Wednesday, May 20, 2015

ಒಂದು ಹೋರಾಟ, ನೂರಾರು ನಿರೀಕ್ಷೆಗಳು...

   ಅಬ್ದುಲ್ ಅಝೀಝ್
 ಯಾಸೀನ್
 ಶರ್ಫುದ್ದೀನ್
 ಆಸಿಫ್ ಹುಸೈನ್
 ಮಕ್ಬೂಲ್ ಅಹ್ಮದ್
  `ಪದಾಧಿಕಾರಿಗಳ ಆಯ್ಕೆ' ಎಂಬ ಶೀರ್ಷಿಕೆಯಡಿ ಸಾಮಾನ್ಯವಾಗಿ ಇಂಥ ಹೆಸರುಗಳು ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವುದಿದೆ. ಅಧ್ಯಕ್ಷ, ಕಾರ್ಯದರ್ಶಿ, ಖಜಾಂಜಿ.. ಎಂದು ಮುಂತಾಗಿ ಅವರ ಹೊಣೆಗಾರಿಕೆಯ ವಿವರಗಳೂ ಅದರಲ್ಲಿರುತ್ತವೆ. ಬಹುತೇಕ ಒಂದೇ ವಿಚಾರಧಾರೆಯವರೇ ಇಂಥ ಸಮಿತಿಗಳಲ್ಲಿರುತ್ತಾರೆ. ವಿಶೇಷ ಏನೆಂದರೆ, ಈ ಮೇಲಿನವರ ವಿಚಾರಧಾರೆ ಒಂದೇ ಅಲ್ಲ. ಇವರು ಪ್ರತಿನಿಧಿಸುವ ಸಂಘಟನೆಗಳೂ ಒಂದೇ ಅಲ್ಲ. ಆದರೂ ಇವರೆಲ್ಲ ತಮ್ಮ ಊರನ್ನು ಮಾದಕ ವ್ಯಸನದಿಂದ ಮುಕ್ತಗೊಳಿಸುವುದಕ್ಕಾಗಿ ಜೊತೆಗೂಡಿದ್ದಾರೆ. ‘ಕೆಡುಕು ಮುಕ್ತ ಹೋರಾಟ ಸಮಿತಿ’ ಎಂಬೊಂದು ತಂಡವನ್ನು ಇವರು ರಚಿಸಿ ಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಕುದ್ರೋಳಿ ಎಂಬ ಪ್ರದೇಶವನ್ನು ಗುರಿಯಾಗಿಸಿಕೊಂಡು ರಚಿಸಲಾದ ಈ ಸಮಿತಿಯನ್ನು ಎಪ್ರಿಲ್ 17 ರಂದು ಉದ್ಘಾಟಿಸಲಾಗಿದೆ. ಕುದ್ರೋಳಿ ವ್ಯಾಪ್ತಿಯ 5 ಮಸೀದಿಗಳ ಅಧ್ಯಕ್ಷರುಗಳೂ ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಹಾಗಂತ, ಈ ಮಸೀದಿಗಳ ವಿಚಾರಧಾರೆಗಳು ಒಂದೇ ಅಲ್ಲ. ಅನೇಕ ಬಾರಿ ಈ ವಿಚಾರಧಾರೆಗಳು ಮುಖಾಮುಖಿಯಾಗಿವೆ. ವೈಚಾರಿಕ ಬಿಕ್ಕಟ್ಟುಗಳೂ, ತರ್ಕಗಳೂ ಮತ್ತು ಪರಸ್ಪರರ ನಡುವೆ ಸಣ್ಣ ಮಟ್ಟಿನ ಬೇರ್ಪಡುವಿಕೆಗಳೂ ನಡೆದಿವೆ. ಇಷ್ಟಿದ್ದೂ ಮುಹಮ್ಮದ್ ಬಾಖವಿ, ಉಸ್ಮಾನ್ ದಾರಿಮಿ, ಮುಹಮ್ಮದ್ ರಫೀಕ್ ಮದನಿ, ರಿಯಾಝುಲ್ ಹಕ್ಕ್ ಅನ್ಸಾರಿ, ಮುಫ್ತಿ ಅಬ್ದುಲ್ ಮನ್ನಾನ್.. ಮುಂತಾದ ವಿಭಿನ್ನ ವಿಚಾರಧಾರೆಯ ಧರ್ಮ ಗುರುಗಳು ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಇಡೀ ಕುದ್ರೋಳಿ ಪ್ರದೇಶವನ್ನು 9 ಮೊಹಲ್ಲಗಳಾಗಿ ವಿಭಜಿಸಲಾಗಿದೆ. ಪ್ರತಿ ಮೊಹಲ್ಲಗಳಿಗೂ ಸಂಚಾಲಕ, ಉಪಸಂಚಾಲಕರನ್ನು ನೇಮಿಸಲಾಗಿದೆ. ಅಲ್ಲದೆ, ಪ್ರದೇಶದ ನಾರಾಯಣ ಕರ್ಕೇರ ಮುಂತಾದವರನ್ನು ಸೇರಿಸಿಕೊಂಡು ‘ಕೆಡುಕು ಮುಕ್ತ ಸೌಹಾರ್ದ ಸಮಿತಿ’ಯನ್ನೂ ರಚಿಸಲಾಗುತ್ತಿದೆ. ಕಾರ್ನರ್ ಮೀಟಿಂಗ್‍ಗಳು, ಹಿರಿಯರ ಸಭೆಗಳು, ಮಹಿಳೆ, ವಿದ್ಯಾರ್ಥಿ ಮತ್ತು ಯುವಕರ ಸಭೆಗಳನ್ನು ನಡೆಸಲಾಗುತ್ತಿದೆ. ಕುದ್ರೋಳಿ ಪರಿಸರದ ಗಾಂಜಾ ಅಡ್ಡೆಗಳಿಗೆ ಸಮಿತಿಯ ಸದಸ್ಯರು ಭೇಟಿ ಕೊಡುತ್ತಿದ್ದಾರೆ. ಮೆಡಿಕಲ್‍ಗಳಿಗೆ ಸೂಚನೆಗಳನ್ನು ನೀಡುತ್ತಿದ್ದಾರೆ. ಜಿಲ್ಲಾಧಿಕಾರಿ, ಡಿಸಿಪಿಗಳು ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಇವೆಲ್ಲ ಎಷ್ಟು ಪರಿಣಾಮ ಬೀರಿದೆಯೆಂದರೆ, ಈಗಾಗಲೇ ಗಾಂಜಾದ ಎರಡು ಅಡ್ಡೆಗಳು ಬಾಗಿಲು ಮುಚ್ಚಿವೆ. ಈ ಪ್ರದೇಶದ ಮಾದಕ ಪದಾರ್ಥಗಳ ಮಾರಾಟಗಾರರೂ ಮತ್ತು ಸೇವನೆಗಾರರಲ್ಲಿ ಒಂದು ಬಗೆಯ ಭೀತಿ ಉಂಟಾಗಿದೆ. ಮಾದಕ ಪದಾರ್ಥಗಳ ವ್ಯಾಪಾರಿಗಳು ಮತ್ತು ಗ್ರಾಹಕರನ್ನು ಮುಖತಃ ಭೇಟಿಯಾಗುವುದು, ಇದರಿಂದ ದೂರ ನಿಲ್ಲಲು ನೆರವು ನೀಡುವುದು ಮತ್ತು ಕೇಳದಿದ್ದರೆ ಕಾನೂನಿನ ಕೈಗೆ ಒಪ್ಪಿಸುವ ಈ ಸಮಿತಿಯ ನಿರ್ಧಾರವು ಸರ್ವತ್ರ ಶ್ಲಾಘನೆಯ ಪಾತ್ರವಾಗಿದೆ. ನಿಜವಾಗಿ, ರಾಜ್ಯದಲ್ಲಿಯೇ ಒಂದು ಅಪರೂಪದ ಬೆಳವಣಿಗೆ ಇದು. ಅಷ್ಟಕ್ಕೂ, ಕೆಡುಕು ಎಂಬುದು ಕುದ್ರೋಳಿ ಪ್ರದೇಶದಲ್ಲಿ ಮಾತ್ರ ಕಾಣುವ ಸಮಸ್ಯೆಯಲ್ಲ. ಮಾದಕ ವ್ಯಸನಕ್ಕೆ ತುತ್ತಾದ ಮತ್ತು ಅದರ ವ್ಯವಹಾರ ಮಾಡುವ ಪ್ರದೇಶಗಳು ಈ ರಾಜ್ಯದಲ್ಲಿ ಅನೇಕ ಕಡೆ ಇವೆ. ಮದ್ಯಪಾನವನ್ನು ಚಟವಾಗಿಸಿ ಕೊಂಡವರು, ಜೂಜಿನಂತಹ ವಿವಿಧ ಕೆಡುಕುಗಳಲ್ಲಿ ತೊಡಗಿಸಿ ಕೊಂಡವರು ಅಸಂಖ್ಯ ಇದ್ದಾರೆ. ಇವರೆಲ್ಲ ಯಾವುದಾದರೊಂದು `ಕುದ್ರೋಳಿ'ಯಲ್ಲಿ ಬದುಕುತ್ತಿರುವವರೇ. ಇಷ್ಟಿದ್ದೂ, ಇವರ ವಿರುದ್ಧ ಸಮಾಜ ಮಾತಾಡಿದ್ದು ಕಡಿಮೆ. ವಿದ್ಯಾರ್ಥಿ-ಯುವಕರು ಈ ಮಾದಕ ವ್ಯಸನಕ್ಕೆ ತುತ್ತಾಗುತ್ತಿರುವುದನ್ನು ಪತ್ರಿಕೆಗಳಲ್ಲಿ ಓದಿಯೋ ಕಣ್ಣಾರೆ ಕಂಡೋ ತ್ಚು ತ್ಚು ತ್ಚು ಎಂಬ ಉದ್ಗಾರದೊಂದಿಗೆ ಸುಮ್ಮನಾಗುವ ಸಂಭಾವಿತರೇ ಹೆಚ್ಚಿರುತ್ತಾರೆ. ಹೀಗಿದ್ದೂ  ಈ ಒಂಟಿ ಮನಸುಗಳು ಒಟ್ಟಾಗುವುದಿಲ್ಲ. ಇದಕ್ಕೆ ಭಿನ್ನ ವಿಚಾರಧಾರೆಗಳು, ರಾಜಕೀಯ ಹಿತಾಸಕ್ತಿಗಳು, ಜಾತಿ-ಧರ್ಮಗಳ ಕಟ್ಟುಪಾಡು.. ಮುಂತಾದುವು ಹೇತುವಾಗಿರುತ್ತದೆ. ಆದ್ದರಿಂದಲೇ ಕುದ್ರೋಳಿಯ `ಕೆಡುಕು ಮುಕ್ತ ಹೋರಾಟ ಸಮಿತಿ' ಶ್ಲಾಘನೆಗೆ ಅರ್ಹವಾಗುವುದು. ವಿಚಾರಧಾರೆಯ ಭಿನ್ನತೆಗಿಂತ ಕೆಡುಕಿನ ನಿರ್ಮೂಲನಕ್ಕೆ ಹೆಚ್ಚು ಮಹತ್ವಕೊಟ್ಟ ಈ ಪ್ರದೇಶದ ಮಂದಿ ಅಭಿನಂದನೆಗೆ ಅರ್ಹರೆನಿಸುವುದು.
  `ಸೈಂಟ್‍ಪಿಕ್ ಅಮೇರಿಕನ್' ಎಂಬ ವೆಬ್ ಸೈಟ್‍ನಲ್ಲಿ ಕ್ಯಾಸ್ಸಿ ರೋಡೆನ್‍ಬರ್ಗ್ ಎಂಬವರು 2012 ಎಪ್ರಿಲ್ 30ರಂದು ಓರ್ವ ಯುವಕನ ಮನಮಿಡಿಯುವ ಪತ್ರವೊಂದನ್ನು ಪ್ರಕಟಿಸುತ್ತಾರೆ.
 "ನಾನು ಜ್ಯಾಕ್. ನನ್ನ ಅದೃಷ್ಟ ಚೆನ್ನಾಗಿದೆ. ನಾನು ಮಾದಕ ವ್ಯಸನದ ಚಟದಿಂದ ನಿಧಾನಕ್ಕೆ ಹೊರಬರುತ್ತಿದ್ದೇನೆ. ಕಳೆದ 10 ತಿಂಗಳಿನಿಂದ ನಾನು ಮಾರಿಜುವಾನ ಸೇವಿಸುತ್ತಿಲ್ಲ. ನಾನು ಮಾದಕ ಪದಾರ್ಥಗಳ ಹೆಸರು ಕೇಳಿದ್ದು ಶಾಲಾ ದಿನಗಳಲ್ಲಿ. ಕೊಕೇನ್, ಹೆರಾಯಿನ್, ಗಾಂಜಾಗಳ ಬಗ್ಗೆ ನಾನು ತರಗತಿಗಳಲ್ಲಿ ಕೇಳಿದ್ದೆ. ಆದರೆ ಮಾರಿಜುವಾನ ಎಂಬ ಹೆಸರು ಕೇಳಿದ ನೆನಪಿಲ್ಲ. ಕೇಳಿದ್ದರೂ ಅದರ ಕುರಿತಂತೆ ಭೀತಿ ಪಡುವ ಯಾವ ಸಂಗತಿಗಳೂ ನನ್ನ ಕಿವಿಗೆ ಬಿದ್ದಿರಲಿಲ್ಲ. ಇಂಥ ಪದಾರ್ಥಗಳು ಯಾರಲ್ಲಾದರೂ ಸಿಕ್ಕರೆ ಪೊಲೀಸರು ಬಂಧಿಸುತ್ತಾರೆ ಎಂಬ ಸುದ್ದಿಯನ್ನಷ್ಟೇ ಕೇಳಿದ್ದೆ. ಪೊಲೀಸರಿಗೆ ಗೊತ್ತಾಗದಿದ್ದರೆ ಸಾಕಲ್ಲವೇ ಎಂಬ ನಿಲುವಷ್ಟೇ ನನ್ನದಾಗಿತ್ತು. ಇದರಾಜೆಗೆ ಈ ಮಾದಕ ಪದಾರ್ಥಗಳ ಅಪಾಯಗಳ ಬಗ್ಗೆ ನನ್ನಲ್ಲಿ ಸಣ್ಣ ಮಾಹಿತಿಯೂ ಇರಲಿಲ್ಲ. ಹೀಗಿರುತ್ತಾ ನನ್ನ ತರಗತಿಯ ಸಹಪಾಠಗಳು ಏನನ್ನೊ ಹೀರುವುದನ್ನು ನಾನು ಕಂಡೆ. ನನಗೂ ಕುತೂಹಲವಾಯಿತು. ಆದರೂ ಒಂದು ಬಗೆಯ ಭಯ. ನಾನು ಇಂಟರ್‍ನೆಟ್ ಮೂಲಕ ಹುಡುಕಾಟ ನಡೆಸಿದೆ. ನನಗೆ ಅದರಲ್ಲಿ ಸಿಕ್ಕ ಮಾಹಿತಿ ನನ್ನನ್ನು ಯಾವ ಬಗೆಯ ನಕಾರಾತ್ಮಕ ಚಿಂತನೆಗೆ ದೂಡಿ ಬಿಟ್ಟಿತೆಂದರೆ ಅದನ್ನು ಪರೀಕ್ಷಿಸಿ ನೋಡುವ ಹುಚ್ಚು ಆಸೆ ಉಂಟಾಯಿತು. ಒಂದು ಕಡೆ ವಯೋ ಸಹಜ ಆವೇಶ ಇನ್ನೊಂದು ಕಡೆ ಕುತೂಹಲ. ಇವೆರಡೂ ಸೇರಿ ನನ್ನನ್ನು ಮಾರಿಜುವಾನದತ್ತ ಕೊಂಡೊಯ್ಯಿತು. ನಾನದನ್ನು ಸೇವಿಸಿದೆ. ಮೊದಲ ಸೇವನೆ ಮುಂದಿನ ಸೇವನೆಗೆ ಪ್ರೇರಣೆ ನೀಡಿತು. ನಾನು ಸೇವಿಸುತ್ತಾ ಹೋದೆ. ಕ್ರಮೇಣ ಸೇವನೆಯ ಪ್ರಮಾಣದಲ್ಲಿ ಹೆಚ್ಚಳವಾಗತೊಡಗಿತು. ಟಿ.ವಿ. ವೀಕ್ಷಣೆ, ಕ್ರೀಡೆ, ಶಿಕ್ಷಣ, ಗೆಳೆಯರೊಂದಿಗಿನ ಸಂಬಂಧ ಎಲ್ಲವನ್ನೂ ನಿರ್ಲಕ್ಷಿಸುವ ಹಂತಕ್ಕೆ ತಲುಪಿದೆ. ಹೋಮ್‍ವರ್ಕ್ ಮಾಡುತ್ತಿರಲಿಲ್ಲ. ಶಿಕ್ಷಕರ ಪಾಠಕ್ಕಿಂತ ಮಾರಿಜುವಾನಕ್ಕೆ ಆಸೆ ಪಡುತ್ತಿದ್ದೆ. ಗೆಳೆಯರೊಂದಿಗೆ ಬೆರೆತು ಖುಷಿ ಪಡುವುದಕ್ಕಿಂತ ಅಮಲಿನಲ್ಲಿ ತೇಲಾಡುವುದನ್ನು ಇಷ್ಟಪಡುತ್ತಿದ್ದೆ. ನನ್ನೊಳಗೆ ಏನೇನೋ ಆಗುತ್ತಿದ್ದುವು. ಮನಸ್ಸು ನನ್ನ ಹಿಡಿತದಲ್ಲಿರುತ್ತಿರಲಿಲ್ಲ. ಕಾರಣವಿಲ್ಲದೆಯೇ ಆತ್ಮಹತ್ಯೆಗೆ ಮನಸು ಪ್ರಚೋದಿಸುತ್ತಿತ್ತು. ಈ ಒತ್ತಡವನ್ನು ತಡೆಯಲಾಗದೇ ಆತ್ಮಹತ್ಯೆಗೆ ಪ್ರಯತ್ನಿಸ ತೊಡಗಿದೆ. ಶಾಲೆಯಲ್ಲಿರುವಾಗ ಹತ್ತಿರದ ಗಾರ್ಬೆಜ್‍ಗೆ ಜಂಪ್ ಮಾಡುವಂತೆ ಮನಸು ಒತ್ತಾಯಿಸುತ್ತಿತ್ತು. ಮನೆಗೆ ಹೋದರೆ ತಂದೆಯ ಬಂದೂಕಿನಿಂದ ತಲೆಗೆ ಹೊಡೆದು ಕೊಳ್ಳುವಂತೆ ಮನಸ್ಸು ಹೇಳುತ್ತಿತ್ತು. ನಾಚಿಕೆ ಮತ್ತು ಭಯ ನನ್ನಿಂದ ದೂರವಾಗ ತೊಡಗಿತು. ನಾನು ದುಡ್ಡು  ಕದಿಯತೊಡಗಿದೆ. ತಾಯಿಯಿಂದ ಕದಿಯಲು ಪ್ರಾರಂಭವಾಗಿ ಮುಂದೆ ಅದು ಗೆಳೆಯರ ಮತ್ತು ದಾರಿಹೋಕರಲ್ಲಿಗೂ ಬಂದು ತಲುಪಿತು. ನನ್ನ ತಾಯಿ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿದ್ದರು. ಅವರ ಗಮನಕ್ಕೆ ಈ ಕದಿಯುವಿಕೆ ಬಂದದ್ದೇ ತಡ, ಅವರು ನನ್ನನ್ನು ತಪಾಸಣೆ ಒಳಪಡಿಸಿದರು. ಬೆದರಿಸಿದರು. ಒಂದೋ ಚಿಕಿತ್ಸೆಗೆ ಒಪ್ಪಿಕೊಳ್ಳಬೇಕು ಇಲ್ಲವೇ ಪೆÇಲೀಸರ ಕೈಗೊಪ್ಪಿಸುವೆ ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟರು. ನಾನು ಕೊನೆಗೂ ಚಿಕಿತ್ಸೆಗೆ ಒಪ್ಪಿಕೊಂಡೆ. ಹಾಗೆ ಆ ವ್ಯಸನದಿಂದ ಹೊರಬಂದೆ.."
 ನಿಜವಾಗಿ, ಇದು ಓರ್ವ `ಜಾಕ್'ನ ಕತೆಯಲ್ಲ. ಇಂಥ ಹತ್ತು ಹಲವು ನಿಜಕತೆಗಳು ಇಂಟರ್‍ನೆಟ್‍ನಲ್ಲಿ ಧಾರಾಳ ಇವೆ. `ಹೈ ಟೈಮ್ಸ್: ಒನ್ ಟೀನ್ಸ್ ಟ್ರು ಸ್ಟೋರಿ ಆಫ್ ಪೋಟ್ ಅಡಿಕ್ಷನ್ ಆಂಡ್ ರಿಕವರಿ’ ಎಂಬ ಶೀರ್ಷಿಕೆಯಲ್ಲಿ ಗ್ರೇಗ್ ಎಂಬ ಮುದ್ದು ಹುಡುಗನ ಮನಮಿಡಿಯುವ ಕತೆಯಿದೆ. `ಕಾನ್‍ಫೆಶ್ಶನ್ ಆಫ್ ಎ ಪೋಟ್ ಎಡಿಕ್ಟ್', `ಮೈ ಮಾರಿಜುವಾನ ಎಡಿಕ್ಷನ್ ಸ್ಟೋರಿ', ‘ಓವರ್ ಕಮಿಂಗ್ ಮೈ ಟೀನೇಜ್ ಡ್ರಗ್ ಎಡಿಕ್ಷನ್...’ ಮುಂತಾದ ಶೀರ್ಷಿಕೆಗಳಲ್ಲಿ ಧಾರಾಳ ಬರಹಗಳಿವೆ. 2013 ಫೆ. 2 ರಂದು ಮಂಗಳೂರಿನ ಪಕ್ಕದ ಪದವಿನಂಗಡಿಯ ಸ್ನೇಹ ಎಂಬ 18ರ ಯುವತಿ ಆತ್ಮಹತ್ಯೆ ಮಾಡಿಕೊಂಡಳು. 9ನೇ ತರಗತಿಯ ವರೆಗೆ ಕಲಿಕೆಯಲ್ಲಿ ಪ್ರಥಮ ಸ್ಥಾನವನ್ನು ಪಡಕೊಂಡಿದ್ದ ಸ್ನೇಹ ಬಳಿಕ ಮಾದಕ ಪದಾರ್ಥದತ್ತ ಅರ್ಕಷಿತಳಾದಳು. ಮನೆಯವರಿಗೆ ಗೊತ್ತಾಗುವಾಗ ಈ ಚಟಕ್ಕೆ ಒಂದೂವರೆ ವರ್ಷಗಳೇ ತಗಲಿತ್ತು. ಮಗು ಎಂದಿನಂತಿಲ್ಲ ಎಂಬ ಅನುಮಾನ ಮೂಡಿ ಹೆತ್ತವರು ಶಾಲೆಯಲ್ಲಿ ವಿಚಾರಿಸಿದಾಗ ದಂಗು ಬಡಿಸುವ ಸತ್ಯಗಳು ಎದುರಾದವು. ಮಗು ಮಧ್ಯಾಹ್ನದ ಬಳಿಕ ಡಿಜೆ ಪಾರ್ಟಿಗಳಿಗೆ ತೆರಳು ತ್ತಿತ್ತು. ಕ್ಲಬ್‍ಗಳಿಗೆ ಹೋಗುತ್ತಿತ್ತು. ತಂದೆ ಗುರುರಾಜ ಉಪಾಧ್ಯಾಯರಿಗೆ ಕುಟುಂಬದೊಂದಿಗೆ ಹೇಳಲು ಅಳುಕು. ಮನೆತನದ ಗೌರವ ಎಲ್ಲಿ ಮಣ್ಣುಪಾಲಾಗುತ್ತೋ ಎಂಬ ಅಂಜಿಕೆ. ಅವರು ಮಗಳನ್ನು ಬೆಂಗಳೂರು ಸಹಿತ ವಿವಿಧ ಆಸ್ಪತ್ರೆಗಳಲ್ಲಿ ತಿಂಗಳುಗಟ್ಟಲೆ ಇರಿಸಿ ಚಿಕಿತ್ಸೆ ಕೊಡಿಸಿದರು. ಡ್ರಗ್ಸ್, ಮದ್ಯಪಾನ, ಗುಟ್ಕಾದಂತಹ ಎಲ್ಲ ಬಗೆಯ ವ್ಯಸನಕ್ಕೂ ತುತ್ತಾಗಿದ್ದ ಮಗಳು ಹಿಂದಿನಂತಾಗಲಿ ಎಂದು ಪ್ರಾರ್ಥಿಸಿದರು. ಆದರೆ ಹೆತ್ತವರಿಗೆ ಗೊತ್ತಾಗದಂತೆ ಮಗಳು ಮನೆಯಿಂದ ತಪ್ಪಿಸಿಕೊಂಡು ಹೊರಗೆ ಹೋಗುತ್ತಿದ್ದಳು. ಕೂಡಿ ಹಾಕಿದರೆ ಮಕ್ಕಳ ಕಲ್ಯಾಣ ಇಲಾಖೆಗೆ ಕರೆ ಮಾಡಿ ದೂರು ಕೊಡುತ್ತಿದ್ದಳು. ಆದರೂ ಈ ಎಲ್ಲವನ್ನೂ ಗುರುರಾಜ್ ಮತ್ತು ಸುನೀತಾ ಎಂಬ ಆ ಹೆತ್ತವರು ಸಹಿಸಿಕೊಂಡಿದ್ದರು. ಫೆ. 2 ರಂದು ತಾಯಿಯೊಂದಿಗೆ ಸ್ನೇಹ
ದುಡ್ಡು ಕೇಳಿದಳು. ನಿರಾಕರಿಸಿದುದಕ್ಕೆ ಸಿಟ್ಟಾಗಿ ಆತ್ಮಹತ್ಯೆ ಮಾಡಿಕೊಂಡಳು.
 ನಿಜವಾಗಿ ಮಾದಕ ವ್ಯಸನವನ್ನು ಅಂಟಿಸಿಕೊಂಡ ‘ಸ್ನೇಹ’ಕ್ಕಿಂತ ಈ ಸಂಗತಿಯನ್ನು ಕುಟುಂಬದ ಮಾನದ ಪ್ರಶ್ನೆಯಾಗಿಸಿಕೊಂಡು ಒಳಗೊಳಗೇ ಕರಗಿದ ಗುರುರಾಜ್ ಹೆಚ್ಚು ಕರುಣೆಗೆ ಅರ್ಹರು. ಮಕ್ಕಳ ಚಟಕ್ಕೆ ಒಳಗೊಳಗೇ ಕೊರಗುತ್ತಾ ಅಯುಷ್ಯ ಕಳೆಯುವ ಹೆತ್ತವರು ನಾವು ವಾಸಿಸುವ ‘ಕುದ್ರೋಳಿ’ಗಳಲ್ಲಿದ್ದಾರೆ. ಆದರೆ ಕುಟುಂಬದ ಗೌರವ, ಮಾನದ ಪ್ರಶ್ನೆಯ ಮುಂದೆ ಅವು ಬಹಿರಂಗಕ್ಕೆ ಬರುತ್ತಿಲ್ಲ. ಅಲ್ಲದೇ, ಇಂಥ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ರೂಪಿಸುವುದಕ್ಕೆ ವಿಚಾರಧಾರೆಗಳು, ಜಾತಿ-ಧರ್ಮಗಳು, ಸಂಘಟನಾ ಗೆರೆಗಳು ಅಡ್ಡ ಬರುತ್ತಿವೆ. ಅಂದಹಾಗೆ, ಕೆಡುಕಿನಲ್ಲಿ ಭಾಗಿಯಾಗಿರುವ ಮಂದಿ ಬಯಸುವುದೂ ಇಂಥ ವಿಭಜನೆಯನ್ನೇ. ಆದ್ದರಿಂದಲೇ,
    ಕುದ್ರೋಳಿಯ `ಕೆಡುಕು ಮುಕ್ತ ಹೋರಾಟ ಸಮಿತಿ' ಇಷ್ಟವಾಗುತ್ತದೆ.

Tuesday, May 5, 2015

ಅತ್ಯಾಚಾರ ಮತ್ತು ಕಾರಣಗಳ ಹುಡುಕಾಟ


    ಒಝ್‍ಜೆಕಾನ್ ಅಸ್ಲನ್ ಎಂಬ 20ರ ಹರೆಯದ ಟರ್ಕಿಯ ಮನಃಶಾಸ್ತ್ರ ವಿದ್ಯಾರ್ಥಿನಿಯನ್ನು 2000 ಆಗಸ್ಟ್ ನಲ್ಲಿ ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಲಾಗುತ್ತದೆ. ಯುವತಿ ಪ್ರತಿರೋಧ ವ್ಯಕ್ತ ಪಡಿಸುತ್ತಾಳೆ. ಅಪಹರಣಕಾರರ ಮೇಲೆ ಪೆಪ್ಪರ್ ಸ್ಪ್ರೇ ಮಾಡುತ್ತಾಳೆ. ಅಪಹರಣಕಾರರು ಆಕೆಗೆ ಇರಿಯುತ್ತಾರಲ್ಲದೇ ತಲೆಗೆ ಕಬ್ಬಿಣದ ರಾಡ್‍ನಿಂದ ಏಟು ಕೊಟ್ಟು ಕೊಲೆ ಮಾಡುತ್ತಾರೆ. ಈ ಕೃತ್ಯ ಟರ್ಕಿಯಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗುತ್ತದೆ. ಅಂಕಾರ, ಇಸ್ತಾಂಬುಲ್, ಮೆರ್ಸಿನ್‍ಗಳಲ್ಲಿ ಮಹಿಳೆಯರು ಭಾರೀ ಸಂಖ್ಯೆಯಲ್ಲಿ ಬೀದಿಗಿಳಿಯುತ್ತಾರೆ. ಇದೇ ವೇಳೆ, ಅತ್ಯಾಚಾರದ ಸಂದರ್ಭದಲ್ಲಿ ಮಹಿಳೆ ಪ್ರತಿರೋಧ ತೋರುವುದರಿಂದ ಲಾಭವೋ ನಷ್ಟವೋ ಎಂಬುದರ ಬಗ್ಗೆ ಯುರೋಪಿನಲ್ಲಿ ನಡೆಯುತ್ತಿದ್ದ ಚರ್ಚೆಯು ಟರ್ಕಿಯನ್ನೂ ಆವರಿಸುತ್ತದೆ. 1999ರಲ್ಲಿ ಇಂಗ್ಲೆಂಡಿನಲ್ಲಿ ಈ ಕುರಿತಂತೆ ನಡೆದ ಚರ್ಚೆಯ ಫಲಿತಾಂಶಗಳು ಟರ್ಕಿಯಲ್ಲೂ ಪ್ರತಿಫಲಿಸುತ್ತದೆ. ಸ್ವರಕ್ಷಣಾ ಕಲೆಯನ್ನು ವಿದ್ಯಾರ್ಥಿಗಳಿಗೆ ಕಲಿಸುವ ಏರ್ಪಾಡು ಮಾಡಬೇಕೆಂಬ ಆಗ್ರಹ ಕೇಳಿ ಬರುತ್ತದೆ. ಎರಡು ಬೆರಳುಗಳಿಂದ ಅತ್ಯಾಚಾರಿಯ ಕಣ್ಣನ್ನು ತಿವಿಯುವುದು ಅಥವಾ ಕೊರಳಿಗೆ ಗುದ್ದುವುದು, ಬೊಬ್ಬೆ ಹಾಕುವುದು, ತಲೆಗೂದಲನ್ನು ಬಲವಾಗಿ ಹಿಡಿದೆಳೆಯುವುದು.. ಸಹಿತ ಪ್ರತಿರೋಧ ವಿಧಾನಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಸಂದರ್ಭಕ್ಕೆ ಹೊಂದಿಕೊಂಡು ಮಹಿಳೆ ಪ್ರತಿರೋಧ ತೋರಬೇಕೆಂದು ಹೇಳುವವರಂತೆಯೇ ಅದರಿಂದಾಗಿ ಅತ್ಯಾಚಾರಿಗಳು ರೊಚ್ಚಿಗೇಳುವ ಅಪಾಯದ ಬಗ್ಗೆಯೂ ಎಚ್ಚರದ ಮಾತುಗಳು ಕೇಳಿಬರುತ್ತವೆ. ಒಂದು ರೀತಿಯಲ್ಲಿ, ಅಸ್ಲನ್ ಟರ್ಕಿಯ ನಿರ್ಭಯ ಆಗುತ್ತಾಳೆ. ಆಕೆಯ ಪ್ರತಿರೋಧ ದೊಡ್ಡ ಮಟ್ಟದ ಪ್ರಶಂಸೆಗೆ ಪಾತ್ರವಾಗುತ್ತದೆ.
    ಹಾಗಂತ, ಅತ್ಯಾಚಾರವನ್ನು ಎದುರಿಸುವುದು ಹೇಗೆ ಎಂಬ ಬಗ್ಗೆ ಯುರೋಪ್‍ನಲ್ಲಿ 90ರ ದಶಕದಲ್ಲೇ ಚರ್ಚೆ ಆರಂಭವಾಗಿತ್ತು.
    ಕ್ರೆಗ್ನಾನ್ ಮತ್ತು ಗ್ರೋವ್ಸ್ ಬರೆದ- ‘ಹರ್ ವಿಟ್ಸ್ ಅಬೌಟ್ ಹರ್: ಸೆಲ್ಫ್ ಡಿಫೆನ್ಸ್ ಸಕ್ಸೆಸ್ ಸ್ಟೋರೀಸ್ ಬೈ ವುಮೆನ್', ಫಿಸ್ನೋಫ್ ಮತ್ತು ಮಾರ್ಗನ್ ಅವರು ಬರೆದ- ‘ರೇಪ್, ಪ್ರಿವೆನ್ಶನ್ ಆಂಡ್ ಸೆಲ್ಫ್ ಡಿಫೆನ್ಸ್’, ಜೆಲ್‍ಮ್ಯಾನ್ ಮತ್ತು ಜೋಸೆಫ್‍ರ- ‘ದಿ ಮೈಂಡ್ ಆಫ್ ದಿ ರೇಪಿಸ್ಟ್’, ಬೆಲ್ ಮತ್ತು ನಪುರ್ಲಾ ನೆಲ್ಸನ್ ಅವರ- ‘ಸ್ಪೀಕಿಂಗ್ ಅಬೌಟ್ ರೇಪ್ ಈಸ್ ಎವ್ರಿ ಒನ್ಸ್ ಬ್ಯುಸಿನೆಸ್’ ಅಥವಾ ಬ್ರೈತ್‍ವೈಟ್ ಮತ್ತು ಬೈಲ್ಸ್ ಅವರು ಬರೆದ- ‘ವುಮೆನ್ ಆ್ಯಸ್ ವಿಕ್ಟಿಮ್ಸ್ ಆಫ್ ಕ್ರೈಮ್..’ ಮುಂತಾದ ಹಲವಾರು ಕೃತಿ-ಲೇಖನಗಳು ಯುರೋಪಿಯನ್ ಆಲೋಚನೆಗಳನ್ನು ಕೆದಕುವ ಪ್ರಯತ್ನ ಮಾಡಿದ್ದುವು. ‘ಅತ್ಯಾಚಾರಿಗಳಿಗೆ ಅನೇಕ ಬಾರಿ ಅತ್ಯಾಚಾರದ ಪರಿಣಾಮ ಗೊತ್ತಿರುವುದಿಲ್ಲ, ಮರಣ ದಂಡನೆಗೆ ಅರ್ಹವಾಗುವಷ್ಟು ಭೀಕರ ಅಪರಾಧ ಎಂಬುದರ ಪ್ರಜ್ಞೆ ಇರುವುದಿಲ್ಲ, ಆದ್ದರಿಂದ ಅತ್ಯಾಚಾರಿಗಳ ಮುಂದೆ ಅದರ ಪರಿಣಾಮಗಳ ಬಗ್ಗೆ ವಿವರಿಸುವ ಮೂಲಕ ಅತ್ಯಾಚಾರದಿಂದ ತಪ್ಪಿಸಿಕೊಳ್ಳಬಹುದು’ ಎಂಬ ಅಭಿಪ್ರಾಯಗಳೂ ಬಂದುವು. 2009 ಡಿಸೆಂಬರ್‍ನಲ್ಲಿ ರೇಪ್ ಇಂಟೆಲಿಜೆನ್ಸ್ ಯುನಿಟ್ ಎಂಬ ವಿಭಾಗವನ್ನು ಬ್ರಿಟನ್‍ನಲ್ಲಿ ಪ್ರಪ್ರಥಮವಾಗಿ ತೆರೆಯಲಾಯಿತು. ಕೆರೋಲಿನ್ ಬೇಟ್ಸ್ ರ ನೇತೃತ್ವದಲ್ಲಿ 400 ವಿಶೇಷ ಅಧಿಕಾರಿಗಳನ್ನು ಒಳಗೊಂಡ ತಂಡವಾಗಿತ್ತು ಅದು. ಜಾನ್‍ವೊರ್ ಬಾಯ್ಸ್ ಎಂಬ ಕ್ಯಾಬ್ ಡ್ರೈವರ್ ಹಾಗೂ ಫುಟ್ಬಾಲ್ ರೆಫ್ರಿಗಳ ಮುಖ್ಯಸ್ಥ ಕಿರ್ಕ್ ರೈಡ್ ಎಂಬಿಬ್ಬರು ನೂರಾರು ಮಹಿಳೆಯರನ್ನು ಅತ್ಯಾಚಾರಕ್ಕೊಳಪಡಿಸಿದ್ದ ಸಂಗತಿ ಬಹಿರಂಗಕ್ಕೆ ಬಂದ ಬಳಿಕ ಈ ತಂಡದ ರಚನೆಯಾಗಿತ್ತು. ಒಂದು ರೀತಿಯಲ್ಲಿ, ಯುರೋಪಿಯನ್ ರಾಷ್ಟ್ರಗಳಲ್ಲಿ 90ರ ದಶಕದಲ್ಲೇ ಆರಂಭವಾದ ಮಹಿಳಾ ಸುರಕ್ಷಿತತೆಯ ಚರ್ಚೆಗಳು ಭಾರತದಲ್ಲಿ ಗಂಭೀರ ಮಟ್ಟದಲ್ಲಿ ಕಾಣಿಸಿಕೊಂಡದ್ದು 2012ರ ನಿರ್ಭಯ ಪ್ರಕರಣದ ನಂತರ. ಅತ್ಯಾಚಾರದ ಹಿಂದಿರುವ ಸತ್ಯಗಳು ಮತ್ತು ಮಿಥ್ಯಗಳು ಒಂದು ಹಂತದ ವರೆಗೆ ನಮ್ಮಲ್ಲಿ ಆ ಬಳಿಕ ಚರ್ಚೆಗೀಡಾದವು. ಹೆಣ್ಣಿನ ಉಡುಪು, ಗಂಡಿನ ಅಮಲು, ಆಧುನಿಕ ಜೀವನ ಕ್ರಮ, ಗಂಡಿನ ಬಲಾಢ್ಯತೆ, ಸಿನಿಮಾ.. ಮುಂತಾದುವುಗಳನ್ನು ಅತ್ಯಾಚಾರಕ್ಕೆ ಕಾರಣವಾಗಿ ಮುಂದಿಡಲಾಯಿತು. ಇವನ್ನು ತಿರಸ್ಕರಿಸುವ ಪ್ರಕ್ರಿಯೆಯೂ ನಡೆದುವು. ನಿಜವಾಗಿ, ನಮ್ಮಲ್ಲಿ ನಡೆದ ಚರ್ಚೆಯಲ್ಲಿ ಕಾಣದೇ ಹೋದುದೇನೆಂದರೆ, ಸ್ವರಕ್ಷಣೆಯ ಬಗ್ಗೆ ಗಂಭೀರ ಮಟ್ಟದ ವಿಶ್ಲೇಷಣೆ ನಡೆಯದೇ ಹೋದುದು. ‘ಪ್ರಚೋದನಾತ್ಮಕ ಉಡುಪು ಧರಿಸುವ ಮಹಿಳೆ ಅಪಾಯವನ್ನು ಆಹ್ವಾನಿಸುತ್ತಾಳೆ' ಎಂಬ ಅಭಿಪ್ರಾಯವನ್ನು ತಿರಸ್ಕರಿಸಿ ನಮ್ಮಲ್ಲಿ ತಿಂಗಳುಗಟ್ಟಲೆ ಚರ್ಚೆಗಳು ನಡೆದಿವೆ. ಅತ್ಯಾಚಾರಿಗಳು ಸುಲಭದ ಗುರಿಯನ್ನು ಇಟ್ಟುಕೊಳ್ಳುತ್ತಾರೆಯೇ ಹೊರತು ಬಟ್ಟೆಯ ಉದ್ದಳತೆಯನ್ನು ನೋಡಿಯಲ್ಲ ಎಂದು ವಾದಿಸಿದವರಿದ್ದಾರೆ. ಮಕ್ಕಳು, ವೃದ್ಧೆಯರ ಮೇಲೆ ನಡೆಯುವ ಅತ್ಯಾಚಾರಗಳಿಗೆ ಯಾವ ಪ್ರಚೋದನೆ ಕಾರಣ’ ಎಂದು ಪ್ರಶ್ನಿಸಿದವರಿದ್ದಾರೆ. ಮಹಿಳೆಯರ ಕುರಿತಾದ ಕೀಳು ಭಾವನೆ, ಪುರುಷ ಶ್ರೇಷ್ಠ ಆಲೋಚನೆಗಳೇ ಅತ್ಯಾಚಾರಕ್ಕೆ ಕಾರಣ ಎಂದೂ ಸಮರ್ಥಿಸಿದವರಿದ್ದಾರೆ. ಈ ವಾದ-ವಿವಾದಗಳೇನೇ ಇರಲಿ, ಅತ್ಯಾಚಾರ ಪ್ರಕರಣಗಳಂತೂ ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಇಂಡಿಯಾಸ್ ಡಾಟರ್‍ನಲ್ಲಿ ಆರೋಪಿ ಮುಖೇಶ್ ಸಿಂಗ್ ತನ್ನ ಕೃತ್ಯದ ಬಗ್ಗೆ ತೀರಾ ಕ್ಯಾಶುವಲ್ ಆಗಿ ಮಾತಾಡುತ್ತಾನೆ. ಅತ್ಯಾಚಾರದ ಇತರ ಪ್ರಕರಣಗಳಿಗೆ ಇಲ್ಲದ ಮಹತ್ವ ನಿರ್ಭಯಳಿಗೇಕೆ ನೀಡಲಾಗುತ್ತಿದೆ ಎಂದು ಪ್ರಶ್ನಿಸುತ್ತಾನೆ. ಸಂಜೆಯ ಬಳಿಕ ಹೆಣ್ಣು ಮನೆಯಿಂದ ಹೊರ ಬರಬಾರದೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ. ಇಂಥ ಅಭಿಪ್ರಾಯಗಳನ್ನು ಒಟ್ಟು ಸೇರಿಸಿ ಭಾರತದಲ್ಲಿ ನಡೆಯುವ ಅತ್ಯಾಚಾರ ಪ್ರಕರಣಗಳಿಗೆ ಇಂಥ ಪುರಾತನ ಆಲೋಚನೆಗಳೇ ಕಾರಣ ಎಂದೂ ಷರಾ ಬರೆಯಬಹುದು. ಆದರೆ ಯುರೋಪಿಯನ್ ರಾಷ್ಟ್ರಗಳು ತೀರಾ ಮುಂದುವರಿದಿದೆಯಲ್ಲವೇ? ಧಾರ್ಮಿಕ ಚಿಂತನೆಗಳಿಗೆ ತೀರಾ ಕಡಿಮೆ ಮಹತ್ವ ಇರುವ ಮತ್ತು ಭಾರತದಂತೆ ಖಾಪ್ ಪಂಚಾಯತ್, ಜಾತಿಗಳು ಮತ್ತು ಕಟ್ಟುಪಾಡುಗಳಿಲ್ಲದ ಅಥವಾ ಆಧುನಿಕ ಚಿಂತನೆಗಳನ್ನು ಅಳವಡಿಸಿಕೊಂಡಿರುವ ರಾಷ್ಟ್ರಗಳಲ್ಲವೆ ಅವು? ಮಾನವ ಹಕ್ಕುಗಳು ಮತ್ತು ಮಹಿಳಾ ಸ್ವಾತಂತ್ರ್ಯದ ವಿಷಯದಲ್ಲಿ ಅಮೇರಿಕ ಜಗತ್ತಿನಲ್ಲಿಯೇ ಮುಂಚೂಣಿಯಲ್ಲೂ ಇದೆಯಲ್ಲವೇ? ಇವೆಲ್ಲ ಇದ್ದೂ ಅಮೇರಿಕದಲ್ಲಿ ಪ್ರತಿವರ್ಷ 92 ಸಾವಿರಕ್ಕಿಂತಲೂ ಅಧಿಕ ಲೈಂಗಿಕ ಹಲ್ಲೆ ಪ್ರಕರಣಗಳು ನಡೆಯುತ್ತಿರುವುದೇಕೆ? 90ರ ದಶಕದಲ್ಲೇ ಬ್ರಿಟನ್ ಸಹಿತ ಯುರೋಪಿಯನ್ ರಾಷ್ಟ್ರಗಳಲ್ಲಿ ಅತ್ಯಾಚಾರವು ಬಹುದೊಡ್ಡ ಚರ್ಚಾ ವಿಷಯವಾಗುವುದಕ್ಕೆ ಕಾರಣಗಳೇನು? ಇವತ್ತು ಯುರೋಪ್, ಅಮೇರಿಕ ಸಹಿತ ಮುಂದುವರಿದ ರಾಷ್ಟ್ರಗಳು ಅತ್ಯಾಚಾರದ ಸಮಸ್ಯೆಯನ್ನು ಎದುರಿಸುತ್ತಿವೆ. ಸ್ವರಕ್ಷಣೆಯ ಬಗ್ಗೆ ಅಲ್ಲಿ ತರಬೇತಿ ಕಾರ್ಯಕ್ರಮಗಳು ನಡೆಯುತ್ತಿವೆ. ಹೀಗಾಗುವುದಕ್ಕೆ ಕಾರಣಗಳೇನು? ಮುಖೇಶ್ ಸಿಂಗ್‍ನಂಥ ಮನಸ್ಥಿತಿಯೊಂದೇ ಇದಕ್ಕೆ ಕಾರಣ ಎಂದಾದರೆ ಯುರೋಪಿಯನ್ ರಾಷ್ಟ್ರಗಳು ಮುಂದುವರಿದಿದೆ ಎಂಬುದು ಬೊಗಳೆ ಎಂದಾಗುತ್ತದೆ. ಅದು ಮಾನಸಿಕವಾಗಿ ಭಾರತಕ್ಕಿಂತಲೂ ಹಿಂದಿದೆ ಎನ್ನಬೇಕಾಗುತ್ತದೆ ಅಥವಾ ಈ ಯುರೋಪ್‍ಗಿಂತಲೂ ಗಲ್ಫ್ ರಾಷ್ಟ್ರಗಳು ಸಾಕಷ್ಟು ಮುಂದಿವೆ ಎಂದೂ ಒಪ್ಪಬೇಕಾಗುತ್ತದೆ. ಯಾಕೆಂದರೆ, ಗಲ್ಫ್ ರಾಷ್ಟ್ರಗಳಲ್ಲಿ ಅತ್ಯಾಚಾರ ಪ್ರಕರಣ ಗಳು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ. ಒಂದು ಕಡೆ, ಆಧುನಿಕ ಚಿಂತನೆಗಳು ಎಲ್ಲಿ ಅತ್ಯಂತ ಹೆಚ್ಚಿವೆಯೋ ಅಲ್ಲಿ ಮಹಿಳಾ ದೌರ್ಜನ್ಯ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದೆ. ಇದು ಮೊದಲು ಅಮೇರಿಕ ಮತ್ತಿತರ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿತು. ಉದಾರೀಕರಣದ ಪ್ರಕ್ರಿಯೆಗಳಿಗೆ ಯುರೋಪ್ ತೆರೆದುಕೊಂಡ ಬಳಿಕ ಮಹಿಳಾ ದೌರ್ಜನ್ಯಗಳ ಪ್ರಕರಣಗಳಲ್ಲಿ ತೀವ್ರಗತಿಯ ಏರಿಕೆ ಉಂಟಾಯಿತು. ಸಿನಿಮಾ, ಜಾಹೀರಾತು, ಸಾರ್ವಜನಿಕ ಬದುಕು ಎಲ್ಲದರಲ್ಲೂ ಮಹಿಳೆ ಮತ್ತು ಪುರುಷ ಕಾಣಿಸಿಕೊಳ್ಳುವ ವಿಧಾನ ಬದಲಾಯಿತು. ಪುರುಷ ಮತ್ತು ಮಹಿಳೆಯರ ಸ್ವಾತಂತ್ರ್ಯ, ಹಕ್ಕುಗಳ ವಿಷಯದಲ್ಲಿ ಹೊಸ ಬಗೆಯ ಚಿಂತನೆಗಳು ನಡೆದುವು. ಸ್ತ್ರೀ ಮತ್ತು ಪುರುಷ ಸಮಾನತೆಯ ವಿಷಯದಲ್ಲಿ ಗಂಭೀರ ವಾದ-ವಿವಾದಗಳು ಉಂಟಾದುವು. ವಿಂಬಲ್ಡನ್ ಟೆನ್ನಿಸ್‍ನಲ್ಲಿ ಪುರುಷರಷ್ಟೇ ಬಹುಮಾನ ಮೊತ್ತವನ್ನು ಮಹಿಳೆಗೂ ನೀಡಬೇಕು ಎಂಬ ಕೂಗು ಹುಟ್ಟಿಕೊಂಡದ್ದೂ ಈ ಸಂದರ್ಭದಲ್ಲೇ. ಯುರೋಪಿನ ಈ ಉದಾರೀಕರಣದ ನೀತಿಗೆ ಭಾರತ ತೆರೆದುಕೊಂಡ ಬಳಿಕ ಭಾರತವೂ ವೇಗವಾಗಿ ಯುರೋಪ್ ಆಗತೊಡಗಿತು. ಯುರೋಪಿನ ಅತ್ಯಾಚಾರ ಸಮಸ್ಯೆ ಭಾರತದ್ದೂ ಆಯಿತು. ಅಲ್ಲಿ ಯಾವ ಬಗೆಯ ಚರ್ಚೆಗಳಾಗುತ್ತವೋ ಅವೇ ಬಗೆಯ ಚರ್ಚೆ ದಶಕಗಳ ಬಳಿಕ ಇಲ್ಲೂ ಆಗತೊಡಗಿತು. ಇನ್ನು ಸ್ವರಕ್ಷಣೆಯ ಕಲೆಯ ಬಗ್ಗೆ ನಾವು ಚರ್ಚೆ ನಡೆಸಬೇಕಾಗುತ್ತದೆ. ಈಗಾಗಲೇ ಯುರೋಪ್ ಆ ಕುರಿತಾದ ಚರ್ಚೆಯನ್ನು ಮಾಡಿ ಮುಗಿಸಿದೆ. ಇನ್ನೊಂದು ಕಡೆ, ಯುರೋಪಿಯನ್ ಪ್ರಣೀತ ಸ್ವಾತಂತ್ರ್ಯವನ್ನು ಅನುಮಾನದಿಂದಲೇ ನೋಡುತ್ತಿರುವ ಮತ್ತು ಆಧುನಿಕ ಚಿಂತನೆಗಳನ್ನು ತನ್ನೊಳಗೆ ಇಳಿಸಿಕೊಳ್ಳಲು ಹಿಂಜರಿಯುತ್ತಿರುವ ರಾಷ್ಟ್ರಗಳಲ್ಲಿ ಮಹಿಳಾ ದೌರ್ಜನ್ಯ ತೀರಾ ಕಡಿಮೆ ಪ್ರಮಾಣದಲ್ಲಿದೆ. ಇದನ್ನು ಏನೆಂದು ವಿಶ್ಲೇಷಿಸಬಹುದು?
  
ಅಷ್ಟಕ್ಕೂ, ಸ್ವಾತಂತ್ರ್ಯ ಎಂಬ ಪದ ದೀಪಿಕಾ ಪಡುಕೋಣೆಯ ‘ಮೈ ಚಾಯ್ಸ್'ನ ಬಳಿಕ ಹುಟ್ಟಿಕೊಂಡದ್ದಲ್ಲ. ಅದು ಉದಾರೀಕರಣದ ಮೊದಲೂ ಇತ್ತು ಮತ್ತು ಉದಾರೀಕರಣದ ನಂತರದಲ್ಲೂ ಇರುತ್ತದೆ. ಆದರೆ ಜಾಗತೀಕರಣದ ನಂತರ ‘ಸ್ವಾತಂತ್ರ್ಯ’ ಎಂಬ ಪದಕ್ಕೆ ಪುರುಷ ಮತ್ತು ಮಹಿಳೆ ಇಬ್ಬರೂ ವಿಪರೀತ ಅರ್ಥವನ್ನು ಕಲ್ಪಿಸಿಕೊಂಡಿರುವಂತೆ ಕಾಣಿಸುತ್ತಿದೆ. ಒಂದು ಕಡೆ, ದೀಪಿಕಾ ಪಡುಕೋಣೆಯಿದ್ದರೆ ಇನ್ನೊಂದು ಕಡೆ ಮುಖೇಶ್ ಸಿಂಗ್ ಇದ್ದಾನೆ. ಇವರಿಬ್ಬರೂ ಜಾಗತೀಕರಣಗೊಂಡ ಇಂದಿನ ಜಗತ್ತಿನಲ್ಲಿಯೇ ಬದುಕುತ್ತಿದ್ದರೂ ಸ್ವಾತಂತ್ರ್ಯ ಎಂಬ ಪದವನ್ನು ಇವರು ಅರ್ಥೈಸಿಕೊಂಡ ರೀತಿಯೇ ಬೇರೆ. ದೀಪಿಕಾಳ ಮೈ ಚಾಯ್ಸ್ ಅನ್ನು ವೀಕ್ಷಿಸಿದರೆ ಮುಖೇಶ್‍ಗೆ ಅದು ಅನಾಗರಿಕ ಅನ್ನಿಸಬಹುದು. ಇಂಡಿಯಾಸ್ ಡಾಟರ್‍ನಲ್ಲಿ ಮುಖೇಶ್‍ನನ್ನು ವೀಕ್ಷಿಸಿದ ದೀಪಿಕಾಳಿಗೆ ಆತ ಅನಾಗರಿಕನಾಗಿ ಕಾಣಿಸಬಹುದು. ಬಹುಶಃ ಉದಾರೀಕಣದ ಜಗತ್ತು ಈ ಎರಡು ‘ಉಗ್ರ'ವಾದಗಳ ನಡುವೆ ಸಿಕ್ಕು ಇವತ್ತು ಒದ್ದಾಡುತ್ತಿರುವಂತೆ ಕಾಣಿಸುತ್ತಿದೆ. ಒಂದು ಕಡೆ, ಯುರೋಪ್ ಪ್ರಣೀತ ಸ್ವಾತಂತ್ರ್ಯವು ಹೆಣ್ಣನ್ನು ಮೈ ಚಾಯ್ಸ್ ನಂತೆ ಬೆಳೆಯಲು ಪ್ರಚೋದಿಸುತ್ತದೆ. ಇನ್ನೊಂದು ಕಡೆ ಅದರ ಅಡ್ಡ ಪರಿಣಾಮಗಳ ಬಗ್ಗೆ ಅದು ಗಾಢ ನಿರ್ಲಕ್ಶ್ಯವನ್ನೂ ತಾಳುತ್ತದೆ ಅಥವಾ ಆ ಬಗ್ಗೆ ಚರ್ಚಿಸುವುದು ಮಹಿಳಾ ವಿರೋಧಿ ಎಂಬ ವಾತಾವರಣವನ್ನು ಹುಟ್ಟು ಹಾಕುತ್ತದೆ. ಇದಕ್ಕೆ ಮಾರುಕಟ್ಟೆ ಆಧಾರಿತ ಅದರ ನೀತಿಗಳು ಕಾರಣವೋ ಏನೋ ಆದರೆ ಅದು ಸಮಾಜದ ಒಟ್ಟು ಆಲೋಚನಾ ಪ್ರಕ್ರಿಯೆಯ ಮೇಲೆ ಪರಿಣಾಮವನ್ನಂತೂ ಬೀರುತ್ತಿದೆ. ಒಂದು ರೀತಿಯಲ್ಲಿ, ಉದಾರೀಕರಣದ ಕರಾಳ ಮುಖವಾಗಿ ಮುಖೇಶ್ ಕಾಣಿಸಿದರೆ ಅತಿರೇಕದ ಮುಖವಾಗಿ ದೀಪಿಕಾ ಕಾಣಿಸುತ್ತಾಳೆ. ಇವೆರಡರ ನಡುವೆ ನಾವು ‘ಸ್ವಾತಂತ್ರ್ಯ'ಕ್ಕೆ ಅರ್ಥವನ್ನು ಹುಡುಕಬೇಕಿದೆ. ಪಂಜಾಬ್‍ನ ಮೊಗ್ಗಾದಲ್ಲಿ ನಡೆದ ಘಟನೆಯನ್ನು ಇನ್ನೊಂದು ನಿರ್ಭಯ ಆಗಿ ನೋಡಲಾಗುತ್ತಿರುವ ಈ ಸಂದರ್ಭದಲ್ಲಿ ಇಂಥದ್ದೊಂದು ಹುಡುಕಾಟ ಅಗತ್ಯವೆನಿಸುತ್ತದೆ. 

Friday, May 1, 2015

ಶ್ರಮ ಸಂಸ್ಕೃತಿ ಮತ್ತು ಯಂತ್ರ ಸಂಸ್ಕೃತಿಯನ್ನು ಮುಖಾಮುಖಿಗೊಳಿಸಿದ ಪ್ರಸನ್ನ

     ಯಂತ್ರಗಳ ಈ ಯುಗದಲ್ಲಿ ಶ್ರಮ ಸಂಸ್ಕ್ರಿತಿಗೆ ಏನು ಮಹತ್ವವಿದೆ? ಮಡಿಕೆ ತಯಾರಿ, ಕೈಮಗ್ಗ, ಚಾಪೆನೇಯ್ಗೆ, ಸಾಂಪ್ರದಾಯಿಕ ಕೃಷಿ.. ಮುಂತಾದ ಶ್ರಮ ಸಹಿತ ಜೀವನ ಕ್ರಮಕ್ಕೆ ಇವತ್ತಿನ ಸಮಾಜ ಮರಳಬೇಕೆಂದು ಬಯಸುವುದು ಎಷ್ಟು ಪ್ರಾಯೋಗಿಕ? ತುಂಬಿ ತುಳುಕುತ್ತಿರುವ ಜನಸಂಖ್ಯೆಗೆ ಇಂಥ ಗುಡಿ ಕೈಗಾರಿಕೆಗಳು ಉದ್ಯೋಗ ನೀಡಬಲ್ಲುದೇ? ಅನ್ನ ನೀಡೀತೇ? ಯಂತ್ರಗಳು ಶ್ರಮ ಸಹಿತ ಸರಳ ಬದುಕಿನ ಮೇಲೆ ಅಡ್ಡ ಪರಿಣಾಮ ಬೀರಿರಬಹುದು. ಇವತ್ತು ಯಂತ್ರಗಳು ಮಾಡುವ ಕೆಲಸವನ್ನು ಐದಾರು ದಶಕಗಳ ಹಿಂದೆ ಮನುಷ್ಯನೇ ಮಾಡುತ್ತಿದ್ದ. ಕೃಷಿಯಿಂದ ಹಿಡಿದು ಹೈನುಗಾರಿಕೆಯ ವರೆಗೆ, ಮರ ಕಡಿಯುವಲ್ಲಿಂದ ತೊಡಗಿ ಅಡಿಕೆ ಸುಲಿಯುವವರೆಗೆ ಎಲ್ಲವೂ ಯಂತ್ರ ಮುಕ್ತವಾಗಿದ್ದುವು. ಆದರೆ ಇವತ್ತು ಗದ್ದೆಯನ್ನು ಉತ್ತುವುದು, ಬಿತ್ತುವುದು, ಕೊಯ್ಯುವುದು, ಕಾಳು-ಜೊಳ್ಳನ್ನು ಬೇರ್ಪಡಿಸುವುದು, ಪ್ಯಾಕಿಂಗ್, ಮಾರ್ಕೆಟಿಂಗ್.. ಎಲ್ಲವನ್ನೂ ಯಂತ್ರವೇ ಮಾಡುತ್ತಿದೆ. ಹಸುವಿನ ಹಾಲು ಕರೆಯುವುದಕ್ಕೂ ಮೆಷೀನು ಬಂದಿದೆ. ಮರಗಳನ್ನು ಕಡಿಯುವುದಕ್ಕೆ ಯಂತ್ರ, ಲೋಡ್-ಅನ್‍ಲೋಡ್‍ಗೆ ಯಂತ್ರ; ಅಡಿಕೆಯನ್ನು ಕೀಳುವಲ್ಲಿಂದ ಸುಲಿಯುವವರೆಗೂ ಎಲ್ಲಕ್ಕೂ ಯಂತ್ರವೇ. ಹಾಗಂತ, ಹೀಗಲ್ಲದೇ ಬರೇ ಮನುಷ್ಯರನ್ನೇ ಆಶ್ರಯಿಸಿಕೊಳ್ಳುವ ವಿಧಾನ ಸಮಾಜವನ್ನು ಇವತ್ತು ಎತ್ತ ಕೊಂಡೊಯ್ಯಬಲ್ಲವು? ಏರುತ್ತಿರುವ ಜನಸಂಖ್ಯೆಗೆ ಸಾವಯವ ಕೃಷಿ ಪದ್ಧತಿ ಅನ್ನ ನೀಡುವಷ್ಟು ಸಮರ್ಥವೇ? ಯಂತ್ರಗಳ ಅವಲಂಬನೆಯಿಲ್ಲದೆ ಬದುಕುವುದು ಇಂದಿನ ಆಧುನಿಕ ಜಗತ್ತಿನಲ್ಲಿ ಎಷ್ಟು ವಾಸ್ತವ..
    ಇಂಥದ್ದೊಂದು ಚರ್ಚೆಗೆ ಖ್ಯಾತ ರಂಗಕರ್ಮಿ ಪ್ರಸನ್ನ ಅವರು ಮತ್ತೊಮ್ಮೆ ಚಾಲನೆಯನ್ನು ಕೊಟ್ಟಿದ್ದಾರೆ. ‘ಶ್ರಮಸಹಿತ ಸರಳ ಬದುಕನ್ನು ಬದುಕೋಣ ಬನ್ನಿ' ಎಂದು ಆಗ್ರಹಿಸಿ ಮಾರ್ಚ್ 20ರಿಂದ ಎಪ್ರಿಲ್ 20ರ ವರೆಗೆ ಅವರು ಬದನವಾಳುವಿ ನಲ್ಲಿ ಸತ್ಯಾಗ್ರಹ ನಡೆಸಿದರು. ಯಂತ್ರಗಳಿಂದ ಕಳಚಿಕೊಳ್ಳುವುದು ಈ ಸತ್ಯಾಗ್ರಹದ ಪರಮ ಧ್ಯೇಯ. ಈ ಸತ್ಯಾಗ್ರಹಕ್ಕೆ ಬೆಂಬಲವನ್ನು ಸೂಚಿಸಿ ಮೇಧಾ ಪಾಟ್ಕರ್ ಬದನವಾಳುವಿಗೆ ಆಗಮಿಸಿದರು. ರಹ್ಮತ್ ತರೀಕೆರೆ, ಜಿ.ಕೆ. ಗೋವಿಂದರಾವ್, ಎ.ಎನ್. ಯಲ್ಲಪ್ಪ ರೆಡ್ಡಿ, ದೇವನೂರು ಮಹಾದೇವ.. ಮುಂತಾದವರು ಪ್ರಸನ್ನರೊಂದಿಗೆ ಸೇರಿಕೊಂಡಿರು. ‘ಶ್ರಮಸಹಿತ ಸರಳ ಬದುಕನ್ನು ಶ್ರದ್ಧೆಯಿಂದ ಬಾಳುತ್ತೇವೆ. ಅದ್ದೂರಿ ಸಭೆ-ಸಮಾರಂಭಗಳನ್ನು ಏರ್ಪಡಿಸುವುದಿಲ್ಲ. ಸರಳ ಮದುವೆ ಮಾಡುತ್ತೇವೆ..' ಎಂಬಿತ್ಯಾದಿಯಾಗಿ ಪ್ರತಿಜ್ಞೆಯನ್ನೂ ಅಲ್ಲಿ ಕೈಗೊಳ್ಳಲಾಯಿತು. ಒಂದು ರೀತಿಯಲ್ಲಿ, ಆಧುನಿಕ ಜಗತ್ತಿನ ಯಂತ್ರ ಸಹಿತ ಬದುಕಿಗೆ ಪರ್ಯಾಯವೆಂಬಂತೆ ಮೈಸೂರು ಸವಿೂಪದ ಬದನವಾಳು ಸತ್ಯಾಗ್ರಹ ತನ್ನನ್ನು ಬಿಂಬಿಸಿ ಕೊಂಡಿತು. ಅಷ್ಟಕ್ಕೂ, ಕಂಪ್ಯೂಟರ್, ಮೊಬೈಲ್ ಜಮಾನದ ಇಂದಿನ ಪೀಳಿಗೆಯ ಪ್ರಶ್ನೆಗಳಿಗೆ ಬದನವಾಳು ತೃಪ್ತಿಕರ ಉತ್ತರ ನೀಡಬಲ್ಲುದೇ ಎಂಬ ಪ್ರಶ್ನೆ ಸಹಜವಾದುದು. ಕಂಪ್ಯೂಟರನ್ನು ಕೈಬಿಟ್ಟು ಹಾರೆ-ಗುದ್ದಲಿಯನ್ನು ಎತ್ತಿಕೊಳ್ಳಿ ಅನ್ನುವುದು ಅಥವಾ ಕೈಗಾರಿಕೆಗಳನ್ನು ಸ್ಥಗಿತಗೊಳಿಸಿ ಶ್ರಮಸಹಿತ ಜಗತ್ತಿಗೆ ಮರಳಿ ಅನ್ನುವುದು ಆಶ್ಚರ್ಯಕರವಷ್ಟೇ ಅಲ್ಲ ಕೆಲವೊಮ್ಮೆ ಹಾಸ್ಯಾಸ್ಪದವಾಗಿಯೂ ಕಾಣಬಹುದು. ಆದರೆ ಈ ಯಂತ್ರಗಳು ಎಲ್ಲಿಯ ವರೆಗೆ? ಪ್ರಾಕೃತಿಕ ಸಂಪನ್ಮೂಲಕ್ಕೂ ಒಂದು ಮಿತಿಯಿದೆಯಲ್ಲವೇ? ಆ ಬಳಿಕ ಏನು? 2050ಕ್ಕಾಗುವಾಗ ತೈಲ ಸಂಪನ್ಮೂಲ ಬಿಡಿ, ನದಿ ಮೂಲಗಳೂ ಬತ್ತಿ ಹೋಗಬಹುದೆಂಬ ಭೀತಿಯನ್ನು ಮೇಧಾ ಪಾಟ್ಕರ್‍ರಂತಹವರೇ ವ್ಯಕ್ತಪಡಿಸುತ್ತಿದ್ದಾರೆ. ಇಂಥ ಸಂದರ್ಭಗಳಲ್ಲಿ ಯಂತ್ರಗಳೇನು ಮಾಡಬಲ್ಲವು? ಅಂದಹಾಗೆ, ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಯಂತ್ರಗಳ ಬಳಕೆ ಎಂದರೆ ಲಾಭ ಹೆಚ್ಚಿಸುವುದು ಹಾಗೂ ಕೆಲಸಗಾರರ ಸಂಖ್ಯೆಯನ್ನು ಕಡಿತಗೊಳಿಸುವುದು ಎಂದರ್ಥ. ಈ ವ್ಯವಸ್ಥೆ ಎಷ್ಟು ಸ್ವಾರ್ಥ ಮತ್ತು ಮೋಹದ ಚೌಕಟ್ಟಿನೊಳಗೆ ಹೆಣೆಯಲ್ಪಟ್ಟಿದೆಯೆಂದರೆ, ಭೌತಿಕ ಅಗತ್ಯಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಹೆಚ್ಚೆಚ್ಚು ದುಡಿಯಬೇಕೆಂದು ಅದು ಹೇಳಿಕೊಡುತ್ತದೆ. ಇಲ್ಲಿ ವಿಶ್ರಾಂತಿಗೆ ಸಮಯ ಬಹಳ ಕಡಿಮೆ. ಆದ್ದರಿಂದಲೇ ಬೌದ್ಧಿಕ ಮತ್ತು ಆಧ್ಯಾತ್ಮಿಕ ಪ್ರಗತಿಗಾಗಿ ವಿೂಸಲಿಡಲು ಇಲ್ಲಿ ಸಮಯವೇ ಇರುವುದಿಲ್ಲ. ದುಡಿಮೆ, ದುಡಿಮೆ ಮತ್ತೂ ದುಡಿಮೆ. ವಿಜ್ಞಾನದ ಸಂಶೋಧನೆಗಳು ಲಾಭಕೋರರ ಕೈಗೆ ಸಿಕ್ಕರೆ ಏನಾಗಬಹುದೋ ಅದರ ಪ್ರತ್ಯಕ್ಷ ಉದಾಹರಣೆಗಳು ಪ್ರತಿ ದಿನ ಸಿಗುತ್ತಲೇ ಇವೆ. ಈ ಲಾಭಕೋರ ಜಗತ್ತಿನ ಮುಷ್ಠಿಯಿಂದ ಹೊರಬಂದು ಸಹಜವಾಗಿ ಮತ್ತು ಸರಳವಾಗಿ ಬದುಕುವುದು ಸಾಧ್ಯವಿಲ್ಲವೇ ಎಂಬ ಪ್ರಸನ್ನ ಅವರ ಪ್ರಶ್ನೆ ಈ ನೆಲೆಯಲ್ಲಿ ತೀರಾ ಅಸಹಜವಾದುದಲ್ಲ ಮತ್ತು ಒಂದೇ ಏಟಿಗೆ ತಿರಸ್ಕಾರಕ್ಕೆ ಅರ್ಹವಾದವೂ ಅಲ್ಲ.
    ಇವತ್ತಿನ ಜಗತ್ತು ಎರಡು ಭಾಗಗಳಾಗಿ ವಿಭಜಿತಗೊಂಡಿದೆ. ಅಭಿವೃದ್ಧಿ ಹೊಂದಿದ ಮತ್ತು ಹೊಂದದ, ಸವಲತ್ತು ಇರುವ ಮತ್ತು ಇರದ ಅಥವಾ ಶ್ರೀಮಂತ ಮತ್ತು ಬಡ ಎಂಬ ಎರಡು ಜಗತ್ತುಗಳು. ಈ ಜಗತ್ತಿನಲ್ಲಿ ಒಂದಕ್ಕೊಂದು ಅವಲಂಬನೆ ಎಷ್ಟು ಆಳವಾಗಿದೆ ಎಂದರೆ, ಅಮೇರಿಕಕ್ಕೆ ಶೀತವಾದರೆ ಚೀನಾ ಸೀನುವಷ್ಟು. ಎಲ್ಲವೂ ಯಂತ್ರಾಧಾರಿತ. ಪ್ರಾಕೃತಿಕ ಸಂಪನ್ಮೂಲಗಳ ಮೇಲೆ ವಿಪರೀತ ಅವಲಂಬನೆಯು ಎಲ್ಲ ಬಗೆಯ ಪೈಪೋಟಿ, ಹಿಂಸೆ, ಆತ್ಮಹತ್ಯೆಗಳ ಭೀಕರ ಸಂಸ್ಕ್ರಿತಿಯನ್ನೇ ಹುಟ್ಟುಹಾಕಿದೆ. ಯಂತ್ರವೆಂಬುದು ಬೇಡಿಕೆಗೆ ತಕ್ಕಂತೆ ಆಹಾರವನ್ನು ಪೂರೈಸುವುದಲ್ಲ. ಅದು ಭ್ರಮೆಯ ಜಗತ್ತನ್ನು ರೈತನ ಮುಂದೆ ತೆರೆದಿಡುತ್ತದೆ. ಹೆಚ್ಚು ಬೆಳೆ, ಹೆಚ್ಚು ದುಡ್ಡು, ಐಶಾರಾಮಿ ಜೀವನ.. ಇಂಥದ್ದೊಂದು ಕಲ್ಪನೆ ಯಂತ್ರ ಸಂಸ್ಕ್ರಿತಿಯದ್ದೇ ಹೊರತು ಶ್ರಮ ಸಂಸ್ಕ್ರಿತಿಯದ್ದಲ್ಲ. ಶ್ರಮ ಸಂಸ್ಕ್ರಿತಿಯಲ್ಲಿ ಮೋಹ ಇಲ್ಲ. ದುಡ್ಡು ಕೂಡಿಡುವ ಧಾವಂತ ಇಲ್ಲ. ಬೆಳಗ್ಗಿನಿಂದ ಸಂಜೆವರೆಗೆ ದುಡಿದು ರಾತ್ರಿಯನ್ನು ನೆಮ್ಮದಿಯಾಗಿ ಕಳೆಯುವ ಮತ್ತು ವಿಪರೀತ ಆಸೆಗಳಿಲ್ಲದೆ ಬದುಕುವ ವಿಧಾನ. ಯಂತ್ರ ಸಂಸ್ಕ್ರಿತಿ ಇದಕ್ಕೆ ವಿರುದ್ಧವಾದುದು. ಅದು ಹಣ ಕೇಂದ್ರಿತ. ಅದಕ್ಕಾಗಿ ಎಷ್ಟು ದುಡಿದರೂ ಉತ್ತಮವೇ. ಹಾಗೆ, ಆಧ್ಯಾತ್ಮಿಕಕ್ಕೂ ಬೌದ್ಧಿಕ ಬೆಳವಣಿಗೆಗೂ ವಿೂಸಲಿಡಲು ಸಮಯವೇ ಇಲ್ಲದಷ್ಟು ಮನುಷ್ಯನನ್ನು ಯಂತ್ರ ಮಾನವನಾಗಿಸುವುದು ಅದರ ಶೈಲಿ. ಎಲ್ಲಿ ಈ ಬಗೆಯ ಧಾವಂತ ಇರುತ್ತದೋ ಅಲ್ಲಿ ಹಿಂಸೆ ಮತ್ತು ಸಾವು ಅನಿವಾರ್ಯವಾಗಿರುತ್ತದೆ. ಯಂತ್ರಾಧಾರಿತ ಜೀವನ ಕ್ರಮದ ಮುಖ್ಯ ಕೊಡುಗೆ ಏನೆಂದರೆ ಪೈಪೋಟಿ. ಶ್ರಮ ಸಹಿತ ಬದುಕಿನಲ್ಲಿ ಈ ಪೈಪೋಟಿ ಕಡಿಮೆ. ಅಂದಹಾಗೆ, ಕೈಗಾರಿಕಾ ಕ್ರಾಂತಿಯಿಂದಾಗಿ ಉದ್ಯೋಗಾವಕಾಶಗಳು ಹೆಚ್ಚಿದುವು, ಜನರ ಜೀವನ ಮಟ್ಟದಲ್ಲಿ ಮತ್ತು ದೇಶದ ಅಭಿವೃದ್ಧಿ ಸೂಚ್ಯಂಕದಲ್ಲಿ ಏರಿಕೆ ಉಂಟಾಯಿತು ಎಂದೆಲ್ಲ ಹೇಳುವಾಗಲೂ ಅದರ ಅಡ್ಡ ಪರಿಣಾಮವಾದ ಹಿಂಸೆ, ಕೊಲೆ, ಕ್ರೌರ್ಯಗಳನ್ನು ನಾವು ಅಡಗಿಸುವುದೇ ಹೆಚ್ಚು. ಐಸಿಸ್‍ನಂಥ ಗುಂಪುಗಳು, ಅಮೇರಿಕದಂಥ ಬಲಾಢ್ಯ ರಾಷ್ಟ್ರಗಳು ಮತ್ತು ಅವುಗಳ ಕ್ರೌರ್ಯಗಳು ಅಸ್ತಿತ್ವ ದಲ್ಲಿರುವುದಕ್ಕೆ ಯಂತ್ರ ಸಂಸ್ಕ್ರಿತಿಗೆ ದೊಡ್ಡ ಪಾತ್ರವಿದೆ. ಪ್ರಾಕೃತಿಕ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯುವುದು ಅಮೇರಿಕದ ಅತಿಕ್ರಮಣದ ಹಿಂದಿನ ಉದ್ದೇಶವಾದರೆ, ಗೋ ಸಾಗಾಟವನ್ನು ತಡೆಯುವ ನೆಪದಲ್ಲಿ ದುಡ್ಡು ಮತ್ತಿತರ ವಸ್ತುಗಳನ್ನು ಕಸಿಯುವುದು ಸ್ಥಳೀಯ ಮಟ್ಟದ ಕ್ರೌರ್ಯಗಳ ಹಿಂದಿನ ಉದ್ದೇಶ. ದುಡ್ಡಿನ ರುಚಿ ಹತ್ತಿಬಿಟ್ಟರೆ ಅದು ಹಿಂಸೆಗೂ ಹೇಸುವುದಿಲ್ಲ. ಕೊಲೆಗೂ ಹಿಂಜರಿಯುವುದಿಲ್ಲ. ಆಧುನಿಕ ಜಗತ್ತಿನ ಕಟು ವಾಸ್ತವ ಇದು. ಶ್ರಮಸಹಿತ ಸರಳ ಬದುಕು ದುಡ್ಡು ಕೇಂದ್ರಿತ ಅಲ್ಲದೇ ಇರುವುದರಿಂದ ಹಿಂಸೆ ಕಡಿಮೆ. ಆದ್ದರಿಂದ ವೀಕೆಂಡ್ ಪಾರ್ಟಿಗಳು ಮತ್ತು ಮೋಜುಗಳೂ ಕಡಿಮೆ. ಯಂತ್ರಗಳು ಒಂದು ಕಡೆ ಉತ್ಪಾದನೆಯನ್ನು ಹೆಚ್ಚಿಸಿರುವಂತೆಯೇ ಇನ್ನೊಂದು ಕಡೆ ಹಸಿವೆಯಿಂದಿರುವವರಿಗೆ ಆ ಉತ್ಪಾದನೆಯನ್ನು ನೀಡದಿರುವ ಕ್ರೌರ್ಯವನ್ನೂ ಪ್ರದರ್ಶಿಸುತ್ತದೆ. ಮಿಗತೆಯಾದ ತನ್ನ ಉತ್ಪನ್ನವನ್ನು ಹಸಿವೆಯ ಮಂದಿಗೆ ನೀಡುವುದರಿಂದ ಲಾಭವೋ ಅಥವಾ ಸಮುದ್ರಕ್ಕೆ ಎಸೆಯುವುದರಿಂದ ಲಾಭವೋ ಎಂಬ ನಿಷ್ಕರ್ಷೆ ಮಾಡುವಷ್ಟು ಕೆಲವೊಮ್ಮೆ ಅದು ಹೃದಯಹೀನವಾಗುತ್ತದೆ.
    ನಿಜವಾಗಿ, ಸ್ಥಳೀಯತೆ ಎಂಬುದು ಒಂದು ಅನನ್ಯ ಐಡೆಂಟಿಟಿ. ಪ್ರತಿಯೊಂದು ಗ್ರಾಮ ಅಥವಾ ಪ್ರದೇಶಕ್ಕೂ ಅದರದ್ದೇ ಆದ ಸ್ಥಳೀಯತೆಯಿದೆ. ಅಕ್ಕಿ, ಗೋಧಿ, ಬಟಾಟೆ, ಟೊಮೆಟೊ, ಮೆಣಸು, ನೀರುಳ್ಳಿ, ಆ್ಯಪಲ್, ಬಾಳೆಹಣ್ಣು.. ಹೀಗೆ ಬೇರೆ ಬೇರೆ ವಸ್ತುಗಳು ಬೇರೆ ಬೇರೆ ಪ್ರದೇಶಗಳಲ್ಲಿ ಬೆಳೆಯುತ್ತವೆ. ಭತ್ತ ಬೆಳೆಯುವ ಮಣ್ಣಿನಲ್ಲಿ ಗೋಧಿಗೆ ಇಳುವರಿ ಸಿಗಲಾರದು. ಟೊಮೆಟೊ ಬೆಳೆಯುವ ಪ್ರದೇಶದಲ್ಲಿ ಮೆಣಸು ಇಳುವರಿಯನ್ನು ಕೊಡಲಾರದು. ಪ್ರತಿಯೊಂದಕ್ಕೂ ಅದರದ್ದೇ ಆದ ಸ್ಥಳೀಯ ಗುಣ ಇದೆ. ಶ್ರಮ ಸಂಸ್ಕ್ರಿತಿಯು ಈ ಸ್ಥಳೀಯತೆಯನ್ನು ಆಧರಿಸಿ ಬದುಕುತ್ತವೆ. ಶ್ರಮ ಸಂಸ್ಕ್ರಿತಿಯಲ್ಲಿ ವಲಸೆ ಕಡಿಮೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೆಚ್ಚಿನ ಇಳುವರಿಯನ್ನು ಮತ್ತು ಹೆಚ್ಚಿನ ಸಂಪಾದನೆಯನ್ನು ನಿರೀಕ್ಷಿಸಿ ವಲಸೆ ಹೋಗುವುದಿಲ್ಲ. ಆದರೆ ಆಧುನಿಕ ಕೈಗಾರಿಕಾ ಜಗತ್ತು ವಲಸೆಯನ್ನು ನೆಚ್ಚಿಕೊಂಡಂತಿರುತ್ತದೆ. ಅದು ವಿಕೇಂದ್ರಿತವಲ್ಲ, ಕೇಂದ್ರೀಕೃತ. ಆದ್ದರಿಂದಲೇ ಇವತ್ತು ಗ್ರಾಮಗಳಿಂದ ನಗರಗಳಿಗೆ ಜನರು ವಿಪರೀತ ಪ್ರಮಾಣದಲ್ಲಿ ವಲಸೆ ಹೋಗುತ್ತಿದ್ದಾರೆ. ಈ ಕಾರಣದಿಂದಾಗಿ ಗ್ರಾಮಗಳು ಖಾಲಿಯಾಗುತ್ತಿವೆ. ನಗರಗಳು ಗಿಜಿಗುಡುತ್ತಿವೆ. ಮಾಲಿನ್ಯಗಳು ಹೆಚ್ಚಾಗುತ್ತಿವೆ.
ಅಷ್ಟಕ್ಕೂ ಶ್ರಮ ಸಂಸ್ಕ್ರಿತಿಯಿಂದ ಯಂತ್ರ ಸಂಸ್ಕ್ರಿತಿಗೆ ಜಗತ್ತು ಸಂಪೂರ್ಣ ವಾಲಿರುವ ಈ ದಿನಗಳಲ್ಲಿ ಶ್ರಮದ ಬದುಕಿನ ಬಗ್ಗೆ ಮಾತಾಡುವುದು ಹಿಮ್ಮುಖ ನಡೆ ಅನಿಸುತ್ತದೋ ಇಲ್ಲವೋ ಆದರೆ ಸದ್ಯದ ದಿನಗಳಲ್ಲಿ ಅಂಥದ್ದೊಂದು ಚಿಂತನೆ ಅಸಾಧುವೇನೂ ಅಲ್ಲ. ಶ್ರಮ ಸಂಸ್ಕ್ರಿತಿ ಮತ್ತು ಯಂತ್ರ ಸಂಸ್ಕ್ರಿತಿ ಇಂದಿನ ದಿನಗಳಲ್ಲಿ ಮುಖಾಮುಖಿಗೊಳ್ಳಲೇಬೇಕಾದ ತುರ್ತು ಅಗತ್ಯವಂತೂ ಇದೆ. ಆಯ್ಕೆ ಯಾವುದೇ ಇದ್ದರೂ ಮುಖಾಮುಖಿಯಂತೂ ಸ್ವಾಗತಾರ್ಹವೇ. ಮೈಸೂರಿನ ಬದನವಾಳು ಅಂಥದ್ದೊಂದು ಮುಖಾಮುಖಿಗೆ ವೇದಿಕೆಯನ್ನು ಒದಗಿಸಿದೆ. ಇದು ಹೇಗೆಂದರೆ, ಕಂಪ್ಯೂಟರ್ ಮತ್ತು ಮಡಿಕೆಯನ್ನು ಮುಖಾಮುಖಿಗೊಳಿಸಿದಂತೆ. ಈ ಮುಖಾಮುಖಿಯಲ್ಲಿ ಗೆಲ್ಲುವುದು ಕಂಪ್ಯೂಟರೇ ಆಗಿರಬಹುದು. ಯಂತ್ರಗಳೇ ಇಲ್ಲದ ಜಗತ್ತನ್ನು ಊಹಿಸುವುದು ಸಾಧ್ಯವೇ ಇಲ್ಲ ಎಂದೂ ಹೇಳಬಹುದು. ಆದರೂ ಯಂತ್ರಗಳನ್ನು ವಿಪರೀತವಾಗಿ ಹಚ್ಚಿಕೊಂಡಿರುವ ಇಂದಿನ ಜಗತ್ತಿನಲ್ಲಿ ಮಡಿಕೆ ಮತ್ತು ಕಂಪ್ಯೂಟರ್ ಮುಖಾಮುಖಿಗೊಳ್ಳುವುದನ್ನು ಸ್ವಾಗತಿಸಲೇಬೇಕು. ಅದರ ಸಾಧಕ-ಬಾಧಕಗಳು ಚರ್ಚಿತಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಪ್ರಸನ್ನ ಅವರ ಸತ್ಯಾಗ್ರಹ ಅಭಿನಂದನಾರ್ಹ.