1. ಸಲಾಮುನ್ ಕೌಲಂಮ್ಮಿನ್ ರಬ್ಬಿರ‍್ರಹೀಮ್- ಸ್ವರ್ಗವಾಸಿಗಳೇ, ಸಲಾಮ್ ಎಂದು ಕರುಣಾನಿಧಿಯಾದ ಪ್ರಭುವಿನ ಕಡೆಯಿಂದ ಹೇಳಲಾಗಿದೆ. (36:58)
2. ವ ಕಾಲ ಲಹುಮ್ ಖಝನತುಹಾ ಸಲಾಮುನ್ ಅಲೈಕುಂ- ಸ್ವರ್ಗ ಪ್ರವೇಶಿಸುವವರೊಡನೆ ನಿಮಗೆ ಸಲಾಂ ಎನ್ನಲಾಗುತ್ತದೆ. (39:73)
3. ಇಲ್ಲಾ ಖೀಲನ್ ಸಲಾಮನ್ ಸಲಾಮ- ಸ್ವರ್ಗದಲ್ಲಿ ಪ್ರತಿಯೊಂದು ಮಾತೂ ಸರಿಯಾದ ಮಾತೇ ಆಗಿರುವುದು. (36:26)
ಅಂದಹಾಗೆ,
ಪವಿತ್ರ ಕುರ್‌ಆನಿನ ಈ ವಚನಗಳಷ್ಟೇ ಅಲ್ಲ, ಸಲಾಮ್‌ನ ಮಹತ್ವದ ಕುರಿತಂತೆ ವಿವರಿಸುವ ಹತ್ತು-ಹಲವು ಪ್ರವಾದಿ ವಚನಗಳು ನಮ್ಮ ನಡುವೆಯಿವೆ. ಆರಾಧನೆಗಳಲ್ಲೇ ಅತೀ ಶ್ರೇಷ್ಠವೆಂದು ಹೇಳಲಾದ ನಮಾಝನ್ನು ಕೊನೆಗೊಳಿಸುವುದು ಬಲ ಮತ್ತು ಎಡ ಭಾಗಕ್ಕೆ ತಿರುಗಿ ಅಸ್ಸಲಾಮು ಅಲೈಕುಂ ವರಹ್ಮತುಲ್ಲಾಹ್ ಎಂದು ಹೇಳುವ ಮೂಲಕವೇ. ಆ ಮೂಲಕ ಸರ್ವರಲ್ಲೂ ಒಳಿತನ್ನು ಹಾಗೂ ದೇವನ ಅನುಗ್ರಹವನ್ನು ಬಯಸುವ ಕ್ರಿಯೆಯೊಂದು ನಡೆಯುತ್ತದೆ. ಅಷ್ಟಕ್ಕೂ, ನಮಾಝï ಮಾಡುವುದು ಅಲ್ಲಾಹನಿಗಾಗಿರುವಾಗ, ಅದರ ಕೊನೆಯಲ್ಲಿ ಅಲ್ಲಾಹನ ಸ್ತುತಿ ಸ್ತೋತ್ರಗಳ ಬದಲಾಗಿ ಜನರಿಗೆ ಒಳಿತನ್ನು ಬಯಸುವ ಈ ಪ್ರಾರ್ಥನೆಯನ್ನು ಅಲ್ಲಾಹನು ಕಲಿಸಲು ಕಾರಣವೇನು? ಅಲ್ಲಾಹುಮ್ಮ ಅಂತಸ್ಸಲಾಮ್ ವಮಿಂಕಸ್ಸಲಾಮ್ ತಬಾರಕ್ತ ಯಾದಲ್ ಜಲಾಲಿ ವಲ್ ಇಕ್ರಾಮ್.. ಎಂದು ಪ್ರವಾದಿ ನಮಾಝï ಬಳಿಕ ಪ್ರಾರ್ಥಿಸುತ್ತಿದ್ದರೆಂದೂ ವರದಿಗಳಿವೆ. ಅಂದರೆ, ‘ಅಲ್ಲಾಹನೇ ನೀನು ಶಾಂತಿಯ ಸಂಕೇತ ಮತ್ತು ಶಾಂತಿಯನ್ನು ದಯಪಾಲಿಸುವವ. ಆದ್ದರಿಂದ ನನಗೆ ಶಾಂತಿಯುತ ಬದುಕನ್ನು ದಯಪಾಲಿಸು’. ಅಂದಹಾಗೆ,
ಸರ್ವರಿಗೂ ಶಾಂತಿಯನ್ನು ಬಯಸುವ ಮೂಲಕ ನಮಾಝನ್ನು ಕೊನೆಗೊಳಿಸಲಾಗುತ್ತದೆ ಮತ್ತು ಆ ಬಳಿಕದ ಪ್ರಾರ್ಥನೆಯೂ ಶಾಂತಿಯನ್ನೇ ಕೇಂದ್ರೀಕರಿಸಿರುತ್ತದೆ. ನನಗೆ ಶಾಂತಿಯುತ ಬದುಕನ್ನು ನೀಡು ಎಂದು ಪ್ರವಾದಿ(ಸ)ಯವರು ಬಯಸುವುದರ ಉದ್ದೇಶ, ಸರ್ವ ಮುಸ್ಲಿಮರೂ ಶಾಂತಿಯುತ ಬದುಕನ್ನು ಬಯಸಬೇಕು ಎಂದೇ ಆಗಿದೆ. ನಿಜವಾಗಿ, ಇದು ಮುಸ್ಲಿಮರ ಐಡೆಂಟಿಟಿ. ಯಾರು ಶಾಂತಿಯುತ ಬದುಕನ್ನು ಬಯಸುತ್ತಾರೋ ಅವರು ಅಶಾಂತಿಯುತ ಸಾಮಾಜಿಕ ವ್ಯವಸ್ಥೆಯನ್ನು ಬಯಸುವುದಾಗಲಿ, ಅದಕ್ಕಾಗಿ ಪ್ರಯತ್ನಿಸುವುದಾಗಲಿ ಮಾಡಲು ಸಾಧ್ಯವೇ ಇಲ್ಲ. ಪ್ರವಾದಿಯವರು(ಸ) ಅನಸ್(ರ)ರೊಂದಿಗೆ ಹೀಗೆ ಹೇಳಿದ್ದಾರೆ,
‘ಮಗನೇ, ನೀನು ನಿನ್ನ ಮನೆಯವರ ಬಳಿಗೆ ಹೋಗುವಾಗ ಸಲಾಂ ಹೇಳು. ಅದು ನಿನ್ನಲ್ಲೂ ನಿನ್ನ ಕುಟುಂಬದಲ್ಲೂ ಸಮೃದ್ಧಿಗೆ ಕಾರಣವಾಗಲಿದೆ.’ ‘ನನ್ನ ಮನೆಯಲ್ಲಿ ದಟ್ಟ ಬಡತನವಿದೆ’ ಎಂದು ಓರ್ವ ವ್ಯಕ್ತಿ ಬಂದು ಹೇಳಿದಾಗಲೂ ಪ್ರವಾದಿ(ಸ) ಹೇಳಿದ್ದು ಮೇಲಿನ ಮಾತುಗಳನ್ನೇ- ‘ನೀನು ನಿನ್ನ ಮನೆಯವರ ಬಳಿಗೆ ಹೋಗುವಾಗ ಸಲಾಂ ಹೇಳು. ಅದು ನಿನ್ನಲ್ಲೂ ನಿನ್ನ ಕುಟುಂಬದಲ್ಲೂ ಸಮೃದ್ಧಿಗೆ ಕಾರಣವಾಗಲಿದೆ.’ ಇದೇವೇಳೆ, ಪ್ರವಾದಿ(ಸ) ಹೇಳಿರುವುದಾಗಿ ಪ್ರಮುಖ ಸಂಗಾತಿ ಅಬೂದರ್ದಾ(ರ) ಹೇಳಿರುವ ಈ ಕೆಳಗಿನ ವಚನವೂ ಬಹಳ ಮಹತ್ವದ್ದಾಗಿದೆ-
‘ನೀವು ಸಲಾಮನ್ನು ಪ್ರಚಾರ ಮಾಡಿ. ಹಾಗಾದರೆ ನೀವು ಉನ್ನತಿಗೆ ಏರುವಿರಿ.’
ಇಲ್ಲಿ ಒಂದು ಗಮನಾರ್ಹ ಅಂಶವಿದೆ. ಸಲಾಮನ್ನು ಹೇಳಿರಿ ಅನುವುದಕ್ಕಿಂತ ಸಲಾಮನ್ನು ಪ್ರಚಾರ ಮಾಡಿರಿ ಎಂದು ಒತ್ತು ಕೊಟ್ಟು ಹೇಳಲಾಗಿದೆ. ಅದೇವೇಳೆ, ನಿಮ್ಮ ಮನೆಗೆ ಪ್ರವೇಶಿಸುವಾಗ ಸಲಾಂ ಹೇಳಿರಿ, ಅದರಿಂದ ಸಮೃದ್ಧಿ ಉಂಟಾಗುತ್ತದೆ ಎಂದೂ ಹೇಳಲಾಗಿದೆ. ಇನ್ನೊಂದು ಕಡೆ, ನಮಾಝïನಿಂದ ವಿರಮಿಸುವುದಕ್ಕೆ ಸಲಾಮನ್ನು ಸಾಕ್ಷ್ಯವಾಗಿ ಆಯ್ಕೆ ಮಾಡಲಾಗಿದೆ. ಇವೆಲ್ಲ ಹೇಳುವುದೇನು? ಓರ್ವರನ್ನು ಎದುರುಗೊಂಡಾಗ ಅಸ್ಸಲಾಮು ಅಲೈಕುಂ ಎಂದು ಹೇಳುವುದಕ್ಕೆ ಬಾಯುಪಚಾರಕ್ಕಿಂತ ಹೊರತಾದ ಘನವಾದ ಉದ್ದೇಶವಿದೆ ಎಂಬುದನ್ನೇ ಅಲ್ಲವೇ? ನಾವು ಸಲಾಮ್‌ನ ನಿಜವಾದ ಉದ್ದೇಶ ಮತ್ತು ಅರ್ಥವನ್ನು ಅರಿತು ಎಷ್ಟು ಬಾರಿ ಸಲಾಮ್ ಹೇಳಿದ್ದೇವೆ? ‘ಸಲಾಮ್ ಹೇಳುವುದರಿಂದ ಮನೆಯಲ್ಲಿ ಸಮೃದ್ಧಿ ಉಂಟಾಗುತ್ತದೆ, ದಾರಿದ್ರ‍್ಯ ತೊಲಗುತ್ತದೆ, ಅದು ಅಲ್ಲಾಹನ ಗುಣನಾಮಗಳಲ್ಲಿ ಒಂದು, ಅದನ್ನು ಪ್ರಚಾರ ಮಾಡಬೇಕು, ಆ ಮೂಲಕ ಸರ್ವರಲ್ಲೂ ಶಾಂತಿ ಮತ್ತು ಒಳಿತನ್ನು ಪಸರಿಸಬೇಕು..’ ಎಂದು ಮನಸಾರೆ ಅಂದುಕೊಂಡು ನಾವು ಸಲಾಂ ಹೇಳಿದ್ದು ಯಾವಾಗ? ಸಲಾಂ ಹೇಳುವಾಗ ಒಂದು ಬಾರಿಯಾದರೂ ನಮ್ಮೊಳಗೆ ಇಂಥ ಭಾವ ಉಂಟಾಗಿದೆಯೇ? ಗೆಳೆಯನೊಬ್ಬ ಎದುರು ಸಿಕ್ಕಾಗ, ಅಲ್ಲಾಹನು ನಿಮಗೆ ಶಾಂತಿ ಮತ್ತು ಸಮೃದ್ಧಿಯನ್ನು ನೀಡಲಿ ಎಂದು ಮನಸ್ಸಿನಿಂದ ಬಯಸಿ ಸಲಾಂ ಹೇಳಿದ್ದೀರಾ ಅಥವಾ ಅದೊಂದು ಸಹಜ ನಡವಳಿಕೆಯಾಗಿ ಮಾರ್ಪಟ್ಟಿದೆಯೇ? ಮನೆಗೆ ಪ್ರವೇಶಿಸುವಾಗ ಸಲಾಂ ಹೇಳಬೇಕು ಎಂದು ಹೇಳಿದ ಪ್ರವಾದಿ, ಅದರಿಂದ ಮನೆಯ ದಾರಿದ್ರ‍್ಯ ದೂರವಾಗುತ್ತದೆ ಎಂದೂ ಹೇಳಿದ್ದಾರೆ.
ಬಡತನ, ದಾರಿದ್ರ‍್ಯ ಇತ್ಯಾದಿಗಳೆಲ್ಲ ಶಾಶ್ವತವಲ್ಲ. ಅವು ಒಂದು ತಾತ್ಕಾಲಿಕ ಸ್ಥಿತಿಯೇ ಹೊರತು ದಾರಿದ್ರ‍್ಯದಲ್ಲಿರುವವರೆಲ್ಲ ಸದಾಕಾಲ ದಾರಿದ್ರ‍್ಯದಲ್ಲೇ ಇರಬೇಕೆಂದು ಇಸ್ಲಾಮ್ ಬಯಸುವುದಿಲ್ಲ, ಸರಕಾರಗಳೂ ಬಯಸುವುದಿಲ್ಲ. ಆದರೆ, ಬಡತನವು ಅನೇಕ ಬಾರಿ ಅತೀ ಅನಿವಾರ್ಯತೆಯನ್ನು ತ್ಯಾಗ ಮಾಡಬೇಕಾದ ಪರಿಸ್ಥಿತಿಗೆ ದೂಡುತ್ತದೆ. ಶ್ರೀಮಂತರು ತಮಗೆ ಬೇಡವಾದುದನ್ನೂ ಖರೀದಿಸುವ ಸಾಮರ್ಥ್ಯ ಪಡಕೊಂಡಿರುವಾಗ ಬಡವರು ಅತೀ ಅಗತ್ಯವಾದುದನ್ನೂ ಖರೀದಿಸಲು ಸಾಧ್ಯವಾಗದೇ ಸಂಕಟಕ್ಕೆ ಒಳಗಾಗುತ್ತಾರೆ. ಇದು ಧರ್ಮಾತೀತ ಸ್ಥಿತಿ. ಆದರೆ, ಈ ಸ್ಥಿತಿಯನ್ನು ಮೀರಬಲ್ಲ ಉಪಕರಣವಾಗಿ ಪ್ರವಾದಿ(ಸ) ಸಲಾಮನ್ನು ಪರಿಚಯಿಸಿದ್ದಾರೆ. ಅದರರ್ಥ ಮನೆಗೆ ಪ್ರವೇಶಿಸುವಾಗ, ಸಲಾಮ್ ಹೇಳಿದ ತಕ್ಷಣ ಬಡತನ ನಿವಾರಣೆಯಾಗುತ್ತದೆ ಎಂದಲ್ಲ. ಆದರೆ, ಅದರ ಅರ್ಥ ಅರಿತು ಅದನ್ನು ಮನಸ್ಸಿಗೆ ತಂದುಕೊಂಡು ಹೇಳುವ ಸಲಾಮ್‌ನಲ್ಲಿ ಬಾಯುಪಚಾರಕ್ಕಿಂತ ಮಿಗಿಲಾದ ಆಧ್ಯಾತ್ಮ ಭಾವ ಒಳಗೊಂಡಿರುತ್ತದೆ. ಅಲ್ಲಾಹನೇ, ನಮಗೆ ಶಾಂತಿ ಮತ್ತು ಸಮೃದ್ಧಿಯನ್ನು ಕೊಡು ಎಂದು ಪ್ರತಿಬಾರಿ ಮನೆಗೆ ಪ್ರವೇಶಿಸುವಾಗಲೂ ಮನೆಯಿಂದ ಹೊರಹೋಗುವಾಗಲೂ ಪ್ರಾರ್ಥಿಸುವ ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ. ಒಂದು ಮನೆಯಲ್ಲಿ 6 ಮಂದಿ ಇದ್ದಾರೆಂದಿಟ್ಟುಕೊಳ್ಳಿ. ಈ 6 ಮಂದಿಯಲ್ಲಿ ಮನೆಯಿಂದ ಒಂಟಿ ಒಂಟಿಯಾಗಿಯೋ ಸಾಮೂಹಿಕ ವಾಗಿಯೋ ಹೊರಹೋಗುವಾಗ ಸಲಾಂ ಹೇಳುವುದು ಮತ್ತು ಮನೆಗೆ ಒಂಟಿ ಒಂಟಿಯಾಗಿ ಪ್ರವೇಶಿಸುವಾಗ ಸಲಾಂ ಹೇಳುವುದನ್ನು ಒಮ್ಮೆ ಸ್ಮರಿಸಿಕೊಳ್ಳಿ. ಅದು ನಮ್ಮೊಳಗೆ ಅಂತಃಶಕ್ತಿಯನ್ನು ತುಂಬುತ್ತದೆ. ಆಧ್ಯಾತ್ಮಿಕ ಚೈತನ್ಯ ಮತ್ತು ಸಕಾರಾತ್ಮಕ ಭಾವವನ್ನು ನೆಲೆಗೊಳಿಸುತ್ತದೆ. ದುರಂತ ಏನೆಂದರೆ,
ಯಾರಾದರೂ ಮುಖಾಮುಖಿಯಾದಾಗ ಸಲಾಂ ಹೇಳುವ ಎಷ್ಟೋ ಮಂದಿ ಮನೆ ಪ್ರವೇಶಿಸುವಾಗ ಸಲಾಂ ಹೇಳುವುದು ಕಡಿಮೆ. ಮಗ ತಂದೆಗೋ ತಾಯಿಗೋ ತಂಗಿಗೋ ಅಕ್ಕನಿಗೋ ಸಲಾಂ ಹೇಳುವುದೂ ಕಡಿಮೆ. ಹಾಗಂತ, ಹೀಗೆ ಸಲಾಂ ಹೇಳುವುದಕ್ಕೆ ಅವರ ವಿರೋಧವಿದೆ ಎಂದಲ್ಲ. ಅದು ರೂಢಿಯಲ್ಲಿ ಬಂದಿಲ್ಲ. ಹೊರಗೆ ಗೆಳೆಯನನ್ನೋ ಗೆಳತಿಯನ್ನೋ ಪರಿಚಿತರು ಮತ್ತು ಇಷ್ಟದವರನ್ನೋ ಆಲಿಂಗಿಸುವ ಮತ್ತು ಶುಭಾಶಯ ಕೋರುವ ಮಗನೋ ಮಗಳೋ ಮನೆಯಲ್ಲಿ ಹೆತ್ತವರನ್ನು ಆಲಿಂಗಿಸುವುದು ಕಡಿಮೆ. ಹೆತ್ತವರಲ್ಲೂ ಈ ಮುಲಾಜುತನ ಇರುತ್ತದೆ. ಪತಿ ಮತ್ತು ಪತ್ನಿ ಪರಸ್ಪರ ಆಲಿಂಗಿಸಿಕೊಳ್ಳುವುದು, ಪರಸ್ಪರ ಸಲಾಂ ಹೇಳಿ ಹೊರಡುವುದೆಲ್ಲ ನಾಚಿಕೆಯ ವಿಷಯ ಎಂಬಂತೆ ಆಗುವುದಿದೆ. ನಿಜವಾಗಿ, ಆಲಿಂಗನವು ಪರಸ್ಪರ ಆಪ್ತ ಭಾವವನ್ನು ಹಂಚುವುದಕ್ಕೆ ಸಹಕಾರಿಯಾದರೆ ಸಲಾಂ ಶಾಂತಿ ಮತ್ತು ಸಮೃ ದ್ಧಿಯನ್ನು ಉಂಟು ಮಾಡುವುದಕ್ಕೆ ನೆರವಾಗುತ್ತದೆ. ಇದು ಬರೇ ಭಾವ ಅಲ್ಲ. ಒಂದು ನಿರ್ದಿಷ್ಟ ಗುರಿಯನ್ನು ಹೊಂದಿರುವ ಸಕಲರಿಗೂ ಒಳಿತು ಬಯಸುವ ಧಾರ್ಮಿಕ ಕರ್ತವ್ಯ. ಆದ್ದರಿಂದಲೇ, ಪ್ರವಾದಿ(ಸ) ಸಲಾಮನ್ನು ಪ್ರಚಾರ ಮಾಡಿ ಎಂದೇ ಹೇಳಿದ್ದಾರೆ. ಅದು ಸಾರ್ವಜನಿಕ ಭಾವವಾಗಿ ವ್ಯಕ್ತವಾಗಬೇಕು. ಸರ್ವರಿಗೂ ಒಳಿತು, ಶಾಂತಿ, ಸಮೃದ್ಧಿಯನ್ನು ಬಯಸುವ ಪ್ರಾರ್ಥನೆಯೊಂದು ಸರ್ವ ದಿಕ್ಕುಗಳಿಂದಲೂ ಕೇಳಿಸುವಂತಿದ್ದರೆ ಅದರಲ್ಲಿ ತೊಂದರೆ ಏನಿದೆ? ನಿಜವಾಗಿ,
ಈ ಜಗತ್ತಿನ ಅಭಿವಂದನೆಯ ಪ್ರಕಾರಗಳಲ್ಲೇ ಅಸ್ಸಲಾಮು ಅಲೈಕುಂ ಎಂಬುದು ಅತೀ ವಿಶಿಷ್ಟ ಮತ್ತು ಅತೀ ಆಕರ್ಷಕ ಎಂದೇ ಹೇಳಬಹುದು. ಯಾವುದೇ ಬಗೆಯ ಮಾತನ್ನು ಆರಂಭಿಸುವುದಕ್ಕಿಂತ ಮೊದಲು, ‘ನಿನಗೆ ಒಳಿತಾಗಲಿ, ನಿನಗೆ ಶಾಂತಿಪೂರ್ಣ ಬದುಕು ಲಭಿಸಲಿ..’ ಎಂದು ಪ್ರಾರ್ಥಿಸುವುದು ಮಹತ್ತರ ವಿಧಾನ. ಸಾಮಾನ್ಯವಾಗಿ ಇವತ್ತು ಹೆಚ್ಚಿನ ಮಾತುಕತೆಗಳು ಮೊಬೈಲ್ ಮೂಲಕವೇ ನಡೆಯುತ್ತವೆ. ಮೊಬೈಲ್ ಮೂಲಕ ನಿಮ್ಮನ್ನು ಸಂಪರ್ಕಿಸುವ ವ್ಯಕ್ತಿಯ ಆ ಕ್ಷಣದ ಪರಿಸ್ಥಿತಿ, ಭಾವ, ಉದ್ದೇಶ ನಮಗೆ ಗೊತ್ತಿರುವುದಿಲ್ಲ. ವ್ಯಕ್ತಿಯ ಹೆಸರು ಮೊಬೈಲ್ ಸ್ಕ್ರೀನ್‌ನಲ್ಲಿ ಕಾಣಿಸಿದಾಗ ವ್ಯಕ್ತಿಯ ಮುಖಭಾವವನ್ನು ನೀವು ಕಲ್ಪಿಸಿಕೊಳ್ಳುತ್ತೀರಿ. ಆದರೆ, ಆ ಮುಖಭಾವದಲ್ಲಿ ಅಡಗಿರಬಹುದಾದ ಸಾವಿರ ಸಂಗತಿಗಳು ನಿಮ್ಮಿಂದ ಅಡಗಿರುತ್ತದೆ. ಆತ/ಕೆ ವಿಪರೀತ ದುಃಸ್ಥಿತಿಯಲ್ಲಿರಬಹುದು, ಹಣಕಾಸಿನ ಮುಗ್ಗಟ್ಟಿನಲ್ಲಿರಬಹುದು, ಅತೀವ ಸಂತಸದಲ್ಲೂ ಇರಬಹುದು. ತನ್ನವರನ್ನು ಕಳಕೊಂಡ ದುಃಖದಲ್ಲಿರಬಹುದು, ಅತೀವ ಆಕ್ರೋಶದಲ್ಲೂ ಇರಬಹುದು. ಈ ಬದುಕಿನಲ್ಲಿ ಸುಖವಿಲ್ಲ ಎಂಬ ನಿರಾಶಾಭಾವದಲ್ಲೂ ಇರಬಹುದು... ಆದರೆ, ಈ ಕರೆ ಸ್ವೀಕರಿಸುವ ವ್ಯಕ್ತಿಗೆ ಇವೆಲ್ಲ ಗೊತ್ತಿರಬೇಕೆಂದಿಲ್ಲ. ಇಂಥ ಸಂದರ್ಭದಲ್ಲಿ ನಿನ್ನಲ್ಲಿ ಶಾಂತಿ ಸಮಾಧಾನ ಉಂಟಾಗಲಿ ಮತ್ತು ಸಮೃದ್ಧಿ ಸಿಗಲಿ ಎಂದು ಪ್ರಾರ್ಥಿಸುವ ಮೂಲಕ ಮಾತುಕತೆ ಆರಂಭಿಸುವುದು ಎಂಥ ಸುಖಾನುಭವವನ್ನು ಕೊಡಬಲ್ಲುದು? ಆ ಕಡೆಯ ವ್ಯಕ್ತಿ ನಿಜಕ್ಕೂ ಅಸ್ಸಲಾಮು ಅಲೈಕುಂ ಎಂಬ ಪದದ ನಿಜವಾದ ಅರ್ಥವನ್ನು ಅರಿತುಕೊಂಡಿದ್ದರೆ ಮತ್ತು ಅದರ ಸಾಮರ್ಥ್ಯವನ್ನು ತಿಳಿದುಕೊಂಡಿದ್ದರೆ ಆ ಕ್ಷಣದಲ್ಲಿ ಅವರಲ್ಲಿ ಮೂಡಬಹುದಾದ ಭಾವಗಳೇನು?
ಮಾನವ ಸಂಘಜೀವಿ ಮತ್ತು ಸಮಾಜ ಜೀವಿ. ಒಂಟಿಯಾಗಿ ಬದುಕುವುದು ಆತನ ಪ್ರಕೃತಿಗೆ ಸೂಕ್ತವಲ್ಲ. ಇಂಥ ಮನುಷ್ಯ ಇತರರಿಗೆ ಒಳಿತನ್ನು ಬಯಸಬೇಕು ಎಂಬುದು ಇಸ್ಲಾಮ್‌ನ ಮರ್ಮ. ‘ಓರ್ವರು ಸೃಷ್ಟಿಯ ಬಗ್ಗೆ ಒಳಿತನ್ನು ಬಯಸಿದರೆ, ಅಲ್ಲಾಹನು ಅವರ ಮೇಲೆ ಕರುಣೆ ತೋರುತ್ತಾನೆ’ ಎಂದು ಪ್ರವಾದಿ(ಸ) ಹೇಳಿದ್ದಾರೆ. ಧರ್ಮದ ಒಳಾರ್ಥವೇ ಗುಣಾಕಾಂಕ್ಷೆ ಎಂದೇ ಹೇಳಲಾಗಿದೆ. ಇತರರಿಗೆ ಕೇಡನ್ನು ಬಯಸದೇ ಇರುವುದು ಮತ್ತು ಅಶಾಂತಿಯನ್ನು ಹರಡಲು ಸಹಕರಿಸದೇ ಇರುವುದೇ ಮುಸ್ಲಿಮನ ಐಡೆಂಟಿಟಿ. ಆದ್ದರಿಂದಲೇ, ನೀವು ಯಾವ ಸನ್ನಿವೇ ಶದಲ್ಲಿದ್ದರೂ ಸಲಾಮ್ ಹೇಳುವುದನ್ನು ರೂಢಿಸಿಕೊಳ್ಳಬೇಕು ಎಂಬ ತರಬೇತಿಯನ್ನು ನೀಡಲಾಗಿದೆ. ಕಿರಿಯರು ಹಿರಿಯರಿಗೆ ಮೊದಲು ಸಲಾಮ್ ಹೇಳಬೇಕು. ನಡೆಯುವವರು ಕುಳಿತವರಿಗೂ ಒಂಟಿ ವ್ಯಕ್ತಿ ಗುಂಪಿಗೂ ಮೊದಲು ಸಲಾಂ ಹೇಳಬೇಕು. ಒಂದು ಗುಂಪಿನಲ್ಲಿರುವವರಲ್ಲಿ ಒಬ್ಬರು ಸಲಾಂಗೆ ಉತ್ತರಿಸಿದರೆ ಅಥವಾ ಸಲಾಂ ಹೇಳಿದರೆ ಆ ಗುಂಪಿನ ಎಲ್ಲರೂ ಸಲಾಂ ಹೇಳಿದಂತೆ ಅಥವಾ ಉತ್ತರಿಸಿದಂತೆ ಎಂದು ಪರಿ ಗಣಿಸಲಾಗುತ್ತದೆ. ಅಷ್ಟಕ್ಕೂ,
ನಾವು ಪ್ರತಿನಿತ್ಯ ಹೇಳುವ ಸಲಾಂ ಎಷ್ಟು ಚೈತನ್ಯಭರಿತವಾಗಿದೆ ಎಂಬ ಬಗ್ಗೆ ಅವಲೋಕನವೊಂದನ್ನು ನಡೆಸಬೇಕು. ನಮ್ಮ ಸಲಾಂನಲ್ಲಿ ಎಷ್ಟು ಆಧ್ಯಾತ್ಮಿಕ ಸ್ಫೂರ್ತಿಯಿದೆ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಮನೆಗೆ ಪ್ರವೇಶಿಸುವಾಗ, ಮನೆಯಿಂದ ಹೊರಹೋಗುವಾಗ ತಾನು ಸಲಾಂ ಹೇಳುತ್ತೇನೆಯೇ ಎಂಬುದನ್ನು ಪ್ರತಿ ಹೆಣ್ಣು ಮತ್ತು ಗಂಡು ಸ್ವಯಂ ಪ್ರಶ್ನಿಸಿಕೊಳ್ಳಬೇಕು. ಸಣ್ಣ ಮಕ್ಕಳಲ್ಲಿ ಸಲಾಂ ಹೇಳುವ ಗುಣವನ್ನು ಮತ್ತು ಅದರ ಅರ್ಥವನ್ನು ಪರಿಣಾಮಕಾರಿಯಾಗಿ ವಿವರಿಸಿ ಹೇಳಬೇಕು. ಅದು ಬರೇ ಅಭಿವಂದನೆಯಷ್ಟೇ ಅಲ್ಲ, ಮನೆಯಲ್ಲಿ ಶಾಂತಿ, ಸಮಾಧಾನವನ್ನು ಉಂಟು ಮಾಡುವ ಹಾಗೂ ಸಮೃದ್ಧಿಯನ್ನು ನೆಲೆಗೊಳಿಸುವ ಚೈತನ್ಯವೂ ಹೌದು ಎಂಬುದನ್ನು ತಿಳಿದುಕೊಳ್ಳುತ್ತಾ ಮಕ್ಕಳು ಬೆಳೆಯಬೇಕು ಮತ್ತು ಆ ಕಾರಣಕ್ಕಾಗಿಯೇ ಮಕ್ಕಳು ಸಲಾಂ
ರೂಢಿಸಿಕೊಳ್ಳಬೇಕು. ಇದೇನೂ ಭಾರೀ ಶ್ರಮದ ಕೆಲಸವಲ್ಲ. ಯಾವ ಮನೆಯಲ್ಲಿ ಸಲಾಂ ಹೇಳುವ ರೂಢಿ ಇಲ್ಲವೋ ಆ ಮನೆಯ ಹೆತ್ತವರು ಮನೆ ಪ್ರವೇಶಿಸುವಾಗ ಸಲಾಂ ಹೇಳುವುದನ್ನು ಪ್ರಾರಂಭಿಸಿದರೆ ಧಾರಾಳ ಸಾಕು. ಮುಂದೆ ಮಕ್ಕಳೂ ಅದನ್ನು ಅನುಸರಿಸುತ್ತಾರೆ ಮತ್ತು ಮನೆಯಲ್ಲಿ ‘ಸಲಾಂ’ ನೆಲೆಸಿರುತ್ತದೆ.
No comments:
Post a Comment