Wednesday, February 26, 2014

ಮೇರಿ ಔರತ್ ಸಾಥ್ ದೇತಿ ತೋ..

   ಆ್ಯಂಡ್ರಿಯಾ, ವನಿಶ್, ಡಕರ್, ಪ್ಯಾಟ್ರಿಕಾ... ಮುಂತಾದ ಅಸಂಖ್ಯ ಓದುಗರು ‘ಲಾರಿ ಸ್ವಿಲ್ಲಿಂಗ್’ರ ಬಗ್ಗೆ ಅಭಿಮಾನ ಪಟ್ಟು ಕೊಂಡರು. ‘ಎಂಥ ಅದ್ಭುತ ದಂಪತಿಗಳು..' ಅಂದರು. Need Kidney 4 wife  ಎಂಬ ಬೋರ್ಡನ್ನು ಕುತ್ತಿಗೆಗೆ ನೇತಾಡಿಸಿ ರಸ್ತೆಯಲ್ಲಿ ನಡೆಯುತ್ತಿರುವ ಸ್ವಿಲ್ಲಿಂಗ್‍ರನ್ನು ಮತ್ತು ಅವರ ಬಗ್ಗೆ ಮಾಡಲಾದ ವರದಿಯನ್ನು ಫೇಸ್‍ಬುಕ್‍ನಲ್ಲಿ ಶೇರ್ ಮಾಡಿಕೊಂಡರು. ಕಿಡ್ನಿಯನ್ನು ನೀಡುವ ಬಗೆ, ಅದಕ್ಕಿರುವ ನಿಯಮಗಳು, ವಿಧಗಳು ಮುಂತಾಗಿ ಅನೇಕಾರು ಸಂಗತಿಗಳು ಇಂಟರ್‍ನೆಟ್‍ನಲ್ಲಿ ಓದುಗರ ಮಧ್ಯೆ ಚರ್ಚೆಗೀಡಾದುವು. ಅಂಥ ಮಾಹಿತಿಯುಳ್ಳ ಲಿಂಕ್‍ಗಳನ್ನು ಓದುಗರು ಪರಸ್ಪರ ಹಂಚಿಕೊಂಡರು. ಎಬಿಸಿ ನ್ಯೂಸ್, ಸಿಎನ್‍ಎನ್, ಡೈಲಿ ಮೈಲ್, ಡೈಲಿ ನ್ಯೂಸ್, ಫಾಕ್ಸ್ ನ್ಯೂಸ್.. ಸಹಿತ ಅಮೇರಿಕದ ಪ್ರಸಿದ್ಧ ಟಿ.ವಿ. ಮತ್ತು ಪತ್ರಿಕೆಗಳು ಲಾರಿ ಸ್ವಿಲ್ಲಿಂಗ್‍ರ ಬಗ್ಗೆ ಬರೆದುವು. ಒಬಾಮರ ಕುರಿತೋ ಹಿಲರಿಯ ಕುರಿತೋ ಪ್ರಕಟವಾಗುವ ಸುದ್ದಿಗಿಂತ ನೂರಾರು ಪಟ್ಟು ಅಧಿಕ ಓದುಗರು ಈ ಸುದ್ದಿಗೆ ಪ್ರತಿಕ್ರಿಯಿಸಿದರು. ಅಮೇರಿಕದಲ್ಲಿ ಕಿಡ್ನಿಗಿರುವ ಬೇಡಿಕೆ ಮತ್ತು ಪೂರೈಕೆಯ ಕುರಿತಂತೆ ವ್ಯಾಪಕ ಮಟ್ಟದಲ್ಲಿ ಚರ್ಚೆ ನಡೆಯುವುದಕ್ಕೆ ಈ ಸುದ್ದಿ ಕಾರಣವಾಯಿತು. ಸ್ವಿಲ್ಲಿಂಗ್‍ರು ಅಮೇರಿಕದ ಗಡಿ ದಾಟಿ ಜಗತ್ತಿನ ವಿವಿಧ ರಾಷ್ಟ್ರಗಳ ಮಾಧ್ಯಮಗಳಲ್ಲಿ ಕಾಣಿಸಿಕೊಂಡರು. ಅರಬ್ ಕ್ರಾಂತಿಯ ಬಿಸಿಯಲ್ಲಿ ಬೇಯುತ್ತಿದ್ದ ಈಜಿಪ್ಟ್ ನಿಂದ ಹಿಡಿದು ಸ್ವೀಡನ್‍ವರೆಗೆ ಎಲ್ಲ ರಾಷ್ಟ್ರಗಳ ಓದುಗರ ಮೇಲೂ, ‘Need Kidney 4 wife’ ಸುದ್ದಿಯು ತೀವ್ರ ಪ್ರಭಾವ ಬೀರಿದುವು. ಲಾರಿ ಸ್ವಿಲ್ಲಿಂಗ್‍ರಿಗೆ ಹಲವರು ಕರೆ ಮಾಡಿ ಸಾಂತ್ವನ ಹೇಳಿದರು. ನಾವು ಕಿಡ್ನಿ ದಾನ ಮಾಡಬಹುದೇ ಎಂದು ಪ್ರಶ್ನಿಸಿದರು. ದುಡ್ಡು ಕಳುಹಿಸಿದರು.
 ಲಾರಿ ಸ್ವಿಲ್ಲಿಂಗ್
 ಜಿಮ್ಮಿ ಸ್ಯೂ
 2012 ಸೆಪ್ಟೆಂಬರ್‍ನಲ್ಲಿ ಇವರಿಬ್ಬರ ಬಗ್ಗೆ ಅಮೇರಿಕನ್ ಮಾಧ್ಯಮಗಳು ಚಿತ್ರ ಸಹಿತ ಸುದ್ದಿ ಬರೆದುವು. ಲಾರಿ ಸ್ವಿಲ್ಲಿಂಗ್‍ಗೆ 76 ವರ್ಷ. ಅವರ ಪತ್ನಿ ಜಿಮ್ಮಿ ಸ್ಯೂ ಎರಡ್ಮೂರು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ದಕ್ಷಿಣ ಕ್ಯಾಲಿಫೋರ್ನಿಯಾದ ಸಣ್ಣ ನಗರವೊಂದರಲ್ಲಿ ಬದುಕುತ್ತಿದ್ದ ಈ ದಂಪತಿಗೆ ಮೂವರು ಮಕ್ಕಳು. ಎಲ್ಲರೂ O+ ರಕ್ತ ಗುಂಪಿನವರು. ಜಿಮ್ಮಿ ಸ್ಯೂ ಆದರೋ A+. ಆದ್ದರಿಂದ ಮನೆಯವರ ಕಿಡ್ನಿ ಅವರಿಗೆ ಸರಿ ಹೊಂದುತ್ತಿರಲಿಲ್ಲ. ಅಲ್ಲದೇ ಆಕೆ ಹುಟ್ಟಿದ್ದೇ ಒಂದೇ ಒಂದು ಕಿಡ್ನಿಯೊಂದಿಗೆ. ಚಾರ್ಲ್ಸ್ ಟನ್‍ನಲ್ಲಿರುವ ಮೆಡಿಕಲ್ ಯುನಿವರ್ಸಿಟಿಯಲ್ಲಿ ಸಣ್ಣ ಉದ್ಯೋಗದಲ್ಲಿದ್ದ ಈಕೆ ಕಿಡ್ನಿ ತೊಂದರೆಯಿಂದಾಗಿ ಮನೆಯಲ್ಲೇ ಇರಬೇಕಾಯಿತಲ್ಲದೇ ವಾರಕ್ಕೆರಡು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುವ ಅನಿವಾರ್ಯತೆಯೂ ಎದುರಾಯಿತು. ಹಾಗಂತ, ಡಯಾಲಿಸಿಸ್ ಮತ್ತು ಔಷಧಕ್ಕೆ ದುಬಾರಿ ದುಡ್ಡೂ ಬೇಕಲ್ಲವೇ? ಸ್ವಿಲ್ಲಿಂಗ್ ಕೆಲಸ ಮಾಡಲೇಬೇಕಿತ್ತು. ಕೆಲಸಕ್ಕೆ ರಜೆ ಇರುವ ಶುಕ್ರ ವಾರದಂದು ಆತ ಪತ್ನಿಯನ್ನು ಡಯಾಲಿಸಿಸ್‍ಗಾಗಿ ಆಸ್ಪತ್ರೆಗೆ ಕರೆದೊಯ್ದರೆ ಮತ್ತೊಂದು ದಿನ ಮಕ್ಕಳು ಕರೆದೊಯ್ಯುತ್ತಿದ್ದರು. ಹೀಗೆ ದಿನಗಳು ಉರುಳುತ್ತಿದ್ದುವೇ ಹೊರತು ಪತ್ನಿಗೆ ಒಂದು ಕಿಡ್ನಿ ಸಿಗುವ ಸಾಧ್ಯತೆ ಕಾಣಿಸುತ್ತಲೇ ಇರಲಿಲ್ಲ. ಕೊನೆಗೊಂದು ದಿನ ಸ್ವಿಲ್ಲಿಂಗ್ ಅಪರೂಪದ ನಿರ್ಧಾರವೊಂದನ್ನು ತಳೆದರು. ತನ್ನ ಪತ್ನಿಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇ ಬೇಕೆಂದು ನಿರ್ಧರಿಸಿದ ಅವರು, Need Kidney 4 wife ಎಂಬ ಚಿಕ್ಕ ಫಲಕವನ್ನು ತಯಾರಿಸಿ ಅದರಲ್ಲಿ ದೂರವಾಣಿ ಸಂಖ್ಯೆಯನ್ನೂ ನಮೂದಿಸಿ ಕುತ್ತಿಗೆಗೆ ನೇತು ಹಾಕಿಕೊಂಡರು. ಬಳಿಕ ತನ್ನ ಊರಾದ ಆ್ಯಂಡರ್ಸನ್ ಸಿಟಿಯ ರಸ್ತೆಯಲ್ಲಿ ಉದ್ದಕ್ಕೂ ನಡೆದಾಡ ತೊಡಗಿದರು. ಇದನ್ನು ಎಷ್ಟು ನಿಷ್ಠೆಯಿಂದ ಮಾಡತೊಡಗಿದರು ಅಂದರೆ, ಕೆಲಸದ ಸಮಯವನ್ನು ಹೊರತುಪಡಿಸಿ ಉಳಿದಂತೆ ಹೆಚ್ಚಿನ ವೇಳೆಯನ್ನು ಇದಕ್ಕಾಗಿಯೇ ವಿೂಸಲಿಟ್ಟರು. ‘ಜನರು ಏನು ಬೇಕಾದರೂ ಹೇಳಿಕೊಳ್ಳಲಿ, ನನಗೆ ನನ್ನ ಪತ್ನಿ ಬೇಕು..' ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡರು. ಹೀಗೆ ಕುತ್ತಿಗೆಗೆ ಕಿಡ್ನಿ ಫಲಕವನ್ನು ನೇತಾಡಿಸಿಕೊಂಡು ತಿಂಗಳುಗಟ್ಟಲೆ ಅಲೆದಾಡುತ್ತಿರುವ ಸ್ವಿಲ್ಲಿಂಗ್ ಎಲ್ಲರ ಚರ್ಚಾ ವಿಷಯವಾಗಿ ಮಾರ್ಪಟ್ಟರು. ಮಾಧ್ಯಮಗಳೂ ಮಾತಾಡಿದುವು. ಕೊನೆಗೆ 2013 ಸೆಪ್ಟೆಂಬರ್‍ನಲ್ಲಿ ಅಮೇರಿಕದ ನಿವೃತ್ತ ಲೆಫ್ಟಿನೆಂಟ್ ಕಮಾಂಡರ್ ಕೆಲ್ಲಿ ವೇವರ್ಲಿಂಗ್ ಎಂಬ 41 ವರ್ಷದ ಮಹಿಳೆ ಕಿಡ್ನಿ ದಾನಕ್ಕೆ ಮುಂದೆ ಬಂದರು. ಸೆ. 11ರಂದು ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಯಿತು.
 ದಾಂಪತ್ಯ ಸಂಬಂಧಗಳ ಪಾವಿತ್ರ್ಯತೆಯು ತೀವ್ರ ಪ್ರಶ್ನೆಗೊಳಗಾಗಿರುವ ಇಂದಿನ ದಿನಗಳಲ್ಲಿ ಜಿಮ್ಮಿ ಸ್ಯೂ ಮತ್ತು ಸ್ವಿಲ್ಲಿಂಗ್‍ರು ಜಾಗತಿಕವಾಗಿ ಸುದ್ದಿಯ ಕೇಂದ್ರವಾದುದರಲ್ಲಿ ಅಚ್ಚರಿ ಏನೂ ಇಲ್ಲ. ‘ಪತಿಯಿಂದ ಕೊಲೆ, ಪತ್ನಿ ಆತ್ಮಹತ್ಯೆ, ಪ್ರಿಯಕರನೊಂದಿಗೆ ಪತ್ನಿ ಪರಾರಿ, ವಿಚ್ಛೇದನ..’ ಮುಂತಾದ ಸುದ್ದಿಗಳು ಇವತ್ತಿನ ದಿನಗಳಲ್ಲಿ ತೀರಾ ಸಾಮಾನ್ಯ. ಕಳೆದೈದು ವರ್ಷಗಳಲ್ಲಿ ಕೇವಲ ಮುಂಬೈಯೊಂದರಲ್ಲೇ  20813 ವಿಚ್ಛೇದನ ಪ್ರಕರಣಗಳು ನಡೆದಿವೆ ಎಂದು ಅಧಿಕೃತ ವರದಿಗಳೇ ಹೇಳುತ್ತವೆ. ನಿಜವಾಗಿ, ಮದುವೆ ಎಷ್ಟು ಸಹಜವೋ ಅಷ್ಟೇ ವಿಚ್ಛೇದನವೂ ಸಹಜ ಎಂಬ ರೀತಿಯ ಬದುಕಿಗೆ ಸಮಾಜ ಒಗ್ಗಿಕೊಳ್ಳುತ್ತಿದೆ. ಸಾಂಪ್ರದಾಯಿಕ ರೀತಿ-ನೀತಿ ಮತ್ತು ಮೌಲ್ಯಗಳ ಬುನಾದಿಯನ್ನೇ ಆಧುನಿಕ ಜೀವನ ಕ್ರಮಗಳು ಅಲುಗಾಡಿಸಿ ಬಿಟ್ಟಿದೆ. ಪ್ರತಿಯೊಂದನ್ನೂ ಪ್ರಶ್ನಿಸುವ ಯುವ ಪೀಳಿಗೆಯು ಎಲ್ಲೆಡೆಯೂ ತಲೆಯೆತ್ತುತ್ತಿವೆ. ಇಂಥ ಸ್ಥಿತಿಯಲ್ಲಿ ಜಿಮ್ಮಿ ಮತ್ತು ಸ್ವಿಲ್ಲಿಂಗ್‍ರ ಜೀವನ ಪ್ರೀತಿ, ಪರಸ್ಪರರ ಭಾವನಾತ್ಮಕ ಸಂಬಂಧಗಳು ಖಂಡಿತ ಆಳ ಅವಲೋಕನಕ್ಕೆ ಅರ್ಹವಾದಂಥವು. ಒಂದು ಸಮಾಜದಲ್ಲಿ ವಿಚ್ಛೇದನಗಳು ವ್ಯಾಪಕ ಪ್ರಮಾಣದಲ್ಲಿ ನಡೆಯುತ್ತಿವೆಯೆಂದಾದರೆ, ಕೈ ಹಿಡಿದವಳನ್ನೇ ಕೊಲೆ ಮಾಡುವಂಥ ವಾತಾವರಣ ಇದೆಯೆಂದಾದರೆ, ಪತಿ-ಮಕ್ಕಳನ್ನು ಬಿಟ್ಟು ಅಥವಾ ಪತ್ನಿ-ಮಕ್ಕಳನ್ನು ಬಿಟ್ಟು ಪ್ರಿಯತಮೆ/ಮರೊಂದಿಗೆ ಹೊರಟು ಹೋಗುವುದಾದರೆ ಅದು ತೀರಾ ನಿರ್ಲಕ್ಷಿಸಿ ಬಿಡುವಷ್ಟು ಕ್ಷುಲ್ಲಕ ಸಂಗತಿಯೇ? ವಿಜ್ಞಾನ-ತಂತ್ರಜ್ಞಾನಗಳಾಗಲಿ ಆಧುನಿಕ ಶಿಕ್ಷಣ ಕ್ರಮಗಳಾಗಲಿ ಮೌಲ್ಯಗಳನ್ನೇ ಕೊಲ್ಲುವಷ್ಟು ಕ್ರೂರವಾಗಿವೆಯೇ? ಒಂದೆರಡು ದಶಕಗಳ ಹಿಂದೆ ಆಗಿದ್ದರೆ ವಿಜ್ಞಾನ ಇಷ್ಟು ಪ್ರಮಾಣದಲ್ಲಿ ಬೆಳೆದಿರಲಿಲ್ಲ. ಶೈಕ್ಷಣಿಕ ಸಂಸ್ಥೆಗಳು ತೀರಾ ಕಡಿಮೆಯಿದ್ದುವು. ಮಾಲ್‍ಗಳು, ಸೂಪರ್ ಬಝಾರ್‍ಗಳು, ಇಂಟರ್‍ನೆಟ್ ಸೌಲಭ್ಯಗಳು ಮಕ್ಕಳ ಕೈಗೆಟಕುವಷ್ಟು ಅಗ್ಗವಾಗಿರಲಿಲ್ಲ. ಹೆಣ್ಣು ಕಲಿಯಬೇಕು ಎಂಬ ಪ್ರಜ್ಞೆ ಇದ್ದರೂ ಉದ್ಯೋಗಕ್ಕಾಗಿಯೇ ಕಲಿಯಬೇಕು ಎಂಬ ಗುರಿಯೂ ಇರಲಿಲ್ಲ. ಮದುವೆಯಾಗುವ ವರೆಗೆ ಹುಡುಗಿ ಕಲಿಯಲಿ ಎಂಬ ಸಾಮಾನ್ಯ ನಿಲುವಿನಲ್ಲಿ ಹೆಚ್ಚಿನ ಮನೆಗಳು ತೃಪ್ತಿಯನ್ನು ಕಾಣುತ್ತಿದ್ದುವು. ಗಂಡು ಉದ್ಯೋಗಕ್ಕೆ, ಹೆಣ್ಣು ಮನೆವಾರ್ತೆಗೆ ಎಂಬ ಸಾಂಪ್ರದಾಯಿಕ ಮನಸ್ಥಿತಿ ಸಾಮಾನ್ಯವಾಗಿತ್ತು. ಹಾಗಂತ, ಅಂದಿನ ದಿನಗಳಲ್ಲಿ ವಿಚ್ಛೇದನ, ನೈತಿಕ ಅಧಃಪತನ ಇರಲಿಲ್ಲ ಎಂದು ಇದರರ್ಥವಲ್ಲ. ಇತ್ತು. ಆದರೆ ಅದರ ಪ್ರಮಾಣವನ್ನು ಇವತ್ತಿಗೆ ಹೋಲಿಸಿದರೆ, ‘ಶೂನ್ಯ' ಅನ್ನುವಷ್ಟರ ಮಟ್ಟಿಗೆ ಕಡಿಮೆಯಿತ್ತು. ಇವತ್ತು ಬದುಕಿನ ವಿಧಾನವೇ ಬದಲಾಗಿದೆ. ದುಡಿಮೆ ಇವತ್ತು ಪುರುಷನ ಕ್ಷೇತ್ರವಾಗಿಯಷ್ಟೇ ಉಳಿದಿಲ್ಲ, ಮಹಿಳೆಯೂ ಸಮಪ್ರಮಾಣದಲ್ಲಿ ಆ ಕ್ಷೇತ್ರದಲ್ಲಿ ಪಾಲು ಕೇಳುತ್ತಿದ್ದಾಳೆ. ಉದ್ಯೋಗ ರಂಗಗಳಲ್ಲಿ ಹಗಲು ಪಾಳಿಯಲ್ಲೂ ರಾತ್ರಿ ಪಾಳಿಯಲ್ಲೂ ದುಡಿಯಲು ಆಕೆ ಸಿದ್ಧವಾಗುತ್ತಿದ್ದಾಳೆ. ಗಂಡು ಮಕ್ಕಳಿಗಿಂತ ಹೆಚ್ಚಿನ ಶೈಕ್ಷಣಿಕ ಅರ್ಹತೆಯನ್ನು ಆಕೆ ಪಡಕೊಳ್ಳುತ್ತಿದ್ದಾಳೆ. ಹಕ್ಕು, ಕರ್ತವ್ಯ, ಅಧಿಕಾರ.. ಮುಂತಾದುವುಗಳ ಪರಿಚಯವಷ್ಟೇ ಆಕೆಗೆ ಇರುವುದಲ್ಲ, ಅವುಗಳನ್ನು ಜಿದ್ದಿನಿಂದ ತನ್ನದಾಗಿಸಿಕೊಳ್ಳುವುದಕ್ಕೂ ಆಕೆ ಸಮರ್ಥಳಾಗುತ್ತಿದ್ದಾಳೆ. ಆದರೆ ಇದೇ ಸಮಯದಲ್ಲಿ ಸಾಮಾಜಿಕ ಮತ್ತು ಕೌಟುಂಬಿಕ ಕ್ಷೇತ್ರಗಳಲ್ಲೂ ಆಘಾತಕಾರಿ ಸುದ್ದಿಗಳ ಪ್ರಮಾಣದಲ್ಲಿ ಹೆಚ್ಚಳವಾಯಿತಲ್ಲ, ನೈತಿಕ-ಅನೈತಿಕತೆಯ ಸೂಕ್ಷ್ಮ  ಗೆರೆಗಳು ತೆಳುವಾದುವಲ್ಲ, ಯಾಕೆ? ಪ್ರಜ್ಞಾವಂತ ಹೆಣ್ಣನ್ನು ಅರ್ಥಮಾಡಿಕೊಳ್ಳಲು ಪುರುಷ ವಿಫಲನಾದನೇ? ವಿದ್ಯಾವಂತ ಹೆಣ್ಣನ್ನು ಮತ್ತು ಆಕೆಯ ವಿಚಾರಗಳನ್ನು ಅಷ್ಟೇ ಗೌರವದಿಂದ ಸ್ವೀಕರಿಸುವಲ್ಲಿ ಸಾಂಪ್ರದಾಯಿಕ ಪುರುಷ ಜಗತ್ತು ಪರಾಜಯ ಕಂಡಿತೇ ಅಥವಾ ಆಧುನಿಕ ವಿದ್ಯೆ ಹೆಣ್ಣನ್ನು ತಪ್ಪು ವಿಚಾರಧಾರೆಗೆ ಒಳಪಡಿಸಿಬಿಟ್ಟಿತೇ? ಪುರುಷರು ತಮ್ಮ ಹಕ್ಕುಗಳ ಭಕ್ಷಕರೆಂಬ ಭಾವನೆಯನ್ನು ವಿದ್ಯೆ ಅವರೊಳಗೆ ಹುಟ್ಟು ಹಾಕಿ, 'ಸೇರಿಗೆ-ಸವ್ವಾ ಸೇರು' ನಿಲುವಿಗೆ ನಿರ್ಬಂಧಿಸಿತೇ?
 ಅಷ್ಟಕ್ಕೂ, ವಿಚ್ಛೇದನದಂಥ ಪ್ರಕರಣಗಳು ಕೇವಲ ಈ ದೇಶದ ಸಮಸ್ಯೆಯಷ್ಟೇ ಆಗಿ ಉಳಿದಿಲ್ಲ. ಮುಂದುವರಿದ ದೇಶಗಳ ಪ್ರಮುಖ ಸಮಸ್ಯೆಯಾಗಿ ಅದು ಮಾರ್ಪಟ್ಟು ಬಿಟ್ಟಿದೆ. ದಾಂಪತ್ಯವೆಂಬುದು ದೀರ್ಘಕಾಲ ಕಾಪಾಡಿಕೊಂಡು ಬರಬೇಕಾದ ರಮ್ಯ ಅನುಭವವೆಂದೋ; ಕಷ್ಟವೋ, ಸುಖವೋ ಜೀವನಪೂರ್ತಿ ಜತೆಯಾಗಿಯೇ ಇರಬೇಕೆಂದೋ ಭಾವಿಸುವ ಸಾಂಪ್ರದಾಯಿಕ ಚೌಕಟ್ಟಿನಿಂದ ಆಧುನಿಕ ಮದುವೆ ಕಲ್ಪನೆಗಳು ಹೊರಬರುತ್ತಿವೆ. ಪತಿ-ಪತ್ನಿಯರಿಬ್ಬರೂ ದುಡಿಯುವ ಇಂದಿನ ವಾತಾವರಣದಲ್ಲಿ ಕಷ್ಟವನ್ನೂ ಸುಖವನ್ನೂ ಸಮ ಪ್ರಮಾಣದಲ್ಲಿ ಹಂಚಿಕೊಳ್ಳುವಲ್ಲೂ ಭಿನ್ನಾಭಿಪ್ರಾಯಗಳು ತಲೆದೋರುತ್ತಿವೆ. ದಾಂಪತ್ಯವನ್ನು ಭಾವನಾತ್ಮಕತೆಯಿಂದ ಹೊರತಂದು ಬರೇ ದೈಹಿಕ ಸಂಬಂಧವಾಗಿಯಷ್ಟೇ ವ್ಯಾಖ್ಯಾನಿಸುವ ಆಲೋಚನೆಗಳಿಗೂ ಮಹತ್ವ ಸಿಗುತ್ತಿವೆ. ಆಧುನಿಕ ಜೀವನ ಕ್ರಮದ ಬೇಡಿಕೆಗೆ ಸ್ಪಂದಿಸುವ ಧಾವಂತದಲ್ಲಿ ಅಸಂಖ್ಯ ಪತಿಯಂದಿರು ಇವತ್ತು ತಮ್ಮ ವೈವಾಹಿಕ ಬದುಕನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪತ್ನಿ-ಮಕ್ಕಳೊಂದಿಗೆ ಖುಷಿಯಿಂದ ತುಸು ಹೊತ್ತು ಕಳೆಯಲೂ ಪುರುಸೊತ್ತಿಲ್ಲದಷ್ಟು ದುಡಿಮೆಯಲ್ಲಿ ಅವರು ಮಗ್ನರಾಗಿ ಬಿಡುತ್ತಿದ್ದಾರೆ. ಕಚೇರಿಯಲ್ಲೂ ಮನೆಯಲ್ಲೂ ವ್ಯವಹಾರದ್ದೇ ಧ್ಯಾನ. ದುಡ್ಡು ಸಂತಸವನ್ನು ಕೊಡುತ್ತದೆ ಎಂದೇ ಅವರು ನಂಬಿದ್ದಾರೆ. ಪತ್ನಿ-ಮಕ್ಕಳನ್ನು ನನ್ನ ದುಡ್ಡು ಸುಖವಾಗಿಡುತ್ತದೆ ಎಂದು ಅಂದುಕೊಂಡು ಅದರ ಹಿಂದೆಯೇ ಓಡುತ್ತಿರುತ್ತಾರೆ. ಇತ್ತ ದಾಂಪತ್ಯ ಸಂಬಂಧದ ಭಾವನಾತ್ಮಕ ಸುಖವನ್ನು ಅನುಭವಿಸುವಲ್ಲಿ ವಿಫಲವಾಗುತ್ತಿರುವ ಪತ್ನಿ ತಪ್ಪು ಹೆಜ್ಜೆ ಇಡುವುದಕ್ಕೂ ಧೈರ್ಯ ತೋರುತ್ತಿದ್ದಾಳೆ. ನಿಜವಾಗಿ, ಆಧುನಿಕ ಜಗತ್ತಿನಲ್ಲಿ ಆಗಾಗ ಸುದ್ದಿಯಾಗುತ್ತಿರುವ ಹತ್ಯೆ, ಆತ್ಮಹತ್ಯೆ, ಪರಾರಿ, ವಿಚ್ಛೇದನಗಳಲ್ಲಿ ಇಂಥ ಹತ್ತು-ಹಲವು ಕಾರಣಗಳಿಗೆ ಖಂಡಿತ ಜಾಗವಿದೆ. ಆದ್ದರಿಂದಲೇ, 'ಪತ್ನಿಗೆ ಕಿಡ್ನಿ ಕೊಡಿ' ಎಂದು ಕುತ್ತಿಗೆಗೆ ಬೋರ್ಡು ತಗುಲಿಸಿ ನಡೆದ ಸ್ವಿಲ್ಲಿಂಗ್ ಇಷ್ಟವಾಗುವುದು. ಅಂದಹಾಗೆ,
 ತನ್ನ 9 ಮತ್ತು 5 ವರ್ಷದ ಇಬ್ಬರು ಮಕ್ಕಳನ್ನು ಬಿಟ್ಟು ಎದುರು ಮನೆಯ ಯುವಕನೊಂದಿಗೆ ಓಡಿಹೋದ ಪತ್ನಿಯ ನಡತೆಗೆ ನೊಂದುಕೊಂಡ ಮುಂಬಯಿಯ ಹೊಟೇಲ್ ಮೇಲ್ವಿಚಾರಕ ಶ್ರೀಧರ್ ಶೆಟ್ಟಿ ಎಂಬಾತ ಕಳೆದ ವಾರ ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಪ್ರಕಟವಾಗಿತ್ತು. ತಾಯಿಯನ್ನು ಸ್ಮರಿಸುತ್ತಾ ಕಣ್ಣೀರು ಹರಿಸುತ್ತಿದ್ದ ಮಕ್ಕಳನ್ನು ನೋಡಿ ಆತ ಚಂಚಲಗೊಂಡಿದ್ದ. ಮೇರಿ ಔರತ್ ಸಾಥ್ ದೇತಿ ತೋ ಮೈ ಐಸೆ ಕದಂ ನಹೀ ಉಠಾತಾ (ನನ್ನ ಪತ್ನಿ ಜತೆಯಾಗಿದ್ದರೆ ನಾನು ಈ ಕೃತ್ಯ ಎಸಗುತ್ತಿರಲಿಲ್ಲ) ಎಂಬ ಡೆತ್ ನೋಟ್ ಬ
ರೆದಿದ್ದ ಆತನನ್ನು ಸ್ಮರಿಸುವಾಗ ಸ್ವಿಲ್ಲಿಂಗ್ ನೆನಪಾದರು.

Thursday, February 20, 2014

ಒಂಟಿಯಾಗಿರುವಾಗ ಬೆತ್ತ ಬೀಸಿದಂತೆ ಗುಂಪಿನಲ್ಲಿರುವಾಗ ಬೀಸಿದರೆ ಹೇಗೆ?

    ಅಭಿವ್ಯಕ್ತಿ ಸ್ವಾತಂತ್ರ್ಯ ಅಂದರೇನು? ಅದರ ಮಿತಿಗಳು ಏನೆಲ್ಲ? ಯಾವೆಲ್ಲ ಸಂಗತಿಗಳು ಈ ಸ್ವಾತಂತ್ರ್ಯದ ಅಡಿಯಲ್ಲಿ ಬರುತ್ತವೆ? ಕಳೆದ ವರ್ಷ ಢುಂಢಿ ಎಂಬ ಕಾದಂಬರಿ ಇಂಥದ್ದೊಂದು ಚರ್ಚೆಯನ್ನು ಹುಟ್ಟು ಹಾಕಿತ್ತು. ಈ ಕಾದಂಬರಿ ಹಿಂದೂ ಭಾವನೆಗಳನ್ನು ನೋಯಿಸುತ್ತದೆ ಎಂದು ಹಿಂದೂ ಸಂಘಟನೆಗಳು ಪ್ರತಿಭಟಿಸಿದುವು. ಕೋರ್ಟ ನಲ್ಲಿ ದಾವೆ ಹೂಡಿದುವು. ಕಾದಂಬರಿಕಾರ ಯೋಗೇಶ್ ಮಾಸ್ಟರ್‍ರನ್ನು ಬೆಂಬಲಿಸುವ ಮತ್ತು ಖಂಡಿಸುವ ಗುಂಪುಗಳು ಸೃಷ್ಟಿಯಾದುವು. ಈ ಮಧ್ಯೆ 2013 ಆಗಸ್ಟ್ 29ರಂದು ಯೋಗೇಶ್ ಮಾಸ್ಟರ್‍ರನ್ನು ಬಂಧಿಸಲಾಯಿತು. ಢುಂಢಿಗೆ ನಿಷೇಧವೂ ಬಿತ್ತು. 2009ರಲ್ಲಿ ಬಿಜೆಪಿಯ ಜಸ್ವಂತ್ ಸಿಂಗ್ ಅವರು, 'ಜಿನ್ನ: ಇಂಡಿಯಾ, ಪಾರ್ಟಿಸನ್, ಇಂಡಿಪೆಂಡೆನ್ಸ್' ಎಂಬ ಕೃತಿ ಬರೆದಾಗಲೂ ಇದೇ ಸಮಸ್ಯೆ ಸೃಷ್ಟಿಯಾಗಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಜಸ್ವಂತ್ ಸಿಂಗ್‍ರು ಆ ಕೃತಿಯನ್ನು ಸಮರ್ಥಿಸುವಾಗ ನರೇಂದ್ರ ಮೋದಿಯವರ ಗುಜರಾತ್ ಸರಕಾರ ಕೃತಿಯನ್ನು ನಿಷೇಧಿಸಿತು. ಸರ್ದಾರ್ ಪಟೇಲ್‍ರ ವ್ಯಕ್ತಿತ್ವಕ್ಕೆ ಕೃತಿಯಲ್ಲಿ ಅವಮಾನ ಮಾಡಲಾಗಿದೆ ಎಂಬ ಕಾರಣವನ್ನೂ ನೀಡಿತು. ಬಿಜೆಪಿಯು ಜಸ್ವಂತ್‍ರನ್ನು ಪಕ್ಷದಿಂದಲೇ ಉಚ್ಛಾಟಿಸಿತು. ಆದರೆ 2009 ಸೆ. 4ರಂದು ಗುಜರಾತ್ ಹೈಕೋರ್ಟು ಕೃತಿಯ ಮೇಲಿನ ನಿಷೇಧವನ್ನು ರದ್ದುಪಡಿಸಿತು.
 ಇದೀಗ, ‘ದಿ ಹಿಂದೂಸ್: ಆನ್ ಆಲ್ಟರ್‍ನೇಟಿವ್ ಹಿಸ್ಟರಿ' ಎಂಬ ಕೃತಿಯು ಅಭಿವ್ಯಕ್ತಿ ಸ್ವಾತಂತ್ರ್ಯದ ಇತಿ-ಮಿತಿಗಳನ್ನು ಮತ್ತೊಮ್ಮೆ ಚರ್ಚೆಗೆ ಒಳಪಡಿಸಿದೆ.
 ಅಮೇರಿಕದ ಚಿಕಾಗೋ ಯುನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿರುವ ವೆಂಡಿ ಡೊನಿಗರ್ ಅವರ ‘ದಿ ಹಿಂದೂಸ್..' ಕೃತಿಯು 2010ರಲ್ಲಿ ಭಾರತದಲ್ಲಿ ಬಿಡುಗಡೆಗೊಂಡಿತ್ತು. ಶಿಕ್ಷಾ ಬಚಾವೋ ಆಂದೋಲನ್ ಎಂಬ ಸಂಘಪರಿವಾರದ ಅಂಗಸಂಸ್ಥೆಯೊಂದು 2011ರಲ್ಲಿ ಈ ಕೃತಿಯ ವಿರುದ್ಧ ಮೊಕದ್ದಮೆ ಹೂಡಿತು. ಹಿಂದೂಗಳ ಭಾವನೆಗಳನ್ನು ಈ ಕೃತಿಯಲ್ಲಿ ಅವಮಾನಿಸಲಾಗಿದೆ ಎಂದು ದಾವೆಯಲ್ಲಿ ಆರೋಪಿಸಲಾಯಿತು. ದಿ ಸೆಟಾನಿಕ್ ವರ್ಸಸ್‍ನಂಥ ವಿವಾದಾತ್ಮಕ ಕೃತಿಗಳನ್ನು ಪ್ರಕಟಿಸಿರುವ ಲಂಡನ್ನಿನ ಪ್ರಸಿದ್ಧ ಪೆಂಗ್ವಿನ್ ಪ್ರಕಾಶನ ಸಂಸ್ಥೆಯು ಈ ಕೃತಿಯನ್ನು ಪ್ರಕಟಿಸಿರುವುದರಿಂದ ಈ ದಾವೆಯ ಬಗ್ಗೆ ಒಂದು ರೀತಿಯ ಕುತೂಹಲ ಸಾಹಿತ್ಯಿಕ ವಲಯದಲ್ಲಂತೂ ಖಂಡಿತ ಇತ್ತು. 1989-90ರಲ್ಲಿ ಸೆಟಾನಿಕ್ ವರ್ಸಸ್‍ನ ವಿರುದ್ಧ ಜಾಗತಿಕವಾಗಿಯೇ ಪ್ರತಿಭಟನೆ ಎದ್ದಿದ್ದರೂ ಆ ಕೃತಿಯನ್ನು ಜಾಗತಿಕ ಮಾರುಕಟ್ಟೆಯಿಂದ 'ಪೆಂಗ್ವಿನ್' ಹಿಂತೆಗೆದುಕೊಂಡಿರಲಿಲ್ಲ. ಇರಾನ್, ಸೌದಿ ಅರೇಬಿಯಾ, ಇರಾಕ್‍ನಂಥ ಮುಸ್ಲಿಮ್ ರಾಷ್ಟ್ರಗಳನ್ನು ಬಿಡಿ; ವೆನೆಝುವೇಲಾ, ಥೈಲೆಂಡ್, ತಾಂಜಾನಿಯಾ, ಸಿಂಗಾಪುರದಂಥ ಪ್ರಮುಖ ಸೆಕ್ಯುಲರ್ ರಾಷ್ಟ್ರಗಳೂ ಈ ಕೃತಿಯ ವಿರುದ್ಧ ನಿಷೇಧ ಹೇರಿದಾಗಲೂ ‘ಪೆಂಗ್ವಿನ್' ತನ್ನ ನಿಲುವನ್ನು ಬದಲಿಸಿರಲಿಲ್ಲ. ಅದರ ನಿರ್ದೇಶಕ ಪೀಟರ್ ಮೇಯರ್‍ರು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಸಲ್ಮಾನ್ ರುಶ್ದಿಯನ್ನು ಸಮರ್ಥಿಸಿಕೊಂಡಿದ್ದರು. ಇರಾನಿನ ಆಧ್ಯಾತ್ಮ ನಾಯಕ ಆಯತುಲ್ಲಾ ಖೊಮೇನಿಯವರು ರುಶ್ದಿಯ ವಿರುದ್ಧ ಹತ್ಯಾ ಘೋಷಣೆ ಮಾಡಿದಾಗಲೂ ಪೆಂಗ್ವಿನ್ ರುಶ್ದಿಯ ಪರವೇ ನಿಂತಿತ್ತು. ಆದ್ದರಿಂದಲೇ, ದಿ ಹಿಂದೂಸ್.. ಕೃತಿಯ ಕುರಿತಂತೆ ಪೆಂಗ್ವಿನ್ ಯಾವ ನಿಲುವನ್ನು ತಳೆಯುತ್ತದೆ ಅನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ, ಭಾರತದ ಮಾರುಕಟ್ಟೆಯಿಂದ ಈ ಕೃತಿಗಳನ್ನು ಹಿಂತೆಗೆದುಕೊಳ್ಳುವುದಾಗಿ ಪೆಂಗ್ವಿನ್ ಕಳೆದ ವಾರ ಘೋಷಿಸಿದೆ. ಶಿಕ್ಷಾ ಬಚಾವೋ ಆಂದೋಲನ್‍ನ ಪ್ರತಿನಿಧಿ ದೀನಾನಾಥ್ ಬಾತ್ರಾ ಮತ್ತು ಪೆಂಗ್ವಿನ್‍ನ ನಡುವೆ ಕೋರ್ಟಿನ ಹೊರಗೆ ನಡೆದ ಈ ರಾಜಿ ಒಪ್ಪಂದವು ಅರುಂಧತಿ ರಾಯ್ ರಂಥವರನ್ನು ಸಿಟ್ಟಿಗೆಬ್ಬಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪೆಂಗ್ವಿನ್ ಕಡೆಗಣಿಸಿದೆ ಎಂಬ ಆರೋಪದೊಂದಿಗೆ ರಾಯ್ ಪತ್ರ ಬರೆದಿದ್ದಾರೆ. ನಿಜವಾಗಿ, 1988ರಲ್ಲಿ ಸೆಟಾನಿಕ್ ವರ್ಸಸ್ ಕೃತಿಯ ಕರಡು ಪ್ರತಿಯನ್ನು ಓದಿದ ಪೆಂಗ್ವಿನ್‍ನ ಸಂಪಾದಕೀಯ ಮಂಡಳಿಯು, ಇದು ವಿವಾದಾತ್ಮಕವಾಗಬಹುದು ಎಂದು ಅನುಮಾನ ವ್ಯಕ್ತಪಡಿಸಿತ್ತು. ಈ ಅನುಮಾನವನ್ನು ಕೃತಿ ಪ್ರಕಟಣೆಗಿಂತ ಮೊದಲೇ ಸಲ್ಮಾನ್ ರುಶ್ದಿಗೂ ತಿಳಿಸಲಾಗಿತ್ತು. ಆಗ ಅವರು ಅದನ್ನು ಕಡೆಗಣಿಸಿ ಹೀಗೆ ಹೇಳಿದ್ದರು,
 ‘ಕೆಲವು ಮುಲ್ಲಾಗಳಿಗೆ ಅಸಮಾಧಾನ ಉಂಟಾಗಬಹುದು. ಅವರು ನನ್ನ ಉದ್ದೇಶ ಶುದ್ಧಿಯನ್ನು ಪ್ರಶ್ನಿಸಬಹುದು. ಆದರೆ ನಾನು ಸಾರ್ವಜನಿಕವಾಗಿ ಈ ಕೃತಿಯನ್ನು ಸಮರ್ಥಿಸಿಕೊಳ್ಳುವೆ.'
 ಅಷ್ಟಕ್ಕೂ, ಓರ್ವ ವ್ಯಕ್ತಿ ಒಂದು ಕೃತಿಯನ್ನು, ಸಿನಿಮಾ, ನಾಟಕ ಅಥವಾ ಕಲಾಕೃತಿಯನ್ನು ರಚಿಸುವುದು ಯಾವ ಉದ್ದೇಶದಿಂದ? ಕೇವಲ ಕೃತಿಕಾರನ ಆತ್ಮತೃಪ್ತಿಗೋಸ್ಕರ ಕೃತಿಯೊಂದು ರಚನೆಗೊಳ್ಳುತ್ತದೆಂದಾದರೆ ಅದನ್ನು ಪ್ರಕಟಿಸುವ ಅಗತ್ಯ ಇಲ್ಲವಲ್ಲವೇ? ಒಂದು ಕೃತಿಯೋ ಸಿನಿಮಾವೋ ಪ್ರಕಟಗೊಂಡ ಬಳಿಕ ಅದು ಅವರದ್ದಾಗಿಯಷ್ಟೇ ಉಳಿಯುವುದಿಲ್ಲ. ಅದನ್ನು ಕೊಂಡು ಓದಿದವರು ಮತ್ತು ವೀಕ್ಷಿಸಿದವರಿಗೂ ಅದು ಅನ್ವಯವಾಗುತ್ತದೆ. ಅದರಲ್ಲಿರುವ ಅಂಶಗಳನ್ನು ಓದುಗ ತನ್ನ ಭಾವನೆಗಳಿಗೆ ಸಮೀಕರಿಸಿ ನೋಡುತ್ತಾನೆ. ತನ್ನ ಆಲೋಚನೆಯೊಂದಿಗೆ ಮುಖಾಮುಖಿಗೊಳಿಸುತ್ತಾನೆ. ತನ್ನೊಳಗಿನ ವಿಚಾರಗಳಿಗೆ ಢಿಕ್ಕಿ ಹೊಡೆಸುತ್ತಾನೆ. ಅಲ್ಲದೇ ಕೃತಿಕಾರನ ನಿರೂಪಣಾ ಶೈಲಿ, ಕಥಾಹಂದರ, ಪ್ರಚಲಿತ ಜಗತ್ತಿನೊಂದಿಗೆ ಕೃತಿಗೆ ಇರುವ ಹೋಲಿಕೆಗಳಷ್ಟೇ ಅಲ್ಲಿ ವಿಮರ್ಶೆಗೆ ಒಳಗಾಗುವುದಲ್ಲ. ಆ ಕೃತಿ ಬಳಸಿದ ಭಾಷೆ, ಚರ್ಚಿಸುತ್ತಿರುವ ವಿಷಯ, ಅದರ ವಾಸ್ತವತೆ.. ಎಲ್ಲವೂ ಚರ್ಚೆಗೊಳಗಾಗುತ್ತದೆ. ನಿಜವಾಗಿ, ಓರ್ವ ವ್ಯಕ್ತಿ ಯಾರೂ ಇಲ್ಲದ ಕಡೆ ಕೈಯಲ್ಲಿರುವ ಬೆತ್ತವನ್ನು ಬೀಸುವುದು ಬೇರೆ, ಗುಂಪಿನಲ್ಲಿರುವಾಗ ಬೀಸುವುದು ಬೇರೆ. ಒಂಟಿಯಾಗಿರುವಾಗ ಬೀಸುವುದರಿಂದ ಯಾರಿಗೂ ಯಾವ ತೊಂದರೆಯೂ ಆಗುವುದಿಲ್ಲ. ಆದರೆ ಗುಂಪಿನಲ್ಲಿರುವಾಗ ಸಾಕಷ್ಟು ಜಾಗರೂಕತೆ ಪಾಲಿಸಬೇಕಾಗು ತ್ತದೆ. ತನ್ನ ಬೀಸುವ ಸ್ವಾತಂತ್ರ್ಯಕ್ಕೆ ಮಿತಿಯನ್ನು ಹೇರಿಕೊಳ್ಳಬೇಕಾಗುತ್ತದೆ. ಒಂಟಿಯಾಗಿರುವಾಗ ಬೀಸಿದಂತೆಯೇ ಗುಂಪಿನಲ್ಲಿರುವಾಗಲೂ ಬೀಸುವೆ ಎಂದು ಹಠ ತೊಟ್ಟರೆ ಇತರರಿಗೆ ಅದರಿಂದ ತೊಂದರೆಯಾಗಬಹುದು. ಅದರಿಂದಾಗಿ ಕೆಲವರು ಗಾಯಗೊಳ್ಳಬಹುದು. ಕೆಲವರು ಭೀತಿಗೆ ಒಳಗಾಗಬಹುದು. ಕೆಲವರು ಗುಂಪಿನಿಂದ ಪ್ರತ್ಯೇಕಗೊಳ್ಳಬಹುದು. ನಿಜವಾಗಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಸೂಕ್ಷ್ಮ ಗೆರೆಗಳನ್ನು ನಾವು ಇಲ್ಲೆಲ್ಲೋ ಹುಡುಕಬೇಕಾಗಿದೆ. 1975ರಲ್ಲಿ ಬಿಡುಗಡೆಗೊಂಡ ಡೆಸ್ಮಂಡ್ ಸ್ಟುವರ್ಟ್‍ ರ - ಅರ್ಲಿ ಇಸ್ಲಾಮ್ ಆಗಲಿ, ಚಾರ್ಲ್ಸ್  ಬೆತ್ಲೆಹೆಮ್‍ರ- ಇಂಡಿಯನ್ ಇಂಡಿಪೆಂಡೆಂಟ್, ಲಾರೆನ್ಸ್ ಡಿ ಸಲ್ವಾಡೋರ್ ಅವರ- ಹೂ ಕಿಲ್ಲ್ದ್  ಗಾಂಧಿ, ಮ್ಯಾಕ್ಸ್ ವೈಲಿ ಅವರ- ಹಿಂದೂ ಹೆವನ್ ಆಗಲಿ.. ಎಲ್ಲವೂ ಈ ದೇಶದಲ್ಲಿ ನಿಷೇಧಕ್ಕೆ ಒಳಗಾಗಿರುವುದು ಅವುಗಳು ಚರ್ಚಿಸಿರುವ ಸೂಕ್ಷ್ಮ ಭಾಷೆ, ವಿಷಯಗಳಿಂದಲೇ.
 1989 ಫೆ. 14ರಂದು ರುಶ್ದಿಯ ವಿರುದ್ಧ ಇರಾನಿನ ಖೊಮೇನಿ ಹತ್ಯಾ ಘೋಷಣೆ ಮಾಡಿದ 7 ದಿನಗಳ ಬಳಿಕ ಫೆ. 21ರಂದು ಲಂಡನ್ನಿನ ಕಿಂಗ್‍ಸ್ಟನ್ ಯುನಿವರ್ಸಿಟಿಯಲ್ಲಿ ಕಾರ್ಯಕ್ರಮವೊಂದು ಏರ್ಪಾಟಾಗಿತ್ತು. ಖ್ಯಾತ ಗಾಯಕ ಕ್ಯಾಟ್ ಸ್ಟೀವನ್ಸ್ ಅದರಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸೆಟಾನಿಕ್ ವರ್ಸಸ್ ಕೃತಿಯ ಬಗ್ಗೆ ಮತ್ತು ಖೊಮೇನಿಯ ಹೇಳಿಕೆಯ ಬಗ್ಗೆ ಅವರಲ್ಲಿ ಪ್ರಶ್ನಿಸಲಾಯಿತು. ಅವರು ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗದ ಬಗ್ಗೆ ವಿಷಾದಿಸಿದ್ದರು. ಕುರ್‍ಆನ್ ಮತ್ತು ಬೈಬಲ್‍ಗಳು ಧರ್ಮನಿಂದನೆಯನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬಹುದಾದ ಅಪರಾಧವಾಗಿ ಪರಿಗಣಿಸಿರುವುದನ್ನು ಅವರು ಉಲ್ಲೇಖಿಸಿದ್ದರು. ಆದರೆ ಮರುದಿನ ಪತ್ರಿಕೆಗಳು, 'Cat says, kill Rushdie '(ರುಶ್ದಿಯನ್ನು ಕೊಲ್ಲುವಂತೆ ಕ್ಯಾಟ್ ಕರೆ)  ಎಂದು ಬರೆದು ವಿವಾದ ಎಬ್ಬಿಸಿದ್ದುವು.BBC ಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳೂ ಚರ್ಚೆಗೆ ಒಳಗಾಗಿದ್ದುವು. 'ಒಂದು ವೇಳೆ ನನಗೆ ರುಶ್ದಿ ಎದುರಾದರೆ ನಾನು ಖೊಮೇನಿಗೆ ಫೋನ್ ಮಾಡಿ ತಿಳಿಸುವೆ..' ಎಂಬ ಅವರ ಮಾತನ್ನು ಎತ್ತಿಕೊಂಡು ಮಾಧ್ಯಮಗಳು ಟೀಕಿಸಿದ್ದುವು. ಹೀಗೆ ಅಭಿವ್ಯಕ್ತಿ ಸ್ವಾತಂತ್ರ್ಯವೆಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ ಬಗೆಯಲ್ಲಿ ವ್ಯಾಖ್ಯಾನಕ್ಕೆ ಒಳಗಾಗುತ್ತಲೇ ಬಂದಿದೆ. ಕ್ಯಾಟ್ ಸ್ಟೀವನ್ಸ್‍ಗೆ ಸೆಟಾನಿಕ್ ವರ್ಸಸ್ ಕೃತಿಯು ಧರ್ಮನಿಂದೆಯ ಕೃತಿಯಾಗಿ ಕಾಣಿಸಿದರೆ, BBCಯ ನಿರೂಪಕ ಜೆಫ್ರಿ ರಾಬರ್ಟ್ಸನ್  ಅದನ್ನು ಆ ರೀತಿಯಾಗಿ ಪರಿಗಣಿಸುವುದೇ ಇಲ್ಲ. ಶಿಕ್ಷಾ ಬಚಾವೋ ಆಂದೋಲನ್‍ನ ದೀನಾನಾಥ್ ಬಾತ್ರರಿಗೆ 'ದಿ ಹಿಂದೂಸ್' ಆನ್ ಆಲ್ಟರ್‍ನೇಟಿವ್ ಹಿಸ್ಟರಿ'ಯು ಧರ್ಮನಿಂದೆಯಾಗಿ ಕಾಣಿಸುವಾಗ ಅರುಂಧತಿ ರಾಯ್‍ರಿಗೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಸಂಕೇತವಾಗಿ ಕಾಣಿಸುತ್ತದೆ.
  1. ನೈನ್ ಅವರ್ಸ್ ಟು ರಾಮ
  2. ಆನ್ ಏರಿಯಾ ಆಫ್ ಡಾರ್ಕ ನೆಸ್
  3. ದಿ ಮೂರ್ಸ್ ಲಾಸ್ಟ್ ಸೈ
  4. ದಿ ಟ್ರೂ ಫುರ್ಕಾನ್
  5. ಡ ವಿನ್ಸಿ ಕೋಡ್
 ಮುಂತಾದ ಹಲವಾರು ಕೃತಿಗಳು ಸ್ವಾತಂತ್ರ್ಯಾನಂತರ ಈ ದೇಶದಲ್ಲಿ ನಿಷೇಧಕ್ಕೆ ಒಳಗಾಗಿದೆ. ಜೇಮ್ಸ್ ಲೈನೆ ಅವರ ‘ಶಿವಾಜಿ: ಹಿಂದೂ ಕಿಂಗ್ ಇನ್ ಇಸ್ಲಾಮಿಕ್ ಇಂಡಿಯಾ’ ಎಂಬ ಕೃತಿಯ ವಿರುದ್ಧ ಶಿವ ಸೈನಿಕರು ಈ ಹಿಂದೆ ಪ್ರತಿಭಟನೆ ನಡೆಸಿದ್ದರು. ಭಂಡಾರ್ಕರ್ ಓರಿಯಂಟಲ್ ಇನ್ಸಿಟ್ಯೂಟ್‍ನ ಮೇಲೆ ದಾಳಿ ನಡೆಸಿದ್ದರು. ತಸ್ಲೀಮಾ ನಸ್ರೀನ್‍ರ ದ್ವಿಖಂಡಿತೋದ ವಿರುದ್ಧ ಕೊಲ್ಕತ್ತಾದಲ್ಲಿ ಪ್ರತಿಭಟನೆ ನಡೆದಿತ್ತು. ಒಂದು ರೀತಿಯಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯ ಕಾಲಕಾಲಕ್ಕೂ ಈ ದೇಶದಲ್ಲಿ ಮುಖಾ ಮುಖಿಯನ್ನು ಎದುರಿಸುತ್ತಲೇ ಬಂದಿದೆ. ಹಾಗಂತ, ಪಾಶ್ಚಾತ್ಯ ರಾಷ್ಟ್ರಗಳು ಪ್ರಸ್ತುತಪಡಿಸುವ ಅಭಿವ್ಯಕ್ತಿ ಸ್ವಾತಂತ್ರ್ಯದ ಮಾದರಿಯೇ ಕಟ್ಟಕಡೆಯದೇ? ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಪಾಶ್ಚಾತ್ಯ ರಾಷ್ಟ್ರಗಳು ಕೊಡುವ ವ್ಯಾಖ್ಯಾನಕ್ಕಿಂತ ಬೇರೆ ವ್ಯಾಖ್ಯಾನಗಳು ಇರಬಾರದೆಂದಿದೆಯೇ? ಧಾರ್ಮಿಕತೆಗೆ ಬಹಳ ಕಡಿಮೆ ಮಹತ್ವ ಇರುವ ಈ ರಾಷ್ಟ್ರಗಳ ಮಾದರಿಯನ್ನೇ ಇತರೆಲ್ಲ ರಾಷ್ಟ್ರಗಳು ಯಾಕೆ ಅನುಸರಿಸಬೇಕು? ಸೆಟಾನಿಕ್ ವರ್ಸಸ್‍ಗೆ ಇಂಗ್ಲೆಂಡ್, ಅಮೇರಿಕ, ಫ್ರಾನ್ಸ್, ಕೆನಡಾಗಳು ನಿಷೇಧ ಹೇರಿಲ್ಲ ಎಂಬ ಕಾರಣಕ್ಕಾಗಿ ಅಥವಾ 'ದಿ ಹಿಂದೂಸ್..' ಕೃತಿಯನ್ನು ಅಭಿವ್ಯಕ್ತಿಯ ಹೆಸರಲ್ಲಿ ಈ ರಾಷ್ಟ್ರಗಳು ಸಮರ್ಥಿಸುತ್ತಿವೆ ಎಂಬ ಕಾರಣಕ್ಕಾಗಿ ನಾವೂ ಅದನ್ನು ಬೆಂಬಲಿಸಬೇಕೇ? ನಿಂದನೆ, ಅಪಹಾಸ್ಯ, ಅವಹೇಳನಗಳು ಯಾಕೆ ಅಭಿವ್ಯಕ್ತಿ ಸ್ವಾತಂತ್ರ್ಯದಡಿಯಲ್ಲಿ ಸಮರ್ಥನೆಗೆ ಒಳಗಾಗಬೇಕು? ಹಾಗಂತ, ಪ್ರವಾದಿ ಮುಹಮ್ಮದ್‍ರನ್ನು(ಸ) ಅಥವಾ ಶ್ರೀಕೃಷ್ಣರನ್ನು ವಿಶ್ಲೇಷಣೆಗೆ ಒಳಪಡಿಸುವುದು ಖಂಡಿತ ತಪ್ಪಲ್ಲ. ಯಾರು ಹೆಚ್ಚೆಚ್ಚು ವಿಮರ್ಶೆಗೆ ಒಳಗಾಗುತ್ತಾರೋ ಅವರು ಜನರಿಗೆ ಹೆಚ್ಚೆಚ್ಚು ಹತ್ತಿರವಾಗುತ್ತಾರೆ. ಆದರೆ ನಿಂದನೆ, ಅಪಹಾಸ್ಯಗಳು ವಿಮರ್ಶೆ ಹೇಗಾಗುತ್ತವೆ? ಇಂಥವುಗಳನ್ನು ಬಳಸದೆಯೇ ಓರ್ವ ವ್ಯಕ್ತಿಯನ್ನು, ಒಂದು ಧರ್ಮವನ್ನು, ಅದರ ಆರಾಧನಾ ಕ್ರಮಗಳನ್ನು ವಿಶ್ಲೇಷಿಸುವುದಕ್ಕೆ ಸಾಧ್ಯವಿಲ್ಲವೇ? ಈ ಜಗತ್ತಿನಲ್ಲಿ ಧರ್ಮಗಳನ್ನು ಪ್ರಶ್ನಿಸುವ ಪ್ರಯತ್ನಗಳು ಅನೇಕ ಬಾರಿ ನಡೆದಿವೆ. ಧರ್ಮಗಳು ಪ್ರತಿಪಾದಿಸುವ ವಿಚಾರಗಳು ಕಟು ಚರ್ಚೆಗೆ ಒಳಗಾಗಿವೆ. ಯಾರೂ ಅಂಥ ಪ್ರಯತ್ನಗಳನ್ನು ತಪ್ಪೂ ಅಂದಿಲ್ಲ. ಚಲನಶೀಲ ಧರ್ಮವೊಂದು ತಾನು ವಿಮರ್ಶೆಗೆ ಒಳಗಾಗುವುದನ್ನು ಅಸಹನೆಯಿಂದ ನೋಡುವುದಕ್ಕೆ ಸಾಧ್ಯವೂ ಇಲ್ಲ. ಆದರೆ ಅಪಹಾಸ್ಯದ ಉದ್ದೇಶದಿಂದಲೇ ಅಂಥ ಪ್ರಯತ್ನಗಳು ನಡೆದರೆ, ನಿಂದನೆಯ ಗುರಿ ಇಟ್ಟುಕೊಂಡೇ ವಿಮರ್ಶೆಗೆ ಮುಂದಾದರೆ..
   ಸೆಟಾನಿಕ್ ವರ್ಸಸ್ ಆಗಲಿ, ‘ದಿ ಹಿಂದೂಸ್: ಆ್ಯನ್ ಆಲ್ಟರ್‍ನೇಟಿವ್ ಹಿಸ್ಟರಿ' ಆಗಲಿ ಎತ್ತಿರುವುದು ಇವೇ ಪ್ರಶ್ನೆಯನ್ನು.

Wednesday, February 5, 2014

ಇಂಥದ್ದೊಂದು ಕಾಯ್ದೆ ಮನೋರಮಾ, ಶರ್ಮಿಳರನ್ನಲ್ಲದೆ ಇನ್ನಾರನ್ನು ಸೃಷ್ಟಿಸಬಲ್ಲುದು?

1. ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿರುವವರ ಮೇಲೆ ಗುಂಡು ಹಾರಿಸಬಹುದು.
2. ಅನುಮಾನಿತ ವ್ಯಕ್ತಿಗಳನ್ನು ವಾರಂಟ್ ಇಲ್ಲದೆಯೇ ಬಂಧಿಸಬಹುದು.
3. ಶಂಕಿತ ಯಾವುದೇ ವಾಹನವನ್ನು ತಡೆಗಟ್ಟಿ, ತಪಾಸಿಸಬಹುದು.
4. ಯೋಧರು ಯಾವ ಕಾರಣಕ್ಕೂ ನ್ಯಾಯಾಂಗ ವ್ಯಾಪ್ತಿಗೆ ಒಳಪಡುವುದಿಲ್ಲ. ಆದ್ದರಿಂದ ಅವರ ಮೇಲೆ ಕೇಸು ದಾಖಲಿಸುವ, ವಿಚಾರಣೆಗೆ ಒಳಪಡಿಸುವುದಕ್ಕೆ ಅವಕಾಶ ಇಲ್ಲ.
    ವಿಶ್ವಸಂಸ್ಥೆಯಲ್ಲಿ ಭಾರತದ ಅಧಿಕಾರಿಯಾಗಿದ್ದ ನವನೀತಮ್ ಪಿಳ್ಳೆಯವರಿಂದ; ‘ಕ್ರೂರ ಕಾನೂನು, ಪುರಾತನ ಕಾಲದ ಮತ್ತು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿಗೆ ಸರಿ ಹೊಂದದ ಕಾನೂನು..’ ಎಂದು ಕರೆಸಿಕೊಂಡಿದ್ದ ‘ಸಶಸ್ತ್ರ ಪಡೆ ಗಳ ವಿಶೇಷಾಧಿಕಾರ ಕಾಯ್ದೆಯಲ್ಲಿರುವ’ (AFSPA) ಅಂಶಗಳಿವು. 2012 ಮಾರ್ಚ್ 31ರಂದು ಸ್ವತಃ ವಿಶ್ವಸಂಸ್ಥೆಯೇ AFSPA  ಕಾಯ್ದೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಪ್ರಜಾತಂತ್ರ ದೇಶವಾದ ಭಾರತದಲ್ಲಿ ಇಂಥ ಕಾನೂನಿಗೆ ಅವಕಾಶ ಇರಬಾರದು ಅಂದಿತು. ಕಾಶ್ಮೀರಕ್ಕೆ ಭೇಟಿ ಕೊಟ್ಟಿದ್ದ ವಿಶ್ವಸಂಸ್ಥೆಯ ವಿಶೇಷಾಧಿಕಾರಿ ಕ್ರಿಸ್ಟೋಫರ್ ಹೆನ್ಸ್ ಅಂತೂ, AFSPA ವನ್ನು ಕ್ರೂರ ಮತ್ತು ದ್ವೇಷ ಮನೋಭಾವದ ಕಾಯ್ದೆ ಅಂದರು. ವಿಕಿಲೀಕ್ಸ್ ಬಿಡುಗಡೆಗೊಳಿಸಿರುವ ವರದಿಯಲ್ಲಿ - AFSPA  ಕಾಯ್ದೆಯಲ್ಲಿ ಸೇನೆಗೆ ನೀಡಲಾಗಿರುವ ಅಪರಿಮಿತ ಅಧಿಕಾರದಿಂದಾಗಿ ಮಣಿಪುರ ಮತ್ತು ಕಾಶ್ಮೀರಗಳಲ್ಲಿ ಹತ್ಯೆ, ಅತ್ಯಾಚಾರಗಳು ನಡೆಯುವುದಕ್ಕೆ ಕಾರಣವಾಗಿವೆ’ ಎಂದು ಹೇಳಲಾಗಿದೆ. ‘ಈ ಕಾಯ್ದೆಯನ್ನು ಹಿಂತೆಗೆದುಕೊಳ್ಳಿ..’ ಎಂದು ಒತ್ತಾಯಿಸಿ ಕಳೆದ ಒಂದು ದಶಕದಿಂದ ಮಣಿಪುರದ ಇರೋಮ್ ಶರ್ಮಿಳಾ ನಿರಾಹಾರ ಉಪವಾಸ ಆಚರಿಸುತ್ತಿದ್ದಾರೆ. ಆದರೂ ಇತ್ತೀಚೆಗೆ ಕೇಂದ್ರ ಸರಕಾರ ಮಣಿಪುರದಲ್ಲಿ ಜಾರಿಯಲ್ಲಿರುವ AFSPA  ಕಾಯ್ದೆಯನ್ನು ಒಂದು ವರ್ಷಕ್ಕೆ ಮುಂದುವರಿಸಿತು.
   ನಿಜವಾಗಿ, Armed Forces (Special Powers) Act  (AFSPA) ಎಂಬ ಕಾಯ್ದೆಯನ್ನು ರಾಷ್ಟ್ರಮಟ್ಟದಲ್ಲಿಯೇ ಚರ್ಚೆ ಗೊಳಪಡಿಸಿದ್ದು ಮಣಿಪುರದ ತಂಗ್ಜಮ್ ಮನೋರಮ.
   2004 ಜುಲೈ 10ರಂದು ಮಧ್ಯರಾತ್ರಿ ಅಸ್ಸಾಮ್ ರೈಫಲ್ಸ್ ನ ಯೋಧರು 32 ವರ್ಷದ ತಂಗ್ಜಮ್ ಮನೋರಮಾರ ಮನೆಗೆ ಬರುತ್ತಾರೆ. ಆ ಸಂದರ್ಭದಲ್ಲಿ ತಂಗ್ಜಮ್ ಮತ್ತು ಮನೆಯವರು ಗಾಢ ನಿದ್ದೆಯಲ್ಲಿದ್ದರು. ಬಾಗಿಲು ಒಡೆದು ಒಳನುಗ್ಗಿದ ಯೋಧರು ಆಕೆಯನ್ನು ಎಳೆದು ಹೊರತರುತ್ತಾರೆ. ಕುಟುಂಬ ಸದಸ್ಯರ ಎದುರೇ ಥಳಿಸುತ್ತಾರೆ. ಬಂಧಿಸಿ ಕರೆದೊಯ್ಯುತ್ತಾರೆ. ಜುಲೈ 11ರಂದು ಸಂಜೆ ಆಕೆಯ ಅರೆನಗ್ನ ಮೃತದೇಹ ಮನೆಯಿಂದ 4 ಕಿಲೋಮೀಟರ್ ದೂರದ ರಸ್ತೆ ಬದಿಯಲ್ಲಿ ಪತ್ತೆಯಾಗುತ್ತದೆ. ಇದರಿಂದಾಗಿ ಮಣಿಪುರದಲ್ಲಿ ತೀವ್ರ ಪ್ರತಿಭಟನೆಗಳು ನಡೆಯುತ್ತವೆ. ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ವಿವಿಧ ಮಹಿಳಾ ಸಂಘಟನೆಗಳು ಧರಣಿ ನಡೆಸುತ್ತವೆ. ‘ನಮ್ಮನ್ನು ಅತ್ಯಾಚಾರ ಮಾಡಿ ..' ಎಂಬ ಬ್ಯಾನರ್ ಹಿಡಿದು ಅಸ್ಸಾಮ್ ರೈಫಲ್ಸ್ ನ ಪ್ರಧಾನ ಕಚೇರಿ ಎದುರು ಮಹಿಳೆಯರು ಸಂಪೂರ್ಣ ನಗ್ನವಾಗಿ ಅಬ್ಬರಿಸುತ್ತಾರೆ. ಪ್ರತಿಭಟನೆಯ ಕಾವು ಹೆಚ್ಚಿದಂತೆಯೇ ಕೇಂದ್ರ ಗೃಹಸಚಿವರು ಮಣಿಪುರಕ್ಕೆ ಭೇಟಿ ನೀಡುತ್ತಾರೆ. ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಪ್ರಧಾನಿ ಮನ್‍ಮೋಹನ್ ಸಿಂಗ್ ಭರವಸೆ ನೀಡುತ್ತಾರೆ. ಪ್ರಕರಣದ ತನಿಖೆಗಾಗಿ ಮಣಿಪುರ ಸರಕಾರವು ಉಪೇಂದ್ರ ಆಯೋಗವನ್ನು ರಚಿಸುತ್ತದೆ. ಆದರೆ ಆಯೋಗದ ವಿಚಾರಣೆಗೆ ಸೇನೆಯು ಯಾವ ಬಗೆಯ ಸಹಕಾರವನ್ನೂ ನೀಡುವುದಿಲ್ಲ. ಸಮನ್ಸ್ ನ ಮೇಲೆ ಸಮನ್ಸ್ ಕಳುಹಿಸಿದರೂ ಸೇನೆ ನಿರ್ಲಕ್ಷ್ಯ  ತೋರುತ್ತದೆ. AFSPA  ಕಾಯ್ದೆಯಂತೆ- ಯೋಧರನ್ನು ಮುಟ್ಟುವ, ವಿಚಾರಣೆಗೆ ಒಳಪಡಿಸುವ ಅಧಿಕಾರ ಯಾವುದೇ ಆಯೋಗ ಅಥವಾ ನ್ಯಾಯಾಂಗಕ್ಕೆ ಇಲ್ಲವಾದ್ದರಿಂದ ಉಪೇಂದ್ರ ಆಯೋಗಕ್ಕೆ ಏನು ಮಾಡುವುದಕ್ಕೂ ಸಾಧ್ಯವಾಗುವುದಿಲ್ಲ. ಆಯೋಗವು ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದರೂ ಅದನ್ನು ಈವರೆಗೂ ಬಹಿರಂಗಪಡಿಸಲಾಗಿಲ್ಲ.
   ಸಮಾಧಿ ಕಲ್ಲುಗಳು ಮೌನವಾಗುವುದಿಲ್ಲ (Tombstones) ಎಂಬ ಶೀರ್ಷಿಕೆಯಲ್ಲಿ ರಾಹುಲ್ ಪಂಡಿತ್ ಎಂಬವರು 2014 ಜನವರಿ 27ರಂದು ದಿ ಹಿಂದೂವಿನಲ್ಲಿ ಒಂದು ಲೇಖನ ಬರೆದಿದ್ದರು. ಕಾಶ್ಮೀರದಲ್ಲಿ ನಡೆಯುತ್ತಿರುವ ಹತ್ಯೆಗಳು, AFSPA ಕಾಯ್ದೆಯ ದುರುಪಯೋಗ, ಜನರ ಭ್ರಮನಿರಸನಗಳ ಬಗ್ಗೆ ಅವರು ಲೇಖನದಲ್ಲಿ ಬೆಳಕು ಚೆಲ್ಲಿದ್ದರು. 2000 ಮಾರ್ಚ್ 26ರಂದು ಅಮೇರಿಕದ ಅಧ್ಯಕ್ಷ  ಬಿಲ್ ಕ್ಲಿಂಟನ್‍ರು ಭಾರತಕ್ಕೆ ಬರುವ ಹೊತ್ತಲ್ಲೇ ಕಾಶ್ಮೀರದ ಪತ್ರಿಬಾಲ್ ಸಮೀಪದ ಚತ್ತೀಸ್ ಸಿಂಗ್‍ಪುರ್‍ನಲ್ಲಿ ಉಗ್ರಗಾಮಿಗಳು 35 ಸಿಕ್ಖರನ್ನು ಗುಂಡಿಟ್ಟು ಕೊಂದಿದ್ದರು. ಈ ಕ್ರೌರ್ಯದಲ್ಲಿ ಭಾಗಿಯಾದ ಐವರು ಉಗ್ರರನ್ನು ತಾವು ಮುಖಾಮುಖಿ ಹೋರಾಟದಲ್ಲಿ (ಎನ್‍ಕೌಂಟರ್) ಕೊಂದಿರುವುದಾಗಿ 5 ದಿನಗಳ ಬಳಿಕ ಸೇನೆಯು ಘೋಷಿಸಿತು. ಆದರೆ ಕಾಶ್ಮೀರಿಗಳು ಈ ಬಗ್ಗೆ ತೀವ್ರ ಬಗೆಯ ಪ್ರತಿಭಟನೆ ನಡೆಸಿದರು. ಕಾಶ್ಮೀರದಲ್ಲಿ ಯೋಧರು ಮನೆಗೆ ಅಕ್ರಮವಾಗಿ ಪ್ರವೇಶಿಸುವುದು, ವಿಚಾರಣೆಯ ನೆಪದಲ್ಲಿ ಜನರನ್ನು ಕೊಂಡೊಯ್ಯುವುದು ಸಾಮಾನ್ಯ. AFSPA  ಕಾಯ್ದೆಯು ಅಂಥದ್ದೊಂದು ಅವಕಾಶವನ್ನು ಸೇನೆಗೆ ಒದಗಿಸಿಕೊಟ್ಟಿದೆ. ಮಾರ್ಚ್ 23-24ರ ಮಧ್ಯೆ ಸೇನೆಯು ಪತ್ರಿಬಾಲ್‍ನಿಂದ ಐವರನ್ನು ವಿಚಾರಣೆಯ ನೆಪದಲ್ಲಿ ಕೊಂಡೊಯ್ದಿತ್ತು. ಆ ಬಳಿಕ ಅವರ ಪತ್ತೆಯೇ ಇರಲಿಲ್ಲ. ಪ್ರತಿಭಟನಾಕಾರರು ಆ ಎನ್‍ಕೌಂಟರ್‍ನ ಬಗ್ಗೆ ಬಲವಾದ ಅನುಮಾನವನ್ನು ವ್ಯಕ್ತಪಡಿಸಿದರು. ಜನಾಕ್ರೋಶ ಎಷ್ಟು ತೀವ್ರತೆಯನ್ನು ಪಡೆದುಕೊಂಡಿತೆಂದರೆ, ಎನ್‍ಕೌಂಟರ್ ಗೀಡಾದವರ ಶವವನ್ನು ಸಮಾಧಿಯಿಂದ ಹೊರ ತೆಗೆಯುವಂತೆ ಸರಕಾರವೇ ಆದೇಶಿಸಿತು. ಎನ್‍ಕೌಂಟರ್ ನಕಲಿ ಎಂಬ ಅನುಮಾನಕ್ಕೆ ಬಲ ಸಿಗುತ್ತಿದ್ದಂತೆಯೇ ಇಡೀ ಪ್ರಕರಣದ ಕುರಿತು ಸಿಬಿಐ ತನಿಖೆಗೆ ಆದೇಶಿಸಲಾಯಿತು. 2006 ಮೇಯಲ್ಲಿ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದ ಸಿಬಿಐಯು, ಪ್ರಕರಣವನ್ನು ನಕಲಿ ಎನ್‍ಕೌಂಟರ್ ಎಂದು ಘೋಷಿಸಿತು. ಅಲ್ಲದೇ ಅದರಲ್ಲಿ ಭಾಗಿಯಾದ 7 ಯೋಧರನ್ನೂ ಗುರುತಿಸಿತು. ಆದರೆ ಸೇನೆ ಸಿಬಿಐ ಚಾರ್ಜ್‍ಶೀಟನ್ನೇ ಒಪ್ಪಿಕೊಳ್ಳಲಿಲ್ಲ. ತನ್ನ ಬಗ್ಗೆ ತನಿಖೆ ನಡೆಸುವುದಕ್ಕೆ ಸಿಬಿಐಗೆ ಅಧಿಕಾರ ಇಲ್ಲ ಎಂದು ಅದು ವಾದಿಸಿತು. 2012ರಲ್ಲಿ ಈ ಪ್ರಕರಣ ಸುಪ್ರೀಮ್ ಕೋರ್ಟ್‍ನಲ್ಲಿ ವಿಚಾರಣೆಗೆ ಒಳಪಟ್ಟಾಗ, ‘ತಾನೇ ವಿಚಾರಣೆ ನಡೆಸುವ ಅಥವಾ ನಾಗರಿಕ ನ್ಯಾಯಾಲಯಕ್ಕೆ ಪ್ರಕರಣವನ್ನು ಒಪ್ಪಿಸುವ’ ಆಯ್ಕೆಯ ಸ್ವಾತಂತ್ರ್ಯವನ್ನು ಕೋರ್ಟು ಸೇನೆಗೆ ಒದಗಿಸಿತು. ಸೇನೆಯು ತಾನೇ ತನಿಖೆ ಮಾಡುವುದಾಗಿ ಹೇಳಿಕೊಂಡಿತು. ಆ ಬಳಿಕ ವಿಚಾರಣೆಗೆ ಹಾಜರಾಗುವಂತೆ ಎನ್‍ಕೌಂಟರ್‍ಗೀಡಾದ ವ್ಯಕ್ತಿಯೊಬ್ಬನ ತಂದೆಗೆ ಸೇನಾ ನ್ಯಾಯಾಲಯ ಸಮನ್ಸ್ ಕಳುಹಿಸಿತು. ವಿಶೇಷ ಏನೆಂದರೆ, ಆ ತಂದೆ ಆ ಎನ್‍ಕೌಂಟರ್‍ಗಿಂತ 6 ವರ್ಷಗಳ ಮೊದಲೇ ಮೃತಪಟ್ಟಿದ್ದರು. ಇಂಥ ಅಸಂಬದ್ಧಗಳ ಮಧ್ಯೆ ಸೇನೆ ವಿಚಾರಣೆಯನ್ನು ಮುಗಿಸಿ ಕಳೆದವಾರ ಜನವರಿ 23ರಂದು ತೀರ್ಪನ್ನೂ ನೀಡಿದೆ. ಆ ಎನ್‍ಕೌಂಟರ್‍ನಲ್ಲಿ ಭಾಗಿಯಾದ ಎಲ್ಲ 7 ಯೋಧರನ್ನೂ ಅದು ದೋಷಮುಕ್ತಗೊಳಿಸಿದೆಯಲ್ಲದೇ ಎನ್‍ಕೌಂಟರ್ ಅನ್ನು ಸಕ್ರಮ ಎಂದಿದೆ. ಒಂದು ರೀತಿಯಲ್ಲಿ ಇಡೀ ವಿಚಾರಣಾ ಪ್ರಕ್ರಿಯೆಯೇ ಒಂದು ಪ್ರಹಸನದಂತೆ ನಡೆದು ಹೋಗಿದೆ. ಸುಪ್ರೀಮ್ ಕೋರ್ಟ್‍ನ ಮುಂದೆ ಸಿಬಿಐನ ಚಾರ್ಜ್‍ಶೀಟ್ ಇದ್ದರೂ, ಕಾಣೆಯಾದ ಐವರು ಕಾಶ್ಮೀರಿಗಳು ಎಲ್ಲಿ ಎಂಬ ಬಹುಮುಖ್ಯ ಪ್ರಶ್ನೆ ಎದ್ದಿದ್ದರೂ ಯಾವುದೂ ಪ್ರಯೋಜನವಾಗಿಲ್ಲ. AFSPA  ಕಾಯ್ದೆಯ ಈ ಕ್ರೂರ ಮುಖವನ್ನು ಪರಿಗಣಿಸಿಯೇ - ‘ಪತ್ರಿಬಾಲ್ ಪ್ರಕರಣವನ್ನು ಮತ್ತೆ ತನಿಖೆ ಗೊಳಪಡಿಸಿ’ ಎಂದು ದಿ ಹಿಂದೂವಿನಂಥ ಪತ್ರಿಕೆಗಳು ಸಂಪಾದಕೀಯ ಬರೆದಿರುವುದು.
    ಅಷ್ಟಕ್ಕೂ, ಕ್ವಿಟ್ ಇಂಡಿಯಾ ಚಳವಳಿಯನ್ನು ಮಟ್ಟಹಾಕಲು ಬ್ರಿಟಿಷ್ ಸರಕಾರವು 1942 ಆಗಸ್ಟ್ 15ರಂದು ಜಾರಿಗೆ ತಂದ ‘ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ’ಯ (The Armed Forces Special Powers Ordinance ) ಬಹುತೇಕ ಅಂಶಗಳನ್ನೇ AFSPA  ಒಳಗೊಂಡಿದೆ ಎಂದರೆ ನೀವು ನಂಬುತ್ತೀರಾ?
    1951ರಲ್ಲಿ ನಾಗಾ ನ್ಯಾಶನಲ್ ಕೌನ್ಸಿಲ್ (NNC) ಸಂಘಟನೆಯು ಸ್ವತಂತ್ರ ನಾಗಾಲ್ಯಾಂಡ್ ರಾಷ್ಟ್ರದ ಬೇಡಿಕೆಯನ್ನಿಟ್ಟಿತು. 99% ಮಂದಿ ಸ್ವತಂತ್ರ ನಾಗಾಲ್ಯಾಂಡ್‍ಗಾಗಿ ಮತ ಚಲಾಯಿಸಿದ್ದಾರೆ ಅಂದಿತು. ಅದರಂತೆ  1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯನ್ನು ಬಹಿಷ್ಕರಿಸಿತು. ಮಾತ್ರವಲ್ಲ, ಸರಕಾರಿ ಶಾಲೆ, ಅಧಿಕಾರಿಗಳ ಮೇಲೂ ಬಹಿಷ್ಕಾರ ಘೋಷಿಸಿತು. 1956 ಮಾರ್ಚ್ 26ರಂದು The Fedaral Government of Nagaland  ಎಂಬ ಪರ್ಯಾಯ ಸರಕಾರದ ರಚನೆಯನ್ನೂ ಮಾಡಿತು. ರಾಜ್ಯ ಸರಕಾರಕ್ಕೆ ಕೇಂದ್ರದ ಸಹಾಯವನ್ನು ಬೇಡದೇ ಬೇರೆ ದಾರಿಯಿರಲಿಲ್ಲ. ಇದನ್ನನುಸರಿಸಿ ಕೇಂದ್ರ ಸರಕಾರವು ಬ್ರಿಟಿಷ್ ಕಾಯ್ದೆಯನ್ನು ಮುಂದಿಟ್ಟುಕೊಂಡು ಕಾನೂನು ರಚಿಸಲು ಮುಂದಾಯಿತು. ಹೀಗೆ ರಚಿತವಾದ ‘ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಗೆ’ 1958 ಮೇ 22ರಂದು ರಾಷ್ಟ್ರಪತಿ ರಾಜೇಂದ್ರ ಪ್ರಸಾದರು ಸಹಿ ಹಾಕಿದರು. ಅಲ್ಲದೇ 1983 ಅಕ್ಟೋಬರ್ 6ರಂದು ಇದೇ ಕಾಯ್ದೆಯನ್ನು ಪಂಜಾಬ್ ಮತ್ತು ಚಂಡೀಗಢದಲ್ಲೂ ಜಾರಿಗೊಳಿಸಲಾಯಿತು.
   ನಿಜವಾಗಿ, ಪರಮಾಧಿಕಾರ ಎಂಬುದು ಯಾವುದೇ ವ್ಯವಸ್ಥೆಯನ್ನೂ ಹಾಳು ಮಾಡಿ ಬಿಡುತ್ತದೆ. ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನೇತೃತ್ವದಲ್ಲಿ 2013ರಲ್ಲಿ ಸುಪ್ರೀಮ್ ಕೋರ್ಟು ಆಯೋಗವೊಂದನ್ನು ರಚಿಸಿ ಮಣಿಪುರದಲ್ಲಿ ನಡೆದ 6 ಎನ್‍ಕೌಂಟರ್‍ಗಳ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿರುವುದಕ್ಕೆ ಈ ಪರಮಾಧಿಕಾರದ ದುರುಪಯೋಗವೇ ಕಾರಣ. ಮಾಜಿ ಚುನಾವಣಾ ಆಯುಕ್ತ ಲಿಂಗ್ಡೊ ಮತ್ತು ಇನ್ನೋರ್ವ ಪೊಲೀಸಧಿಕಾರಿ ಒಳಗೊಂಡಿದ್ದ ಈ ಆಯೋಗವು ಆ ಎನ್‍ಕೌಂಟರ್‍ಗಳನ್ನು ಬಹುತೇಕ ನಕಲಿ ಎಂದೇ ಹೇಳಿತ್ತು. ಎನ್‍ಕೌಂಟರ್‍ಗೀಡಾದವರಿಗೆ ಕ್ರಿಮಿನಲ್ ಹಿನ್ನೆಲೆ ಇದ್ದಿರಲಿಲ್ಲವೆಂದೂ ಅದು ಅಭಿಪ್ರಾಯಪಟ್ಟಿತ್ತು. ಹಾಗೆಯೇ ಜೀವನ್ ರೆಡ್ಡಿ ಆಯೋಗ, ವರ್ಮಾ ಆಯೋಗಗಳಂಥ ತನಿಖಾ ಸಮಿತಿಗಳು ರಚನೆಯಾಗಿರುವುದು ಮತ್ತು ಅವೆಲ್ಲ ಯೋಧರನ್ನು ಕಾನೂನಿನ ವ್ಯಾಪ್ತಿಗೆ ತರಬೇಕೆಂದು ಹೇಳಿರುವುದೆಲ್ಲ AFSPA  ಕಾಯ್ದೆಯ ಕ್ರೌರ್ಯವನ್ನೇ ಹೇಳುತ್ತದೆ. ಅಂದಹಾಗೆ, ದೇಶದ ಸಾರ್ವಭೌಮತೆಗೆ ಸವಾಲೊಡ್ಡುವ ಪ್ರಕರಣಗಳಿಗೆ ಸಂಬಂಧಿಸಿ ವಿಶೇಷ ಕಾಯ್ದೆ ರಚನೆಯಾಗಬೇಕಾದದ್ದು ಅಗತ್ಯವೇ ಆದರೂ ಆ ಕಾಯ್ದೆಯು ಚಳುವಳಿ ಇನ್ನಷ್ಟು ತೀವ್ರಗೊಳ್ಳುವುದಕ್ಕೆ, ನಾಗರಿಕರು ಚಳವಳಿಯೊಂದಿಗೆ ಸೇರಿಕೊಳ್ಳುವುದಕ್ಕೆ ಪ್ರೋತ್ಸಾಹ  ಕೊಡುವಂತೆ ಇರಬಾರದಲ್ಲ. ಕಾಶ್ಮೀರವಾಗಲಿ, ಮಣಿಪುರದಂಥ ಈಶಾನ್ಯ ರಾಜ್ಯಗಳಲ್ಲಾಗಲಿ
 AFSPA  ಇವತ್ತು ಸುದ್ದಿ ಮಾಡುತ್ತಿರುವುದು ಅದರ ಮನುಷ್ಯ ವಿರೋಧಿ ವರ್ತನೆಗಳಿಗಾಗಿ. ಈ ದೇಶದ ನಾಗರಿಕರಿಗಿಲ್ಲದ ಪರಮಾಧಿಕಾರ, ನ್ಯಾಯಾಂಗ ವಿನಾಯಿತಿಯನ್ನು ಪಡಕೊಂಡವರ ದುರ್ವರ್ತನೆಗಾಗಿ.
   ಪತ್ರಿಬಾಲ್ ಪ್ರಕರಣ ಇದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.