
ನಿಮ್ಮ ಗೆಳೆಯ ವರದಕ್ಷಿಣೆ ಪಡೆದುಕೊಂಡು ಓರ್ವ ಹೆಣ್ಣನ್ನು ಪತ್ನಿಯಾಗಿ ಸ್ವೀಕರಿಸಿದಾಗ ನಿಮ್ಮ ಪ್ರತಿಕ್ರಿಯೆ ಹೇಗಿತ್ತು, ಪ್ರತಿಭಟಿಸಿದ್ದೀರಾ? ಇದು ತಪ್ಪು ಅಂದಿದ್ದೀರಾ? ನಿನ್ನ ಮದುವೆಗೆ ಬರಲಾರೆ ಅಂತ ಮುಖಕ್ಕೆ ಮುಖ ಕೊಟ್ಟು ಹೇಳಿದ್ದೀರಾ? ಅದೇ ಹಣದಿಂದ ಆತ ಬೈಕ್ ಖರೀದಿಸಿ ತಂದಾಗ ನೀವು ಹೇಗೆ ಪ್ರತಿಕ್ರಿಯಿಸಿದ್ದಿರಿ? ಬೈಕ್‍ನಲ್ಲಿ ಪೇಟೆಗೆ ಒಂದು ಸುತ್ತು ಬಂದು, ಪರ್‍ಫೆಕ್ಟ್ ಸೆಲೆ ಕ್ಷನ್ ಅಂತ ಶಹಬ್ಬಾಸ್‍ಗಿರಿ ಕೊಟ್ಟದ್ದು ನೀವೇ ಅಲ್ಲವೇ? ಮದುವೆಯ ದಿನ ನಗುಮುಖದಿಂದ ಸ್ವಾಗತಿಸುತ್ತಿದ್ದ ವಧುವಿನ ತಂದೆಯನ್ನು ನೋಡಿ ನೀವೂ ಮಂದಹಾಸ ಬೀರಿದ್ದಲ್ಲದೇ ಅವರ ನಗುವಿನ ಹಿಂದೆ ಇರುವ ವಿಷಾದವನ್ನು, ಆ ವಿಷಾದಕ್ಕಿರುವ ಕಾರಣವನ್ನು ಅರಿತುಕೊಳ್ಳಲು ನೀವು ಪ್ರಯತ್ನಿಸಿದ್ದಿರೇ? ಹೇಳಿದಷ್ಟು ಚಿನ್ನ ಹಾಕಲಿಲ್ಲ ಎಂದು ಆಪಾದಿಸಿ ಪತ್ನಿಯನ್ನು ತವರಿಗೆ ಅಟ್ಟಿದ ನಿಮ್ಮ ಗೆಳೆಯನನ್ನು ನೀವು ತರಾಟೆಗೆ ತೆಗೆದುಕೊಂಡಿದ್ದಿರೆ? ಹೆಣ್ಣು ಶಿಶುವಿಗೆ ಜನ್ಮ ನೀಡಿದ ಪತ್ನಿಯನ್ನು ನಿಂದಿಸಿ ಶಿಶುವಿನ ಮುಖವನ್ನೂ ನೋಡದೆ ಹಿಂತಿರುಗಿದ ನಿಮ್ಮ ಗೆಳೆಯನಿಗೆ ನೀವು ಉಪದೇಶಿಸಿದ್ದೀರಾ? ಮೊದಲನೆಯದ್ದು ಗಂಡಾಗಲಿ ಕಣೇ ಎಂದ ಗೆಳತಿಗೆ, ‘ನೀನೂ ಹೆಣ್ಣಲ್ಲವೇ' ಎಂದು ನೆನಪಿಸಿದ್ದೀರಾ? ಆರತಿಗೊಂದು ಕೀರುತಿಗೊಂದು ಎಂಬ ಪದಪ್ರಯೋಗಕ್ಕೆ ವಿರೋಧ ವ್ಯಕ್ತಪಡಿಸಿ, ಹೆಣ್ಣಿನಿಂದಲೂ ಕೀರ್ತಿ ಸಾಧ್ಯ ಎಂದು ತಿದ್ದಲು ಪ್ರಯತ್ನಿಸಿದ್ದೀರಾ? ಸಹೋದರನಿಗೆ ವಧುವನ್ನು ಹುಡುಕುತ್ತಿದ್ದಿರಲ್ಲ, ಆಗ ಆಯ್ಕೆಯ ಮಾನದಂಡಗಳಾದರೂ ಯಾವುದಿತ್ತು? ಹೆಣ್ಣಿಗೆ ಅವಮಾನವಾಗುವ ರೀತಿಯಲ್ಲಿ ನೀವು ನಡಕೊಂಡಿದ್ದಿರೇ? ಎಷ್ಟು ಹೆಣ್ಣು ಮಕ್ಕಳ ಕಣ್ಣೀರಿಗೆ ನಿಮ್ಮ ಆಯ್ಕೆ ವಿಧಾನ ಕಾರಣವಾಗಿತ್ತು? ಅಣ್ಣನ ಪತ್ನಿಯಾಗಿ ನಿಮ್ಮ ಮನೆಗೆ ಬಂದ ಹೆಣ್ಣು ಮಗಳೊಂದಿಗೆ ಓರ್ವ ನಾದಿನಿಯೆಂಬ ನೆಲೆಯಲ್ಲಿ ನೀವು ಹೇಗೆ ವರ್ತಿಸಿದ್ದೀರಿ? ಹೆಣ್ಣನ್ನು, ಚಿಕ್‍ನೀ ಚಮೇಲಿ, ಹಲ್ಕಟ್ ಜವಾನಿ.. ಎಂದೋ ಅಥವಾ ಇನ್ನಿತರ ರೂಪದಲ್ಲೋ ಅವಮಾನಿಸುವ ಧಾಟಿಯಲ್ಲಿರುವ ಹಾಡುಗಳನ್ನು ಪುರುಷ ಗಾಯಕನ ಜೊತೆ ಭಾರೀ ಉತ್ಸಾಹದಿಂದ ನೀವು ಹಾಡಿಲ್ಲವೇ? ಆಗೆಲ್ಲ ನಿಮಗೆ, ದುಡ್ಡಿಗಾಗಿ ಹೆಣ್ಣಿನ ಸ್ಥಾನ ಮಾನ ಬಿಕರಿಯಾಗುತ್ತಿದೆ ಎಂಬ ಪ್ರಜ್ಞೆ ಕಾಡಿತ್ತೇ? ಹೆಣ್ಣಿನ ದೇಹದ ಇಂಚಿಂಚನ್ನೂ ಮನರಂಜನೆಯ ಹೆಸರಲ್ಲಿ ಸೇಲ್‍ಗೆ ಇಡುವ ನಿರ್ದೇಶಕನನ್ನು ನೀವು ತರಾಟೆಗೆ ತೆಗೆದುಕೊಂಡಿದ್ದೀರಾ? ಹೆಣ್ಣು ಮನರಂಜನೆಯ ಸರಕೇ ಎಂದು ಪ್ರಶ್ನಿಸಿದ್ದೀರಾ? ಹೆಣ್ಣಿನ ದೇಹ ಮನವನ್ನು ರಂಜಿಸುವಂಥದ್ದು ಎಂದು ಹೇಳುವ ಸಿನಿಮಾ ನಿರ್ದೇಶಕ ಮತ್ತು ಅದರಿಂದ ಪ್ರಚೋದಿತನಾಗುವವನ ಮಧ್ಯೆ ಏನು ವ್ಯತ್ಯಾಸ ಇದೆ ಎಂಬ ಜಿಜ್ಞಾಸೆ ನಿಮ್ಮಲ್ಲಿ ಎಂದಾದರೂ ಮೊಡಿದ್ದಿದೆಯೇ? ಈ ವಿಷಯವಾಗಿ ನೀವು ಎಷ್ಟು ಸೆಮಿನಾರ್ ಗಳನ್ನು ಆಯೋಜಿಸಿದ್ದೀರಿ? ಎಷ್ಟು ಪ್ರತಿಭಟನೆಗಳನ್ನು ಮಾಡಿದ್ದೀರಿ? ಯುವತಿಯರನ್ನು ಚುಡಾಯಿಸುವುದಕ್ಕೆಂದೇ ನೀವು ಮಾಲ್‍ಗಳ ಮುಂದೆಯೋ ಬಸ್ ನಿಲ್ದಾಣಗಳಲ್ಲೋ ನಿಂತಿದ್ದಿಲ್ಲವೇ? ಇವೆಲ್ಲ ಸುಮ್ಮನೆ ತಮಾಷೆಗೆ ಎಂದು ಸಮರ್ಥಿಸಿದ್ದೂ ಇಲ್ಲವೇ? ಹೆಣ್ಣನ್ನು ತಮಾಷೆಯ ವಸ್ತುವಿನಿಂತೆ ಕಾಣುವುದನ್ನು ಪ್ರತಿಭಟಿಸಬೇಕೆಂದು ನಿಮಗೆಂದಾದರೂ ಅನಿಸಿದ್ದಿದೆಯೇ? ನಿಮ್ಮ ತಂಗಿಯ ಬಯಕೆಗೆ ವಿರುದ್ಧವಾಗಿ ತಂದೆ ಮದುವೆ ಮಾಡಲು ಮುಂದಾದಾಗ ನೀವು ಅದಕ್ಕೆ ಸಹಕರಿಸಿಲ್ಲವೇ? ಹೆಣ್ಣಿಗೆ ಅಷ್ಟು ತಿಳುವಳಿಕೆಯಿಲ್ಲ ಎಂಬ ಕಾರಣವನ್ನು ನೀವು ಅದಕ್ಕೆ ಸಮರ್ಥನೆಯಾಗಿ ಬಳಸಿಕೊಂಡಿಲ್ಲವೇ? ಓರ್ವ ಹೆಣ್ಣು ಮಗಳು ತನಗಿಷ್ಟವಾದ ಮೈಮುಚ್ಚುವ ಬಟ್ಟೆ ಧರಿಸಿ ಕಾಲೇಜಿಗೆ ಬಂದಾಗ ಅವಳಿಗೆ ನೀವು ಅಡ್ಡ ಹೆಸರಿಟ್ಟು ಚುಡಾಯಿಸಿದ್ದು ನೆನಪಿದೆಯೇ? ದಲಿತರು ಮತ್ತು ಬುಡಕಟ್ಟು ಜನಾಂಗದ ಯುವತಿಯರನ್ನು ಈ ದೇಶದ ಪೊಲೀಸರು ಮತ್ತು ಸೈನಿಕರು ಸಾಮೂಹಿಕ ಅತ್ಯಾಚಾರಕ್ಕೆ ಒಳಪಡಿಸಿದಾಗ ನಿಮ್ಮ ಪ್ರತಿಕ್ರಿಯೆ ಹೇಗಿತ್ತು? ನೀವು ಪ್ರತಿಭಟಿಸಿದ್ದೀರಾ? ಪ್ಲೇ ಕಾರ್ಡುಗಳನ್ನು ಹಿಡಿದಿದ್ದೀರಾ? ಗುಜರಾತ್‍ನಲ್ಲಿ 10 ವರ್ಷಗಳ ಹಿಂದೆ ಯುವತಿಯರ, ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರಗಳು ನಡೆದುವಲ್ಲ, ಕನಿಷ್ಠ ನಿಮ್ಮ ಮನಸ್ಸಿನಲ್ಲಾದರೂ ಆ ಬಗ್ಗೆ ಸಿಟ್ಟು ವ್ಯಕ್ತವಾಗಿತ್ತೇ? ನೀವು ಭಾಗವಹಿಸಿದ ಸಭೆ, ಸಮಾರಂಭಗಳಲ್ಲಿ, ವಿಚಾರಗೋಷ್ಠಿಗಳಲ್ಲಿ ಆ ಅತ್ಯಾಚಾರಗಳನ್ನು ಖಂಡಿಸಿ ಮಾತಾಡಿದ್ದೀರಾ? ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದೀರಾ? ಆ ಸಂತ್ರಸ್ತರಿಗೆ ಯಾವ ಬಗೆಯ ಚಿಕಿತ್ಸೆ ದೊರಕಿದೆ, ಅವರ ಸದ್ಯದ ಸ್ಥಿತಿ ಏನಾಗಿದೆ ಎಂಬುದನ್ನು ತಿಳಿದುಕೊಳ್ಳಲು ಒಮ್ಮೆಯಾದರೂ ಯತ್ನಿಸಿದ್ದೀರಾ? ಅಂದಹಾಗೆ, ನಿಮ್ಮಂತೆಯೇ ಎರಡು ಕಣ್ಣು, ಕೈ, ಕಾಲುಗಳಿದ್ದರೂ ಮತ್ತು ನಿಮ್ಮಂತೆಯೇ ಅವೂ ಸ್ವಸ್ಥಾನದಲ್ಲಿದ್ದರೂ ದಲಿತೆ ಎಂಬ ಕಾರಣಕ್ಕಾಗಿ ನಿಮ್ಮ ಗೆಳತಿಯರು ಆಕೆಯನ್ನು ಮುಟ್ಟಿಸಿಕೊಳ್ಳದೇ ಇದ್ದಾಗ ನೀವು ಮುಟ್ಟಿಸಿಕೊಳ್ಳುವ ಧೈರ್ಯ ಮಾಡಿದ್ದೀರಾ? ಆಕೆಯನ್ನು ತಮ್ಮ ಬಳಿ ಕೂರಿಸಿ ನೀನೂ ನಮ್ಮಂತೆಯೇ ಮನುಷ್ಯಳು ಎಂದು ಹೇಳುವ ಧೈರ್ಯವನ್ನು ನೀವು ಮಾಡಿಲ್ಲವಲ್ಲವೇ? ಈ ಕಾರಣದಿಂದಾಗಿಯೇ ಆಕೆ ಆತ್ಮಹತ್ಯೆ ಮಾಡಿಕೊಂಡಾಗ, ನಿಮ್ಮ ಗೆಳತಿಯರು ತೀರಾ ತುಚ್ಛವಾಗಿ ಮಾತಾಡಿಕೊಂಡದ್ದನ್ನು ಕೇಳಿಸಿಯೂ ನೀವು ಮೌನವಹಿಸಿದ್ದಿರಲ್ಲ, ಅದು ಸರಿಯೆಂದು ಹೇಳುತ್ತೀರಾ? ಬಡತನದಿಂದಾಗಿ ಮಾಸಿದ ಬಟ್ಟೆ ಧರಿಸಿ ಕಾಲೇಜಿಗೆ ಬರುತ್ತಿದ್ದ ಯುವತಿಯನ್ನು ನಿಮ್ಮ ಗೆಳತಿಯರು ದೂರ ಇಡುತ್ತಿದ್ದಾಗ ನಿಮ್ಮ ಪ್ರತಿಕ್ರಿಯೆ ಏನಾಗಿತ್ತು? ಆಕೆಯನ್ನು ಸಾಂತ್ವನಿಸುವ ಪ್ರಯತ್ನ ಮಾಡಿದ್ದೀರಾ? ಫೀಸು ಕಟ್ಟಲು ಸಾಧ್ಯವಿಲ್ಲವೆಂದು ಹೇಳಿ ನಿಮ್ಮ ಗೆಳತಿ ಕಾಲೇಜು ವಿದ್ಯಾ ಭ್ಯಾಸವನ್ನು ಮೊಟಕುಗೊಳಿಸಿದಾಗ ಶ್ರೀಮಂತ ವಿದ್ಯಾರ್ಥಿಗಳ ಗುಂಪಿನಲ್ಲಿದ್ದೂ ನೀವು ಹೇಗೆ ಪ್ರತಿಕ್ರಿಯಿಸಿದ್ದಿರಿ? ನಿರ್ಲಕ್ಷ್ಯವೇ ನಿಮ್ಮ ಉತ್ತರವಾಗಿತ್ತಲ್ಲವೇ? ಇಷ್ಟಕ್ಕೂ ಈ ದೇಶದಲ್ಲಿ ಪ್ರತಿವರ್ಷ ಅಸಂಖ್ಯ ಹೆಣ್ಣು ಶಿಶುಗಳು ಹುಟ್ಟುವುದಕ್ಕಿಂತ ಮೊದಲೇ ಕ್ರೂರವಾಗಿ ಹತ್ಯೆಗೀಡಾಗುತ್ತಿದ್ದರೂ ನೀವು ಮಾತೇ ಆಡಿಲ್ಲವಲ್ಲ, ಯಾಕೆ? ಕಣ್ಣು ಬಿಡುವ ಮೊದಲೇ ಕಂದಮ್ಮಗಳನ್ನು ಕೊಲ್ಲುವುದು ಅತ್ಯಾಚಾರಕ್ಕಿಂತಲೂ ಆಘಾತಕಾರಿ ಎಂದು ಘೋಷಿಸುವ ಅವಕಾಶವನ್ನು ನೀವು ಬಳಸಿಕೊಳ್ಳಲಿಲ್ಲವೇಕೆ? ಮಹಿಳಾ ಉದ್ಯೋಗಿಯನ್ನು ನಿಮ್ಮ ಬಾಸ್ ತುಚ್ಛವಾಗಿ ಕಂಡಾಗ ನೀವು ಪ್ರತಿಭಟಿಸಿದ್ದೀರಾ? ಮಾತೆತ್ತಿದರೆ ಎಲ್ಲಿ ಕೆಲಸಕ್ಕೆ ಕುತ್ತು ಬರುತ್ತೋ ಎಂದು ಅಂಜಿ; ಸಹಿಸಿಕೋ, ಎಲ್ಲ ಬಾಸ್‍ಗಳೂ ಹೀಗೆಯೇ.. ಎಂದು ಸಾಂತ್ವನಿಸಿದ್ದಿರಲ್ಲವೇ? ಹೆಣ್ಣೆಂಬ ಕಾರಣಕ್ಕಾಗಿ ಮಹಿಳೆಗೆ ಕಡಿಮೆ ಸಂಬಳ ಕೊಡುತ್ತಿರುವುದನ್ನು ಕಣ್ಣಾರೆ ನೋಡಿಯೂ ನೀವು ಸುಮ್ಮನೆ ಕೂತಿದ್ದು ಸುಳ್ಳೇ? ನಿಮ್ಮ ತಂದೆ ಮನೆಕೆಲಸದಾಕೆಗೆ ಕ್ಷುಲ್ಲಕ ಕಾರಣಕ್ಕಾಗಿ ಏಟು ಕೊಟ್ಟಾಗ ನೀವು ಪ್ರತಿಭಟಿಸಿದ್ದೀರಾ? ಅಪ್ಪನದ್ದು ತಪ್ಪು ಎಂದು ಗೊತ್ತಿದ್ದೂ ಅಪ್ಪನ ಪರವೇ ವಾದ ಮಾಡಿ ಕೆಲಸದಾಕೆಯ ಕಣ್ಣೀರಿಗೆ ಕಾರಣವಾಗಿದ್ದು ನೆನಪಿದೆಯೇ?..
ದೆಹಲಿಯಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಪ್ರತಿಭಟಿಸುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತು ಯುವ ಸಮೋಹದ ಮುಂದೆ ಇಡಲು ಇನ್ನೂ ಇಂಥ ಅನೇಕ ಪ್ರಶ್ನೆಗಳಿವೆ. ಅವರಿಗೀಗ ತಕ್ಷಣ ನ್ಯಾಯ ಬೇಕಾಗಿದೆ. ಅತ್ಯಾಚಾರಿಗಳನ್ನು ನೇಣಿಗೇರಿಸಿದರೆ, ಕಠಿಣ ಶಿಕ್ಷೆಗೆ ಒಳಪಡಿಸಿದರೆ ಇಂಥ ಕೃತ್ಯಗಳು ಶಾಶ್ವತವಾಗಿ ಕಣ್ಮರೆಯಾದೀತು ಎಂಬ ಧಾಟಿಯಲ್ಲಿ ಅವರು ಮಾತಾಡುತ್ತಿದ್ದಾರೆ. ನಿಜವಾಗಿ, ಮರಣದಂಡನೆಯೊಂದರಿಂದಲೇ ಅತ್ಯಾಚಾರಗಳನ್ನು ಕಡಿಮೆಗೊಳಿಸಲು ಖಂಡಿತ ಸಾಧ್ಯವಿಲ್ಲ. ಅಷ್ಟಕ್ಕೂ, ದೆಹಲಿ ಅತ್ಯಾಚಾರ ಪ್ರಕರಣದ ಮರುದಿನದಿಂದ ಈ ವರೆಗೂ ಪತ್ರಿಕೆಗಳ ತುಂಬ ಅತ್ಯಾಚಾರ ಪ್ರಕರಣಗಳ ಸುದ್ದಿಗಳೇ ತುಂಬಿ ಹೋಗಿರುವುದು ಏನನ್ನು ಸೂಚಿಸುತ್ತದೆ? ಪ್ರತಿಭಟನೆ, ಮರಣದಂಡನೆಯ ಬೆದರಿಕೆಗಳೆಲ್ಲ ಅತ್ಯಾಚಾರಿಗಳ ಮೇಲೆ ಪ್ರಭಾವ ಬೀರುತ್ತಿಲ್ಲ ಎಂಬುದನ್ನೇ ಅಲ್ಲವೇ? ಹೀಗಿರುವಾಗ ಬರೇ ಮರಣದಂಡನೆಯೊಂದನ್ನೇ ಏಕೈಕ ಪರಿಹಾರವಾಗಿ ಬಿಂಬಿಸುವುದು ಎಷ್ಟು ಸರಿ? ಹಾಗಂತ ಮರಣದಂಡನೆ ಬೇಡ ಎಂದಲ್ಲ. ಆದರೆ ಅದಕ್ಕಿಂದಲೂ ಮೊದಲು ಸಾಮಾಜಿಕವಾಗಿ ಆಗಲೇಬೇಕಾದ ಜಾಗೃತಿಯನ್ನು ಕಡೆಗಣಿಸಿದರೆ ಹೇಗೆ? ಶಿಶುವಿನಿಂದ ತೊಡಗಿ ಬಾಲ್ಯ, ಯೌವನ, ವೃದ್ಧಾಪ್ಯ.. ಹೀಗೆ ಎಲ್ಲ ಸ್ಥಿತಿಯಲ್ಲೂ ಹೆಣ್ಣನ್ನು ದ್ವಿತೀಯ ದರ್ಜೆಯವಳಂತೆ, ಚುಡಾವಣೆ, ಮನರಂಜನೆಯ ವಸ್ತುವಿನಂತೆ ಕಾಣುವ ಮನಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸದೇ ಕೇವಲ ನೇಣುಗಂಭವನ್ನು ತೋರಿಸುವುದರಿಂದ ಭಾರೀ ಬದಲಾವಣೆ ತರಲು ಸಾಧ್ಯವೇ? ದೆಹಲಿಯಲ್ಲಾಗುತ್ತಿರುವ ಅತ್ಯಾಚಾರ ಪ್ರಕರಣಗಳ ಕುರಿತಂತೆ ಸ್ಥಳೀಯ ಪತ್ರಿಕೆಯೊಂದು ಇತ್ತೀಚೆಗೆ ಸಮೀಕ್ಷೆ ನಡೆಸಿತ್ತು. ಅದರ ಪ್ರಕಾರ,
..‘90% ಮಹಿಳೆಯರು ತಾವಾಗಿಯೇ ಅತ್ಯಾಚಾರವನ್ನು ಆಹ್ವಾನಿಸುತ್ತಾರೆ, ಅವರು ಧರಿಸುವ ಬಟ್ಟೆ ಅತ್ಯಾಚಾರಕ್ಕೆ ಆಹ್ವಾನಿ ಸುವಂತಿರುತ್ತದೆ, ರಾತ್ರಿ ವೇಳೆ ಅವರು ಒಂಟಿಯಾಗಿ ಹೊರಗೆ ಹೋಗಬಾರದು, ನಿರ್ದಿಷ್ಟ ಫ್ಯಾಶನ್ನಿನ ಡ್ರೆಸ್ ತೊಡುತ್ತಾ, ನೋಡುಗರ ಕಣ್ಣಿನಲ್ಲಿ ತೊಂದರೆ ಹುಡುಕುವುದು ಸರಿಯಲ್ಲ.. ಎಂದೆಲ್ಲಾ ದೆಹಲಿಯ ಪ್ರಮುಖ ಪೊಲೀಸ್ ಅಧಿಕಾರಿಗಳೇ ಸಮೀಕ್ಷಕರೊಂದಿಗೆ ಹೇಳಿರುವುದನ್ನು ಇತ್ತೀಚೆಗೆ ಟಿ.ವಿ. ಚಾನೆಲ್‍ನಲ್ಲಿ ಓರ್ವ ಪೊಲೀಸ್ ಅಧಿಕಾರಿಯೇ ವಿವರಿಸಿದ್ದರು.. (ದಿ ಹಿಂದೂ, 2012 ಡಿ. 25, ಊರ್ವಶಿ ಬುಟಾಲಿಯ).
ಅಂದಹಾಗೆ, ಬಟ್ಟೆಯೊಂದೇ ಅತ್ಯಾಚಾರಕ್ಕೆ ಕಾರಣವಲ್ಲ, ನಿಜ. ಆದರೆ ಅತ್ಯಾಚಾರಕ್ಕೆ ಅದೂ ಒಂದು ಕಾರಣ ಎಂದು ವಾದಿಸುವುದನ್ನು ಮೂಲಭೂತ ವಾದದಂತೆ, ಮಹಿಳಾ ವಿರೋಧಿ ಧ್ವನಿಯಂತೆ ಯಾಕೆ ಪರಿಗಣಿಸಬೇಕು? ಅತ್ಯಾಚಾರವನ್ನು ತಡೆಗಟ್ಟಲು ಪರಿಹಾರಗಳನ್ನು ಸೂಚಿಸುವವರೆಲ್ಲ ಬಟ್ಟೆಯ ಬಗ್ಗೆ ಮಾತೇ ಆಡುವುದಿಲ್ಲ. ಎಲ್ಲಿ ಮಹಿಳಾವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಬಿಡುತ್ತೇವೋ ಅನ್ನುವ ಅನುಮಾನ ಅವರೆಲ್ಲರನ್ನೂ ಕಾಡುತ್ತಿರಬೇಕು. ಒಂದು ವೇಳೆ ಶಿಕ್ಷಣ, ಕಠಿಣ ಕಾನೂನು, ಆಧುನಿಕ ಆಲೋಚನೆಗಳೆಲ್ಲ ಅತ್ಯಾಚಾರಗಳನ್ನು ನಿಯಂತ್ರಿಸುತ್ತವೆ ಅನ್ನುವುದಾದರೆ ಅಮೇರಿಕ, ಬ್ರಿಟನ್, ಸ್ವೀಡನ್, ಜರ್ಮನಿಗಳೆಲ್ಲ ಅತ್ಯಾಚಾರ ರಹಿತ ರಾಷ್ಟ್ರಗಳಾಗಿ ಗುರುತಿಸಿಕೊಳ್ಳ ಬೇಕಾಗಿತ್ತಲ್ಲವೇ? ದಿ ಹಿಂದೂ ಪತ್ರಿಕೆಯ ಪ್ರಕಾರ, 2000ದಲ್ಲಿ ನಡೆಸಲಾದ ಸಮೀಕ್ಷೆಯಂತೆ ಬ್ರಿಟನ್‍ನಲ್ಲಿ 4.9% ಮಂದಿ ಲೈಂಗಿಕ ದೌರ್ಜನ್ಯಕ್ಕೆ ಅಥವಾ ಅತ್ಯಾಚಾರಕ್ಕೆ ಒಳಗಾಗಿದ್ದರು. ಇತ್ತೀಚಿನ ಸಮೀಕ್ಷೆಯ ಪ್ರಕಾರ ಇದರ ಪ್ರಮಾಣ ಶೇ. 10ಕ್ಕೆ ತಲುಪಿದೆ. ಐರ್ಲೆಂಡ್, ಜರ್ಮನಿ, ಸ್ವೀಡನ್‍ಗಳಲ್ಲಿ ಲೈಂಗಿಕ ದೌರ್ಜನ್ಯದ ಪ್ರಮಾಣವು ಶೇ. 25ರಿಂದ ಶೇ. 34ಕ್ಕೆ ಏರಿದೆ. ಅಮೇರಿಕವೂ ಅತ್ಯಾಚಾರ ಪ್ರಕರಣಗಳಿಂದ ಹೊರತಾಗಿಲ್ಲ. ಪ್ರತಿ 2 ನಿಮಿಷಗಳಿಗೊಮ್ಮೆ ಓರ್ವರು ಅಲ್ಲಿ ಲೈಂಗಿಕ ಹಿಂಸೆಗೆ ಗುರಿಯಾಗುತ್ತಾರೆ. ಅದರಲ್ಲೂ ಅಮೇರಿಕದ ಪ್ರತಿ 100 ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ 46 ಪ್ರಕರಣಗಳಷ್ಟೇ ಸುದ್ದಿಯಾಗುತ್ತವೆ. ಇವುಗಳಲ್ಲಿ ಸರಾಸರಿ 12 ಮಂದಿ ಆರೋಪಿಗಳು ಮಾತ್ರ ಬಂಧನಕ್ಕೆ ಒಳಗಾಗುತ್ತಾರೆ. ಅಂದರೆ, 4 ಅತ್ಯಾಚಾರ ಪ್ರಕರಣಗಳಲ್ಲಿ ಓರ್ವನನ್ನು ಮಾತ್ರ ಬಂಧಿಸಿದಂತಾಗುತ್ತದೆ. ಕೊನೆಗೆ ಸರಾಸರಿ ಮೊವರಿಗೆ ಶಿಕ್ಷೆಯಾಗುತ್ತದೆ.. (ದಿ ಹಿಂದೂ, ಡಿ. 27, 2012, ಪ್ರವೀಣ್ ಸ್ವಾಮಿ). ಒಂದು ರೀತಿಯಲ್ಲಿ, 46 ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿ ಶಿಕ್ಷೆಯಾಗುವುದು ಬರೇ ಮೊವರಿಗೆ! ಮುಂದುವರಿದ ಅಮೇರಿಕದ ಸ್ಥಿತಿಯೇ ಹೀಗಿರುವಾಗ ಇನ್ನು ಅದನ್ನೇ ಅನುಸರಿಸುತ್ತಿರುವ ಭಾರತದ ಸ್ಥಿತಿ ಭಿನ್ನವಾಗುವುದಾದರೂ ಹೇಗೆ? ಅಷ್ಟಕ್ಕೂ ಅತ್ಯಾಚಾರಿಗಳಿಗೆ ಮರಣ ದಂಡನೆಯಾಗಬೇಕೆಂದು ಆಗ್ರಹಿಸುತ್ತಿರುವ ವಿದ್ಯಾರ್ಥಿಗಳೆಲ್ಲ ತಮ್ಮ ಸಂಸ್ಕ್ರಿತಿ, ಜೀವನ ಕ್ರಮ, ಆಲೋಚನೆ, ಉಡುಪುಗಳ ಕುರಿತಂತೆ ಪುನರ್ ವಿಮರ್ಶೆಗೆ ಮುಂದಾದರೇನು? ಆಧುನಿಕ ಮತ್ತು ಪಾಶ್ಚಾತ್ಯ ಪ್ರೇರಿತ ಜೀವನ ಕ್ರಮಗಳಿಗೂ ಲೈಂಗಿಕ ದೌರ್ಜನ್ಯಗಳಿಗೂ ಸಂಬಂಧವಿದೆಯೇ ಎಂದು ಆಲೋಚಿಸಿದರೇನು? ಇಂಥ ದೌರ್ಜನ್ಯಗಳನ್ನು ತಡೆಗಟ್ಟುವುದಕ್ಕೆ ಧಾರ್ಮಿಕ ಚಿಂತನೆಗಳಲ್ಲಿ ಏನು ಪರಿಹಾರವಿದೆ ಮತ್ತು ಅವೆಷ್ಟು ಪ್ರಾಯೋಗಿಕ ಎಂದು ಚರ್ಚಿಸಿದರೇನು?
ಆದ್ದರಿಂದಲೇ,
ಹೆಣ್ಣು-ಗಂಡು ಮುಕ್ತವಾಗಿ ಬೆರೆಯಬಾರದು; ಹೆಣ್ಣು ತನ್ನ ದೇಹ ಪ್ರದರ್ಶಿಸಬಾರದು; ಗಂಡು ತನ್ನ ದೃಷ್ಟಿಯನ್ನು ಕೆಳಗಿರಿಸಬೇಕು (ಪವಿತ್ರ ಕುರ್‍ಆನ್: 24: 30-31); ಹೆಣ್ಣಿನ ಕುರಿತಂತೆ ಓರ್ವ ಗಂಡು ನಿಂದಿಸುವುದಿರಲಿ, ಛೆ ಎಂಬ ಪದವನ್ನೂ ಬಳಸಬಾರದು (ಪವಿತ್ರ ಕುರ್‍ಆನ್: 17: 23); ಓರ್ವನು ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಉತ್ತಮ ರೀತಿಯಲ್ಲಿ ಸಾಕಿ ಮದುವೆ ಮಾಡಿಸಿಕೊಟ್ಟರೆ ಆತ ಸ್ವರ್ಗಕ್ಕೆ ಹೋಗುತ್ತಾನೆ; ಹೆಣ್ಣನ್ನು ಗೌರವಿಸಿ, ಸೇವೆ ಮಾಡಿದರೆ ಸ್ವರ್ಗವಿದೆ; ಅತ್ಯಾ ಚಾರಕ್ಕೆ ಅಥವಾ ವ್ಯಭಿಚಾರಕ್ಕೆ ಮರಣ ದಂಡನೆಯಿದೆ (ಪವಿತ್ರ ಕುರ್‍ಆನ್: 4: 25, 24: 2); ನಿಮ್ಮ ಮನೆಯ ಮಹಿಳೆಯರೊಂದಿಗೆ ಉತ್ತಮವಾಗಿ ವರ್ತಿಸುವವನೇ ಅತ್ಯುತ್ತಮ ವ್ಯಕ್ತಿ; ಪತಿ ಮತ್ತು ಪತ್ನಿ ಪರಸ್ಪರ ಉಡುಪಾಗಿದ್ದಾರೆ (ಸಮಾನ) (ಪವಿತ್ರ ಕುರ್‍ಆನ್: 2: 187); ಕೊಲೆಗೀಡಾದ ಶಿಶುವಿನಲ್ಲೇ ನಾಳೆ ದೇವನು ಅದರ ಕಾರಣವನ್ನು ಕೇಳಿ ಅಪರಾಧಿ ಹೆತ್ತವರನ್ನು ಶಿಕ್ಷಿಸುವನು (ಪವಿತ್ರ ಕುರ್‍ಆನ್: 181: 8-9); ವರದಕ್ಷಿಣೆ ನಿಷಿದ್ಧವಾಗಿದೆ (ಪವಿತ್ರ ಕುರ್‍ಆನ್: 4:4, 2:188).. ಎಂದು ಮುಂತಾಗಿ ಸಮಾಜವನ್ನು ತಳಮಟ್ಟದಿಂದಲೇ ತಿದ್ದಿದ ಮತ್ತು ಅದರ ಆಧಾರದಲ್ಲೇ ಒಂದು ಮಾದರಿ ಸಮಾಜವನ್ನು ಪ್ರಾಯೋಗಿಕವಾಗಿ ರಚಿಸಿ ತೋರಿಸಿದ ಪವಿತ್ರ ಕುರ್‍ಆನ್ ಮತ್ತು ಪ್ರವಾದಿ ಮುಹಮ್ಮದ್(ಸ) ಇಷ್ಟವಾಗುವುದು. ಅಂದಹಾಗೆ,
‘ಉತ್ತಮ ಚಿಕಿತ್ಸೆಗಾಗಿ ಅತ್ಯಾಚಾರಕ್ಕೀಡಾದ ಯುವತಿಯನ್ನು ಸಿಂಗಾಪುರಕ್ಕೆ ಕಳುಹಿಸಬಹುದಾದರೆ ಉತ್ತಮ ನ್ಯಾಯಕ್ಕಾಗಿ ಆರೋಪಿಗಳನ್ನು ಯಾಕೆ ಸೌದಿ ಅರೇಬಿಯಾಕ್ಕೆ ಕಳುಹಿಸಬಾರದು...' ಎಂದು ಸಿನೆಮಾ ನಿರ್ದೇಶಕ ಸಂದೀಪ್ ಮಲಾನಿ ಕಳೆದ ವಾರ ಫೇಸ್ ಬುಕ್‍ನಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಇನ್ನೂ ಒಂದು ವಾಕ್ಯವನ್ನು ಸೇರಿಸಬಹುದು,
ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಇಸ್ಲಾಮೀ ಕಾನೂನುಗಳನ್ನು ಭಾರತ ಯಾಕೆ ಅಳವಡಿಸಿಕೊಳ್ಳಬಾರದು?