ರೂಪ್‍ರೇಖಾ ವರ್ಮ |
ಮಹಿಳಾ ಸಬಲೀಕರಣಕ್ಕಾಗಿ ಹಗಲಿರುಳು ದುಡಿಯುತ್ತಿರುವ ಮತ್ತು ಹತ್ತು-ಹಲವು ಪುರಸ್ಕಾರಗಳನ್ನು ಪಡೆದಿರುವ ರೂಪ್‍ರೇಖಾ ವರ್ಮ ಅವರ ನಾಟಕದಲ್ಲಿ ಒಂದು ದೃಶ್ಯವಿದೆ.
ತಾಯಿಯ ರೊಟ್ಟಿಯೂ ಉರುಟು
ತಂದೆಯ ಪೈಸೆಯೂ ಉರುಟು
ಚಂದ್ರನೂ ಉರುಟು
ಸೂರ್ಯನೂ ಉರುಟು
ಇಡೀ ಜಗತ್ತೇ ಉರುಟು ಉರುಟು
ಎಂದು ಪುಟ್ಟ ಹುಡುಗಿ ವಿೂನ ಹಾಡುತ್ತಿರುತ್ತಾಳೆ. ಅದನ್ನು ಕೇಳಿಸಿಕೊಂಡ ಚಿಕ್ಕಪ್ಪ ಆಕೆಯನ್ನು ಹತ್ತಿರ ಕರೆಯುತ್ತಾನೆ. ನಿನ್ನ ಹಾಡು ಸರಿಯಿಲ್ಲ ಅನ್ನುತ್ತಾನೆ. ಹುಡುಗಿಯ ಕಣ್ಣಲ್ಲಿ ಅಚ್ಚರಿ. ಏನು ತಪ್ಪು ಎಂದು ಪ್ರಶ್ನಿಸುತ್ತಾಳೆ. ಆತ ಹುಡುಗಿಯನ್ನು ಹತ್ತಿರ ಕೂರಿಸುತ್ತಾನೆ. ಈ ಹಾಡು ಏನು ಹೇಳುತ್ತದೆ ನೋಡು - ‘ಅಮ್ಮ ರೊಟ್ಟಿ ತಯಾರಿಸುತ್ತಾಳೆ, ಅಪ್ಪ ದುಡ್ಡು ತರುತ್ತಾನೆ’ ಎಂದು ತಾನೇ. ಯಾಕೆ ಅಮ್ಮ ದುಡ್ಡು ತರುತ್ತಾಳೆ, ಅಪ್ಪ ರೊಟ್ಟಿ ತಯಾರಿಸುತ್ತಾನೆ ಎಂದು ಹೇಳಿಲ್ಲ? ಹಾಗೂ ಆಗಬಹುದಲ್ಲವೇ ಮಗೂ... ಎಂದು ಪ್ರಶ್ನಿಸುತ್ತಾನೆ. ಹುಡುಗಿ ನಗುತ್ತಾಳೆ. ಚಿಕ್ಕಪ್ಪಾ.. ಅಮ್ಮ ರೊಟ್ಟಿ ತಯಾರಿಸದೇ ಅಪ್ಪ ರೊಟ್ಟಿ ತಯಾರಿಸುತ್ತಾರಾ? ನೀವೇನು ಚಿಕ್ಕಪ್ಪ ಹೀಗೆ ಕೇಳ್ತೀರಿ’ ಎಂದು ಹುಡುಗಿ ಹಲ್ಲು ಬಿಡುತ್ತಾಳೆ. ಚಿಕ್ಕಪ್ಪ ನಗುತ್ತಾರೆ. ‘ಹಾಗಾದರೆ, ಅಪ್ಪಂದಿರು ಯಾರೂ ರೊಟ್ಟಿ ತಯಾರಿಸುತ್ತಿಲ್ಲ ಎಂದು ಹೇಳಬಹುದಾ’ ಎಂದು ಹುಡುಗಿಯಲ್ಲಿ ಪ್ರಶ್ನಿಸುತ್ತಾರೆ. ಆಕೆ ಸಹಜ ದನಿಯಲ್ಲಿ, ‘ಹೌದು, ಯಾಕೆಂದರೆ ಅಪ್ಪ ಪುರುಷನಾಗಿದ್ದಾನೆ. ಪುರುಷರು ಅಡುಗೆ ಕೆಲಸ ಮಾಡುವುದಿಲ್ಲವಲ್ಲ’ ಅನ್ನುತ್ತಾಳೆ. ‘ಸರಿ ಮಗಳೇ, ಅಪ್ಪ ಪುರುಷನಾಗಿರುವುದರಿಂದ ರೊಟ್ಟಿ ತಯಾರಿಸುತ್ತಿಲ್ಲ ಅಲ್ಲವೇ. ಹಾಗಾದರೆ ನಿನ್ನೆ ನಾವು ಡಾಬಾಕ್ಕೆ ಹೋಗಿ ತಿಂಡಿ ತಿಂದೆವಲ್ಲ. ಅಲ್ಲಿ ರೊಟ್ಟಿ ತಯಾರಿಸಿದ್ದು ಯಾರೂಂತ ಹೇಳಬಲ್ಲೆಯಾ? ನೆನಪು ಮಾಡು’ ಅನ್ನುತ್ತಾರೆ. ಹುಡುಗಿ ಕೆನ್ನೆಗೊಮ್ಮೆ, ಗಲ್ಲಕ್ಕೊಮ್ಮೆ ಕೈಯಿಟ್ಟು ‘ಅದೂ.. ಅದೂ.. ಡಾಬಾವಾಲ ಅಂಕಲ್’ ಅನ್ನುತ್ತಾಳೆ. ‘ಡಾಬಾವಾಲ ಅಂಕಲ್ ಪುರುಷನೋ ಸ್ತ್ರೀಯೋ’ ಎಂದು ಪ್ರಶ್ನಿಸುತ್ತಾರೆ ಚಿಕ್ಕಪ್ಪ. ಪುರುಷ ಅನ್ನುತ್ತಾಳೆ. ‘ಹಾಗಾದರೆ, ನಿನ್ನ ಹಾಡು ತಪ್ಪಲ್ಲವೇ? ಪುರುಷರೂ ರೊಟ್ಟಿ ತಯಾರಿಸುತ್ತಾರಲ್ಲವೇ ಮಗಳೇ’ ಅನ್ನುತ್ತಾರೆ. ಹುಡುಗಿ, ‘ಸರಿ ಚಿಕ್ಕಪ್ಪ, ಪುರುಷರೂ ರೊಟ್ಟಿ ತಯಾರಿಸುತ್ತಾರೆ’ ಎಂದು ಒಪ್ಪಿಕೊಳ್ಳುತ್ತಾಳೆ. ಚಿಕ್ಕಪ್ಪ ಆಕೆಯ ಬೆನ್ನು ತಟ್ಟುತ್ತಾರೆ. ನನ್ನ ವಿೂನ ತುಂಬಾ ಜಾಣೆ ಅನ್ನುತ್ತಾರೆ. ಹುಡುಗಿ ಚಿಕ್ಕಪ್ಪನ ಶಹಬಾಸ್‍ಗಿರಿಯನ್ನು ಅನುಭವಿಸುತ್ತಿರುವಾಗ ಅವರು ಮತ್ತೆ ಪ್ರಶ್ನಿಸುತ್ತಾರೆ, ‘ಮಗಳೇ, ಇನ್ನು ‘ತಾಯಿಯ ಪೈಸೆಯೂ ಉರುಟು ಉರುಟು’ ಎಂದು ಹಾಡಬಹುದಲ್ಲವೇ? ಅದರಲ್ಲಿ ತಪ್ಪಿಲ್ಲವಲ್ಲ..' ಎಂದು ಕೇಳುತ್ತಾರೆ. ಆದರೆ ಹುಡುಗಿ ಒಪ್ಪುವುದಿಲ್ಲ. ಅಮ್ಮ ದುಡ್ಡು ತರುವುದಿಲ್ಲವಲ್ಲ, ಹೊರಗೆ ದುಡಿದು ದುಡ್ಡು ತರುವವ ತಂದೆಯಲ್ಲವೇ.. ಎಂಬುದು ವಿೂನಳ ವಾದ. ಚಿಕ್ಕಪ್ಪ ಒಪ್ಪುವುದಿಲ್ಲ. ತಾಯಿ ದುಡಿಯುವುದಿಲ್ಲ ಎಂದು ನಿನಗೆ ಯಾರು ಹೇಳಿದ್ದು ಎಂದು ಪ್ರಶ್ನಿಸುತ್ತಾರೆ. ಹುಡುಗಿಗೆ ಇರುಸು ಮುರುಸು. ಯಾರೇಕೆ ಹೇಳ್ಬೇಕು ಚಿಕ್ಕಪ್ಪಾ ಎಂದಾಕೆ ಪ್ರಶ್ನಿಸುತ್ತಾಳೆ. ತಾಯಿ ದಿನಾ ಮನೆಯಲ್ಲೇ ಇರುತ್ತಾರಲ್ಲ, ತಂದೆ ಕಚೇರಿಗೆ ಹೋಗಿ ದುಡ್ಡು ಸಂಪಾದಿಸುತ್ತಾರೆ ಎಂದು ಆಕೆ ಸಮರ್ಥಿಸಿಕೊಳ್ಳುತ್ತಾಳೆ. ಆಗ ಚಿಕ್ಕಪ್ಪ ಮಾತಿಗಿಳಿಯುತ್ತಾರೆ. ‘ನಿಜ, ನಿನ್ನ ತಾಯಿ ಇರೋದು ಮನೆಯಲ್ಲೇ. ಆದರೆ ಮನೆಯ ಕೆಲಸ-ಕಾರ್ಯಗಳನ್ನೆಲ್ಲ ಮಾಡುತ್ತಿರುವವರು ಯಾರು, ತಾಯಿಯಲ್ಲವೇ? ಒಂದು ವೇಳೆ ತಾಯಿ ಮಾಡುವ ಕೆಲಸಗಳನ್ನೆಲ್ಲ ಇನ್ನೊಬ್ಬರಿಂದ ಮಾಡಿಸುವುದಾದರೆ ನಾವೆಷ್ಟು ಸಂಬಳ ಕೊಡಬೇಕಾದೀತು? ಆ ಕೆಲಸ ತಾಯಿ ಮಾಡುತ್ತಾಳೆಂದಾದರೆ, ಆ ಸಂಬಳದ ದುಡ್ಡನ್ನೆಲ್ಲಾ ಆಕೆ ಮನೆಗಾಗಿ ಉಳಿಸುತ್ತಾಳೆ ಎಂದಾಗುತ್ತದೆ. ಅಲ್ಲದೇ, ಎಷ್ಟೋ ತಾಯಂದಿರು ಮನೆಯಿಂದ ಹೊರಗೆ ಹೋಗಿಯೂ ದುಡಿಯುತ್ತಿದ್ದಾರೆ. ನಿನ್ನ ಚಿಕ್ಕಮ್ಮನನ್ನು ನೋಡು ಅಥವಾ ನಿನ್ನ ಗೆಳತಿ ಪ್ರಣತಿಯ ತಾಯಿಯನ್ನೋ ಅಸ್ಮಾಳ ತಾಯಿಯನ್ನೋ ನೋಡು. ಅವರೆಲ್ಲಾ ದುಡ್ಡು ಸಂಪಾದನೆಗಾಗಿ ವಿವಿಧ ಕೆಲಸಗಳನ್ನು ಮಾಡುತ್ತಿದ್ದಾರಲ್ಲವೇ?..’ ಹುಡುಗಿಗೆ ಅರ್ಥವಾಗತೊಡಗುತ್ತದೆ. ಆಕೆ ತನ್ನ ಹಾಡನ್ನು ಬದಲಿಸಿ ಹಾಡುತ್ತಾಳೆ. ‘ತಾಯಿಯ ರೊಟ್ಟಿಯೂ ಉರುಟು, ತಂದೆಯ ರೊಟ್ಟಿಯೂ ಉರುಟು. ತಾಯಿಯ ಪೈಸೆಯೂ ಉರುಟು, ತಂದೆಯ ಪೈಸೆಯೂ ಉರುಟು..’ ಮಗು ಹೀಗೆ ಹಾಡುತ್ತಾ ಹೋದಂತೆ ಮಹಿಳೆಯ ವ್ಯಕ್ತಿತ್ವವು ಪುರುಷನೆತ್ತರಕ್ಕೆ ಏರುತ್ತಾ ಹೋಗುತ್ತದೆ. ಹೆಣ್ಣಿನ ಕುರಿತಂತೆ ಇರುವ ತಾತ್ಸಾರ ಭಾವನೆಗೆ ಏಟು ಬೀಳುತ್ತಲೇ ಇರುತ್ತದೆ.
ನಿಜವಾಗಿ, ರೂಪ್‍ರೇಖಾ ವರ್ಮಾರ ಈ ನಾಟಕದ ಮುಂದೆ ಹೋಮಿ ಅದಜನಿಯ ಅವರ ಈ ‘ಮೈ ಚಾಯ್ಸ್’ ಏನೇನೂ ಅಲ್ಲ. ವಿೂನ ಮತ್ತು ಆ ಚಿಕ್ಕಪ್ಪರ ನಡುವಿನ ಸಂಭಾಷಣೆ ಎಷ್ಟು ಹೃದ್ಯವೆಂದರೆ ಓದುತ್ತಾ ಓದುತ್ತಾ ಆ ಮಗು ನಮ್ಮೊಳಗೇ ಇಳಿಯುತ್ತದೆ. ಅದರ ಪುಟ್ಟ ಪುಟ್ಟ ಅಚ್ಚರಿಗಳು ನಮ್ಮೊಳಗನ್ನು ನಾಟುತ್ತದೆ, ಕದಡುತ್ತದೆ, ಕುಕ್ಕುತ್ತದೆ. ಆ ಚಿಕ್ಕಪ್ಪನಾದರೋ ಪುರುಷ ಪ್ರಧಾನ ಸಮಾಜದ ಅಹಮಿಕೆಗೆ ಒಂದೊಂದೇ ಏಟುಗಳನ್ನು ಕೊಡುತ್ತಾ ಹೋಗುತ್ತಾರೆ. ಆ ಏಟುಗಳು ಎಷ್ಟು ನಾಜೂಕಿನವು ಎಂದರೆ, ಅವು ಏಟುಗಳಂತೆ ಕಾಣುವುದೇ ಇಲ್ಲ. ರೂಪ್‍ರೇಖಾ ವರ್ಮಾರ ಮಹಿಳಾ ಸಬಲೀಕರಣಕ್ಕೂ ಮೈ ಚಾಯ್ಸ್ ನ ಮಹಿಳಾ ಸಬಲೀಕರಣಕ್ಕೂ ನಡುವೆ ಇರುವ ದೊಡ್ಡ ವ್ಯತ್ಯಾಸ ಇದು. ಮಾತು, ಸಂಭಾಷಣೆ, ಹಾವ-ಭಾವ, ವಸ್ತು.. ಎಲ್ಲದರಲ್ಲೂ ಆ ಮಗು ಮತ್ತು ಚಿಕ್ಕಪ್ಪನೆದುರು ಮೈ ಚಾಯ್ಸ್ ಸೋಲುತ್ತದೆ. ದೀಪಿಕಾ ಪಡುಕೋಣೆಯ ಮಾತುಗಳಲ್ಲಿ ಮನಸ್ಸನ್ನು ಕದಡುವ ಕಳಕಳಿಯಿಲ್ಲ; ಆಕ್ರೋಶ, ಅಹಮಿಕೆ, ಗಡಸುತನವಷ್ಟೇ ಇದೆ. ಹಾಗಂತ, ರೂಪ್‍ರೇಖಾ ವರ್ಮಾರ ನಾಟಕದ ಜೊತೆ ಮೈ ಚಾಯ್ಸ್ ಅನ್ನು ಹೋಲಿಸದೇ ಒಂದು ಒಂಟಿ ವೀಡಿಯೋವಾಗಿ ನೋಡಿದರೂ ಅದು ಮಹಿಳಾ ಸಬಲೀಕರಣಕ್ಕಿಂತ ಲೆಸ್ಲಿ ಉಡ್ವಿನ್‍ರ ‘ಇಂಡಿಯಾಸ್ ಡಾಟರ್’ಗೆ ಪ್ರತ್ಯುತ್ತರ ಕೊಡಲು ತಯಾರಿಸಲಾದ ವೀಡಿಯೋದಂತೆ ಕಾಣಿಸುತ್ತದೆ. ಮಹಿಳೆಯರು ಹೇಗಿರಬೇಕೆಂದು ಆರೋಪಿ ಮುಖೇಶ್ ಸಿಂಗ್ ‘ಇಂಡಿಯಾಸ್ ಡಾಟರ್’ನಲ್ಲಿ ಹೇಳುತ್ತಾನೆ. ಆತನ ವಕೀಲರಿಬ್ಬರೂ ಆತನಂತೆಯೇ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ನಿಜವಾಗಿ, ಅವರ ಮಹಿಳಾ ವಿರೋಧಿ ಹೇಳಿಕೆಗಳಿಗೆ ಪ್ರತಿಕ್ರಿಯೆಯೆಂಬಂತೆ ಮೈ ಚಾಯ್ಸ್ ಅನ್ನು ಪರಿಗಣಿಸಬಹುದೇ ಹೊರತು ಮಹಿಳಾ ಸಬಲೀಕರಣದ ಸಂಕೇತವಾಗಿ ಅಲ್ಲ. ಮೈ ಚಾಯ್ಸ್ ನಲ್ಲಿ ಮಹಿಳೆಯ ಜಗತ್ತು ತೀರಾ ಸೀಮಿತವಾದದ್ದು. ಓರ್ವ ಸಿನಿಮಾ ತಾರೆಯ ಬೀಸು ಹೇಳಿಕೆಗಳಷ್ಟೇ ಮೈ ಚಾಯ್ಸ್ ನಲ್ಲಿದೆ. ಅದು ಬಿಟ್ಟು ಮಹಿಳಾ ಸಬಲೀಕರಣವನ್ನು ಅದು ಧ್ವನಿಸುವುದೇ ಇಲ್ಲ. ಮಹಿಳಾ ಜಗತ್ತಿನ ವಿವಿಧ ಮುಖಗಳಿಗೆ ಅದರಲ್ಲಿ ಸ್ಥಾನವೂ ಇಲ್ಲ. ಸೆಕ್ಸ್ ಅನ್ನೇ ಕೇಂದ್ರೀಕರಿಸಿ ನಿರ್ಮಿಸಲಾದ ವೀಡಿಯೋ ಅದು. ಆದರೆ ಅದರಾಚೆಗೆ ಬಹುದೊಡ್ಡ ಮಹಿಳಾ ಗುಂಪಿದೆ. ಅವರ ಸಬಲೀಕರಣಕ್ಕೆ ಈ ವೀಡಿಯೋದಲ್ಲಿ ಏನೇನೂ ಇಲ್ಲ. ಶಿಕ್ಷಣ, ಉದ್ಯೋಗ, ಗೃಹಹಿಂಸೆ, ಅತ್ಯಾಚಾರ, ವರದಕ್ಷಿಣೆ, ಭ್ರೂಣಹತ್ಯೆ, ಲಿಂಗ-ವೇತನ ತಾರತಮ್ಯ, ಲೈಂಗಿಕ ದೌರ್ಜನ್ಯ.. ಹೀಗೆ ಸಬಲೀಕರಣಗೊಳ್ಳದ ಅಸಂಖ್ಯ ಸಮಸ್ಯೆಗಳಿವೆ. ‘ಮೈ ಬಾಡಿ, ಮೈ ಮೈಂಡ್, ಮೈ ಚಾಯ್ಸ್’ ಎಂಬ ಮಾತುಗಳು ಮಹಿಳಾ ಜಗತ್ತನ್ನು ಈ ಸಮಸ್ಯೆಗಳಿಂದ ಮುಕ್ತಗೊಳಿಸುವುದಕ್ಕೆ ಖಂಡಿತ ಪರ್ಯಾಪ್ತವಲ್ಲ. ಒಂದು ರೀತಿಯಲ್ಲಿ, ಈ ವೀಡಿಯೋ ಪರಿಹಾರ ಅಲ್ಲ, ಸಮಸ್ಯೆ. ಸಬಲೀಕರಣವಲ್ಲ, ದುರ್ಬಲೀಕರಣ. ಸಿನಿಮಾ ತಾರೆಯೋರ್ವಳು ಸಿನಿಮಾದಲ್ಲಿ ಹೊಡೆಯಬಹುದಾದ ಡಯಲಾಗಷ್ಟೇ ಅದು. ದೀಪಿಕಾ ಪಡುಕೋಣೆ ಆ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಿದ್ದಾರೆ.
ಒಂದು ವೇಳೆ ದೀಪಿಕಾ ಪಡುಕೋಣೆಯ ಬದಲು ವಿೂನ ಮತ್ತು ಆ ಚಿಕ್ಕಪ್ಪ ರ ಮುದ್ದು ಮುದ್ದು ಸಂಭಾಷಣೆ ಮತ್ತು ದೃಶ್ಯಗಳು ಮೈ ಚಾಯ್ಸ್ ನಲ್ಲಿ ಮೂಡಿ ಬರುತ್ತಿದ್ದರೆ ಹೇಗಿರುತ್ತಿತ್ತು? ಅದು ವೀಕ್ಷಕರನ್ನು ಹೇಗೆಲ್ಲ ಕಾಡಬಹುದಿತ್ತು? ಸಬಲೀಕರಣಗೊಲ್ಲದ ಮಹಿಳಾ ಜಗತ್ತಿನ ಮೇಲೆ ಮತ್ತು ಅದಕ್ಕೆ ಅಡ್ಡಿಯಾಗಿರುವ ಪುರುಷ ಮನೋಭಾವದ ಮೇಲೆ ಅದು ಯಾವ ಪ್ರಭಾವವನ್ನು ಬೀರಬಹುದಿತ್ತು?
No comments:
Post a Comment