Tuesday, March 31, 2015

ನ್ಯೂಸ್ ಚಾನೆಲ್‍ಗಳು ನಡೆಸುವ `ಹತ್ಯೆಯ' ತನಿಖೆಯನ್ನು ಯಾರಿಗೆ ಒಪ್ಪಿಸೋಣ?

    ವೃಂದಾ ಗ್ರೋವರ್, ಸುಧಾ ರಾಮಲಿಂಗಂ, ಪಮೇಲ ಪಿಲಿಪೋನ್, ಅರುಣಾ ರಾಯ್, ಅಂಜಲಿ ಭಾರಧ್ವಾಜ್, ಕವಿತಾ ಕೃಷ್ಣನ್, ಕವಿತಾ ಶ್ರೀವಾಸ್ತವ.. ಇವರೆಲ್ಲ ಫೆ. 26ರಂದು ಟೈಮ್ಸ್ ನೌ ಟಿ.ವಿ. ಚಾನೆಲ್‍ನ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿಗೆ ಬಹಿರಂಗ ಪತ್ರವೊಂದನ್ನು ಬರೆದರು. ‘ನಮ್ಮ ವಿರುದ್ಧದ ದ್ವೇಷ ಭಾಷಣವನ್ನು ನಿಲ್ಲಿಸು’ (Stop fostering hate speech against us) ಎಂಬ ಶೀರ್ಷಿಕೆಯಲ್ಲಿದ್ದ ಆ ಪತ್ರದಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳಿದ್ದುವು. ಮಾಧ್ಯಮ ನೀತಿ ಸಂಹಿತೆಯು ನ್ಯೂಸ್‍ರೂಮ್‍ನಿಂದ ನಾಪತ್ತೆಯಾಗಿರುವ ಬಗ್ಗೆ ಆಕ್ಷೇಪಗಳಿದ್ದುವು. ಸುಪ್ರೀಮ್ ಕೋರ್ಟಿನ ನ್ಯಾಯವಾದಿಗಳೂ, ಆರ್.ಟಿ.ಐ. ಕಾರ್ಯಕರ್ತರೂ, ನಾಗರಿಕ ಹಕ್ಕು ಹೋರಾಟಗಾರರೂ, ಹಿರಿಯ ಪತ್ರಕರ್ತರೂ ಆಗಿರುವ ಇವರೆಲ್ಲ ಅರ್ನಾಬ್ ಗೋಸ್ವಾಮಿಯ ಆ್ಯಂಕರಿಂಗ್ ವಿಧಾನವನ್ನು ಪ್ರಶ್ನಿಸಿದರು. ಪ್ರತಿದಿನ ರಾತ್ರಿ 9 ಗಂಟೆಗೆ ಅವರು ನಡೆಸಿಕೊಡುವ ‘ನ್ಯೂಸ್ ಅವರ್' (News hour ) ಚರ್ಚಾ ಕಾರ್ಯಕ್ರಮವು ಹೇಗೆ ನ್ಯಾಶನಲ್ ಬ್ರಾಡ್‍ಕಾಸ್ಟಿಂಗ್ ಅಥಾರಿಟಿಯ (NBC) ನೀತಿ ಸಂಹಿತೆಗೆ ವಿರುದ್ಧವಾಗಿದೆ ಎಂಬುದನ್ನು ಬೊಟ್ಟು ಮಾಡಿದರು. ತನ್ನ ನಿಲುವಿಗೆ ವಿರುದ್ಧವಾಗಿರುವವರನ್ನು ಕಡೆಗಣಿಸುವ ಅಥವಾ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡದೇ ಇರುವ ಅರ್ನಾಬ್‍ರ ಅಬ್ಬರದ ವರ್ತನೆಯನ್ನು ಖಂಡಿಸಿದರು. ಇದಕ್ಕೆ ಉದಾಹರಣೆಯಾಗಿ ಅವರು ಫೆ. 17 ಮತ್ತು 18ರಂದು ನಡೆದ ‘ನ್ಯೂಸ್ ಅವರ್’ ಕಾರ್ಯಕ್ರಮವನ್ನು ಉಲ್ಲೇಖಿಸಿದರು. ಮಧ್ಯ ಪ್ರದೇಶದ ಮಹಾನ್ ಎಂಬಲ್ಲಿ ಎಸ್ಸಾರ್ (Essar) ಬಹುರಾಷ್ಟ್ರೀಯ ಕಂಪೆನಿಯು ನಡೆಸುತ್ತಿರುವ ಮಾನವ ಹಕ್ಕು ಉಲ್ಲಂಘನೆಗಳ ಕುರಿತಂತೆ ಬ್ರಿಟನ್ನಿನ ಪಾರ್ಲಿಮೆಂಟ್ ಸದಸ್ಯರಿಗೆ ಮನವರಿಕೆ ಮಾಡಿಸಲು ಗ್ರೀನ್‍ಪೀಸ್ ಸಂಘಟನೆಯ ಪ್ರಿಯಾ ಪಿಳ್ಳೆ ಬ್ರಿಟನ್‍ಗೆ ಹೋಗುವುದರಲ್ಲಿದ್ದರು. ಇದನ್ನು ಅರಿತ ಕೇಂದ್ರ ಸರಕಾರ ಅವರ ಪ್ರಯಾಣವನ್ನು ತಡೆಹಿಡಿಯಿತು. ಅವರ ಪಾಸ್‍ಪೋರ್ಟ್ ನ್ನು ಮುಟ್ಟುಗೋಲು ಹಾಕಿಕೊಂಡಿತು. ನಿಜವಾಗಿ, ಎಸ್ಸಾರ್ ಕಂಪೆನಿಯ ಮುಖ್ಯ ಕೇಂದ್ರವಿರುವುದು ಬ್ರಿಟನ್‍ನಲ್ಲಿ. ಆ ಹಿನ್ನೆಲೆಯಲ್ಲಿ ಪ್ರಿಯಾ ಪಿಳ್ಳೆಯವರ ಬ್ರಿಟನ್ ಪ್ರವಾಸ ಯಾವ ರೀತಿಯಲ್ಲೂ ಅನುಚಿತವಾಗಿರಲಿಲ್ಲ. ಇದೇ ವಿಷಯವನ್ನು ಎತ್ತಿಕೊಂಡು ಅರ್ನಾಬ್ ಗೋಸ್ವಾಮಿ ಫೆ. 17ರಂದು ತನ್ನ ‘ನ್ಯೂಸ್ ಅವರ್’ ಕಾರ್ಯಕ್ರಮದಲ್ಲಿ ಚರ್ಚಿಸಿದರು. ಆದರೆ ಚರ್ಚೆ ಎಷ್ಟು ಏಕಮುಖವಾಗಿತ್ತೆಂದರೆ, ಅವರು ಆ್ಯಕ್ಟಿವಿಸ್ಟ್ ಗಳನ್ನು ಟೆರರಿಸ್ಟ್ ಎಂದರು. ದೇಶವಿರೋಧಿಗಳೆಂದರು. ಗ್ರೀನ್‍ಪೀಸನ್ನು ಖಂಡಿಸುವ ಅಭಿಪ್ರಾಯಗಳಿಗೆ ಧಾರಾಳ ಸಮಯಾವಕಾಶ ಕೊಟ್ಟ ಅವರು ಅದನ್ನು ಸಮರ್ಥಿಸುವವರಿಗೆ ಏನನ್ನೂ ಕೊಡಲಿಲ್ಲ. ಆ್ಯಕ್ಟಿವಿಸ್ಟ್ ಗಳನ್ನು ಟೆರರಿಸ್ಟ್ ಗಳು, ದೇಶವಿರೋಧಿಗಳು, ನಕ್ಸಲೈಟ್ ಬೆಂಬಲಿಗರು ಎಂದು ಕರೆಯುವುದಕ್ಕೆ ಅರ್ನಾಬ್‍ಗೆ ಏನು ಹಕ್ಕಿದೆ? ಒಂದು ಚಾನೆಲ್ ಹೀಗೆ ಬೇಕಾಬಿಟ್ಟಿಯಾಗಿ ಜನರನ್ನು ವಿಭಜಿಸುವುದು ಬೇಜವಾಬ್ದಾರಿತನದ್ದು. ಕಾರ್ಯಕ್ರಮವನ್ನು ನಡೆಸಿಕೊಡುವ ವ್ಯಕ್ತಿಯೆಂಬ (ಆ್ಯಂಕರ್) ನೆಲೆಯಲ್ಲಿ ಇರಲೇಬೇಕಾದ ತಟಸ್ಥ ನಿಲುವು, ನ್ಯಾಯ, ನಿಷ್ಪಪಕ್ಷಪಾತತನ ಮುಂತಾದ ಮೌಲ್ಯಗಳು ಅರ್ನಾಬ್‍ರಲ್ಲಿ ಕಾಣೆಯಾಗಿರುವುದಕ್ಕಾಗಿ ನಾವು ಟೈಮ್ಸ್ ನೌಗೆ ಬಹಿಷ್ಕಾರ ಹಾಕಿದ್ದೇವೆ ಎಂದು ಪತ್ರದಲ್ಲಿ ಅವರು ಘೋಷಿಸಿದರು.
    ನಿಜವಾಗಿ, ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈ ಪತ್ರ ಬಹಳ ಮುಖ್ಯವಾದುದು. ಇದೇ ವೇಳೆ ಡಿ.ಕೆ. ರವಿಯ ಸಾವನ್ನು ಎದುರಿಟ್ಟುಕೊಂಡು ಕನ್ನಡದ ನ್ಯೂಸ್ ಚಾನೆಲ್‍ಗಳು ನಡೆಸಿದ ಚರ್ಚೆಯ ಸ್ವರೂಪವನ್ನೂ ಇಲ್ಲಿ ಎತ್ತಿಕೊಳ್ಳಬಹುದು. 1976ರಲ್ಲಿ ಆಸ್ಕರ್ ಪ್ರಶಸ್ತಿ ವಿಜೇತರಾದ ಪೀಟರ್ ಫಿಂಚ್  ಹೇಳಿದಂತೆ, “ಟಿ.ವಿ. ಎಂಬುದು ಅಮ್ಯೂಸ್‍ಮೆಂಟ್ ಪಾರ್ಕೇ? ಅದೊಂದು ಸರ್ಕಸ್ ಕಂಪೆನಿಯೇ? ದೊಂಬರಾಟದವರ ಗುಂಪೇ? ಅದನ್ನು ಮತ್ತು ಅದರಲ್ಲಿ ಪ್ರಸಾರವಾಗುವುದನ್ನು ವೀಕ್ಷಕರು ಸೀರಿಯಸ್ಸಾಗಿ ಪರಿಗಣಿಸಬಾರದೇ?..” ಇಂಥ ಅನುಮಾನ ಇವತ್ತಿನ ದಿನಗಳಲ್ಲಿ ಮತ್ತೆ ಮತ್ತೆ ಎದುರಾಗುತ್ತಿದೆ. ಬೇಕಾದರೆ, ಟೈಮ್ಸ್ ನೌನ ‘ನ್ಯೂಸ್ ಅವರ್’ ಕಾರ್ಯಕ್ರಮವನ್ನೇ ಎತ್ತಿಕೊಳ್ಳಿ. ಆ ದಿನದ ಪ್ರಮುಖ ಇಶ್ಯೂವನ್ನು ಎತ್ತಿಕೊಂಡು ಅರ್ನಾಬ್ ಗೋಸ್ವಾಮಿ ರಾತ್ರಿ 9 ಗಂಟೆಗೆ ಕಾಣಿಸಿಕೊಳ್ಳುತ್ತಾರೆ. ಚಾನೆಲ್‍ನಲ್ಲಿ 10-12 ಮಂದಿಯನ್ನು ಕೂರಿಸಿ ಚರ್ಚೆ ಆರಂಭಿಸುತ್ತಾರೆ. ಯಾರನ್ನೂ ಅವರು ಮಾತಾಡಲು ಬಿಡುವುದಿಲ್ಲ. ಅವರು ಪ್ರಶ್ನೆ ಎಸೆಯುತ್ತಾರೆ. ಉತ್ತರ ಬರುವ ಮೊದಲೇ ಮತ್ತೆ ಮಾತಾಡಿ ತನ್ನ ಅಭಿಪ್ರಾಯವನ್ನೇ ಅಂತಿಮ ಗೊಳಿಸುತ್ತಾರೆ. ಆದ್ದರಿಂದಲೇ, ಚರ್ಚೆಯಲ್ಲಿ ಭಾಗವಹಿಸಿದವರೆಲ್ಲ ಟಿ.ವಿ. ಸ್ಕ್ರೀನ್‍ನಲ್ಲಿ ಆಗಾಗ ಇಣುಕಿ ಮಾಯವಾಗುತ್ತಾರೆ. ಅಷ್ಟಕ್ಕೂ, ಮಾಧ್ಯಮಗಳಿಗೆ ಕೆಲವು ನೀತಿ ಸಂಹಿತೆಗಳಿವೆ. ""TV News channels must provide for neutrality by offering equality for all affected parties, players and actors in any dispute or conflict to present their point of view. News channels must strive to ensure that allegations are not portrayed as fact and charges are not conveyed as an act of guilt." "... avoid... broadcasting content that is malicious, biased, regressive, knowingly inaccurate, hurtful, misleading...." NBA..." ಯ ಈ ನೀತಿ ಸಂಹಿತೆಯನ್ನು ಟೈಮ್ಸ್ ನೌ ಸಹಿತ ಈ ದೇಶದಲ್ಲಿರುವ ಸುಮಾರು 400ರಷ್ಟು ಸುದ್ದಿ ಚಾನೆಲ್‍ಗಳಲ್ಲಿ ಎಷ್ಟು ಚಾನೆಲ್‍ಗಳು ಪಾಲಿಸುತ್ತಿವೆ? ಇವತ್ತು ಅರ್ನಾಬ್ ಒಂಟಿಯಲ್ಲ. ಮಾಧ್ಯಮ ನೀತಿ ಸಂಹಿತೆಯನ್ನೆಲ್ಲ ಗಾಳಿಗೆ ತೂರಿ ತಾನೇ ಸರಿ ಎಂಬ ರೀತಿಯಲ್ಲಿ ಕಾರ್ಯಕ್ರಮ ನಡೆಸಿಕೊಡುವ ಅರ್ನಾಬ್‍ರಿಂದ ಪ್ರಭಾವಿತರಾದವರು ಇವತ್ತು ವಿವಿಧ ಚಾನೆಲ್‍ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನ್ಯೂಸ್‍ಎಕ್ಸ್ ನಲ್ಲಿ ರಾಹುಲ್ ಶಿವಶಂಕರ್ ಅನ್ನುವ ಆ್ಯಂಕರ್ ಅರ್ನಾಬ್‍ರನ್ನೇ ಕಾಪಿ ಮಾಡುತ್ತಿದ್ದಾರೆ. ಝೀ ಬಿಸಿನೆಸ್‍ನಲ್ಲಿ ಅಮಿಶ್ ದೇವಗನ್, ಹೆಡ್‍ಲೈನ್ ಟುಡೇಯಲ್ಲಿ ಗೌರವ್ ಸಾವಂತ್‍ರೆಲ್ಲ ಅರ್ನಾಬ್‍ಗೆ ಸ್ಪರ್ಧೆ ಒಡ್ಡುತ್ತಿದ್ದಾರೆ. ಕನ್ನಡದ ಒಂದೆರಡು ನ್ಯೂಸ್ ಚಾನೆಲ್‍ಗಳಲ್ಲೂ ಈ ಬಗೆಯ ಆ್ಯಂಕರ್‍ಗಳಿದ್ದಾರೆ. ವಿರೋಧಿ ದನಿಯನ್ನು ಮಟ್ಟ ಹಾಕುವುದೇ ಆ್ಯಂಕರ್‍ನ ಕೆಲಸ ಎಂದು ನಂಬಿರುವವರ ಮಧ್ಯೆ ಪಾರದರ್ಶಕ, ತಟಸ್ಥ, ನ್ಯಾಯಯುತ.. ಮುಂತಾದ ಮೌಲ್ಯಗಳೆಲ್ಲ ಗೌರವ ಗಿಟ್ಟಿಸಿಕೊಳ್ಳುವುದು ಹೇಗೆ? ಅಸ್ಸಾಮ್‍ನಲ್ಲಿ ಹುಟ್ಟಿ ಆಕ್ಸ್ ಫರ್ಡ್‍ನಲ್ಲಿ ಕಲಿತಿರುವ ಅರ್ನಾಬ್‍ರ ಮೇಲೆ ಅಮೇರಿಕದ ಫಾಕ್ಸ್ ನ್ಯೂಸ್ ಮತ್ತು MSNBC ಗಳು ಪ್ರಭಾವ ಬೀರಿರಬಹುದು. ಫಾಕ್ಸ್ ನ್ಯೂಸ್‍ನ ಬಿಲ್ ರೈಲಿಯನ್ನು ಅರ್ನಾಬ್ ಅನುಸರಿಸುತ್ತಿದ್ದಾರೆ ಎಂಬ ಆರೋಪ ನಿಜವಿರಲೂಬಹುದು. ಲೆಸ್ಲಿ ಉಡ್ವಿನ್‍ರ ‘ಇಂಡಿಯಾಸ್ ಡಾಟರ್’ ಸಾಕ್ಷ್ಯ ಚಿತ್ರವನ್ನು ನಿಷೇಧಿಸಬೇಕೆಂದು ಅರ್ನಾಬ್ ಆಗ್ರಹಿಸಿದುದಕ್ಕೂ ಅವರ ತಂದೆ ಕರ್ನಲ್ ಮನೋರಂಜನ್‍ರು ಬಿಜೆಪಿ ಸದಸ್ಯರಾಗಿರುವುದಕ್ಕೂ ಮತ್ತು 1998ರಲ್ಲಿ ಅವರು ಗುವಾಹಟಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದುದಕ್ಕೂ ಸಂಬಂಧ ಇಲ್ಲದೇ ಇರಬಹುದು. ಆದರೂ ಓರ್ವ ವ್ಯಕ್ತಿಯಾಗಿ ಮತ್ತು ಚಾನೆಲ್‍ನ ಮುಖ್ಯಸ್ಥರಾಗಿ ಅರ್ನಾಬ್‍ರಿಗೆ ಸಾಮಾಜಿಕ ಜವಾಬ್ದಾರಿ ಇರಬೇಡವೇ? ಇದು ಕೇವಲ ಅರ್ನಾಬ್‍ರಿಗೆ ಮಾತ್ರ ಸಂಬಂಧಿಸಿದ ವಿಷಯವಲ್ಲ. ಟೈಮ್ಸ್ ನೌ ಎಂಬುದು ಇಂಗ್ಲಿಷ್ ಚಾನೆಲ್ ಆದುದರಿಂದ ಅದರ ಪ್ರತಿ ಕಾರ್ಯಕ್ರಮಗಳೂ ಸುದ್ದಿಗೀಡಾಗುತ್ತವೆ. ವೀಕ್ಷಕರೂ ದೊಡ್ಡ ಮಟ್ಟದಲ್ಲಿರುತ್ತಾರೆ. ಹಾಗಂತ, ಅರ್ನಾಬ್‍ರಂತೆ ಏಕಮುಖವಾಗಿ ಕಾರ್ಯಕ್ರಮ ಪ್ರಸಾರ ಮಾಡುವ ಚಾನೆಲ್‍ಗಳು ಕನ್ನಡದಲ್ಲೂ ಇವೆ. ಡಿ.ಕೆ. ರವಿ ಸಾವಿನ ವಿಷಯದಲ್ಲಿ ಕನ್ನಡದ ಪ್ರಮುಖ ಚಾನೆಲ್‍ಗಳು ವರ್ತಿಸಿದ್ದು ಬಹುತೇಕ ಅರ್ನಾಬ್‍ರಂತೆಯೇ. CBI ಯ ಹೊರತಾದ ಯಾವ ತನಿಖೆಯೂ ಸೂಕ್ತವಲ್ಲ ಎಂದು ಅವೆಲ್ಲ ಇಡೀ ದಿನ ವಾದಿಸಿದುವು. ರವಿ ಸಾವನ್ನು ಕೊಲೆ ಎಂದು ಸಾಬೀತುಪಡಿಸುವುದಕ್ಕಾಗಿ ವದಂತಿಗಳಿಗೆ ರೆಕ್ಕೆ-ಪುಕ್ಕ ಸೇರಿಸಿ ಸುದ್ದಿ ರೂಪದಲ್ಲಿ ಕೊಟ್ಟವು. ಈ ಸಂದರ್ಭದಲ್ಲಿ ಚಾನೆಲ್‍ಗಳ ಶೈಲಿ ಎಷ್ಟು ಏಕಪಕ್ಷೀಯವಾಗಿತ್ತೆಂದರೆ ಕೊಲೆಯಲ್ಲದ ಇನ್ನಾವುದನ್ನು ಊಹಿಸುವುದೂ ಅಪರಾಧವಾದೀತೋ ಎಂಬ ರೀತಿಯಲ್ಲಿತ್ತು. ಇದೇ ವೇಳೆ, ಹಿರಿಯ ಪತ್ರಕರ್ತ ದಿನೇಶ್ ಅವಿೂನ್ ಮಟ್ಟು ಅವರು ಚಾನೆಲ್‍ಗಳ ಈ ‘ಅರ್ನಾಬ್ ಕಾಯಿಲೆ’ಯನ್ನು ಟೀಕಿಸುತ್ತಾ, “ಮುಂದೊಂದು ದಿನ ಕೇಂದ್ರ ಸರ್ಕಾರಕ್ಕೆ ಸೇರಿದ ಅಧಿಕಾರಿಯೊಬ್ಬರ ಆತ್ಮಹತ್ಯೆಯೋ ಕೊಲೆಯೋ ನಡೆದರೆ ತನಿಖೆಯನ್ನು ಯಾರಿಗೆ ಒಪ್ಪಿಸುತ್ತೀರಿ? ಸಿಬಿಐಗೆ? ಅದು ಕೇಂದ್ರದ ಅಧೀನದಲ್ಲಿದೆಯಲ್ಲ? ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಿಐಡಿಯಿಂದ ತನಿಖೆ ಬೇಡ ಅನ್ನುವುದಾದರೆ ಕೇಂದ್ರ ಸರಕಾರದ ಅಧೀನದಲ್ಲಿರುವ ಸಿಬಿಐಯು ತನಿಖೆ ನಡೆಸಲಿ ಎಂದು ಹೇಗೆ ಹೇಳಲು ಸಾಧ್ಯ? ಹಾಗಿದ್ದರೆ ಅಂತಹ ಪ್ರಕರಣಗಳ ತನಿಖೆ ಯಾರಿಂದ ನಡೆಸುವುದು? ಎಫ್.ಬಿ.ಐ., ಇಂಟರ್‍ಪೋಲ್, ವಿಶ್ವಸಂಸ್ಥೆ?..” ಎಂಬ ಪ್ರಶ್ನೆಯನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದರು. ಹಾಗಂತ, ರವಿ ಪ್ರಕರಣ ಮೊದಲನೆಯದ್ದಲ್ಲ. ಬಾಂಬ್ ಸ್ಫೋಟದ ಸಂದರ್ಭದಲ್ಲಿ ಈ ಬಗೆಯ ತಪ್ಪುಗಳನ್ನು ಹೆಚ್ಚಿನೆಲ್ಲ ಚಾನೆಲ್‍ಗಳೂ ಮಾಡಿವೆ. ಬೆಂಗಳೂರಿನಲ್ಲಿ ಕೆಲವು ಪತ್ರಕರ್ತರ ಹತ್ಯೆಗೆ ಸಂಚು ರೂಪಿಸಿರುವರೆಂದು ಆರೋಪಿಸಿ ಮುತೀಉರ್ರಹ್ಮಾನ್ ಎಂಬ ಡೆಕ್ಕನ್ ಹೆರಾಲ್ಡ್ ನ ಪತ್ರಕರ್ತನ ಸಹಿತ ಕೆಲವರ ಬಂಧನವಾದಾಗ ಇವೇ ಚಾನೆಲ್‍ಗಳು ಆ ಸುದ್ದಿಯನ್ನು ಹಬ್ಬದಂತೆ ಆಚರಿಸಿದ್ದುವು. ಪತ್ರಿಕೆಗಳಲ್ಲೂ ‘ಅರ್ನಾಬ್ ಪ್ರೇರಿತ’ ಸುದ್ದಿಗಳು ಪ್ರಕಟವಾಗಿದ್ದುವು. ಹಾಗಾದರೆ ಸುದ್ದಿ ಮಾಧ್ಯಮಗಳನ್ನು ಈ ಕಾಯಿಲೆಯಿಂದ ಮುಕ್ತಗೊಳಿಸುವುದು ಹೇಗೆ? ಅದಕ್ಕೆ ಸಾಮಾಜಿಕ ಜವಾಬ್ದಾರಿಯನ್ನು ನೆನಪಿಸುವ ವಿಧಾನ ಯಾವುದು? ಹಾಗಂತ ಟೈಮ್ಸ್ ನೌ ಅನ್ನೇ ವೀಕ್ಷಿಸಬೇಕು ಎಂಬ ಒತ್ತಾಯವನ್ನು ಯಾರೂ ಹೇರುತ್ತಿಲ್ಲ ನಿಜ. ವೀಕ್ಷಕರ ಮುಂದೆ ಇವತ್ತು ಧಾರಾಳ ಆಯ್ಕೆಗಳಿವೆ. ಪಬ್ಲಿಕ್ ಬೇಡ ಅಂದರೆ TV 9 ಇದೆ, ಸುವರ್ಣ ಇದೆ, BTV  ಇದೆ. ಆದರೆ ಇದು ಕಾಯಿಲೆಗಿರುವ ಮದ್ದೇ? ಇವತ್ತು ಈ ದೇಶದಲ್ಲಿ ಅತ್ಯಂತ ಹೆಚ್ಚು TRP ಗಳಿಸುತ್ತಿರುವುದು ಅರ್ನಾಬ್‍ರ ‘ನ್ಯೂಸ್ ಅವರ್’ ಕಾರ್ಯಕ್ರಮ. ಒಂದು ಕಡೆ ಪ್ರಮುಖ ವ್ಯಕ್ತಿತ್ವಗಳಿಂದ ಅರ್ನಾಬ್ ತೀವ್ರ ಟೀಕೆಯನ್ನು ಎದುರಿಸುತ್ತಿದ್ದರೂ ಇನ್ನೊಂದು ಕಡೆ ವೀಕ್ಷಕರನ್ನು ಸೆಳೆಯುತ್ತಿದ್ದಾರೆ. ಹೀಗಿರುವಾಗ ಈ ಆಯ್ಕೆಗಳು ನಿರ್ದಿಷ್ಟ ಚಾನೆಲ್‍ಗಳ ಮೇಲೆ ಯಾವ ಪರಿಣಾಮ ಬೀರಬಹುದು? ಜನಪ್ರಿಯತೆಯ ಆಧಾರದಲ್ಲಿ ಹೇಳುವುದಾದರೆ ಅರ್ನಾಬ್ ಇವತ್ತು ಅತ್ಯುತ್ತಮ ಆ್ಯಂಕರ್. ಆದರೆ ಜನಪ್ರಿಯತೆಯೊಂದೇ ಒಂದು ಕಾರ್ಯಕ್ರಮವನ್ನು ಸಮರ್ಥಿಸಿಕೊಳ್ಳುವುದಕ್ಕಿರುವ ಮಾನದಂಡವೆ? ಆ ಜನಪ್ರಿಯತೆಗಾಗಿ ಅವರು ಅನುಸರಿಸಿದ ಕಾರ್ಯ ವಿಧಾನಗಳನ್ನು ನಾವು ಪರಿಶೀಲನೆಗೆ ಒಳಪಡಿಸಬೇಡವೇ? ಇಲ್ಲದಿದ್ದರೆ ಅನಂತ ಮೂರ್ತಿಗಿಂತ ಭೈರಪ್ಪ ಶ್ರೇಷ್ಠ ಎಂದೋ ಅಥವಾ ಗಾಂಧೀಜಿಗಿಂತ ಮೋದಿ ಶ್ರೇಷ್ಠ ಎಂದೋ ಹೇಳಬೇಕಾದೀತಲ್ಲವೇ?
    ಮಾರ್ಚ್ 23ರ ಔಟ್‍ಲುಕ್ ಪತ್ರಿಕೆಯು ಅರ್ನಾಬ್ ಗೋಸ್ವಾಮಿಯನ್ನು ಮುಖಪುಟದಲ್ಲಿ ಕೂರಿಸಿ, ‘TV ನ್ಯೂಸ್‍ನ ಕೊಲೆಗಾರ (THE MAN, WHO KILLED TV NEWS)’ ಎಂಬ ಶೀರ್ಷಿಕೆಯಲ್ಲಿ ಲೇಖನವನ್ನು ಪ್ರಕಟಿಸಿದೆ. ಒಂದು ವೇಳೆ ಡಿ.ಕೆ. ರವಿಯ ವಿಷಯದಲ್ಲಿ ಇದೇ ಮಾನದಂಡವನ್ನು ಕನ್ನಡ ಚಾನೆಲ್‍ಗಳಿಗೆ ಅನ್ವಯಿಸಿದರೆ ಶೀರ್ಷಿಕೆ ಹೇಗಿರಬಹುದು?

Wednesday, March 18, 2015

ಧರ್ಮ ವಿರೋಧಿಗಳನ್ನು ಸಮಾಜಕ್ಕೆ ಪರಿಚಯಿಸಿದ 3ರ ಬಾಲೆ

ಕಾಲ್ಪನಿಕ ಚಿತ್ರ
ಸುರತ್ಕಲ್
  ಮುಡಿಪು
  ಉಳ್ಳಾಲ
  ಬೋಳಂತೂರು
  ದಕ್ಷಿಣ ಕನ್ನಡ ಜಿಲ್ಲೆಯ ಈ ಪ್ರದೇಶಗಳು ಕಳೆದ ಎರಡ್ಮೂರು ವಾರಗಳಿಂದ ಸುದ್ದಿಯಲ್ಲಿವೆ. ಹಾಗಂತ, ಈ ಪ್ರದೇಶಗಳಿಗೆ ಬೃಹತ್ ಕೈಗಾರಿಕೆಗಳೋ, ಪರಮಾಣು ವಿದ್ಯುತ್ ಸ್ಥಾವರಗಳೋ ಬರುತ್ತಿಲ್ಲ. ರಾಜ್ಯ ಸರಕಾರ ಮೊನ್ನೆ ವಿಧಾನ ಸಭೆಯಲ್ಲಿ ಮಂಡಿಸಿದ ಬಜೆಟ್‍ನಲ್ಲಿ ಈ ಪ್ರದೇಶಗಳಿಗೆ ವಿಶೇಷ ಯೋಜನೆಗಳನ್ನೂ ಪ್ರಸ್ತಾಪಿಸಿಲ್ಲ. ಅದೇ ಗುಳಿ ಬಿದ್ದ ರಸ್ತೆಗಳು, ‘ಕಾಮಗಾರಿ ಪ್ರಗತಿಯಲ್ಲಿದೆ’ ಎನ್ನುವ ಬೋರ್ಡ್‍ಗಳು, ನೀರು- ವಿದ್ಯುತ್, ಗ್ಯಾಸ್ ವಿತರಣೆಯ ಸಮಸ್ಯೆಗಳು.. ಎಲ್ಲವೂ ಈ ಪ್ರದೇಶಗಳಲ್ಲಿ ಸಾಮಾನ್ಯವಾಗಿವೆ. ವಿಚಿತ್ರ ಏನೆಂದರೆ, ಈ ಪ್ರದೇಶಗಳು ಸುದ್ದಿಯಲ್ಲಿರುವುದು ಈ ಮೂಲಭೂತ ಸಮಸ್ಯೆಗಳ ಕಾರಣದಿಂದಾಗಿ ಅಲ್ಲ. ಹೆಣ್ಣು ಗಂಡಿನ ಕಾರಣಕ್ಕಾಗಿ, ಅನೈತಿಕ ಪೊಲೀಸ್‍ಗಿರಿಯ ಕಾರಣಕ್ಕಾಗಿ, ಅತ್ಯಾಚಾರದ ಕಾರಣಕ್ಕಾಗಿ. ಇಲ್ಲಿ ನಡೆಯುವ ಪ್ರತಿಭಟನೆಗಳು ಎಷ್ಟು ಧರ್ಮವಿರೋಧಿ ಸ್ವರೂಪದಲ್ಲಿರುತ್ತವೆಯೆಂದರೆ,  ಅಪರಾಧವನ್ನು ನೋಡುವ ಬದಲು ಆರೋಪಿಯ ಧರ್ಮವನ್ನು ನೋಡಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಈ ವಿಷಯದಲ್ಲಿ ಪ್ರಥಮ ಬಹುಮಾನವನ್ನು ಸಂಘಪರಿವಾರಕ್ಕೆ ನೀಡಬೇಕು. ಶಿಕ್ಷಕಿಯೋರ್ವರು ಸ್ನಾನ ಮಾಡುತ್ತಿದ್ದಾಗ ಅದನ್ನು ವಿಡಿಯೋ ಚಿತ್ರೀಕರಿಸಿದ ಘಟನೆ ವಾರಗಳ ಹಿಂದೆ ಬೋಳಂತೂರಿನಲ್ಲಿ ನಡೆಯಿತು. ಮಹಿಳೆ ಹಿಂದೂ ಧರ್ಮದವರಾದರೆ, ಚಿತ್ರೀಕರಿಸಿದವ ಇಸ್ಲಾಮ್ ಧರ್ಮದವ. ಈ ಕೃತ್ಯವನ್ನು ಖಂಡಿಸಿ ಸಂಘಪರಿವಾರವು ಆ ವಲಯದಲ್ಲಿ ಈ ವರೆಗೆ ನಡೆಯದಷ್ಟು ದೊಡ್ಡ ಮಟ್ಟದ ಪ್ರತಿಭಟನಾ ಸಭೆಯನ್ನು ಏರ್ಪಡಿಸಿತು. ರಾಲಿಯನ್ನು ಹಮ್ಮಿಕೊಂಡಿತು. ಸಂಘದ ಪ್ರಮುಖ ನಾಯಕರು ಆ ಪ್ರದೇಶದಲ್ಲಿ ಸೇರಿ ಇಡೀ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಆ ಯುವಕನ ನೆಪದಲ್ಲಿ ಆತನ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರು. ಇದಾದ ಬಳಿಕ ಉಳ್ಳಾಲದಲ್ಲಿ 3ರ ಹರೆಯದ ಬಾಲೆಯ ಮೇಲೆ ಅತ್ಯಾಚಾರ ನಡೆಯಿತು. (ಇದು ಬಹುತೇಕ ದೃಢಪಟ್ಟಿದೆ). ಬಾಲೆ ಮುಸ್ಲಿಮ್ ಸಮುದಾಯಕ್ಕೆ ಸೇರಿದವಳಾದರೆ ಅತ್ಯಾಚಾರದ ಆರೋಪ ಹೊತ್ತವ ಹಿಂದೂ ಸಮುದಾಯಕ್ಕೆ ಸೇರಿದವ. ವಿಷಾದ ಏನೆಂದರೆ, ಬೋಳಂತೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡವರು ಈ ಬಾಲೆಯ ಮೇಲಿನ ಅತ್ಯಾಚಾರವನ್ನು ವಿರೋಧಿಸಿ ಪ್ರತಿಭಟಿಸುವುದು ಬಿಡಿ, ಒಂದು ಗೆರೆಯ ಖಂಡನಾ ಹೇಳಿಕೆಯನ್ನೂ ಹೊರಡಿಸಲಿಲ್ಲ. ತೀರ್ಥಹಳ್ಳಿಯ ನಂದಿತಾ ಎಂಬ ಬಾಲಕಿಯ ಸಾವನ್ನು ಮುಂದಿಟ್ಟುಕೊಂಡು ತೀವ್ರ ಪ್ರತಿಭಟನೆಯನ್ನು ನಡೆಸಿದ ಮತ್ತು ಹೆಣ್ಣಿನ ಮಾನದ ಬಗ್ಗೆ ಹತ್ತು-ಹಲವು ರೀತಿಯಲ್ಲಿ ವ್ಯಾಖ್ಯಾನಿಸಿದ ಸಂಘಪರಿವಾರವು ಈ ಬಾಲೆಗೆ ಬೆಂಬಲ ಸೂಚಿಸುವ ಮತ್ತು ಅಪರಾಧವನ್ನು ಖಂಡಿಸುವ ಸಣ್ಣ ಪ್ರಯತ್ನವನ್ನೂ ನಡೆಸಲಿಲ್ಲ. ಬೋಳಂತೂರು ಪ್ರಕರಣದಲ್ಲಿ ಮುಸ್ಲಿಂ ಸಮುದಾಯದ ಮಂದಿ ಆರೋಪಿಯ ವಿರುದ್ಧ ಕನಿಷ್ಠ ಆಕ್ರೋಶವನ್ನಾದರೂ ವ್ಯಕ್ತಪಡಿಸಿದ್ದರು. ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದ್ದರು.(ಇಷ್ಟು ಸಾಕು ಎಂದಲ್ಲ).  ಆದರೆ, ಕನಿಷ್ಠ ಈ ಮಟ್ಟದ ಪ್ರತಿಕ್ರಿಯೆ ಕೂಡಾ ಉಳ್ಳಾಲ ಪ್ರಕರಣದಲ್ಲಿ ಸಂಘಪರಿವಾರದಿಂದ ವ್ಯಕ್ತವಾಗಿಲ್ಲ. ಏನಿವೆಲ್ಲ? ಯಾಕೆ ಈ ಬಗೆಯ ಆಷಾಡಭೂತಿತನದ ಪ್ರಕಿಯೆಗಳು ನಡೆಯುತ್ತಿವೆ? ನಾಗರಿಕ ಸಮಾಜವೇಕೆ ಈ ಬಗೆಯ ಹಿಪಾಕ್ರಸಿಯನ್ನು ಪ್ರಶ್ನಿಸುವ ಉಮೇದು ತೋರಿಸುತ್ತಿಲ್ಲ?
 ನಿಜವಾಗಿ ಅಪರಾಧಗಳನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸುವುದೇ ದೊಡ್ಡ ತಪ್ಪು. ‘ಅತ್ಯಾಚಾರ ಮಾಡಿದ ಹಿಂದೂ’, ‘ವೀಡಿಯೋ ಚಿತ್ರೀಕರಿಸಿದ ಮುಸ್ಲಿಮ್..’ ಎಂದೆಲ್ಲಾ ಹೇಳುವುದೇ ಅನೈತಿಕವಾದದ್ದು. ಅಪರಾಧಗಳನ್ನು ಧರ್ಮಗಳ ಮೇಲೆ ಹೇರುವುದಕ್ಕೆ ನನ್ನ ಪ್ರಬಲ ವಿರೋಧವಿದೆ. ಆದರೂ, ಈ ಲೇಖನದ ಆರಂಭದಲ್ಲಿ ಹಿಂದೂ-ಮುಸ್ಲಿಮ್ ಎಂಬ ಪದಗಳನ್ನು ಬಳಸಿದ್ದೇನೆ. ಇದು ಸಂಘಪರಿವಾರದ ಹಿಪಾಕ್ರಸಿಯನ್ನು ಸ್ಪಷ್ಟಪಡಿಸುವುದಕ್ಕೆ ಮಾಡಲಾದ ಉಲ್ಲೇಖವೇ  ಹೊರತು ಇದರಲ್ಲಿ ಇನ್ನಾವ ಉದ್ದೇಶವೂ ಅಲ್ಲ. ನಿಜವಾಗಿ, ಅಪರಾಧಿಗಳಿಗೆ ಯಾವ ಧರ್ಮವೂ ಇಲ್ಲ. ಹಿಂದೂ ಅತ್ಯಾಚಾರಿ, ಮುಸ್ಲಿಮ್ ಕೋಮುವಾದಿ, ಕ್ರೈಸ್ತ ಭ್ರಷ್ಟಾಚಾರಿ.. ಎಂಬ ಪದಗಳೇ ಅನ್ಯಾಯದ್ದು. ಈ ಪದಗಳಾಚೆಗೆ ಸಮಾಜದ ಮನಸ್ಥಿತಿಯನ್ನು ಬೆಳೆಸುವ ಪ್ರಯತ್ನಗಳು ನಡೆಯಬೇಕಾಗಿದೆ. ದುರಂತ ಏನೆಂದರೆ, ಸಂಘಪರಿವಾರವು ಸಮಾಜವನ್ನು ಈ ರೀತಿಯಲ್ಲಿ ವಿಭಜಿಸಲು ಶ್ರಮಪಡುತ್ತಿದೆ. ಅದು ಅತ್ಯಾಚಾರವನ್ನೋ, ವೀಡಿಯೋ ಚಿತ್ರೀಕರಣವನ್ನೋ ಪ್ರಶ್ನಿಸುತ್ತಿಲ್ಲ. ಚಿತ್ರಿಸಿದವನ ಧರ್ಮವನ್ನು ನೋಡಿ ಅದು ಪ್ರತಿಭಟನೆ ಹಮ್ಮಿಕೊಳ್ಳಬೇಕೋ ಬೇಡವೋ ಎಂಬುದನ್ನು ನಿರ್ಧರಿಸುತ್ತದೆ. ಅಂದರೆ ಸಂಘಪರಿವಾರಕ್ಕೆ ಹೆಣ್ಣಿನ ಮಾನವಾಗಲಿ, ಸುರಕ್ಷಿತತೆಯಾಗಲಿ ಮುಖ್ಯವಲ್ಲ. ಒಂದು ವೇಳೆ ಅದಾಗಿರುತ್ತಿದ್ದರೆ 3ರ ಬಾಲೆಯ ಬದುಕು ಅದಕ್ಕೆ ಮುಖ್ಯವಾಗ ಬೇಕಿತ್ತು. ಆರೋಪಿಯ ಧರ್ಮ ನೋಡದೇ ಆ ಬಾಲೆಯ ಪರ ಮಾತಾಡುವ ಮತ್ತು ಆ ಕುಟುಂಬಕ್ಕೆ ಸಾಂತ್ವನ ಹೇಳುವ ಪ್ರಯತ್ನ ನಡೆಸಬೇಕಿತ್ತು. ಸುಳ್ಳಿನ ಕತೆ ಕಟ್ಟಿದ ಶಾಲಾಡಳಿತದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಬೇಕಿತ್ತು. ಆದರೆ, ಈ ಬಾಲೆಯ ಪ್ರಕರಣ ಎಂದಲ್ಲ, ಇದಕ್ಕೆ ಸಮಾನವಾದ ಯಾವ ಪ್ರಕಣಗಳಲ್ಲೂ ಸಂಘಪರಿವಾರ ಮಾತಾಡಿದ್ದೇ ಇಲ್ಲ. ಅಷ್ಟಕ್ಕೂ, ಈ ಪ್ರಕರಣದ ಪಾತ್ರಧಾರಿಗಳು ಅದಲು ಬದಲಾಗಿರುತ್ತಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು? ಸಂಘಪರಿವಾರದ ಪ್ರತಿಕ್ರಿಯೆ ಏನಾಗಿರುತ್ತಿತ್ತು?
 ಮಗುವಿನ ಮನಸ್ಸು ಶುಭ್ರವಾದುದು. ಅದಕ್ಕೆ ಹಿಂದೂವೋ ಮುಸ್ಲಿಮೋ ಗೊತ್ತಿಲ್ಲ. ತನ್ನನ್ನು ಕರೆದೊಯ್ಯುವ ವ್ಯಕ್ತಿಯನ್ನು ಅಂಕಲ್ ಎಂದು ಕರೆಯಬಲ್ಲುದೆ ಹೊರತು ಮುಸ್ಲಿಮ್ ಅಂಕಲ್ ಎಂದೋ ಹಿಂದೂ ಅಂಕಲ್ ಎಂದೋ ಅದು ಕರೆಯಲಾರದು. ಆದರೆ, ಸರಿ ಮತ್ತು ತಪ್ಪು, ಧರ್ಮ ಮತ್ತು ಅಧರ್ಮ, ನೈತಿಕತೆ ಮತ್ತು ಅನೈತಿಕ.. ಎಂಬುದನ್ನೆಲ್ಲ ಚೆನ್ನಾಗಿ ಬಲ್ಲ ಪ್ರೌಢ ಹೆಣ್ಣು ಮತ್ತು ಗಂಡುಗಳಿಬ್ಬರು ಪರಸ್ಪರ ಮಾತಾಡಿದರೆಂಬ  ಕಾರಣಕ್ಕಾಗಿ ಹಲ್ಲೆ ನಡೆಸುವ ಮಂದಿ ಇಂಥ ನೈತಿಕ-ಅನೈತಿಕತೆಗಳ ಬಗ್ಗೆ ಏನೊಂದೂ ಗೊತ್ತಿಲ್ಲದ ಬಾಲೆಗಾಗಿ ಯಾವ ಪೊಲೀಸ್‍ಗಿರಿಯನ್ನೂ ಮಾಡಿಲ್ಲ ಮತ್ತು ಮಾಡುತ್ತಿಲ್ಲ ಅನ್ನುವುದು ಅತ್ಯಂತ ವಿಷಾದನೀಯವಾದುದು. ಪ್ರತಿಯೊಂದನ್ನೂ ಹಿಂದೂ-ಮುಸ್ಲಿಮ್ ಎಂದು ವಿಭಜಿಸುತ್ತಾ ಹೋಗುವುದಕ್ಕೆ ಯಾವ ಅರ್ಥವೂ ಇಲ್ಲ. ಆದರೂ ಈ ಜಿಲ್ಲೆಯಲ್ಲಿ ಸದ್ಯ ಇಂಥದ್ದೊಂದು ಅಪಾಯಕಾರಿ ವಾತಾವರಣ ನಿರ್ಮಾಣವಾಗಿದೆ. ಮುಸ್ಲಿಮರ ವಿರುದ್ಧ ಹಿಂದೂ ಏನು ಮಾಡಿದರೂ ಸರಿ ಮತ್ತು ಸಮರ್ಥನೀಯ ಎಂಬ ಅಪಾಯಕಾರಿ ವೈರಸ್ ಎಲ್ಲೆಡೆ ಹಬ್ಬುತ್ತಿದೆ. ಇದು ಮುಸ್ಲಿಮರ ಮೇಲೂ ಪ್ರಭಾವ ಬೀರುತ್ತಿದೆ. ಅವರಲ್ಲೂ ಅದೇ ರೀತಿಯಾಗಿ ಆಲೋಚಿಸುವವರ ಸಂಖ್ಯೆ ವೃದ್ಧಿಸುತ್ತಿದೆ. ಇಂಥವರಿಗೆ ಹೆಣ್ಣಿನ ಮಾನ, ಗೌರವ, ಯಾವುದೂ ಮುಖ್ಯ ಅಲ್ಲ. ಹೆಣ್ಣು ಅವರಿಗೆ ಒಂದು ಸರಕು ಮಾತ್ರ. ಇನ್ನೊಂದು ಧರ್ಮದವರನ್ನು ದ್ವೇಷಿಸುವುದಕ್ಕೆ ಮಾತ್ರ ಬಳಕೆಗೀಡಾಗುವ ಸರಕು. ಆ ಉದ್ದೇಶ ಈಡೇರಿದ ಬಳಿಕ ಆ ಹೆಣ್ಣಿಗೂ ಅವರಿಗೂ ಯಾವ ಸಂಬಂಧವೂ ಇರುವುದಿಲ್ಲ. ಇದಕ್ಕೆ, ಅನೈತಿಕ ಪೊಲೀಸ್‍ಗಿರಿಯಲ್ಲಿ ಅವಮಾನಕ್ಕೆ ಒಳಗಾದ ಹೆಣ್ಣು ಮಕ್ಕಳೇ ಅತ್ಯುತ್ತಮ ಪುರಾವೆ. ಆದ್ದರಿಂದ, ಮಹಿಳಾ ವಿರೋಧಿ, ಧರ್ಮ ವಿರೋಧಿ ಮತ್ತು ಮನುಷ್ಯ ವಿರೋಧಿಯಾದ ಈ ಮಾನಸಿಕತೆಯಿಂದ ಜಿಲ್ಲೆಯನ್ನು ಪಾರು ಮಾಡುವ ಬಗ್ಗೆ ಸರ್ವಧರ್ಮೀಯರೂ (ಮುಖ್ಯವಾಗಿ ಧಾರ್ಮಿಕ ಮುಖಂಡರು) ಗಂಭೀರವಾಗಿ ಆಲೋಚಿಸಬೇಕಾಗಿದೆ. ಈ ಬಗೆಯ ಮಾನಸಿಕತೆ ಹಿಂದೂ-ಮುಸ್ಲಿಮ್ ಯಾರಲ್ಲೇ ಇರಲಿ, ಅವರನ್ನೆಲ್ಲ ಬಹಿರಂಗವಾಗಿ ತರಾಟೆಗೆ ಎತ್ತಿಕೊಳ್ಳುವ ಹಾಗೂ ಮನುಷ್ಯರನ್ನು ಮತ್ತು ಅವರ ಅಪರಾಧಗಳನ್ನು ಧರ್ಮದ ನೆಲೆಯಲ್ಲಿ ವಿಭಜಿಸದೇ ಪರಾಮರ್ಶಿಸುವ ವಾತಾವರಣವನ್ನು ಬೆಳೆಸಬೇಕಾಗಿದೆ. ಉಳ್ಳಾಲದ ಬಾಲೆಯೂ, ಬೋಳಂತೂರಿನ ಶಿಕ್ಷಕಿಯೂ ಮುಡಿಪುವಿನ ಶಾಲಾ ವಿದ್ಯಾರ್ಥಿಗಳೂ.. ಎಲ್ಲರೂ ನಮ್ಮವರೇ. ಅವರ ಮೇಲೆ ಆದ ಅನ್ಯಾಯವನ್ನು ಧರ್ಮ-ಜಾತಿಗಳ ಹಂಗಿಲ್ಲದೇ ಖಂಡಿಸೋಣ. ಆರೋಪಿಗಳನ್ನು ಯಾವ ಧರ್ಮಕ್ಕೂ ಸೇರಿಸದೆ ಬರೇ ಆರೋಪಿಗಳಾಗಿಯೇ ಕಾಣೋಣ. ನಮಗೆ ಶಿಕ್ಷಕಿಯ ಮಾನ ಮತ್ತು ಬಾಲೆಯ ಪ್ರಾಣ ಎರಡೂ ಮುಖ್ಯ. ಅದಕ್ಕೆ ಅಪಚಾರ ಎಸಗಿದವರಿಗೆ ಧರ್ಮವಿಲ್ಲ. ಅವರನ್ನು ನೆಪವಾಗಿಸಿಕೊಂಡು ಮನುಷ್ಯರನ್ನು ವಿಂಗಡಿಸಿದವರಿಗೂ ಧರ್ಮವಿಲ್ಲ. ಅವರು ಧರ್ಮ ರಕ್ಷಕರಾಗುವುದಕ್ಕೆ ಅರ್ಹರೂ ಅಲ್ಲ.

Monday, March 16, 2015

ಇಂಡಿಯಾಸ್ ಡಾಟರ್ ಮತ್ತು ಇಂಡಿಯಾಸ್ ನಾಗಾಲ್ಯಾಂಡ್

     ‘ನಾಗಾಗಳ ದೌರ್ಬಲ್ಯವನ್ನು ಬಹಿರಂಗಕ್ಕೆ ತಂದ ಘೋರ ಪಾತಕ' ಎಂಬ ಶೀರ್ಷಿಕೆಯ ಬರಹವನ್ನು ಶರೀಫುದ್ದೀನ್ ಖಾನ್‍ನ ಭಾವಚಿತ್ರದೊಂದಿಗೆ ಮಾರ್ಚ್ 4ರಂದು ಮುಖಪುಟದಲ್ಲಿ ಪ್ರಕಟಿಸಿದ ನಾಗಾಲ್ಯಾಂಡ್‍ನ ಪ್ರಮುಖ ಪತ್ರಿಕೆ ದಿ ಮಿರುಂಗ್ ಎಕ್ಸ್ ಪ್ರೆಸ್, ಆ ಬರಹದುದ್ದಕ್ಕೂ ನಾಗಾಗಳ ಸ್ವಾಭಿಮಾನವನ್ನು ಪ್ರಶ್ನಿಸುತ್ತಾ ಹೋಯಿತು. ನಿಜವಾಗಿ, ಅದು ಸುದ್ದಿಯೋ ವರದಿಯೋ ಅಥವಾ ಲೇಖನವೋ ಆಗಿರಲಿಲ್ಲ. ನಾಗಾಲ್ಯಾಂಡ್‍ನ ಪ್ರಭಾವಿ ಸಂಘಟನೆಗಳಾದ ನಾಗಾ ಕೌನ್ಸಿಲ್ ದಿಂಪುರ್ (NCD) ಮತ್ತು ನಾಗಾ ವುಮೆನ್ ಹೋಹೋ ದಿಂಪುರ್ (NWHD) ಎಂಬೆರಡು ಸಂಘಟನೆಗಳು ಹೊರಡಿಸಿದ ಜಂಟಿ ಹೇಳಿಕೆಗಳಷ್ಟೇ ಆಗಿದ್ದುವು. ಸಾಮಾನ್ಯವಾಗಿ, ಸಂಘಟನೆಗಳ ಹೇಳಿಕೆಗಳನ್ನು ಪತ್ರಿಕೆಗಳು ಮುಖಪುಟದಲ್ಲಿ ಪ್ರಕಟಿಸುವುದಿಲ್ಲ. ಎಲ್ಲ ಪತ್ರಿಕೆಗಳೂ ಅವುಗಳಿಗಾಗಿ ಒಳಪುಟಗಳಲ್ಲಿ ಸ್ಥಳವನ್ನು ವಿೂಸಲಿಟ್ಟಿರುತ್ತವೆ. ಆದರೆ ಮಿರುಂಗ್ ಎಕ್ಸ್ ಪ್ರೆಸ್ ಈ ಸಂಪ್ರದಾಯವನ್ನು ಮುರಿದುದಷ್ಟೇ ಅಲ್ಲ, ಆ ಪತ್ರಿಕಾ ಹೇಳಿಕೆಯನ್ನು ವೈಭವೀಕರಿಸಿತು. ‘ಬಾಂಗ್ಲಾದೇಶಿಗಳ ಅಕ್ರಮ ಒಳ ನುಸುಳುವಿಕೆಯನ್ನು ಮತ್ತು ರಾಜ್ಯದಲ್ಲಿ ಅವರು ನೆಲೆಸುವುದನ್ನು ತಡೆಯುವ ಹೊಣೆಗಾರಿಕೆಯನ್ನು ನಾಗಾಗಳು ವಹಿಸಿಕೊಳ್ಳದಿದ್ದರೆ ನಮ್ಮ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲಿನ ದಾಳಿಯಲ್ಲಿ ಹೆಚ್ಚಳವಷ್ಟೇ ಆದೀತು' ಎಂದೂ ಬರೆಯಿತು. ‘ನಾಗಾಗಳು ಬರೇ ಖಂಡಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಅವರೊಂದಿಗೆ ವೈವಾಹಿಕ ಸಂಬಂಧವನ್ನು ಬೆಳೆಸುವುದು ಅಪಾಯಕಾರಿ..' ಎಂದಿತು. NCDಯ ಕೋಶಾಧಿಕಾರಿ ಚಿತೆನ್ ಕೊನ್ಯಾಕ್ ಮತ್ತು NWHDಯ ಅಧ್ಯಕ್ಷೆ ಹುಕೇಲಿ ವೊಟ್ಸಾರ ಸಹಿಯಿದ್ದ ಈ ಜಂಟಿ ಹೇಳಿಕೆಯ ಜೊತೆಜೊತೆಗೇ ಮಾರ್ಚ್ 3ರಂದು ನಾಗಾ ಸ್ಟೂಡೆಂಟ್ ಫೆಡರೇಶನ್ (NSF) ಕೂಡ ಒಂದು ಪ್ರಚೋದನಾತ್ಮಕ ಹೇಳಿಕೆಯನ್ನು ಹೊರಡಿಸಿತು. ಅದರ ಅಧ್ಯಕ್ಷ ತೊಂಗ್‍ಪಾಂಗ್ ಒಝುಕು ಅವರ ಸಹಿ ಇದ್ದ ಹೇಳಿಕೆಯಲ್ಲಿ, ‘ಶರೀಫುದ್ದೀನ್ ಎಸಗಿದ ಅತ್ಯಾಚಾರವು ಇಡೀ ನಾಗಾ ಸಮುದಾಯಕ್ಕೇ ಎಸೆದ ಸವಾಲು' ಎನ್ನಲಾಯಿತು. ‘ಅಕ್ರಮ ಬಂಗ್ಲಾದೇಶಿಗಳಾದ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ನಿಧಾನವಾಗಿ ಇವರು ನಮ್ಮ ನಾಡಲ್ಲಿ ನಮ್ಮನ್ನೇ ನಿಯಂತ್ರಿಸುವಷ್ಟು ಪ್ರಬಲರಾಗುತ್ತಾರೆ. ಅವರಿಗೆ ನೆಲೆಸಲು ಅವಕಾಶ ನೀಡುವುದೇ ತಪ್ಪು..’ ಎಂದು ಷರಾ ಬರೆಯಿತು. ಅಂದಹಾಗೆ, ಶರೀಫುದ್ದೀನ್‍ನ ಮೇಲೆ ಅತ್ಯಾಚಾರದ ಆರೋಪ ದಾಖಲಾದದ್ದು ಫೆ. 23ರಂದು. ಫೆ. 24ರಂದು ಆತನ ಬಂಧನವಾಗಿತ್ತು. ಪತ್ರಿಕೆಗಳಲ್ಲಿ ಈ ಸುದ್ದಿ ಪ್ರಕಟವಾದದ್ದೋ ಮಾರ್ಚ್ 3ರಂದು. ಕಾಕತಾಳೀಯವೇನೆಂದರೆ, ಅಕ್ರಮ ಬಂಗ್ಲಾದೇಶಿ ವಲಸಿಗರ(IBI) ವಿರುದ್ಧ ರಾಜ್ಯವ್ಯಾಪಿ ಅಭಿಯಾನ ಕೈಗೊಳ್ಳುವುದರ ಅಂಗವಾಗಿ ನಾಗಾ ಸ್ಟೂಡೆಂಟ್ ಫೆಡರೇಶನ್ (NSF) ಫೆ. 24ರಂದೇ ವಿವಿಧ ಸಂಘಟನೆಗಳೊಂದಿಗೆ ಚರ್ಚೆಯನ್ನು ಏರ್ಪಡಿಸಿತ್ತು. NCD, NWHD, ದಿಂಪುರ್ ನಾಗಾ ಮದರ್ಸ್ ಅಸೋಸಿಯೇಶನ್, ದಿಂಪುರ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ (DCCI) ಮತ್ತು ದಿಂಪುರ್ ಪಟ್ಟಣದ ಸ್ಥಳೀಯ ನಾಗರಿಕರನ್ನು ಸೇರಿಸಿಕೊಂಡು ನಡೆಸಲಾದ ಆ ಚರ್ಚೆಯಲ್ಲಿ ಬಂಗ್ಲಾದೇಶೀಯರನ್ನು ತಡೆಗಟ್ಟುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು. ಈ ಸಭೆಯ ಮರುದಿನ NSF ನ ಅಧ್ಯಕ್ಷ ತೋಂಗ್‍ಪಾಂಗ್ ಒಝುಕು ಅವರು ಒಂದು ಹೇಳಿಕೆಯನ್ನು ಹೊರಡಿಸಿದರು. ನಾಗಾಲ್ಯಾಂಡ್‍ನಲ್ಲಿ ಪರ್ಯಾಯ ಸರಕಾರದಂತೆ ಕಾರ್ಯಾಚರಿಸುತ್ತಿರುವ ಇಸಾಕ್ ಮುಯಿವಾ ನೇತೃತ್ವದ ನ್ಯಾಶನಲ್ ಸೋಶಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (NSCN) ಎಂಬ ಸಶಸ್ತ್ರ ಸಂಘಟನೆಯು ತೆರಿಗೆ ಸಂಗ್ರಹಕ್ಕಾಗಿ ನೂರ್‍ಜಹಾನ್ ಹುಸೇನ್‍ನನ್ನು ನೇಮಿಸಿರುವುದನ್ನು ಆ ಹೇಳಿಕೆಯಲ್ಲಿ ಅವರು ಪ್ರಬಲವಾಗಿ ಖಂಡಿಸಿದರು. ಈ ನೇಮಕದ ಸುದ್ದಿಯು ನಿಜವೇ ಆಗಿದ್ದರೆ ಅದು ಇಡೀ ನಾಗಾಗಳಿಗೆ ಮಾಡುವ ಅವಮಾನ ಎಂದರು. ವಿಶೇಷ ಏನೆಂದರೆ, ಶರೀಫುದ್ದೀನ್ ಖಾನ್‍ನ ಬಂಧನದ ಮೂರು ದಿನಗಳ ಬಳಿಕ ಫೆ. 27ರಂದು ಮೋನ್ ಜಿಲ್ಲೆಯ ಕೊನ್ಯಾಕ್ ಬುಡಕಟ್ಟಿಗೆ ಸೇರಿದ 39 ವರ್ಷದ ನಾಗಾ ವ್ಯಕ್ತಿಯೋರ್ವ 6 ವರ್ಷದ ಬಾಲೆಯ ಮೇಲೆ ಅತ್ಯಾಚಾರ ನಡೆಸಿದ್ದ. ಶವಸಂಸ್ಕಾರ ವೊಂದರಲ್ಲಿ ಪಾಲ್ಗೊಂಡು ಹಿಂತಿರುಗುವ ವೇಳೆ ಆತ ಈ ಕೃತ್ಯವನ್ನು ಎಸಗಿದ್ದ. ಪತ್ರಿಕೆಗಳಲ್ಲಿ ಇದೂ ಸುದ್ದಿಗೀಡಾಗಿತ್ತು. ಆದರೆ ಶರೀಫುದ್ದೀನ್‍ನ ಕುರಿತು ಮಾತಾಡಿದ ಯಾವ ಸಂಘಟನೆಗಳೂ ಈ ಕೃತ್ಯದ ಬಗ್ಗೆ ತಪ್ಪಿಯೂ ಉಲ್ಲೇಖಿಸಲಿಲ್ಲ. ನಾಗಾಗಳ ಸ್ವಾಭಿಮಾನದ ಪ್ರಶ್ನೆಯಾಗಿಯೂ ಅದು ಕಾಡಲಿಲ್ಲ. ಹೀಗಿರುತ್ತಾ, ಈ ಇಡೀ ಘಟನೆಯನ್ನು ನಾವು ‘ಅತ್ಯಾಚಾರ ವಿರೋಧಿ ಸಾರ್ವಜನಿಕ ಆಕ್ರೋಶ'ವಾಗಿ ವ್ಯಾಖ್ಯಾನಿಸುವುದು ಎಷ್ಟು ಸರಿ? ಅತ್ಯಾಚಾರಿಗಳಿಗೆ ತ್ವರಿತವಾಗಿ ಶಿಕ್ಷೆ ಜಾರಿಯಾಗದಿರುವುದನ್ನು ಇದಕ್ಕೆ ಕಾರಣವಾಗಿ ಕೆಲವರು ಮುಂದಿಡುವುದು ಎಷ್ಟರ ಮಟ್ಟಿಗೆ ಸಮರ್ಥನೀಯ? ಅಷ್ಟಕ್ಕೂ, ನಾಗಾ ಸಂಸ್ಕøತಿಯಲ್ಲಿ ಹೆಣ್ಣು ಮಕ್ಕಳಿಗೆ ಗೌರವದ ಸ್ಥಾನವಿದೆ ಎಂಬುದು ಅಥವಾ 2013ರಲ್ಲಿ ಈ ದೇಶದಲ್ಲಿ ದಾಖಲಾದ 33 ಸಾವಿರ ಅತ್ಯಾಚಾರ ಪ್ರಕರಣ ಗಳಲ್ಲಿ 73% ಪ್ರಕರಣಗಳೂ ಬಿದ್ದು ಹೋಗಿವೆ ಎಂಬುದು ನಿಜವೇ ಆಗಿರಬಹುದು. ಆದರೆ ಶರೀಫುದ್ದೀನ್ ಖಾನ್‍ನ ಮೇಲೆ ನಡೆದ ದಾಳಿಯು ಇವುಗಳಿಗಾಗಿ ಖಂಡಿತ ಅಲ್ಲ. ಈ ವಾದವನ್ನು ಸಮರ್ಥಿಸುವುದಕ್ಕೆ ಅತ್ಯಾಚಾರಕ್ಕೀಡಾದ ಆ 6ರ ಬಾಲೆ ಅನುಮತಿಸುವುದೂ ಇಲ್ಲ. ಅಲ್ಲದೇ 2013ರಲ್ಲಿ ನಾಗಾಲ್ಯಾಂಡಿನಲ್ಲಿ ಮಹಿಳಾ ದೌರ್ಜನ್ಯದ 51 ಪ್ರಕರಣಗಳು ನಡೆದಿವೆ ಎಂಬುದೂ ಈ ವಾದವನ್ನು ಅಲ್ಲಗಳೆಯುತ್ತದೆ. ನಿಜವಾಗಿ, ಶರೀಫುದ್ದೀನ್‍ನ ಮೇಲೆ ಮಾಡಲಾದ ದಾಳಿಗೆ ಅತ್ಯಾಚಾರ ಕಾರಣ ಆಗಿರಲಿಲ್ಲ. ಆತನಿಗೆ ತೊಡಿಸಲಾದ ಹೊರಗಿನವ (Outsider) ಎಂಬ ಹಣೆಪಟ್ಟಿಯೇ ಕಾರಣವಾಗಿತ್ತು. ಹಾಗಂತ, ಒಳಗಿನವರು ಮತ್ತು ಹೊರಗಿನವರು ಎಂಬ ಈ ವಿಭಜನೆಯು ನಾಗಾಲ್ಯಾಂಡಿನ ವಿಶೇಷತೆಯೇನೂ ಅಲ್ಲ. ಬಿಜೆಪಿ ಮತ್ತು ಸಂಘಪರಿವಾರ ಈ ದೇಶದಾದ್ಯಂತ ಇವತ್ತು ಇದೇ ಭಾಷೆಯಲ್ಲಿ ಮಾತಾಡುತ್ತಿದೆ. ಮುಸ್ಲಿಮರನ್ನು ಹೊರಗಿನವರೆಂದು ಕರೆಯುತ್ತಾ ಅವರ ಪ್ರತಿ ಅಪರಾಧವನ್ನೂ ಹಿಂದೂ ವಿರೋಧಿಯಂತೆ ಚಿತ್ರಿಸುತ್ತಿದೆ. ಹಿಂದೂ ಯುವತಿಯ ಮೇಲೆ ಹಿಂದೂ ಯುವಕ ಅತ್ಯಾಚಾರ ಮಾಡಿದರೆ ಅದು ಬರೇ ಅತ್ಯಾಚಾರವಾಗಿಯೂ ಮುಸ್ಲಿಮನೋರ್ವ ಅತ್ಯಾಚಾರವೆಸಗಿದರೆ ಅದು ಹಿಂದೂ ಧರ್ಮ, ಸಂಸ್ಕøತಿ, ಗೌರವ, ಸ್ವಾಭಿಮಾನಗಳ ಮೇಲಿನ ಹಲ್ಲೆಯಾಗಿಯೂ ವ್ಯಾಖ್ಯಾನಿಸಲಾಗುತ್ತದೆ. ತೀರ್ಥಹಳ್ಳಿಯ ನಂದಿತಾ, ವಿೂರತ್‍ನ ಪ್ರೇಮ ಪ್ರಕರಣಗಳು ಇದಕ್ಕೆ ಅತ್ಯುತ್ತಮ ಉದಾಹರಣೆಗಳಾಗಿವೆ. ಅಪರಾಧಿಯ ಧರ್ಮವನ್ನು ಪರಿಗಣಿಸಿ ಅಪರಾಧದ ತೀವ್ರತೆಯನ್ನು ಲೆಕ್ಕ ಹಾಕುವ ಈ ರೋಗ ಇವತ್ತು  ಧರ್ಮಗಳ ಹಂಗಿಲ್ಲದೇ ದೇಶದಾದ್ಯಂತ ವ್ಯಾಪಿಸಿದೆ. 1979ರಲ್ಲಿ ಅಸ್ಸಾಮ್‍ನಲ್ಲಿ ಅಸ್ಸಾಮ್ ಗಣ ಪರಿಷತ್ ಎಂಬ ವಿದ್ಯಾರ್ಥಿ ಸಂಘಟನೆಯು ಒಳಗಿನವರು ಮತ್ತು ಹೊರಗಿನವರು (ಅಕ್ರಮ ಬಂಗ್ಲಾದೇಶಿ ವಲಸಿಗರು) ಎಂಬ ವಿಭಜನಾ ಆಂದೋಲನವನ್ನು ಪ್ರಾರಂಭಿಸಿತು. 1983ರಲ್ಲಿ ಅಸ್ಸಾಮ್‍ನ ನೆಲ್ಲಿಯಲ್ಲಿ ನಡೆದ ಮುಸ್ಲಿಮರ ಸಾಮೂಹಿಕ ಹತ್ಯಾಕಾಂಡದಲ್ಲಿ ಈ ವಿಭಜನಾ ಚಳವಳಿಗೆ ದೊಡ್ಡ ಪಾತ್ರವಿತ್ತು. ನಿಜವಾಗಿ, ಅಸ್ಸಾಮ್ ಮತ್ತು ನಾಗಾಲ್ಯಾಂಡ್‍ಗಳು ಪರಸ್ಪರ ಗಡಿಗಳನ್ನು ಹಂಚಿಕೊಳ್ಳುತ್ತಿರುವ ಅಕ್ಕ-ಪಕ್ಕದ ರಾಜ್ಯಗಳು. ಅಲ್ಲದೇ ನಾಗಾಲ್ಯಾಂಡ್ ಎಂಬುದು ಬುಡಕಟ್ಟುಗಳೇ ತುಂಬಿರುವ ರಾಜ್ಯ. ಶರೀಫುದ್ದೀನ್‍ನ ಮೇಲೆ ಹಲ್ಲೆ ನಡೆಸಲಾದ ದಿಂಪುರ್ ಆ ರಾಜ್ಯದ ಏಕೈಕ ವ್ಯಾಪಾರಿ ನಗರ. ಈ ನಗರದಲ್ಲಿ ಪ್ರಮುಖ ವ್ಯಾಪಾರ-ವಹಿವಾಟುಗಳನ್ನೆಲ್ಲ ನಡೆಸುತ್ತಿದ್ದುದು ಹಿಂದಿ ಮಾತಾಡುವ ಉತ್ತರ ಭಾರತೀಯರಾಗಿದ್ದರು. ಈ ಕ್ಷೇತ್ರದಲ್ಲಿ ಸ್ಥಳೀಯ ಬುಡಕಟ್ಟುಗಳ ಪಾತ್ರ ಏನೇನೂ ಇರಲಿಲ್ಲ. ಇಂಥ ಸ್ಥಿತಿಯಲ್ಲಿ ಅಸ್ಸಾಮ್‍ನ ಬರಾಕ್ ಪ್ರದೇಶದ ಮುಸ್ಲಿಮರು ಸಣ್ಣ ವ್ಯಾಪಾರಿಗಳಾಗಿ ದಿಂಪುರ್‍ಗೆ ಆಗಮಿಸಿದರು. 1990ರ ಬಳಿಕ ಸರಕಾರವು ಈ ನಗರದಲ್ಲಿ ಸಾಕಷ್ಟು ಕಮರ್ಷಿಯಲ್ ಕಾಂಪ್ಲೆಕ್ಸ್ ಸ್ಥಾಪಿಸಿತು ಮತ್ತು ಮುಸ್ಲಿಮರು ಅವುಗಳಲ್ಲಿ ವ್ಯಾಪಾರಿ ಮಳಿಗೆಗಳನ್ನು ತೆರೆದರು. ದಿಂಪುರ್‍ನಲ್ಲಿ ಬಹುಸಂಖ್ಯಾತರಾಗಿರುವುದು ಸುಮಿ (ಸೆಮಾ) ಬುಡಕಟ್ಟುಗಳು. ವಿವಿಧ ಉಗ್ರವಾದಿ ಸಂಘಟನೆಗಳಲ್ಲಿ ಹೆಚ್ಚಿರುವವರೂ ಇವರೇ. ಈ ಉಗ್ರವಾದಿ ಸಂಘಟನೆಗಳು ದಿಂಪುರ್‍ನ ಮೇಲೆ ಹಿಡಿತ ಸಾಧಿಸಲು ಆರಂಭದಿಂದಲೂ ಯತ್ನಿಸುತ್ತಿವೆ. ಅದರ ಭಾಗವಾಗಿಯೇ ಮುಸ್ಲಿಮರನ್ನು ಹೊರಗಿನವರೆಂದು ಅವು ವಿಭಜಿಸುತ್ತಾ, ಸುಮಿಗಳ ಹಿತಾಸಕ್ತಿಯನ್ನು ಕಾಪಾಡುವ ಪೋಸು ಕೊಡುತ್ತಿವೆ. ಹೊರಗಿನವರು ಸುಮಿಗಳ ಮೇಲೆ ನಿಯಂತ್ರಣ ಸಾಧಿಸುತ್ತಿದ್ದಾರೆ ಎಂಬ ರೀತಿಯಲ್ಲಿ ಅವು ನಿರಂತರ ಪ್ರಚಾರ ನಡೆಸುತ್ತಿವೆ. ಈ ಪ್ರಚಾರದ ಫಲಿತಾಂಶವೇ ಶರೀಫುದ್ದೀನ್ ಘಟನೆ. ವಿಶೇಷ ಏನೆಂದರೆ, ಆತನ ಪತ್ನಿ ಓರ್ವ ಸುಮಿ ಬುಡಕಟ್ಟಿನವಳು. ಆತನ ಮೇಲೆ ಅತ್ಯಾಚಾರದ ಕೇಸು ದಾಖಲಿಸಿದ ಯುವತಿಯ ಮನೆಯಂತೂ ಈತನ ಬಾಡಿಗೆ ಮನೆಯ ಪಕ್ಕವೇ ಇದೆ. ಅವರ ನಡುವೆ ಕುಟುಂಬ ಸಂಬಂಧದಂಥ ಸಲುಗೆಯೂ ಇದೆ.
    1980ರ ದಶಕದಲ್ಲಿ ಅಸ್ಸಾಮ್‍ನ ಮೇಲಿಗಾಂವ್ ಜಿಲ್ಲೆಯಿಂದ ಬಂಗಾಳಿ ಭಾಷೆ ಮಾತಾಡುವ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿ ನಾಗಾಲ್ಯಾಂಡ್‍ಗೆ ಆಗಮಿಸಿದರು. ಇದಕ್ಕೆ ಕಾರಣವೂ ಇತ್ತು. ನಾಗಾಲ್ಯಾಂಡ್‍ನಲ್ಲಿ ಬಹುಸಂಖ್ಯಾತರಾಗಿರುವ ಸುಮಿ ಬುಡಕಟ್ಟುಗಳಿಗೆ ಕೃಷಿ, ವ್ಯವಸಾಯ ಗೊತ್ತಿರಲಿಲ್ಲ. ಅವು ಗುಡ್ಡಗಾಡು ಜನಾಂಗವಾಗಿತ್ತು. ಅಸ್ಸಾಮ್-ನಾಗಾ ಗಡಿ ಪ್ರದೇಶದಲ್ಲಿದ್ದ ಸಾವಿರಾರು ಎಕರೆ ಅರಣ್ಯ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಸುವುದಕ್ಕೆ ಅವರಿಗೆ ಬಂಗಾಳಿ ಮುಸ್ಲಿಮರ ಅಗತ್ಯವಿತ್ತು. ಆ ಉದ್ದೇಶದಿಂದ ಸುಮಿಗಳು ಮುಸ್ಲಿಮರನ್ನು ಕರೆಸಿಕೊಂಡರು. ರೈತಾಪಿ ವರ್ಗವಾಗಿದ್ದ ಮುಸ್ಲಿಮರು ಆ ಅರಣ್ಯ ಪ್ರದೇಶವನ್ನು ಕೃಷಿಯೋಗ್ಯ ಭೂಮಿಯಾಗಿ ಪರಿವರ್ತಿಸಿದರು ಮತ್ತು ಅಲ್ಲೇ ನೆಲೆಸಿದರು. ಈ ಕಾರಣದಿಂದಾಗಿ ಮುಸ್ಲಿಮರು ಮತ್ತು ಸುಮಿ ಬುಡಕಟ್ಟುಗಳ ನಡುವೆ ಗಾಢ ವಿಶ್ವಾಸ ಬೆಳೆಯಿತು. ಕೌಟುಂಬಿಕ ಮತ್ತು ವೈವಾಹಿಕ ಸಂಬಂಧಗಳು ಏರ್ಪಟ್ಟವು. ಈ ಸಂಬಂಧ ಎಷ್ಟು ಪರಿಚಿತ ಆಯಿತೆಂದರೆ, ಇವತ್ತಿನ ಹೊಸ ಪೀಳಿಗೆಯು ಸುಮಿಯಾನ್ (ಸುಮಿ+ಮಿಯಾನ್) ಆಗಿ ಗುರುತಿಸಿಕೊಳ್ಳುತ್ತಿದೆ. ಶರೀಫುದ್ದೀನ್ ಸುಮಿ ಬುಡಕಟ್ಟಿನ ಮಹಿಳೆಯನ್ನು ವಿವಾಹವಾಗಿರುವುದಕ್ಕೆ ಇಂಥದ್ದೊಂದು ಹಿನ್ನೆಲೆಯೂ ಇದೆ.. ಇವೆಲ್ಲವನ್ನೂ ಜೊತೆಗಿಟ್ಟು ನೋಡಿದರೆ ನಾಗಾಲ್ಯಾಂಡ್ ಪ್ರಕರಣವು ಅತ್ಯಾಚಾರಕ್ಕೆ ನೀಡಲಾದ ಶಿಕ್ಷೆಯಾಗಿ ಕಾಣಿಸುತ್ತಿಲ್ಲ. ಅದು ಸ್ಪಷ್ಟವಾಗಿ ಜನಾಂಗ ದ್ವೇಷಿ ಪ್ರಚಾರ ಯುದ್ಧದ ಫಲಿತಾಂಶ. ಇಂಥ ಪ್ರಚಾರ ಕೇವಲ ನಾಗಾಲ್ಯಾಂಡಿನಲ್ಲಿ ಮಾತ್ರ ನಡೆಯುತ್ತಿರುವುದಲ್ಲ. ಅಲ್ಲಿ ಬಂಗಾಳಿ ಭಾಷೆ ಮಾತಾಡುವ ಎಲ್ಲ ಮುಸ್ಲಿಮರನ್ನೂ ಬಂಗ್ಲಾದೇಶಿಗಳು ಎಂದು ದ್ವೇಷಿಸುವಂತೆಯೇ ದೇಶದ ಇತರ ಭಾಗಗಳಲ್ಲಿ ಮುಸ್ಲಿಮರನ್ನು ಅಕ್ರಮಣಕೋರರು ಎಂಬ ರೀತಿಯಲ್ಲಿ ವ್ಯಾಖ್ಯಾನಿಸಿ ದ್ವೇಷಿಸಲಾಗುತ್ತಿದೆ. ಸಾಧ್ವಿ ಪ್ರಾಚಿ, ಬಾಲಿಕಾ ಸರಸ್ವತಿ, ಅವೈದ್ಯನಾಥ್, ಯೋಗಿ ಆದಿತ್ಯನಾಥ್, ತೊಗಾಡಿಯಾ.. ಸಹಿತ ಒಂದು ನಿರ್ದಿಷ್ಟ ಗುಂಪು ಇಂಥದ್ದೊಂದು ಅಭಿಪ್ರಾಯದೊಂದಿಗೆ ದೇಶದಾದ್ಯಂತ ಸುತ್ತುತ್ತಿದೆ. ಮುಸ್ಲಿಮರನ್ನು ದ್ವೇಷಿಸುವಂತೆ, ಅವರೊಂದಿಗೆ ಮಾತಾಡದಂತೆ, ವ್ಯವಹಾರ ಮಾಡದಂತೆ, ಸಂಪರ್ಕ ಇಟ್ಟುಕೊಳ್ಳದಂತೆ ಈ ಗುಂಪು ಕರೆ ಕೊಡುತ್ತಾ ಬರುತ್ತಿದೆ. ಲವ್ ಜಿಹಾದ್, ಗೋಹತ್ಯೆ, ಮತಾಂತರಗಳ  ನೆಪದಲ್ಲಿ ಮುಸ್ಲಿಮರನ್ನೇ ಗುರಿ ಮಾಡುತ್ತಿದೆ. ನಿಜವಾಗಿ, ಇದೊಂದು ಯಶಸ್ವಿ ಪ್ರಚಾರ ತಂತ್ರ. ಗೋಬೆಲ್ಸ್ ಮಾಡಿದ್ದು ಕೂಡ ಇದನ್ನೇ. ಹೀಗೆ ನಿರಂತರವಾಗಿ ನಡೆಯುವ ಅಪಪ್ರಚಾರವು ಸಮಾಜವನ್ನು ಸಕಾರಾತ್ಮಕವಾಗಿ ಬಾಧಿಸುತ್ತದೆ. ಸಮಾಜವು ಅದರ ಪ್ರಭಾವಕ್ಕೆ ಒಳಗಾಗುತ್ತದೆ. ಅಂತಿಮವಾಗಿ ಅದು ಸಮಾಜದಿಂದ ಪಾಪಪ್ರಜ್ಞೆಯಿಲ್ಲದ ಕ್ರೌಯವನ್ನು ಮಾಡಿಸುತ್ತದೆ ಮತ್ತು ಅದನ್ನು ಸಮರ್ಥಿಸಿ ಕೊಳ್ಳುವಂತೆ ಪ್ರಚೋದಿಸುತ್ತದೆ. ಹಿಟ್ಲರ್‍ನ ಜರ್ಮನಿಯಲ್ಲಿ ನಡೆದದ್ದೂ ಇದುವೇ. ನಾಗಾಲ್ಯಾಂಡಿನಲ್ಲಿ ನಡೆದದ್ದೂ ಇದುವೇ. ಭವಿಷ್ಯದ ಭಾರತದಲ್ಲಿ ನಡೆಯಬಹುದಾದದ್ದೂ ಇದುವೇ.
   ಇಂಡಿಯಾಸ್ ಡಾಟರ್‍ಗೆ ನಿಷೇಧ ಬೀಳುವ ದೇಶದಲ್ಲಿ ಇಂಡಿಯಾವನ್ನೇ ನಾಗಾಲ್ಯಾಂಡ್ ಮಾಡಬಯಸುವವರಿಗೆ ಹಾರ-ತುರಾಯಿಯ ಸ್ವಾಗತವಿದೆ ಎನ್ನುವುದಕ್ಕೆ ಏನನ್ನಬೇಕು?

Tuesday, March 3, 2015

ಸುಡುವ ಪ್ರತಿಭಟನೆ ಮತ್ತು ಭಗವದ್ಗೀತೆ

A book is a book
It is paper, ink and print
If you stab it
It won't bleed
If you beat it
It won't bruise
If you burn it
It won't acream.....
  
    ಎಂದು ಆರಂಭವಾಗುವ ಈ ಕವನವನ್ನು ಅಮೇರಿಕದ ಪ್ರಸಿದ್ಧ ಕವಿ ಸ್ಟೀವನ್ ವಿನ್ಸೆಂಟ್ ಬೆನೆಟ್‍ರು 1942ರಲ್ಲಿ ಹಾಡಿದ್ದರು. ರೇಡಿಯೋದಲ್ಲಿ ಪ್ರಸಾರವಾದ ಅವರ ಈ ಹಾಡನ್ನು ಆಲಿಸಿ ಕೇಳುಗರು ಭಾವುಕರಾಗಿದ್ದರು. ‘They burnt the books’ (ಅವರು ಪುಸ್ತಕಗಳನ್ನು ಉರಿಸಿದರು) ಎಂಬ ಶೀರ್ಷಿಕೆಯ ಈ ಹಾಡು ಆ ಕಾಲದಲ್ಲಿ ಬಹು ಪ್ರಸಿದ್ಧಿಯನ್ನು ಪಡೆದಿತ್ತು. ಜನರು ಈ ಹಾಡಿನ ಪ್ರತಿ ಪದವನ್ನೂ ನಾಝಿ ಜರ್ಮನಿಯೊಂದಿಗೆ ತಾಳೆ ಹಾಕಿ ಅನುಭವಿಸಿದರು. ಹಿಟ್ಲರ್, ಗೋಬೆಲ್ಸ್ ರನ್ನು ನೆನೆಸಿಕೊಂಡು ಆ ಪದಗಳಿಗೆ ಜೀವ ತುಂಬಿದರು. ಪುಲಿಟ್ಝರ್ ಪ್ರಶಸ್ತಿ ವಿಜೇತರಾಗಿದ್ದ ಸ್ಟೀವನ್ ವಿನ್ಸೆಂಟ್ ಬೆನೆಟ್‍ರಿಗೆ ಸಾಕಷ್ಟು ಪ್ರಸಿದ್ಧಿಯನ್ನು ತಂದು ಕೊಟ್ಟ ಈ ಕವನದ ರಚನೆಗೆ ಒಂದು ಭಾವುಕ ಹಿನ್ನೆಲೆಯೂ ಇತ್ತು.
    ಜರ್ಮನಿಯ ಮೇಲೆ ಹಿಟ್ಲರ್ ಹಿಡಿತ ಸಾಧಿಸಿದ್ದ ಕಾಲ. ಈ ಹಿಡಿತ ಕೈ ತಪ್ಪದೇ ಇರಬೇಕಾದರೆ ಏನೇನೆಲ್ಲ ಮಾಡಬೇಕು ಎಂಬ ಬಗ್ಗೆ ಗೋಬೆಲ್ಸ್ ಕೆಲವು ಯೋಜನೆಗಳನ್ನು ರೂಪಿಸಿದ್ದ. ಸರ್ವಾಧಿಕಾರವನ್ನು ಖಂಡಿಸುವ ಮತ್ತು ಪ್ರಜಾತಂತ್ರವನ್ನು ಬೆಂಬಲಿಸುವ ಸರ್ವ ಸಾಹಿತ್ಯಗಳನ್ನೂ ಸುಡಬೇಕೆಂಬುದು ಆತನ ಯೋಜನೆಯಾಗಿತ್ತು. ಹಿಟ್ಲರ್ ವಿರೋಧಿ ಚಿಂತನೆಗಳು ಸಮಾಜದಲ್ಲಿ ಬೆಳೆಯದಂತೆ ಮಾಡುವುದಕ್ಕಾಗಿ ಪತ್ರಿಕೆ, ಸಂಗೀತ, ಸಿನಿಮಾ, ರೇಡಿಯೋ ಮುಂತಾದ ಎಲ್ಲವನ್ನೂ ಸೆನ್ಸಾರ್‍ಗೆ ಒಳಪಡಿಸಲು ಆತ ತೀರ್ಮಾನಿಸಿದ. ಸರ್ವಾಧಿಕಾರವನ್ನು ಇಷ್ಟಪಡುವ ಸಾಮಾಜಿಕ ವಾತಾವರಣವನ್ನು ನಿರ್ಮಿಸುವುದು ಆತನ ಉದ್ದೇಶವಾಗಿತ್ತು. ಅದಕ್ಕಾಗಿ ಯಾವ ಉಗ್ರ ನಿಲುವನ್ನು ತೆಗೆದುಕೊಳ್ಳುವುದಕ್ಕೂ ಹಿಂಜರಿಯಬಾರದೆಂದು ಆತ ಹಿಟ್ಲರ್‍ನಿಗೆ ಮನವರಿಕೆ ಮಾಡಿಸಿದ್ದ. ಅದರಂತೆ, ಜರ್ಮನಿಯ ಮಂದಿ ಓದಬಾರದ ಪುಸ್ತಕಗಳ ಪಟ್ಟಿ ಮಾಡುವಂತೆ ನಾಝಿ ವಿದ್ಯಾರ್ಥಿ ಸಂಘಟನೆಗಳು, ನಾಝಿ ಪರ ಪ್ರೊಫೆಸರ್‍ಗಳು ಮತ್ತು ಲೈಬ್ರರಿಯನ್‍ಗಳಿಗೆ ಗೋಬೆಲ್ಸ್ ಆದೇಶಿಸಿದ. ಹೀಗೆ ಪಟ್ಟಿ ಮಾಡಿದ ಬಳಿಕ 1983 ಮೇ 10ರಂದು ಜರ್ಮನಿಯಾದ್ಯಂತದ ಲೈಬ್ರರಿ ಮತ್ತು ಪುಸ್ತಕ ಮಾರಾಟ ಮಳಿಗೆಗಳ ಮೇಲೆ ನಾಝಿಗಳು ದಾಳಿ ಮಾಡಿದರು. ಹಿಟ್ಲರ್ ಪರ ಘೋಷಣೆಗಳನ್ನು ಕೂಗುತ್ತಾ ರಾತ್ರಿ ಟಾರ್ಚ್ ಲೈಟ್‍ನ ಸಹಾಯದಿಂದ ರಾಲಿ ನಡೆಸಿದರು. ದೊಡ್ಡದೊಂದು ಅಗ್ನಿಕುಂಡವನ್ನು ತಯಾರಿಸಿ ಸುಮಾರು 25 ಸಾವಿರಕ್ಕಿಂತಲೂ ಅಧಿಕ ಕೃತಿಗಳನ್ನು ಸುಟ್ಟು ಹಾಕಿದರು. ಜ್ಯಾಕ್ ಲಂಡನ್, ಅರ್ನೆಸ್ಟ್ ಹೆಮಿಂಗ್ವೆ, ಸಿಂಕ್ಲೇರ್ ಲೂವಿಸ್, ಹೆಲೆನ್ ಕೆಲ್ಲರ್, ಐನ್‍ಸ್ಟೀನ್ ಸಹಿತ ಹತ್ತಾರು ಪ್ರಸಿದ್ಧ ಸಾಹಿತಿಗಳ ಕೃತಿಗಳೂ ಅವುಗಳಲ್ಲಿದ್ದುವು. ಈ ಸುಡುವಿಕೆಯ ವಿರುದ್ಧ ಜಾಗತಿಕವಾಗಿಯೇ ಪ್ರತಿಭಟನೆಗಳು ಕಾಣಿಸಿಕೊಂಡವು. ಜಪಾನ್, ಚೀನಾ, ಅಮೇರಿಕ ಮುಂತಾದ ರಾಷ್ಟ್ರಗಳು ಹಿಟ್ಲರ್ ನೀತಿಯನ್ನು ತೀವ್ರವಾಗಿ ಖಂಡಿಸಿದುವು. ಸಾಹಿತಿಗಳು ಬೀದಿಗಿಳಿದರು. ಆದರೆ ಹಿಟ್ಲರ್ ಬೆದರಲಿಲ್ಲ. ಆತ ಶಾಲಾ ಪಠ್ಯದಲ್ಲೂ ಬದಲಾವಣೆಗಳನ್ನು ತಂದ. ನಾಝಿಸಂ ಮತ್ತು ಆತನನ್ನು ಬೆಂಬಲಿಸುವ ಪುಸ್ತಕಗಳನ್ನು ಶಾಲಾ ಪಠ್ಯವಾಗಿ ಸೇರಿಸಿದ. ಅವಸರ ಅವಸರವಾಗಿ ರಚಿತವಾದ ಆ ಪುಸ್ತಕಗಳು ಎಷ್ಟು ಕಳಪೆ ಗುಣಮಟ್ಟದವು ಆಗಿದ್ದುವೆಂದರೆ ನಾಝಿಸಂ ಅನ್ನು ಹೊಗಳುವುದಕ್ಕಿಂತ ಹೊರತಾದ ಯಾವ ಉದ್ದೇಶವೂ ಅವುಗಳಿಗಿರಲಿಲ್ಲ. ಮಕ್ಕಳನ್ನು ನಾಝಿಸಂನ ಬೆಂಬಲಿಗರಾಗಿ ಬೆಳೆಸುವಂತೆ ಶಾಲಾ ಸಭೆಗಳಲ್ಲಿ ಪೋಷಕರೊಂದಿಗೆ ವಿನಂತಿಸಲಾಗುತ್ತಿತ್ತು. ಹಿಟ್ಲರ್ ಹುಟ್ಟಿದ ದಿನವನ್ನು ಮತ್ತು ಅಧಿಕಾರಕ್ಕೇರಿದ ದಿನವನ್ನು ಶಾಲಾ ವಾರ್ಷಿಕ ದಿನಗಳನ್ನಾಗಿ ಆಚರಿಸುವ ವಾತಾವರಣವನ್ನು ಆತ ಹುಟ್ಟು ಹಾಕಿದ್ದ. ಒಂದು ರೀತಿಯಲ್ಲಿ, ತನ್ನ ವಿಚಾರವನ್ನು ಒಪ್ಪದ ಎಲ್ಲವನ್ನೂ ಮತ್ತು ಎಲ್ಲರನ್ನೂ ತಿರಸ್ಕರಿಸುವ ಉಗ್ರ ಮನೋಭಾವವೊಂದನ್ನು ನಾಝಿಸಂ ಪ್ರಚಾರ ಮಾಡುತ್ತಿತ್ತು. ಅದರ ಭಾಗವೇ ಸಾಹಿತ್ಯ ಕೃತಿಗಳ ಸುಡುವಿಕೆ. 1942ರಲ್ಲಿ ಸ್ಟೀವನ್ ವಿನ್ಸೆಂಟ್ ಬೆನೆಟ್‍ರು ‘ದೆ ಬರ್ನ್‍ಂಟ್ ದ ಬುಕ್ಸ್’ ಎಂಬ ಹಾಡನ್ನು ಬರೆಯುವುದಕ್ಕೆ ಕಾರಣವಾದ ಅಂಶವೂ ಇದುವೇ. ‘ಸಾಹಿತ್ಯ ಕೃತಿಗಳಿಗೆ ಬೆಂಕಿ ಕೊಡುವುದರಿಂದ ನೀವು ಏನನ್ನೂ ಸಾಧಿಸಲಾರಿರಿ’ ಎಂಬ ಸಂದೇಶವನ್ನು ಸಾರಿದ ವಿನ್ಸೆಂಟ್‍ರನ್ನು ಇಲ್ಲಿ ನೆನಪಿಸಿಕೊಳ್ಳುವುದಕ್ಕೆ ಕಾರಣ ಇದೆ-
    ಕಳೆದೆರಡು ವಾರಗಳಿಂದ ಭಗವದ್ಗೀತೆ ಸುದ್ದಿಯಲ್ಲಿದೆ. ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವಾಗಿ ಮಾಡಬೇಕು ಎಂಬ ಸುಶ್ಮಾ ಸ್ವರಾಜ್‍ರ ಬಯಕೆಗೆ ಪ್ರತಿರೋಧವೆಂಬಂತೆ ಅದನ್ನು ಸುಡಬೇಕೆಂಬ ಆಗ್ರಹವೊಂದು ಸಾಹಿತ್ಯ ವಲಯದಿಂದ ಕೇಳಿ ಬಂದಿದೆ. ಕೆ.ಎಸ್. ಭಗವಾನ್, ಜಿ.ಕೆ. ಗೋವಿಂದ ರಾವ್, ಅಗ್ನಿ ಶ್ರೀಧರ್, ಬಂಜಗೆರೆ ಜಯಪ್ರಕಾಶ್ ಮುಂತಾದ ಚಿಂತಕರು ಇಂಥದ್ದೊಂದು ವಾದವನ್ನು ಮುಂದಿಡುವ ಮೂಲಕ ಹೊಸ ಬಗೆಯ ಚರ್ಚೆಯೊಂದನ್ನು ಹುಟ್ಟು ಹಾಕಿದ್ದಾರೆ. 1927 ಡಿಸೆಂಬರ್ 27ರಂದು ಬಾಬಾ ಸಾಹೇಬ್ ಅಂಬೇಡ್ಕರ್‍ರು ಮನುಸ್ಮೃತಿಯನ್ನು ಸಾರ್ವಜನಿಕವಾಗಿಯೇ ಸುಟ್ಟು ಹಾಕಿರುವುದನ್ನು ಕೆಲವರು ಈ ಸುಡುವ ಪ್ರತಿಭಟನೆಗೆ ಸಮರ್ಥನೆಯಾಗಿ ನೀಡುತ್ತಿದ್ದಾರೆ. ಶ್ರೇಣೀಕೃತ ವ್ಯವಸ್ಥೆಯನ್ನು ಪ್ರತಿಪಾದಿಸುವ ಭಗವದ್ಗೀತೆಯನ್ನು ಸುಡುವುದು ಅದಕ್ಕೆ ತೋರಲಾಗುವ ಸರಿಯಾದ ಪ್ರತಿರೋಧ ಎಂಬ ನಿಲುವು ಸಾಹಿತಿಗಳದ್ದು. ಅಂದಹಾಗೆ, ಭಗವದ್ಗೀತೆಯ ಕುರಿತಂತೆ ಪರ-ವಿರುದ್ಧ ಅಭಿಪ್ರಾಯಗಳೇನೇ ಇರಲಿ, ಸುಡುವ ಹಂತಕ್ಕೆ ಒಂದು ಗ್ರಂಥವನ್ನು ನಾವು ಕೊಂಡೊಯ್ಯಬೇಕೇ? ವಿರೋಧವನ್ನು ವ್ಯಕ್ತಪಡಿಸುವುದಕ್ಕೆ ನೂರಾರು ದಾರಿಗಳಿರುವಾಗ ಬೆಂಕಿಯನ್ನು ಪ್ರತಿಭಟನೆಯ ಅಸ್ತ್ರವಾಗಿ ಆಯ್ಕೆ ಮಾಡಿಕೊಳ್ಳುವುದು ಎಷ್ಟು ಸಮಂಜಸ? ಸುಡುವ ಪ್ರಕ್ರಿಯೆಯಲ್ಲಿ ಒಂದು ಉಗ್ರವಾದವಿದೆ. ಸುಟ್ಟ ಬಳಿಕ ಉಳಿಯುವುದು ಬೂದಿ ಮಾತ್ರ. ಬೂದಿಯಿಂದ ಮತ್ತೆ ಆ ಗ್ರಂಥವನ್ನು ರಚಿಸಲು ಸಾಧ್ಯವಿಲ್ಲ. ಆದ್ದರಿಂದಲೇ ನಾಶ ಮಾಡುವ ಪ್ರತಿಭಟನೆಯು ಸಮಾಜ ವಿರೋಧಿಯಂತೆ ಅನಿಸುತ್ತದೆ. ಭಗವದ್ಗೀತೆಯಲ್ಲಿರುವ ನಿರ್ದಿಷ್ಟ ಶ್ಲೋಕಗಳ ಕುರಿತಂತೆ ಪೇಜಾವರ ಸ್ವಾವಿೂಜಿಗಳಂತಹ ಧರ್ಮಗುರುಗಳು ಯಾವ ವ್ಯಾಖ್ಯಾನವನ್ನು ಕೊಡುತ್ತಾರೋ ಅದನ್ನು ಪ್ರಗತಿ ಪರ ಸಾಹಿತಿಗಳು ಒಪ್ಪುವುದಿಲ್ಲ. ಪ್ರಗತಿಪರರ ಆಲೋಚನೆಗಳನ್ನು ಭಗವದ್ಗೀತೆಯ ಪರ ಇರುವವರೂ ಒಪ್ಪುವುದಿಲ್ಲ. ಇಂಥ ಸ್ಥಿತಿಯಲ್ಲಿ, ಬೆಂಕಿ ಕೊಡುವುದರಿಂದ ವೈಚಾರಿಕ ದಾರಿಯೇ ಮುಚ್ಚಿದಂತಾಗುತ್ತದೆ. ಚಾರ್ಲಿ ಹೆಬ್ಡೋದ ಮೇಲಿನ ದಾಳಿಯನ್ನು ಜಗತ್ತು ಖಂಡಿಸಿರುವುದರಲ್ಲಿ ಈ ಕಾರಣವೂ ಇದೆ. ಚಾರ್ಲಿ ಹೆಬ್ಡೋದ ನಿಲುವನ್ನು ಪ್ರಶ್ನಿಸುವುದಕ್ಕೆ ಬಂದೂಕಿಗಿಂತ ಹೊರತಾದ ಹತ್ತಾರು ದಾರಿಗಳಿದ್ದುವು. ಆ ದಾರಿಗಳ ಮೂಲಕ ಸಮಾಜವನ್ನು ಮುಟ್ಟುವುದಕ್ಕೆ ಹೆಬ್ಡೋ ವಿರೋಧಿಗಳು ಶ್ರಮಿಸಬಹುದಾಗಿತ್ತು. ಸಮಾಜದಲ್ಲಿ ಸಂವಾದದ ವಾತಾವರಣವನ್ನು ನಿರ್ಮಿಸಬಹುದಾಗಿತ್ತು. ಆದರೆ ಬಂದೂಕು ಆ ಅವಕಾಶವನ್ನೇ ಕಸಿದುಕೊಂಡಿತು. ಆ ಬಳಿಕ ನಡೆದ ಚರ್ಚೆಗಳಲ್ಲಿ ಹೆಚ್ಚಿನವು ಮುಸ್ಲಿಮ್ ಉಗ್ರವಾದದ ಸುತ್ತ ಆಗಿತ್ತೇ ಹೊರತು ಚಾರ್ಲಿ ಹೆಬ್ಡೋದ ನಿಂದನಾತ್ಮಕ ಧೋರಣೆಯ ಸುತ್ತ ಆಗಿರಲಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸಲು ತಿಳಿಯದ ಸಮುದಾಯವಾಗಿ ಮುಸ್ಲಿಮ್ ಜಗತ್ತನ್ನು ಹೆಚ್ಚಿನ ಮಂದಿ ಚಿತ್ರೀಕರಿಸಿದರು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಚಾರ್ಲಿ ಹೆಬ್ಡೋದ ವ್ಯಂಗ್ಯ ಚಿತ್ರಕ್ಕೂ ನಡುವೆ ಇರುವ ಬಹುದೊಡ್ಡ ವ್ಯತ್ಯಾಸವನ್ನು ಗಮನಿಸದಂತೆ ಮಾಡುವುದಕ್ಕೆ ಬಂದೂಕು ಯಶಸ್ವಿಯಾಯಿತು. ಇದೊಂದೇ ಅಲ್ಲ. ಅಮೇರಿಕದ ಫ್ಲಾರಿಡಾದಲ್ಲಿರುವ ಕ್ರಿಶ್ಚಿಯನ್ ಡವ್ ವರ್ಲ್ಡ್ ಔಟ್‍ರೀಚ್ ಸೆಂಟರ್‍ನ ಪಾದ್ರಿ ಟೆರ್ರಿ ಜೋನ್ಸ್ ರು ಪವಿತ್ರ ಕುರ್‍ಆನಿನ 200 ಪ್ರತಿಗಳನ್ನು ಸುಡುವುದಾಗಿ 2010 ಜುಲೈಯಲ್ಲಿ ಘೋಷಿಸಿದರು. ವರ್ಲ್ಡ್  ಟ್ರೇಡ್ ಸೆಂಟರ್ ಉರುಳಿದ ದಿನವಾದ ಸೆ. 11ರಂದು ಈ ಸುಡುವ ಕಾರ್ಯಕ್ರಮ ಇಟ್ಟುಕೊಳ್ಳುವುದಾಗಿ ಅವರು ಹೇಳಿದರು. ಇದರ ವಿರುದ್ಧ ಜಾಗತಿಕವಾಗಿಯೇ ವಿರೋಧ ವ್ಯಕ್ತವಾಯಿತು. 2011 ಮಾರ್ಚ್ 20ರಂದು ಅವರು ತನ್ನ ಚರ್ಚ್‍ನಲ್ಲಿ ‘ಕುರ್‍ಆನ್‍ನ ವಿಚಾರಣೆ' (Trial of Quran) ಎಂಬ ಕಾರ್ಯಕ್ರಮವನ್ನು ಇಟ್ಟುಕೊಂಡರು. ‘ಮಾನವೀಯತೆಯ ವಿರುದ್ಧ ಕ್ರೌರ್ಯವೆಸಗಿದೆ’ (Crime against Humanity) ಎಂಬ ಆರೋಪವನ್ನು ಹೊರಿಸಿ ಅವರು ಕುರ್‍ಆನನ್ನು ಬಹಿರಂಗವಾಗಿಯೇ ಸುಟ್ಟರು. 2010ರಲ್ಲಿ ಇವರು ‘ಇಸ್ಲಾಮ್ ಈಸ್ ಆಫ್ ದ ಡೆವಿಲ್’ (Islam is of the Devil) ಎಂಬ ಕೃತಿಯನ್ನು ಪ್ರಕಟಿಸಿದರಲ್ಲದೇ ಕುರ್‍ಆನನ್ನು ಎತ್ತಿ ಹಿಡಿದು - ‘ಇದು ಧರ್ಮಗ್ರಂಥವಲ್ಲ, ಪಿಶಾಚಿಯ ಗ್ರಂಥ’ ಎಂದು ಹೇಳಿದ ವೀಡಿಯೋವನ್ನು ಯೂಟ್ಯೂಬ್‍ಗೆ ಹಾಕಿದರು. ಆದರೆ ಇದಕ್ಕೆ ಪ್ರತಿಯಾಗಿ ಅಮೇರಿಕನ್ ಮುಸ್ಲಿಮರು ಮಾಡಿದ್ದೇನೆಂದರೆ, ಸೆ. 11ನ್ನು 'ಲವ್ ಜೀಸಸ್ ಡೇ' (Love Jesus day) ಆಗಿ ಆಚರಿಸಿದ್ದು. ಜೀಸಸ್‍ರನ್ನು ಪ್ರವಾದಿಯೆಂದು ಪವಿತ್ರ ಕುರ್‍ಆನ್  ಕರೆದಿರುವುದಾಗಿ ಅವರು ಹೇಳಿದರು. ಅಲ್ಲದೇ ಸೆ. 11ನ್ನು ‘ಪವಿತ್ರ ಕುರ್‍ಆನನ್ನು ಓದುವ ದಿನ'ವಾಗಿ ಮುಸ್ಲಿಮ್ ಸಂಘಟನೆಗಳು ಆಚರಿಸಿದ್ದೂ ನಡೆಯಿತು. ಅಮೇರಿಕನ್ನರ ಮೇಲೆ ಈ ಪ್ರತಿ ಪ್ರತಿಭಟನೆ ಸಾಕಷ್ಟು ಪರಿಣಾಮವನ್ನು ಬೀರಿತು. ಟೆರ್ರಿ ಜೋನ್ಸ್ ರ ಚರ್ಚ್‍ಗೆ ನೀಡಲಾಗಿದ್ದ 1 ಲಕ್ಷದ 40 ಸಾವಿರ ಡಾಲರ್ ಸಾಲವನ್ನು ಶೀಘ್ರವೇ ಮರು ಪಾವತಿಸುವಂತೆ ಅಮೇರಿಕದ ಬ್ಯಾಂಕೊಂದು ಆದೇಶಿಸಿತಲ್ಲದೇ ಚರ್ಚ್‍ನ ಆಸ್ತಿ-ಪಾಸ್ತಿಗಳಿಗೆ ನೀಡಲಾಗಿದ್ದ ಇನ್ಶೂರೆನ್ಸನ್ನು ರದ್ದುಪಡಿಸಿತು. ಕೆನಡ, ಕ್ಯೂಬಾ, ಅಮೇರಿಕ, ಫ್ರಾನ್ಸ್, ಜರ್ಮನಿ, ಇಂಡೋನೇಷಿಯಾ, ವ್ಯಾಟಿಕನ್ ಸಹಿತ ಜಗತ್ತಿನ ಎಲ್ಲ ರಾಷ್ಟ್ರಗಳೂ ಟೆರ್ರಿ ಜೋನ್ಸ್ ರ ಸುಡುವ ಪ್ರತಿಭಟನೆಯನ್ನು ಖಂಡಿಸಿದುವು. ನಿಜವಾಗಿ, ಉಗ್ರವಾದಕ್ಕೆ ಎದುರಾದ ಸೋಲು ಇದು. ಹಾಗಂತ, ಸುಡುವ ಪ್ರತಿಭಟನೆ ಭಾರತದಲ್ಲಿ ನಡೆಯುತ್ತಿಲ್ಲ ಎಂದಲ್ಲ. 2014 ಡಿಸೆಂಬರ್ 27ರಂದು ತಮಿಳು ಸಾಹಿತಿ ಪೆರುಮಾಳ್ ಮುರುಗನ್‍ರ ಮಧೋರುಬಗನ್ ಎಂಬ ಕಾದಂಬರಿಯನ್ನು ಸಂಘಪರಿವಾರದ ಮಂದಿ ಸಾರ್ವಜನಿಕವಾಗಿಯೇ ಸುಟ್ಟು ಹಾಕಿದ್ದರು. ಕಾದಂಬರಿಯು ಅನೈತಿಕತೆಯನ್ನು ಪ್ರಚೋದಿಸುತ್ತದೆ ಮತ್ತು ಅದರಲ್ಲಿ ಶಿವನನ್ನು ಅವಮಾನಿಸಲಾಗಿದೆ ಎಂಬ ಆರೋಪವನ್ನು ಅವರು ಹೊರಿಸಿದ್ದರು. ಅಂತಿಮವಾಗಿ ಪೆಂಗ್ವಿನ್ ಪ್ರಕಾಶನ ಸಂಸ್ಥೆಯು ಕಾದಂಬರಿಯ ಎಲ್ಲ ಪ್ರತಿಗಳನ್ನೂ ಮಾರುಕಟ್ಟೆಯಿಂದ ಹಿಂಪಡೆಯಿತು. ಮಾತ್ರವಲ್ಲ, `ತಾನಿನ್ನು ಬರೆಯುವುದಿಲ್ಲ' ಎಂದು ಮುರುಗನ್ ಪೆನ್ನು ಕೆಳಗಿಟ್ಟರು. 1995ರಲ್ಲಿ ಸಲ್ಮಾನ್ ರುಶ್ದಿಯವರ ‘ದಿ ಮೂರ್ಸ್ ಲಾಸ್ಟ್ ಸೈ' ಕೃತಿಯನ್ನು ಶಿವಸೇನೆ ಮತ್ತು ಕಾಂಗ್ರೆಸ್‍ನ ಕಾರ್ಯಕರ್ತರು ಬಹಿರಂಗವಾಗಿಯೇ ಸುಟ್ಟು ಹಾಕಿದ್ದರು. ಬಾಳಾ ಠಾಕ್ರೆ ಮತ್ತು ನೆಹರೂರವರನ್ನು ಈ ಕೃತಿಯಲ್ಲಿ ಅವಮಾನಿಸಲಾಗಿದೆ ಎಂಬ ಆರೋಪವನ್ನು ಈ ಪಕ್ಷಗಳು ಇದಕ್ಕೆ ಕಾರಣವಾಗಿ ಕೊಟ್ಟಿದ್ದುವು. 1991ರ ಬೂಕರ್ ಪ್ರಶಸ್ತಿ ಪಟ್ಟಿಯಲ್ಲಿದ್ದ ರೋಹಿಂಟನ್ ಮಿಸ್ತ್ರಿಯವರ ‘ಸಚ್ ಎ ಲಾಂಗ್ ಜರ್ನಿ' ಕೃತಿಯನ್ನು 2010ರಲ್ಲಿ ಶಿವಸೇನೆಯ ವಿದ್ಯಾರ್ಥಿ ಘಟಕವು ಮುಂಬೈಯಲ್ಲಿ ಸುಟ್ಟು ಹಾಕಿತ್ತು. ಕಾದಂಬರಿಯು ಅಸಭ್ಯ ಮತ್ತು ಅಶ್ಲೀಲವಾಗಿದೆ ಹಾಗೂ ಬಾಳಾ ಠಾಕ್ರೆಯವರನ್ನು ಹಗುರವಾಗಿ ಕಾಣಲಾಗಿದೆ ಎಂದು ವಿದ್ಯಾರ್ಥಿಗಳು ಸುಡುವಿಕೆಗೆ ಕಾರಣವನ್ನು ಕೊಟ್ಟಿದ್ದರು.
    ಇವೇನೇ ಇದ್ದರೂ ಸುಡುವ ಪ್ರತಿಭಟನೆಯು ಸಂವಾದದ ವಿರೋಧಿಯಂತೆ ಕಾಣಿಸುತ್ತದೆ. ಆರೋಗ್ಯಕರ ಚರ್ಚೆ, ವೈಚಾರಿಕ ಜಗಳಕ್ಕೆ ಇರುವ ಅವಕಾಶವನ್ನು ಅದು ನಿರಾಕರಿಸಿಬಿಡುತ್ತದೆ. ಆದ್ದರಿಂದಲೇ ಈ ಪ್ರತಿಭಟನಾ ವಿಧಾನವನ್ನು ಪ್ರಶ್ನಿಸಬೇಕಾಗುತ್ತದೆ. ಸಾಹಿತ್ಯ ಕೃತಿಗಳು ಮತ್ತು ಧಾರ್ಮಿಕ ಗ್ರಂಥಗಳ ನಡುವೆ ವ್ಯತ್ಯಾಸಗಳೇನೇ ಇರಲಿ, ಸುಡುವ ಪ್ರತಿಭಟನೆ ಎಷ್ಟು ಆರೋಗ್ಯಪೂರ್ಣ? ಕೃತಿಯೊಂದಕ್ಕೆ ಬೆಂಕಿ ಕೊಡುವುದು ಪ್ರತಿಭಟನೆಯ ಸಾಂಕೇತಿಕ ರೂಪವೇ ಆಗಿರಬಹುದು. ಆದರೆ ಅದು ರವಾನಿಸುವ ಸಂದೇಶವೇನು? ಧರ್ಮಗಳ ಹೆಸರಲ್ಲಿ ಗುಡಿಸಲುಗಳಿಗೆ ಬೀಳುವ ಬೆಂಕಿ ಮತ್ತು ಉದ್ಯಮಿಗಳಿಗೆ ಜಾಗಗಳನ್ನು ಒದಗಿಸುವುದಕ್ಕಾಗಿ ಸ್ಲಂಗಳಿಗೆ ಬೀಳುವ ಬೆಂಕಿಯ ಮಧ್ಯೆ ನಾವು ಗ್ರಂಥಗಳಿಗೂ ಬೆಂಕಿ ಕೊಡಬೇಕೇ? ಅದು ಗ್ರಂಥವೊಂದರ ಮೇಲಿನ ಚರ್ಚೆಯನ್ನು ಅರ್ಥಪೂರ್ಣಗೊಳಿಸಬಲ್ಲುದೇ ಅಥವಾ ಇನ್ನಷ್ಟು ಬೆಂಕಿ ಪ್ರಕರಣಗಳಿಗೆ ಹೇತುವಾಗಬಹುದೇ?
    ಸ್ಟೀವನ್ ವಿನ್ಸೆಂಟ್ ಬೆನೆಟ್‍ರ ಹಾಡು ಯಾಕೋ ಇಷ್ಟವಾಗುತ್ತದೆ.