Wednesday, November 25, 2015

ಆಲಿಸುವವರೇ, ಆಲೋಚಿಸಲು ಪ್ರಾರಂಭಿಸಿ..

   ಕವಿಮಿತ್ರ ಜಲೀಲ್ ಮುಕ್ರಿಯವರು ಕಳೆದವಾರ ವಾಟ್ಸಪ್‍ನಲ್ಲಿ ಒಂದು ಕವನವನ್ನು ಕಳುಹಿಸಿಕೊಟ್ಟಿದ್ದರು;
 
    'ನಮ್ಮವನನ್ನು ಪೊಲೀಸರು ಬಂಧಿಸಿದರೆ
    ಅವನು ನಿರಪರಾಧಿ, ನಾವೆಲ್ಲ ವಕೀಲರು
    ಅನ್ಯನನ್ನು ಪೊಲೀಸರು ಬಂಧಿಸಿದರೆ
    ಅವನು ಅಪರಾಧಿ, ನಾವೆಲ್ಲ ನ್ಯಾಯಾಧೀಶರು..'

       ನಮ್ಮೊಳಗಿನ ಇಬ್ಬಂದಿನಕ್ಕೆ ಕನ್ನಡಿ ಹಿಡಿಯುವ ನಾಲ್ಕು ಸಾಲುಗಳಿವು. ಕೋಮು ಸಂಘರ್ಷ ಎಂಬ ಪದಕ್ಕೂ ಸ್ವಾತಂತ್ರ್ಯಾ ನಂತರದ ಭಾರತದ ಇತಿಹಾಸಕ್ಕೂ ನಡುವೆ ಇರುವ ಸಂಬಂಧವನ್ನು ಟಿಪ್ಪು ಜಯಂತಿ ಮತ್ತೊಮ್ಮೆ ತಾಜಾಗೊಳಿಸಿದೆ. ಇಂಥ ಸಂಘರ್ಷಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿರುವುದಕ್ಕೆ ಏನು ಕಾರಣ? ಧರ್ಮವೇ, ರಾಜಕೀಯವೇ ಅಥವಾ ಟಿಪ್ಪುವಿನಂತಹ ಐತಿಹಾಸಿಕ ವ್ಯಕ್ತಿತ್ವಗಳೇ? 1947ರ ಭಾರತ ಈಗಿನದಲ್ಲ. ಅಭೂತಪೂರ್ವವೆನ್ನಬಹುದಾದ ಅನೇಕಾರು ಬದಲಾವಣೆಗಳನ್ನು ಈ ದೇಶ ಕಂಡಿದೆ. ಕೃಷಿ ಕ್ರಾಂತಿ, ಕೈಗಾರಿಕಾ ಕ್ರಾಂತಿ, ಅಕ್ಷರ ಕ್ರಾಂತಿ, ಸಂವಹನ ಕ್ರಾಂತಿ, ಕಂಪ್ಯೂಟರ್ ಕ್ರಾಂತಿ, ಮಾಧ್ಯಮ ಕ್ರಾಂತಿ.. ಸಹಿತ ಹಳೆ ತಲೆಮಾರು ಅಚ್ಚರಿಪಡುವಂತಹ ಪಲ್ಲಟಗಳು ನಡೆದಿವೆ. 1947ರ ಆಸುಪಾಸಿನಲ್ಲಿದ್ದದ್ದು ಒಂದು- ರೇಡಿಯೋವಾದರೆ, ಇನ್ನೊಂದು ದೂರದರ್ಶನ. ಇವೆರಡನ್ನು ಬಿಟ್ಟರೆ ಜನರಿಗೆ ಮಾಹಿತಿಯನ್ನು ಕೊಡುತ್ತಿದ್ದುದು ಬಹುತೇಕ ನಗರ ಪ್ರದೇಶದ ಮಂದಿಗೆ ದಕ್ಕುತ್ತಿದ್ದ ಕೆಲವೇ ಕೆಲವು ಪತ್ರಿಕೆಗಳು. ಆವತ್ತೂ ಕೋಮು ಸಂಘರ್ಷಗಳಿದ್ದುವು. ನೂರಾರು ಟಿ.ವಿ. ಚಾನೆಲ್‍ಗಳು ಮತ್ತು ಸಾವಿರಾರು ಪತ್ರಿಕೆಗಳಿರುವ ಇವತ್ತೂ ಕೋಮು ಸಂಘರ್ಷಗಳಿವೆ. ಹಾಗಂತ, ಇವುಗಳ ಸಂಖ್ಯೆಯಲ್ಲಿ, ಅವನ್ನು ಕಾರ್ಯರೂಪಕ್ಕೆ ತರುವ ವಿಧಾನಗಳಲ್ಲಿ ಮತ್ತು ಸಾವು-ನೋವುಗಳ ಅಂಕಿ-ಸಂಖ್ಯೆಗಳಲ್ಲಿ ವ್ಯತ್ಯಾಸ ಇರಬಹುದು. ಆದರೂ ಈ ಮನುಷ್ಯ ವಿರೋಧಿ ಮತ್ತು ಧರ್ಮವಿರೋಧಿ ಪಿಡುಗೊಂದು ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ ಪ್ರಾಬಲ್ಯ ಪಡೆಯುತ್ತಿರುವುದು ಯಾಕೆ? ಜನರು ಅಕ್ಷರಸ್ಥರಾದಂತೆಲ್ಲ ಅಜ್ಞಾನ ಕೊನೆಗೊಳ್ಳುತ್ತಾ ಹೋಗುತ್ತದೆ ಎಂಬುದು ಸಾಮಾನ್ಯ ವಾದ. ಅನಕ್ಷರಸ್ಥರಲ್ಲಿ ಕೆಲವು ಸಹಜ ದೌರ್ಬಲ್ಯಗಳಿರುತ್ತವೆ. ಅವರು ಪುಸ್ತಕವನ್ನು ಓದಲಾರರು. ಸಾಹಿತ್ಯವನ್ನು ಅನುಭವಿಸಲಾರರು. ಎಲ್ಲಕ್ಕಿಂತ ಮಿಗಿಲಾಗಿ ತನ್ನ ಧರ್ಮಗ್ರಂಥ ಏನು ಹೇಳುತ್ತದೆ ಎಂಬುದನ್ನು ಓದಿ ತಿಳಿದುಕೊಳ್ಳುವುದು ಅವರಿಂದ ಸಾಧ್ಯವಿಲ್ಲ. ಕಲ್ಬುರ್ಗಿಯನ್ನೋ ಭೈರಪ್ಪ, ಅನಂತಮೂರ್ತಿಯವರನ್ನೋ, ಕುವೆಂಪು, ಬೇಂದ್ರೆ, ಕಾರಂತರನ್ನೋ ಅಥವಾ ಇನ್ನಿತರ ಯಾರನ್ನೇ ಆಗಲಿ ಓದಿ ತಿಳಿಯಲು ಅವಕಾಶವಿರುವುದಿಲ್ಲ. ಇಂಥವರು ಇನ್ನಾರೋ ಹೇಳಿದ ಮಾತನ್ನು ನಂಬಬೇಕಾಗುತ್ತದೆ. ಕುರ್‍ಆನಿನಲ್ಲಿ ಹಾಗಿದೆ, ಭಗವದ್ಗೀತೆಯಲ್ಲಿ ಹೀಗಿದೆ, ಯಂಗ್ ಇಂಡಿಯಾದಲ್ಲಿ ಗಾಂಧೀಜಿ ಹಾಗೆ ಬರೆದಿದ್ದಾರೆ.. ಎಂದೆಲ್ಲಾ ಯಾರೋ ಹೇಳಿದುದನ್ನು ನಿಜ ಎಂದು ನಂಬಬೇಕಾದ ಪರಿಸ್ಥಿತಿ ಅವರಿಗೆ ಎದುರಾಗುತ್ತದೆ. ಸ್ವಾತಂತ್ರ್ಯಾನಂತರದ ಎರಡ್ಮೂರು ದಶಕಗಳಲ್ಲಿ ನಡೆದ ಕೋಮು ಸಂಘರ್ಷಕ್ಕೆ ನಾವು ಈ ಅನಕ್ಷರತೆಯನ್ನೇ ಕಾರಣವಾಗಿ ಇಟ್ಟು ನೋಡಿದರೂ ಪ್ರಶ್ನೆಗಳು ಹಾಗೆಯೇ ಉಳಿಯುತ್ತವೆ. ಮಾತ್ರವಲ್ಲ, ಈ ಪ್ರಶ್ನೆಗಳು ಎಷ್ಟು ಗಂಭೀರವಾದುದೆಂದರೆ, ಕೋಮು ಸಂಘರ್ಷಕ್ಕೆ ಅಕ್ಷರ-ಅನಕ್ಷರದಲ್ಲಿ ಕಾರಣ ಹುಡುಕುವುದನ್ನೇ ಅಜ್ಞಾನ ಎಂದು ಸಾರುವಷ್ಟು ಪ್ರಮಾಣದಲ್ಲಿರುತ್ತದೆ. ಈ ದೇಶ ಹೆಚ್ಚೆಚ್ಚು ಅಕ್ಷರಸ್ಥ ಆದಂತೆಯೇ ಕೋಮು ಸಂಘರ್ಷದ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಾ ಹೋದುವು. ಅಷ್ಟೇ ಅಲ್ಲ, ಈ ಸಂಘರ್ಷದ ವ್ಯಾಪ್ತಿಯೂ ವಿಸ್ತರಿಸುತ್ತಾ ಹೋದುವು. ತೀರಾ ತೀರಾ ಹಳ್ಳಿ ಪ್ರದೇಶಗಳಲ್ಲೂ ಕೋಮು ಉದ್ವಿಘ್ನ ವಾತಾವರಣ ನಿರ್ಮಾಣವಾದದ್ದೇ ಹಳ್ಳಿಗಳು ಅಕ್ಷರಸ್ಥವಾದ ಬಳಿಕ. ಆದ್ದರಿಂದಲೇ ಕೋಮು ಸಂಘರ್ಷಕ್ಕೆ ಕಾರಣಗಳನ್ನು ಅನಕ್ಷರಸ್ಥತೆಗಿಂತ ಹೊರತಾದುದರಲ್ಲಿ ಹುಡುಕಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾರಣಗಳನ್ನು ಹುಡುಕ ಹೊರಟರೆ ಎರಡೇ ಎರಡು ಸಂಗತಿಗಳು ನಮ್ಮ ಎದುರು ನಿಲ್ಲುತ್ತವೆ. ಒಂದೋ ಧರ್ಮ ಇಲ್ಲವೇ ರಾಜಕೀಯ. ದುರಂತ ಏನೆಂದರೆ, ಜನರು ಹೆಚ್ಚೆಚ್ಚು ಅಕ್ಷರಸ್ಥರಾದಂತೆಲ್ಲ ಅದರ ಸಂಪೂರ್ಣ ಲಾಭ ಪಡೆದದ್ದು ಧರ್ಮವಲ್ಲ, ರಾಜಕೀಯ. ಕೋಮು ಸಂಘರ್ಷ ಎಂದು ನಾವು ಇವತ್ತು ಯಾವುದನ್ನೆಲ್ಲ ಗುರುತಿಸುತ್ತೇವೋ ಅವುಗಳಲ್ಲಿ ಪಾಲುಗೊಂಡವರು ಧರ್ಮಾನುಯಾಯಿಗಳು ಮತ್ತು ಅಕ್ಷರಸ್ಥರೂ ಆಗಿರಬಹುದು. ಆದರೆ ಅವರಲ್ಲಿ ಧರ್ಮಗ್ರಂಥವನ್ನು ಸಂಪೂರ್ಣ ಓದಿರುವವರು ತೀರಾ ಕಡಿಮೆ. ಹಾಗಂತ, ನಿರ್ದಿಷ್ಟ ಧರ್ಮಗಳ ಗುರುತುಗಳು ಬಾಹ್ಯನೋಟಕ್ಕೆ ಅವರಲ್ಲಿ ಗೋಚರವಾಗಬಹುದು. ಗಡ್ಡ, ಟೊಪ್ಪಿ, ನಾಮ, ಅಲ್ಲಾಹು ಅಕ್ಬರ್, ಜೈ ಶ್ರೀರಾಮ್.. ಮುಂತಾದ ಘೋಷಣೆಗಳನ್ನು ಅವರು ಮೊಳಗಿಸುತ್ತಿರಬಹುದು. ಆದರೆ ತಮ್ಮ ಅಕ್ಷರ ಜ್ಞಾನವನ್ನು ಧರ್ಮಗ್ರಂಥಗಳ ಅಧ್ಯಯನಕ್ಕೆ ಅವರು ಬಳಸಿಕೊಂಡಿರುವುದು ತೀರಾ ಅಪರೂಪ. ಕಾನೂರು ಸುಬ್ಬಮ್ಮ ಹೆಗ್ಗಡತಿಯಲ್ಲಿ ಕುವೆಂಪು ಹೀಗೆ ಬರೆದಿದ್ದಾರೆ ಎಂದು ಹೇಳಿದರೆ ಆ ಕಾದಂಬರಿಯನ್ನು ಓದಿ ಅದನ್ನು ದೃಢಪಡಿಸಲು ಮುಂದಾಗುವ ವ್ಯಕ್ತಿ, ಮಂದಿರದಲ್ಲೋ ಮಸೀದಿಯಲ್ಲೋ ತಾನು ಉರ ಹೊಡೆಯುವ ಪದಗಳನ್ನು ಧರ್ಮಗ್ರಂಥದಲ್ಲಿ ಹುಡುಕುವ ಉಮೇದು ತೋರುವುದಿಲ್ಲ. ಭೈರಪ್ಪನವರು ‘ಆವರಣ’ದಲ್ಲೋ ‘ದಾಟು’ವಿನಲ್ಲೋ ಏನು ಹೇಳಿದ್ದಾರೆ ಎಂಬುದನ್ನು ಕುತೂಹಲದಿಂದ ಹುಡುಕುವ ವ್ಯಕ್ತಿಗಳಲ್ಲಿ ಹಿಂದುವೂ ಇರಬಹುದು, ಮುಸ್ಲಿಮನೂ ಇರಬಹುದು. ಅಲ್ಲದೇ, ಅವರು ತಂತಮ್ಮ ಧರ್ಮಗಳನ್ನು ಕರ್ಮಠರಾಗಿ ಅನುಸರಿಸುತ್ತಿರಲೂ ಬಹುದು. ಆದರೆ, ‘ಆವರಣ’ದಲ್ಲಿರುವ ಕುತೂಹಲ ಅವರಿಗೆ ಧರ್ಮಗ್ರಂಥದಲ್ಲಿ ಇರುವುದಿಲ್ಲ. ಅವರು ಧರ್ಮಗ್ರಂಥಗಳ ಬಗ್ಗೆ ಇನ್ನಾರೋ ಹೇಳಿದುದನ್ನು ಅಥವಾ ಕೇಳಿದುದನ್ನೇ ಸ್ವೀಕರಿಸಿಕೊಂಡು ಬಹುತೇಕ ಬಾರಿ ಅದನ್ನೇ ಪರಮ ಸತ್ಯ ಎಂದು ನಂಬಿಕೊಂಡೇ ಬದುಕುತ್ತಾರೆ. ಬಹುಶಃ ಅಕ್ಷರಸ್ಥರ ಇಂಥ ದೌರ್ಬಲ್ಯಗಳೇ ಕೋಮು ಸಂಘರ್ಷಗಳಲ್ಲಿ ಪ್ರಧಾನ ಪಾತ್ರವಹಿಸುತ್ತವೆ. ಅಷ್ಟಕ್ಕೂ,
        ಧರ್ಮಗ್ರಂಥವನ್ನು ಓದಿ ತಿಳಿದುಕೊಳ್ಳುವುದಕ್ಕೂ ಯಾರೋ ಹೇಳಿದುದನ್ನು ನಂಬಿ ಬದುಕುವುದಕ್ಕೂ ವ್ಯತ್ಯಾಸ ಇದೆ. ಬೊಳುವಾರು ಮುಹಮ್ಮದ್ ಕುಂಞಯವರ ‘ಓದಿರಿ’ ಕಾದಂಬರಿಯನ್ನು ಓದಿ ತಿಳಿಯುವುದಕ್ಕೂ ಆ ಕಾದಂಬರಿಯ ಬಗ್ಗೆ ಯಾರೋ ಹೇಳಿದುದನ್ನು ಕೇಳಿ ತನ್ನೊಳಗೆ ಅಭಿಪ್ರಾಯ ರೂಪಿಸಿಕೊಳ್ಳುವುದಕ್ಕೂ ವ್ಯತ್ಯಾಸ ಇದೆ. ಭಾರತೀಯ ಅಕ್ಷರಸ್ಥನ ದೊಡ್ಡ ಸಮಸ್ಯೆಯೇನೆಂದರೆ, ಧರ್ಮಗ್ರಂಥಗಳ ಕುರಿತಂತೆ ಓದುವುದನ್ನು ಹೊರತುಪಡಿಸಿ ಉಳಿದೆಲ್ಲ ವದಂತಿಗಳನ್ನು ಅಕ್ಷರಶಃ ನಂಬುವುದು. ಇಸ್ಲಾಮ್ ಹಾಗೆ, ಹೀಗೆ ಎಂದು ಯಾರಾದರೂ ಭಾಷಣ ಮಾಡಿದರೆ ಅಥವಾ ಬರೆದರೆ ಅದನ್ನು ದೃಢಪಡಿಸಿಕೊಳ್ಳುವ ಬದಲು ‘ಆಗಿರಬಹುದು’ ಎಂದು ಅಂದುಕೊಳ್ಳುವುದು. ಭಗವದ್ಗೀತೆಗೂ ಇದೇ ಮಾತನ್ನು ಅನ್ವಯಿಸಬಹುದು. ಮುಸ್ಲಿಮರೆಂದರೆ ಅಷ್ಟು ಕೆಟ್ಟವರು, ಹಿಂದೂಗಳೆಂದರೆ ಇಷ್ಟು ಕೆಟ್ಟವರು, ಮುಸ್ಲಿಮರ ಆಹಾರ ಕ್ರಮ ಹಿಂದೂ ವಿರೋಧಿ, ಅವರ ವೇಷ ಹಿಂದೂ ವಿರೋಧಿ, ಅವರ ನೋಟ ವಿರೋಧಿ, ಸಹವಾಸ ವಿರೋಧಿ, ಅವರ ಅಸ್ತಿತ್ವ ಹಿಂದೂ ವಿರೋಧಿ.. ಹೀಗೆ ಹೇಳುತ್ತಾ ಹೋಗುವುದು ಮತ್ತು ಅದನ್ನು ದೃಢಪಡಿಸುವುದಕ್ಕೆ ಯಾವ್ಯಾವುದೋ ಉದಾಹರಣೆಗಳನ್ನು ಕೊಡುವುದು. ಹಾಗಂತ, ಇಂಥ ಉದಾಹರಣೆಗಳಿಗೂ ಇಸ್ಲಾಮ್ ಧರ್ಮಕ್ಕೂ ಏನು ಸಂಬಂಧವಿದೆ, ಧರ್ಮಗ್ರಂಥದ ಭಾಗವೇ ಈ ಉದಾಹರಣೆ ಎಂದು ಪರಿಶೀಲಿಸುವುದಕ್ಕೆ ಬಹುತೇಕ ಯಾರೂ ಹೋಗುವುದೇ ಇಲ್ಲ. ನಿಜವಾಗಿ, ಸಂಘರ್ಷವನ್ನು ಹುಟ್ಟು ಹಾಕುವುದಕ್ಕೆ ಇಲ್ಲಿಯ ವರೆಗೆ ನೆರವಾಗಿರುವುದು ಇಂಥ ಸಂಗತಿಗಳೇ. ಬರೇ ಆಲಿಸುವವರನ್ನು ಆಟವಾಡಿಸುವುದು ಕಷ್ಟವೇನೂ ಅಲ್ಲ. ಮಸೀದಿಯ ಬಾಗಿಲಲ್ಲಿ ಹಂದಿಯ ತಲೆಯನ್ನು ಹಾಕಲಾಗಿದೆ ಅಥವಾ ಮಂದಿರದ ಬಾಗಿಲಲ್ಲಿ ದನದ ತಲೆಯನ್ನು ಎಸೆಯಲಾಗಿದೆ ಎಂಬ ಸುದ್ದಿಯನ್ನು ಆಲಿಸಿದ ತಕ್ಷಣ ವ್ಯಕ್ತಿ ನಿಂತಲ್ಲಿಯೇ ಉದ್ರಿಕ್ತನಾಗುತ್ತಾನೆ. ಹಾಗಂತ, ಆತ ಹಂದಿಯ ಅಥವಾ ದನದ ತಲೆಯನ್ನು ಮಸೀದಿ-ಮಂದಿರಗಳ ಬಾಗಿಲಲ್ಲಿ ಸ್ವತಃ ನೋಡಿರುವುದೂ ಇಲ್ಲ ಅಥವಾ ಅಂಥ ಸುದ್ದಿಗಳನ್ನು ಆಲಿಸಿದ ತಕ್ಷಣ ಏನು ಮಾಡಬೇಕು ಮತ್ತು ಯಾವ ಪ್ರತಿಕ್ರಿಯೆಯನ್ನು ತೋರಬೇಕು, ಉದ್ರಿಕ್ತಗೊಳ್ಳುವುದು ಅದಕ್ಕೆ ಉತ್ತರವೇ ಎಂಬುದನ್ನು ಧರ್ಮಗ್ರಂಥಗಳ ಆಧಾರದಲ್ಲಿ ಮನನ ಮಾಡಿಕೊಂಡಿರುವುದೂ ಇಲ್ಲ. ಇದು ಆಡಿಸುವವರಿಗೆ ಚೆನ್ನಾಗಿ ಗೊತ್ತು. ಆದ್ದರಿಂದಲೇ ಇವರು ವೇದಿಕೆಯೇರಿ ಅದ್ಭುತ ಡಯಲಾಗ್‍ಗಳನ್ನು ಹೊಡೆಯುತ್ತಾರೆ. ಮಂದಿರದ ಮೇಲಾದ ಅಪವಿತ್ರತೆಯ ಬಗ್ಗೆ ಭಾವನಾತ್ಮಕವಾಗಿ ವಾದ ಮಂಡಿಸುತ್ತಾರೆ. ಗೋವುಗಳ ಬಗ್ಗೆ, ಜನಸಂಖ್ಯೆಯ ಬಗ್ಗೆ, ಮತಾಂತರದ ಬಗ್ಗೆ, ಭಯೋತ್ಪಾದನೆಯ ಬಗ್ಗೆ, ಆಹಾರ-ಉಡುಪು.. ಎಲ್ಲವುಗಳ ಬಗ್ಗೆಯೂ ಅತ್ಯಂತ ಉದ್ರಿಕ್ತವಾಗಿ ಮಾತಾಡುತ್ತಾರೆ. ವೇದಿಕೆಯ ಕೆಳಗಂತೂ ಈ ಮಾತುಗಳು ವಿಪರೀತ ಮಟ್ಟದಲ್ಲಿರುತ್ತವೆ. ಒಂದು ವೇಳೆ, ‘ಇಂಥ ಮಾತುಗಳೆಲ್ಲ ನಿಜವೇ, ದನದ ತಲೆ ಮಂದಿರದ ಬಾಗಿಲಲ್ಲಿ ಕಾಣಿಸಿಕೊಂಡರೆ ಮುಸ್ಲಿಮ್ ಏರಿಯಾಗಳಿಗೆ ಕೊಳ್ಳಿಯಿಡಬೇಕೆಂದು ಹಿಂದೂ ಧರ್ಮ ಆದೇಶಿಸುತ್ತದೆಯೇ..’ ಎಂದು ಆಲಿಸುವವರು ಆಲೋಚಿಸಲು ತೊಡಗಿದರೆಂದಿಟ್ಟುಕೊಳ್ಳಿ. ಅಥವಾ ದನದ ತಲೆ ಮಸೀದಿಯ ವಠಾರದಲ್ಲಿ ಕಾಣಿಸಿಕೊಂಡುದುದಕ್ಕೆ ಏನು ಪ್ರತಿಕ್ರಿಯೆ ವ್ಯಕ್ತಪಡಿಸಬೇಕು ಎಂಬುದಾಗಿ ಧರ್ಮಗ್ರಂಥಗಳ ಹಿನ್ನೆಲೆ ಮತ್ತು ಐತಿಹಾಸಿಕ ಪುರಾವೆಗಳ ಆಧಾರದಲ್ಲಿ ಪರಿಶೀಲಿಸುತ್ತಾರೆಂದಿಟ್ಟುಕೊಳ್ಳಿ. ಪರಿಣಾಮ ಏನಿರಬಹುದು? ಮಂದಿರದಲ್ಲಿ ದನದ ತಲೆ ಕಂಡುಬಂದರೆ ಅದಕ್ಕೆ ಮುಸ್ಲಿಮರೇ ಕಾರಣರಾಗಬೇಕೆಂದೇನೂ ಇಲ್ಲವಲ್ಲ. ಹಾಗೆಯೇ ಮಸೀದಿಯಲ್ಲಿ ಕಂಡುಬಂದ ಹಂದಿ ತಲೆಗೆ ಹಿಂದೂಗಳೇ ಕಾರಣ ರಾಗಬೇಕೆಂದೇನೂ ಇಲ್ಲ. ಇವೆರಡೇ ಅಲ್ಲ, ವೇದಿಕೆಯೇರಿಯೋ ಗುಪ್ತ ಸಭೆ ನಡೆಸಿಯೋ ಹೇಳುವ ಪ್ರತಿ ಉದ್ರಿಕ್ತ ವಿಚಾರಗಳ ಹಿಂದಿನ ಅಸಲಿಯತ್ತನ್ನು ಆಲಿಸುವವರು ಕೆದಕುತ್ತಾ ಹೋಗತೊಡಗಿದರೆ, ಆಡಿಸುವವರು ಬೆತ್ತಲುಗೊಳ್ಳುತ್ತಲೇ ಹೋಗಬೇಕಾಗುತ್ತದೆ. ಅಷ್ಟಕ್ಕೂ, ಹಾಗೆ ಅವರ ಮಾತುಗಳನ್ನು ಆಲಿಸುವಾಗ ಆಲಿಸುವವ ಗುಂಡಿ ಬಿದ್ದ ರಸ್ತೆಯಲ್ಲಿ ಹಲವು ಕಿಲೋವಿೂಟರ್ ನಡೆದು ಆ ಸಭೆಗೆ ಬಂದಿರುತ್ತಾನೆ/ಳೆ. ನಳ್ಳಿಯಲ್ಲಿ ವಾರಕ್ಕೆರಡು ಬಾರಿ ನೀರೂ ಉಳಿದ ದಿನಗಳಲ್ಲಿ ಬರೇ ವಾಯುವೂ ಬರುತ್ತಿರುವುದಕ್ಕೆ ತೀವ್ರ ನೊಂದಿರುತ್ತಾನೆ. ರೇಶನ್ ಕಾರ್ಡ್‍ಗಾಗಿ ಸರತಿ ಸಾಲು ನಿಂತೂ ನಿಂತೂ ಸುಸ್ತಾಗಿರುತ್ತಾನೆ. ಪದವಿ ಸರ್ಟಿಫಿಕೇಟ್ ಇದ್ದೂ ವರ್ಷಗಳಿಂದ ನಿರುದ್ಯೋಗಿಯಾಗಿರುತ್ತಾನೆ. ಬೆಲೆಯೇರಿಕೆಯ ಬಿಸಿಯಿಂದ ಕಂಗಾಲಾಗಿರುತ್ತಾನೆ. ಹಾಸಿಗೆ ಸೇರಿರುವ ಹೆತ್ತವರು, ಮದುವೆಗೆ ನಿಂತಿರುವ ಸಹೋದರಿಯರು, ದುಬಾರಿಯಾಗಿರುವ ಶಿಕ್ಷಣ, ಆಹಾರ ವಸ್ತುಗಳು.. ಎಲ್ಲದರಿಂದಲೂ ಸಂತ್ರಸ್ತನಾಗಿರುತ್ತಾನೆ/ಳೆ. ಒಂದು ವೇಳೆ, ಉದ್ರಿಕ್ತ ಮಾತುಗಾರರನ್ನು ಈ ಆಲಿಸುವವರು ತಿರುಗಿ ಪ್ರಶ್ನಿಸಿದರೆ ಏನಾದೀತು? ಪ್ರಾಣಿಗಳ ತಲೆ, ಮಂದಿರ-ಮಸೀದಿ, ಜನಸಂಖ್ಯೆ, ಮತಾಂತರಗಳಿಂದ ಭಾವುಕ ಗೊಳಿಸುವವನಲ್ಲಿ, ತಮ್ಮೂರಿನ ರಸ್ತೆ, ನೀರು, ನಿರುದ್ಯೋಗ, ಬಡತನಗಳ ಬಗ್ಗೆ ಮಾತಾಡಿ ಎಂದು ಸೂಚಿಸಿದರೆ ಹೇಗಾದೀತು? ಆಲಿಸುವವ ಇಷ್ಟು ಮಾಡಿದರೆ ಸಾಕು ಆಡಿಸುವವರ ಆವೇಶ ಇಳಿಯತೊಡಗುತ್ತವೆ ಮಾತ್ರವಲ್ಲ ಸಮಾಜದ  ಅಚ್ಚೇ ದಿನಗಳು ಆರಂಭವಾಗತೊಡಗುತ್ತವೆ. ಆದ್ದರಿಂದ, ಆಲಿಸುವವರು ಆಲೋಚಿಸಲು ಪ್ರಾರಂಭಿಸಲಿ. ಜೊತೆಗೇ,
        ಜಲೀಲ್ ಮುಕ್ರಿಯವರ ಮೇಲಿನ ನಾಲ್ಕು ಸಾಲುಗಳು ನಾಲ್ಕು ದಿಕ್ಕುಗಳಿಗೂ ಹರಡಲಿ.

Tuesday, November 17, 2015

ಸರಕಾರಿ ಕಾರ್ಯಕ್ರಮವನ್ನು ಬೀದಿಗೆ ತರುವ ಅಗತ್ಯ ಏನಿತ್ತು ಹೇಳಿ?

ಮಸೀದಿ ಮಿನಾರದಲ್ಲಿ
ಗೂಡು ಕಟ್ಟಿದ ಪಾರಿವಾಳ
ಮಂದಿರದಲ್ಲಿ ಧಾನ್ಯ ಕಾಳು
ಹೆಕ್ಕಿ ತಿನ್ನುತ್ತಿತ್ತು.

ಮುಸ್ಲಿಮರು ತಿಂದು ಬಿಸಾಡಿದ
ಮಾಂಸದ ಎಲುಬನ್ನು ತಿಂದ ಬೆಕ್ಕು
ದೇಗುಲ ಪುರೋಹಿತರು ಕೊಟ್ಟ
ಹಾಲನ್ನು ಕುಡಿಯುತ್ತಿತ್ತು.

ಮಂದಿರದ ಮಹಡಿಯಲ್ಲಿ
ಗೂಡು ಕಟ್ಟಿದ ಗುಬ್ಬಚ್ಚಿ
ಮಸೀದಿಯ ಬಾವಿಯ
ನೀರು ಕುಡಿಯುತ್ತಿತ್ತು.

ಆದರೆ ಇವುಗಳಿಗೆ ಪರಸ್ಪರ
ಸಂಬಂಧ ಇಲ್ಲವೆಂಬಂತೆ
ಮಸೀದಿ-ಮಂದಿರಗಳ ಹೆಸರಲ್ಲಿ
ಕಚ್ಚಾಡುತ್ತಿದ್ದಾನೆ ಮನುಜ
ಪ್ರಾಣಿ-ಪಕ್ಷಿಗಳಿಗಿಲ್ಲದ
ಕೋಮು ಬಣ್ಣವ ಕೊಟ್ಟವರಾರು
ಈ ಮನುಜ ಕುಲಕ್ಕೆ
       ವಾಟ್ಸಪ್‍ನಲ್ಲಿ ಓದಿದ ಹೃದ್ಯ ಸಾಲುಗಳಿವು. ಟಿಪ್ಪು ಸುಲ್ತಾನ್ ಜಯಂತಿಯ ದಿನದಿಂದ ರಾಜ್ಯ ಒಂದು ಬಗೆಯ ಆತಂಕದಲ್ಲಿದೆ. ಸಾವು-ನೋವುಗಳಾಗಿವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಂತೂ ತೀರಾ ಕಂಗೆಟ್ಟು ಹೋಗಿವೆ. ‘ಅಂಬೇಡ್ಕರ್ ಮತ್ತು ಕನಕ ಜಯಂತಿಗೆ ಒಂದೊಂದು ದಿನ ರಜೆಯಾದರೆ ಟಿಪ್ಪು ಜಯಂತಿಗೆ ಒಂದು ವಾರ ಸರಕಾರಿ ರಜೆ’ ಎಂದು ಜನರು ಹಾಸ್ಯವನ್ನೋ ಅಸಹನೆಯನ್ನೋ ವ್ಯಕ್ತಪಡಿಸುವಷ್ಟು ಜಿಲ್ಲೆ ಹಿಂಸಾಪೀಡಿತವಾಗಿದೆ. ನೇತ್ರಾವತಿ ನದಿ ತಿರುವು ಯೋಜನೆಯನ್ನು ಪ್ರತಿಭಟಿಸಿ  ಸ್ವಾವಿೂಜಿಗಳು, ಮುಸ್ಲಿಮ್ ಧರ್ಮಗುರುಗಳು ಮತ್ತು ಕ್ರೈಸ್ತ ಗುರುಗಳು ಒಟ್ಟಾಗಿ ಕೈಕೈ ಹಿಡಿದು ನಿಂತ ಎರಡ್ಮೂರು ವಾರಗಳೊಳಗೆ ಇಂಥದ್ದೊಂದು ದಿಢೀರ್ ವಿಭಜನೆ ಸಾಧ್ಯವಾದದ್ದು ಹೇಗೆ? ನೇತ್ರಾವತಿ ಯೋಜನೆಯನ್ನು ಖಂಡಿಸಿ ನಡೆಸಲಾದ ಪ್ರತಿಭಟನೆಯಲ್ಲಿ ಸಂಘಪರಿವಾರದವರೂ ಇದ್ದರು. ಮುಸ್ಲಿಮ್ ಸಂಘಟನೆಗಳೂ ಇದ್ದುವು. ಕೇಸರಿ ಶಾಲು ಧರಿಸಿದ ವ್ಯಕ್ತಿಯ ಬಳಿ ಬಿಳಿ ಟೊಪ್ಪಿ ಧರಿಸಿದ ವ್ಯಕ್ತಿ ಕುಳಿತ ದೃಶ್ಯವನ್ನು ಹೆಕ್ಕಿ ಅನೇಕ ಮಂದಿ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡೂ ಇದ್ದರು. ಸೌಹಾರ್ದತೆ, ಅನ್ಯೋನ್ಯತೆಯ ಆ ದೃಶ್ಯಗಳೆಲ್ಲ ಇಷ್ಟು ಬೇಗ ಮಸುಕಾದದ್ದು ಹೇಗೆ ಮತ್ತು ಯಾಕೆ? ನಿಜವಾಗಿ, ಈ ಪ್ರತಿಭಟನೆ, ಹಿಂಸೆಗಳ ಹಿಂದೆ ಇರುವುದು ಹಿಂದೂ ಪ್ರೇಮವೋ, ಟಿಪ್ಪು ವಿರೋಧವೋ, ಟಿಪ್ಪು ಪ್ರೇಮವೋ ಅಥವಾ ಹಿಡನ್ ಅಜೆಂಡಾಗಳೋ? ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸುವುದಾಗಿ ಘೋಷಿಸಿದ್ದು ಸರಕಾರ. ಹಾಗಂತ, ಟಿಪ್ಪು ಜಯಂತಿಯನ್ನು ಆಚರಿಸಲೇಬೇಕು ಎಂದು ಮುಸ್ಲಿಮ್ ಸಮಾಜ ಒತ್ತಾಯಿಸಿರುವುದೋ ಅದಕ್ಕಾಗಿ ಪ್ರತಿಭಟನೆ ನಡೆಸಿರು ವುದೋ ಎಲ್ಲೂ ನಡೆದಿಲ್ಲ. ಅದಕ್ಕೆ ಮುಖ್ಯ ಕಾರಣ, ಆತ ಮುಸ್ಲಿಮರಿಗೆ ಮಾತ್ರ ಸಂಬಂಧಿಸಿದ ರಾಜನೇನೂ ಅಲ್ಲ ಎಂಬುದು. ಆತ ಒಂದು ಸಮಾಜದ ಪ್ರತಿನಿಧಿ. ಹಿಂದೂ-ಮುಸ್ಲಿಮ್-ಕ್ರೈಸ್ತ ಸಹಿತ ಸರ್ವರನ್ನೂ ಒಳಗೊಂಡ ಒಂದು ಸಮಾಜವನ್ನು ಆತ ಆಳಿದ್ದಾನೆ. ಹೀಗಿರುವಾಗ, ಈ ಜಯಂತಿಯ ಆಚರಣೆ ಹೇಗಿರಬೇಕಿತ್ತು? ಸರಕಾರ ಟಿಪ್ಪು ಜಯಂತಿಯನ್ನು ಆಚರಿಸುವುದಾಗಿ ಘೋಷಿಸಿದಾಗ ಸಮಾಜ ಹೇಗೆ ಪ್ರತಿಕ್ರಿಯಿಸಬೇಕಿತ್ತು? ದುರಂತ ಏನೆಂದರೆ, ತೀರಾ ಸರಕಾರಿ ಕಾರ್ಯಕ್ರಮವಾಗಿ ಮುಗಿಯಬೇಕಾದ ಒಂದು ಆಚರಣೆಗೆ ಹಿಂದೂ ಮತ್ತು ಮುಸ್ಲಿಮರು ಧರ್ಮದ ಬಣ್ಣ ಬಳಿದರು. ಹಿಂದೂಗಳ ಒಂದು ಗುಂಪು ಟಿಪ್ಪು ಜಯಂತಿಯನ್ನು ವಿರೋಧಿಸಿದಾಗ ಮುಸ್ಲಿಮರು ಟಿಪ್ಪು ಆಚರಣೆಯಲ್ಲಿ ವಿಶೇಷ ಆಸಕ್ತಿಯನ್ನು ತೋರಿಸಿದರು. ಟಿಪ್ಪು ವ್ಯಕ್ತಿತ್ವವನ್ನು ವೈಭವೀಕರಿಸಿದರು. ಅತಿರಂಜಿತ ಕತೆಗಳೂ ಹುಟ್ಟಿ ಕೊಂಡವು. ನಿಜವಾಗಿ, ಸರಕಾರಕ್ಕೆ ಟಿಪ್ಪುವಿನ ಮೇಲೆ ಗೌರವ ಇದ್ದಿದ್ದೇ ಆಗಿದ್ದರೆ ಅದು ಜಯಂತಿ ಆಚರಣೆಯ ಹೊಣೆಯನ್ನು ರಾಜ್ಯ ಅಲ್ಪಸಂಖ್ಯಾತ ಇಲಾಖೆಗೆ ವಹಿಸಿಬಿಡುವ ಬದಲು ಸ್ವಯಂ ತಾನೇ ವಹಿಸಿಕೊಳ್ಳಬೇಕಿತ್ತು. ಅಷ್ಟಕ್ಕೂ, ಸರಕಾರ ಎಡವಿತೆಂದೇ ಇಟ್ಟುಕೊಳ್ಳೋಣ. ಆ ತಪ್ಪನ್ನು ಮುಂದುವರಿಸುವ ಅಗತ್ಯ ಮುಸ್ಲಿಮ ರಿಗೇನಿತ್ತು? ತೀರಾ ಸರಕಾರಿ ಕಾರ್ಯಕ್ರಮವನ್ನು ಮುಸ್ಲಿಮರ ಕಾರ್ಯಕ್ರಮವಾಗಿ ಪ್ರತ್ಯೇಕವಾಗಿ ಆಚರಿಸುವ ಅಗತ್ಯವೇನಿತ್ತು? ಟಿಪ್ಪು ಸುಲ್ತಾನ್ ಹೋರಾಡಿದ್ದು ಬ್ರಿಟಿಷರ ವಿರುದ್ಧ. ಸಾಮ್ರಾಜ್ಯ ವಿಸ್ತರಣೆಗಾಗಿಯೋ ಅಥವಾ ಅಧಿಕಾರದ ಉಳಿವಿಗಾಗಿಯೋ ಆತ ಹಿಂದೂ, ಮುಸ್ಲಿಮ್, ಕ್ರೈಸ್ತ ಸಹಿತ ಎಲ್ಲರ ಮೇಲೂ ಕ್ರಮ ಕೈಗೊಂಡಿದ್ದಾನೆ. ಆ ಕ್ರಮ ಧರ್ಮಾತೀತವಾಗಿತ್ತು. ಮುಸ್ಲಿಮರ ಮೊಹರಂ ಮೆರವಣಿಗೆ ಮತ್ತು ಅದಕ್ಕೆ ಸಂಬಂಧಿಸಿದ ಆಚರಣೆಗಳನ್ನೂ ಆತ ನಿಷೇಧಿಸಿದ್ದ. ಓರ್ವ ರಾಜನೆಂಬ ನೆಲೆಯಲ್ಲಿ ಆತ ತನ್ನ ಇತಿ-ಮಿತಿಯೊಳಗೆ ಕೆಲಸ ಮಾಡಿದ್ದಾನೆ. ಇವು ಮತ್ತು ಇಂಥ ಇನ್ನಿತರ ಸಂಗತಿಗಳನ್ನು ಸಮಾಜದ ಮುಂದಿಡುವುದಕ್ಕೆ ಮುಸ್ಲಿಮರು ಪ್ರತ್ಯೇಕ ಸಭೆಗಳನ್ನು ಆಯೋಜಿಸಬೇಕಿತ್ತೇ? ಟಿಪ್ಪು ಸುಲ್ತಾನನ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳಿಗೆ ಸೂಕ್ತ ಉತ್ತರ ಕೊಡಬೇಕಾದ ಕರ್ತವ್ಯ ಸರಕಾರದ್ದು. ಯಾಕೆಂದರೆ, ಜಯಂತಿ ಘೋಷಣೆ ಮಾಡಿದ್ದು ಸರಕಾರವೇ ಹೊರತು ಮೌಲ್ವಿಗಳೂ ಅಲ್ಲ, ಮುಸ್ಲಿಮರ ಧಾರ್ಮಿಕ ಕೇಂದ್ರಗಳೂ ಅಲ್ಲ. ಆದ್ದರಿಂದ, ಸರಕಾರ ಆರೋಪಗಳಿಗೆ ಸೂಕ್ತ ಪ್ರತಿ ಉತ್ತರಗಳನ್ನು ಕೊಟ್ಟು ತನ್ನನ್ನು ಸಮರ್ಥಿಸಿಕೊಳ್ಳಬೇಕಿತ್ತು. ಒಂದು ವೇಳೆ ಟಿಪ್ಪು ಕುರಿತಾದ ಚರ್ಚೆಯು ಸರಕಾರ ಮತ್ತು ಸಂಘ ಪರಿವಾರ ಎಂದು ಎರಡಾಗಿ ವಿಭಜನೆಗೊಳ್ಳುತ್ತಿದ್ದರೆ ಒಟ್ಟು ವಾತಾವರಣ ಹೇಗಿರುತ್ತಿತ್ತು? ನಿಜವಾಗಿ, ಈ ಇಡೀ ಜಯಂತಿಯಲ್ಲಿ ಮುಸ್ಲಿಮರು ಪಾಲುಗೊಳ್ಳಲೇ ಬೇಕೆಂಬುದು ಸಂಘಪರಿವಾರದ ಬಯಕೆ. ಯಾಕೆಂದರೆ, ಈ ಜಯಂತಿಯನ್ನು ಸರಕಾರ v/s ಸಂಘಪರಿವಾರ ಎಂದು ವಿಭಜಿಸುವುದರಿಂದ ಲಾಭ ಕಡಿಮೆ. ಜನರೂ ಆಸಕ್ತಿ ತೋರುವುದಿಲ್ಲ. ಅಲ್ಲದೇ, ಈ ವಿಷಯವನ್ನು ಹೆಚ್ಚು ದಿನ ಚಾಲ್ತಿಯಲ್ಲಿಟ್ಟುಕೊಳ್ಳುವುದಕ್ಕೆ ಸಾಧ್ಯವೂ ಇಲ್ಲ. ಅದು ಬಿಟ್ಟು ಮುಸ್ಲಿಮರು ಈ ಆಚರಣೆಯಲ್ಲಿ ವಿಶೇಷ ಆಸಕ್ತಿಯಿಂದ ಭಾಗಿಯಾದರೆ ಮತ್ತು ಮೆರವಣಿಗೆ ಹಾಗೂ ಕಾರ್ಯಕ್ರಮಗಳನ್ನು ಪ್ರತ್ಯೇಕವಾಗಿ ಆಯೋಜಿಸಿದರೆ, ಅದರಿಂದ ಇಡೀ ಜಯಂತಿಯ ಬಣ್ಣವನ್ನೇ ಬದಲಾಯಿಸಬಹುದು. ಆ ಬಳಿಕ ಸರಕಾರ v/s ಸಂಘಪರಿವಾರ ಎಂಬುದು ಸಂಘಪರಿವಾರ v/s ಮುಸ್ಲಿಮರು ಎಂಬುದಾಗಿ ವಿಭಜನೆಗೊಳಗಾಗುತ್ತದೆ. ಹಾಗೇನಾದರೂ ಆಗಿಬಿಟ್ಟರೆ, ಆ ಬಳಿಕ ರಾಜ್ಯದಾದ್ಯಂತ ಟಿಪ್ಪುವಿನ ನೆಪದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಪ್ರತಿಭಟನೆ ಕೈಗೊಳ್ಳಬಹುದು. ಹಿಂದೂಗಳನ್ನು ಭಾವನಾತ್ಮಕವಾಗಿ ಕಾಡಬಹುದು. ದೇವಸ್ಥಾನವನ್ನು ಧ್ವಂಸಗೊಳಿಸಿದ, ಮತಾಂತರ ಮಾಡಿದ ವ್ಯಕ್ತಿಯನ್ನು ಮುಸ್ಲಿಮರಿಗಾಗಿ ಸರಕಾರ ಓಲೈಕೆ ಮಾಡುತ್ತಿದೆ ಎಂದು ವ್ಯಾಖ್ಯಾನಿಸಬಹುದು. ಬೀದಿಗಿಳಿದಿರುವ ಮುಸ್ಲಿಮರನ್ನು ಮತ್ತು ಅವರ ವಿಪರೀತ ಪ್ರೀತಿಯನ್ನು ಅದಕ್ಕೆ ಪೂರಕವಾಗಿ ಬೊಟ್ಟು ಮಾಡಬಹುದು. ಬಹುಶಃ, ಒಂದು ಹಂತದ ವರೆಗೆ ಸಂಘಪರಿವಾರದ ಈ ಉದ್ದೇಶ ಖಂಡಿತ ಈಡೇರಿದೆ. ಬಿಹಾರದ ಚುನಾವಣೆಯಲ್ಲಿ ಬಿಜೆಪಿಗಾದ ಪರಾಜಯವನ್ನು ರಾಜ್ಯದ ಮಾಧ್ಯಮಗಳು ಚರ್ಚಿಸದಂತೆ ನೋಡಿಕೊಳ್ಳುವಲ್ಲಿಯೂ ಅದು ಯಶಸ್ವಿಯಾಗಿದೆ.
      ಅಷ್ಟಕ್ಕೂ, 200 ವರ್ಷಗಳ ಹಿಂದೆ ಹುಟ್ಟಿ ಮರೆಯಾದ ಓರ್ವ ರಾಜನ ಹೆಸರಲ್ಲಿ ಒಂದು ಸಮಾಜ ಕಿತ್ತಾಡಿಕೊಳ್ಳುತ್ತದೆಂದರೆ ಅದಕ್ಕೆ ಏನೆನ್ನಬೇಕು? ಟಿಪ್ಪು ಸುಲ್ತಾನ್ 200 ವರ್ಷಗಳ ಹಿಂದೆ ಯಾವ ತಪ್ಪುಗಳನ್ನು ಮಾಡಿದ್ದನೋ ಅದಕ್ಕಾಗಿ ಶಿಕ್ಷೆ ಕೊಡುವುದು ಇವತ್ತು ಸಾಧ್ಯವಿಲ್ಲ. ಆತ 200 ವರ್ಷಗಳ ಹಿಂದೆ ಏನೆಲ್ಲ ಒಳಿತು ಮಾಡಿದ್ದನೋ ಅದನ್ನು ಗೌರವಿಸಿ ಇವತ್ತು ಹೂ ಮಾಲೆ ಹಾಕುವುದಕ್ಕೂ ಸಾಧ್ಯವಿಲ್ಲ. ‘ಕನಿಷ್ಠ ಇದುವೇ ಅಂತಿಮ ಸತ್ಯ’ ಎಂದು ಯಾವ ರಾಜನ ಕುರಿತೂ ಹೇಳುವಂತಿಲ್ಲ ಎಂಬುದು ಆತನನ್ನು ವೈಭವೀಕರಿಸುತ್ತಿರುವವರಿಗೂ ತುಚ್ಛೀಕರಿಸುತ್ತಿರುವವರಿಗೂ ಖಂಡಿತ ಗೊತ್ತು. ಇಷ್ಟಿದ್ದೂ ಸಮಾಜದ ವಿಭಜನೆಗೆ ಓರ್ವ ರಾಜನನ್ನು ನೆಪ ಮಾಡಿಕೊಳ್ಳುತ್ತಾರೆಂದಾದರೆ ಆ ವಿಭಜಕರಲ್ಲಿ ಸ್ವಾರ್ಥ ಉದ್ದೇಶಗಳಿವೆ ಎಂಬುದು ಸ್ಪಷ್ಟ. ಟಿಪ್ಪುವಿನ ಹೆಸರಲ್ಲಿ ಅಲ್ಲಲ್ಲಿ ಇರಿತಕ್ಕೊಳಗಾದವರಿಗೆ ಮತ್ತು ಮೃತಪಟ್ಟವರಿಗೆ ಇದು ಗೊತ್ತಿದೆಯೋ ಇಲ್ಲವೋ ಆದರೆ ಇರಿಯಲು ಕತ್ತಿ ಕೊಟ್ಟವರಿಗೆ ಮತ್ತು ಪ್ರಚೋದನಕಾರಿ ಭಾಷಣಗಳನ್ನು ಬಿಗಿಯುವವರಿಗೆ ಇದು ಖಂಡಿತ ಗೊತ್ತು. ಇಲ್ಲಿ ಟಿಪ್ಪು ಒಂದು ನೆಪ ಮಾತ್ರ. ನಾಳೆ ಶಿವಾಜಿಯೂ ಇದಕ್ಕೆ ಬಳಕೆಯಾಗಬಹುದು. ಅಬ್ದುಲ್ ಕಲಾಮ್‍ರು, ಮುಹಮ್ಮದ್ ಅಲಿ, ಸಾವರ್ಕರ್ ಎಲ್ಲರನ್ನೂ ಇದಕ್ಕೆ ಬಳಸಿಕೊಳ್ಳಬಹುದು. ಅಂದಹಾಗೆ, ಈ ರಾಜ್ಯದ ಅನೇಕ ಕಡೆ ಈಗಾಗಲೇ ಬಡಪಾಯಿ ಮೈದಾನಗಳು ಹಿಂದೂ-ಮುಸ್ಲಿಮ್ ಆಗಿ ವಿಭಜನೆಗೊಂಡಿವೆ. ಕ್ರಿಕೆಟ್ ತಂಡಗಳು ಹಿಂದೂ-ಮುಸ್ಲಿಮ್ ಆಗಿವೆ. ಶಾಲೆಗಳೊಳಗೂ ಇಂಥ ವಿಭಜನೆಗಳು ನಡೆಯುತ್ತಿವೆ. ಮಾರುಕಟ್ಟೆಯಲ್ಲಿ, ಬಸ್ ನಿಲ್ದಾಣಗಳಲ್ಲಿ, ಶಾಲಾ ಕ್ಯಾಂಪಸ್‍ಗಳಲ್ಲಿ.. ಯಾರು ಯಾರೊಂದಿಗೆ ಮಾತಾಡಬೇಕು ಎಂಬುದು ಅಲಿಖಿತವಾಗಿ ನಿರ್ಧಾರವಾಗಿಬಿಟ್ಟಿದೆ. ಹಿಂದೂ ಅಂದರೆ ನಾಮ, ಕೇಸರಿ ಬಟ್ಟೆ, ಮತ್ತು ಕೈಗೆ ಕೇಸರಿ ರಿಬ್ಬನ್ ತೊಟ್ಟವ ಎಂಬ ವಾತಾವರಣ ಸೃಷ್ಟಿಯಾಗಿರುವಂತೆಯೇ ಮುಸ್ಲಿಮ್ ಅಂದರೆ ಟೊಪ್ಪಿ, ಗಡ್ಡ, ಪೈಜಾಮ ಧರಿಸಿರುವವ ಎಂಬ ಭಾವನೆಯು ವ್ಯಾಪಕವಾಗುತ್ತಿದೆ. ಈ ವೇಶದಲ್ಲಿ ಹಿಂದೂ ಅಥವಾ ಮುಸ್ಲಿಮ್ ಕಾಣಿಸಿಕೊಂಡರೆ ಆತ ನಿಷ್ಠಾವಂತ ಎಂದೂ ಭಾವಿಸಲಾಗುತ್ತದೆ. ಅಂಥವರನ್ನು ತುಸು ಭಯದಿಂದ ನೋಡಬೇಕಾಗುತ್ತದೆ. ಯುವಕ ಮತ್ತು ಯುವತಿ ಕಾಲೇಜಿನ ಸಹಪಾಠಿಗಳಾದರೂ ಅವರನ್ನು ಕಂಡ ಕೂಡಲೇ ಇವರ ಮಾತು ಅಚಾನಕ್ಕಾಗಿ ನಿಂತು ಹೋಗುತ್ತದೆ. ಅಕ್ಕಪಕ್ಕದ ಮನೆಯವರಾಗಿದ್ದರೂ ಬಸ್ಸಿನಲ್ಲಿ ಒಂದೇ ಸೀಟಿನಲ್ಲಿ ಕುಳಿತುಕೊಳ್ಳುವುದಕ್ಕೆ ಭಯ ಆಗುತ್ತದೆ. ಎಲ್ಲಿ ಹಲ್ಲೆ ನಡೆಯುತ್ತದೋ ಎಂಬ ಭೀತಿಯಿಂದ ಪರಸ್ಪರ ಪರಿಚಯ ಇದ್ದರೂ ಗೆಳೆಯರಾಗಿದ್ದರೂ ಸಹಪಾಠಿಗಳಾಗಿದ್ದರೂ ಅಪರಿಚಿತರಂತೆ ಮತ್ತು ಪರಮ ವೈರಿಗಳಂತೆ ಬಿಂಬಿಸಿಕೊಳ್ಳಬೇಕಾದ ಅನಿವಾರ್ಯತೆ ಒದಗಿ ಬರುತ್ತದೆ. ನಿಜವಾಗಿ, ಕೇಸರಿ ಬಟ್ಟೆ, ರಿಬ್ಬನ್, ನಾಮ ಹಾಕಿದವರನ್ನು ಅಥವಾ ಟೊಪ್ಪಿ, ಗಡ್ಡ, ಪೈಜಾಮ ಧರಿಸಿದವರನ್ನು ಕಂಡು ಹೆಣ್ಣು-ಗಂಡು ಹೆದರಬಾರದಿತ್ತು. ಸಮಾಜ ಅಂತಹವರನ್ನು ಆತಂಕದಿಂದ ನೋಡಬಾರದಿತ್ತು. ಯಾಕೆಂದರೆ, ಒಂದು ಹಂತದವರೆಗೆ ಅದು ಧರ್ಮವೊಂದರ ಸಂಕೇತ. ಧರ್ಮ ಅಪಾಯಕಾರಿಯಲ್ಲ ಎಂದಾದರೆ ಆ ಚಿಹ್ನೆ ಮತ್ತು ಅದನ್ನು ಧರಿಸಿದವರು ಅಪಾಯಕಾರಿಗಳಾಗಲು ಸಾಧ್ಯವೇ ಇಲ್ಲ. ಅವರು ಸಮಾಜದ ಭರವಸೆಗಳಾಗಬೇಕೇ ಹೊರತು ಬೆದರಿಕೆಯಲ್ಲ. ಅವರನ್ನು ಕಾಣುವಾಗ ಹೆಣ್ಣು-ಗಂಡು, ಗೆಳೆಯ-ಗೆಳತಿ, ಸಹೋದರ-ಸಹೋದರಿ ಎಲ್ಲರಲ್ಲೂ ನೆಮ್ಮದಿಯ ಭಾವ ಉಂಟಾಗಬೇಕು. ಅವರು ತಮ್ಮ ರಕ್ಷಕರು ಎಂಬ ವಾತಾವರಣ ಬೆಳೆಯಬೇಕು. ಆದರೆ ಹಾಗಾಗುತ್ತಿಲ್ಲ ಎಂಬುದೇ ಅವರು ನಿಜ ಧರ್ಮವನ್ನು ಪ್ರತಿನಿಧಿಸುತ್ತಿಲ್ಲ ಎಂಬುದಕ್ಕೆ ಸ್ಪಷ್ಟ ಪುರಾವೆ. ಇಂಥವರನ್ನು ಗುರುತಿಸಿ ಸಮಾಜ ತರಾಟೆಗೆತ್ತಿಕೊಳ್ಳದಿದ್ದರೆ ಟಿಪ್ಪು ಎಂದಲ್ಲ ನಾಳೆ ಬದನೆಕಾಯಿ, ಈರುಳ್ಳಿ, ಲಿಂಬೆಹಣ್ಣು, ಬಂಗುಡೆ ಮೀನು ಎಲ್ಲವೂ  ಸಮಾಜವನ್ನು ವಿಭಜಿಸಬಹುದು.
    ಕವನದ  ಸಾಲುಗಳೇಕೋ ಮತ್ತೆ ಮತ್ತೆ ಕಾಡುತ್ತಿವೆ..

Tuesday, November 10, 2015

ಟಿಪ್ಪು ಯಾರ ವಿರೋಧಿ?

ಪೂರ್ಣಯ್ಯ
ಲಾಲಾ ಮುಹ್ತಾಬ್ ರಾಯ್
ಹರಿಸಿಂಗ್
ನರಸಿಂಹ ರಾವ್
ಶ್ರೀನಿವಾಸ್ ರಾವ್
ಅಪ್ಪಾಜಿ ರಾವ್
ಶ್ರೀಪತಿ ರಾವ್
     ಟಿಪ್ಪು ಸುಲ್ತಾನನು ಮತಾಂಧ, ಕ್ರೂರಿ, ಮತಾಂತರಿ.. ಇತ್ಯಾದಿ ಇತ್ಯಾದಿಗಳೆಲ್ಲ ಆಗಿರುತ್ತಿದ್ದರೆ ಇವರೆಲ್ಲ ತಮ್ಮ ಮೂಲ ಹಿಂದೂ ಗುರುತು ಮತ್ತು ನಂಬಿಕೆಗಳೊಂದಿಗೆ ಆತನ ಬಳಿ ಉನ್ನತ ಸ್ಥಾನದಲ್ಲಿರಲು ಸಾಧ್ಯವಿತ್ತೇ? ದಿವಾನ್ ಕೃಷ್ಣ ರಾವ್ - ವಿತ್ತ ಮಂತ್ರಿ. ಪೂರ್ಣಯ್ಯ- ಕಂದಾಯ ಮಂತ್ರಿ. ಲಾಲಾ ಮುಹ್ತಾಬ್- ಟಿಪ್ಪೂವಿನ ಆಪ್ತ ಕಾರ್ಯದರ್ಶಿ. ರಾಮ್ ರಾವ್ ಮತ್ತು ಶಿವಾಜಿ - ಅಶ್ವ ದಳದ ದಂಡನಾಯಕರು. ಶ್ರೀನಿವಾಸ ರಾವ್, ಮೂಲಚಂದ್  ಮತ್ತು ಅಪ್ಪಾಜಿ ರಾವ್‍ರು ಟಿಪ್ಪುವಿನ ವಿಶೇಷ ರಾಯಭಾರಿಗಳು. ಟಿಪ್ಪುವಿನ ಆಡಳಿತದಲ್ಲಿ ಹಿಂದೂಗಳು ಬಹುಸಂಖ್ಯೆಯಲ್ಲಿ ಅಧಿಕಾರಿಗಳಾಗಿರುವುದನ್ನು ಆತನ ಇತಿಹಾಸವನ್ನು ವಿವರಿಸುವ ಒಂದಕ್ಕಿಂತ ಹೆಚ್ಚು ಕೃತಿಗಳು ಹೀಗೆ ಹೆಸರುಗಳ ಸಮೇತ ಸ್ಪಷ್ಟಪಡಿಸುತ್ತದೆ. ಅಲ್ಲದೇ, ಇದನ್ನು ಆತನ ವಿರೋಧಿಗಳೂ ನಿರಾಕರಿಸುತ್ತಿಲ್ಲ. ಏನು ಹೇಳಬೇಕು ಇದಕ್ಕೆ? ಇವೆಲ್ಲ ಮತಾಂಧ ರಾಜನೊಬ್ಬನ ಎಡವಟ್ಟುಗಳೋ ಅಥವಾ ಆತನಿಗೆ ಮತಾಂಧತೆಯ ಹಣೆಪಟ್ಟಿ ಹಚ್ಚಿದವರ ವೈರುಧ್ಯಗಳೋ? 1791ರಲ್ಲಿ ರಘುನಾಥ್ ರಾವ್ ನೇತೃತ್ವದ ಮರಾಠ ದಾಳಿಕೋರರು ಶೃಂಗೇರಿಯ ಶಾರದಾ ಮಂದಿರಕ್ಕೆ ಹಾನಿ ಮಾಡಿದರು. ಸ್ವರ್ಣ ಪಲ್ಲಕ್ಕಿಯನ್ನು ಹೊತ್ತೊಯ್ದರು. ಶಾರದಾ ದೇವಿಯ ಮೂರ್ತಿಯನ್ನು ಗರ್ಭಗುಡಿಯಿಂದೆತ್ತಿ ಹೊರಗೆಸೆದರು. ಮಂದಿರದ ಮುಖ್ಯ ಗುರುಗಳಾದ ಶ್ರೀ ಶಂಕರಾಚಾರ್ಯರು ದಕ್ಷಿಣ ಕನ್ನಡದ ಕಾರ್ಕಳದಲ್ಲಿ ಆಶ್ರಯ ಪಡೆದರು. ಇಂಥ ಸನ್ನಿವೇಶದಲ್ಲಿ ವಿಗ್ರಹ ಭಂಜಕ ರಾಜನೊಬ್ಬನ ಪ್ರತಿಕ್ರಿಯೆ ಹೇಗಿರುತ್ತಿತ್ತು ಮತ್ತು ಹೇಗಿರಬೇಕಿತ್ತು? ಟಿಪ್ಪು ಹೇಗೆ ಪ್ರತಿಕ್ರಿಯಿಸಿದ? ಆತ ಶಾರದಾ ಮೂರ್ತಿಯನ್ನು ಪುನಃ ಪ್ರತಿಷ್ಠಾಪಿಸಿದನಲ್ಲದೇ ಮೂರ್ತಿಗೆ ಹೊದಿಸಲು ಬೆಲೆಬಾಳುವ ವಸ್ತ್ರ ಮತ್ತು ಶಂಕರಾಚಾರ್ಯರಿಗೆ ಒಂದು ಜೋಡಿ ಶಾಲುಗಳನ್ನು ರವಾನಿಸಿದ. ಮಂದಿರದ ಮೇಲೆ ಮುಂದೆ ನಡೆಯಬಹುದಾದ ಸಂಭಾವ್ಯ ದಾಳಿಯನ್ನು ತಡೆಯುವುದಕ್ಕಾಗಿ ಸೇನೆಯ ಒಂದು ತುಕಡಿಯನ್ನು ಕಾವಲು ನಿಲ್ಲಿಸಿದ. ಆ ಸಂದರ್ಭದಲ್ಲಿ ಶ್ರೀ ಶಂಕರಾಚಾರ್ಯರಿಗೆ ಟಿಪ್ಪು ಬರೆದ ಪತ್ರವನ್ನು ಮೈಸೂರಿನ ಪುರಾತತ್ವ ಇಲಾಖೆಯ ನಿರ್ದೇಶಕ ರಾದ ರಾವ್ ಬಹಾದ್ದೂರ್ ನರಸಿಂಹಾಚಾರ್ಯರು 1916ರಲ್ಲಿ ಶಾರದಾ ಮಂದಿರದಲ್ಲಿ ಪತ್ತೆ ಹಚ್ಚಿದರು. ಅಷ್ಟಕ್ಕೂ, ಟಿಪ್ಪುವಿಗೂ ಹಿಂದೂ ಮಂದಿರಕ್ಕೂ ನಡುವಿನ ಸಂಬಂಧ ಕೇವಲ ಶಾರದಾ ಮಠಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ನಂಜನಗೂಡು ತಾಲೂಕಿನ ಲಕ್ಷ್ಮಿಕಾಂತ್ ಮಂದಿರ ಮತ್ತು ಶ್ರೀ ಕಣ್ವೇಶ್ವರ ಮಂದಿರ, ಮೇಲುಕೋಟೆಯ ನಾರಾಯಣ ಸ್ವಾಮಿ ಮಂದಿರ, ಶ್ರೀರಂಗಪಟ್ಟಣದ ಶ್ರೀ ರಂಗನಾಥ ಮಂದಿರಕ್ಕೂ ಆತ ಸಂದರ್ಭಾನುಸಾರ ನೆರವು ನೀಡಿದ್ದಾನೆ, ಉಡುಗೊರೆಗಳನ್ನು ಕಳುಹಿಸಿಕೊಟ್ಟಿದ್ದಾನೆ. ಕೇರಳದ ಮಲಬಾರನ್ನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಯೋಧರು ಅಲ್ಲಿನ ಮಂದಿರವೊಂದಕ್ಕೆ ಹಾನಿ ಮಾಡಿದರು. ಟಿಪ್ಪು ಆ ಯೋಧರನ್ನು ಶಿಕ್ಷಿಸಿದ. ಮಂದಿರವನ್ನು ದುರಸ್ತಿಗೊಳಿಸಿದ. 1780 ರಲ್ಲಿ ಟಿಪ್ಪುವಿನ ತಂದೆ ಹೈದರಲಿಯು ಕಾಂಜಿವರಂನಲ್ಲಿ ಮಂದಿರವೊಂದಕ್ಕೆ ಅಡಿಪಾಯ ಹಾಕಿದ್ದ. 1791ರಲ್ಲಿ ಅಲ್ಲಿಗೆ ಭೇಟಿ ನೀಡಿದ ಟಿಪ್ಪು ಆ ಮಂದಿರವನ್ನು ಪೂರ್ಣಗೊಳಿಸುವುದಕ್ಕಾಗಿ ವ್ಯವಸ್ಥೆ ಮಾಡಿದ. ಅಂದಹಾಗೆ, ಕಲ್ಲಿಕೋಟೆಯ ವೆಂಕಟೇಶ್ವರ ಮಂದಿರಕ್ಕೆ 195 ಹೆಕ್ಟೇರು ಜವಿೂನು ಕೊಟ್ಟದ್ದು ಟಿಪ್ಪುವೇ. ಪೊನ್ನಾನಿಯ ಗುರುವಾಯೂರ್ ಮಂದಿರಕ್ಕೆ 504 ಹೆಕ್ಟೇರು ಜವಿೂನು, ಮಾನೂರು ಮಂದಿರಕ್ಕೆ 73 ಹೆಕ್ಟೇರು, ನಂಬೂದಿರಿ ಪಾಡ್ ಮಂದಿರಕ್ಕೆ 135 ಹೆಕ್ಟೇರು ಜವಿೂನು.. ಮಂಜೂರು ಮಾಡಿರುವುದೂ ಟಿಪ್ಪುವೇ. ಇವೆಲ್ಲ ಟಿಪ್ಪು ವಿರೋಧಿಗಳಿಗೆ ಗೊತ್ತಿಲ್ಲ ಎಂದಲ್ಲ. ಅವರು ಉದ್ದೇಶ ಪೂರ್ವಕವಾಗಿ ಈ ಸತ್ಯವನ್ನು ಅಡಗಿಸುತ್ತಿದ್ದಾರೆ. ಒಂದು ವೇಳೆ, ಟಿಪ್ಪು ದೇಗುಲ ಭಂಜಕನೇ ಆಗಿರುತ್ತಿದ್ದರೆ ಇವತ್ತು ನಮ್ಮ ನಡುವೆ ಇರುವ ಐತಿಹಾಸಿಕ ಮತ್ತು ಪುರಾತನ ದೇಗುಲಗಳ ಪರಿಸ್ಥಿತಿ ಹೇಗಿರುತ್ತಿತ್ತು? ಶ್ರೀರಂಗಪಟ್ಟಣದಲ್ಲಿ ಶ್ರೀ ರಂಗನಾಥನ ದೇಗುಲ ಅಸ್ತಿತ್ವದಲ್ಲಿ ಇರುತ್ತಿತ್ತೇ? ಮೇಲುಕೋಟೆಯಲ್ಲಿ ಚೆಲುವರಾಯ ದೇಗುಲ, ಬೇಲೂರು-ಹಳೆಬೀಡು ಏನಾಗಿರುತ್ತಿತ್ತು? ತನ್ನ ಅರಮನೆಯ ಕೇವಲ ನೂರು ಗಜಗಳ ಅಂತರದಲ್ಲಿದ್ದ ನರಸಿಂಹ ಮತ್ತು ಗಂಗಾಧರ ಮಂದಿರಗಳ ಪರಿಸ್ಥಿತಿ ಏನಾಗಿರುತ್ತಿತ್ತು? ಅಲ್ಲಿಂದ ನಿತ್ಯವೂ ಕೇಳಿ ಬರುತ್ತಿರುವ ಘಂಟೆಯ ನಿನಾದಕ್ಕೆ ಆತ ಏನೆಂದು ಪ್ರತಿಕ್ರಿಯಿಸಬೇಕಿತ್ತು? ಅಷ್ಟಕ್ಕೂ, ಟಿಪ್ಪುವನ್ನು ಹಿಂದೂ ವಿರೋಧಿ, ಮತಾಂಧ.. ಎಂದೆಲ್ಲಾ ಟೀಕಿಸುತ್ತಿರುವವರು ತಮ್ಮ ವಾದಕ್ಕೆ ಆಧಾರವಾಗಿ ನೆಚ್ಚಿಕೊಂಡಿರುವುದಾದರೂ ಯಾರನ್ನು? ವೆಲ್ಲಿಕ್ಸ್, ಕಿರ್ಕ್ ಪ್ಯಾಟ್ರಿಕ್, ಲಿಯೋನ್ ಬೋರಿಂಗ್ ಮುಂತಾದವರನ್ನೇ ಅಲ್ಲವೇ? ಇವರೆಲ್ಲ ಯಾರು? ಇವರ ಹಿನ್ನೆಲೆಯೇನು? ಇವರು ತಮ್ಮ ಗ್ರಂಥದಲ್ಲಿ ಟಿಪ್ಪುವನ್ನು ಮತಾಂಧನಾಗಿ ಚಿತ್ರಿಸಿರುವುದು ನಿಜ. ಆದರೆ, ಇವರಿಗೂ ಬ್ರಿಟಿಷರಿಗೂ ನಡುವೆ ಇರುವ ಸಂಬಂಧವನ್ನೇಕೆ ಯಾರೂ ವಿಶ್ಲೇಷಿಸುತ್ತಿಲ್ಲ? ಭಾರತದಲ್ಲಿ ಬ್ರಿಟಿಷರನ್ನು ಮೊತ್ತಮೊದಲು ಅತ್ಯಂತ ಪ್ರಬಲವಾಗಿ ತನ್ನ ಜೀವನದ ಕೊನೆಯ ತನಕ ಎದುರಿಸಿದವನು ಟಿಪ್ಪು. ಆಂಗ್ಲರಿಗೆ ಸಹಾಯ ಮಾಡದಂತೆ ಮರಾಠರು ಮತ್ತು ನಿಝಾಮರಿಗೆ ತಾನು ಅಧಿಕಾರಕ್ಕೇರಿದ ಕೂಡಲೇ ಪತ್ರ ಬರೆದ. ಕಾಶ್ಮೀರ, ಜೋಧ್‍ಪುರ, ಜೈಪುರ ಮತ್ತು ನೇಪಾಳ ಇತ್ಯಾದಿ ಪ್ರದೇಶಗಳಲ್ಲಿದ್ದ ಹಿಂದೂ ರಾಜರೊಂದಿಗೂ ಆಂಗ್ಲ ವಿರೋಧಿ ಹೋರಾಟದಲ್ಲಿ ಒಗ್ಗೂಡುವಂತೆ ವಿನಂತಿಸಿದ್ದ. ಬ್ರಿಟಿಷರ ವಿರೋಧಿಯಾಗಿದ್ದ ಫ್ರೆಂಚರೊಂದಿಗೆ ಸಹಾಯ ಯಾಚಿಸಿದ್ದ. ಟರ್ಕಿಯ ಸುಲ್ತಾನರಿಂದ ನೆರವು ಕೋರಿದ್ದ. ಇರಾನ್ ಮತ್ತು ಅಫಘಾನಿಸ್ತಾನಗಳಿಗೆ ರಾಯಭಾರಿಗಳನ್ನು ಕಳುಹಿಸಿದ್ದ. ಆದರೆ ಆಂಗ್ಲರ ಸಾಮಂತರಂತಿದ್ದ ಟರ್ಕಿಯ ಸುಲ್ತಾನರು ನೆರವು ನೀಡಲು ನಿರಾಕರಿಸಿದ್ದಷ್ಟೇ ಅಲ್ಲ, ಆಂಗ್ಲರೊಂದಿಗೆ ರಾಜಿ ಮಾಡಿಕೊಂಡು ಫ್ರೆಂಚರಿಂದ ದೂರ ನಿಲ್ಲುವಂತೆ ಸೂಚಿಸಿದರು. ಅಂದಹಾಗೆ, ದೇಶದ ಸುಮಾರು 540 ಪ್ರಾಂತ್ಯಗಳ ರಾಜರುಗಳು ಬ್ರಿಟಿಷರ ಕೈಗೊಂಬೆಗಳಾಗಿ ಕಪ್ಪ ಒಪ್ಪಿಸುತ್ತಿದ್ದ ಸಂದರ್ಭದಲ್ಲಿ ಟಿಪ್ಪು ಇಂಥದ್ದೊಂದು ಪ್ರತಿರೋಧವನ್ನು ಹುಟ್ಟುಹಾಕಿದ್ದ ಅನ್ನುವುದನ್ನೊಮ್ಮೆ ಕಲ್ಪಿಸಿಕೊಳ್ಳಿ? ಟಿಪ್ಪು ಸಾವಿಗೀಡಾದ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧಾರಂಭಕ್ಕಿಂತ ಮೊದಲು ಬ್ರಿಟಿಷರು ಒಂದು ಸಂಧಾನದ ನಾಟಕ ನಡೆಸಿದ್ದರು. ಕರಾರು ಪತ್ರದ ಕರಡು ಪ್ರತಿಯನ್ನು ಟಿಪ್ಪುವಿಗೆ ಕಳುಹಿಸಿಕೊಟ್ಟು ಈ ಒಪ್ಪಂದಕ್ಕೆ ಒಪ್ಪಿದರೆ ಯುದ್ಧ ಇಲ್ಲ ಎಂದು ತಿಳಿಸಿದ್ದರು. ಅದರಲ್ಲಿ, ‘ಟಿಪ್ಪು ತನ್ನ ಸೇನೆಯಲ್ಲಿರುವ ಫ್ರೆಂಚ್ ಯೋಧರು ಮತ್ತು ನೌಕರರನ್ನು ಉಚ್ಛಾಟಿಸಬೇಕು’ ಎಂಬುದೂ ಸೇರಿತ್ತು. ಅಲ್ಲದೇ, ಟಿಪ್ಪುವಿನ ಆಪ್ತ ಮಿತ್ರರೂ ಇದೇ ಸಲಹೆಯನ್ನು ನೀಡಿದ್ದರು. ಆದರೆ ಟಿಪ್ಪು ಒಪ್ಪಿಕೊಳ್ಳಲಿಲ್ಲ. ಹೀಗೆ ತಮ್ಮ ಶರತ್ತನ್ನು ಒಪ್ಪಿಕೊಳ್ಳದಿದ್ದುದನ್ನೇ ನೆಪ ಮಾಡಿಕೊಂಡು ಬ್ರಿಟಿಷರು ಟಿಪ್ಪುವಿನ ವಿರುದ್ಧ ಯುದ್ಧ ಸಾರಿ ಅಂತಿಮವಾಗಿ ಹತ್ಯೆಗೈದರು. ಒಂದು ರೀತಿಯಲ್ಲಿ, ಅಧಿಕಾರ ವಹಿಸಿದಂದಿನಿಂದ ಮರಣವಪ್ಪುವ ವರೆಗೆ ಟಿಪ್ಪು ಬ್ರಿಟಿಷ್ ವಿರೋಧಿಯಾಗಿಯೇ ಬದುಕಿದ. ಈ ದಾರಿಯಲ್ಲಿ ತನ್ನಿಬ್ಬರು ಮಕ್ಕಳನ್ನು ಒತ್ತೆಯಿಟ್ಟ. ವೆಲ್ಲಿಕ್ಸ್, ಕಿರ್ಕ್ ಪ್ಯಾಟ್ರಿಕ್, ಲಿಯೋನ್ ಬೋರಿಂಗ್‍ರ ಗ್ರಂಥವನ್ನು ಎತ್ತಿಕೊಂಡು ಟಿಪ್ಪುವನ್ನು ಮತಾಂಧ ಎಂದು ಕರೆಯುವವರಿಗೆ ಈ ಇತಿಹಾಸ ಗೊತ್ತಿಲ್ಲವೇ? ಬ್ರಿಟಿಷರನ್ನು ವೈರಿಯೆಂದು ಪರಿಗಣಿಸಿದ ಮತ್ತು ಜೀವನಪೂರ್ತಿ ಆ ವೈರಿಯನ್ನು ಎದುರಿಸಿದ ವ್ಯಕ್ತಿಯ ಇತಿಹಾಸವನ್ನು ತಿಳಿಯುವುದಕ್ಕೆ ಆ ವೈರಿ ರಾಷ್ಟ್ರದ ಮಂದಿ ಬರೆದ ಗ್ರಂಥಗಳೇ ಆಧಾರವಾಗಬೇಕೇ? ಜಗತ್ತಿನಲ್ಲಿ ಟಿಪ್ಪುವಿನ ಹೊರತು ಇನ್ನಾರ ಇತಿಹಾಸವನ್ನು ನಾವು ಈ ರೀತಿಯಲ್ಲಿ ಅಭ್ಯಸಿಸಿದ್ದೇವೆ? ನಿಜವಾಗಿ, ಟಿಪ್ಪುವಿನ ಇತಿಹಾಸವನ್ನು ಬ್ರಿಟಿಷರು ಹೇಳುವುದೇ ಒಂದು ಪರಮ ಜೋಕು. ಸದ್ಯ ಈ ದೇಶದಲ್ಲಿ ಈ ಜೋಕನ್ನೇ ಪರಮ ಸತ್ಯ ಎಂದು ಒಂದು ಗುಂಪು ಪ್ರಚಾರ ಮಾಡುತ್ತಿದೆ. ಈ ಪ್ರಚಾರದ ಅಬ್ಬರ ಎಷ್ಟು ಜೋರಾಗಿದೆಯೆಂದರೆ ಆತ ತನ್ನ ಆಡಳಿತಾವಧಿಯಲ್ಲಿ ಬರೇ ಮಸೀದಿಗಳನ್ನು ಕಟ್ಟಿ, ಮತಾಂತರ ಕೇಂದ್ರಗಳನ್ನು ತೆರೆದಿದ್ದನೇನೋ ಎಂದೇ ಭಾವಿಸಬೇಕಾಗುತ್ತದೆ. ಅಷ್ಟಕ್ಕೂ, ಆತ ಕಟ್ಟಿರುವ ಮಸೀದಿಗಳಾದರೂ ಎಷ್ಟಿವೆ ಮತ್ತು ಎಲ್ಲಿವೆ? ಕೊಡಗು ನಗರವೊಂದರಲ್ಲೇ ಆತ 70 ಸಾವಿರ ಹಿಂದೂಗಳನ್ನು ಮತಾಂತರಿಸಿದ್ದಾನೆ ಎಂದು ಆರೋಪಿಸುವಾಗ, ಆ ಕಾಲದಲ್ಲಿ ಕೊಡಗು ನಗರ ಬಿಡಿ ಇಡೀ ಕೊಡಗಿನಲ್ಲಿಯೇ 25 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯಿರುವುದಕ್ಕೆ ಸಾಧ್ಯವಿರಲಿಲ್ಲ ಎಂಬುದನ್ನೇಕೆ ಇವರು ಅಡಗಿಸುತ್ತಿದ್ದಾರೆ? ಹೈದರಲಿಯ ಕಾಲದಲ್ಲಿಯೇ ಕೊಡಗು ಶ್ರೀರಂಗಪಟ್ಟಣದ ವಶವಾಗಿತ್ತು. ಮಾತ್ರವಲ್ಲ, ವಾರ್ಷಿಕ 2 ಸಾವಿರ ಕಪ್ಪ ಕಾಣಿಕೆ ನೀಡಬೇಕೆಂಬ ಶರತ್ತಿನ ಮೇರೆಗೆ ಕೊಡಗನ್ನು ಅಲ್ಲಿನ ರಾಜನಿಗೇ ಆತ ವಹಿಸಿಕೊಟ್ಟಿದ್ದ. ಆ ಬಳಿಕ ಕೊಡಗು ಶ್ರೀರಂಗಪಟ್ಟಣದ ಅಧೀನದಲ್ಲಿಯೇ ಮುಂದುವರಿಯಿತು. ಆದರೆ ಕೊಡಗಿನಲ್ಲಿ ಆಗಾಗ ಬಂಡಾಯ ಏಳುತ್ತಲೇ ಇತ್ತು. 1784ರಲ್ಲಿ ಮನ್‍ಮಿತ್ ರಾಯ್‍ನ ನೇತೃತ್ವದಲ್ಲಿ ಕೊಡಗಿನ ಜನರು ಮತ್ತೊಮ್ಮೆ ಟಿಪ್ಪುವಿನ ವಿರುದ್ಧ ದಂಗೆಯೆದ್ದರು. ಅವನಿಗೆ ರಂಗಾನಾಯರ್ ಎಂಬ ಪ್ರಮುಖನ ಬೆಂಬಲವೂ ಇತ್ತು. ಆಗ ಟಿಪ್ಪು ಕೊಡಗಿನ ಮೇಲೆ ಯುದ್ಧ ಸಾರಿದ ಹಾಗೂ ರಾಯ್ ಮತ್ತು ನಾಯರ್‍ನ ಸಹಿತ ಸಾವಿರಾರು ಮಂದಿಯನ್ನು ಬಂಧಿಸಿ ಶ್ರೀರಂಗಪಟ್ಟಣಕ್ಕೆ ರವಾನಿಸಿದ. ಪದೇ ಪದೇ ಏಳುತ್ತಿದ್ದ ದಂಗೆಯನ್ನು ದಮನಿಸುವುದಕ್ಕೆ ರಾಜನೊಬ್ಬ ಕೈಗೊಂಡ ಕ್ರಮ ಇದಾಗಿತ್ತೇ ಹೊರತು ಇದನ್ನೇ ಬಲಾತ್ಕಾರದ ಮತಾಂತರ ಎಂದು ಸಾರಿ ಬಿಡುವುದು ಇತಿಹಾಸಕ್ಕೆ ಮಾಡುವ ಅಪಚಾರವಾಗುತ್ತದೆ. ಇದೇ ರೀತಿಯಲ್ಲಿ ಆತ ಕ್ರೈಸ್ತರ ವಿರುದ್ಧವೂ ಕ್ರಮ ಕೈಗೊಂಡಿದ್ದ. 1782ರ ಎರಡನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಮಂಗಳೂರಿನ ಕ್ರೈಸ್ತರು ಗುಪ್ತವಾಗಿ ಆಂಗ್ಲರಿಗೆ ನೆರವಾಗಿದ್ದರು. ಬಿಜನೂರನ್ನು ವಶಪಡಿಸುವುದಕ್ಕೆ ಕರ್ನಲ್ ಮ್ಯಾಥ್ಯೂಸ್‍ನಿಗೆ ಸಹಕರಿಸಿದ್ದರು. ಪಶ್ಚಿಮ ಕರಾವಳಿಯಿಂದ ಅನೇಕ ಕ್ರೈಸ್ತರು ಪಲಾಯನಗೈದು ಬ್ರಿಟಿಷರೊಡನೆ ಸೇರಿ ಕೊಂಡಿದ್ದರು. ಮಂಗಳೂರಿನ ಮೇಲೆ ಜನರಲ್ ಕ್ಯಾಂಬೆಲ್ ಆಕ್ರಮಣ ನಡೆಸಿದ ಸಂದರ್ಭದಲ್ಲಿ ಬ್ರಿಟಿಷರಿಗೆ ಒಂದು ಸಾವಿರ ಮೂಟೆ ಅಕ್ಕಿಯನ್ನು ಕ್ರೈಸ್ತರು ಸರಬರಾಜು ಮಾಡಿದ್ದರು. ಕ್ರೈಸ್ತರನ್ನು ಟಿಪ್ಪು ಶಿಕ್ಷಿಸಿದ್ದು ಈ ದ್ರೋಹಕ್ಕಾಗಿ. ಈ ಷಡ್ಯಂತ್ರದಲ್ಲಿ ಭಾಗಿಯಾದ ಹೆಚ್ಚಿನವರನ್ನು ಕೊಚ್ಚಿನ್, ಗೋವಾ, ಶ್ರೀರಂಗ ಪಟ್ಟಣಗಳಿಗೆ ಗಡೀಪಾರು ಮಾಡಲಾಯಿತು. ಅಷ್ಟಕ್ಕೂ, ತನ್ನ ಅಧೀನದಲ್ಲಿರುವ ಪ್ರಜೆಗಳು ವೈರಿಯನ್ನು ಬೆಂಬಲಿಸಿದರೆ ಯಾವ ರಾಜ ತಾನೇ ಅದನ್ನು ಸಹಿಸಬಲ್ಲ? ಹಾಗಂತ, ಕ್ರೈಸ್ತ ಕೈದಿಗಳಿಗೆ ಆರಾಧನಾ ಕರ್ಮಗಳನ್ನು ನೆರವೇರಿಸಲು ಪಾದ್ರಿಗಳನ್ನು ಕಳುಹಿಸಿಕೊಡುವಂತೆ ಗೋವಾದ ವೈಸ್‍ರಾಯ್‍ಗೆ ಪತ್ರ ಬರೆದಿದ್ದೂ ಟಿಪ್ಪುವೇ. ಹಾನಿಗೀಡಾಗಿದ್ದ ಚರ್ಚ್‍ಗಳನ್ನು ದುರಸ್ತಿ ಪಡಿಸಿದ್ದೂ ಆತನೇ. ಕೊಡಗು ಮತ್ತು ಕರಾವಳಿ ಪ್ರದೇಶದಲ್ಲಿ ದಲಿತ, ಕೊರಗ ಮುಂತಾದ ಹಿಂದುಳಿದ ಜಾತಿಯ ಮಹಿಳೆಯರಿಗೆ ಸೊಂಟದಿಂದ ಮೇಲೆ ಬಟ್ಟೆ ಧರಿಸುವುದಕ್ಕೆ ಸಾಮಾಜಿಕವಾಗಿ ಒಂದು ಬಗೆಯ ಬಹಿಷ್ಕಾರವಿತ್ತು. ಜನಾಂಗೀಯ ಪಕ್ಷಪಾತ ಮತ್ತು ಅಸ್ಪೃಶ್ಯತೆಗಳು ದೊಡ್ಡ ಮಟ್ಟದಲ್ಲಿ ಆಚರಣೆಯಲ್ಲಿದ್ದುವು. ಮೇಲ್ವರ್ಗದ ಎದುರು ಕೆಳವರ್ಗದವರು ಸಂಪೂರ್ಣ ಬಟ್ಟೆ ಧರಿಸುವುದನ್ನು ಅಗೌರವ ಎಂದೇ ಪರಿಗಣಿಸಲಾಗುತ್ತಿತ್ತು. ಈ ಅನಾಗರಿಕ ಪದ್ಧತಿಯನ್ನು ನಿಷೇಧಿಸಿದವನೇ ಟಿಪ್ಪು. ಟಿಪ್ಪುವಿನ ಆಗಮನದ ಬಳಿಕವೇ ಈ ಭಾಗದ ದಮನಿತ ಮಹಿಳೆಯರು ರವಿಕೆ ತೊಡಲು ಆರಂಭಿಸಿದರು ಎಂದು ಇತಿಹಾಸಕಾರರು ಹೇಳುತ್ತಾರೆ. ಟಿಪ್ಪು ಕ್ರೈಸ್ತರನ್ನೋ ಕೊಡವರನ್ನೋ ಅವರ ಧರ್ಮದ ಕಾರಣಕ್ಕಾಗಿ ಬಂಧಿಸಿಲ್ಲ ಅಥವಾ ಗಡೀಪಾರುಗೊಳಿಸಿಲ್ಲ ಎಂಬುದು ಆ ಇಡೀ ಬೆಳವಣಿಗೆಯ ಹಿನ್ನೆಲೆಯನ್ನು ಪರಿಶೀಲಿಸಿದರೆ ಸ್ಪಷ್ಟವಾಗುತ್ತದೆ. ಅಂದಹಾಗೆ, ಭಾರತದ ಮೇಲೆ ಯುದ್ಧ ಸಾರಿದ ಪಾಕಿಸ್ತಾನವನ್ನು ಭಾರತೀಯರು ಬೆಂಬಲಿಸಿದರೆ, ಅವರನ್ನು ಇಲ್ಲಿನ ಸರಕಾರ ಏನೆಂದು ಪರಿಗಣಿಸಬಹುದು? ಹೇಗೆ ನಡೆಸಿಕೊಳ್ಳಬಹುದು? ಅಲ್ಲದೆ,ಈ ಮಣ್ಣಿಗೆ ತೀರ ಹೊಚ್ಚ ಹೊಸತಾದ ಸುಧಾರಣಾ ಕ್ರಮಗಳನ್ನೂ ಟಿಪ್ಪು ಕೈಗೊಂಡಿದ್ದ . ರೇಷ್ಮೆ ಬೆಳೆಯನ್ನು ಈ ಮಣ್ಣಿಗೆ ಮೊಟ್ಟಮೊದಲು ಪರಿಚಯಿಸಿದ್ದು ಆತನೇ. ಕೋಲಾರದಲ್ಲಿ ಮತ್ತು ಇನ್ನಿತರ ಕಡೆ ಲಕ್ಷಾಂತರ ಮಂದಿ ಇವತ್ತು ಅದನ್ನು ಆಶ್ರಯಿಸಿದ್ದಾರೆ. ಜಮೀನ್ದಾರರಿಂದ ಭೂಮಿಯನ್ನು ಕಿತ್ತು ಬಡ ದಲಿತ, ದುರ್ಬಲರಾದ ರೈತರಿಗೆ ಕೊಟ್ಟದ್ದೂ ಟಿಪ್ಪುವೇ. ಈ  ಮಣ್ಣಿನ  ಮಟ್ಟಿಗೆ ಅದು ಮೊತ್ತ ಮೊದಲ ಭೂ ಸುಧಾರಣೆಯಾಗಿತ್ತು. ಆ ಬಳಿಕ ಇದೇ ಭೂ ಸುಧಾರಣೆಯನ್ನು ನಾಲ್ವಡಿ ಕೃಷ್ಣರಾಜ ಅರಸರು ಮತ್ತು ಆ ಬಳಿಕ ದೇವರಾಜ ಅರಸರು  ಮುಂದುವರಿಸಿದರು. ಕನ್ನಂಬಾಡಿ ಅಣೆಕಟ್ಟಿಗೆ 1794 ರಲ್ಲಿ ಶಂಕುಸ್ಥಾಪನೆ ನಡೆಸಿದ್ದೂ ಆತನೇ. ಪಾಳು ಬಿದ್ದ ಭೂಮಿಯನ್ನು  ಕೃಷಿ ಮಾಡಲು ಬಿಟ್ಟು ಕೊಡುತ್ತಿದ್ದ ಟಿಪ್ಪು, ಬಡ್ಡಿ ರಹಿತವಾಗಿ ಕೃಷಿಕರಿಗೆ  ಸಾಲ ನೀಡುತ್ತಿದ್ದ. ಆತ ಮಧ್ಯ, ಜೂಜು,ವೇಶ್ಯಾವಾಟಿಕೆಯನ್ನು ನಿಷೇಧಿಸಿದ್ದ. ಆದರೆ ಟಿಪ್ಪುವನ್ನು ಮತಾಂಧ, ಕ್ರೂರಿ ಎಂದೆಲ್ಲ ಕರೆಯುವವರು  ಆತನ ಈ ಯಾವ ಸುಧಾರಣಾ ನೀತಿಯನ್ನು ಪ್ರಸ್ತಾಪಿಸುತ್ತಲೇ ಇಲ್ಲ. ಹಾಗಂತ,
      ಟಿಪ್ಪು ಸುಲ್ತಾನ್‍ನನ್ನು ನಾವು ಓರ್ವ ರಾಜನಾಗಿ ನೋಡಬೇಕೇ ಹೊರತು ಹಿಂದೂವಾಗಿಯೋ ಮುಸ್ಲಿಮನಾಗಿಯೋ ಖಂಡಿತ ಅಲ್ಲ. ಆತನನ್ನು ಮುಸ್ಲಿಮ್ ರಾಜ ಎಂದು ವರ್ಗೀಕರಿಸಬೇಕಾದ ಅಗತ್ಯವೂ ಇಲ್ಲ. ಇತರೆಲ್ಲ ರಾಜರುಗಳಲ್ಲಿರುವ ದೌರ್ಬಲ್ಯಗಳು ಆತನಲ್ಲಿಯೂ ಇದ್ದುವು. ಮೂರು ಮದುವೆಯಾಗಿದ್ದ. ಅರಮನೆಯಲ್ಲಿ ನೂರಾರು ಸೇವಕರಿದ್ದರು. ಆತನಲ್ಲಿ ಮಿತಿವಿೂರಿದ ಮೃದು ಧೋರಣೆಯಿತ್ತು ಮತ್ತು ಅಗತ್ಯಕ್ಕಿಂತ ಹೆಚ್ಚು ತನ್ನವರ ಮೇಲೆ ನಂಬಿಕೆ ಇರಿಸುತ್ತಿದ್ದ. ಸೇನಾ ವ್ಯೂಹ ರಚನೆಯಲ್ಲಿ ಸಾಕಷ್ಟು ದೌರ್ಬಲ್ಯಗಳಿದ್ದುವು. ಕೆಡುಕುಗಳನ್ನು ನಿಷೇಧಿಸುವಲ್ಲೂ ಜಾಣತನದ ಕೊರತೆಯಿತ್ತು. ಆತನ ವಿರುದ್ಧ ಪದೇ ಪದೇ ಬಂಡಾಯದ ಧ್ವನಿ ಏಳುತ್ತಿದ್ದುದು, ಒಳಸಂಚುಗಳು ನಡೆಯುತ್ತಿದ್ದುದು ಮತ್ತು ಆ ಒಳಸಂಚಿನಿಂದಾಗಿಯೇ ಆತ ಪರಾಜಿತನಾದದ್ದು ಎಲ್ಲವೂ ಇವನ್ನು ಇನ್ನಷ್ಟು ಸ್ಪಷ್ಟಪಡಿಸುತ್ತದೆ. ಬಹುಶಃ, ಟಿಪ್ಪು ಸುಲ್ತಾನನನ್ನು ವೈಭವೀಕರಿಸುವವರು ಮತ್ತು ತೀರಾ ಮತಾಂಧನಂತೆ ಚಿತ್ರೀಕರಿಸುವವರಿಬ್ಬರೂ ಟಿಪ್ಪುವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ವಿಫಲರಾಗಿದ್ದಾರೆಂದೇ ಹೇಳ ಬೇಕಾಗುತ್ತದೆ. ಅಷ್ಟಕ್ಕೂ,
          ಟಿಪ್ಪು ಜಯಂತಿಯನ್ನು ಸ್ವತಃ ರಾಜ್ಯ ಸರಕಾರವೇ ಆಚರಿಸುವ ಬದಲು ಅದನ್ನು ಅಲ್ಪಸಂಖ್ಯಾತ ಇಲಾಖೆಗೆ ವಹಿಸಿಕೊಟ್ಟಿದೆಯಲ್ಲ, ಏನಿದರ ಅರ್ಥ? ಟಿಪ್ಪು ಅಲ್ಪಸಂಖ್ಯಾತರ ರಾಜನೇ?