Tuesday, May 21, 2024

ಗೆಲ್ಲಿಸಿದ ಸೋಶಿಯಲ್ ಮೀಡಿಯಾವೇ ಸೋಲಿಸಲಿದೆಯೇ?
1. ಟೈಮ್ಸ್ ನೌ
2. ಝೀ ನ್ಯೂಸ್
3. ರಿಪಬ್ಲಿಕ್ ಭಾರತ್
4. ಸಿಎನ್-ನ್ಯೂಸ್ 18
5. ಇಂಡಿಯಾ ಟಿವಿ
6. ಟಿವಿ ಟುಡೇ ನೆಟ್‌ವರ್ಕ್
7. ಇಂಡಿಯಾ ಟುಡೇ
8. ಆಜ್‌ತಕ್

ಒಂದುವೇಳೆ, ಇವು ಮತ್ತು ಇಂಥ ಇನ್ನಿತರ ಟಿವಿ ಚಾನೆಲ್‌ಗಳು ‘ಮೋದಿ ಕಾವಲು’ಗಾರರಾಗಿ ಬದಲಾಗದೇ ಇರುತ್ತಿದ್ದರೆ ನಮಗೋರ್ವ ಧ್ರುವ್ ರಾಠಿ ಸಿಗ್ತಾ ಇದ್ದರೇ? ರವೀಶ್ ಕುಮಾರ್ ಈ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆಯುತ್ತಿದ್ದರೇ? ಓರ್ವ ಆಕಾಶ್ ಬ್ಯಾನರ್ಜಿ, ಮುಹಮ್ಮದ್ ಝುಬೇರ್, ಕುನಾಲ್ ಕಾಮ್ರಾ, ಕುಮಾರ್ ಶ್ಯಾಮ್‌ಗಳು ಜನರ ನಾಲಿಗೆಯ ತುದಿಯಲ್ಲಿ ಇರುತ್ತಿದ್ದರೇ?

ಇವು ಬರೇ ಪ್ರಶ್ನೆಗಳಲ್ಲ

ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ನಲ್ಲಿ  ತಜ್ಞರಾಗಿರುವ ಯಾಮಿನಿ ಅಯ್ಯರ್ ಮತ್ತು ನೀಲಾಂಜನ್ ಸಿರ್ಕಾರ್ ಎಂಬಿಬ್ಬರು ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಸುತ್ತಾಡಿದಾಗ ಸಿಕ್ಕ ಅನುಭವವನ್ನು ದಿ ಹಿಂದೂ ಪತ್ರಿಕೆಯಲ್ಲಿ ಹಂಚಿಕೊಂಡಿದ್ದಾರೆ. ಮೋಹನ್‌ಲಾಲ್ ಗಂಜ್ ಕ್ಷೇತ್ರದ ರಾವತ್ ಸಮುದಾಯದ ಯುವಕ ಧ್ರುವ್ ರಾಠಿಯ ದೊಡ್ಡ ಫ್ಯಾನ್. ನಿರಂತರವಾಗಿ ಧ್ರುವ್ ರಾಠಿಯ ವೀಡಿಯೋ ವೀಕ್ಷಿಸುತ್ತಿರುವುದಾಗಿ ಆತ ಇವರೊಂದಿಗೆ ಹೇಳಿಕೊಂಡ. ಹಾಗಂತ, ಈತ ಬಿಜೆಪಿ ಬೆಂಬಲಿಗ. ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಭಾವ ಶಾಲಿಯಾಗಿರುವ ಮೋಹನ್‌ಲಾಲ್ ಗಂಜ್ ಕ್ಷೇತ್ರದ ಯುವಕನ ಬಗ್ಗೆಯೂ ಈ ಇಬ್ಬರು ಬರೆದಿದ್ದಾರೆ. ಈತ ಜಾಟ್ ಸಮು ದಾಯದವ. ಬಹಿರಂಗವಾಗಿ ಆತ ರಾಜಕೀಯೇತರ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾನೆ. ಆದರೆ, ಬಿಜೆಪಿಯ ಬಗ್ಗೆ ತೀವ್ರ ಅಸಮಾ ಧಾನವಿದೆ. ಆದರೆ, ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದರೆ ತೊಂದರೆ ಎದುರಾಗಬಹುದು ಎಂಬುದು ಆತನ ಅಭಿಪ್ರಾಯ. ಮಧ್ಯ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಕುರ್ಮಿ ಸಮುದಾಯ ಬಹಳ ಪ್ರಭಾವಿಯಾಗಿದೆ. ಮುಖ್ಯವಾಗಿ ಬಾರಬಂಕಿ ಪಾರ್ಲಿಮೆಂಟ್ ಕ್ಷೇತ್ರದಲ್ಲಿ ಇದೇ ಸಮುದಾಯದ ಬಾಹುಳ್ಯವಿದೆ. ಇಲ್ಲಿನ ಯುವ ತಲೆಮಾರಿನಲ್ಲಿ ಬಿಜೆಪಿಯ ಬಗ್ಗೆ ಮತ್ತು ಮುಖ್ಯ ವಾಹಿನಿ ಟಿವಿ ಚಾನೆಲ್‌ಗಳ ಸುದ್ದಿಗಳ ಬಗ್ಗೆ ತೀವ್ರ ಆಕ್ಷೇಪವಿದೆ. 2019ರಲ್ಲಿ ಬಾರಬಂಕಿ ಪಾರ್ಲಿಮೆಂಟ್ ಕ್ಷೇತ್ರದಲ್ಲಿ ಬಿಜೆಪಿ ಜಯ ಗಳಿಸಿತ್ತು. ಆದರೆ 2022ರ ವಿಧಾನಸಭಾ ಚುನಾವಣೆಯಲ್ಲಿ 5ರಲ್ಲಿ 3 ಸ್ಥಾನಗಳನ್ನೂ ಬಿಜೆಪಿ ಕಳಕೊಂಡಿತ್ತು. ಇದೇ ಉತ್ತರ ಪ್ರದೇಶದ ಆಗ್ರಾದಲ್ಲಿದ್ದ ಜಾಟ್ ಸಮುದಾಯದ ಯುವಕರ ಗುಂಪು ತಾವು ನಿರಂತರವಾಗಿ ರವೀಶ್ ಕುಮಾರ್ ವೀಡಿಯೋ ವೀಕ್ಷಿಸುತ್ತಿರುವುದಾಗಿ ಹೇಳಿರುವುದನ್ನು ಈ ಇಬ್ಬರು ತಜ್ಞರು ಬರ ಕೊಂಡಿದ್ದಾರೆ. ಹಾಗೆಯೇ, ಒಂದುವೇಳೆ, ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅದಕ್ಕೆ ಕಾರಣ ಧ್ರುವ್ ರಾಠಿ ಎಂದು ಓರ್ವ ಮುಸ್ಲಿಮ್ ಯುವಕ ಹೇಳಿರುವುದನ್ನೂ ಇವರು ಉಲ್ಲೇಖಿಸಿದ್ದಾರೆ.

ನಿಜವಾಗಿ,

ಈ ಬಾರಿಯ ಚುನಾವಣೆ ಬಿಜೆಪಿಯ ಟಿವಿ ಚಾನೆಲ್‌ಗಳು ಮತ್ತು ವಿರೋಧ ಪಕ್ಷಗಳ ಸೋಶಿಯಲ್ ಮೀಡಿಯಾಗಳ ನಡುವೆ ನಡೆಯುತ್ತಿದೆ ಎನ್ನುವುದೇ ಹೆಚ್ಚು ಸರಿ. ಅದರಲ್ಲೂ ಯೂಟ್ಯೂಬ್ ಚಾನೆಲ್‌ಗಳ ಪಾತ್ರ ಬಹಳ ಹಿರಿದು. 2019ರಲ್ಲೂ ಬಹುತೇಕ ಇಂಥದ್ದೇ  ವಾತಾವರಣ ಇತ್ತು. ಈಗಿನಷ್ಟಲ್ಲದಿದ್ದರೂ ಸೋಶಿಯಲ್ ಮೀಡಿಯಾ ಜನಪ್ರಿಯವಾಗಿಯೇ ಇತ್ತು. ಪ್ರಧಾನಿ ಮೋದಿಯನ್ನು ಕಾವಲು ಕಾಯುವ ಟಿವಿ ಚಾನೆಲ್‌ಗಳು, ಪತ್ರಿಕೆಗಳು ಮತ್ತು ಬಿಜೆಪಿ ಪ್ರಣೀತ ಸೋಶಿಯಲ್ ಮೀಡಿಯಾ ಒಂದುಕಡೆಯಾದರೆ ಇನ್ನೊಂದು ಕಡೆ ಅವುಗಳ ಪ್ರೊಪಗಾಂಡಾ ವನ್ನು ಪ್ರಶ್ನಿಸುವ ಸೋಶಿಯಲ್ ಮೀಡಿಯಾಗಳಿದ್ದುವು. ಒಂದು ವೇಳೆ, ಪುಲ್ವಾಮ ಮತ್ತು ರಾಮಮಂದಿರ ಇಶ್ಯೂಗಳೆರಡು ಅಲ್ಲದೇ ಇರುತ್ತಿದ್ದರೆ ಬಿಜೆಪಿ 313 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಕಡಿಮೆ ಇತ್ತು. ಆದರೆ,

ಈ ಬಾರಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. 2014 ಮತ್ತು 2019ರ ಚುನಾವಣಾ ಗೆಲುವಿಗೆ ಬಿಜೆಪಿ ಯಾವ ಮಾಧ್ಯಮವನ್ನು ಬಳಸಿಕೊಂಡಿತ್ತೋ ಅದೇ ಸೋಶಿಯಲ್ ಮೀಡಿಯಾವೇ ಇವತ್ತು ಬಿಜೆಪಿಗೆ ಸವಾಲಾಗಿ ನಿಂತಿದೆ. ಮುಖ್ಯವಾಗಿ 2019ರಿಂದ ಈ 2024ರ ನಡುವೆ 5 ವರ್ಷಗಳು ಕಳೆದಿವೆ. ಇದು ಸೋಶಿಯಲ್ ಮೀಡಿಯಾಕ್ಕೆ ಸಂಬಂಧಿಸಿ ಮಹತ್ವಪೂರ್ಣ ಅವಧಿ. ಈ ಅವಧಿ ಯಲ್ಲಿ ಕೋಟ್ಯಂತರ ಯುವಕರು ಪದವೀಧರರಾಗಿ ಶಿಕ್ಷಣ ಸಂಸ್ಥೆಗಳಿಂದ  ಹೊರಬಂದಿದ್ದಾರೆ. ಶಾಲೆಗಳಲ್ಲಿ ಕಲಿಯುತ್ತಿದ್ದವರು ಕಾಲೇಜು ಮೆಟ್ಟಿಲು ಹತ್ತಿದ್ದಾರೆ. ಕಾಲೇಜು ಮೆಟ್ಟಿಲು ಹತ್ತಿದವರು ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೊರೋನಾ ನಂತರ ಹರೆಯದವರ ಕೈಗೂ ಮೊಬೈಲ್ ಬಂದಿದೆ. ಇದು ಒಂದು ಭಾಗವಾದರೆ, ಇನ್ನೊಂದು ಭಾಗ ಸಾಮಾನ್ಯ ನಾಗರಿಕರದ್ದು. ಕಳೆದೈದು ವರ್ಷಗಳಲ್ಲಿ ಮೊಬೈಲ್ ವೀಕ್ಷಣೆ ಮತ್ತು ವಿಷಯಗಳ ಆದ್ಯತೆಯಲ್ಲಿ ಇವರು ಹೆಚ್ಚು ಪ್ರಬುದ್ಧರಾಗಿದ್ದಾರೆ. ಕಂಟೆಂಟ್  ಆಧಾರಿತ ಕಾರ್ಯಕ್ರಮಗಳನ್ನು ವೀಕ್ಷಿಸಲು ಪ್ರಾರಂಭಿಸಿದ್ದಾರೆ. 2010ರಿಂದ 2019ರ ನಡುವೆ ಜನರು ಸಾಮಾನ್ಯವಾಗಿ ಟಿವಿ ಚಾನೆಲ್‌ಗಳ ನರೇಟಿವ್‌ಗಳ ಮೇಲೆಯೇ ಹೆಚ್ಚು ನಂಬಿಕೆ ಇಡುತ್ತಿದ್ದರು. ಕಂಟೆAಟ್‌ಗಳಿಗಿಂತ  ಟಿವಿ ಚಾನೆಲ್‌ಗಳ ಮೇಲಿನ ನಂಬಿಕೆಯೇ ಅವರನ್ನು ನಿಯಂತ್ರಿಸುತ್ತಿತ್ತು. ವಿವಿಧ ಹೆಸರುಗಳಲ್ಲಿ ಮೋದಿ ಪರ ನೀಡುತ್ತಿದ್ದ ವಿವಿಧ ಕಾರ್ಯಕ್ರಮಗಳ ಮೇಲೆ ವಿಶ್ವಾಸವನ್ನೂ ತಾಳುತ್ತಿದ್ದರು. ಆದರೆ,

2019ರ ಬಳಿಕ ಆಗಿರುವ ಬಹಳ ದೊಡ್ಡ ಬದಲಾವಣೆ ಏನೆಂದರೆ, ಗೋಧಿ ಮೀಡಿಯಾಗಳಿಂದ ರೋಸಿ ಹೋದ ಪತ್ರಕರ್ತರು ಪರ್ಯಾಯ ಮಾಧ್ಯಮಗಳನ್ನು ಪ್ರಬಲವಾಗಿ ಬಳಸಿಕೊಂಡದ್ದು. ಮುಖ್ಯವಾಗಿ, ಯೂಟ್ಯೂಬ್‌ನಲ್ಲಿ ಇವರೆಲ್ಲ ನೆಲೆ ಕಂಡುಕೊಂಡರು. ಟಿವಿ ಚಾನೆಲ್‌ಗಳ ಏಕಮುಖ ಧೋರಣೆಯನ್ನು ಖಂಡಿಸಿ ಅಲ್ಲಿಂದ ಹೊರಬಂದವರು ಮತ್ತು ಇನ್ನಿತರ ಜರ್ನ ಲಿಸ್ಟ್ ಗಳಿಗೆ  ಯೂಟ್ಯೂಬ್ ಅತ್ಯಂತ ಯೋಗ್ಯ ತಾಣವಾಯಿತು. ವರಮಾನಕ್ಕೆ ದಾರಿಯೂ ಆಯಿತು. ಇನ್ನೊಂದು ಕಡೆ ಟಿವಿ ಚಾನೆಲ್‌ಗಳ ಕಾರ್ಯಕ್ರಮಗಳನ್ನು ಪೇಲವಗೊಳಿಸುವಷ್ಟು ಗಟ್ಟಿ ಕಂಟೆAಟ್‌ಗಳನ್ನು ಇವರು ನೀಡತೊಡಗಿದರು. ನಿಖರ ಮಾಹಿತಿ, ಅಂಕಿ-ಅಂಶ, ಸಾಕ್ಷ್ಯ ಆಧಾರಿತ ವಾದಗಳ ಮೂಲಕ ಟಿವಿ ಚಾನೆಲ್‌ಗಳಿಗೆ ಸವಾಲು ಹಾಕತೊಡಗಿದರು. ಇವತ್ತು ದೇಶದಾದ್ಯಂತ 1 ಲಕ್ಷವನ್ನೂ ದಾಟಿ ಸಬ್‌ಸ್ಕ್ರೈಬರ್‌ಗಳುಳ್ಳ 40 ಸಾವಿರಕ್ಕಿಂತಲೂ ಅಧಿಕ ಯೂಟ್ಯೂಬ್ ಚಾನೆಲ್‌ಗಳಿವೆ. ಇವುಗಳಲ್ಲಿ ರಾಜಕೀಯ ಮತ್ತು ರಾಜಕೀಯೇತರ ವಿಷಯಗಳಿಗೆ ಸೀಮಿತವಾದ ಯೂಟ್ಯೂಬ್ ಗಳಿವೆಯಾದರೂ ರಾಜಕೀಯ ಯೂಟ್ಯೂಬ್‌ಗಳೇ ಅಧಿಕ ಎಂಬುದೂ ಗಮನಾರ್ಹ. ಅಂದಹಾಗೆ,

ಒಂದು  ಲಕ್ಷ ಸಬ್‌ಸ್ಕ್ರೈ ಬರ್ ಹೊಂದುವುದು ಸುಲಭ ಅಲ್ಲ. ನಿರಂತರ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದರೂ ಒಂದು ಯೂಟ್ಯೂಬ್ ಚಾನೆಲ್ ಲಕ್ಷ ಸಬ್‌ಸ್ಕೆöçÊಬರ್ ಗಡಿ ದಾಟುವುದಕ್ಕೆ ಬಹುತೇಕ ಬಾರಿ ಯಶಸ್ವಿಯಾಗುವುದಿಲ್ಲ. ಜನರು ಕಾರ್ಯಕ್ರಮ ವೀಕ್ಷಿಸಿದರೂ ಸಬ್‌ಸ್ಕ್ರೈಬ್  ಆಗುವುದಿಲ್ಲ. ಈ ಚಾನೆಲನ್ನು ಬೆಂಬಲಿಸಬೇಕು ಎಂಬ ಭಾವ ವೀಕ್ಷಕರಲ್ಲಿ ಮೂಡುವವರೆಗೆ ಚಾನೆಲ್  ಹೆಚ್ಚಾಗುವುದಿಲ್ಲ. ಇವತ್ತು ಧ್ರುವ್ ರಾಠಿ ಮತ್ತು ರವೀಶ್ ಕುಮಾರ್ ಅವರ ಯೂಟ್ಯೂಬ್ ಚಾನೆಲ್ ಒಂದು ಕೋಟಿ ಸಬ್‌ಸ್ಕ್ರೈಬನ್ನೂ ದಾಟಿದೆ. ಇವರಿಬ್ಬರೂ ಮೋದಿ ಸರಕಾರದ ಪ್ರಬಲ ಟೀಕಾಕಾರರೂ ಆಗಿದ್ದಾರೆ. ಮಾತ್ರವಲ್ಲ, ತಮ್ಮ ವಿರೋಧವನ್ನು ಬರಿದೇ ವ್ಯಕ್ತಪಡಿಸದೇ ಅತ್ಯಂತ ಪ್ರಬಲ ಸಾಕ್ಷ್ಯಾಧಾರಗಳನ್ನೂ ಅದಕ್ಕೆ ಒದಗಿಸುತ್ತಿದ್ದಾರೆ. ಮೋದಿ ಪರ ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗಲು ಸಾಧ್ಯವೇ ಇಲ್ಲದ ಅತ್ಯಂತ ಶಕ್ತಿಶಾಲಿ ಕಾರ್ಯಕ್ರಮಗಳನ್ನು ಇವರು ನೀಡುತ್ತಾ ಬಂದಿದ್ದಾರೆ. 2014ರಿಂದ ಒಂದು ಬಗೆಯ ಸುದ್ದಿಯನ್ನು ಆಲಿಸುತ್ತಾ ಬಂದಿ ರುವ ಜನರಿಗೆ ಇದೀಗ ಅದನ್ನು ಪ್ರಶ್ನಿಸುವ ರೀತಿಯ ಕಾರ್ಯ ಕ್ರಮಗಳು ಆಕರ್ಷಕ ಅನ್ನಿಸತೊಡಗಿವೆ. ಟಿವಿ ಚಾನೆಲ್‌ಗಳಿಗಿಂತ ಯೂಟ್ಯೂಬ್ ಚಾನೆಲ್‌ಗಳ ಜರ್ನಲಿಸ್ಟ್ ಗಳು  ಕೊಡುವ ಸಾಕ್ಷ್ಯ  ಆಧಾರಿತ ಮತ್ತು ವಿಷಯ ಆಧಾರಿತ ಕಾರ್ಯಕ್ರಮಗಳು ಪ್ರಭಾವ ಬೀಳತೊಡಗಿವೆ. 2014ರ ಯುವ ಸಮೂಹವು ಈ 2024ರ ವೇಳೆಗೆ ಹೆಚ್ಚು ಮಾಗಿದೆ ಮತ್ತು ಅನುಭವಿಯಾಗಿದೆ. ಭ್ರಮೆ ಮತ್ತು ಭಾವನೆಯಿಂದ ಹೊರಬಂದು ವಾಸ್ತವದ ಆಧಾರದಲ್ಲಿ ಅಭಿಪ್ರಾಯಗಳನ್ನು ಕಟ್ಟುವ ತಿಳುವಳಿಕೆ ಬಂದಿದೆ. ಅಂದಹಾಗೆ,

ಇಂಥ  ಬದಲಾವಣೆಗಳು ಅದ್ಭುತ ಏನಲ್ಲ. ಎಲ್ಲ ಕಾಲಗಳಲ್ಲೂ ಈ ಬಗೆಯ ಪರಿವರ್ತನೆ ಆಗುತ್ತಲೇ ಇರುತ್ತದೆ. 2004ರಿಂದ 2014ರ ವರೆಗಿನ ಕಾಂಗ್ರೆಸ್ ಅಧಿಕಾರಾವಧಿಯಲ್ಲೂ ಈ ವಿಚಾರ ಬದಲಾವಣೆಗಳು ನಡೆದಿವೆ. ಈ ಅವಧಿಯಲ್ಲಿ ಭ್ರಷ್ಟಾಚಾರ ವಿರೋಧಿ ಅಭಿಯಾನ ಮತ್ತು ನಿರ್ಭಯ ಪ್ರಕರಣಗಳು ಸಮಾಜದ ವಿಚಾರಧಾರೆಯಲ್ಲಿ ಮಹತ್ತರ ಬದಲಾವಣೆಗೆ ಕಾರಣವಾದುವು. ಈ ಹಿಂದೆ ಕಾಂಗ್ರೆಸ್‌ಗೆ ಮತ ಚಲಾಯಿಸಿದವರೇ ಬಿಜೆಪಿಗೆ ಮತ ಚಲಾಯಿಸಿದರು. ಆದರೆ, 2014ರ ಬಳಿಕ ಆದ ಮಹತ್ತರ ಬದಲಾವಣೆ ಏನೆಂದರೆ, ಬಿಜೆಪಿಯ ಸೋಶಿಯಲ್ ಮೀಡಿಯಾ ಕಂಟೆಂಟ್ ಗಳನ್ನು ಮುಖ್ಯವಾಹಿನಿಯ ಟಿವಿ ಚಾನೆಲ್ ಗಳು ವಹಿಸಿಕೊಂಡು ಮಾತಾಡಲು ಪ್ರಾರಂಭಿಸಿದ್ದು. ಮುಸ್ಲಿಮರನ್ನು ಹೊರೆಯಂತೆ, ದೇಶದ್ರೋಹಿಗಳಂತೆ, ಹಿಂದೂ ವಿರೋಧಿ ಗಳಂತೆ ಮತ್ತು ಪಾಕ್, ಸೌದಿ ನಿಷ್ಠರಂತೆ ಬಿಂಬಿಸುತ್ತಿದ್ದ ಬಲಪಂಥೀಯ ಸೋಶಿಯಲ್ ಮೀಡಿಯಾಗಳ ವಿವರಣೆಗಳನ್ನೇ ಇವು ಅನಾಮತ್ತಾಗಿ ಎತ್ತಿಕೊಂಡು ಅದೇ ಭಾಷೆಯಲ್ಲಿ ಮಾತಾಡತೊಡಗಿದುವು. ಈ 2024ರಲ್ಲಿ ಗೋಧಿ ಮೀಡಿಯಾಗಳ ಆ್ಯಂಕರ್‌ಗಳು ಮತ್ತು ಅವರ ಭಾಷೆಯನ್ನು 2010ಕ್ಕೆ ಹೋಲಿಸಿ ನೋಡಿದಾಗ ವ್ಯತ್ಯಾಸ ಸ್ಪಷ್ಟವಾಗಿ ಗೊತ್ತಾಗುತ್ತದೆ.

2010ರ ಆಸುಪಾಸಿನಲ್ಲಿ ಮುಸ್ಲಿಮ್ ದ್ವೇಷ ಎಂಬುದು ಚಾನೆಲ್‌ಗಳ ಅಧಿಕೃತ ಭಾಷೆ ಆಗಿರಲಿಲ್ಲ. ಹಿಂದೂ-ಮುಸ್ಲಿಮ್ ಇಶ್ಯೂವನ್ನು ನಿರಂತರ ಎತ್ತುತ್ತಾ ಮತ್ತು ಅದರ ಮೇಲೆ ಏಕಮುಖ ಕಂಟೆಂಟ್  ತಯಾರಿಸುತ್ತಾ ಏಕಮುಖವಾಗಿ ನಡ ಕೊಳ್ಳುತ್ತಿರಲಿಲ್ಲ. ಬಿಜೆಪಿ ತುಂಬಿದ್ದೇ  ಈ ನಿರ್ವಾತವನ್ನು. ಅದು ಹಿಂದೂ-ಮುಸ್ಲಿಮ್ ಇಶ್ಯೂವನ್ನು ಸೋಶಿಯಲ್ ಮೀಡಿಯದಲ್ಲಿ ಮುನ್ನೆಲೆಗೆ ತಂದಿತು. ಮುಖ್ಯವಾಗಿ ಮುಸ್ಲಿಮ್ ದ್ವೇಷ ಭಾವ ಸಾರ್ವಜನಿಕರಲ್ಲಿ ಸೃಷ್ಟಿಯಾಗುವಂತೆ ನೋಡಿಕೊಳ್ಳುವುದಕ್ಕಾಗಿ ಪ್ರತಿ ವೈಯಕ್ತಿಕ ಪ್ರಕರಣಕ್ಕೂ ಧರ್ಮದ ಬಣ್ಣ ಬಳಿದು ವ್ಯಾಖ್ಯಾನಿಸತೊಡಗಿತು. ಮುಸ್ಲಿಮರ ಜನಸಂಖ್ಯೆ, ಲವ್ ಜಿಹಾದ್, ಅಸುರಕ್ಷಿತ ಹಿಂದೂ ಹೆಣ್ಮಕ್ಕಳು, ಮುಸ್ಲಿಮರ ಪಾಲಾಗುತ್ತಿರುವ ಭೂಮಿ, ಭಯೋತ್ಪಾದನೆ, ಕಾಶ್ಮೀರದ ಪಂಡಿತರ ಮೇಲಿನ ಅನ್ಯಾಯ, ಪಾಕಿಸ್ತಾನದ ಮಸಲತ್ತು, ಬಾಂಗ್ಲಾದಿಂದ  ಮುಸ್ಲಿಮರ ನುಸುಳುವಿಕೆ, ಇಂಡಿಯನ್ ಮುಜಾಹಿದೀನ್, ಅಲ್ ಖೈದಾ, ಹರ್ಕತುಲ್ ಅನ್ಸಾರ್, ಐಸಿಸ್.. ಇತ್ಯಾದಿ ಇತ್ಯಾದಿ ಮುಸ್ಲಿಮ್ ಕೇಂದ್ರಿತ ವಿಷಯಗಳನ್ನು ಕ್ರೋಢೀಕರಿಸಿ ನಿರಂತರ ಸೋಶಿಯಲ್ ಮೀಡಿಯದಲ್ಲಿ ನರೇಟಿವ್‌ಗಳನ್ನು ಸೃಷ್ಟಿಸಿತು. ಟಿವಿ ಚಾನೆಲ್‌ಗಳಲ್ಲಿ ಸಂದರ್ಭಾನುಸಾರ ಮಾತ್ರ ಚರ್ಚೆಗೊಳಗಾಗುತ್ತಿದ್ದ ಇಂಥ ವಿಷಯಗಳನ್ನು ಬಿಜೆಪಿ ಐಟಿ ಸೆಲ್ ದಿನದ 24 ಗಂಟೆಯೂ ಚರ್ಚಿಸಲು ಮತ್ತು ವಾಟ್ಸಪ್‌ನಲ್ಲಿ ಹರಿಬಿಡಲು ಪ್ರಾರಂಭಿಸಿದAತೆಯೇ ಜನರು ಆಕರ್ಷಿತರಾದರು. ಅವರಿಗೂ ಹೌದು ಅನ್ನಿಸತೊಡಗಿತು. ಅವರೂ ಮಾತಾಡತೊಡಗಿದರು. ಬಳಿಕ ಇದು ಪತ್ರಿಕೆ ಮತ್ತು ಟಿವಿ ಚಾನೆಲ್‌ಗಳ ಪಡಸಾಲೆಗೂ ಪ್ರವೇಶಿಸಿತು. ಹೀಗೆ ಬಿಜೆಪಿ ಐಟಿ ಸೆಲ್ ಸೃಷ್ಟಿಸಿದ ಪ್ರೊಪಗಾಂಡವು ಟಿವಿ ಮತ್ತು ಪತ್ರಿಕೆಗಳ ಅಧಿಕೃತ ಭಾಷೆಯಾಗಿ ಮತ್ತು ನಿರಂತರ ಕಾರ್ಯಕ್ರಮಗಳ ವಸ್ತುವಾಗಿ ಮಾರ್ಪಟ್ಟಿತು. ಆದರೆ, ಇದೀಗ ಅದೇ ಸೋಶಿಯಲ್ ಮೀಡಿಯಾ ದಿಂದ ಬಿಜೆಪಿ ತೀವ್ರ ಪ್ರತಿರೋಧವನ್ನು ಎದು ರಿಸುತ್ತಿದೆ. ಯಾವ ಮಾಧ್ಯಮವನ್ನು ಬಳಸಿ ಅದು ಅಧಿಕಾರಕ್ಕೆ ಬಂತೋ ಅದೇ ಮೀಡಿಯಾ ಮೂಲಕವೇ ಧ್ರುವ್ ರಾಠಿ, ರವೀಶ್ ಕುಮಾರ್ ಮತ್ತು ಅಸಂಖ್ಯ ಯೂಟ್ಯೂಬರ್‌ಗಳು ಸಡ್ಡು ಹೊಡೆಯುತ್ತಿದ್ದಾರೆ. ಇವರ ಜೊತೆಗೇ ಅಸಂಖ್ಯ ಯೂಟ್ಯೂಬ್ ಚಾನೆಲ್‌ಗಳೂ ಬಿಜೆಪಿ ಸುಳ್ಳುಗಳಿಗೆ ಕನ್ನಡಿ ಹಿಡಿಯುತ್ತಿವೆ. ಅಧಿಕಾರಕ್ಕೇರಲು ಬಿಜೆಪಿ ಬಳಸಿದ ಮೆಟ್ಟಿಲನ್ನೇ ಇದೀಗ ವಿರೋಧ ಪಕ್ಷಗಳೂ ಬಳಸುತ್ತಿವೆ. ಇದರಿಂದ ನಿಜಕ್ಕೂ ಅನಾಥವಾಗಿರುವುದು ಟಿವಿ ಚಾನೆಲ್‌ಗಳು. ಬಿಜೆಪಿಯನ್ನು ನಂಬಿ ಅದರ ಕಾಲಬುಡಕ್ಕೆ ತನ್ನನ್ನು ಒಡ್ಡಿಕೊಂಡ ಇವುಗಳೆಲ್ಲ ಇದೀಗ ಜನರಿಂದಲೂ ಮತ್ತು ವಿರೋಧ ಪಕ್ಷಗಳಿಂದಲೂ ತಿರಸ್ಕೃತಗೊಂಡ ಸ್ಥಿತಿಯಲ್ಲಿದೆ. ಅವುಗಳಲ್ಲಿ ಗಟ್ಟಿಯಾದ ಕಂಟೆಂಟ್ ಗಳಿಲ್ಲ. ಕಣ್ಣು ಮುಚ್ಚಿ ಮೋದಿಯನ್ನು ಬೆಂಬಲಿಸುತ್ತಾ ಬಂದಿರುವ ಅವುಗಳಿಗೆ ದಿಢೀರನೇ ಪಥ ಬದಲಿಸುವುದಕ್ಕೂ ಆಗುವುದಿಲ್ಲ. ಈಗಾಗಲೇ ವಿಶ್ವಾಸಾರ್ಹತೆಯನ್ನು ಕಳಕೊಂಡಿರುವ ಅವುಗಳು ಇದೀಗ ಮೋದಿ ವಿರೋಧಿ ನೀತಿ ಅಳವಡಿಸಿಕೊಂಡರೆ ಮತ್ತಷ್ಟು ನಗೆಪಾಟಲಿಗೀಡಾಗುವ ಅವಕಾಶವೂ ಇದೆ. ಒಂದAತೂ ಸ್ಪಷ್ಟ,

ಸೋಶಿಯಲ್ ಮೀಡಿಯಾದ ಈ ಕಾಲದಲ್ಲಿ ಯಾರೂ ಹೆಚ್ಚು ಸಮಯ ಬಾಳುವುದಿಲ್ಲ. ಯಾವ ಸುಳ್ಳಿಗೂ ದೀರ್ಘ  ಆಯುಷ್ಯವಿಲ್ಲ.


Saturday, May 18, 2024

ನೀವು ನಿಮ್ಮ ಮನೆ ಪ್ರವೇಶಿಸುವಾಗ ಸಲಾಂ ಹೇಳುತ್ತೀರಾ?
1. ಸಲಾಮುನ್ ಕೌಲಂಮ್ಮಿನ್ ರಬ್ಬಿರ‍್ರಹೀಮ್- ಸ್ವರ್ಗವಾಸಿಗಳೇ, ಸಲಾಮ್ ಎಂದು ಕರುಣಾನಿಧಿಯಾದ ಪ್ರಭುವಿನ ಕಡೆಯಿಂದ ಹೇಳಲಾಗಿದೆ.  (36:58)
2. ವ ಕಾಲ ಲಹುಮ್ ಖಝನತುಹಾ ಸಲಾಮುನ್ ಅಲೈಕುಂ- ಸ್ವರ್ಗ ಪ್ರವೇಶಿಸುವವರೊಡನೆ ನಿಮಗೆ ಸಲಾಂ ಎನ್ನಲಾಗುತ್ತದೆ. (39:73)
3. ಇಲ್ಲಾ ಖೀಲನ್ ಸಲಾಮನ್ ಸಲಾಮ- ಸ್ವರ್ಗದಲ್ಲಿ ಪ್ರತಿಯೊಂದು ಮಾತೂ ಸರಿಯಾದ ಮಾತೇ ಆಗಿರುವುದು. (36:26)

ಅಂದಹಾಗೆ,

ಪವಿತ್ರ ಕುರ್‌ಆನಿನ ಈ ವಚನಗಳಷ್ಟೇ ಅಲ್ಲ, ಸಲಾಮ್‌ನ ಮಹತ್ವದ ಕುರಿತಂತೆ ವಿವರಿಸುವ ಹತ್ತು-ಹಲವು ಪ್ರವಾದಿ ವಚನಗಳು ನಮ್ಮ  ನಡುವೆಯಿವೆ. ಆರಾಧನೆಗಳಲ್ಲೇ  ಅತೀ ಶ್ರೇಷ್ಠವೆಂದು ಹೇಳಲಾದ ನಮಾಝನ್ನು ಕೊನೆಗೊಳಿಸುವುದು ಬಲ ಮತ್ತು ಎಡ ಭಾಗಕ್ಕೆ ತಿರುಗಿ  ಅಸ್ಸಲಾಮು ಅಲೈಕುಂ ವರಹ್ಮತುಲ್ಲಾಹ್ ಎಂದು ಹೇಳುವ ಮೂಲಕವೇ. ಆ ಮೂಲಕ ಸರ್ವರಲ್ಲೂ ಒಳಿತನ್ನು ಹಾಗೂ ದೇವನ ಅನುಗ್ರಹವನ್ನು  ಬಯಸುವ ಕ್ರಿಯೆಯೊಂದು ನಡೆಯುತ್ತದೆ. ಅಷ್ಟಕ್ಕೂ, ನಮಾಝï ಮಾಡುವುದು ಅಲ್ಲಾಹನಿಗಾಗಿರುವಾಗ, ಅದರ ಕೊನೆಯಲ್ಲಿ ಅಲ್ಲಾಹನ ಸ್ತುತಿ  ಸ್ತೋತ್ರಗಳ ಬದಲಾಗಿ ಜನರಿಗೆ ಒಳಿತನ್ನು ಬಯಸುವ ಈ ಪ್ರಾರ್ಥನೆಯನ್ನು ಅಲ್ಲಾಹನು ಕಲಿಸಲು ಕಾರಣವೇನು? ಅಲ್ಲಾಹುಮ್ಮ ಅಂತಸ್ಸಲಾಮ್  ವಮಿಂಕಸ್ಸಲಾಮ್ ತಬಾರಕ್ತ ಯಾದಲ್ ಜಲಾಲಿ ವಲ್ ಇಕ್ರಾಮ್.. ಎಂದು ಪ್ರವಾದಿ ನಮಾಝï ಬಳಿಕ ಪ್ರಾರ್ಥಿಸುತ್ತಿದ್ದರೆಂದೂ ವರದಿಗಳಿವೆ.  ಅಂದರೆ, ‘ಅಲ್ಲಾಹನೇ ನೀನು ಶಾಂತಿಯ ಸಂಕೇತ ಮತ್ತು ಶಾಂತಿಯನ್ನು ದಯಪಾಲಿಸುವವ. ಆದ್ದರಿಂದ ನನಗೆ ಶಾಂತಿಯುತ ಬದುಕನ್ನು  ದಯಪಾಲಿಸು’. ಅಂದಹಾಗೆ,

ಸರ್ವರಿಗೂ ಶಾಂತಿಯನ್ನು ಬಯಸುವ ಮೂಲಕ ನಮಾಝನ್ನು ಕೊನೆಗೊಳಿಸಲಾಗುತ್ತದೆ ಮತ್ತು ಆ ಬಳಿಕದ ಪ್ರಾರ್ಥನೆಯೂ ಶಾಂತಿಯನ್ನೇ  ಕೇಂದ್ರೀಕರಿಸಿರುತ್ತದೆ. ನನಗೆ ಶಾಂತಿಯುತ ಬದುಕನ್ನು ನೀಡು ಎಂದು ಪ್ರವಾದಿ(ಸ)ಯವರು ಬಯಸುವುದರ ಉದ್ದೇಶ, ಸರ್ವ ಮುಸ್ಲಿಮರೂ  ಶಾಂತಿಯುತ ಬದುಕನ್ನು ಬಯಸಬೇಕು ಎಂದೇ ಆಗಿದೆ. ನಿಜವಾಗಿ, ಇದು ಮುಸ್ಲಿಮರ ಐಡೆಂಟಿಟಿ. ಯಾರು ಶಾಂತಿಯುತ ಬದುಕನ್ನು  ಬಯಸುತ್ತಾರೋ ಅವರು ಅಶಾಂತಿಯುತ ಸಾಮಾಜಿಕ ವ್ಯವಸ್ಥೆಯನ್ನು ಬಯಸುವುದಾಗಲಿ, ಅದಕ್ಕಾಗಿ ಪ್ರಯತ್ನಿಸುವುದಾಗಲಿ ಮಾಡಲು  ಸಾಧ್ಯವೇ ಇಲ್ಲ. ಪ್ರವಾದಿಯವರು(ಸ) ಅನಸ್(ರ)ರೊಂದಿಗೆ ಹೀಗೆ ಹೇಳಿದ್ದಾರೆ,

‘ಮಗನೇ, ನೀನು ನಿನ್ನ ಮನೆಯವರ ಬಳಿಗೆ ಹೋಗುವಾಗ ಸಲಾಂ ಹೇಳು. ಅದು ನಿನ್ನಲ್ಲೂ ನಿನ್ನ ಕುಟುಂಬದಲ್ಲೂ ಸಮೃದ್ಧಿಗೆ ಕಾರಣವಾಗಲಿದೆ.’ ‘ನನ್ನ ಮನೆಯಲ್ಲಿ ದಟ್ಟ ಬಡತನವಿದೆ’ ಎಂದು ಓರ್ವ ವ್ಯಕ್ತಿ ಬಂದು ಹೇಳಿದಾಗಲೂ ಪ್ರವಾದಿ(ಸ) ಹೇಳಿದ್ದು ಮೇಲಿನ ಮಾತುಗಳನ್ನೇ-  ‘ನೀನು ನಿನ್ನ ಮನೆಯವರ ಬಳಿಗೆ ಹೋಗುವಾಗ ಸಲಾಂ ಹೇಳು. ಅದು ನಿನ್ನಲ್ಲೂ ನಿನ್ನ ಕುಟುಂಬದಲ್ಲೂ ಸಮೃದ್ಧಿಗೆ ಕಾರಣವಾಗಲಿದೆ.’  ಇದೇವೇಳೆ, ಪ್ರವಾದಿ(ಸ) ಹೇಳಿರುವುದಾಗಿ ಪ್ರಮುಖ ಸಂಗಾತಿ ಅಬೂದರ್ದಾ(ರ) ಹೇಳಿರುವ ಈ ಕೆಳಗಿನ ವಚನವೂ ಬಹಳ ಮಹತ್ವದ್ದಾಗಿದೆ-

‘ನೀವು ಸಲಾಮನ್ನು ಪ್ರಚಾರ ಮಾಡಿ. ಹಾಗಾದರೆ ನೀವು ಉನ್ನತಿಗೆ ಏರುವಿರಿ.’

ಇಲ್ಲಿ ಒಂದು ಗಮನಾರ್ಹ ಅಂಶವಿದೆ. ಸಲಾಮನ್ನು ಹೇಳಿರಿ ಅನುವುದಕ್ಕಿಂತ ಸಲಾಮನ್ನು ಪ್ರಚಾರ ಮಾಡಿರಿ ಎಂದು ಒತ್ತು ಕೊಟ್ಟು  ಹೇಳಲಾಗಿದೆ. ಅದೇವೇಳೆ, ನಿಮ್ಮ ಮನೆಗೆ ಪ್ರವೇಶಿಸುವಾಗ ಸಲಾಂ ಹೇಳಿರಿ, ಅದರಿಂದ ಸಮೃದ್ಧಿ ಉಂಟಾಗುತ್ತದೆ ಎಂದೂ ಹೇಳಲಾಗಿದೆ. ಇನ್ನೊಂದು ಕಡೆ, ನಮಾಝï‌ನಿಂದ ವಿರಮಿಸುವುದಕ್ಕೆ ಸಲಾಮನ್ನು ಸಾಕ್ಷ್ಯವಾಗಿ ಆಯ್ಕೆ ಮಾಡಲಾಗಿದೆ. ಇವೆಲ್ಲ ಹೇಳುವುದೇನು? ಓರ್ವರನ್ನು  ಎದುರುಗೊಂಡಾಗ ಅಸ್ಸಲಾಮು ಅಲೈಕುಂ ಎಂದು ಹೇಳುವುದಕ್ಕೆ ಬಾಯುಪಚಾರಕ್ಕಿಂತ ಹೊರತಾದ ಘನವಾದ ಉದ್ದೇಶವಿದೆ ಎಂಬುದನ್ನೇ  ಅಲ್ಲವೇ? ನಾವು ಸಲಾಮ್‌ನ ನಿಜವಾದ ಉದ್ದೇಶ ಮತ್ತು ಅರ್ಥವನ್ನು ಅರಿತು ಎಷ್ಟು ಬಾರಿ ಸಲಾಮ್ ಹೇಳಿದ್ದೇವೆ? ‘ಸಲಾಮ್  ಹೇಳುವುದರಿಂದ ಮನೆಯಲ್ಲಿ ಸಮೃದ್ಧಿ ಉಂಟಾಗುತ್ತದೆ, ದಾರಿದ್ರ‍್ಯ ತೊಲಗುತ್ತದೆ, ಅದು ಅಲ್ಲಾಹನ ಗುಣನಾಮಗಳಲ್ಲಿ ಒಂದು, ಅದನ್ನು ಪ್ರಚಾರ  ಮಾಡಬೇಕು, ಆ ಮೂಲಕ ಸರ್ವರಲ್ಲೂ ಶಾಂತಿ ಮತ್ತು ಒಳಿತನ್ನು ಪಸರಿಸಬೇಕು..’ ಎಂದು ಮನಸಾರೆ ಅಂದುಕೊಂಡು  ನಾವು ಸಲಾಂ  ಹೇಳಿದ್ದು ಯಾವಾಗ? ಸಲಾಂ ಹೇಳುವಾಗ ಒಂದು ಬಾರಿಯಾದರೂ ನಮ್ಮೊಳಗೆ ಇಂಥ ಭಾವ ಉಂಟಾಗಿದೆಯೇ? ಗೆಳೆಯನೊಬ್ಬ ಎದುರು  ಸಿಕ್ಕಾಗ, ಅಲ್ಲಾಹನು ನಿಮಗೆ ಶಾಂತಿ ಮತ್ತು ಸಮೃದ್ಧಿಯನ್ನು ನೀಡಲಿ ಎಂದು ಮನಸ್ಸಿನಿಂದ ಬಯಸಿ ಸಲಾಂ ಹೇಳಿದ್ದೀರಾ ಅಥವಾ ಅದೊಂದು  ಸಹಜ ನಡವಳಿಕೆಯಾಗಿ ಮಾರ್ಪಟ್ಟಿದೆಯೇ? ಮನೆಗೆ ಪ್ರವೇಶಿಸುವಾಗ ಸಲಾಂ ಹೇಳಬೇಕು ಎಂದು ಹೇಳಿದ ಪ್ರವಾದಿ, ಅದರಿಂದ ಮನೆಯ  ದಾರಿದ್ರ‍್ಯ ದೂರವಾಗುತ್ತದೆ ಎಂದೂ ಹೇಳಿದ್ದಾರೆ.

ಬಡತನ, ದಾರಿದ್ರ‍್ಯ ಇತ್ಯಾದಿಗಳೆಲ್ಲ ಶಾಶ್ವತವಲ್ಲ. ಅವು ಒಂದು ತಾತ್ಕಾಲಿಕ ಸ್ಥಿತಿಯೇ ಹೊರತು ದಾರಿದ್ರ‍್ಯದಲ್ಲಿರುವವರೆಲ್ಲ ಸದಾಕಾಲ ದಾರಿದ್ರ‍್ಯದಲ್ಲೇ   ಇರಬೇಕೆಂದು ಇಸ್ಲಾಮ್ ಬಯಸುವುದಿಲ್ಲ, ಸರಕಾರಗಳೂ ಬಯಸುವುದಿಲ್ಲ. ಆದರೆ, ಬಡತನವು ಅನೇಕ ಬಾರಿ ಅತೀ ಅನಿವಾರ್ಯತೆಯನ್ನು  ತ್ಯಾಗ ಮಾಡಬೇಕಾದ ಪರಿಸ್ಥಿತಿಗೆ ದೂಡುತ್ತದೆ. ಶ್ರೀಮಂತರು ತಮಗೆ ಬೇಡವಾದುದನ್ನೂ ಖರೀದಿಸುವ ಸಾಮರ್ಥ್ಯ ಪಡಕೊಂಡಿರುವಾಗ  ಬಡವರು ಅತೀ ಅಗತ್ಯವಾದುದನ್ನೂ ಖರೀದಿಸಲು ಸಾಧ್ಯವಾಗದೇ ಸಂಕಟಕ್ಕೆ ಒಳಗಾಗುತ್ತಾರೆ. ಇದು ಧರ್ಮಾತೀತ ಸ್ಥಿತಿ. ಆದರೆ, ಈ  ಸ್ಥಿತಿಯನ್ನು ಮೀರಬಲ್ಲ ಉಪಕರಣವಾಗಿ ಪ್ರವಾದಿ(ಸ) ಸಲಾಮನ್ನು ಪರಿಚಯಿಸಿದ್ದಾರೆ. ಅದರರ್ಥ ಮನೆಗೆ ಪ್ರವೇಶಿಸುವಾಗ, ಸಲಾಮ್ ಹೇಳಿದ  ತಕ್ಷಣ ಬಡತನ ನಿವಾರಣೆಯಾಗುತ್ತದೆ ಎಂದಲ್ಲ. ಆದರೆ, ಅದರ ಅರ್ಥ ಅರಿತು ಅದನ್ನು ಮನಸ್ಸಿಗೆ ತಂದುಕೊಂಡು  ಹೇಳುವ ಸಲಾಮ್‌ನಲ್ಲಿ  ಬಾಯುಪಚಾರಕ್ಕಿಂತ ಮಿಗಿಲಾದ ಆಧ್ಯಾತ್ಮ ಭಾವ ಒಳಗೊಂಡಿರುತ್ತದೆ. ಅಲ್ಲಾಹನೇ, ನಮಗೆ ಶಾಂತಿ ಮತ್ತು ಸಮೃದ್ಧಿಯನ್ನು ಕೊಡು ಎಂದು  ಪ್ರತಿಬಾರಿ ಮನೆಗೆ ಪ್ರವೇಶಿಸುವಾಗಲೂ ಮನೆಯಿಂದ ಹೊರಹೋಗುವಾಗಲೂ ಪ್ರಾರ್ಥಿಸುವ ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ. ಒಂದು ಮನೆಯಲ್ಲಿ  6 ಮಂದಿ ಇದ್ದಾರೆಂದಿಟ್ಟುಕೊಳ್ಳಿ. ಈ 6 ಮಂದಿಯಲ್ಲಿ ಮನೆಯಿಂದ ಒಂಟಿ ಒಂಟಿಯಾಗಿಯೋ ಸಾಮೂಹಿಕ ವಾಗಿಯೋ ಹೊರಹೋಗುವಾಗ  ಸಲಾಂ ಹೇಳುವುದು ಮತ್ತು ಮನೆಗೆ ಒಂಟಿ ಒಂಟಿಯಾಗಿ ಪ್ರವೇಶಿಸುವಾಗ ಸಲಾಂ ಹೇಳುವುದನ್ನು ಒಮ್ಮೆ ಸ್ಮರಿಸಿಕೊಳ್ಳಿ. ಅದು ನಮ್ಮೊಳಗೆ  ಅಂತಃಶಕ್ತಿಯನ್ನು ತುಂಬುತ್ತದೆ. ಆಧ್ಯಾತ್ಮಿಕ ಚೈತನ್ಯ ಮತ್ತು ಸಕಾರಾತ್ಮಕ ಭಾವವನ್ನು ನೆಲೆಗೊಳಿಸುತ್ತದೆ. ದುರಂತ ಏನೆಂದರೆ,

ಯಾರಾದರೂ ಮುಖಾಮುಖಿಯಾದಾಗ ಸಲಾಂ ಹೇಳುವ ಎಷ್ಟೋ ಮಂದಿ ಮನೆ ಪ್ರವೇಶಿಸುವಾಗ ಸಲಾಂ ಹೇಳುವುದು ಕಡಿಮೆ. ಮಗ  ತಂದೆಗೋ ತಾಯಿಗೋ ತಂಗಿಗೋ ಅಕ್ಕನಿಗೋ ಸಲಾಂ ಹೇಳುವುದೂ ಕಡಿಮೆ. ಹಾಗಂತ, ಹೀಗೆ ಸಲಾಂ ಹೇಳುವುದಕ್ಕೆ ಅವರ  ವಿರೋಧವಿದೆ ಎಂದಲ್ಲ. ಅದು ರೂಢಿಯಲ್ಲಿ ಬಂದಿಲ್ಲ. ಹೊರಗೆ ಗೆಳೆಯನನ್ನೋ ಗೆಳತಿಯನ್ನೋ ಪರಿಚಿತರು ಮತ್ತು ಇಷ್ಟದವರನ್ನೋ ಆಲಿಂಗಿಸುವ ಮತ್ತು ಶುಭಾಶಯ ಕೋರುವ ಮಗನೋ ಮಗಳೋ ಮನೆಯಲ್ಲಿ ಹೆತ್ತವರನ್ನು ಆಲಿಂಗಿಸುವುದು ಕಡಿಮೆ. ಹೆತ್ತವರಲ್ಲೂ ಈ  ಮುಲಾಜುತನ ಇರುತ್ತದೆ. ಪತಿ ಮತ್ತು ಪತ್ನಿ ಪರಸ್ಪರ ಆಲಿಂಗಿಸಿಕೊಳ್ಳುವುದು, ಪರಸ್ಪರ ಸಲಾಂ ಹೇಳಿ ಹೊರಡುವುದೆಲ್ಲ ನಾಚಿಕೆಯ ವಿಷಯ  ಎಂಬಂತೆ  ಆಗುವುದಿದೆ. ನಿಜವಾಗಿ, ಆಲಿಂಗನವು ಪರಸ್ಪರ ಆಪ್ತ ಭಾವವನ್ನು ಹಂಚುವುದಕ್ಕೆ ಸಹಕಾರಿಯಾದರೆ ಸಲಾಂ ಶಾಂತಿ ಮತ್ತು ಸಮೃ ದ್ಧಿಯನ್ನು ಉಂಟು ಮಾಡುವುದಕ್ಕೆ ನೆರವಾಗುತ್ತದೆ. ಇದು ಬರೇ ಭಾವ ಅಲ್ಲ. ಒಂದು ನಿರ್ದಿಷ್ಟ ಗುರಿಯನ್ನು ಹೊಂದಿರುವ ಸಕಲರಿಗೂ ಒಳಿತು  ಬಯಸುವ ಧಾರ್ಮಿಕ ಕರ್ತವ್ಯ. ಆದ್ದರಿಂದಲೇ, ಪ್ರವಾದಿ(ಸ) ಸಲಾಮನ್ನು ಪ್ರಚಾರ ಮಾಡಿ ಎಂದೇ ಹೇಳಿದ್ದಾರೆ. ಅದು ಸಾರ್ವಜನಿಕ  ಭಾವವಾಗಿ ವ್ಯಕ್ತವಾಗಬೇಕು. ಸರ್ವರಿಗೂ ಒಳಿತು, ಶಾಂತಿ, ಸಮೃದ್ಧಿಯನ್ನು ಬಯಸುವ ಪ್ರಾರ್ಥನೆಯೊಂದು ಸರ್ವ ದಿಕ್ಕುಗಳಿಂದಲೂ ಕೇಳಿಸುವಂತಿದ್ದರೆ ಅದರಲ್ಲಿ ತೊಂದರೆ ಏನಿದೆ? ನಿಜವಾಗಿ,

ಈ ಜಗತ್ತಿನ ಅಭಿವಂದನೆಯ ಪ್ರಕಾರಗಳಲ್ಲೇ  ಅಸ್ಸಲಾಮು ಅಲೈಕುಂ ಎಂಬುದು ಅತೀ ವಿಶಿಷ್ಟ ಮತ್ತು ಅತೀ ಆಕರ್ಷಕ ಎಂದೇ ಹೇಳಬಹುದು.  ಯಾವುದೇ ಬಗೆಯ ಮಾತನ್ನು ಆರಂಭಿಸುವುದಕ್ಕಿಂತ  ಮೊದಲು, ‘ನಿನಗೆ ಒಳಿತಾಗಲಿ, ನಿನಗೆ ಶಾಂತಿಪೂರ್ಣ ಬದುಕು ಲಭಿಸಲಿ..’ ಎಂದು  ಪ್ರಾರ್ಥಿಸುವುದು ಮಹತ್ತರ ವಿಧಾನ. ಸಾಮಾನ್ಯವಾಗಿ ಇವತ್ತು ಹೆಚ್ಚಿನ ಮಾತುಕತೆಗಳು ಮೊಬೈಲ್ ಮೂಲಕವೇ ನಡೆಯುತ್ತವೆ. ಮೊಬೈಲ್  ಮೂಲಕ ನಿಮ್ಮನ್ನು ಸಂಪರ್ಕಿಸುವ ವ್ಯಕ್ತಿಯ ಆ ಕ್ಷಣದ ಪರಿಸ್ಥಿತಿ, ಭಾವ, ಉದ್ದೇಶ ನಮಗೆ ಗೊತ್ತಿರುವುದಿಲ್ಲ. ವ್ಯಕ್ತಿಯ ಹೆಸರು ಮೊಬೈಲ್  ಸ್ಕ್ರೀನ್‌ನಲ್ಲಿ ಕಾಣಿಸಿದಾಗ ವ್ಯಕ್ತಿಯ ಮುಖಭಾವವನ್ನು ನೀವು ಕಲ್ಪಿಸಿಕೊಳ್ಳುತ್ತೀರಿ. ಆದರೆ, ಆ ಮುಖಭಾವದಲ್ಲಿ ಅಡಗಿರಬಹುದಾದ ಸಾವಿರ  ಸಂಗತಿಗಳು ನಿಮ್ಮಿಂದ ಅಡಗಿರುತ್ತದೆ. ಆತ/ಕೆ ವಿಪರೀತ ದುಃಸ್ಥಿತಿಯಲ್ಲಿರಬಹುದು, ಹಣಕಾಸಿನ ಮುಗ್ಗಟ್ಟಿನಲ್ಲಿರಬಹುದು, ಅತೀವ ಸಂತಸದಲ್ಲೂ  ಇರಬಹುದು. ತನ್ನವರನ್ನು ಕಳಕೊಂಡ ದುಃಖದಲ್ಲಿರಬಹುದು, ಅತೀವ ಆಕ್ರೋಶದಲ್ಲೂ ಇರಬಹುದು. ಈ ಬದುಕಿನಲ್ಲಿ ಸುಖವಿಲ್ಲ ಎಂಬ  ನಿರಾಶಾಭಾವದಲ್ಲೂ ಇರಬಹುದು... ಆದರೆ, ಈ ಕರೆ ಸ್ವೀಕರಿಸುವ ವ್ಯಕ್ತಿಗೆ ಇವೆಲ್ಲ ಗೊತ್ತಿರಬೇಕೆಂದಿಲ್ಲ. ಇಂಥ ಸಂದರ್ಭದಲ್ಲಿ ನಿನ್ನಲ್ಲಿ ಶಾಂತಿ  ಸಮಾಧಾನ ಉಂಟಾಗಲಿ ಮತ್ತು ಸಮೃದ್ಧಿ ಸಿಗಲಿ ಎಂದು ಪ್ರಾರ್ಥಿಸುವ ಮೂಲಕ ಮಾತುಕತೆ ಆರಂಭಿಸುವುದು ಎಂಥ ಸುಖಾನುಭವವನ್ನು  ಕೊಡಬಲ್ಲುದು? ಆ ಕಡೆಯ ವ್ಯಕ್ತಿ ನಿಜಕ್ಕೂ ಅಸ್ಸಲಾಮು ಅಲೈಕುಂ ಎಂಬ ಪದದ ನಿಜವಾದ ಅರ್ಥವನ್ನು ಅರಿತುಕೊಂಡಿದ್ದರೆ ಮತ್ತು ಅದರ  ಸಾಮರ್ಥ್ಯವನ್ನು ತಿಳಿದುಕೊಂಡಿದ್ದರೆ ಆ ಕ್ಷಣದಲ್ಲಿ ಅವರಲ್ಲಿ ಮೂಡಬಹುದಾದ ಭಾವಗಳೇನು?

ಮಾನವ ಸಂಘಜೀವಿ ಮತ್ತು ಸಮಾಜ ಜೀವಿ. ಒಂಟಿಯಾಗಿ ಬದುಕುವುದು ಆತನ ಪ್ರಕೃತಿಗೆ ಸೂಕ್ತವಲ್ಲ. ಇಂಥ ಮನುಷ್ಯ ಇತರರಿಗೆ ಒಳಿತನ್ನು  ಬಯಸಬೇಕು ಎಂಬುದು ಇಸ್ಲಾಮ್‌ನ ಮರ್ಮ. ‘ಓರ್ವರು ಸೃಷ್ಟಿಯ ಬಗ್ಗೆ ಒಳಿತನ್ನು ಬಯಸಿದರೆ, ಅಲ್ಲಾಹನು ಅವರ ಮೇಲೆ ಕರುಣೆ  ತೋರುತ್ತಾನೆ’ ಎಂದು ಪ್ರವಾದಿ(ಸ) ಹೇಳಿದ್ದಾರೆ. ಧರ್ಮದ ಒಳಾರ್ಥವೇ ಗುಣಾಕಾಂಕ್ಷೆ ಎಂದೇ ಹೇಳಲಾಗಿದೆ. ಇತರರಿಗೆ ಕೇಡನ್ನು ಬಯಸದೇ  ಇರುವುದು ಮತ್ತು ಅಶಾಂತಿಯನ್ನು ಹರಡಲು ಸಹಕರಿಸದೇ ಇರುವುದೇ ಮುಸ್ಲಿಮನ ಐಡೆಂಟಿಟಿ. ಆದ್ದರಿಂದಲೇ, ನೀವು ಯಾವ ಸನ್ನಿವೇ ಶದಲ್ಲಿದ್ದರೂ ಸಲಾಮ್ ಹೇಳುವುದನ್ನು ರೂಢಿಸಿಕೊಳ್ಳಬೇಕು ಎಂಬ ತರಬೇತಿಯನ್ನು ನೀಡಲಾಗಿದೆ. ಕಿರಿಯರು ಹಿರಿಯರಿಗೆ ಮೊದಲು  ಸಲಾಮ್ ಹೇಳಬೇಕು. ನಡೆಯುವವರು ಕುಳಿತವರಿಗೂ ಒಂಟಿ ವ್ಯಕ್ತಿ ಗುಂಪಿಗೂ ಮೊದಲು ಸಲಾಂ ಹೇಳಬೇಕು. ಒಂದು ಗುಂಪಿನಲ್ಲಿರುವವರಲ್ಲಿ ಒಬ್ಬರು ಸಲಾಂಗೆ ಉತ್ತರಿಸಿದರೆ ಅಥವಾ ಸಲಾಂ ಹೇಳಿದರೆ ಆ ಗುಂಪಿನ ಎಲ್ಲರೂ ಸಲಾಂ ಹೇಳಿದಂತೆ ಅಥವಾ ಉತ್ತರಿಸಿದಂತೆ  ಎಂದು ಪರಿ ಗಣಿಸಲಾಗುತ್ತದೆ. ಅಷ್ಟಕ್ಕೂ,

ನಾವು ಪ್ರತಿನಿತ್ಯ ಹೇಳುವ ಸಲಾಂ ಎಷ್ಟು ಚೈತನ್ಯಭರಿತವಾಗಿದೆ ಎಂಬ ಬಗ್ಗೆ ಅವಲೋಕನವೊಂದನ್ನು ನಡೆಸಬೇಕು. ನಮ್ಮ ಸಲಾಂನಲ್ಲಿ ಎಷ್ಟು  ಆಧ್ಯಾತ್ಮಿಕ ಸ್ಫೂರ್ತಿಯಿದೆ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಮನೆಗೆ ಪ್ರವೇಶಿಸುವಾಗ, ಮನೆಯಿಂದ ಹೊರಹೋಗುವಾಗ ತಾನು ಸಲಾಂ  ಹೇಳುತ್ತೇನೆಯೇ ಎಂಬುದನ್ನು ಪ್ರತಿ ಹೆಣ್ಣು ಮತ್ತು ಗಂಡು ಸ್ವಯಂ ಪ್ರಶ್ನಿಸಿಕೊಳ್ಳಬೇಕು. ಸಣ್ಣ ಮಕ್ಕಳಲ್ಲಿ ಸಲಾಂ ಹೇಳುವ ಗುಣವನ್ನು ಮತ್ತು  ಅದರ ಅರ್ಥವನ್ನು ಪರಿಣಾಮಕಾರಿಯಾಗಿ ವಿವರಿಸಿ ಹೇಳಬೇಕು. ಅದು ಬರೇ ಅಭಿವಂದನೆಯಷ್ಟೇ ಅಲ್ಲ, ಮನೆಯಲ್ಲಿ ಶಾಂತಿ, ಸಮಾಧಾನವನ್ನು ಉಂಟು ಮಾಡುವ ಹಾಗೂ ಸಮೃದ್ಧಿಯನ್ನು ನೆಲೆಗೊಳಿಸುವ ಚೈತನ್ಯವೂ ಹೌದು ಎಂಬುದನ್ನು ತಿಳಿದುಕೊಳ್ಳುತ್ತಾ ಮಕ್ಕಳು ಬೆಳೆಯಬೇಕು  ಮತ್ತು ಆ ಕಾರಣಕ್ಕಾಗಿಯೇ ಮಕ್ಕಳು ಸಲಾಂ
ರೂಢಿಸಿಕೊಳ್ಳಬೇಕು. ಇದೇನೂ ಭಾರೀ ಶ್ರಮದ ಕೆಲಸವಲ್ಲ. ಯಾವ ಮನೆಯಲ್ಲಿ ಸಲಾಂ  ಹೇಳುವ ರೂಢಿ ಇಲ್ಲವೋ ಆ ಮನೆಯ ಹೆತ್ತವರು ಮನೆ ಪ್ರವೇಶಿಸುವಾಗ ಸಲಾಂ ಹೇಳುವುದನ್ನು ಪ್ರಾರಂಭಿಸಿದರೆ ಧಾರಾಳ ಸಾಕು. ಮುಂದೆ  ಮಕ್ಕಳೂ ಅದನ್ನು ಅನುಸರಿಸುತ್ತಾರೆ ಮತ್ತು ಮನೆಯಲ್ಲಿ ‘ಸಲಾಂ’ ನೆಲೆಸಿರುತ್ತದೆ.ಭಾರತೀಯ ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸುವ ಹಸಿರು ಧ್ವಜ

 ಏ.ಕೆ. ಕುಕ್ಕಿಲ

ಕೆಲವು ಪ್ರಶ್ನೆಗಳಿವೆ.

1. ಮುಸ್ಲಿಮರು ಭಾರತಕ್ಕೆ ನಿಷ್ಠರಾಗಿಲ್ಲ.
2. ಮುಸ್ಲಿಮರು ಸಮಾಜದಲ್ಲಿ ಪ್ರತ್ಯೇಕವಾಗಿ ಬದುಕುವುದಕ್ಕೆ ಒತ್ತು ಕೊಡುತ್ತಿದ್ದಾರೆ.
3. ಮುಸ್ಲಿಮರು ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿಲ್ಲ... 

 ಹಿಂದೂಗಳ ಜೊತೆಗಿನ ಯಾವುದೇ ಸಂವಾದ  ಕಾರ್ಯಕ್ರಮಗಳಲ್ಲಿ ಮುಸ್ಲಿಮ್ ಅತಿಥಿ ಎದುರಿಸುವ ಪ್ರಶ್ನೆಗಳಲ್ಲಿ ಇವು ಇದ್ದೇ  ಇರುತ್ತವೆ. ಅಷ್ಟಕ್ಕೂ, ಇಂಥ ಪ್ರಶ್ನೆಗಳು ಹುಟ್ಟಿಕೊಳ್ಳಲು  ಕಾರಣಗಳೇನು? ದುರುದ್ದೇಶಪೂರಿತ ಎಂದು ಏಕಾಏಕಿ ಇವನ್ನು ತಳ್ಳಿ ಹಾಕಬಹುದೇ? ರಾಜಕೀಯ ಪ್ರಣೀತ ಪ್ರಶ್ನೆಗಳು ಎಂದು ಷರಾ ಬರೆದು ಬಿಡಬಹುದೇ? ಮುಸ್ಲಿಮರ ಜೀವನ ಕ್ರಮವೇ ಇವುಗಳಿಗೆ ಕಾರಣ ಎಂದು  ಸಮರ್ಥಿಸಿಕೊಳ್ಳಬಹುದೇ? ಅಂದಹಾಗೆ, ಮುಸ್ಲಿಮರು ಭಾರತಕ್ಕೆ ನಿಷ್ಠರಾಗಿಲ್ಲ ಎಂಬ ಆರೋಪಕ್ಕೆ ಕೊಡುವ ಆಧಾರಗಳು ಹೀಗಿವೆ;

1. ಅವರು ಸೌದಿಯಲ್ಲಿರುವ ಕಾಬಾಕ್ಕೆ ಮುಖ ಮಾಡಿ ನಮಾಝï ಮಾಡುತ್ತಾರೆ.
2. ಅವರು ವರ್ಷಂಪ್ರತಿ ಸೌದಿ ಅರೇಬಿಯಾದ ಮಕ್ಕಾಕ್ಕೆ ಹೋಗುತ್ತಾರೆ.
3. ಅವರು ಅರೇಬಿಕ್ ಭಾಷೆಯಲ್ಲಿರುವ ಕುರ್‌ಆನನ್ನು ಪಠಿಸುತ್ತಾರೆ.
4. ಪಾಕಿಸ್ತಾನದ ಧ್ವಜವನ್ನು ಹಾರಿಸುತ್ತಾರೆ.

ಇದರಲ್ಲಿ ಧ್ವಜಕ್ಕೆ ಸಂಬಂಧಿಸಿ ಪುಟ್ಟದೊಂದು ಗೊಂದಲಕ್ಕೆ ಅವಕಾಶ ಇದೆ. ಜಾಗತಿಕ ಮುಸ್ಲಿಮ್ ಸಮುದಾಯವು ಹಸಿರನ್ನು ತಮ್ಮ ಧಾರ್ಮಿಕ  ಬಣ್ಣವಾಗಿ ಆಯ್ದುಕೊಂಡಿದೆ. ಮುಸ್ಲಿಮ್ ವ್ಯಕ್ತಿಯ ಮೃತದೇಹವನ್ನು ಕೊಂಡೊಯ್ಯುವಾಗ ಹಸಿರು ಬಟ್ಟೆಯನ್ನು ಹೊದಿಸುವುದಿದೆ. ಮಸೀದಿ- ಮದ್ರಸಾಗಳಿಗೆ ಹಸಿರು ಬಣ್ಣ ಬಳಿಯು ವುದಿದೆ. ದರ್ಗಾಗಳನ್ನು ಹಸಿರು ಹೊದಿಕೆಯಿಂದ ಮುಚ್ಚುವುದಿದೆ. ಯಾವುದಾದರೂ ಧಾರ್ಮಿಕ  ಕಾರ್ಯಕ್ರಮ ನಡೆಸುವ ವೇಳೆ ರಸ್ತೆಬದಿಯಲ್ಲಿ ಹಸಿರು ಮಿನಿಚರ್ ಮತ್ತು ಹಸಿರು ಬಣ್ಣದ ಬ್ಯಾನರ್‌ಗಳನ್ನು ತೂಗು ಹಾಕುವುದಿದೆ. ಹಾಗಂತ,  ಈ ಬಣ್ಣಕ್ಕೂ ಇಸ್ಲಾಮ್‌ಗೂ ಆಳವಾದ ಸಂಬAಧ ಇದೆ ಎಂದು ಹೇಳಲಾಗದು. ಕುರ್‌ಆನ್‌ನಲ್ಲಾಗಲಿ  ಪ್ರವಚನಗಳಲ್ಲಾಗಲಿ  ಹಸಿರು ಬಣ್ಣವನ್ನು  ಇಸ್ಲಾಮ್‌ನ ಬಣ್ಣ ಎಂದು ಹೇಳಿಯೂ ಇಲ್ಲ. ಪ್ರವಾದಿಯವರು ಬಿಳಿ ಬಣ್ಣವನ್ನು ಅತ್ಯಂತ ಇಷ್ಟಪಡುತ್ತಿದ್ದರು ಮತ್ತು ಬಿಳಿ ಬಟ್ಟೆಯನ್ನೇ  ಧರಿಸುತ್ತಿದ್ದರು ಎಂಬುದು ಐತಿಹಾಸಿಕವಾಗಿ ದಾಖಲಾಗಿದೆ. ಆದರೂ ಹಸಿರು ಬಣ್ಣ ಮುಸ್ಲಿಮರ ಧಾರ್ಮಿಕ ಬಣ್ಣವೆಂಬ ಭಾವ ಅನಧಿಕೃತವಾಗಿ  ಚಲಾವಣೆಯಲ್ಲಿದೆ. ಆದ್ದರಿಂದಲೇ,

ಪಾಕಿಸ್ತಾನದ ರಾಷ್ಟ್ರೀಯ ಧ್ವಜದ ಬಣ್ಣ ಹಸಿರು. ಭಾರತೀಯ ಮುಸ್ಲಿಮರು ಸಾಮಾನ್ಯವಾಗಿ ಎತ್ತಿ ಹಿಡಿಯುವ ಧ್ವಜದ ಬಣ್ಣವೂ ಹಸಿರೇ.  ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ ಎಂಬ ರಾಜಕೀಯ ಪಕ್ಷದ ಧ್ವಜದ ಬಣ್ಣವೂ ಹಸಿರೇ. ಆದರೆ ಪಾಕ್ ಧ್ವಜದ ಮಧ್ಯದಲ್ಲಿ ಅರ್ಧ  ಚಂದ್ರಾಕೃತಿ ಮತ್ತು ನಕ್ಷತ್ರದ ಚಿತ್ರ ಇದೆ ಹಾಗೂ ಇವೆರಡೂ ಬಿಳಿ ಬಣ್ಣದಲ್ಲಿದೆ. ಅಲ್ಲದೇ, ಧ್ವಜ ಸಂಪೂರ್ಣವಾಗಿ ಹಸಿರು ಬಣ್ಣವನ್ನು ಮಾತ್ರವೇ  ಹೊಂದಿಲ್ಲ. ಹಸಿರು ಬಣ್ಣ ಮುಕ್ಕಾಲು ಭಾಗ ಇದ್ದರೆ ಉಳಿದ ಕಾಲು ಭಾಗ ಬಿಳಿ ಬಣ್ಣ. ಧ್ವಜದ ಹಿಡಿಕೆಯಲ್ಲಿ ಅಥವಾ ಎಡಭಾಗದಲ್ಲಿ ಬಿಳಿ  ಬಣ್ಣವಿದ್ದರೆ ಉಳಿದಂತೆ ಹಸಿರು ಬಣ್ಣವಿದೆ. ಮಧ್ಯದಲ್ಲಿ ಅರ್ಧ ಚಂದ್ರಾಕೃತಿ ಮತ್ತು ನಕ್ಷತ್ರ ಇದೆ. ಆದರೆ ಇಂಡಿಯನ್ ಯೂನಿ ಯನ್ ಮುಸ್ಲಿಮ್  ಲೀಗ್ ಪಕ್ಷದ ಧ್ವಜವು ಸಂಪೂರ್ಣವಾಗಿ ಹಸಿರು ಬಣ್ಣವನ್ನಷ್ಟೇ ಹೊಂದಿದೆ. ಮಾತ್ರವಲ್ಲ, ಧ್ವಜದ ಎಡ ಮೂಲೆಯಲ್ಲಿ ಅರ್ಧ ಚಂದ್ರಾಕೃತಿ ಮತ್ತು  ನಕ್ಷತ್ರವನ್ನು ಬಿಳಿ ಬಣ್ಣದಲ್ಲಿ ಹೊಂದಿದೆ. ಹಾಗೆಯೇ, ಮುಸ್ಲಿಮ್ ಲೀಗ್ ಅನ್ನು ಹೊರತುಪಡಿಸಿ ಇತರ ಭಾರತೀಯ ಮುಸ್ಲಿಮರು ಹಾರಿಸುವ  ಯಾವ ಧ್ವಜದಲ್ಲೂ ಹಸಿರು ಬಣ್ಣದ ಹೊರತಾಗಿ ಬಿಳಿ ಬಣ್ಣ ಕಾಣಿಸುವುದಿಲ್ಲ. ಧ್ವಜಗಳಲ್ಲಿ ಅರ್ಧ ಚಂದ್ರಾಕೃತಿ ಮತ್ತು ನಕ್ಷತ್ರ ಇ ದ್ದಿರಬಹುದಾದರೂ ಪಾಕ್ ಧ್ವಜದಲ್ಲಿರುವ ಬಿಳಿ ಬಣ್ಣವು ಭಾರತೀಯ ಮುಸ್ಲಿಮರು ಹಾರಿಸುವ ಧ್ವಜದಲ್ಲಿ ಯಾವಾಗಲೂ ಇರುವುದಿಲ್ಲ. ಆದರೆ,

ಭಾರತೀಯ ಮಾಧ್ಯಮಗಳು ಈ ಸೂಕ್ಷ್ಮ  ವ್ಯತ್ಯಾಸವನ್ನು ಬಹುತೇಕ ಬಾರಿ ಅವಗಣಿಸಿದ್ದೇ  ಹೆಚ್ಚು. ಭಾರತ ಮತ್ತು ಪಾಕ್ ಗಳ ನಡುವೆ ಸಂಬಂಧ   ಜಟಿಲವಾಗಿರುವ ಸಮಯದಲ್ಲಿ ಜವಾಬ್ದಾರಿಯಿಂದ ವರ್ತಿಸಬೇಕಾಗಿರುವ ಮಾಧ್ಯಮಗಳು ಅಸೂಕ್ಷ್ಮತೆಯನ್ನೇ ನೀತಿಯಾಗಿಸಿಕೊಂಡಂತೆ   ವರ್ತಿಸಿದುದರ ಅಡ್ಡಪರಿಣಾಮವನ್ನು ಭಾರತೀಯ ಮುಸ್ಲಿಮರು ಅನುಭವಿಸುವಂತಾಗಿದೆ. ಹಾಗಂತ, ಪಾಕಿಸ್ತಾನದ ರಾಷ್ಟ್ರಧ್ವಜವೇನೂ  ರಹಸ್ಯವಾಗಿಲ್ಲ. ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ ಧ್ವಜವೂ ಅಥವಾ ಭಾರತೀಯ ಮುಸ್ಲಿಮರು ಹಾರಿಸುತ್ತಿರುವ ಧ್ವಜವೂ  ರಹಸ್ಯವಾಗಿಲ್ಲ. ಗೂಗಲ್ ಮಾಡಿ ನೋಡಿದರೆ ಇವು ಚಿತ್ರವಾಗಿಯೂ ಬರಹದಲ್ಲೂ ಲಭ್ಯವಿದೆ. ಆದರೆ, ಹೆಚ್ಚಿನ ಮಾಧ್ಯಮಗಳು ಇಷ್ಟನ್ನು  ಮಾಡಲೂ ತಯಾರಿಲ್ಲ. ಒಂದು ಸಮುದಾಯದ ರಾಷ್ಟ್ರನಿಷ್ಠೆಯನ್ನು ಕಟಕಟೆಯಲ್ಲಿ ನಿಲ್ಲಿಸಬಹುದಾದ ಸೂಕ್ಷ್ಮ ಸಂದರ್ಭವೆಂದು  ಇವುಗಳನ್ನು  ಪರಿಗಣಿಸಿ ನಿಕಷಕ್ಕೆ ಒಡ್ಡುವ ಬದಲು ಅತ್ಯಂತ ಬೇಜವಾಬ್ದಾರಿಯಿಂದ ಅವು ವರ್ತಿಸಿದ್ದೇ  ಹೆಚ್ಚು. ಅಲ್ಲದೇ, ಮುಖ್ಯವಾಹಿನಿಯ ಮುದ್ರಣ ಮತ್ತು  ದೃಶ್ಯ ಮಾಧ್ಯಮಗಳಲ್ಲಿ ಮುಸ್ಲಿಮರ ಪಾತ್ರ ಶೂನ್ಯ ಅನ್ನುವಷ್ಟು ಕಡಿಮೆ ಇರುವುದೂ ಇಂಥ ಗೊಂದಲಗಳ ಸೃಷ್ಟಿಗೆ ಕಾರಣವೆಂದೂ  ಹೇಳಬಹುದು. ಅದರ ಜೊತೆಗೇ, ಭಾರತೀಯ ಮುಸ್ಲಿಮ್ ಸಮುದಾಯಕ್ಕೆ ಪಾಕ್ ರಾಷ್ಟ್ರಧ್ವಜ ಮತ್ತು ತಾವು ಹಾರಿಸುವ ಧ್ವಜದ ನಡುವೆ ಏನೇ ನು ವ್ಯತ್ಯಾಸಗಳಿವೆ ಅಥವಾ ಇರಬೇಕು ಎಂಬುದರ ಬಗ್ಗೆ ಎಷ್ಟು ತಿಳುವಳಿಕೆ ಇದೆ ಅನ್ನು ವುದೂ ಮುಖ್ಯ. ಅಷ್ಟಕ್ಕೂ,

ಭಾರತೀಯ ಮುಸ್ಲಿಮರು ಹಾರಿಸುವ ಧ್ವಜವು ಭಾರತದ ರಾಷ್ಟ್ರಧ್ವಜದಂತೆ ಸದಾ ಕಾಪಿಟ್ಟುಕೊಳ್ಳುವ ಧ್ವಜವಲ್ಲ. ಈದ್‌ನ ದಿನದಂದೋ ಪ್ರವಾದಿ  ದಿನಾಚರಣೆಯ ದಿನದಂದೋ ಅಥವಾ ಕೆಲವು ಧಾರ್ಮಿಕ ಪ್ರವಚನಗಳ ಸಮಯದಲ್ಲೋ  ಈ ಧ್ವಜವನ್ನು ಹಾರಿಸಲಾಗುತ್ತದೆ ಮತ್ತು ಅವುಗಳನ್ನು  ಆ ಬಳಿಕ ಅಷ್ಟೇ ಗಂಭೀರವಾಗಿ ಕಾಪಿಡಲಾಗುವ ವ್ಯವಸ್ಥೆಯೂ ಇದ್ದಂತಿಲ್ಲ. ಮುಂದಿನ ವರ್ಷ ಹೊಸತಾಗಿ ಧ್ವಜ ತಯಾರಿ ನಡೆಯುವುದೇ  ಹೆಚ್ಚು. ಹಾಗೆ ಧ್ವಜ ತಯಾರಿಸುವಾಗ ಹಿಂದಿನ ವರ್ಷದ ನೀತಿ-ನಿಯಮಗಳನ್ನು ಅಷ್ಟೇ ಮುತುವರ್ಜಿಯಿಂದ ಪಾಲಿಸಲಾಗಿದೆ ಎಂದು ನೂರು  ಶೇಕಡಾ ಖಚಿತವಾಗಿ ಹೇಳುವಂತೆಯೂ ಇಲ್ಲ. ಆದ್ದರಿಂದ, ಆಕಾರದಲ್ಲಿ ಮತ್ತು ಚಂದ್ರ ಹಾಗೂ ನಕ್ಷತ್ರವನ್ನು ಛಾಪಿಸುವ ಜಾಗ ಮತ್ತು ಕ್ರಮದಲ್ಲಿ  ವ್ಯತ್ಯಾಸವಾಗುವ ಸಾಧ್ಯತೆಯೂ ಇದೆ. ಆದರೂ, ಪಾಕ್ ಧ್ವಜದಂತೆ ಹಸಿರಿನೊಂದಿಗೆ ಬಿಳಿ ಬಣ್ಣವಿರುವ ಮತ್ತು ಮಧ್ಯದಲ್ಲಿ ಅರ್ಧ ಚಂದ್ರಾಕೃತಿ  ಮತ್ತು ನಕ್ಷತ್ರ ಇರುವ ಧ್ವಜವನ್ನು ಭಾರತೀಯ ಮುಸ್ಲಿಮರು ಎತ್ತಿ ಹಿಡಿದಿರುವುದು ಇಲ್ಲವೇ ಇಲ್ಲ. ಆದರೆ ಭಾರತೀಯ ಮುಖ್ಯವಾಹಿನಿಯ  ಮಾಧ್ಯಮಗಳೂ ಸಹಿತ ಪ್ರಾದೇಶಿಕ ಮಾಧ್ಯಮಗಳು ಕೂಡಾ ಈ ಸೂಕ್ಷ್ಮತೆಯನ್ನು ಮರೆತಂತೆ ಅನೇಕ ಬಾರಿ ವರ್ತಿಸಿವೆ. ಮಾತ್ರ ವಲ್ಲ, ಪದೇ  ಪದೇ ಇಂಥ ತಪ್ಪುಗಳು ಪುನರಾವರ್ತನೆಯಾಗುತ್ತಿರುವುದನ್ನು ನೋಡಿದರೆ ಅವು ಮರೆತಂತೆ ನಟಿಸುತ್ತಿದೆಯೇನೋ ಎಂದು ಅನಿಸುತ್ತದೆ.  ಹಾಗಂತ,

ಹಸಿರು ಬಣ್ಣದ ಧ್ವಜವನ್ನು ತೋರಿಸಿ ಭಾರತೀಯ ಮುಸ್ಲಿಮರನ್ನು ಪಾಕ್ ನಿಷ್ಠರೆಂದು ಹೇಳುವವರು ಮತ್ತು ಹಾಗೆ ಬಿಂಬಿಸುವ  ಮಾಧ್ಯಮಗಳು ಧ್ವಜಕ್ಕೆ ಸಂಬಂಧಿಸಿ ಒಂದಿಷ್ಟು ಸಂಶೋಧನೆ ನಡೆಸಿರುತ್ತಿದ್ದರೂ ಈ ಹಸಿರು ಧ್ವಜ ಪಾಕಿಸ್ತಾನಕ್ಕೆ ಮಾತ್ರ ಸೀಮಿತ ವಾಗಿಲ್ಲ  ಎಂಬುದನ್ನು ಕಂಡುಕೊಳ್ಳುತ್ತಿದ್ದುವು. ಅಲ್ಜೀರಿಯಾ, ಅಝರ್‌ಬೈಜಾನ್, ಕ್ಯಾಮರೂನ್, ಇರಾನ್, ಮಾರಿಟೇನಿಯಾ, ಬಾಂಗ್ಲಾದೇಶ, ಸೌದಿ  ಅರೇಬಿಯಾ, ಶ್ರೀಲಂಕಾ ಇತ್ಯಾದಿ ರಾಷ್ಟ್ರಗಳೂ ಹಸಿರು ಬಣ್ಣವನ್ನೇ ರಾಷ್ಟ್ರಧ್ವಜದ ಬಣ್ಣವಾಗಿ ಆಯ್ಕೆ ಮಾಡಿಕೊಂಡಿವೆ. ಹಸಿರು ಧ್ವಜದ  ಮಧ್ಯಭಾಗದಲ್ಲಿ ಪೂರ್ಣ ಚಂದ್ರಾಕೃತಿಯ ಕಡುಕೆಂಪು ಬಣ್ಣವು ಬಾಂಗ್ಲಾದೇಶದ ರಾಷ್ಟ್ರಧ್ವಜ ವಾಗಿದ್ದರೆ, ಲಾ ಇಲಾಹ ಇಲ್ಲಲ್ಲಾಹ್  ಮುಹಮ್ಮದರ‍್ರಸೂಲುಲ್ಲಾಹ್ ಎಂದು ಅರಬಿ ಭಾಷೆಯಲ್ಲಿ ಬಿಳಿ ಬಣ್ಣದಲ್ಲಿ ಬರೆದಿರುವ ಹಸಿರು ಬಣ್ಣದ ಧ್ವಜವು ಸೌದಿ ಅರೇಬಿಯಾದ  ರಾಷ್ಟ್ರಧ್ವಜವಾಗಿದೆ. ಅಲ್ಜೀರಿಯಾದ ಧ್ವಜವು ಅರ್ಧಭಾಗ ಹಸಿರು ಮತ್ತು ಅರ್ಧ ಭಾಗ ಬಿಳಿ ಬಣ್ಣವನ್ನು ಹೊಂದಿದ್ದು, ಮಧ್ಯದಲ್ಲಿ ಕೆಂಪು ಬಣ್ಣದಲ್ಲಿ  ಅರ್ಧ ಚಂದ್ರಾಕೃತಿ ಮತ್ತು ನಕ್ಷತ್ರವನ್ನು ಹೊಂದಿದೆ. ಕ್ಯಾಮರೂನ್ ದೇಶದ ರಾಷ್ಟ್ರೀಯ ಧ್ವಜದ ಮಧ್ಯ ಭಾಗವು ಹಸಿರು ಬಣ್ಣವನ್ನು ಹೊಂದಿದ್ದು  ಅದರಲ್ಲಿ ಅರ್ಧ ಚಂದ್ರಾಕೃತಿ ಮತ್ತು ನಾಲ್ಕು ನಕ್ಷತ್ರಗಳಿವೆ. ಹಾಗೆಯೇ, ಉಳಿದ ಭಾಗದಲ್ಲಿ ಹಳದಿ, ಬಿಳಿ, ಕೆಂಪು ಮತ್ತು ಕಡು ನೀಲಿ ಬಣ್ಣವಿದೆ.  ಮಾರಿಟಾನಿಯಾ ಮತ್ತು ಇರಾನ್ ಗಳ ಧ್ವಜದಲ್ಲೂ ಹಸಿರಿಗೆ ಬಹುಮುಖ್ಯ ಸ್ಥಾನವಿದೆ. ಅದರಲ್ಲೂ ಮಾರಿಟಾನಿಯಾ ಧ್ವಜದ ಮೇಲ್ಭಾಗ ಮತ್ತು  ಕೆಳಭಾಗದಲ್ಲಿ ಸಣ್ಣ ಗೆರೆಯಾಕಾರದಲ್ಲಿ ಕೆಂಪು ಬಣ್ಣವಿದ್ದರೆ ಉಳಿದ ಭಾಗವನ್ನು ಹಸಿರು ಆವರಿಸಿಕೊಂಡಿದೆ ಮತ್ತು ಅರ್ಧ ಚಂದ್ರಾಕೃತಿ ಮತ್ತು  ನಕ್ಷತ್ರವನ್ನು ಮಧ್ಯದಲ್ಲಿ ಇರಿಸಿಕೊಂಡಿದೆ. ಉಳಿದಂತೆ,
ಜೋರ್ಡಾನ್, ಕುವೈಟ್, ಇರಾಕ್, ಅಲ್ಬೇನಿಯಾ, ಅಂಗೋಲಾ, ಆಂಟಿಗುವಾ, ಬರ್ಬುಡಾ, ಅರ್ಮೇನಿಯ, ಬಹರೈನ್, ಬೊಲಿವಿಯಾ, ಬೋಟ್ಸು  ವಾನಾ, ಬ್ರೂನೈ, ಕಾಂಬೋಡಿಯಾ, ಚಾಡ್, ಕ್ರೋವೇಶಿಯಾ, ಈಜಿಪ್ಟ್, ಈಸ್ಪೋನಿಯಾ, ಇಥಿಯೋಪಿಯಾ, ಗಬೋನ್, ಕತಾರ್, ಸರ್ಬಿಯಾ,  ಸೋಮಾಲಿಯಾ, ಸಿರಿಯಾ, ಟ್ಯುನೀಶಿಯಾ, ತುರ್ಕಿ, ಯಮನ್, ಝಾಂಬಿಯಾ, ಉಗಾಂಡ, ಸಿಂಗಾಪುರ, ರೊಮಾನಿಯಾ, ಫೆಲೆಸ್ತೀನ್,  ಒಮಾನ್, ನೈಜೀ ರಿಯಾ, ನೈಜರ್, ನಮೀಬಿಯಾ, ಮೊರಾಕ್ಕೋ, ಮೊಂಟನಿಗ್ರೋ, ಮಾರಿಷಸ್, ಮಾಲ್ಟಾ, ಲಿಥುವೇನಿಯಾ, ಲಾತ್ವಿಯ,  ಲೈಬೀರಿಯಾ, ಕೊಸೋವೊ, ಕಿನ್ಯಾ, ಇಂಡೋನೇಶಿಯಾ, ಲೆಬನಾನ್, ಸುಡಾನ್, ಸಿರಿಯಾ, ಯುಎಇ, ತುರ್ಕೆಮೆನಿಸ್ತಾನ್, ಉಝ್ಬೆಕಿಸ್ತಾನ್, ಗಿನಿಯಾ, ಮಾಲಿ, ಸೆನೆಗಲ್ ದೇಶಗಳ ಧ್ವಜದಲ್ಲೂ ಹಸಿರು ಬಣ್ಣವಿದೆ. ಅಂದಹಾಗೆ, ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮ್ ರಾಷ್ಟ್ರಗಳು  ಹಸಿರು ಬಣ್ಣವನ್ನು ತಮ್ಮ ರಾಷ್ಟ್ರಧ್ವಜದಲ್ಲಿ ಬಳಸಿಕೊಳ್ಳುವುದಕ್ಕೆ ಪವಿತ್ರ ಕುರ್‌ಆನಿನ ಈ ಎರಡು ವಚನಗಳು ಮುಖ್ಯ ಕಾರಣ ಎಂದು  ಹೇಳಲಾಗುತ್ತದೆ-

1. ಆ ಸ್ವರ್ಗವಾಸಿಗಳು ಹಸಿರು ರತ್ನಗಂಬಳಿಗಳ ಹಾಗೂ ನುಣುಪಾದ ಅಮೂಲ್ಯ ಹಾಸುಗಳ ಮೇಲೆ ದಿಂಬಿಗೊರಗಿ  ಕುಳಿತಿರುವರು.  (ಅಧ್ಯಾಯ 55, ವಚನ 76)
2. ಸ್ವರ್ಗವಾಸಿಗಳ ಮೈಮೇಲೆ ತೆಳ್ಳಗಿನ ರೇಶ್ಮೆಯ ಹಸಿರು ಉಡುಪು ಮತ್ತು ಜರತಾರಿ ಬಟ್ಟೆಗಳಿರುವುವು. (ಅಧ್ಯಾಯ 76, ವಚನ 21)  ನಿಜವಾಗಿ,

ಹಸಿರು ಧ್ವಜದ ಹೆಸರಲ್ಲಿ ಭಾರತೀಯ ಮುಸ್ಲಿಮರ ದೇಶನಿಷ್ಠೆಯನ್ನು ಪ್ರಶ್ನಿಸುವುದರ ಹಿಂದೆ ರಾಜಕೀಯ ದುರುದ್ದೇಶ ಕೆಲಸ ಮಾಡುತ್ತಿದೆ  ಎಂಬುದು ಅತ್ಯಂತ ವಾಸ್ತವ. ಭಾರತೀಯ ಮುಸ್ಲಿಮರನ್ನು ದೇಶದ್ರೋಹಿಗಳು, ಪಾಕ್ ನಿಷ್ಠರು ಎಂದೆಲ್ಲಾ ಬಿಂಬಿಸುವುದರಿಂದ  ರಾಜಕೀಯವಾಗಿ  ಲಾಭವಿದೆ ಎಂಬುದನ್ನು ತಿಳಿದುಕೊಂಡ ಪಕ್ಷವು ಸುಳ್ಳನ್ನು ಮತ್ತೆ ಮತ್ತೆ ತೇಲಿಬಿಡುವ ಹಾಗೂ ಗೊಂದಲಕಾರಿ ಸುದ್ದಿಯನ್ನು ಉತ್ಪಾದನೆ ಮಾಡುವ  ಅಪಾಯಕಾರಿ ಕೆಲಸ ಮಾಡುತ್ತಿದೆ ಅನ್ನುವುದೂ ಸ್ಪಷ್ಟ. ರಾಜಕೀಯ ಪಕ್ಷಗಳ ಈ ದುರುದ್ದೇಶಕ್ಕೆ ಕೆಲವು ಪ್ರಮುಖ ಮಾಧ್ಯಮಗಳೇ ಬೆಂಬಲ  ನೀಡುತ್ತಿರುವುದೇ ಮುಸ್ಲಿಮರು ಇವತ್ತು ಕಟಕಟೆಯಲ್ಲಿ ನಿಂತಿರುವುದಕ್ಕೆ ಮುಖ್ಯ ಕಾರಣ. ಮೊದಲು, ‘ಮುಸ್ಲಿಮರಿಂದ ಪಾಕ್ ಧ್ವಜ ಹಾರಾಟ’  ಎಂಬ ಸುದ್ದಿ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತದೆ. ಬಳಿಕ ಪೊಲೀಸರು ದಾಳಿ ಮಾಡಿ ಕೆಲವರನ್ನು ವಶಕ್ಕೆ ಪಡಕೊಂಡು ಪರಿಶೀಲಿಸಿದ  ಬಳಿಕ ಅದು ಪಾಕ್ ಧ್ವಜವಲ್ಲ, ಹಸಿರು ಧ್ವಜ ಎಂದು ಗೊತ್ತಾಗಿ ಪ್ರಕರಣ ಮುಕ್ತಾಯವನ್ನು ಕಾಣುತ್ತದೆ. ಆದರೆ, ಈ ಸತ್ಯ ಸುದ್ದಿ ಬಹಿರಂಗಕ್ಕೆ  ಬರುವ ಮೊದಲೇ ಸುಳ್ಳು ಸುದ್ದಿ ದೇಶದಾದ್ಯಂತ ಕಾಡ್ಗಿಚ್ಚಿನಂತೆ ಎಲ್ಲರಿಗೂ ತಲುಪಿರುತ್ತದೆ. ಈ ಸುಳ್ಳು ಸುದ್ದಿಯನ್ನು ತೇಲಿಸಿದವರ ಉದ್ದೇಶವೂ  ಇದುವೇ ಆಗಿರುತ್ತದೆ. ಅಲ್ಲದೇ, ನಿಜ ಸುದ್ದಿಗೆ ಸುಳ್ಳು ಸುದ್ದಿಯಷ್ಟು ಆಕರ್ಷಣೆ ಇಲ್ಲದೇ ಇರುವುದರಿಂದ ಅದು ಮಾಧ್ಯಮಗಳಲ್ಲಿ ಜಾಗ  ಪಡಕೊಳ್ಳುವುದೂ ಕಡಿಮೆ. ನಿಜವಾಗಿ,

ಕಟಕಟೆಯಲ್ಲಿರಬೇಕಾದುದು ಮುಸ್ಲಿಮರ ದೇಶನಿಷ್ಠೆಯಲ್ಲ, ಕೆಲವು ಮಾಧ್ಯಮಗಳು ಮತ್ತು ನಿರ್ದಿಷ್ಟ ರಾಜಕೀಯ ಪಕ್ಷಗಳ ಸತ್ಯನಿಷ್ಠೆ, ಪ್ರಾಮಾಣಿಕತೆ  ಮತ್ತು ದೇಶಪ್ರೇಮ. ಅಷ್ಟೇ.

Friday, May 17, 2024

ಮುಸ್ಲಿಮ್ ಜನಸಂಖ್ಯೆ: ಪ್ರಧಾನಿಯ ಹೇಳಿಕೆ ಮತ್ತು ವಾಸ್ತವ

 ಏ.ಕೆ. ಕುಕ್ಕಿಲ

ಮುಸ್ಲಿಮರು ಹೆಚ್ಚು ಮಕ್ಕಳನ್ನು ಹುಟ್ಟಿಸುವವರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ರಾಜಸ್ತಾನದ ಚುನಾವಣಾ ಭಾಷಣದಲ್ಲಿ ಅವರು  ಹೇಳಿರುವ ಈ ಮಾತು ನಿಜವೇ? ಸರ್ಕಾರವೇ ಒದಗಿಸಿರುವ ಮಾಹಿತಿ ಗಳು ಏನನ್ನುತ್ತವೆ?
ಈ ಅಭಿಪ್ರಾಯವನ್ನು ವಿಶ್ಲೇಷಣೆಗೆ ಒಳಪಡಿಸುವುದಕ್ಕಿಂತ ಮೊದಲು, ಈ ದೇಶದಲ್ಲಿ ಅತೀ ಹೆಚ್ಚು ಮಾರಾಟವಾಗುವ ಆಂಗ್ಲ ದೈನಿಕ ಟೈಮ್ಸ್  ಆಫ್ ಇಂಡಿಯಾದಲ್ಲಿ 2021 ಅಕ್ಟೋಬರ್ 16ರಂದು ಪ್ರಕಟವಾದ ಬರಹವನ್ನು ಓದುವುದು ಉತ್ತಮ. ಅಂಕಿ-ಅಂಶಗಳ ಆಧಾರಿತವಾಗಿ  ಬರೆಯಲಾದ ಆ ಬರಹದ ಶೀರ್ಷಿಕೆ:

Rate of Muslim population rise fell more than Hindus in 20 years
(ಕಳೆದ 20 ವರ್ಷಗಳಲ್ಲಿ ಮುಸ್ಲಿಮ್ ಜನಸಂಖ್ಯಾ ಬೆಳವಣಿಗೆ ದರ ಹಿಂದೂಗಳಿಗಿAತಲೂ ಕಡಿಮೆ.)

ಗೂಗಲ್ ಮಾಡಿದರೆ ಈ ಬರಹ ಈಗಲೂ ಓದುವಿಕೆಗೆ ಲಭ್ಯ ಇದೆ. ಈ ಬರಹದ ಆರಂಭ ಹೀಗಾಗುತ್ತದೆ-
While India's Muslim population grew faster than Hindu population between 1991 and 2001 and then
between 2001 and 2011, the pace of growth declined more dramatically for muslims than hindus over these
two decades, census data shows-
- ಅಂದರೆ,

‘ಜನಗಣತಿ ಅಂಕಿ-ಅಂಶಗಳ ಪ್ರಕಾರ, 1991-2001ರ ನಡುವೆ ಈ ದೇಶದ ಮುಸ್ಲಿಮರ ಜನಸಂಖ್ಯಾ ಬೆಳವಣಿಗೆ ದರವು ಹಿಂದೂ ಜನಸಂಖ್ಯಾ  ಬೆಳವಣಿಗೆ ದರಕ್ಕಿಂತ ವೇಗವಾಗಿತ್ತಾದರೂ 2001-2011ರ ನಡುವೆ ಮುಸ್ಲಿಮರ ಈ ಬೆಳವಣಿಗೆ ದರವು ಹಿಂದೂಗಳಿಗಿಂತಲೂ ವೇಗವಾಗಿ  ಕುಸಿಯಿತು.’

1991ರಿಂದ 2011- ಈ ಎರಡು ದಶಕಗಳಲ್ಲಿ ಹಿಂದೂ ಸಮುದಾಯದ ಜನಸಂಖ್ಯಾ ಬೆಳವಣಿಗೆ ದರವು 19.9%ದಿಂದ 16.8%ಕ್ಕೆ ಕುಸಿಯಿತು.  ಇನ್ನಷ್ಟು ಸ್ಪಷ್ಟವಾಗಿ ಹೇಳಬೇಕೆಂದರೆ, ಈ 20 ವರ್ಷಗಳಲ್ಲಿ ಹಿಂದೂಗಳ ಜನಸಂಖ್ಯಾ ಬೆಳವಣಿಗೆ ದರ 3.1%ಕ್ಕೆ ಕುಸಿಯಿತು. ಇದೇ ಅವಧಿಯಲ್ಲಿ  ಮುಸ್ಲಿಮರ ಜನಸಂಖ್ಯಾ ಬೆಳವಣಿಗೆ ದರವು 29.5%ದಿಂದ 24.6%ಕ್ಕೆ ಕುಸಿಯಿತು. ಅಂದರೆ, ಈ ಎರಡು ದಶಕಗಳ ನಡುವೆ 4.7%ಕ್ಕೆ ಕುಸಿಯಿತು.  ಹಿಂದೂ ಸಮುದಾಯದ ಜನಸಂಖ್ಯಾ ಬೆಳವಣಿಗೆ ದರದ ಕುಸಿತಕ್ಕೆ ಹೋಲಿಸಿದರೆ ಮುಸ್ಲಿಮರ ಜನಸಂಖ್ಯಾ ಬೆಳವಣಿಗೆ ದರದಲ್ಲಿ ಕುಸಿತದ  ಪ್ರಮಾಣ ಹೆಚ್ಚು. 1991-2011- ಈ 20 ವರ್ಷಗಳ ನಡುವೆ ಹಿಂದೂಗಳ ಜನಸಂಖ್ಯಾ ಬೆಳವಣಿಗೆ ದರವು 3.1% ಕುಸಿದಿದ್ದರೆ ಮುಸ್ಲಿಮರ  ಕುಸಿತದ ಪ್ರಮಾಣವು 4.7% ಆಗಿತ್ತು. ಇದೇವೇಳೆ, ಇದೇ ಅವಧಿಯಲ್ಲಿ ಬೌದ್ಧ, ಜೈನ, ಕ್ರೈಸ್ತ ಸಮುದಾಯದ ಜನಸಂಖ್ಯಾ ಬೆಳವಣಿಗೆ ದರದ  ಇಳಿಕೆಯು ಇದಕ್ಕಿಂತಲೂ ಹೆಚ್ಚಾಗಿದೆ. ಅಂದಹಾಗೆ,

1991ರಿಂದ  2011ರ ನಡುವೆ ಭಾರತದ ವಿವಿಧ ಧರ್ಮಗಳ ಲೆಕ್ಕಾಚಾರ ಮಾಡುವುದಾದರೆ, ಅತೀ ನಿಧಾನವಾಗಿ ಜನಸಂಖ್ಯಾ ಬೆಳವಣಿಗೆಯಲ್ಲಿ  ಇಳಿಕೆ ಕಂಡಿರುವುದು ಹಿಂದೂ ಸಮುದಾಯದಲ್ಲಿ. ಅತೀ ವೇಗವಾಗಿ ಜನಸಂಖ್ಯಾ ದರ ಇಳಿದಿರುವುದು ಜೈನ ಮತ್ತು ಬೌದ್ಧ ಸಮುದಾಯದಲ್ಲಿ. ಭಾರತ ಸರ್ಕಾರ ನಡೆಸಿರುವ ಜನಗಣತಿ ವಿವರಗಳೇ ಇವೆಲ್ಲವನ್ನೂ ಸ್ಪಷ್ಟಪಡಿಸಿದೆ. 2021ರಲ್ಲಿ ನಡೆಯಬೇಕಿದ್ದ ಜನಗಣತಿ ಇನ್ನೂ ನಡೆಯದಿರುವುದರಿಂದ 2011ರ ಜನಗಣತಿಯನ್ನೇ ಜನಸಂಖ್ಯಾ ಲೆಕ್ಕಾಚಾರಕ್ಕೆ ಆಧಾರವಾಗಿ ಪರಿಗಣಿಸಲಾಗುತ್ತದೆ.

ಇನ್ನೂ ಒಂದಿಷ್ಟು ಅಂಕಿ-ಅಂಶಗಳು

1992ರಲ್ಲಿ ಓರ್ವ ಮುಸ್ಲಿಮ್ ಮಹಿಳೆಗೆ ಸರಾಸರಿ 4.4 ಮಕ್ಕಳು ಇದ್ದರೆ, 2015ಕ್ಕೆ ತಲುಪುವಾಗ ಇದು 2.6ಕ್ಕೆ ಕುಸಿಯಿತು. ಇದೇವೇಳೆ,  1992ರಲ್ಲಿ ಓರ್ವ ಹಿಂದೂ ಮಹಿಳೆಗೆ ಸರಾಸರಿ 3.3 ಮಕ್ಕಳು ಇದ್ದರೆ, 2015ಕ್ಕಾಗುವಾಗ ಇದು 1.2ಕ್ಕೆ ಕುಸಿಯಿತು. 2021ರ Pew Research Centreನ  ವರದಿಯ ಪ್ರಕಾರ,

1992ರಿಂದ 2015ರ ನಡುವೆ ಮುಸ್ಲಿಮ್ ಮಹಿಳೆಯರ ಫಲ ವತ್ತತೆಯ ಪ್ರಮಾಣವು 4.4ರಿಂದ 2.6ಕ್ಕೆ ಕುಸಿದಿದೆ. ಇದೇವೇಳೆ, ಹಿಂದೂ  ಮಹಿಳೆಯರಲ್ಲಿ ಇದು 3.3ರಿಂದ 2.1ಕ್ಕೆ ಕುಸಿದಿದೆ. The National Family health survey (ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ) 2019-21ರ ವರದಿ ಪ್ರಕಾರ,

ಹಿಂದೂ ಮತ್ತು ಮುಸ್ಲಿಮ್ ಮಹಿಳೆಯರ ನಡುವಿನ ಫಲವತ್ತತೆಯ ಅಂತರವು 0.42ರ ಪ್ರಮಾಣದಲ್ಲಿದೆ. ಅಂದರೆ, ಓರ್ವ ಹಿಂದೂ ಮಹಿಳೆ  ಸರಾಸರಿ 1.94 ಮಗುವನ್ನು ಹೊಂದುವಾಗ, ಮುಸ್ಲಿಮ್ ಮಹಿಳೆ ಸರಾಸರಿ 2.36 ಮಗುವನ್ನು ಹೊಂದುತ್ತಾಳೆ. 1992ರಲ್ಲಿ ಓರ್ವ ಮುಸ್ಲಿಮ್  ಮಹಿಳೆ ಹಿಂದೂ ಮಹಿಳೆಗಿಂತ ಸರಾಸರಿ 1.1 ಮಗುವನ್ನು ಹೆಚ್ಚು ಹೊಂದುತ್ತಿದ್ದಳು. ಆದರೆ, 3 ದಶಕಗಳಲ್ಲಿ ಈ ಅಂತರದಲ್ಲಿ ಭಾರೀ  ಇಳಿಕೆಯಾಗಿದೆ. ಹಾಗೆಯೇ,

1991-2011ರ ನಡುವೆ ಲೆಕ್ಕ ಹಾಕಿದರೆ, ಮುಸ್ಲಿಮ್ ಫಲವತ್ತತೆಯ ಪ್ರಮಾಣವು 35% ಕುಸಿದಿರುವಾಗ ಹಿಂದೂ ಫಲವತ್ತತೆಯ ಪ್ರಮಾಣವು  30% ಕುಸಿದಿದೆ. ಅಂದರೆ, ಕಳೆದ 20 ವರ್ಷಗಳಲ್ಲಿ ಮುಸ್ಲಿಮರ ಫಲವತ್ತತೆಯ ಪ್ರಮಾಣವು ಹಿಂದೂಗಳಿಗಿಂತ  5% ಹೆಚ್ಚು ಕುಸಿದಿದೆ. ಇದು  ಹೀಗೆಯೇ ಮುಂದುವರಿದರೆ 2030ಕ್ಕಾಗುವಾಗ ಹಿಂದೂ-ಮುಸ್ಲಿಮ್ ಫಲವತ್ತತೆಯ ಪ್ರಮಾಣವು ಸಮಾನ ಮಟ್ಟಕ್ಕೆ ಬರಲಿದೆ ಎಂದು  ಅಂದಾಜಿಸಬಹುದು. ಅಂದಹಾಗೆ,

2021ರಲ್ಲಿ ಬಿಡುಗಡೆಯಾದ ಬಹುಚರ್ಚಿತ The Population Myth: Islam, Family Plannings and Politics inIndia ಎಂಬ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಶಿ ಅವರ ಪುಸ್ತಕದಲ್ಲಿ ಈ ಕುರಿತಂತೆ ಸಾಕಷ್ಟು ವಿವರಗಳಿವೆ.  ಅವರು ಈ ಪುಸ್ತಕದಲ್ಲಿ ದೆಹಲಿ ವಿವಿಯ ಮಾಜಿ ವೈಸ್ ಚಾನ್ಸ್ಲರ್ ದಿನೇಶ್ ಸಿಂಗ್ ಮತ್ತು ಪ್ರೊ. ಅಜಯ್ ಕುಮಾರ್ ಅವರ ಲೆಕ್ಕಾಚಾರವನ್ನು  ವಿಶೇಷವಾಗಿ ಉಲ್ಲೇಖಿಸಿದ್ದಾರೆ. ಅದರ ಪ್ರಕಾರ, 1951ರ ಜನಗಣತಿ ಪ್ರಕಾರ, ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ 9.8% ಇತ್ತು. 2011ರ ಜ ನಗಣತಿಯಂತೆ ಇದು 14.2%ವಾಗಿ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಹಿಂದೂಗಳ ಜನಸಂಖ್ಯೆ 84.1%ದಿಂದ 79.8%ಕ್ಕೆ ಇಳಿಕೆಯಾಗಿದೆ.  ಅಂದರೆ ಕಳೆದ 60 ವರ್ಷಗಳಲ್ಲಿ ಮುಸ್ಲಿಮರ ಜನಸಂಖ್ಯೆಯಲ್ಲಿ ಕೇವಲ 4.4% ಮಾತ್ರವೇ ಏರಿಕೆಯಾಗಿದೆ. ಹೀಗಾದರೆ, ಮುಂದಿನ ಸಾವಿರ  ವರ್ಷಗಳಲ್ಲೂ ಮುಸ್ಲಿಮರ ಜನಸಂಖ್ಯೆ ಹಿಂದೂಗಳನ್ನು ಮೀರಿಸಲಾರದು ಎಂದವರು ಜನಗಣತಿ ಅಂಕಿ-ಸಂಖ್ಯೆಗಳ ಆಧಾರದಲ್ಲೇ  ಬರೆ ದಿದ್ದಾರೆ. ಅದರಲ್ಲೂ ಹಿಂದೂಗಳು ಇನ್ನು ಮುಂದೆ ಒಂದೇ ಒಂದು ಮಗುವನ್ನು ಹೆರದಿದ್ದರೂ 2070ರ ವರೆಗೆ ಮುಸ್ಲಿಮರು ಈ ದೇಶದಲ್ಲಿ  ಬಹುಸಂಖ್ಯಾತರಾಗಲಾರರು ಎಂದೂ ಖುರೇಶಿ ಬರೆದಿದ್ದಾರೆ. ನಿಜವಾಗಿ,

ಜನಸಂಖ್ಯಾ ಹೆಚ್ಚಳಕ್ಕೂ ಬಡತನ, ಅನಕ್ಷರತೆ ಮತ್ತು ಅಜ್ಞಾನಕ್ಕೂ  ನಡುವೆ ಗಾಢ ಸಂಬಂಧವಿದೆ. ಈ ಸಂಬಂಧಕ್ಕೆ ಹೋಲಿಸಿದರೆ, ಜನಸಂಖ್ಯಾ  ಹೆಚ್ಚಳಕ್ಕೂ ಧರ್ಮಕ್ಕೂ ನಡುವಿನ ಸಂಬಂಧ ತೀರಾ ತೆಳುವಾದುದು. ಕೇರಳ ಸಹಿತ ದಕ್ಷಿಣ ಭಾರತದ ಹಿಂದೂ ಮಹಿಳೆಯರ ಫಲವತ್ತತೆಯ  ಪ್ರಮಾಣವು ಉತ್ತರ ಭಾರತದ ರಾಜ್ಯಗಳ ಹಿಂದೂ ಮಹಿಳೆಯರಿಗೆ ಹೋಲಿಸಿದರೆ ತೀರಾ ಕಡಿಮೆ. ಬಿಹಾರದಲ್ಲಿ ಫಲವತ್ತತೆಯ ಪ್ರಮಾಣ  (TFR) 2.9, ರಾಜಸ್ತಾನ 2.8, ಉತ್ತರ ಪ್ರದೇಶ 2.6 ಇದೆ. ಓರ್ವ ತಾಯಿ ಮಗುವನ್ನು ಹೊಂದುವುದಕ್ಕೂ ಧರ್ಮಕ್ಕೂ ಸಂಬಂಧ  ಇರುತ್ತಿದ್ದರೆ ದಕ್ಷಿಣ ಭಾರತದ ಹಿಂದೂ ಮಹಿಳೆಯರಿಗೂ ಉತ್ತರ ಭಾರತದ ಹಿಂದೂ ಮಹಿಳೆಯರಿಗೂ ಮಕ್ಕಳನ್ನು ಹೊಂದುವ ವಿಷಯದಲ್ಲಿ  ಸಮಾನ ಹೋಲಿಕೆ ಇರಬೇಕಾಗಿತ್ತು. ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಉತ್ತರ ರಾಜ್ಯಗಳಲ್ಲಿ ಸರಾಸರಿ ಮಕ್ಕಳ ಸಂಖ್ಯೆ ಹೆಚ್ಚು.  ಯಾಕೆ ಹೀಗೆ ಎಂದರೆ,

ದಕ್ಷಿಣ ಭಾರತಕ್ಕೆ ಹೋಲಿಸಿದರೆ ಉತ್ತರ ಭಾರತದ ರಾಜ್ಯಗಳು ಅಭಿವೃದ್ಧಿಯಲ್ಲಿ ಹಿಂದುಳಿದಿವೆ. ಬಿಹಾರ, ಒಡಿಸ್ಸಾ, ಉತ್ತರ ಪ್ರದೇಶ, ರಾಜಸ್ಥಾನ  ಇತ್ಯಾದಿ ರಾಜ್ಯಗಳಲ್ಲಿ ಪ್ರತಿ ಕುಟುಂಬದ ಶಿಕ್ಷಣ ಮತ್ತು ಆರ್ಥಿಕ ಸ್ಥಿತಿಯು ದಕ್ಷಿಣ ಭಾರತದ ಕುಟುಂಬಗಳಿಂದ  ತುಂಬಾ ಕೆಳಗಿದೆ. ಎಲ್ಲಿ ಆರ್ಥಿಕ  ಮತ್ತು ಶೈಕ್ಷಣಿಕ ಸ್ಥಿತಿ ತಳಮಟ್ಟದಲ್ಲಿದೆಯೋ ಆ ಪ್ರದೇಶಗಳಲ್ಲಿ ಮಕ್ಕಳ ಜನನ ಪ್ರಮಾಣ ಹೆಚ್ಚಿದೆ. ಇದಕ್ಕೆ ಹಿಂದೂ-ಮುಸ್ಲಿಮ್ ಎಂಬ ಬೇಧ  ಇಲ್ಲ. ಅಭಿವೃದ್ಧಿ ಹೊಂದಿದ ಪ್ರದೇಶಗಳಲ್ಲಿ ಓರ್ವ ತಾಯಿ ಹೊಂದಿರುವ ಮಕ್ಕಳ ಸರಾಸರಿ ಪ್ರಮಾಣವು ಅಭಿವೃದ್ಧಿ ಹೊಂದದ ಪ್ರದೇಶಗಳಿಗೆ  ಹೋಲಿಸಿದರೆ ತೀರಾ ಕಡಿಮೆ. ಇದು ಹಿಂದೂ ಮತ್ತು ಮುಸ್ಲಿಮರಲ್ಲೂ ಬಹುತೇಕ ಸಮಾನವಾಗಿದೆ. ಅಷ್ಟಕ್ಕೂ,

ಜನಸಂಖ್ಯೆಯನ್ನು ಹೊರೆಯಾಗಿ ನೋಡುವ ಸಿದ್ಧಾಂತವನ್ನು ಮೊದಲು ಪರಿಚಯಿಸಿದ್ದು ಥಾಮಸ್ ರಾಬರ್ಟ್ ಮಲ್ತಸ್ ಎಂಬ ಅರ್ಥತಜ್ಞ.  ಇಂಗ್ಲೆಂಡಿನವರಾದ ಮತ್ತು ಮೂರು ಮಕ್ಕಳ ತಂದೆಯಾದ ಇವರು 1798ರಲ್ಲಿ Principle of population-- ಎಂಬ ಪ್ರಬಂಧವನ್ನು ಮಂಡಿಸಿದರು. 1803ರಲ್ಲಿ ಅದರ ಪರಿ ಷ್ಕೃತ ರೂಪವನ್ನು ಪ್ರಕಟಿಸಿದರು. ಅದರಲ್ಲಿ ಅವರು ಜನಸಂಖ್ಯೆಯನ್ನು ಹೊರೆಯಾಗಿ ವ್ಯಾಖ್ಯಾನಿಸಿದ್ದರು. ಜನಸಂಖ್ಯಾ ಹೆಚ್ಚಳವು ಬಡತನ, ನಿರಕ್ಷರತೆ, ಅನಾರೋಗ್ಯ ಇತ್ಯಾದಿಗಳಿಗೆ ಕಾರಣವಾಗುತ್ತದೆ ಎಂಬ ಥಿಯರಿಯನ್ನು ಮಂಡಿಸಿದರು.  ಈ ಥಿಯರಿಯ ಆಧಾರದಲ್ಲಿಯೇ 1973ರಲ್ಲಿ ವಿಶ್ವಸಂಸ್ಥೆಯು ಜನಸಂಖ್ಯಾ ನಿಯಂತ್ರಣವನ್ನು ಘೋಷಿಸಿತು. 1980ರಲ್ಲಿ ಚೀನಾವು  ಕುಟುಂಬಕ್ಕೊಂದೇ  ಮಗು ನೀತಿ ಯನ್ನು ಕಡ್ಡಾಯವಾಗಿ ಜಾರಿಗೊಳಿಸಿತು. ಇದಾಗಿ 36 ವರ್ಷಗಳ ಬಳಿಕ 2016ರಲ್ಲಿ ಇದೇ ಚೀನಾ ತನ್ನ ಈ  ನೀತಿಯನ್ನು ಪೂರ್ಣವಾಗಿ ರದ್ದುಗೊಳಿಸಿತು. ಕುಟುಂಬವೊಂದು  ಮೂರು ಮಗುವನ್ನು ಹೊಂದುವಂತೆ  ವಿನಂತಿ ಮಾಡಲಾಯಿತು. ಅದಕ್ಕಾಗಿ  ವಿವಿಧ ಪ್ರೋತ್ಸಾಹದ ವಿಧಾನಗಳನ್ನೂ ಅನುಸರಿಸಿತು. ಇದು ಏಕೆಂದರೆ,

ಒಂದೇ  ಮಗು ನೀತಿಯಿಂದಾಗಿ ಹಿರಿಯರ ಸಂಖ್ಯೆ ಹೆಚ್ಚಾಗುತ್ತಾ ಹೋಯಿತಲ್ಲದೇ, ದುಡಿಯುವ ಪ್ರಾಯದ ಯುವ ಸಮೂಹದ ಸಂಖ್ಯೆ  ತೀವ್ರ ಪ್ರಮಾಣದಲ್ಲಿ ಕುಸಿಯತೊಡಗಿತು. 2022ರ ವೇಳೆಗೆ ಚೀನಾದಲ್ಲಿ ವೃದ್ಧರ ಸಂಖ್ಯೆ 20%ವನ್ನೂ ಮೀರಿ ಬೆಳೆ ಯಿತು. ಅಲ್ಲದೇ, ಒಂದೇ  ಮಗು ನೀತಿಗೆ ಚೀನಾ ನಾಗರಿಕರು ಎಷ್ಟು ಒಗ್ಗಿ ಹೋಗಿದ್ದಾರೆಂದರೆ, ಸರ್ಕಾರ ಇನಾಮು ಘೋಷಿಸಿ ದರೂ ಒಂದಕ್ಕಿಂತ  ಹೆಚ್ಚು ಮಗುವನ್ನು  ಹೊಂದಲು ಮುಂದೆ ಬರುತ್ತಿಲ್ಲ. ಶಿಕ್ಷಣ ವೆಚ್ಚ, ಪ್ರಸವ ವೆಚ್ಚ, ಜೀವನ ವೆಚ್ಚವನ್ನು ಪರಿಗಣಿಸಿಕೊಂಡು ಚೀನೀಯರು ಒಂದೇ ಮಗುವಿಗೆ ಆದ್ಯತೆ  ನೀಡುತ್ತಿರುವುದು ಸರ್ಕಾರದ ಕೈ ಕಟ್ಟಿದಂತಾಗಿದೆ. ಅಂದಹಾಗೆ,
ಜನಸಂಖ್ಯೆಗೂ ಧರ್ಮಕ್ಕೂ ಬಲವಾದ ಸಂಬಂಧ ಇದೆ ಎಂದಾದರೆ, ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನನ ಪ್ರಮಾಣದಲ್ಲಿ ವ್ಯತ್ಯಾಸ  ಇರಬಾರದಾಗಿತ್ತು. ಅದರಲ್ಲೂ ಜನಸಂಖ್ಯಾ ಹೆಚ್ಚಳಕ್ಕೆ ಇಸ್ಲಾಮ್ ಪ್ರಚೋದಿಸುತ್ತಿದೆ ಎಂದಾದರೆ, ಅರಬ್ ರಾಷ್ಟ್ರಗಳಲ್ಲಿ ಜನರು ತುಂಬಿ  ತುಳುಕಿರಬೇಕಿತ್ತು. ಕುರ್‌ಆನನ್ನೇ ಸಂವಿಧಾನವೆಂದು ಒಪ್ಪಿಕೊಂಡಿರುವ ಸೌದಿ ಅರೇಬಿಯಾ, ಯುಎಇ, ಕತಾರ್, ಒಮಾನ್, ಕುವೈಟ್, ಬಹರೈನ್ನ್   ಇತ್ಯಾದಿ ರಾಷ್ಟ್ರಗಳಲ್ಲಿ ಕಾಲಿಡುವುದಕ್ಕೂ ಸಾಧ್ಯವಾಗದಷ್ಟು ಜನರು ತುಂಬಿರಬೇಕಿತ್ತು. ಆದರೆ, ಆ ರಾಷ್ಟ್ರಗಳಲ್ಲಿ ಸ್ಥಳೀಯರ ಸಂಖ್ಯೆ ಎಷ್ಟು ಕಡಿಮೆ  ಇದೆ ಎಂದರೆ, ಭಾರತ ಸಹಿತ ಉದ್ಯೋಗಕ್ಕಾಗಿ ಅಲ್ಲಿಗೆ ಆಗಮಿಸಿರುವ ವಿದೇಶಿಯರ ಸಂಖ್ಯೆಯೇ ಹೆಚ್ಚಿದೆ. ಈ ಅರಬ್ ರಾಷ್ಟ್ರಗಳು  ಆರ್ಥಿಕವಾಗಿ ಸುಸ್ಥಿತಿಯಲ್ಲಿರುವುದು ಮತ್ತು ಪ್ರತಿ ಅರಬ್ ಕುಟುಂಬವೂ ಸುಶಿಕ್ಷಿತವಾಗಿರುವುದೇ ಇದಕ್ಕೆ ಕಾರಣ. ಹಾಗೆಯೇ, ಜನಸಂಖ್ಯೆಗೆ  ಸಂಬಂಧಿಸಿ ಜಗತ್ತಿನಲ್ಲಿಯೇ ನಂಬರ್ ವನ್ ಸ್ಥಾನದಲ್ಲಿರುವ ಚೀನಾ ಮುಸ್ಲಿಮ್ ರಾಷ್ಟ್ರವೇನೂ ಅಲ್ಲವಲ್ಲ.ಇಸ್ಲಾಮ್ ಎಂದೂ ಜನಸಂಖ್ಯೆಯನ್ನು ಏರಿಸಿ ರಾಷ್ಟ್ರವನ್ನು ತನ್ನ ವಶಪಡಿಸಿಕೊಳ್ಳುವ ಥಿಯರಿಯನ್ನು ಮಂಡಿಸಿಯೇ ಇಲ್ಲ. ಹಾಗೆಯೇ ಜ ನಸಂಖ್ಯೆಯನ್ನು ಹೊರೆ ಎಂದೂ ಹೇಳಿಯೂ ಇಲ್ಲ.ಕುರ್‌ಆನಿನ ಪ್ರಕಾರ, 

ಓರ್ವ ತಾಯಿ ಒಂದು ಮಗುವನ್ನು ಹೆತ್ತು ಕನಿಷ್ಠ ಮೂರು ವರ್ಷಗಳಾದ ಬಳಿಕ ಇನ್ನೊಂದು ಮಗುವನ್ನು ಹೆರಬೇಕು.  (ಅಧ್ಯಾಯ: 31, ವಚನ: 14) ಇದರ ಪ್ರಕಾರ ಇಬ್ಬರು ಮಕ್ಕಳನ್ನು ಓರ್ವ ತಾಯಿ ಹೊಂದುವಾಗ ಕನಿಷ್ಠ ಆರೇಳು ವರ್ಷಗಳಾದರೂ ಆಗುತ್ತದೆ.  ಹೆಣ್ಣನ್ನು ಮಗು ಹೆರುವ ಯಂತ್ರವೆಂದು ಇಸ್ಲಾಮ್ ಪರಿಗಣಿಸಿದ್ದಿದ್ದರೆ ಈ ಅಂತರವನ್ನು ಹೇರುವ ಅಗತ್ಯ ಇದ್ದಿರಲೇ ಇಲ್ಲ. ತಾಯಿಯ  ಆರೋಗ್ಯಕ್ಕೆ ಗರಿಷ್ಠ ಮಹತ್ವ ಕೊಡುವ ಇಸ್ಲಾಮ್, ಹೆಣ್ಣನ್ನು ಹೆರುವ ಯಂತ್ರವಾಗಿ ಕಾಣುವುದಕ್ಕೆ ಸಾಧ್ಯವೂ ಇಲ್ಲ.

ಇದೊಂದು ಮಿತ್.

ಲವ್ ಜಿಹಾದ್‌ನಂತೆ ಜನಸಂಖ್ಯಾ ಹೆಚ್ಚಳವೂ ಒಂದು ಪ್ರೊಪಗಂಡಾ. ಜನ ಸಂಖ್ಯೆಯ ಹೆಸರಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ, ಮುಸ್ಲಿಮರ  ಬಗ್ಗೆ ಹಿಂದೂಗಳಲ್ಲಿ ಭಯ ಹುಟ್ಟಿಸುವುದೇ ಇದರ ಹಿಂದಿರುವ ಉದ್ದೇಶ. ಈ ದೇಶ ಭವಿಷ್ಯದಲ್ಲಿ ಮುಸ್ಲಿಮ್ ಬಹುಸಂಖ್ಯಾತ ದೇಶವಾಗುತ್ತದೆ  ಎಂಬುದು ಬಹುದೊಡ್ಡ ಸುಳ್ಳು. ಈ ದೇಶ ಮುಸ್ಲಿಮ್ ಬಹುಸಂಖ್ಯಾತ ದೇಶವಾಗುವುದಕ್ಕೆ ಸಾಧ್ಯವೇ ಇಲ್ಲ. 2030ರ ವೇಳೆಗೆ ಹಿಂದೂ- ಮುಸ್ಲಿಮ್ ಮಹಿಳೆಯರ ಫಲವತ್ತತೆಯ ಪ್ರಮಾಣ ಏಕಪ್ರಕಾರ ವಾಗಬಹುದು ಎಂದು ತಜ್ಞರೇ ಹೇಳುತ್ತಾರೆ. ಹಾಗಂತ, 1951ರಿಂದ 1991ರ  ವರೆಗೆ ಮುಸ್ಲಿಮ್ ಜನಸಂಖ್ಯಾ ಬೆಳವಣಿಗೆ ದರವು ಹಿಂದೂಗಳಿಗೆ ಹೋಲಿಸಿದರೆ ಹೆಚ್ಚಿತ್ತು ಎಂಬುದು ನಿಜ. ಆದರೆ ಮುಂದಿನ ಎರಡು ದಶಕಗಳಲ್ಲಿ ಈ ಏರಿಕೆ ಪ್ರಮಾಣವು ದಿಢೀರ್ ಕುಸಿದಿರುವುದೂ ನಿಜ. ಈ ಕುಸಿತವೇ ಈ ಏರಿಕೆ-ಇಳಿಕೆಗೆ ಧರ್ಮ ಕಾರಣವಲ್ಲ ಎಂಬುದನ್ನು  ಸೂಚಿಸುತ್ತದೆ. ಬಡತನ-ನಿರಕ್ಷರತೆ, ಅಜ್ಞಾನ ಯಾವ ಪ್ರದೇಶಗಳಲ್ಲಿ ಹೆಚ್ಚಿದೆಯೋ ಅಲ್ಲಿನ ಹಿಂದೂ-ಮುಸ್ಲಿಮ್ ಕುಟುಂಬಗಳಲ್ಲಿ ಮಕ್ಕಳ ಸಂಖ್ಯೆ  ಹೆಚ್ಚಿದೆ. ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಬಲಗೊಂಡಿರುವ ಪ್ರದೇಶಗಳ ಹಿಂದೂ-ಮುಸ್ಲಿಮ್ ಕುಟುಂಬಗಳಲ್ಲಿ ಜನಸಂಖ್ಯೆ ಕಡಿಮೆ ಇದೆ.  ಒಂದುವೇಳೆ, ಮಕ್ಕಳ ಸಂಖ್ಯೆಗೂ ಧರ್ಮಕ್ಕೂ ಬಲವಾದ ಸಂಬಂಧ ಇದೆಯೆಂದಾದರೆ, ಈ ಸಹಜತೆ ಸಾಧ್ಯವೇ ಇರಲಿಲ್ಲ. ಅಂದಹಾಗೆ,

ಇಲ್ಲಿ ನೀಡಲಾದ ಎಲ್ಲ ಅಂಕಿ-ಅಂಶಗಳೂ ಜನಗಣತಿಯನ್ನು ಆಧರಿಸಿದ್ದಾಗಿದ್ದು, ಯಾರು ಬೇಕಾದರೂ ಗೂಗಲ್ ಮಾಡಿ ಪರಿಶೀ ಲಿಸಿಕೊಳ್ಳಬಹುದು.