Tuesday, July 14, 2020

ಆ ತಂದೆ ಮತ್ತು ಮಗ ನಮ್ಮದೇ ಚಪ್ಪಾಳೆಯ ಫಲಿತಾಂಶವೋ ಏನೋ?#HyderabadHorrror, #RIPDisha, #HyderabadPolice, #HyderabadMurder... ಇತ್ಯಾದಿ ಹ್ಯಾಶ್‍ಟ್ಯಾಗ್‍ಗಳು 2019, ಡಿಸೆಂಬರ್ 6ರಂದು ಟ್ವಿಟರ್‍ನಲ್ಲಿ  ಟ್ರೆಂಡಿಂಗ್ ಆಗಿರುವುದನ್ನು ನೀವು ನೋಡಿಯೇ ಇರುತ್ತೀರಿ. ‘This morning I wake up to the news and Justice has been served...’ ಎಂದು ಖ್ಯಾತ ತೆಲುಗು ಚಿತ್ರ ನಟ ನಾಗಾರ್ಜುನ ಅಕ್ಕಿನೇಣಿ ಟ್ವೀಟ್ ಮಾಡಿದ್ದನ್ನೂ ನೀವು ಬಲ್ಲಿರಿ. ದಿಶಾಳಿಗೆ ನ್ಯಾಯ ಲಭಿಸಿದೆ ಎಂಬುದಾಗಿ ಆ ದಿನದಂದು ಬಿಎಸ್‍ಪಿಯ ಮಾಯಾವತಿ ಯವರೂ ಖುಷಿಪಟ್ಟಿದ್ದರು. ಸೆಲೆಬ್ರಿಟಿಗಳು,  ರಾಜಕಾರಣಿಗಳು, ಪತ್ರಕರ್ತರು, ಸಾರ್ವಜನಿಕರು.. ಹೀಗೆ ಅಸಂಖ್ಯ ಮಂದಿ ನಾಗಾರ್ಜುನರಂತೆಯೇ ಖುಷಿ ಪಟ್ಟಿದ್ದರು. ಹೈದರಾಬಾದ್‍ನ ಶಾದ್ ನಗರದ ನೂರಾರು ನಾಗರಿಕರು ಎನ್‍ಕೌಂಟರ್ ನಡೆದ  ಸ್ಥಳಕ್ಕೆ ತೆರಳಿ ಘೋಷಣೆ ಕೂಗಿದ್ದರು. ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ್ದರು. ಇದಕ್ಕೆ ಕಾರಣ, ಶಾದ್ ನಗರ ಪೊಲೀಸ್ ಠಾಣೆಯ ಸೈಬರ್ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್ ಅವರ ನೇತೃತ್ವದಲ್ಲಿ  ನಡೆದ ಎನ್‍ಕೌಂಟರ್.
ದಿಶಾ ಎಂಬ 25ರ ಹರೆಯದ ಹೈದರಾಬಾದ್‍ನ ವೈದ್ಯೆಯನ್ನು ಚನ್ನಕೇಶವುಲು, ಮುಹಮ್ಮದ್ ಆರಿಫ್, ನವೀನ ಮತ್ತು ಶಿವ ಎಂಬ ನಾಲ್ವರು ತಮ್ಮ ಲಾರಿಯಲ್ಲಿ ಅಪಹರಿಸಿ, ಅತ್ಯಾಚಾರ ಮಾಡಿ, ಹತ್ಯೆ  ಮಾಡಿದ್ದರು. ಆ ಬಳಿಕ ಶವವನ್ನು ಶಾದ್ ನಗರದ ಫ್ಲೈ ಓವರ್‍ನ ಅಡಿಯಲ್ಲಿ ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದರು. ನವೆಂಬರ್ 27ರಂದು ಈ ನಾಲ್ವರ ಬಂಧನವಾಗಿತ್ತು. ಡಿಸೆಂಬರ್ 6ರಂದು ಮುಂಜಾನೆ  5.30ರ ಸುಮಾರಿಗೆ ಈ ನಾಲ್ವರನ್ನು ಶವ ಸುಟ್ಟ ಜಾಗಕ್ಕೆ ಮಹಜರಿಗೆಂದು ಕೊಂಡೊಯ್ಯಲಾಗಿತ್ತು. ಆ ಬಳಿಕ ಆ ನಾಲ್ವರನ್ನೂ ಗುಂಡು ಹಾರಿಸಿ ಕೊಲ್ಲಲಾಗಿತ್ತು. ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಎನ್‍ಕೌಂಟರ್ ಮಾಡಲಾಯಿತು ಎಂಬ ಸಮರ್ಥನೆಯನ್ನು ಸಜ್ಜನರ್ ನೀಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲ, ಪತ್ರಿಕೆಗಳಲ್ಲಿ ಕೂಡ ಸಜ್ಜನರ್ ಅವರ ಎನ್‍ಕೌಂಟರನ್ನು ಬೆಂಬಲಿಸಿ ಬರಹಗಳು ಪ್ರಕಟವಾದುವು. ಆದರೆ,
ಇಂಥ ಸನ್ನಿವೇಶದಲ್ಲೂ ಅಸಂಖ್ಯ ಮಂದಿ ಈ ಬಗೆಯ ಸಂಭ್ರಮವನ್ನು ಪ್ರಶ್ನಿಸಿದರು. ನ್ಯಾಯಾಂಗೇತರ ಹತ್ಯೆಯನ್ನು ಸಮರ್ಥಿಸುವುದು ಅಪಾಯಕಾರಿ ಎಂದು ಎಚ್ಚರಿಸಿದ್ದರು. ಇವರಲ್ಲಿ ಕಮ್ಯುನಿಸ್ಟ್  ನೇತಾರ ಸೀತಾರಾಮ್ ಯೆಚೂರಿ ಮತ್ತು ಲೋಕಸತ್ತಾ ಪಕ್ಷದ ನಾಯಕ ಜಯಪ್ರಕಾಶ್ ನಾರಾಯಣ್ ಕೂಡಾ ಸೇರಿದ್ದರು. ಅದರಲ್ಲೂ ನಾರಾಯಣ್ ಅವರು,
‘Extra Judicial Killings will only make innocent people victims overtime. Due process protects all of us’ ಎಂದು ಡಿ. 6,  2019ರಂದು ಟ್ವೀಟ್ ಮಾಡಿದ್ದರು.
ಇದೀಗ ತಮಿಳುನಾಡಿನ ತೂತುಕುಡಿಯ ಸಟ್ಟಕುಲಂ ಪೊಲೀಸ್ ಠಾಣೆಯು ಮುಗ್ಧರಿಬ್ಬರ ಹತ್ಯೆಯ ಹೊಣೆಯನ್ನು ಹೊತ್ತುಕೊಂಡು ಭಾರೀ ಆಕ್ರೋಶಕ್ಕೆ ತುತ್ತಾಗಿದೆ. ಇನ್ಸ್ ಪೆಕ್ಟರ್ ಶ್ರೀಧರ್, ಸಬ್ ಇನ್ಸ್ ಪೆಕ್ಟರ್ ಗಳಾದ ಬಾಲಕೃಷ್ಣನ್ ಮತ್ತು ರಘು ಗಣೇಶನ್ ಸೇರಿದಂತೆ ಕೆಲವು ಪೊಲೀಸರ ಬಂಧನವಾಗಿದೆ. ಹತ್ಯೆಗೀಡಾಗಿರುವುದು ತಂದೆ ಮತ್ತು ಮಗ. ಮಗ ಬೆನಿಕ್ಸ್ ಗೆ ಕಳೆದ ಮೇಯಲ್ಲಿ ಮದುವೆ ನಿಗದಿಯಾಗಿತ್ತು. ಕೊರೋನಾದಿಂದಾಗಿ ಆ ಮದುವೆಯನ್ನು ಡಿಸೆಂಬರ್ ಗೆ ಮುಂದೂಡಲಾಗಿತ್ತು. ತಂದೆಯ ಬಂಧನವನ್ನು ಪ್ರಶ್ನಿಸಿ ಬೆನಿಕ್ಸ್ ಪೊಲೀಸ್ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿರುವುದೇ ಈ  ಘಟನೆಗೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳನ್ನು ಹೇಳಿದ್ದಾರೆ. ಕ್ರೌರ್ಯದ ಪರಮಾವಧಿ ಏನೆಂದರೆ, ಈ ತಂದೆ-ಮಗನ ಬಂಧನವಾದದ್ದು ಜೂನ್ 19ರಂದು. ಸಾವಿಗೀಡಾದದ್ದು ಜೂನ್ 22ರಂದು. ಅದೂ  ಕೋವಿಲ್ ಪಟ್ಟಿ ಸೆಂಟ್ರಲ್ ಜೈಲಿನ ಜೈಲು ಆಸ್ಪತ್ರೆಯಲ್ಲಿ. ಸಟ್ಟಕುಲಂನಿಂದ ಕೋವಿಲ್ ಪಟ್ಟಿ ಸೆಂಟ್ರಲ್ ಜೈಲಿಗೆ 100 ಕಿಲೋಮೀಟರ್ ದೂರವಿದೆ. ಆದರೆ, ಈ ಜೈಲಿ ಗಿಂತ ತೀರಾ ಹತ್ತಿರದಲ್ಲಿ ಪೆರೂರಾನಿ  ಮತ್ತು ಶ್ರೀ ವೈಕುಂಡಂ ಎಂಬೆರಡು ಸಬ್ ಜೈಲುಗಳಿವೆ. ಸಟ್ಟಕುಲಂನಿಂದ ಈ ಎರಡು ಸಬ್ ಜೈಲುಗಳಿಗಿರುವ ದೂರ ಬರೇ 40 ಕಿಲೋ ಮೀಟರ್. ಹೀಗಿದ್ದೂ ಈ ಇಬ್ಬರನ್ನು ಅಷ್ಟು ದೂರದ ಜೈಲಿಗೆ  ಹಾಕಿರುವುದೇಕೆ ಅನ್ನುವ ಪ್ರಶ್ನೆ ಅಸಹಜವಲ್ಲ. ಅಷ್ಟಕ್ಕೂ, ಇಲ್ಲಿಗೇ ಈ ಸಂಕಟ ಮುಗಿದಿಲ್ಲ.
ಈ ಕ್ರೌರ್ಯದ ಬಗ್ಗೆ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ತನಿಖೆಗೆ ಮದ್ರಾಸ್ ಹೈಕೋರ್ಟು ಆದೇಶಿಸುತ್ತದೆ. ಕೋವಿಲ್ ಪಟ್ಟಿ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ಭಾರತೀ ರಾಜನ್ ಅವರು ತನಿಖೆ  ಕೈಗೆತ್ತಿಕೊಳ್ಳುತ್ತಾರೆ. ಆದರೆ, ಸಟ್ಟಕುಲಂ ಪೊಲೀಸ್ ಠಾಣೆ ಅವರನ್ನು ಕ್ಯಾರೇ ಅನ್ನುವುದಿಲ್ಲ. ಮಾತ್ರವಲ್ಲ, ಇಡೀ ಘಟನಾವಳಿಗೆ ಸಾಕ್ಷ್ಯವಾಗಬಹುದಾಗಿದ್ದ ಸಿಸಿಟಿವಿ ಫೂಟೇಜ್‍ಗಳನ್ನೇ ಅಳಿಸಿ ಹಾಕುತ್ತದೆ. ಈ  ಸಂಗತಿಯನ್ನು ಮ್ಯಾಜಿಸ್ಟ್ರೇಟ್‍ರು ಮದ್ರಾಸ್ ಹೈಕೋರ್ಟ್‍ನ ಮುಂದೆ ಇಟ್ಟಾಗ ಅದು ಇಬ್ಬರು ನ್ಯಾಯಾಧೀಶರ ಆಯೋಗವನ್ನು ನೇಮಿಸಿತಲ್ಲದೇ, ಪ್ರಕರಣವನ್ನು ಸಿಬಿಐ ವಹಿಸಿ ಕೊಳ್ಳುವವರೆಗೆ ಸಿಬಿ- ಸಿಐಡಿ  ವಹಿಸಿಕೊಳ್ಳಬೇಕೆಂದು ನಿರ್ದೇಶಿಸುತ್ತದೆ. ಆ ಬಳಿಕ ಪೊಲೀಸಧಿಕಾರಿಗಳ ಬಂಧನ ಮತ್ತು ಅವರ ವಿರುದ್ಧ ಹತ್ಯಾ ಪ್ರಕರಣ ದಾಖಲಾಗುತ್ತದೆ. ಅಂದಹಾಗೆ,
ಈ ದೇಶದಲ್ಲಿ ಪೊಲೀಸ್ ದೌರ್ಜನ್ಯಗಳು ಹೊಸತಲ್ಲ. ಕಸ್ಟಡಿ ಸಾವುಗಳೂ ಹೊಸತಲ್ಲ. ದೇಶದ ಮಾನವ ಹಕ್ಕು ಆಯೋಗಕ್ಕೆ (NHRC) ಕಳೆದ ಮೂರು ವರ್ಷಗಳಲ್ಲಿ 5,300 ಕಸ್ಟಡಿ ಸಾವುಗಳ  ದೂರುಗಳು ಬಂದಿವೆ. ಇನ್ನು, ದೂರುಗಳೇ ದಾಖಲಾಗದ ಸಾವುಗಳು ಎಷ್ಟಿರಬಹುದು? ಈ ದೇಶದಲ್ಲಿ ಪೊಲೀಸರನ್ನು ಎದುರು ಹಾಕಿಕೊಳ್ಳುವುದು ಸಣ್ಣ ಸವಾಲಲ್ಲ. ಒಮ್ಮೆ ಪೊಲೀಸರ ವಿರೋಧ  ಕಟ್ಟಿಕೊಂಡರೆ, ಆ ಬಳಿಕ ಯಾವುದಾದರೊಂದು ಕೇಸಿನಲ್ಲಿ ಫಿಕ್ಸ್ ಆಗುವ ಭೀತಿ ಇದ್ದೇ  ಇರುತ್ತದೆ. ಒಂದುವೇಳೆ, ಗುಜರಾತ್‍ನ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರು ಪ್ರಭುತ್ವದ ವಿರುದ್ಧ ಬಂಡಾಯ  ಏಳದೇ ಇರುತ್ತಿದ್ದರೆ ಅವರು ಈಗ ಎದುರಿಸುತ್ತಿರುವ ಕಸ್ಟಡಿ ಸಾವು ಪ್ರಕರಣವು ಈಗಿನ ಮಾದರಿಯಲ್ಲಿ ಅವರನ್ನು ಕಾಡುತ್ತಿತ್ತೇ? ಅವರು ಜಾಮ್ ನಗರ ಪೊಲೀಸ್ ಸುಪರಿಂಟೆಂಡೆಂಟ್ ಆಗಿದ್ದ ವೇಳೆ  ಕೋಮು ಘರ್ಷಣೆಯ ಹಿನ್ನೆಲೆಯಲ್ಲಿ 150 ಮಂದಿಯನ್ನು ಬಂಧಿಸಿದ್ದರು. ಅದೂ 1990ರಲ್ಲಿ. ಅಡ್ವಾಣಿಯವರ ರಥಯಾತ್ರೆಗೆ ಸಂಬಂಧಿಸಿ ಆ ಘರ್ಷಣೆ ಉಂಟಾಗಿತ್ತು. ಬಂಧಿತರಲ್ಲಿ ಪ್ರಭು ದಾಸ್ ವೈಷ್ಣಾನಿ  ಎಂಬವ ಆ ಬಳಿಕ ಆಸ್ಪತ್ರೆಯಲ್ಲಿ ತೀರಿಕೊಂಡಿದ್ದ. ಅದು ಪೊಲೀಸ್ ದೌರ್ಜನ್ಯದಿಂದಾದ ಸಾವು ಎಂದು ಪ್ರಭುದಾಸ್‍ನ ಸಹೋದರ ಕೇಸು ದಾಖಲಿಸಿದ್ದರು. ಆದರೆ, ಈ ಕುರಿತಾದ ವಿಚಾರಣೆಗೆ ಗುಜರಾತ್  ಸರಕಾರ ಅನುಮತಿ ಕೊಟ್ಟಿರಲಿಲ್ಲ. ಆದ್ದರಿಂದ, ಪ್ರಕರಣ ಇದ್ದಲ್ಲಿಯೇ ಇತ್ತು. ಯಾವಾಗ ಅವರು ಪ್ರಭುತ್ವದ ವಿರುದ್ಧ ತಿರುಗಿ ಬಿದ್ದರೋ ತಕ್ಷಣ ಪ್ರಕರಣ ಮತ್ತೆ ಬೂದಿಯಿಂದ ಎದ್ದು ಬಂತು. ಗುಜರಾತ್  ಸರಕಾರ ತನಿಖೆಗೆ ಅನುಮತಿ ನೀಡಿತು. ಕಳೆದ ವರ್ಷ ಜಾಮ್‍ನಗರ ನ್ಯಾಯಾಲಯವು ಅವರಿಗೆ ಜೀವಾವಧಿ ಶಿಕ್ಷೆಯನ್ನೂ ವಿಧಿಸಿತು. ಅಂದಹಾಗೆ,
ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿ ಪ್ರಧಾನಿ ಮೋದಿಯವರ ವಿರುದ್ಧ ಸಂಜೀವ್ ಭಟ್ ಅವರು 2011ರಲ್ಲಿ ಸುಪ್ರೀಮ್ ಕೋರ್ಟಿಗೆ ಅಫಿದವಿತ್ ಸಲ್ಲಿಸದೇ ಇರುತ್ತಿದ್ದರೆ, ಅವರ ಆ ಕಸ್ಟಡಿ ಸಾವು  ಪ್ರಕರಣಕ್ಕೆ ಮರುಜೀವ ಸಿಗುತ್ತಿತ್ತೇ? ಇಲ್ಲ ಎಂದಾದರೆ, ಇಂಥ ಮುಚ್ಚಿ ಹೋಗುತ್ತಿರುವ ಪ್ರಕರಣಗಳು ಈ ದೇಶದಲ್ಲಿ ಎಷ್ಟಿರಬಹುದು? ರಾಜಕೀಯ ಪಕ್ಷಗಳ ಕೃಪೆಯಿಂದ ಎಷ್ಟು ಕಸ್ಟಡಿ ಸಾವುಗಳು ಸಹಜ  ಸಾವುಗಳಾಗಿಯೋ ಕೇಸುಗಳೇ ದಾಖಲಾಗದೆಯೋ ಸತ್ತು ಹೋಗಿರಬಹುದು? 2000ದಿಂದ 2018ರ ನಡುವೆ 1722 ಕಸ್ಟಡಿ ಸಾವುಗಳು ಸಂಭವಿಸಿದ್ದರೂ ಬರೇ 26 ಪೊಲೀಸರಿಗಷ್ಟೇ ಶಿಕ್ಷೆಯಾಗಿದೆ  ಎಂಬುದು ಏನನ್ನು ಸೂಚಿಸುತ್ತದೆ?
ದಿಶಾ ಪ್ರಕರಣದಲ್ಲಿ ವಿ.ಸಿ. ಸಜ್ಜನರ್ ಮತ್ತು ಅವರ ತಂಡ ಏನನ್ನು ಹೇಳಿತ್ತೋ ಅದನ್ನು ಮನಸಾರೆ ಒಪ್ಪಿಕೊಂಡಿದ್ದವರೇ ಮತ್ತು ಅವರಿಗಾಗಿ ಚಪ್ಪಾಳೆ ತಟ್ಟಿದವರೇ ಇವತ್ತು ಸಟ್ಟಕುಲಂ ಪೆÇಲೀಸರ ಮಾತನ್ನು  ಒಪ್ಪಿಕೊಳ್ಳುತ್ತಿಲ್ಲ. ದಿಶಾ ಪ್ರಕರಣದಲ್ಲಿ ಎನ್‍ಕೌಂಟರನ್ನು ಸಂಭ್ರಮಿಸಿದವರು ಮತ್ತು ಪೊಲೀಸರು ಕೊಟ್ಟ ವರದಿಯನ್ನು ಕಣ್ಣು ಮುಚ್ಚಿ ಅನುಮೋದಿಸಿದವರೇ ಇವತ್ತು ದಿಗ್ಮೂಢರಾಗಿದ್ದಾರೆ. ಹಾಗಂತ,  ತೆಲಂಗಾಣ ಮತ್ತು ತಮಿಳ್ನಾಡು ಬೇರೆ ಬೇರೆ ರಾಜ್ಯಗಳಾಗಿರಬಹುದು. ಪೊಲೀಸ್ ಠಾಣೆಗಳೂ ಬೇರೆ ಬೇರೆ ಆಗಿರಬಹುದು. ಆದರೆ,
ನ್ಯಾಯಾಂಗದ ಕೆಲಸವನ್ನು ಪೊಲೀಸರು ವಹಿಸಿಕೊಂಡರೆ ಮತ್ತು ಅದನ್ನು ನಾಗರಿಕರು ಬೆಂಬಲಿಸಿದರೆ ಅದು ವಿಪರೀತ ಪರಿಣಾಮಕ್ಕೆ ಕಾರಣವಾಗುವ ಭಯ ಇದ್ದೇ  ಇರುತ್ತದೆ. ಇಂಥ ಬೆಳವಣಿಗೆಗಳು  ಪೊಲೀಸರಿಗೆ ಅಪರಿಮಿತ ಧೈರ್ಯವನ್ನು ತಂದು ಕೊಡುತ್ತದೆ. ತಮ್ಮ ಜೊತೆ ನಾಗರಿಕರಿದ್ದಾರೆ ಎಂಬ ಭಂಡ ಧೈರ್ಯದಲ್ಲಿ ಅನ್ಯಾಯ ನಡೆದು ಬಿಡುವುದಕ್ಕೂ ಅವಕಾಶ ಇದೆ. ಸಿಎಎ ವಿರೋಧಿ ಪ್ರತಿಭಟನೆ  ಮತ್ತು ಕೊರೋನಾ ಲಾಕ್‍ಡೌನ್ ಸಮಯದಲ್ಲಿ ಪೆÇಲೀಸರು ನಡೆದುಕೊಂಡ ರೀತಿಯಲ್ಲೂ ಇದಕ್ಕೆ ಉತ್ತರ ಇದೆ. ಮಂಗಳೂರಿನಿಂದ ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ  ವರೆಗೆ, ಶಾಹೀನ್ ಬಾಗ್‍ನಿಂದ ಜೆಎನ್‍ಯು ವರೆಗೆ- ಪೊಲೀಸ್ ದೌರ್ಜನ್ಯದ ನೂರಾರು ವೀಡಿಯೋಗಳು, ವರದಿಗಳು ಮಾಧ್ಯಮಗಳಲ್ಲಿ ಧಾರಾಳ ಪ್ರಕಟವಾಗಿವೆ. ಲಾಕ್‍ಡೌನ್ ಸಂದರ್ಭದಲ್ಲಂತೂ ಪೊಲೀಸ್ ಲಾಠಿಗಳು ಯದ್ವಾತದ್ವಾ ಚಲಿಸಿವೆ.
ಪ್ರಜಾತಂತ್ರ ರಾಷ್ಟ್ರವೊಂದರಲ್ಲಿ ಪೊಲೀಸರು ನ್ಯಾಯಾಂಗವನ್ನು ಲೆಕ್ಕಿಸದೆಯೇ ರಾಜಾರೋಷವಾಗಿ ಹೀಗೆ ಕಾನೂನು ಉಲ್ಲಂಘನೆ ಮಾಡಲು ಹೇಗೆ ಧೈರ್ಯ ಬಂತು? ಪ್ರಭುತ್ವ ಬೆನ್ನಿಗಿದೆ ಎಂಬ ಧೈರ್ಯ  ಇಲ್ಲದೇ ಇರುತ್ತಿದ್ದರೆ, ಈ ಮಟ್ಟದಲ್ಲಿ ಕಾನೂನು ಉಲ್ಲಂಘನೆಗೆ ಅವರು ಮುಂದಾಗುತ್ತಿದ್ದರೇ? ಸಿಸಿಟಿವಿ ಕ್ಯಾಮರಾ ಗಳಲ್ಲಿ ತಮ್ಮ ಕೃತ್ಯ ದಾಖಲಾಗುತ್ತಿದೆ ಎಂಬುದರ ಅರಿವಿದ್ದೂ ಮತ್ತು ಮೊಬೈಲ್‍ಗಳಲ್ಲಿ  ಪ್ರತಿ ಚಟುವಟಿಕೆಗಳೂ ದಾಖಲಾಗುವ ಅಪಾಯ ಗೊತ್ತಿದ್ದೂ ಜಾಮಿಯಾದಲ್ಲಿ, ಜೆಎನ್‍ಯುನಲ್ಲಿ ಮತ್ತು ಮಂಗಳೂರಿನಂಥ ಹಲವಾರು ಕಡೆಗಳಲ್ಲಿ ಎಗ್ಗಿಲ್ಲದೇ ದೌರ್ಜನ್ಯ ನಡೆಸುವುದಕ್ಕೆ ಸಾಧ್ಯವಾದದ್ದು  ಹೇಗೆ? ನಿಜವಾಗಿ,
ಕಾನೂನನ್ನು ಮೀರಿ ಪೊಲೀಸ್ ಇಲಾಖೆ ಕೈಗೊಳ್ಳುವ ಯಾವುದೇ ಎನ್‍ಕೌಂಟರ್, ಕಾರ್ಯಾಚರಣೆ, ವಿಚಾರಣೆಗಳು ನಾಗರಿಕ ಸೌಖ್ಯದ ದೃಷ್ಟಿಯಿಂದ ಅಪಾಯಕಾರಿ. ಪೊಲೀಸರು ತಮ್ಮ ಕರ್ತವ್ಯವನ್ನಷ್ಟೇ  ಮಾಡಬೇಕು. ಅವರು ನ್ಯಾಯಾಧೀಶರಾಗ ಬಾರದು. ಅವರು ನ್ಯಾಯಾಧೀಶರಂತೆ ಮಾತಾಡಿದರೆ ಅವರನ್ನು ನಾಗರಿಕ ಸಮಾಜ ಒಪ್ಪಿಕೊಳ್ಳಲೂ ಬಾರದು. ದಿಶಾಳನ್ನು ಬರ್ಬರವಾಗಿ ಹತ್ಯೆಗೈದವರು ಇವರೇ  ಎಂದು ವಿ.ಸಿ. ಸಜ್ಜನರ್ ಅವರು ನಾಲ್ವರನ್ನು ತೋರಿಸಿ ಹೇಳಿದಾಗ ನಾವು ಒಪ್ಪಿಕೊಂಡೆವು. ಆದರೆ ನ್ಯಾಯಾಂಗ ಇನ್ನೂ ಒಪ್ಪಿಕೊಂಡಿರಲಿಲ್ಲ. ಆ ನಾಲ್ವರು ದಿಶಾಳನ್ನು ಹೇಗೆ ಅಪಹರಿಸಿದರು ಮತ್ತು ಹೇಗೆ  ಬರ್ಬರವಾಗಿ ಹತ್ಯೆ ಮಾಡಿದರು ಎಂಬುದನ್ನು ಸಜ್ಜನರ್ ಮಾಹಿತಿ ನೀಡಿದಾಗಲೂ ನಾವು ಒಪ್ಪಿಕೊಂಡೆವು. ಆದರೆ, ನ್ಯಾಯಾಂಗ ಆಗಲೂ ಒಪ್ಪಿ ಕೊಂಡಿರಲಿಲ್ಲ. ಅವರ ಎನ್‍ಕೌಂಟರ್ ಗೆ ಕಾರಣವಾದ ಸ ನ್ನಿವೇಶವನ್ನು ಸಜ್ಜನರ್ ಹೇಳಿಕೊಂಡರು. ನಾವು ಚಪ್ಪಾಳೆ ತಟ್ಟಿ ಸಂಭ್ರಮಿಸಿದೆವು. ಆಗಲೂ ನ್ಯಾಯಾಲಯ ಅದನ್ನು ಒಪ್ಪಿಕೊಂಡಿರಲಿಲ್ಲ. ಹಾಗಂತ,
ಈ ನಾಲ್ವರೇ ಅಪರಾಧಿಗಳಾಗಿರಲೂ ಬಹುದು. ಆದರೆ ಅದನ್ನು ಹೇಳಬೇಕಾದುದು ಮತ್ತು ಶಿಕ್ಷೆ ನಿರ್ಧರಿಸಬೇಕಾದುದು ಸಜ್ಜನರ್ ಅಲ್ಲ, ನ್ಯಾಯಾಲಯ. ನ್ಯಾಯಾಲಯದ ಹೊರಗಿನ ವ್ಯಕ್ತಿಗಳು ಅದನ್ನು  ತೀರ್ಮಾನಿಸುವುದು ಅನ್ಯಾಯದ ಮಾದರಿ ಯೊಂದಕ್ಕೆ ಅಡಿಗಲ್ಲು ಹಾಕಿದಂತಾಗುತ್ತದೆ. ಮಾತ್ರವಲ್ಲ, ಅದನ್ನು ಸಮರ್ಥಿಸುವುದರಿಂದ ಹಾಗೆ ಮಾಡುವವರಲ್ಲಿ ಧೈರ್ಯ ಉಂಟಾಗುತ್ತದೆ. ಅಂದಹಾಗೆ,
ಜಯರಾಜ್ ಮತ್ತು ಬೆನಿಕ್ಸ್- ನಮ್ಮದೇ ಚಪ್ಪಾಳೆಯ ಫಲಿತಾಂಶವೋ ಏನೋ?

Wednesday, July 8, 2020

ವಿರೋಧಿಸುವ ಮೊದಲೊಮ್ಮೆ ಓದಿಕೊಳ್ಳಿ...ಅಬೂತಾಲಿಬ್
ಇಸ್ಲಾಮನ್ನು ಅತ್ಯಂತ ಚೆನ್ನಾಗಿ ಮತ್ತು ಅತ್ಯಂತ ಸ್ಪಷ್ಟವಾಗಿ ವ್ಯಾಖ್ಯಾನಿಸುವ ಹೆಸರು ಇದು. ‘ಧರ್ಮದಲ್ಲಿ ಬಲಾತ್ಕಾರವಿಲ್ಲ’ ಎಂಬ ಪವಿತ್ರ ಕುರ್‍ಆನಿನ ಸಂದೇಶದ ಪ್ರಾಯೋಗಿಕ ನೆಲೆ-ಬೆಲೆಯ ಕುರಿತು  ಯಾರಿಗಾದರೂ ಸಂದೇಹವಿದ್ದರೆ, ಅವರು ಅಬೂತಾಲಿಬ್‍ರ ಬದುಕನ್ನು ಅಧ್ಯಯನ ನಡೆಸಬೇಕು. ಉದಾರವಾದ ಮತ್ತು ಇಸ್ಲಾಮನ್ನು ಬೇರೆ ಬೇರೆ ತಟ್ಟೆಯಲ್ಲಿಟ್ಟು ತೂಗುವವರ ಪಾಲಿಗೆ ಅಬೂತಾಲಿಬ್  ಒಂದೊಳ್ಳೆಯ ಸರಕು. ಕುತೂಹಲಕಾರಿ ಹೆಸರು.
ಇನ್ನೊಂದು
ಐತಿಹಾಸಿಕ ಮದೀನ ಒಡಂಬಡಿಕೆ. ಪ್ರವಾದಿ ಮುಹಮ್ಮದ್‍ರು(ಸ) ಮಕ್ಕಾದಲ್ಲಿ 13 ವರ್ಷಗಳ ಕಾಲ ತನ್ನ ವಿಚಾರಧಾರೆಯನ್ನು ಜನರ ಮುಂದಿಟ್ಟು ಆ ಬಳಿಕ ಮದೀನಕ್ಕೆ ವಲಸೆ ಹೋಗಿ ಅಲ್ಲಿನ ಧಾರ್ಮಿಕ  ಮತ್ತು ರಾಜಕೀಯದ ನೇತೃತ್ವ ಸ್ಥಾನಕ್ಕೆ ತಲುಪುತ್ತಾರೆ. ಅಲ್ಲಿಯ ಬಹುಸಂಖ್ಯಾತರು ಯಹೂದಿಗಳು. ಆದ್ದರಿಂದ ಅವರೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಪ್ರವಾದಿ ತೀರ್ಮಾನಿಸುತ್ತಾರೆ. ಒಡಂಬಡಿಕೆಯ  ಕರಡು ರಚಿಸುತ್ತಾರೆ. ಆ ಒಡಂಬಡಿಕೆಯ ಮುಖ್ಯ ಅಂಶಗಳು ಹೀಗಿವೆ:
1. ಕೈದಿಗಳನ್ನು ಬಿಡಿಸಿಕೊಳ್ಳುವ ವಿಷಯದಲ್ಲಿ ಮುಸ್ಲಿಮರು ಮತ್ತು ಮುಸ್ಲಿಮೇತರರಲ್ಲಿ ಈಗಾಗಲೇ ವಾಡಿಕೆಯಲ್ಲಿರುವ ಕ್ರಮ ಮುಂದುವರಿಯುತ್ತದೆ. ತಮ್ಮ ಹಿಂದಿನ ಪದ್ಧತಿಯಂತೆಯೇ ಮುಸ್ಲಿಮರು ಮತ್ತು  ಮುಸ್ಲಿಮೇತರರಿಗೆ ನಡೆದುಕೊಳ್ಳುವುದಕ್ಕೆ ಅನುಮತಿ ಇದೆ.
2. ಔಸ್ ಗೋತ್ರದ ಯಹೂದಿಗಳು ಮತ್ತು ಮುಸ್ಲಿಮರು ಒಂದೇ ಜನಾಂಗವೆಂದು (ರಾಜಕೀಯ ಏಕತೆ) ಪರಿಗಣಿಸಲ್ಪಡುವರು. ಯಹೂದಿಗಳು ಮತ್ತು ಮುಸ್ಲಿಮರು ತಂತಮ್ಮ ಧರ್ಮದಂತೆ ಬಾಳಲು  ಸ್ವತಂತ್ರರಾಗಿದ್ದಾರೆ. .
3. ಯಹೂದಿಗಳು ತಮ್ಮ ಖರ್ಚಿಗೆ ಮತ್ತು ಮುಸ್ಲಿಮರು ತಮ್ಮ ಖರ್ಚಿಗೆ ಹೊಣೆಗಾರರಾಗಿದ್ದಾರೆ.
4. ಈ ಸಂವಿಧಾನವನ್ನು ಒಪ್ಪುವವರ ವಿರುದ್ಧ ಯಾರೇ ಯುದ್ಧ ಹೂಡಿದರೂ ಆ ಯುದ್ಧದಾಹಿಗಳ ವಿರುದ್ಧ ಯಹೂದಿ ಮತ್ತು ಮುಸ್ಲಿಮರು ಪರಸ್ಪರ ಒಬ್ಬರಿಗೊಬ್ಬರು ನೆರವಾಗಬೇಕು.
5. ಯಾರಾದರೂ ಮದೀನದ ಮೇಲೆ ಆಕ್ರಮಣ ನಡೆಸಿ ದರೆ, ಯಹೂದಿಗಳು ಮತ್ತು ಮುಸ್ಲಿಮರು ಪರಸ್ಪರರಿಗೆ ನೆರವಾಗುವುದು ಕಡ್ಡಾಯ.
6. ಯಹೂದಿಗಳು ಯಾರೊಂದಿಗಾದರೂ ಶಾಂತಿ ಒಪ್ಪಂದ ವನ್ನು ಮಾಡಿಕೊಂಡು ಮುಸ್ಲಿಮರನ್ನೂ ಅದರಲ್ಲಿ ಸೇರಿಕೊಳ್ಳುವಂತೆ ಆಹ್ವಾನಿಸಿದರೆ ಮುಸ್ಲಿಮರು ಆ ಆಹ್ವಾನವನ್ನು ಸ್ವೀಕರಿಸುವುದು  ಕಡ್ಡಾಯವಾಗಿದೆ. ಹಾಗೆಯೇ ಮುಸ್ಲಿಮರು ಯಾರೊಂದಿಗಾದರೂ ಶಾಂತಿ ಒಪ್ಪಂದವನ್ನು ಮಾಡಿಕೊಂಡು ಯಹೂದಿಯರನ್ನು ಆಹ್ವಾನಿಸಿದರೆ ಅವರೂ ಆ ಆಹ್ವಾನವನ್ನು ಸ್ವೀಕರಿಸುವುದು  ಕಡ್ಡಾಯವಾಗಿದೆ.
7. ಪ್ರತಿಯೊಂದು ವರ್ಗವೂ ತನ್ನ ಗಡಿ ರಕ್ಷಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು.
8. ಈ ಒಡಂಬಡಿಕೆಯು ಯಾವುದೇ ಅಕ್ರಮಿ ಅಥವಾ ಅಪರಾಧಿಯ ಪಾಲಿಗೆ ರಕ್ಷಾ ಕವಚವಲ್ಲ. ಅಕ್ರಮಿಯು ಮುಸ್ಲಿಮ್ ಆದರೂ ಯಹೂದಿ ಆದರೂ ಆತ ಕೇವಲ ಅಕ್ರಮಿ. ಆತನನ್ನು ಧರ್ಮದ  ಕಾರಣಕ್ಕಾಗಿ ಈ ಒಪ್ಪಂದ ರಕ್ಷಿಸುವುದಿಲ್ಲ.
ಅಥವಾ
ಮದೀನಾದಲ್ಲಿರುವ ಎಲ್ಲರೂ ಶಾಂತಿಯುತ ಜೀವನ ಸಾಗಿಸುವುದು, ಪ್ರತಿಯೊಬ್ಬ ನಾಗರಿಕನಿಗೂ ಅವನ/ಳ ವಿಶ್ವಾಸ ಮತ್ತು ಆಚಾರ-ವಿಚಾರಗಳ ಸ್ವಾತಂತ್ರ್ಯ ನೀಡುವುದು, ಹಿಂಸೆ ಮತ್ತು ಕ್ಷೋಭೆಯ ಎಲ್ಲ  ದಾರಿಗಳನ್ನೂ ಮುಚ್ಚುವುದು ಹಾಗೂ ಹೊರಗಿನ ಆಕ್ರಮವನ್ನು ಎಲ್ಲರೂ ಒಟ್ಟಾಗಿ ಎದುರಿಸುವುದು- ಹೀಗೆ ಈ ಒಡಂಬಡಿಕೆಯನ್ನು ಸಂಕ್ಷೇಪಗೊಳಿಸಿಯೂ ಓದಬಹುದು. ಅಂದಹಾಗೆ,
ಈ ಒಡಂಬಡಿಕೆಯೇ ಮುಂದೆ ಮದೀನಾದ ಪ್ರಪ್ರಥಮ ಸಂವಿಧಾನವಾಗಿಯೂ ಗುರುತಿಗೀಡಾಯಿತು. ವಿಶೇಷ ಏನೆಂದರೆ, ಈ ಸಂವಿಧಾನ ರಚನೆಯಾದುದು ಧರ್ಮದ ಆಧಾರದಲ್ಲಿ ಅಲ್ಲ, ಪೌರತ್ವದ  ಆಧಾರದಲ್ಲಿ. ನಾಗರಿಕ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಿರುವ ಸಂವಿಧಾನ ಇದು. ಪ್ರವಾದಿ ಮುಹಮ್ಮದರು(ಸ) ಮದೀನಾಕ್ಕೆ ಬರುವುದಕ್ಕಿಂತ ಮೊದಲೇ, ಅವರ ಅನುಯಾಯಿಗಳು ಮಕ್ಕಾದಿಂದ ಮದೀನಕ್ಕೆ  ಬಂದಿದ್ದರು. ಇವರ ಬದುಕು ಮತ್ತು ವಿಚಾರಧಾರೆಯಿಂದ ಪ್ರಭಾವಿತರಾಗಿ ಅನೇಕ ಮದೀನಾ ನಾಗರಿಕರು ಇವರೊಂದಿಗೆ ಸೇರಿಕೊಂಡಿದ್ದರು. ಹಾಗಂತ, ಮದೀನಾದಲ್ಲಿ ಯಹೂದಿಗಳೇನೂ ಏಕ ಸಮುದಾಯ ಆಗಿರಲಿಲ್ಲ. ಕೈನುಕಾ, ನಝೀರ್, ಕುರೈಝಾ ಎಂದು ಮುಂತಾಗಿ ಬೇರೆ ಬೇರೆ ಗೋತ್ರ ಗಳಲ್ಲಿ  ಹಂಚಿಹೋಗಿದ್ದರು. ಅವರೆಲ್ಲರನ್ನೂ ಒಟ್ಟು ಸೇರಿಸಿ ಪ್ರವಾದಿ ಮುಹಮ್ಮದ್(ಸ) ಈ ಸಂವಿಧಾನವನ್ನು ರಚಿಸಿದ್ದರು. ನಿಜವಾಗಿ,
ಇದು ಮದೀನಕ್ಕಾಗಿ ಮಾತ್ರ ಸಿದ್ಧಗೊಂಡ ಸಂವಿಧಾನ ಆಗಿರಲಿಲ್ಲ. ಅವರ ಮಕ್ಕಾದ ಬದುಕೂ ಹಾಗೆಯೇ ಇತ್ತು.
ಪ್ರವಾದಿ ಮುಹಮ್ಮದ್ ಹುಟ್ಟುವುದಕ್ಕಿಂತ ಮೊದಲೇ ಅವರ ತಂದೆ ನಿಧನರಾಗಿದ್ದರು. ಅವರಿಗೆ ಆರು ವರ್ಷವಾದಾಗ ತಾಯಿಯೂ ನಿಧನರಾದರು. ಹೀಗೆ ಅನಾಥ ಮುಹಮ್ಮದ್‍ರನ್ನು ಸಾಕುವ ಹೊಣೆಯ ನ್ನು ಅವರ ದೊಡ್ಡಪ್ಪ (ತಂದೆಯ ಅಣ್ಣ) ಅಬೂತಾಲಿಬ್ ವಹಿಸಿಕೊಂಡರು. ಅದು ಆಗಿನ ಕಾಲದ ಸಂಪ್ರದಾಯವೂ ಆಗಿತ್ತು. ಆದರೆ 40 ವರ್ಷವಾದಾಗ ತಾನು ಪ್ರವಾದಿ ಎಂದು ಮುಹಮ್ಮದ್‍ರು(ಸ)  ಘೋಷಿಸಿದರು. ಜೊತೆಗೇ ತನ್ನ ದೊಡ್ಡಪ್ಪ ಅಬೂತಾಲಿಬ್, ಚಿಕ್ಕಪ್ಪ ಅಬೂಲಹಬ್, ಸಂಬಂಧಿಕರು, ಆಪ್ತರು ಮುಂತಾದ ಎಲ್ಲರ ವಿಚಾರಧಾರೆಗಳೊಂದಿಗೆ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದರು. ಮಕ್ಕಾದ  ಪಾಲಿಗೆ ಪ್ರವಾದಿ ಮುಹಮ್ಮದರ ವಿಚಾರಧಾರೆ ಹೊಸತು. ಆವರೆಗೆ ಮಕ್ಕಾದ ಮಂದಿ ಹೇಗೆ ಬದುಕುತ್ತಿದ್ದರೋ ಯಾವ ರೀತಿಯಲ್ಲಿ ಆರಾಧನೆ, ಆಚರಣೆ, ವ್ಯಾಪಾರ, ಮದುವೆ, ವಿಚ್ಛೇದನ, ಆಸ್ತಿ  ವಿಲೇವಾರಿ, ಮನರಂಜನೆ, ರಿವಾಜುಗಳು ಇತ್ಯಾದಿಗಳನ್ನು ಮಾಡುತ್ತಿದ್ದರೋ ಅವುಗಳ ಕುರಿತಂತೆ ಪ್ರವಾದಿ ಮುಹಮ್ಮದ್ ಆಕ್ಷೇಪಗಳನ್ನು ಎತ್ತತೊಡಗಿದರು. ಅವುಗಳಲ್ಲಿರುವ ಲೋಪಗಳ ಬಗ್ಗೆ  ಮಾತಾಡಿದರು. ಆದರೆ, ಇದನ್ನು ಅವರ ಕುಟುಂಬಿಕರು ಸಹಿತ ಮಕ್ಕಾದ ಮಂದಿ ವಿರೋಧಿಸಿದರು. ಅವರ ರಕ್ಷಣೆಯ ಹೊಣೆ ಹೊತ್ತ ಅಬೂತಾಲಿಬ್‍ರ ಮೇಲೆ ಒತ್ತಡವನ್ನು ಹೇರ ತೊಡಗಿದರು.  ‘ಅವರನ್ನು ನಿಮ್ಮ ರಕ್ಷಣೆಯಿಂದ ಮುಕ್ತಗೊಳಿಸಿ, ಅವರಿಗೆ ನಾವು ಬುದ್ಧಿ ಕಲಿಸುತ್ತೇವೆ’ ಎಂದು ಧಮಕಿ ಹಾಕಿದರು. ಅಷ್ಟಕ್ಕೂ, ಅಬೂತಾಲಿಬ್‍ರು ಪ್ರವಾದಿ ಮುಹಮ್ಮದ್‍ರ ವಿಚಾರಧಾರೆಯನ್ನು  ಒಪ್ಪಿಕೊಳ್ಳುತ್ತಿರಲಿಲ್ಲವಾದರೂ ಅವರನ್ನು ವಿರೋಧಿಗಳ ಕೈಗೆ ಒಪ್ಪಿಸುವುದಕ್ಕೋ ಅವರನ್ನು ತನ್ನ ರಕ್ಷಣಾ ವ್ಯಾಪ್ತಿಯಿಂದ ಹೊರಗಟ್ಟುವುದಕ್ಕೋ ಸಿದ್ಧರಾಗಲಿಲ್ಲ. ಇದರ ಪರಿಣಾಮವಾಗಿ ಪ್ರವಾದಿ  ಮುಹಮ್ಮದರ ವಿರೋಧಿಗಳು ಅಬೂತಾಲಿಬ್ ಮತ್ತು ಅವರ ಸಂಗಡಿಗರು ಬದುಕುತ್ತಿದ್ದ ಪ್ರದೇಶಕ್ಕೆ ಸಾಮಾಜಿಕ ಬಹಿ ಷ್ಕಾರವನ್ನು ಹಾಕಿದರು. ಮೂರು ವರ್ಷಗಳ ಕಾಲ ಈ ಬಹಿಷ್ಕಾರ  ಮುಂದುವರಿಯಿತು. ಬದುಕು ದುಸ್ತರವಾಯಿತು. ಆದರೂ ಪ್ರವಾದಿ ಮುಹಮ್ಮದ್ ತನ್ನ ವಿಚಾರಧಾರೆಯನ್ನು ಬಿಟ್ಟುಕೊಡಲಿಲ್ಲ. ಹಾಗಂತ, ಈ ಬಹಿಷ್ಕಾರದಿಂದಾಗಿ ಎಲೆ ತಿಂದು ಬದುಕ ಬೇಕಾದ ಸ್ಥಿತಿಗೆ  ತಲುಪಿದರೂ ಅಬೂತಾಲಿಬ್‍ರು ಅವರ ವಿಚಾರ ಧಾರೆಯನ್ನು ಒಪ್ಪಿಕೊಳ್ಳಲೂ ಇಲ್ಲ. ಎಲ್ಲಿಯ ವರೆಗೆಂದರೆ, ಮೃತಪಡುವ ವೇಳೆಯಲ್ಲೂ ಅವರು ಪ್ರವಾದಿ ಮುಹಮ್ಮದರ ವಿಚಾರಧಾರೆಯೊಂದಿಗೆ ಭಿ ನ್ನಮತವನ್ನು ಉಳಿಸಿ ಕೊಂಡೇ ಮೃತಪಟ್ಟರು. ಒಂದುವೇಳೆ,
ಪ್ರವಾದಿಯ ವಿಚಾರಧಾರೆಯಲ್ಲಿ ಬಲವಂತ ಇರುತ್ತಿದ್ದರೆ ಅದು ಮೊಟ್ಟಮೊದಲು ಪ್ರಯೋಗವಾಗಬೇಕಿದ್ದುದು ಅಬೂತಾಲಿಬ್‍ರ ಮೇಲೆ. ನಿಜವಾಗಿ, ಪ್ರವಾದಿ ಮದೀನದಲ್ಲಿ ಯಾವ ಒಪ್ಪಂದವನ್ನು  ಮಾಡಿಕೊಂಡರೋ ಅದನ್ನು ಮಕ್ಕಾದ ಅವರ ಬದುಕಿನಲ್ಲೇ ದರ್ಶಿಸಬಹುದಿತ್ತು. ಅವರ ವಿಚಾರಧಾರೆ ಉದಾರವಾದುದಾಗಿತ್ತು. ಅದರಲ್ಲಿ ಬಲವಂತ ಇರಲಿಲ್ಲ. ಅದು ಭಿನ್ನ ವಿಚಾರಧಾರೆಯ ಮೇಲೆ ಏರಿ  ಹೋಗುವಂಥದ್ದೂ ಆಗಿರಲಿಲ್ಲ. ಪ್ರವಾದಿ ಮುಹಮ್ಮದರ ವಿಚಾರಧಾರೆಯನ್ನು ಅಬೂತಾಲಿಬ್ ಹೇಗೆ ಒಪ್ಪಿಕೊಳ್ಳಲಿಲ್ಲವೋ ಹಾಗೆಯೇ ತನ್ನ ಆಶ್ರಯದಾತ, ದೊಡ್ಡಪ್ಪ, ಕಷ್ಟಕಾಲದಲ್ಲಿ ಕಾವಲು ನಿಂತ ಮಹಾ ನುಭಾವ ಎಂಬ ವಾಸ್ತವದ ಹೊರತಾಗಿಯೂ ಪ್ರವಾದಿ ಮುಹಮ್ಮದ್(ಸ)ರು ತನ್ನ ದೊಡ್ಡಪ್ಪನಿಗಾಗಿ ತನ್ನ ವಿಚಾರ ಧಾರೆಯನ್ನು ಬಿಟ್ಟುಕೊಡಲೂ ಇಲ್ಲ. ಸೈದ್ಧಾಂತಿಕ ಭಿನ್ನಮತವು ಪರಸ್ಪರ ಪ್ರೀತಿ, ವಿಶ್ವಾಸ,  ಸಹಜ ಬದುಕಿಗೆ ಅಡ್ಡಿಯಲ್ಲ ಎಂಬುದನ್ನು ಸಾರಿದ ಸಂದರ್ಭ ಇದು. ದುರಂತ ಏನೆಂದರೆ,
ಪ್ರವಾದಿ ಮುಹಮ್ಮದರ ಕಾಲಾನಂತರ ಅವರ ಅನುಯಾಯಿಗಳು ಮಾಡಿರಬಹುದಾದ ವ್ಯಕ್ತಿಗತ ತಪ್ಪುಗಳನ್ನು ಅವರ ವಿಚಾರಧಾರೆಯ ತಪ್ಪುಗಳೆಂಬಂತೆ ಬಿಂಬಿಸಲು ನಮ್ಮ ನಡುವಿನ ಅನೇಕರು  ಶ್ರಮಿಸುತ್ತಿರುವುದು. ಸಿರಿಯಾದ ಡಮಾಸ್ಕಸ್‍ನಲ್ಲಿರುವ ಮುಸ್ಲಿಮರು ಮತ್ತು ಕ್ರೈಸ್ತರು ಸುಮಾರು 7 ದಶಕಗಳ ಕಾಲ ಒಂದೇ ಕಟ್ಟಡ ದಲ್ಲಿ ಆರಾಧನೆ ನಡೆಸುತ್ತಿದ್ದರು ಎಂದು ಅಲ್ ಬಿದಾಯ ವನ್ನಿಹಾಯ  ಎಂಬ ಬಹುಪ್ರಸಿದ್ಧ ಗ್ರಂಥದಲ್ಲಿ ಇಬ್ನು ಕಸೀರ್ ಎಂಬ ವಿದ್ವಾಂಸರು ದಾಖಲಿಸಿದ್ದಾರೆ. ಕಟ್ಟಡದ ಅರ್ಧಭಾಗ ಮಸೀದಿಯಾಗಿ ಬಳಕೆಯಾಗುತ್ತಿದ್ದರೆ ಉಳಿದರ್ಧ ಭಾಗ ಚರ್ಚ್ ಆಗಿತ್ತು. ಒಂದೇ ಬಾಗಿಲಿನ  ಮೂಲಕ ಎರಡೂ ಧರ್ಮಗಳ ಅನುಯಾಯಿಗಳು ಕಟ್ಟಡ ಪ್ರವೇಶಿಸುತ್ತಿದ್ದರು. ಹಿ.ಶಕ. 86ರಲ್ಲಿ ಇಲ್ಲಿ ಬೇರೆ ಬೇರೆ ಪ್ರಾರ್ಥನಾಲಯಗಳು ನಿರ್ಮಾಣವಾದುವು ಎಂದು ದಾಖಲಾಗಿದೆ.
ಇದೊಂದು ಉದಾಹರಣೆ ಅಷ್ಟೇ.
ಇಂಥ ನೂರಾರು ಉದಾಹರಣೆಗಳು ಚಾರಿತ್ರಿಕವಾಗಿ ದಾಖಲಾಗಿವೆ. ಪ್ರವಾದಿ ಮುಹಮ್ಮದರು ತನ್ನ ವಿಚಾರಧಾರೆಯನ್ನು ಒಪ್ಪದವರೊಂದಿಗೆ ಆರ್ಥಿಕ ವ್ಯವಹಾರವನ್ನು ಇಟ್ಟುಕೊಂಡಿದ್ದರು. ಮೃತಪಡುವ  ವೇಳೆ ಅವರ ಯುದ್ಧಕವಚ ಓರ್ವ ಯಹೂದಿ ಶ್ರೀಮಂತನ ಬಳಿ ಅಡವಿಟ್ಟ ರೂಪದಲ್ಲಿತ್ತು. ಹಿ.ಶಕ 9ರಲ್ಲಿ ನಜ್ರಾನ್‍ನಿಂದ ಆಗಮಿಸಿದ ಕ್ರೈಸ್ತ ನಿಯೋಗಕ್ಕೆ ಅವರು ಮಸೀದಿಯಲ್ಲಿ ಆಶ್ರಯ ಒದಗಿಸಿದರು.  ಧರ್ಮ, ಗೋತ್ರ ನೋಡದೆಯೇ ರೋಗಿ ಗಳನ್ನು ಭೇಟಿಯಾದರು. ಮುಸ್ಲಿಮೇತರರ ಶವವನ್ನು ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯುವ ವೇಳೆ ಗೌರವಪೂರ್ವಕ ಎದ್ದು ನಿಂತರು. ತಾನು ಸಾಗುವ ದಾರಿಯಲ್ಲಿ  ಪ್ರತಿದಿನ ಕಸ ಎಸೆದು ತನ್ನ ವಿರೋಧವನ್ನು ವ್ಯಕ್ತಪಡಿಸುತ್ತಿದ್ದ ಮಹಿಳೆ ಕಾಯಿಲೆ ಬಿದ್ದಾಗ ಆಕೆಯನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ನಿಜವಾಗಿ,
ಪ್ರವಾದಿ ಮುಹಮ್ಮದರು ಈ ಜಗತ್ತಿಗೆ ಪರಿಚಯಿಸಿದ್ದು ಉದಾರವಾದಿ ಸಿದ್ಧಾಂತವನ್ನು. ಅದು ಎಂದೂ ಯಾರ ಮೇಲೆಯೂ ಬಲವಂತವನ್ನು ಒಪ್ಪುವುದಿಲ್ಲ. ಹಾಗಂತ, ಅದು ವಿಚಾರದ ಬಲವಂತ ಮಾತ್ರ  ಅಲ್ಲ, ಬಡತನದ ಕಾರಣದಿಂದ ಓರ್ವನನ್ನು ಗುಲಾಮನಂತೆ ದುಡಿಸುವುದನ್ನು, ಸಾಲಕ್ಕೆ ಬಲವಂತ ದಿಂದ ಹೆಚ್ಚುವರಿ ಹಣ ಪಡೆಯುವುದನ್ನು, ಹೆಣ್ಣಿನ ಒಪ್ಪಿಗೆಯಿಲ್ಲದ ವರನೊಂದಿಗೆ ಬಲವಂತದಿಂದ  ಮದುವೆ ಮಾಡಿಸುವುದನ್ನು, ಹೆಣ್ಣು ಮಕ್ಕಳ ಆಸ್ತಿಯ ಹಕ್ಕನ್ನು ಬಲವಂತದಿಂದ ಕಸಿದುಕೊಳ್ಳುವು ದನ್ನು.. ಹೀಗೆ ಬಲವಂತದಿಂದಾಗುವ ಯಾವುದನ್ನೂ ಒಪ್ಪುವುದಿಲ್ಲ. ಅದು ಕೆಡುಕನ್ನು ಮಾತ್ರ ಬಲವಂತ ದಿಂದ ತಡೆಯುತ್ತದೆ. ಹಾಗಂತ, ಅದು ಪ್ರವಾದಿ ಮುಹಮ್ಮದರ ನಿಲುವಷ್ಟೇ ಅಲ್ಲ, ಇವತ್ತಿನ ಎಲ್ಲ ಪ್ರಜಾತಂತ್ರ ರಾಷ್ಟ್ರಗಳೂ ಕೆಡುಕನ್ನು ಬಲವಂತದಿಂದಲೇ ತಡೆಯುತ್ತಿವೆ. ಆದ್ದರಿಂದ,
ಸದ್ಯದ ಅಗತ್ಯ ಅವರನ್ನು ಅರಿಯುವುದು, ಜರೆಯುವುದಲ್ಲ.

Friday, July 3, 2020

ಅಲ್ಲಿ ಕ್ರಿಸ್ಚಿಯನ್, ಇಲ್ಲಿ ಹನೀಫ್: ಹೆಸರು ಮಾತ್ರ ಬೇರೆಇತ್ತೀಚೆಗೆ ಒಂದು ಘಟನೆ ಸುದ್ದಿಗೀಡಾಗಿತ್ತು.
ಅಮೇರಿಕದ ನ್ಯೂಯಾರ್ಕ್‍ನಲ್ಲಿರುವ ಉದ್ಯಾನವು ಈ ಘಟನೆಯ ಕೇಂದ್ರ ಬಿಂದು. ಹಕ್ಕಿಗಳ ಬಗ್ಗೆ ಅಪಾರ ಒಲವು ಇರುವ ಮತ್ತು ಅವುಗಳನ್ನು ತನ್ನ ಕ್ಯಾಮರಾದಲ್ಲಿ ಸೆರೆಹಿಡಿಯುವ ಹವ್ಯಾಸವುಳ್ಳ  ಕ್ರಿಸ್ಚಿಯನ್ ಕೂಪರ್ ಅನ್ನುವ ವ್ಯಕ್ತಿ ಅಲ್ಲಿದ್ದ. ಆತ ಕರಿಯ ಜನಾಂಗದ ವ್ಯಕ್ತಿ. ಅಲ್ಲಿಗೆ ಆ್ಯಮಿ ಕೂಪರ್ ಎಂಬ ಹೆಸರಿನ ಮಹಿಳೆ ತನ್ನ ನಾಯಿಯೊಂದಿಗೆ ಬರುತ್ತಾಳೆ. ಆಕೆ ಬಿಳಿಯ ಹೆಣ್ಣು. ನಾಯಿಯನ್ನು  ಬಿಗಿಯಾಗಿ ಹಿಡಿದುಕೋ ಎಂದು ಕ್ರಿಸ್ಚಿಯನ್ ಕೂಪರ್ ಆ್ಯಮಿಯೊಂದಿಗೆ ಹೇಳುತ್ತಾನೆ. ನಾಯಿ ಉದ್ಯಾನದೊಳಗೆ ನುಗ್ಗಿ ಹಕ್ಕಿಗಳಿಗೆ ತೊಂದರೆ ಕೊಡಬಹುದು ಎಂಬುದು ಆತನ ಅನುಮಾನ. ಆ್ಯಮಿಗೆ ಆ  ಸಲಹೆ ಇಷ್ಟ ವಾಗುವುದಿಲ್ಲ. ‘ನೀನ್ಯಾರು ನನಗೆ ಸಲಹೆ ಕೊಡುವವ’ ಅನ್ನುವ ಭಾವದಲ್ಲಿ ಆತನ ಮೇಲೆ ಆಕೆ ಏರಿ ಹೋಗುತ್ತಾಳೆ. ‘ನಾನು ಪೊಲೀಸರಿಗೆ ಕರೆ ಮಾಡುವೆ’ ಎಂದಾಕೆ ಬೆದರಿಸುತ್ತಾಳೆ. ‘ಓರ್ವ  ಆಫ್ರಿಕನ್ ಮೂಲದ ಅಮೇರಿಕನ್ ವ್ಯಕ್ತಿ ನನಗೆ ಜೀವ ಬೆದರಿಕೆ ಹಾಕುತ್ತಿದ್ದಾನೆ’ ಎಂದು ದೂರು ಕೊಡುವೆ ಅನ್ನುತ್ತಾಳೆ ಮತ್ತು ‘ಪೊಲೀಸರಿಗೂ ಕಪ್ಪು ವರ್ಣೀಯರಿಗೂ ನಡುವೆ ಎಂಥ ಸಂಬಂಧ ಇದೆ  ಎಂಬುದೂ ನನಗೆ ಗೊತ್ತು’ ಎಂದೂ ಹೇಳುತ್ತಾಳೆ. ಬಳಿಕ ಪೊಲೀಸರಿಗೆ ಕರೆ ಮಾಡುತ್ತಾಳೆ..
ಈ ಇಡೀ ಬೆಳವಣಿಗೆಯನ್ನು ಕ್ರಿಸ್ಚಿಯನ್ ಕೂಪರ್ ಕ್ಯಾಮರಾದಲ್ಲಿ ಸೆರೆಹಿಡಿದು ಹಂಚಿಕೊಳ್ಳುತ್ತಾನೆ.
ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ವರ್ತನೆಯ ಬಗ್ಗೆ ತೀವ್ರ ಆಕ್ಷೇಪಗಳು ವ್ಯಕ್ತವಾಗುತ್ತವೆ. ತೀರಾ ಸಹಜ ಸಲಹೆಯನ್ನು ಆ್ಯಮಿ ಕೂಪರ್ ಜನಾಂಗೀಯ ಪ್ರಕರಣವಾಗಿ ತಿರುಚಿದುದನ್ನು  ಖಂಡಿಸಲಾಗುತ್ತದೆ. ‘ಅಮೇರಿಕನ್ ಪೊಲೀಸರು ಕರಿಯರ ವಿರುದ್ಧ ಇದ್ದಾರೆ ಮತ್ತು ನಿನ್ನನ್ನು ನಾನು ಸಿಲುಕಿಸುವೆ’ ಎಂಬ ಆಕೆಯ ಮಾತಿನ ಧಾಟಿಯು ಅಪ್ಪಟ ಜನಾಂಗೀಯ ಮೇಲ್ಮೆಯಿಂದ ಕೂಡಿದ್ದಾಗಿದೆ  ಎಂದು ಹೇಳಲಾಗುತ್ತದೆ. ಪ್ರಕರಣ ಎಷ್ಟು ತೀವ್ರ ಚರ್ಚೆಯನ್ನು ಹುಟ್ಟುಹಾಕಿತ್ತೆಂದರೆ, ದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ಕ್ರಿಸ್ಚಿಯನ್ ಕೂಪರ್ ನ ಸಂದರ್ಶನ ನಡೆಸುತ್ತದೆ. ಘಟನೆಯ ವಿವರಗಳನ್ನು  ಪಡೆದುಕೊಳ್ಳುತ್ತದೆ. ಆ್ಯಮಿ ತನ್ನ ವರ್ತನೆಗೆ ಕ್ಷಮೆ ಯಾಚಿಸುತ್ತಾಳೆ. ಮಾತ್ರವಲ್ಲ, ಉದ್ಯೋಗದಾತ ಆಕೆಯನ್ನು ಉದ್ಯೋಗದಿಂದ ಕಿತ್ತು ಹಾಕುತ್ತಾನೆ. ಹಾಗಂತ,
ತಾನು ಜನಾಂಗೀಯವಾದಿಯಲ್ಲ ಎಂದು ಆ್ಯಮಿ ಹೇಳಿದ್ದಾಳೆ. ಆಕೆಯ ಈ ಹೇಳಿಕೆಯನ್ನು ‘ದ ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯ ಸಂದರ್ಶನದಲ್ಲಿ ಕ್ರಿಸ್ಚಿಯನ್ ಕೂಪರ್ ಕೂಡಾ ಸಮರ್ಥಿಸಿದ್ದಾನೆ. ಆಕೆ ಜ ನಾಂಗೀಯವಾದಿ ಅಲ್ಲದೇ ಇರಬಹುದು. ಆದರೆ, ಕೆಲವೊಮ್ಮೆ ಜನಾಂಗೀಯವಾದಿಯಲ್ಲದ ವ್ಯಕ್ತಿಯೂ ಸನ್ನಿ ವೇಶದ ಲಾಭವನ್ನು ಪಡಕೊಳ್ಳುವುದಕ್ಕಾಗಿ ಹೇಗೆ ಜನಾಂಗೀಯವಾದಿ ಯಾಗುತ್ತಾರೆ ಎಂಬ  ಸೂಕ್ಷ್ಮ  ಎಳೆಯನ್ನು ಆತ ಬಿಚ್ಚಿಡುತ್ತಾನೆ.
ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಪ್ರಕರಣವು ಈ ಘಟನೆಯನ್ನು ನೆನಪಿಸುವಂತಿದೆ.
ಹಾವೇರಿಯ ರಾಣೆಬೆನ್ನೂರಿನಿಂದ ನಾಲ್ಕು ಎಮ್ಮೆಗಳನ್ನು ತನ್ನ ಲಾರಿಯಲ್ಲಿ ಮಂಗಳೂರಿಗೆ ಸಾಗಾಟ ಮಾಡುತ್ತಿದ್ದ ಮುಹಮ್ಮದ್ ಹನೀಫ್ ಎಂಬವರ ಮೇಲೆ ಜೂನ್ 14ರಂದು ಮಂಗಳೂರಿ ನಲ್ಲಿ  ದಾಳಿಯಾಗುತ್ತದೆ. ದಾಳಿ ನಡೆದ ಸ್ಥಳಕ್ಕೂ ಪೆÇಲೀಸ್ ಠಾಣೆಗೂ ತುಂಬಾ ದೂರ ಏನೂ ಇಲ್ಲ. ಸುಮಾರು 15ರಷ್ಟಿದ್ದ ದುಷ್ಕರ್ಮಿಗಳು ಹನೀಫ್‍ರನ್ನು ಲಾರಿಗೆ ಕಟ್ಟಿ ಹಾಕಿ ಥಳಿಸುತ್ತಾರೆ. ಹಣ ದೋಚುತ್ತಾರೆ.  ತಮಾಷೆ ಏನೆಂದರೆ, ಪೊಲೀಸರು ಹನೀಫ್‍ನನ್ನು ಠಾಣೆಗೆ ಕರೆದೊಯ್ದು ಗೋಕಳ್ಳತನದ ಆರೋಪ ದಡಿ ಜಾಮೀನು ರಹಿತ ಕೇಸು ದಾಖಲಿಸುತ್ತಾರೆ. ಅದೇವೇಳೆ, ದುಷ್ಕರ್ಮಿಗಳ ಪೈಕಿ ಆರು ಮಂದಿಯ ನ್ನು ಬಂಧಿಸಿ ದುರ್ಬಲ ಸೆಕ್ಷನ್‍ಗಳಡಿ ಕೇಸು ದಾಖಲಿಸಿಕೊಳ್ಳುತ್ತಾರೆ ಮತ್ತು ಜಾಮೀನಿ ನಡಿ ಬಿಡುಗಡೆಗೊಳ್ಳುತ್ತಾರೆ.
ಈ ಎಲ್ಲವನ್ನೂ ಸ್ವತಃ ಮುಹಮ್ಮದ್ ಹನೀಫ್‍ರೇ ಸುದ್ದಿ ಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾರೆ. ತಾನು ಸರಕಾರದಿಂದ ಮಾನ್ಯತೆ ಹೊಂದಿದ ಜಾನುವಾರು ಸಾಗಾಟಗಾರ ಎಂಬುದನ್ನು ದಾಖಲೆ ಸಮೇತ  ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ.
ಕ್ರಿಸ್ಚಿಯನ್ ಕೂಪರ್ ಮತ್ತು ಮುಹಮ್ಮದ್ ಹನೀಫ್- ಈ ಎರಡೂ ಪ್ರಕರಣಗಳಲ್ಲಿ ಸೂಕ್ಷ್ಮ  ಸಂಬಂಧವೊಂದಿದೆ. ಕ್ರಿಸ್ಚಿಯನ್ ಕಪ್ಪು ವರ್ಣೀಯನಾಗಿರುವುದು ಆತನನ್ನು ಜರೆಯುವುದಕ್ಕೆ, ಆತನ ವಿರುದ್ಧ ಏರಿ  ಹೋಗುವುದಕ್ಕೆ ಮತ್ತು ಪೆÇಲೀಸರಿಗೆ ಕರೆ ಮಾಡಿ ಆತನ ಕಪ್ಪು ವರ್ಣವನ್ನು ಎತ್ತಿ ಹೇಳಿ ಸುಳ್ಳು ದೂರು ಕೊಡುವುದಕ್ಕೆ ಆ್ಯಮಿ ಕೂಪರ್‍ಗೆ ಧೈರ್ಯ ಒದಗಿಸುತ್ತದೆ. ನಿಜವಾಗಿ, ಕ್ರಿಸ್ಚಿಯನ್‍ನ ಸಲಹೆಯ  ಬಗ್ಗೆ ಆಕ್ಷೇಪ ಇದ್ದಿದ್ದರೆ ಅದನ್ನು ಪ್ರಶ್ನಿಸುವುದಕ್ಕೆ ಆ್ಯಮಿಗೆ ಅವಕಾಶ ಖಂಡಿತ ಇತ್ತು. ಆದರೆ ಆ ಅವಕಾಶ ಆಕೆ ಬಿಳಿಯಳು ಎಂಬ ಕಾರಣದಿಂದ ಒದಗಿರುವುದಲ್ಲ. ಬಿಳಿ ಮತ್ತು ಕಪ್ಪು ಅಲ್ಲಿ ವಿಷಯವೇ ಅಲ್ಲ.  ಇಬ್ಬರು ಮನುಷ್ಯರ ನಡುವಿನ ವಿಷಯ ಅದು. ಆದರೆ ಆ್ಯಮಿ ಆ ಸಲಹೆಯನ್ನು ಓರ್ವ ಕರಿಯನ ಸಲಹೆ ಎಂದು ಪರಿಗಣಿಸಿ ದಳು. ‘ಕರಿಯನೋರ್ವ ಬಿಳಿಯಳಿಗೆ ಸಲಹೆ ಕೊಡುವುದೇ’ ಎಂಬ ಮೇಲ್ಮೆ  ಭಾವನೆಯೂ ಬಂತು. ಆದ್ದರಿಂದಲೇ, ಆಕೆ ಆ ಸಂದರ್ಭದ ಲಾಭವನ್ನು ಪಡೆದುಕೊಳ್ಳಲು ಯತ್ನಿಸಿದಳು. ಪೆÇಲೀಸರಲ್ಲಿ ಕರಿವರ್ಣೀಯರ ವಿರೋಧಿ ಭಾವನೆಯಿದೆ. ಸಾಮಾಜಿಕವಾಗಿಯೂ ಕರಿಯರ ಬಗ್ಗೆ  ಜನಾಂಗೀಯ ತಾರತಮ್ಯ ವನ್ನು ಒಪ್ಪಿಕೊಳ್ಳುವ ಮನಸ್ಥಿತಿಯಿದೆ. ಇದನ್ನು ಬಳಸಿಕೊಂಡು ಈತನನ್ನು ತುಳಿಯಬೇಕು ಎಂದು ಆಲೋಚಿಸಿದಳು.
ಮಂಗಳೂರು ಘಟನೆಯಲ್ಲೂ ಸ್ಪಷ್ಟವಾಗುವುದೂ ಇಂಥದ್ದೇ  ಭಾವನೆ.
ಜಾನುವಾರು ಸಾಗಾಟ ಅಪರಾಧ ಅಲ್ಲ. ಕಸಾಯಿಖಾನೆಗಳು ಬಾಗಿಲು ತೆರೆದಿರುವುದೇ ಜಾನುವಾರುಗಳನ್ನು ನಂಬಿಕೊಂಡು. ಅವೇನೂ ಸ್ವಯಂ ತೆರೆದುಕೊಂಡು ಸ್ವಯಂ ಮುಚ್ಚಿಕೊಳ್ಳುವ ಬಾಗಿಲುಗಳಲ್ಲ.  ಸರಕಾರದ ಮಾನ್ಯತೆಯಿಂದಲೇ ಅವು ಬಾಗಿಲು ತೆರೆಯುತ್ತವೆ. ಹಾಗೆ ಮಾನ್ಯತೆಯಿರುವ ಕಸಾಯಿಖಾನೆಗಳಿಗೆ ಕಾನೂನುಬದ್ಧವಾಗಿ ಜಾನುವಾರು ಸಾಗಾಟ ಮಾಡುವುದು ಅಪರಾಧವೂ ಅಲ್ಲ, ಅದನ್ನು  ತಡೆಯುವುದೇ ಅಪರಾಧ. ಇದು ತಡೆಯುವವರಿಗೂ ಗೊತ್ತು, ಜಾಮೀನು ರಹಿತ ಕೇಸು ದಾಖಲಿಸುವ ಪೆÇಲೀಸು ಠಾಣೆಗೂ ಗೊತ್ತು. ಹಾಗಿದ್ದರೂ ಮತ್ತೂ ಮತ್ತೂ ಇಂಥ ಪ್ರಕರಣಗಳು  ನಡೆಯುತ್ತಿರುವುದೇಕೆ?
ತೆಲಂಗಾಣದ ಹೈಕೋರ್ಟೂ ಕಳೆದವಾರ ಇದೇ ಪ್ರಶ್ನೆಯನ್ನು ಎತ್ತಿತ್ತು. ಕೊರೋನಾ ಲಾಕ್‍ಡೌನ್‍ನ ವೇಳೆ ಕೇವಲ ಒಂದೇ ಸಮುದಾಯದವರೇ ಏಕೆ ಪೊಲೀಸರಿಂದ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು  ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇಲೆ ವಿಚಾರಣೆ ನಡೆಸುತ್ತಾ ಪೊಲೀಸರನ್ನು ಪ್ರಶ್ನಿಸಿತ್ತು.
ಜನಾಂಗೀಯ ತಾರತಮ್ಯ ಮತ್ತು ಧಾರ್ಮಿಕ ತಾರತಮ್ಯ- ಇವೆರಡೂ ಭಾಷಿಕವಾಗಿ ಬೇರೆ ಬೇರೆಯಾಗಿದ್ದರೂ ದೌರ್ಜನ್ಯಕ್ಕೆ ಸಂಬಂಧಿಸಿ ಸಮಾನ ಉದ್ದೇಶಗಳನ್ನೇ ಹೊಂದಿರುತ್ತದೆ. ಯಾವ ದೇಶದಲ್ಲಿ ಜ ನರು ಅಲ್ಪಸಂಖ್ಯೆಯಲ್ಲಿರುತ್ತಾರೋ ಅವರನ್ನು ಗುರಿ ಮಾಡುವುದೇ ಇದರ ಲಕ್ಷಣ. ಅಂದಹಾಗೆ,
ಕಪ್ಪು ಮತ್ತು ಬಿಳುಪು ಯಾವುದೇ ಮನುಷ್ಯರ ಒಳ್ಳೆಯತನ ಮತ್ತು ಕೆಟ್ಟತನವನ್ನು ಗುರುತಿಸುವುದಕ್ಕೆ ಇರುವ ಮಾನದಂಡಗಳಲ್ಲ. ಮುಸ್ಲಿಮ್ ಮತ್ತು ಹಿಂದೂ ಎಂಬುದೂ ಹೀಗೆಯೇ. ಇವು ಒಳಿತು ಮತ್ತು  ಕೆಡುಕನ್ನು ವಿಭಜಿಸುವ ರೇಖೆಗಳಲ್ಲ. ಆದರೆ ಕೊರೋನಾ ಭಾರತವು ಮುಸ್ಲಿಮರನ್ನು ನಡೆಸಿಕೊಂಡ ರೀತಿ ಎಷ್ಟು ಹೀನಾಯವಾಗಿತ್ತು ಅನ್ನುವುದಕ್ಕೆ ನೂರಾರು ವೀಡಿಯೋಗಳು ಮತ್ತು ಚಿತ್ರಗಳೇ  ಸಾಕ್ಷಿಗಳಾಗಿವೆ. ಮುಸ್ಲಿಮರನ್ನು ಗುರಿ ಮಾಡಿಕೊಂಡು ಸುಳ್ಳು ಸುದ್ದಿಗಳನ್ನು ಉತ್ಪಾದಿಸುವ ಕಾರ್ಖಾನೆಗಳೇ ನಿರ್ಮಾಣವಾದುವು. ಯಾವ್ಯಾವುದೋ ಮತ್ತು ಎಲ್ಲೆಲ್ಲಿಯದೋ ವೀಡಿಯೋಗಳನ್ನು  ಮುಸ್ಲಿಮರದೆಂದು ಬಿಂಬಿಸಿ, ಮುಸ್ಲಿಮರನ್ನು ಹೀನಾಯವಾಗಿ ಕಾಣುವುದಕ್ಕೆ ದುರ್ಬಳಕೆ ಮಾಡಲಾಯಿತು. ಮುಸ್ಲಿಮರಿಂದಾಗುವ ಅತಿ ಸಣ್ಣ ತಪ್ಪಿಗೂ ಅತ್ಯಂತ ಭೀಕರ ರೂಪವನ್ನು ಕೊಡಲಾಯಿತು. ಅವು  ಸಮಾಜವನ್ನು ಸಹಜವಾಗಿಯೇ ಪ್ರಭಾವಿಸಿತು. ಮುಸ್ಲಿಮ ರೆಂದರೆ ಹಾಗೆ, ಹೀಗೆ; ಅವರು ಕಾನೂನನ್ನು ಪಾಲಿಸುವುದಿಲ್ಲ, ಕೊರೋನಾದ ಹಿಂದಿರುವುದು ಅವರೇ ಎಂಬಂತಹ ನಂಬಿಕೆಗಳು ಸಾರ್ವಜನಿಕವಾಗಿ ತಳವೂರ ತೊಡಗಿತು. ಪೊಲೀಸರೂ ವೈದ್ಯರೂ ಅಧಿಕಾರಿಗಳೂ ರಾಜಕಾರಣಿಗಳೂ ಅವುಗಳಿಂದ ಪ್ರಭಾವಿತರಾದರು. ಅವರು ಬಯಸದೆಯೇ ಅವರೊಳಗೆ ಮುಸ್ಲಿಮರೆಂದರೆ ಹಾಗೆ ಅನ್ನುವ  ಸ್ಟೀರಿಯೋಟೈಪ್ಡ್ ಚಿತ್ರವೊಂದು ಮೂಡತೊಡಗಿತು. ಆಗಬೇಕಾಗಿದ್ದುದು ಇಷ್ಟೇ. ಆ ಬಳಿಕ,
ಎಲ್ಲಿ ರಕ್ಷಣೆ ಸಿಗಬೇಕೋ, ಎಲ್ಲಿ ತಾರತಮ್ಯಕ್ಕೆ ಅವಕಾಶ ಇರಬಾರದೋ ಅಲ್ಲೇ  ಅವುಗಳ ಉಲ್ಲಂಘನೆ ಸರಾಗವಾಗಿ ನಡೆಯತೊಡಗುತ್ತದೆ.
ಯಾವುದೇ ಸುಳ್ಳು ಸುದ್ದಿಯೂ ಸುಳ್ಳು ಸುದ್ದಿ ಎಂಬ ಗುರುತಿ ನೊಂದಿಗೆ ಪ್ರಸಾರವಾಗುವುದಿಲ್ಲ. ಆರಂಭದಲ್ಲಿ ಎಲ್ಲ ಸುಳ್ಳು ಸುದ್ದಿಗಳೂ ಸತ್ಯ ಸುದ್ದಿಗಳೇ. ಅವು ಸುಳ್ಳುಗಳು ಅಂತ ಪತ್ತೆಯಾಗುವುದು  ವಾರಗಳೋ ತಿಂಗಳುಗಳೋ ಕಳೆದ ಬಳಿಕ. ಆದರೆ, ಆ ಸತ್ಯಶೋಧನಾ ವರದಿಯು ಸುಳ್ಳು ಸುದ್ದಿಯಷ್ಟು ವ್ಯಾಪಕ ಪ್ರಮಾಣದಲ್ಲಿ ಹಂಚಿಕೆಯಾಗುವುದೂ ಇಲ್ಲ. ಆರಂಭದಲ್ಲಿ ಯಾರು ಈ ಸುಳ್ಳು ಸುದ್ದಿಯನ್ನು ಓದಿರುತ್ತಾರೋ ಅವರು ಈ ಸತ್ಯಶೋಧನಾ ವರದಿಯನ್ನು ಓದಬೇಕೆಂದೂ ಇಲ್ಲ. ಹೀಗೆ ಸುಳ್ಳು ಸುದ್ದಿಗಳೇ ಉತ್ಪಾದನೆಗೊಂಡು ಹಂಚುತ್ತಿರುವಾಗ ಅದು ನಿಧಾನಕ್ಕೆ ಫಲಿತಾಂಶವನ್ನು ನೀಡಲೂ  ಪ್ರಾರಂಭಿಸುತ್ತದೆ. ಅಮೇರಿಕ ದಲ್ಲಿ ಕರಿವರ್ಣೀಯರ ವಿರುದ್ಧದ ಜನಾಂಗೀಯ ತಾರತಮ್ಯಕ್ಕೂ ಇಂಥದ್ದೇ  ಹಿನ್ನೆಲೆಯಿದೆ. ಕರಿಯರನ್ನು ಅಪರಾಧಿ ಮನೋಭಾವ ದವರು, ದುರ್ನಡತೆ ಉಳ್ಳವರು, ಶಿಸ್ತನ್ನು  ರೂಢಿಸದವರು, ಅಪರಾಧಿಗಳಲ್ಲಿ ಹೆಚ್ಚಿನವರು ಅವರೇ.. ಇತ್ಯಾದಿ ಸುದ್ದಿ ಗಳನ್ನು ಪದೇ ಪದೇ ಹಂಚಿಕೊಂಡು ಅಲ್ಲಿಯ ನಾಗರಿಕರಲ್ಲಿ ಜನಾಂಗೀಯ ವಿರೋಧಿ ಭಾವನೆ ಗರಿಗೆದರುವಂತೆ ಮಾಡಲಾಗಿದೆ.  ಕರಿಯ ರೆಂದರೆ ಹಾಗೆ, ಕರಿಯರೆಂದರೆ ಹೀಗೆ ಎಂಬ ವದಂತಿಗಳು ಹರಡಿಕೊಂಡು, ಕ್ರಮೇಣ ಅವು ನಿರ್ದಿಷ್ಟ ರೂಪವನ್ನು ಪಡೆ ಯಿತು. ಆ ರೂಪಕ್ಕೆ ಉದ್ದ ಉಗುರು-ಕೋರೆಹಲ್ಲುಗಳನ್ನು  ಅಂಟಿಸಲಾಯಿತು. ಕ್ರಮೇಣ ಕರಿವರ್ಣೀಯರ ವಿರುದ್ಧ ಏನೇ ಆರೋಪ ಹೊರಿಸಿದರೂ ಅದು ನಿಜ ಎಂದು ನಾಗರಿಕರು ನಂಬುವಂಥ ವಾತಾವರಣ ಸೃಷ್ಟಿಯಾಯಿತು.
1955ರಲ್ಲಿ 14 ವರ್ಷದ ಆಫ್ರಿಕನ್ ಮೂಲದ ಅಮೇರಿಕನ್ ಬಾಲಕ ಎಮ್ಮೆಟ್ ಟಿಲ್ ಎಂಬವನನ್ನು ಅಪಹರಿಸಿ, ಹಿಂಸಿಸಿ ಕೊನೆಗೆ ಗುಂಡು ಹೊಡೆದು ಕೊಲ್ಲಲಾದ ಘಟನೆ ನಡೆದಿತ್ತು. ಮಿಸಿಸಿಪ್ಪಿಯಲ್ಲಿ  ನಡೆದ ಈ ಘಟನೆಗೆ ಕ್ಯಾರೋಲಿನ್ ಬ್ರಿಯಾಂಟ್ ಎಂಬ ಬಿಳಿ ಮಹಿಳೆಯೊಂದಿಗೆ ಆತ ಅಸಭ್ಯವಾಗಿ ವರ್ತಿಸಿದ್ದು ಮತ್ತು ಲೈಂಗಿಕ ದೌರ್ಜನ್ಯಕ್ಕೆ ಮುಂದಾದುದನ್ನು ಕಾರಣವಾಗಿ ನೀಡಲಾಗಿತ್ತು. ಆದರೆ ತ ನಿಖೆಯ ವೇಳೆ ಬ್ರಿಯಾಂಟ್ ಈ ಆರೋಪವನ್ನು ಅಲ್ಲಗಳೆದಳು. ಆದರೆ, ಆ ಸತ್ಯವನ್ನು ಆಲಿಸುವುದಕ್ಕೆ ಎಮ್ಮೆಟ್ ಟಿಲ್ ಬದುಕಿರಲಿಲ್ಲ. ಹಾಗಂತ,
ಇದು ಒಂಟಿ ಘಟನೆಯಲ್ಲ ಮತ್ತು ಅಮೇರಿಕಕ್ಕೆ ಮಾತ್ರ ಸೀಮಿತವಾದ ಘಟನೆಯೂ ಅಲ್ಲ.
ಮಂಗಳೂರಿನ ಪೊಲೀಸ್ ಠಾಣೆಯಲ್ಲಿ ಮುಹಮ್ಮದ್ ಹನೀಫ್‍ನ ಮೇಲೆ ಜಾಮೀನು ರಹಿತ ಕೇಸು ದಾಖಲಾಗಿರುವುದರಲ್ಲಿ ಈ ಮನಸ್ಥಿತಿಯ ಪ್ರಭಾವವಿದೆ. ಮುಸ್ಲಿಮನೋರ್ವ ಜಾನುವಾರು ಸಾಗಾಟ  ಮಾಡುತ್ತಾನೆಂದರೆ, ಅದು ಕಳ್ಳ ಸಾಗಾಟವೇ ಆಗಿರಬೇಕು ಎಂಬ ಸ್ಟೀರಿಯೋಟೈಪ್ಡ್ ಭಾವನೆಯ ಫಲಿತಾಂಶ ಅದು. ಕೊರೋನಾದ ಆರಂಭದಲ್ಲೂ ಈ ಮನಸ್ಥಿತಿಯ ಪ್ರದರ್ಶನವಾಗಿತ್ತು. ಮುಸ್ಲಿಮರು  ಕೊರೋನಾವನ್ನು ಹಬ್ಬಿಸುವವರು ಎಂದು ನಂಬುವ ಪ್ರಾಮಾಣಿಕ ಭಾರತೀಯರನ್ನು ತಯಾರಿಸಿತ್ತು. ಮುಹಮ್ಮದ್ ಹನೀಫ್ ಪ್ರಕರಣ ಅದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ನಿಜವಾಗಿ,
ಥಳಿಸಿದವರಿಗೂ ಥಳಿಸಲ್ಪಟ್ಟವರಿಗೂ ಸತ್ಯ ಏನೆಂದು ಗೊತ್ತು. ಅವರಿಬ್ಬರನ್ನು ಬಂಧಿಸಿದವರಿಗೂ ಸತ್ಯದ ಅರಿವಿದೆ. ಆದರೆ ಆ ಸತ್ಯವನ್ನು ಒಪ್ಪುವ ಸ್ಥಿತಿಯಲ್ಲಿ ನಾಗರಿಕ ಸಮಾಜವೇ ಇರುವುದಿಲ್ಲ. ಇದು ಈ  ಕಾಲದ ಅತಿದೊಡ್ಡ ದುರಂತ.