2. ಹಮಾಸನ್ನು ಸಂಪೂರ್ಣವಾಗಿ ನಾಶಪಡಿಸದೇ ಈ ಯುದ್ಧದಿಂದ ವಿರಮಿಸಲಾರೆ.
3. ಹಮಾಸ್ ಹಿಡಿದಿಟ್ಟುಕೊಂಡಿರುವ ಒತ್ತೆಯಾಳುಗಳನ್ನು ಸೈನಿಕ ಕಾರ್ಯಾಚರಣೆಯ ಮೂಲಕವೇ ಬಿಡುಗಡೆಗೊಳಿಸುತ್ತೇವೆ.
4. ಗಾಝಾವನ್ನು ಪೂರ್ಣ ಪ್ರಮಾಣದಲ್ಲಿ ವಶಪಡಿಸುತ್ತೇವೆ, ಹಮಾಸ್‌ನಿಂದ ಮುಕ್ತಗೊಳಿಸುತ್ತೇವೆ ಮತ್ತು ಗಾಝಾದ ಸುರಕ್ಷಿತತೆಯನ್ನು ನಮ್ಮ ಸೈನಿಕರೇ ನೋಡಿಕೊಳ್ಳುತ್ತಾರೆ.
5. ಎಷ್ಟೇ ಒತ್ತಡ ಎದುರಾದರೂ ಕದನ ವಿರಾಮ ಸಾಧ್ಯವೇ ಇಲ್ಲ.
6. ಕದನ ವಿರಾಮ ಎಂದರೆ ಪರಾಜಯ ಎಂದು ಅರ್ಥ.
ಇವೆಲ್ಲವನ್ನೂ ಹೇಳಿದ್ದು ಒಬ್ಬನೇ ವ್ಯಕ್ತಿ- ಬೆಂಜಮಿನ್ ನೆತನ್ಯಾಹು. ಆದರೆ ಇದೇ ಬೆಂಜಮಿನ್ ನೆತನ್ಯಾಹು ಈ ಎಲ್ಲ ಘೋಷಣೆಗಳಿಗೂ ತದ್ವಿರುದ್ಧವಾಗಿ ನಡಕೊಂಡಿದ್ದಾರೆ. ಇದೇ ನೆತನ್ಯಾಹು ಸರ್ಕಾರ ಹಮಾಸ್‌ನ ಜೊತೆ ಮಾತುಕತೆ ನಡೆಸಿದೆ. ಮಾತ್ರವಲ್ಲ, ಇಸ್ರೇಲ್‌ಗೆ ಅನನುಕೂಲವಾಗುವ ರೀತಿಯ ಕದನ ವಿರಾಮಕ್ಕೂ ಒಪ್ಪಿಕೊಂಡಿದೆ. ಈ ಕದನ ವಿರಾಮದ ಷರತ್ತನ್ನು ಪರಿಶೀಲಿಸಿದರೆ ಇಸ್ರೇಲ್ ವಿರುದ್ಧದ ಹೋರಾಟದಲ್ಲಿ ಹಮಾಸ್ ಮೇಲುಗೈ ಪಡೆದಿದೆ ಎಂದೇ ಅನಿಸುತ್ತದೆ. 4 ದಿನಗಳ ಕದನ ವಿರಾಮ ಒಪ್ಪಂದದ ಪ್ರಕಾರ, ಹಮಾಸ್ 50 ಮಂದಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಬೇಕು. ಇದಕ್ಕೆ ಪ್ರತಿಯಾಗಿ ಇಸ್ರೇಲ್ 150 ಮಂದಿ ಫೆಲೆಸ್ತೀನಿ ಕೈದಿಗಳನ್ನು ಬಿಡುಗಡೆಗೊಳಿಸಬೇಕು.
ಅಂದಹಾಗೆ,
ಹಮಾಸ್‌ನ 50 ಮಂದಿಗೆ ಇಸ್ರೇಲ್ 150 ಮಂದಿ ಕೈದಿಗಳನ್ನು ಬಿಡುಗಡೆಗೊಳಿಸಲು ಯಾಕೆ ಒಪ್ಪಿಕೊಂಡಿತು ಎಂಬುದು ಮೊದಲ ಪ್ರಶ್ನೆ. ಹಮಾಸ್‌ನ ಹಿಡಿತದಲ್ಲಿ 240ಕ್ಕಿಂತಲೂ ಅಧಿಕ ಒತ್ತೆಯಾಳುಗಳಿದ್ದಾರೆ ಎಂದು ಇಸ್ರೇಲ್ ಈ ಹಿಂದೆ ಘೋಷಿಸಿತ್ತು. ಒಂದುವೇಳೆ, ಈ ಘರ್ಷಣೆಯಲ್ಲಿ ಇಸ್ರೇಲ್ ಮೇಲುಗೈ ಪಡೆದಿದ್ದೇ ಆಗಿದ್ದರೆ ಮತ್ತು ಹಮಾಸ್‌ನ ಜಂಘಾಬಲವನ್ನೇ ಅದು ಉಡುಗಿಸಿದ್ದರೆ ಕದನ ವಿರಾಮ ಇಲ್ಲದೆಯೇ ಅದು ಒತ್ತೆಯಾಳುಗಳನ್ನು ಬಿಡಿಸಿಕೊಳ್ಳಬೇಕಿತ್ತು. ಅಥವಾ ಹಮಾಸ್‌ನ 50 ಮಂದಿಯ ಬದಲಿಗೆ ತನ್ನ ವಶದಲ್ಲಿರುವ 50 ಮಂದಿಯನ್ನು ಮಾತ್ರ ಬಿಡುಗಡೆಗೊಳಿಸಬೇಕಿತ್ತು. ಆದರೆ ಇವಾವುವೂ ಆಗಿಲ್ಲ. ಬದಲಾಗಿ ಹಮಾಸ್ ಬಿಡುಗಡೆಗೊಳಿಸುವ ಸಂಖ್ಯೆಯ ಮೂರು ಪಟ್ಟು ಕೈದಿಗಳನ್ನು ಬಿಡುಗಡೆಗೊಳಿಸಲು ಒಪ್ಪಿಕೊಳ್ಳುವ ಮೂಲಕ ತಾನು ಅಸಹಾಯಕ ಎಂದು ನೆತನ್ಯಾಹು ಘೋಷಿಸಿದ್ದಾರೆ. ಕತರ್ ಮಧ್ಯಸ್ಥಿಕೆಯಲ್ಲಿ ನಡೆದ ಈ ಒಪ್ಪಂದದಲ್ಲಿ ಇನ್ನೂ ಒಂದು ಜಾಣ್ಮೆಯನ್ನು ಹಮಾಸ್ ಪ್ರದರ್ಶಿಸಿದೆ. ಇಸ್ರೇಲ್ ಬಿಡುಗಡೆಗೊಳಿಸಬೇಕಾದ 150 ಕೈದಿಗಳ ಪಟ್ಟಿಯನ್ನು ಅದು ಬಹಳ ಬುದ್ಧಿವಂತಿಕೆಯಿಂದ ತಯಾರಿಸಿದೆ. ಇಸ್ರೇಲ್ ಜೈಲಿನಲ್ಲಿ 19 ವರ್ಷಕ್ಕಿಂತ ಕೆಳಗಿನ ಎಷ್ಟು ಮಂದಿ ಫೆಲೆಸ್ತೀನಿ ಬಾಲಕರಿದ್ದಾರೆ ಎಂಬುದನ್ನು ಜಗತ್ತಿಗೆ ಗೊತ್ತು ಮಾಡುವ ಸಂದರ್ಭವಾಗಿ ಈ ಅವಕಾಶವನ್ನು ಅದು ಬಳಸಿಕೊಂಡಿದೆ. ಈ 150 ಮಂದಿ ಕೈದಿಗಳಲ್ಲಿ ಹೆಚ್ಚಿನವರು ತಾಯಿ ಮತ್ತು ಅವರ ಹದಿಹರೆಯದ ಮಕ್ಕಳೇ ಇದ್ದಾರೆ. ಫೆಲೆಸ್ತೀನ್‌ನಿಂದ ತಾಯಂದಿರು ಮತ್ತು ಅವರ ಹದಿಹರೆಯದ ಮಕ್ಕಳನ್ನು ಇಸ್ರೇಲ್ ಕೊಂಡೊಯ್ದು ಜೈಲಲ್ಲಿಡುತ್ತಿದೆ ಎಂಬುದನ್ನು ಜಗತ್ತಿಗೆ ಸಾರಲು ಈ ಸಂದರ್ಭವನ್ನು ಹಮಾಸ್ ಬಳಸಿಕೊಳ್ಳಲು ಯಶಸ್ವಿಯಾಗಿದೆ. ಒಂದುಕಡೆ,
ಅಕ್ಟೋಬರ್ 7ರ ಬಳಿಕ ಇಸ್ರೇಲ್ ನಡೆಸಿದ ಬಾಂಬ್ ದಾಳಿಗೆ 6 ಸಾವಿರಕ್ಕಿಂತಲೂ ಅಧಿಕ ಫೆಲೆಸ್ತೀನಿ ಮಕ್ಕಳು ಹತ್ಯೆಗೀಡಾಗಿದ್ದಾರೆ. ಇ ನ್ನೊಂದು ಕಡೆ, ಬಾಲಕರನ್ನು ಮತ್ತು ಅವರ ತಾಯಂದಿರನ್ನು ಇದೇ ಇಸ್ರೇಲ್ ಬಂಧಿಸಿ ಜೈಲಲ್ಲಿಡುತ್ತಿದೆ.. ಎಂಬ ಸಂದೇಶವನ್ನು ಜಗತ್ತಿಗೆ ಹಮಾಸ್ ಅತ್ಯಂತ ಜಾಣ್ಮೆಯಿಂದ ರವಾನಿಸುವ ಪ್ರಯತ್ನ ನಡೆಸಿದೆ. ಅಂದಹಾಗೆ,
ಇಸ್ರೇಲ್ ಮೇಲೆ ಅಕ್ಟೋಬರ್ 7ರಂದು ಹಮಾಸ್ ದಾಳಿ ನಡೆಸಿದ ಬಳಿಕ ನಡೆದ ಚರ್ಚೆಗಳಲ್ಲಿ ಎರಡು ಬಹುಮುಖ್ಯ ಅಂಶಗಳಿದ್ದುವು-
1. ಪ್ರಬಲ ಆರ್ಥಿಕ ಬಲ, ಸೇನಾ ಬಲ ಮತ್ತು ಗುಪ್ತಚರ ಬಲವನ್ನು ಹೊಂದಿರುವ ಇಸ್ರೇಲ್‌ನ ಮುಂದೆ ಹಮಾಸ್ ನುಚ್ಚುನೂರಾಗಲಿದೆ.
2. ಭಯೋತ್ಪಾದಕ ಗುಂಪು ಎಂಬ ಹಣೆ ಪಟ್ಟಿ ಹಚ್ಚಿ ಹಮಾಸನ್ನು ಜಗತ್ತು ಮೂಲೆಗೊತ್ತಲಿದೆ ಮತ್ತು ಇಸ್ರೇಲ್‌ಗೆ ಜಾಗತಿಕ ರಾಷ್ಟ್ರಗಳ ಮಾನ್ಯತೆ ಇನ್ನೂ ಹೆಚ್ಚಾಗಲಿದೆ.
ಆದರೆ,
46 ದಿನಗಳ ಘರ್ಷಣೆಗಳ ಬಳಿಕದ ಪರಿಸ್ಥಿತಿ ಹೇಗಿದೆಯೆಂದರೆ, ಈ ಎರಡೂ ಲೆಕ್ಕಾಚಾರಗಳೂ ತಲೆಕೆಳಗಾಗಿವೆ ಮತ್ತು ಇಸ್ರೇಲ್ ಅಕ್ಟೋಬರ್ 7ಕ್ಕಿಂತ ಮೊದಲಿನ ಸ್ಥಿತಿಯಿಂದಲೂ ಕೆಳಜಾರಿ ಪ್ರಪಾತಕ್ಕೆ ಬಿದ್ದಿದೆ. ಫೆಲೆಸ್ತೀನ್‌ನ ಮೇಲೆ ಬಾಂಬ್ ಸುರಿದು 14 ಸಾವಿರ ಮಂದಿಯನ್ನು ಹತ್ಯೆಗೈಯಲು ಇಸ್ರೇಲ್ ಯಶಸ್ವಿಯಾಗಿದ್ದರೂ ಹಮಾಸ್‌ಗೆ ಆಘಾತ ನೀಡಲು ಅದಕ್ಕೆ ಇನ್ನೂ ಸಾಧ್ಯವಾಗಿಲ್ಲ. ಬರೇ 20 ನಿಮಿಷಗಳಲ್ಲಿ 5 ಸಾವಿರ ರಾಕೆಟ್‌ಗಳನ್ನು ಇಸ್ರೇಲ್ ನೊಳಗೆ ಹಾರಿಸಿದ ಹಮಾಸ್‌ನ ಆ ರಾಕೆಟ್ ಲಾಂಚರ್ ವ್ಯವಸ್ಥೆಯನ್ನು ಬೇಧಿಸಲು ಅದು ಎಳ್ಳಷ್ಟೂ ಶಕ್ತವಾಗಿಲ್ಲ. ಹಮಾಸ್‌ನ ಜಾಲ ಹೇಗಿದೆ, ಎಲ್ಲೆಲ್ಲಿದೆ ಮತ್ತು ಅದರ ಕಾರ್ಯಾಚರಣೆಯ ಸ್ವರೂಪ ಏನು ಎಂಬುದನ್ನೆಲ್ಲ ಪತ್ತೆ ಹಚ್ಚುವಲ್ಲಿ ಇಸ್ರೇಲ್ ಘೋರ ವೈಫಲ್ಯವನ್ನು ಕಂಡಿದೆ. ಮೊಬೈಲ್‌ನೊಳಗೆ ನುಸುಳಿ ಮಾಹಿತಿಯನ್ನು ಕದಿಯಬಲ್ಲ ಅತ್ಯಾಧುನಿಕ ಸ್ಪೈವೇರ್ ತಂತ್ರಜ್ಞಾನದ ಹೊರತಾಗಿಯೂ ಹಮಾಸ್‌ನ ಸೈನಿಕ ತಂತ್ರಜ್ಞಾನ, ಕಾರ್ಯಾಚರಣೆಯ ವಿಧಾನ ಮತ್ತು ರಾಕೆಟ್ ಲಾಂಚರ್‌ಗಳ ಕಾರ್ಯವಿಧಾನವನ್ನು ಅರಿತುಕೊಳ್ಳು ವಲ್ಲಿ ಇಸ್ರೇಲ್ ವಿಫಲವಾಗಿರುವುದು ಅದರ ಸಾಮರ್ಥ್ಯದ ಮಿತಿಯನ್ನು ಹೇಳುತ್ತದೆ. ಒಂದೋ,
ಹೊರಗೆ ಬಿಂಬಿಸಿಕೊಂಡಷ್ಟು ಇಸ್ರೇಲ್ ಬಲಿಷ್ಠವಾಗಿಲ್ಲ ಅಥವಾ ಬುದ್ಧಿವಂತಿಕೆಯಲ್ಲಿ ಇಸ್ರೇಲನ್ನು ಮೀರಿಸುವ ಸಮರ್ಥರು ಹಮಾಸ್‌ನಲ್ಲಿದ್ದಾರೆ ಎಂದೇ ಹೇಳಬೇಕಾಗುತ್ತದೆ. ಹಮಾಸ್ ಗುಂಪು ತನ್ನನ್ನು ಸುರಂಗದಲ್ಲಿ ಬಚ್ಚಿಟ್ಟುಕೊಳ್ಳುತ್ತದೆ ಎಂದೇ ಈವರೆಗೆ ಇಸ್ರೇಲ್ ಹೇಳಿಕೊಳ್ಳುತ್ತಾ ಬಂದಿತ್ತು. ಜಗತ್ತು ಕೂಡ ಅದನ್ನೇ ನಂಬಿತ್ತು. ಇದು ಭಾಗಶಃ ಸತ್ಯ ಕೂಡ. ಆದರೆ, ಹಮಾಸ್‌ನ ಬಲ ಸುರಂಗವನ್ನೇ ಅವಲಂಬಿಸಿಕೊಂಡಿಲ್ಲ ಎಂಬುದನ್ನು ಈ ಘರ್ಷಣೆ ಜಗಜ್ಜಾಹೀರುಗೊಳಿಸಿದೆ. 46 ದಿನಗಳ ಬಳಿಕವೂ ಅದು ಹಮಾಸ್‌ಗೆ ಸೇರಿದ ಪ್ರಮುಖವಾದ ಏನನ್ನೂ ವಶಪಡಿಸಿಕೊಂಡಿಲ್ಲ. ನೆಲ, ಜಲ ಮತ್ತು ಆಕಾಶ ಮಾರ್ಗಗಳಿಂದ ಏಕಕಾಲದಲ್ಲಿ ಆಕ್ರಮಣ ಮಾಡಬಲ್ಲ ಸಾಮರ್ಥ್ಯ ಇದ್ದೂ ಮತ್ತು ಇವಾವುವೂ ಇಲ್ಲದ ಹಮಾಸ್‌ನ ವಿರುದ್ಧದ ಹೋರಾಟದಲ್ಲಿ ಇಸ್ರೇಲ್ ಶರಣಾಗತ ಸ್ಥಿತಿಗೆ ತಲುಪಿದ್ದು ಏಕೆ? ಮೊಸಾದ್ ಎಂಬ ಪ್ರಬಲ ಗುಪ್ತಚರ ವ್ಯವಸ್ಥೆ ಇದ್ದೂ ಹಮಾಸ್ ಚಟುವಟಿಕೆಯ ಮೇಲೆ ಕಣ್ಣಿಡಲು ಅದು ವಿಫಲವಾದದ್ದು ಏಕೆ? ‘ಯುದ್ಧ ಆರಂಭಿಸಿದ್ದು ನೀವು, ಕೊನೆಗೊಳಿಸುವುದು ನಾವು...’ ಎಂದು ಅಕ್ಟೋಬರ್ 7ರಂದು ಘೋಷಿಸಿದ್ದ ನೆತನ್ಯಾಹು ನವೆಂಬರ್ 25ಕ್ಕೆ ತಲುಪುವಾಗ ಶರಣಾಗತ ಭಾವದಲ್ಲಿ ಕಾಣಿಸಿಕೊಂಡದ್ದು ಯಾಕೆ? ಬಲಿಷ್ಠ ಎಂದು ಗುರುತಿಸಿಕೊಂಡಿರುವ ರಾಷ್ಟ್ರವೊಂದರ ಪ್ರಧಾನಿಯು ಗಾಝಾ ಎಂಬ ರಾಷ್ಟ್ರವೇ ಅಲ್ಲದ ಮತ್ತು ಹಮಾಸ್ ಎಂಬ ಏನೂ ಅಲ್ಲದ ಗುಂಪಿನ ಪ್ರತಿನಿಧಿ ಇಸ್ಮಾಈಲ್ ಹನಿಯ್ಯ ಎಂಬವರ ಮುಂದೆ ತಲೆ ತಗ್ಗಿಸಿದ್ದು ಏಕೆ? ನೆತನ್ಯಾಹು ಸರಕಾರದ ಪಾಲುದಾರ ಪಕ್ಷವಾಗಿರುವ ಝಿಯೋನಿಸ್ಟ್ ಪಾರ್ಟಿ ಎಂಬ ತೀವ್ರ ಬಲಪಂಥೀಯ ಪಕ್ಷದ ವಿರೋಧದ ನಡುವೆಯೂ ಅವರು ಕದನ ವಿರಾಮಕ್ಕೆ ಒಪ್ಪಿಕೊಂಡದ್ದು ಏಕೆ? ಅವರಿಗೆ ಅಂಥದ್ದೊಂದು ಅನಿವಾರ್ಯತೆ ಏನಿತ್ತು? ನಿಜವಾಗಿ,
ಅಕ್ಟೋಬರ್ 7ರ ದಾಳಿಯ ಬಳಿಕ ಹಮಾಸ್ ಕಟಕಟೆಯಲ್ಲಿ ನಿಂತದ್ದು ನಿಜ. ಜಾಗತಿಕವಾಗಿ ಹಮಾಸ್ ಮೇಲಿದ್ದ ಸಹಾನುಭೂತಿಗೆ ಈ ದಾಳಿ ಪೆಟ್ಟು ನೀಡಿದ್ದೂ ನಿಜ. ಈ ಉದ್ವೇಗದ ಸಂದರ್ಭವನ್ನೇ ನೆತನ್ಯಾಹು ಬಳಸಿಕೊಂಡರು. ಹಮಾಸನ್ನು ಟೆರರಿಸ್ಟ್ ಎಂದರು. ಟೆರರಿಸ್ಟ್ ಗಳ ಜೊತೆ ಮಾತುಕತೆ ಸಾಧ್ಯವೇ ಇಲ್ಲ ಎಂದು ಅಬ್ಬರಿಸಿದರು. ಅಮೇರಿಕ, ಬ್ರಿಟನ್, ಜರ್ಮನಿ, ಕೆನಡ, ಭಾರತ ಇತ್ಯಾದಿ ರಾಷ್ಟçಗಳ ಬೆಂಬಲದಿಂದ ಅವರು ಪುಳಕಿತರಾದರು. ಆದರೆ ‘ಇಂಥ ಸನ್ನಿವೇಶದಲ್ಲೂ ಹಮಾಸನ್ನು ಟೆರರಿಸ್ಟ್ ಎನ್ನಲಾರೆ’ ಎಂದು ಘೋಷಿಸಿದ್ದು ಬಿಬಿಸಿ ಮಾಧ್ಯಮ. ಬ್ರಿಟನ್ನಿನ ರಕ್ಷಣಾ ಕಾರ್ಯದರ್ಶಿ ಗ್ರಾಂಟ್ ಶಾಪ್ಸ್, ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲಾವೆಲ್ಲಿ ಮತ್ತು ಸಂಸ್ಕೃತಿ ಕಾರ್ಯದರ್ಶಿ ಲೇಸಿ ಫ್ರೇಝರ್ ಅವರು ಬಿಬಿಸಿಯ ನಿಲುವನ್ನು ತೀವ್ರವಾಗಿ ಖಂಡಿಸಿದ ಹೊರತಾಗಿಯೂ ಮತ್ತು ಬಿಬಿಸಿ ಈ ಬಗ್ಗೆ ನಿಲುವು ಬದಲಿಸಿಕೊಳ್ಳಬೇಕೆಂದು ಒತ್ತಾಯಿಸಿದ ಬಳಿಕವೂ ಬಿಬಿಸಿ ತನ್ನ ನಿಲುವಿಗೇ ಅಂಟಿಕೊಂಡಿತು. ಕದನ ವಿರಾಮದ ಈ ಹಂತದಲ್ಲಿ ನಿಂತು ಪರಿಶೀಲಿಸಿದರೆ,
ಈ ಇಡೀ ಘರ್ಷಣೆಯಿಂದ ಇಸ್ರೇಲ್ ಕಳಕೊಂಡದ್ದೇ ಹೆಚ್ಚು ಎಂದೇ ಅನಿಸುತ್ತದೆ. ಹಮಾಸ್‌ನ ಜೊತೆ ಮಾತುಕತೆಗೆ ಮುಂದಾಗುವ ಮೂಲಕ ಅದು ಟೆರರಿಸ್ಟ್ ಗುಂಪು ಅಲ್ಲ ಮತ್ತು ಅದು ಗಾಝಾದ ಸಂಘಟನೆ ಎಂಬುದನ್ನು ಬಹಿರಂಗವಾಗಿ ಅದು ಒಪ್ಪಿಕೊಂಡಿದೆ. ಇನ್ನೊಂದು ಮಹತ್ವಪೂರ್ಣ ಬೆಳವಣಿಗೆ ಏನೆಂದರೆ, ದ್ವಿರಾಷ್ಟ್ರ ಸಿದ್ಧಾಂತವೇ ಪರಿಹಾರ ಎಂಬ ಕೂಗು ಜಾಗತಿಕವಾಗಿಯೇ ಕೇಳಿ ಬಂದಿದೆ. ಅಕ್ಟೋಬರ್ 7 ಮೊದಲು ಯಾವ ಕೂಗು ಅತೀ ಸಣ್ಣ ಪ್ರಮಾಣದಲ್ಲೂ ಕೇಳುತ್ತಿರಲಿಲ್ಲವೋ ಅದೇ ಕೂಗು ಇವತ್ತು ಅತೀ ತಾರಕ ಧ್ವನಿಯಲ್ಲಿ ಕೇಳಿಸಲಾರಂಭಿಸಿದೆ. ಚೀನಾದಿಂದ ಹಿಡಿದು ಭಾರತ, ಆಸ್ಟ್ರೆಲಿಯಾ, ದಕ್ಷಿಣ ಆಫ್ರಿಕಾ, ಅಮೇರಿಕಾ, ಸ್ವೀಡನ್, ಸಿಂಗಾಪುರ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳು ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ನಿರ್ಮಾಣದ ಬಗ್ಗೆ ಬಲವಾಗಿ ಧ್ವನಿಯೆತ್ತಿವೆ. ಭಾರತ, ಚೀನಾ, ರ ಶ್ಯಾ, ಇಥಿಯೋಪಿಯಾ, ದಕ್ಷಿಣ ಆಫ್ರಿಕಾ, ಅರ್ಜಂಟೀನಾ, ಈಜಿಪ್ಟ್, ಇರಾನ್, ಸೌದಿ ಅರೇಬಿಯಾ ಮತ್ತು ಯುಎಇಗಳನ್ನೊಳಗೊಂಡ ಬಿಕ್ಸ್ ಒಕ್ಕೂಟ ರಾಷ್ಟ್ರಗಳ ಸಭೆಯು ದ್ವಿರಾಷ್ಟ್ರ ಪರಿಹಾರವನ್ನು ಬಲವಾಗಿಯೇ ಮಂಡಿಸಿವೆ. ಬ್ರಿಕ್ಸ್ ನ ಈಗಿನ ಅಧ್ಯಕ್ಷ ದಕ್ಷಿಣ ಆಫ್ರಿಕಾದ ಸಿರಿಲ್ ರಾಂಪೋಸ್ ಅವರಂತೂ ಇಸ್ರೇಲ್ ಬಾಂಬ್ ಹಾಕುವುದನ್ನು ನಿಲ್ಲಿಸುವವರೆಗೆ ತನ್ನಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯನ್ನೇ ಮುಚ್ಚಿಸಿದರು ಮತ್ತು ರಾಜತಾಂತ್ರಿಕ ಸಂಬಂಧವನ್ನೇ ಸ್ಥಗಿತಗೊಳಿಸಿದರು. ಅಕ್ಟೋಬರ್ 7ರ ಮೊದಲು ಇಸ್ರೇಲ್‌ನ ಮೇಲೆ ಈ ಬಗೆಯ ಒತ್ತಡ ಇದ್ದಿರಲಿಲ್ಲ. ಸ್ವತಂತ್ರ ಫೆಲೆಸ್ತೀನ್ ಸ್ಥಾಪನೆಯನ್ನು ವಿರೋಧಿಸುತ್ತಲೇ ಬಂದಿರುವ ಮತ್ತು ಈ ಕುರಿತಂತೆ ಯಾವುದೇ ರಾಷ್ಟ್ರ ನಾಯಕರು ಹೇಳಿಕೆ ನೀಡದಂತೆ ಮತ್ತು ಮಾಧ್ಯಮಗಳಲ್ಲಿ ಚರ್ಚೆ ನಡೆಯದಂತೆ ನೋಡಿಕೊಳ್ಳುತ್ತಾ ಬಂದಿದ್ದ ಇಸ್ರೇಲ್, ಇತ್ತೀಚಿನ ದ ಶಕಗಳಲ್ಲಿ ಇದೇ ಮೊದಲು ಬಾರಿ ಕಟಕಟೆಯಲ್ಲಿ ನಿಂತಿತು. ಅಕ್ಟೋಬರ್ 7ರಂದು ಫೆಲೆಸ್ತೀನ್‌ನ ಮೇಲೆ ವೈಮಾನಿಕ ದಾಳಿ ನಡೆಸಲು ಮುಂದಾಗುವಾಗ ನೆತನ್ಯಾಹು ಇಂಥದ್ದೊಂದು ಬೆಳವಣಿಗೆಯನ್ನು ಊಹಿಸಿರುವ ಸಾಧ್ಯತೆಯೇ ಇಲ್ಲ.
ಒಂದುರೀತಿಯಲ್ಲಿ,
ಈ ಘರ್ಷಣೆಯು ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಎಂಬ ಫೆಲೆಸ್ತೀನಿಯರ ಬಹುಕಾಲದ ಕನಸು ನನಸಾಗುವ ದಿಶೆಯಲ್ಲಿ ಮಹತ್ವದ ಮೈಲುಗಲ್ಲಾಗುವ ಸಾಧ್ಯತೆ ಕಾಣಿಸುತ್ತದೆ. ಬಹುಶಃ ಈಗಿನ ಅಲ್ಪಕಾಲೀನ ಕದನ ವಿರಾಮವೇ ಶಾಶ್ವತ ಕದನ ವಿರಾಮವಾಗಿ ಮಾರ್ಪಡಲೂ ಬಹುದು ಅಥವಾ ಮತ್ತೆ ಘರ್ಷಣೆ ಮುಂದುವರಿಯಲೂ ಬಹುದು. ಆದರೆ, ಈಗಾಗಲೇ ಈ ಘರ್ಷಣೆಯಿಂದ ಇಸ್ರೇಲ್ ಸಾಕಷ್ಟು ಕಳಕೊಂಡಿದೆ. ಒಂದುವೇಳೆ, ಘರ್ಷಣೆ ಇನ್ನಷ್ಟು ಮುಂದುವರಿದರೆ ಇದರಿಂದ ಇಸ್ರೇಲ್ ಮತ್ತಷ್ಟು ತೊಂದರೆಗೆ ಸಿಲುಕಲಿದೆ. ಅರಬ್ ರಾಷ್ಟ್ರಗಳು ಇಸ್ರೇಲ್ ವಿರುದ್ಧ ಒಗ್ಗಟ್ಟು ಪ್ರದ ರ್ಶಿಸಬೇಕಾದ ಮತ್ತು ಕಟು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಲಿದೆ. ಇದನ್ನು ಅಮೇರಿಕ ಬಯಸಲಾರದು. ಇಸ್ರೇಲ್‌ಗೂ ಇದು ಬೇಕಾಗಿಲ್ಲ. ಇದರಾಚೆಗೆ, ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯತ್ತ ಜಾಗತಿಕ ರಾಷ್ಟ್ರಗಳ ಒಲವು ಮತ್ತು ಒತ್ತಡ ಹೆಚ್ಚಾಗಬಹುದು. ಇದಕ್ಕೆ ಅಮೇರಿಕ ಪದೇ ಪದೇ ತಡೆ ಒಡ್ಡುತ್ತಿರುವುದರಿಂದ ಚೀನಾ ನೇತೃತ್ವದಲ್ಲಿ ಅರಬ್ ರಾಷ್ಟ್ರಗಳು ಅಮೇರಿಕಕ್ಕೆ ಪರ್ಯಾಯ ಶಕ್ತಿಯಾಗಿ ಬೆಳೆದು ನಿಲ್ಲಬಹುದು. ಹೀಗಾದರೆ, ಒಂದೋ ಅಮೇರಿಕ ಮತ್ತು ಅದರ ಬೆಂಬಲಿಗರು ಮೆತ್ತಗಾಗಬೇಕಾಗುತ್ತದೆ ಅಥವಾ ಇನ್ನೊಂದು ಮಹಾ ಘರ್ಷಣೆಗೆ ವೇದಿಕೆ ಸಿದ್ಧವಾಗ ಬೇಕಾಗುತ್ತದೆ. ಇವು ಏನೇ ಇದ್ದರೂ,
ಅಕ್ಟೋಬರ್ 7ರ ಬಳಿಕದ ಬೆಳವಣಿಗೆಯನ್ನು ಪರಿಶೀಲಿಸಿದರೆ, ಹಮಾಸ್ ಮೇಲುಗೈ ಪಡೆದಂತೆ ಮತ್ತು ಇಸ್ರೇಲ್ ಮಂಡಿಯೂರಿದಂತೆ ಕಾಣಿಸುತ್ತದೆ. ಇದು ನಿಜಕ್ಕೂ ಅಭೂತಪೂರ್ವ ಬೆಳವಣಿಗೆ. ಇರುವೆಯೊಂದು ಆನೆಯನ್ನು ಮಣಿಸುತ್ತದಲ್ಲ , ಅಂಥ ಕತೆ.
No comments:
Post a Comment