Thursday, October 24, 2013

ನಿರ್ಭಯಳಿಗೆ ಸಾಧ್ಯವಾದದ್ದು ಸೌಜನ್ಯಳಿಗೆ ಅಸಾಧ್ಯವಾಗಬೇಕೆಂದೇನೂ ಇಲ್ಲವಲ್ಲ

ಸೌಜನ್ಯ
   ಈ ಹೆಣ್ಣು ಮಗಳು ಇವತ್ತು ರಾಜ್ಯದಾದ್ಯಂತ ಸುದ್ದಿಯಲ್ಲಿದ್ದಾಳೆ. ಧರ್ಮಸ್ಥಳದಿಂದ ಹಿಡಿದು ಬೆಂಗಳೂರಿನ ವರೆಗೆ ಈಕೆಯ ಹೆಸರಲ್ಲಿ ಸರಣಿ ಪ್ರತಿಭಟನೆಗಳು ನಡೆಯುತ್ತಿವೆ. ಪರ ವಿರುದ್ಧ ಚರ್ಚೆಗಳಾಗುತ್ತಿವೆ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ಬೆರಳು ತೋರಿಸುವ ಪ್ರಯತ್ನಗಳೂ ಅವರಿಂದ ನಿರಾಕರಣೆಯ ಹೇಳಿಕೆಗಳೂ ಮಾಧ್ಯಮಗಳಲ್ಲಿ ದಪ್ಪಕ್ಷರಗಳಲ್ಲಿ ಪ್ರಕಟವಾಗುತ್ತಿವೆ. ಹೀಗೆ ಒಂದು ಬಗೆಯ ಅನುಮಾನ ಸಮಾಜದಲ್ಲಿ ಸಹಜವಾಗಿ ಸೃಷ್ಟಿಯಾಗಿದೆ. ಹಾಗಂತ, ನಿತ್ಯಾನಂದ ಸ್ವಾಮಿ ಮತ್ತು ಅಸಾರಾಮ್ ಬಾಪುರ ಪಟ್ಟಿಯಲ್ಲಿಟ್ಟು ವೀರೇಂದ್ರ ಹೆಗ್ಗಡೆಯವರನ್ನು ಯಾರೂ ನೋಡುತ್ತಿಲ್ಲ, ನೋಡಬಾರದು ಕೂಡ. ಅವರಿಬ್ಬರ ಮೇಲಿನ ಆರೋಪಕ್ಕೂ ಈ ಪ್ರಕರಣಕ್ಕೂ ನಡುವೆ ಖಂಡಿತ ವ್ಯತ್ಯಾಸ ಇದೆ. ಹಾಗಿದ್ದರೂ, ಸೌಜನ್ಯಳನ್ನು ಕೇಂದ್ರೀಕರಿಸಿ ಇವತ್ತು ಹುಟ್ಟಿಕೊಂಡಿರುವ ಚರ್ಚೆಯು ಕೆಲವೊಂದು ಮೂಲಭೂತ ಪ್ರಶ್ನೆಗಳನ್ನು ಎತ್ತುವಲ್ಲಿ ವಿಫಲವಾಗಿದೆsಯೇನೋ ಅನ್ನಿಸುತ್ತದೆ. ಯಾಕೆ ಹೆಣ್ಣೇ ಮತ್ತೆ ಮತ್ತೆ ಶೋಷಣೆಗೆ ಒಳಗಾಗುತ್ತಿದ್ದಾಳೆ? ಧರ್ಮಸ್ಥಳವನ್ನು ಹೊರಗಿಟ್ಟು ನೋಡಿದರೂ, ದೇಶದಲ್ಲಿ ಅನೇಕ ದೇವಮಾನವರು ಮತ್ತು ಆಧ್ಯಾತ್ಮಿಕ ಕೇಂದ್ರಗಳು ಹೆಸರು ಕೆಡಿಸಿಕೊಂಡಿರುವುದು ಹೆಣ್ಣಿನ ಕಾರಣದಿಂದಲೇ. ಆಧ್ಯಾತ್ಮಿಕ ಕೇಂದ್ರಗಳಿಗೆ ಸಮಾಜದಲ್ಲಿ ಅದರದ್ದೇ ಆದ ಗೌರವವಿದೆ. ದೇವಮಾನವರು, ಬಾಬಾಗಳೆಲ್ಲ ಈ ಗೌರವದ ಪಾಲನ್ನು ಪಡಕೊಳ್ಳುತ್ತಲೂ ಇದ್ದಾರೆ. ಒಂದು ರೀತಿಯಲ್ಲಿ, ಆಧ್ಯಾತ್ಮಿಕ ಕೇಂದ್ರಗಳೆಂಬುದು ನಮ್ಮ ಹೆಣ್ಣು ಮಕ್ಕಳ ಪಾಲಿಗೆ ಅತ್ಯಂತ ಸುರಕ್ಷಿತ ತಾಣಗಳಾಗಿ ಗುರುತಿಸಿಕೊಳ್ಳಬೇಕಿತ್ತು. ಅಲ್ಲಿರುವ ದೇವ ಮಾನವರೋ ಬಾಬಾಗಳೋ ಈ ಸುರಕ್ಷಿತತೆಯನ್ನು ಒದಗಿಸುವಲ್ಲಿ ಮುತುವರ್ಜಿ ತೋರಬೇಕಿತ್ತು. ಯಾಕೆಂದರೆ, ಧರ್ಮದ ಮೌಲ್ಯಗಳು ಅತ್ಯಂತ ಹೆಚ್ಚು ಜಾರಿಯಲ್ಲಿರುವುದು ಅಲ್ಲಿಯೇ. ಆದರೆ ಹೆಣ್ಣಿಗೆ ಅಂಥ ಸ್ಥಳಗಳೂ ಸುರಕ್ಷಿತ ಅಲ್ಲ ಎಂದರೆ, ಹೆಣ್ಣು ಆಧ್ಯಾತ್ಮಿಕತೆಗೆ ಏನೆಂದು ಅರ್ಥಕೊಟ್ಟಾಳು?
ಊರ್ವಶಿ
ಮೇನಕೆ
ರಂಭೆ
ತಿಲೋತ್ತಮೆ
   ದೇವಲೋಕದ ಈ ಅಪ್ಸರೆಯರ ಬಗ್ಗೆ ಪುರಾಣಗಳಲ್ಲಿ ಧಾರಾಳ ಉಲ್ಲೇಖಗಳಿವೆ. ಋಷಿಗಳ ತಪಸ್ಸನ್ನು ಭಂಗಗೊಳಿಸಲಿಕ್ಕಾಗಿ ದೇವರುಗಳು ಇವರನ್ನು ಆಶ್ರಯಿಸಿದ್ದು, ಇವರನ್ನು ಒಲಿಸುವುದಕ್ಕಾಗಿ ದೇವರುಗಳ ಮಧ್ಯೆಯೇ ಸಂಘರ್ಷ ನಡೆಯುತ್ತಿದ್ದುದು, ಘೋರ ತಪಸ್ಸು ಮಾಡುತ್ತಿದ್ದ ವಿಶ್ವಾಮಿತ್ರನನ್ನು ಚಿತ್ತ ಚಾಂಚಲ್ಯಗೊಳಿಸಲು ಮೇನಕೆ ಭೂಮಿಗೆ ಇಳಿದು ಬಂದದ್ದು ಮತ್ತು ಅವರಿಬ್ಬರ ಮಗುವಾಗಿ ಶಕುಂತಳ ಜನಿಸಿದ್ದು.., ಹೀಗೆ ಪುರಾಣಗಳ ತುಂಬ ಅಪ್ಸರೆಯರ ನೃತ್ಯ, ಹಾಡುಗಳ ಧಾರಾಳ ಸನ್ನಿವೇಶಗಳಿವೆ. ಅದರ ಸುಧಾರಿತ ಮುಖವೇ ದೇವದಾಸಿ ಪದ್ಧತಿ ಎಂದು ಹೇಳಲಾಗುತ್ತದೆ. ದೇವದಾಸಿಯರನ್ನು ಸಮಾಜದ ಉನ್ನತ ವರ್ಗವು ಲೈಂಗಿಕವಾಗಿ ಬಳಸಿಕೊಳ್ಳುತ್ತಿತ್ತು. ಅವರು ನೃತ್ಯ, ಹಾಡು, ಸಂಗೀತಗಳ ಮೂಲಕ ಉನ್ನತ ವರ್ಗದ ಮನ ತಣಿಸುವ ಕೆಲಸ ಮಾಡುತ್ತಿದ್ದರು. ಬಹುಶಃ ನಾಗರಿಕತೆ ಅಷ್ಟಾಗಿ ಬೆಳೆದಿಲ್ಲದ ಕಾಲದಲ್ಲಿ ಚಲಾವಣೆಯಲ್ಲಿದ್ದ ಈ ದೇವದಾಸಿ ಪದ್ಧತಿಯು ಕ್ರಮೇಣ ಅಳಿಯುತ್ತಾ ಹೋಯಿತಾದರೂ ಪುರುಷರಲ್ಲಿರುವ ಆ ಮನಸ್ಥಿತಿ ಸಂಪೂರ್ಣ ಹೊರಟು ಹೋಗಿಲ್ಲ ಅನ್ನುವುದಕ್ಕೆ ಇವತ್ತು ಆಧ್ಯಾತ್ಮಿಕ ಕೇಂದ್ರಗಳಿಂದ ಕೇಳಿ ಬರುತ್ತಿರುವ ಲೈಂಗಿಕ ಶೋಷಣೆಗಳ ಸುದ್ದಿಗಳೇ ಪುರಾವೆ. ಹೆಣ್ಣನ್ನು ಈ ಹಿಂದೆ ನೋಡುತ್ತಿದ್ದುದೂ ಲೈಂಗಿಕ ವಸ್ತುವಾಗಿಯೇ. ಇವತ್ತೂ ಹಾಗೆಯೇ. ಒಂದು ಕಡೆ, ವಿಧವೆಯರನ್ನು ಅರ್ಚಕಿಯರನ್ನಾಗಿಸುವ ಪ್ರಯತ್ನಗಳು ನಡೆಯುತ್ತಿವೆ. ಹೆಣ್ಣು ಮಕ್ಕಳು ಕಲಿಕೆಯಲ್ಲಿ ಗಂಡು ಮಕ್ಕಳನ್ನು ವಿೂರಿಸುತ್ತಿರುವ ಬಗ್ಗೆ, ಪುರುಷರಿಗೆ ಸರಿ ಸಮಾನವಾಗಿ ಮಹಿಳೆಯರೂ ಬೆಳೆಯುತ್ತಿರುವ ಬಗ್ಗೆ ಕೊಂಡಾಡಲಾಗುತ್ತಿದೆ. ಈ ದೇಶವನ್ನು ಅಳುತ್ತಿರುವ ಪ್ರಮುಖ ಪಕ್ಷವೊಂದರ ನಾಯಕಿಯೇ ಮಹಿಳೆ. ಇನ್ನೊಂದು ಕಡೆ, ಆಧ್ಯಾತ್ಮಿಕ ನಾಯಕರು ಆಕೆಯನ್ನು ದೇವದಾಸಿ ಇಮೇಜಿನಿಂದ ಹೊರತಂದು ನೋಡಲು ವಿಫಲರಾಗುತ್ತಿದ್ದಾರೆ. ಹೀಗಿರುವಾಗ, ಆಧ್ಯಾತ್ಮಿ ಕತೆಯ ಮೇಲೆ ಹೆಣ್ಣು ನಂಬುಗೆ ಕಳಕೊಂಡರೆ, ಅವುಗಳ ವಿರುದ್ಧವೇ ತಿರುಗಿ ಬಿದ್ದರೆ ಯಾರನ್ನು ದೂರಬೇಕು?
   ಇದನ್ನು ನೀವೂ ನೋಡಿರುತ್ತೀರಿ..
ಮುಂಬೈಯ ಚೋರ್ ಬಝಾರ್. ಕಾಂಜಿಲಾಲ್ ಮೆಹ್ತಾಗೆ ಇಲ್ಲೊಂದು ಅಂಗಡಿಯಿದೆ. ಪಕ್ಕಾ ನಾಸ್ತಿಕನಾಗಿದ್ದರೂ ಆತ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿರುವುದು ವಿಗ್ರಹಗಳನ್ನು ಮತ್ತು ಪ್ರಾಚೀನ ವಸ್ತುಗಳನ್ನು. ಹೀಗಿರುತ್ತಾ ಒಂದು ದಿನ ಭೂಕಂಪ ಅಪ್ಪಳಿಸಿ ಆತನ ಅಂಗಡಿ ಧ್ವಂಸವಾಗುತ್ತದೆ. ನೆರೆ ಮನೆಯ ಮಹಾದೇವನನ್ನು ಸೇರಿಸಿಕೊಂಡು ಆತ ನೇರ ಇನ್ಶೂರೆನ್ಸ್ ಕಂಪೆನಿಗೆ ಹೋಗುತ್ತಾನೆ. ತನಗಾದ ನಷ್ಟಕ್ಕೆ ಪರಿಹಾರ ಹೇಗೆ ಪಡಕೊಳ್ಳಬೇಕೆಂದು ಪ್ರಶ್ನಿಸುತ್ತಾನೆ. ಪ್ರಾಕೃತಿಕ ವಿಕೋಪಗಳು ದೇವ ಕಾಯ್ದೆ (Act of God)ಯಡಿಯಲ್ಲಿ ಬರುತ್ತದೆ, ಅದಕ್ಕೆ ಇನ್ಶೂರೆನ್ಸ್ ಸಿಗಲ್ಲ ಅನ್ನುತ್ತದೆ ಕಂಪೆನಿ. ಆತನ ಮುಂದೆ ಬೇರೆ ಆಯ್ಕೆಗಳಿರುವುದಿಲ್ಲ. ದೇವನ ವಿರುದ್ಧವೇ ಕೋರ್ಟಿನಲ್ಲಿ ಮೊಕದ್ದಮೆ ಹೂಡುತ್ತಾನೆ. ಪ್ರಕರಣ ಸಾರ್ವಜನಿಕರ ಗಮನವನ್ನು ಸೆಳೆಯಲು ಪ್ರಾರಂಭಿಸುತ್ತದೆ. ಭೂಮಿಯಲ್ಲಿ ದೇವನನ್ನು ಪ್ರತಿನಿಧಿಸುವವರೆಂದರೆ ಧಾರ್ಮಿಕ ಪುರೋಹಿತರು. ಆದ್ದರಿಂದ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಬೇಕಾದ ಅನಿವಾರ್ಯತೆ ತಲೆದೋರುತ್ತದೆ. ಆ ಕಾರಣದಿಂದಲೇ ನ್ಯಾಯಾಲಯವು ಧಾರ್ಮಿಕ ಪುರೋಹಿತರಾದ ಸಿದ್ದೇಶ್ವರ್ ಮಹಾರಾಜ್, ಗೋಪಿ ಮಯ್ಯ ಮತ್ತು ಲೀಲಾಧಾರ್ ಸ್ವಾಮಿ ಯವರಲ್ಲಿ ಕೋರ್ಟಿಗೆ ಹಾಜರಾಗುವಂತೆ ಸಮನ್ಸ್ ಕಳುಹಿಸುತ್ತದೆ.
   ಕಾಂಜಿ ಕೋರ್ಟಿನಲ್ಲಿ ಸ್ವಯಂ ವಾದಿಸುತ್ತಾನೆ. ಮೊಕದ್ದಮೆಯನ್ನು ವಜಾಗೊಳಿಸಿ ಎಂದು ವಿರೋಧಿ ವಕೀಲ ಸರ್ದೇಸಾೈ ವಾದಿಸುವಾಗ, ಕಾಂಜಿ ಪ್ರತಿಭಟಿಸುತ್ತಾನೆ. ಭೂಮಿಯಲ್ಲಿ ದೇವನ ಪ್ರತಿನಿಧಿಗಳು ನಾವು ಎಂದು ಧಾರ್ಮಿಕ ಗುಂಪುಗಳು ವಾದಿಸುತ್ತಿವೆ. ಅವು ದೇವನ ಪರವಹಿಸಿ ಮಾತನಾಡುತ್ತವೆ. ಆದ್ದರಿಂದ ಭೂಕಂಪಕ್ಕೆ ಉತ್ತರಿಸಬೇಕಾದವರು ಮತ್ತು ಹೊಣೆ ಹೊತ್ತುಕೊಳ್ಳಬೇಕಾದವರು ಇವರೇ..’ ಎಂಬ ಕಾಂಜಿಯ ವಾದವನ್ನು ಒಪ್ಪಿಕೊಳ್ಳುವ ನ್ಯಾಯಾಧೀಶರು ಮೊಕದ್ದಮೆಯನ್ನು ಸ್ವೀಕರಿಸುತ್ತಾರಲ್ಲದೆ ವಿಚಾರಣೆಯನ್ನು ಮುಂದುವರಿಸುತ್ತಾರೆ. ಈ ಪ್ರಕರಣದಿಂದ ಮಾಧ್ಯಮಗಳು ಕಾಂಜಿಯ ಸಂದರ್ಶನಕ್ಕಾಗಿ ಮುಗಿ ಬೀಳುತ್ತವೆ. ಆತ ಪ್ರಸಿದ್ಧಿ ಪಡೆಯುತ್ತಾನೆ. ಸಾರ್ವಜನಿಕರು ಕಾಂಜಿಯ ಪರ ನಿಲ್ಲುತ್ತಾರೆ.  ಅಂತಿಮವಾಗಿ ಕೋರ್ಟು ಆತನ ಪರ ತೀರ್ಪು ನೀಡುತ್ತದೆ. ಆತನಿಗೆ ಪರಿಹಾರ ಒದಗಿಸುವಂತೆ ಧಾರ್ಮಿಕ ಗುಂಪುಗಳಿಗೆ ಅದು ಆದೇಶಿಸುತ್ತದೆ. ವಿಚಿತ್ರ ಏನೆಂದರೆ, ವಿಗ್ರಹಗಳನ್ನು ಆರಾಧಿಸುವುದು ಬಿಡಿ, ಆಧ್ಯಾತ್ಮಿಕತೆಯನ್ನೇ ಒಪ್ಪದ ಕಾಂಜಿಯನ್ನೇ ಜನರು ಆ ಬಳಿಕ ದೇವನೆಂದು ಪೂಜಿಸತೊಡಗುವುದು. ಲೀಲಾಧರ್, ಗೋಪಿ ಮತ್ತು ಸಿದ್ದೇಶ್ವರ ಸ್ವಾಮಿಗಳು ಕಾಂಜಿಯ ಹೆಸರಲ್ಲೇ ದೇವಾಲಯ ಆರಂಭಿಸುವುದು ಮತ್ತು ಅದಕ್ಕಾಗಿ ಮಿಲಿಯನ್‍ಗಟ್ಟಲೆ ಡೊನೇಶನ್ ಸಂಗ್ರಹಿಸುವುದು.. ಹೀಗೆ ‘ಓ ಮೈ ಗಾಡ್’ ಎಂಬ ಚಿತ್ರದ ಕತೆ ಕೊನೆಗೊಳ್ಳುತ್ತದಾದರೂ ಅಲ್ಲಿಂದಲೇ ನಮ್ಮೊಳಗೆ ಪ್ರಶ್ನೆಗಳು ಆರಂಭಗೊಳ್ಳುತ್ತವೆ.
   ನಿಜವಾಗಿ, ಧರ್ಮವು ಸಮಾಜವನ್ನು ಶೋಷಣೆ ಮುಕ್ತಗೊಳಿಸಲು ಬಂದಿದೆ ಎಂದು ನಾವೆಷ್ಟೇ ಹೇಳಿದರೂ, ಆ ಮುಕ್ತತೆಯ ಅನುಭವವನ್ನು ಪಡೆಯುವಲ್ಲಿ ಸಮಾಜ ಮತ್ತೆ ಮತ್ತೆ ವಿಫಲವಾಗುತ್ತಲೇ ಇದೆ. ಅಂಥದ್ದೊಂದು ವಾತಾವರಣವನ್ನು ನಿರ್ಮಿಸಲು ಆಧ್ಯಾತ್ಮಿಕ ಕೇಂದ್ರಗಳಿಗೆ ಇನ್ನೂ ಸಾಧ್ಯವಾಗಿಲ್ಲ. ಅದರ ಬದಲು ಈ ಕೇಂದ್ರಗಳಲ್ಲಿರುವವರನ್ನೇ ದೇವತ್ವಕ್ಕೆ ಏರಿಸಲಾಗುತ್ತದೆ. ಮನುಷ್ಯ ದೇವನಾಗುವುದು ಸಾಧ್ಯವೆ, ಯಕಃಶ್ಚಿತ್ ಮಾನವನಲ್ಲಿ ಅಂಥದ್ದೊಂದು ನಿರೀಕ್ಷೆ ಇಟ್ಟುಕೊಳ್ಳುವುದು ಸಾಧುವೇ.. ಎಂಬೆಲ್ಲ ಪ್ರಶ್ನೆಗಳಾಚೆ ಅಂಥವರು ಇಮೇಜು ಬೆಳೆಸಿಕೊಂಡು ಬಿಟ್ಟಿರುತ್ತಾರೆ. ಅವರ ಸುತ್ತ ಸಾಮ್ರಾಜ್ಯವೊಂದು ಬೆಳೆಯುತ್ತದೆ. ಇಂಥ ಹೊತ್ತಲ್ಲಿ ಧರ್ಮದ ನಿಜ ರುಚಿ ಬದಿಗೆ ಸರಿದು ದೇವಮಾನವರು ಏನು ಹೇಳುತ್ತಾರೋ ಅದುವೇ ಧರ್ಮವಾಗಿ ಬಿಡುತ್ತದೆ. ಇಂಥ ಸ್ಥಿತಿಯಲ್ಲಿ ಅತ್ಯಂತ ಹೆಚ್ಚು ಶೋಷಣೆಗೆ ಒಳಗಾಗುವುದು ಹೆಣ್ಣೇ. ಯಾಕೆಂದರೆ, ಆಕೆ ಗಂಡಿನಂಥಲ್ಲ. ನಾಚಿಕೆ, ಮುಜುಗರ, ಮುಚ್ಚುಮರೆಗಳೆಲ್ಲ ಆಕೆಯಲ್ಲೇ ಹೆಚ್ಚು. ಆದ್ದರಿಂದ ದೇವದಾಸಿತನವನ್ನು, ವೈಧವ್ಯದ ಬದುಕನ್ನು ಆಕೆ ಪ್ರಶ್ನಿಸದೇ ಒಪ್ಪಿಕೊಂಡದ್ದು. ತಾನೇಕೆ ಸತಿ ಹೋಗಬೇಕು, ಪುರುಷನೂ ಹೋಗಬಹುದಲ್ವೇ..’ ಎಂದು ಪ್ರಶ್ನಿಸದೇ ಇದ್ದದ್ದು. ಹೆಣ್ಣಿನ ಇಂಥ ದೌರ್ಬಲ್ಯಗಳನ್ನು ಸಮಾಜದ ಒಂದು ವರ್ಗ ಆವತ್ತೂ ಇವತ್ತೂ ದುರುಪಯೋಗಿಸುತ್ತಲೇ ಇದೆ.
   1990ರಲ್ಲಿ ಕುವೈಟ್‍ನ ಮೇಲೆ ದಾಳಿ ಮಾಡಿದ ಸದ್ದಾಂ ಹುಸೇನರು, ಕುವೈಟಿಗರನ್ನು ಬೆದರಿಸುವುದಕ್ಕಾಗಿ ಇರಾಕ್‍ನ ಬೀದಿ, ಮನೆಗಳಿಂದ ಜನರನ್ನು ಎತ್ತಿಕೊಂಡು ಬಂದು ಕುವೈಟ್‍ಗೆ ಹಾಕಿದ್ದರು. ಹಾಗೆ ಮಾಡುವುದಕ್ಕಿಂತ ಮೊದಲು ಬಳಕೆಗೆ ಬಾರದ ಆಟಿಕೆ ಬಂದೂಕು ಮತ್ತು ಅರೆಬರೆ ಸೇನಾ ಉಡುಪುಗಳನ್ನು ಈ ಜನರಿಗೆ ಅವರು ತೊಡಿಸಿದ್ದರು. ಆ ಬಡಪಾಯಿಗಳು ಕುವೈಟ್‍ನ ಬೀದಿಯಲ್ಲಿ ನೀರು, ಅನ್ನ ಇಲ್ಲದೇ ತಮ್ಮ ಸೈನಿಕ ಉಡುಪನ್ನೂ ಮರೆತು ಭಿಕ್ಷೆ ಬೇಡಿದ್ದನ್ನು ಕುವೈಟ್‍ನಿಂದ ವಾಪಸಾದವರು ಹೇಳಿಕೊಂಡಿದ್ದರು. ನಿಜವಾಗಿ, ನಮ್ಮ ನಡುವೆ ಹೀಗೆ ಧಾರ್ಮಿಕ ಪೋಶಾಕು ತೊಟ್ಟ ಆದರೆ, ಅಂತರಿಕವಾಗಿ ಧಾರ್ಮಿಕತ್ವವಿಲ್ಲದ ಧಾರಾಳ ಮಂದಿಯಿದ್ದಾರೆ. ಹೆಣ್ಣಿನ ಬಗ್ಗೆ ಅವರು ಎಷ್ಟೇ ಗೌರವಾರ್ಹ ಪದಗಳನ್ನು ಬಳಸಲಿ, ಸಂದರ್ಭ ಸಿಕ್ಕಾಗ ಆಕೆಯನ್ನು ಅವರು ಪರಿಗಣಿಸುವುದು ದೇವದಾಸಿಯಾಗಿಯೇ. ಆದ್ದರಿಂದಲೇ,
   ಅತ್ಯಾಚಾರದ ವಿರುದ್ಧ ಕಠಿಣ ಕಾನೂನು ರೂಪಿಸಲು ‘ನಿರ್ಭಯ’ ಪ್ರಕರಣವು ಕಾರಣವಾದಂತೆಯೇ ಧಾರ್ಮಿಕ ಕ್ಷೇತ್ರಗಳನ್ನು ಸ್ವಚ್ಛಗೊಳಿಸುವ ಚಳವಳಿಗೆ ಸೌಜನ್ಯ ಪ್ರೇರಕವಾಗಲಿ.