Tuesday, December 31, 2019

ಸಮುದಾಯ ಬಹಿಷ್ಕರಿಸಬೇಕಾದದ್ದು ಎನ್‍ ಆರ್ ಸಿಯನ್ನೋ ಅಲ್ಲ, ದಾಖಲೆ ಪತ್ರಗಳನ್ನೋ?



1. ದಾಖಲೆ ಪತ್ರಗಳನ್ನು ಸರಿಪಡಿಸಿಟ್ಟುಕೊಳ್ಳುವಂತೆ ಮುಸ್ಲಿಮ್ ಸಮುದಾಯದಲ್ಲಿ ಈಗಿಂದೀಗಲೇ ಜಾಗೃತಿ ಅಭಿಯಾನವೊಂದು ಪ್ರಾರಂಭವಾಗಬೇಕು.
2. ಮುಸ್ಲಿಮರು ಎನ್‍ ಆರ್ ಸಿಯನ್ನು ಬಹಿಷ್ಕರಿಸಬೇಕು.
ಈ ಎರಡೂ ಅಭಿಪ್ರಾಯಗಳು ಮುಸ್ಲಿಮ್ ಸಮುದಾಯದಲ್ಲಿ ಸದ್ಯ ಚರ್ಚೆಯಲ್ಲಿದೆ. ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಮಸೂದೆಯು ಈಗಾಗಲೇ ಕಾನೂನಾಗಿ ಪರಿವರ್ತನೆಯಾಗಿದೆ. ಈಗದು CAB ಅಲ್ಲ CAA (Citizen Amendment Act). ಇನ್ನೊಂದು ಎನ್‍ ಆರ್ ಸಿ (ರಾಷ್ಟ್ರೀಯ ಪೌರತ್ವ ನೋಂದಣಿ). ಇವೆರಡನ್ನೂ ಜೊತೆಜೊತೆಯಾಗಿಯೇ ಜಾರಿಗೆ ತರುವ ಉದ್ದೇಶವನ್ನು ನೇರವಾಗಿಯೋ ಪರೋಕ್ಷವಾಗಿಯೋ ಕೇಂದ್ರ ಸರಕಾರ ಈಗಾಗಲೇ ವ್ಯಕ್ತಪಡಿಸಿದೆ. 2014 ಡಿಸೆಂಬರ್ 31ರ ಒಳಗಡೆ ಭಾರತದಲ್ಲಿ ವಾಸಿಸಿದ ದಾಖಲೆಯನ್ನು ಸಲ್ಲಿಸುವ ಮುಸ್ಲಿಮೇತರ ಎಲ್ಲ ಧರ್ಮೀಯರಿಗೂ ಪೌರತ್ವ ತಿದ್ದುಪಡಿ ಕಾನೂನಿನ ಪ್ರಕಾರ ಭಾರತೀಯ ಪೌರತ್ವ ಲಭ್ಯವಾಗಲಿದೆ. ಆದರೆ, ಮುಸ್ಲಿಮರಿಗೆ ಈ ಅವಕಾಶ ಇಲ್ಲ. ಪಾಕ್, ಬಾಂಗ್ಲಾ ಮತ್ತು ಅಫಘಾನಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ಮುಸ್ಲಿಮರಿಗೆ ಭಾರತೀಯ ನಾಗರಿಕತೆ ನಿರಾಕರಿಸುವುದು ಮತ್ತು ಧಾರ್ಮಿಕ ದೌರ್ಜನ್ಯದಿಂದಾಗಿ ಭಾರತಕ್ಕೆ ಬಂದ ಮುಸ್ಲಿಮೇತರರಿಗೆ ಪೌರತ್ವ ಒದಗಿಸುವುದು ಪೌರತ್ವ ಕಾನೂನಿನ ಉದ್ದೇಶವಾಗಿದೆಯೆಂದು ಕೇಂದ್ರ ಸರಕಾರ ಹೇಳುತ್ತಿದ್ದರೂ ಅಲ್ಲೂ ಗೊಂದಲಗಳಿವೆ. ಮೇಲಿನ ಮೂರೂ ರಾಷ್ಟ್ರಗಳಿಂದ ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರರಲ್ಲಿ ಧಾರ್ಮಿಕ ದೌರ್ಜನ್ಯದಿಂದ ಬಂದವರೆಷ್ಟು ಮತ್ತು ಉದ್ಯೋಗವನ್ನರಸಿಕೊಂಡು ಬಂದವರೆಷ್ಟು ಎಂಬುದನ್ನು ಪತ್ತೆ ಹಚ್ಚುವುದು ಹೇಗೆ ಅನ್ನುವ ಪ್ರಶ್ನೆಗೆ ಕೇಂದ್ರ ಸರಕಾರ ಈವರೆಗೂ ಉತ್ತರಿಸಿಲ್ಲ. ಅದು ಸುಲಭವೂ ಅಲ್ಲ. ನಿಜವಾಗಿ, ಧಾರ್ಮಿಕ ದೌರ್ಜನ್ಯ ಎಂಬುದು ಅತ್ಯಂತ ಜಾಣತನದಿಂದ ಆಯ್ಕೆ ಮಾಡಿದ ಪದ. ಈ ಮೂಲಕ ಒಂದೇ ಕಲ್ಲಿನಿಂದ ಎರಡು ಹಣ್ಣುಗಳನ್ನು ಉರುಳಿಸುವ ಉದ್ದೇಶ ಕೇಂದ್ರ ಸರಕಾರಕ್ಕಿದೆ.
1. ನೆರೆಯ ಮೂರೂ ರಾಷ್ಟ್ರಗಳಲ್ಲಿ ಭಾರೀ ಪ್ರಮಾಣದಲ್ಲಿ ಮುಸ್ಲಿಮೇತರರ ಮೇಲೆ ಧಾರ್ಮಿಕ ದೌರ್ಜನ್ಯವಾಗುತ್ತಿದೆ, ಆ ದೌರ್ಜನ್ಯವನ್ನು ತಡೆಯಲಾಗದೇ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮೇತರರು ಭಾರತಕ್ಕೆ ವಲಸೆ ಬಂದಿದ್ದಾರೆ.
2. ಇಸ್ಲಾಮಿಕ್ ರಾಷ್ಟ್ರಗಳೆಂದರೆ ಮುಸ್ಲಿಮೇತರರ ವಿರೋಧಿ. ಅಲ್ಲಿ ಮುಸ್ಲಿಮೇತರರ ಬದುಕು ಸುರಕ್ಷಿತವಲ್ಲ.
ಧಾರ್ಮಿಕ ದೌರ್ಜನ್ಯ ಎಂಬ ಪದವು ಈ ಎರಡೂ ಸಂದೇಶವನ್ನು ಸೂಚ್ಯವಾಗಿ ರವಾನಿಸುತ್ತದೆ ಮತ್ತು ದೇಶದ ನಾಗರಿಕರಲ್ಲಿ ಮುಸ್ಲಿಮ್ ವಿರೋಧಿ ಭಾವವೊಂದನ್ನು ಅದು ತಾನಾಗಿಯೇ ಸೃಷ್ಟಿಸುತ್ತದೆ. ನಿಜವಾಗಿ, ಇಂಥದ್ದೊಂದು ಧ್ರುವೀಕರಣ ವನ್ನು ಸಾಧಿಸುವುದೇ ಈ ಕಾನೂನಿನ ಮೊದಲ ಗುರಿ. ಇದು ಯಶಸ್ವಿಯಾದರೆ ಆ ಬಳಿಕ ವಲಸಿಗ ಮುಸ್ಲಿಮರಿಗೇಕೆ ಪೌರತ್ವ ಕೊಡುವುದಿಲ್ಲ ಎಂಬ ಪ್ರಶ್ನೆಯೇ ದೇಶದ್ರೋಹಿ ಎನಿಸಿಕೊಳ್ಳುತ್ತದೆ. ಮುಸ್ಲಿಮೇತರರನ್ನು ಹಿಂಸಿಸಿದ ನಾಡಿನಿಂದ ಬಂದವರಿಗೆ ಪೌರತ್ವ ಕೊಡುವುದು ತಪ್ಪು ಎಂದು ಮಾತ್ರವಲ್ಲ, ಹಾಗೆ ಭಾರತಕ್ಕೆ ಬಂದ ಮುಸ್ಲಿಮರೆಲ್ಲ ಮುಸ್ಲಿಮೇತರರಿಗೆ ಹಿಂಸೆ ಕೊಟ್ಟ ಅಪರಾಧಿಗಳು ಎಂಬ ಭಾವ ಹುಟ್ಟಿಕೊಳ್ಳುತ್ತದೆ. ಭಾರತಕ್ಕೆ ಬಂದವರಲ್ಲಿ ಮುಸ್ಲಿಮೇತರರನ್ನು ವಲಸಿಗರು ಎಂಬ ಅನುಕಂಪದ ಪದದಿಂದ ಗುರುತಿಸುವುದು ಮತ್ತು ಮುಸ್ಲಿಮರನ್ನು ಅಕ್ರಮ ನುಸುಳುಕೋರರು ಮತ್ತು ಉಗ್ರರು ಎಂಬ ರಕ್ತದೊತ್ತಡ ಏರಿಸುವ ಪದದಿಂದ ಕರೆಯುವುದೂ ನಡೆಯುತ್ತದೆ. ಮಾತ್ರವಲ್ಲ, ಕ್ರಮೇಣ ಭಾರತಕ್ಕೆ ಬಂದ ಮುಸ್ಲಿಮೇತರರನ್ನು- ಧಾರ್ಮಿಕ ದೌರ್ಜನ್ಯಕ್ಕಾಗಿ ಮತ್ತು ಉದ್ಯೋಗಕ್ಕಾಗಿ- ಎಂಬೆರಡು ವರ್ಗೀಕರಣವನ್ನು ಇದು ಅಳಿಸಿ ಹಾಕುತ್ತದಲ್ಲದೇ ಎಲ್ಲರನ್ನೂ ಧಾರ್ಮಿಕ ದೌರ್ಜನ್ಯದ ಸಂತ್ರಸ್ತರ ಪಟ್ಟಿಗೆ ಸೇರಿಸುತ್ತದೆ. ಸದ್ಯ ಈ ತಂತ್ರ ಬಹುತೇಕ ಯಶಸ್ವಿಯಾಗಿದೆ. ಮುಸ್ಲಿಮ್ ವಲಸಿಗರು ಮಾತ್ರ ಈಗ ಚರ್ಚೆಯಲ್ಲಿದ್ದಾರೆಯೇ ಹೊರತು ಭಾರತಕ್ಕೆ ಬಂದಿರುವ ಮುಸ್ಲಿಮೇತರರಲ್ಲಿ ನಿಜಕ್ಕೂ ಧಾರ್ಮಿಕ ದೌರ್ಜನ್ಯದಿಂದ ಬಂದವರೆಷ್ಟು ಎಂಬ ಬಗ್ಗೆ ಪ್ರಶ್ನೆ ಗಳೇ ಏಳುತ್ತಿಲ್ಲ. ಉದ್ಯೋಗವನ್ನರಸಿಕೊಂಡು ಬಂದವರನ್ನು ಹೇಗೆ ಪತ್ತೆ ಹಚ್ಚುತ್ತೀರಿ ಮತ್ತು ಅವರನ್ನು ಎಲ್ಲಿಗೆ ಕಳುಹಿಸುತ್ತೀರಿ ಎಂಬ ಪ್ರಶ್ನೆಯೂ ಮುನ್ನೆಲೆಗೆ ಬಂದಿಲ್ಲ. ನಿಜವಾಗಿ,
ಪಾಕ್, ಬಾಂಗ್ಲಾ ಮತ್ತು ಅಫಘಾನ್‍ಗಳಿಂದ ಭಾರತಕ್ಕೆ ಬಂದವರಲ್ಲಿ ಉದ್ಯೋಗವನ್ನು ಅರಸಿಕೊಂಡು ಬಂದಿರುವವರ ಸಂಖ್ಯೆಯೇ ಹೆಚ್ಚಿರುವುದು ಖಂಡಿತ. ಭಾರತಕ್ಕೆ ಹೋಲಿಸಿದರೆ ಪಾಕ್, ಬಾಂಗ್ಲಾ ಮತ್ತು ಅಫಘಾನ್‍ಗಳು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದುರ್ಬಲ ರಾಷ್ಟ್ರಗಳು. ನೇಪಾಲ, ಮ್ಯಾನ್ಮಾರ್, ಲಂಕಾಗಳನ್ನೂ ಇವೇ ಸಾಲಿಗೆ ಸೇರಿಸಬಹುದು. ಅಂದಹಾಗೆ, ದುರ್ಬಲ ರಾಷ್ಟ್ರಗಳಿಂದ ಪ್ರಬಲ ರಾಷ್ಟ್ರಗಳಿಗೆ ವಲಸೆ ಹೋಗುವುದು ಇತಿಹಾಸದ ಅದ್ಭುತವೇನೂ ಅಲ್ಲ. ಇತ್ತೀಚೆಗೆ ಅಮೇರಿಕವು ತನ್ನ ಮೆಕ್ಸಿಕೋ ಗಡಿಯನ್ನು ಮುಚ್ಚುವುದಕ್ಕೆ ಮುಂದಾಯಿತು. ಇದಕ್ಕೆ ಕಾರಣ ವಲಸೆ. ಆರ್ಥಿಕವಾಗಿ ಹಿಂದುಳಿದಿರುವ ಮೆಕ್ಸಿಕೋ ದಿಂದ ಜನರು ನೆರೆಯ ಅಮೇರಿಕಕ್ಕೆ ಉದ್ಯೋಗವನ್ನರಸಿಕೊಂಡು ವಲಸೆ ಹೋಗುತ್ತಿದ್ದಾರೆ. ಹಾಗೆಯೇ, ಉದ್ಯೋಗವನ್ನರಸಿಕೊಂಡು ಅಮೇರಿಕ, ಬ್ರಿಟನ್, ಜರ್ಮನಿ, ಅರಬ್ ರಾಷ್ಟ್ರಗಳ ಸಹಿತ ಜಗತ್ತಿನೆಲ್ಲೆಡೆಗೆ ಭಾರತೀಯರು ಹೊರಟು ಹೋಗಿರುವುದು ಮತ್ತು ಇವರಲ್ಲಿ ಅಸಂಖ್ಯ ಮಂದಿ ಆಯಾ ರಾಷ್ಟ್ರಗಳ ಪೌರತ್ವಕ್ಕಾಗಿ ಅರ್ಜಿ ಹಾಕಿ ಪೌರತ್ವ ಪಡೆದುಕೊಂಡಿರುವುದೂ ಇಂಥದ್ದೇ ಒಂದು ಪ್ರಕ್ರಿಯೆ. ಅಷ್ಟಕ್ಕೂ,
ಕೇಂದ್ರ ಸರಕಾರಕ್ಕೆ ಇವೆಲ್ಲ ಗೊತ್ತಿಲ್ಲ ಎಂದಲ್ಲ. ಗೊತ್ತಿದ್ದೇ ಅದು ಈ ಮಸೂದೆಯನ್ನು ಕಾನೂನಾಗಿಸಿದೆ. ಮಾತ್ರವಲ್ಲ, ಪೌರತ್ವ ರದ್ದಾಗುವವರ ಪಟ್ಟಿಯಲ್ಲಿ ಮುಸ್ಲಿಮರ ಹೆಸರು   ಮಾತ್ರ ಇರುವಂತೆ ನೋಡಿಕೊಂಡಿರುವುದರಲ್ಲೂ ಜಾಣತನವಿದೆ. ಅದು ಏನೆಂದರೆ,
ಬಿಜೆಪಿಗೂ ಮುಸ್ಲಿಮರಿಗೂ ನಡುವೆ ಸಂಬಂಧ ಅಷ್ಟಕ್ಕಷ್ಟೇ ತಾನೇ. ಅದು ಬಿಜೆಪಿಯನ್ನು ಬೆಂಬಲಿಸುವವರಿಗೂ ಬೆಂಬಲಿಸ ದವರಿಗೂ ಜೆನ್ನಾಗಿ ಗೊತ್ತಿದೆ. ಮುಸ್ಲಿಮರನ್ನು ಗುರಿಯಾಗಿಸಿಕೊಂಡೇ ಅದು ರಾಜಕೀಯ ಮಾಡುತ್ತಲೂ ಇದೆ. ಮುಸ್ಲಿಮರನ್ನು ಗೋಳು ಹೊಯ್ದುಕೊಂಡಷ್ಟೂ ತನ್ನ ಮತಪೆಟ್ಟಿಗೆ ತುಂಬುತ್ತದೆ ಅನ್ನುವ ಮನೋಭಾವ ಅದರದು. ನಿಜವಾಗಿ, ಹಿಂದೂಗಳಿಗೆ ಭಾರತ ಬಿಟ್ಟು ಅನ್ಯ ದೇಶವಿಲ್ಲ ಎಂಬ ಕೇಂದ್ರ ಸರಕಾರದ ವಾದವು ಪ್ರಾಮಾಣಿಕವೇ ಆಗಿರುತ್ತಿದ್ದರೆ ಪಾಕ್, ಬಾಂಗ್ಲಾ, ಅಫಘಾನ್‍ನಿಂದ ಭಾರತಕ್ಕೆ ಬಂದವರ ಪೈಕಿ ಹಿಂದೂಗಳಿಗೆ ಮಾತ್ರ ಪೌರತ್ವವನ್ನು ಕೊಡಬೇಕಿತ್ತು. ಜೊತೆಗೇ ಫಾರ್ಸಿಗಳಿಗೂ. ಹಾಗಂತ, ಬೌದ್ಧ ಧರ್ಮವನ್ನೇ ಪಾಲಿಸುವ ಹಲವು ರಾಷ್ಟ್ರಗಳು ಭಾರತದ ಸುತ್ತ-ಮುತ್ತಲೇ ಇವೆ. ಥಾೈಲೆಂಡ್, ಮ್ಯಾನ್ಮಾರ್, ಭೂತಾನ್, ಲಂಕಾ, ಮಂಗೋಲಿಯಾ ಇತ್ಯಾದಿ ರಾಷ್ಟ್ರಗಳಲ್ಲಿ ಬೌದ್ಧರು ಬಹುಸಂಖ್ಯಾತರು. ಕ್ರೈಸ್ತರಿಗಂತೂ ಇಂಗ್ಲಂಡ್, ಗ್ರೀಸ್, ಐರ್ಲೆಂಡ್ ಸೇರಿದಂತೆ 15ರಿಂದ ಇಪ್ಪತ್ತರಷ್ಟು ಕ್ರೈಸ್ತ ಧರ್ಮ ಪಾಲನಾ ರಾಷ್ಟ್ರಗಳಿವೆ. ಹೀಗಿರುವಾಗ, ವಲಸೆ ಬಂದ ಬೌದ್ಧರಿಗೂ ಮತ್ತು ಕ್ರೈಸ್ತರಿಗೂ ಹೋಗುವುದಕ್ಕೆ ಬೇರೆ ರಾಷ್ಟ್ರಗಳಿವೆ ಎಂದು ಹೇಳುವುದನ್ನು ಬಿಟ್ಟು (ಇದು ಈ ಲೇಖಕನ ಬಯಕೆಯಲ್ಲ) ಅವರೆಲ್ಲರಿಗೂ ಭಾರತೀಯ ಪೌರತ್ವವನ್ನು ಕೊಡುವುದು ಮತ್ತು ಮುಸ್ಲಿಮರನ್ನು ಮಾತ್ರ ಅದರಿಂದ ಹೊರಗಿಡುವುದು ಅಕ್ಷಮ್ಯವೆನಿಸುತ್ತದೆ. ಒಂದುವೇಳೆ,
ವಲಸಿಗ ಹಿಂದೂಗಳಿಗೆ ಮಾತ್ರ ಪೌರತ್ವದ ಅವಕಾಶವನ್ನು ಕೊಟ್ಟು ಉಳಿದೆಲ್ಲರಿಗೂ ಪೌರತ್ವವನ್ನು ನಿರಾಕರಿಸಿರುತ್ತಿದ್ದರೆ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸಂಚಲನೆಯನ್ನು ಸೃಷ್ಟಿಸುತ್ತಿತ್ತು. ಬ್ರಿಟನ್, ಅಮೇರಿಕ, ಜಪಾನ್, ಚೀನಾದಂತಹ ರಾಷ್ಟ್ರಗಳು ಪ್ರತಿ ಭಟಿಸುತ್ತಿದ್ದವು. ಟ್ರಂಪ್ ದಿಗ್ಬಂಧನದ ಭಾಷೆಯಲ್ಲಿ ಮಾತಾಡುತ್ತಿದ್ದರು. ಅಮಿತ್ ಷಾ ಸಹಿತ ಕೇಂದ್ರ ಸಚಿವ ಸಂಪುಟದ ಹಲವರಿಗೆ ಅಮೇರಿಕ ಮತ್ತಿತರ ರಾಷ್ಟ್ರಗಳು ದಿಗ್ಬಂಧನ ವಿಧಿಸುವ ಸಾಧ್ಯತೆಗಳೂ ಇದ್ದುವು. ವಿದೇಶದಲ್ಲಿರುವ ಭಾರತೀಯ ಹಿಂದೂ ಸಮುದಾಯದ ಉದ್ಯೋಗಿಗಳ ಮೇಲೆ ಮಾನಸಿಕ ಮತ್ತು ದೈಹಿಕ ಆಕ್ರಮಣಗಳೂ ನಡೆಯುತ್ತಿದ್ದುವು. ಅವರ ಉದ್ಯೋಗವು ಅನಿಶ್ಚಿತ ಸ್ಥಿತಿಗೆ ತಲುಪು ವುದಕ್ಕೂ ಅವಕಾಶ ಇತ್ತು. ಅದರ ಜೊತೆಗೇ ಭಾರತದಲ್ಲಿನ ಸ್ಥಿತಿಗತಿಗಳಲ್ಲೂ ವ್ಯತ್ಯಾಸಗಳಾಗುತ್ತಿತ್ತು. ಪೌರತ್ವ ಕಾಯ್ದೆಯನ್ನು ವಿರೋಧಿಸುವವರ ಗುಂಪಿನಲ್ಲಿ ಮುಸ್ಲಿಮ್, ಬೌದ್ಧ, ಕ್ರೈಸ್ತ ಇತ್ಯಾದಿ ವೈವಿಧ್ಯತೆಗಳಿರುತ್ತಿತ್ತು. ಪ್ರತಿಭಟನೆಗಳು ಈಗಿನದಕ್ಕಿಂತ ಹೆಚ್ಚು ವ್ಯಾಪಕವೂ ವೈವಿಧ್ಯವೂ ಆಗಿರುತ್ತಿತ್ತು. ಈ ಎಲ್ಲ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡೇ ಕೇಂದ್ರ ಸರಕಾರ ಪೌರತ್ವ ಕಾಯ್ದೆಯನ್ನು ರೂಪಿಸಿದೆ. ಮುಸ್ಲಿಮರನ್ನು ಮಾತ್ರ ಪೌರತ್ವ ಪಟ್ಟಿಯಿಂದ ಹೊರಗಿಡುವುದರಿಂದ ಅಪಾಯ ಕಡಿಮೆ ಮತ್ತು ರಾಜಕೀಯ ಲಾಭಗಳು ಹೆಚ್ಚು ಎಂಬುದಾಗಿ ಅದು ಲೆಕ್ಕ ಹಾಕಿದೆ. ಆದ್ದರಿಂದ,
ಈ ಎಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡೇ ಪೌರತ್ವ ಮತ್ತು ಎನ್‍ಆರ್‍ಸಿಗೆ ಮುಸ್ಲಿಮ್ ಸಮುದಾಯದ ಪ್ರತಿಕ್ರಿಯೆ ಹೇಗಿರಬೇಕು ಎಂಬುದನ್ನು ಚಿಂತಿಸಬೇಕಾಗಿದೆ. ಮುಸ್ಲಿಮರು ದಾಖಲೆಗಳನ್ನು ಸರಿಪಡಿಸಿಟ್ಟುಕೊಳ್ಳುವುದು ಬೇರೆ ಮತ್ತು ಎನ್‍ಆರ್‍ಸಿಗಾಗಿ ದಾಖಲೆ ಪತ್ರಗಳನ್ನು ಸಲ್ಲಿಸದಿರುವುದೇ ಬೇರೆ. ಇವೆರಡನ್ನೂ ಒಂದೇ ಎಂದು ವ್ಯಾಖ್ಯಾನಿಸಿ ದಾಖಲೆ ಪತ್ರಗಳ ಬಗ್ಗೆ ನಿರ್ಲಕ್ಷ್ಯ ತೋರುವುದರಲ್ಲಿ ಅಪಾಯ ಹೆಚ್ಚು. ಎನ್‍ ಆರ್ ಸಿಗಾಗಿ ದಾಖಲೆ ಪತ್ರಗಳನ್ನು ಸಲ್ಲಿಸಬೇಕೋ ಅಥವಾ ಬಹಿಷ್ಕರಿಸಬೇಕೋ ಎಂಬುದು ನಂತರದ ವಿಚಾರ. ಎನ್‍ ಆರ್ ಸಿಗೆ ಅಲ್ಲದಿದ್ದರೂ ಸರಿಯಾದ ದಾಖಲೆ ಪತ್ರಗಳು ನಾಗರಿಕರ ಜೊತೆಯಿರಬೇಕಾದುದು ಕಾನೂನಾತ್ಮಕವಾಗಿಯೂ ಅಗತ್ಯ. ಸರಿಯಾದ ದಾಖಲೆ ಪತ್ರ ಗಳೇ ಇಲ್ಲದಿದ್ದರೆ ಯಾವ ಸಂದರ್ಭದಲ್ಲೂ ಪ್ರಭುತ್ವ ನಿಮ್ಮನ್ನು ಗುರಿ ಮಾಡಬಹುದು. ಅದಕ್ಕೆ ಎನ್‍ಆರ್‍ಸಿಯೇ ಬೇಕೆಂದಿಲ್ಲ. ನಗರ ಪ್ರದೇಶದಲ್ಲಿ ವಾಸಿಸುವ ಮುಸ್ಲಿಮರ ಪೈಕಿ ಹೆಚ್ಚಿನವರಿಗೆ ದಾಖಲೆ ಪತ್ರಗಳ ಮಹತ್ವ ಗೊತ್ತಿದೆ. ಹೆಚ್ಚಿನವರಲ್ಲಿ ಸರಿಯಾದ ದಾಖಲೆಪತ್ರಗಳೂ ಇವೆ. ಆದರೆ ಹಳ್ಳಿ ಮತ್ತು ಗ್ರಾಮೀಣ ಪ್ರದೇಶದ ಮುಸ್ಲಿಮರಲ್ಲಿ ಈ ತಿಳುವಳಿಕೆ ಇಲ್ಲ. ಅವರಲ್ಲಿ ದಾಖಲೆ ಪತ್ರಗಳನ್ನು ಸರಿಯಾಗಿ ಇಟ್ಟುಕೊಳ್ಳದವರೂ ಇದ್ದಾರೆ. ಇರುವ ದಾಖಲೆ ಪತ್ರಗಳಲ್ಲೂ ಕ್ರಮಬದ್ಧತೆ ಇಲ್ಲ. ರೇಶನ್ ಕಾರ್ಡ್, ಆಧಾರ್ ಕಾರ್ಡ್, ಮತದಾನದ ಚೀಟಿ, ಜನನ ಸರ್ಟಿಫಿಕೇಟ್ ಇತ್ಯಾದಿ ಇತ್ಯಾದಿಗಳು ಇಲ್ಲದವರೂ ಇರಬಹುದು ಅಥವಾ ಇದ್ದರೂ ಒಂದಕ್ಕೊಂದು ತಾಳೆಯಾಗದ ರೀತಿಯಲ್ಲಿ ಇರುವವುಗಳೂ ಇರಬಹುದು. ಆದ್ದರಿಂದ ‘ಎನ್‍ಆರ್‍ಸಿಯನ್ನು ಬಹಿಷ್ಕರಿಸೋಣ ಮತ್ತು ಯಾರೂ ದಾಖಲೆ ಪತ್ರಗಳನ್ನು ಸರಿಪಡಿಸಿಕೊಳ್ಳಬೇಡಿ’ ಎಂಬ ಕರೆಯು ಜನಪ್ರಿಯ ಘೋಷಣೆಯಾಗಿ ಬಿಡಬಹುದೇ ಹೊರತು ದೂರದೃಷ್ಟಿಯದ್ದಾಗದು. ಅಲ್ಲದೇ,
ಪ್ರಭುತ್ವದ ಉರುಳು ಬಿಗಿಯಾದಂತೆಯೇ ಸಮುದಾಯದಲ್ಲಿ ಬಿರುಕು ಮೂಡುವುದಕ್ಕೂ ಅವಕಾಶವಿದೆ. ಪ್ರಭುತ್ವವು ಸಮು ದಾಯವನ್ನು ವಿಭಜಿಸುವ ಮೂಲಕ ಸಮುದಾಯದ ಬಹಿ ಷ್ಕಾರದ ಧೋರಣೆಯಲ್ಲಿ ಕಂದಕ ತೋಡುವುದಕ್ಕೂ ಸಾಧ್ಯ  ವಿದೆ. ಎನ್‍ ಆರ್ ಸಿಯಲ್ಲಿ ಭಾಗವಹಿಸದಿದ್ದರೆ ಶಾಲೆಗಳು, ಉದ್ಯಮಗಳು, ಆಸ್ಪತ್ರೆಗಳು ಸಹಿತ ಸಮುದಾಯದ ಮಂದಿ ನಡೆಸುವ ಸರ್ವವೂ ಸ್ಥಗಿತಗೊಳ್ಳುವ ಅಥವಾ ಅವುಗಳಿಗೆ ಬೀಗಮುದ್ರೆ ಹಾಕುವ ಒತ್ತಡದ ಸ್ಥಿತಿಯನ್ನು ಪ್ರಭುತ್ವ ತಂದಿಟ್ಟರೆ ಮತ್ತು ಆ ಕಾರಣದಿಂದ ಸಮುದಾಯದ ಧೋರಣೆಯಲ್ಲಿ ಸಡಿಲಿಕೆ ಉಂಟಾದರೆ, ಅದರ ನೇರ ಪರಿಣಾಮವನ್ನು ಎದುರಿಸ ಬೇಕಾಗಿರುವುದು ಹಳ್ಳಿ ಮತ್ತು ಗ್ರಾಮೀಣ ಪ್ರದೇಶದ ಬಡ ಮುಸ್ಲಿಮರೇ ಹೊರತು ಸರಿಯಾದ ದಾಖಲೆ ಪತ್ರಗಳನ್ನು ಇಟ್ಟುಕೊಂಡಿರುವ ನಗರ ಪ್ರದೇಶದವರಲ್ಲ.
ಹಾಗೆಯೇ, ಕೊನೆಯ ಗಳಿಗೆಯಲ್ಲಿ ಎನ್‍ ಆರ್ ಸಿ ಬಹಿಷ್ಕಾರದಿಂದ ಮುಸ್ಲಿಮ್ ಸಮುದಾಯ ಹೊರಬಂದರೂ ಅದರ ಅಡ್ಡ ಪರಿಣಾಮಕ್ಕೆ ತುತ್ತಾಗುವುದೂ ಈ ಬಡವರೇ. ಯಾಕೆಂದರೆ, ದಾಖಲೆ ಪತ್ರಗಳನ್ನು ಸರಿಪಡಿಸಿಕೊಳ್ಳುವುದಕ್ಕೆ ಅವರು ಆ ಬಳಿಕದಿಂದ ಪ್ರಾರಂಭಿಸಬೇಕು. ಆ ಸಮಯದಲ್ಲಿ ಅದಕ್ಕೆ ಅವಕಾಶ ಇದೆಯೋ ಇಲ್ಲವೋ ಅನ್ನುವುದೂ ಈಗ ಸ್ಪಷ್ಟವಿಲ್ಲ. ಎನ್‍ ಆರ್ ಸಿಯ ಕೊನೆ ದಿನಾಂಕ ಮುಗಿಯುವುದರ ಒಳಗಾಗಿ ಅವರಿಗೆ ಸರಿಯಾದ ದಾಖಲೆ ಪತ್ರಗಳನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದು ಈಗ ಹೇಳುವಂತೆಯೂ ಇಲ್ಲ. ಆದರೆ, ನಗರ ಪ್ರದೇಶದ ಮಂದಿಗೆ ಈ ಯಾವ ಸಮಸ್ಯೆಗಳೂ ಎದುರಾಗುವುದಿಲ್ಲ. ಆದ್ದರಿಂದ,
ಒಂದುಕಡೆ ಮುಸ್ಲಿಮ್ ಸಮುದಾಯದ ದಾಖಲೆ ಪತ್ರಗಳನ್ನು ಸರಿಪಡಿಸಿಕೊಳ್ಳುವ ಜಾಗೃತಿ ಅಭಿಯಾನಗಳನ್ನು ಕೈಗೊಳ್ಳುತ್ತಲೇ ಇನ್ನೊಂದು ಕಡೆ ಎನ್‍ ಆರ್ ಸಿಯನ್ನು ಬಹಿಷ್ಕರಿಸಬೇಕೋ ಬೇಡವೋ ಎಂಬ ಚರ್ಚೆಗಳು ನಡೆಯುವುದೇ ಸರಿ. ಸರಿಯಾದ ದಾಖಲೆ ಪತ್ರಗಳು ಮುಸ್ಲಿಮ್ ಸಮುದಾಯದ ಎಲ್ಲರ ಜೊತೆಗೂ ಇರಲಿ. ಎನ್‍ ಆರ್ ಸಿಯನ್ನು ಬಹಿಷ್ಕರಿಸುವುದಕ್ಕೂ ಬಹಿಷ್ಕರಿಸದೇ ಇರುವುದಕ್ಕೂ ಮತ್ತು ಈ ದಾಖಲೆ ಪತ್ರಗಳನ್ನು ಸರಿಪಡಿಸುವುದಕ್ಕೂ ಸಂಬಂಧ ಕಲ್ಪಿಸದೇ ಇರೋಣ. ಇವೆರಡೂ ಬೇರೆ ಬೇರೆ. ಇಲ್ಲದಿದ್ದರೆ ಸಮುದಾಯದ ಬಡ ಮತ್ತು ದುರ್ಬಲ ಮುಸ್ಲಿಮರನ್ನು ಹಳ್ಳಕ್ಕೆ ತಳ್ಳಿದಂತಾದೀತು.

Saturday, December 14, 2019

ಎನ್‍ಕೌಂಟರ್: ಸಂಭ್ರಮ ಮತ್ತು ಸೂತಕದ ನಡುವಿನ ಬಿಂದುವಿನಲ್ಲಿ ನಿಂತು...




ಕೆಲವು ಅಂಕಿ-ಅಂಶಗಳು ಹೀಗಿವೆ;
1. ಭಾರತದ ಜೈಲುಗಳಲ್ಲಿ ಸದ್ಯ ಗಲ್ಲು ಶಿಕ್ಷೆಯ ತೀರ್ಪನ್ನು ಪಡೆದುಕೊಂಡ ಮತ್ತು ಯಾವ ಕ್ಷಣದಲ್ಲೂ ನೇಣಿಗೆ ಏರಿಸಲ್ಪಡುವೆವೆಂಬ ಭಯದಲ್ಲಿ 380ರಷ್ಟು ಅಪರಾಧಿಗಳು ತಣ್ಣಗೆ ಬದುಕುತ್ತಿದ್ದಾರೆ. ಹಾಗಂತ, ಇವರೆಲ್ಲ ನಿನ್ನೆ ಮೊನ್ನೆ ಗಲ್ಲು ಶಿಕ್ಷೆ ಪಡಕೊಂಡವರಲ್ಲ. ಇವರಲ್ಲಿ 27 ವರ್ಷದಿಂದ ಗಲ್ಲು ಶಿಕ್ಷೆಯನ್ನು ಎದುರು ನೋಡುತ್ತಿರುವವನೂ ಇದ್ದಾನೆ. ಉಳಿದವರಲ್ಲಿ 5, 10, 15 ವರ್ಷ ಗಳಿಂದ ಗಲ್ಲು ಶಿಕ್ಷೆಯನ್ನು ಕಾಯುತ್ತಿರುವವರೂ ಇದ್ದಾರೆ.
2. 2016ರ ಆರಂಭದಲ್ಲಿ ಈ ದೇಶದಲ್ಲಿ ಒಟ್ಟು 1,18,537 ಅತ್ಯಾಚಾರ ಪ್ರಕರಣಗಳು ನ್ಯಾಯಾಲಯದಲ್ಲಿದ್ದುವು. ಆದರೆ, 2016ರ ಕೊನೆಗಾಗುವಾಗ ಈ ಅತ್ಯಾಚಾರ ಪ್ರಕರಣಗಳ ಸಂಖ್ಯೆ 1,33,813ಕ್ಕೆ ಏರಿಕೆ ಕಂಡಿತು. ಇದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ(NCRB)ದ ವರದಿ. ನೆನಪಿರಲಿ- 2012ರ ನಿರ್ಭಯ ಪ್ರಕರಣದ ಬಳಿಕದ ಅಂಕಿ ಅಂಶ ಇದು. 2012 ಡಿಸೆಂಬರ್ 16ರ ರಾತ್ರಿ ಬಸ್ ಒಂದರಲ್ಲಿ 23 ವರ್ಷದ ಈ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಯಿತು. ಬಳಿಕ ಆಕೆ ಆಸ್ಪತ್ರೆಯಲ್ಲಿ ನಿಧನಳಾದಳು. ಅಪರಾಧಿಗಳನ್ನು ಗಲ್ಲಿಗೇರಿಸ ಬೇಕೆಂದು ವಿಪಕ್ಷ ನಾಯಕಿ ಸುಶ್ಮಾ ಸ್ವರಾಜ್ ಅಂದು ಸಂಸತ್ತಿ ನಲ್ಲಿ ಆಗ್ರಹಿಸಿದ್ದರು. 2013 ಆಗಸ್ಟ್‍ನಲ್ಲಿ 22 ವರ್ಷದ ಪೋಟೋ ಪತ್ರಕರ್ತೆಯ ಮೇಲೆ ಮುಂಬೈಯ ಶಕ್ತಿ ಮಿಲ್ಸ್ ಆವರಣದಲ್ಲಿ ಐವರು ಸಾಮೂಹಿಕ ಅತ್ಯಾಚಾರ ನಡೆಸಿದರು. ಇಂಗ್ಲಿಷ್ ಭಾಷೆಯ ಮ್ಯಾಗಸಿನ್ ಒಂದಕ್ಕೆ ಅಸೈನ್‍ಮೆಂಟ್ ತಯಾರಿಸಲು ತನ್ನ ಗೆಳೆಯನೊಂದಿಗೆ ಹೋಗಿದ್ದ ವೇಳೆ ಈ ಅತ್ಯಾಚಾರ ನಡೆಯಿತು. 2015 ಮಾರ್ಚ್ 14ರಂದು ಪಶ್ಚಿಮ ಬಂಗಾಲದ ರಾಣಾಘಾಟ್‍ನ ಜೀಸಸ್ ಮತ್ತು ಮೇರಿ ಕಾನ್ವೆಂಟ್‍ನಲ್ಲಿ 71 ವರ್ಷದ ನನ್ ಒಬ್ಬರನ್ನು ಅತ್ಯಾಚಾರಗೈಯಲಾಯಿತು. ರಾಷ್ಟ್ರಮಟ್ಟದಲ್ಲಿ ಭಾರೀ ಸದ್ದಿನೊಂದಿಗೆ ಸುದ್ದಿಗೀಡಾದ ಮತ್ತು ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗೆ ಗುರಿಯಾದ ಈ ಪ್ರಕರಣಗಳ ಬಳಿಕದ ವರದಿ ಇದು ಎಂಬುದನ್ನೂ ಗಮನದಲ್ಲಿಟ್ಟುಕೊಳ್ಳಿ.
3. ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ(ಓಅಖಃ)ದ ವರದಿಯಲ್ಲಿ ಇನ್ನಷ್ಟು ಅಚ್ಚರಿಗಳಿವೆ. ಅತ್ಯಾಚಾರ ಆರೋಪವು ಶಿಕ್ಷೆಯಾಗಿ ಪರಿವರ್ತನೆಯಾಗುವ ಪ್ರಮಾಣಗಳ ಕುರಿತೂ ಅದು ವಿವರವಾಗಿ ಅಂಕಿ ಅಂಶಗಳನ್ನು ಮುಂದಿಟ್ಟಿದೆ. 2013ರ ವರೆಗಿನ ಅದರ ವರದಿಗಳೇ ಪರಿಸ್ಥಿತಿಯನ್ನು ನಮಗೆ ಮನದಟ್ಟು ಮಾಡಿ ಕೊಳ್ಳಲು ದಾರಾಳ ಸಾಕು. ಇಲ್ಲೂ ಓದುಗರಲ್ಲಿ ಒಂದು ಎಚ್ಚರಿಕೆ ಇರಬೇಕು. ಇಲ್ಲಿ ನೀಡಲಾಗಿರುವ ಅಂಕಿ-ಅಂಶಗಳೆಲ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲುಗೊಂಡು, ಎಫ್‍ಐಆರ್ ಆಗಿ ಆ ಬಳಿಕ ಅದು ನ್ಯಾಯಾಲಯಕ್ಕೆ ತಲುಪಿದ ಪ್ರಕರಣಗಳು. ಇಂಥ ಯಾವ ಪ್ರಕ್ರಿಯೆಗೂ ಒಳಗಾಗದೇ ಮತ್ತು ಹೊರ ಜಗತ್ತಿನ ಮುಂದೆ ಅನಾವರಣಗೊಳ್ಳದೆಯೇ ಸತ್ತು ಹೋದ ಪ್ರಕರಣಗಳು ಈ ಅಂಕಿ-ಅಂಶಗಳಿಗೆ ಸೇರಿರುವುದಿಲ್ಲ. ಈ ಅಂಕಿ-ಅಂಶಗಳು ಹೀಗಿವೆ:
ಅತ್ಯಾಚಾರ ಆರೋಪವು ಸಾಬೀತುಗೊಂಡು ಶಿಕ್ಷೆಯಾಗಿ ಪರಿ ವರ್ತನೆಯಾದ ಪ್ರಕರಣಗಳು 1973ರಲ್ಲಿ 44.3% ಇದ್ದರೆ, 1983 ರಲ್ಲಿ ಇದು 37.7%ಕ್ಕೆ ಕುಸಿಯಿತು. 2009ರಲ್ಲಿ ಇದು 26.9%ಕ್ಕೆ ಕುಸಿದರೆ, 2010ರಲ್ಲಿ 26.6%, 2011ರಲ್ಲಿ 26.4%, 2012ರಲ್ಲಿ 24.2% ಮತ್ತು 2013ರಲ್ಲಿ 27.1%ಕ್ಕೆ ಕುಸಿಯುತ್ತಾ ಬಂತು. ಹಾಗಂತ, 1973ರಿಂದ 2013ರ ನಡುವೆ ಅತ್ಯಾಚಾರ ಪ್ರಕರಣಗಳಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಾ ಬಂದಿದೆ ಎಂಬುದು ಇದರ ಅರ್ಥವಲ್ಲ. ಪ್ರತಿವರ್ಷವೂ ಅತ್ಯಾಚಾರ ಪ್ರಕರಣಗಳಲ್ಲಿ ಭಾರೀ ಅನ್ನುವಂತೆ ಏರಿಕೆ ಕಂಡು ಬರುತ್ತಲೇ ಇದೆ. ಮಾತ್ರವಲ್ಲ, ಅತ್ಯಾಚಾರಗಳು ಬರ್ಬರ ಅನ್ನುವಷ್ಟು ಕ್ರೂರವಾಗುತ್ತಲೂ ಇದೆ. 2012ರ ನಿರ್ಭಯ, 2018 ಜನವರಿ 17ರ ಆಸಿಫಾ, 2019ರ ಪಶು ವೈದ್ಯೆ ಮತ್ತು ಉನ್ನಾವೋ ಯುವತಿ.. ಎಲ್ಲವೂ ಬರ್ಬರತೆ ಯಲ್ಲಿ ಒಂದಕ್ಕಿಂತ ಒಂದನ್ನು ಮೀರುವಂಥವು. ಅತ್ಯಾಚಾರ ಪ್ರಕರಣಗಳಲ್ಲಿ ಏರಿಕೆ ಮತ್ತು ಶಿಕ್ಷಾ ಪ್ರಮಾಣದಲ್ಲಿ ಇಳಿಕೆ- ಇದು 1973ರಿಂದ 2013ರ ವರೆಗಿನ ಆಘಾತಕಾರಿ ಸತ್ಯಗಳು.
4. ಭಾರತದಲ್ಲಿ ಸರಾಸರಿ ಒಂದು ಮಿಲಿಯನ್ ಜನರಿಗೆ ಕೇವಲ 14 ಮಂದಿ ನ್ಯಾಯಾಧೀಶರಿದ್ದಾರೆ. ಇದು ಜಗತ್ತಿನ 65 ರಾಷ್ಟ್ರಗಳ ಪೈಕಿ ಅತ್ಯಂತ ಕಡಿಮೆ ಪ್ರಮಾಣ. ಅತ್ಯಾಚಾರ ಪ್ರಕರಣವನ್ನು ನಿಭಾಯಿಸುವುದಕ್ಕಾಗಿ 2012ರಲ್ಲಿ ದೆಹಲಿ ಸರ್ಕಾರ 4 ತ್ವರಿತಗತಿ ನ್ಯಾಯಾಲಯವನ್ನು ರಚಿಸಿದೆ. ಇದರಿಂದ ಆಗಿರುವ ತೊಂದರೆ ಏನೆಂದರೆ, ಸಾಮಾನ್ಯ ನ್ಯಾಯಾಲಯಗಳಲ್ಲಿ ನ್ಯಾಯಾ ಧೀಶರ ಸಂಖ್ಯೆಗೆ ಕುತ್ತು ಬಂದಿದೆ. ಈ ಹಿಂದೆ ದಕ್ಷಿಣ ಆಫ್ರಿಕಾ ದಲ್ಲೂ ಅತ್ಯಾಚಾರ ಪ್ರಕರಣವು ನಾಗರಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಜನರು ನ್ಯಾಯ ವಿಳಂಬದ ಕುರಿತು ಪ್ರತಿಭಟನೆಗಿಳಿದರು. ಆದ್ದರಿಂದ ತ್ವರಿತಗತಿ ನ್ಯಾಯಾಲಯಗಳನ್ನು ಸ್ಥಾಪಿಸ ಲಾಯಿತು. 2011ರ ಲೆಕ್ಕಾಚಾರದಂತೆ, ಒಟ್ಟು ದಾಖಲಾದ ಅತ್ಯಾ ಚಾರ ಪ್ರಕರಣಗಳ ಪೈಕಿ 70ರಿಂದ 95% ಪ್ರಕರಣಗಳೂ ಸಾಬೀತು ಗೊಂಡು ಶಿಕ್ಷೆಯಾಗಿ ಪರಿವರ್ತನೆಯಾಯಿತು. ತ್ವರಿತಗತಿ ನ್ಯಾಯಾಲಯ ಸ್ಥಾಪನೆಯಾಗುವುದಕ್ಕಿಂತ ಮೊದಲು ಅಲ್ಲಿ ಈ ಶಿಕ್ಷೆಯ ಪ್ರಮಾಣ ತೀರಾ ಅತ್ಯಲ್ಪವಾಗಿತ್ತು. ಉದಾ. 1998ರಲ್ಲಿ ಈ ಶಿಕ್ಷೆಯ ಪ್ರಮಾಣ 8.9%ರಷ್ಟೇ ಇತ್ತು.
5. ಅತ್ಯಾಚಾರಿಗಳಿಗೆ ಶಿಕ್ಷೆ ವಿಧಿಸುವುದರಲ್ಲಿ ಭಾರತಕ್ಕಿಂತಲೂ ಹಿಂದಿರುವ ರಾಷ್ಟ್ರಗಳಿವೆ. ಅತ್ಯಾಚಾರಕ್ಕಾಗಿ 2012ರಲ್ಲಿ ಸ್ವೀಡನ್‍ನಲ್ಲಿ ಶಿಕ್ಷೆಗೀಡಾದವರ ಸಂಖ್ಯೆ 7%, ಫ್ರಾನ್ಸ್ ನಲ್ಲಿ 25% ಮತ್ತು ಸ್ವೀಡನ್ ನಲ್ಲಿ 10%. ಅದೇವೇಳೆ, ಇರಾನ್, ಈಜಿಪ್ಟ್, ಸೌದಿ ಅರೇಬಿಯಾಗಳಲ್ಲಿ ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ.
6. ಇನ್ನೂ ಒಂದು ಲೆಕ್ಕಾಚಾರ ಹೀಗಿದೆ:
ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋದ ಪ್ರಕಾರ, 2016 ರಲ್ಲಿ ಒಟ್ಟು 38,947 ಲೈಂಗಿಕ ಹಿಂಸೆ (ಅತ್ಯಾಚಾರ) ಪ್ರಕರಣಗಳು ನಡೆದಿದ್ದು, ಇದರಲ್ಲಿ 2167ರಷ್ಟು ಸಾಮೂಹಿಕ ಅತ್ಯಾಚಾರಗಳು ನಡೆದಿವೆ. ಇದರ ಪ್ರಕಾರ ಲೆಕ್ಕ ಹಾಕಿದರೆ, ಪ್ರತಿ ಗಂಟೆಗೆ 4 ಹೆಣ್ಣು ಮಕ್ಕಳು ಲೈಂಗಿಕ ಹಿಂಸೆ ಅಥವಾ ಅತ್ಯಾಚಾರಕ್ಕೆ ಗುರಿ ಯಾಗುತ್ತಾರೆ. ಕಳೆದ 10 ವರ್ಷಗಳಿಂದ ಒಟ್ಟು 2.80 ಲಕ್ಷ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಆಘಾತಕಾರಿ ಅಂಶ ಏನೆಂದರೆ, ಇವುಗಳಲ್ಲಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳು ಶೇ. 15ಕ್ಕಿಂತಲೂ ಹೆಚ್ಚು. ಹಾಗೆಯೇ ಭಾರತದಲ್ಲಿ ನೇಣಿಗೊಳಗಾಗುವ ಒಟ್ಟು ಪ್ರಕರಣಗಳಲ್ಲಿ ಶೇ. 39ರಷ್ಟು ಪ್ರಕರಣಗಳೂ ಅತ್ಯಾಚಾರಕ್ಕೆ ಸಂಬಂಧಿಸಿದ್ದು. ಆದ್ದರಿಂದ,
ಇಂಥ ಸನ್ನಿವೇಶದಲ್ಲಿ ಅತ್ಯಾಚಾರಕ್ಕೆ ಒಳಗಾದ ಯುವತಿ, ಆಕೆಯ ಕುಟುಂಬ, ಸಂಬಂಧಿಕರು ಇತ್ಯಾದಿ ಆಪ್ತ ವಲಯವು ಅತ್ಯಾಚಾರದ ಆರೋಪಿಗಳನ್ನು ಸ್ಥಳದಲ್ಲಿಯೇ ಜಜ್ಜಿ ಹಾಕಬೇಕು ಎಂದು ಬಯಸುವುದು ಸಹಜ. ಹೈದರಾಬಾದ್‍ನ ಪಶುವೈದ್ಯೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳನ್ನು ಎನ್‍ಕೌಂಟರ್ ನಡೆಸಿದ ಪೋಲೀಸರು ಅಂಥವರ ಕಣ್ಣಲ್ಲಿ ಹೀರೋಗಳಾಗುವುದೂ ಸಹಜ. ಅವರೊಳಗೆ ಮಡುಗಟ್ಟಿದ ದುಃಖವೇ ಅವರನ್ನು ಅಂಥದ್ದೊಂದು ನಿರ್ಧಾರಕ್ಕೆ ಪ್ರೇರೇಪಿಸಿರುತ್ತದೆ. ಅತ್ಯಾಚಾರಕ್ಕೆ ಅವರು ಸಾಕ್ಷಿಗಳಾಗಿಲ್ಲದಿದ್ದರೂ ಪೊಲೀಸರು ತೋರಿಸಿದ ಆರೋಪಿಗಳನ್ನು ನಿಜ ಅಪರಾಧಿಗಳು ಎಂದೇ ಖಚಿತವಾಗಿ ನಂಬುವಂತೆ ಅವರೊಳಗಿನ ಆಕ್ರೋಶ ಮತ್ತು ನೋವು ಬಲವಂತಪಡಿಸಿರುತ್ತದೆ. ಅವರಿರುವ ಜಾಗ ಮತ್ತು ಪರಿಸ್ಥಿತಿಯಲ್ಲಿ ನಿಂತು ನೋಡಿದರೆ ನಾವೂ ಅಂಥದ್ದೇ ತೀರ್ಮಾನಕ್ಕೆ ಬರುವುದಕ್ಕೂ ಸಾಧ್ಯವಿದೆ. ಅದೇವೇಳೆ, ಎನ್‍ಕೌಂಟರ್ ಗೆ ಒಳಗಾದ ಆರೋಪಿಗಳ ಕುಟುಂಬಗಳ ಭಾವನೆ ಬೇರೆಯದೇ ಆಗಿರುತ್ತದೆ. ಹೈದರಾಬಾದ್‍ನ ವೈದ್ಯೆಯ ಪ್ರಕರಣದಲ್ಲೂ ಇದು ವ್ಯಕ್ತವಾಗಿದೆ. ಅವರಿಗೆ ಎನ್‍ಕೌಂಟರ್ ತಪ್ಪಾಗಿ ಕಾಣಿಸುತ್ತದೆ. ಅವರು ಅದಕ್ಕಾಗಿ ಸಂಭ್ರಮಿಸುವುದೂ ಇಲ್ಲ. ನ್ಯಾಯ ತೀರ್ಮಾನ ವಾಗಬೇಕಾದುದು ನ್ಯಾಯಾಲಯದಲ್ಲಿ ಎಂದವರು ವಿಷಣ್ಣವದನರಾಗಿ ವಾದಿಸುತ್ತಾರೆ. ನಿಜವಾಗಿ,
ಈ ಎರಡು ಗುಂಪುಗಳ ಪ್ರತಿಕ್ರಿಯೆಗಳನ್ನು ನಿರ್ಲಕ್ಷಿಸಿಯೇ ನಾವು ಪೊಲೀಸ್ ಎನ್‍ಕೌಂಟರ್ ಅನ್ನು ವಿಮರ್ಶೆಗೊಡ್ಡಬೇಕು. ಸಂತ್ರಸ್ತೆಯ ಕುಟುಂಬ ಮತ್ತು ಆರೋಪಿಗಳ ಕುಟುಂಬ- ಇವೆರಡರ ಪ್ರತಿಕ್ರಿಯೆಯೂ ಪ್ರಬುದ್ಧವಾಗಿರಬೇಕಿಲ್ಲ. ಎನ್ ಕೌಂಟರ್‍ನ ದೂರಗಾಮಿ ಪರಿಣಾಮವನ್ನು ಗ್ರಹಿಸಿ ಅವು ಪ್ರತಿಕ್ರಿಯಿಸಬೇಕೆಂದಿಲ್ಲ. ಕ್ಷಣದ ಆಕ್ರೋಶ, ದ್ವೇಷ, ಮಮತೆ ಇತ್ಯಾದಿಗಳೇ ಈ ಎರಡೂ ಗುಂಪುಗಳ ಸಂಭ್ರಮಕ್ಕೋ ದುಃಖಕ್ಕೋ ಕಾರಣ. ಆದರೆ, ನಾಗರಿಕ ಸಮಾಜದ ಮೇಲೆ ಅಂಥದ್ದೊಂದು ಒತ್ತಡವಿಲ್ಲ. ಆದ್ದರಿಂದಲೇ, ಅದು ವ್ಯಕ್ತಪಡಿ ಸುವ ಪ್ರತಿಕ್ರಿಯೆಯು ಆವೇಶ, ದ್ವೇಷ, ಚಂಚಲತೆಯಿಂದ ದೂರವಿರ ಬೇಕಲ್ಲದೇ, ನ್ಯಾಯಾಲಯಕ್ಕಿಂತ ಹೊರಗೆ ಜಾರಿ ಮಾಡಲಾಗುವ ಶಿಕ್ಷೆಯ ದೂರಗಾಮಿ ಪರಿಣಾಮವನ್ನು ಗ್ರಹಿಸಿದ ರೀತಿಯಲ್ಲಿರಬೇಕು. ಹಾಗಂತ, ಈ ಬರಹದ ಆರಂಭದಲ್ಲಿ ಉಲ್ಲೇಖಿಸಲಾದ ಅಂಕಿ-ಅಂಶಗಳು ನ್ಯಾಯದಾನ ದಲ್ಲಾಗುವ ವಿಳಂಬವನ್ನು ಸ್ಪಷ್ಟಪಡಿಸುತ್ತಿವೆ ಎಂಬುದು ನಿಜ. ಅಷ್ಟೇ ಅಲ್ಲ, ವಿಳಂಬದ ಜೊತೆಗೇ ನ್ಯಾಯ ನಿರಾಕರಣೆಯೂ ನಡೆಯುತ್ತಿದೆ ಅನ್ನುವುದೂ ಸತ್ಯ. ಆದರೆ, ಈ ಸಮಸ್ಯೆಗೆ ಪೊಲೀಸ್ ಎನ್ ಕೌಂಟರ್ ಪರಿಹಾರ ಆಗಬಹುದೇ? ಪೊಲೀಸ್ ವ್ಯವಸ್ಥೆಯು ನ್ಯಾಯಾಂಗ ವ್ಯವಸ್ಥೆಯಂತೆ ಸ್ವತಂತ್ರ ಅಲ್ಲವಲ್ಲ. ಪೊಲೀಸರು ಕ್ಷಣಕ್ಷಣಕ್ಕೂ ಸರಕಾರದ ನಿರ್ದೇಶನದಂತೆ ಕೆಲಸ ನಿರ್ವಹಿಸುತ್ತಾರೆ. ಸರ್ಕಾರವಾದರೋ ಪಕ್ಷಾತೀತವೂ ಅಲ್ಲ ಅಥವಾ ಬಹುಪಕ್ಷೀಯವೂ ಅಲ್ಲ. ನಿರ್ದಿಷ್ಟ ರಾಜಕೀಯ ಪಕ್ಷವನ್ನು ಪ್ರತಿನಿಧಿಸುವ ಸರ್ಕಾರವೊಂದು ಪಕ್ಷಾತೀತವಾಗಿ ಕೆಲಸ ಮಾಡುವುದಕ್ಕೆ ಸಾಧ್ಯವೂ ಇಲ್ಲ. ಯಾವ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೋ ಆ ಸರ್ಕಾರದ ಅಣತಿಯಂತೆ ಪೊಲೀಸ್ ವ್ಯವಸ್ಥೆ ತನ್ನನ್ನು ತೊಡಗಿಸಿಕೊಳ್ಳುತ್ತದೆ. ಹೀಗಿರುವಾಗ, ಪೊಲೀಸರು ನಡೆಸುವ ಯಾವುದೇ ಎನ್‍ಕೌಂಟರ್ ಪಕ್ಷಾತೀತವಾಗಿ ಮತ್ತು ಸಂಪೂರ್ಣ ನ್ಯಾಯಯುತವಾಗಿ ನಡೆಯುವುದು ಅನುಮಾನಾಸ್ಪದ. ಜಮ್ಮುವಿನಲ್ಲಿ 8ರ ಹರೆಯದ ಆಸಿಫಾ ಎಂಬ ಮಗುವನ್ನು ಹಿಂಸಿಸಿ ಅತ್ಯಾಚಾರಗೈದು ಹತ್ಯೆ ನಡೆಸಿದ ಆರೋಪಿಗಳ ಪರವೇ ನಿರ್ದಿಷ್ಟ ರಾಜಕೀಯ ಪಕ್ಷದ ಶಾಸಕರು ರ್ಯಾಲಿ ನಡೆಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಸರಕಾರವು ತನಗೆ ಬೇಕಾದ ಆರೋಪಿಗಳನ್ನು ಉಳಿಸಿಕೊಂಡು ತನಗಾಗದ ಅಥವಾ ಸಂಬಂಧವಿಲ್ಲದ ಆರೋಪಿ ಗಳನ್ನು ಪೊಲೀಸರ ಮೂಲಕ ಮುಗಿಸುವುದಕ್ಕೂ ಅವಕಾಶವಿದೆ. ಸರ್ಕಾರವೇ ಭಾಗಿಯಾದ ಹಲವಾರು ಹತ್ಯಾಕಾಂಡಗಳು, ಕೌಸರ್‍ಬೀಯಂಥ ಎನ್‍ಕೌಂಟರ್ ಗಳು ಇದಕ್ಕೆ ಸಾಕ್ಷ್ಯವಾಗಿಯೂ ನಮ್ಮ ಮುಂದಿದೆ. ಆದ್ದರಿಂದ,
ಅತ್ಯಾಚಾರವಿರಲಿ, ಇನ್ನಾವುದೇ ಕ್ರೌರ್ಯವಿರಲಿ, ಪೊಲೀಸರು ತಮ್ಮ ಕಾರ್ಯವ್ಯಾಪ್ತಿಯನ್ನು ಮೀರಿ ಕ್ರಮಕ್ಕೆ ಮುಂದಾಗುವುದನ್ನು ಸಮರ್ಥಿಸಿಕೊಳ್ಳುವುದು ಒಟ್ಟು ಪ್ರಜಾತಂತ್ರದ ಹಿತದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಬಹುದು. ಸಂತ್ರಸ್ತೆಯ ಕುಟುಂಬ ಮತ್ತು ಆರೋಪಿಗಳ ಕುಟುಂಬದಂತೆ ನಾಗರಿಕರೂ ಭಾವಾವೇಶದಿಂದ ಪ್ರತಿಕ್ರಿಯಿಸತೊಡಗಿದರೆ ಅದು ಪೊಲೀಸ್ ಇಲಾಖೆಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ. ಸಾರ್ವಜನಿಕರಿಂದ ಪ್ರಶಂಸೆ ಗಿಟ್ಟಿಸಿಕೊಳ್ಳುವುದಕ್ಕಾಗಿ ಮತ್ತು ಸರ್ಕಾರದ ಪುರಸ್ಕಾರವನ್ನು ಪಡೆಯುವುದ ಕ್ಕಾಗಿಯೂ ನಕಲಿ ಎನ್‍ಕೌಂಟರ್ ಗಳಿಗೆ ಅದು ದಾರಿಯನ್ನು ತೆರೆದುಕೊಡುತ್ತದೆ. ಅಂದಹಾಗೆ, ನಿರ್ದಿಷ್ಟ ಪೊಲೀಸ್ ಪ್ರಮುಖರನ್ನು ಫ್ಯಾಂಟಮ್‍ನಂತೆ ಚಿತ್ರಿಸಿ, ಹೂಹಾರ ಹಾಕಿ ಹೀರೋನಂತೆ ಸತ್ಕರಿಸುವುದರಿಂದ ಲಾಭವೂ ಇದೆ, ನಷ್ಟವೂ ಇದೆ. ಕೆಲವೊಮ್ಮೆ ಇಂಥ ಸತ್ಕಾರವು ಅವರನ್ನು ಕಾನೂನು ಬಾಹಿರವಾಗಿ ವರ್ತಿಸುವುದಕ್ಕೂ ಪ್ರೇರಣೆ ನೀಡುತ್ತದೆ. ರಾಷ್ಟ್ರಪತಿ ಪದಕ ಸಹಿತ ಇನ್ನಿತರ ಗೌರವಾರ್ಹ ಪುರಸ್ಕಾರ ಪಡೆದವರೂ ಆ ಬಳಿಕ ವಿಲನ್ ಆದ ಇತಿಹಾಸ ಈ ದೇಶದಲ್ಲಿದೆ. ಆದ್ದರಿಂದ,
ಅತ್ಯಾಚಾರಕ್ಕೆ ಸಂಬಂಧಿಸಿ ನ್ಯಾಯಾಂಗದ ನಿಧಾನಗತಿಗೆ ಅಥವಾ ನಿಷ್ಕ್ರಿಯತೆಗೆ ಎನ್‍ಕೌಂಟರ್ ಅನ್ನು ಬೆಂಬಲಿಸುವುದು ಉತ್ತರ ಅಲ್ಲ. ಸ್ವತಃ ಅದುವೇ ಒಂದು ಪ್ರಶ್ನೆ. ದೊಡ್ಡ ಸಂಖ್ಯೆಯಲ್ಲಿ ತ್ವರಿತಗತಿ ನ್ಯಾಯಾಲಯದ ಸ್ಥಾಪನೆ ಮತ್ತು ನಿಗದಿತ ಅವಧಿಯೊಳಗೆ ವಿಚಾರಣೆ ನಡೆಸಿ ಶಿಕ್ಷೆ ಜಾರಿಮಾಡುವುದಕ್ಕೆ ದಾರಿಗಳನ್ನು ಕಂಡುಕೊಳ್ಳುವುದೇ ಇದಕ್ಕಿರುವ ಪರಿಹಾರ. ಇದು ಅಸಾಧ್ಯವೂ ಅಲ್ಲ. ಆದರೆ, ಅದಕ್ಕೆ ಸಂಭ್ರಮದ ಮೂಡ್‍ನಿಂದ ಹೊರಬಂದು ಆಲೋಚಿಸಬೇಕು, ಅಷ್ಟೇ.

Saturday, December 7, 2019

ಅಂಬೇಡ್ಕರ್ ಸಂವಿಧಾನ ಅಲ್ಪಾಯುಷಿ ಎಂದಿದ್ದ ಜೆನ್ನಿಂಗ್ ರ ಸಂವಿಧಾನ ಬದುಕಿ ಬಾಳಿದ್ದು ಬರೇ ಆರು ವರ್ಷ



1. ಮಹಾರಾಷ್ಟ್ರದಲ್ಲಿ ಕೊನೆಗೂ ಶಿವಸೇನೆ-ಎನ್‍ಸಿಪಿ-ಕಾಂಗ್ರೆಸ್ ಮೈತ್ರಿ ಸರಕಾರ: ಉದ್ಧವ್ ಮುಖ್ಯಮಂತ್ರಿ
2. Uಜಜhಚಿv ಣo be ಒಚಿhಚಿಡಿಚಿshಣಡಿಚಿ ಅಒ
ನವೆಂಬರ್ 23ರ ಶನಿವಾರದಂದು ಪ್ರಕಟವಾದ ಎಲ್ಲ ಪತ್ರಿಕೆಗಳ ಮುಖಪುಟದ ಶೀರ್ಷಿಕೆ ಬಹುತೇಕ ಹೀಗೆಯೇ ಇತ್ತು ಮಾತ್ರವಲ್ಲ, ದೇಶದ ಬಹುತೇಕ ಎಲ್ಲ ಭಾಷೆಯ ಪತ್ರಿಕೆಗಳ ಮುಖಪುಟದ ಮುಖ್ಯ ಸುದ್ದಿ ಇದುವೇ ಆಗಿತ್ತು. ತನ್ನ ಪತ್ನಿ ರಶ್ಮಿಯೊಂದಿಗೆ ಉದ್ಧವ್ ಠಾಕ್ರೆಯವರು ಕೈ ಮುಗಿದು ಸಾರ್ವಜನಿಕರಿಗೆ ದರ್ಶನ ನೀಡುತ್ತಿರುವ ಫೋಟೋವನ್ನು ಹೆಚ್ಚಿನೆಲ್ಲ ಪತ್ರಿಕೆಗಳು ಈ ಸುದ್ದಿಯೊಂದಿಗೆ ಮುದ್ರಿಸಿದ್ದುವು. ತಮಾಷೆ ಏನೆಂದರೆ, ಶನಿವಾರ ಬೆಳಿಗ್ಗೆ ಓದುಗರು ಈ ಸುದ್ದಿಯನ್ನು ಓದಿ ಓದಿ ನಕ್ಕರು. ಯಾಕೆಂದರೆ, ಪತ್ರಿಕೆಗಳ ಮುಖಪುಟದ ಸುದ್ದಿಗೂ ಮಹಾರಾಷ್ಟ್ರದಲ್ಲಿ ನಡೆದಿರುವ ಬೆಳವಣಿಗೆಗಳಿಗೂ ಸಂಬಂಧವೇ ಇರಲಿಲ್ಲ. ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂದ್ರ ಫಡ್ನವೀಸ್ ಮತ್ತು ಉಪಮುಖ್ಯ ಮಂತ್ರಿಯಾಗಿ ಎನ್‍ಸಿಪಿಯ ಅಜಿತ್ ಪವಾರ್ ಅವರು ಅದೇ ದಿನ ಬೆಳಿಗ್ಗೆ ಪ್ರತಿಜ್ಞಾ ವಿಧಿ ಸ್ವೀಕರಿಸುತ್ತಿರುವುದನ್ನು ಟಿವಿ ಚಾನೆಲ್‍ಗಳು ಪ್ರಸಾರ ಮಾಡುತ್ತಿದ್ದುವು. ಶನಿವಾರ ಬೆಳ್ಳಂ ಬೆಳಗ್ಗೆ 5.30ರ ಹೊತ್ತಿಗೆ ಫಡ್ನವಿಸ್ ಅವರು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಭೇಟಿಯಾದರು. ಸರ್ಕಾರ ರಚಿಸುವ ಹಕ್ಕು ಮಂಡಿಸಿದರು. ತಕ್ಷಣ ರಾಷ್ಟ್ರಪತಿ ಆಳ್ವಿಕೆಯನ್ನು ವಾಪಸ್ ಪಡೆಯುವ ಪ್ರಕ್ರಿಯೆ ನಡೆಯಿತು. 7.30ರ ಹೊತ್ತಿಗೆ ಪ್ರಮಾಣ ವಚನ ಕಾರ್ಯಕ್ರಮವೂ ನಡೆಯಿತು. ನಿಜವಾಗಿ,
ಇದೊಂದು ದಿಢೀರ್ ಪ್ರಕ್ರಿಯೆ. ಇದೂ ಸಾಧ್ಯ ಅನ್ನುವುದನ್ನು ಈ ದೇಶದ ನಾಗರಿಕರು ಊಹಿಸಿರುವ ಸಾಧ್ಯತೆ ಇಲ್ಲವೇ ಇಲ್ಲ. ಒಂದು ಸರಕಾರ ರಚನೆಗಾಗಿ ರಾಜ್ಯಪಾಲರು ಬೆಳ್ಳಂಬೆಳಗ್ಗೆ ಗಂಟೆ 5.30ಕ್ಕೆ ಚುರುಕಾಗುವುದು, ಅದಕ್ಕೆ ಕೇಂದ್ರ ಸರಕಾರ ಸಾಥ್ ನೀಡುವುದು ಮತ್ತು ಇದಾಗಿ ಎರಡೇ ಗಂಟೆಯೊಳಗೆ ಹೊಸ ಸರಕಾರ ಪ್ರತಿಜ್ಞಾ ವಿಧಿ ಸ್ವೀಕರಿಸುವುದು.. ಇವೆಲ್ಲ ದೇಶದ ಪಾಲಿಗೆ ಅಚ್ಚರಿ ಮತ್ತು ಆಘಾತದ ಸುದ್ದಿ. ಇಷ್ಟೊಂದು ತುರ್ತು ಅಗತ್ಯವಿತ್ತೇ ಅನ್ನುವ ಪ್ರಶ್ನೆಯ ಜೊತೆಗೇ ಸಾಂವಿಧಾನಿಕವಾಗಿ ಇಂಥದ್ದೊಂದು ನಡೆಗೆ ಸಮ್ಮತಿ ಇದೆಯೇ ಎಂಬ ಪ್ರಶ್ನೆಯೂ ನಾಗರಿಕರಲ್ಲಿ ವ್ಯಾಪಕ ಮಟ್ಟದಲ್ಲಿ ಚರ್ಚೆಗೆ ಒಳಗಾಯಿತು. ರಾಜ್ಯ ಪಾಲರ ಅಧಿಕಾರ ವ್ಯಾಪ್ತಿ ಮತ್ತು ಅವರು ಯಾರಿಗೆ ಮತ್ತು ಯಾವುದಕ್ಕೆ ನಿಷ್ಠರಾಗಿರಬೇಕು ಎಂಬ ಬಗ್ಗೆ ತೀವ್ರ ಸಂವಾದಗಳೂ ನಡೆದುವು. ಫಡ್ನವಿಸ್ ಅವರು ಅಜಿತ್ ಪವಾರ್ ಜೊತೆ ಸೇರಿ ಸರಕಾರ ರಚಿಸುವ ಬಗ್ಗೆ ಸಾರ್ವಜನಿಕರಿಗೆ ಯಾವ ಮುನ್ಸೂ ಚನೆಯೂ ಇರಲಿಲ್ಲ. ದೇಶವನ್ನು ಕತ್ತಲಲ್ಲಿಟ್ಟು ಒಂದು ಸರಕಾರ ರಚಿಸುವ ತುರ್ತು ಏನಿತ್ತು? ಮಹಾರಾಷ್ಟ್ರದಲ್ಲಿ ಅಂಥ ಅಪಾಯಕಾರಿ ರಾಜಕೀಯ ಶೂನ್ಯತೆ ಸೃಷ್ಟಿಯಾಗಿತ್ತೇ? ಆಡಳಿತ ಸ್ತಬ್ಧವಾಗಿತ್ತೇ? ರಾಷ್ಟ್ರಪತಿ ಆಡಳಿತ ಜಾರಿಯಲ್ಲಿರುವಾಗ ಕತ್ತಲಲ್ಲಿ ಸರಕಾರ ರಚಿಸುವಷ್ಟು ತುರ್ತನ್ನು ರಾಜ್ಯಪಾಲರು ಪ್ರದರ್ಶಿಸಿದ್ದೇಕೆ? ದೇವೇಂದ್ರ ಫಡ್ನವಿಸ್‍ರಲ್ಲಿ ಸರಕಾರ ರಚಿಸುವಷ್ಟು ಬಹುಮತ ಇದೆ ಎಂಬುದನ್ನು ರಾಜ್ಯಪಾಲರು ಯಾವ ಆಧಾರದಲ್ಲಿ ಸ್ಪಷ್ಟ ಪಡಿಸಿಕೊಂಡರು? ಅಜಿತ್ ಪವಾರ್ ರ ಜೊತೆ ಆ ಮೊದಲು ಬಿಜೆಪಿ ಮಾತುಕತೆ ನಡೆಸಿದ್ದಾಗಲಿ, ಮೈತ್ರಿ ಸಾಧ್ಯತೆಗಳಾಗಲಿ ಸಾರ್ವಜನಿಕವಾಗಿ ಬಹಿರಂಗವಾಗಿರಲಿಲ್ಲ. ಅಂಥದ್ದೊಂದು ಸೂಚನೆ ಮಾಧ್ಯಮಗಳಿಗೂ ದಕ್ಕಿರಲಿಲ್ಲ. ಅದರ ಬದಲು ಶಿವಸೇನೆ, ಎನ್‍ಸಿಪಿ ಮತ್ತು ಕಾಂಗ್ರೆಸ್‍ಗಳು ಬಹಿರಂಗವಾಗಿ ಮೈತ್ರಿ ಮಾತು ಕತೆ ನಡೆಸುತ್ತಿದ್ದುವು. ಅವು ಜೊತೆ ಸೇರಿ ಸರಕಾರ ರಚಿಸುವ ಎಲ್ಲ ಸಾಧ್ಯತೆಗಳೂ ದಿನೇ ದಿನೇ ಸ್ಪಷ್ಟವಾಗುತ್ತಲೇ ಇತ್ತು. ಹೀಗಿರುವಾಗ ಈ ಬಹಿರಂಗ ಮೈತ್ರಿಯ ಬದಲು ಅಜಿತ್ ಮತ್ತು ಫಡ್ನವಿಸ್‍ರ ‘ರಾತ್ರಿ ಮೈತ್ರಿ’ಯ ಮೇಲೆ ರಾಜ್ಯಪಾಲರು ವಿಶ್ವಾಸ ತಾಳಿದ್ದು ಯಾಕೆ? ಆ ಬಳಿಕ ಸದನದಲ್ಲಿ ಬಹುಮತ ಸಾಬೀತು ಪಡಿಸಲು ಒಂದು ವಾರಗಳಷ್ಟು ದೀರ್ಘ ಅವಧಿಯನ್ನು ರಾಜ್ಯ ಪಾಲರು ಫಡ್ನವಿಸ್‍ರಿಗೆ ನೀಡಿದ್ದು ಏಕೆ? ಏನಿದರ ಉದ್ದೇಶ? ಒಂದುವೇಳೆ, ಫಡ್ನವಿಸ್‍ರ ಮೇಲೆ ರಾಜ್ಯಪಾಲರಿಗೆ ಅಷ್ಟೊಂದು ವಿಶ್ವಾಸ ಇದ್ದಿದ್ದರೆ ಮರುದಿನವೇ ಸದನದಲ್ಲಿ ವಿಶ್ವಾಸ ಮತ ಕೋರುವಂತೆ ಆದೇಶಿಸಬಹುದಿತ್ತಲ್ಲವೇ... ಇವು ಮತ್ತು ಇಂಥ ಇನ್ನೂ ಅನೇಕ ಪ್ರಶ್ನೆಗಳು ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು. ಮಾತ್ರವಲ್ಲ, ರಾಜ್ಯಪಾಲರು ಈ ಎಲ್ಲ ಚರ್ಚೆಗಳ ಕೇಂದ್ರಬಿಂದುವಾದರು. ಅಂದಹಾಗೆ,
1969ರಲ್ಲಿ ತಮಿಳುನಾಡಿನಲ್ಲಿ ಜಸ್ಟಿಸ್ ಪಿ.ವಿ. ರಾಜಮನ್ನಾರ್ ಸಮಿತಿಯನ್ನು ರಚಿಸಲಾಗಿತ್ತು. ರಾಜ್ಯ ಮತ್ತು ಕೇಂದ್ರ ಸರಕಾರಗಳ ನಡುವಿನ ಸಂಬಂಧ ಸುಧಾರಣೆಯ ಕುರಿತಂತೆ ಪರಾಮರ್ಶೆ ನಡೆಸುವ ಮತ್ತು ಸಲಹೆ ನೀಡುವ ಹೊಣೆಗಾರಿಕೆ ಈ ಸಮಿತಿಯದ್ದು. ರಾಜ್ಯಪಾಲರ ನೇಮಕವು ರಾಜ್ಯ ಮತ್ತು ಕೇಂದ್ರ ಸರಕಾರಗಳ ನಡುವಿನ ಸಮಾಲೋಚನೆಯ ಬಳಿಕ ನಡೆಯಬೇಕು ಎಂದು ಈ ಸಮಿತಿ ಸಲಹೆ ನೀಡಿತ್ತು. ಆದರೆ, ಈ ಸಲಹೆ ಈ ವರೆಗೂ ಪುರಸ್ಕøತಗೊಂಡಿಲ್ಲ ಮತ್ತು ರಾಜ್ಯಪಾಲರೆಂದರೆ, ಕೇಂದ್ರದ ಆದೇಶವನ್ನು ಜಾರಿ ಮಾಡುವ ಸೇವಕ ಎಂಬ ಭಾವನೆ ಸಾರ್ವಜನಿಕವಾಗಿ ಚಾಲ್ತಿಯಲ್ಲಿದೆ. ನಿಜವಾಗಿ,
ಇದು ಸಂವಿಧಾನವನ್ನು ದುರ್ಬಲಗೊಳಿಸುವ ಸ್ಥಿತಿ. ಇಂಥ ಬೆಳವಣಿಗೆಗಳು ಸಂವಿಧಾನವನ್ನು ನಿಧಾನಕ್ಕೆ ಅಪ್ರಸ್ತುತಗೊಳಿಸತೊಡಗುತ್ತದೆ. ಸಂವಿಧಾನದ ಬಗ್ಗೆ ನಾಲಗೆಯಿಂದ ಹೆಮ್ಮೆಯ ಮಾತು ಗಳನ್ನಾಡುತ್ತಾ ಕ್ರಿಯೆಯಿಂದ ಸಂವಿಧಾನವನ್ನೇ ದುರ್ಬಲಗೊಳಿಸುವ ಇಂಥ ಬೆಳವಣಿಗೆಗಳು ಅತ್ಯಂತ ಅಪಾಯಕಾರಿ. ಈ ಜಗತ್ತಿನಲ್ಲಿ ಹುಟ್ಟಿಕೊಂಡ ಅನೇಕ ಲಿಖಿತ ಸಂವಿಧಾನಗಳು ಹುಟ್ಟಿಕೊಂಡಷ್ಟೇ ವೇಗವಾಗಿ ಸಾವಿಗೀಡಾದದ್ದೂ ಇದೆ. ಅದಕ್ಕೆ, ಆ ಸಂವಿಧಾನದಲ್ಲಿ ಉಲ್ಲೇಖಗೊಂಡಿರುವ ವಿಧಿಗಳೋ ಪರಿಚ್ಛೇದಗಳೋ ರಾಜ್ಯ ನಿರ್ದೇಶಕ ತತ್ವಗಳೋ ಕಾರಣ ಅಲ್ಲ. ಅದನ್ನು ಜಾರಿ ಮಾಡ ಬೇಕಾದವರು ಅದರಲ್ಲಿ ವಿಫಲವಾದಾಗ ಮತ್ತು ಸ್ವಾರ್ಥಕ್ಕಾಗಿ ಸಂವಿಧಾನದ ಆಶಯಗಳನ್ನೇ ನಿರರ್ಥಕಗೊಳಿಸುವ ಕ್ರಿಯೆಯಲ್ಲಿ ತೊಡಗಿದಾಗ ಅಂತಿಮವಾಗಿ ಸಂವಿಧಾನಗಳೇ ಸತ್ತು ಹೋಗುತ್ತವೆ. ‘ಲಿಖಿತ ಸಂವಿಧಾನಗಳ ಆಯುಷ್ಯ’ ಎಂಬ ಹೆಸರಲ್ಲಿ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ನಡೆದ ಅಧ್ಯಯನ ಮತ್ತು ಅದರಿಂದ ಬಹಿರಂಗಕ್ಕೆ ಬಂದ ಸತ್ಯಗಳು ಈ ಬಗ್ಗೆ ಸಾಕಷ್ಟು ಬೆಳಕು ಚೆಲ್ಲುತ್ತವೆ.
ಥಾಮಸ್ ಗಿನ್ಸ್ ಬರ್ಗ್, ಝಾಕರಿ ಎಲ್‍ಕಿನ್ಸ್ ಮತ್ತು ಜೇಮ್ಸ್ ಮೆಲ್ಲನ್ ಅವರನ್ನೊಳಗೊಂಡ ಈ ಅಧ್ಯಯನ ತಂಡವು 1789 ರಿಂದ 2006ರ ವರೆಗಿನ ಸಂವಿಧಾನಗಳ ಬಗ್ಗೆ ಅಧ್ಯಯನ ನಡೆಸಿದೆ. ಈ ಅವಧಿಯಲ್ಲಿ ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಎಷ್ಟು ಲಿಖಿತ ಸಂವಿಧಾನಗಳು ಅಸ್ತಿತ್ವಕ್ಕೆ ಬಂದಿವೆ, ಅವು ಎಷ್ಟು ಜೀವಂತವಿವೆ ಮತ್ತು ಎಷ್ಟು ಸಂವಿಧಾನಗಳ ಆಯುಷ್ಯ ಮುಗಿ ದಿವೆ ಎಂಬುದನ್ನು ನಿಖರವಾಗಿ ಈ ಸಮಿತಿ ಪಟ್ಟಿ ಮಾಡಿದೆ. ವಿಶೇಷ ಏನೆಂದರೆ, ಲಿಖಿತ ಸಂವಿಧಾನಗಳ ಆಯುಷ್ಯ ಬಹಳ ಹೃಸ್ವ. 1789ರಿಂದ 2006ರ ನಡುವೆ ಒಟ್ಟು 792 ಸಂವಿಧಾನಗಳು ಈ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಅಸ್ತಿತ್ವಕ್ಕೆ ಬಂದಿವೆ. ಹಾಗಂತ, ಜಗತ್ತಿನಲ್ಲಿ 792 ರಾಷ್ಟ್ರಗಳು ಇವೆ ಎಂದಲ್ಲ. ರಾಷ್ಟ್ರಗಳ ಸಂಖ್ಯೆ ಗಿಂತ ಮೂರು ಪಟ್ಟು ಹೆಚ್ಚು ಸಂವಿಧಾನಗಳು ಅಸ್ತಿತ್ವಕ್ಕೆ ಬಂದುದು ಹೇಗೆಂದರೆ, ಒಂದರ ಜಾಗದಲ್ಲಿ ಇನ್ನೊಂದು. ಅದರ ಜಾಗದಲ್ಲಿ ಮತ್ತೊಂದು. ಹೀಗೆ 518 ಸಂವಿಧಾನಗಳು ಹಳೆ ಸಂವಿಧಾನಗಳನ್ನು ಸಾಯಿಸಿ ಅಸ್ತಿತ್ವಕ್ಕೆ ಬಂದುವು ಎಂದು ಹೇಳಲಾಗಿದೆ. ಈ ನಡುವೆ ಸಂವಿಧಾನಕ್ಕೆ ತಿದ್ದುಪಡಿಗಳ ಮೇಲೆ ತಿದ್ದುಪಡಿಗಳು ಜಗತ್ತಿನ ಎಲ್ಲ ರಾಷ್ಟ್ರಗಳಲ್ಲೂ ನಡೆಯುತ್ತಲೂ ಇವೆ. ಯಾವ ಲಿಖಿತ ಸಂವಿಧಾನವೂ ದೀರ್ಘಾಯುಷಿಯಲ್ಲ. ಹೆಚ್ಚೆಂದರೆ, 17 ವರ್ಷಗಳಷ್ಟು ಸಂವಿಧಾನಗಳು ಬಾಳುತ್ತವೆ, ಆ ಬಳಿಕ ಅವು ಬದಲಾವಣೆಗೆ ಒಳಗಾಗುತ್ತವೆ, ಬುಡಸಮೇತ ಕುಸಿದು ಬೀಳುತ್ತವೆ, ಅಪ್ರಸ್ತುತಗೊಳ್ಳುತ್ತವೆ ಎಂದು ಅಧ್ಯಯನ ಕಂಡುಕೊಂಡಿದೆ. ಹಾಗಂತ,
ಈ ಅಧ್ಯಯನಕ್ಕಿಂತ ಮೊದಲು ಭಾರತೀಯ ಸಂವಿ ಧಾನದ ಆಯುಷ್ಯದ ಕುರಿತೂ ಈ ಹಿಂದೆ ಚರ್ಚೆಗಳಾಗಿತ್ತು. ಜಗತ್ತಿನ ವಿವಿಧ ರಾಷ್ಟ್ರಗಳ ಸಂವಿಧಾನವನ್ನು ಅಧ್ಯಯನ ನಡೆಸಿ ಅವುಗಳಲ್ಲಿರುವ ಉತ್ತಮ ಮತ್ತು ಪ್ರಾಯೋಗಿಕ ಅಂಶಗಳನ್ನು ಎತ್ತಿಕೊಂಡು ರಚಿಸಲಾದ ಭಾರತೀಯ ಸಂವಿಧಾನದ ಆಯುಷ್ಯ ಎಷ್ಟು ದೀರ್ಘ ಎಂದು ತಜ್ಜರು ಚರ್ಚೆ ನಡೆಸಿದ್ದರು. ಬ್ರಿಟಿಷ್ ನ್ಯಾಯವಾದಿ, ಅಕಾಡೆಮಿಕ್ ಮತ್ತು ಕೇಂಬ್ರಿಜ್ ವಿವಿಯ ವೈಸ್ ಚಾನ್ಸಲರ್ ಆಗಿದ್ದ ಸರ್ ಐವನ್ ಜೆನ್ನಿಂಗ್ಸ್ ಇಂಥವರಲ್ಲಿ ಒಬ್ಬರು. ಅವರು ಭಾರತೀಯ ಸಂವಿಧಾನದ ಅತಿದೊಡ್ಡ ಟೀಕಾಕಾರರಾಗಿದ್ದರು. ಈ ಸಂವಿಧಾನದ ದೀರ್ಘ ಬಾಳಿಕೆಯ ಬಗ್ಗೆ ಅವರು ಸಂಶಯ ವ್ಯಕ್ತಪಡಿಸಿದ್ದರು. ಮದ್ರಾಸ್ ವಿಶ್ವವಿದ್ಯಾಲಯವು 1951ರಲ್ಲಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಭಾರತೀಯ ಸಂವಿಧಾನವನ್ನು ವಿಮರ್ಶಿಸಿದ್ದರು.
ಮೂರು ದಿನಗಳ ಕಾಲ ನಡೆದ ಸಭೆಯಲ್ಲಿ ಅವರು ಸರಣಿ ಉಪನ್ಯಾಸ ನೀಡಿದ್ದರು. ಸಂವಿಧಾನ ತಜ್ಞನೆಂಬ ನೆಲೆಯಲ್ಲಿ ಅವರನ್ನು ವಿಶೇಷವಾಗಿ ಉಪನ್ಯಾಸಕ್ಕೆ ಆಹ್ವಾನಿಸಲಾಗಿತ್ತು. ವಿಶೇಷ ಏನೆಂದರೆ, ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿದ್ದ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ ಅವರು ಜೆನ್ನಿಂಗ್ ಅವರ ಈ ಎಲ್ಲ ಉಪನ್ಯಾಸಗಳಲ್ಲೂ ಸಭಿಕರಾಗಿ ಪಾಲ್ಗೊಂಡಿದ್ದರು. ಜೆನ್ನಿಂಗ್ ಅವರು ಭಾರತೀಯ ಸಂವಿಧಾನವನ್ನು ‘ತುಂಬಾ ದೀರ್ಘ, ತುಂಬಾ ಸಂಕೀರ್ಣ ಮತ್ತು ಇತಿಹಾಸದ ಬಂಧನದಲ್ಲಿರುವ ಸಂಹಿತೆ’ ಎಂದು ಕರೆದಿದ್ದರು. ಕುತೂಹಲದ ವಿಷಯ ಏನೆಂದರೆ, ಇದೇ ಜೆನ್ನಿಂಗ್ ಅವರು ಸೇರಿ ತಯಾರಿಸಿದ ಶ್ರೀಲಂಕಾದ ಸಂವಿಧಾನವು ಬರೇ ಆರೇ ವರ್ಷಗಳಲ್ಲಿ ಸಾವಿಗೀಡಾದದ್ದು. ನಿಜವಾಗಿ,
ಜೆನ್ನಿಂಗ್ ಅವರ ಮಾತನ್ನು ಸುಳ್ಳು ಮಾಡಿ ಭಾರತೀಯ ಸಂವಿಧಾನವು ನವೆಂಬರ್ 26ರಂದು 70ನೇ ವರ್ಷಕ್ಕೆ ಕಾಲಿಟ್ಟಿದೆ. ಜಗತ್ತಿನ ದೀರ್ಘಾಯುಷ್ಯದ ಲಿಖಿತ ಸಂವಿಧಾನಗಳಲ್ಲಿ ಭಾರತೀಯ ಸಂವಿಧಾನವೂ ಒಂದು. ಆದರೆ, ಈ ಸಂವಿಧಾನವನ್ನು ಅಪ್ರಸ್ತುತ ಗೊಳಿಸುವ ಪ್ರಕ್ರಿಯೆಗಳು ರಾಜಕೀಯವಾಗಿ ಮತ್ತೆ ಮತ್ತೆ ನಡೆಯುತ್ತಲೇ ಇವೆ. ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಯಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತಿದೆ. ರಾಷ್ಟ್ರಪತಿ ಆಳ್ವಿಕೆಯನ್ನು ರಾತೋರಾತ್ರಿ ರದ್ದುಪಡಿಸುವಂತೆ ರಾಷ್ಟ್ರಪತಿಯವರಿಗೆ ಸೂಚಿಸುವ ವಿಶೇಷಾಧಿಕಾರ ಪ್ರಧಾನ ಮಂತ್ರಿಯವರಿಗೆ ಇರಬಹುದು. ಹಾಗೆಯೇ, ಬೆಳ್ಳಂಬೆಳಗ್ಗೆ 5.30ಕ್ಕೆ ರಾಜ್ಯಪಾಲರು ಚುರುಕಾಗುವುದು ಮತ್ತು ಎರಡು ಗಂಟೆಯೊಳಗೆಯೇ ಸರಕಾರವೊಂದರ ರಚನೆಗೆ ಮುಂದಾಗುವುದೆಲ್ಲ ಸಾಂವಿಧಾನಿಕವಾಗಿ ಸರಿಯೇ ಇರಬಹುದು. ಆದರೆ, ನೈತಿಕವಾಗಿ ಎಷ್ಟು ಸರಿ? ರಾಜ್ಯಪಾಲರು ಆ ಮಟ್ಟದಲ್ಲಿ ಚುರುಕಾಗಲೇ ಬೇಕಾದ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿಯೇ ಇರಲಿಲ್ಲವಲ್ಲ. ಬೆಳ್ಳಂಬೆಳಗ್ಗೆ ರಾಷ್ಟ್ರಪತಿ ಆಡಳಿತವನ್ನು ರದ್ದುಪಡಿಸ ಬೇಕಾದ ಸಾಂವಿಧಾನಿಕ ತುರ್ತು ನಿರ್ಮಾಣವಾಗಿಯೇ ಇರಲಿಲ್ಲವಲ್ಲ. ಎರಡು ತದ್ವಿರುದ್ಧ ನಿಲುವಿನ ಪಕ್ಷಗಳು (ಬಿಜೆಪಿ-ಎನ್‍ಸಿಪಿ) ಸರಕಾರ ರಚನೆಯ ಕಾರಣಕ್ಕಾಗಿ ಮೈತ್ರಿ ಮಾತುಕತೆ ನಡೆಸಿರುವುದು ಎಲ್ಲೂ ಬಹಿರಂಗವಾಗಿ ನಡೆದೇ ಇರಲಿಲ್ಲವಲ್ಲ. ಹೀಗಿರುವಾಗ, ರಾಜ್ಯಪಾಲರ ನಡೆಯು ಸಂವಿಧಾನದ ವರ್ಚಸ್ಸಿನ ಮೇಲೆ ಬೀರುವ ಪರಿಣಾಮ ಏನು? ಅವರು ಮಾಡಿದ್ದು ಸಾಂವಿಧಾನಿಕವಾಗಿ ಸರಿ ಎಂದು ಸಮರ್ಥಿಸುವುದರಿಂದ ಸಂವಿಧಾನವನ್ನು ದುರ್ಬಲ ಗೊಳಿಸಿದಂತಾಗುವುದಿಲ್ಲವೇ? ಅಷ್ಟಕ್ಕೂ,
ಸಂವಿಧಾನದ ಅಳಿವು ಮತ್ತು ಉಳಿವು ಅದನ್ನು ಜಾರಿ ಮಾಡು ವವರ ಕೈಯಲ್ಲಿದೆ. ಕೋಶಿಯಾರಿ ಅವರ ನಡೆಯು ಅದರ ಉಳಿವಿಗೆ ಪೂರಕವಾಗಿಲ್ಲ. ಅದು ಜೆನ್ನಿಂಗ್‍ಗಷ್ಟೇ ಸಂತಸ ಕೊಡಬಹುದು.

Thursday, December 5, 2019

ಒಂದುವೇಳೆ, ಹೆಣ್ಣಿನ ಬದಲು ಗಂಡು ಗರ್ಭ ಧರಿಸುವಂತಾಗಿದ್ದರೆ ಹೇಗಿರುತ್ತಿತ್ತು?


ಒಂದುವೇಳೆ, ಹೆಣ್ಣಿನ ಬದಲು ಗಂಡು ಗರ್ಭ ಧರಿಸು ವಂತಾಗಿದ್ದರೆ ಹೇಗಿರುತ್ತಿತ್ತು?
ಅರ್ಥಶಾಸ್ತ್ರಜ್ಞರಾದ ರಿತಿಕಾ ಖೇರಾ, ಜೀನ್ ಡ್ರೇಝ ಮತ್ತು ಸಮಾಜ ವಿಜ್ಞಾನಿ ಅನ್ಮೋಲ್ ಸೊಮಾಂಚಿ ಅವರ ನೇತೃತ್ವದಲ್ಲಿ ವಿದ್ಯಾರ್ಥಿ ಸ್ವಯಂ ಸೇವಕರು ಇತ್ತೀಚೆಗೆ ಕೈಗೊಂಡ ತಾಯಿ-ಮಗು  ಸಮೀಕ್ಷೆ (ಜಚ್ಚಾ-ಬಚ್ಚಾ ಸರ್ವೇ)ಯ ಫಲಿತಾಂಶವನ್ನು ನೀವು ಗಂಭೀರವಾಗಿ ಪರಿಗಣಿಸಿದರೆ ಈ ಮೇಲಿನ ಪ್ರಶ್ನೆಯನ್ನು ಖಂಡಿತ ಕೇಳಿಯೇ ಕೇಳುತ್ತೀರಿ.
ಈ ದೇಶದ ಪ್ರಮುಖ 6 ರಾಜ್ಯಗಳಾದ ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‍ಗಢ, ಒಡಿಸ್ಸಾ, ಹಿಮಾಚಲ ಪ್ರದೇಶ ಮತ್ತು ಜಾರ್ಖಂಡ್‍ಗಳ ಒಟ್ಟು 706 ಗರ್ಭಿಣಿ ಹಾಗೂ ಎದೆಹಾಲು ಉಣಿಸುವ  ತಾಯಂದಿರನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು. ಈ 6 ರಾಜ್ಯಗಳ ಪೈಕಿ ಪ್ರತಿ ರಾಜ್ಯದ 6 ಜಿಲ್ಲೆಗಳನ್ನು ಆಯ್ಕೆ ಮಾಡಿ 60 ಅಂಗನವಾಡಿ ಕೇಂದ್ರಗಳ ಮೂಲಕ 342 ಗರ್ಭಿಣಿ ಯರು ಮತ್ತು 364  ಹಾಲು ಉಣಿಸುವ ತಾಯಂದಿರನ್ನು ಈ ಸಮೀಕ್ಷೆಗಾಗಿ ಮಾತಾಡಿಸಲಾಗಿತ್ತು. ವಿಷಾದ ಏನೆಂದರೆ, ಗರ್ಭ ಧರಿಸಿದ ಮತ್ತು ಗರ್ಭ ಧರಿಸಿಲ್ಲದ ಈ ಎರಡು ಸ್ಥಿತಿಗಳಲ್ಲಿ ಹೆಣ್ಣು ಹೇಗಿರುತ್ತಾಳೆ ಅನ್ನುವ ಬಗ್ಗೆ  ಸಾಮಾನ್ಯ ಪುರುಷರಲ್ಲಿ ತಿಳುವಳಿಕೆ ತೀರಾ ಕಡಿಮೆ. ಹಾಗಂತ, ಇವೆರಡೂ ಸ್ಥಿತಿಗಳು ಪರಿಗಣನೆಗೆ ಮತ್ತು ಅಧ್ಯಯನಕ್ಕೆ ಅರ್ಹ ಅನ್ನುವ ಭಾವನೆಯೇ ಇಲ್ಲದ ಪುರುಷರ ಸಂಖ್ಯೆ ಧಾರಾಳ ಇದೆ. ಗರ್ಭ  ಧರಿಸುವುದಕ್ಕಿಂತ ಮುಂಚೆ ಪತ್ನಿ ಹೇಗಿದ್ದಳೋ ಮತ್ತು ಏನೆಲ್ಲ ಸೇವೆಯನ್ನು ಮಾಡುತ್ತಿದ್ದಳೋ ಅವೆಲ್ಲವನ್ನೂ ಗರ್ಭ ಧರಿಸಿದ ಬಳಿಕವೂ ಪುರುಷ ಅಪೇಕ್ಷಿಸುತ್ತಾನೆ. ಆಕೆಯ ಮೂಡ್ ಸ್ವಿಂಗ್ ಸ್ಥಿತಿ, ದೇಹದ  ಚಟುವಟಿಕೆಯಲ್ಲಿ ಆಗುತ್ತಿರುವ ವ್ಯತ್ಯಾಸ, ವಾಂತಿ, ಸುಸ್ತು, ತಲೆ ಸುತ್ತುವಿಕೆಯಂಥ ಹಲವಾರು ಸ್ಥಿತಿಗತಿಗಳ ಕುರಿತು ಪುರುಷ ಜಗತ್ತು ಓದಿಕೊಳ್ಳುವುದು ಕಡಿಮೆ. ಗರ್ಭದಾರಣೆ ಎಂಬುದನ್ನು ಪರಿಗಣಿಸತಕ್ಕ  ವಿಷಯವೇ ಅಲ್ಲವೆಂಬಂತೆ ಬದುಕುವ ಪುರುಷರ ಸಂಖ್ಯೆ ಸಣ್ಣದೇನಲ್ಲ. ಇದಕ್ಕಿರುವ ಕಾರಣಗಳೇನೇ ಇರಲಿ, ಗರ್ಭಿಣಿ ಮತ್ತು ಹಾಲೂಡಿಸುವ ಮಹಿಳೆಯರು ಭಾರತ ದಲ್ಲಿ ಅನುಭವಿಸುವ ಸಮಸ್ಯೆ ಬಹಳ  ದೊಡ್ಡದು ಅನ್ನುವುದನ್ನು ಸಮೀಕ್ಷೆ ಹೇಳುತ್ತದೆ. ನಿಜವಾಗಿ,
ಪ್ರಸವದ ಸಂದರ್ಭದಲ್ಲಿ ಸಾವಿಗೀಡಾದ ಮಹಿಳೆಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬರುತ್ತಿದೆ, ನಿಜ. 2007ರಲ್ಲಿ ಭಾರತದಲ್ಲಿ ಪ್ರತಿ ಒಂದು ಲಕ್ಷ ಪ್ರಸವಗಳ ಪೈಕಿ 212 ಮಂದಿಯ  ಸಾವು ಸಂಭವಿಸುತ್ತಿದ್ದರೆ ಇದು 2013ಕ್ಕಾಗುವಾಗ 167ಕ್ಕೆ ಕುಸಿದಿದೆ ಎಂಬುದೂ ನಿಜ. ಭಾರತದಲ್ಲಿ ಪ್ರತಿವರ್ಷ 44 ಸಾವಿರ ಮಂದಿ ಪ್ರಸವದ ಬಳಿಕ ಸಾವಿಗೀಡಾಗುತ್ತಾರೆ ಎಂಬ ಅಂಕಿ ಅಂಶವಿದೆ.  ಅಂದಹಾಗೆ, ಈ ಸಂಖ್ಯೆ ಸಣ್ಣದೇನಲ್ಲ. ಜಗತ್ತಿನ ಒಟ್ಟು ಸಾವುಗಳ ಪೈಕಿ 20% ಸಾವು ಕೇವಲ ಭಾರತದಲ್ಲೇ ನಡೆಯುತ್ತಿದೆ. ಜಾಗತಿಕವಾಗಿ ಪ್ರತಿದಿನ ಪ್ರಸವದ ಬಳಿಕ 800 ಮಹಿಳೆಯರು  ಸಾವಿಗೀಡಾಗುತ್ತಿದ್ದಾರೆ. ವಿಶೇಷ ಏನೆಂದರೆ, ಪ್ರಸವದ ಬಳಿಕದ ಸಾವಿನಲ್ಲಿ ನೈಜೀರಿಯಾ ಮೊದಲ ಸ್ಥಾನದಲ್ಲಿದ್ದರೆ ಭಾರತ ದ್ವಿತೀಯ ಸ್ಥಾನದಲ್ಲಿದೆ. ಈ ಸ್ಥಾನಗಳನ್ನು ಲೆಕ್ಕಿಸದೇ ಈ ಕ್ಷೇತ್ರದ ಬಗ್ಗೆ ನಾವು  ಅಧ್ಯಯನ ನಡೆಸುವಾಗ ಮಹಿಳಾ ಜಗತ್ತಿನ ಬಗ್ಗೆ ಗಂಡು ಸಮಾಜದಲ್ಲಿ ಒಟ್ಟು ನಿರ್ಲಕ್ಷ್ಯ ಭಾವವೊಂದು ಸ್ಪಷ್ಟವಾಗಿ ಕಾಣಿಸುತ್ತದೆ. ಗರ್ಭ ಧರಿಸಿದ ಬಳಿಕ ಸುಮಾರು 13ರಿಂದ 18 ಕಿಲೋ ಗ್ರಾಂನಷ್ಟು ತೂಕ  ಹೆಚ್ಚಿಸಿಕೊಳ್ಳಬೇಕಾದುದು ಆರೋಗ್ಯಪೂರ್ಣ ಮಗುವನ್ನು ಪ್ರಸವಿಸುವ ದೃಷ್ಟಿಯಿಂದ ಗರ್ಭಿಣಿಯ ಪಾಲಿಗೆ ಅಗತ್ಯ. ಆದರೆ ಇದಕ್ಕೆ ಪೌಷ್ಠಿ ಕಾಂಶಯುಕ್ತ ಆಹಾರ ಬೇಕು. ಇಂಥ ಆಹಾರವನ್ನು ಪಡೆದುಕೊಳ್ಳ  ಬೇಕಾದರೆ ಸರಕಾರದ ಸೌಲಭ್ಯಗಳು ತ್ವರಿತವಾಗಿ ಗರ್ಭಿಣಿಯರಿಗೆ ತಲುಪಿಸುವ ವ್ಯವಸ್ಥೆಯಾಗಬೇಕು. ಆದರೆ ಇದು ಸಾಧ್ಯವಾಗುತ್ತಿಲ್ಲ. ಅಂಗನವಾಡಿಯಲ್ಲಿ ಮಹಿಳೆಯರಿದ್ದರೂ ಇವರಿಗೆ ಸೌಲಭ್ಯವನ್ನು  ತಲುಪಿಸುವಲ್ಲಿಂದ ಹಿಡಿದು ಸರಕಾರದ ಮತ್ತು ಆಡಳಿತ ವ್ಯವಸ್ಥೆಯ ಆಯಕಟ್ಟಿನ ಜಾಗದ ವರೆಗೆ ಪುರುಷರ ಪ್ರಾಬಲ್ಯ ಇರುವುದರಿಂದಲೋ ಏನೋ ‘ಪ್ರಧಾನಮಂತ್ರಿ ಮಾತೃವಂದನಾ ಯೋಜನೆ’ಯಾಗಲಿ  ಇನ್ನಾವುದೇ ಕಾರ್ಯಕ್ರಮಗಳಾಗಲಿ ಗರ್ಭಿಣಿಯರನ್ನು ಸಮರ್ಪಕ ವಾಗಿ ತಲುಪುತ್ತಿಲ್ಲ. ಅಂದಹಾಗೆ,
ಕೊರತೆ ಇರುವುದು ಯೋಜನೆಗಳಲ್ಲಲ್ಲ, ಅದನ್ನು ಸಮರ್ಪಕ ವಾಗಿ ಅನುಷ್ಠಾನ ಮಾಡುವುದರಲ್ಲಿ. ಗರ್ಭಧಾರಣೆಯ ಕುರಿತಂತೆ ಪುರುಷ ಅತ್ಯಂತ ಸಂವೇದನಾಶೀಲತೆಯನ್ನು ಪ್ರದರ್ಶಿಸಿದರೆ ಒಟ್ಟು  ವಾತಾವರಣದಲ್ಲೇ ಬದಲಾವಣೆ ಉಂಟಾಗಬಹುದು. ಪ್ರಸವದ ದಿನದ ವರೆಗೆ ಕೂಲಿ ಕೆಲಸ ಮಾಡಿರುವುದಾಗಿ ಓರ್ವಳು ಸಮೀಕ್ಷೆ ಯಲ್ಲಿ ಹೇಳಿಕೊಂಡಿರುವುದು ಇಲ್ಲಿ ಉಲ್ಲೇಖನೀಯ. ಸಾಮಾನ್ಯವಾಗಿ,
ಮನೆಯ ಕೆಲಸ ಕಾರ್ಯಗಳನ್ನು ಮಹಿಳೆಯೇ ಮಾಡುವುದಿದೆ. ಪುರುಷ ಹೊರಗೆ ಹೋಗಿ ದುಡಿಯುವಾಗ ಮನೆಯೊಳಗಿನ ಕೆಲಸಗಳನ್ನು ಸಂಭಾಳಿಸುವುದನ್ನು ಮಹಿಳೆ ವಹಿಸಿಕೊಳ್ಳುತ್ತಾಳೆ. ಶೌಚಾಲಯ  ಸ್ನಾನಗೃಹಗಳನ್ನು ಶುಚೀಕರಿಸುವುದು, ಮನೆ ಗುಡಿಸು ವುದು, ಅಡುಗೆ ಮಾಡುವುದು, ಬಟ್ಟೆ ಒಗೆಯುವುದು, ಮಕ್ಕಳನ್ನು ಶಾಲೆಗೆ ಸಿದ್ಧಗೊಳಿಸುವುದು ಇತ್ಯಾದಿಗಳನ್ನು ಕರ್ತವ್ಯವೆಂಬಂತೆ ಮಾಡುವ ಆಕೆ,  ಗರ್ಭ ಧರಿಸಿದ ಬಳಿಕವೂ ಈ ಕೆಲಸಗಳಿಗೆ ವಿನಾಯಿತಿ ಸಿಗದ ಸ್ಥಿತಿಯಲ್ಲಿದ್ದಾಳೆ ಅನ್ನುವುದಕ್ಕೆ ಏನು ಕಾರಣ? ಇದು ಬರೇ ಅನಿವಾರ್ಯತೆಯೋ ಅಥವಾ ಗರ್ಭದ ಬಗ್ಗೆ ಪುರುಷರಲ್ಲಿ ಇರುವ  ತಿಳುವಳಿಕೆಯ ಕೊರತೆ ಮತ್ತು ಆ ಕಾರಣ ವಾಗಿ ಸೃಷ್ಟಿಯಾಗಿರುವ ಅಸಡ್ಡೆಭಾವವೋ? ನಿಜವಾಗಿ,
ಮನೆಯಲ್ಲಿ ಬಾಲಪಾಠವಾಗಿ ಇಂಥವುಗಳನ್ನು ಮಕ್ಕಳಿಗೆ ಕಲಿಸುವ ಸ್ಥಿತಿ ಇರಬೇಕು. ಗರ್ಭ, ಪ್ರಸವ, ಮಕ್ಕಳ ಪರಿಪಾಲನೆ ಮತ್ತು ಈ ಎಲ್ಲ ಸಂದರ್ಭಗಳಲ್ಲಿ ಹೆಣ್ಣು ಅನುಭವಿಸುವ ವೇದನೆ-ಸಂಕಟ- ತೊಳಲಾಟಗಳನ್ನು ಬಾಲ್ಯದಲ್ಲಿಯೇ ಮಕ್ಕಳು ಅರಿತುಕೊಳ್ಳುವಂತಹ ವಾತಾವರಣ ಸೃಷ್ಟಿಯಾಗಬೇಕು. ಹಾಗಂತ, ಇಂಥವು ಮಕ್ಕಳಿಗೆ ಎಷ್ಟು ಅರ್ಥವಾಗುತ್ತವೆ ಎಂಬುದು ಮುಖ್ಯ ಅಲ್ಲ. ಅಲ್ಲೊಂದು  ಕುತೂಹಲದ ಹುಳವನ್ನು ಮಕ್ಕಳ ಮೆದುಳಿಗೆ ಕಳುಹಿಸುವ ಕೆಲಸ ನಡೆದರೂ ಸಾಕು, ಮುಂದೆ ಆ ಮಕ್ಕಳು ಬೆಳೆದಂತೆಲ್ಲ ಈ ಇಡೀ ಪ್ರಕ್ರಿಯೆಯ ಬಗ್ಗೆ ಕುತೂಹಲ ತಾಳುತ್ತಾರೆ. ಅಧ್ಯಯನ ನಡೆಸುತ್ತಾರೆ.  ಗರ್ಭ ಮತ್ತು ಪ್ರಸವ ಇವೆರಡನ್ನೂ ಆಧರಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುತ್ತಾರೆ. ಬಹುಶಃ, ಪವಿತ್ರ ಕುರ್‍ಆನ್ ಈ ಬಗ್ಗೆ ಪರಾಮರ್ಶೆ ನಡೆಸಿರುವುದಕ್ಕೆ ಇವೂ ಕಾರಣ ಇರಬಹುದೇನೋ-
“ಅವನ/ಳ ತಾಯಿಯು ನಿತ್ರಾಣದ ಮೇಲೆ ನಿತ್ರಾಣವನ್ನು ಸಹಿಸಿ ಅವನನ್ನು/ಳನ್ನು ತನ್ನ ಗರ್ಭದಲ್ಲಿರಿಸಿದಳು ಮತ್ತು ಅವನ/ಳ ಸ್ತನಪಾನ ಬಿಡುವುದರಲ್ಲಿ ಎರಡು ವರ್ಷಗಳು ತಗುಲಿದುವು. ಆದುದರಿಂದ  ನಿನ್ನ ಮಾತಾಪಿತರಿಗೆ ಕೃತಜ್ಞತೆ ಸಲ್ಲಿಸು.”
“ಅವನ/ಳ ತಾಯಿಯು ಬಹಳ ಕಷ್ಟಪಟ್ಟು ಅವನನ್ನು ಗರ್ಭ ದಲ್ಲಿರಿಸಿದಳು ಮತ್ತು ಕಷ್ಟಪಟ್ಟೇ ಅವನನ್ನು ಹೆತ್ತಳು. ಅವನ ಗರ್ಭಾವಧಿಯಲ್ಲಿ ಮತ್ತು ಎದೆಹಾಲು ಬಿಡಿಸುವುದರಲ್ಲಿ 30 ತಿಂಗಳುಗಳು ತಗುಲಿದುವು.”
ಪವಿತ್ರ ಕುರ್‍ಆನ್ ನ ಲುಕ್ಮಾನ್ (34) ಮತ್ತು ಅಅïಕಾಫ್ (15) ಎಂಬೆರಡು ಅಧ್ಯಾಯಗಳ ವಚನಗಳಿವು. ಪವಿತ್ರ ಕುರ್‍ಆನನ್ನು ಸಣ್ಣ ಪ್ರಾಯ ದಲ್ಲೇ ಮಕ್ಕಳಿಗೆ ಕಲಿಸಲಾಗುತ್ತದೆ. ಮಕ್ಕಳ ಮದ್ರಸ ಶಿಕ್ಷಣ ಆರಂಭವಾಗುವುದೇ  ಪವಿತ್ರ ಕುರ್‍ಆನನ್ನು ಅಧ್ಯಯನ ನಡೆಸುವ ಮೂಲಕ. ಹಾಗಂತ, ಪವಿತ್ರ ಕುರ್‍ಆನ್‍ನಲ್ಲಿರುವ ಎಲ್ಲವೂ ಆ ಸಣ್ಣ ಪ್ರಾಯದಲ್ಲೇ ಮಕ್ಕಳಿಗೆ ಜೀರ್ಣವಾಗುತ್ತದೆ ಎಂದಲ್ಲ. ಅದು ಸಾಧ್ಯವೂ ಇಲ್ಲ. ಆದರೆ, ಮಕ್ಕಳ  ಮನಸ್ಸಿಗೆ ಒಮ್ಮೆ ಒಂದು ವಿಷಯ ತಾಕಿಬಿಟ್ಟರೆ ಅವರು ಬೆಳೆಯುತ್ತಲೇ ಆ ವಿಷಯ ಅವರೊಳಗೂ ಬೆಳೆಯುತ್ತದೆ. ಬಳಿಕ ಅದು ಕುತೂಹಲವಾಗಿ ಮಾರ್ಪಡುತ್ತದೆ ಮತ್ತು ಅಧ್ಯಯನಕ್ಕೆ ಒಳಪಡುತ್ತದೆ.  ಇಂಥದ್ದೊಂದು ಪ್ರಕ್ರಿಯೆಗೆ ಮಕ್ಕಳ ಬಾಲ್ಯದಲ್ಲೇ ಆರಂಭವನ್ನು ಕೊಡುವ ಪ್ರಯತ್ನ ನಡೆದರೆ, ಗರ್ಭ ಮತ್ತು ಪ್ರಸವಗಳೆರಡೂ ಪುರುಷ ಜಗತ್ತಿನ ಅಸಡ್ಡೆಯ ಪಟ್ಟಿಯಲ್ಲಿ ಸ್ಥಾನ ಗಳಿಸುವುದು ಸುಲಭ ಅಲ್ಲ.  ಅಷ್ಟಕ್ಕೂ,
ಹೆಣ್ಣಿನ ಬದಲು ಗಂಡು ಗರ್ಭ ಧರಿಸುವಂತಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು ಅನ್ನುವ ಪ್ರಶ್ನೆಯನ್ನು ಪುರುಷ ಸಮಾಜ ಒಮ್ಮೆ ಕಲ್ಪಿಸಿಕೊಂಡರೆ ಸಿಗುವ ಉತ್ತರ ಏನಿದ್ದೀತು? ಗರ್ಭ ಮತ್ತು ತಂದೆತನದ  (ತಾಯ್ತನ) ಸುತ್ತ ಆತ ಏನೆಲ್ಲ ಅಭೂತಪೂರ್ವ ಕತೆಗಳನ್ನು ಕಟ್ಟಬಹುದು? ಮಾನವ ಸೃಷ್ಟಿಯ ಈ ಅತಿವಿಶಿಷ್ಟ ಪ್ರಕ್ರಿಯೆಗೆ ಆತ ಏನೆಲ್ಲ ತಯಾರಿಗಳನ್ನು ನಡೆಸುತ್ತಿದ್ದ? ಸುತ್ತಲಿನ ಸಮಾಜವನ್ನು ಹೇಗೆ ಅದಕ್ಕೆ  ಸಜ್ಜುಗೊಳಿಸುತ್ತಿದ್ದ? ಬಹುಶಃ ಉತ್ತರಗಳು ಸ್ವಾರಸ್ಯಕರವಿದ್ದೀತು. ಆಸ್ಪತ್ರೆಯ ಪ್ರಸವ ಕೋಣೆಗಳಲ್ಲಿ ವಿವಿಧ ವೈದ್ಯಕೀಯ ಉಪಕರಣಗಳು ತುಂಬಿ ತುಳುಕಿರುತ್ತಿತ್ತು. ಕಾಲಿಗೊಂದು, ಕೈಗೊಂದು ಆಳುಗಳು  ಬೇಕಿರುತ್ತಿತ್ತು. ವೈದ್ಯರು 24 ಗಂಟೆ ಆತನ ಪಕ್ಕವೇ ಇರಬೇಕಿತ್ತು. ಪ್ರಸವದ ವಾರಕ್ಕಿಂತ ಮೊದಲೇ ಆಸ್ಪತ್ರೆಯಲ್ಲಿ ದಾಖಲಾಗುವುದು ಅನಿವಾರ್ಯವೆಂಬ ವಾತಾವರಣ ಸೃಷ್ಟಿಯಾಗಿರುತ್ತಿತ್ತು. ಗರ್ಭಸ್ಥನನ್ನು  ಆಸ್ಪತ್ರೆಗೆ ಕೊಂಡೊಯ್ಯುವ ವಾಹನಗಳಿಗೆ ಸೈರನ್ ಅಳವಡಿಸುವುದಕ್ಕೆ ಪರ ವಾನಿಗೆ ಸಿಗುತ್ತಿತ್ತು. ಅಗತ್ಯ ಬಿದ್ದರೆ ಝೀರೋ ಟ್ರಾಫಿಕ್‍ನ ವ್ಯವಸ್ಥೆಯೂ ಆಗುತ್ತಿತ್ತು. ಪ್ರಸವವನ್ನು ಅತೀ ತುರ್ತು ಸ್ಥಿತಿಯೆಂದು  ಸರಕಾರ ಘೋಷಿಸಿ ಬಿಡುತ್ತಿತ್ತಲ್ಲದೇ, ಆಸ್ಪತ್ರೆಯ ವೈದ್ಯರು ಉಳಿ ದೆಲ್ಲ ಚಿಕಿತ್ಸೆಗಳನ್ನು ಬದಿಗೊತ್ತಿ ಪ್ರಸವ ಚಿಕಿತ್ಸೆಗೆ ಮುಂದಾಗಬೇಕೆಂದು ಫರ್ಮಾನು ಹೊರಡಿಸುತ್ತಿತ್ತು. ಗರ್ಭದಾರಣೆಯ ಸಮಯದಿಂದ  ಹಿಡಿದು ಮಗುವಿಗೆ ಹಾಲೂಡಿಸುವ ತನಕ ಸುಮಾರು ಎರಡು ವರ್ಷಗಳವರೆಗಾದರೂ ಸರಕಾರ ಸಂಬಳ ಸಹಿತ ರಜೆಯನ್ನು ಮಂಜೂರು ಮಾಡಿರುತ್ತಿತ್ತು. ಸರಕಾರದ ವತಿಯಿಂದಲೇ ಬಾಣಂತನನ್ನು  ಉಪಚರಿಸುವುದಕ್ಕೆ ಸೇವಕರ ವ್ಯವಸ್ಥೆ ಆಗುತ್ತಿತ್ತು. ಕಾಲಕಾಲಕ್ಕೆ ಪೌಷ್ಠಿಕ ಆಹಾರಗಳನ್ನು ಮನೆ ಮನೆಗೇ ವಿತರಿಸುವ ಮತ್ತು ಇದರಲ್ಲಿ ನಿರ್ಲಕ್ಷ್ಯ ತೋರುವವರನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸುವ ಕಾನೂ ನನ್ನು ಸರಕಾರ ಜಾರಿಗೆ ತರುತ್ತಿತ್ತು. ಸರಕಾರ ಬಾಣಂತನವನ್ನು ಗೌರವಿಸುವ ದೃಷ್ಟಿಯಿಂದ ವರ್ಷದಲ್ಲೊಂದು ದಿನವನ್ನು ‘ಬಾಣಂತನ ದಿನ’ ಎಂದು ಘೋಷಿಸಿ ಸರಕಾರಿ ರಜೆ ಸಾರುತ್ತಿತ್ತು.  ಗರ್ಭಧಾರಣೆಯಿಂದ ತೊಡಗಿ ಪ್ರಸವದ ವರೆಗೆ ಎಲ್ಲ ಚಿಕಿತ್ಸಾ ವೆಚ್ಚಗಳನ್ನು ಸರಕಾರಿ-ಖಾಸಗಿ ಎನ್ನದೇ ಎಲ್ಲ ಆಸ್ಪತ್ರೆಗಳೂ ಉಚಿತವಾಗಿ ನಿರ್ವಹಿಸಬೇಕೆಂದು ಸರಕಾರಿ ಆದೇಶ ಹೊರಬೀಳುತ್ತಿತ್ತು. ಇನ್ನು, ಮನೆಯ ಅಲೆಮಾರಿನ ತುಂಬಾ ವಿಶೇಷ ಅಡುಗೆ ವಸ್ತುಗಳು ಮತ್ತು ಹಣ್ಣು-ಹಂಪಲುಗಳು ತುಂಬಿರುತ್ತಿತ್ತು. ಯಾವ ಹಣ್ಣಿನ ರಸ ಯಾವಾಗ ತೆಗೆದುಕೊಳ್ಳಬೇಕು ಮತ್ತು ಯಾವ ಸಂದರ್ಭದಲ್ಲಿ ವಿಶ್ರಾಂತಿ,  ಯಾವ ಸಂದರ್ಭದಲ್ಲಿ ಊಟ, ಯಾವ ಸಂದರ್ಭದಲ್ಲಿ ಜನರನ್ನು ಭೇಟಿಯಾಗಬಹುದು ಇತ್ಯಾದಿಗಳನ್ನು ವಿವರಿಸುವ ಪಟ್ಟಿ ಬಾಣಂತನ ಕೋಣೆಯಲ್ಲಿ ತೂಗಾಡುತ್ತಿರುತ್ತಿತ್ತು. ಗರ್ಭಸ್ಥ ಗಂಡಿನ ಬದುಕನ್ನು  ಸುಲಭಗೊಳಿಸುವುದಕ್ಕಾಗಿ ಸರಕಾರವು ಹೊಸ ತಂತ್ರಜ್ಞಾನಗಳ ಉತ್ಪಾದನೆ ಮತ್ತು ಸಂಶೋಧನೆಗೆ ಬಜೆಟ್‍ನಲ್ಲಿ ಇಂತಿಷ್ಟು ಮೊತ್ತವನ್ನು ಘೋಷಿಸಿ ಬಿಡುತ್ತಿತ್ತು. ಗರ್ಭಸ್ಥನಿಗಾಗಿ ಉಚಿತ ಬಸ್‍ಪಾಸ್ ಕೊಡುವುದು ಮತ್ತು ಆಸ್ಪತ್ರೆ, ಸರಕಾರಿ ಕಚೇರಿ, ರೇಶನ್ ಅಂಗಡಿ ಸಹಿತ ಎಲ್ಲೆಡೆಯೂ ಪ್ರತ್ಯೇಕ ಸರತಿ ಸಾಲು ಇರುತ್ತಿದ್ದುವು...
ಪಟ್ಟಿ ತುಂಬಾ ಉದ್ದ ಇದೆ..
ನಿಜವಾಗಿ, ಇದು ಊಹೆಯಂತೆ ಕಂಡರೂ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮ ರಂಗದ ಮುಖ್ಯ ನೀತಿ ನಿರೂಪಣೆಯ ಸ್ಥಾನಗಳಲ್ಲಿ ಪುರುಷರೇ ಅಧಿಕವಾಗಿರುವ ಇಂದಿನ  ಸ್ಥಿತಿಯಲ್ಲಿ ಈ ಸಾಧ್ಯತೆಯನ್ನು ನಿರಾಕರಿಸುವ ಹಾಗಿಲ್ಲ. ಗರ್ಭಧಾರಣೆ ಮತ್ತು ಪ್ರಸವ ಇವೆರಡನ್ನೂ ಮತ್ತು ಇವೆರಡರ ನಡುವಿನ ಸಂಕಟಗಳನ್ನೂ ಅನುಭವಿಸದ ಗಂಡು ಮತ್ತು ಅನುಭವಿಸಿದ ಗಂಡು ಇಬ್ಬರೂ ಏಕಪ್ರಕಾರ ಇರಲಾರರು. ಅಂದಹಾಗೆ,
ಪ್ರಸವದ ವೇಳೆ ರಕ್ತಸ್ರಾವವಾಗಿ ಮಹಿಳೆ ಸಾವಿಗೀಡಾದ ಸುದ್ದಿಯನ್ನು ಓದುತ್ತಾ ಇವೆಲ್ಲ ನೆನಪಾಯಿತು.

Wednesday, November 27, 2019

ವಿಶ್ವಾಸಾರ್ಹತೆಯನ್ನು ಕಳಕೊಂಡ ಬಳಿಕ ರೇಡಿಯೋವಾದರೇನು, ಟಿವಿಯಾದರೇನು?



ಖಾಸಗಿ ನ್ಯೂಸ್ ಚಾನೆಲ್‍ಗಳು - 400
ದಿನಪತ್ರಿಕೆಗಳು - 1000
ರೇಡಿಯೋ ಸ್ಟೇಶನ್‍ಗಳು - 3000
ಈ ಮೇಲಿನ ಉಲ್ಲೇಖಕ್ಕೆ ಮುಖ್ಯ ಕಾರಣ- ಕಾಶ್ಮೀರ. 1984ರ ಅಕ್ಟೋಬರ್ ಕೊನೆಯಲ್ಲಿ ಒಂದು ಭೀಕರ ಘಟನೆ ನಡೆಯಿತು. ಆ ದಿನ ಬೆಳಿಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಜೀವ್ ಗಾಂಧಿಯವರು ಕೊಲ್ಕತ್ತಾದಲ್ಲಿದ್ದರು. ಅವರು ಪ್ರಯಾಣಿಸುತ್ತಿದ್ದ ಮರ್ಸಿಡಿಸ್ ಕಾರನ್ನು ದಿಢೀರ್ ಆಗಿ ತಡೆದು ನಿಲ್ಲಿಸಿದ ಪೊಲೀಸ್ ಜೀಪೊಂದು ಅವರ ಕಿವಿಗೆ ಆಘಾತಕಾರಿ ಸುದ್ದಿಯೊಂದನ್ನು ಮುಟ್ಟಿಸಿತು.  ದೆಹಲಿಯ ನಿಮ್ಮ ಮನೆಯಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ತಾವು ಕೂಡಲೇ ದೆಹಲಿಗೆ ಹಿಂತಿರುಗಬೇಕೆಂಬುದು ಆ ಮಾಹಿತಿಯ ಒಟ್ಟು ಸಾರಾಂಶವಾಗಿತ್ತು. ಅವತ್ತು ಬೆಳಿಗ್ಗೆ ಟಿ.ವಿ. ಸಂದರ್ಶನಕ್ಕೆಂದು ತನ್ನ ಮನೆಯಿಂದ ಹೊರಟ ಪ್ರಧಾನಿ ಇಂದಿರಾ ಗಾಂಧಿಯವರನ್ನು ಅವರ ಅಂಗರಕ್ಷಕರೇ ವರಾಂಡದಲ್ಲಿ ಗುಂಡಿಟ್ಟು ಸಾಯಿಸಿದ್ದರು. ರಾಜೀವ್ ಗಾಂಧಿಯವರಿಗೆ ಪೊಲೀಸರ ಮೂಲಕ ಈ ಗುಂಡಿನ ದಾಳಿಯ ಮಾಹಿತಿ  ಲಭ್ಯವಾಯಿತಾದರೂ ತಾಯಿಯ ಜೀವಕ್ಕೆ ಅಪಾಯ ಒದಗಿದೆಯೇ ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಇಂದಿನಂತೆ ಖಾಸಗಿ ಟಿ.ವಿ. ಚಾನೆಲ್‍ಗಳು ಮತ್ತು ಸಾಮಾಜಿಕ ಜಾಲತಾಣಗಳ ಸೌಲಭ್ಯ ಆ ಕಾಲದಲ್ಲಿ ಇಲ್ಲದೇ ಇದ್ದುದರಿಂದ ಮಾಹಿತಿಗಾಗಿ ರಾಜೀವ್ ಗಾಂಧಿಯವರು ರೇಡಿಯೋ ಸ್ಟೇಶನ್‍ಗಳನ್ನು ಅವಲಂಬಿಸುವುದು ಅನಿವಾರ್ಯವಾಗಿತ್ತು. ವಿಶೇಷ ಏನೆಂದರೆ, ರಾಜೀವ್ ಗಾಂಧಿಯವರು ಮಾಹಿತಿಗಾಗಿ ಆಶ್ರಯಿಸಿದ್ದು ಬಿಬಿಸಿ ರೇಡಿಯೋವನ್ನು. ತಾಯಿಯ ಮೇಲಾದ ಗುಂಡಿನ ದಾಳಿಯ ಮಾಹಿತಿ ತನಗೆ ಎಲ್ಲಿ ಲಭಿಸಿತ್ತೋ ಅಲ್ಲಿಂದ ಕೊಲ್ಕತ್ತಾಗೆ ತಕ್ಷಣ ಸಾಗಬೇಕಾದರೆ ಹೆಲಿಕಾಪ್ಟರ್ ನ ಅಗತ್ಯವಿತ್ತು. ಅದು ಬರುವವರೆಗೆ ರಾಜೀವ್ ಗಾಂಧಿಯವರು ಮಾಹಿತಿಗಾಗಿ ಬಿಬಿಸಿ ರೇಡಿಯೋವನ್ನು ಆಶ್ರಯಿಸಿದ್ದರು ಎಂದು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷರೂ ಮತ್ತು ಔಟ್‍ಲುಕ್ ಮ್ಯಾಗಸಿನ್‍ನ  ಮಾಜಿ ಸಂಪಾದಕರೂ ಆದ ಕೃಷ್ಣ ಪ್ರಸಾದ್ ಅವರು ಇತ್ತೀಚೆಗೆ ಬರೆದುಕೊಂಡಿದ್ದರು.
ಪ್ರಶ್ನೆ ಹುಟ್ಟಿಕೊಳ್ಳುವುದೂ ಇಲ್ಲೇ. ಭಾರತೀಯ ರೇಡಿಯೋ ಸ್ಟೇಷನ್‍ಗಳು ಇದ್ದೂ ರಾಜೀವ್ ಗಾಂಧಿಯವರು ಬಿಬಿಸಿಯನ್ನು ಯಾಕಾಗಿ ಆಶ್ರಯಿಸಿಕೊಂಡರು? ಈ ಪ್ರಶ್ನೆ ಕ್ಷುಲ್ಲಕ ಅಲ್ಲ ಮತ್ತು ಪ್ರಚಲಿತ  ಸಂದರ್ಭದಲ್ಲಂತೂ ಬಹಳ ಮಹತ್ವಪೂರ್ಣವಾದುದು. ಅಮ್ಮನ ಆಡಳಿತದಡಿಯಲ್ಲಿ ಪ್ರಸಾರವಾಗುತ್ತಿದ್ದ ರೇಡಿಯೋ ವಾರ್ತೆಗಳಿಗಿಂತ ಬ್ರಿಟಿಷ್ ರೇಡಿಯೋ ವಾರ್ತೆಗಳನ್ನು ಅವರು ವಿಶ್ವಾಸಾರ್ಹವಾಗಿ  ಪರಿಗಣಿಸಲು ಕಾರಣವೇನು? ಅಮ್ಮನಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದರೂ ಅದನ್ನು ಅಷ್ಟೇ ನೇರವಾಗಿ ಹೇಳುವ ಧೈರ್ಯವನ್ನು ಭಾರತೀಯ ರೇಡಿಯೋಗಳು ತೋರಲಾರವು ಎಂಬುದು ಇದಕ್ಕೆ  ಕಾರಣವೇ? ಭಾರತೀಯ ರೇಡಿಯೋ ಏನಿದ್ದರೂ ಪ್ರಭುತ್ವದ ಮುಲಾಜಿಗೆ ಬಿದ್ದು ಸುದ್ದಿ ತಯಾರಿಸುತ್ತವೆ, ಬಿಬಿಸಿಗೆ ಈ ಮುಲಾಜಿನ ಅಗತ್ಯ ಇರುವುದಿಲ್ಲ ಎಂದು ಅವರು ಅಂದುಕೊಂಡಿರಬಹುದೇ? ಸತ್ಯ  ಹೇಳುವ ಧೈರ್ಯವನ್ನು ಬಿಬಿಸಿಯಷ್ಟು ಭಾರತೀಯ ರೇಡಿಯೋಗಳು ತೋರಲಾರವು ಎಂದವರು ಅಂದುಕೊಂಡಿದ್ದರೇ?
ಭಾರತದಲ್ಲಿ ಮಾಧ್ಯಮ ಕ್ರಾಂತಿಗಿಂತ ಮೊದಲಿನ ಘಟನೆ ಇದು. 1991ರ ಮನ್‍ಮೋಹನೀಕರಣದ ಬಳಿಕ ಮಾಧ್ಯಮವೂ ಸೇರಿದಂತೆ ಒಟ್ಟು ವಾತಾವರಣದಲ್ಲೇ ವ್ಯಾಪಕ ಬದಲಾವಣೆಗಳಾದುವು. ಎಲ್ಲ  ಕ್ಷೇತ್ರಗಳಿಗೂ ಖಾಸಗೀಕರಣ ದಾಳಿಯಿಟ್ಟಿತು. ಸರಕಾರಿ ಸ್ವಾಮ್ಯದಲ್ಲಿ ಸಡಿಲಿಕೆ ಉಂಟಾಯಿತು. ಇವತ್ತು ಖಾಸಗಿ ನ್ಯೂಸ್ ಚಾನೆಲ್‍ಗಳು ಕಣ್ಣು ದಣಿಯುವಷ್ಟು ಸುದ್ದಿಯನ್ನು ಕೊಡುತ್ತಿವೆ. ಪತ್ರಿಕೆಗಳಂತೂ ಓದಿ  ಮುಗಿಸದಷ್ಟು ಸುದ್ದಿ ಭಾರ ಹೇರುತ್ತವೆ. ರೇಡಿಯೋ ಸ್ಟೇಷನ್‍ಗಳೂ ಪ್ರಭುತ್ವದಿಂದ ಬಿಡಿಸಿಕೊಂಡು ಸ್ವತಂತ್ರವಾಗಿ ಕಾರ್ಯಾಚರಿಸುತ್ತಿವೆ. ನಿಜವಾಗಿ, ಯಾವುದೇ ಕ್ಷೇತ್ರದಲ್ಲಿರುವ ಪೈಪೋಟಿಯು ಆ ಕ್ಷೇತ್ರವನ್ನು ಹೆಚ್ಚು ಜನಪರಗೊಳಿಸುತ್ತದೆ ಮತ್ತು ಹೆಚ್ಚು ವಿಶ್ವಾಸಯೋಗ್ಯವಾಗಿಸುತ್ತದೆ ಅನ್ನುವ ಸರ್ವ ಒಪ್ಪಿತ ಮಾತಿದೆ. ಪ್ರಸಾರ ಭಾರತಿಗೂ ಖಾಸಗಿ ಚಾನೆಲ್‍ಗೂ ನಡುವೆ ಇರುವ ಪ್ರಮುಖ ವ್ಯತ್ಯಾಸಗಳಲ್ಲಿ  ಇದೂ ಒಂದು. ಆಲ್ ಇಂಡಿಯಾ ರೇಡಿಯೋ ಮತ್ತು ಖಾಸಗಿ ಎಫ್.ಎಂ.ಗಳನ್ನು ಬೇರ್ಪಡಿಸುವುದೂ ಈ ಖಾಸಗಿ-ಸರಕಾರಿ ಎಂಬ ಗೆರೆಗಳೇ. ಡಿ.ಡಿ.ಯಲ್ಲಿ ಪ್ರಸಾರವಾಗುವ ವಾರ್ತೆಗೂ ಖಾಸಗಿ ಚಾನೆಲ್‍ಗಳಲ್ಲಿ ಪ್ರಸಾರವಾಗುವ ವಾರ್ತೆಗೂ ಇರುವ ಅಂತರದಲ್ಲೂ ನಮಗೆ ಈ ವ್ಯತ್ಯಾಸವನ್ನು ಗುರುತಿಸಬಹುದು. ಪ್ರಧಾನಿ ಮೋದಿಯವರ ಭಾಷಣವನ್ನು ಪ್ರಸಾರ ಮಾಡದಿರುವುದಕ್ಕೆ ಇತ್ತೀಚೆಗೆ ತಮಿಳ್ನಾಡು ದೂರದರ್ಶನದ ಮುಖ್ಯಸ್ಥೆಯನ್ನು ವಜಾ ಮಾಡಿರುವ ಘಟನೆಯೂ ಇದನ್ನೇ ಸೂಚಿಸುತ್ತದೆ. ಪ್ರಭುತ್ವಕ್ಕೆ ಶರಣಾಗಿ ಸುದ್ದಿ ತಯಾರಿಸಬೇಕಾದ ಅನಿವಾರ್ಯತೆಯೊಂದು ಅಲ್ಲಿರುತ್ತದೆ. ಆದರೆ ಖಾಸಗಿ ಚಾನೆಲ್‍ಗಳು ಮತ್ತು ಪತ್ರಿಕೆಗಳ ಮಟ್ಟಿಗೆ ಈ ಅನಿವಾರ್ಯತೆ ಇಲ್ಲ. ಪ್ರತಿಪಕ್ಷವಾಗಿದ್ದುಕೊಂಡು ಸುದ್ದಿ ತಯಾರಿಸುವುದು ಮತ್ತು ಪ್ರಭುತ್ವವನ್ನೇ ಪ್ರಶ್ನೆ ಮಾಡುವುದು ಇಲ್ಲಿನ ಮುಖ್ಯ ಗುರಿಯಾಗಿರಬೇಕು.  ದುರಂತ ಏನೆಂದರೆ, ರಾಜೀವ್ ಗಾಂಧಿಯವರು ವಿಶ್ವಾಸಾರ್ಹ ಸುದ್ದಿಗಾಗಿ ಹೇಗೆ ಬಿಬಿಸಿಯನ್ನು ಆಶ್ರಯಿಸಿದರೋ ಹಾಗೆಯೇ ಇವತ್ತು ವಿಶ್ವಾಸಾರ್ಹ ಸುದ್ದಿ-ವಾರ್ತೆಗಾಗಿ ಭಾರತೀಯರು ವಿದೇಶಿ ಮಾಧ್ಯಮಗಳನ್ನು ಅವಲಂಬಿಸುವ ಸ್ಥಿತಿಗೆ ತಲುಪಿದ್ದಾರೆ. ವಿಶೇಷವಾಗಿ ಕಾಶ್ಮೀರಕ್ಕೆ ಸಂಬಂಧಿಸಿ. ಆಗಸ್ಟ್ 5ರಂದು ಕಾಶ್ಮೀರದ 370ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಗೊಳಿಸಿದ ಬಳಿಕದ ಕಾಶ್ಮೀರಿ  ವಾತಾವರಣವನ್ನು ಭಾರತೀಯ ಮಾಧ್ಯಮಗಳು ಬಹುದೊಡ್ಡ ಸವಾಲಾಗಿ ಸ್ವೀಕರಿಸಬೇಕಿತ್ತು. ಅಂದ ಹಾಗೆ, 
370ನೇ ವಿಧಿಯನ್ನು ರದ್ದುಗೊಳಿಸುವುದು ಇಲ್ಲವೇ ಬಿಡುವುದು ಪ್ರಭುತ್ವದ ಕೈಯಲ್ಲಿದೆ. ಅದು  ಸರಿಯೋ ತಪ್ಪೋ ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ. ಆದರೆ, ಈ ಸರಿ-ತಪ್ಪುಗಳ ಆಚೆಗೆ  ತಮ್ಮ ಕ್ಯಾಮರಾ ಮತ್ತು ಪೆನ್ನನ್ನು ದುಡಿಸಬೇಕಾದುದು ಮಾಧ್ಯಮದ ಕರ್ತವ್ಯ. ಮಾಧ್ಯಮ  ಕ್ಷೇತ್ರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದುದನ್ನು ಸಮರ್ಥಿಸುವವರೂ ಇರಬಹುದು. ವಿರೋಧಿಸುವವರೂ ಇರಬಹುದು. ಈ ಭಿನ್ನ ಸ್ಥಿತಿ ಅಪರಾಧ ಅಲ್ಲ. ಅದನ್ನು ಹಾಗೆಯೇ ಇರಗೊಡಬೇಕಾದ  ಅಗತ್ಯವೂ ಇದೆ. ಆದರೆ, 370ನೇ ವಿಧಿ ರದ್ಧತಿಯಿಂದ ಜನಸಾಮಾನ್ಯರ ಮೇಲಾದ ಪರಿಣಾಮ, ಅವರ ಪ್ರತಿಕ್ರಿಯೆಗಳು, ಈ ವಿಧಿ ರದ್ಧತಿಯನ್ನು ಜಾರಿಗೊಳಿಸುವುದಕ್ಕಾಗಿ ಪ್ರಭುತ್ವ ಎಸಗುವ  ದಬ್ಬಾಳಿಕೆಗಳು, ನಾಗರಿಕರ ಸ್ವಾತಂತ್ರ್ಯ ಹರಣ.. ಇತ್ಯಾದಿ ಇತ್ಯಾದಿಗಳು ಈ ಭಿನ್ನಾಭಿಪ್ರಾಯಕ್ಕೆ ಬಲಿಯಾಗಬಾರದು. 370 ವಿಧಿ ರದ್ಧತಿಯ ಪರ ಇಲ್ಲವೇ ವಿರುದ್ಧ ಇರುವುದು ಬೇರೆ, ಈ ವಿಧಿ ರದ್ಧತಿಯನ್ನು  ಜಾರಿಗೊಳಿಸುವ ಹೆಸರಲ್ಲಿ ಪ್ರಭುತ್ವದಿಂದ ಉಂಟಾಗುವ ಅನ್ಯಾಯಗಳನ್ನು ವರದಿ ಮಾಡದಿರುವುದು ಬೇರೆ. 370ನೇ ವಿಧಿ ರದ್ಧತಿಯನ್ನು ಬೆಂಬಲಿಸುತ್ತಲೇ ಅದರ ಹೆಸರಲ್ಲಾಗುವ ದೌರ್ಜನ್ಯವನ್ನು  ಅಷ್ಟೇ ಪ್ರಬಲವಾಗಿ ಖಂಡಿಸುವುದಕ್ಕೂ ಮಾಧ್ಯಮ ಕ್ಷೇತ್ರಕ್ಕೆ ಸಾಧ್ಯವಾಗಬೇಕು. ಪ್ರಭುತ್ವವು ತನಗೆ ಶರಣಾಗಿ ವರದಿ ಮಾಡುವ ಜಿಹುಜೂರ್ ಮಾಧ್ಯಮವನ್ನು ಬಯಸುತ್ತದೆ. ಈ ವಿಷಯದಲ್ಲಿ ಕಾಂಗ್ರೆಸ್- ಬಿಜೆಪಿ ಎಂಬ ಭೇದವಿಲ್ಲ. ಆದರೆ ಮಾಧ್ಯಮ ಕ್ಷೇತ್ರ ಈ ಸ್ಥಿತಿಯನ್ನು ಮೀರಿ ನಿಲ್ಲಬೇಕು. ಕಾಶ್ಮೀರದಲ್ಲಿ ಏನಾಗುತ್ತಿದೆ ಅನ್ನುವುದನ್ನು ವೈಯಕ್ತಿಕ ಹಿತಾಸಕ್ತಿಯ ಹೊರಗಿಟ್ಟು ನೋಡಬೇಕು. ವಿಷಾದ ಏನೆಂದರೆ,
370ನೇ ವಿಧಿ ರದ್ಧತಿಯ ಬಳಿಕದ ಕಾಶ್ಮೀರವನ್ನು ನಮ್ಮ ಹೆಚ್ಚಿನ ಸುದ್ದಿ ಮಾಧ್ಯಮಗಳು ಅತ್ಯಂತ ಶಾಂತಚಿತ್ತತೆಯಿಂದ ಮತ್ತು ಎಲ್ಲವೂ ಚೆನ್ನಾಗಿದೆ ಎಂಬ ಭಾವದಲ್ಲಿ ಕಟ್ಟಿಕೊಟ್ಟಿವೆ. ಪ್ರಭುತ್ವ ಏನನ್ನು ಹೇಳಲು  ಬಯಸುತ್ತದೋ ಅದನ್ನು ಇನ್ನಷ್ಟು ಸುಂದರವಾಗಿ ಮತ್ತು ಆಕರ್ಷಕವಾಗಿ ಹೇಳಿವೆ. ಬಿಬಿಸಿ, ಅಲ್ ಜಝೀರಾ, ರಾಯಿಟರ್ಸ್, ಎಎಫ್‍ಪಿ, ಎ.ಪಿ., ಟೈಮ್, ದ ನ್ಯೂಯಾರ್ಕ್ ಟೈಮ್ಸ್, ದ ವಾಷಿಂಗ್ಟನ್  ಪೋಸ್ಟ್, ಹಪ್ಫಿಂಗ್ಟನ್ ಪೋಸ್ಟ್, ಫ್ರಾನ್ಸ್ 24, ದ ಇಂಡಿಪೆಂಡೆಂಟ್, ದಾಸ್ಚೆ ವೆಲ್ಜಿ, ದ ವಾಲ್‍ಸ್ಟ್ರೀಟ್ ಜರ್ನಲ್, ದ ಲ್ಯಾನ್ಸೆಟ್ ಇತ್ಯಾದಿ ಇತ್ಯಾದಿ ಪತ್ರಿಕೆಗಳು ಕಾಶ್ಮೀರದ ಕುರಿತಂತೆ ಏನೆಲ್ಲ ವರದಿ ಮಾಡಿದುವೋ ಮತ್ತು ಏನೆಲ್ಲ ವೀಡಿಯೋಗಳನ್ನು ಹಂಚಿಕೊಂಡವೋ ಅದಕ್ಕೆ ತೀರಾ ವಿರುದ್ಧವಾಗಿ ಹೆಚ್ಚಿನ ಭಾರತೀಯ ಮಾಧ್ಯಮಗಳು ಸುದ್ದಿ ಪ್ರಕಟಿಸಿದುವು. ‘ವಿದೇಶಿ ಮತ್ತು ಸ್ವದೇಶಿ ಮಾಧ್ಯಮಗಳು ಮಾಡುತ್ತಿರುವ  ವರದಿಗಳು ಒಂದೇ ರಾಜ್ಯದಿಂದ ಅಲ್ಲವೇ’ ಎಂದು ಪ್ರಶ್ನಿಸಬೇಕಾದ ರೀತಿಯಲ್ಲಿ ಭಾರತೀಯ ಮತ್ತು ವಿದೇಶಿ ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಕಟವಾದುವು. ನಿಜವಾಗಿ,
2014ರ ಬಳಿಕ ಮಾಧ್ಯಮ ಕ್ಷೇತ್ರದಲ್ಲಿ ಕಾಣಿಸಿಕೊಂಡ ‘ಪ್ರಭುತ್ವ ಪ್ರೇಮಿ’ ಕಾಯಿಲೆಯ ಮುಂದುವರಿದ ಭಾಗ ಇದು. ಕಾಶ್ಮೀರದ 370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರಕಾರವು ಆ ಬಳಿಕ ವಿದೇಶಿ  ಪತ್ರಕರ್ತರಿಗೆ ಕಾಶ್ಮೀರಕ್ಕೆ ತೆರಳಲು ಅನುಮತಿಯನ್ನು ನಿರಾಕರಿಸಿದಾಗ ಅವು ಸ್ಥಳೀಯ ಪತ್ರಕರ್ತರ ನೆರವನ್ನು ಪಡೆದುಕೊಂಡವು. ಒಂದು ರೀತಿಯಲ್ಲಿ ನಿರ್ಬಂಧಕ್ಕೆ ನೀಡಿದ ಏಟು ಇದು. ಜನರ ಸ್ಥಿತಿ- ಗತಿಯನ್ನು ವರದಿ ಮಾಡದಂತೆ ತಡೆಯುವುದನ್ನು ಯಾವ ಸ್ಥಿತಿಯಲ್ಲಾದರೂ ಉಲ್ಲಂಘಿಸುವೆವು ಎಂಬ ಕಠಿಣ ಎಚ್ಚರಿಕೆ ಇದು. ಆ ಬಗೆಯ ಕೆಚ್ಚು ವಿದೇಶಿ ಮಾಧ್ಯಮಗಳ ಪಾಲಿಗೆ ವಿಫುಲ ಸುದ್ದಿಯನ್ನು  ಒದಗಿಸಿದುವು. ಆದರೆ ಭಾರತೀಯ ಮಾಧ್ಯಮಗಳು ಈ ವಿಷಯದಲ್ಲಿ ತೀವ್ರ ವೈಫಲ್ಯವನ್ನು ಕಂಡವು. ಅವು ಕಾಶ್ಮೀರದ ಸ್ಥಿತಿಗತಿಯನ್ನು ಜನರ ಮುಂದಿಡುವ ಬದಲು ಇದು ದೇಶ ಕಟ್ಟುವ ಸಮಯವೆಂದು  ಬಗೆದು ದೇಶಭಕ್ತಿ ಪ್ರದರ್ಶಿಸತೊಡಗಿದುವು. ಮಾರುಕಟ್ಟೆಯಲ್ಲಿ ಯಾವುದು ಹೆಚ್ಚು ಮಾರಾಟವಾಗಬಲ್ಲುದೋ ಅದನ್ನೇ ಉತ್ಪಾದಿಸಿ ಉತ್ಪಾದಿಸಿ ಹಂಚಿದುವು.
ಮಾಧ್ಯಮಗಳ ‘ಪ್ರಭುತ್ವ ಪ್ರೇಮಿ’ ಧೋರಣೆಯು ಅಂತಿಮವಾಗಿ ಯಾವ ಫಲಿತಾಂಶವನ್ನು ತರಬಲ್ಲುದೋ ಅದುವೇ ಇವತ್ತು ಸಾಮಾಜಿಕವಾಗಿ ವ್ಯಕ್ತಗೊಳ್ಳುತ್ತಿದೆ. ಜನರು ಖಾಸಗಿ ಮಾಧ್ಯಮಗಳ ಮೇಲೆ  ವಿಶ್ವಾಸವನ್ನು ಕಳಕೊಳ್ಳುತ್ತಿದ್ದಾರೆ. ಮಾಧ್ಯಮ ಕ್ಷೇತ್ರ ಬಿತ್ತರಿಸುವ ಮತ್ತು ಪ್ರಕಟಿಸುವ ಯಾವುದೇ ಸುದ್ದಿ-ವಾರ್ತೆಯನ್ನು ತಕರಾರಿಲ್ಲದೇ ಸ್ವೀಕರಿಸುವ ಸ್ಥಿತಿ ಇವತ್ತು ಯಾರಲ್ಲೂ ಇಲ್ಲ. ಯಾವುದೇ ಪತ್ರಿಕೆಯ  ಹೆಸರನ್ನು ಉಲ್ಲೇಖಿಸಿದ ಕೂಡಲೇ ಅದು ‘ಪ್ರಭುತ್ವ ಪ್ರೇಮಿ’ ಮತ್ತು ‘ನಂಬಲರ್ಹವಲ್ಲ’ ಎಂದು ಓದುಗರು ತಕ್ಷಣ ಷರಾ ಬರೆಯುವ ಸ್ಥಿತಿಗೆ ವಾತಾವರಣ ಬಂದುಮುಟ್ಟಿದೆ. ಮಾಧ್ಯಮ ಕ್ಷೇತ್ರದ ಹೆಚ್ಚಿನವರು  ಹೀಗೆ ತಮ್ಮ ಕ್ರೆಡಿಬಿಲಿಟಿಯನ್ನು ಸಾರ್ವಜನಿಕವಾಗಿ ಕಳಕೊಂಡ ಸ್ಥಿತಿಯಲ್ಲಿದ್ದಾರೆ. ಇದಕ್ಕೆ ಇನ್ನೊಂದು ಉತ್ತಮ ಉದಾಹರಣೆ- ವಿಧಾನಸಭಾ ಕಲಾಪಕ್ಕೆ ಮಾಧ್ಯಮ ನಿರ್ಬಂಧವನ್ನು ಹೇರಿದ ಮುಖ್ಯಮಂತ್ರಿ  ಯಡಿಯೂರಪ್ಪ ಸರಕಾರದ ನಿರ್ಧಾರವನ್ನು ಪ್ರತಿಭಟಿಸುವುದಕ್ಕಾಗಿ ಬೆಂಗಳೂರಿನಲ್ಲಿ ನಡೆದ ಪತ್ರಕರ್ತರ ಪ್ರತಿಭಟನೆ. ಈ ಪ್ರತಿಭಟನೆಯಲ್ಲಿ ಪ್ರಮುಖ ಟಿ.ವಿ. ಚಾನೆಲ್‍ಗಳ ಖ್ಯಾತನಾಮರು ಭಾಗವಹಿಸಿದ್ದರು.  ಆದರೆ, ಕುಮಾರ ಸ್ವಾಮಿಯನ್ನು ಇಳಿಸಿ ಯಡಿಯೂರಪ್ಪರನ್ನು ಮುಖ್ಯಮಂತ್ರಿಯಾಗಿ ಕೂರಿಸುವಲ್ಲಿ ಹಗಲಿರುಳು ಕಂಠ ಶೋಷಣೆ ಮತ್ತು ಪದ ಜೋಡಣೆ ಮಾಡಿದವರೇ ಹೀಗೆ ಬೀದಿಗಿಳಿದುದನ್ನು ಜನರು  ಅನುಮಾನದಿಂದಲೇ ನೋಡಿದರು. ಸಾಮಾಜಿಕ ಜಾಲತಾಣಗಳಲ್ಲಂತೂ ಆ ಪ್ರತಿಭಟನೆ ಬೆಂಬಲ ಗಿಟ್ಟಿಸುವುದಕ್ಕಿಂತ ಹೆಚ್ಚು ಕುಹಕಕ್ಕೆ ಒಳಗಾಯಿತು. ಜನರು ಹರಿತ ಪದಗಳಿಂದ ತಿವಿದರು. ಕುಟುಕಿದರು.  ವ್ಯಂಗ್ಯವಾಡಿದರು. ನಿಜವಾಗಿ,
ವಿಶ್ವಾಸಾರ್ಹತೆ ಕಳಕೊಂಡರೆ ಎದುರಾಗುವ ಸ್ಥಿತಿ ಇದು. ಅಂದು ಆಲ್ ಇಂಡಿಯಾ ರೇಡಿಯೋವಾದರೆ ಇಂದು ಖಾಸಗಿ ಟಿ.ವಿ. ಚಾನೆಲ್‍ಗಳು. ಅಷ್ಟೇ ವ್ಯತ್ಯಾಸ.

Wednesday, October 30, 2019

ಉಸ್ತಾದರು ಬಟ್ಟೆ ಹಾಸಿದ್ದಾರೆ, ಸಮುದಾಯ ಭಿಕ್ಷೆ ಹಾಕುತ್ತಿದೆ...



1. Redirecting money from the Gulf.
2. ಬೇಡುವ ಸ್ಥಿತಿ ಬರದಿರಲಿ ಎಂದು ಅಲ್ಲಾಹನಲ್ಲಿ ಬೇಡಿದ ಖತೀಬರು ಮಸೀದಿಯಲ್ಲಿ ಬೇಡಲು ಕುಳಿತಾಗ ಕರುಳು ಹಿಂಡಿದಂತಾಯಿತು...
ಕಳೆದವಾರ ನನ್ನ ಆಸಕ್ತಿಯನ್ನು ಕೆರಳಿಸಿದ ಎರಡು ಬರಹಗಳ ಶೀರ್ಷಿಕೆಗಳಿವು. ಈ ಎರಡೂ ಬರಹಗಳ ವಸ್ತು, ವಿಶ್ಲೇಷಣೆ, ನಿರೂಪಣಾ ಶೈಲಿ, ಭಾಷೆ ಮತ್ತು ಪದಬಳಕೆ.. ಎಲ್ಲವೂ ಬೇರೆ ಬೇರೆ. ಆದರೆ  ಗುರಿ ಮಾತ್ರ ಒಂದೇ- ಅದು ಮುಸ್ಲಿಮ್ ಸಮುದಾಯ. ಕಳಕಳಿಯೂ ಅದುವೇ. ಮುಸ್ಲಿಮ್ ಸಮುದಾಯದ ಬಗ್ಗೆ ಕಳಕಳಿ ವ್ಯಕ್ತಪಡಿಸುವ ಎರಡು ಬೇರೆ ಬೇರೆ ಬರಹಗಳು ಎಂಬ ಸಾಮಾನ್ಯ ಭಾವದ  ಆಚೆ ನಿಂತು ಚರ್ಚಿಸಲೇಬೇಕಾದ ವಿಷಯಗಳು ಆ ಎರಡು ಬರಹಗಳಲ್ಲಿದ್ದುವು.
 Redirecting money from the Gulf.- ಅಕ್ಟೋಬರ್ 14ರ ದ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ ಬರಹ ಇದು. ದ ಹಿಂದೂ ಪತ್ರಿಕೆಯ ಮಾಜಿ ಸಹಸಂಪಾದಕರಾಗಿದ್ದ ಮತ್ತು  ಈಗ ಸ್ವತಂತ್ರ ಪತ್ರಕರ್ತರಾಗಿ ದುಡಿಯುತ್ತಿರುವ ಕೆ.ಪಿ.ಎಂ. ಬಶೀರ್ ಅವರು ಇದನ್ನು ಬರೆದಿದ್ದಾರೆ. (ಅಕ್ಟೋಬರ್ 18ರ ವಾರ್ತಾಭಾರತಿ ಪತ್ರಿಕೆಯು ‘ಕೊಲ್ಲಿ ರಾಷ್ಟ್ರಗಳಿಂದ ಬರುವ ಹಣ ಎಲ್ಲಿ  ಹೂಡಿಕೆಯಾಗಬೇಕು’ ಎಂಬ ಶೀರ್ಷಿಕೆಯಲ್ಲಿ ಈ ಲೇಖನವನ್ನು ಮರು ಮುದ್ರಿಸಿದೆ). ಇಡೀ ಲೇಖನದ ಕೇಂದ್ರ ಬಿಂದು- ಕೇರಳದ ಮುಸ್ಲಿಮರು. ಅದರಲ್ಲಿರುವ ಒಂದು ಪ್ಯಾರಾ ಹೀಗಿದೆ:
“ಕೇರಳದ ಮುಸ್ಲಿಮರಲ್ಲಿ ಇನ್ನೊಂದು ತಲೆಮಾರಿನ ಕೊನೆಯ ವರೆಗೂ ಉಳಿಯುವಷ್ಟು ಕಾರುಗಳಿವೆ. ಬಂಗಲೆಗಳಿವೆ ಮತ್ತು ಚಿನ್ನಾಭರಣಗಳಿವೆ. ಆದರೆ ಉದ್ಯೋಗಗಳಿಲ್ಲ. ಕೇರಳದಲ್ಲೇ ಇರುವ ಯುವಕರಿಗೂ ಉದ್ಯೋಗಗಳಿಲ್ಲ. ಹಾಗೆಯೇ ಗಲ್ಫ್ ರಾಷ್ಟ್ರಗಳಿಂದ ದಿಢೀರನೆ ಉದ್ಯೋಗ ಕಳೆದುಕೊಂಡು ಬರುವವರಿಗೂ ಉದ್ಯೋಗಗಳಿಲ್ಲ. ಅನಿವಾಸಿ ಕೇರಳೀಯರು ಕಳೆದ ಎರಡು ದಶಕಗಳಲ್ಲಿ ತಾವು  ತಮ್ಮ ರಾಜ್ಯಕ್ಕೆ ಕಳುಹಿಸಿದ್ದ ಭಾರೀ ಮೊತ್ತದಿಂದ ಕೇವಲ ಶೇಕಡ ಒಂದರಷ್ಟನ್ನು ಉದ್ಯೋಗ ಸೃಷ್ಟಿಸುವ ವ್ಯಾಪಾರ ಮತ್ತು ಉದ್ದಿಮೆಗಳಲ್ಲಿ ಹೂಡಿಕೆ ಮಾಡುತ್ತಿದ್ದರೂ ಕೇರಳದ ಮುಂದಿನ ತಲೆಮಾರಿಗೆ  ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗಕ್ಕಾಗಿ ಪರದಾಡುವ ಸ್ಥಿತಿ ಬರುತ್ತಿರಲಿಲ್ಲ...”
ಇನ್ನೊಂದು ಬರಹ- ಮಿತ್ರ ಹನೀಫ್ ಪುತ್ತೂರು ಅವರದ್ದು. ಅವರ ಬರಹದಿಂದ ಆರಿಸಿದ ಒಂದು ತುಂಡು ಬರಹ ಹೀಗಿದೆ:
“ಕಳೆದ ಶುಕ್ರವಾರ ಜುಮಾ ನಮಾಜ್ ಮುಗಿದ ಬಳಿಕ ಮಸೀದಿಯ ಇಮಾಮರು ಹೀಗೆ ಪ್ರಕಟಣೆ ಹೊರಡಿಸಿದರು- ‘ಮಸೀದಿಯ ಬಾಗಿಲ ಬಳಿ ಉಸ್ತಾದರೊಬ್ಬರು (ಖತೀಬರು) ಬಟ್ಟೆ ಹಾಸಿ  ಕುಳಿತುಕೊಂಡಿದ್ದಾರೆ. ಅವರಿಗೆ ಮೂರು ಹೆಣ್ಣು ಮಕ್ಕಳು. ನಿಮ್ಮ ಕೈಲಾದ ನೆರವು ನೀಡಿ’. ಸಾಮಾನ್ಯವಾಗಿ, ‘ಬೇಡುವ ಸ್ಥಿತಿ ಯಾರಿಗೂ ನೀಡದಿರು ದೇವಾ’ ಎಂದು ಖತೀಬರು ಪ್ರಾರ್ಥಿಸುವುದು ರೂಢಿ.  ಹೀಗಿರುತ್ತಾ, ಹಾಗೆ ಪ್ರಾರ್ಥಿಸುವ ಖತೀಬರೇ ಬಾಗಿಲ ಬಳಿ ಬಟ್ಟೆ ಹಾಸಿ ಬೇಡಲು ಕುಳಿತುದಕ್ಕೆ ಕಾರಣ ಏನು?”
ಭಾರತದ ಮಟ್ಟಿಗೆ ಕೇರಳ ಒಂದು ಅಚ್ಚರಿ. ಹಲವು ಪ್ರಥಮಗಳನ್ನು ತನ್ನದಾಗಿಸಿಕೊಂಡಿರುವ ರಾಜ್ಯ ಇದು. ಒಟ್ಟು 3.5 ಕೋಟಿ ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು ಶೇ. 56, ಮುಸ್ಲಿಮರ ಪಾಲು ಶೇ.  25 ಮತ್ತು ಕ್ರೈಸ್ತರದ್ದು ಶೇ. 19. ಭಾರತದ ಉಳಿದ ಭಾಗಗಳಲ್ಲಿರುವ ಜನಸಾಂದ್ರತೆಗೆ ಹೋಲಿಸಿದರೆ ಕೇರಳದ ಜನಸಾಂದ್ರತೆ 3 ಪಟ್ಟು ಹೆಚ್ಚು. ಪ್ರತಿ ಚದರ ಮೈಲಿಗೆ ಜನಸಾಂದ್ರತೆಯ ಪ್ರಮಾಣ 2,200  ಅಥವಾ ಪ್ರತಿ ಚದರ ಕಿಲೋಮೀಟರ್ ಗೆ ಜನಸಾಂದ್ರತೆಯ ಮಟ್ಟ 860. ದೇಶದ ಇನ್ನಾವ ಕಡೆಯೂ ಈ ಮಟ್ಟದ ಜನದಟ್ಟಣೆಯಿಲ್ಲ. ಭಾರತದ ರಾಜ್ಯಗಳ ಪೈಕಿ ಅತಿ ಸಣ್ಣ ರಾಜ್ಯಗಳಲ್ಲಿ ಒಂದಾಗಿರುವ  ಕೇರಳವು ದೇಶದ ಜಿಡಿಪಿಗೆ ಅತಿ ಮಹತ್ವದ ಕೊಡುಗೆಯನ್ನು ನೀಡುತ್ತಿದೆ. ಭಾರತದ ಒಟ್ಟು ಮಾನವ ಅಭಿವೃದ್ಧಿ ಸೂಚ್ಯಂಕವು ಏನಿದೆಯೋ ಅದಕ್ಕಿಂತ ಕೇರಳದ ಮಾನವ ಅಭಿವೃದ್ಧಿ ಸೂಚ್ಯಂಕವು ಬಹಳ  ಮುಂದಿದೆ. ಅದರ ಪ್ರಮಾಣ 0.79. ಕೇರಳದ ಸಾಕ್ಷರತೆಯ ಪ್ರಮಾಣ ಶೇ. 98.9. ಕೇರಳಿಗರ ಸರಾಸರಿ ಆಯುಷ್ಯ 74 ವರ್ಷ. ಭಾರತದ ಇತರ ಭಾಗಗಳಿಗೆ ಹೋಲಿಸಿದರೆ ಇವೆಲ್ಲ ತುಂಬಾ ತುಂಬಾ  ಹೆಚ್ಚು. ಅಲ್ಲದೇ, ಇನ್ನೊಂದು ಅಚ್ಚರಿಯ ಅಂಕಿಅಂಶವೂ ಇದೆ. ಅದೇನೆಂದರೆ, ಬಡತನದ ಸೂಚ್ಯಂಕ. ಕೇರಳದ ಗ್ರಾಮೀಣ ಭಾಗದಲ್ಲಿ ಬಡತನದ ಸೂಚ್ಯಂಕವು 1970ರಲ್ಲಿ 59% ಇದ್ದರೆ 2010ರ ವೇಳೆಗೆ  ಇದು ಕೇವಲ 12%ಕ್ಕೆ ಇಳಿದಿತ್ತು. ವಿಶೇಷ ಏನೆಂದರೆ, 1970 ಮತ್ತು 2010ರ ನಡುವೆ ಕೇರಳದ ಬಡತನ ಸೂಚ್ಯಂಕದಲ್ಲಿ 47%ದಷ್ಟು ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದ್ದರೆ ಅದೇ ಅವಧಿಯಲ್ಲಿ ಭಾರತದ  ಇತರ ರಾಜ್ಯಗಳ ಗ್ರಾಮೀಣ ಭಾಗದಲ್ಲಿ ಬಡತನ ಸೂಚ್ಯಂಕದಲ್ಲಿ ಆದ ಇಳಿಕೆ ಕೇವಲ 29%. ಅಂದಹಾಗೆ,
ಭಾರತ ಮತ್ತು ಕೇರಳದ ನಡುವೆ ಆಯುಷ್ಯ, ಆರೋಗ್ಯ, ಸಾಕ್ಷರತೆ, ಆದಾಯ ಇತ್ಯಾದಿ ಇತ್ಯಾದಿಗಳಲ್ಲಿ ಭಾರೀ ಪ್ರಮಾಣದಲ್ಲಿ ಅಂತರ ಉಂಟಾಗಿರುವುದಕ್ಕೆ ಬಹಳ ಮುಖ್ಯ ಕಾರಣ ಏನೆಂದರೆ, ಗಲ್ಫ್  ಉದ್ಯೋಗ.
ಕೇರಳದ ಪ್ರತಿ ಹತ್ತರಲ್ಲಿ ಓರ್ವ ವ್ಯಕ್ತಿ ವಿದೇಶದಲ್ಲಿ ದುಡಿಯುತ್ತಿದ್ದಾರೆ ಎಂಬ ಅಂದಾಜಿದೆ. ಅಂದರೆ, ಸುಮಾರು 35 ಲಕ್ಷ ಮಂದಿ. ಇವರಲ್ಲಿ ಸುಮಾರು 90% ಮಂದಿಯೂ ಯುಎಇ, ಸೌದಿ ಅರೇಬಿಯಾ,  ಕುವೈತ್, ಕತರ್, ಒಮನ್, ಬಹ್ರೈನ್‍ಗಳಲ್ಲಿ ದುಡಿಯುತ್ತಿದ್ದಾರೆ. ಪ್ರತಿದಿನ ಸುಮಾರು 200 ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತ ಕೇರಳಕ್ಕೆ ಈ ರಾಷ್ಟ್ರಗಳಿಂದ ಹರಿದು ಬರುತ್ತಿದೆ ಎಂಬ ಲೆಕ್ಕಾಚಾರವೂ  ಇದೆ. ಕೇವಲ 2013ರಲ್ಲೇ 70 ಬಿಲಿಯನ್ ಡಾಲರ್ ನ ಷ್ಟು ಮೊತ್ತವನ್ನು ಗಲ್ಫ್ ಉದ್ಯೋಗಿಗಳು ಕೇರಳಕ್ಕೆ ಕಳುಹಿಸಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. 21ನೇ ಶತಮಾನದ ಆರಂಭದಿಂದ ಇಂದಿನವರೆಗೆ 60  ಟ್ರಿಲಿಯನ್ ರೂಪಾಯಿಯನ್ನು ಗಲ್ಫ್ ರಾಷ್ಟ್ರಗಳ ಉದ್ಯೋಗಿಗಳು ಕೇರಳಕ್ಕೆ ಕಳುಹಿಸಿಕೊಟ್ಟಿದ್ದಾರೆ. ಈ ಹಣದಲ್ಲಿ ಕೇರಳದ ಮುಸ್ಲಿಮರ ಪಾಲು ಬಹಳ ದೊಡ್ಡದು. ಕೇರಳದ ಒಟ್ಟು ಜನಸಂಖ್ಯೆಯ ಕಾಲಂಶದಷ್ಟಿರುವ ಈ ಮುಸ್ಲಿಮರು ಭಾರತದ ಇತರ ಭಾಗದಲ್ಲಿರುವ ಮುಸ್ಲಿಮರಿಗಿಂತ ಹೆಚ್ಚು ಶ್ರೀಮಂತರು, ಸ್ಥಿತಿವಂತರು, ಅಕ್ಷರಸ್ಥರು ಮತ್ತು ಆರೋಗ್ಯವಂತರು ಕೂಡ. ವಿಚಿತ್ರ ಏನೆಂದರೆ, ಅಮೇರಿಕ,  ಬ್ರಿಟನ್‍ನಂಥ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಕೇರಳೀಯರಲ್ಲಿ ಹೆಚ್ಚಿನವರು ಕೇರಳದಲ್ಲಿರುವ ತಮ್ಮ ಜಮೀನು-ಆಸ್ತಿಪಾಸ್ತಿಗಳನ್ನು ಮಾರಿ ಹಣವನ್ನು ವಿದೇಶಕ್ಕೆ ತರಿಸಿಕೊಂಡು ಅಲ್ಲೇ ಖಾಯಂ ಆಗಿ  ವಾಸಿಸಲು ಮುಂದಾಗುತ್ತಿರುವಾಗ ಗಲ್ಫ್ ನಲ್ಲಿ ದುಡಿಯುತ್ತಿರುವ ಕೇರಳಿಗರು ಮಾತ್ರ ಅಲ್ಲೇ ನೆಲೆಸುವುದನ್ನು ಇಷ್ಟಪಡದೇ ಹಣವನ್ನೆಲ್ಲ ಊರಿಗೆ ಕಳುಹಿಸುತ್ತಿದ್ದಾರೆ ಎಂಬುದು. ಪ್ರಶ್ನೆ ಇರುವುದೂ ಇಲ್ಲೇ.  ಹೀಗೆ ಕಳುಹಿಸಲಾಗುವ ಹಣ ಎಲ್ಲಿಗೆ ಹೋಗುತ್ತದೆ? ಯಾವುದಕ್ಕೆ ಬಳಕೆಯಾಗುತ್ತದೆ? ಕೇರಳದ ರಾಜರಸ್ತೆಗಳಲ್ಲಿ ಸಾಗುವಾಗ ರಸ್ತೆಯ ಎರಡೂ ಬದಿಗಳಲ್ಲಿ ಎದುರಾಗುವ ಬಂಗಲೆಗಳು, ಮಹಲುಗಳು,  ಚಿನ್ನದಂಗಡಿಗಳು, ಬಹುಮಹಡಿ ಕಟ್ಟಡಗಳು ಇತ್ಯಾದಿಗಳಿಗೆಲ್ಲ ಸುರಿದಿರುವ ಕೋಟಿಗಳೆಷ್ಟಿರಬಹುದು? ಈ ಪ್ರಶ್ನೆಯನ್ನು ಕರ್ನಾಟಕದ ಮುಸ್ಲಿಮರಿಗೆ ಸಂಬಂಧಿಸಿಯೂ ಕೇಳಬಹುದು. ಕರಾವಳಿ ಕರ್ನಾಟಕದ ಮುಸ್ಲಿಮರಿಗೆ ಸಂಬಂಧಿಸಿಯೂ ಕೇಳಬಹುದು. ಪ್ರತಿದಿನ 200 ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತ ಕೇರಳಕ್ಕೆ ಹರಿದು ಬರುತ್ತದೆಂದಾದರೆ, ಆ ಮೊತ್ತ ಕರಗುವುದೆಲ್ಲಿ? ಈ ಬೃಹತ್  ಮೊತ್ತವನ್ನು ನಿರ್ಮಾಣಾತ್ಮಕ ಕೆಲಸಗಳಲ್ಲಿ ಹೂಡಿಕೆಯಾಗುವಂತೆ ಮಾಡಲು ಮುಸ್ಲಿಮ್ ಸಮುದಾಯ ಯಾಕೆ ಯಾವ ನೀಲ ನಕ್ಷೆಯನ್ನೂ ರೂಪಿಸಿಲ್ಲ? ಒಂದುವೇಳೆ, ರೂಪಿಸಿರುತ್ತಿದ್ದರೆ, ಕೇರಳದ  ಯುವ ಸಮೂಹದ ಇಂದಿನ ನಿರುದ್ಯೋಗ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಿತ್ತಲ್ಲವೇ? ಗಲ್ಫ್ ಅನ್ನುವುದು ಬಸಿದಷ್ಟೂ ಬತ್ತದ ಸಮುದ್ರ ಏನಲ್ಲ. ಒಂದಲ್ಲ ಒಂದು ದಿನ ಅಲ್ಲಿನ  ಉದ್ಯೋಗಕ್ಕೆ ಕತ್ತರಿ ಬೀಳುವ ಎಲ್ಲ ಸಾಧ್ಯತೆಗಳೂ ಇವೆ. ಅಂಥದ್ದೊಂದು ಸ್ಥಿತಿಯನ್ನು ಎದುರಿಸಲು ಕೇರಳವನ್ನು ಎಚ್ಚರಗೊಳಿಸುವುದು ಯಾರ ಹೊಣೆ? ಯಾಕೆ ಆ ಹೊಣೆಗಾರಿಕೆಯನ್ನು ಮುಸ್ಲಿಮ್  ಸಮುದಾಯದ ಯಾರೂ ಮುಖ್ಯ ಅಜೆಂಡಾವಾಗಿ ಎತ್ತಿಕೊಂಡಿಲ್ಲ? ಅಂದಹಾಗೆ,
ಗಲ್ಫ್ ನ ಉದ್ಯೋಗಕ್ಕೆ ಕತ್ತರಿ ಬಿದ್ದರೆ ಮಹಲುಗಳು ಯಾವ ಆದಾಯವನ್ನೂ ಕೊಡವು. ಐಶಾರಾಮಿ ಆಸ್ಪತ್ರೆಗಳಿಗೆ ವ್ಯಯಿಸಿದ ಹಣದಲ್ಲಿ ಒಂದು ನಯಾ ಪೈಸೆಯೂ ಮರಳಿ ಬಾರದು. ಕಾರುಗಳು,  ಬೈಕ್‍ಗಳು ಮತ್ತಿತರ ವಾಹನಗಳಿಂದ ಯಾವ ಹುಟ್ಟುವಳಿಯೂ ಆಗದು. ಅವೆಲ್ಲ ಉತ್ಪಾದನಾ ರಹಿತ ಹೂಡಿಕೆಗಳು. ಹೀಗೆ ಅನುತ್ಪಾದಕದ ಕ್ಷೇತ್ರದಲ್ಲಿ ಆಗುತ್ತಿರುವ ಭಾರೀ ಪ್ರಮಾಣದ ಹೂಡಿಕೆಯನ್ನು  ನಿಲ್ಲಿಸಿ ಅವುಗಳ ಬದಲು ಕೈಗಾರಿಕೆ, ಕೃಷಿ, ಉದ್ಯಮಗಳಲ್ಲಿ ಹೂಡಿಕೆಯಾಗುವಂತೆ ಮಾರ್ಗದರ್ಶನ ಮಾಡುವ ಪ್ರಯತ್ನಗಳು ಮುಸ್ಲಿಮ್ ಸಮುದಾಯದಿಂದ ವ್ಯವಸ್ಥಿತವಾಗಿ ನಡೆದಿರುತ್ತಿದ್ದರೆ ಗಲ್ಫ್ ನಲ್ಲಿ  ಉದ್ಯೋಗಕ್ಕೆ ಕತ್ತರಿ ಬಿದ್ದರೂ ಚಿಂತಿಸುವ ಅಗತ್ಯವಿರಲಿಲ್ಲ. ಯುವ ತಲೆಮಾರು ಗಲ್ಫ್ ನ ಕಡೆಗೆ ತಲೆ ಹಾಕಿ ಮಲಗಬೇಕಾದ ಅಗತ್ಯವೂ ಇರಲಿಲ್ಲ. ಹೀಗಾಗಿರುತ್ತಿದ್ದರೆ, ಕೇರಳೀಯರಿಗೆ ದೊಡ್ಡ ಪ್ರಮಾಣದಲ್ಲಿ  ಉದ್ಯೋಗ ಕೊಟ್ಟ ಸಂತೃಪ್ತಿಯೊಂದಿಗೆ ಗಲ್ಫ್ ನಿಂದ ಮರಳಿ ಬರುವ ಒಂದು ಅವಕಾಶ ಅನಿವಾಸಿ ಕೇರಳೀಯರಿಗೆ ಖಂಡಿತ ಇತ್ತು. ಈಗಲೂ ಇದೆ. ಆದರೆ,
ಇದು ಯಶಸ್ವಿಯಾಗಬೇಕಾದರೆ ಮುಸ್ಲಿಮ್ ಸಮುದಾಯ ನೀಲನಕ್ಷೆಯನ್ನು ತಕ್ಷಣ ರೂಪಿಸಬೇಕಿದೆ. ಮನೆ, ಕಾರು, ಆಸ್ಪತ್ರೆ ಗಳಿಗೆ ಅತಿಯಾಗಿ ಖರ್ಚು ಮಾಡದಂತೆ ಮತ್ತು ನಿರ್ಮಾಣಾತ್ಮಕ ಕೆಲಸಗಳಲ್ಲಿ  ಹೂಡಿಕೆ ಮಾಡುವಂತೆ ಜಾಗೃತಿ ಕೆಲಸಗಳನ್ನು ನಡೆಸಬೇಕಾಗಿದೆ. ಹೈನುಗಾರಿಕೆ, ಕೃಷಿ, ಕೈಗಾರಿಕೆ ಮತ್ತಿತರ ಕ್ಷೇತ್ರಗಳಲ್ಲಿ ಹೇಗೆಲ್ಲ ಹೂಡಿಕೆ ಮಾಡಬಹುದು ಮತ್ತು ಯಾವ ಕ್ಷೇತ್ರ ಹೂಡಿಕೆ ಸ್ನೇಹಿಯಾಗಿದೆ ಎಂಬ ಬಗ್ಗೆ ಗಲ್ಫ್ ಉದ್ಯೋಗಿಗಳಿಗೆ ಮನದಟ್ಟು ಮಾಡುವ ಅಭಿಯಾನಗಳು ನಡೆಯಬೇಕಾಗಿದೆ. ನಿಜವಾಗಿ,
ಕೇರಳಿಗರಿಗಷ್ಟೇ ಅಲ್ಲ, ಕೇರಳದ ಹೊರಗಿನ ಭಾರತೀಯರಿಗೂ ಉದ್ಯೋಗ ನೀಡುವಷ್ಟು ಬೃಹತ್ ಪ್ರಮಾಣದ ಉದ್ಯೋಗ ಸೃಷ್ಟಿಗೆ ಹೆಸರಾಗಬೇಕಿದ್ದ ಮತ್ತು ಹಲವು ಯಶಸ್ವಿ ಮುಸ್ಲಿಮ್ ಉದ್ಯಮಿಗಳನ್ನು  ದೇಶಕ್ಕೆ ಕೊಡುಗೆಯಾಗಿ ನೀಡಬೇಕಿದ್ದ ಕೇರಳವು ಈ ವಿಷಯದಲ್ಲಿ ದಯನೀಯ ವೈಫಲ್ಯ ಕಂಡಿರುವುದಕ್ಕೆ ಕಾರಣ- ಕೇವಲ ಗಲ್ಫ್ ಉದ್ಯೋಗಿಗಳಷ್ಟೇ ಅಲ್ಲ, ಅವರಿಗೆ ಸೂಕ್ತ ಮಾರ್ಗದರ್ಶನ ಮಾಡದ  ಮತ್ತು ನಿರ್ಮಾಣಾತ್ಮಕ ಸಲಹೆಗಳನ್ನು ನೀಡುವಲ್ಲಿ ವಿಫಲವಾದ ಮುಸ್ಲಿಮ್ ಸಮುದಾಯದ ಸಂಘ-ಸಂಸ್ಥೆಗಳೂ ಅಷ್ಟೇ ಕಾರಣ. ಅಷ್ಟಕ್ಕೂ,
ಈ ಬಗೆಯ ವೈಫಲ್ಯ ಕೇವಲ ಗಲ್ಫ್ ಉದ್ಯೋಗಿಗಳಿಗೆ ಸಂಬಂಧಿಸಿ ಮಾತ್ರ ಇರುವುದಲ್ಲ. ಕೇರಳ-ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಇರುವ ಮದ್ರಸ-ದರ್ಸ್ ಅಥವಾ ಮುಸ್ಲಿಮ್ ಧಾರ್ಮಿಕ ಶಿಕ್ಷಣ  ಕೇಂದ್ರಗಳೂ ದೊಡ್ಡ ಸಂಖ್ಯೆಯಲ್ಲಿ ಇಂಥ ಜನರ ಗುಂಪನ್ನು ಸಮಾಜಕ್ಕೆ ಅರ್ಪಿಸಿರುವುದನ್ನೂ ಇಷ್ಟೇ ಪ್ರಾಂಜಲ ಮನಸ್ಸಿನಿಂದ ನಾವು ಒಪ್ಪಿಕೊಳ್ಳಬೇಕಾಗಿದೆ. ಅಲ್ಲಿಂದ ಪಾರಂಗತರಾಗಿ ಬಂದವರು ಮಸೀದಿ-ಮದ್ರಸದ ಹೊರತು ಇನ್ನಾವ ಕ್ಷೇತ್ರಕ್ಕೂ ಸಲ್ಲದವರಾಗಿ ಮಾರ್ಪಟ್ಟು ಬಿಟ್ಟರು. ಅವರು ಉದ್ಯಮಿಗಳಾಗಲಿಲ್ಲ. ಸರಕಾರಿ ಉದ್ಯೋಗಿಗಳಾಗಲಿಲ್ಲ. ಖಾಸಗಿ ಕ್ಷೇತ್ರದ ಉದ್ಯೋಗಕ್ಕೆ ಬೇಕಾದ ಅರ್ಹತೆಗಳಿರಲಿಲ್ಲ. ಅರಬಿ ಭಾಷೆಯ ಹೊರತಾಗಿ ಇತರ ಭಾಷೆಗಳ ಮೇಲೆ ಹಿಡಿತ ಸಾಧಿಸುವ ಶಿಕ್ಷಣ ಲಭಿಸಲಿಲ್ಲ. ಸಾಹಿತಿಗಳಾಗಲಿಲ್ಲ. ವಿಜ್ಞಾನಿಗಳೂ ಇಂಜಿನಿಯರ್ ಗಳೂ ಆಗಲಿಲ್ಲ. ‘ಅವರು ಉಸ್ತಾದರೂ ಹೌದು, ವಿಜ್ಞಾನಿಯೂ ಹೌದು; ಅವರು ಉಸ್ತಾದರೂ ಹೌದು, ಯಶಸ್ವಿ ಉದ್ಯಮಿಯೂ ಹೌದು; ಅವರು ಉಸ್ತಾದರೂ ಹೌದು, ಇಂಜಿನಿಯರೂ ಹೌದು; ಅವರು ಉಸ್ತಾದರೂ ಹೌದು, ಶಿಕ್ಷಣ ತಜ್ಞರೂ ಹೌದು, ಸಾಹಿತಿಯೂ ಹೌದು; ಐಪಿಎಸ್, ಐಎಎಸ್ ಕೂಡಾ ಹೌದು..’ ಹೀಗೆ ಹೇಳಬಹುದಾದ ಯಾವ ವಾತಾವರಣವೂ ನಿರ್ಮಾಣವಾಗಲಿಲ್ಲ. ಮುಸ್ಲಿಮ್ ಧಾರ್ಮಿಕ ಶಿಕ್ಷಣ ಕೇಂದ್ರಗಳು (ದರ್ಸ್-ಮದ್ರಸ) ಬರೇ ಮಸೀದಿ-ಮದ್ರಸವನ್ನು ನೋಡಿಕೊಳ್ಳುವ ಜನರ ಗುಂಪನ್ನು ಉತ್ಪಾದಿಸಬಲ್ಲವೇ ಹೊರತು ನಿರ್ಮಾಣಾತ್ಮಕ ಕ್ಷೇತ್ರಕ್ಕೆ ಅಲ್ಲಿನ ಕೊಡುಗೆ ಶೂನ್ಯ ಅನ್ನುವ ಸ್ಥಿತಿ ನಿರ್ಮಾಣವಾಯಿತು. ಇದರಿಂದಾಗಿ ಅವರು ಕಲಿಸುವ ಮದ್ರಸ ಶಿಕ್ಷಣಗಳು ಜಡವಾದುವು. ಶಾಲೆಗೆ ತೆರಳಿ ಸಂಜೆಯೋ ಬೆಳಿಗ್ಗೆಯೋ ಮದ್ರಸಕ್ಕೆ ಹೋಗುವ ಮಗುವಿನ ಪ್ರಶ್ನೆಗಳನ್ನು ಅವರು ಬಂಡಾಯದಂತೆ ಕಂಡರು. ಶಾಲೆಯಲ್ಲಿ ಆಧುನಿಕ ಶಿಕ್ಷಣವನ್ನು ಪಡೆದು ಮದ್ರಸಕ್ಕೆ ಬರುತ್ತಿರುವ ಮಗು ಮತ್ತು ಆ ಶಿಕ್ಷಣವನ್ನೇ ಪಡೆಯದ ಮದ್ರಸ ಅಧ್ಯಾಪಕರು- ಈ ಎರಡರ ಮುಖಾಮುಖಿಯು ಯಾವೆಲ್ಲ ಸಮಸ್ಯೆಗಳನ್ನು ಸೃಷ್ಟಿಸಬಹುದೋ ಅವೆಲ್ಲವನ್ನೂ ಸೃಷ್ಟಿಸಿತು. ಶಿಕ್ಷಣ ಕ್ಷೇತ್ರದಲ್ಲಿ ಲೌಕಿಕ ಮತ್ತು ಧಾರ್ಮಿಕ ಎಂಬ ವಿಭಜನೆಗೆ ಅದು ಕಾರಣವಾಗಿ, ಕೊನೆಗೆ ಚೇತನವಿಲ್ಲದ ಧಾರ್ಮಿಕ ಶಿಕ್ಷಣದ ಮೇಲೆ ಲೌಕಿಕ ಶಿಕ್ಷಣದ ಸವಾರಿಗೂ ಅದು ಕಾರಣವಾಯಿತು. ನಿಜವಾಗಿ,
ಹನೀಫ್ ಪುತ್ತೂರು ಎತ್ತಿದ ಪ್ರಶ್ನೆಗೆ ಬಹುಶಃ ಇಲ್ಲೆಲ್ಲೋ ಉತ್ತರ ಇರಬೇಕು. ಹನೀಫರು ಉಲ್ಲೇಖಿಸಿದ ಆ ಖತೀಬರು ಮಸೀದಿಯ ಬಾಗಿಲಲ್ಲಿ ಬಟ್ಟೆ ಹಾಸಿರುವುದಕ್ಕೆ ಕಾರಣ ಅವರಲ್ಲ. ಮುಸ್ಲಿಮ್ ಸಮುದಾಯದ ಅನುತ್ಪಾದಕ ಶೈಕ್ಷಣಿಕ ನೀತಿಯೇ ಇಲ್ಲಿ ಬಹುದೊಡ್ಡ ಅಪರಾಧಿ. ಖತೀಬರು ಅದರ ಉತ್ಪನ್ನ ಅಷ್ಟೇ. ಹಾಗಂತ,
ಇಂದಿನ ಸ್ಥಿತಿ ಹಾಗಿಲ್ಲ. ಧಾರ್ಮಿಕ ಮತ್ತು ಲೌಕಿಕ ಶಿಕ್ಷಣವನ್ನು ಉನ್ನತ ಮಟ್ಟದಲ್ಲಿ ಪಡೆದ ಹಾಗೂ ಮಸೀದಿ-ಮದ್ರಸಗಳ ಹೊರತಾಗಿ ಇತರ ಕ್ಷೇತ್ರಗಳಲ್ಲೂ ಯಶಸ್ವಿಯಾಗಿ ತೊಡಗಿಸಿಕೊಂಡ ದೊಡ್ಡ ಸಂಖ್ಯೆಯ ವಿದ್ವಾಂಸರಿದ್ದಾರೆ. ಭಾಷಣ-ಬರಹಗಳ ಮೂಲಕ ಅವರು ಸಮುದಾಯವನ್ನು ಎಚ್ಚರಿಸುತ್ತಿದ್ದಾರೆ. ಇವರಿಗೆ ಅಭಿನಂದನೆಗಳು. ಮುಸ್ಲಿಮ್ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಇವರು ಮಾರ್ಗದರ್ಶನ ಮಾಡಲಿ. ನೀಲನಕಾಶೆ ರೂಪಿಸಲಿ. ಬೇಡುವ ಖತೀಬರು ಮತ್ತು ಅನುತ್ಪಾದಕ ಹಣವಂತರು ನಿರ್ಮಾಣವಾಗದಂತೆ ನೋಡಿಕೊಳ್ಳಲಿ.

Wednesday, October 16, 2019

ಮಕ್ಕಳು ಮುದುಡಿ ಮಲಗಿದ್ದುವು, ಮನೆ ಸೋರುತ್ತಿತ್ತು...



ಕೆರೋಲಿನ್ ವಿಲ್ಲೋ 
ಜಾನ್ ವೇವರ್
ಮಿಚೆಲ್ ಮೆಕ್‍ಶಿ
ರೋನಿ ಅಲ್ಫಾಂಡರಿ
ಡೀನ್ ಮ್ಯಾಥ್ಯೂ
ಟೆಗಾನ್ ಬ್ರಾಝಿಮರ್
ಈ ಆರೂ ಮಂದಿ ರಾಜಕಾರಣಿಗಳಲ್ಲ, ಯೋಧರಲ್ಲ, ವಿಜ್ಞಾನಿಗಳಲ್ಲ, ಧರ್ಮಗುರುಗಳಲ್ಲ, ಶ್ರೀಮಂತರೂ ಅಲ್ಲ. 2016 ಮಾರ್ಚ್ 15ರ ತನ್ನ ಸಂಚಿಕೆಯಲ್ಲಿ ಬ್ರಿಟನ್ನಿನ ದ ಗಾರ್ಡಿಯನ್ ಪತ್ರಿಕೆಯು ಇವರ  ಮಾತುಗಳನ್ನು ಪ್ರಕಟಿಸಿತ್ತು. ಇವರೆಲ್ಲರ ಆಸಕ್ತಿಯ ಕ್ಷೇತ್ರ ಒಂದೇ- ಸಮಾಜ ಸೇವೆ. ‘ವಿಶ್ವ ಸಮಾಜ ಸೇವಾ ದಿನ’ದ ಹಿನ್ನೆಲೆಯಲ್ಲಿ ಬ್ರಿಟನ್‍ನಲ್ಲಿ ಇವರೆಲ್ಲರನ್ನೂ ಒಂದೇ ಕಡೆ ಸೇರಿಸಲಾಗಿತ್ತು ಮತ್ತು ಅ ನುಭವಗಳನ್ನು ಹಂಚಿ ಕೊಳ್ಳುವುದಕ್ಕೆ ವೇದಿಕೆಯನ್ನು ಒದಗಿಸಲಾಗಿತ್ತು. ಬ್ರಿಟನ್, ಅಮೇರಿಕ, ನ್ಯೂಝಿಲ್ಯಾಂಡ್, ಇಸ್ರೇಲ್, ಆಸ್ಟ್ರೇಲಿಯಾ ಮುಂತಾದ ರಾಷ್ಟ್ರಗಳಲ್ಲಿ ಚದುರಿ ಹೋಗಿರುವ ಇವರೆಲ್ಲ ಈ  ಸಮಾಜವನ್ನು ಸಹಜವಾಗಿ ನೋಡುವುದಿಲ್ಲ. ಆರಾಮವಾಗಿ ತಿಂದುಂಡು ಬದುಕುವ ಅವಕಾಶ ಇದ್ದೂ ಹೀಗೆ ತಿಂದುಂಡು ಬದುಕಲಾಗದ ಮನು ಷ್ಯರ ಬಗ್ಗೆ ಇವರು ಆಲೋಚಿಸುತ್ತಿರುತ್ತಾರೆ. 14  ವರ್ಷದವಳಿದ್ದಾಗಲೇ ಕೆರೋಲಿನ್ ವಿಲ್ಲೋ ಅವರು ತಾನು ಏನು ಆಗಬೇಕೆಂಬುದನ್ನು ನಿರ್ಧರಿಸಿದ್ದರಂತೆ.
1. ಪತ್ರಕರ್ತ
2. ನಟಿ
3. ಸಮಾಜ ಸೇವಕಿ
ಕೇವಲ 22 ವರ್ಷದಲ್ಲೇ ಅವರು ಸಮಾಜ ಸೇವೆಯನ್ನು ಆಯ್ಕೆ ಮಾಡಿಕೊಂಡರು. ತನ್ನ ಮನಸ್ಸಿನಿಂದ ನಟಿ ಮತ್ತು ಪತ್ರಕರ್ತೆಯನ್ನು ಹೊರಹಾಕಿದರು. ಹಾಗಂತ, ಇವರು ಪ್ರತಿನಿಧಿಸುವ ರಾಷ್ಟ್ರಗಳೇನೂ ಬಡವ ಅಲ್ಲ. ಬ್ರಿಟನ್, ಅಮೇರಿಕ, ಇಸ್ರೇಲ್, ನ್ಯೂಝಿಲ್ಯಾಂಡ್, ಅಸ್ಟ್ರೇಲಿಯಾ- ಇವೆಲ್ಲ ವಿಶ್ವ ರಾಷ್ಟ್ರಗಳ ಭೂಪಟದಲ್ಲಿ ಎತ್ತರದ ಸ್ಥಾನದಲ್ಲಿ ಇರುವಂಥವು. ಬಡತನವನ್ನು ಮೆಟ್ಟಿ ನಿಂತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಹೆಸರು ನಮೂದಿಸಿಕೊಂಡಿರುವ ರಾಷ್ಟ್ರಗಳಿವು. ಆದರೂ ಅಶಕ್ತರು, ಬಡವರು, ಇನ್ನೊಬ್ಬರನ್ನು ಅವಲಂಬಿಸಿ ಬದುಕಬೇಕಾದವರು ಈ ರಾಷ್ಟ್ರಗಳಲ್ಲೂ ಧಾರಾಳ ಇದ್ದಾರೆ.  ಸರಕಾರದ ಯೋಜನೆಗಳೊಂದೇ ಎಲ್ಲದಕ್ಕೂ ಪರಿಹಾರ ಅಲ್ಲ. ಸಮಾಜವನ್ನು ಅಭಿವೃದ್ಧಿಗೊಳಿಸುವಲ್ಲಿ ಉದಾರ ಮನಸುಗಳು, ಸಮಾಜದ ಸೇವೆಗೈಯುವ ಹೃದಯಗಳ ಅಗತ್ಯ ಇರುತ್ತದೆ. ಈ ಮೇಲಿನ  6 ಮಂದಿಯೂ ಸಮಾಜ ಸೇವೆಯನ್ನು ತಮ್ಮ ಕಾರ್ಯಕ್ಷೇತ್ರವಾಗಿ ಆಯ್ದುಕೊಂಡಿರುವುದಕ್ಕೆ ಕಾರಣವೂ ಇದುವೇ.
ಇತ್ತೀಚೆಗೆ ನಾನು ಎರಡು ಕಾರ್ಯಕ್ರಮಗಳಲ್ಲಿ ಭಾಗಿಯಾದೆ. ಇದರಲ್ಲಿ ಒಂದು, ಹೊಸ ಮನೆಯ ಹಸ್ತಾಂತರ ಕಾರ್ಯಕ್ರಮವಾದರೆ ಇನ್ನೊಂದು, ಅಂಗಡಿಯೊಂದರ ಹಸ್ತಾಂತರ ಕಾರ್ಯಕ್ರಮ. ವಿಶೇಷ  ಏನೆಂದರೆ,
ಈ ಎರಡೂ ಕಾರ್ಯಕ್ರಮಗಳ ಫಲಾನುಭವಿಗಳು ಮಹಿಳೆಯರು. ಈ ಮನೆ ಹಸ್ತಾಂತರಕ್ಕಿಂತ ಕೆಲವು ಸಮಯಗಳ ಹಿಂದೆ ಗೆಳೆಯರ ಜೊತೆ ಬೆಳಿಗ್ಗೆ ಒಂದು ಮನೆಗೆ ನಾನು ಭೇಟಿ ಕೊಟ್ಟಿದ್ದೆ. ಮೆಲ್ಲಗೆ  ಮಳೆ ಸುರಿಯುತ್ತಿತ್ತು. ಆದರೆ ಆ ಮನೆ ಮಳೆಯನ್ನೂ ತಾಳಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. 10, 8 ಮತ್ತು 5ನೇ ಕ್ಲಾಸಿನಲ್ಲಿ ಕಲಿಯುತ್ತಿರುವ ಮಕ್ಕಳು (ಇವರಲ್ಲಿ ಎರಡನೆಯವಳು ಹೆಣ್ಣು) ಮಂಚದಂಥ ಒಂದು ರಚನೆಯಲ್ಲಿ  ಒಟ್ಟಿಗೆ ಮಲಗಿದ್ದರು. ಮೇಲಿನಿಂದ ಅವರ ಮೇಲೆಯೇ ನೀರು ಸೋರುತ್ತಿತ್ತು. ಹಾಗಂತ, ಅಲ್ಲಿಂದ ಎದ್ದು ಬೇರೆ ಕಡೆ ಮಲಗೋಣವೆಂದರೆ ಅಲ್ಲಿ ಸೂಕ್ತ ಜಾಗವೂ ಇಲ್ಲ. ಮಳೆ ನೀರು ಬೀಳುವಾಗ ಮತ್ತಷ್ಟು  ಮುದುಡಿ ಕೊಳ್ಳುವುದು ಮತ್ತು ಮಲಗುವುದು ಆ ಮಕ್ಕಳಿಗೆ ಅಭ್ಯಾಸ ಆದ ಹಾಗಿತ್ತು. ಪುಟ್ಟ ಬಲ್ಬೊಂದು ಉರಿಯುತ್ತಿತ್ತಾದರೂ ಕಪ್ಪು ಬಣ್ಣಕ್ಕೆ ತಿರುಗಿರುವ ಮನೆಯನ್ನು ಬೆಳಗಿಸುವುದಕ್ಕೆ ಅದರಿಂದ  ಸಾಧ್ಯವಿರಲಿಲ್ಲ. ಅಡುಗೆ ಕೋಣೆ, ಮಲಗುವ ಕೋಣೆ, ಬಟ್ಟೆಗಳನ್ನಿಡುವ ಜಾಗ, ಪಾತ್ರೆ-ಪಿಂಗಾಣಿಗಳನ್ನು ಎತ್ತಿಡುವ ಜಾಗ, ಒಲೆ, ಶೌಚಾಲಯಕ್ಕೆ ಇರುವ ಬಾಗಿಲು- ಯಾವುದಕ್ಕೂ ಪ್ರತ್ಯಪ್ರತ್ಯೇಕ ಅನ್ನುವ  ಜಾಗ ಇರಲಿಲ್ಲ. ಅವವೇ ಸ್ವತಃ ಜಾಗ ಮಾಡಿಕೊಂಡಂತೆ ಕಂಡಿತು. ಮನೆ ಅನ್ನುವಾಗ ನಮ್ಮಲ್ಲಿ ಯಾವ ದೃಶ್ಯ ಮೂಡುತ್ತದೋ ಆ ದೃಶ್ಯಕ್ಕೆ ಯಾವ ರೀತಿಯಲ್ಲೂ ಹೋಲಿಕೆ ಯಾಗದ ಮತ್ತು ಮನೆ ಅ ನ್ನುವ ಪದದೊಳಗೆ ಇರಲು ಒಪ್ಪದ ರಚನೆ ಅದು. ಒಂದಷ್ಟು ಭಾಗ ಟರ್ಪಾಲು ಹಾಸಿದೆ. ಆದರೆ ಮಳೆಯನ್ನು ಸಂಪೂರ್ಣವಾಗಿ ತಡೆದು ನಿಲ್ಲಿಸುವ ಸಾಮಥ್ರ್ಯ ಆ ಟರ್ಪಾಲ್‍ಗೂ ಇಲ್ಲ. ಇನ್ನು, ಮನೆಯ  ಗೋಡೆ ಮತ್ತು ನೆಲ ಸುಣ್ಣ ಬಣ್ಣ ಕಂಡಿಲ್ಲ. ಅಷ್ಟೇ ಅಲ್ಲ, ನೆಲವು ಮಣ್ಣಿನ ಹೊರತು ಬೇರೇನನ್ನೂ ನೋಡಿಲ್ಲ. ಬೆಳೆದು ನಿಂತ ಇಬ್ಬರು ಹೆಣ್ಣು ಮಕ್ಕಳು ಮತ್ತು ತಾಯಿ ಸಹಿತ ಈ ಮನೆಯಲ್ಲಿ 6 ಮಂದಿ  ಸದಸ್ಯರು. ಪುರುಷ ಇಲ್ಲ. ವಿಶೇಷ ಏನೆಂದರೆ, ಈ ಮನೆಯೂ ಬಾಡಿಗೆಯದ್ದು. ಪ್ರತಿ ತಿಂಗಳು ಬಾಡಿಗೆ ಮೊತ್ತವನ್ನು ಪಾವತಿಸುತ್ತಲೇ ಅವರು ಆ ಮನೆಯಲ್ಲಿ ಉಳಿದಿದ್ದಾರೆ. ಬೀಡಿ ಸುರುಟುವುದರ  ಹೊರತು ಬೇರೆ ಯಾವ ಆದಾಯ ಮೂಲವೂ ಆ ಮನೆಗಿಲ್ಲ. ಅಂದಹಾಗೆ,
ಇದು ಒಂದು ಉದಾಹರಣೆ ಅಷ್ಟೇ. ಹುಡುಕುವ ಕಣ್ಣು ನಿಮ್ಮದಾದರೆ ಇಂಥ ಅಸಂಖ್ಯ ಮನೆಗಳು ನಿಮಗೂ ಸಿಗಬಹುದು. ಹಾಗಂತ, ಅವರ ಆ ಸ್ಥಿತಿಗೆ ಯಾರು ಕಾರಣ ಅನ್ನುವ ಪ್ರಶ್ನೆಗೆ ಏಕರೂಪದ  ಉತ್ತರ ಲಭ್ಯವಾಗುವ ಸಾಧ್ಯತೆ ಕಡಿಮೆ. ಈ ಪ್ರಶ್ನೆಯನ್ನು ಆಲಿಸಿದ ವ್ಯಕ್ತಿಯ ಹುದ್ದೆ, ಜೀವನ ಕ್ರಮ, ಆಲೋಚನೆ, ಧಾರ್ಮಿಕ ಮತ್ತು ರಾಜಕೀಯ ಒಲವು ಇತ್ಯಾದಿಗಳನ್ನು ಉತ್ತರವು ಹೊಂದಿಕೊಂಡಿರುತ್ತದೆ.  ಅಷ್ಟಕ್ಕೂ, ಬಡತನವನ್ನು ಕತೆ, ಕಾದಂಬರಿ, ಕಾವ್ಯ, ನಾಟಕ, ಸಿನಿಮಾಗಳಲ್ಲಿ ರಮ್ಯವಾಗಿ ಕಟ್ಟಿ ಕೊಡುವುದು ಬೇರೆ, ಅದನ್ನು ಸ್ವತಃ ಅನುಭವಿಸುವುದು ಬೇರೆ. ಬಡತನದಲ್ಲೇ ಬದುಕಿ ಬಡತನದಲ್ಲೇ  ಸಾಯಬೇಕು ಅನ್ನುವ ಬಯಕೆ ಯಾರದ್ದೂ ಆಗಿರುವುದಿಲ್ಲ. ಯಾವುದೇ ಗುಡಿಸಲಿನ ವ್ಯಕ್ತಿಯು ತಾನು ಹೀಗೆಯೇ ಗುಡಿಸಲಿನಲ್ಲೇ ಸದಾ ಬದುಕುತ್ತಿರಬೇಕು ಎಂದು ಪ್ರಾರ್ಥಿಸುತ್ತಾ ದಿನ ದೂಡುವುದನ್ನು  ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಪ್ರತಿ ಮನೆಯೂ ಇಂದಿನಿಂದ ಉತ್ತಮ ನಾಳೆಯ ತಲಾಶೆಯಲ್ಲಿರುತ್ತದೆ. ಅದಕ್ಕಾಗಿ ಶ್ರಮ ಪಡುತ್ತದೆ. ಯಾವುದೇ ಶ್ರೀಮಂತ ಕುಟುಂಬವು ತನ್ನ ಕೌಟುಂಬಿಕ ಸ್ಥಿತಿಗತಿಯನ್ನು  ಉತ್ತಮ ಪಡಿಸಲು ಪ್ರಯತ್ನಿಸುತ್ತದೆಯೇ ಹೊರತು ಇಂದಿಗಿಂತ ತನ್ನ ನಾಳಿನ ಜೀವನ ದುರ್ಬರ ಆಗಿರಬೇಕು ಎಂದು ಬಯಸುವುದಿಲ್ಲ. ಅದರಲ್ಲೂ ಶ್ರೀಮಂತ ಕುಟುಂಬಗಳಲ್ಲಿ ಆರ್ಥಿಕ ಸ್ಥಿತಿಗತಿಗಳಲ್ಲಿ  ಆಗುವ ಸಣ್ಣ ಏರಿಳಿತಗಳೂ ಭಾರೀ ಅವಘಡಕ್ಕೆ ಕಾರಣವಾಗುತ್ತಿರುವುದೂ ಸುಳ್ಳಲ್ಲ. ಆರ್ಥಿಕ ಕುಸಿತವನ್ನು ತಡೆದುಕೊಳ್ಳಲಾಗದೇ ಸಾಮೂಹಿಕವಾಗಿ ಬದುಕು ಮುಗಿಸುವ ಘಟನೆಗಳು ಆಗಾಗ  ಸಂಭವಿಸುತ್ತಿರುವುದೇ ಇದಕ್ಕೆ ಪುರಾವೆ.
ಬಡವ ಮತ್ತು ಶ್ರೀಮಂತ ಎಂಬುದು ನಿಜವಾಗಿ ಸಮಾಜದ ಎರಡು ಧ್ರುವಗಳು. ಮನುಷ್ಯರು ಎಂಬ ಏಕೈಕ ಸಮಾನ ಅಂಶವನ್ನು ನಿರ್ಲಕ್ಷಿಸಿ ನೋಡಿದರೆ ಇವರಿಬ್ಬರ ನಡುವೆ ಅನೇಕ ಅಸಮಾನ ಅಂಶಗಳು ಬಾಹ್ಯನೋಟಕ್ಕೇ ಎದ್ದು ಕಾಣುತ್ತವೆ. ಅವರ ಮಾತಿನಲ್ಲಿ, ಹುದ್ದೆಯಲ್ಲಿ, ಉಡುಪಿನಲ್ಲಿ, ಪ್ರಯಾಣದಲ್ಲಿ, ಆಹಾರದಲ್ಲಿ, ಅವರು ತೆರಳುವ ಹೊಟೇಲಿನಲ್ಲಿ, ಪಾಲುಗೊಳ್ಳುವ ಕಾರ್ಯಕ್ರಮಗಳಲ್ಲಿ... ಹೀಗೆ  ಈ ಅಸಮಾನ ಅಂಶಗಳ ಪಟ್ಟಿ ದೀರ್ಘ ಇದೆ. ಬಡವ ಹೋಗುವ ಹೋಟೆಲೇ ಬೇರೆ, ಶ್ರೀಮಂತ ಹೋಗುವ ಹೋಟೆಲೇ ಬೇರೆ. ಮದುವೆಗೆ ಬಡವ ಉಡುವ ಉಡುಪೇ ಬೇರೆ, ಶ್ರೀಮಂತ ಉಡುವ ಉಡುಪೇ ಬೇರೆ.  ದುರಂತ ಏನೆಂದರೆ, ಅನೇಕ ಬಾರಿ ಬಾಹ್ಯ ನೋಟದ ಈ ಅಸಮಾನ ಅಂಶಗಳೇ ಪ್ರಾಮುಖ್ಯತೆಯನ್ನು ಪಡೆದುಕೊಂಡು ಬೌದ್ಧಿಕ ಮಟ್ಟವನ್ನು  ಅಳೆಯುವುದಕ್ಕೂ ಇವೇ ಅಳತೆಗೋಲಾಗಿ ಬಿಡುವುದೂ ಇದೆ. ಒಳ್ಳೆಯವರು ಮತ್ತು ಕೆಟ್ಟವರು ಎಂಬ ವಿಂಗಡನೆಗೂ ಬಾಹ್ಯನೋಟದ ಈ ವ್ಯತ್ಯಾಸವೇ ಮಾನದಂಡವಾಗಿರುವುದೂ ಇದೆ.
ಅಂದಹಾಗೆ, ‘ಬಡಕುಟುಂಬದ ಪ್ರತಿಭೆ’ ಎಂಬ ಪದಪ್ರಯೋಗವೊಂದು ನಮ್ಮಲ್ಲಿ ಇದೆ. ಬಡಕುಟುಂಬದಲ್ಲೂ ಪ್ರತಿಭೆಗಳಿವೆ ಅಥವಾ ಬಡತನವು ಪ್ರತಿಭೆಗೆ ಅಡ್ಡಿಯಾಗಿಲ್ಲ ಎಂಬುದನ್ನು ಸೂಚ್ಯವಾಗಿ  ತಿಳಿಸುವುದು ಈ ಪದಪ್ರಯೋಗದ ಉದ್ದೇಶವಾಗಿರಬಹುದಾದರೂ ‘ಪ್ರತಿಭೆಗಳೆಲ್ಲ ಶ್ರೀಮಂತ ಮನೆಯ ಸೊತ್ತಾಗಿ ಬಿಟ್ಟಿದೆ’ ಎಂಬ ಧ್ವನ್ಯಾರ್ಥವೂ ಈ ಪದಪ್ರಯೋಗಕ್ಕೆ ಇದೆ ಎಂಬುದೂ ಅಷ್ಟೇ ಸತ್ಯ.  ನಿಜವಾಗಿ, ಬಡತನವು ಅತ್ಯಂತ ಹಾನಿಯನ್ನುಂಟು ಮಾಡುವುದು ಆ ಮನೆಯ ಮಕ್ಕಳ ಮೇಲೆ. ಆ ಮಕ್ಕಳು ಪ್ರತಿಭಾ ಸಂಪನ್ನವಾಗಿದ್ದೂ ಆ ಪ್ರತಿಭೆಯನ್ನು ಪೋಷಿಸುವ ಸೂಕ್ತ ವಾತಾವರಣ ಆ ಮನೆಯಲ್ಲಿರುವುದಿಲ್ಲ. ಅನೇಕ ಬಾರಿ ಪ್ರತಿಭೆಯನ್ನು ಪೋಷಿಸಬೇಕು ಅನ್ನುವ ತಿಳು ವಳಿಕೆಯೇ ಮನೆಯವರಲ್ಲಿರುವುದಿಲ್ಲ. ಅಂಥ ಆಲೋಚನೆಗೆ ಬಿಡುವೂ ಇರುವುದಿಲ್ಲ. ಗುಣಮಟ್ಟದ ಶಿಕ್ಷಣ ಒದಗಿಸುವುದಕ್ಕೆ ಮತ್ತು  ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಪ್ರೋತ್ಸಾಹಿಸುವುದಕ್ಕೆ ಸಾಮರ್ಥ್ಯವಾಗಲಿ, ಉತ್ಸಾಹವಾಗಲಿ ಇರುವು ದಿಲ್ಲ. ಇಂಥ ಮನೆಗಳ ಮಕ್ಕಳ ಪ್ರಾಥಮಿಕ ಶಾಲೆಯ ಶಿಕ್ಷಣವು ಉನ್ನತ ಶಿಕ್ಷಣವಾಗಿ  ಪರಿವರ್ತಿತವಾಗುವುದು ಅನೇಕ ಬಾರಿ ಅಸಂಭವವಾಗುವ ಸಾಧ್ಯತೆಯೇ ಹೆಚ್ಚು. ಆದ್ದರಿಂದಲೇ, ಶ್ರೀಮಂತರ ಮನೆಯಲ್ಲಿ ಸೃಷ್ಟಿಯಾಗುವ ಪ್ರತಿಭೆಗಳಷ್ಟು ಧಾರಾಳವಾಗಿ ಬಡವರ ಮನೆಯಲ್ಲಿ ಪ್ರತಿಭೆಗಳು  ಸೃಷ್ಟಿಯಾಗುವುದಿಲ್ಲ.
ಈ ಸ್ಥಿತಿಯಲ್ಲಿ ಬದಲಾವಣೆ ಉಂಟಾಗಬೇಕಾದರೆ ‘ಸಮಾಜ ಸೇವೆ’ ಅನ್ನುವ ಪರಿಕಲ್ಪನೆಯು ಹೊಸ ದೃಶ್ಯರೂಪವಾಗಿ ಸಮಾಜದ ನಡುವೆ ಹರಿದಾಡಬೇಕಾದ ಅಗತ್ಯವಿದೆ. ಶ್ರೀಮಂತರು ಮತ್ತು ಬಡವರ  ನಡುವಿನ ಅನುಪಾತ ಬಹಳ ದೊಡ್ಡದು. ಶ್ರೀಮಂತರಿಗೆ ಹೋಲಿಸಿದರೆ ಬಡವರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಿದೆ. ಈ ಅಂತರ ತಗ್ಗಬೇಕು. ಸರ್ವರಿಗೂ ಗುಣಮಟ್ಟದ ಬದುಕು, ಗುಣಮಟ್ಟದ ಶಿಕ್ಷಣ  ಲಭ್ಯವಾಗಬೇಕು. ಹಾಗಂತ, ಆಶಯವೊಂದೇ ಈ ಬಯಕೆಯನ್ನು ಪೂರ್ತಿಗೊಳಿಸಲಾರದು. ಈ ವಿಷಯದಲ್ಲಿ ಸರಕಾರದ ಹೊಣೆಗಾರಿಕೆ ದೊಡ್ಡದಿದೆ ನಿಜ. ಆದರೆ, ಸರಕಾರವೊಂದೇ ಈ ಸ್ಥಿತಿಯಲ್ಲಿ  ಅಮೂಲಾಗ್ರ ಬದಲಾವಣೆಯನ್ನು ತರುತ್ತದೆ ಎಂಬ ನಿರೀಕ್ಷೆ ತಪ್ಪು. ಬಡವರ ಸ್ಥಿತಿಯು ಶ್ರೀಮಂತರ ಮನಸ್ಸನ್ನು ಕಲಕಿ ಬಿಡಲು ಯಶಸ್ವಿಯಾಗುವವರೆಗೆ ಈ ಸ್ಥಿತಿಯಲ್ಲಿ ದೊಡ್ಡ ಬದಲಾವಣೆ ಸಾಧ್ಯವಿಲ್ಲ.  ಸಮಾಜಸೇವೆ ಅನ್ನುವ ಪರಿಕಲ್ಪನೆಗೆ ಮಹತ್ವ ಬರುವುದು ಈ ಕಾರಣದಿಂದ. ಅಂದಹಾಗೆ, ಬಡವರಿಗೆ ನೆರವಾಗುವುದರಲ್ಲಿ ಎರಡು ರೀತಿಗಳಿವೆ.
1. ವೈಯಕ್ತಿಕವಾಗಿ ನೆರವಾಗುವುದು.
2. ಸಂಘಟಿತವಾಗಿದ್ದುಕೊಂಡು ನೆರವಾಗುವುದು.
ಶ್ರೀಮಂತರು ಬಡವರಿಗೆ ವೈಯಕ್ತಿಕ ನೆಲೆಯಲ್ಲಿ ನೆರವಾಗುವುದಕ್ಕೆ ಬಹಳ ಪುರಾತನ ಇತಿಹಾಸವಿದೆ. ತನ್ನ ಮನೆಯ ಪಕ್ಕದ ಅಥವಾ ತನ್ನ ಗಮನಕ್ಕೆ ಬಂದ ಬಡತನದ ಪ್ರಕರಣಗಳಿಗೆ ಸಂಬಂಧಿಸಿ  ಶ್ರೀಮಂತರು ವೈಯಕ್ತಿಕವಾಗಿ ನೆರವಾಗಿರುವ ಪ್ರಥಮ ಪ್ರಕರಣ ಯಾವಾಗ ಪ್ರಾರಂಭವಾಯಿತು ಎಂಬುದಕ್ಕೆ ನಿರ್ದಿಷ್ಟ ದಾಖಲೆಗಳು ಐತಿಹಾಸಿಕವಾಗಿ ಇಲ್ಲ. ಆದರೆ, 1869ರಲ್ಲಿ ಮೊಟ್ಟಮೊದಲ ಬಾರಿ ಸಮಾಜ ಸೇವೆಯನ್ನು ಸಂಘಟಿತ ರೂಪಕ್ಕೆ ತರುವ ಪ್ರಯತ್ನ ನಡೆಯಿತು ಎಂದು ದಾಖಲೆಗಳು ಹೇಳುತ್ತವೆ. ಬ್ರಿಟನ್ನಿನ ಹೆಲೆನ್ ಬೊಸಾ ನ್ಕೆಟ್ ಮತ್ತು ಅಕ್ಟೋವಿಯಾ ಹಿಲ್ ಅವರು ಸ್ಥಾಪಿಸಿದ ‘ಚಾರಿಟಿ ಆರ್ಗನೈಝೇ ಶನ್ ಸೊಸೈಟಿ’ಯು ಈ ನಿಟ್ಟಿನಲ್ಲಿ ಪ್ರಥಮ ಪ್ರಯೋಗವಾಗಿದೆ ಎಂದು ಹೇಳಲಾಗುತ್ತದೆ. ಬಡವರು, ಅವರ ಸಾಮಾಜಿಕ  ಅಗತ್ಯಗಳು ಹಾಗೂ ಅವರನ್ನು ಬಡತನದಿಂದ ಮೇಲೆ ತ್ತುವ ಬಗ್ಗೆ ವೈಜ್ಞಾನಿಕವಾಗಿ ಮತ್ತು ವ್ಯವಸ್ಥಿತವಾಗಿ ರೂಪುರೇಶೆಗಳನ್ನು ಸಿದ್ಧಪಡಿಸಿ ಕೆಲಸ ಮಾಡುವ ಸಂಘಟಿತ ಪ್ರಯತ್ನಗಳಲ್ಲಿ ‘ಚಾರಿಟಿ ಆರ್ಗ ನೈಝೇಶನ್ ಸೊಸೈಟಿ’ಯು ತೊಡಗಿಸಿಕೊಂಡಿತು ಎಂಬ ಅಭಿಪ್ರಾಯವಿದೆ.
ನಾನು ಭಾಗಿಯಾದ ಮನೆ ಹಸ್ತಾಂತರ ಕಾರ್ಯಕ್ರಮವು ಆರಂಭ ದಲ್ಲಿ ಉಲ್ಲೇಖಿಸಲಾದ ದುರ್ಬಲ ಮನೆಯವರಿಗೆ ಸಂಬಂಧಿಸಿದ್ದಾಗಿತ್ತು. ತಾಯಿ ಮತ್ತು 5 ಮಂದಿ ಮಕ್ಕಳಲ್ಲಿ ಹೊಸ ಭರವಸೆಯನ್ನು  ತುಂಬುವ ಕಾರ್ಯಕ್ರಮ ಅದಾಗಿತ್ತು. ಮನೆ ಹಸ್ತಾಂತರದ ವೇಳೆ ಅವರ ಕಣ್ಣಲ್ಲಿ ಮೂಡಿದ ಮಿಂಚು ಯಾವ ವಿದ್ಯುತ್ ಬೆಳಕಿಗೆ ಸರಿಗಟ್ಟದು. ಅವರ ಕಣ್ಣಿನ ಅಶ್ರುಧಾರೆಗೆ ಯಾವ ನೀರೂ ಸಾಟಿಯಾಗದು.  ಅಂಗಡಿ ಹಸ್ತಾಂತರ ಕಾರ್ಯಕ್ರಮವೂ ಇಂಥದ್ದೇ ಒಂದು ಪ್ರಯೋಗ. ನಾಲ್ವರು ಮಹಿಳೆಯರು ಮತ್ತು ಅವರ ಮಕ್ಕಳು ಮಾತ್ರ ಇರುವ ಕುಟುಂಬಕ್ಕೆ ಆದಾಯ ಮೂಲವಾಗಿ ಮನೆಯೆದುರೇ  ಅಂಗಡಿಯೊಂದನ್ನು ಕಟ್ಟಿಕೊಟ್ಟು ಬದುಕಿಗೆ ನೆರವಾದ ಸನ್ನಿವೇಶ. ಸಮಾಜ ಸೇವೆಯು ಸಂಘಟಿತ ಸ್ವರೂಪವನ್ನು ಪಡೆಯುವಾಗ ಆಗುವ ಬದಲಾವಣೆಗಳಿವು. ಅಂದಹಾಗೆ,
ಇವೆರಡನ್ನೂ ಸಾಧ್ಯವಾಗಿಸಿದ ಮಂಗಳೂರು ಜಮಾಅತೆ ಇಸ್ಲಾಮೀ ಹಿಂದ್‍ನ ಸಮಾಜ ಸೇವಾ ವಿಭಾಗಕ್ಕೆ ಕೃತಜ್ಞತೆಗಳು.

Tuesday, October 8, 2019

NRC, NRIC, NPR, CAB ಮತ್ತು ಭಾರತೀಯರ ಆತಂಕಗಳು



NRC (ರಾಷ್ಟ್ರೀಯ ಪೌರತ್ವ ನೋಂದಣಿ)ಯ ಕುರಿತಂತೆ ಅಸಂಖ್ಯ ಮಂದಿಯಲ್ಲಿ ಗೊಂದಲವಿದೆ. ಹಾಗಂತ, ಈ ಗೊಂದಲ ಶೂನ್ಯದಿಂದ ಹುಟ್ಟಿಕೊಂಡದ್ದಲ್ಲ. ಈ ಗೊಂದಲಕ್ಕೆ ಒಂದಕ್ಕಿಂತ ಹೆಚ್ಚು ಕಾರಣಗಳೂ ಇವೆ.
1. ಅಸ್ಸಾಮ್‍ನಿಂದ ಕೇಳಿ ಬರುತ್ತಿರುವ ಸುದ್ದಿಗಳು. ದೇಶ ದಲ್ಲಿ ಸದ್ಯ NRC ಜಾರಿಯಲ್ಲಿರುವುದು ಅಸ್ಸಾಮ್‍ನಲ್ಲಿ ಮಾತ್ರ. 2019 ಆಗಸ್ಟ್ 1ರಂದು ಬಿಡುಗಡೆಗೊಂಡ NRC ಅಂತಿಮ ಕರಡು ಪಟ್ಟಿಯಲ್ಲಿ 19,06,857 ಮಂದಿಯನ್ನು ಭಾರತೀಯರಲ್ಲ  ಎಂದು ಘೋಷಿಸಲಾಗಿದೆ. ಈ ಪಟ್ಟಿಯ ಬಿಡುಗಡೆಗಿಂತ ಮೊದಲು ಮಾಧ್ಯಮಗಳಲ್ಲಿ ಪ್ರತಿದಿನವೆಂಬಂತೆ ಪ್ರಕಟವಾಗುತ್ತಿದ್ದ ಅಸ್ಸಾಮ್ ನಾಗರಿಕರ ಗೋಳಿನ ಸುದ್ದಿಗಳಿಗೂ ಕೂಡ ಈ ಗೊಂದಲದಲ್ಲಿ ಪಾತ್ರ ಇದೆ. ಭಾರತೀಯ ಸೇನೆಯಲ್ಲಿ ದುಡಿದವರು, ಮಾಜಿ ರಾಷ್ಟ್ರಪತಿಗಳ ಮೊಮ್ಮಕ್ಕಳು ಸಹಿತ ಅನೇಕ ಚಿರಪರಿಚಿತರು ತಮ್ಮ ನಾಗರಿಕತ್ವವನ್ನು ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂಬ ವರದಿಗಳು ಜನಸಾಮಾನ್ಯರಲ್ಲಿ ಸಹಜ ಆತಂಕವನ್ನು ಹುಟ್ಟು ಹಾಕಿದೆ. ತಮ್ಮನ್ನು ಭಾರತೀಯರೆಂದು ಸಾಬೀತು ಪಡಿಸಲು ಏನೆಲ್ಲ ದಾಖಲೆಗಳನ್ನು ಮಂಡಿಸಬೇಕು ಮತ್ತು ಈ ದಾಖಲೆಗಳಲ್ಲಿ ಸ್ಪೆಲ್ಲಿಂಗ್ (ಪದ) ವ್ಯತ್ಯಾಸವಿದ್ದರೆ ಅದು ತಮ್ಮನ್ನು ಅಭಾರತೀಯ ರೆಂದು ಕರೆದು ಹೊರಹಾಕುವುದಕ್ಕೆ ಆಧಾರವಾಗುತ್ತದೋ ಎಂಬುದೂ ಈ ಆತಂಕದಲ್ಲಿ ಸೇರಿಕೊಂಡಿದೆ.  ಉದಾಹರಣೆಗೆ ಜನನ ಸರ್ಟಿಫಿಕೇಟ್‍ನಲ್ಲಿ ಮುಹಮ್ಮದ್ ಎಂಬ ಹೆಸರನ್ನು Mohammad ಎಂದು ದಾಖಲಿಸಿದ್ದು, ಶಾಲಾ ಸರ್ಟಿಫಿಕೇಟ್‍ನಲ್ಲಿ Mahammad ಎಂದು ದಾಖಲಿಸಿದ್ದರೆ Mo ಮತ್ತು Ma ಗಳ ಈ ವ್ಯತ್ಯಾಸವು ಭಾರತೀಯ ಮತ್ತು  ಅಭಾರತೀಯಗೊಳಿಸುವುದಕ್ಕೆ ಕಾರಣ ಆಗಬಲ್ಲುದೋ ಅನ್ನುವ ಪ್ರಶ್ನೆ ಇದು. ಅಸ್ಸಾಮ್‍ನಲ್ಲಿ ನಾಗರಿಕರ ದಾಖಲೆಗಳನ್ನು ಪರಿಶೀಲಿಸಿ ಅವರು ಭಾರತೀಯರೋ ವಿದೇಶಿಗಳೋ ಎಂದು ತೀರ್ಮಾನಿಸಲು ನೇಮಕವಾಗಿರುವ ವಿದೇಶಿ ನ್ಯಾಯ ಮಂಡಳಿಯು (FT) ಇಂಥ ವ್ಯತ್ಯಾಸಗಳನ್ನು ಗಂಭೀರವಾಗಿ ಪರಿಗಣಿಸಿವೆ ಅನ್ನುವ ಸುದ್ದಿಗಳಿಗೂ ಈ ಆತಂಕದಲ್ಲಿ ಪಾಲು ಇದೆ.
2. NRC ಯನ್ನು ದೇಶದಾದ್ಯಂತ ಜಾರಿಗೊಳಿಸುತ್ತೇವೆ ಎಂಬ ಬಿಜೆಪಿಯ ಘೋಷಣೆ. 2019 ಸೆಪ್ಟೆಂಬರ್ 18ರಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಮತ್ತೊಮ್ಮೆ ಈ ಘೋಷಣೆಯನ್ನು ಮಾಡಿದ್ದಾರೆ. ಈ ಘೋಷಣೆಯ ತಕ್ಷಣದ ಪರಿಣಾಮವು  ಪಶ್ಚಿಮ ಬಂಗಾಲದಲ್ಲಿ ಈಗಾಗಲೇ ವ್ಯಕ್ತವಾಗಿದೆ. ತಮ್ಮ ದಾಖಲೆಗಳನ್ನು ಪಡೆದುಕೊಳ್ಳಲು ಮತ್ತು ಸರಿಪಡಿಸಲು ಜನರು ನೋಂದಣಿ ಕೇಂದ್ರಗಳ ಮುಂದೆ ಸರತಿಯಲ್ಲಿ ನಿಂತಿದ್ದಾರೆ. ನಾಲ್ಕೈದು ಮಂದಿಯ ಸಾವೂ ಸಂಭವಿಸಿದೆ.
3. ಪೌರತ್ವ ತಿದ್ದುಪಡಿ ಮಸೂದೆ (CAB). ಈ ಮಸೂದೆಯ ಪ್ರಕಾರ ಧಾರ್ಮಿಕ ಹಿಂಸೆಗೆ ತುತ್ತಾಗಿ ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬಂದ ಹಿಂದೂ, ಕ್ರೈಸ್ತ, ಬೌದ್ಧ, ಜೈನ, ಫಾರ್ಸಿ, ಸಿಕ್ಖ್ ಸಮುದಾಯದ ಜ ನರಿಗೆ ಭಾರತೀಯ ಪೌರತ್ವವನ್ನು ನೀಡಲಾಗುವುದು. ಆದರೆ ಈ ಅವಕಾಶ ಮುಸ್ಲಿಮರಿಗೆ ಇಲ್ಲ. ಈ ಮೇಲಿನ ರಾಷ್ಟ್ರಗಳಿಂದ ಬಂದ ಮುಸ್ಲಿಮೇತರರು 5 ವರ್ಷಗಳ ಕಾಲ ಭಾರತದಲ್ಲಿ ನೆಲೆಸಿದ್ದರೆ ಅವರನ್ನು ಭಾರತೀಯ ನಾಗರಿಕರಾಗಿ ಪರಿಗಣಿಸಲಾಗುವುದು. ಹೀಗೆ ಪರಿಗಣಿಸುವುದಕ್ಕೆ ದಾಖಲೆ ಪತ್ರಗಳ ಅಗತ್ಯವೂ ಇಲ್ಲ. 2019 ಸೆಪ್ಟೆಂಬರ್ 9ರಂದು ಅಸ್ಸಾಮ್‍ನ ಗುವಾಹಟಿಯಲ್ಲಿ ನಡೆದ ಈಶಾನ್ಯ ರಾಜ್ಯಗಳ ಪ್ರಜಾತಾಂತ್ರಿಕ ಒಕ್ಕೂಟ (NEDA)ದ 4ನೇ ಸಭೆಯಲ್ಲಿ ಅಮಿತ್ ಶಾ ಅವರು  CABಯ ಜಾರಿಯ ಕುರಿತು ಮತ್ತೊಮ್ಮೆ ಘೋಷಣೆಯನ್ನು ಮಾಡಿದ್ದಾರೆ. ಅಂದಹಾಗೆ, 2016 ಜುಲೈ 15ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಕೇಂದ್ರ ಸರಕಾರವು ಪೌರತ್ವ ತಿದ್ದು ಪಡಿ ಮಸೂದೆ(CAB)ಯ ಬಗ್ಗೆ ಪಾರ್ಲಿಮೆಂಟ್‍ನಲ್ಲಿ ಪ್ರಸ್ತಾಪ  ಮಾಡಿತ್ತು. ಮಾತ್ರವಲ್ಲ, ಅದರ ಕರಡು ಪರಿಶೀಲನೆಗಾಗಿ ಬಿಜೆಪಿ ಸಂಸದ ರಾಜೇಂದ್ರ ಅಗರ್‍ವಾಲ್ ಅವರ ನೇತೃತ್ವದಲ್ಲಿ ಜಂಟಿ ಪಾರ್ಲಿಮೆಂಟ್ ಸಮಿತಿಯನ್ನು (PAC) ರಚಿಸಿತ್ತು. 2019 ಜನವರಿ 8ರಂದು ಈ ಪೌರತ್ವ ತಿದ್ದುಪಡಿ ಮಸೂದೆಯನ್ನು  ಸರಕಾರ ಪಾರ್ಲಿಮೆಂಟ್‍ನಲ್ಲಿ ಮಂಡಿಸಿ ಮಂಜೂರೂ ಮಾಡಿಕೊಂಡಿತ್ತು. ಆದರೆ ರಾಜ್ಯಸಭೆಯಲ್ಲಿ ಅಗತ್ಯ ಬಹುಮತ ಇಲ್ಲ ದಿರುವುದರಿಂದ ಮಂಡಿಸಿರಲಿಲ್ಲ. ಈ ಕಾರಣದಿಂದಾಗಿ ಈ ಮಸೂದೆ ಸದ್ಯ ಅನೂರ್ಜಿತ ಸ್ಥಿತಿಯಲ್ಲಿದೆ.
ನಿಜವಾಗಿ, ಅಸ್ಸಾಮ್‍ನಲ್ಲಿ ಜಾರಿಯಲ್ಲಿರುವ NRC ಗೂ ದೇಶದಾದ್ಯಂತ ಜಾರಿಯಾಗಲಿರುವ NRIC ಗೂ ಕೆಲವು ಮೂಲ ಭೂತ ವ್ಯತ್ಯಾಸಗಳಿವೆ. ಅಸ್ಸಾಮ್‍ನಲ್ಲಿ ಜಾರಿಯಲ್ಲಿರುವ NRC ಯನ್ನು NRCA (ಅಸ್ಸಾಮ್ ರಾಷ್ಟ್ರೀಯ ಪೌರತ್ವ ನೋಂದಣಿ)  ಅನ್ನುವುದೇ ಸೂಕ್ತ. ಯಾಕೆಂದರೆ, ಅಸ್ಸಾಮ್‍ನದ್ದು ಬಹುಸೂಕ್ಷ್ಮ ವಿಷಯ. ಅಲ್ಲಿನ ಪೌರತ್ವ ನೋಂದಣಿ ಪ್ರಕ್ರಿಯೆಗೂ ಅಲ್ಲಿನ ಭೌಗೋಳಿಕ, ಸಾಂಸ್ಕೃತಿಕ, ಸಾಮಾಜಿಕ ಸ್ಥಿತಿಗತಿಗೂ ನೇರ ಸಂಬಂಧ ಇದೆ. ತಮ್ಮ ಸಾಂಸ್ಕೃತಿಕ ಗುರುತು ಮತ್ತು ಅಸ್ಸಾಮಿ ಅನನ್ಯತೆಗೆ ಬಾಂಗ್ಲಾದೇಶಿ ನುಸುಳುಕೋರರಿಂದ ಹಾನಿ ಉಂಟಾಗಿದೆ ಎಂಬ ಭಾವನೆ ಅಸ್ಸಾಮ್‍ನ ಬುಡಕಟ್ಟು - ಮೂಲ ನಿವಾಸಿಗಳಲ್ಲಿ ಬಹು ಹಿಂದಿನಿಂದಲೇ ಇತ್ತು. ಈ ಹಿನ್ನೆಲೆಯಲ್ಲಿ ಬಂಗಾಳಿ ಭಾಷೆ ಮಾತಾಡುವ ಹಿಂದೂಗಳು ಮತ್ತು  ಮುಸ್ಲಿಮರ ಮೇಲೆ ಬಾಂಗ್ಲಾ ನುಸುಳುಕೋರರು ಎಂಬ ಹಣೆಪಟ್ಟಿಯನ್ನು ವಿವೇಚನಾರಹಿತವಾಗಿ ಅಂಟಿಸಿ ಪದೇ ಪದೇ ಪೀಡಿಸಲಾಗುತ್ತಿತ್ತು. 1980ರ ದಶಕದಲ್ಲಿ ನೆಲ್ಲಿ ಎಂಬ ಪ್ರದೇಶದಲ್ಲಿ ಮುಸ್ಲಿಮರ ಮೇಲೆ ನಡೆಸಲಾದ ಸಾಮೂಹಿಕ  ಹತ್ಯಾಕಾಂಡಕ್ಕೂ ಈ ಅಸಹನೆಗೂ ಸಂಬಂಧ ಇದೆ. ಅನಧಿಕೃತ ಮೂಲಗಳ ಪ್ರಕಾರ ಸುಮಾರು 10 ಸಾವಿರ ಮಂದಿಯನ್ನು ಭೀಕರವಾಗಿ ಹತ್ಯೆ ಮಾಡಲಾದ ಈ ಕೃತ್ಯದ ಹಿಂದೆ ತೀವ್ರ ಮುಸ್ಲಿಮ್ ದ್ವೇಷಿ ಅಪಪ್ರಚಾರದ ಕತೆಯಿದೆ. ನಿಜವಾಗಿ,  ಅಸ್ಸಾಮ್‍ಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ದೊಡ್ಡಮಟ್ಟದಲ್ಲಿ ವಲಸೆ ನಡೆದಿದೆ ಅನ್ನುವುದು ಸುಳ್ಳಲ್ಲ. ಅಸ್ಸಾಮ್ ಎಂಬುದು ಗುಡ್ಡಗಾಡು ಪ್ರದೇಶ. ಅಲ್ಲಿನ ಬ್ರಹ್ಮಪುತ್ರ ನದಿಗೆ ದೇಶದ ಇತರ ನದಿಗಳಿಗಿಂತ ಭಿನ್ನವಾದ ಮುಖ ಇದೆ. ಪ್ರವಾಹಕ್ಕೆ ಕುಪ್ರಸಿದ್ಧಿಯನ್ನು ಪಡೆದಿರುವ ನದಿ ಇದು. ಆದ್ದರಿಂದಲೇ ಈ ನದಿಯನ್ನು ಅವಲಂಬಿಸಿಕೊಂಡು ಬದುಕುತ್ತಿರುವ ಅಸಂಖ್ಯಾತ ಮಂದಿ ಮನೆ ಮಾರುಗಳನ್ನು ಕಳಕೊಳ್ಳುವುದು ಸಾಮಾನ್ಯ. ಮಾತ್ರವಲ್ಲ, ಹಾಗೆ ಕಳಕೊಳ್ಳುವಾಗ ತಮ್ಮ ನಾಗರಿಕತ್ವಕ್ಕೆ ಪುರಾವೆ ಯಾಗಿರುವ ದಾಖಲೆ ಪತ್ರಗಳನ್ನು ಕಳಕೊಳ್ಳುವುದೂ ಸತ್ಯ. ಇವತ್ತು ವಿದೇಶಿಯರೆಂದು ಘೋಷಿತವಾದ 19 ಲಕ್ಷ ಮಂದಿಯಲ್ಲಿ ಇವರ ಸಂಖ್ಯೆ ಸಾಕಷ್ಟಿದೆ.
ಬರ್ಮಾದ ಭಾಗವಾಗಿದ್ದ ಅಸ್ಸಾಮ್ 1826ರಲ್ಲಿ ಯಾವಾಗ ಬ್ರಿಟಿಷ್ ಭಾರತದ ವಶವಾಯಿತೋ ಆಗಿನಿಂದಲೇ ಈ ಪ್ರದೇಶದಲ್ಲಿ ಬ್ರಿಟಿಷರು ಕೃಷಿಗೆ ಮಹತ್ವ ಕೊಟ್ಟರು. ಧಾರಾಳ ಪಾಳು ಭೂಮಿ ಇದ್ದ ಕಾರಣ ಅವರಿಗೆ ಅಸ್ಸಾಮ್ ಕೃಷಿಗೆ ಯೋಗ್ಯವಾಗಿ  ಕಂಡಿತು. ಅವರಿಗೆ ದುಡಿಯಲು ಜನರ ಅಗತ್ಯ ಇತ್ತು. ಆಗ ಬ್ರಿಟಿಷರು ಭಾರತದ ಭಾಗವೇ ಆಗಿದ್ದ ಮತ್ತು ಅಸ್ಸಾಮ್‍ಗೆ ತಾಗಿಕೊಂಡಂತಿರುವ ಬಾಂಗ್ಲಾದಿಂದ ಜನರನ್ನು ಕರೆತಂದು ಕೃಷಿ ಕಾರ್ಯಕ್ಕೆ ಹಚ್ಚಿದರು. ಇನ್ನೊಂದು ಕಡೆ, ಗುಡ್ಡಗಾಡು ಪ್ರದೇ ಶವನ್ನು ಚಹಾ ಬೆಳೆಗೆ ಅನುಕೂಲಕರವಾಗಿ ಪರಿವರ್ತಿಸುವ ಯೋಜನೆ ಹಾಕಿಕೊಂಡರು. ಅದಕ್ಕಾಗಿ ಝಾರ್ಖಂಡ್, ಆಂಧ್ರಪ್ರದೇಶ, ತೆಲಂಗಾಣ, ಒರಿಸ್ಸಗಳಿಂದ ಆದಿವಾಸಿಗಳನ್ನು ಕರೆತಂದು ದುಡಿಸಿದರು. ಅಸ್ಸಾಮ್‍ನ ಜನಸಂಖ್ಯೆಯಲ್ಲಿ ಈ ವಲಸೆ  ಒಂದು ಹಂತದ ಬದಲಾವಣೆಗೆ ಕಾರಣವಾಯಿತು. ಹಾಗಂತ, ಈ ಪ್ರಕ್ರಿಯೆ ಇಲ್ಲಿಗೇ ನಿಲ್ಲಲಿಲ್ಲ. ಬ್ರಿಟಿಷರಿಂದ ಭಾರತ ಸ್ವತಂತ್ರಗೊಂಡ ಬಳಿಕವೂ ಈ ವಲಸೆ ಪ್ರಕ್ರಿಯೆ ಮುಂದುವರಿಯಿತು. ಬಾಂಗ್ಲಾದೇಶ ಮತ್ತು ಪಾಕ್‍ನ ಜೊತೆ ಅಸ್ಸಾಮ್ ಗಡಿ  ಹಂಚಿಕೊಂಡಿರುವುದರಿಂದ ಆ ಎರಡು ರಾಷ್ಟ್ರಗಳಲ್ಲಿ ನಡೆಯುವ ಪ್ರತಿ ಬೆಳವಣಿಗೆಯೂ ಅಸ್ಸಾಮ್‍ನ ಜನಸಂಖ್ಯೆಯ ಏರಿಕೆಯಲ್ಲಿ ಪಾತ್ರ ವಹಿಸತೊಡಗಿತು. 1950ರಲ್ಲಿ ಪೂರ್ವ ಪಾಕಿಸ್ತಾನದಿಂದ (ಈಗಿನ ಬಾಂಗ್ಲಾದೇಶ) ದೊಡ್ಡಮಟ್ಟದಲ್ಲಿ ಜನರು  ನಿರಾಶ್ರಿತರಾಗಿ ಅಸ್ಸಾಮ್ ಪ್ರವೇಶಿಸಿದರು. 1965ರಲ್ಲಿ ಭಾರತ-ಪಾಕ್‍ಗಳ ನಡುವೆ ಯುದ್ಧ ನಡೆದಾಗ ಬಂಗಾಳಿ ಭಾಷೆ ಯನ್ನಾಡುವ ಹಿಂದೂಗಳು ಬಹುದೊಡ್ಡ ಸಂಖ್ಯೆಯಲ್ಲಿ ಅಸ್ಸಾಮ್‍ಗೆ ಕಾಲಿಟ್ಟರು. ಆ ಬಳಿಕದ ವಲಸೆ 1971ರಲ್ಲಿ ನಡೆಯಿತು. ಪ್ರತ್ಯೇಕ  ಬಾಂಗ್ಲಾದೇಶದ ರಚನೆಯ ವೇಳೆ ಬಂಗಾಳಿ ಮಾತನ್ನಾಡುವ ಹಿಂದೂ ಮತ್ತು ಮುಸ್ಲಿಮರು ಭಾರೀ ಸಂಖ್ಯೆಯಲ್ಲಿ ಭಾರತ ಪ್ರವೇಶಿಸಿದರು. 1965 ಮತ್ತು 71ರ ನಡುವೆ ಸುಮಾರು 75 ಲಕ್ಷದಿಂದ 1 ಕೋಟಿಯಷ್ಟು ಮಂದಿ ಭಾರತಕ್ಕೆ ಬಂದಿದ್ದಾರೆ ಅನ್ನುವ ಅಂದಾಜಿದೆ. ಈ ಭಾರೀ ಪ್ರಮಾಣದ ವಲಸೆಯು ಅಸ್ಸಾಮ್‍ನ ಬುಡಕಟ್ಟು ಮತ್ತು ಮೂಲ ನಿವಾಸಿಗಳ ಬದುಕಿನ ಮೇಲೆ ಭಾರೀ ಪರಿಣಾಮವನ್ನು ಬೀರಿತು. ಈ ವಲಸೆಯ ವಿರುದ್ಧ ಅಸ್ಸಾಮ್ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಪ್ರತಿಭಟನೆ  ಪ್ರಾರಂಭವಾಯಿತು. 1979-1985ರ ನಡುವೆ ಆಲ್ ಅಸ್ಸಾಮ್ ವಿದ್ಯಾರ್ಥಿ ಸಂಘ ಮತ್ತು ಅಸ್ಸಾಮ್ ಗಣ ಪರಿಷತ್‍ಗಳು ವಲಸೆ ವಿರೋಧಿ ಹೋರಾಟದಲ್ಲಿ ತೊಡಗಿಕೊಂಡವು. ವಲಸೆಗಾರ ಹಿಂದೂ-ಮುಸ್ಲಿಮ್ ಇಬ್ಬರೂ ಈ ಹೋರಾಟದ  ಗುರಿಗಳಾಗಿದ್ದರು. ಕೊನೆಗೆ 1985 ಆಗಸ್ಟ್ 14ರಂದು ಆಲ್ ಅಸ್ಸಾಮ್ ಸ್ಟೂಡೆಂಟ್ ಯೂನಿಯನ್, ಅಸ್ಸಾಮ್ ಗಣ ಪರಿಷತ್, ಅಸ್ಸಾಮ್ ರಾಜ್ಯ ಸರಕಾರ ಮತ್ತು ಪ್ರಧಾನಿ ರಾಜೀವ್ ಗಾಂಧಿಯವರ ಉಪಸ್ಥಿತಿಯಲ್ಲಿ ಅಸ್ಸಾಮ್ ಒಪ್ಪಂದಕ್ಕೆ ಸಹಿ  ಹಾಕಲಾಯಿತು. ಮೂಲ ನಿವಾಸಿಗಳ ಅನನ್ಯತೆಯನ್ನು ಕಾಪಾಡುವುದು, ಅಕ್ರಮ ವಲಸೆಯನ್ನು ತಡೆ ಯುವುದು ಮತ್ತು 1971 ಮಾರ್ಚ್ 24ಕ್ಕಿಂತ ಮೊದಲು ಯಾರು ಅಸ್ಸಾಮ್‍ನಲ್ಲಿ ನೆಲೆಸಿದ್ದರೋ ಅವರನ್ನು ಭಾರತೀಯರೆಂದು ಪರಿಗಣಿಸಿ ಆ ಬಳಿಕ  ಬಂದವರನ್ನು ಅಕ್ರಮ ವಲಸಿಗರೆಂದು ಬಗೆದು ಹೊರ ಹಾಕುವುದು- ಈ ಒಪ್ಪಂದದ ಸಾರಾಂಶವಾಗಿತ್ತು. (1971 ಮಾರ್ಚ್ 26ರಂದು ಬಾಂಗ್ಲಾದೇಶದ ರಚನೆಯಾಯಿತು.) ಆದರೆ ಈ ಒಪ್ಪಂದವನ್ನು ಜಾರಿಗೊಳಿಸಲು ಯಾವ ಸರಕಾರವೂ  ಪ್ರಾಮಾಣಿಕವಾಗಿ ಮುಂದಾಗಲಿಲ್ಲ. ಇದನ್ನು ಪ್ರಶ್ನಿಸಿ 2012ರಲ್ಲಿ ಸುಪ್ರೀಮ್ ಕೋರ್ಟ್‍ನಲ್ಲಿ ದಾವೆಯನ್ನು ಹೂಡಲಾಯಿತು. ಇದನ್ನು ಪರಿಗಣಿಸಿದ ಸುಪ್ರೀಮ್ ಕೋರ್ಟ್ ತಕ್ಷಣ ಈ ಒಪ್ಪಂದವನ್ನು ಜಾರಿಗೊಳಿಸುವಂತೆ ಆದೇಶಿಸಿತು. ಅಲ್ಲದೇ, 2016ರಲ್ಲಿ  ಈ ಕೆಲಸ ಪೂರ್ಣಗೊಳ್ಳಬೇಕೆಂದೂ ಗಡು ವಿಧಿಸಿತು. ಮಾತ್ರವಲ್ಲ, 1971ರ ಮತದಾರರ ಪಟ್ಟಿಯಲ್ಲಿ ಹೆಸರಿರುವ ದಾಖಲೆ ಅಥವಾ LIC ಸರ್ಟಿಫಿಕೇಟ್, ಭೂಮಿ ಪಹಣಿ ಪತ್ರ ಇತ್ಯಾದಿ ದಾಖಲೆಗಳಲ್ಲಿ ಯಾವುದನ್ನಾದರೂ ಅಧಿಕಾರಿಗಳ ಮುಂದೆ  ಅಸ್ಸಾಮಿಗರು ಹಾಜರುಪಡಿಸಬೇಕಿತ್ತು. ಅಷ್ಟಕ್ಕೂ,
ಕಳೆದ ಅಸ್ಸಾಮ್ ವಿಧಾನಸಭಾ ಚುನಾವಣೆಯ ವೇಳೆ, ಅಕ್ರಮ ಬಾಂಗ್ಲಾದೇಶಿ ವಲಸಿಗರ ಬಗ್ಗೆ ಬಿಜೆಪಿ ದೊಡ್ಡ ಧ್ವನಿಯಲ್ಲಿ ಮಾತಾಡಿತ್ತು. ಒಂದು ಕೋಟಿಗಿಂತಲೂ ಅಧಿಕವಿರುವ ಈ ವಲಸಿಗರನ್ನು ಹೊರದಬ್ಬುವುದಾಗಿ ಅದು ಹೇಳಿಕೊಂಡಿತ್ತು. ಆದರೆ  ಓಖಅಯ ಮೊದಲ ಕರಡು ಪಟ್ಟಿ ಬಿಡುಗಡೆಗೊಂಡಾಗ ಬಿಜೆಪಿ ಪ್ರಚಾರ ಮಾಡಿರುವ ಒಂದು ಕೋಟಿ ಬಲುದೊಡ್ಡ ಸುಳ್ಳು ಅನ್ನುವುದು ಸ್ಪಷ್ಟಗೊಂಡಿತು. 40 ಲಕ್ಷ ಅಕ್ರಮ ವಲಸಿಗರಿದ್ದಾರೆ  ಎಂದು ಮೊದಲ ಕರಡು ಪ್ರತಿ ಹೇಳಿದರೆ ಇದೀಗ ಅವರ  ಸಂಖ್ಯೆ 19 ಲಕ್ಷಕ್ಕೆ ಇಳಿದಿದೆ. ಈ ಇಳಿಕೆ ಇನ್ನೂ ಮುಂದು ವರಿದು 10 ಲಕ್ಷದಲ್ಲಿ ನಿಲ್ಲಬಹುದು ಎಂಬ ಲೆಕ್ಕಾಚಾರವಿದೆ. ಭಾರತದ ಪ್ರತಿ ನಾಗರಿಕನಿಗೂ 15 ಲಕ್ಪ ರೂಪಾಯಿಯನ್ನು ಹಂಚುವಷ್ಟು ಸ್ವಿಸ್ ಬ್ಯಾಂಕ್‍ನಲ್ಲಿ ಭಾರತೀಯರ ಕಪ್ಪು ಹಣವಿದೆ  ಎಂಬ ಪ್ರಧಾನಿ ನರೇಂದ್ರ ಮೋದಿಯವರ ಮಾತು ಎಷ್ಟು ದೊಡ್ಡ ಸುಳ್ಳೋ ಅಂಥದ್ದೇ ಒಂದು ಸುಳ್ಳು ಒಂದು ಕೋಟಿ ಅಕ್ರಮ ಬಾಂಗ್ಲಾದೇಶಿ ವಲಸಿಗರು ಅನ್ನುವುದಾಗಿತ್ತು. ಇದೀಗ ಬಿಜೆಪಿ ಈ ಸುಳ್ಳಿನಿಂದ ಬಿಡಿಸಿಕೊಳ್ಳುವ ಯತ್ನದಲ್ಲಿದೆ. ಈಗ  ಬಿಡುಗಡೆಗೊಂಡಿರುವ ಅಂತಿಮ ಕರಡು ಪಟ್ಟಿಯಲ್ಲಿರುವ 19 ಲಕ್ಷದಲ್ಲಿ ಕೇವಲ 7 ಲಕ್ಷ ದಷ್ಟು ಮಂದಿ ಮಾತ್ರ ಮುಸ್ಲಿಮರಿದ್ದಾರೆ ಮತ್ತು 12 ಲಕ್ಷದಷ್ಟು ಮಂದಿ ಹಿಂದೂಗಳಿದ್ದಾರೆ ಅನ್ನುವುದು ಬಿಜೆಪಿಯನ್ನು ಗಾಢ ನಿರಾಶೆಗೆ ತಳ್ಳಿದೆ. ‘NRC ಪಟ್ಟಿಯಲ್ಲಿರುವ 10ರಿಂದ 20% ಮಂದಿಯ ಹಿನ್ನೆಲೆಯನ್ನು ಮರು ಪರಿಶೀಲಿಸಬೇಕೆಂದು’ ಕೋರಿ ಜುಲೈಯಲ್ಲಿ ಕೇಂದ್ರ ಮತ್ತು ಅಸ್ಸಾಮ್‍ನ ಬಿಜೆಪಿ ಸರಕಾರಗಳು ಸುಪ್ರೀಮ್ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದು ಇದೇ ಆತಂಕದಿಂದ. ಆದರೆ, ಸುಪ್ರೀಮ್ ಈ ಮ ನವಿಯನ್ನು ತಿರಸ್ಕರಿಸಿತ್ತು. ಸುಪ್ರೀಮ್ ನೇಮಿಸಿರುವ ಅಸ್ಸಾಮ್ ಓಖಅ ಸಂಚಾಲಕ ಪ್ರತೀಕ್ ಹಜೇಲ ಅವರು ಇಂಥದ್ದೊಂದು ಮರು ಪರಿಶೀಲನೆಯ ಅಗತ್ಯವಿಲ್ಲ ಎಂದು ಕೋರ್ಟ್‍ಗೆ ತಿಳಿಸಿದ್ದರು. ಇದಕ್ಕಾಗಿ ಬಿಜೆಪಿಯು ಪ್ರತೀಕ್ ಹಜೇಲರನ್ನು  ದೂಷಿಸಿತ್ತು. ಇದೀಗ ಈ ಇಡೀ ಪ್ರಕ್ರಿಯೆಗೆ ಬಿಜೆಪಿ ಹೊಸ ತಿರುವು ಕೊಡುವ ಪ್ರಯತ್ನದಲ್ಲಿದೆ. ಈಗಾಗಲೇ NRC ಅಂತಿಮ ಕರಡನ್ನು ರದ್ದಿ ಕಾಗದ ಎಂದು ಅದರ ನಾಯಕರು ಕರೆದಿದ್ದಾರೆ. ಇನ್ನೊಂದು ಕಡೆ, ಅಂತಿಮ ಕರಡು ಅಂತಿಮವಲ್ಲ,  ಅದರಲ್ಲಿ ಹೆಸರಿಲ್ಲದವರು ಹೈಕೋರ್ಟ್ ಮತ್ತು ಸುಪ್ರೀಮ್‍ಗೂ ಹೋಗಬಹುದು ಮತ್ತು ಅಲ್ಲಿವರೆಗೂ ಪಟ್ಟಿಯಲ್ಲಿ ಹೆಸರಿಲ್ಲದವರ ಮೇಲೆ ಕ್ರಮ ಕೈಗೊಳ್ಳಲಾಗುವುದಿಲ್ಲ ಅನ್ನುವ ಸೂಚನೆಯನ್ನು ಬಿಜೆಪಿ ನೀಡತೊಡಗಿದೆ. NRC ಪಟ್ಟಿಯಲ್ಲಿ  ಹೆಸರಿಲ್ಲದವರು ಹೈಕೋರ್ಟು-ಸುಪ್ರೀಮ್‍ಗೆ ಹೋಗುವುದೆಂದರೆ, ಅದೊಂದು ದೀರ್ಘ ಪ್ರಕ್ರಿಯೆ. ಆ ಪ್ರಕ್ರಿಯೆ ಮುಗಿಯುವವರೆಗೆ ಅವರು ಭಾರತೀಯರೇ ಆಗಿ ಇರುತ್ತಾರೆ. ಈ ತಂತ್ರವನ್ನು ಬಿಜೆಪಿ ಯಾಕೆ ಮುನ್ನೆಲೆಗೆ ತಂದಿದೆಯೆಂದರೆ, ಅದಕ್ಕಿಂತ  ಮೊದಲು ಪೌರತ್ವ ತಿದ್ದುಪಡಿ ಮಸೂದೆ(CAB)ಯನ್ನು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಮಂಜೂರುಗೊಳಿಸಿ ಮುಸ್ಲಿಮೇತರ ವಲಸಿಗರನ್ನು ರಕ್ಷಿಸಿಕೊಳ್ಳುವುದು. ಓಖಅ ಪಟ್ಟಿಯಲ್ಲಿ ಮುಸ್ಲಿಮರು ಮಾತ್ರ ಉಳಿದುಕೊಳ್ಳುವಂತೆ ನೋಡಿಕೊಳ್ಳುವುದು.  ಅಂದಹಾಗೆ,
ಅಸ್ಸಾಮ್‍ನಲ್ಲಿ ಜಾರಿಯಲ್ಲಿರುವ ಓಖಅಗೆ ನಿರ್ದಿಷ್ಟ ಒಪ್ಪಂದವೊಂದರ ಹಿನ್ನೆಲೆಯಿದೆ. 1971 ಮಾರ್ಚ್ 24ರ ಒಳಗೆ ಅಸ್ಸಾಮ್ ನಲ್ಲಿ ನೆಲೆಸಿದ್ದ ಮತ್ತು ಮತದಾರರ ಪಟ್ಟಿಯಲ್ಲಿ ಹೆಸರಿದ್ದ ಎಲ್ಲರೂ ಭಾರತೀಯರು ಅನ್ನುವುದು ಈ ಹಿನ್ನೆಲೆ. ಇದೊಂದು  ಗಡು. ಆದರೆ, NRC ಯನ್ನು ಭಾರತದಾದ್ಯಂತ ಜಾರಿಗೊಳಿಸುವಾಗ ಅದಕ್ಕೆ ಈ ಒಪ್ಪಂದ ಅನ್ವಯವಾಗುವುದಿಲ್ಲ. ಆದ್ದರಿಂದ ಅಸ್ಸಾಮ್ ಹೊರತುಪಡಿಸಿ ಭಾರತದಾದ್ಯಂತ ಜಾರಿಗೊಳ್ಳಲಿರುವ NRC ಯ ಸ್ವರೂಪದಲ್ಲಿ ಖಂಡಿತ ವ್ಯತ್ಯಾಸವಿದೆ. 2020 ಎಪ್ರಿಲ್‍ನಿಂದ 2020 ಸೆಪ್ಟೆಂಬರ್ 30ರೊಳಗೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR)ಯನ್ನು ಕೈಗೊಳ್ಳುವುದು ಮತ್ತು ಇದರ ಆಧಾರದಲ್ಲಿ ಭಾರತೀಯ ನಾಗರಿಕರ ರಾಷ್ಟ್ರೀಯ ನೋಂದಣಿ (NRIC)ಯನ್ನು ಜಾರಿ ಮಾಡುವುದು ಕೇಂದ್ರದ      ಉದ್ದೇಶ ಎಂದು ಹೇಳಲಾಗಿದೆ. ಅಸ್ಸಾಮ್‍ನಲ್ಲಿರುವ NRC ಹೇಗೆಯೋ ಹಾಗೆಯೇ ಈ NRIC. NPR ಎಂಬುದು ಭಾರತದ ನಿವಾಸಿಗಳ ಮಾಹಿತಿ ಸಂಗ್ರಹವಾಗಿದ್ದು, ಇದರಲ್ಲಿ ಜನಸಂಖ್ಯಾ ಅಂಕಿ ಅಂಶಗಳು  ಮತ್ತು ಬಯೋಮೆಟ್ರಿಕ್  ವಿವರಗಳು ಒಳಗೊಂಡಿರುತ್ತವೆ ಎನ್ನಲಾಗುತ್ತಿದೆ. ಇದು ದೇಶದ ಸಾಮಾನ್ಯ ನಿವಾಸಿಗಳ ಪಟ್ಟಿ. ಸಾಮಾನ್ಯ ದಾಖಲೆ ಪತ್ರಗಳು ಇದರ ನೋಂದಣಿಗೆ ಸಾಕಾಗುತ್ತದೆ. ಇದರ ಬಳಿಕ NRIC ಯನ್ನು ಜಾರಿ ಮಾಡಲು ಕೇಂದ್ರ ಸರಕಾರ ತೀರ್ಮಾನಿಸಿದೆ. ನಿಜವಾಗಿ,
ಬಿಜೆಪಿಯ ಉದ್ದೇಶ ವಲಸೆಗಾರರನ್ನು ಹೊರಗಟ್ಟುವುದಲ್ಲ, ವಲಸೆಗಾರ ಮುಸ್ಲಿಮರನ್ನು ಮಾತ್ರ ಹೊರಗಟ್ಟುವುದು. ಪೌರತ್ವ ತಿದ್ದುಪಡಿ ಮಸೂದೆ ಸ್ಪಷ್ಟಪಡಿಸುವುದು ಇದನ್ನೇ. NRC ಅಥವಾ NRIC ಯ ಅತಿ ದಾರುಣ ಮುಖ ಇದು.  ಭಾರತೀಯರನ್ನು ಹಿಂದೂಗಳು ಮತ್ತು ಮುಸ್ಲಿಮರೆಂದು ವಿಭಜಿಸಿ ಮುಸ್ಲಿಮರನ್ನು ಶಂಕಿತರಂತೆ ಕಾಣುವ ಮತ್ತು ಅವರ ಬದುಕನ್ನು ಅಭದ್ರತೆಗೆ ನೂಕುವ ಈ ಕ್ರಮ ಅತ್ಯಂತ ಕೆಟ್ಟದು.

Tuesday, August 27, 2019

45 ಕೆಜಿ ತೂಗುವ ಫಕೀರನ ಹತ್ಯೆಗೆ ಏನು ಕಾರಣ ಕಾಂಗ್ರೆಸ್ಸಿಗರೇ?



1. 1938-1939
2. 1947 ಮೇ 31
ಈ ಎರಡೂ ಇಸವಿಗಳನ್ನು ಇಂದಿನ ಕಾಂಗ್ರೆಸ್ ಪಕ್ಷ ಮತ್ತೆ ನೆನಪಿಸಿಕೊಳ್ಳಬೇಕಾದುದು ಬಹಳ ಅಗತ್ಯ. 1938-39ರಲ್ಲಿ ಕಾಂಗ್ರೆಸ್ ಪಕ್ಷವು ದೊಡ್ಡ ಸವಾಲನ್ನು ಎದುರಿಸಲು ಸಿದ್ಧವಾಯಿತು. ಪ್ರಜಾತಂತ್ರ ವ್ಯವಸ್ಥೆಯನ್ನು ಪ್ರತಿಪಾದಿಸುವುದು ಬೇರೆ ಮತ್ತು ಪ್ರಜಾತಂತ್ರ ವ್ಯವಸ್ಥೆಗೆ ತನ್ನನ್ನು ಅರ್ಪಿಸಿಕೊಳ್ಳುವುದು ಬೇರೆ. ಪ್ರತಿ ಪಾದಿಸುವಾಗ ಸವಾಲುಗಳು ಕಡಿಮೆ. ಚತುರ ಮಾತುಗಾರ ಪ್ರಜಾತಂತ್ರ ವ್ಯವಸ್ಥೆಯನ್ನು ಬಂಗಾರದ ಕಲಶದಲ್ಲಿ ಇಟ್ಟುಕೊಡಬಲ್ಲ. ಅದನ್ನು ಅವನು ಪರಿಹಾರವಾಗಿ ಮತ್ತು ಪರಮ ಪವಿತ್ರವಾಗಿ ವ್ಯಾಖ್ಯಾನಿಸಬಲ್ಲ. ಪ್ರಜಾತಂತ್ರ ವ್ಯವಸ್ಥೆ ಮತ್ತು ಪ್ರಜಾತಂತ್ರ ರಹಿತ ವ್ಯವಸ್ಥೆಗಳೆರಡನ್ನೂ ಮುಖಾಮುಖಿಗೊಳಿಸಿ, ಬೀಜ ಸೀಳಿ, ಎರಡ ರಲ್ಲಿ ಒಂದನ್ನು ಬಿಳಿಯಾಗಿಯೂ ಇನ್ನೊಂದನ್ನು ಕಪ್ಪಾಗಿಯೂ ಪರಿವರ್ತಿಸಬಲ್ಲ. ಹೀಗೆ ಮಾಡುವುದಕ್ಕೆ ಆ ಕ್ಷಣದಲ್ಲಿ ಆತನಿಗೆ ಅಗತ್ಯವಿರುವುದು ಎರಡೇ ಎರಡು ವಸ್ತುಗಳು.
1. ಮೈಕ್.
2. ನಾಲಗೆ.
ಆದರೆ, ಪ್ರಜಾತಂತ್ರ ವ್ಯವಸ್ಥೆಗೆ ವ್ಯಕ್ತಿಯೋ ಸಂಘಟನೆಯೋ ಪಕ್ಷವೋ ತನ್ನನ್ನು ಅರ್ಪಿಸಿಕೊಳ್ಳುವಾಗ ಈ ಮಾತುಗಾರಿಕೆಯೇ ಸವಾಲಾಗಿ ಎದುರು ನಿಲ್ಲುತ್ತದೆ. ಮೈಕ್‍ನಲ್ಲಿ ಪ್ರತಿಪಾದಿಸಿದ ಎಲ್ಲವೂ ಪ್ರಾಯೋಗಿಕವಾಗಿಯೂ ಸಾಧ್ಯ ಎಂದು ತೋರಿಸಿಕೊಡ ಬೇಕಾದ ಸವಾಲು ಎದುರಾಗುತ್ತದೆ. ಸಾಮಾನ್ಯವಾಗಿ, ಪ್ರಜಾತಂತ್ರ ವ್ಯವಸ್ಥೆಯನ್ನು ಒಪ್ಪಿಕೊಂಡಿರುವ ಯಾವುದೇ ರಾಜಕೀಯ ಪಕ್ಷ ದಾರಿ ಬದಲಿಸಿಕೊಳ್ಳುವುದು ಇಲ್ಲೇ. 1938-39ರ ಇಸವಿ ಮುಖ್ಯ ವಾಗುವುದು ಈ ಕಾರಣಕ್ಕಾಗಿಯೇ. ಪ್ರಜಾತಂತ್ರ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಅಳವಡಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿತು. ಪಕ್ಷದ ಅಧ್ಯಕ್ಷ ಹುದ್ದೆಯನ್ನು ಮತದಾನದ ಮೂಲಕ ತುಂಬಿಕೊಳ್ಳಲು ನಿರ್ಧರಿಸಿತು. ಪಕ್ಷದಲ್ಲಿರುವ ಪ್ರಭಾವಿ ನಾಯಕರ ಮಟ್ಟಿಗೆ ಹೇಳುವುದಾದರೆ, ಇಂಥದ್ದೊಂದು  ನಿರ್ಧಾರ ಸುಲಭದಲ್ಲಿ ಜೀರ್ಣಿಸಿಕೊಳ್ಳಲು ಅವರಿಂದ ಸಾಧ್ಯವಿಲ್ಲ. ಯಾಕೆಂದರೆ, ಮತದಾನವಾದರೆ ಯಾರು ಬೇಕಾದರೂ ಆಯ್ಕೆಯಾಗುವುದಕ್ಕೆ ಬಾಗಿಲು ತೆರೆದಂತಾಗುತ್ತದೆ. ಹೊಸಬರೂ ಆಯ್ಕೆಯಾಗಬಹುದು. ಹಲವು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದವರು ಪರಾಜಯ ಹೊಂದಬಹುದು. ಇಂಥ ಸಾಧ್ಯಾಸಾಧ್ಯತೆಯ ನಡುವೆಯೂ ಮಹಾತ್ಮ ಗಾಂಧಿಯವರು ಅಧ್ಯಕ್ಷ ಹುದ್ದೆಯನ್ನು ಮುಕ್ತವಾಗಿಟ್ಟರು. ಒಂದುಕಡೆ, ನೇತಾಜಿ ಸುಭಾಶ್ ಚಂದ್ರ ಬೋಸ್‍ರು ಸ್ಪರ್ಧೆಗೆ ಇಳಿದರೆ ಇನ್ನೊಂದು ಕಡೆ ಸ್ವತಃ ಗಾಂಧೀಜಿಯವರೇ ಪಟ್ಟಾಭಿ ಸೀತಾರಾಮಯ್ಯರನ್ನು ಕಣಕ್ಕಿಳಿಸಿದರು. ಗಾಂಧೀಜಿಯವರ ಪ್ರಭಾವ, ಅವರ ವ್ಯಕ್ತಿತ್ವಕ್ಕೆ ಇದ್ದ ಖದರು, ರಾಷ್ಟ್ರವ್ಯಾಪಿಯಾಗಿ ಅವರಿಗಿದ್ದ ಜನಮನ್ನಣೆಯನ್ನು ಪರಿಗಣಿಸಿದರೆ ಪಟ್ಟಾಭಿ ಸೀತಾರಾಮಯ್ಯರ ಗೆಲುವು ಶತಸಿದ್ಧವಾಗಿತ್ತು. ಆದರೆ ನಿರೀಕ್ಷೆ ಹುಸಿಯಾಯಿತು. ನೇತಾಜಿ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದರು. ಇದೊಂದು ಅಭೂತಪೂರ್ವ ಬೆಳವಣಿಗೆ. ಚುನಾವಣೆಯ ಮೂಲಕ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡುವುದಕ್ಕೆ ಗಾಂಧೀಜಿ ತೋರಿದ ಧೈರ್ಯ ಮತ್ತು ಗಾಂಧೀಜಿ ಸೂಚಿಸಿದ ಅಭ್ಯರ್ಥಿಯನ್ನು ತಿರಸ್ಕರಿಸಿ ಯುವ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ ಕಾಂಗ್ರೆಸಿಗರು- ಇವೆರಡೂ ಮಹತ್ವಪೂರ್ಣವಾದುದು. ಇನ್ನೊಂದು, ಚಕ್ರಯ್ಯ.
1947 ಮೇ 31ರಂದು ಮಹಾತ್ಮಾ ಗಾಂಧೀಜಿಯವರು ಚಕ್ರಯ್ಯನ ಬಗ್ಗೆ ಬಹಿರಂಗವಾಗಿ ಮಾತಾಡಿದ್ದರು. ಚಕ್ರಯ್ಯ ಕಾಂಗ್ರೆಸ್‍ನ ಯುವ ಮುಂದಾಳು. ಆಂಧ್ರಪ್ರದೇಶದ ದಲಿತ ಸಮು ದಾಯದ ವ್ಯಕ್ತಿ. ಧೈರ್ಯ, ಹೊಸ ಚಿಂತನೆ, ಖಚಿತ ನಿಲುವು ಗಳುಳ್ಳ ವ್ಯಕ್ತಿಯೆಂಬ ನೆಲೆಯಲ್ಲಿ ಗಾಂಧೀಜಿ ಅವರನ್ನು ಗುರುತಿಸಿದ್ದರು. ಆದರೆ, ಅವರ ಆರೋಗ್ಯ ಹದಗೆಡುತ್ತಾ ಇತ್ತು. ಗಾಂಧೀಜಿಯವರಿಗೂ ಅವರ ಆರೋಗ್ಯದ ಬಗ್ಗೆ ಆತಂಕವಿತ್ತು. ಅವರು ಹೇಳಿದ್ದು ಹೀಗೆ,
“ಭಾರತವು ತನ್ನ ಪ್ರಥಮ ರಾಷ್ಟ್ರಾಧ್ಯP್ಷÀನನ್ನು ಚುನಾಯಿಸುವ ಸಂದರ್ಭ ಹತ್ತಿರ ಬರುತ್ತಿದೆ. ಒಂದುವೇಳೆ, ಆ ಸಂದರ್ಭದಲ್ಲಿ ಚಕ್ರಯ್ಯ ಜೀವಂತವಾಗಿದ್ದರೆ ರಾಷ್ಟ್ರಾಧ್ಯP್ಷÀ ಹುz್ದÉಗೆ ನಾನು ಚಕ್ರಯ್ಯನ ಹೆಸರನ್ನು ಸೂಚಿಸುವೆ.”
ಈಗಿನ ಕಾಂಗ್ರೆಸ್‍ನ ಮುಂದೆ ಈಗ ಎರಡು ಆಯ್ಕೆಗಳಿವೆ.
1. ಚಕ್ರಯ್ಯನಂಥ ವ್ಯಕ್ತಿಯನ್ನು ಗುರುತಿಸುವುದು ಮತ್ತು ಅಧ್ಯಕ್ಷ  ಹುದ್ದೆಯನ್ನು ವಹಿಸಿಕೊಡುವುದು.
2. 1938-39ರಲ್ಲಿ ಮಾಡಿದಂತೆ ಅಧ್ಯP್ಷÀ ಹುz್ದÉಯನ್ನು ಚುನಾವಣೆಯ ಮೂಲಕ ತುಂಬಿಕೊಳ್ಳುವುದು.
2019 ಜುಲೈ 4ರಂದು ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ  ಹುದ್ದೆಗೆ ಅಧಿಕೃತವಾಗಿ ರಾಜೀನಾಮೆಯನ್ನು ನೀಡಿ ದರು. ಕಾಂಗ್ರೆಸ್ ಪಕ್ಷದ ಮಟ್ಟಿಗೆ ಇದೊಂದು ಐತಿಹಾಸಿಕ ದಿನಾಂಕ. ಕಾಂಗ್ರೆಸ್ ಪಕ್ಷದ ಮೇಲೆ ನೆಹರೂ-ಗಾಂಧಿಯನ್ ಕುಟುಂಬದ 4 ತಲೆಮಾರುಗಳ ಆಧಿಪತ್ಯ ಈ ಮೂಲಕ ತಾರ್ಕಿಕ ಅಂತ್ಯವನ್ನು ಕಂಡಂತಾಗಿದೆ. ನೆಹರೂ, ಇಂದಿರಾ, ರಾಜೀವ್ ಮತ್ತು ರಾಹುಲ್- ಈ ನಾಲ್ವರೂ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ, ಚಿಂತಿಸಿದ್ದಾರೆ, ತಂತ್ರಗಾರಿಕೆ ಹೆಣೆದಿದ್ದಾರೆ, ಮುಂದೆ ನಿಂತು ಹೋರಾಡಿದ್ದಾರೆ, ನಿದ್ದೆ  ಕಳೆದಿದ್ದಾರೆ ಮತ್ತು ಜೀವವನ್ನೂ ಕೊಟ್ಟಿದ್ದಾರೆ. ಕುಟುಂಬ ರಾಜಕಾರಣ ಎಂಬ ವ್ಯಂಗ್ಯನುಡಿಯ ಆಚೆಗೆ ಕಾಂಗ್ರೆಸ್ ಪಕ್ಷವನ್ನು ಪ್ರಬಲ ರಾಜಕೀಯ ಪP್ಷÀವಾಗಿ ಕಟ್ಟುವಲ್ಲಿ ಮತ್ತು ಅನೇಕಾರು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸುವಲ್ಲಿ ಅವರ ಪಾತ್ರ ಮತ್ತು ಶ್ರಮ ಬಹಳ ದೊಡ್ಡದು. ಬಹುಶಃ, ಪಕ್ಷದ ಅಧ್ಯಕ್ಷನಾಗಿದ್ದುಕೊಂಡು ಅತ್ಯಂತ ಹೆಚ್ಚು ಸವಾಲು ಗಳನ್ನು ಎದುರಿಸಿದ್ದು ರಾಹುಲ್ ಗಾಂಧಿ. ಇಂದಿರಾ ಗಾಂಧಿಯವರಿಗೆ ತಂದೆ ನೆಹರೂರವರ ನೆರಳಿನಾಶ್ರಯವಿತ್ತು. ಪ್ರಧಾನಿಯಾಗಿ ನೆಹರೂ ಗಳಿಸಿರುವ ಜನಮನ್ನಣೆ, ಅವರಿಗಿದ್ದ ಗೌರವ, ಸ್ವಾತಂತ್ರ್ಯ ಹೋರಾಟಗಾರನೆಂಬ ನೆಲೆಯಲ್ಲಿ ಸಹಜವಾಗಿಯೇ ದಕ್ಕಿದ್ದ ಜನ ಪ್ರಿಯತೆಗಳು ಇಂದಿರಾರನ್ನೂ ಕಾಪಾಡಿದುವು. ನೆಹರೂರಿಂದ ಪಡೆದ ರಾಜಕೀಯ ಪಟ್ಟಗಳೂ ಅವರ ಪ್ರಯೋಜನಕ್ಕೆ ಬಂದಿದ್ದುವು. ಇಂದಿರಾರಿಗೆ ಹೋಲಿಸಿದರೆ ರಾಜೀವ್ ಅನನುಭವಿ. ಇಂದಿರೆಯ ಮಗ ಅನ್ನುವುದನ್ನು ಬಿಟ್ಟರೆ ಕಾಂಗ್ರೆಸ್ ಪಕ್ಷದಲ್ಲಿ ಮುಂಚೂಣಿಯ ನಾಯಕನಾಗಿ ಗುರುತಿಸಿಕೊಳ್ಳುವುದಕ್ಕೆ ವಿಶೇಷ ಅರ್ಹತೆಯೇನೂ ಅವರಿಗಿರಲಿಲ್ಲ. ಆದರೆ, ಇಂದಿರಾ ಗಾಂಧಿಯವರ ಹತ್ಯೆ ಮತ್ತು ಆ ಹತ್ಯೆಯು ಈ ದೇಶದಾದ್ಯಂತ ಸೃಷ್ಟಿಸಿದ ಅನು ಕಂಪದ ವಾತಾವರಣವು ರಾಜೀವ್‍ರನ್ನು ಸುಲಭದಲ್ಲಿ ನಾಯಕ ನನ್ನಾಗಿ ರೂಪಿಸಿತು. ದೇಶವು ಅವರನ್ನು ಪ್ರಧಾನಿಯನ್ನಾಗಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕನಾಗಿ ಒಪ್ಪಿಕೊಂಡಿತು. ಆದರೆ, ರಾಹುಲ್ ಗಾಂಧಿಯ ಮಟ್ಟಿಗೆ ಈ ಯಾವ ಅನುಕೂಲತೆಗಳೂ ಇಲ್ಲ. ನೆಹರೂ, ಇಂದಿರಾ, ರಾಜೀವ್‍ರ ಕಾಲದ ರಾಜಕೀಯ ಸ್ಥಿತಿ-ಗತಿಗೆ ಹೋಲಿಸಿದರೆ ರಾಹುಲ್ ಕಾಲದ ರಾಜಕೀಯ-ಸಾಮಾಜಿಕ ಸ್ಥಿತಿಗತಿಗಳು ಅತ್ಯಂತ ಭಿನ್ನ. ಬಿಜೆಪಿ ಅತ್ಯಂತ ಪ್ರಬಲ ರಾಜಕೀಯ ಪಕ್ಷವಾಗಿ ಬೆಳೆದು ನಿಂತ ಕಾಲ. ನರೇಂದ್ರ ಮೋದಿ ಯಂಥ ಮಾತಿನ ಮಲ್ಲ ಅವರ ಎದುರಿದ್ದರು. ಇನ್ನೊಂದು ಕಡೆ, ಸೈದ್ಧಾಂತಿಕವಾಗಿ ಗಟ್ಟಿತನವಿಲ್ಲದ ಮತ್ತು ವೈಚಾರಿಕವಾಗಿ ದಿವಾಳಿಯಾದ ಜನರ ಗುಂಪಾಗಿ ಕಾಂಗ್ರೆಸ್ ಪಕ್ಷ ಪರಿವರ್ತಿತವಾಗಿತ್ತು. ಆದ್ದರಿಂದ ನೆಹರೂ, ಇಂದಿರಾ, ರಾಜೀವ್‍ರ ಕಾಲದ ಕಾಂಗ್ರೆಸ್‍ಗೆ ರಾಹುಲ್ ಕಾಲದ ಕಾಂಗ್ರೆಸನ್ನು ಹೋಲಿಸುವುದು ಸೂಕ್ತವಾಗುವುದಿಲ್ಲ. ರಾಹುಲ್ ಗಾಂಧಿಯವರು ಕಾಂಗ್ರೆಸ್ ಪP್ಷÀದ ಮುಂಚೂಣಿಗೆ ಬರುವಾಗ ಕಾಂಗ್ರೆಸ್ ಎಷ್ಟು ಸೈದ್ಧಾಂತಿಕ ಅಧಃ ಪತನಕ್ಕೆ ತಲುಪಿತ್ತೆಂದರೆ, ಅದರ ಹೆಸರನ್ನು ಬಿಜೆಪಿಯೆಂದು ಬದಲಿಸಿದರೆ ದೊಡ್ಡ ವ್ಯತ್ಯಾಸ ಆಗಲಾರದು ಎಂದು ಹೇಳುವಂತಾಗಿತ್ತು. ಈಗಂತೂ ಈ ‘ಸೈದ್ಧಾಂತಿಕ ಭ್ರಷ್ಟಾಚಾರ’ದ ಸ್ಥಿತಿ ತೀವ್ರವಾಗಿಯೇ ಇದೆ. ಕಾಂಗ್ರೆಸ್‍ಗೂ ಬಿಜೆಪಿಗೂ ನಡುವೆ ವ್ಯತ್ಯಾಸ ಏನು ಎಂಬ ಪ್ರಶ್ನೆಗೆ ಈ ಹಿಂದೆ ಉತ್ತರ ಸುಲಭವಿತ್ತು. ಬಿಜೆಪಿ ನಾಯಕರ ಭಾಷೆ ಕಾಂಗ್ರೆಸ್ ನಾಯಕರದ್ದಾಗಿರಲಿಲ್ಲ. ದೇಶ, ಭಾಷೆ, ಧರ್ಮ, ಜಾತಿ, ದೇಶಪ್ರೇಮ, ಧರ್ಮಪ್ರೇಮ ಇತ್ಯಾದಿ ಇತ್ಯಾದಿ ವಿಷಯಗಳಲ್ಲಿ ಬಿಜೆಪಿಯ ನಿಲುವಿಗೂ ಕಾಂಗ್ರೆಸ್‍ನ ನಿಲುವಿಗೂ ತಕ್ಷಣಕ್ಕೆ ಗುರು ತಿಸಿ ಬಿಡುವಷ್ಟು ವ್ಯತ್ಯಾಸಗಳಿದ್ದುವು. ಕೋಮುವಾದಕ್ಕೆ ಬಿಜೆಪಿ ಕೊಡುವ ಅರ್ಥ ಬೇರೆ, ಕಾಂಗ್ರೆಸ್ ಕೊಡುವ ಅರ್ಥ ಬೇರೆ. ಹಿಂದೂ, ಮುಸ್ಲಿಮ್, ಕ್ರೈಸ್ತ, ಸಿಕ್ಖ್ ಸಹಿತ ಎಲ್ಲ ಧರ್ಮೀಯರ ಭಾರತೀಯತೆಯ ಬಗ್ಗೆ ಮತ್ತು ಅವರ ಐಡೆಂಟಿಟಿಯ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಎರಡು ರೀತಿಯ ಅಭಿಪ್ರಾಯ ಗಳನ್ನು ಹೊಂದಿದ್ದವು. ಆದರೆ ರಾಹುಲ್ ಕೈಗೆ ಕಾಂಗ್ರೆಸ್ ಸಿಗುವಾಗ ಅಥವಾ ಕಾಂಗ್ರೆಸ್ ಪಕ್ಷಕ್ಕೆ ರಾಹುಲ್ ಪ್ರವೇಶವಾಗುವಾಗ ಬಹುತೇಕ ಕಾಂಗ್ರೆಸ್ ಈ ಅನನ್ಯತೆಯನ್ನು ಕಳೆದುಕೊಂಡಾಗಿತ್ತು. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದ ಜನಪ್ರತಿನಿಧಿಯೊಬ್ಬ ಯಾವ ಅಂಜಿಕೆ ಮತ್ತು ಸೈದ್ಧಾಂತಿಕ ತಾಕಲಾಟವಿಲ್ಲದೇ ಬಿಜೆಪಿ ಸೇರ ಬಹುದಾದ ವಾತಾವರಣ ನಿರ್ಮಾಣವಾಗಿತ್ತು. ರಾಹುಲ್ ನಿರ್ಗ ಮನದ ಈ ವೇಳೆಯಲ್ಲಂತೂ ಇದು ಉಚ್ಛ್ರಾಯ ಸ್ಥಿತಿಯಲ್ಲಿದೆ. ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ಹೆಸರಿನಲ್ಲಿ ಬೇರೆ ಬೇರೆಯಾಗಿರುವ ಮತ್ತು ವೈಚಾರಿಕವಾಗಿ ಒಂದೇ ಸಿದ್ಧಾಂತವನ್ನು ಪ್ರತಿಪಾದಿಸುವ ದಾರುಣ ಸ್ಥಿತಿಗೆ ತಲುಪಿಬಿಟ್ಟಿರುವಂತೆ ಕಾಣುತ್ತಿದೆ.
ಯಾವುದೇ ಪಕ್ಷದ ಹುಟ್ಟಿಗೆ ಮೂಲ ಆಧಾರ- ಸಿದ್ಧಾಂತ. ಗಾಂಧಿಯನ್ ಥಾಟ್ಸ್, ಸಾವರ್ಕರ್ ಥಾಟ್ಸ್, ಕಾರ್ಲ್‍ಮಾರ್ಕ್ಸ್  ಥಾಟ್ಸ್- ಇತ್ಯಾದಿಗಳು ಸಮಾನ ಅಲ್ಲ, ಏಕವೂ ಅಲ್ಲ. ಗಾಂಧಿಯನ್ ಥಾಟ್ಸ್ ನೊಂದಿಗೆ ಸಾವರ್ಕರ್ ಥಾಟ್ಸ್ ಹೊಂದಿಕೊಳ್ಳುವುದಿಲ್ಲ. ಸಾವರ್ಕರ್ ಥಾಟ್ಸ್ ಅನ್ನು ಕಾರ್ಲ್‍ಮಾರ್ಕ್ಸ್  ಥಾಟ್ಸ್ ಒಪ್ಪುವುದಿಲ್ಲ. ಕಾಂಗ್ರೆಸ್‍ನ ಹುಟ್ಟಿಗೂ ಬಿಜೆಪಿಯ ಹುಟ್ಟಿಗೂ ಇರುವ ಕಾರಣಗಳು ಏನೆಂದರೆ, ಗಾಂಧಿ ಮತ್ತು ಸಾವರ್ಕರ್. ಇವರಿಬ್ಬರೂ ಎರಡು ಬಿಂದುಗಳು. ಕಾಂಗ್ರೆಸ್ ಈ ದೇಶದ ವೈವಿಧ್ಯ ಸಂಸ್ಕೃತಿಯನ್ನು ಮತ್ತು ಧಾರ್ಮಿಕ ಐಡೆಂಟಿಟಿಯನ್ನು ಗೌರವಿಸಿ ಕಾಪಾಡುವ ಗುಣದ ನಾಮಪದವಾದರೆ, ಬಿಜೆಪಿ ಬಹುತೇಕ ಈ ಗುಣದ ವಿರುದ್ಧ ಪದವಾಗಿ ಆರಂಭ ಕಾಲದಿಂದಲೂ ಗುರುತಿಸಿಕೊಳ್ಳುತ್ತಲೇ ಬಂದಿದೆ. ಗಾಂಧೀಜಿಗೆ ಗೋಡ್ಸೆ ಗುಂಡಿಕ್ಕುವುದಕ್ಕೆ ಅವರ ಬರಿಮೈ ಕಾರಣವಾಗಿರಲಿಲ್ಲ. ಸೈದ್ಧಾಂತಿಕ ವ್ಯತ್ಯಾಸದ ಹೊರತಾಗಿ 45 ಕೆಜಿ ತೂಗುವ ಆ ಫಕೀರನನ್ನು ಹತ್ಯೆಗೈಯುವುದಕ್ಕೆ ಗೋಡ್ಸೆಗೆ ಇನ್ನಾವ ಕಾರಣವೂ ಇರಲಿಲ್ಲ. ಗಾಂಧೀಜಿ ಪ್ರತಿಪಾದಿಸುವ ಸಿದ್ಧಾಂತ ಮತ್ತು ಗೋಡ್ಸೆಯ ಸಿದ್ಧಾಂತದ ನಡುವೆ ಎಷ್ಟು ತೀವ್ರವಾದ ವ್ಯತ್ಯಾಸ ಇದೆ ಅನ್ನುವುದನ್ನು ಆ ಗುಂಡು ಸೂಚಿಸುತ್ತದೆ. ಗಾಂಧೀಜಿ ಪ್ರತಿಪಾದಿಸುವ ಸಿದ್ಧಾಂತವು ಗುಂಡಿಕ್ಕಿ ಹತ್ಯೆಗೈಯ ಬೇಕಾದುದು ಎಂಬುದಾಗಿ ಗೋಡ್ಸೆ ಪ್ರತಿನಿಧಿಸುವ ಸಿದ್ಧಾಂತವು ಭಾವಿಸುತ್ತದೆ. ಹೀಗಿರುವಾಗ, ಗಾಂಧೀಜಿ ಪ್ರಣೀತ ಕಾಂಗ್ರೆಸ್ ಸಿದ್ಧಾಂತವನ್ನು ಒಪ್ಪಿಕೊಂಡು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾದವ ಅಥವಾ ಚುನಾವಣೆಯಲ್ಲಿ ಸ್ಪರ್ಧಿಸಿ ಜನಪ್ರತಿನಿಧಿಯಾದವ ಆ ಬಳಿಕ ಯಾವ ಮುಜುಗರವೂ ಇಲ್ಲದೇ ಗೋಡ್ಸೆಯನ್ನು ಮೆಚ್ಚಿ ಕೊಳ್ಳುವ ಅಥವಾ ಸಮರ್ಥಿಸಿಕೊಳ್ಳುವ ಪಕ್ಷವನ್ನು ಸೇರಿಕೊಳ್ಳುವುದಕ್ಕೆ ಹೇಗೆ ಸಾಧ್ಯ? ಹಾಗೆ ಸೇರಿಕೊಂಡವರನ್ನು ಏನೆಂದು ಕರೆಯ ಬಹುದು? ಸಿದ್ಧಾಂತ ಬದ್ಧತೆಯೇ ಪಕ್ಷ ಸೇರ್ಪಡೆಗೆ ಮತ್ತು ಚುನಾವಣಾ ಅಭ್ಯರ್ಥಿತನಕ್ಕೆ ಅರ್ಹತೆಯಾಗಿ ಮಾರ್ಪಡುವುದು ಯಾವಾಗ? ಅಂದಹಾಗೆ,
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹುದ್ದೆಗೆ ಚಕ್ರಯ್ಯನಂಥ ಸಿದ್ಧಾಂತಬದ್ಧ ವ್ಯಕ್ತಿಯನ್ನು ಗುರುತಿಸುವುದು ಮತ್ತು ಧೈರ್ಯದಿಂದ ಘೋಷಿಸುವುದಕ್ಕೆ ಗಾಂಧೀಜಿಯಂಥ ಪ್ರಭಾವಿ ವ್ಯಕ್ತಿ ಈಗ ಕಾಂಗ್ರೆಸ್‍ನಲ್ಲಿಲ್ಲ. ಆದ್ದರಿಂದ, ಸುಭಾಷ್ ಚಂದ್ರ ಬೋಸ್‍ರ ಅನಿರೀಕ್ಷಿತ ಗೆಲುವಿಗೆ ಸಾಕ್ಷಿಯಾದ ಮುಕ್ತ ಚುನಾವಣಾ ವಿಧಾನವನ್ನು ಕಾಂಗ್ರೆಸ್ ಅಳವಡಿಸಿಕೊಳ್ಳಬೇಕು. ಸಿದ್ಧಾಂತಕ್ಕೆ ಬದ್ಧವಾದ ಮತ್ತು ಯಾವ ಸಂದರ್ಭದಲ್ಲೂ ಸಿದ್ಧಾಂತವನ್ನು ಎತ್ತಿ ಹಿಡಿಯುವ ವ್ಯಕ್ತಿ ಕಾಂಗ್ರೆಸ್‍ನ ಅಧ್ಯP್ಷÀರಾಗಲಿ. ಆ ಮೂಲಕ ಶತಮಾನ ಹಳೆಯದಾದ ಪಕ್ಷವನ್ನು ಸಾವಿನಿಂದ ರಕ್ಷಿಸಲಿ.

Wednesday, July 24, 2019

ಗೆಳೆಯನ ಮೋಬ್ ಲಿಂಚಿಂಗ್ ಆಕ್ರೋಶದ ಒಳ-ಹೊರಗೆ



ಮೊನ್ನೆ ಗೆಳೆಯ ಒಂದು ಬಗೆಯ ಅಸಹನೆ, ಸಿಟ್ಟಿನಿಂದ ಹೇಳಿದ,
“ಇವರನ್ನೆಲ್ಲ ಹಿಡಿದು ಥಳಿಸ್ಬೇಕು. ಗುಂಪು ದಾಳಿ (Mob lynching) ಅನ್ತೇವಲ್ಲ, ಅದು. ಥಳಿತ ಎಷ್ಟು ತೀವ್ರವಾಗಿರಬೇಕು ಅಂದರೆ, ಇನ್ನೊಮ್ಮೆ ಇವರು ರೆಸಾರ್ಟ್ ರಾಜಕಾರಣ ಮಾಡ ಬಾರದು. ಮತದಾರರನ್ನು ಅವಮಾನಿಸುವ ರೀತಿಯಲ್ಲಿ  ರಾಜೀನಾಮೆ ಕೊಡಬಾರದು. ಇನ್ನೊಂದು ಪಕ್ಷ ಸೇರಬಾರದು..”
ಕೇವಲ ಕರ್ನಾಟಕದ ರಾಜಕೀಯ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾತ್ರ ವ್ಯಕ್ತವಾದ ಸಿಟ್ಟು ಇದಲ್ಲ. ರಾಜಕಾರಣಿ ಕರ್ನಾಟಕದಲ್ಲಿ ಮಾತ್ರ ಇರುವುದಲ್ಲವಲ್ಲ. ಈ ದೇಶದ ಹಣೆಬರಹ ಅವಲಂಬಿಸಿರುವುದೇ ರಾಜಕಾರಣಿ ಎಂಬ  ಬಹುವೇಷಧಾರಿ ಪ್ರಾಣಿಯ ಕೈಯಲ್ಲಿ. ಕರ್ನಾಟಕದ 13 ಮಂದಿ ಜನಪ್ರತಿನಿಧಿಗಳು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮುಂಬೈಯ ಹೊಟೇಲ್‍ಗೆ ವಾಸ ಬದಲಿಸಿದ ಆಸುಪಾಸಿನಲ್ಲೇ  ತೆಲಂಗಾಣ ಮತ್ತು ಗೋವಾ ದಲ್ಲೂ ಇದೇ ಬಗೆಯ ಅಚ್ಚರಿಗಳು  ನಡೆದುವು. ತೆಲಂಗಾಣದ 18 ಮಂದಿ ಕಾಂಗ್ರೆಸ್ ಶಾಸಕರ ಪೈಕಿ 12 ಮಂದಿ ಟಿ.ಆರ್.ಎಸ್. ಪಕ್ಷವನ್ನು ಸೇರಿಕೊಂಡರು. ಗೋವಾದ 15 ಮಂದಿ ಕಾಂಗ್ರೆಸ್ ಶಾಸಕರಲ್ಲಿ 10 ಮಂದಿ ಬಿಜೆಪಿಗೆ ಸೇರ್ಪಡೆಗೊಂಡರು. ಪ್ರಶ್ನೆ ಇರುವುದೂ ಇಲ್ಲೇ. ಓರ್ವ  ವ್ಯಕ್ತಿ, ತನ್ನ ಏಕಮಾತ್ರ ಮತದಿಂದ ಶಾಸಕನಾಗಿ ಆಯ್ಕೆಯಾಗಲಾರ. ಆತನಿಗಿರುವುದು ಜುಜುಬಿ ಒಂದೇ ಒಂದು ಓಟು. ಆದ್ದರಿಂದ ಆತ ಶಾಸಕನಾಗಿ ಆಯ್ಕೆ ಯಾಗುವುದು ಮತ್ತು ಆಗದೇ ಇರುವುದು- ಇವೆರಡೂ ಆತನ ಕ್ಷೇತ್ರದ ಮತದಾರರನ್ನು  ಅವಲಂಬಿಸಿರುತ್ತದೆ. ಒಂದು ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಎರಡರಿಂದ ಎರಡೂವರೆ ಲಕ್ಷ ಮತದಾರರಿರುತ್ತಾರೆ. ಇವರು ಅತ್ಯಂತ ಹೆಚ್ಚು ಮತವನ್ನು ಯಾವ ಅಭ್ಯರ್ಥಿಗೆ ನೀಡಿರುತ್ತಾರೋ ಅವರು ಜನಪ್ರತಿನಿಧಿಯಾಗಿ ಆಯ್ಕೆಯಾಗುತ್ತಾರೆ. ಆ ಬಳಿಕ  ಜನರಿಗೆ ಆತ/ಕೆ ಉತ್ತರದಾಯಿ. ಪ್ರಜಾತಂತ್ರದ ಸರಳ ವ್ಯಾಖ್ಯಾನ ಇದು. ಆದರೆ, ಇಷ್ಟಕ್ಕೇ ಈ ವ್ಯಾಖ್ಯಾನ ಮುಗಿಯುವುದಿಲ್ಲ. ಪ್ರಜಾತಂತ್ರದಲ್ಲಿ ಇದರಾಚೆಗೆ ಕೆಲವು ಸತ್ಯಗಳಿವೆ. ಈ ಪ್ರಜಾತಂತ್ರದ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಓರ್ವ ಅಭ್ಯರ್ಥಿ  ಜಯಶಾಲಿಯಾಗಬಹುದೇ ಎಂಬ ಪ್ರಶ್ನೆಗೆ ಉತ್ತರ- ‘ಸಾಧ್ಯವಿದೆ’ ಎಂಬುದು ನಿಜವೇ ಆದರೂ ಹಾಗೆ ಹೇಳುವಾಗ ತುಟಿ ಒಂದಿಷ್ಟು ಅದುರುತ್ತದೆ ಅನ್ನುವುದೂ ಅಷ್ಟೇ ನಿಜ. ಯಾಕೆಂದರೆ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳೇ  ನಿರ್ಣಾಯಕ. ಅವು ಒಂದು ರೀತಿಯಲ್ಲಿ ಆಲದ ಮರದಂತೆ. ವಿಶಾಲವಾಗಿ ಚಾಚಿಕೊಳ್ಳುವ ಸಾಮರ್ಥ್ಯ ಆಲದ ಮರಗಳಿವೆ. ಮಾತ್ರವಲ್ಲ, ತನ್ನ ಅಡಿಯಲ್ಲಿ ಇತರ ಗಿಡ ಮರಗಳು ಬೆಳೆಯದಂತೆ ತಡೆಯುವ ತಾಕತ್ತೂ ಅವುಗಳಿಗಿವೆ. ಆದ್ದರಿಂದ,  ವ್ಯಕ್ತಿಯೋರ್ವ ಪಕ್ಷೇತರನಾಗಿ ಸ್ಪರ್ಧಿಸು ವುದೆಂದರೆ, ಆ ಆಲದ ಮರವನ್ನು ಎದುರು ಹಾಕಿಕೊಂಡಂತೆ. ಅದರ ಬುಡದಲ್ಲಿ ಚಿಗುರಿಕೊಳ್ಳುವುದು ಸುಲಭದ ಸಾಹಸ ಅಲ್ಲ. ಹಣದ ಹೊರತಾದ ಹಲವಾರು ಅಗತ್ಯಗಳು ಮತ್ತು ಅನೇಕಾರು ಅರ್ಹತೆಗಳು  ಆತನಲ್ಲಿರಬೇಕಾಗುತ್ತದೆ. ಮಾತ್ರವಲ್ಲ, ಇವೆಲ್ಲ ಇದ್ದೂ ಸೋಲಾಗುವ ಸಾಧ್ಯತೆಯೇ ಹೆಚ್ಚು. ಈ ದೇಶದ ಲೋಕಸಭೆ ಮತ್ತು ವಿಧಾನ ಸಭೆಗಳಲ್ಲಿ ಪಕ್ಷೇತರರ ಸಂಖ್ಯೆ ಜುಜುಬಿಯಾಗಿರುವುದೇ ಇದಕ್ಕೆ ಉತ್ತಮ ಪುರಾವೆ. ಈ ದೇಶದ ಯಾವ ರಾಜ್ಯ ವ ನ್ನೂ ಪಕ್ಷೇತರರು ಆಳುತ್ತಿಲ್ಲ. ಪಕ್ಷೇತರರು ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ಬಹುಮತ ಪಡೆದದ್ದಿಲ್ಲ. ಈ ಹಿನ್ನೆಲೆಯಲ್ಲಿ ವಿಶ್ಲೇಷಿಸುವುದಾದರೆ, ಚುನಾವಣೆಯಲ್ಲಿ ಓರ್ವ ಅಭ್ಯರ್ಥಿಯ ಗೆಲುವಿಗೂ ಆತನ ಸ್ಪರ್ಧಾ ರೀತಿಗೂ ಸಂಬಂಧವಿರುತ್ತದೆ.  ಯಾವುದಾದರೊಂದು ರಾಜಕೀಯ ಪಕ್ಷದ ಅಭ್ಯರ್ಥಿಯಾಗಿದ್ದು ಕೊಂಡು ಸ್ಪರ್ಧಿಸುವುದು ಪಕ್ಷೇತರನಾಗಿ ಸ್ಪರ್ಧಿಸುವುದಕ್ಕಿಂತ ಹೆಚ್ಚು ಸುರಕ್ಷಿತ. ಅದರಲ್ಲೂ ಬಲಾಢ್ಯ ಮತ್ತು ರಾಷ್ಟ್ರ ಮಟ್ಟದ ರಾಜಕೀಯ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಗೆಲುವಿನ  ದೃಷ್ಟಿಯಿಂದ ಇನ್ನೂ ಸುರಕ್ಷಿತ. ಅಂದರೆ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರ ಮತವೇ ಅಭ್ಯರ್ಥಿಯ ಗೆಲುವಿನಲ್ಲಿ ನಿರ್ಣಾಯಕ ಎಂದು ಹೇಳಬಹುದು. ಆದರೆ, ಇದು ಮೇಲು ಮೇಲಿನ ವ್ಯಾಖ್ಯಾನ ಅಷ್ಟೇ. ಈ ವ್ಯಾಖ್ಯಾನದ ಒಳಗಡೆ ಕತ್ತಲೆಯಿದೆ.  ಒಂದುವೇಳೆ, ಈ ಬಗೆಯ ವ್ಯಾಖ್ಯಾನವೇ ಪರಮ ಸತ್ಯ ಎಂದಾಗಿರುತ್ತಿದ್ದರೆ ಪಕ್ಷೇತರ ಅಭ್ಯರ್ಥಿಗಳ ಗೆಲುವು ಯಾಕೆ ಕಠಿಣ ಅನ್ನುವ ಪ್ರಶ್ನೆ ಮುಖ್ಯವಾಗುತ್ತದೆ. ಈ ವ್ಯವಸ್ಥೆಯಲ್ಲಿ ಜನರ ಮತ ನಿರ್ಣಾಯ ಕವೇ ಆಗಿರಬಹುದು. ಆದರೆ ಜನರ ಮತವನ್ನು  ನಿರ್ದಿಷ್ಟ ಚೌಕಟ್ಟಿನೊಳಗಡೆ ಕೇಂದ್ರೀಕರಿಸುವಲ್ಲಿ ಮತ್ತು ಪಕ್ಷೇತರ ಇತ್ಯಾದಿಗಳಿಗೆ ಚದುರಿ ಹೋಗದಂತೆ ತಡೆಯುವಲ್ಲಿ ರಾಜಕೀಯ ಪಕ್ಷಗಳು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ರಾಜಕೀಯ ಪಕ್ಷಗಳೆಂದರೆ, ಮೇಜು-ಕುರ್ಚಿಗಳಲ್ಲವಲ್ಲ. ಅದೊಂದು  ಜನರ ಗುಂಪು. ತಮ್ಮವರ ಗೆಲುವಿಗೆ ಸಂಘಟಿತವಾಗಿ ಪ್ರಯತ್ನಿಸುವುದೇ ಈ ಗುಂಪಿನ ಗುರಿ. ಪಕ್ಷೇತರ ಅಭ್ಯರ್ಥಿಯ ಪಾಲಿಗೆ ಇಂಥ ಸಂಘಟಿತ ವ್ಯವಸ್ಥೆ ಇರುವುದಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳ ಎದುರು ಪಕ್ಷೇತರ ಅಭ್ಯರ್ಥಿ  ಯಾಕೆ ವಿಫಲವಾಗುತ್ತಾನೆ ಅನ್ನುವುದಕ್ಕೆ ಉತ್ತರ ಇಲ್ಲೆಲ್ಲೋ  ಇದೆ. ಮತದಾರರೂ ಅಷ್ಟೇ. ಪಕ್ಷೇತರ ಅಭ್ಯರ್ಥಿಗಿಂತ ರಾಜಕೀಯ ಪಕ್ಷಗಳ ಮೂಲಕ ಸ್ಪರ್ಧಿಸುವ ಅಭ್ಯರ್ಥಿಯ ಮೇಲೆಯೇ ಹೆಚ್ಚು ವಿಶ್ವಾಸ ತಾಳುತ್ತಾರೆ. ಆದ್ದರಿಂದ ಓರ್ವ ವ್ಯಕ್ತಿ ಒಂದು  ರಾಜಕೀಯ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗುವುದು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವುದೆಂದರೆ, ಅದು ಬಲುದೊಡ್ಡ ಜವಾಬ್ದಾರಿ. ಪಕ್ಷೇತರನಾಗಿ ಸ್ಪರ್ಧಿಸಿದರೆ ಲಭ್ಯವಾಗದ ಗೆಲುವನ್ನು ರಾಜಕೀಯ ಪಕ್ಷದ ಮೂಲಕ ಸ್ಪರ್ಧಿಸು ವಾಗ  ಲಭ್ಯವಾಗಿಸುತ್ತದೆ. ಜನರು ಆತನಿಗೆ ಮತ ಹಾಕುವುದಕ್ಕಿಂತ ಆತ ಪ್ರತಿನಿಧಿಸುವ ಬಿಜೆಪಿಗೋ ಕಾಂಗ್ರೆಸ್ಸಿಗೋ ಮತ ಹಾಕುತ್ತಾರೆ. ಆ ಮತ ಆತನನ್ನು ಗೆಲ್ಲಿಸುತ್ತದೆ. ಇಲ್ಲಿ ಆತನ ವೈಯಕ್ತಿಕ ವರ್ಚಸ್ಸಿಗಿಂತ ಹೆಚ್ಚು ಆತ ಪ್ರತಿನಿಧಿಸುವ ಪಕ್ಷ ಮತ್ತು ಪಕ್ಷದ  ಮೇಲೆ ವಿಶ್ವಾಸ ತಾಳಿರುವ ಮತದಾರರು ಮುಖ್ಯವಾಗುತ್ತಾರೆ. ಕರ್ನಾಟಕದ ರೆಸಾರ್ಟ್ ರಾಜಕೀಯ ಮತ್ತು ತೆಲಂಗಾಣ ಹಾಗೂ ಗೋವಾದ ಪಕ್ಷಾಂತರ ರಾಜಕೀಯ ಪ್ರಶ್ನಾರ್ಹವಾಗುವುದು ಈ ಕಾರಣದಿಂದಲೇ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ  ಸ್ಪರ್ಧಿಸಿ ಆಯ್ಕೆಯಾದ 12 ಮಂದಿ ಶಾಸಕರು ತೆಲಂಗಾಣ ರಾಷ್ಟ್ರ ಸಮಿತಿ (ಟಿ.ಆರ್.ಎಸ್.)ಯನ್ನು ಸೇರಿಕೊಂಡಿರುವುದು ಪ್ರಜಾತಾಂತ್ರಿಕವಾಗಿ ಎಷ್ಟು ಸರಿ? ತೆಲಂಗಾಣ ವಿಧಾನಸಭೆಗೆ ನಡೆದ ಚುನಾವಣೆಯ ವೇಳೆ ಈ ಅಭ್ಯರ್ಥಿಗಳು ಇಂಥದ್ದೊಂದು   ಸುಳಿವನ್ನು ಮತದಾರರಿಗೆ ನೀಡಿದ್ದರೆ? ತಾವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದರೂ ಸಂದರ್ಭ ಬಂದಾಗ ಟಿ.ಆರ್.ಎಸ್. ಸೇರಿಕೊಳ್ಳುವೆವು ಎಂದು ಮತದಾರರಿಗೆ ಮಾತು ಕೊಟ್ಟಿದ್ದರೆ? ಬಿಜೆಪಿಗೆ ಸೇರ್ಪಡೆಗೊಂಡ ಗೋವಾದ 10 ಮಂದಿ ಕಾಂಗ್ರೆಸ್  ಶಾಸಕರಿಗೂ ಇವೇ ಪ್ರಶ್ನೆಗಳು ಅನ್ವಯಿಸುತ್ತವೆ. ಪ್ರಜಾತಂತ್ರ ಅಂದರೆ ಮೋಸ ಎಂದು ಅರ್ಥವಲ್ಲವಲ್ಲ. ಪ್ರಜೆಗಳೇ ಆರಿಸುವ ಅಭ್ಯರ್ಥಿ ಎಂಬ ನೆಲೆಯಲ್ಲಿ ಪ್ರತಿ ಪ್ರತಿನಿಧಿಯೂ ಮತದಾರರಿಗೆ ಉತ್ತರದಾಯಿಯಾಗಿರುತ್ತಾನೆ. ಒಂದುವೇಳೆ, ಸ್ಪರ್ಧೆಯ  ಸಂದರ್ಭದಲ್ಲೇ  ತನ್ನ ಪಕ್ಷಾಂತರದ ಬಗ್ಗೆ, ಅತೃಪ್ತಿ ಹೊಂದಿ ರಾಜೀನಾಮೆ ನೀಡುವುದರ ಬಗ್ಗೆ, ಬಂಡಾಯ ಏಳುವುದರ ಬಗ್ಗೆ ಮತದಾರರೊಂದಿಗೆ ಹೇಳಿಕೊಂಡಿರುತ್ತಿದ್ದರೆ ಒಂದು ಹಂತದವರೆಗೆ ಇಂಥ ಪಕ್ಷಾಂತರ ಮತ್ತು ಅತೃಪ್ತಿ ರಾಜೀನಾಮೆಯ ನ್ನು ಒಪ್ಪಿಕೊಳ್ಳಬಹುದಿತ್ತು. ಆದರೆ, ಯಾವ ಅಭ್ಯರ್ಥಿಯೂ ಇಂಥದ್ದೊಂದು  ಸಣ್ಣ ಸೂಚನೆಯನ್ನೂ ಚುನಾ ವಣೆಯ ಸಂದರ್ಭದಲ್ಲಿ ಮತದಾರರೊಂದಿಗೆ ಹಂಚಿಕೊಂಡಿರುವುದಿಲ್ಲ. ತಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದೇ ಚುನಾವಣಾ  ಭಾಷಣವನ್ನು ಆರಂಭಿಸಿರುತ್ತಾನೆ. ಜನರು ಈತನಿಗೆ ಮತ ಚಲಾಯಿಸುವುದಕ್ಕೂ ಈ ನಿಷ್ಠಾವಂತಿಕೆಗೆ ಪಾತ್ರ ಇರುತ್ತದೆ. ಸ್ಪರ್ಧೆಯ ಸಂದರ್ಭದಲ್ಲೇ  ಮುಂದೊಂದು ದಿನ ತಾನು ಇನ್ನೊಂದು ಪಕ್ಷಕ್ಕೆ ಪಕ್ಷಾಂತರವಾಗಬಹುದು ಅಥವಾ ಅತೃಪ್ತಿ ಯಿಂದ  ರಾಜೀನಾಮೆ ಕೊಟ್ಟು ರೆಸಾರ್ಟಲ್ಲಿ ತಂಗಬಹುದು ಎಂದು ಹೇಳಿರುತ್ತಿದ್ದರೆ ಆತ ತಕ್ಷಣ ತನ್ನ ಅಭ್ಯರ್ಥಿತನವನ್ನು ಕಳಕೊಳ್ಳುತ್ತಿದ್ದ. ಅಂದರೆ, ಆತನ ಗೆಲುವಿನಲ್ಲಿ ಪಕ್ಷನಿಷ್ಠೆಗೆ ಪ್ರಮುಖ ಪಾತ್ರ ಇರುತ್ತದೆ. ಆತ ಯಾವ ಪಕ್ಷದಿಂದ ಸ್ಪರ್ಧಿಸಿರುತ್ತಾನೋ  ಅದರಲ್ಲೇ  ಉಳಿಯುತ್ತಾನೆ ಅನ್ನುವ ವಿಶ್ವಾಸದಿಂದ ಜನರು ಮತ ಚಲಾಯಿಸಿರುತ್ತಾರೆ. ಹೀಗಿರುವಾಗ, ಪಕ್ಷಾಂತರ ಎಂಬುದು ಜನರಿಗೆ ಮಾಡುವ ಮೋಸ ಅಲ್ಲದೇ ಇನ್ನೇನು? ಯಾವುದೇ ಜನಪ್ರತಿನಿಧಿಗೆ ತನ್ನ ಪಕ್ಷದ ಮೇಲೆ ಅತೃಪ್ತಿ ಉಂಟಾಗಿದ್ದರೆ ಆತ  ಕ್ಷೇತ್ರದ ಮತದಾರರೊಂದಿಗೆ ಸಮಾ ಲೋಚಿಸಿ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಹೊರಬರಬೇಕೇ ಹೊರತು ರೆಸಾರ್ಟಲ್ಲಿ ಉಳಿಯುವುದಲ್ಲ. ಅಷ್ಟಕ್ಕೂ, ಈ ರಾಜೀನಾಮೆ ಕೊಟ್ಟು ರೆಸಾರ್ಟಲ್ಲಿ ಉಳಿದಿರುವ ಶಾಸಕರ ಅತೃಪ್ತಿ ಯಾವ ವಿಷಯದಲ್ಲಿ? ಕ್ಷೇತ್ರದ  ಅಭಿವೃದ್ಧಿಯ ವಿಷಯದಲ್ಲಿಯೇ? ತನ್ನ ಕ್ಷೇತ್ರಕ್ಕೆ ಅನುದಾನ ಪಡಕೊಳ್ಳುವ ವಿಷಯದಲ್ಲೇ? ಸರಕಾರದ ಮೇಲೆಯೇ? ಪಕ್ಷದ ಕಾರ್ಯ ನಿರ್ವಹಣೆಯ ಕುರಿತೇ? ಅತೃಪ್ತಿಗೆ ಇವುಗಳಲ್ಲಿ ಯಾವುದೇ ಕಾರಣ ಆಗಿದ್ದರೂ ಅದಕ್ಕೆ ಪರಿಹಾರ ಯಾವುದು?  ಮುಂಬೈಯ ಹೊಟೇಲಲ್ಲಿ ತಂಗುವುದು ಯಾರ ಹಿತಕ್ಕಾಗಿ? ಅಂದಹಾಗೆ,
ಅರಬ್ ರಾಷ್ಟ್ರಗಳಲ್ಲಿ ಅಥವಾ ಸರ್ವಾಧಿಕಾರಿಗಳ ಹಿಡಿತದಲ್ಲಿರುವ ರಾಷ್ಟ್ರಗಳಲ್ಲಿ ಇವತ್ತು ಪ್ರಜಾತಂತ್ರದ ಕೂಗು ಎಷ್ಟು ದೊಡ್ಡ ಮಟ್ಟದಲ್ಲಿ ಕೇಳುತ್ತಿದೆಯೆಂದರೆ, ಪ್ರಜಾತಂತ್ರ ಎಂಬುದು ಸರ್ವರೋಗ ನಿವಾರಕ ಎಂದು ಯಾರೇ ಆಗಲಿ ಅಂದುಕೊಳ್ಳಬೇಕು.  ಈ ಕೂಗಿಗೆ ಆ ಜನರು ತೆರುತ್ತಿರುವ ದಂಡವಂತೂ ಅತ್ಯಂತ ಆಘಾತಕಾರಿಯಾದುದು. ಪ್ರಜಾತಂತ್ರ ಇರುವ ರಾಷ್ಟ್ರಗಳಿಗೆ ಓಡಿ ಬರುತ್ತಿರುವ ಅವರಲ್ಲಿ ಅಸಂಖ್ಯ ಮಂದಿ ನೀರಿನಲ್ಲಿ ಮುಳುಗಿಯೋ ಮರಳುಗಾಡಿನಲ್ಲಿ ಹೂತೋ ಗಡಿಯ ಬಾಗಿಲುಗಳು  ತೆರೆಯದೆಯೋ ಸಾವಿಗೀಡಾಗುತ್ತಿದ್ದಾರೆ. ಆದರೂ ಅವರ ಪ್ರಜಾತಂತ್ರ ಪರ ಕೂಗು ನಿಂತಿಲ್ಲ. ಚೀನಾದ ತಿಯೆನ್ಮಾನ್ ಚೌಕದಲ್ಲಿ ಸಾವಿರಾರು ವಿದ್ಯಾರ್ಥಿಗಳು ಪ್ರಜಾತಂತ್ರವನ್ನು ಆಗ್ರಹಿಸಿ 1989ರಲ್ಲಿ ಬಿಡಾರ ಹೂಡಿದರು. ಅವರನ್ನೆಲ್ಲ ಚೀನಾದ ಸರಕಾರ  ಸೇನಾ ಟ್ಯಾಂಕರ್‍ಗಳನ್ನು ಹರಿಸಿ ಕೊಂದು ಹಾಕಿತು. ಆದರೂ ಅಲ್ಲಿನ ಜನರ ಪ್ರಜಾತಂತ್ರ ಪರ ಬಯಕೆ ಕೊನೆಗೊಂಡಿಲ್ಲ. ಸುಡಾನ್‍ನ ಜನರು ಈಗ ಬೀದಿಯಲ್ಲಿದ್ದಾರೆ. ಅವರಿಗೂ ಸರ್ವಾಧಿಕಾರದಿಂದ ಮುಕ್ತಿ ಸಿಗಬೇಕೆಂಬ ಹಠ; ಪ್ರಜಾತಂತ್ರ  ಬರಬೇಕೆಂಬ ಆಸೆ. ಇದೇವೇಳೆ, ಪ್ರಜಾತಂತ್ರ ಅನ್ನುವ ಪರಿಕಲ್ಪನೆ ಎಷ್ಟು ಯಶಸ್ವಿ ಅನ್ನುವ ಪ್ರಶ್ನೆಯನ್ನು ಭಾರತೀಯ ಪ್ರಜಾತಂತ್ರವಂತೂ ಖಂಡಿತ ಎತ್ತುತ್ತಿದೆ. ಜನಪ್ರತಿನಿಧಿಯ ಮೇಲೆ ಜನರಿಗೆ ನಿಯಂತ್ರಣವೇ ಇಲ್ಲದ ವ್ಯವಸ್ಥೆಯೊಂದು ಸರ್ವಾಧಿಕಾರಿ  ವ್ಯವಸ್ಥೆಗಿಂತ ಎಷ್ಟು ಭಿನ್ನ ಮತ್ತು ಹೇಗೆಲ್ಲ ಭಿನ್ನ ಅನ್ನುವ ಚರ್ಚೆಯೊಂದಕ್ಕೆ ಭಾರತೀಯ ಪ್ರಜಾತಂತ್ರ ತೆರೆದುಕೊಳ್ಳ ಬೇಕಾದ ಜರೂರತ್ತು ಇವತ್ತಿನದು. ಅತ್ಯಂತ ಬಲಾಢ್ಯ ರಾಜಕೀಯ ಪಕ್ಷವು ತೀರಾ ಅಯೋಗ್ಯ ವ್ಯಕ್ತಿಯನ್ನೂ ಅಭ್ಯರ್ಥಿಯನ್ನಾಗಿ ಚುನಾವಣಾ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಹೋಗಬಹುದಾದ ಸ್ಥಿತಿ ಭಾರತೀಯ ಪ್ರಜಾತಂತ್ರದಲ್ಲಿ ನಿರ್ಮಾಣವಾಗಿರುವುದು ಹೇಗೆ? ಈ ಸ್ಥಿತಿಗೆ ಪರ್ಯಾಯ ಏನು? ನಾವೀಗ ಒಪ್ಪಿಕೊಂಡಿರುವ ಪ್ರಜಾತಂತ್ರ ವ್ಯವಸ್ಥೆಯೇ ಅಂತಿಮವೇ? ಇದರಾಚೆಗೆ  ಪರ್ಯಾಯ ವ್ಯವಸ್ಥೆಯೊಂದನ್ನು ಕನಸಬಹುದೇ? ಈಗಿನ ವ್ಯವಸ್ಥೆಯಲ್ಲಿ  ಯಾವೆಲ್ಲ ಮಾರ್ಪಾಡುಗಳನ್ನು ತರಬಹುದು? ಪ್ರಜಾತಂತ್ರ ವ್ಯವಸ್ಥೆಯನ್ನು ಜನರ ನಿಜವಾದ ಪ್ರಾತಿನಿಧಿಕ ವ್ಯವಸ್ಥೆಯನ್ನಾಗಿಸಲು ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳು  ಯಾವುವು? ಹಾಗಂತ,
ಅತೃಪ್ತಿಯ ಹೆಸರಲ್ಲಿ ರಾಜೀನಾಮೆ ಕೊಟ್ಟು ಮುಂಬೈಯ ಹೊಟೇಲಲ್ಲಿ ತಂಗಿರುವ ಶಾಸಕರ ಮೇಲೆ ಮೋಬ್ ಲಿಂಚಿಂಗ್ (ಗುಂಪು ಥಳಿತ) ನಡೆಯಬೇಕು ಎಂದ ಗೆಳೆಯನ ಆಕ್ರೋಶದಲ್ಲಿ ಒರಟುತನವಿದ್ದರೂ ಮತ್ತು ಅದು ಕಾನೂನುಬಾಹಿರ  ಬಯಕೆಯೇ ಆಗಿದ್ದರೂ ಆ ಆಕ್ರೋಶಕ್ಕೆ ಈಗಿನ ರಾಜಕೀಯವೇ ಮೂಲ ಕಾರಣ ಅನ್ನುವುದನ್ನು ನಿರಾಕರಿಸುವ ಹಾಗಿಲ್ಲ.