Tuesday, December 25, 2012

ಕಳಪೆ ವಸ್ತುಗಳ ಮಾರಾಟಗಾರ ಥಳಿತಕ್ಕೆ ಒಳಗಾಗಿದ್ದಾನೆಯೇ ಹೊರತು ಸನ್ಮಾನಕ್ಕಲ್ಲ..


“ನನ್ನ, ಗುಜರಾತ್ ಪ್ರವಾಸದ ಬಗ್ಗೆ ಪ್ರತಿಕ್ರಿಯೆ ನೀಡಿದವರಿಗೆ, ನನ್ನನ್ನು ಮನಸ್ಸಿಗೆ ಬಂದಂತೆ ಬೈದವರಿಗೆ, ತಮ್ಮ ಮನಸ್ಸಿನ ವಿಕಾರವನ್ನು ಹೊರ ಹಾಕಿ ವಿಜೃಂಭಿಸಿದವರಿಗೆ, ಗುಜರಾತಿಗೆ ಹುಡುಗಿಯನ್ನು ಕರಕೊಂಡು ಹೋಗಿದ್ದೆಯಾ ಎಂದು ಪ್ರಶ್ನಿಸುವ ಮೊಲಕ ತಮ್ಮ ಮನಸ್ಸಿನ ಆಲೋಚನೆಯನ್ನು ಹೊರಹಾಕಿದ ಮಹಾತ್ಮರಿಗೆ ಎಲ್ಲರಿಗೂ ಕೃತಜ್ಞತೆಗಳು. ನಮ್ಮ ಮಾತು ನಮ್ಮ ಸಂಸ್ಕ್ರಿತಿಯನ್ನು ಹೊರ ಹಾಕುತ್ತದೆ ಎಂಬ ಮಾತಿಗೆ ನನಗೆ ಮತ್ತೊಮ್ಮೆ ಪುರಾವೆ ದೊರಕಿದೆ. ಹಾಗೆ ಮೋದಿಯವರ ಉಗ್ರ ಅಭಿಮಾನಿಗಳ ಮನಸ್ಸು ಹೇಗಿದೆ ಎಂಬುದು ನನಗೆ ಮತ್ತೊಮ್ಮೆ ಅರ್ಥವಾಗಿದೆ. ತಮ್ಮ ಮನಸ್ಸಿನಲ್ಲಿ ಇರುವುದನ್ನು ಹೊರಗೆ ಹಾಕಿ ಬೆತ್ತಲೆಯಾದ ಎಲ್ಲರಿಗೂ ಮತ್ತೊಮ್ಮೆ ಕೃತಜ್ಞತೆಗಳು...”
  ಹಾಗಂತ ಕನ್ನಡದ ಖ್ಯಾತ ಪತ್ರಕರ್ತರೂ ಸಮಯ ಟಿ.ವಿ. ಚಾನೆಲ್‍ನಲ್ಲಿ ಈ ಹಿಂದೆ ಸಂಪಾದಕರೂ ಆಗಿದ್ದ ಶಶಿಧರ್ ಭಟ್ರು 2012, ಡಿ. 17ರಂದು ತಮ್ಮ ಫೇಸ್‍ಬುಕ್‍ನಲ್ಲಿ ಬರೆದಿದ್ದರು. ಅದಕ್ಕೆ ಕಾರಣವೂ ಇದೆ.
  ಅವರು ಇತ್ತೀಚೆಗೆ ಎರಡು ದಿನಗಳ ಕಾಲ ಗುಜರಾತ್‍ಗೆ ಭೇಟಿ ನೀಡಿದ್ದರು. ಆಗ ತಮ್ಮ ಅನುಭವಕ್ಕೆ ಬಂದದ್ದನ್ನು, ‘ಮೋದಿಯ ನಾಡಿನಲ್ಲಿ ಎರಡು ದಿನ ಕಂಡದ್ದು, ಕೇಳಿದ್ದು..’ ಎಂಬ ಶೀರ್ಷಿಕೆಯಲ್ಲಿ ಲೇಖನ ಬರೆದಿದ್ದರು. ಇವರ ಗಡ್ಡವನ್ನು ನೋಡಿ ಮುಸ್ಲಿಮ್ ಎಂದು ಭಾವಿಸಿದ ಅಹ್ಮದಾಬಾದ್‍ನ ಹೊಟೇಲ್‍ನ ಮಾಲಿಕ ರೂಮ್ ಕೊಡಲು ನಿರಾಕರಿಸಿದ್ದು, ಆತ ಮೋದಿಯ ಅಭಿವೃದ್ಧಿಯ ಬಗ್ಗೆ ಹೊಗಳಿದ್ದು, ಯಾವ ಅಭಿವೃದ್ಧಿ ಎಂದು ಇವರು ಪ್ರಶ್ನಿಸಿದಾಗ ಉತ್ತರಕ್ಕಾಗಿ ತಡಕಾಡಿದ್ದು... ಎಲ್ಲವನ್ನೂ ಭಟ್ರು ವಿಸ್ತ್ರತವಾಗಿ ಬರೆದಿದ್ದರು. ಮಾತ್ರವಲ್ಲ, ಇಂಥ ರಾಜ್ಯಕ್ಕೆ ಧಿಕ್ಕಾರವಿರಲಿ ಎಂದೂ ಸೇರಿಸಿದ್ದರು. ಡಿ. 15ರಂದು ಬರೆದ ಈ ಲೇಖನಕ್ಕೆ ಕೇವಲ ಎರಡೇ ದಿನಗಳಲ್ಲಿ ಓದುಗರಿಂದ 188 ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದುವು. ಹೆಚ್ಚಿನ ಪ್ರತಿಕ್ರಿಯೆಗಳೂ ಭಟ್ರನ್ನು ಹೀಯಾಳಿಸುವ ಮತ್ತು ಮೋದಿಯನ್ನು ಸಂತನಂತೆ ಹೊಗಳುವ ಧಾಟಿಯಲ್ಲಿತ್ತು. ನಿಜವಾಗಿ, ಇದು ಶಶಿಧರ ಭಟ್ ಎಂಬ ಓರ್ವ ಪತ್ರಕರ್ತರಿಗಾದ ಅನುಭವವಷ್ಟೇ ಅಲ್ಲ, ಮೋದಿಯನ್ನು ಟೀಕಿಸುವ ಪ್ರತಿಯೊಬ್ಬರನ್ನೂ ಇವತ್ತು ಇಂಥ ಹೀಯಾಳಿಕೆಗಳು ಬೆನ್ನಟ್ಟುತ್ತಾ ಬರುತ್ತಿವೆ. ಮೋದಿಯ ಕುರಿತಂತೆ ಒಂದು ಬಗೆಯ ಭ್ರಮೆ ಮತ್ತು ಭ್ರಾಂತಿಯನ್ನು ತುಂಬಿಕೊಂಡ ಯುವ ಸಮೂಹ ವೊಂದು ಈ ದೇಶದಲ್ಲಿ ತಲೆ ಎತ್ತುತ್ತಾ ಇದೆ. ಮೋದಿಯನ್ನು ‘ಅಭಿವೃದ್ಧಿಯ ಹರಿಕಾರ’, ‘ಹಿಂದೂ ಹೃದಯ ಸಾಮ್ರಾಟ..’ ಎಂದೆಲ್ಲಾ ಈ ಗುಂಪು ಹಾಡಿ ಹೊಗಳುತ್ತಾ ಇದೆ. ‘ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾಲಯದ ಅತುಲ್ ಸೂದ್ ಸೇರಿದಂತೆ 10 ಮಂದಿ ಪ್ರಮುಖ ಸಂಶೋಧಕರು ಇತ್ತೀಚೆಗೆ ಗುಜರಾತ್‍ನಾದ್ಯಂತ ಸುತ್ತಾಡಿ ತಯಾರಿಸಿದ, ‘ಅಭಿವೃದ್ಧಿಯ ನಡುವೆ ಬಡತನ: ಗುಜರಾತ್‍ನ ಅಭಿವೃದ್ಧಿಯ ದುರಂತ’ (Poverty Amidst Prosperity: Essays on the Trujectory of Development in Gujrat) ಎಂಬ ಅಧ್ಯಯನಾತ್ಮಕ ಪ್ರಬಂಧದ ಅಂಕಿ ಅಂಶಗಳನ್ನು ಮುಂದಿಟ್ಟು ಚರ್ಚಿಸಿದರೂ ಈ ಗುಂಪು, ಆ ಸಂಶೋಧಕರನ್ನೇ ಹಿಂದೂ ವಿರೋಧಿಗಳು ಅನ್ನುತ್ತವೆ. ಮೋದಿಯನ್ನು ಟೀಕಿಸುವುದು ಹಿಂದೂಗಳನ್ನು ಟೀಕಿಸಿದಂತೆ ಎಂಬೊಂದು ಸುಳ್ಳನ್ನು ಹರಡಲು ಈ ಗುಂಪು ತೀವ್ರವಾಗಿ ಶ್ರಮಿಸುತ್ತಿದೆ. ಅಡ್ವಾಣಿಯನ್ನೊ ಸುಶ್ಮಾ, ಜೈಟ್ಲಿಯನ್ನೋ ಟೀಕಿಸಿದರೆ ಸುಮ್ಮನಿರುವ ಈ ಫ್ಯಾನ್ ಕ್ಲಬ್, ಮೋದಿಯನ್ನು ಟೀಕಿಸಿದ ಕೂಡಲೇ ಜಾಗೃತಗೊಳ್ಳುತ್ತದೆ. ಮೋದಿ ಟೀಕಾತೀತ, ಅವರು ದೇಶಕ್ಕೇ ರೋಲ್ ಮಾಡೆಲ್ ಎಂಬುದನ್ನು ಮಾಧ್ಯಮಗಳ ಮುಖಾಂತರ ನಿರಂತರವಾಗಿ ಸಾರ್ವಜನಿಕರಿಗೆ ಮುಟ್ಟಿಸುವ ಶ್ರಮದಲ್ಲಿ ಈ ಮಂದಿ ನಿರತರಾಗಿದ್ದಾರೆ. ಮಾಧ್ಯಮಗಳೂ ಇದರಲ್ಲಿ ಭಾಗಿಯಾಗಿವೆ. ಪುರಾವೆ ಬೇಕಾದರೆ, ಗುಜರಾತ್ ಚುನಾವಣೆಯ ಫಲಿತಾಂಶಕ್ಕೆ ಕನ್ನಡ ಪತ್ರಿಕೆಗಳು ಕೊಟ್ಟ ಶೀರ್ಷಿಕೆಗಳನ್ನೇ ಎತ್ತಿಕೊಳ್ಳಿ. ‘ಮೋದಿಗೆ ಹ್ಯಾಟ್ರಿಕ್ ಗೆಲುವು..’ (Hat - trick for Narendra Modi ..) ಎಂಬ ಸಹಜ ಮತ್ತು ಉತ್ಪ್ರೇಕ್ಷೆಯಿಲ್ಲದ ಶೈಲಿಯ ಶೀರ್ಷಿಕೆಯಲ್ಲಿ ದಿ ಹಿಂದೂ ಮತ್ತು ಟೈಮ್ಸ್ ಆಫ್ ಇಂಡಿಯಾದಂಥ ಆಂಗ್ಲ ಪತ್ರಿಕೆಗಳು ವರದಿ ಪ್ರಕಟಿಸಿದ್ದರೆ, ಕನ್ನಡಪ್ರಭ ಪತ್ರಿಕೆಯು-ನಮೋ ನಮಃ ‘ವೀರಭದ್ರ’ ಎಂದೂ, ಉದಯವಾಣಿ- ಮೋದಿ ಮೋಡಿ ಮುಮ್ಮಡಿ ಎಂದೂ ಹೊಸದಿಂಗತ- ನಮೋ ಗುಜರಾತ್ ಎಂದೂ ಶೀರ್ಷಿಕೆ ಕೊಟ್ಟಿದ್ದುವು. ಮೋದಿಯನ್ನು ದೈವತ್ವಕ್ಕೇರಿಸುವ ಶೈಲಿಯ ಇಂಥ ಶೀರ್ಷಿಕೆಗಳು ಕೊಡುವ ಸೂಚನೆಯಾದರೂ ಏನು? ಜನ ಸಾಮಾನ್ಯರ ಮೇಲೆ ಇಂಥ ಶೀರ್ಷಿಕೆಗಳು ಯಾವ ಬಗೆಯ ಪರಿಣಾಮವನ್ನು ಬೀರಿಯಾವು? ಅಂದಹಾಗೆ, ಸುದ್ದಿಯೊಂದರ ಶೀರ್ಷಿಕೆಗೂ ಲೇಖನವೊಂದರ ಶೀರ್ಷಿಕೆಗೂ ವ್ಯತ್ಯಾಸ ಇದೆಯಲ್ಲವೇ? ಮೋದಿಯನ್ನು ಆರಾಧಿಸುವ ಪತ್ರಕರ್ತರು ಮಾಧ್ಯಮಗಳಲ್ಲಿದ್ದರೆ ಸುದ್ದಿ ಹೇಗೆ ತಿರುಚಿಕೊಳ್ಳಬಹುದು ಎನ್ನುವುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕೆ?
ಅಕ್ಟೋಬರ್ 9
  ‘..ಸಂಜೆ 7 ಗಂಟೆಗೆ ಅಹ್ಮದಾಬಾದ್‍ನಲ್ಲಿ ಮೋದಿಯ ಚುನಾವಣಾ ಭಾಷಣ ಏರ್ಪಾಡಾಗಿತ್ತು. ಆದರೆ ಮೋದಿ ಆಗಮಿಸಿದ್ದು 10 ಗಂಟೆಗೆ. 7 ಗಂಟೆಗೆ ಬಂದು ಮೋದಿಯನ್ನು ಕಾಯುತ್ತಿದ್ದ ಜನರಿಗೆ ಬಿಜೆಪಿ ನಾಯಕರು ಮೋದಿಯ ಮುಖವಾಡ, ಪೋಸ್ಟರ್ಸ್, ಮೋದಿಯ ಗ್ಲೌವ್ಸ್, ಮೋದಿ ಟೀಶರ್ಟ್, ಶಾಲು... ಎಲ್ಲವನ್ನೂ ಹಂಚತೊಡಗಿದರು. ಸಾಮಾನ್ಯ ವ್ಯಕ್ತಿಯೊಬ್ಬ ಸಭೆಯತ್ತ ನೋಡಿದರೆ ಕಾಣಿಸುವುದು ಎಲ್ಲೆಲ್ಲೂ ಮೋದಿಯೇ. ಆ ಬಳಿಕ ಮೋದಿ ಮತ್ತು ಗುಜರಾತನ್ನು ಹೊಗಳುವ ಹಾಡು, ನರ್ತನಗಳು ಆರಂಭವಾದುವು. ಮೋದಿಯನ್ನು ಶಿವಾಜಿ, ಪೃಥ್ವಿರಾಜ್ ಚೌಹಾಣ್ ಮತ್ತು ವಿವೇಕಾನಂದರಿಗೆ ಹೋಲಿಕೆ ಮಾಡಿ ಗಾಯಕನೋರ್ವ ಹಾಡತೊಡಗಿದ. ರಾಜ್ಯ ಬಿಜೆಪಿಯ ಪ್ರಮುಖ ನಾಯಕರೊಬ್ಬರು ಮೋದಿಯ ಸ್ತುತಿ ಮಾಡತೊಡಗಿದರು. ಆ ಬಳಿಕ ಬಿಜೆಪಿ ಕಾರ್ಯಕರ್ತರು ಮೋದಿಯ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆರಂಭಿಸಿದರು. ನೆರೆದ ಮಂದಿ, ಮೋದಿ ಇದಲ್ಲ, ಇದಲ್ಲ ಮೋದಿ.. ಎಂದು ಬೊಬ್ಬೆ ಹಾಕುತ್ತಿದ್ದರೆ, ಇಡೀ ಸಭೆಯಲ್ಲೇ ರೋಮಾಂಚನ, ಕುತೂಹಲ. ಕೊನೆಗೆ ಮೋದಿ ಬಂದರು..’ (ವಿದ್ಯಾ ಸುಬ್ರಹ್ಮಣ್ಯಂ, 2012 ಡಿ. 13. ದಿ ಹಿಂದೂ). ನಿಜವಾಗಿ ಮೋದಿಗೆ ಪ್ರಚಾರದ ಕಲೆ ಚೆನ್ನಾಗಿ ಗೊತ್ತು. ‘2012ರ ನವೆಂಬರ್ ನಲ್ಲಿ ಮೋದಿಯ 50 ಸಾವಿರ ಮುಖವಾಡಗಳನ್ನು ಖರೀದಿಸಲಾಗಿತ್ತು. ಆದರೆ ಆ ಮುಖವಾಡ ಸೂಕ್ತವಾಗಿಲ್ಲ, ಮುಖವಾಡದಲ್ಲಿ ಚರ್ಮ ಜೋತು ಬಿದ್ದಿದೆ, ವೃದ್ಧರಂತೆ ಕಾಣುತ್ತದೆಂದು ಹೇಳಿ ಅವನ್ನು ತಿರಸ್ಕರಿಸಲಾಯಿತಲ್ಲದೇ, 3 ಲಕ್ಷ ಹೊಸ ಮುಖವಾಡಕ್ಕೆ ಆದೇಶ ನೀಡಲಾಯಿತು.’ (ದಿ ಹಿಂದೂ, ಡಿ. 20, 2012) ಇದಲ್ಲದೇ ಮೋದಿಯ ಮುಗಿಲೆತ್ತರದ ಕಟೌಟುಗಳನ್ನು ಬ್ಯುಝಿ ಟ್ರಾಫಿಕ್‍ನ ಹತ್ತಿರ, ಮಾಲ್‍ಗಳ ಬಳಿ, ಸರ್ಕಲ್‍ಗಳಲ್ಲಿ ಧಾರಾಳ ತೂಗು ಹಾಕಲಾಗಿದೆ. ಉರಿಯುತ್ತಿದ್ದ ರೈಲಿನ ಪ್ರತಿಕೃತಿಯೊಂದಿಗೆ 2002ರಲ್ಲಿ ಮೋದಿ ಚುನಾವಣಾ ಪ್ರಚಾರ ನಡೆಸಿದ್ದರೆ, 2007ರ ಚುನಾವಣೆಯಲ್ಲಿ ಮೋದಿ ರೈಲನ್ನು ಕೈಬಿಟ್ಟು 6 ಕೋಟಿ ಗುಜರಾತಿಯನ್ನರ ‘ಅಸ್ಮಿತೆ’ ಯನ್ನು (ಗೌರವ) ಎತ್ತಿಕೊಂಡರು. ಮೌತ್‍ಕಾ ಸೌಧಾಗರ್ ಎಂದು ಸೋನಿಯಾ ಗಾಂಧಿ ಹೇಳಿದ್ದನ್ನೇ ಅಸ್ತ್ರವಾಗಿ ಬಳಸಿ ಕೊಂಡರು. ಆದರೆ ಈ 2012ರಲ್ಲಿ ಮೋದಿಗೆ ಆ ಕೋಮು ಅಜೆಂಡಾವೋ, ಅಸ್ಮಿತೆಯೋ ಅಗತ್ಯವಿರಲಿಲ್ಲ. ಅವರು ಅಭಿವೃದ್ಧಿಯ ಮಾತುಗಳನ್ನಾಡಿದರು. 3ಡಿ ತಂತ್ರಜ್ಞಾನದ ಮುಖಾಂತರ 5 ದಿನಗಳಲ್ಲಿ 106 ಕಡೆ ಚುನಾವಣಾ ಭಾಷಣಗಳನ್ನು ನೀಡಿದರು. ಮೋದಿಯ ಅಭಿವೃದ್ಧಿ ಮಂತ್ರ ಪೊಳ್ಳು ಎಂಬುದನ್ನು ಅಂಕಿ-ಸಂಖ್ಯೆಗಳ ಆಧಾರದಲ್ಲಿ ಸಮೀಕ್ಷರು ಎಷ್ಟೇ ಹೇಳಿದರೂ, 3ಡಿ ತಂತ್ರಜ್ಞಾನದಲ್ಲಿ ಕಾಣಿಸಿಕೊಳ್ಳುವ ಮೋದಿಯ ಬಗ್ಗೆ ಜನಸಾಮಾನ್ಯರು ಆಕರ್ಷಿತರಾಗಲಾರರೆಂದು ಹೇಗೆ ಹೇಳುವುದು? ಮೋದಿ ಗುಜರಾತ್‍ಗಾಗಿ ಏನೋ ಅದ್ಭುತವಾದುದನ್ನು ಮಾಡುತ್ತಿದ್ದಾರೆ ಎಂದು ಜನಸಾಮಾನ್ಯರು ಅಂದುಕೊಳ್ಳುವುದಕ್ಕೆ ಮುಖವಾಡ, ಕಟೌಟ್‍ಗಳು, 3ಡಿಗಳಂಥ ಗಿಮಿಕ್‍ಗಳು ಪ್ರೇರಕವಾಗಲಾರದೇ? ಗುಜರಾತ್‍ನ ಗಲ್ಲಿಗಳಲ್ಲಿ, ಬೀದಿ, ಸಭೆಗಳಲ್ಲಿ.. ಹೀಗೆ ಮೋದಿಯ ಮುಖವಾಡವನ್ನು ಧರಿಸಿದ ಮಂದಿ ಎಲ್ಲೆಲ್ಲೂ ಕಾಣಿಸಿಕೊಳ್ಳುವಾಗ ಒಂದು ಬಗೆಯ ಭ್ರಮೆಗೆ ಸಾರ್ವಜನಿಕರು ಒಳಗಾಗುವ ಸಾಧ್ಯತೆ ಖಂಡಿತ ಇದೆ. ಇಷ್ಟಕ್ಕೂ, 2009ರಲ್ಲೇ ಮೋದಿ ಬ್ಲಾಗು ಆರಂಭಿಸಿದ್ದಾರೆ. ಅವರು ಪ್ರತಿದಿನ ಟ್ವೀಟ್ ಮಾಡುತ್ತಾರೆ. ಫೇಸ್‍ಬುಕ್‍ನಲ್ಲಿದ್ದಾರೆ. ನಿಜವಾಗಿ ಇವತ್ತಿನ ದಿನಗಳಲ್ಲಿ ಯಾವೆಲ್ಲ ಮಾಧ್ಯಮಗಳನ್ನು ಪ್ರಚಾರಕ್ಕಾಗಿ ಬಳಸಲು ಸಾಧ್ಯವಿದೆಯೋ ಅವೆಲ್ಲವನ್ನೂ ಮೋದಿ ಬಳಸುತ್ತಿದ್ದಾರೆ. 2007ರ ಚುನಾವಣೆಯ ಸಂದರ್ಭದಲ್ಲಿ ಮಿಯಾಂ ಮುಶರ್ರಫ್ ಎಂದು ಪಾಕಿಸ್ತಾನದ ಮುಶರ್ರಫ್‍ರನ್ನು ಛೇಡಿಸುತ್ತಾ, ಆ ಮುಖಾಂತರ ಪರೋಕ್ಷವಾಗಿ ಮುಸ್ಲಿಮರನ್ನು ವ್ಯಂಗ್ಯಕ್ಕೆ ಒಳಪಡಿಸಿದ್ದರೆ ಈ ಬಾರಿ ಸೋನಿಯಾರ ಆಪ್ತ ಕಾರ್ಯದರ್ಶಿ ಗುಜರಾತ್‍ನ ಅಹ್ಮದ್ ಪಟೇಲ್‍ರನ್ನು ಅಹ್ಮದ್ ಭಾಯಿ ಎಂದು ಸಂಬೋಧಿಸುತ್ತಾ, ಬಿಜೆಪಿ ಸೋತರೆ ಓರ್ವ ಮುಸ್ಲಿಮ್ ವ್ಯಕ್ತಿ  ಗುಜರಾತ್‍ನ ಮುಖ್ಯಮಂತ್ರಿ ಆಗುತ್ತಾರೆ ಎಂಬಂತೆ ಬಿಂಬಿಸುತ್ತಾರೆ. ಅಲ್ಲೂ ಪಟೇಲ್ ಎಂಬ ಪದವನ್ನು ಬೇಕೆಂದೇ ಅಡಗಿಸುತ್ತಾರೆ. ನಿಜವಾಗಿ ಗುಜರಾತ್‍ನ ಮುಖ್ಯಮಂತ್ರಿ. ಅಭ್ಯರ್ಥಿಯನ್ನು ಕಾಂಗ್ರೆಸ್ ಘೋಷಿಸಿಯೇ ಇರಲಿಲ್ಲ. ಮಾತ್ರವಲ್ಲ ಅಹ್ಮದ್ ಪಟೇಲ್‍ರು ಅಲ್ಲಿನ ಮುಖ್ಯಮಂತ್ರಿ ಆಗುವ ಸಾಧ್ಯತೆಯೂ ಇರಲಿಲ್ಲ. ಆದರೆ, ಇಲ್ಲದ ಸಾಧ್ಯತೆಯನ್ನು ಇದ್ದಂತೆ ತೋರಿಸಿ ಜನರನ್ನು ದಿಕ್ಕು ತಪ್ಪಿಸುವ, ಮುಸ್ಲಿಮ್ ವ್ಯಕ್ತಿ ಮುಖ್ಯಮಂತ್ರಿಯಾಗುವುದು ಅಪಾಯಕಾರಿ ಎಂಬ ಸೂಚನೆ ರವಾನಿಸುವ ತಂತ್ರವನ್ನು ಮೋದಿ ಹೆಣೆದರು. ಅಪ್ಪಟ ಸುಳ್ಳು, ಕೋಮುವಾದಿ ಭಾಷೆ ಮತ್ತು ಜನಾಂಗದ್ವೇಷಿ ವಿಚಾರಗಳನ್ನು ಹರಡುತ್ತಾ, ತನ್ನ ವಿರುದ್ಧ ಬರುವ ಆರೋಪಗಳನ್ನೆಲ್ಲಾ ‘ಹಿಂದೂ ವಿರೋಧಿ’ ಎಂಬಂತೆ ಚಿತ್ರಿಸಲು ಒಂದು ಹಂತದವರೆಗೆ ಮೋದಿ ಯಶಸ್ವಿಯಾಗಿದ್ದಾರೆ. ಅವರ ಫೇಸ್‍ಬುಕ್‍ನಲ್ಲಿ ಇರುವ ಪೋಸ್ಟ್ ಗಳಲ್ಲಿ ಹೆಚ್ಚಿನವು ಅವರು ವಿಶ್ವದ ನಾನಾ ಉದ್ಯಮಿಗಳು, ರಾಜತಾಂತ್ರಿಕರು, ಚಿಂತಕರ ಜೊತೆಗಿರುವಂಥವು. ‘ನಿರುದ್ಯೋಗ, ಅಸಮಾನತೆ, ಬಡತನ, ಅಪೌಷ್ಟಿಕತೆ, ಶಿಶು ಮರಣ, ಆರೋಗ್ಯ ಮತ್ತು ಶಿಕ್ಷಣಾ ಕ್ಷೇತ್ರಗಳಲ್ಲಿ ಗುಜರಾತ್‍ನ ಸದ್ಯದ ಸಾಧನೆ ತೀರಾ ಕಳಪೆಯಾಗಿದ್ದರೂ’ (ಅತುಲ್ ಸೂದ್, ದಿ ಹಿಂದೂ 2012, ನ. 30) ಅಹ್ಮದಾಬಾದ್‍ನ ಶಾಪಿಂಗ್ ಮಾಲ್‍ಗಳನ್ನೂ, ಶೋ ರೂಮ್‍ಗಳನ್ನೂ, ಸೂಪರ್ ಹೈವೇ, ಸುಂದರವಾಗಿರುವ ಸಬರಮತಿ ನದಿಯನ್ನೂ ತೋರಿಸಿ ಮೋದಿ ಅಭಿವೃದ್ಧಿ ಅನ್ನುತ್ತಿದ್ದಾರೆ. ಒಂದು ರೀತಿಯಲ್ಲಿ, ಗುಜರಾತ್‍ನಾದ್ಯಂತ ಒಂದು ಬಗೆಯ ಭ್ರಮೆಯಿದೆ. ಭ್ರಾಂತಿ ಮತ್ತು ಭೀತಿಯೂ ಇದೆ.  ಮೋದಿಯ ಸುಳ್ಳಿನ ಪ್ರಚಾರದ ಅಬ್ಬರವನ್ನು ನೋಡಿ, ಗುಜರಾತ್‍ನಲ್ಲಿ ಏನೋ ಆಗುತ್ತಿದೆ ಎಂದು ಜನಸಾಮಾನ್ಯರು ಅಂದುಕೊಳ್ಳುವಂಥ ವಾತಾವರಣ ಖಂಡಿತ ಇದೆ. ತಮ್ಮ ಕೇರಿಯಲ್ಲಿ ಅಲ್ಲದಿದ್ದರೂ ಇತರ ಕಡೆ ಭಾರೀ ಅಭಿವೃದ್ಧಿ ಆಗಿರಬೇಕು ಎಂದು ನಂಬುವಂಥ ಸ್ಥಿತಿಯನ್ನು ಮೋದಿ ಮತ್ತು ಅವರ ಬೆಂಬಲಿಗರು ನಿರ್ಮಿಸಿದ್ದಾರೆ.
ಜಮೀಅತೆ ಉಲಮಾಯೆ ಹಿಂದ್
ಆಲ್ ಇಂಡಿಯಾ ಮಜ್ಲಿಸೆ ಮುಶಾವರತ್
ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್
ಮರ್ಕಝಿ ಜಮೀಅತೆ ಅಹ್ಲೆ ಹದೀಸ್
ಇಮಾರತೆ ಶರಿಯಾ..
ಮುಂತಾದ 10 ಸಂಘಟನೆಗಳು 2012 ನವೆಂಬರ್ 23ರಂದು ಸಭೆ ಸೇರಿ ಮುಸ್ಲಿಮ್ ಸಬಲೀಕರಣಕ್ಕಾಗಿರುವ ಜಂಟಿ ಸಮಿತಿ(JCMOE)ಯನ್ನು ರಚಿಸಿತಲ್ಲದೇ, 2002ರ ಗುಜರಾತ್ ಹತ್ಯಾಕಾಂಡಕ್ಕಾಗಿ ಮೋದಿ ಕ್ಷಮೆಯಾಚಿಸಿ ತನ್ನ ವರ್ತನೆಯಲ್ಲಿ ಬದಲಾವಣೆ ತೋರ್ಪಡಿಸಿದರೆ, ಗುಜರಾತ್‍ನ ಪುನರ್ ನಿರ್ಮಾಣದಲ್ಲಿ ಮುಸ್ಲಿಮರು ಸಹಕರಿಸುವುದಾಗಿ ಘೋಷಿಸಿತ್ತು. ಮುಸ್ಲಿಮರು ಹೆಚ್ಚಿರುವ ಚುನಾವಣಾ ಕ್ಷೇತ್ರಗಳಲ್ಲಿ ಕನಿಷ್ಠ 20 ಸ್ಥಾನಗಳನ್ನಾದರೂ ಮೋದಿ ಮುಸ್ಲಿಮರಿಗೆ ನೀಡಬೇಕು ಎಂದೂ ಅದು ಆಗ್ರಹಿಸಿತ್ತು. ಆದರೆ ಗುಜರಾತ್‍ನ 182 ಕ್ಷೇತ್ರಗಳ ಪೈಕಿ ಒಂದೇ ಒಂದು ಕ್ಷೇತ್ರದಲ್ಲಿ ಮುಸ್ಲಿಮರಿಗೆ ಮೋದಿ ಟಿಕೇಟು ನೀಡಲಿಲ್ಲ. ಸದ್ಬಾವನಾ ಯಾತ್ರೆಯಲ್ಲಿ ಮುಸ್ಲಿಮರ ಜೊತೆ ನಿಂತು ಪೋಸ್ ಕೊಟ್ಟರೂ ಒಂದು ಸೆಕೆಂಡು ತಲೆಯಲ್ಲಿಟ್ಟು ಕೆಳಗಿಡಬಹುದಾಗಿದ್ದ ಮುಸ್ಲಿಮ್ ಟೋಪಿಯನ್ನೂ ಅವರು ಸ್ವೀಕರಿಸಲಿಲ್ಲ. ನಿಜವಾಗಿ, ಮುಸ್ಲಿಮ್ ವಿರೋಧಿ ಎಂಬ ಇಮೇಜನ್ನು ಕಳಚಿಕೊಳ್ಳಲು ಮೋದಿಗೆ ಎಳ್ಳಷ್ಟೂ ಇಷ್ಟವಿಲ್ಲ. ಮೋದಿಯ ವೇದಿಕೆಗೆ ಮುಸ್ಲಿಮ್ ವಿದ್ವಾಂಸರೇ ಬರಲಿ, ಇರ್ಫಾನ್ ಪಠಾಣೇ ಬರಲಿ, ಎಲ್ಲವನ್ನೂ ಅವರು ತನ್ನ ಲಾಭಕ್ಕಾಗಿ ಬಳಸಿಕೊಳ್ಳುತ್ತಾರೆ. ಮುಸ್ಲಿಮರಿಗೆ ಪಾಠ ಕಲಿಸಿದ್ದೇನೆ ಎಂಬ ಹಮ್ಮು ಈಗಲೂ ಅವರಲ್ಲಿದೆ. ..‘ಈ ವರ್ಷ ಗುಜರಾತ್‍ನ ಸೌರಾಷ್ಟ್ರವು ಮಳೆ ಇಲ್ಲದೇ ಸಂಕಷ್ಟಕ್ಕೆ ಒಳಗಾದಾಗ, ಸೌರಾಷ್ಟ್ರವನ್ನು ಅವರು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಲಿಲ್ಲ. ಯಾಕೆಂದರೆ, ಹಾಗೆ ಘೋಷಿಸುವುದರಿಂದ ಗುಜರಾತ್‍ನ ಬಗ್ಗೆ ತಾನು ಕಟ್ಟಿ ಬೆಳೆಸಿದ ಸುಳ್ಳು ಇಮೇಜಿಗೆ ಎಲ್ಲಿ ಧಕ್ಕೆ ಬಂದೀತೋ ಎಂಬ ಭೀತಿ. ಅಭಿವೃದ್ಧಿಯ ಮಂತ್ರ ಜಪಿಸುತ್ತಿರುವ ಗುಜರಾತ್‍ನಲ್ಲಿ ಅಪೌಷ್ಠಿಕತೆಯ ಪ್ರಮಾಣ ಹೆಚ್ಚಿದೆಯಲ್ಲವೇ ಎಂದು ಈ ವರ್ಷದ ಆರಂಭದಲ್ಲಿ ಅಮೇರಿಕದ ವಾಲ್‍ಸ್ಟ್ರೀಟ್ ಜರ್ನಲ್ ಪತ್ರಿಕೆಯ ಪತ್ರಕರ್ತನೋರ್ವ ಮೋದಿಯನ್ನು ಪ್ರಶ್ನಿಸಿದ್ದ. ಹೆಣ್ಣು ಮಕ್ಕಳಲ್ಲಿ ಸೌಂದರ್ಯ ಪ್ರಜ್ಞೆ ಹೆಚ್ಚಾಗಿರುವುದೇ (ಸ್ಲಿಮ್) ಇದಕ್ಕೆ ಕಾರಣ ಎಂದು ಅವರು ಹೇಳಿದ್ದರು:’ (ದಿ ಹಿಂದೂ, ಸ್ಮಿತಾಗುಪ್ತಾ, ಡಿ. 20, 2012) ಹೀಗೆ ಮೋದಿ ಉದ್ದಕ್ಕೂ ಸತ್ಯವನ್ನು ಮುಚ್ಚಿಡುತ್ತಲೇ ಹೋಗುತ್ತಿದ್ದಾರೆ. ನುಣುಪಾದ ರಸ್ತೆ, ಶಾಪಿಂಗ್ ಮಾಲ್‍ಗಳನ್ನು ತೋರಿಸಿ, ವಿವಿಧ ಗಿಮಿಕ್‍ಗಳನ್ನು ಮಾಡಿ, ಗುಜರಾತಿಯನ್ನರನ್ನು ಒಂದು ಬಗೆಯ ಭ್ರಮೆಗೆ ಅವರು ಒಳಪಡಿಸಿದ್ದಾರೆ. ಒಂದು ರೀತಿಯಲ್ಲಿ, ಮೋದಿ ಒಬ್ಬ ಅತ್ಯುತ್ತಮ ಸೇಲ್ಸ್ ಮನ್. ಅವರು 2001ರಲ್ಲಿ ಮುಖ್ಯಮಂತ್ರಿ ಆಗುವಾಗ ಗುಜರಾತ್‍ನಲ್ಲಿ ಬಿಜೆಪಿಯ ಸ್ಥಿತಿ ದಯನೀಯವಾಗಿತ್ತು. ಆದ್ದರಿಂದ ಹಿಂದೂ ಕೋಮುವಾದವನ್ನು ಅವರು ಮಾರಾಟ ಮಾಡಲೇ ಬೇಕಾಗಿತ್ತು. ಹೀಗಾಗಿ 2002ರಲ್ಲಿ ಅವರು ಕೋಮುಗಲಭೆಯನ್ನು ಮಾರಾಟ ಮಾಡಿದರು. ಆದರೆ ಈಗ ಅದೇ ವಸ್ತುವನ್ನು ಅವರು ಮತ್ತೆ ಮಾರಾಟ ಮಾಡುತ್ತಿಲ್ಲ. ಯಾಕೆಂದರೆ, 2002ರಲ್ಲಿ ಅವರು ಮಾರಿದ್ದು ಕಳಪೆ ವಸ್ತು ಎಂಬುದು ಅವರಿಗೆ ಚೆನ್ನಾಗಿ ಗೊತ್ತು. ಮತ್ತೊಮ್ಮೆ ಅದನ್ನು ಮಾರಾಟಕ್ಕಿಟ್ಟರೆ ಗಿರಾಕಿಗಳು ಸಿಗಲಿಕ್ಕಿಲ್ಲ ಅನ್ನುವುದೂ ಅವರಿಗೆ ಗೊತ್ತು. ಆದ್ದರಿಂದಲೇ, ಈ ಬಾರಿ ಅವರು ‘ಅಭಿವೃದ್ಧಿ’ಯನ್ನು ಮಾರಾಟಕ್ಕಿಟ್ಟಿದ್ದಾರೆ.
  ಅಂದಹಾಗೆ, ಕಳಪೆ ವಸ್ತುಗಳನ್ನು ಮಾರಾಟ ಮಾಡುತ್ತಾ ಜೇಬು ತುಂಬಿಸುತ್ತಿರುವವರನ್ನು ಕೊನೆಗೊಂದು ದಿನ ಆ ಗಿರಾಕಿಗಳೇ ಹಿಡಿದು ಥಳಿಸಿ, ಮುಖವಾಡ ಬಯಲುಗೊಳಿಸಿದ ಧಾರಾಳ ಉದಾಹರಣೆಗಳು ಈ ದೇಶದಲ್ಲಿ ನಡೆದಿದೆಯಲ್ಲವೇ?


No comments:

Post a Comment