Tuesday, November 10, 2020

ಒಂದು ಜಾಹೀರಾತು ಮತ್ತು ಹಲವು ಡಿಬೇಟ್‍ಗಳುಟಿ.ವಿ. ಚಾನೆಲ್ ಒಂದರಲ್ಲಿ ಚರ್ಚೆಯನ್ನು ವೀಕ್ಷಿಸಿದೆ. ಸುಮಾರಾಗಿ ಅದು ಹೀಗೆ ಸಾಗುತ್ತದೆ-
ನಿರೂಪಕ: ಇಸ್ಲಾಮಿನಲ್ಲಿ ಸೀಮಂತ ಆಚರಣೆ ಸರಿಯೋ ತಪ್ಪೋ?
ಅತಿಥಿ: ತಪ್ಪು
ನಿರೂಪಕ: ಮುಸ್ಲಿಮ್ ಯುವಕನನ್ನು ವರಿಸಿದ ಹಿಂದೂ ಯುವತಿ ಇಸ್ಲಾಮ್‍ಗೆ ಮತಾಂತರ ಆಗದಿದ್ದರೆ ಆ ವಿವಾಹ  ಸಿಂಧುವಾಗುತ್ತದೋ ಇಲ್ಲವೋ?
ಅತಿಥಿ: ಇಲ್ಲ
ನಿರೂಪಕ: ಹಾಗಿದ್ದರೆ ತನಿಷ್ಕ್ ಜ್ಯುವೆಲ್ಲರಿಯ ಏಕತ್ವಂ ಜಾಹೀರಾತು ಇಸ್ಲಾಮ್‍ನ ವಿಧಿ-ನಿಯಮಗಳಿಗೆ ಪೂರಕವಾಗಿದೆಯೇ?
ಅತಿಥಿ: ಇಲ್ಲ
ನಿರೂಪಕ: ಹಾಗಿದ್ದರೆ ತನಿಷ್ಕ್ ಜಾಹೀರಾತ್‍ಗೆ ನಿಮ್ಮ ಬೆಂಬಲ ಇದೆಯೇ?
ಅತಿಥಿ: ಇಲ್ಲ.
ಚರ್ಚೆ ಹೇಗೆ ಕೊನೆಗೊಳ್ಳಬೇಕೆಂದು ಮೊದಲೇ ನಿರ್ಧರಿಸಿದ ನಿರೂಪಕನೋರ್ವ ಹೇಗೆ ಅತಿಥಿಗಳ ಬಾಯಿಯಿಂದ ತನಗೆ ಬೇಕಾದ  ಉತ್ತರವನ್ನು ಪಡೆದುಕೊಳ್ಳಬಹುದು ಎಂಬುದಕ್ಕೆ ಉದಾಹರಣೆಗೆ ಇದು.
ಮುಸ್ಲಿಮರಲ್ಲಿ ಇಸ್ಲಾಮಿನ ರೀತಿ-ರಿವಾಜುಗಳಿಗೆ ಸಂಬಂಧಿಸಿ ವಿಭಿನ್ನ ಧೋರಣೆಯಿದೆ. ದರ್ಗಾ ಸಂಸ್ಕೃತಿಯನ್ನು ತಪ್ಪು ಎಂದು ವಾದಿಸುವವರು ಇರುವಂತೆಯೇ ಸರಿ ಎಂದು ವಾದಿಸುವವರೂ ಇದ್ದಾರೆ. ಗರ್ಭಿಣಿಗೆ ಮಾಡುವ ಸೀಮಂತ ಆಚರಣೆಯ ಪರ ಮತ್ತು  ವಿರೋಧ ಅಭಿಪ್ರಾಯ ಉಳ್ಳವರೂ ಇದ್ದಾರೆ. ಮದುವೆಯ ಮೊದಲು ವಧುವಿನ ಮನೆಯಲ್ಲಿ ನಡೆಯುವ ಮದರಂಗಿ ಕಾರ್ಯಕ್ರಮ,  ಹುಟ್ಟು ಹಬ್ಬ ಆಚರಣೆ ಇತ್ಯಾದಿ ಆಚರಣೆಗಳ ಕುರಿತಂತೆ ಮುಸ್ಲಿಮ್ ಸಮುದಾಯದೊಳಗೆ ವೈಚಾರಿಕ ಭಿನ್ನಾಭಿಪ್ರಾಯ ಇದೆ. ವಿಶೇಷ  ಏನೆಂದರೆ, ಈ ಭಿನ್ನಾ ಭಿಪ್ರಾಯದ ವಿವರ ಗೊತ್ತಿರುವ ಚತುರ ಟಿವಿ ನಿರೂಪಕ ನೋರ್ವ ಹೇಗೆ ಈ ಸಂದರ್ಭವನ್ನು ದುರ್ಬಳಕೆ  ಮಾಡಿಕೊಳ್ಳಬಲ್ಲ ಎಂಬುದು. ಉದಾಹರಣೆಗೆ ತನಿಷ್ಕ್ ಜ್ಯುವೆಲ್ಲರಿಯ ಏಕತ್ವಂ ಜಾಹೀರಾತನ್ನೇ ಎತ್ತಿಕೊಳ್ಳೋಣ.
ಉತ್ತರ ಭಾರತದ ಮುಸ್ಲಿಮ್ ಕುಟುಂಬಕ್ಕೆ ಕೇರಳದ ಹಿಂದೂ ಯುವತಿಯೋರ್ವಳು ಸೊಸೆಯಾಗಿ ಹೋಗುತ್ತಾಳೆ. ಗರ್ಭಿಣಿಯಾಗು ತ್ತಾಳೆ ಮತ್ತು ಆಕೆಗೆ ಕೇರಳದ ಹಿಂದೂ ಕುಟುಂಬದಲ್ಲಿ ರೂಢಿ ಯಲ್ಲಿರುವಂತೆ ಸೀಮಂತ ಕಾರ್ಯಕ್ರಮ ಮಾಡಲು ಆ ಮುಸ್ಲಿಮ್  ಕುಟುಂಬ ತಯಾರಿ ನಡೆಸುತ್ತದೆ. ಆ ಹಿಂದೂ ಯುವತಿಗೆ ಆಶ್ಚರ್ಯವೂ ಆಗುತ್ತದೆ. ಮುಸ್ಲಿಮರಲ್ಲಿ ಈ ಆಚರಣೆ ಇಲ್ವಲ್ಲಾ ಎಂಬ  ಉದ್ಧಾರವೊಂದು ಆ ಹೆಣ್ಣು ಮಗಳಲ್ಲಿ ಕಾಣಿಸಿಕೊಳ್ಳುತ್ತದೆ. ನಮ್ಮಲ್ಲಿಲ್ಲದಿದ್ದರೇನು, ನಿಮ್ಮಲ್ಲಿದೆಯಲ್ಲವೇ ಎಂಬ ರೀತಿಯಲ್ಲಿ ಆ  ಮುಸ್ಲಿಮ್ ಕುಟುಂಬ ಆಕೆಯನ್ನು ಪ್ರೀತಿಸುವ ಮತ್ತು ಸಾಂಸ್ಕೃತಿಕ ಏಕತ್ವವನ್ನು ಸಾರುವ ದೃಶ್ಯ ಆ ಜಾಹೀರಾತಿನದು.
ಕುತೂಹಲ ಇರುವುದೂ ಇಲ್ಲೇ.
ಅಕ್ಟೋಬರ್ 9 ರಂದು ಬಿಡುಗಡೆಗೊಂಡ ಆ ಜಾಹೀರಾತಿನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಗಳು ವ್ಯಕ್ತವಾದುವು. ತನಿಷ್ಕ್ ಆ ಜಾಹೀರಾತನ್ನು ಹಿಂತೆಗೆದುಕೊಳ್ಳ ಬೇಕೆಂಬ ಬೇಡಿಕೆಗಳು ವ್ಯಕ್ತವಾದುವು. ನಟಿ ಕಂಗನಾ ರಾಣಾವತ್ ಅವರು ಆ  ಜಾಹೀರಾತನ್ನು ಲವ್ ಜಿಹಾದ್ ಎಂದರು. ಕ್ರಿಯೇಟಿವ್ ಟೆರರಿಸ್ಟ್ ಎಂದರು. ಲವ್ ಜಿಹಾದ್‍ಗೆ ಪ್ರೇರೇಪಿಸುತ್ತದೆ ಮತ್ತು ಭಾರತೀಯ  ಸಾಂಸ್ಕೃತಿಕ ಅಸ್ಥಿತೆಗೆ ಅದು ವಿರುದ್ಧವಿದೆ ಎಂಬ ಅಭಿಪ್ರಾಯ ಬಲಪಡೆಯಿತು. ಕೊನೆಗೆ ತನಿಷ್ಕ್ ಆ ಜಾಹೀರಾತನ್ನು ಹಿಂಪಡೆಯಿತು.  ನಿಮಗೆ ಗೊತ್ತಿರಲಿ,
ಈ ಜಾಹೀರಾತನ್ನು ಮುಸ್ಲಿಮರು ಆಕ್ಷೇಪಿಸಿರಲಿಲ್ಲ. `ಸೀಮಂತ ಆಚರಣೆ ಇಸ್ಲಾಮ್‍ಗೆ ವಿರುದ್ಧ, ಆದ್ದರಿಂದ ಆ ಜಾಹೀರಾತು  ಇಸ್ಲಾಮ್ ವಿರೋಧಿ' ಎಂದು ಯಾವ ಮೌಲಾನರೂ ಫತ್ವ ಹೊರಡಿಸಿರಲಿಲ್ಲ. ಆದರೆ, ಟಿವಿ ಕಾರ್ಯಕ್ರಮವನ್ನು ಬರೇ ಆ  ಜಾಹೀರಾತು ಮತ್ತು ಅದನ್ನು ವಿರೋಧಿಸುವವರ ಮೃತ್ತದೊಳಗೆ ತಿರುಗಿಸಿದರೆ, ಅದರಲ್ಲಿ ಮಜಾ ಏನಿರುತ್ತೆ? ಅದರ ಬದಲು ಅದನ್ನು ಹಿಂದೂ-ಮುಸ್ಲಿಮ್ ಆಗಿ ಪರಿವರ್ತಿಸಿದರೆ ಮತ್ತು ಮುಸ್ಲಿಮರಿಂದಲೂ ಆ ಜಾಹೀರಾತನ್ನು ತಪ್ಪು ಎಂದು ಹೇಳಿಸಿದರೆ,  ವಿರೋಧಕ್ಕೆ ಆನೆ ಬಲ ಬರುತ್ತದೆ. ಇದಕ್ಕೆ ಮಾಡಬೇಕಾದುದೇನೆಂದರೆ, ಮುಸ್ಲಿಮರಲ್ಲಿ ಸೀಮಂತವನ್ನು ಯಾರು ವಿರೋಧಿಸುತ್ತಾರೋ  ಅವರನ್ನು ಟಿವಿ ಟಿಬೇಟ್‍ಗೆ ಆಹ್ವಾನಿಸುವುದು. ಚರ್ಚೆಯನ್ನು ಇಸ್ಲಾಂ ಧರ್ಮದೆಡೆಗೆ ಒಯ್ಯುವುದು ಮತ್ತು ಇಸ್ಲಾಮ್‍ನಲ್ಲಿ ಸೀಮಂತ  ಇದೆಯೇ ಎಂದು ಪ್ರಶ್ನಿಸುವುದು. ಅವರಿಂದ ಇಲ್ಲ ಎಂಬ ಉತ್ತರ ವನ್ನು ಪಡೆದುಕೊಂಡು ಆ ಇಡೀ ಜಾಹೀರಾತು ಹೇಗೆ ಇಸ್ಲಾಮ್  ವಿರೋಧಿ ಎಂದು ವ್ಯಾಖ್ಯಾನಿಸುವುದು ಮತ್ತು ಸದ್ಯ ದೇಶದಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವವರಿಗೆ 20 ಕೋಟಿ ಮುಸ್ಲಿಮರ  ಬೆಂಬಲವೂ ಇದೆ ಎಂಬ ಪರೋಕ್ಷ ಸಂದೇಶವನ್ನು ಸಾರಲು ಯತ್ನಿಸುವುದು- ಇದು ಆ ಕಾರ್ಯಕ್ರಮದ ಒಟ್ಟು ಸಾರಾಂಶ.
ನಿಜಕ್ಕೂ ತನಿಷ್ಕ್ ಜಾಹೀರಾತು ಹಿಂದೂ-ಮುಸ್ಲಿಮರಿಗೆ ಸಂಬಂಧಿಸಿದ್ದೇ?
ಈ ಪ್ರಶ್ನೆ ಒಟ್ಟು ಬೆಳವಣಿಗೆಯ ದೃಷ್ಟಿಯಿಂದ ಬಹಳ ಮುಖ್ಯವಾದುದು. ತನಿಷ್ಕ್ ಜಾಹೀರಾತಿಗೆ ಯಾರು ವಿರೋಧ ವ್ಯಕ್ತಪಡಿಸಿದ್ದಾರೋ ಅವರಾರೂ ಇಸ್ಲಾಮ್‍ನಲ್ಲಿ ಸೀಮಂತ ಆಚರಣೆ ಇಲ್ಲ ಎಂಬುದನ್ನು ಅದಕ್ಕೆ ಕಾರಣವಾಗಿ ಕೊಟ್ಟಿಲ್ಲ. ಹಿಂದೂ  ಯುವತಿಯು ಮುಸ್ಲಿಮ್ ಕುಟುಂಬಕ್ಕೆ ವಿವಾಹವಾಗಿ ತೆರಳುವುದೇ ಅವರ ವಿರೋಧಕ್ಕೆ ಕಾರಣ. ಹಾಗಂತ, ಈ ವಿರೋಧಿ ಗುಂಪು ಅಮಾಯಕ ಏನಲ್ಲ. ಹಿಂದೂ ಯುವತಿಯನ್ನು ಮುಸ್ಲಿಮ್ ಯುವಕ ವಿವಾಹವಾಗಿರುವುದು ಅಥವಾ ಮುಸ್ಲಿಮ್ ಯುವತಿ ಹಿಂದೂ  ಯುವಕನನ್ನು ಮದುವೆಯಾಗಿರುವುದು ಈ ಗುಂಪಿಗೆ ಗೊತ್ತಿಲ್ಲ ಎಂದೂ ಅಲ್ಲ. ಮುಖ್ತಾರ್ ಅಬ್ಬಾಸ್ ನಕ್ವಿ, ಉಮರ್ ಅಬ್ದುಲ್ಲಾ,  ಕಬೀರ್ ಖಾನ್ ಜೋಡಿ, ಸಿನಿಮಾ ರಂಗದ ಅನೇಕ ನಟ-ನಟಿಯರು ಧರ್ಮಾತೀತವಾಗಿ ವಿವಾಹವಾಗಿದ್ದಾರೆ. ಭಾರತದಂತಹ  ಬಹು ಧರ್ಮೀಯ ಮತ್ತು ಬಹುಸಂಸ್ಕೃತಿಯ ರಾಷ್ಟ್ರವೊಂದ ರಲ್ಲಿ ಈ ಬಗೆಯ ವಿವಾಹ ಅಚ್ಚರಿಯ ಬೆಳವಣಿಗೆಯೂ ಅಲ್ಲ. ಇದು  ವಿರೋಧಿಸುವವರಿಗೂ ಗೊತ್ತು, ವಿರೋಧಿಸುವವರನ್ನು ಒಳಗೊಳಗೇ ಬೆಂಬಲಿಸುವವರಿಗೂ ಗೊತ್ತು. ನಿಜ ಏನೆಂದರೆ,
ಈ ವಿರೋಧ ಹುಟ್ಟಿಕೊಂಡಿರುವುದು ಸಾಂಸ್ಕೃತಿಕ ರಾಜಕಾರಣದ ಗರ್ಭದಲ್ಲಿ. ಮುಸ್ಲಿಮರನ್ನು ವಿರೋಧಿಸುವುದರಿಂದ ರಾಜಕೀಯ  ಲಾಭವಿದೆ ಎಂಬುದು 90ರ ಬಳಿಕ ಈ ದೇಶದಲ್ಲಿ ಸಿದ್ಧವಾಗುತ್ತಾ ಬಂದ ಸತ್ಯ. ಮುಸ್ಲಿಮರನ್ನು ಎಷ್ಟು ತೀವ್ರವಾಗಿ ವಿರೋ ಧಿಸುತ್ತೀರೋ ಮತ್ತು ಅವರ ಸಾಂಸ್ಕೃತಿಕ ಗುರುತುಗಳ ವಿರುದ್ಧ ಎಂಥೆಂಥ ಕಾನ್ಫಿರಸಿ ಥಿಯರಿಯನ್ನು ಹುಟ್ಟು ಹಾಕುತ್ತೀರೋ ಅಷ್ಟೇ  ಪ್ರಬಲ ವಾಗಿ ನಿಮ್ಮ ವಿಚಾರಧಾರೆಗೆ ಸಾಮಾಜಿಕ ಮನ್ನಣೆ ಲಭ್ಯವಾಗುತ್ತಾ ಹೋಗುತ್ತದೆ ಎಂಬ ವಾತಾವರಣ 90ರ ಬಳಿಕ  ದಟ್ಟವಾಗುತ್ತಾ ಹೋಯಿತು. ಟಿಪ್ಪು, ಔರಂಗಜೇಬ, ಘಸ್ನಿ, ಘೋರಿ, ನವಾಬರು ಇತ್ಯಾದಿ ದೊರೆಗಳನ್ನು ದೇಶದ್ರೋಹಿಗಳಂತೆ  ಬಿಂಬಿಸುವುದರಿಂದ ಸಾಮಾಜಿಕ ಧ್ರುವೀಕರಣ ಸಾಧ್ಯವಿದೆ ಎಂಬುದು ದಿನೇ ದಿನೇ ಗಟ್ಟಿಗೊಳ್ಳತೊಡಗಿತು. ಅವರೆಲ್ಲ ರಾಜರು

ಎಂಬುದನ್ನು ಮರೆತು ಇಸ್ಲಾಮ್ ಧರ್ಮದ ನಿಜವಾಗಿ ಪ್ರತಿನಿಧಿಗಳು ಎಂಬಂಥ ಭಾವನೆ ಯನ್ನು ಬಿತ್ತಲಾಯಿತು. ಅವರನ್ನು ಎಷ್ಟು  ಹೀನಾಯಾಗಿ ಬಿಂಬಿಸ ಬಹುದೋ ಅಷ್ಟೆಲ್ಲಾ ಪ್ರಯತ್ನಗಳನ್ನು ಮಾಡಲಾಯಿತು. ಅವರ ರಚನೆಗಳನ್ನು ಅಳಿಸುವ ಶ್ರಮ  ನಡೆಸಲಾಯಿತು.
ಈ ಸಾಂಸ್ಕೃತಿಕ ರಾಜಕಾರಣದ ಭಾಗವೇ ತನಿಷ್ಕ್ ಜಾಹೀರಾತಿನ ವಿರೋಧ.
ನಿಜಕ್ಕೂ ಅವರ ವಿರೋಧ ಇರುವುದು ಆ ಜಾಹೀರಾತಿನ ಸೀಮಂತಕ್ಕಲ್ಲ. ಅಲ್ಲಿ ಬಿಂಬಿಸಲಾಗಿರುವ ಹಿಂದೂ-ಮುಸ್ಲಿಮ್ ಭ್ರಾತೃತ್ವ  ಭಾವಕ್ಕೆ. ಮುಸ್ಲಿಮರು ಹಿಂದೂ ಸಾಂಸ್ಕೃತಿಕ ಆಚರಣೆ ಯನ್ನು ಗೌರವಿಸುವಂಥ ವಿಶಾಲ ಹೃದಯಿಗಳು ಎಂಬ ಸಂದೇಶಕ್ಕೆ. ಈ  ಸಂದೇಶ ಅವರು ಪ್ರತಿಪಾದಿಸುವ ಸಾಂಸ್ಕøತಿಕ ರಾಜಕಾರಣಕ್ಕೆ ಬಹುದೊಡ್ಡ ಕೊಡಲಿಯೇಟು. ಹಿಂದೂ-ಮುಸ್ಲಿಮರನ್ನು ಎರಡು  ಧ್ರುವಗಳಲ್ಲಿ ಕೂರಿಸಿ ಪರಸ್ಪರ ವೈರಿಗಳಂತೆ ಸದಾ ಇರಗೊಡುವುದೇ ಅವರ ಗುರಿ. ಅವರ ಯಶಸ್ಸು ಅಡಗಿರುವುದೇ ಇದರಲ್ಲಿ.  ಯಾವಾಗ ಈ ತಂತ್ರಕ್ಕೆ ಏಟು ಕೊಡುವ ಘಟನೆಗಳು ನಡೆಯುತ್ತೋ ಅಗೆಲ್ಲ ಇವರು ವಿಚಲಿತಗೊಳ್ಳುತ್ತಾರೆ. ಎಲ್ಲಿ ತಮ್ಮ ಹಿಡಿತ  ಸಮಾಜದಿಂದ ಕೈ ತಪ್ಪಿ ಹೋಗುತ್ತೋ ಎಂದು ಭಯಪಡುತ್ತಾರೆ. ಆದ್ದರಿಂದಲೇ, ಹಿಂದೂ-ಮುಸ್ಲಿಮ್ ಸೌಹಾರ್ದವನ್ನು ಮತ್ತು  ಏಕತ್ವವನ್ನು ನೀಡುವ ಸಂದೇಶಗಳು ಯಾವಾಗೆಲ್ಲ ಬಿತ್ತರವಾಗುತ್ತೋ ಆಗೆಲ್ಲ ಅದರ ವಿರುದ್ಧ ಏನಾದರೊಂದು ನೆಪ ಹೂಡಿ ಅದನ್ನು  ವಿಫಲಗೊಳಿಸಲು ಮುಂದಾಗುತ್ತಾರೆ. ನಿಜವಾಗಿ,
ಟಿ.ವಿ. ಡಿಬೆಟ್ ಆಗಬೇಕಿದ್ದುದು ಈ ಸಾಂಸ್ಕೃತಿಕ ರಾಜಕಾರಣವನ್ನು ಕೇಂದ್ರೀಕರಿಸಿಕೊಂಡು. ಇದು ಹಿಂದೂ ಧರ್ಮ ಮತ್ತು  ಇಸ್ಲಾಮ್ ಧರ್ಮದ ನಡುವಿನ ಸಮಸ್ಯೆ ಅಲ್ಲ. ಅವರ ಮೌಲಾನಾರೋ ಸ್ವಾಮೀಜಿಗಳೋ ಆ ಜಾಹೀರಾತಿನ ವಿರುದ್ಧ ಬೀದಿಗಿಳಿದು  ಹೋರಾಟಕ್ಕೂ ಧುಮುಕಿಲ್ಲ. ಹೀಗಿರುವಾಗ, ಇದಕ್ಕೆ ಇಷ್ಟೊಂದು ದೊಡ್ಡ ಮಟ್ಟದ ವಿರೋಧ ಎಲ್ಲಿಂದ ಬಂತು ಮತ್ತು ಯಾಕೆ ಬಂತು  ಎಂಬ ಬಗ್ಗೆ ಒಳನೋಟವುಳ್ಳ ಚರ್ಚೆಯ ಅಗತ್ಯ ವಿತ್ತು. ಇಂಥ ಜಾಹೀರಾತಿನಿಂದ ಯಾರಿಗೆ, ಯಾಕೆ ತೊಂದರೆಯಿದೆ ಎಂಬ ಪ್ರಶ್ನೆ  ಮುಂಚೂಣಿಗೆ ಬರಬೇಕಿತ್ತು. ಮುಸ್ಲಿಮ್ ಕುಟುಂಬವೊಂದು ಹಿಂದೂ ಯುವತಿಯನ್ನು ಹಿಂದೂವಾಗಿಯೇ ಇರಗೊಟ್ಟು, ಆಕೆಯ  ಸಂಪ್ರದಾಯದಂತೆ ಸೀಮಂತ ಆಚರಿಸಿರುವುದರಿಂದ ಭಾರತೀಯತೆಗೆ ಏನು ಅಪಾಯ ಎಂಬ ಪ್ರಶ್ನೆ ಏಳಬೇಕಿತ್ತು? ಆ ಯುವತಿಯ ನ್ನು ಆ ಮುಸ್ಲಿಮ್ ಕುಟುಂಬ ಇಸ್ಲಾಮ್‍ಗೂ ಮತಾಂತರಿಸಿಲ್ಲ, ಅಲ್ಲದೇ ಆ ಯುವತಿಯ ಆಚರಣೆಯನ್ನು ಸ್ವತಃ ಆ ಕುಟುಂಬವೇ  ಮುಂದೆ ನಿಂತು ಮಾಡಿದೆ- ಹೀಗಿರುವಾಗ ಇಲ್ಲಿ ಲವ್ ಜಿಹಾದ್ ಹೇಗೆ ಬಂತು ಎಂದು ಪ್ರಶ್ನಿಸಬೇಕಿತ್ತು?
ದುರಂತ ಏನೆಂದರೆ,
ಟಿವಿ ಚರ್ಚೆಯಲ್ಲಿ ಭಾಗವಹಿಸುವವರು ಅನೇಕ ಬಾರಿ ಚಾನೆಲ್‍ಗಳ ಒಳ ಉದ್ದೇಶವನ್ನು ಅರಿತಿರುವುದಿಲ್ಲ. ನಿರೂಪಕರು ಚರ್ಚೆಯ ನ್ನು ಕೊಂಡೊಯ್ಯುವ ಕಡೆಗೆ ಇವರೂ ಸಾಗುತ್ತಾರೆಯೇ ಹೊರತು ಈ ಚರ್ಚೆ ಸಾಗಬೇಕಾದ ದಾರಿ ಇದುವೋ ಅಥವಾ ತಮ್ಮನ್ನು  ತಪ್ಪು ದಾರಿಯೆಡೆಗೆ ನಿರೂಪಕ ಕೊಂಡೊಯ್ಯುತ್ತಿದ್ದಾರೆಯೋ ಎಂಬುದನ್ನು ವಿಶ್ಲೇಷಿಸುವುದಿಲ್ಲ ಅಥವಾ ಆ ಕ್ಷಣದಲ್ಲಿ ಅವರಿಗೆ ಅದು  ಹೊಳೆಯುವುದಿಲ್ಲ. ಇದನ್ನೇ ನಿರೂಪಕ/ಕಿಯರು ದುರುಪ ಯೋಗಿಸುತ್ತಾರೆ. ಚರ್ಚೆಯನ್ನು ತನ್ನ ಉದ್ದೇಶಿತ ಗುರಿಯೆಡೆಗೆ  ಕೊಂಡೊಯ್ದು ತನಗೆ ಬೇಕಾದ ಫಲಿತಾಂಶವನ್ನು ಪಡಕೊಳ್ಳುತ್ತಾರೆ. ತನಿಷ್ಕ್ ಜಾಹೀರಾತಿನ ಸುತ್ತ ಟಿವಿ ಮತ್ತು ಸಾಮಾಜಿಕ  ಜಾಲತಾಣ ಗಳಲ್ಲಿ ನಡೆದಿರುವ ಚರ್ಚೆಗಳಲ್ಲಿ ಬಹುತೇಕವೂ ಧರ್ಮದ ಸುತ್ತವೇ ಗಿರಕಿ ಹೊಡೆದಿರುವುದಕ್ಕೆ ಆ ಚರ್ಚೆಯನ್ನು ಹುಟ್ಟು  ಹಾಕಿದವರು ಅಥವಾ ಅದರಲ್ಲಿ ಭಾಗವಹಿಸಿದ ಚತುರರೇ ಕಾರಣ. ಅವರು ಉಪಾಯವಾಗಿ ಚರ್ಚೆಯನ್ನು ಹಿಂದೂ ಮುಸ್ಲಿಮ್ ಆಗಿ  ಪರಿವರ್ತಿಸುತ್ತಾರೆ. ಇತರರನ್ನೂ ಆ ದಾರಿಯೆಡೆಗೆ ಸೆಳೆಯುತ್ತಾರೆ. ಕೊನೆಗೆ ಚರ್ಚೆಯ ಮೂಲ ಉದ್ದೇಶವೇ ಗೌಣವಾಗಿ  ಹಿಂದೂ-ಮುಸ್ಲಿಮ್ ಜಗಳವಾಗಿ ಅದು ಕೊನೆಗೊಳ್ಳುತ್ತದೆ.
ಆ ಟಿವಿ ಚರ್ಚೆಯಲ್ಲಿ ಆದದ್ದೂ ಇದುವೇ.