ಗುಂಪು ಹತ್ಯೆ(Mob lynching)ಯ ಮನೋಸ್ಥಿತಿ ಇರುವುದು ಬರೇ ಬೀದಿಯಲ್ಲಿ ಮಾತ್ರವೇ? ಚಪ್ಪಲಿ ಧರಿಸಿದ, ಮಾಸಿದ ಶರ್ಟು, ಪ್ಯಾಂಟು ಅಥವಾ ಟೀ ಶರ್ಟು ಧರಿಸಿದ ಸಾಮಾನ್ಯ ಜನರಿಗೆ ಮಾತ್ರ ಈ ಮನೋಸ್ಥಿತಿಯನ್ನು ಸೀಮಿತಗೊಳಿಸಿ ನೋಡುವುದು ಎಲ್ಲಿಯವರೆಗೆ ಸರಿ? ಈ ಮನೋಸ್ಥಿತಿಯನ್ನು ಉತ್ಪಾದಿಸಿದ ಲ್ಯಾಬ್ ಯಾವುದು? ಅದು ಎಲ್ಲಿದೆ? ನಮ್ಮ ಟಿವಿ ಸ್ಟುಡಿಯೋಗಳಲ್ಲಿ ನಡೆಯುತ್ತಿರುವ ಚರ್ಚೆ ಮತ್ತು ಸುದ್ದಿ-ವಿವರಣೆಗಳ ಸ್ವರೂಪ ಹೇಗಿದೆ? ಅವು ಗುಂಪುಹತ್ಯೆ ಮನಸ್ಥಿತಿಗಿಂತ ಭಿನ್ನವಾಗಿದೆಯೇ? ನಿರೂಪಕನ ದೇಹ ಭಾಷೆ ಮತ್ತು ಚರ್ಚಾಪಟುಗಳ ಆವೇಶದಲ್ಲಿ ನಿಜಕ್ಕೂ ವೀಕ್ಷಕರಿಗೆ ತಲುಪುವ ಸಂದೇಶ ಯಾವ ಬಗೆಯದು? ಕಳೆದ ಐದಾರು ವರ್ಷಗಳಿಂದ ಹೆಚ್ಚಿನ ಟಿವಿ ಚಾನೆಲ್‍ಗಳು ವಾರಕ್ಕೊಮ್ಮೆಯಾದರೂ ಇಸ್ಲಾಮ್, ಮುಸ್ಲಿಮ್ ಅಥವಾ ಪಾಕಿಸ್ತಾನದ ಸುತ್ತ ಚರ್ಚೆಯನ್ನು ಅಯೋಜಿಸುತ್ತಿರುವುದರ ಉದ್ದೇಶ ಏನು? ಇದು ಸಹಜ ಬೆಳವಣಿಗೆಯೇ? ದಿಢೀರ್ ಆಗಿ ಇಂಥದ್ದೊಂದು ಬೆಳವಣಿಗೆ ಹುಟ್ಟಿಕೊಳ್ಳಲು ಕಾರಣವೇನು? ಇಸ್ಲಾಮ್ ಮತ್ತು ಮುಸ್ಲಿಮರ ಸುತ್ತ ನಡೆಯುವ ಚರ್ಚೆಯನ್ನು ನೀವು ಗಮನಿಸಿದ್ದೀರಾ? ತ್ರಿವಳಿ ತಲಾಕ್, ಬಹು ಪತ್ನಿತ್ವ, ಜಿಹಾದ್, ಜನಸಂಖ್ಯೆ, ಪಾಕಿಸ್ತಾನ, ಗೋಹತ್ಯೆ, ಗೋ ಸಾಗಾಟ, ಭಯೋತ್ಪಾದನೆ, ಮಹಿಳಾ ಸಮಾನತೆ, ನಮಾಝ್, ಅದಾನ್, ಮದ್ರಸ, ಗಡ್ಡ, ಬುರ್ಖಾ, ಸ್ಕಾರ್ಫ್ ಮತ್ತಿತರ ಹಲವು ವಿಷಯಗಳ ಮೇಲೆ ಟಿವಿ ಚಾನೆಲ್ ಗಳು ಹಮ್ಮಿಕೊಳ್ಳುವ ಚರ್ಚೆಯು ಹೇಗಿರು ತ್ತದೆ? ಚರ್ಚಾಪಟುಗಳು ಯಾರಿರುತ್ತಾರೆ? ಚರ್ಚೆ ಗಳಲ್ಲಿ ಭಾಗವಹಿಸುವ 6 ಮಂದಿಯಲ್ಲಿ ಒಬ್ಬ ವೌಲವಿ. ಉಳಿದ 5 ಮಂದಿಯಲ್ಲಿ ನಾಲ್ಕು ಮಂದಿ ಮೌಲವಿಯನ್ನು ವಿರೋಧಿಸುವವರು. ನಿರೂಪಕನೂ ಅವರದೇ ಗುಂಪು. ಉಳಿದ ಓರ್ವ ತಟಸ್ಥ. ಇಂಥ ಸ್ಥಿತಿಯಲ್ಲಿ, ಒಂದೋ ಮೌಲವಿ ಸೋಲಬೇಕು ಅಥವಾ ಅರಚಬೇಕು ಅಥವಾ ತನ್ನ ಮೇಲಾಗುವ ನಿರಂತರ ಶಬ್ದ ಮಾಲಿನ್ಯದಿಂದ ಕುದಿದು ಎದ್ದು ಹೋಗಬೇಕು ಇಲ್ಲವೇ ಇವರ ವಿರುದ್ಧ ಕೈ ಎತ್ತಬೇಕು. ಸದ್ಯ ನಡೆಯುತ್ತಿರುವ ಟಿವಿ ಚರ್ಚೆಗಳ ಸ್ವರೂಪ ಇದು. ಹೀಗಿರುತ್ತಾ, ಗುಂಪು ಹತ್ಯೆಯಲ್ಲಿ ತೊಡಗಿರುವ ಜನಸಮೂಹವನ್ನು ಒಂದು ನಿರ್ವಾತ ಸ್ಥಿತಿಯಲ್ಲಿ ಹುಟ್ಟಿಕೊಂಡ ಅನಾಗರಿಕ ಗುಂಪು ಎಂದು ಅಂದುಕೊಳ್ಳುವುದು ಎಷ್ಟು ಸರಿ? ಈ ಗುಂಪಿನ ಆಕ್ರೋಶದ ಹಿಂದೆ ಕಳೆದ ಐದಾರು ವರ್ಷಗಳಿಂದ ಟಿವಿ ಚಾನೆಲ್‍ಗಳು ಆಯೋಜಿಸುತ್ತಿರುವ ಚರ್ಚೆಗೆ ಪಾತ್ರವಿಲ್ಲವೇ? ಬಿತ್ತರಿಸಿದ ಸುದ್ದಿಯ ಬೆಂಬಲವಿಲ್ಲವೇ? ಮೌಲವಿಯನ್ನು ಸ್ಟುಡಿಯೋ ದೊಳಗೆ ಕೂರಿಸಿ ನಿರೂಪಕನೂ ಸೇರಿದಂತೆ ಎಲ್ಲ ಚರ್ಚಾಪಟುಗಳು ನಿರಂತರ ಮಾತಿನ ಬಾಣ ಎಸೆದು, ಬಾಯಿ ಮುಚ್ಚಿಸಿ ಅಪರಾಧಿಯಂತೆ ಕೊಠಡಿಯಿಂದ ಹೊರ ಕಳುಹಿಸಿದುದರ ಫಲಿತಾಂಶವೇ ಇವತ್ತು ಬೀದಿಯಲ್ಲಿ ಗುಂಪು ಹತ್ಯೆಯ ಮೂಲಕ ವ್ಯಕ್ತವಾಗುತ್ತಿದೆ ಎಂದು ಯಾಕೆ ಹೇಳಬಾರದು? ಟಿವಿ ಎಂಬುದು ಸಾರ್ವಜನಿಕವಾಗಿ ಅಭಿಪ್ರಾಯವನ್ನು ರೂಪಿಸುವ ಕೇಂದ್ರ. ಅಲ್ಲಿ ನಡೆಯುವ ಚರ್ಚೆ, ವರದಿ, ಸುದ್ದಿ ಮತ್ತು ನಿರೂಪಣೆಯ ಧಾಟಿ ವೀಕ್ಷಕರ ಮೇಲೆ ಪರಿಣಾಮವನ್ನು ಬೀರುತ್ತದೆ ಮತ್ತು ಈ ಪರಿಣಾಮವು ಒಬ್ಬರಿಗಿಂತ ಒಬ್ಬರಲ್ಲಿ ಭಿನ್ನವೂ ಆಗಿರುತ್ತದೆ. ಮೌಲವಿ ಅಥವಾ ಮುಸ್ಲಿಮ್ ಸಮುದಾಯವನ್ನು ಪ್ರತಿನಿಧಿಸುವ ವ್ಯಕ್ತಿಯ ಮೇಲೆ ಉಳಿದ ಚರ್ಚಾಪಟುಗಳೆಲ್ಲ ವಾಗ್ದಾಳಿ ಮಾಡುವುದನ್ನು ಆ ನಾಲ್ವರ ಗೆಲುವಾಗಿಯೇ ಸಾಮಾನ್ಯ ವೀಕ್ಷಕನೊಬ್ಬ ಪರಿಗಣಿಸಬಲ್ಲ. ನಿರೂಪಕನೂ ಕೊನೆಗೆ ಆ ನಾಲ್ವರ ಪರವೇ ಅಭಿಪ್ರಾಯ ಮಂಡಿಸಿ ಚರ್ಚೆಗೆ ವಿರಾಮ ಹಾಕುವಾಗ ಈ ನಂಬಿಕೆಗೆ ಇನ್ನಷ್ಟು ಬಲ ಬರುತ್ತದೆ. ಇದು ನಿರಂತರವಾಗಿ ನಡೆಯ ತೊಡಗಿದಾಗ, ಅದು ಸಮಾಜದಲ್ಲಿ ಒಂದು ಬಗೆಯ ಸ್ಟೀರಿಯೋಟೈಡ್ಡ್ ಅಭಿಪ್ರಾಯವನ್ನು ರೂಪಿಸಿ ಬಿಡುವುದಕ್ಕೆ ಅವಕಾಶ ಇದೆ. ಮುಸ್ಲಿಮರೆಂದರೆ ಹೀಗೆಯೇ; ಅವರು ಅತ್ಯಾಚಾರಿಗಳು, ಗೋ ಕಳ್ಳರು, ನಾಲ್ಕು-ನಾಲ್ಕು ಮದುವೆಯಾಗು ವವರು, ನಿರಂತರವಾಗಿ ಮಕ್ಕಳನ್ನು ಹುಟ್ಟಿಸಿ ಜನಸಂಖ್ಯೆ ಹೆಚ್ಚಿಸುವವರು, ಒಂದೇ ಉಸಿರಿಗೆ ತಲಾಕ್ ಹೇಳಿ ಹೆಣ್ಣನ್ನು ಬೀದಿಗಟ್ಟು ವವರು, ಅವರ ನಿಷ್ಠೆ ಪಾಕಿಸ್ತಾನಕ್ಕೆ, ಪಾಕಿಸ್ತಾನ ಭಾರತದ ಶತ್ರು, ಅವರು ಹಿಂದೂಗಳ ವಿರೋಧಿ, ಅವರ ಕೆಲಸ ಗೋ ಹತ್ಯೆ ಮಾಡುವುದು, ಜನಸಂಖ್ಯೆ ಹೆಚ್ಚಿಸುವ ಮೂಲಕ ಹಿಂದೂಗಳನ್ನು ಅಲ್ಪಸಂಖ್ಯಾತರಾಗಿಸುವ ಷಡ್ಯಂತ್ರ ನಡೆಸುತ್ತಿದ್ದಾರೆ, ಅವರು ಅನ್ಯ, ಅವರ ಧರ್ಮಗ್ರಂಥ ಅನ್ಯ, ಅವರ ಉಡುಪು ಅನ್ಯ... ಹೀಗೆ ಮುಸ್ಲಿಮರ ಬಗ್ಗೆ ಅಸಹ್ಯ ಪಡುವ ವಾತಾವರಣವೊಂದನ್ನು ಅದು ನಿರ್ಮಿಸಿ ಬಿಡಬಲ್ಲದು. ಅಲ್ಲದೇ, ಬಲಪಂಥೀಯ ರಾಜಕಾರಣಿಗಳು ಕಳೆದ ಎರಡು ದಶಕಗಳಲ್ಲಿ ಆಡಿದ ಮಾತುಗಳನ್ನು ಇದರ ಜೊತೆ ಸೇರಿಸಿ ನೋಡಿದರೆ, ಗುಂಪು ಹತ್ಯೆಗೆ ಸ್ಪಷ್ಟವಾದ ಚೌಕಟ್ಟೊಂದು ಲಭ್ಯವಾಗುತ್ತದೆ. ಉದಾಹರಣೆಗೆ,
`ನ್ಯೂಸ್ 24' ಎಂಬ ಹಿಂದಿ ಚಾನೆಲ್ ಜುಲೈ ಎರಡನೇ ವಾರದಲ್ಲಿ 45 ನಿಮಿಷಗಳ ಚರ್ಚೆಯೊಂದನ್ನು ಏರ್ಪಡಿಸಿತ್ತು. `2019ರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಗೆದ್ದು ಮೋದಿ ಮತ್ತೆ ಪ್ರಧಾನಿಯಾದರೆ, ಭಾರತವು ಹಿಂದೂ ಪಾಕಿಸ್ತಾನವಾಗಲಿದೆ’ ಎಂಬ ಶಶಿ ತರೂರ್ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ಚರ್ಚೆಯನ್ನು ಹಮ್ಮಿಕೊಳ್ಳಲಾಗಿತ್ತು. ಚರ್ಚೆಯ ವಿಷಯ: `ಯಾವುದು ಅಗತ್ಯ: ಹಿಂದೂ ರಾಷ್ಟ್ರವೋ ಸೆಕ್ಯುಲರ್ ಭಾರತವೋ?" ಎಂಬುದು. ಇದರಲ್ಲಿ ಭಾಗವಹಿಸಿದವರು,
1. ಸಂಬಿತ್ ಪಾತ್ರ - ಬಿಜೆಪಿ ವಕ್ತಾರ
2. ಪ್ರೊ. ಕಪಿಲ್ ಕುಮಾರ್ - ಸ್ವತಂತ್ರ ಚರ್ಚಾಪಟು
3. ಪ್ರೇಮ್‍ಚಂದ್ ಮಿಶ್ರ - ಕಾಂಗ್ರೆಸ್ ಪ್ರತಿನಿಧಿ
4. ಶಮ್ಸುಲ್ ಇಸ್ಲಾಮ್ - ದೆಹಲಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರೊಫೆಸರ್.
ನೇರ ಪ್ರಸಾರದ ಈ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆಯೇ ಈ ಚರ್ಚಾ ವಿಷಯವನ್ನು ಬದಲಿಸಬೇಕೆಂದು ಪ್ರೊ. ಕಪಿಲ್ ಕುಮಾರ್ ಆಗ್ರಹಿಸಿದರು. ಮುಸ್ಲಿಮರಲ್ಲಿ ಆಚರಣೆಯಲ್ಲಿರುವ ತ್ರಿವಳಿ ತಲಾಕ್, ನಿಕಾಹ್ ಹಲಾಲ ಮತ್ತು 5 ಮದುವೆಯ ಬಗ್ಗೆ ಚರ್ಚೆ ನಡೆಯಬೇಕು ಎಂದು ದೊಡ್ಡ ದನಿಯಲ್ಲಿ ಒತ್ತಾಯಿಸಿದರು. ನಿಜವಾಗಿ, ಈ ಮೂರೂ ವಿಷಯಗಳು ಇಸ್ಲಾಮಿಗೆ ಅನ್ಯವಾದುದು. ಕುರ್‍ಆನ್ ಮತ್ತು ಪ್ರವಾದಿ ಚರ್ಯೆಯನ್ನು? ಈ ಮೂರಕ್ಕೂ ಎಲ್ಲೂ ಆಧಾರವಿಲ್ಲ. ಆದರೆ ಪ್ರೊ. ಕಪಿಲ್ ಕುಮಾರ್ ಅವರ ವಾದ ಮತ್ತು ದೇಹ ಭಾಷೆ ಎಷ್ಟು ಕೆಟ್ಟದಾಗಿತ್ತೆಂದರೆ, ಇಡೀ ಇಸ್ಲಾಮ್ ಈ ಮೂರರಿಂದ ತುಂಬಿ ಹೋಗಿದೆ ಎಂದೇ ನಂಬುವಂತಿತ್ತು. ಮುಸ್ಲಿಮರೆಲ್ಲ ಈ ಮೂರನ್ನು ಪರಮ ಪವಿತ್ರ ಕಡ್ಡಾಯ ನಿಯಮವಾಗಿ ತಮ್ಮ ಮೇಲೆ ವಿಧಿಸಿಕೊಂಡಿದ್ದಾರೆ ಎಂದು ಅಂದುಕೊಳ್ಳುವ ರೀತಿಯಲ್ಲಿ ಅವರು ವಾದಿಸುತ್ತಿದ್ದರು. ಅದೇವೇಳೆ, `ಸಂಬಿತ್ ಪಾತ್ರ ಅವರ ಜೊತೆಗೂಡಿದರು. ಹಿಂದೂ ಮತ್ತು ಹಿಂದೂಸ್ತಾನ್ ಎರಡೂ ಸಮಾನಾಂತರ ಪರ್ಯಾಯ ಪದಗಳು' ಎಂದವರು ವಾದಿಸಿದರು. ಅದರ ಮೇಲೆ ಚರ್ಚೆಯ ಅಗತ್ಯವಿಲ್ಲ ಎಂಬ ಧಾಟಿಯಲ್ಲಿ ಮಾತಾಡಿದರು. ಮುಸ್ಲಿಮರಿಂದ ಈ ದೇಶದ ಹಿಂದುಗಳು ಈ ಹಿಂದೆ ಅನುಭವಿಸಿದ ಹಿಂಸೆ-ಅನ್ಯಾಯಗಳತ್ತ ಅವರ ಮಾತು ಹೊರಳಿತು. ತಮಾಷೆ ಏನೆಂದರೆ, ಚರ್ಚೆ ನಡೆಯಬೇಕಾಗಿದ್ದುದು ಶಶಿ ತರೂರ್ ಹೇಳಿಕೆಯ ಮೇಲೆ. ಆದರೆ, ನಡೆಯುತ್ತಿರುವುದು ಇಸ್ಲಾಮ್ ಮತ್ತು ಮುಸ್ಲಿಮರ ಸುತ್ತ. ಪ್ರೊ. ಶಮ್ಸುಲ್ ಇಸ್ಲಾಮ್ ಅವರು ಈ ಬಗ್ಗೆ ತಕರಾರು ಎತ್ತಿದರು. `ಇಲ್ಲೇನು ನಡೆಯುತ್ತಿದೆ' ಎಂದು ನಿರೂಪಕರನ್ನು ಪ್ರಶ್ನಿಸಿದರು. ಆದರೆ ನಿರೂಪಕನಿಂದ ಅವರಿಬ್ಬರ ಮಾತಿನ ಓಘವನ್ನು ತಡೆಯುವ ಪ್ರಬಲ ಪ್ರಯತ್ನವೇನೂ ನಡೆಯಲಿಲ್ಲ. ಮುಸ್ಲಿಮರು ಅದೆಷ್ಟು ಕ್ರೂರಿಗಳು ಅನ್ನುವುದನ್ನು ಪೈಪೋಟಿಯಿಂದ ಅವರಿಬ್ಬರೂ ಹೇಳುತ್ತಲೇ ಇದ್ದರು. ಇದು ಶಮ್ಸುಲ್ ಇಸ್ಲಾಮ್‍ರನ್ನು ಕೆರಳಿಸಿತು. ಭಾರತೀಯ ನಾಗರಿಕತೆಯ 5 ಸಾವಿರದಷ್ಟು ದೀರ್ಘ ಇತಿಹಾಸದಿಂದ ಕೇವಲ ಮುಸ್ಲಿಮ್ ಅಳ್ವಿಕೆಯ ಇತಿಹಾಸವನ್ನಷ್ಟೇ ಆಯ್ಕೆ ಮಾಡಿ ಯಾಕೆ ಚರ್ಚಿಸುತ್ತೀರಿ ಎಂದವರು ಪ್ರಶ್ನಿಸಿದರಲ್ಲದೇ, ಈ ಸೆಲೆಕ್ಟಿವ್ ವಾದವನ್ನು ಖಂಡಿಸಿದರು. ಒಂದು ವೇಳೆ, ಮುಸ್ಲಿಮ್ ರಾಜರ ಅನ್ಯಾಯಕ್ಕೆ ಭಾರತೀಯ ಮುಸ್ಲಿಮರು ಹೊಣೆಗಾರರೆಂದಾದರೆ, ಸೀತಾ ಮಾತೆಯ ಅಪಹರಣಕ್ಕೆ ಮತ್ತು ದ್ರೌಪದಿಯ ಮಾನಹರಣಕ್ಕೆ ಯಾರನ್ನು ಕಟಕಟೆಯಲ್ಲಿ ನಿಲ್ಲಿಸುತ್ತೀರಿ ಎಂದು ಪ್ರಶ್ನಿಸಿದರು. ಭಾರತದ ದೀರ್ಘ ಇತಿಹಾಸದಲ್ಲಿ ನಡೆದಿರುವ ಹಿಂಸೆ, ಅನ್ಯಾಯ, ಅತ್ಯಾಚಾರ, ಹತ್ಯೆ, ಲೂಟಿ, ಕ್ರೌರ್ಯಗಳಾವುದನ್ನೂ ಪ್ರಸ್ತಾಪಿಸದೆ ಮತ್ತು ಅದರ ಹೊಣೆಯನ್ನು ಯಾರ ಮೇಲೂ ಹೊರಿಸದೆ ಬರೇ ಮುಸ್ಲಿಮ್ ಆಳ್ವಿಕೆಯನ್ನು ಮಾತ್ರ ಪ್ರಸ್ತಾಪಿಸಿ ಇಂದಿನ ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ಕೂರಿಸುವ ಪ್ರಯತ್ನ ತಪ್ಪು ಎಂದು ವಾದಿಸಿದರು. ಇದರಿಂದಾಗಿ ಪ್ರೊ. ಕಪಿಲ್ ಕುಮಾರ್ ಮತ್ತು ಸಂಬಿತ್ ಪಾತ್ರ ಅವರ ಧ್ವನಿಯ ಮಟ್ಟ ಏರಿತು. ಆವೇಶ ಹೆಚ್ಚಾಯಿತು. ಪ್ರೊ. ಶಮ್ಸುಲ್ ಇಸ್ಲಾಮ್‍ರನ್ನು ಅತ್ಯಾಚಾರಿ, ಐಸಿಸ್ ಏಜೆಂಟ್, ಪಾಕಿಸ್ತಾನಿ ಬೆಂಬಲಿಗ ಮತ್ತು ಕಾಂಗ್ರೆಸಿಗ ಎಂದು ಜರೆದರು. ತ್ರಿವಳಿ ತಲಾಕ್, ನಿಕಾಹ್ ಹಲಾಲ ಮತ್ತು 5 ಮದುವೆಯ ವಿಷಯದಲ್ಲಿ ಶಮ್ಸುಲ್ ಇಸ್ಲಾಮ್‍ರಿಂದ ಪ್ರತಿಕ್ರಿಯೆಯನ್ನು ಪಡೆಯದ ಹೊರತು ತಾನು ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದು ಪ್ರೊ. ಕಪಿಲ್ ಕುಮಾರ್ ನಿರೂಪಕನಿಗೆ ಬೆದರಿಕೆ ಹಾಕಿ ದರು. ಚರ್ಚೆ ಮುಂದುವರಿಯಿತು. ಕಪಿಲ್ ಕುಮಾರ್ ಮೌನವಾಗಿಯೇ ಇದ್ದರು. ಕೊನೆಗೆ ಚರ್ಚೆಯನ್ನು ಮುಗಿಸುವ ಹಂತಕ್ಕೆ ಬರುವಾಗ, ನಿರೂಪಕ ಇಡೀ ಚರ್ಚೆಯ ಉದ್ದೇಶವನ್ನೇ ಪ್ರಶ್ನಿಸುವ ರೀತಿಯಲ್ಲಿ ವರ್ತಿಸಿದರು. ಚರ್ಚೆಯನ್ನು ಮುಗಿಸಬೇಕಾದುದು `ಯಾವುದು ಅಗತ್ಯ: ಹಿಂದೂ ರಾಷ್ಟ್ರವೋ ಸೆಕ್ಯುಲರ್ ರಾಷ್ಟ್ರವೋ’ ಎಂಬುದರ ಮೇಲೆ. ಆದರೆ, ಆತ ನಿಕಾಹ್ ಹಲಾಲ, ತಿವ್ರಳಿ ತಲಾಕ್‍ಗಳ ವಿಷಯದಲ್ಲಿ ಶಮ್ಸುಲ್ ಇಸ್ಲಾಮ್‍ರನ್ನು ಉದ್ದೇಶಿಸಿ ಹೀಗೆ ಪ್ರಶ್ನಿಸಿದರು-
`ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಮುಸ್ಲಿಮರು ಯಾಕೆ ನಿರಾಕರಿಸುತ್ತಾರೆ? ಮುಸ್ಲಿಮರು ತ್ರಿವಳಿ ತಲಾಕ್, ನಿಕಾಹ್ ಹಲಾಲ ಮತ್ತು ಬಹುಪತ್ನಿತ್ವವನ್ನು ಒಪ್ಪುವುದು ಮತ್ತು ಒಂದೇ ದೇಶ ಮತ್ತು ಒಂದೇ ಕಾನೂನನ್ನು ತಿರಸ್ಕರಿಸುವುದು ಯಾಕೆ? ಶಮ್ಸುಲ್ ಇಸ್ಲಾಮ್ ಅವರೆ, ಈ ವಿಷಯದಲ್ಲಿ ನಿಮ್ಮಿಂದ ಉತ್ತರ ಪಡೆಯು ವೆನೆಂದು ನಾನು ಕಪಿಲ್ ಕುಮಾರ್ ಗೆ ಮಾತು ಕೊಟ್ಟಿರುವೆ. ಪ್ರತಿಕ್ರಿಯೆ ವ್ಯಕ್ತಪಡಿಸಿ’ ಎಂದರು.
ಶಮ್ಸುಲ್ ಇಸ್ಲಾಮ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅವರೇನೂ ಅದರ ಬೆಂಬಲಿಗರಾಗಿರಲಿಲ್ಲ. ಭಾರತೀಯ ಸಂವಿಧಾನಕ್ಕೆ ಭಾರತೀಯ ಮುಸ್ಲಿಮರು ಬದ್ಧರಾಗಿರುತ್ತಾರೆ ಎಂದರು. ತಕ್ಷಣ ನಿರೂಪಕ ಹೇಳಿದ:
‘ಕಪಿಲ್ ಸರ್, ನೀವು ಖುಷಿ ಪಡಲೇಬೇಕು. ನಾನು ಶಮ್ಸುಲ್ ಇಸ್ಲಾಮ್‍ರಿಂದ ನಿಮ್ಮ ಪ್ರಶ್ನೆಗೆ ಉತ್ತರವನ್ನು ಪಡೆದಿದ್ದೇನೆ.’
ಹೀಗೆ, `ಯಾವುದು ಅಗತ್ಯ: ಹಿಂದೂ ರಾಷ್ಟ್ರವೋ ಸೆಕ್ಯುಲರ್ ಭಾರತವೋ' ಎಂಬ ಚರ್ಚೆ ಮುಕ್ತಾಯಗೊಂಡಿತು ಎಂದು A TV debate with hindu nation with a muslim name ಎಂಬ ಲೇಖನದಲ್ಲಿ ಶಮ್ಸುಲ್ ಇಸ್ಲಾಮ್ ಇತ್ತೀಚೆಗೆ ಬರೆದುಕೊಂಡಿದ್ದರು.
ಅಂದಹಾಗೆ, ಚರ್ಚೆ ಮುಗಿಯಬೇಕಾದ ರೀತಿಯೇ ಇದು? ಯಾವ ವಿಷಯದ ಮೇಲೆ ಚೆರ್ಚ ನಡೆಯಬೇಕೆಂದು ತೀರ್ಮಾನಿಸ ಬೇಕಾದುದು ಟಿವಿ ಸಂಸ್ಥೆಗಳು. ಒಮ್ಮೆ ಈ ವಿಷಯ ನಿರ್ಧಾರವಾದ ಮೇಲೆ ಚರ್ಚಾಪಟುವೊಬ್ಬ ಬಂದು ಅದನ್ನು ಬದಲಿಸುವುದಕ್ಕೆ ಅವಕಾಶವೇ ಇಲ್ಲ. ಅತಿಥಿಗಳನ್ನು ಚರ್ಚೆಗೆ ಆಹ್ವಾನಿಸುವಾಗ ಅವರಲ್ಲಿ ಚರ್ಚಾ ವಿಷಯವನ್ನು ಹೇಳಲಾಗುತ್ತದೆ. ಆತ ಆ ವಿಷಯದ ಮೇಲೆ ಚರ್ಚಿಸುವುದಕ್ಕಾಗಿಯೇ ಸಿದ್ಧತೆಯೊಂದಿಗೆ ಬರುತ್ತಾನೆ. ಇದು ನಿರೂಪಕನಿಗೂ ಗೊತ್ತಿದೆ. ಚರ್ಚೆಯಲ್ಲಿ ಭಾಗವಹಿಸುವವರಿಗೂ ಗೊತ್ತಿದೆ. ಹೀಗಿದ್ದೂ, ಕಪಿಲ್ ಕುಮಾರ್ ರ ಬೇಡಿಕೆಯನ್ನು ನಿರೂಪಕ ಒಪ್ಪಿಕೊಂಡದ್ದು ಹೇಗೆ ಮತ್ತು ಯಾಕೆ? ನಿಗದಿತ ವಿಷಯದ ಮೇಲೆ ಚರ್ಚೆಯನ್ನು ಹಿಡಿದು ನಿಲ್ಲಿಸದೆ ಮತ್ತು ಅದರ ಮೇಲೆಯೇ ಚರ್ಚೆಯನ್ನು ಕೊನೆಗೊಳಿಸದೆ ಕಪಿಲ್ ಕುಮಾರ್ ರನ್ನು ತೃಪ್ತಿಪಡಿಸುವ ಪ್ರಯತ್ನ ನಡೆದದ್ದು ಹೇಗೆ? ಈ ಬಗೆಯ ಬೆಳ ವಣಿಗೆಗಳು ವೀಕ್ಷಕರಲ್ಲಿ ಯಾವ ಅಭಿಪ್ರಾಯವನ್ನು ಹುಟ್ಟು ಹಾಕಿಯಾವು! ಈ ದೇಶದ ಅತೀ ದೊಡ್ಡ ಸಮಸ್ಯೆ ಎಂದರೆ, ಅದು ತ್ರಿವಳಿ ತಲಾಕ್, ನಿಕಾಹ್ ಹಲಾಲ, ಬಹುಪತ್ನಿತ್ವ ಎಂದು ಅವರು ಅಂದುಕೊಳ್ಳಲಾರರೇ? ಹಾಗಂತ ಇದು, ಒಂಟಿ ಪ್ರಕರಣ ಅಲ್ಲ. ಚರ್ಚೆ ಯಾವ ವಿಷಯದ ಮೇಲೆಯೇ ನಡೆಯಲಿ, ಮುಸ್ಲಿಮ್ ಪ್ರತಿನಿಧಿ ಬಾಯಿ ತೆರೆದ ಕೂಡಲೇ ಭಯೋತ್ಪಾದನೆ, ಪಾಕಿಸ್ತಾನ, ಬಹುಪತ್ನಿತ್ವ ಇತ್ಯಾದಿ ವಿಷಯಗಳನ್ನು ಎತ್ತಿ ಬಾಯಿ ಮುಚ್ಚಿಸುವ ಶ್ರಮ ಬಹುತೇಕ ಟಿವಿ ಚರ್ಚೆಗಳಲ್ಲಿ ನಡೆಯುತ್ತಿದೆ. ಮಾತ್ರವಲ್ಲ, ಈ ಎಲ್ಲ ಸಂದರ್ಭಗಳಲ್ಲಿ ನಿರೂಪಕನ ಮುಖದಲ್ಲಿ ಮಂದಹಾಸ ಇರುತ್ತದೆ. ನಿಜವಾಗಿ ಇದುವೇ ಲಿಂಚಿಂಗ್. ಲಕ್ಷಣವಾಗಿ ನಗಲೂ, ಮಾತಾಡಲೂ ಬರುವ ಮತ್ತು ಸೂಟು-ಬೂಟು ಧರಿಸಿರುವ ಮಂದಿ ಟಿವಿ ಸ್ಟುಡಿಯೋಗಳಲ್ಲಿ ಕುಳಿತು ಹೀಗೆ ಗುಂಪು ದಾಳಿ ನಡೆಸುವುದನ್ನೇ ಬೀದಿಯಲ್ಲಿರುವ ಮಂದಿ ತುಸು ಕ್ರೂರವಾಗಿ ನಡೆಸುತ್ತಿದ್ದಾರೆ. ಆ ಸಂದರ್ಭದಲ್ಲಿ ಅವರಲ್ಲೂ ಮಂದಹಾಸವೇ ಇರುತ್ತದೆ. ಅಂದಹಾಗೆ,
ಝೀ ಹಿಂದೂಸ್ತಾನ್ ಎಂಬ ಟಿವಿ ಚಾನೆಲ್ ಇತ್ತೀಚೆಗೆ ಏರ್ಪಡಿಸಿದ ಚರ್ಚೆಯಲ್ಲಿ ನ್ಯಾಯವಾದಿ ಫರಾ ಫೈಝ್ ಮತ್ತು ಮುಫ್ತಿ ಏಜಾಝ್ ಅರ್ಶದ್ ಖಾಸ್ಮಿ ಎಂಬಿಬ್ಬರು ಪರಸ್ಪರ ಬಾರಿಸಿಕೊಂಡದ್ದನ್ನು ನೀವು ನೋಡಿರಬಹುದು. ಇದು ಸ್ಯಾಂಪಲ್. ಮುಂದೊಂದು ದಿನ ಟಿವಿ ಸ್ಟುಡಿಯೋದಲ್ಲೇ ಗುಂಪು ಹತ್ಯೆಯೂ ನಡೆದೀತು.
No comments:
Post a Comment