Friday, December 29, 2023

ಗೆಲ್ಲಲು ಕಾಂಗ್ರೆಸ್ ಏನೇನು ಮಾಡಬಹುದು?





1. ಮೃದು ಹಿಂದುತ್ವ
2. ಗ್ಯಾರಂಟಿಗಳ ಮೇಲೆ ಅತಿಯಾದ ಅವಲಂಬನೆ
3. ಮೈತ್ರಿ ಪಕ್ಷಗಳ ಕಡೆಗಣನೆ
4. ಆಕ್ರಮಣಕಾರಿ ಮನೋಭಾವದ ಕೊರತೆ
5. ಸೇವಾದಳದ ನಿರ್ಲಕ್ಷ್ಯ 

ಮಧ್ಯಪ್ರದೇಶ, ರಾಜಸ್ತಾನ ಚತ್ತೀಸ್‌ಗಢಗಳಲ್ಲಿ ಕಾಂಗ್ರೆಸ್ ಸೋಲಲು ಕಾರಣವೇನು ಅನ್ನುವ ವಿಶ್ಲೇಷಣೆಗಳು ನಡೆಯುತ್ತಿವೆ.  ತೆಲಂಗಾಣವೂ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಒಟ್ಟಾರೆ 4 ಕೋಟಿ 81 ಲಕ್ಷ   ಮತಗಳನ್ನು ಪಡೆದರೆ ಕಾಂಗ್ರೆಸ್ 4 ಕೋಟಿ 90  ಲಕ್ಷ  ಮತಗಳನ್ನು ಪಡೆದಿದೆ. ಒಂದುರೀತಿ ಯಲ್ಲಿ, 9 ಲಕ್ಷದಷ್ಟು ಹೆಚ್ಚುವರಿ ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಸಮಾಧಾನ ಪಡಲಾಗುತ್ತಿದೆ. ಆದರೆ ಈ ಸಮಾಧಾನ ಪೂರ್ಣ ಪ್ರಾಮಾಣಿಕವಲ್ಲ. ಯಾಕೆಂದರೆ,  ತೆಲಂಗಾಣದಲ್ಲಿ ಸ್ಪರ್ಧೆಯಿದ್ದುದೇ ಕಾಂಗ್ರೆಸ್ ಮತ್ತು ಭಾರತ್ ರಾಷ್ಟ್ರ  ಸಮಿತಿ (ಬಿಆರ್‌ಎಸ್) ನಡುವೆ. ಆದ್ದರಿಂದ, ಅಲ್ಲಿ ಬಿಜೆಪಿ ಮತ್ತು  ಕಾಂಗ್ರೆಸ್ ನಡುವೆ ಚಲಾವಣೆಯಾದ ಮತಗಳನ್ನು ಉಳಿದ ಮೂರು ರಾಜ್ಯಗಳ ಜೊತೆಗೆ ಸೇರಿಸಿಕೊಂಡು ಲೆಕ್ಕ ಹಾಕುವುದು ತಪ್ಪಾಗುತ್ತದೆ.  ಆದರೂ ತೆಲಂಗಾಣದಲ್ಲಿ ಬಿಜೆಪಿ ಮಹತ್ವದ ಮುನ್ನಡೆಯನ್ನು ಪಡೆದಿದೆ. ಈ ಹಿಂದೆ ಏಕೈಕ ಶಾಸಕರನ್ನು ಹೊಂದಿದ್ದ ಬಿಜೆಪಿಯು ಈ  ಬಾರಿ 8 ಸ್ಥಾನಗಳನ್ನು ಹೆಚ್ಚುವರಿಯಾಗಿ ಪಡೆದಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ ಒಟ್ಟಾರೆ 14 ಲಕ್ಷ  ಮತಗಳನ್ನು  ಪಡೆದಿತ್ತು. ಈ ಬಾರಿ 32 ಲಕ್ಷ  ಮತಗಳನ್ನು ಪಡೆದಿದೆ. ಮಾತ್ರವಲ್ಲ, ಸುಮಾರು 15ಕ್ಕಿಂತಲೂ ಅಧಿಕ ಕ್ಷೇತ್ರಗಳಲ್ಲಿ ಎರಡನೇ ಸ್ಥಾನ  ಪಡೆದುಕೊಂಡಿದೆ. ಆದ್ದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಮತ ಹಂಚಿಕೆಯನ್ನು ಮಧ್ಯಪ್ರದೇಶ, ರಾಜಸ್ತಾನ ಮತ್ತು  ಛತ್ತೀಸ್‌ಗಢಗಳಿಗೆ ಸೀಮಿತಗೊಳಿಸಿ ನೋಡುವುದೇ ಸರಿಯಾದ ವಿಧಾನ. ಈ ಹಿನ್ನೆಲೆಯಲ್ಲಿ ಲೆಕ್ಕ ಹಾಕಿದರೆ, 

ಈ ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ 3 ಕೋಟಿ 98  ಲಕ್ಷ ಕ್ಕಿಂತಲೂ ಅಧಿಕ ಮತಗಳನ್ನು ಪಡೆದಿದೆ. ಬಿಜೆಪಿ ಪಡೆದಿರುವ ಮತಗಳು 4 ಕೋಟಿ 48 ಲಕ್ಷಕ್ಕಿಂತಲೂ ಅಧಿಕ. ಅಂದರೆ,  ಕಾಂಗ್ರೆಸ್‌ಗಿAತ ಬಿಜೆಪಿ ಸುಮಾರು 50 ಲಕ್ಷಕ್ಕಿಂತಲೂ ಅಧಿಕ ಮತಗಳನ್ನು ಪಡೆದಿದೆ. 2018ರ ಚುನಾವಣೆಯಲ್ಲಿ ಈ ಮೂರೂ  ರಾಜ್ಯಗಳಲ್ಲಿ ಕಾಂಗ್ರೆಸ್ 3 ಕೋಟಿ 57 ಲಕ್ಷಕ್ಕಿಂತಲೂ ಅಧಿಕ ಮತಗಳನ್ನು ಪಡೆದಿತ್ತು ಮತ್ತು ಬಿಜೆಪಿ 3 ಕೋಟಿ 41 ಲಕ್ಷಕ್ಕಿಂತಲೂ ಅಧಿಕ  ಮತಗಳನ್ನು ಪಡೆದಿತ್ತು. ಅಂದರೆ ಬಿಜೆಪಿಗಿಂತ ಕಾಂಗ್ರೆಸ್ 16 ಲಕ್ಷಕ್ಕಿಂತಲೂ ಅಧಿಕ ಹೆಚ್ಚು ಮತಗಳನ್ನು ಪಡೆದಿತ್ತು.

ಇನ್ನೂ ಒಂದು ಲೆಕ್ಕಾಚಾರ ಇದೆ

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಮಧ್ಯ ಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ತಾನಗಳಲ್ಲಿ ಅಧಿಕಾರ ಕಳ ಕೊಂಡಿತ್ತು.  ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆ ಬಳಿಕ ಮಧ್ಯ ಪ್ರದೇಶದಲ್ಲಿ ಆಪರೇಶನ್ ಕಮಲ ನಡೆದು, ಕಮಲನಾಥ್ ನೇತೃತ್ವದ ಕಾಂಗ್ರೆಸ್  ಸರಕಾರ ಕುಸಿದು ಬಿದ್ದುದು ಬೇರೆ ವಿಷಯ. ಆದರೆ, 2019ರ ಲೋಕಸಭಾ ಚುನಾವಣೆಯ ವೇಳೆ ಸಂಪೂರ್ಣ ಚಿತ್ರಣವೇ  ಬದಲಾಯಿತು. ಮಧ್ಯಪ್ರದೇಶದ 28 ಲೋಕಸಭಾ ಸ್ಥಾನಗಳ ಪೈಕಿ 27 ಸ್ಥಾನಗಳನ್ನೂ ಬಿಜೆಪಿ ಗೆದ್ದುಕೊಂಡಿತು. ರಾಜಸ್ತಾನದ 25 ಸ್ಥಾನಗಳನ್ನೂ ಬಿಜೆಪಿಯೇ ಗೆದ್ದುಕೊಂಡಿತು. ಛತ್ತೀಸ್‌ಗಢದ ಪರಿಸ್ಥಿತಿಯೂ ಭಿನ್ನವಲ್ಲ. ಒಟ್ಟು 11 ಸ್ಥಾನಗಳ ಪೈಕಿ ಬಿಜೆಪಿ 9ನ್ನೂ  ಗೆದ್ದುಕೊಂಡಿತು.

ಇನ್ನೂ ಒಂದು ಅಂಕಿ ಅಂಶವನ್ನು ಇಲ್ಲಿ ಪರಿಗಣಿಸಬಹುದು.

2013ರಲ್ಲಿ ಈ ಮೂರೂ ರಾಜ್ಯಗಳಲ್ಲಿ ನಡೆದ ಚುನಾವಣೆಯನ್ನು ಬಿಜೆಪಿಯೇ ಗೆದ್ದುಕೊಂಡಿತ್ತು. ಮಾತ್ರವಲ್ಲ, 2014ರ ಲೋಕಸಭಾ ಚು ನಾವಣೆಯಲ್ಲೂ ಬಿಜೆಪಿಗೆ ಗೆಲುವಾಯಿತು. ಹಾಗೆಯೇ 2003ರಲ್ಲಿ ಈ ಮೂರೂ ರಾಜ್ಯಗಳಲ್ಲಿ ಬಿಜೆಪಿಗೇ ಅಭೂತಪೂರ್ವ ಗೆಲುವು  ಲಭ್ಯವಾಗಿತ್ತು. ಇದೇ ಉತ್ಸಾಹದಲ್ಲಿ ಆಗಿನ ಪ್ರಧಾನಿ ವಾಜಪೇಯಿಯವರು ಇಂಡಿಯಾ ಶೈನಿಂಗ್ ಎಂಬ ಘೋಷಣೆ ಯನ್ನು  ಹೊರಡಿಸಿದ್ದರು. ಅದರ ಮೇಲೆಯೇ 2004ರಲ್ಲಿ ಲೋಕಸಭಾ ಚುನಾವಣೆಯನ್ನೂ ಎದುರಿಸಿದರು ಮತ್ತು ಆಘಾತಕಾರಿ ಸೋಲನ್ನೂ  ಅನುಭವಿಸಿದರು.

ನಿಜವಾಗಿ, ಬಿಜೆಪಿಯ ಮತ ಗಳಿಕೆಯ ಹೆಚ್ಚಳದಲ್ಲಿ ಇತರ ಸಣ್ಣ-ಪುಟ್ಟ ಪಕ್ಷಗಳ ಪಾಲು ಅಧಿಕವಿದೆ ಎಂದು ಹೇಳಲಾಗುತ್ತಿದೆ.  ಮಾಯಾವತಿಯ ಬಿಎಸ್‌ಪಿಯು ಮಧ್ಯಪ್ರದೇಶದಲ್ಲಿ ಕಳೆದ ಬಾರಿಗಿಂತ ಈ ಬಾರಿ 1.6% ಮತಗಳನ್ನು ಕಳಕೊಂಡಿದೆ. ಹಾಗೆಯೇ  ರಾಜಸ್ತಾನದಲ್ಲಿ 2.3%, ಛತ್ತೀಸ್‌ಗಢದಲ್ಲಿ 1.8% ಮತ್ತು ತೆಲಂಗಾಣದಲ್ಲಿ 0.7% ಮತಗಳನ್ನು ಕಳಕೊಂಡಿದೆ. ಹಾಗೆಯೇ, 2018ರಲ್ಲಿ ಜನತಾ  ಕಾಂಗ್ರೆಸ್ ಛತ್ತೀಸ್‌ಗಢ ಎಂಬ ಪಕ್ಷವು ಬಿಎಸ್‌ಪಿ ಜೊತೆ ಮೈತ್ರಿ ಮಾಡಿಕೊಂಡು 7.6% ಮತ ಪ್ರಮಾಣದೊಂದಿಗೆ 5 ಸ್ಥಾನಗಳನ್ನು  ಪಡೆದುಕೊಂಡಿತ್ತು. ಆದರೆ ಈ ಬಾರಿ ಸೊನ್ನೆ ಸುತ್ತಿದೆ. ಇದೇ ರೀತಿ, ಈ ನಾಲ್ಕು ರಾಜ್ಯಗಳಲ್ಲಿ ಸ್ಪರ್ಧಿಸಿರುವ ಇತರ ಪಕ್ಷಗಳು ಮತ್ತು  ಪಕ್ಷೇತರರ ಶೇಕಡಾವಾರು ಮತಗಳೂ ಕುಸಿದಿದ್ದು, ಇವೆಲ್ಲ ವನ್ನೂ ಬಿಜೆಪಿ ಸೆಳೆದುಕೊಂಡಿದೆ ಎಂದು ಲೆಕ್ಕಾಚಾರ ಹೇಳುತ್ತಿದೆ.

ಅಷ್ಟಕ್ಕೂ,

ಕಾಂಗ್ರೆಸ್‌ನ ಈ ವೈಫಲ್ಯಕ್ಕೆ ಕಾರಣವೇನು? ಮೃದು ಹಿಂದುತ್ವವೇ? ಈ ಮೃದು ಹಿಂದುತ್ವ ಅಂದರೇನು? ರಾಹುಲ್ ಗಾಂಧಿ, ಪ್ರಿಯಾಂಕಾ  ಗಾಂಧಿ ದೇವಸ್ಥಾನಕ್ಕೆ ಹೋಗುವುದು ಅಥವಾ ದೇವಸ್ಥಾನದಿಂದಲೇ ಚುನಾವಣಾ ಪ್ರಚಾರ ಆರಂಭಿಸುವುದು ಮೃದು ಹಿಂದುತ್ವವೇ?  ಹಣೆಗೆ ನಾಮ ಹಾಕಿಕೊಳ್ಳುವುದು ಅಥವಾ ತಾನು ಶಿವನ ಆರಾಧಕ ಎಂದು ಹೇಳುವುದು ಮೃದು ಹಿಂದುತ್ವವೇ? ಸನಾತನ ಧರ್ಮವನ್ನು  ಟೀಕಿಸಿದ ಡಿಎಂಕೆ ಜೊತೆ ಅಸಹಮತವನ್ನು ತೋರುವುದು ಮೃದು ಹಿಂದುತ್ವವೇ? ಛತ್ತೀಸ್ ಗಢದ ಚಂಪಾರಣ್‌ನಲ್ಲಿ ಕಾಂಗ್ರೆಸ್  ಮುಖ್ಯಮಂತ್ರಿ ಬಘೇಲ್ ಅವರು ರಾಮನ ಬೃಹತ್ ಪ್ರತಿಮೆಯನ್ನು ಚುನಾವಣೆಗಿಂತ ಮೊದಲು ಅನಾವರಣಗೊಳಿಸಿದರು. ರಾಮ ವ ನವಾಸಕ್ಕೆಂದು ನಡೆದು ಹೋದ ಮಾರ್ಗವನ್ನು ‘ರಾಮ ವನ ಗಮನ ಪಥ’ ಎಂಬ ಹೆಸರಿನ ಯೋಜನೆಯೊಂದಿಗೆ ಜಾರಿಗೆ ತಂದರು.  ಇದನ್ನು ಮೃದು ಹಿಂದುತ್ವವೆಂದು  ಟೀಕಿಸಲಾಗುತ್ತದೆ. ಒಟ್ಟಿನಲ್ಲಿ ಕಾಂಗ್ರೆಸ್ ನಾಯಕರು ಧಾರ್ಮಿಕವಾಗಿ ಗುರುತಿಸಿಕೊಳ್ಳುವುದನ್ನು, ಕೇಸರಿ  ರುಮಾಲು ಹಾಕುವುದನ್ನು ಮೃದು ಹಿಂದುತ್ವ ಎಂದು ಕರೆಯ ಲಾಗುತ್ತಿದ್ದು, ಇದರಿಂದಾಗಿ ಕಾಂಗ್ರೆಸ್ ಚುನಾವಣೆಯಲ್ಲಿ ನೆಲ ಕಚ್ಚುತ್ತಿದೆ  ಎಂದು ವ್ಯಾಖ್ಯಾನಿಸಲಾಗುತ್ತಿದೆ. ನಿಜಕ್ಕೂ ಇದು ಎಷ್ಟು ತರ್ಕಬದ್ಧ? ಕಾಂಗ್ರೆಸ್ ನಾಯಕರು ಧಾರ್ಮಿಕವಾಗಿ ಗುರುತಿಸಿಕೊಳ್ಳು ವುದರಿಂದ  ವಿಚಲಿತರಾಗಿ ಬಿಜೆಪಿಗೆ ಮತ ಹಾಕುತ್ತಿರುವ ಕಾಂಗ್ರೆಸ್ ಮತದಾರರು ಯಾರು? ಅವರು ಈ ವರೆಗೆ ಬಿಜೆಪಿಗೆ ಮತ ಹಾಕದೇ  ಇರುವುದಕ್ಕೆ ಈ ಒಂದು ವ್ಯತ್ಯಾಸ ಮಾತ್ರ ಕಾರಣವೇ? ಹಿಂದೂ ಧರ್ಮವನ್ನು ಬಿಜೆಪಿ ಪ್ರತಿಪಾದಿಸುತ್ತಿರುವ ರೀತಿ ಮತ್ತು ಕಾಂಗ್ರೆಸ್ ಪ್ರತಿ ಪಾದಿಸುತ್ತಿರುವ ರೀತಿ ಹೇಗಿದೆ? ಸಮಾನವೇ? ಹಿಂದೂಯೇತರರನ್ನು ಮುಖ್ಯವಾಗಿ ಮುಸ್ಲಿಮರನ್ನು ಬಿಜೆಪಿ ನಡೆಸಿಕೊಳ್ಳುತ್ತಿರುವ ರೀತಿ  ಹೇಗಿದೆ? ಕಾಂಗ್ರೆಸ್ ಹೇಗೆ ನಡೆಸಿಕೊಳ್ಳುತ್ತಿದೆ? ಚುನಾವಣಾ ಗೆಲುವಿಗಾಗಿ ಧಾರ್ಮಿಕ ಧ್ರುವೀಕರಣ ಮಾಡುವ ಬಿಜೆಪಿಗೂ ಧರ್ಮವನ್ನು  ಆಧ್ಯಾತ್ಮಿಕ ಸುಖದ ಭಾಗವಾಗಿ ನೋಡುವ ಕಾಂಗ್ರೆಸ್‌ಗೂ ವ್ಯತ್ಯಾಸ ಇಲ್ಲವೇ? ಈ ವರೆಗೆ ಕಾಂಗ್ರೆಸ್‌ಗೆ ಓಟು ಹಾಕುತ್ತಿದ್ದವರು ಈಗ  ಬಿಜೆಪಿಗೆ ಓಟು ಹಾಕುವುದಾದರೆ ಅದು ಕಾಂಗ್ರೆಸ್‌ನ ಮೃದು ಹಿಂದುತ್ವದಿಂದ ಬೇಸತ್ತೇ? ಕಾಂಗ್ರೆಸ್ ಅಲ್ಲದಿದ್ದರೆ ಇವರಿಗೆಲ್ಲ ಬಿಜೆಪಿ  ಪರ್ಯಾಯವಾದುದು ಹೇಗೆ? ಒಂದುರೀತಿಯಲ್ಲಿ,

ಮೃದು ಹಿಂದುತ್ವದಿಂದಾಗಿ ಕಾಂಗ್ರೆಸ್‌ಗೆ ಸೋಲಾಗುತ್ತಿದೆ ಎಂಬುದು ಒಂದು ಊಹೆಯೇ ಹೊರತು ಇದು ಬಹುತೇಕ ನಿಜವಲ್ಲ.  ಧರ್ಮವನ್ನು ಸಂಪೂರ್ಣ ನಿರಾಕರಿಸುವ ಧಾಟಿಯಲ್ಲಿ ಮಾತನಾಡಿದ ಕಮ್ಯುನಿಸ್ಟ್ ಪಕ್ಷಗಳು ಇವತ್ತು ಅಸ್ತಿತ್ವಕ್ಕಾಗಿ ಹೋರಾ ಡುತ್ತಿವೆ.  ಒಂದು ಕಾಲದಲ್ಲಿ ಪಶ್ಚಿಮ ಬಂಗಾಲದಂಥ  ದೊಡ್ಡ ರಾಜ್ಯವೂ ಸೇರಿ ತ್ರಿಪುರಾದಲ್ಲೂ ದೀರ್ಘಕಾಲ ಆಡಳಿತ ನಡೆಸಿದ್ದ ಮತ್ತು  ಲೋಕಸಭೆಯಲ್ಲಿ 50ಕ್ಕಿಂತಲೂ ಅಧಿಕ ಸ್ಥಾನಗಳನ್ನು ಪಡೆದಿದ್ದ ಕಮ್ಯುನಿಸ್ಟ್ ಪಕ್ಷಗಳು ಇವತ್ತು ಕೇರಳಕ್ಕೆ ಸೀಮಿತಗೊಳ್ಳಲು ಕಾರಣವೇನು?  ಧರ್ಮದಿಂದ ಸಂಪೂರ್ಣ ಅಂತರ ಕಾಯ್ದುಕೊಳ್ಳುವುದೇ ಅದರ ಯಶಸ್ಸಿಗೆ ಕಾರಣವಾಗಿದ್ದರೆ, ಮತ್ತೇಕೆ ಇವತ್ತು ಅದು ಈ ಮಟ್ಟದಲ್ಲಿ  ಪತನಮುಖಿಯಾಗಿದೆ? ನಿಜವಾಗಿ,

ಕಾಂಗ್ರೆಸ್‌ನ ವೈಫಲ್ಯಕ್ಕೆ ಅದು ಧಾರ್ಮಿಕವಾಗಿ ಗುರುತಿಸಿಕೊಂಡಿರುವುದು ಕಾರಣ ಅಲ್ಲ. ಅದರಿಂದಾಗಿ ಕಾಂಗ್ರೆಸ್ ಮತದಾರರು ದೂರ  ಸರಿದುದೂ ಅಲ್ಲ. ಬಿಜೆಪಿಯ ಯಶಸ್ಸಿನಲ್ಲಿ ಅದರ ಪ್ರಚಾರ ತಂತ್ರಕ್ಕೆ ಬಹಳ ದೊಡ್ಡ ಪಾತ್ರ ಇದೆ. ದ್ವೇಷ ರಾಜಕೀಯವನ್ನು ಅದು  ತಳಮಟ್ಟದಲ್ಲಿ ಯಶಸ್ವಿಯಾಗಿ ಬಿತ್ತಿದೆ. ಈ ದ್ವೇಷವು ಆಂತರಿಕವಾಗಿಯಷ್ಟೇ ಅಲ್ಲ, ಬಹಿರಂಗವಾಗಿಯೂ ಅದರ ನಾಯಕರಿಂದ  ಬಿತ್ತರವಾಗುತ್ತಿರುತ್ತದೆ. ಇದನ್ನು ಕಾಂಗ್ರೆಸ್ ಎದುರಿಸಬೇಕಾದರೆ ಬೇರುಮಟ್ಟದಲ್ಲಿ ಜನರನ್ನು ತಲುಪುವ ಪ್ರಬಲ ಸಂಘಟನಾ ಬಲ  ಇರಬೇಕು. ‘ಸೇವಾದಳ’ವನ್ನು ಕಾಂಗ್ರೆಸ್ ಸ್ಥಾಪಿಸಿರುವುದು ಇದೇ ಕಾರಣಕ್ಕೆ. ಇದು ಬಲಿಷ್ಠವಾಗಿರುವ ಕಾಲದ ವರೆಗೆ ಕಾಂಗ್ರೆಸ್ಸೂ ಬಲಿಷ್ಠವಾಗಿತ್ತು. ಸೇವಾದಳದ ನಾಯಕರು ವೇದಿಕೆಯಲ್ಲಿರುವಾಗ ಕಾಂಗ್ರೆಸ್ ಜನಪ್ರತಿನಿಧಿಗಳು ಸಭಿಕರಾಗಿ ಎದುರಲ್ಲಿ ಕುಳಿತುಕೊಳ್ಳಬೇಕಿತ್ತು.  ಸೇವಾದಳದ ನಿರ್ದೇಶಗಳನ್ನು ಜನಪ್ರತಿನಿಧಿಗಳು ಅನುಸರಿಸಬೇಕಿತ್ತು. ಸೇವಾದಳವು ಬೇರುಮಟ್ಟದಲ್ಲಿ ಜನರನ್ನು ಸಂಪರ್ಕಿಸಿ ಮತವನ್ನು  ಒಗ್ಗೂಡಿಸುತ್ತಿತ್ತು. ಈ ಸೇವಾದಳದಿಂದಲೇ ಕಾಂಗ್ರೆಸ್ ನಾಯಕರೂ ಬೆಳೆಯುತ್ತಿದ್ದರು. ಕಾರ್ಯಕರ್ತರು ತಯಾರಾಗುತ್ತಿದ್ದುದೇ ಈ  ಸೇವಾದಳದಿಂದ. ಆದರೆ ಇವತ್ತು ಸೇವಾದಳ ಪರಿಣಾಮಶೂನ್ಯ ಸ್ಥಿತಿಯಲ್ಲಿದೆ. ಸೇವಾದಳದ ಸಭೆಯಲ್ಲಿ ಸಭಿಕರಾಗಿ ಕಾಣಿಸಿಕೊಳ್ಳಬೇಕಿದ್ದ  ಜನ ಪ್ರತಿನಿಧಿ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ/ಳೆ. ಆತನ ಅಣತಿ ಯಂತೆ ಸಭೆಯಲ್ಲಿ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ಸಂಘಟ ನೆಯನ್ನು ಹೀಗೆ ಜನಪ್ರತಿನಿಧಿಗಳು ಹೈಜಾಕ್ ಮಾಡಿರುವ ಕಾರಣದಿಂದಾಗಿ ಸಂಘಟನೆಯ ಮಹತ್ವವೇ ಕಳೆದುಹೋಗಿದೆ. ಅದೇರೀತಿ,

ಗ್ಯಾರಂಟಿಗಳ ಮೇಲೆಯೇ ಅತಿಯಾದ ಭಾರ ಹಾಕಬಾರದು. ದಕ್ಷಿಣ ಭಾರತದಲ್ಲಿ ಒಂದೊಮ್ಮೆ ಈ ತತ್ವ ಫಲಿಸಬಹುದಾದರೂ ಹಿಂದಿ  ನಾಡಿನಲ್ಲಿ ದ್ವೇಷ ರಾಜಕೀಯದ ಪ್ರಭಾವವೇ ಮುಂಚೂಣಿಯಲ್ಲಿದೆ. ಯಾವುದೇ ಗ್ಯಾರಂಟಿಯನ್ನು ಕಾಲ ಕಸವಾಗಿಸುವಷ್ಟು ದ್ವೇಷವನ್ನು  ಪ್ರತಿದಿನವೆಂಬಂತೆ  ತುಂಬಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ಯಾರಂಟಿಗಳ ಜೊತೆಗೇ ಈಗಾಗಲೇ ಇಂಡಿಯಾ ಕೂಟದಿಂದ ಹೊರಗಿರುವ  ಪಕ್ಷಗಳನ್ನು ಕೂಟದೊಳಗೆ ಸೇರಿಸುವ ಮತ್ತು ಈಗಿಂದೀಗಲೇ ಲೋಕಸಭಾ ಸೀಟು ಹಂಚಿಕೆಯ ಸ್ಪಷ್ಟ ನಿರ್ಧಾರ ವನ್ನು ಕೈಗೊಳ್ಳಬೇಕು.  ಬಿಎಸ್‌ಪಿಯಂಥ ಪಕ್ಷಕ್ಕೆ ಗೆಲ್ಲುವ ಸಾಮರ್ಥ್ಯ ಕಡಿಮೆಯಿದ್ದರೂ ಬಿಜೆಪಿಯನ್ನು ಗೆಲ್ಲಿಸುವ ಸಾಮರ್ಥ್ಯ ಹಿಂದಿ ನಾಡಿನಲ್ಲಿ ಸಾಕಷ್ಟಿದೆ  ಎಂಬುದು ಇಂಡಿಯಾ ಒಕ್ಕೂಟಕ್ಕೆ ಗೊತ್ತಿರಬೇಕು. ಈಗಿಂದೀಗಲೇ ಇಂಡಿಯಾ ಒಕ್ಕೂಟ ಸೀಟು ಹಂಚಿಕೆಯನ್ನು ಗಂಭೀರವಾಗಿ  ಪರಿಗಣಿಸಿ ಒಮ್ಮತಕ್ಕೆ ಬರದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಗೆಲುವು ಅಸಾಧ್ಯ. ಜೊತೆಗೇ, ಇಂಡಿಯಾ ಒಕ್ಕೂಟವು ಸಾಮಾನ್ಯ ಕನಿಷ್ಠ  ಕಾರ್ಯಕ್ರಮಕ್ಕೆ ತಕ್ಷಣ ರೂಪು ನೀಡಬೇಕು. ಹಾಗಂತ,

ಬಿಜೆಪಿಯ ದ್ವೇಷ ರಾಜಕಾರಣಕ್ಕೆ ಕಾನೂನಿನ ಕಠಿಣ ಭಾಷೆಯಲ್ಲೇ  ಉತ್ತರವನ್ನು ನೀಡಬೇಕು. ಇಂಥ ಸಂದರ್ಭಗಳಲ್ಲಿ  ಆಕ್ರಮಣಕಾರಿಯಾಗಿ ವರ್ತಿಸುವುದೇ ಸರಿಯಾದ ವಿಧಾನ. ನ್ಯಾಯ ಮತ್ತು ಸಂವಿಧಾನಕ್ಕೆ ಬದ್ಧವಾಗುವ ವಿಷಯದಲ್ಲಿ  ಆಕ್ರಮಣಕಾರಿಯಾಗುವುದು ಈಗಿನ ಅನಿವಾರ್ಯತೆ. ಬರೇ ಅಭಿವೃದ್ಧಿಯೊಂದೇ ಬಿಜೆಪಿಗಾಗಲಿ ಕಾಂಗ್ರೆಸ್‌ಗಾಗಿ ಓಟು ತರಲಾರದು.  ಆದ್ದರಿಂದಲೇ, ಬಿಜೆಪಿ ಅಭಿವೃದ್ಧಿಗಿಂತ ಹೆಚ್ಚು ಗಮನವನ್ನು ಅಭಿವೃದ್ಧಿ ಹೊರತಾದ ಧರ್ಮ ಧ್ರುವೀಕರಣಕ್ಕೆ ನೀಡುತ್ತಿದೆ. ಅದರ ಜೊತೆಗೇ  ಗ್ಯಾರಂಟಿಗಳ ಮೊರೆಯೂ ಹೋಗಿದೆ. ಬರೇ ಧರ್ಮ ಧ್ರುವೀಕರಣವೊಂದೇ ಓಟು ತಂದು ಕೊಡಲಾರದು ಎಂಬ ಭಯ ಬಿಜೆಪಿಗಿದೆ  ಎಂಬುದನ್ನೇ ಇದು ಸೂಚಿಸುತ್ತದೆ. ಇದು ನಿಜಕ್ಕೂ ಕಾಂಗ್ರೆಸ್‌ನ ಪಾಲಿಗೆ ಬಹುದೊಡ್ಡ ಆಶಾವಾದ. ಧರ್ಮ ಧ್ರುವೀಕರಣದ ಮೇಲೆ ಸ್ವತಃ  ಬಿಜೆಪಿಗೇ ಸಂಪೂರ್ಣ ವಿಶ್ವಾಸ ಇಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಜನರು ಸದಾಕಾಲ ದ್ವೇಷ ರಾಜಕಾರಣವನ್ನು ಬೆಂಬಲಿಸಲ್ಲ.  ಇಂಥ ರಾಜಕಾರಣದ ವ್ಯಾಲಿಡಿಟಿ ಹೃಸ್ವವಾದುದು. ಅಂತಿಮ ಗೆಲುವು ಸರ್ವರನ್ನೂ ಒಳಗೊಳ್ಳುವ ಸರ್ವಹಿತ ಸಿದ್ಧಾಂತದ್ದೇ. ಒಕ್ಕೂಟ  ಪಕ್ಷಗಳನ್ನು ವಿಶ್ವಾಸಕ್ಕೆ ಪಡಕೊಂಡು ಕಾಂಗ್ರೆಸ್ ಈಗಿಂದೀಗಲೇ ಸ್ಪಷ್ಟ ಗುರಿಯೊಂದಿಗೆ ಲೋಕಸಭಾ ಚುನಾವಣೆಗೆ ತಯಾರಿ ನಡೆಸಿದರೆ  ಗೆಲುವು ಅಸಾಧ್ಯವಲ್ಲ.

Thursday, December 14, 2023

ಅಲ್ಲಾಹನ ಹೆಸರಲ್ಲಿ ಇ ಮೇಲ್ ಮತ್ತು ಕಟಕಟೆಯಲ್ಲಿ ಮುಸ್ಲಿಮರು




1. ಹಿಂದೂವಿನಿಂದ  ಹಿಂದೂವಿನ ಮೇಲೆ ಹಲ್ಲೆ
2. ಮೇಲ್ಜಾತಿ ವ್ಯಕ್ತಿಯಿಂದ ದಲಿತನ ಮೇಲೆ ಹಲ್ಲೆ
3. ದಲಿತ ವ್ಯಕ್ತಿಯಿಂದ ಮೇಲ್ಜಾತಿ ವ್ಯಕ್ತಿಯ ಮೇಲೆ ಹಲ್ಲೆ
4. ಹಿಂದೂವಿನ ಮೇಲೆ ಮುಸ್ಲಿಮನಿಂದ ಹಲ್ಲೆ
5. ಹಿಂದೂವಿನಿAದ ಮುಸ್ಲಿಮನ ಮೇಲೆ ಹಲ್ಲೆ
6. ಮನುಷ್ಯನಿಂದ ಮನುಷ್ಯನ ಮೇಲೆ ಹಲ್ಲೆ 


ಈ 6 ಸುದ್ದಿಗಳ ಪೈಕಿ ಜನರ ಗಮನವನ್ನೇ ಸೆಳೆಯದ, ಇತರರೊಂದಿಗೆ ಹಂಚಿಕೊಳ್ಳದ ಮತ್ತು ನಿರ್ಲಕ್ಷಿಸಿ ಮುಂದೆ ಹೋಗಬಹುದಾದ  ಸುದ್ದಿ ಯಾವುದಾಗಿರಬಹುದು? ಉತ್ತರ ಕಷ್ಟವೇನೂ ಅಲ್ಲ- 1 ಮತ್ತು 6. ಇನ್ನು, ಅತ್ಯಂತ ಹೆಚ್ಚು ಗಮನ ಸೆಳೆಯುವ, ಟಿ.ವಿ.  ಸಂವಾದಗಳಿಗೆ ಕಾರಣವಾಗುವ, ಸಾರ್ವಜನಿಕ ಪ್ರತಿಭಟನೆ, ರ‍್ಯಾಲಿ, ಲಾಠಿ ಚಾರ್ಜು-ಕರ್ಫ್ಯೂ, ಹಿಂಸೆಗಳಿಗೂ ಕಾರಣವಾಗಬಹುದಾದ  ಸುದ್ದಿ ಯಾವುದು? ಉತ್ತರ ಸುಲಭ- 4. ಇನ್ನು, ಇದಕ್ಕಿಂತ ತುಸು ಕಡಿಮೆ ಗಮನ ಸೆಳೆಯಬಹುದಾದ ಆದರೆ ಸಾರ್ವಜನಿಕ ಚರ್ಚೆ  ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಟೀಕೆ-ಟಿಪ್ಪಣಿಗಳಿಗೆ ಒಳಗಾಗಬಹುದಾದ ಸುದ್ದಿ ಯಾವುದೆಂದರೆ ಸಂಖ್ಯೆ 5ರದ್ದು. ಉಳಿದಂತೆ  ಕೆಲವೊಮ್ಮೆ ಪ್ರತಿಭಟನೆಗೂ ಚುನಾವಣೆಯ ಸಂದರ್ಭದಲ್ಲಾದರೆ ರಾಜಕಾರಣಿಗಳ ಕ್ಷಮಾಯಾಚನೆಗೂ ಕಠಿಣ ಕ್ರಮದ ಭರವಸೆಗೂ  ಕಾರಣವಾಗುವ ಸುದ್ದಿಯು ಕ್ರಮ ಸಂಖ್ಯೆ 2ರದ್ದು. ಆದರೆ, ‘ದಲಿತ ವ್ಯಕ್ತಿಯಿಂದ ಮೇಲ್ಜಾತಿ ವ್ಯಕ್ತಿಯ ಮೇಲೆ ಹಲ್ಲೆ ’ ಎಂಬ ಕ್ರಮ ಸಂಖ್ಯೆ  3ರ ಸುದ್ದಿಯು ದೇಶದಲ್ಲಿ ಬಹುತೇಕ ಅಸಂಭವ ಅಥವಾ ಅಪರೂಪದಲ್ಲಿ ಅಪರೂಪದ್ದಾಗಿರುವುದರಿಂದ ಆ ಬಗ್ಗೆ ವಿಶ್ಲೇಷಣೆ  ಅಗತ್ಯವಿಲ್ಲ.
 

ಇನ್ನೊಂದು ಉದಾಹರಣೆ
1. ಪ್ರೀತಿಸಿದ ಯುವಕ-ಯುವತಿಯರಿಬ್ಬರೂ ಪರಾರಿ
2. ಹಿಂದೂ ಯುವಕನೊಂದಿಗೆ ಹಿಂದೂ ಯುವತಿ ಪರಾರಿ
3. ಹಿಂದೂ ಯುವತಿ ಮುಸ್ಲಿಮ್ ಯುವಕನೊಂದಿಗೆ ಪರಾರಿ
4. ಹಿಂದೂ ಯುವಕನೊಂದಿಗೆ ಮುಸ್ಲಿಮ್ ಯುವತಿ ಪರಾರಿ
5. ಮೇಲ್ಜಾತಿ ಯುವಕನೊಂದಿಗೆ ದಲಿತ ಯುವತಿ ಪರಾರಿ
6. ದಲಿತ ಯುವಕನೊಂದಿಗೆ ಮೇಲ್ಜಾತಿ ಯುವತಿ ಪರಾರಿ
ಇವುಗಳ ಪೈಕಿ ಅತ್ಯಂತ ಹೆಚ್ಚು ಗಮನ ಸೆಳೆಯುವ, ಚರ್ಚೆಗೆ ಗ್ರಾಸವಾಗುವ, ಹಿಂಸಾಚಾರ ಮತ್ತು ಪೊಲೀಸ್ ಬಿಗಿ ಬಂದೋಬಸ್ತ್ ಗೆ  ಕಾರಣವಾಗುವ ಹಾಗೂ ಧರ್ಮ ಅಪಾಯದಲ್ಲಿದೆ ಎಂಬ ಕೂಗು ಕೇಳಿ ಬರುವ ಸುದ್ದಿ ಯಾವುದೆಂಬುದನ್ನು ಪತ್ತೆ ಹಚ್ಚುವುದಕ್ಕೆ  ಕಷ್ಟವೇನೂ ಇಲ್ಲ- ಅದು ಸುದ್ದಿ ಸಂಖ್ಯೆ 3. ಇನ್ನು, ಇಷ್ಟು ತೀವ್ರವಾಗಿ ಅಲ್ಲದಿದ್ದರೂ ಚರ್ಚೆ, ಆತಂಕ ಮತ್ತು ಸೋಶಿಯಲ್ ಮೀಡಿಯಾ  ಚರ್ಚೆಗಳಿಗೆ ಕಾರಣವಾಗುವ ಸುದ್ದಿಯೆಂದರೆ ಕ್ರಮ ಸಂಖ್ಯೆ 4ರದ್ದು. ಈ ಸುದ್ದಿiಗಳ ಪೈಕಿ ಅತ್ಯಂತ ಕಡಿಮೆ ಗಮನ ಸೆಳೆಯಬಹುದಾದ  ಮತ್ತು ನಕ್ಕು ಮುಂದೆ ಸಾಗಬಹುದಾದ ಅನಾಕರ್ಷಣೀಯ ಸುದ್ದಿ ಕ್ರಮ ಸಂಖ್ಯೆ 1ರದ್ದು. ಹಾಗೆಯೇ  ಕೆಲವೊಮ್ಮೆ ಅತ್ಯಂತ ಅಪಾಯಕಾರಿ  ತಿರುವನ್ನು ಪಡಕೊಳ್ಳಬಹುದಾದ ಮತ್ತು ಮರ್ಯಾದಾ ಹತ್ಯೆಯಂಥ ಕ್ರೌರ್ಯಕ್ಕೂ ಕಾರಣವಾಗಬಹುದಾದ ಸುದ್ದಿ ಕ್ರಮಸಂಖ್ಯೆ 6ರದ್ದು.  ಸುದ್ದಿ ಸಂಖ್ಯೆ 5 ಸಾಮಾನ್ಯ ಸಂದರ್ಭಗಳಲ್ಲಿ ಅಸಂಭವ ಆಗಿರುವುದರಿಂದ ಅದಕ್ಕಿರುವ ಪ್ರತಿಕ್ರಿಯೆಯ ಬಗ್ಗೆ ಕುತೂಹಲವನ್ನಷ್ಟೇ  ಇಟ್ಟುಕೊಳ್ಳಬಹುದು.


ಇನ್ನೂ ಒಂದು ಉದಾಹರಣೆ ಕೊಡುತ್ತೇನೆ
1. ಅಪರಿಚಿತರಿಂದ ವಿಮಾನ ನಿಲ್ದಾಣಕ್ಕೆ ಬಾಂಬು ಬೆದರಿಕೆ
2. ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ: ಅಲ್ಲಾಹನ ಹೆಸರಲ್ಲಿ ಈ-ಮೇಲ್ ರವಾನೆ
3. ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ: ಆದಿತ್ಯರಾವ್ ಎಂಬಾತನ ಬಂಧನ
4. ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಜೀವಂತ ಬಾಂಬ್: ತಜ್ಞರಿಂದ ಬಾಂಬ್ ನಿಷ್ಕ್ರಿಯ


ನಿಜವಾಗಿ ಇಲ್ಲಿರುವ ನಾಲ್ಕು ಸುದ್ದಿಗಳ ಪೈಕಿ ಅತ್ಯಂತ ಆಘಾತಕಾರಿ ಮತ್ತು ಬೆಚ್ಚಿ ಬೀಳಬೇಕಾದ ಸುದ್ದಿ ಕ್ರಮಸಂಖ್ಯೆ 4ರದ್ದು. ಯಾಕೆಂದರೆ,  ಯಾವ ಗೌಜು-ಗದ್ದಲ, ಬೆದರಿಕೆ, ಈ-ಮೇಲ್‌ಗಳ ರಂಪಾಟವೂ ಇಲ್ಲದೇ ಯಾರೋ ಒಬ್ಬ ಜೀವಂತ ಬಾಂಬ್ ಇಟ್ಟು ಹೋಗಿದ್ದಾನೆ,  ಅದು ಸಕಾಲದಲ್ಲಿ ಪತ್ತೆಯಾಗದೇ ಹೋಗಿರುತ್ತಿದ್ದರೆ ಅನೇಕ ಜೀವಗಳು ಪ್ರಾಣ ಕಳಕೊಳ್ಳುತ್ತಿದ್ದುವು. ವಿಮಾನ ನಿಲ್ದಾಣವೇ  ಸ್ಫೋಟಗೊಳ್ಳುತ್ತಿತ್ತು. ಒಂದೊಮ್ಮೆ ನಿಲ್ದಾಣದಲ್ಲಿ ವಿಮಾನ ಇರುತ್ತಿದ್ದರೆ, ಭಾರಿ ಸಾವು-ನೋವುಗಳಾಗುವ ಸಾಧ್ಯತೆಯೂ ಇತ್ತು. ಅಪಾರ  ನಾಶ-ನಷ್ಟ ಮತ್ತು ಭಾರತದ ವರ್ಚಸ್ಸಿಗೆ ಹಾನಿ ತಟ್ಟಬಹುದಾದ ಕೃತ್ಯ ಇದು. ಆದರೆ, ಟಿ.ವಿ. ಚಾನೆಲ್‌ಗಳು, ಪತ್ರಿಕೆಗಳು, ಸೋಶಿಯಲ್  ಮೀಡಿಯಾದ ಚರ್ಚೆಯಿಂದ ಹಿಡಿದು ಸಾರ್ವಜನಿಕ ಚರ್ಚೆ, ಸಭೆ, ಪ್ರತಿಭಟನೆ, ಆವೇಶದ ಭಾಷಣಗಳ ವರೆಗೆ- ಈ ಎಲ್ಲಕ್ಕೂ  ಕಾರಣವಾಗಬಹುದಾದ ಬಿಗ್ ಬ್ರೇಕಿಂಗ್ ಸುದ್ದಿ ಇದಾಗುವುದಿಲ್ಲ, ಬದಲು ಕ್ರಮ ಸಂಖ್ಯೆ 2ರ ಸುದ್ದಿ ಈ ಎಲ್ಲವನ್ನೂ ಸಾಧ್ಯವಾಗಿಸುತ್ತದೆ.  ಅಷ್ಟಕ್ಕೂ,


ಕ್ರಮ ಸಂಖ್ಯೆ 2ರ ವ್ಯಕ್ತಿ ವಿಮಾನ ನಿಲ್ದಾಣಕ್ಕೆ ಬಾಂಬನ್ನೇ ಹಾಕುವುದಿಲ್ಲ. ಅಲ್ಲಾಹನ ಹೆಸರಲ್ಲಿ ರವಾನಿಸಲಾದ ಈ-ಮೇಲ್‌ನ ಹೊರತಾಗಿ  ಆತ ಯಾರೆಂದೇ ಗೊತ್ತಿರುವುದಿಲ್ಲ. ಆತ ಈ-ಮೇಲ್‌ನಲ್ಲಿ ಬಳಸಿರುವ ಅಲ್ಲಾಹ್, ಬಿಸ್ಮಿಲ್ಲಾಹ್, ಇನ್‌ಶಾ ಅಲ್ಲಾಹ್, ಜಿಹಾದ್, ಕಾಫಿರ್  ಇತ್ಯಾದಿಗಳೇ ಆತನ ಗುರುತು. ಹಾಗಂತ, ಈ ಈ-ಮೇಲನ್ನು ಮುಸ್ಲಿಮ್ ವ್ಯಕ್ತಿಯೇ ರವಾನಿಸಬೇಕಿಲ್ಲ, ಇಂಥ ಪದಗಳನ್ನು ಬಲ್ಲ  ಯಾರೂ ಇಂಥ ಈ-ಮೇಲನ್ನು ರವಾನಿಸಬಹುದು. ಆದರೆ, ಅರೇಬಿಕ್ ಪದಗಳನ್ನು ಮುಸ್ಲಿಮರಿಗೆ ಸಂಬAಧಿಸಿದವು ಮತ್ತು ಮುಸ್ಲಿಮರು  ಮಾತ್ರ ಅಂಥ ಪದಗಳನ್ನು ಬಳಸಬಲ್ಲರು ಎಂದು ತಕ್ಷಣ ತೀರ್ಮಾನಕ್ಕೆ ಬರಲಾಗುತ್ತದಲ್ಲದೇ, ಟಿ.ವಿ. ಆ್ಯಂಕರ್‌ಗಳು ಕೋಟು- ಬೂಟುಗಳನ್ನು ಹಾಕಿಕೊಂಡು ಡಿಬೇಟ್‌ಗೆ ಸಿದ್ಧವಾಗುತ್ತಾರೆ. ಡಿಬೇಟ್ ಆರಂಭವಾಗುವುದಕ್ಕಿಂತ ಮೊದಲೇ ಗುಂಡಿನ ಧ್ವನಿಯೊಂದಿಗೆ  ಮುಖಕ್ಕೆ ಬಟ್ಟೆ ಕಟ್ಟಿದ ಮತ್ತು ಕೈಯಲ್ಲಿ ಬಂದೂಕು ಹಿಡಿದ ಚಿತ್ರಗಳು ಪರದೆಯಲ್ಲಿ ಕಾಣಿಸಿಕೊಳ್ಳುತ್ತದೆ. ಇವರೆಲ್ಲ ಮುಸ್ಲಿಮರು ಎಂಬುದ ನ್ನು ಸಾರಿ ಹೇಳುವುದಕ್ಕಾಗಿ ಕೆಲವೊಮ್ಮೆ ಹಿನ್ನೆಲೆಯಲ್ಲಿ ಅದಾನ್ ಕೂಡಾ ಕೇಳಿಸುವುದಿದೆ ಅಥವಾ ಮಸೀದಿಯ ಚಿತ್ರ ಹಾದು  ಹೋಗುವುದಿದೆ. ಆ ಬಳಿಕ ಡಿಬೇಟ್‌ನ ಹೆಸರಲ್ಲಿ ಏಕಮುಖ ವಾದಗಳು ಪ್ರಾರಂಭವಾಗುತ್ತವೆ. ಈ ಹಿಂದೆ ಬಂದಿರುವ ಇಂಥದ್ದೇ  ಶೈಲಿಯ ಈ-ಮೇಲ್‌ಗಳು, ಅದರಲ್ಲಿ ಇದ್ದ ಅರೇಬಿಕ್ ಪದಗಳು ಮತ್ತು ಅದರ ಹಿಂದಿರುವ ಮನಸ್ಥಿತಿ, ಜಗತ್ತನ್ನೇ ಇಸ್ಲಾಮ್ ಮಾಡುವ  ಸಂಚು, ಹಿಂಸಾಪ್ರಿಯತೆ, ಹಿಂದೂಗಳಿಗಿರುವ ಅಪಾಯ.. ಇತ್ಯಾದಿಗಳನ್ನೆಲ್ಲ ಹರಡಿಟ್ಟು ಚರ್ಚಿಸಲಾಗುತ್ತದೆ. ಹಾಗಂತ,


ಟಿ.ವಿ.ಗಳಿಂದ ಹೊರಬಂದು ಪತ್ರಿಕೆಗಳನ್ನು ನೋಡಿದರೂ ಸುಖವೇನೂ ಇರುವುದಿಲ್ಲ. ಟಿ.ವಿ.ಯಷ್ಟು ಬೇಜವಾಬ್ದಾರಿತನದಿಂದ ಅಲ್ಲ ದಿದ್ದರೂ, ಶಂಕಿತರು ಮುಸ್ಲಿಮರೇ ಎಂದು ಪರೋಕ್ಷವಾಗಿಯಾದರೂ ಬಿಂಬಿಸುವ ರೀತಿಯಲ್ಲೇ  ಸುದ್ದಿ ಹೆಣೆಯಲ್ಪಟ್ಟಿರುತ್ತದೆ. ಅದಕ್ಕೆ  ಕಾರಣ, ಅಲ್ಲಾಹ್, ಬಿಸ್ಮಿಲ್ಲಾಹ್, ಜಿಹಾದ್, ಕಾಫಿರ್.. ಇತ್ಯಾದಿ ಪದಗಳು. ಇದರ ಆಚೆಗೆ, ರಾಜಕಾರಣಿಗಳು, ಸಂಘಟನೆಗಳ ನಾಯಕರು  ಅದಾಗಲೇ ಅಪರಾಧಿಯನ್ನು ಪತ್ತೆ ಮಾಡಿದವರಂತೆ ಹೇಳಿಕೆ ನೀಡತೊಡಗುತ್ತಾರೆ. ಇಸ್ಲಾಮ್‌ನಿಂದ ಈ ದೇಶಕ್ಕೆ ಇರುವ ಅಪಾಯ,  ಮುಸ್ಲಿಮರನ್ನು ದೂರ ಇಡಬೇಕಾದ ಅಗತ್ಯ ಮತ್ತು ಹಿಂದೂಗಳು ಸಂಘಟಿತರಾಗಬೇಕಾದ ಅನಿವಾರ್ಯತೆಗಳ ಕುರಿತು ಭಾಷಣಗಳನ್ನು  ಮಾಡಲಾಗುತ್ತದೆ. ಮುಸ್ಲಿಮ್ ಧರ್ಮಗುರುಗಳೇಕೆ ಫತ್ವಾ ಹೊರಡಿಸುವುದಿಲ್ಲ, ಈ ಬೆದರಿಕೆಯನ್ನು ಖಂಡಿಸಿ ಮುಸ್ಲಿಮರೇಕೆ ಪ್ರತಿಭಟನೆ  ನಡೆಸುವುದಿಲ್ಲ ಎಂದು ಪ್ರಶ್ನಿಸಲಾಗುತ್ತದೆ. ಅಂದಹಾಗೆ, ಇಷ್ಟೆಲ್ಲಾ ನಡೆಯುತ್ತಿದ್ದರೂ ಅಲ್ಲಾಹನ ಹೆಸರಲ್ಲಿ ಈ-ಮೇಲ್ ಕಳಿಸಿದವನ ಬಂಧನವೂ ಆಗಿರುವುದಿಲ್ಲ ಮತ್ತು ಆತನ ಧರ್ಮ ಯಾವುದು ಎಂದೂ ಪತ್ತೆಯಾಗಿರುವುದಿಲ್ಲ. ಆ ಈ-ಮೇಲ್‌ನಲ್ಲಿ ಬಳಸಲಾಗಿರುವ ಪದಗಳೇ  ಒಂದಿಡೀ ಧರ್ಮವನ್ನು ಮತ್ತು ಅದರ ಅನುಯಾಯಿಗಳನ್ನು ಕಟಕಟೆಯಲ್ಲಿ ನಿಲ್ಲಿಸುವುದಕ್ಕೆ ಕಾರಣವಾಗುತ್ತದೆ. ಇದೇವೇಳೆ,


ಕ್ರಮಸಂಖ್ಯೆ 3ರ ಸುದ್ದಿಯ ಆರೋಪಿಯನ್ನು ಬಂಧಿಸಲಾಗಿದ್ದರೂ ಅದಕ್ಕೆ ಈ ಮಟ್ಟದ ಕವರೇಜ್ ಸಿಗುವುದಿಲ್ಲ. ಆ ವ್ಯಕ್ತಿಯನ್ನು ಆತನ  ಧರ್ಮದ ಆಧಾರದಲ್ಲಿ ಟಿ.ವಿ.ಗಳು ವಿಚಾರಣೆ ನಡೆಸುವುದಿಲ್ಲ.  ಆತ ಓದಿದ ಗ್ರಂಥ  ಯಾವುದು, ಅದರಲ್ಲಿ ಆತನಿಗೆ ಇಷ್ಟವಾದ ಅಧ್ಯಾಯ ಯಾವುದು, ಆತ ವೀಕ್ಷಿಸುತ್ತಿದ್ದ ವೀಡಿಯೋ ಎಂಥದ್ದು, ಆತ ಎಲ್ಲೆಲ್ಲಿಗೆಲ್ಲಾ  ತೀರ್ಥಯಾತ್ರೆ ಹೋಗಿದ್ದಾನೆ, ಆತ ಕರ್ಮಠನಾಗಿದ್ದನೆ, ಆತ ಮದುವೆಯಾಗಿದ್ದಾನಾ, ಮಕ್ಕಳಿದ್ದಾರಾ, ಎಷ್ಟನೇ ತರಗತಿಯಲ್ಲಿ ಶಾಲೆ ಖೈದು  ಮಾಡಿದ್ದಾನೆ, ಈ ಮೊದಲು ಇಂಥ ಬೆದರಿಕೆ ಹಾಕಿದ್ದನಾ, ಪಾಸ್‌ಪೋರ್ಟ್ ಇದೆಯಾ, ವಿದೇಶಕ್ಕೆ ಪ್ರಯಾಣಿಸಿದ್ದಾನಾ... ಇತ್ಯಾದಿ ಇತ್ಯಾದಿ  ಮೀಡಿಯಾ ಟ್ರಯಲ್‌ಗಳು ನಡೆಯುವುದಿಲ್ಲ. ಪತ್ರಿಕೆಗಳು ಕೂಡಾ ವಿಷಯದ ಆಳಕ್ಕೆ ಇಳಿಯದೇ ಆತನಿಗೆ ಮಾನಸಿಕ ಸಮಸ್ಯೆ ಇತ್ತಾ,  ಖಿನ್ನತೆಗೆ ಔಷಧಿ ಪಡೆಯುತ್ತಿದ್ದನಾ ಎಂಬಿತ್ಯಾದಿ ಪತ್ತೆ ಕಾರ್ಯಕ್ಕೆ ತೊಡಗುತ್ತವೆ. ರಾಜಕಾರಣಿ ಗಳೂ ಮೌನವಾಗುತ್ತಾರೆ. ಸಂಘಟನೆಗಳಿಗೂ ಇದರಲ್ಲಿ ಆಸಕ್ತಿ ಇರುವುದಿಲ್ಲ. ಆವೇಶದ ಭಾಷಣಗಳೋ ಘೋಷಣೆಗಳೋ ಕೇಳಿ ಬರುವುದೂ ಇಲ್ಲ. ಏನೂ ನಡೆದೇ  ಇಲ್ಲವೋ ಎಂದು ಅನುಮಾನಿ ಸುವಂತೆ ಬಂದಷ್ಟೇ ವೇಗದಲ್ಲಿ ಈ ಸುದ್ದಿ ಸತ್ತೂ ಹೋಗುತ್ತದೆ.


ಅಂದಹಾಗೆ, ಈ ಎಲ್ಲವನ್ನೂ ನೆನಪಿಸಿಕೊಳ್ಳುವುದಕ್ಕೆ ಒಂದು ಕಾರಣ ಇದೆ.


ಬೆಂಗಳೂರಿನ 15  ಶಾಲೆಗಳಿಗೆ ಡಿಸೆಂಬರ್ 1ರಂದು ಈ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾದ ಸುದ್ದಿಯನ್ನು ಗೆಳೆಯರೊಬ್ಬರು  ನನಗೆ ವಾಟ್ಸಾಪ್ ಮಾಡಿದ್ದರು. ಅದರೊಂದಿಗೆ ಮುಸ್ಲಿಮರ ಬಗ್ಗೆ ಅತ್ಯಂತ ನಿರಾಶೆಯ ಭಾವನೆಗಳನ್ನೂ ಹಂಚಿ ಕೊಂಡಿದ್ದರು. ಇವರು  ದೇಶಸೇವೆಗೈದು ನಿವೃತ್ತರಾದ ಯೋಧರು. ಅವರ ಭಾವನೆಗಳನ್ನು ಅರ್ಥೈಸಿಕೊಳ್ಳಬಲ್ಲೆ. ‘ಇಸ್ಲಾಮ್‌ಗೆ ಮತಾಂತರವಾಗಿ ಇಲ್ಲವೇ  ಸಾಯಲು ಸಿದ್ಧರಾಗಿ ಎಂದು ಬೆದರಿಸುವುದು, ವಿಗ್ರಹಾರಾಧಕರ ತಲೆ ಕಡಿಯುತ್ತೇವೆ ಅನ್ನುವುದು, 15 ಶಾಲೆಗಳಲ್ಲಿರುವ ಮಕ್ಕಳನ್ನು  ಬಾಂಬ್ ಸ್ಫೋಟಿಸಿ ಹತ್ಯೆ ನಡೆಸುತ್ತೇವೆ..’ ಅನ್ನುವುದೆಲ್ಲ ರಾಕ್ಷಸೀಯ ಮಾತುಗಳು. ಯಾರಲ್ಲೆ  ಆಗಲಿ ಆ ಮಾತುಗಳು ಆಘಾತ ಮತ್ತು  ಆಕ್ರೋಶವನ್ನು ಉಂಟು ಮಾಡಬಲ್ಲುದು. ಈ ಮಾತುಗಳ ನಡುನಡುವೆ ಬಿಸ್ಮಿಲ್ಲಾಹ್ ಮತ್ತು ಅಲ್ಲಾಹು ಅಕ್ಬರ್ ಎಂಬ ಪದಗಳೂ ಇವೆ.  ಈ ಈ-ಮೇಲ್‌ಗೆ ದಿಗಿಲುಗೊಂಡು ಶಾಲೆಗೆ ಧಾವಿಸಿದ ಪೋಷಕರು ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡೂ ಹೋಗಿದ್ದಾರೆ. ಇವೆಲ್ಲ  ಅಸಹಜವೂ ಅಲ್ಲ. ವಿಷಾದ ಏನೆಂದರೆ,

ಒಂದು  ಈ-ಮೇಲ್‌ನಲ್ಲಿರುವ ಪದಗಳನ್ನು ಓದಿಕೊಂಡು ಅದಕ್ಕೆ ಧರ್ಮವನ್ನು ಅಂಟಿಸುತ್ತೇವಲ್ಲ, ಇದು ಎಷ್ಟು ಸರಿ? ಒಂದುವೇಳೆ, ಈ  ಈ-ಮೇಲ್‌ನ ಹಿಂದೆ ಇರುವ ವ್ಯಕ್ತಿ ಮುಸ್ಲಿಮ್ ಎಂದೇ ಇಟ್ಟುಕೊಂಡರೂ ಅದು ಇಸ್ಲಾಮ್‌ನಿಂದ ಪ್ರೇರಿತ ಎಂದು ಅಂದುಕೊಳ್ಳುವುದು  ಏಕೆ? 20 ಕೋಟಿ ಮುಸ್ಲಿಮರು ಈ ದೇಶದಲ್ಲಿ ಹಿಂದೂಗಳೊಂದಿಗೆ ಬೆರೆತು ಬದುಕುತ್ತಿದ್ದರೂ ಅವರ ಮೇಲೆ ವಿಶ್ವಾಸವಿಡುವುದಕ್ಕಿಂತ  ಹೆಚ್ಚು ಓರ್ವ ಭಯೋತ್ಪಾದಕನ ಈ-ಮೇಲ್‌ನ ಮೇಲೆ ನಂಬಿಕೆ ಇಡುವುದೇಕೆ? ಇಂಥದ್ದೊಂದು  ಸಮೂಹಸನ್ನಿ ಭೀತಿಯನ್ನು ಹುಟ್ಟು  ಹಾಕಿದವರು ಯಾರು? ಆ ಈ-ಮೇಲ್‌ನಲ್ಲಿ ಏನೆಲ್ಲಾ ಹೇಳಿವೆಯೋ ಅದುವೇ ಇಸ್ಲಾಮ್ ಮತ್ತು ಅದುವೇ ಮುಸ್ಲಿಮರು ಎಂದು  ನಂಬುವುದಕ್ಕೆ ಈ ದೇಶದಲ್ಲಿ ಏನು ಆಧಾರಗಳಿವೆ? ಮುಸ್ಲಿಮನ ಬುಟ್ಟಿಯಿಂದ ಮೀನು ಖರೀದಿಸುವ ಹಿಂದೂಗಳು, ಹಿಂದೂಗಳ  ಅಂಗಡಿಯಿಂದ  ಹೂವು ಖರೀದಿಸುವ ಮುಸ್ಲಿಮರು ಮತ್ತು ಧರ್ಮ ನೋಡದೇ ಅಕ್ಕಿ-ಸಕ್ಕರೆ, ಬೆಲ್ಲ, ಚಪ್ಪಲಿ, ಮೊಬೈಲು, ಟಿ.ವಿ., ಫ್ರಿಜ್ಜು,  ಕೋಳಿ, ಮಾಂಸ, ತರಕಾರಿ, ಕಾರು, ಬೈಕು, ಹಣ್ಣು-ಹಂಪಲುಗಳನ್ನು ಖರೀದಿಸುವ ಹಿಂದೂ ಮತ್ತು ಮುಸ್ಲಿಮರು ಹಾಗೂ ರಕ್ತದಾನ  ಮಾಡುವ ಮತ್ತು ಕಷ್ಟದಲ್ಲಿರುವವರಿಗೆ ನೆರವಾಗುವ ಈ ಎರಡೂ ಧರ್ಮೀಯರು ಒಂದು ಈ-ಮೇಲ್, ಒಂದು ಹತ್ಯೆ, ಒಂದು ಪ್ರೇಮ  ಪ್ರಕರಣಕ್ಕೆ ತಲ್ಲಣಿಸಿ ಹೋಗುವುದೇಕೆ? ನಿಜಕ್ಕೂ ಈ ಭಯ ಸಜಹವೇ ಅಥವಾ ರಾಜಕೀಯ ಸೃಷ್ಟಿಯೇ? ಅಷ್ಟಕ್ಕೂ,


ಕೊಲ್ಲುವ ಉದ್ದೇಶ ಹೊಂದಿರುವ ವ್ಯಕ್ತಿ ಈ-ಮೇಲ್ ಮಾಡುವುದಿಲ್ಲ. ಈ-ಮೇಲ್ ಮಾಡುವವ ಕೊಲ್ಲುವ ಉದ್ದೇಶವನ್ನು ಹೊಂದಿರುವುದೂ ಇಲ್ಲ. ಈತ ಬರೇ ಭಯೋತ್ಪಾದಕನಷ್ಟೇ ಅಲ್ಲ, ಧರ್ಮದ್ರೋಹಿ, ಮನುಷ್ಯ ದ್ರೋಹಿ ಮತ್ತು ಸೌಹಾರ್ದ ದ್ರೋಹಿ.

Wednesday, December 6, 2023

ತಲೆಬಾಗಿದ ಇಸ್ರೇಲ್, ಜಗತ್ತನ್ನು ಚಕಿತಗೊಳಿಸಿದ ಹಮಾಸ್




1. ಹಮಾಸ್ ಜೊತೆ ಮಾತುಕತೆ ನಡೆಸುವುದೆಂದರೆ ಐಸಿಸ್ ಜೊತೆ ಮಾತುಕತೆ ನಡೆಸಿದಂತೆ. ಇದು ಎಂದೂ ಸಾಧ್ಯವೇ ಇಲ್ಲ.

2. ಹಮಾಸನ್ನು ಸಂಪೂರ್ಣವಾಗಿ ನಾಶಪಡಿಸದೇ ಈ ಯುದ್ಧದಿಂದ ವಿರಮಿಸಲಾರೆ.

3. ಹಮಾಸ್ ಹಿಡಿದಿಟ್ಟುಕೊಂಡಿರುವ ಒತ್ತೆಯಾಳುಗಳನ್ನು ಸೈನಿಕ ಕಾರ್ಯಾಚರಣೆಯ ಮೂಲಕವೇ ಬಿಡುಗಡೆಗೊಳಿಸುತ್ತೇವೆ.

4. ಗಾಝಾವನ್ನು ಪೂರ್ಣ ಪ್ರಮಾಣದಲ್ಲಿ ವಶಪಡಿಸುತ್ತೇವೆ, ಹಮಾಸ್‌ನಿಂದ ಮುಕ್ತಗೊಳಿಸುತ್ತೇವೆ ಮತ್ತು ಗಾಝಾದ ಸುರಕ್ಷಿತತೆಯನ್ನು  ನಮ್ಮ ಸೈನಿಕರೇ ನೋಡಿಕೊಳ್ಳುತ್ತಾರೆ.

5. ಎಷ್ಟೇ ಒತ್ತಡ ಎದುರಾದರೂ ಕದನ ವಿರಾಮ ಸಾಧ್ಯವೇ ಇಲ್ಲ.

6. ಕದನ ವಿರಾಮ ಎಂದರೆ ಪರಾಜಯ ಎಂದು ಅರ್ಥ.

ಇವೆಲ್ಲವನ್ನೂ ಹೇಳಿದ್ದು ಒಬ್ಬನೇ ವ್ಯಕ್ತಿ- ಬೆಂಜಮಿನ್ ನೆತನ್ಯಾಹು. ಆದರೆ ಇದೇ ಬೆಂಜಮಿನ್ ನೆತನ್ಯಾಹು ಈ ಎಲ್ಲ ಘೋಷಣೆಗಳಿಗೂ  ತದ್ವಿರುದ್ಧವಾಗಿ ನಡಕೊಂಡಿದ್ದಾರೆ. ಇದೇ ನೆತನ್ಯಾಹು ಸರ್ಕಾರ ಹಮಾಸ್‌ನ ಜೊತೆ ಮಾತುಕತೆ ನಡೆಸಿದೆ. ಮಾತ್ರವಲ್ಲ, ಇಸ್ರೇಲ್‌ಗೆ ಅನನುಕೂಲವಾಗುವ ರೀತಿಯ ಕದನ ವಿರಾಮಕ್ಕೂ ಒಪ್ಪಿಕೊಂಡಿದೆ. ಈ ಕದನ ವಿರಾಮದ ಷರತ್ತನ್ನು ಪರಿಶೀಲಿಸಿದರೆ ಇಸ್ರೇಲ್ ವಿರುದ್ಧದ  ಹೋರಾಟದಲ್ಲಿ ಹಮಾಸ್ ಮೇಲುಗೈ ಪಡೆದಿದೆ ಎಂದೇ ಅನಿಸುತ್ತದೆ. 4 ದಿನಗಳ ಕದನ ವಿರಾಮ ಒಪ್ಪಂದದ ಪ್ರಕಾರ, ಹಮಾಸ್ 50  ಮಂದಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಬೇಕು. ಇದಕ್ಕೆ ಪ್ರತಿಯಾಗಿ ಇಸ್ರೇಲ್ 150 ಮಂದಿ ಫೆಲೆಸ್ತೀನಿ ಕೈದಿಗಳನ್ನು  ಬಿಡುಗಡೆಗೊಳಿಸಬೇಕು.

ಅಂದಹಾಗೆ, 

ಹಮಾಸ್‌ನ 50 ಮಂದಿಗೆ ಇಸ್ರೇಲ್ 150 ಮಂದಿ ಕೈದಿಗಳನ್ನು ಬಿಡುಗಡೆಗೊಳಿಸಲು ಯಾಕೆ ಒಪ್ಪಿಕೊಂಡಿತು ಎಂಬುದು  ಮೊದಲ ಪ್ರಶ್ನೆ. ಹಮಾಸ್‌ನ ಹಿಡಿತದಲ್ಲಿ 240ಕ್ಕಿಂತಲೂ ಅಧಿಕ ಒತ್ತೆಯಾಳುಗಳಿದ್ದಾರೆ ಎಂದು ಇಸ್ರೇಲ್ ಈ ಹಿಂದೆ ಘೋಷಿಸಿತ್ತು.  ಒಂದುವೇಳೆ, ಈ ಘರ್ಷಣೆಯಲ್ಲಿ ಇಸ್ರೇಲ್ ಮೇಲುಗೈ ಪಡೆದಿದ್ದೇ  ಆಗಿದ್ದರೆ ಮತ್ತು ಹಮಾಸ್‌ನ ಜಂಘಾಬಲವನ್ನೇ ಅದು ಉಡುಗಿಸಿದ್ದರೆ  ಕದನ ವಿರಾಮ ಇಲ್ಲದೆಯೇ ಅದು ಒತ್ತೆಯಾಳುಗಳನ್ನು ಬಿಡಿಸಿಕೊಳ್ಳಬೇಕಿತ್ತು. ಅಥವಾ ಹಮಾಸ್‌ನ 50 ಮಂದಿಯ ಬದಲಿಗೆ ತನ್ನ ವಶದಲ್ಲಿರುವ 50 ಮಂದಿಯನ್ನು ಮಾತ್ರ ಬಿಡುಗಡೆಗೊಳಿಸಬೇಕಿತ್ತು. ಆದರೆ ಇವಾವುವೂ ಆಗಿಲ್ಲ. ಬದಲಾಗಿ ಹಮಾಸ್ ಬಿಡುಗಡೆಗೊಳಿಸುವ  ಸಂಖ್ಯೆಯ ಮೂರು ಪಟ್ಟು ಕೈದಿಗಳನ್ನು ಬಿಡುಗಡೆಗೊಳಿಸಲು ಒಪ್ಪಿಕೊಳ್ಳುವ ಮೂಲಕ ತಾನು ಅಸಹಾಯಕ ಎಂದು ನೆತನ್ಯಾಹು  ಘೋಷಿಸಿದ್ದಾರೆ. ಕತರ್ ಮಧ್ಯಸ್ಥಿಕೆಯಲ್ಲಿ ನಡೆದ ಈ ಒಪ್ಪಂದದಲ್ಲಿ ಇನ್ನೂ ಒಂದು ಜಾಣ್ಮೆಯನ್ನು ಹಮಾಸ್ ಪ್ರದರ್ಶಿಸಿದೆ. ಇಸ್ರೇಲ್  ಬಿಡುಗಡೆಗೊಳಿಸಬೇಕಾದ 150 ಕೈದಿಗಳ ಪಟ್ಟಿಯನ್ನು ಅದು ಬಹಳ ಬುದ್ಧಿವಂತಿಕೆಯಿಂದ ತಯಾರಿಸಿದೆ. ಇಸ್ರೇಲ್ ಜೈಲಿನಲ್ಲಿ 19  ವರ್ಷಕ್ಕಿಂತ ಕೆಳಗಿನ ಎಷ್ಟು ಮಂದಿ ಫೆಲೆಸ್ತೀನಿ ಬಾಲಕರಿದ್ದಾರೆ ಎಂಬುದನ್ನು ಜಗತ್ತಿಗೆ ಗೊತ್ತು ಮಾಡುವ ಸಂದರ್ಭವಾಗಿ ಈ ಅವಕಾಶವನ್ನು ಅದು ಬಳಸಿಕೊಂಡಿದೆ. ಈ 150 ಮಂದಿ ಕೈದಿಗಳಲ್ಲಿ ಹೆಚ್ಚಿನವರು ತಾಯಿ ಮತ್ತು ಅವರ ಹದಿಹರೆಯದ ಮಕ್ಕಳೇ ಇದ್ದಾರೆ.  ಫೆಲೆಸ್ತೀನ್‌ನಿಂದ ತಾಯಂದಿರು ಮತ್ತು ಅವರ ಹದಿಹರೆಯದ ಮಕ್ಕಳನ್ನು ಇಸ್ರೇಲ್ ಕೊಂಡೊಯ್ದು ಜೈಲಲ್ಲಿಡುತ್ತಿದೆ ಎಂಬುದನ್ನು ಜಗತ್ತಿಗೆ  ಸಾರಲು ಈ ಸಂದರ್ಭವನ್ನು ಹಮಾಸ್ ಬಳಸಿಕೊಳ್ಳಲು ಯಶಸ್ವಿಯಾಗಿದೆ. ಒಂದುಕಡೆ,

ಅಕ್ಟೋಬರ್ 7ರ ಬಳಿಕ ಇಸ್ರೇಲ್ ನಡೆಸಿದ ಬಾಂಬ್ ದಾಳಿಗೆ 6 ಸಾವಿರಕ್ಕಿಂತಲೂ ಅಧಿಕ ಫೆಲೆಸ್ತೀನಿ ಮಕ್ಕಳು ಹತ್ಯೆಗೀಡಾಗಿದ್ದಾರೆ. ಇ ನ್ನೊಂದು ಕಡೆ, ಬಾಲಕರನ್ನು ಮತ್ತು ಅವರ ತಾಯಂದಿರನ್ನು ಇದೇ ಇಸ್ರೇಲ್ ಬಂಧಿಸಿ ಜೈಲಲ್ಲಿಡುತ್ತಿದೆ.. ಎಂಬ ಸಂದೇಶವನ್ನು ಜಗತ್ತಿಗೆ  ಹಮಾಸ್ ಅತ್ಯಂತ ಜಾಣ್ಮೆಯಿಂದ ರವಾನಿಸುವ ಪ್ರಯತ್ನ ನಡೆಸಿದೆ. ಅಂದಹಾಗೆ,
ಇಸ್ರೇಲ್ ಮೇಲೆ ಅಕ್ಟೋಬರ್ 7ರಂದು ಹಮಾಸ್ ದಾಳಿ ನಡೆಸಿದ ಬಳಿಕ ನಡೆದ ಚರ್ಚೆಗಳಲ್ಲಿ ಎರಡು ಬಹುಮುಖ್ಯ ಅಂಶಗಳಿದ್ದುವು- 

 1. ಪ್ರಬಲ ಆರ್ಥಿಕ ಬಲ, ಸೇನಾ ಬಲ ಮತ್ತು ಗುಪ್ತಚರ ಬಲವನ್ನು ಹೊಂದಿರುವ ಇಸ್ರೇಲ್‌ನ ಮುಂದೆ ಹಮಾಸ್ ನುಚ್ಚುನೂರಾಗಲಿದೆ. 

 2. ಭಯೋತ್ಪಾದಕ ಗುಂಪು ಎಂಬ ಹಣೆ ಪಟ್ಟಿ ಹಚ್ಚಿ ಹಮಾಸನ್ನು ಜಗತ್ತು ಮೂಲೆಗೊತ್ತಲಿದೆ ಮತ್ತು ಇಸ್ರೇಲ್‌ಗೆ ಜಾಗತಿಕ ರಾಷ್ಟ್ರಗಳ  ಮಾನ್ಯತೆ ಇನ್ನೂ ಹೆಚ್ಚಾಗಲಿದೆ.

ಆದರೆ,

46 ದಿನಗಳ ಘರ್ಷಣೆಗಳ ಬಳಿಕದ ಪರಿಸ್ಥಿತಿ ಹೇಗಿದೆಯೆಂದರೆ, ಈ ಎರಡೂ ಲೆಕ್ಕಾಚಾರಗಳೂ ತಲೆಕೆಳಗಾಗಿವೆ ಮತ್ತು ಇಸ್ರೇಲ್  ಅಕ್ಟೋಬರ್ 7ಕ್ಕಿಂತ ಮೊದಲಿನ ಸ್ಥಿತಿಯಿಂದಲೂ ಕೆಳಜಾರಿ ಪ್ರಪಾತಕ್ಕೆ ಬಿದ್ದಿದೆ. ಫೆಲೆಸ್ತೀನ್‌ನ ಮೇಲೆ ಬಾಂಬ್ ಸುರಿದು 14 ಸಾವಿರ  ಮಂದಿಯನ್ನು ಹತ್ಯೆಗೈಯಲು ಇಸ್ರೇಲ್ ಯಶಸ್ವಿಯಾಗಿದ್ದರೂ ಹಮಾಸ್‌ಗೆ ಆಘಾತ ನೀಡಲು ಅದಕ್ಕೆ ಇನ್ನೂ ಸಾಧ್ಯವಾಗಿಲ್ಲ. ಬರೇ 20  ನಿಮಿಷಗಳಲ್ಲಿ 5 ಸಾವಿರ ರಾಕೆಟ್‌ಗಳನ್ನು ಇಸ್ರೇಲ್ ನೊಳಗೆ ಹಾರಿಸಿದ ಹಮಾಸ್‌ನ ಆ ರಾಕೆಟ್ ಲಾಂಚರ್ ವ್ಯವಸ್ಥೆಯನ್ನು ಬೇಧಿಸಲು  ಅದು ಎಳ್ಳಷ್ಟೂ ಶಕ್ತವಾಗಿಲ್ಲ. ಹಮಾಸ್‌ನ ಜಾಲ ಹೇಗಿದೆ, ಎಲ್ಲೆಲ್ಲಿದೆ ಮತ್ತು ಅದರ ಕಾರ್ಯಾಚರಣೆಯ ಸ್ವರೂಪ ಏನು ಎಂಬುದನ್ನೆಲ್ಲ  ಪತ್ತೆ ಹಚ್ಚುವಲ್ಲಿ ಇಸ್ರೇಲ್ ಘೋರ ವೈಫಲ್ಯವನ್ನು ಕಂಡಿದೆ. ಮೊಬೈಲ್‌ನೊಳಗೆ ನುಸುಳಿ ಮಾಹಿತಿಯನ್ನು ಕದಿಯಬಲ್ಲ ಅತ್ಯಾಧುನಿಕ  ಸ್ಪೈವೇರ್ ತಂತ್ರಜ್ಞಾನದ ಹೊರತಾಗಿಯೂ ಹಮಾಸ್‌ನ ಸೈನಿಕ ತಂತ್ರಜ್ಞಾನ, ಕಾರ್ಯಾಚರಣೆಯ ವಿಧಾನ ಮತ್ತು ರಾಕೆಟ್ ಲಾಂಚರ್‌ಗಳ  ಕಾರ್ಯವಿಧಾನವನ್ನು ಅರಿತುಕೊಳ್ಳು ವಲ್ಲಿ ಇಸ್ರೇಲ್ ವಿಫಲವಾಗಿರುವುದು ಅದರ ಸಾಮರ್ಥ್ಯದ ಮಿತಿಯನ್ನು ಹೇಳುತ್ತದೆ. ಒಂದೋ,

ಹೊರಗೆ ಬಿಂಬಿಸಿಕೊಂಡಷ್ಟು ಇಸ್ರೇಲ್ ಬಲಿಷ್ಠವಾಗಿಲ್ಲ ಅಥವಾ ಬುದ್ಧಿವಂತಿಕೆಯಲ್ಲಿ ಇಸ್ರೇಲನ್ನು ಮೀರಿಸುವ ಸಮರ್ಥರು ಹಮಾಸ್‌ನಲ್ಲಿದ್ದಾರೆ ಎಂದೇ ಹೇಳಬೇಕಾಗುತ್ತದೆ. ಹಮಾಸ್ ಗುಂಪು ತನ್ನನ್ನು ಸುರಂಗದಲ್ಲಿ ಬಚ್ಚಿಟ್ಟುಕೊಳ್ಳುತ್ತದೆ ಎಂದೇ ಈವರೆಗೆ ಇಸ್ರೇಲ್  ಹೇಳಿಕೊಳ್ಳುತ್ತಾ ಬಂದಿತ್ತು. ಜಗತ್ತು ಕೂಡ ಅದನ್ನೇ ನಂಬಿತ್ತು. ಇದು ಭಾಗಶಃ ಸತ್ಯ ಕೂಡ. ಆದರೆ, ಹಮಾಸ್‌ನ ಬಲ ಸುರಂಗವನ್ನೇ  ಅವಲಂಬಿಸಿಕೊಂಡಿಲ್ಲ ಎಂಬುದನ್ನು ಈ ಘರ್ಷಣೆ ಜಗಜ್ಜಾಹೀರುಗೊಳಿಸಿದೆ. 46 ದಿನಗಳ ಬಳಿಕವೂ ಅದು ಹಮಾಸ್‌ಗೆ ಸೇರಿದ  ಪ್ರಮುಖವಾದ ಏನನ್ನೂ ವಶಪಡಿಸಿಕೊಂಡಿಲ್ಲ. ನೆಲ, ಜಲ ಮತ್ತು ಆಕಾಶ ಮಾರ್ಗಗಳಿಂದ ಏಕಕಾಲದಲ್ಲಿ ಆಕ್ರಮಣ ಮಾಡಬಲ್ಲ  ಸಾಮರ್ಥ್ಯ ಇದ್ದೂ ಮತ್ತು ಇವಾವುವೂ ಇಲ್ಲದ ಹಮಾಸ್‌ನ ವಿರುದ್ಧದ ಹೋರಾಟದಲ್ಲಿ ಇಸ್ರೇಲ್ ಶರಣಾಗತ ಸ್ಥಿತಿಗೆ ತಲುಪಿದ್ದು ಏಕೆ?  ಮೊಸಾದ್ ಎಂಬ ಪ್ರಬಲ ಗುಪ್ತಚರ ವ್ಯವಸ್ಥೆ ಇದ್ದೂ ಹಮಾಸ್ ಚಟುವಟಿಕೆಯ ಮೇಲೆ ಕಣ್ಣಿಡಲು ಅದು ವಿಫಲವಾದದ್ದು ಏಕೆ? ‘ಯುದ್ಧ  ಆರಂಭಿಸಿದ್ದು ನೀವು, ಕೊನೆಗೊಳಿಸುವುದು ನಾವು...’ ಎಂದು ಅಕ್ಟೋಬರ್ 7ರಂದು ಘೋಷಿಸಿದ್ದ ನೆತನ್ಯಾಹು ನವೆಂಬರ್ 25ಕ್ಕೆ ತಲುಪುವಾಗ ಶರಣಾಗತ ಭಾವದಲ್ಲಿ ಕಾಣಿಸಿಕೊಂಡದ್ದು ಯಾಕೆ? ಬಲಿಷ್ಠ ಎಂದು ಗುರುತಿಸಿಕೊಂಡಿರುವ ರಾಷ್ಟ್ರವೊಂದರ ಪ್ರಧಾನಿಯು  ಗಾಝಾ ಎಂಬ ರಾಷ್ಟ್ರವೇ ಅಲ್ಲದ ಮತ್ತು ಹಮಾಸ್ ಎಂಬ ಏನೂ ಅಲ್ಲದ ಗುಂಪಿನ ಪ್ರತಿನಿಧಿ ಇಸ್ಮಾಈಲ್ ಹನಿಯ್ಯ ಎಂಬವರ  ಮುಂದೆ ತಲೆ ತಗ್ಗಿಸಿದ್ದು ಏಕೆ? ನೆತನ್ಯಾಹು ಸರಕಾರದ ಪಾಲುದಾರ ಪಕ್ಷವಾಗಿರುವ  ಝಿಯೋನಿಸ್ಟ್ ಪಾರ್ಟಿ ಎಂಬ ತೀವ್ರ ಬಲಪಂಥೀಯ ಪಕ್ಷದ ವಿರೋಧದ ನಡುವೆಯೂ ಅವರು ಕದನ ವಿರಾಮಕ್ಕೆ ಒಪ್ಪಿಕೊಂಡದ್ದು ಏಕೆ? ಅವರಿಗೆ ಅಂಥದ್ದೊಂದು ಅನಿವಾರ್ಯತೆ ಏನಿತ್ತು? ನಿಜವಾಗಿ,

ಅಕ್ಟೋಬರ್ 7ರ ದಾಳಿಯ ಬಳಿಕ ಹಮಾಸ್ ಕಟಕಟೆಯಲ್ಲಿ ನಿಂತದ್ದು ನಿಜ. ಜಾಗತಿಕವಾಗಿ ಹಮಾಸ್ ಮೇಲಿದ್ದ ಸಹಾನುಭೂತಿಗೆ ಈ  ದಾಳಿ ಪೆಟ್ಟು ನೀಡಿದ್ದೂ ನಿಜ. ಈ ಉದ್ವೇಗದ ಸಂದರ್ಭವನ್ನೇ ನೆತನ್ಯಾಹು ಬಳಸಿಕೊಂಡರು. ಹಮಾಸನ್ನು ಟೆರರಿಸ್ಟ್ ಎಂದರು.  ಟೆರರಿಸ್ಟ್ ಗಳ  ಜೊತೆ ಮಾತುಕತೆ ಸಾಧ್ಯವೇ ಇಲ್ಲ ಎಂದು ಅಬ್ಬರಿಸಿದರು. ಅಮೇರಿಕ, ಬ್ರಿಟನ್, ಜರ್ಮನಿ, ಕೆನಡ, ಭಾರತ ಇತ್ಯಾದಿ  ರಾಷ್ಟçಗಳ ಬೆಂಬಲದಿಂದ ಅವರು ಪುಳಕಿತರಾದರು. ಆದರೆ ‘ಇಂಥ ಸನ್ನಿವೇಶದಲ್ಲೂ ಹಮಾಸನ್ನು ಟೆರರಿಸ್ಟ್ ಎನ್ನಲಾರೆ’ ಎಂದು  ಘೋಷಿಸಿದ್ದು ಬಿಬಿಸಿ ಮಾಧ್ಯಮ. ಬ್ರಿಟನ್ನಿನ ರಕ್ಷಣಾ ಕಾರ್ಯದರ್ಶಿ ಗ್ರಾಂಟ್ ಶಾಪ್ಸ್, ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲಾವೆಲ್ಲಿ ಮತ್ತು  ಸಂಸ್ಕೃತಿ ಕಾರ್ಯದರ್ಶಿ ಲೇಸಿ ಫ್ರೇಝರ್ ಅವರು ಬಿಬಿಸಿಯ ನಿಲುವನ್ನು ತೀವ್ರವಾಗಿ ಖಂಡಿಸಿದ ಹೊರತಾಗಿಯೂ ಮತ್ತು ಬಿಬಿಸಿ ಈ  ಬಗ್ಗೆ ನಿಲುವು ಬದಲಿಸಿಕೊಳ್ಳಬೇಕೆಂದು ಒತ್ತಾಯಿಸಿದ ಬಳಿಕವೂ ಬಿಬಿಸಿ ತನ್ನ ನಿಲುವಿಗೇ ಅಂಟಿಕೊಂಡಿತು. ಕದನ ವಿರಾಮದ ಈ  ಹಂತದಲ್ಲಿ ನಿಂತು ಪರಿಶೀಲಿಸಿದರೆ,

ಈ ಇಡೀ ಘರ್ಷಣೆಯಿಂದ ಇಸ್ರೇಲ್ ಕಳಕೊಂಡದ್ದೇ  ಹೆಚ್ಚು ಎಂದೇ ಅನಿಸುತ್ತದೆ. ಹಮಾಸ್‌ನ ಜೊತೆ ಮಾತುಕತೆಗೆ ಮುಂದಾಗುವ  ಮೂಲಕ ಅದು ಟೆರರಿಸ್ಟ್ ಗುಂಪು ಅಲ್ಲ ಮತ್ತು ಅದು ಗಾಝಾದ ಸಂಘಟನೆ ಎಂಬುದನ್ನು ಬಹಿರಂಗವಾಗಿ ಅದು ಒಪ್ಪಿಕೊಂಡಿದೆ. ಇನ್ನೊಂದು  ಮಹತ್ವಪೂರ್ಣ ಬೆಳವಣಿಗೆ ಏನೆಂದರೆ, ದ್ವಿರಾಷ್ಟ್ರ  ಸಿದ್ಧಾಂತವೇ ಪರಿಹಾರ ಎಂಬ ಕೂಗು ಜಾಗತಿಕವಾಗಿಯೇ ಕೇಳಿ ಬಂದಿದೆ.  ಅಕ್ಟೋಬರ್ 7 ಮೊದಲು ಯಾವ ಕೂಗು ಅತೀ ಸಣ್ಣ ಪ್ರಮಾಣದಲ್ಲೂ ಕೇಳುತ್ತಿರಲಿಲ್ಲವೋ ಅದೇ ಕೂಗು ಇವತ್ತು ಅತೀ ತಾರಕ ಧ್ವನಿಯಲ್ಲಿ ಕೇಳಿಸಲಾರಂಭಿಸಿದೆ. ಚೀನಾದಿಂದ ಹಿಡಿದು ಭಾರತ, ಆಸ್ಟ್ರೆಲಿಯಾ, ದಕ್ಷಿಣ ಆಫ್ರಿಕಾ, ಅಮೇರಿಕಾ, ಸ್ವೀಡನ್, ಸಿಂಗಾಪುರ  ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳು ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ನಿರ್ಮಾಣದ ಬಗ್ಗೆ ಬಲವಾಗಿ ಧ್ವನಿಯೆತ್ತಿವೆ. ಭಾರತ, ಚೀನಾ, ರ ಶ್ಯಾ, ಇಥಿಯೋಪಿಯಾ, ದಕ್ಷಿಣ ಆಫ್ರಿಕಾ, ಅರ್ಜಂಟೀನಾ, ಈಜಿಪ್ಟ್, ಇರಾನ್, ಸೌದಿ ಅರೇಬಿಯಾ ಮತ್ತು ಯುಎಇಗಳನ್ನೊಳಗೊಂಡ  ಬಿಕ್ಸ್ ಒಕ್ಕೂಟ ರಾಷ್ಟ್ರಗಳ ಸಭೆಯು ದ್ವಿರಾಷ್ಟ್ರ ಪರಿಹಾರವನ್ನು ಬಲವಾಗಿಯೇ ಮಂಡಿಸಿವೆ. ಬ್ರಿಕ್ಸ್ ನ  ಈಗಿನ ಅಧ್ಯಕ್ಷ ದಕ್ಷಿಣ ಆಫ್ರಿಕಾದ  ಸಿರಿಲ್ ರಾಂಪೋಸ್ ಅವರಂತೂ ಇಸ್ರೇಲ್ ಬಾಂಬ್ ಹಾಕುವುದನ್ನು ನಿಲ್ಲಿಸುವವರೆಗೆ ತನ್ನಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯನ್ನೇ  ಮುಚ್ಚಿಸಿದರು ಮತ್ತು ರಾಜತಾಂತ್ರಿಕ ಸಂಬಂಧವನ್ನೇ ಸ್ಥಗಿತಗೊಳಿಸಿದರು. ಅಕ್ಟೋಬರ್ 7ರ ಮೊದಲು ಇಸ್ರೇಲ್‌ನ ಮೇಲೆ ಈ ಬಗೆಯ  ಒತ್ತಡ ಇದ್ದಿರಲಿಲ್ಲ. ಸ್ವತಂತ್ರ ಫೆಲೆಸ್ತೀನ್ ಸ್ಥಾಪನೆಯನ್ನು ವಿರೋಧಿಸುತ್ತಲೇ ಬಂದಿರುವ ಮತ್ತು ಈ ಕುರಿತಂತೆ ಯಾವುದೇ ರಾಷ್ಟ್ರ  ನಾಯಕರು ಹೇಳಿಕೆ ನೀಡದಂತೆ ಮತ್ತು ಮಾಧ್ಯಮಗಳಲ್ಲಿ ಚರ್ಚೆ ನಡೆಯದಂತೆ ನೋಡಿಕೊಳ್ಳುತ್ತಾ ಬಂದಿದ್ದ ಇಸ್ರೇಲ್, ಇತ್ತೀಚಿನ ದ ಶಕಗಳಲ್ಲಿ ಇದೇ ಮೊದಲು ಬಾರಿ ಕಟಕಟೆಯಲ್ಲಿ ನಿಂತಿತು. ಅಕ್ಟೋಬರ್ 7ರಂದು ಫೆಲೆಸ್ತೀನ್‌ನ ಮೇಲೆ ವೈಮಾನಿಕ ದಾಳಿ ನಡೆಸಲು  ಮುಂದಾಗುವಾಗ ನೆತನ್ಯಾಹು ಇಂಥದ್ದೊಂದು  ಬೆಳವಣಿಗೆಯನ್ನು ಊಹಿಸಿರುವ ಸಾಧ್ಯತೆಯೇ ಇಲ್ಲ.
 
ಒಂದುರೀತಿಯಲ್ಲಿ,

ಈ ಘರ್ಷಣೆಯು ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಎಂಬ ಫೆಲೆಸ್ತೀನಿಯರ ಬಹುಕಾಲದ ಕನಸು ನನಸಾಗುವ ದಿಶೆಯಲ್ಲಿ ಮಹತ್ವದ  ಮೈಲುಗಲ್ಲಾಗುವ ಸಾಧ್ಯತೆ ಕಾಣಿಸುತ್ತದೆ. ಬಹುಶಃ ಈಗಿನ ಅಲ್ಪಕಾಲೀನ ಕದನ ವಿರಾಮವೇ ಶಾಶ್ವತ ಕದನ ವಿರಾಮವಾಗಿ ಮಾರ್ಪಡಲೂ  ಬಹುದು ಅಥವಾ ಮತ್ತೆ ಘರ್ಷಣೆ ಮುಂದುವರಿಯಲೂ ಬಹುದು. ಆದರೆ, ಈಗಾಗಲೇ ಈ ಘರ್ಷಣೆಯಿಂದ ಇಸ್ರೇಲ್ ಸಾಕಷ್ಟು  ಕಳಕೊಂಡಿದೆ. ಒಂದುವೇಳೆ, ಘರ್ಷಣೆ ಇನ್ನಷ್ಟು ಮುಂದುವರಿದರೆ ಇದರಿಂದ ಇಸ್ರೇಲ್ ಮತ್ತಷ್ಟು ತೊಂದರೆಗೆ ಸಿಲುಕಲಿದೆ. ಅರಬ್  ರಾಷ್ಟ್ರಗಳು ಇಸ್ರೇಲ್ ವಿರುದ್ಧ ಒಗ್ಗಟ್ಟು ಪ್ರದ ರ್ಶಿಸಬೇಕಾದ ಮತ್ತು ಕಟು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆಗೆ  ಸಿಲುಕಲಿದೆ. ಇದನ್ನು ಅಮೇರಿಕ ಬಯಸಲಾರದು. ಇಸ್ರೇಲ್‌ಗೂ ಇದು ಬೇಕಾಗಿಲ್ಲ. ಇದರಾಚೆಗೆ, ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯತ್ತ  ಜಾಗತಿಕ ರಾಷ್ಟ್ರಗಳ ಒಲವು ಮತ್ತು ಒತ್ತಡ ಹೆಚ್ಚಾಗಬಹುದು. ಇದಕ್ಕೆ ಅಮೇರಿಕ ಪದೇ ಪದೇ ತಡೆ ಒಡ್ಡುತ್ತಿರುವುದರಿಂದ ಚೀನಾ  ನೇತೃತ್ವದಲ್ಲಿ ಅರಬ್ ರಾಷ್ಟ್ರಗಳು ಅಮೇರಿಕಕ್ಕೆ ಪರ್ಯಾಯ ಶಕ್ತಿಯಾಗಿ ಬೆಳೆದು ನಿಲ್ಲಬಹುದು. ಹೀಗಾದರೆ, ಒಂದೋ ಅಮೇರಿಕ ಮತ್ತು  ಅದರ ಬೆಂಬಲಿಗರು ಮೆತ್ತಗಾಗಬೇಕಾಗುತ್ತದೆ ಅಥವಾ ಇನ್ನೊಂದು ಮಹಾ ಘರ್ಷಣೆಗೆ ವೇದಿಕೆ ಸಿದ್ಧವಾಗ ಬೇಕಾಗುತ್ತದೆ. ಇವು ಏನೇ  ಇದ್ದರೂ,

ಅಕ್ಟೋಬರ್ 7ರ ಬಳಿಕದ ಬೆಳವಣಿಗೆಯನ್ನು ಪರಿಶೀಲಿಸಿದರೆ, ಹಮಾಸ್ ಮೇಲುಗೈ ಪಡೆದಂತೆ ಮತ್ತು ಇಸ್ರೇಲ್ ಮಂಡಿಯೂರಿದಂತೆ  ಕಾಣಿಸುತ್ತದೆ. ಇದು ನಿಜಕ್ಕೂ ಅಭೂತಪೂರ್ವ ಬೆಳವಣಿಗೆ. ಇರುವೆಯೊಂದು ಆನೆಯನ್ನು ಮಣಿಸುತ್ತದಲ್ಲ , ಅಂಥ  ಕತೆ.