Monday, November 27, 2023

ಉಡುಪಿಯಲ್ಲಿ ಹತ್ಯೆ: ನಿಜಕ್ಕೂ ಚರ್ಚೆಗೊಳ ಗಾಗಬೇಕಾದುದು ಯಾವುದು?





1. ಅಯ್ನಾಝ

2. ಗೌರಿ

3. ಶ್ರದ್ಧಾ ವಾಲ್ಕರ್

ಹತ್ಯೆಗೀಡಾಗಿರುವ ಈ ಮೂವರಲ್ಲೂ ಒಂದು ಸಮಾನಾಂಶವಿದೆ. ಅದೇನೆಂದರೆ, ಈ ಮೂವರೂ ಮಹಿಳೆಯರು. ಅಸಮಾನ ಅಂಶವೂ  ಇದೆ, ಅದು ಒಂದಲ್ಲ ಹಲವು. ಇಲ್ಲಿ ಬಹುಮುಖ್ಯ ಪ್ರಶ್ನೆಯೊಂದಿದೆ-

ಗಂಡು  ಇಷ್ಟು ವ್ಯಗ್ರಗೊಳ್ಳುವುದು ಏಕೆ? ಹತ್ಯೆಯನ್ನು ಪರಿಹಾರವಾಗಿ ಬಗೆಯುವುದು ಏಕೆ?

2023 ನವೆಂಬರ್ 12ರಂದು ಉಡುಪಿ ನೇಜಾರಿನ ಗಗನ ಸಖಿ ಅಯ್ನಾಝ ಮತ್ತು ಆಕೆಯ ತಾಯಿ, ಸಹೋದರಿ ಮತ್ತು ಪುಟ್ಟ  ತಮ್ಮನನ್ನು ಹತ್ಯೆ ಮಾಡಲಾಯಿತು. ಆರೋಪಿಯ ಹೆಸರು- ಪ್ರವೀಣ್ ಅರುಣ್ ಚೌಗಲೆ. 2022  ಮೇ 18ರಂದು ದೆಹಲಿಯ ನೌರೋಲಿಯಲ್ಲಿ ಶ್ರದ್ಧಾ ವಾಲ್ಕರ್ ಎಂಬವರ ಹತ್ಯೆ ನಡೆಯಿತು. ಆರೋಪಿಯ ಹೆಸರು- ಅಫ್ತಾಬ್ ಅಮೀನ್ ಪೂನಾವಾಲ. ಈ ಎರಡೂ  ಹತ್ಯೆಗಳು ಅತ್ಯಂತ ಬರ್ಬರವಾಗಿತ್ತು. ಶ್ರದ್ಧಾಳನ್ನು ಹತ್ಯೆ ಮಾಡಿದ ಬಳಿಕ ತುಂಡರಿಸಿ ಫ್ರೀಜರ್‌ನಲ್ಲಿ ಇರಿಸಲಾಗಿತ್ತು. ಬಳಿಕ ದೇಹದ  ತುಂಡುಗಳನ್ನು ದೆಹಲಿಯ ಬೇರೆ ಬೇರೆ ಪ್ರದೇಶಗಳಲ್ಲಿ ಎಸೆದು ಸಾಕ್ಷ್ಯ  ನಾಶಕ್ಕಾಗಿ ಪೂನಾವಾಲ ಪ್ರಯತ್ನಿಸಿದ್ದ. ಮನೆಯೊಳಗೆ ಹರಿದಿದ್ದ  ರಕ್ತವನ್ನು ನೀರಿನಿಂದ ಸ್ವಚ್ಛಗೊಳಿಸಿದ್ದ. ಆಕೆ ಜೀವಂತ ವಿದ್ದಾಳೆ ಎಂದು ಗೆಳತಿಯರು ಮತ್ತು ಮನೆಯವರು ಭಾವಿಸುವಂತೆ  ಮಾಡುವುದಕ್ಕಾಗಿ ಬೇರೆ ಬೇರೆ ತಂತ್ರಗಳನ್ನೂ ಹೆಣೆದಿದ್ದ. ಅಂದಹಾಗೆ,

ಈ ಪೂನಾವಾಲಾಗೆ ಹೋಲಿಸಿದರೆ ಈ ಪ್ರವೀಣ್ ಚೌಗಲೆ ಇನ್ನಷ್ಟು ಭೀಕರವಾಗಿ ಕಾಣಿಸುತ್ತಾನೆ. ಅಫ್ತಾಬ್ ಪೂನಾವಾಲ ಸಾಮಾನ್ಯ ಫುಡ್  ಬ್ಲಾಗರ್. ಆತ ಪೊಲೀಸ್ ಇಲಾಖೆಯಿಂದಾಗಲಿ ಅಥವಾ ಯಾವುದೇ ಶಿಸ್ತುಬದ್ಧ ವ್ಯವಸ್ಥೆಯಿಂದಾಗಲಿ ತರಬೇತಿ ಪಡೆದವನಲ್ಲ. ಆಹಾರ  ತಯಾರಿಯ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಈತ ಫುಡ್ ಫೋಟೋಗ್ರಾಫರ್ ಆಗಿಯೂ ಗುರುತಿಸಿಕೊಂಡಿದ್ದ. ತನ್ನ ಇನ್‌ಸ್ಟಾಗ್ರಾಮ್  ಅಕೌಂಟನ್ನು ‘ಹಂಗ್ರಿ ಚೋಕೋ’ ಎಂದು ಹೆಸರಿಸಿ ತನ್ನ ಆಹಾರ ಪ್ರೀತಿಯನ್ನು ವ್ಯಕ್ತಪಡಿಸಿದ್ದ. ಆತನಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 28  ಸಾವಿರಕ್ಕಿಂತಲೂ ಅಧಿಕ ಫಾಲೋವರ್ಸ್ಗಳಿದ್ದರು. ಪದವೀಧರನಾಗಿದ್ದ 28 ವರ್ಷದ ಪೂನಾವಾಲ ಬಾಡಿ ಬಿಲ್ಡರ್ ಕೂಡಾ ಆಗಿದ್ದ.  ಆದರೆ,

ಪ್ರವೀಣ್ ಚೌಗಲೆಯ ಹಿನ್ನೆಲೆ ಹೀಗಲ್ಲ. ನಾಗರಿಕ ಸಮಾಜ ಗೌರವಿಸುವ ಮತ್ತು ಆದರ ಭಾವದಿಂದ ನೋಡುವ ಹಿನ್ನೆಲೆ ಈತನ ಬೆ ನ್ನಿಗಿದೆ. ಈತ ಪೊಲೀಸ್ ಇಲಾಖೆಯಲ್ಲಿದ್ದ. ಆ ಬಳಿಕ ಏರ್ ಇಂಡಿಯಾ ವಿಮಾನ ಸಂಸ್ಥೆಯಲ್ಲಿ ಕ್ಯಾಬಿನ್ ಕ್ರೂ ಉದ್ಯೋಗದಲ್ಲಿದ್ದ. ಇವು  ಎರಡೂ ಶಿಸ್ತಿನ ಕಾರಣಕ್ಕಾಗಿ ಗುರುತಿಸಿಕೊಂಡಿವೆ. ಪೊಲೀಸ್ ಹುದ್ದೆಗೆ ಆಯ್ಕೆಯಾದ ಕೂಡಲೇ ಖಾಕಿ ಡ್ರೆಸ್ಸು, ಲಾಠಿ, ಹ್ಯಾಟು-ಬೂಟು  ಕೊಡುವುದಿಲ್ಲ. ಅಲ್ಲಿ ಶಿಸ್ತಿನ ಪಾಠವನ್ನು ಹೇಳಿ ಕೊಡಲಾಗುತ್ತದೆ. ಜನರೊಂದಿಗೆ ಹೇಗೆ ವರ್ತಿಸಬೇಕು, ಅತ್ಯಂತ ಕಠಿಣ ಸನ್ನಿವೇಶದಲ್ಲೂ  ಹೇಗೆ ಸಂಯಮದಿಂದಿರಬೇಕು ಎಂದು ಕಲಿಸಲಾಗುತ್ತದೆ. ವಿಮಾನ ಸಂಸ್ಥೆಯಲ್ಲೂ ಅಷ್ಟೇ. ಶಿಸ್ತಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ.  ಪ್ರಯಾಣಿಕರೊಂದಿಗೆ ಸಂಯಮ ಮತ್ತು ಆದರ ಭಾವದೊಂದಿಗೆ ವರ್ತಿಸಲು ಹೇಳಿ ಕೊಡಲಾಗುತ್ತದೆ. ಅದಕ್ಕಾಗಿ ತರಬೇತಿಯನ್ನೂ  ನೀಡಲಾಗುತ್ತದೆ. ಇಷ್ಟಿದ್ದೂ,
ಅಫ್ತಾಬ್ ಪೂನಾವಾಲನೂ ನಾಚುವಷ್ಟು ಭೀಕರವಾಗಿ ಪ್ರವೀಣ್ ಚೌಗಲೆ ಹತ್ಯೆ ಮಾಡಿದ್ದಾನೆ. 12 ವರ್ಷದ ಬಾಲಕನನ್ನೂ ಕತ್ತರಿಸಿ  ಹಾಕಿದ್ದಾನೆ. ಆದರೆ, ಈ ಎರಡನ್ನೂ ಮೀಡಿಯಾ ನೋಡಿದ್ದು ಹೇಗೆ? ಫೇಸ್‌ಬುಕ್, ಟ್ವೀಟರ್ (ಈಗಿನ ಎಕ್ಸ್) ಬಳಕೆದಾರರು  ಪ್ರತಿಕ್ರಿಯಿಸಿದ್ದು ಹೇಗೆ?

ಶ್ರದ್ಧಾ ವಾಲ್ಕರ್‌ಳನ್ನು ಕೊಂದವ ಅಫ್ತಾಬ್ ಪೂನಾವಾಲಾ ಎಂದು ಗೊತ್ತಾದ ಕೂಡಲೇ ಮೀಡಿಯಾಗಳು ಆತನ ಟ್ರಯಲ್‌ಗೆ ಇಳಿದಿದ್ದುವು.  ಆತ ಎಲ್ಲಿಯವ, ಆತನ ತಂದೆ-ತಾಯಿ ಯಾರು? ಅವರ ಹಿನ್ನೆಲೆ ಏನು, ಯಾವ ವೃತ್ತಿಯಲ್ಲಿದ್ದಾರೆ, ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ದಾರಾ,  ದೇಶವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿ ಸಿದ್ದಾರಾ, ವಿದೇಶಕ್ಕೆ ಪ್ರಯಾಣಿಸಿದ್ದಾರಾ, ಅವರಿಗೆಷ್ಟು ಮಕ್ಕಳು, ಅವರು ಏನೇನು ಆಗಿದ್ದಾರೆ,  ಅಫ್ತಾಬ್ ಅವರಲ್ಲಿ ಎಷ್ಟನೆಯವ, ಈತ ಎಲ್ಲೆಲ್ಲಿ ಕಲಿತಿದ್ದಾನೆ, ಕಲಿಕೆಯ ವೇಳೆ ಈತನ ಸ್ವಭಾವ ಏನಿತ್ತು, ಶ್ರದ್ಧಾಳ ಮೊದಲು ಮತ್ತು ಬಳಿಕ  ಯಾರೊಂದಿಗೆಲ್ಲ ರಿಲೇಷನ್‌ಶಿಪ್ ಇತ್ತು, ಈ ಹಿಂದೆಯೂ ಹತ್ಯೆ ಮಾಡಿದ್ದಾನಾ, ಈತನ ಕೆಲಸ ಏನು, ಈ ಹಿಂದೆ ಯಾವ ಕೆಲಸ  ಮಾಡುತ್ತಿದ್ದ, ಇದು ಲವ್ ಜಿಹಾದಾ, ಆನ್‌ಲೈನ್‌ನಲ್ಲಿ ಏನೇನೆಲ್ಲಾ ಹುಡುಕಿದ್ದಾನೆ, ಯಾರೊಂದಿಗೆಲ್ಲ ಸಂಪರ್ಕ ಇಟ್ಟುಕೊಂಡಿದ್ದಾನೆ..  ಇತ್ಯಾದಿ ಇತ್ಯಾದಿ ಹತ್ತು ಹಲವು ಪ್ರಶ್ನೆಗಳೊಂದಿಗೆ ಟಿ.ವಿ. ಮತ್ತು ಮುದ್ರಣ ಮಾಧ್ಯಮಗಳು ತನಿಖೆಗಿಳಿದಿದ್ದುವು. ರಾಷ್ಟ್ರೀಯ ಟಿ.ವಿ. ಚಾ ನೆಲ್‌ಗಳಲ್ಲಂತೂ ದಿನಕ್ಕೆರಡು ಎಪಿಸೋಡ್‌ಗಳನ್ನು ಪ್ರಸಾರ ಮಾಡಿದವು. ಈ ನಡುವೆ ಸೋಶಿಯಲ್ ಮೀಡಿಯಾವಂತೂ ಇವರಿಬ್ಬರ  ಸಂಬಂಧವನ್ನು ಲವ್ ಜಿಹಾದ್ ಎಂದಿತು. ‘ಮುಸ್ಲಿಮರೊಂದಿಗೆ ಸಂಬಂಧ ಬೆಳೆಸಿದರೆ ಫ್ರಿಡ್ಜ್ ಸೇರುತ್ತೀರಿ’ ಎಂದು ಉಪದೇಶ ಮಾಡಿತು.  ‘ನನ್ನ ಅಬ್ದುಲ್ಲ ಅಂಥವನಲ್ಲ..’ ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್  ಆಯಿತು. ಶ್ರದ್ಧಾಳನ್ನು ಹಿಂದೂ ಎಂದೂ ಅಫ್ತಾಬ್‌ನನ್ನು ಮುಸ್ಲಿಮ್  ಎಂದೂ ವರ್ಗೀಕರಿಸಿ ಆ ಹತ್ಯೆಯನ್ನು ಹಿಂದೂ-ಮುಸ್ಲಿಮ್ ಪ್ರಕರಣವಾಗಿ ಬಿಂಬಿಸಲಾಯಿತು. ಆದರೆ,

ಆರೋಪಿ ಪ್ರವೀಣ್ ಚೌಗಲೆಗೆ ಸಂಬಂಧಿಸಿ ಮೀಡಿಯಾಗಳು ಈ ಬಗೆಯ ತನಿಖೆಯನ್ನೇ ನಡೆಸಿಲ್ಲ. ಆತನ ಹಿನ್ನೆಲೆ, ಆತ ದ್ವೇಷ ಭಾಷಣ  ಪ್ರೇಮಿಯಾಗಿದ್ದನೇ, ಆತನ ಮೊಬೈಲ್‌ನಲ್ಲಿ ಯಾರೆಲ್ಲರ ಭಾಷಣಗಳ ತುಣುಕಿತ್ತು, ಎಷ್ಟು ಭಾಷಣ ಸಭೆಗಳಿಗೆ ಹೋಗಿದ್ದಾನೆ, ಮುಸ್ಲಿಮ್  ವಿರೋಧಿ ಎಷ್ಟು ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದಾನೆ, ಆತನ ಸೋಶಿಯಲ್ ಮೀಡಿಯಾ ಅಕೌಂಟ್ ಹೇಗಿದೆ, ಅದರಲ್ಲಿ ಮುಸ್ಲಿಮ್  ವಿರೋಧಿ ಪೋಸ್ಟ್ ಹಂಚಿಕೊಂಡಿದ್ದಾನಾ, ಆತನ ಕೌಟುಂಬಿಕ ಬದುಕು ಹೇಗಿದೆ, ಎಷ್ಟು ಮದುವೆಯಾಗಿದ್ದಾನೆ, ಅಪರಾಧ ಹಿನ್ನೆಲೆ  ಇದೆಯಾ, ಆತ ಕಲಿತ ಶಾಲೆ ಯಾವುದು, ಅಲ್ಲಿನ ನಡವಳಿಕೆ ಹೇಗಿತ್ತು, ಮುಸ್ಲಿಮರನ್ನು ಚಿಕ್ಕಂದಿನಿಂದಲೇ ದ್ವೇಷಿಸುತ್ತಿದ್ದನಾ, ಮುಸ್ಲಿಮ್  ದ್ವೇಷಿ ವ್ಯಕ್ತಿಗಳು ಮತ್ತು ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದನಾ, ಆತ ಪೊಲೀಸ್ ಇಲಾಖೆಯಲ್ಲಿದ್ದಾಗ ಮುಸ್ಲಿಮ್ ಕೈದಿಗಳ  ಜೊತೆ ಹೇಗೆ ನಡಕೊಂಡಿದ್ದ, ಕಸ್ಟಡಿ ಥಳಿತದ ಆರೋಪ ಇದೆಯೇ, ಮುಸ್ಲಿಮ್ ವಿಮಾನ ಪ್ರಯಾಣಿಕರೊಂದಿಗೆ ಹೇಗೆ ನಡಕೊಳ್ಳುತ್ತಿದ್ದ,  ಪ್ರಯಾ ಣಿಕರಿಂದ ಆರೋಪ ಇತ್ತಾ, ಆತನ ಅಪ್ಪ-ಅಮ್ಮ ಯಾರು, ಅವರ ಹಿನ್ನೆಲೆ ಏನು, ಅವರು ಯಾರೊಂದಿಗೆಲ್ಲ ಸಂಪರ್ಕ ಇಟ್ಟು  ಕೊಂಡಿದ್ದಾರೆ.. ಎಂದು ಮುಂತಾಗಿ ತನಿಖೆಗಿಳಿಯಬೇಕಾದ ಮೀಡಿಯಾಗಳು ಅದರ ಬದಲು ಹತ್ಯೆಗೆ ಅನೈತಿಕ ಸಂಬಂಧ ಕಾರಣ  ಎಂಬೊಂದು ದಾಳವನ್ನು ಆರಂಭದಲ್ಲೇ  ಉರುಳಿಸಿ ಕೈ ತೊಳೆದುಕೊಂಡವು. ಹಾಗಿದ್ದರೆ,

ಅಫ್ತಾಬ್ ಪೂನಾವಾಲನ ಮೇಲೆ ಅಷ್ಟೊಂದು ಅನುಮಾನ ಮತ್ತು ಕುತೂಹಲವನ್ನು ಇವೇ ಮೀಡಿಯಾಗಳು ವ್ಯಕ್ತಪಡಿಸಿದ್ದೇಕೆ? ಅದನ್ನೂ  ಇಬ್ಬರು ಸಂಗಾತಿಗಳ ನಡುವಿನ ಮನಸ್ತಾಪ ಎಂದು ಷರಾ ಬರೆದು ಬಿಡಬಹುದಿತ್ತಲ್ಲವೇ? ಯಾಕೆ ಹಾಗಾಗಲಿಲ್ಲ? ಶ್ರದ್ಧಾಳ ಹತ್ಯೆಯಲ್ಲಿ  ಅಫ್ತಾಬ್‌ನ ಧರ್ಮ ಮುಖ್ಯವಾಗುವುದಾದರೆ, ಅಯ್ನಾಝï‌ಳ ಹತ್ಯೆಯಲ್ಲಿ ಯಾಕೆ ಪ್ರವೀಣನ ಧರ್ಮ ಮುಖ್ಯ ವಾಗುವುದಿಲ್ಲ? ಒಂದನ್ನು  ಲವ್ ಜಿಹಾದ್‌ನ ಹಿನ್ನೆಲೆಯಲ್ಲೂ ಇನ್ನೊಂದನ್ನು ನೈತಿಕತೆಯ ಹಿನ್ನೆಲೆಯಲ್ಲೂ ನೋಡುವುದರ ಮರ್ಮವೇನು? ನಿಜವಾಗಿ,

ಇದೊಂದು ಮನಸ್ಥಿತಿ. ಈ ಅಪಾಯಕಾರಿ ಮನಸ್ಥಿತಿಯು ಕೆಲವೊಮ್ಮೆ ದ್ವೇಷಭಾಷಣಕಾರರಿಗಿಂತಲೂ ಅತಿಯಾಗಿ ಮಾಧ್ಯಮ ಮಿತ್ರರಲ್ಲಿ  ಕಾಣಿಸಿಕೊಳ್ಳುತ್ತದೆ. ಆರೋಪಿ ಮುಸ್ಲಿಮ್ ಅಂದ ತಕ್ಷಣ ಅವರೊಳಗಿನ ‘ಧರ್ಮಪ್ರಜ್ಞೆ’ ಎಚ್ಚರಗೊಳ್ಳುತ್ತದೆ. ಆರೋಪಿ ಮುಸ್ಲಿಮ್ ಹೆಸರಿನವ ಎಂದಾದರೆ ಆ ಕೃತ್ಯಕ್ಕೆ ಬಾಹ್ಯ ಕಾರಣ ಕ್ಕಿಂತ ಹೊರತಾದ ಧರ್ಮ ಕಾರಣ ಇದ್ದೇ  ಇರುತ್ತದೆ ಎಂದವರು ತೀರ್ಮಾನಿಸಿ ಬಿಡುತ್ತಾರೆ.  ಅವರ ತನಿಖಾ ರೀತಿ, ನಾಗರಿಕರಲ್ಲಿ ಮತ್ತು ಪೊಲೀಸ್ ಅಧಿಕಾರಿಗಳಲ್ಲಿ ಕೇಳುವ ಪ್ರಶ್ನೆ ಎಲ್ಲವೂ ತಮ್ಮ ಈ ಪೂರ್ವಾಗ್ರಹವನ್ನು  ಪುಷ್ಠೀಕರಿಸುವ ರೀತಿಯಲ್ಲೇ  ಇರುತ್ತದೆ. ವರದಿಗಳನ್ನೂ ಈ ಅನುಮಾನದ ಸುಳಿಯೊಳಗೇ ತಯಾರಿಸಲಾಗುತ್ತದೆ. ಅಂದಹಾಗೆ, ಅ ಫ್ತಾಬ್‌ಗಿಂತಲೂ ಬರ್ಬರವಾಗಿ ನಡಕೊಂಡ ಪ್ರವೀಣನ ಬಗ್ಗೆ ಮಾಧ್ಯಮಗಳು ತೋರಿದ ನಯ-ವಿನಯ, ನಾಜೂಕುತನವು ಖಂಡಿತ  ಪಿಎಚ್‌ಡಿ ಸಂಶೋಧನೆಗೆ ಅರ್ಹವಾಗಿದೆ.
ನಿಜವಾಗಿ,

ಚರ್ಚೆಗೊಳಗಾಗಬೇಕಾದದ್ದು- ಪುರುಷ ಯಾಕೆ ಚೂರಿಯಲ್ಲಿ ಪರಿಹಾರವನ್ನು ಕಾಣುತ್ತಾನೆ ಎಂಬುದು. 2023 ಆಗಸ್ಟ್ ನಲ್ಲಿ  ದಕ್ಷಿಣ ಕನ್ನಡ  ಜಿಲ್ಲೆಯ ಪುತ್ತೂರಿನಲ್ಲಿ 18 ವರ್ಷದ ಗೌರಿ ಎಂಬ ಯುವತಿಯನ್ನು ಪದ್ಮರಾಜ ಎಂಬವ ಹತ್ಯೆ ಮಾಡಿದ. ಇಂಥವು ಆಗಾಗ ಸುದ್ದಿಗೆ  ಒಳಗಾಗುತ್ತಲೇ ಇರುತ್ತದೆ. ಪುರುಷ ಹೆಣ್ಣಿನ ಜೊತೆ ಇಷ್ಟು ನಿಷ್ಠುರವಾಗಿ ನಡಕೊಳ್ಳುವುದಕ್ಕೆ ಏನು ಕಾರಣ? ಅಹಂಮೇ? ತಾನು  ಹೇಳಿದ್ದನ್ನು ಹೆಣ್ಣು ಕೇಳಲೇಬೇಕು ಎಂಬ ಪುರುಷ ಪ್ರಧಾನ ಮನಸ್ಥಿತಿಯೇ? ತಾನು ಏನು ಮಾಡಿಯೂ ದಕ್ಕಿಸಿಕೊಳ್ಳುವೆ ಎಂಬ ಹುಂಬ  ಧೈರ್ಯವೇ? ಅಥವಾ ಇದರಾಚೆ ಗಿನ ಬೇರಾವುದಾದರೂ ಕಾರಣಗಳು ಇವೆಯೇ? ಹತ್ಯೆಯನ್ನು ಧರ್ಮದ ಆಧಾರದಲ್ಲಿ  ವಿಭಜಿಸುವುದಕ್ಕಿಂತ ಇಂಥ ಅನುಮಾನಗಳ ನ್ನಿಟ್ಟುಕೊಂಡು ಹುಡುಕ ಹೊರಟರೆ ಅದರಿಂದ ನಾಗರಿಕ ಸಮಾಜವನ್ನು ಎಚ್ಚರಿಸುವುದಕ್ಕೆ  ಪೂರಕ ಮಾಹಿತಿಗಳು ಲಭ್ಯವಾದೀತು. ಮುಖ್ಯವಾಗಿ, ನಾವೆಷ್ಟೇ ಆಧುನಿಕಗೊಂಡಿದ್ದೇವೆ ಎಂದು ಹೇಳಿದರೂ ಮತ್ತು ಚಂದ್ರನಲ್ಲಿಗೆ ನಮ್ಮ  ನೌಕೆ ತಲುಪಿದ್ದನ್ನು ಸಂಭ್ರಮಿಸಿದರೂ ಆಳದಲ್ಲಿ ಪುರುಷ ಅಹಂನ ಮನಸ್ಥಿತಿಯೊಂದು ಸಮಾಜದಲ್ಲಿ ಸುಪ್ತವಾಗಿ ಹರಿಯುತ್ತಿದೆ. ಹೆಚ್ಚಿನ  ಮನೆಗಳೂ ಇಂಥ ಮನಸ್ಥಿತಿ ಯಿಂದಲೇ ತುಂಬಿಕೊಂಡಂತಿದೆ. ಹೆಣ್ಣೆಂದರೆ ಗಂಡಿಗೆ ತಗ್ಗಿ-ಬಗ್ಗಿ ಶರಣು ಭಾವದಲ್ಲಿ ಬದುಕಬೇಕಾದವಳು,  ಎದುರು ಮಾತಾಡುವಂತಿಲ್ಲ, ತರ್ಕ-ವಾದಗಳ ಮೂಲಕ ಗಂಡಿಗೆ ಇರಿಸು-ಮುರಿಸು ತರುವಂತಿಲ್ಲ, ಗಂಡಿಗಿಂತ  ಉತ್ತಮ ಐಡಿಯಾ  ಅವಳಲ್ಲಿದ್ದರೂ ಅದನ್ನು ಸ್ವೀಕರಿಸುವುದು ಗಂಡಿನ ಸ್ವಾಭಿಮಾನಕ್ಕೆ ಕುತ್ತು, ಗಂಡಿಗಿಂತ ಉನ್ನತ ಹುದ್ದೆಯಲ್ಲಿರುವವಳು ಪತ್ನಿಯಾಗುವುದು  ಆತನ ಇಮೇಜಿಗೆ ಕುಂದು.. ಇತ್ಯಾದಿ ಇತ್ಯಾದಿ ಹಲವು ಅಲಿಖಿತ ಕಟ್ಟು ಪಾಡುಗಳನ್ನು ಹೆಚ್ಚಿನ ಪುರುಷರು ಎದೆಯೊಳಗಿಟ್ಟು  ಬದುಕುತ್ತಿರುತ್ತಾರೆ. ಕೆಲವೊಮ್ಮೆ ಅದನ್ನು ವ್ಯಕ್ತಪಡಿಸುತ್ತಲೂ ಇರುತ್ತಾರೆ. ಇಂಥ ಮನಸ್ಥಿತಿಯು ಹೆಣ್ಣಿನ ಸಣ್ಣ ಎದುರುತ್ತರವನ್ನೂ ತನಗಾದ  ಅವಮಾನವೆಂದೇ ಬಗೆಯುವ ಸಾಧ್ಯತೆ ಇದೆ. ತನಗಿಲ್ಲದ ಪ್ರತಿಭೆ, ಮಾತುಗಾರಿಕೆ, ಚುರುಕುತನಗಳು ಆಕೆಯಲ್ಲಿರುವುದನ್ನು ಪುರುಷ  ನೋರ್ವ ತನ್ನ ಪಾಲಿನ ಹಿನ್ನಡೆಯಾಗಿ ಪರಿಗಣಿಸುವುದಕ್ಕೂ ಅವಕಾಶ ಇದೆ. ಇಂಥ ಭಾವನೆ ಪದೇ ಪದೇ ಎದೆಯನ್ನು  ಚುಚ್ಚತೊಡಗಿದಾಗ ಕ್ಷುಲ್ಲಕವೆಂದು ತೋರುವ ಕಾರಣಕ್ಕೂ ಚೂರಿ ಎತ್ತಿಕೊಳ್ಳುವುದನ್ನೂ ನಿರಾಕರಿಸಲಾಗದು. ಸದ್ಯದ ಅಗತ್ಯ ಏನೆಂದರೆ,

ಇಂಥ ಕ್ರೌರ್ಯಗಳಲ್ಲಿ ಆರೋಪಿಯ ಧರ್ಮವನ್ನು ಹುಡುಕದೇ ಆತ ಬೆಳೆದ ಮನೆ, ಅಲ್ಲಿನ ರೀತಿ-ರಿವಾಜು, ಕಟ್ಟುಪಾಡುಗಳು, ಆತನ  ಪರಿಸರ ಇತ್ಯಾದಿಗಳ ಮೇಲೆ ಗಮನ ಹರಿಸಿ ಕಾರಣಗಳನ್ನು ಪತ್ತೆ ಹಚ್ಚಬೇಕು. ಇದು ನಿರಂತರವಾಗಿ ನಡೆಯಬೇಕು. ಹೆಣ್ಣಿನ ಮೇಲೆ  ಚೂರಿ ಅಥವಾ ಶಸ್ತ್ರ  ಪ್ರಯೋಗ ಮಾಡುವ ಗಂಡುಗಳ ನಡುವೆ ಸಾಮ್ಯತೆ ಇದೆಯೇ ಎಂಬ ಅಧ್ಯಯನ ನಡೆಸಬೇಕು. ಈ ಕುರಿತಂತೆ  ಮನಃಶಾಸ್ತ್ರಜ್ಞರ ಅಭಿಪ್ರಾಯಗಳನ್ನು ಪಡೆದು ಪ್ರಕಟಿಸಬೇಕು. ಇಂಥ ಪ್ರಯತ್ನಗಳು ಒಂದು ಅಭಿಯಾನದಂತೆ ನಡೆದರೆ ಕ್ರಮೇಣ ಅದು  ಮನೆ ಮನೆಯಲ್ಲೂ ಚರ್ಚೆಗೆ ಒಳಗಾದೀತು. ಹೆಣ್ಣನ್ನು ದ್ವಿತೀಯ ದರ್ಜೆಯಂತೆ ಕಾಣುವ ಮನೆ-ಮನಗಳ ಪರಿವರ್ತನೆಗೂ ಇಂಥವು  ಕಾರಣವಾದೀತು. ಸದ್ಯದ ಅಗತ್ಯ ಇದು. ಅದರಾಚೆಗೆ ಅಫ್ತಾಬ್, ಪ್ರವೀಣ್ ಅಥವಾ ಪದ್ಮರಾಜ್‌ರನ್ನು ಹಿಂದೂ-ಮುಸ್ಲಿಮ್ ಆಗಿ  ನೋಡುವುದು ನಿಜಕ್ಕೂ ಅಧರ್ಮ.

No comments:

Post a Comment