Monday, April 20, 2015

ದರ ನಿಗದಿಪಡಿಸಿ ತಿರುಗಾಡುವ ಯುವಕರೂ 'ರುಬೀನ'ರ 'ಸುಲ್ತಾನ'ರೂ


ಮಾಧ್ಯಮದ ಜೊತೆ ಮಾತಾಡುತ್ತಿರುವ ರುಬೀನ
     “ಅಕ್ಕಪಕ್ಕದ ಮನೆಯ ಹೆಣ್ಣು ಮಕ್ಕಳು 18 ತುಂಬುವಾಗಲೇ ಮದುವೆಯಾಗಿ ಹೊರಟು ಹೋಗುತ್ತಿದ್ದ ವಾತಾವರಣದ ಮಧ್ಯೆ ನನಗೆ 24 ತುಂಬಿತು. ತಂದೆ ಕೂಲಿ ಮಾಡುತ್ತಿದ್ದರು. ತಾಯಿ ಮೀನು ಮಾರುವವಳು. ಇವತ್ತಿನ ಮದುವೆ ಮಾರುಕಟ್ಟೆಯಲ್ಲಿ ಹೆಣ್ಣಿಗೆ ಮತ್ತು ಹೆಣ್ಣಿನ ಅಪ್ಪ-ಅಮ್ಮನಿಗೆ ಕೆಲವು ಅರ್ಹತೆಗಳು ಇರಲೇಬೇಕಾಗುತ್ತದಲ್ಲವೇ? ಹೆಣ್ಣು ಎಂಬ ಐಡೆಂಟಿಟಿಯೊಂದೇ ಓರ್ವಳು ಮದುಮಗಳಾಗುವುದಕ್ಕೆ ಸಾಕಾಗುವುದಿಲ್ಲವಲ್ಲ. ಹೆಣ್ಣಿನ ಬಗ್ಗೆ ಗಂಡಿನಲ್ಲಿ ಒಂದು ರೇಖಾಚಿತ್ರವಿರುತ್ತದೆ. ಆ ಚಿತ್ರಕ್ಕೆ ಹೆಣ್ಣು ತಾಳೆಯಾದರೆ ಮಾತ್ರವೇ ಆಕೆ ಮದುಮಗಳಾಗಲು ಸಾಧ್ಯ. ಹೀಗಿರುವಾಗ 9ನೇ ತರಗತಿಯಲ್ಲಿ ಕಲಿಕೆ ನಿಲ್ಲಿಸಿದ, ಬಣ್ಣದಲ್ಲೂ ಸೌಂದರ್ಯದಲ್ಲೂ ಸಿನಿಮಾ ತಾರೆಯರಿಗೆ ಹೋಲಿಕೆಯಾಗದ ಮತ್ತು ಮೀನು ಮಾರುವ ಬಡ ಕುಟುಂಬದ ಹೆಣ್ಣಾಗಿರುವ ನನಗೆ ಮದುವೆ ಪ್ರಸ್ತಾಪಗಳು ಬರುತ್ತವೆ ಎಂದು ನಿರೀಕ್ಷಿಸುವುದಕ್ಕೆ ಏನರ್ಥವಿರುತ್ತದೆ? ಹೀಗಿದ್ದೂ, ನನಗೆ 4 ಪ್ರಸ್ತಾಪಗಳು ಬಂದುವು. ಆದರೆ ಆ ನಾಲ್ವರೂ ನನ್ನನ್ನು ಮದುವೆಯಾಗಲು ಒಪ್ಪಿಕೊಳ್ಳಲಿಲ್ಲ. ಯಾಕೆಂದರೆ, ಅವರು ಕೇಳುವಷ್ಟು ವರದಕ್ಷಿಣೆ ಕೊಡಲು ನನ್ನ ಅಮ್ಮ-ಅಪ್ಪನಲ್ಲಿ ದುಡ್ಡಿರಲಿಲ್ಲ. ಅದರಲ್ಲೂ ನನ್ನ ಅಪ್ಪನಾದರೋ ಜವಾಬ್ದಾರಿ ರಹಿತ ವ್ಯಕ್ತಿ. ಹರೆಯದ ಮಗಳಿದ್ದಾಳೆ ಎಂಬುದನ್ನು ಮರೆತವರಂತೆ ಅವರು ವರ್ತಿಸುವರು. ಅಪ್ಪನ ಬಗ್ಗೆ ತಾಯಿಗೂ ತಕರಾರುಗಳಿದ್ದುವು. ನಾನು ತಂದೆಯವರೊಂದಿಗೆ ಈ ಬಗ್ಗೆ ಜಗಳಾಡಿದ್ದೆ. ‘ನನ್ನ ವಿವಾಹಕ್ಕೆ (ವರದಕ್ಷಿಣೆ) ಏನು ತಯಾರಿ ನಡೆಸಿದ್ದೀರಿ’ ಎಂದು ಧೈರ್ಯ ತಂದುಕೊಂಡು ಪ್ರಶ್ನಿಸಿದ್ದೆ. ತಂದೆಗೆ ಸಿಟ್ಟು ಬಂದಿತ್ತು. ನಿನ್ನ ಮದುವೆಗೆ ಚಿಕ್ಕಾಸನ್ನೂ ಖರ್ಚು ಮಾಡುವುದಿಲ್ಲವೆಂದು ಅವರು ಘರ್ಜಿಸಿದ್ದರು. ನಮ್ಮಲ್ಲಿ ಪುರುಷರು ಮಹಿಳೆಯರ ಅರ್ಧದಷ್ಟೂ ದುಡಿಯುವುದಿಲ್ಲ. ಅಲ್ಲದೆ, ಮಹಿಳೆಯಿಂದಲೇ ಅವರು ಖರ್ಚಿಗೆ ಕೇಳುವುದಿದೆ. ಇಂಥ ಸ್ಥಿತಿಯಲ್ಲಿ ತಂದೆಯೊಂದಿಗೆ ಜಗಳಾಡಿ ಪ್ರಯೋಜನವಾದರೂ ಏನಿರುತ್ತದೆ? ಮೀನು ಮಾರುವ ತಾಯಿಯಿದ್ದೂ ಉತ್ತಮ ಮೀನಿನ ರುಚಿ ಸವಿಯವ ಸಾಮರ್ಥ್ಯವಿಲ್ಲದ ನನಗೆ ಇನ್ನು ಇತರ ಹುಡುಗಿಯರಂತೆ ಅಂದವಾಗಿ ಡ್ರೆಸ್ಸು ಧರಿಸಿ ನಡೆದಾಡುವ ಅವಕಾಶ ಎಲ್ಲಿರುತ್ತದೆ..”
   ರುಬೀನಾ ಹೇಳುತ್ತಾ ಹೋಗುತಾರೆ,
     “ನಿನ್ನನ್ನು ಮದುವೆಯಾಗಲು ದೂರದಿಂದ ಸುಲ್ತಾನ್ ಬರುತ್ತಾನೆಂದು ಚಿಕ್ಕಂದಿನಲ್ಲಿ ತಾಯಿ ಹೇಳುತ್ತಿದ್ದರು. ಆದರೆ ಬೆಳೆದು ದೊಡ್ಡವಳಾದಾಗ ಆ ಮಾತು ಎಷ್ಟು ಅಸಂಭವ ಎಂಬುದು ನನಗೆ ಅರಿವಾಗತೊಡಗಿತು. ಸುಲ್ತಾನ್ ಬಿಡಿ ಓರ್ವ ಮೀನು ಮಾರುವವನಾದರೂ ಬರುತ್ತಿಲ್ಲವಲ್ಲ ಎಂದು ಅಮ್ಮ ಸಂಕಟ ಪಡುತ್ತಿದ್ದಳು. ಒಂದು ದಿನ ಅಪ್ಪನೊಂದಿಗೆ- ‘ರುಬೀನಾಳಿಗೆ ಸಂಬಂಧ ಹುಡುಕಿ’ ಅಂತ ಅಮ್ಮ ಹೇಳಿದ್ರು. ನಿನ್ನ ಕೈಯಲ್ಲಿ ವರದಕ್ಷಿಣೆಯ ದುಡ್ಡಿದ್ದರೆ ಹುಡುಕು ಅಂದರು ಅಪ್ಪ. ಹಾಗೆ ಹೋದ ಅಪ್ಪ ಮಧ್ಯಾಹ್ನದ ಹೊತ್ತಲ್ಲಿ ಮನೆಗೆ ಬಂದು ನೀರು ಕೇಳಿದ್ರು. ಅಡುಗೆ ತಯಾರಿಯಲ್ಲಿದ್ದ ನನಗದು ಕೇಳಿಸಲಿಲ್ಲ. ಸಿಟ್ಟಿನಿಂದ ಚೆನ್ನಾಗಿ ಬಾರಿಸಿದ್ರು. ನಾನು ಮೊದಲೇ ಕೃಶಕಾಯಿ. ಬವಳಿ ಬಂದು ಬಿದ್ದುಬಿಟ್ಟೆ. ಅಮ್ಮ ಮೀನು ಮಾರಿ ಬರುವಾಗ ನಾನಿನ್ನೂ ಮಲಗಿಯೇ ಇದ್ದೆ. ನನ್ನ ಮೈಯಲ್ಲಿರುವ ಬಾಸುಂಡೆಗಳನ್ನು ನೋಡಿ ಅವಳು ಕಣ್ಣೀರಿಳಿಸಿದಳು. ವಿಶೇಷ ಏನೆಂದರೆ, ಅದೇ ದಿನ ನಮ್ಮ ಮನೆಗೆ ನಸೀಮಾದ ಎಂಬ ಅತಿಥಿ ಬಂದರು. ತಾಯಿ ಅವರೊಂದಿಗೆ ಎಲ್ಲವನ್ನೂ ಹೇಳಿ ಕಣ್ಣೀರಿಳಿಸಿದಳು. ಒಂದು ವಿವಾಹ ಸಂಬಂಧ ತರುವಂತೆ ವಿನಂತಿಸಿದಳು. ವರದಕ್ಷಿಣೆಯಾಗಿ ಏನು ಕೊಡಬಲ್ಲೆ ಎಂಬುದು ಆಕೆಯ ಪ್ರಶ್ನೆ. ಅಮ್ಮ ತುಸು ಅಲುಗಾಡಿದಳು. ಕೊಡಲು ಅಮ್ಮನ ಬಳಿಯಿರುವುದು ಸುಸ್ಥಿತಿಯಲ್ಲಿರದ ಮೀನು ಬುಟ್ಟಿ ಮಾತ್ರ. ನಾನು ಅಮ್ಮನನ್ನೇ ನೋಡಿದೆ. ನನ್ನನ್ನು ಹೆತ್ತ ತಪ್ಪಿಗೆ ಆಕೆಯ ಕಣ್ಣು, ಕೆನ್ನೆ, ತುಟಿಗಳು ಅದುರುತ್ತಿವೆಯೇನೋ ಎಂದು ಸಂಕಟವಾಯಿತು. ಅಮ್ಮ ಹೇಳಿದಳು,
‘ಈಗ ಏನಿಲ್ಲ, ಆದರೆ 50 ಸಾವಿರ ರೂಪಾಯಿ ಮತ್ತು 3 ಪವನ್ ಚಿನ್ನ ವರದಕ್ಷಿಣೆಯಾಗಿ ಕೊಡಬಲ್ಲೆ. ಇದಕ್ಕೂ ಸಾಲ ಮಾಡಬೇಕಷ್ಟೇ. ಆದರೆ ನಾನು ಮೀನು ಮಾರಿ ಸಾಲವನ್ನು ಸಂದಾಯ ಮಾಡುವೆ.’
    ಹೀಗಿರುತ್ತಾ 2008 ಜೂನ್ 23ರಂದು ಪಕ್ಕದ ಮನೆಗೆ ನಸೀಮಾದರ ಫೋನ್ ಕರೆಬಂತು. ಹುಡುಗನನ್ನು ನೋಡಲು ಇಂತಿಂಥ ಜಾಗಕ್ಕೆ ಬನ್ನಿ ಎಂದು ಆಕೆ ಹೇಳಿದರು. ಅಮ್ಮ ಕರಕೊಂಡು ಹೋದರು. ವರದಕ್ಷಿಣೆಯ ಭಾರವನ್ನು ದೇಹವಿಡೀ ಹೊತ್ತು ಬಸವಳಿದ ತಾಯಿಯೊಂದಿಗೆ ಸುಲ್ತಾನ್‍ನ ಕನಸು ಕಾಣುತ್ತಾ ಹೋಗುವ ಹರೆಯದ ಮಗಳು! ನಾವೊಂದು ಮನೆಗೆ ಹೋದೆವು. ಅಲ್ಲಿ 48 ವರ್ಷದ ಹಸನ್ ಜಾಬಿರ್ ಎಂಬವನಿದ್ದ. ಅವನೇ ನನ್ನ ಸುಲ್ತಾನ್. ಮಾಲ್ದೀವ್ಸ್ ನವ. ಅವನನ್ನು ನೋಡಿದ ಕೂಡಲೇ ನನಗೆ ಭಯವಾಯಿತು. ನಸೀಮಾದ ಆತನ ಬಗ್ಗೆ ನನ್ನಲ್ಲಿ ಹೇಳತೊಡಗಿದರು- ವಯಸ್ಸೇನೂ ನಿಲ್ಲುವುದಿಲ್ವಲ್ಲ ರುಬೀನಾ. ಮುಂದಿನ ವರ್ಷ ನಿನಗೆ 25 ಆಗುತ್ತದೆ. ಹೆಣ್ಣಿನ ಪ್ರಾಯ ಎಂಬುದು ಗಂಡಿನ ಪ್ರಾಯದಂತೆ ಅಲ್ವಲ್ಲ? ನೋಡು, ನಮ್ಮ ಭಾಗ್ಯವು ನಮ್ಮನ್ನು ಹುಡುಕಿಕೊಂಡು ಬರುವುದು ಬದುಕಿನಲ್ಲಿ ಒಂದು ಬಾರಿ ಮಾತ್ರ. ಆ ಸಂದರ್ಭದಲ್ಲಿ ಆ ಭಾಗ್ಯವನ್ನು ನಾವು ಗಟ್ಟಿಯಾಗಿ ಹಿಡ್ಕೊಬೇಕು. ನಾವೆಲ್ಲ ಭಾಗ್ಯವನ್ನು ಹುಡುಕಿಕೊಂಡು ತಿರುಗಾಡಿದವರು ಮಗಳೇ. ಆದರೆ ಸಿಗಲಿಲ್ಲ. ನೀನು ಭಾಗ್ಯವಂತೆ. ವರನ ಬಗ್ಗೆ ನೀನೇನೂ ಚಿಂತಿಸಬೇಡ. ಈತ ದೊಡ್ಡ ವ್ಯಾಪಾರಿ. ನಾಲ್ಕೈದು ಮನೆಗಳಿವೆ. 3 ಅಂಗಡಿಗಳಿವೆ. ದುಡ್ಡು ಮಾಡುವ ಬ್ಯುಸಿಯಲ್ಲಿ ಮದುವೆಯನ್ನು ಮುಂದೂಡುತ್ತಾ ಹೋಗಿ ಹೋಗಿ ಈಗ ಒಪ್ಪಿಕೊಂಡಿದ್ದಾನೆ. ಈತನಿಗೆ ಪ್ರೀತಿಸಲಷ್ಟೇ ಗೊತ್ತು. ಪ್ರೀತಿಸುವವರಿಗಾಗಿ ಈತ ಹೃದಯನ್ನೇ ಸಿಗಿದು ಕೊಡುವಷ್ಟು ಉದಾರಿ. ಮಗಳೇ, ನಿನ್ನ ಮನೆಯವರ ಸಾಲವನ್ನು ಆತ ಸಂದಾಯ ಮಾಡಬಲ್ಲ. ವೃದ್ಧಾಪ್ಯದಲ್ಲಿ ನಿನ್ನ ಅಪ್ಪ-ಅಮ್ಮ ದುಡಿಯದಂತೆ ಸಾಕಬಲ್ಲ..’ ಹೀಗೆ ನಸೀಮಾದ ಹೇಳುತ್ತಾ ಹೋದಂತೆ ಆತ ನನ್ನ ಪಾಲಿನ ಸುಲ್ತಾನ್ ಆಗುತ್ತಲೇ ಹೋದ. ನಾನು ಒಪ್ಪಿಕೊಂಡೆ. ಆತ ತಾಯಿಗೆ 15 ಸಾವಿರ ರೂಪಾಯಿಯನ್ನು ಕೊಟ್ಟ. ಒಂದು ಬಗೆಯ ಖುಷಿ, ಆತಂಕಗಳೊಂದಿಗೆ ನಾನು ಗುಬ್ಬಚ್ಚಿಯಂತಾದೆ. ವರದಕ್ಷಿಣೆ ಕೊಡುವ ಸಾಮರ್ಥ್ಯವಿಲ್ಲದ ಹೆಣ್ಣು ಮಗಳೊಬ್ಬಳ ಮುಂದೆ ಇವುಗಳಲ್ಲದೆ ಬೇರೆ ಆಯ್ಕೆಗಳು ಏನಿರುತ್ತವೆ ಹೇಳಿ? ಈ ಪ್ರಸ್ತಾಪವನ್ನು ತಿರಸ್ಕರಿಸಬಹುದು. ಆದರೆ ಆ ತಿರಸ್ಕಾರವು ನನ್ನ ಅಮ್ಮ-ಅಪ್ಪನನ್ನು ಹೇಗೆಲ್ಲ ಕಾಡಬಹುದು? ಅವರ ಕಣ್ಣೀರಿಗೆ ಕಾರಣವಾಗುವ ತಿರಸ್ಕಾರಕ್ಕಿಂತ ಅವರನ್ನು ಸುಖವಾಗಿಡಬಲ್ಲ ಅಥವಾ ಕನಿಷ್ಠ ಭಾರವನ್ನು ಇಳಿಸಬಲ್ಲ ಒಪ್ಪಿಗೆಯೇ ಉತ್ತಮ ಅಲ್ಲವೇ? ನನ್ನ ಹರೆಯದ ಕನಸುಗಳಿಗೆ ಆತ ರೆಕ್ಕೆ ಜೋಡಿಸಬಲ್ಲ ಎಂಬ ನಿರೀಕ್ಷೆಯೊಂದಿಗೆ 2008 ಜೂನ್ 28ರಂದು ಒಂದು ಹೊಟೇಲಿನಲ್ಲಿ ಹಸನ್ ಜಾಬಿರ್‍ನೊಂದಿಗೆ ವಿವಾಹವಾದೆ. ಒಂದು ಉಂಗುರ ಮತ್ತು ಒಂದು ಪವನಿನ ಸರವನ್ನು ಆತ ಮಹರ್ ಆಗಿ ನೀಡಿದ. ಮದುವೆ ದಿನದಂದು ಆತ ನನ್ನ ತಾಯಿಗೆ ಮತ್ತೆ 15 ಸಾವಿರ ರೂಪಾಯಿಯನ್ನು ಕೊಟ್ಟ. ಅದರಿಂದ ನಸೀಮಾದ ಮತ್ತಿತರರು ತಮ್ಮ ಪಾಲನ್ನು ಪಡಕೊಂಡರು. ನನ್ನ ಮನಸ್ಸಿಗೆ ಆತನನ್ನು ಪದೇ ಪದೇ ಸುಲ್ತಾನ್ ಎಂದು ಹೇಳಿಕೊಟ್ಟೆ. ಆತನನ್ನು ಪತಿಯಾಗಿ ಒಪ್ಪಿಕೊಳ್ಳುವಂತೆ ಮನಸ್ಸನ್ನು ಸಿದ್ಧಪಡಿಸಿದೆ. ಆಯ್ಕೆಗಳೇ ಇಲ್ಲದ ಹೆಣ್ಣು ಮಗಳ ಮುಂದೆ ಮಾಲ್ದೀವ್ಸ್ ಆದರೂ, 48 ವರ್ಷವಾದರೂ, ಕೂದಲು ತುಸು ನೆರೆದಿದ್ದರೂ ಉತ್ತಮ ಆಯ್ಕೆಯೇ ತಾನೆ? ನಾನು ಮಾಲ್ದೀವ್ಸ್ ಗೆ ತೆರಳಬೇಕಾದರೆ ಪಾಸ್‍ಪೋರ್ಟ್‍ನ ವ್ಯವಸ್ಥೆ ಆಗಬೇಕಿತ್ತು. ಹಾಗೆ ಆಗಸ್ಟ್ 24ಕ್ಕೆ ಮಾಲ್ದೀವ್ಸ್ ಗೆ ತೆರಳಿದೆವು. ಮೊದಲು ಹೋದದ್ದು ಅವರ ಅಕ್ಕನ ಮನೆಗೆ. ಭಾಷೆ ಬೇರೆ. ಏನೇನೋ ಹೇಳಿ ನಕ್ಕರು. ನಾನು ಮೌನವಾಗಿದ್ದೆ. ಓರ್ವ ಹಿರಿಯರು ಬಂದು ನನ್ನನ್ನು ಆಲಿಂಗಿಸಿಕೊಂಡರು. ನನಗೆ ನೆಮ್ಮದಿಯೆನಿಸಿತು. ಬಳಿಕ ಪತಿಯವರು ತಮ್ಮ ಮನೆಗೆ ಕರೆದುಕೊಂಡು ಹೋದರು. ಮನೆಯಲ್ಲಿ ಐವರು ಮಕ್ಕಳಿದ್ದರು. ನನ್ನ ಮನಸ್ಸಿಗೆ ಮೊದಲ ಆಘಾತ ಆದದ್ದು ಆಗಲೇ. ಅವು ನನ್ನ `ಸುಲ್ತಾನ'ನ ಮಕ್ಕಳು. ಅವರಿಗೆ ಅದಾಗಲೇ ಒಂದು ಮದುವೆಯಾಗಿತ್ತು. ಆಕೆ ಅವರನ್ನೂ ಮಕ್ಕಳನ್ನೂ ಬಿಟ್ಟು ಹೋಗಿದ್ದಳು. ನನಗೇಕೆ ಮೋಸ ಮಾಡಿದಿರಿ ಎಂದು ನಾನವರಲ್ಲಿ ಪ್ರಶ್ನಿಸಿದೆ. ಅವರು ಗದರಿಸಿದರು. ಆ ಗದರಿಕೆ ಎಷ್ಟು ಜೋರಾಗಿತ್ತೆಂದರೆ ನನಗೆ ಧ್ವನಿಯೇ ಇರಲಿಲ್ಲ.
ನಸೀಮಾದ ಹೇಳಿದ್ದು ಸರಿ. ಅವರಿಗೆ 5 ಮನೆಗಳಿದ್ದುವು. 3 ಅಂಗಡಿಗಳಿದ್ದುವು. ಆದರೆ ತುಂಬಾ ಜಿಪುಣರಾಗಿದ್ದರು. ಈ ನಡುವೆ ನಾನು ಗರ್ಭಧರಿಸಿದೆ. ಗರ್ಭಿಣಿಯಾದವಳು ತಾಯಿಯ ಆಸರೆಯನ್ನು ಬಯಸುವುದು ಸಹಜ. ಊರಿಗೆ ಕಳುಹಿಸಿಕೊಡಿ ಎಂದು ವಿನಂತಿಸಿದೆ. ಆದರೆ ಅವರು ಮನಸ್ಸು ಮಾಡಲಿಲ್ಲ. ಒಂದು ಬಗೆಯ ಸಂಕಟ, ಮನೋವ್ಯಥೆಗಳೊಂದಿಗೆ ಗರ್ಭವನ್ನು ಅನುಭವಿಸಿ 2009 ಸೆ. 4ರಂದು ಗಂಡು ಮಗುವಿಗೆ ಜನ್ಮವಿತ್ತೆ. ಮಗುವಿಗೆ ಶುಹೈಬ್ ಅಂತ ಹೆಸರಿಟ್ಟೆ. ನಾನು ಮತ್ತೆ ಮತ್ತೆ ಊರಿಗೆ ಹೋಗುವ ಬೇಡಿಕೆಯನ್ನು ಇಡುತ್ತಲೇ ಇದ್ದೆ. ಕೊನೆಗೆ ಮಗುವಿಗೆ 8 ತಿಂಗಳಾದ ಬಳಿಕ 2010 ಫೆ. 1ರಂದು ಊರಿಗೆ ಮರಳಿದೆ. 15 ದಿನ ಇದ್ದು ಪುನಃ ಮಾಲ್ದೀವ್ಸ್ ಗೆ ಹೋದೆ. ಅವರಿಗೆ ಮಕ್ಕಳ ಮೇಲೆ ಪ್ರೀತಿ ಬಹಳವೇ ಕಡಿಮೆ. ಎಷ್ಟು ಕಡಿಮೆಯೆಂದರೆ, ಶುಹೈಬ್‍ನಿಗೆ ಬಿಸ್ಕಿಟ್, ಬೇಬಿ ಪೌಡರ್ ಮುಂತಾದುವುಗಳನ್ನೂ ತಂದುಕೊಡುತ್ತಿರಲಿಲ್ಲ. ಹೀಗಿರುತ್ತಾ ಒಂದು ದಿನ ಆ ಅನಾಹುತ ಸಂಭವಿಸಿ ಬಿಟ್ಟಿತು.
    ಬೆಳಿಗ್ಗೆ ಅವರು ಅಂಗಡಿಗೆಂದು ತೆರಳಿದ ಬಳಿಕ ಮೇಜಿನ ಮೇಲಿದ್ದ ಕೆಲವು ಮಾತ್ರೆಗಳನ್ನು ನಾನು ನುಂಗಿಬಿಟ್ಟೆ. ಮಾನಸಿಕ ಒತ್ತಡ ಅದರ ಹಿಂದಿತ್ತೋ ಏನೋ ನಾನರಿಯೆ. ಹಾಸಿಗೆಯಲ್ಲಿ ಬಿದ್ದುಕೊಂಡೆ. ಕೆಲವು ಗಂಟೆಗಳ ಬಳಿಕ ಎಚ್ಚರವಾದಾಗ ಮಗ ಹತ್ತಿರದಲ್ಲೇ ನಿಶ್ಶಬ್ದವಾಗಿ ಮಲಗಿದ್ದ. ಆತನನ್ನು ತಟ್ಟಿ ಎಬ್ಬಿಸಿದೆ. ಅಲುಗಾಡಲಿಲ್ಲ. ನಾನು ಹುಚ್ಚಿಯಂತೆ ಮನೆಯ ಪಕ್ಕದ ನರ್ಸ್‍ಗಳ ಬಳಿಗೆ ಓಡಿ ವಿಷಯ ತಿಳಿಸಿ ಮರಳಿ ಬಂದೆ. ಮಗು ಸಾವಿಗೀಡಾಗಿದೆ ಎಂಬುದು ನನಗೆ ಖಚಿತವಾಯಿತು. ನಾನು ಫ್ಯಾನಿಗೆ ನೇಣು ಬಿಗಿದು ಸಾಯಲು ಯತ್ನಿಸಿದಾಗ ನರ್ಸ್‍ಗಳು ಹಗ್ಗ ಬಿಚ್ಚಿ ಉಳಿಸಿದರು. ಸುತ್ತ ಸೇರಿದವರೆಲ್ಲ ಮಗುವನ್ನು ಕೊಂದ ಪಾಪಿಯಂತೆ ನನ್ನನ್ನು ದುರುಗುಟ್ಟಿ ನೋಡಿದರು. ಪತ್ರಿಕೆಗಳಲ್ಲೂ ಹಾಗೆಯೇ ಬಂತು. ನಾನು ಕೊಂದಿರಲಿಲ್ಲ. ಮಗು ಹೇಗೆ ಸಾವಿಗೀಡಾಗಿದೆ ಎಂಬುದೂ ಗೊತ್ತಿರಲಿಲ್ಲ. ನನ್ನನ್ನು ಜೈಲಿಗೆ ಅಟ್ಟಲಾಯಿತು. ಇದಾಗಿ ಹಲವು ತಿಂಗಳುಗಳ ಬಳಿಕ ಗಂಡ ನನ್ನನ್ನು ಭೇಟಿಯಾಗಲು ಬಂದರು. ನನಗೆ ಖುಷಿಯಾಯಿತು. ನನ್ನನ್ನು ಬಿಡುಗಡೆಗೊಳಿಸಿ ಜೊತೆಗೊಯ್ಯುವರೆಂದು ಅಂದುಕೊಂಡೆ. ಆದರೆ ಅವರು ವಿಚ್ಛೇದನ ಪತ್ರಕ್ಕೆ ಸಹಿ ಹಾಕುವಂತೆ ಒತ್ತಾಯಿಸುವುದಕ್ಕಾಗಿ ಬಂದಿದ್ದರು. ನಾನು ಸಹಿ ಹಾಕಲಿಲ್ಲ. ಹೀಗೆ ಮೂರು ಬಾರಿ ಬಂದರು. ನಾನು ಒಪ್ಪಿಕೊಳ್ಳದೇ ಹೋದಾಗ ಒಂದು ದಿನ ನ್ಯಾಯಾಧೀಶರೇ ನನ್ನನ್ನು ಕರೆದು ಕಾಗದಕ್ಕೆ ಸಹಿ ಹಾಕಿಸಿದರು. ಅದು ವಿವಾಹ ವಿಚ್ಛೇದನ ಪತ್ರ. ಮರು ಮದುವೆಗೆ ಮಾಲ್ದೀವ್ಸ್ ನಲ್ಲಿ ಪತ್ನಿಯ ಸಹಿಯುಳ್ಳ ವಿಚ್ಛೇದನ ಪತ್ರ ಅಗತ್ಯವಂತೆ.
    ವಿಚಾರಣೆಯಿಲ್ಲದೇ ಜೈಲಲ್ಲಿದ್ದ ನನಗೆ ನಿಧಾನಕ್ಕೆ ಬಿಡುಗಡೆಯ ಬಾಗಿಲುಗಳು ತೆರೆಯತೊಡಗಿದುವು. ಜಯಚಂದ್ರನ್ ಎಂಬವರು ಜೈಲಿನಿಂದ ಬಿಡುಗಡೆಗೊಂಡದ್ದು ನನ್ನ ಪಾಲಿಗೆ ವರವಾಯಿತು. ಅವರು ಪತ್ರಕರ್ತರು, ಮಾನವಹಕ್ಕು ಹೋರಾಟಗಾರರಲ್ಲಿ ನನ್ನ ಬಗ್ಗೆ ಹೇಳಿ ಸಭೆ ಏರ್ಪಡಿಸಿದರು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತೆ ಮಾಡಿದರು. ಹೀಗೆ ಮೂರುವರೆ ವರ್ಷಗಳ ಬಳಿಕ ನನ್ನ ವಿಚಾರಣೆ ನಡೆಯಿತು. ವಿಚಾರಣೆ ನಡೆದದ್ದು ಮಾಲ್ದೀವ್ಸ್ ನ ದಿವೇಹಿ ಭಾಷೆಯಲ್ಲಿ. ದಿವೇಹಿ ಭಾಷೆಯಲ್ಲಿದ್ದ ದಾಖಲೆಗಳಿಗೆ ನನ್ನಿಂದ ಸಹಿ ಪಡೆದುಕೊಂಡರು. ನನಗೆ ಏನಿಲ್ಲವೆಂದರೂ 25 ವರ್ಷಗಳ ವರೆಗೆ ಶಿಕ್ಷೆಯಾದೀತೆಂದು ಎಲ್ಲರೂ ಹೇಳಿಕೊಂಡರು. ಇಂಥ ಸಂದರ್ಭದಲ್ಲೇ ಫಾರಿಶ್ ಅಬ್ದುಲ್ಲ ಎಂಬ ವಕೀಲರು ನನ್ನ ನೆರವಿಗೆ ಬಂದದ್ದು. ಅವರು ಇಡೀ ಪ್ರಕರಣ ಎಷ್ಟು ದುರ್ಬಲವಾಗಿದೆ ಎಂಬುದನ್ನು ನ್ಯಾಯಾಲಯದ ಮುಂದಿಟ್ಟರು. ಮಗುವಿನ ಪೋಸ್ಟ್ ಮಾರ್ಟಂ ನಡೆಸಿಲ್ಲ, ಮಗುವಿಗೇನಾಗಿದೆ ಎಂಬ ಬಗ್ಗೆ ವೈದ್ಯಕೀಯ ವರದಿಯಿಲ್ಲ, ಪ್ರಕರಣಕ್ಕೆ ಸಾಕ್ಷಿಗಳಾದ ನರ್ಸ್‍ಗಳು ಮಾಲ್ದೀವ್ಸ್ ಬಿಟ್ಟು ಹೋಗಿದ್ದಾರೆ, ಪತಿಯ ಹೇಳಿಕೆಯನ್ನೇ ದಾಖಲಿಸಿಲ್ಲ.. ಹೀಗೆ ಅವರು ಎಲ್ಲವನ್ನೂ ನ್ಯಾಯಾಲಯದಲ್ಲಿ ತೆರೆದಿಟ್ಟರು. ಕೊನೆಗೆ 5 ವರ್ಷಗಳ ಬಂಧನದ ಬಳಿಕ 2015 ಮಾರ್ಚ್ 16ರಂದು ನಾನು ಜೈಲಿನಿಂದ ಹೊರಬಂದೆ. ಊರಿಗೆ ಮರಳಿದ ಬಳಿಕ ಜಾಬಿರ್ ಮತ್ತೆ ಕರೆ ಮಾಡಿದರು. ಕ್ಷಮೆ ಯಾಚಿಸಿದರು. ತಾನು ಮರು ಮದುವೆಯಾಗಿಲ್ಲ ಅಂದರು. ನಿನ್ನನ್ನು ಕಣ್ಣಾರೆ ಕಾಣಬೇಕು ಅಂದರು. ನಾನು ಫೋನ್ ಇಟ್ಟೆ. ಹಾಗಾಗದಿರಲಿ ಎಂದು ಪ್ರಾರ್ಥಿಸಿದೆ...”
     ಹೀಗೆ ಕೇರಳದ ತಿರುವನಂತಪುರ ಜಿಲ್ಲೆಯ ಕಡಪ್ಪುರದ ರುಬೀನಾಳು ಪತ್ರಕರ್ತ ಶಮೀರ್‍ರ ಮುಂದೆ ಹೇಳುತ್ತಾ ಹೋಗುವಾಗ ವರದಕ್ಷಿಣೆಯ ಕರಾಳ ಮುಖವೊಂದು ನಮ್ಮೆದುರು ತೆರೆಯುತ್ತಾ ಹೋಗುತ್ತದೆ. ಒಂದು ಕಡೆ ವರದಕ್ಷಿಣೆಯನ್ನು ನಿರೀಕ್ಷಿಸುತ್ತಾ ತಿರುಗಾಡುವ ಯುವಕರು ಮತ್ತು ಇನ್ನೊಂದು ಕಡೆ ಈ ಸಂದರ್ಭವನ್ನೇ ದುರುಪಯೋಗಿಸಲು ಕಾದು ಕೂತಿರುವ ಜಾಬಿರ್ ಗಳು... ಇವರ ಮಧ್ಯೆ ರುಬೀನರು ನಲುಗುತ್ತಲೇ ಇದ್ದಾರೆ. ಇಷ್ಟಿದ್ದೂ, ನಮ್ಮ ಸಮುದಾಯ ಈ ವಾಸ್ತವಕ್ಕೆ ಮುಖಾಮುಖಿಗೊಳ್ಳುವುದು ಯಾವಾಗ? ನಿರ್ದಯಿ ಫತ್ವಾಗಳು ಜಾರಿಯಾಗುವುದು ಎಂದು? ವರ್ಷಗಳ ಹಿಂದೆ ನನ್ನೂರಿನ ಹೆಣ್ಣು ಮಗಳು ಗುಜರಾತ್‍ಗೆ ಮದುವೆಯಾಗಿ ಹೋದ ಘಟನೆ ಇನ್ನೂ ಹಸಿರಾಗಿರುವುದರಿಂದಲೋ ಏನೋ ಈ ರುಬೀನಾ ನನ್ನ ಮನಸ್ಸನ್ನಿಡೀ ಕಾಡಿದಳು. ಆದ್ದರಿಂದಲೇ ಈ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು.


Wednesday, April 15, 2015

ಬೀಫ್ ಫೆಸ್ಟ್ ಪ್ರತಿಭಟನೆ ಮತ್ತು ಆಹಾರದ ಹಕ್ಕಿನ ಪ್ರಶ್ನೆ

     ದನದ ಮಾಂಸ ಸೇವನೆಯು ಆಹಾರ ಹಕ್ಕಿನ ವ್ಯಾಪ್ತಿಗೆ ಒಳಪಡುತ್ತದೋ ಇಲ್ಲವೊ? ಓರ್ವರ ಆಹಾರವನ್ನು ನಿರ್ಧರಿಸುವ ಅಧಿಕಾರ ಯಾರಿಗಿದೆ? ಅದಕ್ಕಿರುವ ಮಾನದಂಡಗಳೇನು? ಓರ್ವ ಮಾಂಸಾಹಾರಿ, ಇನ್ನೋರ್ವ ಸಸ್ಯಾಹಾರಿ, ಮತ್ತೋರ್ವಳು ಉಭಯಾಹಾರಿ- ಇವರಲ್ಲಿ ಒಬ್ಬರನ್ನು ಸರಿ ಮತ್ತು ಮತ್ತಿಬ್ಬರನ್ನು ತಪ್ಪು ಎಂದು ವಿಂಗಡಿಸಬಹುದೆ? ಹಾಗೆ ವಿಂಗಡಿಸುವುದಾದರೆ ಅದಕ್ಕಿರುವ ಆಧಾರಗಳೇನು- ಧಾರ್ಮಿಕ ಗ್ರಂಥಗಳೇ, ಪುರಾಣಗಳೇ, ರಾಜಕೀಯವೇ, ಪರ-ವಿರೋಧಿಗಳ ಶೇಕಡಾವಾರು ಲೆಕ್ಕಾಚಾರಗಳೇ ಅಥವಾ ಆರೋಗ್ಯವೇ... ಇಂಥದ್ದೊಂದು ಜಿಜ್ಞಾಸೆ ಸಮಾಜವನ್ನು ಮತ್ತೆ ಕಾಡತೊಡಗಿದೆ. ನಿಜವಾಗಿ, ದನದ ಮಾಂಸವನ್ನು ನಿಷೇಧಿಸಬೇಕೆಂದು ಆಗ್ರಹಿಸುವವರ ವಾದವು ಎಷ್ಟು ಏಕಪಕ್ಷೀಯ ವಾಗಿದೆಯೆಂದರೆ ಅದು ನಟಿ ದೀಪಿಕಾ ಪಡುಕೋಣೆಯ ‘ಮೈ ಚಾಯ್ಸ್’ನಂತೆ ಕಾಣಿಸುತ್ತದೆ. ಮೈ ಚಾಯ್ಸ್ ನಲ್ಲಿ ದೀಪಿಕಾ ಕೆಲವು ಸೆಲೆಕ್ಟಿವ್ ವಿಷಯಗಳ ಬಗ್ಗೆ ಮಾತ್ರ ಮಾತಾಡುತ್ತಾಳೆ. ಸಿನಿಮಾ ರಂಗದಲ್ಲಿ ಗಂಡು ಮತ್ತು ಹೆಣ್ಣಿನ ನಡುವೆ ಇರುವ ವೇತನ ತಾರತಮ್ಯದ ಬಗ್ಗೆ ಮೈ ಚಾಯ್ಸ್ ನಲ್ಲಿ ಏನೂ ಇಲ್ಲ. ಹೀರೋಗೆ ಸಮಾನವಾದ ವೇತನ ಪಡೆಯುವುದು ಹೀರೋಯಿನ್‍ಳ ಹಕ್ಕು ಎಂದಾಕೆ ಹೇಳುವುದಿಲ್ಲ. ಆರ್ಥಿಕ ಅಸಮಾನತೆಯ ಬಗ್ಗೆ ಮೈ ಚಾಯ್ಸ್ ಮೌನವಾಗುತ್ತದೆ. ಅತ್ಯಾಚಾರ, ಗೃಹಹಿಂಸೆ, ಉದ್ಯೋಗ ಮತ್ತು ಆರ್ಥಿಕ ಸ್ವಾತಂತ್ರ್ಯ ಮುಂತಾದವುಗಳ ಬಗ್ಗೆ ದೀಪಿಕಾ ಪಡಕೋಣೆಯಲ್ಲಿ ಯಾವ `ಚಾಯ್ಸೂ' ಇಲ್ಲ. ಒಂದು ರೀತಿಯಲ್ಲಿ, ದನದ ಮಾಂಸವನ್ನು ನಿಷೇಧಿಸಬೇಕೆನ್ನುವವರ ವಾದದಲ್ಲಿ ಮೈ ಚಾಯ್ಸ್ ನ ದೌರ್ಬಲ್ಯಗಳೆಲ್ಲ ಕಾಣಿಸುತ್ತವೆ. ಅಂದ ಹಾಗೆ, ಈ ದೇಶದ ದೊಡ್ಡದೊಂದು ಜನಸಂಖ್ಯೆಗೆ ಮಾಂಸವೇ ಆಹಾರ. ಆಹಾರ ಎಂಬುದು ತಿನ್ನುವವರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಅದು ಅಸಂಖ್ಯ ಮಂದಿಯನ್ನು ಸುತ್ತಿಕೊಂಡಿರುತ್ತದೆ. ನೀವು ಅಕ್ಕಿಯನ್ನು ನಿಷೇಧಿಸಿದರೆ ಅದು ಅನ್ನ ತಿನ್ನುವವರ ಸಮಸ್ಯೆಯಾಗಿಯಷ್ಟೇ ಗುರುತಿಸಿಕೊಳ್ಳುವುದಿಲ್ಲ. ಅದು ಗದ್ದೆಯ ಸಮಸ್ಯೆಯೂ ಹೌದು. ಎತ್ತುಗಳನ್ನು, ನೇಗಿಲು ತಯಾರಿಸುವವರನ್ನು, ಮರದ ವ್ಯಾಪಾರಿಗಳನ್ನು, ಟ್ರ್ಯಾಕ್ಟರ್ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಮಿಕರನ್ನು, ನೀರೆತ್ತುವ ಪಂಪ್ ಮತ್ತು ಅದರ ಉತ್ಪಾದಕ ಕೇಂದ್ರಗಳನ್ನು, ಕಾರ್ಮಿಕರನ್ನು.. ಹೀಗೆ ಅದು ಸಂಕೋಲೆಯಂತೆ ಉದ್ದಕ್ಕೂ ಬಾಧಿಸುತ್ತಾ ಹೋಗುತ್ತದೆ. ನೀವು ಅನ್ನಕ್ಕೆ ಬೆಂಕಿಕೊಟ್ಟರೆ ಆ ಬೆಂಕಿ ಕೊನೆಗೊಳ್ಳುವುದು ಇನ್ನೆಲ್ಲೋ ರೈತರ ಗದ್ದೆ-ನೇಗಿಲುಗಳಲ್ಲಿ. ಭತ್ತದ ಬಣವೆಗಳಲ್ಲಿ ಅಥವಾ ರಸಗೊಬ್ಬರವನ್ನೋ ನೇಗಿಲನ್ನೋ ತಯಾರಿಸುವ ಕಾರ್ಮಿಕರಲ್ಲಿ. ದನದ ಮಾಂಸ ನಿಷೇಧಕ್ಕೂ ಇದೇ ಬಗೆಯ ಮುಖ ಇದೆ. ಅದು ತಿನ್ನುವವರಿಗೆ ಮಾತ್ರ ಸಂಬಂಧಿಸಿರುವುದಲ್ಲ. ಮಾಂಸದ ವ್ಯಾಪಾರಿಗಳು, ಕಸಾಯಿಗಳು, ರೈತರು, ಮಧ್ಯವರ್ತಿಗಳು, ಚರ್ಮ ಉತ್ಪಾದನೆ ಮತ್ತು ಚರ್ಮೋದ್ಯಮದಲ್ಲಿ ತೊಡಗಿಸಿಕೊಂಡವರು.. ಎಲ್ಲರೂ ಅದರ ಅಡ್ಡ ಪರಿಣಾಮಕ್ಕೆ ಒಳಗಾಗುತ್ತಾರೆ. ಬ್ಯಾಗ್, ಪರ್ಸ್, ಶೂ, ಚಪ್ಪಲಿ ಮುಂತಾದವುಗಳಿಗೆ ದನ ಮತ್ತು ಎತ್ತಿನ ಚರ್ಮ ಅಗತ್ಯ. ಮಹಾರಾಷ್ಟ್ರದ ಧಾರಾವಿಯು ಏಷ್ಯದಲ್ಲೇ ಅತಿ ದೊಡ್ಡವಾದ ಚರ್ಮೋದ್ಯಮ ಪ್ರದೇಶವಾಗಿ ಗುರುತಿಸಿಕೊಂಡಿದೆ. ಇಲ್ಲಿ 16 ಸಾವಿರದಷ್ಟು ಸಣ್ಣ ಸಣ್ಣ ಕೈಗಾರಿಕೆ ಗಳಿವೆ. 25 ಸಾವಿರಕ್ಕಿಂತ ಅಧಿಕ ಮಂದಿ ಇಲ್ಲಿ ದುಡಿಯುತ್ತಿದ್ದಾರೆ. ಅಲ್ಲದೆ, ಮಾಂಸಾಹಾರವು ಹೊಟೇಲ್ ವ್ಯವಹಾರಗಳಲ್ಲಿ ದೊಡ್ಡದೊಂದು ಪಾತ್ರ ನಿರ್ವಹಿಸುತ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿ 17,500 ಕೋಟಿ ರೂಪಾಯಿ ಬೆಲೆಬಾಳುವ 18 ಲಕ್ಷ ಟನ್ ದನದ ಮಾಂಸವನ್ನು ಈ ದೇಶವು ರಫ್ತು ಮಾಡಿದೆ. ಆದರೆ `ಮಾಂಸ ನಿಷೇಧಿಸಿ' ಅನ್ನುವವರು ಈ ವಿಷಯಗಳನ್ನು ತಮ್ಮ ಚರ್ಚಾವ್ಯಾಪ್ತಿಗೆ ತೆಗೆದುಕೊಳ್ಳುವುದೇ ಇಲ್ಲ. ಮುದಿ ಹಸು-ಎತ್ತುಗಳ ಕುರಿತೂ ಅವರಲ್ಲಿ ಯೋಜನೆಗಳೇ ಇಲ್ಲ. “ಜಾನುವಾರು ಹತ್ಯೆಗೆ ನಿಷೇಧ ಇರುವ ಮಧ್ಯ ಪ್ರದೇಶದಲ್ಲಿ- ಹಾಲುಕೊಡದ, ಉಳುಮೆಗೆ ಬಾರದ ಹಸು-ಎತ್ತುಗಳ ಸಹಿತ ಧಾರಾಳ ಜಾನುವಾರು ಗಳು ಪ್ಲಾಸ್ಟಿಕ್ ತಿನ್ನುತ್ತಾ, ಮಾಲಿನ್ಯದ ನೀರು ಕುಡಿಯುತ್ತಾ ರಸ್ತೆಯಲ್ಲಿ ಕೊನೆಯುಸಿರೆಳೆಯುತ್ತಿವೆ..” ಎಂದು ಅನುಷಾ ನಾರಾಯಣ್ ದಿ ಹಿಂದೂ ಪತ್ರಿಕೆಯಲ್ಲಿ (05-05-2013) ಬರೆದಿರುವುದಕ್ಕೂ ಅವರು ಪ್ರತಿಕ್ರಿಯಿಸುವುದಿಲ್ಲ. ಅವರ ಚರ್ಚೆ ಏನಿದ್ದರೂ `ಪವಿತ್ರ'ತೆಯ ಸುತ್ತಲೇ ತಿರುಗುತ್ತಿರುತ್ತದೆ. ಮಾಂಸ ನಿಷೇಧವನ್ನು ಪ್ರತಿಭಟಿಸಿ ಮೊನ್ನೆ ಎಪ್ರಿಲ್ 9ರಂದು ಬೆಂಗಳೂರಿನಲ್ಲಿ ಏರ್ಪಡಿಸಲಾದ ‘ಬೀಫ್ ಫೆಸ್ಟ್ ಕಾರ್ಯಕ್ರಮ’ ಇದೀಗ ವಿವಾದಕ್ಕೆ ಒಳಗಾಗಿದೆ. ಸಾರ್ವಜನಿಕವಾಗಿ ಬೀಫ್ ಭೋಜನ ಮಾಡಲಾದ ಈ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಗಿರೀಶ್ ಕಾರ್ನಾಡ್ ಮತ್ತು ಕೆ. ಮರುಳ ಸಿದ್ಧಪ್ಪ ಭಾಗವಹಿಸಿರುವುದರ ಸುತ್ತ ಚರ್ಚೆಗಳು ಎದ್ದಿವೆ.  ಅಂಬೇಡ್ಕರ್ ಜನ್ಮದಿನವಾದ ಎಪ್ರಿಲ್ 14 ರಂದು ಚೆನ್ನೈ ಮತ್ತು ಬೆಂಗಳೂರಿನಲ್ಲಿ ದನದಮಾಂಸದ ಬಿರಿಯಾನಿಯನ್ನು (ಬೀಫ್ ಫೆಸ್ಟ್) ಸಾರ್ವಜನಿಕವಾಗಿಯೇ ಸೇವಿಸಲಾಗಿದೆ. ಹೀಗೆ ಆಹಾರದ ಹಕ್ಕಿನ ಬದಲು ಬೀಫ್ ಫೆಸ್ಟ್ ಚರ್ಚಾ ವಸ್ತುವಾಗುತ್ತಿದೆ. ಅಷ್ಟಕ್ಕೂ ಬೀಫ್ ಫೆಸ್ಟ್ ನೈತಿಕವೋ ಅನೈತಿಕವೋ ಎಂಬುದು ಚರ್ಚಾ ವಸ್ತುವಾದರೆ ಮುಖ್ಯ ವಿಷಯ ಬದಿಗೆ ಸರಿಯುತ್ತದೆ ಎಂಬುದು ಆಹಾರದ ಹಕ್ಕನ್ನು ವಿರೋಧಿಸುವವರಿಗೆ ಚೆನ್ನಾಗಿ ಗೊತ್ತು.
    ನಿಜವಾಗಿ, ಪ್ರತಿಯೊಂದಕ್ಕೂ ಕೆಲವು ಮೇರೆಗಳಿವೆ. ಈ ಮೇರೆಗಳನ್ನು ನಿರ್ಲಕ್ಷಿಸಿ ಪ್ರತಿಭಟನೆಯನ್ನೋ ಇನ್ನೇನನ್ನೋ ಹಮ್ಮಿಕೊಂಡಾಗ ಅವುಗಳ ಉದ್ದೇಶಶುದ್ದಿಯೇ ಸಾರ್ವಜನಿಕವಾಗಿ ಪ್ರಶ್ನೆಗೊಳಗಾಗುತ್ತದೆ. ಹಾಗಾದರೆ ಪ್ರತಿಭಟನೆಯ ಮೂಲ ಉದ್ದೇಶವೇ ಚರ್ಚೆಯ ವ್ಯಾಪ್ತಿಯಿಂದ ಹೊರಬಿದ್ದು ಪ್ರತಿಭಟನೆ ನೈತಿಕವೋ ಅನೈತಿಕವೋ ಎಂಬುದರ ಸುತ್ತವೇ ಇಡೀ ಚರ್ಚೆ ಕೇಂದ್ರೀಕೃತಗೊಳ್ಳುತ್ತದೆ. ಆಹಾರದ ಹಕ್ಕನ್ನು ಆಗ್ರಹಿಸಿ ಏರ್ಪಡಿಸಲಾದ ಬೀಫ್ ಫೆಸ್ಟ್ ಕಾರ್ಯಕ್ರಮ ಇಲ್ಲೆಲ್ಲೋ ಎಡವಿದೆ ಎಂದು ಅನಿಸುವುದು ಈ ಕಾರಣದಿಂದಲೇ. ಮಾಂಸಾಹಾರವನ್ನು ಬಹಿರಂಗವಾಗಿ ಸೇವಿಸುವುದು ಸೇವಿಸುವವರ ಹಕ್ಕೇ ಆಗಿರಬಹುದು. ಅಂಥ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿರಲೂಬಹುದು. ಆದರೂ ದನವನ್ನು ಈ ದೇಶದಲ್ಲಿ ಪೂಜಿಸುವವರಿದ್ದಾರೆ. ಅದಕ್ಕೆ ಪವಿತ್ರತೆಯನ್ನು ಕಲ್ಪಿಸಿದವರಿದ್ದಾರೆ. ಅದು ಮಾಂಸಕ್ಕಾಗಿ ಬಳಕೆಯಾಗಬಾರದೆಂದು ಪ್ರಾಮಾಣಿಕವಾಗಿ ಬಯಸುವವರೂ ಇದ್ದಾರೆ. ಇಂಥ ಸಂದರ್ಭದಲ್ಲಿ, ದನವನ್ನು ಸುತ್ತುವರಿದಿರುವ ಮಿಥ್ಯೆಗಳು ಮತ್ತು ರಾಜಕೀಯ ಸ್ವಾರ್ಥವನ್ನು ಇಂಥವರಿಗೆ ತಿಳಿಯಪಡಿಸುವುದಕ್ಕೆ ಉದ್ರೇಕಕಾರಿಯಲ್ಲದ ವಿಧಾನವನ್ನೇ ಆಯ್ಕೆಮಾಡಿಕೊಳ್ಳಬೇಕಾಗುತ್ತದೆ. ದನದ ಮಾಂಸವನ್ನು ಬಹಿರಂಗವಾಗಿ (ಅದೂ ಒಂದು ಹಬ್ಬಂದಂತೆ) ಸೇವಿಸುವುದರಲ್ಲಿ ಒಂದು ಉಗ್ರವಾದವಿದೆ. ಈ ಉಗ್ರವಾದವನ್ನು ‘ದನದ ರಾಜಕೀಯ’ದಲ್ಲಿ ತೊಡಗಿರುವವರು ಹೆಚ್ಚು ಇಷ್ಟಪಡುತ್ತಾರೆ. ಇಂಥ ಉಗ್ರವಾದವೇ ಅವರ ಮಾರುಕಟ್ಟೆ. ಬಹಿರಂಗವಾಗಿ ಮಾಂಸ ಭೋಜನ ಮಾಡುವವರು ಧರ್ಮ ವಿರೋಧಿಗಳು, ಹಿಂದೂ ವಿರೋಧಿಗಳು ಎಂದೆಲ್ಲಾ ಹೇಳಿ ತಮ್ಮ ಬೆಂಬಲಿಗ ವಲಯವನ್ನು ಅವರು ವಿಸ್ತರಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಬೀಫ್ ಫೆಸ್ಟ್ ಕಾರ್ಯಕ್ರಮ ಒಂದು ಅನುಚಿತ ಪ್ರತಿಭಟನಾ ವಿಧಾನ. ಆದರೂ ಈ ಕಾರಣವೊಂದನ್ನೇ ನೆಪವಾಗಿಟ್ಟುಕೊಂಡು ಆಹಾರ ಹಕ್ಕು ಪ್ರತಿಭಟನೆಯ ಪ್ರಸ್ತುತತೆಯನ್ನು ನಾವು ನಿರಾಕರಿಸಬೇಕಿಲ್ಲ. ಈ ಫೆಸ್ಟ್ ನ ನೈತಿಕ-ಅನೈತಿಕತೆಯನ್ನು ಚರ್ಚಿಸುವ ಬದಲು ಅಂಥದ್ದೊಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳುವಂತೆ ಬಲವಂತಪಡಿಸಿದ ವ್ಯವಸ್ಥೆಯ ಫ್ಯಾಸಿಸ್ಟ್ ಧೋರಣೆಯನ್ನು ನಾವು ವಿಶ್ಲೇಷಿಸಬೇಕಾಗುತ್ತದೆ. ಇತ್ತೀಚೆಗೆ, ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರು ಮುಖ್ಯ ನ್ಯಾಯಮೂರ್ತಿ ಕೆ.ಎಲ್. ದತ್ತು ಅವರಿಗೆ ಬರೆದ ಪತ್ರವೊಂದು ಇದೇ ರೀತಿಯಲ್ಲಿ ಚರ್ಚೆಗೆ ಒಳಗಾಗಿತ್ತು. ಗುಡ್ ಫ್ರೈಡೆಯೆಂದು ನ್ಯಾಯಾಧೀಶರುಗಳ ಸಭೆ ಏರ್ಪಡಿಸಿದುದರ ಔಚಿತ್ಯವನ್ನು ಪ್ರಶ್ನಿಸಿ ದತ್ತು ಅವರಿಗೆ ಮಾರ್ಚ್ 18ರಂದು ಕುರಿಯನ್ ಪತ್ರ ಬರೆದಿದ್ದರು. ರಜಾದಿನದಂದು ಸಭೆ ಇಟ್ಟದ್ದು ಸರಿಯಲ್ಲ ಅಂದಿದ್ದರು. ಆದರೆ ಸಭೆಯನ್ನು ಸಮರ್ಥಿಸಿ ದತ್ತು ಅವರು ಮಾರ್ಚ್ 20ರಂದು ಉತ್ತರ ಬರೆದರು. 2007ರಲ್ಲಿ ವಾಲ್ಮೀಕಿ ಜಯಂತಿಯಂದು ಮತ್ತು 2009ರಲ್ಲಿ ಸ್ವಾತಂತ್ರ್ಯೋತ್ಸವದಂದು ಮುಖ್ಯ ನ್ಯಾಯಮೂರ್ತಿಗಳ ಸಭೆಯನ್ನು ಇಡಲಾಗಿತ್ತು ಎಂದೂ ಸಮರ್ಥಿಸಿಕೊಂಡರು. ಇದಕ್ಕೆ ಉತ್ತರವಾಗಿ ಎಪ್ರಿಲ್ ಒಂದರಂದು ಕುರಿಯನ್ ಮತ್ತೊಂದು ಪತ್ರ ಬರೆದರು. ಈ ಕುರಿತಂತೆ ಸಾಕಷ್ಟು ಚರ್ಚೆಗಳೂ ನಡೆದುವು. ನಿಜವಾಗಿ, ಕುರಿಯನ್ ಅವರ ಪತ್ರದ ಒಳಾರ್ಥವನ್ನು ಅರ್ಥೈಸದೇ ಹೋದರೆ ಅವರನ್ನು ಟೀಕೆಗೊಳಪಡಿಸುವುದು ತೀರಾ ಸುಲಭ. ಅಮೇರಿಕದಲ್ಲಿ ಗುಡ್‍ಫ್ರೈಡೆಯಂದು ನ್ಯಾಯಾಂಗ ಕಲಾಪಗಳು ನಡೆಯುತ್ತವೆ ಎಂದು ನಮಗೆ ವಾದಿಸಬಹುದು. 18ನೇ ಶತಮಾನದಲ್ಲಿ ಬ್ರಿಟನ್ನಿನ ಮುಖ್ಯ ನ್ಯಾಯಾಧೀಶರಾಗಿದ್ದ ಲಾರ್ಡ್ ಮ್ಯಾನ್ ಫೀಲ್ಡ್‍ರು ನ್ಯಾಯಾಂಗ ವಿಚಾರಣೆಯನ್ನು ಮರುದಿನಕ್ಕೆ ನಿಗದಿಪಡಿಸಿದಾಗ ವಕೀಲರಾದ ಸಾರ್ಜೆಂಟ್ ಡೆವಿ ಎಂಬವರು, ‘ನಾಳೆ  ಗುಡ್‍ಫ್ರೈಡೆ’ ಅಂದಿದ್ದರು. ಅದಕ್ಕೆ, ‘ಚಿಂತಿಲ್ಲ, ಒಳ್ಳೆಯ ದಿನ, ಒಳ್ಳೆಯ ಉದ್ದೇಶ..’ ಎಂದು ಮ್ಯಾನ್ ಫೀಲ್ಡ್ ಪ್ರತಿಕ್ರಿಯಿಸಿದ್ದನ್ನು ಉದಾಹರಣೆಯಾಗಿ ಬಳಸಿಕೊಳ್ಳಬಹುದು. ‘ಹಿಂದುಗಳಲ್ಲಿ ಸುಮಾರು 100ರಷ್ಟು ಪವಿತ್ರ ದಿನಗಳಿದ್ದರೂ ಸರಕಾರ ಅದನ್ನು 10-15ಕ್ಕೆ ಇಳಿಸಿದೆ ಮತ್ತು ಖಾಸಗಿ ಕಂಪೆನಿಗಳಂತೂ 5ಕ್ಕೆ ಇಳಿಸಿವೆ. ಆದರೂ ನಮ್ಮ ತಕರಾರಿಲ್ಲ, ನಿಮ್ಮದೇನು’ ಎಂದೂ ಕುರಿಯನ್‍ರನ್ನು ಟೀಕಿಸಬಹುದು. ನಿಜವಾಗಿ, ಕುರಿಯನ್ ಅವರ ತಕರಾರು ಗುಡ್‍ಫ್ರೈಡೇ ದಿನದ ಸಭೆಯದ್ದಲ್ಲ, ಅಂಥ ದಿನಗಳನ್ನು ಕಡೆಗಣಿಸಲು ಒತ್ತಾಯಿಸುವ ಫ್ಯಾಸಿಸಂನ ಕುರಿತಾದ್ದು. ಅವರು ತಮ್ಮ ಪತ್ರದಲ್ಲಿ ಸೆಕ್ಯುಲರಿಸಂ ಕಡೆಗಣನೆಗೆ ಒಳಗಾಗುತ್ತಿರುವ ಬಗ್ಗೆ ಭೀತಿಯನ್ನು ಹಂಚಿಕೊಂಡಿದ್ದಾರೆ. ಪ್ರಧಾನಿ ಮೋದಿ ಮತ್ತು ಅವರ ಬೆಂಬಲಿಗ ತಂಡವು ಈ ದೇಶದಲ್ಲಿ ಇವತ್ತು ವರ್ತಿಸುತ್ತಿರುವ ರೀತಿಯನ್ನು ನೋಡಿದರೆ ಕುರಿಯನ್‍ರ ತಕರಾರು ಏನು ಎಂಬುದು ಅರ್ಥವಾಗುತ್ತದೆ. ಸೆಕ್ಯುಲರಿಸಂನ ಮೇಲೆ ವೈಚಾರಿಕವಾಗಿ ಮತ್ತು ಆಡಳಿತಾತ್ಮಕವಾಗಿ ನಿರಂತರ ಹಲ್ಲೆಗಳಾಗುತ್ತಿರುವ ಇಂದಿನ ದಿನಗಳಲ್ಲಿ ಆಹಾರ ಹಕ್ಕಿನ ನಿಷೇಧದ ಚರ್ಚೆ ಅಥವಾ ಕುರಿಯನ್‍ರ ಪತ್ರದ ಮೇಲಿನ ಚರ್ಚೆ ಹೇಗೆ ಸಾಗಬೇಕು ಮತ್ತು ಹೇಗೆ ಸಾಗುತ್ತಿದೆಯೆಂಬುದು ಬಹಳ ಮುಖ್ಯ. ಫ್ಯಾಸಿಸಂ ಅಂದರೆ ನಾವು ಈಗಲೂ ಜರ್ಮನಿ, ಇಟಲಿ, ಸ್ಪೈನ್ ಕಡೆಗೆ ನೋಡುತ್ತೇವೆ. ಹಿಟ್ಲರ್, ಮುಸೋಲೊನಿ, ಫ್ರಾಂಕೊ ಮುಂತಾದವರೇ ನಮ್ಮ ಕಣ್ಣ ಮುಂದೆ ಸುಳಿಯುತ್ತಾರೆ. ಆದರೆ ಹಿಟ್ಲರ್‍ನ ಮೈನ್‍ಕ್ಯಾಂಪ್‍ಗಿಂತಲೂ ಅಪಾಯಕಾರಿಯಾದ ವಿಚಾರಧಾರೆಗಳು ಈ ದೇಶದಲ್ಲಿ ಹರಿದಾಡುತ್ತಿವೆ ಎಂಬುದನ್ನು ಇಂಥ ಸಂದರ್ಭದಲ್ಲಿ ಗಂಭೀರವಾಗಿ ಪರಿಗಣಿಸುವುದೇ ಇಲ್ಲ. 4 ಸಾವಿರಕ್ಕಿಂತಲೂ ಅಧಿಕ ಜಾತಿ ಬುಡಕಟ್ಟುಗಳಿರುವ, 325 ಭಾಷೆಗಳು, ಬೇರೆ ಬೇರೆ ರಾಜ್ಯಗಳು ಮತ್ತು ಅದರದೇ ಆದ ಭಿನ್ನ ಸಂಸ್ಕøತಿಗಳಿರುವ ದೇಶವನ್ನು ಒಂದೇ ವಿಚಾರಧಾರೆಯೊಳಗೆ ಮತ್ತು ಒಂದೇ ಸಂಸ್ಕøತಿಯೊಳಗೆ ತಂದು ನಿಲ್ಲಿಸುವ ತಂತ್ರಗಳು ನಮ್ಮನ್ನು ಜಾಗೃತಿಗೊಳಿಸುತ್ತಲೂ ಇಲ್ಲ. ಮೋದಿಯರ ಚುನಾವಣಾ ವಿಜಯದ ಕುರಿತು Democratically Elected Totalitarian Government ಎಂದು ಅರುಂಧತಿ ರಾಯ್ ತನ್ನ ಫೇಸ್‍ಬುಕ್‍ನಲ್ಲಿ ಬರೆದಿದ್ದರು ಎಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು.
    ತನ್ನ ದೇಶದಲ್ಲಿ ವರ್ಣಬೇಧ ಮಾನಸಿಕತೆ ಇದೆ ಎಂದು ಒಪ್ಪಿಕೊಳ್ಳುವ ಪ್ರಾಮಾಣಿಕತೆ ಕ್ಯೂಬಾದ ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋರಲ್ಲಿ ಈಗಲೂ ಇದೆ. ಇರುವ ಕೆಡುಕನ್ನು ಇದೆ ಎಂದು ಒಪ್ಪಿಕೊಳ್ಳುವುದು ಅರ್ಧ ಪರಿಹಾರವನ್ನು ಕಂಡುಕೊಂಡಂತೆ. ಆದರೆ ಈ ದೇಶದಲ್ಲಿ ಇವತ್ತು ಎಲ್ಲವನ್ನೂ ನಿರಾಕರಿಸುವ ಮನಸ್ಥಿತಿಯೊಂದು ಗಟ್ಟಿಗೊಳ್ಳುತ್ತಿದೆ. `ಇಲ್ಲಿ ಎಂದೂ ಅಸ್ಪ್ರಿಶ್ಯತೆ ಇರಲಿಲ್ಲ, ಗೋಹತ್ಯೆ ಇರಲಿಲ್ಲ, ಶ್ರೇಣೀಕೃತ ವ್ಯವಸ್ಥೆ ಇರಲಿಲ್ಲ, ಮಡೆಸ್ನಾನ ಸರಿ, ಪಂಕ್ತಿಭೋಜನ ಸರಿ, ಆರ್ಯರು ಹೊರಗಿನವರಲ್ಲ..’ ಹೀಗೆ ಹಿಂದಿನ ತಪ್ಪುಗಳನ್ನು ಹೊಸ ವ್ಯಾಖ್ಯಾನದೊಂದಿಗೆ ಅನುಕೂಲಕ್ಕೆ ಬಳಸಿಕೊಳ್ಳುವ ವಿಚಾರಧಾರೆಯೊಂದು ವೇಗವಾಗಿ ಪ್ರಸಾರವಾಗುತ್ತಿದೆ. ಇಂಥ ಸ್ಥಿತಿಯಲ್ಲಿ ಕುರಿಯನ್‍ರ ಪತ್ರ ಮತ್ತು ಆಹಾರದ ಹಕ್ಕು ಪ್ರತಿಭಟನೆಗಳು ಮುಖ್ಯವಾಗುತ್ತವೆ. ಅಂದಹಾಗೆ, ದನದ ಮಾಂಸವನ್ನು ಆಹಾರವಾಗಿ ಪರಿಗಣಿಸುವವರು ಯಾರ ಮತ್ತು ಯಾವ ಧರ್ಮದ ವಿರೋಧಿಗಳೂ ಅಲ್ಲ ಎಂಬುದನ್ನು ಸಮಾಜಕ್ಕೆ ಸ್ಪಷ್ಟವಾಗಿ ಗೊತ್ತುಪಡಿಸಬೇಕಾಗಿದೆ. ಅದನ್ನು ಒಂದು ಆಹಾರದ ಇಶ್ಯೂ ಆಗಿ ಪರಿಗಣಿಸಬೇಕೆ ಹೊರತು ಧರ್ಮದ ವಿಷಯವಾಗಿ ಖಂಡಿತ ಅಲ್ಲ. ಆಹಾರವು ಸಮಾಜವನ್ನು ವಿಂಗಡಿಸುವುದರ ಮಾನದಂಡ ಅಲ್ಲ, ಆಗಲೂ ಬಾರದು.

Tuesday, April 7, 2015

ಮೈ ಬಾಡಿ, ಮೈ ಮೈಂಡ್' ಪ್ರಶ್ನಾತೀತವೇ?

ರೂಪ್‍ರೇಖಾ ವರ್ಮ
     ಲೀಲಾ ಗುಲಾಠಿ ಮತ್ತು ಜಶೋಧರಾ ಬಗ್ಚಿ ಬರೆದಿರುವ ‘ಎ ಸ್ಪೇಸ್ ಆಫ್ ಸೈಲೆನ್ಸ್: ದಿ ಸೆಕ್ಷುವಲ್ ಎಕನಾಮಿಕ್ಸ್ ಆಫ್ ಮಾಡರ್ನ್ ಇಂಡಿಯಾ' ಎಂಬ ಕೃತಿ ಅಥವಾ ದೀಪಾ ಸರ್ಕಾರ್ ಬರೆದಿರುವ, ‘ಅಬಾರ್ಷನ್ ಇನ್ ಇಂಡಿಯಾ: ಫ್ಯಾಕ್ಟ್ಸ್ ಆಂಡ್ ರಿಯಾಲಿಟೀಸ್’ ಎಂಬ ಕೃತಿ ಅಥವಾ ‘ಸೋಶಿಯಲ್ ಅಬ್ಯೂಸ್ ಏಂಡ್ ಗರ್ಲ್ಸ್', ಅಥವಾ ‘ಲಿಟ್ಲ್ ವುಮೆನ್', ‘ಎಸ್ಕೇಪ್', ‘ಲೀನ್ ಇನ್: ವುಮೆನ್ ವರ್ಕ್ ಏಂಡ್ ದ ವಿಲ್ ಟು ಲೀಡ್'.. ಮುಂತಾದ ಮಹಿಳಾ ಸಬಲೀಕರಣಕ್ಕೆ ಸಂಬಂಧಪಟ್ಟ ಕೃತಿಗಳು ಈ ಜಗತ್ತಿನಲ್ಲಿ ನೂರಾರು ಇವೆ. ಆ ಕುರಿತಂತೆ ಫೇಸ್‍ಬುಕ್ ಪುಟಗಳಿವೆ. ವೆಬ್‍ಸೈಟ್‍ಗಳಿವೆ. 2013 ಮೇ 29ರಂದು ಒಂದು ವಿಶೇಷ ಅಭಿಯಾನ ನಡೆಯಿತು. ಮಹಿಳಾ ವಿರೋಧಿ ಫೇಸ್‍ಬುಕ್ ಪುಟಗಳ ವಿರುದ್ಧ ಸುಮಾರು 100ರಷ್ಟು ನ್ಯಾಯವಾದಿಗಳು ಪ್ರತಿ ಭಟನಾ ಅಭಿಯಾನ ಕೈಗೊಂಡರು. ಫೇಸ್‍ಬುಕ್ ತಕ್ಷಣ ಅದಕ್ಕೆ ಸ್ಪಂದಿಸಿತಲ್ಲದೇ ಅಂಥ ಪುಟಗಳನ್ನು ಅದು ಕಿತ್ತು ಹಾಕಿತು. ಇವತ್ತು ಫೇಸ್‍ಬುಕ್ ಮತ್ತು ಟ್ವಿಟರ್‍ಗಳಲ್ಲಿ ಅಸಂಖ್ಯ ಮಹಿಳೆಯರಿದ್ದಾರೆ. ಬ್ಲಾಗುಗಳನ್ನು ಬರೆಯುತ್ತಿದ್ದಾರೆ. ಜಗತ್ತಿನ ಪ್ರತಿ ಘಟನೆಗಳಿಗೂ ಪ್ರತಿಕ್ರಿಯಿಸುತ್ತಾ ಈ ಮಹಿಳೆಯರು ಗಮನ ಸೆಳೆಯುತ್ತಿದ್ದಾರೆ. ಆದರೆ ಅವರಾರೂ ‘ಮದುವೆ ಮುಂಚಿನ ಸೆಕ್ಸ್ ಅಥವಾ ಮದುವೆಯಾಚೆಗಿನ ಸೆಕ್ಸ್’ ಅನ್ನು ಮಹಿಳಾ ಸಬಲೀಕರಣದ ಭಾಗವಾಗಿ ಮತ್ತು ಹೆಣ್ಣಿನ ಆಯ್ಕೆಯಾಗಿ ಕಂಡದ್ದು ಎಲ್ಲೂ ಸುದ್ದಿಯಾಗಿಲ್ಲ. ಇದೀಗ ಭಾರೀ ಸುದ್ದಿಯಲ್ಲಿರುವ ‘ಮೈ ಚಾಯ್ಸ್' ಎಂಬ ವೀಡಿಯೋ ಮಹಿಳಾ ಸಬಲೀಕರಣದ ಸುತ್ತ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ‘ಮೈ ಬಾಡಿ, ಮೈ ಮೈಂಡ್, ಮೈ ಚಾಯ್ಸ್..' ಎಂದು ಆರಂಭವಾಗುವ ಮತ್ತು ಫ್ಯಾಶನ್ ಇಂಡಿಯಾ ಎಂಬ ಮಾಸ ಪತ್ರಿಕೆಯು ಹೊರ ತಂದಿರುವ ಈ ವೀಡಿಯೋ ಎಷ್ಟರ ಮಟ್ಟಿಗೆ ಮಹಿಳಾ ಸಬಲೀಕರಣದ ಪ್ರತಿನಿಧಿ? ‘ಮೈ ಬಾಡಿ, ಮೈ ಮೈಂಡ್' ಪ್ರಶ್ನಾತೀತವೇ? ‘ನಾನು ಪ್ರಶ್ನಾತೀತೆ' ಎಂಬ ಅಹಮಿಕೆಯೊಂದು ‘ಮೈ ಚಾಯ್ಸ್' ವೀಡಿಯೋದ ಉದ್ದಕ್ಕೂ ರಾಚುತ್ತಿರುವುದು ಏನನ್ನು ಸೂಚಿಸುತ್ತದೆ? ಸ್ವೇಚ್ಛೆಗೂ ಆಯ್ಕೆಗೂ ನಡುವೆ ವ್ಯತ್ಯಾಸಗಳಿರುತ್ತವಲ್ಲವೇ? ಯಾವುದು ಸ್ವೇಚ್ಛೆ? ಯಾವುದು ಆಯ್ಕೆ? ಸರಿ ಮತ್ತು ತಪ್ಪುಗಳ ಹಂಗಿಲ್ಲದೇ ಬದುಕುವುದರ ಹೆಸರೇ ಮಹಿಳಾ ಸಬಲೀಕರಣವೇ? ಹಾಗಂತ, ನ್ಯಾಯ-ಅನ್ಯಾಯ, ನೈತಿಕ-ಅನೈತಿಕ, ಸರಿ-ತಪ್ಪು.. ಮುಂತಾದ ಪದಗಳು ಮತ್ತು ಅವು ಧ್ವನಿಸುವ ಮೌಲ್ಯಗಳನ್ನು ಹುಟ್ಟು ಹಾಕಿದ್ದು ಯಾರು? ಅದು ಕೌಟುಂಬಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಕ್ಷೇತ್ರಗಳಲ್ಲಿ ಪಾಲನೆಯಲ್ಲಿರಬೇಕೆಂದು ಬಯಸುತ್ತಿರುವವರು ಯಾರು? ಬರೇ ಪುರುಷರೇ? ಮಹಿಳೆಯರೂ ಇವನ್ನು ಜೀವನ ಮೌಲ್ಯ ಎಂದು ನಂಬುತ್ತಿಲ್ಲವೇ? ಅಷ್ಟಕ್ಕೂ, ಇಂಥ ಯಾವ ಕಟ್ಟುಪಾಡುಗಳೂ ಇಲ್ಲದೇ ರಚನೆಯಾಗುವ ಸಮಾಜವೊಂದರ ಸ್ವರೂಪ ಹೇಗಿದ್ದೀತು? ಹೊತ್ತು-ಗೊತ್ತಿಲ್ಲದೇ ಮನೆಗೆ ಆಗಮಿಸುವ ಮತ್ತು ಮನೆಯಿಂದ ನಿರ್ಗಮಿಸುವ ಪತ್ನಿಯನ್ನೊಮ್ಮೆ ಕಲ್ಪಿಸಿಕೊಳ್ಳಿ. ಆ ಮನೆಯ ಪರಿಸ್ಥಿತಿ ಹೇಗಿದ್ದೀತು? ಈ ಬಗ್ಗೆ ಪತಿ ಮತ್ತು ಮಕ್ಕಳ ಅಭಿಪ್ರಾಯ ಏನಿರಬಹುದು? ಒಂದು ವೇಳೆ ಪತ್ನಿಯ ಧಾಟಿಯಲ್ಲೇ ಪತಿಯೂ ಮಾತಾಡತೊಡಗಿದರೆ ಏನಾದೀತು? ಆತನೂ ಪ್ರಶ್ನಾತೀತವಾದರೆ ಮನೆ ಹೇಗಿದ್ದೀತು? ಹೀಗೆ ಆಲೋಚಿಸುವ ಯಾವ ಕುಟುಂಬ ಪೂರ್ಣಾಯುಷ್ಯ ಬಾಳಬಹುದು? ‘ನಾನು ಎಲ್ಲಿಗೂ ಹೋಗುವೆ, ಹೇಗೆ ಬೇಕಾದರೂ ಬದುಕುವೆ, ಅದು ನನ್ನ ಆಯ್ಕೆ..’ ಎಂದು ಮಹಿಳೆ ವಾದಿಸುವಾಗ ಪುರುಷನೂ ಹಾಗೆಯೇ ವಾದಿಸಬಹುದಲ್ಲವೇ? ಹೆಣ್ಣು ಪ್ರಶ್ನಾತೀತೆಯಾದರೆ ಗಂಡೂ ಪ್ರಶ್ನಾತೀತ. ಹಾಗಾದರೆ ಯಾರು ಪ್ರಶ್ನಾರ್ಹರು? ಪ್ರಶ್ನಾತೀತವಾಗಿ ಬೆಳೆಯುವುದೇ ಮಹಿಳಾ ಸಬಲೀಕರಣವೆಂದಾದರೆ ಆ ಸಬಲೀಕರಣ ಮಹಿಳೆಯರನ್ನು ಎತ್ತ ಕೊಂಡೊಯ್ಯಬಹುದು? ಯಾವ ಬಗೆಯ ಸಮಾಜವನ್ನು ಅದು ನಿರ್ಮಿಸಬಲ್ಲುದು?
    ಮಹಿಳಾ ಸಬಲೀಕರಣಕ್ಕಾಗಿ ಹಗಲಿರುಳು ದುಡಿಯುತ್ತಿರುವ ಮತ್ತು ಹತ್ತು-ಹಲವು ಪುರಸ್ಕಾರಗಳನ್ನು ಪಡೆದಿರುವ ರೂಪ್‍ರೇಖಾ ವರ್ಮ ಅವರ ನಾಟಕದಲ್ಲಿ ಒಂದು ದೃಶ್ಯವಿದೆ.
   ತಾಯಿಯ ರೊಟ್ಟಿಯೂ ಉರುಟು
   ತಂದೆಯ ಪೈಸೆಯೂ ಉರುಟು
   ಚಂದ್ರನೂ ಉರುಟು
   ಸೂರ್ಯನೂ ಉರುಟು
   ಇಡೀ ಜಗತ್ತೇ ಉರುಟು ಉರುಟು
ಎಂದು ಪುಟ್ಟ ಹುಡುಗಿ ವಿೂನ ಹಾಡುತ್ತಿರುತ್ತಾಳೆ. ಅದನ್ನು ಕೇಳಿಸಿಕೊಂಡ ಚಿಕ್ಕಪ್ಪ ಆಕೆಯನ್ನು ಹತ್ತಿರ ಕರೆಯುತ್ತಾನೆ. ನಿನ್ನ ಹಾಡು ಸರಿಯಿಲ್ಲ ಅನ್ನುತ್ತಾನೆ. ಹುಡುಗಿಯ ಕಣ್ಣಲ್ಲಿ ಅಚ್ಚರಿ. ಏನು ತಪ್ಪು ಎಂದು ಪ್ರಶ್ನಿಸುತ್ತಾಳೆ. ಆತ ಹುಡುಗಿಯನ್ನು ಹತ್ತಿರ ಕೂರಿಸುತ್ತಾನೆ. ಈ ಹಾಡು ಏನು ಹೇಳುತ್ತದೆ ನೋಡು - ‘ಅಮ್ಮ ರೊಟ್ಟಿ ತಯಾರಿಸುತ್ತಾಳೆ, ಅಪ್ಪ ದುಡ್ಡು ತರುತ್ತಾನೆ’ ಎಂದು ತಾನೇ. ಯಾಕೆ ಅಮ್ಮ ದುಡ್ಡು ತರುತ್ತಾಳೆ, ಅಪ್ಪ ರೊಟ್ಟಿ ತಯಾರಿಸುತ್ತಾನೆ ಎಂದು ಹೇಳಿಲ್ಲ? ಹಾಗೂ ಆಗಬಹುದಲ್ಲವೇ ಮಗೂ... ಎಂದು ಪ್ರಶ್ನಿಸುತ್ತಾನೆ. ಹುಡುಗಿ ನಗುತ್ತಾಳೆ. ಚಿಕ್ಕಪ್ಪಾ.. ಅಮ್ಮ ರೊಟ್ಟಿ ತಯಾರಿಸದೇ ಅಪ್ಪ ರೊಟ್ಟಿ ತಯಾರಿಸುತ್ತಾರಾ? ನೀವೇನು ಚಿಕ್ಕಪ್ಪ ಹೀಗೆ ಕೇಳ್ತೀರಿ’ ಎಂದು ಹುಡುಗಿ ಹಲ್ಲು ಬಿಡುತ್ತಾಳೆ. ಚಿಕ್ಕಪ್ಪ ನಗುತ್ತಾರೆ. ‘ಹಾಗಾದರೆ, ಅಪ್ಪಂದಿರು ಯಾರೂ ರೊಟ್ಟಿ ತಯಾರಿಸುತ್ತಿಲ್ಲ ಎಂದು ಹೇಳಬಹುದಾ’ ಎಂದು ಹುಡುಗಿಯಲ್ಲಿ ಪ್ರಶ್ನಿಸುತ್ತಾರೆ. ಆಕೆ ಸಹಜ ದನಿಯಲ್ಲಿ, ‘ಹೌದು, ಯಾಕೆಂದರೆ ಅಪ್ಪ ಪುರುಷನಾಗಿದ್ದಾನೆ. ಪುರುಷರು ಅಡುಗೆ ಕೆಲಸ ಮಾಡುವುದಿಲ್ಲವಲ್ಲ’ ಅನ್ನುತ್ತಾಳೆ. ‘ಸರಿ ಮಗಳೇ, ಅಪ್ಪ ಪುರುಷನಾಗಿರುವುದರಿಂದ ರೊಟ್ಟಿ ತಯಾರಿಸುತ್ತಿಲ್ಲ ಅಲ್ಲವೇ. ಹಾಗಾದರೆ ನಿನ್ನೆ ನಾವು ಡಾಬಾಕ್ಕೆ ಹೋಗಿ ತಿಂಡಿ ತಿಂದೆವಲ್ಲ. ಅಲ್ಲಿ ರೊಟ್ಟಿ ತಯಾರಿಸಿದ್ದು ಯಾರೂಂತ ಹೇಳಬಲ್ಲೆಯಾ? ನೆನಪು ಮಾಡು’ ಅನ್ನುತ್ತಾರೆ. ಹುಡುಗಿ ಕೆನ್ನೆಗೊಮ್ಮೆ, ಗಲ್ಲಕ್ಕೊಮ್ಮೆ ಕೈಯಿಟ್ಟು ‘ಅದೂ.. ಅದೂ.. ಡಾಬಾವಾಲ ಅಂಕಲ್’ ಅನ್ನುತ್ತಾಳೆ. ‘ಡಾಬಾವಾಲ ಅಂಕಲ್ ಪುರುಷನೋ ಸ್ತ್ರೀಯೋ’ ಎಂದು ಪ್ರಶ್ನಿಸುತ್ತಾರೆ ಚಿಕ್ಕಪ್ಪ. ಪುರುಷ ಅನ್ನುತ್ತಾಳೆ. ‘ಹಾಗಾದರೆ, ನಿನ್ನ ಹಾಡು ತಪ್ಪಲ್ಲವೇ? ಪುರುಷರೂ ರೊಟ್ಟಿ ತಯಾರಿಸುತ್ತಾರಲ್ಲವೇ ಮಗಳೇ’ ಅನ್ನುತ್ತಾರೆ. ಹುಡುಗಿ, ‘ಸರಿ ಚಿಕ್ಕಪ್ಪ, ಪುರುಷರೂ ರೊಟ್ಟಿ ತಯಾರಿಸುತ್ತಾರೆ’ ಎಂದು ಒಪ್ಪಿಕೊಳ್ಳುತ್ತಾಳೆ. ಚಿಕ್ಕಪ್ಪ ಆಕೆಯ ಬೆನ್ನು ತಟ್ಟುತ್ತಾರೆ. ನನ್ನ ವಿೂನ ತುಂಬಾ ಜಾಣೆ ಅನ್ನುತ್ತಾರೆ. ಹುಡುಗಿ ಚಿಕ್ಕಪ್ಪನ ಶಹಬಾಸ್‍ಗಿರಿಯನ್ನು ಅನುಭವಿಸುತ್ತಿರುವಾಗ ಅವರು ಮತ್ತೆ ಪ್ರಶ್ನಿಸುತ್ತಾರೆ, ‘ಮಗಳೇ, ಇನ್ನು ‘ತಾಯಿಯ ಪೈಸೆಯೂ ಉರುಟು ಉರುಟು’ ಎಂದು ಹಾಡಬಹುದಲ್ಲವೇ? ಅದರಲ್ಲಿ ತಪ್ಪಿಲ್ಲವಲ್ಲ..' ಎಂದು ಕೇಳುತ್ತಾರೆ. ಆದರೆ ಹುಡುಗಿ ಒಪ್ಪುವುದಿಲ್ಲ. ಅಮ್ಮ ದುಡ್ಡು ತರುವುದಿಲ್ಲವಲ್ಲ, ಹೊರಗೆ ದುಡಿದು ದುಡ್ಡು ತರುವವ ತಂದೆಯಲ್ಲವೇ.. ಎಂಬುದು ವಿೂನಳ ವಾದ. ಚಿಕ್ಕಪ್ಪ ಒಪ್ಪುವುದಿಲ್ಲ. ತಾಯಿ ದುಡಿಯುವುದಿಲ್ಲ ಎಂದು ನಿನಗೆ ಯಾರು ಹೇಳಿದ್ದು ಎಂದು ಪ್ರಶ್ನಿಸುತ್ತಾರೆ. ಹುಡುಗಿಗೆ ಇರುಸು ಮುರುಸು. ಯಾರೇಕೆ ಹೇಳ್ಬೇಕು ಚಿಕ್ಕಪ್ಪಾ ಎಂದಾಕೆ ಪ್ರಶ್ನಿಸುತ್ತಾಳೆ. ತಾಯಿ ದಿನಾ ಮನೆಯಲ್ಲೇ ಇರುತ್ತಾರಲ್ಲ, ತಂದೆ ಕಚೇರಿಗೆ ಹೋಗಿ ದುಡ್ಡು ಸಂಪಾದಿಸುತ್ತಾರೆ ಎಂದು ಆಕೆ ಸಮರ್ಥಿಸಿಕೊಳ್ಳುತ್ತಾಳೆ. ಆಗ ಚಿಕ್ಕಪ್ಪ ಮಾತಿಗಿಳಿಯುತ್ತಾರೆ. ‘ನಿಜ, ನಿನ್ನ ತಾಯಿ ಇರೋದು ಮನೆಯಲ್ಲೇ. ಆದರೆ ಮನೆಯ ಕೆಲಸ-ಕಾರ್ಯಗಳನ್ನೆಲ್ಲ ಮಾಡುತ್ತಿರುವವರು ಯಾರು, ತಾಯಿಯಲ್ಲವೇ? ಒಂದು ವೇಳೆ ತಾಯಿ ಮಾಡುವ ಕೆಲಸಗಳನ್ನೆಲ್ಲ ಇನ್ನೊಬ್ಬರಿಂದ ಮಾಡಿಸುವುದಾದರೆ ನಾವೆಷ್ಟು ಸಂಬಳ ಕೊಡಬೇಕಾದೀತು? ಆ ಕೆಲಸ ತಾಯಿ ಮಾಡುತ್ತಾಳೆಂದಾದರೆ, ಆ ಸಂಬಳದ ದುಡ್ಡನ್ನೆಲ್ಲಾ ಆಕೆ ಮನೆಗಾಗಿ ಉಳಿಸುತ್ತಾಳೆ ಎಂದಾಗುತ್ತದೆ. ಅಲ್ಲದೇ, ಎಷ್ಟೋ ತಾಯಂದಿರು ಮನೆಯಿಂದ ಹೊರಗೆ ಹೋಗಿಯೂ ದುಡಿಯುತ್ತಿದ್ದಾರೆ. ನಿನ್ನ ಚಿಕ್ಕಮ್ಮನನ್ನು ನೋಡು ಅಥವಾ ನಿನ್ನ ಗೆಳತಿ ಪ್ರಣತಿಯ ತಾಯಿಯನ್ನೋ ಅಸ್ಮಾಳ ತಾಯಿಯನ್ನೋ ನೋಡು. ಅವರೆಲ್ಲಾ ದುಡ್ಡು ಸಂಪಾದನೆಗಾಗಿ ವಿವಿಧ ಕೆಲಸಗಳನ್ನು ಮಾಡುತ್ತಿದ್ದಾರಲ್ಲವೇ?..’ ಹುಡುಗಿಗೆ ಅರ್ಥವಾಗತೊಡಗುತ್ತದೆ. ಆಕೆ ತನ್ನ ಹಾಡನ್ನು ಬದಲಿಸಿ ಹಾಡುತ್ತಾಳೆ. ‘ತಾಯಿಯ ರೊಟ್ಟಿಯೂ ಉರುಟು, ತಂದೆಯ ರೊಟ್ಟಿಯೂ ಉರುಟು. ತಾಯಿಯ ಪೈಸೆಯೂ ಉರುಟು, ತಂದೆಯ ಪೈಸೆಯೂ ಉರುಟು..’ ಮಗು ಹೀಗೆ ಹಾಡುತ್ತಾ ಹೋದಂತೆ ಮಹಿಳೆಯ ವ್ಯಕ್ತಿತ್ವವು ಪುರುಷನೆತ್ತರಕ್ಕೆ ಏರುತ್ತಾ ಹೋಗುತ್ತದೆ. ಹೆಣ್ಣಿನ ಕುರಿತಂತೆ ಇರುವ ತಾತ್ಸಾರ ಭಾವನೆಗೆ ಏಟು ಬೀಳುತ್ತಲೇ ಇರುತ್ತದೆ.
   ನಿಜವಾಗಿ, ರೂಪ್‍ರೇಖಾ ವರ್ಮಾರ ಈ ನಾಟಕದ ಮುಂದೆ ಹೋಮಿ ಅದಜನಿಯ ಅವರ ಈ ‘ಮೈ ಚಾಯ್ಸ್’ ಏನೇನೂ ಅಲ್ಲ. ವಿೂನ ಮತ್ತು ಆ ಚಿಕ್ಕಪ್ಪರ ನಡುವಿನ ಸಂಭಾಷಣೆ ಎಷ್ಟು ಹೃದ್ಯವೆಂದರೆ ಓದುತ್ತಾ ಓದುತ್ತಾ ಆ ಮಗು ನಮ್ಮೊಳಗೇ ಇಳಿಯುತ್ತದೆ. ಅದರ ಪುಟ್ಟ ಪುಟ್ಟ ಅಚ್ಚರಿಗಳು ನಮ್ಮೊಳಗನ್ನು ನಾಟುತ್ತದೆ, ಕದಡುತ್ತದೆ, ಕುಕ್ಕುತ್ತದೆ. ಆ ಚಿಕ್ಕಪ್ಪನಾದರೋ ಪುರುಷ ಪ್ರಧಾನ ಸಮಾಜದ ಅಹಮಿಕೆಗೆ ಒಂದೊಂದೇ ಏಟುಗಳನ್ನು ಕೊಡುತ್ತಾ ಹೋಗುತ್ತಾರೆ. ಆ ಏಟುಗಳು ಎಷ್ಟು ನಾಜೂಕಿನವು ಎಂದರೆ, ಅವು ಏಟುಗಳಂತೆ ಕಾಣುವುದೇ ಇಲ್ಲ. ರೂಪ್‍ರೇಖಾ ವರ್ಮಾರ ಮಹಿಳಾ ಸಬಲೀಕರಣಕ್ಕೂ ಮೈ ಚಾಯ್ಸ್ ನ ಮಹಿಳಾ ಸಬಲೀಕರಣಕ್ಕೂ ನಡುವೆ ಇರುವ ದೊಡ್ಡ ವ್ಯತ್ಯಾಸ ಇದು. ಮಾತು, ಸಂಭಾಷಣೆ, ಹಾವ-ಭಾವ, ವಸ್ತು.. ಎಲ್ಲದರಲ್ಲೂ ಆ ಮಗು ಮತ್ತು ಚಿಕ್ಕಪ್ಪನೆದುರು ಮೈ ಚಾಯ್ಸ್ ಸೋಲುತ್ತದೆ. ದೀಪಿಕಾ ಪಡುಕೋಣೆಯ ಮಾತುಗಳಲ್ಲಿ ಮನಸ್ಸನ್ನು ಕದಡುವ ಕಳಕಳಿಯಿಲ್ಲ; ಆಕ್ರೋಶ, ಅಹಮಿಕೆ, ಗಡಸುತನವಷ್ಟೇ ಇದೆ. ಹಾಗಂತ, ರೂಪ್‍ರೇಖಾ ವರ್ಮಾರ ನಾಟಕದ ಜೊತೆ ಮೈ ಚಾಯ್ಸ್ ಅನ್ನು ಹೋಲಿಸದೇ ಒಂದು ಒಂಟಿ ವೀಡಿಯೋವಾಗಿ ನೋಡಿದರೂ ಅದು ಮಹಿಳಾ ಸಬಲೀಕರಣಕ್ಕಿಂತ ಲೆಸ್ಲಿ ಉಡ್ವಿನ್‍ರ ‘ಇಂಡಿಯಾಸ್ ಡಾಟರ್’ಗೆ ಪ್ರತ್ಯುತ್ತರ ಕೊಡಲು ತಯಾರಿಸಲಾದ ವೀಡಿಯೋದಂತೆ ಕಾಣಿಸುತ್ತದೆ. ಮಹಿಳೆಯರು ಹೇಗಿರಬೇಕೆಂದು ಆರೋಪಿ ಮುಖೇಶ್ ಸಿಂಗ್ ‘ಇಂಡಿಯಾಸ್ ಡಾಟರ್’ನಲ್ಲಿ ಹೇಳುತ್ತಾನೆ. ಆತನ ವಕೀಲರಿಬ್ಬರೂ ಆತನಂತೆಯೇ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ನಿಜವಾಗಿ, ಅವರ ಮಹಿಳಾ ವಿರೋಧಿ ಹೇಳಿಕೆಗಳಿಗೆ ಪ್ರತಿಕ್ರಿಯೆಯೆಂಬಂತೆ ಮೈ ಚಾಯ್ಸ್ ಅನ್ನು ಪರಿಗಣಿಸಬಹುದೇ ಹೊರತು ಮಹಿಳಾ ಸಬಲೀಕರಣದ ಸಂಕೇತವಾಗಿ ಅಲ್ಲ. ಮೈ ಚಾಯ್ಸ್ ನಲ್ಲಿ ಮಹಿಳೆಯ ಜಗತ್ತು ತೀರಾ ಸೀಮಿತವಾದದ್ದು. ಓರ್ವ ಸಿನಿಮಾ ತಾರೆಯ ಬೀಸು ಹೇಳಿಕೆಗಳಷ್ಟೇ ಮೈ ಚಾಯ್ಸ್ ನಲ್ಲಿದೆ. ಅದು ಬಿಟ್ಟು ಮಹಿಳಾ ಸಬಲೀಕರಣವನ್ನು ಅದು ಧ್ವನಿಸುವುದೇ ಇಲ್ಲ. ಮಹಿಳಾ ಜಗತ್ತಿನ ವಿವಿಧ ಮುಖಗಳಿಗೆ ಅದರಲ್ಲಿ ಸ್ಥಾನವೂ ಇಲ್ಲ. ಸೆಕ್ಸ್ ಅನ್ನೇ ಕೇಂದ್ರೀಕರಿಸಿ ನಿರ್ಮಿಸಲಾದ ವೀಡಿಯೋ ಅದು. ಆದರೆ ಅದರಾಚೆಗೆ ಬಹುದೊಡ್ಡ ಮಹಿಳಾ ಗುಂಪಿದೆ. ಅವರ ಸಬಲೀಕರಣಕ್ಕೆ ಈ ವೀಡಿಯೋದಲ್ಲಿ ಏನೇನೂ ಇಲ್ಲ. ಶಿಕ್ಷಣ, ಉದ್ಯೋಗ, ಗೃಹಹಿಂಸೆ, ಅತ್ಯಾಚಾರ, ವರದಕ್ಷಿಣೆ, ಭ್ರೂಣಹತ್ಯೆ, ಲಿಂಗ-ವೇತನ ತಾರತಮ್ಯ, ಲೈಂಗಿಕ ದೌರ್ಜನ್ಯ.. ಹೀಗೆ ಸಬಲೀಕರಣಗೊಳ್ಳದ ಅಸಂಖ್ಯ ಸಮಸ್ಯೆಗಳಿವೆ. ‘ಮೈ ಬಾಡಿ, ಮೈ ಮೈಂಡ್, ಮೈ ಚಾಯ್ಸ್’ ಎಂಬ ಮಾತುಗಳು ಮಹಿಳಾ ಜಗತ್ತನ್ನು ಈ ಸಮಸ್ಯೆಗಳಿಂದ ಮುಕ್ತಗೊಳಿಸುವುದಕ್ಕೆ ಖಂಡಿತ ಪರ್ಯಾಪ್ತವಲ್ಲ. ಒಂದು ರೀತಿಯಲ್ಲಿ, ಈ ವೀಡಿಯೋ ಪರಿಹಾರ ಅಲ್ಲ, ಸಮಸ್ಯೆ. ಸಬಲೀಕರಣವಲ್ಲ, ದುರ್ಬಲೀಕರಣ. ಸಿನಿಮಾ ತಾರೆಯೋರ್ವಳು ಸಿನಿಮಾದಲ್ಲಿ ಹೊಡೆಯಬಹುದಾದ ಡಯಲಾಗಷ್ಟೇ ಅದು. ದೀಪಿಕಾ ಪಡುಕೋಣೆ ಆ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಿದ್ದಾರೆ.
   ಒಂದು ವೇಳೆ ದೀಪಿಕಾ ಪಡುಕೋಣೆಯ ಬದಲು ವಿೂನ ಮತ್ತು ಆ ಚಿಕ್ಕಪ್ಪ ರ ಮುದ್ದು ಮುದ್ದು ಸಂಭಾಷಣೆ ಮತ್ತು ದೃಶ್ಯಗಳು ಮೈ ಚಾಯ್ಸ್ ನಲ್ಲಿ ಮೂಡಿ ಬರುತ್ತಿದ್ದರೆ ಹೇಗಿರುತ್ತಿತ್ತು? ಅದು ವೀಕ್ಷಕರನ್ನು ಹೇಗೆಲ್ಲ ಕಾಡಬಹುದಿತ್ತು? ಸಬಲೀಕರಣಗೊಲ್ಲದ  ಮಹಿಳಾ ಜಗತ್ತಿನ ಮೇಲೆ ಮತ್ತು ಅದಕ್ಕೆ ಅಡ್ಡಿಯಾಗಿರುವ ಪುರುಷ ಮನೋಭಾವದ ಮೇಲೆ ಅದು ಯಾವ ಪ್ರಭಾವವನ್ನು ಬೀರಬಹುದಿತ್ತು?