ಏ.ಕೆ. ಕುಕ್ಕಿಲ
ಕೆಲವು ಪ್ರಶ್ನೆಗಳಿವೆ.1. ಮುಸ್ಲಿಮರು ಭಾರತಕ್ಕೆ ನಿಷ್ಠರಾಗಿಲ್ಲ.
2. ಮುಸ್ಲಿಮರು ಸಮಾಜದಲ್ಲಿ ಪ್ರತ್ಯೇಕವಾಗಿ ಬದುಕುವುದಕ್ಕೆ ಒತ್ತು ಕೊಡುತ್ತಿದ್ದಾರೆ.
3. ಮುಸ್ಲಿಮರು ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿಲ್ಲ...
ಹಿಂದೂಗಳ ಜೊತೆಗಿನ ಯಾವುದೇ ಸಂವಾದ ಕಾರ್ಯಕ್ರಮಗಳಲ್ಲಿ ಮುಸ್ಲಿಮ್ ಅತಿಥಿ ಎದುರಿಸುವ ಪ್ರಶ್ನೆಗಳಲ್ಲಿ ಇವು ಇದ್ದೇ ಇರುತ್ತವೆ. ಅಷ್ಟಕ್ಕೂ, ಇಂಥ ಪ್ರಶ್ನೆಗಳು ಹುಟ್ಟಿಕೊಳ್ಳಲು ಕಾರಣಗಳೇನು? ದುರುದ್ದೇಶಪೂರಿತ ಎಂದು ಏಕಾಏಕಿ ಇವನ್ನು ತಳ್ಳಿ ಹಾಕಬಹುದೇ? ರಾಜಕೀಯ ಪ್ರಣೀತ ಪ್ರಶ್ನೆಗಳು ಎಂದು ಷರಾ ಬರೆದು ಬಿಡಬಹುದೇ? ಮುಸ್ಲಿಮರ ಜೀವನ ಕ್ರಮವೇ ಇವುಗಳಿಗೆ ಕಾರಣ ಎಂದು ಸಮರ್ಥಿಸಿಕೊಳ್ಳಬಹುದೇ? ಅಂದಹಾಗೆ, ಮುಸ್ಲಿಮರು ಭಾರತಕ್ಕೆ ನಿಷ್ಠರಾಗಿಲ್ಲ ಎಂಬ ಆರೋಪಕ್ಕೆ ಕೊಡುವ ಆಧಾರಗಳು ಹೀಗಿವೆ;
1. ಅವರು ಸೌದಿಯಲ್ಲಿರುವ ಕಾಬಾಕ್ಕೆ ಮುಖ ಮಾಡಿ ನಮಾಝï ಮಾಡುತ್ತಾರೆ.
2. ಅವರು ವರ್ಷಂಪ್ರತಿ ಸೌದಿ ಅರೇಬಿಯಾದ ಮಕ್ಕಾಕ್ಕೆ ಹೋಗುತ್ತಾರೆ.
3. ಅವರು ಅರೇಬಿಕ್ ಭಾಷೆಯಲ್ಲಿರುವ ಕುರ್‌ಆನನ್ನು ಪಠಿಸುತ್ತಾರೆ.
4. ಪಾಕಿಸ್ತಾನದ ಧ್ವಜವನ್ನು ಹಾರಿಸುತ್ತಾರೆ.
ಇದರಲ್ಲಿ ಧ್ವಜಕ್ಕೆ ಸಂಬಂಧಿಸಿ ಪುಟ್ಟದೊಂದು ಗೊಂದಲಕ್ಕೆ ಅವಕಾಶ ಇದೆ. ಜಾಗತಿಕ ಮುಸ್ಲಿಮ್ ಸಮುದಾಯವು ಹಸಿರನ್ನು ತಮ್ಮ ಧಾರ್ಮಿಕ ಬಣ್ಣವಾಗಿ ಆಯ್ದುಕೊಂಡಿದೆ. ಮುಸ್ಲಿಮ್ ವ್ಯಕ್ತಿಯ ಮೃತದೇಹವನ್ನು ಕೊಂಡೊಯ್ಯುವಾಗ ಹಸಿರು ಬಟ್ಟೆಯನ್ನು ಹೊದಿಸುವುದಿದೆ. ಮಸೀದಿ- ಮದ್ರಸಾಗಳಿಗೆ ಹಸಿರು ಬಣ್ಣ ಬಳಿಯು ವುದಿದೆ. ದರ್ಗಾಗಳನ್ನು ಹಸಿರು ಹೊದಿಕೆಯಿಂದ ಮುಚ್ಚುವುದಿದೆ. ಯಾವುದಾದರೂ ಧಾರ್ಮಿಕ ಕಾರ್ಯಕ್ರಮ ನಡೆಸುವ ವೇಳೆ ರಸ್ತೆಬದಿಯಲ್ಲಿ ಹಸಿರು ಮಿನಿಚರ್ ಮತ್ತು ಹಸಿರು ಬಣ್ಣದ ಬ್ಯಾನರ್‌ಗಳನ್ನು ತೂಗು ಹಾಕುವುದಿದೆ. ಹಾಗಂತ, ಈ ಬಣ್ಣಕ್ಕೂ ಇಸ್ಲಾಮ್‌ಗೂ ಆಳವಾದ ಸಂಬAಧ ಇದೆ ಎಂದು ಹೇಳಲಾಗದು. ಕುರ್‌ಆನ್‌ನಲ್ಲಾಗಲಿ ಪ್ರವಚನಗಳಲ್ಲಾಗಲಿ ಹಸಿರು ಬಣ್ಣವನ್ನು ಇಸ್ಲಾಮ್‌ನ ಬಣ್ಣ ಎಂದು ಹೇಳಿಯೂ ಇಲ್ಲ. ಪ್ರವಾದಿಯವರು ಬಿಳಿ ಬಣ್ಣವನ್ನು ಅತ್ಯಂತ ಇಷ್ಟಪಡುತ್ತಿದ್ದರು ಮತ್ತು ಬಿಳಿ ಬಟ್ಟೆಯನ್ನೇ ಧರಿಸುತ್ತಿದ್ದರು ಎಂಬುದು ಐತಿಹಾಸಿಕವಾಗಿ ದಾಖಲಾಗಿದೆ. ಆದರೂ ಹಸಿರು ಬಣ್ಣ ಮುಸ್ಲಿಮರ ಧಾರ್ಮಿಕ ಬಣ್ಣವೆಂಬ ಭಾವ ಅನಧಿಕೃತವಾಗಿ ಚಲಾವಣೆಯಲ್ಲಿದೆ. ಆದ್ದರಿಂದಲೇ,
ಪಾಕಿಸ್ತಾನದ ರಾಷ್ಟ್ರೀಯ ಧ್ವಜದ ಬಣ್ಣ ಹಸಿರು. ಭಾರತೀಯ ಮುಸ್ಲಿಮರು ಸಾಮಾನ್ಯವಾಗಿ ಎತ್ತಿ ಹಿಡಿಯುವ ಧ್ವಜದ ಬಣ್ಣವೂ ಹಸಿರೇ. ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ ಎಂಬ ರಾಜಕೀಯ ಪಕ್ಷದ ಧ್ವಜದ ಬಣ್ಣವೂ ಹಸಿರೇ. ಆದರೆ ಪಾಕ್ ಧ್ವಜದ ಮಧ್ಯದಲ್ಲಿ ಅರ್ಧ ಚಂದ್ರಾಕೃತಿ ಮತ್ತು ನಕ್ಷತ್ರದ ಚಿತ್ರ ಇದೆ ಹಾಗೂ ಇವೆರಡೂ ಬಿಳಿ ಬಣ್ಣದಲ್ಲಿದೆ. ಅಲ್ಲದೇ, ಧ್ವಜ ಸಂಪೂರ್ಣವಾಗಿ ಹಸಿರು ಬಣ್ಣವನ್ನು ಮಾತ್ರವೇ ಹೊಂದಿಲ್ಲ. ಹಸಿರು ಬಣ್ಣ ಮುಕ್ಕಾಲು ಭಾಗ ಇದ್ದರೆ ಉಳಿದ ಕಾಲು ಭಾಗ ಬಿಳಿ ಬಣ್ಣ. ಧ್ವಜದ ಹಿಡಿಕೆಯಲ್ಲಿ ಅಥವಾ ಎಡಭಾಗದಲ್ಲಿ ಬಿಳಿ ಬಣ್ಣವಿದ್ದರೆ ಉಳಿದಂತೆ ಹಸಿರು ಬಣ್ಣವಿದೆ. ಮಧ್ಯದಲ್ಲಿ ಅರ್ಧ ಚಂದ್ರಾಕೃತಿ ಮತ್ತು ನಕ್ಷತ್ರ ಇದೆ. ಆದರೆ ಇಂಡಿಯನ್ ಯೂನಿ ಯನ್ ಮುಸ್ಲಿಮ್ ಲೀಗ್ ಪಕ್ಷದ ಧ್ವಜವು ಸಂಪೂರ್ಣವಾಗಿ ಹಸಿರು ಬಣ್ಣವನ್ನಷ್ಟೇ ಹೊಂದಿದೆ. ಮಾತ್ರವಲ್ಲ, ಧ್ವಜದ ಎಡ ಮೂಲೆಯಲ್ಲಿ ಅರ್ಧ ಚಂದ್ರಾಕೃತಿ ಮತ್ತು ನಕ್ಷತ್ರವನ್ನು ಬಿಳಿ ಬಣ್ಣದಲ್ಲಿ ಹೊಂದಿದೆ. ಹಾಗೆಯೇ, ಮುಸ್ಲಿಮ್ ಲೀಗ್ ಅನ್ನು ಹೊರತುಪಡಿಸಿ ಇತರ ಭಾರತೀಯ ಮುಸ್ಲಿಮರು ಹಾರಿಸುವ ಯಾವ ಧ್ವಜದಲ್ಲೂ ಹಸಿರು ಬಣ್ಣದ ಹೊರತಾಗಿ ಬಿಳಿ ಬಣ್ಣ ಕಾಣಿಸುವುದಿಲ್ಲ. ಧ್ವಜಗಳಲ್ಲಿ ಅರ್ಧ ಚಂದ್ರಾಕೃತಿ ಮತ್ತು ನಕ್ಷತ್ರ ಇ ದ್ದಿರಬಹುದಾದರೂ ಪಾಕ್ ಧ್ವಜದಲ್ಲಿರುವ ಬಿಳಿ ಬಣ್ಣವು ಭಾರತೀಯ ಮುಸ್ಲಿಮರು ಹಾರಿಸುವ ಧ್ವಜದಲ್ಲಿ ಯಾವಾಗಲೂ ಇರುವುದಿಲ್ಲ. ಆದರೆ,
ಭಾರತೀಯ ಮಾಧ್ಯಮಗಳು ಈ ಸೂಕ್ಷ್ಮ ವ್ಯತ್ಯಾಸವನ್ನು ಬಹುತೇಕ ಬಾರಿ ಅವಗಣಿಸಿದ್ದೇ ಹೆಚ್ಚು. ಭಾರತ ಮತ್ತು ಪಾಕ್ ಗಳ ನಡುವೆ ಸಂಬಂಧ ಜಟಿಲವಾಗಿರುವ ಸಮಯದಲ್ಲಿ ಜವಾಬ್ದಾರಿಯಿಂದ ವರ್ತಿಸಬೇಕಾಗಿರುವ ಮಾಧ್ಯಮಗಳು ಅಸೂಕ್ಷ್ಮತೆಯನ್ನೇ ನೀತಿಯಾಗಿಸಿಕೊಂಡಂತೆ ವರ್ತಿಸಿದುದರ ಅಡ್ಡಪರಿಣಾಮವನ್ನು ಭಾರತೀಯ ಮುಸ್ಲಿಮರು ಅನುಭವಿಸುವಂತಾಗಿದೆ. ಹಾಗಂತ, ಪಾಕಿಸ್ತಾನದ ರಾಷ್ಟ್ರಧ್ವಜವೇನೂ ರಹಸ್ಯವಾಗಿಲ್ಲ. ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ ಧ್ವಜವೂ ಅಥವಾ ಭಾರತೀಯ ಮುಸ್ಲಿಮರು ಹಾರಿಸುತ್ತಿರುವ ಧ್ವಜವೂ ರಹಸ್ಯವಾಗಿಲ್ಲ. ಗೂಗಲ್ ಮಾಡಿ ನೋಡಿದರೆ ಇವು ಚಿತ್ರವಾಗಿಯೂ ಬರಹದಲ್ಲೂ ಲಭ್ಯವಿದೆ. ಆದರೆ, ಹೆಚ್ಚಿನ ಮಾಧ್ಯಮಗಳು ಇಷ್ಟನ್ನು ಮಾಡಲೂ ತಯಾರಿಲ್ಲ. ಒಂದು ಸಮುದಾಯದ ರಾಷ್ಟ್ರನಿಷ್ಠೆಯನ್ನು ಕಟಕಟೆಯಲ್ಲಿ ನಿಲ್ಲಿಸಬಹುದಾದ ಸೂಕ್ಷ್ಮ ಸಂದರ್ಭವೆಂದು ಇವುಗಳನ್ನು ಪರಿಗಣಿಸಿ ನಿಕಷಕ್ಕೆ ಒಡ್ಡುವ ಬದಲು ಅತ್ಯಂತ ಬೇಜವಾಬ್ದಾರಿಯಿಂದ ಅವು ವರ್ತಿಸಿದ್ದೇ ಹೆಚ್ಚು. ಅಲ್ಲದೇ, ಮುಖ್ಯವಾಹಿನಿಯ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಮುಸ್ಲಿಮರ ಪಾತ್ರ ಶೂನ್ಯ ಅನ್ನುವಷ್ಟು ಕಡಿಮೆ ಇರುವುದೂ ಇಂಥ ಗೊಂದಲಗಳ ಸೃಷ್ಟಿಗೆ ಕಾರಣವೆಂದೂ ಹೇಳಬಹುದು. ಅದರ ಜೊತೆಗೇ, ಭಾರತೀಯ ಮುಸ್ಲಿಮ್ ಸಮುದಾಯಕ್ಕೆ ಪಾಕ್ ರಾಷ್ಟ್ರಧ್ವಜ ಮತ್ತು ತಾವು ಹಾರಿಸುವ ಧ್ವಜದ ನಡುವೆ ಏನೇ ನು ವ್ಯತ್ಯಾಸಗಳಿವೆ ಅಥವಾ ಇರಬೇಕು ಎಂಬುದರ ಬಗ್ಗೆ ಎಷ್ಟು ತಿಳುವಳಿಕೆ ಇದೆ ಅನ್ನು ವುದೂ ಮುಖ್ಯ. ಅಷ್ಟಕ್ಕೂ,
ಭಾರತೀಯ ಮುಸ್ಲಿಮರು ಹಾರಿಸುವ ಧ್ವಜವು ಭಾರತದ ರಾಷ್ಟ್ರಧ್ವಜದಂತೆ ಸದಾ ಕಾಪಿಟ್ಟುಕೊಳ್ಳುವ ಧ್ವಜವಲ್ಲ. ಈದ್‌ನ ದಿನದಂದೋ ಪ್ರವಾದಿ ದಿನಾಚರಣೆಯ ದಿನದಂದೋ ಅಥವಾ ಕೆಲವು ಧಾರ್ಮಿಕ ಪ್ರವಚನಗಳ ಸಮಯದಲ್ಲೋ ಈ ಧ್ವಜವನ್ನು ಹಾರಿಸಲಾಗುತ್ತದೆ ಮತ್ತು ಅವುಗಳನ್ನು ಆ ಬಳಿಕ ಅಷ್ಟೇ ಗಂಭೀರವಾಗಿ ಕಾಪಿಡಲಾಗುವ ವ್ಯವಸ್ಥೆಯೂ ಇದ್ದಂತಿಲ್ಲ. ಮುಂದಿನ ವರ್ಷ ಹೊಸತಾಗಿ ಧ್ವಜ ತಯಾರಿ ನಡೆಯುವುದೇ ಹೆಚ್ಚು. ಹಾಗೆ ಧ್ವಜ ತಯಾರಿಸುವಾಗ ಹಿಂದಿನ ವರ್ಷದ ನೀತಿ-ನಿಯಮಗಳನ್ನು ಅಷ್ಟೇ ಮುತುವರ್ಜಿಯಿಂದ ಪಾಲಿಸಲಾಗಿದೆ ಎಂದು ನೂರು ಶೇಕಡಾ ಖಚಿತವಾಗಿ ಹೇಳುವಂತೆಯೂ ಇಲ್ಲ. ಆದ್ದರಿಂದ, ಆಕಾರದಲ್ಲಿ ಮತ್ತು ಚಂದ್ರ ಹಾಗೂ ನಕ್ಷತ್ರವನ್ನು ಛಾಪಿಸುವ ಜಾಗ ಮತ್ತು ಕ್ರಮದಲ್ಲಿ ವ್ಯತ್ಯಾಸವಾಗುವ ಸಾಧ್ಯತೆಯೂ ಇದೆ. ಆದರೂ, ಪಾಕ್ ಧ್ವಜದಂತೆ ಹಸಿರಿನೊಂದಿಗೆ ಬಿಳಿ ಬಣ್ಣವಿರುವ ಮತ್ತು ಮಧ್ಯದಲ್ಲಿ ಅರ್ಧ ಚಂದ್ರಾಕೃತಿ ಮತ್ತು ನಕ್ಷತ್ರ ಇರುವ ಧ್ವಜವನ್ನು ಭಾರತೀಯ ಮುಸ್ಲಿಮರು ಎತ್ತಿ ಹಿಡಿದಿರುವುದು ಇಲ್ಲವೇ ಇಲ್ಲ. ಆದರೆ ಭಾರತೀಯ ಮುಖ್ಯವಾಹಿನಿಯ ಮಾಧ್ಯಮಗಳೂ ಸಹಿತ ಪ್ರಾದೇಶಿಕ ಮಾಧ್ಯಮಗಳು ಕೂಡಾ ಈ ಸೂಕ್ಷ್ಮತೆಯನ್ನು ಮರೆತಂತೆ ಅನೇಕ ಬಾರಿ ವರ್ತಿಸಿವೆ. ಮಾತ್ರ ವಲ್ಲ, ಪದೇ ಪದೇ ಇಂಥ ತಪ್ಪುಗಳು ಪುನರಾವರ್ತನೆಯಾಗುತ್ತಿರುವುದನ್ನು ನೋಡಿದರೆ ಅವು ಮರೆತಂತೆ ನಟಿಸುತ್ತಿದೆಯೇನೋ ಎಂದು ಅನಿಸುತ್ತದೆ. ಹಾಗಂತ,
ಹಸಿರು ಬಣ್ಣದ ಧ್ವಜವನ್ನು ತೋರಿಸಿ ಭಾರತೀಯ ಮುಸ್ಲಿಮರನ್ನು ಪಾಕ್ ನಿಷ್ಠರೆಂದು ಹೇಳುವವರು ಮತ್ತು ಹಾಗೆ ಬಿಂಬಿಸುವ ಮಾಧ್ಯಮಗಳು ಧ್ವಜಕ್ಕೆ ಸಂಬಂಧಿಸಿ ಒಂದಿಷ್ಟು ಸಂಶೋಧನೆ ನಡೆಸಿರುತ್ತಿದ್ದರೂ ಈ ಹಸಿರು ಧ್ವಜ ಪಾಕಿಸ್ತಾನಕ್ಕೆ ಮಾತ್ರ ಸೀಮಿತ ವಾಗಿಲ್ಲ ಎಂಬುದನ್ನು ಕಂಡುಕೊಳ್ಳುತ್ತಿದ್ದುವು. ಅಲ್ಜೀರಿಯಾ, ಅಝರ್‌ಬೈಜಾನ್, ಕ್ಯಾಮರೂನ್, ಇರಾನ್, ಮಾರಿಟೇನಿಯಾ, ಬಾಂಗ್ಲಾದೇಶ, ಸೌದಿ ಅರೇಬಿಯಾ, ಶ್ರೀಲಂಕಾ ಇತ್ಯಾದಿ ರಾಷ್ಟ್ರಗಳೂ ಹಸಿರು ಬಣ್ಣವನ್ನೇ ರಾಷ್ಟ್ರಧ್ವಜದ ಬಣ್ಣವಾಗಿ ಆಯ್ಕೆ ಮಾಡಿಕೊಂಡಿವೆ. ಹಸಿರು ಧ್ವಜದ ಮಧ್ಯಭಾಗದಲ್ಲಿ ಪೂರ್ಣ ಚಂದ್ರಾಕೃತಿಯ ಕಡುಕೆಂಪು ಬಣ್ಣವು ಬಾಂಗ್ಲಾದೇಶದ ರಾಷ್ಟ್ರಧ್ವಜ ವಾಗಿದ್ದರೆ, ಲಾ ಇಲಾಹ ಇಲ್ಲಲ್ಲಾಹ್ ಮುಹಮ್ಮದರ‍್ರಸೂಲುಲ್ಲಾಹ್ ಎಂದು ಅರಬಿ ಭಾಷೆಯಲ್ಲಿ ಬಿಳಿ ಬಣ್ಣದಲ್ಲಿ ಬರೆದಿರುವ ಹಸಿರು ಬಣ್ಣದ ಧ್ವಜವು ಸೌದಿ ಅರೇಬಿಯಾದ ರಾಷ್ಟ್ರಧ್ವಜವಾಗಿದೆ. ಅಲ್ಜೀರಿಯಾದ ಧ್ವಜವು ಅರ್ಧಭಾಗ ಹಸಿರು ಮತ್ತು ಅರ್ಧ ಭಾಗ ಬಿಳಿ ಬಣ್ಣವನ್ನು ಹೊಂದಿದ್ದು, ಮಧ್ಯದಲ್ಲಿ ಕೆಂಪು ಬಣ್ಣದಲ್ಲಿ ಅರ್ಧ ಚಂದ್ರಾಕೃತಿ ಮತ್ತು ನಕ್ಷತ್ರವನ್ನು ಹೊಂದಿದೆ. ಕ್ಯಾಮರೂನ್ ದೇಶದ ರಾಷ್ಟ್ರೀಯ ಧ್ವಜದ ಮಧ್ಯ ಭಾಗವು ಹಸಿರು ಬಣ್ಣವನ್ನು ಹೊಂದಿದ್ದು ಅದರಲ್ಲಿ ಅರ್ಧ ಚಂದ್ರಾಕೃತಿ ಮತ್ತು ನಾಲ್ಕು ನಕ್ಷತ್ರಗಳಿವೆ. ಹಾಗೆಯೇ, ಉಳಿದ ಭಾಗದಲ್ಲಿ ಹಳದಿ, ಬಿಳಿ, ಕೆಂಪು ಮತ್ತು ಕಡು ನೀಲಿ ಬಣ್ಣವಿದೆ. ಮಾರಿಟಾನಿಯಾ ಮತ್ತು ಇರಾನ್ ಗಳ ಧ್ವಜದಲ್ಲೂ ಹಸಿರಿಗೆ ಬಹುಮುಖ್ಯ ಸ್ಥಾನವಿದೆ. ಅದರಲ್ಲೂ ಮಾರಿಟಾನಿಯಾ ಧ್ವಜದ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಸಣ್ಣ ಗೆರೆಯಾಕಾರದಲ್ಲಿ ಕೆಂಪು ಬಣ್ಣವಿದ್ದರೆ ಉಳಿದ ಭಾಗವನ್ನು ಹಸಿರು ಆವರಿಸಿಕೊಂಡಿದೆ ಮತ್ತು ಅರ್ಧ ಚಂದ್ರಾಕೃತಿ ಮತ್ತು ನಕ್ಷತ್ರವನ್ನು ಮಧ್ಯದಲ್ಲಿ ಇರಿಸಿಕೊಂಡಿದೆ. ಉಳಿದಂತೆ,
ಜೋರ್ಡಾನ್, ಕುವೈಟ್, ಇರಾಕ್, ಅಲ್ಬೇನಿಯಾ, ಅಂಗೋಲಾ, ಆಂಟಿಗುವಾ, ಬರ್ಬುಡಾ, ಅರ್ಮೇನಿಯ, ಬಹರೈನ್, ಬೊಲಿವಿಯಾ, ಬೋಟ್ಸು ವಾನಾ, ಬ್ರೂನೈ, ಕಾಂಬೋಡಿಯಾ, ಚಾಡ್, ಕ್ರೋವೇಶಿಯಾ, ಈಜಿಪ್ಟ್, ಈಸ್ಪೋನಿಯಾ, ಇಥಿಯೋಪಿಯಾ, ಗಬೋನ್, ಕತಾರ್, ಸರ್ಬಿಯಾ, ಸೋಮಾಲಿಯಾ, ಸಿರಿಯಾ, ಟ್ಯುನೀಶಿಯಾ, ತುರ್ಕಿ, ಯಮನ್, ಝಾಂಬಿಯಾ, ಉಗಾಂಡ, ಸಿಂಗಾಪುರ, ರೊಮಾನಿಯಾ, ಫೆಲೆಸ್ತೀನ್, ಒಮಾನ್, ನೈಜೀ ರಿಯಾ, ನೈಜರ್, ನಮೀಬಿಯಾ, ಮೊರಾಕ್ಕೋ, ಮೊಂಟನಿಗ್ರೋ, ಮಾರಿಷಸ್, ಮಾಲ್ಟಾ, ಲಿಥುವೇನಿಯಾ, ಲಾತ್ವಿಯ, ಲೈಬೀರಿಯಾ, ಕೊಸೋವೊ, ಕಿನ್ಯಾ, ಇಂಡೋನೇಶಿಯಾ, ಲೆಬನಾನ್, ಸುಡಾನ್, ಸಿರಿಯಾ, ಯುಎಇ, ತುರ್ಕೆಮೆನಿಸ್ತಾನ್, ಉಝ್ಬೆಕಿಸ್ತಾನ್, ಗಿನಿಯಾ, ಮಾಲಿ, ಸೆನೆಗಲ್ ದೇಶಗಳ ಧ್ವಜದಲ್ಲೂ ಹಸಿರು ಬಣ್ಣವಿದೆ. ಅಂದಹಾಗೆ, ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮ್ ರಾಷ್ಟ್ರಗಳು ಹಸಿರು ಬಣ್ಣವನ್ನು ತಮ್ಮ ರಾಷ್ಟ್ರಧ್ವಜದಲ್ಲಿ ಬಳಸಿಕೊಳ್ಳುವುದಕ್ಕೆ ಪವಿತ್ರ ಕುರ್‌ಆನಿನ ಈ ಎರಡು ವಚನಗಳು ಮುಖ್ಯ ಕಾರಣ ಎಂದು ಹೇಳಲಾಗುತ್ತದೆ-
1. ಆ ಸ್ವರ್ಗವಾಸಿಗಳು ಹಸಿರು ರತ್ನಗಂಬಳಿಗಳ ಹಾಗೂ ನುಣುಪಾದ ಅಮೂಲ್ಯ ಹಾಸುಗಳ ಮೇಲೆ ದಿಂಬಿಗೊರಗಿ ಕುಳಿತಿರುವರು. (ಅಧ್ಯಾಯ 55, ವಚನ 76)
2. ಸ್ವರ್ಗವಾಸಿಗಳ ಮೈಮೇಲೆ ತೆಳ್ಳಗಿನ ರೇಶ್ಮೆಯ ಹಸಿರು ಉಡುಪು ಮತ್ತು ಜರತಾರಿ ಬಟ್ಟೆಗಳಿರುವುವು. (ಅಧ್ಯಾಯ 76, ವಚನ 21) ನಿಜವಾಗಿ,
ಹಸಿರು ಧ್ವಜದ ಹೆಸರಲ್ಲಿ ಭಾರತೀಯ ಮುಸ್ಲಿಮರ ದೇಶನಿಷ್ಠೆಯನ್ನು ಪ್ರಶ್ನಿಸುವುದರ ಹಿಂದೆ ರಾಜಕೀಯ ದುರುದ್ದೇಶ ಕೆಲಸ ಮಾಡುತ್ತಿದೆ ಎಂಬುದು ಅತ್ಯಂತ ವಾಸ್ತವ. ಭಾರತೀಯ ಮುಸ್ಲಿಮರನ್ನು ದೇಶದ್ರೋಹಿಗಳು, ಪಾಕ್ ನಿಷ್ಠರು ಎಂದೆಲ್ಲಾ ಬಿಂಬಿಸುವುದರಿಂದ ರಾಜಕೀಯವಾಗಿ ಲಾಭವಿದೆ ಎಂಬುದನ್ನು ತಿಳಿದುಕೊಂಡ ಪಕ್ಷವು ಸುಳ್ಳನ್ನು ಮತ್ತೆ ಮತ್ತೆ ತೇಲಿಬಿಡುವ ಹಾಗೂ ಗೊಂದಲಕಾರಿ ಸುದ್ದಿಯನ್ನು ಉತ್ಪಾದನೆ ಮಾಡುವ ಅಪಾಯಕಾರಿ ಕೆಲಸ ಮಾಡುತ್ತಿದೆ ಅನ್ನುವುದೂ ಸ್ಪಷ್ಟ. ರಾಜಕೀಯ ಪಕ್ಷಗಳ ಈ ದುರುದ್ದೇಶಕ್ಕೆ ಕೆಲವು ಪ್ರಮುಖ ಮಾಧ್ಯಮಗಳೇ ಬೆಂಬಲ ನೀಡುತ್ತಿರುವುದೇ ಮುಸ್ಲಿಮರು ಇವತ್ತು ಕಟಕಟೆಯಲ್ಲಿ ನಿಂತಿರುವುದಕ್ಕೆ ಮುಖ್ಯ ಕಾರಣ. ಮೊದಲು, ‘ಮುಸ್ಲಿಮರಿಂದ ಪಾಕ್ ಧ್ವಜ ಹಾರಾಟ’ ಎಂಬ ಸುದ್ದಿ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತದೆ. ಬಳಿಕ ಪೊಲೀಸರು ದಾಳಿ ಮಾಡಿ ಕೆಲವರನ್ನು ವಶಕ್ಕೆ ಪಡಕೊಂಡು ಪರಿಶೀಲಿಸಿದ ಬಳಿಕ ಅದು ಪಾಕ್ ಧ್ವಜವಲ್ಲ, ಹಸಿರು ಧ್ವಜ ಎಂದು ಗೊತ್ತಾಗಿ ಪ್ರಕರಣ ಮುಕ್ತಾಯವನ್ನು ಕಾಣುತ್ತದೆ. ಆದರೆ, ಈ ಸತ್ಯ ಸುದ್ದಿ ಬಹಿರಂಗಕ್ಕೆ ಬರುವ ಮೊದಲೇ ಸುಳ್ಳು ಸುದ್ದಿ ದೇಶದಾದ್ಯಂತ ಕಾಡ್ಗಿಚ್ಚಿನಂತೆ ಎಲ್ಲರಿಗೂ ತಲುಪಿರುತ್ತದೆ. ಈ ಸುಳ್ಳು ಸುದ್ದಿಯನ್ನು ತೇಲಿಸಿದವರ ಉದ್ದೇಶವೂ ಇದುವೇ ಆಗಿರುತ್ತದೆ. ಅಲ್ಲದೇ, ನಿಜ ಸುದ್ದಿಗೆ ಸುಳ್ಳು ಸುದ್ದಿಯಷ್ಟು ಆಕರ್ಷಣೆ ಇಲ್ಲದೇ ಇರುವುದರಿಂದ ಅದು ಮಾಧ್ಯಮಗಳಲ್ಲಿ ಜಾಗ ಪಡಕೊಳ್ಳುವುದೂ ಕಡಿಮೆ. ನಿಜವಾಗಿ,
ಕಟಕಟೆಯಲ್ಲಿರಬೇಕಾದುದು ಮುಸ್ಲಿಮರ ದೇಶನಿಷ್ಠೆಯಲ್ಲ, ಕೆಲವು ಮಾಧ್ಯಮಗಳು ಮತ್ತು ನಿರ್ದಿಷ್ಟ ರಾಜಕೀಯ ಪಕ್ಷಗಳ ಸತ್ಯನಿಷ್ಠೆ, ಪ್ರಾಮಾಣಿಕತೆ ಮತ್ತು ದೇಶಪ್ರೇಮ. ಅಷ್ಟೇ.
No comments:
Post a Comment