Wednesday, December 13, 2017

ಹಾದಿಯ, ಪದ್ಮಾವತಿ ಮತ್ತು ಕೆಲವು ಪ್ರಶ್ನೆಗಳು


ಪದ್ಮಾವತಿ
ಹಾದಿಯ
ಇಬ್ಬರೂ ಹೆಣ್ಮಕ್ಕಳೇ. ಒಂದು- ಐತಿಹಾಸಿಕವಾಗಿ ಪ್ರಬಲ ದಾಖಲೆಗಳಿಲ್ಲದ ಕಾಲ್ಪನಿಕ ಪಾತ್ರವಾದರೆ, ಇನ್ನೊಂದು- ಜೀವಂತ ಪಾತ್ರ. ಈ ಎರಡು ವ್ಯಕ್ತಿತ್ವಗಳ ನಡುವೆ ಸುಮಾರು ಏಳೂಕಾಲು ಶತಮಾನಗಳ ಅಂತರ ಇದೆ. ನಿಜವಾಗಿ, ಪದ್ಮಾವತಿ ಅಥವಾ ಪದ್ಮಿನಿ ಎಂಬೋರ್ವ ರಾಣಿ ಇದ್ದಳೋ ಎಂಬ ಬಗ್ಗೆ ಇತಿಹಾಸ ಕಾರರಲ್ಲಿ ಗೊಂದಲ ಇದೆ. 1540ರಲ್ಲಿ ಸೂಫಿ ಕವಿ ಮಲಿಕ್ ಮುಹಮ್ಮದ್ ಜಾಯಿಸಿಯ ಕಾವ್ಯದ ಮೂಲಕ ಮೊದಲ ಬಾರಿ ಪದ್ಮಿನಿ ಮುನ್ನೆಲೆಗೆ ಬರುತ್ತಾಳೆ. ಕಾವ್ಯವೆಂಬುದು ರೂಪಕ, ಸಂಕೇತ, ಕಲ್ಪಿತ ಪ್ರೇಮ, ವಿರಹ, ಸುಖಗಳ ಗುಚ್ಚವೆಂಬುದನ್ನು ನಮ್ಮೊಳಗೆ ನಾವು ಸ್ಪಷ್ಟಪಡಿಸಿಕೊಂಡರೆ, ಪದ್ಮಿನಿಯನ್ನು ಅರ್ಥೈಸಿಕೊಳ್ಳು ವುದು ಕಷ್ಟವೇನಲ್ಲ. 1303ರಲ್ಲಿ ಚಿತ್ತೂರಿನ ರಾಜ ರಾಣಾ ಜಯಸಿಂಹನ ಮೇಲೆ ಅಲ್ಲಾವುದ್ದೀನ್ ಖಿಲ್ಜಿ ದಾಳಿ ಮಾಡುತ್ತಾನೆ. ಸೋಲಿಸುತ್ತಾನೆ. 1316ರಲ್ಲಿ ಖಿಲ್ಜಿ ಸಾವಿಗೀಡಾಗುತ್ತಾನೆ. ಐತಿಹಾಸಿಕ ದಾಖಲೆಗಳಲ್ಲಿ ಈ ಇಬ್ಬರ ಹೆಸರಿದೆಯೇ ಹೊರತು ಎಲ್ಲೂ ಪದ್ಮಿನಿ ಅಥವಾ ಪದ್ಮಾವತಿಯ ಹೆಸರಿಲ್ಲ. ಆದರೆ ಕವಿ ಜಾಯಿಸಿ ಈ ಇಡೀ ಘಟನೆಗೆ ರಮ್ಯ ಹಿನ್ನೆಲೆಯೊಂದನ್ನು ಒದಗಿಸುತ್ತಾನೆ. `ಖಿಲ್ಜಿಗೆ ರಾಣಿ ಪದ್ಮಾವತಿಯ ಮೇಲೆ ಮೋಹ ಉಂಟಾಗುತ್ತದೆ, ಆ ಕಾರಣದಿಂದಲೇ ಯುದ್ಧ ಏರ್ಪಡುತ್ತದೆ, ಖಿಲ್ಜಿಯ ವಶವಾಗುವುದನ್ನು ತಪ್ಪಿಸುವುದಕ್ಕಾಗಿ ರಾಣಿ ಪದ್ಮಿನಿ ಇತರ 16 ಸಾವಿರ ಮಹಿಳೆಯರೊಂದಿಗೆ ಸಾಮೂಹಿಕ ಸತಿ ಸಹಗಮನ (ಜೋಹರ್) ಮಾಡುತ್ತಾಳೆ..’ ಇದು ಜಾಯಿಸಿಯ ಕಾವ್ಯದ ಸಾರಾಂಶ. ಇನ್ನೋರ್ವಳು ಹಾದಿಯ. ಈಕೆ ದಂತಕತೆಯಲ್ಲ. ನಮ್ಮ ನಡುವಿನ ವಾಸ್ತವ. ಕೇರಳದ ನೆಡುಂಬಾಶ್ಶೇರಿ ವಿಮಾಣ ನಿಲ್ದಾಣದಲ್ಲಿ ತನ್ನನ್ನು ಸುತ್ತುವರಿದಿರುವ ಪೊಲೀಸರ ನಡುವೆ ಮಾಧ್ಯಮದ ಮಂದಿಯನ್ನು ಕೂಗಿ ಕರೆದು- ‘ನಾನು ಮುಸ್ಲಿಮ್, ನನ್ನನ್ನು ಯಾರೂ ಬಲವಂತದಿಂದ ಮತಾಂತರಿಸಿಲ್ಲ, ನನ್ನ ಗಂಡ ಶಫಿನ್ ಜಹಾನ್...’ ಎಂದುದನ್ನು ಕಳೆದ ವಾರ ಟಿವಿ ಚಾನೆಲ್‍ಗಳು ನೇರವಾಗಿ ಪ್ರಸಾರ ಮಾಡಿದುವು. ಹಾಗಂತ, ಆಕೆ ತನ್ನನ್ನು ತಾನು ಹೀಗೆ ಪ್ರಸ್ತುತಪಡಿಸುತ್ತಿರುವುದು ಇದೇ ಮೊದಲಲ್ಲ. ಆಕೆ ಕೇರಳ ಹೈಕೋರ್ಟಿನ ಮುಂದೆ ಅದನ್ನು ಈ ಮೊದಲೇ ವ್ಯಕ್ತಪಡಿಸಿದ್ದಳು. ತನ್ನ ಹೆತ್ತವರ ಮುಂದೆ 2015ರ ನವೆಂಬರ್ ನಲ್ಲೇ ಹೇಳಿಕೊಂಡಿದ್ದಳು. 2016 ಮೇ 24 ರಂದು ಕೇರಳ ಹೈಕೋರ್ಟು ನೀಡಿದ ತೀರ್ಪಿನಲ್ಲಿ ಆಕೆಯ ಇಸ್ಲಾಮ್ ಸ್ವೀಕಾರದ ಬಗ್ಗೆ ವಿವರವಾಗಿ ಹೇಳಲಾಗಿತ್ತು. ತಮಿಳುನಾಡಿನ ಸೇಲಂನಲ್ಲಿರುವ ಶಿವರಾಜ್ ಹೋಮಿಯೋಪತಿ ಮೆಡಿಕಲ್ ಕಾಲೇಜ್‍ನಲ್ಲಿ ಓದುವಲ್ಲಿಂದ ಹಿಡಿದು 2015ರಲ್ಲಿ ದೊಡ್ಡಪ್ಪ ಸತ್ತಾಗ ನಡೆದ ಪ್ರಸಂಗಗಳ ವರೆಗೆ ಅದು ಹಾದಿಯಾಳ ಬದುಕು ಸಾಗಿ ಬಂದ ದೃಶ್ಯಗಳನ್ನು ಕಟ್ಟಿಕೊಟ್ಟಿತ್ತು. ಸೇಲಂನ ಮೆಡಿಕಲ್ ಕಾಲೇಜ್‍ನ ಹತ್ತಿರದಲ್ಲೇ ಇರುವ ಬಾಡಿಗೆ ಮನೆಯೊಂದರಲ್ಲಿ ಇತರ ನಾಲ್ವರು ಹೆಣ್ಣು ಮಕ್ಕಳೊಂದಿಗೆ ಅಖಿಲ ಎಂಬ ಹಾದಿಯ ವಾಸವಾಗಿದ್ದಳು. ನಾಲ್ವರು ರೂಮ್‍ಮೇಟ್‍ಗಳಲ್ಲಿ ಫಸೀನ ಮತ್ತು ಜಸೀನ ಎಂಬಿಬ್ಬರು ಮುಸ್ಲಿಂ ವಿದ್ಯಾರ್ಥಿನಿಯರೂ ಇದ್ದರು. ಜಸೀನಳ ಮನೆಗೆ ಅಖಿಲ ಹಲವು ಬಾರಿ ಹೋಗಿದ್ದಾಳೆ. ಇವರಿಬ್ಬರ ನಡತೆ ಅಖಿಲಳನ್ನು ತೀವ್ರವಾಗಿ ಆಕರ್ಷಿಸಿದೆ. ಅವರು ಮಾಡುತ್ತಿರುವ ನಮಾಝ್‍ನಿಂದ ಅಖಿಲ ಪ್ರಭಾವಿತಳಾಗಿದ್ದಾಳೆ. ಬಹುದೇವತ್ವಕ್ಕಿಂತ ಏಕದೇವತ್ವದ ಪರಿಕಲ್ಪನೆ ಆಕೆಗೆ ಹೆಚ್ಚು ಆಪ್ತವಾಗಿ ಕಂಡಿದೆ. ಇಸ್ಲಾಮ್‍ಗೆ ಸಂಬಂಧಿಸಿದ ಪುಸ್ತಕಗಳು ಮತ್ತು ವೀಡಿಯೋಗಳನ್ನು ಆಕೆ ವೀಕ್ಷಿಸ ತೊಡಗಿದ್ದಾಳೆ. ನಮಾಝನ್ನು ಅಭ್ಯಾಸ ಮಾಡತೊಡಗಿದ್ದಾಳೆ. ಮನೆಯಲ್ಲಿ ತಾನು ನಮಾಝ್ ಮಾಡಿದುದನ್ನು ನೋಡಿ ಅಪ್ಪ ಅಶೋಕನ್ ಗದರಿಸಿಯೂ ಇದ್ದಾರೆ. ಇನ್ನೊಮ್ಮೆ ಈ ಭಂಗಿ ಪುನರಾವರ್ತಿಸಬಾರದು ಎಂದೂ ತಾಕೀತು ಮಾಡಿದ್ದಾರೆ. ಆದರೆ 2015 ನವೆಂಬರ್ ನಲ್ಲಿ ದೊಡ್ಡಪ್ಪ ಮೃತಪಟ್ಟ ಸಮಯದಲ್ಲಿ ಅಖಿಲಳ ನಿಜ ರೂಪ ಮನೆಯವರಿಗೆ ಗೊತ್ತಾಗಿದೆ. ದೊಡ್ಡಪ್ಪರ ಸದ್ಗತಿಗಾಗಿ ಮನೆಯಲ್ಲಿ ಹಮ್ಮಿಕೊಂಡ 40 ದಿನಗಳ ಕಾಲದ ಪೂಜಾ ಕಾರ್ಯಗಳಲ್ಲಿ ಭಾಗವಹಿಸಲು ಅಖಿಲಾ ನಿರಾಕರಿಸಿದ್ದಾಳೆ. ತಂದೆ ಒತ್ತಾಯಿಸಿದಾಗ ಆಕೆ ತನ್ನ ಧರ್ಮ ವಿಶ್ವಾಸವನ್ನು ಬಹಿರಂಗ ಪಡಿಸಿದ್ದಾಳೆ. ‘ತಾನು ಪ್ರೌಢೆ ಮತ್ತು ಅಕ್ಷರಸ್ಥೆ’ ಎಂದು ಆಕೆ ನ್ಯಾಯಾಲಯದ ಮುಂದೆ ಹೇಳಿಕೊಳ್ಳುತ್ತಾಳೆ. ಕೋರ್ಟು ಒಪ್ಪಿಕೊಳ್ಳುತ್ತದೆ. ಇದಾದ ಬಳಿಕ 2016 ಆಗಸ್ಟ್ 16 ರಂದು ಮಗಳ ಸುರಕ್ಷತತೆಯ ಭಯವನ್ನು ಮುಂದಿಟ್ಟುಕೊಂಂಡು ತಂದೆ ಅಶೋಕನ್ ಮತ್ತೆ ನ್ಯಾಯಾಲಯದ ಮೊರೆ ಹೋಗುತ್ತಾರೆ. ಮಗಳನ್ನು ವಿದೇಶಕ್ಕೆ ರವಾನಿಸುವ ಆತಂಕವನ್ನು ಅವರು ತೋಡಿಕೊಳ್ಳುತ್ತಾರೆ. ನಿಜ ಏನೆಂದರೆ, ಆಕೆಯಿನ್ನೂ ಪಾಸ್‍ ಪೋರ್ಟೇ ಮಾಡಿಕೊಂಡಿರಲಿಲ್ಲ. ಅಖಿಲ ತನ್ನ ಹೆತ್ತವರೊಂದಿಗೆ ಹೋಗಲು ನಿರಾಕರಿಸುತ್ತಾಳೆ.  ಮುಂದಿನ ವಿಚಾರಣೆಗಾಗಿ 2016 ಡಿ. 21 ರಂದು ಅಖಿಲ ಕೋರ್ಟ್‍ಗೆ ಹಾಜರಾಗುವಾಗ ತನಗೆ ಮದುವೆಯಾಗಿರುವುದಾಗಿ ಹೇಳಿಕೊಳ್ಳುತ್ತಾಳೆ. ಜೊತೆಗಿದ್ದ ಶಫಿನ್ ಜಹಾನ್ ತನ್ನ ಪತಿ ಎಂದೂ ಸ್ಪಷ್ಟಪಡಿಸುತ್ತಾಳೆ. ಮದುವೆಯಾದ ಸ್ಥಳ, ನೋಂದಣಿಯ ವಿವರಗಳನ್ನು ಆಕೆ ನ್ಯಾಯಾಲಯದ ಮುಂದಿಡುತ್ತಾಳೆ. ಜಸ್ಟೀಸ್ ಕೆ. ಸುರೇಂದ್ರ ಮೋಹನ್ ಮತ್ತು ಕೆ. ಅಬ್ರಹಾಂ ಅವರಿದ್ದ ನ್ಯಾಯಾಂಗೀಯ ಪೀಠ ಈ ಬೆಳವಣಿಗೆಗೆ ಅಚ್ಚರಿ ವ್ಯಕ್ತಪಡಿಸುತ್ತದೆ. ನೋಂದಣಿಯಲ್ಲಿ Shafin Jahan ಎಂಬುದರ ಬದಲು Jefin Jahan  ಎಂದಿರುವುದನ್ನು ಪೀಠ ಗಂಭೀರವಾಗಿ ಪರಿಗಣಿಸಿ ವಿವಾಹವನ್ನೇ ರದ್ದುಪಡಿಸುವ ಅಭೂತಪೂರ್ವ ತೀರ್ಮಾನ ಕೈಗೊಳ್ಳುತ್ತದೆ. ಮಾತ್ರವಲ್ಲ,
    `ಹಾದಿಯ ಪ್ರಬುದ್ಧಳಾಗಿರಬಹುದು, ಆದರೆ 20ರ ಹರೆಯವು ಚಂಚಲವಾದುದು. ಹೆತ್ತವರಿಗೆ ಆಕೆಯ ಸುರಕ್ಷಿತತೆಯ ಬಗ್ಗೆ ಭಯವಿದೆ. ಭಾರತೀಯ ಸಂಸ್ಕೃತಿಯ ಪ್ರಕಾರ ಮಗಳನ್ನು ಮದುವೆ ಮಾಡಿಕೊಡುವ ಹಕ್ಕು ಹೆತ್ತವರಿಗಿದೆ...’ಎಂದೂ ಅದು  ತೀರ್ಪು ನೀಡುತ್ತದೆ. ಇಲ್ಲಿ ಕಾಡುವ ಪ್ರಶ್ನೆ ಏನೆಂದರೆ, ಹಾದಿಯಾಳ ಸ್ಥಾನದಲ್ಲಿ ಓರ್ವ ಗಂಡು ಇರುತ್ತಿದ್ದರೆ ವಿಚಾರಣಾ ಪ್ರಕ್ರಿಯೆಯ ಸ್ವರೂಪ ಹೇಗಿರುತ್ತಿತ್ತು? ಅವನನ್ನು ಹೆತ್ತವರ ಸುಪರ್ದಿಗೆ ಕೊಡಲಾಗುತ್ತಿತ್ತೆ? ಆತನ ವಿವಾಹವನ್ನು ರದ್ದುಪಡಿಸಲಾಗುತ್ತಿತ್ತೆ? ಆತನ ವಿವಾಹದ ಹೊಣೆಗಾರಿಕೆ ಹೆತ್ತವರದ್ದು ಎಂಬ ಸಮರ್ಥನೆ ಲಭಿಸುತ್ತಿತ್ತೆ? ಅಂದಹಾಗೆ, ಪ್ರೌಢರಾದ ಹೆಣ್ಣು ಮತ್ತು ಗಂಡು ತಮ್ಮಗಿಷ್ಟವಾದ ಧರ್ಮವನ್ನು ಸ್ವೀಕರಿಸುವುದು ಮತ್ತು ತಮಗಿಷ್ಟವಾದವರನ್ನು ವರಿಸುವುದನ್ನು ಈ ಸಮಾಜ ಹೇಗೆ ಪರಿಗಣಿಸಬೇಕು? ಒಂದುಕಡೆ, ಮರ್ಯಾದೆಗೇಡು ಹತ್ಯೆ ನಡೆಯುತ್ತಿದೆ. ಕುಟುಂಬ, ಜಾತಿ, ಸಮಾಜದ ಮರ್ಯಾದೆಯೇ ಅದರ ಕೇಂದ್ರ ಬಿಂದು. ಅದನ್ನು ತೀರ್ಮಾನಿಸುವುದು ಪುರುಷರೇ ತುಂಬಿಕೊಂಡಿರುವ ಖಾಪ್ ಪಂಚಾಯತ್. ಅಲ್ಲೂ ಹೆಣ್ಣೇ ಬಲಿಪಶು. ಪದ್ಮಾವತಿ ಪ್ರಕರಣದಲ್ಲಿ ವಿಜೃಂಬಿಸುತ್ತಿರುವುದೂ ಪುರುಷರೇ. ಹಾದಿಯಾಳ ಪ್ರಕರಣದಲ್ಲಿ ‘ಹೆಣ್ಣಿನ ಮೇಲಿನ ಹೆತ್ತವರ ಹಕ್ಕು ಆಕೆಯ ವಿವಾಹದವರೆಗಿದೆ...’ ಎಂಬರ್ಥದಲ್ಲಿ ತೀರ್ಪು ನೀಡಿದ ಹೈಕೋರ್ಟಿನ ನ್ಯಾಯಾಧೀಶರಿಬ್ಬರೂ ಪುರುಷರೇ. ಇದು ಅನುದ್ದೇಶಿತವೇ ಆಗಿರಬಹುದು. ಆದರೂ ಕೆಲವು ಪ್ರಶ್ನೆಗಳಿಗಂತೂ ನಾವು ಉತ್ತರಗಳನ್ನು ಹುಡುಕಲೇಬೇಕು. ಹೆಣ್ಣಿನ ಮೇಲಿನ ಕಾಳಜಿಯ ನೆಪದಲ್ಲಿ ಹೆಣ್ಣನ್ನು ಪುರುಷ ವಿಚಾರಧಾರೆಯು ಆಪೋಶನ ತೆಗೆದುಕೊಳ್ಳುತ್ತಿದೆಯೇ? ಪುರಾತನ ಕಾಲದಲ್ಲಿ ಹೆಣ್ಣು ಹೇಗೆ ದುರ್ಬಲತೆಯ ಸಂಕೇತವೋ ಹಾಗೆಯೇ ಈ 21ನೇ ಶತಮಾನದಲ್ಲೂ ಹೆಣ್ಣು ದುರ್ಬಲಳೇ ಆಗಿರುವುದೇಕೆ? ಇದು ನಿಜಕ್ಕೂ ಅವಳ ಸ್ಥಿತಿಯೋ ಅಥವಾ ಪುರುಷ ಪ್ರಧಾನ ಸಮಾಜವು ಬಲವಂತದಿಂದ ಆಕೆಯ ಮೇಲೆ ಹೇರಿದ ಸ್ಥಿತಿಯೋ? ಒಂದು ಕಡೆ, ಮಹಿಳಾ ಹಕ್ಕು, ಸ್ವಾತಂತ್ರ್ಯ, ಸಮಾನತೆ... ಇತ್ಯಾದಿಗಳ ಕುರಿತಂತೆ ನ್ಯಾಯಾಲಯವೂ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಕರ್ಣಾನಂದಕರ ಹೇಳಿಕೆಗಳು ಹೊರ ಬೀಳುತ್ತಿವೆ. ಇನ್ನೊಂದೆಡೆ, ಪ್ರೌಢ ಹೆಣ್ಣನ್ನು ಚಂಚಲೆಯೆಂದೋ ನಿರ್ಧಾರ ತಳೆಯುವ ಸಾಮರ್ಥ್ಯ ಇಲ್ಲದವಳೆಂದೋ ಹೇಳಿ ಅದುಮಲಾಗುತ್ತದೆ. ಪದ್ಮಿನಿಯ ವಿಚಾರವಾಗಿ ಬೀದಿಯಲ್ಲಿರುವುದು ಮಹಿಳೆಯರಲ್ಲ, ಪುರುಷರೇ. ಹಾದಿಯಾಳ ಪ್ರಕರಣವನ್ನು ಲವ್ ಜಿಹಾದ್ ಆಗಿ ಪರಿವರ್ತಿಸಿ ಗದ್ದಲ ಎಬ್ಬಿಸುತ್ತಿರುವುದೂ ಪುರು ಷರೇ. ಪುರಾತನ ಕಾಲದ ಪುರುಷ ಪ್ರಧಾನ ಮನಸ್ಥಿತಿಯು ಆಧುನಿಕ ಕಾಲದಲ್ಲಿ ಹೀಗೆ ವೇಷ ಬದಲಿಸಿ ಅಸ್ತಿತ್ವ ಪಡಕೊಳ್ಳುತ್ತಿದೆಯೇ? ಜೊತೆಗೆ, 1829 ಡಿಸೆಂಬರ್ 8 ರಂದು ನಿಷೇಧಕ್ಕೊಳಗಾದ ಸತಿ ಪದ್ಧತಿಯ ಬಗ್ಗೆ ಹೆಮ್ಮೆಪಟ್ಟುಕೊಳ್ಳುವ ವಿಚಾರಧಾರೆಯೊಂದು ಈಗಲೂ ಅಸ್ತಿತ್ವದಲ್ಲಿದೆಯೇ? ಪದ್ಮಾವತಿಯನ್ನು `ರಾಷ್ಟ್ರ ಮಾತಾ ಪದ್ಮಾವತಿ' ಎಂದು ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ ಕರೆದಿರುವುದರಲ್ಲಿ ಸತಿ ಸಹಗಮನದ ಆರಾಧನೆಯೂ ಇದೆಯಲ್ಲವೇ? ‘ಯಾಕೆ ಹೆಣ್ಣೇ ಸತಿ ಹೋಗಬೇಕು, ಪುರುಷ ಯಾಕೆ ಸತಿ ಹೋಗಬಾರದು’ ಎಂಬ ಪ್ರಶ್ನೆ ಎತ್ತಬೇಕಾದ ಕಡೆ, ಸತಿಯನ್ನೇ ವೈಭವೀಕರಿಸುವ ಮತ್ತು ಇನ್ನೋರ್ವ ಹೆಣ್ಣಿನ (ದೀಪಿಕಾ ಪಡುಕೋಣೆ) ಮೂಗು ಕೊಯ್ಯುವ, ತಲೆ ಕತ್ತರಿಸುವ ಹೇಳಿಕೆಗಳು ಬರುತ್ತವಲ್ಲ, ಏನಿದರ ಅರ್ಥ? ಹಾದಿಯ ಎತ್ತುವ ಪ್ರಶ್ನೆಯೂ ಬಹುತೇಕ ಇದರ ಸುತ್ತಲೇ ಇದೆ. ಆಕೆ ಯಾವ ಕ್ರಿಮಿನಲ್ ಕಾರ್ಯದಲ್ಲೂ ಭಾಗಿಯಾಗಿಲ್ಲ. ಸಂವಿಧಾನ ಒದಗಿಸಿರುವ ವೈಯಕ್ತಿಕ ಹಕ್ಕನ್ನು ಚಲಾಯಿಸಿದ್ದಾಳೆ ಎಂದ ಮಾತ್ರಕ್ಕೇ ಆಕೆಯನ್ನು ಕಟಕಟೆಯಲ್ಲಿ ನಿಲ್ಲಿಸಿ ಒಂದೂವರೆ ಗಂಟೆಗಳ ಕಾಲ ಆಕೆಯ ಪರ, ವಿರುದ್ಧ ಮತ್ತು ಆಕೆ ಇಷ್ಟಪಟ್ಟ ಯುವಕನ ಬಗ್ಗೆ ವಾದಗಳನ್ನು ಆಲಿಸುವಂತೆ ಸುಪ್ರೀಮ್ ಕೋರ್ಟ್ ಆಕೆಯನ್ನು ಬಲವಂತ ಪಡಿಸಿದುದು ಎಷ್ಟು ಸರಿ? ಆಕೆಯ ಮೇಲೆ ಯಾವ ಆರೋಪವೂ ಇಲ್ಲ. ಪ್ರೌಢೆ ಹೆಣ್ಣು ಮಗಳೊಬ್ಬಳು ತನಗಿಷ್ಟ ಬಂದ ಧರ್ಮವನ್ನು ಸ್ವೀಕರಿಸುವುದು ಮತ್ತು ತನಗಿಷ್ಟ ಬಂದವರನ್ನು ವಿವಾಹವಾಗುವುದು ನ್ಯಾಯಿಕ ಭಾಷೆಯಲ್ಲೂ ಅಪರಾಧವಲ್ಲ. ಹೀಗಿದ್ದರೂ ಆಕೆಯನ್ನು ಪೊಲೀಸು ಕಾವಲಿನಲ್ಲಿ ದಿಗ್ಬಂಧನದಲ್ಲಿಟ್ಟುದುದು ಮತ್ತು ದೆಹಲಿವರೆಗೆ ಕೊಂಡೊಯ್ದು ಕೋರ್ಟಿನಲ್ಲಿ ಹಾಜರುಗೊಳಿಸಿದುದನ್ನು ಹೇಗೆಂದು ವ್ಯಾಖ್ಯಾನಿಸಬೇಕು? ಅಷ್ಟಕ್ಕೂ,
     ರಾಣಾ ಮತ್ತು ಖಿಲ್ಜಿಯ ನಡುವೆ 13ನೇ ಶತಮಾನದಲ್ಲಿ ನಡೆದ ಯುದ್ಧದ ಐತಿಹಾಸಿಕ ವಿವರಗಳಲ್ಲಿ ಇರದ ಪದ್ಮಿನಿಯನ್ನು, 21ನೇ ಶತಮಾನದ ಹಾದಿಯಳಿಗೆ ಹೋಲಿಸುವಾಗ ಏನನಿಸುತ್ತದೆ? `ಪೊಲೀಸರ ತನಿಖೆಯಲ್ಲಿ ಲವ್ ಜಿಹಾದ್ ಪ್ರಕರಣಗಳು ಪತ್ತೆಯಾಗಿಲ್ಲ’ ಎಂದು ಸು. ಕೋರ್ಟಿನಲ್ಲಿ ಕೇರಳ ಸರಕಾರವು ಕಳೆದ ಅಕ್ಟೋಬರ್ ನಲ್ಲಿ ಅಫಿದವಿತ್ ಸಲ್ಲಿಸಿದ್ದರೂ ಲವ್ ಜಿಹಾದ್ ಪ್ರಕರಣಗಳ ಬಗ್ಗೆ ತನಿಖಿಸುವಂತೆ ಸುಪ್ರೀಮ್ ಕೋರ್ಟ್ ರಾಷ್ಟ್ರೀಯ ತನಿಖಾ ದಳಕ್ಕೆ (NIO) ಆದೇಶಿಸಿರುವುದು ಇಲ್ಲದ ಪದ್ಮಿನಿಯನ್ನು ಹುಡುಕಲು ಹೇಳಿದಂತೆ ಆಗಬಹುದೇ? ಮಲಿಕ್ ಮುಹಮ್ಮದ್ ಜಾಯಿಸಿಯ ಕಾವ್ಯದಲ್ಲಿ ಹುಟ್ಟಿಕೊಂಡವಳು ಪದ್ಮಿನಿಯಾದರೆ ರಾಜಕೀಯ ಹಿತಸಕ್ತಿಗಾಗಿ ನಿರ್ದಿಷ್ಟ ರಾಜಕೀಯ ಪಕ್ಷ ಮತ್ತು ಅದರ ಪರಿವಾರದಿಂದ ಸೃಷ್ಟಿಯಾಗಿರುವುದೇ ಲವ್ ಜಿಹಾದ್. ಇಲ್ಲದ ಪದ್ಮಿನಿಯ ನೆಪದಲ್ಲಿ ಹೆಣ್ಣಿನ ಮೇಲೆ ದಾಳಿ ಎಸಗುವ ಬೆದರಿಕೆ ಒಡ್ಡಿದವರೇ ಹಾದಿಯ ಪ್ರಕರಣವನ್ನು ಲವ್ ಜಿಹಾದ್ ಗೊಳಿಸುವಲ್ಲೂ ಮುಂಚೂಣಿಯಲ್ಲಿದ್ದಾರೆ. ಬಾಹ್ಯ ನೋಟಕ್ಕೆ ಹೆಣ್ಣಿನ ಮೇಲಿನ ಕಾಳಜಿಯಂತೆ ಈ ಎಲ್ಲ ಬೆಳವಣಿಗೆಗಳು ಕಂಡು ಬಂದರೂ ಆಳದಲ್ಲಿ ಇದು ಹೆಣ್ಣನ್ನು ಬಂಧಿಸಿಡುವ ಪುರುಷ ಪ್ರಧಾನ ಮನಸ್ಥಿತಿಯ ಇನ್ನೊಂದು ರೂಪದಂತೆ ಕಾಣಿಸುತ್ತಿದೆ. ಆಯ್ಕೆ ಮಾಡುವ ಸಾಮರ್ಥ್ಯ ಹೆಣ್ಣಿಗಿಲ್ಲ.. ಎಂದು ಸಾರುವುದೇ ಈ ಎಲ್ಲವುಗಳ ಒಟ್ಟು ಸಾರಾಂಶ.
      ಮನಸ್ಥಿತಿ ಪುರಾತನ ಕಾಲದ್ದೇ. ಪಾತ್ರಗಳು ಮಾತ್ರ ಬೇರೆ.

Monday, December 4, 2017

ಅಲೆಕ್ಸಾಂಡರ್‍ನನ್ನು ಕಣ್ಣೀರಾಗಿಸಿದ ಆ ಕ್ಷಮೆ...

    1. ತನ್ನ ಸಂಬಂಧಿಕನನ್ನು ಕೊಲೆಗೈದ ವ್ಯಕ್ತಿಯೊಂದಿಗೆ ಓರ್ವನು ಪ್ರವಾದಿ ಮುಹಮ್ಮದ್‍ರ(ಸ) ಬಳಿಗೆ ಬರುತ್ತಾನೆ. ನಡೆದ ವಿಷಯವನ್ನು ಹೇಳುತ್ತಾನೆ. ಆರೋಪಿ ತಪ್ಪೊಪ್ಪಿಕೊಳ್ಳುತ್ತಾನೆ. ಪ್ರವಾದಿ(ಸ) ಹೇಳುತ್ತಾರೆ, ಅಪರಾಧಿಯನ್ನು ಕ್ಷಮಿಸು. ವ್ಯಕ್ತಿ ಒಪ್ಪಿಕೊಳ್ಳುವುದಿಲ್ಲ. ಪ್ರವಾದಿ(ಸ) ಮತ್ತೆ ಹೇಳುತ್ತಾರೆ, ಆತನಿಂದ ರಕ್ತ ಪರಿಹಾರವನ್ನು ಪಡೆದುಕೊಂಡು ಆತನನ್ನು ಕ್ಷಮಿಸು. ವ್ಯಕ್ತಿ ಅದಕ್ಕೂ ಒಪ್ಪುವುದಿಲ್ಲ. ಆಗ ಪ್ರವಾದಿ(ಸ) ಹೇಳುತ್ತಾರೆ, ಹಾಗಾ ದರೆ ಆತನನ್ನು ವಧಿಸು. ನೀನೂ ಆತನಂತೆ ಆಗಬಯಸುವಿ ಯೆಂದಾದರೆ ಹಾಗೆ ಮಾಡು. (ಅಬೂದಾವೂದ್- 4497)
2. ಓರ್ವ ವ್ಯಕ್ತಿ ಪ್ರವಾದಿಯವರ ಬಳಿಗೆ ಬಂದು ಹೇಳುತ್ತಾನೆ,
ನನ್ನ ಕೆಲಸಗಾರನನ್ನು ನಾನು ಎಷ್ಟು ಬಾರಿ ಕ್ಷಮಿಸಬೇಕು?’
ಪ್ರವಾದಿ ಹೇಳುತ್ತಾರೆ,
ಪ್ರತಿದಿನ 70 ಬಾರಿ (ತಿರ್ಮಿದಿ: 1424).
ಪವಿತ್ರ ಕುರ್‍ಆನ್ ಹೇಳುತ್ತದೆ,
1. ಇತರರ ಅಪರಾಧಗಳನ್ನು ಕ್ಷಮಿಸುವ ಸಜ್ಜನರು ಅಲ್ಲಾಹನಿಗೆ ಅತ್ಯಂತ ಮೆಚ್ಚುಗೆಯವರು. (3: 134)
2. ಅಲ್ಲಾಹನು ಮಹಾ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ. (42: 5)
ಎರಡು ಪ್ರವಾದಿ ವಚನಗಳು ಮತ್ತು ಎರಡು ಕುರ್‍ಆನ್ ವಚನಗಳನ್ನು ಇಲ್ಲಿ ಉಲ್ಲೇಖಿಸುವುದಕ್ಕೆ ಒಂದು ಕಾರಣ ಇದೆ.
ಕಳೆದ ತಿಂಗಳು ಅಮೇರಿಕದ ಕೆಂಟುಕಿಯ ಕೋರ್ಟ್‍ನಲ್ಲಿ ಅಚ್ಚರಿಯ ಘಟನೆಯೊಂದು ನಡೆಯಿತು. 2015 ಎಪ್ರಿಲ್‍ನಲ್ಲಿ ನಡೆದ ಹತ್ಯೆಗೆ ಸಂಬಂಧಿಸಿ ಅಂತಿಮ ತೀರ್ಪು ಪ್ರಕಟವಾಗುವುದಕ್ಕೆ ಎಲ್ಲವೂ ಸಿದ್ಧವಾಗಿತ್ತು. ಸಲಾಹುದ್ದೀನ್ ಜಿತ್‍ಮೌದ್ ಎಂಬ 22 ವರ್ಷದ ತರುಣನನ್ನು ಹತ್ಯೆ ಮಾಡಿದ ಪ್ರಕರಣದ ತೀರ್ಪು. ಸಲಾಹುದ್ದೀನನ ತಂದೆ ಅಬ್ದುಲ್ ಮುನೀಮ್ ಸಂಬಾಟ್ ಜಿತ್‍ಮೌದ್ ತನ್ನ ಕುಟುಂಬ ಸಮೇತ ಕೋರ್ಟ್‍ನಲ್ಲಿದ್ದರು. ಅಪರಾಧಿ ಟ್ರೆ ಅಲ್‍ಕ್ಸಾಂಡರ್ ರೆಲ್ ಫೋರ್ಡ್ ಕೂಡ ಕಟಕಟೆಯಲ್ಲಿದ್ದ. ಆತನ ಕುಟುಂಬವು ತೀರ್ಪನ್ನು ನಿರೀಕ್ಷಿಸುತ್ತಾ ನ್ಯಾಯಾಲಯದಲ್ಲಿತ್ತು. ನ್ಯಾಯಾಧೀಶೆ ಕಿಂಬರ್ಲಿ ಬಿನ್ನೆಲ್ ಇನ್ನೇನು ತೀರ್ಪು ಘೋಷಿಸಲು ಮುಂದಾಗುತ್ತಿರುವಂತೆಯೇ, 64 ವರ್ಷದ ಇಸ್ಲಾಮೀ ವಿದ್ವಾಂಸ ಮತ್ತು ಅಮೇರಿಕದ ಲೆಕ್ಸಿಂಗ್ಟನ್ ಯುನಿವರ್ಸಲ್ ಅಕಾಡಮಿ ಮತ್ತು ಸೈಂಟ್ ಲೂಯಿಸ್‍ನ ಅಲ್ ಸಲಾಮ್ ಡೇ ಸ್ಕೂಲ್ ಸೇರಿದಂತೆ ಹಲವಾರು ಇಸ್ಲಾಮಿಕ್ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಸದ್ಯ ನಿವೃತ್ತರಾಗಿರುವ ಮೂಲತಃ ಥಾೈಲೆಂಡ್‍ನವರಾದ ಅಬ್ದುಲ್ ಮುನೀಮ್ ಜಿತ್‍ಮೌದ್ ಅವರು ಎದ್ದು ನಿಂತರಲ್ಲದೇ ತಾನು ಅಲೆಕ್ಸಾಂಡರ್‍ನನ್ನು ಕ್ಷಮಿಸಿದ್ದೇನೆ ಎಂದು ತುಂಬಿದ ಕಣ್ಣೀರಿನೊಂದಿಗೆ ಘೋಷಿಸಿದರು.
“ನಾನು ನಿನ್ನ ಮೇಲೆ ಕೋಪಿಸಲಾರೆ. ನಿನ್ನನ್ನು ಈ ಕೃತ್ಯಕ್ಕೆ ಪ್ರೇರೇಪಿಸಿದ ಶೈತಾನನೇ ನಿಜವಾದ ಅಪರಾಧಿ. ನಿನ್ನನ್ನು ಅಂಥ ಕ್ರೂರ ಕೃತ್ಯಕ್ಕೆ ಪ್ರೇರೇಪಿಸಿದ ಶೈತಾನನ ಮೇಲೆ ನಾನು ಸಿಟ್ಟಾಗುವೆ. ಈ ಜಗತ್ತಿನಲ್ಲಿ ಸಂತ್ರಸ್ತನು ಪಾಪಿಯನ್ನು ಕ್ಷಮಿಸದಿದ್ದರೆ ದೇವನೂ ಪಾಪಿಯನ್ನು ಕ್ಷಮಿಸಲಾರ ಅನ್ನುವುದು ನನ್ನ ವಿಶ್ವಾಸ. ಆದ್ದರಿಂದ ನಾನು ನಿನ್ನನ್ನು ಕ್ಷಮಿಸಿದ್ದೇನೆ..” ಎಂದವರು ನಡುಗುವ ದನಿಯೊಂದಿಗೆ ಹೇಳಿದರು. ಜೊತೆಗೇ, ಪವಿತ್ರ ಕುರ್‍ಆನಿನ 9ನೇ ಅಧ್ಯಾಯದ 51ನೇ ವಚನದಲ್ಲಿ ಹೇಳಲಾಗಿರುವ, “ಅಲ್ಲಾಹನು ನಮಗಾಗಿ ಲಿಖಿತಗೊಳಿಸಿರುವುದರ ಹೊರತು ಬೇರಾವುದೂ (ಒಳಿತು ಮತ್ತು ಕೆಡುಕು) ನಮ್ಮನ್ನು ಬಾಧಿಸುವುದಿಲ್ಲ. ಅಲ್ಲಾಹನೇ ನಮ್ಮ ಮಾಲಿಕನಾಗಿದ್ದಾನೆ. ಸತ್ಯವಿಶ್ವಾಸಿಗಳು ಅವನ ಮೇಲೆಯೇ ಭರವಸೆಯನ್ನಿರಿಸಬೇಕು..” ಎಂಬ ವಚನವೇ ನನ್ನ ಈ ನಿರ್ಧಾರಕ್ಕೆ ಕಾರಣ ಎಂದೂ ಹೇಳಿದರು. ಅವರು ಹೀಗೆ ಹೇಳಿ ಮುಗಿಸುತ್ತಿರುವಂತೆಯೇ ನ್ಯಾಯಾಲಯದ ವಾತಾವರಣ ಸಂಪೂರ್ಣ ಬದಲಾಯಿತು. ತೀರ್ಪು ಹುಟ್ಟು ಹಾಕಿದ್ದ ಕುತೂಹಲವು ಭಾವುಕ ಸನ್ನಿವೇಶವಾಗಿ ಮಾರ್ಪಾಟಾಯಿತು. ಸ್ವತಃ ನ್ಯಾಯಾಧೀಶರಾದ ಕಿಂಬರ್ಲಿ ಬಿನ್ನೆಲ್ ಅವರೇ ಭಾವುಕರಾದರು. ಅವರ ಗಂಟಲು ಕಟ್ಟಿಕೊಂಡಿತು. ತೀರ್ಪು ಘೋಷಣೆ ಸಾಧ್ಯವಾಗದೇ ಸ್ವಲ್ಪ ಸಮಯ ಕಲಾಪ ಮುಂದೂಡಿ ಬಳಿಕ ಹಿಂತಿರುಗಿ ಬಂದು ಅಪರಾಧಿ ಅಲೆಕ್ಸಾಂಡರ್‍ಗೆ 31 ವರ್ಷಗಳ ಶಿಕ್ಷೆಯನ್ನು ಘೋಷಿಸಿ ದರು. ಬಳಿಕ ಅಬ್ದುಲ್ ಮುನೀಮ್ ಜಿತ್‍ಮೌದ್‍ರು ಅಲೆಕ್ಸಾಂಡರ್ ನನ್ನು ತಬ್ಬಿಕೊಂಡರು. ಅಲೆಕ್ಸಾಂಡರ್ ಪಶ್ಚಾತ್ತಾಪ ಭಾವದಿಂದ ಕಣ್ಣೀರಿಳಿಸಿದ. ತನ್ನನ್ನು ಕ್ಷಮಿಸುವಂತೆ ಕೋರಿಕೊಂಡ.
2015 ಎಪ್ರಿಲ್ 19ರಂದು 22 ವರ್ಷದ ಸಲಾಹುದ್ದೀನ್‍ನನ್ನು ಅಲೆಕ್ಸಾಂಡರ್ ಸಹಿತ ಒಟ್ಟು ಮೂರು ಮಂದಿ ಸೇರಿ ಇರಿದು ಹತ್ಯೆಗೈದು ದರೋಡೆ ನಡೆಸಿದ್ದರೆಂದು ಆರೋಪಿಸಲಾಗಿತ್ತು. ಲೆಕ್ಸಿಂಗ್ಟನ್ ಕೋರ್ಟ್ ಅಪಾರ್ಟ್‍ಮೆಂಟ್ ಕಾಂಪ್ಲೆಕ್ಸ್ ನಲ್ಲಿ ಈ ಘಟನೆ ನಡೆದಿತ್ತು. ಆರೋಪಿಗಳು ರೆಸ್ಟೋರೆಂಟ್ ಒಂದಕ್ಕೆ ಪಿಝ್ಝಾಕ್ಕೆ ಆರ್ಡರ್ ಮಾಡಿದ್ದರು. ಪಿಝ್ಝಾ ಡೆಲಿವರಿ ಮಾಡಲು ಸಲಾಹುದ್ದೀನ್ ಬಂದಿದ್ದ. ಪೊಲೀಸರ ಪ್ರಕಾರ ಸಲಾಹುದ್ದೀನ್‍ನ ಧರ್ಮವನ್ನು ನೋಡಿಕೊಂಡು ಈ ಹತ್ಯೆ ನಡೆಸಲಾಗಿದೆ.ಕ್ಷಮೆ ಎಂಬುದು ಎರಡಕ್ಷರಗಳ ಆಚೆಗೆ ಆಲದ ಮರದಂತೆ ವಿಶಾಲವಾಗಿ ಚಾಚಿಕೊಂಡಿರುವ ವಸ್ತು. ಕ್ಷಮೆಯ ಕುರಿತಂತೆ ಗಂಟೆಗಟ್ಟಲೆ ಭಾಷಣ ಮಾಡಿದವರು ಕೂಡ ಕ್ಷಮಿಸಲೇಬೇಕಾದ ನಿರ್ಣಾಯಕ ಸನ್ನಿವೇಶ ಎದುರಾದಾಗ ಸಂದಿಗ್ಧಕ್ಕೆ ಸಿಲುಕಿದ್ದುಂಟು. ಪ್ರವಾದಿ ಮುಹಮ್ಮದ್‍ರ(ಸ) ಬದುಕಿನಲ್ಲಿ ಕ್ಷಮೆಯ ಧಾರಾಳ ಸನ್ನಿವೇಶಗಳು ಸಿಗುತ್ತವೆ. ತಾಯಿಫ್‍ನಿಂದ ಹಿಡಿದು ತನ್ನ ಕತ್ತಿನ ಶಾಲನ್ನು ಹಿಡಿದೆಳೆದ ಬುಡಕಟ್ಟು ವ್ಯಕ್ತಿಯವರೆಗೆ, ಹಿಂದ್‍ಳಿಂದ ಹಿಡಿದು ತನ್ನ ಮೇಲೆ ಕಸ ಎಸೆಯುತ್ತಿದ್ದ ಯುವತಿಯ ವರೆಗೆ. ವೈಯಕ್ತಿಕ ಪ್ರಕರಣಗಳನ್ನು ಅವರು ಕ್ಷಮೆ ಎಂಬ ಚೌಕಟ್ಟಿನೊಳಗಿಟ್ಟು ನೋಡುತ್ತಿದ್ದರು. ಶಿಕ್ಷೆಗೂ ಕ್ಷಮೆಗೂ ನಡುವೆ ಇರುವ ಬಹುದೊಡ್ಡ ವ್ಯತ್ಯಾಸ ಏನೆಂದರೆ, ಶಿಕ್ಷೆಯಿಂದ ಸಂತ್ರಸ್ತ ಕುಟುಂಬ ಪಡೆಯುವ ಸುಖ ತಾತ್ಕಾಲಿಕವಾದುದು. ಸಲಾಹುದ್ದೀನ್ ಪ್ರಕರಣವನ್ನೇ ಎತ್ತಿ ಕೊಳ್ಳೋಣ. 22 ವರ್ಷದ ಯುವಕ ಎಂಬ ನೆಲೆಯಲ್ಲಿ ಆತನ ಮೇಲೆ ಹೆತ್ತವರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರಬಹುದು. ವರಮಾನದ ನೆಲೆಯಲ್ಲೂ ಆತನ ಅಗತ್ಯ ಹೆತ್ತವರಿಗೆ ಇದ್ದಿರಬಹುದು. ಏಕೈಕ ಮಗನಾಗಿದ್ದರಂತೂ ಸಲಾಹುದ್ದೀನ್‍ಗೆ ಇನ್ನಷ್ಟು ಮಹತ್ವ ಲಭ್ಯವಾಗುತ್ತದೆ. ಹೀಗಿರುವಾಗ, ಆತನನ್ನು ಕಳಕೊಳ್ಳುವುದು ಸಣ್ಣ ಆಘಾತಕಾರಿ ಸಂಗತಿಯಲ್ಲ. ಮನೆಯಲ್ಲಿ ಸದಾ ಶೂನ್ಯ  ಕಾಡಬಹುದಾದ ಸನ್ನಿವೇಶವನ್ನು ಅದು ಹುಟ್ಟು ಹಾಕುತ್ತದೆ. ಮೆಟ್ಟು, ಪೆನ್ನು, ಶರ್ಟು, ಕನ್ನಡಕ, ಫೋಟೋ, ಪುಸ್ತಕ.. ಹೀಗೆ ಸಲಾಹುದ್ದೀನ್‍ಗೆ ಸಂಬಂಧಿಸಿದ ಪ್ರತಿಯೊಂದೂ ಆತನನ್ನು ಮರು ನೆನಪಿಸುತ್ತಾ ಚುಚ್ಚುತ್ತಿರುತ್ತದೆ. ಸಲಾಹುದ್ದೀನ್‍ನ ಗೆಳೆಯರು ಸಿಕ್ಕಾಗ ಆತ ನೆನಪಾಗುತ್ತಾನೆ. ಆತನ ಇಷ್ಟದ ವಸ್ತುಗಳನ್ನು ನೋಡಿದಾಗ ಆತ ನೆನಪಾಗುತ್ತಾನೆ. ಆತ ದಿನಾ ಕುಳಿತುಕೊಳ್ಳುತ್ತಿದ್ದ ಚಯರೋ, ಸೋಫಾವೋ ಇನ್ನೇನೋ ಆತನನ್ನು ಅನುಕ್ಷಣ ನೆನಪಿಸಿ ಇರಿಯುತ್ತಿರುತ್ತವೆ. ಆದ್ದರಿಂದ ಸಲಾಹುದ್ದೀನ್‍ನ ಹತ್ಯೆಗೆ ಕಾರಣರಾದವರ ಮೇಲೆ ಆತನ ಹೆತ್ತವರಲ್ಲಿ ಅಸಾಧ್ಯ ಸಿಟ್ಟು ಹೊಮ್ಮಲೇ ಬೇಕಾದುದು ಅಸಹಜವಲ್ಲ. ಅವರಿಗೆ ಶಿಕ್ಷೆ ದೊರಕಲೇ ಬೇಕೆಂದು ಹೋರಾಟ ನಡೆಸುವುದೂ ಅಚ್ಚರಿಯದ್ದಲ್ಲ. ಅದೊಂದು ರೀತಿಯಲ್ಲಿ ವಿಚಿತ್ರ ಸುಖ ಕೊಡುವ ಘಳಿಗೆ. ಆರೋಪಿಗಳನ್ನು ದಂಡಿಸಲೇಬೇಕು ಎಂಬ ಹಠದ ಹಿಂದೆ ಇರುವುದು ಇಲ್ಲದ ಮಗನ ನೆನಪು. ಒಂದು ವೇಳೆ ಇವೆಲ್ಲವೂ ನಿರೀಕ್ಷಿಸಿದಂತೆಯೇ ಸಾಗಿ ಅಂತಿಮವಾಗಿ ಆರೋಪಿಗಳ ಕೃತ್ಯ ಸಾಬೀತಾಯಿತು ಎಂಬಲ್ಲಿಗೆ ತಲುಪಿದಾಗಲೇ ನಿಜವಾದ ಸವಾಲು ಎದುರುಗೊಳ್ಳುತ್ತದೆ. ಅಲ್ಲಿಯವರೆಗೆ ಅವರ ಜೊತೆ ಒಂದು ಹಠ ಇತ್ತು. ಮಗನಿಗಾಗಿ ಈ ಹಠ ಎಂಬ ಸಮರ್ಥನೆಯೂ ಇತ್ತು. ಮಾತ್ರವಲ್ಲ, ಮಗನನ್ನು ಪ್ರತಿನಿತ್ಯ ಆ ಹಠ ನೆನಪಿಸುತ್ತಲೂ ಇತ್ತು. ಆದರೆ ಆರೋಪ ಸಾಬೀತಾಗಿ ಶಿಕ್ಷೆ ಘೋಷಿಸಲ್ಪಟ್ಟ ಮೇಲೆ ಉಂಟಾಗುವ ಶೂನ್ಯ ಇದೆಯಲ್ಲ, ಅದು ಅತ್ಯಂತ ಅಸಹನೀಯವಾದುದು. ತನ್ನ ಹೋರಾಟದಲ್ಲಿ ಯಶಸ್ವಿಯಾದೆ ಅನ್ನುವ ನೆಮ್ಮದಿಯ ಜೊತೆಜೊತೆಗೇ ಮಗನಿಗಾಗಿ ಮಾಡುವುದಕ್ಕೆ ಇನ್ನೇನೂ ಉಳಿದಿಲ್ಲವಲ್ಲ ಎಂಬ ಹತಾಶೆ ಆ ಬಳಿಕದ ದಿನಗಳಲ್ಲಿ ಮತ್ತೆ ಮತ್ತೆ ಕಾಡುತ್ತಲೇ ಇರುತ್ತದೆ. ಮಗನೂ ಇಲ್ಲ, ಅಪರಾಧಿಯೂ ಇಲ್ಲ ಎಂಬ ಎರಡು ಇಲ್ಲಗಳ ಬದುಕು ಒಟ್ಟಾಗಿ ಕಾಡುವ ಸನ್ನಿವೇಶ ಅದು. ನಿಜವಾಗಿ, ಪ್ರತೀಕಾರ ಭಾವವು ಎಲ್ಲ ಸಂದರ್ಭಗಳಲ್ಲೂ ನೆಮ್ಮದಿಯನ್ನೇ ಕೊಡಬೇಕೆಂದಿಲ್ಲ. ಕೆಲವೊಮ್ಮೆ ಪ್ರತೀಕಾರದ ಬಳಿಕ ಉಂಟಾಗುವ ಭಾವವು ಪ್ರತೀಕಾರಕ್ಕಿಂತ ಮೊದಲಿನ ಭಾವಕ್ಕಿಂತಲೂ ವೇದನಾಜನಕ ವಾಗಿರುತ್ತದೆ. ಅಪರಾಧಿಯ ಕುಟುಂಬವನ್ನು ಒಲಿಸಲಾಗದ ಮತ್ತು ಮಗನನ್ನೂ ಪಡಕೊಳ್ಳಲಾಗದ ವಿಚಿತ್ರ ಸಂಕಟ ಎದುರಾಗುತ್ತದೆ. ಸಲಾಹುದ್ದೀನ್ ಪ್ರಕರಣವು ಇದಕ್ಕೆ ಉತ್ತಮ ನಿದರ್ಶನ. ಸಲಾಹುದ್ದೀನ್ ಮತ್ತು ಅಲೆಕ್ಸಾಂಡರ್‍ನ ಎರಡೂ ಕುಟುಂಬಗಳು ನ್ಯಾಯಾಲಯದ ತೀರ್ಪಿನ ವೇಳೆ ಉಪಸ್ಥಿತವಿದ್ದವು. ಮೂವರು ಆರೋಪಿಗಳಲ್ಲಿ ಇಬ್ಬರನ್ನು ಕೋರ್ಟು ಆ ಮೊದಲೇ ದೋಷಮುಕ್ತ ಗೊಳಿಸಿದ್ದುದರಿಂದ ಅಲೆಕ್ಸಾಂಡರ್ ಕುಟುಂಬ ಮಾತ್ರ ಅಲ್ಲಿ ಉಪಸ್ಥಿತವಿತ್ತು. ಅಬ್ದುಲ್ ಮುನೀಮ್ ಜಿತ್‍ಮೌಂದ್‍ರ ಕ್ಷಮೆ ಆ ಕ್ಷಣದಲ್ಲಿ ಅನಿರೀಕ್ಷಿತವಾಗಿತ್ತು. ಅದು ನ್ಯಾಯಾಲಯ ಮತ್ತು ಅಲೆಕ್ಸಾಂಡರ್ ಕುಟುಂಬದ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ, 31 ವರ್ಷದ ಶಿಕ್ಷೆಯನ್ನೇ ನಗಣ್ಯಗೊಳಿಸುವಷ್ಟು. ಅಲೆಕ್ಸಾಂಡರ್‍ನ ಕುಟುಂಬ ಸಲಾಹುದ್ದೀನ್ ಕುಟುಂಬವನ್ನು ಆಲಿಂಗಿಸಿತು. ಅಲೆಕ್ಸಾಂಡರ್ ಮಾದಕ ವ್ಯಸನಿಯಾಗಿದ್ದ ಎಂಬುದನ್ನು ಆ ವೇಳೆ ಆ ಕುಟುಂಬ ಒಪ್ಪಿಕೊಂಡಿತು. ಅಂದಿನವರೆಗೆ ಪೊಲೀಸರಲ್ಲಾಗಲಿ, ನ್ಯಾಯಾಲಯದಲ್ಲಾಗಲಿ ಹೇಳಿರದ ಸತ್ಯ ಅದು. ಅಂಥದ್ದೊಂದು ಸತ್ಯವನ್ನು ಹೇಳಿಸಿದ್ದು ಅಬ್ದುಲ್ ಮುನೀಮ್ ಜಿತ್‍ಮೌಂದ್‍ರ ಕ್ಷಮಾ ಘೋಷಣೆ. ಆ ಕ್ಷಮೆಯು ಕೋರ್ಟಿನ ತೀರ್ಪಿನ ಮೇಲೆ ಯಾವ ಪರಿಣಾಮವನ್ನು ಬೀರದೇ ಇದ್ದರೂ ಅದು ಅಲೆಕ್ಸಾಂಡರ್ ಕುಟುಂಬದ ಮೇಲೆ ಮತ್ತು ಸ್ವತಃ ಅಲೆಕ್ಸಾಂಡರ್‍ನ ಮೇಲೆ ತೀವ್ರ ಪರಿಣಾಮವನ್ನು ಬೀರಿತು. ಟಿಶ್ಯೂ ಪೇಪರ್‍ನಿಂದ ಮತ್ತೆ ಮತ್ತೆ ಕಣ್ಣುಜ್ಜಿಕೊಳ್ಳುವ ಆತ ಇಡೀ ಘಟನೆಯ ಕೇಂದ್ರ ಬಿಂದುವಾದ. ತನ್ನನ್ನು ಕ್ಷಮಿಸಿ ಎಂದು ಬೇಡಿಕೊಂಡ. ಕೋರ್ಟ್‍ನ ಶಿಕ್ಷೆಯಿಂದ ಹೇಳಿಸಲಾಗದ ಮಾತುಗಳನ್ನು 64 ವರ್ಷದ ಗಡ್ಡದಾರಿ ವ್ಯಕ್ತಿಯ ಕ್ಷಮೆ ಹೇಳಿಸಿತು. ಪವಿತ್ರ ಕುರ್‍ಆನ್ ಘೋಷಿಸುವುದೇನೆಂದರೆ, ‘ಅಲ್ಲಾಹನು ಅತ್ಯಂತ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ’ (24:22, 22:42), ಓ ಪೈಗಂಬರರೇ ಕ್ಷಮಾಶೀಲರಾಗಿರಿ (7: 199), ಅವರ ವರ್ತನೆಗೆ ಪ್ರತಿಯಾಗಿ ಸೌಜನ್ಯಪೂರ್ಣ ಕ್ಷಮೆಯೊಂದಿಗೆ ವರ್ತಿಸಿರಿ (15: 85) ಎಂದೇ ಆಗಿದೆ. ಹಾಗಂತ,    ಪವಿತ್ರ ಕುರ್‍ಆನ್ ಪ್ರತೀಕಾರದ ಮಾರ್ಗವನ್ನು ಸಂಪೂರ್ಣ ಮುಚ್ಚಿದೆ ಎಂದಲ್ಲ. ಕ್ಷಮೆ ಮತ್ತು ಪ್ರತೀಕಾರ ಎರಡನ್ನೂ ಸಮಾ ನಾಂತರ ರೇಖೆಯಾಗಿ ಗೌರವಿಸುತ್ತಲೇ ಕ್ಷಮೆಗೆ ಒಂದಷ್ಟು ಹೆಚ್ಚು ಒತ್ತು ಕೊಟ್ಟಿರುವುದರಲ್ಲಿ ದೂರದೃಷ್ಟಿಯಿದೆ ಎಂದೇ ಅನಿಸುತ್ತದೆ. ಪವಿತ್ರ ಕುರ್‍ಆನ್‍ನ ಪ್ರಕಾರ, ‘ಪ್ರತೀಕಾರ ಎಸಗುವುದಿದ್ದರೆ ನಿಮ್ಮ ಮೇಲೆ ಅತಿರೇಕ ಎಸಗಿರುವಷ್ಟು ಮಾತ್ರ. ಆದರೆ ನೀವು ತಾಳ್ಮೆ ವಹಿಸಿದರೆ ನಿಶ್ಚಯವಾಗಿಯೂ ಇದು ಸಹನಾಶೀಲರಿಗೆ ಅತ್ಯುತ್ತಮ’ (16: 26), ‘ಯಾರಾದರೂ ಪ್ರತೀಕಾರವನ್ನು ದಾನ ಮಾಡಿದರೆ ಅದು ಅವರ ಪಾಲಿಗೆ ಪ್ರಾಯಶ್ಚಿತ್ತವಾಗುವುದು’ (5: 45), ‘ಕೆಡುಕಿನ ಪ್ರತಿಫಲ ಅದಕ್ಕೆ ಸಮಾನವಾದ ಕೆಡುಕಾಗಿದೆ. ಇನ್ನು ಯಾರಾದರೂ ಕ್ಷಮಿಸಿ ಬಿಟ್ಟರೆ ಹಾಗೂ ಸುಧಾರಿಸಿಕೊಂಡರೆ ಅದರ ಪ್ರತಿಫಲದ ಹೊಣೆ ಅಲ್ಲಾಹನ ಮೇಲಿದೆ’ (42: 40). ಒಂದು ವೇಳೆ,
    ಕ್ಷಮೆ ಮತ್ತು ಪ್ರತೀಕಾರ-ಎಂಬೆರಡು ಸಹಜ ಆಯ್ಕೆಗಳಲ್ಲಿ ಸಲಾಹುದ್ದೀನ್‍ನ ತಂದೆ ಪ್ರತೀಕಾರವನ್ನೇ ಆಯ್ದುಕೊಂಡಿದ್ದರೆ ಅಲೆಕ್ಸಾಂಡರ್‍ನು ಸುದ್ದಿಗೇ ಒಳಗಾಗುತ್ತಿರಲಿಲ್ಲವೇನೋ..