Wednesday, December 9, 2020

ಲವ್: ನಿಮ್ಮಲ್ಲಿರುವ ಪಟ್ಟಿಯನ್ನು ನೀವೇ ಇಟ್ಟುಕೊಳ್ಳಿ



ಏ.ಕೆ. ಕುಕ್ಕಿಲ

'The price of saying No’ ಎಂಬ ಶೀರ್ಷಿಕೆಯಲ್ಲಿ ನವೆಂಬರ್ 7ರ ದ ಹಿಂದೂ ಪತ್ರಿಕೆಯು ವರದಿಯೊಂದನ್ನು  ಪ್ರಕಟಿಸಿತ್ತು. ಹರ್ಯಾಣದ ಬಲ್ಲಾಬ್‍ಘರ್‍ ನಲ್ಲಿರುವ ಅಗರ್ವಾಲ್ ಕಾಲೇಜಿನ ಹೊರಗಡೆ ನಿಖಿತಾ ಎಂಬ ಕಾಲೇಜು ವಿದ್ಯಾರ್ಥಿನಿ  ನಿಂತಿರುತ್ತಾಳೆ. ತನ್ನನ್ನು ಕರೆದುಕೊಂಡು ಹೋಗಲು ಬರಬೇಕಾದ ಸಹೋದರನನ್ನು ಕಾಯುತ್ತಿರುತ್ತಾಳೆ. ಅಕ್ಟೋಬರ್ 26ರಂದು  ಸಂಜೆ 3.30 ಗಂಟೆ. ತೌಸೀಫ್ ಎಂಬ 21 ವರ್ಷದ ಯುವಕ ತನ್ನ ಗೆಳೆಯ ರೆಹಾನ್‍ನೊಂದಿಗೆ ಅಲ್ಲಿಗೆ ಕಾರಲ್ಲಿ ಬರುತ್ತಾನೆ.  ನಿಖಿತಾಳನ್ನು ಕಾರಲ್ಲಿ ಎತ್ತಿಕೊಂಡು ಹೋಗಲು ಶ್ರಮಿಸುತ್ತಾನೆ. ಆಕೆ ತಪ್ಪಿಸಿಕೊಂಡಾಗ ಗುಂಡು ಹಾರಿಸುತ್ತಾನೆ. ಬಳಿಕ ಪರಾರಿ ಯಾಗುತ್ತಾನೆ. ಆಕೆ ಸಾವಿಗೀಡಾಗುತ್ತಾಳೆ.

ಮರುದಿನವೇ ಪೋಲೀಸರು ಆರೋಪಿಗಳನ್ನು ಬಂಧಿಸುತ್ತಾರೆ. 700 ಪುಟಗಳ ಚಾರ್ಜ್ ಶೀಟ್ ಸಲ್ಲಿಸುತ್ತಾರೆ.

ಆ ಬಳಿಕ ಕರ್ನಿಸೇನಾದಂಥ ಅನೇಕಾರು ಸಂಘಟನೆಗಳು ಈ ಘಟನೆಯನ್ನು ಎತ್ತಿಕೊಂಡು ಪ್ರತಿಭಟನೆ ನಡೆಸಿವೆ. ಸಾಮಾಜಿಕ  ಜಾಲತಾಣಗಳಲ್ಲಿ ಲವ್‍ಜಿಹಾದ್ ಕೋನದಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ಸರ್ವ ಬಿರಾದಾರಿ ಸಂಘಟನ್‍ನ ನೇತೃತ್ವದಲ್ಲಿ ನವೆಂಬರ್  1ರಂದು ಹರ್ಯಾಣದ ದುಸ್ಸೆಹ್ರಾ ಮೈದಾನದಲ್ಲಿ ಪ್ರತಿಭಟನೆ ನಡೆದಿದೆ. ಸಾವಿರಕ್ಕಿಂತ ಅಧಿಕ ಮಂದಿ ಅದರಲ್ಲಿ ಭಾಗಿಯಾಗಿದ್ದಾರೆ.  ಪ್ರತಿಭಟನೆ ಹಿಂಸಾತ್ಮಕ ರೂಪ ಪಡಕೊಂಡಿತಲ್ಲದೇ 11 ಪೊಲೀಸರಿಗೂ ಗಾಯವಾಯಿತು. ಆಗ್ರಾದಿಂದ ನವದೆಹಲಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 44ಕ್ಕೆ ತಡೆಯೊಡ್ಡಲು ಪ್ರತಿಭಟನಾಕಾರರು ಶ್ರಮಿಸಿದರು. ಅಂಗಡಿಗಳಿಗೆ ಕಲ್ಲೆಸೆತ ನಡೆಯಿತು. 32 ಮಂದಿಯ ಬಂಧನವೂ ನಡೆಯಿತು. ಬಳಿಕ ನಿಖಿತಾಳ ತಂದೆ ಮೂಲಚಂದ್ ತೋಮರ್ ಅವರ ಮನೆಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ  ಕುಮಾರಿ ಶೆಲ್ಜಾ ಭೇಟಿ ನೀಡಿದ ವೇಳೆ ಅವರ ಮೇಲೆ ಹಲ್ಲೆ ನಡೆಯಿತು. ಆ ಬಗ್ಗೆ ಎಫ್‍ಐಆರ್ ಕೂಡ ದಾಖಲಾಯಿತು. ಹಾಗಂತ,

ಇದು ಎರಡು ಧರ್ಮಗಳ ನಡುವಿನ ವಿಷಯ ಅಲ್ಲ ಎಂದು ನಿಖಿತಾಳ ತಂದೆ ತೋಮರ್ ಅವರೇ ಹೇಳಿದ್ದಾರೆ. ಆದರೆ ವೃತ್ತಿಯಲ್ಲಿ  ಎಲೆಕ್ಟ್ರೀಷಿಯನ್ ಆಗಿರುವ ತೋಮರ್ ಅವರಲ್ಲಿ ಇನ್ನೊಂದು ಸಂಕಟವೂ ಇದೆ. ‘ನೋ’ ಎಂದ ಕಾರಣಕ್ಕೆ ಕೊಲ್ಲುವುದನ್ನು ಹೇಗೆ  ಸಹಿಸಿಕೊಳ್ಳುವುದು?

2018ರಲ್ಲಿ ನಿಖಿತಾಳನ್ನು ಇದೇ ತೌಸೀಫ್ ಅಪಹರಣಗೊಳಿಸಿದ ಬಗ್ಗೆ ಬಲ್ಲಾಬ್‍ಘರ್ ನ  ಪೊಲೀಸ್ ಠಾಣೆಯಲ್ಲಿ ತೋಮರ್ ಕೇಸು  ದಾಖಲಿಸಿದ್ದರು. ಎಫ್‍ಐಆರ್ ದಾಖಲಾಗಿತ್ತು. ಎಫ್‍ಐಆರ್‍ನ ಪ್ರಕಾರ, ನಿಖಿತಾ ತನ್ನ ಅಪಹರಣವಾಗಿರುವ ಬಗ್ಗೆ ಗೆಳೆಯ  ಅಭಿಷೇಕ್‍ಗೆ ತಿಳಿಸಿದ್ದಳು. ಆತ ತೋಮರ್‍ ಗೆ ತಿಳಿಸಿದ್ದ. ಭಾರತೀಯ ದಂಡಸಂಹಿತೆ 365ರ ಪ್ರಕಾರ ಕೇಸೂ ದಾಖಲಾಗಿತ್ತು. ಆದರೆ,  ಆ ಬಳಿಕ ಎರಡೂ ಕುಟುಂಬಗಳು ಮಾತುಕತೆ ನಡೆಸಿ ಸಮಸ್ಯೆಯನ್ನು ರಾಜಿಯಲ್ಲಿ ಪರಿಹರಿಸಿಕೊಂಡಿದ್ದುವು. ಆದರೆ ತೌಸೀಫ್‍ನ  ತಾಯಿ ಇದನ್ನು ನಿರಾಕರಿಸುತ್ತಾರೆ. ತೌಸೀಫ್‍ನ ಜೊತೆ ನಿಖಿತಾಳೇ ಹೊರಟು ಬಂದಿದ್ದಳು ಮತ್ತು ಆಕೆಯ ಅಂಕಲ್‍ನ ಜೊತೆ ಬಳಿಕ  ಕಳುಹಿಸಿಕೊಡಲಾಯಿತು ಎಂದು ಅವರು ಹೇಳುತ್ತಾರೆ. ಎಫ್‍ಐಆರ್ ಅನ್ನು ಆ ಬಳಿಕ ರದ್ದುಗೊಳಿಸಲಾಗಿತ್ತು.

ಫರೀದಾಬಾದ್‍ನ ರವಾಲ್ ಇಂಟರ್‍ನ್ಯಾಶನಲ್ ಸ್ಕೂಲ್‍ನಲ್ಲಿ ಕಲಿಯುತ್ತಿದ್ದಾಗ ನಿಖಿತಾ ಮತ್ತು ತೌಸೀಫ್ ಭೇಟಿಯಾಗಿದ್ದರು ಎಂದು  ತೋಮರ್ ಹೇಳುತ್ತಾರೆ. ಆತ ಆಗ ಹಾಸ್ಟೆಲ್‍ನಲ್ಲಿದ್ದು ಕಲಿಯುತ್ತಿದ್ದ. ತೌಸೀಫ್‍ನ ತಾಯಿಯ ಪ್ರಕಾರ ಆತ ಕಲಿಕೆಯಲ್ಲಿ ಮುಂದು.  ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಆತನಿಗೆ ಈ ಬಾರಿ ಎಂಬಿಬಿಎಸ್ ಸೀಟು ಸಿಕ್ಕಿತ್ತು. ದೂರ ಎಂಬ ಕಾರಣಕ್ಕಾಗಿ ಎಂಬಿಬಿಎಸ್  ಕಲಿಕೆಯನ್ನು ಕೈ ಬಿಡಲಾಗಿತ್ತು. ಹಾಗೆಯೇ, ನಿಖಿತಾಳ ಅಪಹರಣ ಪ್ರಕರಣ ನಡೆದ ಬಳಿಕ ಮನೆಯವರು ಆಕೆಯ ಜೊತೆ ಸದಾ  ಇರುತ್ತಿದ್ದರು. ಒಂಟಿಯಾಗಿ ಕಾಲೇಜಿಗೆ ಹೋಗುವುದಾಗಲಿ ಮತ್ತು ಹಿಂತಿರುಗುವುದಾಗಲಿ ಮಾಡುತ್ತಿರಲಿಲ್ಲ. ಅಮ್ಮ ಮತ್ತು  ಸಹೋದರ ಸದಾ ಬೆಂಗಾವಲಾಗಿ ನಿಲ್ಲುತ್ತಿದ್ದರು. ಘಟನೆ ನಡೆದ ದಿನದಂದೂ ಆಕೆ ಸಹೋದರನಿಗಾಗಿ ಕಾಯುತ್ತಿದ್ದಳು. ಈ ಎರಡು  ವರ್ಷಗಳ ಅವಧಿಯಲ್ಲಿ ಒಮ್ಮೆಯೂ ಆಕೆಯನ್ನು ತೌಸೀಫ್ ಭೇಟಿಯಾಗಿದ್ದನ್ನು ತಾನು ಕಂಡಿಲ್ಲ ಎಂದು ತೋಮರ್ ಹೇಳುತ್ತಾರೆ.  ಪೊಲೀಸರು ಹೇಳುವುದೇನೆಂದರೆ, ‘ಒಂದೋ ಆಕೆ ನನಗೆ ಸಿಗಬೇಕು, ಇಲ್ಲದಿದ್ದರೆ ಯಾರಿಗೂ ಸಿಗಬಾರದು’ ಎಂಬ ಮನಸ್ಥಿತಿ ತೌಸೀಫ್‍ನದ್ದು. ನಿಜವಾಗಿ,

ಅಕ್ಟೋಬರ್ 26ರ ಆ ಘಟನೆಯನ್ನು ಇಲ್ಲಿ ಇಷ್ಟುದ್ದ ವಿವರಿಸಬೇಕಾದ ಅಗತ್ಯ ಇರಲಿಲ್ಲ. ಮತ್ತೂ ಯಾಕೆ ಇಲ್ಲಿ ಇಷ್ಟು ವಿಸ್ತೃತವಾಗಿ  ವಿವರಿಸಿದ್ದೇಕೆಂದರೆ, ಭಾರತದ ಯಾವುದೇ ಮೂಲೆಯಲ್ಲಿ ನಡೆಯಬಹುದಾದ ಕ್ರೌರ್ಯಕ್ಕಿಂತ ಈ ಕ್ರೌರ್ಯ ಯಾವ ರೀತಿಯಲ್ಲೂ ಭಿನ್ನ  ಅಲ್ಲ ಎಂಬುದಕ್ಕಾಗಿ. ಇದು ಅಪರೂಪದಲ್ಲಿ ಅಪರೂಪದ ಘಟನೆ ಅಲ್ಲ. ಇಂಥ ಕ್ರೌರ್ಯಗಳು ದೇಶದಲ್ಲಿ ಈ ಮೊದಲೂ ನಡೆದಿವೆ.  ‘ನನಗೆ ಸಿಗದವಳು ಯಾರಿಗೂ ಸಿಗಬಾರದು’ ಎಂಬ ಸ್ವಾರ್ಥವು ಅನೇಕ ಹೆಣ್ಮಕ್ಕಳನ್ನು ಬಲಿ ಪಡೆದಿದೆ. ಅಂಥ ಹೆಣ್ಮಕ್ಕಳಲ್ಲಿ ಹಿಂದುವೂ  ಇದ್ದಾರೆ. ಮುಸ್ಲಿಮೂ ಇದ್ದಾರೆ. ಕ್ರೂರಿ ಗಂಡು ಮಕ್ಕಳಲ್ಲಿ ಹಿಂದುವೂ ಇದ್ದಾರೆ, ಮುಸ್ಲಿಮೂ ಇದ್ದಾರೆ. ಸಮಾಜ ಮಾತ್ರ ತನ್ನ ಮನಸ್ಥಿತಿಗೋ ರಾಜಕೀಯ ಹಿತಾಸಕ್ತಿಗೆ ಅನುಗುಣವಾಗಿಯೋ ಕೆಲವೊಂದನ್ನು ಲವ್ ಜಿಹಾದ್ ಎಂದೋ ಇನ್ನು ಹಲವನ್ನು ಪ್ರೇಮ  ಪ್ರಕರಣ ವೆಂದೋ ವಿಭಜಿಸಿ ಆಡಿಕೊಳ್ಳುತ್ತದೆ. ಸದ್ಯದ ಅಗತ್ಯ ಏನೆಂದರೆ, 

ನಿಖಿತಾಳಂತಹ ಕೋಟ್ಯಂತರ ಹೆಣ್ಮಕ್ಕಳ ಬದುಕು ಅ ಪಾಯಕ್ಕೆ ತುತ್ತಾಗದಂತೆ ನೋಡಿಕೊಳ್ಳುವುದು. ನಿಖಿತಾ ಎಂಬುದು ಒಂದು ಸಂಕೇತ ಮಾತ್ರ. ಧರ್ಮ ಯಾವುದೇ ಆಗಿದ್ದರೂ ಹೆಣ್ಣು  ಹೆಣ್ಣೇ. ಇಂಥ ಪ್ರಕರಣಗಳು ಅಂತಿಮವಾಗಿ ಪರಿಣಾಮ ಬೀರುವುದೂ ಹೆಣ್ಣಿನ ಮೇಲೆಯೇ. ಹೆಣ್ಮಕ್ಕಳ ಓದಿಗೆ ಇಂಥವು ತಡೆ  ಒಡ್ಡುತ್ತವೆ. ದೂರದೂರಿಗೆ ಕಲಿಕೆಗೆ ಕಳುಹಿಸಿ ಕೊಡಲು ಹೆತ್ತವರು ಭಯ ಪಡುತ್ತಾರೆ. ಮುಂದೆ ಏನಾಗುವುದೋ ಎಂಬ ಭೀತಿಯಿಂದ  ಮನೆಯಲ್ಲೇ  ಹೆಣ್ಮಕ್ಕಳನ್ನು ಹೆತ್ತವರು ಉಳಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಇಂಥ ಭಯ ಇರುವ ಕಾರಣದಿಂದಲೇ ಹೆಣ್ಮಕ್ಕಳು ಮ ನೆಯವರಲ್ಲಿ ಏನನ್ನೂ ಹಂಚಿಕೊಳ್ಳುವುದಿಲ್ಲ. ಪುಂಡರ ಚುಡಾಯಿಸುವಿಕೆಯಾಗಲಿ ಏಕಮುಖ ಪ್ರೇಮಿಯ ಕುರಿತಾಗಲಿ ಮನೆಯಲ್ಲಿ  ಏನನ್ನೂ ಹೇಳಿ ಕೊಳ್ಳದೇ ಮುಚ್ಚಿಡುತ್ತಾರೆ. ಹೇಳಿಬಿಟ್ಟರೆ ಎಲ್ಲಿ ಕಲಿಕೆಗೆ ಕುತ್ತಾಗು ವುದೋ ಎಂಬ ಭೀತಿ. ಕೆಲವೊಮ್ಮೆ ಹೆಣ್ಮಕ್ಕಳು  ಹೇಳಿಕೊಂಡರೂ ಮರ್ಯಾದೆಗೆ ಅಂಜಿ ಹೆತ್ತವರು ಸುಮ್ಮನಾಗುವುದಿದೆ. ಅದು ಆರೋಪಿಗಳಲ್ಲಿ ಧೈರ್ಯವನ್ನು ಒದಗಿಸುತ್ತದೆ.

ಹೆಣ್ಣು-ಗಂಡಿನ ನಡುವೆ ಆಕರ್ಷಣೆ ಪ್ರಕೃತಿ ಸಹಜ. ಮಾನವ ಜನಾಂಗ ಇರುವವರೆಗೆ ಈ ಆಕರ್ಷಣೆ ಇದ್ದೇ  ಇರುತ್ತದೆ. ಮಾತ್ರವಲ್ಲ,  ಈ ಆಕರ್ಷಣೆಗೆ ಧರ್ಮವೂ ಇರುವುದಿಲ್ಲ. ಹೆಣ್ಣು ಮತ್ತು ಗಂಡು ಎಂಬ ಪ್ರಕೃತಿ ಧರ್ಮವಷ್ಟೇ ಇರುತ್ತದೆ. ಸಮಾಜ ಮಾತ್ರ  ಹೆಣ್ಣಿಗೊಂದು ಮತ್ತು ಗಂಡಿಗೊಂದು ಧರ್ಮವನ್ನು ಕೊಟ್ಟು ಆ ಆಕರ್ಷಣೆಯಲ್ಲಿ ಸಂಚನ್ನೋ ಸಹಜತೆಯನ್ನೋ ಕಾಮವನ್ನೋ  ಹುಡುಕುತ್ತದೆ. ಲವ್ ಜಿಹಾದ್ ಎಂಬುದಕ್ಕೆ ಇದರಾಚೆಗಿನ ಮಹತ್ವ ಇಲ್ಲ ಎಂದೇ ನನ್ನ ಭಾವನೆ. ಬಹು ಧರ್ಮೀಯ  ಭಾರತದಲ್ಲಂತೂ ಹೆಣ್ಣು ಹಿಂದೂ ಆಗಿರುವುದು ಮತ್ತು ಗಂಡು ಮುಸ್ಲಿಮ್ ಆಗಿರುವುದು ಅಥವಾ ಇವು ತಿರುವು-ಮುರುವು  ಆಗಿರುವುದು ಅಚ್ಚರಿಯದ್ದೇನೂ ಅಲ್ಲ. ಮುಸ್ಲಿಮ್ ಮತ್ತು ಹಿಂದೂಗಳ ಜನಸಂಖ್ಯೆಯಲ್ಲಿ ಏರಿಳಿತ ಇರುವುದರಿಂದ ಪ್ರೇಮ  ಪ್ರಕರಣಗಳ ಅನುಪಾತದಲ್ಲೂ ಈ ಏರಿಳಿತ ಇದೆ. ಹಿಂದೂ ಯುವಕ ಮತ್ತು ಮುಸ್ಲಿಮ್ ಯುವತಿಯ ನಡುವಿನ ಪ್ರೇಮ  ಪ್ರಕರಣಕ್ಕಿಂತ ಮುಸ್ಲಿಮ್ ಯುವಕ ಮತ್ತು ಹಿಂದೂ ಯುವತಿಯ ನಡುವಿನ ಪ್ರೇಮ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರೆ ಅದಕ್ಕೆ ಈ ಜ ನಸಂಖ್ಯೆಯ ಪ್ರಮಾಣ ಕಾರಣವಾಗಿರುವುದರ ಹೊರತಾಗಿ ಇನ್ನಾವುದೂ ಕಾಣಿಸುತ್ತಿಲ್ಲ. ಸದ್ಯ ಸಮಾಜದ ಅಗತ್ಯ ಏನೆಂದರೆ, 

ಯುವ  ಸಮೂಹವನ್ನು ಪ್ರೇಮದ ವಿಷಯದಲ್ಲಿ ಶಿಕ್ಷಿತರನ್ನಾಗಿ ಮಾಡುವುದು. ಪ್ರೇಮ ಸಹಜ ಸತ್ಯ ಎಂಬುದನ್ನು ಅರ್ಥ ಮಾಡಿಕೊಂಡ  ಯಾವುದೇ ಸಮಾಜ ತನ್ನ ಯುವ ಪೀಳಿಗೆಗೆ ಪ್ರೇಮವನ್ನು ವಿವರಿಸಿಕೊಡುವ ಜವಾಬ್ದಾರಿಯನ್ನೂ ವಹಿಸಿಕೊಳ್ಳಬೇಕಿದೆ. ಲವ್  ಜಿಹಾದ್ ಸುಳ್ಳು ನಿಜ. ಆದರೆ ಲವ್ ಸುಳ್ಳಲ್ಲ. ಸುಳ್ಳಲ್ಲದ ಲವ್ ಅನ್ನು ಸುಳ್ಳು ಸುಳ್ಳೇ ಎದೆಯೊಳಗೆ ಬಚ್ಚಿಟ್ಟುಕೊಂಡು ಸಂಕಟಪಡುತ್ತಾ  ಹೊರಗಡೆ ನಗುವ ಮತ್ತು ಅಮಾಯಕರಂತೆ ಬದುಕುವ ಯುವಕ-ಯುವತಿಯರಿಗೆ ಅದರ ಸರಿ-ತಪ್ಪುಗಳನ್ನು ವಿವರಿಸಿಕೊಡುವ  ವ್ಯವಸ್ಥೆಯಾಗಬೇಕು. ಹೀಗಾಗ ಬೇಕಾದರೆ ಮೊದಲು ಅವರು ತಮ್ಮ ಪ್ರೇಮವನ್ನು ಹೆತ್ತವರೊಂದಿಗೆ ಮುಕ್ತವಾಗಿ ಹಂಚಿಕೊಳ್ಳುವ  ವಾತಾವರಣ ನಿರ್ಮಾಣವಾಗಬೇಕು. ನಿಜವಾಗಿ ಇವತ್ತಿನ ದಿನಗಳ ಅತೀ ಜರೂರು ಇದು. ಮಕ್ಕಳ ಪಾಲಿಗೆ ಮನೆಯ ವಾತಾವರಣ  ಎಲ್ಲವನ್ನೂ ಹಂಚಿಕೊಳ್ಳುವಷ್ಟು ಹಿತಕರವಾಗಿರಬೇಕು. ತಮ್ಮ ಉದ್ದೇಶ, ಗುರಿ, ಹವ್ಯಾಸ, ಅಭ್ಯಾಸ, ಗೆಳೆಯರು, ಕಲಿಕೆ, ಪ್ರೇಮ.. ಏನೇ  ಇರಲಿ ಎಲ್ಲವನ್ನೂ ಹೆತ್ತವರೊಂದಿಗೆ ಹಂಚಿಕೊಂಡು ಸಲಹೆ ಪಡಕೊಳ್ಳುವ ಮುಕ್ತ ವಾತಾವರಣ ಮನೆಯದ್ದಾಗಿರಬೇಕು. ಹೆಣ್ಣಿಗೂ  ಗಂಡಿಗೂ ಈ ವಾತಾವರಣ ಪ್ರತಿ ಮನೆಯಲ್ಲೂ ಸೃಷ್ಟಿಯಾಗಬೇಕು. ಅದರಿಂದ ಎರಡು ಲಾಭ ಇದೆ-

1. ಯುವಕ ಅಥವಾ ಯುವತಿಗೆ ಅದರಿಂದ ಮಾನಸಿಕ ಬಲ ಲಭ್ಯವಾಗುತ್ತದೆ. ಭಾರ ಇಳಿಸಿಕೊಂಡ ನೆಮ್ಮದಿ ಒಂದೆಡೆ ಯಾದರೆ,  ಹೆತ್ತವರಿಂದ ಸಲಹೆ-ಸೂಚನೆ ಪಡಕೊಳ್ಳುವ ಮೂಲಕ ತಾನು ಒಂಟಿಯಲ್ಲ ಎಂಬ ಭಾವನೆ ಅವರಲ್ಲಿ ಬೆಳೆಯುತ್ತದೆ.

2. ತನ್ನ ಮಗ ಅಥವಾ ಮಗಳು ಎಂಥ ಸ್ಥಿತಿಯಲ್ಲಿದ್ದಾಳೆ/ನೆ ಎಂಬುದನ್ನು ಹೆತ್ತವರಿಗೆ ಅರಿತುಕೊಳ್ಳಲು ಸುಲಭವಾಗುತ್ತದೆ. ತನ್ನ  ಮಕ್ಕಳ ಸ್ಥಿತಿ ಸಂದಿಗ್ಧವೋ ಭವಿಷ್ಯದಲ್ಲಿ ಅಪಾಯ ಎದುರಾದೀತೋ, ಕೌನ್ಸೆಲಿಂಗ್ ನಡೆಸಬೇಕಾದೀತೋ ಇತ್ಯಾದಿಗಳ ಬಗ್ಗೆ  ವಿಶ್ಲೇಷಿಸುವುದಕ್ಕೆ ಹೆತ್ತವರಿಗೆ ಅವಕಾಶ ಸಿಗುತ್ತದೆ.

ಇಂಥ ವಾತಾವರಣವನ್ನು ಮನೆಯೊಳಗಡೆ ಉಂಟು ಮಾಡಿದರೆ ನಿಖಿತಾಳಂತಹ ಅಸಂಖ್ಯ ಹೆಣ್ಮಕ್ಕಳನ್ನು ಅಪಾಯದಿಂದ ಪಾರು  ಮಾಡುವುದಕ್ಕೆ ಅವಕಾಶ ಸಿಗಬಹುದು. ಹಾಗೆಯೇ ತೌಸೀಫ್‍ನಂಥ ಮಕ್ಕಳು ನಿರ್ಮಾಣವಾಗದಂತೆ ತಡೆಯುವುದಕ್ಕೂ  ಸಾಧ್ಯವಾಗಬಹುದು. ‘ತನಗೆ ಸಿಗದವರು ಇನ್ನಾರಿಗೂ ಸಿಗಬಾರದು’ ಎಂಬ ಭಾವ ತೀವ್ರವತೆಯು ಹೆಚ್ಚಿನ ದುರಂತ ಪ್ರೇಮ ಪ್ರಕರಣ ಗಳ ಒಳರಹಸ್ಯವೆಂಬುದು ಸತ್ಯ. ಏಕಮುಖ ಪ್ರೇಮದ ಕೊನೆಯೂ ಹೀಗೆಯೇ. ಪ್ರೇಮದ ಬಗ್ಗೆ ಮುಕ್ತವಾಗಿ ಮಾತಾಡಿಕೊಳ್ಳದ  ಸಾಮಾಜಿಕ ವಾತಾವರಣದಲ್ಲಿ ಇಂಥ ದುರಂತಗಳು ತಪ್ಪಿದ್ದಲ್ಲ. ಇವನ್ನು ಕಾನೂನೊಂದೇ ತಡೆಯದು. ಆ ಕ್ಷಣದಲ್ಲಿ ವ್ಯಕ್ತಿಯ  ಮೆದುಳು ಸಕಾರಾತ್ಮಕವಾಗಿ ಯೋಚಿಸುವುದನ್ನು ನಿಲ್ಲಿಸಿರುತ್ತದೆ. ಕಾನೂನು ಕಟ್ಟಳೆಗಳು ಆ ಸಮಯದಲ್ಲಿ ಭಯ ಉಂಟು  ಮಾಡುವುದೂ ಇಲ್ಲ. ಅದೊಂದು ಭ್ರಾಮಕ ಸ್ಥಿತಿ. ಆ ಸ್ಥಿತಿಗೆ ತಲುಪದಂತೆ ಯುವ ಸಮೂಹವನ್ನು ತಡೆಯಬೇಕಾದರೆ ಅವರು  ತಮ್ಮನ್ನು ಮುಕ್ತವಾಗಿ ಮನೆಯವರೊಂದಿಗೆ ತೆರೆದಿಡುವಂತಹ ವಾತಾವರಣ ನಿರ್ಮಾಣವಾಗಬೇಕಾಗಿದೆ. ಪ್ರೇಮದ ಉತ್ಕಟ  ಭಾವತೀವ್ರತೆಯ ಅಮಲಿನಿಂದ ಹೆಣ್ಣು ಅಥವಾ ಗಂಡನ್ನು ಹೊರತರಲು ಒಂದು ಮನೆಯಿಂದ ಸಾಧ್ಯ. ಅದು ಬಿಟ್ಟು ಪ್ರೇಮ  ಪ್ರಕರಣವನ್ನು ಲವ್‍ಜಿಹಾದ್ ಎಂದೋ ಮತಾಂತರದ ಸಂಚು ಎಂದೋ ಹುಯಿಲೆಬ್ಬಿಸುವುದು ಕಾಲಹರಣ ಅಷ್ಟೇ.

ಇನ್ನು, ಇಸ್ಲಾಮ್‍ಗೆ ಮತಾಂತರವಾದವರ ಸಂಖ್ಯೆ ಮತ್ತು ಹಿಂದೂ ಧರ್ಮಕ್ಕೆ ಮತಾಂತರವಾದವರ ಸಂಖ್ಯೆಯನ್ನು ಇಟ್ಟುಕೊಂಡು  ಚರ್ಚಿಸುವಿರಾದರೆ, ನಿಮ್ಮಿಷ್ಟ.

Tuesday, November 10, 2020

ಒಂದು ಜಾಹೀರಾತು ಮತ್ತು ಹಲವು ಡಿಬೇಟ್‍ಗಳು



ಟಿ.ವಿ. ಚಾನೆಲ್ ಒಂದರಲ್ಲಿ ಚರ್ಚೆಯನ್ನು ವೀಕ್ಷಿಸಿದೆ. ಸುಮಾರಾಗಿ ಅದು ಹೀಗೆ ಸಾಗುತ್ತದೆ-
ನಿರೂಪಕ: ಇಸ್ಲಾಮಿನಲ್ಲಿ ಸೀಮಂತ ಆಚರಣೆ ಸರಿಯೋ ತಪ್ಪೋ?
ಅತಿಥಿ: ತಪ್ಪು
ನಿರೂಪಕ: ಮುಸ್ಲಿಮ್ ಯುವಕನನ್ನು ವರಿಸಿದ ಹಿಂದೂ ಯುವತಿ ಇಸ್ಲಾಮ್‍ಗೆ ಮತಾಂತರ ಆಗದಿದ್ದರೆ ಆ ವಿವಾಹ  ಸಿಂಧುವಾಗುತ್ತದೋ ಇಲ್ಲವೋ?
ಅತಿಥಿ: ಇಲ್ಲ
ನಿರೂಪಕ: ಹಾಗಿದ್ದರೆ ತನಿಷ್ಕ್ ಜ್ಯುವೆಲ್ಲರಿಯ ಏಕತ್ವಂ ಜಾಹೀರಾತು ಇಸ್ಲಾಮ್‍ನ ವಿಧಿ-ನಿಯಮಗಳಿಗೆ ಪೂರಕವಾಗಿದೆಯೇ?
ಅತಿಥಿ: ಇಲ್ಲ
ನಿರೂಪಕ: ಹಾಗಿದ್ದರೆ ತನಿಷ್ಕ್ ಜಾಹೀರಾತ್‍ಗೆ ನಿಮ್ಮ ಬೆಂಬಲ ಇದೆಯೇ?
ಅತಿಥಿ: ಇಲ್ಲ.
ಚರ್ಚೆ ಹೇಗೆ ಕೊನೆಗೊಳ್ಳಬೇಕೆಂದು ಮೊದಲೇ ನಿರ್ಧರಿಸಿದ ನಿರೂಪಕನೋರ್ವ ಹೇಗೆ ಅತಿಥಿಗಳ ಬಾಯಿಯಿಂದ ತನಗೆ ಬೇಕಾದ  ಉತ್ತರವನ್ನು ಪಡೆದುಕೊಳ್ಳಬಹುದು ಎಂಬುದಕ್ಕೆ ಉದಾಹರಣೆಗೆ ಇದು.
ಮುಸ್ಲಿಮರಲ್ಲಿ ಇಸ್ಲಾಮಿನ ರೀತಿ-ರಿವಾಜುಗಳಿಗೆ ಸಂಬಂಧಿಸಿ ವಿಭಿನ್ನ ಧೋರಣೆಯಿದೆ. ದರ್ಗಾ ಸಂಸ್ಕೃತಿಯನ್ನು ತಪ್ಪು ಎಂದು ವಾದಿಸುವವರು ಇರುವಂತೆಯೇ ಸರಿ ಎಂದು ವಾದಿಸುವವರೂ ಇದ್ದಾರೆ. ಗರ್ಭಿಣಿಗೆ ಮಾಡುವ ಸೀಮಂತ ಆಚರಣೆಯ ಪರ ಮತ್ತು  ವಿರೋಧ ಅಭಿಪ್ರಾಯ ಉಳ್ಳವರೂ ಇದ್ದಾರೆ. ಮದುವೆಯ ಮೊದಲು ವಧುವಿನ ಮನೆಯಲ್ಲಿ ನಡೆಯುವ ಮದರಂಗಿ ಕಾರ್ಯಕ್ರಮ,  ಹುಟ್ಟು ಹಬ್ಬ ಆಚರಣೆ ಇತ್ಯಾದಿ ಆಚರಣೆಗಳ ಕುರಿತಂತೆ ಮುಸ್ಲಿಮ್ ಸಮುದಾಯದೊಳಗೆ ವೈಚಾರಿಕ ಭಿನ್ನಾಭಿಪ್ರಾಯ ಇದೆ. ವಿಶೇಷ  ಏನೆಂದರೆ, ಈ ಭಿನ್ನಾ ಭಿಪ್ರಾಯದ ವಿವರ ಗೊತ್ತಿರುವ ಚತುರ ಟಿವಿ ನಿರೂಪಕ ನೋರ್ವ ಹೇಗೆ ಈ ಸಂದರ್ಭವನ್ನು ದುರ್ಬಳಕೆ  ಮಾಡಿಕೊಳ್ಳಬಲ್ಲ ಎಂಬುದು. ಉದಾಹರಣೆಗೆ ತನಿಷ್ಕ್ ಜ್ಯುವೆಲ್ಲರಿಯ ಏಕತ್ವಂ ಜಾಹೀರಾತನ್ನೇ ಎತ್ತಿಕೊಳ್ಳೋಣ.
ಉತ್ತರ ಭಾರತದ ಮುಸ್ಲಿಮ್ ಕುಟುಂಬಕ್ಕೆ ಕೇರಳದ ಹಿಂದೂ ಯುವತಿಯೋರ್ವಳು ಸೊಸೆಯಾಗಿ ಹೋಗುತ್ತಾಳೆ. ಗರ್ಭಿಣಿಯಾಗು ತ್ತಾಳೆ ಮತ್ತು ಆಕೆಗೆ ಕೇರಳದ ಹಿಂದೂ ಕುಟುಂಬದಲ್ಲಿ ರೂಢಿ ಯಲ್ಲಿರುವಂತೆ ಸೀಮಂತ ಕಾರ್ಯಕ್ರಮ ಮಾಡಲು ಆ ಮುಸ್ಲಿಮ್  ಕುಟುಂಬ ತಯಾರಿ ನಡೆಸುತ್ತದೆ. ಆ ಹಿಂದೂ ಯುವತಿಗೆ ಆಶ್ಚರ್ಯವೂ ಆಗುತ್ತದೆ. ಮುಸ್ಲಿಮರಲ್ಲಿ ಈ ಆಚರಣೆ ಇಲ್ವಲ್ಲಾ ಎಂಬ  ಉದ್ಧಾರವೊಂದು ಆ ಹೆಣ್ಣು ಮಗಳಲ್ಲಿ ಕಾಣಿಸಿಕೊಳ್ಳುತ್ತದೆ. ನಮ್ಮಲ್ಲಿಲ್ಲದಿದ್ದರೇನು, ನಿಮ್ಮಲ್ಲಿದೆಯಲ್ಲವೇ ಎಂಬ ರೀತಿಯಲ್ಲಿ ಆ  ಮುಸ್ಲಿಮ್ ಕುಟುಂಬ ಆಕೆಯನ್ನು ಪ್ರೀತಿಸುವ ಮತ್ತು ಸಾಂಸ್ಕೃತಿಕ ಏಕತ್ವವನ್ನು ಸಾರುವ ದೃಶ್ಯ ಆ ಜಾಹೀರಾತಿನದು.
ಕುತೂಹಲ ಇರುವುದೂ ಇಲ್ಲೇ.
ಅಕ್ಟೋಬರ್ 9 ರಂದು ಬಿಡುಗಡೆಗೊಂಡ ಆ ಜಾಹೀರಾತಿನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಗಳು ವ್ಯಕ್ತವಾದುವು. ತನಿಷ್ಕ್ ಆ ಜಾಹೀರಾತನ್ನು ಹಿಂತೆಗೆದುಕೊಳ್ಳ ಬೇಕೆಂಬ ಬೇಡಿಕೆಗಳು ವ್ಯಕ್ತವಾದುವು. ನಟಿ ಕಂಗನಾ ರಾಣಾವತ್ ಅವರು ಆ  ಜಾಹೀರಾತನ್ನು ಲವ್ ಜಿಹಾದ್ ಎಂದರು. ಕ್ರಿಯೇಟಿವ್ ಟೆರರಿಸ್ಟ್ ಎಂದರು. ಲವ್ ಜಿಹಾದ್‍ಗೆ ಪ್ರೇರೇಪಿಸುತ್ತದೆ ಮತ್ತು ಭಾರತೀಯ  ಸಾಂಸ್ಕೃತಿಕ ಅಸ್ಥಿತೆಗೆ ಅದು ವಿರುದ್ಧವಿದೆ ಎಂಬ ಅಭಿಪ್ರಾಯ ಬಲಪಡೆಯಿತು. ಕೊನೆಗೆ ತನಿಷ್ಕ್ ಆ ಜಾಹೀರಾತನ್ನು ಹಿಂಪಡೆಯಿತು.  ನಿಮಗೆ ಗೊತ್ತಿರಲಿ,
ಈ ಜಾಹೀರಾತನ್ನು ಮುಸ್ಲಿಮರು ಆಕ್ಷೇಪಿಸಿರಲಿಲ್ಲ. `ಸೀಮಂತ ಆಚರಣೆ ಇಸ್ಲಾಮ್‍ಗೆ ವಿರುದ್ಧ, ಆದ್ದರಿಂದ ಆ ಜಾಹೀರಾತು  ಇಸ್ಲಾಮ್ ವಿರೋಧಿ' ಎಂದು ಯಾವ ಮೌಲಾನರೂ ಫತ್ವ ಹೊರಡಿಸಿರಲಿಲ್ಲ. ಆದರೆ, ಟಿವಿ ಕಾರ್ಯಕ್ರಮವನ್ನು ಬರೇ ಆ  ಜಾಹೀರಾತು ಮತ್ತು ಅದನ್ನು ವಿರೋಧಿಸುವವರ ಮೃತ್ತದೊಳಗೆ ತಿರುಗಿಸಿದರೆ, ಅದರಲ್ಲಿ ಮಜಾ ಏನಿರುತ್ತೆ? ಅದರ ಬದಲು ಅದನ್ನು ಹಿಂದೂ-ಮುಸ್ಲಿಮ್ ಆಗಿ ಪರಿವರ್ತಿಸಿದರೆ ಮತ್ತು ಮುಸ್ಲಿಮರಿಂದಲೂ ಆ ಜಾಹೀರಾತನ್ನು ತಪ್ಪು ಎಂದು ಹೇಳಿಸಿದರೆ,  ವಿರೋಧಕ್ಕೆ ಆನೆ ಬಲ ಬರುತ್ತದೆ. ಇದಕ್ಕೆ ಮಾಡಬೇಕಾದುದೇನೆಂದರೆ, ಮುಸ್ಲಿಮರಲ್ಲಿ ಸೀಮಂತವನ್ನು ಯಾರು ವಿರೋಧಿಸುತ್ತಾರೋ  ಅವರನ್ನು ಟಿವಿ ಟಿಬೇಟ್‍ಗೆ ಆಹ್ವಾನಿಸುವುದು. ಚರ್ಚೆಯನ್ನು ಇಸ್ಲಾಂ ಧರ್ಮದೆಡೆಗೆ ಒಯ್ಯುವುದು ಮತ್ತು ಇಸ್ಲಾಮ್‍ನಲ್ಲಿ ಸೀಮಂತ  ಇದೆಯೇ ಎಂದು ಪ್ರಶ್ನಿಸುವುದು. ಅವರಿಂದ ಇಲ್ಲ ಎಂಬ ಉತ್ತರ ವನ್ನು ಪಡೆದುಕೊಂಡು ಆ ಇಡೀ ಜಾಹೀರಾತು ಹೇಗೆ ಇಸ್ಲಾಮ್  ವಿರೋಧಿ ಎಂದು ವ್ಯಾಖ್ಯಾನಿಸುವುದು ಮತ್ತು ಸದ್ಯ ದೇಶದಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವವರಿಗೆ 20 ಕೋಟಿ ಮುಸ್ಲಿಮರ  ಬೆಂಬಲವೂ ಇದೆ ಎಂಬ ಪರೋಕ್ಷ ಸಂದೇಶವನ್ನು ಸಾರಲು ಯತ್ನಿಸುವುದು- ಇದು ಆ ಕಾರ್ಯಕ್ರಮದ ಒಟ್ಟು ಸಾರಾಂಶ.
ನಿಜಕ್ಕೂ ತನಿಷ್ಕ್ ಜಾಹೀರಾತು ಹಿಂದೂ-ಮುಸ್ಲಿಮರಿಗೆ ಸಂಬಂಧಿಸಿದ್ದೇ?
ಈ ಪ್ರಶ್ನೆ ಒಟ್ಟು ಬೆಳವಣಿಗೆಯ ದೃಷ್ಟಿಯಿಂದ ಬಹಳ ಮುಖ್ಯವಾದುದು. ತನಿಷ್ಕ್ ಜಾಹೀರಾತಿಗೆ ಯಾರು ವಿರೋಧ ವ್ಯಕ್ತಪಡಿಸಿದ್ದಾರೋ ಅವರಾರೂ ಇಸ್ಲಾಮ್‍ನಲ್ಲಿ ಸೀಮಂತ ಆಚರಣೆ ಇಲ್ಲ ಎಂಬುದನ್ನು ಅದಕ್ಕೆ ಕಾರಣವಾಗಿ ಕೊಟ್ಟಿಲ್ಲ. ಹಿಂದೂ  ಯುವತಿಯು ಮುಸ್ಲಿಮ್ ಕುಟುಂಬಕ್ಕೆ ವಿವಾಹವಾಗಿ ತೆರಳುವುದೇ ಅವರ ವಿರೋಧಕ್ಕೆ ಕಾರಣ. ಹಾಗಂತ, ಈ ವಿರೋಧಿ ಗುಂಪು ಅಮಾಯಕ ಏನಲ್ಲ. ಹಿಂದೂ ಯುವತಿಯನ್ನು ಮುಸ್ಲಿಮ್ ಯುವಕ ವಿವಾಹವಾಗಿರುವುದು ಅಥವಾ ಮುಸ್ಲಿಮ್ ಯುವತಿ ಹಿಂದೂ  ಯುವಕನನ್ನು ಮದುವೆಯಾಗಿರುವುದು ಈ ಗುಂಪಿಗೆ ಗೊತ್ತಿಲ್ಲ ಎಂದೂ ಅಲ್ಲ. ಮುಖ್ತಾರ್ ಅಬ್ಬಾಸ್ ನಕ್ವಿ, ಉಮರ್ ಅಬ್ದುಲ್ಲಾ,  ಕಬೀರ್ ಖಾನ್ ಜೋಡಿ, ಸಿನಿಮಾ ರಂಗದ ಅನೇಕ ನಟ-ನಟಿಯರು ಧರ್ಮಾತೀತವಾಗಿ ವಿವಾಹವಾಗಿದ್ದಾರೆ. ಭಾರತದಂತಹ  ಬಹು ಧರ್ಮೀಯ ಮತ್ತು ಬಹುಸಂಸ್ಕೃತಿಯ ರಾಷ್ಟ್ರವೊಂದ ರಲ್ಲಿ ಈ ಬಗೆಯ ವಿವಾಹ ಅಚ್ಚರಿಯ ಬೆಳವಣಿಗೆಯೂ ಅಲ್ಲ. ಇದು  ವಿರೋಧಿಸುವವರಿಗೂ ಗೊತ್ತು, ವಿರೋಧಿಸುವವರನ್ನು ಒಳಗೊಳಗೇ ಬೆಂಬಲಿಸುವವರಿಗೂ ಗೊತ್ತು. ನಿಜ ಏನೆಂದರೆ,
ಈ ವಿರೋಧ ಹುಟ್ಟಿಕೊಂಡಿರುವುದು ಸಾಂಸ್ಕೃತಿಕ ರಾಜಕಾರಣದ ಗರ್ಭದಲ್ಲಿ. ಮುಸ್ಲಿಮರನ್ನು ವಿರೋಧಿಸುವುದರಿಂದ ರಾಜಕೀಯ  ಲಾಭವಿದೆ ಎಂಬುದು 90ರ ಬಳಿಕ ಈ ದೇಶದಲ್ಲಿ ಸಿದ್ಧವಾಗುತ್ತಾ ಬಂದ ಸತ್ಯ. ಮುಸ್ಲಿಮರನ್ನು ಎಷ್ಟು ತೀವ್ರವಾಗಿ ವಿರೋ ಧಿಸುತ್ತೀರೋ ಮತ್ತು ಅವರ ಸಾಂಸ್ಕೃತಿಕ ಗುರುತುಗಳ ವಿರುದ್ಧ ಎಂಥೆಂಥ ಕಾನ್ಫಿರಸಿ ಥಿಯರಿಯನ್ನು ಹುಟ್ಟು ಹಾಕುತ್ತೀರೋ ಅಷ್ಟೇ  ಪ್ರಬಲ ವಾಗಿ ನಿಮ್ಮ ವಿಚಾರಧಾರೆಗೆ ಸಾಮಾಜಿಕ ಮನ್ನಣೆ ಲಭ್ಯವಾಗುತ್ತಾ ಹೋಗುತ್ತದೆ ಎಂಬ ವಾತಾವರಣ 90ರ ಬಳಿಕ  ದಟ್ಟವಾಗುತ್ತಾ ಹೋಯಿತು. ಟಿಪ್ಪು, ಔರಂಗಜೇಬ, ಘಸ್ನಿ, ಘೋರಿ, ನವಾಬರು ಇತ್ಯಾದಿ ದೊರೆಗಳನ್ನು ದೇಶದ್ರೋಹಿಗಳಂತೆ  ಬಿಂಬಿಸುವುದರಿಂದ ಸಾಮಾಜಿಕ ಧ್ರುವೀಕರಣ ಸಾಧ್ಯವಿದೆ ಎಂಬುದು ದಿನೇ ದಿನೇ ಗಟ್ಟಿಗೊಳ್ಳತೊಡಗಿತು. ಅವರೆಲ್ಲ ರಾಜರು

ಎಂಬುದನ್ನು ಮರೆತು ಇಸ್ಲಾಮ್ ಧರ್ಮದ ನಿಜವಾಗಿ ಪ್ರತಿನಿಧಿಗಳು ಎಂಬಂಥ ಭಾವನೆ ಯನ್ನು ಬಿತ್ತಲಾಯಿತು. ಅವರನ್ನು ಎಷ್ಟು  ಹೀನಾಯಾಗಿ ಬಿಂಬಿಸ ಬಹುದೋ ಅಷ್ಟೆಲ್ಲಾ ಪ್ರಯತ್ನಗಳನ್ನು ಮಾಡಲಾಯಿತು. ಅವರ ರಚನೆಗಳನ್ನು ಅಳಿಸುವ ಶ್ರಮ  ನಡೆಸಲಾಯಿತು.
ಈ ಸಾಂಸ್ಕೃತಿಕ ರಾಜಕಾರಣದ ಭಾಗವೇ ತನಿಷ್ಕ್ ಜಾಹೀರಾತಿನ ವಿರೋಧ.
ನಿಜಕ್ಕೂ ಅವರ ವಿರೋಧ ಇರುವುದು ಆ ಜಾಹೀರಾತಿನ ಸೀಮಂತಕ್ಕಲ್ಲ. ಅಲ್ಲಿ ಬಿಂಬಿಸಲಾಗಿರುವ ಹಿಂದೂ-ಮುಸ್ಲಿಮ್ ಭ್ರಾತೃತ್ವ  ಭಾವಕ್ಕೆ. ಮುಸ್ಲಿಮರು ಹಿಂದೂ ಸಾಂಸ್ಕೃತಿಕ ಆಚರಣೆ ಯನ್ನು ಗೌರವಿಸುವಂಥ ವಿಶಾಲ ಹೃದಯಿಗಳು ಎಂಬ ಸಂದೇಶಕ್ಕೆ. ಈ  ಸಂದೇಶ ಅವರು ಪ್ರತಿಪಾದಿಸುವ ಸಾಂಸ್ಕøತಿಕ ರಾಜಕಾರಣಕ್ಕೆ ಬಹುದೊಡ್ಡ ಕೊಡಲಿಯೇಟು. ಹಿಂದೂ-ಮುಸ್ಲಿಮರನ್ನು ಎರಡು  ಧ್ರುವಗಳಲ್ಲಿ ಕೂರಿಸಿ ಪರಸ್ಪರ ವೈರಿಗಳಂತೆ ಸದಾ ಇರಗೊಡುವುದೇ ಅವರ ಗುರಿ. ಅವರ ಯಶಸ್ಸು ಅಡಗಿರುವುದೇ ಇದರಲ್ಲಿ.  ಯಾವಾಗ ಈ ತಂತ್ರಕ್ಕೆ ಏಟು ಕೊಡುವ ಘಟನೆಗಳು ನಡೆಯುತ್ತೋ ಅಗೆಲ್ಲ ಇವರು ವಿಚಲಿತಗೊಳ್ಳುತ್ತಾರೆ. ಎಲ್ಲಿ ತಮ್ಮ ಹಿಡಿತ  ಸಮಾಜದಿಂದ ಕೈ ತಪ್ಪಿ ಹೋಗುತ್ತೋ ಎಂದು ಭಯಪಡುತ್ತಾರೆ. ಆದ್ದರಿಂದಲೇ, ಹಿಂದೂ-ಮುಸ್ಲಿಮ್ ಸೌಹಾರ್ದವನ್ನು ಮತ್ತು  ಏಕತ್ವವನ್ನು ನೀಡುವ ಸಂದೇಶಗಳು ಯಾವಾಗೆಲ್ಲ ಬಿತ್ತರವಾಗುತ್ತೋ ಆಗೆಲ್ಲ ಅದರ ವಿರುದ್ಧ ಏನಾದರೊಂದು ನೆಪ ಹೂಡಿ ಅದನ್ನು  ವಿಫಲಗೊಳಿಸಲು ಮುಂದಾಗುತ್ತಾರೆ. ನಿಜವಾಗಿ,
ಟಿ.ವಿ. ಡಿಬೆಟ್ ಆಗಬೇಕಿದ್ದುದು ಈ ಸಾಂಸ್ಕೃತಿಕ ರಾಜಕಾರಣವನ್ನು ಕೇಂದ್ರೀಕರಿಸಿಕೊಂಡು. ಇದು ಹಿಂದೂ ಧರ್ಮ ಮತ್ತು  ಇಸ್ಲಾಮ್ ಧರ್ಮದ ನಡುವಿನ ಸಮಸ್ಯೆ ಅಲ್ಲ. ಅವರ ಮೌಲಾನಾರೋ ಸ್ವಾಮೀಜಿಗಳೋ ಆ ಜಾಹೀರಾತಿನ ವಿರುದ್ಧ ಬೀದಿಗಿಳಿದು  ಹೋರಾಟಕ್ಕೂ ಧುಮುಕಿಲ್ಲ. ಹೀಗಿರುವಾಗ, ಇದಕ್ಕೆ ಇಷ್ಟೊಂದು ದೊಡ್ಡ ಮಟ್ಟದ ವಿರೋಧ ಎಲ್ಲಿಂದ ಬಂತು ಮತ್ತು ಯಾಕೆ ಬಂತು  ಎಂಬ ಬಗ್ಗೆ ಒಳನೋಟವುಳ್ಳ ಚರ್ಚೆಯ ಅಗತ್ಯ ವಿತ್ತು. ಇಂಥ ಜಾಹೀರಾತಿನಿಂದ ಯಾರಿಗೆ, ಯಾಕೆ ತೊಂದರೆಯಿದೆ ಎಂಬ ಪ್ರಶ್ನೆ  ಮುಂಚೂಣಿಗೆ ಬರಬೇಕಿತ್ತು. ಮುಸ್ಲಿಮ್ ಕುಟುಂಬವೊಂದು ಹಿಂದೂ ಯುವತಿಯನ್ನು ಹಿಂದೂವಾಗಿಯೇ ಇರಗೊಟ್ಟು, ಆಕೆಯ  ಸಂಪ್ರದಾಯದಂತೆ ಸೀಮಂತ ಆಚರಿಸಿರುವುದರಿಂದ ಭಾರತೀಯತೆಗೆ ಏನು ಅಪಾಯ ಎಂಬ ಪ್ರಶ್ನೆ ಏಳಬೇಕಿತ್ತು? ಆ ಯುವತಿಯ ನ್ನು ಆ ಮುಸ್ಲಿಮ್ ಕುಟುಂಬ ಇಸ್ಲಾಮ್‍ಗೂ ಮತಾಂತರಿಸಿಲ್ಲ, ಅಲ್ಲದೇ ಆ ಯುವತಿಯ ಆಚರಣೆಯನ್ನು ಸ್ವತಃ ಆ ಕುಟುಂಬವೇ  ಮುಂದೆ ನಿಂತು ಮಾಡಿದೆ- ಹೀಗಿರುವಾಗ ಇಲ್ಲಿ ಲವ್ ಜಿಹಾದ್ ಹೇಗೆ ಬಂತು ಎಂದು ಪ್ರಶ್ನಿಸಬೇಕಿತ್ತು?
ದುರಂತ ಏನೆಂದರೆ,
ಟಿವಿ ಚರ್ಚೆಯಲ್ಲಿ ಭಾಗವಹಿಸುವವರು ಅನೇಕ ಬಾರಿ ಚಾನೆಲ್‍ಗಳ ಒಳ ಉದ್ದೇಶವನ್ನು ಅರಿತಿರುವುದಿಲ್ಲ. ನಿರೂಪಕರು ಚರ್ಚೆಯ ನ್ನು ಕೊಂಡೊಯ್ಯುವ ಕಡೆಗೆ ಇವರೂ ಸಾಗುತ್ತಾರೆಯೇ ಹೊರತು ಈ ಚರ್ಚೆ ಸಾಗಬೇಕಾದ ದಾರಿ ಇದುವೋ ಅಥವಾ ತಮ್ಮನ್ನು  ತಪ್ಪು ದಾರಿಯೆಡೆಗೆ ನಿರೂಪಕ ಕೊಂಡೊಯ್ಯುತ್ತಿದ್ದಾರೆಯೋ ಎಂಬುದನ್ನು ವಿಶ್ಲೇಷಿಸುವುದಿಲ್ಲ ಅಥವಾ ಆ ಕ್ಷಣದಲ್ಲಿ ಅವರಿಗೆ ಅದು  ಹೊಳೆಯುವುದಿಲ್ಲ. ಇದನ್ನೇ ನಿರೂಪಕ/ಕಿಯರು ದುರುಪ ಯೋಗಿಸುತ್ತಾರೆ. ಚರ್ಚೆಯನ್ನು ತನ್ನ ಉದ್ದೇಶಿತ ಗುರಿಯೆಡೆಗೆ  ಕೊಂಡೊಯ್ದು ತನಗೆ ಬೇಕಾದ ಫಲಿತಾಂಶವನ್ನು ಪಡಕೊಳ್ಳುತ್ತಾರೆ. ತನಿಷ್ಕ್ ಜಾಹೀರಾತಿನ ಸುತ್ತ ಟಿವಿ ಮತ್ತು ಸಾಮಾಜಿಕ  ಜಾಲತಾಣ ಗಳಲ್ಲಿ ನಡೆದಿರುವ ಚರ್ಚೆಗಳಲ್ಲಿ ಬಹುತೇಕವೂ ಧರ್ಮದ ಸುತ್ತವೇ ಗಿರಕಿ ಹೊಡೆದಿರುವುದಕ್ಕೆ ಆ ಚರ್ಚೆಯನ್ನು ಹುಟ್ಟು  ಹಾಕಿದವರು ಅಥವಾ ಅದರಲ್ಲಿ ಭಾಗವಹಿಸಿದ ಚತುರರೇ ಕಾರಣ. ಅವರು ಉಪಾಯವಾಗಿ ಚರ್ಚೆಯನ್ನು ಹಿಂದೂ ಮುಸ್ಲಿಮ್ ಆಗಿ  ಪರಿವರ್ತಿಸುತ್ತಾರೆ. ಇತರರನ್ನೂ ಆ ದಾರಿಯೆಡೆಗೆ ಸೆಳೆಯುತ್ತಾರೆ. ಕೊನೆಗೆ ಚರ್ಚೆಯ ಮೂಲ ಉದ್ದೇಶವೇ ಗೌಣವಾಗಿ  ಹಿಂದೂ-ಮುಸ್ಲಿಮ್ ಜಗಳವಾಗಿ ಅದು ಕೊನೆಗೊಳ್ಳುತ್ತದೆ.
ಆ ಟಿವಿ ಚರ್ಚೆಯಲ್ಲಿ ಆದದ್ದೂ ಇದುವೇ. 

Saturday, October 24, 2020

ಹಾಥರಸ್: Fact ಮತ್ತು Truth ಗಳು



Fact
Truth 

ಬಾಹ್ಯನೋಟಕ್ಕೆ ಈ ಎರಡೂ ಪದಗಳು ಧ್ವನಿಸುವ ಅರ್ಥ ಸಮಾನವಾದುದು. ನಿಜ, ಸತ್ಯ, ನಿಖರ ಇತ್ಯಾದಿ ಅರ್ಥಗಳಲ್ಲಿ ಈ ಮೇಲಿನ ಎರಡೂ ಪದಗಳನ್ನು ಬಳಸಲಾಗುತ್ತದೆ. ಇದು ತಪ್ಪೂ ಅಲ್ಲ. ಆದರೆ, ಎಲ್ಲ ಸಂದರ್ಭಗಳಲ್ಲಿ Fact ಎಂಬುದು Truth  ಆಗಿರುವುದಿಲ್ಲ. ಹೇಳುವುದು ಸತ್ಯವೇ (Fact) ಆಗಿರಬಹುದು. ಆದರೆ ಆ ಸತ್ಯ ಆ ಸಂದರ್ಭದಲ್ಲಿ ತಪ್ಪಾದ ಸಂದೇಶವನ್ನು  ಮತ್ತು ತಪ್ಪು ಗ್ರಹಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಲೂಬಹುದು. ಅಥವಾ ಅದು ಸತ್ಯವಾಗಿದ್ದರೂ ಆ ಸಂದರ್ಭದಲ್ಲಿ  ಉದ್ದೇಶಿತ ಸತ್ಯ (Truth) ಆಗಿರುವುದಿಲ್ಲ. 

ಒಂದು ಉದಾಹರಣೆ ಕೊಡುತ್ತೇನೆ.

ಒಂದು ಮನೆ ಉರಿದು ಭಾಗಶಃ ಭಸ್ಮವಾಗಿರುತ್ತದೆ. ಆ ಮನೆಗೆ ಮತ್ತು ಆ ಮನೆಯಲ್ಲಿರುವ ಸೊತ್ತುಗಳಿಗೆ ಸಾಕಷ್ಟು ಹಾನಿ  ತಟ್ಟಿರುತ್ತದೆ. ತನಿಖಾಧಿಕಾರಿ ಆ ಮನೆಗೆ ಭೇಟಿ ಕೊಡುತ್ತಾನೆ ಮತ್ತು ಪರಿಶೀಲನೆಯ ವೇಳೆ ಅವನಿಗೆ ಸೀಮೆ ಎಣ್ಣೆ ಮತ್ತು ಬೆಂಕಿ ಪೆÇಟ್ಟಣ ಕಾಣಿಸುತ್ತದೆ. ಇದಾದ ಬಳಿಕ ಪತ್ರಕರ್ತ ಆತನನ್ನು ಕಂಡು ಹೀಗೆ ಪ್ರಶ್ನಿಸುತ್ತಾನೆ-

‘ಮನೆಗೆ ಹೇಗೆ ಬೆಂಕಿ ಹತ್ತಿಕೊಂಡಿತು?’

‘ಆ ಸ್ಥಳದಲ್ಲಿ ಆಮ್ಲಜನಕ ಇದ್ದುದರಿಂದ ಬೆಂಕಿ ಹತ್ತಿಕೊಂಡಿತು’ ಎಂದು ತನಿಖಾಧಿಕಾರಿ ಉತ್ತರಿಸುತ್ತಾನೆ.

ಅಷ್ಟಕ್ಕೂ, 

ಈ ಉತ್ತರ ಸುಳ್ಳಲ್ಲ. ಆಮ್ಲಜನಕದ ಅನುಪಸ್ಥಿತಿಯಲ್ಲಿ ಬೆಂಕಿ ಹತ್ತಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ತನಿಖಾಧಿಕಾರಿ ಸತ್ಯವ ನ್ನೇ ಹೇಳಿದ್ದಾನೆ. ಆದರೆ ಆ ಪತ್ರಕರ್ತನ ಪ್ರಶ್ನೆಗೆ ಈ ಉತ್ತರ ಸಮಂಜಸವೇ ಎಂದು ಪರಿಶೀಲಿಸಿದರೆ ಅಲ್ಲ ಎಂದೇ ಸ್ಪಷ್ಟವಾಗುತ್ತದೆ.  ಇದು ಆ ಸಂದರ್ಭಕ್ಕೆ ಅಪ್ರಸ್ತುತವಾದ, ಅನಗತ್ಯ ವಾದ ಮತ್ತು ಪತ್ರಕರ್ತನನ್ನು ತಪ್ಪುಗ್ರಹಿಕೆಗೆ ಈಡು ಮಾಡುವ ಉತ್ತರವೇ ಹೊರತು  ಖಿಡಿuಣh ಅಲ್ಲ. ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬ ಪತ್ರಕರ್ತನ ಪ್ರಶ್ನೆಯಲ್ಲಿ, ಆ ಬೆಂಕಿ ಉದ್ದೇಶಪೂರ್ವಕವೋ ಆಕಸ್ಮಿಕವೋ  ಎಂಬ ಅಂಶವೂ ಒಳಗೊಂಡಿದೆ. ಒಂದುವೇಳೆ, ಉದ್ದೇಶಪೂರ್ವಕ ಎಂದಾದರೆ, ಅದಕ್ಕೆ ಏನು ಕಾರಣ ಮತ್ತು ಯಾರು ಕಾರಣ  ಎಂಬ ಪ್ರಶ್ನೆಯೂ ಇದೆ. ಅಂದಹಾಗೆ,

ಉತ್ತರ ಪ್ರದೇಶದ ಹಾಥರಸ್‍ನ ಘಟನೆ ಮುಖ್ಯವಾಗುವುದು ಇಲ್ಲೇ. ಇಲ್ಲಿ ವಿಶೇಷವಾಗಿ ನಾವು ಎರಡು ರೀತಿಯ ಮಾತುಗಳನ್ನು  ಎತ್ತಿಕೊಳ್ಳಬಹುದು.

1. ಆ ಯುವತಿಯ ಸಾವಿನಿಂದ ನನಗೆ ಅಪಾರ ನೋವಾಗಿದೆ.

2. ಹಾಥರಸ್‍ನಲ್ಲಿ ಅತ್ಯಾಚಾರಕ್ಕೀಡಾದ ಯುವತಿ.

ಈ ಮೇಲಿನ ಎರಡೂ ರೀತಿಯ ಮಾತುಗಳನ್ನು ನೀವು ಆಲಿಸಿಯೇ ಇರುತ್ತೀರಿ. ಟಿ.ವಿ. ಚರ್ಚೆಗಳಲ್ಲಿ ಮತ್ತೆ ಮತ್ತೆ ಇಂಥ ಪದ ಪ್ರಯೋಗವನ್ನು ಕೇಳಿಯೂ ಇರುತ್ತೀರಿ. ಮೇಲ್ನೋಟಕ್ಕೆ ಭಾಸವಾಗುವಂತೆ, ಈ ಬಗೆಯ ಪದಪ್ರಯೋಗದಲ್ಲಿ ಅಸತ್ಯವೇನೂ  ಕಾಣಿಸುವುದಿಲ್ಲ. ಯಾರದೇ ಸಾವಿನಲ್ಲಿ ನೋವಾಗುವುದೂ ಸಹಜ ಮತ್ತು ಯುವತಿಯರ ಮೇಲೆ ಅತ್ಯಾಚಾರವಾಗುವುದೂ ಸಹಜ.  ಈ ಮೇಲಿನ ಮಾತುಗಳಲ್ಲಿ ಸುಳ್ಳೇನೂ ಇಲ್ಲ. ಆದರೆ ಸತ್ಯವನ್ನು ಪ್ರಖರವಾಗಿ ಮತ್ತು ಸನ್ನಿವೇಶಕ್ಕೆ ಅನುಗುಣವಾಗಿ ಇಲ್ಲಿನ  ಮಾತುಗಳು ಕಟ್ಟಿ ಕೊಡುತ್ತವೆಯೇ ಎಂದು ವಿಶ್ಲೇಷಿಸಲು ಹೊರಟರೆ ಇಲ್ಲ ಎಂಬ ಉತ್ತರವೇ ಎದುರಾಗುತ್ತದೆ.
ಮೊದಲನೆಯದಾಗಿ, ‘ಹಾಥರಸ್‍ನ ಯುವತಿಯ ಸಾವಿನಿಂದ ನನಗೆ ತೀವ್ರ ನೋವಾಗಿದೆ’ ಎಂಬ ಹೇಳಿಕೆಯಲ್ಲಿ ಅನುಕಂಪ ಇದೆ,  ದುಃಖ ಇದೆ. ಅಲ್ಲದೇ ಹಾಥರಸ್‍ನ ಯುವತಿ ಸತ್ತಿರುವುದೂ ನಿಜ. ಸತ್ತವರಿಗಾಗಿ ದುಃಖಿತ ಭಾವ ವ್ಯಕ್ತಪಡಿಸುವುದೂ ಸಹಜ.  ಆದರೆ, ಸಾವು ಎಂಬ ಪದ ಹಾಥರಸ್‍ನ ಘಟನೆಗೆ ಸೂಕ್ತವೇ? ಅದು ಸಾವೇ?

ಸಾಮಾನ್ಯವಾಗಿ ಸಾವು ಎಂಬ ಪದವನ್ನು ನಾವು ಅಪಘಾತದಿಂದಾಗುವ ಅಥವಾ ಕಾಯಿಲೆಯಿಂದಾಗುವ ಸಾವಿಗೆ ಬಳಸುತ್ತೇವೆ.  ಹೆಣ್ಣಾಗಲಿ, ಗಂಡಾಗಲಿ ಸಹಜ ಮರಣವನ್ನಪ್ಪುವುದಕ್ಕೆ ಸಾವು ಎಂದು ಉಲ್ಲೇಖಿಸುತ್ತೇವೆ. ಆದರೆ ಹಾಥರಸ್‍ನಲ್ಲಿ ನಡೆದಿರುವುದೇನು? ಕೇವಲ ಸಾವು ಎಂಬ ಪದದೊಳಗೆ ತುಂಬಿಬಿಡ ಬಹುದಾದ ಸಣ್ಣ ಕೃತ್ಯವೇ ಅದು? ಆ ಯುವತಿಯನ್ನು ಬರ್ಬರವಾಗಿ  ನಡೆಸಿಕೊಳ್ಳಲಾಗಿದೆ. ಅತ್ಯಾಚಾರ ನಡೆಸಲಾಗಿದೆ ಮತ್ತು ಕ್ರೂರ ಹಿಂಸೆಗೆ ಒಳಪಡಿಸಲಾಗಿದೆ. ಅಂತಿಮವಾಗಿ ಆ ಹೆಣ್ಮಗು ಪ್ರಾಣ  ಕಳಕೊಂಡಿದೆ. ಸಾವು ಎನ್ನುವ ಪದ ಈ ಎಲ್ಲವನ್ನೂ ಬಿಂಬಿಸುತ್ತದೆಯೇ?
 ನಿಜವಾಗಿ,
‘ಹಾಥರಸ್‍ನ ಯುವತಿಯ ಸಾವಿನಿಂದ ನೋವಾಗಿದೆ’ ಎಂಬ ವಾಕ್ಯವೇ ತಪ್ಪು. ಹಾಥರಸ್‍ನಲ್ಲಿ ಯುವತಿ ಸಾವಿಗೀಡಾದದ್ದಲ್ಲ,  ಬರ್ಬರವಾಗಿ ಹತ್ಯೆ ನಡೆಸಲಾಗಿದೆ. ಅದಕ್ಕೆ ಮಾಮೂಲಿ ನೋವನ್ನು ಪ್ರಕಟಿಸಿದರೆ ಸಾಲದು. ಆ ನೋವಿನಲ್ಲಿ ಆಕ್ರೋಶ, ಸಿಟ್ಟು, ಅನ್ಯಾಯಕ್ಕೊಳಗಾದ ಭಾವ ಬಿಂಬಿತವಾಗಬೇಕು. ಇದೇ ರೀತಿಯಲ್ಲಿ ಈ ಮೇಲಿನ ಇನ್ನೊಂದು ಹೇಳಿಕೆಯನ್ನೂ ಎತ್ತಿಕೊಳ್ಳಬಹುದು.  ‘ಹಾಥರಸ್‍ನಲ್ಲಿ ಅತ್ಯಾಚಾರಕ್ಕೀಡಾದ ಯುವತಿ..’ ಎಂಬ ಮಾತು ನಿಜ (Fact) ಹೌದು. ಆದರೆ ಪೂರ್ಣ ನಿಜ ಅಲ್ಲ. ಹಾಥರಸ್ ನಲ್ಲಿ ಅತ್ಯಾಚಾರಕ್ಕೀಡಾದ ದಲಿತ ಯುವತಿ ಎಂಬುದೇ ಸಂಪೂರ್ಣ ನಿಜ (Truth).

ಈ ದೇಶದಲ್ಲಿ ನಡೆಯುವ ಅತ್ಯಾಚಾರಕ್ಕೂ ದಲಿತ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರಕ್ಕೂ ವ್ಯತ್ಯಾಸ ಇದೆ. ಹಾಗೆಯೇ ಮುಸ್ಲಿಮರ  ಮೇಲಿನ ದೌರ್ಜನ್ಯಕ್ಕೂ ವ್ಯತ್ಯಾಸ ಇದೆ. ದಲಿತರ ಮೇಲಿನ ಹಲ್ಲೆಗೂ ಸಾಮಾನ್ಯ ಹಲ್ಲೆಗೂ ವ್ಯತ್ಯಾಸ ಇದೆ. ಅತ್ಯಾಚಾರ ಈ ದೇಶಕ್ಕೆ  ಹೊಸತಲ್ಲ. ದೌರ್ಜನ್ಯವೂ ಹಾಗೆಯೇ. 130 ಕೋಟಿ ಜನಸಂಖ್ಯೆಯಿರುವ ದೇಶದಲ್ಲಿ ಹತ್ಯೆಗೆ ಬೆಚ್ಚಿ ಬೀಳುವವರೂ ಇಲ್ಲ. ಆದರೆ,  ಸಾಮಾನ್ಯ ಹಲ್ಲೆಗೂ ದಲಿತರ ಮೇಲಿನ ಹಲ್ಲೆಗೂ ನಡುವೆ ಇರುವ ವ್ಯತ್ಯಾಸ ಏನೆಂದರೆ- ಜಾತಿ. ಮುಸ್ಲಿಮರಿಗೆ ಸಂಬಂಧಿಸಿ  ಹೇಳುವುದಾದರೆ ಅವರ ಧರ್ಮ. ದಲಿತೇತರ ಮತ್ತು ಮುಸ್ಲಿಮೇತರ ಹಲ್ಲೆ-ಹತ್ಯೆ, ದೌರ್ಜನ್ಯಗಳಿಗೆ ಈ ಹೆಚ್ಚುವರಿ ಕಾರಣಗಳು  ಇರುವುದಿಲ್ಲ. ಮೇಲ್ಜಾತಿಯ ಇಬ್ಬರು ಯುವಕರು ಪರಸ್ಪರ ವಾಗ್ವಾದಗಳಲ್ಲಿ ತೊಡಗುವುದಕ್ಕೂ ದಲಿತ ಯುವಕ ಮತ್ತು ಮೇಲ್ಜಾತಿಯ  ಯುವಕರಿಬ್ಬರು ವಾಗ್ವಾದಗಳಲ್ಲಿ ತೊಡಗುವುದಕ್ಕೂ ಭಿನ್ನತೆ ಇದೆ. ಮೇಲ್ಜಾತಿಯ ಯುವಕನಿಗೆ ಆ ವಾಗ್ವಾದಕ್ಕೆ ಕಾರಣವಾದ  ವಿಷಯಕ್ಕಿಂತಲೂ ತನ್ನ ಜೊತೆ ವಾಗ್ವಾದದಲ್ಲಿ ತೊಡಗಿರುವ ಯುವಕನ ಜಾತಿ ಮುಖ್ಯವಾಗುತ್ತದೆ. ಅದುವೇ ಆತನನ್ನು ಆಕ್ರೋ ಶಗೊಳ್ಳುವಂತೆಯೂ ಮಾಡುತ್ತದೆ. ಮೇಲ್ಜಾತಿ ಯುವಕರಿಬ್ಬರ ನಡುವಿನ ವಾಗ್ವಾದ ಅತಿರೇಕಕ್ಕೆ ಹೋಗದೇ ಶಾಂತವಾಗುವಾಗ ದಲಿತ  ಯುವಕ ಮತ್ತು ಮೇಲ್ಜಾತಿ ಯುವಕನ ನಡುವಿನ ವಾಗ್ವಾದ ಹೊೈ-ಕೈ, ಹಲ್ಲೆಯಲ್ಲಿ ಕೊನೆಗೊಳ್ಳುವುದಕ್ಕೆ ಅವಕಾಶ ಇದೆ. 

ಮುಸ್ಲಿಮರಿಗೆ  ಸಂಬಂಧಿಸಿಯೂ ಈ ಮಾತನ್ನು ಸಂಪೂರ್ಣ ಅಲ್ಲದಿದ್ದರೂ ಬಹುತೇಕ ಅನ್ವಯಿಸಿ ನೋಡಬಹುದು. ಇಬ್ಬರು ಮುಸ್ಲಿಮ್ ಯುವಕರ  ನಡುವಿನ ಜಗಳ ಹಿಂದೂ ಮತ್ತು ಮುಸ್ಲಿಮ್ ಯುವಕರ ನಡುವಿನ ಜಗಳದಂತೆ ಇರುವುದು ಕಡಿಮೆ. ಹಾಗೆ ಕೊನೆಗೊಳ್ಳುವುದೂ  ಕಡಿಮೆ. ಇಬ್ಬರು ಮುಸ್ಲಿಮ್ ಯುವಕರ ನಡುವಿನ ಜಗಳ ಅವರಿಬ್ಬರ ನಡುವಿನ ಜಗಳವಾಗಿ ಗುರುತಿಸಿಕೊಂಡರೆ, ಹಿಂದೂ ಮತ್ತು  ಮುಸ್ಲಿಮ್ ಯುವಕರ ನಡುವಿನ ಜಗಳವು ಎರಡು ಸಮುದಾಯಗಳ ನಡುವಿನ ಜಗಳವಾಗಿ ಮತ್ತು ಎರಡೂ ಸಮುದಾಯಗಳ  ಪಾಲಿನ ಪ್ರತಿಷ್ಠೆಯಾಗಿ ಪರಿವರ್ತಿತವಾಗುವುದೇ ಹೆಚ್ಚು. ಇವತ್ತಿನ ದಿನಗಳಂತೂ ಇಂಥ ಸಾಧ್ಯತೆಯನ್ನು ಹಲವು ಪಟ್ಟು ವೃದ್ಧಿಸಿದೆ. ಈ  ಹಿನ್ನೆಲೆಯಲ್ಲೂ, ಹಾಥರಸ್ ಅತ್ಯಾಚಾರ ಮುಖ್ಯವಾಗುತ್ತದೆ.

ದಲಿತರ ಮೇಲಿನ ಹಲ್ಲೆಗೆ ಅಥವಾ ಅತ್ಯಾಚಾರಕ್ಕೆ ಸಾಮಾಜಿಕ, ಆರ್ಥಿಕ, ಸಾಂಸ್ಕøತಿಕ ಮತ್ತು ರಾಜಕೀಯ ಆಯಾಮಗಳೂ ಇರುತ್ತವೆ.  ದೇಶದ ಇವತ್ತಿನ ಪರಿಸ್ಥಿತಿಗೆ ಅನ್ವಯಿಸಿ ಹೇಳುವುದಾದರೆ, ಮುಸ್ಲಿಮರ ಮೇಲಿನ ದೌರ್ಜನ್ಯಕ್ಕೂ ಈ ಆಯಾಮ ಇದೆ. ಹಾಥರಸ್  ಘಟನೆಯ ಆರೋಪಿಯಲ್ಲೋರ್ವನಾದ ಸಂದೀಪ್‍ನ ಮನೆ ಮತ್ತು ಅತ್ಯಾಚಾರಕ್ಕೀಡಾದ ದಲಿತ ಯುವತಿಯ ಮನೆ ಪರಸ್ಪರ  ಎದುರು-ಬದುರಾಗಿದೆ. ಈ ಯುವತಿಯ ಹೆತ್ತವರಿಗೆ ಉಳುಮೆಯ ಗದ್ದೆ ಇದೆ. ಮನೆಯಲ್ಲಿ ಎರಡು ಎಮ್ಮೆಗಳಿವೆ. ಆ ಪ್ರದೇಶದ  ಇತರರಿಗೆ ಹೋಲಿಸಿದರೆ ಒಂದಿಷ್ಟು ಸಬಲ ಕುಟುಂಬ ಈ ಯುವತಿಯದು. ಅಲ್ಲದೇ, ಈ ಯುವತಿಯ ಕುಟುಂಬ ಕೊಟ್ಟ ದೂರಿ ನಿಂದಾಗಿ ಸಂದೀಪನ ತಂದೆ ನ್ಯಾಯಾಂಗ ಬಂಧನಕ್ಕೂ ಒಳಗಾಗಿದ್ದರು. ದಲಿತ ಕುಟುಂಬವೊಂದು ಸಬಲವಾಗುವುದು ಮತ್ತು  ಮೇಲ್ಜಾತಿ ಕುಟುಂಬದ ವಿರುದ್ಧ ದೂರು ಕೊಟ್ಟ ಕಂಬಿ ಎಣಿಸುವಂತೆ ಮಾಡುವುದೆಲ್ಲ ಜಾತಿ ವ್ಯಸನದಿಂದ ಬಳಲುತ್ತಿರುವ ಉತ್ತರ  ಭಾರತದಲ್ಲಿ ಸಾಮಾನ್ಯ ಸಂಗತಿಯಲ್ಲ. ಮುಂದುವರಿದ ಸಮಾಜಕ್ಕೂ ಇಂಥದ್ದನ್ನು ಸ್ವೀಕರಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಆ  ಯುವತಿಯ ಅಂತ್ಯಸಂಸ್ಕಾರದ ಬಳಿಕದ ಘಟನೆಗಳನ್ನೇ ಪರಿಶೀಲಿಸಿ.

ಆಕೆಯ ಮೇಲೆ ಅತ್ಯಾಚಾರವೇ ಆಗಿಲ್ಲ ಎಂದು ಅಲ್ಲಿನ ಪೊಲೀಸ್ ಮುಖ್ಯಸ್ಥರೇ ಹೇಳುತ್ತಾರೆ. ಇದಕ್ಕೆ ಆಧಾರವಾಗಿ ಅವರು ಮುಂದಿಟ್ಟಿರುವುದು- ವೀರ್ಯ. ವೀರ್ಯ ಸಿಕ್ಕಿಲ್ಲವಾದ್ದರಿಂದ ಅತ್ಯಾಚಾರವಾಗಿಲ್ಲ ಎಂಬುದು ಅವರ ವಾದ. ಇದು ನಿಜ ಇರಬಹುದು.  ಆದರೆ, ಅತ್ಯಾಚಾರವನ್ನು ಸಾಬೀತುಪಡಿಸುವುದಕ್ಕೆ ವೀರ್ಯ ಸಿಗಲೇಬೇಕೆಂದಿದೆಯೇ? ಕಾನೂನು ಹಾಗೆ ಹೇಳುತ್ತದೆಯೇ? ಈ ಪ್ರಶ್ನೆಯನ್ನು ಜಾಣತನದಿಂದ ಅವರು ಅಡಗಿಸಿದ್ದಾರೆ. ಅವರು ಹೇಳಿರುವುದು ಸತ್ಯ. ಆದರೆ Truth  ಏನೆಂದರೆ 2012ರ ನಿರ್ಭಯ  ಪ್ರಕರಣದ ಬಳಿಕ ತಿದ್ದುಪಡಿ ಮಾಡಲಾದ ಕಾನೂನಿನಂತೆ ಅತ್ಯಾಚಾರವನ್ನು ಸಾಬೀತುಪಡಿಸುವುದಕ್ಕೆ ವೀರ್ಯ ಸಿಗಬೇಕೆಂದಿಲ್ಲ.  ಹಾಗೆಯೇ ಹೆತ್ತವರಿಗೆ ಯುವತಿಯ ಮುಖವನ್ನೂ ತೋರಿಸದೆಯೇ ಮಧ್ಯರಾತ್ರಿ ಶವಸಂಸ್ಕಾರವನ್ನು ಪೊಲೀಸರೇ ನಿರ್ವಹಿಸಿದರಲ್ಲ,  ಅದಕ್ಕೆ ಕೊಡುವ ಕಾರಣ ಏನೆಂದರೆ, ಆ ಶವವನ್ನು ರಾಜಕೀಯಕ್ಕಾಗಿ ಭೀಮ್ ಆರ್ಮಿ ಸದಸ್ಯರು ಬಳಸಿಕೊಳ್ಳುವ ಸಾಧ್ಯತೆ ಇತ್ತು,  ಶವ ಅದಾಗಲೇ ಕೊಳೆಯಲು ಆರಂಭಿಸಿತ್ತು ಇತ್ಯಾದಿ ಇತ್ಯಾದಿ. ಭೀಮ್ ಆರ್ಮಿಯ ಸದಸ್ಯರು ಅಲ್ಲಿ ಇದ್ದುದು ನಿಜ (Fact).  ಆದರೆ, ತರಾತುರಿಯಿಂದ ಶವಸಂಸ್ಕಾರ ನಡೆಸುವುದಕ್ಕೆ ಅದೊಂದೇ ಕಾರಣವೇ? ಅಲ್ಲ. ಅತ್ಯಾಚಾರದಂಥ ಪ್ರಕರಣಗಳಿಗೆ ದೇಹವೇ  ಮುಖ್ಯ ಸಾಕ್ಷ್ಯ. ಆ ಸಾಕ್ಷ್ಯ ಎಲ್ಲಿಯವರೆಗೆ ಲಭ್ಯವಿರುತ್ತದೋ ಅಲ್ಲಿಯ ವರೆಗೆ ಅದೊಂದು ಟೈಂಬಾಂಬ್. ಆರೋಪಿಗಳು ಅತ್ಯಂತ  ಹೆಚ್ಚು ಭಯಪಡುವುದು ಆ ದೇಹಕ್ಕೆ. ಇದು Truth. ಇದನ್ನು ಅವರು ಹೇಳಲ್ಲ. 
ನಿಜವಾಗಿ,

ಕೆಲವೊಮ್ಮೆ ರಾಜಕಾರಣಿಗಳು ಮತ್ತು ಅಧಿಕಾರಿಗಳು ಸತ್ಯವನ್ನು ಹೇಳುವುದೇ ಪರಮ ಸತ್ಯವನ್ನು (Truth) ಅಡಗಿಸುವುದಕ್ಕಾಗಿ.  ದಲಿತ ಯುವತಿ ಎಂದು ಹೇಳ್ಬೇಡಿ, ಯುವತಿ ಎಂದು ಹೇಳಿದರೆ ಸಾಕು ಎಂಬ ಸಾಬೂನು ಮಾತನ್ನು ಕೆಲವರು ಪವಿತ್ರ ವಾಕ್ಯದಂತೆ  ಹೇಳುವುದಿದೆ. ಪಕ್ಕನೆ ನಮಗೆ ಹೌದಲ್ವಾ ಎಂದು ಅನಿಸುವುದೂ ಇದೆ. ಇದು ಈಚಿಛಿಣ ಹೌದು. ಆದರೆ Truth ಅಲ್ಲ. ದಲಿತ  ಯುವತಿಯೂ ದಲಿತೇತರ ಯುವತಿಯೂ ಹೆಣ್ಣು ಎಂಬ ನೆಲೆಯಲ್ಲಿ ಸಮಾನರೇ ಹೊರತು ಅದರಾಚೆಗಿನ ಸ್ಥಾನ-ಮಾನಗಳಲ್ಲಲ್ಲ.  ಹಾಥರಸ್ ಘಟನೆಯಲ್ಲಿ ಅಲ್ಲಿನ ಮುಖ್ಯಮಂತ್ರಿಗಳಿಂದ ಹಿಡಿದು ಪೊಲೀಸ್ ಅಧಿಕಾರಿಗಳ ವರೆಗೆ ಎಲ್ಲರೂ ನಡೆದುಕೊಂಡ  ರೀತಿಯನ್ನೊಮ್ಮೆ ಗಮನಿಸಿ. ಒಂದುವೇಳೆ, 

ಆರೋಪಿಗಳು ಮೇಲ್ಜಾತಿ ಸಮುದಾಯದವ ರಾಗದೇ ಇದ್ದಿದ್ದರೆ ಅವರೆಲ್ಲ  ಹಾಗಿರುತ್ತಿದ್ದರೆ? ಜಿಲ್ಲಾಧಿಕಾರಿಯವರು ಹಾಗೆ ನಡೆದುಕೊಳ್ಳು ತ್ತಿದ್ದರೇ? ಪೊಲೀಸರು ಮಾಧ್ಯಮದವರನ್ನು ತಡೆಯುತ್ತಿದ್ದರೇ?  ಬ್ಯಾರಿಕೇಡ್‍ಗಳನ್ನಿಟ್ಟು ಊರಿಗೆ ಊರನ್ನೇ ದ್ವೀಪ ವನ್ನಾಗಿ ಮಾಡುತ್ತಿದ್ದರೇ? ಆರೋಪಿಗಳನ್ನು ರಕ್ಷಿಸುವ ಧಾಟಿಯಲ್ಲಿ ಹೇಳಿಕೆಗಳ  ಮೇಲೆ ಹೇಳಿಕೆಗಳನ್ನು ಕೊಡಿಸುತ್ತಿದ್ದರೇ? ನಿಜಕ್ಕೂ,

ಆ ಯುವತಿಯದ್ದು ಸಾವೂ ಅಲ್ಲ, ಅದಕ್ಕೆ ಬರೇ ನೋವು ಸಾಕಾಗುವುದೂ ಇಲ್ಲ. 

Saturday, September 26, 2020

ನಾವು ಹೆಮ್ಮೆ ಪಡಬೇಕಾದುದು ಯಾವಾಗ ಅಂದರೆ?



ಮೊದಲಿಗೆ ಒಂದಿಷ್ಟು ಮಾಹಿತಿಗಳು.

ಕೇಂದ್ರ ಲೋಕಸೇವಾ ಆಯೋಗವು (UPSC) ಈ ಬಾರಿ ನಡೆಸಿದ ಪರೀಕ್ಷೆಯಲ್ಲಿ ಒಟ್ಟು 829 ಮಂದಿ ತೇರ್ಗಡೆಯಾಗಿದ್ದು, ಇವರಲ್ಲಿ 42 ಮಂದಿ ಮುಸ್ಲಿಮರು. ಟಾಪ್ 100ರಲ್ಲಿ ಸ್ಥಾನ  ಪಡೆದ ಏಕೈಕ ಮುಸ್ಲಿಮ್ ಅಭ್ಯರ್ಥಿ ಸಪ್ನಾ ನಝರುದ್ದೀನ್. ಇವರ ರಾಂಕ್ 45. ಆಗಸ್ಟ್ 4ರಂದು ಈ ಫಲಿತಾಂಶ ಬಿಡುಗಡೆಗೊಂಡಿದೆ. ಕಳೆದ ವರ್ಷ ಒಟ್ಟು 759 ಮಂದಿ ತೇರ್ಗಡೆಯಾಗಿದ್ದರು ಮತ್ತು ಇವರಲ್ಲಿ 28 ಮಂದಿಯಷ್ಟೇ ಮುಸ್ಲಿಮರಿದ್ದರು. 2016ರಲ್ಲಿ ಒಟ್ಟು ತೇರ್ಗಡೆಗೊಂಡವರ ಪೈಕಿ 50 ಮಂದಿ ಮುಸ್ಲಿಮರಿದ್ದರು. ಅಲ್ಲದೇ, ಟಾಪ್ 100ರಲ್ಲಿ 10 ಮಂದಿ  ಮುಸ್ಲಿಮರಿದ್ದರು. 2012, 13, 14, 15ರಲ್ಲಿ ಕ್ರಮವಾಗಿ 30, 34, 38, 36 ಮುಸ್ಲಿಮ್ ಅಭ್ಯರ್ಥಿಗಳು ಈ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.

ಮೊನ್ನೆ ಆಗಸ್ಟ್ 21ರಂದು ಹೊರಬಿದ್ದ ಸಿಇಟಿ ಪರೀಕ್ಷಾ ಫಲಿತಾಂಶದ ಕತೆಯೂ ಇದುವೇ. ಐದು ವಿಭಾಗಗಳ ಮೊದಲ 50  ರಾಂಕ್ ಗಳಲ್ಲಿ ಸ್ಥಾನ ಪಡೆದಿರುವುದು ಒಬ್ಬನೇ ಒಬ್ಬ ಮುಸ್ಲಿಮ್  ಅಭ್ಯರ್ಥಿ. ಸಿಇಟಿಯ ಐದು ವಿಭಾಗಗಳಾದ ಎಂಜಿನಿಯರಿಂಗ್, ಬಿಎಸ್‍ಸಿ ಅಗ್ರಿಕಲ್ಚರ್, ಪಶು ವೈದ್ಯಕೀಯ, ಬಿ ಫಾರ್ಮ ಮತ್ತು ನ್ಯಾಚುರೋಪಥಿ ಆ್ಯಂಡ್ ಯೋಗಿಕ್ ಸೈನ್ಸ್ ಗಳಲ್ಲಿ ಎಂ.ಡಿ.  ಅರ್ಬಾಜ್  ಅಹ್ಮದ್‍ರನ್ನು ಬಿಟ್ಟರೆ ಮೊದಲ 50 ರಾಂಕ್ ಗಳಲ್ಲಿ ಇನ್ನಾರೂ ಮುಸ್ಲಿಮರಿಲ್ಲ.
ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 73% ವಿದ್ಯಾರ್ಥಿಗಳು ಪಾಸಾಗಿದ್ದರೆ, ಪರಿಶಿಷ್ಟ ಪಂಗಡದಿಂದ 71% ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಮುಸ್ಲಿಮರು  ಒಳಗೊಂಡಿರುವ 2ಬಿ ವಿಭಾಗದ ಪರೀಕ್ಷಾ ಫಲಿತಾಂಶ 67%.

ವಿಷಾದ ಏನೆಂದರೆ, ಮುಸ್ಲಿಮ್ ಸಮುದಾಯದಲ್ಲಿ ಅತ್ಯಂತ ಕಡಿಮೆ ಚರ್ಚೆಗೆ ಒಳಗಾಗುವ ವಿಷಯಗಳು ಇವು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮುಸ್ಲಿಮ್  ವಿದ್ಯಾರ್ಥಿಗಳ ವಿವರಗಳು ಒಂದೆರಡು ದಿನಗಳ ಕಾಲ ಮುಸ್ಲಿಮರ ಮೊಬೈಲ್‍ಗಳಲ್ಲಿ ಹರಿದಾಡುತ್ತವಾದರೂ ಅದರಾಚೆಗೆ ಸಿಇಟಿ, ಯುಪಿಎಸ್‍ಸಿ, ನೀಟ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳ  ವಿವರ ಹರಿದಾಡುವುದು ಶೂನ್ಯ ಅನ್ನುವಷ್ಟು ಕಡಿಮೆ. ಈ ಸಮುದಾಯದ ಹೆಚ್ಚಿನ ಮಂದಿಗೆ ಎಸ್ಸೆಸ್ಸೆಲ್ಸಿ, ಡಿಗ್ರಿ ಇತ್ಯಾದಿ ಹೆಸರುಗಳ ಹೊರತಾಗಿ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಅವುಗಳಲ್ಲಿ  ತೇರ್ಗಡೆಯಾಗುವ ಮೂಲಕ ಆಗುವ ಪ್ರಯೋಜನಗಳ ಕುರಿತು ಅರಿವಿಲ್ಲ. ಅಲ್ಲದೇ, ಅರಿವಿದ್ದವರಿಂದ ಅರಿವಿಲ್ಲದವರಿಗೆ ಅವು ಹಂಚಿಕೆಯಾಗುವ ಸನ್ನಿವೇಶಗಳು ದೊಡ್ಡ ಪ್ರಮಾಣದಲ್ಲಿ  ಸೃಷ್ಟಿಯಾಗುತ್ತಲೂ ಇಲ್ಲ. ಹಾಗಂತ,

ಇದಕ್ಕೆ ಬೇಕಾದ ಸಂಪನ್ಮೂಲ ವ್ಯಕ್ತಿಗಳು ಮತ್ತು ವ್ಯವಸ್ಥೆಗಳು ಇಲ್ಲ ಎಂದಲ್ಲ. ಈಗ ಇರುವ ವ್ಯವಸ್ಥೆ ಎಷ್ಟು ಅದ್ಭುತವಾಗಿದೆ ಯೆಂದರೆ, ಈ ವ್ಯವಸ್ಥೆ ಇನ್ನಾವುದಾದರೂ ಸಮುದಾಯದಲ್ಲಿ ಇ ದ್ದಿದ್ದಿದ್ದೇ ಆಗಿದ್ದರೆ ಅವು ಯಾರ ಕೈಗೂ ಸಿಗದಷ್ಟು ಎತ್ತರಕ್ಕೆ ಏರಿ ಬಿಡುತ್ತಿದ್ದುವು.

ಸುಮ್ಮನೆ, ನಮ್ಮ ನಮ್ಮ ವ್ಯಾಪ್ತಿಯಲ್ಲಿರುವ ಮಸೀದಿಗಳನ್ನೊಮ್ಮೆ ಲೆಕ್ಕ ಹಾಕಿ. ಫರ್ಲಾಂಗಿಗೊಂದರಂತೆ ಮಸೀದಿಗಳಿವೆ. ಈ ಮಸೀದಿಗಳೆಲ್ಲ ಭೂಮಿಯಡಿಯಿಂದ ದಿಢೀರ್ ಆಗಿ ಉದ್ಭವವಾದವುಗಳಲ್ಲ. ಒಂದು ಪ್ರದೇಶದಲ್ಲಿ ಮಸೀದಿ ಇದೆ ಎಂದಾದರೆ, ಆ ಪ್ರದೇಶದಲ್ಲಿ ಮುಸ್ಲಿಮರಿದ್ದಾರೆ ಎಂದರ್ಥ. ಯಾವ ಸರಕಾರವೂ ಮಸೀದಿ ಕಟ್ಟಿ ಕೊಡುವುದಿಲ್ಲ. ಮಸೀದಿ ಕಟ್ಟಿಕೊಳ್ಳುವುದು  ಮುಸ್ಲಿಮರು. ಆ ಮಸೀದಿಯಲ್ಲಿ ನಿತ್ಯದ ಪ್ರಾರ್ಥನೆಗಾಗಿ ಮತ್ತು ನೀರು, ಚಾಪೆ, ವಿದ್ಯುತ್, ನೈರ್ಮಲ್ಯಗಳನ್ನು ಕಾಯ್ದುಕೊಳ್ಳುವುದಕ್ಕಾಗಿ ಬೇಕಾದ ವ್ಯವಸ್ಥೆ ಮಾಡಿಕೊಳ್ಳುವುದೂ ಮುಸ್ಲಿಮರೇ.  ಐದು ಬಾರಿ ಅದಾನ್ ಕೊಡುವುದಕ್ಕೆ, ನಮಾಜ್ ಗೆ ನೇತೃತ್ವ ನೀಡುವು ದಕ್ಕೆ ಮತ್ತು ಮದ್ರಸದಲ್ಲಿ ವಿದ್ಯಾರ್ಥಿಗಳಿಗೆ ಕಲಿಸುವುದಕ್ಕೆ ಬೇಕಾದ ಏರ್ಪಾಡುಗಳನ್ನು ಮಾಡುವುದೂ ಮುಸ್ಲಿಮರೇ.  ಇವೆಲ್ಲವು ಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗುವುದಕ್ಕಾಗಿ ಮಸೀದಿ ಕಮಿಟಿಯನ್ನು ರಚಿಸುವುದೂ ಮುಸ್ಲಿಮರೇ. ಆದ್ದರಿಂದಲೇ, ಪ್ರಶ್ನೆಗಳೂ ಹುಟ್ಟಿಕೊಳ್ಳೋದು.
ಇಷ್ಟೆಲ್ಲ ಸಾಧ್ಯವಿರುವ ಮುಸ್ಲಿಮರಿಗೆ ಸಿಇಟಿ, ಯುಪಿಎಸ್‍ಸಿ, ನೀಟ್-ಜೆಇಇ, ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಇತ್ಯಾದಿ ಇತ್ಯಾದಿಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳು ಟಾಪರ್ ಆಗಿ ಮೂಡಿ  ಬರುವಂತೆ ಮಾಡುವುದು ಕಷ್ಟವೇ? ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಗ್ರಿಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳು ಶೇ. 95ಕ್ಕಿಂತ ಹೆಚ್ಚು ತೇರ್ಗಡೆ ಹೊಂದುವಂತೆ ಮಾಡುವುದು ಅಸಾಧ್ಯವೇ? ಸ್ಪರ್ಧಾತ್ಮಕ  ಪರೀಕ್ಷೆಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳು ಭಾರೀ ಪ್ರಮಾಣದಲ್ಲಿ ಭಾಗವಹಿಸುವಂತೆ ಮಾಡುವುದು ಮತ್ತು ಉನ್ನತ 100ರ ಪಟ್ಟಿಯಲ್ಲಿ ಪ್ರಾಬಲ್ಯವನ್ನು ಸ್ಥಾಪಿಸುವಂತೆ ಮಾಡಲಾಗದೇ?

ಖಂಡಿತ ಸಾಧ್ಯವಿದೆ.

ಎಲ್ಲ ಮಸೀದಿಯ ಆಡಳಿತ ಸಮಿತಿ ಮತ್ತು ಉಸ್ತಾದರು ಮಸೀದಿಯ ಮಿಂಬರಿನ ಪಕ್ಕ ಕುಳಿತು ಹೀಗೆ ಒಮ್ಮೆ ಅವಲೋಕನ ನಡೆಸಿಕೊಳ್ಳಲಿ-
ನಮ್ಮ ಜಮಾಅತ್‍ನಲ್ಲಿ ಎಸ್ಸೆಸ್ಸೆಲ್ಲಿ, ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಎಷ್ಟಿದ್ದಾರೆ? ಈ ಮುಗಿಸಿದವರಲ್ಲಿ ತೇರ್ಗಡೆ ಹೊಂದಿ ಮುಗಿಸಿದವರು ಎಷ್ಟು, ಅನುತ್ತೀರ್ಣರಾಗಿ ಅರ್ಧದಲ್ಲೇ   ಮುಗಿಸಿದವರು ಎಷ್ಟು? ಎಸ್ಸೆಸ್ಸೆಲ್ಸಿಯಲ್ಲಿ ಫೇಲಾದವರು ಏನು ಮಾಡುತ್ತಿದ್ದಾರೆ, ಅವರಿಗೆ ಉದ್ಯೋಗ ಸಿಕ್ಕಿದೆಯೇ, ಮಗ ಹಾಳಾಗುತ್ತಿದ್ದಾನೆ ಎಂಬ ದೂರು ಮನೆಯವರಲ್ಲಿ ಇದೆಯೇ? ಮಗ ನ/ಳ ವಿದ್ಯಾಭ್ಯಾಸವನ್ನು ಮುಂದುವರಿಸಲು ಅವರು ಪ್ರಯತ್ನ ಪಟ್ಟಿದ್ದಾರೆಯೇ? ಆತ/ಕೆಗೆ ಮಾರ್ಗದರ್ಶನ ಮಾಡಿದರೆ ಸಾಧನೆ ಮಾಡಬಲ್ಲನೇ/ಳೇ? ಹಾಗೆಯೇ ಎಸ್ಸೆಸ್ಸೆಲ್ಸಿಯಲ್ಲಿ  ಉತ್ತೀರ್ಣರಾದ ಹುಡುಗ/ಹುಡುಗಿಗೆ ನಾವು ಏನು ಮಾರ್ಗದರ್ಶನ ಮಾಡಿದ್ದೇವೆ? ಯಾವ ಯಾವ ಆಯ್ಕೆಗಳು ಇವರ ಮುಂದಿವೆ ಮತ್ತು ಯಾವ ಆಯ್ಕೆ ಯಾವ ವಿದ್ಯಾರ್ಥಿಗೆ ಸೂಕ್ತ  ಎಂದು ಅಂಕಗಳನ್ನು ಆಧರಿಸಿ ನಿರ್ಣಯಿಸುವ ವ್ಯವಸ್ಥೆ ಮಾಡಲಾಗಿದೆಯೇ? ನುರಿತ ವ್ಯಕ್ತಿಗಳಿಂದ ಅವರಿಗೆ ಮಾರ್ಗದರ್ಶನ ಲಭಿಸಿದೆಯೇ? ತಮ್ಮ ಮಸೀದಿ ವ್ಯಾಪ್ತಿಯ ಯಾವ ಮನೆಯಲ್ಲಿ  ಎಷ್ಟು ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದಾರೆ, ಪಿಯುಸಿಗೆ ಹಾಜರಾಗಿದ್ದಾರೆ ಮತ್ತು ಯಾರ್ಯಾರು ಎಷ್ಟೆಷ್ಟು ಅಂಕಗಳನ್ನು ಪಡೆದಿದ್ದಾರೆ ಎಂಬ ಬಗ್ಗೆ ಮಾಹಿತಿ ಇದೆಯೇ? ಯಾವ  ಮನೆಯ ವಿದ್ಯಾರ್ಥಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾನೆ/ಳೆ ಮತ್ತು ಅವರಲ್ಲಿ ಯಾರ ಸಂಕಷ್ಟಕ್ಕೆ ನೆರವಾದರೆ ಅವರ ಭವಿಷ್ಯ ಉಜ್ವಲವಾಗಬಹುದು? ತಮ್ಮ ಮಸೀದಿ ವ್ಯಾಪ್ತಿಯಲ್ಲಿ ಎಷ್ಟು ಮಂದಿ  ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದಾರೆ ಮತ್ತು ಆ ಚಟುವಟಿಕೆಗಳು ಯಾವುವು ಹಾಗೂ ಅವನ್ನು ಇನ್ನಷ್ಟು ಹರಿತಗೊಳಿಸುವುದಕ್ಕೆ ಏನು ತೊಂದರೆಗಳಿವೆ? ಉತ್ತಮ  ತರಬೇತು ದಾರರಿಂದ ಅವರಿಗೆ ಮಾರ್ಗದರ್ಶನ ಲಭಿಸಿದರೆ ಅವರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಿಂಚಬಲ್ಲರೇ? ಅದೇರೀತಿ,

ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಓದುವ ಮಕ್ಕಳಿಗೆ ಮತ್ತು ಅವರ ಹೆತ್ತವರಿಗೆ ಎಷ್ಟು ಗೊತ್ತಿದೆ? ಸಿಇಟಿ, ನೀಟ್, ಐಐಟಿ ಮುಂತಾದ ಪರೀಕ್ಷೆಗಳಲ್ಲಿ ಹಾಜರಾಗಲು ಈ  ವಿದ್ಯಾರ್ಥಿಗಳಲ್ಲಿ ಎಷ್ಟು ಮಂದಿ ಅರ್ಹರು ಮತ್ತು ಅವರನ್ನು ಹೇಗೆ ತರಬೇತುಗೊಳಿಸಬಹುದು? ಮನೆಯವರ ನಿಲುವು ಏನು? ಪದವಿ ಶಿಕ್ಷಣ ಪೂರೈಸಿದವರು ಮತ್ತು ಇನ್ನಿತರ ರೂಪದಲ್ಲಿ  ಶಿಕ್ಷಣ ಮುಗಿಸಿದವರಿಗೆ ಸರಕಾರಿ ಉದ್ಯೋಗಕ್ಕೆ ಸೇರಲು ತೊಂದರೆಯಾಗಿದೆಯೇ? ಅರ್ಹತೆಯಿದ್ದೂ ಉದ್ಯೋಗ ಸಿಗದೇ ಹತಾಶರಾಗಿದ್ದಾರೆಯೇ? ಕಲಿಕೆಗೆ ತಕ್ಕ ಉದ್ಯೋಗ ಸಿಕ್ಕಿಲ್ಲ ಎಂಬ  ಭಾವದಲ್ಲಿ ದಿನೇ ದಿನೇ ಕೊರಗುತ್ತಿದ್ದಾರೆಯೇ?
ಪ್ರಶ್ನೆಗಳು ಇನ್ನೂ ಇವೆ ಮತ್ತು ಇವೆಲ್ಲ ಬರೇ ಪ್ರಶ್ನೆಗಳೂ ಅಲ್ಲ. ಪ್ರತಿ ಮಸೀದಿ ಕಮಿಟಿಗಳೂ ಒಂದಿಷ್ಟು ಹೊತ್ತು ಚರ್ಚೆಗೆ ಮೀಸಲಿಡಬೇಕಾದ ಸಂಗತಿಗಳು. ಮಸೀದಿ ಕಮಿಟಿಗಳು ಈವರೆಗೆ  ಮಸೀದಿಗೆ ಬಳಿಯಬೇಕಾದ ಬಣ್ಣ, ರಬೀವುಲ್ ಅವ್ವಲ್‍ನಲ್ಲಿ ಮಾಡಬೇಕಾದ ಅಲಂಕಾರ, ಮಸೀದಿಯ ಮೈಕ್ ಬದಲಾವಣೆ, ಏ.ಸಿ. ಅಳವಡಿಕೆ, ಹೊಸ ಮಿನಾರ, ಮಿಂಬರ್ ಇತ್ಯಾದಿಗಳ  ಚರ್ಚೆಗಾಗಿ ಸಾಕಷ್ಟು ಸಮಯ ವಿನಿಯೋಗಿಸಿದೆ. ಅನೇಕ ಬಾರಿ ಇಂಥವುಗಳ ಚರ್ಚೆಗಾಗಿ ಮೀಟಿಂಗ್‍ಗಳ ಮೇಲೆ ಮೀಟಿಂಗ್‍ಗಳು ನಡೆದಿವೆ. ಹಣವೂ ಖರ್ಚಾಗಿವೆ. ಹಾಗಂತ,

ಇವೆಲ್ಲ ಅನಗತ್ಯ ಎಂದಲ್ಲ. ಈ ಹಿಂದೆ ಏನೆಲ್ಲಾ ನಡೆದು ಹೋಗಿವೆಯೋ ಅವೆಲ್ಲ ನಮ್ಮ ಮುಂದಿನ ಬದುಕಿಗೆ ಪಾಠವಾಗಬೇಕು. ಇನ್ನು ನಮ್ಮ ಮಸೀದಿ ಮೀಟಿಂಗ್‍ಗಳು ಈ ಮೇಲಿನ  ವಿಷಯಗಳ ಮೇಲೆ ನಡೆಯಲಿ. ಪ್ರತಿ ಮಸೀದಿಯ ಆಡಳಿತ ಕಮಿಟಿಗಳೂ ತಮ್ಮ ಮಸೀದಿ ವ್ಯಾಪ್ತಿಯಲ್ಲಿರುವ ಪ್ರತಿ ಮನೆಗಳ ಕ್ಷೇಮಾಭ್ಯುದಯಕ್ಕಾಗಿ ಮೀಟಿಂಗ್‍ಗಳ ಮೇಲೆ ಮೀಟಿಂಗ್‍ಗಳನ್ನು  ನಡೆಸುವ ಹೊಸ ಬದಲಾವಣೆಗೆ ನಾಂದಿ ಹಾಡಲಿ. ಪ್ರತಿ ಮನೆಯ ಸದಸ್ಯರ ಡಾಟಾ ಕಲೆ ಹಾಕುವ ಮತ್ತು ಆ ಡಾಟಾದಲ್ಲಿ ಆ ಮನೆಯಲ್ಲಿರುವ ವಿದ್ಯಾರ್ಥಿಗಳೆಷ್ಟು, ಉದ್ಯೋಗಿಗಳೆಷ್ಟು,  ಮಕ್ಕಳೆಷ್ಟು? ಯಾವ ಮಕ್ಕಳು ಯಾವ್ಯಾವ ತರಗತಿಯಲ್ಲಿ ಓದು ತ್ತಿದ್ದಾರೆ, ಅವರ ಅಂಕಗಳೆಷ್ಟು, ಅವರ ಆಸಕ್ತಿ ಏನು, ಯಾವ ರೀತಿಯ ಮಾರ್ಗದರ್ಶನ ಅವರಿಗೆ ಬೇಕಾಗಿದೆ, ಯಾವ ಮ ನೆಯ ವಿದ್ಯಾರ್ಥಿಯನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಗೊಳಿಸಬಹುದು, ಯಾವ ವಿದ್ಯಾರ್ಥಿಗೆ ಯಾವ ಕ್ಷೇತ್ರ ಸೂಕ್ತ ಮುಂತಾದುವುಗಳ ಬಗ್ಗೆ ಸ್ಪಷ್ಟವಾದ ವಿವರಗಳಿರಲಿ. ಅವುಗಳನ್ನು  ಹರಡಿಕೊಂಡು ಮೀಟಿಂಗ್ ನಡೆಸಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವ ಸಭೆಗಳನ್ನು ಮದ್ರಸದಲ್ಲಿ ಏರ್ಪಡಿಸಿ. ಭವಿಷ್ಯದ ಬಗ್ಗೆ ಅವರಲ್ಲಿ ಕನಸು ಕಾಣಲು ಹೇಳಿ. ನಿಮ್ಮದೇ ಮಸೀದಿ ವ್ಯಾಪ್ತಿಯಲ್ಲಿರುವ ಉತ್ತಮ ಸಾಧಕರನ್ನು ತಂದು ಮಕ್ಕಳಿಗೆ ಪ್ರೇರಣದಾಯಕ ಮಾತುಗಳನ್ನು ಆಡಿಸಿ. ಉದ್ಯಮಿಯೂ ಮಾತಾಡಲಿ. ವೈದ್ಯನೂ  ಮಾತಾಡಲಿ. ಶಿಕ್ಷಕನೂ ಮಾತಾಡಲಿ. ಉಸ್ತಾದರೂ ಮಾತಾಡಲಿ. ನಮ್ಮ ಸಮುದಾಯದಲ್ಲಿ ಎಷ್ಟೊಂದು ಸಾಧಕರಿದ್ದಾರೆ, ಎಂಥೆಂಥ ಅದ್ಭುತ ಮನುಷ್ಯರಿದ್ದಾರೆ ಎಂಬ ಹೆಮ್ಮೆ ಮೂಡುವಂತೆ  ಮಾಡಿ. ಹಾಗಂತ,

ಇದು ಕೇವಲ ಪುರುಷರಿಂದ ಪುರುಷರಿಗೆ ಎಂಬಂಥ ಕಾರ್ಯ ಕ್ರಮ ಆಗಬಾರದು. ಮಹಿಳಾ ಸಾಧಕರನ್ನು ಕರೆತನ್ನಿ. ಮಾತಾಡಿಸಿ. ಹೆಣ್ಮಕ್ಕಳ ಸಾಧನೆಗೂ ಹೆಮ್ಮೆಪಡಿ. ಅವರನ್ನೂ  ಹುರಿದುಂಬಿಸಿ.

ರಸ್ತೆಬದಿಯಲ್ಲಿ ವ್ಯಾಪಾರ ಮಾಡುತ್ತಿರುವ ಉಸ್ತಾದರ ಪೋಟೋ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿತ್ತು. ಅನೇಕರು ಆ ವ್ಯಾಪಾರವನ್ನು ಕೊಂಡಾಡಿದ್ದೂ ಇದೆ.  ಉಸ್ತಾದರ ಆರ್ಥಿಕ ಮುಗ್ಗಟ್ಟನ್ನು ಉಲ್ಲೇಖಿಸಿ ದುಃಖಿಸಿದ್ದೂ ಇದೆ. ನಿಜವಾಗಿ,

ನಾವು ಹೆಮ್ಮೆಪಡಬೇಕಾದದ್ದು- ಇಂಥ ವ್ಯಾಪಾರಿಗಳಿಂದ ಮುಸ್ಲಿಮ್ ಸಮುದಾಯದ ಐಎಎಸ್, ಐಪಿಎಸ್ ಅಧಿಕಾರಿಗಳು, ಇನ್ಸ್‍ಪೆಕ್ಟರ್, ವೈದ್ಯ, ಪ್ರೊಫೆಸರ್, ಸಂಶೋಧಕರು ಅಗತ್ಯ ವಸ್ತುಗಳ ನ್ನು ಖರೀದಿಸಿಕೊಂಡು ಹೋಗುವಂತಾದಾಗ. ಅಂಥ ಅಧಿಕಾರಿಗಳನ್ನು ಧಾರಾಳ ಸಂಖ್ಯೆಯಲ್ಲಿ ತಯಾರಿಸಿ ಸಮಾಜಕ್ಕೆ ಅರ್ಪಿಸಿದಾಗ. ಎಲ್ಲೆಂದರಲ್ಲಿ ಅವರ ಉಪಸ್ಥಿತಿಯೇ ಕಾಣುವಂತಾದಾಗ.

ಆ ಉಸ್ತಾದರಿಗೆ ಸಲಾಮ್.

ಮನಸ್ಸು ಮಾಡಿದರೆ ಹೆಜ್ಜೆಗೊಂದು ಹಯಾತ್ ಖಾನ್ ಮನೆ ಸೃಷ್ಟಿಯಾದೀತು



ಇತ್ತೀಚೆಗೆ ಗೆಳೆಯ ಬಶೀರ್ ಅಹ್ಮದ್‍ರು ಒಂದು ಮಾಹಿತಿಯನ್ನು ಹಂಚಿಕೊಂಡಿದ್ದರು. ಒಂದೇ ಕುಟುಂಬದ ಮೂರು ಮಂದಿ IPS ಅಧಿಕಾರಿಗಳಾಗಿರುವ ಕತೆ. ಆ ಮೂವರ  ಪೋಟೋವನ್ನು ಅವರು ಹಂಚಿಕೊಂಡಿದ್ದರು. ಓರ್ವ ಹೆಣ್ಣು ಮಗಳು ಮತ್ತು ಇಬ್ಬರು ಗಂಡು ಮಕ್ಕಳು. ನಿಜವಾಗಿ,


ಮುಸ್ಲಿಮ್ ಸಮುದಾಯದ ಒಳಗಡೆ ಗಂಭೀರ ಚರ್ಚೆಗೆ ಒಳಗಾಗಬೇಕಾದ ಸಂಗತಿ ಇದು. ಒಂದೇ ಕುಟುಂಬದ 3 ಮಂದಿ ಹೇಗೆ IPS ಅಧಿಕಾರಿಗಳಾದರು? ಅದರ ಹಿಂದೆ ಆ ಮಕ್ಕಳ  ಹೆತ್ತವರ ಪರಿಶ್ರಮ ಏನು? ಆ ಮಕ್ಕಳಲ್ಲಿ IPS ಕನಸನ್ನು ಹೇಗೆ ಮತ್ತು ಏಕೆ ಬಿತ್ತಿದರು? ಸ್ಪರ್ಧಾತ್ಮಕ ಪರೀಕ್ಷೆಗೆ ತಮ್ಮ ಮಕ್ಕಳನ್ನು ಹೇಗೆ ಅಣಿಗೊಳಿಸಿದರು? ಅದಕ್ಕಾಗಿ ಅವರು ಏನೇನು  ಮಾಡಿದರು? ಆ ಮಕ್ಕಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಅಭಿರುಚಿ ಮೂಡಿಸಿದ್ದು ಹೇಗೆ? ಎಷ್ಟು ಹಗಲು ಮತ್ತು ರಾತ್ರಿಯನ್ನು ಆ ಹೆತ್ತವರು ಈ ಮಕ್ಕಳಿಗಾಗಿ ಕಳೆದರು...

ಇವು ತಕ್ಷಣ ಹೊಳೆದ ಪ್ರಶ್ನೆಗಳು ಮಾತ್ರ. ಎಳೆ ಪ್ರಾಯದಿಂದ ಹಿಡಿದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ IPS ಅಧಿಕಾರಿಗಳಾಗಿಸುವ ವರೆಗಿನ ಈ ದೀರ್ಘ ಪ್ರಯಾಣದ ಬಗ್ಗೆ ಆ  ಹೆತ್ತವರಲ್ಲಿ ಅನೇಕ ಸಂಗತಿಗಳಿರಬಹುದು. ಅವು ಈ ಸಮುದಾಯದ ಪಾಲಿಗೆ ಲಭ್ಯವಾಗಬೇಕಾದರೆ, ಮೊದಲು ಆ ಬಗ್ಗೆ ಸಮುದಾಯದಲ್ಲಿ ಕುತೂಹಲ ಹುಟ್ಟಿಕೊಳ್ಳಬೇಕು. ಆ ಸಾಧನೆಯೆಡೆಗೆ  ಬೆರಗಿ ನಿಂದ ನೋಡಬೇಕು. ಈ ಸಮುದಾಯದ ವಾಟ್ಸಾಪ್ ಚರ್ಚೆಗಳಲ್ಲಿ ಆ ಮೂವರ ಬಗ್ಗೆ ಚರ್ಚೆಗಳಾಗಬೇಕು. ಅವರ ಪರಿಶ್ರಮ ಮತ್ತು ಯಶಸ್ಸು ಪ್ರತಿ ಮನೆಯ ಮಾತು- ಕತೆಯಾಗಬೇಕು. ಆ ಮಾತು-ಕತೆಯನ್ನು ಪ್ರತಿ ಮನೆಯ ಮಕ್ಕಳು ಆಲಿಸಬೇಕು. ಅವರೊಳಗಡೆ IPS, IAS, IRSನಂಥ ಕನಸುಗಳು ಗರಿಗೆದರಬೇಕು. ಮಕ್ಕಳು ಫುಟ್ಬಾಲ್  ಆಡುತ್ತಲೋ ಬ್ಯಾಟು ಬೀಸುತ್ತಲೋ IPS ಕನಸು ಕಾಣಬೇಕು.

ಹಾಗಂತ,

ಬಶೀರ್ ಅಹ್ಮದ್‍ರು ಹಂಚಿಕೊಂಡ ಸಂಗತಿ ಮೊತ್ತಮೊದಲ ಪ್ರಕರಣವೂ ಅಲ್ಲ ಮತ್ತು ಸಾಧನೆಯ ಛಲ ಇದ್ದರೆ ಇದು ಅಸಾಧ್ಯವೂ ಅಲ್ಲ.

2017 ನವೆಂಬರ್‍ನಲ್ಲಿ ಆಓಂ ಪತ್ರಿಕೆಯ ಒಂದು ವರದಿಯನ್ನು ಪ್ರಕಟಿಸಿತ್ತು. ‘Jaipur: This ಕಾಯಂಖನಿ family is all IAS, IPS ಅಂಡ್ RAS’ (ಈ  ಕಾಯಮ್‍ಖಾನಿ ಕುಟುಂಬದ ಎಲ್ಲರೂ ಐಎಎಸ್, ಐಪಿಎಸ್ ಮತ್ತು ಆರ್‍ಎಎಸ್) ಎಂಬುದು ಆ ವರದಿಯ ಶೀರ್ಷಿಕೆ.

ಜೈಪುರದ ಹಯಾತ್ ಮುಹಮ್ಮದ್ ಖಾನ್ ಅವರ ಮಕ್ಕಳ ಕತೆಯಿದು. ಇದು ಸುದ್ದಿಯಾಗುವುದಕ್ಕೆ ಕಾರಣ ಏನೆಂದರೆ, ಹಯಾತ್ ಮುಹಮ್ಮದ್‍ರ ಮಗ ಝಾಕಿರ್ ಹುಸೇನ್‍ರು ಐಎಎಸ್  ಅಧಿಕಾರಿಯಾಗಿ ಭಡ್ತಿ ಹೊಂದಿದುದು. ಇವರ ದೊಡ್ಡಣ್ಣ ಅಶ್ಫಾಕ್ ಹುಸೇನ್‍ರು ಅದಾಗಲೇ ಐಎಎಸ್ ಅಧಿಕಾರಿಯಾಗಿ ನಿವೃತ್ತಿ ಹೊಂದಿದ್ದರು. ಅಶ್ಫಾಕ್ ಹುಸೇನ್‍ರ ಮಗಳು ಅಥವಾ  ಹಝಾತ್ ಮುಹಮ್ಮದ್‍ರ ಮೊಮ್ಮಗಳಾದ ಫರ್ಹಾ ಖಾನ್ ಅವರು ಭಾರತೀಯ ಕಂದಾಯ ಸೇವಾ (RAS) ಅಧಿಕಾರಿಣಿಯಾಗಿದ್ದಾರೆ. ಹಾಗೆಯೇ ಹಯಾತ್ ಮುಹಮ್ಮದ್‍ರ ಮಗ  ಲಿಯಾಕತ್ ಅಲಿ ಖಾನ್‍ರು ನಿವೃತ್ತ ಇನ್ಸ್ ಪೆಕ್ಟರ್ ಜನರಲ್ ಆಗಿದ್ದು, ಅವರ ಮಗಳು ಶಾಹೀನ್ ಅಲಿ ಖಾನ್ ಕೂಡ ಭಾರತೀಯ ಕಂದಾಯ ಸೇವಾ ಇಲಾಖೆ (RAS)ಯಲ್ಲಿ ಅಧಿಕಾರಿಯಾಗಿದ್ದಾರೆ. ಹಯಾತ್ ಮುಹಮ್ಮದ್‍ರ ಮಗಳ ಮಗ ಸಲೀಮ್ ಕೂಡ ಭಾರತೀಯ ಕಂದಾಯ ಸೇವಾ (RAS) ಅಧಿಕಾರಿಯಾಗಿದ್ದಾರೆ. ಹಯಾತ್ ಖಾನ್‍ರ ಕಿರಿಯ  ಸಹೋದರ ಅಬ್ದುಲ್ ಸಮದ್‍ರ ಮಗ ಝಾಕಿರ್ ಅಹ್ಮದ್ ಖಾನ್ ಸೇನೆಯಲ್ಲಿ ಕರ್ನಲ್ ಆಗಿರುವುದು ಮಾತ್ರ ಅಲ್ಲ, ಅವರ ಇನ್ನಿಬ್ಬರು ಮಕ್ಕಳಾದ ಶಾಕಿಬ್ ಹಾಗೂ ಇಶ್ರತ್ ಕೂಡ ಸೇ ನೆಯಲ್ಲಿ ಕರ್ನಲ್ ಹುದ್ದೆಯಲ್ಲಿದ್ದಾರೆ. ಇದೇ ವೇಳೆ, ಹಯಾತ್ ಮುಹಮ್ಮದ್ ಖಾನ್‍ರು ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ಅವರ ಒಟ್ಟು ಐವರು ಮಕ್ಕಳಲ್ಲಿ ಮೂವರು ಐಎಎಸ್  ಮತ್ತು ಒಬ್ಬರು ಐಪಿಎಸ್.

ಇನ್ನೊಂದು ಇಂಥದ್ದೇ  ಸಾಧಕ ಕುಟುಂಬವಿದೆ.

ಇದು 2019ರ ಸುದ್ದಿ. Four Siblings from UP crack civil services examination within 3 years  (ನಾಲ್ವರು ಸಹೋದರ-ಸಹೋದರಿಯರು 3  ವರ್ಷಗಳ ಅಂತರದಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು)- ಎಂಬ ಶೀರ್ಷಿಕೆಯಲ್ಲಿ ಈ ಸುದ್ದಿ ಪ್ರಕಟವಾಗಿತ್ತು. ಉತ್ತರ ಪ್ರದೇಶದ ಪ್ರತಾಪ್‍ಗಢ್‍ನ ಅನಿಲ್ ಮಿಶ್ರಾ ಅವರ  ಕುಟುಂಬ ಈ ಸಾಧನೆಯನ್ನು ಮೆರೆದಿತ್ತು. ಅನಿಲ್ ಮಿಶ್ರಾ ಬ್ಯಾಂಕ್ ಮ್ಯಾನೇಜರ್. ಅವರ ನಾಲ್ವರು ಮಕ್ಕಳಲ್ಲಿ ಕ್ಷಮಾ ದೊಡ್ಡವಳು. ವಿಶೇಷ ಏನೆಂದರೆ, UPSC  ಪರೀಕ್ಷೆಯನ್ನು ಎಲ್ಲರಿಗಿಂತ  ಕೊನೆಯಲ್ಲಿ ಮುಗಿಸಿದವರು ಕ್ಷಮಾ. ಅದೂ ಮದುವೆಯಾಗಿ 8 ವರ್ಷಗಳ ಬಳಿಕ- 2015ರಲ್ಲಿ. ಸತತ ನಾಲ್ಕು ಪ್ರಯತ್ನಗಳ ಬಳಿಕ ಕ್ಷಮಾರಿಗೆ ಈ ಯಶಸ್ಸು ಪ್ರಾಪ್ತವಾಗಿತ್ತು. ಇದಕ್ಕಿಂತ  ಮೊದಲು 2013ರಲ್ಲೇ  ಯೋಗೇಶ್ UPSC ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರು. 2014ರಲ್ಲಿ ಮಾಧವಿ UPSC ಪರೀಕ್ಷೆಯಲ್ಲಿ ಉನ್ನತ ರ್ಯಾಂಕ್ ನೊಂದಿಗೆ ತೇರ್ಗಡೆಯಾದರು. ಅದೇ  ವರ್ಷ ಲೋಕೇಶ್ ಕೂಡ ತೇರ್ಗಡೆಯಾದರು. ಮೂರು ವರ್ಷಗಳ ಅಂತರದಲ್ಲಿ ಈ ನಾಲ್ವರೂ ಉನ್ನತ ಅಧಿಕಾರಿಗಳಾಗುವ ಹಂತಕ್ಕೆ ತಲುಪಿದರು.

ಅಂದಹಾಗೆ,

ಇಂಥ ಸಾಧಕ ಕುಟುಂಬಗಳ ಪಟ್ಟಿ ಇನ್ನೂ ಇರಬಹುದು. ಸದ್ಯ ಮುಸ್ಲಿಮ್ ಸಮುದಾಯ ತನ್ನೊಳಗನ್ನು ಮುಟ್ಟಿ ನೋಡುವುದಕ್ಕೆ ಮತ್ತು ಗಂಭೀರ ಅವಲೋಕನದ ಕಡೆಗೆ ಸಜ್ಜಾಗುವುದಕ್ಕೆ  ಈ ಮೂರು ಉದಾಹರಣೆಗಳು ಧಾರಾಳ ಸಾಕು. ಕೇವಲ ಈ ಮೂರೇ ಮೂರು ಕುಟುಂಬಗಳಲ್ಲಿ ಸುಮಾರು 15ರಷ್ಟು ಉನ್ನತ ದರ್ಜೆಯ ಅಧಿಕಾರಿಗಳು ತಯಾರಾದುದು ಹೇಗೆ? ಪ್ರತಿಭೆಗಳೆಲ್ಲ ಒಂದೇ ಕಡೆ ರಾಶಿ ಬಿದ್ದದ್ದು ಹೇಗೆ? ಇದು ಅವರವರ ಅದೃಷ್ಟ ಎಂದು ತಳ್ಳಿ ಹಾಕಬಹುದಾದ ಸಂಗತಿಯೇ ಅಥವಾ ಇವರನ್ನು ಎದುರಿಟ್ಟುಕೊಂಡು ಮುಸ್ಲಿಮ್ ಸಮುದಾಯದ ಪ್ರತಿ  ಮನೆಗಳೂ ಇಂಥ ಅಧಿಕಾರಿಗಳನ್ನು ರೂಪಿಸುವುದಕ್ಕೆ ಪಣ ತೊಡಬೇಕಾದ ಸಂದರ್ಭವೇ?

ಪ್ರತಿ ಮಕ್ಕಳಲ್ಲೂ ಪ್ರತಿಭೆ ಇದ್ದೇ  ಇದೆ. ಆ ಪ್ರತಿಭೆಗೆ ನಮ್ಮಿಂದ ಎಷ್ಟು ಪೋಷಣೆ ಸಿಗುತ್ತದೆ ಎಂಬುದರ ಆಧಾರದಲ್ಲಿ ಅದರ ಭವಿಷ್ಯ ನಿರ್ಧಾರವಾಗುತ್ತದೆ. ಮಿಶ್ರಾ ಕುಟುಂಬದ ಯೋಗೇಶ್  UPSC ಪರೀಕ್ಷೆಯಲ್ಲಿ ತೇರ್ಗಡೆ ಆಗದೇ ಇರುತ್ತಿದ್ದರೆ ಉಳಿದ ಮೂವರು UPSC ಪರೀಕ್ಷೆಗೆ ಶ್ರಮ ವಹಿಸುತ್ತಿದ್ದರೋ ಅನ್ನುವ ಪ್ರಶ್ನೆ ಪ್ರಸ್ತುತ. ಯೋಗೇಶ್‍ನ ಮೇಲೆ ಮಿಶ್ರಾ ದಂಪತಿ ಹಾಕಿರು  ವಷ್ಟು ಶ್ರಮವನ್ನು ಉಳಿದ ಮೂವರು ಮಕ್ಕಳ ಮೇಲೆ ಹಾಕಿರುವ ಸಾಧ್ಯತೆ ಇಲ್ಲ. ಲೋಕೇಶ್‍ರನ್ನು UPSC  ಪರೀಕ್ಷೆಗೆ ಸಜ್ಜುಗೊಳಿಸುವುದಕ್ಕೆ ಆ ಹೆತ್ತವರು ಪಟ್ಟಿರುವ ಶ್ರಮವು ಉಳಿದ  ಮೂವರು ಮಕ್ಕಳ ಮೇಲೆ ವ್ಯಯಿಸಿರುವ ಶ್ರಮಕ್ಕಿಂತ ಹಲವು ಪಟ್ಟು ಅಧಿಕ ಇರಬಹುದು. ಯಾಕೆಂದರೆ,

UPSC ಪರೀಕ್ಷೆಯಲ್ಲಿ ಲೋಕೇಶ್ ಯಶಸ್ಸು ಪಡೆಯುವ ವರೆಗೆ ಅದೊಂದು ಕನ್ನಡಿಯ ಗಂಟು. ಆವರೆಗೆ ಆ ಗಂಟನ್ನು ಅವರ ಮಕ್ಕಳಲ್ಲಿ ಯಾರೂ ತನ್ನದಾಗಿಸಿಕೊಂಡಿಲ್ಲ. ಆದ್ದರಿಂದ  ಪರೀಕ್ಷೆಯಲ್ಲಿ ಲೋಕೇಶ್ ಯಶಸ್ಸು ಪಡೆಯುವುದು ಎಲ್ಲಕ್ಕಿಂತ ಮುಖ್ಯ. ಲೋಕೇಶ್‍ಗೂ ಹೇಳಿಕೊಳ್ಳುವುದಕ್ಕೆ ಅವರ ಕುಟುಂಬದಲ್ಲಿ ಬೇರೆ ಮಾದರಿಗಳಿರಲಿಲ್ಲ. ಆದರೆ ಯಾವಾಗ ಲೋಕೇಶ್  ಯಶಸ್ವಿಯಾದರೋ ಉಳಿದ ಮೂವರೂ ಅರ್ಧ ಯಶಸ್ಸನ್ನು ಅದಾಗಲೇ ಪಡೆದು ಕೊಂಡರು. ಇದು ಸಾಧ್ಯ ಎಂಬ ವಿಶ್ವಾಸ ಅವರಲ್ಲಿ ತನ್ನಿಂತಾನೇ ಬೆಳೆಯಿತು. ಪರೀಕ್ಷೆಯನ್ನು ಎದುರಿಸುವ  ಪಟ್ಟುಗಳನ್ನು ಹೇಳಿಕೊಡುವುದಕ್ಕೆ ಲೋಕೇಶ್ ಇದ್ದಾನೆ ಎಂಬ ಧೈರ್ಯ ಅವರಿಗೆ ಪರೀಕ್ಷೆಯ ಅರ್ಧಭಾಗವನ್ನು ಗೆಲ್ಲಿಸಿ ಕೊಟ್ಟಿತು. ಇನ್ನರ್ಧಕ್ಕಷ್ಟೇ ಹೆತ್ತವರು ಶ್ರಮ ಹಾಕಿದರೆ ಸಾಕಾಗಿತ್ತು. ಇದು  ಯಶಸ್ಸಿನ ಗುಟ್ಟು ಕೂಡ.

ಹಯಾತ್ ಮುಹಮ್ಮದ್ ಖಾನ್‍ರ ಕುಟುಂಬದ ಎಲ್ಲರೂ ಐಎಎಸ್, ಐಪಿಎಸ್, ಆರ್ ಏಎಸ್ ಇತ್ಯಾದಿ ಉನ್ನತ ಅಧಿಕಾರಿಗಳಾಗಿರುವುದರ ಹಿಂದೆ ಇರುವುದೂ ಇದೇ ಗುಟ್ಟು. ಇವರ ಐವರು  ಮಕ್ಕಳಲ್ಲಿ ಹಿರಿಯವ ಯಾವಾಗ ಐಪಿಎಸ್ ಅಧಿಕಾರಿಯಾದರೋ ಅದು ಉಳಿದ ನಾಲ್ವರು ಮಕ್ಕಳ ಮೇಲೆ ಸಕಾರಾತ್ಮಕ ಪರಿ ಣಾಮ ಮತ್ತು ಪ್ರಭಾವವನ್ನು ಬೀರಿತು. ನಮ್ಮೆದುರು ಅಣ್ಣ  ಇದ್ದಾನೆ ಎಂಬುದು ತಮ್ಮಂದಿರ ಪಾಲಿನ ದೊಡ್ಡ ಆಮ್ಲಜನಕ. ಅವರನ್ನು ಮಾನಸಿಕವಾಗಿ ಆ ಅಣ್ಣ ಆವರಿಸುತ್ತಾನೆ. ಅವರಿಗರಿವಿಲ್ಲದೆಯೇ ಅವರನ್ನು ಆತ ಮುಂದಕ್ಕೊಯ್ಯುತ್ತಾನೆ.

ಸದ್ಯ ಮುಸ್ಲಿಮ್ ಸಮುದಾಯದಲ್ಲಿ ಇಂಥದ್ದೊಂದು ಬದಲಾವಣೆ ಬರಬೇಕಾಗಿದೆ. ಪ್ರತಿ ಮನೆಯ ಹೆತ್ತವರಲ್ಲೂ ಇಂಥದ್ದೊಂದು ಕನಸನ್ನು ಬಿತ್ತಬೇಕಾಗಿದೆ. ತಮ್ಮ ಮಕ್ಕಳಲ್ಲಿ ಉನ್ನತ ಅಧಿಕಾರಿಯನ್ನು ಅವರು ಕಾಣುವಂತೆ ಮಾಡಬೇಕಾಗಿದೆ. ಅದಕ್ಕಾಗಿ ಪ್ರೇರಣೆ ನೀಡಬೇಕಾಗಿದೆ. ನಿಜವಾಗಿ,

ಇದು ಮುಸ್ಲಿಮ್ ಸಮುದಾಯದ ಪಾಲಿಗೆ ತೀರಾ ತೀರಾ ಕಠಿಣ ಅಲ್ಲ. ಸಮುದಾಯದಲ್ಲಿ ಮಸೀದಿ ಮತ್ತು ಮದ್ರಸ ಎಂಬ ವಿಶೇಷ ಸೊತ್ತು ಇದೆ. ಇತರ ಯಾವ ಸಮುದಾಯದಲ್ಲೂ ಇಲ್ಲದ  ಮತ್ತು ಬಹೂಪಯೋಗಿ ಸೌಲಭ್ಯ ಇದು. ಮಸೀದಿಯನ್ನು ಬರೇ ನಮಾಝïಗಾಗಿ ಮತ್ತು ಮದ್ರಸವನ್ನು ಬರೇ ಇಸ್ಲಾಮಿನ ಮೂಲಭೂತ ಶಿಕ್ಷಣವನ್ನು ಪಡೆಯುವುದಕ್ಕಾಗಿ ಮಾತ್ರ ಮೀಸ ಲಿಡದೇ ಸಮುದಾಯದ ಸಬಲೀಕರಣಕ್ಕಾಗಿಯೂ ಬಳಸಿಕೊಂಡರೆ ಈ ಸಾಧನೆ ಅಸಾಧ್ಯವಲ್ಲ. ಅಂದಹಾಗೆ,

ಪ್ರತಿ ಮಸೀದಿಗೂ ಒಂದು ಆಡಳಿತ ಸಮಿತಿಯಿದೆ ಮತ್ತು ಪ್ರತಿ ಮಸೀದಿ ವ್ಯಾಪ್ತಿಯಲ್ಲೂ ಒಂದಕ್ಕಿಂತ ಹೆಚ್ಚು ಸಂಘಟನೆಗಳಿವೆ. ನಮ್ಮ ಗುರಿ ತಲುಪುವ ದೃಷ್ಟಿಯಿಂದ ಇದು ಬಹಳ ಅನು  ಕೂಲಕರ ವ್ಯವಸ್ಥೆ. ಸದ್ಯ ಈ ಮಸೀದಿ ಆಡಳಿತ ಸಮಿತಿ ಮತ್ತು ಈ ಸಂಘಟನೆಗಳ ನಡುವೆ ಸಂವಹನ ಸಾಧ್ಯವಾಗಬೇಕು. ಒಂದೇ ಕಡೆ ಎಲ್ಲರೂ ಕುಳಿತು ಮಸೀದಿ ವ್ಯಾಪ್ತಿಯ ಪ್ರತಿ ಮನೆಯ ನ್ನೂ ಸಬಲೀಕರಣಗೊಳಿಸುವುದಕ್ಕೆ ಪೂರಕವಾದ ಕಾರ್ಯತಂತ್ರವನ್ನು ರೂಪಿಸಬೇಕು. ಸಂಘಟನಾತ್ಮಕ ಭಿನ್ನಾಭಿಪ್ರಾಯಗಳೋ ಆಡಳಿತ ಸಮಿತಿಯೊಂದಿಗಿನ ವೈಮನಸ್ಯವೋ ಇದಕ್ಕೆ ಅಡ್ಡಿ  ಬರಬಾರದು. ಮುಂದಿನ ಇಷ್ಟು ವರ್ಷಗಳಲ್ಲಿ ಈ ಮಸೀದಿ ವ್ಯಾಪ್ತಿಯ ಒಟ್ಟು ಮನೆಗಳಿಂದ ಇಷ್ಟು ಐಎಎಸ್, ಐಪಿಎಸ್ ಮತ್ತಿತರ ಉನ್ನತ ಅಧಿಕಾರಿಗಳು ತಯಾರಾಗಬೇಕು ಎಂಬ ಗುರಿಯ ನ್ನು ಇಟ್ಟುಕೊಳ್ಳ ಬೇಕು. ಬಳಿಕ ಆ ಗುರಿಯನ್ನು ತಲುಪುವುದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳಬೇಕು. ಮಸೀದಿ ವ್ಯಾಪ್ತಿಯ ಪ್ರತಿ ಮನೆಯ ಸಂಪೂರ್ಣ ವಿವರವೂ ಮಸೀದಿಯ ಕಂ ಪ್ಯೂಟರ್‍ನಲ್ಲಿ ದಾಖಲುಗೊಂಡಿರಬೇಕು. ಯಾವ್ಯಾವ ಮನೆಯಲ್ಲಿ ಎಷ್ಟೆಷ್ಟು ಮಂದಿಯಿದ್ದಾರೆ ಎಂಬುದರಿಂದ ಹಿಡಿದು ಆ ಮನೆಯಲ್ಲಿ ಕಲಿಯುವ ಮಕ್ಕಳೆಷ್ಟು, ವಿಧವೆ, ವಿವಾಹ ಪ್ರಾಯಕ್ಕೆ  ಬಂದ ಹೆಣ್ಣು-ಗಂಡು, ವೃದ್ಧರು, ರೋಗಿಗಳು, ಮನೆಯ ವರಮಾನ, ದುಡಿಯುವವರು, ಉದ್ಯೋಗ ಅರಸುವವರು, ಕಲಿಕೆ ನಿಲ್ಲಿಸಿದವರು ಇತ್ಯಾದಿ ಎಲ್ಲವೂ ಮಸೀದಿ ಕಂಪ್ಯೂಟರ್‍ನಲ್ಲಿ  ಸುರಕ್ಷಿತವಾಗಿ ಇರಬೇಕು. ಈ ಎಲ್ಲ ಡಾಟಾಗಳನ್ನು ಹರಡಿಕೊಂಡು ಮಸೀದಿ ಆಡಳಿತ ಸಮಿತಿ ಮತ್ತು ಸಂಘಟನೆಗಳು ಪಕ್ಕಾ ಯೋಜನೆಗಳನ್ನು ರೂಪಿಸಬೇಕು. ಮುಖ್ಯವಾಗಿ, 

ಮದ್ರಸಕ್ಕೆ  ಬರುವ ಮಕ್ಕಳಿಗೆ ಪ್ರತಿದಿನ ಸಾಧಕರ ಕುರಿತು ವಿವರಿಸುವ 15 ನಿಮಿಷದ ಸ್ಫೂರ್ತಿ ತರಗತಿ ಇರಬೇಕು. ಪ್ರತಿದಿನ ಮದ್ರಸದಿಂದ ಉನ್ನತ ಅಧಿಕಾರಿಯಾಗುವ ಕನಸಿನೊಂದಿಗೆ ಮಕ್ಕಳು ಮನೆಗೆ  ಹೊರಡಬೇಕು. ಮನೆಯಲ್ಲೂ ಹೆತ್ತವರ ಮಾತು-ಕತೆಯಲ್ಲಿ ಸಾಧಕರ ಬಗ್ಗೆ ಉಲ್ಲೇಖಗಳಾಗುತ್ತಿರಬೇಕು. ಪ್ರತಿ ಮನೆಯ ಮಕ್ಕಳೂ ಆಕಾಶ, ನಕ್ಷತ್ರ, ಸೂರ್ಯ, ಚಂದ್ರ, ವಿಮಾನ, ರಾಕೆಟ್,  ಕಂಪ್ಯೂಟರ್, ವಾಹನಗಳು, ಮಿನಾರಗಳು ಹೀಗೆ ಪ್ರತಿಯೊಂದನ್ನೂ ಬೆರಗಿನಿಂದ ನೋಡುತ್ತಾ ಬೆಳೆಯುವಂತಾಗಬೇಕು. ವೈದ್ಯರು, ವಿಜ್ಞಾನಿಗಳು, ಎಂಜಿನಿಯರ್‍ ಗಳು, ಉನ್ನತ ಶಿಕ್ಷಣ ಪಡೆದ  ವಿದ್ವಾಂಸರು, ಜರ್ನಲಿಸ್ಟ್ ಗಳು, ಅರ್ಥತಜ್ಞರ ಬಗ್ಗೆ ಓದುತ್ತಾ, ಆಲಿಸುತ್ತಾ ಬೆಳೆಯಬೇಕು. ಇದೊಂದು ದೀರ್ಘ ಪ್ರಯಾಣ. ದೂರದೃಷ್ಟಿಯ ಯೋಜನೆಗಳ ಹೊರತು ಈ ಪ್ರಯಾಣದ ಕೊನೆಯನ್ನು ತಲುಪಲಾಗದು. ಇಲ್ಲಿ ಮಕ್ಕಳ ತರಬೇತಿ ಮಾತ್ರ ಆಗಬೇಕಾದುದಲ್ಲ. ಹೆತ್ತವರ ತರಬೇತಿಯೂ ಆಗಬೇಕು. ಹೆತ್ತವರನ್ನು ಮಸೀದಿಗೋ ಮದ್ರಸಕ್ಕೋ ಆಹ್ವಾನಿಸಿ ಸ್ಫೂರ್ತಿದಾಯಕ  ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಅವರಲ್ಲಿ ಹೊಸ ಸ್ಫೂರ್ತಿ, ಭರವಸೆಯನ್ನು ತುಂಬಬೇಕು. ತಮ್ಮ ಮಕ್ಕಳಲ್ಲಿ ಉನ್ನತ ಅಧಿಕಾರಿಯನ್ನು ಕಾಣುವಂತೆ ಅವರನ್ನು ಪ್ರೇರೇಪಿಸಬೇಕು.  ಅವರಲ್ಲಿ ಕನಸನ್ನು ತುಂಬಬೇಕು. ಎಷ್ಟೆಂದರೆ, ಹಗಲೂ-ರಾತ್ರಿ ಅವರು ಈ ಕನಸಿನೊಂದಿಗೆ ಬದುಕಬೇಕು ಮತ್ತು ಅವರು ಈ ಕನಸನ್ನು ನನಸು ಮಾಡುವುದಕ್ಕಾಗಿಯೇ ಬದುಕಬೇಕು.

ಒಂದುವೇಳೆ,

ಪ್ರತೀ ಹೆತ್ತವರು, ಉಸ್ತಾದರು, ಸಂಘಟನೆಗಳು ಮತ್ತು ಮಸೀದಿ ಆಡಳಿತ ಸಮಿತಿಯವರು ಜೊತೆಯಾದರೆ ಮತ್ತು ಈ ಮೇಲಿನ ಗುರಿಯನ್ನು ತಲುಪುವ ಉದ್ದೇಶಕ್ಕಾಗಿ ಒಂದಾದರೆ, ಹಯಾತ್  ಮುಹಮ್ಮದ್ ಖಾನ್‍ರ ಮನೆ ಹೆಜ್ಜೆಗೊಂದರಂತೆ ಸೃಷ್ಟಿಯಾದೀತು.



ನಮ್ಮೊಡನಿದ್ದೂ ನಮ್ಮವರಾಗದ ಮದ್ರಸ ಶಿಕ್ಷಕರು

ಸನ್ಮಾರ್ಗ ಸಂಪಾದಕೀಯ 

ಕೊರೋನಾ ತಂದಿಟ್ಟ ಸಂಕಷ್ಟದ ಕುಲುಮೆಯಲ್ಲಿ ಬೆಂದು ಹೋದವರ ಸಂಖ್ಯೆ ಅಪಾರ. ಲಾಕ್‍ ಡೌನ್‍ನ ಮೂಲಕ ಆರಂಭವಾದ ಈ ಸಂಕಷ್ಟ ಸಮಾಜದ ಎಲ್ಲ ವರ್ಗವನ್ನೂ ಆವರಿಸಿದೆ.  ಉದ್ಯೋಗ ನಷ್ಟ, ವ್ಯಾಪಾರ ನಷ್ಟ, ಕೈಗಾರಿಕೆಗಳ ಸ್ಥಗಿತ, ಉದ್ಯೋಗ ರಹಿತ ಕೂಲಿಕಾರ್ಮಿಕರು, ಖಾಸಗಿ ಶಾಲೆಯ ಶಿಕ್ಷಕರು, ಮದ್ರಸದ ಶಿಕ್ಷಕರು- ಹೀಗೆ ಪ್ರತಿಯೊಬ್ಬರೂ ಕೊರೋನಾ  ದಾಳಿಯ ಸಂತ್ರಸ್ತರೇ. ವಿಷಾದ ಏನೆಂದರೆ, ಈ ಎಲ್ಲರ ಪೈಕಿ ಅತ್ಯಂತ ಕಡಿಮೆ ಚರ್ಚೆಗೆ ಒಳಗಾದವರೆಂದರೆ, ಮದ್ರಸ ಶಿಕ್ಷಕರು. ಇವರು ಟಿ.ವಿ. ಚಾನೆಲ್‍ಗಳ ಮುಂದೆ ಬಂದದ್ದು ಕಡಿಮೆ.  ಪತ್ರಿಕೆಗಳ ಮುಂದೆ ತಮ್ಮ ಸಂಕಷ್ಟಗಳನ್ನು ಹೇಳಿಕೊಂಡದ್ದೂ ಕಡಿಮೆ. ಒಂದುರೀತಿಯಲ್ಲಿ, ನಮ್ಮ ನಡುವೆಯೇ ಇದ್ದು ನಮ್ಮವರಾಗದೇ ಉಳಿದುಕೊಂಡರೇನೋ ಎಂದು  ಅಂದುಕೊಳ್ಳಬಹುದಾದ ಸ್ಥಿತಿ ಅವರದು.
ಮದ್ರಸ ಶಿಕ್ಷಣ ಎಂಬುದು ಸಂಪೂರ್ಣವಾಗಿ ಮುಸ್ಲಿಮರಿಗೆ ಸಂಬಂಧಿಸಿರುವುದರಿಂದ ಮತ್ತು ಅಲ್ಲಿ ಕಲಿಸುವ ಶಿಕ್ಷಕರು ಪೂರ್ಣವಾಗಿ ಮುಸ್ಲಿಮರ ಸಾಂಪ್ರದಾಯಿಕ ಉಡುಪನ್ನು  ಧರಿಸುವುದರಿಂದ ಸಾಮಾಜಿಕವಾಗಿ ಅವರು ಒಂದು ಪ್ರತ್ಯೇಕ ಗುರುತನ್ನು ಪಡೆದುಕೊಂಡಿದ್ದಾರೆ. ಈ ಗುರುತು ಮುಸ್ಲಿಮ್ ಸಮುದಾಯದ ಹಿನ್ನೆಲೆಯಲ್ಲಿ ನೋಡುವಾಗ ಅವರಿಗೆ  ಪೂರಕವಾಗಿದ್ದರೂ ಒಟ್ಟು ಸಮಾಜದ ದೃಷ್ಟಿಯಿಂದ ನೋಡುವಾಗ ಅದು ಅವರ ಪಾಲಿಗೆ ಮಾರಕವಾಗಿ ಮಾರ್ಪಡುವುದಕ್ಕೂ ಅವಕಾಶ ಇದೆ. ಅವರನ್ನು ಸಂಪರ್ಕಿಸುವುದಕ್ಕೆ,  ಮಾತಾಡಿಸುವುದಕ್ಕೆ ಮುಸ್ಲಿಮೇತರ ಸಮುದಾಯ ಮತ್ತು ಮಾಧ್ಯಮದ ಮಂದಿ ಅಂಜಿಕೆ ತೋರಿದ್ದರೆ ಅದಕ್ಕೆ ಈ ಗುರುತೂ ಒಂದು ಕಾರಣ. ಮುಸ್ಲಿಮರಿಗೆ ಸಂಬಂಧಿಸಿ ಮದ್ರಸ ಶಿಕ್ಷಕರು  ಮತ್ತು ಮಸೀದಿ ಉಸ್ತಾದರೆಂದರೆ ವಿಶೇಷ ಗೌರವ ಮತ್ತು ಆದರ ಇದೆ. ಅವರು ಸಮುದಾಯದ ಮಾರ್ಗದರ್ಶಕರು ಎಂಬ ಪ್ರೀತಿಯಿದೆ. ಆದರೆ,
ಈ ಗೌರವ ಮತ್ತು ಆದರವು ಅವರಿಗೆ ವೇತನವನ್ನು ನಿಗದಿಗೊಳಿಸುವಾಗ ಪರಿಗಣನೆಗೆ ಬರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ಅತ್ಯಂತ ನಿರಾಶಾಜನಕವಾದುದು. ಮಸೀದಿ ಉಸ್ತಾದರು ಮತ್ತು  ಮದ್ರಸ ಶಿಕ್ಷಕರಿಗೆ ಗೌರವ ಕೊಡುವುದರಲ್ಲಿ ಮುಸ್ಲಿಮ್ ಸಮುದಾಯ ಹಿಂದೆ ಬಿದ್ದಿಲ್ಲ. ಆದರೆ, ಈ ಗೌರವವು ಅವರನ್ನು ಆರ್ಥಿಕವಾಗಿ ಮೇಲೆತ್ತುವುದಕ್ಕೆ ಬಹುತೇಕ ಸಫಲವೂ ಆಗಿಲ್ಲ. ಇದಕ್ಕೆ  ಕಾರಣಗಳೂ ಇರಬಹುದು ಮತ್ತು ಕೆಲವೊಂದು ಕಡೆ ಇದಕ್ಕೆ ಅಪವಾದಗಳೂ ಇರಬಹುದು. ಆದರೆ, ಒಂದು ಮೊತ್ತವಾಗಿ ನೋಡುವಾಗ, ಮಸೀದಿ ಉಸ್ತಾದರು ಮತ್ತು ಮದ್ರಸ ಶಿಕ್ಷಕರು ಕ ನಿಷ್ಠ ಈ ಕೊರೋನಾ ಕಾಲದಲ್ಲಿ ಸಾಮುದಾಯಿಕ ಅವಗಣನೆಗೆ ಒಳಗಾದರೇನೋ ಎಂದು ಹೇಳಬೇಕಾಗುತ್ತದೆ.
ಮುಸ್ಲಿಮ್ ಸಮುದಾಯದ ಎಲ್ಲ ಮಸೀದಿ ಮತ್ತು ಮದ್ರಸಗಳು ಶ್ರೀಮಂತವಲ್ಲ. ಒಂದು ಮಸೀದಿಯ ವ್ಯಾಪ್ತಿಯೊಳಗೆ ಸಾವಿರದಷ್ಟು ಮನೆಗಳು ಇರುವಂತೆಯೇ 25 ಮನೆಗಳನ್ನೇ  ಅವಲಂಬಿಸಿಕೊಂಡಿರುವ ಮಸೀದಿ-ಮದ್ರಸಗಳೂ ಇವೆ. ಈ ವ್ಯತ್ಯಾಸ ಬಹಳ ಮುಖ್ಯ. ಯಾಕೆಂದರೆ, ಒಂದು ಮಸೀದಿ ವ್ಯಾಪ್ತಿಯಲ್ಲಿ ಸಾವಿರದಷ್ಟು ಮನೆಗಳಿವೆ ಎಂದರೆ ಅಷ್ಟೂ ಮನೆಗಳಿಂದ  ವಂತಿಗೆಗಳು ಆ ಮಸೀದಿಗೆ ಬರುತ್ತವೆ ಎಂದು ಅರ್ಥ. ವಂತಿಗೆ ಎಷ್ಟೇ ಸಣ್ಣ ಮೊತ್ತವಾದರೂ ಸಾವಿರ ಮನೆಗಳ ವಂತಿಗೆಯು ಅಂತಿಮವಾಗಿ ದೊಡ್ಡ ಮೊತ್ತವಾಗಿ ಮಾರ್ಪಡುವುದೂ ಸಹಜ.  ಅಲ್ಲದೇ, ಈ ಸಾವಿರ ಮನೆಗಳಲ್ಲಿ ಅನೇಕಾರು ದೊಡ್ಡ ದೊಡ್ಡ ಶ್ರೀಮಂತರ ಮತ್ತು ಅನಿವಾಸಿಗಳ ಮನೆಗಳಿರುವುದಕ್ಕೂ ಅವಕಾಶ ಇದೆ. ಆ ಮನೆಗಳು ವಿಶೇಷ ಮೊತ್ತವನ್ನು ಅಭಿಮಾನ ಪೂರ್ವಕ ಮಸೀದಿಗೆ ನೀಡುತ್ತಿರುವುದೂ ನಡೆಯುತ್ತದೆ. ಆದ್ದರಿಂದ ಇಂಥ ಮಸೀದಿ-ಮದ್ರಸಗಳು ಆರ್ಥಿಕವಾಗಿ ಬಡವಾಗಿರುವುದಿಲ್ಲ. ಇಲ್ಲಿ ಕಲಿಸುವ ಶಿಕ್ಷಕರಾಗಲಿ, ಮಸೀದಿ ಉಸ್ತಾದರಾಗಲಿ  ತಕ್ಕಮಟ್ಟಿನ ವೇತನವನ್ನೂ ಪಡೆಯುತ್ತಿರುತ್ತಾರೆ. ಮಾತ್ರವಲ್ಲ, ಕೊರೋನಾ ಲಾಕ್‍ಡೌನ್ ಮತ್ತು ಆ ಬಳಿಕದ ದಿನಗಳಲ್ಲಿ ಇವರು ತೀವ್ರ ಆರ್ಥಿಕ ಹೊಡೆತವನ್ನು ಎದುರಿಸಿರುವ ಸಾಧ್ಯತೆಯೂ  ಕಡಿಮೆ. ಇವರ ವೇತನಕ್ಕೆ ಕತ್ತರಿ ಬಿದ್ದಿರುವ ಪ್ರಕರಣಗಳೂ ತೀರಾ ತೀರಾ ಕಡಿಮೆ. ಆದರೆ,
ಕಡಿಮೆ ಮನೆಗಳನ್ನು ಅವಲಂಬಿಸಿರುವ ಮಸೀದಿ-ಮದ್ರಸಗಳ ಸ್ಥಿತಿ ಹಾಗಿಲ್ಲ. ಅಲ್ಲಿ ಮಸೀದಿಗೆ ಬರುವ ವಂತಿಗೆ ತೀರಾ ಕಡಿಮೆ. ವಿಶೇಷವಾಗಿ, ಹಳ್ಳಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇಂಥ  ಸ್ಥಿತಿ ದಾರಾಳ ಇದೆ. ಶ್ರೀಮಂತರು ಮತ್ತು ಅನಿವಾಸಿಗಳ ಸಂಖ್ಯೆಯೂ ಇಂಥ ಪ್ರದೇಶಗಳಲ್ಲಿ ವಿರಳ. ಕೊರೋನಾ ತಂದಿಟ್ಟ ಸಂಕಷ್ಟಕ್ಕೆ ಅತೀ ದಾರುಣವಾಗಿ ತುತ್ತಾದವರೆಂದರೆ, ಈ ಮಸೀ ದಿ-ಮದ್ರಸದ ಉಸ್ತಾದರು ಮತ್ತು ಶಿಕ್ಷಕರು. ಅನೇಕ ಮಸೀದಿಗಳು ಇವರಿಬ್ಬರಲ್ಲಿ ಉಸ್ತಾದರನ್ನು ಮಾತ್ರ ಉಳಿಸಿಕೊಂಡು ಶಿಕ್ಷಕರನ್ನು ಮನೆಗೆ ಕಳಿಸಿದ್ದೂ ಇದೆ. ಕೆಲವು ಕಡೆ ಇಬ್ಬರನ್ನೂ  ಉಳಿಸಿಕೊಂಡಿದ್ದರೂ ವೇತನದಲ್ಲಿ ಕಡಿತಗೊಳಿಸಿದ್ದೂ ಇದೆ. ಒಂದುಕಡೆ, ಮಸೀದಿ ವ್ಯಾಪ್ತಿಯ ಮನೆಗಳ ಆದಾಯದಲ್ಲಿ ತೀವ್ರ ಇಳಿಕೆಯಾಗಿದೆ. ಪ್ರತಿ ಮನೆಗಳೂ ಆರ್ಥಿಕ ಸಂಕಷ್ಟವನ್ನು  ಎದುರಿಸುತ್ತಿವೆ. ಇದು ಸಹಜವಾಗಿಯೇ ಮಸೀದಿಯ ಆದಾಯದ ಮೇಲೂ ಪರಿಣಾಮ ಬೀರುತ್ತಿವೆ. ಅಲ್ಲದೇ, ಲಾಕ್‍ಡೌನ್‍ನ ಸಂದರ್ಭದಲ್ಲಿ ಮುಚ್ಚಲಾದ ಮದ್ರಸಗಳು ಇನ್ನೂ ಬಾಗಿಲು  ತೆರೆದಿಲ್ಲ. ಮದ್ರಸಗಳಿಗೆ ವಿದ್ಯಾರ್ಥಿಗಳು ಬರುವುದಿಲ್ಲವಾದ್ದರಿಂದ ಆ ಮಕ್ಕಳ ಪೋಷಕರು ಕಲಿಕಾ ಶುಲ್ಕವನ್ನು ಪಾವತಿಸುವುದೂ ಇಲ್ಲ. ಇದರ ನೇರ ಪರಿಣಾಮವನ್ನು ಎದುರಿಸಬೇಕಾದವರು  ಮದ್ರಸ ಶಿಕ್ಷಕರು. ಆದ್ದರಿಂದಲೇ, ಬರೇ ಮದ್ರಸ ಶಿಕ್ಷಕ ಉದ್ಯೋಗವನ್ನೇ ನೆಚ್ಚಿಕೊಂಡವರು ಈ ಕೊರೋನಾ ಕಾಲದಲ್ಲಿ ತೀವ್ರ ಸಂಕಷ್ಟಕ್ಕೆ ಸಹಜವಾಗಿಯೇ ತುತ್ತಾದರು. ಅನೇಕ ಮಸೀದಿಗಳು  ಇಂಥ ಶಿಕ್ಷಕರನ್ನು ತಾತ್ಕಾಲಿಕವಾಗಿ ಕೈಬಿಟ್ಟವು. ಆದರೆ ಹೀಗೆ ಉದ್ಯೋಗ ಕಳಕೊಂಡ ಮದ್ರಸ ಶಿಕ್ಷಕರಿಗೆ ಪರ್ಯಾಯವಾಗಿ ಅವರ ಮುಂದಿದ್ದುದು ಬರೇ ಶೂನ್ಯ ಮಾತ್ರ. ವಿಷಾದ ಏನೆಂದರೆ,
ಖಾಸಗಿ ಶಾಲಾ ಶಿಕ್ಷಕರ ಸಂಕಷ್ಟ ಚರ್ಚೆಗೆ ಒಳಗಾದಂತೆ ಮದ್ರಸಾ ಶಿಕ್ಷಕರ ಸಂಕಷ್ಟ ಚರ್ಚೆಗೆ ಒಳಗಾಗಿಲ್ಲ ಅನ್ನುವುದು. ಮಾಧ್ಯಮಗಳೂ ಅವರ ಬಗ್ಗೆ ಒಂದಿಷ್ಟು ಅಂತರವನ್ನೇ  ಕಾಯ್ದುಕೊಂಡವು. ಅಲ್ಲದೇ, ಅತೀವ ಸ್ವಾಭಿಮಾನವೂ ಈ ಶಿಕ್ಷಕರು ಹೊರ ಪ್ರಪಂಚದಲ್ಲಿ ಚರ್ಚೆಯಾಗದಂತೆ ನೋಡಿಕೊಂಡವು. ನಿಜವಾಗಿ,
ಮುಸ್ಲಿಮ್ ಸಮುದಾಯದ ಮಸೀದಿ-ಮದ್ರಸಾಗಳು ನಿರ್ವಹಿಸಲ್ಪಡುತ್ತಿರುವ ರೀತಿಯೇ ಒಂದು ಕೌತುಕ. ಯಾವುದೇ ಸರಕಾರಕ್ಕೂ ಕಡಿಮೆ ಇಲ್ಲದಂತೆ ಅತ್ಯಂತ ವ್ಯವಸ್ಥಿತವಾಗಿ ಮತ್ತು  ಯೋಜನಾಬದ್ಧವಾಗಿ ಇವು ತಲೆತಲಾಂತರದಿಂದ ನಿರ್ವಹಿಸಲ್ಪಡುತ್ತಾ ಬರುತ್ತಿವೆ. ಇಲ್ಲಿ ದುಡಿಯುತ್ತಿರುವ ಯಾವ ಶಿಕ್ಷಕರೂ ಮತ್ತು ಉಸ್ತಾದರೂ ಅವರಿಗೆ ಸಿಗುವ ವೇತನದಿಂದ  ಶ್ರೀಮಂತರಾದ ಉದಾಹರಣೆ ಇಲ್ಲ. ಉಸ್ತಾದರ ಮತ್ತು ಶಿಕ್ಷಕರ ದುಡಿಮೆಯನ್ನು ಸಮುದಾಯವು ಸೇವೆ ಎಂದು ಪರಿಗಣಿಸಿರುವುದೇ ಇದಕ್ಕೆ ಕಾರಣ. ಇದನ್ನು ನಿರಾಕರಿಸಬೇಕಾಗಿಯೂ ಇಲ್ಲ.  ಅದೊಂದು ಸೇವೆ. ಆದರೆ ಈ ಗೌರವವೊಂದೇ ಅವರ ಹೊಟ್ಟೆಯನ್ನು ತಣಿಸದು. ಕುಟುಂಬವನ್ನು ಪೋಷಿಸದು. ಅವರ ಸೇವೆಯನ್ನು ಕೊಂಡಾಡುತ್ತಲೇ ವೈಜ್ಞಾನಿಕವಾಗಿ ಅವರಿಗೆ ವೇತನ  ನಿಗದಿಗೊಳಿಸುವ ಸನ್ನಿವೇಶಗಳೂ ಸೃಷ್ಟಿಯಾಗಬೇಕು. ಮದ್ರಸಾಗಳು ಬಾಗಿಲು ಮುಚ್ಚಿವೆ ಎಂಬುದು ಅವರನ್ನು ಉದ್ಯೋಗದಿಂದ ಕಿತ್ತು ಹಾಕುವುದಕ್ಕೆ ಸಕಾರಣವಾಗುವುದಿಲ್ಲ. ಅವರ ಸೇವೆಗೆ  ನಿಜವಾದ ಗೌರವ ಕೊಡಬೇಕಾದ ಸಂದರ್ಭ ಇದು. ಮಸೀದಿ ಆಡಳಿತ ಸಮಿತಿಗಳು ಅವರನ್ನು ಉಳಿಸಿಕೊಂಡು ಧೈರ್ಯ ತುಂಬಬೇಕು. ಅವರ ವೇತನಕ್ಕೆ ಪರ್ಯಾಯ ದಾರಿಗಳನ್ನು  ಕಂಡುಕೊಳ್ಳಬೇಕು. ಸರ್ಕಾರದ ಮತ್ತು ವಕ್ಫ್ ಬೋರ್ಡ್‍ನ ಮುಂದೆ ಶಿಕ್ಷಕರ ಸಮಸ್ಯೆಯನ್ನು ವಿವರಿಸಬೇಕು. ಹೀಗೆ ಉದ್ಯೋಗ ಕಳಕೊಂಡ ಮದ್ರಸ ಶಿಕ್ಷಕರ ಬಗ್ಗೆ ಅಧ್ಯಯನ  ನಡೆಯಬೇಕಲ್ಲದೇ, ಈ ಉದ್ಯೋಗ ರಹಿತ ಅವಧಿಯಲ್ಲಿ ಅವರಿಗಾದ ತೊಂದರೆಗಳನ್ನು ದಾಖಲಿಸಿ ಸರಕಾರದ ಮುಂದಿಡಬೇಕು ಮತ್ತು ಸೂಕ್ತ ಪರಿಹಾರ ಪ್ಯಾಕೇಜ್‍ಗಾಗಿ ಆಗ್ರಹಿಸಬೇಕು.
ಮಸೀದಿ ಮತ್ತು ಮದ್ರಸಾಗಳಷ್ಟೇ ಈ ಸಮುದಾಯದ ಆಸ್ತಿಗಳಲ್ಲ. ಅಲ್ಲಿರುವ ಉಸ್ತಾದರು ಮತ್ತು ಶಿಕ್ಷಕರೂ ಸಮುದಾಯದ ಆಸ್ತಿಗಳೇ. ಅವರು ಸಮುದಾಯಕ್ಕೆ ಮಾರ್ಗದರ್ಶಕರಾಗಿ ಮತ್ತು  ಮೌಲ್ಯಯುತ ಪೀಳಿಗೆಯನ್ನು ಬೆಳೆಸುವವರಾಗಿ ಬೇಕಾದವರಾಗಿದ್ದಾರೆ. ಸಂಕಷ್ಟದ ಸಮಯದಲ್ಲಿ ಸಮುದಾಯ ಅವರನ್ನು ಕೈ ಬಿಡುವುದು ದ್ರೋಹವಾಗುತ್ತದೆ. ಅವರನ್ನು ಆದರಿಸಿ, ಅವರ  ಸಮಸ್ಯೆಗಳನ್ನು ಸರ್ಕಾರದ ಮುಂದಿಟ್ಟು ಪರಿಹಾರವನ್ನು ಪಡಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ.

Wednesday, September 2, 2020

ಆಯಿಶಾರ ಪ್ರಶ್ನೆ, ಪ್ರವಾದಿಯ ಉತ್ತರ



1. ಉಹುದ್
2. ತಾಯಿಫ್

ಮಕ್ಕಾದಲ್ಲಿ ಪ್ರವಾದಿ ಮುಹಮ್ಮದರ(ಸ) ಪಾಲಿಗೆ ದೊಡ್ಡ ಶಕ್ತಿಯಾಗಿದ್ದ ದೊಡ್ಡಪ್ಪ ಅಬೂತಾಲಿಬ್ ಮತ್ತು  ಪತ್ನಿ ಖದೀಜಾ- ಇಬ್ಬರೂ ಬೆನ್ನು ಬೆನ್ನಿಗೇ ಮೃತಪಟ್ಟ ಬಳಿಕ ಪ್ರವಾದಿ ಅನಾಥತೆ ಯನ್ನು ಅ ನುಭವಿಸಿದರು. ಅಬೂತಾಲಿಬ್ ಜೀವಿಸಿರುವವರೆಗೆ ಅವರಿಗೆ ಅಸ್ತಿತ್ವದ ಸಮಸ್ಯೆ ಕಾಡಿರಲಿಲ್ಲ. ಅಬೂತಾ ಲಿಬ್ ಅಭಯ ನೀಡಿದ್ದರು. ಅಬೂತಾಲಿಬ್‍ರನ್ನು ಎದುರು ಹಾಕಿಕೊಂಡು ಪ್ರವಾದಿ ಮುಹಮ್ಮದ್‍ರೊಂ ದಿಗೆ ಜಗಳ ಕಾಯುವ ಮತ್ತು ಅವರನ್ನು ಮಕ್ಕಾದಿಂದ ಹೊರ ಹಾಕುವ ಧೈರ್ಯ ಯಾರಿಗೂ ಇರಲಿಲ್ಲ.  ಆದರೆ ಅವರ ನಿಧನದ ಜೊತೆಗೇ ಪ್ರವಾದಿ ಮುಹಮ್ಮದರ ಪಾಲಿನ ಕರಾಳ ದಿನಗಳೂ ತೆರೆದುಕೊಂಡವು.  ಅವರ ವಿಚಾರಧಾರೆಗಳನ್ನು ವಿರೋಧಿಸುತ್ತಿದ್ದ ಮಂದಿ ಚುರುಕಾದರು. ಪ್ರವಾದಿಯನ್ನು ನಖಶಿಖಾಂತ  ದ್ವೇಷಿಸಿದರು.

ಒಂದು ಘಟನೆ ಹೀಗಿದೆ:

ಒಂದು ಮುಂಜಾನೆ. ಪ್ರವಾದಿ ಮುಹಮ್ಮದರು ತನ್ನ ವಿಚಾರಧಾರೆಯನ್ನು ಜನರ ಜೊತೆ  ಹಂಚಿಕೊಂಡರು. ಆದರೆ ಆ ಮಾತುಗಳನ್ನು ಆಲಿಸಿದವರಲ್ಲಿ ಕೆಲವರು ಅವರ ಮುಖಕ್ಕೆ ಉಗುಳಿದರು.  ಕೆಲವರು ಮಣ್ಣು ಎಸೆದರು. ಬೈದರು. ಹೀನಾಯ ಭಾಷೆಯಲ್ಲಿ ನಿಂದಿಸಿದರು. ಪ್ರವಾದಿ ಏನೂ ಮಾಡ ಲಿಲ್ಲ. ಅವರ ಸುತ್ತ ಸೇರಿಕೊಂಡವರು ವ್ಯಂಗ್ಯ, ದೂಷಣೆ, ಬೈಗುಳ ಸುರಿಸುತ್ತಾ ಮನಬಂದಂತೆ  ವರ್ತಿಸುತ್ತಿದ್ದರು. ಬೆಳಕು ಹರಿದು ಹಗಲು ಸ್ಪಷ್ಟವಾದಾಗ ಓರ್ವ ಹೆಣ್ಣು ಮಗಳು ಪಾತ್ರೆ ತುಂಬಾ ನೀರು  ಹಿಡಿದುಕೊಂಡು ಬಂದಳು. ಆಕೆಯ ಕಣ್ಣು ತುಂಬಿಕೊಂಡಿತ್ತು. ಪ್ರವಾದಿ ತನ್ನ ಕೈ ಮತ್ತು ಮುಖವನ್ನು  ತೊಳೆದುಕೊಂಡರು. ಬಳಿಕ ಹೇಳಿದರು,

“ಮಗಳೇ, ನಿನ್ನ ಅಪ್ಪ ದುರ್ಬಲ, ಅಸಹಾಯಕ ಮತ್ತು ಯಾರ ರಕ್ಷಣೆಯೂ ಇಲ್ಲದವನೆಂದು ಭಾವಿಸ ದಿರು. ಅಲ್ಲಾಹ್ ನಿನ್ನ ತಂದೆಯ ಜೊತೆಗಿದ್ದಾನೆ..” ಆ ಹೆಣ್ಣು ಮಗಳು ಪ್ರವಾದಿಯ ಪುತ್ರಿಯಾಗಿದ್ದರು.  ಹೆಸರು ಝೈನಬ್. ಆ ಇಡೀ ಘಟನೆಯನ್ನು ಮುನೀಬುಲ್ ಅಸ್ದಿ ಎಂಬವರು ಆ ಬಳಿಕ  ಸ್ಮರಿಸಿಕೊಂಡಿದ್ದಾರೆ. ತ್ವಬ್ರಾನಿ ಎಂಬ ವಿದ್ವಾಂಸರು ಬರೆದಿರುವ ಮುಲ್‍ಜಮುಲ್ ಕಬೀರಿ ಎಂಬ  ಗ್ರಂಥದಲ್ಲಿ ಈ ಘಟನೆ ಉಲ್ಲೇಖಗೊಂಡಿದೆ.

ಹೀಗೆ ಮಕ್ಕಾದಲ್ಲಿ ಯಾರ ಆಶ್ರಯವೂ ಇಲ್ಲದೇ ಅತಂತ್ರರಾದ ಪ್ರವಾದಿಯವರು ಮುಂದೇನು ಅನ್ನುವ  ಆತಂಕಕ್ಕೆ ಸಿಲುಕುತ್ತಾರೆ. ಒಂದುಕಡೆ, ತನ್ನೂರೇ ತನ್ನನ್ನು ವೈರಿಯಂತೆ ಪರಿಗಣಿಸಿರುವುದು ಮತ್ತು ಇ ನ್ನೊಂದೆಡೆ ತನ್ನ ವಿಚಾರಧಾರೆಗೆ ಬದ್ಧವಾಗಿ ಬದುಕುವುದು- ಇವೆರಡೂ ಅವರನ್ನು ಪ್ರಶ್ನೆಯ ಮೊ ನೆಯಲ್ಲಿ ನಿಲ್ಲಿಸುತ್ತದೆ. ತನ್ನೂರಿನ ಜನರ ಜೀವನ ಕ್ರಮದಲ್ಲಿರುವ ತಪ್ಪುಗಳನ್ನು ಕಂಡು ಮೌ ನವಾಗಿರುವುದಕ್ಕೆ ಅವರ ಮನಸ್ಸು ಒಪ್ಪುತ್ತಿಲ್ಲ. ಪರಂಪರಾಗತ ವೆಂದೋ ಸಂಪ್ರದಾಯವೆಂದೋ  ಹೇಳಿಕೊಂಡು ಮೌಢ್ಯಗಳನ್ನೇ ಜೀವನ ವಿಧಾನವಾಗಿ ಒಪ್ಪಿಕೊಂಡವರ ಜೊತೆ ರಾಜಿ ಮಾಡಿ  ಕೊಳ್ಳುವುದನ್ನು ಕಲ್ಪಿಸಿಕೊಳ್ಳುವುದೂ ಅವರ ಪಾಲಿಗೆ ಅಸಾಧ್ಯವಾಗಿತ್ತು. ಇನ್ನೊಂದೆಡೆ, ತನ್ನ  ವಿಚಾರಧಾರೆಯನ್ನು ಸಹಿಸುವುದಕ್ಕೆ ತನ್ನೂರು ಸಿದ್ಧವಿರಲಿಲ್ಲ. ಇಂಥ ಸ್ಥಿತಿಯಲ್ಲಿ ಅವರು ತನಗೆ ಆಶ್ರಯ  ನೀಡ ಬಹುದಾದ ಅಥವಾ ಕನಿಷ್ಠ ತನ್ನ ಮಾತುಗಳನ್ನು ಆಲಿಸಬಹುದಾದ ಇನ್ನೊಂದು ಊರನ್ನು  ಬಯಸಿದರು. ಮುಖ್ಯವಾಗಿ ಅವರಿಗೆ ಅಭಯ ನೀಡಬಹುದಾದ ಊರಿನ ಅಗತ್ಯವಿತ್ತು. ಆಗ ಅವರಿಗೆ  ನೆನಪಾದದ್ದೇ  ತಾಯಿಫ್.

ತಾಯಿಫ್ ಎಂಬ ಊರು ಮಕ್ಕಾದಿಂದ ಸುಮಾರು 90 ಕಿಲೋಮೀಟರ್ ದೂರದಲ್ಲಿತ್ತು. ಪ್ರವಾದಿ  ಮುಹಮ್ಮದರು ಆ ಊರನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಎರಡು ಕಾರಣಗಳಿದ್ದುವು.

1. ಪ್ರವಾದಿ ಮುಹಮ್ಮದ್‍ರ ತಾಯಿ ಆಮಿನಾರ ಬಂಧುಗಳಿರುವ ಊರು.
2. ಅವರ ಸಾಕುತಾಯಿ ಹಲೀಮಾರ ಕುಟುಂಬದವರು ವಾಸಿಸು ತ್ತಿರುವ ಊರು.

ಮಕ್ಕಾದವರ ಹಿಂಸೆ ಮತ್ತು ಅವಮಾನದಿಂದ ರಕ್ಷಣೆ ಪಡೆಯುವ ಮತ್ತು ತನ್ನ ಬದುಕನ್ನು ಹೊಸ  ಊರಲ್ಲಿ ಪ್ರಾರಂಭಿಸುವ ಉದ್ದೇಶದೊಂದಿಗೆ ಪ್ರವಾದಿ ಮುಹಮ್ಮರು ತನ್ನ ಸಾಕು ಪುತ್ರ ಝೈದ್ ಬಿನ್  ಹಾರಿಸರೊಂದಿಗೆ ತಾಯಿಫ್ ಎಂಬ ಊರಿಗೆ ಕಾಲ್ನಡಿಗೆಯಲ್ಲಿ ಸಾಗಿದರು. ವಿಪರೀತ ಬಿಸಿಲು. ಅಲ್ಲದೇ  ಕಾಲ್ನಡಿಗೆಯಲ್ಲೇ  ಪ್ರಯಾಣ. ಅದೂ 90 ಕಿಲೋಮೀಟರ್‍ನಷ್ಟು ದೀರ್ಘ ಯಾತ್ರೆ. ಪ್ರವಾದಿ ಮತ್ತು  ಝೈದ್ ಬಿನ್ ಹಾರಿಸ- ಇಬ್ಬರೂ ದಣಿದಿದ್ದರು. ಆದರೂ ಅವರಿಬ್ಬರೂ ಹಠ ಬಿಡದೇ ತಾಯಿಫ್‍ಗೆ  ತಲುಪಿದರು. ಬಳಿಕ ಪುರ ಪ್ರಮುಖರಾದ ಅಬ್ದುಲ್ಲಾ ಬಿನ್ ಅಮ್ರ್‍ರನ್ನು ಭೇಟಿಯಾಗಿ ತಾವು ಬಂದಿರುವ  ಉದ್ದೇಶವನ್ನು ವಿವರಿಸಿದರು. ಅಲ್ಲದೇ, ಸಹೋದರರಾದ ಮಸ್‍ಊದ್ ಮತ್ತು ಹಬೀಬ್ ಎಂಬಿಬ್ಬರನ್ನೂ  ಭೇಟಿಯಾದರು. ತನಗೆ ಆಶ್ರಯ ನೀಡಬೇಕೆಂದು ಕೋರಿಕೊಂಡರು. ಆದರೆ ಅವರು ಒಪ್ಪಿಕೊಳ್ಳಲಿಲ್ಲ  ಎಂದು ಮಾತ್ರವಲ್ಲ, ಅಸಭ್ಯ ಭಾಷೆಯಲ್ಲಿ ನಿಂದಿಸಿದರು. ತೀವ್ರ ವಿರೋಧವನ್ನು ವ್ಯಕ್ತಪಡಿಸಿದರು. ಅವರ  ಪ್ರತಿಕ್ರಿಯೆಯನ್ನು ಆಲಿಸಿದ ಬಳಿಕ ಪ್ರವಾದಿ ಹೇಳಿದರು,

‘ನೀವು ಆಶ್ರಯ ಕೊಡದಿದ್ದರೂ ಚಿಂತಿಲ್ಲ, ಆದರೆ ಆಶ್ರಯ ಕೊಡದೇ ಇರುವ ಸಂಗತಿಯನ್ನು ಮಕ್ಕಾದ  ಮಂದಿಗೆ ಮಾತ್ರ ತಿಳಿಸಬೇಡಿ. ಈ ಮಾತುಕತೆಯನ್ನು ಇಲ್ಲಿಗೇ ಬಿಟ್ಟು ಬಿಡಿ.’

ಪ್ರವಾದಿ ಮರಳಿ ಮಕ್ಕಾಕ್ಕೆ ಹೊರಟು ನಿಂತರು. ತನ್ನ ತಾಯಿ ಮತ್ತು ಸಾಕು ತಾಯಿಯ ಊರ ಜನರು  ತನಗೆ ಆಶ್ರಯ ನೀಡಲಿಲ್ಲವಲ್ಲ ಅನ್ನುವ ನೋವೊಂದು ಅವರಲ್ಲಿರುವ ಸಾಧ್ಯತೆಯನ್ನು  ಅಲ್ಲಗಳೆಯುವಂತಿಲ್ಲ. ಮಕ್ಕಾದಿಂದ ಹೊರಡುವಾಗ ಅವರಲ್ಲೊಂದು ನಿರೀಕ್ಷೆ ಇತ್ತು. ತನ್ನ ತಾಯಿಯ  ತವರೂರು ತನ್ನನ್ನು ಸ್ವೀಕರಿಸಬಹುದು ಅನ್ನುವ ಆಶಾವಾದವಿತ್ತು. ತನ್ನೂರಿನ ಜನರು ತನ್ನನ್ನು  ತಿರಸ್ಕರಿಸಿದರೇನು, ತಾಯಿಯ ತವರೂರಲ್ಲಿ ತಾನು ಹೊಸ ಬದುಕನ್ನು ಕಂಡುಕೊಳ್ಳುವೆ ಅನ್ನುವ  ವಿಶ್ವಾಸವಿತ್ತು. ಆದರೆ, ಆ ನಿರೀಕ್ಷೆ ಈಗ ಹುಸಿಯಾಗಿದೆ. ಅವರು ಝೈದ್ ಬಿನ್ ಹಾರಿಸರೊಂದಿಗೆ  ಮರಳಿ ಕಾಲ್ನಡಿಗೆಯಲ್ಲಿ ಹೊರಟು ನಿಂತಾಗ ಅವರ ಸುತ್ತ ಗುಂಪು ಸೇರಿತು. ಹಲ್ಲೆ ನಡೆಸಿತು.  ಕಲ್ಲೆಸೆಯಿತು. ಎಲ್ಲಿಯ ವರೆಗೆಂದರೆ, ಜೊತೆಗಿದ್ದ ಝೈದ್ ಬಿನ್ ಹಾರಿಸರ ತಲೆಗೆ ಬಿದ್ದ ಕಲ್ಲಿನೇಟಿನಿಂದಾಗಿ  ರಕ್ತ ಹರಿದು ಮುಖವಿಡೀ ಕೆಂಪು ಕೆಂಪಾಯಿತು. ಪ್ರವಾದಿ ಮುಹಮ್ಮದ್‍ರ ಕಾಲಿನ ಹಿಂಭಾಗ ಕಲ್ಲಿನೇಟಿಗೆ  ಒಡೆದು ರಕ್ತ ಸುರಿಯತೊಡಗಿತು. ಗುಂಪು ಅವರನ್ನು ತಮ್ಮ ಗಡಿಯವರೆಗೆ ಹಿಂಬಾಲಿಸಿ ಹಿಂಸೆ ಕೊಟ್ಟು  ಮರಳಿತು. ಪ್ರವಾದಿ ನಡೆಯುತ್ತಾ ಒಂದು ತೋಟಕ್ಕೆ ಹೋದರು. ಅಲ್ಲೇ  ಒರಗಿ ಕುಳಿತರು. ಆ ತೋಟದ  ಕಾರ್ಮಿಕ ಅವರಿಗೆ ಬೇಕಾದ ವ್ಯವಸ್ಥೆಯನ್ನು ಮಾಡಿದ. ನೀರು ಕೊಟ್ಟ.
ಪ್ರವಾದಿ ಮುಹಮ್ಮದರ ಮುಂದೆ ಈಗ ಇನ್ನೊಂದು ಸವಾಲು ಎದುರಾಯಿತು.

ಅವರೀಗ ಮಕ್ಕಾದ ಹೊರಗಿನ ತಾಯಿಫ್‍ಗೆ ಬಂದಿರುವುದು, ಅಲ್ಲಿ ಅಭಯ ಕೇಳಿರುವುದು ಮತ್ತು  ತಾಯಿಫ್‍ನ ಪುರ ಪ್ರಮುಖರು ಅದನ್ನು ತಿರಸ್ಕರಿಸಿರುವುದು ಎಲ್ಲವೂ ಮಕ್ಕಾದ ತನ್ನ ವಿರೋಧಿಗಳಿಗೆ  ತಿಳಿದಿರುವ ಸಾಧ್ಯತೆಯಂತೂ ಇದ್ದೇ  ಇದೆ. ತನ್ನ ಮೇಲೆ ಜನರ ಗುಂಪು ಮುಗಿಬಿದ್ದಿರುವುದರಲ್ಲೇ  ಈ  ಸೂಚನೆ ಇದೆ. ಆಶ್ರಯ ಕೇಳಿರುವ ವಿಷಯವನ್ನು ಪುರಪ್ರಮುಖರು ಬಹಿರಂಗಪಡಿಸಿದ್ದಾರೆ. ಅದರ  ಭಾಗವಾಗಿಯೇ ಜನರು ಒಟ್ಟು ಗೂಡಿದ್ದಾರೆ. ಆದ್ದರಿಂದ ಈ ಸುದ್ದಿ ಮಕ್ಕಾಕ್ಕೂ ತಲುಪಿರುವ ಸಾಧ್ಯತೆ  ಇದೆ. ಇನ್ನು ನೇರವಾಗಿ ಮಕ್ಕಾಕ್ಕೆ ಹೋಗುವುದರಲ್ಲೂ ಸುಖ ಇಲ್ಲ. ಅಲ್ಲಿ ಯಾರಾದರೂ ಆಶ್ರಯವನ್ನು  ಕೊಡಲು ಮುಂದೆ ಬಂದರೆ, ಪ್ರಯಾಣ ಸುಲಭ. ಈ ಹಿನ್ನೆಲೆಯಲ್ಲಿ ಪ್ರವಾದಿ ಮುಹಮ್ಮದರು ಮಕ್ಕಾದ  ಮಂದಿಯಲ್ಲಿ ಅಭಯವನ್ನು ಕೋರಿ ಬಳಿಕ ಪಯಣ ಮುಂದುವರಿಸುವುದು ಉತ್ತಮವೆಂದು ಬಗೆದರು.  ಹೀಗೆ ಅಖ್‍ನಸ್ ಬಿನ್ ಶರೀಖ್ ಎಂಬ ಪ್ರಮುಖ ವ್ಯಕ್ತಿಗೆ ಕೋರಿಕೆ ಸಲ್ಲಿಸಿದರು. ಆದರೆ ಆ ವ್ಯಕ್ತಿ  ಒಪ್ಪಿಕೊಳ್ಳಲಿಲ್ಲ. ಬಳಿಕ ಸುಹೈಲ್ ಬಿನ್ ಅಮ್ರ್ ಎಂಬ ಮತ್ತೋರ್ವ ಪ್ರಮುಖ ವ್ಯಕ್ತಿಗೆ ಕೋರಿಕೆ  ಕಳುಹಿಸಿದರು. ಆತನೂ ನಿರಾಕರಿಸಿದ. ಕೊನೆಗೆ, ಮುತ್‍ಇಮ್ ಬಿನ್ ಅದಿಯ್ಯ್ ಎಂಬ ವ್ಯಕ್ತಿಗೆ ಪ್ರವಾ ದಿಯವರು ಆಶ್ರಯ ಕೋರಿಕೆಯನ್ನು ಸಲ್ಲಿಸಿದರು. ಆತ ಒಪ್ಪಿಕೊಂಡ. ಮಾತ್ರವಲ್ಲ, ತನ್ನ ಆರು ಮಂದಿ  ಪುತ್ರರನ್ನು ಸೇರಿಸಿಕೊಂಡು ಆಗಮಿಸಿದ. ಎಲ್ಲರೂ ಶಸ್ತ್ರಸಜ್ಜಿತರು. ಪ್ರವಾದಿಯನ್ನು ಕಾಬಾದ ಬಳಿ ನಿಲ್ಲಿಸಿದ  ಮತ್ತು ಘೋಷಿಸಿದ-

‘ನಾನು ಮುಹಮ್ಮದರಿಗೆ ಅಭಯ ನೀಡಿದ್ದೇನೆ.’

ಹಾಗಂತ, ಆತ ಪ್ರವಾದಿ ಮುಹಮ್ಮದರ ವಿಚಾರಧಾರೆಯನ್ನು ಒಪ್ಪಿಕೊಂಡಿರಲಿಲ್ಲ. ದೊಡ್ಡಪ್ಪ ಅಬೂತಾ ಲಿಬ್‍ರ ನಿಧನದ ಬಳಿಕ ಅತಂತ್ರರಂತಾಗಿದ್ದ ಪ್ರವಾದಿ ಮುಹಮ್ಮದರು ಹೀಗೆ ಮತ್ತೆ ಅಭಯದಾತರನ್ನು  ಪಡೆದುಕೊಂಡರು. ಮಕ್ಕಾದಲ್ಲಿ ತನ್ನ ವಿಚಾರ ಧಾರೆಯನ್ನು ಹರಡತೊಡಗಿದರು. ವಿರೋಧಿಗಳ ಕುಹಕ,  ಹಿಂಸೆ ಎಗ್ಗಿಲ್ಲದೇ ನಡೆಯುತ್ತಿದ್ದರೂ ಅವರನ್ನು ತಾಯ್ನಾಡಿನಿಂದ ಬಲ ವಂತವಾಗಿ ಹೊರಹಾಕುವುದಕ್ಕೆ  ಅವಕಾಶ ಇರಲಿಲ್ಲ. ಹಾಗಂತ, ಹಿಂಸೆಯೂ ನಿಲ್ಲಲಿಲ್ಲ. ಕೊನೆಗೆ ಅವರು ಮಕ್ಕಾವನ್ನು ಬಿಟ್ಟು ಸುಮಾರು  150 ಕಿಲೋಮೀಟರ್ ದೂರದ ಮದೀನಾಕ್ಕೆ ವಲಸೆ ಹೋಗಲು ತೀರ್ಮಾನಿಸಿದರು. ಅಲ್ಲಿ ಹೋಗಿ  ನೆಲೆಸಿದರು. ಆದರೆ,

ಮಕ್ಕಾದ ಅವರ ವಿರೋಧಿಗಳು ಅವರನ್ನು ಅಲ್ಲೂ ಸಮಾ ಧಾನದಿಂದ ಬದುಕಲು ಬಿಡಲಿಲ್ಲ. ತಂತ್ರ  ಹೆಣೆದರು. ಅವರ ವಿರುದ್ಧ ಯುದ್ಧ ಘೋಷಿಸಿದರು. ಮದೀನಾದಲ್ಲಿದ್ದ ಯಹೂದಿ ಗಳೊಂದಿಗೆ ಅತ್ಯಂತ  ಜನಪರವಾದ ಮತ್ತು ಪೌರತ್ವ ಕೇಂದ್ರಿತವಾದ ಕರಾರೊಂದನ್ನು ಮಾಡಿಕೊಂಡು ನೆಲೆ ಕಂಡುಕೊಂಡಿದ್ದ  ಪ್ರವಾದಿಯವರು ಈ ಯುದ್ಧವನ್ನು ಎದುರಿಸಬೇಕಾಗಿತ್ತು. ಹಾಗೆ, ಮದೀನಾದ ಹೊರಗಡೆಯಿರುವ ಬದ್ರ್  ಎಂಬ ಸ್ಥಳದಲ್ಲಿ ಕಾಳಗ ನಡೆಯಿತು. ಮಕ್ಕಾದ ಯುದ್ಧ ತಂಡದಲ್ಲಿ ಪ್ರವಾದಿಗೆ ಅಭಯ ನೀಡಿದ್ದ  ಮುತ್‍ಇಮ್ ಬಿನ್ ಅದಿಯ್ಯ್ ಕೂಡ ಇದ್ದರು. ಪ್ರವಾದಿಗೆ ಇದು ಗೊತ್ತಾಯಿತು. ‘ಮುತ್‍ಇಮ್ ಬಿನ್  ಅದಿಯ್ಯ್‍ರನ್ನು ರಣಾಂಗಣದಲ್ಲಿ ಗುರಿ ಮಾಡಬೇಡಿ’ ಎಂದು ಪ್ರವಾದಿ ತನ್ನ ಯೋಧರಿಗೆ ಸೂಚಿಸಿದರು.  ಅಲ್ಲದೇ ಯುದ್ಧದಿಂದ ದೂರ ನಿಲ್ಲುವಂತೆ ಮುತ್‍ಇಮ್‍ರಿಗೆ ಮನವಿಯನ್ನೂ ಮಾಡಿಕೊಂಡರು. ಆದರೆ  ಅವರು ನಿರಾಕರಿಸಿದರು. ಕೊನೆಗೆ ಮುತ್‍ಇಮ್ ಕಾಳಗದಲ್ಲಿ ಸಾವನ್ನಪ್ಪಿದರು.
ಅಂದಿನ ಕಾಲದಲ್ಲಿ ಯುದ್ಧವೆನ್ನುವುದು ಅರಬಿಗಳ ಸಂಸ್ಕøತಿ ಯಾಗಿತ್ತು. ಸಣ್ಣ-ಪುಟ್ಟ ವಿವಾದವೂ  ಯುದ್ಧದಲ್ಲೇ  ಕೊನೆಗೊಳ್ಳುತ್ತಿತ್ತು. ಜನರೆಲ್ಲ ಯಾವುದಾದರೊಂದು ಗೋತ್ರದಲ್ಲಿ ಗುರುತಿಸಿಕೊಂಡಿದ್ದರು.  ಯಾವುದೇ ವ್ಯಕ್ತಿಗಾಗುವ ಅನ್ಯಾಯ, ಅವಮಾನವು ಆ ವ್ಯಕ್ತಿಗೆ ಮಾತ್ರವಲ್ಲದೇ, ಆ ವ್ಯಕ್ತಿ ಪ್ರತಿನಿಧಿಸುವ  ಗೋತ್ರಕ್ಕಾಗುವ ಅನ್ಯಾಯ, ಅವಮಾನವಾಗಿ ಗುರುತಿಗೀಡಾಗುತ್ತಿತ್ತು. ಬಳಿಕ ಅದು ಪ್ರತಿಷ್ಠೆಯ ಪ್ರಶ್ನೆಯಾಗುತ್ತಿತ್ತು. ಅದಕ್ಕಾಗಿಯೇ ಆಯಾ ಗೋತ್ರಗಳು ತಿಂಗಳುಗಟ್ಟಲೆ ಘರ್ಷಣೆಯಲ್ಲೂ ತೊಡಗುತ್ತಿತ್ತು.

ಬದ್ರ್‍ನಲ್ಲಿ ನಡೆದ ಕಾಳಗದಲ್ಲಿ ಪ್ರವಾದಿಯವರ ವಿರೋಧಿಗಳಿಗೆ ಸೋಲು ಉಂಟಾಯಿತು. ಅವರ  150ರಷ್ಟು ಮಂದಿಯನ್ನು ಪ್ರವಾದಿಯವರ ಸೇನೆ ಬಂಧಿಸಿ ಮದೀನಾಕ್ಕೆ ಕೊಂಡೊಯ್ಯಿತು. ಬಂಧಿಗಳ  ಕುಟುಂಬಸ್ಥರು ದಂಡವನ್ನು ಪಾವತಿಸಿ ತಮ್ಮವರನ್ನು ಬಿಡಿಸಿಕೊಂಡು ಹೋಗತೊಡಗಿದರು. ಆಗ ಪ್ರವಾದಿ  ತನ್ನ ಅನುಯಾಯಿಗಳೊಂದಿಗೆ ಹೇಳಿದ್ದು ಹೀಗೆ:

‘ಒಂದುವೇಳೆ, ಮುತ್‍ಇಮ್ ಬಿನ್ ಅದಿಯ್ಯ್ ಯುದ್ಧದಲ್ಲಿ ಸಾವಿಗೀಡಾಗದೆ ಬದುಕಿರುತ್ತಿದ್ದರೆ ಮತ್ತು ಈ  ಯುದ್ಧ ಕೈದಿಗಳನ್ನು ಬಿಡುಗಡೆಗೊಳಿಸುವಂತೆ ಕೇಳಿಕೊಂಡಿದ್ದರೆ ಯಾವ ದಂಡವನ್ನೂ ಪಡೆದುಕೊಳ್ಳದೇ  ಎಲ್ಲರನ್ನೂ ಬಿಡುಗಡೆಗೊಳಿಸುತ್ತಿದ್ದೆ.’
ಇದರ ನಂತರ, ಇನ್ನೊಂದು ಕಾಳಗವೂ ನಡೆಯಿತು.

ಅದು ಉಹುದ್ ಎಂಬ ಬೆಟ್ಟದ ಕೆಳಗಡೆ. ಅದರಲ್ಲಿ ಪ್ರವಾದಿ ಮುಹಮ್ಮದ್‍ರ ಸೇನೆ ತೀವ್ರ ಹೊಡೆತವನ್ನು  ತಿನ್ನುತ್ತದೆ. ಪ್ರವಾದಿಯವರ ಅತ್ಯಂತ ಆಪ್ತರೂ ಸೇರಿದಂತೆ 70 ಮಂದಿ ಸಾವಿಗೀಡಾಗುತ್ತಾರೆ. ಸ್ವತಃ  ಪ್ರವಾದಿಯ ಹಲ್ಲುಗಳೂ ಉದುರುತ್ತವೆ. ಒಂದು ರೀತಿಯಲ್ಲಿ, ಪ್ರವಾದಿಯವರು ಬಲವಾದ ಎದಿರೇಟನ್ನು  ಪಡೆದ ಕಾಳಗ. ಒಂದು ದಿನ ಅವರ ಪತ್ನಿ ಆಯಿಶಾ(ರ) ಪ್ರಶ್ನಿಸುತ್ತಾರೆ,

‘ಉಹುದ್ ಕಾಳಗದ ದಿನಗಳಿಗಿಂತ ಕಠಿಣ ಮತ್ತು ನೋವಿನ ದಿನಗಳು ನಿಮ್ಮ ಬದುಕಿನಲ್ಲಿ  ಎದುರಾಗಿವೆಯೇ?’ ಪ್ರವಾದಿಯ ಉತ್ತರ ಹೀಗಿತ್ತು:
‘ನಾನು ಅಭಯವನ್ನು ಕೋರಿ ತಾಯಿಫ್‍ಗೆ ಹೋದ ದಿನವೇ ನನ್ನ ಪಾಲಿನ ಅತ್ಯಂತ ಕಷ್ಟಕರವಾದ  ಮತ್ತು
ನೋವು ನೀಡಿದ ದಿನ.’

ನಿಜವಾಗಿ, ಇವು ಒಂದು ಘಟನೆಯಾಗಿಯಷ್ಟೇ ನಮ್ಮ ಎದುರು ನಿಲ್ಲಬೇಕಾದುದಲ್ಲ. ಅಥವಾ  ಭಾವುಕತೆಯಿಂದ ಓದಿ ಮುಗಿಸಬೇಕಾದುದೂ ಅಲ್ಲ. ತನಗೆ ಮದೀನಾದಲ್ಲೂ ನೆಲೆ ಇಲ್ಲದಂತೆ  ಮಾಡಬೇಕೆಂದು ಹೊರಟು ಬಂದ ಸೇನೆಯ ಭಾಗವಾಗಿದ್ದ ಮುತ್‍ಇಮ್ ಬಿನ್ ಅದಿಯ್ಯ್‍ನ ಬಗ್ಗೆ  ಪ್ರವಾದಿಯ ಧೋರಣೆ ಮತ್ತು ತಾಯಿಫ್‍ಗಿಂತ ಅನೇಕಾರು ಪಟ್ಟು ಅಧಿಕ ನೋವನ್ನು ಮತ್ತು ಸಾವನ್ನು  ನೀಡಿರುವ ಬೇರೆ ಸಂದರ್ಭಗಳಿದ್ದಾಗ್ಯೂ ಪ್ರವಾದಿ ತಾಯಿಫನ್ನೇ ಅತೀ ಪ್ರಮುಖ ನೋವಿನ ಘಟ ನೆಯಾಗಿ ಎತ್ತಿ ಹೇಳಿರುವುದೇಕೆಂಬ ಬಗ್ಗೆ ಆಳ ಚಿಂತನೆ ನಡೆಸಬೇಕಾಗಿದೆ.

ಮುತ್‍ಇಮ್ ಮತ್ತು ತಾಯಿಫ್- ಈ ಎರಡರಲ್ಲೂ ಅನೇಕ ಪಾಠಗಳಿವೆ. 

Tuesday, July 14, 2020

ಆ ತಂದೆ ಮತ್ತು ಮಗ ನಮ್ಮದೇ ಚಪ್ಪಾಳೆಯ ಫಲಿತಾಂಶವೋ ಏನೋ?



#HyderabadHorrror, #RIPDisha, #HyderabadPolice, #HyderabadMurder... ಇತ್ಯಾದಿ ಹ್ಯಾಶ್‍ಟ್ಯಾಗ್‍ಗಳು 2019, ಡಿಸೆಂಬರ್ 6ರಂದು ಟ್ವಿಟರ್‍ನಲ್ಲಿ  ಟ್ರೆಂಡಿಂಗ್ ಆಗಿರುವುದನ್ನು ನೀವು ನೋಡಿಯೇ ಇರುತ್ತೀರಿ. ‘This morning I wake up to the news and Justice has been served...’ ಎಂದು ಖ್ಯಾತ ತೆಲುಗು ಚಿತ್ರ ನಟ ನಾಗಾರ್ಜುನ ಅಕ್ಕಿನೇಣಿ ಟ್ವೀಟ್ ಮಾಡಿದ್ದನ್ನೂ ನೀವು ಬಲ್ಲಿರಿ. ದಿಶಾಳಿಗೆ ನ್ಯಾಯ ಲಭಿಸಿದೆ ಎಂಬುದಾಗಿ ಆ ದಿನದಂದು ಬಿಎಸ್‍ಪಿಯ ಮಾಯಾವತಿ ಯವರೂ ಖುಷಿಪಟ್ಟಿದ್ದರು. ಸೆಲೆಬ್ರಿಟಿಗಳು,  ರಾಜಕಾರಣಿಗಳು, ಪತ್ರಕರ್ತರು, ಸಾರ್ವಜನಿಕರು.. ಹೀಗೆ ಅಸಂಖ್ಯ ಮಂದಿ ನಾಗಾರ್ಜುನರಂತೆಯೇ ಖುಷಿ ಪಟ್ಟಿದ್ದರು. ಹೈದರಾಬಾದ್‍ನ ಶಾದ್ ನಗರದ ನೂರಾರು ನಾಗರಿಕರು ಎನ್‍ಕೌಂಟರ್ ನಡೆದ  ಸ್ಥಳಕ್ಕೆ ತೆರಳಿ ಘೋಷಣೆ ಕೂಗಿದ್ದರು. ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ್ದರು. ಇದಕ್ಕೆ ಕಾರಣ, ಶಾದ್ ನಗರ ಪೊಲೀಸ್ ಠಾಣೆಯ ಸೈಬರ್ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್ ಅವರ ನೇತೃತ್ವದಲ್ಲಿ  ನಡೆದ ಎನ್‍ಕೌಂಟರ್.
ದಿಶಾ ಎಂಬ 25ರ ಹರೆಯದ ಹೈದರಾಬಾದ್‍ನ ವೈದ್ಯೆಯನ್ನು ಚನ್ನಕೇಶವುಲು, ಮುಹಮ್ಮದ್ ಆರಿಫ್, ನವೀನ ಮತ್ತು ಶಿವ ಎಂಬ ನಾಲ್ವರು ತಮ್ಮ ಲಾರಿಯಲ್ಲಿ ಅಪಹರಿಸಿ, ಅತ್ಯಾಚಾರ ಮಾಡಿ, ಹತ್ಯೆ  ಮಾಡಿದ್ದರು. ಆ ಬಳಿಕ ಶವವನ್ನು ಶಾದ್ ನಗರದ ಫ್ಲೈ ಓವರ್‍ನ ಅಡಿಯಲ್ಲಿ ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದರು. ನವೆಂಬರ್ 27ರಂದು ಈ ನಾಲ್ವರ ಬಂಧನವಾಗಿತ್ತು. ಡಿಸೆಂಬರ್ 6ರಂದು ಮುಂಜಾನೆ  5.30ರ ಸುಮಾರಿಗೆ ಈ ನಾಲ್ವರನ್ನು ಶವ ಸುಟ್ಟ ಜಾಗಕ್ಕೆ ಮಹಜರಿಗೆಂದು ಕೊಂಡೊಯ್ಯಲಾಗಿತ್ತು. ಆ ಬಳಿಕ ಆ ನಾಲ್ವರನ್ನೂ ಗುಂಡು ಹಾರಿಸಿ ಕೊಲ್ಲಲಾಗಿತ್ತು. ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಎನ್‍ಕೌಂಟರ್ ಮಾಡಲಾಯಿತು ಎಂಬ ಸಮರ್ಥನೆಯನ್ನು ಸಜ್ಜನರ್ ನೀಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲ, ಪತ್ರಿಕೆಗಳಲ್ಲಿ ಕೂಡ ಸಜ್ಜನರ್ ಅವರ ಎನ್‍ಕೌಂಟರನ್ನು ಬೆಂಬಲಿಸಿ ಬರಹಗಳು ಪ್ರಕಟವಾದುವು. ಆದರೆ,
ಇಂಥ ಸನ್ನಿವೇಶದಲ್ಲೂ ಅಸಂಖ್ಯ ಮಂದಿ ಈ ಬಗೆಯ ಸಂಭ್ರಮವನ್ನು ಪ್ರಶ್ನಿಸಿದರು. ನ್ಯಾಯಾಂಗೇತರ ಹತ್ಯೆಯನ್ನು ಸಮರ್ಥಿಸುವುದು ಅಪಾಯಕಾರಿ ಎಂದು ಎಚ್ಚರಿಸಿದ್ದರು. ಇವರಲ್ಲಿ ಕಮ್ಯುನಿಸ್ಟ್  ನೇತಾರ ಸೀತಾರಾಮ್ ಯೆಚೂರಿ ಮತ್ತು ಲೋಕಸತ್ತಾ ಪಕ್ಷದ ನಾಯಕ ಜಯಪ್ರಕಾಶ್ ನಾರಾಯಣ್ ಕೂಡಾ ಸೇರಿದ್ದರು. ಅದರಲ್ಲೂ ನಾರಾಯಣ್ ಅವರು,
‘Extra Judicial Killings will only make innocent people victims overtime. Due process protects all of us’ ಎಂದು ಡಿ. 6,  2019ರಂದು ಟ್ವೀಟ್ ಮಾಡಿದ್ದರು.
ಇದೀಗ ತಮಿಳುನಾಡಿನ ತೂತುಕುಡಿಯ ಸಟ್ಟಕುಲಂ ಪೊಲೀಸ್ ಠಾಣೆಯು ಮುಗ್ಧರಿಬ್ಬರ ಹತ್ಯೆಯ ಹೊಣೆಯನ್ನು ಹೊತ್ತುಕೊಂಡು ಭಾರೀ ಆಕ್ರೋಶಕ್ಕೆ ತುತ್ತಾಗಿದೆ. ಇನ್ಸ್ ಪೆಕ್ಟರ್ ಶ್ರೀಧರ್, ಸಬ್ ಇನ್ಸ್ ಪೆಕ್ಟರ್ ಗಳಾದ ಬಾಲಕೃಷ್ಣನ್ ಮತ್ತು ರಘು ಗಣೇಶನ್ ಸೇರಿದಂತೆ ಕೆಲವು ಪೊಲೀಸರ ಬಂಧನವಾಗಿದೆ. ಹತ್ಯೆಗೀಡಾಗಿರುವುದು ತಂದೆ ಮತ್ತು ಮಗ. ಮಗ ಬೆನಿಕ್ಸ್ ಗೆ ಕಳೆದ ಮೇಯಲ್ಲಿ ಮದುವೆ ನಿಗದಿಯಾಗಿತ್ತು. ಕೊರೋನಾದಿಂದಾಗಿ ಆ ಮದುವೆಯನ್ನು ಡಿಸೆಂಬರ್ ಗೆ ಮುಂದೂಡಲಾಗಿತ್ತು. ತಂದೆಯ ಬಂಧನವನ್ನು ಪ್ರಶ್ನಿಸಿ ಬೆನಿಕ್ಸ್ ಪೊಲೀಸ್ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿರುವುದೇ ಈ  ಘಟನೆಗೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳನ್ನು ಹೇಳಿದ್ದಾರೆ. ಕ್ರೌರ್ಯದ ಪರಮಾವಧಿ ಏನೆಂದರೆ, ಈ ತಂದೆ-ಮಗನ ಬಂಧನವಾದದ್ದು ಜೂನ್ 19ರಂದು. ಸಾವಿಗೀಡಾದದ್ದು ಜೂನ್ 22ರಂದು. ಅದೂ  ಕೋವಿಲ್ ಪಟ್ಟಿ ಸೆಂಟ್ರಲ್ ಜೈಲಿನ ಜೈಲು ಆಸ್ಪತ್ರೆಯಲ್ಲಿ. ಸಟ್ಟಕುಲಂನಿಂದ ಕೋವಿಲ್ ಪಟ್ಟಿ ಸೆಂಟ್ರಲ್ ಜೈಲಿಗೆ 100 ಕಿಲೋಮೀಟರ್ ದೂರವಿದೆ. ಆದರೆ, ಈ ಜೈಲಿ ಗಿಂತ ತೀರಾ ಹತ್ತಿರದಲ್ಲಿ ಪೆರೂರಾನಿ  ಮತ್ತು ಶ್ರೀ ವೈಕುಂಡಂ ಎಂಬೆರಡು ಸಬ್ ಜೈಲುಗಳಿವೆ. ಸಟ್ಟಕುಲಂನಿಂದ ಈ ಎರಡು ಸಬ್ ಜೈಲುಗಳಿಗಿರುವ ದೂರ ಬರೇ 40 ಕಿಲೋ ಮೀಟರ್. ಹೀಗಿದ್ದೂ ಈ ಇಬ್ಬರನ್ನು ಅಷ್ಟು ದೂರದ ಜೈಲಿಗೆ  ಹಾಕಿರುವುದೇಕೆ ಅನ್ನುವ ಪ್ರಶ್ನೆ ಅಸಹಜವಲ್ಲ. ಅಷ್ಟಕ್ಕೂ, ಇಲ್ಲಿಗೇ ಈ ಸಂಕಟ ಮುಗಿದಿಲ್ಲ.
ಈ ಕ್ರೌರ್ಯದ ಬಗ್ಗೆ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ತನಿಖೆಗೆ ಮದ್ರಾಸ್ ಹೈಕೋರ್ಟು ಆದೇಶಿಸುತ್ತದೆ. ಕೋವಿಲ್ ಪಟ್ಟಿ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ಭಾರತೀ ರಾಜನ್ ಅವರು ತನಿಖೆ  ಕೈಗೆತ್ತಿಕೊಳ್ಳುತ್ತಾರೆ. ಆದರೆ, ಸಟ್ಟಕುಲಂ ಪೊಲೀಸ್ ಠಾಣೆ ಅವರನ್ನು ಕ್ಯಾರೇ ಅನ್ನುವುದಿಲ್ಲ. ಮಾತ್ರವಲ್ಲ, ಇಡೀ ಘಟನಾವಳಿಗೆ ಸಾಕ್ಷ್ಯವಾಗಬಹುದಾಗಿದ್ದ ಸಿಸಿಟಿವಿ ಫೂಟೇಜ್‍ಗಳನ್ನೇ ಅಳಿಸಿ ಹಾಕುತ್ತದೆ. ಈ  ಸಂಗತಿಯನ್ನು ಮ್ಯಾಜಿಸ್ಟ್ರೇಟ್‍ರು ಮದ್ರಾಸ್ ಹೈಕೋರ್ಟ್‍ನ ಮುಂದೆ ಇಟ್ಟಾಗ ಅದು ಇಬ್ಬರು ನ್ಯಾಯಾಧೀಶರ ಆಯೋಗವನ್ನು ನೇಮಿಸಿತಲ್ಲದೇ, ಪ್ರಕರಣವನ್ನು ಸಿಬಿಐ ವಹಿಸಿ ಕೊಳ್ಳುವವರೆಗೆ ಸಿಬಿ- ಸಿಐಡಿ  ವಹಿಸಿಕೊಳ್ಳಬೇಕೆಂದು ನಿರ್ದೇಶಿಸುತ್ತದೆ. ಆ ಬಳಿಕ ಪೊಲೀಸಧಿಕಾರಿಗಳ ಬಂಧನ ಮತ್ತು ಅವರ ವಿರುದ್ಧ ಹತ್ಯಾ ಪ್ರಕರಣ ದಾಖಲಾಗುತ್ತದೆ. ಅಂದಹಾಗೆ,
ಈ ದೇಶದಲ್ಲಿ ಪೊಲೀಸ್ ದೌರ್ಜನ್ಯಗಳು ಹೊಸತಲ್ಲ. ಕಸ್ಟಡಿ ಸಾವುಗಳೂ ಹೊಸತಲ್ಲ. ದೇಶದ ಮಾನವ ಹಕ್ಕು ಆಯೋಗಕ್ಕೆ (NHRC) ಕಳೆದ ಮೂರು ವರ್ಷಗಳಲ್ಲಿ 5,300 ಕಸ್ಟಡಿ ಸಾವುಗಳ  ದೂರುಗಳು ಬಂದಿವೆ. ಇನ್ನು, ದೂರುಗಳೇ ದಾಖಲಾಗದ ಸಾವುಗಳು ಎಷ್ಟಿರಬಹುದು? ಈ ದೇಶದಲ್ಲಿ ಪೊಲೀಸರನ್ನು ಎದುರು ಹಾಕಿಕೊಳ್ಳುವುದು ಸಣ್ಣ ಸವಾಲಲ್ಲ. ಒಮ್ಮೆ ಪೊಲೀಸರ ವಿರೋಧ  ಕಟ್ಟಿಕೊಂಡರೆ, ಆ ಬಳಿಕ ಯಾವುದಾದರೊಂದು ಕೇಸಿನಲ್ಲಿ ಫಿಕ್ಸ್ ಆಗುವ ಭೀತಿ ಇದ್ದೇ  ಇರುತ್ತದೆ. ಒಂದುವೇಳೆ, ಗುಜರಾತ್‍ನ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರು ಪ್ರಭುತ್ವದ ವಿರುದ್ಧ ಬಂಡಾಯ  ಏಳದೇ ಇರುತ್ತಿದ್ದರೆ ಅವರು ಈಗ ಎದುರಿಸುತ್ತಿರುವ ಕಸ್ಟಡಿ ಸಾವು ಪ್ರಕರಣವು ಈಗಿನ ಮಾದರಿಯಲ್ಲಿ ಅವರನ್ನು ಕಾಡುತ್ತಿತ್ತೇ? ಅವರು ಜಾಮ್ ನಗರ ಪೊಲೀಸ್ ಸುಪರಿಂಟೆಂಡೆಂಟ್ ಆಗಿದ್ದ ವೇಳೆ  ಕೋಮು ಘರ್ಷಣೆಯ ಹಿನ್ನೆಲೆಯಲ್ಲಿ 150 ಮಂದಿಯನ್ನು ಬಂಧಿಸಿದ್ದರು. ಅದೂ 1990ರಲ್ಲಿ. ಅಡ್ವಾಣಿಯವರ ರಥಯಾತ್ರೆಗೆ ಸಂಬಂಧಿಸಿ ಆ ಘರ್ಷಣೆ ಉಂಟಾಗಿತ್ತು. ಬಂಧಿತರಲ್ಲಿ ಪ್ರಭು ದಾಸ್ ವೈಷ್ಣಾನಿ  ಎಂಬವ ಆ ಬಳಿಕ ಆಸ್ಪತ್ರೆಯಲ್ಲಿ ತೀರಿಕೊಂಡಿದ್ದ. ಅದು ಪೊಲೀಸ್ ದೌರ್ಜನ್ಯದಿಂದಾದ ಸಾವು ಎಂದು ಪ್ರಭುದಾಸ್‍ನ ಸಹೋದರ ಕೇಸು ದಾಖಲಿಸಿದ್ದರು. ಆದರೆ, ಈ ಕುರಿತಾದ ವಿಚಾರಣೆಗೆ ಗುಜರಾತ್  ಸರಕಾರ ಅನುಮತಿ ಕೊಟ್ಟಿರಲಿಲ್ಲ. ಆದ್ದರಿಂದ, ಪ್ರಕರಣ ಇದ್ದಲ್ಲಿಯೇ ಇತ್ತು. ಯಾವಾಗ ಅವರು ಪ್ರಭುತ್ವದ ವಿರುದ್ಧ ತಿರುಗಿ ಬಿದ್ದರೋ ತಕ್ಷಣ ಪ್ರಕರಣ ಮತ್ತೆ ಬೂದಿಯಿಂದ ಎದ್ದು ಬಂತು. ಗುಜರಾತ್  ಸರಕಾರ ತನಿಖೆಗೆ ಅನುಮತಿ ನೀಡಿತು. ಕಳೆದ ವರ್ಷ ಜಾಮ್‍ನಗರ ನ್ಯಾಯಾಲಯವು ಅವರಿಗೆ ಜೀವಾವಧಿ ಶಿಕ್ಷೆಯನ್ನೂ ವಿಧಿಸಿತು. ಅಂದಹಾಗೆ,
ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿ ಪ್ರಧಾನಿ ಮೋದಿಯವರ ವಿರುದ್ಧ ಸಂಜೀವ್ ಭಟ್ ಅವರು 2011ರಲ್ಲಿ ಸುಪ್ರೀಮ್ ಕೋರ್ಟಿಗೆ ಅಫಿದವಿತ್ ಸಲ್ಲಿಸದೇ ಇರುತ್ತಿದ್ದರೆ, ಅವರ ಆ ಕಸ್ಟಡಿ ಸಾವು  ಪ್ರಕರಣಕ್ಕೆ ಮರುಜೀವ ಸಿಗುತ್ತಿತ್ತೇ? ಇಲ್ಲ ಎಂದಾದರೆ, ಇಂಥ ಮುಚ್ಚಿ ಹೋಗುತ್ತಿರುವ ಪ್ರಕರಣಗಳು ಈ ದೇಶದಲ್ಲಿ ಎಷ್ಟಿರಬಹುದು? ರಾಜಕೀಯ ಪಕ್ಷಗಳ ಕೃಪೆಯಿಂದ ಎಷ್ಟು ಕಸ್ಟಡಿ ಸಾವುಗಳು ಸಹಜ  ಸಾವುಗಳಾಗಿಯೋ ಕೇಸುಗಳೇ ದಾಖಲಾಗದೆಯೋ ಸತ್ತು ಹೋಗಿರಬಹುದು? 2000ದಿಂದ 2018ರ ನಡುವೆ 1722 ಕಸ್ಟಡಿ ಸಾವುಗಳು ಸಂಭವಿಸಿದ್ದರೂ ಬರೇ 26 ಪೊಲೀಸರಿಗಷ್ಟೇ ಶಿಕ್ಷೆಯಾಗಿದೆ  ಎಂಬುದು ಏನನ್ನು ಸೂಚಿಸುತ್ತದೆ?
ದಿಶಾ ಪ್ರಕರಣದಲ್ಲಿ ವಿ.ಸಿ. ಸಜ್ಜನರ್ ಮತ್ತು ಅವರ ತಂಡ ಏನನ್ನು ಹೇಳಿತ್ತೋ ಅದನ್ನು ಮನಸಾರೆ ಒಪ್ಪಿಕೊಂಡಿದ್ದವರೇ ಮತ್ತು ಅವರಿಗಾಗಿ ಚಪ್ಪಾಳೆ ತಟ್ಟಿದವರೇ ಇವತ್ತು ಸಟ್ಟಕುಲಂ ಪೆÇಲೀಸರ ಮಾತನ್ನು  ಒಪ್ಪಿಕೊಳ್ಳುತ್ತಿಲ್ಲ. ದಿಶಾ ಪ್ರಕರಣದಲ್ಲಿ ಎನ್‍ಕೌಂಟರನ್ನು ಸಂಭ್ರಮಿಸಿದವರು ಮತ್ತು ಪೊಲೀಸರು ಕೊಟ್ಟ ವರದಿಯನ್ನು ಕಣ್ಣು ಮುಚ್ಚಿ ಅನುಮೋದಿಸಿದವರೇ ಇವತ್ತು ದಿಗ್ಮೂಢರಾಗಿದ್ದಾರೆ. ಹಾಗಂತ,  ತೆಲಂಗಾಣ ಮತ್ತು ತಮಿಳ್ನಾಡು ಬೇರೆ ಬೇರೆ ರಾಜ್ಯಗಳಾಗಿರಬಹುದು. ಪೊಲೀಸ್ ಠಾಣೆಗಳೂ ಬೇರೆ ಬೇರೆ ಆಗಿರಬಹುದು. ಆದರೆ,
ನ್ಯಾಯಾಂಗದ ಕೆಲಸವನ್ನು ಪೊಲೀಸರು ವಹಿಸಿಕೊಂಡರೆ ಮತ್ತು ಅದನ್ನು ನಾಗರಿಕರು ಬೆಂಬಲಿಸಿದರೆ ಅದು ವಿಪರೀತ ಪರಿಣಾಮಕ್ಕೆ ಕಾರಣವಾಗುವ ಭಯ ಇದ್ದೇ  ಇರುತ್ತದೆ. ಇಂಥ ಬೆಳವಣಿಗೆಗಳು  ಪೊಲೀಸರಿಗೆ ಅಪರಿಮಿತ ಧೈರ್ಯವನ್ನು ತಂದು ಕೊಡುತ್ತದೆ. ತಮ್ಮ ಜೊತೆ ನಾಗರಿಕರಿದ್ದಾರೆ ಎಂಬ ಭಂಡ ಧೈರ್ಯದಲ್ಲಿ ಅನ್ಯಾಯ ನಡೆದು ಬಿಡುವುದಕ್ಕೂ ಅವಕಾಶ ಇದೆ. ಸಿಎಎ ವಿರೋಧಿ ಪ್ರತಿಭಟನೆ  ಮತ್ತು ಕೊರೋನಾ ಲಾಕ್‍ಡೌನ್ ಸಮಯದಲ್ಲಿ ಪೆÇಲೀಸರು ನಡೆದುಕೊಂಡ ರೀತಿಯಲ್ಲೂ ಇದಕ್ಕೆ ಉತ್ತರ ಇದೆ. ಮಂಗಳೂರಿನಿಂದ ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ  ವರೆಗೆ, ಶಾಹೀನ್ ಬಾಗ್‍ನಿಂದ ಜೆಎನ್‍ಯು ವರೆಗೆ- ಪೊಲೀಸ್ ದೌರ್ಜನ್ಯದ ನೂರಾರು ವೀಡಿಯೋಗಳು, ವರದಿಗಳು ಮಾಧ್ಯಮಗಳಲ್ಲಿ ಧಾರಾಳ ಪ್ರಕಟವಾಗಿವೆ. ಲಾಕ್‍ಡೌನ್ ಸಂದರ್ಭದಲ್ಲಂತೂ ಪೊಲೀಸ್ ಲಾಠಿಗಳು ಯದ್ವಾತದ್ವಾ ಚಲಿಸಿವೆ.
ಪ್ರಜಾತಂತ್ರ ರಾಷ್ಟ್ರವೊಂದರಲ್ಲಿ ಪೊಲೀಸರು ನ್ಯಾಯಾಂಗವನ್ನು ಲೆಕ್ಕಿಸದೆಯೇ ರಾಜಾರೋಷವಾಗಿ ಹೀಗೆ ಕಾನೂನು ಉಲ್ಲಂಘನೆ ಮಾಡಲು ಹೇಗೆ ಧೈರ್ಯ ಬಂತು? ಪ್ರಭುತ್ವ ಬೆನ್ನಿಗಿದೆ ಎಂಬ ಧೈರ್ಯ  ಇಲ್ಲದೇ ಇರುತ್ತಿದ್ದರೆ, ಈ ಮಟ್ಟದಲ್ಲಿ ಕಾನೂನು ಉಲ್ಲಂಘನೆಗೆ ಅವರು ಮುಂದಾಗುತ್ತಿದ್ದರೇ? ಸಿಸಿಟಿವಿ ಕ್ಯಾಮರಾ ಗಳಲ್ಲಿ ತಮ್ಮ ಕೃತ್ಯ ದಾಖಲಾಗುತ್ತಿದೆ ಎಂಬುದರ ಅರಿವಿದ್ದೂ ಮತ್ತು ಮೊಬೈಲ್‍ಗಳಲ್ಲಿ  ಪ್ರತಿ ಚಟುವಟಿಕೆಗಳೂ ದಾಖಲಾಗುವ ಅಪಾಯ ಗೊತ್ತಿದ್ದೂ ಜಾಮಿಯಾದಲ್ಲಿ, ಜೆಎನ್‍ಯುನಲ್ಲಿ ಮತ್ತು ಮಂಗಳೂರಿನಂಥ ಹಲವಾರು ಕಡೆಗಳಲ್ಲಿ ಎಗ್ಗಿಲ್ಲದೇ ದೌರ್ಜನ್ಯ ನಡೆಸುವುದಕ್ಕೆ ಸಾಧ್ಯವಾದದ್ದು  ಹೇಗೆ? ನಿಜವಾಗಿ,
ಕಾನೂನನ್ನು ಮೀರಿ ಪೊಲೀಸ್ ಇಲಾಖೆ ಕೈಗೊಳ್ಳುವ ಯಾವುದೇ ಎನ್‍ಕೌಂಟರ್, ಕಾರ್ಯಾಚರಣೆ, ವಿಚಾರಣೆಗಳು ನಾಗರಿಕ ಸೌಖ್ಯದ ದೃಷ್ಟಿಯಿಂದ ಅಪಾಯಕಾರಿ. ಪೊಲೀಸರು ತಮ್ಮ ಕರ್ತವ್ಯವನ್ನಷ್ಟೇ  ಮಾಡಬೇಕು. ಅವರು ನ್ಯಾಯಾಧೀಶರಾಗ ಬಾರದು. ಅವರು ನ್ಯಾಯಾಧೀಶರಂತೆ ಮಾತಾಡಿದರೆ ಅವರನ್ನು ನಾಗರಿಕ ಸಮಾಜ ಒಪ್ಪಿಕೊಳ್ಳಲೂ ಬಾರದು. ದಿಶಾಳನ್ನು ಬರ್ಬರವಾಗಿ ಹತ್ಯೆಗೈದವರು ಇವರೇ  ಎಂದು ವಿ.ಸಿ. ಸಜ್ಜನರ್ ಅವರು ನಾಲ್ವರನ್ನು ತೋರಿಸಿ ಹೇಳಿದಾಗ ನಾವು ಒಪ್ಪಿಕೊಂಡೆವು. ಆದರೆ ನ್ಯಾಯಾಂಗ ಇನ್ನೂ ಒಪ್ಪಿಕೊಂಡಿರಲಿಲ್ಲ. ಆ ನಾಲ್ವರು ದಿಶಾಳನ್ನು ಹೇಗೆ ಅಪಹರಿಸಿದರು ಮತ್ತು ಹೇಗೆ  ಬರ್ಬರವಾಗಿ ಹತ್ಯೆ ಮಾಡಿದರು ಎಂಬುದನ್ನು ಸಜ್ಜನರ್ ಮಾಹಿತಿ ನೀಡಿದಾಗಲೂ ನಾವು ಒಪ್ಪಿಕೊಂಡೆವು. ಆದರೆ, ನ್ಯಾಯಾಂಗ ಆಗಲೂ ಒಪ್ಪಿ ಕೊಂಡಿರಲಿಲ್ಲ. ಅವರ ಎನ್‍ಕೌಂಟರ್ ಗೆ ಕಾರಣವಾದ ಸ ನ್ನಿವೇಶವನ್ನು ಸಜ್ಜನರ್ ಹೇಳಿಕೊಂಡರು. ನಾವು ಚಪ್ಪಾಳೆ ತಟ್ಟಿ ಸಂಭ್ರಮಿಸಿದೆವು. ಆಗಲೂ ನ್ಯಾಯಾಲಯ ಅದನ್ನು ಒಪ್ಪಿಕೊಂಡಿರಲಿಲ್ಲ. ಹಾಗಂತ,
ಈ ನಾಲ್ವರೇ ಅಪರಾಧಿಗಳಾಗಿರಲೂ ಬಹುದು. ಆದರೆ ಅದನ್ನು ಹೇಳಬೇಕಾದುದು ಮತ್ತು ಶಿಕ್ಷೆ ನಿರ್ಧರಿಸಬೇಕಾದುದು ಸಜ್ಜನರ್ ಅಲ್ಲ, ನ್ಯಾಯಾಲಯ. ನ್ಯಾಯಾಲಯದ ಹೊರಗಿನ ವ್ಯಕ್ತಿಗಳು ಅದನ್ನು  ತೀರ್ಮಾನಿಸುವುದು ಅನ್ಯಾಯದ ಮಾದರಿ ಯೊಂದಕ್ಕೆ ಅಡಿಗಲ್ಲು ಹಾಕಿದಂತಾಗುತ್ತದೆ. ಮಾತ್ರವಲ್ಲ, ಅದನ್ನು ಸಮರ್ಥಿಸುವುದರಿಂದ ಹಾಗೆ ಮಾಡುವವರಲ್ಲಿ ಧೈರ್ಯ ಉಂಟಾಗುತ್ತದೆ. ಅಂದಹಾಗೆ,
ಜಯರಾಜ್ ಮತ್ತು ಬೆನಿಕ್ಸ್- ನಮ್ಮದೇ ಚಪ್ಪಾಳೆಯ ಫಲಿತಾಂಶವೋ ಏನೋ?