Thursday, August 29, 2024

ವಕ್ಫ್ ತಿದ್ದುಪಡಿ ಮಸೂದೆ: ವಿರೋಧಿಸುವುದೇ ಪರಿಹಾರವೇ?





ವಕ್ಫ್ ಗೆ  ಸಂಬಂಧಿಸಿ  ಸಾರ್ವಜನಿಕವಾಗಿ ಎರಡು ಅತಿರೇಕದ ಅಭಿಪ್ರಾಯಗಳಿವೆ

1. ವಕ್ಫ್ ನ  ಹೆಸರಿನಲ್ಲಿ ಮುಸ್ಲಿಮರು ಸಿಕ್ಕಸಿಕ್ಕ ಭೂಮಿಯ ಮೇಲೆ ಹಕ್ಕು ಸ್ಥಾಪಿಸುತ್ತಿದ್ದು, ವಕ್ಫ್ ಕಾಯಿದೆಯನ್ನೇ ರದ್ದು ಪಡಿಸಬೇಕು. ಮೊಗಲರ ಕಾಲದಲ್ಲಿ ಪ್ರಾರಂಭವಾದ ಈ ವಕ್ಫ್ ವ್ಯವಸ್ಥೆಯು ಸ್ವಾತಂತ್ರ‍್ಯಾನಂತರವೂ ಮುಂದುವರಿಯುವುದಕ್ಕೆ  ಅರ್ಥವಿಲ್ಲ ಮತ್ತು ಮೊಗಲರು ಬಿಟ್ಟು ಹೋದ ವಕ್ಫ್ ಆಸ್ತಿಯಲ್ಲಿ ಇವತ್ತು ಎಷ್ಟೋ ಪಟ್ಟು ವೃದ್ಧಿಸಿರುವುದೇ ಮುಸ್ಲಿಮರು  ವಕ್ಫ್ ಹೆಸರಲ್ಲಿ ಅನ್ಯಾಯವಾಗಿ ಭೂಮಿ ಕಬಳಿಸುತ್ತಿದ್ದಾರೆಂಬುದಕ್ಕೆ ಸಾಕ್ಷಿಯಾಗಿದೆ.

2. ಭಾರತೀಯ ವಕ್ಫ್ ವ್ಯವಸ್ಥೆಯ ನಿರ್ವಹಣೆಯಲ್ಲಿ ಯಾವುದೇ ನ್ಯೂನತೆಗಳಿಲ್ಲ ಮತ್ತು ಅದನ್ನು ಸುಧಾರಣೆ ಮಾಡಬೇಕಾದ  ಯಾವ ಅಗತ್ಯವೂ ಇಲ್ಲ. ಅಂದಹಾಗೆ,

ವಕ್ಫ್ ಎಂಬುದರ ಸರಳ ಅರ್ಥ-
ಅಲ್ಲಾಹನಿಗೆ ಅರ್ಪಿಸುವುದು. ಇದರಲ್ಲಿ ಎರಡು ವಿಧಗಳಿವೆ.
1. ಮಸೀದಿ ನಿರ್ಮಾಣಕ್ಕಾಗಿ ಓರ್ವ ಅಥವಾ ಸಂಸ್ಥೆ ತನ್ನ ಭೂಮಿಯನ್ನು ವಕ್ಫ್ ಮಾಡುವುದು ಅಥವಾ ಅಲ್ಲಾಹನಿಗೆ  ಅರ್ಪಿಸುವುದು.
2. ಮಸೀದಿಯ ಇಮಾಮರು, ಮದ್ರಸ ಅಧ್ಯಾಪಕರು, ಸಿಬಂದಿಗಳು ಮುಂತಾದವರ ವೇತನ ನಿರ್ವಹಣೆಗಾಗಿ ಮತ್ತು  ಮಸೀದಿಗೆ ಆದಾಯ ಮೂಲವಾಗಿ ಭೂಮಿಯನ್ನು ವಕ್ಫ್ ಮಾಡುವುದು.

ಹೀಗೆ ಮಸೀದಿ ನಿರ್ಮಾಣಕ್ಕಾಗಿ ಮತ್ತು ಮಸೀದಿಯ ಆದಾಯ ಮೂಲಕ್ಕಾಗಿ ಹೆಕ್ಟೇರುಗಟ್ಟಲೆ ಭೂಮಿಯನ್ನು ವಕ್ಫ್  ಮಾಡಿದ ಮುಸ್ಲಿಮರಿದ್ದಾರೆ. ಒಮ್ಮೆ ವಕ್ಫ್ ಮಾಡಿದ ಮೇಲೆ ಆ ಭೂಮಿಯ ಸಂಪೂರ್ಣ ಅಧಿಕಾರವನ್ನು ಆ ವ್ಯಕ್ತಿ ಕಳ ಕೊಳ್ಳುತ್ತಾರೆ. ಆ ಬಳಿಕದಿಂದ ಅದು ಅಲ್ಲಾಹನ ಆಸ್ತಿಯಾಗಿ ಪರಿವರ್ತನೆಯಾಗುತ್ತದೆ. ಮಸೀದಿ ಆಡಳಿತ ಮಂಡಳಿಗಾಗಲಿ,  ಅದರ ಅಧ್ಯಕ್ಷ, ಪದಾಧಿಕಾರಿಗಳಿಗಾಗಲಿ ಆ ಭೂಮಿಯಲ್ಲಿ ಯಾವ ಪಾಲೂ ಇಲ್ಲ. ಅವರು ಅದನ್ನು ಸುಪರ್ದಿಗೆ ಪಡ  ಕೊಳ್ಳುವುದಕ್ಕೂ ಅವಕಾಶ ಇಲ್ಲ. ಈ ವ್ಯವಸ್ಥೆ ಪ್ರವಾದಿ(ಸ)ರ ಕಾಲದಿಂದಲೇ ಮುಸ್ಲಿಮರಲ್ಲಿ ಅಸ್ತಿತ್ವದಲ್ಲಿದೆ. ಮೊಗಲರು ಇದನ್ನು ಆರಂಭಿಸಿದ್ದಲ್ಲ ಮತ್ತು ಅವರು ನಿಲ್ಲಿಸಬಯಸಿದ್ದರೂ ಅದು ನಿಲ್ಲುವಂಥದ್ದೂ ಆಗಿರಲಿಲ್ಲ. ಯಾಕೆಂದರೆ, ವಕ್ಫ್  ಎಂಬುದು ದೊರೆಗಳೋ ಸರಕಾರವೋ ಯಾರಿಂದಲಾದರೂ ಭೂಮಿಯನ್ನು ಕಿತ್ತುಕೊಂಡು ಕೊಡುವುದರ ಹೆಸರಲ್ಲ. ಹಾಗೆ  ಕೊಡುವುದು ವಕ್ಫ್ ಆಗುವುದಕ್ಕೆ ಸಾಧ್ಯವೂ ಇಲ್ಲ. ಓರ್ವ ವ್ಯಕ್ತಿ ಯಾವುದೇ ಒತ್ತಾಯ-ಬಲವಂತವಿಲ್ಲದೇ ಮನಃ ಪೂರ್ವಕವಾಗಿ ಅಲ್ಲಾಹನಿಗೆ ಅರ್ಪಿಸುವುದಷ್ಟೇ ವಕ್ಫ್ ಆಗಬಲ್ಲದು. ಆದ್ದರಿಂದಲೇ,

ವಕ್ಫ್ ಮಾಡುವ ವ್ಯವಸ್ಥೆ ಪ್ರವಾದಿ ನಿಧನವಾಗಿ 1500 ವರ್ಷಗಳ ಬಳಿಕವೂ ಅಥವಾ ಮೊಗಲರ ನಂತರದ ಈ 800  ವರ್ಷಗಳ ಬಳಿಕವೂ ಇವತ್ತಿಗೂ ಈ ದೇಶದಲ್ಲಿ ಅಸ್ತಿತ್ವದಲ್ಲಿದೆ. ಕೇವಲ ನಮ್ಮ ದೇಶ ಎಂದಲ್ಲ, ಮುಸ್ಲಿಮರಿರುವ ಜಗತ್ತಿನ  ಎಲ್ಲ ರಾಷ್ಟ್ರಗಳಲ್ಲೂ ಈ ವಕ್ಫ್ ವ್ಯವಸ್ಥೆ ಅಸ್ತಿತ್ವದಲ್ಲಿದೆ. ಜಗತ್ತಿನಲ್ಲಿಯೇ ಅತೀ ಹೆಚ್ಚು ವಕ್ಫ್ ಆಸ್ತಿ ಇರುವ ರಾಷ್ಟ್ರ  ಭಾರತವಾದರೆ, ದ್ವಿತೀಯ ಸ್ಥಾನದಲ್ಲಿ ಟರ್ಕಿಯಿದೆ. ಭಾರತದಲ್ಲಿ 60 ಲಕ್ಷ ಎಕ್ರೆ ವಕ್ಫ್ ಭೂಮಿಯಿದೆ. ಸರಳವಾಗಿ  ಹೇಳಬೇಕೆಂದರೆ, ಒಟ್ಟು ಕೇರಳದಷ್ಟು ದೊಡ್ಡದಾದ ಅಥವಾ ಅರ್ಧ ಪಂಜಾಬ್‌ನಷ್ಟು ವಿಸ್ತಾರವಾದ ಭೂಮಿ. ಇವೆಲ್ಲ  ಮೊಗಲರು ಕೊಟ್ಟಿರೋದಲ್ಲ. ಮೊಗಲರ ಕಾಲದಲ್ಲಿ ವಕ್ಫ್ ಬಂದಿರುವುದಕ್ಕಿಂತ  ಅನೇಕ ಪಟ್ಟು ಹೆಚ್ಚು ಭೂಮಿ ಇವತ್ತು  ವಕ್ಫ್ನ ಹೆಸರಲ್ಲಿ ನೋಂದಣಿಯಾಗಿದೆ ಎಂದಾದರೆ ಅದಕ್ಕೆ ದಾನಿಗಳಾದ ಮುಸ್ಲಿಮರೇ ಕಾರಣ. ಮಸೀದಿ, ಮದ್ರಸಾಗಳ  ನಿರ್ಮಾಣವು ಬಹುದೊಡ್ಡ ಪುಣ್ಯ ಕಾರ್ಯವಾಗಿರುವುದರಿಂದ ಮುಸ್ಲಿಮರು ಈ ವಿಷಯದಲ್ಲಿ ಉದಾರಿಗಳಾಗಿರುತ್ತಾರೆ.  ಸಂದರ್ಭ ಬಂದಾಗಲೆಲ್ಲ ಭೂಮಿ ವಕ್ಫ್ ಮಾಡುತ್ತಾರೆ. ಆ ಮೂಲಕ ದೇವನ ಪ್ರೀತಿಗೆ ಪಾತ್ರರಾಗುವುದನ್ನು ಬಯಸುತ್ತಾರೆ.  ನಿಜವಾಗಿ,

ಈ ದೇಶದ ಅತೀ ಹೆಚ್ಚಿನ ಭೂಮಿ ರಕ್ಷಣಾ ಇಲಾಖೆಯ ಅಧೀನದಲ್ಲಿದೆ. ದ್ವಿತೀಯ ಸ್ಥಾನದಲ್ಲಿ ರೈಲ್ವೆ ಇಲಾಖೆ ಇದ್ದರೆ,  ಮೂರನೇ ಸ್ಥಾನ ವಕ್ಫ್ ನ  ಪಾಲಾಗಿದೆ. ವಕ್ಫ್ ಅಧೀನದಲ್ಲಿ 2 ಲಕ್ಷ ಕೋಟಿ ರೂಪಾಯಿ ಬೆಲೆಬಾಳುವ ಆಸ್ತಿ ಇದೆ ಎಂದು  ಅಂದಾಜಿಸಲಾಗಿದ್ದು, ಇವುಗಳನ್ನು ಅತ್ಯಂತ ಪಾರದರ್ಶಕವಾಗಿ ನಿರ್ವಹಣೆ ಮಾಡಿರುತ್ತಿದ್ದರೆ ಪ್ರತಿ ವರ್ಷ 20 ಸಾವಿರ  ಕೋಟಿ ರೂಪಾಯಿ ಆದಾಯ ಬರುತ್ತಿತ್ತು ಎಂದು ಹೇಳಲಾಗುತ್ತಿದೆ. ಒಂದುವೇಳೆ, ಇಷ್ಟು ಭಾರೀ ಮೊತ್ತವು ಸಂಗ್ರಹವಾಗಿ  ಅದು ಮುಸ್ಲಿಮ್ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಬಳಕೆಯಾಗಿರುತ್ತಿದ್ದರೆ ಸಾಚಾರ್ ವರದಿಯಲ್ಲಿ ಮುಸ್ಲಿಮ್  ಸಮುದಾಯದ ಸ್ಥಾನಮಾನ ಎಲ್ಲಿರುತ್ತಿತ್ತು? ದಲಿತರಿಗಿಂತ ಕೆಳಗಿರುತ್ತಿತ್ತೇ? ಸರಕಾರದ ಹಂಗಿಲ್ಲದೇ ಮುಸ್ಲಿಮ್  ಸಮುದಾಯವನ್ನು ಅಭಿವೃದ್ಧಿಪಥದಲ್ಲಿ ಕೊಂಡೊಯ್ಯಲು ಈ ಆದಾಯದಿಂದ ಸಾಧ್ಯವಿರುತ್ತಿರಲಿಲ್ಲವೇ? ಪ್ರತಿ ಮಸೀದಿಯನ್ನು  ಕೇಂದ್ರೀಕರಿಸಿ ಆ ಮಸೀದಿ ವ್ಯಾಪ್ತಿಯಲ್ಲಿರುವ ಸರ್ವರ ಶಿಕ್ಷಣಕ್ಕಾಗಿ, ಸ್ವಉದ್ಯೋಗ, ಕೌಶಲ್ಯಾಭಿವೃದ್ಧಿಗಾಗಿ, ಪ್ರತಿಭಾ ಪೋಷಣೆ,  ಇಂಜಿನಿಯರ್, ಡಾಕ್ಟರ್, ಸೈಂಟಿಸ್ಟ್ ಗಳ  ತಯಾರಿಗಾಗಿ ಯೋಜನೆಯನ್ನು ರೂಪಿಸುವುದು ಮತ್ತು ಹಣ ಖರ್ಚು ಮಾಡುವುದಕ್ಕೆ ಸಾಧ್ಯವಿರಲಿಲ್ಲವೇ? ಸರಕಾರದ ಯಾವ ಮೀಸಲಾತಿಗೂ ದುಂಬಾಲು ಬೀಳದೆಯೇ ಸ್ವಶಕ್ತಿಯಿಂದ ಮೇಲೇಳಲು ಈ  ಆದಾಯ ಊರುಗೋಲು ಆಗುತ್ತಿರಲಿಲ್ಲವೇ? ಸರಕಾರದ ಸೌಲಭ್ಯದ ಹೊರತಾಗಿಯೂ ವಿಧವಾ ವೇತನ ನೀಡುವುದಕ್ಕೆ,  ವಿಶೇಷ ಚೇತನರಿಗೆ, ವೃದ್ಧರಿಗೆ ಮಾಸಾಶನ ಯೋಜನೆಯನ್ನು ರೂಪಿಸುವುದಕ್ಕೆ ಈ ಆದಾಯವನ್ನು ಬಳಸಿ  ಮಾದರಿಯಾಗಬಹುದಿತ್ತಲ್ಲವೇ? ತೀರಾ ಬಡವರನ್ನು ಗುರುತಿಸಿ ಅವರಿಗೆ ಮನೆ ನಿರ್ಮಿಸಿಕೊಡುವ ಮತ್ತು ಮದುವೆಗೆ  ನೆರವಾಗುವಂಥ ಯೋಜನೆಗಳನ್ನು ತಯಾರಿಸಲು ಈ ಆದಾಯವನ್ನು ಬಳಕೆ ಮಾಡಬಹುದಿತ್ತಲ್ಲವೇ? ಆಘಾತಕಾರಿ ಸಂಗತಿ  ಏನೆಂದರೆ,

ಇಷ್ಟು ಭಾರೀ ಪ್ರಮಾಣದಲ್ಲಿ ವಕ್ಫ್ ಆಸ್ತಿಯನ್ನು ಹೊಂದಿದ್ದರೂ ಪ್ರತಿವರ್ಷ ಆದಾಯವಾಗಿ ಬರುತ್ತಿರುವುದು ಕೇವಲ 163  ಕೋಟಿ ರೂಪಾಯಿ. ಅಂದಹಾಗೆ, 20 ಸಾವಿರ ಕೋಟಿ ರೂಪಾಯಿ ಎಲ್ಲಿ, ಈ ಜುಜುಬಿ 163 ಕೋಟಿ ರೂಪಾಯಿ ಎಲ್ಲಿ?  ಹೀಗಾಗಲು ಕಾರಣವೇನು? 20 ಸಾವಿರ ಕೋಟಿ ರೂಪಾಯಿ ಆದಾಯವನ್ನು ತರಬಲ್ಲ ಆಸ್ತಿಯನ್ನು ಹೊಂದಿದ್ದೂ ಕೇವಲ  163 ಕೋಟಿ ರೂಪಾಯಿ ಆದಾಯ ಮಾತ್ರ ಸಂಗ್ರಹವಾಗುತ್ತಿರುವುದರ ಅಸಲಿಯತ್ತೇನು? 9ನೇ ಜಂಟಿ ಪಾರ್ಲಿಮೆಂಟರಿ  ಸಮಿತಿ (ಜೆಪಿಸಿ)ಯ ವರದಿಯು ಈ ಕುರಿತಂತೆ ಸಾಕಷ್ಟು ಬೆಳಕು ಚೆಲ್ಲುತ್ತದೆ. ವಕ್ಫ್ ನ  70% ಭೂಮಿಯೂ  ಅತಿಕ್ರಮಣವಾಗಿದೆ ಮತ್ತು ವಕ್ಫ್ ಮಂಡಳಿಯ ಅಧೀನದಲ್ಲಿ 20-25% ಭೂಮಿಯಷ್ಟೇ ಇದೆ ಎಂದು ಆ ವರದಿಯಲ್ಲಿ  ಹೇಳಲಾಗಿತ್ತು. ಈ ಭೂಮಿ ಕೂಡಾ ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ವಕ್ಫ್ ನ  ಆಸ್ತಿಯನ್ನು ಒಂದುಕಡೆ ಸರಕಾರ  ಅತಿಕ್ರಮಣ ಮಾಡಿದ್ದರೆ ಇನ್ನೊಂದೆಡೆ ಕಂಪೆನಿಗಳು ತಳವೂರಿದೆ. ಹಾಗೆಯೇ ರೆಸಿಡೆನ್ಶಿಯಲ್ ಕಾಂಪ್ಲೆಕ್, ಸರಕಾರಿ ಇನ್ಸ್ಟಿಟ್ಯೂಟ್‌ಗಳು ವಕ್ಫ್ ಭೂಮಿಯನ್ನು ಅತಿಕ್ರಮಿಸಿ ರಾಜನಂತೆ ಮೆರೆಯುತ್ತಿವೆ. ಇದಕ್ಕೆ ಬೆಂಗಳೂರಿನ ವಿಂಡ್ಸರ್ ಮ್ಯಾನರ್  ಹೊಟೇಲನ್ನು ಉದಾಹರಣೆಯಾಗಿ ಎತ್ತಿಕೊಳ್ಳಬಹುದು.

ಅಘಾ ಅಲಿ ಅಸ್ಗರ್ ಎಂಬವರು ವಕ್ಫ್ ಮಾಡಿರುವ ಈ ಭೂಮಿಯನ್ನು ವಕ್ಫ್ ಬೋರ್ಡ್ ಮೊನಾಕ್ ಕಾರ್ಪೊರೇಶನ್‌ಗೆ  30 ವರ್ಷಗಳಿಗಾಗಿ ಲೀಸ್‌ಗೆ ನೀಡಿತ್ತು. 1973ರಲ್ಲಿ ಮತ್ತೆ 20 ವರ್ಷಗಳಿಗೆ ಲೀಸ್ ಅವಧಿಯನ್ನು ವಿಸ್ತರಿಸಿತು. ಆದರೆ ಇದೇ  ಮೊನಾರ್ಕ್ ಕಂಪೆನಿಯು ವಕ್ಫ್ ಬೋರ್ಡ್ ನ  ಗಮನಕ್ಕೆ ತಾರದೆಯೇ ಲೀಸ್ ಹಕ್ಕುಗಳನ್ನು ವಿಶ್ವಾರಮ್ ಹೊಟೇಲ್ಸ್  ಪ್ರೈವೇಟ್ ಲಿಮಿಟೆಡ್‌ಗೆ ಹಸ್ತಾಂತರಿಸಿತು. ಆ ಬಳಿಕ ಅಂಜುಮನ್ ಮತ್ತು ಇತರ ಮೂರು ಮಂದಿ ಸಿವಿಲ್ ಕೋರ್ಟ್ ನ   ಮೆಟ್ಟಿಲು ಹತ್ತಿದರು. ಆ ಬಳಿಕ ಅದು ಹೈಕೋರ್ಟ್ ಮತ್ತು ಸುಪ್ರೀಮ್ ಕೋರ್ಟ್ವರೆಗೆ ಹೋಯಿತು. ಈ ಹೊಟೇಲನ್ನು  ತೆರವುಗೊಳಿಸಬೇಕೆಂದು ಈ ಮೂರೂ ಕೋರ್ಟ್ ಗಳು  ಆದೇಶ ನೀಡಿದುವು. ಇದು ಒಂದು ಪ್ರಕರಣವಾದರೆ, ಹೀಗೆ  ಕೋರ್ಟಿನ ಮುಖವನ್ನೇ ಕಾಣದೇ ಇರುವ ಅಸಂಖ್ಯ ಪ್ರಕರಣಗಳು ಈ ದೇಶದಲ್ಲಿವೆ. ವಕ್ಫ್ ಆಸ್ತಿಯ ಬಹುಭಾಗವನ್ನು  ಇವತ್ತಿಗೂ ಜುಜುಬಿ ಲೀಸ್‌ಗೆ ಕೊಡಲಾಗಿದೆ. ಅವುಗಳಿಂದ ಎಷ್ಟು ಆದಾಯ ಬರಬೇಕಿದೆಯೋ ಅದರ 5% ಆದಾಯ  ಕೂಡಾ ಬರುತ್ತಿಲ್ಲ ಎಂಬುದು ಹಗಲಿನಷ್ಟೇ ಸತ್ಯ. ಇದು ಸರಕಾರಕ್ಕೂ ಗೊತ್ತಿದೆ. ಸಚಿವರು, ಶಾಸಕರು, ಪ್ರಭಾವಿಗಳು ಮತ್ತು  ಶ್ರೀಮಂತರ ಕೈಯಲ್ಲಿ ವಕ್ಫ್ ಆಸ್ತಿಗಳು ವಿವಿಧ ಕಾಂಪ್ಲೆಕ್ಸ್ ಗಳಾಗಿ, ಶಿಕ್ಷಣ ಸಂಸ್ಥೆಗಳಾಗಿ, ಬಹುಮಹಡಿ ಕಟ್ಟಡಗಳಾಗಿ ಪರಿವರ್ತಿತವಾಗಿವೆ ಮತ್ತು ಅದರ ಕೋಟ್ಯಂತರ ರೂಪಾಯಿ ಆದಾಯ ಅವರ ಖಾತೆಗೆ ಹರಿದು ಬರುತ್ತಲೂ ಇವೆ. ಆದ್ದರಿಂದ  ಅತಿಕ್ರಮವಾಗಿರುವ ವಕ್ಫ್ ಆಸ್ತಿಯನ್ನು ತೆರವುಗೊಳಿಸುವುದು ಬಿಡಿ, ಕನಿಷ್ಠ ಆ ಬಗ್ಗೆ ಪ್ರಾಯೋಗಿಕ ತನಿಖೆಯನ್ನೂ  ಮಾಡಲಾಗುತ್ತಿಲ್ಲ. ಇನ್ನೊಂದೆಡೆ, ಇರುವ ವಕ್ಫ್ ಆಸ್ತಿಗಳ ನಿರ್ವಹಣೆಯೂ ಅತ್ಯಂತ ಕಳಪೆಯಾಗಿದೆ. ವಕ್ಫ್ ಆಸ್ತಿಯನ್ನು  ಆದಾಯ ಮೂಲವಾಗಿ ಪರಿವರ್ತಿಸುವಲ್ಲೂ ವಕ್ಫ್ ಮಂಡಳಿ ದಯನೀಯವಾಗಿ ಸೋತಿದೆ. ಹಾಗೆಯೇ ಮಂಡಳಿಯಲ್ಲಿ  ಭ್ರಷ್ಟಾಚಾರವೂ ಇದೆ. ಇದು ವಕ್ಫ್ ಆಸ್ತಿಯ ಒಂದು ಮುಖವಾದರೆ, ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಮಸೂದೆಯದ್ದು ಇನ್ನೊಂದು ಮುಖ. ವಕ್ಫ್ ಭೂಮಿಗೆ  ಸಂಬಂಧಿಧಿಸಿ ಇರುವ ಗೋಜಲುಗಳು ಮತ್ತು ಅಸಮರ್ಪಕ ನಿರ್ವಹಣೆಯ ನೆಪದಲ್ಲಿ ಇಡೀ ವಕ್ಫ್ ವ್ಯವಸ್ಥೆಯನ್ನೇ  ಕುಲಗೆಡಿಸುವ ದುರುದ್ದೇಶವನ್ನು ಈ ತಿದ್ದುಪಡಿ ಮಸೂದೆ ಹೊಂದಿದೆ ಎಂದೇ ಅನಿಸುತ್ತದೆ. ಅಂದಹಾಗೆ,

ವಕ್ಫ್ ಮಂಡಳಿಯಲ್ಲಿ ಈ ವರೆಗೆ ಮುಸ್ಲಿಮರಿಗೆ ಮಾತ್ರ ಅವಕಾಶ ಇತ್ತು. ಆದರೆ, ಇದೀಗ ಇಬ್ಬರು ಮುಸ್ಲಿಮೇತರರನ್ನು ಈ  ಮಂಡಳಿಗೆ ಸೇರಿಸುವ ಪ್ರಸ್ತಾವನೆ ಈ ತಿದ್ದುಪಡಿ ಮಸೂದೆಯಲ್ಲಿದೆ. ಹಾಗಂತ, ಇದರ ಒಳಮರ್ಮ ಅರ್ಥವಾಗಬೇಕಾದರೆ,  ರಾಮಮಂದಿರ ಟ್ರಸ್ಟ್, ಸಿಖ್ಖ್ ಗುರುದ್ವಾರ ಮಂಡಳಿ ಅಥವಾ ಈ ದೇಶದ ಯಾವುದೇ ಪ್ರಮುಖ ಮಂದಿರ ನಿರ್ವಹಣಾ  ಮಂಡಳಿಯಲ್ಲಿ ಯಾರ‍್ಯಾರು ಇದ್ದಾರೆ ಅನ್ನುವುದನ್ನು ನೋಡಬೇಕು. ಈ ಯಾವ ಮಂಡಳಿಗೂ ಮುಸ್ಲಿಮರನ್ನು ಸೇರಿಸದ  ಕೇಂದ್ರ ಸರ್ಕಾರ ವಕ್ಫ್ ಮಂಡಳಿಗೆ ಮಾತ್ರ ಹಿಂದೂಗಳನ್ನು ಸೇರಿಸಿಕೊಳ್ಳುವ ಔಚಿತ್ಯವೇನು? ಒಂದುವೇಳೆ ರಾಮಮಂದಿರ  ಟ್ರಸ್ಟ್ ನಲ್ಲಿ  ಮುಸ್ಲಿಮರನ್ನು ಸೇರಿಸಿದರೆ ಅದಕ್ಕೆ ವ್ಯಕ್ತವಾಗಬಹುದಾದ ಪ್ರತಿಕ್ರಿಯೆಗಳು ಹೇಗಿದ್ದೀತು? ಹಾಗೆಯೇ,

ಯಾವುದೇ ವಕ್ಫ್ ಆಸ್ತಿಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸುವುದನ್ನು ಈ ಹೊಸ ಮಸೂದೆಯು  ಕಡ್ಡಾಯಗೊಳಿಸುತ್ತದೆ. ಆ ಮೂಲಕ ಜಿಲ್ಲಾಧಿಕಾರಿ ವಕ್ಫ್ ಆಸ್ತಿಯಲ್ಲಿ ಮಧ್ಯಪ್ರವೇಶ ಮಾಡುವುದಕ್ಕೂ ದಾರಿ  ತೆರೆದಂತಾಗುತ್ತದೆ. ರಾಜಕೀಯ ಕಾರಣಕ್ಕಾಗಿ ಯಾವುದೇ ಆಸ್ತಿಯನ್ನು ನೋಂದಣಿಯಾಗದಂತೆ ತಡೆಯುವುದಕ್ಕೆ, ವಿವಿಧ ನೆಪಗಳ  ಮೂಲಕ ಸತಾಯಿಸುವುದಕ್ಕೆ ಅವರಿಗೆ ಈ ಮಸೂದೆ ಅವಕಾಶ ನೀಡಬಹುದು. ಇದೇವೇಳೆ,
1995ರ ವಕ್ಫ್ ಕಾಯ್ದೆ ಸೆಕ್ಷನ್ 40ನ್ನು ಈ ಮಸೂದೆಯು ರದ್ದು ಮಾಡುತ್ತದೆ. ಸೆಕ್ಷನ್ 40ರ ಪ್ರಕಾರ, ಯಾವುದೇ ಆಸ್ತಿಯು  ವಕ್ಫ್ ಆಸ್ತಿ ಹೌದೋ ಅಲ್ಲವೋ ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಈ ಕಾಯ್ದೆ ವಕ್ಫ್ ನ್ಯಾಯ ಮಂಡಳಿಗೆ  ನೀಡುತ್ತದೆ. ಆದರೆ,  ಈಗ ಈ ಬಗ್ಗೆ ಜಿಲ್ಲಾಧಿಕಾರಿ ನಿರ್ಧಾರವನ್ನು ಕೈಗೊಳ್ಳ ಬೇಕಾಗಿದೆ. ಇದರಿಂದಾಗಿ, ವಕ್ಫ್ ನ್ಯಾಯ  ಮಂಡಳಿಯು ತನ್ನ ಅಸ್ತಿತ್ವವನ್ನು ಕಳಕೊಳ್ಳುತ್ತದಲ್ಲದೇ ಜಿಲ್ಲಾಧಿಕಾರಿ ಮಧ್ಯಪ್ರವೇಶಕ್ಕೆ ಅನುವು ಮಾಡಿಕೊಡುತ್ತದೆ. ಇದು ವಕ್ಫ್  ಆಸ್ತಿಯ ಮೇಲಿನ ಅಧಿಕಾರವನ್ನು ವಕ್ಫ್ ಮಂಡಳಿಯಿಂದ  ಪರೋಕ್ಷವಾಗಿ ಕಿತ್ತುಕೊಳ್ಳುವುದಕ್ಕೆ ಮತ್ತು ಜಿಲ್ಲಾಧಿಕಾರಿಗೆ ಅಧಿಕಾರವನ್ನು ನೀಡುತ್ತದೆ. ಜೊತೆಗೆ,

ವಕ್ಫ್ ಆಸ್ತಿ ಎಂದು ಗುರುತಿಸಲಾಗಿರುವ ಯಾವುದೇ ಆಸ್ತಿಯು ಸರ್ಕಾರಕ್ಕೆ ಸೇರಿದ್ದೋ ಎಂಬ ಅನುಮಾನ ಬಂದರೆ,  ಜಿಲ್ಲಾಧಿಕಾರಿ ಸರ್ವೇ ನಡೆಸಿ ನಿರ್ಧಾರ ಕೈಗೊಳ್ಳಬಹುದು ಎಂದು ಹೊಸ ಮಸೂದೆಯಲ್ಲಿ ಹೇಳಲಾಗಿದೆ. ಇದರಿಂದಾಗುವ  ತೊಂದರೆ ಏನೆಂದರೆ, ತಲೆತಲಾಂತರಗಳಿಂದ ಸರಕಾರಿ ಜಾಗದಲ್ಲಿರುವ ಮಸೀದಿಗಳ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು  ಹೋಗಬಹುದು. ಹೀಗೆ ಸರಕಾರಿ ಜಾಗದಲ್ಲಿ ಮಸೀದಿಗಳು ಮಾತ್ರ ಇರುವುದಲ್ಲ. ಮಂದಿರ, ಚರ್ಚ್ ಗಳೂ  ಇವೆ. ಹಳೆ  ಕಾಲದ ಇಂಥ ಮಸೀದಿಗಳು ಆ ಬಳಿಕ ವಕ್ಫ್ ಹೆಸರಿಗೆ ಹಸ್ತಾಂತರ ವಾಗಿರಲೂಬಹುದು. ಆದರೆ ಇಂಥವುಗಳನ್ನು ಹುಡುಕಿ  ಹುಡುಕಿ ಜಿಲ್ಲಾಧಿಕಾರಿಗಳಿಗೆ ದೂರು ಕೊಡುವ ವ್ಯವಸ್ಥಿತ ಗುಂಪೇ ರಚನೆಯಾಗಬಹುದು ಮತ್ತು ಆ ದೂರಿನ ಆಧಾರದಲ್ಲಿ  ಮಸೀದಿಗಳನ್ನು ತೆರವುಗೊಳಿಸುವ ಕಾರ್ಯವೂ ನಡೆಯಬಹುದು. ಜಿಲ್ಲಾಧಿಕಾರಿಯ ತೀರ್ಪನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ  ಹೋಗುವ ಅವಕಾಶ ಇದೆಯಾದರೂ ಮುಸ್ಲಿಮ್ ಸಮುದಾಯವನ್ನು ಸದಾ ಆತಂಕದಲ್ಲಿಡುವುದಕ್ಕೆ  ಮಾಡಲಾದ ಸಂಚೇ  ಇದೆಂದು ಅನಿಸುತ್ತದೆ. ಈ ಮೊದಲು ಜಿಲ್ಲಾಧಿಕಾರಿಗೆ ಈ ಹಕ್ಕು ಇರಲಿಲ್ಲ. ವಕ್ಫ್ಗೆ ಸಂಬಂಧಿಸಿ ಎದುರಾಗುವ ಯಾವುದೇ  ವಿವಾದವನ್ನು ವಕ್ಫ್ ನ್ಯಾಯ ಮಂಡಳಿಯಲ್ಲಿಯೇ ಪ್ರಶ್ನಿಸಬೇಕಿತ್ತು. ಹಾಗೆಯೇ,

ಮುಸ್ಲಿಮೇತರರು ವಕ್ಫ್ ಆಗಿ ನೀಡುವ ಆಸ್ತಿಯನ್ನು ಸ್ವೀಕರಿಸುವುದಕ್ಕಾಗಿ ಈ ಹಿಂದೆ ಕಾಯ್ದೆಯಲ್ಲಿ ಸೆಕ್ಷನ್ 104ನ್ನು  ಅಳವಡಿಸಲಾಗಿತ್ತು. ಆದರೆ ಹೊಸ ಮಸೂದೆಯು ಆ 104 ಸೆಕ್ಷನ್ ಅನ್ನೇ ರದ್ದುಗೊಳಿಸಿದೆ. ಆ ಮೂಲಕ ಈ ಮೊದಲು  ಯಾರಾದರೂ ವಕ್ಫ್ ಆಗಿ ಆಸ್ತಿ ನೀಡಿದ್ದರೆ ಅದನ್ನು ವಶಪಡಿಸಿಕೊಳ್ಳುವ ಅಧಿಕಾರವನ್ನು ಸರ್ಕಾರ ಸ್ವಯಂ ಪಡಕೊಳ್ಳುತ್ತದೆ.  ಅಂದಹಾಗೆ,

ವಕ್ಫ್ ಆಸ್ತಿಯ ಮೇಲೆ ಕೇಂದ್ರ ಸರ್ಕಾರ ನಡೆಸಬಯಸಿರುವ ಸವಾರಿಯನ್ನು  ಪ್ರಶ್ನಿಸುತ್ತಲೇ ವಕ್ಫ್ ಆಸ್ತಿಗಳು ಇಷ್ಟಂಶ  ಪರಭಾರೆ ಆಗಿರುವುದಕ್ಕೆ ಮತ್ತು ಅತ್ಯಂತ ಅಸಮರ್ಪಕ ನಿರ್ವಹಣೆಗೆ ಯಾರು ಹೊಣೆ ಮತ್ತು ಏನು ಪರಿಹಾರ ಎಂಬುದನ್ನು ಮುಸ್ಲಿಮ್ ಸಮುದಾಯ ಸ್ವಯಂ ಪ್ರಶ್ನಿಸಿಕೊಳ್ಳುವ ವಿವೇಕವನ್ನೂ ಪ್ರದರ್ಶಿಸಬೇಕಿದೆ. ವಕ್ಫ್ ಮಂಡಳಿಯಲ್ಲಿ ಈ ವರೆಗೆ  ಯಾಕೆ ಒಬ್ಬರೇ ಒಬ್ಬರು ಮಹಿಳೆಯರಿಗೆ ಅವಕಾಶ ಕೊಟ್ಟಿಲ್ಲ, ಏಕೆ ಮುಸ್ಲಿಮ್ ಸಮುದಾಯದ ವಿವಿಧ ಪಂಥಗಳಿಗೆ ಪ್ರಾತಿನಿಧ್ಯವನ್ನು ಕೊಟ್ಟಿಲ್ಲ ಎಂಬ ಪ್ರಶ್ನೆಗೂ ಸಮುದಾಯ ಕೊರಳೊಡ್ಡಬೇಕಿದೆ. ಇದು ಮುಸ್ಲಿಮ್ ಸಮುದಾಯದ ಪಾಲಿಗೆ  ಆತ್ಮಾವಲೋಕನದ ಸಂದರ್ಭ. ಕನಿಷ್ಠ,

1. ವಕ್ಫ್ ಅಂದರೆ ಏನು, ಅದರಿಂದ ಸಮುದಾಯಕ್ಕೆ ಆಗುವ ಪ್ರಯೋಜನಗಳೇನು, ಇದಕ್ಕಿರುವ ಧಾರ್ಮಿಕ ಮಹತ್ವ,  ಹಿನ್ನೆಲೆ, ಇದು ಬೆಳೆದು ಬಂದ ಪರಂಪರೆಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಹೇಳುವ ಜಾಗೃತಿ ಅಭಿಯಾನಗಳು  ಆರಂಭವಾಗಬೇಕು.
2. ವಕ್ಫ್ ನ  ಬಗ್ಗೆ ನಾನಾ ಬಗೆಯ ಸುಳ್ಳು ಪ್ರಚಾರಗಳು ಸಮಾಜದಲ್ಲಿ ಈಗಾಗಲೇ ಹರಡಿವೆ ಮತ್ತು ಸೋಶಿಯಲ್  ಮೀಡಿಯಾದ ಮೂಲಕ ಹರಡುತ್ತಲೂ ಇವೆ. ಈ ಅಪಪ್ರಚಾರಗಳನ್ನು ಪರಿಶೀಲಿಸಬೇಕಲ್ಲದೇ, ಇವುಗಳಿಗೆ ಸಮರ್ಪಕ  ಉತ್ತರ ಕೊಡುವ ಕಾರ್ಯಕ್ರಮಗಳು ಒಂದು ಅಭಿಯಾನ ರೂಪದಲ್ಲಿ ನಡೆಯಬೇಕು. ಆ ಕುರಿತಂತೆ ದಾಖಲೆ ಸಹಿತ  ಬರಹಗಳು, ಪ್ರಕಟಣೆಗಳು, ಭಿತ್ತಿಪತ್ರಗಳು ಎಲ್ಲೆಡೆ ಲಭ್ಯವಾಗುವಂತೆ ಮಾಡಬೇಕು.
3. ವಕ್ಫ್ ಮಂಡಳಿಗೆ ಚುರುಕುತನದಿಂದ ಕೂಡಿದ ಮತ್ತು ಆ್ಯಕ್ಟಿವ್ ಆಗಿರುವ ಅಧ್ಯಕ್ಷರು ಬೇಕು. ಅವರು ಮಾಧ್ಯಮಗಳು  ಮತ್ತು ರಾಜಕಾರಣಿಗಳು ಎತ್ತುವ ಪ್ರಶ್ನೆಗಳಿಗೆ ಅಂಕಿ-ಅಂಶ  ಆಧಾರಿತವಾಗಿ ಉತ್ತರಿಸುವಷ್ಟು ಶಕ್ತಿಶಾಲಿಯೂ ಆಗಿರಬೇಕು. ಈ  ಮಂಡಳಿಯು ಮಾಧ್ಯಮಗಳೊಂದಿಗೆ ಉತ್ತಮ ಸಂಪರ್ಕ ಇಟ್ಟುಕೊಂಡಿರಬೇಕು. ಅದಕ್ಕಾಗಿ ಪೂರ್ಣಕಾಲಿಕ ಉದ್ಯೋಗಿಗಳ ನ್ನು ನೇಮಿಸಬೇಕು.
4. ವಕ್ಫ್ನ ಆಸ್ತಿಗಳು ಎಲ್ಲೆಲ್ಲಿ ಇವೆಯೋ ಆ ಬಗ್ಗೆ ಆನ್‌ಲೈನ್‌ನಲ್ಲಿ ಸಿಗುವಂತೆ ಡಾಟಾ ತಯಾರಿಸಬೇಕು. ಇವೆಲ್ಲ ಜನರಿಗೆ  ಬೆರಳ ತುದಿಯಲ್ಲಿ ಲಭ್ಯವಾಗುವಂತೆ ಮಾಡುವುದರಿಂದ ಅನಗತ್ಯ ಗೊಂದಲಗಳಿಗೂ ಮತ್ತು ಅಪಪ್ರಚಾರಗಳಿಗೂ ತಡೆ  ಬೀಳಬಹುದು. ಅತಿಕ್ರಮಣ ಆಗಿರುವ ವಕ್ಫ್ ಆಸ್ತಿಗಳು, ಈಗ ಬರುತ್ತಿರುವ ಆದಾಯ, ಕೋರ್ಟು ಮೆಟ್ಟಲೇರಿರುವ  ಪ್ರಕರಣಗಳು, ಪರಭಾರೆ ಆಗಿರುವ ಆಸ್ತಿಗಳು.. ಇತ್ಯಾದಿಗಳ ಸಹಿತ ಎಲ್ಲ ಮಾಹಿತಿಯನ್ನು ಮಂಡಳಿಯ ವೆಬ್‌ಸೈಟ್‌ನಲ್ಲಿ  ಪ್ರಕಟಿಸಬೇಕು.
5. ವಕ್ಫ್ ಆಸ್ತಿ ನಿರ್ವಹಣೆಯಲ್ಲಿ ಆಗುತ್ತಿರುವ ಭ್ರಷ್ಟಾಚಾರಕ್ಕೆ ತಡೆ ಬೀಳಬೇಕು.

ಅಷ್ಟಕ್ಕೂ,

ಈ ತಿದ್ದುಪಡಿ ಮಸೂದೆಯನ್ನು ಪರಿಶೀಲಿಸುವುದಕ್ಕೆ ರಚಿಸಲಾದ ಸಂಸದೀಯ ಮಂಡಳಿಯಲ್ಲಿ ತೇಜಸ್ವಿ ಸೂರ್ಯ  ಇದ್ದಾರೆಂಬುದೇ ಕೇಂದ್ರ ಸರಕಾರದ ಪ್ರಾಮಾಣಿಕತೆಯನ್ನು ಜಗಜ್ಜಾಹೀರುಗೊಳಿಸುತ್ತದೆ.

No comments:

Post a Comment