Tuesday, January 28, 2014

ವಿಳಾಸವೇ ಇಲ್ಲದ ಅವರನ್ನು ಸೃಷ್ಟಿಸಿದ್ದು ತಕ್ಷಣದ ಪ್ರತಿಕ್ರಿಯೆಗಳೇ?

 1. ಜುನಾಗಢ್
 2. ನವ್‍ಸಾರಿ
 3. ನರ್ಮದಾ
 4. ಡಾಂಗ್ಸ್
  2002ರ ಗುಜರಾತ್ ಹತ್ಯಾಕಾಂಡದ ವೇಳೆ ಈ ನಾಲ್ಕು ಕ್ಷೇತ್ರಗಳಲ್ಲಿ ಹಿಂಸಾಚಾರ ಕಾಣಿಸಿಕೊಳ್ಳದೇ ಇದ್ದುದಕ್ಕೆ ಏನು ಕಾರಣ? ಹಿಂಸಾಚಾರ ಅತ್ಯಂತ ತೀವ್ರವಾಗಿದ್ದ ಆನಂದ್ ಮತ್ತು ಖೇಡಾ ಕ್ಷೇತ್ರಗಳ ಆಸು-ಪಾಸಿನಲ್ಲೇ ಈ ಕ್ಷೇತ್ರಗಳು ಇದ್ದೂ ಇಂಥದ್ದೊಂದು ಬೆಳವಣಿಗೆ ಯಾಕಾಯಿತು? ಈ ಹತ್ಯಾಕಾಂಡವು ಕ್ರಿಯೆಗೆ ಪ್ರತಿಕ್ರಿಯೆ ಎಂದಾದರೆ ಈ ಪ್ರತಿಕ್ರಿಯೆ ಕೆಲವು ನಿರ್ದಿಷ್ಟ ಕ್ಷೇತ್ರ ಮತ್ತು ಪ್ರದೇಶಗಳಲ್ಲಿ ಮಾತ್ರ ಯಾಕೆ ಕಾಣಿಸಿಕೊಂಡಿತು? ಕೆಲವು ಆಯ್ದ ಪ್ರದೇಶಗಳ ಮಂದಿ ಮಾತ್ರ ಯಾಕೆ ತಕ್ಷಣ ಪ್ರಚೋದನೆಗೊಂಡರು? ಹೀಗಿರುವಾಗ, ಕ್ರಿಯೆಗೆ ಪ್ರತಿಕ್ರಿಯೆ, ತಕ್ಷಣದ ಪ್ರಚೋದನೆ.. ಎಂಬೆಲ್ಲ ವ್ಯಾಖ್ಯಾನಗಳನ್ನು ಕೊಟ್ಟು ಈ  ಹತ್ಯಾಕಾಂಡವನ್ನು ಸರಳೀಕೃತಗೊಳಿಸುತ್ತಿರುವವರ ವಾದವನ್ನು ಒಪ್ಪಬಹುದೇ? ಅಷ್ಟಕ್ಕೂ, ಮೋದಿ ಸರಕಾರವು ಕರಸೇವಕರ ಮೃತ ದೇಹಗಳನ್ನು ಮೆರವಣಿಗೆಯಲ್ಲಿ ಅಹ್ಮದಾಬಾದ್‍ಗೆ ಕರೆತಂದಿತ್ತು. ಗುಜರಾತ್‍ಗಿಂತ ತೀರಾ ದೂರ ಇರುವ ಕರ್ನಾಟಕದ ಮಾಧ್ಯಮಗಳಲ್ಲೂ ಕಸೇವಕರ ಸಾವು ಪ್ರಮುಖ ಸುದ್ದಿಯಾಗಿ ಬಿತ್ತರವಾಗಿತ್ತು. ಅಂದರೆ, ಗೋಧ್ರಾ
ಪ್ರಕರಣವು ಬರೇ ಗುಜರಾತ್‍ನ ದುರಂತವಾಗಿಯಷ್ಟೇ ಗುರುತಿಸಿಕೊಂಡದ್ದಲ್ಲ, ಇಡೀ ದೇಶಕ್ಕೇ ಆಘಾತದ ಸುದ್ದಿಯಾಗಿತ್ತು. ಹೀಗಿರುವಾಗ, ಕನಿಷ್ಠ ಇಡೀ ಗುಜರಾತ್‍ನಲ್ಲಾದರೂ ಹಿಂಸಾತ್ಮಕ ಪ್ರತಿಕ್ರಿಯೆ ಕಾಣಿಸಿಕೊಳ್ಳಬೇಕಿತ್ತಲ್ಲವೇ?
 ಇಂಥದ್ದೊಂದು ಅನುಮಾನವನ್ನು ಆಕ್ಸ್ ಫರ್ಡ್‍ ನ  ಸಮಾಜಶಾಸ್ತ್ರಜ್ಞ ಮೈಕೆಲ್ ಬಿಗ್ಸ್ ಮತ್ತು ಭಾರತದ ಸಂಶೋಧಕ ರಾಹಿಲ್ ದತ್ತಿವಾಲರು ದಿ ಹಿಂದೂ ಪತ್ರಿಕೆಯಲ್ಲಿ ಇತ್ತೀಚೆಗೆ ವ್ಯಕ್ತಪಡಿಸಿದ್ದರು.
 ನಿಜವಾಗಿ, ಯಾವುದೇ ಹತ್ಯಾಕಾಂಡವೂ ‘ಸಹಜ' ಆಗಿರುವುದಿಲ್ಲ. ಹತ್ಯಾಕಾಂಡಗಳಿಗೆ ಅವುಗಳದ್ದೇ ಆದ ಹಿನ್ನೆಲೆ, ಯೋಜನೆ, ಗುರಿಗಳಿರುತ್ತವೆ. ಗುಜರಾತ್ ಹತ್ಯಾಕಾಂಡದ ವೇಳೆ ಜುನಾಗಢ್ ಮತ್ತು ನವ್‍ಸಾರಿ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದವರು ಬಿಜೆಪಿ ಶಾಸಕರು. ಹಾಗೆಯೇ ನರ್ಮದಾ ಮತ್ತು ಡಾಂಗ್ಸ್ ಕ್ಷೇತ್ರಗಳಲ್ಲಿ ಬಿಜೆಪಿ ತೀರಾ ದುರ್ಬಲ ಆಗಿತ್ತು. ಒಂದು ವೇಳೆ ಹತ್ಯಾಕಾಂಡವು ಗೋಧ್ರಾ ಘಟನೆಗೆ ಸಹಜ ಪ್ರತಿಕ್ರಿಯೆಯೇ ಆಗಿರುತ್ತಿದ್ದರೆ, ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳು ಹಿಂಸಾತ್ಮಕವಾಗಿ ಪ್ರತಿಕ್ರಿಯಿಸದೇ ಇರುವುದಕ್ಕೆ ಸಾಧ್ಯವೇ ಇರಲಿಲ್ಲ. ಈ ಹಿನ್ನೆಲೆಯಲ್ಲಿ ರಾಹಿಲ್ ದತ್ತಿವಾಲರು ಹೊಸ ಬಗೆಯ ಸರ್ವೇಗೆ ಮುಂದಾದರು. 1998ರಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಡೆದ ಸ್ಥಾನಗಳು ಮತ್ತು ಆ ಬಳಿಕದಿಂದ ಈ ವರೆಗಿನ ಅದರ ಸ್ಥಾನಗಳನ್ನು ಅವರು ವಿಶ್ಲೇಷಣೆಗೆ ಒಳಪಡಿಸಿದರು. ಹಿಂಸಾಪೀಡಿತ ಮತ್ತು ಹಿಂಸಾರಹಿತ ಕ್ಷೇತ್ರಗಳನ್ನು ತುಲನೆ ಮಾಡಿ ನೋಡಿದರು. ಈ ಹಿಂದೆ ಇದೇ ಬಗೆಯ ಮಾನದಂಡವನ್ನು ಅಳವಡಿಸಿಕೊಂಡು ಖ್ಯಾತ ಸಮಾಜ ಶಾಸ್ತ್ರಜ್ಞ ಪೌಲ್ ಬ್ರಾಸ್ ಎಂಬವರು ಅಧ್ಯಯನ ನಡೆಸಿದ್ದರು. ಭಾರತದಲ್ಲಿ ನಡೆದಿರುವ ಹಿಂಸಾಚಾರಕ್ಕೆ ಸಂಬಂಧಿಸಿ, 1. ದಿ ಪ್ರೊಡಕ್ಷನ್ ಆಫ್ ಹಿಂದೂ-ಮುಸ್ಲಿಮ್ ವಯಲೆನ್ಸ್ ಇನ್ ಕಾಂಟೆಂಪರರಿ ಇಂಡಿಯಾ 2. ಫಾರ್ಮ್ ಆಫ್ ಕಲೆಕ್ಟಿವ್ ವಯಲೆನ್ಸ್ ರಯೆಟ್ಸ್, ಪೊಗ್ರಾಮ್ಸ್ ಆಂಡ್ ಜೆನೋಸೈಡ್ ಇನ್ ಮಾಡರ್ನ್ ಇಂಡಿಯಾ, 3. ಎತ್‍ನಿಕ್ ಗ್ರೂಪ್ಸ್ ಆಂಡ್ ಸ್ಟೇಟ್.. ಮುಂತಾದ ಬಹುಪ್ರಭಾವಿ ಕೃತಿಗಳನ್ನು ಬರೆದಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದ ಈ ಪ್ರೊಫೆಸರ್‍ರ ಸರ್ವೇ ವಿಧಾನವು ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿವೆ. ದತ್ತಿವಾಲ ಈ ವಿಧಾನವನ್ನೇ ಅನುಸರಿಸಿ ಗುಜರಾತ್ ಹತ್ಯಾಕಾಂಡದ ಸತ್ಯಗಳನ್ನು ಹುಡುಕುವ ಪ್ರಯತ್ನ ಮಾಡಿದರು. ದಂಗುಬಡಿಸುವ ಸಂಗತಿ ಏನೆಂದರೆ, ಬಿಜೆಪಿ ಅಭ್ಯರ್ಥಿಗಳ ಸೋಲಿನಲ್ಲಿ ಮುಸ್ಲಿಮರ ಪಾತ್ರ ಎಲ್ಲಿ ನಿರ್ಣಾಯಕವಾಗಿತ್ತೋ ಅಲ್ಲಿ ಭೀಕರ ಹಿಂಸಾಚಾರ ನಡೆದಿತ್ತು. ಬಿಜೆಪಿ ಪ್ರಬಲ ವಾಗಿರುವ ಕ್ಷೇತ್ರಗಳು ಹಿಂಸಾರಹಿತವಾಗಿರುವಂತೆಯೇ ಬಿಜೆಪಿ ಅಭ್ಯರ್ಥಿಗಳಿಗೆ 20ರಿಂದ 30% ಮತದಾನವಾದ ಕ್ಷೇತ್ರಗಳೂ ಹಿಂಸೆಯಿಂದ ದೂರವಿದ್ದುವು. ಬಿಜೆಪಿ ಅಭ್ಯರ್ಥಿಗಳು ಪ್ರಬಲ ಪೈಪೋಟಿ ಎದುರಿಸಿದ ಮತ್ತು 30-40% ಓಟು ಪಡೆದ ಕ್ಷೇತ್ರಗಳೇ ಹಿಂಸೆಯ ಕೇಂದ್ರಗಳಾಗಿದ್ದುವು. ಮಾತ್ರವಲ್ಲ, ಎಲ್ಲೆಲ್ಲಾ ಹಿಂಸಾಚಾರ ನಡೆದಿತ್ತೋ ಅಲ್ಲೆಲ್ಲಾ ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಮತ ಗಳಿಕೆಯಲ್ಲಿ ತೀವ್ರ ಮಟ್ಟದ ಏರಿಕೆ ಕಾಣಸಿಕೊಂಡಿತ್ತು.
 ಅಷ್ಟಕ್ಕೂ, ಇಂಥದ್ದು ಕೇವಲ ಭಾರತದಲ್ಲಿ ಮಾತ್ರ ನಡೆಯುವುದಲ್ಲ.
 2007ರಲ್ಲಿ ಕೀನ್ಯಾದಲ್ಲಿ ಭೀಕರ ಹಿಂಸಾಚಾರ ನಡೆಯಿತು. ಅಧ್ಯಕ್ಷ  ಕಿಬಕಿಯವರು ಹಿಂಸಾಚಾರಕ್ಕೆ ರಾಜಕಾರಣಿ ಭಾಷೆಯಲ್ಲಿ ವ್ಯಾಖ್ಯಾನಗಳನ್ನು ಕೊಟ್ಟರು. ಪಾರ್ಟಿ ಆಫ್ ನ್ಯಾಶನಲ್ ಯೂನಿಟಿ ಮತ್ತು ಓರೇಂಜ್ ಡೆಮಾಕ್ರಟಿಕ್ ಮೂವ್‍ಮೆಂಟ್ ಪಕ್ಷಗಳ ಅಧಿಕಾರ ದಾಹದಿಂದ ಹುಟ್ಟಿಕೊಂಡ ಹಿಂಸಾಚಾರಕ್ಕೆ 1,133 ಮಂದಿ ಬಲಿಯಾದರು. ಮೂರೂವರೆ ಲಕ್ಷಕ್ಕಿಂತ ಹೆಚ್ಚು ಮಂದಿ ನಿರಾಶ್ರಿತರಾದರು. Spoutaneous or pre-meditated post-election violence in Kenya -  ಎಂಬ ಅಧ್ಯಯನಾಧಾರಿತ ಬರಹದಲ್ಲಿ ಆ ಹಿಂಸಾಚಾರದ ರಾಜಕೀಯ ಪ್ರಭಾವವನ್ನು ಬಿಚ್ಚಿಡಲಾಗಿದೆ. ಅಂದಹಾಗೆ, ನಿತ್ಯ ಮಾತಾಡಿ ಕುಶಲೋಪರಿ ಹಂಚಿಕೊಳ್ಳುವ ಅಕ್ಕ-ಪಕ್ಕದ ಮಂದಿ ಎಲ್ಲೋ ನಡೆದ ಒಂದು ದಿಢೀರ್ ಪ್ರಕರಣವನ್ನು ಎತ್ತಿಕೊಂಡು ಸಂಬಂಧವೇ ಇಲ್ಲದವರಂತೆ ವರ್ತಿಸುವುದನ್ನು ಹೇಗೆ ಸಹಜ ಎಂದು ಒಪ್ಪಿಕೊಳ್ಳುವುದು? ಗೋಧ್ರಾ ಪ್ರಕರಣ ಅಥವಾ ಮುಝಫರ್ ನಗರದ ಘಟನೆ ತೀರಾ ಅನಿರೀಕ್ಷಿತವಾದದ್ದು. ಅದಕ್ಕೂ ತನ್ನ ನೆರೆಮನೆಯ ಮುಸ್ಲಿಮರಿಗೂ ಸಂಬಂಧ ಇದೆ ಎಂದು ಮುಝಫರ್ ನಗರದಲ್ಲಿ ಅಥವಾ ಪಂಚಮಹಲ್, ಗುಲ್ಬರ್ಗ್ ಸೊಸೈಟಿಯ ಹತ್ಯಾಕಾಂಡದಲ್ಲಿ ಭಾಗಿಯಾದವರು ತೀರ್ಮಾನಿಸುವುದಕ್ಕೆ ಸಾಧ್ಯವೇ ಇಲ್ಲ. ಒಂದು ಬೆಳಗಾತ ನಡೆದ ಗೋಧ್ರಾ ಘಟನೆಯನ್ನು ಮುಂದಿಟ್ಟುಕೊಂಡು ತನ್ನ ನೆರೆಮನೆಯ ಮುಸ್ಲಿಮ್ ಮಹಿಳೆಯರನ್ನು ಅತ್ಯಾಚಾರಕ್ಕೆ ಗುರಿಪಡಿಸಲು ಸಾಧ್ಯವೇ? ಎಲ್ಲೋ ನಡೆದ ಕ್ರಿಯೆಗೆ ಇನ್ನೆಲ್ಲೋ ಇರುವ ಮತ್ತು ತನಗೆ ತೀರಾ ಪರಿಚಿತ ಇರುವ ವ್ಯಕ್ತಿಯ ಮೇಲೆ ಹಿಂಸಾತ್ಮಕ ಪ್ರತಿಕ್ರಿಯೆ ತೋರುವುದನ್ನು ಸಹಜ ಅನ್ನಲಾದೀತೇ?  ಒಂದು ವೇಳೆ, ಇಂಥ ಪ್ರತಿಕ್ರಿಯೆಗಳು ಸಹಜ ಎಂದಾದರೆ ಭೂಮಿಯಲ್ಲಿ ಹಿಂಸೆಯ ಹೊರತು ಬೇರೆ ಯಾವ ವಾತಾವರಣವಿದ್ದೀತು? ಅಷ್ಟಕ್ಕೂ, ರಾಜಕೀಯ ಬೆರೆತುಕೊಂಡ ಅಥವಾ ನಿರ್ದಿಷ್ಟ ಪಕ್ಷವೊಂದಕ್ಕೆ ಲಾಭ ತರಬಲ್ಲಂಥ ಘಟನೆಗಳಿಗೆ ಮಾತ್ರ ಯಾಕೆ ಹಿಂಸಾತ್ಮಕ ಪ್ರತಿಕ್ರಿಯೆಗಳು ಲಭ್ಯವಾಗುತ್ತಿವೆ? ಘಟನೆಯೊಂದರ ಭೀಭತ್ಸತೆಯನ್ನು ನೋಡಿಕೊಂಡು ಹಿಂಸಾತ್ಮಕ ಪ್ರತಿಕ್ರಿಯೆ ವ್ಯಕ್ತ ವಾಗುತ್ತದೆಂದಾದರೆ, ಅತ್ಯಾಚಾರಕ್ಕೀಡಾಗಿ ಸಾವಿಗೀಡಾದ ನಿರ್ಭಯಳ ಪ್ರಕರಣದಲ್ಲೂ ಅದು ಕಾಣಿಸಿಕೊಳ್ಳಬೇಕಿತ್ತಲ್ಲವೇ? ಆ ಭೀಕರ ಕ್ರಿಯೆಗೆ ಪ್ರತಿಭಟನೆಯಂಥ ತೀರಾ ಅಹಿಂಸಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗಲು ಕಾರಣವೇನು? ಅದರ ಬಳಿಕವೇ ಮುಝಫರ್ ನಗರದಲ್ಲಿ ಚುಡಾವಣೆ ಪ್ರಕರಣ ನಡೆದಿದೆ. ನಿರ್ಭಯ ಪ್ರಕರಣಕ್ಕೆ ಹೋಲಿಸಿದರೆ ಏನೇನೂ ಅಲ್ಲದ ಘಟನೆಯೊಂದು 62 ಮಂದಿಯ ಸಾವಿಗೆ ಮತ್ತು 50 ಸಾವಿರದಷ್ಟು ಮಂದಿಯ ನಿರಾಶ್ರಿತ ಬದುಕಿಗೆ ಕಾರಣವಾಗುವಷ್ಟು ಭೀಕರ ಅನ್ನಿಸಿಕೊಂಡಿತೇಕೆ? ಪ್ರತಿಕ್ರಿಯೆಯೊಂದು ಹಿಂಸಾತ್ಮಕ ಅಥವಾ ಶಾಂತವಾಗುವುದಕ್ಕೆ ಕ್ರಿಯೆ ನಡೆಸಿದವರ ಧರ್ಮ ಮತ್ತು ಹೆಸರುಗಳು ಮುಖ್ಯವಾಗುತ್ತದೆ ಎಂದಲ್ಲವೇ ಇದರರ್ಥ. ಹಾಗಾದರೆ, ಅಂಥದ್ದೊಂದು ವಾತಾವರಣವನ್ನು ಸಮಾಜದಲ್ಲಿ ಬೆಳೆಸಿದವರು ಯಾರು? ನಮ್ಮ ಶಿಕ್ಷಣ ಕ್ರಮದ ಬಗ್ಗೆ ಏನೇ ಭಿನ್ನಾಭಿಪ್ರಾಯಗಳಿದ್ದರೂ ಈ ಮಟ್ಟದ ಹಿಂಸಾಚಾರಕ್ಕೆ ಅದುವೇ ಮೂಲ ಕಾರಣ ಎಂದು ಯಾರೂ ಹೇಳುತ್ತಿಲ್ಲ. ಒಂದು ಧರ್ಮದವರನ್ನು ಹತ್ಯಾಕಾಂಡಕ್ಕೆ ಒಳಪಡಿಸುವಂತೆ ಪ್ರಚೋದಿಸುವ ಅಂಶಗಳು ನಮ್ಮ ಶೈಕ್ಷಕ ಪಠ್ಯಕ್ರಮಗಳಲ್ಲಿ ಈ ವರೆಗೆ ಅಳವಡಿಕೆಯಾಗಿಲ್ಲ. ಹಾಗಂತ, ಪಠ್ಯಕ್ರಮಗಳೇ ಇದಕ್ಕೆ ಮುಖ್ಯ ಕಾರಣ ಎಂದಾದರೆ, ಈ ಹಿಂಸಾಚಾರಗಳಲ್ಲಿ ವೈದ್ಯರು, ಇಂಜಿನಿಯರ್‍ಗಳು, ವಿಜ್ಞಾನಿಗಳು, ಉನ್ನತ ಅಧಿಕಾರಿಗಳು ಮುಂತಾದ ಶಿಕ್ಷಿತರು ನೇರವಾಗಿ ಪಾಲುಗೊಳ್ಳಬೇಕಿತ್ತು. ಆದರೆ ಯಾವ ಪ್ರಕರಣಗಳಲ್ಲೂ ಇಂಥವರ ನೇರ ಪಾಲುದಾರಿಕೆ ಕಾಣಿಸುತ್ತಿಲ್ಲ. ಗುಜರಾತ್ ಹತ್ಯಾಕಾಂಡ ಅಥವಾ ಇನ್ನಿತರ ಯಾವುದೇ ಹತ್ಯಾಕಾಂಡಗಳಲ್ಲೂ ಆದಿವಾಸಿಗಳು, ಹಿಂದುಳಿದ ವರ್ಗಗಳ ಸಾಮಾನ್ಯ ಮಂದಿಯೇ ಪಾಲುಗೊಂಡಿದ್ದಾರೆ. ಇವೆಲ್ಲ ಸೂಚಿಸುವುದು ಏನನ್ನು? ತಮ್ಮ ನೆರೆಯ, ಪರಿಚಿತ ಮಂದಿಯನ್ನೇ ಹತ್ಯೆ ಮಾಡುವಷ್ಟು, ಅತ್ಯಾಚಾರ ಮಾಡಿ ಹೆಮ್ಮೆ ಪಡುವಷ್ಟು ಹೀನ ಮಟ್ಟಕ್ಕೆ ಇವರನ್ನು ತಲುಪಿಸಿದ್ದು ಯಾರು? ಅವರ ಉದ್ದೇಶವೇನು?
 ಯಾವುದೇ ಹತ್ಯಾಕಾಂಡ ಬರೇ ಸಾವು-ನೋವುಗಳನ್ನಷ್ಟೇ ಸೃಷ್ಟಿಸುವುದಲ್ಲ. ಒಂದು ದೊಡ್ಡ ಜನಸಮೂಹದ ಐಡೆಂಟಿಟಿಯನ್ನೇ ಅದು ಕಿತ್ತುಕೊಂಡು ಬಿಡುತ್ತದೆ. ಹಿಂಸಾಚಾರ ಸ್ಫೋಟಿಸಿದ ಬೆನ್ನಿಗೇ ಜನರ ವಲಸೆ ಪ್ರಾರಂಭವಾಗುತ್ತದೆ. ಹಾಗೆ ವಲಸೆ ಹೋಗುವವರಿಗೆ ಮನೆ, ಬಟ್ಟೆ, ಸಂಪತ್ತು ಸಹಿತ ಏನನ್ನೂ ಒಯ್ಯಲಾಗುವುದಿಲ್ಲ. ಹಾಗೆ ಹೋಗುವವರಲ್ಲಿ ಗರ್ಭಿಣಿಯರು, ಬಾಣಂತಿಯರು, ರೋಗಿಗಳು, ವೃದ್ಧರು, ಮಕ್ಕಳು.. ಎಲ್ಲರೂ ಇರುತ್ತಾರೆ. ವಲಸೆ ಹೋಗುವಾಗ ನಿರ್ದಿಷ್ಟ ಗುರಿಯೂ ಇರುವುದಿಲ್ಲ. ಅಂತೂ ಬದುಕಿ ಉಳಿಯುವುದಕ್ಕಾಗಿ ಎಲ್ಲೋ ಟೆಂಟು ಹಾಕುತ್ತಾರೆ. ಅಲ್ಲಿ ಶುದ್ಧ ನೀರು, ಆಹಾರ, ಶೌಚಾಲಯ, ಔಷಧ.. ಯಾವುದರ ವ್ಯವಸ್ಥೆಯೂ ಇರುವುದಿಲ್ಲ. ವಿದ್ಯಾಭ್ಯಾಸ, ಉದ್ಯೋಗ, ವ್ಯಾಪಾರ.. ಎಲ್ಲವನ್ನೂ ಕಳಕೊಂಡ ಸಾವಿರಾರು ಮಂದಿಯ ಗುಂಪಿಗೆ ಸರಕಾರ ಎಷ್ಟೇ ನೆರವಿನ ವಾಗ್ದಾನ ಮಾಡಿದರೂ ಒಂದು ಹಂತದ ಬಳಿಕ ವಲಸಿಗರು ಒಂಟಿಯಾಗುತ್ತಾ ಹೋಗುತ್ತಾರೆ. ಅವರು ನಿರಾಶ್ರಿತ ಶಿಬಿರಗಳಲ್ಲಿ ಹೆಚ್ಚು ಸಮಯ ಠಿಕಾಣಿ ಹೂಡುವುದನ್ನು ಸರಕಾರವೂ ಇಚ್ಛಿಸುವುದಿಲ್ಲ. ಯಾಕೆಂದರೆ, ತನ್ನದೇ ಪ್ರಜೆಗಳು ನಿರಾಶ್ರಿತ ಶಿಬಿರಗಳಲ್ಲಿ ಬದುಕುವುದೆಂದರೆ ಯಾವ ಸರಕಾರಕ್ಕೇ ಆಗಲಿ ಅದು ಕಪ್ಪು ಚುಕ್ಕೆ. ಅವರನ್ನು ಎತ್ತಿಕೊಂಡು ವಿರೋಧ ಪಕ್ಷಗಳು ರಾಜಕೀಯ ಮಾಡಬಹುದು. ಮಾಧ್ಯಮಗಳು ಸರಕಾರದ ವೈಫಲ್ಯಕ್ಕೆ ಪುರಾವೆಯಾಗಿ ಆ ಶಿಬಿರಗಳನ್ನು ತೋರಿಸಬಹುದು. ಆದ್ದರಿಂದ ಒಂದಷ್ಟು ಪರಿಹಾರವನ್ನು ಘೋಷಿಸಿ ಅವರನ್ನು ಶಿಬಿರದಿಂದ ಎತ್ತಿ ಹೊರಹಾಕಲಾಗುತ್ತದೆ. ಹೀಗೆ ಮೊದಲು ತನ್ನ ಊರಿನಿಂದ ಬಳಿಕ ನಿರಾಶ್ರಿತ ಶಿಬಿರಗಳಿಂದ ಹೊರಬೀಳುವ ಮಂದಿ ಅಂತಿಮವಾಗಿ ಎಲ್ಲೆಲ್ಲೋ ಟೆಂಟು ಹಾಕಿ ಬದುಕತೊಡಗುತ್ತಾರೆ. ಅವರಿಗೆ ತಮ್ಮದೆಂದು ಹೇಳಿಕೊಳ್ಳುವುದಕ್ಕೆ ಸರಿಯಾದ ಐಡೆಂಟಿಟಿಯೇ ಇರುವುದಿಲ್ಲ. ರೇಶನ್ ಕಾರ್ಡ್, ಗುರುತಿನ ಚೀಟಿ, ವಿಳಾಸ.. ಯಾವುದೂ ಇರುವುದಿಲ್ಲ. ಮಕ್ಕಳಿಗೆ ಶಿಕ್ಷಣವೂ ಇರುವುದಿಲ್ಲ. ಒಂದಷ್ಟು ಸಮಯ ಒಂದು ಕಡೆಯಾದರೆ ಇನ್ನೊಂದಷ್ಟು ಸಮಯ ಇನ್ನೊಂದು ಕಡೆ. ಒಂದು ವೇಳೆ ಈ ದೇಶದ ಸ್ಲಂಗಳ ಮೂಲವನ್ನು ಹುಡುಕ ಹೊರಟರೆ ಇಂಥ ನೂರಾರು ಕತೆಗಳು ಸಿಗಬಲ್ಲುದು.
 ಮುಝಫರ್ ನಗರದ ನಿರಾಶ್ರಿತ ಶಿಬಿರಗಳನ್ನು ಉತ್ತರ ಪ್ರದೇಶ ಸರಕಾರವು ಇತ್ತೀಚೆಗೆ ಬುಲ್ಡೋಜರ್‍ನಿಂದ ಕೆಡವಿದ ಬಳಿಕ ದಿಕ್ಕಾಪಾಲಾದ ಸಂತ್ರಸ್ತರು ರಸ್ತೆಯ ಬದಿ, ರೈಲ್ವೆ ನಿಲ್ದಾಣದ ಸಮೀಪ ಅಲ್ಲಲ್ಲಿ ಶಿಬಿರಗಳನ್ನು ಹಾಕಿಕೊಂಡಿದ್ದಾರೆ ಎಂಬ ವರದಿಗಳೇ ಇವಕ್ಕೆ ಪುರಾವೆಯಾಗಿವೆ.

Wednesday, January 22, 2014

ಕಾರ್ಮಿಕರ ಪ್ರತಿಭಟನೆಗಿಂತ ಶ್ರೀಶಾಂತ್ ರ ಮದುವೆಯೇ ಮುಖ್ಯವಾಗುತ್ತದಲ್ಲ, ಏಕೆ ಹೇಳಿ?

1. ವಾರ್ ಈಸ್ ಎ ಲೈ
2. ವೆನ್ ದಿ ವರ್ಲ್ಡ್  ಔಟ್‍ಲಾವ್‍ಡ್  ವಾರ್
3. ವಾರ್ ನೋ ಮೋರ್: ದಿ ಕೇಸ್ ಫಾರ್ ಅಬೋಲಿಶನ್
ಮುಂತಾದ ಬಹುಚರ್ಚಿತ ಕೃತಿಗಳನ್ನು ರಚಿಸಿರುವ ಮತ್ತು ಈಗ ‘ವಾರ್ ಈಸ್ ಎ ಕ್ರೈಮ್.ಆರ್ಗ್' ಎಂಬ ವೆಬ್‍ಸೈಟ್ ಸ್ಥಾಪಿಸಿ ಸಕ್ರಿಯರಾಗಿರುವ ಅಮೇರಿಕದ ಪ್ರಮುಖ ಬ್ಲಾಗರ್, ಅಂಕಣಗಾರ ಡೇವಿಡ್ ಸ್ವಾನ್‍ಸನ್‍ರು ಪ್ರಚಲಿತ ಮಾಧ್ಯಮ ಧೋರಣೆಯನ್ನು ಪ್ರಶ್ನಿಸಿ ಅನೇಕ ಬಾರಿ ಚರ್ಚೆಗೆ ಒಳಗಾಗಿದ್ದಾರೆ. ಯುದ್ಧದ ಬಗ್ಗೆ, ಅದು ಉಂಟು ಮಾಡುವ ನಾಶ-ನಷ್ಟದ ಬಗ್ಗೆ ಮತ್ತು ಅದು ಸುತ್ತುವರಿದಿರುವ ಸುಳ್ಳುಗಳ ಬಗ್ಗೆ ಕಣ್ತೆರೆಸುವ ಹಲವು ಪ್ರಭಾವಿ ಬರಹಗಳನ್ನು ಬರೆದಿದ್ದಾರೆ.
   2003ರಲ್ಲಿ ಅಮೇರಿಕವು ಇರಾಕ್‍ನ ಮೇಲೆ ಅತಿಕ್ರಮಣ ನಡೆಸಿತು. ಬಾಂಬುಗಳು, ಬಂದೂಕುಗಳೂ ಸಿಡಿದುವು. ಸದ್ದಾಮ್‍ರನ್ನು ಅಧಿಕಾರದಿಂದ ಕಿತ್ತು ಹಾಕಲಾಯಿತು. ಈ ಮಧ್ಯೆ ಅಮೇರಿಕದಲ್ಲಿ ಕೆಲವಾರು ಸಮೀಕ್ಷೆಗಳೂ ನಡೆದುವು. 2010ರಲ್ಲಿ ನಡೆದ ಸಮೀಕ್ಷೆಯ ಕೇಂದ್ರ ವಿಷಯ ಹೀಗಿತ್ತು:
   ಇರಾಕ್‍ನ ಮೇಲೆ ಅಮೇರಿಕ ನಡೆಸಿದ ದಾಳಿಯಿಂದ ಇರಾಕಿಗಳಿಗೆ ಲಾಭವಾಗಿದೆಯೋ ನಷ್ಟವಾಗಿದೆಯೋ?
ಸಮೀಕ್ಷೆಗೆ ಒಳಪಟ್ಟ ಅಮೇರಿಕನ್ನರಲ್ಲಿ ಹೆಚ್ಚಿನ ಮಂದಿಯೂ ಇರಾಕಿಗಳಿಗೆ ಲಾಭವಾಗಿದೆ ಎಂದೇ ಉತ್ತರಿಸಿದ್ದರು. ಇದೇ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಇರಾಕ್‍ನಲ್ಲಿಯೂ ಸರ್ವೇ ನಡೆಸಲಾಯಿತು. ಆದರೆ ಬಹುತೇಕ ಎಲ್ಲ ಇರಾಕಿಗಳೂ ತಮಗೆ ಸದ್ದಾಮ್ ಆಡಳಿತ ಕಾಲವೇ ಉತ್ತಮವಾಗಿತ್ತೆಂದು ಅಭಿಪ್ರಾಯಪಟ್ಟರು. ಒಂದೇ ವಿಷಯ, ಆದರೆ ಎರಡು ಅಭಿಪ್ರಾಯ! ಹೀಗಾಗಲು ಕಾರಣ ಏನೆಂದರೆ, ಮಾಧ್ಯಮಗಳೇ. ಇರಾಕಿಗಳು ಯಾವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೋ ಅದರಲ್ಲಿ ಉತ್ಪ್ರೇಕ್ಷೆ ಇಲ್ಲ. ಅದು ಅವರ ಕಣ್ಣೆದುರಿನ ವಾಸ್ತವ. ಆದರೆ ಅಮೇರಿಕನ್ನರ ಅಭಿಪ್ರಾಯವು ಸಂಪೂರ್ಣವಾಗಿ ಮಾಧ್ಯಮ ವರದಿಯನ್ನೇ ಅವಲಂಬಿಸಿಕೊಂಡಿತ್ತು. ಮಾಧ್ಯಮಗಳು ಏನನ್ನು ಉಣಬಡಿಸಿದ್ದುವೋ ಅದರ ಸಂಗ್ರಹ ರೂಪವನ್ನೇ ಅಮೇರಿಕನ್ನರು ಸಮೀಕ್ಷೆಯಲ್ಲಿ ವ್ಯಕ್ತಪಡಿಸಿದ್ದರು.
   ಡೇವಿಡ್ ಸ್ವಾನ್‍ಸನ್‍ರ ಈ ಅಭಿಪ್ರಾಯವನ್ನು ಇಲ್ಲಿ ಹಂಚಿಕೊಳ್ಳುವುದಕ್ಕೆ ಕಾರಣ ಇದೆ..
ಈ ವರ್ಷದ ಆರಂಭದಲ್ಲಿ ತಮಿಳ್ನಾಡಿನ ಕೆಲವು ಓದುಗರು ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷ  ಮಾರ್ಕಾಂಡೇಯ ಕಾಟ್ಜು ಅವರಿಗೆ ಪತ್ರವೊಂದನ್ನು ಬರೆದರು. ಸಾಮಾನ್ಯವಾಗಿ ಪತ್ರಿಕಾ ಮಂಡಳಿಗೆ ದೂರುಗಳು ರವಾನೆಯಾಗುತ್ತಲೇ ಇರುತ್ತವೆ. ಮಾಧ್ಯಮ ಧೋರಣೆಯನ್ನು ಪ್ರಶ್ನಿಸಿ ಓದುಗರ ಆಗಾಗ ಸಿಟ್ಟು ತೋಡಿಕೊಳ್ಳುವುದಿದೆ. ಇಂತಿಂಥ ಪತ್ರಿಕೆ, ಚಾನೆಲ್‍ಗಳಲ್ಲಿ ಗಲಭೆಗೆ ಪ್ರಚೋದನೆ ನೀಡಲಾಗಿದೆ, ವಾರ್ತೆಯನ್ನು ತಿರುಚಲಾಗಿದೆ, ಒಂದು ಸಮುದಾಯವನ್ನು ಅವಮಾನಿಸಲಾಗಿದೆ.. ಎಂಬೆಲ್ಲ ದೂರುಗಳನ್ನು ಹೊತ್ತ ಪತ್ರಗಳು ಕಾಟ್ಜುರನ್ನು ತಲುಪುತ್ತಲೇ ಇರುತ್ತವೆ. ಆದರೆ ತಮಿಳ್ನಾಡಿನ ಪತ್ರ ಇದಕ್ಕಿಂತ ಭಿನ್ನ ಆಗಿತ್ತು.
   ಪ್ರಮುಖ 11 ಕಾರ್ಮಿಕ ಸಂಘಟನೆಗಳಿಗೆ ಸೇರಿದ ಸುಮಾರು 2 ಲಕ್ಷಕ್ಕಿಂತಲೂ ಅಧಿಕ ಕಾರ್ಮಿಕರು ಕಳೆದ ಡಿ. 12ರಂದು ದೆಹಲಿಯಲ್ಲಿ ಪಾರ್ಲಿಮೆಂಟೋ ಚಲೋ ರಾಲಿಯನ್ನು ಏರ್ಪಡಿಸಿದ್ದರು. ನಿಜವಾಗಿ ಶ್ರಮಿಕ ವರ್ಗ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಒಟ್ಟು ಸೇರುವುದು, ಪ್ರತಿಭಟಿಸುವುದೆಲ್ಲ ತೀರಾ ಅಪರೂಪ. ಶ್ರಮಿಕ ವರ್ಗಕ್ಕೆ ಅದರದ್ದೇ ಆದ ಮಿತಿಗಳಿವೆ. ಐಟಿ-ಬಿಟಿಯಲ್ಲಿ ದುಡಿಯುವವರಿಗೆ, ಸರಕಾರಿ ಉದ್ಯೋಗಿಗಳಾಗಿರುವ ಮಂದಿಗೆ ಇರುವಂಥ ವರ್ಚಸ್ಸು ಇಂಥವರಿಗಿರುವುದು ಕಡಿಮೆ. ಶ್ರಮಿಕ ವರ್ಗ ಸಾಮಾನ್ಯವಾಗಿ ತಳಮಟ್ಟದ ಜನಸಮುದಾಯವನ್ನು ಪ್ರತಿನಿಧಿಸುತ್ತದೆ. ಅಂಥವರು ಡಿ. 12ರಂದು ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಒಟ್ಟು ಸೇರಿ ಪ್ರತಿಭಟನೆ ಹಮ್ಮಿಕೊಂಡರೂ ಡಿ. 13ರ ದಿ ಹಿಂದೂ, ಟೈಮ್ಸ್ ಆಫ್ ಇಂಡಿಯಾ, ನ್ಯೂ ಇಂಡಿಯನ್ ಎಕ್ಸ್ ಪ್ರೆಸ್, ಡೆಕ್ಕನ್ ಕ್ರಾನಿಕಲ್.. ಮುಂತಾದ ಪ್ರಮುಖ ಆಂಗ್ಲ ಪತ್ರಿಕೆಗಳಾಗಲಿ, ತಮಿಳು ಪತ್ರಿಕೆಗಳಾಗಲಿ ಆ ಸುದ್ದಿಯನ್ನು ಪ್ರಕಟಿಸಿಯೇ ಇರಲಿಲ್ಲ. ಮೋದಿಯದ್ದೋ ರಾಹುಲ್‍ರದ್ದೋ ಸಣ್ಣ ಸಭೆಗೂ ಭಾರೀ ಕವರೇಜ್ ಕೊಡುವ ಮಾಧ್ಯಮಗಳು, ಕಾರ್ಮಿಕ ಪ್ರತಿಭಟನೆಯನ್ನು ಕಡೆಗಣಿಸಿದ್ದು ಸರಿಯೇ? ಡಿ. 13ರ ಹೆಚ್ಚಿನ ಪ್ರಮುಖ ಪತ್ರಿಕೆಗಳಲ್ಲಿ ಭುವನೇಶ್ವರಿಯನ್ನು ಕ್ರಿಕೆಟಿಗ ಶ್ರೀಶಾಂತ್ ವಿವಾಹವಾದ ಬಗ್ಗೆ ಚಿತ್ರ ಸಮೇತ ವರದಿಗಳಿದ್ದುವು. ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಹಮ್ಮಿಕೊಳ್ಳಲಾದ ಪ್ರತಿಭಟನೆಗೆ ಜಾಗ ಕೊಡದ ಪತ್ರಿಕೆಗಳು, ಸಾಮಾನ್ಯ ಮದುವೆ ಸಮಾರಂಭಕ್ಕೆ ಮಹತ್ವ ಕೊಟ್ಟದ್ದರ ಬಗ್ಗೆ ಮಂಡಳಿಯ ನಿಲುವು ಏನು? ಹಾಗಂತ, ಮಂಡಳಿಗೆ ದೂರು ಕೊಡುವುದಕ್ಕಿಂತ ಮೊದಲು ಸಂಬಂಧಿತ ಸಂಪಾದಕರಿಗೆ ವಿಷಯ ತಿಳಿಸಬೇಕೆಂಬ ನಿಯಮ ಇರುವುದು ನಮಗೆ ಗೊತ್ತು. ನಾವು ಅದನ್ನು ಪಾಲಿಸಿಲ್ಲ ಅನ್ನುವುದೂ ನಿಜ. ಯಾಕೆಂದರೆ, ಒಂದೋ ಎರಡೋ ಪತ್ರಿಕೆಯಿಂದ ಇಂಥ ಎಡವಟ್ಟು ಆಗಿದ್ದಿದ್ದರೆ ಸಂಪಾದಕರನ್ನು ಭೇಟಿಯಾಗಬಹುದಿತ್ತು. ಆದರೆ ಹಲವು ಪತ್ರಿಕೆಗಳು ಒಂದೇ ಬಗೆಯ ತಪ್ಪನ್ನು ಮಾಡಿರುವಾಗ ಎಲ್ಲ ಸಂಪಾದಕರನ್ನೂ ಭೇಟಿ ಮಾಡುವುದು ಹೇಗೆ? ಅದು ಎಷ್ಟು ಪ್ರಾಯೋಗಿಕ? ಆದ್ದರಿಂದ ನಿಮ್ಮಲ್ಲಿ ಭರವಸೆ ಇಟ್ಟು ಈ ಪತ್ರ ರವಾನಿಸಿದ್ದೇವೆ..’ ಎಂದು ಆ ಪತ್ರದಲ್ಲಿ ಹೇಳಲಾಗಿತ್ತು.
   ಅಷ್ಟಕ್ಕೂ, ಭಾರತವು ಪತ್ರಿಕೆಗಳ ಪಾಲಿಗೆ ಅತಿದೊಡ್ಡ ಮಾರುಕಟ್ಟೆ. ವಿವಿಧ ಬಗೆಯ ಸುಮಾರು 70 ಸಾವಿರದಷ್ಟು ಪತ್ರಿಕೆಗಳು ಈ ದೇಶದಲ್ಲಿ ಚಲಾವಣೆಯಲ್ಲಿವೆ ಎಂದು ಹೇಳಲಾಗುತ್ತಿದೆ. ಪ್ರತಿದಿನ 100 ಮಿಲಿಯನ್ ಪ್ರತಿಗಳು ಮಾರಾಟವಾಗುತ್ತಿವೆ. 500ರಷ್ಟು ಟಿ.ವಿ. ಚಾನೆಲ್‍ಗಳೇ ಇವೆ. ಇವುಗಳಲ್ಲಿ ನ್ಯೂಸ್ ಚಾನೆಲ್‍ಗಳ ಪಾಲು 80. ಮಾಧ್ಯಮ ಕ್ಷೇತ್ರದಲ್ಲಿ ಒಂದು ಬಗೆಯ ಸ್ಪರ್ಧೆ ಇವತ್ತು ಸೃಷ್ಟಿಯಾಗಿ ಬಿಟ್ಟಿದೆ. ಇಂಥ ಸ್ಥಿತಿಯಲ್ಲಿ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳದೇ ಹೋದರೆ ಪತ್ರಿಕೆಯೊಂದು ಬದುಕಿ ಉಳಿಯಬಲ್ಲುದೇ? ಮಸಾಲೆಗಳೇ ತುಂಬಿರುವ ವರದಿಗಳ ಮಧ್ಯೆ ಅವೇನೂ ಇಲ್ಲದ, ನಿಖರ ಮತ್ತು ನಿಷ್ಠುರ ಸತ್ಯವುಳ್ಳ ವರದಿಗಳನ್ನಷ್ಟೇ ಪ್ರಕಟಿಸುವ ಧೈರ್ಯ ತೋರಿದರೆ ಆ ಪತ್ರಿಕೆಗೆ ಎಷ್ಟು ಮಂದಿ ಓದುಗರು ಸಿಕ್ಕಾರು?
    ‘2006ರ ಜನವರಿಯಿಂದ ಎಪ್ರಿಲ್ 2ರ ವರೆಗೆ ಮಹಾರಾಷ್ಟ್ರದ ವಿದರ್ಭದಲ್ಲಿ 400ರಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡರು. ಎಪ್ರಿಲ್ 2ರ ಅದೇ ದಿನ ಸೆನ್ಸೆಕ್ಸ್ ಹನ್ನೊಂದು ಸಾವಿರವನ್ನು ದಾಟಿತು. ಮಾತ್ರವಲ್ಲ, ಪತ್ರಕರ್ತರಿಗೆ ‘ಲಕ್ಮೆ ಫ್ಯಾಶನ್ ವೀಕ್' 500 ಪಾಸುಗಳನ್ನು ಬಿಡುಗಡೆ ಮಾಡಿತು. ಒಂದೇ ವಾರದಲ್ಲಿ ನಡೆದ ಈ ಮೂರು ಬೆಳವಣಿಗೆಗಳಲ್ಲಿ ವಿದರ್ಭದ ರೈತರ ಸಾವು ಹೆಚ್ಚಿನ ಪತ್ರಿಕೆ ಮತ್ತು ಟಿ.ವಿ. ಚಾನೆಲ್‍ಗಳಲ್ಲಿ ಉಲ್ಲೇಖಕ್ಕೇ ಒಳಗಾಗಲಿಲ್ಲ. ಆದರೆ ಈ ದೇಶದ 2% ಮಂದಿ ಮಾತ್ರ ಆಸಕ್ತವಾಗಿರುವ ಷೇರು ಮಾರುಕಟ್ಟೆಯ ಬಗ್ಗೆ, ಸೆನ್ಸೆಕ್ಸ್ ನ ಏರಿಳಿತದ ಬಗ್ಗೆ ಮಾಧ್ಯಮಗಳು ಮುಖಪುಟದಲ್ಲಿ ಪ್ರಮುಖ ಸುದ್ದಿಯಾಗಿ ಪ್ರಕಟಿಸುತ್ತವೆ. 500 ಮಂದಿ ಪತ್ರಕರ್ತರು ಫ್ಯಾಶನ್ ಶೋವನ್ನು ವರದಿ ಮಾಡಲು ಹೋಗುವಾಗ ವಿದರ್ಭದ ರೈತರ ಸಮಸ್ಯೆಯನ್ನು ಅಧ್ಯಯನ ನಡೆಸಲು ತೆರಳುವ ಪತ್ರಕರ್ತರು ಬೆರಳೆಣಿಕೆಯಷ್ಟು. ನಿಜವಾಗಿ, ಫ್ಯಾಶನ್ ಶೋವನ್ನು ವರದಿ ಮಾಡಲು ತೆರಳುವ ಪತ್ರಕರ್ತರು ಟಿ.ವಿ.ಯಲ್ಲಿ ಕಾಣಿಸಿಕೊಳ್ಳುತ್ತಾರೆ. ಅಲ್ಲಿ ಭರ್ಜರಿ ಪಾರ್ಟಿಗಳು, ಕಿವಿ ತಣಿಸುವ ಸಂಗೀತ, ಆಡಂಬರ.. ಎಲ್ಲವೂ ಇರುತ್ತದೆ. ಆದರೆ ರೈತರನ್ನು ಹುಡುಕಿಕೊಂಡು ಹೋದರೆ, ಪ್ಯಾಂಟು ಸೂಟುಗಳಲ್ಲಿ ಕೆಸರು ಮೆತ್ತಿಕೊಳ್ಳುತ್ತದೆ. ವಾಹನಗಳು ಸಾಗದ ದಾರಿ, ಭರ್ಜರಿ ಔತಣ ಸಿಗದ ಮನೆಗಳು ಮತ್ತು ಕಣ್ಣೀರನ್ನೇ ಉಣಬಡಿಸುವ ಮನುಷ್ಯರು ಪತ್ರಕರ್ತರಿಗೆ ಎಷ್ಟು ಇಷ್ಟವಾಗಬಲ್ಲರು? ಅಂದಹಾಗೆ, ಕಾರ್ಮಿಕ ಸಂಘಟನೆಗಳ ಪ್ರತಿಭಟನೆಯು ಫ್ಯಾಶನ್ ಶೋಗಿಂತ ಅಥವಾ ಶ್ರೀಶಾಂತ್‍ರ ಮದುವೆಗಿಂತ ಮಹತ್ವಪೂರ್ಣ ಎಂದು ಓರ್ವ ಸಂಪಾದಕ ತೀರ್ಮಾನಿಸಬೇಕಾದರೆ ಕನಿಷ್ಠ ಆತನಿಗೆ ಶ್ರಮಿಕ ವರ್ಗದ ಬಗ್ಗೆ ಆಳವಾದ ಅರಿವು ಇರಬೇಕು. ರೈತನ ಬೆವರಿಗೂ ಫ್ಯಾಶನ್ ಶೋದ ಬೆಡಗಿಯ ಬೆವರಿಗೂ ನಡುವೆ ಇರುವ ಸೂಕ್ಷ್ಮ  ವ್ಯತ್ಯಾಸ ಗೊತ್ತಿರಬೇಕು. ಸದ್ಯದ ದಿನಗಳು ಹೇಗಿವೆ ಎಂದರೆ, ಮಾಧ್ಯಮದ ಆಯಕಟ್ಟಿನ ಜಾಗಗಳು ಮಾತ್ರವಲ್ಲ, ಅದರ ನಂತರದ ಸ್ಥಾನಗಳು ಕೂಡ ಫ್ಯಾಶನ್ ಶೋದಂತಹ ಥಳಕು-ಬಳುಕನ್ನು ಇಷ್ಟಪಡುವವರ ಪಾಲಾಗಿ ಬಿಟ್ಟಿವೆ. ರೈತನ ಮಗ, ಮಲ ಹೊರುವವನ ಮಗಳು, ಹೊಲೆಯ, ಮಾದಿಗರ ಮಕ್ಕಳು.. ಮಾಧ್ಯಮ ಕ್ಷೇತ್ರದಲ್ಲಿ ನಿರ್ಣಾಯಕ ಸ್ಥಾನಕ್ಕೆ ಏರುವಲ್ಲಿ ವಿಫಲವಾಗುತ್ತಲೇ ಇದ್ದಾರೆ. ದೆಹಲಿ ಮೂಲದ ಸೆಂಟರ್ ಫಾರ್ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ ಸಂಸ್ಥೆಯು 37 ಹಿಂದಿ, ಇಂಗ್ಲಿಷ್ ಪತ್ರಿಕೆಗಳು ಮತ್ತು ಟಿ.ವಿ. ಚಾನೆಲ್‍ಗಳನ್ನು ಕೇಂದ್ರೀಕರಿಸಿ 2006ರಲ್ಲಿ ಸರ್ವೇ ನಡೆಸಿತ್ತು. ಇದರಲ್ಲಿ ಬಹಿರಂಗವಾದ ಸತ್ಯ ಏನೆಂದರೆ, ಪತ್ರಿಕೆಗಳಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸ್ಥಾನಗಳ ಪೈಕಿ ಶೇ. 90 ಸ್ಥಾನಗಳಲ್ಲಿ ಮೇಲ್ವರ್ಗದವರೇ ಇದ್ದರು. ಮಾತ್ರವಲ್ಲ, ದಲಿತರ ಪೈಕಿ ಒಬ್ಬನೇ ಒಬ್ಬ ಪ್ರತಿನಿಧಿ ಈ ಸ್ಥಾನದಲ್ಲಿ ಇರಲಿಲ್ಲ. ಇವೆಲ್ಲ ಸೂಚಿಸುವುದು ಏನನ್ನು? ತುಳಿತಕ್ಕೊಳಗಾಗಿರುವವರ ಪ್ರಾತಿನಿಧ್ಯವೇ ಶೂನ್ಯವಾಗಿರುವ ಕ್ಷೇತ್ರವೊಂದು ಅವರ ಬಗ್ಗೆ ಕಾಳಜಿಯುಳ್ಳ ಸುದ್ದಿ-ಲೇಖನಗಳನ್ನು ಭಾರೀ ಉತ್ಸಾಹದಿಂದ ಪ್ರಕಟಿಸುತ್ತದೆಂದು ಹೇಗೆ ನಿರೀಕ್ಷಿಸುವುದು? ಅಂದಹಾಗೆ, ಪಡಿತರ ಸಮಸ್ಯೆ, ನೀರು, ನಿರುದ್ಯೋಗ, ಗ್ಯಾಸ್, ಬೆಲೆ ಏರಿಕೆ.. ಮುಂತಾದ ವಿಷಯಗಳ ಮೇಲೆ ಹಮ್ಮಿಕೊಳ್ಳಲಾಗುವ ಪ್ರತಿಭಟನೆಗಳಿಗೆ ಇವತ್ತಿನ ಮುಖ್ಯ ವಾಹಿನಿಯ ಪತ್ರಿಕೆಗಳು ಕೊಡುವ ಮಹತ್ವ ಮತ್ತು ಪ್ರಚೋದನಕಾರಿ ಭಾಷಣವೊಂದಕ್ಕೆ ಕೊಡುವ ಮಹತ್ವ; ಇವೆರಡನ್ನೂ ತುಲನೆ ಮಾಡಿ ನೋಡಿ, ಏನನಿಸುತ್ತದೆ? ಜನಸಾಮಾನ್ಯರ ನೋವುಗಳನ್ನು ಓರ್ವ ಪತ್ರಕರ್ತ ಅಥವಾ ಸಂಪಾದಕ ಸ್ವಯಂ ಅನುಭವಿಸುವುದಕ್ಕೂ ಇನ್ನಾರೋ ಹೇಳಿ ಅನುಭವಿಸುವುದಕ್ಕೂ ವ್ಯತ್ಯಾಸ ಇದೆಯಲ್ಲವೇ? ಹಸಿರು ಕಾರ್ಡು ಮತ್ತು ಕೆಂಪು ಕಾರ್ಡನ್ನು ವಿತರಿಸುವಲ್ಲಿ ಒಂದು ಕುಟುಂಬಕ್ಕಾದ ಅನ್ಯಾಯವು ಓರ್ವ ಪತ್ರಕರ್ತನಿಗೆ ಮಹತ್ವದ ಸುದ್ದಿಯಂತೆ ಕಾಣಿಸಬೇಕಾದರೆ, ಹಸಿವಿನ ಪರಿಚಯ ಇರಬೇಕು. ಆದರೆ ಮಾಧ್ಯಮ ಕ್ಷೇತ್ರದಲ್ಲಿರುವವರ ಜೀವನ ಕ್ರಮಕ್ಕೂ ಜನಸಾಮಾನ್ಯರ ಜೀವನ ಕ್ರಮಕ್ಕೂ ನಡುವೆ ಇರುವ ಅಗಾಧ ಪ್ರಮಾಣದ ಅಂತರವೇ ಕಾರ್ಮಿಕ ಪ್ರತಿಭಟನೆಗಳಂಥ ಜನಪರ ಕಾರ್ಯಕ್ರಮಗಳು ಮಾಧ್ಯಮಗಳಲ್ಲಿ ಗಮನ ಸೆಳೆಯಲು ವಿಫಲವಾಗುತ್ತಿದೆಯೇನೋ ಅನ್ನಿಸುತ್ತಿದೆ. ಪ್ರಚೋದನಕಾರಿ ಭಾಷಣವು ಗ್ಯಾಸ್ ಬೆಲೆ ಏರಿಕೆಯ ವಿರುದ್ಧದ ಪ್ರತಿಭಟನೆಗಿಂತ ಮಹತ್ವದ ಸುದ್ದಿಯಾಗಿ ಪ್ರಕಟವಾಗುವುದಕ್ಕೂ ಇದನ್ನೇ ಕಾರಣವಾಗಿ ಪರಿಗಣಿಸಬೇಕಾಗುತ್ತದೆ.
   ಮೀಡಿಯಾ ಮೋರ್ ಕೀನ್ ಆನ್ ಫ್ಯಾಶನ್ ಶೋಸ್ ದಾನ್ ಫಾರ್ಮರ್ಸ್ ಸೂಸೈಡ್ಸ್ (ರೈತರ ಆತ್ಮಹತ್ಯೆಗಿಂತ ಫ್ಯಾಶನ್ ಶೋಗಳ ಮೇಲೆಯೇ ಮಾಧ್ಯಮಗಳಿಗೆ ಹೆಚ್ಚು ಆಸಕ್ತಿ) ಎಂಬ ಶೀರ್ಷಿಕೆಯಲ್ಲಿ ಈ ಹಿಂದೆ ಲೇಖನ ಬರೆದು ಮಾಧ್ಯಮ ಜಗತ್ತಿನ ತಪ್ಪುಗಳನ್ನು ದಿ ಹಿಂದೂ ಪತ್ರಿಕೆಯ ಗ್ರಾಮೀಣ ವಿಭಾಗದ ಸಂಪಾದಕ ಮತ್ತು ಪ್ರಮುಖ ಪತ್ರಕರ್ತ ಪಿ. ಸಾಯಿನಾಥ್ ಅನಾವರಣಗೊಳಿಸಿದ್ದರು. ಇದೀಗ ತಮಿಳುನಾಡಿನ ರೈತರು ಪತ್ರ ಬರೆದಿದ್ದಾರೆ. ವಿಷಾದ ಏನೆಂದರೆ, ಮಾಧ್ಯಮ ರಂಗವು ಈ ಪತ್ರವನ್ನು ಎದುರಿಟ್ಟುಕೊಂಡು ಆತ್ಮಾವಲೋಕನ ಮಾಡಿಕೊಳ್ಳುತ್ತದೆಂದು ನಿರೀಕ್ಷಿಸುವುದಕ್ಕೆ ಯಾವ ಆಧಾರಗಳೂ ಕಾಣಿಸುತ್ತಿಲ್ಲ.

Wednesday, January 8, 2014

ಅಪರಾಧಿಗಳು, ಧರ್ಮ ನಿಂದಕರೆಲ್ಲ ಹೀರೋಗಳಾಗದಿರಲಿ..


    ಪ್ರಕರಣವೊಂದು ಧರ್ಮವಿರೋಧಿ, ಸಮಾಜ ವಿರೋಧಿಯಾಗಿ ಗುರುತಿಸಿಕೊಳ್ಳುವುದಕ್ಕೆ ಯಾವುದು ಮಾನದಂಡವಾಗಬೇಕು? ಪ್ರಕರಣದಲ್ಲಿ ಭಾಗಿಯಾದವರ ಧರ್ಮವೇ, ಜಾತಿಯೇ, ವೇಷ ಭೂಷಣಗಳೇ? ಒಂದು ಪ್ರಕರಣವು ಅಭಿನಂದನಾರ್ಹ ಎನಿಸಿಕೊಳ್ಳುವುದು ಅಥವಾ ಖಂಡನೆಗೆ ಒಳಪಡಬೇಕಾದದ್ದೆಲ್ಲ ಯಾವುದರ ಆಧಾರದಲ್ಲಿ? ಹಿಂದೂ ಯುವತಿ ಮುಸ್ಲಿಮ್ ಯುವಕನೊಂದಿಗೆ ಗೆಳೆತನ ಇಟ್ಟುಕೊಳ್ಳುವುದನ್ನು ತಪ್ಪೆನ್ನುವವರು ಮತ್ತು ಅದನ್ನು ಬಲವಂತದಿಂದ, ಹಲ್ಲೆ ನಡೆಸಿಯಾದರೂ ತಡೆಯಬೇಕಾದದ್ದು ತಮ್ಮ ಧಾರ್ಮಿಕ ಕರ್ತವ್ಯ ಎಂದು ವಾದಿಸುವವರು; ಹಿಂದೂ ಯುವಕ ಮುಸ್ಲಿಮ್ ಯುವತಿಯೊಂದಿಗೆ ಗೆಳೆತನ ಬೆಳೆಸಿಕೊಳ್ಳುವುದನ್ನೂ ತಪ್ಪೆನ್ನಬೇಕಲ್ಲವೇ? ಅಂಥ ಸಂಬಂಧವನ್ನು ಬಲವಂತದಿಂದ, ಹಲ್ಲೆ ನಡೆಸಿಯಾದರೂ ತಡೆಯುವುದು ತಮ್ಮ ಧಾರ್ಮಿಕ ಕರ್ತವ್ಯ ಎಂದು ವಾದಿಸಬೇಕಲ್ಲವೇ? ನ್ಯಾಯ ಅಂದರೆ ಇದುವೇ ಅಲ್ಲವೇ? ಹಾಗೆಯೇ, ಮುಸ್ಲಿಮ್ ಯುವತಿ ಹಿಂದೂ ಯುವಕನೊಂದಿಗೆ ಗೆಳೆತನ ಬೆಳೆಸಿಕೊಳ್ಳುವುದನ್ನು ಬಲವಂತದಿಂದ ತಡೆಯಬೇಕೆಂದು ವಾದಿಸುವವರಿಗೂ ಇದೇ ಪ್ರಶ್ನೆ ಅನ್ವಯವಾಗುತ್ತದೆ. ಆದರೆ, ಈ ಎಲ್ಲ ಸಂದರ್ಭಗಳಲ್ಲಿ ಇವರ ನಿಲುವಿನಲ್ಲಿ ದ್ವಂದ್ವಗಳೇಕೆ ಕಾಣಿಸುತ್ತವೆ? ಹಿಂದೂ ಹುಡುಗ ಮುಸ್ಲಿಮ್ ಹುಡುಗಿಯೊಂದಿಗೆ ಗೆಳೆತನ ಬೆಳೆಸಿದರೆ ಅಭಿನಂದನೆ ಸಲ್ಲಿಸುತ್ತಲೇ ಹಿಂದೂ ಯುವತಿ ಮುಸ್ಲಿಮ್ ಹುಡುಗನೊಂದಿಗೆ ಗೆಳೆತನ ಬೆಳೆಸಿದಾಗ ದಾಳಿ ನಡೆಸುವುದೇಕೆ? ಪ್ರತಿಭಟನೆ ಹಮ್ಮಿಕೊಳ್ಳುವುದೇಕೆ?
   ದೇರಳಕಟ್ಟೆಯಲ್ಲಿ ನಡೆದ ಪ್ರಕರಣವು ಜಿಲ್ಲೆಯಲ್ಲಿ ನೈತಿಕತೆ, ಅನೈತಿಕತೆ, ನ್ಯಾಯ, ಧರ್ಮ, ಕೋಮು ರಾಜಕೀಯ.. ಮುಂತಾದುವುಗಳ ಸುತ್ತ ಮತ್ತೊಮ್ಮೆ ಚರ್ಚೆಗೆ ವೇದಿಕೆ ಒದಗಿಸಿದೆ. ದೇರಳಕಟ್ಟೆಯಲ್ಲಿ ಏನು ನಡೆದಿದೆಯೋ ಅದು ತೀವ್ರವಾದ ಖಂಡನೆಗೆ ಅರ್ಹವಾದದ್ದು. ಅದರಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೋ ಅವರನ್ನು ಉಗ್ರ ಶಿಕ್ಷೆಗೆ ಒಳಪಡಿಸಬೇಕಾದದ್ದು ಅತ್ಯಂತ ಅಗತ್ಯ. ಅದರಲ್ಲಿ ಯಾವ ರಾಜಿಯನ್ನೂ ಮಾಡಿಕೊಳ್ಳಬಾರದು. ಅದೇವೇಳೆ, ಅದರಲ್ಲಿ ಭಾಗಿಯಾದ ಆರೋಪಿಗಳ ಹೆಸರನ್ನು ನೋಡಿಕೊಂಡು ಆ ಇಡೀ ಪ್ರಕರಣವನ್ನು ಒಂದು ಧರ್ಮಕ್ಕೆ  ಜೋಡಿಸುವುದನ್ನೂ ಅಷ್ಟೇ ಪ್ರಬಲವಾಗಿ ಖಂಡಿಸಬೇಕಾಗುತ್ತದೆ. ಯಾಕೆಂದರೆ, ಹಾಗೆ ಮಾಡುವುದು ಸೈನೈಡ್ ಕಿಲ್ಲರ್ ಮೋಹನ್ ಕುಮಾರನಿಗೆ ಧರ್ಮವನ್ನು ಜೋಡಿಸಿದಂತೆ. ನಿಜವಾಗಿ, ಹೆಣ್ಣು ಮಕ್ಕಳನ್ನು ಕೊಲ್ಲುವುದಕ್ಕಿಂತ ಮೊದಲು ಮೋಹನನು ಅತ್ಯಾಚಾರವಷ್ಟೇ ಮಾಡುತ್ತಿದ್ದುದಲ್ಲ, ಮನೆಯಲ್ಲಿರುವ ಹಣ, ಬಂಗಾರವನ್ನೆಲ್ಲಾ ತಮ್ಮೊಂದಿಗೆ ತರುವಂತೆ ಆ ಹೆಣ್ಣು ಮಕ್ಕಳಲ್ಲಿ ಹೇಳುತ್ತಿದ್ದ. ಮದುವೆಯ ಕನಸು ಕಟ್ಟಿಕೊಂಡು ಬರುವ ಆ ಮುಗ್ಧ ಹೆಣ್ಣು ಮಕ್ಕಳಿಗೆ ಬಳಿಕ ಸಯನೈಡ್ ನೀಡಿ ಕೊಲ್ಲುತ್ತಿದ್ದ. ಮಾಡಿದ ಅತ್ಯಾಚಾರವನ್ನು ಚಿತ್ರೀಕರಿಸುತ್ತಿರಲಿಲ್ಲ ಎಂಬುದನ್ನು ಬಿಟ್ಟರೆ ಉಳಿದಂತೆ, ಆತ ಎಸಗಿದ ಕೃತ್ಯಗಳಂತೂ ದೇರಳಕಟ್ಟೆ ಪ್ರಕರಣಕ್ಕಿಂತಲೂ ಘೋರವಾದದ್ದು. ಯಾಕೆಂದರೆ, ಮದುವೆ ಎಂಬುದು ಪ್ರತಿ ಹೆಣ್ಣು ಮಕ್ಕಳ ದೊಡ್ಡದೊಂದು ಕನಸು. ಆ ಕನಸನ್ನು ದುರುಪಯೋಗಿಸಿಕೊಂಡು ಅತ್ಯಾಚಾರಕ್ಕೆ ಒಳಪಡಿಸಿ ಕೊಲ್ಲುವುದಿದೆಯಲ್ಲ, ಅದಕ್ಕೆ ಯಾವ ಬ್ಲಾಕ್‍ಮೇಲೂ ಸಮಾನವಲ್ಲ. ಅಂದಹಾಗೆ, ದೇರಳಕಟ್ಟೆ ಪ್ರಕರಣದಲ್ಲಿ ಭಾಗಿಯಾದವರೆಲ್ಲ ಕ್ರಿಮಿನಲ್ ಹಿನ್ನೆಲೆಯುಳ್ಳವರು. ರೌಡಿಗಳ ಪಟ್ಟಿಯಲ್ಲಿ ಹೆಸರು ದಾಖಲಿಸಿಕೊಂಡವರು.  ಆದ್ದರಿಂದ, ಸಮಾಜದಲ್ಲಿ ಅವರಿಗೆ ಯಾವ ಸ್ಥಾನ-ಮಾನವೂ ಇರುವುದಿಲ್ಲ. ಬೆಂಬಲಿಗರೂ ಇರುವುದಿಲ್ಲ. ಆದರೆ, ಮೋಹನ್ ಕುಮಾರ್ ಹಾಗಲ್ಲ. ಆತ ಸಮಾಜದಲ್ಲಿ ಕ್ರಿಮಿನಲ್ ಆಗಿ ಗುರುತಿಸಿರಲಿಲ್ಲ. ಬ್ಲಾಕ್‍ಮೇಲ್ ಮಾಡುವ ತಂಡದ ಸದಸ್ಯನೆಂಬ ಹಣೆಪಟ್ಟಿಯೂ ಇರಲಿಲ್ಲ. ಶಿಕ್ಷಕನ ಗುರುತಿನೊಂದಿಗೆ ಬದುಕುತ್ತಿದ್ದ ಆತನಿಗೂ ಪಕ್ಕಾ ಕ್ರಿಮಿನಲ್‍ಗಳಾಗಿ ಗುರುತಿಸಿಕೊಂಡಿದ್ದ ದೇರಳಕಟ್ಟೆ ಆರೋಪಿಗಳಿಗೂ ಹೋಲಿಸಿ ನೋಡಿದರೆ ಮೋಹನ್ ಕುಮಾರನ ಅಪರಾಧವೇ ಹೆಚ್ಚು ಅಪಾಯಕಾರಿಯಾಗಿ ಕಾಣಿಸುತ್ತದೆ. ಆದರೂ, ಈಗ ಪ್ರತಿಭಟನೆಯಲ್ಲಿ ತೊಡಗಿರುವ ಎಷ್ಟು ಮಂದಿ ಆತನ ವಿರುದ್ಧ ಪ್ರತಿಭಟಿಸಿದ್ದಾರೆ? ಆತನ ಕ್ರೌರ್ಯವನ್ನು ಆತ ಪ್ರತಿನಿಧಿಸುವ ಧರ್ಮಕ್ಕೆ ಜೋಡಿಸಿದ್ದಾರೆ? ಆತನ ಮೇಲೆ ಇಂತಿಂಥ ಕಾಯ್ದೆಗಳನ್ನು ಹಾಕಿ ಎಂದು ಆಗ್ರಹಿಸಿದ್ದಾರೆ? ಹೀಗಿರುವಾಗ, ಇಲ್ಲೆಲ್ಲಾ ಕೇಳದ ಘೋಷಣೆ, ಮಾಡದ ಪ್ರತಿಭಟನೆಗಳು ದೇರಳಕಟ್ಟೆ ಪ್ರಕರಣದಲ್ಲಿ ಮಾತ್ರ ಕಾಣಿಸಿಕೊಂಡಿರುವುದಕ್ಕೆ ಏನು ಕಾರಣ? ಒಂದು ವೇಳೆ ದೇರಳಕಟ್ಟೆ ಆರೋಪಿಗಳ ಹೆಸರು ಸಫ್ವಾನ್, ಸಂಶುದ್ದೀನ್, ಸವಿೂರ್, ನಿಸಾರ್... ಎಂದಾಗಿರದೇ, ವಿನಯ, ರಮೇಶ್, ಉದಯ, ಚಂದ್ರ.. ಎಂದಾಗಿರುತ್ತಿದ್ದರೆ ಈ ಇಡೀ ಪ್ರಕರಣ ಯಾವ ತಿರುವನ್ನು ಪಡಕೊಳ್ಳುತ್ತಿತ್ತು? ಅದು ನೈತಿಕ ಪೊಲೀಸ್‍ಗಿರಿಯಾಗಿ ಸಮರ್ಥನೆಗೆ ಒಳಗಾಗುತ್ತಿರಲಿಲ್ಲವೇ? ಅಷ್ಟಕ್ಕೂ, ಹೋಮ್ ಸ್ಟೇ ದಾಳಿಯ ಸಂದರ್ಭದಲ್ಲಿ ಹೆಣ್ಣು ಮಕ್ಕಳೇನೂ ಸುರಕ್ಷಿತ ಆಗಿರಲಿಲ್ಲವಲ್ಲ. ಸುಮಾರು 50 ರಷ್ಟಿದ್ದ ಯುವಕರ ಮಧ್ಯೆ ಆ ಹೆಣ್ಣು ಮಕ್ಕಳು ಅನುಭವಿಸಿದ ಹಿಂಸೆಯ ಬಗ್ಗೆ ಹೈಕೋರ್ಟೇ ದಿಗ್ಭ್ರಮೆ ವ್ಯಕ್ತಪಡಿಸಿತ್ತು. ದೇಶಾದ್ಯಂತ ಖಂಡನೆ ವ್ಯಕ್ತವಾಗಿತ್ತು. ಆದರೂ, ಇವತ್ತು ಪ್ರತಿಭಟನೆಯಲ್ಲಿ ತೊಡಗಿರುವರು ಅಂದು ಆ ಪ್ರಕರಣವನ್ನು ಯಾವೆಲ್ಲ ರೀತಿಯಲ್ಲಿ ಸಮರ್ಥಿಸಿಲ್ಲ? ಆರೋಪಿಗಳ ಬಿಡುಗಡೆಗಾಗಿ ಒತ್ತಾಯಿಸಿದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿಲ್ಲವೇ? ಹೆಣ್ಣಿನ ಮಾನ, ಘನತೆ, ಗೌರವವನ್ನು ಕಾಪಾಡುವುದು ಪ್ರತಿಭಟನಾಕಾರರ ಉದ್ದೇಶ ಎಂದಾಗಿದ್ದರೆ, ಅದು ದೇರಳಕಟ್ಟೆಯಾದರೇನು, ಹೋಮ್ ಸ್ಟೇ ಆದರೇನು ಅಥವಾ ಸೌಜನ್ಯ ಆದರೇನು.. ಎಲ್ಲವೂ ಒಂದೇ ಅಲ್ಲವೇ? ಹೋಮ್ ಸ್ಟೇಯ ಹೆಣ್ಣು ಮಕ್ಕಳ ಮಾನವನ್ನು ಹರಾಜುಗೊಳಿಸಿ ದೇರಳಕಟ್ಟೆ ಪ್ರಕರಣಕ್ಕಾಗಿ ಖಂಡನೆ ವ್ಯಕ್ತಪಡಿಸುವುದಕ್ಕೆ ಏನು ಅರ್ಥವಿದೆ? ಅಲ್ಲದೇ, ಈಗ ಪ್ರತಿಭಟಿಸುವವರಲ್ಲಿ ಎಷ್ಟು ಮಂದಿ ಸೌಜನ್ಯ ಪ್ರಕರಣದ ಬಗ್ಗೆ ಮಾತಾಡಿದ್ದಾರೆ? ನ್ಯಾಯಯುತ ತನಿಖೆಗೆ ಒತ್ತಾಯಿಸಿ ಪ್ರತಿಭಟಿಸಿದ್ದಾರೆ? ಭಾಷಣ ಮಾಡಿದ್ದಾರೆ?   ದೇರಳಕಟ್ಟೆಯ ವಿದ್ಯಾರ್ಥಿನಿಯಂತೆ ಸೌಜನ್ಯಳ ಮಾನ, ಪ್ರಾಣವೂ ಗೌರವಾರ್ಹವೇ ಅಲ್ಲವೇ?
 ನಿಜವಾಗಿ, ದೇರಳಕಟ್ಟೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಬಿಡುಗಡೆಗೊಳಿಸುವುದಕ್ಕೋ, ಪ್ರಕರಣವನ್ನು ದುರ್ಬಲಗೊಳಿಸುವುದಕ್ಕೋ ಮುಸ್ಲಿಮ್ ಸಮುದಾಯ ಎಂದೂ ಪ್ರಯತ್ನಿಸಿಲ್ಲ. ಅವರನ್ನು ಬಿಡುಗಡೆಗೊಳಿಸಿ ಎಂದು ಹೇಳಿಕೊಂಡು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿಲ್ಲ. ಆರೋಪಿಗಳ ಕೃತ್ಯವನ್ನು ಧಾರ್ಮಿಕವಾಗಿಯೋ, ವೈಯಕ್ತಿಕವಾಗಿಯೋ ಯಾವ ವಿದ್ವಾಂಸರೂ, ನಾಯಕರೂ ಸಮರ್ಥಿಸಿಕೊಂಡಿಲ್ಲ. ಹೀಗೆಲ್ಲ ಇದ್ದೂ ಆ ಇಡೀ ಪ್ರಕರಣವನ್ನು ಮುಸ್ಲಿಮರ ಅಪರಾಧವಾಗಿ ಬಿಂಬಿಸುತ್ತಿರುವುದಕ್ಕೆ ಏನೆನ್ನಬೇಕು? ಮುಸ್ಲಿಮರ ಧಾರ್ಮಿಕ ವಿಧಿಯನ್ನು ಅವಹೇಳನಗೊಳಿಸುತ್ತಾ, ಅವರ ಆಚಾರ-ಆರಾಧನಾ ಕ್ರಮವನ್ನು ತೆಗಳುತ್ತಾ ನಡೆಯುವವರನ್ನು ಏನೆಂದು ಕರೆಯಬೇಕು? ನಿಜವಾಗಿ, ಒಂದು ಧರ್ಮವನ್ನು ಇತರರು ಪ್ರೀತಿಸುವುದು, ಗೌರವಿಸುವುದು ಆ ಧರ್ಮದ ನಾಯಕರ ವರ್ತನೆಯನ್ನು ನೋಡಿಕೊಂಡು. ದೇರಳಕಟ್ಟೆ ಪ್ರಕರಣದ ಬಳಿಕ ಏರ್ಪಡಿಸಲಾದ ಪ್ರತಿಭಟನೆಗಳು ಮತ್ತು ಕೇಳಿಬಂದ ಭಾಷಣಗಳನ್ನು ಆಲಿಸುವಾಗ ಆಘಾತವಾಗುತ್ತದೆ. ಪ್ರತಿಭಟನಾಕಾರರು ಮತ್ತು ಭಾಷಣಗಾರರ ಧಾರ್ಮಿಕ ನಿಷ್ಠೆಯ ಬಗ್ಗೆಯೇ ಅನುಮಾನ ಮೂಡುತ್ತದೆ. ಇನ್ನೊಂದು ಧರ್ಮವನ್ನು ಮತ್ತು ಅದರ ಅನುಯಾಯಿಗಳನ್ನು ಸಾರಾಸಗಟು ಅವಮಾನಿಸುವವರು ಹೇಗೆ ಧಾರ್ಮಿಕ ನಾಯಕರಾಗಬಲ್ಲರು? ಅಂಥ ನಾಯಕರಿಂದ ಎಂಥ ಧರ್ಮ ಜಾಗೃತಿ ಉಂಟಾದೀತು? ಅವರು ಕಟ್ಟುವ ಸಮಾಜದ ಸ್ವರೂಪವಾದರೂ ಹೇಗಿದ್ದೀತು?
   ಅಂದಹಾಗೆ, ಅಪರಾಧ ಕೃತ್ಯಕ್ಕೂ ಧರ್ಮಕ್ಕೂ ಯಾವ ಸಂಬಂಧವೂ ಇರುವುದಿಲ್ಲ, ಇರಬಾರದು. ಅಪರಾಧಿಗಳು ಕೇವಲ ಅಪರಾಧಿಗಳೇ ಹೊರತು ಅಪರಾಧಿಗಳನ್ನು ಮುಸ್ಲಿಮ್ ಅಪರಾಧಿ ಅಥವಾ ಹಿಂದೂ ಅಪರಾಧಿ ಎಂದು ವಿಭಜಿಸುವುದು ಅತ್ಯಂತ ಅಮಾನವೀಯವಾದದ್ದು. ಮುಂದಿನ ಎರಡ್ಮೂರು ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಇಶ್ಯೂ ಬೇಕೆಂದಾದರೆ ಈ ಜಿಲ್ಲೆಯಲ್ಲಿ ಧಾರಾಳ ಇವೆ. ಅದಕ್ಕಾಗಿ ದೇರಳಕಟ್ಟೆ ಪ್ರಕರಣವನ್ನು ಬಳಸಿಕೊಳ್ಳುವ ಪ್ರಯತ್ನವನ್ನು ಯಾರೂ ಬೆಂಬಲಿಸಬಾರದು. ಚುನಾವಣೆಗಳು ಜನಪರ ಇಶ್ಯೂ ಆಧಾರದಲ್ಲಿ ನಡೆಯಬೇಕೆ ಹೊರತು ಭಾವನೆಗಳ ಆಧಾರದಲ್ಲಿ ಅಲ್ಲ. ಹೋಮ್ ಸ್ಟೇ, ದೇರಳಕಟ್ಟೆ, ಪಬ್‍ದಾಳಿ, ಮೋಹನ್ ಕುಮಾರ್.. ಇವೆಲ್ಲ ಪಕ್ಕಾ ಕಾನೂನು ಬಾಹಿರ ಕೃತ್ಯಗಳು. ಅವನ್ನು ಕಾನೂನು ನೋಡಿಕೊಳ್ಳಲಿ. ಅದರ ನೆಪದಲ್ಲಿ ಧರ್ಮವನ್ನೋ ಅದರ ಆಚಾರಗಳನ್ನೋ ನಿಂದಿಸುವುದೆಂದರೆ, ಅದುಅವರ ಯೋಗ್ಯತೆಯನ್ನಷ್ಟೇ ಬಿಂಬಿಸುತ್ತದೆ. ಯಾವ ಆರೋಪಿಗಳೂ ಮೌಲವಿಗಳಲ್ಲೋ, ಪುರೋಹಿತರಲ್ಲೋ ಕೇಳಿಕೊಂಡು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದಿಲ್ಲ ಅಥವಾ ಮೌಲವಿ, ಪುರೋಹಿತರು ಅಪರಾಧ ಕೃತ್ಯಕ್ಕೆ ಪ್ರಚೋದಿಸಿದರೂ ಅದಕ್ಕೆ ಧರ್ಮ ಹೊಣೆಯಾಗುವುದೂ ಇಲ್ಲ. ಅದು ಅವರ ಕಸುಬು. ಆದ್ದರಿಂದ, ಆರೋಪಿಗಳನ್ನು ಆರೋಪಿಗಳಾಗಿಯೇ ನೋಡೋಣ. ಅವರೆಂದೂ ಸಮಾಜದ ಹೀರೋಗಳು ಆಗದಿರಲಿ. ಅವರನ್ನು ಹೀರೋಗಳಾಗಿಸುವವರಿಗೆ ನಮ್ಮ ಬೆಂಬಲವೂ ಸಿಗದಿರಲಿ.