Friday, May 29, 2020

ಕೊರೋನಾ ಹರಡಿದ್ದು ಮುಸ್ಲಿಮರು ಎಂದುದರಲ್ಲಿ ಆ ಮನೆಗೆಲಸದಾಕೆಯ ತಪ್ಪಿಲ್ಲ, ಅದು ಆಕೆಯ ಮಾತೂ ಅಲ್ಲ...ಪ್ರಖರ ಜಾತ್ಯತೀತ ಮತ್ತು ಅತ್ಯಂತ ವಿಶ್ವಾಸಾರ್ಹವೆಂದು ಗುರುತಿಗೀಡಾಗಿರುವ ದ ಹಿಂದೂ ಪತ್ರಿಕೆಯು ಮಾರ್ಚ್ 26 ರಂದು ಪ್ರಕಟಿಸಿದ ಕಾರ್ಟೂನ್ ಒಂದು ಅದರ ಓದುಗ ವಲಯವನ್ನು ಮಾತ್ರವಲ್ಲ,  ಅದರ ವಿರೋಧಿಗಳನ್ನೂ ತಬ್ಬಿಬ್ಬುಗೊಳಿಸಿತ್ತು. ಕೊರೋನಾ ವೈರಸ್ ಜಗತ್ತನ್ನೇ ಒತ್ತೆಯಿಟ್ಟುಕೊಂಡಿದೆ ಎಂಬ ಸಂದೇಶವುಳ್ಳ ಆ ಕಾರ್ಟೂನ್‍ನಲ್ಲಿ ವೈರಸ್‍ಗೆ ಮುಸ್ಲಿಮರು ಧರಿಸುವ ಬಟ್ಟೆಯನ್ನು  ತೊಡಿಸಲಾಗಿತ್ತು. ದ ಹಿಂದೂವಿನಂಥ ಪತ್ರಿಕೆಯಿಂದ ಇಂಥದ್ದೊಂದು ಕಾರ್ಟೂನನ್ನು ನಿರೀಕ್ಷಿಸದ ಓದುಗರು ತಕ್ಷಣ ಆಕ್ಷೇಪ ವ್ಯಕ್ತಪಡಿಸಿದರು. ಪತ್ರಿಕೆಯ ಸಂಪಾದಕರನ್ನು ತರಾಟೆಗೆ ತೆಗೆದುಕೊಂಡರು.  ಸಂಪಾದಕರೂ ಅಷ್ಟೇ, ಶೀಘ್ರವಾಗಿ ಆಕ್ಷೇಪಗಳಿಗೆ ಸ್ಪಂದಿಸಿದರು. ಕ್ಷಮೆಯಾಚಿಸಿದರು. ಆ ಕಾರ್ಟೂನನ್ನು ಪ್ರಕಟಿಸಿದ ವಿಷಯದಲ್ಲಿ ಯಾವ ದುರುದ್ದೇಶವೂ ಇರಲಿಲ್ಲ ಎಂದು ಹೇಳಿದ ಪತ್ರಿಕೆ, ಆ ಕಾರ್ಟೂನನ್ನು ಅಳಿಸಿ ಹಾಕಿತು.
ಇಸ್ಲಾಮನ್ನು ಭೀತಿಕಾರಕವಾಗಿ ಬಿಂಬಿಸುವ ಪ್ರಚಾರಗಳಿಗೆ ಹೇಗೆ ಜಾತ್ಯತೀತ ಮನಸುಗಳು ಕೂಡ ಬಲಿಯಾಗಬಹುದು ಅನ್ನುವುದಕ್ಕೊಂದು ಉದಾಹರಣೆ ಇದು.
ಆತ್ಮೀಯ ರೈತ ಗೆಳೆಯರೊಬ್ಬರು ಎಪ್ರಿಲ್ 5 ರಂದು ತಮ್ಮ ಫೇಸ್‍ಬುಕ್‍ನಲ್ಲಿ ಹಂಚಿಕೊಂಡ ನಿಜ ಘಟನೆಯೊಂದನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತ ಎಂದು ಅನಿಸುತ್ತದೆ.
ಮಧ್ಯಾಹ್ನ ಸುಮಾರು ಒಂದು ಗಂಟೆ. ಮನೆಗೆಲಸದ ಮಹಿಳೆಯೂ ಸೇರಿದಂತೆ ಕುಟುಂಬ ಸಮೇತ ಟಿ.ವಿ. ನೋಡುತ್ತ ನಾವು ಊಟ ಮಾಡುತ್ತಿದ್ದೆವು. ಪ್ರಧಾನಿ ಮೋದಿಯವರು ಎಪ್ರಿಲ್ 9 ರಂದು ರಾತ್ರಿ  9 ಗಂಟೆಗೆ ದೀಪ ಉರಿಸಲು ಕರೆಕೊಟ್ಟ ಸುದ್ದಿ ಟಿವಿಯಲ್ಲಿ ಪ್ರಸಾರವಾಗುತ್ತಾ ಇತ್ತು. ಏಕಾಏಕಿ ನಮ್ಮ ಜೊತೆ ಕೂತು ಊಟ ಮಾಡುತ್ತಿದ್ದ ಕೆಲಸದ ಮಹಿಳೆ,
ಬ್ಯಾರಿಗಳಿಗೆ (ಮುಸ್ಲಿಮರಿಗೆ) ತುಂಬಾ ಅಹಂಕಾರ, ಇದೆಲ್ಲ (ಕೊರೋನಾ) ಆಗುತ್ತಿರುವುದು ಅವರಿಂದಲೇ' ಎಂದು ತುಳು ಭಾಷೆಯಲ್ಲಿ ಹೇಳಿದಳು. ಒಂದು ಕ್ಷಣ ನಾನು ಶಾಕ್ ಆದೆ. ಗಂಜಿ ಗಂಟಲಲ್ಲಿ  ಇಳಿಯಲಿಲ್ಲ. ಯಾಕೆಂದರೆ, ಆ ಮಹಿಳೆ ಸಣ್ಣ ಮಗುವಾಗಿದ್ದಾಗಲೇ ತಾಯಿಯನ್ನು ಕಳಕೊಂಡವಳು. ವಯಸ್ಸು 50 ದಾಟಿದ್ದರೂ ಮಲತಾಯಿಯಾಗಲೀ ಸೋದರರಾಗಲಿ ಆಕೆಗೆ ಮದುವೆ ಮಾಡಿಸಲು  ಪ್ರಯತ್ನ ನಡೆಸಿಲ್ಲ. ವರ್ಷದ 365 ದಿನವೂ ಕೂಲಿ ಕೆಲಸಕ್ಕೆ ಹೋಗುತ್ತಾಳೆ. ತನ್ನ ಸಂಪಾದನೆಯ ಮೇಲೆ ಆಕೆಗೆ ಯಾವ ಅಧಿಕಾರವೂ ಇಲ್ಲ. ವಿಶೇಷ ಏನೆಂದರೆ, ವರ್ಷಕ್ಕೆ ಒಂದು ಸಲವೂ ಈಕೆ ಪೇಟೆಗೆ  ಹೋದವಳಲ್ಲ. ಮುಸ್ಲಿಮರ ಸಂಪರ್ಕವೇ ಇಲ್ಲ. ಇವಳು ಸೋದರನ ಮನೆಯಲ್ಲಿ ವಾಸವಿದ್ದು, ಆತನೂ ಕೂಲಿ ಕೆಲಸಕ್ಕೆ ಹೋಗುತ್ತಾನೆ. ಅಲ್ಲದೆ, ಇವರ ಕುಟುಂಬಕ್ಕೆ ಯಾವ ಬ್ಯಾರಿಗಳಿಂದಲೂ  (ಮುಸ್ಲಿಮರು) ಯಾವ ಸಮಸ್ಯೆಯೂ ಆಗಿಲ್ಲ. ಇವರು ದಿನಬಳಕೆಯ ದಿನಸಿಗಳನ್ನು ಇದೇ ಊರಿನ ಚೆಯ್ಯಾಕನ(ಮುಸ್ಲಿಮ್) ಅಂಗಡಿಯಿಂದಲೇ ತರುತ್ತಾರೆ. ಈ ಮಹಿಳೆಯ ಬಗ್ಗೆ ನಮಗೆಲ್ಲ ಅನುಕಂಪ.  ತುಂಬಾ ಪಾಪದ ಹುಡುಗಿ. ಕಷ್ಟದ ಬದುಕು. ಹೀಗಿರುವಾಗ, ಕೊರೋನಾ ವೈರಸ್ ಬ್ಯಾರಿಗಳಿಂದ (ಮುಸ್ಲಿಮರಿಂದ) ಹರಡುತ್ತದೆ,
ಅವರಿಗೆ ಅಹಂಕಾರ, ಅವರಿಗೆ ಬುದ್ದಿ ಕಲಿಸಬೇಕು ಎಂಬೆಲ್ಲ ವಿಷಯಗಳನ್ನು ಅವಳ ಮನಸ್ಸಿಗೆ ತುಂಬಿದವರು ಯಾರು?”
ಗೆಳೆಯ ಎತ್ತಿದ ಈ ಪ್ರಶ್ನೆ ಅತ್ಯಂತ ಸಕಾಲಿಕ ಮತ್ತು ಸಾಮಾ ಜಿಕ ಅವಲೋಕನವೊಂದಕ್ಕೆ ಅತ್ಯಂತ ಸೂಕ್ತವೆಂದು ತೋರುತ್ತದೆ.
ಖ್ಯಾತ ಸಮಾಜ ಕಾರ್ಯಕರ್ತೆ ಕವಿತಾ ಕೃಷ್ಣನ್ ಅವರು ಎಪ್ರಿಲ್ 11 ರಂದು ಟ್ವಿಟರ್‍ನಲ್ಲಿ ವೀಡಿಯೊಂದನ್ನು ಪೋಸ್ಟ್ ಮಾಡಿದ್ದರು. ವೈರಲ್ ಆದ ಆ ವೀಡಿಯೋದಲ್ಲಿ ಅವರು ಮಾಧ್ಯಮಗಳನ್ನು ತೀವ್ರ  ತರಾಟೆಗೆ ಎತ್ತಿಕೊಂಡಿದ್ದರು. ಕೊರೋನಾ ವೈರಸನ್ನು ಕೊರೋನಾ ಜಿಹಾದ್ ಎಂದೋ, ಮದ್ರಸಾ ಹಾಟ್‍ಸ್ಪಾಟ್ ಎಂದೋ, ತಬ್ಲೀಗಿ ಟೆರರಿಸಂ ಎಂದೋ ಉಲ್ಲೇಖಿಸುವ ಮಾಧ್ಯಮ ನೀತಿಯನ್ನು  ಖಂಡಿಸುತ್ತಾ- `ಇದು ಜರ್ನಲಿಸಂ ಅಲ್ಲ, ಇತಿಹಾಸ ನಿಮ್ಮನ್ನು ನೆನಪಿಡಲಿದೆ. ನಿಮ್ಮನ್ನು ಜಡ್ಜ್ ಮಾಡಲಿದೆ' ಎಂದು ಭಾವುಕವಾಗಿ ಹೇಳಿದ್ದರು. ಅಷ್ಟಕ್ಕೂ,
ಮುಸ್ಲಿಮ್ ವ್ಯಾಪಾರಿಗಳಿಗೆ ಪ್ರವೇಶವಿಲ್ಲ ಎಂಬ ಭಿತ್ತಿಪತ್ರವು ಕರ್ನಾಟಕ, ತೆಲಂಗಾಣ, ದೆಹಲಿ, ಮಧ್ಯಪ್ರದೇಶವೂ ಸೇರಿದಂತೆ ವಿವಿಧ ಕಡೆ ಕಾಣಿಸಿಕೊಳ್ಳಲು ಏನು ಕಾರಣ? ಮುಸ್ಲಿಮರು ಉಗುಳಿನ ಮೂಲಕ,  ನೀರು, ಹಣ್ಣು-ಹಂಪಲು, ನೋಟು ಇತ್ಯಾದಿಗಳ ಮೂಲಕ ಇತರರಿಗೆ ಉದ್ದೇಶಪೂರ್ವಕವಾಗಿ ಸೋಂಕು ಹರಡುತ್ತಿದ್ದಾರೆ ಎಂಬ ವದಂತಿ ಜನಸಾಮಾನ್ಯರ ಬಳಿಗೂ ತಲುಪಿದ್ದು ಹೇಗೆ?
ಎಪ್ರಿಲ್ 1 ರಂದು ಕೊರೋನಾ ಜಿಹಾದ್ ಹ್ಯಾಶ್‍ಟ್ಯಾಗ್ ಟ್ವೀಟರ್ ನಲ್ಲಿ  ಟ್ರೆಂಡಿಂಗ್ ಆಗಿತ್ತು. ಮಾರ್ಚ್ 28 ರಿಂದ ಎಪ್ರಿಲ್ 3 ರ ಮಧ್ಯೆ ಕೊರೋನಾ ಜಿಹಾದ್ ಹ್ಯಾಶ್‍ಟ್ಯಾಗ್ 3 ಲಕ್ಷಕ್ಕಿಂತಲೂ ಹೆಚ್ಚು ಬಾರಿ  ಕಾಣಿಸಿಕೊಂಡಿದ್ದು, 165 ಮಿಲಿಯನ್‍ಗಿಂತಲೂ ಹೆಚ್ಚು ಮಂದಿ ಈ ಅವಧಿಯಲ್ಲೇ ವೀಕ್ಷಿಸಿರುವ ಸಾಧ್ಯತೆ ಇದೆಯೆಂದು ಟೈಮ್ಸ್ ಮ್ಯಾಗಸಿನ್ ಲೆಕ್ಕ ಹಾಕಿದೆ. ದೆಹಲಿಯ ವ್ಯಕ್ತಿಯೊಬ್ಬರು ಇತರರೆದುರು  ಉದ್ದೇಶ ಪೂರ್ವಕವಾಗಿ ಕೆಮ್ಮುತ್ತಾರೆ ಎಂಬ ಸುಳ್ಳು ವೀಡಿಯೋ ಕೂಡ ಇದೇ ಸಂದರ್ಭದಲ್ಲಿ ವೈರಲ್ ಆಯಿತು. ಇನ್ನೊಂದು ಕುಪ್ರಸಿದ್ಧ ವೀಡಿಯೋ ಯಾವುದೆಂದರೆ ತಬ್ಲೀಗಿ ಸದಸ್ಯರೋರ್ವರು  ಉದ್ದೇಶಪೂರ್ವಕವಾಗಿ ವ್ಯಕ್ತಿಯೊಬ್ಬರ ಮೇಲೆ ಉಗುಳುವುದು. ರೋಗ ಹರಡುವುದೇ ಈತನ ಉದ್ದೇಶ ಎಂಬುದು ಅದಕ್ಕೆ ನೀಡಲಾದ ಒಕ್ಕಣೆ. ಇದು ಕೊರೋನಾ ಜಿಹಾದ್ ಮತ್ತು ತಬ್ಲೀಗಿ ವೈರಸ್  ಎಂಬ ಹ್ಯಾಶ್‍ಟ್ಯಾಗ್‍ನೊಂದಿಗೆ ಲೆಕ್ಕವಿಲ್ಲದಷ್ಟು ಬಾರಿ ಹಂಚಿಕೆಯಾಯಿತು. ಮುಸ್ಲಿಮರು ದುಷ್ಟರು ಎಂಬುದನ್ನು ಸಾರಿ ಸಾರಿ ಹೇಳುವುದಕ್ಕೆ ಅತ್ಯಂತ ಪ್ರಶಸ್ತ ವೀಡಿಯೋವಾಗಿಯೂ ಇದು ಜ ನಪ್ರಿಯಗೊಂಡಿತು. ನಿಜವಾಗಿ,
ಆ ವ್ಯಕ್ತಿ ಭಾರತದವನೇ ಅಲ್ಲ. ಥಾೈಲೆಂಡ್‍ನವ. ಆತ ದೆಹಲಿಯ ತಬ್ಲೀಗಿ ಸಭೆಯಲ್ಲಿ ಭಾಗವಹಿಸಿದ್ದೂ ಇಲ್ಲ. ಆತನ ಹೆಸರು ಅನನ್ ಸಹೋಹ್. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಆತ ಸಹ ಪ್ರಯಾಣಿಕನ  ಮೇಲೆ ಉಗುಳಿದ್ದು ನಿಜ. ಆತ ಪಾಕಿಸ್ತಾನದಿಂದ ಥಾೈಲೆಂಡ್‍ಗೆ ಹಿಂತಿರುಗುತ್ತಿದ್ದ. ಆತ ಮಧುಮೇಹಿ. ಪ್ರಯಾಣದ ಮಧ್ಯೆ ಆತ ವಾಂತಿ ಮಾಡಿದ್ದ ಮತ್ತು ಕೆಮ್ಮುತ್ತಲೂ ಇದ್ದ. ಆದ್ದರಿಂದ ಪ್ರಯಾಣವನ್ನು  ಮೊಟಕುಗೊಳಿಸಿ ರೈಲಿನಿಂದ ಇಳಿಯುವಂತೆ ಆತನ ಮೇಲೆ ಒತ್ತಡ ಹೇರಲಾಯಿತಾದರೂ ಆತ ನಿರಾಕರಿಸಿದ್ದ. ಬಳಿಕ ರೈಲಿನಲ್ಲೇ ಸಾವಿಗೀಡಾದ. ಆತನ ಗಂಟಲ ದ್ರವನ್ನು ಪರೀಕ್ಷೆ ನಡೆಸಿದ ಬಳಿಕ  ಕೊರೋನ ಇದ್ದುದು ದೃಢಗೊಂಡಿತ್ತು. ಮಾತ್ರವಲ್ಲ, ಆತನಿಂದ ಉಗುಸಿಕೊಂಡ ವ್ಯಕ್ತಿಗಾಗಿ ಥಾೈಲೆಂಡ್‍ನಲ್ಲಿ ಹುಡುಕಾಟವೂ ನಡೆದಿತ್ತು. ಸ್ವಯಂ ಬಂದು ತಪಾಸಣೆ ಮಾಡಿಕೊಳ್ಳಬೇಕೆಂದು ಆ ವ್ಯಕ್ತಿಗೆ  ಸೂಚನೆ ನೀಡಲಾಗಿತ್ತು. ಈ ಎಲ್ಲ ವಿವರಗಳನ್ನು ಎಪ್ರಿಲ್ 3 ರಂದು ಇಂಡಿಪೆಂಡೆಂಟ್ ಪತ್ರಿಕೆ Man who had Coronavirus appears to be caught on camera  spitting on a strander's face just hours before he died ಎಂಬ ಶೀಷಿರ್ಕೆಯಲ್ಲಿ ಪ್ರಕಟಿಸಿತು.
ಈ ಸತ್ಯ ಬಹಿರಂಗವಾಗುವುದಕ್ಕಿಂತ ಮೊದಲೇ ಆ ವ್ಯಕ್ತಿ ತಬ್ಲೀಗಿ ಸಭೆಯಲ್ಲಿ ಭಾಗವಹಿಸಿದವನೆಂದೂ ಉದ್ದೇಶಪೂರ್ವಕವಾಗಿ ಉಗುಳುತ್ತಿದ್ದಾನೆಂದೂ ಹೇಳುವ ಆ ವೀಡಿಯೋವು ಟ್ವಿಟರ್‍ನಲ್ಲಿ ಎಪ್ರಿಲ್ 3  ರ ವರೆಗೆ 4,200 ಬಾರಿ ಮರು ಟ್ವೀಟ್ ಆಗಿತ್ತು ಮತ್ತು 505 ಉತ್ತರಗಳು ಬಂದಿದ್ದುವು. ಇದೇ ರೀತಿಯಲ್ಲಿ ಇನ್ನೊಂದು ಸುಳ್ಳು ವೀಡಿಯೋ ಮುಸ್ಲಿಮರು ಸೀನುವುದು. ಕೊರೋನಾವನ್ನು ಹಬ್ಬಿಸುವ  ದುರುದ್ದೇಶದಿಂದ ಮುಸ್ಲಿಮನೋರ್ವನು ಸೀನುತ್ತಿದ್ದಾನೆ ಎಂಬ ವೀಡಿಯೋ ಟ್ವಿಟರ್-ಫೇಸ್‍ಬುಕ್‍ನಲ್ಲಿ ಭಾರೀ ಹಂಚಿಕೆ ಕಂಡಿತಾದರೂ ಅದು ಸುಳ್ಳು ಅನ್ನುವುದನ್ನು ಆ ಬಳಿಕ ಆಲ್ಟ್ ನ್ಯೂಸ್ ಬಹಿರಂಗ  ಪಡಿಸಿತು. ಈ ಸಂದರ್ಭ ದಲ್ಲಿ ವಾರ್ತಾಭಾರತಿ ಮತ್ತು ಪ್ರಜಾವಾಣಿಯನ್ನು ಸ್ಮರಿಸಲೇಬೇಕು. ಅದರಲ್ಲೂ ವಾರ್ತಾಭಾರತಿಯಂತೂ ಸುಳ್ಳು ಸುದ್ದಿಗಳ ಬೆನ್ನು ಹತ್ತಿ ಸತ್ಯವನ್ನು ತಿಳಿಸುವುದನ್ನು ಒಂದು  ಅಭಿಯಾನವಾಗಿ ಸ್ವೀಕರಿಸಿತು.
ವಿಷಾದ ಏನೆಂದರೆ, ಸಾಮಾಜಿಕ ಮಾಧ್ಯಮ ಮತ್ತು ಖಾಸಗಿ ಟಿವಿ ಚಾನೆಲ್‍ಗಳು ದಿಕ್ಕು-ದಿಸೆಯಿಲ್ಲದೇ ತಬ್ಲೀಗಿಗಳನ್ನು ಮತ್ತು ಅವರ ಬೆನ್ನ ಹಿಂದೆ ನಿಂತು ಇಡೀ ಮುಸ್ಲಿಮ್ ಸಮುದಾಯವನ್ನು ವೈರಸ್  ವಾಹಕರು ಎಂದು ನಿಂದಿಸುತ್ತಿರುವುದರ ಹೊರತಾಗಿಯೂ ದೇಶವನ್ನು ಮತ್ತು ದೇಶದ ಪ್ರಜೆಗಳ ಹಿತವನ್ನೂ ಕಾಯಬೇಕಾದ ಪ್ರಧಾನಿಯವರು ಈ ಬಗ್ಗೆ ಮಾತಾಡಲು ಎಪ್ರಿಲ್ 19ರ ವರೆಗೆ ಕಾದರು  ಎಂಬುದಾಗಿದೆ. ಇದಕ್ಕೂ ಮೊದಲು ಅವರು ಮಾತಾಡಲೇ ಬೇಕಾದ ಸನ್ನಿವೇಶವನ್ನು ಅವರ ಪಕ್ಷದ ಮುಖಂಡರೇ ಸೃಷ್ಟಿಸಿ ದ್ದಾಗ್ಯೂ ಅವರು ಮೌನವಹಿಸಿದರು. ಬಿಜೆಪಿಯ ಐಟಿ ಸೆಲ್‍ನ ಮುಖ್ಯಸ್ಥ  ಅಮಿತ್ ಮಾಳವೀಯ ಅವರು ಎಪ್ರಿಲ್ 1 ರಂದು ಹೀಗೆ ಟ್ವೀಟ್ ಮಾಡಿದರು:
Delhis derk underbelly is exploding! Last 3 months have seen an islamic insurrection of sorts, first in the name of anti-  CAA protests from shaheen bagh to jamia, jaffrabad to seelampur. and now the illegal gathering of radical tablighi  jamaat at the markaz. it needs of fix. 
ಹಿಮಾಚಲ ಪ್ರದೇಶದ ಬಿಜೆಪಿ ಮುಖಂಡ ರಾಜೀವ್ ಬಿಂದಾಲ್ ಅವರು ಎಪ್ರಿಲ್ 4 ರಂದು ಹೀಗೆ ಹೇಳಿದರು:
ಕೊರೋನಾವನ್ನು ಮಟ್ಟ ಹಾಕುವುದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಶತ ಪ್ರಯತ್ನ ನಡೆಸುತ್ತಿವೆ. ಆದರೆ, ತಬ್ಲೀಗಿ ಸದಸ್ಯರು ಮಾನವ ಬಾಂಬ್‍ನಂತೆ ತಿರುಗಾಡುತ್ತಿದ್ದಾರೆ.
ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆಯವರು ಎಪ್ರಿಲ್ 6 ರಂದು ಹೀಗೆ ಬರೆದರು:
ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಸೇರಿಸಲಾಗಿರುವ ತಬ್ಲೀಗಿ ಸದಸ್ಯರು ಆಸ್ಪತ್ರೆ ಸಿಬ್ಬಂದಿಯ ಮೇಲೆ ಉಗುಳುತ್ತಿದ್ದಾರೆ, ಅನುಚಿತವಾಗಿ ವರ್ತಿಸುತ್ತಿದ್ದಾರೆ.
ಆದರೆ, ಸಂಸದೆಯ ಹೇಳಿಕೆಯನ್ನು ಆಸ್ಪತ್ರೆ ಸಿಬ್ಬಂದಿಗಳು ಮತ್ತು ಬೆಳಗಾವಿ ಜಿಲ್ಲಾಧಿಕಾರಿಗಳೇ ನಿರಾಕರಿಸಿದರು. ಆದರೆ, ಸಂಸದೆಯ ಸುಳ್ಳು ಹೇಳಿಕೆಗಾಗಿ ಅವರ ಮೇಲೆ ಯಾವ ಕ್ರಮವನ್ನೂ  ಜರುಗಿಸಲಾಗಿಲ್ಲ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್ ಅವರು ಎಪ್ರಿಲ್ 9 ರಂದು ತಬ್ಲೀಗಿ ಸದಸ್ಯರನ್ನು ಮಾನವ ಬಾಂಬ್ ಎಂದು ಕರೆದರು.
ಈ ಎಲ್ಲ ಟ್ವೀಟ್‍ಗಳೂ ಖಾಸಗಿ ಟಿವಿ ಚಾನೆಲ್‍ಗಳು ಮತ್ತು ಪತ್ರಿಕೆಗಳಿಗೆ ಮುಸ್ಲಿಮರ ಮೇಲೆ ಏರಿ ಹೋಗಲು ಬಹುದೊಡ್ಡ ಧೈರ್ಯ ಒದಗಿಸಿದುವು. ಅವು ಸುದ್ದಿಗಳು ಮತ್ತು ವೀಡಿಯೋಗಳ ಸಾಚಾತ ನವನ್ನು ಪರಿಶೀಲಿಸುವ ಗೋಜಿಗೇ ಹೋಗದೇ ಇನ್ನಷ್ಟು ಮಸಾಲೆಯನ್ನು ಈ ಸುದ್ದಿಗಳಿಗೆ ಲೇಪಿಸಿ 24 ಗಂಟೆ ಪ್ರಸಾರ-ಪ್ರಚಾರ ಮಾಡಿದುವು. ಜನವರಿ ಮತ್ತು ಮಾರ್ಚ್‍ನ ಮಧ್ಯೆ 1.5 ಮಿಲಿಯನ್ ಜ ನರು ಯಾವುದೇ ಪರೀಕ್ಷೆ ಇಲ್ಲದೇ ಮತ್ತು ಸ್ಕ್ರೀನಿಂಗ್ ಇಲ್ಲದೇ ದೇಶ ಪ್ರವೇಶಿಸಿದ್ದಾರೆ ಎಂಬುದು ಗೌಣವಾಯಿತು. ಲಾಕ್‍ಡೌನ್ ಘೋಷಣೆಯಾದ ಬಳಿಕ ಈ ದೇಶದಲ್ಲಿ ನಡೆದ ಮದುವೆ, ಸೀಮಂತ,  ಅಂತ್ಯಸಂಸ್ಕಾರ, ಜಾತ್ರೆ, ರಥೋತ್ಸವ, ಧಾರ್ಮಿಕ ಕಾರ್ಯಕ್ರಮ, ಔತಣ ಇತ್ಯಾದಿ ಇತ್ಯಾದಿಗಳನ್ನೆಲ್ಲ ತಬ್ಲೀಗನ್ನು ಮುಂದಿಟ್ಟುಕೊಂಡು ಮರೆಸಲಾಯಿತಲ್ಲದೇ ಮುಸ್ಲಿಮರನ್ನೇ ಗುರಿ ಮಾಡಿ ಸುಳ್ಳು ಸುದ್ದಿಗಳನ್ನೇ  ಮತ್ತೆ ಮತ್ತೆ ಪ್ರಸಾರ ಮಾಡುವ ಪ್ರಯತ್ನವನ್ನು ಎಗ್ಗಿಲ್ಲದೇ ನಡೆಸಲಾಯಿತು. ಈ ನಡುವೆ ಪ್ರಧಾನಿಯವರು ಎಪ್ರಿಲ್ 9 ರಂದು ವೀಡಿಯೋ ಕಾನ್ಫ ರೆನ್ಸ್ ಮೂಲಕ ಸಂಸದರನ್ನುದ್ದೇಶಿಸಿ ಮಾತಾಡಿದರು.  ಸಾಮಾಜಿಕ ತುರ್ತುಸ್ಥಿತಿಯ ಕುರಿತಂತೆ ವಿಚಾರ ವಿನಿಮಯ ನಡೆಸಿದರು. ಇದು ಎಂಥ ಸಂದರ್ಭವಾಗಿತ್ತೆಂದರೆ ಮಾಧ್ಯಮಗಳು ಮತ್ತು ಬಿಜೆಪಿ ಸಂಸದರು ಮುಸ್ಲಿಮರ ವಿರುದ್ಧ ತಾರಕ ಧನಿಯಲ್ಲಿ  ಮಾತಾಡುತ್ತಿದ್ದರು. ಆದರೂ ಪ್ರಧಾನಿಯವರು ಈ ವೀಡಿಯೋ ಕಾನ್ಫರೆನ್ಸ್ ವೇಳೆ ಈ ಬಗ್ಗೆ ಒಂದೇ ಒಂದು ಪದವನ್ನೂ ಉಚ್ಚರಿ ಸಲಿಲ್ಲ. ಈ ನಡುವೆ ದೇಶವನ್ನುದ್ದೇಶಿಸಿ ಅವರು ಎರಡೆರಡು ಬಾರಿ  ಮಾತಾಡಿದರಾದರೂ ಮುಸ್ಲಿಮರನ್ನು ಗುರಿ ಮಾಡಬೇಡಿ ಎಂಬ ಏಕ ವಾಕ್ಯವನ್ನು ಉಚ್ಚರಿಸಲೂ ಅವರು ಹಿಂಜರಿದರು.
ಈ ನಡುವೆ ಒಂದು ಅಭೂತಪೂರ್ವ ಬೆಳವಣಿಗೆ ನಡೆಯಿತು.
ಬಿಜೆಪಿ ಹಾಲಿ ಸಂಸದ ತೇಜಸ್ವಿ ಸೂರ್ಯ ಅವರು ಅರಬ್ ಮಹಿಳೆಯರನ್ನು ಹೀನಾಯವಾಗಿ ನಿಂದಿಸಿ 2015ರಲ್ಲಿ ಮಾಡಿದ್ದ ಟ್ವೀಟ್‍ನ ಸ್ಕ್ರೀನ್‍ಶಾಟನ್ನು ಕುವೈಟಿನ ಅಬ್ದುಲ್ ರಹ್ಮಾನ್ ನಾಸರ್ ಎನ್ನುವ  ಸಾಮಾಜಿಕ ಕಾರ್ಯಕರ್ತ ಟ್ವೀಟರ್‍ನಲ್ಲಿ ಪುನಃ ಹಂಚಿಕೊಂಡರು. ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಟ್ವಿಟರ್ ಖಾತೆಗೂ ಮತ್ತು ಅವರ ಕಾರ್ಯಾಲಯದ ಖಾತೆಗೂ ಅದನ್ನು ಟ್ಯಾಗ್ ಮಾಡಿದರು.  ಅಷ್ಟೇ ಅಲ್ಲ, ಸರಣಿ ಟ್ವೀಟ್‍ಗಳನ್ನು ಮಾಡಿ ಪ್ರಧಾನಿ ಮತ್ತು ಅವರ ಮುಸ್ಲಿಮ್ ಧೋರಣೆಯನ್ನು ಪ್ರಶ್ನಿಸಿದರು. `ಪ್ರತಿ ವರ್ಷ 120 ಬಿಲಿಯನ್ ಡಾಲರ್ ಮೊತ್ತವನ್ನು 53 ಅರಬ್ ಮುಸ್ಲಿಮ್ ರಾಷ್ಟ್ರಗಳಿಂದ  ಅನಿವಾಸಿ ಭಾರತೀಯರು ತವರಿಗೆ ಕಳುಹಿಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನ ಉದ್ಯೋಗಿಗಳೂ ಹಿಂದುಗಳೇ. ಅವರನ್ನು ನಾವು ಅತ್ಯುತ್ತಮ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದೇವೆ. ನೀವೇಕೆ ಹೀಗೆ’ ಎಂದು ಪ್ರಧಾ ನಿಯನ್ನು ಮತ್ತು ಅವರ ಬೆಂಬಲಿಗರನ್ನು ಪ್ರಶ್ನಿಸಿದರು. ಇದು ಇಡೀ ಅರಬ್ ವಲಯದಲ್ಲೇ ಕಿಡಿ ಹೊತ್ತಿಸಿತು. ಶಾರ್ಜಾ ರಾಜ ಕುಟುಂಬದ ರಾಜಕುಮಾರಿ ಹಿಂದ್ ಅಲ್ ಖಾಸ್ಮಿಯು ಎಪ್ರಿಲ್ 16 ರಂದು  ಟ್ವೀಟ್ ಮಾಡಿ, ಮುಸ್ಲಿಮ್ ವಿರೋಧಿ ಟ್ವೀಟ್‍ಗಳ ಬಗ್ಗೆ ಎಚ್ಚರಿಕೆ ನೀಡಿದರು. ಕುವೈಟ್ ಮತ್ತು ಯುಎಇಗಳು ಭಾರತೀಯ ಮುಸ್ಲಿಮರ ಪರಿಸ್ಥಿತಿ ಮತ್ತು ದ್ವೇಷ ಪ್ರಚಾರಗಳ ಕುರಿತಂತೆ ಮೊದಲ ಬಾರಿ  ಗಂಭೀರವಾಗಿ ಅವಲೋಕನಕ್ಕೆ ಇಳಿಯಿತು. ಅರಬ್ ಪಾರ್ಲಿಮೆಂಟ್ ಕಾರ್ಯದರ್ಶಿ ಮತ್ತು ಜಾಗತಿಕ ಸಂಸದೀಯ ಸಂಪರ್ಕ ಕಾರ್ಯದರ್ಶಿ ಜಮಾಲ್ ಬಹ್ರೈನ್ ಅವರು ಭಾರತದಲ್ಲಿ ಮುಸ್ಲಿಮರ ವಿರುದ್ಧ  ನಡೆಸಲಾಗುತ್ತಿರುವ ಅಪಪ್ರಚಾರ ಮತ್ತು ಹಿಂಸೆಯ ಕುರಿತಂತೆ ವಿಶ್ವಸಂಸ್ಥೆ ಮತ್ತು ಓಐಸಿ(ಇಸ್ಲಾಮಿಕ್ ರಾಷ್ಟ್ರಗಳ ಒಕ್ಕೂಟ)ಗೆ ದೂರು ಕೊಟ್ಟರು. ಇದಾದ ಬಳಿಕ ಎಪ್ರಿಲ್ 19 ರಂದು ಓಐಸಿಯೇ  ರಂಗಕ್ಕಿಳಿಯಿತು. ಮುಸ್ಲಿಮರ ಹಿತ ರಕ್ಷಣೆಗೆ ಕ್ರಮಕೈಗೊಳ್ಳಿ ಎಂದು ನೇರವಾಗಿಯೇ ಪ್ರಧಾನಿ ಮೋದಿಯವರನ್ನು ಅದು ಅಗ್ರಹಿಸಿತು. ಈ ಬೆಳವಣಿಗೆಯ ಒಂದು ಗಂಟೆಯ ನಂತರ ಪ್ರಧಾನಿಯವರು  ಎಪ್ರಿಲ್ 19 ರಂದು ಅತ್ಯಂತ ಸುಂದರ ಟ್ವೀಟ್ ಮಾಡಿದರು:
"ಯಾವುದೇ ಜನಾಂಗ, ಧರ್ಮ, ಬಣ್ಣ, ಜಾತಿ, ಭಾಷೆ, ಗಡಿಗಳನ್ನು ನೋಡಿ ಕೋವಿಡ್- 19 ದಾಳಿ ಮಾಡುವುದಿಲ್ಲ. ನಾವು ಒಟ್ಟಾಗಿ ಮತ್ತು ಸಹೋದರತ್ವದ ಮೂಲಕ ಈ ವೈರಸನ್ನು ಎದುರಿಸಬೇಕು. ಈ  ವಿಷಯದಲ್ಲಿ ನಾವೆಲ್ಲರೂ ಜೊತೆಯಾಗಿ ಹೋರಾಡಬೇಕು" ಎಂದವರು ಕರೆಕೊಟ್ಟರು.
ಒಂದುವೇಳೆ, ಕೊರೋನಾ ಜಿಹಾದ್, ತಬ್ಲೀಗಿ ವೈರಸ್, ತಬ್ಲೀಗಿ ಟೆರರಿಸಂ, ತಬ್ಲೀಗಿ ನಂಜು, ಮದ್ರಸ ಹಾಟ್‍ಸ್ಪಾಟ್ ಇತ್ಯಾದಿ ಇತ್ಯಾದಿ ಹ್ಯಾಶ್‍ಟ್ಯಾಗ್‍ಗಳೊಂದಿಗೆ ಸಾಮಾಜಿಕ ಮಾಧ್ಯಮಗಳು ಮತ್ತು  ಖಾಸಗಿ ಟಿವಿ ಚಾನೆಲ್‍ಗಳು ಎಪ್ರಿಲ್ ಒಂದರಿಂದ ಪುಂಖಾನುಪುಂಖವಾಗಿ ಜನಾಂಗ ದ್ವೇಷಿ ಸುದ್ದಿಗಳನ್ನು ಹರಡಲು ಪ್ರಾರಂಭಿಸಿದ ಹೊತ್ತಲೇ ಇದೇ ಸಂದೇಶವನ್ನು ಪ್ರಧಾನಿಯವರು ನೀಡಿರುತ್ತಿದ್ದರೆ ಏ ನಾಗುತ್ತಿತ್ತು? ಅಪ್ಪಟ ಸುಳ್ಳು ವೀಡಿಯೋಗಳನ್ನು ಹಂಚುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಎಲ್ಲ ರಾಜ್ಯಗಳಿಗೂ ಆದೇಶ ನೀಡಿರುತ್ತಿದ್ದರೆ ದೇಶದ ಪರಿಸ್ಥಿತಿ ಈಗ ಹೇಗಿರುತ್ತಿತ್ತು?
ಬಾಯಿ ಬಡುಕ ಸಂಸದರ ಪೈಕಿ ಒಬ್ಬರಿಗಾದರೂ ಶೋಕಾಸ್ ನೋಟೀಸ್ ಜಾರಿ ಮಾಡಿರುತ್ತಿದ್ದರೆ ದೇಶದಲ್ಲಿ ಏನೆಲ್ಲ ಬದಲಾವಣೆಗಳಾಗುತ್ತಿತ್ತು? ಸುಳ್ಳು ಸುದ್ದಿ ಹರಡುವವರನ್ನು ಮತ್ತು ದ್ವೇಷ ಪ್ರಚಾರ  ನಡೆಸುವವರನ್ನು ಜೈಲಿಗಟ್ಟಿ ಎಂದು ಆದೇಶಿಸಿರುತ್ತಿದ್ದರೆ ನಮ್ಮ ವಾಟ್ಸ್‍ಪ್‍ಗಳು ಹೇಗಿರುತ್ತಿತ್ತು? ಯಾಕೆ ನನ್ನ ಪ್ರಧಾನಿ ಇವವುದನ್ನೂ ಮಾಡದೇ ಉಳಿದರು? ಅತಿ ಹೀನಾಯ ದ್ವೇಷ ಪ್ರಚಾರಗಳನ್ನು ಯಾಕೆ  ಅವರು ಸಹಿಸಿಕೊಂಡರು? ಅವರೇ ಕಾವಲು ನಿಂತು ಸಂರಕ್ಷಿಸಬೇಕಾದ ಜನರ ಮೇಲೆ ದಾಳಿಗೆ ಯಾಕೆ ಅವಕಾಶ ಮಾಡಿಕೊಟ್ಟರು? ಅವರ ಒಂದೇ ಒಂದು ಕಟು ಎಚ್ಚರಿಕೆಯು ಟಿವಿ ಚಾನೆಲ್‍ಗಳ  ಬೊಂಬಡವನ್ನು ತಡೆಯಲು ಸಾಕಾಗುತ್ತಿರಲಿಲ್ಲವೇ? ಅಂದಹಾಗೆ,
ಬ್ಯಾರಿಗಳು ಕೊರೋನಾ ಹರಡುತ್ತಿದ್ದಾರೆ ಎಂದು ಆ ಮನೆಗೆಲಸದ ಮಹಿಳೆ ಹೇಳಿದರಲ್ಲ, ಅದರಲ್ಲಿ ಆಕೆಯ ತಪ್ಪಿಲ್ಲ. ಆಕೆ ಆಡಿದ್ದು ಆಕೆಯ ಮಾತೂ ಅಲ್ಲ.

Monday, May 18, 2020

ಕೈ ಬಾಯಿ ಅಶುದ್ಧಾವಸ್ಥೆಯಲ್ಲಿಟ್ಟುಕೊಂಡು ಕೈ ತೊಳೆಯುತ್ತಾ..ಇವತ್ತು ಹಸ್ತಕ್ಕೆ ಅಪಾರವಾದ ಮಹತ್ವ ಲಭ್ಯವಾಗಿದೆ. ಇದನ್ನು ಕರುಣಿಸಿದ್ದು ಕೊರೋನಾ. ಹಸ್ತ ಎಂಬುದು ಈ ದೇಶದ ಪಾಲಿಗೆ ವ್ಯಕ್ತಿ ಸಂಬಂಧಿತ ಅಂಗ ಮಾತ್ರ ಅಲ್ಲ, ಅದಕ್ಕೆ ರಾಜಕೀಯ ಮಗ್ಗುಲೂ  ಇದೆ. ಹಸ್ತದ ಮಹಿಮೆ ಏನು ಅನ್ನುವುದನ್ನು ಈ ದೇಶಕ್ಕೆ ಮನವರಿಕೆ ಮಾಡಿಸಿರುವ ಕೀರ್ತಿ ಕಾಂಗ್ರೆಸ್ ಪಕ್ಷಕ್ಕಿದೆ. ಮುಖ್ಯವಾಗಿ ಮೂರ್ನಾಲ್ಕು ದಶಕಗಳ ಹಿಂದೆ ಕಾಂಗ್ರೆಸ್‍ನ ಚುನಾವಣಾ ಹೋರಾಟವು  ಹಸ್ತದ ಪ್ರಾಮುಖ್ಯತೆಯನ್ನೇ ಅವಲಂಬಿಸಿತ್ತು. ಶಿಕ್ಷಿತರಲ್ಲದ ಮತ್ತು ರೈತ-ಕೂಲಿಕಾರ್ಮಿಕರೇ ಅಧಿಕವಿದ್ದ ಭಾರತೀಯ ಮತದಾರರನ್ನು ಆಕರ್ಷಿಸುವುದಕ್ಕೆ ಹಸ್ತದ ಮಹತ್ವವನ್ನು ಸಾರುವುದೇ ಪರಿಣಾಮಕಾರಿ ಎಂದು ಅಂದು ಕಾಂಗ್ರೆಸ್ ತೀರ್ಮಾನಿಸಿತ್ತು. ಈಗಿನಂತೆ ವರ್ಷದಲ್ಲಿ ಇಷ್ಟು ಕೋಟಿ ಉದ್ಯೋಗ, ಇಷ್ಟು ಐಟಿ ನಗರಗಳ ಸ್ಥಾಪನೆ, ಸ್ಮಾರ್ಟ್ ಸಿಟಿಗಳ ನಿರ್ಮಾಣ, ಚಂದ್ರಯಾನ, ಸ್ಟಾರ್ಟ್ ಅಪ್‍ಗಳು,  ಆಯುಷ್ಮಾನ್, ಮೇಕ್ ಇನ್ ಇಂಡಿಯಾ ಇತ್ಯಾದಿ ಇತ್ಯಾದಿ ಘೋಷಣೆಗಳನ್ನು ಸ್ವೀಕರಿಸುವುದಕ್ಕೆ ಮೂರ್ನಾಲ್ಕು ದಶಕಗಳ ಹಿಂದಿನ ಭಾರತೀಯರು ಸಜ್ಜಾಗಿರಲಿಲ್ಲ. ಅವರಿಗೆ ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ  ಆಹಾರ ಮತ್ತು ಉಳಕೊಳ್ಳುವುದಕ್ಕೆ ಮನೆ- ಇವೆರಡೇ ಆದ್ಯತೆಯ ವಿಷಯಗಳಾಗಿದ್ದುವು. ಈಗಿನಂತೆ ತಂತ್ರಜ್ಞಾನಗಳು ಬೆಳೆದಿಲ್ಲದ ಮತ್ತು ಸಾಮಾಜಿಕ ಜಾಲತಾಣಗಳ ಭರಾಟೆಯಿಲ್ಲದ ಆ ಕಾಲದಲ್ಲಿ  ರಾಜಕೀಯ ಎಂಬುದು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಕಾಣಿಸಿಕೊಳ್ಳುವ ಮಳೆ ನೀರೇ ಹೊರತು ಈಗಿನಂತೆ ವರ್ಷದ 365 ದಿನಗಳು ಮತ್ತು 24 ಗಂಟೆಯೂ ಸದಾ ಸುರಿಯುತ್ತಿರುವ ಜಡಿಮಳೆ  ಆಗಿರಲಿಲ್ಲ. ಆದ್ದರಿಂದಲೇ, 

ಕಾಂಗ್ರೆಸ್ ಆ ಕಾಲದಲ್ಲಿ ತನ್ನ ಪಕ್ಷದ ಚಿಹ್ನೆಯನ್ನೇ ಚುನಾವಣಾ ಪ್ರಣಾಳಿಕೆಯಾಗಿ ಬಿಂಬಿಸುವ ತಂತ್ರ ಹೆಣೆದಿತ್ತು. ಹಸ್ತ ಇಲ್ಲದಿದ್ದರೆ ಹೇಗೆ ಕೆಲಸ ಮಾಡುವಿರಿ, ಉಣ್ಣುವಿರಿ, ದೈ ನಂದಿನ ಚಟುವಟಿಕೆಗಳನ್ನು ಹೇಗೆ ಮಾಡುವಿರಿ ಎಂದೆಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮತದಾರ ರೊಂದಿಗೆ ಪ್ರಶ್ನಿಸುತ್ತಿದ್ದರು. ಹಸ್ತವಿದ್ದರೆ ದುಡಿಮೆ, ಹಸ್ತವಿದ್ದರೆ ಅನ್ನ ಅನ್ನುವ ರೀತಿಯ ಸಂವಾದಗಳು  ಸಾಮಾನ್ಯ ಜನರ ನಡುವೆ ನಡೆಯುತ್ತಲೂ ಇದ್ದುವು. ಇದೀಗ ಹಸ್ತ ಮತ್ತೊಮ್ಮೆ ಗಂಭೀರ ಚರ್ಚೆಗೆ ಒಳಗಾಗಿದೆ. ನಿನ್ನೆ-ಮೊನ್ನೆ ನಮಗೆ ಹಸ್ತ ಲಾಘವ ಮಾಡುತ್ತಿದ್ದವ ಇವತ್ತು ಮಾಡುತ್ತಿಲ್ಲ. ಆಲಿಂಗಿಸುತ್ತಿದ್ದವ  ಆಲಿಂಗಿಸುತ್ತಿಲ್ಲ. ಒಂದುವೇಳೆ, 

ಅಭ್ಯಾಸ ಬಲದಿಂದ ಹಸ್ತಲಾಘವ ಮಾಡಿದರೂ ತಕ್ಷಣ ಕೈ ತೊಳೆದುಕೊಳ್ಳುವ ಧಾವಂತಕ್ಕೆ ಬೀಳುತ್ತಾರೆ. ಅಂದರೆ, ನಮ್ಮ ಹಸ್ತ ಈಗ ನಮ್ಮದಷ್ಟೇ ಆಗಿ ಉಳಿದಿಲ್ಲ. ಅದು ಇ ನ್ನೊಬ್ಬರ ಆರೋಗ್ಯ-ಅನಾರೋಗ್ಯವನ್ನು ನಿರ್ಧರಿಸುವ ಅಂಗವೂ ಆಗಿಬಿಟ್ಟಿದೆ. ನಾಲ್ಕು ದಶಕಗಳ ಹಿಂದೆ ನಮ್ಮ ಹಿರಿಯರ ಪಾಲಿಗೆ ಹಸ್ತವು ಅನ್ನ ನೀಡುವ ಅಂಗವಷ್ಟೇ ಆಗಿತ್ತು. ಅವರದನ್ನು  ಪ್ರೀತಿಸುತ್ತಿದ್ದರು. ಹಸ್ತದ ಚಿಹ್ನೆಗೆ ಮತ ಹಾಕಿ ತಮ್ಮ ಹಸ್ತಪ್ರೇಮವನ್ನು ಮೆರೆಯುತ್ತಿದ್ದರು. ಈಗ ಹಸ್ತ ಎಂಬುದು ಶಂಕಿತ ಭಯೋತ್ಪಾದಕನಂತಾಗಿ ಬಿಟ್ಟಿದೆ. ನನ್ನದೇ ಹಸ್ತದ ಮೇಲೆ ನನಗೇ ನಂಬಿಕೆಯಿಲ್ಲ.  ಕ್ಷಣಕ್ಷಣಕ್ಕೂ ಹಸ್ತವನ್ನು ತೊಳೆಯುತ್ತಿದ್ದೇವೆ. ಎಲ್ಲಿ ಮಲಿನವಾಗಿದೆಯೋ ಎಂಬ ಆತಂಕದಲ್ಲಿದ್ದೇವೆ. ಇನ್ನೊಬ್ಬರಿಗೆ ಹಸ್ತಲಾಘವ ಮಾಡುವುದಕ್ಕೂ ಕೈ ಮುಂದೆ ಬರುತ್ತಿಲ್ಲ. ಒಂದು ವೇಳೆ ಕೈ ಮುಂದೆ  ಮಾಡಿದರೂ ಎದುರಿನವರಿಗೆ ನಮ್ಮ ಹಸ್ತದ ಮೇಲೆ ನಂಬಿಕೆಯಿಲ್ಲ. ನಮ್ಮದೇ ದೇಹದ ಅಂಗವೊಂದು ನಮ್ಮೊಳಗಡೆಯೇ ಅಸ್ಪೃಶ್ಯವಾಗಿರುವ ಸ್ಥಿತಿ ಇದು. ದೇಹಕ್ಕೆ ಹಸ್ತ ಅನಿವಾರ್ಯ ಎಂಬುದು ಒಂದು  ಕಡೆಯಾದರೆ, ಈ ಹಸ್ತವೇ ತನ್ನ ಅಂತ್ಯಕ್ಕೆ ಕಾರಣವಾಗುತ್ತದೋ ಎಂಬ ಭೀತಿ ಇನ್ನೊಂದು ಕಡೆ. ಇದೊಂದು ವಿಚಿತ್ರ ಸ್ಥಿತಿ. ನಮ್ಮ ದೇಹದ ಒಂದು ಪ್ರಮುಖ ಅಂಗವೇ ನಮ್ಮ ಪಾಲಿನ ವಿಲನ್ ಆಗುವ  ಸಾಧ್ಯತೆಯನ್ನು ನಾವು ಕೊರೋನಾಕ್ಕಿಂತ ಮೊದಲು ಎಷ್ಟು ಬಾರಿ ಚರ್ಚಿಸಿದ್ದೇವೆ? ಆ ಬಗ್ಗೆ ಗಂಭೀರವಾಗಿ ನಾವೆಷ್ಟು ಬಾರಿ ಚಿಂತಿಸಿದ್ದೇವೆ? 

ಪವಿತ್ರ ಕುರ್‍ಆನ್‍ನಲ್ಲಿ ಮರಣಾನಂತರದಲ್ಲಿ ನಡೆಯುವ  ವಿಚಾರಣೆಯ ಒಂದು ದೃಶ್ಯಕಲ್ಪನೆಯಿದೆ. ಜನರು ಮೃತಪಟ್ಟ ಬಳಿಕ ಮತ್ತೊಮ್ಮೆ ಎಬ್ಬಿಸಲ್ಪಡುತ್ತಾರೆ ಮತ್ತು ಜೀವಂತ ಇದ್ದಾಗ ಅವರು ಮಾಡಿದ ಕೃತ್ಯಗಳ ವಿಚಾರಣೆಯೊಂದು ನಡೆಯಲಿದೆ. ಆಗ ಆತ ನ/ಕೆಯ ನಾಲಗೆಯ ಬದಲು ದೇಹದ ಅಂಗಾಂಗಗಳು ಮಾತಾಡುವ ಸನ್ನಿವೇಶ ಇದೆ.

‘ಅವರೆಲ್ಲರೂ ಅಲ್ಲಿಗೆ ತಲುಪಿದಾಗ ಅವರ ಕಿವಿಗಳೂ ಕಣ್ಣುಗಳೂ ಅವರ ದೇಹದ ಚರ್ಮಗಳೂ ಅವರು ಭೂಲೋಕದಲ್ಲಿ ಏನು ಮಾಡುತ್ತಿದ್ದರೆಂಬ ಬಗ್ಗೆ ಸಾಕ್ಷ್ಯ  ಹೇಳುವುವು. ಆಗ ಅವರು ತಮ್ಮ  ಚರ್ಮದೊಡನೆ- ನೀವು ನಮ್ಮ ವಿರುದ್ಧ ಸಾಕ್ಷ್ಯ ಹೇಳಿದ್ದೇಕೆ ಎಂದು ಪ್ರಶ್ನಿಸುವರು’ ಎಂದು ಹೇಳುವ ಪವಿತ್ರ ಕುರ್ ಆನ್  (ಅಧ್ಯಾಯ 41, ವಚನ 20-21) ಆ ಬಳಿಕ ಇನ್ನೊಂದು ಮುಖ್ಯ ಅಂಶವನ್ನೂ  ಹೇಳುತ್ತದೆ-

ನೀವು ಭೂಲೋಕದಲ್ಲಿ ಅಡಗಿಕೊಂಡು ಅಪರಾಧವೆಸಗುತ್ತಿದ್ದಾಗ ನಿಮ್ಮ ಕಿವಿಗಳು, ನಿಮ್ಮ ಕಣ್ಣುಗಳು ಮತ್ತು ಚರ್ಮಗಳು ನಿಮ್ಮ ವಿರುದ್ಧ ಸಾಕ್ಷ್ಯ  ಹೇಳಲಿವೆ ಎಂಬ ಯೋಚನೆಯೇ ನಿಮಗಿರಲಿಲ್ಲ (ಅಧ್ಯಾಯ  41, ವಚನ 22).

ಒಂದು ರೀತಿಯಲ್ಲಿ, ನಮ್ಮದೇ ದೇಹದ ಅಂಗವೊಂದನ್ನು ಶಂಕಿತವಾಗಿ ನಡೆಸಿಕೊಳ್ಳುವ ಹೊಸ ಬಗೆಯ ಜೀವನ ಕ್ರಮವೊಂದನ್ನು ಕೊರೋನಾ ನಮಗೆ ಕಲಿಸಿಕೊಡುತ್ತಿದೆ. ಸಾಮಾನ್ಯವಾಗಿ ಶುದ್ಧ ಹಸ್ತ  ಮತ್ತು ಕೈ-ಬಾಯಿ ಶುದ್ಧವಾಗಿಟ್ಟುಕೊಳ್ಳುವುದು ಎಂಬ ರೀತಿಯ ಮಾತುಗಳನ್ನು ನಾವು ಬಳಸುವುದಿದೆ. ಶುದ್ಧ ಹಸ್ತ ಅಂದರೆ, ಕೈಯನ್ನು ಸದಾ ಸಾಬೂನು ಬಳಸಿ ತೊಳೆಯುವುದು ಎಂದು ಅರ್ಥ ಅಲ್ಲ.  ಕೈ ಬಾಯಿ ಶುದ್ಧವಾಗಿಟ್ಟುಕೊಳ್ಳುವುದು ಅಂದರೂ ಅಷ್ಟೇ- ಕೈಗೂ ಬಾಯಿಗೂ ಸೋಪ್ ವಾಟರ್ ಹಾಕಿ ತೊಳೆಯುವುದೆಂದಲ್ಲ. ಇವೆರಡೂ ವ್ಯಕ್ತಿಯಲ್ಲಿ ಚಾರಿತ್ರ್ಯ, ಪ್ರಾಮಾಣಿಕತೆಯನ್ನು ತುಂಬಿಸುವ  ಪದಗಳು. ಕೈ ಶುದ್ಧವಾಗಿರಬೇಕು ಎಂದರೆ ಕೈಯಿಂದ ಮಾಡುವ ಪ್ರತಿಯೊಂದೂ ಪಾರದರ್ಶಕ ಮತ್ತು ಪ್ರಾಮಾಣಿಕವಾಗಿರಬೇಕು ಎಂದು ಅರ್ಥ. ಬರೆಯುವ ಬರಹ, ಮಾಡುವ ಕೆಲಸ ಎಲ್ಲವೂ. ಕೈಯನ್ನು  ಉಪಯೋಗಿಸಿ ಏನೆಲ್ಲವನ್ನು ಮಾಡಲು ಸಾಧ್ಯವೋ ಮತ್ತು ಏನೆಲ್ಲವನ್ನು ಮಾಡಲಾಗುತ್ತದೋ ಅವೆಲ್ಲವೂ ಕಲ್ಮಶ ರಹಿತ ಆಗಿರಬೇಕು ಅನ್ನುವ ಆಶಯ ಇದರದು. ಹೀಗಾದರೆ ಬಾಯಿಯೂ ಶುದ್ಧ  ವಾಗುತ್ತದೆ. ಪ್ರಾಮಾಣಿಕ ದುಡಿಮೆಯಿಂದ ಗಳಿಸಿದ ಸಂಪತ್ತು ಬಾಯಿಗೆ ಶುದ್ಧವಾದುದನ್ನೇ ತಲುಪಿಸುತ್ತದೆ. ಆ ಮೂಲಕ ನಾಲಗೆಯೂ ಶುದ್ಧವಾದುದನ್ನು ಮತ್ತು ಪ್ರಾಮಾಣಿಕತೆಯನ್ನೇ ಆಡುತ್ತದೆ.  ಇದೊಂದು ಬಗೆಯ ಸರಪಳಿಯಂತೆ. ಶುದ್ಧವಾದ ಕೈ ಇಡೀ ದೇಹವನ್ನೇ ಶುದ್ಧವಾಗಿಟ್ಟುಕೊಳ್ಳುವ ಕ್ರಿಯೆಯ ಉಗಮ ಸ್ಥಾನ ಎನ್ನಬಹುದು. ಆದರೆ,

ಸದ್ಯದ ಪರಿಸ್ಥಿತಿ ಹಾಗಿಲ್ಲ. ಕೈ ಮತ್ತು ಬಾಯಿಯನ್ನು ಅತ್ಯಂತ ಅಶುದ್ಧಾವಸ್ಥೆಯಲ್ಲಿಟ್ಟುಕೊಂಡು ನಡೆದಾಡುತ್ತಿರುವ ಮಾನವ ಜನಾಂಗವೊಂದು ಈ ಭೂಮಿಯ ಮೇಲೆ ಬದುಕುತ್ತಿದೆ. ಮಾನವನ ಕೈಯಿಂದ  ಹಿಡಿದು ಬಾಯಿಯವರೆಗೆ ಪ್ರತಿ ಅಂಗಗಳೂ ಇವತ್ತು ಶಂಕಿತ ಸ್ಥಿತಿಯಲ್ಲಿದೆ. ರಂಜನ್ ಗೊಗೋಯಿ ಅವರಿಂದ ಹಿಡಿದು ಐದು ವರ್ಷಕ್ಕೊಮ್ಮೆ ಮತ ಚಲಾಯಿಸಲು ಮತಗಟ್ಟೆಗೆ ಬರುವ ಕಟ್ಟಕಡೆಯ ಜ ನಸಾಮಾನ್ಯರವರೆಗೆ. ಪ್ರಧಾನಿ ಯಿಂದ ಹಿಡಿದು ಪಂಚಾಯತ್‍ನ ಸಾಮಾನ್ಯ ಜನಪ್ರತಿನಿಧಿಯ ವರೆಗೆ. ಉನ್ನತ ಪೊಲೀಸ್ ಅಧಿಕಾರಿಯಿಂದ ತೊಡಗಿ ಸಾಮಾನ್ಯ ಪೇದೆಯವರೆಗೆ. ಮಧ್ಯಪ್ರದೇಶದ ಒಂದಷ್ಟು  ಜನಪ್ರತಿನಿಧಿಗಳು ಇವತ್ತು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಅವರಿಂದಾಗಿ ಒಂದು ಸರಕಾರ ಉರುಳಿ ಇನ್ನೊಂದು ಅಸ್ತಿತ್ವಕ್ಕೆ ಬಂದಿದೆ. ಈ ಇಡೀ ಪ್ರಕ್ರಿಯೆಯಲ್ಲಿ ಯಾರೂ ಪ್ರಾಮಾಣಿಕತೆಯನ್ನು  ದರ್ಶಿಸುತ್ತಿಲ್ಲ. ಇವರು ಕೈ ಮತ್ತು ಬಾಯಿಯನ್ನು ಹೊಲಸು ಮಾಡಿಕೊಂಡಿದ್ದಾರೆ ಎಂಬ ಮಾತನ್ನು ಕಟ್ಟಕಡೆಯ ಜನ ಸಾಮಾನ್ಯರು ಹೇಳುತ್ತಿದ್ದಾರೆ. ಇದೊಂದು ಉದಾಹರಣೆ ಅಷ್ಟೇ. ಎಲ್ಲೆಡೆಯೂ ಅ ಪ್ರಾಮಾಣಿಕತೆಯೆಂಬ ಕೈ-ಬಾಯಿ ಅಶುದ್ಧತೆಯು ಕಣ್ಣಿಗೆ ರಾಚುವಂತಿದೆ. ಇಲ್ಲಿ ಬಹುತೇಕ ಎಲ್ಲರೂ ಶಂಕಿತರೇ. ಎಲ್ಲಿಯ ವರೆಗೆಂದರೆ, ಕೊರೋನಾವನ್ನು ತಡೆಯುವುದಕ್ಕಾಗಿ ವಿತರಿಸಲಾಗುತ್ತಿರುವ  ಮಾಸ್ಕ್‍ಗಳನ್ನೂ ದುಪ್ಪಟ್ಟು    ಬೆಲೆಗೆ ಮಾರಲಾಗುತ್ತದೆ. ಸ್ಯಾನಿಟೈಸರ್ ಗಳ ಸ್ಥಿತಿಯೂ ಇದುವೇ. ನಿಜವಾಗಿ,

ಈಗ ಆರಂಭವಾಗಿರುವ ಕೈ ತೊಳೆಯುವ ಆಂದೋಲನವು ಬರೇ ಕೊರೋನಾವನ್ನು ದೃಷ್ಟಿ ಯಲ್ಲಿಟ್ಟುಕೊಂಡು ಮಾತ್ರ ನಡೆಯಬೇಕಾದುದಲ್ಲ. ಈ ಕೈ ತೊಳೆಯುವ ಪ್ರಕ್ರಿಯೆಯ ಜೊತೆಜೊತೆಗೇ  ಅವಲೋಕನವೊಂದೂ ನಡೆಯಬೇಕಾಗಿದೆ. ನಾವು ಈ ಕೊರೋನಾಕ್ಕಿಂತ ಮೊದಲು ಕೈ ತೊಳೆಯುತ್ತಿದ್ದೆವು. ಅದಕ್ಕೂ ಒಂದು ಉದ್ದೇಶ ಇತ್ತು. ಕೈಯ ಕೊಳೆ ಯನ್ನು ನೀಗಿಸುವುದು ಮತ್ತು ಕೈಯನ್ನು  ಶುದ್ಧ ವಾಗಿಟ್ಟುಕೊಳ್ಳುವುದು. ಹಾಗೆಯೇ ಕೊರೋನಾದ ಬಳಿಕದ ಕೈ ತೊಳೆಯುವಿಕೆಯ ಮುಖ್ಯ ಗುರಿ ಏನೆಂದರೆ, ಕೊರೋನಾ ವೈರಸನ್ನು ಕೈಯಿಂದ ನೀಗಿಸುವುದು ಮತ್ತು ನಮ್ಮ ದೇಹಕ್ಕೆ ಸೇರದಂತೆ  ತಡೆಯುವುದು. ಆದರೆ ಈ ಎರಡೂ ಕೈ ತೊಳೆಯುವಿಕೆಯೂ ಬಾಹ್ಯ ದೃಷ್ಟಿಯಿಂದ ಪರಿ ಪೂರ್ಣವೇ ಹೊರತು ಮನುಷ್ಯನ ಆಂತರಿಕ ದೃಷ್ಟಿಯಿಂದ ಪರಿಪೂರ್ಣವಲ್ಲ. ಕೊಳೆ ಎಂಬುದು ಒಂದು ಮಾಲಿನ್ಯ  ಸ್ಥಿತಿ. ಬಾಹ್ಯ ಕೊಳೆ ಹೇಗೆಯೋ ಆಂತರಿಕವಾಗಿಯೂ ಅಂಥದ್ದೊಂದು ಕೊಳೆಯ ಸ್ಥಿತಿ ಇರುತ್ತದೆ. ಕೈಯಲ್ಲಾಗಿರುವ ಕೊಳೆ ಬಾಹ್ಯವಾಗಿದ್ದರೆ, ನಂಜು, ಅಪ್ರಾಮಾಣಿಕತೆ, ಭ್ರಷ್ಟತೆ, ಕೋಮುವಾದ, ದ್ವೇಷ  ಇತ್ಯಾದಿ ಇತ್ಯಾದಿಗಳು ಈ ಕೊಳೆಯ ಆಂತರಿಕ ಸ್ಥಿತಿ. ಒಂದು ವೇಳೆ, 

ಬಾಹ್ಯದಲ್ಲಿರುವ ಕೊಳೆಯನ್ನು ನೀಗಿಸುವುದೇ ಕೈ ತೊಳೆ ಯುವ ಉದ್ದೇಶವಾದಾಗ ಅದು ಆ ವ್ಯಕ್ತಿಯನ್ನು ಆಂತರಿಕ ಪರಿ ಶುದ್ಧತೆಯೆಡೆಗೆ ಕೊಂಡೊಯ್ಯಲು ವಿಫಲವಾಗುತ್ತದೆ. ಕೊಳೆಯಿಂದ ಶುದ್ಧವಾದ ಅದೇ ಕೈಯಿಂದ ಆತ/ಕೆ ಅಶುದ್ಧವಾದ ಲಂಚ ಪಡಕೊಳ್ಳಬಲ್ಲ, ಸುಳ್ಳು ಬರೆಯಬಲ್ಲ. ವಂಚನೆ ಮಾಡಬಲ್ಲ. ಹಾಗೆ ದುಡಿದ  ಸಂಪತ್ತಿನಿಂದ ಹೊಟ್ಟೆ ತಣಿಸುವುದೆಂದರೆ ಆ ಕೊಳೆ ದೇಹಕ್ಕೂ ಅಂಟಿಕೊಳ್ಳುವುದೆಂದರ್ಥ. ಇವತ್ತು ಈ ದೈಹಿಕ ಕೊಳೆ ಸಾಂಕ್ರಾಮಿಕವಾಗಿ ಬಿಟ್ಟಿದೆ. ಕೈ ತೊಳೆದುಕೊಳ್ಳುವುದಕ್ಕೂ ಆಂತರಿಕ ವಾಗಿ ಪರಿ ಶುದ್ಧವಾಗುವುದಕ್ಕೂ ಸಂಬಂಧವೇ ಇಲ್ಲದಂತಹ ವಾತಾವರಣ ನಿರ್ಮಾಣವಾಗಿಬಿಟ್ಟಿದೆ. ಈ ಸಂಕ್ರಮಣ ಕಾಲದಲ್ಲೇ  ಕೊರೋನಾ ಬಂದಿದೆ. ದಿನದಲ್ಲಿ ಐದೋ, ಹತ್ತೋ, ಇಪ್ಪತ್ತೋ ಬಾರಿ ಕೈ  ತೊಳೆದುಕೊಳ್ಳುತ್ತಿದ್ದವರು ಈಗ ಅಸಂಖ್ಯ ಬಾರಿ ಕೈ ತೊಳೆಯತೊಡಗಿದ್ದಾರೆ. ಜೊತೆಗೇ ಸಾಬೂನನ್ನೂ ಕಡ್ಡಾಯವಾಗಿ ಉಪಯೋಗಿಸುತ್ತಿದ್ದಾರೆ. ಎಲ್ಲಿ ಈ ಕೊಳೆ ದೇಹವನ್ನು ಸೇರುತ್ತೋ ಅನ್ನುವ ಭಯ.  ಒಂದುವೇಳೆ, ದೇಹ ಸೇರಿಕೊಂಡರೆ ಜೀವವನ್ನೇ ಕಸಿದುಕೊಂಡೀತೋ ಅನ್ನುವ ಆತಂಕ. ಬಹುಶಃ,

ನಮ್ಮೊಳಗಿನ ಮಾಲಿನ್ಯವನ್ನು ನಮಗೆ ಗೊತ್ತುಪಡಿಸುವುದಕ್ಕೆ ಈ ಕೊರೋನಾ ಬಂದಿದೆಯೇನೋ ಎಂದು ಅನಿಸುತ್ತದೆ. ಅಪ್ರಾಮಾ ಣಿಕತೆಯು ದೇಹಾರೋಗ್ಯವನ್ನು ಕೆಡಿಸಬಲ್ಲುದು ಎಂಬುದನ್ನು ಕೊರೋ ನಾ ನೇರವಾಗಿ ಸಾರಿ ಸಾರಿ ಹೇಳುತ್ತಿರುವಂತಿದೆ. ನಮ್ಮದೇ ದೇಹದ ಅಂಗವೊಂದನ್ನು ಶಂಕಿತ ಸ್ಥಿತಿಯಲ್ಲಿಟ್ಟು ಕೊರೋನಾ ಇವತ್ತು ಪದೇ ಪದೇ ಪಾಠ ಮಾಡುತ್ತಿದೆ. ನಾವು ಕೈ ತೊಳೆದುಕೊಳ್ಳುತ್ತಿದ್ದೇವೆ.  ಪುಟ್ಟ ಹಸ್ತದಲ್ಲಿ ಆಗುವ ಕೊಳೆಗೆ ದೇಹವನ್ನೇ ಆಪೋಶನ ಪಡಕೊಳ್ಳುವ ಸಾಮಥ್ರ್ಯ ಇದೆಯೆಂಬುದೇ ನಮ್ಮೊಳಗನ್ನು ಅಲುಗಾಡಿಸಲು ಧಾರಾಳ ಸಾಕು. ಕೈ ತೊಳೆಯುವುದೆಂದರೆ, ಕೊಳೆ ನೀಗಿಸುವುದಷ್ಟೇ  ಅಲ್ಲ, ಬಾಹ್ಯದಿಂದ ತೊಡಗಿ ಆಂತರಿಕದ ವರೆಗೆ ಪರಿಶುದ್ಧವಾಗಿರುವುದು. ಪ್ರಾಮಾಣಿಕವಾಗಿರುವುದು.

ಕೈ ತೊಳೆಯುವುದೆಂದರೆ ಇದುವೇ.