Tuesday, July 28, 2015

ಮರಣದಂಡನೆ ಎತ್ತಿರುವ ಪ್ರಶ್ನೆಗಳು..

ಯಾಕೂಬ್ ಮೇಮನ್
ರಾಮ್ ಜೇಠ್ಮಲಾನಿ
ಕೆ.ಟಿ.ಎಸ್. ತುಳಸಿ
ಗೋಪಾಲ್ ಸುಬ್ರಹ್ಮಣ್ಯಂ
ಹರೀಶ್ ಸಾಳ್ವೆ
ಮುಕುಲ್ ರೋಹ್ಟಗಿ..
ಮುಂತಾದವರ ಜೊತೆ ಎಂ.ಎಲ್. ಶರ್ಮಾ ಮತ್ತು ಎ.ಪಿ. ಸಿಂಗ್ ಎಂಬಿಬ್ಬರು ನ್ಯಾಯವಾದಿಗಳನ್ನು ಇಟ್ಟು ನೋಡಿ. ದೆಹಲಿಯ ನಿರ್ಭಯ ಪ್ರಕರಣದ ಆರೋಪಿಗಳಾದ ಅಕ್ಷಯ್ ಥಾಕುರ್, ವಿನಯ್ ಶರ್ಮಾ, ಪವನ್ ಗುಪ್ತಾ ಮತ್ತು ಮುಖೇಶ್ ಸಿಂಗ್‍ನ ಪರ ನ್ಯಾಯಾಲಯದಲ್ಲಿ ವಾದಿಸಿದ ನ್ಯಾಯವಾದಿಗಳು ಇವರು. ಇವರಿಬ್ಬರ ಹೇಳಿಕೆಗಳು ಲೆಸ್ಲಿ ವುಡ್‍ವಿನ್‍ರ ‘ಇಂಡಿಯಾಸ್ ಡಾಟರ್' ಎಂಬ ಸಾಕ್ಷ್ಯಚಿತ್ರದಲ್ಲಿ ದಾಖಲಾಗಿವೆ. “ಬೀದಿಯಲ್ಲಿ ಸ್ವೀಟ್ ಇಟ್ಟರೆ ನಾಯಿಗಳು ಬಂದು ತಿನ್ನುತ್ತವೆ. ಅಪರಾತ್ರಿಯಲ್ಲಿ ಯಾರೋ ಒಬ್ಬನ ಜೊತೆ ತನ್ನ ಮಗಳನ್ನು ನಿರ್ಭಯಳ ಹೆತ್ತವರು ಕಳುಹಿಸಿಕೊಟ್ಟದ್ದು ಯಾಕೆ..” ಎಂದು ಶರ್ಮಾ ಪ್ರಶ್ನಿಸಿದರೆ, “ನನ್ನ ಮಗಳು ಅಥವಾ ಸಹೋದರಿ ವಿವಾಹಪೂರ್ವ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಮನೆಗೊಯ್ದು ಪೆಟ್ರೋಲ್ ಸುರಿದು ಕುಟುಂಬದೆದುರೇ ಬೆಂಕಿ ಹಚ್ಚುವೆ..” ಎಂದು ಸಿಂಗ್ ಹೇಳುತ್ತಾರೆ. ದೇಶವನ್ನೇ ಬೆಚ್ಚಿ ಬೀಳಿಸಿದ ಪ್ರಕರಣದ ಆರೋಪಿಗಳ ಪರ ಇಂತಹ ವಕೀಲರು ವಾದಿಸಿದರೆ ಅದರ ಫಲಿತಾಂಶ ಏನಿದ್ದೀತು? ನ್ಯಾಯಾಧೀಶರು ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನಲ್ಲದೇ ಇನ್ನೇನನ್ನು ನೀಡಿಯಾರು? ಅಷ್ಟಕ್ಕೂ, ತೀರಾ ಸಾಮಾನ್ಯರಂತೆ ಮತ್ತು ಮಹಿಳಾ ಹಕ್ಕುಗಳ ಕುರಿತು ಅರಿವೇ ಇಲ್ಲದವರಂತೆ ಮಾತಾಡುವ ಇವರನ್ನು ನಿರ್ಭಯ ಆರೋಪಿಗಳು ತಮ್ಮ ವಕೀಲರನ್ನಾಗಿ ಆಯ್ಕೆ ಮಾಡಿಕೊಂಡದ್ದೇಕೆ? ಜೇಠ್ಮಲಾನಿ, ತುಳಸಿ, ಅಶೋಕ್ ದೇಸಾಯಿ, ಪರಾಸರನ್, ಪಿ.ಪಿ. ರಾವ್‍ರಂತಹ ಪ್ರಸಿದ್ಧ ನ್ಯಾಯವಾದಿಗಳು ಇದ್ದಾಗ್ಯೂ ನಿರ್ಭಯ ಆರೋಪಿಗಳು ಈ ಅಪರಿಚಿತರನ್ನೇ ಯಾಕೆ ನೇಮಿಸಿಕೊಂಡರು? ಇದು ಅವರ ಬಯಕೆಯೋ ಅಥವಾ ಅನಿವಾರ್ಯತೆಯೋ? 2009 ಅಕ್ಟೋಬರ್ 31ರಂದು ‘ದ ಎಕನಾಮಿಕ್ಸ್ ಟೈಂಸ್' ಪತ್ರಿಕೆಯು, ‘5 ನಿಮಿಷದ ಕೆಲಸಕ್ಕೆ 5 ಲಕ್ಷ ಪಡೆಯುವ ಪ್ರಮುಖ ವಕೀಲರು' ಎಂಬ ಶೀರ್ಷಿಕೆಯಲ್ಲಿ ಲೇಖನವೊಂದನ್ನು ಪ್ರಕಟಿಸಿತ್ತು. 5 ನಿಮಿಷದ ಕೋರ್ಟ್ ಹಾಜರಿಗೆ 3ರಿಂದ 5 ಲಕ್ಷ ರೂಪಾಯಿ ಪಡೆಯುವ ವಕೀಲರನ್ನು ಅದರಲ್ಲಿ ಹೆಸರಿಸಲಾಗಿತ್ತು. ಹರೀಶ್ ಸಾಳ್ವೆ, ಮುಕುಲ್ ರೋಹ್ಟಗಿ, ಅಶೋಕ್ ದೇಸಾಯಿ, ಕೆ.ಕೆ. ವೇಣುಗೋಪಾಲ್, ಅಭಿಷೇಕ್ ಸಿಂಘ್ವಿ.. ಮುಂತಾದವರ ಹೆಸರು ಆ ಪಟ್ಟಿಯಲ್ಲಿದ್ದುವು. ನಿಜವಾಗಿ, ಜೇಠ್ಮಲಾನಿಯವರು ಒಂದು ಪ್ರಕರಣಕ್ಕೆ 40 ಲಕ್ಷ ರೂಪಾಯಿಯನ್ನು ಪಡಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ನ್ಯಾಯವಾದಿಗಳ ವೃಂದದಲ್ಲಿಯೇ ಅವರಿಗೆ ಅಪಾರ ಅನುಭವ ಇದೆ. 2002ರ ಗುಜರಾತ್ ಹತ್ಯಾಕಾಂಡ ಪ್ರಕರಣದಲ್ಲಿ ಅವರು ಗುಜರಾತ್ ಸರಕಾರದ ಪರ ವಾದಿಸಿದ್ದಾರೆ, ಇಂದಿರಾ ಮತ್ತು ರಾಜೀವ್ ಗಾಂಧಿಯವರನ್ನು ಹತ್ಯೆಗೈದ ಆರೋಪಿಗಳ ಪರವೂ ವಾದಿಸಿದ್ದಾರೆ. ಅವರೊಂದು ಪ್ರಕರಣವನ್ನು ಎತ್ತಿಕೊಂಡರೆಂದರೆ, ಅದಕ್ಕೆ ಅಪಾರ ಮನ್ನಣೆ ಸಿಗುತ್ತದೆ. ಅವರ ವಾಕ್ಚಾತುರ್ಯ, ಅಧ್ಯಯನಶೀಲತೆ ಮತ್ತು ಅನುಭವಗಳು ಪ್ರಕರಣಕ್ಕೆ ವಿಶೇಷ ತಿರುವನ್ನು ಕೊಡುವಷ್ಟು ಆಳವಾಗಿದೆ. ಹರೀಶ್ ಸಾಳ್ವೆಯವರು ಇತ್ತೀಚೆಗಷ್ಟೇ ವೋಡಾಪೋನ್ ಪ್ರಕರಣದಲ್ಲಿ ಸರಕಾರದ ವಿರುದ್ಧ ತೀರ್ಪು ಬರುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವೋಡಾಪೋನ್ 11 ಸಾವಿರ ಕೋಟಿ ರೂಪಾಯಿ ತೆರಿಗೆ ಕಟ್ಟಬೇಕೆಂಬ ಸರಕಾರದ ಆದೇಶವನ್ನು ಕೋರ್ಟು ವಜಾ ಗೊಳಿಸಿದೆ. ಹಾಗಂತ, ಇವರಲ್ಲಿ ಯಾರಾದರೊಬ್ಬರು ನಿರ್ಭಯ ಪ್ರಕರಣದ ಆರೋಪಿಗಳ ಪರ ವಾದಿಸುವುದನ್ನೊಮ್ಮೆ ಊಹಿಸಿಕೊಳ್ಳಿ. ಇವರಿಗೆ ಫೀಸು ಕೊಟ್ಟು ತಮ್ಮ ವಕೀಲರನ್ನಾಗಿ ನೇಮಿಸಿಕೊಳ್ಳುವ ಸಾಮರ್ಥ್ಯ ಕೊಳಚೆಗೇರಿ ನಿವಾಸಿಗಳಾದ ಆ ಆರೋಪಿಗಳಿಗಿದೆಯೇ? ಅಂದಮೇಲೆ ಸಮಾನ ನ್ಯಾಯ ಎಂಬ ಪರಿಕಲ್ಪನೆಗೆ ಏನರ್ಥವಿದೆ? ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಾನೂನು ಆಯೋಗದ ನೆರವಿನೊಂದಿಗೆ ನಡೆಸಿದ ಅಧ್ಯಯನದ ಪ್ರಕಾರ, ಮರಣ ದಂಡನೆಗೆ ಗುರಿಯಾದ ಶೇ. 75ರಷ್ಟು ಮಂದಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರು ಹಾಗೂ ಆರ್ಥಿಕವಾಗಿ ತೀರಾ ದುರ್ಬಲರಾದವರು. “ನೂರರಲ್ಲಿ ಓರ್ವರಿಗಷ್ಟೇ ಸರಿಯಾದ ವಕೀಲರನ್ನು ನೇಮಿಸಿಕೊಳ್ಳುವ ಸಾಮರ್ಥ್ಯ ಇದೆ..” ಎಂದು ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಹೇಳುತ್ತಾರೆ. ಭಾರತದ ಕಾನೂನು ಆಯೋಗದ ಮುಖ್ಯಸ್ಥ ಮತ್ತು ದೆಹಲಿ ಹೈಕೋರ್ಟ್‍ನ ನಿವೃತ್ತ ನ್ಯಾಯಾಧೀಶ ಎ.ಪಿ. ಶಾರ ಪ್ರಕಾರ, “ಭಾರತದಲ್ಲಿ ಬಡವರು ಮತ್ತು ತುಳಿತಕ್ಕೊಳಗಾದವರೇ ಗಲ್ಲಿಗೇರುತ್ತಿದ್ದಾರೆ..” ಇವೆಲ್ಲ ಏನು? ಒಂದು ಕಡೆ ಕಣ್ಣಿಗೆ ಬಟ್ಟೆ ಕಟ್ಟಿರುವ ನ್ಯಾಯದೇವತೆ ಇನ್ನೊಂದು ಕಡೆ, ದುರ್ಬಲ ಆರೋಪಿಗಳ ಕೈ-ಕಾಲುಗಳನ್ನು ಕಟ್ಟಿ ಹಾಕುವ ರೀತಿಯ ನ್ಯಾಯ ಪ್ರಕ್ರಿಯೆ - ಇದನ್ನು ಹೇಗೆ ವಿಶ್ಲೇಷಿಸಬಹುದು?
    2012 ನವೆಂಬರ್ 21ರಂದು ಅಜ್ಮಲ್ ಕಸಬ್‍ನನ್ನು ಗಲ್ಲಿ ಗೇರಿಸುವಾಗ ಆತನ ಮುಂದೆ ವಿವಿಧ ನ್ಯಾಯಾಲಯಗಳಿಂದ ಮರಣದಂಡನೆ ಶಿಕ್ಷೆಗೆ ಗುರಿಯಾದ ಸುಮಾರು 300ರಷ್ಟು ಮಂದಿ ಇದ್ದರು. ಅವರಲ್ಲಿ ಅಫ್ಝಲ್‍ಗುರು ಇದ್ದ. ಪಂಜಾಬ್ ಮುಖ್ಯಮಂತ್ರಿ ಬಿಯಂತ್ ಸಿಂಗ್‍ರನ್ನು ಹತ್ಯೆಗೈದ ಬಲ್ವಂತ್ ಸಿಂಗ್ ರಾಜೋನಾ, ಖಾಲಿಸ್ತಾನ್ ಲಿಬರೇಶನ್ ಫೋರ್ಸ್‍ನ ಭಯೋತ್ಪಾದಕ ದೇವಿಂದರ್ ಸಿಂಗ್ ಭುಲ್ಲರ್, ರಾಜೀವ್ ಗಾಂಧಿಯನ್ನು ಹತ್ಯೆಗೈದ ಮೂವರು ಆರೋಪಿಗಳು, ವೀರಪ್ಪನ್‍ನ 4 ಮಂದಿ ಸಹಚರರು.. ಎಲ್ಲರೂ ಆತನ ಮುಂದೆ ಇದ್ದರು. ಅನುಕ್ರಮವಾಗಿ ಗಲ್ಲಿಗೇರಿಸುವುದಾದರೆ ಕಸಬ್ ನ ಸರದಿ 25 ಮಂದಿಯ ಬಳಿಕ ಬರಬೇಕಿತ್ತು. ಆದರೆ ಆತನನ್ನು ಹಿಂದಿನಿಂದ ಎತ್ತಿ ಮುಂದಕ್ಕೆ ತಂದು ಗಲ್ಲಿಗೇರಿಸಲಾಯಿತು. ಇದಕ್ಕೆ ಕಾರಣ ಏನೆಂದರೆ, ಆತ ಪಾಕಿಸ್ತಾನಿ. ಆತನನ್ನು ಜೀವಂತ ಇರಿಸಿಕೊಳ್ಳಬೇಕಾದ ಯಾವ ರಾಜಕೀಯ ಒತ್ತಡವೂ ಇಲ್ಲಿಲ್ಲ. ಆದರೆ, ದೇವಿಂದರ್ ಸಿಂಗ್ ಭುಲ್ಲರ್‍ನ ಹಿಂದೆ ರಾಜಕೀಯ ಒತ್ತಡ ಇದೆ. ಆತನನ್ನು ಗಲ್ಲಿಗೇರಿಸುವುದರ ವಿರುದ್ಧ ಭಾವನಾತ್ಮಕ ಒತ್ತಡವನ್ನು ಹೇರಲಾಗುತ್ತಿದೆ. ನಿಜವಾಗಿ, ಯಾರನ್ನು ಗಲ್ಲಿಗೇರಿಸಬೇಕು, ಯಾರನ್ನು ಬಾರದು, ಯಾರ ಗಲ್ಲನ್ನು ಮುಂದೂಡಬೇಕು.. ಎಂಬುದೆಲ್ಲ ಇಲ್ಲಿ ಬರೇ ಕೋರ್ಟು, ಕಚೇರಿ, ರಾಷ್ಟ್ರಪತಿಗಳಿಂದ ಮಾತ್ರ ನಿರ್ಧರಿತವಾಗುವುದಲ್ಲ. ಅದನ್ನೂ ರಾಜಕೀಯವೇ ನಿರ್ಧರಿಸುತ್ತದೆ. ‘ಕಸಬ್‍ನನ್ನು ಬಿರಿಯಾನಿ ಕೊಟ್ಟು ಸಾಕಲಾಗುತ್ತಿದೆ..' ಎಂಬುದಾಗಿ ಬಿಜೆಪಿ ಈ ದೇಶದಲ್ಲಿ ಪ್ರಚಾರ ಮಾಡಿತ್ತು. ಮಾಧ್ಯಮದ ಒಂದು ವರ್ಗವೂ ಅದಕ್ಕೆ ಬೆಂಬಲ ನೀಡಿತ್ತು. ಅಷ್ಟಕ್ಕೂ, ಕಸಬ್‍ನಿಂದ ಕಾಂಗ್ರೆಸ್‍ಗಾಗಲೀ ಬಿಜೆಪಿಗಾಗಲೀ ಯಾವ ಲಾಭವೂ ಇಲ್ಲ. ಈ ದೇಶದವನೇ ಅಲ್ಲದ ಆತನನ್ನು ಗಲ್ಲಿಗೇರಿಸುವುದರಿಂದ ರಾಜಕೀಯವಾಗಿ ಕಳಕೊಳ್ಳುವುದಕ್ಕೇನೂ ಇಲ್ಲ. ಇದನ್ನರಿತೇ ತುರ್ತಾಗಿ ಆತನನ್ನು ಗಲ್ಲಿಗೆ ಕೊಡಲಾಯಿತು. ಆದರೆ ಇಂಥ ರಾಜಕೀಯ ಪ್ರೇರಿತ ಕ್ರಮಗಳು ಸಹಜವಾಗಿ ಕೆಲವಾರು ಆತಂಕಕಾರಿ ಅನುಮಾನಗಳನ್ನೂ ಮುಂದಿಡುತ್ತದೆ. ಮರಣ ದಂಡನೆಗೆ ಗುರಿಯಾಗುವ ದುರ್ಬಲ ವರ್ಗದವರಿಗೆ ರಾಜಕೀಯವಾಗಿ ಹೇಳಿಕೊಳ್ಳಬಹುದಾದ ಪ್ರಭಾವವಿರುವುದಿಲ್ಲವಲ್ಲ. ಅವರ ವಿರುದ್ಧ ಸಾಕ್ಷ್ಯಗಳನ್ನು ಒದಗಿಸುವ ಪೊಲೀಸ್ ವ್ಯವಸ್ಥೆಯಾದರೋ ಪರಮ ಭ್ರಷ್ಟಾಚಾರಿ. ಈ ದುರ್ಬಲರಿಂದ ನಕಲಿ ತಪ್ಪೊಪ್ಪಿಗೆಯನ್ನು ಪಡಕೊಳ್ಳುವುದಕ್ಕೆ ಪೊಲೀಸರಿಗೆ ಕಷ್ಟವೂ ಇಲ್ಲ. ಹಾಗಂತ, ಇವೆಲ್ಲವನ್ನೂ ಸಮರ್ಪಕವಾಗಿ ನ್ಯಾಯಾಧೀಶರ ಮುಂದೆ ನಿವೇದಿಸುವುದಕ್ಕೆ ಜೇಠ್ಮಲಾನಿ, ಹರೀಶ್ ಸಾಳ್ವೆ, ತುಳಸಿ..ಗಳೂ ಅವರಿಗೆ ಸಿಗುತ್ತಿಲ್ಲ. ಶ್ರೀಮಂತ ಮತ್ತು ಬಡವ ಮಾಡಿದ ಅಪರಾಧ ಒಂದೇ ಆಗಿದ್ದರೂ ತೀರ್ಪುಗಳು ಭಿನ್ನವಾಗಿ ಬರುವುದಕ್ಕೆ ಈ ಅಸಮಾನತೆ ಖಂಡಿತ ಅವಕಾಶ ಮಾಡಿಕೊಡುತ್ತದೆ. ಇಂಥ ಸ್ಥಿತಿಯಲ್ಲಿ, ‘ಗಲ್ಲು' ಶಿಕ್ಷೆ ಬೇಕೋ ಬೇಡವೋ ಎಂಬುದು ಮುಖ್ಯವಾಗುತ್ತದೆ. ಅಷ್ಟಕ್ಕೂ, ಗಲ್ಲು ಶಿಕ್ಷೆಯನ್ನು ಜಾರಿಗೊಳಿಸದಿರುವ ಕುರಿತಂತೆ  2007ರಲ್ಲಿ ವಿಶ್ವಸಂಸ್ಥೆಯಲ್ಲಿ ಮಂಡಿಸಲಾದ ಮಸೂದೆಗೆ ಭಾರತವು ವಿರೋಧ ವ್ಯಕ್ತಪಡಿಸಿರಬಹುದು. 2012 ನವೆಂಬರ್‍ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಂಡಿಸಿದ ‘ಗಲ್ಲುಶಿಕ್ಷೆ ನಿಷೇಧ' ಮಸೂದೆಯನ್ನು ಭಾರತ ತಿರಸ್ಕರಿಸಿರಬಹುದು. ಅಲ್ಲದೇ, ‘ಅಪರೂಪದಲ್ಲಿ ಅಪರೂಪದ’ ಪ್ರಕರಣಗಳಿಗೆ ಮಾತ್ರ ಮರಣದಂಡನೆ ವಿಧಿಸಬೇಕೆಂಬ 1983ರ ಸುಪ್ರೀಮ್ ಕೋರ್ಟ್‍ನ ನಿಲುವು ಪ್ರಶಂಸಾರ್ಹವಾದುದು ಎಂದೂ ಹೇಳಬಹುದು. ಆದರೆ, ನ್ಯಾಯವು ದುಡ್ಡಿದ್ದವರ ಪರ ಎಂಬ ವಾತಾರವಣ ನಿರ್ಮಾಣವಾಗಿರುವ ಕಡೆ ನೇಣು ಯಾವ ಪರಿಣಾಮವನ್ನು ಬೀರಬಲ್ಲುದು? 2001ರಲ್ಲಿ 83 ಮಂದಿ, 2002ರಲ್ಲಿ 23 ಮಂದಿ, 2005ರಲ್ಲಿ 77 ಮಂದಿ, 2006ರಲ್ಲಿ 40 ಮಂದಿ ಮತ್ತು 2007ರಲ್ಲಿ 100 ಮಂದಿಗೆ ದೇಶದ ವಿವಿಧ ನ್ಯಾಯಾಲಯಗಳು ನೇಣು ಶಿಕ್ಷೆಯನ್ನು ವಿಧಿಸಿದೆ (ಜಾರಿಗೊಳಿಸಿಲ್ಲ) ಎಂದು ಆಮ್ನೆಸ್ಟಿ ಇಂಟರ್‍ನ್ಯಾಶನಲ್‍ನ ಅಂಕಿ-ಅಂಶಗಳು ಹೇಳುವಾಗ, ಅದರಲ್ಲಿ ಹರೀಶ್ ಸಾಳ್ವೆ ವಾದಿಸಿದ ಪ್ರಕರಣಗಳು ಇದ್ದೀತೇ? ಜೇಠ್ಮಲಾನಿ ಪ್ರತಿನಿಧಿಸಿದ ಪ್ರಕರಣ ಎಷ್ಟಿರಬಹುದು? ಬಹುಶಃ, ಇಂಥದ್ದೊಂದು ಆತಂಕವೇ ಮರಣ ದಂಡನೆಯ ಬಗ್ಗೆ ಮತ್ತೆ ಮತ್ತೆ ಚರ್ಚೆಯ ಅಗತ್ಯವನ್ನು ಒತ್ತಿ ಹೇಳುತ್ತದೆ. ಸಮರ್ಥ ವಕೀಲರನ್ನು ನೇಮಿಸಿಕೊಳ್ಳುವ ಸಾಮರ್ಥ್ಯವಿಲ್ಲದ ಬಡ ಆರೋಪಿಗಳಿರುವ ದೇಶವೊಂದರಲ್ಲಿ ಮರಣದಂಡನೆ ಎಷ್ಟು ಸಮಂಜಸವಾದೀತು? ಅಫ್ಝಲ್ ಗುರುವಿಗೆ ಮರಣದಂಡನೆಯನ್ನು ವಿಧಿಸುವಾಗ, ‘ಇದರಲ್ಲಿ ಸಮಾಜದ ಭಾವನೆಯನ್ನು ಪರಿಗಣಿಸಲಾಗಿದೆ...’ ಎಂದು ಸುಪ್ರೀಮ್ ಕೋರ್ಟ್ ಹೇಳಿತ್ತು. ಅರುಂಧತಿ ರಾಯ್ ಸಹಿತ ಅನೇಕರು ಕೋರ್ಟ್‍ನ ಈ ವ್ಯಾಖ್ಯಾನವನ್ನು ಪ್ರಶ್ನಿಸಿದ್ದರು. ತೀರ್ಪುಗಳು ಭಾವನೆಯಿಂದ ಮುಕ್ತವಾಗಿರಬೇಕೆಂಬ ಅಭಿಪ್ರಾಯ ಹಲವರದ್ದಾಗಿತ್ತು. ನಿರ್ಭಯ ಪ್ರಕರಣಕ್ಕಿಂತ ಮೊದಲು ಅತ್ಯಾಚಾರವು ಈ ದೇಶದಲ್ಲಿ ಇವತ್ತಿನಷ್ಟು ಭಾವಾನಾತ್ಮಕವಾಗಿರಲಿಲ್ಲ. ಅಮೇರಿಕದ ಅವಳಿ ಕಟ್ಟಡಗಳ ಮೇಲೆ ದಾಳಿಯಾಗುವ ವರೆಗೆ ಬಾಂಬ್ ಭಯೋತ್ಪಾದನೆಯೂ ಇವತ್ತಿನ ರೀತಿಯಲ್ಲಿ ಸಾರ್ವಜನಿಕ ಗಮನವನ್ನು ಸೆಳೆದಿರಲಿಲ್ಲ. ಆದರೆ, ಇವತ್ತು ಅತ್ಯಾಚಾರ ಮತ್ತು ಭಯೋತ್ಪಾದನೆ ಈ ದೇಶದಲ್ಲಿ ಭಾವನಾತ್ಮಕ ವಾತಾವರಣವೊಂದನ್ನು ಹುಟ್ಟುಹಾಕಿದೆ. ಮಾಧ್ಯಮ ಕ್ರಾಂತಿಯಿಂದಾಗಿ ಸಾರ್ವಜನಿಕ ಅಭಿಪ್ರಾಯಗಳು ಕ್ಷಿಪ್ರವಾಗಿ ರೂಪುಗೊಳ್ಳುತ್ತಿವೆ. ಆದ್ದರಿಂದ ಇಂಥ ಪ್ರತಿ ಪ್ರಕರಣವೂ ನ್ಯಾಯಾಂಗ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವುದಕ್ಕೆ ಸಾಧ್ಯವಿದೆ. ಹೀಗಿರುವಾಗ, ರಾಮ್ ಜೇಠ್ಮಲಾನಿ ಪ್ರತಿನಿಧಿಸುವ ಪ್ರಕರಣಕ್ಕೂ ಎಂ.ಎಲ್. ಶರ್ಮ ಪ್ರತಿನಿಧಿಸುವ ಪ್ರಕಣಕ್ಕೂ ಫಲಿತಾಂಶದಲ್ಲಿ ವ್ಯತ್ಯಾಸಗಳುಂಟಾಗುವ ಸಾಧ್ಯತೆಯಿದೆ. ಅಲ್ಲದೇ, ಹಲವಾರು ವರ್ಷ ಜೈಲಿನಲ್ಲಿದ್ದು ಬಳಿಕ ನಿರಾಪರಾಧಿಯೆಂದು ಬಿಡುಗಡೆಗೊಂಡ ಪ್ರಕರಣಗಳು ಈ ದೇಶದಲ್ಲಿ ಧಾರಾಳ ನಡೆದಿವೆ. ನೇಣು ಕುಣಿಕೆಯವರೆಗೆ ಸಾಗಿ ಬಳಿಕ ಬಿಡುಗಡೆಗೊಂಡ ಉಪನ್ಯಾಸಕ ಎಸ್.ಎ.ಆರ್. ಗೀಲಾನಿಯೇ ಇದಕ್ಕೆ ಅತ್ಯುತ್ತಮ ಸಾಕ್ಷಿ. “ನನ್ನ ಜೈಲಿನ ಅನುಭವಗಳು” ಎಂಬ ಅವರ ಕೃತಿಯನ್ನು ಓದಿದ ಯಾರೇ ಆಗಲಿ ದಿಗ್ಭ್ರಮೆಗೊಂಡಾರು. ಸಾಕ್ಷ್ಯಗಳನ್ನು ಸೃಷ್ಟಿಸುವ ನಮ್ಮ ವ್ಯವಸ್ಥೆಯ ಸಾಮರ್ಥ್ಯಕ್ಕೆ ಬೆಚ್ಚಿ ಬಿದ್ದಾರು. ಇಂಥ ಸ್ಥಿತಿಯಲ್ಲಿ, ಮರಣದಂಡನೆಯನ್ನು ಸಾರಾಸಾಗಟ ಬೆಂಬಲಿಸುವುದು ಎಷ್ಟರ ಮಟ್ಟಿಗೆ ಸರಿ? ಅದು ಅಗತ್ಯವೇ? ಅದರ ಹೊರತಾದ ಶಿಕ್ಷೆ ಅಪರಿಪೂರ್ಣವೇ? ಬಹುಶಃ,
   “ಸುಪ್ರೀಮ್ ಕೋರ್ಟ್ ಹೇಳಿರುವ ಅಪರೂಪದಲ್ಲಿ ಅಪ ರೂಪದ ಪ್ರಕರಣ ಎಂಬ ವಿಭಾಗದಲ್ಲಿ ಯಾಕೂಬ್ ಮೇಮನ್ ಪ್ರಕರಣ ಒಳಪಡುತ್ತದೆಯೇ ಎಂಬುದು ಖಂಡಿತಕ್ಕೂ ಚರ್ಚಾರ್ಹ” (It is certainly debatable whether Yakub memon's case would fall in the category of the rarest of the rare..) ಎಂದು ದಿ ಹಿಂದೂ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಹೇಳಿರುವುದನ್ನು ಇಲ್ಲಿ ಸ್ಮರಿಸಿಕೊಂಡರೆ ಇಲ್ಲಿನ ಪ್ರಶ್ನೆಗಳು ಇನ್ನಷ್ಟು ಅರ್ಥಪೂರ್ಣವೆನಿಸಬಹುದು. 

Thursday, July 23, 2015

ಮೌಲಾನಾ ಫಝ್ಲುರ್ರಹ್ಮಾನ್, ಮಾಧ್ಯಮ ಮತ್ತು ಖಬರಿಸ್ತಾನದ ವಿಡಂಬನೆ

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ವಿಷಾದ ಪ್ರಕಟಣೆ
    “ಭೂಕಂಪಕ್ಕೆ ಜೀನ್ಸ್ ಧರಿಸುವ ಮಹಿಳೆಯರೇ ಕಾರಣ ಎಂದ ಮೌಲಾನಾ ಫಝ್ಲುರ್ರಹ್ಮಾನ್..” (Women wearing jeans are reason behind earthquekes- Jui-F chief maulana fazlur rehman) ಎಂಬ ಶೀರ್ಷಿಕೆಯಲ್ಲಿ ಕಳೆದ ಮೇ 30ರಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯು ಸುದ್ದಿಯೊಂದನ್ನು ಪ್ರಕಟಿಸಿತು. ಮರುದಿನ ಮೇ 31ರಂದು (ಆದಿತ್ಯವಾರ) ವಿಜಯ ಕರ್ನಾಟಕ ಪತ್ರಿಕೆಯು, “ಭೂಕಂಪಕ್ಕೆ ಹೆಣ್ಣು ಮಕ್ಕಳ ಜೀನ್ಸ್ ಕಾರಣ” ಎಂಬ ಶೀರ್ಷಿಕೆಯಲ್ಲಿ ಅದೇ ಸುದ್ದಿಯನ್ನು ಪ್ರಕಟಿಸಿತು. “ಬೆಲೆ ಏರಿಕೆ, ಭಯೋತ್ಪಾದನೆ ಮತ್ತು ಭೂಕಂಪಗಳಿಗೆ ಜೀನ್ಸ್ ಧರಿಸುವ ಮಹಿಳೆಯರೇ ಕಾರಣ ಎಂದ ಪಾಕಿಸ್ತಾನದ ಧರ್ಮ ಗುರು” (Pakistan Cleric says women who wears jeans are behind earthquekes, terrorism and rising inflation) ಎಂಬ ಮೈಲುದ್ದದ ಶೀರ್ಷಿಕೆಯೊಂದಿಗೆ ಲಂಡನ್ನಿನ ಡೈಲಿ ಮೇಲ್ ಪತ್ರಿಕೆಯಲ್ಲಿ ಜೂನ್ 2ರಂದು ಅದೇ ಸುದ್ದಿ ಪ್ರಕಟವಾಯಿತು. ಟೈಮ್ಸ್ ಆಫ್ ಇಂಡಿಯಾ, ಡಿ.ಎನ್.ಎ., ಕನ್ನಡಪ್ರಭ ಸೇರಿದಂತೆ ಹೆಚ್ಚಿನೆಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳು ಈ ಸುದ್ದಿಯನ್ನು ಅತೀವ ಆಸಕ್ತಿಯಿಂದ ಪ್ರಕಟಿಸಿದವು. ಮೇ 30ರಿಂದ ಜೂನ್ 2ರ ನಡುವೆ ಪ್ರಕಟವಾದ ಈ ಸುದ್ದಿಗಳಿಗೆ ಓದುಗರ ಪ್ರತಿಕ್ರಿಯೆ ಎಷ್ಟು ಆವೇಶ ಭರಿತವಾಗಿತ್ತೆಂದರೆ ನಿಂದನೆ, ಭರ್ತ್ಸ್ಯನೆ, ವ್ಯಂಗ್ಯಗಳ ಮಹಾಪೂರವೇ ಹರಿಯಿತು. ಫಝ್ಲುರ್ರಹ್ಮಾನ್‍ರನ್ನು ಜೋಕರ್‍ನಂತೆ ಬಿಂಬಿಸಲಾಯಿತು. ‘ಕೂಪ ಮಂಡೂಕ ಮೌಲಾನಾ’ ಎಂದು ಕರೆಯಲಾಯಿತು. ಅಂದಹಾಗೆ, ಫಝ್ಲುರ್ರಹ್ಮಾನ್‍ರು ಪಾಕ್ ಪಾರ್ಲಿಮೆಂಟ್‍ನ ಸದಸ್ಯ. ಅವರ ಜವಿೂಯತೆ ಉಲೆಮಾ ಪಕ್ಷವು ಪ್ರಧಾನಿ ನವಾಝ್ ಶರೀಫ್‍ರ ಆಡಳಿತ ಮೈತ್ರಿಕೂಟದ ಭಾಗವಾಗಿದೆ. ಅಷ್ಟಕ್ಕೂ, ಫಝ್ಲುರ್ರಹ್ಮಾನ್‍ರು ನಿಜಕ್ಕೂ ಇಂಥದ್ದೊಂದು ಹೇಳಿಕೆಯನ್ನು ಕೊಟ್ಟಿರುತ್ತಿದ್ದರೆ ಟೀಕೆಗಳನ್ನು ಒಂದು ಹಂತದವರೆಗೆ ಸಮರ್ಥಿಸಿಕೊಳ್ಳಬಹುದಿತ್ತು. ಹಾಗಂತ, ಅವರು ಮಾದರಿ ಮೌಲಾನಾ ಎಂದು ಹೇಳುತ್ತಿಲ್ಲ. ಅವರು ಈ ಹಿಂದೆ ನೀಡಿರಬಹುದಾದ ವಿವಾದಾಸ್ಪದ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುತ್ತಲೂ ಇಲ್ಲ. ಆದರೆ, ಸುದ್ದಿಯನ್ನು ಪ್ರಕಟಿಸುವುದಕ್ಕಿಂತ ಮೊದಲು ಅದರ ಮೂಲವನ್ನು ಮಾಧ್ಯಮಗಳು ಪರಿಶೀಲಿಸಬೇಡವೇ? ಅದು ಫಝ್ಲುರ್ರಹ್ಮಾನ್‍ರ ಹೇಳಿಕೆ ಎಂಬುದಕ್ಕೆ ಅಧಿಕೃತ ದಾಖಲೆಗಳನ್ನೋ ಮಾಹಿತಿಯನ್ನೋ ಇಟ್ಟುಕೊಂಡಿರಬೇಡವೇ? ನಿಜವಾಗಿ, ಈ ಸುದ್ದಿ ಪಾಕಿಸ್ತಾನದ ಖಬರಿಸ್ತಾನ್ ಟೈಮ್ಸ್ ಡಾಟ್ ಕಾಮ್ ಎಂಬ ಇಂಟರ್‍ನೆಟ್ ಪತ್ರಿಕೆಯಲ್ಲಿ (Online) ಮೇ 22ರಂದು ಪ್ರಕಟವಾಗಿತ್ತು. ಅದೊಂದು ವಿಡಂಬನಾತ್ಮಕ (Satirical) ಪತ್ರಿಕೆ. ತಮಾಷೆ, ವ್ಯಂಗ್ಯ, ಪ್ರಹಸನಗಳೇ ಈ ಖಬರಿಸ್ತಾನದ ಬಂಡವಾಳ. ಅದು ಉತ್ಪ್ರೇಕ್ಷಿತ ಸುದ್ದಿಯನ್ನು ಕೊಡುತ್ತಿರುತ್ತದೆ. ನಿಜದಂತೆ ಕಾಣುವ ಆದರೆ ನಿಜವಲ್ಲದ ಅಪಹಾಸ್ಯದ ಸುದ್ದಿಗಳನ್ನು ಸೃಷ್ಟಿಸುತ್ತಿರುತ್ತದೆ. ಈ ಖಬರಿಸ್ತಾನ ಪ್ರಕಟಿಸಿದ ಇದೇ ಸುದ್ದಿಯು ಮೇ 26ರ ಬಳಿಕ ಇನ್ನಿತರ ಇಂಟರ್‍ನೆಟ್ ಪತ್ರಿಕೆಗಳಲ್ಲೂ ಕಾಣಿಸಿಕೊಂಡವು. ಕ್ಯಾಂಪಸ್ ಬಸ್ ಮ್ಯಾಗ್ ಎಂಬ ಇಂಟರ್‍ನೆಟ್ ಪತ್ರಿಕೆಯೂ ಇದರಲ್ಲೊಂದು. ಆದರೆ ಆ ಪತ್ರಿಕೆಗೆ ಅದು ವಿಡಂಬನಾತ್ಮಕ ಸುದ್ದಿಯೆಂದು ಗೊತ್ತಿತ್ತು. ಹಾಗೆಯೇ ಅದು ಬರೆದಿತ್ತು ಕೂಡ. ತಾನು ಈ ಸುದ್ದಿಯನ್ನು ಪಾಕಿಸ್ತಾನ್ ಟುಡೇಯಿಂದ ಆರಿಸಿಕೊಂಡಿರುವುದಾಗಿಯೂ ಅದು ಹೇಳಿಕೊಂಡಿತ್ತು. ವಿಶೇಷ ಏನೆಂದರೆ, ಪಾಕಿಸ್ತಾನ್ ಟುಡೆಯಲ್ಲಿ ಈ ಸುದ್ದಿ ಒಂದು ವರ್ಷದ ಹಿಂದೆ 2014, ಫೆಬ್ರವರಿ 1 ರಂದೇ ಪ್ರಕಟವಾಗಿತ್ತು. ಇದೂ ಅದರ ಸ್ವಂತ ಸುದ್ದಿಯಲ್ಲ. ಖಬರಿಸ್ತಾನದಿಂದಲೇ ಪಡಕೊಂಡ ಸುದ್ದಿಯಾಗಿತ್ತದು. ಹೀಗೆ ತನ್ನದೇ ಹಳೆ ಸುದ್ದಿಯನ್ನು ಖಬರಿಸ್ತಾನವು ಮೇ 22 ರಂದು ಮತ್ತೆ ಹೊಸ ಸುದ್ದಿಯಂತೆ ಮರು ಪ್ರಕಟಿಸಿತು. ಖಬರಿಸ್ತಾನದ ಪ್ರಕಾರ, ಶುಕ್ರವಾರದ ನಮಾಝ್‍ನ ಬಳಿಕ ಏರ್ಪಡಿಸಲಾದ ಪತ್ರಿಕಾಗೋಷ್ಠಿಯಲ್ಲಿ ಫಝ್ಲುರ್ರಹ್ಮಾನ್‍ರು ಈ ಹೇಳಿಕೆಯನ್ನು ಹೊರಡಿಸಿದ್ದಾರೆ. ಕ್ಯಾಂಪಸ್ ಬಸ್ ಮ್ಯಾಗ್‍ನ ಪ್ರಕಾರ, ಈ ಹೇಳಿಕೆ ಹೊರಡಿಸಿದ್ದು ಮಂಗಳವಾರ. ವಿಜಯ ಕರ್ನಾಟಕದ ಮಟ್ಟಿಗೆ ಈ ಪತ್ರಿಕಾಗೋಷ್ಠಿ ಏರ್ಪಟಾದದ್ದು ಶನಿವಾರ. ಒಂದು ಸುದ್ದಿಯನ್ನು ಸುಳ್ಳು ಎಂದು ತೀರ್ಮಾನಿಸುವುದಕ್ಕೆ ಇದಕ್ಕಿಂತ ಹೆಚ್ಚಿನ ಪುರಾವೆಗಳು ಇನ್ನೇನು ಬೇಕು? ನಿಜವಾಗಿ, ಸುದ್ದಿಯನ್ನು ಪರಿಶೀಲಿಸದೆಯೇ ಪ್ರಕಟಿಸುವುದರಿಂದ ಆಗುವ ಅನಾಹುತಗಳಿಗೆ ಉದಾಹರಣೆ ಇದು. ಇಲ್ಲಿ ಖಬರಿಸ್ತಾನವನ್ನು ದೂರಿ ಪ್ರಯೋಜನವಿಲ್ಲ. ಯಾಕೆಂದರೆ, ವಿಡಂಬನಾತ್ಮಕ ಪತ್ರಿಕೆಯಾಗಿಯೇ ಅದು ಗುರುತಿಸಿಕೊಂಡಿದೆ. ಆದ್ದರಿಂದಲೇ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯು ಈ ಸುದ್ದಿ ಪ್ರಕಟಿಸಿದುದಕ್ಕಾಗಿ ಬಳಿಕ ವಿಷಾದ ಸೂಚಿಸಿತು. ಲಂಡನ್ನಿನ ಡೈಲಿ ಮೇಲ್ ಪತ್ರಿಕೆಯು ತನ್ನ ಅನ್‍ಲೈನ್ ಆವೃತ್ತಿಯಿಂದ ಈ ಸುದ್ದಿಯನ್ನು ಕಿತ್ತಾಹಾಕಿತು. ಹಾಗಿದ್ದರೂ, ಕೆಲವು ಪ್ರಶ್ನೆಗಳಂತೂ ಕಾಡಿಯೇ ಕಾಡುತ್ತದೆ. ಮಾಧ್ಯಮದ ಜವಾಬ್ದಾರಿಗಳು ಏನೆಲ್ಲ? ಸುದ್ದಿಯನ್ನು ಪರಿಶೀಲನೆಗೆ ಒಳಪಡಿಸದೆಯೇ ಪ್ರಕಟಿಸುವುದು ಬರೇ ವಿಷಾದ ಸೂಚಿಸಿ ಮುಗಿಸುವಷ್ಟು ಸಣ್ಣ ವಿಚಾರವೇ? ವಿಷಾದ ಸೂಚಿಸುವುದಕ್ಕಿಂತ ಮೊದಲು ಆ ಸುದ್ದಿಯು ಲಕ್ಷಾಂತರ ಮಂದಿಯನ್ನು ತಲುಪಿರುತ್ತದೆ. ಓದುಗರು ಅದನ್ನು ಇತರರಲ್ಲಿ ಹಂಚಿಕೊಂಡಿರುತ್ತಾರೆ. ಅದನ್ನು ತಮ್ಮ ವಾದಕ್ಕೆ ಪುರಾವೆಯಾಗಿ ಮಂಡಿಸಿರುತ್ತಾರೆ. ಓರ್ವನನ್ನು ಭಯೋತ್ಪಾದಕನೆಂದೋ ದೇಶದ್ರೋಹಿಯೆಂದೋ ಸಾಬೀತುಪಡಿಸುವುದಕ್ಕೆ ಆ ಸುದ್ದಿಯು ಬಳಕೆಯಾಗಿರುತ್ತದೆ. ಇವೆಲ್ಲವೂ ಕಳೆದ ಮೇಲೆ ಪತ್ರಿಕೆಯ ಯಾವುದೋ ಒಂದು ಮೂಲೆಯಲ್ಲಿ ಅಥವಾ ಇಂಟರ್‍ನೆಟ್ ಆವೃತ್ತಿಯಲ್ಲಿ ವಿಷಾದ ಸೂಚಿಸುವುದರಿಂದ ಅದಾಗಲೇ ಆಗಿರುವ ಹಾನಿಯನ್ನು ತುಂಬಬಹುದೆ? ಅಷ್ಟಕ್ಕೂ, ಅವು ಪ್ರಕಟಿಸುವ ವಿಷಾದ ಎಷ್ಟು ಚಿಕ್ಕದಾಗಿರುತ್ತದೆಂದರೆ, ಹೆಚ್ಚಿನ ಬಾರಿ ವಿಷಾದಕ್ಕೆ ಕಾರಣಗಳೇನು ಎಂಬುದೇ ಓದುಗರಿಗೆ ಗೊತ್ತಾಗುವುದಿಲ್ಲ. ಮುಖಪುಟದಲ್ಲಿ ಪ್ರಕಟವಾದ ಒಂದು ತಪ್ಪು ಸುದ್ದಿಯ ಬಗ್ಗೆ ಸೂಚಿಸುವ ವಿಷಾದ ಹೇಳಿಕೆಯು ಒಳಪುಟದಲ್ಲಿ ಒಂದು ಗೆರೆಯಷ್ಟೂ ಇರುವುದಿಲ್ಲ.  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಕೂಡ, “ಈ ಸುದ್ದಿಯು ತಪ್ಪಾಗಿದ್ದು’ ಅದನ್ನು ಪಾಕಿಸ್ತಾನದ ವಿಡಂಬನಾತ್ಮಕ ವೆಬ್‍ಸೈಟ್‍ನ ವರದಿಯ ಆಧಾರದಲ್ಲಿ ಹೆಣೆಯಲಾಗಿತ್ತು. ತಪ್ಪಿಗಾಗಿ ವಿಷಾದಿಸುತ್ತೇವೆ” (This story is erroneous. It was based on reports over a satirical peace appeared on a Pakistani website  we regret the mistake) ಎಂದು ಬರೆಯಿತೇ ಹೊರತು ಆ ಸುದ್ದಿಯ ಹಿನ್ನೆಲೆ, ಸುದ್ದಿ ಹುಟ್ಟಿಕೊಂಡ ಬಗೆ ಮತ್ತು ವಾಸ್ತವಗಳ ಕುರಿತಂತೆ ಯಾವ ಮಾಹಿತಿಯನ್ನೂ ನೀಡಲಿಲ್ಲ. ಒಂದು ತಪ್ಪಾದ ಸುದ್ದಿಯನ್ನು ಓದಿದ ಓದುಗನಿಗೆ ಅದರ ಸರಿಯಾದ ಭಾಗವನ್ನು ಓದುವ ಹಕ್ಕು ಇದೆಯಲ್ಲವೇ? ಅದನ್ನು ಒದಗಿಸಬೇಕಾದದ್ದು ಯಾರು? ತಪ್ಪು ಸುದ್ದಿಯನ್ನು ಕೊಟ್ಟ ಪತ್ರಿಕೆಗಳು ಅದರ ಹೊಣೆಯನ್ನು ವಹಿಸಿಕೊಳ್ಳುವುದಿಲ್ಲವಾದರೆ ಅದನ್ನು ಏನೆಂದು ಪರಿಗಣಿಸಬೇಕು? ಬೇಜವಾಬ್ದಾರಿ, ನಿರ್ಲಕ್ಷ್ಯ, ನುಣುಚಿಕೊಳ್ಳುವಿಕೆ, ಪಲಾಯನ...
    ಇತ್ತೀಚೆಗೆ ಬಿ.ಬಿ.ಸಿ.ಯು ಒಂದು ಸುದ್ದಿಯನ್ನು ಸ್ಫೋಟಿಸಿತು. ನೈಜೀರಿಯಾದ ಅನಂಬ್ರದಲ್ಲಿರುವ ಒಂದು ಹೊಟೇಲ್‍ನಲ್ಲಿ ನರಮಾಂಸವನ್ನು ಬೇಯಿಸಿ ಗ್ರಾಹಕರಿಗೆ ನೀಡಲಾಗುತ್ತದೆ ಎಂಬುದೇ ಆ ಸುದ್ದಿ. ಈ ವಿಷಯ ಬಹಿರಂಗವಾದ ಬಳಿಕ ಆ ಹೊಟೇಲ್ ಅನ್ನು ಮುಚ್ಚಲಾಗಿದೆ ಎಂದೂ ಅದು ಪ್ರಕಟಿಸಿತು. ಈ ಸುದ್ದಿ ಪ್ರಕಟವಾದದ್ದು ಬಿಬಿಸಿಯ ಸ್ವಾಹಿಲಿ ಎಂಬ ಹೆಸರಿನ ಇಂಟರ್‍ನೆಟ್ ಪತ್ರಿಕೆಯಲ್ಲಿ. ಸ್ವಾಹಿಲಿ ಎಂಬುದು ಒಂದು ಭಾಷೆ. ತಾಂಝಾನಿಯಾ, ಬುರುಂಡಿ, ಕಾಂಗೋ, ನೈಜೀರಿಯಾ, ಅಮೇರಿಕ, ರುವಾಂಡ... ಮುಂತಾದ ರಾಷ್ಟ್ರಗಳಲ್ಲಿ ಈ ಭಾಷೆಯನ್ನಾಡುವ 5 ಮಿಲಿಯನ್ ಮಂದಿಯಿದ್ದಾರೆ ಎಂದು ಹೇಳಲಾಗುತ್ತದೆ. ಬಿ.ಬಿ.ಸಿ. ಪ್ರಕಟಿಸಿದ ಸುದ್ದಿ ಎಷ್ಟು ರೋಚಕವಾಗಿತ್ತೆಂದರೆ, ಅದರಲ್ಲಿ ಹಸಿಹಸಿ ವಿವರಣೆಗಳಿದ್ದುವು. “ಜನರು ಅನುಮಾನ ಬಂದು ಪೊಲೀಸರಿಗೆ ದೂರು ಕೊಟ್ಟರೆಂದೂ, ಪೊಲೀಸರು ಬಂದು ಪರಿಶೀಲಿಸಿದಾಗ ಆಗಷ್ಟೇ ಕೊಯ್ದ, ರಕ್ತ ತೊಟ್ಟಿಕ್ಕುತ್ತಿರುವ ಮಾನವ ತಲೆಗಳು ಕಂಡುಬಂದುವು ಎಂದೂ’ ಬರೆಯಲಾಗಿತ್ತು. ರಕ್ತವನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಲಾಗುತ್ತಿತ್ತಂತೆ. ಪೊಲೀಸರು ಹೆಚ್ಚಿನ ಪರಿಶೀಲನೆಗೆ ಒಳಪಡಿಸಿದಾಗ ಬಂದೂಕುಗಳು ಮತ್ತು ಗ್ರೆನೇಡ್‍ಗಳು ಸಿಕ್ಕವು..” ಎಂದೂ ಬಿ.ಬಿ.ಸಿ. ಬರೆಯಿತು. ಈ ಸುದ್ದಿಯನ್ನು ಲಂಡನ್ನಿನ ಪ್ರಸಿದ್ಧ ಪತ್ರಿಕೆಗಳಾದ ಡೈಲಿ ಮೇಲ್, ಟೆಲಿಗ್ರಾಫ್‍ಗಳೂ ಎತ್ತಿಕೊಂಡವು. ನೈಜೀರಿಯಾದ ಕೆಲವು ಪತ್ರಿಕೆಗಳೂ ಇದನ್ನು ಮುದ್ರಿಸಿದುವು. ಇದನ್ನು ಓದಿದ ಅನಂಬ್ರದ ಜನರು ಬೀದಿಗಿಳಿದರು. ಬಿ.ಬಿ.ಸಿ. ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು. ನೈಜೀರಿಯದ ಸಂಸ್ಕ್ರಿತಿ ಮತ್ತು ಪ್ರವಾಸೋದ್ಯಮ ಸಚಿವೆ ಮೇರಿ ಇಮೆಲ್ಡಾರು ಸುದ್ದಿಯನ್ನು ಖಂಡಿಸಿ ಪತ್ರಿಕಾಗೋಷ್ಠಿ ನಡೆಸಿದರು. ಇಷ್ಟೆಲ್ಲ ಅನಾಹುತಗಳು ಆದ ಬಳಿಕ ಮೇ 19ರಂದು ಬಿ.ಬಿ.ಸಿ.ಯು ವಿಷಾದ ವ್ಯಕ್ತಪಡಿಸಿ ಇಂಟರ್‍ನೆಟ್ ಆವೃತ್ತಿಯಿಂದ ಆ ಸುದ್ದಿಯನ್ನು ಹಿಂತೆಗೆದುಕೊಂಡಿತು. ‘ಸುದ್ದಿ ಮೂಲವನ್ನು ತನಿಖೆಗೊಳಪಡಿಸದೇ ಪ್ರಕಟಿಸಿದುದರಿಂದ ಆದ ಪ್ರಮಾದವಿದು..’ ಎಂಬ ಸ್ಪಷ್ಟೀಕರಣವನ್ನೂ ನೀಡಿತು. ನಿಜವಾಗಿ, `ಪ್ರಮಾದ' ಎಂಬ ಮೂರಕ್ಷರಕ್ಕೆ ಸೀಮಿತಗೊಳಿಸಿ ನೋಡಬಹುದಾದ ಪ್ರಕರಣ ಇದಲ್ಲ. ಯಾಕೆಂದರೆ, ಇಂಥ ಪ್ರಮಾದಗಳು ಏಶ್ಯನ್- ಆಫ್ರಿಕನ್ ರಾಷ್ಟ್ರಗಳ ಬಗ್ಗೆ ಮತ್ತು ಅಲ್ಲಿನ ಜನರ ಬಗ್ಗೆ ಪಾಶ್ಚಾತ್ಯ ಮಾಧ್ಯಮಗಳಿಂದ ನಿರಂತರ ನಡೆಯುತ್ತಲೇ ಬಂದಿದೆ. ಬಿ.ಬಿ.ಸಿ.ಯಿಂದ ಹಿಡಿದು `ದ ಲಾಸ್ಟ್ ಕಿಂಗ್ ಆಫ್ ಸ್ಕಾಟ್‍ಲ್ಯಾಂಡ್' ಎಂಬ ಸಿನಿಮಾದ ವರೆಗೆ ಎಲ್ಲವೂ ಆಫ್ರಿಕನ್ ನಾಗರಿಕರನ್ನು ಅನಾಗರಿಕರಂತೆ ಬಿಂಬಿಸುತ್ತಲೇ ಬಂದಿವೆ. ಉಗಾಂಡದ ಮಾಜಿ ಅಧ್ಯಕ್ಷ ಇದಿ ಅಮೀನ್‍ರನ್ನು ನರಮಾಂಸ ಭಕ್ಷಕ ಎಂದು ಅವು ಹೇಳಿದ್ದುವು. ಲಿಬಿಯದ ಗದ್ದಾಫಿ, ಇರಾಕ್‍ನ ಸದ್ದಾಮ್, ಇರಾನ್‍ನ ಖೊಮೇನಿ... ಸಹಿತ ಆಫ್ರಿಕನ್-ಅರಬ್ ರಾಷ್ಟ್ರಗಳ ನಾಯಕರ ದೊಡ್ಡದೊಂದು ಪಟ್ಟಿಯೇ ಇವರ ಪ್ರಮಾದಕ್ಕೆ ಸಾಕ್ಷಿಯಾಗಿದೆ. ಆದ್ದರಿಂದಲೇ ಮಾಧ್ಯಮ ಪ್ರಾಮಾಣಿಕತೆ ಮತ್ತೆ ಮತ್ತೆ ಸಂದೇಹಕ್ಕೆ ಒಳಗಾಗುತ್ತಿರುವುದು. ವಿಷಾದ ಎಂಬುದು ನಿರ್ಲಕ್ಷ್ಯವನ್ನೋ ದುರುದ್ದೇಶವನ್ನೋ ಮುಚ್ಚಿಡುವುದಕ್ಕಾಗಿ ಬಳಸಬೇಕಾದ ಪದವಲ್ಲವಲ್ಲ. ಆ ಪದಕ್ಕೆ ಗೌರವವಿದೆ.We regret the mistake
   .
ತಪ್ಪೊಪ್ಪಿಕೊಂಡ BBC
ಎಂದು ಒಪ್ಪುವಾಗ, ಮತ್ತೆಂದೂ ಇಂಥದ್ದೊಂದು ಪ್ರಮಾದಕ್ಕೆ ಅವಕಾಶ ನೀಡುವುದಿಲ್ಲ ಎಂಬೊಂದು ಬದ್ಧತೆಯನ್ನೂ ಮಾಧ್ಯಮ ರಂಗ ಪ್ರದರ್ಶಿಸಬೇಕಾಗುತ್ತದೆ. ಈ ಬದ್ಧತೆಯನ್ನು ಮಾಧ್ಯಮ ರಂಗವು ಇವತ್ತು ಎಷ್ಟರ ಮಟ್ಟಿಗೆ ಕಾಪಾಡಿಕೊಂಡಿದೆ? ಈ ರಂಗ ಇವತ್ತು ನಮಗೆ ಒದಗಿಸುತ್ತಿರುವುದು ಸಂಪೂರ್ಣ ಪರಿಶೀಲನೆಗೊಳಪಡಿಸಿದ ಸುದ್ದಿಯನ್ನೋ? ಅವು ಪಕ್ಷಪಾತರಹಿತವೇ? ಧರ್ಮ, ಜಾತಿ, ಜನಾಂಗ, ಭಾಷೆಯನ್ನು ಮೀರಿದ ಆದರ್ಶವೊಂದು ‘ಸುದ್ದಿ ಮನೆ’(ಪತ್ರಿಕಾ ಕಚೇರಿ)ಗಳಲ್ಲಿವೆಯೇ? ಇದೆಯೆಂದಾದರೆ ಅದು ನಿಜಕ್ಕೂ ಸಕ್ರಿಯವಾಗಿದೆಯೇ? ಅಷ್ಟಕ್ಕೂ,
      ಫಝ್ಲುರ್ರಹ್ಮಾನ್‍ರ ಬಗ್ಗೆ ರೋಚಕ ಸುದ್ದಿಯನ್ನು ಕಟ್ಟಿಕೊಟ್ಟ ಕನ್ನಡ ಸಹಿತ ಹೆಚ್ಚಿನೆಲ್ಲ ಪತ್ರಿಕೆಗಳು ಕನಿಷ್ಠ ಆ ಬಗ್ಗೆ ಸ್ಪಷ್ಟೀಕರಣವನ್ನೋ ವಿಷಾದವನ್ನೋ ಈ ವರೆಗೂ ಸೂಚಿಸಿಲ್ಲ ಎಂಬುದೇ ಮಾಧ್ಯಮರಂಗದ ಆದರ್ಶ ಬದ್ಧತೆಯ ಮಿತಿಯನ್ನು ಸ್ಪಷ್ಟಪಡಿಸುತ್ತದೆ.  

Wednesday, July 8, 2015

ಇವೆಲ್ಲ ಆಕಸ್ಮಿಕವೋ ಪೂರ್ವಯೋಜಿತವೋ?

ಚೇತನ್ ಭಗತ್
ಅಮರ್ತ್ಯ ಸೇನ್
ಸಲ್ಮಾನ್ ರುಶ್ದಿ
ತಸ್ಲೀಮಾ ನಸ್ರೀನ್
    ಮುಂತಾದವರಂತೆ, ಪರಾಂಜಯ್ ಗುಹಾ ತಾಕುರ್ತಾ, ಸುಬಿರ್ ಘೋಷ್, ಜ್ಯೋತಿರ್ಮಯಿ ಚೌಧರಿ, ಮ್ಯಾಟ್ ಕೆನ್ನಾರ್ಡ್, ಆ್ಯಂಡ್ರೆ ವಾಲ್ಚೆಕ್.. ಇವರೆಲ್ಲ ಸುದ್ದಿಗೀಡಾದವರಲ್ಲ. ಹಾಗಂತ, ಇವರೂ ಬರಹಗಾರರೇ. ಆದರೆ ಇವರು ಬರಹಕ್ಕಾಗಿ ಆಯ್ದುಕೊಳ್ಳುವ ವಿಷಯಗಳು ಇವರನ್ನು ಖ್ಯಾತನಾಮರಿಂದ ಹೊರಗಿರಿಸಿವೆ. ಇವರ ಕುತೂಹಲಗಳನ್ನು ಜಾಣತನದಿಂದ ನಿರ್ಲಕ್ಷಿಸಲಾಗಿದೆ. ಸುದ್ದಿಗೆ ಮತ್ತು ಚರ್ಚೆಗೆ ಒಳಗಾಗಲೇಬೇಕಿದ್ದ ಇವರ ಬರಹಗಳನ್ನು ಸುದ್ದಿಗೀಡಾಗದಂತೆ ನೋಡಿಕೊಳ್ಳ     ಲಾಗಿದೆ. ಮಾನನಷ್ಟ ಮೊಕದ್ದಮೆಯನ್ನು ಹೂಡಲಾಗಿದೆ. ಮಾನಸಿಕವಾಗಿ ಹಿಂಸಿಸಲಾಗಿದೆ, ಅಗೌರವಿಸಲಾಗಿದೆ. ಅಷ್ಟಕ್ಕೂ, ರುಶ್ದಿಯಂತೆಯೋ ತಸ್ಲೀಮಾರಂತೆಯೋ ಇವರು ಯಾರ ಧಾರ್ಮಿಕ ಭಾವನೆಯನ್ನೂ ಘಾಸಿಗೊಳಿಸಿಲ್ಲ. ಜನರ ಆಚಾರ-ವಿಚಾರಗಳನ್ನು ಪ್ರಶ್ನಿಸಿಲ್ಲ. ಅವರು, ‘ಜಗತ್ತಿನ ಹೆಚ್ಚಿನ ಸಂಪತ್ತು ಕೇವಲ 85 ಮಂದಿ ಶ್ರೀಮಂತರಲ್ಲೇ ಯಾಕೆ ಸುತ್ತುತ್ತಿವೆ’ ಎಂದು ಅನುಮಾನಿಸಿದರು. ಆ ಕುರಿತಂತೆ ಅಧ್ಯಯನ ನಡೆಸಿದರು. ‘ಜಗತ್ತಿನ ಹೆಚ್ಚಿನೆಲ್ಲ ಅತಿಕ್ರಮಣಗಳು ಮತ್ತು ದಾಳಿಗಳು ನಿರ್ದಿಷ್ಟ ಸಂದರ್ಭವೊಂದರಲ್ಲೇ ಯಾಕೆ ಘಟಿಸುತ್ತಿವೆ..’ ಎಂದು ಕುತೂಹಲಗೊಂಡು ಹುಡುಕಾಡಿದರು. ಈ ಹುಡುಕಾಟವೇ ಇವರನ್ನು ಕಪ್ಪು ಪಟ್ಟಿಯಲ್ಲಿರಿಸುವುದಕ್ಕೆ ಕಾರಣವಾದುವು.
    ದಿ ಗಾರ್ಡಿಯನ್, ನ್ಯೂಯಾರ್ಕ್ ಟೈಮ್ಸ್, ಫೈನಾನ್ಶಿಯಲ್ ಟೈಮ್ಸ್.. ಮುಂತಾದ ಪ್ರಸಿದ್ಧ ಪತ್ರಿಕೆಗಳಿಗೆ ನಿರಂತರವಾಗಿ ಬರೆಯುತ್ತಿದ್ದ ಖ್ಯಾತ ಪತ್ರಕರ್ತ ಮ್ಯಾಟ್ ಕೆನ್ನಾರ್ಡ್‍ರು ಒಮ್ಮೆ ಫೈನಾನ್ಶಿಯಲ್ ಟೈಮ್ಸ್ ಗೆ ಈಜಿಪ್ಟ್ ನ ಸರ್ವಾಧಿಕಾರಿ ಮುಬಾರಕ್‍ರ ಬಗ್ಗೆ ಒಂದು ಲೇಖನ ಬರೆದರು. ಇಸ್ರೇಲ್‍ನ ನಂತರ ಅಮೇರಿಕದಿಂದ ಅತ್ಯಂತ ಹೆಚ್ಚು ನೆರವು ಪಡೆಯುತ್ತಿರುವ ರಾಷ್ಟ್ರ ಈಜಿಪ್ಟ್. ಈ ಹಿನ್ನೆಲೆಯಿಂದಲೇ ಅವರು ‘ಅಮೇರಿಕ ಬೆಂಬಲಿತ’ (US backed ) ಎಂಬ ಪದವನ್ನು ಲೇಖನದ ಮಧ್ಯೆ ಬಳಸಿದರು. ಆದರೆ ಸಂಪಾದಕರು ಆ ಪದವನ್ನು ಕಿತ್ತು ಹಾಕಿದರು. ಇನ್ನೊಮ್ಮೆ, ಲೆಬನಾನ್‍ನಲ್ಲಿ ಅಸ್ತಿತ್ವದಲ್ಲಿರುವ ಹಿಝ್ಬುಲ್ಲಾದ ಬಗ್ಗೆ ಅದೇ ಫೈನಾನ್ಶಿಯಲ್ ಟೈಮ್ಸ್ ಗೆ ಲೇಖನವೊಂದನ್ನು ಬರೆದುಕೊಟ್ಟರು. ‘ಹಿಝ್ಬುಲ್ಲಾಗೆ ಇರಾನ್ ನೆರವಾಗುತ್ತಿದೆ’ (Iranian backed ) ಎಂದೂ ಬರೆದರು. ಆದರೆ ಆ ಪದವನ್ನು ಸಂಪಾದಕರು ಹಾಗೆಯೇ ಉಳಿಸಿಕೊಂಡರು. ಮಾಧ್ಯಮಗಳು ಮತ್ತು ಅವುಗಳ ಭಾಷೆಯನ್ನು ಮೂರನೇ ಶಕ್ತಿಯೊಂದು ಸದಾ ನಿಯಂತ್ರಿಸುತ್ತಿರುತ್ತದೆ ಎಂಬ ತನ್ನ ಅಧ್ಯಯನಾತ್ಮಕ ಬರಹದಲ್ಲಿ ಒಂದು ಉದಾಹರಣೆಯಾಗಿ ಕೆನ್ನಾರ್ಡ್‍ರು ಈ ಘಟನೆಯನ್ನು ಉಲ್ಲೇಖಿಸಿದರು. ಜಗತ್ತಿನಲ್ಲಿ ದೊಡ್ಡದೊಂದು ಜನಸಂಖ್ಯೆ ಹಸಿವಿನಿಂದ ಸಾಯುತ್ತಿರುವಾಗ ಕೆಲವೇ ಕೆಲವು ಶ್ರೀಮಂತರ ಗುಂಪಿನಲ್ಲಿ ಜಗತ್ತಿನ ಸಂಪತ್ತೆಲ್ಲ  ಸೇರಿಕೊಂಡಿರುವುದು ಆಕಸ್ಮಿಕವಲ್ಲ ಎಂದೇ ಅವರು ತನ್ನ ಹೊಸ ಪುಸ್ತಕ ‘The rocket: A Rouge Reporters V/s The Masters of the
ಕಾರ್ಯಾಚರಣೆಗೆ ಸಿದ್ಧವಾಗುತ್ತಿರುವ ಕರ್ಕರೆ
 Universe’ದಲ್ಲಿ ವಾದಿಸಿದರು. ಮಾಧ್ಯಮಗಳು ಈ ಶ್ರೀಮಂತರ ದಂಧೆಯನ್ನು ಪ್ರಶ್ನಿಸುವ ಸಾಮರ್ಥ್ಯವನ್ನು ಕಳಕೊಂಡಿವೆ ಎಂದು ಹಲವಾರು ಉದಾಹರಣೆಗಳ ಮೂಲಕ ಸಾದರಪಡಿಸಿದರು. ಇದಕ್ಕಿಂತ ಮೊದಲು, 2014 ಎಪ್ರಿಲ್ 15ರಂದು ‘ಗ್ಯಾಸ್ ವಾರ್ಸ್: ಕ್ರೋನಿ ಕ್ಯಾಪಿಟಾಲಿಸಂ ಆ್ಯಂಡ್ ದಿ ಅಂಬಾನೀಸ್' ಎಂಬ ಕೃತಿಯೊಂದು ಬಿಡುಗಡೆಯಾಯಿತು. ಪರಾಂಜಯ್ ಗುಹಾ, ಸುಬಿರ್ ಮತ್ತು ಜ್ಯೋತಿರ್ಮಯಿ ಎಂಬ ಮೂವರು ಸಂಶೋಧನಾ ನಿರತ ಬರಹಗಾರರು ಒಟ್ಟು ಸೇರಿ ಈ ಕೃತಿಯನ್ನು ರಚಿಸಿದ್ದರು. ವಿಶೇಷ ಏನೆಂದರೆ, ಅವರು ಈ ಕೃತಿಯ ಪ್ರಕಟಣೆಗಾಗಿ ಎರಡ್ಮೂರು ಪ್ರಕಾಶನ ಸಂಸ್ಥೆಗಳನ್ನು ಸಂಪರ್ಕಿಸಿದ್ದರು. ಅವು ಒಪ್ಪಿಕೊಳ್ಳದೇ ಹೋದಾಗ ಸ್ವಯಂ ಪ್ರಕಟಣೆಗೆ ಮುಂದಾದರು. ಬಿಡುಗಡೆಯಾದ ಎರಡೇ ದಿನಗಳೊಳಗೆ ಅಂಬಾನಿಗಳ ವಕೀಲರಿಂದ ನೋಟೀಸ್ ಬಂತು. ಎಪ್ರಿಲ್ 23ರಂದು ಮತ್ತೊಂದು ನೋಟೀಸು ಬಂತು. 100 ಕೋಟಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸುವುದಾಗಿ ಬೆದರಿಸಲಾದ ನೋಟೀಸ್. ಕೇಂದ್ರ ಸರಕಾರದ ನೀತಿಗಳು ಹೇಗೆ ಅಂಬಾನಿ ಪರವಾಗಿವೆ ಎಂಬುದನ್ನು ‘ಗ್ಯಾಸ್ ವಾರ್..’ ಕೃತಿಯಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿತ್ತು. ಕೃಷ್ಣ ಮತ್ತು ಗೋದಾವರಿ ನದಿ ತಟದಲ್ಲಿ ತೈಲ ಎತ್ತುವಿಕೆಗೆ ಮತ್ತು ತೈಲ ಬೆಲೆಗೆ ಸಂಬಂಧಿಸಿ ಅನಿಲ್ ಮತ್ತು ಮುಖೇಶ್ ಅಂಬಾನಿ ನಡುವೆ ಇರುವ ತಗಾದೆಗಳು ಕೃತಿಯಲ್ಲಿ ಉಲ್ಲೇಖಿತವಾಗಿದ್ದುವು. ಸರಕಾರವು ರಿಲಯನ್ಸ್ ಪರ ಇರುವುದನ್ನು ಮತ್ತು ಆ ಕಾರಣದಿಂದಲೇ ಈ ಹಿಂದೆ ಪೆಟ್ರೋಲಿಯಂ ಸಚಿವರನ್ನು ಸರಕಾರ ಬದಲಿಸಿರುವುದನ್ನೂ ಕೃತಿಯಲ್ಲಿ ಪುರಾವೆಯಾಗಿ ಮಂಡಿಸಲಾಗಿತ್ತು. ರಾಜಕೀಯ ಪಕ್ಷಗಳಿಗೆ ರಿಲಯನ್ಸ್ ದೇಣಿಗೆ ನೀಡುತ್ತಿದೆ ಮತ್ತು ಪ್ರತಿಯಾಗಿ ವಿವಿಧ ತೈಲ ಮತ್ತಿತರ ಗುತ್ತಿಗೆಗಳನ್ನು ಪಡಕೊಂಡು ಅದು ಶ್ರೀಮಂತವಾಗುತ್ತಾ ಹೋಗುತ್ತಿದೆ ಎಂದೂ ಹೇಳಲಾಗಿತ್ತು.
    ಅಷ್ಟಕ್ಕೂ, ಮ್ಯಾಗಿ ನೂಡಲ್ಸನ್ನು ಸರಕಾರಗಳು ನಿಷೇಧಿಸುವುದಕ್ಕಿಂತ ಮೊದಲು ದೇಶದಲ್ಲಿ ಅದರ ವ್ಯಾಪ್ತಿ, ಮಾರಾಟ, ಬಜೆಟ್ ಇವೆಲ್ಲ ಎಷ್ಟು ಮಂದಿಗೆ ಗೊತ್ತಿತ್ತು? ‘ಮ್ಯಾಗಿ ಮಾರುಕಟ್ಟೆಯಲ್ಲಿ ಸಿಗುತ್ತದೆ, ನಾವು ತಿನ್ನುತ್ತೇವೆ..’ ಎಂಬುದಕ್ಕಿಂತ ಹೊರತಾಗಿ ಅದರ ತಯಾರಿಯ ಬಗ್ಗೆ ನಾವೆಷ್ಟು ತಲೆ ಕೆಡಿಸಿಕೊಂಡಿದ್ದೆವು? ಮ್ಯಾಗಿಯನ್ನು ನಮಗೆ ಇಷ್ಟದ ಆಹಾರವಾಗಿ ಪರಿಚಯಿಸಿದ್ದು ಜಾಹೀರಾತುಗಳೇ. ಕೇವಲ ಕಳೆದ ಒಂದೇ ವರ್ಷದಲ್ಲಿ ಭಾರತದಲ್ಲಿ ಮ್ಯಾಗಿಯ ಪ್ರಚಾರಕ್ಕಾಗಿ 445 ಕೋಟಿ ರೂಪಾಯಿಯನ್ನು ಬಳಸಲಾಗಿದೆ. ಹಾಗಂತ, ಇದರ ತಪಾಸಣೆಗೆ ಕಂಪೆನಿ ವ್ಯಯಿಸಿದ್ದು ಬರೇ 19 ಕೋಟಿ ರೂಪಾಯಿ. ಶ್ರೀಮಂತ ಕಂಪೆನಿಗಳು ಮತ್ತು ವ್ಯಕ್ತಿಗಳು ತಮ್ಮ ಖಜಾನೆಯನ್ನು ತುಂಬಿಸುವುದಕ್ಕಾಗಿ ಮರುಳು ಮಾಡುವ ತಂತ್ರಗಳನ್ನು ಹೆಣೆಯುತ್ತಲೇ ಇರುತ್ತಾರೆ. ರಾಷ್ಟ್ರಗಳು ಕೂಡ ಇದರಿಂದ ಹೊರತಾಗಿಲ್ಲ. ಅವು ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವುದಕ್ಕೆ ನಿರ್ದಿಷ್ಟ ಸಂದರ್ಭಗಳಿಗಾಗಿ ಕಾಯುತ್ತಿರುತ್ತವೆ. 1994ರ  ವಿಶ್ವಕಪ್ ಫುಟ್ಬಾಲ್ ಫೈನಲ್‍ನಲ್ಲಿ ಇಟಲಿ ಆಡುತ್ತಿರುವ ದಿನದಂದೇ ಇಟಲಿಯ ಅಧ್ಯಕ್ಷ ಸಿಲ್ವಿಯೋ ಬೆರ್ಲಸ್ಕೋನಿಯವರು ವಿವಾದಾತ್ಮಕ ಆದೇಶವೊಂದನ್ನು ಹೊರಡಿಸಿದರು. ಭ್ರಷ್ಟ ರಾಜಕಾರಣಿಗಳು ಜೈಲು ಪಾಲಾಗುವುದನ್ನು ತಡೆಯುವ ಉದ್ದೇಶದ ಆದೇಶವಾಗಿತ್ತದು. 2008ರಲ್ಲಿ ರಷ್ಯಾವು ಜಾರ್ಜಿಯಾದ ಮೇಲೆ ಆಕ್ರಮಣ ನಡೆಸುವಾಗ ಬೀಜಿಂಗ್‍ನಲ್ಲಿ ಒಲಿಂಪಿಕ್ಸ್ ನಡೆಯುತ್ತಿತ್ತು. ನಿಜವಾಗಿ, ಮಾಧ್ಯಮಗಳ ಗಮನವಷ್ಟೇ ಅಲ್ಲ, ಜಗತ್ತಿನ ಗಮನವೂ ಇದ್ದದ್ದು ಬೀಜಿಂಗ್‍ನಲ್ಲೇ. ಅಷ್ಟಕ್ಕೂ, ಇಂಥ ಘಟನೆಗಳು ಆಕಸ್ಮಿಕ ಅಲ್ಲ ಎಂಬುದಕ್ಕೆ - Read ದಿ study: Attack when the World is not watching? International media and the Israel-Palestinian conflict' (ಜಗತ್ತು ಗಮನಿಸದಿರುವಾಗ ನಡೆಸುವ ಆಕ್ರಮಣ, ಇಸ್ರೇಲ್-ಫೆಲೆಸ್ತೀನ್ ವಿವಾದ ಮತ್ತು ಅಂತಾರಾಷ್ಟ್ರೀಯ ಮಾಧ್ಯಮ) ಎಂಬ ರಾಬಿನ್ ಡ್ಯುರಾಂಟ್ ಮತ್ತು ಎಕತರಿನ್ ಝರಾವ್‍ಸ್ಕಾಯ ಎಂಬವರ ಸಂಶೋಧನಾತ್ಮಕ ಬರಹ ಧಾರಾಳ ಪುರಾವೆಗಳನ್ನು ಒದಗಿಸುತ್ತದೆ. ಪ್ಯಾರಿಸ್‍ನ ಪೊ ಯುನಿವರ್ಸಿಟಿ ಮತ್ತು ಪ್ಯಾರಿಸ್ ಸ್ಕೂಲ್ ಆಫ್ ಇಕನಾಮಿಕ್ಸ್ ನಲ್ಲಿ ಪ್ರೊಫೆಸರ್‍ಗಳಾಗಿರುವ ಇವರು, ‘ಮಾಧ್ಯಮಗಳು ಇತರ ಸುದ್ದಿಗಳಲ್ಲಿ ಬ್ಯುಸಿಯಾಗಿರುವ ಸಂದರ್ಭವನ್ನು ವಿವಿಧ ರಾಷ್ಟ್ರಗಳು ಹೇಗೆ ಆಕ್ರಮಣಕ್ಕೆ ಬಳಸಿಕೊಳ್ಳುತ್ತವೆ.. ’ ಎಂಬುದನ್ನು ವಿವರವಾಗಿ ಕೃತಿಯಲ್ಲಿ ತೆರೆದಿಟ್ಟರು. 2000ದಿಂದ 2011ರ ವರೆಗಿನ 11 ವರ್ಷಗಳ ಅವಧಿಯ ಇಸ್ರೇಲ್-ಫೆಲೆಸ್ತೀನ್ ಸಂಘರ್ಷವನ್ನು ಈ ಲೇಖಕರು ತಮ್ಮ ಅಧ್ಯಯನಕ್ಕೆ ಒಳಪಡಿಸಿದರು. ಇಸ್ರೇಲ್-ಫೆಲೆಸ್ತೀನ್ ನಡುವಿನ ಸಂಘರ್ಷ ಮತ್ತು ಆ ಸಂದರ್ಭದಲ್ಲಿ ಅಮೇರಿಕದ ಪ್ರಮುಖ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಸುದ್ದಿಗಳನ್ನು ಪರಸ್ಪರ ಹೋಲಿಸಿ ನೋಡಿಕೊಂಡರು. 2001 ಸೆ. 11ರಂದು ಜಗತ್ತಿನ ಗಮನವೆಲ್ಲ ಅಮೇರಿಕದತ್ತ ನೆಟ್ಟಿತ್ತು. ಎರಡು ನಾಗರಿಕ ವಿಮಾನಗಳು ಅಲ್ಲಿನ ಅವಳಿ ಗೋಪುರವನ್ನು ಹೊಡೆದುರುಳಿಸಿದ ಭಯಾನಕ ಘಟನೆಗೆ ಜಗತ್ತು ತಲ್ಲಣಗೊಂಡಿತ್ತು. ಮಾಧ್ಯಮಗಳು ಮಾತ್ರವಲ್ಲ, ಜಗತ್ತಿನ ಎಲ್ಲರೂ ಅಮೇರಿಕದತ್ತ ಗಮನ ಕೇಂದ್ರೀಕರಿಸಿದ್ದರು. ಇದೇ ಸಂದರ್ಭವನ್ನು ನೋಡಿಕೊಂಡು ಇಸ್ರೇಲ್‍ನ ಪ್ರಧಾನಿ ಏರಿಯಲ್ ಶೆರೋನ್‍ರು ಫೆಲೆಸ್ತೀನ್‍ನ ಗಾಝಾದ ಮೇಲೆ ಹೆಲಿಕಾಪ್ಟರ್ ದಾಳಿ ನಡೆಸಿದರು. ಪಶ್ಚಿಮ ದಂಡೆಯ ಮೇಲೆ ಸೇನೆಯ ಮೂಲಕ ಆಕ್ರಮಣ ನಡೆಸಿದರು. ಇದೊಂದೇ ಅಲ್ಲ, Exposing the lies of the Empire (ಸಾಮ್ರಾಜ್ಯದ ಸುಳ್ಳುಗಳ ಅನಾವರಣ) ಎಂಬ ಆ್ಯಂಡ್ರೆ ವಾಲ್ಚೆಕ್‍ರ ಕೃತಿಯಲ್ಲೂ ಇಂಥ ಮೋಸಗಳ ವಿವರಗಳಿವೆ. ಇರಾಕ್‍ನ ಮೇಲೆ ಅಮೇರಿಕ ನಡೆಸಿದ ಆಕ್ರಮಣದ ಸುತ್ತ ಹೆಣೆಯಲಾದ ಈ ಕೃತಿಯಲ್ಲಿ ಅಮೇರಿಕನ್ ಸುಳ್ಳುಗಳ ದೊಡ್ಡದೊಂದು ಮೂಟೆಯನ್ನೇ ಬಿಚ್ಚಿಡಲಾಗಿದೆ. ಕಾದಂಬರಿಕಾರ, ಸಿನಿಮಾ ನಿರ್ದೇಶಕ ಮತ್ತು ಪತ್ರಕರ್ತರೂ ಆಗಿರುವ ಆ್ಯಂಡ್ರೆ ವಾಲ್ಚೆಕ್‍ರು ಇದೀಗ ಈ ಕೃತಿಯ ದ್ವಿತೀಯ ಭಾಗವನ್ನು ತರುವ ಉಮೇದಿನಲ್ಲಿದ್ದಾರೆ. ಅವರ ವಿಶೇಷತೆ ಏನೆಂದರೆ, ಅವರು ಸುದ್ದಿಗಳ ಮೂಲವನ್ನು ಹುಡುಕಿಕೊಂಡು ಹೋಗುತ್ತಾರೆ. ‘ಚೀನಾದಲ್ಲಿ ಸಮಾಜವಾದ ಸತ್ತಿದೆ..’ ಎಂಬ ಪಾಶ್ಚಾತ್ಯ ಮಾಧ್ಯಮಗಳ ಅಭಿಪ್ರಾಯವನ್ನು ದೃಢಪಡಿಸಿಕೊಳ್ಳುವುದಕ್ಕಾಗಿ ಅವರು ಬೀಜಿಂಗ್‍ನಲ್ಲಿ ನೆಲೆಸಿದರು. ಜಿಂಬಾಬ್ವೆಯ ವಿರುದ್ಧ ಇಕನಾಮಿಕ್ಸ್ ಟೈಮ್ಸ್, ಬಿಬಿಸಿಯಂಥ ಮಾಧ್ಯಮಗಳು ಅಕ್ಷರ ದಾಳಿಯನ್ನು ಪ್ರಾರಂಭಿಸಿದಾಗ ಅವರು ಜಿಂಬಾಬ್ವೆಗೆ ತೆರಳಿದರು. ‘ಜಿಂಬಾಬ್ವೆಯ ರಾಜಧಾನಿ ಹರಾರೆಯಲ್ಲಿ ಒಂದೇ ಒಂದು ಆಸ್ಪತ್ರೆ ಇಲ್ಲ..’ ಎಂಬಲ್ಲಿವರೆಗೆ ಈ ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಕಟವಾಗಿದ್ದುವು. ಒಂದು ಕಾಲದಲ್ಲಿ ಬಿಳಿಯ ರಾಷ್ಟ್ರಗಳ ಅತಿಕ್ರಮಣಕ್ಕೀಡಾಗಿ ಬಸವಳಿದಿದ್ದ ಮತ್ತು ರಾಬರ್ಟ್ ಮುಗಾಬೆಯವರ ನೇತೃತ್ವದಲ್ಲಿ ಕರಿಯರು ಒಟ್ಟು ಸೇರಿ ಸ್ವಾತಂತ್ರ್ಯ ದೊರಕಿಸಿಕೊಟ್ಟ ಇತಿಹಾಸ ಜಿಂಬಾಬ್ವೆಗಿದೆ. ಬಿಬಿಸಿ ಮತ್ತು ಇಕನಾಮಿಕ್ಸ್ ಗಳು ಹೇಳಿದ್ದು ಪರಮ ಸುಳ್ಳು ಎಂಬುದನ್ನು ವಾಲ್ಚೆಕ್ ಸಾಬೀತುಪಡಿಸಿದರು. ನಿಜವಾಗಿ, ಇಂಥ ಬರಹಗಳಿಗೆ ಮಾಧ್ಯಮಗಳಲ್ಲಿ ಜಾಗ ಸಿಗುವುದು ಕಡಿಮೆ. ಜುಜುಬಿ 85 ಮಂದಿಯ ಕೈಯಲ್ಲಿ ಇಷ್ಟು ದೊಡ್ಡ ಜಗತ್ತಿನ ಹೆಚ್ಚಿನ ಸಂಪತ್ತುಗಳು ಯಾಕೆ ಕೇಂದ್ರೀಕೃತವಾಗಿವೆ ಎಂಬ ಪ್ರಶ್ನೆಯನ್ನು ಕೇಳುವ ಸಾಮರ್ಥ್ಯ ಮುಖ್ಯವಾಹಿನಿಯ ಮಾಧ್ಯಮಗಳಿರುವುದಿಲ್ಲ. ಯಾಕೆಂದರೆ, ಈ ಮಾಧ್ಯಮವನ್ನು ನಿಯಂತ್ರಿಸುತ್ತಿರುವುದೇ ಈ ಶ್ರೀಮಂತರು. ಭಾರತದ ಪ್ರಮುಖ ಟಿ.ವಿ. ಚಾನೆಲ್‍ಗಳು ಮತ್ತು ಪತ್ರಿಕೆಗಳು ಯಾರ ನಿಯಂತ್ರಣದಲ್ಲಿವೆ ಎಂಬ ಅಧ್ಯಯನಕ್ಕೆ ಇಳಿದಾಗ ಇದು ಇನ್ನಷ್ಟು ಸ್ಪಷ್ಟವಾಗುತ್ತದೆ. ಸರಕಾರಗಳಿಗೂ ಅವರನ್ನು ಎದುರು ಹಾಕಿಕೊಳ್ಳುವ ಸಾಮರ್ಥ್ಯ ಬಹುತೇಕ ಇರುವುದಿಲ್ಲ. ಅವರಿಲ್ಲದಿದ್ದರೆ ಪಕ್ಷ ನಡೆಯದಂಥ ಸ್ಥಿತಿ ಇರುತ್ತದೆ. ಅವರಿಗಾಗಿ ನೀತಿ-ನಿಯಮಗಳನ್ನು ಒಂದೋ ಸಡಿಲಿಸಬೇಕಾಗುತ್ತದೆ ಅಥವಾ ಪಕ್ಷಪಾತ ತೋರಬೇಕಾಗುತ್ತದೆ. ಹೀಗೆ ಶ್ರೀಮಂತರೇ ಶ್ರೀಮಂತರಾಗುತ್ತಾರೆ. ಅಷ್ಟಕ್ಕೂ, 
   ರಕ್ಷಣಾ ಹಗರಣದಿಂದಾಗಿ ವಾಜಪೇಯಿ ನೇತೃತ್ವದ ಎನ್‍ಡಿಎ ಸರಕಾರವು ತೀವ್ರ ಮುಜುಗರ ಅನುಭವಿಸುತ್ತಿದ್ದ ಸಂದರ್ಭದಲ್ಲೇ ಪಾರ್ಲಿಮೆಂಟ್ ನ ಮೇಲೆ ದಾಳಿಯಾಗುವುದು ಮತ್ತು ಕರ್ಕರೆ, ಸಾಲಸ್ಕರ್‍ರಂಥ ಪ್ರಮುಖ ಮೂವರು ಪೊಲೀಸಧಿಕಾರಿಗಳು ಆಶ್ಚರ್ಯಕರ ರೀತಿಯಲ್ಲಿ ಮುಂಬೈ ಭಯೋತ್ಪಾದಕ ದಾಳಿಯ ವೇಳೆ ಸಾವಿಗೀಡಾಗುವುದನ್ನು ಹೇಗೆ ಅನುಮಾನಿಸದಿರಲು ಸಾಧ್ಯ?
Thursday, July 2, 2015

ರೋಮ್ ಮಾರ್ಚ್, ರಥಯಾತ್ರೆ ಮತ್ತು ಮೋದಿ..

ಶಂಕರ್ ಗುಹಾ ನಿಯೋಗಿ
    ನರೇಂದ್ರ ಮೋದಿಯವರು ಪ್ರಧಾನಿಯಾದ ಕೆಲವೇ ವಾರಗಳಲ್ಲಿ, “ಭಾರತದ ಅಭಿವೃದ್ಧಿ ಯೋಜನೆಗಳನ್ನು ತಡೆಯಲು ವಿದೇಶಿ ದೇಣಿಗೆ ಪಡೆಯುವ ಎನ್‍ಜಿಓ(ಸರಕಾರೇತರ ಸಂಸ್ಥೆ)ಗಳ ಸಂಚು” (Concerted efforts by select foreign funded NGOs to take down Indian development projects) ಎಂಬ ಶೀರ್ಷಿಕೆಯಲ್ಲಿ ಭಾರತದ ಗುಪ್ತಚರ ಇಲಾಖೆಯು (IB) 21 ಪುಟಗಳ ವರದಿಯನ್ನು ಸರಕಾರಕ್ಕೆ ಸಲ್ಲಿಸಿತು. ಸುಮನ್ ಸಹಾಯ್, ವಂದನಾ ಶಿವ, ಕವಿತಾ ಕುರುಗಂತಿ, ಉದಯ ಕುಮಾರ್, ಅರುಣಾ ರಾಡ್ರಿಗಸ್, ಸ್ವಾಮಿ ಅಗ್ನಿವೇಶ್.. ಮುಂತಾದ ಸಾಮಾಜಿಕ ಕಾರ್ಯಕರ್ತರ ಮೇಲೆ ಈ ವರದಿ ಶಂಕೆ ವ್ಯಕ್ತ ಪಡಿಸಿತು. ಗ್ರೀನ್‍ಪೀಸ್, ಆ್ಯಕ್ಷನ್ ಏಡ್, ಆಶಾ.. ಮುಂತಾದ ಎನ್‍ಜಿಓಗಳೂ ಶಂಕೆಗೊಳಗಾದವು. ಅದರಲ್ಲೂ ಗ್ರೀನ್‍ಪೀಸ್‍ನ ಮೇಲೆ ಮೋದಿ ಸರಕಾರ ಎಷ್ಟರ ಮಟ್ಟಿಗೆ ದ್ವೇಷದಿಂದ ವರ್ತಿಸಿ ತೆಂದರೆ, ಅದರ ಪ್ರಮುಖ ಕಾರ್ಯಕರ್ತೆ ಪ್ರಿಯಾ ಪಿಳ್ಳೆಯನ್ನು ಲಂಡನ್‍ಗೆ ತೆರಳದಂತೆ ಭಾರತದ ವಿಮಾನ ನಿಲ್ದಾಣದಲ್ಲೇ ತಡೆಹಿಡಿಯಲಾಯಿತು. ಮಧ್ಯ ಪ್ರದೇಶದ ಮಹನ್ ಎಂಬಲ್ಲಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಯೋಜನೆಯಿಂದ ನಿರ್ಗತಿಕರಾಗುವ ಆದಿವಾಸಿಗಳ ಕುರಿತಂತೆ ಬ್ರಿಟಿಷ್ ಪಾರ್ಲಿಮೆಂಟ್‍ನಲ್ಲಿ ವಿಷಯ ಮಂಡಿಸುವುದು ಪ್ರಿಯಾ ಪಿಳ್ಳೆಯ ಪ್ರಯಾಣದ ಉದ್ದೇಶವಾಗಿತ್ತು. 40 ರಾಷ್ಟ್ರಗಳಲ್ಲಿ ಚಟುವಟಿಕೆಯಲ್ಲಿರುವ ಗ್ರೀನ್‍ಪೀಸ್, ಜಗತ್ತಿನಲ್ಲಿಯೇ ಅತಿ ದೊಡ್ಡ ಸರಕಾರೇತರ ಸಂಸ್ಥೆ. ಕಲ್ಲಿದ್ದಲು ಮತ್ತು ಪರಮಾಣು ಆಧಾರಿತ ವಿದ್ಯುತ್ ಯೋಜನೆಗಳೇ ಅದರ ಮುಖ್ಯ ಗುರಿ. ಇಂಥ ಬೃಹತ್ ಯೋಜನೆಗಳಿಂದ ಆಗಬಹುದಾದ ಪರಿಸರ ನಾಶ, ನಿರ್ವಸಿತರು, ಕೃಷಿ ಭೂಮಿ.. ಸಹಿತ ಒಟ್ಟು ಹಾನಿಗಳ ಬಗ್ಗೆ ಅದು ಜನಜಾಗೃತಿ ಮೂಡಿಸುವುದನ್ನು ಈವರೆಗೂ ಮಾಡುತ್ತಾ ಬಂದಿದೆ. ನಿಜವಾಗಿ, ಮೋದಿಯವರ ಕಾಕದೃಷ್ಟಿ ಗ್ರೀನ್‍ಪೀಸ್‍ನ ಮೇಲೆ ಬೀಳುವುದಕ್ಕೆ ಇನ್ನೊಂದು ಕಾರಣವೂ ಇದೆ- ಅದುವೇ ಅದಾನಿ. ‘Research breaking: Adani's record of environmental destruction and non compliance with regulations’ (ಅದಾನಿ ಕಂಪೆನಿ ನಡೆಸಿರುವ ಪರಿಸರ ನಾಶ ಮತ್ತು ಕಾನೂನು ಉಲ್ಲಂಘನೆಯ ಅಧ್ಯಯನಾತ್ಮಕ ವರದಿ) ಎಂಬ ಹೆಸರಲ್ಲಿ 2014 ಮಾರ್ಚ್‍ನಲ್ಲಿ ಗ್ರೀನ್‍ಪೀಸ್ ಸಂಸ್ಥೆಯು ವಿಸ್ತೃತ ವರದಿಯನ್ನು ಬಿಡುಗಡೆಗೊಳಿಸಿತ್ತು. ಮೋದಿಯವರ ಪರಮಾಪ್ತರಾದ ಅದಾನಿಯವರ ‘ಕೋಲ್ ಇಂಡಿಯಾ ಕಂಪೆನಿ’ಗೆ ಪರಿಸರ ನಾಶದಲ್ಲಿ ದೀರ್ಘ ಇತಿಹಾಸವಿರುವುದನ್ನು ಆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಅನಧಿಕೃತ ನಿರ್ಮಾಣ, ತೆರಿಗೆ ವಂಚನೆ ಮತ್ತು ಅಧಿಕಾರಿಗಳಿಗೆ ಲಂಚ ನೀಡಿದ್ದೂ ಸೇರಿದಂತೆ ಅದಾನಿ ಕಂಪೆನಿಯ ನಡೆಯನ್ನು ಅದರಲ್ಲಿ ಉಲ್ಲೇಖಿಸಿ ಪ್ರಶ್ನಿಸಲಾಗಿತ್ತು. ಅದಾನಿಯವರ ಕೋಲ್ ಇಂಡಿಯಾ ಕಂಪೆನಿಯು ಜಗತ್ತಿನಲ್ಲಿಯೇ ಪ್ರಮುಖ ಕಲ್ಲಿದ್ದಲು ಸಂಸ್ಥೆ. ಆಸ್ಟ್ರೇಲಿಯಾದಲ್ಲಿ ಅದು 16.5 ಬಿಲಿಯನ್ ಡಾಲರ್ ಮೊತ್ತದ ಕಲ್ಲಿದ್ದಲು ಗುತ್ತಿಗೆಯನ್ನು ಪಡಕೊಂಡದ್ದು ಮತ್ತು ಅಲ್ಲಿನ ಆಡಳಿತ ಮತ್ತು ವಿರೋಧ ಪಕ್ಷಗಳಿಗೆ ಆ ಮೊದಲೇ ಪಾರ್ಟಿ ಫಂಡ್ ನೀಡಿದ್ದು ಈ ಹಿಂದೆ ಸುದ್ದಿಯಾಗಿತ್ತು. ನಿಜವಾಗಿ, ಗ್ರೀನ್‍ಪೀಸ್‍ನ ಮೇಲೆ ಕ್ರಮ ಕೈಗೊಂಡರೆ ಅದು ಜಾಗತಿಕವಾಗಿ ಸಂಚಲನ ಸೃಷ್ಟಿಸಲಾರದೆಂಬುದು ಮೋದಿಯವರಿಗೆ ಖಚಿತವಾಗಿ ಗೊತ್ತಿತ್ತು. ಯಾಕೆಂದರೆ, ಅದು ಬೃಹತ್ ಅಭಿವೃದ್ಧಿ ಯೋಜನೆಗಳನ್ನು ವಿಶ್ವದಾದ್ಯಂತ ಪ್ರಶ್ನಿಸುತ್ತಿದೆ. ಅಂಥವುಗಳನ್ನು ಖಂಡಿಸಿ ಪ್ರತಿಭಟಿಸುತ್ತಿದೆ. ಫೋಸ್ಕೋ, ವೇದಾಂತ, ಪರಮಾಣು ವಿದ್ಯುತ್ ಸ್ಥಾವರಗಳು, ನರ್ಮದಾ ಯೋಜನೆ.. ಸಹಿತ ಎಲ್ಲವೂ ಅದರ ವಿರೋಧಕ್ಕೆ ಗುರಿಯಾಗಿದೆ. ಇವುಗಳಿಂದಾಗಿ ನಿರ್ವಸಿತರಾಗುವ ಜನರಿಗೆ ಅದು ಧ್ವನಿಯನ್ನು ಕೊಡುತ್ತಿದೆ. ಈ ಹಿಂದೆ ಫ್ರಾನ್ಸ್ ಸರಕಾರವು ಮೊರುರಾದಲ್ಲಿ ಅಣು ಪರೀಕ್ಷೆ ನಡೆಸಿದ್ದನ್ನು ಗ್ರೀನ್‍ಪೀಸ್ ಪ್ರತಿಭಟಿಸಿದಾಗ ಫ್ರಾನ್ಸ್ ಅದರ ಕತ್ತು ಹಿಸುಕಿತ್ತು. ಹಾಗಂತ, ಈ ವಿಷಯದಲ್ಲಿ ಮೋದಿ ಒಂಟಿಯಲ್ಲ.    ಪುರುಷೋತ್ತಮ್ ದಾಸ್ ಕುದಾಲ್‍ರ ನೇತೃತ್ವದಲ್ಲಿ 1982ರಲ್ಲಿ ಇಂದಿರಾ ಗಾಂಧಿಯವರು ಎನ್‍ಜಿಓಗಳ ತನಿಖೆಗಾಗಿ ಸಮಿತಿಯನ್ನು ರಚಿಸಿದ್ದರು. 1975ರಲ್ಲಿ ತುರ್ತು ಪರಿಸ್ಥತಿಯನ್ನು ಹೇರಿ ಆ ಬಳಿಕ ಜನತಾ ಸರಕಾರ ಅಧಿಕಾರಕ್ಕೆ ಬಂದು ಮುಂದಿನ ಚುನಾವಣೆಯಲ್ಲಿ ಮತ್ತೆ ಇಂದಿರಾ ಗಾಂಧಿಯವರೇ ಅಧಿಕಾರಕ್ಕೇರಿದ ಸಂದರ್ಭವಾಗಿತ್ತದು. ಜನತಾ ಸರಕಾರದ ಗೆಲುವಿನಲ್ಲಿ ಎನ್‍ಜಿಓಗಳ ಪಾತ್ರವಿದೆ ಎಂಬುದು ಅವರ ಅನುಮಾನವಾಗಿತ್ತು. 'ಎನ್‍ಜಿಓಗಳಿಗೆ ಅಮೇರಿಕದ ಗುಪ್ತಚರ ಸಂಸ್ಥೆ ಸಿಐಎ  ದೇಣಿಗೆ ನೀಡಿದೆ ಮತ್ತು ಇದರಲ್ಲಿ ಸಂಘಪರಿವಾರದ ನಾಯಕರೂ ಭಾಗಿಯಾಗಿದ್ದಾರೆ'...  ಎಂದೂ ವರದಿಯಲ್ಲಿ ಹೇಳಲಾಗಿತ್ತು.    ನಿಜವಾಗಿ, ಸರ್ವಾಧಿಕಾರಿ ಮನಸ್ಥಿತಿಯ ಮಂದಿಯೇ ಹೀಗೆ. ಅದು ಇಂದಿರಾ ಆಗಿರಬಹುದು ಅಥವಾ ಮೋದಿ ಆಗಿರಬಹುದು - ಅವರು ಸದಾ ಭೀತಿಯಲ್ಲೇ ಬದುಕುತ್ತಿರುತ್ತಾರೆ. ವಿರೋಧಿ ಧ್ವನಿಗಳನ್ನು ಮಟ್ಟ ಹಾಕುತ್ತಾರೆ. ತನಿಖೆಯ ಹೆಸರಲ್ಲಿ ಹಿಂಸೆ ಕೊಡುತ್ತಾರೆ. ಒಮ್ಮೆ ಅಧಿಕಾರಕ್ಕೇರಿದ ಬಳಿಕ ಮತ್ತೆಂದೂ ಅಧಿಕಾರ ಬಿಟ್ಟು ಕೊಡಲು ಒಪ್ಪದ ಅಸಮರ್ಪಕ ರಾಜಕೀಯ ಮನಸ್ಥಿತಿ ಭಾರತದ್ದು. ಪ್ರಿಯಾ ಪಿಳ್ಳೆಯನ್ನು ದೇಶವಿರೋಧಿಯಂತೆ ನಡೆಸಿಕೊಂಡ
 
ರೋಮ್ ಮಾರ್ಚ್
ಮೋದಿಯವರಂತೆಯೇ 1977ರಲ್ಲಿ ಅಂದಿನ ಜನತಾ ಸರಕಾರವು ಶಂಕರ್ ಗುಹಾ ನಿಯೋಗಿಯನ್ನೂ ನಡೆಸಿ ಕೊಂಡಿತ್ತು. ಛತ್ತೀಸ್‍ಗಢದ ರಾಜಹೋರಾ ಕಲ್ಲಿದ್ದಲು ಗಣಿಯಲ್ಲಿ ಗುಲಾಮರಂತೆ ಜೀವಿಸುತ್ತಿದ್ದ ಆದಿವಾಸಿಗಳ ಪರ ಪ್ರತಿಭಟನೆ ಹಮ್ಮಿಕೊಂಡದ್ದಕ್ಕಾಗಿ ಅಂದಿನ ಮಧ್ಯಪ್ರದೇಶ ಸರಕಾರ ಅವರನ್ನು 1977 ಜೂನ್ 2ರಂದು ಬಂಧಿಸಿತ್ತು. ‘ರಷ್ಯಾದ ಸಹಾಯದಿಂದ ನಡೆಸಲಾಗುವ ಈ ಗಣಿಗಾರಿಕೆಯ ವಿರುದ್ಧ ಅಮೇರಿಕದ ಸಿಐಎ ಯು ನಿಯೋಗಿಯ ಮೂಲಕ ಸಂಚು ನಡೆಸಿದೆ..’ ಎಂದು ಸರಕಾರ ವಾದಿಸಿತ್ತು. ಒಂದು ರೀತಿಯಲ್ಲಿ, 1975ರಲ್ಲಿ ಈ ದೇಶದ ಮೇಲೆ ಮೊದಲ ಬಾರಿಗೆ ತುರ್ತು ಸ್ಥಿತಿಯನ್ನು ಹೇರಲಾಯಿತಾದರೂ ಅದು ಎರಡು ವರ್ಷಗಳಲ್ಲೇ ಅಧಿಕೃತವಾಗಿ ಕೊನೆಗೊಂಡಿದೆ. ಆದರೆ 1991ರ ಬಳಿಕ ಈ ದೇಶದಲ್ಲಿ ಅನಧಿಕೃತ ಮತ್ತು ಅಘೋಷಿತ ತುರ್ತು ಸ್ಥಿತಿಯೊಂದು ಹೆಚ್ಚೂ-ಕಡಿಮೆ ಜಾರಿಯಲ್ಲಿದೆ. 1922 ಅಕ್ಟೋಬರ್ 22ರಿಂದ 29ರ ವರೆಗೆ ಇಟಲಿಯ ಸರ್ವಾಧಿಕಾರಿ ಬೆನಿಟೋ ಮುಸಲೋನಿಯು ‘ರೋಮ್ ಮಾರ್ಚ್' ಎಂಬ ರಾಲಿಯನ್ನು ಹಮ್ಮಿಕೊಂಡಿದ್ದರು. ‘ನಮಗೆ ಅಧಿಕಾರ ಕೊಡಿ’ ಎಂಬ ಘೋಷಣೆಯೊಂದಿಗೆ ಸುಮಾರು 60 ಸಾವಿರ ಕಪ್ಪು ಶರ್ಟ್ ಧರಿಸಿದ ಅವರ ಬೆಂಬಲಿಗರು ಇಟಲಿಯಾದ್ಯಂತ ರಾಲಿಯಲ್ಲಿ ತೆರಳಿದ್ದರು. 90ರ ದಶಕದಲ್ಲಿ ಅಡ್ವಾಣಿಯವರ ನೇತೃತ್ವದಲ್ಲಿ ನಡೆದ ರಥಯಾತ್ರೆ ಅದನ್ನೇ ಹೋಲುತ್ತದೆ. ಆ ಬಳಿಕ ಈ ದೇಶದಲ್ಲಿ ಭೀತಿಯ ರಾಜಕೀಯವೊಂದು ನಡೆಯುತ್ತಿದೆ. ರಥ ತೆರಳಿದಲ್ಲೆಲ್ಲಾ ಕೋಮು ವಿಭಜನೆ, ರಕ್ತಪಾತ ನಡೆಯಿತು. ಮಂಡಲ್ ವಿರೋಧಿ ಚಳವಳಿ, ರಾಜೀವ್ ಗಾಂಧಿ ಹತ್ಯೆ, ನವ ಉದಾರೀಕರಣದ ಪ್ರವೇಶ.. ಎಲ್ಲವೂ 90ರ ಬಳಿಕದ ಘಟನೆಗಳಾಗಿವೆ. ತುರ್ತು ಸ್ಥಿತಿಯಲ್ಲಿ ಕಾಣಿಸಿಕೊಳ್ಳುವ ಭೀತಿಯು 90ರ ಬಳಿಕ ರಾಜಕಾರಣದಲ್ಲಿ ಧಾರಾಳವಾಗಿ ಕಾಣಸಿಗುತ್ತದೆ. ಪ್ರತಿ ಚುನಾವಣೆಯ ಸಂದರ್ಭದಲ್ಲೂ ಜಾತ್ಯತೀತತೆ, ಜಾತೀಯತೆ, ಕೋಮುವಾದ, ಬಾಯಿಮುಚ್ಚಿ, ಪಾಕ್‍ಗೆ ಹೋಗಿ, ಸಮುದ್ರಕ್ಕೆ ಹಾರಿ.. ಎಂಬಂತಹ ಭೀತಿಕಾರಕ ಹೇಳಿಕೆಗಳು ಮಾಮೂಲಾಗುತ್ತಿವೆ. ತುರ್ತುಸ್ಥಿತಿ ಎಂಬ ಪದವನ್ನು ಪ್ರಯೋಗಿಸದೆಯೇ ಅದನ್ನು ಅನಧಿಕೃತವಾಗಿ ಜಾರಿಯಲ್ಲಿಡುವುದಕ್ಕೆ ಪ್ರಯತ್ನಗಳು ನಡೆಯುತ್ತಿವೆ. 1971ರಲ್ಲಿ ಕಾಂಗ್ರೆಸ್ ವಿಭಜನೆಗೊಂಡ ನಂತರ ಗರೀಬಿ ಹಠಾವೊ ಮತ್ತು ಬ್ಯಾಂಕ್ ರಾಷ್ಟ್ರೀಕರಣದಂಥ ಇಶ್ಯೂಗಳನ್ನು ಮುಂದಿಟ್ಟುಕೊಂಡು ಇಂದಿರಾಗಾಂಧಿಯವರು ಚುನಾವಣೆಯನ್ನು ಎದುರಿಸಿದರು. ಮಾತ್ರವಲ್ಲ, 352 ಸ್ಥಾನಗಳನ್ನು ಗಳಿಸಿದರು. ಅದೇ ವರ್ಷದ ಕೊನೆಯಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧ ಸಾರಿ ಬಾಂಗ್ಲಾವನ್ನು ವಿಮೋಚನೆಗೊಳಿಸಿದರು. ಅದಕ್ಕಾಗಿ ವಾಜಪೇಯಿಯವರಿಂದ ‘ದುರ್ಗೆ' ಎಂಬ ಬಿರುದನ್ನೂ ಗಿಟ್ಟಿಸಿಕೊಂಡರು. ಆದರೆ, ಇದಾಗಿ ಕೇವಲ 3 ವರ್ಷಗಳೊಳಗೆ ಇಂದಿರಾ ಎಂತಹ ಪಾತಾಳಕ್ಕೆ ಕುಸಿದರೆಂದರೆ, ಅವರು ತುರ್ತುಸ್ಥಿತಿಯ ಮೊರೆ ಹೋದರು. 1973ರಲ್ಲಿ ನಡೆದ ಅರಬ್-ಇಸ್ರೇಲ್ ಯುದ್ಧವು ಭಾರತೀಯ ಅರ್ಥವ್ಯವಸ್ಥೆಯನ್ನು ತೀವ್ರವಾಗಿ ಬಾಧಿಸಿತ್ತು. ಬೆಲೆ ಏರಿಕೆಯಿಂದಾಗಿ ಜನರು ಕಂಗಾಲಾಗಿದ್ದರು. ಗುಜರಾತ್‍ನ ಎಲ್.ಡಿ. ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕ್ಯಾಂಟೀನ್ ಆಹಾರಕ್ಕೆ 20% ಬೆಲೆ ಏರಿಸಿದ್ದನ್ನು ಖಂಡಿಸಿ ಪ್ರತಿಭಟನೆ ಆರಂಭಿಸಿದ್ದರು. ಈ ಪ್ರತಿಭಟನೆ ಆ ಬಳಿಕ ಇತರ ರಾಜ್ಯಗಳಿಗೂ ಹಮ್ಮಿಕೊಂಡು ಚಳವಳಿಯ ರೂಪ ಪಡೆಯಿತು. 1974 ಜನವರಿಯಲ್ಲಿ ಗುಜರಾತ್‍ನಲ್ಲಿ ನಡೆದ ಪ್ರತಿಭಟನೆಯ ವಿರುದ್ಧ ಸರಕಾರ ಕೈಗೊಂಡ ಕಾರ್ಯಾಚರಣೆಯಲ್ಲಿ 100ರಷ್ಟು ಮಂದಿ ಸಾವಿಗೀಡಾದರು. ಸರಕಾರಿ ಉದ್ಯೋಗಿಗಳೂ, ಕಾರ್ಮಿಕರೂ ಪ್ರತಿಭಟನೆಯಲ್ಲಿ ಭಾಗವಹಿಸತೊಡಗಿದರು. ಇಂದಿರಾ ತುರ್ತು ಸ್ಥಿತಿಯನ್ನು ಹೇರಿದರು.    1984ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, “ಯಾವ ಕಾರಣಕ್ಕಾಗಿ ನೀವು ಕೆಲವರ ವಾಹನಗಳಲ್ಲಿ ಪ್ರಯಾಣಿಸುವಾಗ ಭಯ ಪಡುತ್ತೀರಿ..” ಎಂಬ ಜಾಹೀರಾತನ್ನು ಕಾಂಗ್ರೆಸ್ ಪ್ರಕಟಿಸಿತ್ತು. ಆ ಜಾಹೀರಾತಿನಲ್ಲಿ ‘ಸಿಕ್ಖ್ ಡ್ರೈವರ್’ನಂತೆ ಕಾಣುವ ವ್ಯಕ್ತಿಯ ರೇಖಾಚಿತ್ರವೂ ಇತ್ತು. ಇಂದಿರಾ ಗಾಂಧಿಯವರ ಹತ್ಯೆಯ ಬಳಿಕ ನಡೆದ ಆ ಚುನಾವಣೆಯ ಈ ಜಾಹೀರಾತನ್ನು ಮುಖ್ಯವಾಹಿನಿಯ ಪತ್ರಿಕೆಗಳೆಲ್ಲವೂ ಮುದ್ರಿಸಿದ್ದುವು. ಬಹುಶಃ, ಇವತ್ತು ಈ ಜಾಹೀರಾತನ್ನು ನಗಣ್ಯವಾಗಿಸುವಂತೆ ಹೇಳಿಕೆಗಳು ಕೇಳಿ ಬರುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರ ಪಕ್ಷೀಯರು ಮತ್ತು ಬೆಂಬಲಿಗರೇ ಇಂಥ ಹೇಳಿಕೆಗಳನ್ನು ಹೊರಡಿಸುತ್ತಿದ್ದರೂ ಅವರು ಮಾತಾಡುತ್ತಿಲ್ಲ. ನಿಜವಾಗಿ, ಇಂದಿರಾ ಗಾಂಧಿಯವರು ತುರ್ತು ಸ್ಥಿತಿಯನ್ನು ಹೇರಲು ಮುಂದಾದದ್ದೇ ಸವಾಲುಗಳು ಎದುರಾದಾಗ ಮತ್ತು ಅದನ್ನು ಸಹಜ ಪ್ರಜಾತಾಂತ್ರಿಕ ರೀತಿಯಲ್ಲಿ ಎದುರಿಸಲು ಅಶಕ್ತರಾದಾಗ. ನರೇಂದ್ರ ಮೋದಿಯವರು ತನ್ನ ಬೇಕಾಬಿಟ್ಟಿ ಅಭಿವೃದ್ಧಿ ಯೋಜನೆಗೆ NGO ಗಳು ತಡೆ ಎಂಬುದನ್ನು ಪರಿಗಣಿಸಿಯೇ ಅವುಗಳನ್ನು ಶಂಕಿತ ಪಟ್ಟಿಯಲ್ಲಿರಿಸಿದರು. ಚುನಾವಣೆಯ ಸಂದರ್ಭದಲ್ಲಿ ಅವರು ಹುಟ್ಟಿಸಿದ ಭರವಸೆಯು ಒಂದೊಂದಾಗಿ ಕಳಚಿಕೊಳ್ಳುತ್ತಾ ಬರುತ್ತಿರುವಂತೆಯೇ ಸ್ವಚ್ಛ ಭಾರತ್ ಮತ್ತು ಯೋಗ ದಿನವನ್ನು ಆಚರಿಸಿದರು. ಇದೀಗ ಅಧಿಕಾರದ ಒಂದು ವರ್ಷ ಪೂರ್ತಿಯಾಗುತ್ತಿರುವ ಸಂದರ್ಭದಲ್ಲೇ ಆಂತರಿಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅಷ್ಟಕ್ಕೂ, ಅವರ ಆಡಳಿತಾತ್ಮಕ ರೀತಿಯೇ ಸರ್ವಾಧಿಕಾರಿ ಸ್ವರೂಪದ್ದು. ಸಚಿವ ಸಂಪುಟವನ್ನು ತೆರೆಮರೆಗೆ ಸರಿಸಿ ಎಲ್ಲದರಲ್ಲೂ ‘ತಾನೇ' ಕಾಣಿಸಿಕೊಳ್ಳುವ ತವಕ. ಪಾಕ್‍ನ ಮೇಲೆ ಇಂದಿರಾ ದಾಳಿ ಮಾಡಿದಂತೆಯೇ ಮ್ಯಾನ್ಮಾರ್‍ನ ಗಡಿಯೊಳಕ್ಕೆ ನುಗ್ಗಿರುವುದನ್ನು ಮಹಾನ್ ಸಾಧನೆಯಾಗಿ ಅವರ ಪಕ್ಷ ಬಿಂಬಿಸಿಕೊಳ್ಳುತ್ತಿದೆ. ಇಂದಿರಾರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷವು ವ್ಯಕ್ತಿ ಕೇಂದ್ರಿತವಾಗಿತ್ತು. ಮೋದಿ ನಾಯಕತ್ವದಲ್ಲಿ ಬಿಜೆಪಿಯೂ ವ್ಯಕ್ತಿ ಕೇಂದ್ರಿತವಾಗುತ್ತಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇಂಥ ಬದಲಾವಣೆ ಯಾವತ್ತೂ ಅಪಾಯಕಾರಿಯೇ.
     ಹಾಗಂತ, ಸುಮಾರು 8,875ರಷ್ಟು NGO ಗಳ ಪರವಾನಿಗೆಯನ್ನು ರದ್ದುಗೊಳಿಸಿರುವ ನರೇಂದ್ರ ಮೋದಿಯವರನ್ನು ಅನುಮಾನಿಸುವುದಕ್ಕೆ ಕಾರಣಗಳು ಇನ್ನೂ ಇವೆ.