Thursday, July 21, 2016

ಮಗು, ಮಣ್ಣು ಮತ್ತು ಕಲಿಕೆ

 ಬೆಂಗಳೂರಿನ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಸರಕಾರಿ ಶಾಲೆ
       ಶಾಲೆಯ ಬಗ್ಗೆ ನಮ್ಮ ಪರಿಕಲ್ಪನೆಗಳು ಏನಾಗಿವೆ ಮತ್ತು ಏನಾಗಿರಬೇಕು? ಬಾಗಿಲು ಮುಚ್ಚುವ ಸರಕಾರಿ ಶಾಲೆಗಳ
ಮೇಲೆ ನಡೆಯುವ ಚರ್ಚೆಯು ಬಾಗಿಲು ತೆರೆದಿರುವ ಶಾಲೆಗಳ ಮೇಲೆ ಪರಿಣಾಮ ಬೀರುವಷ್ಟು ಪ್ರಬುದ್ಧವಾಗಿವೆಯೇ? ಶಾಲೆ ಎಂಬುದು ಒಂದು ಮಗುವಿನ ಪಾಲಿಗೆ ಅಕ್ಷರವನ್ನು ಕಲಿಸುವ ಬರೇ ಒಂದು ಕೊಠಡಿ ಮಾತ್ರವೇ ಅಲ್ಲ, ಮಗುವನ್ನು ಸಮಗ್ರವಾಗಿ ವಿಕಾಸಗೊಳಿಸಿ ಸಮಾ ಜಕ್ಕೆ ಅರ್ಪಿಸುವ ಜಾಗ ಕೂಡ. ಈ ಸಮಗ್ರ ಎಂಬ ಪರಿ ಕಲ್ಪನೆಯೊಳಗೆ ಸೇರಿಕೊಳ್ಳಲು ಅರ್ಹತೆಯಿರುವ ಶಾಲೆಗಳು ನಮ್ಮ ನಡುವೆ ಎಷ್ಟಿವೆ? ಸರಕಾರಿ ಮತ್ತು ಸರಕಾರೇತರ ಎಂಬು ದಾಗಿ ವಿಂಗಡಿಸಿ ನೋಡಿದರೂ ಈ ಪ್ರಶ್ನೆ ಅತ್ಯಂತ ಸಕಾಲಿಕ ಮತ್ತು ಸಮಯೋಚಿತ. ಒಂದು ಮಗುವಿನ ಪಾಲಿಗೆ ಸಮಗ್ರ ಅಭಿವೃದ್ಧಿ ಎಂಬುದು ಯಾವುದೆಲ್ಲ? ಭಾರತದ ಭೌಗೋಳಿಕ ವ್ಯಾಪ್ತಿ, ಐತಿಹಾಸಿಕ ಘಟನಾವಳಿಗಳು, ಸಂಸ್ಕøತಿ, ಜೀವ ವೈವಿಧ್ಯ, ರಾಷ್ಟ್ರಗೀತೆ.. ಇತ್ಯಾದಿ ಇತ್ಯಾದಿಗಳ ಅರಿವು ಮಗುವಿಗೆ ಇರಬೇಕಾದುದು ಅಗತ್ಯ ನಿಜ. ಆದರೆ ಇವುಗಳಾಚೆಗೆ ಒಂದು ಮಗುವನ್ನು ದೇಶದ ಅಭಿವೃದ್ಧಿಯಲ್ಲಿ ಪಾಲು ದಾರಗೊಳಿಸಬಹುದಾದ ಪ್ರಾಯೋಗಿಕ ಕಾರ್ಯಗಳು ಇವೆಯೇ? ಇದ್ದರೆ ಅವು ಏನೆಲ್ಲ?
          ದೇಶದ ತುಂಬ ಹರಡಿರುವ ಅಸಂಖ್ಯಾತ ಶಾಲೆಗಳಲ್ಲಿ ಕೆಲವು ಶಾಲೆಗಳು ಇಂಥ ಪ್ರಶ್ನೆಗಳ ಹುಟ್ಟಿಗೆ ಕಾರಣವಾಗಿವೆ. ತಮಿಳುನಾಡಿನಲ್ಲಿ ಸರಕಾರಿ ಶಾಲೆಯೊಂದಿದೆ. ಆ ಶಾಲೆಯಲ್ಲಿ ಪಾಠಗಳು ಮಾತ್ರ ನಡೆ ಯುತ್ತಿರುವುದಲ್ಲ. ಆ ಶಾಲೆ ಹೆಸರುವಾಸಿಯಾಗಿರುವುದೇ ಅಲ್ಲಿನ ಅಧ್ಯಾಪಕರ ಭಿನ್ನ ಕಲಿಕಾ ಪ್ರವೃತ್ತಿಗಾಗಿ. ಆ ಶಾಲೆಯಲ್ಲಿ ಅತಿ ವಿಶಾಲವಾದ ಲೈಬ್ರರಿ ಇದೆ. ಆ ಲೈಬ್ರರಿಯಲ್ಲಿ ಮೂರೂವರೆ ಸಾವಿರಕ್ಕಿಂತಲೂ ಅಧಿಕ ಸಾಹಿತ್ಯ ಕೃತಿಗಳಿವೆ. ಅಲ್ಲಿನ ಮಕ್ಕಳು ವಿವಿಧ ಸಾಹಿತ್ಯ ಕೃತಿಗಳ ಮೇಲೆ ವಿಮರ್ಶೆ ಬರೆಯುತ್ತಾರೆ. ಓದುತ್ತಾರೆ. ಕ್ಲಾಸ್‍ರೂಂನಲ್ಲಿ ಆ ಬಗ್ಗೆ ಚರ್ಚೆಗಳು ನಡೆಯುತ್ತವೆ. ಕತೆ, ಕವನ, ವಿಮರ್ಶಾ ಬರಹಗಳು ಆ ಶಾಲೆಯ ಮಕ್ಕಳಲ್ಲಿ ಎಷ್ಟು ಪರಿಚಿತವಾಗಿವೆಯೆಂದರೆ ಅದು ಪಠ್ಯದ ಭಾಗವೆಂದೇ ಅಂದುಕೊಳ್ಳುವಷ್ಟು. ಪಠ್ಯ ಮತ್ತು ಅಂಕ ಮಾತ್ರವೇ ಮುಖ್ಯ ಮತ್ತು ಅವು ಮಾತ್ರ ಶಿಕ್ಷಣ ಎಂಬ ಸಾಮಾನ್ಯ ಪರಿಕಲ್ಪನೆಯಿಂದ ಮಕ್ಕಳನ್ನು ಹೊರತಂದು ಈ ಶಾಲೆ ರಾಜ್ಯದಲ್ಲಿಯೇ ಹೊಸ ಚರ್ಚೆಗೆ ನಾಂದಿ ಹಾಡಿದೆ. ಎಲ್ಲಾದರೂ ಕಥಾ ಸ್ಪರ್ಧೆ ಇದ್ದರೆ ಈ ಮಕ್ಕಳದ್ದೇ ಪ್ರಾಬಲ್ಯ. ಕವನಕ್ಕೂ ಈ ಮಕ್ಕಳೇ ಹಕ್ಕುದಾರರು. ವಿಮರ್ಶಾ ಸಾಹಿತ್ಯದಲ್ಲೂ ಈ ಮಕ್ಕಳೇ ಮುಂದು. ‘ಮಕ್ಕಳಲ್ಲಿ ಓದು ಕಡಿಮೆಯಾಗುತ್ತಿದೆ, ಸಾಹಿತ್ಯದ ಅಭಿರುಚಿ ಇಲ್ಲ, ಯಾಂತ್ರಿಕವಾಗಿ ಈ ಪೀಳಿಗೆ ಬೆಳೆಯುತ್ತಿದೆ..’ ಎಂಬೆಲ್ಲ ಆರೋಪಗಳ ನಡುವೆ ಇಂಥದ್ದೊಂದು ಪ್ರಯೋಗ ನಿಜಕ್ಕೂ ಮಾದರಿ ಅನಿಸುತ್ತಿದೆ. ಬೆಂಗಳೂರಿನ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಸರಕಾರಿ ಶಾಲೆಯನ್ನೂ ನಾವಿಲ್ಲಿ ಉದಾಹರಿಸಬಹುದು. ಇಲ್ಲಿ ಮಕ್ಕಳ ಕೈ ಕೆಸರಾಗುತ್ತದೆ. ಮಕ್ಕಳು ಪಿಕ್ಕಾಸು, ಹಾರೆಗಳನ್ನು ಬಳಸುತ್ತಾರೆ. ನೆಲ ಅಗೆಯುತ್ತಾರೆ. ಹೂದೋಟಗಳನ್ನು ನಿರ್ವಹಿಸುತ್ತಾರೆ. ಅಂದಹಾಗೆ, ಸ್ವಾತಂತ್ರ್ಯದ 69 ವರ್ಷಗಳ ಬಳಿಕವೂ ಈ ದೇಶದ ಶಿಕ್ಷಣ ರಂಗವು ನಿರೀಕ್ಷಿತ ಮಟ್ಟದಲ್ಲಿ ಬೆಳೆದಿಲ್ಲ ಎಂದೆಲ್ಲಾ ಕಳಕಳಿ ವ್ಯಕ್ತಪಡಿಸುವುದನ್ನು ಅಭ್ಯಾಸ ಮಾಡಿಕೊಂಡು ಬಂದ ಪರಂಪರೆ ಇಲ್ಲಿಯದು. ಸರ ಕಾರಿ ಶಾಲೆಗಳು ಬಾಗಿಲು ಮುಚ್ಚಿದರೆ ಸರಕಾರವನ್ನು ದೂರುವುದು ಸುಲಭ ಮತ್ತು ಜವಾಬ್ದಾರಿಯಿಂದ ಕಳಚಿಕೊಳ್ಳುವುದಕ್ಕೆ ನಮಗೆ ಒಂದು ಬಳಸು ವಿಧಾನವೂ ಇದುವೇ. ತಕ್ಷಣ ನಾವು ಇಂಥ ಬಾಗಿಲು ಮುಚ್ಚುವಿಕೆಗಳಿಂದ ಆಗುವ ದೂರಗಾಮಿ ಪರಿಣಾಮಗಳ ಬಗ್ಗೆ ಕರುಬುವುದಿದೆ. ಕಳೆದ ವರ್ಷ ಎಷ್ಟು ಡ್ರಾಪ್‍ಔಟ್ ಆಯಿತು, ಈ ವರ್ಷ ಬಾಗಿಲು ಮುಚ್ಚುವುದರಿಂದ ಎಷ್ಟು ಆಗಲಿದೆ, ಅದರಿಂದಾಗಿ ಸಾಮಾಜಿಕ, ಆರ್ಥಿಕ ಪ್ರಗತಿಯ ಮೇಲೆ ಬೀರುವ ಅಡ್ಡ ಪರಿಣಾಮಗಳು ಏನೇನು.. ಎಂಬುದರ ವಿಶ್ಲೇಷಣೆ ನಡೆಯುತ್ತದೆ. ಇತ್ತೀಚೆಗಷ್ಟೇ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ಬಿಡುಗಡೆಗೊಳಿಸಿದ ವರದಿಯ ಪ್ರಕಾರ, ಪ್ರತಿ 10ರಲ್ಲಿ 4 ಮಕ್ಕಳು 8ನೇ ಕ್ಲಾಸ್‍ಗಿಂತ ಮೊದಲೇ ಡ್ರಾಪ್‍ಔಟ್ ಆಗುತ್ತಾರೆ. ಇವರಲ್ಲಿ ಬಡವರು, ವಿಶೇಷ ಚೇತನರು, ವಲಸಿಗರೇ ಅಧಿಕ. ಇವು ಮತ್ತು ಇಂಥ ಅನೇಕಾರು ಅಂಕಿ-ಅಂಶಗಳನ್ನು ಉಲ್ಲೇಖಿಸಿ ಸರಕಾರವನ್ನು ಮತ್ತು ಕೆಲವೊಮ್ಮೆ ಹೆತ್ತವರನ್ನು ಬೈಯ್ದು ಭಾಷಣ, ಬರಹಗಳಿಗೆ ನಾವು ಇತಿಶ್ರೀ ಹಾಕುವುದೂ ಮತ್ತು ಇದುವೇ ಕನ್ನಡ ಪ್ರೇಮವಾಗಿ ಗುರುತಿಸಿಕೊಳ್ಳುವುದೂ ನಡೆಯುತ್ತಿದೆ. ನಿಜಕ್ಕೂ, ಒಂದು ಮುಚ್ಚುಗಡೆಯಾಗುವ ಶಾಲೆಯ ಬಗ್ಗೆ ವ್ಯಕ್ತವಾಗಬೇಕಾದ ಅಭಿಪ್ರಾಯಗಳು ಇಷ್ಟೇ ಆಗಿರಬೇಕೇ? ಅದರಾಚೆಗೆ, ಈ ಮುಚ್ಚಿದ ಬಾಗಿಲುಗಳನ್ನು ತೆರೆಯಲು ಅಥವಾ ಮುಚ್ಚದೇ ಹೋಗಲು ಬೇರೆ ಪರ್ಯಾಯ ಕ್ರಮಗಳನ್ನು ಹೇಗೆ ಹುಡುಕಬಹುದು?
          ಕೇರಳದ ಕೋಝಿಕ್ಕೋಡ್‍ನಲ್ಲಿರುವ ಸರಕಾರಿ ಹೆಣ್ಮಕ್ಕಳ ಶಾಲೆ ಈ ಹಿನ್ನೆಲೆಯಲ್ಲಿ ಚರ್ಚೆಗೆ ಅತ್ಯಂತ ಯೋಗ್ಯವಾಗಿ ಕಾಣುತ್ತದೆ. ದೇಶದ ಅತ್ಯುನ್ನತ 10 ಶಾಲೆಗಳಲ್ಲಿ ಒಂದಾಗಿ ಗುರುತಿಗೀಡಾಗಿರುವ ಈ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳೆಲ್ಲ ತೀರಾ ಬಡತನದ ಹಿನ್ನೆಲೆಯ, ಬೀಡಿ ಕಟ್ಟುವ ಕುಟುಂಬದವು. ಈ ಶಾಲೆಯೂ ಬಾಗಿಲು ಮುಚ್ಚಿಕೊಂಡು ಒಂದಷ್ಟು ಮಲಯಾಳಂ ಪ್ರೇಮಿಗಳ ಶೋಕವನ್ನು ಗಿಟ್ಟಿಸಿಕೊಳ್ಳುವುದಕ್ಕೆ ಎಲ್ಲ ರೀತಿಯಲ್ಲೂ ಅರ್ಹವಾಗಿತ್ತು. ಆದರೆ, ನಾಡಿನ ಕೆಲವರು ಈ ಶಾಲೆಯ ಬಗ್ಗೆ ಕಾಳಜಿ ತೋರಿದರು. ಈ ಶಾಲೆಯನ್ನು ಸರ್ವ ಸೌಲಭ್ಯಗಳುಳ್ಳ ಶಾಲೆಯಾಗಿ ಪರಿವರ್ತಿಸಬೇಕೆಂಬ ನಿಟ್ಟಿನಲ್ಲಿ ಪ್ರಯತ್ನಕ್ಕಿಳಿದರು. ಅದಕ್ಕಾಗಿ ವಿವಿಧ ಸಂಸ್ಥೆಗಳನ್ನು, ಶ್ರೀಮಂತರನ್ನೂ ಸಂಪರ್ಕಿಸಿದರು. ಈ ಕಾರಣದಿಂದಾಗಿ, ಕೋಝಿಕ್ಕೋಡ್‍ನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್, ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಝೇಶನ್ ಮತ್ತು ಇನ್ಫೋಸಿಸ್‍ಗಳು ಆ ಶಾಲೆಯ ನೆರವಿಗೆ ಬಂದುವು. ಓರ್ವ ದಾನಿ 15 ಕೋಟಿ ರೂಪಾಯಿ ದೇಣಿಗೆ ನೀಡಿದರು. ಇದರಿಂದಾಗಿ ಇಡೀ ಶಾಲೆಯ ಸ್ವರೂಪವೇ ಬದ ಲಾಯಿತು. ಖ್ಯಾತ ಸ್ಕಾಟಿಷ್ ವಿನ್ಯಾಸಕಾರ ವಿಲಿಯಂ ಕೂಪರ್‍ರ ಸಲಹೆಯಂತೆ ವಿವಿಧ ಕಾಮಗಾರಿಗಳು ನಡೆದುವು. ಒಂದು ವಿಶಾಲ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಲಾಯಿತು. ಈ ಕ್ರೀಡಾಂಗಣದಲ್ಲಿ 3 ಬಾಸ್ಕೆಟ್‍ಬಾಲ್ ಕೋರ್ಟ್, ಹಾಕಿ ಮೈದಾನ, ಫುಟ್‍ಬಾಲ್ ಮೈದಾನ, ಬ್ಯಾಡ್ಮಿಂಟನ್ ಕೋರ್ಟ್, 2 ಸಾವಿರ ಮಂದಿ ಕೂರಬಲ್ಲಷ್ಟು ವಿಶಾಲವಾದ ಡೈನಿಂಗ್ ಸಭಾಂಗಣ, 25 ಸಾವಿರ ಪುಸ್ತಕಗಳುಳ್ಳ ವಿಶಾಲ ಲೈಬ್ರರಿಯು ತಲೆ ಎತ್ತಿತು. ಇಸ್ರೋ ಸಂಸ್ಥೆಯು 4 ಸೈನ್ಸ್ ಲ್ಯಾಬ್‍ಗಳನ್ನು ಒದಗಿಸಿತು. 150 ಕಂಪ್ಯೂ ಟರ್‍ಗಳನ್ನು ಇನ್ಫೋಸಿಸ್ ಒದಗಿಸಿತು. ಕೋಝಿಕ್ಕೋಡ್‍ನ ಐಐಎಂ ಈ ಎಲ್ಲವುಗಳ ಜಾರಿಗೆ ಪೂರ್ಣ ಸಹಕಾರವನ್ನು ನೀಡಿತು. ಇವೆಲ್ಲದರ ಪರಿಣಾಮ ಎಷ್ಟು ವ್ಯಾಪಕ ಮಟ್ಟದಲ್ಲಿ ಆಯಿತೆಂದರೆ ಇಡೀ ಶಾಲೆ ರಾಜ್ಯದಲ್ಲಿಯೇ ಅತೀ ಉನ್ನತ ಮತ್ತು ಸರ್ವರ ಗಮನಕ್ಕೆ ಪಾತ್ರವಾಯಿತು. ಈ ವರ್ಷ ಈ ಶಾಲೆಯಲ್ಲಿ 2400 ಮಕ್ಕಳ ದಾಖಲಾತಿ ನಡೆದಿದೆ ಎಂಬುದೇ ಇದಕ್ಕಿರುವ ಅತ್ಯುತ್ತಮ ಪುರಾವೆ. ಮುಚ್ಚಿ ಬಿಡಬಹುದಾದ ಶಾಲೆಯೊಂದನ್ನು ಸರ್ವರೂ ಆಸೆಪಡುವ ಮತ್ತು ದೇಶದಲ್ಲೇ  ಉನ್ನತ ಶಾಲೆಗಳಲ್ಲಿ ಒಂದಾಗಿಸಲು ಸಾಧ್ಯವಿದೆ ಎಂಬುದಕ್ಕೆ ಉದಾಹರಣೆಯೂ ಇದುವೇ.
        ಆಧುನಿಕ ಕಾಲದ ಇಂದಿನ ಮಕ್ಕಳ ಎದುರು ಮೊಬೈಲ್, ಕಂಪ್ಯೂಟರ್, ಇಂಟರ್‍ನೆಟ್, ವಾಹನ ಮುಂತಾದ ಎಲ್ಲವೂ ಇದೆ. ಅವುಗಳ ಉಪಯೋಗ-ದುರುಪಯೋಗಗಳೂ ಅವುಗಳಿಗೆ ಗೊತ್ತಿದೆ. ಇದೇ ವೇಳೆ, ಹಾರೆ, ಪಿಕ್ಕಾಸು, ಗುದ್ದಲಿ, ಕೃಷಿ ಚಟು ವಟಿಕೆ, ಬಾವಿಯಿಂದ ನೀರೆತ್ತುವುದು, ಮಡಿಕೆ ತಯಾರಿ, ಉಳುಮೆ, ನೇಜು ಕೊಯ್ಯುವುದು.. ಮುಂತಾದ ಅನೇಕಾರು ಮಣ್ಣು ಸಂಬಂಧಿ ಚಟುವಟಿಕೆಗಳು ಅವರಿಂದ ಅಪರಿಚಿತವಾಗುತ್ತಲೂ ಇವೆ. ಮಗುವೊಂದರ ಸಮಗ್ರ ಬೆಳವಣಿಗೆಯೆಂಬುದು ಪುಸ್ತಕ, ಕಪ್ಪು ಬೋರ್ಡು, ಮಾರ್ಕು, ಯೂನಿಫಾರ್ಮು, ಶಾಲಾ ಬಸ್ಸು.. ಎಂಬಿವುಗಳನ್ನೇ ಆಧರಿಸಿ ಇರುವುದಲ್ಲವಲ್ಲ. ಅನ್ನ ಉಣ್ಣುವ ಮಗುವಿಗೆ ಅನ್ನದ ಹುಟ್ಟಿನ ಬಗ್ಗೆ ಕುತೂ ಹಲ ಹುಟ್ಟಬೇಕು. ಪೈರನ್ನು ನೋಡುವ ಮಗು, ಅದನ್ನು ಆನಂದಿಸುತ್ತಾ, ಪ್ರಶ್ನೆಗಳನ್ನು ಕೇಳುತ್ತಾ ಬೆರಗುಗೊಳ್ಳಬೇಕು. ನಳ್ಳಿ ನೀರಿಲ್ಲದ ಮತ್ತು ಬಾವಿಯಿಂದ ನೀರು ಸೇದಿಯೇ ಬದುಕುತ್ತಿದ್ದ ಅಜ್ಜ, ಮುತ್ತಜ್ಜಂದಿರ ಬಗ್ಗೆ ಅರಿವು ಪಡೆಯಬೇಕು. ಇಂಥ ಪರಂಪರೆಯ ಬಗ್ಗೆ ಜ್ಞಾನ ಪಡಕೊಳ್ಳುವುದರಿಂದ ಆಗುವ ದೊಡ್ಡ ಲಾಭ ಏನೆಂದರೆ, ಮಗು ಮಣ್ಣಿನ ಬಗ್ಗೆ, ಅದರ ಉತ್ಪನ್ನಗಳ ಬಗ್ಗೆ ಮತ್ತು ಆ ಉತ್ಪನ್ನ ವನ್ನು ಬೆಳೆಯುವವರ ಬಗ್ಗೆ ಕುತೂಹಲಗೊಳ್ಳುತ್ತದೆ. ಶಾಲೆಗಳಿಂದ ಇಂಥ ಕುತೂಹಲವನ್ನು ಹುಟ್ಟಿಸಲು ಸಾಧ್ಯವಿದೆ. ಶಾಲೆಯನ್ನು ಅಕ್ಷ ರಗಳ ಬಂಧನದಿಂದ ಬಿಡಿಸಿ ಮಣ್ಣಿನೊಂದಿಗೆ ಸರಸವಾಡಲು ಬಿಡಬೇಕು. ಎಷ್ಟು ಅವಕಾಶ ಇದೆಯೋ ಅಷ್ಟರ ಮಟ್ಟಿಗೆ ಶಾಲಾ ಕ್ಯಾಂಪಸ್ ಅನ್ನು ವಿವಿಧ ಕೃಷಿ ಚಟುವಟಿಕೆಗಳಿಗೆ ಮುಕ್ತವಾಗಿಡಬೇಕು. ಹಳ್ಳಿ ಪ್ರದೇಶಗಳಲ್ಲಂತೂ ಶಾಲಾ ಕ್ಯಾಂಪಸ್ ವಿಶಾಲವಾಗಿರುತ್ತದೆ. ಮಕ್ಕಳು ವಿವಿಧ ತರಕಾರಿ ಬೆಳೆಗಳನ್ನು ಬೆಳೆಯುವಂತೆ ಪ್ರೇರೇಪಣೆ ನೀಡಬೇಕು. ಇಂಥ ಚಟುವಟಿಕೆಯನ್ನು ಪಠ್ಯದ ಭಾಗದಂತೆಯೇ ಪರಿಗಣಿಸಿ ಅದಕ್ಕೊಂದು ನಿಶ್ಚಿತ ಸಮಯವನ್ನು ಮೀಸಲಿಟ್ಟರೆ ಅದು ದೂರಗಾಮಿ ಪರಿಣಾಮ ಬೀರಬಹುದು. ಶಾಲಾ ಸಮಯ ಕ್ಕಿಂತ ಮೊದಲೇ ಶಾಲೆಗೆ ಬಂದು ತಾನು ಬೆಳೆದ ತರಕಾರಿಗಳ ಜೊತೆ ಸಮಯ ಕಳೆಯಲು ಮಕ್ಕಳನ್ನು ಅದು ಪ್ರೇರೇಪಿಸಬಹುದು. ಒಂದು ಬೀಜ ಮೊಳಕೆಯೊಡೆಯುವಾಗ ಮಗುವೂ ಅದರೊಂದಿಗೆ ಬೆಳೆಯಬಹುದು. ಅದರೊಳಗೊಂದು ಕೌತುಕ, ಕುತೂಹಲ, ರೋಮಾಂಚನ ಹುಟ್ಟಿಕೊಳ್ಳಬಹುದು. ಮನೆ ಸೇರಿಕೊಂಡ ಬಳಿಕ ಮನೆಯಲ್ಲೂ ಅದರ ಪ್ರಯೋಗಕ್ಕೆ ಮುಂದಾಗಬಹುದು. ಹೀಗೆ ಮಣ್ಣು ಮತ್ತು ಮಗು ಜೊತೆಜೊತೆಯಾಗಿ ಬೆಳೆಯುವುದೆಂದರೆ ಪರಿಪೂರ್ಣ ಮಾನವ ಜೀವಿಯೊಂದು ಬೆಳೆದಂತೆ. ದುರಂತ ಏನೆಂದರೆ, ಇಂದಿನ ಮಗು ಮಣ್ಣಿನ ಹೊರಗೆ ಬೆಳೆಯುತ್ತಿದೆ. ಅದರ ಬೆಳವಣಿಗೆಗೂ ಮಣ್ಣಿಗೂ ಬಹುತೇಕ ಯಾವ ಸಂಬಂಧವೂ ಇಲ್ಲದಷ್ಟು ಅಂತರ ನಿರ್ಮಾಣವಾಗುತ್ತಿದೆ. ಕಾಂಕ್ರೀಟು ನೆಲ, ಡಾಮಾರು ರಸ್ತೆ, ವಾಹನದಲ್ಲಿ ಸಂಚಾರ, ಮತ್ತೆ ಶಾಲೆಯ ಮಾರ್ಬಲ್ ನೆಲದ ಮೇಲೆ ಓಡಾಟ.. ಹೀಗೆ ಎಲ್ಲವೂ ಮಣ್ಣಿ ನೊಂದಿಗೆ ನೇರವಾಗಿ ಸಂಪರ್ಕ ಇಲ್ಲದ ಬದುಕು ಮಗುವಿನದು. ಹಾಗಂತ, ಇದನ್ನು ತಿರಸ್ಕರಿಸಿ ಬದುಕಲು ಇವತ್ತು ಸುಲಭವೂ ಅಲ್ಲ. ಆದರೆ, ಈ ಬದುಕು ಮಾತ್ರವೇ ಅಂತಿಮ ಎಂಬ ರೀತಿ ಯಲ್ಲಿ ಇತರ ಸಾಧ್ಯತೆಗಳ ಬಾಗಿಲನ್ನೇ ಮುಚ್ಚಿ ಬಿಡಬೇಕಾದ ಅಗತ್ಯವೇನೂ ಇಲ್ಲವಲ್ಲ. ಶಾಲಾ ಕ್ಯಾಂಪಸ್ ಅನ್ನು ಮಗು ಮತ್ತು ಮಣ್ಣಿನ ಸಂಭಾಷಣೆಗಾಗಿ ಯಾಕೆ ಉಪಯೋಗಿಸಬಾರದು? ಆಧುನಿಕ ಶಿಕ್ಷಣ ಮತ್ತು ಕಾಂಕ್ರೀಟು ಅಭಿವೃದ್ಧಿಯ ಮೇಲೆ ಆರೋಪಗಳನ್ನು ಹೊರಿಸುತ್ತಾ ಮತ್ತು ಕೊನೆಗೆ ಅದರೊಂದಿಗೆ ರಾಜಿ ಮಾಡಿಕೊಳ್ಳುವುದನ್ನೇ ಪರಿಹಾರವಾಗಿ ಕಾಣುವುದಕ್ಕಿಂತ, ಇರುವ ಅವಕಾಶವನ್ನು ಯಾಕೆ ಸದುಪಯೋಗಪಡಿಸಬಾರದು? ನಿಜವಾಗಿ,
        ಮಗು ಮತ್ತು ಮಣ್ಣಿನ ನಡುವೆ ಸಂಭಾಷಣೆ ಸಾಧ್ಯವಾದಾಗಲೇ ಪರಿಪೂರ್ಣ ಮನುಷ್ಯ ಹುಟ್ಟಿಕೊಳ್ಳುತ್ತಾನೆ. ಮಣ್ಣನ್ನು ಹೊರತುಪಡಿಸಿದ ಅಭಿವೃದ್ಧಿಯ ಕಲ್ಪನೆ ಎಂದೂ ಸಮಗ್ರವಲ್ಲ. ಅದು ಮಗು ವಿರೋಧಿ. ಅಭಿವೃದ್ಧಿ ವಿರೋಧಿ.

Wednesday, July 13, 2016

ಎರಡು ಉಗ್ರ ನಿಲುವುಗಳಾಚೆ- ಝಾಕಿರ್ ನಾಯ್ಕ್ ಏನು?

      'ದೊಗಳೆ ಕೋಟು-ಪ್ಯಾಂಟು, ಅಡ್ಡಾದಿಡ್ಡಿ  ಗಡ್ಡ, ರಿಂಗ್ ಮಾಸ್ಟರ್ ಫೋಸು, ಬಾಲಿವುಡ್ ಹೀರೋನಂತೆ ವೇದಿಕೆಗೆ ಪ್ರವೇಶ, ಭಯೋತ್ಪಾದಕ ಗುರು..' ಎಂಬಲ್ಲಿಂದ ಹಿಡಿದು,
 'ಜ್ಞಾನದ ಸಾಗರ, ಪರ್ಯಾಯವಿಲ್ಲದ ಪ್ರವಚನಕಾರ, ಕುರ್‍ಆನನ್ನು ಕಲಸಿ ಕುಡಿದ ಮಹಾನ್, ಅವರನ್ನು ಟೀಕಿಸುವುದೆಂದರೆ ಕುರ್‍ಆನನ್ನೇ ಟೀಕಿಸಿದಂತೆ...'
         ಎಂಬಲ್ಲಿ ವರೆಗಿನ ಎರಡು ಉಗ್ರ ಅಭಿಪ್ರಾಯಗಳಾಚೆ- ಝಾಕಿರ್ ನಾಯ್ಕ್ ಏನು ಮತ್ತು ಹೇಗೆ? ಈ ಮೇಲಿನ ಉಗ್ರವಾದಗಳ ಹೊರಗೆ ನಿಲ್ಲಿಸಿ ನೋಡಿದರೆ, ಝಾಕಿರ್ ನಾಯ್ಕ್ ಹೇಗೆ ಕಾಣಿಸುತ್ತಾರೆ? ಉಗ್ರ ನಕಾರಾತ್ಮಕತೆ ಮತ್ತು ಉಗ್ರ ಸಕಾರಾತ್ಮಕತೆಯ ನಡುವಿನಲ್ಲೊಂದು ದಾರಿಯಿದೆಯಲ್ಲ, ಅಲ್ಲಿ ಗುರುತಿಸಿಕೊಳ್ಳುವ ಯೋಗ್ಯತೆ ಝಾಕಿರ್ ನಾಯ್ಕ್ ರಿಗೆ ಇದೆಯೇ? ಅವರ ಮೇಲಿನ ಆರೋಪಗಳಲ್ಲಿ ಎಷ್ಟು ಕಾಳಿದೆ ಮತ್ತು ಎಷ್ಟು ಜೊಳ್ಳಿದೆ? 'Ban Peace TV, arrest Zakir Naik- mentor of Dhaka attack Killers’ ಎಂಬ ಶೀರ್ಷಿಕೆಯಲ್ಲಿ ಮತ್ತು Indian Media :Stop the Vilification Campaign against Dr. Zakir Naik'  ಎಂಬ ಶೀರ್ಷಿಕೆಯಲ್ಲಿ ಜುಲೈ 7ರಂದು ಹುಟ್ಟು ಹಾಕಲಾದ ಝಾಕಿರ್ ನಾಯ್ಕ್ ಅವರ ಪರ ಮತ್ತು ವಿರುದ್ಧದ ಎರಡು ಆನ್‍ಲೈನ್ ಪಿಟಿಷನ್‍ಗಳನ್ನೇ ಎತ್ತಿಕೊಳ್ಳಿ ಅಥವಾ ಫೇಸ್‍ಬುಕ್, ಟ್ವಿಟರ್‍ಗಳಲ್ಲಿ ತುಂಬಿಕೊಂಡಿರುವ ಪ್ರತಿಕ್ರಿಯೆಗಳನ್ನೇ ಪರಿಶೀಲಿಸಿ. ಅವೇನು ಕಮ್ಮಿ ಉಗ್ರಗಾಮಿಯೇ? ಝಾಕಿರ್ ನಾಯ್ಕ್ ರ ಪರ ಅಥವಾ ವಿರುದ್ಧ ಇರುವವರನ್ನೆಲ್ಲ ಉಡಾಯಿಸಿ ಬಿಡಬೇಕೆಂಬಷ್ಟು ಕೋಪ-ತಾಪ ಅವುಗಳಲ್ಲಿ ಕಾಣುತ್ತಿರುವುದನ್ನು ಹೇಗೆ ವಿಶ್ಲೇಷಿಸಬಹುದು? ಈ ಉಗ್ರಗಾಮಿತ್ವದ ಹುಟ್ಟು ಎಲ್ಲಿ? ಪ್ರಧಾನಿ ನರೇಂದ್ರ ಮೋದಿಯವ ರನ್ನು ಅತ್ಯಂತ ಮಾನ್ಯ ಭಾಷೆಯಲ್ಲಿ ಮತ್ತು ಅತ್ಯಂತ ತರ್ಕಬದ್ಧ ನೆಲೆಯಲ್ಲಿ ಟೀಕಿಸಿ ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಹಾಕಿದರೂ ಸಿಗುವ ಪ್ರತಿಕ್ರಿಯೆಗಳ ಭಾಷೆ, ವ್ಯಾಕರಣ, ಪದ ಬಳಕೆ, ವಾದ ಸ್ವರೂಪ... ಎಲ್ಲದರಲ್ಲೂ ವೈವಿಧ್ಯತೆ ಇರುತ್ತದೆ. ಕೆಲವು ಅತ್ಯಂತ ನಿಂದನಾತ್ಮಕವಾಗಿದ್ದರೆ ಇನ್ನು ಕೆಲವು ಬೆದರಿಕೆಯ ದಾಟಿಯಲ್ಲಿರುತ್ತದೆ. ಕೆಲವು ಪ್ರತಿಕ್ರಿಯೆಗಳು ‘ಬಿನ್ ಲಾಡೆನ್’ನನ್ನೂ ನಾಲಾಯಕ್ಕು ಗೊಳಿಸುವಷ್ಟು ಉಗ್ರವಾಗಿರುತ್ತದೆ. ಹೆಚ್ಚಿನವು ಓದಬಲ್ಲಷ್ಟು ಚೆನ್ನಾಗಿರುತ್ತವೆ. ಕೆಲವರು ಇನ್‍ಬಾಕ್ಸ್ ನಲ್ಲಿ ಜೀವ ಬೆದರಿಕೆಯ ಸಂದೇಶ ರವಾನಿಸುವುದೂ ಇದೆ. ಒಂದೇ ಸ್ಟೇಟಸ್. ಆದರೆ ಹತ್ತಾರು ಬಗೆಯ ಪ್ರತಿಕ್ರಿಯೆಗಳು! ಇದನ್ನು ಹೇಗೆ ವಿಶ್ಲೇಷಣೆಗೆ ಒಳಪಡಿಸಬಹುದು? ತೀರಾ ಗೌರವಾರ್ಹ ಭಾಷೆಯಲ್ಲಿ ಬರೆಯಲಾದ ಸ್ಟೇಟಸ್‍ಗೂ ಓದುಗನಿಂದ ಜೀವ ಬೆದರಿಕೆಯ ಪ್ರತಿಕ್ರಿಯೆ ಸಿಗುತ್ತದೆಂದಾದರೆ, ಆ ಉಗ್ರ ಮನಸ್ಥಿತಿಯ ಹುಟ್ಟು ಎಲ್ಲಿ? ಈ ಸ್ಟೇಟಸ್‍ನ ಹೊರಗೆ ಇನ್ನಾವುದೋ ಆತನನ್ನು ಹಾಗೆ ತಯಾರುಗೊಳಿಸಿದೆ ಎಂದೇ ಅದರರ್ಥವಲ್ಲವೇ? ನಿಜವಾಗಿ, ಈ ಸ್ಟೇಟಸ್ ಒಂದು ನೆಪ ಮಾತ್ರ. ಅದಕ್ಕಿಂತ ಮೊದಲೇ ಅವರನ್ನು ಹಾಗೆ ಕೆರಳಿಸಿ ಅದಕ್ಕೆ ಸಿದ್ಧಗೊಳಿಸಲಾಗಿದೆ. ಝಾಕಿರ್ ನಾಯ್ಕ್ ರ ಮೇಲಿನ ಆರೋಪಗಳ ಸ್ಥಿತಿಯೂ ಇದುವೇ ಆಗಿದೆಯೇ? ಅವರ ಮೇಲೆ ಹೊರಿಸಲಾಗಿರುವ ಆರೋಪಗಳು ಎಷ್ಟು ತರ್ಕಬದ್ಧ? ಢಾಕಾದ ಹೋಲಿ ಆರ್ಟಿಸನ್ ಬೇಕರಿ ಮೇಲಿನ ದಾಳಿಯಲ್ಲಿ ಭಾಗಿಯಾದ ರೋಹನ್ ಇಮ್ತಿಯಾಝ್ ಮತ್ತು ನಿಬ್ರಸ್ ಇಸ್ಲಾಮ್‍ರು ಝಾಕಿರ್ ನಾಯ್ಕ್ ರ ಅಭಿಮಾನಿಗಳಾಗಿದ್ದರು ಎಂಬುದು ಝಾಕಿರ್ ನಾಯ್ಕ್ ರನ್ನು ಭಯೋತ್ಪಾದಕ ಗುರು ಆಗಿಸಬಲ್ಲುದೆ? ಹಾಗಂತ ಅವರು ಝಾಕಿರ್ ನಾಯ್ಕ್ ರನ್ನು ಮಾತ್ರವಲ್ಲ, ಅಂಜುಮನ್ ಚೌಧರಿ ಮತ್ತು ಮೆಹ್ದಿ ಬಿಸ್ವಾಸ್‍ರನ್ನೂ ಫಾಲೋ (ಅನುಯಾಯಿ) ಮಾಡುತ್ತಿದ್ದರು. ಝಾಕಿರ್ ನಾಯ್ಕ್ ರನ್ನು ಉಲ್ಲೇ ಖಿಸಿ ಕಳೆದ ವರ್ಷ ರೋಹನ್ ಇಮ್ತಿಯಾಝ್ ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಹಾಕಿದ್ದ ಎಂದು ಜೂನ್ 27ರಂದು ಬಾಂಗ್ಲಾ ದೇಶದ ಇಂಗ್ಲಿಷ್ ದಿನಪತ್ರಿಕೆ ದಿ ಡೈಲಿ ಸ್ಟಾರ್ ಹೇಳಿಕೊಂಡಿತ್ತು. (ಇದೀಗ ಪತ್ರಿಕೆ ತನ್ನ ಹೇಳಿಕೆಯಿಂದ ಹಿಂದೆ ಸರಿದಿದೆ) ಸದ್ಯ ಝಾಕಿರ್ ನಾಯ್ಕ್ ರನ್ನು ಭಯೋತ್ಪಾದಕರನ್ನಾಗಿಸಿದ್ದು ಇದೇ ಒಂದು ಪೋಸ್ಟ್. ನಿಜವಾಗಿ, ರೋಹನ್ ಫುಟ್ಬಾಲ್ ಅನ್ನು ಇಷ್ಟಪಟ್ಟಿದ್ದ. ಆಡುತ್ತಿದ್ದ. 18 ವರ್ಷದ ಮುಬಶ್ಶಿರ್ ಎಂಬ ಇನ್ನೋರ್ವ ದಾಳಿಕೋರನಂತೂ ಗಿಟಾರ್ ಪ್ರಿಯ. ಝಾಕಿರ್ ನಾಯ್ಕ್ ರನ್ನು ಫಾಲೋ ಮಾಡಿದಂತೆಯೇ ಇವರಿಬ್ಬರೂ ಮೆಸ್ಸಿಯನ್ನೋ, ನೈಮರ್ ಅನ್ನೋ, ಸುಮಿತ್ ರಾಮಚಂದ್ರನ್, ಎಹ್ಸಾನ್ ನೂರಾನಿಯನ್ನೋ ಫಾಲೋ ಮಾಡಿರಬಹುದು. ದೆಹಲಿಯ ಸಿಖ್ಖ್ ಹತ್ಯಾಕಾಂಡದಲ್ಲಿ ಭಾಗಿಯಾ ದವರು, ಗುಜರಾತ್ ಹತ್ಯಾಕಾಂಡ, ಮುಝಫ್ಫರ್ ನಗರ್ ಗಲಭೆ, ಕೇರಳದ ತರುಣಿ ಜಿಶಾಳನ್ನು ಅತ್ಯಾಚಾರಗೈದ ಆಮಿರ್... ಎಲ್ಲರೂ ಯಾರ್ಯಾರದೋ ಫಾಲೋವರ್ ಆಗಿರಬಹುದು. ಅವರಲ್ಲಿ ಧರ್ಮಗುರುಗಳು, ಪರಮ ಪೂಜ್ಯರೂ ಇರಬಹುದು. ಹಾಗಂತ, ಅವರ ಕೃತ್ಯಕ್ಕೆ ಪರಮ ಪೂಜ್ಯರನ್ನು ಅಥವಾ ಧರ್ಮಗುರುಗಳನ್ನು ಹೊಣೆಯಾಗಿಸುವುದು ಎಷ್ಟು ಸರಿ? ಅಷ್ಟಕ್ಕೂ, ಝಾಕಿರ್ ನಾಯ್ಕ್ ರನ್ನು ಪರಮ ಪವಿತ್ರ ಎಂದು ಸಮರ್ಥಿಸುವುದು ಇಲ್ಲಿನ ಉದ್ದೇಶವಲ್ಲ. ನಾನವರ ಫಾಲೋವರೂ ಅಲ್ಲ. ಅವರ ಪ್ರವಚನ ಶೈಲಿಯ ಬಗ್ಗೆ ಭಿನ್ನಾಭಿಪ್ರಾಯಗಳು ನನ್ನಲ್ಲೂ ಇವೆ. ತೆರೆದ ವೇದಿಕೆಯಲ್ಲಿ ಅವರು ನಡೆಸುವ ಧರ್ಮಧೀಕ್ಷೆ, ನಾನು ಸರಿ- ನೀನು ತಪ್ಪು ಎಂಬುದನ್ನು ಸಾಬೀತುಪಡಿಸುವಲ್ಲಿ ಅವರು ತೋರುವ ಆತುರ ಮತ್ತು ಅಬ್ಬರ, ಧರ್ಮಗಳನ್ನು ಎದುರು-ಬದುರಾಗಿ ನಿಲ್ಲಿಸುವ ರೀತಿ-ನೀತಿ... ಇತ್ಯಾದಿ ಇತ್ಯಾದಿಗಳ ಕುರಿತಂತೆ ಖಂಡಿತ ಆಕ್ಷೇಪ ಇದೆ. “ಒಸಾಮ ಬಿನ್ ಲಾಡೆನ್ ಹೋರಾಡುತ್ತಿರುವುದು ಇಸ್ಲಾಮ್‍ನ ವೈರಿಗಳ ಜೊತೆ ಎಂದಾದರೆ ನಾನು ಆತನ ಜೊತೆಗಿದ್ದೇನೆ. ಜಗತ್ತಿನ ಅತಿ ದೊಡ್ಡ ಭಯೋತ್ಪಾದಕ ಅಮೇರಿಕವನ್ನು ಆತ ಭಯ ಪಡಿಸುವುದಾದರೆ ಆತನ ಜೊತೆ ನಾನಿದ್ದೇನೆ. ಆದರೆ ಆತ ಹಾಗೆಯೋ ಎಂಬುದು ನನಗೆ ಗೊತ್ತಿಲ್ಲ. ಬರೇ ಸುದ್ದಿಯ ಆಧಾರದಲ್ಲಿ ನಾನು ತೀರ್ಪು ನೀಡಲಾರೆ. ಮುಸ್ಲಿಮರಾದ ನೀವೂ ಆರೋಪಗಳನ್ನು ಸಾರಾಸಗಟು ನಂಬಬೇಡಿ. ಯಾರು ಕುರ್‍ಆನನ್ನು ಆಧಾರವಾಗಿ ಹಿಡಿದಿರುವರೋ ಅವರ ಜೊತೆ ನಾನಿದ್ದೇನೆ. ಇಡೀ ಜಗತ್ತೇ ಅವರ ವಿರುದ್ಧ ಇದ್ದರೂ ನಾನು ಅವರ ಜೊತೆ ಇದ್ದೇನೆ...” ಮುಂತಾದ ಅವರ ಮಾತುಗಳಲ್ಲಿ ಕ್ಷಣದ ಆವೇಶ ಇದೆ. ಬಾಲಿಶತನವೂ ಇದೆ. ಖ್ಯಾತ ಸಾಹಿತಿ ಖುಶ್ವಂತ್ ಸಿಂಗ್ ಹೇಳಿರುವಂತೆ, ಎಳಸುತನವೂ ಇದೆ. ಅದರಾಚೆಗೆ ಇಂಥ ಮಾತುಗಳಲ್ಲಿ ರೋಹನ್ ಇಮ್ತಿಯಾಝ್ ರಂತಹವರನ್ನು, ನ್ಯೂಯಾರ್ಕ್ ಸಬ್‍ವೇಗೆ ಆತ್ಮಹತ್ಯಾ ದಾಳಿ ನಡೆಸಲು ಯತ್ನಿಸಿದ ಅಫಘಾನ್ ಮೂಲದ ಅಮೇರಿಕನ್ ಪ್ರಜೆ ನಜೀಬುಲ್ಲಾ ಝಾದಿಯನ್ನು, 2006ರ ಮುಂಬೈ ಸರಣಿ ಬಾಂಬ್ ಸ್ಫೋಟದ ಆರೋಪಿ ರಾಹಿಲ್ ಶೇಖ್‍ನನ್ನು ಅಥವಾ ವಾರಗಳ ಹಿಂದೆ ಹೈದಾರಾಬಾದ್‍ನಲ್ಲಿ ಬಂಧನಕ್ಕೀಡಾದ ಮುಹಮ್ಮದ್ ಇಬ್ರಾಹೀಮ್ ಯಝ್ದಾನಿಯಂತಹವರನ್ನು ಪ್ರಚೋದಿಸುವಂತಹದ್ದು ಏನೂ ಇಲ್ಲ. ಅಷ್ಟಕ್ಕೂ, ಝಾಕಿರ್ ನಾಯ್ಕ್ ರಿಗೆ ವಿಶ್ವಾದ್ಯಂತ ಫಾಲೋವರ್ಸ್‍ಗಳನ್ನು ಗಿಟ್ಟಿಸಿಕೊಟ್ಟದ್ದು ಮತ್ತು ಅವರ ಪೀಸ್ TV ಗೆ 100 ಮಿಲಿಯನ್ ವೀಕ್ಷಕರು ದಕ್ಕಿದ್ದು ಅವರು ಒಸಾಮನ ಬಗ್ಗೆಯೋ ಅಮೇರಿಕ ಅಥವಾ ಇಸ್ರೇಲ್‍ನ ಕುರಿತೋ ಅಭಿಪ್ರಾಯ ಮಂಡಿಸುತ್ತಿರುವುದಕ್ಕಾಗಿ ಅಲ್ಲ. ಅಲ್ಲದೆ, ಕೇವಲ ಒಸಾಮ, ಅಬೂಬಕರ್ ಬಗ್ದಾದಿ, ಬುಶ್, ಬ್ಲೇರ್, ಸದ್ದಾಮ್, ಐಸಿಸ್‍ಗಳನ್ನೇ ಕೇಂದ್ರೀಯ ವಿಷಯವಾಗಿಸಿ ಅವರು ಕಾರ್ಯಕ್ರಮ ನಡೆಸಿದ್ದೂ ಬಹುತೇಕ ಇಲ್ಲವೇ ಇಲ್ಲ. ಜನರು ಅವರನ್ನು ಇಷ್ಟಪಡುವುದು ಮತ್ತು ಫಾಲೋ ಮಾಡುವುದು ಧರ್ಮಗಳನ್ನು ತುಲನಾತ್ಮಾಕವಾಗಿ ವಿಶ್ಲೇಷಿಸುವ ಅವರ ಜಾಣ್ಮೆಗಾಗಿ. ಆರ್ಟ್ ಆಫ್ ಲಿವಿಂಗ್‍ನ ರವಿ ಶಂಕರ್ ಗುರೂಜಿ ಸಹಿತ ಬೇರೆ ಬೇರೆ ಧರ್ಮಗಳ ವಿದ್ವಾಂಸರನ್ನು ಕರೆದು ಅವರು ನಡೆಸುವ ಚರ್ಚೆಯೇ ಅತ್ಯಂತ ಹೆಚ್ಚು ವೀಕ್ಷಣೆಗೆ ಒಳಗಾಗುತ್ತಿರುವುದು. ಅವರಲ್ಲಿ ಮಾತುಗಾರಿಕೆಯಿದೆ. ಅಚ್ಚರಿಗೆ ದೂಡುವ ಸ್ಮರಣ ಶಕ್ತಿಯಿದೆ. ಪಾಂಡಿತ್ಯವಿದೆ. ನಿಜವಾಗಿ, ಇಂಥ ಚರ್ಚೆಗಳ ನಡುವೆ ಒಸಾಮನೋ ಬ್ಲೇರೋ ಬಗ್ದಾದಿಯೋ ಬರುತ್ತಾರೆಯೇ ಹೊರತು ಅವರನ್ನೇ ಕೇಂದ್ರೀಕರಿಸಿ ಚರ್ಚೆಗಳು ನಡೆಯುವುದಿಲ್ಲ. ಒಂದಿಡೀ ಕಾರ್ಯಕ್ರಮದಲ್ಲಿ ಬಂದು ಹೋಗುವ ಸಣ್ಣ ಸಣ್ಣ ಉಲ್ಲೇಖವನ್ನು ಮಾತ್ರವೇ ತಮಗೆ ಬೇಕಾದಂತೆ ಮತ್ತು ಬೇಕಾದಷ್ಟೇ ಎತ್ತಿಕೊಂಡು ಇದುವೇ ರೋಹನ್, ಕಫೀಲ್, ರಾಹಿಲ್‍ರನ್ನು ತಯಾರುಗೊಳಿಸಿದೆ ಅಂದರೆ ಅದು ಒಂದೋ ಅಲ್ಪಜ್ಞಾನ ಇಲ್ಲವೇ ಪೂರ್ವಗ್ರಹ ಅಥವಾ ದ್ವೇಷ ಎಂದು ಕರೆಯಲ್ಪಡಬಹುದೇ ಹೊರತು ಇನ್ನೇನೂ ಅಲ್ಲ. ಅವರ ಅಭಿಮಾನಿಗಳ ಪಟ್ಟಿಯಲ್ಲಿ ಮಲೇಶ್ಯಾದ ಉಪ ಪ್ರಧಾನಿ ದಾತುಕ್ ಸೆರಿ ಅವರ ಹೆಸರೂ ಇದೆ. ಇತ್ತೀಚೆಗೆ ಲಂಡನ್‍ನ ಮೇಯರ್ ಆಗಿ ಆಯ್ಕೆಯಾದ ಸಾದಿಕ್ ಖಾನ್‍ರ ಗೆಳೆಯ ಫಾರೂಕ್ ಶೇಖ್‍ರು 1,50,000 ಪೌಂಡ್ ಮೊತ್ತವನ್ನು ಝಾಕಿರ್ ನಾಯ್ಕ್ ರ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್‍ಗೆ ದೇಣಿಗೆಯಾಗಿ ನೀಡಿದ್ದಾರೆ. ಅಲ್ಲದೇ, ಸಾದಿಕ್ ಖಾನ್‍ರ ಚುನಾವಣಾ ಪ್ರಚಾರಕ್ಕಾಗಿ ಇವರು 15,000 ಪೌಂಡ್ ಮೊತ್ತವನ್ನು ನೀಡಿದ್ದಾರೆ. ಮಾತ್ರವಲ್ಲ, ಪ್ರಿನ್ಸ್ ಚಾರ್ಲ್ಸ್  ಅವರ ಎರಡು ಚಾರಿಟಿ ಸಂಸ್ಥೆಗಳಿಗೂ ಇವರು ಅಪಾರ ಮೊತ್ತವನ್ನು ದೇಣಿಗೆಯಾಗಿ ನೀಡಿದ್ದಾರೆ. ಇದೇವೇಳೆ, ಮೂರು ತಿಂಗಳ ಹಿಂದೆ ಮಲೇಶ್ಯಾದಲ್ಲಿ ನಡೆದ ಝಾಕಿರ್ ನಾಯ್ಕ್‍ರ ಕಾರ್ಯಕ್ರಮಕ್ಕೆ ಅಲ್ಲಿನ ಹಿಂದೂಗಳ ಒಂದು ಗುಂಪು ಆಕ್ಷೇಪ ಎತ್ತಿರುವುದನ್ನೂ ಇಲ್ಲಿ ಉಲ್ಲೇಖಿಸಬೇಕು. ಆದರೆ ಈ ಆಕ್ಷೇಪಕ್ಕೆ ಕಾರಣ, ಅವರು ಭಯೋತ್ಪಾದನೆಯನ್ನು ಪ್ರಚೋದಿಸುತ್ತಾರೆ ಎಂಬುದಾಗಿರಲಿಲ್ಲ. ಬದಲು ಅವರು ಹಿಂದೂ ಧರ್ಮವನ್ನು ಅವಮಾನಿಸುತ್ತಾರೆ ಎಂಬುದಾಗಿತ್ತು. ಝಾಕಿರ್ ನಾಯ್ಕ್ ರ ಬಗ್ಗೆ ಮಾತಾಡುವಾಗ ಅವರ ಪರ ಮತ್ತು ವಿರುದ್ಧದ ಇವು ಮತ್ತು ಇಂಥ ಭಿನ್ನ ನಿಲುವುಗಳನ್ನು ಎದುರಿಟ್ಟುಕೊಂಡು ಪ್ರಾಮಾಣಿಕವಾಗಿ ವಿಶ್ಲೇಷಣೆ ನಡೆಸಬೇಕೇ ಹೊರತು, ಬರೇ ವಿರೋಧಿ ಅಭಿಪ್ರಾಯವನ್ನೇ ಉಬ್ಬಿಸಿ, ವೈಭವೀಕರಿಸಿ ಇದಮಿತ್ಥಂ ಎಂದು ತೀರ್ಪು ನೀಡುವುದು ಅತ್ಯಂತ ಅಸಂಬದ್ಧವಾದುದು. ಇದು ಅನೈತಿಕ ಮತ್ತು ಅಸಮರ್ಥನೀಯ.
 ನಿಜ, ಝಾಕಿರ್ ನಾಯ್ಕ್ ಟೀಕಾತೀತರೇನೂ ಅಲ್ಲ. ಅವರನ್ನು ಮತ್ತು ಅವರ ಪ್ರವಚನ ಶೈಲಿಯನ್ನು ಟೀಕಿಸುವುದೆಂದರೆ ಪವಿತ್ರ ಕುರ್‍ಆನನ್ನು ಟೀಕಿಸಿದಂತೆಯೂ ಅಲ್ಲ. ಪೀಸ್ ಟಿವಿಯಲ್ಲಿ ಪ್ರವಚನ ನೀಡುವ ಕೆನಡದ ಡಾ| ಬಿಲಾಲ್ ಫಿಲಿಪ್, ಅಮೇರಿಕದ ಯಾಸಿರ್ ಫಝಗ, ಬ್ರಿಟನ್ನಿನ ಅಬ್ದುರ್ರಹೀಮ್ ಗ್ರೀನ್, ಮಲೇಶ್ಯಾದ ಹುಸೈನ್, ಸುಡಾನಿನ ಜಾಫರ್ ಇದ್ರಿಸ್, ಯುಎಇಯ ಸಲೀಮ್ ಅಲ್ ಅಮ್ರಿ, ಪಾಕಿಸ್ತಾನದ ಇಸ್ರಾರ್ ಅಹ್ಮದ್, ಅಹ್ಮದ್ ದೀದಾತ್... ಮುಂತಾದವರಲ್ಲಿ ಅವರು ಓರ್ವರೇ ಹೊರತು ಅವರನ್ನು ಅತಿಮಾನುಷರಂತೆ ಬಿಂಬಿಸಬೇಕಾದ ಯಾವ ಅಗತ್ಯವೂ ಇಲ್ಲ. ಜುಲೈ 5 ರಂದು, ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, ಭಯೋತ್ಪಾದನೆಯ ಬಗ್ಗೆ ತನ್ನ ನಿಲುವೇನು ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ‘ನ್ಯೂಸ್ 18’ ಚಾನೆಲ್‍ಗೆ ನೀಡಿದ ಸಂದರ್ಶನದಲ್ಲಿ, “ಮಾಧ್ಯಮಗಳು ತಿರುಚಿದ ವೀಡಿಯೋಗಳನ್ನು ಪ್ರಸಾರ ಮಾಡುತ್ತಿವೆ..” ಎಂದೂ ಹೇಳಿದ್ದಾರೆ. “ಪೊಲೀಸರನ್ನು ಕಂಡರೆ ಕಳ್ಳ ಹೇಗೆ ಭಯಪಡುತ್ತಾನೋ ಹಾಗೆಯೇ ಮುಸ್ಲಿಮರನ್ನು ಕಂಡರೆ ಸಮಾಜ ವಿರೋಧಿಗಳು ಭಯಪಡಬೇಕು.. ಎಂದಿರುವುದನ್ನುEvery Muslim should be a Terrorist ಎಂದು ಮಾಧ್ಯಮಗಳು ತಿರುಚಿವೆ” ಎಂದೂ ಹೇಳಿದ್ದಾರೆ. ಅಷ್ಟಕ್ಕೂ, ತಿರುಚಿದ ವೀಡಿಯೋವನ್ನು ಹಿಡಿದು ಕನ್ನಯ್ಯ ಕುಮಾರ್‍ನನ್ನು ದೇಶದ್ರೋಹಿಯಾಗಿಸಿದ ಟೈಮ್ಸ್ ನೌನಂಥ ಚಾನೆಲ್‍ಗಳಿಗೆ ಝಾಕಿರ್ ನಾಯ್ಕ್‍ರನ್ನು ಭಯೋತ್ಪಾದಕ ಆಗಿಸುವುದು ಕಷ್ಟವೇನೂ ಅಲ್ಲವಲ್ಲ.
 ಸದ್ಯ ಝಾಕಿರ್ ನಾಯ್ಕ್ ರು ಎರಡು ಉಗ್ರ ನಿಲುವುಗಳ ನಡುವೆ ಸಿಲುಕಿಕೊಂಡಿದ್ದಾರೆ. ಅವರನ್ನು ಭಯೋತ್ಪಾದಕ ಪ್ರವಚನಕಾರ ಎಂದು ಮುದ್ರೆಯೊತ್ತಲು ಮತ್ತು ಅವರನ್ನು ಭಾರತಕ್ಕೆ ಕಾಲಿಡದಂತೆ ತಡೆಯಲು ಒಂದು ಗುಂಪು ಯತ್ನಿಸುತ್ತಿದ್ದರೆ ಇನ್ನೊಂದು ಗುಂಪು ಅವರ ಮಾತು-ಕೃತಿ ಎಲ್ಲವೂ ಪರಮ ಪವಿತ್ರ ಎಂದು ಸಮರ್ಥಿಸುವ ಉಮೇದಿನಲ್ಲಿದೆ. ಆದ್ದರಿಂದ, ಝಾಕಿರ್ ನಾಯ್ಕ್ ರನ್ನು ಸದ್ಯ ಈ ಎರಡು ಉಗ್ರಗಾಮಿತ್ವದ ನಡುವಿನ ಖಾಲಿ ಜಾಗದಲ್ಲಿ ತಂದು ನಾವು ಕೂರಿಸಬೇಕಿದೆ. ಅವರು ತನಿಖಾತೀತರೂ ಅಲ್ಲ, ತಪ್ಪನ್ನೇ ಮಾಡದ ಪ್ರವಾದಿಯೂ ಅಲ್ಲ. ಅವರ ಭಾಷೆಯಲ್ಲಿ, ಹೋಲಿಕೆಯ ಶೈಲಿಯಲ್ಲಿ, ವಿವಾದಿತ ವ್ಯಕ್ತಿಗಳನ್ನು ಸಮರ್ಥಿಸುವ ಅಥವಾ ವಿರೋಧಿಸುವ ರೀತಿ-ನೀತಿಯಲ್ಲಿ ಆಕ್ಷೇಪಗಳೆತ್ತುವವರನ್ನು ಸಾರಾಸಗಟು
              
ರೋಹನ್ ಇಮ್ತಿಯಾಝ್‍
ತಿರಸ್ಕರಿಸಬೇಕಿಲ್ಲ. ಹಾಗೆ ಮಾಡುವವರನ್ನು ಪವಿತ್ರ ಕುರ್‍ಆನಿನ ವಿರೋಧಿಗಳಾಗಿಯೋ, ಇಸ್ಲಾಮ್‍ನ ವೈರಿಗಳಾಗಿಯೋ ಪಟ್ಟ ಕಟ್ಟಬೇಕಾಗಿಯೂ ಇಲ್ಲ. ಪರ ಮತ್ತು ವಿರುದ್ಧ ವಾದಗಳು ಸಹಜ ಮತ್ತು ಅಷ್ಟೇ ಸ್ವಾಗತಾರ್ಹ. ಕೋಟ್ಯಂತರ ಮಂದಿ ವೀಕ್ಷಕರಿರುವ ವ್ಯಕ್ತಿತ್ವವೊಂದಕ್ಕೆ ಬರೇ ಸಮರ್ಥಕರಷ್ಟೇ ಇರಬೇಕು ಎಂಬ ಹಠ ಬಾಲಿಶತನದ್ದು. ಅವರ ಬಗ್ಗೆ ಚರ್ಚೆ ನಡೆಯಲಿ. ಅದೇ ವೇಳೆ, ಭಯೋತ್ಪಾದಕರ ಫೇಸ್‍ಬುಕ್ ಸ್ಟೇಟಸ್‍ನ ಆಧಾರದಲ್ಲಿ ಅವರನ್ನು ಅಪರಾಧಿ ಸ್ಥಾನದಲ್ಲಿ ಕೂರಿಸುವುದು ಎಷ್ಟು ಸರಿ ಎಂಬುದೂ ಈ ಚರ್ಚೆಯ ವ್ಯಾಪ್ತಿಗೆ ಒಳಪಡಲಿ. ದೇಶದ ನಿಷ್ಠಾವಂತ ಪ್ರಜೆಯಾಗಿರುವ, ಸಂವಿಧಾನವನ್ನು ಉಲ್ಲಂಘಿಸದ ಮತ್ತು ಯಾವ ಕ್ರಿಮಿನಲ್ ಕೃತ್ಯಗಳಲ್ಲೂ ಭಾಗಿಯಾಗದ ವ್ಯಕ್ತಿ ಯೋರ್ವನಿಗಿಂತ ಭಯೋತ್ಪಾದಕನ ಸ್ಟೇಟಸ್ ಮೇಲೆ ನಂಬಿಕೆಯಿಡುವುದು ನ್ಯಾಯಪೂರ್ಣವೋ ಹಾಸ್ಯಾಸ್ಪದವೋ ಎಂಬುದೂ ಚರ್ಚೆಗೊಳಗಾಗಲಿ. ಒಂದು ವೇಳೆ, ತನ್ನ ಪ್ರತಿ ಚಟುವಟಿಕೆಯನ್ನೂ ತೆರೆದ ವೇದಿಕೆಯಲ್ಲಿ ,ಎಲ್ಲರೆದುರೇ, ಬಹಿರಂಗವಾಗಿ ನಡೆಸುವ ಝಾಕಿರ್ ನಾಯ್ಕ್ ರಿಗಿಂತ ಆರೇಳು ತಿಂಗಳುಗಳ ಹಿಂದೆ ನಾಪತ್ತೆ ಯಾಗಿ ಮೊನ್ನೆ ಢಾಕಾದ ಆರ್ಟಿಸನ್ ಬೇಕರಿಯಲ್ಲಿ ಕೊಲೆಗಡುಕನಾಗಿ ದಿಢೀರ್ ಪತ್ತೆಯಾದ ರೋಹನ್ ಇಮ್ತಿಯಾಝ್‍ನೇ ಹೆಚ್ಚು ನಂಬಲರ್ಹ ಎಂಬುದೇ ಇದಕ್ಕೆ ಉತ್ತರವಾದರೆ, ಈ ಉತ್ತರ ಇನ್ನಷ್ಟು ಪ್ರಶ್ನೆಗಳಿಗೂ ಜನ್ಮಕೊಡುತ್ತದೆ. ಹಾಗಿದ್ದರೆ,
      ಕ್ರಿಯೆಗೆ ಪ್ರತಿಕ್ರಿಯೆ ಎಂದ ನರೇಂದ್ರ ಮೋದಿಯವರಿಗಿಂತ ಗುಜರಾತ್ ಹತ್ಯಾಕಾಂಡದ ಅಪರಾಧಿಗಳಲ್ಲಿ, ಅಖ್ಲಾಕ್ ಕುಟುಂಬಕ್ಕಿಂತ ಕೊಲೆಗಾರರಲ್ಲಿ, ನ್ಯಾಯಾಧೀಶರಿಗಿಂತ ಅಪರಾಧಿಗಳಲ್ಲಿ, ಪೊಲೀಸರಿಗಿಂತ ಕಳ್ಳರಲ್ಲಿ, ಅಶ್ವತಿಗಿಂತ ಆರೋಪಿ ವಿದ್ಯಾರ್ಥಿನಿಯರಲ್ಲಿ... ಹೆಚ್ಚು ನಂಬಿಕೆ ಇಡಬೇಕೆ? ಅವರ ಹೇಳಿಕೆಯನ್ನೇ ನ್ಯಾಯ ನಿರ್ಣಯಕ್ಕೆ ಆಧಾರವಾಗಿ ಪರಿಗಣಿಸಬೇಕೇ?

Friday, July 8, 2016

ಟ್ರಂಪ್, ಜಾನ್ಸನ್, ಹುಕುಂ ಸಿಂಗ್ ಮತ್ತು ಫ್ಯಾಕ್ಟ್ ಚೆಕ್

         ದಿ ಹಿಂದೂ
 ವಾಷಿಂಗ್ಟನ್ ಪೋಸ್ಟ್
 ಎಬಿಪಿ ನ್ಯೂಸ್
 ಮಿಲ್ಲಿ ಗಝೆಟ್
 ಮುಂತಾದ ಪತ್ರಿಕೆಗಳು ಮತ್ತು ನ್ಯೂಸ್ ಲ್ಯಾಂಡ್ರಿಯಂಥ ವೆಬ್ ಪತ್ರಿಕೆಗಳು ತಮ್ಮ ವಿಶಿಷ್ಟ ಪ್ರಯತ್ನಕ್ಕಾಗಿ ವಾರಗಳ ಹಿಂದೆ ಸಾರ್ವತ್ರಿಕ ಶ್ಲಾಘನೆಗೆ ಒಳಗಾದುವು. ಸತ್ಯದ ದೃಢೀಕರಣ (Fact check) ಎಂಬ ಹೆಸರಲ್ಲಿ ಅವು ನಡೆಸಿದ ಪ್ರಯತ್ನವನ್ನು ಅನೇಕರು ಮೆಚ್ಚಿಕೊಂಡರು. ಮಾಧ್ಯಮಗಳ ಜವಾಬ್ದಾರಿ, ಪಾರ ದರ್ಶಕತೆ, ನ್ಯಾಯನಿಷ್ಠೆ... ಮುಂತಾದುವುಗಳ ಕುರಿತಂತೆ ಸಾರ್ವ ಜನಿಕವಾಗಿ ಇರುವ ದೂರುಗಳ ಪ್ರಮಾಣವನ್ನು ತುಸುವಾದರೂ ತಗ್ಗಿಸುವುದಕ್ಕೆ ಇಂಥ ಪ್ರಯತ್ನಗಳು ಯಶಸ್ವಿಯಾದಾವು ಎಂದು ಅನೇಕರು ಕೊಂಡಾಡಿದರು.
 ‘ಉತ್ತರ ಪ್ರದೇಶದ ಕೈರಾನ ನಗರದ ಹಿಂದೂಗಳು ಬಲ ವಂತದ ವಲಸೆಗೆ ತುತ್ತಾಗಿದ್ದಾರೆ..’ ಎಂದು ಬಿಜೆಪಿ ಸಂಸದ ಹುಕುಂ ಸಿಂಗ್ ವಾರಗಳ ಹಿಂದೆ ಸುದ್ದಿ ಸ್ಫೋಟಿಸಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಈ ಹೇಳಿಕೆಯನ್ನು ಅತ್ಯಂತ ಮಹತ್ವಪೂರ್ಣ ಸುದ್ದಿಯಾಗಿ ಎತ್ತಿ ಹೇಳಿದ್ದರು. ಮುಸ್ಲಿಮರಿಂದಾಗಿ ಹಿಂದೂಗಳು ವಲಸೆ ಹೋಗಿದ್ದಾರೆ ಎಂಬ ಧಾಟಿಯಲ್ಲಿ ಅವರು ಮತ್ತು ಇನ್ನಷ್ಟು ಬಿಜೆಪಿ ನಾಯಕರು ಮಾತಾಡಿದ್ದರು. ಉತ್ತರ ಪ್ರದೇಶದಲ್ಲಿ 2017ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಈ ವಲಸೆಯನ್ನು ಪ್ರಮುಖ ಇಶ್ಯೂ ಆಗಿ ಎತ್ತಿಕೊಳ್ಳುವ ಎಲ್ಲ ಸೂಚನೆಯನ್ನೂ ಬಿಜೆಪಿ ನೀಡತೊಡಗಿತು. ಈ ನಡುವೆ ಕೈರಾನದಿಂದ ವಲಸೆ ಹೋದ 346ರಷ್ಟು ಹಿಂದೂ ಕುಟುಂಬಗಳ ಹೆಸರು ಮತ್ತು ವಿಳಾಸವನ್ನು ಹುಕುಂ ಸಿಂಗ್ ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದರು. ಹುಕುಂ ಸಿಂಗ್‍ರ ಈ ಮಾಹಿತಿಯನ್ನೇ ಅಧಿಕೃತ ಮತ್ತು ಅಂತಿಮ ಸತ್ಯವೆಂದು ನಂಬಿ ಚರ್ಚೆಗಳೂ ಆರಂಭವಾದುವು. ಪತ್ರಿಕೆಗಳಲ್ಲಿ ವಿಶ್ಲೇಷಣೆಗಳೂ ನಡೆದುವು. ಇದೇ ವೇಳೆ, ದಿ ಹಿಂದೂ ಪತ್ರಿಕೆಯು ಸತ್ಯದ ದೃಢೀಕರಣಕ್ಕೆ(Fact check) ಮುಂದಾಯಿತು. ಅದು ತನ್ನ ವರದಿಗಾರರನ್ನು ಕೈರಾನಾಕ್ಕೆ ಕಳುಹಿಸಿ ಸತ್ಯದ ಬೆನ್ನಟ್ಟಿತು. ಮಾತ್ರವಲ್ಲ, ಜೂನ್ 14ರಂದು, ‘MPs claim of ಫೊರ್ಸ್ಡ್ migration disputed’ ಎಂಬ ಶೀರ್ಷಿಕೆಯಲ್ಲಿ ವರದಿಯನ್ನು ಪ್ರಕಟಿಸಿತು. ಹುಕುಂ ಸಿಂಗ್ ಬಿಡುಗಡೆಗೊಳಿಸಿದ ಪಟ್ಟಿಯಲ್ಲಿರುವವರು ಈಗಲೂ ಕೈರಾನದಲ್ಲೇ ವಾಸಿಸುತ್ತಿರುವುದನ್ನು ದಾಖಲೆ ಸಮೇತ ಓದುಗರ ಮುಂದಿಟ್ಟಿತು. ಜೂನ್ 16ರಂದು A heart warming truth in the heap of lies about exodes’ ಎಂಬ ಶೀರ್ಷಿಕೆಯಲ್ಲಿ ಇನ್ನೊಂದು ಸುದ್ದಿಯನ್ನು ಪ್ರಕಟಿಸಿತು. ಕೈರಾನಾದ ಹಿಂದೂ-ಮುಸ್ಲಿಮ್ ಧರ್ಮಗುರುಗಳು ಒಟ್ಟಾಗಿ ಮೆರವಣಿಗೆ ನಡೆಸಿದುದನ್ನೂ ‘ಬಲ ವಂತದ ವಲಸೆ’ ಎಂಬ ವಾದದ ಪರಮ ಸುಳ್ಳನ್ನೂ ಅದು ತೆರೆದಿಟ್ಟಿತು. ಇಷ್ಟಿದ್ದೂ, ಬಿಜೆಪಿ ಮತ್ತೆ ಅದೇ ಹಳೆಯ ಸುಳ್ಳಿಯ ಮೇಲೆಯೇ ಇನ್ನೂ ವಿಶ್ವಾಸವಿಟ್ಟಿರುವುದನ್ನು ಖಂಡಿಸಿ ಜೂನ್ 17ರಂದು ಇನ್ನೊಂದು ವರದಿಯನ್ನೂ ಪ್ರಕಟಿಸಿತು. ‘ಬಲವಂತದ ವಲಸೆಯು ಸುಳ್ಳು ಎಂದು ಅಧಿಕೃತವಾಗಿ ಸಾಬೀತಾದ ಬಳಿಕವೂ ಸುಳ್ಳಿನ ಮೇಲೆ ದೃಢವಾಗಿ ನಿಂತ ಬಿಜೆಪಿ..’ ಎಂಬ ನಿಖರ ಶೀರ್ಷಿಕೆಯನ್ನು ಆ ವರದಿಗೆ ಅದು ನೀಡಿತ್ತು. ಇದೇ ವೇಳೆ ಮಿಲ್ಲಿ ಗಝೆಟ್ ಪತ್ರಿಕೆಯು ಎರಡು ವಾರಗಳ ತನಕ ಕೈರಾನದಲ್ಲಿ ಸುತ್ತಾಡಿ ಸತ್ಯವನ್ನು ತೆರೆದಿಡಲು ಪ್ರಯತ್ನಿಸಿದ್ದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.
 ನಿಜವಾಗಿ, ಸತ್ಯದ ದೃಢೀಕರಣ ಎಂಬುದು ವಿದೇಶಿ ಪತ್ರಿಕಾ ಓದುಗರ ಪಾಲಿಗೆ ತೀರಾ ಹೊಸತಲ್ಲ. ಈ ಮೊದಲು ಲಂಡನ್ನಿನ ಗಾರ್ಡಿಯನ್ ಪತ್ರಿಕೆ ತನ್ನದೇ ವರದಿಗಾರನ ಬಗ್ಗೆ ಸತ್ಯಶೋಧನಾ ತಂಡವನ್ನು ರಚಿಸಿತ್ತು. ಎರಡು ವಾರಗಳ ಹಿಂದೆ ಬಿಬಿಸಿ ಇಂಥ ದ್ದೊಂದು ಪ್ರಯತ್ನ ನಡೆಸಿತು. ಯುರೋಪಿಯನ್ ಯೂನಿಯನ್ ನಿಂದ (ಇ.ಯು.) ಬ್ರಿಟನ್ ಹೊರ ಬರಬೇಕೋ ಬೇಡವೋ ಎಂಬ ವಿಷಯದಲ್ಲಿ ಅಲ್ಲಿ ನಡೆಯುತ್ತಿದ್ದ ತುರುಸಿನ ಚರ್ಚೆಗಳು ಮತ್ತು ಪರ-ವಿರುದ್ಧ ವಾದಿಗಳ ಹೇಳಿಕೆಗಳು ಅತ್ಯಂತ ತಾರಕ ಮಟ್ಟದಲ್ಲಿದ್ದುವು. ಒಕ್ಕೂಟದಿಂದ ಬ್ರಿಟನ್ ಹೊರಬರಲಿ ಎಂದು ಒತ್ತಾಯಿಸುವ ‘ಲೀವ್ ಕ್ಯಾಂಪೇನ್’ ಎಂಬ ಹೆಸರಿನ ಚಳವಳಿಯು ಜನರನ್ನು ಆಕರ್ಷಿಸಲು ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿತ್ತು. ಅದರ ಪ್ರಮುಖ ನಾಯಕರಾದ ಬೋರಿಸ್ ಜಾನ್ಸನ್, ಆ್ಯಂಡ್ರೆ ಲೆಡ್ಸಂ, ಗಿಸೇಲಾ ಸ್ಟುವರ್ಟ್ ಮುಂತಾದವರು ಹೇಳಿಕೆಗಳ ಮೇಲೆ ಹೇಳಿಕೆಗಳನ್ನು ನೀಡುತ್ತಿದ್ದರು. ಇಂಥ ಸನ್ನಿವೇಶದಲ್ಲಿ ಇವರ ಹೇಳಿಕೆ ಗಳನ್ನು ದೃಢಪಡಿಸಿಕೊಳ್ಳುವ ಸಾಹಸಕ್ಕೆ ಬಿಬಿಸಿ ಮುಂದಾಯಿತು.
 ‘ಬಾಲ್ಕನ್‍ನಲ್ಲಿ ನಡೆಯುತ್ತಿದ್ದ ಯುದ್ಧ ಮತ್ತು ಸಾವುಗಳನ್ನು ತಪ್ಪಿಸುವ ಬದಲು ಅದರಿಂದ ದೂರ ನಿಂತ ಒಕ್ಕೂಟವಾಗಿದೆ ಯುರೋಪ್. ಆ ಯುದ್ಧದಲ್ಲಿ ಒಂದು ಬಿಲಿಯನ್ ಮಂದಿ ಸಾವಿಗೀಡಾಗಿದ್ದರು. ಯುರೋಪ್ ಒಕ್ಕೂಟ ಅತ್ಯಂತ ಸ್ವಾರ್ಥಿ..’ ಎಂಬರ್ಥದಲ್ಲಿ ಬೋರಿಸ್ ಜಾನ್ಸನ್ ಅವರು ವಾದಿಸಿದ್ದರು. ಅಂದಹಾಗೆ, ಬಾಲ್ಕನ್ ಎಂಬುದು ಯುಗೋಸ್ಲಾವಿಯಾ ಯುದ್ಧಕ್ಕೆ ಸಂಬಂಧಿಸಿ ಉಲ್ಲೇಖಿಸುವ ಹೆಸರು. 1990ರ ದಶಕದಲ್ಲಿ ನಾಲ್ಕು ವರ್ಷಗಳ ಕಾಲ ಯುಗೋಸ್ಲಾವಿಯಾದಲ್ಲಿ ನಡೆದ ಆಂತರಿಕ ಯುದ್ಧವು ಅತ್ಯಂತ ಭೀಕರವಾಗಿತ್ತು. ಪ್ರಥಮ ಜಾಗತಿಕ ಯುದ್ಧದ ಮೊದಲು ಯುಗೋಸ್ಲಾವಿಯ ಎಂಬ ಏಕರಾಷ್ಟ್ರ ಇರಲಿಲ್ಲ. ಅದು ಕಿಂಗ್‍ಡಂ ಆಫ್ ಸೆರ್ಬ್, ಕ್ರೋಟ್ಸ್ ಮತ್ತು ಸ್ಲೋವನ್ಸ್ ಆಗಿ ಗುರುತಿಸಿಕೊಂಡಿತ್ತು. 1929ರಲ್ಲಿ ಇವೆಲ್ಲವೂ ಯುಗೋಸ್ಲಾವಿಯಾ ಎಂಬ ಏಕರಾಷ್ಟ್ರದ ಹೆಸರಲ್ಲಿ ಒಕ್ಕೂಟವಾಗಿ ಬದಲಾಯಿತು. ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಯುಗೋಸ್ಲಾವಿಯಾದ ಕ್ರೋಟ್ಸ್‍ಗಳು ಜರ್ಮನಿಯ ನಾಝಿಗಳ ಪರ ನಿಂತಾಗ ಆಂತರಿಕ ಸಂಘರ್ಷ ಭುಗಿಲೆದ್ದಿತು. ಸೆರ್ಬ್ ಮತ್ತು ಇತರರನ್ನು ಯುಗೋ ಸ್ಲಾವಿಯಾದಿಂದ ಹೊರಹಾಕುವ ಉದ್ದೇಶದಿಂದ ಮಾಡಲಾದ ಈ ನಿರ್ಧಾರವು ಪರಸ್ಪರ ಶಸ್ತ್ರಾಸ್ತ್ರ ಹೋರಾಟಕ್ಕೆ ನಾಂದಿ ಹಾಡಿತ್ತು. ಬಳಿಕ ಜೋಸೆಫ್ ಟಿಟೋ ಎಂಬವರು ಯುಗೋಸ್ಲಾವಿಯಾವನ್ನು ಒಕ್ಕೂಟವಾಗಿ ಉಳಿಸಿಕೊಳ್ಳಲು ಮತ್ತೆ ಯಶಸ್ವಿಯಾದರು. ಆದರೆ ಸೋವಿಯತ್ ಯೂನಿಯನ್‍ನ ಪತನಾನಂತರ ಮತ್ತೊಮ್ಮೆ ಯುಗೋಸ್ಲಾವಿಯಾದಲ್ಲಿ ಭಿನ್ನಮತ ಸ್ಫೋಟಿಸಿತು. 1991ರಲ್ಲಿ ಯುಗೋಸ್ಲಾವಿಯದಿಂದ ಕ್ರೋಟ್ಸ್‍ಗಳು ಮತ್ತು ಸ್ಲೋವನ್‍ಗಳು ಸ್ವಾತಂತ್ರ್ಯ ಘೋಷಿಸಿದರು. ಆದರೆ ಇದನ್ನು ಸೆರ್ಬ್‍ಗಳು ವಿರೋ ಧಿಸಿದರು. ಇದು ಪೂರ್ಣ ಪ್ರಮಾಣದ ಯುದ್ಧಕ್ಕೆ ವೇದಿಕೆ ಒದಗಿಸಿತು. ಸುಮಾರು 10 ಸಾವಿರ ಮಂದಿ ಈ ಯುದ್ಧದಲ್ಲಿ ಸಾವಿಗೀಡಾದರು. ವಿಶ್ವಸಂಸ್ಥೆಯಿಂದ ಯುಗೋಸ್ಲಾವಿಯಾವನ್ನು ಹೊರಹಾಕಲಾಯಿತು. ಆದರೆ ಬೋರಿಸ್ ಜಾನ್ಸನ್ ಅವರು ಇಡೀ ಘಟನೆಗೆ ತೀರಾ ಸಂಕುಚಿತ ವ್ಯಾಖ್ಯಾನ ನೀಡಿದರಲ್ಲದೇ ಸಾವಿಗೀಡಾದವರ ಸಂಖ್ಯೆಯನ್ನು 10 ಸಾವಿರದ ಬದಲು 1 ಮಿಲಿಯನ್ ಎಂದು ಅತಿಯಾಗಿ ಉಬ್ಬಿಸಿ ಹೇಳಿದರು. ಬಿಬಿಸಿ ಅತ್ಯಂತ ಸವಿವರವಾಗಿ ಬಾಲ್ಕನ್ ವಿಷಯವನ್ನು ಜನರ ಮುಂದಿಟ್ಟಿತು. ಇದೇ ವೇಳೆ, ‘2025ರ ವೇಳೆಗೆ ಯುರೋಪಿಯನ್ ಒಕ್ಕೂಟದ ಎಲ್ಲ 28 ದೇಶಗಳ ಆದಾಯ ಮತ್ತು ರಾಜಕೀಯದ ಮೇಲಿನ ಹೊಣೆಗಾರಿಕೆಯನ್ನು ಒಕ್ಕೂಟವೇ ನೋಡಿಕೊಳ್ಳಲಿದೆ..’ ಎಂದು ಲೀವ್ ಕ್ಯಾಪೇನ್‍ನ ಇನ್ನೋರ್ವ ನಾಯಕ ಆ್ಯಂಡ್ರೆ ಲೆಡ್‍ಸಂ ಹೇಳಿರುವುದನ್ನು ಬಿಬಿಸಿ ಸತ್ಯ ದೃಢೀಕರಣಕ್ಕೆ ಒಳ ಪಡಿಸಿತು. ನಿಜವಾಗಿ, ಈ ಹೇಳಿಕೆ ಅಪ್ಪಟ ಸುಳ್ಳಾಗಿತ್ತು. ಯುರೋ ಝೋನ್ ರಾಷ್ಟ್ರಗಳ ನಡುವೆ ಒಂದು ಪ್ರಸ್ತಾಪವಾಗಿ ಈ ಅಭಿಪ್ರಾಯ ಇತ್ತೇ ಹೊರತು 28 ರಾಷ್ಟ್ರಗಳ ಯುರೋಪಿಯನ್ ಒಕ್ಕೂಟಕ್ಕೂ ಇದಕ್ಕೂ ಸಂಬಂಧವೇ ಇರಲಿಲ್ಲ. ಸತ್ಯದ ದೃಢೀಕರಣಕ್ಕೆ ಒಳಪಟ್ಟ ಇನ್ನೊಂದು ಹೇಳಿಕೆ ಯಾವುದೆಂದರೆ, ‘ಯುರೋಪಿಯನ್ ಯೂನಿಯನ್‍ಗೆ ಬ್ರಿಟನ್ ನೀಡುವ 1.9 ಬಿಲಿಯನ್ ಪೌಂಡ್ ಮೊತ್ತವನ್ನು ಕೇವಲ ಟರ್ಕಿಯ ಅಭಿವೃದ್ಧಿಗೆ ಬಳಸಲಾಗುತ್ತಿದೆ’ ಎಂಬುದು. ಇದನ್ನು ಹೇಳಿದ್ದು ‘ಲೀವ್ ಕ್ಯಾಂಪೇನ್’ನ ಮತ್ತೋರ್ವ ನಾಯಕ ಗೀಸೆಲಾ ಸ್ಟುವರ್ಟ್. ನಿಜ ಏನೆಂದರೆ, 2014ರಿಂದ 2020ರ ನಡುವೆ ಯುರೋಪಿಯನ್ ಯೂನಿಯನ್‍ಗೆ ಬ್ರಿಟನ್ 1.2 ಬಿಲಿಯನ್ ಪೌಂಡನ್ನು ಕೊಡಬೇಕಾಗಿದೆ. ಅದನ್ನು ಅಲ್ಬೇನಿಯಾ, ಮೆಸಡೋನಿಯಾ, ಮಾಂಟನಿಗ್ರೋ, ಸೆರ್ಬಿಯ, ಟರ್ಕಿ, ಬೋಸ್ನಿಯಾ, ಹರ್ಝಗೋವಿನಾ ಮತ್ತು ಕೊಸೋವೊ ಎಂಬ 7 ರಾಷ್ಟ್ರಗಳ ರಾಜಕೀಯ ಮತ್ತು ಆರ್ಥಿಕ ಸುಧಾರಣೆಗಾಗಿ ಬಳಸಲಾಗುತ್ತದೆ.
 ಇದೇ ವೇಳೆ ಅಮೇರಿಕದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳನ್ನು ಸತ್ಯ ದೃಢೀಕರಣಕ್ಕೆ ಒಳಪಡಿಸುವ ಶ್ರಮವನ್ನು ಅಮೇರಿಕದ ವಾಷಿಂಗ್ಟನ್ ಪೋಸ್ಟ್ ಕೈಗೊಂಡಿತು. ‘ಹಿಲರಿ ಕ್ಲಿಂಟನ್ ಅವರು ಅಮೇರಿಕದ ರಾಜ್ಯ ಕಾರ್ಯದರ್ಶಿ ಯಾಗಿದ್ದ ಸಂದರ್ಭದಲ್ಲಿ ಬ್ರೂನಿ ಸರಕಾರದಿಂದ 58 ಸಾವಿರ ಡಾಲರ್ ಮೊತ್ತದ ಜ್ಯುವೆಲ್ಲರಿ ಮತ್ತು ತಮ್ಮ ಸಂಸ್ಥೆಗಾಗಿ ಮಿಲಿಯಾಂತರ ಡಾಲರ್ ಅನ್ನು ಪಡೆದುಕೊಂಡಿದ್ದಾರೆ..’ ಎಂದವರು ಆರೋಪಿಸಿದ್ದರು. ಅಂದಹಾಗೆ, ವಾಷಿಂಗ್ಟನ್ ಪೋಸ್ಟ್ ನ ಸತ್ಯಶೋಧನೆಯಲ್ಲಿ ಇದು ತಿರುಚಿದ ಮತ್ತು ತಪ್ಪು ಸಂದೇಶ ರವಾನಿಸುವ ಹೇಳಿಕೆ ಎಂಬುದು ಸಾಬೀತಾಯಿತು. ಹಿಲರಿ ಕ್ಲಿಂಟನ್ ಅವರು ಒಂದು ಡೈಮಂಡ್ ನೆಕ್ಲೆಸ್, ಒಂದು ನೀಲ ರತ್ನ ಮತ್ತು ಚಿನ್ನವನ್ನು ಉಡುಗೊರೆಯಾಗಿ ಸ್ವೀಕರಿಸಿದ್ದು ನಿಜ. ಆದರೆ ಅದು ಸರಕಾರದಿಂದ ಅಲ್ಲ, ಬ್ರೂನಿಯ ರಾಣಿಯಿಂದ. ಅಮೇರಿಕದ ಆಡಳಿತಾತ್ಮಕ ನೀತಿಯ ಪ್ರಕಾರವೇ ಅವರು ಆ ಕೊಡುಗೆಯನ್ನು ಸ್ವೀಕರಿಸಿದ್ದರು ಮತ್ತು ಅವುಗಳನ್ನು ಸರಕಾರಕ್ಕೆ ಸಲ್ಲಿಸಿದ್ದರು. ಟ್ರಂಪ್ ಈ ಸತ್ಯವನ್ನು ಹೇಳಿರಲಿಲ್ಲ. ಜನರನ್ನು ಗೊಂದಲಕ್ಕೆ ಸಿಲುಕಿಸುವ ಈ ಮಾತಿನ ಧಾಟಿಯನ್ನು ವಾಷಿಂಗ್ಟನ್ ಪೋಸ್ಟ್ ತನ್ನ ಫ್ಯಾಕ್ಟ್ ಚೆಕ್ ವಿಧಾನದ ಮೂಲಕ ಖಂಡಿಸಿತು. ಇದಲ್ಲದೇ, ಇದೇ ಬಗೆಯ ಸತ್ಯ ದೃಢೀಕರಣ ಪ್ರಕ್ರಿಯೆಗೆ ಕಳೆದವಾರ ನ್ಯೂಸ್‍ಲ್ಯಾಂಡ್ರಿ ಎಂಬ ವೆಬ್ ಪತ್ರಿಕೆಯು ಕೈಹಾಕಿತು. ಟೈಮ್ಸ್ ನೌ ನ್ಯೂಸ್ ಚಾನೆಲ್‍ನಲ್ಲಿ ಪ್ರಸಾರವಾದ ಪ್ರಧಾನಿ ನರೇಂದ್ರ ಮೋದಿಯವರ ಸಂದರ್ಶನವನ್ನು ಅದು ಸತ್ಯ ದೃಢೀಕರಣಕ್ಕೆ ಒಳಪಡಿಸಿತು. ಅರ್ನಾಬ್ ಗೋಸ್ವಾಮಿಯವರ ಪ್ರಶ್ನೆಗೆ ನರೇಂದ್ರ ಮೋದಿಯವರು ನೀಡಿರುವ ಉತ್ತರಗಳನ್ನು ಅದು ಅವರದೇ ಈ ಹಿಂದಿನ ಹೇಳಿಕೆಗಳೊಂದಿಗೆ ಹೋಲಿಸಿ ತಪ್ಪುಗಳನ್ನು ಪತ್ತೆ ಹಚ್ಚಿತು. ಎಬಿಪಿ ನ್ಯೂಸ್ ಅಂತೂ ಸೋಶಿಯಲ್ ಮೀಡಿಯಾಗಳಲ್ಲಿ ಬರುವ ಸುದ್ದಿಗಳ ಬಗ್ಗೆ ಸತ್ಯ ದೃಢೀಕರಣದ ಹೊಸ ಪ್ರಯತ್ನಕ್ಕೆ ಮುಂದಾಯಿತು. ‘ವೈರಲ್ ಸಚ್’ ಡಾಟ್ ಕಾಮ್ ಎಂಬ ಹೆಸರಲ್ಲಿ ಅದು ಸರಣಿ ಪತ್ತೆ ಕಾರ್ಯವನ್ನು ನಡೆಸಿತು. ವಿಶೇಷ ಏನೆಂದರೆ, ಈ ಹಿಂದೆ ತಾನೇ ಪ್ರಕಟಿಸಿದ ಸುದ್ದಿಯೇ ಸುಳ್ಳೆಂಬುದು ಅದರ ಗಮನಕ್ಕೆ ಬಂತಲ್ಲದೇ ‘Vairal sach- Fact checker of ABP news itself become a lier’ ಎಂಬ ಶೀರ್ಷಿಕೆಯಲ್ಲಿ ಅದನ್ನು ಓದುಗರೊಂದಿಗೆ ಹಂಚಿಕೊಂಡಿತು. ‘ಅನಾರೋಗ್ಯಕ್ಕೀಡಾದ ನರೇಂದ್ರ ಮೋದಿಯವರ ತಾಯಿಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ..’ ಎಂಬ ಶೀರ್ಷಿಕೆಯಲ್ಲಿ ಚಿತ್ರಸಹಿತ ಅದು ಈ ಹಿಂದೆ ಸುದ್ದಿ ಪ್ರಕಟಿಸಿತ್ತು. ಆದರೆ ಅದು ನಿಜ ವಾಗಿರಲಿಲ್ಲ. ಪೋಟೋದಲ್ಲಿದ್ದ ವೃದ್ಧ ಮಹಿಳೆ ನರೇಂದ್ರ ಮೋದಿಯವರ ತಾಯಿಯೂ ಆಗಿರಲಿಲ್ಲ.
 ಮಾಧ್ಯಮಗಳ ಹೊಣೆಗಾರಿಕೆ ಮತ್ತು ಸತ್ಯದ ಮೇಲಿನ ಬದ್ಧತೆಯು ಸೋಶಿಯಲ್ ಮೀಡಿಯಾಗಳ ಮೂಲಕ ಪದೇ ಪದೇ ಫ್ಯಾಕ್ಟ್ ಚೆಕ್‍ಗೆ ಒಳಗಾಗುತ್ತಲೇ ಇದೆ. ಪತ್ರಿಕೆಗಳು ಈ ಹಿಂದೆಂದಿಗಿಂತಲೂ ಹೆಚ್ಚು ಜಾಗೃತವಾಗಿರಬೇಕಾದ ಸಂದರ್ಭ ಇದು. ಏನನ್ನೋ ಬರೆದು ದಕ್ಕಿಸಿಕೊಳ್ಳಬಹುದಾದ ಕಾಲ ಇದಲ್ಲ. ಪ್ರತಿಯೊಂದೂ ಪ್ರಶ್ನೆಗೊಳಗಾಗುತ್ತಿದೆ. ಪ್ರತಿಯೊಬ್ಬರೂ ಪ್ರಶ್ನೆ ಗೊಳಗಾಗುತ್ತಿದ್ದಾರೆ. ಸಂಪಾದಕ, ವರದಿಗಾರ, ಪತ್ರಕರ್ತ, ಮಾಲಿಕ, ಅಂಕಣಗಾರ.. ಎಲ್ಲರ ಮೇಲೂ ಅನುಮಾನದ ತೂಗುಗತ್ತಿ ಸದಾ ನೇತಾಡುತ್ತಿದೆ. ಆದ್ದರಿಂದ ಖಚಿತವಲ್ಲದ ಮತ್ತು ಪಕ್ಷಪಾತಿ ಯಾದ ಸುದ್ದಿಯ ಬಗ್ಗೆ ಪತ್ರಿಕೆಗಳು ಎಚ್ಚರ ವಹಿಸಬೇಕಾಗಿದೆ. ವಾಷಿಂಗ್ಟನ್ ಪೋಸ್ಟ್, ಬಿಬಿಸಿ, ಎಬಿಪಿ ನ್ಯೂಸ್‍ನಂತೆ ಸುದ್ದಿಯ ಸತ್ಯಾಸತ್ಯತೆಯನ್ನು ದೃಢೀಕರಿಸಿಕೊಳ್ಳುವ ಮತ್ತು ಅದನ್ನು ತಮ್ಮದೇ ಪತ್ರಿಕೆಯಲ್ಲಿ ಹೇಳಿಕೊಳ್ಳುವ ಪ್ರಾಮಾಣಿಕತೆಯನ್ನು ಪ್ರದರ್ಶಿಸಬೇಕಾಗಿದೆ. ಇಲ್ಲದಿದ್ದರೆ,
 ಓದುಗರೇ ಪತ್ರಿಕೆಗಳನ್ನು ‘ಫ್ಯಾಕ್ಟ್ ಚೆಕ್’ಗೆ ಒಳಪಡಿಸಿಯಾರು.