Tuesday, April 30, 2013

A ಗ್ರೇಡ್ ಪಡೆದೂ ಏಟು ತಿಂದ ಮಗಳನ್ನು ನೆನೆದು..

   “...ನನ್ನನ್ನು ಯಾವಾಗಲೂ ಕಾಡುವ ಹುಡುಗ ಆತ. ಹುಡುಗ ಅನ್ನುವುದಕ್ಕಿಂತ ಮಗು ಅನ್ನಬಹುದೇನೋ? ಇಷ್ಟಕ್ಕೂ, 8 ವರ್ಷ ಪ್ರಾಯಕ್ಕೆ ಹುಡುಗ ಎಂಬ ಪದ ಬಳಕೆಯು ಭಾರ ಆಗಬಹುದಲ್ಲವೇ? ನನ್ನ ವೃತ್ತಿ ಬದುಕಿನಲ್ಲಿ ಅಂಥದ್ದೊಂದು ವಿದ್ಯಾರ್ಥಿಯನ್ನು ನಾನು ಕಂಡೇ ಇಲ್ಲ. ಆತನ ಮುಖದಲ್ಲಿ ನಗುವನ್ನು ಪತ್ತೆ ಹಚ್ಚಲು ನನಗೆ ಈ ವರೆಗೂ ಸಾಧ್ಯವಾಗಿಲ್ಲ. ನಗುವೇ ಇಲ್ಲದ ಮಗು ಆತ. ಬೆಳಗ್ಗೆ ಬಂದು ಕ್ಲಾಸಲ್ಲಿ ಕೂತರೆ ಸಂಜೆ ಮನೆಗೆ ಹೋಗುವ ವರೆಗೂ ಮುಖ ಬಿಗಿದುಕೊಂಡೇ ಇರುತ್ತಿದ್ದ. ಭಯ, ನಿರಾಶೆ, ನಿರ್ವಿಕಾರ ತುಂಬಿದ ಮುಖ. ಬಿಸಿಲಿನಲ್ಲಿ ಆಟ ಆಡಿದ ಕಾರಣದಿಂದಾಗಿ ಮುಖ ಕೆಂಪು ಕೆಂಪಾಗಿದ್ದರೂ ತುಟಿಗಳನ್ನು ಕಚ್ಚಿ ಹಿಡಿದೇ ಕ್ಲಾಸಲ್ಲಿ ಕೂರುತ್ತಿದ್ದ. 8 ವರ್ಷದ ಮಕ್ಕಳೆಲ್ಲಾ ಹೀಗಿರುತ್ತಾರಾ? ನಗು, ಹರಟೆ, ತಮಾಷೆ, ಜಗಳಗಳೆಲ್ಲ ಆ ಪ್ರಾಯದಲ್ಲಿ ಸಾಮಾನ್ಯ ತಾನೇ? ಹೀಗಿರುವಾಗ, ಈ ಮಗು ಮಾತ್ರ ನಗುವುದನ್ನೇ ಮರೆತಂತೆ, ತುಟಿ ಬಿಗಿ ಹಿಡಿದು ಪಾಠ ಕೇಳುವುದನ್ನು ನಾನು ಗಮನಿಸುತ್ತಲೇ ಇದ್ದೆ. ಹಾಗಂತ, ನನ್ನ ಜೊತೆ ಕ್ಲಾಸಿನಲ್ಲಿ ಮುಕ್ತವಾಗಿ ಬೆರೆಯದಂತೆ ಮಕ್ಕಳನ್ನು ನಾನು ನಿರ್ಬಂಧಿಸಿಟ್ಟಿದ್ದೇನೆ ಎಂದಲ್ಲ. ನನ್ನ ಸೀರೆಯ ಸೆರಗು ಹಿಡಿದು ಮಕ್ಕಳು ಆಡುವಷ್ಟು ನಾನು ಕ್ಲಾಸಿನಲ್ಲಿ ಮಗುವಾಗುತ್ತಿದ್ದೆ. ಮಕ್ಕಳ ನಗು, ಹರಟೆ, ಮುದ್ದು ಮಾತುಗಳನ್ನೆಲ್ಲ ಅನುಭವಿಸುವ ಮನಸ್ಸನ್ನೂ ಹೊಂದಿದ್ದೆ. ಆದರೂ ನಾನು ಈ ಮಗುವಿನ ಮನಸ್ಸಿನೊಳಗೆ ಇಣುಕಿ ನೋಡುವ ಪ್ರಯತ್ನವನ್ನು ಮಾಡಿಯೇ ಇಲ್ಲ. ಬಹುಶಃ ನನ್ನ ಅಸಡ್ಡೆಯೋ, ಕೆಲಸದ ಒತ್ತಡವೋ ಅಥವಾ ಇನ್ನೇನೋ ಕಾರಣಗಳನ್ನು ಕೊಟ್ಟರೂ ಅದು ಸಮರ್ಥನೆ ಆಗದು ಎಂಬುದು ನನಗೆ ಗೊತ್ತು. ಆ ಮಗುವಿನ ಮಟ್ಟಿಗೆ ನಾನು ತಪ್ಪು ಮಾಡಿದೆನೋ ಎಂಬೊಂದು ಅಳುಕು ಈಗಲೂ ನನ್ನನ್ನು ಕಾಡುತ್ತಿದೆ. ಆ ಮಗುವಿಗೆ ಹೋಲಿಸಿದರೆ ಆತನ ಅಣ್ಣ ತುಂಬಾ ಹುಷಾರು. ಪ್ರತಿದಿನ ತಾಯಿಯೊಂದಿಗೆ ಬರುವ ಈತ ಮಾತ್ರ ಹೀಗೆ..
   ಪ್ರಾಥಮಿಕ ಶಾಲೆಯ ಅಧ್ಯಾಪಕಿ ಮಿಣಿ ಹೇಳುತ್ತಾ ಹೋಗುತ್ತಾರೆ..
ಮಕ್ಕಳು ಅಧ್ಯಾಪಕರನ್ನು ಅತ್ಯಂತ ಹೆಚ್ಚು ಹಚ್ಚಿಕೊಳ್ಳುವುದು ಯಾವಾಗ ಗೊತ್ತೇ? ಪ್ರೈಮರಿಯಲ್ಲಿ. ತಾಯಿಯ ಮಡಿಲಿನಿಂದ ಆಗಷ್ಟೇ ಎದ್ದು ಬರುವ ಮಕ್ಕಳಿಗೆ ಅಧ್ಯಾಪಕಿಯು ತಾಯಿಯಂತೆ ಕಾಣುವುದರಲ್ಲಿ ಅಚ್ಚರಿಯೇನೂ ಅಲ್ಲ. ಆ ವರೆಗೆ ಮಕ್ಕಳು ಮನೆಯಲ್ಲಿ ತಾಯಿಯೊಂದಿಗೇ ಬೆಳೆದಿರುತ್ತಾರೆ. ಇದೀಗ ಬೆಳಗ್ಗಿನಿಂದ ಸಂಜೆಯ ತನಕ ತಾಯಿಯಿಂದ ಬೇರ್ಪಟ್ಟು ಬದುಕುವ ಸಂದರ್ಭ ಬಂದಾಗ ಮಗು ಆ ವಾತಾವರಣಕ್ಕೆ ಹೊಂದಿಕೊಳ್ಳಲು ಚಡಪಡಿಸುತ್ತದೆ. ತಾಯಿ ಸಿಗದೇ ಹೋದಾಗ ಅದು ಅಧ್ಯಾಪಕಿಯಲ್ಲಿ ಆ ತಾಯಿಯನ್ನು ಹುಡುಕತೊಡಗುತ್ತದೆ. ಅಧ್ಯಾಪಕಿಯು ತಾಯಿಯಂತೆಯೇ ಪ್ರೀತಿ, ಕಕ್ಕುಲತೆ, ಅಲಿಂಗನ ಮಾಡಬೇಕೆಂದು ಅದು ಬಯಸುತ್ತದೆ. ಅಂದಹಾಗೆ, ಅಧ್ಯಾಪಕಿ ಹತ್ತಿರ ಕರೆದರೆ, ಮಗು ದೂರ ನಿಲ್ಲುವುದು ಕಡಿಮೆ. ಅಧ್ಯಾಪಕಿಗೆ ಚಾಚಿಕೊಂಡೋ ಅವರ ಮೇಲೆ ಭಾರ ಹಾಕಿಯೋ ಅವು ನಿಲ್ಲುತ್ತವೆ. ಯಾಕೆ ಹೀಗೆ ಎಂದರೆ, ತಾಯಿಯೊಂದಿಗಿನ ವರ್ತನೆಯ ಗುಂಗಿನಿಂದ ಅದು ಹೊರಬಂದಿರುವುದಿಲ್ಲ. ಶಾಲೆಯಲ್ಲೂ ಅದಕ್ಕೆ ಓರ್ವ ತಾಯಿ ಬೇಕು ಅಥವಾ ಹಾಗೆ ಪ್ರೀತಿಸುವ ಅಧ್ಯಾಪಕಿ ಬೇಕು. ಆದರೆ ಮಗು ಬೆಳೆಯುತ್ತಾ ಹೋದಂತೆ ಅಧ್ಯಾಪಕರೊಂದಿಗೆ ಅಂತರವೂ ಹೆಚ್ಚುತ್ತಾ ಹೋಗುತ್ತದೆ. ಅಧ್ಯಾಪಕಿ ಮತ್ತು ತಾಯಿಯ ನಡುವಿನ ಅಂತರ, ಸಂಬಂಧಗಳಲ್ಲಿನ ವ್ಯತ್ಯಾಸಗಳನ್ನು ಮಗು ತಿಳಿಯುತ್ತಾ, ಪಾಲಿಸುತ್ತಾ ಬೆಳೆಯುತ್ತದೆ.
   ‘..ನಾನು ಪ್ರಸವ ರಜೆಯನ್ನು ಪಡಕೊಂಡು ಶಾಲೆಯಿಂದ ಹೊರಬಂದೆ. ಮೆಟ್ಟಿಲು ಇಳಿಯುವಾಗ ಮನಸ್ಸು ಭಾರವಾಗುತ್ತಿತ್ತು. ನನ್ನ ಜಾಗಕ್ಕೆ ತಾತ್ಕಾಲಿಕವಾಗಿ ಇನ್ನೋರ್ವ ಅಧ್ಯಾಪಕರನ್ನು ನೇಮಿಸಲಾಗಿತ್ತು. ನಾನು ನನ್ನ ಮಗುವಿನೊಂದಿಗೆ ಮಗುವಾದೆ. 6 ತಿಂಗಳು ಹೇಗೆ ಕಳೆಯಿತೆಂಬುದೇ ಗೊತ್ತಾಗಲಿಲ್ಲ. ಮತ್ತೆ ಕೆಲಸಕ್ಕೆ ಸೇರಿಕೊಂಡೆ. ಸ್ಟಾಫ್ ರೂಮ್‍ಗೆ ಹೋಗುವಾಗ ಅಲ್ಲಿಂದ  ಜೋರಾದ ನಗು ಕೇಳಿ ಬರುತ್ತಿತ್ತು. ನಡುನಡುವೆ ಆ ಮಗುವಿನ ಹೆಸರೂ. ನಾನು ಕುತೂಹಲಗೊಂಡೆ. ಆ ನಗದ ಮಗುವಿನ ಬಗ್ಗೆ ಮಾಹಿತಿಗಳನ್ನು ಕೇಳಿದೆ. ಮಗು ತಲೆ ಸುತ್ತು, ವಾಂತಿ, ಹೊಟ್ಟೆ ನೋವಿನಿಂದ ಬಳಲುತ್ತಿರುವ ಸಂಗತಿಯನ್ನು ಸಹ ಅಧ್ಯಾಪಕಿ ನನಗೆ ವಿವರಿಸಿದರು. ಕ್ಲಾಸಿನಲ್ಲಿ ಇರುವಾಗಲೇ ಎಷ್ಟೋ ಬಾರಿ ತಲೆ ಸುತ್ತು ಬಂದು, ವಾಂತಿ ಮಾಡಿಕೊಂಡ ಕತೆ. ಹೆತ್ತವರು ಆಸ್ಪತ್ರೆಯಿಂದ ಆಸ್ಪತ್ರೆಗೆ ಓಡಾಡಿದ ಕತೆ. ಹಲವು ವೈದ್ಯರುಗಳಿಗೆ ತೋರಿಸಿದರೂ ರೋಗ ಏನೆಂದೇ ಗೊತ್ತಾಗದೇ, ಅನಾರೋಗ್ಯ ಇದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲಾಗದೇ ಪರೀಕ್ಷೆಗಳು, ಸ್ಕ್ಯಾನಿಂಗ್‍ಗಳ ವರದಿಗಳೊಂದಿಗೆ ಕ್ಲಿನಿಕ್‍ಗಳಿಗೆ ಅಲೆದಾಡಿದ ಅಪ್ಪನ ಕತೆ. ಮಗುವಿನಿಂದಾಗಿ ದುಡಿಯಲೂ ಆಗದೇ ಒದ್ದಾಡುವ ಹೆತ್ತವರ ಕತೆ. ಕೊನೆಗೆ, ಯಾವ ರೋಗ ಲಕ್ಷಣಗಳೂ ಕಾಣಿಸದಾದಾಗ ಮಾನಸಿಕ ತಜ್ಞ(ಸೈಕ್ರಿಯಾಟ್ರಿಸ್ಟ್)ರಿಗೆ ತೋರಿಸುವಂತೆ ವೈದ್ಯರು ಸಲಹೆ ಮಾಡಿದ್ದು, ಆ ಮಗು ಮತ್ತು ಹೆತ್ತವರೊಂದಿಗೆ ಮಾನಸಿಕ ತಜ್ಞರು ದೀರ್ಘ ಸಮಯ ಮಾತಾಡಿದ್ದು ಹಾಗೂ, ‘ಈ ಮಗುವಿನ ಟೀಚರ್ ಮರಳಿ ಶಾಲೆಗೆ ಬಂದ ಬಳಿಕವೂ ಈ ರೋಗ ಕಾಣಿಸಿಕೊಂಡರೆ ನನ್ನ ಬಳಿಗೆ ಬನ್ನಿ..' ಎಂದು ಅವರು ಹೇಳಿ ಕಳುಹಿಸಿದ್ದು.. ಎಲ್ಲವನ್ನೂ ಸಹ ಅಧ್ಯಾಪಕರು ನನಗೆ ವಿವರಿಸಿದರು. ಮರುದಿನ ನಾನು ಶಾಲೆಗೆ ಹೋದಾಗ ಆ ತಾಯಿ ಭಾರೀ ನಿರೀಕ್ಷೆಯೊಂದಿಗೆ ನನ್ನನ್ನು ಕಾದು ನಿಂತಿದ್ದರು. ಆಕೆಗೆ ಹೇಳಿಕೊಳ್ಳುವುದಕ್ಕೆ ಧಾರಾಳ ವಿಷಯಗಳಿದ್ದುವು. ಆಕೆಯ ಜೊತೆಗಿದ್ದ ಮಗನಾದರೋ ಈ ಹಿಂದಿನಂತೆಯೇ ಬಿಗಿದ ಮುಖದೊಂದಿಗೆ ತಣ್ಣಗೆ ಇದ್ದ. ನಾನು ಇಲ್ಲದಿದ್ದ ಸಂದರ್ಭದಲ್ಲಿ ಅನುಭವಿಸಿದ ತೊಂದರೆಗಳನ್ನು ಆ ತಾಯಿ ಪಟ್ಟಿ ಮಾಡಿ ಹೇಳತೊಡಗಿದರು. ಮಗುವಿನ ರೋಗಕ್ಕಾಗಿ ಕಣ್ಣೀರಾದರು. ಇನ್ನೂ ಈ ರೋಗ ಹೀಗೆಯೇ ಮುಂದುವರಿದರೆ ಇಲ್ಲಿಂದ TC  ಪಡಕೊಂಡು ಬೇರೆ ಸ್ಕೂಲಿಗೆ ಹೋಗುವುದು ಇಲ್ಲವೇ ಒಳ್ಳೆಯ ಆಸ್ಪತ್ರೆಯಲ್ಲಿ ತಪಾಸಿಸಿ ಚಿಕಿತ್ಸೆ ನಡೆಸುವುದು.. ಇವೆರಡೇ ನನ್ನ ಮುಂದಿರುವ ಆಯ್ಕೆಗಳು ಎಂದು ಅವರು ಕಣ್ಣೀರು ತುಂಬಿ ಹೇಳಿದರು. ನಾನೂ ಒಮ್ಮೆ ಬೆವೆತು ಹೋದೆ. ಯಾಕೆ ಹೀಗೆ, ಏನಾಗಿರಬಹುದು ಎಂಬುದು ನನ್ನ ಅಂದಾಜಿಗೂ ಹೊಳೆಯಲಿಲ್ಲ. ಆದರೂ ಧೈರ್ಯ ತಂದುಕೊಂಡೆ. ‘ಇರಲಿ ಏನೂ ಆಗಲ್ಲ. ನೀವು ಹೋಗಿ..' ಎಂದು ಬೆನ್ನು ತಟ್ಟಿ ಅವರನ್ನು ಬೀಳ್ಕೊಟ್ಟೆ. ಕ್ಲಾಸಿಗೆ ಹೋದೆ. ನಂಬಲಾಗಲಿಲ್ಲ. ಆತ ಆ ಹಳೆಯ ಮಗುವೇ. ಆವತ್ತು ಮಾತ್ರವಲ್ಲ, ಉಳಿದ ಎಲ್ಲ ದಿನಗಳಲ್ಲೂ ಆತ ಯಾವ ರೋಗ ಲಕ್ಷಣಗಳೂ ಇಲ್ಲದೇ ಈ ಹಿಂದಿನಂತೆಯೇ ಕಾಣಿಸಿಕೊಂಡ. ವಾಂತಿಯೂ ಇಲ್ಲ. ತಲೆ ಸುತ್ತೂ ಇಲ್ಲ..
   ಈ ಘಟನೆ ನಡೆದು 5 ವರ್ಷಗಳೇ ಕಳೆದಿವೆ. ನಾನೀಗ ಆ ಸ್ಕೂಲಿನಲ್ಲೂ ಇಲ್ಲ. ಬೇರೆಡೆ ವರ್ಗವಾಗಿ ಹೋಗಿದ್ದೇನೆ. ಆದರೆ ಅಧ್ಯಾಪಕ ವೃತ್ತಿಯಲ್ಲಿ ಒಂದು ಪಾಠವಾಗಿ ಈಗಲೂ ಅದು ನನ್ನ ಮನಸ್ಸಿನಲ್ಲಿದೆ. ಒಂದು ಪ್ರೈಮರಿ ಸ್ಕೂಲಿನ ಮಗುವಿಗೆ ಅಧ್ಯಾಪಕಿ ಯಾರಾಗಿರಬೇಕು ಎಂಬ ಪಾಠ. ಆದರೂ ಈ ಸಂದರ್ಭದಲ್ಲಿ ನನ್ನ ಹೃದಯ ಭಾರವಾಗುತ್ತದೆ. ಕಣ್ಣು ತುಂಬುತ್ತದೆ. ಯಾಕೆಂದರೆ, ಆ ಮಗು ನನ್ನಲ್ಲಿ ಇಟ್ಟಿದ್ದ ವಿಶ್ವಾಸ ಮತ್ತು ಪ್ರೀತಿಯನ್ನು ಅಷ್ಟೇ ತೀವ್ರತೆಯಿಂದ ಮರಳಿಸಿಕೊಡಲು ನನ್ನಿಂದ ಸಾಧ್ಯವಾಗಿಲ್ಲ ಎಂಬುದಕ್ಕಾಗಿ. ನೀನು ಒಳ್ಳೆಯ ವಿದ್ಯಾರ್ಥಿ ಮಗು ಎಂದು ತಲೆ ನೇವರಿಸಿ
ಹೇಳುವ ಪ್ರಯತ್ನ ಮಾಡಿಲ್ಲ ಎಂಬುದಕ್ಕಾಗಿ..'
   ಕೇರಳದ ಮಿಣಿ ಎಂಬ ಈ ಅಧ್ಯಾಪಕಿಯು ಕಳೆದವಾರ ಬಿಚ್ಚಿಟ್ಟ ಈ  ಸಂಗತಿಗಳನ್ನು ಓದುತ್ತಾ ಹೋದಂತೆ ಮಿತ್ರ ರಾಘವೇಂದ್ರ ಹೆಬ್ಬಾರ್ ನೆನಪಾದರು. ತಮ್ಮ ಪಕ್ಕದ ಮನೆಯಲ್ಲಿ ನಡೆದ ಘಟನೆಯನ್ನು ಅವರು ಎಪ್ರಿಲ್ 11ರಂದು ಹೀಗೆ ಹಂಚಿಕೊಂಡಿದ್ದರು.
   49, 48, 47, 48, 46, 48.. ಇಷ್ಟು ಅಂಕಗಳನ್ನು ಪಡೆದ 4ನೇ ತರಗತಿಯ ಮಗಳಿಗೆ ಅಪ್ಪ ಬೆಲ್ಟ್ ನಿಂದ ಹೊಡೆಯುತ್ತಿದ್ದರು. ಆಕೆ ಜೋರಾಗಿ ಅಳುತ್ತಿದ್ದಳು. ಹಾಗಂತ ಈ ಮಗು ಇಷ್ಟು ಅಂಕಗಳನ್ನು ಪಡೆದದ್ದು ಒಟ್ಟು 100 ಮಾರ್ಕ್ಸ್ ನ ಪ್ರಶ್ನೆಪತ್ರಿಕೆಯಲ್ಲಿ ಎಂದು ಭಾವಿಸಬೇಡಿ. 50 ಅಂಕಗಳ ಒಟ್ಟು 6 ಪ್ರಶ್ನೆ ಪತ್ರಿಕೆಗಳಲ್ಲಿ ಆ ಮಗು ಪಡೆದ ಅಂಕಗಳವು. ಒಟ್ಟು 300ರಲ್ಲಿ 286 ಅಂಕ ಗಳನ್ನು ಪಡೆದ ಬಳಿಕವೂ ಮಗುವಿಗೆ ಏಟು ತಪ್ಪಲಿಲ್ಲ. 5 ವಿಷಯಗಳಲ್ಲಿA  ಮತ್ತು ಒಂದರಲ್ಲಿA+ ಗ್ರೇಡನ್ನು ಆ ಮಗು ಪಡೆದಿತ್ತು. ಇಷ್ಟಿದ್ದೂ ಏಟು ಯಾಕೆಂದರೆ, ಎಲ್ಲ ವಿಷಯಗಳಲ್ಲೂA+ ಬರಲೇಬೇಕೆಂದು ಅವಳ ಹೆತ್ತವರು ತಾಕೀತು ಮಾಡಿದ್ದರು. ಸಂಜೆ ತನ್ನ ಕೈ ಮತ್ತು ಕಾಲಿಗಾದ ಗಾಯವನ್ನು ಮಗು ತೋರಿಸಿದಾಗ ಮಿತ್ರ ಹೆಬ್ಬಾರರು ಕಂಗಾಲಾದರು..’
   ಮಕ್ಕಳನ್ನು ಮಕ್ಕಳಾಗಿ ಅನುಭವಿಸುವುದಕ್ಕೆ, ಅವರನ್ನು ಅವರ ಮಾರ್ಕು, ಸೌಂದರ್ಯ, ಜಾಣತನ, ಚುರುಕುತನಗಳ ಹೊರತಾದ ಕಾರಣಕ್ಕಾಗಿಯೂ ಪ್ರೀತಿಸುವುದಕ್ಕೆ ಹೆತ್ತವರು, ಅಧ್ಯಾಪಕರು ಅಥವಾ ಒಟ್ಟು ಸಮಾಜ ವಿಫಲವಾಗುತ್ತಲೇ ಇವೆ ಎಂಬುದನ್ನು ಇಂಥ ಹತ್ತು-ಹಲವು ಘಟನೆಗಳು ನಿತ್ಯ ಸಾಬೀತುಪಡಿಸುತ್ತಲೇ ಇವೆ. ದುರಂತ ಏನೆಂದರೆ, ಇವತ್ತಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ಮಕ್ಕಳಾಗಿ ಬೆಳೆಯುವುದಕ್ಕೆ ಅನೇಕ ಹೆತ್ತವರು ಅವಕಾಶವನ್ನೇ ಕೊಡುತ್ತಿಲ್ಲ ಎಂಬುದು. ತಮ್ಮ ಮಕ್ಕಳನ್ನು ಅಂಕದ ಕೋಳಿಯಂತೆ ಸ್ಪರ್ಧೆಗೆ ಸಜ್ಜುಗೊಳಿಸುವಲ್ಲಿ ಹೆಚ್ಚಿನೆಲ್ಲ ಪಾಲಕರು ಬ್ಯುಝಿಯಾಗಿ ಬಿಟ್ಟಿದ್ದಾರೆ. ತಾರೆ ಝಮೀನ್ ಪರ್, ವೇಕ್ ಅಪ್ ಸಿದ್‍ನಂಥ ಚಿತ್ರಗಳು, ಟೋಟೊ ಚಾನ್‍ನಂಥ ಕಾದಂಬರಿಗಳು ಈ ಮನಸ್ಥಿತಿಯನ್ನು ಬದಲಿಸಲು ಶ್ರಮಿಸಿವೆಯಾದರೂ ಅವುಗಳ ಪರಿಣಾಮ ಒಂದು ಹಂತದ ವರೆಗಷ್ಟೇ ಆಗಿವೆ. ಹೆಚ್ಚು ಅಂಕ ಯಾರು ಪಡೆಯುತ್ತಾರೋ ಅವರೇ ಅತ್ಯಂತ ಪ್ರತಿಭಾವಂತರು ಎಂಬ ನಂಬುಗೆ ಈಗಲೂ ಹೆಚ್ಚಿನ ಎಲ್ಲ ಪಾಲಕರಲ್ಲೂ ಇವೆ. ಸಮಾಜದ ನಿಲುವೂ ಬಹುತೇಕ ಹೀಗೆಯೇ. ಹಾಗಂತ ಎಲ್ಲ ಮಕ್ಕಳಿಗೂA+ ಗ್ರೇಡನ್ನೇ ಪಡೆಯಲು ಸಾಧ್ಯವಿದೆಯೇ? ಎಲ್ಲ ಮಕ್ಕಳೂ ಅತಿ ಬುದ್ಧಿವಂತರೂ ಜಾಣರೂ ಚುರುಕಿನವರೂ ಆಗಿರುತ್ತಾರಾ? ಪ್ರತಿಯೊಂದು ಮಗುವಿಗೂ ಅದರದ್ದೇ ಆದ ಇತಿ-ಮಿತಿಗಳೂ ಸಾಮರ್ಥ್ಯ -ಅಸಾಮರ್ಥ್ಯಗಳೂ ಇರುತ್ತವಲ್ಲವೇ? ಮಗುವಿನ ಸಾಮರ್ಥ್ಯ, ಒಲವುಗಳನ್ನು ನೋಡಿಕೊಂಡು ಅದಕ್ಕೆ ಪೂರಕವಾಗಿ ಕಾರ್ಯ ಯೋಜನೆಯನ್ನು ರೂಪಿಸಲು ಹೆತ್ತವರು ಮತ್ತು ಶಿಕ್ಷಕರು ಯಾಕೆ ಪದೇಪದೇ ವಿಫಲವಾಗುತ್ತಿದ್ದಾರೆ? ಕಲಿಕೆಯನ್ನೇಕೆ ನಾವು ‘ಕಷ್ಟ'ವಾಗಿ ಮಾರ್ಪಡಿಸಿ ಬಿಟ್ಟಿದ್ದೇವೆ? ಅದನ್ನು ಅನುಭವಿಸುತ್ತಾ, ಆಟದಂತೆ ಪ್ರೀತಿಸುತ್ತಾ ಬೆಳೆಯುವ ಒಂದು ವಾತಾವರಣವನ್ನು ನಾವೇಕೆ ತಯಾರಿಸುತ್ತಿಲ್ಲ? ಮಕ್ಕಳ ಆಸಕ್ತಿ, ನಿಲುವು, ಮಾತುಗಳೆಲ್ಲ ದೊಡ್ಡವರ ಆಸಕ್ತಿ, ಮಾತುಗಳಂತೆ ಇರಬೇಕೆಂದಿಲ್ಲವಲ್ಲ. ಮಕ್ಕಳು ಮಕ್ಕಳಂತಾಡದೆ ದೊಡ್ಡವರಂತಾಡಬೇಕೆಂದು ನಾವು ಬಯಸುವುದಾದರೂ ಏಕೆ? ಅವರ ಬಾಲ್ಯವನ್ನು ನಮ್ಮ ಉದ್ದೇಶದ ಈಡೇರಿಕೆಗಾಗಿ ಕಸಿಯುತ್ತೇವಲ್ಲ, ಸರಿಯೇ? ನ್ಯಾಯವೇ?
   ತನ್ನ ತರ್ಲೆ ಬುದ್ಧಿಗಾಗಿ ಒಂದನೇ ಕ್ಲಾಸಿನಿಂದ ಉಚ್ಛಾಟನೆಗೊಂಡ ಟೋಟೋಚಾನ್‍ನನ್ನು ಅದ್ಭುತ ವ್ಯಕ್ತಿಯಾಗಿ ಬೆಳೆಸುವ ಸಸುಕು ಕೊಬೆಯಾಚಿ ಎಂಬ ಮುಖ್ಯೋಪಾಧ್ಯಾಯಿನಿ, ನಗದ ಮಗುವನ್ನು ಅಪಾರವಾಗಿ ಪ್ರೀತಿಸಿದ ಅನಾಮಧೇಯ ಹೆತ್ತವರು ಮತ್ತು ಮಿಣಿ ಎಂಬ ಆ ಟೀಚರ್.. ಇಂಥವರ ಸಂಖ್ಯೆ ಸಮಾಜದಲ್ಲಿ ಹೆಚ್ಚಾದರೆ ಅದೆಷ್ಟು ಚೆನ್ನ, ಅಲ್ಲವೇ?

Monday, April 22, 2013

ಇಷ್ಟಿದ್ದೂ ಆ ಅಜೆಂಡಾದಲ್ಲಿ ಇನ್ನೂ ನಿರೀಕ್ಷೆ ಇಟ್ಟುಕೊಂಡಿದ್ದೀರಲ್ಲ, ಏಕೆ?

   1985ರಲ್ಲಿ ರಾಮನಿಗಾಗಿ ಸಂತರು ದೇಶಾದ್ಯಂತ ನಡೆಸಿದ ಪಾದಯಾತ್ರೆ, 1989ರ ಇಟ್ಟಿಗೆ ಚಳವಳಿ, 1990ರ ರಾಮಜ್ಯೋತಿ ಯಾತ್ರೆ, 1992 ಅಕ್ಟೋಬರ್‍ನಲ್ಲಿ ನಡೆದ ರಾಮ ಪಾದುಕಾ ಯಾತ್ರೆ ಮತ್ತು 92 ಡಿಸೆಂಬರ್‍ನಲ್ಲಿ ನಡೆದ ಬಾಬರಿ ಮಸೀದಿಯ ಧ್ವಂಸ.. ಇವುಗಳು ಬಿಜೆಪಿಗೆ ರಾಜಕೀಯವಾಗಿ ಭಾರೀ ಲಾಭವನ್ನು ತಂದುಕೊಟ್ಟಿವೆ ಎಂದು ಅನೇಕ ಮಂದಿ ಬಲವಾಗಿ ನಂಬಿದ್ದಾರೆ. 1984ರಲ್ಲಿ 2 ಲೋಕಸಭಾ ಸೀಟುಗಳನ್ನಷ್ಟೇ (ಅಡ್ವಾಣಿ, ವಾಜಪೇಯಿ) ಹೊಂದಿದ್ದ ಬಿಜೆಪಿ, 96ರಲ್ಲಿ ಸರಕಾರ ರಚಿಸುವಷ್ಟು ಬೆಳೆದಿರುವುದಕ್ಕೆ ಈ ರಾಮ ಮಂದಿರ ಚಳವಳಿಯೇ ಕಾರಣ ಎಂದು ಬಿಜೆಪಿಯ ವಿರೋಧಿಗಳೂ ಅಂದು ಕೊಂಡಿದ್ದಾರೆ. ಆದರೆ ನಿಜಸ್ಥಿತಿ ಹಾಗಿದೆಯೇ? ರಾಮ ಜನ್ಮಭೂಮಿ ಚಳವಳಿ ಬಿಜೆಪಿಗೆ ಎಷ್ಟರ ಮಟ್ಟಿಗೆ ಲಾಭವನ್ನು ತಂದುಕೊಟ್ಟಿದೆ? 96ರಲ್ಲಿ ಸರಕಾರ ರಚಿಸುವಷ್ಟು ಅದು ಪ್ರಬಲ ಪಕ್ಷವಾಗಿ ಮೂಡಿ ಬಂದಿರುವುದಕ್ಕೆ ಕೇವಲ ಮಂದಿರ ಚಳವಳಿಯೊಂದೇ ಕಾರಣವೇ ಅಥವಾ ವಿ.ಪಿ. ಸಿಂಗ್‍ರ ಮಂಡಲ್ ಇಶ್ಯೂ, ಬೋಫೋರ್ಸ್ ಹಗರಣ ಸಹಿತ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಅದಾಗಲೇ ಸೃಷ್ಟಿ ಮಾಡಿದ್ದ ಸನ್ನಿವೇಶಗಳೇ? 80 ರ ದಶಕದಲ್ಲಿ ರಾಜೀವ್ ಗಾಂಧಿಯವರ ವಿರುದ್ಧ ಬಂಡೆದ್ದು ತೃತೀಯರಂಗ ಕಟ್ಟಿಕೊಂಡ ವಿ.ಪಿ. ಸಿಂಗ್‍ರ ಜೊತೆ ಬಿಜೆಪಿ ಕೈ ಜೋಡಿಸಿತು. ಸರಕಾರದಲ್ಲಿ ಭಾಗಿಯಾಯಿತು. ಹೀಗೆ ಅಪರಿಚಿತವಾಗಿದ್ದ ಬಿಜೆಪಿಯನ್ನು ಈ ದೇಶದ ಮಂದಿಗೆ ಪರಿಚಯಿಸಿಕೊಟ್ಟಿದ್ದೇ ವಿ.ಪಿ. ಸಿಂಗ್. (ಕರ್ನಾಟಕದಲ್ಲಿ ಯಡಿಯೂರಪ್ಪರನ್ನು ಸೇರಿಸಿ ಕುಮಾರಸ್ವಾಮಿ ಸರಕಾರ ರಚಿಸಿದಂತೆ) ಬಳಿಕ ಬಿಜೆಪಿಯ ಬೆಳವಣಿಗೆಯನ್ನು ತಡೆಯುವುದಕ್ಕಾಗಿ ವಿ.ಪಿ. ಸಿಂಗ್‍ರು ಮಂಡಲ್ ಇಶ್ಯೂವನ್ನು ಹೊರತಂದಾಗ, ಬಿಜೆಪಿ ಮಂದಿರವನ್ನು ಎತ್ತಿಕೊಂಡಿತು. ಬಿಜೆಪಿಯ ಬೆಳವಣಿಗೆಯ ಹಿಂದಿರುವ ಇವನ್ನೆಲ್ಲ ನಿರ್ಲಕ್ಷಿಸಿ ಬರೇ ಮಂದಿರವೊಂದಕ್ಕೇ ಸಂಪೂರ್ಣ ಕ್ರೆಡಿಟ್ ಕೊಡುವುದು ಸೂಕ್ತವೇ? ಹಾಗಿದ್ದರೆ ಕಳೆದು 10 ವರ್ಷಗಳಲ್ಲಿ ಬಿಜೆಪಿ ರಾಮನಿಗಾಗಿ ಒಂದೇ ಒಂದು ಚಳವಳಿ, ಪಾದಯಾತ್ರೆ, ರಥಯಾತ್ರೆಗಳನ್ನು ಕೈಗೊಂಡಿಲ್ಲವೇಕೆ? ಕನಿಷ್ಠ ಮಂದಿರದ ಬಗ್ಗೆ ಒಂದೇ ಒಂದು ಹೇಳಿಕೆ ಕೊಡುವುದಕ್ಕೂ ಅದು ಹಿಂಜರಿದಿರುವುದೇಕೆ, ಮರೆವೇ? ನಿರ್ಲಕ್ಷ್ಯವೇ?
   92ರಲ್ಲಿ ಬಾಬರಿ ಮಸೀದಿಯ ಧ್ವಂಸವಾಯಿತು. ಆ ವಾತಾವರಣ ಇನ್ನೂ ಹಸಿಯಾಗಿರುವಾಗಲೇ ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶಗಳ ವಿಧಾನಸಭೆಗೆ 93ರಲ್ಲಿ ಚುನಾವಣೆ ನಡೆಯಿತು. ಆದರೆ, ಬಾಬರೀ ಪತನದ ಸಂದರ್ಭದಲ್ಲಿ ಉ. ಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿತು. 425 ಸ್ಥಾನಗಳ ವಿಧಾನಸಭೆಯಲ್ಲಿ 221 ಶಾಸಕರನ್ನು ಹೊಂದಿದ್ದ ಅದು ಚುನಾವಣೆಯ ಬಳಿಕ 177ಕ್ಕೆ ಕುಸಿಯಿತು. ಮಧ್ಯ ಪ್ರದೇಶದ ವಿಧಾನಸಭೆಯಲ್ಲಿ 220ರಷ್ಟಿದ್ದ ಬಿಜೆಪಿಯ ಶಾಸಕರ ಸಂಖ್ಯೆ 117ಕ್ಕೆ ಇಳಿಯಿತು. ನಿಜವಾಗಿ, ಬಾಬರಿ ಮಸೀದಿಯ ಪತನದ ಬಳಿಕದಿಂದ ಈವರೆಗೆ ಬಿಜೆಪಿ ಉತ್ತರ ಪ್ರದೇಶದಲ್ಲಿ ಅಧಿಕಾರವನ್ನೇ ಪಡೆದಿಲ್ಲ. ರಾಮ ಜನ್ಮಭೂಮಿ ಚಳವಳಿಯ ಕೇಂದ್ರ ಸ್ಥಾನವಿರುವ, ನೂರಾರು ಸಾಧು-ಸಂತರು, ಇಟ್ಟಿಗೆಗಳು ಒಟ್ಟಾದ ರಾಜ್ಯವೊಂದರ ಮತದಾರರು ಬಿಜೆಪಿಯನ್ನು ಸಾರಾಸಗಟು ತಿರಸ್ಕರಿಸಿದ್ದೇಕೆ? ಬಿಎಸ್‍ಪಿಯಂಥ ತೀರಾ ಜೂನಿಯರ್ ಪಕ್ಷವೂ ಆ ಬಳಿಕ ಅಧಿಕಾರಕ್ಕೆ ಬಂದವಲ್ಲ, ಏನದರ ಗುಟ್ಟು? ಮಂದಿರ, ಮಸೀದಿ ಅಜೆಂಡಾವನ್ನು ತಮ್ಮ ಪ್ರಣಾಳಿಕೆಯಲ್ಲಿ ಬಿಡಿ, ಕನಿಷ್ಠ ತಮ್ಮ ಚುನಾವಣಾ ಪ್ರಚಾರ ಸಭೆಗಳಲ್ಲೂ ಉಲ್ಲೇಖಿಸದ ಮಾಯಾವತಿ, ಅಖಿಲೇಶ್ ಸಿಂಗ್ ಯಾದವ್‍ರು ಆ ಬಳಿಕ ಅಧಿಕಾರಕ್ಕೆ ಬಂದಿರುವುದು ಏನನ್ನು ಸೂಚಿಸುತ್ತದೆ? ಮಂದಿರವು ಇಶ್ಯೂ ಅಲ್ಲ ಎಂಬುದನ್ನೇ ಅಲ್ಲವೇ? ಉತ್ತರ ಪ್ರದೇಶದ ವಿಧಾನಸಭೆಗೆ 2012ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ನೇತೃತ್ವವನ್ನು ವಹಿಸಿಕೊಂಡದ್ದು ಉಮಾಭಾರತಿ. ಆಕೆ ಎಲ್ಲೆಲ್ಲಿ ಭಾಷಣಕ್ಕೆ ಹೋದರೋ ಅಲ್ಲೆಲ್ಲಾ ರಾಮ ಮಂದಿರವನ್ನು ಭಾಷಣದಲ್ಲಿ ಉಲ್ಲೇಖಿಸಿದ್ದರು. ಆದರೂ ಈ ವರೆಗಿನ ಅತಿ ಕಡಿಮೆ ಸ್ಥಾನಗಳನ್ನು ಪಡೆಯಲಷ್ಟೇ ಅದು ಶಕ್ತವಾಯಿತು. ಇವೆಲ್ಲ ಏನು? ಕೋಮು ಅಜೆಂಡಾಕ್ಕೆ, ವಿಭಜನಕಾರಿ ರಾಜಕೀಯ ಸಿದ್ಥಾಂತಕ್ಕೆ ಈ ದೇಶದ ಮಣ್ಣು ಒಗ್ಗುವುದಿಲ್ಲ ಎಂದಲ್ಲವೆ ಇದರರ್ಥ? ಹಾಗಿದ್ದೂ, ರಾಮ ಮಂದಿರದಿಂದ ಬಿಜೆಪಿಗೆ ಲಾಭವಾಗುತ್ತದೆ ಎಂಬ ಮಾತು ಈ ದೇಶದಲ್ಲಿ ಚಾಲ್ತಿಯಲ್ಲಿರುವುದು ಯಾಕೆ? ಬಿಜೆಪಿಯ ಅಧ್ಯಕ್ಷ ರಾಜನಾಥ್ ಸಿಂಗ್‍ರು ಮತ್ತೆ, ‘ಉಗ್ರ ನಾಯಕರನ್ನು’ ಮುಂಚೂಣಿಗೆ ತರುತ್ತಿದ್ದಾರಲ್ಲ, ಏನಿದರ ಮರ್ಮ? ಬಿಜೆಪಿಯ ಚುನಾವಣಾ ಸಮಿತಿಗೆ ಮೋದಿ, ಉಮಾಭಾರತಿ, ವರುಣ್ ಗಾಂಧಿ, ಅಮಿತ್ ಷಾರನ್ನು ಅವರು ಸೇರ್ಪಡೆಗೊಳಿಸಿರುವುದು ಯಾವ ಸಂದೇಶವನ್ನು ನೀಡುತ್ತದೆ? ಇಷ್ಟಿದ್ದೂ,
   ‘ಮುಸ್ಲಿಮ್ ಮತ್ತು ಹಿಂದೂಗಳ ಮಧ್ಯೆ ಬಿಜೆಪಿ ದ್ವೇಷವನ್ನು ಬಿತ್ತುತ್ತಿದೆ ಎಂದು ಅರೋಪಿಸುವುದಕ್ಕೆ ಕಾಂಗ್ರೆಸ್‍ಗೆ ಏನು ಅರ್ಹತೆಯಿದೆ? ಅದರ ಆಳ್ವಿಕೆಯಲ್ಲಿ ಕೋಮುಗಲಭೆ ನಡೆದಿಲ್ಲವೇ..’ ಎಂದು ಕಳೆದ ತಿಂಗಳು ರಾಜನಾಥ್ ಸಿಂಗ್ ಪ್ರಶ್ನಿಸಿದರಲ್ಲ, ಏನೆನ್ನಬೇಕು?
   ಅಂದಹಾಗೆ, 1961ರಲ್ಲಿ ಮಧ್ಯ ಪ್ರದೇಶದ ಜಬಲ್ಪುರದಲ್ಲಿ ನಡೆದ ಕೋಮುಗಲಭೆಯಿಂದ ಹಿಡಿದು 2012ರಲ್ಲಿ ರಾಜಸ್ಥಾನದ ಭರತ್ಪುರ್‍ನಲ್ಲಿ ನಡೆದ ಕೋಮುಗಲಭೆಯವರೆಗೆ, ಕಾಂಗ್ರೆಸ್ ಆಳ್ವಿಕೆಯಲ್ಲಿ ಸಾಕಷ್ಟು ಕೋಮುಗಲಭೆಗಳು ನಡೆದಿವೆ. ಆದರೆ, ಗಲಭೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ದೊಡ್ಡದೊಂದು ವ್ಯತ್ಯಾಸ ಇದೆ. ಅದುವೇ ಐಡಿಯಾಲಜಿ. ಬಿಜೆಪಿ ಪ್ರಚೋದಿತ ಕೋಮುಗಲಭೆಗಳಿಗೆ ಸೈದ್ಧಾಂತಿಕ ಹಿನ್ನೆಲೆಯಿರುತ್ತದೆ. ಅದು ಓಟಿಗಾಗಿಯಷ್ಟೇ ಗಲಭೆ ಎಬ್ಬಿಸುವುದಲ್ಲ. ಅದರಾಚೆಗೆ ಕೆಲವು ನಿಗೂಢ ಅಜೆಂಡಾಗಳು ಅದರ ಬಳಿಯಿವೆ. ಕಾಲ ಕಾಲಕ್ಕೆ, ಸಂದರ್ಭಕ್ಕೆ ತಕ್ಕಂತೆ ಮುಸ್ಲಿಮರನ್ನು ದ್ವೇಷಿಸುವುದಕ್ಕೆ ಪೂರಕವಾಗುವ ಇಶ್ಯೂಗಳೊಂದಿಗೆ ಅದು ಗುರುತಿಸಿಕೊಳ್ಳುತ್ತದೆ. ಮಾತ್ರವಲ್ಲ, ಹತ್ತು ಹಲವು ಸತ್ಯಗಳನ್ನು ಮುಚ್ಚಿಡುವುದಕ್ಕೂ ಅದು ಪ್ರಯತ್ನಿಸುತ್ತದೆ. ಹೇಗೆಂದರೆ,
   ‘1949 ಡಿಸೆಂಬರ್ 22-23ರ ಮಧ್ಯರಾತ್ರಿ ಸುಮಾರು ಒಂದು ಗಂಟೆಗೆ ಬಾಬ ಅಭಿರಾಮ್ ದಾಸ್, ವೃಂದಾವನ್ ದಾಸ್ ಮತ್ತು ಇನ್ನೊಬ್ಬರು ಸೇರಿಕೊಂಡು ಬಾಬರಿ ಮಸೀದಿಯ ಮುಖ್ಯ ಗುಂಬಜದ ಕೆಳಗೆ ರಾಮ ವಿಗ್ರಹವನ್ನು ಸ್ಥಾಪಿಸುತ್ತಾರೆ. ಒಳಗೆ ಮಲಗಿಕೊಂಡಿದ್ದ ಮುಅದ್ದಿನ್ (ಬಾಂಗ್ ಕೊಡುವವ) ಮುಹಮ್ಮದ್ ಇಸ್ಮಾಈಲ್‍ರನ್ನು ತೀವ್ರವಾಗಿ ಥಳಿಸಿ ಹೊರ ಹಾಕುತ್ತಾರೆ. ಅಲ್ಲಿರುವ ಚಾಪೆ ಇನ್ನಿತರ ವಸ್ತುಗಳನ್ನು ಹೊರಕ್ಕೆಸೆಯುತ್ತಾರೆ. ಮಸೀದಿಯ ಗೋಡೆಗಳಲ್ಲಿ ಬರೆಯಲಾಗಿದ್ದ ಅರಬಿ ಅಕ್ಷರಗಳನ್ನು ಖುರ್ಪಿ ಎಂಬ ಆಯುಧದಿಂದ ಅಳಿಸಿ ಅವಸರವಸರವಾಗಿ ರಾಮ ಮತ್ತು ಸೀತೆಯನ್ನು ಕೆತ್ತುತ್ತಾರೆ. ಮರುದಿನ ಬೆಳಿಗ್ಗೆ ಸಾಕಷ್ಟು ಸಂಖ್ಯೆಯಲ್ಲಿ ಸಾಧುಗಳು ಬಾಬರಿ ಮಸೀದಿಗೆ ಬಂದು ಸೇರಿಕೊಳ್ಳುತ್ತಾರೆ. ಪ್ರಿಂಟಿಂಗ್ ಪ್ರೆಸ್ ಇಟ್ಟುಕೊಂಡಿದ್ದ ಹಿಂದೂ ಮಹಾಸಭಾದ ಫೈಝಾಬಾದ್ ವರ್ತುಲದ ಅಧ್ಯಕ್ಷ ಗೋಪಾಲ್ ಸಿಂಗ್ ವಿಶಾರದನು, ಮಸೀದಿಯೊಳಗೆ ‘ರಾಮ ವಿಗ್ರಹದ ಪವಾಡಸದೃಶ ಪ್ರತ್ಯಕ್ಷದ’ ಕತೆಯನ್ನು ವಿವರಿಸುವ ಪೋಸ್ಟರ್ ಮತ್ತು ನೋಟಿಸುಗಳನ್ನು ಹಂಚುತ್ತಾನೆ. ನಿಜವಾಗಿ ಮಸೀದಿಯ ಒಳಗೆ ರಾಮ ವಿಗ್ರಹವನ್ನು ಪ್ರತಿಷ್ಠಾಪಿಸುವ ಯೋಜನೆಗೆ ರೂಪುಕೊಟ್ಟಿದ್ದೇ ಫೈಝಾಬಾದ್‍ನ ಆಗಿನ ಜಿಲ್ಲಾ ಮ್ಯಾಜಿಸ್ಟ್ರೇಟರ್ ಕೆ.ಕೆ.ಕೆ. ನಾಯರ್. ವಿಗ್ರಹ ಪ್ರತಿಷ್ಠಾಪನೆಗಾಗಿ ಒಂದು ವಾರ ಮೊದಲೇ ಅಯೋಧ್ಯೆಯ ಒಂದು ದೇವಾಲಯದಲ್ಲಿ ಸಂತರನ್ನು ಭೇಟಿಯಾಗಿ ಅವರು ಯೋಜನೆಗೆ ಅಂತಿಮ ರೂಪ ಕೊಟ್ಟಿದ್ದರು. ಡಿಸೆಂಬರ್ 22ರ ಬೆಳಗಾತ 4 ಗಂಟೆಗೆ ಅವರು ಬಾಬರಿ ಮಸೀದಿಗೆ ತೆರಳಿ ವಿಗ್ರಹ ಪ್ರತಿಷ್ಠಾಪನೆಯನ್ನು ಕಂಡು ಅನಂದಿಸಿದ್ದರು. ಆದರೆ ಈ ಸುದ್ದಿಯನ್ನು ಲಕ್ನೋದ ತನ್ನ ಮೇಲಧಿಕಾರಿಗಳಿಗೆ ಬೆಳಗಿನ 9 ಗಂಟೆಯವರೆಗೂ ತಿಳಿಸಿಯೇ ಇರಲಿಲ್ಲ. ಸಾಧುಗಳು-ಸಾರ್ವಜನಿಕರು ಬಂದು ಇಡೀ ಮಸೀದಿಯನ್ನು ವಶಪಡಿಸಿಕೊಂಡ ಬಳಿಕವಷ್ಟೇ ಅವರು ಸುದ್ದಿಯನ್ನು ರವಾನಿಸಿದರು. ಮಹಾತ್ಮಾಗಾಂಧಿ ಹತ್ಯೆಯ ಆರೋಪದಲ್ಲಿ ಬಂಧನಕ್ಕೀಡಾಗಿ ಬಳಿಕ ಬಿಡುಗಡೆಗೊಂಡ ದಿಗ್ವಿಜಯ್ ನಾಥ್ ಈ ಇಡೀ ಷಢ್ಯಂತ್ರದ ಮಾಸ್ಟರ್ ಮೈಂಡ್ ಆಗಿದ್ದ..’
   ಕೃಷ್ಣ ಝಾ ಮತ್ತು ಧೀರೇಂದ್ರ ಝಾ ಅವರ, ‘ಅಯೋಧ್ಯಾ: ದಿ ಡಾರ್ಕ್ ನೈಟ್’  ಎಂಬ ಕೃತಿಯಲ್ಲಿರುವ ಈ ಸಂಗತಿಗಳನ್ನು ರಾಮ ಮಂದಿರ ಚಳವಳಿಯ ಸಂದರ್ಭದಲ್ಲಾಗಲಿ, ಆ ಬಳಿಕವಾಗಲಿ ಬಿಜೆಪಿ ಸಾರ್ವಜನಿಕರ ಮುಂದೆ ಬಹಿರಂಗಪಡಿಸಿದ್ದಿದೆಯೇ? ರಾಮ ವಿಗ್ರಹವು ಪವಾಡ ಸದೃಶವಾಗಿ ಬಾಬರಿ ಮಸೀದಿಯ ಒಳಗೆ ಪ್ರತ್ಯಕ್ಷವಾಗಿದೆ ಎಂಬ ಸುಳ್ಳನ್ನು ಹೇಳುತ್ತಾ, ಮುಸ್ಲಿಮರನ್ನು ಖಳರಂತೆ ಬಿಂಬಿಸುತ್ತಾ, ಗಲಭೆಗೆ ಪ್ರಚೋದಿಸಿದ್ದನ್ನು ಬಿಟ್ಟರೆ ಉಳಿದಂತೆ ಅದು ಯಾವ ನಿರ್ಮಾಣ ಕೆಲಸವನ್ನು ಮಾಡಿದೆ? ಬಾಂಗ್ಲಾ ನುಸುಳುಕೋರರು, ಮುಸ್ಲಿಮ್ ಭಯೋತ್ಪಾದನೆ, 371ನೇ ವಿಧಿ, ಲವ್ ಜಿಹಾದ್, ಪರ್ಸನಲ್ ಲಾ.. ಹೀಗೆ ಅದು ಎತ್ತುವ ಎಲ್ಲ ಸಂಗತಿಗಳೂ ಯಾಕೆ ಮುಸ್ಲಿಮರನ್ನೇ ಗುರಿಯಾಗಿಸಿಕೊಂಡಿರುತ್ತವೆ? ಕಾಂಗ್ರೆಸ್, ಕಮ್ಯೂನಿಸ್ಟ್, ತೃಣಮೂಲ, ಡಿ.ಎಂ.ಕೆ., ಜನತಾ ದಳಗಳಂಥ ಪಕ್ಷಗಳು ಮಾತಾಡುವ ಶೈಲಿ ಮತ್ತು ಬಿಜೆಪಿ ಮಾತಾಡುವ ಶೈಲಿಗಳನ್ನು ನೋಡಿ. ಕಾಂಗ್ರೆಸ್ ಆಳ್ವಿಕೆಯಲ್ಲಿ ಕೋಮುಗಲಭೆ ನಡೆದಿಲ್ಲವೇ ಎಂದು ಪ್ರಶ್ನಿಸುವ ರಾಜನಾಥ್ ಸಿಂಗ್‍ರೇ, ಈ ಶೈಲಿಗಳಲ್ಲಿರುವ ವ್ಯತ್ಯಾಸವನ್ನು ಗುರುತಿಸಿದ್ದೀರಾ? ಈಶ್ವರಪ್ಪ, ವರುಣ್ ಗಾಂಧಿ, ಉಮಾಭಾರತಿ.. ಮುಂತಾದ ಹತ್ತು-ಹಲವು ನಾಯಕರ ಭಾಷೆ, ವಿಷಯ, ಆವೇಶಗಳು ಹೇಗಿರುತ್ತವೆ? ಮುಸ್ಲಿಮರ ಕುರಿತಂತೆ ಬಳಸುವ ಅವೇ ಭಾಷೆಯನ್ನು, ಅವೇ ಶೈಲಿಯನ್ನು, ಅವೇ ಆವೇಶವನ್ನು ಇತರರಿಗೆ ನೀವೆಲ್ಲ ಉಪಯೋಗಿಸುತ್ತೀರಾ? ಕೋಮುಗಲಭೆಗಳನ್ನು ನಿಯಂತ್ರಿಸುವಲ್ಲಿ ಕಾಂಗ್ರೆಸ್ ವಿಫಲ ಆಗಿರಬಹುದು. 1984ರ ಸಿಖ್ ಹತ್ಯಾಕಾಂಡವನ್ನು ಕಾಂಗ್ರೆಸ್ಸಿನ ಪೂರ್ವಗ್ರಹಪೀಡಿತ ದುಷ್ಟ ಮನಸ್ಥಿತಿಗೆ ಪುರಾವೆಯಾಗಿ ತೋರಿಸಬಹುದು. ಆದರೆ, 2005 ಅಗಸ್ಟ್ 12ರಂದು ಪ್ರಧಾನಿ ಮನ್‍ಮೋಹನ್ ಸಿಂಗ್‍ರು ಸಿಖ್ ಸಮುದಾಯದಲ್ಲಷ್ಟೇ ಅಲ್ಲ, ಇಡೀ ದೇಶಕ್ಕೇ ಕೈ ಮುಗಿದು ಕ್ಷಮೆಯಾಚಿಸಿದರಲ್ಲ, ಮೋದಿಯಿಂದ ಅಂಥದ್ದೊಂದು ಕ್ಷಮೆಯಾಚನೆಯನ್ನು ಮಾಡಿಸಲು ನಿಮ್ಮಿಂದ ಸಾಧ್ಯವಾಗಿದೆಯೇ? ಸಿಖ್ ಹತ್ಯಾಕಾಂಡದ ಪಶ್ಚಾತ್ತಾಪವಾಗಿ ಓರ್ವ ಸಿಖ್ ವ್ಯಕ್ತಿಯನ್ನೇ ಪ್ರಧಾನ ಮಂತ್ರಿಯಾಗಿ ಕಾಂಗ್ರೆಸ್ ಆಯ್ಕೆ ಮಾಡಿತು. ನಿಮಗೆ ಹೀಗೆ ಸಮರ್ಥಿಸಿಕೊಳ್ಳುವುದಕ್ಕೆ ಏನಿದೆ ಹೇಳಿ? ಪ್ರಧಾನಿ ಬಿಡಿ, ವಿಧಾನ ಸಭೆಗೆ ಓರ್ವ ಮುಸ್ಲಿಮ್ ವ್ಯಕ್ತಿಯನ್ನು ಅಭ್ಯರ್ಥಿಯಾಗಿ ನಿಲ್ಲಿಸುವುದನ್ನು ನೋಡುವುದಕ್ಕೆ ನಾವು ಇನ್ನೆಷ್ಟು ವರ್ಷಗಳನ್ನು ಕಾಯಬೇಕು? ಇವೆಲ್ಲ ಏನನ್ನು ಸೂಚಿಸುತ್ತದೆ? ಮುಸ್ಲಿಮರಿಗೆ ಸಂಬಂಧಿಸಿ ಕಾಂಗ್ರೆಸ್‍ನ ಧೋರಣೆಗೂ ಬಿಜೆಪಿಯು ಧೋರಣೆಗೂ ನಡುವೆ ಇರುವ ಅಗಾಧ ಅಂತರವನ್ನೇ ಅಲ್ಲವೇ? ಹೀಗಿರುತ್ತಾ,
   ನೀವೇ ಇಷ್ಟು ಬಾಲಿಶವಾಗಿ ಪ್ರಶ್ನಿಸಿದರೆ ಹೇಗೆ ರಾಜನಾಥ್‍ರೇ..


Monday, April 15, 2013

ಜನಸಾಮಾನ್ಯರಿಗೆ ಏನುತ್ತರ ಕೊಡುತ್ತೀರಿ ಧರ್ಮಗುರುಗಳೇ?   ರಣರಂಗ. ಸತ್ಯ ಮತ್ತು ಮಿಥ್ಯಗಳ ಮಧ್ಯೆ ತೀವ್ರ ಸಂಘರ್ಷ ನಡೆಯುತ್ತಿತ್ತು. ಓರ್ವ ಯುವಕ ಅತೀವ ಹುರುಪು, ಉತ್ಸಾಹದಿಂದ ಸತ್ಯದ ಮಾರ್ಗದಲ್ಲಿ ಹೋರಾಡುತ್ತಿದ್ದ. ಹೀಗಿರುತ್ತಾ, ಆತನ ದೇಹದ ಮೇಲೆ ಹಲವಾರು ಗಾಯಗಳಾದುವು. ಬಾಣದ ಗಾಯ ಮತ್ತು ತಲವಾರಿನ ಏಟುಗಳು ಆತನ ದೇಹವನ್ನು ಇಂಚಿಂಚಾಗಿ ಇರಿಯತೊಡಗಿದುವು. ಹಾಗಂತ, ಆತ ರಣರಂಗಕ್ಕೆ ಬರುವಾಗ ಇವುಗಳ ಬಗ್ಗೆ ತಿಳಿದಿರಲಿಲ್ಲ ಎಂದಲ್ಲ. ಯುದ್ಧ ಅಂದರೆ ಏನು, ಯಾವೆಲ್ಲ ಆಯುಧಗಳನ್ನು ಈ ಯುದ್ಧದಲ್ಲಿ ಬಳಸಲಾಗುತ್ತದೆ, ತಾನು ಯಾಕಾಗಿ, ಯಾರಿಗಾಗಿ ಮತ್ತು ಯಾವ ಉದ್ದೇಶದಿಂದ ಹೋರಾಡುತ್ತಿದ್ದೇನೆ, ಈ ಮುಖಾಮುಖಿಯಲ್ಲಿ ಯಾರು ಬಲಶಾಲಿ.. ಎಂಬುದೆಲ್ಲಾ ಆತನಿಗೆ ಚೆನ್ನಾಗಿಯೇ ಗೊತ್ತಿತ್ತು. ಮಾತ್ರವಲ್ಲ, ತಾನು ಸತ್ಯದ ಮಾರ್ಗದಲ್ಲಿ ಹೋರಾಡುತ್ತಿರುವುದರಿಂದ, ಒಂದು ವೇಳೆ ಸಾವು ಎದುರಾದರೂ ಅದು ಹುತಾತ್ಮತೆ ಅನ್ನಿಸಿಕೊಳ್ಳುತ್ತದೆ ಮತ್ತು ಸ್ವರ್ಗ ಸಿಗುತ್ತದೆ ಎಂಬುದೂ ತಿಳಿದಿತ್ತು. ಆದರೂ ದೇಹದ ಮೇಲಾದ ಗಾಯ ಆತನನ್ನು ಅಸಾಧ್ಯ ಸಂಕಟಕ್ಕೆ ದೂಡಿತು. ಸಹಿಸಲು ಸಾಧ್ಯವೇ ಇಲ್ಲ ಅನ್ನುವಷ್ಟರ ಮಟ್ಟಿಗೆ ಆ ಗಾಯಗಳು ಆತನನ್ನು ಚುಚ್ಚತೊಡಗಿದುವು. ಕೊನೆಗೆ ಆತ ತಲವಾರಿನಿಂದ ತನ್ನ ಕೈಯನ್ನು ಸ್ವಯಂ ಕಡಿದುಕೊಂಡ. ರಕ್ತ ಹರಿಯತೊಡಗಿತು. ಆತನ ಉದ್ದೇಶ ಕೂಡ, ರಕ್ತ ಹರಿದು ಶೀಘ್ರ ಸಾವು ಬರಲಿ ಎಂದೇ ಆಗಿತ್ತು. ಕೊನೆಗೆ ಆತ ಸಾವಿಗೀಡಾದ..’ ಈ ಘಟನೆಯನ್ನು ತನ್ನ ಅನುಯಾಯಿಗಳ ಜೊತೆ ಹಂಚಿಕೊಳ್ಳುತ್ತಾ ಪ್ರವಾದಿ ಮುಹಮ್ಮದರು(ಸ) ಹೇಳಿದರು,
   ಅದು ಹುತಾತ್ಮತೆಯಲ್ಲ, ಆತ್ಮಹತ್ಯೆ. ಆತ್ಮಹತ್ಯೆಯನ್ನು ಅಲ್ಲಾಹನು ನಿಷಿದ್ಧಗೊಳಿಸಿದ್ದಾನೆ. (ಪವಿತ್ರ ಕುರ್‍ಆನ್: 4: 29)
   ಓರ್ವನು ಜಿಹಾದ್‍ನಲ್ಲಿ ಭಾಗಿಯಾಗಿದ್ದೂ ಆತ್ಮಹತ್ಯೆ ಮಾಡಿಕೊಂಡರೆ ಅದು ಜಿಹಾದೂ ಅಲ್ಲ, ಆತನಿಗೆ ಸ್ವರ್ಗವೂ ಇಲ್ಲ ಎಂಬ ಪ್ರವಾದಿ(ಸ) ವಚನವನ್ನು ಇಲ್ಲಿ ನೆನಪಿಸಿಕೊಳ್ಳುವುದಕ್ಕೆ ಕಾರಣ ಇದೆ.
   ಬೀದರ್ ಜಿಲ್ಲೆಯ ಚೌಳಿ ಮಠದ ಮೂವರು ಸ್ವಾಮೀಜಿಗಳು ಎಪ್ರಿಲ್ 8ರಂದು ಆತ್ಮಹತ್ಯೆ ಮಾಡಿಕೊಂಡರು. ಮಾತ್ರವಲ್ಲ, ಆತ್ಮ ಹತ್ಯೆಗಿಂತ ಮೊದಲು ತಮ್ಮ ಹೇಳಿಕೆಗಳನ್ನು ಚಿತ್ರೀಕರಿಸುವ ವ್ಯವಸ್ಥೆಯನ್ನೂ ಮಾಡಿದರು. ‘ಫೆಬ್ರವರಿ 28ರಂದು ಹಿರಿಯ ಸ್ವಾಮೀಜಿ ಶ್ರೀ ಗಣೇಶ್ ಅವಧೂತರು ಸಾವಿಗೀಡಾಗಿ ಕೈಲಾಸ ಸೇರಿಕೊಂಡಿದ್ದು, ಇದೀಗ ನಾವು ಅವರ ಜೊತೆ ಸೇರ ಬಯಸಿದ್ದೇವೆ. ಇನ್ನು ಇಲ್ಲಿ ನಮಗೆ ಮಾಡುವುದಕ್ಕೇನೂ ಉಳಿದಿಲ್ಲ..' ಎಂಬ ಮೃತ್ಯು ಪತ್ರವನ್ನೂ ಬರೆದಿದ್ದರು. ಮಾಧ್ಯಮಗಳು ಈ ಕುರಿತಂತೆ ಸಾಕಷ್ಟು ಚರ್ಚಿಸಿದುವು. ಆ ಆತ್ಮಹತ್ಯೆಗೆ ಅವು; ಅಗ್ನಿ ಪ್ರವೇಶ, ಆತ್ಮಾಹುತಿ, ಜೀವಂತ ದಹನ, ದೇಹತ್ಯಾಗ, ಅಗ್ನಿ ಸಮಾಧಿ.. ಮುಂತಾದ ಹೆಸರುಗಳನ್ನೂ ಕೊಟ್ಟುವು. ಆದರೆ ಯಾವ ಹೆಸರುಗಳನ್ನು ಕೊಟ್ಟರೂ ಅವುಗಳ ಒಟ್ಟು ಅರ್ಥ ‘ಆತ್ಮಹತ್ಯೆ' ಎಂದೇ ಆಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಇಷ್ಟಕ್ಕೂ, ಗುರುಗಳು ಸಾವಿಗೀಡಾದರೆಂದು ಶಿಷ್ಯರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಪದಗುಚ್ಛಗಳ ಮೂಲಕವೋ ಸಿದ್ಧಿಯ (ಪವಾಡ ಪ್ರಾಪ್ತಿ) ನೆಪದಲ್ಲೋ ಸಮರ್ಥಿಸಿಕೊಳ್ಳಬಹುದೇ? ಒಂದು ಮಠಕ್ಕೆ, ಅದನ್ನು ನೋಡಿಕೊಳ್ಳುವ ಗುರುಗಳಿಗೆ, ಶಿಷ್ಯ ವೃಂದ ಮತ್ತು ಭಕ್ತಾದಿಗಳಿಗೆ ಅವರವರದ್ದೇ ಆದ ಉದ್ದೇಶ, ಗುರಿಗಳಿರುತ್ತದಲ್ಲವೇ? ಸಮಾಜಕ್ಕೆ ಮಾರ್ಗದರ್ಶನ ಮಾಡುವ, ಮೌಲ್ಯಗಳನ್ನು ಹೇಳಿಕೊಡುವ, ತಿದ್ದುವ ಕೆಲಸಗಳನ್ನು ಮಠಗಳು ಮಾಡುತ್ತವೆ ಎಂಬ ನಂಬಿಕೆಯಿಂದಲೇ ಅಲ್ಲವೇ ಜನರು ಮಠ ಗಳತ್ತ ನೋಡುವುದು, ಗುರುಗಳತ್ತ ಧಾವಿಸುವುದು? ಆದರೆ ಮಾರ್ಗದರ್ಶನ ಮಾಡಬೇಕಾದವರೇ ಆತ್ಮಹತ್ಯೆಯ ದಾರಿ ಹಿಡಿದರೆ ಅದು ಭಕ್ತಾದಿಗಳಿಗೆ ಕೊಡುವ ಸಂದೇಶವೇನು? ಸುಖ-ದುಃಖ, ನೋವು-ನಲಿವು, ಸಿಟ್ಟು-ವೈರಾಗ್ಯ.. ಎಲ್ಲವನ್ನೂ ಸಮಚಿತ್ತದಿಂದಲೇ ನಿಭಾಯಿಸುವ ಕಲೆಯನ್ನು ಸಮಾಜಕ್ಕೆ ಕಲಿಸ ಬೇಕಾದವರೇ ‘ಸಮಚಿತ್ತ' ಕಳಕೊಂಡರೆ ಅನುಯಾಯಿಗಳು ಏನಾದಾರು? ಸಾವು ಪ್ರತಿಯೊಂದು ಜೀವಿಗೂ ಶತಃಸಿದ್ಧ. ಗುರುಗಳೂ ಅದರಿಂದ ಹೊರತಲ್ಲ. ಇದನ್ನು ಅತ್ಯಂತ ಚೆನ್ನಾಗಿ ತಿಳಿದು ಕೊಂಡಿರಬೇಕಾದವರು ಅವರ ಆಪ್ತ ಶಿಷ್ಯರೇ. ಸಾವಿನ ಮರ್ಮವನ್ನು ಸಮಾಜಕ್ಕೆ ಹೇಳಿಕೊಡುವುದಕ್ಕೆ, ಗುರುಗಳು ಬೋಧಿಸಿದ ಮೌಲ್ಯಗಳನ್ನು ಪ್ರಚಾರ ಮಾಡುವುದಕ್ಕೆ ಆ ಸಾವು ಒಂದು ಉತ್ತಮ ಅವಕಾಶ. ಆದರೆ, ಶಿಷ್ಯರೇ ಅದಕ್ಕೆ ಬೆನ್ನು ತಿರುಗಿಸಿದರೆ? ಅಗಲಿಕೆಯ ಭಾರದಿಂದ ಕುಸಿದು ಕೂತರೆ?
   ಪ್ರವಾದಿ ಮುಹಮ್ಮದರು(ಸ) ಸಾವಿಗೀಡಾದ ಸುದ್ದಿ ಎಲ್ಲೆಡೆ ಹರಡತೊಡಗಿತು. ಅವರ ಅನುಯಾಯಿಗಳು ಸುದ್ದಿಯನ್ನು ಖಚಿತಪಡಿಸುತ್ತಾ, ಅವರ ಮನೆಯತ್ತ ಧಾವಿಸತೊಡಗಿದರು. ಈ ಸುದ್ದಿ ಅವರ ಆಪ್ತಶಿಷ್ಯ ಉಮರ್(ರ)ರಿಗೂ ತಲುಪಿತು. ಸಾವು ಎಲ್ಲರಿಗೂ ಶತಸಿದ್ಧ ಎಂಬುದನ್ನು ಅವರು ತಿಳಿದಿದ್ದರೂ ಆ ಕ್ಷಣದಲ್ಲಿ ಅವರು ಉದ್ವೇಗಕ್ಕೆ ಒಳಗಾದರು. ವಿಚಲಿತರಾಗಿ ಮನೆಯಿಂದ ಹೊರಟರು. ಯಾರಾದರೂ ತನ್ನ ನಾಯಕನ ಸಾವಿನ ಬಗ್ಗೆ ಮಾತಾಡಿದರೆ ಅವರನ್ನು ಕೊಂದೇ ಬಿಡಬೇಕು ಅನ್ನುವ ಆವೇಶ ಅವರಲ್ಲಿತ್ತು. ದಾರಿಯಲ್ಲಿ ಪ್ರವಾದಿಯವರ(ಸ) ಇನ್ನೋರ್ವ ಶಿಷ್ಯ ಅಬೂಬಕರ್(ರ) ಎದುರಾದರು. ತಮ್ಮ ನಾಯಕನ ಸಾವನ್ನು ಖಚಿತಪಡಿಸಿದರು. ಉಮರ್ ಒಪ್ಪಲಿಲ್ಲ, ವಾದಕ್ಕಿಳಿದರು. ಆಗ ಅಬೂಬಕರ್ ಹೇಳಿದರು, ಯಾರಾದರೂ ಪ್ರವಾದಿ ಮುಹಮ್ಮದರನ್ನು(ಸ) ಆರಾಧಿಸುತ್ತಾರೆಂದಾದರೆ, ಆ ಮುಹಮ್ಮದ್(ಸ) ಸಾವಿಗೀಡಾಗಿದ್ದಾರೆ. ಇನ್ನು, ಸೃಷ್ಟಿಕರ್ತನನ್ನು (ಅಲ್ಲಾಹ್) ಆರಾಧಿಸುವುದಾದರೆ, ಆತ ಸಾವಿಗೀಡಾಗಿಲ್ಲ, ಆಗುವುದೂ ಇಲ್ಲ..' ಉಮರ್‍ರಿಗೆ ತಪ್ಪಿನ ಅರಿವಾಯಿತು. ನನ್ನ ಆರಾಧ್ಯ ಮುಹಮ್ಮದ್(ಸ) ಅಲ್ಲ, ಸೃಷ್ಟಿಕರ್ತ ಅಲ್ಲಾಹ್ ಎಂಬುದಾಗಿ ಸ್ವಯಂ ಸ್ಪಷ್ಟಪಡಿಸಿಕೊಂಡರು.
   ಅಂದಹಾಗೆ, ಪೀಪಲ್ಸ್ ಟೆಂಪಲ್, ದಿ ಆರ್ಡರ್ ಆಫ್ ದಿ ಸೋಲಾರ್ ಟೆಂಪಲ್ಸ್, ಹೆವೆನ್ಸ್ ಗೇಟ್.. ಮುಂತಾದ ಪಂಥಗಳ ಆತ್ಮಹತ್ಯಾ ಇತಿಹಾಸವನ್ನು ಬಲ್ಲವರಿಗೆ ‘ಚೌಳಿ ಮಠ' ಘಟನೆ ಆಘಾತವನ್ನೇನೂ ನೀಡದು.
   1997 ಮಾರ್ಚ್ 26ರಂದು ಅಮೇರಿಕದ ಕ್ಯಾಲಿಫೋರ್ನಿಯಾದಲ್ಲಿ 39 ಮಂದಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದಾಗಿ 4 ದಿನಗಳ ಬಳಿಕ ಮಾರ್ಚ್ 30ರಂದು ಅಮೇರಿಕದ ಖ್ಯಾತ ನಟಿ ನಿಚೆಲ್ ನಿಕೋಲಸ್‍ಳ ತಮ್ಮ ಥಾಮಸ್ ನಿಕೋಲಸ್ ಎಂಬವ ಆತ್ಮಹತ್ಯೆಗೆ ಶರಣಾಗುತ್ತಾನೆ. ‘ನನಗಿಂತ ಮೊದಲೇ ತೆರಳಿ ಆಕಾಶದಲ್ಲಿ ತೇಲಾಡುತ್ತಾ ಇರುವವರ ಜೊತೆ ಸೇರಲು ಹೋಗುತ್ತಿದ್ದೇನೆ..' ಅಂತ ಡೆತ್‍ನೋಟ್ ಬರೆದಿಡುತ್ತಾನೆ. ಇದು ಅಮೇರಿಕನ್ ಮಾಧ್ಯಮಗಳಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗುತ್ತದೆ. ಸಾರ್ವಜನಿಕರಲ್ಲಿ ಒಂದು ಬಗೆಯ ಗೊಂದಲ, ತಳಮಳಗಳು ಕಾಣಿಸಿಕೊಳ್ಳುತ್ತವೆ. ಬೋನಿ ನಿಟ್ಟೆಲ್ ಮತ್ತು ಮಾರ್ಶಲ್ ಎಂಬಿಬ್ಬರು 1970ರಲ್ಲಿ ಸ್ಥಾಪಿಸಿದ ಹೆವೆನ್ಸ್ ಗೇಟ್ ಎಂಬ ಧಾರ್ಮಿಕ ಪಂಥದ ಬಗ್ಗೆ, ಅದರ ಆಚಾರ-ವಿಚಾರ, ಆಧ್ಯಾತ್ಮಿಕ ನಿಲುವುಗಳ ಬಗ್ಗೆ ಚರ್ಚೆಗಳಾಗುತ್ತವೆ. ನಿಜವಾಗಿ, 1970ರಲ್ಲಿ ಮಾರ್ಶಲ್‍ಗೆ ಹೃದಯಾಘಾತವಾಗಿತ್ತು. ಬಳಿಕ ಚೇತರಿಸಿಕೊಂಡ ಆತ, ತನಗೆ ಸಾವಿನ ಅನುಭವವಾಗಿದೆ ಎಂದು ಹೇಳಿಕೊಂಡ. ಬೈಬಲ್‍ನಲ್ಲಿ ಉಲ್ಲೇಖಿತವಾಗಿರುವ 11:3 ವಚನಗಳ ಕುರಿತಂತೆ ತನಗೆ ಕ್ರಾಂತಿಕಾರಿ ಬೋಧನೆಗಳು ದೊರಕಿವೆ ಎಂದು ಪ್ರತಿಪಾದಿಸಿದ. ತನಗೆ ಯೇಸುವಿನೊಂದಿಗೆ ನೇರವಾದ ಸಂಬಂಧ ಇದ್ದು, ತಾನು ಮಾನವನ ಮಟ್ಟ ಕ್ಕಿಂತ ಮೇಲ್ತರದ ಸಾಮ್ರಾಜ್ಯದಲ್ಲಿದ್ದೇನೆ ಎಂದು ಹೇಳಿದನಲ್ಲದೇ, ತನ್ನನ್ನು ಆಸ್ಪತ್ರೆಯಲ್ಲಿ ಉಪಚರಿಸಿದ ನರ್ಸ್ ಬೋನಿ ನಿಟ್ಟೆಲ್‍ಳ ಜೊತೆ ಸೇರಿ ಹೆವೆನ್ಸ್ ಗೇಟ್‍ಗೆ ಅಡಿಪಾಯ ಹಾಕಿದ. ಈ ಜಗತ್ತು ನಾಶವಾಗುವ ಬಗ್ಗೆ, ಮೋಕ್ಷ, ಸಾಕ್ಷಾತ್ಕಾರದ ಬಗ್ಗೆ ವಿಚಿತ್ರ ಆಲೋಚನೆಗಳನ್ನು ಸಮಾಜದ ಮುಂದಿಟ್ಟ. ಈ ಭೂಮಿ ಶೀಘ್ರವೇ ಸರ್ವನಾಶವಾಗಲಿದ್ದು, ಈ ಗೋಲದಲ್ಲಿ ಬದುಕುವ ಮಂದಿ ಆದಷ್ಟು ಬೇಗ ಭೂಮಿಯಿಂದ ಹೊರಟು ಬಿಡುವುದು ಇದಕ್ಕಿರುವ ಪರಿಹಾರ ಎಂದು ಕರೆಕೊಟ್ಟ. ಈ ದೇಹವು ಒಂದು ವಾಹನವಾಗಿದೆ, ಜನರ ಸಂಚಾರಕ್ಕೆ ಈ ವಾಹನ ಒಂದು ನಿಮಿತ್ತ ಮಾತ್ರ. ಆತ್ಮವು ಈ ವಾಹನವನ್ನು ಬಿಟ್ಟು ಹೋಗುವುದರ ಅರ್ಥವೇ ಸಾವು.. ಎಂದೆಲ್ಲಾ ಹೇಳಿದ. 1997 ಮಾರ್ಚ್ 26ರ ಸಾಮೂಹಿಕ ಆತ್ಮಹತ್ಯೆಯ ದಿನಗಳ ಮೊದಲು ಆತ ತನ್ನ ಹೇಳಿಕೆಯನ್ನು ಚಿತ್ರೀಕರಿಸಿಕೊಂಡನಲ್ಲದೇ, ಅದರಲ್ಲಿ ಭೂಮಿಯೊಂದಿಗಿನ ಸಂಬಂಧ ಬಿಟ್ಟುಬಿಡಿ. ಕೌಟುಂಬಿಕ ಸಂಬಂಧ, ಪತಿ-ಪತ್ನಿ, ಮಕ್ಕಳು, ಉದ್ಯೋಗ, ದುಡ್ಡು.. ಹೀಗೆ ಎಲ್ಲ ಸಂಬಂಧಗಳನ್ನು ಕಡಿದುಕೊಳ್ಳಿ. ಬದುಕಿನ ಮುಂದಿನ ಹಂತಕ್ಕೆ ಏರಲು ಸಿದ್ಧವಾಗಿ. ಭೂಮಿ ನಾಶವಾಗಲಿದೆ.. ಎಂದೆಲ್ಲಾ ತನ್ನ ಸದಸ್ಯರಿಗೆ ಬೋಧಿಸಿದ.
   ಅಷ್ಟಕ್ಕೂ, ಗುರು ಮತ್ತು ಅನುಯಾಯಿಗಳು ಜೊತೆಯಾಗಿ ಆತ್ಮ ಹತ್ಯೆ ಮಾಡಿಕೊಂಡ ಘಟನೆ ಇದೊಂದೇ ಎಂದು ಭಾವಿಸಬೇಡಿ.
   1978 ನವೆಂಬರ್ 18ರಂದು ಅಮೇರಿಕದಲ್ಲಿ 918 ಮಂದಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡರು. 9/11 ಘಟನೆಯನ್ನು ಬಿಟ್ಟರೆ ಉಳಿದಂತೆ ಅಮೇರಿಕದಲ್ಲಿ ಒಂದೇ ದಿನ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸಾವಿಗೀಡಾದದ್ದು ಇದೊಂದೇ. ಇಡೀ ಅಮೇರಿಕಕ್ಕೆ ಅಮೇರಿಕವೇ ಪೀಪಲ್ಸ್ ಟೆಂಪಲ್ ಪಂಥದ ಕುರಿತು, ಅದರ ಸ್ಥಾಪಕ ಜಿಮ್ ಜೋನ್ಸ್‍ನ ಬಗ್ಗೆ, ಆತನ ಸೈದ್ಧಾಂತಿಕ ನೆಲೆಗಟ್ಟು, ಹಿನ್ನೆಲೆಯ ಕುರಿತಂತೆ ಗಂಭೀರವಾಗಿ ಚರ್ಚಿಸಿತು. ಇವಾಂಜಲಿಕಲ್ ಪ್ರವಚಕನಾಗಿ ಗುರುತಿಸಿಕೊಂಡಿದ್ದ ಜೋನ್ಸ್, ಕ್ರೈಸ್ತ ಧರ್ಮದಲ್ಲಿ ಕ್ರಾಂತಿಕಾರಿ ನಿಲುವುಗಳನ್ನು ಪ್ರತಿಪಾದಿಸಿದ. ಆತನ ಹೊಸ ಪಂಥದ ಡಜನ್‍ಗಟ್ಟಲೆ ಕಚೇರಿಗಳು ಕ್ಯಾಲಿಫೋರ್ನಿಯಾದಲ್ಲಿ ತೆರೆದವು.  ಆಳದಲ್ಲಿ ಆತ ಕಮ್ಯುನಿಸ್ಟ್ ನಾಸ್ತಿಕನಾಗಿದ್ದರೂ ಅಪ್ಪಟ ಆಸ್ತಿಕನಂತೆ ಗುರುತಿಸಿಕೊಂಡು ಅನುಯಾಯಿಗಳನ್ನು ಕಲೆ ಹಾಕತೊಡಗಿದ. ರಾಜಕೀಯ ನಾಯಕರ ಸಂಬಂಧ ಬೆಳೆಸಿದ. ಅನುಯಾಯಿಗಳ ಸಂಖ್ಯೆ ಬೆಳೆಯಿತು. ಹೀಗಿರುತ್ತಾ ಆತನ ಸುತ್ತ ತನಿಖೆ ನಡೆಯುತ್ತಿದೆ ಮತ್ತು ರಶ್ಯ ಆತನನ್ನು ಹಾಗೂ ಅನುಯಾಯಿಗಳನ್ನು ಸ್ವೀಕರಿಸಲು ಸಿದ್ಧವಿಲ್ಲವೆಂಬುದನ್ನು ತಿಳಿದ ಬಳಿಕ, ತನ್ನೆಲ್ಲಾ ಅನುಯಾಯಿಗಳ ಜೊತೆ ಜೋನ್ಸ್ ಟೌನ್‍ನ ತನ್ನ ಕಚೇರಿಗೆ ತೆರಳಿ, ಅವರನ್ನು ಆತ್ಮಹತ್ಯೆಗೆ ಪ್ರಚೋದಿಸಿದ. ಈ ಜಗತ್ತಿನ ಅಮಾನವೀಯ ಸ್ಥಿತಿಯನ್ನು ಪ್ರತಿಭಟಿಸಿ ‘ಕ್ರಾಂತಿಯುತವಾಗಿ ಆತ್ಮಹತ್ಯೆ ಮಾಡುತ್ತಿದ್ದೇವೆ..’ ಎಂಬ ಒಕ್ಕಣೆಯುಳ್ಳ 45 ನಿಮಿಷಗಳ ಹೇಳಿಕೆಯನ್ನು ಆತ್ಮಹತ್ಯೆಗೆ ಮೊದಲು ಚಿತ್ರೀಕರಿಸಲಾದ ವೀಡಿಯೋದಲ್ಲಿ ಹೇಳಿಕೊಂಡ. ‘ಜನರನ್ನು ಧಾರ್ಮಿಕವಾಗಿ ಒಟ್ಟುಗೂಡಿಸಿ, ಅಮೇರಿಕದಲ್ಲಿ ಕಮ್ಯೂನಿಸ್ಟ್ ಆಡಳಿತವನ್ನು (ಕ್ರಾಂತಿ) ತರಬೇಕೆಂಬುದು ಆತನ ನಿಲುವಾಗಿತ್ತೆಂದು’ ನ್ಯೂಯಾರ್ಕ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಆತನ ಪತ್ನಿ ಮರ್ಸಿ ಆ ಬಳಿಕ ಒಪ್ಪಿಕೊಂಡಿದ್ದಳು. ಇದಲ್ಲದೇ, 1984ರಲ್ಲಿ ಲುಕ್ ಜರ್ನೆಟ್ ಮತ್ತು ಜೋಸೆಫ್ ಡಿ ಮಾಂಬ್ರೆ ಎಂಬವರಿಂದ ಫ್ರಾನ್ಸ್ ನಲ್ಲಿ ಹುಟ್ಟು ಪಡೆದ ಸೋಲಾರ್ ಟೆಂಪಲ್ಸ್ ಎಂಬ ಪಂಥವೂ ತನ್ನ ಅನುಯಾಯಿಗಳನ್ನು ಆತ್ಮಹತ್ಯೆಗೆ ಪ್ರಚೋದಿಸಿದ ಕುಖ್ಯಾತಿಯನ್ನೇ ಹೊಂದಿದೆ. ಈ ಜಗತ್ತಿನ ದೌರ್ಜನ್ಯ ಮತ್ತು ಹಿಪಾಕ್ರಸಿಯಿಂದ ಬಚಾವಾಗುವುದಕ್ಕಾಗಿ ಆತ್ಮಹತ್ಯೆಯನ್ನು ಪರಿಹಾರವಾಗಿ ಆ ಪಂಥ ಮಂಡಿಸಿರುವುದರಿಂದಲೇ 1994-97ರ ಮಧ್ಯೆ ಅದರ 74 ಮಂದಿ ಅನುಯಾಯಿಗಳು ಆತ್ಮಹತ್ಯೆ ಮಾಡಿಕೊಂಡರು. ಇವರಲ್ಲಿ ಓರ್ವ ಮೇಯರ್, ಪತ್ರಕರ್ತ, ಸರಕಾರಿ ಅಧಿಕಾರಿ.. ಕೂಡ ಸೇರಿದ್ದರು..’
   ಹಾಗಂತ, ಚೌಳಿ ಮಠವನ್ನು ಈ ಪಂಥಗಳ ಜೊತೆ ಹೋಲಿಸುವುದಕ್ಕಾಗುವುದಿಲ್ಲ. ಮೂವರು ಸ್ವಾಮೀಜಿಗಳು ಆತ್ಮಹತ್ಯೆ ಮಾಡಿಕೊಂಡರೂ ಭಕ್ತಾದಿಗಳಲ್ಲಿ ಯಾರೂ ಆ ದಾರಿಯನ್ನು ಆಯ್ಕೆ ಮಾಡಿಲ್ಲ. ಆದರೂ ಈ ಸ್ವಾಮೀಜಿಗಳು ತಮ್ಮ ಕೃತ್ಯದ ಮೂಲಕ ಸಾರ್ವಜನಿಕರಲ್ಲಿ ಸಾಕಷ್ಟು ಗೊಂದಲಗಳನ್ನು ಹುಟ್ಟು ಹಾಕಿರುವರೆಂಬುದು ಸ್ಪಷ್ಟ. ಜನಸಾಮಾನ್ಯರು ಊಟ, ಬಟ್ಟೆ, ಮನೆ, ನೀರು.. ಸಹಿತ ಅನೇಕಾರು ಮೂಲಭೂತ ಸಮಸ್ಯೆಗಳಿಂದ ಬಳಲುತ್ತಿರುವಾಗ ಸರಕಾರದಿಂದ ಕೋಟಿಗಟ್ಟಲೆ ಅನುದಾನ ಪಡೆಯುವ ಮಠಗಳು ಹೀಗೆ ‘ಆತ್ಮಹತ್ಯೆ' ಮಾಡಿಕೊಂಡರೆ ಏನು ಮಾಡಬೇಕು? ಜನರ ಸಂಕಷ್ಟಗಳಿಗೆ ಕಣ್ಣು, ಕಿವಿ, ಹೃದಯವಾಗಬೇಕಾದ ಸ್ವಾಮೀಜಿಗಳೇ ಕಣ್ಣು ಮುಚ್ಚಿಕೊಂಡು ಹೊರಟು ಹೋಗುವುದಕ್ಕೆ ಏನರ್ಥವಿದೆ? ಆಧ್ಯಾತ್ಮ ಎಂಬುದು ಆತ್ಮಹತ್ಯೆಯ ಮೂಲಕ ಸಿದ್ಧಿಸುವಂಥದ್ದೇ? ಯಾವುದೇ ಸಮಸ್ಯೆ, ಸಂಕಷ್ಟವನ್ನು ಛಾತಿಯಿಂದ ಎದುರಿಸುವುದಕ್ಕೆ ಪ್ರಚೋದನೆ ಕೊಡುವುದರ ಹೆಸರೇ ಅಲ್ಲವೇ ಧರ್ಮ? ಚೌಳಿ ಮಠ ಘಟನೆಯು ಧರ್ಮದ ಈ ಕಲ್ಪನೆಯನ್ನು ಹೇಗೆ ಪ್ರತಿನಿಧಿಸುತ್ತದೆ? ಅಲ್ಲದೇ, ವಾರಕ್ಕೋ ತಿಂಗಳಿಗೊಮ್ಮೆಯೋ ಮಠಕ್ಕೆ ಭೇಟಿಕೊಟ್ಟು ನಡಕೊಳ್ಳುವ ಭಕ್ತರಂಥಲ್ಲವಲ್ಲ ಸ್ವಾಮೀಜಿಗಳು! ಅವರಿಗೆ ಸರಿ-ತಪ್ಪು, ಕರ್ಮ-ಅಕರ್ಮ, ಪಾಪ-ಪುಣ್ಯ, ವೇದ-ಉಪನಿಷತ್ತುಗಳೆಲ್ಲ ಚೆನ್ನಾಗಿ ಗೊತ್ತಿರುತ್ತದಲ್ಲವೇ? ಹೀಗಿರುವಾಗ ಅವರೇ ಆತ್ಮಹತ್ಯೆ ಮಾಡಿಕೊಂಡರೆ ಆತ್ಮಹತ್ಯೆಯು ‘ಧಾರ್ಮಿಕವಾಗಿ ಸರಿ’ ಎಂಬ ವಾದದ ಹುಟ್ಟಿಗೆ ಕಾರಣವಾಗದೇ? ಮುಂದೆ, ಕೈಲಾಸ ಸೇರುವುದಕ್ಕೆ ಆತ್ಮಹತ್ಯೆಯನ್ನು ಒಂದು ಮಾರ್ಗವಾಗಿ ಆಯ್ಕೆ ಮಾಡಿಕೊಳ್ಳುವವರು ಸೃಷ್ಟಿಯಾದರೆ ಏನು ಮಾಡುವುದು? ಇವೆಲ್ಲ ರವಾನಿಸುವ ಸಂದೇಶವಾದರೂ ಏನು?
   ಪವಿತ್ರ ಕುರ್‍ಆನ್ ಮತ್ತು ಪ್ರವಾದಿ ಮುಹಮ್ಮದ್‍ರ(ಸ) ಬದುಕು-ಬೋಧನೆಗಳು ಇಷ್ಟವಾಗುವುದೇ ಇದಕ್ಕೆ..
Monday, April 8, 2013

ಯುವಕರತ್ತ ಗುರಿ ಮಾಡಿದ್ದ ಬಂದೂಕು ಯುವತಿಯರತ್ತ ತಿರುಗಿತೇಕೆ?

   ಜಿಐಓ (ಗಲ್ರ್ಸ್ ಇಸ್ಲಾಮಿಕ್ ಆರ್ಗನೈಝೇಶನ್)ನ ಮೇಲೆ ನಿಗಾ ಇಡುವಂತೆ ಮಹಾರಾಷ್ಟ್ರದ ಎಲ್ಲಾ ಪೊಲೀಸ್  ಠಾಣೆಗಳಿಗೆ  ಮುಂಬೈಯ ಗುಪ್ತಚರ ಸಂಸ್ಥೆಗಳು ಸುತ್ತೋಲೆ ಹೊರಡಿಸಿರುವುದನ್ನು, Erroreous memo puts Mumbai cops in spot-  ಎಂಬ ಶೀರ್ಷಿಕೆಯಲ್ಲಿ ಪಿಟಿಐ ಕಳೆದವಾರ ವರದಿ ಮಾಡಿತು. Mumbai police shocker: Muslim institute is enrolling for Jihad  ಎಂಬ ಹೆಡ್‍ಲೈನ್‍ನಲ್ಲಿ NDTV ಸುದ್ದಿ ಪ್ರಕಟಿಸಿದರೆ;  Storm after cop memo leak over Girls Islamic Organisation ಎಂದು ದಿ ಟೆಲಿಗ್ರಾಫ್ ಪತ್ರಿಕೆ ಸುದ್ದಿ ಬರೆಯಿತು. ಎಪ್ರಿಲ್ ಒಂದರಂದು ಶಿವಸೇನೆಯ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಈ ಸುದ್ದಿ ಮರುದಿನ ಹೆಚ್ಚಿನೆಲ್ಲಾ ಆಂಗ್ಲ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗಿ ಪ್ರಕಟವಾಯಿತು. ಸುತ್ತೋಲೆಯಲ್ಲಿ,
   ‘ಜಮಾಅತೆ ಇಸ್ಲಾಮೀ  ಹಿಂದ್‍ನ ಅಂಗಸಂಸ್ಥೆಯಾದ ಜಿಐಓವು ಮಹಾರಾಷ್ಟ್ರದಲ್ಲಿ 40 ಹೈಸ್ಕೂಲ್ ಮತ್ತು 3 ಜೂನಿಯರ್ ಕಾಲೇಜುಗಳನ್ನು ನಡೆಸುತ್ತಿದ್ದು, ವಿದ್ಯಾರ್ಥಿನಿಯರ ಬ್ರೈನ್‍ವಾಶ್ ಮಾಡುತ್ತಿದೆ. ಅವರಿಗೆ ಜಿಹಾದ್‍ನ ತರಬೇತಿ ನೀಡುತ್ತಿದೆ. ಸಂಘಟನೆಯ ಸ್ವಾಲಿಹಾ ಬಾಜಿ ಮತ್ತು ಸುಮಯ್ಯ ಎಂಬಿಬ್ಬರು ಈ ವಿಷಯದಲ್ಲಿ ತುಂಬಾ ಮುಂದಿದ್ದಾರೆ. ಅವರ ಬಗ್ಗೆ ವಿಶೇಷ ಗಮನವಿಡಬೇಕು. ಇಸ್ಲಾಮಿನಂತೆ ಬದುಕಲು ಯುವತಿಯರನ್ನು ಪ್ರಚೋದಿಸುತ್ತಾ, ಅವರಲ್ಲಿ ಜಿಹಾದಿ ಪ್ರಜ್ಞೆಯನ್ನು ಅದು ತುಂಬುತ್ತಿದೆ..' ಎಂದೆಲ್ಲಾ ಹೇಳಲಾಗಿತ್ತು. ಆನ್‍ಲೈನ್‍ನಲ್ಲಿ ಈ ಕುರಿತಂತೆ ಧಾರಾಳ ಚರ್ಚೆಗಳು ನಡೆದುವು. ಅಲ್ಲದೇ,
   'ಜನರು ಇವತ್ತು ವಿಜ್ಞಾನದೆಡೆಗೆ ಹೆಚ್ಚೆಚ್ಚು ಆಕರ್ಷಿತರಾಗುತ್ತಿರುವಾಗ, ಈ ಸಂಘಟನೆಯು ಯುವತಿಯರನ್ನು ಬುರ್ಖಾ ಧರಿಸುವಂತೆ ಮತ್ತು ಇಸ್ಲಾಮನ್ನು ಅಧ್ಯಯನ ಮಾಡುವಂತೆ ಪ್ರೇರೇಪಿಸುತ್ತಿದೆ. ಆದ್ದರಿಂದಲೇ ನಾವು ಇವರ ಬಗ್ಗೆ ನಿಗಾ ವಹಿಸುವಂತೆ ಪೊಲೀಸರಿಗೆ ಸೂಚಿಸಿದ್ದೇವೆ..' ಎಂದು ಗುಪ್ತಚರ ಸಂಸ್ಥೆಯ ವಿಶೇಷ ದಳದ ಮುಖ್ಯಸ್ಥ ಸಂಜಯ್ ಶಿಂತ್ರೆ ಪತ್ರಕರ್ತರೊಂದಿಗೆ ಹೇಳಿಕೊಂಡದ್ದು ಚರ್ಚೆಯ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿತು. ‘ವೈಜ್ಞಾನಿಕ ಆಲೋಚನೆಗಳನ್ನು ಹೊಂದುವುದೆಂದರೆ ಬಟ್ಟೆಗಳನ್ನೆಲ್ಲಾ ಕಳಚುವುದು ಎಂದರ್ಥವೇ..’ ಎಂದು ಚರ್ಚೆಯಲ್ಲಿ ಭಾಗವಹಿಸಿದ ಒಬ್ಬರು ಪ್ರಶ್ನಿಸಿದರೆ, 'ಮೈ ಮುಚ್ಚುವ ಬಟ್ಟೆ ಧರಿಸುವುದು ವಿಜ್ಞಾನಕ್ಕೆ ವಿರುದ್ಧವೇ'..  ಎಂದು ಇನ್ನೊಬ್ಬರು ಪ್ರಶ್ನಿಸಿದರು. Leaked information is secondary, but how that Mumbai police has issued such an internal notice where an organisation is working for the good cause. Is the police is blind as they cant differentiate between good and bad...  It is very clear that the Mumbai police is acting as per the script written by the RSS and VHP -  ಗುಪ್ತಚರ ಇಲಾಖೆಯು ಹೊರಡಿಸಿದ ಸುತ್ತೋಲೆ ಹೇಗೆ ಸೋರಿಕೆಯಾಯಿತು ಎಂಬುದು ಮುಖ್ಯವಲ್ಲ, ಬದಲು ಒಳಿತಿಗಾಗಿ ಕೆಲಸ ಮಾಡುತ್ತಿರುವ ಸಂಘಟನೆಯ ವಿರುದ್ಧ ಪೊಲೀಸರು ಇಂಥದ್ದೊಂದು ಸುತ್ತೋಲೆ ಹೊರಡಿಸಿದ್ದಾದರೂ ಹೇಗೆ? ಒಳಿತು ಮತ್ತು ಕೆಡುಕಿನ ನಡುವೆ ಇರುವ ವ್ಯತ್ಯಾಸವನ್ನು ತಿಳಿಯದಷ್ಟು ಅವರು ಕುರುಡಾಗಿ ಬಿಟ್ಟರೇ? ಇದಕ್ಕೆ ಪೊಲೀಸರು ಕ್ಷಮೆ ಯಾಚಿಸುವುದು ಪರಿಹಾರವಲ್ಲ. ಅವರು ತಕ್ಷಣ ಈ ಸುತ್ತೋಲೆಯನ್ನು ಹಿಂಪಡೆದು ಜಿಐಓನ ಮೇಲೆ ನಿಗಾ ಇಡುವುದನ್ನು ನಿಲ್ಲಿಸಬೇಕು. ಈ ಬೆಳವಣಿಗೆಯನ್ನು ನೋಡುವಾಗ ಮುಂಬೈ ಪೊಲೀಸರು ಆರೆಸ್ಸೆಸ್ ಮತ್ತು ವಿಹಿಂಪದ ಕಾರ್ಯಸೂಚಿಯಂತೆ ಕೆಲಸ ನಿರ್ವಹಿಸುತ್ತಿದ್ದಾರೆಂಬುದು ಸ್ಪಷ್ಟವಾಗುತ್ತಿದೆ..’ ಅಂತ ಚೆನ್ನೈಯ ಯೂನುಸ್ ಎಂಬವರು ಬರೆದರೆ; ಅಮೇರಿಕದಲ್ಲಿರುವ ಸುರೇಶ್ ಎಂಬವರು,
   ‘ತನಿಖಾ ಸಂಸ್ಥೆಗಳು ವ್ಯಕ್ತಿ ಅಥವಾ ಸಂಘಟನೆಗಳ ವಿರುದ್ಧ ಅನುಮಾನಗೊಂಡಾಗ ಅದರ ವಿರುದ್ಧ ಮುಗಿ ಬೀಳುವುದು ಸರಿಯಲ್ಲ. ಅವರು ತನಿಖೆ ನಡೆಸಲಿ. ದೇಶದ ಸದ್ಯದ ಪರಿಸ್ಥಿತಿಯಲ್ಲಿ ನಿಗಾ ವಹಿಸುವುದು, ಅನುಮಾನಗೊಳ್ಳುವುದೆಲ್ಲ ಅಸಹಜ ಅಲ್ಲ. ದೇಶದ ತನಿಖಾ ಸಂಸ್ಥೆಗಳನ್ನು ಎಲ್ಲ ಬಾಹ್ಯ ಒತ್ತಡಗಳಿಂದ ಮುಕ್ತಗೊಳಿಸುವುದು ಮತ್ತು ತೀರಾ ಸಣ್ಣ ವಿಷಯದಲ್ಲೂ ತನಿಖೆಗೆ ಪೂರ್ಣ ಸ್ವಾತಂತ್ರ್ಯ ಕೊಡುವುದು ನಮ್ಮ ಅಗತ್ಯವಾಗಿದೆ..' ಎಂದು ಬರೆದರು. ಹೀಗೆ ಚರ್ಚೆಗಳು ಸಾಗುತ್ತಿರುವಂತೆಯೇ ಪ್ರಕರಣದ ಎರಡು ದಿನಗಳ ಬಳಿಕ ಮುಂಬೈ ಪೊಲೀಸರು ಕ್ಷಮೆ ಯಾಚಿಸಿದರು. ಜಮಾಅತ್‍ನ ಮಹಾರಾಷ್ಟ್ರ ಘಟಕದ ಅಧ್ಯಕ್ಷ  ಮುಹಮ್ಮದ್ ಅಸ್ಲಮ್ ಖಾನ್ ನೇತೃತ್ವದ ನಿಯೋಗಕ್ಕೆ ತನಿಖೆ ನಡೆಸುವ ಭರವಸೆ ನೀಡಿದರು. ಆದರೆ ಕ್ಷಮೆ, ತನಿಖಾ ಭರವಸೆಗಳೇನೇ ಇರಲಿ, ಸುತ್ತೋಲೆಯು ಸಾರ್ವಜನಿಕವಾಗಿ ಕೆಲವು ಅನುಮಾನಗಳನ್ನಂತೂ ಹುಟ್ಟು ಹಾಕಿದೆ. ಭಯೋತ್ಪಾದನೆಯ ಹೆಸರಲ್ಲಿ ಅಮಾಯಕ ಮುಸ್ಲಿಮ್ ಯುವಕರ ಬಂಧನದ ಕುರಿತಂತೆ ತನಿಖೆ ನಡೆಸಲು ತ್ವರಿತ ನ್ಯಾಯಾಲಯಗಳನ್ನು ರಚಿಸಲಾಗುವುದೆಂದು ಗೃಹ ಸಚಿವ ಶಿಂಧೆಯವರು ಘೋಷಿಸಿದ ಬೆನ್ನಲ್ಲೇ ಮುಸ್ಲಿಮ್ ಯುವತಿಯರ ಮಧ್ಯೆಯೂ 'ಜಿಹಾದಿ' ತರಬೇತಿಗಳು ನಡೆಯುತ್ತಿವೆಯೆಂಬ ಸುದ್ದಿಯನ್ನು ಹರಿಬಿಡುವುದಕ್ಕೆ ಕಾರಣವೇನು? ಇದು ಕಾಕತಾಳೀಯವೇ (Co- inside) ಅಥವಾ ಇದರ ಹಿಂದೆ ನಿಗೂಢ ಉದ್ದೇಶಗಳಿವೆಯೇ? ಜಿಐಓನ ವಿರುದ್ಧ ಒಂದೇ ಒಂದು ಕೇಸು ದಾಖಲಾಗಿಲ್ಲ ಎಂದು ಮುಂಬೈ ಪೊಲೀಸ್ ಮುಖ್ಯಸ್ಥರೇ ಒಪ್ಪಿಕೊಂಡಿದ್ದಾರೆ. ಅಲ್ಲದೇ ಇಸ್ಲಾಮಿನಂತೆ ಬದುಕಲು ಮುಸ್ಲಿಮ್ ಯುವತಿಯರನ್ನು ಜಿಐಓ ಪ್ರೇರೇಪಿಸುತ್ತಿದೆ ಎಂದೂ ಹೇಳುತ್ತಿದ್ದಾರೆ. ಇದೇನು ದೇಶ ವಿರೋಧಿ ಕೃತ್ಯವೇ? ಈ ದೇಶದ ಸಂವಿಧಾನವೇ ಒದಗಿಸಿರುವ ಸ್ವಾತಂತ್ರ್ಯವನ್ನು ಭಯೋತ್ಪಾದನಾ ಚಟುವಟಿಕೆಯಂತೆ, ನಿಗಾ ಇಡುವಷ್ಟು ಉಗ್ರ ಕೃತ್ಯದಂತೆ ಯಾಕೆ ನೋಡಬೇಕು? ಜಿಐಓನ ಚಟುವಟಿಕೆಗಳೇನೂ ಭೂಗತವಾಗಿ ನಡೆಯುತ್ತಿಲ್ಲವಲ್ಲ. ಅದರ ಸಂವಿಧಾನ ಎಲ್ಲರಿಗೂ ಸಿಗುವಷ್ಟು ಮುಕ್ತವಾಗಿದೆ. ಅದರ ಕಚೇರಿಗಳು ಕೂಡ ವಿಳಾಸ ಸಮೇತ ಸಾರ್ವಜನಿಕರಿಗೆ ಲಭ್ಯವಿವೆ. ಯಾರಿಗೆ ಬೇಕಾದರೂ ಅದರ ಚಟುವಟಿಕೆಗಳನ್ನು ವೀಕ್ಷಿಸುವ, ಪಾಲುಗೊಳ್ಳುವ ಅವಕಾಶಗಳೂ ಇವೆ. ಹೀಗಿರುತ್ತಾ, ಜಿಐಓವನ್ನು ಶಂಕಿತಗೊಳಿಸುವ ಸುತ್ತೋಲೆಯೊಂದು ಹೊರಡುತ್ತದೆಂದರೆ ಅದನ್ನು ಕಡೆಗಣಿಸುವುದಾದರೂ ಹೇಗೆ? ಇಷ್ಟಕ್ಕೂ ಈ ದೇಶದಲ್ಲಿ ಜಿಐಓ ಎಂಬ ಸಂಘಟನೆ ಇರುವುದು ಮಹಾರಾಷ್ಟ್ರದಲ್ಲಿ ಮಾತ್ರ ಅಲ್ಲ, ದೇಶದಾದ್ಯಂತ ಇದೆ. ಅಲ್ಲದೆ, ಅದರ ಸಂವಿಧಾನ, ಕಾರ್ಯವಿಧಾನ, ಗುರಿ, ಉದ್ದೇಶಗಳೆಲ್ಲವೂ ದೇಶದಾದ್ಯಂತ ಒಂದೇ. www.giomsz.blogspot.com  ಎಂಬ ಲಿಂಕ್‍ಗೆ ಕ್ಲಿಕ್ ಮಾಡಿದರೆ ಮುಂಬೈಯ ಜಿಐಓ ಘಟಕವು ಈ ವರೆಗೆ ಏನೆಲ್ಲ ಚಟುವಟಿಕೆಗಳನ್ನು ನಡೆಸಿದೆ, ಅದರ ವಿಶೇಷತೆಯೇನು, ಅದರ ಕಾರ್ಯವಿಧಾನ ದೇಶಕ್ಕೆ ಮಾರಕವೋ ಪೂರಕವೋ.. ಎಂಬಿತ್ಯಾದಿಗಳನ್ನೆಲ್ಲ ಗುಪ್ತಚರ ಇಲಾಖೆಯ ಸಹಿತ ಯಾರಿಗೆ ಬೇಕಾದರೂ ಮನವರಿಕೆ ಮಾಡಿಕೊಳ್ಳಬಹುದು. ಇಷ್ಟಿದ್ದೂ ನೈತಿಕತೆ ಅಳವಡಿಸಿಕೊಳ್ಳುವಂತೆ, ಧರ್ಮದ ಪ್ರಕಾರ ಬದುಕುವಂತೆ ಪ್ರೇರೇಪಿಸುವುದನ್ನು ಸುತ್ತೋಲೆಯಲ್ಲಿ ಅಪರಾಧವಾಗಿ ಪರಿಗಣಿಸಿರುವುದು ಮತ್ತು ಪೊಲೀಸ್ ಇಲಾಖೆಯ ಒಳಗೇ ಸುತ್ತಬೇಕಾದ ಈ ಸುತ್ತೋಲೆಯನ್ನು ಶಿವಸೇನೆಯ ಸಾಮ್ನಾ ಪತ್ರಿಕೆಗೆ ಮೊದಲು ಸೋರಿಕೆ ಮಾಡಿರುವುದು ಏನನ್ನು ಸೂಚಿಸುತ್ತದೆ? ಜಿಐಓ ಮತ್ತು ಆ ಮೂಲಕ ಜಮಾಅತ್‍ನ ಮೇಲೆ ಸಾರ್ವಜನಿಕರಲ್ಲಿ ಒಂದು ಬಗೆಯ ಅನುಮಾನವನ್ನು ಮೂಡಿಸುವ ಉದ್ದೇಶ ಇದರ ಹಿಂದೆ ಇಲ್ಲ ಅನ್ನುತ್ತೀರಾ? ಬಂಗ್ಲಾದೇಶದ ಜಮಾಅತೆ ಇಸ್ಲಾಮಿಯ ಕುರಿತಂತೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಸುದ್ದಿಗಳ ಹಿನ್ನೆಲೆಯಲ್ಲಿ ಈ ಸುತ್ತೋಲೆಯನ್ನು ತಾಳೆ ಮಾಡಿ ನೋಡಿಕೊಳ್ಳಿ. ಪೊಲೀಸರ ಉದ್ದೇಶ ಶುದ್ಧಿಯ ಬಗ್ಗೆ ಅನುಮಾನ ಬರುವುದಿಲ್ಲವೇ? ಬಂದೂಕು ಹಿಡಿದ ಬುರ್ಖಾಧಾರಿ ಮಹಿಳೆಯರ ಪೊಟೋದ ಜೊತೆ ಈ ಸುದ್ದಿಯನ್ನು ಪ್ರಕಟಿಸುವುದಕ್ಕೆ ಸಾಮ್ನಾ ಪತ್ರಿಕೆಗೆ ಅವಕಾಶ ಮಾಡಿಕೊಟ್ಟದ್ದಾದರೂ ಯಾರು? ಸುತ್ತೋಲೆಯು ಯಾಕೆ ಮುಸ್ಲಿಮ್ ವಿರೋಧಿ ಧೋರಣೆಯುಳ್ಳ ಸಾಮ್ನಾಕ್ಕೇ ಪ್ರಥಮವಾಗಿ ಸೋರಿಕೆಯಾಗಬೇಕು? ಜಿಐಓವು ಯುವತಿಯರಿಗೆ ಬಂದೂಕಿಗೆ ತರಬೇತಿ ಕೊಡುತ್ತಿದೆ ಎಂಬ ಸುಳ್ಳು ಸಂದೇಶವನ್ನು ಸಾರ್ವಜನಿಕವಾಗಿ ಬಿತ್ತುವುದಕ್ಕೆ ಗುಪ್ತಚರ ಇಲಾಖೆಯ ಅಧಿಕಾರಿಗಳು ಸಾಮ್ನಾದ ಮುಖಾಂತರ ನಡೆಸಿರುವ ಸಂಚು ಇದಾಗಿರಬಾರದೇಕೆ? ಅಂದಹಾಗೆ,
  1. ಒಳಿತಿನ ಅಭಿವೃದ್ಧಿ ಮತ್ತು ಕೆಡುಕಿನ ನಿರ್ಮೂಲನಕ್ಕಾಗಿ ಯುವತಿಯರನ್ನು ಪ್ರೇರೇಪಿಸುವುದು.
  2. ಸಮಾಜದಲ್ಲಿರುವ ಕೆಡುಕುಗಳ ನಿರ್ಮೂಲನಕ್ಕಾಗಿ ಪ್ರಯತ್ನಿಸುವುದು.
  3. ಇಸ್ಲಾಮೀ  ಜೀವನ ಕ್ರಮದ ಆಧಾರದಲ್ಲಿ ಕುಟುಂಬ ನಿರ್ಮಾಣಕ್ಕಾಗಿ ಯುವತಿಯರನ್ನು ತಯಾರುಗೊಳಿಸುವುದು.
  4. ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ಮೌಲ್ಯಗಳನ್ನು ಮತ್ತು ಶೈಕ್ಷಣಿಕ ಕೇಂದ್ರಗಳಲ್ಲಿ ಉತ್ತಮ ಚಾರಿತ್ರ್ಯ ಹಾಗೂ ಉನ್ನತ ಶಿಷ್ಟಾಚಾರಗಳನ್ನು ಬೆಳೆಸುವುದು.
  5. ನೈತಿಕ ಮೇರೆಗಳನ್ನು ಪಾಲಿಸುತ್ತಾ, ಕುರ್‍ಆನ್ ಮತ್ತು ಪ್ರವಾದಿ ಚರ್ಯೆಯ ಆಧಾರದಲ್ಲಿ ಕೋಮು ದ್ವೇಷ, ಅಶಾಂತಿಗೆ ಕಾರಣವಾಗುವ ವಿಧಾನಗಳಿಂದ ದೂರವಿದ್ದುಕೊಂಡು ರಚನಾತ್ಮಕ ರೂಪದಲ್ಲಿ ಇವುಗಳ ಜಾರಿಗಾಗಿ ಪ್ರಯತ್ನಿಸುವುದು..
   ಮುಂತಾದ ಅಂಶಗಳಿರುವ ಜಿಐಓನ ಸಂವಿಧಾನದಲ್ಲಿ ದೇಶದ ಸಮಗ್ರತೆಗೆ, ಶಾಂತಿಯುತ ವ್ಯವಸ್ಥೆಗೆ ಭಂಗ ತರುವಂಥದ್ದು ಏನಿದೆ? ಇಸ್ಲಾಮಿನಂತೆ ಜೀವಿಸಿ ಎಂದು ಕರೆಕೊಟ್ಟು, ಅದಕ್ಕಾಗಿ ಪ್ರಯತ್ನಿಸುವುದು ಶಂಕಿತ ಚಟುವಟಿಕೆಯೇ? ಮುಂಬೈಯ ಜಿಐಓವಂತೂ, ‘ಪರೀಕ್ಷೆಯನ್ನು ಎದುರಿಸುವುದು ಹೇಗೆ; ಪ್ರಬಂಧ, ಸಂವಾದ, ಪೈಂಟಿಂಗ್ಸ್ ಸ್ಪರ್ಧೆಗಳು, ಇಸ್ಲಾಮೀ  ರಜಾದಿನ ಶಿಬಿರ (VIC), ಕ್ಯಾರಿಯರ್ ಗೈಡೆನ್ಸ್, ಸೆಮಿನಾರ್, ಅಧ್ಯಯನ ತರಗತಿಗಳು, ಗೆಟ್ ಟುಗೆದರ್.. ಮುಂತಾದ ವಿವಿಧ                ಕಾರ್ಯಕ್ರಮಗಳನ್ನು ನಡೆಸಿರುವುದಾಗಿ ಬ್ಲಾಗ್‍ನಲ್ಲಿಯೇ ಹೇಳಿಕೊಂಡಿದೆ. ಇದರಲ್ಲಿ ಭಯೋತ್ಪಾದನೆಗೆ ಪೂರಕವಾಗಿರುವುದು ಯಾವುದಿದೆ? ಅಲ್ಲದೇ, ದೇಶದಾದ್ಯಂತ ಜಿಐಓ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದೆ. ತಮಿಳುನಾಡಿನ ಕುಡಂಕುಲಮ್‍ನಲ್ಲಿ ನಿರ್ಮಾಣವಾಗುತ್ತಿರುವ ಅಣುವಿದ್ಯುತ್ ಸ್ಥಾವರದ ವಿರುದ್ಧ ಮರಳಿನಲ್ಲಿ ಸ್ವಯಂ ಅರ್ಧ ಹೂತುಕೊಂಡು ಪ್ರತಿಭಟಿಸಿ ದೇಶದ ಗಮನ ಸೆಳೆದಿದ್ದರೆ ಅದು ಜಿಐಓ ಮಾತ್ರ. ದೆಹಲಿ ಅತ್ಯಾಚಾರದ ವಿರುದ್ಧ ಜಿಐಓ ರಾಲಿ, ಪ್ರತಿಭಟನೆ, ಸೆಮಿನಾರ್‍ಗಳನ್ನು ನಡೆಸಿದೆ. ಕರ್ನಾಟಕದ ಜಿಐಓ ಘಟಕವಂತೂ ಇತ್ತೀಚೆಗಷ್ಟೇ, 'ಲಜ್ಜೆ- ನನ್ನ ಜೀವನದ ಪ್ರತಿಬಿಂಬ '- ಎಂಬ ವಿಷಯದಲ್ಲಿ ರಾಜ್ಯದಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಯುವತಿಯರಲ್ಲಿ ನೈತಿಕ ಮೇರೆಗಳನ್ನು ಪಾಲಿಸುವಂತೆ ಕರೆ ಕೊಡುವ ಕ್ಯಾಂಪಸ್ ಉಪನ್ಯಾಸಗಳನ್ನು ನಡೆಸುತ್ತಿದೆ. ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರನ್ನು ಅವರ ಧರ್ಮ ನೋಡದೇ ಬಹುಮಾನ ಕೊಟ್ಟು ಪ್ರೋತ್ಸಾಹಿಸುತ್ತಿದೆ. ಇವೆಲ್ಲ ಶಂಕಿತ ಚಟುವಟಿಕೆಗಳು ಎಂದಾದರೆ ಅಶಂಕಿತ ಚಟುವಟಿಕೆಗಳಾದರೂ ಯಾವುದು? ನಿಜವಾಗಿ, ಇವತ್ತು ದೇಶದಲ್ಲಿ ಅತ್ಯಂತ ಹೆಚ್ಚು ಚರ್ಚೆಯಲ್ಲಿರುವುದೇ ಯುವತಿಯರು. ಅತ್ಯಾಚಾರದ ಸುದ್ದಿಗಳು ಸುದ್ದಿ-ಮಾಧ್ಯಮಗಳನ್ನಿಡೀ ತುಂಬಿಕೊಂಡು ಭೀತಿಯ ವಾತಾವರಣ ನಿರ್ಮಾಣವಾಗಿರುವ ಸನ್ನಿವೇಶ ಇವತ್ತಿನದು. ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸುವ ಬಗ್ಗೆ ಕಾನೂನೇ ನಿರ್ಮಾಣವಾಗಿದ್ದರೂ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಇದರ ಜೊತೆಗೇ ಅತ್ಯಾಚಾರಕ್ಕೆ ಪ್ರಚೋದಕವಾಗುವ ಹೆಣ್ಣಿನ ವರ್ತನೆಗಳೂ ಸಾರ್ವಜನಿಕವಾಗಿ ಚರ್ಚೆಯಲ್ಲಿವೆ. ನೈತಿಕ-ಅನೈತಿಕಗಳು ವಿವಿಧ ಸೆಮಿನಾರ್‍ಗಳ, ಪತ್ರಿಕಾ ಬರಹಗಳ ವಸ್ತುವಾಗುತ್ತಿವೆ. ಇಂಥ ಹೊತ್ತಲ್ಲಿ, ಅತ್ಯಾಚಾರಿಗಳ ಬದಲು ನೈತಿಕ ಮೇರೆಗಳ ಬಗ್ಗೆ ಜಾಗೃತಿ ಮೂಡಿಸುವ ಯುವತಿಯರು ಶಂಕಿತಗೊಳ್ಳುವುದಕ್ಕೆ ಏನೆನ್ನಬೇಕು? ಅಂಥ ಸುತ್ತೋಲೆಯನ್ನು ತಯಾರುಗೊಳಿಸಿ ಸೋರಿಕೆ ಮಾಡಿದವರ ಉದ್ದೇಶ ಏನಿರಬಹುದು? ಈ ಸೋರಿಕೆ ಆಕಸ್ಮಿಕವೋ ಉದ್ದೇಶಪೂರ್ವಕವೋ?
   ಮುಸ್ಲಿಮ್ ಯುವಕರತ್ತ ಗುರಿ ಮಾಡಿದ್ದ ವ್ಯವಸ್ಥೆಯ ಬಂದೂಕು ಇದೀಗ ಯುವತಿಯರತ್ತ ತಿರುಗಿರುವುದಕ್ಕೆ ಖಂಡಿತ ಶಂಕಿತ ಉದ್ದೇಶವೊಂದು ಇರಲೇಬೇಕು.

Tuesday, April 2, 2013

ಕುದಿಯುವ ಅಪ್ಪನಿಂದ ತಣ್ಣನೆಯ ಮಗಳು ಹೇಗೆ ಸೃಷ್ಟಿಯಾದಾಳು ಹೇಳಿ?

ತೀರ್ಥಹಳ್ಳಿಯ ಘಟನೆ
   ಮೇಜಿನ ಮೇಲೆ ಚಿಕ್ಕದೊಂದು ಫೈಲು. ಅದರ ಪಕ್ಕ ಆ ಅಪ್ಪ ಕೂತಿದ್ದಾರೆ. ಬ್ಯುಝಿ ಇರ್ಬೇಕು, ಫೈಲನ್ನು ಭಾರೀ ಗಂಭೀರವಾಗಿ ಪರಿಶೀಲಿಸುತ್ತಿದ್ದಾರೆ. ಏನೋ ಬರೆಯುವುದು, ತುಸು ಹೊತ್ತು ನಿಂತು, ಆಲೋಚಿಸಿ ಪುನಃ ಬರೆಯೋದು.. ಹೀಗೆ ನಡೆಯುತ್ತಿರುತ್ತದೆ. 8 ವರ್ಷದ ಆ ಮಗಳಿಗೆ ಅಪ್ಪ ಅಂದರೆ ಇಷ್ಟ. ಅಪ್ಪನಿಗೂ ಮಗಳೆಂದರೆ ಇಷ್ಟವೇ. ಅಪ್ಪ ಬರೆಯುವಾಗ ಆಕೆ
ಪೆನ್ನು ಕೇಳುವಳು. ಲೈಟು ಆಫ್ ಮಾಡುವಳು. ಅಪ್ಪ ಸಿಟ್ಟಾದರೆ ಸುಮ್ಮನೆ ನಗುವಳು. ತನ್ನ ಬ್ಯಾಗ್‍ನಿಂದ ಪುಸ್ತಕ ತೆಗೆದು ಫೈಲಿನ ಮೇಲಿಟ್ಟು ತಂಟೆ ಕೊಡುವಳು. ಅಪ್ಪನ ಮಡಿಲಲ್ಲಿ ಬಂದು ಕೂರುವಳು. ‘ಅಸಾಧ್ಯ ತುಂಟಿ ನನ್ನ ಪುಟ್ಟಿ’ ಎಂದು ಅಪ್ಪ ಮುದ್ದು ಮಾಡಿ ಪಕ್ಕಕ್ಕೆ ಕೂರಿಸುವರು. ಹೀಗಿರುತ್ತಾ 3ನೇ ಕ್ಲಾಸಿನ ವಾರ್ಷಿಕ ಪರೀಕ್ಷೆಯ ಸಮಯ ಹತ್ತಿರ ಬಂತು. ‘ಚೆನ್ನಾಗಿ ಕಲಿತು ಹೆಚ್ಚು ಅಂಕ ಪಡೆದು ಪಾಸಾದರೆ ಗಿಫ್ಟ್ ಕೊಡುತ್ತೇನೆ’ ಮಗಳೇ'.. ಎಂದು ಅಪ್ಪ ಶಾಲೆಯ ಆರಂಭದಲ್ಲಿ ಹೇಳಿದ್ದು ಆಕೆಗಿನ್ನೂ ನೆನಪಿತ್ತು. ಹಾಗಂತ ಆಕೆಯೇನೂ ದಡ್ಡಿಯಲ್ಲ. ಮೊದಲ ನಾಲ್ಕೈದು ರಾಂಕುಗಳಲ್ಲಿ ಯಾವಾಗಲೂ ಒಂದು ಆಕೆಗೇ ಮೀಸಲಿರುತ್ತಿತ್ತು. ಆದರೆ ಅಂತಿಮ ಪರೀಕ್ಷೆಗೆ ತಯಾರಿ ನಡೆಸುವ ಹೊತ್ತಿನಲ್ಲೇ ಆರೋಗ್ಯ ಕೈಕೊಟ್ಟಿತು. ಹುಡುಗಿ ತೀವ್ರ ಅಸ್ವಸ್ಥಳಾದಳು. ಅಪ್ಪ ಅಧೀರನಾಗಿಬಿಟ್ಟ. ಮಗಳನ್ನು ಉಳಿಸಿಕೊಳ್ಳಬೇಕಾದರೆ ದೊಡ್ಡದೊಂದು ತ್ಯಾಗಕ್ಕೆ ಆತ ಸಿದ್ಧನಾಗಬೇಕಿತ್ತು. ಅಪ್ಪ ಸಿದ್ಧನಾದ. ಮಗಳು ಚೇತರಿಸಿಕೊಂಡಳು. ತಂಟೆ, ತಕರಾರು, ಮುದ್ದು, ಲವಲವಿಕೆ.. ಎಲ್ಲವನ್ನೂ ಕಳಕೊಂಡು ಆಸ್ಪತ್ರೆಯ ಮಂಚದಲ್ಲಿ ಮುದುಡಿ ಮಲಗಿದ್ದ ಮಗಳು ಮತ್ತೆ ಅವೆಲ್ಲವನ್ನೂ ಪಡಕೊಂಡಳು. ಪರೀಕ್ಷೆ ಬರೆದಳು. ಒಂದು ದಿನ ಸಂಜೆ ಅಪ್ಪನನ್ನೇ ಕಾಯುತ್ತಾ ಗೇಟಿನಲ್ಲಿ ನಿಂತಿದ್ದ ಅವಳು ಓಡೋಡಿ ಅಪ್ಪನ ಕೈ ಹಿಡಿದಳು. ಗಿಫ್ಟ್ ಕೊಡಿ ಅಂದಳು. ಅಪ್ಪ ಆಕೆಯನ್ನು ಎತ್ತಿ ಮುದ್ದಿಸಿ ಬೆನ್ನು ತಟ್ಟಿದರು. ಡ್ರೆಸ್ಸು ಬದಲಿಸಿ, ನೀರು ಕುಡಿಯುತ್ತಿದ್ದ ಅಪ್ಪನ ಮಡಿಲಲ್ಲಿ ಕೂತ ಮಗಳು ಮತ್ತೆ ಪ್ರಶ್ನಿಸಿದಳು,
  ಅಪ್ಪ, ಏನು ಗಿಫ್ಟ್ ಕೊಡುತ್ತೀರಿ?
ಅಪ್ಪ ಮಗಳನ್ನೇ ನೋಡಿದರು. ಆಸ್ಪತ್ರೆಯ ಮಂಚದಲ್ಲಿ ಸಾವು-ಬದುಕಿನ ಹೋರಾಟದಲ್ಲಿ ಅಸಾಧ್ಯ ಸಂಕಟ ಅನುಭವಿಸುತ್ತಿದ್ದ ಮಗಳನ್ನು ನೋಡಲಾರದೇ ಕಣ್ಣೀರಿಳಿಸಿದ್ದು, ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದದ್ದು, ಸಿಕ್ಕ-ಸಿಕ್ಕ ವೈದ್ಯರನ್ನು ಸಂಪರ್ಕಿಸಿದ್ದು, ಪ್ರಾರ್ಥಿಸಿದ್ದು.. ಎಲ್ಲವೂ ನೆನಪಿಗೆ ಬಂತು. ಅವರು ಮಗಳನ್ನು ಸಂತೈಸುತ್ತಾ ಹೇಳಿದರು,
  ನಿನಗೆ ಈಗಾಗಲೇ ದೊಡ್ಡದೊಂದು ಗಿಫ್ಟ್ ಕೊಟ್ಟಿದ್ದೇನೆ ಮಗೂ.
  ಏನಪ್ಪ ಅದು?
  ಕಿಡ್ನಿ
  ಕಿಡ್ನಿಯಾ? ಎಲ್ಲಿದೆ ಅದು?
  ನಿನ್ನ ಹೊಟ್ಟೆಯೊಳಗಿದೆ ಪುಟ್ಟಿ
  ಹೋಗಪ್ಪ ನೀನು. ಹೊಟ್ಟೆಯೊಳಗಿಟ್ಟು ಏನು ಪ್ರಯೋಜನ? ನೀನೇ ಅದನ್ನು ತಗೊ. ನನಗೆ ಬೇರೆಯದೇ ಗಿಫ್ಟ್ ಕೊಡಪ್ಪಾ..
  ಅವರು ಮೃದುವಾಗಿ ನಕ್ಕು ಮಗಳನ್ನು ಎತ್ತಿಕೊಂಡರು. ಮುತ್ತು ಕೊಟ್ಟರು. ಕಣ್ಣು ಮಂಜಾಗುತ್ತಿತ್ತು.
ಸೋನಂ
   ಅಪ್ಪ-ಮಕ್ಕಳ ನಡುವಿನ ಸಂಬಂಧ, ಮಕ್ಕಳ ಬೆಳವಣಿಗೆಯಲ್ಲಿ ಯಾರ ಪಾತ್ರ ಮೇಲು- ಅಪ್ಪನದ್ದೋ  ಅಮ್ಮನದ್ದೋ ಎಂಬೆಲ್ಲಾ ಚರ್ಚೆಗಳು ಈ ಸಮಾಜದಲ್ಲಿ ಧಾರಾಳ ನಡೆದಿವೆ. ಹೆಚ್ಚಿನ ಚರ್ಚೆಗಳ ಕೇಂದ್ರ ಬಿಂದು ಅಮ್ಮನೇ. ಅಮ್ಮನ ಪಾತ್ರವನ್ನೇ ಮುಖ್ಯ ವಾಗಿಸಿ, ‘ಅಮ್ಮ ಹೇಗಿರುತ್ತಾಳೋ ಹಾಗೆಯೇ ಮಕ್ಕಳು' ಎಂಬಲ್ಲಿಗೆ ಹೆಚ್ಚಿನ ಚರ್ಚೆಗಳು ಮುಕ್ತಾಯಗೊಳ್ಳುತ್ತವೆ. ಇದು ತಪ್ಪು ಎಂದಲ್ಲ. ಆದರೆ, ಕಿಡ್ನಿ ಕೊಟ್ಟೂ ಅದರ ಮಹತ್ವವನ್ನು ಮನದಟ್ಟಾಗಿಸಲು ಚಡಪಡಿಸುವ, ಒತ್ತಿ ಬರುವ ಕಣ್ಣೀರನ್ನು ಮುಖ ತೊಳೆದೊ, ನೆಪ ಹೇಳಿಯೋ ಅಡಗಿಸುವ, ಮಕ್ಕಳಿಗೆ ಪತ್ನಿ ಏಟು ಕೊಡುತ್ತಿದ್ದರೆ ಒಳಗೊಳಗೇ ಕರುಬುವ ಅಪ್ಪ.. ಚರ್ಚೆಯ ವ್ಯಾಪ್ತಿಗೆ ಬರುವುದೇ ಕಡಿಮೆ. ಅಮ್ಮನಿಗೆ ಕಣ್ಣೀರಿಳಿಸಲು ಬರುತ್ತದೆ; ತನ್ನ ಭಾವನೆಗಳನ್ನು ಎಲ್ಲರೆದುರು ವ್ಯಕ್ತಪಡಿಸುವುದಕ್ಕೂ ಆಗುತ್ತದೆ. ಆದರೆ, ಅಪ್ಪ ಈ ವಿಷಯಗಳಲ್ಲಿ ತೀರಾ ಕಂಜೂಸು. ಕಣ್ಣೀರಿಳಿಸಲು ಬರುತ್ತದಾದರೂ ಎಲ್ಲರೆದುರು ಕಣ್ಣೀರಿಳಿಸುವುದಕ್ಕೆ, ಮಕ್ಕಳ ಮೇಲಿನ ಪ್ರೀತಿಯನ್ನು ಬಹಿರಂಗವಾಗಿ ಅಷ್ಟೇ ತೀವ್ರತನದಿಂದ ವ್ಯಕ್ತಪಡಿಸುವುದಕ್ಕೆ ಆತನಿಗೆ ಬರುವುದಿಲ್ಲ. ಸ್ನಾನ ಗೃಹದಲ್ಲಿ, ಕತ್ತಲ ಕೋಣೆಯಲ್ಲಿ ಒಂಟಿಯಾಗಿ ಕಣ್ಣೀರಿಳಿಸಿ, ಹೊರಗೆ ಆತ ನಗು ನಗುತ್ತಾ ಬದುಕುತ್ತಾನೆ. ಈ ದೌರ್ಬಲ್ಯವೇ ಆತನನ್ನು ‘ಅಮುಖ್ಯ' ವ್ಯಕ್ತಿಯಾಗಿ ಪರಿಗಣಿಸುವುದಕ್ಕೆ ಮುಖ್ಯ ಕಾರಣವಾಗಿದೆ. ಇಷ್ಟಕ್ಕೂ, ಟಿ.ವಿ. ಜಾಹೀರಾತಿನಲ್ಲಿ ಬರುವ ಸೂಪರ್ ವೇಗದಲ್ಲಿ ಓಡುವ ಬೈಕನ್ನು ತೋರಿಸಿ, ‘ನೀನು ಹಾಗೆ ಓಡಿಸಬಲ್ಲೆಯಾ..’ ಎಂದು ಮಕ್ಕಳು ಕೇಳುವುದು ಅಪ್ಪನಲ್ಲೇ. ಸೂಪರ್‍ಮ್ಯಾನ್, ಸ್ಪೈಡರ್‍ಮ್ಯಾನ್‍ಗಳನ್ನೆಲ್ಲಾ ಯಾವ ಮಕ್ಕಳೇ ಆದರೂ ತಾಯಿಗೆ ಹೋಲಿಸಿ ನೋಡುತ್ತಾರಾ? ಮುಖ್ಯವಾಗಿ, ಹೆಣ್ಣು ಮಕ್ಕಳ ಪಾಲಿಗೆ ಅಪ್ಪ ಯಾವಾಗಲೂ ಹೀರೋನೇ. ಶಾಲೆಗೆ ಹೋಗುವ ಪುಟ್ಟ ಮಕ್ಕಳು ಪರಸ್ಪರ ತಂದೆಯಂದಿರನ್ನು ಹೋಲಿಸಿಕೊಂಡು ಜಗಳ ಮಾಡುತ್ತಾರೆ. ನನ್ನ ಅಪ್ಪ ಅಷ್ಟು ಸ್ಪೀಡ್ ಬೈಕ್ ಓಡಿಸ್ತಾರೆ, ನನ್ನ ಅಪ್ಪನಲ್ಲಿ ಅಂಥ ಕಾರಿದೆ, ನನ್ನ ಅಪ್ಪ ಅಷ್ಟು ಎತ್ತರ ಇದ್ದಾರೆ, ಅವರು ಹಾಗೆ, ಅವರು ಹೀಗೆ.. ಎಂದೆಲ್ಲಾ ಹೆಮ್ಮೆ ಪಟ್ಟುಕೊಳ್ಳುತ್ತಾರೆ. ಇಂಥ ಸಂದರ್ಭಗಳಲ್ಲೆಲ್ಲಾ ತಾಯಿಯ ಪ್ರಸ್ತಾಪವಾಗುವುದು ಕಡಿಮೆ. ಹಾಗಂತ ತಾಯಿ ಅಮುಖ್ಯ ಎಂದಲ್ಲ. ತಾಯಿ ಯಾವಾಗಲೂ ತಾಯಿಯೇ. ಅಪ್ಪ ಆಕೆಯನ್ನು ಸರಿಗಟ್ಟಲಾರ. ಆದರೂ, ಮಕ್ಕಳ ಪಾಲಿಗೆ ಹೀರೋ ಪಾತ್ರವೊಂದರ ಅಗತ್ಯವಿರುತ್ತದೆ. ಯಾವಾಗಲೂ ಮಕ್ಕಳು ತಾಯಿಯನ್ನು ಅತಿಯಾಗಿ ಅವಲಂಬಿಸುವುದಾದರೂ ತಂದೆಯ ವರ್ಚಸ್ಸನ್ನು ಪಡೆದುಕೊಳ್ಳಲು ಹಂಬಲಿಸುತ್ತವೆ. ಅದರಲ್ಲೂ ಹೆಣ್ಣು ಮಕ್ಕಳು ತಂದೆಯಿಂದ ಹೆಚ್ಚು ಪ್ರಭಾವಿತವಾಗುತ್ತವೆ. ತಂದೆಗೆ ಮನೆಯಲ್ಲಿ ಸಿಗುವ ಗೌರವ, ಉಪಚಾರ, ಅವರ ಮಾತಿಗಿರುವ ಮನ್ನಣೆಗಳನ್ನೆಲ್ಲಾ ಮಗು ಅತ್ಯಂತ ಆಸಕ್ತಿಯಿಂದ ಅಭ್ಯಸಿಸುತ್ತದೆ. ಅಪ್ಪ ಮಾತಾಡುವ ಶೈಲಿಯಲ್ಲಲ್ಲ ಅಮ್ಮ ಮಾತಾಡುವುದು. ಬೈಕಲ್ಲಿ ಝುಯ್ಯನೆ ಹೋಗಿ ಇಷ್ಟದ ವಸ್ತುಗಳನ್ನು ತಂದುಕೊಡುವುದು ಅಪ್ಪನೇ ಹೊರತು ಅಮ್ಮನಲ್ಲ. ಪೇಟೆಗೆ ಹೋದರೂ ಅಪ್ಪನದ್ದೇ ಕಾರುಬಾರು. ಒಂದು ರೀತಿಯಲ್ಲಿ ದೈಹಿಕವಾಗಿ, ಭಾವನಾತ್ಮಕವಾಗಿ, ಆಧ್ಯಾತ್ಮಿಕವಾಗಿ ಅಪ್ಪನನ್ನು ತುಂಬಿ ಕೊಂಡೇ ಮಕ್ಕಳು ಬೆಳೆಯುತ್ತವೆ. ಆದ್ದರಿಂದಲೇ ಇವತ್ತಿನ ದಿನಗಳಲ್ಲಿ ಮಾಧ್ಯಮ ಸುದ್ದಿಗಳನ್ನು ಓದುವಾಗ ಆಘಾತವಾಗುವುದು, ಹತ್ತು-ಹಲವು ಪ್ರಶ್ನೆಗಳು ಮೂಡುವುದು.
    ಆತ್ಮಹತ್ಯೆಯ ಸುದ್ದಿಯನ್ನು ಕೇಳದ, ಓದದ ಒಂದೇ ಒಂದು ದಿನವಾದರೂ ಇವತ್ತಿದೆಯೇ? ಮುಖ್ಯವಾಗಿ ಹೆಣ್ಣು ಮಕ್ಕಳು ಆತ್ಮಹತ್ಯೆಗೆ ಶರಣಾಗುವ ಸುದ್ದಿಗಳು ಎಷ್ಟಿಲ್ಲ ಹೇಳಿ? ಕೊಲೆಗಾರ ಯುವಕರೂ ಧಾರಾಳ ಇದ್ದಾರಲ್ಲವೇ? ಎಲ್ಲೋ ದೂರದಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆಂದು ಹೋದ ಮಗಳು ಕೊಲೆಗೀಡಾಗಿಯೋ ಸ್ವಯಂ ಜೀವ ಕಳಕೊಂಡೋ ಸುದ್ದಿ ಮಾಡುತ್ತಿರುವುದು ಇವತ್ತಿನ ದಿನಗಳಲ್ಲಿ ಮಾಮೂಲಿ ಆಗುತ್ತಿರುವುದೇಕೆ? ಅದಕ್ಕೆ ಲವ್ ಅಫೇರು, ಅದು-ಇದುಗಳನ್ನು ಕಾರಣವಾಗಿ ಕೊಡಬಹುದಾದರೂ ಅವು ಸಾಯುವಷ್ಟು ಮತ್ತು ಸಾಯಿಸುವಷ್ಟು ಭೀಕರ ಅಪರಾಧಗಳೇ? ಅಷ್ಟಕ್ಕೂ ‘ಸಾಯುವ' ಮನಸ್ಥಿತಿಯನ್ನು ಮಕ್ಕಳಲ್ಲಿ ತುಂಬಿದ ಪ್ರಚೋದನೆಗಳು ಯಾವುದಿರಬಹುದು? ಅವರನ್ನು ಅಷ್ಟು ಕಟು ತೀರ್ಮಾನಕ್ಕೆ ದೂಡುವಲ್ಲಿ ಅವರು ಬಾಲ್ಯದಲ್ಲಿ ಕಂಡುಂಡ ಸಂಗತಿಗಳು ಕಾರಣವಾಗಿರಬಹುದೇ? ಮನೆಯ ವಾತಾವರಣ, ಹೆತ್ತವರ ವರ್ತನೆಗಳು ಒಂದು ಹಂತದ ವರೆಗೆ ಮಕ್ಕಳ ನಿರ್ಧಾರದ ಮೇಲೆ ಪ್ರಭಾವ ಬೀರಿರಬಹುದೇ?
   ನಿಜವಾಗಿ, ಓರ್ವ ಹೆಣ್ಣು ಮಗಳಿಗೆ ‘ಗಂಡಿನ' ಪರಿಚಯ ಆಗುವುದೇ ತಂದೆಯಿಂದ. ಹಾಗೆಯೇ ಹೆಣ್ಣಿನ ಪರಿಚಯ ಆಗುವುದು ತಾಯಿಯಿಂದ. ಹೆಣ್ಣು ಅಂದರೆ ಹೀಗಿರಬೇಕು ಮತ್ತು ಗಂಡು ಅಂದರೆ ಹೀಗಿರಬೇಕು ಅನ್ನುವುದನ್ನು ಇವರಿಬ್ಬರ ಮಾತು, ವರ್ತನೆ, ನಗು, ತಮಾಷೆ, ಭಾವ-ಭಂಗಿಗಳಿಂದ ಹೆಣ್ಣು ಮಗು ಕಲಿತುಕೊಳ್ಳಲು ಪ್ರಾರಂಭಿಸುತ್ತದೆ. ಅಪ್ಪ ಮನೆಯಲ್ಲಿ ಪಾಸಿಟಿವ್ ಆಗಿದ್ದರೆ ಮಗಳು ಪಾಸಿಟಿವ್ ಆಗುತ್ತಾಳೆ. ಅಮ್ಮನಿಗಿಂತ ಹೆಚ್ಚು ಆಸಕ್ತಿಯಿಂದ ಅಪ್ಪನನ್ನು ನೋಡುವ ಮಗಳಿಗೆ ಅಪ್ಪ ದೊಡ್ಡದೊಂದು ರೋಲ್ ಮಾಡೆಲ್. ಅಪ್ಪ ಸಿಡುಕನಾದರೆ, ಕ್ರಮೇಣ ಮಗಳೂ ಸಿಡುಕುತನವನ್ನು ಅಳವಡಿಸಿಕೊಳ್ಳುತ್ತಾಳೆ. ಅಪ್ಪ ಸುಳ್ಳುಗಾರನಾದರೆ, ಮಗಳಿಗೂ ಅದು ಅಂಟಿಕೊಂಡುಬಿಡುತ್ತದೆ. ಸದಾ ಸಂಶಯ ಸ್ವಭಾವದ ಅಪ್ಪನಿಂದ ಮಗಳು ಕಲಿತುಕೊಳ್ಳುವುದು ಅನುಮಾನಗಳನ್ನೇ. ಅಪ್ಪನಲ್ಲಿ ಯಾವ ಕ್ವಾಲಿಟಿಯಿದೆಯೋ ಅದು ಮಗನಿಗಿಂತ ಹೆಚ್ಚು ವರ್ಗಾವಣೆಯಾಗುವುದು ಮಗಳಿಗೆ. ಆದ್ದರಿಂದಲೇ, ವಿವಾಹ ವಿಚ್ಛೇದನಗಳಲ್ಲಿ, ಆತ್ಮಹತ್ಯೆಗಳಲ್ಲಿ, ಇನ್ನಿತರ ಅನಾಹುತಕಾರಿ ನಿರ್ಧಾರಗಳಲ್ಲಿ ಹೆಣ್ಣಿನ ಪಾತ್ರ ಏನಿದೆಯೋ ಅವುಗಳ ಮೇಲೆ ತಂದೆಯ ಪ್ರಭಾವವಿರುತ್ತದೆ ಎಂದು ಮನಃಶಾಸ್ತ್ರಜ್ಞರು ಹೇಳುವುದು. ಹೆಣ್ಣು ದಿಢೀರ್ ನಿರ್ಧಾರ ಕೈಗೊಳ್ಳುವ, ಮುಂಗೋಪದ ಮನಸ್ಥಿತಿಯವಳಾಗಿದ್ದರೆ ಅದಕ್ಕೆ ಆಕೆಯಷ್ಟೇ ಕಾರಣ ಅಲ್ಲ, ಬಾಲ್ಯದಲ್ಲಿ ಆಕೆಯ ‘ಅಪ್ಪ' ನಿರ್ವಹಿಸಿದ ಪಾತ್ರವೂ ಕಾರಣವಾಗಿರುತ್ತದೆ. ಅನೇಕ ಬಾರಿ, ‘ನೀನೇಕೆ ಗಂಡು ಮಕ್ಕಳಂತೆ ವರ್ತಿಸುತ್ತಿ..' ಎಂದು ಹೆತ್ತವರು ಮಗಳನ್ನು ತರಾಟೆಗೆ ಎತ್ತಿಕೊಳ್ಳುವುದಿದೆ. ‘ಹೆಣ್ಣು ಹೆಣ್ಣಿನಂತೆ ಇರಬೇಕು' ಎಂಬ ಬುದ್ಧಿವಾದವೂ ಇರುತ್ತದೆ. ನಿಜವಾಗಿ, ಹೆಣ್ಣು ಗಂಡಿನಂತೆ ವರ್ತಿಸುವುದಕ್ಕೆ ಕಾರಣ, ಗಂಡು ಎಂಬ ಅಪ್ಪ ಆಕೆಯನ್ನು ಪ್ರಭಾವಿಸಿದ್ದು. ಇಷ್ಟಕ್ಕೂ, ಯಾವ ಮಕ್ಕಳೂ ದಿಢೀರ್ ಆಗಿ ಬೆಳೆಯುವುದಿಲ್ಲವಲ್ಲ. ಹೆಣ್ಣು ಮಕ್ಕಳಾಗಲಿ, ಗಂಡು ಮಕ್ಕಳಾಗಲಿ ಅಮ್ಮ-ಅಪ್ಪ ಎಂಬ ಹೆಣ್ಣು-ಗಂಡನ್ನು ನೋಡುತ್ತಾ, ಅಭ್ಯಸಿಸುತ್ತಾ ಬೆಳೆಯುತ್ತಾರೆ. ಮನೆಯಲ್ಲಿ ಅಪ್ಪನ ಚಟುವಟಿಕೆಗಳನ್ನು ಹತ್ತಿರದಿಂದ ವೀಕ್ಷಿಸುತ್ತಾರೆ. ಅಮ್ಮ ಎಂಬ ಹೆಣ್ಣು- ಮಕ್ಕಳ ಚಾಕರಿ ಮಾಡುತ್ತಾ, ಅಡುಗೆ ಮಾಡುತ್ತಾ, ಬಟ್ಟೆ ಒಗೆಯುತ್ತಾ, ನೆಲ ಗುಡಿಸುತ್ತಾ, ಪಾತ್ರೆ ತೊಳೆಯುತ್ತಾ, ಇಸ್ತ್ರಿ ಹಾಕುತ್ತಾ.. ಹೀಗೆ ತನ್ನನ್ನು ಗುರುತಿಸಿಕೊಳ್ಳುವಾಗ ಅಪ್ಪ ಎಂಬ ಗಂಡು ಅದಕ್ಕೆ ಭಿನ್ನವಾಗಿ ಗುರುತಿಸಿಕೊಳ್ಳುತ್ತಾನೆ. ಆತನದು ನೀಟಾಗಿ ಪ್ಯಾಂಟು ಧರಿಸುವ, ಸಂಜೆ ಮನೆಗೆ ಬಂದು ಯಜಮಾನಿಕೆ ಪ್ರದರ್ಶಿಸುವ, ಸೇವೆ ಮಾಡಿಸಿಕೊಳ್ಳುವ.. ಪಾತ್ರ. ಹೀಗಿರುವಾಗ ಮಕ್ಕಳ ಮೇಲೆ ಅಪ್ಪ ಎಂಬ ಈ ಗಂಡಿನ ಪಾತ್ರ ಪ್ರಭಾವ ಬೀರದೆಂದು ಹೇಗೆ ಹೇಳುವುದು? ಮಕ್ಕಳಿಗೆ ಒಂದೊಮ್ಮೆ ಆಯ್ಕೆಯ ಅವಕಾಶ ಕೊಟ್ಟರೆ, ಅವರು ಪಾತ್ರೆ ತೊಳೆಯುವ ಪಾತ್ರಕ್ಕಿಂತ ಯಜಮಾನಿಕೆ ಪ್ರದರ್ಶಿಸುವ ಪಾತ್ರವನ್ನೇ ಆಯ್ದುಕೊಳ್ಳಲಾರರೇ? ಒಂದು ರೀತಿಯಲ್ಲಿ ಹೆಣ್ಣು ಮತ್ತು ಗಂಡಿನ ತಪ್ಪಾದ ಇಮೇಜನ್ನು ಅಮ್ಮ ಮತ್ತು ಅಪ್ಪ ಮನೆಯಲ್ಲಿ ದಿನಂಪ್ರತಿ ಮಕ್ಕಳಿಗೆ ನೀಡುತ್ತಿರುವಾಗ, ಮಕ್ಕಳು ಅದರಿಂದ ಪ್ರಭಾವಿತವಾಗಬಾರದೆಂದು ಬಯಸುವುದಕ್ಕೆ ಏನರ್ಥವಿದೆ? ಅಪ್ಪ ಎಂಬ ಗಂಡು ಅಮ್ಮ ಎಂಬ ಹೆಣ್ಣನ್ನು ದ್ವಿತೀಯ ದರ್ಜೆಗೆ ಇಳಿಸದೇ ಇದ್ದರೆ, ಮನೆ ಗೆಲಸದಲ್ಲಿ ತಾನೂ ಭಾಗಿಯಾದರೆ, ಯಜಮಾನಿಕೆಯ ದರ್ಪವನ್ನು ಕೈಬಿಟ್ಟು ಬದುಕಿದರೆ, ಪಾತ್ರೆ ತೊಳೆಯುವ, ಮನೆ ಗುಡಿಸುವ ಕೆಲಸಗಳನ್ನು ತಾನೂ ನಿರ್ವಹಿಸಿದರೆ.. ಪತ್ನಿ ಸಂತೃಪ್ತಳಾಗುವುದಷ್ಟೇ ಅಲ್ಲ, ಮಕ್ಕಳೂ ಸಂತುಲಿತವಾಗಿ ಬೆಳೆಯುತ್ತಾರೆ. ಬೆಳೆದ ಮಗಳು ದುಡುಕಿದಳೆಂದೋ ತಪ್ಪು ಹೆಜ್ಜೆ ಇಟ್ಟಳೆಂದೋ ಮನೆ ಬಿಟ್ಟಳೆಂದೋ ದೂರುವ ಮೊದಲು, ಆಕೆಯ ಬಾಲ್ಯ ಹೇಗಿತ್ತೆಂಬುದರ ಬಗ್ಗೆ ಪ್ರತಿ ಹೆತ್ತವರೂ ಅವಲೋಕನ ನಡೆಸಬೇಕು. ಬಾಲ್ಯದಲ್ಲಿ ಅಪ್ಪನ ಪಾತ್ರ ದುಡುಕಿನದ್ದಾದರೆ, ಜೋರು ಮಾಡಿ ಬಾಯಿ ಮುಚ್ಚಿಸುವ ರೂಪದ್ದಾದರೆ, ಔಟ್ ಗೋಯಿಂಗ್ ಮಾತ್ರ ಎಂಬ ರೀತಿಯದ್ದಾದರೆ, ಅದರ ಪ್ರಭಾವ ಮಕ್ಕಳ ಮೇಲೆ ಬಿದ್ದಿರುವುದಕ್ಕೆ ಖಂಡಿತ ಸಾಧ್ಯವಿದೆ. ಮಕ್ಕಳು ಕೀಳರಿಮೆ, ನಿರುತ್ಸಾಹಿ, ಪರಾವಲಂಬನೆಯವರಾಗಿದ್ದರೆ, ಅದರಲ್ಲಿ ಅವರ ಬಾಲ್ಯದ ಮಾದರಿಗಳ ಪಾತ್ರ ದೊಡ್ಡದಿದೆ ಎಂದೇ ಅರ್ಥ. ಅಂದಹಾಗೆ, ಪ್ರವಾದಿ ಮುಹಮ್ಮದ್(ಸ) ಎಂಬ ಗಂಡು ನಿರ್ವಹಿಸಿದ ಮಾದರಿ ಅಪ್ಪನ ಪಾತ್ರ ದಿಂದಾಗಿಯೇ ಅಲ್ಲವೇ ಫಾತಿಮಾ(ರ) ಎಂಬ ಮಾದರಿ ಹೆಣ್ಣು ಮಗಳು ಸಮಾಜಕ್ಕೆ ದಕ್ಕಿದ್ದು? ಮುಹಮ್ಮದುಲ್ ಗಝ್ಝಾಲಿ ಎಂಬ ಅಪ್ಪನ ಮಾದರಿ ವ್ಯಕ್ತಿತ್ವವಲ್ಲದಿದ್ದರೆ ಝೈನಬುಲ್ ಗಝ್ಝಾಲಿ ಎಂಬ ಧೀರ ಮಹಿಳೆ ಸೃಷ್ಟಿಯಾಗಲು ಸಾಧ್ಯವಿತ್ತೇ?
  
ಲವ್‍ನ ಕಾರಣಕ್ಕಾಗಿ ಮಾರ್ಚ್ 28ರಂದು ಸೋನಂ ಎಂಬ ಕಾಲೇಜು ತರುಣಿಯನ್ನು ತೀರ್ಥಹಳ್ಳಿಯ ನಡುಬೀದಿಯಲ್ಲಿ ವಿದ್ಯಾರ್ಥಿ ಗಳೆದುರೇ ಇರಿದು ಕೊಂದು ತಾನೂ ಆತ್ಮಹತ್ಯೆಗೆ ಪ್ರಯತ್ನಿಸಿದ ಯುವಕನ ಸುದ್ದಿಯನ್ನು ಓದುತ್ತಾ ಇವೆಲ್ಲ ನೆನಪಾಯಿತು..