Wednesday, March 19, 2014

ಅವರನ್ನು ಭ್ರಷ್ಟರೆನ್ನುವುದಕ್ಕಾಗಿ ನಾವೇ ಭ್ರಷ್ಟರಾಗುವುದು ಯಾವ ಬಗೆಯ ಜರ್ನಲಿಸಂ?

   ‘ಕುಟುಕು ಪತ್ರಿಕೋದ್ಯಮ’ (Sting Journalism) ಮತ್ತು ‘ಬಲೆಗೆ ಸಿಲುಕಿಸುವ ಕಾರ್ಯಾಚರಣೆ’ (Entrapment Operation) ಇವೆರಡೂ ಒಂದೇ ಅಲ್ಲ. ಇವೆರಡರ ಮಧ್ಯೆ ಸಾಕಷ್ಟು ವ್ಯತ್ಯಾಸವಿದೆ. ಪ್ರಜಾಪ್ರಭುತ್ವದ ‘ಕಾವಲು ನಾಯಿ’ಯೊಂದು (Watch dog) ಮಾಲಿಕನ ಕಣ್ಣು ತಪ್ಪಿಸಿ ಮನೆಯೊಳಗೆ ಹೊಕ್ಕು ಒಳಗೆ ಕ್ಯಾಮರಾ ಇಡುವುದು ಬೇರೆ, ಮಾಲಿಕನಿಗೆ ಗುರುತೇ ಸಿಗದಷ್ಟು ಅಚ್ಚು ಕಟ್ಟಾಗಿ ವೇಷ ಬದಲಿಸಿ ಕಾವಲು ನಾಯಿಯೊಂದು ಮಾಲಿಕನನ್ನು ಭೇಟಿಯಾಗುವುದು ಮತ್ತು ಆತನಿಗೆ ಆಮಿಷ ಒಡ್ಡಿ ಬಲೆಗೆ ಸಿಲುಕಿಸುವುದು ಬೇರೆ. ಇವತ್ತಿನ ಕುಟುಕು ಕಾರ್ಯಾಚರಣೆಗಳು (Sting Operation) ಯಾವ ಬಗೆಯವು? ಅವು ನಿಜಕ್ಕೂ, ನಾವೆಲ್ಲ ಸಮರ್ಥಿಸುವಷ್ಟು ನೈತಿಕವಾಗಿವೆಯೇ? ಖಾಸಗಿತನ ಎಂಬುದು ಪ್ರತಿಯೋರ್ವರ ಸಾಂವಿಧಾನಿಕ ಹಕ್ಕು. ಬೇಕಾಬಿಟ್ಟಿಯಾಗಿ ಅದರೊಳಕ್ಕೆ ಇಣುಕುವುದು, ಕ್ಯಾಮರ ಇಡುವುದು ಸಂವಿಧಾನ ವಿರೋಧಿ. ಒಂದು ವೇಳೆ ಇಣುಕುವುದು ಅನಿವಾರ್ಯ ಎಂದಾದರೆ ಆ ಅನಿವಾರ್ಯತೆಯನ್ನು ಸಮಾಜದ ಮುಂದೆ ಸ್ಪಷ್ಟಪಡಿಸಬೇಕಾಗುತ್ತದೆ. ಮಾತ್ರವಲ್ಲ, ಸಮಾಜಕ್ಕೂ ಅದು ಅನಿವಾರ್ಯ ಎಂದು ಅನಿಸುವಷ್ಟು ಆ ಸ್ಪಷ್ಟನೆ ಗಂಭೀರವಾಗಿರಬೇಕಾಗುತ್ತದೆ. ಇವತ್ತಿನ ಕುಟುಕು ಕಾರ್ಯಾಚರಣೆಗಳು ಈ ಮಟ್ಟದಲ್ಲಿ ಇವೆಯೇ? ನೂರಾರು ಟಿ.ವಿ. ಚಾನೆಲ್‍ಗಳು ಮತ್ತು ಪತ್ರಿಕೆಗಳು ಇರುವ ಇಂದಿನ ಮಾಧ್ಯಮ ರಂಗದಲ್ಲಿ ಪ್ರತಿಯೊಂದಕ್ಕೂ ಅದರದ್ದೇ ಆದ ಗುರಿ ಮತ್ತು ಸವಾಲುಗಳು ಇವೆ. ನೂರಾರು ಮಾಲಿಕರು, ಸಾವಿರಾರು ಪತ್ರಕರ್ತರು ಈ ರಂಗವನ್ನು ಇವತ್ತು ಆಳುತ್ತಿದ್ದಾರೆ. ಓರ್ವ ರಾಜಕಾರಣಿಗೆ ತನ್ನ ಕ್ಷೇತ್ರದ ಮತದಾರರನ್ನು ಸೆಳೆಯುವುದು ಮತ್ತು ಅವರು ಸದಾ ತನ್ನ ಬೆಂಬಲಿಗರಾಗಿರುವಂತೆ ನೋಡಿಕೊಳ್ಳುವುದು ಎಷ್ಟು ಅಗತ್ಯವೋ ಅಂಥದ್ದೇ ಅಗತ್ಯ ಇವತ್ತು ಚಾನೆಲ್‍ಗಳಿಗೂ ಇವೆ. ವೀಕ್ಷಕರನ್ನು ಹಿಡಿದಿಡುವುದಕ್ಕಾಗಿ ಅವು ವಿವಿಧ ಚಾನೆಲ್‍ಗಳೊಂದಿಗೆ ಹೋರಾಡಬೇಕಾಗುತ್ತದೆ. ರಾಜಕಾರಣಿಯೋರ್ವ ತನ್ನ ಪ್ರತಿಸ್ಪರ್ಧಿಯ ಪ್ರಭಾವವನ್ನು ಕುಗ್ಗಿಸುವುದಕ್ಕಾಗಿ ಮಾಡಬಹುದಾದ ತಂತ್ರಗಳಂತೆಯೇ ಚಾನೆಲ್‍ಗಳೂ ತಂತ್ರಗಳನ್ನು ಹೆಣೆಯಬೇಕಾಗುತ್ತದೆ. ಆಗಾಗ ಬ್ರೇಕಿಂಗ್ ನ್ಯೂಸ್‍ಗಳು, ತನಿಖಾ ವರದಿಗಳು, ಮನರಂಜನೆಗಳನ್ನು ಇತರ ಚಾನೆಲ್‍ಗಳಿಗಿಂತ ಭಿನ್ನ ರೂಪದಲ್ಲಿ ಒದಗಿಸುತ್ತಿರಬೇಕಾಗುತ್ತದೆ. ಇಂಥ ಒತ್ತಡಗಳು ಟಿ.ವಿ. ಚಾನೆಲ್‍ಗಳ ಹೆಜ್ಜೆ ತಪ್ಪಿಸಲಾರವೇ? ಸಾರ್ವಜನಿಕ ಹಿತಾಸಕ್ತಿಗಾಗಿ ನಡೆಯಬೇಕಾದ ತನಿಖಾ ವರದಿಯೊಂದು ತಮ್ಮ TRP ಹೆಚ್ಚಿಸಿ ಕೊಳ್ಳುವುದಕ್ಕಾಗಿ ದುರ್ಬಳಕೆಗೆ ಈಡಾಗಲಾರದೇ?
   2007ರಲ್ಲಿ, ದೆಹಲಿಯ ಶಾಲಾ ಶಿಕ್ಷಕಿಯ ಮೇಲೆ ನಡೆಸಲಾದ ಕುಟುಕು ಕಾರ್ಯಾಚರಣೆಯನ್ನು ಲೈವ್ ಇಂಡಿಯಾ ಟಿ.ವಿ. ಚಾನೆಲ್ ಪ್ರಸಾರ ಮಾಡಿತ್ತು. ಶಾಲೆಯ ವಿದ್ಯಾರ್ಥಿಗಳನ್ನು ಈಕೆ ವೇಶ್ಯಾವಾಟಿಕೆಗೆ ಒದಗಿಸುತ್ತಿದ್ದಾಳೆಂದು ಅದು ವಾದಿಸಿತು. ಚಾನೆಲ್‍ನಲ್ಲಿ ಈ ಕುಟುಕು ಕಾರ್ಯಾಚರಣೆ ಪ್ರಸಾರವಾದದ್ದೇ ತಡ, ಜನ ಕುಪಿತರಾದರು. ಶಿಕ್ಷಕಿಯ ಮೇಲೆ ದಾಳಿ ನಡೆಸಿದರು. ಆ ಪರಿಸರದಲ್ಲಷ್ಟೇ ಅಲ್ಲ, ಇಡೀ ದೇಶದಲ್ಲೇ ಆ ಶಿಕ್ಷಕಿ ಮಾನಗೇಡಿಯಾಗಿ, ಕ್ರೂರಿಯಾಗಿ ಬಿಂಬಿತಗೊಂಡರು. ಆದರೆ ಆ ಬಳಿಕ ಇಡೀ ಕಾರ್ಯಾಚರಣೆಯೇ ನಕಲಿ ಎಂದು ಸಾಬೀತಾಯಿತು. ಪತ್ರಕರ್ತರಿಬ್ಬರನ್ನು ಬಂಧಿಸಲಾಯಿತು. ಆದರೆ, ಆ ದಿನಗಳಲ್ಲಿ ಆ ಶಿಕ್ಷಕಿ ಎದುರಿಸಿರಬಹುದಾದ ಒತ್ತಡವನ್ನೊಮ್ಮೆ ಊಹಿಸಿ. ಹಾಗಂತ, ಒಂದು ಕುಟುಕು ಕಾರ್ಯಾಚರಣೆಯನ್ನು ಒಂದೇ ದಿನದಲ್ಲಿ ಒಂದೇ ಬಾರಿಗೆ ನಡೆಸುವುದಕ್ಕೆ ಸಾಧ್ಯವಿಲ್ಲವಲ್ಲ. ಅದಕ್ಕೆ ಒಂದಕ್ಕಿಂತ ಹೆಚ್ಚು ದಿನಗಳು ಬೇಕಾಗಬಹುದು. ಆ ಸಂದರ್ಭದಲ್ಲಿ ಕುಟುಕು ತಂಡವು ವಿವಿಧ ಬಗೆಯ ಮಾತುಕತೆ, ಒಪ್ಪಂದ, ಕೊಡುಕೊಳ್ಳುವಿಕೆಗಳನ್ನು ಕಾರ್ಯಾಚರಣೆಗೆ ಒಳಗಾಗುವ ವ್ಯಕ್ತಿಯೊಂದಿಗೆ ನಡೆಸಿರಬಹುದು. ತಂಡವು ಅಸಂಖ್ಯ ಸುಳ್ಳುಗಳನ್ನು ಹೇಳಿರಬಹುದು. ಆದರೆ ಆ ಕಾರ್ಯಾಚರಣೆಯನ್ನು ಟಿ.ವಿ. ಚಾನೆಲ್ ಸಂಪೂರ್ಣವಾಗಿ ಇದ್ದ ಹಾಗೇ ಪ್ರಸಾರ ಮಾಡುವುದಿಲ್ಲ. ಅದನ್ನು ಸಂಕ್ಷೇಪಿಸುತ್ತದೆ. ತನಗೆ ಬೇಕಾದ್ದನ್ನು ಮಾತ್ರ ಉಳಿಸಿ ಉಳಿದುದನ್ನು ಕಿತ್ತು ಹಾಕಿ ಪ್ರಸಾರ ಮಾಡುತ್ತದೆ. ವೀಕ್ಷಕರಿಗೆ ಗೊತ್ತಿರುವುದು ಚಾನೆಲ್ ಏನನ್ನು ಪ್ರಸಾರ ಮಾಡಿದೆಯೋ ಅದು ಮಾತ್ರ. ಇದು ಹೇಗೆ ಸಮರ್ಥನೀಯ? ಇಲ್ಲಿ ಚಾನೆಲ್ ಅಳವಡಿಸಿಕೊಂಡಿರುವ ಪಾರದರ್ಶಕತೆ ಯಾವುದು? ಕುಟುಕು ಕಾರ್ಯಾಚರಣೆಗೆ ಒಳಗಾದ ವ್ಯಕ್ತಿಯನ್ನು ಸುಳ್ಳುಗಾರ ಮತ್ತು ಚಾನೆಲನ್ನು ಪ್ರಾಮಾಣಿಕ ಎಂದು ವಿಭಜಿಸುವುದಕ್ಕೆ ಇರುವ ಮಾನದಂಡ ಏನು? ತನ್ನ ಹಿತಾಸಕ್ತಿಗಾಗಿಯೇ ಒಂದು ಚಾನೆಲ್ ಕುಟುಕು ಕಾರ್ಯಾಚರಣೆಯನ್ನು ಆಯೋಜಿಸಬಾರದೆಂದಿದೆಯೇ? ಕಾರ್ಯಾಚರಣೆ ವಿಫಲಗೊಂಡರೂ ತನಗೆ ಬೇಕಾದಂತೆ ಇಡೀ ಕಾರ್ಯಾಚರಣೆಯನ್ನು ತಿರುಚಿ, ಸಂಕ್ಷೇಪಿಸಿ ಪ್ರಸಾರ ಮಾಡುವುದಕ್ಕೂ ಅವಕಾಶ ಇದೆಯಲ್ಲವೇ? ಇಂಥ ತಪ್ಪುಗಳು ನಡೆಯಲ್ಲ ಎಂದು ವೀಕ್ಷಕರನ್ನು ನಂಬಿಸುವುದಕ್ಕೆ ಮಾಧ್ಯಮಗಳು ಏನು ಕ್ರಮಗಳನ್ನು ಕೈಗೊಂಡಿವೆ? ಅಂದಹಾಗೆ, ಚಾನೆಲ್‍ಗಳನ್ನು ನಂಬಬೇಕು ಮತ್ತು ಅದರ ಕಾರ್ಯಾಚರಣೆಗೆ ಒಳಗಾಗುವ ವ್ಯಕ್ತಿಯನ್ನು ನಂಬಬಾರದು ಎಂದು ವಾದಿಸುವುದಕ್ಕೆ ಬರೇ ಅದು ಪ್ರಸಾರ ಮಾಡುವ ದೃಶ್ಯಗಳನ್ನಷ್ಟೇ ಸಮರ್ಥನೆಯಾಗಿ ಬಳಸಿಕೊಳ್ಳಲು ಇಂದಿನ ದಿನಗಳಲ್ಲಿ ಸಾಧ್ಯವಿಲ್ಲ. ಆದ್ದರಿಂದಲೇ ದಿ ಹಿಂದೂವಿನಂಥ ಪ್ರಮುಖ ಪತ್ರಿಕೆಗಳು ಕುಟುಕು ಕಾರ್ಯಾಚರಣೆಯನ್ನು ಗಂಭೀರವಾಗಿ ಪರಿಗಣಿಸದೇ ಇರುವುದು. 2013 ಡಿಸೆಂಬರ್ 16ರಂದು ಪ್ರಕಟವಾದ ಲೇಖನದಲ್ಲಿ (The Dilemmas of Sting Journalism) ಅದು ತನ್ನ ನಿಲುವನ್ನು ಸ್ಪಷ್ಟಪಡಿಸಿತ್ತು. ಸ್ಟಿಂಗ್ ಅಪರೇಶನ್‍ಗಳ ಸತ್ಯಾಸತ್ಯತೆಯನ್ನು ನಂಬಲು ಸಾಧ್ಯವಿಲ್ಲವಾದ್ದರಿಂದ ತಾವು ಅದಕ್ಕೆ ಪ್ರಾಮುಖ್ಯತೆ ಕೊಡುವುದಿಲ್ಲ ಎಂದು ಅದು ಹೇಳಿಕೊಂಡಿತ್ತಲ್ಲದೇ ಆಮಿಷವೊಡ್ಡಿ ಬಲೆಗೆ ಸಿಲುಕಿಸುವ ಕಾರ್ಯಾಚರಣೆಗೆ ತನ್ನ ತೀವ್ರ ವಿರೋಧವನ್ನು ವ್ಯಕ್ತಪಡಿಸಿತ್ತು.
   ನಿಜವಾಗಿ, 1973ರಲ್ಲಿ ಅಮೆರಿಕದಲ್ಲಿ ತೆರೆಕಂಡ The Sting ಎಂಬ ಸಿನಿಮಾದ ಸುಧಾರಿತ ರೂಪವೇ ಸ್ಟಿಂಗ್ ಆಪರೇಶನ್. ಆ ಸಿನಿಮದಲ್ಲಿ ರಾಬರ್ಟ್ ರೆಡ್‍ಫೋರ್ಡ್ ಮತ್ತು ನ್ಯೂಮನ್‍ರು ನಿರ್ವಹಿಸಿದ ಅದೇ ಪಾತ್ರವನ್ನು ಇವತ್ತು ಪತ್ರಕರ್ತರು ಮಾಡುತ್ತಿದ್ದಾರೆ. ಅಮೇರಿಕದಲ್ಲಿ ಈ ಕುಟುಕು ಕಾರ್ಯಾಚರಣೆಯ ದುರ್ಬಳಕೆ ಪ್ರಾರಂಭವಾದಂತೆಯೇ ಅದು ಹಲವು ಕಾನೂನುಗಳನ್ನು ರೂಪಿಸಿತು. ಕಾನೂನು ಜಾರಿ ಮಾಡುವ ಸಂಸ್ಥೆಗಳು ಮತ್ತು ಪೊಲೀಸ್ ಪರವಾನಿಗೆ ಇರುವ ಗೂಢಚರರಿಗೆ ಮಾತ್ರ ಅದು ಸ್ಟಿಂಗ್ ಆಪರೇಶನ್ ನಡೆಸುವುದಕ್ಕೆ ಅನುಮತಿ ನೀಡಿತು. ಪತ್ರಕರ್ತರಿಗೆ ಅವಕಾಶವನ್ನು ನಿರಾಕರಿಸಲಾಯಿತು. ಸ್ವೀಡನ್ ಅಂತೂ ಕುಟುಕು ಕಾರ್ಯಾಚರಣೆಯನ್ನೇ ನಿಷೇಧಿಸಿತು. ಅಷ್ಟಕ್ಕೂ, ಮಾಧ್ಯಮಗಳಿಗೆ ನೀತಿ ಸಂಹಿತೆ (Ethics) ಎಂಬುದು ಇರಬೇಡವೇ? ಮಾಧ್ಯಮ ರಂಗವು ಈ ಎಥಿಕ್ಸ್ ಅನ್ನು ಪಾಲಿಸಿದೆಯೋ ಇಲ್ಲವೋ ಎಂಬುದನ್ನು ನಿರ್ಧರಿಸುವ ಸಂಸ್ಥೆ ಯಾವುದು? 2001ರಲ್ಲಿ ಆಪರೇಶನ್ ವೆಸ್ಟ್ ಎಂಡ್ ಎಂಬ ಹೆಸರಿನಲ್ಲಿ ಟೆಹಲ್ಕಾವು ಕುಟುಕು ಕಾರ್ಯಾಚರಣೆ ನಡೆಸಿದಾಗ ಈ ಪ್ರಶ್ನೆಯನ್ನು ಹಲವರು ಎತ್ತಿದ್ದರು. ಅದು ತನ್ನ ಕಾರ್ಯಾಚರಣೆಯ ಭಾಗವಾಗಿ ರಕ್ಷಣಾ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ವೇಶ್ಯೆಯರನ್ನೂ ಮದ್ಯವನ್ನೂ ಒದಗಿಸಿತ್ತು. ಆ ಬಳಿಕ ಮುಂಬೈ ಪ್ರೆಸ್ ಕ್ಲಬ್‍ನಲ್ಲಿ ಅದು ಪತ್ರಿಕಾಗೋಷ್ಠಿಯನ್ನು ನಡೆಸಿ ತನ್ನ ಕ್ರಮವನ್ನು ಸಮರ್ಥಿಸಿಯೂ ಕೊಂಡಿತ್ತು. ಆದರೆ, ಟೆಹಲ್ಕಾದ ಕುಟುಕು ಕಾರ್ಯಾಚರಣೆಯು ಎತ್ತಿರುವ ನೈತಿಕ ಪ್ರಶ್ನೆ ಈಗಲೂ ಜೀವಂತವಾಗಿಯೇ ಇದೆ. ಭ್ರಷ್ಟಾಚಾರವನ್ನು ಬಯಲಿಗೆಳೆಯುವುದಕ್ಕೆ ಮಾಧ್ಯಮರಂಗ ಆ ಮಟ್ಟಕ್ಕೂ ಇಳಿಯ ಬೇಕೇ? ಸಮಾಜವು ನೈತಿಕತೆಯನ್ನು ಬಯಸುವುದು ಬರೇ ರಾಜಕಾರಣಿಗಳಿಂದ ಮಾತ್ರ ಅಲ್ಲವಲ್ಲ, ಪತ್ರಿಕಾ ರಂಗದಲ್ಲೂ ಅದು ಇರಬೇಕಲ್ಲವೇ? ವೇಶ್ಯೆಯರನ್ನು ಒದಗಿಸುವ ಮನಸ್ಥಿತಿ ಯಾವ ಬಗೆಯದು? ಓರ್ವರ ಭ್ರಷ್ಟತನವನ್ನು ಬಯಲಿಗೆಳೆಯುವುದಕ್ಕೆ ಅಂಥದ್ದನ್ನೆಲ್ಲ ಒದಗಿಸಲು ಒಂದು ಮಾಧ್ಯಮ ಸಂಸ್ಥೆ ಸಿದ್ಧವಾಗುತ್ತದೆಂದರೆ, ಆ ಸಂಸ್ಥೆಯನ್ನು ಎಷ್ಟರ ಮಟ್ಟಿಗೆ ನಂಬಬಹುದು? ಇದೊಂದೇ ಅಲ್ಲ, ಇಲ್ಲಿ ಇನ್ನೊಂದು ಅಚ್ಚರಿಯೂ ಇದೆ. ಭಾರತದಲ್ಲಿ ರಾಜಕಾರಣಿಗಳು ಮಾತ್ರವೇ ಸ್ಟಿಂಗ್ ಆಪರೇಶನ್‍ಗೆ ಗುರಿಯಾಗುತ್ತಿರುವುದೇಕೆ? ಭ್ರಷ್ಟಾಚಾರವು ಕೇವಲ ರಾಜಕಾರಣಿಗಳು ಮತ್ತು ಸರಕಾರಿ ಅಧಿಕಾರಿಗಳಿಗೆ ಮಾತ್ರ ಸೀಮಿತವೇ? ಉದಾರೀಕರಣಕ್ಕೆ ಈ ದೇಶವು ತೆರೆದುಕೊಂಡ ಬಳಿಕ ಒಟ್ಟು ವಾತಾವರಣವೇ ಬದಲಾಗಿ ಬಿಟ್ಟಿದೆ. ಹೆಸರಿಗೆ ಪ್ರಧಾನಿ, ಹಣಕಾಸು ಸಚಿವ, ರಕ್ಷಣಾ ಸಚಿವ.. ಎಂಬೆಲ್ಲಾ ವಿಂಗಡಣೆಗಳಿದ್ದರೂ ಅವೆಲ್ಲವನ್ನೂ ನೋಡಿಕೊಳ್ಳುವುದು ಮತ್ತು ನಿರ್ವಹಿಸುವುದು ಕಾರ್ಪೋರೇಟ್ ದಣಿಗಳು ಎಂಬ ಮಾತುಗಳು ಎಲ್ಲೆಡೆಯೂ ಹರಿದಾಡುತ್ತಿವೆ. ಅಂಬಾನಿ, ಟಾಟಾ, ಅದಾನಿ, ಐಟಿ ಕಂಪೆನಿಗಳಿಗೆ ಸರಕಾರದ ಮೇಲೆ ಹಿಡಿತವಿದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಕುಟುಕು ಕಾರ್ಯಾಚರಣೆ ನಡೆಸುವ ಮಾಧ್ಯಮ ಸಂಸ್ಥೆಗಳು ಈ ಮಂದಿಯ ಕಚೇರಿಯೊಳಗೆ ಈ ವರೆಗೂ ಕ್ಯಾಮರಾ ಇಟ್ಟಿಲ್ಲವಲ್ಲ, ಯಾಕೆ?
   ನಿಜವಾಗಿ, ಯಾರದೋ ಖಾಸಗಿ ಬದುಕಿಗೆ ಕ್ಯಾಮರಾ ಇಡುವುದು ಸುಲಭ. ಮದ್ಯವನ್ನೋ, ಹೆಣ್ಣನ್ನೋ ಅಥವಾ ಇನ್ನೇನನ್ನೋ ಕೊಟ್ಟು ಓರ್ವರನ್ನು ಸಿಲುಕಿಸುವುದು ಇಂದಿನ ದಿನಗಳಲ್ಲಿ ಭಾರೀ ಕಷ್ಟದ ಸಂಗತಿ ಅಲ್ಲ. ಆದರೆ, ಇದು ಸೃಷ್ಟಿ ಮಾಡುವ ನೈತಿಕ ಪ್ರಶ್ನೆ ಬಹಳ ಗಂಭೀರವಾದುದು. ಒಂದು ತಪ್ಪನ್ನು ಬಹಿರಂಗ ಪಡಿಸುವುದಕ್ಕಾಗಿ ತಪ್ಪಾದ ಮಾರ್ಗವನ್ನು ಅವಲಂಭಿಸುವುದು ಸಮರ್ಥನೀಯವೇ? ಹಾಗಂತ, ಮಾಧ್ಯಮ ಸಂಸ್ಥೆಗಳು ಸಾರ್ವಜನಿಕ ಸೊತ್ತೇನೂ ಅಲ್ಲವಲ್ಲ. ಅದರ ಆಡಳಿತ ಮಂಡಳಿ, ಪತ್ರಕರ್ತರು ಮತ್ತು ಇತರರು ಜನರಿಂದ ಓಟು ಪಡೆದು ಆಯ್ಕೆಯಾದವರೂ ಅಲ್ಲ. ಅಲ್ಲಿ ಎಷ್ಟು ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿದೆ ಎಂಬುದು ಜನರಿಗೆ ಗೊತ್ತಾಗುವುದೂ ಇಲ್ಲ. ಹೀಗಿರುವಾಗ, ಮಾಧ್ಯಮ ಸಂಸ್ಥೆಯೊಂದು ತನಿಖಾ ವರದಿಯನ್ನೋ, ಸವಿೂಕ್ಷೆಯನ್ನೋ ಅಥವಾ ಸ್ಟಿಂಗ್ ಅಪರೇಶನ್ ಅನ್ನೋ ಪ್ರಸಾರ ಮಾಡಿದ ಕೂಡಲೇ ಅದನ್ನು ನಾವು ನಂಬಲೇ ಬೇಕಾದ ಅಗತ್ಯ ಏನಿದೆ? ಒಂದು ವೇಳೆ, ಜನರ ವಿಶ್ವಾಸಕ್ಕೆ ಪಾತ್ರವಾದ ತಜ್ಞರ ತಂಡದ ತಪಾಸಣೆಯ ಬಳಿಕವೇ ಮಾಧ್ಯಮ ಸಂಸ್ಥೆಯೊಂದು ತನ್ನ ಪ್ರತಿ ಕಾರ್ಯಾಚರಣೆಯನ್ನೂ ಪ್ರಸಾರ ಮಾಡುವುದಾದರೆ ಅದು ಬೇರೆ ವಿಷಯ. ಆದರೆ ಇಂಥ ಪಾರದರ್ಶಕತೆಯನ್ನು ಇವತ್ತು ಯಾವ ಸಂಸ್ಥೆ ಅಳವಡಿಸಿಕೊಂಡಿದೆ? ಮಾಧ್ಯಮ ರಂಗದಲ್ಲಿರುವ ಪ್ರಾಮಾಣಿಕ ಸಂಸ್ಥೆಗಳನ್ನು ಗೌರವಿಸುತ್ತಲೇ ಈ ಅನುಮಾನವನ್ನು ವ್ಯಕ್ತಪಡಿಸಬೇಕಾಗಿದೆ.
   ಕಳೆದ ವಾರ T V 9 ಮತ್ತು ಸಚಿವ ಡಿ.ಕೆ. ಶಿವಕುಮಾರ್ ನಡುವೆ ಸ್ಟಿಂಗ್ ಅಪರೇಶನ್‍ನ ಕುರಿತಂತೆ ನಡೆದಿರುವ ವಿವಾದವು ಇಂಥದ್ದೊಂದು ಬರಹಕ್ಕೆ ಪ್ರೇರೇಪಿಸಿತು.

Wednesday, March 12, 2014

ಕ್ಷಮೆಯಾಚಿಸುವ ಮೋಚಿ ಮತ್ತು ಕ್ಷಮಿಸುವ ಕುತ್ಬುದ್ದೀನ್

   ಕುತ್ಬುದ್ದೀನ್ ಅನ್ಸಾರಿ
   ಅಶೋಕ್ ಮೋಚಿ
2002ರ ಗುಜರಾತ್ ಹತ್ಯಾಕಾಂಡದ ಪ್ರಸ್ತಾಪವಾದಾಗಲೆಲ್ಲ ಈ ಎರಡು ಮುಖಗಳು ಸದಾ ನಮ್ಮ ಮುಂದೆ ಸುಳಿದು ಹೋಗುತ್ತವೆ. ತನ್ನೆರಡು ಕೈಗಳನ್ನು ಜೋಡಿಸಿ, ಕಣ್ಣಲ್ಲಿ ನೀರು ತುಂಬಿಕೊಂಡು, ‘ರಕ್ಷಿಸಿ’ ಎಂದು ಬೇಡುವ ಕುತ್ಬುದ್ದೀನ್ ಅನ್ಸಾರಿ ಮತ್ತು, ಒಂದು ಕೈಯಲ್ಲಿ ಕಬ್ಬಿಣದ ರಾಡ್ ಹಿಡಿದು, ತಲೆಗೆ ಕೇಸರಿ ಪಟ್ಟಿಯನ್ನು ಕಟ್ಟಿ ವಿಜಯೋತ್ಸವ ಅಚರಿಸುವ ಅಶೋಕ್ ಭವನ್‍ಭಾಯಿ  ಪರ್‍ಮಾರ್ ಅಥವಾ ಅಶೋಕ್ ಮೋಚಿ. ಗುಜರಾತ್ ಹತ್ಯಾಕಾಂಡ ನಡೆದು 12 ವರ್ಷಗಳು ಕಳೆದರೂ ಈ ಎರಡು ಪೊಟೋಗಳಿಗೆ ಬೇಡಿಕೆ ಕುಂದಿಲ್ಲ. ಇವರಿಬ್ಬರನ್ನು ಹೊರತುಪಡಿಸಿ ಗುಜರಾತ್ ಹತ್ಯಾಕಾಂಡವನ್ನು ವ್ಯಾಖ್ಯಾನಿಸದಷ್ಟು ಇವರು ಆ ಘಟನೆಯ ಭಾಗವಾಗಿದ್ದಾರೆ. ಅಸಂಖ್ಯ ಬಾರಿ ಇವರ ಪೋಟೋಗಳನ್ನು ಮಾಧ್ಯಮಗಳು ಬಳಸಿಕೊಂಡಿವೆ. ಹತ್ಯಾಕಾಂಡದ ಭಯಾನಕತೆ ಮತ್ತು ಅಸಹಾಯಕತೆಯ ಎರಡು ಸಾಕ್ಷ್ಯಗಳಾಗಿ ಇವು ಜಾಗತಿಕವಾಗಿಯೇ ಇವತ್ತು ಗುರುತಿಗೀಡಾಗಿವೆ. ಗುಜರಾತ್‍ನ ನರೋಡ ಪಾಟಿಯಾದಲ್ಲಿರುವ ತನ್ನ ಮನೆಯ ಮೇಲಂತಸ್ತಿನಲ್ಲಿದ್ದ ಕುತ್ಬುದ್ದೀನ್ ಅನ್ಸಾರಿ ಮತ್ತು ಆತನ ಕುಟುಂಬವನ್ನು ಗಲಭೆಕೋರರು ಸುತ್ತವರಿದಿದ್ದರು. ಇನ್ನೇನು ಸಾವು ಖಚಿತ ಎಂದು ಅನಿಸುತ್ತಿರುವಾಗಲೇ ಅಲ್ಲಿಗೆ ಕ್ಷಿಪ್ರ ಕಾರ್ಯಾಚರಣಾ ಪಡೆ (Rapid Action Force) ಧಾವಿಸಿತ್ತು. ತಮ್ಮನ್ನು ‘ರಕ್ಷಿಸಿ’ ಎಂದು ಆತ ಸೇನೆಯೊಂದಿಗೆ ಕೈ ಮುಗಿದು ಬೇಡಿಕೊಳ್ಳುತ್ತಿರುವುದನ್ನು ಮುಂಬೈ ಮಿರರ್ ಪತ್ರಿಕೆಯ ಅರ್ಕೋ ದತ್ತ ಸೆರೆಹಿಡಿದಿದ್ದರು. ಹೀಗೆ ಕ್ಲಿಕ್ಕಿಸುವಾಗ, ಈ ಪೋಟೋ ಗುಜರಾತ್ ಹತ್ಯಾಕಾಂಡವನ್ನು ವ್ಯಾಖ್ಯಾನಿಸುವ ಮೈಲುಗಲ್ಲಾಗುತ್ತದೆ ಎಂದು ಅವರು ಅಂದುಕೊಂಡಿರಲಿಲ್ಲ. ಕುತ್ಬುದ್ದೀನ್‍ನ ನೀರು ತುಂಬಿದ ಕಣ್ಣು, ಕೈ, ಗಾಯಗೊಂಡ ಕೆನ್ನೆ, ಬಟ್ಟೆಯಲ್ಲಿ ಹರಡಿರುವ ರಕ್ತ... ಎಲ್ಲವೂ ಗುಜರಾತ್ ಹತ್ಯಾಕಾಂಡದ ಒಂದೊಂದು ಸಾಕ್ಷ್ಯವಾಗಿ ಆ ಬಳಿಕ ಜನರನ್ನು ತಟ್ಟಿದುವು. ಸರಕಾರ ಅಥವಾ ಮಾಧ್ಯಮಗಳು ಹೇಳುವುದಕ್ಕಿಂತ ಹೆಚ್ಚಿನದನ್ನು ಆ ಒಂದು ಪೋಟೋ ಅದ್ಭುತವಾಗಿ ಕಟ್ಟಿಕೊಟ್ಟಿತು. ಹಾಗೆಯೇ ಚಮ್ಮಾರನಾದ ಅಶೋಕ್ ಮೋಚಿಯ ಪೋಟೋವನ್ನು ಅಹ್ಮದಾಬಾದ್‍ನ ಮಧೇಶ್ವರ್‍ನ ಗಲಭೆ ಪೀಡಿತ ಪ್ರದೇಶದಲ್ಲಿ ಮುಂಬೈ ಮಿರರ್ ಪತ್ರಿಕೆಯ ಸೆಬಾಸ್ಟಿಯನ್ ಡಿಸೋಜ ಸೆರೆಹಿಡಿದರು.ಒಂದು ರೀತಿಯಲ್ಲಿ, ಗುಜರಾತ್ ಹತ್ಯಾಕಾಂಡದ ಕ್ರೌರ್ಯ, ರಕ್ತದಾಹವನ್ನು ಗ್ರಹಿಸಿಕೊಳ್ಳುವುದಕ್ಕೆ ಮೋಚಿಯ ಪೋಟೋವೊಂದೇ ಧಾರಾಳ ಸಾಕು. ವಿಶೇಷ ಏನೆಂದರೆ, ಮೊನ್ನೆ ಮಾರ್ಚ್ 4ರಂದು ಕೇರಳದ ಕಣ್ಣೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇವರಿಬ್ಬರೂ ಒಟ್ಟಾದರು. ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಟೈಲರ್ ಆಗಿರುವ 40 ವರ್ಷದ ಕುತ್ಬುದ್ದೀನ್‍ಗೆ ಮೋಚಿ ಹೂವನ್ನು ನೀಡಿದ. ತನ್ನ ಕೃತ್ಯಕ್ಕಾಗಿ ಕ್ಷಮೆಯಾಚಿಸಿದ. ಮೋದಿ ಆಡಳಿತದ ಬಗ್ಗೆ, ಗಲಭೆಯನ್ನು ಪ್ರಾಯೋಜಿಸಿದವರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ. ತಾನೀಗ ಅವರೆಲ್ಲರ ಸಂಪರ್ಕವನ್ನು ಕಡಿದು ನೈಜ ಮನುಷ್ಯನಾಗಿದ್ದೇನೆ ಅಂದ. ಹತ್ಯಾಕಾಂಡಕ್ಕಾಗಿ ತಾನು ತೀವ್ರ ಪಶ್ಚಾತ್ತಾಪ ಪಡುತ್ತಿದ್ದೇನೆ ಎಂದು ಘೋಷಿಸಿ ಕುತ್ಬುದ್ದೀನನ್ನು ಅಪ್ಪಿಕೊಂಡ.
   ನಿಜವಾಗಿ, ‘ದ್ವೇಷಕ್ಕೆ ದೀರ್ಘ ಆಯುಷ್ಯವಿಲ್ಲ’ ಎಂಬುದನ್ನು ಅತ್ಯಂತ ಬಲವಾಗಿ ಸಾರುವ ಘಟನೆ ಇದು. 2002ರಲ್ಲಿ ಮೋಚಿ ಬಲಾಢ್ಯತೆಯ ಸಂಕೇತವಾಗಿದ್ದ. ಕ್ರೌರ್ಯವೇ ಪರಿಹಾರ ಎಂಬ ಸಂದೇಶದ ಪ್ರತಿಬಿಂಬವಾಗಿದ್ದ. ತನ್ನ ಧರ್ಮಕ್ಕೆ ಹೊರತಾದವರನ್ನು ಕೊಲ್ಲುವುದು ಗೌರವಾರ್ಹ ಎಂದು ಅಂದುಕೊಂಡವರ ರಾಯಭಾರಿಯಾಗಿದ್ದ. ಅದೇ ವೇಳೆ ಕುತ್ಬುದ್ದೀನ್ ಅಸಹಾಯಕತೆಯ ಪ್ರತಿರೂಪ. ಆದರೆ 12 ವರ್ಷಗಳ ಬಳಿಕ ಈ 2014ರಲ್ಲಿ ಅವರಿಬ್ಬರೂ ಮುಖಾಮುಖಿಯಾದಾಗ ಒಟ್ಟು ಚಿತ್ರಣವೇ ಬದಲಾಗಿ ಬಿಟ್ಟಿದೆ. ಕ್ರೌರ್ಯವೇ ಪರಿಹಾರ ಅನ್ನುತ್ತಿದ್ದವ ಕ್ಷಮೆಯಾಚಿಸುತ್ತಿದ್ದಾನೆ. ಅಸಹಾಯಕನಾಗಿದ್ದವ ಕ್ಷಮೆ ನೀಡುವಷ್ಟು ಬಲಾಢ್ಯನಾಗಿದ್ದಾನೆ. ಅನ್ಸಾರಿಗೆ ಮದುವೆಯಾಗಿ ಮೂರು ಮಕ್ಕಳಿದ್ದರೆ ಮೋಚಿ ಇನ್ನೂ ಮದುವೆಯಾಗಿಲ್ಲ. ಹಲೀಮ್ ನಿಕಾಡಿ ಎಂಬ ರಸ್ತೆ ಬದಿಯಲ್ಲಿ ಆತ ಈಗಲೂ ಚಮ್ಮಾರ ವೃತ್ತಿಯನ್ನು ಮಾಡುತ್ತಿದ್ದಾನೆ. ತಾನು ಗಲಭೆಯಲ್ಲಿ ಸೂತ್ರಧಾರಿಗಳ ದಾಳವಾಗಿ ಬಳಕೆಗೀಡಾಗಿದ್ದೇನೆ ಅನ್ನುವ ಪಶ್ಚಾತ್ತಾಪದ ಭಾವ ಆತನ ಪ್ರತಿ ನಡೆಯಲ್ಲೂ ವ್ಯಕ್ತವಾಗುತ್ತಿದೆ.
ಇಷ್ಟಕ್ಕೂ, ಕುತ್ಬುದ್ದೀನ್ ಮತ್ತು ಮೋಚಿ ಸಮಾಗಮದ ಬಗ್ಗೆ ಮಾಧ್ಯಮಗಳೇಕೆ ನಿರ್ಲಕ್ಷ್ಯ ತಾಳಿದುವು? ಈ ಘಟನೆಯನ್ನು ಎತ್ತಿಕೊಂಡು ಗಂಭೀರ ಚರ್ಚೆ ನಡೆಸುವುದಕ್ಕೆ ಮತ್ತು ಸಮಾಜಕ್ಕೆ ಒಂದೊಳ್ಳೆಯ ಸಂದೇಶವನ್ನು ಸಾರುವುದಕ್ಕೆ ಮುಖ್ಯವಾಹಿನಿಯ ಮಾಧ್ಯಮಗಳೇಕೆ ಪ್ರಯತ್ನಿಸಲಿಲ್ಲ? ದೆಹಲಿಯಲ್ಲಿ ನಡೆಯುವ ಘಟನೆಯನ್ನು ಮಾತ್ರ ಮಾಧ್ಯಮಗಳು ಗಂಭೀರವಾಗಿ ಪರಿಗಣಿಸುತ್ತವೆ ಎಂಬ ಆರೋಪವನ್ನು ನಿಜಗೊಳಿಸುವಂತೆ ಅವು ವರ್ತಿಸಿದ್ದೇಕೆ? ನಿರ್ಭಯ ಪ್ರಕರಣದ ಸಂದರ್ಭದಲ್ಲೂ ಇಂಥದ್ದೊಂದು ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿತ್ತು. ಕ್ರೌರ್ಯವೊಂದರ ಪ್ರತಿರೂಪವಾದ ವ್ಯಕ್ತಿ ತನ್ನ ಕೃತ್ಯಕ್ಕಾಗಿ ಪಶ್ಚಾತ್ತಾಪ ಪಡುವುದು ಮತ್ತು ಸಂತ್ರಸ್ತನಲ್ಲಿ ಕ್ಷಮೆಯಾಚಿಸುವುದೆಲ್ಲ ಸಣ್ಣ ಸಂಗತಿ ಅಲ್ಲವಲ್ಲ. ಮೋಚಿಯನ್ನು ಅಭಿಮಾನದಿಂದ ನೋಡುವ ಒಂದು ವರ್ಗ ಈ ದೇಶದಲ್ಲಿ ಇವತ್ತು ಖಂಡಿತ ಇದೆ. ಒಂದು ಸಮುದಾಯಕ್ಕೆ ಪಾಠ ಕಲಿಸಿದ ಹೀರೋ ಎಂಬಂತೆ ಆತನನ್ನು ಬಿಂಬಿಸುವ ಮಂದಿಯೂ ಇದ್ದಾರೆ. ಅಲ್ಲದೇ ಚುನಾವಣೆಯ ಈ ಸಂದರ್ಭದಲ್ಲಿ ದ್ವೇಷದ ವಾತಾವರಣವನ್ನು ಹುಟ್ಟು ಹಾಕುವ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಮಾಧ್ಯಮಗಳು ಮೋಚಿಯನ್ನು ಎದುರಿಟ್ಟುಕೊಂಡು ಚರ್ಚಿಸಿರುತ್ತಿದ್ದರೆ ಅದು ಸಮಾಜದ ಮೇಲೆ ಪ್ರಭಾವ ಬೀರುತ್ತಿತ್ತಲ್ಲವೇ? ಕ್ರೌರ್ಯದ ವಿಫಲ ಮುಖವಾಗಿ ಆತ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೆ ದೇಶಾದ್ಯಂತ ಅದು ಗಟ್ಟಿ ಸಂದೇಶ ರವಾನಿಸುತ್ತಿತ್ತಲ್ಲವೇ? ನಿಜವಾಗಿ, ಕೋಮುವಾದದ ಮಾತುಗಳು ಮತ್ತೆ ಸದ್ದು ಮಾಡುತ್ತಿರುವ ಇಂದಿನ ದಿನಗಳಲ್ಲಿ ಮೋಚಿ ಬ್ರೇಕಿಂಗ್ ನ್ಯೂಸ್ ಆಗಬೇಕಾದ ತುರ್ತು ಅಗತ್ಯ ಇದೆ. ಲೋಕಸಭಾ ಚುನಾವಣೆಯನ್ನು ಎದುರಿಟ್ಟುಕೊಂಡು ಟಿ.ವಿ. ಚಾನೆಲ್‍ಗಳು ಈಗಾಗಲೇ ಚರ್ಚೆಯನ್ನು ಪ್ರಾರಂಭ ಮಾಡಿವೆ. ಮೋದಿ ಮತ್ತು ರಾಹುಲ್‍ರ ದೌರ್ಬಲ್ಯ-ಪ್ರಾಬಲ್ಯದ ಬಗ್ಗೆ ಅವು ಗಂಟೆಗಟ್ಟಲೆ ಚರ್ಚೆಯನ್ನು ಪ್ರಸಾರ ಮಾಡುತ್ತಿವೆ. ಆಮ್ ಆದ್ಮಿ ಪಕ್ಷ, ತೃತೀಯ ರಂಗ, ಮಮತಾ ಮತ್ತು ಜಯಲಲಿತಾರ ಫೆಡರಲ್ ಒಕ್ಕೂಟ... ಎಲ್ಲದರ ಬಗ್ಗೆಯೂ ಚರ್ಚಿಸುವುದಕ್ಕೆ ಅವು ಧಾರಾಳ ಸಮಯವನ್ನು ವಿೂಸಲಿಡುತ್ತಿವೆ. ಹಾಗಂತ, ಇವೆಲ್ಲ ತಪ್ಪು ಎಂದಲ್ಲ. ಆದರೆ, ನಮ್ಮ ಮುಖ್ಯವಾಹಿನಿಯ ಟಿ.ವಿ. ಚಾನೆಲ್‍ಗಳಲ್ಲಿ ಮೋಚಿ ಒಂದರ್ಧ ಗಂಟೆ ಬ್ರೇಕಿಂಗ್ ನ್ಯೂಸ್ ಆಗುವುದನ್ನೊಮ್ಮೆ ಕಲ್ಪಿಸಿಕೊಳ್ಳಿ. ರಾಜ್‍ದೀಪ್ ಸರ್ದೇಸಾೈ, ಬರ್ಖಾದತ್, ಅರ್ನಾಬ್ ಗೋಸ್ವಾಮಿ ಅಥವಾ ಕನ್ನಡದ ವಿವಿಧ ಚಾನೆಲ್‍ಗಳ ಆ್ಯಂಕರ್‍ಗಳು ಆತನನ್ನು ಕುಳ್ಳಿರಿಸಿ ಸಂದರ್ಶಿಸುವ ವಾತಾವರಣವನ್ನೊಮ್ಮೆ ಊಹಿಸಿ. ಅದು ಎಷ್ಟು ಪ್ರಭಾವಶಾಲಿಯಾಗುತ್ತಿತ್ತು? ಧರ್ಮದ ನೆಲೆಯಲ್ಲಿ ಸಮಾಜದ ವಿಭಜನೆಯನ್ನು ಬಯಸುವ; ದ್ವೇಷ, ಕ್ರೌರ್ಯದ ಭಾಷೆಯಲ್ಲಿ ಮಾತನಾಡುವ ಮಂದಿಯ ಪಾಲಿಗೆ ಪಶ್ಚಾತ್ತಾಪ ಪಡುವ ಮೋಚಿ ಅತಿ ದೊಡ್ಡ  ಎದುರಾಳಿ. ಆತ ತನ್ನ ಕೃತ್ಯಕ್ಕಾಗಿ ಕ್ಷಮೆ ಯಾಚಿಸಿದಷ್ಟೂ ಈ ಮಂದಿಯ ಯೋಜನೆ ವಿಫಲವಾಗುತ್ತಲೇ ಹೋಗುತ್ತದೆ. ಆತ ಹೆಚ್ಚೆಚ್ಚು ಮಾತಾಡಿದಂತೆಲ್ಲ ಈ ಮಂದಿಯ ಭಾಷಣ, ಪ್ರಚಾರಗಳು ಕಡಿಮೆಯಾಗುತ್ತಾ ಹೋಗುತ್ತವೆ. ಕುತ್ಬುದ್ದೀನ್‍ನ ಹೆಗಲಿಗೆ ಆತ ಕೈಯಿರಿಸಿ ಸಹೋದರತ್ವ ಪ್ರದರ್ಶಿಸುವುದನ್ನು ಈ ಮಂದಿ ಸಹಿಸುವುದಕ್ಕೆ ಸಾಧ್ಯವೇ ಇಲ್ಲ. ಆದರೆ, ಈ ದೇಶದ ಇವತ್ತಿನ ತುರ್ತು ಅಗತ್ಯ ಇದು. ಮೋಚಿ ಹೆಚ್ಚೆಚ್ಚು ಮಾತಾಡಬೇಕು. ಕುತ್ಬುದ್ದೀನ್ ಮತ್ತು ಆತನ ಸಮುದಾಯವನ್ನು ಕ್ರೂರವಾಗಿ ನಡೆಸಿಕೊಂಡ ತನ್ನ ಕೃತ್ಯಕ್ಕೆ ಆತ ಪಶ್ಚಾತ್ತಾಪ ಪಡುತ್ತಾ, ಕೋಮುವಾದದ ಪೊಳ್ಳುತನವನ್ನು ಬಯಲಿಗೆಳೆಯಬೇಕು. ಆದ್ದರಿಂದಲೇ ಮಾಧ್ಯಮಗಳು ಆತನಿಗೆ ಕವರೇಜ್ ಕೊಡಬೇಕಿತ್ತೆಂದು ಅನಿಸಿದ್ದು. ಆತನನ್ನು ಕೂರಿಸಿ ಮಾತಾಡಿಸಬೇಕಿತ್ತೆಂದು ಬಯಸಿದ್ದು.
   ಅಂದಹಾಗೆ, ಗುಜರಾತ್ ಹತ್ಯಾಕಾಂಡದ ಸಮಯದಲ್ಲಿ ಮೋಚಿಗೆ 27 ವರ್ಷ. ಬಹುಶಃ ಕುತ್ಬುದ್ದೀನ್ ಸಮುದಾಯದ ಬಗ್ಗೆ ಹರಡಲಾಗಿರುವ ಸುಳ್ಳುಗಳನ್ನು ಒರೆಗೆ ತಿಕ್ಕಿ ನೋಡುವಷ್ಟು ಪ್ರೌಢ ವಯಸ್ಸು ಅದಲ್ಲ. ಅಲ್ಲದೇ ಹಾಗೆ ನೋಡಬೇಕಾದ ಅಗತ್ಯವನ್ನು ಚಮ್ಮಾರನಾಗಿರುವ ಆತನ ಸುತ್ತ-ಮುತ್ತಲಿನ ವಾತಾವರಣ ಒತ್ತಾಯಿಸುವ ಸಾಧ್ಯತೆಯೂ ಇಲ್ಲ. ನಿಜವಾಗಿ, ಧರ್ಮದ ಹೆಸರಲ್ಲಿ ರಕ್ತ ಹರಿಸಲು ಸಿದ್ಧವಾಗುವ ಗುಂಪಿನ ದೌರ್ಬಲ್ಯ ಇದು. ಮೊದಲನೆಯದಾಗಿ, ಅವರಿಗೆ ನಿರ್ದಿಷ್ಟ ಉದ್ಯೋಗ ಇರುವುದಿಲ್ಲ. ಮಾತ್ರವಲ್ಲ, ಇರುವ ಉದ್ಯೋಗವೂ ಭದ್ರವಾಗಿರುವುದಿಲ್ಲ. ಯಾವುದು ಸುಳ್ಳು, ಯಾವುದು ಸತ್ಯ, ಏಕೆ ದ್ವೇಷಿಸಬೇಕು, ಏಕೆ ಕೊಳ್ಳಿಯಿಡಬೇಕು.. ಎಂಬಿತ್ಯಾದಿಯಾಗಿ ಆಲೋಚಿಸುವಷ್ಟು ಪ್ರೌಢತೆಯಾಗಲಿ, ವೈಚಾರಿಕ ಒಳನೋಟವಾಗಲಿ ಇರುವುದಿಲ್ಲ. ತಾವು ಸೂತ್ರದ ಗೊಂಬೆಗಳಾಗುತ್ತಿದ್ದೇವೋ ಎಂಬುದಾಗಿ ವಿಮರ್ಶಿಸಿಕೊಳ್ಳುವಷ್ಟು ಸಹನೆಯೂ ಇರುವುದಿಲ್ಲ. ಹೀಗೆ ಅರಿವಿಲ್ಲದೆಯೋ ಅಥವಾ ಹುಂಬತನದಿಂದಲೋ ಕ್ರೌರ್ಯದಲ್ಲಿ ಪಾಲ್ಗೊಂಡು ಬಳಿಕ ‘ಯೂಸ್ ಏಂಡ್ ತ್ರೊ’ ಆಗುವ ಎಲ್ಲರಿಗೂ ಮೋಚಿ ದೊಡ್ಡದೊಂದು ಪಾಠ ಹೇಳಿ ಕೊಟ್ಟಿದ್ದಾನೆ. ಈ ಪಾಠ ದ್ವೇಷದ್ದಲ್ಲ, ಪ್ರೀತಿಯದ್ದು. ವಿಭಜನೆಯದ್ದಲ್ಲ ಆಲಿಂಗನದ್ದು. ಹಿಂದೂ ಮತ್ತು ಮುಸ್ಲಿಮರು ಪರಸ್ಪರ ಭುಜಕ್ಕೆ ಕೈಯಿಟ್ಟು ಸಹೋದರರಂತೆ ಬದುಕಬೇಕಾದವರೆಂಬ ನೀತಿಯದ್ದು. ಈ ಪಾಠಕ್ಕೆ ಜಯವಾಗಲಿ. ಗುಜರಾತ್ ಹತ್ಯಾಕಾಂಡವನ್ನು ‘ಮಾದರಿ’ಯೆಂದು ನಂಬಿರುವವರಿಗೆ ಪಶ್ಚಾತ್ತಾಪ ಪಡುವ ಮೋಚಿ ಮಾದರಿಯಾಗಲಿ.

Thursday, March 6, 2014

ಸೇನೆಯ ಸಾಮರ್ಥ್ಯವನ್ನೇ ಪ್ರಶ್ನಿಸುವ ಈ ಅಭಿಮಾನಿಗಳಿಂದ ಏನನ್ನು ನಿರೀಕ್ಷಿಸುತ್ತೀರಿ?

    ಫ್ರ್ರಾಂಕೆನ್‍ಸ್ಪೈನ್ಸ್ ಮಾನ್‍ಸ್ಟರ್
 ಇಂಥದ್ದೊಂದು ಪದ ಹುಟ್ಟಿಕೊಂಡದ್ದೇ 1818ರಲ್ಲಿ. ಕತೆ, ಕಾದಂಬರಿ, ಸಿನಿಮಾ, ನಾಟಕಗಳು ತೀರಾ ಅಪರೂಪವಾಗಿದ್ದ ಮತ್ತು ಜನಸಾಮಾನ್ಯರ ಕೈಗೆ ಎಟುಕದಷ್ಟು ದೂರವಾಗಿದ್ದ ಆ ಕಾಲದಲ್ಲಿ ಬ್ರಿಟನ್ನಿನ 18ರ ಯುವತಿ ಮೇರಿ ಶೆಲ್ಲಿ ಎಂಬಾಕೆ ಕಾದಂಬರಿ ಬರೆಯಲು ಪ್ರಾರಂಭಿಸಿದರು. ವಿಲಕ್ಷಣ ವಿಜ್ಞಾನಿ ವಿಕ್ಟರ್ ಫ್ರಾಂಕೆನ್‍ಸ್ಪೈನ್‍ನನ್ನು ಕೇಂದ್ರವಾಗಿಟ್ಟು ಆಕೆ ಬರೆಯ ತೊಡಗಿದಳು. ವೈಜ್ಞಾನಿಕ ಸಂಶೋಧನೆಗಳ ಕಲ್ಪಿತ ಕಥೆಯನ್ನು ವಸ್ತುವಾಗಿಟ್ಟುಕೊಂಡು ಪ್ರಕಟವಾದ ಮೊದಲ ಕಾದಂಬರಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಕಾದಂಬರಿಯಲ್ಲಿ ನಾಯಕ ಫ್ರಾಂಕೆನ್‍ಸ್ಪೈನನು ಪ್ರಯೋಗಾಲಯದಲ್ಲಿ ಒಂದು ಭೀಕರ ಜೀವಿಯನ್ನು ಸೃಷ್ಟಿಸುತ್ತಾನೆ. ಆದರೆ ಆ ಜೀವಿಗೆ ಆತ ಹೆಸರಿಡುವುದಿಲ್ಲ. ಕ್ರಮೇಣ ಆ ಜೀವಿ ಆತನ ಇಚ್ಛೆಗೆ ವಿರುದ್ಧವಾಗಿ ವರ್ತಿಸ ತೊಡಗುತ್ತದೆ. ಆತ ಮತ್ತು ಆ ಜೀವಿ ಮುಖಾಮುಖಿಯಾಗುವುದು, ಮಾತಿನ ವಿನಿಮಯ ನಡೆಯುವುದು, ಸಿಟ್ಟು, ಹತಾಶೆಗಳು ಕಾಣಿಸಿಕೊಳ್ಳುವುದು... ಎಲ್ಲವೂ ನಡೆಯುತ್ತದೆ. ಇಂಥ ಸಂದರ್ಭಗಳಲ್ಲಿ ಆತ ಈ ಜೀವಿಯನ್ನು ಪಿಶಾಚಿ (Fiend), ಪಾಪಿ (Wretch), ಪೆಡಂಭೂತ (Monster), ಕೆಟ್ಟ ಹುಳ (Insect) ಪ್ರಾಣಿ.. ಎಂದೆಲ್ಲಾ ವಿವಿಧ ಹೆಸರುಗಳಿಂದ ಕರೆಯುತ್ತಾನೆ. ಒಂದು ರೀತಿಯ ಅಸಹನೆ, ಕಿಡಿಕಾರುವಿಕೆಗಳು ಆ ಎಲ್ಲ ಮಾತುಗಳಲ್ಲಿ ವ್ಯಕ್ತವಾಗುತ್ತಿರುತ್ತವೆ. 1818ರಲ್ಲಿ ಫ್ರಾಂಕೆನ್‍ಸ್ಪೈನ್ ಎಂಬ ಹೆಸರಲ್ಲಿ ಪ್ರಕಟವಾದ ಈ ಕಾದಂಬರಿ 1823ರಲ್ಲಿ ಮರು ಮುದ್ರಣಗೊಳ್ಳುತ್ತದೆ. ಮಾತ್ರವಲ್ಲ, ಕ್ರಮೇಣ ಫ್ರಾಂಕೆನ್‍ಸ್ಪೈನ್ಸ್ ಮಾನ್‍ಸ್ಟರ್ (ಫ್ರಾಂಕೆನ್‍ಸ್ಪೈನ್‍ನ ಪೆಡಂಭೂತ) ಎಂಬ ಹೊಸ ಪದ ಪ್ರಯೋಗವೇ ಹುಟ್ಟಿಕೊಳ್ಳುತ್ತದೆ. ತಮಗಾಗದವರನ್ನು ಹೆಸರೆತ್ತದೇ ನಿಂದನೀಯ ಪದಗಳ ಮೂಲಕ ಸಂಬೋಧಿಸುವ ಶೈಲಿಗೆ ಫ್ರಾಂಕೆನ್‍ಸ್ಪೈನ್ಸ್ ಮಾನ್‍ಸ್ಟರ್ ಎನ್ನುವ ಪದಪ್ರಯೋಗ ರೂಢಿಗೆ ಬರುತ್ತದೆ.
   ಅಷ್ಟಕ್ಕೂ, 1818ರ ಕಾದಂಬರಿಯಲ್ಲಿ ಕಾಣಿಸಿಕೊಂಡ ಫ್ರಾಂಕೆನ್‍ಸ್ಪೈನ್ಸ್ ಮಾನ್‍ಸ್ಟರ್ ಶೈಲಿಯನ್ನು ಈ 2014ರಲ್ಲಿ ನೆನಪಿಸಿಕೊಳ್ಳುವುದಕ್ಕೆ ಕಾರಣ ಇದೆ.
 ಸಿಕ್ಕುಲರ್, ಲದ್ದಿಜೀವಿ, ದೇಶದ್ರೋಹಿಗಳು, ಹಿಂದೂ ವಿರೋಧಿ, ಜಿಹಾದಿಸ್ಟ್, ತಾಲಿಬಾನಿಗಳು, ಮತಾಂಧರು, ಪಾಕಿಗಳು, ಅಭಿವೃದ್ಧಿ ವಿರೋಧಿಗಳು.. ಇಂಥ ಪದಪ್ರಯೋಗಗಳು ಫೇಸ್‍ಬುಕ್, ಟ್ವೀಟರ್ ಗಳಂಥ ಸೋಶಿಯಲ್ ವಿೂಡಿಯಾಗಳಲ್ಲಿ ಇವತ್ತು ತುಂಬಿಕೊಂಡಿವೆ. ತಮ್ಮ ವಿಚಾರಧಾರೆಗೆ ಸರಿಹೊಂದದ ಸ್ಟೇಟಸ್ ಅನ್ನೋ ಲೇಖನವನ್ನೋ ಪೋಸ್ಟ್ ಮಾಡಿದವರನ್ನು ಒಂದೇ ಮಾತಿಗೆ ತೆಗಳುವ, ಸಾರಾಸಗಟು ನಿಂದಿಸುವ ಬೆಳವಣಿಗೆಗಳು ನಡೆಯುತ್ತಿವೆ. ಅದರಲ್ಲೂ ನರೇಂದ್ರ ಮೋದಿಯವರನ್ನು ವಿಮರ್ಶಿಸುವ ಲೇಖನಗಳು ಪ್ರಕಟವಾದರೆ, ಇಂಥ ಪದಗಳ ಬಳಕೆ ಅತಿ ಎನ್ನಿಸುವಷ್ಟು ಜೋರಾಗಿರುತ್ತದೆ. ಅಂಥ ಲೇಖನಗಳನ್ನು ಬರೆದವ ಮುಸ್ಲಿಮ್ ಹೆಸರಿನವನಾದರೆ ತಕ್ಷಣ- ಜಿಹಾದಿ, ಹಿಂದೂ ವಿರೋಧಿ, ತಾಲಿಬಾನಿ, ಮತಾಂಧ.. ಎಂದೆಲ್ಲಾ ಕರೆಯಲಾಗುತ್ತದೆ. ಆತನ ಧರ್ಮದ ಬಗ್ಗೆ, ಅದನ್ನು ಅನುಸರಿಸುವವರ ದೌರ್ಬಲ್ಯಗಳ ಬಗ್ಗೆ, ಕಾನೂನು ಕಟ್ಟಳೆಗಳ ಕುರಿತಂತೆ ಹೀನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ. ಲೇಖನವು ಮೋದಿ ಎಂಬ ಓರ್ವ ಅಪ್ಪಟ ರಾಜಕೀಯ ನಾಯಕನ ಕುರಿತಂತೆ ಆಗಿದ್ದರೂ ಕಾಮೆಂಟ್‍ಗಳಂತೂ ಬರೆದವನ ಧರ್ಮದ ಸುತ್ತ ಕೇಂದ್ರಿತವಾಗಿರುತ್ತದೆ. ಮೋದಿಯನ್ನು ವಿಮರ್ಶಿಸುವುದೆಂದರೆ ಹಿಂದೂ ಧರ್ಮವನ್ನು ವಿಮರ್ಶಿಸಿದಂತೆ, ಮೋದಿಯನ್ನು ಟೀಕಿಸುವುದೆಂದರೆ, ಹಿಂದೂ ಧರ್ಮವನ್ನು ಅವಹೇಳನಗೊಳಿಸಿದಂತೆ.. ಎಂಬಂಥ ವಾತಾವರಣವನ್ನು ಸೃಷ್ಟಿ ಮಾಡಲಾಗುತ್ತದೆ. ಒಂದು ವೇಳೆ ಮೋದಿಯನ್ನು ವಿಮರ್ಶಿಸುವ ಲೇಖನ ಬರೆದವರು ಹಿಂದೂ ಹೆಸರಿನವರಾದರೆ ತಕ್ಷಣ- ಈ ಮಂದಿ ಸಿಕ್ಕುಲರಿಸ್ಟ್, ಲದ್ದಿಜೀವಿ, ನಕ್ಸಲ್ ಬೆಂಬಲಿಗರು.. ಎಂದೆಲ್ಲಾ ನಿಂದಿಸತೊಡಗುತ್ತಾರೆ. ಹಿಂದೂ ವಿರೋಧಿ ಅನ್ನುತ್ತಾರೆ. ಹೀಗೆ ಮೋದಿಯನ್ನು ವಿಮರ್ಶಾತೀತ ಎಂಬ ರೀತಿಯಲ್ಲಿ ಬಿಂಬಿಸುತ್ತಾ, ಫ್ರಾಂಕೆನ್‍ಸ್ಟೈನ್ಸ್ ಮಾನ್‍ಸ್ಟರ್ ಶೈಲಿಯ ಪದಪ್ರಯೋಗದೊಂದಿಗೆ ಮುಗಿಬೀಳುತ್ತಾರೆ. ನಿಜವಾಗಿ, ಇಂಥ ಬೆಳವಣಿಗೆಯನ್ನು ತೀರಾ ನಿರ್ಲಕ್ಷಿಸಿ ಬಿಡುವಂತೆಯೂ ಇಲ್ಲ. ಕೇವಲ ಓರ್ವ ರಾಜಕಾರಣಿಯಷ್ಟೇ ಆಗಿರುವ ಮೋದಿಯ ಸುತ್ತ ಇಂಥದ್ದೊಂದು ಭ್ರಮೆಯನ್ನು ಹುಟ್ಟುಹಾಕುವುದರಿಂದ ಉಂಟಾಗಬಹುದಾದ ದೂರಗಾಮಿ ಪರಿಣಾಮಗಳೇನು? ಮೋದಿ ಏನು ಮಾಡಿದರೂ, ಏನು ಹೇಳಿದರೂ ಸರಿ ಎಂಬೊಂದು ಮನಸ್ಥಿತಿ ಅಂತಿಮವಾಗಿ ಯಾವ ಬಗೆಯ ವಾತಾವರಣವನ್ನು ಉಂಟು ಮಾಡೀತು? ಬಿಜೆಪಿಯಾಗಲಿ, ಕಾಂಗ್ರೆಸ್ ಆಗಲಿ ಬರೇ ರಾಜಕೀಯ ಪಕ್ಷಗಳು ಮಾತ್ರ. ಅದರಾಚೆಗೆ ಈ ಪಕ್ಷಗಳಲ್ಲಿ ದೇವಾಂಶ ಸಂಭೂತರೋ, ಪ್ರವಾದಿಗಳೋ ಯಾರೂ ಇಲ್ಲ. ಭ್ರಷ್ಟಾಚಾರಗಳಲ್ಲಿ ಎರಡೂ ಪಕ್ಷಗಳು ಹೆಸರು ಕೆಡಿಸಿಕೊಂಡಿವೆ. ನೈತಿಕತೆ, ಪ್ರಾಮಾಣಿಕತೆ, ಸಜ್ಜನಿಕೆ.. ಮುಂತಾದುವುಗಳ ಉಲ್ಲಂಘನೆಗಳಲ್ಲಿ ಎರಡೂ ಪಕ್ಷಗಳು ಪರಸ್ಪರ ಸ್ಪರ್ಧಿಸುತ್ತಿವೆ. ಗೋಧ್ರಾದಲ್ಲಿ ರೈಲು ದಹನಗೊಂಡದ್ದು ಮತ್ತು ಆ ಬಳಿಕ ಹತ್ಯಾಕಾಂಡ ನಡೆದದ್ದೆಲ್ಲ ಮೋದಿ ಆಡಳಿತದಲ್ಲೇ. ಅದಾನಿ ಕಂಪೆನಿಗೆ 1 ರೂಪಾಯಿಗೆ ಒಂದು ಎಕರೆ ಭೂಮಿ ಕೊಟ್ಟದ್ದೂ ಮೋದಿಯೇ. 10 ವರ್ಷಗಳ ಕಾಲ ಲೋಕಾಯುಕ್ತರನ್ನು ನೇಮಕಗೊಳಿಸದೇ ಗುಜರಾತ್ ಲೋಕಾಯುಕ್ತ ಇಲಾಖೆಯನ್ನೇ ನಿಶ್ಶಸ್ತ್ರಗೊಳಿಸಿದ್ದೂ ಅವರೇ. ಗೋಧ್ರಾ ಹತ್ಯಾಕಾಂಡ, ನಕಲಿ ಎನ್‍ಕೌಂಟರ್ ಸಹಿತ ಹಲವು ಗುರುತರ ಆರೋಪಗಳನ್ನು ಅವರು ಕಳೆದ ಒಂದು ದಶಕದ ಅವಧಿಯಲ್ಲಿ ಎದುರಿಸುತ್ತಲೇ ಬಂದಿದ್ದಾರೆ. ಇದು ಫ್ರಾಂಕೆನ್‍ಸ್ಟೈನ್ಸ್ ಮಾನ್‍ಸ್ಟರ್ ಶೈಲಿಯಲ್ಲಿ ಮಾತಾಡುವ ಅವರ ಬೆಂಬಲಿಗರಿಗೂ ಗೊತ್ತು. ಹೀಗಿರುವಾಗ ಮೋದಿ ಪ್ರಶ್ನಾತೀತರಾಗುವುದು ಹೇಗೆ? ಅವರನ್ನು ವಿಮರ್ಶೆಗೊಡ್ಡುವ ಲೇಖನಗಳು ಹೆಚ್ಚೆಚ್ಚು ಪ್ರಕಟವಾಗುವುದರಿಂದ ಅವರ ವರ್ಚಸ್ಸಿಗೆ ಧಕ್ಕೆಯಾಗಬಹುದು ಅನ್ನುವ ಭೀತಿಯ ಹೊರತು ಇಂಥ ನಿಂದನೆಗೆ ಬೇರೆ ಯಾವ ಕಾರಣಗಳಿವೆ?
 ಕಳೆದ ವರ್ಷ ಉತ್ತರಾಖಂಡದಲ್ಲಿ ನಡೆದ ಪ್ರವಾಹದ ಸಂದರ್ಭದಲ್ಲಿ ಮೋದಿ ಬೆಂಬಲಿಗರು ಭ್ರಮೆಯ ದೊಡ್ಡದೊಂದು ಅಲೆಯನ್ನೇ ಸೃಷ್ಟಿಸಿದ್ದರು. ಉತ್ತರಾಖಂಡದಲ್ಲಿ ಸಿಲುಕಿರುವ ಗುಜರಾತ್‍ನ ತೀರ್ಥಯಾತ್ರಿಗಳನ್ನು ಹೇಗೆ ಬಚಾವ್ ಮಾಡ ಲಾಗುತ್ತಿದೆಯೆಂಬುದನ್ನು ಅವರು ಸೋಶಿಯಲ್ ವಿೂಡಿಯಾಗಳಲ್ಲಿ ಹೇಳತೊಡಗಿದರು. ಕ್ಷಣಕ್ಷಣಕ್ಕೂ ಹೊಸ ಹೊಸ ಸುದ್ದಿ. ಮೋದಿಯವರು ಸಂತ್ರಸ್ತ ಶಿಬಿರವನ್ನು ಪ್ರಾರಂಭಿಸಿದ್ದು, ಡೆಹ್ರಾಡೂನ್‍ನಿಂದ ಭಕ್ತರು ಸುರಕ್ಷಿತವಾಗಿ ಹಿಂತಿರುಗಲು ವ್ಯವಸ್ಥೆ ಮಾಡಿದ್ದು, ವಿಶೇಷ ರೈಲು ಓಡಿಸುವಂತೆ ರೈಲ್ವೆ ಮಂತ್ರಿಗೆ ಮೋದಿ ಪತ್ರ ಬರೆದಿದ್ದು, ತನ್ನ ಪ್ರಮುಖ ಅಧಿಕಾರಿಗಳನ್ನು ಸಂತ್ರಸ್ತರ ಯೋಗಕ್ಷೇಮ ನೋಡಿಕೊಳ್ಳಲು ನೇಮಿಸಿದ್ದು.. ಮುಂತಾದುವುಗಳನ್ನು ಯಾವ ಬಗೆಯಲ್ಲಿ ಹೇಳಲಾಗುತ್ತಿತ್ತೆಂದರೆ, ಇನ್ನಾರೂ ಇಂಥ ಉಪಕ್ರಮಗಳನ್ನು ಕೈಗೊಂಡೇ ಇಲ್ಲವೇನೋ ಅನ್ನುವ ಧಾಟಿಯಲ್ಲಿ. ಆದರೆ 2013 ಜೂನ್ 23ರ rediff.com ಪ್ರಕಟಿಸಿದ ವರದಿಯನ್ನು ನೋಡಿದರೆ, ಇಂಥ ಪರಿಹಾರ ಕ್ರಮಗಳನ್ನು ಇತರ ರಾಜ್ಯಗಳೂ ಕೈಗೊಂಡಿರುವುದು ಸ್ಪಷ್ಟವಾಗುತ್ತದೆ. ಇವುಗಳಿಗಿಂತಲೂ ಭಯಾನಕ ಉತ್ಪ್ರೇಕ್ಷೆ ಯಾವುದೆಂದರೆ, ಮೋದಿ ಬರೇ ಎರಡೇ ದಿನಗಳಲ್ಲಿ 15 ಸಾವಿರ ಗುಜರಾತಿ ಸಂತ್ರಸ್ತರನ್ನು ರಕ್ಷಿಸಿ ಗುಜರಾತ್‍ಗೆ ತಲುಪಿಸಿದ್ದಾರೆ ಅನ್ನುವುದು. ರಾಷ್ಟ್ರೀಯ ಪತ್ರಿಕೆಗಳು ಒಂದು ಕ್ಷಣ ಇಂಥ ಪ್ರಚಾರಗಳನ್ನು ನಂಬಿಬಿಟ್ಟವು. ಮೋದಿಯನ್ನು ರಾಂಬೋ  ಎಂದು ಅವರ ಅಭಿಮಾನಿಗಳು ಕರೆಯುವಷ್ಟರ ಮಟ್ಟಿಗೆ ಇಂಥ ಭ್ರಮೆಗಳು ಪ್ರಭಾವಿಸಿಬಿಟ್ಟವು. ಒಂದು ಪ್ರಮುಖ ಆಂಗ್ಲ ಪತ್ರಿಕೆಯ ವೆಬ್‍ಸೈಟ್‍ನಲ್ಲಿ ನ್ಯೂಜೆರ್ಸಿಯ ರೋಹಿತ್ ಸಿಂಗ್ ಅನ್ನುವವ ಹೀಗೆ ಟ್ವೀಟ್ ಮಾಡಿದ,
     In 2 days 15000 Gujaratis were identified, airlifted out of the jungle and taken back to Gujarat.  What was our army doing there? Shameful of our whole army could not do this and Modi could get it done in 2 days. Learn from Narendra Modi. - ಕೇವಲ ಎರಡೇ ದಿನಗಳಲ್ಲಿ 15 ಸಾವಿರ ಗುಜರಾತಿಯರನ್ನು ಪತ್ತೆಹಚ್ಚಿ ಉತ್ತರಾಖಂಡದ ಕಾಡಿನಿಂದ ಅವರನ್ನು ವಿಮಾನದಲ್ಲಿ ಸುರಕ್ಷಿತವಾಗಿ ಗುಜರಾತ್‍ಗೆ ಹಿಂತಿರುಗಿಸಲಾಗಿದೆ. ಹಾಗಾದರೆ ನಮ್ಮ ಸೇನೆ ಏನು ಮಾಡುತ್ತಿತ್ತು? ನಮ್ಮ ಇಡೀ ಸೇನೆಗೆ ಮಾಡಲಾಗದಿರುವುದನ್ನು ಮೋದಿ ಕೇವಲ ಎರಡೇ ದಿನಗಳಲ್ಲಿ ಮಾಡಿ ಮುಗಿಸಿದರು. ಇದು ನಮ್ಮ ಸೇನೆಗೆ ನಾಚಿಕೆಗೇಡು. ಮೋದಿಯಿಂದ ಕಲಿಯಿರಿ...'
 ಎರಡು ದಿನಗಳಲ್ಲಿ 15 ಸಾವಿರ ಮಂದಿಯನ್ನು ಉತ್ತರಾಖಂಡ ದಿಂದ ಗುಜರಾತ್‍ಗೆ ರವಾನಿಸಲು ಸಾಧ್ಯವೇ ಎಂಬುದನ್ನು ತರ್ಕಕ್ಕೆ ಒಳಪಡಿಸದೆಯೇ, ‘ಮೋದಿಗೆ ಏನೂ ಸಾಧ್ಯ' ಎಂಬ ಭ್ರಮೆಯಲ್ಲಿ ತೇಲಿದವರ ಸ್ಥಿತಿ ಇದು. ಆ ಬಳಿಕ ಈ ಪ್ರಚಾರ ಎಷ್ಟು ದೊಡ್ಡ ಸುಳ್ಳು ಎಂಬುದು ಬಹಿರಂಗವಾಯಿತು. ನಿಜವಾಗಿ, ಒಂದು ಬಗೆಯ ಅಂಧಾಭಿಮಾನವನ್ನು ಮೋದಿಯ ಸುತ್ತ ಇವತ್ತು ಹರಡಿಬಿಡಲಾಗಿದೆ. ಈ ದೇಶದ ಪ್ರಧಾನಿಯಾಗುವವ ರಾಂಬೋ  ಥರ ಇರಬೇಕು, ಸೂಪರ್ ಹ್ಯೂಮನ್ ಆಗಿರಬೇಕು, ಜೋರು ಮಾತು, ವ್ಯಂಗ್ಯ ಮತ್ತು ಇರಿಯುವ ಪದಗಳು ಗೊತ್ತಿರಬೇಕು.. ಎಂಬೆಲ್ಲಾ ಭ್ರಮೆಗಳನ್ನು ತೇಲಿಸಿ ಬಿಡಲಾಗಿದೆ. ಕಡಿಮೆ ಮಾತಾಡುವ ವ್ಯಕ್ತಿ ನಾಲಾಯಕ್ ಎಂಬುದಾಗಿ ಮನಮೋಹನ್ ಸಿಂಗ್‍ರನ್ನು ತೋರಿಸಿ ಹೇಳಲಾಗುತ್ತಿದೆ. ಮೋದಿಯ ಸುತ್ತ ಹೀಗೆ ಹರಿಬಿಡಲಾಗಿರುವ ಸುಳ್ಳಿನ ಪೊರೆಯನ್ನು ಯಾರಾದರೂ ಕಳಚಲು ಪ್ರಯತ್ನಿಸಿದರೆ, ತಕ್ಷಣ ಅವರನ್ನು ಫ್ರಾಂಕೆನ್‍ಸ್ಟೈನ್ಸ್ ಮಾನ್‍ಸ್ಟರ್ ಶೈಲಿಯಲ್ಲಿ ನಿಂದಿಸಲಾಗುತ್ತದೆ. ಅವರು ಮತಾಂಧರು, ಲದ್ದಿಜೀವಿಗಳು ಆಗಿಬಿಡುತ್ತಾರೆ. ಮೋದಿಯ ಸುತ್ತ ಆರೋಗ್ಯಕರ ಚರ್ಚೆ ನಡೆಯುವುದನ್ನೇ ಇಷ್ಟಪಡದ ಅಂಧಾಭಿಮಾನಿಗಳ ಒಂದು ತಂಡ ಸಕ್ರಿಯವಾಗಿ ಕಾರ್ಯನಿರತವಾಗಿದೆ. ಗೂಗಲ್‍ನಲ್ಲಿ,  NaMo for PM - ಎಂದು ಟೈಪಿಸಿ ಹುಡುಕಿದರೆ ಮೋದಿಯ ನೂರಾರು ಫ್ಯಾನ್ ಕ್ಲಬ್‍ಗಳು ಸಿಗುತ್ತವೆ. ಅಲ್ಲಿ ನಡೆಯುವ ಚರ್ಚೆಗಳಲ್ಲಿ, ‘ಫಿನಿಶ್ ಪಾಕಿಸ್ತಾನ್’, ‘ಮುಸ್ಲಿಮರಿಗೆ ಒಂದು ಪಾಠ ಕಲಿಸಿ’ ಮತ್ತು ‘ಸೋನಿಯಾರನ್ನು ಇಟಲಿಗೆ ಅಟ್ಟಿಬಿಡಿ’, ‘ಪ್ರಧಾನಿ ಮೋದಿ’, ‘ಮೋಡಿಫೈಯಿಂಗ್ ಇಂಡಿಯಾ..’ ಮುಂತಾದ ಒಕ್ಕಣೆಗಳೇ ಗೋಚರಿಸುತ್ತವೆ. ಯಾರನ್ನೋ ಮುಗಿಸಲು, ಯಾರ ಮೇಲೆಯೋ ಏರಿ ಹೋಗಲು, ಯಾರಿಗೋ ಪಾಠ ಕಲಿಸಲು.. ಹೀಗೆ ಹೊಡಿ-ಬಡಿ ವ್ಯಕ್ತಿತ್ವದ ಮೋದಿ ಇವತ್ತು ಅವರ ಅಭಿಮಾನಿ ವರ್ಗಗಳಲ್ಲಿ ನೆಲೆಯೂರಿದ್ದಾರೆ. ಆದ್ದರಿಂದ ಅವರ ಭಾಷೆಯೂ ಹಾಗೆಯೇ ಇದೆ. ಈ ಬಗೆಯ ಭ್ರಮೆಯನ್ನು ಪ್ರಶ್ನಿಸುವವರು ಮತ್ತು ಅದನ್ನು ವಿಮರ್ಶೆಗೊಡ್ಡುವವರನ್ನು ಈ ಮಂದಿ ಅದೇ ಉದ್ವೇಗದಿಂದ ಎದುರಿಸುತ್ತಿದ್ದಾರೆ. ನಿಂದನೆಯ ಮಾತುಗಳ ಮೂಲಕ ಅಂಥ ವಿಮರ್ಶೆಗಳಿಗೆ ತಡೆಯೊಡ್ಡಲು ಯತ್ನಿಸುತ್ತಾರೆ. ಈ ದೇಶದ ಸೇನೆಯ ಸಾಮರ್ಥ್ಯವನ್ನೇ ಪ್ರಶ್ನಿಸುವಷ್ಟು ಈ ಅಂಧಾಭಿಮಾನ ಬೆಳೆದಿರುತ್ತದೆ. ಬಹುಶಃ,
 ಅಂತಿಮವಾಗಿ ಮೋದಿಯ ಸೋಲಿಗೆ ಈ ಅಂಧಾಭಿಮಾನಿಗಳೇ ಕಾರಣಕರ್ತರಾಗುತ್ತಾರೇನೋ..