Monday, October 23, 2017

ಕ್ರಿಸ್ಟಾಫ್‍ರ ಉತ್ತರ ಕೊರಿಯದಿಂದ ನಾಂದೇಡ್‍ನ ಭಾರತದ ವರೆಗೆ

        ಅಮೇರಿಕದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ವರದಿಗಾರ ನಿಕೋಲಸ್ ಕ್ರಿಸ್ಟಾಫ್‍ರು (Nicholas Kristof) ಇತ್ತೀಚೆಗೆ ಉತ್ತರ ಕೊರಿಯಾಕ್ಕೆ ಭೇಟಿ ನೀಡಿ ಕಂಡುಕೊಂಡ ಅನುಭವಗಳು ಮತ್ತು ಕಳೆದವಾರ ಪ್ರಕಟವಾದ ಮಹಾರಾಷ್ಟ್ರದ ನಾಂದೇಡ್-ವಾಘಾಲ ಸಿಟಿ ಮುನ್ಸಿಪಲ್ ಕಾರ್ಪೋರೇಶನ್‍ಗೆ ನಡೆದ ಚುನಾ ವಣೆಯ ಫಲಿತಾಂಶಗಳ ನಡುವೆ ನೇರ ಸಂಬಂಧ ಇಲ್ಲದೇ ಇದ್ದರೂ ಇವೆರಡೂ ಯಾವುದೋ ಒಂದು ಬಿಂದುವಿನಲ್ಲಿ ಜೊತೆಗೂಡುವಂತೆ ಕಂಡವು. ಉತ್ತರ ಕೊರಿಯಕ್ಕೆ ಐದು ದಿನಗಳ ಭೇಟಿ ನೀಡಿರುವ ನಿಕೋಲಸ್ ಕ್ರಿಸ್ಟಾಫ್, ಆ ಕುರಿತಂತೆ ನ್ಯೂಯಾರ್ಕ್ ಟೈಮ್ಸ್ ನಲ್ಲಿ ಸರಣಿ ಲೇಖನಗಳನ್ನು ಬರೆದಿದ್ದಾರೆ. ಅದರಲ್ಲಿ Inside North Korea, and feeling the drums of war ಎಂಬುದೂ ಒಂದು. ಅದರಲ್ಲಿ ಉತ್ತರ ಕೊರಿಯದ ವಿವಿಧ ಅಧಿಕಾರಿಗಳು ಮತ್ತು ಜನರೊಂದಿಗೆ ನಡೆಸಿದ ವೀಡಿಯೋ ಸಂದರ್ಶನವೂ ಇದೆ. ಚಿತ್ರಗಳಿವೆ. ಇವನ್ನು ಓದುತ್ತಾ ಮತ್ತು ವೀಕ್ಷಿಸುತ್ತಾ ಹೋದಂತೆ ನನಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಭಕ್ತರು ನೆನಪಾದರು. ಭಕ್ತರು ಎಂಬ ಪದವನ್ನು ನಾನಿಲ್ಲಿ ಉದ್ದೇಶಪೂರ್ವಕವಾಗಿಯೇ ಬಳಸಿದ್ದೇನೆ. ಭಕ್ತರು ಮತ್ತು ಬೆಂಬಲಿಗರ ನಡುವೆ ಒಂದು ಸೂಕ್ಷ್ಮ ವ್ಯತ್ಯಾಸ ಇದೆ. ಭಕ್ತರು ಬದಲಾಗುವುದು ಕಡಿಮೆ. ಅಲ್ಲೊಂದು ಸ್ವಾಮಿನಿಷ್ಠೆಯಿದೆ. ಆ ನಿಷ್ಠೆ ಹೆಚ್ಚಿನ ಬಾರಿ ಎಷ್ಟು ಅಂಧವಾಗಿ ಇರುತ್ತದೆಂದರೆ, ವಾಸ್ತವವನ್ನೂ ಒಪ್ಪಿಕೊಳ್ಳದಷ್ಟು. ಆದರೆ ಬೆಂಬಲಿಗರು ಹಾಗಲ್ಲ. ಅವರ ಬೆಂಬಲವು ಸಂದರ್ಭ, ಸನ್ನಿವೇಶ ಮತ್ತು ಪರಿಸ್ಥಿತಿಗಳಿಗೆ ಹೊಂದಿಕೊಂಡು ಬದಲಾಗುತ್ತಲೇ ಇರುತ್ತದೆ. ನಿಕೋಲಸ್ ಕ್ರಿಸ್ಟಾಫ್‍ರ ಲೇಖನಗಳು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಹೊತ್ತಿನಲ್ಲೇ  ಮಹಾ ರಾಷ್ಟ್ರದ ನಾಂದೇಡ್ ಮುನ್ಸಿಪಲ್ ಕಾರ್ಪೋರೇಶನ್‍ಗೆ ನಡೆದ ಚುನಾವಣೆಯ ಫಲಿತಾಂಶಗಳೂ ಪ್ರಕಟವಾದುವು. ಅಚ್ಚರಿ ಏನೆಂದರೆ, ಒಟ್ಟು 81 ಸ್ಥಾನಗಳಲ್ಲಿ 73 ಸ್ಥಾನಗಳನ್ನು ‘ರಾಹುಲ್ ಗಾಂಧಿ’ಯ ಕಾಂಗ್ರೆಸ್ ಪಡೆದಿದೆ. ಬಿಜೆಪಿಗೆ ದಕ್ಕಿದ್ದು ಬರೇ 6. ಕಳೆದ ಚುನಾವಣೆಯಲ್ಲಿ 11 ಸ್ಥಾನಗಳನ್ನು ಪಡೆದಿದ್ದ ಓವೈಸಿಯ ಪಕ್ಪವು ಈ ಬಾರಿ ಶೂನ್ಯ ಸಾಧನೆಯನ್ನು ಮಾಡಿದೆ. ಅಂದ ಹಾಗೆ, 578 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದ, 60% ಮತದಾನವಾಗಿದ್ದ ಮತ್ತು ಚುನಾವಣಾ ಆಯೋಗವು ಮೊದಲ ಬಾರಿ 32 ವಾರ್ಡುಗಳಲ್ಲಿ VVPAT  (Voter verifiable paper audit trail )ಯನ್ನು ಅಳವಡಿಸಿದ್ದ ಚುನಾವಣೆ ಎಂಬ ನೆಲೆಯಲ್ಲಿ ಮಾತ್ರ ಈ ಫಲಿತಾಂಶ ಮುಖ್ಯವಲ್ಲ, ಈ ಹಿಂದೆ 16 ಮುನ್ಸಿಪಲ್ ಕಾರ್ಪೋರೇಶನ್‍ಗಳಿಗೆ ನಡೆದ ಚುನಾವಣೆಯಲ್ಲಿ 13ನ್ನು ಗೆದ್ದ ಬಿಜೆಪಿಯ ಫಡ್ನವಿಸ್ ಸರಕಾರಕ್ಕೆ ನೋಟ್ ನಿಷೇಧ ಮತ್ತು ಜಿಎಸ್‍ಟಿಯ ಬಳಿಕ ಎದುರಾದ ಮೊದಲ ಹಿನ್ನಡೆ ಎಂಬ ಕಾರಣಕ್ಕಾಗಿಯೂ ಮುಖ್ಯವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಸರಕಾರಕ್ಕೆ 3 ವರ್ಷಗಳು ತುಂಬಿವೆ. ಅಧಿ ಕಾರ ನಡೆಸುವ ಪಕ್ಷ ಎಂಬ ನೆಲೆಯಲ್ಲಿ ಜನರು ಲೆಕ್ಕಾಚಾರ ನಡೆಸುವ ಸಂದರ್ಭ ಇದು. ಚುನಾವಣೆಯ ಸಮಯದಲ್ಲಿ ನರೇಂದ್ರ ಮೋದಿಯವರು ಕೊಟ್ಟಿರುವ ಆಶ್ವಾಸನೆ, ಮೂಡಿಸಿದ ಭರವಸೆ ಮತ್ತು ಮಾತಿನ ವಾಗ್ವೈಖರಿಗಳನ್ನೆಲ್ಲ ಒಂದು ಕಡೆ ರಾಶಿ ಹಾಕಿ ಫಲಿತಾಂಶ ಹುಡುಕುವ ಸಮಯವೂ ಹೌದು. ನಾಂದೇಡ್ ನಗರ ಪಾಲಿಕೆಯ ಚುನಾವಣಾ ಫಲಿತಾಂಶವನ್ನು ಬಿಜೆಪಿ ಮತ್ತು ಅದರ ಬೆಂಬಲಿಗರು ಈ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತಾರೋ ಅನ್ನುವ ಕುತೂಹಲವೊಂದು ಎಲ್ಲರಂತೆ ನನ್ನಲ್ಲೂ ಇತ್ತು. ಸಾಮಾನ್ಯವಾಗಿ ಆಡಳಿತ ಪಕ್ಷವು ಸ್ಥಳೀಯ ಚುನಾವಣೆಯಲ್ಲಿ ಮೇಲುಗೈ ಸಾಧಿಸುವುದೇ ಹೆಚ್ಚು. ನಾಂದೇಡ್‍ನಲ್ಲಂತೂ ಖುದ್ದು ಮುಖ್ಯಮಂತ್ರಿ ಫಡ್ನವಿಸ್‍ರೇ ರಾಲಿ ನಡೆಸಿದ್ದರು. ಸರಕಾರವೇ ಒಂದಷ್ಟು ದಿನ ನಾಂದೇಡ್‍ನಲ್ಲೇ ಠಿಕಾಣಿ ಹೂಡಿದಂಥ ವಾತಾವರಣವೂ ಸೃಷ್ಟಿಯಾಗಿತ್ತು. ಇಷ್ಟಿದ್ದೂ, ಕಳೆದ ಬಾರಿ ಅಧಿಕಾರವಿದ್ದೂ 40 ಸ್ಥಾನಗಳನ್ನಷ್ಟೇ ಪಡೆದಿದ್ದ ಕಾಂಗ್ರೆಸ್ ಈ ಬಾರಿ 73 ಸ್ಥಾನಗಳನ್ನು ಪಡೆದುದಕ್ಕೆ ಏನು ಕಾರಣ? ಇದು ಪ್ರಧಾನಿ ಮೋದಿಯವರ ಜನಪ್ರಿಯತೆ ಕುಸಿಯುತ್ತಿರುವುದರ ಸೂಚನೆಯೇ? 2014ರ ಬಿಜೆಪಿ 2017ರ ಕೊನೆಯಲ್ಲಿ ಮಸುಕಾಗಲು ಪ್ರಾರಂಭಿಸಿತೇ? ದುರಂತ ಏನೆಂದರೆ, ಇಂಥದ್ದೊಂದು ಚರ್ಚೆಗೆ ಮುಖಾಮುಖಿಯಾಗುವುದಕ್ಕೇ ಬಿಜೆಪಿಯ ನಿಷ್ಠಾವಂತ ಬೆಂಬಲಿಗರು ಸಿದ್ಧರಾಗುತ್ತಿಲ್ಲ. ಉತ್ತರ ಕೊರಿಯಾದ ಈಗಿನ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‍ರ ಬಗ್ಗೆ ಅಲ್ಲಿನ ಜನರ ಅಭಿಪ್ರಾಯಗಳು ಯಾವ ಮಾದರಿಯವೋ ಬಹುತೇಕ ಅವನ್ನೇ ಹೋಲುವಷ್ಟು ಅಂಧ ಅಭಿಮಾನವೊಂದು ಅವರಲ್ಲಿ ವ್ಯಕ್ತವಾಗುತ್ತಿದೆ. ಅಲ್ಲಿನ ಸರ್ಕಾರಿ ಮಾಧ್ಯಮಗಳು ಕಿಮ್ ಜಾಂಗ್ ಉನ್‍ರನ್ನು ಅಪ್ರತಿಮ ಬುದ್ಧಿಮತ್ತೆಯುಳ್ಳವ, ಸೇನಾ ಚತುರ, ಸರಿಸಾಟಿಯಿಲ್ಲದ ಶೂರ ಮತ್ತು ಅದ್ವಿತೀಯ ನಾಯಕತ್ವ ಕೌಶಲ ಇರುವವ (The state media are worshipful about his brilliant intelligence, military acumen, matchless courage , and outstanding art of command ..) ಎಂದು ಹೊಗಳುತ್ತಿವೆ ಎಂದು ನಿಕೋಲಸ್ ಕ್ರಿಸ್ಟಾಫ್ ಹೇಳುತ್ತಾರೆ. ಒಂದು ವೇಳೆ ಕ್ರಿಸ್ಟಾಫ್‍ರು ಭಾರತಕ್ಕೆ ಭೇಟಿ ನೀಡಿರುತ್ತಿದ್ದರೆ ಕೊರಿಯದ ಸರಕಾರಿ ಮಾಧ್ಯಮದ ಕೆಲಸವನ್ನು ಇಲ್ಲಿನ ಖಾಸಗಿ ಮಾಧ್ಯಮಗಳು ಅಚ್ಚುಕಟ್ಟಾಗಿ ನಿರ್ವಹಿಸುತ್ತಿವೆ ಎಂದು ಬರೆಯುತ್ತಿದ್ದರೋ ಏನೋ. ಇಡೀ ಕೊರಿಯಾದಲ್ಲಿ ಜನರು ಅಧ್ಯಕ್ಷ ಕಿಮ್ ಜಾಂಗ್ ಉನ್‍ರ ಬಗ್ಗೆ ಅವಾಸ್ತವಿಕ ಮತ್ತು ಅಪೌರುಶೇಯ ಭ್ರಮೆಯಲ್ಲಿ ಮುಳುಗಿ ಹೋಗಿದ್ದಾರೆ. ಉನ್‍ರು ಅಮೇರಿಕವನ್ನು ಚಿಂದಿ ಉಡಾಯಿಸುವ ಕನಸನ್ನು ಅವರು ಕಾಣುತ್ತಿದ್ದಾರೆ. ಸೇನಾ ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳು ಅಲ್ಲಿ ಪ್ರತಿದಿನ ಪಥಸಂಚಲನ ನಡೆಸುತ್ತಾರೆ ಮತ್ತು ಅಮೇರಿಕವನ್ನು ಖಂಡಿಸುತ್ತಾರೆ ಎಂದು ಕ್ರಿಸ್ಟಾಫ್ ಬರೆಯುತ್ತಾರೆ. ಉತ್ತರ ಕೊರಿಯಾದ ಕ್ಷಿಪಣಿ ಅಮೇರಿ ಕಕ್ಕೆ ಅಪ್ಪಳಿಸಿ ರಾಷ್ಟ್ರಧ್ವಜವನ್ನು ಧ್ವಂಸ ಮಾಡುವ ಭಿತ್ತಿ ಚಿತ್ರ ಗಳು ರಸ್ತೆಯಂಚಿನಲ್ಲಿವೆ. ಕ್ಷಿಪಣಿಗಳ ಚಿತ್ರಗಳು ಅಲ್ಲಿನ ಶಿಶು ವಿಹಾರ ಮೈದಾನಗಳಲ್ಲಿ, ಪ್ರದರ್ಶನ ತಾಣಗಳಲ್ಲಿ, ಟಿ.ವಿ.ಗಳಲ್ಲಿ ರಾರಾಜಿಸುತ್ತಿವೆ ಎನ್ನುತ್ತಾರೆ ಕ್ರಿಸ್ಟಾಫ್. ಅಮೇರಿಕವನ್ನು ತೀವ್ರವಾಗಿ ವಿರೋಧಿಸುವ ವಾತಾವರಣವೊಂದು ಉತ್ತರ ಕೊರಿಯದಲ್ಲಿದೆ. ಅದನ್ನು ಅತ್ಯಂತ ಬುದ್ಧಿವಂತಿಕೆಯಿಂದ ಅಲ್ಲಿನ ನಾಯಕತ್ವ ಜೀವಂತವಾಗಿಯೂ ಇಡುತ್ತಿದೆ. ಅಮೇರಿಕ ವಿರೋಧಿ ಮನೋ ಭಾವವನ್ನು ಅಲ್ಲಿ ಎಲ್ಲಿಯ ವರೆಗೆ ಬೆಳೆಸಲಾಗಿದೆ ಎಂಬುದಕ್ಕೆ ಒಟ್ಟೋ ವರ್‍ಂಬಿಯರ್ (Votto Warmbier) ಎಂಬ 22ರ ಅಮೇರಿಕನ್ ವಿದ್ಯಾರ್ಥಿಯೇ ಉದಾಹರಣೆ. ಉತ್ತರ ಕೊರಿಯಾಕ್ಕೆ ಭೇಟಿ ನೀಡುವುದಕ್ಕೆ ಅಮೇರಿಕದಲ್ಲಿ ನಿರ್ಬಂಧವಿದೆ. ಈ ಕಾರಣದಿಂದಾಗಿ ಒಟ್ಟೋ ವರ್‍ಂಬಿಯರ್ ಚೀನಾದ ಮೂಲಕ ಉತ್ತರ ಕೊರಿಯಾಕ್ಕೆ 2015ರ ಕೊನೆಯಲ್ಲಿ ತೆರಳುತ್ತಾನೆ. ಆದರೆ ಆತನನ್ನು ಯಾಂಗೂನ್ ವಿಮಾನ ನಿಲ್ದಾಣದಲ್ಲೇ ಬಂಧಿಸಲಾಗು ತ್ತದೆ. ಶತ್ರು ಕಾಯ್ದೆಯಡಿ ಕೇಸು ದಾಖಲಾಗುತ್ತದೆ. ಇದಾದ ಎರಡು ತಿಂಗಳ ಬಳಿಕ ಭಿತ್ತಿ ಚಿತ್ರವೊಂದನ್ನು ಕದ್ದ ಆರೋಪದಲ್ಲಿ 15 ವರ್ಷಗಳ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಆತನ ಬಗ್ಗೆ ನಡೆದ ಒಂದು ಗಂಟೆಯ ವಿಚಾರಣೆಯನ್ನು ಅಲ್ಲಿನ ಟಿ.ವಿ.ಯಲ್ಲಿ ಬಿತ್ತರಿಸಲಾಗುತ್ತದೆ. ಆತ ಕಣ್ಣೀರಿನೊಂದಿಗೆ ತಪ್ಪೊಪ್ಪಿಕೊಳ್ಳುವ ದೃಶ್ಯ ಪ್ರಸಾರವಾಗುತ್ತದೆ. ಇದಾಗಿ 17 ತಿಂಗಳ ಬಳಿಕ ಕಳೆದ ಜೂನ್‍ನಲ್ಲಿ ಆತನನ್ನು ಬಹುತೇಕ ನಿರ್ಜೀವ ಸ್ಥಿತಿಯಲ್ಲಿ ಅಮೇರಿಕಕ್ಕೆ ಮರಳಿಸಲಾಗುತ್ತದೆ ಮತ್ತು ಇದಾಗಿ ಒಂದೇ ವಾರದೊಳಗೆ ಆತ ಸಾವಿಗೀಡಾಗುತ್ತಾನೆ. ಆತನ ಮೆದುಳಿಗೆ ಆಘಾತವಾಗಿರುವುದು ಮತ್ತು ಕಳೆದ ಒಂದು ವರ್ಷದಿಂದ ಆತ ಕೋಮಾದಲ್ಲಿರುವುದೂ ಬೆಳಕಿಗೆ ಬರುತ್ತದೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಕೊರಿಯಾದ ಅಧಿಕಾರಿಗಳು ಯಾವ ಬೇಸರವನ್ನೂ ವ್ಯಕ್ತಪಡಿಸದಿರುವುದನ್ನು ಅತ್ಯಂತ ಅಚ್ಚರಿಯಿಂದ ಕ್ರಿಸ್ಟಾಫ್ ಬರೆಯುತ್ತಾರೆ. ಆತನ ಚಿಕಿತ್ಸೆಗೆ ವೆಚ್ಚ ಮಾಡಿ ದುದನ್ನು ಅಮೇರಿಕ ಮರಳಿಸಬೇಕು ಎಂಬ ರೀತಿಯ ಅಲ್ಲಿನ ಅಧಿಕಾರಿಗಳ ವಾದಕ್ಕೆ ಚಕಿತರಾಗುತ್ತಾರೆ. ನಿಜವಾಗಿ ಇದೊಂದು ರೀತಿಯ ಭ್ರಮೆ. ವ್ಯವಸ್ಥೆಯೊಂದು ಜನರನ್ನು ಎಷ್ಟರ ಮಟ್ಟಿಗೆ ತೀವ್ರವಾದಿಗಳಾಗಿಸಬಹುದು ಅನ್ನುವುದಕ್ಕೆ ಉದಾಹರಣೆ. ನಮ್ಮಲ್ಲೇ  ಗೌರಿ ಲಂಕೇಶ್‍ರ ಹತ್ಯೆಗೆ, ಅನಂತಮೂರ್ತಿ, ಕಲ್ಬುರ್ಗಿಯವರ ಹತ್ಯೆಗೆಲ್ಲ ವ್ಯಕ್ತವಾದ ಪ್ರತಿಕ್ರಿಯೆಗಳನ್ನೊಮ್ಮೆ ಅವಲೋಕಿಸಿಕೊಳ್ಳಿ. ಭಿತ್ತಿಪತ್ರವನ್ನು ಕದ್ದ ವ್ಯಕ್ತಿಯನ್ನು ಜೀವಚ್ಛವವಾಗಿ ಮಾಡಿದುದರ ಬಗ್ಗೆ ಪಶ್ಚಾತ್ತಾಪಪಡದ ಮತ್ತು ಚಿಕಿತ್ಸೆಗೆ ಮಾಡಿದ ವೆಚ್ಚದ ಬಗ್ಗೆ ಚಿಂತಿತರಾದ ಉತ್ತರ ಕೊರಿಯನ್ನರಿಗೆ ಹೋಲುವ ರೀತಿಯಲ್ಲಿ ಇಲ್ಲೂ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತಲ್ಲವೇ? ಆ ಪ್ರತಿಕ್ರಿಯೆಗಳ ಮೂಲ ಎಲ್ಲಿತ್ತು? ಪ್ರತಿಕ್ರಿಯಿಸಿದವರು ಯಾರ ಬೆಂಬಲಿಗರಾಗಿದ್ದರು? ಈ ದೇಶದವರೇ ಆದ ಆದರೆ ಪ್ರಧಾನಿ ಮೋದಿಯವರ ವಿಚಾರಧಾರೆಯನ್ನು ಒಪ್ಪದ ಕನ್ಹಯ್ಯ, ಹಾರ್ದಿಕ್ ಪಟೇಲ್, ಜಿಗ್ನೇಶ್, ಪ್ರಕಾಶ್ ರೈ ಅವರ ಬಗ್ಗೆ ಇಲ್ಲಿ ವ್ಯಕ್ತವಾಗುತ್ತಿರುವ ವಿರೋಧಗಳು ಯಾವ ಮಟ್ಟಿನವು? ಒಟ್ಟೋನ ಮೇಲೆ ಶತ್ರು ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿದಂತೆಯೇ ಕನ್ಹಯ್ಯನ ಮೇಲೆ ದೇಶದ್ರೋಹಿ ಕಾಯ್ದೆಯಡಿ ಕೇಸು ದಾಖಲಿಸಲಾಯಿತು. ಮಾತ್ರವಲ್ಲ, ಒಂದಿಡೀ ಮಾಧ್ಯಮ ಗುಂಪು ಆತನ ಮೇಲೆ ಎರಗಿತು. ಬಿಜೆಪಿ ಪ್ರಣೀತ ವಿಚಾರಧಾರೆಯನ್ನೇ ಏಕೈಕ ಮತ್ತು ಪರ್ಯಾಯವಿಲ್ಲದ ವಿಚಾರಧಾರೆಯಾಗಿ ಮಂಡಿಸಲು ಅವೆಲ್ಲ ಹೆಣಗಿದುವು. ಉತ್ತರ ಕೊರಿಯಾದಲ್ಲಿ ಅಮೇರಿಕದ ವಿರುದ್ಧ ಯಾವ ಬಗೆಯ ಅಭಿಪ್ರಾಯವನ್ನು ರೂಪಿಸಲಾಗಿದೆಯೋ ಪ್ರಜಾತಂತ್ರ ಭಾರತದಲ್ಲೂ ಬಿಜೆಪಿ ವಿಚಾರಧಾರೆಯೇ ಸರಿ ಮತ್ತು ಪರಿಪೂರ್ಣ ಎಂಬ ಧಾಟಿಯಲ್ಲಿ ಮಾಧ್ಯಮಗಳ ಒಂದು ಗುಂಪು ಅತ್ಯಂತ ಪ್ರಬಲವಾಗಿ ವಾದಿಸಿತು. ವಿರೋಧಿ ಧ್ವನಿಯನ್ನು ಮೆಟ್ಟುವ ಪ್ರಯತ್ನ ನಡೆಯಿತು. ಆದರೆ,
ನಾಂದೇಡ್ ನಗರ ಪಾಲಿಕಾ ಚುನಾವಣೆಯ ಫಲಿತಾಂಶವು ಈ ವಿಚಾರಧಾರೆಯ ಪ್ರಭಾವ ಕುಸಿಯುತ್ತಿರುವುದನ್ನು ಸೂಚಿಸು ವಂತಿದೆ. ಕಳೆದ 3 ವರ್ಷಗಳಲ್ಲಿ ಪ್ರಾಬಲ್ಯ ಸ್ಥಾಪಿಸಿದ್ದ ವಿಚಾರ ಧಾರೆಗೆ ಎದುರಾದ ಪ್ರಬಲ ಸವಾಲು ಇದು. ವ್ಯಕ್ತಿ ವರ್ಚಸ್ಸು ಎಂಬುದು ಸರ್ವಾಧಿಕಾರಿ ಪ್ರಭುತ್ವವೊಂದರಲ್ಲಿ ಸದಾ ಕಾಯ್ದುಕೊಳ್ಳಬಹುದಾದ ಸಂಗತಿಯೇ ಹೊರತು ಪ್ರಜಾತಂತ್ರ ರಾಷ್ಟ್ರದಲ್ಲಲ್ಲ. ಪ್ರಜಾತಂತ್ರ ರಾಷ್ಟ್ರದಲ್ಲಿ ವ್ಯಕ್ತಿ ವರ್ಚಸ್ಸು ಒಂದು ಹಂತವನ್ನು ದಾಟಿದ ಬಳಿಕ ಸವಾಲಿಗೆ ಮುಖಾಮುಖಿಯಾಗಲೇ ಬೇಕಾಗುತ್ತದೆ. ಆ ಮುಖಾಮುಖಿಯಲ್ಲಿ ಗೆಲುವು ಪಡೆಯಬೇಕಾದರೆ ಸಾಧನೆ ಇರಬೇಕಾಗುತ್ತದೆ. ಜನಸ್ನೇಹಿಯಾಗಿ ಗುರುತಿಸಿರಬೇಕಾಗುತ್ತದೆ. ಕೃತಿಯಲ್ಲಿ ಜನರ ಹೃದಯವನ್ನು ತಟ್ಟಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕಳೆದ 3 ವರ್ಷಗಳು ಪ್ರಧಾನಿ ಮೋದಿಯವರನ್ನು ಅವರ ವ್ಯಕ್ತಿ ವರ್ಚಸ್ಸು ಗೆಲ್ಲಿಸುತ್ತಾ ಬಂತು. ಆದರೆ ಈ ಗೆಲುವನ್ನು ಆ ಪಕ್ಷ ತಪ್ಪಾಗಿ ಅರ್ಥೈಸಿತೋ ಎಂಬ ಅನುಮಾನವನ್ನು ನಾಂದೇಡ್ ಫಲಿತಾಂಶವು ಮುಂದಿಡುತ್ತಿದೆ. ಅಷ್ಟಕ್ಕೂ, ಸ್ಥಳೀಯ ಚುನಾವಣೆಯ ಮೇಲೆ ಸ್ಥಳೀಯವಾದ ಅಂಶಗಳು ಮತ್ತು ರಾಜ್ಯ ಸರಕಾರದ ನೀತಿಗಳು ಪ್ರಭಾವ ಬೀರಿರುತ್ತವೆಯೇ ಹೊರತು ಕೇಂದ್ರ ಸರಕಾರದ್ದಲ್ಲ ಎಂದು ವಾದಿಸಬಹುದು. ಬಾಹ್ಯನೋಟಕ್ಕೆ ಅದು ಸರಿಯೆಂದೂ ಅನಿಸಬಹುದು. ಆದರೆ ಇವತ್ತು ಈ ದೇಶದಲ್ಲಿ ಪಂಚಾಯತಿ ಚುನಾವಣೆಯಿಂದ ಹಿಡಿದು ಸಂಸತ್ ಚುನಾವಣೆಯ ವರೆಗೆ ಬಿಜೆಪಿ ಮತ ಯಾಚಿಸುವುದೇ ಪ್ರಧಾನಿ ನರೇಂದ್ರ ಮೋದಿಯವರನ್ನು ಎದುರಿಟ್ಟುಕೊಂಡು. ಅವರ ಹೊರತಾಗಿ ಅದಕ್ಕೆ ವಿಷಯಗಳೂ ಇಲ್ಲ. ಸಾಧನೆಗಳೂ ಇಲ್ಲ. ಆದ್ದರಿಂದಲೇ ನಾಂದೇಡ್ ಫಲಿತಾಂಶ ಮುಖ್ಯವಾಗುವುದು. ಏನೇ ಆಗಲಿ,
    ಭಾರತ ಭ್ರಮೆಯಿಂದ ಕಳಚಿಕೊಳ್ಳುತ್ತಿದೆ. ಭ್ರಮೆಯಲ್ಲಿರುವ ಮಂದಿ ಈ ಬದಲಾವಣೆಯನ್ನು ಒಪ್ಪಿಕೊಂಡರೂ ಇಲ್ಲದಿದ್ದರೂ..

ಬ್ಲ್ಯಾಕ್ ಶರ್ಟ್ಸ್ ಗೆ ಪರ್ಯಾಯವೇ ಈ ಜಾಕೆಟ್?

     ಇಟಲಿಯ ಬರಹಗಾರ್ತಿ ಇಗೆನಿಯ ಪೌಲಿಸೆಲ್ಲಿಯವರು ತಮ್ಮ ‘ಇನ್ ಫ್ಯಾಶನ್ ಅಂಡರ್ ಫ್ಯಾಸಿಸಂ: ಬಿಯಾಂಡ್ ದಿ ಬ್ಲ್ಯಾಕ್ ಶರ್ಟ್’ ಎಂಬ ಬಹುಚರ್ಚಿತ ಕೃತಿಯಲ್ಲಿ ಫ್ಯಾಸಿಸಂನ ಕುರಿತಂತೆ ಒಳನೋಟವನ್ನು ಹರಿಸಿದ್ದಾರೆ. ಇಟಲಿಯ ಉಡುಪು ವಿನ್ಯಾಸಗಳು ಹೇಗೆ ಫ್ಯಾಸಿಸಂನಿಂದ ಪ್ರಭಾವಿತವಾಗಿವೆ ಎಂಬುದನ್ನು ಪ್ರಸಿದ್ಧ ಉಡುಪು ವಿನ್ಯಾಸಕಾರ ಫರ್ನಾಂಡೋ ಗಟ್ಟಿನೋನಿ ಮತ್ತು ಮೈಕಲ್ ಫಂಟಾನಾ ಅವರ ಜೊತೆ ನಡೆಸಿದ ಮಾತುಕತೆಯಿಂದಲೂ ಅವರು ಹೆಕ್ಕಿ ತೋರಿಸಿದ್ದಾರೆ. ಇಟಲಿಯ ಪ್ರಸಿದ್ಧ ಬಟ್ಟೆ ಬ್ರಾಂಡ್‍ಗಳಾದ Gucci, Max, Mara, Prada.. ಮುಂತಾದುವುಗಳಲ್ಲಿ ಅವರು ಫ್ಯಾಸಿಸಂನ ಛಾಯೆಯನ್ನು ಹುಡುಕಿದ್ದಾರೆ. ಚರ್ಚೆಗೊಡ್ಡಿದ್ದಾರೆ. ಅಂದಹಾಗೆ, ಅವರು ಬಟ್ಟೆಯ ಮೇಲೆ ಇಂಥದ್ದೊಂದು ಪತ್ತೆ ಕಾರ್ಯ ನಡೆಸುವುದಕ್ಕೆ ಪ್ರಮುಖ ಕಾರಣ ಇದೆ. ಅದೆಂದರೆ ಮುಸೊಲೋನಿ. 1920ರ ದಶಕದಲ್ಲಿ ಮುಸೊಲೋನಿ ಇಟಲಿಯ ಮೇಲೆ ಪ್ರಾಬಲ್ಯ ಸ್ಥಾಪಿಸಿದ್ದ. ಆತ ಅತ್ಯುತ್ತಮ ಮಾತುಗಾರ. ಸಂಘಟಕ. ಆತನ ‘ರಾಷ್ಟ್ರೀಯ ಫ್ಯಾಸಿಸ್ಟ್ ಪಾರ್ಟಿ’ಯ ಸ್ವಯಂ ಸೇವಕರನ್ನು ಬ್ಲ್ಯಾಕ್‍ ಶರ್ಟ್ಸ್ ಎಂದು ಕರೆಯಲಾಗುತ್ತಿತ್ತು. ಕಪ್ಪು ಶರ್ಟು ಅವರ ಸಮವಸ್ತ್ರ. ಮುಸೊಲೋನಿ ನಿರ್ಗಮಿಸಿದ್ದರೂ ಆತನ ವಿಚಾರಧಾರೆಯ ಕುರುಹು ಈಗಿನ ಬಟ್ಟೆ ವಿನ್ಯಾಸಗಳಲ್ಲಿ ಗೋಚರಿಸುತ್ತವೆ ಎಂಬುದು ಇಗೊನಿಯರ ಅಭಿಪ್ರಾಯ. ನಿಜವಾಗಿ, ಫ್ಯಾಸಿಸಂ ಎಂಬುದು ಒಂದು ವಿಚಾರಧಾರೆ. ಅದಕ್ಕೆ ಶಾಶ್ವತ ಅಳಿವು ಎಂಬುದಿಲ್ಲ. ಆ ವಿಚಾರಧಾರೆಗೆ ಅಧಿಕಾರ ಕೈ ತಪ್ಪಿ ಹೋದ ತಕ್ಷಣ ಅದರ ನಿಧನ ವಾರ್ತೆಯನ್ನು ಶಾಶ್ವತಗೊಳಿಸಬೇಕಾದ ಅಗತ್ಯವೂ ಇಲ್ಲ. ಅದು ವಿವಿಧ ರೀತಿಯಲ್ಲಿ ಪುಟಿಯಲು ಸಿದ್ಧವಾಗುತ್ತಲೇ ಇರುತ್ತದೆ. ಉಡುಪು ಅದರ ಬಹು ದೊಡ್ಡ ಮಾಧ್ಯಮ. ಉಡುಪಿಗೆ ಅದ್ಭುತ ಸಾಮರ್ಥ್ಯ ಇದೆ. ಅದು ಸಮಾಜವನ್ನು ಆಕರ್ಷಿಸುತ್ತದೆ. ಒಂದು ಫ್ಯಾಶನ್ ಸಮಾಜದ ಭಾಗವಾಗುವುದೆಂದರೆ, ಅದು ಬರೇ ಫ್ಯಾಶನ್‍ಗೇ ಸೀಮಿತಗೊಳ್ಳುವುದಿಲ್ಲ. ಆ ಫ್ಯಾಶನ್ ಏನನ್ನು ಅಭಿವ್ಯಕ್ತಿಸುತ್ತದೋ ಅದನ್ನು ಅದರ ಗ್ರಾಹಕರು ಪ್ರತಿನಿಧಿಸುತ್ತಾರೆ. ಖಾಕಿ ಬಟ್ಟೆಯು ಹೊರನೋಟಕ್ಕೆ ಬರೇ  ಒಂದು ಉಡುಪು ಮಾತ್ರ. ಹಾಗಂತ, ಆ ಉಡುಪನ್ನು ಎಲ್ಲರೂ ಧರಿಸುವುದಿಲ್ಲ. ಸಾಮಾನ್ಯವಾಗಿ ಪೊಲೀಸರು ಖಾಕಿಯನ್ನು ಧರಿಸುತ್ತಾರೆ. ಖಾಕಿಗೂ ಪೊಲೀಸರಿಗೂ ನಡುವೆ ಸಂಬಂಧ ಎಷ್ಟು ಪ್ರಬಲವಾಗಿದೆಯೆಂದರೆ, ಬಟ್ಟೆಯಂಗಡಿಯಲ್ಲಿ ಅಪ್ಪಿ-ತಪ್ಪಿ ವಿತರ ಕರು ಖಾಕಿಯನ್ನು ತೋರಿಸಿದರೆ, ‘ನಾನು ಪೊಲೀಸ್ ಇಲಾಖೆ ಯಲ್ಲಿ ಇಲ್ಲ’ ಎಂಬ ಉತ್ತರವನ್ನು ಗ್ರಾಹಕರು ಕೊಡುವುದಿದೆ. ಖಾಕಿ ಎಂದರೆ ಪೊಲೀಸ್ ಇಲಾಖೆ ಎಂದಾಗಿದೆ. ಪೊಲೀಸರು ಯಾರೆಂದರೆ, ಒಂದು ನಿರ್ದಿಷ್ಟ ಕಾನೂನನ್ನು ಮತ್ತು ಸಂವಿಧಾನ ವನ್ನು ಪ್ರತಿನಿಧಿಸುವವರು. ಪೊಲೀಸರಿಂದ ಕಾನೂನು ಭಂಗ ವಾಗಿ ಬಿಟ್ಟರೆ ಸಮಾಜ ಅದನ್ನು ಬಹಳ ದೊಡ್ಡ ಅನ್ಯಾಯವಾಗಿ ಪರಿಗಣಿಸುತ್ತದೆ. ಅದೇ ಕಾನೂನುಭಂಗವನ್ನು ಓರ್ವ ಸಾಮಾನ್ಯ ನಾಗರಿಕ ಮಾಡಿದರೆ ಅದು ಅಷ್ಟು ಸುದ್ದಿಯಾಗುವುದಿಲ್ಲ. ಇದಕ್ಕಿರುವ ಕಾರಣ ಏನೆಂದರೆ, ಪೊಲೀಸರು ಧರಿಸುವ ಖಾಕಿ ಬಟ್ಟೆಯು ಬರೇ ಸಮವಸ್ತ್ರವಷ್ಟೇ ಅಲ್ಲ, ಒಂದು ನಿರ್ದಿಷ್ಟ ವಿಚಾರಧಾರೆ ಅಥವಾ ನಿಯಮ ಸಂಹಿತೆಯನ್ನು ಅದು ಪ್ರತಿಬಿಂಬಿಸುತ್ತದೆ. ಇಟಲಿಯ Gucci, Max, Mara, Prada.. ಬ್ರಾಂಡುಗಳಲ್ಲಿ ಮುಸೊಲೋನಿಯ ಫ್ಯಾಸಿಸ್ಟ್ ವಿಚಾರಧಾರೆಯ ಪ್ರಭಾವವಿದೆ ಎಂಬ ಇಗೆನಿಯರ ಮಾತು ಮುಖ್ಯವಾಗುವುದು ಇಲ್ಲೇ. ಮುಸೊಲೋನಿ ತನ್ನ ಬ್ಲ್ಯಾಕ್ ಶರ್ಟ್ಸ್ ನ ಬೆಂಬಲಿಗರಿಂದ ಇಟಲಿಯಾದ್ಯಂತ ಪೆರೇಡ್ ನಡೆಸುತ್ತಿದ್ದ. ಆತನ ಸುತ್ತ-ಮುತ್ತ ಇದ್ದುದು ಬ್ಲ್ಯಾಕ್ ಶರ್ಟ್‍ಗಳೇ. ಅವನ ಬೆಂಬಲಿಗರು ಬ್ಲ್ಯಾಕ್ ಶರ್ಟ್ ಧರಿಸುವುದನ್ನು ಫ್ಯಾಶನ್ ಆಗಿಸಿಕೊಳ್ಳತೊಡಗಿದರು. ಇಟಲಿಯ ಎಲ್ಲೆಡೆಗೂ ಬ್ಲ್ಯಾಕ್ ಹರಡತೊಡಗಿತು. ನಿಜವಾಗಿ, ಕಪ್ಪು ಎಂಬುದು ಮುಸೊಲೋನಿಯ ವಿಚಾರಧಾರೆಯನ್ನು ಪ್ರತಿನಿಧಿಸುವ ಬಣ್ಣ. ರಸ್ತೆಯಲ್ಲಿ ನೂರೋ ಸಾವಿರವೋ ಮಂದಿ ಶಿಸ್ತುಬದ್ಧವಾಗಿ ಕಪ್ಪು ಸಮವಸ್ತ್ರದೊಂದಿಗೆ ನಡೆಯುವುದೆಂದರೆ, ಅದು ಬರೇ ನಡತೆಯಷ್ಟೇ ಆಗಿರುವುದಿಲ್ಲ. ಆ ಶಿಸ್ತು ಮತ್ತು ಸಮವಸ್ತ್ರವು ಸಮಾಜದಲ್ಲಿ ಭಯ ಮತ್ತು ಬಲವಂತದ ಮೌನವನ್ನು ಉತ್ಪಾದಿಸುತ್ತದೆ. ಹಿಟ್ಲರ್ ಕೂಡ ಕಪ್ಪನ್ನು ಸಮವಸ್ತ್ರವನ್ನಾಗಿ ಬಳಸಿಕೊಂಡಿದ್ದ. ಆ ಸಮವಸ್ತ್ರದಲ್ಲಿ ಪೆರೇಡನ್ನೂ ನಡೆಸುತ್ತಿದ್ದ. ಸಮಾಜದ ಮೇಲೆ ಪ್ರಭಾವ ಬೀರುವುದಕ್ಕೆ ಇಟಲಿ ಮತ್ತು ಜರ್ಮನಿಯ ಫ್ಯಾಸಿಸ್ಟ್ ವಿಚಾರಧಾರೆಗಳು ಪ್ರಮುಖ ಮಾಧ್ಯಮವಾಗಿ ಬಳಸಿಕೊಂಡದ್ದೇ ಬಟ್ಟೆಯನ್ನು. ಸದ್ಯ ಪ್ರಧಾನಿ ನರೇಂದ್ರ ಮೋದಿಯವರು ಇಂಥದ್ದೊಂದು ಪ್ರಯತ್ನದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಂತಿದೆ. ‘ಮೋದಿ ಜಾಕೆಟ್’ (MJ) ಎಂಬುದು ಅವರ ಬೆಂಬಲಿಗರ ನೆಚ್ಚಿನ ವಿನ್ಯಾಸವಾಗತೊಡಗಿದೆ. ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್‍ರೂ ಮೋದಿ ಜಾಕೆಟ್ ಧರಿಸುವವರಲ್ಲಿ ಓರ್ವರು ಎಂಬುದೇ ಅದು ಬರೇ ಫ್ಯಾಶನ್ ಅಲ್ಲ ಎಂಬುದಕ್ಕಿರುವ ಪುರಾವೆಯಾಗಿದೆ. ಜಾಕೆಟ್ ಒಂದು ವಿಚಾರಧಾರೆಯ ಪ್ರತಿನಿಧಿ. ನರೇಂದ್ರ ಮೋದಿಯವರೇ ಆ ವಿಚಾರಧಾರೆ. ದೇಶದ ಪ್ರತಿ ನಗರ, ಗ್ರಾಮ ಮತ್ತು ಹಳ್ಳಿ ಪ್ರದೇಶಗಳಲ್ಲಿ ಮೋದಿ ಜಾಕೆಟ್  ಜನಪ್ರಿಯವಾಗುವುದನ್ನು ಕಲ್ಪಿಸಿಕೊಳ್ಳಿ. ಪ್ರತಿ ಹೆಣ್ಣು ಮತ್ತು ಗಂಡು ತಮ್ಮ ಬಟ್ಟೆಗೆ ಮೇಲುಡುಗೆಯಾಗಿ ಜಾಕೆಟ್ ಧರಿಸುವ ಸಂದರ್ಭವನ್ನೊಮ್ಮೆ ಊಹಿಸಿ. ಒಂದು ವ್ಯಕ್ತಿತ್ವ ಮತ್ತು ಒಂದು ವಿಚಾರಧಾರೆಯನ್ನು ಪ್ರತಿಷ್ಠಾಪಿಸುವುದಕ್ಕೆ ಸುಲಭ ದಾರಿಯಿದು. ಇತ್ತೀಚೆಗೆ ಬರೋಡಾಕ್ಕೆ ಕಾರ್ಯನಿಮಿತ್ತ ಹೋಗಿದ್ದ ಪ್ರೊಫೆಸರ್ ಸದಾನಂದ ಮೇನನ್ ಅವರು ಈ ಆತಂಕವನ್ನು ತೋಡಿಕೊಂಡಿದ್ದರು. ಬರೋಡದ ಎಲ್ಲೆಡೆಯೂ ಮೋದಿ ಜಾಕೆಟ್ ರಾರಾಜಿಸುತ್ತಿದೆ ಎಂದವರು ಹೇಳಿದ್ದರು. ಪ್ರತಿ ಅಂಗಡಿ, ಮನೆ, ರಸ್ತೆ, ಪಾರ್ಕ್, ಮೈದಾನ, ಚೌಕಿ ಎಲ್ಲೆಂದರಲ್ಲಿ ಮೋದಿ ಜಾಕೆಟ್ ತುಂಬಿ ಹೋಗಿರುವುದನ್ನು ಹಂಚಿಕೊಂಡಿದ್ದರು. ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಮೋದಿಯವರು ದೇಶವನ್ನುದ್ದೇಶಿಸಿ ಮಾತಾಡುವಾಗ ಧರಿಸಿದ್ದ ಉಡುಪು ವಿಶಿಷ್ಟವಾಗಿತ್ತು. ಅಂಥ ಉಡುಪನ್ನು ಈ ಹಿಂದಿನ ಪ್ರಧಾನಿಗಳಾರೂ ಧರಿಸಿರಲಿಲ್ಲ. ಈ ಹಿಂದಿನ ಎಲ್ಲ ಪ್ರಧಾನಿಗಳಿಗಿಂತಲೂ ವಿಭಿನ್ನವಾಗಿ ಅವರು  ಕೆಂಪು ಕೋಟೆಯಿಂದ ಜನರೊಂದಿಗೆ ಮಾತಾಡಿದರು. ಪ್ರಧಾನಿಯವರ ಸ್ವಾತಂತ್ರ್ಯೋತ್ಸವದ ಭಾಷಣ ಎಂದ ತಕ್ಷಣ ಮೋದಿಯವರ ಮುಖಕ್ಕಿಂತಲೂ ಮೊದಲು ಅವರ ತಲೆಯ ಮುಂಡಾಸು ಮತ್ತು ಅದರ ಬಣ್ಣ ಎದುರು ಬರುತ್ತದೆ. ಉಳಿದ ಪ್ರಧಾನಿಗಳ ಮಟ್ಟಿಗೆ ಅವರ ಮುಖವೇ ಅವರ ಗುರುತು. ಮೋದಿಯವರ ಮಟ್ಟಿಗೆ ಅವರ ಉಡುಪೇ ಅವರ ಗುರುತು. ಇಟಲಿಯ ಮುಸೊಲೋನಿಯಿಂದ ಅತ್ಯಂತ ಹೆಚ್ಚು ಪ್ರಭಾವಿತ ಗೊಂಡ ಸಂಘಟನೆ ಎಂಬ ನೆಲೆಯಲ್ಲಿ ಆರೆಸ್ಸೆಸ್‍ನ ಸಮವಸ್ತ್ರವನ್ನು ಇಲ್ಲಿ ಎತ್ತಿಕೊಳ್ಳಬಹುದು. ನಿರ್ದಿಷ್ಟ ಸಮವಸ್ತ್ರ ಮತ್ತು ಶಿಸ್ತಿನೊಂದಿಗೆ ಅದು ಪೆರೇಡ್ ನಡೆಸುತ್ತದೆ. ಖಾಕಿ ಚಡ್ಡಿ, ಬಿಳಿ ಶರ್ಟು ಮತ್ತು ಟೊಪ್ಪಿ ಧರಿಸಿದವರನ್ನು ಸಾಮಾನ್ಯ ಜನರೂ ಆರೆಸ್ಸೆಸ್ಸಿನವರಾಗಿ ಪರಿಗಣಿಸುತ್ತಾರೆ. ಅದು ಎಷ್ಟರ ಮಟ್ಟಿಗೆ ಆ ಸಂಘಟನೆಯ ಬ್ರ್ಯಾಂಡ್ ಆಗಿಬಿಟ್ಟಿದೆಯೆಂದರೆ, ಆರೆಸ್ಸೆಸ್ಸಿ ಗನಲ್ಲದವನನ್ನೂ ಆ ಉಡುಪು ಆರೆಸ್ಸೆಸ್ಸಿಗನನ್ನಾಗಿ ಮಾಡಿಸುತ್ತದೆ. ನಿಜವಾಗಿ, ಖಾಕಿ ಮತ್ತು ಬಿಳಿ ಬಣ್ಣಗಳು ಹಲವು ಬಣ್ಣಗಳಲ್ಲಿ ಒಂದು ಬಣ್ಣವೇ ಹೊರತು ಅದಕ್ಕೆ ಇನ್ನಾವ ವೈಶಿಷ್ಟ್ಯವೂ ಇಲ್ಲ. ಆದರೆ ಇದನ್ನು ನಿರ್ದಿಷ್ಟ ಆಕಾರದಲ್ಲಿ ಮತ್ತು ನಿರ್ದಿಷ್ಟ ವಿನ್ಯಾಸದೊಂದಿಗೆ ಧರಿಸುವಾಗ ಅದೊಂದು ವಿಚಾರಧಾರೆಯಾಗಿ ಮಾರ್ಪಡುತ್ತದೆ.
      ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಖಾದಿ ಮತ್ತು ಬಿಳಿ ಟೋಪಿಗೆ ಬಹು ಬೇಡಿಕೆಯಿತ್ತು. ಭಾರತೀಯರು ಭಾರೀ ಸಂಖ್ಯೆಯಲ್ಲಿ ಅದನ್ನು ಧರಿಸಿದರು. ಅದನ್ನು ವಿಮೋಚನೆ ಮತ್ತು ಸ್ವಾಭಿಮಾನದ ಸಂಕೇತವಾಗಿ ಬಳಸಿದರು. ಆ ಸಮಯದಲ್ಲಿ ಅದು ಫ್ಯಾಶನ್ ಆಗಿತ್ತು. ಅದೊಂದು ವಿಮೋಚನಾ ವಿಚಾರಧಾರೆ. ಅದರಲ್ಲಿ ಮನುಷ್ಯ ವಿರೋಧಿಯಾದ ಯಾವುದನ್ನೂ ಯಾರೂ ಕಂಡಿರಲಿಲ್ಲ. ಇವತ್ತಿಗೂ ಸರಕಾರಗಳು ಖಾದಿ ಬಟ್ಟೆಯನ್ನು ಜನಪ್ರಿಯಗೊಳಿಸಲು ಪ್ರಯ ತ್ನಿಸುತ್ತಿವೆ. ಆದರೆ ಮೋದಿಯವರ ಜಾಕೆಟ್‍ಗೆ ಇಂಥದ್ದೊಂದು ಹಿನ್ನೆಲೆ ಇದೆಯೇ? ಅವರು ಬೆಳೆದು ಬಂದ ಸಂಘಟನೆಯ ವಿಚಾರಧಾರೆಯು ಈ ದೇಶದ ಬಹುತ್ವಕ್ಕೆ ಅಪಾಯಕಾರಿ ಎಂಬ ನಿಲುವು ಬಹುಸಂಖ್ಯಾತ ಜನರಲ್ಲಿದೆ. ನರೇಂದ್ರ ಮೋದಿಯವರ ನಿಲುವೂ ಅನೇಕ ಬಾರಿ ಈ ದೇಶದಲ್ಲಿ ಪ್ರಶ್ನಾರ್ಹಗೊಂಡಿದೆ. ಬಹುತ್ವವನ್ನು ಒಪ್ಪದ ಮತ್ತು ಫ್ಯಾಸಿಸ್ಟ್ ವಿಚಾರಧಾರೆಯನ್ನು ಪ್ರತಿನಿಧಿಸುವ ಧಾಟಿಯಲ್ಲೇ ಅವರು ಮಾತು, ಪ್ರತಿಕ್ರಿಯೆಗಳಿರುತ್ತವೆ. ಆದ್ದರಿಂದಲೇ ಅವರ ಜಾಕೆಟ್ ಆರೆಸ್ಸೆಸ್‍ನ ಸಮವಸ್ತ್ರಕ್ಕೆ ಹತ್ತಿರವಾಗಬಹುದೇ ಹೊರತು ಸ್ವಾತಂತ್ರ್ಯ ಹೋರಾಟದ ಖಾದಿ, ಬಿಳಿ ಟೋಪಿಗಲ್ಲ. ಇಂದಿನ ಸಮಾಜಕ್ಕೆ ಪ್ರಧಾನಿ ನರೇಂದ್ರ ಮೋದಿ ಯಾರು ಮತ್ತು ಮೋದಿ ಜಾಕೆಟ್ ಏನು ಅನ್ನುವುದು ಗೊತ್ತು. ಆದರೆ ಮೋದಿಯನ್ನು ನೋಡೇ ಇಲ್ಲದ ಮುಂದಿನ ತಲೆಮಾರಿನ ಪಾಲಿಗೆ ಜಾಕೆಟ್ ಎಂಬುದು ಮೋದಿಯವರನ್ನು ನೆನಪಿಸುವ ಒಂದು ಸ್ಮರಣಿಕೆ. ಜಾಕೆಟ್ ಒಂದು ಫ್ಯಾಶನ್ ಆಗಿ ಸಮಾಜದಲ್ಲಿ ಚಲಾವಣೆಯಲ್ಲಿರುವುದೆಂದರೆ, ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಆ ವಿಚಾರಧಾರೆಯನ್ನು ಚಲಾವಣೆಯಲ್ಲಿ ಇಟ್ಟಂತೆ ಆಗುತ್ತದೆ. ಆ ಜಾಕೆಟ್ ಅನ್ನು ಧರಿಸುವ ಹೆಣ್ಣು ಮತ್ತು ಗಂಡು ಮೋದಿ ಯನ್ನು ನೆನಪಿಸಿಕೊಳ್ಳುವುದಕ್ಕೆ ಅವಕಾಶ ಒದಗುತ್ತದೆ. ಬಟ್ಟೆ ಅಂಗಡಿಗೆ ತೆರಳಿ ಮೋದಿ ಜಾಕೆಟ್ ಕೊಡಿ ಎಂದು ಕೇಳುವಾಗ ಜಾಕೆಟ್ ಮಾತ್ರ ಮಾರಾಟವಾಗುವುದಲ್ಲ, ಮೋದಿಯೂ ಮಾರಾಟವಾಗುತ್ತಾರೆ. ಹಾಗೆ ಜಾಕೆಟ್ ಖರೀದಿಸಿದವರಲ್ಲಿ ಮತ್ತು ಅದನ್ನು ಖರೀದಿಸದಿದ್ದರೂ ಅದನ್ನು ಧರಿಸಿದವರನ್ನು ನೋಡಿದವರಲ್ಲಿ ಮೋದಿಯವರ ಬಗ್ಗೆ ಕುತೂಹಲ ಹುಟ್ಟಬಾರದೆಂದೇನಿಲ್ಲ. ಗಾಂಧಿ ಟೋಪಿ ಧರಿಸಿದವರಲ್ಲಿ ಗಾಂಧಿಯ ಬಗ್ಗೆ ಹೇಗೆ ಜಿಜ್ಞಾಸೆ ಮೂಡಬಹುದೋ ಹಾಗೆಯೇ ಇದು. ಆ ಕುತೂಹಲ ಕೊನೆಗೆ ಮೋದಿಯವರ ಬಗ್ಗೆ ತಿಳಿದುಕೊಳ್ಳುವುದಕ್ಕೂ ಅವರನ್ನು ಬೆಳೆಸಿದ ಸಂಘಟನೆಯ ವಿಚಾರಧಾರೆಯನ್ನು ಅಧ್ಯಯನ ನಡೆಸುವುದಕ್ಕೂ ಕಾರಣವಾಗಬಹುದು. ಒಂದು ವಿಚಾರಧಾರೆಯನ್ನು ಜನರ ಬಳಿಗೆ ತಲುಪಿಸುವ ಬುದ್ಧಿವಂತಿಕೆಯ ವಿಧಾನ ಇದು. ಮೋದಿ ಜಾಕೆಟ್ ಅನ್ನು ಧರಿಸಿದ ಗುಜರಾತ್‍ನ ಒಂದು ಡಜನ್‍ನಷ್ಟು ಸಚಿವರು ಒಟ್ಟಾಗಿ ನಿಂತಿರುವ ಫೋಟೋವನ್ನು ಬರೋಡ ಭೇಟಿಯ ವೇಳೆ ದಿನ ಪತ್ರಿಕೆಯೊಂದರಲ್ಲಿ ತಾನು ನೋಡಿರುವುದಾಗಿ ಪ್ರೊಫೆಸರ್ ಸದಾನಂದ ಮೆನನ್ ಹೇಳಿಕೊಂಡಿದ್ದರು. ಜಾಕೆಟ್ ಬರೇ ಮೋದಿಯವರ ಖಾಸಗಿ ಉಡುಪಾಗಿಯಷ್ಟೇ ಪರಿಗಣಿತವಾಗಿಲ್ಲ ಎಂಬುದಕ್ಕೆ ಪುರಾವೆ ಇದು. ಬಿಜೆಪಿ ಇದನ್ನು ರಾಜಕೀಯವಾಗಿ ಪ್ರತಿಷ್ಠಾಪಿಸಬಯಸಿದೆ. ತನ್ನ ವಿಚಾರಧಾರೆಯನ್ನು ಜಾಕೆಟ್‍ನ ಮೂಲಕ ಹಂಚಬಯಸಿದೆ. ಆದ್ದರಿಂದಲೇ ಇದು ಆತಂಕಕಾರಿ.

Saturday, October 21, 2017

ದಡ್ಡುಗಟ್ಟಿದ ಮನಸ್ಸಿನ ಸಂಕೇತವೇ ಆ ಫಾರ್ವರ್ಡ್?

      ಹೆಚ್ಚಿನೆಲ್ಲ ಪತ್ರಿಕೆಗಳು ಪ್ರಕಟಿಸಿರುವ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪೈಪೋಟಿಯಿಂದ ಹಂಚಿಕೆಯಾದ ವೀಡಿಯೋವೊಂದನ್ನು ವೀಕ್ಷಿಸಿದೆ. ಪಶ್ಚಿಮ ಬಂಗಾಲದ ಬಿಜೆಪಿ ನಾಯಕ ದಿಲೀಪ್ ಘೋಷ್‍ರನ್ನು ಹಿಗ್ಗಾ-ಮುಗ್ಗಾ ಥಳಿಸುವ ವೀಡಿಯೋ ಅದು. ಗುಂಪೊಂದು ಈ ನಾಯಕನನ್ನು ಅಟ್ಟಾ ಡಿಸಿಕೊಂಡು ಹೊಡೆಯುತ್ತದೆ. ಒದೆಯುತ್ತದೆ. ಥಳಿಸುತ್ತದೆ. ಮುಷ್ಠಿಯಿಂದ ಗುದ್ದುತ್ತದೆ. ಗುಂಪಿನ ನಡುವೆ ಅಸಹಾಯಕನಾದ ದಿಲೀಪ್ ಘೋಷ್‍ರು ಕುಸಿದು ಬೀಳುತ್ತಾರೆ. ತಪ್ಪಿಸಿಕೊಳ್ಳುವ ವಿಫಲ ಪ್ರಯತ್ನ ನಡೆಸುತ್ತಾರೆ. ಇಲಿಯೊಂದು ಬೆಕ್ಕಿನ ಕೈಗೆ ಸಿಕ್ಕರೆ ಹೇಗೆ ಚಡಪಡಿಸಬಹುದೋ ಅಂಥದ್ದೊಂದು ಸನ್ನಿವೇಶ ಅಲ್ಲಿ ನಿರ್ಮಾಣವಾಗುತ್ತದೆ. ಸಿನಿಮಾ ಶೈಲಿಯಲ್ಲಿ ಓಡಿ ಬಂದು ಜಂಪ್ ಮಾಡಿ ಒದೆಯುವ ಘಟನೆಯೂ ನಡೆಯುತ್ತದೆ. ಒಂದು ವೇಳೆ, ಈ ವೀಡಿಯೋವನ್ನು ದಿಲೀಪ್ ಘೋಷ್‍ರ ಮಕ್ಕಳು, ಪತ್ನಿ, ತಾಯಿ, ತಂದೆ ನೋಡಿದರೆ ಏನನಿಸಬಹುದು? ಅವರ ಪ್ರತಿಕ್ರಿಯೆ ಹೇಗಿರಬಹುದು? ಅಪ್ಪ ನಡುಬೀದಿಯಲ್ಲಿ ಯಾರದೋ ಕೈಯಲ್ಲಿ ಥಳಿಸಿಕೊಳ್ಳುವುದನ್ನು ಮಕ್ಕಳಿಂದ ಸಹಿಸಿಕೊಳ್ಳಲು ಸಾಧ್ಯವೇ? ಒಂದು ಕುಟುಂಬದ ಸದಸ್ಯ ಅವಮಾನಿತ ಆಗುವುದೆಂದರೆ, ಅದು ಆತನೊಬ್ಬನ ಅವಮಾನವಷ್ಟೇ ಆಗುವು ದಲ್ಲ. ಆತನೊಂದಿಗೆ ಸಂಬಂಧ ಇರುವ ಎಲ್ಲರ ಅವಮಾನ ವಾಗಿಯೂ ಪರಿವರ್ತಿತವಾಗುತ್ತದೆ. ಅಪ್ಪ ಸದಾ ಮಕ್ಕಳ ಪಾಲಿಗೆ ಗೌರವಾನ್ವಿತ ವ್ಯಕ್ತಿತ್ವ. ಆ ವ್ಯಕ್ತಿತ್ವವನ್ನು ಹಾಗೆ ನೋಡು ವುದೇ ಮಕ್ಕಳ ಪಾಲಿನ ಹೆಮ್ಮೆ. ತುಂಬಿದ ಸಭೆಯಲ್ಲಿ ಮಕ್ಕಳು ಹೊಗಳಿಕೆಗೋ ಬಹುಮಾನಕ್ಕೋ ಅರ್ಹವಾಗುವುದು ಅಪ್ಪನ ಪಾಲಿಗೆ ಹೇಗೆ ಹೆಮ್ಮೆಯ ಸಂಗತಿಯೋ ಅಪ್ಪ ಹಾಗೆ ಗುರು ತಿಸಿಕೊಳ್ಳುವುದು ಮಕ್ಕಳ ಪಾಲಿಗೂ ಹೆಮ್ಮೆ. ಆದ್ದರಿಂದಲೋ ಏನೋ ಇಬ್ಬರ ನಡುವೆ ಜಗಳ ನಡೆಯುವ ಸಂದರ್ಭದಲ್ಲಿ ವಿನಿಮಯವಾಗುವ ಕೆಟ್ಟ ಬೈಗುಳಗಳು ಹೆತ್ತವರನ್ನೇ ಕೇಂದ್ರೀಕರಿಸಿರುತ್ತವೆ. ‘ನನ್ನನ್ನು ಏನು ಬೇಕಾದರೂ ಅನ್ನು, ಆದರೆ ಹೆತ್ತವ ರನ್ನು ಏನಾದರೂ ಅಂದರೆ ಸುಮ್ಮನಿರಲ್ಲ’ ಎಂಬ ಮಾತು ಸಾಮಾನ್ಯವಾಗಿ ಸಿನಿಮಾಗಳಲ್ಲೂ ಅದರ ಹೊರಗೂ ಕೇಳಿ ಬರುವುದಿದೆ. ಇಂಥದ್ದೊಂದು ಗೌರವಾನ್ವಿತ ವ್ಯಕ್ತಿತ್ವ ನಡುಬೀದಿಯಲ್ಲಿ ಅವಮಾನಕ್ಕೊಳಗಾಗುವುದನ್ನು ಯಾವ ಮಗು ತಾನೇ ಸಹಿಸಿಕೊಂಡೀತು? ಈ ಪ್ರಶ್ನೆ ಕೇವಲ ದಿಲೀಪ್ ಘೋಷ್‍ರಿಗೆ ಸಂಬಂಧಿಸಿ ಮಾತ್ರ ಕೇಳಬೇಕಾದುದಲ್ಲ. ಹೀಗೆ ಎಲ್ಲರೆದುರೇ ಅವಮಾನಿತರಾದ ಮತ್ತು ಅವಮಾನಿತರಾಗುತ್ತಲೇ ಸಾವಿಗೀಡಾದ ಹಲವರ ಪಟ್ಟಿ ನಮ್ಮೆಲ್ಲರ ಮುಂದಿದೆ. ಹೈನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಹರ್ಯಾಣದ ಪೆಹ್ಲೂಖಾನ್ ಎಂಬ 50ರ ಆಸುಪಾಸಿನ ವ್ಯಕ್ತಿ ಗುಂಪಿನಿಂದ ಥಳಿತಕ್ಕೊಳಗಾಗಿ ಅಸಹಾಯಕರಾಗಿ ಬೀದಿಯಲ್ಲಿ ಬೀಳುವ ವೀಡಿಯೋವನ್ನು ಬಹುತೇಕರು ವೀಕ್ಷಿಸಿರಬಹುದು. ಅಖ್ಲಾಕ್ ಎಂಬ ವೃದ್ಧನನ್ನು ಉತ್ತರ ಪ್ರದೇಶದಲ್ಲಿ ಗುಂಪೊಂದು ಥಳಿಸಿ ಕೊಲ್ಲುವ ವೀಡಿಯೋವೂ ಬಹುತೇಕ ವೈರಲ್ ಆಗಿತ್ತು. ಇಂಥದ್ದು ಅನೇಕ ಇವೆ. ನೈತಿಕ ಪೊಲೀಸ್‍ಗಿರಿಯ ಹೆಸರಲ್ಲಿ ನಡೆದ ಹಲವು ಥಳಿತದ ವೀಡಿಯೋಗಳು ಅನೇಕರ ಮೊಬೈಲ್ ಗ್ಯಾಲರಿಯಲ್ಲಿ ಈಗಲೂ ಇದ್ದಿರಬಹುದು. ಗೂಗಲ್‍ನಿಂದ ಹೆಕ್ಕಿ ಈಗಲೂ ಇಂಥವುಗಳನ್ನು ರವಾನಿಸುವವರೂ ಇದ್ದಾರೆ. ದಿಲೀಪ್ ಘೋಷ್‍ರನ್ನು ಥಳಿಸುವ ವೀಡಿಯೋವು ನಾನಿರುವ ಅನೇಕಾರು ವಾಟ್ಸಾಪ್ ಗ್ರೂಪ್‍ಗಳಲ್ಲಿ ಮತ್ತೆ ಮತ್ತೆ ಪ್ರತ್ಯಕ್ಪವಾಗುತ್ತಿರುವುದನ್ನು ನೋಡಿ ನೋಡಿ ನಾನು ಒಂದು ರೀತಿಯಲ್ಲಿ ಕಂಗಾಲಾದೆ. ನನ್ನನ್ನು ಮತ್ತೆ ಮತ್ತೆ ಪ್ರಶ್ನೆಗಳು ಕಾಡಿದುವು. ಓರ್ವ ಗೌರವಾನ್ವಿತ ವ್ಯಕ್ತಿ ನಡು ಬೀದಿಯಲ್ಲಿ ಥಳಿತಕ್ಕೊಳಗಾಗುವುದು ಯಾವ ಕೆಟಗರಿಯಲ್ಲಿ ಬರುತ್ತದೆ? ಮನೋರಂಜನೆ, ಅಪರಾಧ, ಹಂಚಿಕೊಳ್ಳಬಾರದ, ವೀಕ್ಷಿಸಬಾರದ.. ಇವುಗಳಲ್ಲಿ ಯಾವ ಕೆಟಗರಿ? ಇದು ಎಲ್ಲರೂ ವೀಕ್ಷಿಸಬೇಕಾದ ಮತ್ತು ಒಬ್ಬರಿಂದೊಬ್ಬರಿಗೆ ಹಂಚಿಕೆ ಮಾಡಬೇಕಾದ ವೀಡಿಯೋ ಹೌದೇ? ಇದನ್ನು ವೀಕ್ಷಿಸಿದ ಬಳಿಕ ವೀಕ್ಪಕನ ಮನಸ್ಸಿನಲ್ಲಿ ಉದ್ಭವವಾಗುವ ಭಾವ ಯಾವುದು? ತೃಪ್ತಿಯೇ, ಅತೃಪ್ತಿಯೇ, ಖುಷಿಯೇ, ಸಿಟ್ಟೇ, ನೋವೇ? ಹಾಗಂತ, ದಿಲೀಪ್ ಘೋಷ್‍ರು ನಾಗರಿಕ ಜಗತ್ತಿನಲ್ಲಿ ಬದುಕದ ಮತ್ತು ಕಾಡಿನಲ್ಲೋ ಇನ್ನೆಲ್ಲೋ  ಭೂಗತರಾಗಿ ಬದುಕುವ ವೀರಪ್ಪನ್ನೋ ದಾವೂದ್ ಇಬ್ರಾಹೀಮೋ ಏನೂ ಅಲ್ಲ. ಅವರ ವಿಚಾರಧಾರೆ, ಚಟುವಟಿಕೆ, ರಾಜಕೀಯ ಕಾರ್ಯ ವಿಧಾನಗಳ ಮೇಲೆ ಅನೇಕರಿಗೆ ಅಸಮಾಧಾನ ಇರಬಹುದು. ಇದು ಅಸಹಜ ಅಲ್ಲ. ಪ್ರಜಾ ತಂತ್ರ ರಾಷ್ಟ್ರವೊಂದರಲ್ಲಿ ಪ್ರತಿಯೊಬ್ಬರಿಗೂ ಭಿನ್ನ ವಿಚಾರಧಾರೆ ಯನ್ನು ಹೊಂದುವ, ವ್ಯಕ್ತಪಡಿಸುವ ಮತ್ತು ಅದರಂತೆ ಬದು ಕುವ ಪೂರ್ಣ ಸ್ವಾತಂತ್ರ್ಯ ಇದೆ. ಅದು ಸಂವಿಧಾನ ವಿರೋಧಿಯಾಗಬಾರದು ಎಂಬುದಷ್ಟೇ ಇಲ್ಲಿರುವ ಷರತ್ತು. ದಿಲೀಪ್ ಘೋಷ್‍ರ ವಿಚಾರಧಾರೆಯನ್ನು ಮತ್ತು ಅವರು ಗುರುತಿಸಿಕೊಂಡಿರುವ ಬಿಜೆಪಿಯನ್ನು ಪ್ರಶ್ನಿಸುವುದಕ್ಕೆ ಈ ದೇಶದಲ್ಲಿ ಅನೇಕರು ಸಂವಿಧಾನಬದ್ಧ ದಾರಿಗಳಿವೆ. ವೇದಿಕೆಗಳಿವೆ.
      ಪಶ್ಚಿಮ ಬಂಗಾಲದ ಡಾರ್ಜಿಲಿಂಗ್‍ನಲ್ಲಿ ಗೋರ್ಖಾಲ್ಯಾಂಡ್ ಜನಮುಕ್ತಿ ಮೋರ್ಚಾವು (GJM) ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಕೈಗೊಂಡಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಸೆ. 26ರಂದು ಕೈ ಬಿಟ್ಟಿತ್ತು. ಸತತ 104 ದಿನಗಳ ವರೆಗೆ ಸಾಗಿದ ಈ ಪ್ರತಿಭಟನೆಯಿಂದ ಉಎಒ ಹಿಂದೆ ಸರಿಯಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಮನವಿ ಕಾರಣ ವಾಗಿತ್ತು. ಪಶ್ಚಿಮ ಬಂಗಾಲದಲ್ಲಿ ಬೇರು ಬಿಡಲು ವಿವಿಧ ಕಸರತ್ತುಗಳನ್ನು ನಡೆಸುತ್ತಿರುವ ಬಿಜೆಪಿಯು ಈ ಬೆಳವಣಿಗೆಯನ್ನು ಒಂದು ಅವಕಾಶವಾಗಿ ಬಳಸಿಕೊಳ್ಳಲು ತೀರ್ಮಾನಿಸಿತು. ದಿಲೀಪ್ ಘೋಷ್ ನೇತೃತ್ವದ ಒಂದು ನಿಯೋಗವು GJM ಗುಂಪಿನೊಂದಿಗೆ ಮಾತುಕತೆ ನಡೆಸುವ ಉದ್ದೇಶದಿಂದ ಅಕ್ಟೋಬರ್ 4ರಂದು ದಾರ್ಜಿಲಿಂಗ್‍ಗೆ ಭೇಟಿ ಕೊಟ್ಟಿತು. ದಾರ್ಜಿಲಿಂಗ್‍ನ ಚೌಕ್ ಬಝಾರ್‍ನಲ್ಲಿ GJM ಬೆಂಬಲಿಗರೊಂದಿಗೆ ಬಿಜೆಪಿ ರಾಲಿ ನಡೆಸಿತು. ಮಾತ್ರವಲ್ಲ, ಗೋರ್ಖಾ ದುಃಖ್ ನಿವಾರಕ್ ಸಭಾಂಗಣದಲ್ಲಿ ‘ವಿಜಯ ಸಮ್ಮಿಲನ ಸಭೆ’ಯನ್ನು ಏರ್ಪಡಿಸಿತು. ಈ ಸಮಯದಲ್ಲಿ GJM ಅನ್ನು ವಿರೋಧಿಸುವ ಗುಂಪೊಂದು ಈ ಸಭೆಗೆ ಅಡ್ಡಿಪಡಿಸಿದೆ. ಕಾರ್ಯಕ್ರಮವನ್ನೇ ರದ್ದುಗೊಳಿಸಬೇಕಾದಷ್ಟು ಪ್ರಬಲವಾಗಿ ವಿರೋಧಿ ಗುಂಪು ಪ್ರತಿಭಟನೆ ನಡೆಸಿದೆ. ಸಭಾಂಗಣದಿಂದ ಹೊರಬಂದ ದಿಲೀಪ್ ಘೋಷ್‍ರನ್ನು ಗುಂಪು ಥಳಿಸಿದೆ. ಹಾಗಂತ, ನಾವು ಈ ಚರ್ಚೆಯನ್ನು ದಿಲೀಪ್ ಘೋಷ್‍ರಿಂದ ಆರಂಭಿಸಿ ಅವರಲ್ಲಿಗೇ ಕೊನೆ ಗೊಳಿಸಬೇಕಾದ ಅಗತ್ಯ ಇಲ್ಲ. ರಾಜಸ್ತಾನದಿಂದ ತನ್ನ ಮನೆಗೆ ಆಕಳುಗಳನ್ನು ಕೊಂಡೊಯ್ಯುತ್ತಿದ್ದ ಹೈನು ಕೃಷಿಕ ಪೆಹ್ಲೂಖಾನ್ ರನ್ನೂ ದಿಲೀಪ್ ಘೋಷ್‍ರ ಸ್ಥಾನದಲ್ಲಿ ಇರಿಸಿ ನೋಡಬಹುದು. ದಿಲೀಪ್ ಘೋಷ್‍ರಿಗೆ ದಾರ್ಜಿಲಿಂಗ್‍ನಲ್ಲಿ ಸಭೆ ನಡೆಸುವ ಮತ್ತು ತನ್ನ ವಿಚಾರವನ್ನು ಹೇಳಿಕೊಳ್ಳುವ ಸ್ವಾತಂತ್ರ್ಯ ಎಷ್ಟು ಇದೆಯೋ ಅಷ್ಟೇ ಸ್ವಾತಂತ್ರ್ಯ ಮತ್ತು ಅರ್ಹತೆ ಪೆಹ್ಲೂಖಾನ್‍ಗೂ ಇತ್ತು. ಅವರು ಕಾನೂನುಬದ್ಧವಾಗಿಯೇ ಆಕಳನ್ನು ಸಾಗಿಸುತ್ತಿದ್ದರು. ಥಳಿಸಲು ಬಂದ ಗುಂಪಿಗೆ ಅಧಿಕೃತ ದಾಖಲೆಗಳನ್ನು ತೋರಿಸಿಯೂ ಇದ್ದರು. ನನಗೆ ದಿಲೀಪ್ ಘೋಷ್‍ರ ವೀಡಿಯೋವನ್ನು ನೋಡನೋಡುತ್ತಾ ಪೆಹ್ಲೂಖಾನ್‍ರ ವೀಡಿಯೋ ನೆನಪಿಗೆ ಬಂತು. ಇಬ್ಬರೂ ಅಸಹಾಯಕರು. ಕಾನೂನಿನ ಪ್ರಕಾರ ಯಾವ ಅಪರಾಧವನ್ನು ಮಾಡಿರದೇ ಇದ್ದರೂ ಇಬ್ಬರೂ ನಡುಬೀದಿಯಲ್ಲಿ ಅವಮಾನಕ್ಕೆ ಒಳಗಾದರು. ಇಲ್ಲಿ ಎರಡು ಪ್ರಮುಖ ವಿಷಯಗಳಿವೆ.
1. ಈ ವೀಡಿಯೋವನ್ನು ಇತರರಿಗೆ ಹಂಚುವ ಗುಂಪು
2. ಇದನ್ನು ಅನುಭವಿಸುವ ಗುಂಪು
     ಪೆಹ್ಲೂಖಾನ್‍ರ ಥಳಿತ ಮತ್ತು ಹತ್ಯೆಗೆ ಸಂಬಂಧಿಸಿ ವ್ಯಕ್ತವಾದ ಪ್ರತಿಕ್ರಿಯೆಗಳಲ್ಲಿ ಎರಡು ರೀತಿಯದ್ದಿದ್ದುವು. ಒಂದು- ಥಳಿತವನ್ನು ಪರೋಕ್ಷವಾಗಿ ಸಮರ್ಥಿಸುವ ಧಾಟಿಯದ್ದಾದರೆ ಇನ್ನೊಂದು ಖಂಡಿಸುವ ಧಾಟಿಯವು. ಪೆಹ್ಲೂಖಾನ್‍ರನ್ನು ದನಕಳ್ಳ ಎಂದು ಸುಳ್ಳು ಸುಳ್ಳೇ ಕರೆದು, ದೇಶದಲ್ಲಿ ಪ್ರತಿದಿನ ಕಳ್ಳತನವಾಗುತ್ತಿರುವ ಗೋಸಂಕುಲಗಳ ಪಟ್ಟಿ ಮಾಡಿ, ಕಸಾಯಿ ಖಾನೆಗಳ ಸಂಖ್ಯೆಯಲ್ಲಿ ವಿವರಿಸಿ, ಕೊನೆಗೆ ಅತ್ತ ಖಂಡನೆಯನ್ನೂ ವ್ಯಕ್ತಪಡಿಸದೇ ಇತ್ತ ಥಳಿತವನ್ನೂ ಹೊಗಳದೇ ಗೋಹತ್ಯೆ ನಿಷೇ ಧಕ್ಕೆ ಕರೆಕೊಡುವ ರೀತಿಯಲ್ಲಿ ಒಂದು ವರ್ಗದ ಪ್ರತಿಕ್ರಿಯೆ ಬಹುತೇಕ ಮುಕ್ತಾಯಗೊಂಡಿತ್ತು. ಅಂಥ ಪ್ರತಿಕ್ರಿಯೆಗಳನ್ನು ಗಮನವಿಟ್ಟು ಓದಿದರೆ ಪೆಹ್ಲೂಖಾನ್‍ರದ್ದೇ ತಪ್ಪು ಎಂದು ಅಂತಿಮ ನಿರ್ಧಾರಕ್ಕೆ ಯಾರೇ ಆಗಲಿ ಬರುವ ಸಾಧ್ಯತೆಯೇ ಹೆಚ್ಚು. ಅದೇ ವೇಳೆ, ಇದೇ ಮಂದಿ ಇವತ್ತು ದಿಲೀಪ್ ಘೋಷ್‍ರ ಮೇಲಿನ ಹಲ್ಲೆಗೆ ವ್ಯಕ್ತಪಡಿಸುತ್ತಿರುವ ಪ್ರತಿಕ್ರಿಯೆಯನ್ನು ನೋಡಿದರೆ ದಿಗಿಲಾಗುತ್ತದೆ. ಅವರ ಪ್ರತಿಕ್ರಿಯೆಯಲ್ಲಿ ನೇರ ಖಂಡನೆಯಿದೆ. ಆಕ್ರೋಶ ಇದೆ. ಮಮತಾ ಬ್ಯಾನರ್ಜಿಯವರೇ ಇದಕ್ಕೆ ಹೊಣೆ ಎಂಬ ಸಿಟ್ಟು ಇದೆ. ದಿಲೀಪ್ ಘೋಷ್‍ರ ಹಕ್ಕು, ಸ್ವಾತಂತ್ರ್ಯ, ಘನತೆಯನ್ನು ಎತ್ತಿ ಹಿಡಿಯುವ ಮಾತುಗಳಿವೆ. ಅದೇವೇಳೆ, ಪೆಹ್ಲೂಖಾನ್‍ರ ಮೇಲಿನ ಹಲ್ಲೆಯನ್ನು ಕಟು ಭಾಷೆಯಲ್ಲಿ ಖಂಡಿಸಿದ, ಅವರ ಹೈನುಗಾರಿಕಾ ಮೂಲವನ್ನು ಉಲ್ಲೇಖಿಸಿ ಸಮರ್ಥಿಸಿದ ಮತ್ತು ಅವರ ಘನತೆ, ಗೌರವ, ಸ್ವಾತಂತ್ರ್ಯದ ಬಗ್ಗೆ ಬಲವಾಗಿ ವಾದಿಸಿದವರಲ್ಲಿ ಅನೇಕರು ಇವತ್ತು ದಿಲೀಪ್ ಘೋಷ್‍ರ ಮೇಲಾದ ಹಲ್ಲೆಗೆ ಅತ್ಯಂತ ಮೃದುವಾಗಿ ಮತ್ತು ಅಡ್ಡಗೋಡೆಯ ಮೇಲೆ ದೀಪ ಇಟ್ಟ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಒಳಗೊಳಗೇ ಸಂತಸ ಪಡುವ ರೀತಿಯಲ್ಲಿರುವ ಪ್ರತಿಕ್ರಿಯೆಗಳೂ ಇವೆ. ಇದರ ಜೊತೆಗೇ ನನ್ನನ್ನು ಕಾಡಿದ ಇನ್ನೊಂದು ಅಂಶವೆಂದರೆ, ಯಾವ ಭಾವ-ವಿಕಾರವೂ ಇಲ್ಲದೇ ಇಂಥ ವೀಡಿಯೋಗಳನ್ನು ಹಂಚುವವರ ಮನಸ್ಥಿತಿ. ವೀಡಿಯೋದಲ್ಲಿ ವೀಕ್ಷಿಸುತ್ತಿರುವುದು ಕ್ರೌರ್ಯ, ಅವ ಮಾನವನ್ನು. ಇದನ್ನು ಇನ್ನೊಬ್ಬರಿಗೆ ಓರ್ವ ವ್ಯಕ್ತಿ ಯಾವೆಲ್ಲ ಕಾರಣಗಳಿಗಾಗಿ ಫಾರ್ವರ್ಡ್ ಮಾಡಬಹುದು? ಇನ್ನೊಬ್ಬ ರೊಂದಿಗೆ ಹಂಚಿಕೊಳ್ಳಬೇಕೆಂದು ಅಥವಾ ಇತರರು ವೀಕ್ಷಿಸ ಬೇಕೆಂದು ಆತ ಯಾವ ಉದ್ದೇಶದಿಂದ ಬಯಸಿರಬಹುದು? ಅದನ್ನು ನೋಡಿ ಆತ ಸಂತಸ ಪಟ್ಟಿರಬಹುದೇ, ದುಃಖಿಸಿರ ಬಹುದೇ, ಕಾನೂನು ಉಲ್ಲಂಘನೆಯ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸುವುದು ಆತನ ಉದ್ದೇಶವೇ, ವೀಕ್ಷಿಸುವ ಸಂದರ್ಭದಲ್ಲಿ ವೀಡಿಯೋದಲ್ಲಿರುವ ವ್ಯಕ್ತಿಯ ಮಕ್ಕಳು, ಪತ್ನಿ, ಹೆತ್ತವರು, ಸಂಬಂಧಿಕರ ನೆನಪು ಸುಳಿದಿರಬಹುದೇ? ಅಥವಾ
ಹಾಗೆ ಫಾರ್ವರ್ಡ್ ಮಾಡುವುದಕ್ಕೆ ವೀಡಿಯೋದಲ್ಲಿರುವ ವ್ಯಕ್ತಿಯ ಧರ್ಮ, ರಾಜಕೀಯ ವಿಚಾರಧಾರೆ, ವೈಯಕ್ತಿಕ ದ್ವೇಷ, ಸ್ವಾರ್ಥ.. ಇತ್ಯಾದಿ ಇತ್ಯಾದಿಗಳು ಕಾರಣವೇ? ನಿಜವಾಗಿ,
     ಆತ್ಮಹತ್ಯೆ, ಹತ್ಯೆ, ಅಪಘಾತ, ಹಿಂಸಾಚಾರ, ಥಳಿತ.. ಮುಂತಾದುವುಗಳ ವೀಡಿಯೋಗಳನ್ನು ಜನರು ಹೆಚ್ಚೆಚ್ಚು ವೀಕ್ಷಿಸುತ್ತಾರೆ ಮತ್ತು ಫಾರ್ವರ್ಡ್ ಮಾಡುತ್ತಿದ್ದಾರೆ ಎಂಬುದೇ ಅಪಾಯದ ಸೂಚನೆ. ಯಾವುದೇ ತಪ್ಪನ್ನು ಮತ್ತೆ ಮತ್ತೆ ಪುನರಾವರ್ತಿಸುತ್ತಾ ಹೋದಂತೆ ಅದು ಕ್ರಮೇಣ ತಪ್ಪುಗಳ ಪಟ್ಟಿಯಿಂದಲೇ ಹೊರಬಿದ್ದು ಸಹಜವಾಗಿ ಕಾಣಿಸತೊಡಗುತ್ತದೆ. ಹುಲಿಯ ವೇಷ ತೊಟ್ಟು ಪುಟ್ಟ ಮಕ್ಕಳ ಎದುರು ನಿಂತರೆ ಆರಂಭದಲ್ಲಿ ಅವು ಬೆದರುತ್ತವೆ. ಕಿರುಚಲೂ ಬಹುದು. ಆದರೆ ಮತ್ತೆ ಮತ್ತೆ ಇದನ್ನು ಪುನರಾವರ್ತಿಸಿದರೆ ಅವು ಆ ಹುಲಿಯನ್ನು ಸಹಜವಾಗಿ ಸ್ವೀಕರಿಸುತ್ತದೆ. ಬಹುಶಃ ನಮ್ಮ ಸಮಾಜ ಹಿಂಸೆ, ಕ್ರೌರ್ಯ, ಕಾನೂನು ಉಲ್ಲಂಘನೆಗೆ ಹೊಂದಿಕೊಳ್ಳುವ ಹಂತಕ್ಕೆ ತಲುಪುತ್ತಿದೆಯೇನೋ ಎಂದು ಭಯವಾಗುತ್ತಿದೆ. ಕ್ರೌರ್ಯದ ವೀಡಿಯೋವನ್ನು ನಿರ್ಲಿಪ್ತವಾಗಿ ವೀಕ್ಷಿಸುವ ಮತ್ತು ಪೂರ್ವಾಪರ ಯೋಚಿಸದೆಯೇ ಫಾರ್ವರ್ಡ್ ಮಾಡುವ ಸ್ಥಿತಿ ನಿಧಾನಕ್ಕೆ ನಿರ್ಮಾಣವಾಗುತ್ತಿರುವಂತೆ ಅನಿಸುತ್ತಿದೆ. ಇದು ಹಿಂಸೆಗೆ ಹೊಂದಿಕೊಳ್ಳುವುದರ ಸೂಚನೆ. ಹಿಂಸೆಯನ್ನು ವೀಕ್ಷಿಸಿ ವೀಕ್ಷಿಸಿ ಮನಸ್ಸು ದಡ್ಡುಗಟ್ಟುತ್ತಿರುವುದರ ಸಂಕೇತ. ಪೆಹ್ಲೂಖಾನ್ ಮತ್ತು ದಿಲೀಪ್ ಘೋಷ್ ಪ್ರಕರಣವು ನಮ್ಮೊಳಗನ್ನು ಅವಲೋಕಿಸಿಕೊಳ್ಳುವುದಕ್ಕೆ ಒಂದೊಳ್ಳೆಯ ಸಂದರ್ಭ.

ರೋಹಿಂಗ್ಯ: ಇತಿಹಾಸ ಮತ್ತು ವರ್ತಮಾನ

      ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ ಕಾರವು ಮ್ಯಾನ್ಮಾರ್ ಆಡಳಿತದ ಪರ ನಿಂತಿರುವುದನ್ನು ಪ್ರಶ್ನಿಸಿ ದಿ ಹಿಂದೂ ಪತ್ರಿಕೆಯು ಸೆ. 22 ರಂದು ‘Dancing with Suu Kyi’ (ಸೂಕಿಯ ಜೊತೆ ನೃತ್ಯ) ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ ಲೇಖನಕ್ಕಿಂತ ಮೂರು ದಿನಗಳ ಮೊದಲು ಮ್ಯಾನ್ಮಾರ್‍ನ ನಾಯಕಿ ಅಂಗ್ ಸಾನ್ ಸೂಕಿ ದೇಶವನ್ನುದ್ದೇಶಿಸಿ ಮಾತನಾಡಿದ್ದರು. ಆ ಭಾಷಣದಲ್ಲಿ ಜಗತ್ತು ಅಚ್ಚರಿಪಡಬಹುದಾದ ಪ್ರಸ್ತಾಪಗಳು ಇಲ್ಲದಿದ್ದರೂ ಆ ಭಾಷಣ ಜಾಗತಿಕವಾಗಿ ಚರ್ಚೆಗೆ ಒಳಗಾಯಿತು. ಕಾರಣ ಏನೆಂದರೆ, ಅವರು ತಮ್ಮ ಭಾಷಣದಲ್ಲಿ ಎಲ್ಲೂ ರೋಹಿಂಗ್ಯನ್ ಮುಸ್ಲಿಮರು ಎಂಬ ಪದವನ್ನು ಬಳಸಿಯೇ ಇರಲಿಲ್ಲ. ಈ ಬಗ್ಗೆ ಅವರನ್ನು ಮಾಧ್ಯಮದ ಮಂದಿ ಪ್ರಶ್ನಿಸಿದಾಗಲೂ ಅವರು ತಾನು ಹಾಗೆ ಸಂಬೋಧಿಸುವುದಿಲ್ಲ ಎಂದು ಸಮರ್ಥಿಸಿಕೊಂಡರು. ನಿಜವಾಗಿ, ಇದುವೇ ಸೂಕಿ. ಬೌದ್ಧ ತೀವ್ರವಾದಿ ಸಂಘಟನೆಗಳಾದ 969 ಮೂವ್‍ಮೆಂಟ್, ಮಾ ಬಾ ತಾ ಮುಂತಾದುವುಗಳೊಂದಿಗೆ ಅವರು ಸಹಮತ ಹೊಂದಿರುವರೋ ಇಲ್ಲವೋ, ಆದರೆ ಅವುಗಳಿಗೆ ಎದುರಾಡಬಾರದ ಅನಿವಾರ್ಯತೆಯಲ್ಲಂತೂ ಇದ್ದಾರೆ. 2013ರಲ್ಲಿ ಬಿಬಿಸಿಯು ಅವರ ಸಂದರ್ಶನ ನಡೆಸಿತ್ತು. ಸಂದರ್ಶನ ನಡೆಸಿದವರು ಬಿಬಿಸಿಯ ಮಿಶಲ್ ಹುಸೈನ್. ವಿಶೇಷ ಏನೆಂದರೆ, ಆ ಸಂದರ್ಶನ ಪ್ರಸಿದ್ಧವಾದದ್ದು ಸಂದರ್ಶನದ ಬಳಿಕ ಅವರು ಪೀಟರ್ ಪ್ಲೆಫಂ ಎಂಬವರ ಜೊತೆ ಹಂಚಿಕೊಂಡ ಅನುಭವದಿಂದಾಗಿ. ‘ಓರ್ವ ಮುಸ್ಲಿಮ್ ವ್ಯಕ್ತಿ ತನ್ನ ಸಂದರ್ಶನ ನಡೆಸುವುದಾಗಿ ಮುಂಚಿತವಾಗಿ ತನಗೆ ಯಾರೂ ಮಾಹಿತಿ ನೀಡಲಿಲ್ಲ’ವೆಂದು ಅವರು ಪೀಟರ್ ಜೊತೆ ದೂರಿಕೊಂಡಿದ್ದರು. ಸಂದರ್ಶನ ನಡೆಸಿ ದವನ ಧರ್ಮ ಸೂಕಿಗೆ ಯಾಕೆ ಮುಖ್ಯವಾಯಿತೆಂಬುದು ಆಗ ತೀವ್ರ ಚರ್ಚೆಗೆ ಒಳಗಾಗಿತ್ತು. 2015ರಲ್ಲಿ ಬರ್ಮಾದಲ್ಲಿ ನಡೆದ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸೂಕಿಯ NLD  ಪಕ್ಷವು ಬಹುಮತ ಪಡೆಯಿತು. ಆದರೆ ಅವರ ಪಕ್ಷವು ಒಬ್ಬನೇ ಒಬ್ಬ ಮುಸ್ಲಿಮ್ ವ್ಯಕ್ತಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೇಟು ನೀಡಿರಲಿಲ್ಲ. ಅಂದಹಾಗೆ, ಬೌದ್ಧ ತೀವ್ರವಾದಿ ಗುಂಪುಗಳು ರೋಹಿಂಗ್ಯ ಎಂಬ ನಾಮಸೂಚಕವನ್ನು ಪ್ರಯೋಗಿಸುವುದೇ ಇಲ್ಲ. ಅವು ರೋಹಿಂಗ್ಯನ್ ಮುಸ್ಲಿಮರನ್ನು ಬಂಗಾಳಿ ಮುಸ್ಲಿಮರು ಎಂದೇ ಕರೆಯುತ್ತವೆ. 2016 ಎಪ್ರಿಲ್‍ನಲ್ಲಿ ಮ್ಯಾನ್ಮಾರ್‍ನ ಅಮೇರಿಕನ್ ರಾಯಭಾರ ಕಚೇರಿಯ ಎದುರು ವಿವಿಧ ಬೌದ್ಧ ಸಂಘಟನೆಗಳಿಗೆ ಸೇರಿದ 300ಕ್ಕೂ ಅಧಿಕ ಯುವಕರು ಮತ್ತು ಬೌದ್ಧ ಬಿಕ್ಷುಗಳು ಪ್ರತಿಭಟನೆ ನಡೆಸಿದರು. ರಾಯಭಾರ ಕಚೇರಿಯು ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ರೋಹಿಂಗ್ಯ ಎಂಬ ಪದ ಬಳಸಿದ್ದನ್ನು ಖಂಡಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ರೋಹಿಂಗ್ಯ ಮುಸ್ಲಿಮರು ಪ್ರಯಾಣಿಸುತ್ತಿದ್ದ ದೋಣಿಯು ಮುಳುಗಿ 9 ಮಕ್ಕಳೂ ಸೇರಿದಂತೆ 22 ಮಂದಿ ಸಾವಿಗೀಡಾದುದಕ್ಕೆ ಸಂತಾಪ ಸೂಚಿಸಿ ಹೊರಡಿಸಿದ ಪ್ರಕಟಣೆ ಅದಾಗಿತ್ತೇ ಹೊರತು ರೋಹಿಂಗ್ಯದಲ್ಲಿ ನಡೆಯುತ್ತಿರುವ ಜನಾಂಗೀಯ ನಿರ್ಮೂಲನಕ್ಕೆ ಸಂಬಂಧಿಸಿದ ಪ್ರಕಟಣೆ ಅದಾಗಿರಲಿಲ್ಲ. ರೋಹಿಂಗ್ಯ ಎಂಬ ಪ್ರದೇಶ ಮ್ಯಾನ್ಮಾರ್‍ನಲ್ಲಿ ಇಲ್ಲ ಎಂದು ಪ್ರತಿ ಭಟನಾಕಾರರು ವಾದಿಸಿದರು. ಮ್ಯಾನ್ಮಾರ್ ಸರಕಾರವು ಅಂಗೀ ಕರಿಸಿಲ್ಲದ ಪದ ಪ್ರಯೋಗದೊಂದಿಗೆ ಒಂದು ಪ್ರದೇಶದ ಮಂದಿ ಯನ್ನು ಗುರುತಿಸುವ ಮೂಲಕ ಅಮೇರಿಕವು ಅಂತಾರಾಷ್ಟ್ರೀಯ ರಾಜತಾಂತ್ರಿಕ ನಿಯಮಗಳನ್ನು ಉಲ್ಲಂಘಿಸಿದೆ ಎಂದವರು ಆರೋ ಪಿಸಿದರು. ಅಮೇರಿಕಕ್ಕೆ ರೋಹಿಂಗ್ಯನ್ನರಲ್ಲಿ ಪ್ರೀತಿ ಇದೆಯೆಂದಾದರೆ ಅವರನ್ನು ಅಮೇರಿಕವೇ ಇಟ್ಟುಕೊಳ್ಳಲಿ ಎಂದವರು ಆಗ್ರಹಿಸಿ ದರು. ಆ ಇಡೀ ಪ್ರತಿಭಟನೆಯ ನೇತೃತ್ವವನ್ನು ಮಾ ಬಾ ತಾ ಎಂಬ ಬೌದ್ಧ ತೀವ್ರವಾದಿ ಸಂಘಟನೆಯು ವಹಿಸಿಕೊಂಡಿತ್ತು. ಒಂದು ರೀತಿಯಲ್ಲಿ, ರೋಹಿಂಗ್ಯ ಎಂಬೊಂದು ಜನಸಮೂಹ ಇದೆ ಎಂಬುದನ್ನೇ ಒಪ್ಪಲು ಸಿದ್ಧವಿಲ್ಲದ ತೀವ್ರ ರಾಷ್ಟ್ರೀಯ ವಾದಿಗಳ ಜೊತೆ ಜಗತ್ತು ಇವತ್ತು ಮಾತಾಡಬೇಕಿದೆ.
      ಸೂಕಿ ಅಧಿಕಾರಕ್ಕೆ ಬಂದದ್ದೇ 2015ರಲ್ಲಿ. ಆದರೆ, ಬೌದ್ಧ ರಾಷ್ಟ್ರೀಯವಾದಿಗಳು ದಶಕಗಳ ಮೊದಲೇ ಮ್ಯಾನ್ಮಾರ್‍ನಲ್ಲಿ ಪ್ರಾಬಲ್ಯವನ್ನು ಸ್ಥಾಪಿಸಿದ್ದರು. ಖುದ್ದು ಮಿಲಿಟರಿ ಸರಕಾರವೇ ಈ ರಾಷ್ಟ್ರೀಯವಾದವನ್ನು ಪೋಷಿಸುತ್ತಲೂ ಬಂದಿತ್ತು. ‘ಇಸ್ಲಾಮ್ ಬರ್ಮಾದಲ್ಲಿ ವ್ಯಾಪಿಸಿದರೆ ಏನಾಗಬಹುದು..’ ಎಂಬ ಶೀರ್ಷಿಕೆಯ ಕಿರುಹೊತ್ತಗೆಗಳನ್ನು ಮಿಲಿಟರಿ ಸರಕಾರದ ಮೌನ ಸಮ್ಮತಿಯೊಂದಿಗೆ ಹಂಚಲಾಗಿತ್ತು. ಭವಿಷ್ಯದಲ್ಲಿ ಮ್ಯಾನ್ಮಾರ್‍ನಲ್ಲಿ ಬೌದ್ಧರು ಅಲ್ಪಸಂಖ್ಯಾತರಾಗುವರೆಂದೂ ಬಾಂಗ್ಲಾ, ಮಲೇಶ್ಯ, ಇಂಡೋನೇಶ್ಯಾಗಳು ಮ್ಯಾನ್ಮಾರನ್ನು ವಶಪಡಿಸಲಿವೆಯೆಂದೂ ಮಾ ಬಾ ತಾ ಎಂಬ ಸಂಘಟನೆ ಬಹಿರಂಗವಾಗಿ ಪ್ರಚಾರ ಮಾಡುತ್ತಿದೆ. ಮದ್ರಸಗಳ ಹೊರತಾಗಿ ಬೇರೆ ಯಾವುದೇ ಮಾದರಿಯ ಶಿP್ಷÀಣ ಸಂಸ್ಥೆಗಳನ್ನು ಸ್ಥಾಪಿಸುವುದಕ್ಕೆ ಅನುಮತಿ ನಿರಾಕರಿಸಲಾಗುತ್ತಿರುವುದಕ್ಕೂ ಈ ತೀವ್ರವಾದಿ ಪ್ರಚಾರವೇ ಕಾರಣ. ಮುಖ್ಯವಾಗಿ, ಮುಸ್ಲಿಮರನ್ನೇ ಗುರಿಯಾಗಿಸಿ 2015ರಲ್ಲಿ ‘ಜನಾಂಗ-ಧರ್ಮ ಸಂರಕ್ಷಣಾ ನಿಯಮ’ ಎಂಬ ಕಾನೂನನ್ನು ಜಾರಿಗೆ ತರಲು ಮಿಲಿಟರಿ ಜನರಲ್ ತೇನ್‍ಸೇನ್‍ರ ಮೇಲೆ ತೀವ್ರವಾದಿ ಬೌದ್ಧ ಸಂಘಟನೆಗಳು ಒತ್ತಡ ಹೇರಿ ಯಶಸ್ವಿಯಾದುವು. ಹಾಗೆಯೇ ‘ಪ್ರಸವದ ನಡುವೆ ಕಡ್ಡಾಯ ವಿರಾಮ ಇರಬೇಕು, ಏಕಪತ್ನಿತ್ವ, ಬೌದ್ಧರಲ್ಲದ ಪುರುಷರನ್ನು ವಿವಾಹವಾಗಬಯಸುವ ಬೌದ್ಧ ಮಹಿಳೆಯರು ಮುಂಚಿತವಾಗಿ ನೋಂದಣಿ ಮಾಡುವುದು, ಮತಾಂತರ ನಿಯಂತ್ರಣ ಕಾಯ್ದೆ..’ ಮುಂತಾದುವುಗಳನ್ನು ಜಾರಿಗೆ ತರಲು ಅವು ಒತ್ತಡ ಹೇರಿದುವು. ಹಾಗಂತ, ಮ್ಯಾನ್ಮಾರ್‍ನಲ್ಲಿ ಮುಸ್ಲಿಮರ ಜನಸಂಖ್ಯೆ ಬರೇ 2.3%. ಕ್ರೈಸ್ತರು 6.3% ಮತ್ತು ಬೌದ್ಧರು 89.8% ಇz್ದÁರೆ. ಮುಸ್ಲಿಮರು ಅತ್ಯಧಿಕ ಸಂಖ್ಯೆಯಲ್ಲಿರು ವುದು ರಾಖೈನ್ ರಾಜ್ಯದಲ್ಲಿ. ಇಲ್ಲಿನ ಒಟ್ಟು 30 ಲಕ್ಪ ಜನಸಂಖ್ಯೆ ಯಲ್ಲಿ 13 ಲಕ್ಷ ಮಂದಿ ರೋಹಿಂಗ್ಯನ್ನರ ಮುಸ್ಲಿಮರು. ನಿಜವಾಗಿ, ರಾಖೈನ್ ರಾಜ್ಯದ ಮೂಲ ಹೆಸರು ಅರಖಾನ್. ಮುಸ್ಲಿಮ್ ಬಾಹುಳ್ಯದ ರಾಜ್ಯ ಇದಾಗಿತ್ತು. 1989ರಲ್ಲಿAdaption of Expression Lawದ ಪ್ರಕಾರ ಅರಖಾನ್ ಹೆಸರನ್ನು ರಾಖೈನ್ ಆಗಿ ಬದಲಾಯಿಸಲಾಯಿತಲ್ಲದೇ ಬೌದ್ಧ ಪ್ರಾಬಲ್ಯವುಳ್ಳ ರಾಜ್ಯವಾಗಿ ಮರು ರೂಪಿಸಲಾಯಿತು. 2012ರಲ್ಲಿ ಇಲ್ಲಿ ನಡೆದ ಜನಾಂಗೀಯ ಹತ್ಯಾಕಾಂಡದಲ್ಲಿ ಸಂತ್ರಸ್ತರಾದ 1 ಲಕ್ಷದ 40 ಸಾವಿರ ಮಂದಿ ಇಲ್ಲಿ ನಿರಾಶ್ರಿತರಾಗಿ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಅಂದಹಾಗೆ, 1982ರಲ್ಲಿ ಮಿಲಿಟರಿ ಸರಕಾರವು ಜಾರಿಗೆ ತಂದ ಪೌರತ್ವ ಕಾಯ್ದೆಯಲ್ಲಿ ದೇಶದ ನಾಗರಿಕರನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ. 1. ಪೂರ್ಣ ನಾಗರಿಕರು, 2. ಸಹ ನಾಗರಿಕರು, 3. ಸಹಜ ನಾಗರಿಕರು ಮತ್ತು 4. ವಿದೇಶಿ ನಾಗರಿಕರು. ಇವರಲ್ಲಿ ರೋಹಿಂಗ್ಯನ್ನರು ವಿದೇಶಿ ವರ್ಗದಲ್ಲಿ ಸ್ಥಾನ ಪಡೆದುಕೊಂಡರು. ಆ ಮೂಲಕ ಅವರನ್ನು ಮ್ಯಾನ್ಮಾರ್‍ನ ಪೌರತ್ವದಿಂದ ಹೊರಗಿಡಲಾಯಿತು. 1970ರಲ್ಲೇ  ಜನರಲ್ ನೆವಿಯವರ ಆಡಳಿತ ಕಾಲದಲ್ಲಿ ರೋಹಿಂಗ್ಯನ್ನ ರನ್ನು ಹೊರಗಿನವರಾಗಿ ನೋಡುವ ಪ್ರಯತ್ನಗಳು ಪ್ರಾರಂಭವಾದುವು. 1982ರಲ್ಲಿ ಬರ್ಮೀಸ್ ಪೌರತ್ವ ನಿಯಮ ಜಾರಿಗೆ ಬಂತು. 2012ರಲ್ಲಿ ರೋಹಿಂಗ್ಯ ನ್ನರಿಗಾಗಿ ‘ವೈಟ್ ಕಾರ್ಡ್’ ಗುರುತು ಚೀಟಿಯನ್ನು ಜಾರಿಗೆ ತರುವ ಮೂಲಕ ಪೌರತ್ವ ನೀಡುವ ಸೂಚನೆ ನೀಡಲಾಯಿತಾದರೂ 2015ರಲ್ಲಿ ವೈಟ್ ಕಾರ್ಡನ್ನೇ ರದ್ದುಪಡಿಸುವುದರೊಂದಿಗೆ ಪೌರತ್ವ ನಿಷೇಧ ನಿಯಮವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲಾಯಿತು. ನಿಜವಾಗಿ, ಮ್ಯಾನ್ಮಾರ್‍ನಲ್ಲಿ ಇಸ್ಲಾಮ್‍ಗೆ ಬಹಳ ದೀರ್ಘ ಇತಿಹಾಸವಿದೆ.
        8ನೇ ಶತಮಾನದಲ್ಲಿ ಅರಬ್-ಪರ್ಶಿಯನ್ ವ್ಯಾಪಾರಿಗಳ ಮೂಲಕ ಮ್ಯಾನ್ಮಾರ್‍ಗೆ ಇಸ್ಲಾಮ್ ತಲುಪಿತ್ತು ಎಂದು ಹೇಳಲಾಗುತ್ತದೆ. 1430ರಿಂದ 1785ರ ವರೆಗೆ ಮರೋಕು ಎಂಬ ರಾಜವಂಶವು ಆಡಳಿತ ನಡೆಸಿತ್ತು. ಈ ಆಡಳಿತ ವಂಶದ ಸ್ಥಾಪಕನಾಗಿ ಸುಲೈಮಾನ್ ಷಾ ಎಂದು ಗುರುತಿಸಿ ಕೊಂಡಿರುವ ಮಿನ್‍ಸೋ ಮೂನ್ ಎಂಬವನಾಗಿದ್ದ. 17ನೇ ಶತಮಾನದ ವರೆಗೆ ಆಡಳಿತ ನಡೆಸಿದ ಈ ರಾಜವಂಶದ ಮೇಲೆ ಅರಕಾನ್ ಬೌದ್ಧ ರಾಜವಂಶವು ದಾಳಿ ನಡೆಸಿ ಸೋಲಿಸಿತು. ಆ ಪ್ರದೇಶದಿಂದ ಮುಸ್ಲಿಮರು ಮತ್ತು ಹಿಂದೂಗಳು ಜೀವ ಭಯದಿಂದ ಪಲಾಯನ ಮಾಡಿದರು. ಬೌದ್ದೇತರ ಎಲ್ಲ ಆರಾಧನಾಲಯಗಳನ್ನೂ ಅರಕಾನ್ ಆಡಳಿತವು ಧ್ವಂಸಗೊಳಿಸಿತು. ಇದಾಗಿ ಒಂದು ಶತಮಾನದ ಬಳಿಕ 1824ರಲ್ಲಿ ಬ್ರಿಟಿಷರು ಮ್ಯಾನ್ಮಾರ್ ಮೇಲೆ ದಾಳಿ ನಡೆಸಿದರು. ಅಲ್ಲಿನ ಕೃಷಿ ಕೆಲಸಗಳಿಗಾಗಿ ಅವರು ಬಂಗಾಳಿ ಮುಸ್ಲಿಮ ರನ್ನು ಕರೆ ತಂದರು. ಇವರ ಜೊತೆಗೇ ಈ ಹಿಂದೆ ಪಲಾಯಗೈದವರ ತಲೆಮಾರುಗಳೂ ಅರಕಾನ್‍ಗೆ ಬಂದವು. ದುರಂತ ಏನೆಂದರೆ, ಮ್ಯಾನ್ಮಾರ್‍ನ ಬೌದ್ಧ ತೀವ್ರವಾದಿಗಳು ಮುಸ್ಲಿಮ್ ಇತಿಹಾಸವನ್ನು ಪ್ರಾರಂಭಿಸುವುದೇ ಇಲ್ಲಿಂದ. ಅಲ್ಲದೇ ರೋಹಿಂಗ್ಯನ್ನರು ವಾಸವಾಗಿರುವುದು ರಾಖೈನ್ ರಾಜ್ಯದ ಪಶ್ಚಿಮ ಸಮುದ್ರ ತೀರದ ಬಳಿ. ಇದು ತೈಲ ಸಮೃದ್ಧ ಪ್ರದೇಶವಾಗಿಯೂ ಗುರುತಿಸಿಕೊಂಡಿದೆ. ಮಾತ್ರವಲ್ಲ, ಈ ಪ್ರದೇಶವು ಬಾಂಗ್ಲಾದೇಶಕ್ಕೆ ತಾಗಿಕೊಂಡೂ ಇದೆ. ಬಾಂಗ್ಲಾ ದೇಶದ ಚಿತ್ತಗಾಂಗ್‍ನ ಭಾಷೆಗೆ ಸಾಮಿಪ್ಯವುಳ್ಳ ಬಂಗಾಳಿ ಭಾಷೆಯನ್ನು ಹೆಚ್ಚಿನ ರೋಹಿಂಗ್ಯನ್ನರು ಆಡುತ್ತಾರೆ. ಶುದ್ಧ ಬರ್ಮೀಸ್ ಭಾಷೆ ಆಡುವ ರೋಹಿಂಗ್ಯನ್ನರೂ ರಾಖೈನ್‍ನ ಪೂರ್ವ ಭಾಗದಲ್ಲಿ ದ್ದಾರೆ. ದೇಹ ರಚನೆಯಲ್ಲೂ ರೋಹಿಂಗ್ಯನ್ನರು ಬಂಗಾಳಿಯರನ್ನೇ ಹೋಲುತ್ತಾರೆ. ಈ ಸಾಮ್ಯತೆಯೇ ಬೌದ್ಧ ಸಂಘಟನೆಗಳ ಆರೋಪಕ್ಕೆ ಇನ್ನೊಂದು ಆಧಾರ. 1430ರ ಮರೋಕು ರಾಜವಂಶದ ಪ್ರಜೆಗಳು ಇವರು ಎಂದು ಇತಿ ಹಾಸ ಉಲ್ಲೇಖಿಸುತ್ತದಾದರೂ ಇವರಿಗೆ ಬ್ರಿಟಿಷ್ ಇತಿಹಾಸದ ಕಾಲವನ್ನಷ್ಟೇ ಬೌದ್ಧ ತೀವ್ರವಾದಿಗಳು ಮತ್ತು ಈ ಹಿಂದಿನ ಮಿಲಿಟರಿ ಸರಕಾರವು ಒಪ್ಪಿಕೊಳ್ಳುತ್ತಿದೆ. ಬ್ರಿಟಿಷರು ತಮ್ಮ ಜೊತೆ ಕರೆ ತಂದ ಬಂಗಾಳಿ ಮತ್ತು ಮರೋಕು ರಾಜವಂಶದ ಹೊಸ ತಲೆಮಾರಿಗೆ ಅರಕಾನ್ ರಾಜ್ಯದಲ್ಲಿ 99 ವರ್ಷಗಳ ಅವಧಿಗೆ ಭೂಮಿಯನ್ನು ವಿತರಿಸಿತ್ತು. ಒಂದು ರೀತಿಯಲ್ಲಿ, ಅದು ಮರೋಕು ರಾಜವಂಶ ಕಾಲದ ಪ್ರಜೆಗಳ ಜಾಗ. ಅರಕಾನನ್ನು ಬೌದ್ಧ ರಾಜವಂಶವು ವಶಪಡಿಸಿಕೊಳ್ಳುವ ಮೂಲಕ ಅದು ಅವರಿಂದ ಕೈ ತಪ್ಪಿ ಹೋಗಿತ್ತು. ಬ್ರಿಟಿಷರು ಹೀಗೆ ಭೂಮಿ ಹಂಚಿದ್ದೂ ಮತ್ತು ಕೃಷಿ ಕಾರ್ಯಗಳಲ್ಲಿ ಮುಸ್ಲಿಮರನ್ನು ಬಳಸಿಕೊಂಡಿರುವುದರ ಫಲಿತಾಂಶವು ಇವತ್ತು ಮ್ಯಾನ್ಮಾರ್‍ನಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಇಲ್ಲಿನ ಮುಸ್ಲಿಮರು ತೀರಾ ಬಡವರೇನೂ ಅಲ್ಲ. ಸ್ಥಿತಿ ವಂತರಾಗಿಯೇ ಗುರುತಿಸಿಕೊಂಡಿದ್ದಾರೆ. 1940ರಲ್ಲಿ ಮುಜಾಹಿದ್‍ಗಳೆಂದು ಗುರುತಿಸಿಕೊಂಡ ಸಶಸ್ತ್ರ ಗುಂಪೊಂದು ಅರಕಾನ್ ಅನ್ನು ಪಾಕ್‍ನ ಜೊತೆ ಸೇರಿಸುವ ಉದ್ದೇಶದೊಂದಿಗೆ ಹೋರಾಟ ನಡೆಸಿತ್ತು. ಜಿನ್ನಾರೊಂದಿಗೆ ಮಾತುಕತೆಯನ್ನೂ ನಡೆಸ ಲಾಗಿತ್ತು. ಆಗ ಜನರಲ್ ಅನ್ ಸಾನ್‍ರು ಸ್ವತಂತ್ರ ಬರ್ಮಾದಲ್ಲಿ ಇವರಿಗೆ ಸಂರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದರು. ಆ ಬಳಿಕ ಎರಡನೇ ವಿಶ್ವಯುದ್ಧದ ಸಮಯದಲ್ಲಿ ಮುಸ್ಲಿಮರು ಬ್ರಿಟಿಷರನ್ನು ಬೆಂಬಲಿಸಿದರು. ಬೌದ್ಧರ ಅರಕಾನ್ ನ್ಯಾಷನಲ್ ಆರ್ಮಿ ಮತ್ತು ಬರ್ಮೀಸ್ ಇಂಡಿಪೆಂಡೆನ್ಸ್ ಆರ್ಮಿಗಳು ಜಪಾನನ್ನು ಬೆಂಬಲಿಸಿದುವು. 1948ರಲ್ಲಿ ಬರ್ಮಾವು ಸ್ವತಂತ್ರವಾಯಿತು. ಅಂದಿನಿಂದಲೇ ರೋಹಿಂಗ್ಯನ್ನರನ್ನು ಪ್ರಜೆಗಳೆಂದು ಒಪ್ಪಿಕೊಳ್ಳುವುದಕ್ಕೆ ಆಡಳಿತ ನಿರಾಕರಿಸತೊಡಗಿತು.
ಬಹುಶಃ ರೋಹಿಂಗ್ಯನ್ ಹತ್ಯಾಕಾಂಡಕ್ಕೆ ಇರುವ ಇನ್ನೊಂದು ಆಯಾಮ ಆರ್ಥಿಕತೆಯದ್ದು.
      ಮ್ಯಾನ್ಮಾರ್‍ನ ರಾಖೈನ್ ಪ್ರದೇಶದಿಂದ ಆರಂಭವಾಗಿ ರೋಹಿಂಗ್ಯನ್ ಪ್ರದೇಶದಲ್ಲಿ ಕೊನೆಗೊಳ್ಳುವ ಕ್ಯೋಕ್‍ಫೂ ರಸ್ತೆ ನಿರ್ಮಾಣವನ್ನು ಚೀನಾ ತ್ವರಿತಗೊಳಿಸಿದ ಸಮಯದಲ್ಲೇ (2012) ರೋಹಿಂಗ್ಯದಲ್ಲಿ ಮೊದಲ ಜನಾಂಗೀಯ ಹತ್ಯಾಕಾಂಡ ಆರಂಭವಾಗಿದ್ದು. ಈ ರಸ್ತೆ ಚೀನಾದ ಪಾಲಿಗೆ ಬಹು ಅಮೂಲ್ಯವಾದುದು. ಅತ್ಯಂತ ಕಡಿಮೆ ಅವಧಿಯಲ್ಲಿ ತನ್ನ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸಲು ಈ ರಸ್ತೆ ನೆರವಾಗುವುದರಿಂದ ಚೀನಾ ಭಾರೀ ಪ್ರಮಾಣದಲ್ಲಿ ಇಲ್ಲಿ ಹೂಡಿಕೆ ಮಾಡಿತ್ತು. ಇದನ್ನು ವಿಫಲಗೊಳಿಸುವ ಉದ್ದೇಶದಿಂದಲೇ ಅಮೇರಿಕ ಚುರುಕಾಯಿತು. 2012ರಲ್ಲಿ ಒಬಾಮ ಎರಡು ಬಾರಿ ಮ್ಯಾನ್ಮಾರ್‍ಗೆ ಭೇಟಿ ಕೊಟ್ಟಿರುವುದೇ ಇದಕ್ಕೆ ಸಾಕ್ಷಿ. ಇದೇ ಸಮಯದಲ್ಲಿ ರೋಹಿಂಗ್ಯ ಹತ್ಯಾಕಾಂಡವೂ ನಡೆದು ಕಾಮಗಾರಿ ಸ್ಥಗಿತಗೊಂಡಿತು. ಅಮೇರಿಕವು ಸೂಕಿ ಮತ್ತು ಮಿಲಿಟರಿ ಜನರಲ್ ತೇನ್‍ಸೇನ್‍ರನ್ನೂ ತನ್ನಲ್ಲಿಗೆ ಕರೆಸಿಕೊಂಡಿತ್ತು. ಹೀಗೆ ಸ್ಥಗಿತಗೊಂಡಿದ್ದ ಕಾಮ ಗಾರಿಯು 5 ವರ್ಷಗಳ ಬಳಿಕ ಪುನಃ ಪ್ರಾರಂಭಗೊಂಡಿತು. ಇದಕ್ಕಾಗಿ ಚೀನಾ-ಮ್ಯಾನ್ಮಾರ್ ಒಪ್ಪಂದ ಮಾಡಿಕೊಂಡವು. ಒಬಾಮರಂತೆ ಟ್ರಂಪ್‍ರಿಗೆ ಮ್ಯಾನ್ಮಾರನ್ನು ಒಲಿಸಿಕೊಳ್ಳಲು ಸಾಧ್ಯವಾಗದಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಅಲ್ಲದೇ ಚೀನಾವು ಹತ್ತಿರದ ಎಲ್ಲ ದೇಶಗಳ ಒಲವನ್ನೂ ಗಿಟ್ಟಿಸಿಕೊಂಡಿದೆ. ಈ ನಡುವೆ ಸೂ ಕಿ ಎರಡು ಬಾರಿ ಚೀನಾಕ್ಕೆ ಭೇಟಿ ನೀಡಿದರು. ಹೀಗೆ ರಾಜತಾಂತ್ರಿಕ ಸಮರದಲ್ಲಿ ಅಮೇರಿಕಕ್ಕೆ ತೀವ್ರ ಹಿನ್ನಡೆಯಾಯಿತು. ಈ ನಡುವೆ ಚೀನಾ-ಮ್ಯಾನ್ಮಾರ್ ಪೈಪ್‍ಲೈನ್ ಕಾಮಗಾರಿಯು ಸಂಪೂರ್ಣವಾಯಿತಲ್ಲದೇ ಚೀನಾದ ಬಲುವಾನ್ ಪ್ರದೇಶಕ್ಕೆ ಪ್ರತಿದಿನ 2,60,000 ಬ್ಯಾರಲ್ ತೈಲ ಸಾಗಿಸುವುದಕ್ಕೆ ಬೇಕಾದ ಎಲ್ಲ ಏರ್ಪಾಡುಗಳು ಮುಗಿದಿವೆ. ಈ ಸಂದರ್ಭದಲ್ಲೇ  ಮತ್ತೆ ರೋಹಿಂಗ್ಯ ನರಮೇಧ ಕಾಣಿಸಿಕೊಂಡಿದೆ. ಇದರಲ್ಲಿ ಅಮೇರಿಕದ ಪಾತ್ರವನ್ನು ಶಂಕಿಸುವಂತೆಯೇ ಸ್ವತಃ ಚೀನಾವೇ ತನ್ನ ಪೈಪ್‍ಲೈನ್ ಯೋಜನೆಯ ಕಡೆಗೆ ಜನರ ಗಮನ ಹರಿಯದಂತೆ ಮಾಡುವುದಕ್ಕಾಗಿ ಇಂಥದ್ದೊಂದು ಹತ್ಯಾಕಾಂಡಕ್ಕೆ ಕುಮ್ಮಕ್ಕು ನೀಡಿರಬಹುದೇ ಎಂದೂ ಅನುಮಾನಿಸಬಹುದಾಗಿದೆ. ಹಾಗಂತ,
     ರೋಹಿಂಗ್ಯನ್ ಮುಸ್ಲಿಮರು ತಮ್ಮ ಹಕ್ಕುಗಳ ಬಗ್ಗೆ ಪ್ರಜ್ಞೆಯಿಲ್ಲದವರೋ ಅಥವಾ ಹೋರಾಟ ನಡೆಸದವರೋ ಅಲ್ಲ. ರಾಖೈನ್ ರಾಜ್ಯದ 30 ಲಕ್ಷ ಮಂದಿಯಲ್ಲಿ 13 ಲಕ್ಷದಷ್ಟಿರುವ ರೋಹಿಂಗ್ಯನ್ನರು ರೋಹಿಂಗ್ಯ ಸಾಲಿಡಾರಿಟಿ ಆರ್ಗನೈಝೇಶನ್ (RSA) ಮತ್ತು ಅರಕಾನ್ ಇಸ್ಲಾಮಿಕ್ ಫ್ರಂಟ್ (ARIF) ಸ್ಥಾಪಿಸಿದ್ದರು. 1998ರಲ್ಲಿ ಇವೆರಡನ್ನೂ ಒಟ್ಟುಗೂಡಿಸಿ ಅರಕಾನ್-ರೋಹಿಂಗ್ಯ ನ್ಯಾಶನಲ್ ಆರ್ಗನೈಝೇಶನ್ (ARNA) ಅನ್ನು ರಚಿಸಿದರು ಮತ್ತು ಅದರ ಹೋರಾಟ ವಿಭಾಗವಾಗಿ ರೋಹಿಂಗ್ಯ ನ್ಯಾಶನಲ್ ಆರ್ಮಿ (RNA)ಯನ್ನು ಕಟ್ಟಿದರು. ಈಗ ಮ್ಯಾನ್ಮಾರ್ ಸೇನೆಯ ಜೊತೆ ಹೋರಾಟದಲ್ಲಿ ನಿರತವಾಗಿರುವ ಗುಂಪಿನ ಹೆಸರು ಅರಕಾನ್-ರೋಹಿಂಗ್ಯ ಸಾಲ್ವೇಶನ್ ಆರ್ಮಿ (ARSA).
     ಒಂದು ಕಡೆ, ಬೌದ್ಧ ರಾಷ್ಟ್ರೀಯವಾದಿಗಳು ಮತ್ತು ಅವರಿಗೆ ಬೆಂಬಲವಾಗಿ ನಿಂತಿರುವ ಸೇನೆಯಿದ್ದರೆ ಇನ್ನೊಂದು ಕಡೆ ಪೌರತ್ವವೇ ನಿರಾಕರಿಸಲ್ಪಟ್ಟು ಅತ್ತ ದರಿ ಇತ್ತ ಪುಲಿ ಸ್ಥಿತಿಯಲ್ಲಿರುವ ರೋಹಿಂಗ್ಯನ್ನರು. ಮಗದೊಂದೆಡೆ ಅಮೇರಿಕ ಮತ್ತು ಚೀನಾದ ಆರ್ಥಿಕ ಹಿತಾಸಕ್ತಿಗಳು. ಬಹುಶಃ, ರೋಹಿಂಗ್ಯ ಹತ್ಯಾಕಾಂಡದ ಹಿಂದೆ ಬರೇ ಪೌರತ್ವಕ್ಕಿಂತ ಹೊರತಾದ ಆರ್ಥಿಕ ಮತ್ತು ರಾಜಕೀಯ ಕಾರಣಗಳಿವೆ. ಸೇನೆಯ ಮೇಲೆ ಅರಕಾನ್-ರೋಹಿಂಗ್ಯ ಸಾಲ್ವೇಶನ್ ಆರ್ಮಿ (ARSA) ದಾಳಿಯೆಸಗಿದುದೇ ಈ ಹತ್ಯಾಕಾಂಡಕ್ಕೆ ಕಾರಣ ಎಂಬುದು ಬರೇ ನೆಪ ಮಾತ್ರ. ಅದಕ್ಕಿಂತ ಮೊದಲೇ,
         ಅತ್ಯಂತ ಯೋಜಿತವಾಗಿ ಈ ಹತ್ಯಾಕಾಂಡದ ನಕ್ಷೆಯನ್ನು ರೂಪಿಸಲಾಗಿತ್ತು ಎಂದೇ ಅನಿಸುತ್ತದೆ.