1. ದಾಖಲೆ ಪತ್ರಗಳನ್ನು ಸರಿಪಡಿಸಿಟ್ಟುಕೊಳ್ಳುವಂತೆ ಮುಸ್ಲಿಮ್ ಸಮುದಾಯದಲ್ಲಿ ಈಗಿಂದೀಗಲೇ ಜಾಗೃತಿ ಅಭಿಯಾನವೊಂದು ಪ್ರಾರಂಭವಾಗಬೇಕು.
2. ಮುಸ್ಲಿಮರು ಎನ್ ಆರ್ ಸಿಯನ್ನು ಬಹಿಷ್ಕರಿಸಬೇಕು.
ಈ ಎರಡೂ ಅಭಿಪ್ರಾಯಗಳು ಮುಸ್ಲಿಮ್ ಸಮುದಾಯದಲ್ಲಿ ಸದ್ಯ ಚರ್ಚೆಯಲ್ಲಿದೆ. ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಮಸೂದೆಯು ಈಗಾಗಲೇ ಕಾನೂನಾಗಿ ಪರಿವರ್ತನೆಯಾಗಿದೆ. ಈಗದು CAB ಅಲ್ಲ CAA (Citizen Amendment Act). ಇನ್ನೊಂದು ಎನ್ ಆರ್ ಸಿ (ರಾಷ್ಟ್ರೀಯ ಪೌರತ್ವ ನೋಂದಣಿ). ಇವೆರಡನ್ನೂ ಜೊತೆಜೊತೆಯಾಗಿಯೇ ಜಾರಿಗೆ ತರುವ ಉದ್ದೇಶವನ್ನು ನೇರವಾಗಿಯೋ ಪರೋಕ್ಷವಾಗಿಯೋ ಕೇಂದ್ರ ಸರಕಾರ ಈಗಾಗಲೇ ವ್ಯಕ್ತಪಡಿಸಿದೆ. 2014 ಡಿಸೆಂಬರ್ 31ರ ಒಳಗಡೆ ಭಾರತದಲ್ಲಿ ವಾಸಿಸಿದ ದಾಖಲೆಯನ್ನು ಸಲ್ಲಿಸುವ ಮುಸ್ಲಿಮೇತರ ಎಲ್ಲ ಧರ್ಮೀಯರಿಗೂ ಪೌರತ್ವ ತಿದ್ದುಪಡಿ ಕಾನೂನಿನ ಪ್ರಕಾರ ಭಾರತೀಯ ಪೌರತ್ವ ಲಭ್ಯವಾಗಲಿದೆ. ಆದರೆ, ಮುಸ್ಲಿಮರಿಗೆ ಈ ಅವಕಾಶ ಇಲ್ಲ. ಪಾಕ್, ಬಾಂಗ್ಲಾ ಮತ್ತು ಅಫಘಾನಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ಮುಸ್ಲಿಮರಿಗೆ ಭಾರತೀಯ ನಾಗರಿಕತೆ ನಿರಾಕರಿಸುವುದು ಮತ್ತು ಧಾರ್ಮಿಕ ದೌರ್ಜನ್ಯದಿಂದಾಗಿ ಭಾರತಕ್ಕೆ ಬಂದ ಮುಸ್ಲಿಮೇತರರಿಗೆ ಪೌರತ್ವ ಒದಗಿಸುವುದು ಪೌರತ್ವ ಕಾನೂನಿನ ಉದ್ದೇಶವಾಗಿದೆಯೆಂದು ಕೇಂದ್ರ ಸರಕಾರ ಹೇಳುತ್ತಿದ್ದರೂ ಅಲ್ಲೂ ಗೊಂದಲಗಳಿವೆ. ಮೇಲಿನ ಮೂರೂ ರಾಷ್ಟ್ರಗಳಿಂದ ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರರಲ್ಲಿ ಧಾರ್ಮಿಕ ದೌರ್ಜನ್ಯದಿಂದ ಬಂದವರೆಷ್ಟು ಮತ್ತು ಉದ್ಯೋಗವನ್ನರಸಿಕೊಂಡು ಬಂದವರೆಷ್ಟು ಎಂಬುದನ್ನು ಪತ್ತೆ ಹಚ್ಚುವುದು ಹೇಗೆ ಅನ್ನುವ ಪ್ರಶ್ನೆಗೆ ಕೇಂದ್ರ ಸರಕಾರ ಈವರೆಗೂ ಉತ್ತರಿಸಿಲ್ಲ. ಅದು ಸುಲಭವೂ ಅಲ್ಲ. ನಿಜವಾಗಿ, ಧಾರ್ಮಿಕ ದೌರ್ಜನ್ಯ ಎಂಬುದು ಅತ್ಯಂತ ಜಾಣತನದಿಂದ ಆಯ್ಕೆ ಮಾಡಿದ ಪದ. ಈ ಮೂಲಕ ಒಂದೇ ಕಲ್ಲಿನಿಂದ ಎರಡು ಹಣ್ಣುಗಳನ್ನು ಉರುಳಿಸುವ ಉದ್ದೇಶ ಕೇಂದ್ರ ಸರಕಾರಕ್ಕಿದೆ.
1. ನೆರೆಯ ಮೂರೂ ರಾಷ್ಟ್ರಗಳಲ್ಲಿ ಭಾರೀ ಪ್ರಮಾಣದಲ್ಲಿ ಮುಸ್ಲಿಮೇತರರ ಮೇಲೆ ಧಾರ್ಮಿಕ ದೌರ್ಜನ್ಯವಾಗುತ್ತಿದೆ, ಆ ದೌರ್ಜನ್ಯವನ್ನು ತಡೆಯಲಾಗದೇ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮೇತರರು ಭಾರತಕ್ಕೆ ವಲಸೆ ಬಂದಿದ್ದಾರೆ.
2. ಇಸ್ಲಾಮಿಕ್ ರಾಷ್ಟ್ರಗಳೆಂದರೆ ಮುಸ್ಲಿಮೇತರರ ವಿರೋಧಿ. ಅಲ್ಲಿ ಮುಸ್ಲಿಮೇತರರ ಬದುಕು ಸುರಕ್ಷಿತವಲ್ಲ.
ಧಾರ್ಮಿಕ ದೌರ್ಜನ್ಯ ಎಂಬ ಪದವು ಈ ಎರಡೂ ಸಂದೇಶವನ್ನು ಸೂಚ್ಯವಾಗಿ ರವಾನಿಸುತ್ತದೆ ಮತ್ತು ದೇಶದ ನಾಗರಿಕರಲ್ಲಿ ಮುಸ್ಲಿಮ್ ವಿರೋಧಿ ಭಾವವೊಂದನ್ನು ಅದು ತಾನಾಗಿಯೇ ಸೃಷ್ಟಿಸುತ್ತದೆ. ನಿಜವಾಗಿ, ಇಂಥದ್ದೊಂದು ಧ್ರುವೀಕರಣ ವನ್ನು ಸಾಧಿಸುವುದೇ ಈ ಕಾನೂನಿನ ಮೊದಲ ಗುರಿ. ಇದು ಯಶಸ್ವಿಯಾದರೆ ಆ ಬಳಿಕ ವಲಸಿಗ ಮುಸ್ಲಿಮರಿಗೇಕೆ ಪೌರತ್ವ ಕೊಡುವುದಿಲ್ಲ ಎಂಬ ಪ್ರಶ್ನೆಯೇ ದೇಶದ್ರೋಹಿ ಎನಿಸಿಕೊಳ್ಳುತ್ತದೆ. ಮುಸ್ಲಿಮೇತರರನ್ನು ಹಿಂಸಿಸಿದ ನಾಡಿನಿಂದ ಬಂದವರಿಗೆ ಪೌರತ್ವ ಕೊಡುವುದು ತಪ್ಪು ಎಂದು ಮಾತ್ರವಲ್ಲ, ಹಾಗೆ ಭಾರತಕ್ಕೆ ಬಂದ ಮುಸ್ಲಿಮರೆಲ್ಲ ಮುಸ್ಲಿಮೇತರರಿಗೆ ಹಿಂಸೆ ಕೊಟ್ಟ ಅಪರಾಧಿಗಳು ಎಂಬ ಭಾವ ಹುಟ್ಟಿಕೊಳ್ಳುತ್ತದೆ. ಭಾರತಕ್ಕೆ ಬಂದವರಲ್ಲಿ ಮುಸ್ಲಿಮೇತರರನ್ನು ವಲಸಿಗರು ಎಂಬ ಅನುಕಂಪದ ಪದದಿಂದ ಗುರುತಿಸುವುದು ಮತ್ತು ಮುಸ್ಲಿಮರನ್ನು ಅಕ್ರಮ ನುಸುಳುಕೋರರು ಮತ್ತು ಉಗ್ರರು ಎಂಬ ರಕ್ತದೊತ್ತಡ ಏರಿಸುವ ಪದದಿಂದ ಕರೆಯುವುದೂ ನಡೆಯುತ್ತದೆ. ಮಾತ್ರವಲ್ಲ, ಕ್ರಮೇಣ ಭಾರತಕ್ಕೆ ಬಂದ ಮುಸ್ಲಿಮೇತರರನ್ನು- ಧಾರ್ಮಿಕ ದೌರ್ಜನ್ಯಕ್ಕಾಗಿ ಮತ್ತು ಉದ್ಯೋಗಕ್ಕಾಗಿ- ಎಂಬೆರಡು ವರ್ಗೀಕರಣವನ್ನು ಇದು ಅಳಿಸಿ ಹಾಕುತ್ತದಲ್ಲದೇ ಎಲ್ಲರನ್ನೂ ಧಾರ್ಮಿಕ ದೌರ್ಜನ್ಯದ ಸಂತ್ರಸ್ತರ ಪಟ್ಟಿಗೆ ಸೇರಿಸುತ್ತದೆ. ಸದ್ಯ ಈ ತಂತ್ರ ಬಹುತೇಕ ಯಶಸ್ವಿಯಾಗಿದೆ. ಮುಸ್ಲಿಮ್ ವಲಸಿಗರು ಮಾತ್ರ ಈಗ ಚರ್ಚೆಯಲ್ಲಿದ್ದಾರೆಯೇ ಹೊರತು ಭಾರತಕ್ಕೆ ಬಂದಿರುವ ಮುಸ್ಲಿಮೇತರರಲ್ಲಿ ನಿಜಕ್ಕೂ ಧಾರ್ಮಿಕ ದೌರ್ಜನ್ಯದಿಂದ ಬಂದವರೆಷ್ಟು ಎಂಬ ಬಗ್ಗೆ ಪ್ರಶ್ನೆ ಗಳೇ ಏಳುತ್ತಿಲ್ಲ. ಉದ್ಯೋಗವನ್ನರಸಿಕೊಂಡು ಬಂದವರನ್ನು ಹೇಗೆ ಪತ್ತೆ ಹಚ್ಚುತ್ತೀರಿ ಮತ್ತು ಅವರನ್ನು ಎಲ್ಲಿಗೆ ಕಳುಹಿಸುತ್ತೀರಿ ಎಂಬ ಪ್ರಶ್ನೆಯೂ ಮುನ್ನೆಲೆಗೆ ಬಂದಿಲ್ಲ. ನಿಜವಾಗಿ,
ಪಾಕ್, ಬಾಂಗ್ಲಾ ಮತ್ತು ಅಫಘಾನ್‍ಗಳಿಂದ ಭಾರತಕ್ಕೆ ಬಂದವರಲ್ಲಿ ಉದ್ಯೋಗವನ್ನು ಅರಸಿಕೊಂಡು ಬಂದಿರುವವರ ಸಂಖ್ಯೆಯೇ ಹೆಚ್ಚಿರುವುದು ಖಂಡಿತ. ಭಾರತಕ್ಕೆ ಹೋಲಿಸಿದರೆ ಪಾಕ್, ಬಾಂಗ್ಲಾ ಮತ್ತು ಅಫಘಾನ್‍ಗಳು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದುರ್ಬಲ ರಾಷ್ಟ್ರಗಳು. ನೇಪಾಲ, ಮ್ಯಾನ್ಮಾರ್, ಲಂಕಾಗಳನ್ನೂ ಇವೇ ಸಾಲಿಗೆ ಸೇರಿಸಬಹುದು. ಅಂದಹಾಗೆ, ದುರ್ಬಲ ರಾಷ್ಟ್ರಗಳಿಂದ ಪ್ರಬಲ ರಾಷ್ಟ್ರಗಳಿಗೆ ವಲಸೆ ಹೋಗುವುದು ಇತಿಹಾಸದ ಅದ್ಭುತವೇನೂ ಅಲ್ಲ. ಇತ್ತೀಚೆಗೆ ಅಮೇರಿಕವು ತನ್ನ ಮೆಕ್ಸಿಕೋ ಗಡಿಯನ್ನು ಮುಚ್ಚುವುದಕ್ಕೆ ಮುಂದಾಯಿತು. ಇದಕ್ಕೆ ಕಾರಣ ವಲಸೆ. ಆರ್ಥಿಕವಾಗಿ ಹಿಂದುಳಿದಿರುವ ಮೆಕ್ಸಿಕೋ ದಿಂದ ಜನರು ನೆರೆಯ ಅಮೇರಿಕಕ್ಕೆ ಉದ್ಯೋಗವನ್ನರಸಿಕೊಂಡು ವಲಸೆ ಹೋಗುತ್ತಿದ್ದಾರೆ. ಹಾಗೆಯೇ, ಉದ್ಯೋಗವನ್ನರಸಿಕೊಂಡು ಅಮೇರಿಕ, ಬ್ರಿಟನ್, ಜರ್ಮನಿ, ಅರಬ್ ರಾಷ್ಟ್ರಗಳ ಸಹಿತ ಜಗತ್ತಿನೆಲ್ಲೆಡೆಗೆ ಭಾರತೀಯರು ಹೊರಟು ಹೋಗಿರುವುದು ಮತ್ತು ಇವರಲ್ಲಿ ಅಸಂಖ್ಯ ಮಂದಿ ಆಯಾ ರಾಷ್ಟ್ರಗಳ ಪೌರತ್ವಕ್ಕಾಗಿ ಅರ್ಜಿ ಹಾಕಿ ಪೌರತ್ವ ಪಡೆದುಕೊಂಡಿರುವುದೂ ಇಂಥದ್ದೇ ಒಂದು ಪ್ರಕ್ರಿಯೆ. ಅಷ್ಟಕ್ಕೂ,
ಕೇಂದ್ರ ಸರಕಾರಕ್ಕೆ ಇವೆಲ್ಲ ಗೊತ್ತಿಲ್ಲ ಎಂದಲ್ಲ. ಗೊತ್ತಿದ್ದೇ ಅದು ಈ ಮಸೂದೆಯನ್ನು ಕಾನೂನಾಗಿಸಿದೆ. ಮಾತ್ರವಲ್ಲ, ಪೌರತ್ವ ರದ್ದಾಗುವವರ ಪಟ್ಟಿಯಲ್ಲಿ ಮುಸ್ಲಿಮರ ಹೆಸರು ಮಾತ್ರ ಇರುವಂತೆ ನೋಡಿಕೊಂಡಿರುವುದರಲ್ಲೂ ಜಾಣತನವಿದೆ. ಅದು ಏನೆಂದರೆ,
ಬಿಜೆಪಿಗೂ ಮುಸ್ಲಿಮರಿಗೂ ನಡುವೆ ಸಂಬಂಧ ಅಷ್ಟಕ್ಕಷ್ಟೇ ತಾನೇ. ಅದು ಬಿಜೆಪಿಯನ್ನು ಬೆಂಬಲಿಸುವವರಿಗೂ ಬೆಂಬಲಿಸ ದವರಿಗೂ ಜೆನ್ನಾಗಿ ಗೊತ್ತಿದೆ. ಮುಸ್ಲಿಮರನ್ನು ಗುರಿಯಾಗಿಸಿಕೊಂಡೇ ಅದು ರಾಜಕೀಯ ಮಾಡುತ್ತಲೂ ಇದೆ. ಮುಸ್ಲಿಮರನ್ನು ಗೋಳು ಹೊಯ್ದುಕೊಂಡಷ್ಟೂ ತನ್ನ ಮತಪೆಟ್ಟಿಗೆ ತುಂಬುತ್ತದೆ ಅನ್ನುವ ಮನೋಭಾವ ಅದರದು. ನಿಜವಾಗಿ, ಹಿಂದೂಗಳಿಗೆ ಭಾರತ ಬಿಟ್ಟು ಅನ್ಯ ದೇಶವಿಲ್ಲ ಎಂಬ ಕೇಂದ್ರ ಸರಕಾರದ ವಾದವು ಪ್ರಾಮಾಣಿಕವೇ ಆಗಿರುತ್ತಿದ್ದರೆ ಪಾಕ್, ಬಾಂಗ್ಲಾ, ಅಫಘಾನ್‍ನಿಂದ ಭಾರತಕ್ಕೆ ಬಂದವರ ಪೈಕಿ ಹಿಂದೂಗಳಿಗೆ ಮಾತ್ರ ಪೌರತ್ವವನ್ನು ಕೊಡಬೇಕಿತ್ತು. ಜೊತೆಗೇ ಫಾರ್ಸಿಗಳಿಗೂ. ಹಾಗಂತ, ಬೌದ್ಧ ಧರ್ಮವನ್ನೇ ಪಾಲಿಸುವ ಹಲವು ರಾಷ್ಟ್ರಗಳು ಭಾರತದ ಸುತ್ತ-ಮುತ್ತಲೇ ಇವೆ. ಥಾೈಲೆಂಡ್, ಮ್ಯಾನ್ಮಾರ್, ಭೂತಾನ್, ಲಂಕಾ, ಮಂಗೋಲಿಯಾ ಇತ್ಯಾದಿ ರಾಷ್ಟ್ರಗಳಲ್ಲಿ ಬೌದ್ಧರು ಬಹುಸಂಖ್ಯಾತರು. ಕ್ರೈಸ್ತರಿಗಂತೂ ಇಂಗ್ಲಂಡ್, ಗ್ರೀಸ್, ಐರ್ಲೆಂಡ್ ಸೇರಿದಂತೆ 15ರಿಂದ ಇಪ್ಪತ್ತರಷ್ಟು ಕ್ರೈಸ್ತ ಧರ್ಮ ಪಾಲನಾ ರಾಷ್ಟ್ರಗಳಿವೆ. ಹೀಗಿರುವಾಗ, ವಲಸೆ ಬಂದ ಬೌದ್ಧರಿಗೂ ಮತ್ತು ಕ್ರೈಸ್ತರಿಗೂ ಹೋಗುವುದಕ್ಕೆ ಬೇರೆ ರಾಷ್ಟ್ರಗಳಿವೆ ಎಂದು ಹೇಳುವುದನ್ನು ಬಿಟ್ಟು (ಇದು ಈ ಲೇಖಕನ ಬಯಕೆಯಲ್ಲ) ಅವರೆಲ್ಲರಿಗೂ ಭಾರತೀಯ ಪೌರತ್ವವನ್ನು ಕೊಡುವುದು ಮತ್ತು ಮುಸ್ಲಿಮರನ್ನು ಮಾತ್ರ ಅದರಿಂದ ಹೊರಗಿಡುವುದು ಅಕ್ಷಮ್ಯವೆನಿಸುತ್ತದೆ. ಒಂದುವೇಳೆ,
ವಲಸಿಗ ಹಿಂದೂಗಳಿಗೆ ಮಾತ್ರ ಪೌರತ್ವದ ಅವಕಾಶವನ್ನು ಕೊಟ್ಟು ಉಳಿದೆಲ್ಲರಿಗೂ ಪೌರತ್ವವನ್ನು ನಿರಾಕರಿಸಿರುತ್ತಿದ್ದರೆ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸಂಚಲನೆಯನ್ನು ಸೃಷ್ಟಿಸುತ್ತಿತ್ತು. ಬ್ರಿಟನ್, ಅಮೇರಿಕ, ಜಪಾನ್, ಚೀನಾದಂತಹ ರಾಷ್ಟ್ರಗಳು ಪ್ರತಿ ಭಟಿಸುತ್ತಿದ್ದವು. ಟ್ರಂಪ್ ದಿಗ್ಬಂಧನದ ಭಾಷೆಯಲ್ಲಿ ಮಾತಾಡುತ್ತಿದ್ದರು. ಅಮಿತ್ ಷಾ ಸಹಿತ ಕೇಂದ್ರ ಸಚಿವ ಸಂಪುಟದ ಹಲವರಿಗೆ ಅಮೇರಿಕ ಮತ್ತಿತರ ರಾಷ್ಟ್ರಗಳು ದಿಗ್ಬಂಧನ ವಿಧಿಸುವ ಸಾಧ್ಯತೆಗಳೂ ಇದ್ದುವು. ವಿದೇಶದಲ್ಲಿರುವ ಭಾರತೀಯ ಹಿಂದೂ ಸಮುದಾಯದ ಉದ್ಯೋಗಿಗಳ ಮೇಲೆ ಮಾನಸಿಕ ಮತ್ತು ದೈಹಿಕ ಆಕ್ರಮಣಗಳೂ ನಡೆಯುತ್ತಿದ್ದುವು. ಅವರ ಉದ್ಯೋಗವು ಅನಿಶ್ಚಿತ ಸ್ಥಿತಿಗೆ ತಲುಪು ವುದಕ್ಕೂ ಅವಕಾಶ ಇತ್ತು. ಅದರ ಜೊತೆಗೇ ಭಾರತದಲ್ಲಿನ ಸ್ಥಿತಿಗತಿಗಳಲ್ಲೂ ವ್ಯತ್ಯಾಸಗಳಾಗುತ್ತಿತ್ತು. ಪೌರತ್ವ ಕಾಯ್ದೆಯನ್ನು ವಿರೋಧಿಸುವವರ ಗುಂಪಿನಲ್ಲಿ ಮುಸ್ಲಿಮ್, ಬೌದ್ಧ, ಕ್ರೈಸ್ತ ಇತ್ಯಾದಿ ವೈವಿಧ್ಯತೆಗಳಿರುತ್ತಿತ್ತು. ಪ್ರತಿಭಟನೆಗಳು ಈಗಿನದಕ್ಕಿಂತ ಹೆಚ್ಚು ವ್ಯಾಪಕವೂ ವೈವಿಧ್ಯವೂ ಆಗಿರುತ್ತಿತ್ತು. ಈ ಎಲ್ಲ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡೇ ಕೇಂದ್ರ ಸರಕಾರ ಪೌರತ್ವ ಕಾಯ್ದೆಯನ್ನು ರೂಪಿಸಿದೆ. ಮುಸ್ಲಿಮರನ್ನು ಮಾತ್ರ ಪೌರತ್ವ ಪಟ್ಟಿಯಿಂದ ಹೊರಗಿಡುವುದರಿಂದ ಅಪಾಯ ಕಡಿಮೆ ಮತ್ತು ರಾಜಕೀಯ ಲಾಭಗಳು ಹೆಚ್ಚು ಎಂಬುದಾಗಿ ಅದು ಲೆಕ್ಕ ಹಾಕಿದೆ. ಆದ್ದರಿಂದ,
ಈ ಎಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡೇ ಪೌರತ್ವ ಮತ್ತು ಎನ್‍ಆರ್‍ಸಿಗೆ ಮುಸ್ಲಿಮ್ ಸಮುದಾಯದ ಪ್ರತಿಕ್ರಿಯೆ ಹೇಗಿರಬೇಕು ಎಂಬುದನ್ನು ಚಿಂತಿಸಬೇಕಾಗಿದೆ. ಮುಸ್ಲಿಮರು ದಾಖಲೆಗಳನ್ನು ಸರಿಪಡಿಸಿಟ್ಟುಕೊಳ್ಳುವುದು ಬೇರೆ ಮತ್ತು ಎನ್‍ಆರ್‍ಸಿಗಾಗಿ ದಾಖಲೆ ಪತ್ರಗಳನ್ನು ಸಲ್ಲಿಸದಿರುವುದೇ ಬೇರೆ. ಇವೆರಡನ್ನೂ ಒಂದೇ ಎಂದು ವ್ಯಾಖ್ಯಾನಿಸಿ ದಾಖಲೆ ಪತ್ರಗಳ ಬಗ್ಗೆ ನಿರ್ಲಕ್ಷ್ಯ ತೋರುವುದರಲ್ಲಿ ಅಪಾಯ ಹೆಚ್ಚು. ಎನ್ ಆರ್ ಸಿಗಾಗಿ ದಾಖಲೆ ಪತ್ರಗಳನ್ನು ಸಲ್ಲಿಸಬೇಕೋ ಅಥವಾ ಬಹಿಷ್ಕರಿಸಬೇಕೋ ಎಂಬುದು ನಂತರದ ವಿಚಾರ. ಎನ್ ಆರ್ ಸಿಗೆ ಅಲ್ಲದಿದ್ದರೂ ಸರಿಯಾದ ದಾಖಲೆ ಪತ್ರಗಳು ನಾಗರಿಕರ ಜೊತೆಯಿರಬೇಕಾದುದು ಕಾನೂನಾತ್ಮಕವಾಗಿಯೂ ಅಗತ್ಯ. ಸರಿಯಾದ ದಾಖಲೆ ಪತ್ರ ಗಳೇ ಇಲ್ಲದಿದ್ದರೆ ಯಾವ ಸಂದರ್ಭದಲ್ಲೂ ಪ್ರಭುತ್ವ ನಿಮ್ಮನ್ನು ಗುರಿ ಮಾಡಬಹುದು. ಅದಕ್ಕೆ ಎನ್‍ಆರ್‍ಸಿಯೇ ಬೇಕೆಂದಿಲ್ಲ. ನಗರ ಪ್ರದೇಶದಲ್ಲಿ ವಾಸಿಸುವ ಮುಸ್ಲಿಮರ ಪೈಕಿ ಹೆಚ್ಚಿನವರಿಗೆ ದಾಖಲೆ ಪತ್ರಗಳ ಮಹತ್ವ ಗೊತ್ತಿದೆ. ಹೆಚ್ಚಿನವರಲ್ಲಿ ಸರಿಯಾದ ದಾಖಲೆಪತ್ರಗಳೂ ಇವೆ. ಆದರೆ ಹಳ್ಳಿ ಮತ್ತು ಗ್ರಾಮೀಣ ಪ್ರದೇಶದ ಮುಸ್ಲಿಮರಲ್ಲಿ ಈ ತಿಳುವಳಿಕೆ ಇಲ್ಲ. ಅವರಲ್ಲಿ ದಾಖಲೆ ಪತ್ರಗಳನ್ನು ಸರಿಯಾಗಿ ಇಟ್ಟುಕೊಳ್ಳದವರೂ ಇದ್ದಾರೆ. ಇರುವ ದಾಖಲೆ ಪತ್ರಗಳಲ್ಲೂ ಕ್ರಮಬದ್ಧತೆ ಇಲ್ಲ. ರೇಶನ್ ಕಾರ್ಡ್, ಆಧಾರ್ ಕಾರ್ಡ್, ಮತದಾನದ ಚೀಟಿ, ಜನನ ಸರ್ಟಿಫಿಕೇಟ್ ಇತ್ಯಾದಿ ಇತ್ಯಾದಿಗಳು ಇಲ್ಲದವರೂ ಇರಬಹುದು ಅಥವಾ ಇದ್ದರೂ ಒಂದಕ್ಕೊಂದು ತಾಳೆಯಾಗದ ರೀತಿಯಲ್ಲಿ ಇರುವವುಗಳೂ ಇರಬಹುದು. ಆದ್ದರಿಂದ ‘ಎನ್‍ಆರ್‍ಸಿಯನ್ನು ಬಹಿಷ್ಕರಿಸೋಣ ಮತ್ತು ಯಾರೂ ದಾಖಲೆ ಪತ್ರಗಳನ್ನು ಸರಿಪಡಿಸಿಕೊಳ್ಳಬೇಡಿ’ ಎಂಬ ಕರೆಯು ಜನಪ್ರಿಯ ಘೋಷಣೆಯಾಗಿ ಬಿಡಬಹುದೇ ಹೊರತು ದೂರದೃಷ್ಟಿಯದ್ದಾಗದು. ಅಲ್ಲದೇ,
ಪ್ರಭುತ್ವದ ಉರುಳು ಬಿಗಿಯಾದಂತೆಯೇ ಸಮುದಾಯದಲ್ಲಿ ಬಿರುಕು ಮೂಡುವುದಕ್ಕೂ ಅವಕಾಶವಿದೆ. ಪ್ರಭುತ್ವವು ಸಮು ದಾಯವನ್ನು ವಿಭಜಿಸುವ ಮೂಲಕ ಸಮುದಾಯದ ಬಹಿ ಷ್ಕಾರದ ಧೋರಣೆಯಲ್ಲಿ ಕಂದಕ ತೋಡುವುದಕ್ಕೂ ಸಾಧ್ಯ ವಿದೆ. ಎನ್ ಆರ್ ಸಿಯಲ್ಲಿ ಭಾಗವಹಿಸದಿದ್ದರೆ ಶಾಲೆಗಳು, ಉದ್ಯಮಗಳು, ಆಸ್ಪತ್ರೆಗಳು ಸಹಿತ ಸಮುದಾಯದ ಮಂದಿ ನಡೆಸುವ ಸರ್ವವೂ ಸ್ಥಗಿತಗೊಳ್ಳುವ ಅಥವಾ ಅವುಗಳಿಗೆ ಬೀಗಮುದ್ರೆ ಹಾಕುವ ಒತ್ತಡದ ಸ್ಥಿತಿಯನ್ನು ಪ್ರಭುತ್ವ ತಂದಿಟ್ಟರೆ ಮತ್ತು ಆ ಕಾರಣದಿಂದ ಸಮುದಾಯದ ಧೋರಣೆಯಲ್ಲಿ ಸಡಿಲಿಕೆ ಉಂಟಾದರೆ, ಅದರ ನೇರ ಪರಿಣಾಮವನ್ನು ಎದುರಿಸ ಬೇಕಾಗಿರುವುದು ಹಳ್ಳಿ ಮತ್ತು ಗ್ರಾಮೀಣ ಪ್ರದೇಶದ ಬಡ ಮುಸ್ಲಿಮರೇ ಹೊರತು ಸರಿಯಾದ ದಾಖಲೆ ಪತ್ರಗಳನ್ನು ಇಟ್ಟುಕೊಂಡಿರುವ ನಗರ ಪ್ರದೇಶದವರಲ್ಲ.
ಹಾಗೆಯೇ, ಕೊನೆಯ ಗಳಿಗೆಯಲ್ಲಿ ಎನ್ ಆರ್ ಸಿ ಬಹಿಷ್ಕಾರದಿಂದ ಮುಸ್ಲಿಮ್ ಸಮುದಾಯ ಹೊರಬಂದರೂ ಅದರ ಅಡ್ಡ ಪರಿಣಾಮಕ್ಕೆ ತುತ್ತಾಗುವುದೂ ಈ ಬಡವರೇ. ಯಾಕೆಂದರೆ, ದಾಖಲೆ ಪತ್ರಗಳನ್ನು ಸರಿಪಡಿಸಿಕೊಳ್ಳುವುದಕ್ಕೆ ಅವರು ಆ ಬಳಿಕದಿಂದ ಪ್ರಾರಂಭಿಸಬೇಕು. ಆ ಸಮಯದಲ್ಲಿ ಅದಕ್ಕೆ ಅವಕಾಶ ಇದೆಯೋ ಇಲ್ಲವೋ ಅನ್ನುವುದೂ ಈಗ ಸ್ಪಷ್ಟವಿಲ್ಲ. ಎನ್ ಆರ್ ಸಿಯ ಕೊನೆ ದಿನಾಂಕ ಮುಗಿಯುವುದರ ಒಳಗಾಗಿ ಅವರಿಗೆ ಸರಿಯಾದ ದಾಖಲೆ ಪತ್ರಗಳನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದು ಈಗ ಹೇಳುವಂತೆಯೂ ಇಲ್ಲ. ಆದರೆ, ನಗರ ಪ್ರದೇಶದ ಮಂದಿಗೆ ಈ ಯಾವ ಸಮಸ್ಯೆಗಳೂ ಎದುರಾಗುವುದಿಲ್ಲ. ಆದ್ದರಿಂದ,
ಒಂದುಕಡೆ ಮುಸ್ಲಿಮ್ ಸಮುದಾಯದ ದಾಖಲೆ ಪತ್ರಗಳನ್ನು ಸರಿಪಡಿಸಿಕೊಳ್ಳುವ ಜಾಗೃತಿ ಅಭಿಯಾನಗಳನ್ನು ಕೈಗೊಳ್ಳುತ್ತಲೇ ಇನ್ನೊಂದು ಕಡೆ ಎನ್ ಆರ್ ಸಿಯನ್ನು ಬಹಿಷ್ಕರಿಸಬೇಕೋ ಬೇಡವೋ ಎಂಬ ಚರ್ಚೆಗಳು ನಡೆಯುವುದೇ ಸರಿ. ಸರಿಯಾದ ದಾಖಲೆ ಪತ್ರಗಳು ಮುಸ್ಲಿಮ್ ಸಮುದಾಯದ ಎಲ್ಲರ ಜೊತೆಗೂ ಇರಲಿ. ಎನ್ ಆರ್ ಸಿಯನ್ನು ಬಹಿಷ್ಕರಿಸುವುದಕ್ಕೂ ಬಹಿಷ್ಕರಿಸದೇ ಇರುವುದಕ್ಕೂ ಮತ್ತು ಈ ದಾಖಲೆ ಪತ್ರಗಳನ್ನು ಸರಿಪಡಿಸುವುದಕ್ಕೂ ಸಂಬಂಧ ಕಲ್ಪಿಸದೇ ಇರೋಣ. ಇವೆರಡೂ ಬೇರೆ ಬೇರೆ. ಇಲ್ಲದಿದ್ದರೆ ಸಮುದಾಯದ ಬಡ ಮತ್ತು ದುರ್ಬಲ ಮುಸ್ಲಿಮರನ್ನು ಹಳ್ಳಕ್ಕೆ ತಳ್ಳಿದಂತಾದೀತು.