Saturday, November 18, 2023

ಆ ಹಿರಿಯರು ಎತ್ತಿ ಹಿಡಿದಿರುವ ಭಿತ್ತಿಪತ್ರವೇ ಎಲ್ಲವನ್ನೂ ಹೇಳುತ್ತಿದೆ...






You take my water
Burn my olive trees
Destroy my house
Take my job
Steal my land
Imprison my Father
Kill my Mother
Bomb my country
Starve us all
Humiliate us all
But... I am to blame
I shot a rocket back

‘ಆಪರೇಶನ್ ಪಿಲ್ಲರ್ ಆಫ್ ಡಿಫೆನ್ಸ್’ ಎಂಬ ಹೆಸರಲ್ಲಿ 2012ರಲ್ಲಿ ಗಾಝಾದ ಮೇಲೆ ಇಸ್ರೇಲ್ ವಾಯುದಾಳಿ ಆರಂಭಿಸಿದಾಗ ಮತ್ತು  ನೂರಾರು ಮಂದಿಯನ್ನು ಸಾಯಿಸಿದಾಗ ಗಾಝಾದ ಓರ್ವ ಹಿರಿಯ ವ್ಯಕ್ತಿ ಇಂಥದ್ದೊಂದು  ಭಿತ್ತಿಪತ್ರವನ್ನು ಎತ್ತಿ ಹಿಡಿದು  ಪ್ರತಿಭಟಿಸಿದ್ದರು. ಕೆಲವೊಂದಿಷ್ಟು ಪತ್ರಿಕೆಗಳು ಈ ಭಿತ್ತಿಪತ್ರಕ್ಕೆ ಮಹತ್ವ ಕೊಟ್ಟು ಪ್ರಕಟಿಸಿದ್ದುವು. ಅದರಲ್ಲಿ, ಭಾರತದ ಫ್ರಂಟ್‌ಲೈನ್ ಪತ್ರಿಕೆ  ಕೂಡಾ ಒಂದು. ಈ ಭಿತ್ತಿಪತ್ರವನ್ನು ಸಂಕ್ಷಿಪ್ತವಾಗಿ ಹೀಗೆ ಅನುವಾದಿಸಬಹುದು:

‘ನೀವು ನನ್ನ ನೀರನ್ನು ಕಸಿದಿರಿ, ನನ್ನ ಆಲಿವ್ ಮರಗಳನ್ನು ಸುಟ್ಟಿರಿ, ನನ್ನ ಮನೆಯನ್ನು ಧ್ವಂಸ ಮಾಡಿದಿರಿ, ನನ್ನ ಕೆಲಸವನ್ನು  ಕಿತ್ತುಕೊಂಡಿರಿ. ನನ್ನ ಭೂಮಿಯನ್ನು ಲಪಟಾಯಿಸಿದಿರಿ, ನನ್ನ ತಂದೆಯನ್ನು ಜೈಲಲ್ಲಿಟ್ಟಿರಿ, ನನ್ನ ತಾಯಿಯನ್ನು ಕೊಂದಿರಿ, ನನ್ನ ದೇಶಕ್ಕೆ  ಬಾಂಬ್ ಹಾಕಿದಿರಿ, ನಮ್ಮನ್ನೆಲ್ಲ ಹಸಿವಿಗೆ ದೂಡಿದಿರಿ, ನಮ್ಮನ್ನು ಅವಮಾನಿಸಿದಿರಿ... ಹೀಗಿದ್ದೂ ಈಗ ನಾನೇ ಅಪರಾಧಿ. ಏಕೆಂದರೆ,  ನಿಮ್ಮೆಡೆಗೆ ನಾನೊಂದು ರಾಕೆಟ್ ಹಾರಿಸಿದೆ..’

ಬಹುಶಃ, 1948 ಮೇ 15ರಿಂದ 2023ರ ಈ ನವೆಂಬರ್ ವರೆಗೆ ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ಏನೆಲ್ಲ ಘಟಿಸಿವೆಯೋ  ಅವೆಲ್ಲವನ್ನೂ ಈ ಒಂದು ಭಿತ್ತಿಪತ್ರಕ್ಕಿಂತ ಸಮರ್ಥವಾಗಿ ಇನ್ನಾವುದೂ ಕಟ್ಟಿಕೊಡಲಾರದು ಅನ್ನಿಸುತ್ತದೆ. ಅಮೇರಿಕದ ಬೆಂಬಲ ಮತ್ತು  ವಿಶ್ವಸಂಸ್ಥೆಯ ಒತ್ತಾಸೆಯೊಂದಿಗೆ 1948 ಮೇ 15ರಂದು ಫೆಲೆಸ್ತೀನ್ ಮಣ್ಣಿನಲ್ಲಿ ಇಸ್ರೇಲ್ ರಾಷ್ಟ್ರ  ಸ್ಥಾಪನೆಯಾದಾಗ ಅಲ್ಲಿ ಕೇವಲ 8  ಲಕ್ಷದ 6 ಸಾವಿರ ಮಂದಿ ಯಹೂದಿಯರಷ್ಟೇ ಇದ್ದರು. ಫೆಲೆಸ್ತೀನ್ ಮಣ್ಣಿನ 55% ಭೂಭಾಗವಷ್ಟೇ ಇಸ್ರೇಲ್‌ನದ್ದಾಗಿತ್ತು. ಇವತ್ತು  ಇಸ್ರೇಲ್‌ನಲ್ಲಿ ಸುಮಾರು 90 ಲಕ್ಷ ಮಂದಿ ಯಹೂದಿಯರಿದ್ದಾರೆ ಮತ್ತು ಫೆಲೆಸ್ತೀನ್‌ನ 95% ಭೂಮಿ ಕೂಡಾ ಇಸ್ರೇಲ್‌ನ ವಶದಲ್ಲಿದೆ.  ಇವತ್ತು, ಜಾಗತಿಕವಾಗಿ ಚದುರಿ ಹೋಗಿರುವ ಯಹೂದಿಯರನ್ನು ಇಸ್ರೇಲ್ ಮುಕ್ತವಾಗಿ ತನ್ನಲ್ಲಿಗೆ ಸ್ವಾಗತಿಸುತ್ತಿದೆಯಲ್ಲದೇ, ಅವರ ವಸತಿಗಾಗಿ  ಫೆಲೆಸ್ತೀನಿ ಭೂಮಿಯನ್ನು ಇಂಚಿಂಚೇ  ಕಸಿದುಕೊಳ್ಳುತ್ತಿದೆ ಮತ್ತು ಅಲ್ಲಿರುವ ಫೆಲೆಸ್ತೀನಿಯರನ್ನು ಬಲವಂತದಿಂದ  ಒಕ್ಕಲೆಬ್ಬಿಸುತ್ತಿದೆ.  ಹಾಗಂತ,

ಇವೇನೂ ರಹಸ್ಯವಾಗಿ ನಡೆಯುತ್ತಿಲ್ಲ. ಇಂಥ ಅಕ್ರಮ ವಸತಿ ನಿರ್ಮಾಣದ ವಿರುದ್ಧ ವಿಶ್ವಸಂಸ್ಥೆಯದ್ದೇ  ಒಂದಕ್ಕಿಂತ  ಹೆಚ್ಚು ನಿರ್ಣಯಗಳು  ಅಂಗೀಕಾರಗೊಂಡಿವೆ. ಅದರಲ್ಲಿ ಗೋಡೆ ನಿರ್ಮಾಣವನ್ನು ಖಂಡಿಸಿ ಕೈಗೊಳ್ಳಲಾದ ನಿರ್ಣಯವೂ ಒಂದು. ಫೆಲೆಸ್ತೀನಿಯರನ್ನು ಫೆಲೆಸ್ತೀನಿಯರಿಂದಲೇ ವಿಭಜಿಸುವ ಬೃಹತ್ ಗೋಡೆ ನಿರ್ಮಾಣಕ್ಕೆ ಇಸ್ರೇಲ್ 2002ರಲ್ಲಿ ಕೈಹಾಕಿತು. 704 ಕಿ. ಮೀಟರ್ ಉದ್ದದ ಈ  ಗೋಡೆಯು 2006ರಲ್ಲಿ ಪೂರ್ಣಗೊಂಡಾಗ ಪಶ್ಚಿಮ ದಂಡೆಯ 25 ಸಾವಿರ ಫೆಲೆಸ್ತೀನಿಯರು ಉಳಿದ ಭಾಗದ ಫೆಲೆಸ್ತೀನಿಯರ ಸಂಪರ್ಕವನ್ನು ಕಳೆದುಕೊಂಡರು. ಈ ಗೋಡೆಯ 15% ಭಾಗ ಇಸ್ರೇಲ್‌ನಲ್ಲಿದ್ದರೆ ಉಳಿದ 85% ಭಾಗವೂ ಫೆಲೆಸ್ತೀನ್‌ನ ಪಶ್ಚಿಮ ದಂಡೆಯನ್ನು ಹಾದು ಹೋಗಿದೆ. ಇಷ್ಟಿದ್ದೂ, ಈ ಗೋಡೆಯನ್ನು ಅಲುಗಾಡಿಸುವುದಕ್ಕೆ ವಿಶ್ವಸಂಸ್ಥೆಯ ಯಾವ ನಿರ್ಣಯಕ್ಕೂ ಸಾಧ್ಯವಾಗಿಲ್ಲ.  ಇದು ವರ್ಣಭೇದದ ಗೋಡೆ ಎಂಬ ವಿಶ್ವಸಂಸ್ಥೆಯ ಹೇಳಿಕೆಗೆ ಕವಡೆ ಕಾಸಿನ ಕಿಮ್ಮತ್ತೂ ದಕ್ಕಿಲ್ಲ. ನಿಜವಾಗಿ,

1948 ಮೇ 15ರಂದು ಇಸ್ರೇಲ್ ರಾಷ್ಟ್ರ  ಅಧಿಕೃತವಾಗಿ ಘೋಷಣೆಯಾದದ್ದೇ  ರಕ್ತದೋಕುಳಿಯ ಮೇಲೆ. ಈ ಘೋಷಣೆಯ ಮೂರು  ವಾರಗಳ ಮೊದಲು, 1948 ಎಪ್ರಿಲ್ 9ರಂದು ಇರ್ಗುನ್ ಮತ್ತು ಸ್ಟೆರ್ನ್ ಎಂಬ ಝಿಯೋನಿಸ್ಟ್ ಬಂದೂಕುಧಾರಿ ಗುಂಪು ಪಶ್ಚಿಮ  ಜೆರುಸಲೇಮ್‌ನಲ್ಲಿರುವ ಡೆರ್ ಯಾಸೀನ್‌ಗೆ ನುಗ್ಗುತ್ತದೆ. ಇಲ್ಲಿ ವಾಸಿಸುತ್ತಿದ್ದ ಫೆಲೆಸ್ತೀನಿಯರ ಮೇಲೆ ಗುಂಡು ಹಾರಿಸಿ ನರಮೇಧ  ನಡೆಸುತ್ತದೆ. ಕಲ್ಲು ಕ್ವಾರೆಯಲ್ಲಿ ದುಡಿಯುತ್ತಿದ್ದ ಮತ್ತು ಕಲ್ಲು ಕೆತ್ತನೆಯಲ್ಲಿ ತೊಡಗಿಸಿಕೊಂಡಿದ್ದ ಬಡಪಾಯಿ ಫೆಲೆಸ್ತೀನಿಯರು  ಇಂಥದ್ದೊಂದು  ದಾಳಿಯನ್ನು ನಿರೀಕ್ಷಿಸಿಯೇ ಇರಲಿಲ್ಲ. ಈ ದಾಳಿಯಲ್ಲಿ 20ಕ್ಕಿಂತ ಅಧಿಕ ಫೆಲೆಸ್ತೀನಿಯರು ಹತ್ಯೆಗೀಡಾಗುತ್ತಾರೆ ಮತ್ತು  ಸಾವಿರಾರು ಮಂದಿ ಪಲಾಯನ ಮಾಡುತ್ತಾರೆ-(The Deir Yassin massacare: Why still matters 75 years later: 9, April 2023). ಫೆಲೆಸ್ತೀನಿಯರನ್ನು ಬಲವಂತದಿಂದ  ಒಕ್ಕಲೆಬ್ಬಿಸಿ ಆ ಭೂಮಿಯನ್ನು ಇಸ್ರೇಲ್ ಭೂಪಟಕ್ಕೆ  ಸೇರಿಸುವುದೇ ಈ ದಾಳಿಯ ಉದ್ದೇಶವಾಗಿತ್ತು. ಈ ನರಮೇಧಕ್ಕೆ ನೇತೃತ್ವ ನೀಡಿದವರೇ ಮೆನಾಚಿನ್ ಬೆಗಿನ್. ಇವರು ಆ ಬಳಿಕ ಇಸ್ರೇಲಿನ ಪ್ರಧಾನಿಯಾಗುತ್ತಾರೆ. ಮಾತ್ರವಲ್ಲ, ಶಾಂತಿ ಒಪ್ಪಂದದ ಹೆಸರಲ್ಲಿ ಈಜಿಪ್ಟ್ ಅಧ್ಯಕ್ಷ ಸಾದಾತ್‌ರ ಜೊತೆ ನೋಬೆಲ್ ಪ್ರಶಸ್ತಿ  ಹಂಚಿಕೊಳ್ಳುತ್ತಾರೆ. ಆ ಬಳಿಕ,

1982ರಲ್ಲಿ ಇತಿಹಾಸ ಕಂಡ ಅತಿದೊಡ್ಡ ನರಮೇಧಕ್ಕೆ ಜಗತ್ತು ಸಾಕ್ಷಿಯಾಗುತ್ತದೆ. ಲೆಬನಾನ್‌ನ ಶಬ್ರ ಮತ್ತು ಶತೀಲದ ನಿರಾಶ್ರಿತ ಕೇಂದ್ರಗಳ  ಮೇಲೆ ಇಸ್ರೇಲ್ ಸೇನೆ ಬೆಂಬಲಿತ ಶಸ್ತ್ರ ಸಜ್ಜಿತ ಗುಂಪು ಗಳು ಭೀಕರ ದಾಳಿ ಮಾಡುತ್ತವೆ. ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ನಡುವಿನ  ಮೂರು ಯುದ್ಧಗಳಿಂದಾಗಿ ಮತ್ತು ಇಸ್ರೇಲ್ ಭೂ ಒತ್ತುವರಿಯಿಂದಾಗಿ ನಿರಾಶ್ರಿತರಾದ ಫೆಲೆಸ್ತೀನಿಯರು ಲೆಬನಾನ್‌ನ ಈ ನಿರಾಶ್ರಿತ  ಕೇಂದ್ರಗಳಲ್ಲಿದ್ದರು. ಇಸ್ರೇಲ್ ಅಧ್ಯಕ್ಷ  ಇಝಾಕ್ ರಬಿನ್‌ರ ಹತ್ಯೆಯ ನೆಪದಲ್ಲಿ ನಡೆದ ಈ ಕ್ರೌರ್ಯಕ್ಕೆ 3,500 ಮಂದಿ ನಿರಾಶ್ರಿತರು  ಹತ್ಯೆಗೀಡಾದರು. ಇವರಲ್ಲಿ ಮಕ್ಕಳು ಮತ್ತು ಮಹಿಳೆಯರ ಸಂಖ್ಯೆಯೇ ಅಧಿಕ. ಆ ಬಳಿಕದಿಂದ ಈ 2023ರ ನವೆಂಬರ್ ವರೆಗೆ  ಫೆಲೆಸ್ತೀನಿನ ಮೇಲೆ ಇಸ್ರೇಲ್ ಹತ್ತು-ಹಲವು ಬಾರಿ ವೈಮಾನಿಕ ಮತ್ತು ಭೂದಾಳಿಯನ್ನು ನಡೆಸಿದೆ. ಸಾವಿರಕ್ಕೂ ಮಿಕ್ಕಿ ಫೆಲೆಸ್ತೀನಿಯರು  ಈ ದಾಳಿಗೆ ಬಲಿಯಾಗಿದ್ದಾರೆ. ಅಸಂಖ್ಯ ಮಂದಿ ಗಾಯಗೊಂಡಿದ್ದಾರೆ. ಅಂದಹಾಗೆ,

ಫೆಲೆಸ್ತೀನ್‌ನಿಂದ  ಹಾರಿ ಬರುವ ರಾಕೆಟ್‌ಗಳನ್ನೇ ಈ ಎಲ್ಲ ಸಂದರ್ಭಗಳಲ್ಲೂ ತನ್ನ ದಾಳಿಗೆ ಇಸ್ರೇಲ್ ನೆಪವಾಗಿ ಬಳಸಿ ಕೊಳ್ಳುತ್ತಿದೆ.  ಆದರೆ, ಅಕ್ರಮವಾಗಿ ರಾಷ್ಟ್ರ  ಸ್ಥಾಪನೆ ಮಾಡಿದ್ದಲ್ಲದೇ ತನ್ನ ಸುತ್ತಲಿನ ಜನತೆಯನ್ನು ಕುಡಿಯುವ ನೀರಿಗೂ ಅಂಗಲಾಚುವಂತೆ  ಮಾಡಿ,  ತುತ್ತು ಅನ್ನಕ್ಕೂ ಕೈಯೊಡ್ಡುವಂತೆ ನಿರ್ಬಂಧಿಸಿ, ಅವರಿಂದ ಸರ್ವ ಸ್ವಾತಂತ್ರ‍್ಯವನ್ನೂ ಕಸಿದುಕೊಂಡು ಮತ್ತು ಅವರ ಭೂಮಿಯನ್ನು ನಿತ್ಯ  ಕಸಿದುಕೊಳ್ಳುತ್ತಾ ಹಿಂಸೆಗೆ ಪ್ರಚೋದಿಸುವ ಮತ್ತು ಪ್ರತೀಕಾರ ತೀರಿಸುವಂತೆ ರೊಚ್ಚಿಗೆಬ್ಬಿಸುವ ಇಸ್ರೇಲ್‌ನ ನೀತಿ ಎಲ್ಲೂ ಚರ್ಚೆಗೆ  ಒಳಗಾಗುತ್ತಿಲ್ಲ. ಅವರ ಬದಲು ದುರ್ಬಲ ರಾಕೆಟ್ಟೇ ಸಮೂಹ ನಾಶಕವೆಂಬಂತೆ  ಬಿಂಬಿತವಾಗುತ್ತಿದೆ. ಇದೇವೇಳೆ,

ಅಕ್ಟೋಬರ್ 7ರಂದು ಇಸ್ರೇಲ್‌ನಲ್ಲಿ ಹಮಾಸ್ ನಡೆಸಿದ ಕಗ್ಗೊಲೆಯ ವಿರುದ್ಧ ಪ್ರಮುಖ ಮಾಧ್ಯಮಗಳು ಮತ್ತು ಜಾಗತಿಕ ನಾಯಕರು  ವ್ಯಕ್ತಪಡಿಸಿದ ಆಕ್ರೋಶ, ಆಘಾತ ಮತ್ತು ಪ್ರತೀಕಾರ ಭಾವದ ಸಣ್ಣದೊಂದು ಅಂಶವನ್ನಾದರೂ ಇಸ್ರೇಲ್ ಈ 75 ವರ್ಷಗಳಲ್ಲಿ ಎಸಗಿರುವ  ಕಗ್ಗೊಲೆ ಮತ್ತು ಕ್ರೌರ್ಯಗಳ ವಿರುದ್ಧ ಯಾಕೆ ವ್ಯಕ್ತಪಡಿಸುತ್ತಿಲ್ಲ ಎಂಬ ಪ್ರಶ್ನೆಗೂ ಮಹತ್ವವಿದೆ. ಅಥವಾ ಇಸ್ರೇಲ್ ಕಡೆಯಿಂದ ಯಾವ  ಅನ್ಯಾಯವೂ ನಡೆಯುತ್ತಿಲ್ಲವೇ, ಫೆಲೆಸ್ತೀನಿ ಹೋರಾಟಗಾರರು ಸುಳ್ಳು ಸುಳ್ಳೇ ಇಸ್ರೇಲನ್ನು ವಿಲನ್ ಆಗಿ ಬಿಂಬಿಸುತ್ತಿದ್ದಾರೆಯೇ ಎಂಬ  ಅನುಮಾನಕ್ಕೂ ಅವಕಾಶ ಇದೆ. ನಿಜವಾಗಿ, ಇಸ್ರೇಲ್ ಸಂತ್ರಸ್ತ ರಾಷ್ಟ್ರವಾಗಿಯೂ ಫೆಲೆಸ್ತೀನಿಯರು ಭಯೋತ್ಪಾದಕರಾಗಿಯೂ  ಬಿಂಬಿತವಾಗಿರುವುದರ ಹಿಂದೆ ಬಲವಾದ ಒಂದು ಕಾರಣ ಇದೆ. ಅದುವೇ,

MEMRI

2001 ಸೆಪ್ಟೆಂಬರ್ 11ರಂದು (9/11) ಅಮೇರಿಕದ ಅವಳಿ ಕಟ್ಟಡಗಳ ಮೇಲೆ ದಾಳಿ ನಡೆದ ಬೆನ್ನಿಗೇ ವೀಡಿಯೋ ಒಂದು ವೈರಲ್  ಆಗಿತ್ತು. ಅಮೇರಿಕ, ಬ್ರಿಟನ್, ಫ್ರಾನ್ಸ್ ಸಹಿತ ಯುರೋಪಿಯನ್ ರಾಷ್ಟ್ರಗಳು ಮತ್ತು ಅರಬ್ ರಾಷ್ಟ್ರಗಳ ಟಿ.ವಿ. ಚಾನೆಲ್ ಗಳು ಕೂಡಾ  ಆ ವೀಡಿಯೋವನ್ನು ಪ್ರಸಾರ ಮಾಡಿದ್ದುವು. ಭಾರತೀಯ ಮಾಧ್ಯಮಗಳಲ್ಲೂ ಆ ವೀಡಿಯೋ ಸುದ್ದಿಯಾಗಿತ್ತು. ‘ಅವಳಿ ಕಟ್ಟಡದ ಮೇಲಿನ ದಾಳಿಯನ್ನು ಸಂಭ್ರಮಿಸುತ್ತಿರುವ ಫೆಲೆಸ್ತೀನಿಯರು’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಆ ವೀಡಿಯೋದಿಂದ ಕೋಟ್ಯಂತರ  ವಿರೋಧಿಗಳನ್ನು ಫೆಲೆಸ್ತೀನಿಯರು ಗಿಟ್ಟಿಸಿಕೊಂಡರು. ಅರಬ್ ರಾಷ್ಟ್ರಗಳ ವಿರೋಧಕ್ಕೂ ಫೆಲೆಸ್ತೀನಿಯರು ತುತ್ತಾದರು. ಈಗಿನಂತೆ  ಸೋಶಿಯಲ್ ಮೀಡಿಯಾ ಬಲಶಾಲಿಯಾಗಿ ಲ್ಲದ ಆ ಕಾಲದಲ್ಲಿ ಸತ್ಯಸುದ್ದಿ ಬಹಿರಂಗವಾದಾಗ ಬಹುತೇಕರೂ ಆ ವೀಡಿಯೋವನ್ನೇ  ಮರೆತಿದ್ದರು. ನಿಜವಾಗಿ, 1990ರ ಗಲ್ಫ್ ಯುದ್ಧದ ವೇಳೆ ಸದ್ದಾಮ್ ಹುಸೇನ್‌ರನ್ನು ಬೆಂಬಲಿಸಿ ಫೆಲೆಸ್ತೀನಿಯರು ನಡೆಸಿದ ಸಂಭ್ರಮದ  ವೀಡಿಯೋ ಅದಾಗಿತ್ತು. ಅಷ್ಟಕ್ಕೂ,

ಅವಳಿ ಗೋಪುರ ಧ್ವಂಸಕ್ಕೆ ಸಂಬಂಧವೇ ಇಲ್ಲದ ಈ ವೀಡಿಯೋವನ್ನು ಮಾಧ್ಯಮಗಳಿಗೆ ಹಂಚಿದ್ದು ಯಾರು, ಜಗತ್ತಿನ ಪ್ರಮುಖ  ಮಾಧ್ಯಮಗಳು ಆ ವೀಡಿಯೋವನ್ನು ಪರಾಂಬರಿಸದೇ ಪ್ರಸಾರ ಮಾಡಿದ್ದು ಹೇಗೆ ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ.  ಬಹುಶಃ ಅದರ ಹಿಂದಿರುವುದೇ ಈ,

ಮಿಡ್ಲೀಸ್ಟ್ ಮೀಡಿಯಾ ರಿಸರ್ಚ್ ಇನ್‌ಸ್ಟಿಟ್ಯೂಶನ್ ಅಥವಾ MEMRI ಎಂಬ ಮಾಧ್ಯಮ ಸಂಸ್ಥೆ.

1997 ಡಿಸೆಂಬರ್ 1ರಂದು ಅಮೇರಿಕದ ವಾಷಿಂಗ್ಟನ್‌ನಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆಯ ಮುಖ್ಯ ರೂವಾರಿ ಇಸ್ರೇಲಿ ಗುಪ್ತಚರ  ಸಂಸ್ಥೆಯ ಮಾಜಿ ಅಧಿಕಾರಿ ಇಗಲ್ ಕಾರ್ಮೋನ್ (Yigal Carmen) ಮತ್ತು ಇಸ್ರೇಲಿ-ಅಮೇರಿಕನ್ ಚಿಂತಕ ಮೆರಾವ್  ವರ್ಮ್ಸೆರ್ (Meyrav Wurmser). ತುರ್ಕಿ, ಯಮನ್, ಲೆಬನಾನ್, ಸಿರಿಯಾ ಸಹಿತ ಅರಬ್ ರಾಷ್ಟ್ರಗಳ ಸುದ್ದಿಗಳನ್ನು ಇಂಗ್ಲಿಷ್  ಮತ್ತಿತರ ಭಾಷೆಗಳಿಗೆ ಭಾಷಾಂತರಿಸುವ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಈ  MEMRIಯು, ಮುಂಚೂಣಿ ಮಾಧ್ಯಮಗಳ ಮೇಲೆ  ಗಾಢ ಪ್ರಭಾವವನ್ನು ಹೊಂದಿದೆ. ಜಗತ್ತಿನ ಪ್ರಮುಖ ಮಾಧ್ಯಮಗಳಿಗೆ ಯಾವುದೇ ಹಣವನ್ನು ಪಡೆಯದೇ ಸುದ್ದಿಯನ್ನು ಒದಗಿಸುವ ಈ  ಸಂಸ್ಥೆಯು ಅರಬ್ ಮತ್ತು ಇಸ್ರೇಲ್ ವಿರೋಧಿ ಸುದ್ದಿಗಳನ್ನು ಉತ್ಪಾದಿಸುತ್ತಿದೆ ಎಂಬ ಆರೋಪ ಪ್ರಬಲವಾಗಿಯೇ ಇದೆ. ಇಸ್ರೇಲ್‌ನ  ಹಿನ್ನೆಲೆ, ಭೂ ವಿಸ್ತರಣೆ, ಕ್ರೌರ್ಯಗಳು ಸಹಿತ ಯಾವುದೂ ಚರ್ಚೆಯಾಗದಂತೆ ನೋಡಿಕೊಳ್ಳುವುದು ಮತ್ತು ಫೆಲೆಸ್ತೀನಿಯರ ವಿಮೋಚ ನಾ ಹೋರಾಟವನ್ನು ಭಯೋತ್ಪಾದನೆಯಂತೆ ಬಿಂಬಿಸುವಲ್ಲಿ ಇದರ ಪಾತ್ರ ಮಹತ್ವದ್ದು ಎಂದು ಹೇಳಲಾಗುತ್ತಿದೆ. ಹಮಾಸ್  ಹೋರಾಟಗಾರರು 40 ಇಸ್ರೇಲಿ ಮಕ್ಕಳ ಶಿರಚ್ಛೇದನ ನಡೆಸಿದ್ದಾರೆ ಎಂಬ ಸುದ್ದಿ ಮೊದಲು ಉತ್ಪಾದನೆಯಾದದ್ದು ಎಲ್ಲಿ ಎಂಬ ಪತ್ತೆ  ಕಾರ್ಯಕ್ಕೆ ಯಾರಾದರೂ ಇಳಿದರೆ, ಅವರು ಈ  MEMRI ಕಚೇರಿಗೆ ತಲುಪುವ ಸಾಧ್ಯತೆಯೂ ಇಲ್ಲದಿಲ್ಲ. ಮೊದಲು ಈ ಸುದ್ದಿಯನ್ನು  ಹಂಚಿಕೊಂಡದ್ದು ಇಸ್ರೇಲ್. ಅದೇ ಸುದ್ದಿಯನ್ನು ಆ ಬಳಿಕ ಸಿಎನ್‌ಎನ್ ನ್ಯೂಸ್ ಚಾನೆಲ್ ಪ್ರಸಾರ ಮಾಡಿತು. ಆ ಬಳಿಕ ಅಮೇರಿಕದ  ಅಧ್ಯಕ್ಷ ಜೊ ಬೈಡೆನ್ ಆ ಸುದ್ದಿಯನ್ನು ಮಾಧ್ಯಮಗಳ ಜೊತೆ ಹಂಚಿಕೊಂಡರು. ಇದಾಗಿ ಐದು ದಿನಗಳ ಬಳಿಕ ಈ ಸುದ್ದಿ ಸುಳ್ಳು  ಎಂದು ಸಿಎನ್‌ಎನ್ ಪತ್ರಕರ್ತೆ ಒಪ್ಪಿಕೊಂಡರಲ್ಲದೇ, ಕ್ಷಮೆ ಯಾಚಿಸಿದರು.

ಅಂದಹಾಗೆ,

ಇಸ್ರೇಲ್ ರಾಷ್ಟ್ರ ಪರಿಕಲ್ಪನೆಗೂ 1893ರಲ್ಲಿ ಫ್ರಾನ್ಸ್ ನಲ್ಲಿ  ನಡೆದ ಘಟನೆಗೂ ಸಂಬಂಧ  ಇದೆ.

ಆಲ್ಫ್ರೆಡ್ ಡ್ರೆಫಸ್ (Alfred Dreyfus) ಎಂಬ ಸೇನಾಧಿಕಾರಿಯನ್ನು 1893ರಲ್ಲಿ ಫ್ರಾನ್ಸ್ ವಿಚಾರಣೆಗೆ ಒಳಪಡಿಸಿತು. ಫ್ರಾನ್ಸ್ ನ   ರಹಸ್ಯ ಮಾಹಿತಿಯನ್ನು ಫ್ರಾನ್ಸ್ನಲ್ಲಿರುವ ಜರ್ಮನಿ ರಾಯಭಾರಿಗೆ ವರ್ಗಾಯಿಸಿದ್ದಾರೆ ಎಂಬ ಆರೋಪ ಈ 35 ವರ್ಷದ ಯಹೂದಿ  ಸೇನಾಧಿಕಾರಿಯ ಮೇಲಿತ್ತು. 1894ರಲ್ಲಿ ಫ್ರೆಂಚ್ ಅಕಾಡೆಮಿಯ ಹತ್ತಿರ ಇವರನ್ನು ಕೋರ್ಟ್ ಮಾರ್ಶಲ್‌ಗೆ ಒಳಪಡಿಸಲಾಯಿತಲ್ಲದೇ,  ಯೋಧರ ಜೊತೆಗೇ ಸಾವಿರಾರು ಜನರನ್ನೂ ಸೇರಿಸಿ ಅತ್ಯಂತ ನಾಟಕೀಯವಾಗಿ ಶಿಕ್ಷಿಸಲಾಯಿತು. ಅವರ ಯೂನಿಫಾರ್ಮ್ ಹರಿದೆಸೆದು  ಪದಕಗಳನ್ನು ಕಿತ್ತೆಸೆದು ಕೂದಲು ಕತ್ತರಿಸಿ ಚಾಟಿಯಿಂದ ಥಳಿಸಲಾಯಿತು. ಈ ಎಲ್ಲ ಕ್ರೌರ್ಯಗಳ ನಡುವೆ ಫ್ರಾನ್ಸ್ ಗೆ  ಜಯವಾಗಲಿ ಎಂಬ  ಘೋಷಣೆಯನ್ನೂ ಕೂಗಲಾಯಿತು. ಅಲ್ಪ ಸಂಖ್ಯಾತ ಯಹೂದಿಯರು ವಿಶ್ವಾಸಕ್ಕೆ ಯೋಗ್ಯರಲ್ಲ ಎಂಬ ಪ್ರಚಾರದೊಂದಿಗೆ ಈ ಎಲ್ಲವೂ  ನಡೆಯಿತು. ಆ ಬಳಿಕ 5 ವರ್ಷಗಳ ಕಠಿಣ ಶಿಕ್ಷೆ ಜಾರಿಗೊಳಿಸಲಾಯಿತು. ನಿಜವಾಗಿ,

ಈ ಆಲ್ಫ್ರೆಡ್ ಅಪರಾಧಿಯೇ ಆಗಿರಲಿಲ್ಲ. ಸೇನೆಯ ಹೊಸ ಕಮಾಂಡರ್ ಜಾರ್ಜ್ ಪಿಕಾರ್ಟ್ ಎಂಬವರು ಈ ಬಗ್ಗೆ ತನಿಖೆ  ನಡೆಸಿದರಲ್ಲದೇ, ಆಲ್ಫ್ರೆಡ್‌ರನ್ನು ಅನ್ಯಾಯವಾಗಿ ದಂಡಿಸಲಾಗಿದೆ ಎಂದು ಹೇಳಿದರು ಮತ್ತು ಮೇಜರ್ ಜನರಲ್ ಫರ್ಡಿನೆಂಡ್ ವಾಲ್‌ಸಿ ನ್ ನಿಜವಾದ ಅಪರಾಧಿ ಎಂದು 1896ರಲ್ಲಿ ವರದಿ ನೀಡಿದರು. ಆದರೆ ಫ್ರಾನ್ಸ್ ಈ ವರದಿಯನ್ನು ಒಪ್ಪಲು ತಯಾರಿರಲಿಲ್ಲ. ಈ ಇಡೀ  ವಿಚಾರಣಾ ಪ್ರಕ್ರಿಯೆಯನ್ನು ವರದಿ ಮಾಡಲು ಆಸ್ಟ್ರೀಯಾದಿಂದ ಆಗಮಿಸಿದ್ದ ಪತ್ರಕರ್ತ ಥಿಯೋಡರ್ ಹೆಲ್‌ಸಲ್ ಎಂಬವರು ಯಹೂದಿಯರಿಗೆ ಪ್ರತ್ಯೇಕ ರಾಷ್ಟ್ರದ ಆಶಯ ಮೊತ್ತಮೊದಲ ಬಾರಿ ಮುಂದಿಟ್ಟರು. ಯುರೋಪ್‌ನಲ್ಲಿ ಯಹೂದಿಯ ಮೇಲೆ ನಡೆಯುತ್ತಿರುವ  ಹಿಂಸೆ, ಅನ್ಯಾಯ, ಕ್ರೌರ್ಯಗಳಿಗೆ ಪ್ರತ್ಯೇಕ ರಾಷ್ಟ್ರವೇ ಪರಿಹಾರ ಎಂಬ ವಾದವನ್ನು ಮುಂದಿಟ್ಟು 1896ರಲ್ಲಿ ‘ಯಹೂದಿ ರಾಷ್ಟ್ರ ’ ಎಂಬ  ಪುಸ್ತಕವನ್ನೇ ಬರೆದರು. ಈ ಹಿನ್ನೆಲೆಯಲ್ಲಿ 1897ರಲ್ಲಿ ಸ್ವಿಟ್ಝರ್ಲ್ಯಾಂಡಿನ ಬಾಸೆಲ್‌ನಲ್ಲಿ ಜಾಗತಿಕ ಝಿಯೋನಿಸ್ಟ್ ಕಾನ್ಫರೆನ್ಸ್ ನಡೆಯಿತು  ಮತ್ತು ಯಹೂದಿಯರಿಗೆ ಸ್ವತಂತ್ರ ರಾಷ್ಟ್ರ  ಎಂಬ ಆಶಯವನ್ನು ಮುಂದಿಟ್ಟಿತು. ಈ ಸ್ವತಂತ್ರ ಯಹೂದಿ ರಾಷ್ಟ್ರ ವನ್ನು ಉಗಾಂಡದಲ್ಲಿ  ಸ್ಥಾಪಿಸಿ ಎಂದು 1907ರಲ್ಲಿ ಬ್ರಿಟನ್ ಯಹೂದಿಯರಿಗೆ ಹೇಳಿತು. ಹಾಗಂತ, ಉಂಗಾಡವೇನೂ ಖಾಲಿ ಬಿದ್ದಿರಲಿಲ್ಲ. ಆದರೆ ಯಹೂದಿಯರು ಈ ಆಫರನ್ನು ತಿರಸ್ಕರಿಸಿದರು. ಬಳಿಕ ಯಹೂದಿಯರು 1917ರ ಬಾಲ್ಫರ್ ಘೋಷಣೆಯೊಂದಿಗೆ ಫೆಲೆಸ್ತೀನ್‌ನಲ್ಲಿ ಯಹೂದಿ  ರಾಷ್ಟ್ರ  ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧವಾಯಿತು. ಫೆಲೆಸ್ತೀನನ್ನು ಎರಡಾಗಿ ವಿಭಜಿಸಿ ಒಂದು ಭಾಗದಲ್ಲಿ ಇಸ್ರೇಲನ್ನು ಸ್ಥಾಪಿಸುವ ಯೋಜನೆಯನ್ನು 1947 ನವೆಂಬರ್‌ನಲ್ಲಿ ವಿಶ್ವಸಂಸ್ಥೆ ಪ್ರಸ್ತಾಪಿಸಿತು. ಹಾಗಂತ, ಆಗ ಫೆಲೆಸ್ತೀನ್‌ನಲ್ಲಿ ಜನವಾಸವಿಲ್ಲದ ಖಾಲಿ ಪ್ರದೇಶವೇನೂ ಇರಲಿಲ್ಲ. ಅಂದರೆ ಫೆಲೆಸ್ತೀನಿಯರನ್ನು ಹೊರಹಾಕಿ ಯಹೂದಿಯರನ್ನು ಕೂರಿಸುವುದು ಎಂಬುದು ಅದರ ಇಂಗಿತವಾಗಿತ್ತು. 1948 ಮೇ  15ರಂದು ಫೆಲೆಸ್ತೀನ್‌ನಲ್ಲಿ ಸ್ವತಂತ್ರ ಇಸ್ರೇಲ್ ರಾಷ್ಟ್ರ  ಸ್ಥಾಪನೆಯಾಯಿತು. ಇದು ಇತಿಹಾಸ. ಅಷ್ಟಕ್ಕೂ,

ಫೆಲೆಸ್ತೀನ್‌ನಿಂದ ಹಾರುವ ಜುಜುಬಿ ರಾಕೆಟನ್ನು ತೋರಿಸಿ ಫೆಲೆಸ್ತೀನಿಯರನ್ನು ಭಯೋತ್ಪಾದಕರಂತೆ ಮತ್ತು ಇಸ್ರೇಲನ್ನು ಸಂತ್ರಸ್ತ  ರಾಷ್ಟ್ರ ದಂತೆ ಚಿತ್ರಿಸುವವರು ಗಾಝಾದ ಆ ಹಿರಿಯ ವ್ಯಕ್ತಿಯ ಭಿತ್ತಿಪತ್ರವನ್ನು ಒಮ್ಮೆ ಹೃದಯಕ್ಕೆ ಒತ್ತಿ ಹಿಡಿದು ಅವಲೋಕಿಸುವುದು  ಒಳ್ಳೆಯದು.

No comments:

Post a Comment