Wednesday, October 16, 2019

ಮಕ್ಕಳು ಮುದುಡಿ ಮಲಗಿದ್ದುವು, ಮನೆ ಸೋರುತ್ತಿತ್ತು...



ಕೆರೋಲಿನ್ ವಿಲ್ಲೋ 
ಜಾನ್ ವೇವರ್
ಮಿಚೆಲ್ ಮೆಕ್‍ಶಿ
ರೋನಿ ಅಲ್ಫಾಂಡರಿ
ಡೀನ್ ಮ್ಯಾಥ್ಯೂ
ಟೆಗಾನ್ ಬ್ರಾಝಿಮರ್
ಈ ಆರೂ ಮಂದಿ ರಾಜಕಾರಣಿಗಳಲ್ಲ, ಯೋಧರಲ್ಲ, ವಿಜ್ಞಾನಿಗಳಲ್ಲ, ಧರ್ಮಗುರುಗಳಲ್ಲ, ಶ್ರೀಮಂತರೂ ಅಲ್ಲ. 2016 ಮಾರ್ಚ್ 15ರ ತನ್ನ ಸಂಚಿಕೆಯಲ್ಲಿ ಬ್ರಿಟನ್ನಿನ ದ ಗಾರ್ಡಿಯನ್ ಪತ್ರಿಕೆಯು ಇವರ  ಮಾತುಗಳನ್ನು ಪ್ರಕಟಿಸಿತ್ತು. ಇವರೆಲ್ಲರ ಆಸಕ್ತಿಯ ಕ್ಷೇತ್ರ ಒಂದೇ- ಸಮಾಜ ಸೇವೆ. ‘ವಿಶ್ವ ಸಮಾಜ ಸೇವಾ ದಿನ’ದ ಹಿನ್ನೆಲೆಯಲ್ಲಿ ಬ್ರಿಟನ್‍ನಲ್ಲಿ ಇವರೆಲ್ಲರನ್ನೂ ಒಂದೇ ಕಡೆ ಸೇರಿಸಲಾಗಿತ್ತು ಮತ್ತು ಅ ನುಭವಗಳನ್ನು ಹಂಚಿ ಕೊಳ್ಳುವುದಕ್ಕೆ ವೇದಿಕೆಯನ್ನು ಒದಗಿಸಲಾಗಿತ್ತು. ಬ್ರಿಟನ್, ಅಮೇರಿಕ, ನ್ಯೂಝಿಲ್ಯಾಂಡ್, ಇಸ್ರೇಲ್, ಆಸ್ಟ್ರೇಲಿಯಾ ಮುಂತಾದ ರಾಷ್ಟ್ರಗಳಲ್ಲಿ ಚದುರಿ ಹೋಗಿರುವ ಇವರೆಲ್ಲ ಈ  ಸಮಾಜವನ್ನು ಸಹಜವಾಗಿ ನೋಡುವುದಿಲ್ಲ. ಆರಾಮವಾಗಿ ತಿಂದುಂಡು ಬದುಕುವ ಅವಕಾಶ ಇದ್ದೂ ಹೀಗೆ ತಿಂದುಂಡು ಬದುಕಲಾಗದ ಮನು ಷ್ಯರ ಬಗ್ಗೆ ಇವರು ಆಲೋಚಿಸುತ್ತಿರುತ್ತಾರೆ. 14  ವರ್ಷದವಳಿದ್ದಾಗಲೇ ಕೆರೋಲಿನ್ ವಿಲ್ಲೋ ಅವರು ತಾನು ಏನು ಆಗಬೇಕೆಂಬುದನ್ನು ನಿರ್ಧರಿಸಿದ್ದರಂತೆ.
1. ಪತ್ರಕರ್ತ
2. ನಟಿ
3. ಸಮಾಜ ಸೇವಕಿ
ಕೇವಲ 22 ವರ್ಷದಲ್ಲೇ ಅವರು ಸಮಾಜ ಸೇವೆಯನ್ನು ಆಯ್ಕೆ ಮಾಡಿಕೊಂಡರು. ತನ್ನ ಮನಸ್ಸಿನಿಂದ ನಟಿ ಮತ್ತು ಪತ್ರಕರ್ತೆಯನ್ನು ಹೊರಹಾಕಿದರು. ಹಾಗಂತ, ಇವರು ಪ್ರತಿನಿಧಿಸುವ ರಾಷ್ಟ್ರಗಳೇನೂ ಬಡವ ಅಲ್ಲ. ಬ್ರಿಟನ್, ಅಮೇರಿಕ, ಇಸ್ರೇಲ್, ನ್ಯೂಝಿಲ್ಯಾಂಡ್, ಅಸ್ಟ್ರೇಲಿಯಾ- ಇವೆಲ್ಲ ವಿಶ್ವ ರಾಷ್ಟ್ರಗಳ ಭೂಪಟದಲ್ಲಿ ಎತ್ತರದ ಸ್ಥಾನದಲ್ಲಿ ಇರುವಂಥವು. ಬಡತನವನ್ನು ಮೆಟ್ಟಿ ನಿಂತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಹೆಸರು ನಮೂದಿಸಿಕೊಂಡಿರುವ ರಾಷ್ಟ್ರಗಳಿವು. ಆದರೂ ಅಶಕ್ತರು, ಬಡವರು, ಇನ್ನೊಬ್ಬರನ್ನು ಅವಲಂಬಿಸಿ ಬದುಕಬೇಕಾದವರು ಈ ರಾಷ್ಟ್ರಗಳಲ್ಲೂ ಧಾರಾಳ ಇದ್ದಾರೆ.  ಸರಕಾರದ ಯೋಜನೆಗಳೊಂದೇ ಎಲ್ಲದಕ್ಕೂ ಪರಿಹಾರ ಅಲ್ಲ. ಸಮಾಜವನ್ನು ಅಭಿವೃದ್ಧಿಗೊಳಿಸುವಲ್ಲಿ ಉದಾರ ಮನಸುಗಳು, ಸಮಾಜದ ಸೇವೆಗೈಯುವ ಹೃದಯಗಳ ಅಗತ್ಯ ಇರುತ್ತದೆ. ಈ ಮೇಲಿನ  6 ಮಂದಿಯೂ ಸಮಾಜ ಸೇವೆಯನ್ನು ತಮ್ಮ ಕಾರ್ಯಕ್ಷೇತ್ರವಾಗಿ ಆಯ್ದುಕೊಂಡಿರುವುದಕ್ಕೆ ಕಾರಣವೂ ಇದುವೇ.
ಇತ್ತೀಚೆಗೆ ನಾನು ಎರಡು ಕಾರ್ಯಕ್ರಮಗಳಲ್ಲಿ ಭಾಗಿಯಾದೆ. ಇದರಲ್ಲಿ ಒಂದು, ಹೊಸ ಮನೆಯ ಹಸ್ತಾಂತರ ಕಾರ್ಯಕ್ರಮವಾದರೆ ಇನ್ನೊಂದು, ಅಂಗಡಿಯೊಂದರ ಹಸ್ತಾಂತರ ಕಾರ್ಯಕ್ರಮ. ವಿಶೇಷ  ಏನೆಂದರೆ,
ಈ ಎರಡೂ ಕಾರ್ಯಕ್ರಮಗಳ ಫಲಾನುಭವಿಗಳು ಮಹಿಳೆಯರು. ಈ ಮನೆ ಹಸ್ತಾಂತರಕ್ಕಿಂತ ಕೆಲವು ಸಮಯಗಳ ಹಿಂದೆ ಗೆಳೆಯರ ಜೊತೆ ಬೆಳಿಗ್ಗೆ ಒಂದು ಮನೆಗೆ ನಾನು ಭೇಟಿ ಕೊಟ್ಟಿದ್ದೆ. ಮೆಲ್ಲಗೆ  ಮಳೆ ಸುರಿಯುತ್ತಿತ್ತು. ಆದರೆ ಆ ಮನೆ ಮಳೆಯನ್ನೂ ತಾಳಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. 10, 8 ಮತ್ತು 5ನೇ ಕ್ಲಾಸಿನಲ್ಲಿ ಕಲಿಯುತ್ತಿರುವ ಮಕ್ಕಳು (ಇವರಲ್ಲಿ ಎರಡನೆಯವಳು ಹೆಣ್ಣು) ಮಂಚದಂಥ ಒಂದು ರಚನೆಯಲ್ಲಿ  ಒಟ್ಟಿಗೆ ಮಲಗಿದ್ದರು. ಮೇಲಿನಿಂದ ಅವರ ಮೇಲೆಯೇ ನೀರು ಸೋರುತ್ತಿತ್ತು. ಹಾಗಂತ, ಅಲ್ಲಿಂದ ಎದ್ದು ಬೇರೆ ಕಡೆ ಮಲಗೋಣವೆಂದರೆ ಅಲ್ಲಿ ಸೂಕ್ತ ಜಾಗವೂ ಇಲ್ಲ. ಮಳೆ ನೀರು ಬೀಳುವಾಗ ಮತ್ತಷ್ಟು  ಮುದುಡಿ ಕೊಳ್ಳುವುದು ಮತ್ತು ಮಲಗುವುದು ಆ ಮಕ್ಕಳಿಗೆ ಅಭ್ಯಾಸ ಆದ ಹಾಗಿತ್ತು. ಪುಟ್ಟ ಬಲ್ಬೊಂದು ಉರಿಯುತ್ತಿತ್ತಾದರೂ ಕಪ್ಪು ಬಣ್ಣಕ್ಕೆ ತಿರುಗಿರುವ ಮನೆಯನ್ನು ಬೆಳಗಿಸುವುದಕ್ಕೆ ಅದರಿಂದ  ಸಾಧ್ಯವಿರಲಿಲ್ಲ. ಅಡುಗೆ ಕೋಣೆ, ಮಲಗುವ ಕೋಣೆ, ಬಟ್ಟೆಗಳನ್ನಿಡುವ ಜಾಗ, ಪಾತ್ರೆ-ಪಿಂಗಾಣಿಗಳನ್ನು ಎತ್ತಿಡುವ ಜಾಗ, ಒಲೆ, ಶೌಚಾಲಯಕ್ಕೆ ಇರುವ ಬಾಗಿಲು- ಯಾವುದಕ್ಕೂ ಪ್ರತ್ಯಪ್ರತ್ಯೇಕ ಅನ್ನುವ  ಜಾಗ ಇರಲಿಲ್ಲ. ಅವವೇ ಸ್ವತಃ ಜಾಗ ಮಾಡಿಕೊಂಡಂತೆ ಕಂಡಿತು. ಮನೆ ಅನ್ನುವಾಗ ನಮ್ಮಲ್ಲಿ ಯಾವ ದೃಶ್ಯ ಮೂಡುತ್ತದೋ ಆ ದೃಶ್ಯಕ್ಕೆ ಯಾವ ರೀತಿಯಲ್ಲೂ ಹೋಲಿಕೆ ಯಾಗದ ಮತ್ತು ಮನೆ ಅ ನ್ನುವ ಪದದೊಳಗೆ ಇರಲು ಒಪ್ಪದ ರಚನೆ ಅದು. ಒಂದಷ್ಟು ಭಾಗ ಟರ್ಪಾಲು ಹಾಸಿದೆ. ಆದರೆ ಮಳೆಯನ್ನು ಸಂಪೂರ್ಣವಾಗಿ ತಡೆದು ನಿಲ್ಲಿಸುವ ಸಾಮಥ್ರ್ಯ ಆ ಟರ್ಪಾಲ್‍ಗೂ ಇಲ್ಲ. ಇನ್ನು, ಮನೆಯ  ಗೋಡೆ ಮತ್ತು ನೆಲ ಸುಣ್ಣ ಬಣ್ಣ ಕಂಡಿಲ್ಲ. ಅಷ್ಟೇ ಅಲ್ಲ, ನೆಲವು ಮಣ್ಣಿನ ಹೊರತು ಬೇರೇನನ್ನೂ ನೋಡಿಲ್ಲ. ಬೆಳೆದು ನಿಂತ ಇಬ್ಬರು ಹೆಣ್ಣು ಮಕ್ಕಳು ಮತ್ತು ತಾಯಿ ಸಹಿತ ಈ ಮನೆಯಲ್ಲಿ 6 ಮಂದಿ  ಸದಸ್ಯರು. ಪುರುಷ ಇಲ್ಲ. ವಿಶೇಷ ಏನೆಂದರೆ, ಈ ಮನೆಯೂ ಬಾಡಿಗೆಯದ್ದು. ಪ್ರತಿ ತಿಂಗಳು ಬಾಡಿಗೆ ಮೊತ್ತವನ್ನು ಪಾವತಿಸುತ್ತಲೇ ಅವರು ಆ ಮನೆಯಲ್ಲಿ ಉಳಿದಿದ್ದಾರೆ. ಬೀಡಿ ಸುರುಟುವುದರ  ಹೊರತು ಬೇರೆ ಯಾವ ಆದಾಯ ಮೂಲವೂ ಆ ಮನೆಗಿಲ್ಲ. ಅಂದಹಾಗೆ,
ಇದು ಒಂದು ಉದಾಹರಣೆ ಅಷ್ಟೇ. ಹುಡುಕುವ ಕಣ್ಣು ನಿಮ್ಮದಾದರೆ ಇಂಥ ಅಸಂಖ್ಯ ಮನೆಗಳು ನಿಮಗೂ ಸಿಗಬಹುದು. ಹಾಗಂತ, ಅವರ ಆ ಸ್ಥಿತಿಗೆ ಯಾರು ಕಾರಣ ಅನ್ನುವ ಪ್ರಶ್ನೆಗೆ ಏಕರೂಪದ  ಉತ್ತರ ಲಭ್ಯವಾಗುವ ಸಾಧ್ಯತೆ ಕಡಿಮೆ. ಈ ಪ್ರಶ್ನೆಯನ್ನು ಆಲಿಸಿದ ವ್ಯಕ್ತಿಯ ಹುದ್ದೆ, ಜೀವನ ಕ್ರಮ, ಆಲೋಚನೆ, ಧಾರ್ಮಿಕ ಮತ್ತು ರಾಜಕೀಯ ಒಲವು ಇತ್ಯಾದಿಗಳನ್ನು ಉತ್ತರವು ಹೊಂದಿಕೊಂಡಿರುತ್ತದೆ.  ಅಷ್ಟಕ್ಕೂ, ಬಡತನವನ್ನು ಕತೆ, ಕಾದಂಬರಿ, ಕಾವ್ಯ, ನಾಟಕ, ಸಿನಿಮಾಗಳಲ್ಲಿ ರಮ್ಯವಾಗಿ ಕಟ್ಟಿ ಕೊಡುವುದು ಬೇರೆ, ಅದನ್ನು ಸ್ವತಃ ಅನುಭವಿಸುವುದು ಬೇರೆ. ಬಡತನದಲ್ಲೇ ಬದುಕಿ ಬಡತನದಲ್ಲೇ  ಸಾಯಬೇಕು ಅನ್ನುವ ಬಯಕೆ ಯಾರದ್ದೂ ಆಗಿರುವುದಿಲ್ಲ. ಯಾವುದೇ ಗುಡಿಸಲಿನ ವ್ಯಕ್ತಿಯು ತಾನು ಹೀಗೆಯೇ ಗುಡಿಸಲಿನಲ್ಲೇ ಸದಾ ಬದುಕುತ್ತಿರಬೇಕು ಎಂದು ಪ್ರಾರ್ಥಿಸುತ್ತಾ ದಿನ ದೂಡುವುದನ್ನು  ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಪ್ರತಿ ಮನೆಯೂ ಇಂದಿನಿಂದ ಉತ್ತಮ ನಾಳೆಯ ತಲಾಶೆಯಲ್ಲಿರುತ್ತದೆ. ಅದಕ್ಕಾಗಿ ಶ್ರಮ ಪಡುತ್ತದೆ. ಯಾವುದೇ ಶ್ರೀಮಂತ ಕುಟುಂಬವು ತನ್ನ ಕೌಟುಂಬಿಕ ಸ್ಥಿತಿಗತಿಯನ್ನು  ಉತ್ತಮ ಪಡಿಸಲು ಪ್ರಯತ್ನಿಸುತ್ತದೆಯೇ ಹೊರತು ಇಂದಿಗಿಂತ ತನ್ನ ನಾಳಿನ ಜೀವನ ದುರ್ಬರ ಆಗಿರಬೇಕು ಎಂದು ಬಯಸುವುದಿಲ್ಲ. ಅದರಲ್ಲೂ ಶ್ರೀಮಂತ ಕುಟುಂಬಗಳಲ್ಲಿ ಆರ್ಥಿಕ ಸ್ಥಿತಿಗತಿಗಳಲ್ಲಿ  ಆಗುವ ಸಣ್ಣ ಏರಿಳಿತಗಳೂ ಭಾರೀ ಅವಘಡಕ್ಕೆ ಕಾರಣವಾಗುತ್ತಿರುವುದೂ ಸುಳ್ಳಲ್ಲ. ಆರ್ಥಿಕ ಕುಸಿತವನ್ನು ತಡೆದುಕೊಳ್ಳಲಾಗದೇ ಸಾಮೂಹಿಕವಾಗಿ ಬದುಕು ಮುಗಿಸುವ ಘಟನೆಗಳು ಆಗಾಗ  ಸಂಭವಿಸುತ್ತಿರುವುದೇ ಇದಕ್ಕೆ ಪುರಾವೆ.
ಬಡವ ಮತ್ತು ಶ್ರೀಮಂತ ಎಂಬುದು ನಿಜವಾಗಿ ಸಮಾಜದ ಎರಡು ಧ್ರುವಗಳು. ಮನುಷ್ಯರು ಎಂಬ ಏಕೈಕ ಸಮಾನ ಅಂಶವನ್ನು ನಿರ್ಲಕ್ಷಿಸಿ ನೋಡಿದರೆ ಇವರಿಬ್ಬರ ನಡುವೆ ಅನೇಕ ಅಸಮಾನ ಅಂಶಗಳು ಬಾಹ್ಯನೋಟಕ್ಕೇ ಎದ್ದು ಕಾಣುತ್ತವೆ. ಅವರ ಮಾತಿನಲ್ಲಿ, ಹುದ್ದೆಯಲ್ಲಿ, ಉಡುಪಿನಲ್ಲಿ, ಪ್ರಯಾಣದಲ್ಲಿ, ಆಹಾರದಲ್ಲಿ, ಅವರು ತೆರಳುವ ಹೊಟೇಲಿನಲ್ಲಿ, ಪಾಲುಗೊಳ್ಳುವ ಕಾರ್ಯಕ್ರಮಗಳಲ್ಲಿ... ಹೀಗೆ  ಈ ಅಸಮಾನ ಅಂಶಗಳ ಪಟ್ಟಿ ದೀರ್ಘ ಇದೆ. ಬಡವ ಹೋಗುವ ಹೋಟೆಲೇ ಬೇರೆ, ಶ್ರೀಮಂತ ಹೋಗುವ ಹೋಟೆಲೇ ಬೇರೆ. ಮದುವೆಗೆ ಬಡವ ಉಡುವ ಉಡುಪೇ ಬೇರೆ, ಶ್ರೀಮಂತ ಉಡುವ ಉಡುಪೇ ಬೇರೆ.  ದುರಂತ ಏನೆಂದರೆ, ಅನೇಕ ಬಾರಿ ಬಾಹ್ಯ ನೋಟದ ಈ ಅಸಮಾನ ಅಂಶಗಳೇ ಪ್ರಾಮುಖ್ಯತೆಯನ್ನು ಪಡೆದುಕೊಂಡು ಬೌದ್ಧಿಕ ಮಟ್ಟವನ್ನು  ಅಳೆಯುವುದಕ್ಕೂ ಇವೇ ಅಳತೆಗೋಲಾಗಿ ಬಿಡುವುದೂ ಇದೆ. ಒಳ್ಳೆಯವರು ಮತ್ತು ಕೆಟ್ಟವರು ಎಂಬ ವಿಂಗಡನೆಗೂ ಬಾಹ್ಯನೋಟದ ಈ ವ್ಯತ್ಯಾಸವೇ ಮಾನದಂಡವಾಗಿರುವುದೂ ಇದೆ.
ಅಂದಹಾಗೆ, ‘ಬಡಕುಟುಂಬದ ಪ್ರತಿಭೆ’ ಎಂಬ ಪದಪ್ರಯೋಗವೊಂದು ನಮ್ಮಲ್ಲಿ ಇದೆ. ಬಡಕುಟುಂಬದಲ್ಲೂ ಪ್ರತಿಭೆಗಳಿವೆ ಅಥವಾ ಬಡತನವು ಪ್ರತಿಭೆಗೆ ಅಡ್ಡಿಯಾಗಿಲ್ಲ ಎಂಬುದನ್ನು ಸೂಚ್ಯವಾಗಿ  ತಿಳಿಸುವುದು ಈ ಪದಪ್ರಯೋಗದ ಉದ್ದೇಶವಾಗಿರಬಹುದಾದರೂ ‘ಪ್ರತಿಭೆಗಳೆಲ್ಲ ಶ್ರೀಮಂತ ಮನೆಯ ಸೊತ್ತಾಗಿ ಬಿಟ್ಟಿದೆ’ ಎಂಬ ಧ್ವನ್ಯಾರ್ಥವೂ ಈ ಪದಪ್ರಯೋಗಕ್ಕೆ ಇದೆ ಎಂಬುದೂ ಅಷ್ಟೇ ಸತ್ಯ.  ನಿಜವಾಗಿ, ಬಡತನವು ಅತ್ಯಂತ ಹಾನಿಯನ್ನುಂಟು ಮಾಡುವುದು ಆ ಮನೆಯ ಮಕ್ಕಳ ಮೇಲೆ. ಆ ಮಕ್ಕಳು ಪ್ರತಿಭಾ ಸಂಪನ್ನವಾಗಿದ್ದೂ ಆ ಪ್ರತಿಭೆಯನ್ನು ಪೋಷಿಸುವ ಸೂಕ್ತ ವಾತಾವರಣ ಆ ಮನೆಯಲ್ಲಿರುವುದಿಲ್ಲ. ಅನೇಕ ಬಾರಿ ಪ್ರತಿಭೆಯನ್ನು ಪೋಷಿಸಬೇಕು ಅನ್ನುವ ತಿಳು ವಳಿಕೆಯೇ ಮನೆಯವರಲ್ಲಿರುವುದಿಲ್ಲ. ಅಂಥ ಆಲೋಚನೆಗೆ ಬಿಡುವೂ ಇರುವುದಿಲ್ಲ. ಗುಣಮಟ್ಟದ ಶಿಕ್ಷಣ ಒದಗಿಸುವುದಕ್ಕೆ ಮತ್ತು  ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಪ್ರೋತ್ಸಾಹಿಸುವುದಕ್ಕೆ ಸಾಮರ್ಥ್ಯವಾಗಲಿ, ಉತ್ಸಾಹವಾಗಲಿ ಇರುವು ದಿಲ್ಲ. ಇಂಥ ಮನೆಗಳ ಮಕ್ಕಳ ಪ್ರಾಥಮಿಕ ಶಾಲೆಯ ಶಿಕ್ಷಣವು ಉನ್ನತ ಶಿಕ್ಷಣವಾಗಿ  ಪರಿವರ್ತಿತವಾಗುವುದು ಅನೇಕ ಬಾರಿ ಅಸಂಭವವಾಗುವ ಸಾಧ್ಯತೆಯೇ ಹೆಚ್ಚು. ಆದ್ದರಿಂದಲೇ, ಶ್ರೀಮಂತರ ಮನೆಯಲ್ಲಿ ಸೃಷ್ಟಿಯಾಗುವ ಪ್ರತಿಭೆಗಳಷ್ಟು ಧಾರಾಳವಾಗಿ ಬಡವರ ಮನೆಯಲ್ಲಿ ಪ್ರತಿಭೆಗಳು  ಸೃಷ್ಟಿಯಾಗುವುದಿಲ್ಲ.
ಈ ಸ್ಥಿತಿಯಲ್ಲಿ ಬದಲಾವಣೆ ಉಂಟಾಗಬೇಕಾದರೆ ‘ಸಮಾಜ ಸೇವೆ’ ಅನ್ನುವ ಪರಿಕಲ್ಪನೆಯು ಹೊಸ ದೃಶ್ಯರೂಪವಾಗಿ ಸಮಾಜದ ನಡುವೆ ಹರಿದಾಡಬೇಕಾದ ಅಗತ್ಯವಿದೆ. ಶ್ರೀಮಂತರು ಮತ್ತು ಬಡವರ  ನಡುವಿನ ಅನುಪಾತ ಬಹಳ ದೊಡ್ಡದು. ಶ್ರೀಮಂತರಿಗೆ ಹೋಲಿಸಿದರೆ ಬಡವರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಿದೆ. ಈ ಅಂತರ ತಗ್ಗಬೇಕು. ಸರ್ವರಿಗೂ ಗುಣಮಟ್ಟದ ಬದುಕು, ಗುಣಮಟ್ಟದ ಶಿಕ್ಷಣ  ಲಭ್ಯವಾಗಬೇಕು. ಹಾಗಂತ, ಆಶಯವೊಂದೇ ಈ ಬಯಕೆಯನ್ನು ಪೂರ್ತಿಗೊಳಿಸಲಾರದು. ಈ ವಿಷಯದಲ್ಲಿ ಸರಕಾರದ ಹೊಣೆಗಾರಿಕೆ ದೊಡ್ಡದಿದೆ ನಿಜ. ಆದರೆ, ಸರಕಾರವೊಂದೇ ಈ ಸ್ಥಿತಿಯಲ್ಲಿ  ಅಮೂಲಾಗ್ರ ಬದಲಾವಣೆಯನ್ನು ತರುತ್ತದೆ ಎಂಬ ನಿರೀಕ್ಷೆ ತಪ್ಪು. ಬಡವರ ಸ್ಥಿತಿಯು ಶ್ರೀಮಂತರ ಮನಸ್ಸನ್ನು ಕಲಕಿ ಬಿಡಲು ಯಶಸ್ವಿಯಾಗುವವರೆಗೆ ಈ ಸ್ಥಿತಿಯಲ್ಲಿ ದೊಡ್ಡ ಬದಲಾವಣೆ ಸಾಧ್ಯವಿಲ್ಲ.  ಸಮಾಜಸೇವೆ ಅನ್ನುವ ಪರಿಕಲ್ಪನೆಗೆ ಮಹತ್ವ ಬರುವುದು ಈ ಕಾರಣದಿಂದ. ಅಂದಹಾಗೆ, ಬಡವರಿಗೆ ನೆರವಾಗುವುದರಲ್ಲಿ ಎರಡು ರೀತಿಗಳಿವೆ.
1. ವೈಯಕ್ತಿಕವಾಗಿ ನೆರವಾಗುವುದು.
2. ಸಂಘಟಿತವಾಗಿದ್ದುಕೊಂಡು ನೆರವಾಗುವುದು.
ಶ್ರೀಮಂತರು ಬಡವರಿಗೆ ವೈಯಕ್ತಿಕ ನೆಲೆಯಲ್ಲಿ ನೆರವಾಗುವುದಕ್ಕೆ ಬಹಳ ಪುರಾತನ ಇತಿಹಾಸವಿದೆ. ತನ್ನ ಮನೆಯ ಪಕ್ಕದ ಅಥವಾ ತನ್ನ ಗಮನಕ್ಕೆ ಬಂದ ಬಡತನದ ಪ್ರಕರಣಗಳಿಗೆ ಸಂಬಂಧಿಸಿ  ಶ್ರೀಮಂತರು ವೈಯಕ್ತಿಕವಾಗಿ ನೆರವಾಗಿರುವ ಪ್ರಥಮ ಪ್ರಕರಣ ಯಾವಾಗ ಪ್ರಾರಂಭವಾಯಿತು ಎಂಬುದಕ್ಕೆ ನಿರ್ದಿಷ್ಟ ದಾಖಲೆಗಳು ಐತಿಹಾಸಿಕವಾಗಿ ಇಲ್ಲ. ಆದರೆ, 1869ರಲ್ಲಿ ಮೊಟ್ಟಮೊದಲ ಬಾರಿ ಸಮಾಜ ಸೇವೆಯನ್ನು ಸಂಘಟಿತ ರೂಪಕ್ಕೆ ತರುವ ಪ್ರಯತ್ನ ನಡೆಯಿತು ಎಂದು ದಾಖಲೆಗಳು ಹೇಳುತ್ತವೆ. ಬ್ರಿಟನ್ನಿನ ಹೆಲೆನ್ ಬೊಸಾ ನ್ಕೆಟ್ ಮತ್ತು ಅಕ್ಟೋವಿಯಾ ಹಿಲ್ ಅವರು ಸ್ಥಾಪಿಸಿದ ‘ಚಾರಿಟಿ ಆರ್ಗನೈಝೇ ಶನ್ ಸೊಸೈಟಿ’ಯು ಈ ನಿಟ್ಟಿನಲ್ಲಿ ಪ್ರಥಮ ಪ್ರಯೋಗವಾಗಿದೆ ಎಂದು ಹೇಳಲಾಗುತ್ತದೆ. ಬಡವರು, ಅವರ ಸಾಮಾಜಿಕ  ಅಗತ್ಯಗಳು ಹಾಗೂ ಅವರನ್ನು ಬಡತನದಿಂದ ಮೇಲೆ ತ್ತುವ ಬಗ್ಗೆ ವೈಜ್ಞಾನಿಕವಾಗಿ ಮತ್ತು ವ್ಯವಸ್ಥಿತವಾಗಿ ರೂಪುರೇಶೆಗಳನ್ನು ಸಿದ್ಧಪಡಿಸಿ ಕೆಲಸ ಮಾಡುವ ಸಂಘಟಿತ ಪ್ರಯತ್ನಗಳಲ್ಲಿ ‘ಚಾರಿಟಿ ಆರ್ಗ ನೈಝೇಶನ್ ಸೊಸೈಟಿ’ಯು ತೊಡಗಿಸಿಕೊಂಡಿತು ಎಂಬ ಅಭಿಪ್ರಾಯವಿದೆ.
ನಾನು ಭಾಗಿಯಾದ ಮನೆ ಹಸ್ತಾಂತರ ಕಾರ್ಯಕ್ರಮವು ಆರಂಭ ದಲ್ಲಿ ಉಲ್ಲೇಖಿಸಲಾದ ದುರ್ಬಲ ಮನೆಯವರಿಗೆ ಸಂಬಂಧಿಸಿದ್ದಾಗಿತ್ತು. ತಾಯಿ ಮತ್ತು 5 ಮಂದಿ ಮಕ್ಕಳಲ್ಲಿ ಹೊಸ ಭರವಸೆಯನ್ನು  ತುಂಬುವ ಕಾರ್ಯಕ್ರಮ ಅದಾಗಿತ್ತು. ಮನೆ ಹಸ್ತಾಂತರದ ವೇಳೆ ಅವರ ಕಣ್ಣಲ್ಲಿ ಮೂಡಿದ ಮಿಂಚು ಯಾವ ವಿದ್ಯುತ್ ಬೆಳಕಿಗೆ ಸರಿಗಟ್ಟದು. ಅವರ ಕಣ್ಣಿನ ಅಶ್ರುಧಾರೆಗೆ ಯಾವ ನೀರೂ ಸಾಟಿಯಾಗದು.  ಅಂಗಡಿ ಹಸ್ತಾಂತರ ಕಾರ್ಯಕ್ರಮವೂ ಇಂಥದ್ದೇ ಒಂದು ಪ್ರಯೋಗ. ನಾಲ್ವರು ಮಹಿಳೆಯರು ಮತ್ತು ಅವರ ಮಕ್ಕಳು ಮಾತ್ರ ಇರುವ ಕುಟುಂಬಕ್ಕೆ ಆದಾಯ ಮೂಲವಾಗಿ ಮನೆಯೆದುರೇ  ಅಂಗಡಿಯೊಂದನ್ನು ಕಟ್ಟಿಕೊಟ್ಟು ಬದುಕಿಗೆ ನೆರವಾದ ಸನ್ನಿವೇಶ. ಸಮಾಜ ಸೇವೆಯು ಸಂಘಟಿತ ಸ್ವರೂಪವನ್ನು ಪಡೆಯುವಾಗ ಆಗುವ ಬದಲಾವಣೆಗಳಿವು. ಅಂದಹಾಗೆ,
ಇವೆರಡನ್ನೂ ಸಾಧ್ಯವಾಗಿಸಿದ ಮಂಗಳೂರು ಜಮಾಅತೆ ಇಸ್ಲಾಮೀ ಹಿಂದ್‍ನ ಸಮಾಜ ಸೇವಾ ವಿಭಾಗಕ್ಕೆ ಕೃತಜ್ಞತೆಗಳು.

No comments:

Post a Comment