Monday, December 31, 2012

ಇಸ್ಲಾಮಿ ಕಾನೂನುಗಳನ್ನು ಭಾರತದಲ್ಲಿ ಯಾಕೆ ಪ್ರಯೋಗಿಸಿ ನೋಡಬಾರದು?

   ಯುವಕರೇ ಮತ್ತು ಯುವತಿಯರೇ,
ನಿಮ್ಮ ಗೆಳೆಯ ವರದಕ್ಷಿಣೆ ಪಡೆದುಕೊಂಡು ಓರ್ವ ಹೆಣ್ಣನ್ನು ಪತ್ನಿಯಾಗಿ ಸ್ವೀಕರಿಸಿದಾಗ ನಿಮ್ಮ ಪ್ರತಿಕ್ರಿಯೆ ಹೇಗಿತ್ತು, ಪ್ರತಿಭಟಿಸಿದ್ದೀರಾ? ಇದು ತಪ್ಪು ಅಂದಿದ್ದೀರಾ? ನಿನ್ನ ಮದುವೆಗೆ ಬರಲಾರೆ ಅಂತ ಮುಖಕ್ಕೆ ಮುಖ ಕೊಟ್ಟು ಹೇಳಿದ್ದೀರಾ? ಅದೇ ಹಣದಿಂದ ಆತ ಬೈಕ್ ಖರೀದಿಸಿ ತಂದಾಗ ನೀವು ಹೇಗೆ ಪ್ರತಿಕ್ರಿಯಿಸಿದ್ದಿರಿ? ಬೈಕ್‍ನಲ್ಲಿ ಪೇಟೆಗೆ ಒಂದು ಸುತ್ತು ಬಂದು, ಪರ್‍ಫೆಕ್ಟ್ ಸೆಲೆ ಕ್ಷನ್ ಅಂತ ಶಹಬ್ಬಾಸ್‍ಗಿರಿ ಕೊಟ್ಟದ್ದು ನೀವೇ ಅಲ್ಲವೇ? ಮದುವೆಯ ದಿನ ನಗುಮುಖದಿಂದ ಸ್ವಾಗತಿಸುತ್ತಿದ್ದ ವಧುವಿನ ತಂದೆಯನ್ನು ನೋಡಿ ನೀವೂ ಮಂದಹಾಸ ಬೀರಿದ್ದಲ್ಲದೇ ಅವರ ನಗುವಿನ ಹಿಂದೆ ಇರುವ ವಿಷಾದವನ್ನು, ಆ ವಿಷಾದಕ್ಕಿರುವ ಕಾರಣವನ್ನು ಅರಿತುಕೊಳ್ಳಲು ನೀವು ಪ್ರಯತ್ನಿಸಿದ್ದಿರೇ? ಹೇಳಿದಷ್ಟು ಚಿನ್ನ ಹಾಕಲಿಲ್ಲ ಎಂದು ಆಪಾದಿಸಿ ಪತ್ನಿಯನ್ನು ತವರಿಗೆ ಅಟ್ಟಿದ ನಿಮ್ಮ ಗೆಳೆಯನನ್ನು ನೀವು ತರಾಟೆಗೆ ತೆಗೆದುಕೊಂಡಿದ್ದಿರೆ? ಹೆಣ್ಣು ಶಿಶುವಿಗೆ ಜನ್ಮ ನೀಡಿದ ಪತ್ನಿಯನ್ನು ನಿಂದಿಸಿ ಶಿಶುವಿನ ಮುಖವನ್ನೂ ನೋಡದೆ ಹಿಂತಿರುಗಿದ ನಿಮ್ಮ ಗೆಳೆಯನಿಗೆ ನೀವು ಉಪದೇಶಿಸಿದ್ದೀರಾ? ಮೊದಲನೆಯದ್ದು ಗಂಡಾಗಲಿ ಕಣೇ ಎಂದ ಗೆಳತಿಗೆ, ‘ನೀನೂ ಹೆಣ್ಣಲ್ಲವೇ' ಎಂದು ನೆನಪಿಸಿದ್ದೀರಾ? ಆರತಿಗೊಂದು ಕೀರುತಿಗೊಂದು ಎಂಬ ಪದಪ್ರಯೋಗಕ್ಕೆ ವಿರೋಧ ವ್ಯಕ್ತಪಡಿಸಿ, ಹೆಣ್ಣಿನಿಂದಲೂ ಕೀರ್ತಿ ಸಾಧ್ಯ ಎಂದು ತಿದ್ದಲು ಪ್ರಯತ್ನಿಸಿದ್ದೀರಾ? ಸಹೋದರನಿಗೆ ವಧುವನ್ನು ಹುಡುಕುತ್ತಿದ್ದಿರಲ್ಲ, ಆಗ ಆಯ್ಕೆಯ ಮಾನದಂಡಗಳಾದರೂ ಯಾವುದಿತ್ತು? ಹೆಣ್ಣಿಗೆ ಅವಮಾನವಾಗುವ ರೀತಿಯಲ್ಲಿ ನೀವು ನಡಕೊಂಡಿದ್ದಿರೇ? ಎಷ್ಟು ಹೆಣ್ಣು ಮಕ್ಕಳ ಕಣ್ಣೀರಿಗೆ ನಿಮ್ಮ ಆಯ್ಕೆ ವಿಧಾನ ಕಾರಣವಾಗಿತ್ತು? ಅಣ್ಣನ ಪತ್ನಿಯಾಗಿ ನಿಮ್ಮ ಮನೆಗೆ ಬಂದ ಹೆಣ್ಣು ಮಗಳೊಂದಿಗೆ ಓರ್ವ ನಾದಿನಿಯೆಂಬ ನೆಲೆಯಲ್ಲಿ ನೀವು ಹೇಗೆ ವರ್ತಿಸಿದ್ದೀರಿ? ಹೆಣ್ಣನ್ನು, ಚಿಕ್‍ನೀ ಚಮೇಲಿ, ಹಲ್ಕಟ್ ಜವಾನಿ.. ಎಂದೋ ಅಥವಾ ಇನ್ನಿತರ ರೂಪದಲ್ಲೋ ಅವಮಾನಿಸುವ ಧಾಟಿಯಲ್ಲಿರುವ ಹಾಡುಗಳನ್ನು ಪುರುಷ ಗಾಯಕನ ಜೊತೆ ಭಾರೀ ಉತ್ಸಾಹದಿಂದ ನೀವು ಹಾಡಿಲ್ಲವೇ? ಆಗೆಲ್ಲ ನಿಮಗೆ, ದುಡ್ಡಿಗಾಗಿ ಹೆಣ್ಣಿನ ಸ್ಥಾನ ಮಾನ ಬಿಕರಿಯಾಗುತ್ತಿದೆ ಎಂಬ ಪ್ರಜ್ಞೆ ಕಾಡಿತ್ತೇ? ಹೆಣ್ಣಿನ ದೇಹದ ಇಂಚಿಂಚನ್ನೂ ಮನರಂಜನೆಯ ಹೆಸರಲ್ಲಿ ಸೇಲ್‍ಗೆ ಇಡುವ ನಿರ್ದೇಶಕನನ್ನು ನೀವು ತರಾಟೆಗೆ ತೆಗೆದುಕೊಂಡಿದ್ದೀರಾ? ಹೆಣ್ಣು ಮನರಂಜನೆಯ ಸರಕೇ ಎಂದು ಪ್ರಶ್ನಿಸಿದ್ದೀರಾ? ಹೆಣ್ಣಿನ ದೇಹ ಮನವನ್ನು ರಂಜಿಸುವಂಥದ್ದು ಎಂದು ಹೇಳುವ ಸಿನಿಮಾ ನಿರ್ದೇಶಕ ಮತ್ತು ಅದರಿಂದ ಪ್ರಚೋದಿತನಾಗುವವನ ಮಧ್ಯೆ ಏನು ವ್ಯತ್ಯಾಸ ಇದೆ ಎಂಬ ಜಿಜ್ಞಾಸೆ ನಿಮ್ಮಲ್ಲಿ ಎಂದಾದರೂ ಮೊಡಿದ್ದಿದೆಯೇ? ಈ ವಿಷಯವಾಗಿ ನೀವು ಎಷ್ಟು ಸೆಮಿನಾರ್ ಗಳನ್ನು ಆಯೋಜಿಸಿದ್ದೀರಿ? ಎಷ್ಟು ಪ್ರತಿಭಟನೆಗಳನ್ನು ಮಾಡಿದ್ದೀರಿ? ಯುವತಿಯರನ್ನು ಚುಡಾಯಿಸುವುದಕ್ಕೆಂದೇ ನೀವು ಮಾಲ್‍ಗಳ ಮುಂದೆಯೋ ಬಸ್ ನಿಲ್ದಾಣಗಳಲ್ಲೋ  ನಿಂತಿದ್ದಿಲ್ಲವೇ? ಇವೆಲ್ಲ ಸುಮ್ಮನೆ ತಮಾಷೆಗೆ ಎಂದು ಸಮರ್ಥಿಸಿದ್ದೂ ಇಲ್ಲವೇ? ಹೆಣ್ಣನ್ನು ತಮಾಷೆಯ ವಸ್ತುವಿನಿಂತೆ ಕಾಣುವುದನ್ನು ಪ್ರತಿಭಟಿಸಬೇಕೆಂದು ನಿಮಗೆಂದಾದರೂ ಅನಿಸಿದ್ದಿದೆಯೇ? ನಿಮ್ಮ ತಂಗಿಯ ಬಯಕೆಗೆ ವಿರುದ್ಧವಾಗಿ ತಂದೆ ಮದುವೆ ಮಾಡಲು ಮುಂದಾದಾಗ ನೀವು ಅದಕ್ಕೆ ಸಹಕರಿಸಿಲ್ಲವೇ? ಹೆಣ್ಣಿಗೆ ಅಷ್ಟು ತಿಳುವಳಿಕೆಯಿಲ್ಲ ಎಂಬ ಕಾರಣವನ್ನು ನೀವು ಅದಕ್ಕೆ ಸಮರ್ಥನೆಯಾಗಿ ಬಳಸಿಕೊಂಡಿಲ್ಲವೇ? ಓರ್ವ ಹೆಣ್ಣು ಮಗಳು ತನಗಿಷ್ಟವಾದ ಮೈಮುಚ್ಚುವ ಬಟ್ಟೆ ಧರಿಸಿ ಕಾಲೇಜಿಗೆ ಬಂದಾಗ ಅವಳಿಗೆ ನೀವು ಅಡ್ಡ ಹೆಸರಿಟ್ಟು ಚುಡಾಯಿಸಿದ್ದು ನೆನಪಿದೆಯೇ? ದಲಿತರು ಮತ್ತು ಬುಡಕಟ್ಟು ಜನಾಂಗದ ಯುವತಿಯರನ್ನು ಈ ದೇಶದ ಪೊಲೀಸರು ಮತ್ತು ಸೈನಿಕರು ಸಾಮೂಹಿಕ ಅತ್ಯಾಚಾರಕ್ಕೆ ಒಳಪಡಿಸಿದಾಗ ನಿಮ್ಮ ಪ್ರತಿಕ್ರಿಯೆ ಹೇಗಿತ್ತು? ನೀವು ಪ್ರತಿಭಟಿಸಿದ್ದೀರಾ? ಪ್ಲೇ ಕಾರ್ಡುಗಳನ್ನು ಹಿಡಿದಿದ್ದೀರಾ? ಗುಜರಾತ್‍ನಲ್ಲಿ 10 ವರ್ಷಗಳ ಹಿಂದೆ ಯುವತಿಯರ, ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರಗಳು ನಡೆದುವಲ್ಲ, ಕನಿಷ್ಠ ನಿಮ್ಮ ಮನಸ್ಸಿನಲ್ಲಾದರೂ ಆ ಬಗ್ಗೆ ಸಿಟ್ಟು ವ್ಯಕ್ತವಾಗಿತ್ತೇ? ನೀವು ಭಾಗವಹಿಸಿದ ಸಭೆ, ಸಮಾರಂಭಗಳಲ್ಲಿ, ವಿಚಾರಗೋಷ್ಠಿಗಳಲ್ಲಿ ಆ ಅತ್ಯಾಚಾರಗಳನ್ನು ಖಂಡಿಸಿ ಮಾತಾಡಿದ್ದೀರಾ? ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದೀರಾ? ಆ ಸಂತ್ರಸ್ತರಿಗೆ ಯಾವ ಬಗೆಯ ಚಿಕಿತ್ಸೆ ದೊರಕಿದೆ, ಅವರ ಸದ್ಯದ ಸ್ಥಿತಿ ಏನಾಗಿದೆ ಎಂಬುದನ್ನು ತಿಳಿದುಕೊಳ್ಳಲು ಒಮ್ಮೆಯಾದರೂ ಯತ್ನಿಸಿದ್ದೀರಾ? ಅಂದಹಾಗೆ, ನಿಮ್ಮಂತೆಯೇ ಎರಡು ಕಣ್ಣು, ಕೈ, ಕಾಲುಗಳಿದ್ದರೂ ಮತ್ತು ನಿಮ್ಮಂತೆಯೇ ಅವೂ ಸ್ವಸ್ಥಾನದಲ್ಲಿದ್ದರೂ ದಲಿತೆ ಎಂಬ ಕಾರಣಕ್ಕಾಗಿ ನಿಮ್ಮ ಗೆಳತಿಯರು ಆಕೆಯನ್ನು ಮುಟ್ಟಿಸಿಕೊಳ್ಳದೇ ಇದ್ದಾಗ ನೀವು ಮುಟ್ಟಿಸಿಕೊಳ್ಳುವ ಧೈರ್ಯ ಮಾಡಿದ್ದೀರಾ? ಆಕೆಯನ್ನು ತಮ್ಮ ಬಳಿ ಕೂರಿಸಿ ನೀನೂ ನಮ್ಮಂತೆಯೇ ಮನುಷ್ಯಳು ಎಂದು ಹೇಳುವ ಧೈರ್ಯವನ್ನು ನೀವು ಮಾಡಿಲ್ಲವಲ್ಲವೇ? ಈ ಕಾರಣದಿಂದಾಗಿಯೇ ಆಕೆ ಆತ್ಮಹತ್ಯೆ ಮಾಡಿಕೊಂಡಾಗ, ನಿಮ್ಮ ಗೆಳತಿಯರು ತೀರಾ ತುಚ್ಛವಾಗಿ ಮಾತಾಡಿಕೊಂಡದ್ದನ್ನು ಕೇಳಿಸಿಯೂ ನೀವು ಮೌನವಹಿಸಿದ್ದಿರಲ್ಲ, ಅದು ಸರಿಯೆಂದು ಹೇಳುತ್ತೀರಾ? ಬಡತನದಿಂದಾಗಿ ಮಾಸಿದ ಬಟ್ಟೆ ಧರಿಸಿ ಕಾಲೇಜಿಗೆ ಬರುತ್ತಿದ್ದ ಯುವತಿಯನ್ನು ನಿಮ್ಮ ಗೆಳತಿಯರು ದೂರ ಇಡುತ್ತಿದ್ದಾಗ ನಿಮ್ಮ ಪ್ರತಿಕ್ರಿಯೆ ಏನಾಗಿತ್ತು? ಆಕೆಯನ್ನು ಸಾಂತ್ವನಿಸುವ ಪ್ರಯತ್ನ ಮಾಡಿದ್ದೀರಾ? ಫೀಸು ಕಟ್ಟಲು ಸಾಧ್ಯವಿಲ್ಲವೆಂದು ಹೇಳಿ ನಿಮ್ಮ ಗೆಳತಿ ಕಾಲೇಜು ವಿದ್ಯಾ ಭ್ಯಾಸವನ್ನು ಮೊಟಕುಗೊಳಿಸಿದಾಗ ಶ್ರೀಮಂತ ವಿದ್ಯಾರ್ಥಿಗಳ ಗುಂಪಿನಲ್ಲಿದ್ದೂ ನೀವು ಹೇಗೆ ಪ್ರತಿಕ್ರಿಯಿಸಿದ್ದಿರಿ? ನಿರ್ಲಕ್ಷ್ಯವೇ ನಿಮ್ಮ ಉತ್ತರವಾಗಿತ್ತಲ್ಲವೇ? ಇಷ್ಟಕ್ಕೂ ಈ ದೇಶದಲ್ಲಿ ಪ್ರತಿವರ್ಷ ಅಸಂಖ್ಯ ಹೆಣ್ಣು ಶಿಶುಗಳು ಹುಟ್ಟುವುದಕ್ಕಿಂತ ಮೊದಲೇ ಕ್ರೂರವಾಗಿ ಹತ್ಯೆಗೀಡಾಗುತ್ತಿದ್ದರೂ ನೀವು ಮಾತೇ ಆಡಿಲ್ಲವಲ್ಲ, ಯಾಕೆ? ಕಣ್ಣು ಬಿಡುವ ಮೊದಲೇ ಕಂದಮ್ಮಗಳನ್ನು ಕೊಲ್ಲುವುದು ಅತ್ಯಾಚಾರಕ್ಕಿಂತಲೂ ಆಘಾತಕಾರಿ ಎಂದು ಘೋಷಿಸುವ ಅವಕಾಶವನ್ನು ನೀವು ಬಳಸಿಕೊಳ್ಳಲಿಲ್ಲವೇಕೆ? ಮಹಿಳಾ ಉದ್ಯೋಗಿಯನ್ನು ನಿಮ್ಮ ಬಾಸ್ ತುಚ್ಛವಾಗಿ ಕಂಡಾಗ ನೀವು ಪ್ರತಿಭಟಿಸಿದ್ದೀರಾ? ಮಾತೆತ್ತಿದರೆ ಎಲ್ಲಿ ಕೆಲಸಕ್ಕೆ ಕುತ್ತು ಬರುತ್ತೋ ಎಂದು ಅಂಜಿ; ಸಹಿಸಿಕೋ, ಎಲ್ಲ ಬಾಸ್‍ಗಳೂ ಹೀಗೆಯೇ.. ಎಂದು ಸಾಂತ್ವನಿಸಿದ್ದಿರಲ್ಲವೇ? ಹೆಣ್ಣೆಂಬ ಕಾರಣಕ್ಕಾಗಿ ಮಹಿಳೆಗೆ ಕಡಿಮೆ ಸಂಬಳ ಕೊಡುತ್ತಿರುವುದನ್ನು ಕಣ್ಣಾರೆ ನೋಡಿಯೂ ನೀವು ಸುಮ್ಮನೆ ಕೂತಿದ್ದು ಸುಳ್ಳೇ? ನಿಮ್ಮ ತಂದೆ ಮನೆಕೆಲಸದಾಕೆಗೆ ಕ್ಷುಲ್ಲಕ ಕಾರಣಕ್ಕಾಗಿ ಏಟು ಕೊಟ್ಟಾಗ ನೀವು ಪ್ರತಿಭಟಿಸಿದ್ದೀರಾ? ಅಪ್ಪನದ್ದು ತಪ್ಪು ಎಂದು ಗೊತ್ತಿದ್ದೂ ಅಪ್ಪನ ಪರವೇ ವಾದ ಮಾಡಿ ಕೆಲಸದಾಕೆಯ ಕಣ್ಣೀರಿಗೆ ಕಾರಣವಾಗಿದ್ದು ನೆನಪಿದೆಯೇ?..
  ದೆಹಲಿಯಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಪ್ರತಿಭಟಿಸುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತು ಯುವ ಸಮೋಹದ  ಮುಂದೆ ಇಡಲು ಇನ್ನೂ ಇಂಥ ಅನೇಕ ಪ್ರಶ್ನೆಗಳಿವೆ. ಅವರಿಗೀಗ ತಕ್ಷಣ ನ್ಯಾಯ ಬೇಕಾಗಿದೆ. ಅತ್ಯಾಚಾರಿಗಳನ್ನು ನೇಣಿಗೇರಿಸಿದರೆ, ಕಠಿಣ ಶಿಕ್ಷೆಗೆ ಒಳಪಡಿಸಿದರೆ ಇಂಥ ಕೃತ್ಯಗಳು ಶಾಶ್ವತವಾಗಿ ಕಣ್ಮರೆಯಾದೀತು ಎಂಬ ಧಾಟಿಯಲ್ಲಿ ಅವರು ಮಾತಾಡುತ್ತಿದ್ದಾರೆ. ನಿಜವಾಗಿ, ಮರಣದಂಡನೆಯೊಂದರಿಂದಲೇ ಅತ್ಯಾಚಾರಗಳನ್ನು ಕಡಿಮೆಗೊಳಿಸಲು ಖಂಡಿತ ಸಾಧ್ಯವಿಲ್ಲ. ಅಷ್ಟಕ್ಕೂ, ದೆಹಲಿ ಅತ್ಯಾಚಾರ ಪ್ರಕರಣದ ಮರುದಿನದಿಂದ ಈ ವರೆಗೂ ಪತ್ರಿಕೆಗಳ ತುಂಬ ಅತ್ಯಾಚಾರ ಪ್ರಕರಣಗಳ ಸುದ್ದಿಗಳೇ ತುಂಬಿ ಹೋಗಿರುವುದು ಏನನ್ನು ಸೂಚಿಸುತ್ತದೆ? ಪ್ರತಿಭಟನೆ, ಮರಣದಂಡನೆಯ ಬೆದರಿಕೆಗಳೆಲ್ಲ ಅತ್ಯಾಚಾರಿಗಳ ಮೇಲೆ ಪ್ರಭಾವ ಬೀರುತ್ತಿಲ್ಲ ಎಂಬುದನ್ನೇ ಅಲ್ಲವೇ? ಹೀಗಿರುವಾಗ ಬರೇ ಮರಣದಂಡನೆಯೊಂದನ್ನೇ ಏಕೈಕ ಪರಿಹಾರವಾಗಿ ಬಿಂಬಿಸುವುದು ಎಷ್ಟು ಸರಿ? ಹಾಗಂತ ಮರಣದಂಡನೆ ಬೇಡ ಎಂದಲ್ಲ. ಆದರೆ ಅದಕ್ಕಿಂದಲೂ ಮೊದಲು ಸಾಮಾಜಿಕವಾಗಿ ಆಗಲೇಬೇಕಾದ ಜಾಗೃತಿಯನ್ನು ಕಡೆಗಣಿಸಿದರೆ ಹೇಗೆ? ಶಿಶುವಿನಿಂದ ತೊಡಗಿ ಬಾಲ್ಯ, ಯೌವನ, ವೃದ್ಧಾಪ್ಯ.. ಹೀಗೆ ಎಲ್ಲ ಸ್ಥಿತಿಯಲ್ಲೂ ಹೆಣ್ಣನ್ನು ದ್ವಿತೀಯ ದರ್ಜೆಯವಳಂತೆ, ಚುಡಾವಣೆ, ಮನರಂಜನೆಯ ವಸ್ತುವಿನಂತೆ ಕಾಣುವ ಮನಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸದೇ ಕೇವಲ ನೇಣುಗಂಭವನ್ನು ತೋರಿಸುವುದರಿಂದ ಭಾರೀ ಬದಲಾವಣೆ ತರಲು ಸಾಧ್ಯವೇ? ದೆಹಲಿಯಲ್ಲಾಗುತ್ತಿರುವ ಅತ್ಯಾಚಾರ ಪ್ರಕರಣಗಳ ಕುರಿತಂತೆ ಸ್ಥಳೀಯ ಪತ್ರಿಕೆಯೊಂದು ಇತ್ತೀಚೆಗೆ ಸಮೀಕ್ಷೆ ನಡೆಸಿತ್ತು. ಅದರ ಪ್ರಕಾರ,
  ..‘90% ಮಹಿಳೆಯರು ತಾವಾಗಿಯೇ ಅತ್ಯಾಚಾರವನ್ನು ಆಹ್ವಾನಿಸುತ್ತಾರೆ, ಅವರು ಧರಿಸುವ ಬಟ್ಟೆ ಅತ್ಯಾಚಾರಕ್ಕೆ ಆಹ್ವಾನಿ ಸುವಂತಿರುತ್ತದೆ, ರಾತ್ರಿ ವೇಳೆ ಅವರು ಒಂಟಿಯಾಗಿ ಹೊರಗೆ ಹೋಗಬಾರದು, ನಿರ್ದಿಷ್ಟ ಫ್ಯಾಶನ್ನಿನ ಡ್ರೆಸ್ ತೊಡುತ್ತಾ, ನೋಡುಗರ ಕಣ್ಣಿನಲ್ಲಿ ತೊಂದರೆ ಹುಡುಕುವುದು ಸರಿಯಲ್ಲ.. ಎಂದೆಲ್ಲಾ ದೆಹಲಿಯ ಪ್ರಮುಖ ಪೊಲೀಸ್ ಅಧಿಕಾರಿಗಳೇ ಸಮೀಕ್ಷಕರೊಂದಿಗೆ ಹೇಳಿರುವುದನ್ನು ಇತ್ತೀಚೆಗೆ ಟಿ.ವಿ. ಚಾನೆಲ್‍ನಲ್ಲಿ ಓರ್ವ ಪೊಲೀಸ್ ಅಧಿಕಾರಿಯೇ ವಿವರಿಸಿದ್ದರು..             (ದಿ ಹಿಂದೂ, 2012 ಡಿ. 25, ಊರ್ವಶಿ ಬುಟಾಲಿಯ).
  ಅಂದಹಾಗೆ, ಬಟ್ಟೆಯೊಂದೇ ಅತ್ಯಾಚಾರಕ್ಕೆ ಕಾರಣವಲ್ಲ, ನಿಜ. ಆದರೆ ಅತ್ಯಾಚಾರಕ್ಕೆ ಅದೂ ಒಂದು ಕಾರಣ ಎಂದು ವಾದಿಸುವುದನ್ನು ಮೂಲಭೂತ ವಾದದಂತೆ, ಮಹಿಳಾ ವಿರೋಧಿ ಧ್ವನಿಯಂತೆ ಯಾಕೆ ಪರಿಗಣಿಸಬೇಕು? ಅತ್ಯಾಚಾರವನ್ನು ತಡೆಗಟ್ಟಲು ಪರಿಹಾರಗಳನ್ನು ಸೂಚಿಸುವವರೆಲ್ಲ ಬಟ್ಟೆಯ ಬಗ್ಗೆ ಮಾತೇ ಆಡುವುದಿಲ್ಲ. ಎಲ್ಲಿ ಮಹಿಳಾವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಬಿಡುತ್ತೇವೋ ಅನ್ನುವ ಅನುಮಾನ ಅವರೆಲ್ಲರನ್ನೂ ಕಾಡುತ್ತಿರಬೇಕು. ಒಂದು ವೇಳೆ  ಶಿಕ್ಷಣ, ಕಠಿಣ ಕಾನೂನು, ಆಧುನಿಕ ಆಲೋಚನೆಗಳೆಲ್ಲ ಅತ್ಯಾಚಾರಗಳನ್ನು ನಿಯಂತ್ರಿಸುತ್ತವೆ ಅನ್ನುವುದಾದರೆ ಅಮೇರಿಕ, ಬ್ರಿಟನ್, ಸ್ವೀಡನ್, ಜರ್ಮನಿಗಳೆಲ್ಲ ಅತ್ಯಾಚಾರ ರಹಿತ ರಾಷ್ಟ್ರಗಳಾಗಿ ಗುರುತಿಸಿಕೊಳ್ಳ ಬೇಕಾಗಿತ್ತಲ್ಲವೇ? ದಿ ಹಿಂದೂ ಪತ್ರಿಕೆಯ ಪ್ರಕಾರ, 2000ದಲ್ಲಿ ನಡೆಸಲಾದ ಸಮೀಕ್ಷೆಯಂತೆ ಬ್ರಿಟನ್‍ನಲ್ಲಿ 4.9% ಮಂದಿ ಲೈಂಗಿಕ ದೌರ್ಜನ್ಯಕ್ಕೆ ಅಥವಾ ಅತ್ಯಾಚಾರಕ್ಕೆ ಒಳಗಾಗಿದ್ದರು. ಇತ್ತೀಚಿನ ಸಮೀಕ್ಷೆಯ ಪ್ರಕಾರ ಇದರ ಪ್ರಮಾಣ ಶೇ. 10ಕ್ಕೆ ತಲುಪಿದೆ. ಐರ್ಲೆಂಡ್, ಜರ್ಮನಿ, ಸ್ವೀಡನ್‍ಗಳಲ್ಲಿ ಲೈಂಗಿಕ ದೌರ್ಜನ್ಯದ ಪ್ರಮಾಣವು ಶೇ. 25ರಿಂದ ಶೇ. 34ಕ್ಕೆ ಏರಿದೆ. ಅಮೇರಿಕವೂ ಅತ್ಯಾಚಾರ ಪ್ರಕರಣಗಳಿಂದ ಹೊರತಾಗಿಲ್ಲ. ಪ್ರತಿ 2 ನಿಮಿಷಗಳಿಗೊಮ್ಮೆ ಓರ್ವರು ಅಲ್ಲಿ ಲೈಂಗಿಕ ಹಿಂಸೆಗೆ ಗುರಿಯಾಗುತ್ತಾರೆ. ಅದರಲ್ಲೂ ಅಮೇರಿಕದ ಪ್ರತಿ 100 ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ 46 ಪ್ರಕರಣಗಳಷ್ಟೇ ಸುದ್ದಿಯಾಗುತ್ತವೆ. ಇವುಗಳಲ್ಲಿ ಸರಾಸರಿ 12 ಮಂದಿ ಆರೋಪಿಗಳು ಮಾತ್ರ ಬಂಧನಕ್ಕೆ ಒಳಗಾಗುತ್ತಾರೆ. ಅಂದರೆ, 4 ಅತ್ಯಾಚಾರ ಪ್ರಕರಣಗಳಲ್ಲಿ ಓರ್ವನನ್ನು ಮಾತ್ರ ಬಂಧಿಸಿದಂತಾಗುತ್ತದೆ. ಕೊನೆಗೆ ಸರಾಸರಿ ಮೊವರಿಗೆ ಶಿಕ್ಷೆಯಾಗುತ್ತದೆ.. (ದಿ ಹಿಂದೂ, ಡಿ. 27, 2012, ಪ್ರವೀಣ್ ಸ್ವಾಮಿ). ಒಂದು ರೀತಿಯಲ್ಲಿ, 46 ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿ ಶಿಕ್ಷೆಯಾಗುವುದು ಬರೇ ಮೊವರಿಗೆ! ಮುಂದುವರಿದ ಅಮೇರಿಕದ ಸ್ಥಿತಿಯೇ ಹೀಗಿರುವಾಗ ಇನ್ನು ಅದನ್ನೇ ಅನುಸರಿಸುತ್ತಿರುವ ಭಾರತದ ಸ್ಥಿತಿ ಭಿನ್ನವಾಗುವುದಾದರೂ ಹೇಗೆ? ಅಷ್ಟಕ್ಕೂ ಅತ್ಯಾಚಾರಿಗಳಿಗೆ ಮರಣ ದಂಡನೆಯಾಗಬೇಕೆಂದು ಆಗ್ರಹಿಸುತ್ತಿರುವ ವಿದ್ಯಾರ್ಥಿಗಳೆಲ್ಲ ತಮ್ಮ ಸಂಸ್ಕ್ರಿತಿ, ಜೀವನ ಕ್ರಮ, ಆಲೋಚನೆ, ಉಡುಪುಗಳ ಕುರಿತಂತೆ ಪುನರ್ ವಿಮರ್ಶೆಗೆ ಮುಂದಾದರೇನು? ಆಧುನಿಕ ಮತ್ತು ಪಾಶ್ಚಾತ್ಯ ಪ್ರೇರಿತ ಜೀವನ ಕ್ರಮಗಳಿಗೂ ಲೈಂಗಿಕ ದೌರ್ಜನ್ಯಗಳಿಗೂ ಸಂಬಂಧವಿದೆಯೇ ಎಂದು ಆಲೋಚಿಸಿದರೇನು? ಇಂಥ ದೌರ್ಜನ್ಯಗಳನ್ನು ತಡೆಗಟ್ಟುವುದಕ್ಕೆ ಧಾರ್ಮಿಕ ಚಿಂತನೆಗಳಲ್ಲಿ ಏನು ಪರಿಹಾರವಿದೆ ಮತ್ತು ಅವೆಷ್ಟು ಪ್ರಾಯೋಗಿಕ ಎಂದು ಚರ್ಚಿಸಿದರೇನು?
  ಆದ್ದರಿಂದಲೇ,
ಹೆಣ್ಣು-ಗಂಡು ಮುಕ್ತವಾಗಿ ಬೆರೆಯಬಾರದು; ಹೆಣ್ಣು ತನ್ನ ದೇಹ ಪ್ರದರ್ಶಿಸಬಾರದು; ಗಂಡು ತನ್ನ ದೃಷ್ಟಿಯನ್ನು ಕೆಳಗಿರಿಸಬೇಕು (ಪವಿತ್ರ ಕುರ್‍ಆನ್: 24: 30-31); ಹೆಣ್ಣಿನ ಕುರಿತಂತೆ ಓರ್ವ ಗಂಡು ನಿಂದಿಸುವುದಿರಲಿ, ಛೆ ಎಂಬ ಪದವನ್ನೂ ಬಳಸಬಾರದು (ಪವಿತ್ರ ಕುರ್‍ಆನ್: 17: 23); ಓರ್ವನು ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಉತ್ತಮ ರೀತಿಯಲ್ಲಿ ಸಾಕಿ ಮದುವೆ ಮಾಡಿಸಿಕೊಟ್ಟರೆ ಆತ ಸ್ವರ್ಗಕ್ಕೆ ಹೋಗುತ್ತಾನೆ; ಹೆಣ್ಣನ್ನು ಗೌರವಿಸಿ, ಸೇವೆ ಮಾಡಿದರೆ ಸ್ವರ್ಗವಿದೆ; ಅತ್ಯಾ ಚಾರಕ್ಕೆ ಅಥವಾ ವ್ಯಭಿಚಾರಕ್ಕೆ ಮರಣ ದಂಡನೆಯಿದೆ (ಪವಿತ್ರ ಕುರ್‍ಆನ್: 4: 25, 24: 2); ನಿಮ್ಮ ಮನೆಯ ಮಹಿಳೆಯರೊಂದಿಗೆ ಉತ್ತಮವಾಗಿ ವರ್ತಿಸುವವನೇ ಅತ್ಯುತ್ತಮ ವ್ಯಕ್ತಿ; ಪತಿ ಮತ್ತು ಪತ್ನಿ ಪರಸ್ಪರ ಉಡುಪಾಗಿದ್ದಾರೆ (ಸಮಾನ) (ಪವಿತ್ರ ಕುರ್‍ಆನ್: 2: 187); ಕೊಲೆಗೀಡಾದ ಶಿಶುವಿನಲ್ಲೇ ನಾಳೆ ದೇವನು ಅದರ ಕಾರಣವನ್ನು ಕೇಳಿ ಅಪರಾಧಿ ಹೆತ್ತವರನ್ನು ಶಿಕ್ಷಿಸುವನು (ಪವಿತ್ರ ಕುರ್‍ಆನ್: 181: 8-9); ವರದಕ್ಷಿಣೆ ನಿಷಿದ್ಧವಾಗಿದೆ (ಪವಿತ್ರ ಕುರ್‍ಆನ್: 4:4, 2:188).. ಎಂದು ಮುಂತಾಗಿ ಸಮಾಜವನ್ನು ತಳಮಟ್ಟದಿಂದಲೇ ತಿದ್ದಿದ ಮತ್ತು ಅದರ ಆಧಾರದಲ್ಲೇ  ಒಂದು ಮಾದರಿ ಸಮಾಜವನ್ನು ಪ್ರಾಯೋಗಿಕವಾಗಿ ರಚಿಸಿ ತೋರಿಸಿದ ಪವಿತ್ರ ಕುರ್‍ಆನ್ ಮತ್ತು ಪ್ರವಾದಿ ಮುಹಮ್ಮದ್(ಸ) ಇಷ್ಟವಾಗುವುದು. ಅಂದಹಾಗೆ,
  ‘ಉತ್ತಮ ಚಿಕಿತ್ಸೆಗಾಗಿ ಅತ್ಯಾಚಾರಕ್ಕೀಡಾದ ಯುವತಿಯನ್ನು  ಸಿಂಗಾಪುರಕ್ಕೆ ಕಳುಹಿಸಬಹುದಾದರೆ ಉತ್ತಮ ನ್ಯಾಯಕ್ಕಾಗಿ ಆರೋಪಿಗಳನ್ನು ಯಾಕೆ ಸೌದಿ ಅರೇಬಿಯಾಕ್ಕೆ ಕಳುಹಿಸಬಾರದು...' ಎಂದು ಸಿನೆಮಾ ನಿರ್ದೇಶಕ ಸಂದೀಪ್ ಮಲಾನಿ ಕಳೆದ ವಾರ ಫೇಸ್ ಬುಕ್‍ನಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಇನ್ನೂ ಒಂದು ವಾಕ್ಯವನ್ನು ಸೇರಿಸಬಹುದು,
  ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಇಸ್ಲಾಮೀ  ಕಾನೂನುಗಳನ್ನು ಭಾರತ ಯಾಕೆ ಅಳವಡಿಸಿಕೊಳ್ಳಬಾರದು?

Tuesday, December 25, 2012

ಕಳಪೆ ವಸ್ತುಗಳ ಮಾರಾಟಗಾರ ಥಳಿತಕ್ಕೆ ಒಳಗಾಗಿದ್ದಾನೆಯೇ ಹೊರತು ಸನ್ಮಾನಕ್ಕಲ್ಲ..


“ನನ್ನ, ಗುಜರಾತ್ ಪ್ರವಾಸದ ಬಗ್ಗೆ ಪ್ರತಿಕ್ರಿಯೆ ನೀಡಿದವರಿಗೆ, ನನ್ನನ್ನು ಮನಸ್ಸಿಗೆ ಬಂದಂತೆ ಬೈದವರಿಗೆ, ತಮ್ಮ ಮನಸ್ಸಿನ ವಿಕಾರವನ್ನು ಹೊರ ಹಾಕಿ ವಿಜೃಂಭಿಸಿದವರಿಗೆ, ಗುಜರಾತಿಗೆ ಹುಡುಗಿಯನ್ನು ಕರಕೊಂಡು ಹೋಗಿದ್ದೆಯಾ ಎಂದು ಪ್ರಶ್ನಿಸುವ ಮೊಲಕ ತಮ್ಮ ಮನಸ್ಸಿನ ಆಲೋಚನೆಯನ್ನು ಹೊರಹಾಕಿದ ಮಹಾತ್ಮರಿಗೆ ಎಲ್ಲರಿಗೂ ಕೃತಜ್ಞತೆಗಳು. ನಮ್ಮ ಮಾತು ನಮ್ಮ ಸಂಸ್ಕ್ರಿತಿಯನ್ನು ಹೊರ ಹಾಕುತ್ತದೆ ಎಂಬ ಮಾತಿಗೆ ನನಗೆ ಮತ್ತೊಮ್ಮೆ ಪುರಾವೆ ದೊರಕಿದೆ. ಹಾಗೆ ಮೋದಿಯವರ ಉಗ್ರ ಅಭಿಮಾನಿಗಳ ಮನಸ್ಸು ಹೇಗಿದೆ ಎಂಬುದು ನನಗೆ ಮತ್ತೊಮ್ಮೆ ಅರ್ಥವಾಗಿದೆ. ತಮ್ಮ ಮನಸ್ಸಿನಲ್ಲಿ ಇರುವುದನ್ನು ಹೊರಗೆ ಹಾಕಿ ಬೆತ್ತಲೆಯಾದ ಎಲ್ಲರಿಗೂ ಮತ್ತೊಮ್ಮೆ ಕೃತಜ್ಞತೆಗಳು...”
  ಹಾಗಂತ ಕನ್ನಡದ ಖ್ಯಾತ ಪತ್ರಕರ್ತರೂ ಸಮಯ ಟಿ.ವಿ. ಚಾನೆಲ್‍ನಲ್ಲಿ ಈ ಹಿಂದೆ ಸಂಪಾದಕರೂ ಆಗಿದ್ದ ಶಶಿಧರ್ ಭಟ್ರು 2012, ಡಿ. 17ರಂದು ತಮ್ಮ ಫೇಸ್‍ಬುಕ್‍ನಲ್ಲಿ ಬರೆದಿದ್ದರು. ಅದಕ್ಕೆ ಕಾರಣವೂ ಇದೆ.
  ಅವರು ಇತ್ತೀಚೆಗೆ ಎರಡು ದಿನಗಳ ಕಾಲ ಗುಜರಾತ್‍ಗೆ ಭೇಟಿ ನೀಡಿದ್ದರು. ಆಗ ತಮ್ಮ ಅನುಭವಕ್ಕೆ ಬಂದದ್ದನ್ನು, ‘ಮೋದಿಯ ನಾಡಿನಲ್ಲಿ ಎರಡು ದಿನ ಕಂಡದ್ದು, ಕೇಳಿದ್ದು..’ ಎಂಬ ಶೀರ್ಷಿಕೆಯಲ್ಲಿ ಲೇಖನ ಬರೆದಿದ್ದರು. ಇವರ ಗಡ್ಡವನ್ನು ನೋಡಿ ಮುಸ್ಲಿಮ್ ಎಂದು ಭಾವಿಸಿದ ಅಹ್ಮದಾಬಾದ್‍ನ ಹೊಟೇಲ್‍ನ ಮಾಲಿಕ ರೂಮ್ ಕೊಡಲು ನಿರಾಕರಿಸಿದ್ದು, ಆತ ಮೋದಿಯ ಅಭಿವೃದ್ಧಿಯ ಬಗ್ಗೆ ಹೊಗಳಿದ್ದು, ಯಾವ ಅಭಿವೃದ್ಧಿ ಎಂದು ಇವರು ಪ್ರಶ್ನಿಸಿದಾಗ ಉತ್ತರಕ್ಕಾಗಿ ತಡಕಾಡಿದ್ದು... ಎಲ್ಲವನ್ನೂ ಭಟ್ರು ವಿಸ್ತ್ರತವಾಗಿ ಬರೆದಿದ್ದರು. ಮಾತ್ರವಲ್ಲ, ಇಂಥ ರಾಜ್ಯಕ್ಕೆ ಧಿಕ್ಕಾರವಿರಲಿ ಎಂದೂ ಸೇರಿಸಿದ್ದರು. ಡಿ. 15ರಂದು ಬರೆದ ಈ ಲೇಖನಕ್ಕೆ ಕೇವಲ ಎರಡೇ ದಿನಗಳಲ್ಲಿ ಓದುಗರಿಂದ 188 ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದುವು. ಹೆಚ್ಚಿನ ಪ್ರತಿಕ್ರಿಯೆಗಳೂ ಭಟ್ರನ್ನು ಹೀಯಾಳಿಸುವ ಮತ್ತು ಮೋದಿಯನ್ನು ಸಂತನಂತೆ ಹೊಗಳುವ ಧಾಟಿಯಲ್ಲಿತ್ತು. ನಿಜವಾಗಿ, ಇದು ಶಶಿಧರ ಭಟ್ ಎಂಬ ಓರ್ವ ಪತ್ರಕರ್ತರಿಗಾದ ಅನುಭವವಷ್ಟೇ ಅಲ್ಲ, ಮೋದಿಯನ್ನು ಟೀಕಿಸುವ ಪ್ರತಿಯೊಬ್ಬರನ್ನೂ ಇವತ್ತು ಇಂಥ ಹೀಯಾಳಿಕೆಗಳು ಬೆನ್ನಟ್ಟುತ್ತಾ ಬರುತ್ತಿವೆ. ಮೋದಿಯ ಕುರಿತಂತೆ ಒಂದು ಬಗೆಯ ಭ್ರಮೆ ಮತ್ತು ಭ್ರಾಂತಿಯನ್ನು ತುಂಬಿಕೊಂಡ ಯುವ ಸಮೂಹ ವೊಂದು ಈ ದೇಶದಲ್ಲಿ ತಲೆ ಎತ್ತುತ್ತಾ ಇದೆ. ಮೋದಿಯನ್ನು ‘ಅಭಿವೃದ್ಧಿಯ ಹರಿಕಾರ’, ‘ಹಿಂದೂ ಹೃದಯ ಸಾಮ್ರಾಟ..’ ಎಂದೆಲ್ಲಾ ಈ ಗುಂಪು ಹಾಡಿ ಹೊಗಳುತ್ತಾ ಇದೆ. ‘ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾಲಯದ ಅತುಲ್ ಸೂದ್ ಸೇರಿದಂತೆ 10 ಮಂದಿ ಪ್ರಮುಖ ಸಂಶೋಧಕರು ಇತ್ತೀಚೆಗೆ ಗುಜರಾತ್‍ನಾದ್ಯಂತ ಸುತ್ತಾಡಿ ತಯಾರಿಸಿದ, ‘ಅಭಿವೃದ್ಧಿಯ ನಡುವೆ ಬಡತನ: ಗುಜರಾತ್‍ನ ಅಭಿವೃದ್ಧಿಯ ದುರಂತ’ (Poverty Amidst Prosperity: Essays on the Trujectory of Development in Gujrat) ಎಂಬ ಅಧ್ಯಯನಾತ್ಮಕ ಪ್ರಬಂಧದ ಅಂಕಿ ಅಂಶಗಳನ್ನು ಮುಂದಿಟ್ಟು ಚರ್ಚಿಸಿದರೂ ಈ ಗುಂಪು, ಆ ಸಂಶೋಧಕರನ್ನೇ ಹಿಂದೂ ವಿರೋಧಿಗಳು ಅನ್ನುತ್ತವೆ. ಮೋದಿಯನ್ನು ಟೀಕಿಸುವುದು ಹಿಂದೂಗಳನ್ನು ಟೀಕಿಸಿದಂತೆ ಎಂಬೊಂದು ಸುಳ್ಳನ್ನು ಹರಡಲು ಈ ಗುಂಪು ತೀವ್ರವಾಗಿ ಶ್ರಮಿಸುತ್ತಿದೆ. ಅಡ್ವಾಣಿಯನ್ನೊ ಸುಶ್ಮಾ, ಜೈಟ್ಲಿಯನ್ನೋ ಟೀಕಿಸಿದರೆ ಸುಮ್ಮನಿರುವ ಈ ಫ್ಯಾನ್ ಕ್ಲಬ್, ಮೋದಿಯನ್ನು ಟೀಕಿಸಿದ ಕೂಡಲೇ ಜಾಗೃತಗೊಳ್ಳುತ್ತದೆ. ಮೋದಿ ಟೀಕಾತೀತ, ಅವರು ದೇಶಕ್ಕೇ ರೋಲ್ ಮಾಡೆಲ್ ಎಂಬುದನ್ನು ಮಾಧ್ಯಮಗಳ ಮುಖಾಂತರ ನಿರಂತರವಾಗಿ ಸಾರ್ವಜನಿಕರಿಗೆ ಮುಟ್ಟಿಸುವ ಶ್ರಮದಲ್ಲಿ ಈ ಮಂದಿ ನಿರತರಾಗಿದ್ದಾರೆ. ಮಾಧ್ಯಮಗಳೂ ಇದರಲ್ಲಿ ಭಾಗಿಯಾಗಿವೆ. ಪುರಾವೆ ಬೇಕಾದರೆ, ಗುಜರಾತ್ ಚುನಾವಣೆಯ ಫಲಿತಾಂಶಕ್ಕೆ ಕನ್ನಡ ಪತ್ರಿಕೆಗಳು ಕೊಟ್ಟ ಶೀರ್ಷಿಕೆಗಳನ್ನೇ ಎತ್ತಿಕೊಳ್ಳಿ. ‘ಮೋದಿಗೆ ಹ್ಯಾಟ್ರಿಕ್ ಗೆಲುವು..’ (Hat - trick for Narendra Modi ..) ಎಂಬ ಸಹಜ ಮತ್ತು ಉತ್ಪ್ರೇಕ್ಷೆಯಿಲ್ಲದ ಶೈಲಿಯ ಶೀರ್ಷಿಕೆಯಲ್ಲಿ ದಿ ಹಿಂದೂ ಮತ್ತು ಟೈಮ್ಸ್ ಆಫ್ ಇಂಡಿಯಾದಂಥ ಆಂಗ್ಲ ಪತ್ರಿಕೆಗಳು ವರದಿ ಪ್ರಕಟಿಸಿದ್ದರೆ, ಕನ್ನಡಪ್ರಭ ಪತ್ರಿಕೆಯು-ನಮೋ ನಮಃ ‘ವೀರಭದ್ರ’ ಎಂದೂ, ಉದಯವಾಣಿ- ಮೋದಿ ಮೋಡಿ ಮುಮ್ಮಡಿ ಎಂದೂ ಹೊಸದಿಂಗತ- ನಮೋ ಗುಜರಾತ್ ಎಂದೂ ಶೀರ್ಷಿಕೆ ಕೊಟ್ಟಿದ್ದುವು. ಮೋದಿಯನ್ನು ದೈವತ್ವಕ್ಕೇರಿಸುವ ಶೈಲಿಯ ಇಂಥ ಶೀರ್ಷಿಕೆಗಳು ಕೊಡುವ ಸೂಚನೆಯಾದರೂ ಏನು? ಜನ ಸಾಮಾನ್ಯರ ಮೇಲೆ ಇಂಥ ಶೀರ್ಷಿಕೆಗಳು ಯಾವ ಬಗೆಯ ಪರಿಣಾಮವನ್ನು ಬೀರಿಯಾವು? ಅಂದಹಾಗೆ, ಸುದ್ದಿಯೊಂದರ ಶೀರ್ಷಿಕೆಗೂ ಲೇಖನವೊಂದರ ಶೀರ್ಷಿಕೆಗೂ ವ್ಯತ್ಯಾಸ ಇದೆಯಲ್ಲವೇ? ಮೋದಿಯನ್ನು ಆರಾಧಿಸುವ ಪತ್ರಕರ್ತರು ಮಾಧ್ಯಮಗಳಲ್ಲಿದ್ದರೆ ಸುದ್ದಿ ಹೇಗೆ ತಿರುಚಿಕೊಳ್ಳಬಹುದು ಎನ್ನುವುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕೆ?
ಅಕ್ಟೋಬರ್ 9
  ‘..ಸಂಜೆ 7 ಗಂಟೆಗೆ ಅಹ್ಮದಾಬಾದ್‍ನಲ್ಲಿ ಮೋದಿಯ ಚುನಾವಣಾ ಭಾಷಣ ಏರ್ಪಾಡಾಗಿತ್ತು. ಆದರೆ ಮೋದಿ ಆಗಮಿಸಿದ್ದು 10 ಗಂಟೆಗೆ. 7 ಗಂಟೆಗೆ ಬಂದು ಮೋದಿಯನ್ನು ಕಾಯುತ್ತಿದ್ದ ಜನರಿಗೆ ಬಿಜೆಪಿ ನಾಯಕರು ಮೋದಿಯ ಮುಖವಾಡ, ಪೋಸ್ಟರ್ಸ್, ಮೋದಿಯ ಗ್ಲೌವ್ಸ್, ಮೋದಿ ಟೀಶರ್ಟ್, ಶಾಲು... ಎಲ್ಲವನ್ನೂ ಹಂಚತೊಡಗಿದರು. ಸಾಮಾನ್ಯ ವ್ಯಕ್ತಿಯೊಬ್ಬ ಸಭೆಯತ್ತ ನೋಡಿದರೆ ಕಾಣಿಸುವುದು ಎಲ್ಲೆಲ್ಲೂ ಮೋದಿಯೇ. ಆ ಬಳಿಕ ಮೋದಿ ಮತ್ತು ಗುಜರಾತನ್ನು ಹೊಗಳುವ ಹಾಡು, ನರ್ತನಗಳು ಆರಂಭವಾದುವು. ಮೋದಿಯನ್ನು ಶಿವಾಜಿ, ಪೃಥ್ವಿರಾಜ್ ಚೌಹಾಣ್ ಮತ್ತು ವಿವೇಕಾನಂದರಿಗೆ ಹೋಲಿಕೆ ಮಾಡಿ ಗಾಯಕನೋರ್ವ ಹಾಡತೊಡಗಿದ. ರಾಜ್ಯ ಬಿಜೆಪಿಯ ಪ್ರಮುಖ ನಾಯಕರೊಬ್ಬರು ಮೋದಿಯ ಸ್ತುತಿ ಮಾಡತೊಡಗಿದರು. ಆ ಬಳಿಕ ಬಿಜೆಪಿ ಕಾರ್ಯಕರ್ತರು ಮೋದಿಯ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆರಂಭಿಸಿದರು. ನೆರೆದ ಮಂದಿ, ಮೋದಿ ಇದಲ್ಲ, ಇದಲ್ಲ ಮೋದಿ.. ಎಂದು ಬೊಬ್ಬೆ ಹಾಕುತ್ತಿದ್ದರೆ, ಇಡೀ ಸಭೆಯಲ್ಲೇ ರೋಮಾಂಚನ, ಕುತೂಹಲ. ಕೊನೆಗೆ ಮೋದಿ ಬಂದರು..’ (ವಿದ್ಯಾ ಸುಬ್ರಹ್ಮಣ್ಯಂ, 2012 ಡಿ. 13. ದಿ ಹಿಂದೂ). ನಿಜವಾಗಿ ಮೋದಿಗೆ ಪ್ರಚಾರದ ಕಲೆ ಚೆನ್ನಾಗಿ ಗೊತ್ತು. ‘2012ರ ನವೆಂಬರ್ ನಲ್ಲಿ ಮೋದಿಯ 50 ಸಾವಿರ ಮುಖವಾಡಗಳನ್ನು ಖರೀದಿಸಲಾಗಿತ್ತು. ಆದರೆ ಆ ಮುಖವಾಡ ಸೂಕ್ತವಾಗಿಲ್ಲ, ಮುಖವಾಡದಲ್ಲಿ ಚರ್ಮ ಜೋತು ಬಿದ್ದಿದೆ, ವೃದ್ಧರಂತೆ ಕಾಣುತ್ತದೆಂದು ಹೇಳಿ ಅವನ್ನು ತಿರಸ್ಕರಿಸಲಾಯಿತಲ್ಲದೇ, 3 ಲಕ್ಷ ಹೊಸ ಮುಖವಾಡಕ್ಕೆ ಆದೇಶ ನೀಡಲಾಯಿತು.’ (ದಿ ಹಿಂದೂ, ಡಿ. 20, 2012) ಇದಲ್ಲದೇ ಮೋದಿಯ ಮುಗಿಲೆತ್ತರದ ಕಟೌಟುಗಳನ್ನು ಬ್ಯುಝಿ ಟ್ರಾಫಿಕ್‍ನ ಹತ್ತಿರ, ಮಾಲ್‍ಗಳ ಬಳಿ, ಸರ್ಕಲ್‍ಗಳಲ್ಲಿ ಧಾರಾಳ ತೂಗು ಹಾಕಲಾಗಿದೆ. ಉರಿಯುತ್ತಿದ್ದ ರೈಲಿನ ಪ್ರತಿಕೃತಿಯೊಂದಿಗೆ 2002ರಲ್ಲಿ ಮೋದಿ ಚುನಾವಣಾ ಪ್ರಚಾರ ನಡೆಸಿದ್ದರೆ, 2007ರ ಚುನಾವಣೆಯಲ್ಲಿ ಮೋದಿ ರೈಲನ್ನು ಕೈಬಿಟ್ಟು 6 ಕೋಟಿ ಗುಜರಾತಿಯನ್ನರ ‘ಅಸ್ಮಿತೆ’ ಯನ್ನು (ಗೌರವ) ಎತ್ತಿಕೊಂಡರು. ಮೌತ್‍ಕಾ ಸೌಧಾಗರ್ ಎಂದು ಸೋನಿಯಾ ಗಾಂಧಿ ಹೇಳಿದ್ದನ್ನೇ ಅಸ್ತ್ರವಾಗಿ ಬಳಸಿ ಕೊಂಡರು. ಆದರೆ ಈ 2012ರಲ್ಲಿ ಮೋದಿಗೆ ಆ ಕೋಮು ಅಜೆಂಡಾವೋ, ಅಸ್ಮಿತೆಯೋ ಅಗತ್ಯವಿರಲಿಲ್ಲ. ಅವರು ಅಭಿವೃದ್ಧಿಯ ಮಾತುಗಳನ್ನಾಡಿದರು. 3ಡಿ ತಂತ್ರಜ್ಞಾನದ ಮುಖಾಂತರ 5 ದಿನಗಳಲ್ಲಿ 106 ಕಡೆ ಚುನಾವಣಾ ಭಾಷಣಗಳನ್ನು ನೀಡಿದರು. ಮೋದಿಯ ಅಭಿವೃದ್ಧಿ ಮಂತ್ರ ಪೊಳ್ಳು ಎಂಬುದನ್ನು ಅಂಕಿ-ಸಂಖ್ಯೆಗಳ ಆಧಾರದಲ್ಲಿ ಸಮೀಕ್ಷರು ಎಷ್ಟೇ ಹೇಳಿದರೂ, 3ಡಿ ತಂತ್ರಜ್ಞಾನದಲ್ಲಿ ಕಾಣಿಸಿಕೊಳ್ಳುವ ಮೋದಿಯ ಬಗ್ಗೆ ಜನಸಾಮಾನ್ಯರು ಆಕರ್ಷಿತರಾಗಲಾರರೆಂದು ಹೇಗೆ ಹೇಳುವುದು? ಮೋದಿ ಗುಜರಾತ್‍ಗಾಗಿ ಏನೋ ಅದ್ಭುತವಾದುದನ್ನು ಮಾಡುತ್ತಿದ್ದಾರೆ ಎಂದು ಜನಸಾಮಾನ್ಯರು ಅಂದುಕೊಳ್ಳುವುದಕ್ಕೆ ಮುಖವಾಡ, ಕಟೌಟ್‍ಗಳು, 3ಡಿಗಳಂಥ ಗಿಮಿಕ್‍ಗಳು ಪ್ರೇರಕವಾಗಲಾರದೇ? ಗುಜರಾತ್‍ನ ಗಲ್ಲಿಗಳಲ್ಲಿ, ಬೀದಿ, ಸಭೆಗಳಲ್ಲಿ.. ಹೀಗೆ ಮೋದಿಯ ಮುಖವಾಡವನ್ನು ಧರಿಸಿದ ಮಂದಿ ಎಲ್ಲೆಲ್ಲೂ ಕಾಣಿಸಿಕೊಳ್ಳುವಾಗ ಒಂದು ಬಗೆಯ ಭ್ರಮೆಗೆ ಸಾರ್ವಜನಿಕರು ಒಳಗಾಗುವ ಸಾಧ್ಯತೆ ಖಂಡಿತ ಇದೆ. ಇಷ್ಟಕ್ಕೂ, 2009ರಲ್ಲೇ ಮೋದಿ ಬ್ಲಾಗು ಆರಂಭಿಸಿದ್ದಾರೆ. ಅವರು ಪ್ರತಿದಿನ ಟ್ವೀಟ್ ಮಾಡುತ್ತಾರೆ. ಫೇಸ್‍ಬುಕ್‍ನಲ್ಲಿದ್ದಾರೆ. ನಿಜವಾಗಿ ಇವತ್ತಿನ ದಿನಗಳಲ್ಲಿ ಯಾವೆಲ್ಲ ಮಾಧ್ಯಮಗಳನ್ನು ಪ್ರಚಾರಕ್ಕಾಗಿ ಬಳಸಲು ಸಾಧ್ಯವಿದೆಯೋ ಅವೆಲ್ಲವನ್ನೂ ಮೋದಿ ಬಳಸುತ್ತಿದ್ದಾರೆ. 2007ರ ಚುನಾವಣೆಯ ಸಂದರ್ಭದಲ್ಲಿ ಮಿಯಾಂ ಮುಶರ್ರಫ್ ಎಂದು ಪಾಕಿಸ್ತಾನದ ಮುಶರ್ರಫ್‍ರನ್ನು ಛೇಡಿಸುತ್ತಾ, ಆ ಮುಖಾಂತರ ಪರೋಕ್ಷವಾಗಿ ಮುಸ್ಲಿಮರನ್ನು ವ್ಯಂಗ್ಯಕ್ಕೆ ಒಳಪಡಿಸಿದ್ದರೆ ಈ ಬಾರಿ ಸೋನಿಯಾರ ಆಪ್ತ ಕಾರ್ಯದರ್ಶಿ ಗುಜರಾತ್‍ನ ಅಹ್ಮದ್ ಪಟೇಲ್‍ರನ್ನು ಅಹ್ಮದ್ ಭಾಯಿ ಎಂದು ಸಂಬೋಧಿಸುತ್ತಾ, ಬಿಜೆಪಿ ಸೋತರೆ ಓರ್ವ ಮುಸ್ಲಿಮ್ ವ್ಯಕ್ತಿ  ಗುಜರಾತ್‍ನ ಮುಖ್ಯಮಂತ್ರಿ ಆಗುತ್ತಾರೆ ಎಂಬಂತೆ ಬಿಂಬಿಸುತ್ತಾರೆ. ಅಲ್ಲೂ ಪಟೇಲ್ ಎಂಬ ಪದವನ್ನು ಬೇಕೆಂದೇ ಅಡಗಿಸುತ್ತಾರೆ. ನಿಜವಾಗಿ ಗುಜರಾತ್‍ನ ಮುಖ್ಯಮಂತ್ರಿ. ಅಭ್ಯರ್ಥಿಯನ್ನು ಕಾಂಗ್ರೆಸ್ ಘೋಷಿಸಿಯೇ ಇರಲಿಲ್ಲ. ಮಾತ್ರವಲ್ಲ ಅಹ್ಮದ್ ಪಟೇಲ್‍ರು ಅಲ್ಲಿನ ಮುಖ್ಯಮಂತ್ರಿ ಆಗುವ ಸಾಧ್ಯತೆಯೂ ಇರಲಿಲ್ಲ. ಆದರೆ, ಇಲ್ಲದ ಸಾಧ್ಯತೆಯನ್ನು ಇದ್ದಂತೆ ತೋರಿಸಿ ಜನರನ್ನು ದಿಕ್ಕು ತಪ್ಪಿಸುವ, ಮುಸ್ಲಿಮ್ ವ್ಯಕ್ತಿ ಮುಖ್ಯಮಂತ್ರಿಯಾಗುವುದು ಅಪಾಯಕಾರಿ ಎಂಬ ಸೂಚನೆ ರವಾನಿಸುವ ತಂತ್ರವನ್ನು ಮೋದಿ ಹೆಣೆದರು. ಅಪ್ಪಟ ಸುಳ್ಳು, ಕೋಮುವಾದಿ ಭಾಷೆ ಮತ್ತು ಜನಾಂಗದ್ವೇಷಿ ವಿಚಾರಗಳನ್ನು ಹರಡುತ್ತಾ, ತನ್ನ ವಿರುದ್ಧ ಬರುವ ಆರೋಪಗಳನ್ನೆಲ್ಲಾ ‘ಹಿಂದೂ ವಿರೋಧಿ’ ಎಂಬಂತೆ ಚಿತ್ರಿಸಲು ಒಂದು ಹಂತದವರೆಗೆ ಮೋದಿ ಯಶಸ್ವಿಯಾಗಿದ್ದಾರೆ. ಅವರ ಫೇಸ್‍ಬುಕ್‍ನಲ್ಲಿ ಇರುವ ಪೋಸ್ಟ್ ಗಳಲ್ಲಿ ಹೆಚ್ಚಿನವು ಅವರು ವಿಶ್ವದ ನಾನಾ ಉದ್ಯಮಿಗಳು, ರಾಜತಾಂತ್ರಿಕರು, ಚಿಂತಕರ ಜೊತೆಗಿರುವಂಥವು. ‘ನಿರುದ್ಯೋಗ, ಅಸಮಾನತೆ, ಬಡತನ, ಅಪೌಷ್ಟಿಕತೆ, ಶಿಶು ಮರಣ, ಆರೋಗ್ಯ ಮತ್ತು ಶಿಕ್ಷಣಾ ಕ್ಷೇತ್ರಗಳಲ್ಲಿ ಗುಜರಾತ್‍ನ ಸದ್ಯದ ಸಾಧನೆ ತೀರಾ ಕಳಪೆಯಾಗಿದ್ದರೂ’ (ಅತುಲ್ ಸೂದ್, ದಿ ಹಿಂದೂ 2012, ನ. 30) ಅಹ್ಮದಾಬಾದ್‍ನ ಶಾಪಿಂಗ್ ಮಾಲ್‍ಗಳನ್ನೂ, ಶೋ ರೂಮ್‍ಗಳನ್ನೂ, ಸೂಪರ್ ಹೈವೇ, ಸುಂದರವಾಗಿರುವ ಸಬರಮತಿ ನದಿಯನ್ನೂ ತೋರಿಸಿ ಮೋದಿ ಅಭಿವೃದ್ಧಿ ಅನ್ನುತ್ತಿದ್ದಾರೆ. ಒಂದು ರೀತಿಯಲ್ಲಿ, ಗುಜರಾತ್‍ನಾದ್ಯಂತ ಒಂದು ಬಗೆಯ ಭ್ರಮೆಯಿದೆ. ಭ್ರಾಂತಿ ಮತ್ತು ಭೀತಿಯೂ ಇದೆ.  ಮೋದಿಯ ಸುಳ್ಳಿನ ಪ್ರಚಾರದ ಅಬ್ಬರವನ್ನು ನೋಡಿ, ಗುಜರಾತ್‍ನಲ್ಲಿ ಏನೋ ಆಗುತ್ತಿದೆ ಎಂದು ಜನಸಾಮಾನ್ಯರು ಅಂದುಕೊಳ್ಳುವಂಥ ವಾತಾವರಣ ಖಂಡಿತ ಇದೆ. ತಮ್ಮ ಕೇರಿಯಲ್ಲಿ ಅಲ್ಲದಿದ್ದರೂ ಇತರ ಕಡೆ ಭಾರೀ ಅಭಿವೃದ್ಧಿ ಆಗಿರಬೇಕು ಎಂದು ನಂಬುವಂಥ ಸ್ಥಿತಿಯನ್ನು ಮೋದಿ ಮತ್ತು ಅವರ ಬೆಂಬಲಿಗರು ನಿರ್ಮಿಸಿದ್ದಾರೆ.
ಜಮೀಅತೆ ಉಲಮಾಯೆ ಹಿಂದ್
ಆಲ್ ಇಂಡಿಯಾ ಮಜ್ಲಿಸೆ ಮುಶಾವರತ್
ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್
ಮರ್ಕಝಿ ಜಮೀಅತೆ ಅಹ್ಲೆ ಹದೀಸ್
ಇಮಾರತೆ ಶರಿಯಾ..
ಮುಂತಾದ 10 ಸಂಘಟನೆಗಳು 2012 ನವೆಂಬರ್ 23ರಂದು ಸಭೆ ಸೇರಿ ಮುಸ್ಲಿಮ್ ಸಬಲೀಕರಣಕ್ಕಾಗಿರುವ ಜಂಟಿ ಸಮಿತಿ(JCMOE)ಯನ್ನು ರಚಿಸಿತಲ್ಲದೇ, 2002ರ ಗುಜರಾತ್ ಹತ್ಯಾಕಾಂಡಕ್ಕಾಗಿ ಮೋದಿ ಕ್ಷಮೆಯಾಚಿಸಿ ತನ್ನ ವರ್ತನೆಯಲ್ಲಿ ಬದಲಾವಣೆ ತೋರ್ಪಡಿಸಿದರೆ, ಗುಜರಾತ್‍ನ ಪುನರ್ ನಿರ್ಮಾಣದಲ್ಲಿ ಮುಸ್ಲಿಮರು ಸಹಕರಿಸುವುದಾಗಿ ಘೋಷಿಸಿತ್ತು. ಮುಸ್ಲಿಮರು ಹೆಚ್ಚಿರುವ ಚುನಾವಣಾ ಕ್ಷೇತ್ರಗಳಲ್ಲಿ ಕನಿಷ್ಠ 20 ಸ್ಥಾನಗಳನ್ನಾದರೂ ಮೋದಿ ಮುಸ್ಲಿಮರಿಗೆ ನೀಡಬೇಕು ಎಂದೂ ಅದು ಆಗ್ರಹಿಸಿತ್ತು. ಆದರೆ ಗುಜರಾತ್‍ನ 182 ಕ್ಷೇತ್ರಗಳ ಪೈಕಿ ಒಂದೇ ಒಂದು ಕ್ಷೇತ್ರದಲ್ಲಿ ಮುಸ್ಲಿಮರಿಗೆ ಮೋದಿ ಟಿಕೇಟು ನೀಡಲಿಲ್ಲ. ಸದ್ಬಾವನಾ ಯಾತ್ರೆಯಲ್ಲಿ ಮುಸ್ಲಿಮರ ಜೊತೆ ನಿಂತು ಪೋಸ್ ಕೊಟ್ಟರೂ ಒಂದು ಸೆಕೆಂಡು ತಲೆಯಲ್ಲಿಟ್ಟು ಕೆಳಗಿಡಬಹುದಾಗಿದ್ದ ಮುಸ್ಲಿಮ್ ಟೋಪಿಯನ್ನೂ ಅವರು ಸ್ವೀಕರಿಸಲಿಲ್ಲ. ನಿಜವಾಗಿ, ಮುಸ್ಲಿಮ್ ವಿರೋಧಿ ಎಂಬ ಇಮೇಜನ್ನು ಕಳಚಿಕೊಳ್ಳಲು ಮೋದಿಗೆ ಎಳ್ಳಷ್ಟೂ ಇಷ್ಟವಿಲ್ಲ. ಮೋದಿಯ ವೇದಿಕೆಗೆ ಮುಸ್ಲಿಮ್ ವಿದ್ವಾಂಸರೇ ಬರಲಿ, ಇರ್ಫಾನ್ ಪಠಾಣೇ ಬರಲಿ, ಎಲ್ಲವನ್ನೂ ಅವರು ತನ್ನ ಲಾಭಕ್ಕಾಗಿ ಬಳಸಿಕೊಳ್ಳುತ್ತಾರೆ. ಮುಸ್ಲಿಮರಿಗೆ ಪಾಠ ಕಲಿಸಿದ್ದೇನೆ ಎಂಬ ಹಮ್ಮು ಈಗಲೂ ಅವರಲ್ಲಿದೆ. ..‘ಈ ವರ್ಷ ಗುಜರಾತ್‍ನ ಸೌರಾಷ್ಟ್ರವು ಮಳೆ ಇಲ್ಲದೇ ಸಂಕಷ್ಟಕ್ಕೆ ಒಳಗಾದಾಗ, ಸೌರಾಷ್ಟ್ರವನ್ನು ಅವರು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಲಿಲ್ಲ. ಯಾಕೆಂದರೆ, ಹಾಗೆ ಘೋಷಿಸುವುದರಿಂದ ಗುಜರಾತ್‍ನ ಬಗ್ಗೆ ತಾನು ಕಟ್ಟಿ ಬೆಳೆಸಿದ ಸುಳ್ಳು ಇಮೇಜಿಗೆ ಎಲ್ಲಿ ಧಕ್ಕೆ ಬಂದೀತೋ ಎಂಬ ಭೀತಿ. ಅಭಿವೃದ್ಧಿಯ ಮಂತ್ರ ಜಪಿಸುತ್ತಿರುವ ಗುಜರಾತ್‍ನಲ್ಲಿ ಅಪೌಷ್ಠಿಕತೆಯ ಪ್ರಮಾಣ ಹೆಚ್ಚಿದೆಯಲ್ಲವೇ ಎಂದು ಈ ವರ್ಷದ ಆರಂಭದಲ್ಲಿ ಅಮೇರಿಕದ ವಾಲ್‍ಸ್ಟ್ರೀಟ್ ಜರ್ನಲ್ ಪತ್ರಿಕೆಯ ಪತ್ರಕರ್ತನೋರ್ವ ಮೋದಿಯನ್ನು ಪ್ರಶ್ನಿಸಿದ್ದ. ಹೆಣ್ಣು ಮಕ್ಕಳಲ್ಲಿ ಸೌಂದರ್ಯ ಪ್ರಜ್ಞೆ ಹೆಚ್ಚಾಗಿರುವುದೇ (ಸ್ಲಿಮ್) ಇದಕ್ಕೆ ಕಾರಣ ಎಂದು ಅವರು ಹೇಳಿದ್ದರು:’ (ದಿ ಹಿಂದೂ, ಸ್ಮಿತಾಗುಪ್ತಾ, ಡಿ. 20, 2012) ಹೀಗೆ ಮೋದಿ ಉದ್ದಕ್ಕೂ ಸತ್ಯವನ್ನು ಮುಚ್ಚಿಡುತ್ತಲೇ ಹೋಗುತ್ತಿದ್ದಾರೆ. ನುಣುಪಾದ ರಸ್ತೆ, ಶಾಪಿಂಗ್ ಮಾಲ್‍ಗಳನ್ನು ತೋರಿಸಿ, ವಿವಿಧ ಗಿಮಿಕ್‍ಗಳನ್ನು ಮಾಡಿ, ಗುಜರಾತಿಯನ್ನರನ್ನು ಒಂದು ಬಗೆಯ ಭ್ರಮೆಗೆ ಅವರು ಒಳಪಡಿಸಿದ್ದಾರೆ. ಒಂದು ರೀತಿಯಲ್ಲಿ, ಮೋದಿ ಒಬ್ಬ ಅತ್ಯುತ್ತಮ ಸೇಲ್ಸ್ ಮನ್. ಅವರು 2001ರಲ್ಲಿ ಮುಖ್ಯಮಂತ್ರಿ ಆಗುವಾಗ ಗುಜರಾತ್‍ನಲ್ಲಿ ಬಿಜೆಪಿಯ ಸ್ಥಿತಿ ದಯನೀಯವಾಗಿತ್ತು. ಆದ್ದರಿಂದ ಹಿಂದೂ ಕೋಮುವಾದವನ್ನು ಅವರು ಮಾರಾಟ ಮಾಡಲೇ ಬೇಕಾಗಿತ್ತು. ಹೀಗಾಗಿ 2002ರಲ್ಲಿ ಅವರು ಕೋಮುಗಲಭೆಯನ್ನು ಮಾರಾಟ ಮಾಡಿದರು. ಆದರೆ ಈಗ ಅದೇ ವಸ್ತುವನ್ನು ಅವರು ಮತ್ತೆ ಮಾರಾಟ ಮಾಡುತ್ತಿಲ್ಲ. ಯಾಕೆಂದರೆ, 2002ರಲ್ಲಿ ಅವರು ಮಾರಿದ್ದು ಕಳಪೆ ವಸ್ತು ಎಂಬುದು ಅವರಿಗೆ ಚೆನ್ನಾಗಿ ಗೊತ್ತು. ಮತ್ತೊಮ್ಮೆ ಅದನ್ನು ಮಾರಾಟಕ್ಕಿಟ್ಟರೆ ಗಿರಾಕಿಗಳು ಸಿಗಲಿಕ್ಕಿಲ್ಲ ಅನ್ನುವುದೂ ಅವರಿಗೆ ಗೊತ್ತು. ಆದ್ದರಿಂದಲೇ, ಈ ಬಾರಿ ಅವರು ‘ಅಭಿವೃದ್ಧಿ’ಯನ್ನು ಮಾರಾಟಕ್ಕಿಟ್ಟಿದ್ದಾರೆ.
  ಅಂದಹಾಗೆ, ಕಳಪೆ ವಸ್ತುಗಳನ್ನು ಮಾರಾಟ ಮಾಡುತ್ತಾ ಜೇಬು ತುಂಬಿಸುತ್ತಿರುವವರನ್ನು ಕೊನೆಗೊಂದು ದಿನ ಆ ಗಿರಾಕಿಗಳೇ ಹಿಡಿದು ಥಳಿಸಿ, ಮುಖವಾಡ ಬಯಲುಗೊಳಿಸಿದ ಧಾರಾಳ ಉದಾಹರಣೆಗಳು ಈ ದೇಶದಲ್ಲಿ ನಡೆದಿದೆಯಲ್ಲವೇ?


Tuesday, December 11, 2012

ಅಬ್ದುಲ್ ನಾರಾಯಣ್ ಡಿ' ಸೋಜ ಎಂಬ ಸೌಹಾರ್ದಪ್ರೇಮಿ?

ಸಂಪಾದಕರೇ,
  ನಾನು ಕೆಎಸ್‍ಆರ್‍ಟಿಸಿಯಲ್ಲಿ ನೌಕರ. ಕಳೆದ ದೀಪಾವಳಿಯ ಸಂದರ್ಭದಲ್ಲಿ ಸಹೋದ್ಯೋಗಿಗಳು ನನ್ನಲ್ಲಿ ಚಂದಾ ಕೇಳಿದರು. ನಾನು ನಯವಾಗಿ ನಿರಾಕರಿಸಿದೆ. ಇಸ್ಲಾಮಿನಲ್ಲಿ ವಿಗ್ರಹ ಪೂಜೆ ಮಾಡುವುದು ಮತ್ತು ಅದಕ್ಕೆ ಪ್ರೋತ್ಸಾಹ ಕೊಡುವುದು ನಿಷಿದ್ಧ ಎಂದೆ. ಸಹೋದ್ಯೋಗಿಗಳಿಗೆ ಇಷ್ಟವಾದಂತೆ ಕಾಣಿಸಲಿಲ್ಲ. ಬಳಿಕ, ಬಸ್ಸಿಗೆ ಹೂಹಾರ ಹಾಕುವಂತೆ ಒತ್ತಾಯಿಸಿದರು. ಆಗಲೂ ನಾನು ನಿರಾಕರಿಸಿದೆ. ಇಸ್ಲಾಮಿನಲ್ಲಿ ಇಂಥ ಆಚರಣೆಗಳಿಗೆ ಅವಕಾಶ ಇಲ್ಲ. ಇದು ಹಿಂದೂ ಧರ್ಮದ ಆಚರಣೆ. ನೀವು ಆಚರಿಸಿ. ಆದರೆ ನನ್ನನ್ನು ಬಲವಂತಪಡಿಸಬೇಡಿ ಎಂದೆ. ಅವರು ಒಪ್ಪಿಕೊಳ್ಳಲಿಲ್ಲ. ನನ್ನನ್ನು ಕೋಮುವಾದಿಯಂತೆ, ಸೌಹಾರ್ದದ ವಿರೋಧಿಯಂತೆ ಬಿಂಬಿಸಿದರು. ಮೇಲಧಿಕಾರಿಗಳಿಗೆ ದೂರು ಕೊಟ್ಟರು. ಯಾವುದಾದರೂ ಪ್ರಕರಣದಲ್ಲಿ ಸಿಲುಕಿಸಿ ಕೆಲಸದಿಂದ ವಜಾ ಮಾಡುವುದಕ್ಕಾಗಿ ಪಿತೂರಿ ನಡೆಸಿದರು. ಹೀಗಾಗಿ ನಾನು ಸಾಕಷ್ಟು ನೊಂದಿದ್ದೇನೆ. ಇನ್ನೊಂದು ಧರ್ಮವನ್ನು ಗೌರವಿಸುತ್ತಾ, ನನ್ನ ಧರ್ಮಕ್ಕೆ ನಾನು ನಿಷ್ಠನಾಗುವುದು ಯಾಕೆ ಸೌಹಾರ್ದದ ವಿರೋಧಿ ಅನ್ನಿಸಿಕೊಳ್ಳುತ್ತದೆ ಅನ್ನುವುದು ಇನ್ನೂ ನನಗೆ ಅರ್ಥವಾಗಿಲ್ಲ. ನಾನು ತಪ್ಪು ಮಾಡಿದ್ದೇನೆಯೇ ತಿಳಿಸಿ..
  ಹಾಗಂತ ನನ್ನ ದೂರದ ಗೆಳೆಯನೊಬ್ಬ ದೂರವಾಣಿ ಕರೆ ಮಾಡಿ ಇತ್ತೀಚೆಗೆ ವಿನಂತಿಸಿದ್ದ..
ಇಷ್ಟಕ್ಕೂ, ಸೌಹಾರ್ದ ಅಂದರೇನು? ಯಾವುದನ್ನೆಲ್ಲಾ ನಾವು ಸೌಹಾರ್ದ ಅಂತ ಕರೆಯಬಹುದು? ಹಿಂದೂ ವಿಧಿಯಂತೆ ಮುಸ್ಲಿಮರು ವಿವಾಹವಾಗುವುದು ಅಥವಾ ಇಸ್ಲಾಮೀ  ವಿಧಿಯಂತೆ ಹಿಂದೂಗಳು ವಿವಾಹವಾಗುವುದು ಸೌಹಾರ್ದವಾಗಬಹುದೇ? ಹಿಂದೂಗಳದ್ದೋ ಕ್ರೈಸ್ತರದ್ದೋ ಕೆಲವು ಆಚರಣೆಗಳನ್ನು ಮುಸ್ಲಿಮರು ಮಾಡುವುದು ಮತ್ತು ಮುಸ್ಲಿಮರ ಕೆಲವು ಆಚರಣೆಗಳನ್ನು ಹಿಂದೂಗಳು ಮಾಡುವುದನ್ನೆಲ್ಲಾ ಸೌಹಾರ್ದವಾಗಿ ಪರಿಗಣಿಸಬಹುದಾ? ನಿಜವಾಗಿ, ಮಾಧ್ಯಮಗಳ ಹಿಡಿತ ಈ ಸಮಾಜದ ಮೇಲೆ ಬಲವಾಗಿರುವುದರಿಂದ ಅವು ಏನೆಲ್ಲ ಹೇಳುತ್ತವೋ ಅಥವಾ ಯಾವುದನ್ನು ಅನುಕರಣೀಯ ಅಂಥ ಬೋಧಿಸುತ್ತವೋ ಅವನ್ನೇ ಸರಿ ಎಂದು ಸಮಾಜ ತೀರ್ಮಾನಿಸಿಬಿಡುತ್ತದೆ. ಮುಸ್ಲಿಮನೋರ್ವ ಇರುಮುಡಿ ಕಟ್ಟಿ ಅಯ್ಯಪ್ಪ ವ್ರತಧಾರಿಯಾಗುವುದು ಇವತ್ತಿನ ಮಾಧ್ಯಮಗಳ ಮಟ್ಟಿಗೆ ಸೌಹಾರ್ದದ ಸಂಕೇತ. ದರ್ಗಾಕ್ಕೆ ಹಿಂದೂವೊಬ್ಬ ನಡೆದುಕೊಳ್ಳುವುದು ಕೂಡಾ ಮಾಧ್ಯಮಗಳ ಕಣ್ಣಿನಲ್ಲಿ ಸೌಹಾರ್ದವಾಗುತ್ತದೆ. ‘ಕಾರಣಿಕದ’ ಜಾಗಕ್ಕೆ ಮುಸ್ಲಿಮನೋರ್ವ ನಡೆದುಕೊಂಡರೆ, ಅಂತರ್ಜಾತಿ ವಿವಾಹವಾದರೆ ಅಥವಾ ಇನ್ನೇನೋ ಅಸಂಗತಗಳು ನಡೆದರೆ ಅವಕ್ಕೆಲ್ಲಾ ಸೌಹಾರ್ದದ ಬಿರುದು ಕೊಟ್ಟು ಸಾರ್ವಜನಿಕವಾಗಿ, ‘ಇಂಥದ್ದು ಮಾತ್ರ ಸೌಹಾರ್ದ’ ಎಂಬೊಂದು ತಿಳುವಳಿಕೆಯನ್ನು ಹುಟ್ಟಿಸುವಲ್ಲಿ ಮಾಧ್ಯಮಗಳು ಬಹುವಂಶ ಇವತ್ತು ಯಶಸ್ವಿಯಾಗಿವೆ. ಆದ್ದರಿಂದಲೇ, ಚಂದಾ ಕೊಡಲು ನಿರಾಕರಿಸಿದ ನನ್ನ ಗೆಳೆಯ ಕೋಮುವಾದಿಯಾಗಿ ಬಿಂಬಿತಗೊಂಡದ್ದು.
  ಅಂದ ಹಾಗೆ, ಇಸ್ಲಾಮ್‍ನಲ್ಲಿ ಮದುವೆಯಾಗುವುದಕ್ಕೆ ನಿಶ್ಚಿತವಾದ ವಿಧಾನವಿದೆ. ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ವರ ಮತ್ತು ವಧುವಿನ ತಂದೆ ಇಲ್ಲವೇ ವಾರೀಸುದಾರರು ವಿಧಿಗಳನ್ನು ನೆರವೇರಿಸುತ್ತಾರೆ. ಅದೇ ವೇಳೆ ಹಿಂದೂಗಳ ಮದುವೆಯು ಅಗ್ನಿಸಾಕ್ಷಿಯಾಗಿ ನೆರವೇರುತ್ತದೆ. ಮಾತ್ರವಲ್ಲ, ಇಸ್ಲಾಮ್ ಪ್ರಬಲವಾಗಿ ನಿಷೇಧಿಸಿರುವ ಬಹುದೇವಾರಾಧನೆ, ವಿಗ್ರಹಾರಾಧನೆಯ ವಿಧಿ-ವಿಧಾನಗಳೂ ಬಳಕೆಯಲ್ಲಿವೆ. ಹೀಗಿರುವಾಗ, ಮುಸ್ಲಿಮನೊಬ್ಬ ಹಿಂದೂ ಧಾರ್ಮಿಕ ವಿಧಿಯಂತೆ ಮದುವೆಯಾಗುವುದಾದರೆ, ಅದು ಹಿಂದೂಗಳ ಮಟ್ಟಿಗೆ ಸೌಹಾರ್ದವಾಗಿ ಕಾಣಬಹುದು. ಆದರೆ ಮುಸ್ಲಿಮರು ಅದನ್ನು ಧರ್ಮದ್ರೋಹವೆಂದಲ್ಲದೆ ಸೌಹಾರ್ದವಾಗಿ ಪರಿಗಣಿಸಲು ಸಾಧ್ಯವೇ? ಒಂದು ಧರ್ಮಕ್ಕೆ ಅಪಚಾರವೆಸಗಿ ಮಾಡಲಾಗುವ ಯಾವುದೇ ಬಗೆಯ ಸೌಹಾರ್ದತೆಯು ಸಾಮಾಜಿಕವಾಗಿ ಒಗ್ಗಟ್ಟನ್ನು ತಂದೀತೇ? ಆದ್ದರಿಂದಲೇ ಪ್ರವಾದಿ ಮುಹಮ್ಮದರು(ಸ) ಇಂಥ ಆಲೋಚನೆಗಳನ್ನು ಬಲವಾಗಿ ತಿರಸ್ಕರಿಸಿದ್ದು. "ಒಂದು ವರ್ಷ ನೀವು ನಮ್ಮ ವಿಗ್ರಹಗಳನ್ನು ಪೂಜಿಸಿದರೆ ಇನ್ನೊಂದು ವರ್ಷ ನಿಮ್ಮ ಅಲ್ಲಾಹನನ್ನು ನಾವು ಪೂಜಿಸುತ್ತೇವೆ" ಎಂದು ಪ್ರವಾದಿಯವರಲ್ಲಿ ಮಕ್ಕಾದ ವಿರೋಧಿಗಳು ವಿನಂತಿಸಿದ್ದರು. ಒಂದು ವೇಳೆ ಪ್ರವಾದಿಯವರು  ಆ ಬೇಡಿಕೆಯನ್ನು ಒಪ್ಪಿಕೊಳ್ಳುತ್ತಿದ್ದರೆ ಅವರ ಮತ್ತು ಅವರ ಅನುಯಾಯಿಗಳ ಮೇಲೆ ನಡೆಯುತ್ತಿದ್ದ ಹಿಂಸೆ, ದೌರ್ಜನ್ಯ, ಬಹಿಷ್ಕಾರಗಳಿಗೆಲ್ಲಾ ತೆರೆ ಬೀಳುತ್ತಿತ್ತು. ಇಷ್ಟಿದ್ದೂ ಪ್ರವಾದಿ(ಸ) ಹೇಳಿದ್ದು, ‘ನಿಮಗೆ ನಿಮ್ಮ ಧರ್ಮ ಮತ್ತು ನಮಗೆ ನಮ್ಮ ಧರ್ಮ.’ ‘ಧರ್ಮದ ವಿಷಯದಲ್ಲಿ ಬಲಾತ್ಕಾರ ಸರಿಯಲ್ಲ.’ (ಪವಿತ್ರ ಕುರ್‍ಆನ್: 2: 256) (109: 6)
  ನಿಜವಾಗಿ, ಇಂಥದ್ದೊಂದು ಕಲಬೆರಕೆಯ ಸೌಹಾರ್ದತೆಯು ಆಚರಣೆಯಲ್ಲಿರಬೇಕಾದುದು ಕೊಳ್ಳುಬಾಕ ಸಂಸ್ಕ್ರತಿಯ ಮಟ್ಟಿಗೆ ಬಹಳ ಅಗತ್ಯ. ಧರ್ಮವನ್ನು ತೀರಾ ಸರಳವಾಗಿ ವ್ಯಾಖ್ಯಾನಿಸುತ್ತಾ ಬದುಕುವ ಸಮೂಹವೊಂದರ ಅಗತ್ಯ ಜಾಗತೀಕರಣಕ್ಕೆ ಮತ್ತು ಸಾಮ್ರಾಜ್ಯಶಾಹಿ ಆಲೋಚನೆಗಳಿಗೆ ತುರ್ತಾಗಿ ಬೇಕಾಗಿದೆ. ಒಂದು ಕಡೆ ಅಪ್ಪಟ ಭೌತಿಕ ವಾದಿಗಳನ್ನು ಅದು ತಯಾರಿಸುತ್ತಿರುವ ಹಾಗೆಯೇ ಇನ್ನೊಂದು ಕಡೆ, ಧರ್ಮನಿಷ್ಠರನ್ನು ಅಪಾಯಕಾರಿಗಳಂತೆ ಬಿಂಬಿಸುವುದಕ್ಕೆ ಅದು ತನ್ನ ಸರ್ವಸಾಧ್ಯ ಕಾಣಿಕೆಗಳನ್ನು ನೀಡುತ್ತಿದೆ. ಜಗತ್ತಿನ ಕೆಲವು ಕುಬೇರ ಕಂಪೆನಿಗಳು ಉತ್ಪನ್ನಗಳನ್ನು ತಯಾರಿಸಿ, ಅದಕ್ಕೆ ತಕ್ಕಂತೆ ಮಾಧ್ಯಮಗಳನ್ನು ಬಳಸಿ ಜನರನ್ನು ಭ್ರಮಾಲೋಕದಲ್ಲಿ ತೇಲುವಂತೆ ಮಾಡುತ್ತಿವೆ. ಜನರು ಈ ಉತ್ಪನ್ನಗಳನ್ನು ಮನೆ ತುಂಬಿಸಿಕೊಳ್ಳುವುದೇ ನಿಜವಾದ ಪ್ರೆಸ್ಟೀಜು ಎಂದು ಭಾವಿಸುವ ಮೂಲಕ ಅದಕ್ಕಾಗಿ ಹಗಲಿರುಳು, ನ್ಯಾಯ-ಅನ್ಯಾಯವೆನ್ನದೆ ದುಡಿಯುತ್ತಾರೆ. ದೇಶದ ಒಟ್ಟು ವ್ಯವಸ್ಥೆ ಇವತ್ತು ಭ್ರಷ್ಟವಾಗಿದ್ದರೆ, ಜನರಲ್ಲಿ ತುಂಬಲಾದ ಈ ದುರಾಸೆಗೆ ಪ್ರಥಮ ಸ್ಥಾನವಿದೆ.
  ಇದರ ಇನ್ನೊಂದು ಮುಖ, ಈ ತೀವ್ರ ಭೌತಿಕವಾದವನ್ನು ಒಪ್ಪದವರನ್ನು ಅಪಾಯಕಾರಿಗಳಂತೆ ಬಿಂಬಿಸುವುದು. ಇವತ್ತು ಸಾಮ್ರಾಜ್ಯಶಾಹಿತ್ವದ ಪ್ರಥಮ ಶತ್ರು ಯಾವುದೇ ಒಂದು ರಾಷ್ಟ್ರವಲ್ಲ ಅಥವಾ ಸರ್ವಾಧಿಕಾರಿಯೋ ಯಾವುದಾದರೊಂದು ನಿರ್ದಿಷ್ಟ ಪಕ್ಷವೋ ಅಲ್ಲ. ಧರ್ಮವನ್ನು ಅದರ ನಿಜವಾದ ಅರ್ಥದಲ್ಲಿ ಯಾರೆಲ್ಲ ಪಾಲಿಸುತ್ತಾರೋ ಅವರ ಬಗ್ಗೆ ಸಾಮ್ರಾಜ್ಯಶಾಹಿತ್ವಕ್ಕೆ ತೀವ್ರ ಸಿಟ್ಟಿದೆ. ತಮ್ಮ ಭ್ರಮಾ ಜಗತ್ತಿನೊಳಗೆ ಅವರನ್ನು ಸೆಳೆಯಲು ಸಾಧ್ಯವಿಲ್ಲ ಎಂದು ತಿಳಿದುಕೊಂಡಿರುವ ಅದು ಇವರು ತಮ್ಮ ವಿರುದ್ಧ ಧ್ವನಿಯೆತ್ತದಂತೆ ತಡೆಯುವುದಕ್ಕಾಗಿ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ತಂತ್ರಗಳನ್ನು ಹೆಣೆದುಕೊಂಡಿದೆ. ಭಾರತದಂಥ ದೇಶಗಳಲ್ಲಿ ಧರ್ಮಗಳ ನಡುವೆ ಸಂಘರ್ಷ ಉಂಟಾಗುವಂಥ ವಾತಾವರಣವನ್ನು ನಿರ್ಮಿಸಿದ್ದರೆ, ಇರಾಕ್ ಮತ್ತಿತರ ಕಡೆ ಸುನ್ನಿ-ಶಿಯಾ ಭಿನ್ನಾಭಿಪ್ರಾಯವನ್ನು, ಜನಾಂಗೀಯ ಮತ್ತು ಪ್ರಾದೇಶಿಕ ವಾದವನ್ನು ಸಂಘರ್ಷದ ವಿಷಯವಾಗಿ ತೂರಿಬಿಟ್ಟಿದೆ. ಸಾಮ್ರಾಜ್ಯಶಾಹಿತ್ವವನ್ನು ಮತ್ತು ಕಲಬೆರಕೆ ಧಾರ್ಮಿಕತೆ ಯನ್ನು ಬಲವಾಗಿ ವಿರೋಧಿಸುತ್ತಿದ್ದ ಈಜಿಪ್ಟ್ ನ ಮುಸ್ಲಿಮ್ ಬ್ರದರ್‍ಹುಡ್ ಅನ್ನು ಹುಸ್ನಿ ಮುಬಾರಕ್ ಎಂಬ ಸರ್ವಾಧಿಕಾರಿಯ ಮುಖಾಂತರ 40 ವರ್ಷಗಳವರೆಗೆ ದಮನಿಸಿದ್ದು ಇದೇ ಸಾಮ್ರಾಜ್ಯಶಾಹಿತ್ವ. ಇಲ್ಲದಿದ್ದರೆ ಫೆಲೆಸ್ತೀನ್, ಈಜಿಪ್ಟ್, ಸಿರಿಯ, ಜೋರ್ಡಾನ್, ಲೆಬನಾನ್.. ಮುಂತಾದ ರಾಷ್ಟ್ರಗಳ ಭೂಪ್ರದೇಶವನ್ನು ಆಕ್ರಮಿಸಿರುವ ಇಸ್ರೇಲ್‍ನ ವಿರುದ್ಧ ಒಂದಾಗುವುದರ ಬದಲು, ಲಿಬಿಯದ ಗದ್ದಾಫಿ, ಟ್ಯುನೀಶಿಯಾದ ಝೈನುಲ್ ಆಬಿದೀನ್, ಈಜಿಪ್ಟ್ ನ ಮುಬಾರಕ್, ಜೋರ್ಡಾನ್‍ನ ಸಾಲಿಹ್, ಸಿರಿಯದ ಅಸದ್..ರೆಲ್ಲ ತಮ್ಮದೇ ದೇಶದ ‘ಮುಸ್ಲಿಮ್ ಬ್ರದರ್‍ಹುಡ್’ಗಳ ವಿರುದ್ಧ ಒಂದಾಗುತ್ತಿದ್ದರೆ? ನಿಜವಾಗಿ, ಇಂಥ ಧರ್ಮದ ಇಂತಿಂಥ ಚಟುವಟಿಕೆಗಳು ಅಮಾನವೀಯವಾದದ್ದು, ಕ್ರೌರ್ಯದ್ದು ಎಂದು ಮಾಧ್ಯಮಗಳನ್ನು ಬಳಸಿ ಸಾಮ್ರಾಜ್ಯಶಾಹಿತ್ವವು ಗದ್ದಲವೆಬ್ಬಿಸುತ್ತದೆ. ಮಾತ್ರವಲ್ಲ, ಅದು ಹೇಗೆ ಇತರ ಧರ್ಮಗಳಿಗೆ ಅಪಾಯಕಾರಿ ಎಂಬುದನ್ನು ಸಿನಿಮಾ, ಕಾರ್ಟೂನ್ ಅಥವಾ ಇನ್ನಾವುದಾದರೂ ವಿಧಾನದ ಮೂಲಕ ಹೇಳುತ್ತಲೇ ಇರುತ್ತವೆ. ಹೀಗೆ ಒಂದು ಧರ್ಮವನ್ನು ಇನ್ನೊಂದು ಧರ್ಮದ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ತೆರೆಯ ಹಿಂದೆ ನಿಂತು ಅತ್ಯಂತ ಅಚ್ಚುಕಟ್ಟಾಗಿ ಅವು ಮಾಡುತ್ತಲೇ ಇರುತ್ತವೆ. ಆದ್ದರಿಂದಲೇ, ನನ್ನ ಮಿತ್ರನ ಧರ್ಮನಿಷ್ಠೆ ಆತನ ಸಹೋದ್ಯೋಗಿಗಳಿಗೆ ಕೋಮುವಾದದಂತೆ ಕಾಣಿಸಿದ್ದು. ಯಾಕೆಂದರೆ, ಕೋಮುವಾದ, ಸೌಹಾರ್ದತೆ.. ಎಂಬುದನ್ನೆಲ್ಲಾ ನಾವು ಇವತ್ತು ಕಲಿತದ್ದು ಧರ್ಮಗ್ರಂಥಗಳಿಂದಲ್ಲ, ಮಾಧ್ಯಮ ಜಾಹೀರಾತುಗಳಿಂದ. ನಿಜವಾಗಿ, ತನ್ನ ಧರ್ಮಕ್ಕೆ ನಿಷ್ಠವಾಗಿರುವುದು ಕೋಮುವಾದವಲ್ಲ. ತನ್ನ ಧರ್ಮದವನ ಅಪರಾಧವನ್ನು, ‘ತನ್ನ ಧರ್ಮದವ’ ಎಂಬ ಕಾರಣಕ್ಕಾಗಿ ಬೆಂಬಲಿಸುವುದೇ ಕೋಮುವಾದ. ಆದರೆ ಇವತ್ತಿನ ಸ್ಥಿತಿಯಾದರೂ ಹೇಗಿದೆ? ಸಮಾಜದಲ್ಲಿ ಕಳ್ಳಭಟ್ಟಿ ಇದೆ. ಮದ್ಯ ಇದೆ. ಲಾಟರಿ ಇದೆ. ಜೂಜು ಇದೆ.. ಹೀಗೆ ಧರ್ಮಗಳು ವಿರೋಧಿಸಿದ ಕೆಡುಕಿನ ಸಾವಿರ ಸಾವಿರ ಪ್ರಕಾರಗಳು ಇವೆ. ಆದರೆ, ಈ ಕುರಿತಂತೆ ಎಲ್ಲಾದರೂ ಗಲಭೆ ನಡೆಯುತ್ತದೆಯೇ? ಕಳ್ಳಭಟ್ಟಿ ತಯಾರಿಸುವವ ಇನ್ನೊಬ್ಬ ಕಳ್ಳಭಟ್ಟಿ ತಯಾರಕನ ಮೇಲೆ ಮುಗಿ ಬೀಳುತ್ತಾನಾ? ಒಂದು ಮದ್ಯದಂಗಡಿಯ ಮಾಲಿಕ ಇನ್ನೋರ್ವ ಮದ್ಯದಂಗಡಿ ಮಾಲಿಕನನ್ನು ಕೊಲ್ಲುತ್ತಾನಾ? ಸಿಕ್ಕಿಮ್ ಲಾಟರಿಯು ನಾಗಾಲ್ಯಾಂಡ್ ಲಾಟರಿಯನ್ನು ಮುಗಿಸಲು ನೋಡುವುದಿದೆಯೇ? ನಿಜವಾಗಿ ಎಲ್ಲ ಕೆಡುಕುಗಳ ಸ್ಥಿತಿಯೂ ಹೀಗೆಯೇ. ಒಂದು ರೀತಿಯಲ್ಲಿ, ಧರ್ಮಾನುಯಾಯಿಗಳು ಈ ಎಲ್ಲ ಕೆಡುಕುಗಳ ವಿರುದ್ಧ ಹೋರಾಡಬೇಕಿತ್ತು. ಆದರೆ ಇದು ಆಗುವ ಬದಲು; ಒಂದು ಪ್ರದೇಶಕ್ಕೆ ತೀರಾ ಕಂಟಕವಾಗಿರುವ ಹಿಂದೂ ಸಹೋದರನ ಮಾಲಿಕತ್ವದ ಮದ್ಯ ದಂಗಡಿಯ ವಿರುದ್ಧ ಮುಸ್ಲಿಮರು ಪ್ರತಿಭಟನೆ ನಡೆಸಿದರೆ, ಆ ಮದ್ಯದಂಗಡಿ ಹಿಂದೂವಿಗೆ ಸೇರಿದ್ದು ಎಂಬ ಏಕೈಕ ಕಾರಣಕ್ಕಾಗಿ ಅದರ ಪರ ಹಿಂದೂಗಳು ಒಟ್ಟು ಸೇರುವಂಥ ಘೋರ ವಿಪರ್ಯಾಸಗಳು ನಡೆಯುತ್ತಿವೆ. ಅದೇ ರೀತಿ, ಅಕ್ರಮ ಕಸಾಯಿಖಾನೆ ಒಂದು ಕಡೆ ನಡೆಯುತ್ತಿದ್ದರೆ ಮತ್ತು ಅದರ ವಿರುದ್ಧ ಹಿಂದೂಗಳು ಪ್ರತಿಭಟನೆ ನಡೆಸಿದರೆ ಅದು ಮುಸ್ಲಿಮರಿಗೆ ಸೇರಿದ್ದೆಂಬ ಕಾರಣಕ್ಕಾಗಿ ಆ ಅಕ್ರಮ ಕಸಾಯಿಖಾನೆಯನ್ನು ಮುಸ್ಲಿಮರು ಬೆಂಬಲಿಸುವಂಥ ಧರ್ಮವಿರೋಧಿ ಕೃತ್ಯಗಳು ನಡೆಯುತ್ತಿವೆ. ನಿಜವಾಗಿ, ಕೋಮುವಾದ ಅಂದರೆ ಇದುವೇ. ಇದಕ್ಕೆ ಧರ್ಮಾನುಯಾಯಿಗಳ ಅಜ್ಞಾನ ಕಾರಣವೇ ಹೊರತು ಧರ್ಮ ಅಲ್ಲ. ಆದರೆ, ಇಂಥದ್ದೊಂದು ಅಜ್ಞಾನ ಸಮಾಜದಲ್ಲಿ ಗಟ್ಟಿಯಾಗಿ ಬೇರೂರುವುದನ್ನು ಸಾಮ್ರಾಜ್ಯಶಾಹಿ ಮತ್ತು ಮಾರುಕಟ್ಟೆ ದೊರೆಗಳು ಯಾವಾಗಲೂ ಬಯಸುತ್ತಲೇ ಇರುತ್ತಾರೆ. ಹೀಗಾದರೆ, ದೇಶದ ಬಹುದೊಡ್ಡ ಜನಸಂಖ್ಯೆಯನ್ನು ತಮ್ಮ ಉತ್ಪನ್ನಗಳ ಹಿಂದೆಯೇ ಬೀಳುವಂತೆ ಮಾಡುವುದಕ್ಕೆ ಈ ಮಾರುಕಟ್ಟೆ ದೊರೆಗಳಿಗೆ ಸುಲಭವಾಗುತ್ತದೆ. ನಿಜವಾಗಿ, ಇವತ್ತು ಯಾವುದೇ ಧರ್ಮಾನುಯಾಯಿ ಸಾಮ್ರಾಜ್ಯ ಶಾಹಿತ್ವದ ಬಗ್ಗೆ ಸರಿಯಾಗಿ ಅರಿತುಕೊಂಡರೆ ಆತ ಖಂಡಿತ ಇನ್ನೊಂದು ಧರ್ಮವನ್ನು ದ್ವೇಷಿಸುವ ಬದಲು ಸಾಮ್ರಾಜ್ಯಶಾಹಿತ್ವ ಹುಟ್ಟು ಹಾಕುತ್ತಿರುವ ಭ್ರಮೆಗಳ ಮತ್ತು ಅವುಗಳಿಂದಾಗಿ ಜನರು ಸ್ವೇಚ್ಛಾಚಾರಿಗಳಾಗುತ್ತಿರುವುದರ ವಿರುದ್ಧ ಹೋರಾಡುತ್ತಿದ್ದ.
  ಅಂದಹಾಗೆ, ಸೌಹಾರ್ದಕ್ಕೆ ವ್ಯಾಖ್ಯಾನವಾದರೂ ಏನು? ಇನ್ನೊಬ್ಬರಿಗೆ ಖುಷಿಯಾಗಲಿ ಎಂದು ತನ್ನ ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸೌಹಾರ್ದವಾಗುತ್ತದೆ? ತನ್ನ ಧರ್ಮ ವಿರೋಧಿಸಿದ್ದರೂ ತನ್ನ ಸಹೋದ್ಯೋಗಿಗಳಿಗೆ ನೋವಾಗದಿರಲಿ ಎಂಬುದಕ್ಕಾಗಿ ಓರ್ವ ಮದ್ಯ ಸೇವಿಸಬಹುದೇ? ಭ್ರಷ್ಟಾಚಾರದಲ್ಲಿ ಭಾಗಿಯಾಗಬಹುದೇ? ಕಳ್ಳತನಕ್ಕೆ ಸಹಕರಿಸಬಹುದೇ? ಏಕದೇವನದ್ದೋ ವಿಗ್ರಹದ್ದೋ ಪೂಜೆ ಮಾಡಬಹುದೇ.. ನಿಜವಾಗಿ, ಹೀಗೆಲ್ಲ ಮಾಡುವುದು ಸೌಹಾರ್ದವಾಗುತ್ತದೆಂದಾದರೆ ಸೌಹಾರ್ದದ ಅರ್ಥವೇ ‘ವಂಚನೆ’ ಎಂದಾಗಿ ಬಿಡುತ್ತದೆ. ಯಾಕೆಂದರೆ, ಆತ ಹೀಗೆಲ್ಲ ಮಾಡುವುದು ಆತನ ಇಷ್ಟದಂತೆ ಅಲ್ಲ, ಇನ್ನಾರದೋ ಖುಷಿಗಾಗಿ. ಇದು ಎಷ್ಟು ಅಪಾಯಕಾರಿ ಎಂದರೆ, ಓರ್ವ ಅಬ್ದುಲ್ ನಾರಾಯಣ್ ಡಿಸೋಜ ಎಂದು ತನ್ನನ್ನು ಕರೆದುಕೊಂಡಂತೆ. ಮುಸ್ಲಿಮರಲ್ಲಿ ಆತ ಅಬ್ದುಲ್ಲ ಎಂದು ಗುರುತಿಸಿಕೊಳ್ಳುತ್ತಾನೆ. ಹಿಂದೂಗಳು ಸಿಕ್ಕರೆ ನಾರಾಯಣ್ ಎಂದೂ ಕ್ರೈಸ್ತರನ್ನು ಕಂಡರೆ ಡಿಸೋಜ ಎಂದೂ ಪರಿಚಯಿಸಿ ಕೊಳ್ಳುತ್ತಾನೆ. ನಿಜವಾಗಿ, ಆತ ಮಾಡುತ್ತಿರುವುದು ವಂಚನೆ. ಪರಿಸ್ಥಿತಿಯ ಲಾಭ ಪಡಕೊಳ್ಳುವುದಕ್ಕಾಗಿ ಆತ ವಿವಿಧ ವೇಷ ತೊಡುತ್ತಿರುತ್ತಾನೆ. ಒಂದು ರೀತಿಯಲ್ಲಿ, ಈತನಷ್ಟು ಅಪಾಯಕಾರಿಗಳು ಇನ್ನಾರೂ ಇರುವುದಿಲ್ಲ. ಸಮಾಜದಲ್ಲಿ ಇವತ್ತು ಕೆಲವರು ಒತ್ತಾಯಪಡಿಸುತ್ತಿರುವುದು ಈ ಬಗೆಯ ಸೌಹಾರ್ದವನ್ನು. ಮುಸ್ಲಿಮನೊಬ್ಬ ಗಣಪತಿಗೆ ಪೂಜೆ ಮಾಡಿದರೆ, ಕೃಷ್ಣಾಷ್ಟಮಿಯಲ್ಲಿ ವೇಷ ಹಾಕಿದರೆ ಅಥವಾ ಹಿಂದೂವೊಬ್ಬ ದರ್ಗಾಕ್ಕೋ ಇನ್ನಾವುದಕ್ಕೋ ನಡಕೊಂಡರೆ.. ಅದು ಸೌಹಾರ್ದ ಖಂಡಿತ ಅಲ್ಲ. ಅದೊಂದು ಬಗೆಯ ನಕಲಿ ಧಾರ್ಮಿಕತೆ. ಸೌಹಾರ್ದ ಅಂದರೆ ತನ್ನ ಧರ್ಮ ವಿರೋಧಿಸಿದ ಕಾರ್ಯಗಳನ್ನು ಮಾಡುವುದಲ್ಲ, ಬದಲು ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಇನ್ನೊಂದು ಧರ್ಮವನ್ನು ಮತ್ತು ಅದರ ಆಚರಣೆಗಳನ್ನು ಗೌರವಿಸುವುದು. ಆದ್ದರಿಂದಲೇ ಧರ್ಮನಿಷ್ಠ ವ್ಯಕ್ತಿ ಎಂದೂ ಕೋಮುವಾದಿಯಾಗುವುದಿಲ್ಲ. ಸೌಹಾರ್ದ ವಿರೋಧಿಯೂ ಆಗುವುದಿಲ್ಲ. ಆದರೆ ಇವತ್ತು ಕೋಮುವಾದ ಮತ್ತು ಸೌಹಾರ್ದದ ಅರ್ಥವನ್ನೇ ಕೆಲವರು ಕೆಡಿಸಿಬಿಟ್ಟಿರುವುದರಿಂದ ಧರ್ಮಿಷ್ಟರೇ ಇವತ್ತು ಕೋಮುವಾದಿಗಳು ಮತ್ತು ಸೌಹಾರ್ದ ವಿರೋಧಿಗಳಾಗಿ ಗುರುತಿಗೀಡಾಗುತ್ತಿದ್ದಾರೆ.
  ಮಿತ್ರನ ಸಂಕಟ ಕೂಡಾ ಇದುವೇ..