Wednesday, October 30, 2019

ಉಸ್ತಾದರು ಬಟ್ಟೆ ಹಾಸಿದ್ದಾರೆ, ಸಮುದಾಯ ಭಿಕ್ಷೆ ಹಾಕುತ್ತಿದೆ...1. Redirecting money from the Gulf.
2. ಬೇಡುವ ಸ್ಥಿತಿ ಬರದಿರಲಿ ಎಂದು ಅಲ್ಲಾಹನಲ್ಲಿ ಬೇಡಿದ ಖತೀಬರು ಮಸೀದಿಯಲ್ಲಿ ಬೇಡಲು ಕುಳಿತಾಗ ಕರುಳು ಹಿಂಡಿದಂತಾಯಿತು...
ಕಳೆದವಾರ ನನ್ನ ಆಸಕ್ತಿಯನ್ನು ಕೆರಳಿಸಿದ ಎರಡು ಬರಹಗಳ ಶೀರ್ಷಿಕೆಗಳಿವು. ಈ ಎರಡೂ ಬರಹಗಳ ವಸ್ತು, ವಿಶ್ಲೇಷಣೆ, ನಿರೂಪಣಾ ಶೈಲಿ, ಭಾಷೆ ಮತ್ತು ಪದಬಳಕೆ.. ಎಲ್ಲವೂ ಬೇರೆ ಬೇರೆ. ಆದರೆ  ಗುರಿ ಮಾತ್ರ ಒಂದೇ- ಅದು ಮುಸ್ಲಿಮ್ ಸಮುದಾಯ. ಕಳಕಳಿಯೂ ಅದುವೇ. ಮುಸ್ಲಿಮ್ ಸಮುದಾಯದ ಬಗ್ಗೆ ಕಳಕಳಿ ವ್ಯಕ್ತಪಡಿಸುವ ಎರಡು ಬೇರೆ ಬೇರೆ ಬರಹಗಳು ಎಂಬ ಸಾಮಾನ್ಯ ಭಾವದ  ಆಚೆ ನಿಂತು ಚರ್ಚಿಸಲೇಬೇಕಾದ ವಿಷಯಗಳು ಆ ಎರಡು ಬರಹಗಳಲ್ಲಿದ್ದುವು.
 Redirecting money from the Gulf.- ಅಕ್ಟೋಬರ್ 14ರ ದ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ ಬರಹ ಇದು. ದ ಹಿಂದೂ ಪತ್ರಿಕೆಯ ಮಾಜಿ ಸಹಸಂಪಾದಕರಾಗಿದ್ದ ಮತ್ತು  ಈಗ ಸ್ವತಂತ್ರ ಪತ್ರಕರ್ತರಾಗಿ ದುಡಿಯುತ್ತಿರುವ ಕೆ.ಪಿ.ಎಂ. ಬಶೀರ್ ಅವರು ಇದನ್ನು ಬರೆದಿದ್ದಾರೆ. (ಅಕ್ಟೋಬರ್ 18ರ ವಾರ್ತಾಭಾರತಿ ಪತ್ರಿಕೆಯು ‘ಕೊಲ್ಲಿ ರಾಷ್ಟ್ರಗಳಿಂದ ಬರುವ ಹಣ ಎಲ್ಲಿ  ಹೂಡಿಕೆಯಾಗಬೇಕು’ ಎಂಬ ಶೀರ್ಷಿಕೆಯಲ್ಲಿ ಈ ಲೇಖನವನ್ನು ಮರು ಮುದ್ರಿಸಿದೆ). ಇಡೀ ಲೇಖನದ ಕೇಂದ್ರ ಬಿಂದು- ಕೇರಳದ ಮುಸ್ಲಿಮರು. ಅದರಲ್ಲಿರುವ ಒಂದು ಪ್ಯಾರಾ ಹೀಗಿದೆ:
“ಕೇರಳದ ಮುಸ್ಲಿಮರಲ್ಲಿ ಇನ್ನೊಂದು ತಲೆಮಾರಿನ ಕೊನೆಯ ವರೆಗೂ ಉಳಿಯುವಷ್ಟು ಕಾರುಗಳಿವೆ. ಬಂಗಲೆಗಳಿವೆ ಮತ್ತು ಚಿನ್ನಾಭರಣಗಳಿವೆ. ಆದರೆ ಉದ್ಯೋಗಗಳಿಲ್ಲ. ಕೇರಳದಲ್ಲೇ ಇರುವ ಯುವಕರಿಗೂ ಉದ್ಯೋಗಗಳಿಲ್ಲ. ಹಾಗೆಯೇ ಗಲ್ಫ್ ರಾಷ್ಟ್ರಗಳಿಂದ ದಿಢೀರನೆ ಉದ್ಯೋಗ ಕಳೆದುಕೊಂಡು ಬರುವವರಿಗೂ ಉದ್ಯೋಗಗಳಿಲ್ಲ. ಅನಿವಾಸಿ ಕೇರಳೀಯರು ಕಳೆದ ಎರಡು ದಶಕಗಳಲ್ಲಿ ತಾವು  ತಮ್ಮ ರಾಜ್ಯಕ್ಕೆ ಕಳುಹಿಸಿದ್ದ ಭಾರೀ ಮೊತ್ತದಿಂದ ಕೇವಲ ಶೇಕಡ ಒಂದರಷ್ಟನ್ನು ಉದ್ಯೋಗ ಸೃಷ್ಟಿಸುವ ವ್ಯಾಪಾರ ಮತ್ತು ಉದ್ದಿಮೆಗಳಲ್ಲಿ ಹೂಡಿಕೆ ಮಾಡುತ್ತಿದ್ದರೂ ಕೇರಳದ ಮುಂದಿನ ತಲೆಮಾರಿಗೆ  ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗಕ್ಕಾಗಿ ಪರದಾಡುವ ಸ್ಥಿತಿ ಬರುತ್ತಿರಲಿಲ್ಲ...”
ಇನ್ನೊಂದು ಬರಹ- ಮಿತ್ರ ಹನೀಫ್ ಪುತ್ತೂರು ಅವರದ್ದು. ಅವರ ಬರಹದಿಂದ ಆರಿಸಿದ ಒಂದು ತುಂಡು ಬರಹ ಹೀಗಿದೆ:
“ಕಳೆದ ಶುಕ್ರವಾರ ಜುಮಾ ನಮಾಜ್ ಮುಗಿದ ಬಳಿಕ ಮಸೀದಿಯ ಇಮಾಮರು ಹೀಗೆ ಪ್ರಕಟಣೆ ಹೊರಡಿಸಿದರು- ‘ಮಸೀದಿಯ ಬಾಗಿಲ ಬಳಿ ಉಸ್ತಾದರೊಬ್ಬರು (ಖತೀಬರು) ಬಟ್ಟೆ ಹಾಸಿ  ಕುಳಿತುಕೊಂಡಿದ್ದಾರೆ. ಅವರಿಗೆ ಮೂರು ಹೆಣ್ಣು ಮಕ್ಕಳು. ನಿಮ್ಮ ಕೈಲಾದ ನೆರವು ನೀಡಿ’. ಸಾಮಾನ್ಯವಾಗಿ, ‘ಬೇಡುವ ಸ್ಥಿತಿ ಯಾರಿಗೂ ನೀಡದಿರು ದೇವಾ’ ಎಂದು ಖತೀಬರು ಪ್ರಾರ್ಥಿಸುವುದು ರೂಢಿ.  ಹೀಗಿರುತ್ತಾ, ಹಾಗೆ ಪ್ರಾರ್ಥಿಸುವ ಖತೀಬರೇ ಬಾಗಿಲ ಬಳಿ ಬಟ್ಟೆ ಹಾಸಿ ಬೇಡಲು ಕುಳಿತುದಕ್ಕೆ ಕಾರಣ ಏನು?”
ಭಾರತದ ಮಟ್ಟಿಗೆ ಕೇರಳ ಒಂದು ಅಚ್ಚರಿ. ಹಲವು ಪ್ರಥಮಗಳನ್ನು ತನ್ನದಾಗಿಸಿಕೊಂಡಿರುವ ರಾಜ್ಯ ಇದು. ಒಟ್ಟು 3.5 ಕೋಟಿ ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು ಶೇ. 56, ಮುಸ್ಲಿಮರ ಪಾಲು ಶೇ.  25 ಮತ್ತು ಕ್ರೈಸ್ತರದ್ದು ಶೇ. 19. ಭಾರತದ ಉಳಿದ ಭಾಗಗಳಲ್ಲಿರುವ ಜನಸಾಂದ್ರತೆಗೆ ಹೋಲಿಸಿದರೆ ಕೇರಳದ ಜನಸಾಂದ್ರತೆ 3 ಪಟ್ಟು ಹೆಚ್ಚು. ಪ್ರತಿ ಚದರ ಮೈಲಿಗೆ ಜನಸಾಂದ್ರತೆಯ ಪ್ರಮಾಣ 2,200  ಅಥವಾ ಪ್ರತಿ ಚದರ ಕಿಲೋಮೀಟರ್ ಗೆ ಜನಸಾಂದ್ರತೆಯ ಮಟ್ಟ 860. ದೇಶದ ಇನ್ನಾವ ಕಡೆಯೂ ಈ ಮಟ್ಟದ ಜನದಟ್ಟಣೆಯಿಲ್ಲ. ಭಾರತದ ರಾಜ್ಯಗಳ ಪೈಕಿ ಅತಿ ಸಣ್ಣ ರಾಜ್ಯಗಳಲ್ಲಿ ಒಂದಾಗಿರುವ  ಕೇರಳವು ದೇಶದ ಜಿಡಿಪಿಗೆ ಅತಿ ಮಹತ್ವದ ಕೊಡುಗೆಯನ್ನು ನೀಡುತ್ತಿದೆ. ಭಾರತದ ಒಟ್ಟು ಮಾನವ ಅಭಿವೃದ್ಧಿ ಸೂಚ್ಯಂಕವು ಏನಿದೆಯೋ ಅದಕ್ಕಿಂತ ಕೇರಳದ ಮಾನವ ಅಭಿವೃದ್ಧಿ ಸೂಚ್ಯಂಕವು ಬಹಳ  ಮುಂದಿದೆ. ಅದರ ಪ್ರಮಾಣ 0.79. ಕೇರಳದ ಸಾಕ್ಷರತೆಯ ಪ್ರಮಾಣ ಶೇ. 98.9. ಕೇರಳಿಗರ ಸರಾಸರಿ ಆಯುಷ್ಯ 74 ವರ್ಷ. ಭಾರತದ ಇತರ ಭಾಗಗಳಿಗೆ ಹೋಲಿಸಿದರೆ ಇವೆಲ್ಲ ತುಂಬಾ ತುಂಬಾ  ಹೆಚ್ಚು. ಅಲ್ಲದೇ, ಇನ್ನೊಂದು ಅಚ್ಚರಿಯ ಅಂಕಿಅಂಶವೂ ಇದೆ. ಅದೇನೆಂದರೆ, ಬಡತನದ ಸೂಚ್ಯಂಕ. ಕೇರಳದ ಗ್ರಾಮೀಣ ಭಾಗದಲ್ಲಿ ಬಡತನದ ಸೂಚ್ಯಂಕವು 1970ರಲ್ಲಿ 59% ಇದ್ದರೆ 2010ರ ವೇಳೆಗೆ  ಇದು ಕೇವಲ 12%ಕ್ಕೆ ಇಳಿದಿತ್ತು. ವಿಶೇಷ ಏನೆಂದರೆ, 1970 ಮತ್ತು 2010ರ ನಡುವೆ ಕೇರಳದ ಬಡತನ ಸೂಚ್ಯಂಕದಲ್ಲಿ 47%ದಷ್ಟು ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದ್ದರೆ ಅದೇ ಅವಧಿಯಲ್ಲಿ ಭಾರತದ  ಇತರ ರಾಜ್ಯಗಳ ಗ್ರಾಮೀಣ ಭಾಗದಲ್ಲಿ ಬಡತನ ಸೂಚ್ಯಂಕದಲ್ಲಿ ಆದ ಇಳಿಕೆ ಕೇವಲ 29%. ಅಂದಹಾಗೆ,
ಭಾರತ ಮತ್ತು ಕೇರಳದ ನಡುವೆ ಆಯುಷ್ಯ, ಆರೋಗ್ಯ, ಸಾಕ್ಷರತೆ, ಆದಾಯ ಇತ್ಯಾದಿ ಇತ್ಯಾದಿಗಳಲ್ಲಿ ಭಾರೀ ಪ್ರಮಾಣದಲ್ಲಿ ಅಂತರ ಉಂಟಾಗಿರುವುದಕ್ಕೆ ಬಹಳ ಮುಖ್ಯ ಕಾರಣ ಏನೆಂದರೆ, ಗಲ್ಫ್  ಉದ್ಯೋಗ.
ಕೇರಳದ ಪ್ರತಿ ಹತ್ತರಲ್ಲಿ ಓರ್ವ ವ್ಯಕ್ತಿ ವಿದೇಶದಲ್ಲಿ ದುಡಿಯುತ್ತಿದ್ದಾರೆ ಎಂಬ ಅಂದಾಜಿದೆ. ಅಂದರೆ, ಸುಮಾರು 35 ಲಕ್ಷ ಮಂದಿ. ಇವರಲ್ಲಿ ಸುಮಾರು 90% ಮಂದಿಯೂ ಯುಎಇ, ಸೌದಿ ಅರೇಬಿಯಾ,  ಕುವೈತ್, ಕತರ್, ಒಮನ್, ಬಹ್ರೈನ್‍ಗಳಲ್ಲಿ ದುಡಿಯುತ್ತಿದ್ದಾರೆ. ಪ್ರತಿದಿನ ಸುಮಾರು 200 ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತ ಕೇರಳಕ್ಕೆ ಈ ರಾಷ್ಟ್ರಗಳಿಂದ ಹರಿದು ಬರುತ್ತಿದೆ ಎಂಬ ಲೆಕ್ಕಾಚಾರವೂ  ಇದೆ. ಕೇವಲ 2013ರಲ್ಲೇ 70 ಬಿಲಿಯನ್ ಡಾಲರ್ ನ ಷ್ಟು ಮೊತ್ತವನ್ನು ಗಲ್ಫ್ ಉದ್ಯೋಗಿಗಳು ಕೇರಳಕ್ಕೆ ಕಳುಹಿಸಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. 21ನೇ ಶತಮಾನದ ಆರಂಭದಿಂದ ಇಂದಿನವರೆಗೆ 60  ಟ್ರಿಲಿಯನ್ ರೂಪಾಯಿಯನ್ನು ಗಲ್ಫ್ ರಾಷ್ಟ್ರಗಳ ಉದ್ಯೋಗಿಗಳು ಕೇರಳಕ್ಕೆ ಕಳುಹಿಸಿಕೊಟ್ಟಿದ್ದಾರೆ. ಈ ಹಣದಲ್ಲಿ ಕೇರಳದ ಮುಸ್ಲಿಮರ ಪಾಲು ಬಹಳ ದೊಡ್ಡದು. ಕೇರಳದ ಒಟ್ಟು ಜನಸಂಖ್ಯೆಯ ಕಾಲಂಶದಷ್ಟಿರುವ ಈ ಮುಸ್ಲಿಮರು ಭಾರತದ ಇತರ ಭಾಗದಲ್ಲಿರುವ ಮುಸ್ಲಿಮರಿಗಿಂತ ಹೆಚ್ಚು ಶ್ರೀಮಂತರು, ಸ್ಥಿತಿವಂತರು, ಅಕ್ಷರಸ್ಥರು ಮತ್ತು ಆರೋಗ್ಯವಂತರು ಕೂಡ. ವಿಚಿತ್ರ ಏನೆಂದರೆ, ಅಮೇರಿಕ,  ಬ್ರಿಟನ್‍ನಂಥ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಕೇರಳೀಯರಲ್ಲಿ ಹೆಚ್ಚಿನವರು ಕೇರಳದಲ್ಲಿರುವ ತಮ್ಮ ಜಮೀನು-ಆಸ್ತಿಪಾಸ್ತಿಗಳನ್ನು ಮಾರಿ ಹಣವನ್ನು ವಿದೇಶಕ್ಕೆ ತರಿಸಿಕೊಂಡು ಅಲ್ಲೇ ಖಾಯಂ ಆಗಿ  ವಾಸಿಸಲು ಮುಂದಾಗುತ್ತಿರುವಾಗ ಗಲ್ಫ್ ನಲ್ಲಿ ದುಡಿಯುತ್ತಿರುವ ಕೇರಳಿಗರು ಮಾತ್ರ ಅಲ್ಲೇ ನೆಲೆಸುವುದನ್ನು ಇಷ್ಟಪಡದೇ ಹಣವನ್ನೆಲ್ಲ ಊರಿಗೆ ಕಳುಹಿಸುತ್ತಿದ್ದಾರೆ ಎಂಬುದು. ಪ್ರಶ್ನೆ ಇರುವುದೂ ಇಲ್ಲೇ.  ಹೀಗೆ ಕಳುಹಿಸಲಾಗುವ ಹಣ ಎಲ್ಲಿಗೆ ಹೋಗುತ್ತದೆ? ಯಾವುದಕ್ಕೆ ಬಳಕೆಯಾಗುತ್ತದೆ? ಕೇರಳದ ರಾಜರಸ್ತೆಗಳಲ್ಲಿ ಸಾಗುವಾಗ ರಸ್ತೆಯ ಎರಡೂ ಬದಿಗಳಲ್ಲಿ ಎದುರಾಗುವ ಬಂಗಲೆಗಳು, ಮಹಲುಗಳು,  ಚಿನ್ನದಂಗಡಿಗಳು, ಬಹುಮಹಡಿ ಕಟ್ಟಡಗಳು ಇತ್ಯಾದಿಗಳಿಗೆಲ್ಲ ಸುರಿದಿರುವ ಕೋಟಿಗಳೆಷ್ಟಿರಬಹುದು? ಈ ಪ್ರಶ್ನೆಯನ್ನು ಕರ್ನಾಟಕದ ಮುಸ್ಲಿಮರಿಗೆ ಸಂಬಂಧಿಸಿಯೂ ಕೇಳಬಹುದು. ಕರಾವಳಿ ಕರ್ನಾಟಕದ ಮುಸ್ಲಿಮರಿಗೆ ಸಂಬಂಧಿಸಿಯೂ ಕೇಳಬಹುದು. ಪ್ರತಿದಿನ 200 ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತ ಕೇರಳಕ್ಕೆ ಹರಿದು ಬರುತ್ತದೆಂದಾದರೆ, ಆ ಮೊತ್ತ ಕರಗುವುದೆಲ್ಲಿ? ಈ ಬೃಹತ್  ಮೊತ್ತವನ್ನು ನಿರ್ಮಾಣಾತ್ಮಕ ಕೆಲಸಗಳಲ್ಲಿ ಹೂಡಿಕೆಯಾಗುವಂತೆ ಮಾಡಲು ಮುಸ್ಲಿಮ್ ಸಮುದಾಯ ಯಾಕೆ ಯಾವ ನೀಲ ನಕ್ಷೆಯನ್ನೂ ರೂಪಿಸಿಲ್ಲ? ಒಂದುವೇಳೆ, ರೂಪಿಸಿರುತ್ತಿದ್ದರೆ, ಕೇರಳದ  ಯುವ ಸಮೂಹದ ಇಂದಿನ ನಿರುದ್ಯೋಗ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಿತ್ತಲ್ಲವೇ? ಗಲ್ಫ್ ಅನ್ನುವುದು ಬಸಿದಷ್ಟೂ ಬತ್ತದ ಸಮುದ್ರ ಏನಲ್ಲ. ಒಂದಲ್ಲ ಒಂದು ದಿನ ಅಲ್ಲಿನ  ಉದ್ಯೋಗಕ್ಕೆ ಕತ್ತರಿ ಬೀಳುವ ಎಲ್ಲ ಸಾಧ್ಯತೆಗಳೂ ಇವೆ. ಅಂಥದ್ದೊಂದು ಸ್ಥಿತಿಯನ್ನು ಎದುರಿಸಲು ಕೇರಳವನ್ನು ಎಚ್ಚರಗೊಳಿಸುವುದು ಯಾರ ಹೊಣೆ? ಯಾಕೆ ಆ ಹೊಣೆಗಾರಿಕೆಯನ್ನು ಮುಸ್ಲಿಮ್  ಸಮುದಾಯದ ಯಾರೂ ಮುಖ್ಯ ಅಜೆಂಡಾವಾಗಿ ಎತ್ತಿಕೊಂಡಿಲ್ಲ? ಅಂದಹಾಗೆ,
ಗಲ್ಫ್ ನ ಉದ್ಯೋಗಕ್ಕೆ ಕತ್ತರಿ ಬಿದ್ದರೆ ಮಹಲುಗಳು ಯಾವ ಆದಾಯವನ್ನೂ ಕೊಡವು. ಐಶಾರಾಮಿ ಆಸ್ಪತ್ರೆಗಳಿಗೆ ವ್ಯಯಿಸಿದ ಹಣದಲ್ಲಿ ಒಂದು ನಯಾ ಪೈಸೆಯೂ ಮರಳಿ ಬಾರದು. ಕಾರುಗಳು,  ಬೈಕ್‍ಗಳು ಮತ್ತಿತರ ವಾಹನಗಳಿಂದ ಯಾವ ಹುಟ್ಟುವಳಿಯೂ ಆಗದು. ಅವೆಲ್ಲ ಉತ್ಪಾದನಾ ರಹಿತ ಹೂಡಿಕೆಗಳು. ಹೀಗೆ ಅನುತ್ಪಾದಕದ ಕ್ಷೇತ್ರದಲ್ಲಿ ಆಗುತ್ತಿರುವ ಭಾರೀ ಪ್ರಮಾಣದ ಹೂಡಿಕೆಯನ್ನು  ನಿಲ್ಲಿಸಿ ಅವುಗಳ ಬದಲು ಕೈಗಾರಿಕೆ, ಕೃಷಿ, ಉದ್ಯಮಗಳಲ್ಲಿ ಹೂಡಿಕೆಯಾಗುವಂತೆ ಮಾರ್ಗದರ್ಶನ ಮಾಡುವ ಪ್ರಯತ್ನಗಳು ಮುಸ್ಲಿಮ್ ಸಮುದಾಯದಿಂದ ವ್ಯವಸ್ಥಿತವಾಗಿ ನಡೆದಿರುತ್ತಿದ್ದರೆ ಗಲ್ಫ್ ನಲ್ಲಿ  ಉದ್ಯೋಗಕ್ಕೆ ಕತ್ತರಿ ಬಿದ್ದರೂ ಚಿಂತಿಸುವ ಅಗತ್ಯವಿರಲಿಲ್ಲ. ಯುವ ತಲೆಮಾರು ಗಲ್ಫ್ ನ ಕಡೆಗೆ ತಲೆ ಹಾಕಿ ಮಲಗಬೇಕಾದ ಅಗತ್ಯವೂ ಇರಲಿಲ್ಲ. ಹೀಗಾಗಿರುತ್ತಿದ್ದರೆ, ಕೇರಳೀಯರಿಗೆ ದೊಡ್ಡ ಪ್ರಮಾಣದಲ್ಲಿ  ಉದ್ಯೋಗ ಕೊಟ್ಟ ಸಂತೃಪ್ತಿಯೊಂದಿಗೆ ಗಲ್ಫ್ ನಿಂದ ಮರಳಿ ಬರುವ ಒಂದು ಅವಕಾಶ ಅನಿವಾಸಿ ಕೇರಳೀಯರಿಗೆ ಖಂಡಿತ ಇತ್ತು. ಈಗಲೂ ಇದೆ. ಆದರೆ,
ಇದು ಯಶಸ್ವಿಯಾಗಬೇಕಾದರೆ ಮುಸ್ಲಿಮ್ ಸಮುದಾಯ ನೀಲನಕ್ಷೆಯನ್ನು ತಕ್ಷಣ ರೂಪಿಸಬೇಕಿದೆ. ಮನೆ, ಕಾರು, ಆಸ್ಪತ್ರೆ ಗಳಿಗೆ ಅತಿಯಾಗಿ ಖರ್ಚು ಮಾಡದಂತೆ ಮತ್ತು ನಿರ್ಮಾಣಾತ್ಮಕ ಕೆಲಸಗಳಲ್ಲಿ  ಹೂಡಿಕೆ ಮಾಡುವಂತೆ ಜಾಗೃತಿ ಕೆಲಸಗಳನ್ನು ನಡೆಸಬೇಕಾಗಿದೆ. ಹೈನುಗಾರಿಕೆ, ಕೃಷಿ, ಕೈಗಾರಿಕೆ ಮತ್ತಿತರ ಕ್ಷೇತ್ರಗಳಲ್ಲಿ ಹೇಗೆಲ್ಲ ಹೂಡಿಕೆ ಮಾಡಬಹುದು ಮತ್ತು ಯಾವ ಕ್ಷೇತ್ರ ಹೂಡಿಕೆ ಸ್ನೇಹಿಯಾಗಿದೆ ಎಂಬ ಬಗ್ಗೆ ಗಲ್ಫ್ ಉದ್ಯೋಗಿಗಳಿಗೆ ಮನದಟ್ಟು ಮಾಡುವ ಅಭಿಯಾನಗಳು ನಡೆಯಬೇಕಾಗಿದೆ. ನಿಜವಾಗಿ,
ಕೇರಳಿಗರಿಗಷ್ಟೇ ಅಲ್ಲ, ಕೇರಳದ ಹೊರಗಿನ ಭಾರತೀಯರಿಗೂ ಉದ್ಯೋಗ ನೀಡುವಷ್ಟು ಬೃಹತ್ ಪ್ರಮಾಣದ ಉದ್ಯೋಗ ಸೃಷ್ಟಿಗೆ ಹೆಸರಾಗಬೇಕಿದ್ದ ಮತ್ತು ಹಲವು ಯಶಸ್ವಿ ಮುಸ್ಲಿಮ್ ಉದ್ಯಮಿಗಳನ್ನು  ದೇಶಕ್ಕೆ ಕೊಡುಗೆಯಾಗಿ ನೀಡಬೇಕಿದ್ದ ಕೇರಳವು ಈ ವಿಷಯದಲ್ಲಿ ದಯನೀಯ ವೈಫಲ್ಯ ಕಂಡಿರುವುದಕ್ಕೆ ಕಾರಣ- ಕೇವಲ ಗಲ್ಫ್ ಉದ್ಯೋಗಿಗಳಷ್ಟೇ ಅಲ್ಲ, ಅವರಿಗೆ ಸೂಕ್ತ ಮಾರ್ಗದರ್ಶನ ಮಾಡದ  ಮತ್ತು ನಿರ್ಮಾಣಾತ್ಮಕ ಸಲಹೆಗಳನ್ನು ನೀಡುವಲ್ಲಿ ವಿಫಲವಾದ ಮುಸ್ಲಿಮ್ ಸಮುದಾಯದ ಸಂಘ-ಸಂಸ್ಥೆಗಳೂ ಅಷ್ಟೇ ಕಾರಣ. ಅಷ್ಟಕ್ಕೂ,
ಈ ಬಗೆಯ ವೈಫಲ್ಯ ಕೇವಲ ಗಲ್ಫ್ ಉದ್ಯೋಗಿಗಳಿಗೆ ಸಂಬಂಧಿಸಿ ಮಾತ್ರ ಇರುವುದಲ್ಲ. ಕೇರಳ-ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಇರುವ ಮದ್ರಸ-ದರ್ಸ್ ಅಥವಾ ಮುಸ್ಲಿಮ್ ಧಾರ್ಮಿಕ ಶಿಕ್ಷಣ  ಕೇಂದ್ರಗಳೂ ದೊಡ್ಡ ಸಂಖ್ಯೆಯಲ್ಲಿ ಇಂಥ ಜನರ ಗುಂಪನ್ನು ಸಮಾಜಕ್ಕೆ ಅರ್ಪಿಸಿರುವುದನ್ನೂ ಇಷ್ಟೇ ಪ್ರಾಂಜಲ ಮನಸ್ಸಿನಿಂದ ನಾವು ಒಪ್ಪಿಕೊಳ್ಳಬೇಕಾಗಿದೆ. ಅಲ್ಲಿಂದ ಪಾರಂಗತರಾಗಿ ಬಂದವರು ಮಸೀದಿ-ಮದ್ರಸದ ಹೊರತು ಇನ್ನಾವ ಕ್ಷೇತ್ರಕ್ಕೂ ಸಲ್ಲದವರಾಗಿ ಮಾರ್ಪಟ್ಟು ಬಿಟ್ಟರು. ಅವರು ಉದ್ಯಮಿಗಳಾಗಲಿಲ್ಲ. ಸರಕಾರಿ ಉದ್ಯೋಗಿಗಳಾಗಲಿಲ್ಲ. ಖಾಸಗಿ ಕ್ಷೇತ್ರದ ಉದ್ಯೋಗಕ್ಕೆ ಬೇಕಾದ ಅರ್ಹತೆಗಳಿರಲಿಲ್ಲ. ಅರಬಿ ಭಾಷೆಯ ಹೊರತಾಗಿ ಇತರ ಭಾಷೆಗಳ ಮೇಲೆ ಹಿಡಿತ ಸಾಧಿಸುವ ಶಿಕ್ಷಣ ಲಭಿಸಲಿಲ್ಲ. ಸಾಹಿತಿಗಳಾಗಲಿಲ್ಲ. ವಿಜ್ಞಾನಿಗಳೂ ಇಂಜಿನಿಯರ್ ಗಳೂ ಆಗಲಿಲ್ಲ. ‘ಅವರು ಉಸ್ತಾದರೂ ಹೌದು, ವಿಜ್ಞಾನಿಯೂ ಹೌದು; ಅವರು ಉಸ್ತಾದರೂ ಹೌದು, ಯಶಸ್ವಿ ಉದ್ಯಮಿಯೂ ಹೌದು; ಅವರು ಉಸ್ತಾದರೂ ಹೌದು, ಇಂಜಿನಿಯರೂ ಹೌದು; ಅವರು ಉಸ್ತಾದರೂ ಹೌದು, ಶಿಕ್ಷಣ ತಜ್ಞರೂ ಹೌದು, ಸಾಹಿತಿಯೂ ಹೌದು; ಐಪಿಎಸ್, ಐಎಎಸ್ ಕೂಡಾ ಹೌದು..’ ಹೀಗೆ ಹೇಳಬಹುದಾದ ಯಾವ ವಾತಾವರಣವೂ ನಿರ್ಮಾಣವಾಗಲಿಲ್ಲ. ಮುಸ್ಲಿಮ್ ಧಾರ್ಮಿಕ ಶಿಕ್ಷಣ ಕೇಂದ್ರಗಳು (ದರ್ಸ್-ಮದ್ರಸ) ಬರೇ ಮಸೀದಿ-ಮದ್ರಸವನ್ನು ನೋಡಿಕೊಳ್ಳುವ ಜನರ ಗುಂಪನ್ನು ಉತ್ಪಾದಿಸಬಲ್ಲವೇ ಹೊರತು ನಿರ್ಮಾಣಾತ್ಮಕ ಕ್ಷೇತ್ರಕ್ಕೆ ಅಲ್ಲಿನ ಕೊಡುಗೆ ಶೂನ್ಯ ಅನ್ನುವ ಸ್ಥಿತಿ ನಿರ್ಮಾಣವಾಯಿತು. ಇದರಿಂದಾಗಿ ಅವರು ಕಲಿಸುವ ಮದ್ರಸ ಶಿಕ್ಷಣಗಳು ಜಡವಾದುವು. ಶಾಲೆಗೆ ತೆರಳಿ ಸಂಜೆಯೋ ಬೆಳಿಗ್ಗೆಯೋ ಮದ್ರಸಕ್ಕೆ ಹೋಗುವ ಮಗುವಿನ ಪ್ರಶ್ನೆಗಳನ್ನು ಅವರು ಬಂಡಾಯದಂತೆ ಕಂಡರು. ಶಾಲೆಯಲ್ಲಿ ಆಧುನಿಕ ಶಿಕ್ಷಣವನ್ನು ಪಡೆದು ಮದ್ರಸಕ್ಕೆ ಬರುತ್ತಿರುವ ಮಗು ಮತ್ತು ಆ ಶಿಕ್ಷಣವನ್ನೇ ಪಡೆಯದ ಮದ್ರಸ ಅಧ್ಯಾಪಕರು- ಈ ಎರಡರ ಮುಖಾಮುಖಿಯು ಯಾವೆಲ್ಲ ಸಮಸ್ಯೆಗಳನ್ನು ಸೃಷ್ಟಿಸಬಹುದೋ ಅವೆಲ್ಲವನ್ನೂ ಸೃಷ್ಟಿಸಿತು. ಶಿಕ್ಷಣ ಕ್ಷೇತ್ರದಲ್ಲಿ ಲೌಕಿಕ ಮತ್ತು ಧಾರ್ಮಿಕ ಎಂಬ ವಿಭಜನೆಗೆ ಅದು ಕಾರಣವಾಗಿ, ಕೊನೆಗೆ ಚೇತನವಿಲ್ಲದ ಧಾರ್ಮಿಕ ಶಿಕ್ಷಣದ ಮೇಲೆ ಲೌಕಿಕ ಶಿಕ್ಷಣದ ಸವಾರಿಗೂ ಅದು ಕಾರಣವಾಯಿತು. ನಿಜವಾಗಿ,
ಹನೀಫ್ ಪುತ್ತೂರು ಎತ್ತಿದ ಪ್ರಶ್ನೆಗೆ ಬಹುಶಃ ಇಲ್ಲೆಲ್ಲೋ ಉತ್ತರ ಇರಬೇಕು. ಹನೀಫರು ಉಲ್ಲೇಖಿಸಿದ ಆ ಖತೀಬರು ಮಸೀದಿಯ ಬಾಗಿಲಲ್ಲಿ ಬಟ್ಟೆ ಹಾಸಿರುವುದಕ್ಕೆ ಕಾರಣ ಅವರಲ್ಲ. ಮುಸ್ಲಿಮ್ ಸಮುದಾಯದ ಅನುತ್ಪಾದಕ ಶೈಕ್ಷಣಿಕ ನೀತಿಯೇ ಇಲ್ಲಿ ಬಹುದೊಡ್ಡ ಅಪರಾಧಿ. ಖತೀಬರು ಅದರ ಉತ್ಪನ್ನ ಅಷ್ಟೇ. ಹಾಗಂತ,
ಇಂದಿನ ಸ್ಥಿತಿ ಹಾಗಿಲ್ಲ. ಧಾರ್ಮಿಕ ಮತ್ತು ಲೌಕಿಕ ಶಿಕ್ಷಣವನ್ನು ಉನ್ನತ ಮಟ್ಟದಲ್ಲಿ ಪಡೆದ ಹಾಗೂ ಮಸೀದಿ-ಮದ್ರಸಗಳ ಹೊರತಾಗಿ ಇತರ ಕ್ಷೇತ್ರಗಳಲ್ಲೂ ಯಶಸ್ವಿಯಾಗಿ ತೊಡಗಿಸಿಕೊಂಡ ದೊಡ್ಡ ಸಂಖ್ಯೆಯ ವಿದ್ವಾಂಸರಿದ್ದಾರೆ. ಭಾಷಣ-ಬರಹಗಳ ಮೂಲಕ ಅವರು ಸಮುದಾಯವನ್ನು ಎಚ್ಚರಿಸುತ್ತಿದ್ದಾರೆ. ಇವರಿಗೆ ಅಭಿನಂದನೆಗಳು. ಮುಸ್ಲಿಮ್ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಇವರು ಮಾರ್ಗದರ್ಶನ ಮಾಡಲಿ. ನೀಲನಕಾಶೆ ರೂಪಿಸಲಿ. ಬೇಡುವ ಖತೀಬರು ಮತ್ತು ಅನುತ್ಪಾದಕ ಹಣವಂತರು ನಿರ್ಮಾಣವಾಗದಂತೆ ನೋಡಿಕೊಳ್ಳಲಿ.

Wednesday, October 16, 2019

ಮಕ್ಕಳು ಮುದುಡಿ ಮಲಗಿದ್ದುವು, ಮನೆ ಸೋರುತ್ತಿತ್ತು...ಕೆರೋಲಿನ್ ವಿಲ್ಲೋ 
ಜಾನ್ ವೇವರ್
ಮಿಚೆಲ್ ಮೆಕ್‍ಶಿ
ರೋನಿ ಅಲ್ಫಾಂಡರಿ
ಡೀನ್ ಮ್ಯಾಥ್ಯೂ
ಟೆಗಾನ್ ಬ್ರಾಝಿಮರ್
ಈ ಆರೂ ಮಂದಿ ರಾಜಕಾರಣಿಗಳಲ್ಲ, ಯೋಧರಲ್ಲ, ವಿಜ್ಞಾನಿಗಳಲ್ಲ, ಧರ್ಮಗುರುಗಳಲ್ಲ, ಶ್ರೀಮಂತರೂ ಅಲ್ಲ. 2016 ಮಾರ್ಚ್ 15ರ ತನ್ನ ಸಂಚಿಕೆಯಲ್ಲಿ ಬ್ರಿಟನ್ನಿನ ದ ಗಾರ್ಡಿಯನ್ ಪತ್ರಿಕೆಯು ಇವರ  ಮಾತುಗಳನ್ನು ಪ್ರಕಟಿಸಿತ್ತು. ಇವರೆಲ್ಲರ ಆಸಕ್ತಿಯ ಕ್ಷೇತ್ರ ಒಂದೇ- ಸಮಾಜ ಸೇವೆ. ‘ವಿಶ್ವ ಸಮಾಜ ಸೇವಾ ದಿನ’ದ ಹಿನ್ನೆಲೆಯಲ್ಲಿ ಬ್ರಿಟನ್‍ನಲ್ಲಿ ಇವರೆಲ್ಲರನ್ನೂ ಒಂದೇ ಕಡೆ ಸೇರಿಸಲಾಗಿತ್ತು ಮತ್ತು ಅ ನುಭವಗಳನ್ನು ಹಂಚಿ ಕೊಳ್ಳುವುದಕ್ಕೆ ವೇದಿಕೆಯನ್ನು ಒದಗಿಸಲಾಗಿತ್ತು. ಬ್ರಿಟನ್, ಅಮೇರಿಕ, ನ್ಯೂಝಿಲ್ಯಾಂಡ್, ಇಸ್ರೇಲ್, ಆಸ್ಟ್ರೇಲಿಯಾ ಮುಂತಾದ ರಾಷ್ಟ್ರಗಳಲ್ಲಿ ಚದುರಿ ಹೋಗಿರುವ ಇವರೆಲ್ಲ ಈ  ಸಮಾಜವನ್ನು ಸಹಜವಾಗಿ ನೋಡುವುದಿಲ್ಲ. ಆರಾಮವಾಗಿ ತಿಂದುಂಡು ಬದುಕುವ ಅವಕಾಶ ಇದ್ದೂ ಹೀಗೆ ತಿಂದುಂಡು ಬದುಕಲಾಗದ ಮನು ಷ್ಯರ ಬಗ್ಗೆ ಇವರು ಆಲೋಚಿಸುತ್ತಿರುತ್ತಾರೆ. 14  ವರ್ಷದವಳಿದ್ದಾಗಲೇ ಕೆರೋಲಿನ್ ವಿಲ್ಲೋ ಅವರು ತಾನು ಏನು ಆಗಬೇಕೆಂಬುದನ್ನು ನಿರ್ಧರಿಸಿದ್ದರಂತೆ.
1. ಪತ್ರಕರ್ತ
2. ನಟಿ
3. ಸಮಾಜ ಸೇವಕಿ
ಕೇವಲ 22 ವರ್ಷದಲ್ಲೇ ಅವರು ಸಮಾಜ ಸೇವೆಯನ್ನು ಆಯ್ಕೆ ಮಾಡಿಕೊಂಡರು. ತನ್ನ ಮನಸ್ಸಿನಿಂದ ನಟಿ ಮತ್ತು ಪತ್ರಕರ್ತೆಯನ್ನು ಹೊರಹಾಕಿದರು. ಹಾಗಂತ, ಇವರು ಪ್ರತಿನಿಧಿಸುವ ರಾಷ್ಟ್ರಗಳೇನೂ ಬಡವ ಅಲ್ಲ. ಬ್ರಿಟನ್, ಅಮೇರಿಕ, ಇಸ್ರೇಲ್, ನ್ಯೂಝಿಲ್ಯಾಂಡ್, ಅಸ್ಟ್ರೇಲಿಯಾ- ಇವೆಲ್ಲ ವಿಶ್ವ ರಾಷ್ಟ್ರಗಳ ಭೂಪಟದಲ್ಲಿ ಎತ್ತರದ ಸ್ಥಾನದಲ್ಲಿ ಇರುವಂಥವು. ಬಡತನವನ್ನು ಮೆಟ್ಟಿ ನಿಂತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಹೆಸರು ನಮೂದಿಸಿಕೊಂಡಿರುವ ರಾಷ್ಟ್ರಗಳಿವು. ಆದರೂ ಅಶಕ್ತರು, ಬಡವರು, ಇನ್ನೊಬ್ಬರನ್ನು ಅವಲಂಬಿಸಿ ಬದುಕಬೇಕಾದವರು ಈ ರಾಷ್ಟ್ರಗಳಲ್ಲೂ ಧಾರಾಳ ಇದ್ದಾರೆ.  ಸರಕಾರದ ಯೋಜನೆಗಳೊಂದೇ ಎಲ್ಲದಕ್ಕೂ ಪರಿಹಾರ ಅಲ್ಲ. ಸಮಾಜವನ್ನು ಅಭಿವೃದ್ಧಿಗೊಳಿಸುವಲ್ಲಿ ಉದಾರ ಮನಸುಗಳು, ಸಮಾಜದ ಸೇವೆಗೈಯುವ ಹೃದಯಗಳ ಅಗತ್ಯ ಇರುತ್ತದೆ. ಈ ಮೇಲಿನ  6 ಮಂದಿಯೂ ಸಮಾಜ ಸೇವೆಯನ್ನು ತಮ್ಮ ಕಾರ್ಯಕ್ಷೇತ್ರವಾಗಿ ಆಯ್ದುಕೊಂಡಿರುವುದಕ್ಕೆ ಕಾರಣವೂ ಇದುವೇ.
ಇತ್ತೀಚೆಗೆ ನಾನು ಎರಡು ಕಾರ್ಯಕ್ರಮಗಳಲ್ಲಿ ಭಾಗಿಯಾದೆ. ಇದರಲ್ಲಿ ಒಂದು, ಹೊಸ ಮನೆಯ ಹಸ್ತಾಂತರ ಕಾರ್ಯಕ್ರಮವಾದರೆ ಇನ್ನೊಂದು, ಅಂಗಡಿಯೊಂದರ ಹಸ್ತಾಂತರ ಕಾರ್ಯಕ್ರಮ. ವಿಶೇಷ  ಏನೆಂದರೆ,
ಈ ಎರಡೂ ಕಾರ್ಯಕ್ರಮಗಳ ಫಲಾನುಭವಿಗಳು ಮಹಿಳೆಯರು. ಈ ಮನೆ ಹಸ್ತಾಂತರಕ್ಕಿಂತ ಕೆಲವು ಸಮಯಗಳ ಹಿಂದೆ ಗೆಳೆಯರ ಜೊತೆ ಬೆಳಿಗ್ಗೆ ಒಂದು ಮನೆಗೆ ನಾನು ಭೇಟಿ ಕೊಟ್ಟಿದ್ದೆ. ಮೆಲ್ಲಗೆ  ಮಳೆ ಸುರಿಯುತ್ತಿತ್ತು. ಆದರೆ ಆ ಮನೆ ಮಳೆಯನ್ನೂ ತಾಳಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. 10, 8 ಮತ್ತು 5ನೇ ಕ್ಲಾಸಿನಲ್ಲಿ ಕಲಿಯುತ್ತಿರುವ ಮಕ್ಕಳು (ಇವರಲ್ಲಿ ಎರಡನೆಯವಳು ಹೆಣ್ಣು) ಮಂಚದಂಥ ಒಂದು ರಚನೆಯಲ್ಲಿ  ಒಟ್ಟಿಗೆ ಮಲಗಿದ್ದರು. ಮೇಲಿನಿಂದ ಅವರ ಮೇಲೆಯೇ ನೀರು ಸೋರುತ್ತಿತ್ತು. ಹಾಗಂತ, ಅಲ್ಲಿಂದ ಎದ್ದು ಬೇರೆ ಕಡೆ ಮಲಗೋಣವೆಂದರೆ ಅಲ್ಲಿ ಸೂಕ್ತ ಜಾಗವೂ ಇಲ್ಲ. ಮಳೆ ನೀರು ಬೀಳುವಾಗ ಮತ್ತಷ್ಟು  ಮುದುಡಿ ಕೊಳ್ಳುವುದು ಮತ್ತು ಮಲಗುವುದು ಆ ಮಕ್ಕಳಿಗೆ ಅಭ್ಯಾಸ ಆದ ಹಾಗಿತ್ತು. ಪುಟ್ಟ ಬಲ್ಬೊಂದು ಉರಿಯುತ್ತಿತ್ತಾದರೂ ಕಪ್ಪು ಬಣ್ಣಕ್ಕೆ ತಿರುಗಿರುವ ಮನೆಯನ್ನು ಬೆಳಗಿಸುವುದಕ್ಕೆ ಅದರಿಂದ  ಸಾಧ್ಯವಿರಲಿಲ್ಲ. ಅಡುಗೆ ಕೋಣೆ, ಮಲಗುವ ಕೋಣೆ, ಬಟ್ಟೆಗಳನ್ನಿಡುವ ಜಾಗ, ಪಾತ್ರೆ-ಪಿಂಗಾಣಿಗಳನ್ನು ಎತ್ತಿಡುವ ಜಾಗ, ಒಲೆ, ಶೌಚಾಲಯಕ್ಕೆ ಇರುವ ಬಾಗಿಲು- ಯಾವುದಕ್ಕೂ ಪ್ರತ್ಯಪ್ರತ್ಯೇಕ ಅನ್ನುವ  ಜಾಗ ಇರಲಿಲ್ಲ. ಅವವೇ ಸ್ವತಃ ಜಾಗ ಮಾಡಿಕೊಂಡಂತೆ ಕಂಡಿತು. ಮನೆ ಅನ್ನುವಾಗ ನಮ್ಮಲ್ಲಿ ಯಾವ ದೃಶ್ಯ ಮೂಡುತ್ತದೋ ಆ ದೃಶ್ಯಕ್ಕೆ ಯಾವ ರೀತಿಯಲ್ಲೂ ಹೋಲಿಕೆ ಯಾಗದ ಮತ್ತು ಮನೆ ಅ ನ್ನುವ ಪದದೊಳಗೆ ಇರಲು ಒಪ್ಪದ ರಚನೆ ಅದು. ಒಂದಷ್ಟು ಭಾಗ ಟರ್ಪಾಲು ಹಾಸಿದೆ. ಆದರೆ ಮಳೆಯನ್ನು ಸಂಪೂರ್ಣವಾಗಿ ತಡೆದು ನಿಲ್ಲಿಸುವ ಸಾಮಥ್ರ್ಯ ಆ ಟರ್ಪಾಲ್‍ಗೂ ಇಲ್ಲ. ಇನ್ನು, ಮನೆಯ  ಗೋಡೆ ಮತ್ತು ನೆಲ ಸುಣ್ಣ ಬಣ್ಣ ಕಂಡಿಲ್ಲ. ಅಷ್ಟೇ ಅಲ್ಲ, ನೆಲವು ಮಣ್ಣಿನ ಹೊರತು ಬೇರೇನನ್ನೂ ನೋಡಿಲ್ಲ. ಬೆಳೆದು ನಿಂತ ಇಬ್ಬರು ಹೆಣ್ಣು ಮಕ್ಕಳು ಮತ್ತು ತಾಯಿ ಸಹಿತ ಈ ಮನೆಯಲ್ಲಿ 6 ಮಂದಿ  ಸದಸ್ಯರು. ಪುರುಷ ಇಲ್ಲ. ವಿಶೇಷ ಏನೆಂದರೆ, ಈ ಮನೆಯೂ ಬಾಡಿಗೆಯದ್ದು. ಪ್ರತಿ ತಿಂಗಳು ಬಾಡಿಗೆ ಮೊತ್ತವನ್ನು ಪಾವತಿಸುತ್ತಲೇ ಅವರು ಆ ಮನೆಯಲ್ಲಿ ಉಳಿದಿದ್ದಾರೆ. ಬೀಡಿ ಸುರುಟುವುದರ  ಹೊರತು ಬೇರೆ ಯಾವ ಆದಾಯ ಮೂಲವೂ ಆ ಮನೆಗಿಲ್ಲ. ಅಂದಹಾಗೆ,
ಇದು ಒಂದು ಉದಾಹರಣೆ ಅಷ್ಟೇ. ಹುಡುಕುವ ಕಣ್ಣು ನಿಮ್ಮದಾದರೆ ಇಂಥ ಅಸಂಖ್ಯ ಮನೆಗಳು ನಿಮಗೂ ಸಿಗಬಹುದು. ಹಾಗಂತ, ಅವರ ಆ ಸ್ಥಿತಿಗೆ ಯಾರು ಕಾರಣ ಅನ್ನುವ ಪ್ರಶ್ನೆಗೆ ಏಕರೂಪದ  ಉತ್ತರ ಲಭ್ಯವಾಗುವ ಸಾಧ್ಯತೆ ಕಡಿಮೆ. ಈ ಪ್ರಶ್ನೆಯನ್ನು ಆಲಿಸಿದ ವ್ಯಕ್ತಿಯ ಹುದ್ದೆ, ಜೀವನ ಕ್ರಮ, ಆಲೋಚನೆ, ಧಾರ್ಮಿಕ ಮತ್ತು ರಾಜಕೀಯ ಒಲವು ಇತ್ಯಾದಿಗಳನ್ನು ಉತ್ತರವು ಹೊಂದಿಕೊಂಡಿರುತ್ತದೆ.  ಅಷ್ಟಕ್ಕೂ, ಬಡತನವನ್ನು ಕತೆ, ಕಾದಂಬರಿ, ಕಾವ್ಯ, ನಾಟಕ, ಸಿನಿಮಾಗಳಲ್ಲಿ ರಮ್ಯವಾಗಿ ಕಟ್ಟಿ ಕೊಡುವುದು ಬೇರೆ, ಅದನ್ನು ಸ್ವತಃ ಅನುಭವಿಸುವುದು ಬೇರೆ. ಬಡತನದಲ್ಲೇ ಬದುಕಿ ಬಡತನದಲ್ಲೇ  ಸಾಯಬೇಕು ಅನ್ನುವ ಬಯಕೆ ಯಾರದ್ದೂ ಆಗಿರುವುದಿಲ್ಲ. ಯಾವುದೇ ಗುಡಿಸಲಿನ ವ್ಯಕ್ತಿಯು ತಾನು ಹೀಗೆಯೇ ಗುಡಿಸಲಿನಲ್ಲೇ ಸದಾ ಬದುಕುತ್ತಿರಬೇಕು ಎಂದು ಪ್ರಾರ್ಥಿಸುತ್ತಾ ದಿನ ದೂಡುವುದನ್ನು  ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಪ್ರತಿ ಮನೆಯೂ ಇಂದಿನಿಂದ ಉತ್ತಮ ನಾಳೆಯ ತಲಾಶೆಯಲ್ಲಿರುತ್ತದೆ. ಅದಕ್ಕಾಗಿ ಶ್ರಮ ಪಡುತ್ತದೆ. ಯಾವುದೇ ಶ್ರೀಮಂತ ಕುಟುಂಬವು ತನ್ನ ಕೌಟುಂಬಿಕ ಸ್ಥಿತಿಗತಿಯನ್ನು  ಉತ್ತಮ ಪಡಿಸಲು ಪ್ರಯತ್ನಿಸುತ್ತದೆಯೇ ಹೊರತು ಇಂದಿಗಿಂತ ತನ್ನ ನಾಳಿನ ಜೀವನ ದುರ್ಬರ ಆಗಿರಬೇಕು ಎಂದು ಬಯಸುವುದಿಲ್ಲ. ಅದರಲ್ಲೂ ಶ್ರೀಮಂತ ಕುಟುಂಬಗಳಲ್ಲಿ ಆರ್ಥಿಕ ಸ್ಥಿತಿಗತಿಗಳಲ್ಲಿ  ಆಗುವ ಸಣ್ಣ ಏರಿಳಿತಗಳೂ ಭಾರೀ ಅವಘಡಕ್ಕೆ ಕಾರಣವಾಗುತ್ತಿರುವುದೂ ಸುಳ್ಳಲ್ಲ. ಆರ್ಥಿಕ ಕುಸಿತವನ್ನು ತಡೆದುಕೊಳ್ಳಲಾಗದೇ ಸಾಮೂಹಿಕವಾಗಿ ಬದುಕು ಮುಗಿಸುವ ಘಟನೆಗಳು ಆಗಾಗ  ಸಂಭವಿಸುತ್ತಿರುವುದೇ ಇದಕ್ಕೆ ಪುರಾವೆ.
ಬಡವ ಮತ್ತು ಶ್ರೀಮಂತ ಎಂಬುದು ನಿಜವಾಗಿ ಸಮಾಜದ ಎರಡು ಧ್ರುವಗಳು. ಮನುಷ್ಯರು ಎಂಬ ಏಕೈಕ ಸಮಾನ ಅಂಶವನ್ನು ನಿರ್ಲಕ್ಷಿಸಿ ನೋಡಿದರೆ ಇವರಿಬ್ಬರ ನಡುವೆ ಅನೇಕ ಅಸಮಾನ ಅಂಶಗಳು ಬಾಹ್ಯನೋಟಕ್ಕೇ ಎದ್ದು ಕಾಣುತ್ತವೆ. ಅವರ ಮಾತಿನಲ್ಲಿ, ಹುದ್ದೆಯಲ್ಲಿ, ಉಡುಪಿನಲ್ಲಿ, ಪ್ರಯಾಣದಲ್ಲಿ, ಆಹಾರದಲ್ಲಿ, ಅವರು ತೆರಳುವ ಹೊಟೇಲಿನಲ್ಲಿ, ಪಾಲುಗೊಳ್ಳುವ ಕಾರ್ಯಕ್ರಮಗಳಲ್ಲಿ... ಹೀಗೆ  ಈ ಅಸಮಾನ ಅಂಶಗಳ ಪಟ್ಟಿ ದೀರ್ಘ ಇದೆ. ಬಡವ ಹೋಗುವ ಹೋಟೆಲೇ ಬೇರೆ, ಶ್ರೀಮಂತ ಹೋಗುವ ಹೋಟೆಲೇ ಬೇರೆ. ಮದುವೆಗೆ ಬಡವ ಉಡುವ ಉಡುಪೇ ಬೇರೆ, ಶ್ರೀಮಂತ ಉಡುವ ಉಡುಪೇ ಬೇರೆ.  ದುರಂತ ಏನೆಂದರೆ, ಅನೇಕ ಬಾರಿ ಬಾಹ್ಯ ನೋಟದ ಈ ಅಸಮಾನ ಅಂಶಗಳೇ ಪ್ರಾಮುಖ್ಯತೆಯನ್ನು ಪಡೆದುಕೊಂಡು ಬೌದ್ಧಿಕ ಮಟ್ಟವನ್ನು  ಅಳೆಯುವುದಕ್ಕೂ ಇವೇ ಅಳತೆಗೋಲಾಗಿ ಬಿಡುವುದೂ ಇದೆ. ಒಳ್ಳೆಯವರು ಮತ್ತು ಕೆಟ್ಟವರು ಎಂಬ ವಿಂಗಡನೆಗೂ ಬಾಹ್ಯನೋಟದ ಈ ವ್ಯತ್ಯಾಸವೇ ಮಾನದಂಡವಾಗಿರುವುದೂ ಇದೆ.
ಅಂದಹಾಗೆ, ‘ಬಡಕುಟುಂಬದ ಪ್ರತಿಭೆ’ ಎಂಬ ಪದಪ್ರಯೋಗವೊಂದು ನಮ್ಮಲ್ಲಿ ಇದೆ. ಬಡಕುಟುಂಬದಲ್ಲೂ ಪ್ರತಿಭೆಗಳಿವೆ ಅಥವಾ ಬಡತನವು ಪ್ರತಿಭೆಗೆ ಅಡ್ಡಿಯಾಗಿಲ್ಲ ಎಂಬುದನ್ನು ಸೂಚ್ಯವಾಗಿ  ತಿಳಿಸುವುದು ಈ ಪದಪ್ರಯೋಗದ ಉದ್ದೇಶವಾಗಿರಬಹುದಾದರೂ ‘ಪ್ರತಿಭೆಗಳೆಲ್ಲ ಶ್ರೀಮಂತ ಮನೆಯ ಸೊತ್ತಾಗಿ ಬಿಟ್ಟಿದೆ’ ಎಂಬ ಧ್ವನ್ಯಾರ್ಥವೂ ಈ ಪದಪ್ರಯೋಗಕ್ಕೆ ಇದೆ ಎಂಬುದೂ ಅಷ್ಟೇ ಸತ್ಯ.  ನಿಜವಾಗಿ, ಬಡತನವು ಅತ್ಯಂತ ಹಾನಿಯನ್ನುಂಟು ಮಾಡುವುದು ಆ ಮನೆಯ ಮಕ್ಕಳ ಮೇಲೆ. ಆ ಮಕ್ಕಳು ಪ್ರತಿಭಾ ಸಂಪನ್ನವಾಗಿದ್ದೂ ಆ ಪ್ರತಿಭೆಯನ್ನು ಪೋಷಿಸುವ ಸೂಕ್ತ ವಾತಾವರಣ ಆ ಮನೆಯಲ್ಲಿರುವುದಿಲ್ಲ. ಅನೇಕ ಬಾರಿ ಪ್ರತಿಭೆಯನ್ನು ಪೋಷಿಸಬೇಕು ಅನ್ನುವ ತಿಳು ವಳಿಕೆಯೇ ಮನೆಯವರಲ್ಲಿರುವುದಿಲ್ಲ. ಅಂಥ ಆಲೋಚನೆಗೆ ಬಿಡುವೂ ಇರುವುದಿಲ್ಲ. ಗುಣಮಟ್ಟದ ಶಿಕ್ಷಣ ಒದಗಿಸುವುದಕ್ಕೆ ಮತ್ತು  ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಪ್ರೋತ್ಸಾಹಿಸುವುದಕ್ಕೆ ಸಾಮರ್ಥ್ಯವಾಗಲಿ, ಉತ್ಸಾಹವಾಗಲಿ ಇರುವು ದಿಲ್ಲ. ಇಂಥ ಮನೆಗಳ ಮಕ್ಕಳ ಪ್ರಾಥಮಿಕ ಶಾಲೆಯ ಶಿಕ್ಷಣವು ಉನ್ನತ ಶಿಕ್ಷಣವಾಗಿ  ಪರಿವರ್ತಿತವಾಗುವುದು ಅನೇಕ ಬಾರಿ ಅಸಂಭವವಾಗುವ ಸಾಧ್ಯತೆಯೇ ಹೆಚ್ಚು. ಆದ್ದರಿಂದಲೇ, ಶ್ರೀಮಂತರ ಮನೆಯಲ್ಲಿ ಸೃಷ್ಟಿಯಾಗುವ ಪ್ರತಿಭೆಗಳಷ್ಟು ಧಾರಾಳವಾಗಿ ಬಡವರ ಮನೆಯಲ್ಲಿ ಪ್ರತಿಭೆಗಳು  ಸೃಷ್ಟಿಯಾಗುವುದಿಲ್ಲ.
ಈ ಸ್ಥಿತಿಯಲ್ಲಿ ಬದಲಾವಣೆ ಉಂಟಾಗಬೇಕಾದರೆ ‘ಸಮಾಜ ಸೇವೆ’ ಅನ್ನುವ ಪರಿಕಲ್ಪನೆಯು ಹೊಸ ದೃಶ್ಯರೂಪವಾಗಿ ಸಮಾಜದ ನಡುವೆ ಹರಿದಾಡಬೇಕಾದ ಅಗತ್ಯವಿದೆ. ಶ್ರೀಮಂತರು ಮತ್ತು ಬಡವರ  ನಡುವಿನ ಅನುಪಾತ ಬಹಳ ದೊಡ್ಡದು. ಶ್ರೀಮಂತರಿಗೆ ಹೋಲಿಸಿದರೆ ಬಡವರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಿದೆ. ಈ ಅಂತರ ತಗ್ಗಬೇಕು. ಸರ್ವರಿಗೂ ಗುಣಮಟ್ಟದ ಬದುಕು, ಗುಣಮಟ್ಟದ ಶಿಕ್ಷಣ  ಲಭ್ಯವಾಗಬೇಕು. ಹಾಗಂತ, ಆಶಯವೊಂದೇ ಈ ಬಯಕೆಯನ್ನು ಪೂರ್ತಿಗೊಳಿಸಲಾರದು. ಈ ವಿಷಯದಲ್ಲಿ ಸರಕಾರದ ಹೊಣೆಗಾರಿಕೆ ದೊಡ್ಡದಿದೆ ನಿಜ. ಆದರೆ, ಸರಕಾರವೊಂದೇ ಈ ಸ್ಥಿತಿಯಲ್ಲಿ  ಅಮೂಲಾಗ್ರ ಬದಲಾವಣೆಯನ್ನು ತರುತ್ತದೆ ಎಂಬ ನಿರೀಕ್ಷೆ ತಪ್ಪು. ಬಡವರ ಸ್ಥಿತಿಯು ಶ್ರೀಮಂತರ ಮನಸ್ಸನ್ನು ಕಲಕಿ ಬಿಡಲು ಯಶಸ್ವಿಯಾಗುವವರೆಗೆ ಈ ಸ್ಥಿತಿಯಲ್ಲಿ ದೊಡ್ಡ ಬದಲಾವಣೆ ಸಾಧ್ಯವಿಲ್ಲ.  ಸಮಾಜಸೇವೆ ಅನ್ನುವ ಪರಿಕಲ್ಪನೆಗೆ ಮಹತ್ವ ಬರುವುದು ಈ ಕಾರಣದಿಂದ. ಅಂದಹಾಗೆ, ಬಡವರಿಗೆ ನೆರವಾಗುವುದರಲ್ಲಿ ಎರಡು ರೀತಿಗಳಿವೆ.
1. ವೈಯಕ್ತಿಕವಾಗಿ ನೆರವಾಗುವುದು.
2. ಸಂಘಟಿತವಾಗಿದ್ದುಕೊಂಡು ನೆರವಾಗುವುದು.
ಶ್ರೀಮಂತರು ಬಡವರಿಗೆ ವೈಯಕ್ತಿಕ ನೆಲೆಯಲ್ಲಿ ನೆರವಾಗುವುದಕ್ಕೆ ಬಹಳ ಪುರಾತನ ಇತಿಹಾಸವಿದೆ. ತನ್ನ ಮನೆಯ ಪಕ್ಕದ ಅಥವಾ ತನ್ನ ಗಮನಕ್ಕೆ ಬಂದ ಬಡತನದ ಪ್ರಕರಣಗಳಿಗೆ ಸಂಬಂಧಿಸಿ  ಶ್ರೀಮಂತರು ವೈಯಕ್ತಿಕವಾಗಿ ನೆರವಾಗಿರುವ ಪ್ರಥಮ ಪ್ರಕರಣ ಯಾವಾಗ ಪ್ರಾರಂಭವಾಯಿತು ಎಂಬುದಕ್ಕೆ ನಿರ್ದಿಷ್ಟ ದಾಖಲೆಗಳು ಐತಿಹಾಸಿಕವಾಗಿ ಇಲ್ಲ. ಆದರೆ, 1869ರಲ್ಲಿ ಮೊಟ್ಟಮೊದಲ ಬಾರಿ ಸಮಾಜ ಸೇವೆಯನ್ನು ಸಂಘಟಿತ ರೂಪಕ್ಕೆ ತರುವ ಪ್ರಯತ್ನ ನಡೆಯಿತು ಎಂದು ದಾಖಲೆಗಳು ಹೇಳುತ್ತವೆ. ಬ್ರಿಟನ್ನಿನ ಹೆಲೆನ್ ಬೊಸಾ ನ್ಕೆಟ್ ಮತ್ತು ಅಕ್ಟೋವಿಯಾ ಹಿಲ್ ಅವರು ಸ್ಥಾಪಿಸಿದ ‘ಚಾರಿಟಿ ಆರ್ಗನೈಝೇ ಶನ್ ಸೊಸೈಟಿ’ಯು ಈ ನಿಟ್ಟಿನಲ್ಲಿ ಪ್ರಥಮ ಪ್ರಯೋಗವಾಗಿದೆ ಎಂದು ಹೇಳಲಾಗುತ್ತದೆ. ಬಡವರು, ಅವರ ಸಾಮಾಜಿಕ  ಅಗತ್ಯಗಳು ಹಾಗೂ ಅವರನ್ನು ಬಡತನದಿಂದ ಮೇಲೆ ತ್ತುವ ಬಗ್ಗೆ ವೈಜ್ಞಾನಿಕವಾಗಿ ಮತ್ತು ವ್ಯವಸ್ಥಿತವಾಗಿ ರೂಪುರೇಶೆಗಳನ್ನು ಸಿದ್ಧಪಡಿಸಿ ಕೆಲಸ ಮಾಡುವ ಸಂಘಟಿತ ಪ್ರಯತ್ನಗಳಲ್ಲಿ ‘ಚಾರಿಟಿ ಆರ್ಗ ನೈಝೇಶನ್ ಸೊಸೈಟಿ’ಯು ತೊಡಗಿಸಿಕೊಂಡಿತು ಎಂಬ ಅಭಿಪ್ರಾಯವಿದೆ.
ನಾನು ಭಾಗಿಯಾದ ಮನೆ ಹಸ್ತಾಂತರ ಕಾರ್ಯಕ್ರಮವು ಆರಂಭ ದಲ್ಲಿ ಉಲ್ಲೇಖಿಸಲಾದ ದುರ್ಬಲ ಮನೆಯವರಿಗೆ ಸಂಬಂಧಿಸಿದ್ದಾಗಿತ್ತು. ತಾಯಿ ಮತ್ತು 5 ಮಂದಿ ಮಕ್ಕಳಲ್ಲಿ ಹೊಸ ಭರವಸೆಯನ್ನು  ತುಂಬುವ ಕಾರ್ಯಕ್ರಮ ಅದಾಗಿತ್ತು. ಮನೆ ಹಸ್ತಾಂತರದ ವೇಳೆ ಅವರ ಕಣ್ಣಲ್ಲಿ ಮೂಡಿದ ಮಿಂಚು ಯಾವ ವಿದ್ಯುತ್ ಬೆಳಕಿಗೆ ಸರಿಗಟ್ಟದು. ಅವರ ಕಣ್ಣಿನ ಅಶ್ರುಧಾರೆಗೆ ಯಾವ ನೀರೂ ಸಾಟಿಯಾಗದು.  ಅಂಗಡಿ ಹಸ್ತಾಂತರ ಕಾರ್ಯಕ್ರಮವೂ ಇಂಥದ್ದೇ ಒಂದು ಪ್ರಯೋಗ. ನಾಲ್ವರು ಮಹಿಳೆಯರು ಮತ್ತು ಅವರ ಮಕ್ಕಳು ಮಾತ್ರ ಇರುವ ಕುಟುಂಬಕ್ಕೆ ಆದಾಯ ಮೂಲವಾಗಿ ಮನೆಯೆದುರೇ  ಅಂಗಡಿಯೊಂದನ್ನು ಕಟ್ಟಿಕೊಟ್ಟು ಬದುಕಿಗೆ ನೆರವಾದ ಸನ್ನಿವೇಶ. ಸಮಾಜ ಸೇವೆಯು ಸಂಘಟಿತ ಸ್ವರೂಪವನ್ನು ಪಡೆಯುವಾಗ ಆಗುವ ಬದಲಾವಣೆಗಳಿವು. ಅಂದಹಾಗೆ,
ಇವೆರಡನ್ನೂ ಸಾಧ್ಯವಾಗಿಸಿದ ಮಂಗಳೂರು ಜಮಾಅತೆ ಇಸ್ಲಾಮೀ ಹಿಂದ್‍ನ ಸಮಾಜ ಸೇವಾ ವಿಭಾಗಕ್ಕೆ ಕೃತಜ್ಞತೆಗಳು.

Tuesday, October 8, 2019

NRC, NRIC, NPR, CAB ಮತ್ತು ಭಾರತೀಯರ ಆತಂಕಗಳುNRC (ರಾಷ್ಟ್ರೀಯ ಪೌರತ್ವ ನೋಂದಣಿ)ಯ ಕುರಿತಂತೆ ಅಸಂಖ್ಯ ಮಂದಿಯಲ್ಲಿ ಗೊಂದಲವಿದೆ. ಹಾಗಂತ, ಈ ಗೊಂದಲ ಶೂನ್ಯದಿಂದ ಹುಟ್ಟಿಕೊಂಡದ್ದಲ್ಲ. ಈ ಗೊಂದಲಕ್ಕೆ ಒಂದಕ್ಕಿಂತ ಹೆಚ್ಚು ಕಾರಣಗಳೂ ಇವೆ.
1. ಅಸ್ಸಾಮ್‍ನಿಂದ ಕೇಳಿ ಬರುತ್ತಿರುವ ಸುದ್ದಿಗಳು. ದೇಶ ದಲ್ಲಿ ಸದ್ಯ NRC ಜಾರಿಯಲ್ಲಿರುವುದು ಅಸ್ಸಾಮ್‍ನಲ್ಲಿ ಮಾತ್ರ. 2019 ಆಗಸ್ಟ್ 1ರಂದು ಬಿಡುಗಡೆಗೊಂಡ NRC ಅಂತಿಮ ಕರಡು ಪಟ್ಟಿಯಲ್ಲಿ 19,06,857 ಮಂದಿಯನ್ನು ಭಾರತೀಯರಲ್ಲ  ಎಂದು ಘೋಷಿಸಲಾಗಿದೆ. ಈ ಪಟ್ಟಿಯ ಬಿಡುಗಡೆಗಿಂತ ಮೊದಲು ಮಾಧ್ಯಮಗಳಲ್ಲಿ ಪ್ರತಿದಿನವೆಂಬಂತೆ ಪ್ರಕಟವಾಗುತ್ತಿದ್ದ ಅಸ್ಸಾಮ್ ನಾಗರಿಕರ ಗೋಳಿನ ಸುದ್ದಿಗಳಿಗೂ ಕೂಡ ಈ ಗೊಂದಲದಲ್ಲಿ ಪಾತ್ರ ಇದೆ. ಭಾರತೀಯ ಸೇನೆಯಲ್ಲಿ ದುಡಿದವರು, ಮಾಜಿ ರಾಷ್ಟ್ರಪತಿಗಳ ಮೊಮ್ಮಕ್ಕಳು ಸಹಿತ ಅನೇಕ ಚಿರಪರಿಚಿತರು ತಮ್ಮ ನಾಗರಿಕತ್ವವನ್ನು ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂಬ ವರದಿಗಳು ಜನಸಾಮಾನ್ಯರಲ್ಲಿ ಸಹಜ ಆತಂಕವನ್ನು ಹುಟ್ಟು ಹಾಕಿದೆ. ತಮ್ಮನ್ನು ಭಾರತೀಯರೆಂದು ಸಾಬೀತು ಪಡಿಸಲು ಏನೆಲ್ಲ ದಾಖಲೆಗಳನ್ನು ಮಂಡಿಸಬೇಕು ಮತ್ತು ಈ ದಾಖಲೆಗಳಲ್ಲಿ ಸ್ಪೆಲ್ಲಿಂಗ್ (ಪದ) ವ್ಯತ್ಯಾಸವಿದ್ದರೆ ಅದು ತಮ್ಮನ್ನು ಅಭಾರತೀಯ ರೆಂದು ಕರೆದು ಹೊರಹಾಕುವುದಕ್ಕೆ ಆಧಾರವಾಗುತ್ತದೋ ಎಂಬುದೂ ಈ ಆತಂಕದಲ್ಲಿ ಸೇರಿಕೊಂಡಿದೆ.  ಉದಾಹರಣೆಗೆ ಜನನ ಸರ್ಟಿಫಿಕೇಟ್‍ನಲ್ಲಿ ಮುಹಮ್ಮದ್ ಎಂಬ ಹೆಸರನ್ನು Mohammad ಎಂದು ದಾಖಲಿಸಿದ್ದು, ಶಾಲಾ ಸರ್ಟಿಫಿಕೇಟ್‍ನಲ್ಲಿ Mahammad ಎಂದು ದಾಖಲಿಸಿದ್ದರೆ Mo ಮತ್ತು Ma ಗಳ ಈ ವ್ಯತ್ಯಾಸವು ಭಾರತೀಯ ಮತ್ತು  ಅಭಾರತೀಯಗೊಳಿಸುವುದಕ್ಕೆ ಕಾರಣ ಆಗಬಲ್ಲುದೋ ಅನ್ನುವ ಪ್ರಶ್ನೆ ಇದು. ಅಸ್ಸಾಮ್‍ನಲ್ಲಿ ನಾಗರಿಕರ ದಾಖಲೆಗಳನ್ನು ಪರಿಶೀಲಿಸಿ ಅವರು ಭಾರತೀಯರೋ ವಿದೇಶಿಗಳೋ ಎಂದು ತೀರ್ಮಾನಿಸಲು ನೇಮಕವಾಗಿರುವ ವಿದೇಶಿ ನ್ಯಾಯ ಮಂಡಳಿಯು (FT) ಇಂಥ ವ್ಯತ್ಯಾಸಗಳನ್ನು ಗಂಭೀರವಾಗಿ ಪರಿಗಣಿಸಿವೆ ಅನ್ನುವ ಸುದ್ದಿಗಳಿಗೂ ಈ ಆತಂಕದಲ್ಲಿ ಪಾಲು ಇದೆ.
2. NRC ಯನ್ನು ದೇಶದಾದ್ಯಂತ ಜಾರಿಗೊಳಿಸುತ್ತೇವೆ ಎಂಬ ಬಿಜೆಪಿಯ ಘೋಷಣೆ. 2019 ಸೆಪ್ಟೆಂಬರ್ 18ರಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಮತ್ತೊಮ್ಮೆ ಈ ಘೋಷಣೆಯನ್ನು ಮಾಡಿದ್ದಾರೆ. ಈ ಘೋಷಣೆಯ ತಕ್ಷಣದ ಪರಿಣಾಮವು  ಪಶ್ಚಿಮ ಬಂಗಾಲದಲ್ಲಿ ಈಗಾಗಲೇ ವ್ಯಕ್ತವಾಗಿದೆ. ತಮ್ಮ ದಾಖಲೆಗಳನ್ನು ಪಡೆದುಕೊಳ್ಳಲು ಮತ್ತು ಸರಿಪಡಿಸಲು ಜನರು ನೋಂದಣಿ ಕೇಂದ್ರಗಳ ಮುಂದೆ ಸರತಿಯಲ್ಲಿ ನಿಂತಿದ್ದಾರೆ. ನಾಲ್ಕೈದು ಮಂದಿಯ ಸಾವೂ ಸಂಭವಿಸಿದೆ.
3. ಪೌರತ್ವ ತಿದ್ದುಪಡಿ ಮಸೂದೆ (CAB). ಈ ಮಸೂದೆಯ ಪ್ರಕಾರ ಧಾರ್ಮಿಕ ಹಿಂಸೆಗೆ ತುತ್ತಾಗಿ ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬಂದ ಹಿಂದೂ, ಕ್ರೈಸ್ತ, ಬೌದ್ಧ, ಜೈನ, ಫಾರ್ಸಿ, ಸಿಕ್ಖ್ ಸಮುದಾಯದ ಜ ನರಿಗೆ ಭಾರತೀಯ ಪೌರತ್ವವನ್ನು ನೀಡಲಾಗುವುದು. ಆದರೆ ಈ ಅವಕಾಶ ಮುಸ್ಲಿಮರಿಗೆ ಇಲ್ಲ. ಈ ಮೇಲಿನ ರಾಷ್ಟ್ರಗಳಿಂದ ಬಂದ ಮುಸ್ಲಿಮೇತರರು 5 ವರ್ಷಗಳ ಕಾಲ ಭಾರತದಲ್ಲಿ ನೆಲೆಸಿದ್ದರೆ ಅವರನ್ನು ಭಾರತೀಯ ನಾಗರಿಕರಾಗಿ ಪರಿಗಣಿಸಲಾಗುವುದು. ಹೀಗೆ ಪರಿಗಣಿಸುವುದಕ್ಕೆ ದಾಖಲೆ ಪತ್ರಗಳ ಅಗತ್ಯವೂ ಇಲ್ಲ. 2019 ಸೆಪ್ಟೆಂಬರ್ 9ರಂದು ಅಸ್ಸಾಮ್‍ನ ಗುವಾಹಟಿಯಲ್ಲಿ ನಡೆದ ಈಶಾನ್ಯ ರಾಜ್ಯಗಳ ಪ್ರಜಾತಾಂತ್ರಿಕ ಒಕ್ಕೂಟ (NEDA)ದ 4ನೇ ಸಭೆಯಲ್ಲಿ ಅಮಿತ್ ಶಾ ಅವರು  CABಯ ಜಾರಿಯ ಕುರಿತು ಮತ್ತೊಮ್ಮೆ ಘೋಷಣೆಯನ್ನು ಮಾಡಿದ್ದಾರೆ. ಅಂದಹಾಗೆ, 2016 ಜುಲೈ 15ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಕೇಂದ್ರ ಸರಕಾರವು ಪೌರತ್ವ ತಿದ್ದು ಪಡಿ ಮಸೂದೆ(CAB)ಯ ಬಗ್ಗೆ ಪಾರ್ಲಿಮೆಂಟ್‍ನಲ್ಲಿ ಪ್ರಸ್ತಾಪ  ಮಾಡಿತ್ತು. ಮಾತ್ರವಲ್ಲ, ಅದರ ಕರಡು ಪರಿಶೀಲನೆಗಾಗಿ ಬಿಜೆಪಿ ಸಂಸದ ರಾಜೇಂದ್ರ ಅಗರ್‍ವಾಲ್ ಅವರ ನೇತೃತ್ವದಲ್ಲಿ ಜಂಟಿ ಪಾರ್ಲಿಮೆಂಟ್ ಸಮಿತಿಯನ್ನು (PAC) ರಚಿಸಿತ್ತು. 2019 ಜನವರಿ 8ರಂದು ಈ ಪೌರತ್ವ ತಿದ್ದುಪಡಿ ಮಸೂದೆಯನ್ನು  ಸರಕಾರ ಪಾರ್ಲಿಮೆಂಟ್‍ನಲ್ಲಿ ಮಂಡಿಸಿ ಮಂಜೂರೂ ಮಾಡಿಕೊಂಡಿತ್ತು. ಆದರೆ ರಾಜ್ಯಸಭೆಯಲ್ಲಿ ಅಗತ್ಯ ಬಹುಮತ ಇಲ್ಲ ದಿರುವುದರಿಂದ ಮಂಡಿಸಿರಲಿಲ್ಲ. ಈ ಕಾರಣದಿಂದಾಗಿ ಈ ಮಸೂದೆ ಸದ್ಯ ಅನೂರ್ಜಿತ ಸ್ಥಿತಿಯಲ್ಲಿದೆ.
ನಿಜವಾಗಿ, ಅಸ್ಸಾಮ್‍ನಲ್ಲಿ ಜಾರಿಯಲ್ಲಿರುವ NRC ಗೂ ದೇಶದಾದ್ಯಂತ ಜಾರಿಯಾಗಲಿರುವ NRIC ಗೂ ಕೆಲವು ಮೂಲ ಭೂತ ವ್ಯತ್ಯಾಸಗಳಿವೆ. ಅಸ್ಸಾಮ್‍ನಲ್ಲಿ ಜಾರಿಯಲ್ಲಿರುವ NRC ಯನ್ನು NRCA (ಅಸ್ಸಾಮ್ ರಾಷ್ಟ್ರೀಯ ಪೌರತ್ವ ನೋಂದಣಿ)  ಅನ್ನುವುದೇ ಸೂಕ್ತ. ಯಾಕೆಂದರೆ, ಅಸ್ಸಾಮ್‍ನದ್ದು ಬಹುಸೂಕ್ಷ್ಮ ವಿಷಯ. ಅಲ್ಲಿನ ಪೌರತ್ವ ನೋಂದಣಿ ಪ್ರಕ್ರಿಯೆಗೂ ಅಲ್ಲಿನ ಭೌಗೋಳಿಕ, ಸಾಂಸ್ಕೃತಿಕ, ಸಾಮಾಜಿಕ ಸ್ಥಿತಿಗತಿಗೂ ನೇರ ಸಂಬಂಧ ಇದೆ. ತಮ್ಮ ಸಾಂಸ್ಕೃತಿಕ ಗುರುತು ಮತ್ತು ಅಸ್ಸಾಮಿ ಅನನ್ಯತೆಗೆ ಬಾಂಗ್ಲಾದೇಶಿ ನುಸುಳುಕೋರರಿಂದ ಹಾನಿ ಉಂಟಾಗಿದೆ ಎಂಬ ಭಾವನೆ ಅಸ್ಸಾಮ್‍ನ ಬುಡಕಟ್ಟು - ಮೂಲ ನಿವಾಸಿಗಳಲ್ಲಿ ಬಹು ಹಿಂದಿನಿಂದಲೇ ಇತ್ತು. ಈ ಹಿನ್ನೆಲೆಯಲ್ಲಿ ಬಂಗಾಳಿ ಭಾಷೆ ಮಾತಾಡುವ ಹಿಂದೂಗಳು ಮತ್ತು  ಮುಸ್ಲಿಮರ ಮೇಲೆ ಬಾಂಗ್ಲಾ ನುಸುಳುಕೋರರು ಎಂಬ ಹಣೆಪಟ್ಟಿಯನ್ನು ವಿವೇಚನಾರಹಿತವಾಗಿ ಅಂಟಿಸಿ ಪದೇ ಪದೇ ಪೀಡಿಸಲಾಗುತ್ತಿತ್ತು. 1980ರ ದಶಕದಲ್ಲಿ ನೆಲ್ಲಿ ಎಂಬ ಪ್ರದೇಶದಲ್ಲಿ ಮುಸ್ಲಿಮರ ಮೇಲೆ ನಡೆಸಲಾದ ಸಾಮೂಹಿಕ  ಹತ್ಯಾಕಾಂಡಕ್ಕೂ ಈ ಅಸಹನೆಗೂ ಸಂಬಂಧ ಇದೆ. ಅನಧಿಕೃತ ಮೂಲಗಳ ಪ್ರಕಾರ ಸುಮಾರು 10 ಸಾವಿರ ಮಂದಿಯನ್ನು ಭೀಕರವಾಗಿ ಹತ್ಯೆ ಮಾಡಲಾದ ಈ ಕೃತ್ಯದ ಹಿಂದೆ ತೀವ್ರ ಮುಸ್ಲಿಮ್ ದ್ವೇಷಿ ಅಪಪ್ರಚಾರದ ಕತೆಯಿದೆ. ನಿಜವಾಗಿ,  ಅಸ್ಸಾಮ್‍ಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ದೊಡ್ಡಮಟ್ಟದಲ್ಲಿ ವಲಸೆ ನಡೆದಿದೆ ಅನ್ನುವುದು ಸುಳ್ಳಲ್ಲ. ಅಸ್ಸಾಮ್ ಎಂಬುದು ಗುಡ್ಡಗಾಡು ಪ್ರದೇಶ. ಅಲ್ಲಿನ ಬ್ರಹ್ಮಪುತ್ರ ನದಿಗೆ ದೇಶದ ಇತರ ನದಿಗಳಿಗಿಂತ ಭಿನ್ನವಾದ ಮುಖ ಇದೆ. ಪ್ರವಾಹಕ್ಕೆ ಕುಪ್ರಸಿದ್ಧಿಯನ್ನು ಪಡೆದಿರುವ ನದಿ ಇದು. ಆದ್ದರಿಂದಲೇ ಈ ನದಿಯನ್ನು ಅವಲಂಬಿಸಿಕೊಂಡು ಬದುಕುತ್ತಿರುವ ಅಸಂಖ್ಯಾತ ಮಂದಿ ಮನೆ ಮಾರುಗಳನ್ನು ಕಳಕೊಳ್ಳುವುದು ಸಾಮಾನ್ಯ. ಮಾತ್ರವಲ್ಲ, ಹಾಗೆ ಕಳಕೊಳ್ಳುವಾಗ ತಮ್ಮ ನಾಗರಿಕತ್ವಕ್ಕೆ ಪುರಾವೆ ಯಾಗಿರುವ ದಾಖಲೆ ಪತ್ರಗಳನ್ನು ಕಳಕೊಳ್ಳುವುದೂ ಸತ್ಯ. ಇವತ್ತು ವಿದೇಶಿಯರೆಂದು ಘೋಷಿತವಾದ 19 ಲಕ್ಷ ಮಂದಿಯಲ್ಲಿ ಇವರ ಸಂಖ್ಯೆ ಸಾಕಷ್ಟಿದೆ.
ಬರ್ಮಾದ ಭಾಗವಾಗಿದ್ದ ಅಸ್ಸಾಮ್ 1826ರಲ್ಲಿ ಯಾವಾಗ ಬ್ರಿಟಿಷ್ ಭಾರತದ ವಶವಾಯಿತೋ ಆಗಿನಿಂದಲೇ ಈ ಪ್ರದೇಶದಲ್ಲಿ ಬ್ರಿಟಿಷರು ಕೃಷಿಗೆ ಮಹತ್ವ ಕೊಟ್ಟರು. ಧಾರಾಳ ಪಾಳು ಭೂಮಿ ಇದ್ದ ಕಾರಣ ಅವರಿಗೆ ಅಸ್ಸಾಮ್ ಕೃಷಿಗೆ ಯೋಗ್ಯವಾಗಿ  ಕಂಡಿತು. ಅವರಿಗೆ ದುಡಿಯಲು ಜನರ ಅಗತ್ಯ ಇತ್ತು. ಆಗ ಬ್ರಿಟಿಷರು ಭಾರತದ ಭಾಗವೇ ಆಗಿದ್ದ ಮತ್ತು ಅಸ್ಸಾಮ್‍ಗೆ ತಾಗಿಕೊಂಡಂತಿರುವ ಬಾಂಗ್ಲಾದಿಂದ ಜನರನ್ನು ಕರೆತಂದು ಕೃಷಿ ಕಾರ್ಯಕ್ಕೆ ಹಚ್ಚಿದರು. ಇನ್ನೊಂದು ಕಡೆ, ಗುಡ್ಡಗಾಡು ಪ್ರದೇ ಶವನ್ನು ಚಹಾ ಬೆಳೆಗೆ ಅನುಕೂಲಕರವಾಗಿ ಪರಿವರ್ತಿಸುವ ಯೋಜನೆ ಹಾಕಿಕೊಂಡರು. ಅದಕ್ಕಾಗಿ ಝಾರ್ಖಂಡ್, ಆಂಧ್ರಪ್ರದೇಶ, ತೆಲಂಗಾಣ, ಒರಿಸ್ಸಗಳಿಂದ ಆದಿವಾಸಿಗಳನ್ನು ಕರೆತಂದು ದುಡಿಸಿದರು. ಅಸ್ಸಾಮ್‍ನ ಜನಸಂಖ್ಯೆಯಲ್ಲಿ ಈ ವಲಸೆ  ಒಂದು ಹಂತದ ಬದಲಾವಣೆಗೆ ಕಾರಣವಾಯಿತು. ಹಾಗಂತ, ಈ ಪ್ರಕ್ರಿಯೆ ಇಲ್ಲಿಗೇ ನಿಲ್ಲಲಿಲ್ಲ. ಬ್ರಿಟಿಷರಿಂದ ಭಾರತ ಸ್ವತಂತ್ರಗೊಂಡ ಬಳಿಕವೂ ಈ ವಲಸೆ ಪ್ರಕ್ರಿಯೆ ಮುಂದುವರಿಯಿತು. ಬಾಂಗ್ಲಾದೇಶ ಮತ್ತು ಪಾಕ್‍ನ ಜೊತೆ ಅಸ್ಸಾಮ್ ಗಡಿ  ಹಂಚಿಕೊಂಡಿರುವುದರಿಂದ ಆ ಎರಡು ರಾಷ್ಟ್ರಗಳಲ್ಲಿ ನಡೆಯುವ ಪ್ರತಿ ಬೆಳವಣಿಗೆಯೂ ಅಸ್ಸಾಮ್‍ನ ಜನಸಂಖ್ಯೆಯ ಏರಿಕೆಯಲ್ಲಿ ಪಾತ್ರ ವಹಿಸತೊಡಗಿತು. 1950ರಲ್ಲಿ ಪೂರ್ವ ಪಾಕಿಸ್ತಾನದಿಂದ (ಈಗಿನ ಬಾಂಗ್ಲಾದೇಶ) ದೊಡ್ಡಮಟ್ಟದಲ್ಲಿ ಜನರು  ನಿರಾಶ್ರಿತರಾಗಿ ಅಸ್ಸಾಮ್ ಪ್ರವೇಶಿಸಿದರು. 1965ರಲ್ಲಿ ಭಾರತ-ಪಾಕ್‍ಗಳ ನಡುವೆ ಯುದ್ಧ ನಡೆದಾಗ ಬಂಗಾಳಿ ಭಾಷೆ ಯನ್ನಾಡುವ ಹಿಂದೂಗಳು ಬಹುದೊಡ್ಡ ಸಂಖ್ಯೆಯಲ್ಲಿ ಅಸ್ಸಾಮ್‍ಗೆ ಕಾಲಿಟ್ಟರು. ಆ ಬಳಿಕದ ವಲಸೆ 1971ರಲ್ಲಿ ನಡೆಯಿತು. ಪ್ರತ್ಯೇಕ  ಬಾಂಗ್ಲಾದೇಶದ ರಚನೆಯ ವೇಳೆ ಬಂಗಾಳಿ ಮಾತನ್ನಾಡುವ ಹಿಂದೂ ಮತ್ತು ಮುಸ್ಲಿಮರು ಭಾರೀ ಸಂಖ್ಯೆಯಲ್ಲಿ ಭಾರತ ಪ್ರವೇಶಿಸಿದರು. 1965 ಮತ್ತು 71ರ ನಡುವೆ ಸುಮಾರು 75 ಲಕ್ಷದಿಂದ 1 ಕೋಟಿಯಷ್ಟು ಮಂದಿ ಭಾರತಕ್ಕೆ ಬಂದಿದ್ದಾರೆ ಅನ್ನುವ ಅಂದಾಜಿದೆ. ಈ ಭಾರೀ ಪ್ರಮಾಣದ ವಲಸೆಯು ಅಸ್ಸಾಮ್‍ನ ಬುಡಕಟ್ಟು ಮತ್ತು ಮೂಲ ನಿವಾಸಿಗಳ ಬದುಕಿನ ಮೇಲೆ ಭಾರೀ ಪರಿಣಾಮವನ್ನು ಬೀರಿತು. ಈ ವಲಸೆಯ ವಿರುದ್ಧ ಅಸ್ಸಾಮ್ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಪ್ರತಿಭಟನೆ  ಪ್ರಾರಂಭವಾಯಿತು. 1979-1985ರ ನಡುವೆ ಆಲ್ ಅಸ್ಸಾಮ್ ವಿದ್ಯಾರ್ಥಿ ಸಂಘ ಮತ್ತು ಅಸ್ಸಾಮ್ ಗಣ ಪರಿಷತ್‍ಗಳು ವಲಸೆ ವಿರೋಧಿ ಹೋರಾಟದಲ್ಲಿ ತೊಡಗಿಕೊಂಡವು. ವಲಸೆಗಾರ ಹಿಂದೂ-ಮುಸ್ಲಿಮ್ ಇಬ್ಬರೂ ಈ ಹೋರಾಟದ  ಗುರಿಗಳಾಗಿದ್ದರು. ಕೊನೆಗೆ 1985 ಆಗಸ್ಟ್ 14ರಂದು ಆಲ್ ಅಸ್ಸಾಮ್ ಸ್ಟೂಡೆಂಟ್ ಯೂನಿಯನ್, ಅಸ್ಸಾಮ್ ಗಣ ಪರಿಷತ್, ಅಸ್ಸಾಮ್ ರಾಜ್ಯ ಸರಕಾರ ಮತ್ತು ಪ್ರಧಾನಿ ರಾಜೀವ್ ಗಾಂಧಿಯವರ ಉಪಸ್ಥಿತಿಯಲ್ಲಿ ಅಸ್ಸಾಮ್ ಒಪ್ಪಂದಕ್ಕೆ ಸಹಿ  ಹಾಕಲಾಯಿತು. ಮೂಲ ನಿವಾಸಿಗಳ ಅನನ್ಯತೆಯನ್ನು ಕಾಪಾಡುವುದು, ಅಕ್ರಮ ವಲಸೆಯನ್ನು ತಡೆ ಯುವುದು ಮತ್ತು 1971 ಮಾರ್ಚ್ 24ಕ್ಕಿಂತ ಮೊದಲು ಯಾರು ಅಸ್ಸಾಮ್‍ನಲ್ಲಿ ನೆಲೆಸಿದ್ದರೋ ಅವರನ್ನು ಭಾರತೀಯರೆಂದು ಪರಿಗಣಿಸಿ ಆ ಬಳಿಕ  ಬಂದವರನ್ನು ಅಕ್ರಮ ವಲಸಿಗರೆಂದು ಬಗೆದು ಹೊರ ಹಾಕುವುದು- ಈ ಒಪ್ಪಂದದ ಸಾರಾಂಶವಾಗಿತ್ತು. (1971 ಮಾರ್ಚ್ 26ರಂದು ಬಾಂಗ್ಲಾದೇಶದ ರಚನೆಯಾಯಿತು.) ಆದರೆ ಈ ಒಪ್ಪಂದವನ್ನು ಜಾರಿಗೊಳಿಸಲು ಯಾವ ಸರಕಾರವೂ  ಪ್ರಾಮಾಣಿಕವಾಗಿ ಮುಂದಾಗಲಿಲ್ಲ. ಇದನ್ನು ಪ್ರಶ್ನಿಸಿ 2012ರಲ್ಲಿ ಸುಪ್ರೀಮ್ ಕೋರ್ಟ್‍ನಲ್ಲಿ ದಾವೆಯನ್ನು ಹೂಡಲಾಯಿತು. ಇದನ್ನು ಪರಿಗಣಿಸಿದ ಸುಪ್ರೀಮ್ ಕೋರ್ಟ್ ತಕ್ಷಣ ಈ ಒಪ್ಪಂದವನ್ನು ಜಾರಿಗೊಳಿಸುವಂತೆ ಆದೇಶಿಸಿತು. ಅಲ್ಲದೇ, 2016ರಲ್ಲಿ  ಈ ಕೆಲಸ ಪೂರ್ಣಗೊಳ್ಳಬೇಕೆಂದೂ ಗಡು ವಿಧಿಸಿತು. ಮಾತ್ರವಲ್ಲ, 1971ರ ಮತದಾರರ ಪಟ್ಟಿಯಲ್ಲಿ ಹೆಸರಿರುವ ದಾಖಲೆ ಅಥವಾ LIC ಸರ್ಟಿಫಿಕೇಟ್, ಭೂಮಿ ಪಹಣಿ ಪತ್ರ ಇತ್ಯಾದಿ ದಾಖಲೆಗಳಲ್ಲಿ ಯಾವುದನ್ನಾದರೂ ಅಧಿಕಾರಿಗಳ ಮುಂದೆ  ಅಸ್ಸಾಮಿಗರು ಹಾಜರುಪಡಿಸಬೇಕಿತ್ತು. ಅಷ್ಟಕ್ಕೂ,
ಕಳೆದ ಅಸ್ಸಾಮ್ ವಿಧಾನಸಭಾ ಚುನಾವಣೆಯ ವೇಳೆ, ಅಕ್ರಮ ಬಾಂಗ್ಲಾದೇಶಿ ವಲಸಿಗರ ಬಗ್ಗೆ ಬಿಜೆಪಿ ದೊಡ್ಡ ಧ್ವನಿಯಲ್ಲಿ ಮಾತಾಡಿತ್ತು. ಒಂದು ಕೋಟಿಗಿಂತಲೂ ಅಧಿಕವಿರುವ ಈ ವಲಸಿಗರನ್ನು ಹೊರದಬ್ಬುವುದಾಗಿ ಅದು ಹೇಳಿಕೊಂಡಿತ್ತು. ಆದರೆ  ಓಖಅಯ ಮೊದಲ ಕರಡು ಪಟ್ಟಿ ಬಿಡುಗಡೆಗೊಂಡಾಗ ಬಿಜೆಪಿ ಪ್ರಚಾರ ಮಾಡಿರುವ ಒಂದು ಕೋಟಿ ಬಲುದೊಡ್ಡ ಸುಳ್ಳು ಅನ್ನುವುದು ಸ್ಪಷ್ಟಗೊಂಡಿತು. 40 ಲಕ್ಷ ಅಕ್ರಮ ವಲಸಿಗರಿದ್ದಾರೆ  ಎಂದು ಮೊದಲ ಕರಡು ಪ್ರತಿ ಹೇಳಿದರೆ ಇದೀಗ ಅವರ  ಸಂಖ್ಯೆ 19 ಲಕ್ಷಕ್ಕೆ ಇಳಿದಿದೆ. ಈ ಇಳಿಕೆ ಇನ್ನೂ ಮುಂದು ವರಿದು 10 ಲಕ್ಷದಲ್ಲಿ ನಿಲ್ಲಬಹುದು ಎಂಬ ಲೆಕ್ಕಾಚಾರವಿದೆ. ಭಾರತದ ಪ್ರತಿ ನಾಗರಿಕನಿಗೂ 15 ಲಕ್ಪ ರೂಪಾಯಿಯನ್ನು ಹಂಚುವಷ್ಟು ಸ್ವಿಸ್ ಬ್ಯಾಂಕ್‍ನಲ್ಲಿ ಭಾರತೀಯರ ಕಪ್ಪು ಹಣವಿದೆ  ಎಂಬ ಪ್ರಧಾನಿ ನರೇಂದ್ರ ಮೋದಿಯವರ ಮಾತು ಎಷ್ಟು ದೊಡ್ಡ ಸುಳ್ಳೋ ಅಂಥದ್ದೇ ಒಂದು ಸುಳ್ಳು ಒಂದು ಕೋಟಿ ಅಕ್ರಮ ಬಾಂಗ್ಲಾದೇಶಿ ವಲಸಿಗರು ಅನ್ನುವುದಾಗಿತ್ತು. ಇದೀಗ ಬಿಜೆಪಿ ಈ ಸುಳ್ಳಿನಿಂದ ಬಿಡಿಸಿಕೊಳ್ಳುವ ಯತ್ನದಲ್ಲಿದೆ. ಈಗ  ಬಿಡುಗಡೆಗೊಂಡಿರುವ ಅಂತಿಮ ಕರಡು ಪಟ್ಟಿಯಲ್ಲಿರುವ 19 ಲಕ್ಷದಲ್ಲಿ ಕೇವಲ 7 ಲಕ್ಷ ದಷ್ಟು ಮಂದಿ ಮಾತ್ರ ಮುಸ್ಲಿಮರಿದ್ದಾರೆ ಮತ್ತು 12 ಲಕ್ಷದಷ್ಟು ಮಂದಿ ಹಿಂದೂಗಳಿದ್ದಾರೆ ಅನ್ನುವುದು ಬಿಜೆಪಿಯನ್ನು ಗಾಢ ನಿರಾಶೆಗೆ ತಳ್ಳಿದೆ. ‘NRC ಪಟ್ಟಿಯಲ್ಲಿರುವ 10ರಿಂದ 20% ಮಂದಿಯ ಹಿನ್ನೆಲೆಯನ್ನು ಮರು ಪರಿಶೀಲಿಸಬೇಕೆಂದು’ ಕೋರಿ ಜುಲೈಯಲ್ಲಿ ಕೇಂದ್ರ ಮತ್ತು ಅಸ್ಸಾಮ್‍ನ ಬಿಜೆಪಿ ಸರಕಾರಗಳು ಸುಪ್ರೀಮ್ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದು ಇದೇ ಆತಂಕದಿಂದ. ಆದರೆ, ಸುಪ್ರೀಮ್ ಈ ಮ ನವಿಯನ್ನು ತಿರಸ್ಕರಿಸಿತ್ತು. ಸುಪ್ರೀಮ್ ನೇಮಿಸಿರುವ ಅಸ್ಸಾಮ್ ಓಖಅ ಸಂಚಾಲಕ ಪ್ರತೀಕ್ ಹಜೇಲ ಅವರು ಇಂಥದ್ದೊಂದು ಮರು ಪರಿಶೀಲನೆಯ ಅಗತ್ಯವಿಲ್ಲ ಎಂದು ಕೋರ್ಟ್‍ಗೆ ತಿಳಿಸಿದ್ದರು. ಇದಕ್ಕಾಗಿ ಬಿಜೆಪಿಯು ಪ್ರತೀಕ್ ಹಜೇಲರನ್ನು  ದೂಷಿಸಿತ್ತು. ಇದೀಗ ಈ ಇಡೀ ಪ್ರಕ್ರಿಯೆಗೆ ಬಿಜೆಪಿ ಹೊಸ ತಿರುವು ಕೊಡುವ ಪ್ರಯತ್ನದಲ್ಲಿದೆ. ಈಗಾಗಲೇ NRC ಅಂತಿಮ ಕರಡನ್ನು ರದ್ದಿ ಕಾಗದ ಎಂದು ಅದರ ನಾಯಕರು ಕರೆದಿದ್ದಾರೆ. ಇನ್ನೊಂದು ಕಡೆ, ಅಂತಿಮ ಕರಡು ಅಂತಿಮವಲ್ಲ,  ಅದರಲ್ಲಿ ಹೆಸರಿಲ್ಲದವರು ಹೈಕೋರ್ಟ್ ಮತ್ತು ಸುಪ್ರೀಮ್‍ಗೂ ಹೋಗಬಹುದು ಮತ್ತು ಅಲ್ಲಿವರೆಗೂ ಪಟ್ಟಿಯಲ್ಲಿ ಹೆಸರಿಲ್ಲದವರ ಮೇಲೆ ಕ್ರಮ ಕೈಗೊಳ್ಳಲಾಗುವುದಿಲ್ಲ ಅನ್ನುವ ಸೂಚನೆಯನ್ನು ಬಿಜೆಪಿ ನೀಡತೊಡಗಿದೆ. NRC ಪಟ್ಟಿಯಲ್ಲಿ  ಹೆಸರಿಲ್ಲದವರು ಹೈಕೋರ್ಟು-ಸುಪ್ರೀಮ್‍ಗೆ ಹೋಗುವುದೆಂದರೆ, ಅದೊಂದು ದೀರ್ಘ ಪ್ರಕ್ರಿಯೆ. ಆ ಪ್ರಕ್ರಿಯೆ ಮುಗಿಯುವವರೆಗೆ ಅವರು ಭಾರತೀಯರೇ ಆಗಿ ಇರುತ್ತಾರೆ. ಈ ತಂತ್ರವನ್ನು ಬಿಜೆಪಿ ಯಾಕೆ ಮುನ್ನೆಲೆಗೆ ತಂದಿದೆಯೆಂದರೆ, ಅದಕ್ಕಿಂತ  ಮೊದಲು ಪೌರತ್ವ ತಿದ್ದುಪಡಿ ಮಸೂದೆ(CAB)ಯನ್ನು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಮಂಜೂರುಗೊಳಿಸಿ ಮುಸ್ಲಿಮೇತರ ವಲಸಿಗರನ್ನು ರಕ್ಷಿಸಿಕೊಳ್ಳುವುದು. ಓಖಅ ಪಟ್ಟಿಯಲ್ಲಿ ಮುಸ್ಲಿಮರು ಮಾತ್ರ ಉಳಿದುಕೊಳ್ಳುವಂತೆ ನೋಡಿಕೊಳ್ಳುವುದು.  ಅಂದಹಾಗೆ,
ಅಸ್ಸಾಮ್‍ನಲ್ಲಿ ಜಾರಿಯಲ್ಲಿರುವ ಓಖಅಗೆ ನಿರ್ದಿಷ್ಟ ಒಪ್ಪಂದವೊಂದರ ಹಿನ್ನೆಲೆಯಿದೆ. 1971 ಮಾರ್ಚ್ 24ರ ಒಳಗೆ ಅಸ್ಸಾಮ್ ನಲ್ಲಿ ನೆಲೆಸಿದ್ದ ಮತ್ತು ಮತದಾರರ ಪಟ್ಟಿಯಲ್ಲಿ ಹೆಸರಿದ್ದ ಎಲ್ಲರೂ ಭಾರತೀಯರು ಅನ್ನುವುದು ಈ ಹಿನ್ನೆಲೆ. ಇದೊಂದು  ಗಡು. ಆದರೆ, NRC ಯನ್ನು ಭಾರತದಾದ್ಯಂತ ಜಾರಿಗೊಳಿಸುವಾಗ ಅದಕ್ಕೆ ಈ ಒಪ್ಪಂದ ಅನ್ವಯವಾಗುವುದಿಲ್ಲ. ಆದ್ದರಿಂದ ಅಸ್ಸಾಮ್ ಹೊರತುಪಡಿಸಿ ಭಾರತದಾದ್ಯಂತ ಜಾರಿಗೊಳ್ಳಲಿರುವ NRC ಯ ಸ್ವರೂಪದಲ್ಲಿ ಖಂಡಿತ ವ್ಯತ್ಯಾಸವಿದೆ. 2020 ಎಪ್ರಿಲ್‍ನಿಂದ 2020 ಸೆಪ್ಟೆಂಬರ್ 30ರೊಳಗೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR)ಯನ್ನು ಕೈಗೊಳ್ಳುವುದು ಮತ್ತು ಇದರ ಆಧಾರದಲ್ಲಿ ಭಾರತೀಯ ನಾಗರಿಕರ ರಾಷ್ಟ್ರೀಯ ನೋಂದಣಿ (NRIC)ಯನ್ನು ಜಾರಿ ಮಾಡುವುದು ಕೇಂದ್ರದ      ಉದ್ದೇಶ ಎಂದು ಹೇಳಲಾಗಿದೆ. ಅಸ್ಸಾಮ್‍ನಲ್ಲಿರುವ NRC ಹೇಗೆಯೋ ಹಾಗೆಯೇ ಈ NRIC. NPR ಎಂಬುದು ಭಾರತದ ನಿವಾಸಿಗಳ ಮಾಹಿತಿ ಸಂಗ್ರಹವಾಗಿದ್ದು, ಇದರಲ್ಲಿ ಜನಸಂಖ್ಯಾ ಅಂಕಿ ಅಂಶಗಳು  ಮತ್ತು ಬಯೋಮೆಟ್ರಿಕ್  ವಿವರಗಳು ಒಳಗೊಂಡಿರುತ್ತವೆ ಎನ್ನಲಾಗುತ್ತಿದೆ. ಇದು ದೇಶದ ಸಾಮಾನ್ಯ ನಿವಾಸಿಗಳ ಪಟ್ಟಿ. ಸಾಮಾನ್ಯ ದಾಖಲೆ ಪತ್ರಗಳು ಇದರ ನೋಂದಣಿಗೆ ಸಾಕಾಗುತ್ತದೆ. ಇದರ ಬಳಿಕ NRIC ಯನ್ನು ಜಾರಿ ಮಾಡಲು ಕೇಂದ್ರ ಸರಕಾರ ತೀರ್ಮಾನಿಸಿದೆ. ನಿಜವಾಗಿ,
ಬಿಜೆಪಿಯ ಉದ್ದೇಶ ವಲಸೆಗಾರರನ್ನು ಹೊರಗಟ್ಟುವುದಲ್ಲ, ವಲಸೆಗಾರ ಮುಸ್ಲಿಮರನ್ನು ಮಾತ್ರ ಹೊರಗಟ್ಟುವುದು. ಪೌರತ್ವ ತಿದ್ದುಪಡಿ ಮಸೂದೆ ಸ್ಪಷ್ಟಪಡಿಸುವುದು ಇದನ್ನೇ. NRC ಅಥವಾ NRIC ಯ ಅತಿ ದಾರುಣ ಮುಖ ಇದು.  ಭಾರತೀಯರನ್ನು ಹಿಂದೂಗಳು ಮತ್ತು ಮುಸ್ಲಿಮರೆಂದು ವಿಭಜಿಸಿ ಮುಸ್ಲಿಮರನ್ನು ಶಂಕಿತರಂತೆ ಕಾಣುವ ಮತ್ತು ಅವರ ಬದುಕನ್ನು ಅಭದ್ರತೆಗೆ ನೂಕುವ ಈ ಕ್ರಮ ಅತ್ಯಂತ ಕೆಟ್ಟದು.