ಏ.ಕೆ. ಕುಕ್ಕಿಲ
ಮದ್ರಸದಲ್ಲಿ ಕಲಿತಿರುವ ಮತ್ತು ಕುರ್‌ಆನ್ ಕಂಠಪಾಠ ಮಾಡಿರುವ (ಹಾಫಿಝï) ಬಿಹಾರದ ಹರೆಯದ ಯುವಕನೊಬ್ಬ ಹೊಟೇಲ್ ಒಂದರಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿರುವುದನ್ನು ಇತ್ತೀಚೆಗೆ ಒಬ್ಬರು ಬರೆದುಕೊಂಡಿದ್ದರು. ಹಾಗಂತ, ಕ್ಲೀನಿಂಗ್ ಕೆಲಸ ಮಾಡಬಾರದು, ಅದೇನು ನಿಕೃಷ್ಟವಾ ಎಂಬ ಪ್ರಶ್ನೆ ಇರಬಹುದು. ನಿಕೃಷ್ಟವೂ ಅಲ್ಲ, ಮಾಡಬಾರದು ಎಂದೂ ಅಲ್ಲ. ಆದರೆ, ಕುರ್‌ಆನ್ ಕಂಠ ಪಾಠ ಮಾಡಿರುವ ಮತ್ತು ಆಲಿಮ್ ಎಂದು ಗುರುತಿಸಿಕೊಳ್ಳಬಹುದಾದಷ್ಟು ಕಲಿತಿರುವ ಓರ್ವ ವ್ಯಕ್ತಿ ಕ್ಲೀನಿಂಗ್ ಕೆಲಸಕ್ಕೆ ಸೇರಬೇಕಾ ಎಂಬುದು ಇಲ್ಲಿನ ತಕರಾರು.ಈ ದೇಶದಲ್ಲಿ ಪ್ರತಿವರ್ಷ ಮದ್ರಸಾಗಳಿಂದ 5 ಸಾವಿರ ಮಂದಿ ಬಿರುದಿನೊಂದಿಗೆ ಹೊರಬರುತ್ತಿದ್ದಾರೆ ಎಂಬ ಮಾಹಿತಿಯಿದೆ. ಇಲ್ಲಿ ಮದ್ರಸಾ ಎಂದು ಹೇಳಿರುವುದು ಬೆಳಿಗ್ಗೆ ಶಾಲೆ ಪ್ರಾರಂಭವಾಗುವುದಕ್ಕಿಂತ ಮೊದಲು ಮತ್ತು ಸಂಜೆ ಶಾಲೆ ಮುಗಿದ ಬಳಿಕ ಹೋಗಿ ಮಕ್ಕಳು ಒಂದೆರಡು ಗಂಟೆಯ ಧಾರ್ಮಿಕ ಶಿಕ್ಷಣ ಪಡೆಯುತ್ತಾರಲ್ಲ, ಅದನ್ನಲ್ಲ. ಬರೇ ಮದ್ರಸಾಗಳಲ್ಲೇ ಕಲಿಯುತ್ತಿರುವ ಮತ್ತು ಬಹುತೇಕ ಹಾಸ್ಟೆಲ್‌ಗಳಲ್ಲಿ ತಂಗಿ ಕಲಿಯುತ್ತಿರುವ ವಿದ್ಯಾಭ್ಯಾಸ ಕ್ರಮ ವನ್ನು. ಹೀಗೆ ಕಲಿತ ಮಕ್ಕಳು ಬಿರುದಿನೊಂದಿಗೆ ಈ ಶಾಲೆಯಿಂದ ಹೊರಬೀಳುತ್ತಾರೆ. ಅನೇಕ ಬಾರಿ ರಮಝಾನ್‌ನಲ್ಲಿ ತರಾವೀಹ್ ಮತ್ತು ಕಿಯಾಮುಲ್ಲೈಲ್‌ಗಾಗಿ ಆಯ್ಕೆಯಾಗುವುದೂ ಇವರೇ. ರಮಝಾನ್ ಬರುವುದಕ್ಕಿಂತ ತಿಂಗಳ ಮೊದಲು ಹೆಚ್ಚಿನ ಮಸೀದಿಗಳು ಇಂಥ ಹಾಫಿಝïಗಳ ತಲಾಶೆಯಲ್ಲಿ ತೊಡಗುತ್ತವೆ. ಸ್ಥಳೀಯವಾಗಿ ಇಂಥ ಹಾಫಿಝïಗಳು ಅಲಭ್ಯವಾಗಿರುವುದೇ ಇದಕ್ಕೆ ಕಾರಣ. ಅದೇವೇಳೆ, ಬಿಹಾರ, ಜಾರ್ಖಂಡ್, ಉತ್ತರಾ ಖಂಡ್, ಅಸ್ಸಾಮ್, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶ ಗಳು ಇಂಥ ಹಾಫಿಝïಗಳನ್ನು ಧಾರಾಳವಾಗಿ ತಯಾರಿಸುತ್ತವೆ. ಆದ್ದರಿಂದಲೇ ರಮಝಾನ್‌ನಲ್ಲಿ ಹೆಚ್ಚಿನ ಮಸೀದಿಗಳಲ್ಲಿ ಉತ್ತರ ಭಾರತ ಮತ್ತು ಕೆಲವೆಡೆ ಉತ್ತರ ಕರ್ನಾಟಕದ ಹಾಫಿಝïಗಳೇ ತರಾವೀಹ್ ಮತ್ತು ಕಿಯಾಮುಲ್ಲೈಲ್‌ಗೆ ನೇತೃತ್ವ ನೀಡುವುದನ್ನು ಕಾಣಬಹುದು. ಇದು ತಪ್ಪು ಎಂದಲ್ಲ. ಆದರೆ,
ಆಧುನಿಕ ಶಿಕ್ಷಣಕ್ಕೆ ಮಹತ್ವ ಕೊಡದೇ ಬರೇ ಮದ್ರಸಾ ಶಿಕ್ಷಣವನ್ನೇ ಗುರಿಯಾಗಿಸಿಕೊಂಡು ಕಲಿಯುವುದು ಮತ್ತು ಬಿರುದಿನೊಂದಿಗೆ ಹೊರಬರುವ ಇವೇ ಮಂದಿ ಆ ಬಳಿಕ ಮಸೀದಿ ಇಮಾಮರಾಗಿ ಸಮುದಾಯಕ್ಕೆ ನೇತೃತ್ವ ಮತ್ತು ಮಾರ್ಗದರ್ಶನ ನೀಡುವ ಅತೀ ಮಹತ್ವಪೂರ್ಣ ಹೊಣೆಯನ್ನು ಹೊತ್ತುಕೊಳ್ಳುವುದು ನಡೆಯುತ್ತದೆ. ಇವರೇ ಮುಖ್ಯ ವಿಷಯಗಳಲ್ಲಿ ಧಾರ್ಮಿಕ ಅಭಿಪ್ರಾಯ ವ್ಯಕ್ತಪಡಿಸುವ ಆಲಿಮ್‌ಗಳಾಗುತ್ತಾರೆ. ಅನೇಕ ಬಾರಿ ಇವರು ರಾಜಕೀಯ ಕುತಂತ್ರದ ಪ್ರಶ್ನೆಗಳ ಒಳಮರ್ಮವನ್ನು ತಿಳಿಯದೇ ಅಭಿಪ್ರಾಯ ಹಂಚಿಕೊಂಡು ಸಮುದಾಯವನ್ನು ಮುಜುಗರಕ್ಕೆ ಸಿಲುಕಿಸುವುದೂ ಇದೆ. ಉತ್ತರ ಭಾರತದಿಂದ ಇಂಥ ವಿದ್ವಾಂಸರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಗೆ ಒಳಗಾಗುವುದೂ ಇದೆ. ಅವರ ವಿಡಿಯೋ ವೈರಲ್ ಆಗುವುದೂ ಇದೆ. ಇದು ಅವರ ಸಮಸ್ಯೆ ಮಾತ್ರ ಅಲ್ಲ. ಸಮುದಾಯದ ದೂರದೃಷ್ಟಿಯ ಕೊರತೆಯೂ ಇದರ ಹಿಂದಿದೆ. ಯಾವುದೇ ಮದ್ರಸದ ಚಂದಾಕ್ಕೆ ಬರುವವರಲ್ಲಿ ನಾವು ಒಂದಷ್ಟು ಮಾತುಕತೆ ನಡೆಸಬೇಕು. ಆ ಮದ್ರಸಾದ ಕಲಿಕಾ ಸ್ವರೂಪದಿಂದ ಹಿಡಿದು ಭೌತಿಕ ಶಿಕ್ಷಣ ಕೊಡುವುದಕ್ಕೆ ಅವರಲ್ಲಿರುವ ಅಡಚಣೆಗಳೇನು ಅಥವಾ ಅದಕ್ಕೆ ತಯಾರಿ ನಡೆಸದೇ ಇರುವುದಕ್ಕೆ ಕಾರಣಗಳೇನು ಇತ್ಯಾದಿಯಾಗಿ ಕನಿಷ್ಠ ಮಾಹಿತಿ ಪಡಕೊಳ್ಳುವ ಪ್ರಯತ್ನ ನಡೆಸಬೇಕು. ಯಾಕೆಂದರೆ,
ಮದ್ರಸಾ ಶಿಕ್ಷಣಕ್ಕಾಗಿ ಚಂದಾ ನೀಡುವುದೆಂದರೆ ಮದುವೆಗೋ ಔಷಧಿಗೋ ಚಂದಾ ನೀಡಿದಂತಲ್ಲ. ಈ ಮದ್ರಸಾಗಳು ಸಮುದಾಯಕ್ಕೆ ಮಾರ್ಗದರ್ಶನ ನೀಡಬಲ್ಲವರನ್ನು ತಯಾರಿಸುತ್ತವೆ. ರಾಜಕೀಯ, ಆರ್ಥಿಕ, ಶೈಕ್ಷಣಿಕ ಮತ್ತು ಕೌಟುಂಬಿಕ ವಿಷಯಗಳಲ್ಲಿ ಅವರಿಂದ ಸಮಾಜ ಅಭಿಪ್ರಾಯವನ್ನು ನಿರೀಕ್ಷಿಸುತ್ತದೆ. ಇಂಥ ಸ್ಥಾನಕ್ಕೆ ಏರುವವರನ್ನು ತಯಾರಿಸುವ ಮದ್ರಸಾಗಳು ಬರೇ ಕುರ್‌ಆನ್ ಕಂಠಪಾಠ ಮಾಡುವುದು, ಧಾರ್ಮಿಕ ಸಂಗತಿಗಳನ್ನು ತಿಳಿಸುವುದರಿಂದ ಒಟ್ಟು ಸಮಾಜ ಮತ್ತು ಸಮುದಾಯಕ್ಕೆ ಏನೂ ಪ್ರಯೋಜನವಿಲ್ಲ. ವರ್ತಮಾನದ ಸವಾಲುಗಳನ್ನು ಎದುರಿಸಲು ಮತ್ತು ಅವುಗಳಿಗೆ ಸೂಕ್ತ ಪರಿಹಾರವನ್ನು ಒದಗಿಸುವ ಸಮರ್ಥರನ್ನು ಇವು ತಯಾರಿಸಬೇಕು. ಒಂದುವೇಳೆ, ಇಂಥ ಮದ್ರಸಾಗಳ ಪ್ರತಿನಿಧಿಗಳನ್ನು ಕೂರಿಸಿ ಅವರ ಜೊತೆ ಧಾರ್ಮಿಕ ಮತ್ತು ಭೌತಿಕ ಶಿಕ್ಷಣಗಳ ಅಗತ್ಯ ಮತ್ತು ಮಹತ್ವಗಳ ಬಗ್ಗೆ ಅರಿವು ಮೂಡಿಸಿದರೆ, ಅವರು ಮರಳಿದ ಬಳಿಕ ಕನಿಷ್ಠ ತಮ್ಮೂರ ಆಡಳಿತ ಸಮಿತಿಯಲ್ಲಿ ಈ ಬಗ್ಗೆ ವಿಚಾರವನ್ನು ಹಂಚಿಕೊಳ್ಳಬಹುದು. ಮುಂದಿನ ಬಾರಿ ಚಂದಾ ಸಂಗ್ರಹಕ್ಕೆ ಬರುವಾಗ ಮದ್ರಸಾದ ಆಧುನೀಕರಣ ಮತ್ತು ಭೌತಿಕ ಶಿಕ್ಷಣ ಕೊಡುವ ಬಗ್ಗೆ ನಡೆದಿರುವ ಚರ್ಚೆ ಮತ್ತು ಅಂದಾಜು ವೆಚ್ಚದ ಪಟ್ಟಿಯನ್ನಾದರೂ ತರಬಹುದು. ಚಂದಾ ನೀಡುವ ಮೊದಲು ಶಿಕ್ಷಣದ ಸ್ವರೂಪ ಮತ್ತು ಪ್ರಗತಿಯ ಬಗ್ಗೆ ಜನರು ಪ್ರಶ್ನಿಸುತ್ತಾರೆ ಎಂಬ ಭಾವ ಮದ್ರಸಾ ಆಡಳಿತ ಸಮಿತಿಗಳಲ್ಲಿ ಮೂಡತೊಡಗಿದರೆ ಸಹಜವಾಗಿಯೇ ಪರಿವರ್ತನೆಗೆ ಬಾಗಿಲು ತೆರೆದುಕೊಳ್ಳುತ್ತದೆ. ಮುಖ್ಯವಾಗಿ,
ಮದ್ರಸಾದಲ್ಲಿ ಕಲಿತು ಹೊರಬರುವ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳಂತೆ ಅಲ್ಲ. ಭೌತಿಕ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗಿಂತ ಭಿನ್ನ ವ್ಯಕ್ತಿತ್ವವೊಂದನ್ನು ಅವರು ರೂಢಿಸಿಕೊಂಡಿರಬೇಕಾಗುತ್ತದೆ. ಅವರಿಂದ ಸಮಾಜ ಸಾಕಷ್ಟನ್ನು ನಿರೀಕ್ಷಿಸಿರುತ್ತದೆ. ಬರೇ ಭೌತಿಕ ಶಿಕ್ಷಣ ಪಡೆದ ವ್ಯಕ್ತಿಯೋರ್ವ ಅಪರಾಧ ಕೃತ್ಯಗಳಲ್ಲಿ ಭಾಗಿಯಾದಾಗ ಸಮಾಜ ವ್ಯಕ್ತಪಡಿಸುವ ಪ್ರತಿಕ್ರಿಯೆಗೂ ಮದ್ರಸಾ ಬಿರುದಾಂಕಿತ ವ್ಯಕ್ತಿ ಅದೇ ಅಪರಾಧದಲ್ಲಿ ಭಾಗಿಯಾದಾಗ ವ್ಯಕ್ತಪಡಿಸುವ ಪ್ರತಿಕ್ರಿಯೆಗೂ ದೊಡ್ಡ ವ್ಯತ್ಯಾಸವಿರುತ್ತದೆ. ಆ ಕಾರಣದಿಂದಲೇ ಮದ್ರಸಾದಿಂದ ಹೊರಬೀಳುವ ವಿದ್ಯಾರ್ಥಿಗಳು ವಿಶೇಷ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಅವರು ಸಮಾಜದ ಗೌರವಕ್ಕೆ ಪಾತ್ರವಾಗಬೇಕಾದರೆ, ಅವರಲ್ಲಿ ಅಂಥ ಆಕರ್ಷಣೀಯ ಗುಣಗಳಿರಬೇಕಾಗುತ್ತದೆ. ವರ್ತನೆಯಲ್ಲೂ ಆ ಗುಣಗಳು ಪ್ರತಿಫಲಿಸ ಬೇಕಾಗುತ್ತದೆ. ಸಮುದಾಯವು ಅವರ ಮಾತುಗಳನ್ನು ಆಲಿಸುವಂತೆ ಮಾಡುವ ಮತ್ತು ಅವರಲ್ಲಿ ಅಭಿಪ್ರಾಯವನ್ನು ಕೇಳಿ ತಿಳಿದುಕೊಳ್ಳುವ ಹಂತಕ್ಕೆ ಅವರು ತಮ್ಮನ್ನು ಅಭಿವೃದ್ಧಿ ಪಡಿಸಿ ಕೊಳ್ಳಬೇಕಾಗಿದೆ. ಹಾಗಂತ,
ಹೀಗೆ ಹೇಳುವುದು ಸುಲಭ. ಆದರೆ, ಪ್ರಾಯೋಗಿಕವಾಗಿ ಅಷ್ಟು ಸುಲಭ ಅಲ್ಲ. ಅದಕ್ಕೆ ತರಬೇತಿಯ ಅಗತ್ಯ ಇದೆ. ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿ ಮದ್ರಸಾಗಳಲ್ಲಿ ವಿಶೇಷ ತರಗತಿಗಳನ್ನು ನಡೆಸಬೇಕಾಗಿದೆ. ಆತ್ಮಸಂಸ್ಕರಣೆಗೆ ಅತಿಯಾದ ಮಹತ್ವವನ್ನು ನೀಡಬೇಕಾಗಿದೆ. ಮುಖ್ಯವಾಗಿ, ಹೀಗೆ ಮದ್ರಸಾಗಳಿಂದ ಸಮಾಜಕ್ಕೆ ಹರಿದು ಬರುವವರು ಯಾವುದಾದರೂ ಮಸೀದಿಯ ಇಮಾಮರಾಗಿ ಮತ್ತು ಮದ್ರಸಾ ಶಿಕ್ಷಕರಾಗಿ ಸೇರಿಕೊಳ್ಳುತ್ತಾರೆ. ಇದು ಸಾಮಾನ್ಯವಾಗಿ ನಡೆಯುವ ಪದ್ಧತಿ. ಆದರೆ, ಇಂಥ ಶಿಕ್ಷಕರಿಗೆ ನಿಯಮಿತವಾಗಿ ತರಬೇತಿ ನೀಡುವ ಕಾರ್ಯಾಗಾರಗಳು ನಡೆಯುತ್ತಿವೆಯೇ ಎಂಬ ಪ್ರಶ್ನೆಯಿದೆ.
ಮದ್ರಸಾ ಶಿಕ್ಷಕರಿಗಾಗಿ ಬಹುತೇಕ ಇಂಥ ಕಾರ್ಯಾಗಾರಗಳು ನಡೆಯುತ್ತಲೇ ಇಲ್ಲ ಎಂಬುದೇ ವಿಷಾದದ ಸಂಗತಿ. ಅಲ್ಲಿ ವಿಕಸನಕ್ಕೆ ಆದ್ಯತೆ ಕಡಿಮೆಯಾಗಿದೆ. ಅದರ ಜೊತೆಗೇ ಮದ್ರಸಾ ಕಲಿಕೆಯ ಸಂದರ್ಭದಲ್ಲಿ ಸಂಶೋಧನೆಗೆ ಸಿಗಬೇಕಾದಷ್ಟು ಒತ್ತು ಸಿಗುತ್ತಿಲ್ಲ ಎಂಬ ಆರೋಪವೂ ಇದೆ. ಗತ ವಿದ್ವಾಂಸರು ಏನೇ ನೆಲ್ಲ ಸಂಶೋಧನೆ ಕೈಗೊಂಡಿದ್ದಾರೋ ಮತ್ತು ಕುರ್‌ಆನ್ ಹಾಗೂ ಹದೀಸ್‌ಗಳ ಮೇಲೆ ಏನೆಲ್ಲಾ ಅಧ್ಯಯನಗಳನ್ನು ಮಾಡಿದ್ದಾರೋ ಅವುಗಳನ್ನು ಕಲಿಯುವುದಕ್ಕಷ್ಟೇ ತಮ್ಮನ್ನು ಸೀಮಿತಗೊಳಿಸುವ ರೀತಿಯಲ್ಲಿ ಮದ್ರಸ ಕಲಿಕೆಯನ್ನು ಅದುಮಿಡಲಾಗುತ್ತಿದೆ ಎಂದೂ ಹೇಳಲಾಗುತ್ತಿದೆ. ನಿಜವಾಗಿ,
ಮದ್ರಸಾ ಕಲಿಕೆಯ ಪ್ರತಿ ಮಗುವೂ ವಿಭಿನ್ನವಾಗಿರುತ್ತದೆ. ಹೊಸತಿಗೆ ತೆರೆದುಕೊಳ್ಳುವುದೇ ಪ್ರತಿ ಮಗುವಿನ ಪ್ರಕೃತಿ. ಇಂಥ ಮಕ್ಕಳನ್ನು ಗತಕಾಲದ ಚಿಂತನೆಗಳನ್ನು ಓದಿ ಅಭ್ಯಸಿಸಿ ಬಿರುದು ಪಡಕೊಳ್ಳುವುದಕ್ಕಷ್ಟೇ ಮಿತಿಗೊಳಿಸದೇ ಕುರ್‌ಆನ್ ಮತ್ತು ಹದೀಸ್ ಗಳ ಮೇಲೆ ಸಂಶೋಧನೆಗೆ ಹಚ್ಚಬೇಕು. ಅದಕ್ಕೆ ಪೂರಕವಾಗಿ ಕಲಿಕಾ ರೀತಿಯಲ್ಲಿ ಬದಲಾವಣೆಯನ್ನು ತರಬೇಕು. ಪವಿತ್ರ ಕುರ್‌ಆನ್ ಸಾರ್ವಕಾಲಿಕ ಗ್ರಂಥ ಎಂಬುದರ ಅರ್ಥ, ಅದು ಸರ್ವ ಕಾಲಗಳ ಸವಾಲುಗಳಿಗೂ ತನ್ನೊಳಗೆ ಪರಿಹಾರವನ್ನು ಅಡಗಿಸಿಕೊಂಡಿದೆ ಎಂದೇ ಆಗಿದೆ. ಆದರೆ ಆ ಪರಿಹಾರವನ್ನು ಹುಡುಕಿ ತೆಗೆಯಬೇಕಾದ ಸವಾಲು ಎಲ್ಲರ ಮೇಲಿದೆ. ಮದ್ರಸಾ ಶಿಕ್ಷಣವಂತೂ ಕುರ್‌ಆನಿನ ಪ್ರತಿ ವಾಕ್ಯಗಳಲ್ಲಿ ಅಡಗಿರುವ ವಿಭಿನ್ನ ಸಾಧ್ಯತೆಗಳನ್ನು ಸಂಶೋಧಿಸುವ ಕ್ಲಾಸ್ ರೂಮ್‌ಗಳಾಗಬೇಕು. ಓರ್ವ ವಿದ್ಯಾರ್ಥಿಯೊಳಗೆ ಸಂಶೋಧನೆಯ ಆಸಕ್ತಿಯನ್ನು ಹುಟ್ಟಿಸಿದರೆ ಆ ಬಳಿಕ ಆ ವಿದ್ಯಾರ್ಥಿ ಸಮಾಜಕ್ಕೂ ಸಮು ದಾಯಕ್ಕೂ ಅಪೂರ್ವ ಶಕ್ತಿಯಾಗಬಲ್ಲರು. ಸಮುದಾಯಕ್ಕೆ ನೇತೃತ್ವ ಸಿಗಬೇಕಾದದ್ದು ಇಂಥ ವ್ಯಕ್ತಿಗಳಿಂದ. ಅಂಥವರು ವರ್ತಮಾನದ ಸವಾಲುಗಳನ್ನು ಅರ್ಥೈಸಬಲ್ಲರು ಮತ್ತು ಧಾರ್ಮಿಕ ಆಧಾರದಲ್ಲಿ ಸರ್ವರೂ ಅಂಗೀಕರಿಸಬಲ್ಲ ಉತ್ತರವನ್ನು ನೀಡಬಲ್ಲರು. ಅಷ್ಟಕ್ಕೂ,
ಮದ್ರಸಾಗಳ ಅಸ್ತಿತ್ವವನ್ನೇ ಇಲ್ಲವಾಗಿಸಲು ಪ್ರಭುತ್ವ ತಂತ್ರ ಹೆಣೆಯುತ್ತಿರುವ ಈ ದಿನಗಳಲ್ಲಿ ಮದ್ರಸಾಗಳನ್ನು ಫಲಪ್ರದಗೊಳಿಸಲು ಮತ್ತು ಸಮಾಜದಲ್ಲಿ ನಿರ್ಮಾಣಾತ್ಮಕ ಪಾತ್ರ ವಹಿಸುವುದಕ್ಕೆ ಅವುಗಳನ್ನು ಸಿದ್ಧಪಡಿಸಲು ಮುಂದಾಗದಿದ್ದರೆ ಸಮುದಾಯ ಮುಂದಕ್ಕೆ ಬೆರಳು ಕಚ್ಚಿಕೊಳ್ಳಬೇಕಾದೀತು.