Saturday, March 25, 2017

ಮಸೀದಿ ಕೆಡವದೆಯೇ, ಮಂದಿರ ಕಟ್ಟದೆಯೇ ಮತ ಧ್ರುವೀಕರಣ ಸಾಧ್ಯವಾದದ್ದು ಹೇಗೆ?

     
1993ರಲ್ಲಿ 177, 1996ರಲ್ಲಿ 174, 2002ರಲ್ಲಿ 88, 2007ರಲ್ಲಿ 51 ಮತ್ತು 2012ರಲ್ಲಿ 47 ಸ್ಥಾನಗಳನ್ನು ಪಡೆದಿದ್ದ ಭಾರತೀಯ ಜನತಾ ಪಕ್ಷವು ಈ 2017ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 325 ಸ್ಥಾನಗಳನ್ನು ಪಡೆದುದಕ್ಕೆ ಕಾರಣವೇನು? ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವೇ? ಕೋಮು ಧ್ರುವೀಕರಣವೇ ಅಥವಾ ಮತಯಂತ್ರ ದುರುಪ ಯೋಗವೇ? ಇಲ್ಲಿ ಬಹುಮುಖ್ಯವಾದ ಅಂಶವೊಂದಿದೆ. 92ರ ಬಾಬರಿ ಧ್ವಂಸದ ಬಳಿಕ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಡೆದ ಸ್ಥಾನಗಳ ಸಂಖ್ಯೆ 177. ಬಾಬರಿ ಇರುವುದೇ ಉತ್ತರ ಪ್ರದೇಶದಲ್ಲಿ. 92ರಲ್ಲಿ ಮಸೀದಿಯನ್ನು ಒಡೆಯುವ ಮೊದಲು ದೇಶದಾದ್ಯಂತ ಬಿಜೆಪಿ ರಥಯಾತ್ರೆ ನಡೆಸಿತ್ತು. ಅಡ್ವಾಣಿ ಮತ್ತು ವಾಜಪೇಯಿಯವರು ಆ ರಥಯಾತ್ರೆಗೆ ನಾಯಕತ್ವವನ್ನು ನೀಡಿದ್ದರು. ದೇಶದಾದ್ಯಂತ ಕೋಮು ಆಧಾರಿತ ವಿಭಜನೆಗಳು ನಡೆಯುತ್ತಿದ್ದ ಕಾಲ. ಉತ್ತರ ಪ್ರದೇಶವಂತೂ ಇದರ ಪ್ರಭಾವದಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವೇ ಇರಲಿಲ್ಲ. ಅಲ್ಲದೇ ಬಾಬರಿ ಧ್ವಂಸದ ಸಮಯದಲ್ಲಿ ಉತ್ತರ ಪ್ರದೇಶದಲ್ಲಿದ್ದುದೇ ಬಿಜೆಪಿ ಸರಕಾರ. ಕಲ್ಯಾಣ್ ಸಿಂಗ್ ಆಗ ಮುಖ್ಯಮಂತ್ರಿಯಾಗಿದ್ದರು. ಇವೆಲ್ಲ ಇದ್ದೂ 1993ರ ಚುನಾವಣೆಯಲ್ಲಿ ಬರೇ 177 ಸ್ಥಾನಗಳನ್ನು ಪಡೆದು ಅಧಿಕಾರ ವಂಚಿತವಾಯಿತಲ್ಲ ಮತ್ತು ಸರಿಸುಮಾರು 19 ವರ್ಷಗಳ ಬಳಿಕ ಇದೀಗ 325 ಸ್ಥಾನಗಳೊಂದಿಗೆ ಮತ್ತೆ ಅಧಿಕಾರ ಪಡೆಯಿತಲ್ಲ, ಇವೆರಡೂ ಏನನ್ನು ಸೂಚಿಸುತ್ತವೆ? 92ರಲ್ಲಿ ಇದ್ದಿರಬಹುದಾದ ಕೋಮು ಧ್ರುವೀಕರಣಕ್ಕಿಂತಲೂ ಹೆಚ್ಚಿನ ಕೋಮುಧ್ರುವೀಕರಣವನ್ನು ಈ ಬಾರಿ ಮಾಡಲಾಯಿತೇ? ಅದು ಸಾಧ್ಯವೇ? ರಾಮಮಂದಿರದ ಚರ್ಚೆ ಅತ್ಯಂತ ತಾರಕ ಸ್ಥಿತಿಯಲ್ಲಿದ್ದಾಗಲೂ ಮತ್ತು ವಾಜಪೇಯಿ, ಅಡ್ವಾಣಿಯಂಥ ಅತಿ ಪ್ರಬಲ ನಾಯಕರು ಬಿಜೆಪಿಯ ನೇತೃತ್ವ ಸ್ಥಾನದಲ್ಲಿದ್ದಾಗಲೂ ಸಾಧಿಸಲಾಗದ ಕೋಮುಧ್ರುವೀಕರಣ ವನ್ನು ನರೇಂದ್ರ ಮೋದಿಯವರು ಮಾಡಿದರೇ? ಮಸೀದಿಯನ್ನು ಕೆಡವದೆಯೇ ಮತ್ತು ಮಂದಿರವನ್ನು ಕಟ್ಟದೆಯೇ ಅವರು ಸಮಾಜವನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸಿದರೇ? ಅದು ಹೇಗೆ?
ನೋಟು ರದ್ದತಿ
104 ಉಪಗ್ರಹಗಳನ್ನು ಒಮ್ಮೆಲೇ ಕಕ್ಷೆಗೆ ಹಾರಿಸಿದ್ದು
ಕಪ್ಪು ಹಣ
ಆಧಾರ್ ಕಾರ್ಡ್
ಆಹಾರ ವೈವಿಧ್ಯತೆ
ವಿಶ್ವವಿದ್ಯಾಲಯಗಳಲ್ಲಿ ನಡೆದ ಬೆಳವಣಿಗೆ..
.. ಇವು ಮತ್ತು ಇಂಥ ಹಲವಾರು ವಿಷಯಗಳು ಈ ದೇಶದಲ್ಲಿ ಚರ್ಚೆಗೊಳಗಾದ ವಿಧಾನವನ್ನೊಮ್ಮೆ ಪರಿಶೀಲಿಸಿ. ಎಲ್ಲವೂ ದೇಶಪ್ರೇಮ ಮತ್ತು ರಾಷ್ಟ್ರೀಯ ಭದ್ರತೆಯ ವಿಷಯಗಳಾಗಿ ಮಾರ್ಪಡುವುದನ್ನು ಕಳೆದ ಎರಡೂವರೆ ವರ್ಷಗಳಲ್ಲಿ ಈ ದೇಶ ಕಂಡಿದೆ. ಬಡತನದಿಂದ (ಭೂಕ್ ಮಾರ್‍ಸೇ ಆಝಾದಿ) ಆಝಾದಿ ಎಂಬ ಘೋಷಣೆಯು ಯಾವ ರೀತಿಯಲ್ಲಿ ಚರ್ಚೆಗೊಳಗಾಯಿತು ಎಂಬುದು ನಮಗೆ ಗೊತ್ತು. 60% ಬಡವರಿರುವ ದೇಶವೊಂದರ ಅತಿ ಜನಪ್ರಿಯ ಘೋಷಣೆಯಾಗಿ ಭೂಕ್ ಮಾರ್‍ಸೇ ಆಝಾದಿ ಗುರುತಿಸಬೇಕಿತ್ತು. ದೆಹಲಿಯ ಜವಾಹರ್‍ಲಾಲ್ ನೆಹರೂ ವಿಶ್ವವಿದ್ಯಾಲಯದ ಕ್ಯಾಂಪಸ್‍ನಿಂದ ಮೊಳಗಿದ ಆ ಘೋಷಣೆಯು ಅತ್ಯಂತ ಕ್ರಾಂತಿಕಾರಿ, ಆಕರ್ಷಕ ಮತ್ತು ಜನನುಡಿಯಾಗುವಷ್ಟು ಶಕ್ತಿಯುತವಾದುದು. ಈ ಘೋಷಣೆ ಕೂಗಿದವರಿಗೆ ಭಾರತದ ದುಡಿಯುವ ವರ್ಗದ ಬಗ್ಗೆ ಅರಿವು ಇತ್ತು. ಅಧ್ಯಯನದ ಅಂಕಿ-ಅಂಶಗಳಿದ್ದುವು. ಆದ್ದರಿಂದ, ನೇರಾತಿನೇರ ಆ ಘೋಷಣೆಯನ್ನು ಎದುರಿಸುವುದು ಯಾವುದೇ ಸರಕಾರಕ್ಕೆ ಸುಲಭವಿರಲಿಲ್ಲ. ನರೇಂದ್ರ ಮೋದಿ ಬಳಗದ ಚಾಣಾಕ್ಷತನ ಗೋಚರವಾಗುವುದೇ ಇಲ್ಲಿ. ಅದು ‘ಆಝಾದಿ’ಯನ್ನು ವಿವಾದಾತ್ಮಕಗೊಳಿಸಿತು. ರಾಷ್ಟ್ರೀಯತೆಯನ್ನು ಮುನ್ನೆಲೆಗೆ ತಂದು ನಿಲ್ಲಿಸಿತು. ಭಾರತದಲ್ಲಿ ಬಹುಸಂಖ್ಯಾತರು ಬಡವರಾಗಿದ್ದರೂ ಭಾರತದ ಬಡತನವನ್ನು ಹೇಳುವುದೇ ದೇಶದ್ರೋಹ ಎಂಬ ವಾತಾವರಣ ಸೃಷ್ಟಿಯಾಯಿತು. ಅಂತಿಮವಾಗಿ ನಡೆದz್ದÉೀನೆಂದರೆ, ಆಝಾದಿ ಘೋಷಣೆಯನ್ನು ಕೂಗಿದವರು ದೇಶಪ್ರೇಮಿಗಳೋ ದೇಶದ್ರೋಹಿಗಳೋ ಎಂಬುದು. ದೇಶವಿರೋಧಿ ಘೋಷಣೆಗಳನ್ನು ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ವಿವಿಧ ನಾಯಕರು ಪದೇ ಪದೇ ಹೇಳುತ್ತಲೇ ಹೋದರು. ಹಾಗೆಯೇ, ನೋಟು ರದ್ದತಿಯು ಬಡ ಭಾರತದ ಅತಿದೊಡ್ಡ ಇಶ್ಯೂ ಆಗಬೇಕಿತ್ತು. ನೂರಕ್ಕಿಂತಲೂ ಅಧಿಕ ಮಂದಿ ಬ್ಯಾಂಕಿನೆದುರು ಕ್ಯೂ ನಿಂತು ಸಾವಿಗೀಡಾದರು. ಯಾವುದೇ ಪೂರ್ವ ತಯಾರಿಯಿಲ್ಲದೇ ಮಾಡಲಾದ ಅತ್ಯಂತ ಅಶಿಸ್ತಿತ ಕ್ರಮ ಅದು ಅನ್ನುವುದಕ್ಕೆ ವಿಶೇಷ ಅಧ್ಯಯನವೇನೂ ಬೇಕಾಗಿರಲಿಲ್ಲ. ಆದರೆ ನೋಟು ರದ್ದತಿ ಚರ್ಚೆಯನ್ನು ಮೋದಿಯವರ ಬಳಗವು ರಾಷ್ಟ್ರೀಯತೆಯ ಜೊತೆ ಸೇರಿಸಿ ಬಿಟ್ಟಿತು. ನೋಟು ರದ್ದತಿಗೂ ಭಯೋತ್ಪಾದನೆಗೂ ನಡುವೆ ನಂಟು ಕಲ್ಪಿಸಿತು. ಕಾಶ್ಮೀರದಲ್ಲಿ ಪ್ರತಿಭಟನಾಕಾರರು ಎಸೆಯುತ್ತಿದ್ದ ಕಲ್ಲನ್ನು ನೋಟು ರದ್ದತಿಯ ಜೊತೆ ಜೋಡಿಸಿತು. ನೋಟು ರದ್ದತಿಯನ್ನು ವಿರೋಧಿಸುವವರೆಲ್ಲ ಕಪ್ಪು ಹಣ ಇಟ್ಟುಕೊಂಡವರಂತೆ ಮತ್ತು ದೇಶದ ಅಭಿವೃದ್ಧಿಯ ವಿರೋಧಿಗಳಂತೆ ಚಿತ್ರಿಸಿತು. ಆಧಾರ್ ಕಾರ್ಡ್ ಅನ್ನು ಸಮರ್ಥಿಸಿಕೊಂಡದ್ದೂ ರಾಷ್ಟ್ರೀಯ ಭದ್ರತೆ ಎಂಬ ಗುಮ್ಮವನ್ನು ತೋರಿಸಿಯೇ. ಆಧಾರ್ ಕಾರ್ಡ್ ಅನ್ನು ದೇಶಕ್ಕೆ ಪರಿಚಯಪಡಿಸಿದ್ದು ಕಾಂಗ್ರೆಸ್. ಆಗ ವಿರೋಧ ಪಕ್ಷದಲ್ಲಿದ್ದ ಬಿಜೆಪಿ ಅದನ್ನು ವಿರೋಧಿಸಿತ್ತು. ಬಾಂಗ್ಲಾ ನುಸುಳುಕೋರರಿಗೆ ಮತ್ತು ಉಗ್ರರಿಗೆ ಪೌರತ್ವವನ್ನು ಒದಗಿಸುವ ಯೋಜನೆ ಎಂದು ಅದು ಖಂಡಿಸಿತ್ತು. ಆಗ ನರೇಂದ್ರ ಮೋದಿಯವರು ಗುಜರಾತ್‍ನ ಮುಖ್ಯಮಂತ್ರಿಯಾಗಿದ್ದರು. ಆದರೆ ಅವರು ಯಾವಾಗ ಪ್ರಧಾನ ಮಂತ್ರಿಯಾದರೋ ಅದೇ ಆಧಾರ್ ಕಾರ್ಡ್ ಅನ್ನು ರಾಷ್ಟ್ರೀಯ ಭದ್ರತೆಯ ವಿಷಯವಾಗಿ ಮಾರ್ಪಡಿಸಿದರು. ಪ್ರತಿಯೊಂದಕ್ಕೂ ಆಧಾರ್ ಕಾರ್ಡ್ ಅನ್ನು ಕಡ್ಡಾಯಗೊಳಿಸತೊಡಗಿದರು. ಗುರ್‍ಮೆಹರ್ ಕೌರ್ ಎಂಬ ಹುತಾತ್ಮ ಯೋಧನ ಮಗಳು ಶಾಂತಿಯ ಪರ ಮಾತಾಡಿದಾಗ ಅದನ್ನು ‘ದೇಶದ್ರೋಹಿ’ಯಾಗಿ ಬಿಂಬಿಸಿದ್ದು ಮತ್ತು ಮತ್ತೊಂದು ಸುತ್ತಿನ ದೇಶಪ್ರೇಮಿ ಚರ್ಚೆಯು ಮಾಧ್ಯಮಗಳಲ್ಲಿ ನಡೆಯುವಂತೆ ಮಾಡಿದ್ದು ಇದೇ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯೇ. ಹಾಗಂತ, ಮೋದಿಯವರು ಪ್ರಧಾನಿಯಾಗುವುದಕ್ಕಿಂತ ಮೊದಲು ಬಿಜೆಪಿಯು ದೇಶಪ್ರೇಮದ ಬಗ್ಗೆ ಮಾತಾಡುತ್ತಿರಲಿಲ್ಲ ಎಂದಲ್ಲ. ವಾಜಪೇಯಿಯವರ ಕಾಲದಲ್ಲೂ ಈ ಮಾತಿತ್ತು. ಜನಸಂಘವೂ ಮಾತಾಡಿತ್ತು. ಆದರೆ ವಿಶ್ವವಿದ್ಯಾಲಯದಿಂದ ಸಿನಿಮಾ ಥಿಯೇಟರ್‍ಗಳ ವರೆಗೆ, ಯೋಗದಿಂದ ಆಹಾರದ ವರೆಗೆ ಪ್ರತಿಯೊಂದನ್ನೂ ರಾಷ್ಟ್ರೀಯತೆ ಮತ್ತು ದೇಶಪ್ರೇಮದೊಂದಿಗೆ ಜೋಡಿಸಿ ಚರ್ಚಿಸುವ ವಿಧಾನವನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡದ್ದು ನರೇಂದ್ರ ಮೋದಿಯೇ. ಉತ್ತರ ಪ್ರದೇಶದಲ್ಲಿ ಅವರು ಒಬ್ಬನೇ ಒಬ್ಬ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ. ಇನ್ನೊಂದು ಕಡೆ, ಅದೇ ಉತ್ತರ ಪ್ರದೇಶದ ಚುನಾವಣಾ ರ್ಯಾಲಿಯಲ್ಲಿ ಅಮಿತ್ ಶಾರು ತಮ್ಮ ವಿರೋಧಿಗಳನ್ನು ‘ಕಸಬ್’ಗೆ ಹೋಲಿಸಿದರು. ಕಸಬ್ ಎಂಬುದು ಮುಸ್ಲಿಮ್ ಐಡೆಂಟಿಟಿಯನ್ನು ಸಾರುವ ಹೆಸರು ಮಾತ್ರ ಅಲ್ಲ. ಅದು ವಿದ್ರೋಹಿ ಪದ. ಪಾಕಿಸ್ತಾನಿ ಹಿತಾಸಕ್ತಿಯನ್ನು ಕಾಪಾಡಬಯಸುವ ಪದ. ಫತೇಹ್‍ಪುರ್‍ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ನರೇಂದ್ರ ಮೋದಿಯವರು ಇನ್ನೊಂದು ಹೆಜ್ಜೆ ಮುಂದಿಟ್ಟರು. ಕಬರ್‍ಸ್ಥಾನದಷ್ಟೇ ಸ್ಮಶಾನಕ್ಕೂ ಸೌಲಭ್ಯಗಳು ಲಭ್ಯವಾಗಬೇಕೆಂದು ಆಗ್ರಹಿಸಿದರು. ಈದ್‍ಗೆ ವಿದ್ಯುತ್ ಒದಗಿಸಿದವರು ದೀಪಾವಳಿಗೂ ವಿದ್ಯುತ್ ಒದಗಿಸಬೇಕೆಂದು ಹೇಳಿದರು. ಅಖಿಲೇಶ್ ಸರಕಾರದ ಕನ್ಯಾ ವಿದ್ಯಾ ಧನ್ ಯೋಜನೆಯ ಲಾಭ ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಲಭ್ಯವಾಗುತ್ತಿದೆ ಎಂದು ದೂರಿದರು. 12ನೇ ತರಗತಿಯಲ್ಲಿ ಡಿಸ್ಟಿಂಕ್ಷನ್‍ನಲ್ಲಿ ತೇರ್ಗಡೆಯಾದ ವಿದ್ಯಾರ್ಥಿನಿಯರಿಗೆ ಮುಂದಿನ ಓದಿಗಾಗಿ 30 ಸಾವಿರ ನೆರವು ನೀಡುವ ಯೋಜನೆ ಇದು. ನಿಜವಾಗಿ, ನರೇಂದ್ರ ಮೋದಿಯವರು ನೀಡಿದ ಈ ಮೂರೂ ಹೇಳಿಕೆಗಳೂ ಸುಳ್ಳಾಗಿದ್ದುವು. ಅಖಿಲೇಶ್ ಸರಕಾರ ಅಂಕಿ-ಅಂಶವನ್ನು ಬಿಡುಗಡೆಗೊಳಿಸುವ ಮೂಲಕ ಸತ್ಯ ಹೇಳುವ ಪ್ರಯತ್ನ ನಡೆಸಿತಾದರೂ ಸುಳ್ಳು ಅದಾಗಲೇ ತಲುಪಬೇಕಾದ ಕಡೆಗೆಲ್ಲ ತಲುಪಿತ್ತು. ವಿಚಿತ್ರ ಏನೆಂದರೆ, ಅಂಕಿ-ಅಂಶ ಬಿಡುಗಡೆ ಗೊಂಡ ಬಳಿಕವೂ ಬಿಜೆಪಿಯ ದ್ವಿತೀಯ ಸ್ತರದ ನಾಯಕರು ಈ ಸುಳ್ಳನ್ನು ಇನ್ನಷ್ಟು ಗಟ್ಟಿಯಾಗಿ ಪುನರಾವರ್ತಿಸುತ್ತಿದ್ದುದು. ಅಲ್ಲದೇ ಮುಸ್ಲಿಮರಿಗೆ ಟಿಕೇಟು ಕೊಡದೇ ಇರುವುದನ್ನು ನಿಷ್ಪಕ್ಷಪಾತ ನೀತಿಯಾಗಿಯೂ ಟಿಕೇಟ್ ನೀಡಿದ ಎಸ್ಪಿ ಮತ್ತು ಬಿಎಸ್ಪಿಗಳ ನೀತಿಯನ್ನು ತುಷ್ಠೀಕರಣವಾಗಿಯೂ ಅದು ಪರೋಕ್ಷವಾಗಿ ವ್ಯಾಖ್ಯಾನಿಸಿತು. ತಾನು ಬಹುಸಂಖ್ಯಾತ ಪರ ಎಂಬ ಸಂದೇಶವನ್ನು ಈ ದೇಶಕ್ಕೆ ಮತ್ತೆ ಮತ್ತೆ ನೀಡುವ ಪ್ರಯತ್ನವನ್ನು ನರೇಂದ್ರ ಮೋದಿಯವರ ಅಧಿಕಾರದುದ್ದಕ್ಕೂ ಮಾಡುತ್ತಲೇ ಬರಲಾಗಿದೆ. ದೇವಾಲಯಗಳಿಗೆ ಭೇಟಿ ಕೊಡುವ ಮೋದಿಯವರು ಮಸೀದಿಗಳಿಗೆ ಭೇಟಿ ಕೊಡುತ್ತಿಲ್ಲ. ಉತ್ತರ ಪ್ರದೇಶದಲ್ಲಿ ಕೊನೆಯ ಹಂತದ ಮತದಾನ ನಡೆದ ಮಾರ್ಚ್ 8ರಂದು ಅವರು ಸೋಮನಾಥ ದೇವಾಲಯಕ್ಕೆ ಭೇಟಿ ಕೊಟ್ಟಿದ್ದರು. ಕೆಲವು ರಾಷ್ಟ್ರೀಯ ಟಿ.ವಿ. ಚಾನೆಲ್‍ಗಳು ಅದನ್ನು ನೇರ ಪ್ರಸಾರ ಮಾಡಿತ್ತು. ಅವರು ಬಹುಸಂಖ್ಯಾತರ ಪ್ರತಿನಿಧಿಯಾಗಿ ಗುರುತಿಸಿಕೊಳ್ಳಲು ಬಯಸುತ್ತಾರೆ. ತನ್ನ ದೌರ್ಬಲ್ಯಗಳನ್ನು ಸಾಮಥ್ರ್ಯವೆಂಬಂತೆ ಬಿಂಬಿಸುವ ಕಲೆ ಅವರಿಗೆ ಸಿದ್ಧಿಸಿದೆ. 104 ಕ್ಷಿಪಣಿಗಳನ್ನು ಒಂದೇ ಬಾರಿ ಕಕ್ಷೆಗೆ ಇಸ್ರೋ ಹಾರಿಸಿದುದನ್ನು ಅವರು ಚುನಾವಣೆಯ ಸಂದರ್ಭದಲ್ಲಿ ತನ್ನ ಸಾಧನೆಯಾಗಿ ಬಿಂಬಿಸಿಕೊಂಡರು. ಹಾಗಂತ, ಆ ಸಾಧನೆಯ ಪರಿಶ್ರಮ ಅವರು ಅಧಿಕಾರಕ್ಕೇರಿದ ಬಳಿಕ ಪ್ರಾರಂಭವಾದದ್ದೇ ಎಂದು ಪ್ರಶ್ನಿಸುವಂತಿಲ್ಲ. ಪ್ರಶ್ನಿಸಿದರೆ ಅದು ದೇಶದ್ರೋಹಿ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುತ್ತದೆ. ದೇಶದ ಸಾಧನೆಯನ್ನು ಅನುಭವಿಸಲಾರದ ದೇಶವಿರೋಧಿ ಮನಸಿನವರು ನೀವಾಗುತ್ತೀರಿ. ನಿಜವಾಗಿ, ಇಸ್ರೋದ ಸಾಧನೆಯ ಹಿಂದೆ ದೀರ್ಘ ಪರಿಶ್ರಮದ ಇತಿಹಾಸವಿದೆ. ಅದು ಕಳೆದ ಎರಡೂವರೆ ವರ್ಷಗಳ ಬಳಿಕ ದಿಢೀರ್ ಆಗಿ ಈ ಉಪಗ್ರಹ ಯೋಜನೆಯನ್ನು ಹಾಕಿ ಕೊಂಡಿರುವುದಲ್ಲ. ಆದರೆ, ಉಪಗ್ರಹವನ್ನು ತನ್ನ ಸಾಧನೆಯ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವುದರಿಂದ ರಾಷ್ಟ್ರದ ಬಗ್ಗೆ ಅಪಾರ ಕಾಳಜಿ ಉಳ್ಳ ಪಕ್ಷ  ಎಂಬ ಹೆಗ್ಗಳಿಕೆಯನ್ನು ಬಿಜೆಪಿಗೆ ಪಡಕೊಳ್ಳ ಬಹುದಾಗಿದೆ. ಚುನಾವಣಾ ರ್ಯಾಲಿಯಲ್ಲಿ ಮೋದಿಯವರು ಉಲ್ಲೇಖಿಸಿದ ಜಿಡಿಪಿ ಲೆಕ್ಕಾಚಾರವನ್ನು ಕಾಂಗ್ರೆಸ್ ಪ್ರಶ್ನಿಸಿದಾಗ ಮೋದಿಯವರು ಪ್ರತಿಕ್ರಿಯಿಸಿದ ರೀತಿಯನ್ನೊಮ್ಮೆ ಪರಿಶೀಲಿಸಿ. ಕಾಂಗ್ರೆಸ್ ದೇಶದ ಅಭಿವೃದ್ಧಿಯನ್ನು ಬಯಸುತ್ತಿಲ್ಲ. ನಿಜವಾಗಿ, ಚರ್ಚೆ ಆಗಬೇಕಾಗಿದ್ದುದು ಅಂಕಿ-ಅಂಶ ಕೃತ್ರಿಮವೋ ಅಸಲಿಯೋ ಎಂಬುದಾಗಿ. ನೋಟು ಅಮಾನ್ಯೀಕರಣದಿಂದಾಗಿ ಉಂಟಾದ ಉತ್ಪಾದನಾ ಹಿನ್ನಡೆಯ ಹೊರತಾಗಿಯೂ ಜಿಡಿಪಿಯಲ್ಲಿ ಇಷ್ಟು ಹೆಚ್ಚಳ ಹೇಗೆ ಉಂಟಾಯಿತು ಅನ್ನುವುದು ಕಾಂಗ್ರೆಸ್‍ನ ಪ್ರಶ್ನೆ. ಆದರೆ ಮೋದಿಯವರು ಆ ಪ್ರಶ್ನೆಯನ್ನು ದೇಶದ್ರೋಹಿಯಾಗಿ ಪರಿವರ್ತಿಸಿದರು.
ಖ್ಯಾತ ಪತ್ರಕರ್ತೆ ವಿದ್ಯಾ ಸುಬ್ರಹ್ಮಣ್ಯಮ್  ಅವರು ಕಳೆದ ವಾರ ತನ್ನ ಅನುಭವವನ್ನು ಹೀಗೆ ಹಂಚಿಕೊಂಡಿದ್ದರು- ‘ಅಲಹಾಬಾದ್ ಹೈಕೋರ್ಟ್‍ನಲ್ಲಿ ನಾನು ಸುಮಾರು 30ಕ್ಕಿಂತಲೂ ಅಧಿಕ ವಕೀಲರನ್ನು ಭೇಟಿಯಾದೆ. ಅವರ ಒಲವು ಮೋದಿ ಪರ. ಆದರೆ ಅವರ ಮಾತುಗಳಲ್ಲಿ ತೀವ್ರ ಮುಸ್ಲಿಮ್ ವಿರೋಧಿ ಭಾವವಿತ್ತು. ಸಮಾಜವಾದಿ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಮಹಿಳಾ ನ್ಯಾಯವಾದಿ ಹೇಳಿದರು, ಮುಸ್ಲಿಮರಿಗೆ ಒಂದೇ ಒಂದು ಟಿಕೆಟ್ ಕೊಡದಿರುವ ಬಿಜೆಪಿಯ ನೀತಿ ಶ್ಲಾಘನಾರ್ಹವಾದುದು.’
ಬಾರಬಂಕಿ ಜಿಲ್ಲೆಯ ಸುರಸಂದ ಗ್ರಾಮದ ರಸ್ತೆಬದಿ ವ್ಯಾಪಾರಿ ರಾಜೇಶ್ ಯಾದವ್ ಹೇಳಿದ,
‘ನನ್ನ ಓಟು ಎಸ್ಪಿಗೆ. ಆದರೆ ರಾಮಮಂದಿರ ನನ್ನ ಆದ್ಯತೆ. ನಾವು ಹಿಂದೂಸ್ತಾನದಲ್ಲಿದ್ದೇವೆ. ಪಾಕಿಸ್ತಾನದಲ್ಲಲ್ಲ ಅಥವಾ ಕಬರಿಸ್ತಾನದಲ್ಲಲ್ಲ.’
ನರೇಂದ್ರ ಮೋದಿಯವರ ಮಾತುಗಳು ನುಡಿಗಟ್ಟಾಗುತ್ತಿವೆ ಅನ್ನುವುದಕ್ಕೆ ಆತನ ಕಬರಿಸ್ತಾನ ಮಾತು ಸಾಕ್ಷಿ.
     1977ರಲ್ಲಿ ಇಸ್ರೇಲ್‍ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾದ ಬೆಗಿನ್ ಅವರು ಇದೇ ರೀತಿಯ ತಂತ್ರವನ್ನು ಬಳಸಿದ್ದರು ಎಂದು ಹೇಳಲಾಗುತ್ತದೆ. ಅವರು ಬಲಪಂಥೀಯ ವಿಚಾರಧಾರೆಯವರು. ಲಿಕುಡ್ ಪಕ್ಷಕ್ಕೆ ಅವರು ನಾಯಕರಾಗಿದ್ದರು. ಬಹುಶಃ ನರೇಂದ್ರ ಮೋದಿಯವರು ತನ್ನ ವಿಚಾರಧಾರೆಯನ್ನು ಸಮರ್ಥವಾಗಿ ಸಾರುವಲ್ಲಿ ಮತ್ತು ಭಾರತೀಯರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ ಎಂದು ಹೇಳಬೇಕಾಗುತ್ತದೆ. ಅದಕ್ಕೆ ಸರಿಯಾದ ಪ್ರತಿರೋಧವನ್ನು ಒಡ್ಡುವಲ್ಲಿ ಅಥವಾ ಜನರಿಗೆ ಸಮರ್ಥವಾಗಿ ತಮ್ಮ ವಾದವನ್ನು ಮನವರಿಕೆ ಮಾಡಿಸುವಲ್ಲಿ ವಿರೋಧಿಗಳು ವಿಫಲವಾಗುತ್ತಿರುವಂತೆ ಕಾಣಿಸುತ್ತಿದೆ. ಇದು ಕಠಿಣ ಸವಾಲು. ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಮೊಳಗುವಾಗ ಎದ್ದು ನಿಲ್ಲಬೇಕಾದ ಉನ್ಮತ್ತ ರಾಷ್ಟ್ರೀಯತೆಯೊಂದಿಗೆ ಸೆಣಸುವುದು ಸುಲಭ ಅಲ್ಲ. ನರೇಂದ್ರ ಮೋದಿಯವರು ಈ ಉನ್ನತ್ತ ರಾಷ್ಟ್ರೀಯತೆ ಮತ್ತು ದೇಶಪ್ರೇಮವನ್ನು ದೇಶಕ್ಕೆ ಹಂಚುತ್ತಿದ್ದಾರೆ. ಅದಕ್ಕೆ ಒಂದು ಹಂತದ ವರೆಗೆ ಸ್ವಾಗತವೂ ಲಭ್ಯವಾಗುತ್ತಿದೆ. ಖಾಲಿ ಹೊಟ್ಟೆಯಲ್ಲಿರುವ ಮತ್ತು ಜಾತಿಯ ಹೆಸರಲ್ಲಿ ಅವಮಾನಿತನಾಗುವ ವ್ಯಕ್ತಿಯನ್ನೂ ಕ್ಷಣ ರೋಮಾಂಚಿತ ಗೊಳಿಸುವ ಸಾಮರ್ಥ್ಯ ರಾಷ್ಟ್ರೀಯತೆಗಿದೆ. ಮೋದಿಯವರ ಅಧಿಕಾರಾವಧಿಯಲ್ಲೇ ಅತ್ಯಂತ ಹೆಚ್ಚು ದಲಿತ ದೌರ್ಜನ್ಯ ಪ್ರಕರಣಗಳು ನಡೆದಿದ್ದರೂ ಮತ್ತು ಉನಾ ಘಟನೆ ರಾಷ್ಟ್ರವ್ಯಾಪಿ ಚರ್ಚೆಗೆ ವೇದಿಕೆ ಒದಗಿಸಿದ್ದರೂ ಉತ್ತರ ಪ್ರದೇಶದ ದಲಿತರು ಬಿಜೆಪಿಗೆ ಮತ ಚಲಾಯಿಸಿದರೆಂಬುದು ಏನನ್ನು ಸೂಚಿಸುತ್ತದೆ? ಅವರನ್ನು ಪ್ರಭಾವಿತಗೊಳಿಸಿದ ವಿಚಾರ ಯಾವುದು?
      ವಿಶ್ಲೇಷಣೆ ನಡೆಯಲಿ.

Saturday, March 18, 2017

ಗೋಡ್ಸೆಯ ಬಂದೂಕಿನಿಂದ ಮಂಜೇರ್‍ನ ಪಿಸ್ತೂಲ್‍ವರೆಗೆ..

       1. ಗುಂಡೇಟು ತಗುಲಿ ಕುಸಿದು ಬಿದ್ದ ಮಹಾತ್ಮಾ ಗಾಂಧಿಯವರನ್ನು ಪಕ್ಕದ ಆಸ್ಪತ್ರೆಗೆ ಕೊಂಡೊಯ್ಯದೇ ಇದ್ದುದು ಯಾಕಾಗಿ?
      2. ನಾಥೂರಾಂ ಗೋಡ್ಸೆಯನ್ನು ಹಿಡಿದ ಅಮೇರಿಕನ್ ರಾಯಭಾರ ಕಚೇರಿಯ ಉದ್ಯೋಗಿ ಟೋ ರೈನರ್ ನನ್ನು ಮತ್ತು ಗೋಡ್ಸೆಯಿಂದ ಬಂದೂಕನ್ನು ಕಿತ್ತುಕೊಂಡ ಭಾರತೀಯ ವೈಮಾನಿಕ ದಳದ ಉದ್ಯೋಗಿ ಡಿ.ಆರ್. ಸಿಂಗ್‍ರನ್ನು ವಿಚಾರಣೆಗೆ ಒಳಗಪಡಿಸದೇ ಇರಲು ಕಾರಣವೇನು?
      3. 1948 ಜನವರಿ 20ರಂದು ಬಿರ್ಲಾ ಮಂದಿರದಲ್ಲಿ ಗಾಂಧೀಜಿಯವರ ವಿರುದ್ಧ ಹತ್ಯಾ ಯತ್ನ ನಡೆದ ಬಳಿಕವೂ ಅವರಿಗೆ ಗರಿಷ್ಠ ಭದ್ರತಾ ವ್ಯವಸ್ಥೆಯನ್ನು ಮಾಡದಿರುವುದಕ್ಕೆ ಬೇರೇನಾದರೂ ಕಾರಣಗಳಿವೆಯೇ? ಹಾಗಂತ, ಅದು ಪ್ರಥಮ ಹತ್ಯಾ ಯತ್ನ ಆಗಿರಲಿಲ್ಲ. 1934 ಜೂನ್ 25ರಂದು, 1944 ಜುಲೈ ಮತ್ತು ಸೆಪ್ಟೆಂಬರ್‍ನಲ್ಲೂ ಹತ್ಯಾಯತ್ನ ನಡೆದಿತ್ತು. ಇಷ್ಟಿದ್ದೂ, ಭದ್ರತೆಯ ವಿಷಯದಲ್ಲಿ ಈ ಮಟ್ಟಿನ ನಿರ್ಲಕ್ಷ್ಯಕ್ಕೆ ಕಾರಣವೇನು?
      4. ನಾಥೂರಾಂ ಗೋಡ್ಸೆ ಬಳಸಿದ ಬಂದೂಕಿನ ಬಗ್ಗೆ ಯಾವ ವಿಚಾರಣೆಯೂ ನಡೆದಿಲ್ಲವೇಕೆ? ಅದರ ಒಡೆಯ ಯಾರೆಂಬ ಬಗ್ಗೆ ತನಿಖೆ ನಡೆದಿಲ್ಲವೇಕೆ? 1948 ಜನವರಿ 28ರಂದು ನಾಥೂರಾಂ ಗೋಡ್ಸೆ ಮಧ್ಯಪ್ರದೇಶದ ಗ್ವಾಲಿಯರ್‍ಗೆ ತಲುಪುತ್ತಾನೆ. ಅಲ್ಲಿ ಅವನಿಗೆ ಗಂಗಾಧರ್ ದಂಡವತೆ ಎಂಬವರು ಈ ಬಂದೂಕನ್ನು ನೀಡಿದ್ದಾರೆ ಅನ್ನುವುದು ಸ್ಪಷ್ಟವಾಗಿದೆ. ಅಲ್ಲದೇ, ಆ ಬಂದೂಕಿನ ನೈಜ ಒಡೆಯ ತಾನಲ್ಲವೆಂದು ಅವರು ಹೇಳಿದ್ದಾರೆ. ಅದನ್ನು ಜಗದೀಶ್ ಚಂದ್ರ ಗೋಯಲ್‍ನಿಂದ ತಾನು ಪಡೆದಿರುವುದಾಗಿ ದಂಡವತೆ ಹೇಳಿದ್ದಾರೆ. ಇದನ್ನು ಗೋಯಲ್ ಕೂಡ ಒಪ್ಪಿಕೊಂಡಿದ್ದಾರೆ. ಆದರೆ ಆ ಬಂದೂಕಿಗೆ ಇಷ್ಟು ಸಣ್ಣ ಇತಿಹಾಸ ಮಾತ್ರ ಇರುವುದಲ್ಲ. ಗೋಡ್ಸೆಯ ಕೈಗೆ ಆ ಬಂದೂಕು ತಲುಪುವ ಮೊದಲು ಹಲವರ ಕೈ ಬದಲಾಗಿದೆ. ಅದು ಇಟಲಿಯಲ್ಲಿ ತಯಾರಾದ ಬಂದೂಕು. ಆದ್ದರಿಂದಲೇ ಅಂದಿನ ಕಾಲದಲ್ಲಿ ತುಂಬಾ ದುಬಾರಿಯೂ ಆಗಿತ್ತು. ಸಾಮಾನ್ಯ ವ್ಯಕ್ತಿಯೋರ್ವ ಅದನ್ನು ಖರೀದಿಸುವುದು ಸಾಧ್ಯವಿರಲಿಲ್ಲ. ಗ್ವಾಲಿಯರ್‍ನ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ದಂಡವತೆಯವರ ಪುತ್ರ ಚಂದ್ರಶೇಖರ್ ಅವರು ಆ ಬಂದೂಕಿನ ಬಗ್ಗೆ 2012ರಲ್ಲಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಜೊತೆ ಹೀಗೆ ಹೇಳಿಕೊಂಡಿದ್ದರು,
      ‘ಆ ಬಂದೂಕಿನ ಮೂಲದ ರಹಸ್ಯವನ್ನು ಹಲವು ವರ್ಷಗಳಿಂದ ಕಾಪಿಟ್ಟುಕೊಂಡು ಬರಲಾಗಿದೆ. ಅದನ್ನು ಇವತ್ತು ಬಹಿರಂಗಪಡಿಸಿದರೆ ದೊಡ್ಡ ರಾಷ್ಟ್ರೀಯ ಭೂಕಂಪವೇ ಉಂಟಾದೀತು. ಈ ವಯಸ್ಸಿನಲ್ಲಿ (58) ಬೆದರಿಕೆ, ಆರೋಪಗಳನ್ನು ಎದುರಿಸುತ್ತಾ ಬದುಕುವುದು ನನ್ನಿಂದ ಸಾಧ್ಯವಿಲ್ಲ..’
    ಗಾಂಧೀಜಿಯವರ ಹತ್ಯೆಯ ಅಪರಾಧಕ್ಕಾಗಿ 1949 ಫೆಬ್ರವರಿ 10ರಂದು ನಾಥೂರಾಂ ಗೋಡ್ಸೆ ಮತ್ತು ನಾರಾಯಣ ಆಪ್ಟೆಗೆ ನ್ಯಾಯಾಲಯ ಗಲ್ಲು ಶಿಕ್ಷೆಯನ್ನು ವಿಧಿಸುತ್ತದೆ. ಗೋಪಾಲ್ ಗೋಡ್ಸೆ, ವಿಷ್ಣು ಕರ್ಕರೆ, ಮದನ್ ಲಾಲ್ ಪಹ್‍ವ, ಶಂಕರ್ ಕಿಸ್ತಯ್ಯ, ದತ್ತಾತ್ರೇಯ ಪರ್ಚರೆಗೆ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ಘೋಷಿಸುತ್ತದೆ. ವಿ.ಡಿ. ಸಾವರ್ಕರ್‍ರನ್ನು ದೋಷಮುಕ್ತ ಗೊಳಿಸುತ್ತದೆ. ದಿಗಂಬರ್ ರಾಮಚಂದ್ರ ಬಾಡ್ಜೆ ಮಾಫಿ ಸಾಕ್ಷಿಯಾಗಿ ಬದಲಾದುದರಿಂದ ಆತನೂ ಹೊರ ಬರುತ್ತಾನೆ. 1949 ನವೆಂಬರ್ 15ರಂದು ಅಂಬಾಲ ಜೈಲಿನಲ್ಲಿ ನಾಥೂರಾಂ ಗೋಡ್ಸೆಯನ್ನು ಗಲ್ಲಿಗೇರಿಸಲಾಗುತ್ತದೆ. ನೇಣುಗಂಭದ ಕಡೆಗೆ ಸಾಗುವಾಗ ಆತ ಅಖಂಡ್ ಭಾರತ್ ಎಂದು ಕೂಗಿಕೊಳ್ಳುತ್ತಾನೆ. ನೇಣುಗಂಭಕ್ಕೇರುವಾಗ, ‘ನಮಸ್ತೆ ಸದಾ ವತ್ಸಲೆ, ಮಾತೃಭೂಮೆ.. ಭಾರತ್ ಮಾತಾಕಿ ಜೈ’ ಎಂದು ಘೋಷಿಸುತ್ತಾನೆ. ಹೀಗೆ ಈ ಅಪರಾಧಿಗಳಲ್ಲಿ ಓರ್ವನಾದ ಗೋಪಾಲ್ ಗೋಡ್ಸೆಯ ಮಗಳು ಹಿಮಾನಿ ಸಾವರ್ಕರ್ ಟೈಮ್ಸ್ ಆಫ್ ಇಂಡಿಯಾದೊಂದಿಗೆ 2012 ಅಕ್ಟೋಬರ್ 2ರಂದು ಹೀಗೆ ಹೇಳಿಕೊಂಡಿದ್ದರು -
     ‘ಬಂದೂಕಿನ ನಿಜ ಒಡೆಯ ಯಾರೆಂದು ತಂದೆಯವರೊಂದಿಗೆ ಹಲವು ಬಾರಿ ಪ್ರಶ್ನಿಸಿದ್ದೇನೆ. ಆದರೆ ಮೌನವೇ ಅವರ ಉತ್ತರವಾಗಿತ್ತು’ (Mystery  shrouds ownership of pistol that killed Baapu, P. Naveen Oct. 2, 2012). ಇವೆಲ್ಲ ಏನನ್ನು ಸೂಚಿಸುತ್ತದೆ? ಯಾಕೆ ಈ ಬಂದೂಕಿನ ಬಗ್ಗೆ ಇಷ್ಟು ರಹಸ್ಯವನ್ನು ಈವರೆಗೂ ಕಾಪಿಟ್ಟುಕೊಳ್ಳಲಾಗಿದೆ? ಗಾಂಧೀಜಿಯವರ ಹತ್ಯೆಯಾಗುವುದಕ್ಕಿಂತ ಒಂದು ದಿನ ಮೊದಲು ನಾಗಪುರದ ಪ್ರೊಫೆಸರ್ ಒಬ್ಬರು ತಮ್ಮ ವಿದ್ಯಾರ್ಥಿಗಳೊಂದಿಗೆ ಈ ಹತ್ಯೆಯ ಬಗ್ಗೆ ಮುಂಚಿತವಾಗಿ ತಿಳಿಸಿದ್ದರು ಎಂದು 1948 ಫೆಬ್ರವರಿ 7ರ ಇಂಡಿಯನ್ ಎಕ್ಸ್ ಪ್ರೆಸ್‍ನಲ್ಲಿ ಸುದ್ದಿ ಪ್ರಕಟವಾಗಿತ್ತು. ಹತ್ಯೆಯ ಬಳಿಕ ನಾಗಪುರದ ಸಿಟಿ ಕಾಲೇಜಿನ ಪ್ರೊ. ವರಹದ್ ಪಾಂಡೆಯವರನ್ನು ಬಂಧಿಸಲಾಗಿರುವುದು ಇದನ್ನು ಪುಷ್ಠೀಕರಿಸುತ್ತದೆ. ಅಷ್ಟಕ್ಕೂ,
      ಇವೆಲ್ಲವನ್ನೂ ಇಲ್ಲಿ ಹಂಚಿಕೊಳ್ಳುವುದಕ್ಕೆ ಒಂದು ಕಾರಣವಿದೆ.
       ಮಾರ್ಚ್ 8ರಂದು ಉತ್ತರ ಪ್ರದೇಶದಲ್ಲಿ ಕೊನೆಯ ಹಂತದ ಮತದಾನ ನಡೆಯುತ್ತಿತ್ತು. ದೇಶದ ಪ್ರಮುಖ ಟಿ.ವಿ. ಚಾನೆಲ್‍ಗಳು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ನೇರಪ್ರಸಾರದಲ್ಲಿ ಬ್ಯುಸಿಯಾಗಿದ್ದುವು. ಮಾರ್ಚ್ 7ರಂದು ಭೋಪಾಲ್-ಉಜ್ಜೈನ್‍ನ ನಡುವೆ ಸಂಚರಿಸುವ ಪ್ರಯಾಣಿಕರ ರೈಲಿನಲ್ಲಿ ಸಣ್ಣ ಪ್ರಮಾಣದ ಸ್ಫೋಟ ಸಂಭವಿಸಿತು. ಆರಂಭದಲ್ಲಿ ಅದು ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದ ಆದ ಸ್ಫೋಟ ಎಂದು ನಂಬಲಾಯಿತು. 8 ಮಂದಿ ಗಾಯಗೊಂಡರು. ಆರಂಭದಲ್ಲಿ ಸಾಮಾನ್ಯ ಘಟನೆಯಾಗಿ ಗುರುತಿಗೀಡಾದ ಸ್ಫೋಟವು ಕೆಲವೇ ಗಂಟೆಗಳಲ್ಲಿ ಭಯೋತ್ಪಾದಕ ದಾಳಿಯಾಗಿ ಬದಲಾಯಿತು. ಮಾರ್ಚ್ 8ರ ಮುಂಜಾನೆ ರಾಷ್ಟ್ರೀಯ ಟಿ.ವಿ. ಚಾನೆಲ್‍ಗಳು ಪ್ರಕರಣವನ್ನು ಎತ್ತಿಕೊಂಡವು. ಆರಂಭದಲ್ಲಿ ಅವು ಕೊಟ್ಟ ಶೀರ್ಷಿಕೆಗಳು ಬಹುತೇಕ ಈ ಮಟ್ಟದಲ್ಲಿತ್ತು-
1. ಭಾರತದಲ್ಲಿ ಮೊಟ್ಟ ಮೊದಲ ಐಸಿಸ್ ದಾಳಿ..
2. ಉಜ್ಜೈನ್ ಸ್ಫೋಟದ ಮೂಲವನ್ನು ಲಕ್ನೋದಲ್ಲಿ ಪತ್ತೆ ಹಚ್ಚಲಾಗಿದೆ..
3. ಸಿರಿಯಾಕ್ಕೆ ಸ್ಫೋಟದ ಚಿತ್ರವನ್ನು ರವಾನಿಸಿದ ದಾಳಿಕೋರರು..
       ಬಳಿಕ ಲಕ್ನೋದ ಥಾಕೂರ್‍ಗಂಜ್‍ಗೆ ದೃಶ್ಯಮಾಧ್ಯಮಗಳ ಕ್ಯಾಮರಾಗಳು ತಿರುಗಿದುವು. ಅಲ್ಲಿ ಶಂಕಿತ ಭಯೋತ್ಪಾದಕರ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯ ನೇರಪ್ರಸಾರವನ್ನು ಮಾಡತೊಡಗಿದುವು. ನಡುನಡುವೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಗುಜರಾತ್‍ನ ಸೋಮನಾಥ ದೇವಾಲಯಕ್ಕೆ ಭೇಟಿ ನೀಡುತ್ತಿರುವುದನ್ನು ತೋರಿಸತೊಡಗಿದುವು. ಹಾಗಂತ, ಶಂಕಿತ ಭಯೋತ್ಪಾದಕರಿಗೂ ಐಸಿಸ್‍ಗೂ ನಡುವೆ ಸಂಬಂಧ ಇದೆ ಎಂದು ಕೇಂದ್ರದ ಗೃಹ ಇಲಾಖೆಯಾಗಲಿ ಅಥವಾ ಉತ್ತರ ಪ್ರದೇಶದ ಪೊಲೀಸರಾಗಲಿ ಏನನ್ನೂ ಹೇಳಿರಲಿಲ್ಲ. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ರಾಜ್ಯ ಗೃಹ ಸಚಿವ ಭೂಪೇಂದ್ರ ಸಿಂಗ್‍ರ ಹೇಳಿಕೆಯ ಹೊರತು ಐಸಿಸ್ ಭೂತಕ್ಕೆ ಇನ್ನಾವ ಪುರಾವೆಯೂ ಇರಲಿಲ್ಲ. ಆದರೆ ಚಾನೆಲ್‍ಗಳು ವಿವಿಧ ತಜ್ಞರನ್ನು ಕೂರಿಸಿ ದಿನವಿಡೀ ಚರ್ಚಿಸಿದುವು. ಐಸಿಸ್‍ನ ಮುಂದಿನ ಕಾರ್ಯಾಚರಣೆ, ಅದು ಯುವಕರನ್ನು ತೆಕ್ಕೆಗೆ ಹಾಕಿಕೊಳ್ಳುವ ವಿಧಾನ, ಭಾರತದಲ್ಲಿ ಅದರ ಪ್ರಭಾವ, ಅದನ್ನು ಎದುರಿಸುವ ಬಗೆ.. ಎಲ್ಲವನ್ನೂ ಅತ್ಯಂತ ಅದ್ಭುತವಾಗಿ ಅವು ಕಟ್ಟಿಕೊಟ್ಟವು. ವಿಶೇಷ ಏನೆಂದರೆ, ಯಾವ ತಜ್ಞರೂ ಸುದ್ದಿಯ ಮೂಲವನ್ನು ಪ್ರಶ್ನಿಸಲಿಲ್ಲ. ಸುದ್ದಿಯ ಅಧಿಕೃತತೆಯ ಬಗ್ಗೆ ಸ್ಪಷ್ಟೀಕರಣ ಕೋರ ಲಿಲ್ಲ. ಆರಂಭದಲ್ಲಿ ಉತ್ತರ ಪ್ರದೇಶದ ಸ್ಥಳೀಯ ಚಾನೆಲ್ ಒಂದು ಸೈಫುಲ್ಲಾ ಮತ್ತು ಇನ್ನಿಬ್ಬರ ವಿರುದ್ಧದ ಕಾರ್ಯಾಚರಣೆಯ ನೇರ ಪ್ರಸಾರದಲ್ಲಿ ತೊಡಗಿತು. ಬಳಿಕ ರಾಷ್ಟ್ರೀಯ ದೃಶ್ಯ ಮಾಧ್ಯಮಗಳು ಪ್ರವೇಶಿಸಿದುವು. ಪಠಾಣ್‍ಕೋಟ್‍ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನೇರ ಪ್ರಸಾರ ಮಾಡಿದ ಆರೋಪದಲ್ಲಿ ಇತ್ತೀಚೆಗೆ ಓಆಖಿಗಿಯ ಮೇಲೆ ಕೇಂದ್ರ ಸರಕಾರ ನಿಷೇಧ ಹೇರಹೊರಟ ಘಟನೆ ಇನ್ನೂ ಹಸಿಯಾಗಿರುವಾಗಲೇ ಈ ನೇರ ಪ್ರಸಾರ ನಡೆಯಿತೆಂಬುದು ಇನ್ನೊಂದು ಸೋಜಿಗ. 26/11ರಂದು ಮುಂಬೈಯ ತಾಜ್ ಹೊಟೇಲ್‍ನ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ರಾಷ್ಟ್ರೀಯ ದೃಶ್ಯ ಮಾಧ್ಯಮಗಳು ನೇರ ಪ್ರಸಾರ ಮಾಡಿದ್ದುವು. ಆ ಬಗ್ಗೆ ಪರ-ವಿರುದ್ಧ ಚರ್ಚೆಗಳಾಗಿದ್ದುವು. ಇವುಗಳ ಪರಾಮರ್ಶೆಗೆ ಉನ್ನತ ಮಟ್ಟದ ತಜ್ಞರ ಸಮಿತಿಯನ್ನೂ ರಚಿಸಲಾಗಿತ್ತು. ಆ ನೇರ ಪ್ರಸಾರದಿಂದಾಗಿ ಕಾರ್ಯಾಚರಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ ಎಂದು ಸಮಿತಿ ಅಭಿಪ್ರಾಯ ಪಟ್ಟಿತು. ಇಷ್ಟಿದ್ದೂ, ಮಾರ್ಚ್ 8ರ ನೇರ ಪ್ರಸಾರ ಯಾಕೆ ಚರ್ಚೆಗೊಳಗಾಗಲಿಲ್ಲ? ಕೇಂದ್ರ ಸರಕಾರ ಈ ಬಗ್ಗೆ ಯಾವ ಆಕ್ಷೇಪವನ್ನೂ ವ್ಯಕ್ತಪಡಿಸಿಲ್ಲವೇಕೆ? ಅದೇ ದಿನ ಅಜ್ಮೀರ್ ಸ್ಫೋಟ ಪ್ರಕರಣದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯು ತೀರ್ಪು ನೀಡಿತು. ಸುನೀಲ್ ಜೋಶಿ, ದೇವೇಂದ್ರ ಗುಪ್ತ ಸಹಿತ ಮೂವರಿಗೆ ಜೀವಾವಧಿ ಶಿಕ್ಷೆಯಾಯಿತು. ಮ್ಯಾಜಿಸ್ಟ್ರೇಟರ್ ಮುಂದೆ ತಪ್ಪೊಪ್ಪಿಕೊಂಡಿದ್ದ ಅಸೀಮಾನಂದ ಆರೋಪ ಮುಕ್ತರಾದರು. ಭಯೋತ್ಪಾದನಾ ಕೃತ್ಯಗಳನ್ನು ನಡೆಸುವವರು ಯಾವುದಾದರೂ ನಿರ್ದಿಷ್ಟ ಸಮುದಾಯಕ್ಕೆ ಸೇರಬೇಕೆಂದಿಲ್ಲ ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ಸಾರಿದ ಸಂದರ್ಭ ಇದು. ಆದರೆ ಲೈವ್ ಕವರೇಜ್‍ನಲ್ಲಿ ನಿರತವಾಗಿದ್ದ ದೃಶ್ಯ ಮಾಧ್ಯಮಗಳು ಈ ತೀರ್ಪಿನಲ್ಲಿ ಯಾವ ಪ್ರಾಮುಖ್ಯತೆಯನ್ನೂ ಕಾಣಲಿಲ್ಲ. ಸಂಜೆಯ ವೇಳೆಗೆ ಸೈಫುಲ್ಲಾನ ಹತ್ಯೆಯ ಸುದ್ದಿಯನ್ನೂ ಆತನಿಂದ ಬಿಹಾರದ ಮಂಜೇರ್‍ನಲ್ಲಿ ತಯಾರಿಸಲಾದ ಪಿಸ್ತೂಲು ವಶಪಡಿಸಲಾಗಿರುವುದನ್ನೂ ಚಾನೆಲ್‍ಗಳು ಘೋಷಿಸಿದುವು. ಮತದಾನ ಮುಗಿದ ಬಳಿಕ ಗೃಹ ಸಚಿವ ರಾಜನಾಥ್ ಸಿಂಗ್‍ರಿಂದ ಸ್ಪಷ್ಟನೆ ಹೊರಬಿತ್ತು. ಶಂಕಿತ ಭಯೋತ್ಪಾದಕ ಸೈಫುಲ್ಲಾನಿಗೆ ಐಸಿಸ್‍ನೊಂದಿಗೆ ಸಂಬಂಧ ಇರುವ ಬಗ್ಗೆ ಅವರು ಏನನ್ನೂ ಹೇಳಲಿಲ್ಲ. ಮಗನ ಶವವನ್ನು ಪಡೆಯಲಾರೆ ಎಂದ ಸೈಫುಲ್ಲಾನ ತಂದೆಯನ್ನು ಅವರು ಹೊಗಳಿದರು. ಅಲ್ಲಿಗೆ ನೇರ ಪ್ರಸಾರ ಕೊನೆಗೊಂಡಿತು. ನಿಜವಾಗಿ, ಅನುಮಾನ ಆರಂಭವಾಗುವುದೇ ಅಲ್ಲಿಂದ. ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ನೇರ ಪ್ರಸಾರವಾಗಲು ಕಾರಣವೇನು? ಇದೇ ಕಾರಣಕ್ಕಾಗಿ NDTVಯ ಮೇಲೆ ನಿಷೇಧ ಹೇರಲು ಕೇಂದ್ರ ಸರಕಾರ ಹೊರಟ ಬಳಿಕವೂ ಚಾನೆಲ್‍ಗಳು ಮತ್ತದೇ ಧೈರ್ಯವನ್ನು ಹೇಗೆ ಪ್ರದರ್ಶಿಸಿದವು? ಕೇಂದ್ರ ಗೃಹ ಇಲಾಖೆ ಯಾಕೆ ಮಧ್ಯ ಪ್ರವೇಶ ಮಾಡಲಿಲ್ಲ? ಮತದಾನದ ದಿನ ದಿಢೀರ್ ಆಗಿ ದೃಶ್ಯ ಮಾಧ್ಯಮಗಳು ಜಿದ್ದಿಗೆ ಬಿದ್ದಂತೆ ನೇರ ಪ್ರಸಾರದಲ್ಲಿ ತೊಡಗಿರುವುದಕ್ಕೆ ಬೇರೇನಾದರೂ ಉದ್ದೇಶವಿದೆಯೇ ಅಥವಾ ಅದು ಸಹಜವೇ ಅಥವಾ ಅವು ಸಂಚಿಗೆ ಬಲಿಯಾದುವೇ? ಬಿಜೆಪಿಯ ಪರ ಮತದಾರರನ್ನು ಭಾವನಾತ್ಮಕವಾಗಿ ಸೆಳೆಯುವ ತಂತ್ರವು ಇದರ ಹಿಂದಿರಬಹುದೇ? ನಡುನಡುವೆ ಮೋದಿ ಮತ್ತು ಅಮಿತ್ ಶಾರ ಸೋಮನಾಥ ದೇವಾಲಯ ಭೇಟಿಯ ದೃಶ್ಯಗಳು ಪ್ರಸಾರವಾದುದು ಈ ತಂತ್ರದ ಭಾಗವೇ?
        ಗಾಂಧೀಜಿಯವರ ಹತ್ಯೆಯ ಸುತ್ತ ರಹಸ್ಯಗಳು ಇನ್ನೂ ಉಳಿದುಕೊಂಡಿರುವಂತೆಯೇ ಇಲ್ಲಿ ನಡೆಯುವ ಸ್ಫೋಟಗಳು, ಬಂಧನಗಳು ಮತ್ತು ಮಾಧ್ಯಮ ನಿಲುವುಗಳು ಮತ್ತೆ ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಾ ಹೋಗುತ್ತಿರುವುದೇಕೆ? ನಿಜ ಏನು?Saturday, March 11, 2017

ಭಿತ್ತಿಚಿತ್ರದಿಂದ ಬೆತ್ತಲಾದವರು..

      ಕೇರಳದ ನಟಿಯ ಮೇಲೆ ನಡೆದ ಲೈಂಗಿಕ ಹಲ್ಲೆ ಮತ್ತು ದೆಹಲಿಯ ಲೇಡಿ ಶ್ರೀರಾಮ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿನಿಯಾಗಿರುವ ಗುರ್‍ಮೆಹರ್ ಕೌರ್‍ರಿಗೆ ಒಡ್ಡಲಾದ ಅತ್ಯಾಚಾರ ಮತ್ತು ಹಲ್ಲೆಯ ಬೆದರಿಕೆಯು ಕೆಲವು ಬಹುಮುಖ್ಯ ಪ್ರಶ್ನೆಗಳನ್ನು ಹುಟ್ಟು ಹಾಕಿವೆ.
    ಹೆಣ್ಣನ್ನು ನಿಯಂತ್ರಿಸುವುದಕ್ಕೆ ಅತ್ಯಾಚಾರ ಮತ್ತು ದೈಹಿಕ ಹಲ್ಲೆಯು ಅತ್ಯಂತ ಪರಿಣಾಮಕಾರಿ ಆಯುಧ ಎಂಬ ಪುರಾತನ ನಂಬಿಕೆಯು ಭಾರತದಲ್ಲಿ ಜನಪ್ರಿಯಗೊಳ್ಳುತ್ತಿದೆಯೇ? ದೇಶಪ್ರೇಮ ಮತ್ತು ಭಾರತೀಯ ಸಂಸ್ಕೃತಿಯ ರಕ್ಪಕರಾಗಿ ಗುರುತಿಸಿಕೊಳ್ಳಲು ಉತ್ಸುಕರಾಗಿರುವ ವರ್ಗವೊಂದರಲ್ಲಿ ಈ ನಂಬಿಕೆಯು ವಿಪರೀತವಾಗಿ ಪ್ರಭಾವ ಬೀರುತ್ತಿದೆಯೇ? ಹೆಣ್ಣಿನ ಧ್ವನಿಯನ್ನು ಈ ಗುಂಪು ದ್ವಿತೀಯ ದರ್ಜೆಯವು ಎಂದು ಪರಿಗಣಿಸುತ್ತಿದೆಯೇ? ಆಕೆಯ ಧ್ವನಿಗೆ ತಾರ್ಕಿಕ ಉತ್ತರ ನೀಡುವ ಬದಲು ಅಪಹಾಸ್ಯ, ಮರುಕ, ನಿಂದನೆ, ಅತಿ ಕೆಟ್ಟ ಹೋಲಿಕೆಗಳನ್ನು ಈ ವರ್ಗ ಬಳಸುತ್ತಿರುವುದರ ಉದ್ದೇಶ ಏನು? ಅದು ರವಾನಿಸುವ ಸಂದೇಶ ಏನು? ‘ಬೌದ್ಧಿಕ ವಾಗಿ ನೀನಿನ್ನೂ ಪುರುಷರಿಗೆ ಸರಿಸಮಾನವಾಗಿಲ್ಲ’ ಎಂಬುದನ್ನೇ? ‘ಗುರ್‍ಮೆಹರ್ ಕೌರ್‍ಳ ದಾರಿಗೆಡಿಸಿದವರು ಯಾರು’ ಎಂದು ಕೇಂದ್ರ ಸಚಿವ ಕಿರುಣ್ ರಿಜಿಜು ಕೇಳಿರುವುದು ಏನನ್ನು ಸೂಚಿಸುತ್ತದೆ? ‘ಯಾರೋ ಹೇಳುವಂತೆ ಕೇಳುವವಳು, ಸ್ವತಃ ತೀರ್ಮಾನ ಕೈಗೊಳ್ಳುವ ಸಾಮರ್ಥ್ಯ ಇಲ್ಲದವಳು..’ ಎಂಬುದನ್ನೇ ಅಲ್ಲವೇ? ಕೌರ್‍ಳಿಗೆ ಅತ್ಯಾಚಾರ ಬೆದರಿಕೆಯನ್ನು ಹಾಕಿದವರು ದಾರಿಹೋಕರಲ್ಲ ಅಥವಾ ಅಶಿಕ್ಷಿತರಲ್ಲ. ‘ಪಾಕ್ ನರಕವಲ್ಲ’ ಎಂದು ಹೇಳಿದ ಮಾಜಿ ಸಂಸದೆ ರಮ್ಯರನ್ನು ಅತ್ಯಂತ ಅಶ್ಲೀಲ ಭಾಷೆಯಲ್ಲಿ ನಿಂದಿಸಿದವರೂ ನಾಗರಿಕ ಭಾಷೆಯನ್ನು ತಿಳಿಯದವರಲ್ಲ. ಸಾಮಾಜಿಕ ಹೋರಾಟಗಾರ್ತಿ ಪ್ರಭಾ ಬೆಳವಂಗಲ ಅವರು ಫೇಸ್‍ಬುಕ್‍ನಲ್ಲಿ ಹಂಚಿಕೊಂಡ ಬರಹವೊಂದನ್ನು ಆಕ್ಷೇಪಿಸಿ ‘ಅವರ ಜುಟ್ಟು ಹಿಡಿದು ಅತ್ಯಾಚಾರ ನಡೆಸಬೇಕು’ ಎಂದು ಪ್ರತಿಕ್ರಿಯಿಸಿದ ವಿ.ಆರ್. ಭಟ್ ಎಂಬವನೂ ತಿಳುವಳಿಕೆ ಇಲ್ಲದವನಲ್ಲ. ಹೋರಾಟಗಾರ್ತಿ ವಿದ್ಯಾ ದಿನಕರ್ ಅವರ ವಿರುದ್ಧ ಇಂಥದ್ದೇ ಕೀಳು ದರ್ಜೆಯ ಮಾತುಗಳನ್ನಾಡಿದವರೂ ಇದೇ ಸಾಲಿನಲ್ಲಿ ಸೇರಿದವರು. ಹಾಗಂತ, ತನ್ನ ಭಿತ್ತಿಚಿತ್ರದಲ್ಲಿ ಗುರ್‍ಮೆಹರ್ ಕೌರ್ ಅಶ್ಲೀಲ ಭಾಷೆಯನ್ನೇನೂ ಪ್ರಯೋಗಿಸಿಲ್ಲ. ದೆಹಲಿಯ ರಾಮಜಸ್ ಕಾಲೇಜಿನಲ್ಲಿ ನಡೆದ ಬೆಳವಣಿಗೆಗಳು ಆಕೆಯನ್ನು ಆತಂಕಕ್ಕೆ ತಳ್ಳಿದುವು. ದೆಹಲಿ ವಿಶ್ವವಿದ್ಯಾಲಯದ ವ್ಯಾಪ್ತಿಗೊಳಪಟ್ಟ ಕಾಲೇಜು ಎಂಬ ನೆಲೆಯಲ್ಲಿ ಅಥವಾ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿಷಯ ಎಂಬ ನೆಲೆಯಲ್ಲಿ ಆಕೆ ಅಭಿಪ್ರಾಯವೊಂದನ್ನು ಹೊಂದುವುದು ಮತ್ತು ಅದನ್ನು ವ್ಯಕ್ತಪಡಿಸುವುದು ಅಪರಾಧವೂ ಅಲ್ಲ. ಫೆಬ್ರವರಿ 21-22ರಂದು ‘ಪ್ರತಿಭಟನೆಯ ಸಂಸ್ಕೃತಿಗಳು’ ಎಂಬ ವಿಷಯದ ಮೇಲೆ ರಾಮಜಸ್ ಕಾಲೇಜು ವಿಚಾರ ಸಂಕಿರಣವೊಂದನ್ನು ಏರ್ಪಡಿಸಿತ್ತು. ಇದರಲ್ಲಿ ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕರಾದ ಶೆಹ್ಲಾ ರಶೀದ್ ಮತ್ತು ಉಮರ್ ಖಾಲಿದ್‍ರು ಮಾತಾಡಬೇಕಿತ್ತು. ‘ಕನ್ಹಯ್ಯ’ ವಿವಾದದ ಸಂದರ್ಭದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡವರು ಈ ಇಬ್ಬರು ವಿದ್ಯಾರ್ಥಿಗಳು. ಬಿಜೆಪಿಯ ವಿದ್ಯಾರ್ಥಿ ಘಟಕವಾದ ಎಬಿವಿಪಿಯು ಇವರಿಬ್ಬರು ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ವಿರೋಧಿಸಿತು. ಪರ-ವಿರೋಧ ಮಾತುಗಳಾದುವು. ಕಾರ್ಯಕ್ರಮ ರದ್ದಾಯಿತು. ಹಲ್ಲೆಗಳು ನಡೆದುವು. ವಿದ್ಯಾರ್ಥಿಗಳು ಮತ್ತು ಶಿಕ್ಷಕರೂ ಗಾಯಗೊಂಡರು. ಗುರ್‍ಮೆಹರ್ ಕೌರ್‍ಳ ಧ್ವನಿಯನ್ನು ತರ್ಕಕ್ಕೆ ಒಡ್ಡುವಾಗ ಈ ಎಲ್ಲ ಬೆಳವಣಿಗೆಗಳನ್ನು ನಾವು ಎದುರಿಟ್ಟುಕೊಳ್ಳಬೇಕು. ರಾಮಜಸ್ ಕಾಲೇಜು ಮತ್ತು ದೆಹಲಿಯ ಇತರ ವಿಶ್ವವಿದ್ಯಾಲಯಗಳಲ್ಲಿ ಎಬಿವಿಪಿಯ ವರ್ತನೆಯು ಗುರ್‍ಮೆಹರ್ ಕೌರ್‍ಳಲ್ಲಿ ಒಂದು ಅಭಿಪ್ರಾಯವನ್ನು ರೂಪಿಸಿತು. ಅದು ಆಕೆಯ ಸ್ವಾತಂತ್ರ್ಯ. ಅಂಥ ಸ್ವಾತಂತ್ರ್ಯ ಎಲ್ಲರಿಗೂ ಮುಕ್ತವಾಗಿದೆ. ‘ನಾನು ಎಬಿವಿಪಿಗೆ ಹೆದರಲ್ಲ’ ಎಂದಾಕೆ ತನ್ನ ಫೇಸ್‍ಬುಕ್ ಪುಟದಲ್ಲಿ ಭಿತ್ತಿ ಚಿತ್ರ (ಪ್ಲಕಾರ್ಡ್) ಹಿಡಿದು ಘೋಷಿಸಿಕೊಂಡರು. ಅದು ಬಹು ಜನಪ್ರಿಯವಾಯಿತು. ಅದು ವಿದ್ಯಾರ್ಥಿ ಚಳುವಳಿಯಾಗಿ ರೂಪುಗೊಂಡಿತು. ಒಂದು ವೇಳೆ, ಎಬಿವಿಪಿಗೆ ಅಥವಾ ಅದನ್ನು ಪೊರೆದಿರುವ ವರ್ಗಕ್ಕೆ ಈ ಅಭಿಪ್ರಾಯದ ಬಗ್ಗೆ ಆಕ್ಷೇಪಣೆ ಇದ್ದರೆ ಅದನ್ನು ಮಂಡಿಸಬೇಕಾದ ರೀತಿ ಯಾವುದಾಗಿತ್ತು? ‘ಎಬಿವಿಪಿಗೆ ಹೆದರಲ್ಲ’ ಎಂಬ ಹೇಳಿಕೆಯಲ್ಲಿ, ‘ಅದು ಹೆದರಿಸುತ್ತೆ’ ಎಂಬ ಭಾವವಿದೆ. ಆದ್ದರಿಂದ, ಎಬಿವಿಪಿ ಅಂದರೆ ಹಾಗೆಯೋ ಅಥವಾ ಅಲ್ಲವೋ ಎಂಬುದನ್ನು ಅದು ಸ್ಪಷ್ಟಪಡಿಸಬಹುದಾಗಿತ್ತು. ಕೌರ್‍ಳ ಹೇಳಿಕೆ ಯಾಕೆ ತಪ್ಪು ಎಂಬುದನ್ನು ದೇಶಕ್ಕೆ ಮನವರಿಕೆ ಮಾಡಬಹುದಾದ ಮತ್ತು ಮಾಡಬೇಕಾದ ಸಂದರ್ಭ ಇದು. ಈ ವಿಧಾನದಲ್ಲಿ ಸವಾಲೂ ಇದೆ. ಬೌದ್ಧಿಕ ಚರ್ಚೆಗೆ ಅವಕಾಶವೂ ಇದೆ. ಆದರೆ, ಎಬಿವಿಪಿ ಈ ಸಹಜ ದಾರಿಯನ್ನು ಕೈಬಿಟ್ಟು ಒಂದು ವರ್ಷದ ಹಿಂದೆ ಚಿತ್ರೀಕರಿಸಿದ್ದ ಕೌರ್‍ಳ ‘ರಾಮನ ದನಿ’ ಎಂಬ ವಿಡಿಯೋದ ಭಿತ್ತಿ ಚಿತ್ರವನ್ನು ಎತ್ತಿಕೊಂಡಿತು. ಆ ಇಡೀ ವೀಡಿಯೋದಲ್ಲಿ ತಾನೇನು ಎಂಬುದನ್ನು ಆಕೆ ಹೇಳಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ ತಂದೆ ಕ್ಯಾಪ್ಟನ್ ಮನ್‍ದೀಪ್ ಸಿಂಗ್ ಹುತಾತ್ಮರಾದ ಬಳಿಕ ತಾನೆದುರಿಸಿದ ಪ್ರಶ್ನೆ ಮತ್ತು ಕಂಡುಕೊಂಡ ಉತ್ತರಗಳನ್ನು ಮಾತೇ ಆಡದೆ ಬರೇ ಭಿತ್ತಿಚಿತ್ರದಲ್ಲಿ ನಮೂದಿಸುವ ಮೂಲಕ ವ್ಯಕ್ತಪಡಿಸಿದ್ದಾರೆ. ಅಂತಹ ಹಲವು ಪ್ಲಕಾರ್ಡ್‍ಗಳಲ್ಲಿ ಒಂದು - ‘ನನ್ನ ತಂದೆಯನ್ನು ಪಾಕಿಸ್ತಾನ ಕೊಂದಿಲ್ಲ ಯುದ್ಧ ಕೊಂದಿದೆ..’ ಎಂಬುದು. ನಿಜವಾಗಿ, ಈ ವೀಡಿಯೋದಲ್ಲಿ ಆಕೆ ಎತ್ತಿ ಹಿಡಿದಿರುವ ಪ್ರತಿ ಭಿತ್ತಿ ಚಿತ್ರಗಳಿಗೂ ಒಂದಕ್ಕೊಂದು ಸಂಬಂಧ ಇದೆ. ಆದರೆ ಈ ವೀಡಿಯೋದ ಹಲವು ಭಿತ್ತಿ ಚಿತ್ರಗಳಲ್ಲಿ ಎಬಿವಿಪಿ ಒಂದನ್ನು ಮಾತ್ರ ಹೆಕ್ಕಿಕೊಂಡಿತು ಮತ್ತು ಅದರ ಹಿಂದು-ಮುಂದಿನ ಭಿತ್ತಿ ಚಿತ್ರಗಳಲ್ಲಿರುವ ಯಾವ ಬರಹವನ್ನೂ ಉಲ್ಲೇಖಿಸದೆಯೇ ಮತ್ತು ಈ ಒಂದು ಭಿತ್ತಿ ಚಿತ್ರದ ಮೇಲೆಯೇ ಜನರ ಗಮನ ಕೇಂದ್ರೀಕೃತವಾಗುವಂತೆ ಮಾಡಲು ಪ್ರಯತ್ನಿಸಿತು. ‘ಎಬಿವಿಪಿಗೆ ಹೆದರಲ್ಲ’ ಎಂಬ ಘೋಷಣೆಯ ಬಳಿಕ ಆಕೆ ಎತ್ತಿ ಹಿಡಿದ ಭಿತ್ತಿಚಿತ್ರ ಅದು ಎಂದು ಅಸಂಖ್ಯ ಮಂದಿ ಭಾವಿಸಿಕೊಂಡರು. ಆಕೆಯನ್ನು ದೇಶದ್ರೋಹಿ ಎಂದು ಕರೆದರು. ನಗರ ಕೇಂದ್ರಿತ ನಕ್ಸಲೀಯ ಎಂದರು. ಅತ್ಯಾಚಾರ ಮತ್ತು ಹಲ್ಲೆಯ ಬೆದರಿಕೆಯೊಡ್ಡಿದರು. ತಮಾಷೆಯ ವಸ್ತುವಾಗಿಸಿದರು. ಸಂಸದ ಪ್ರತಾಪಸಿಂಹ ಆಕೆಯನ್ನು ದಾವೂದ್ ಇಬ್ರಾಹೀಮ್‍ಗೆ ಹೋಲಿಸಿದರು. ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮತ್ತು ನಟ ರಣದೀಪ್ ಹೂಡ ತೀರಾ ಅಗ್ಗದ ತಮಾಷೆಗೆ ಒಳಗಾಗಿಸಿದರು. ಹಾಗಂತ, ಕೌರ್‍ಗೆ ಅಭಿಪ್ರಾಯ ಸ್ವಾತಂತ್ರ್ಯ ಇರುವಂತೆಯೇ ಇತರರಿಗೂ ಆ ಸ್ವಾತಂತ್ರ್ಯ ಇದೆ ಎಂದು ವಾದಿಸಬಹುದು. ಅದು ನಿಜ ಕೂಡ. ಆದರೆ, ಯುದ್ಧದಲ್ಲಿ ತಂದೆಯನ್ನು ಕಳಕೊಂಡ ಹೆಣ್ಣು ಮಗಳೊಬ್ಬಳು ‘ಯುದ್ಧ ಬೇಡ’ ಎಂದು ಅತ್ಯಂತ ಪರಿಣಾಮಕಾರಿಯಾಗಿ ಆಗ್ರಹಿಸುವುದನ್ನು ತೀರಾ ತಮಾಷೆಯಾಗಿ ಕಾಣುವುದು ಯಾವ ಮನಸ್ಥಿತಿ? ಆ ಹೆಣ್ಣು ಮಗಳ ಮೇಲೆ ಯುದ್ಧದ ನೇರ ಪರಿಣಾಮವಾಗಿದೆ. ಎರಡರ ಹರೆಯದಲ್ಲೇ ಆಕೆ ತನ್ನ ಅಪ್ಪನನ್ನು ಕಳೆದುಕೊಂಡಿದ್ದಾರೆ. ತನ್ನ ಗೆಳತಿಯರು ತಂತಮ್ಮ ಅಪ್ಪಂದಿರೊಂದಿಗೆ ಕೈ ಹಿಡಿದು ನಡೆಯುವುದನ್ನು ಆಕೆ ಕಂಡಿರ ಬಹುದು. ಅಂಥದ್ದೊಂದು ಬೆಚ್ಚನೆಯ ಪ್ರೀತಿಗಾಗಿ ಆಕೆ ಆಗ್ರಹಿಸಿರಬಹುದು. ತನ್ನಿಂದ ಅಪ್ಪನನ್ನು ಕಸಿದುಕೊಂಡಿರುವುದು ಯುದ್ಧ ಎಂಬ ಅರಿವು ಆಕೆಯೊಳಗೆ ಶಾಶ್ವತ ಗಾಯವಾಗಿ ಉಳಿದುಕೊಂಡಿರಬಹುದು. ಬಹುಶಃ ಆ ಗಾಯದ ಪ್ರತಿಕ್ರಿಯೆಯೇ ಆ ಭಿತ್ತಿಚಿತ್ರ ಎಂದೂ ಹೇಳಬಹುದು. ಆಕೆ ಯುದ್ಧವನ್ನು ದ್ವೇಷಿಸುತ್ತಾರೆ. ಶಾಂತಿಯನ್ನು ಬಯಸುತ್ತಾರೆ. ಆದ್ದರಿಂದಲೇ ಯುದ್ಧವಿರೋಧಿ ಚಳವಳಿಗಳಲ್ಲಿ ಭಾಗವಹಿಸುತ್ತಲೂ ಇದ್ದಾರೆ. ಯುದ್ಧ ವಿರೋಧಿ ಸುದ್ದಿ ಗೋಷ್ಠಿಯಲ್ಲಿ ತಾನು ಭಾಗವಹಿಸಿದುದನ್ನು ಫೋಟೋ ಸಮೇತ ಅವರು 2016 ನವೆಂಬರ್ 6ರಂದು ತನ್ನ ಫೇಸ್‍ಬುಕ್ ಪುಟದಲ್ಲಿ ಪ್ರಕಟಿಸಿದ್ದಾರೆ. ‘ಯುದ್ಧದಾಹಿಗಳ ವಿರುದ್ಧ ಕ್ರಮ ಕೈಗೊಳ್ಳಿ’ ಎಂಬ ಆಗ್ರಹದೊಂದಿಗೆ ನಡೆಸಲಾದ ಸುದ್ದಿಗೋಷ್ಠಿ ಅದು. ಅದರಲ್ಲಿ ಕೌರ್‍ರ ಜೊತೆಗೆ ಕವಿತಾ ಕೃಷ್ಣನ್ ಮತ್ತು ಸಾಮಾಜಿಕ ಕಾರ್ಯಕರ್ತ ಜಾನ್ ದಯಾಳ್ ಇದ್ದಾರೆ. ಆಕೆಯ ಭಿತ್ತಿ ಚಿತ್ರವೊಂದನ್ನು ಎತ್ತಿಕೊಂಡು ಕುಹಕವಾಡಿದವರು ಆಕೆಗಿರುವ ಈ ಹಿನ್ನೆಲೆಯನ್ನು ಯಾಕೆ ಗಮನಿಸಿಲ್ಲ ಅಥವಾ ಯಾಕೆ ಗಂಭೀರವಾಗಿ ಪರಿಗಣಿಸಿಲ್ಲ? ಹೆಣ್ಣು ಎಂದೇ?
      ಹೆಣ್ಣಿನ ಧ್ವನಿಯನ್ನು ನಿರ್ಲಕ್ಷಿಸುವುದು ಅನಾಗರಿಕ ಸಮಾಜದಲ್ಲಿ ನಡೆದುಕೊಂಡು ಬಂದ ಸಂಸ್ಕೃತಿ. ಅತ್ಯಾಚಾರ ಎಂಬುದು ಆಕೆ ಯನ್ನು ಪಳಗಿಸುವುದಕ್ಕೂ ನಿಯಂತ್ರಿಸುವುದಕ್ಕೂ ಇರುವ ಆಯುಧ. ಇದು ಈಗಲೂ ಚಾಲ್ತಿಯಲ್ಲಿದೆ ಎಂಬುದಕ್ಕೆ ಗುರ್‍ಮೆಹರ್ ಕೌರ್ ಮತ್ತು ಕೇರಳದ ನಟಿ ಇತ್ತೀಚಿನ ಉದಾಹರಣೆ. ಅತ್ಯಂತ ಮುಂದುವರಿದ ಮತ್ತು ನಾಗರಿಕ ಸಮಾಜದಲ್ಲಿ ಸಂಭಾವಿತರಾಗಿ ಗುರುತಿಸಿಕೊಂಡವರೇ ಹೆಣ್ಣನ್ನು ಇಷ್ಟು ಬಾಲಿಶವಾಗಿ ನಡೆಸಿಕೊಳ್ಳುತ್ತಾ ರೆಂದರೆ, ಅದರ ಅರ್ಥ ಏನು? ಇದಕ್ಕೆ ಪರಿಹಾರವೇನು? ಹೆಚ್ಚು ಹೆಚ್ಚು ಮಹಿಳಾ ಪರ ಕಾನೂನುಗಳನ್ನು ರಚಿಸುವುದೇ? ಮಹಿಳೆ ಯರಿಗಾಗಿ ಪೊಲೀಸ್ ಸಹಾಯವಾಣಿಯನ್ನು ಹೆಚ್ಚೆಚ್ಚು ತೆರೆಯುವುದೇ? ಸುಪ್ರೀಮ್ ಕೋರ್ಟಿನಲ್ಲಿ ಈಗಿರುವ 28 ನ್ಯಾಯಾಧೀಶರಲ್ಲಿ ಓರ್ವರ ಹೊರತು ಉಳಿದವರೆಲ್ಲರೂ ಪುರುಷರೇ ಎಂಬುದನ್ನು ಕಾರಣವಾಗಿ ಉಲ್ಲೇಖಿಸುವುದೇ? ದೇಶದ 24 ಹೈಕೋರ್ಟ್‍ಗಳಲ್ಲಿ ಬರೇ 61 ಮಹಿಳಾ ನ್ಯಾಯಾ ಧೀಶರಿದ್ದಾರೆ ಎಂಬ ಕೊರತೆಯನ್ನು ತೋರಿಸುವುದೇ? ನಮ್ಮ ಪೊಲೀಸ್ ಇಲಾಖೆಯಲ್ಲಿ ಎಷ್ಟು ಮಹಿಳೆ ಯರಿದ್ದಾರೆ ಎಂಬುದನ್ನು ಲೆಕ್ಕ ಹಾಕುವುದೇ? ನಮ್ಮ ಪಠ್ಯಪುಸ್ತಕಗಳಲ್ಲಿ ಇನ್ನಷ್ಟು ಲಿಂಗ ಸಮಾನತೆಯನ್ನು ಕಾಯ್ದುಕೊಳ್ಳುವುದೇ? ನಿಜಕ್ಕೂ, ಹೆಣ್ಣನ್ನು ಅವಮಾನಿಸುವವರು ಯಾರು? ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೆಂದರೆ ನಾಗರಿಕ ಭಾಷೆಯ ತಿಳುವಳಿಕೆ ಇಲ್ಲದವರಲ್ಲ. ಲಿಂಗ ಸಮಾನತೆಯ ಬಗ್ಗೆ ಪಾಠಗಳು ಅತ್ಯಂತ ಹೆಚ್ಚು ಮೊಳಗುತ್ತಿರುವುದೇ ವಿಶ್ವವಿದ್ಯಾಲಯಗಳಲ್ಲಿ. ಕ್ರಿಕೆಟಿಗರು, ಸಂಸದರು, ಸಿನಿಮಾ ನಟರು ಮುಂತಾದವರೆಲ್ಲ ನಾಗರಿಕ ಪರಿಭಾಷೆಯ ಬಗ್ಗೆ ಚೆನ್ನಾಗಿಯೇ ತಿಳಿದುಕೊಂಡವರು. ಹೀಗಿದ್ದೂ, ಒಂದು ಭಿತ್ತಿಚಿತ್ರಕ್ಕೆ ಪ್ರತಿಯಾಗಿ ಅತ್ಯಾಚಾರದ ಬೆದರಿಕೆಗಳು ಬಂದುವಲ್ಲ, ಯಾಕೆ? ಯುದ್ಧ ವಿರೋಧಿ ಭಿತ್ತಿಚಿತ್ರವನ್ನು ಅರ್ಥೈಸಿಕೊಳ್ಳುವಷ್ಟೂ ಕಾಮನ್‍ಸೆನ್ಸ್ ಈ ವಿದ್ಯಾವಂತರಿಂದ ಪ್ರಕಟವಾಗಲಿಲ್ಲವಲ್ಲ, ಯಾವ ಕಾರಣದಿಂದ? ಅದರ ಹಿಂದೆ ಸಿದ್ಧಾಂತವೊಂದು ಕೆಲಸ ಮಾಡಿದೆಯೇ? ಹಾಗಾದರೆ ಆ ಸಿದ್ಧಾಂತ ಯಾವುದು? ಅದು ಏನನ್ನು ಪ್ರತಿಪಾದಿಸುತ್ತದೆ? ಹೆಣ್ಣಿನ ಬಗ್ಗೆ ಆ ಸಿದ್ಧಾಂತದ ನಿಲುವು ಏನು? ಆಕೆಯ ಮಾತು ಬಾಲಿಷವೇ? ಆಕೆ ಗಂಭೀರ ವಿಷಯವನ್ನು ಮಾತಾಡಬಾರದೇ? ಪುರುಷ ಸಮಾಜದ ನಿಲುವನ್ನು ಆಕೆ ಪ್ರಶ್ನಿಸಬಾರದೇ? ಆಕೆಯ ಮಾತನ್ನು ಎತ್ತಿಕೊಂಡು ಗಂಭೀರ ಚರ್ಚೆಗೆ ಒಡ್ಡುವುದು ಪುರುಷ ಸಮಾಜದ ಯೋಗ್ಯತೆಗೆ ಕುಂದೇ? ಅತ್ಯಾಚಾರ, ಹಲ್ಲೆ, ದಮನಕಾರಿ ಹೇಳಿಕೆಗಳು ಮತ್ತು ಅಪಹಾಸ್ಯಗಳು ಆ ಸಿದ್ಧಾಂತದ ಭಾಗವೇ? ಭಾರತೀಯ ಸಂಸ್ಕೃತಿಯ ರಕ್ಷಕರಂತೆ ಮತ್ತು ದೇಶಪ್ರೇಮವನ್ನು ಪೇಟೆಂಟ್ ಪಡಕೊಂಡವರಂತೆ ವರ್ತಿಸುವವರು ಈ ಸಿದ್ಧಾಂತವನ್ನು ಪ್ರತಿನಿಧಿಸುತ್ತಿದ್ದಾರೆಯೇ? ಭಾರತೀಯ ಸಂಸ್ಕೃತಿ, ಪರಂಪರೆಯ ಹೆಸರಲ್ಲಿ ಅವರು ತರಲು ಉದ್ದೇಶಿಸಿರುವುದು ಈ ವಿಚಾರಧಾರೆಯನ್ನೇ? ಕ್ರಿಕೆಟಿಗರು, ನಟರು, ಕ್ರೀಡಾಪಟುಗಳು ಇದರ ಅರಿವಿಲ್ಲ ದೆಯೇ ಅದರ ಬೆಂಬಲಿಗರಾಗುತ್ತಿದ್ದಾರೆಯೇ?
       ಗುರ್‍ಮೆಹರ್ ಮೂಲಕ ಮುನ್ನೆಲೆಗೆ ಬಂದಿರುವ ಇಂಥ ಪ್ರಶ್ನೆಗಳು ಗಂಭೀರ ಚರ್ಚೆಗೆ ಒಳಪಡಬೇಕಿದೆ.


Saturday, March 4, 2017

ತಾತನ ಬೆಕ್ಕು, ಅಲಿಯ ಕುಟುಂಬ ಮತ್ತು ಯುದ್ಧ

ಅರ್ನೆಸ್ಟ್ ಹೆಮಿಂಗ್ವೆ
ಅಬೂ ಅಲಿ
ಇವರಿಬ್ಬರಲ್ಲಿ ಅರ್ನೆಸ್ಟ್ ಹೆಮಿಂಗ್ವೆ ಖ್ಯಾತ ಕತೆಗಾರ. ಅಬೂ ಅಲಿ ಪರಿಣತ ಕಾರ್ ಮೆಕ್ಯಾನಿಕ್. ಹೆಮಿಂಗ್ವೆ ಸ್ವೀಡನ್‍ನವರಾದರೆ, ಅಬೂ ಅಲಿ ಇರಾಕಿನವ. ಹೆಮಿಂಗ್ವೆ ಇವತ್ತು ನಮ್ಮ ಜೊತೆ ಇಲ್ಲ. ಅಬೂ ಅಲಿ ಆದರೋ ಇನ್ನೂ ಬದುಕಿದ್ದಾರೆ. ಇವಿಷ್ಟು ಇವರಿ ಬ್ಬರ ನಡುವೆ ಹೋಲಿಕೆಯಾಗದ ಸಂಗತಿಗಳು. ಆದರೆ ಒಂದು ವಿಷಯದಲ್ಲಿ ಇವರಿಬ್ಬರೂ ಒಂದುಗೂಡುತ್ತಾರೆ. ಅದು- ಯುದ್ಧ.
1936ರಲ್ಲಿ ಸ್ಪೈನ್ ದೇಶದಲ್ಲಿ ಆಂತರಿಕ ಘರ್ಷಣೆಗಳು ನಡೆಯುತ್ತಿದ್ದವು. ಗುಂಡೆಸೆತ, ಬಾಂಬ್ ದಾಳಿ ಮತ್ತು ವೈಮಾನಿಕ ದಾಳಿಗಳೂ ಈ ಘರ್ಷಣೆಗಳ ಭಾಗವಾಗಿದ್ದುವು. ಹೆಮಿಂಗ್ವೆ ಇದನ್ನು ವರದಿ ಮಾಡುತ್ತಿದ್ದರು. ಅವರೊಳಗೆ ಓರ್ವ ಕತೆಗಾರನೂ ಇದ್ದ. ವಿವಿಧ ಸಂದರ್ಭ ಮತ್ತು ಸನ್ನಿವೇಶಗಳಲ್ಲಿ ಆ ಕತೆಗಾರ ಜಾಗೃತವಾಗು ತ್ತಿದ್ದ. ವರದಿಗಾರಿಕೆಯ ಸಮಯದಲ್ಲಿ ಹೆಮಿಂಗ್ವೆ ಏನೆಲ್ಲವನ್ನು ನೋಡು ತ್ತಿದ್ದರೋ ಅವುಗಳ ಆಧಾರದಲ್ಲಿ ಕತೆಯನ್ನೂ ಹೆಣೆಯುತ್ತಿದ್ದರು.
      ‘ಒಂದು ಸೇತುವೆ. ಆ ಸೇತುವೆ ಎಷ್ಟು ಬ್ಯುಸಿ ಅಂದರೆ, ಎತ್ತಿನ ಬಂಡಿಗಳು, ಲಾರಿಗಳು ಸಹಿತ ವಿವಿಧ ಸಾಗಾಟದ ವಾಹನಗಳು ಸ್ಪರ್ಧೆಗೆ ಬಿದ್ದಂತೆ ಚಲಿಸುತ್ತಿದ್ದವು. ಈ ಸೇತುವೆಯ ಒಂದು ತುದಿಯಲ್ಲಿ ಆ ವೃದ್ಧ ಕುಳಿತಿದ್ದ. ಆತನ ಉಡುಪು ತೀರಾ ಕೊಳಕಾಗಿತ್ತು. ಜನರು ಊರು ತೊರೆಯುವ ಧಾವಂತ ದಲ್ಲಿದ್ದರು. ಊರಿನ ಮೇಲೆ ಶತ್ರುಗಳ ದಾಳಿಯಾಗಲಿದೆ ಎಂಬ ಘೋಷಣೆಯನ್ನು ಹೊರಡಿಸಲಾಗಿತ್ತು. ಹೆಚ್ಚಿನ ಜನರೂ ಸೇತುವೆ ಯನ್ನು ದಾಟಿ ಸುರಕ್ಷಿತ ಜಾಗವನ್ನು ಸೇರಿಕೊಂಡಾಗಿತ್ತು. ಆದರೆ, ಆ ವೃದ್ಧ ಮಾತ್ರ ಸೇತುವೆಯ ತುದಿಯಲ್ಲಿ ಕದಲದೇ ಕುಳಿತಿದ್ದ. ಸೇತುವೆಯ ಮತ್ತೊಂದು ತುದಿಯನ್ನು ದಾಟಿ ಶತ್ರುಗಳ ಚಟುವಟಿಕೆಯನ್ನು ಗಮನಿಸುವ ಜವಾಬ್ದಾರಿ ನನ್ನ ಮೇಲಿದ್ದುದರಿಂದ ನಾನು ಚುರುಕಾಗಿದ್ದೆ. ಆದರೂ ವೃದ್ಧ ಚಲಿಸುತ್ತಿಲ್ಲ. ‘ನಿನ್ನ ಊರು ಯಾವುದು ತಾತ?’ ಎಂದು ನಾನು ಪ್ರಶ್ನಿಸಿದೆ. ಸಾನ್ ಕಾರ್ಲೋಸ್ ಅಂದ. ಜೊತೆಗೇ ನಾನು ಕೇಳದೇನೇ, ‘ಅಲ್ಲಿ ನಾನು ಕೆಲವು ಸಾಕು ಪ್ರಾಣಿಗಳ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದೆ..’ ಎಂದೂ ಸೇರಿಸಿದ.
    ಪ್ರಾಣಿಗಳನ್ನು ಸಾಕಿಕೊಂಡು ಜೀವನ ಸಾಗಿಸುತ್ತಿದ್ದೆ. ಯುದ್ಧ ಭೀತಿಯಿಂದಾಗಿ ನನ್ನೂರಿನ ಜನರೆಲ್ಲ ಊರು ಬಿಟ್ಟರು. ಆದರೂ ನನಗೆ ಬಿಡಲಾಗುತ್ತಿಲ್ಲ. ಹುಟ್ಟೂರನ್ನು ಬಿಡುವುದು ಸುಲಭವಾ? ಆ ಭಾವುಕತೆಯೇ ಇನ್ನೂ ನನ್ನನ್ನು ಇಲ್ಲೇ ಕೂರುವಂತೆ ಮಾಡಿದೆ’ ಎಂದು ವೃದ್ಧ ನಿಟ್ಟುಸಿರಿಟ್ಟ.
     ‘ಯಾವೆಲ್ಲ ಪ್ರಾಣಿಗಳನ್ನು ಸಾಕಿಕೊಂಡಿದ್ದೆ..’ ಎಂದು ನಾನು ಪ್ರಶ್ನಿಸಿದೆ. ಹೀಗೆ ಪ್ರಶ್ನಿಸುವಾಗ ನನ್ನ ದೃಷ್ಟಿ ಸೇತುವೆಯ ಇನ್ನೊಂದು ತುದಿಯಲ್ಲೇ ನೆಟ್ಟಿತ್ತು. ಯಾವ ಸಮಯದಲ್ಲೂ ಶತ್ರು ದಾಳಿ ಮಾಡುವ ಸಂಭವವಿತ್ತು. ಚಿಕ್ಕದೊಂದು ಚಲನೆಗೂ ಗುಂಡಿನ ಸುರಿಮಳೆಯಾಗುವ ಭೀತಿ. ಆದರೆ ಈ ತಾತ ಯಾವ ಭಯವೂ ಇಲ್ಲದೇ ಸುಮ್ಮನೆ ಕುಳಿತಿದ್ದಾನೆ. ಆತ ಹೇಳಿದ,
‘ಬಗೆ ಬಗೆಯ ಪ್ರಾಣಿಗಳಿದ್ದುವು ಮಗೂ. ಮುಖ್ಯವಾಗಿ ಮೂರು ಬಗೆಯ ಪ್ರಾಣಿಗಳು. ಎರಡು ಕುರಿಗಳು, ನಾಲ್ಕು ಜೊತೆ ಪಾರಿವಾಳಗಳು, ಮತ್ತೊಂದು ಬೆಕ್ಕು. ಛೆ, ಅವೆಲ್ಲವನ್ನೂ ಬಿಟ್ಟು ಬರಬೇಕಾಯಿತಲ್ಲ. ನಮ್ಮೂರಿನ ಮೇಲೆ ಶತ್ರುಗಳು ದಾಳಿ ಮಾಡುತ್ತಾರೆಂಬ ಖಚಿತ ಮಾಹಿತಿ ನಮ್ಮ ಸೇನೆಗೆ ಸಿಕ್ಕಿದೆಯಂತಲ್ಲ. ಹಾಗಾಗಿ ಊರಿಗೆ ಊರೇ ಖಾಲಿ ಮಾಡಬೇಕೆಂದು ಸೇನಾಧಿಕಾರಿ ಕಟ್ಟಪ್ಪಣೆ ಹೊರಡಿಸಿರುವರಂತಲ್ಲ. ಏನ್ ಮಾಡೋದು. ಎಲ್ಲವನ್ನೂ ಬಿಟ್ಟು ಬರಬೇಕಾಯಿತು..’ ತಾತ ನಿಟ್ಟುಸಿರಿಟ್ಟ.
     ‘ನಿನಗೆ ಪತ್ನಿ-ಮಕ್ಕಳು ಯಾರೂ ಇಲ್ಲವಾ ತಾತ’ ಎಂದು ಪ್ರಶ್ನಿಸಿದೆ ನಾನು.
     ಉಹೂಂ. ಇಲ್ಲ ಮಗೂ. ಬಿಟ್ಟು ಬಂದ ಬೆಕ್ಕಿನ ಬಗ್ಗೆ ನನಗೆ ಚಿಂತೆಯಿಲ್ಲ. ಬೆಕ್ಕುಗಳು ಹೇಗಾದ್ರೂ ಬದುಕಿಕೊಳ್ಳುತ್ತವೆ. ಆದರೆ ಉಳಿದ ಪ್ರಾಣಿಗಳು ಹಾಗಲ್ಲವಲ್ಲ. ಅವುಗಳ ಬಗ್ಗೆಯೇ ಚಿಂತೆ ನನಗೆ..’ ಆತ ವಿಷಾದಿಸಿದ. ನಾನು ಅವಸರಪಟ್ಟೆ. ಬರುತ್ತಿದ್ದ ಲಾರಿಯೊಂದನ್ನು ತೋರಿಸಿ, ‘ನೀನಿದನ್ನು ಹತ್ತಿ ಹೋಗು. ಇಲ್ಲಿ ಹೆಚ್ಚು ಹೊತ್ತು ಕುಳ್ಳಿರುವಂತಿಲ್ಲ. ಇದು ಅಪಾಯಕಾರಿ ಪ್ರದೇಶ’ ಎಂದೆ. ತಾತ ಮಿಸುಕಾಡಲಿಲ್ಲ. ‘ಇರು. ಸ್ವಲ್ಪ ಹೊತ್ತು ಇಲ್ಲೇ ಇದ್ದು ಮತ್ತೆ ಹೋಗುತ್ತೇನೆ. ಆರು ಮೈಲು ದೂರದಿಂದ ನಡೆದುಕೊಂಡು ಬಂದಿದ್ದೇನೆ. ಸುಸ್ತು ಇದೆ’ ಎಂದ. ಬಳಿಕ ಮೊದಲಿನ ಮಾತನ್ನೇ ತುಸು ವಿಸ್ತರಿಸಿ ಹೇಳತೊಡಗಿದ- ‘ನನಗೆ ಬೆಕ್ಕಿನ ಬಗ್ಗೆ ಚಿಂತೆಯಿಲ್ಲ. ಬೆಕ್ಕು ತನ್ನ ಕಾಳಜಿಯನ್ನು ತಾನೇ ವಹಿಸಿಕೊಳ್ಳುತ್ತದೆ. ಆದರೆ ಉಳಿದ ಪ್ರಾಣಿಗಳ ಬಗ್ಗೆಯೇ ನಂಗೆ ಭಯ. ಅವುಗಳು ಸುರಕ್ಷಿತವಾಗಿ ಉಳಿಯಬಲ್ಲವು ಎಂದು ನಿನಗೆ ಅನಿಸುತ್ತಿದೆಯೇ.. ಎಂದು ಕೇಳಿದ ತಾತ. ನನ್ನ ಜವಾಬ್ದಾರಿ ಈ ತಾತನನ್ನು ಊರು ಬಿಡಿಸುವುದೊಂದೇ ಅಲ್ಲವಾದುದರಿಂದ ಸೇತುವೆಯ ಆ ಕಡೆಯ ಬಗ್ಗೆ ಗಮನ ಹರಿಸುತ್ತಲೇ ಮತ್ತು ತಾತನಿಗೆ ಏನಾದರೂ ಉತ್ತರ ಕೊಡಬೇಕೆಂಬ ಉದ್ದೇಶದಿಂದ ‘ಅವು ಸುರಕ್ಷಿತವಾಗಿರಬಲ್ಲವು’ ಎಂದೆ. ಜೊತೆಗೇ, ‘ಇಲ್ಲಿಗೆ ಬರು ವಾಗ ಪಾರಿವಾಳಗಳ ಪಂಜರದ ಬಾಗಿಲನ್ನು ತೆರೆದಿಟ್ಟು ಬಂದಿರು ವೆಯಾ’ ಎಂದು ನಾನು ಪ್ರಶ್ನಿಸಿದೆ. ಆತ ಹೌದು ಎಂಬಂತೆ ತಲೆಯಾಡಿಸಿದ. ಹಾಗಾದರೆ, ಅವು ಹಾರಿ ಹೋಗಿರ್ತವೆ ಅನ್ನು ಅಂದೆ. ಅವುಗಳೇನೋ ಹಾರಿ ಹೋಗಿರ್ತವೆ, ಆದರೆ ಕುರಿಗಳು. ಅಲ್ಲದೇ ನನ್ನದಲ್ಲದ ಅನೇಕ ಪ್ರಾಣಿಗಳೂ ಊರಿನಲ್ಲಿವೆ. ಅವುಗಳ ಬಗ್ಗೆಯೂ ನನಗೆ ನೆನಪಾಗುತ್ತಿದೆ.. ಎಂದ. ನಾನು ಹೇಗಾದರೂ  ಮಾಡಿ ಅಜ್ಜನನ್ನು ಸೇತುವೆಯಿಂದ ಕದಲಿಸಿ ಬಿಟ್ಟೆ. ‘ಛೆ ನಾನು ಪ್ರಾಣಿಗಳನ್ನು ಬಿಟ್ಟು ಬರಬಾರದಿತ್ತು..’ ಎಂದು ತನ್ನಷ್ಟಕ್ಕೇ ಅನ್ನುತ್ತಾ ತಾತ ನಿಧಾನಕ್ಕೆ ಹೊರಟು ಹೋದ. ಎಂಥ ವಿಪರೀತ ಪರಿಸ್ಥಿತಿಯಲ್ಲೂ ಬೆಕ್ಕುಗಳು ತಮ್ಮನ್ನು ತಾವೇ ನಿಭಾಯಿಸಿಕೊಳ್ಳಬಲ್ಲವು ಎನ್ನುವುದೊಂದೇ ಆ ತಾತನಿಗಿದ್ದಿರಬಹುದಾದ ಆಶಾಕಿರಣವೆನ್ನಬಹುದಾಗಿತ್ತು..’
      ಓರ್ವ ಸೈನಿಕನ ಪಾತ್ರದಲ್ಲಿ ತನ್ನನ್ನು ಬಿಂಬಿಸಿಕೊಂಡು ವೃದ್ಧನ ಎದೆಮಿಡಿತದಲ್ಲಿ ಯುದ್ಧದ ಇನ್ನೊಂದು ಮುಖವನ್ನು ‘ಓಲ್ಡ್ ಮ್ಯಾನ್ ಅಟ್ ದ ಬ್ರಿಡ್ಜ್’ ಎಂಬ ಶೀರ್ಷಿಕೆಯ ಈ ಕತೆಯಲ್ಲಿ ಹೆಮಿಂಗ್ವೆ ಬಿಚ್ಚಿಡುತ್ತಾರೆ. ಈ ಕಥೆಯಲ್ಲಿ ಫಿರಂಗಿಗಳಿಲ್ಲ. ಬಾಂಬುಗಳಿಲ್ಲ. ವೈಮಾನಿಕ ದಾಳಿಯ ಸದ್ದುಗಳಿಲ್ಲ ಅಥವಾ ಯುದ್ಧ ಅಂದರೆ ಇವೇ ಅಲ್ಲ. ಇದರಾಚೆಗೆ ಯುದ್ಧದಲ್ಲಿ ಭಾವ ನಾತ್ಮಕ ಅಂಶಗಳಿವೆ. ಸಾಮಾನ್ಯವಾಗಿ, ಬಾಂಬು ದಾಳಿಗೀಡಾಗಿ ಕುಸಿದು ಹೋದ ಕಟ್ಟಡಗಳ ಚಿತ್ರಗಳು ನಮಗೆ ಆರ್ಥಿಕ ನಾಶ-ನಷ್ಟಗಳ ಪ್ರಮಾಣವನ್ನಷ್ಟೇ ತಕ್ಪಣಕ್ಕೆ ಹೇಳಬಲ್ಲವು. ಆದರೆ ಆ ಕುಸಿದ ಕಟ್ಟಡಗಳ ಒಳಗೆ ಇದ್ದಿರಬಹುದಾದ ಮನುಷ್ಯರ ಭಾವನೆ ಗಳು ಏನೇನಿರಬಹುದು? ಅವರು ವಲಸೆ ಹೋಗಿರಬಹುದೇ? ಹೋಗುವಾಗ ಅವರು ಯಾವೆಲ್ಲ ನೆನಪುಗಳನ್ನು ಹೊತ್ತುಕೊಂಡು ಹೋಗಿರಬಹುದು? ತಮ್ಮಿಷ್ಟದ ಏನೆಲ್ಲವನ್ನು ಬಿಟ್ಟು ಹೋಗಬೇಕಾಗಿ ಬಂದಿರಬಹುದು? ಎಷ್ಟು ಬಾರಿ ಕಣ್ಣೀರು ಸುರಿಸಿರಬಹುದು? ಹೂವಿನ ಗಿಡ, ಹಣ್ಣುಗಳ ಮರಗಳು, ಕೈತೋಟ, ಸಾಕು ಪ್ರಾಣಿ ಗಳು, ಇಷ್ಟದ ಡ್ರಾಯಿಂಗ್ ರೂಮ್, ಮಂಚ.. ಇತ್ಯಾದಿಗಳಿಗೆಲ್ಲ ವಿದಾಯ ಕೋರಬೇಕಾದ ಆ ಸಂದರ್ಭಗಳು ಹೇಗಿರಬಹುದು? ಇನ್ನು, ವಲಸೆ ಹೋಗಬೇಕಾದ ದಾರಿಯ ಬಗ್ಗೆ, ತಲುಪಬೇಕಾದ ಗುರಿಯ ಕುರಿತು ಏನೆಲ್ಲ ಆತಂಕಗಳಿರಬಹುದು? ಹೀಗೆ ಬರೇ ಸಾವುಗಳಷ್ಟೇ ಯುದ್ಧವಲ್ಲ ಎಂಬುದನ್ನು ‘ಓಲ್ಡ್ ಮ್ಯಾನ್ ಅಟ್ ದ ಬ್ರಿಡ್ಜ್’ ಎಂಬ ಕತೆ ನವಿರಾಗಿ ಹೇಳುವಾಗ ಅಬೂ ಅಲಿಯ ನೈಜ ಬದುಕು ಯುದ್ಧದ ಇನ್ನೊಂದು ಪಾಶ್ರ್ವವನ್ನು ಹೇಳುತ್ತದೆ.
     ಇರಾಕ್‍ನ ಅಬೂ ಅಲಿ ಕೆಲಸ ಮಾಡುತ್ತಿರುವುದು ಅರಬ್ ರಾಷ್ಟ್ರವೊಂದರಲ್ಲಿ. ಆತ ತಜ್ಞ ಕಾರ್ ಮೆಕ್ಯಾನಿಕ್ ಆಗಿ ಗುರುತಿಸಿ ಕೊಂಡಿದ್ದ. ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿನ ತುಂಬು ಸಂಸಾರ. 2003ರಲ್ಲಿ ಇರಾಕ್‍ನ ಮೇಲೆ ಅಮೇರಿಕ ಯುದ್ಧ ಘೋಷಿಸುವ ಮೊದಲು ಇರಾಕ್‍ನಲ್ಲಿ ಎಲ್ಲವೂ ಸಹಜ ವಾಗಿತ್ತು. ಅಬೂ ಅಲಿಯ ಕುಟುಂಬವೂ ಸುಖವಾಗಿತ್ತು. ಯುದ್ಧ ಕ್ಕಿಂತ ಮೊದಲು ಅತ್ಯಧಿಕ ತಲಾ ಆದಾಯ ಇರುವ ರಾಷ್ಟ್ರಗಳಲ್ಲಿ ಇರಾಕ್ ಮುಂಚೂಣಿಯಲ್ಲಿತ್ತು. ಇರಾಕ್ ದಿನಾರ್ ಎಂಬುದು ಅತ್ಯಧಿಕ ಬೆಲೆಬಾಳುವ ಕರೆನ್ಸಿಯಾಗಿತ್ತು. ಶೈಕ್ಪಣಿಕವಾಗಿಯೂ ಸಾಕಷ್ಟು ಮುಂದುವರಿದಿದ್ದ ದೇಶ ಇರಾಕ್. ಅದಕ್ಕೆ ಸಾಕ್ಷಿ ಎಂಬಂತೆ ಅಬೂ ಅಲಿ ಮತ್ತು ಪತ್ನಿ ಸಮೀರಾ ಪಟಪಟನೆ ಇಂಗ್ಲಿಷ್ ಮಾತಾಡುವುದನ್ನು ಉಲ್ಲೇಖಿಸಬಹುದು. ಆದರೆ, 2003ರ ಯುದ್ಧದಲ್ಲಿ ಅಬೂ ಅಲಿಯ ಸಹೋದರ ಹತ್ಯೆ ಗೀಡಾಗುತ್ತಾರೆ. ಸುಖವಾಗಿದ್ದ ಕುಟುಂಬದ ಮೇಲೆ ಎರಗಿದ ಮೊದಲ ಆಘಾತ ಅದು. ಸಂದರ್ಭಕ್ಕೆ ತಕ್ಕಂತೆ ಅಬೂ ಅಲಿ ತನ್ನ ಕುಟುಂಬವನ್ನು ತನ್ನಲ್ಲಿಗೆ ಕರೆಸಿಕೊಳ್ಳುತ್ತಿದ್ದರು. ಒಂದೆರಡು ತಿಂಗಳು ಇದ್ದು ಕುಟುಂಬ ಮರಳಿ ಹೋಗುತ್ತಿತ್ತು. ಯುದ್ಧದ ಬಳಿಕದ ಇರಾಕ್‍ನಲ್ಲಿ ಬದುಕೆಂಬುದು ದೊಡ್ಡ ಸವಾಲು. ಅಬೂ ಅಲಿ ಇರುವಲ್ಲಿಗೆ ಬರುತ್ತಿದ್ದ ಪತ್ನಿ ಮತ್ತು ಮಕ್ಕಳು ಹಿಂತಿರುಗಿ ಹೋಗಲು ಇಷ್ಟಪಡುತ್ತಿರಲಿಲ್ಲ. ಹಾಗಂತ, 6 ಲಕ್ಪದಷ್ಟು ಜನರನ್ನು ಬಲಿ ಪಡೆದ ಮತ್ತು ಅದಕ್ಕಿಂತಲೂ ಹೆಚ್ಚು ನಾಶನಷ್ಟಗಳಿಗೆ ಕಾರಣವಾದ ಇರಾಕನ್ನು ಯಾರಾದರೂ ವಾಸಸ್ಥಳವಾಗಿ ಆಯ್ಕೆ ಮಾಡಿಕೊಳ್ಳುವುದು ಸಣ್ಣ ಧೈರ್ಯವಲ್ಲವಲ್ಲ. ಅಲ್ ಹಾಯ್ ಮೋಟರ್ಸ್‍ನಲ್ಲಿ ದುಡಿಯುತ್ತಿದ್ದ ಅಬೂ ಅಲಿಯು ಪತ್ನಿ ಮತ್ತು ಮಕ್ಕಳ ಬೇಡಿಕೆಯನ್ನು ಸಂಪೂರ್ಣ ಒಪ್ಪಿಕೊಳ್ಳುವ ಸ್ಥಿತಿಯಲ್ಲೂ ಇರಲಿಲ್ಲ. ಇರಾಕ್ ಯುದ್ಧದ ಮೊದಲು ಒಂದು ಇರಾಕಿ ದಿನಾರ್‍ಗೆ ಸಿಗುತ್ತಿದ್ದ ಪೆಪ್ಸಿಯು ಯುದ್ಧಾನಂತರ 36 ದಿನಾರ್‍ಗೆ ತನ್ನ ಬೆಲೆಯನ್ನು ಏರಿಸಿಕೊಂಡಿತ್ತು ಅಥವಾ ದಿನಾರ್‍ನ ಬೆಲೆ ಅಷ್ಟರ ಮಟ್ಟಿಗೆ ಕುಸಿದು ಹೋಗಿತ್ತು. ಕಳ್ಳತನ, ದರೋಡೆ, ಸುಲಿಗೆಗಳು ಸಾಮಾನ್ಯ ಅನ್ನಬಹುದಾದ ಸ್ಥಿತಿಗೆ ತಲುಪಿದುವು. ಅದರ ಬಿಸಿ ಒಂದು ದಿನ ಅಬೂ ಅಲಿಯ ಕುಟುಂಬಕ್ಕೂ ತಾಗಿತು. ದರೋಡೆ ಕೋರರ ಗುಂಪು ಅಬೂ ಅಲಿಯ ಮನೆಯನ್ನು ಹೊಕ್ಕವು. ಪತ್ನಿ, ಮಕ್ಕಳನ್ನು ಮನೆಯೊಳಗೆ ಆ ಗುಂಪು ಬಂಧಿಯಾಗಿಸಿತು. ಪ್ರತಿಭಟಿಸಿದ ಪತ್ನಿಯ ಅಕ್ಕಳ ಎಡ ಭುಜಕ್ಕೆ ದರೋಡೆಕೋರನೊಬ್ಬ ಗುಂಡು ಹೊಡೆದ. ಮನೆಯಲ್ಲಿದ್ದ ಹಣ, ಆಭರಣ ಎಲ್ಲವನ್ನೂ ಅವರು ಹೊತ್ತೊಯ್ದರು. ಜೀವ ಉಳಿದಿದೆ ಅನ್ನುವುದನ್ನು ಬಿಟ್ಟರೆ ಅಬೂ ಅಲಿಗೆ ನೆಮ್ಮದಿ ಕೊಡಬಹುದಾದ ಇನ್ನಾವುದೂ ಅಲ್ಲಿ ಉಳಿದಿರಲಿಲ್ಲ.
       ನಿಜವಾಗಿ, ಸೇತುವೆಯ ತುದಿಯಲ್ಲಿ ಕುಳಿತು ತನ್ನ ಸಾಕು ಪ್ರಾಣಿಗಳ ಬಗ್ಗೆ ಚಿಂತಿಸುತ್ತಾ ಭಾವುಕನಾದ ‘ಓಲ್ಡ್ ಮ್ಯಾನ್ ಅಟ್ ದ ಬ್ರಿಡ್ಜ್’ ಕತೆಯ ಆ ವೃದ್ಧ ಮತ್ತು ಬೆಂಜ್, ಬಿಎಂಡಬ್ಲ್ಯು, ರಾಲ್ಸ್ ರಾಯ್ ಕಾರುಗಳ ಅಡಿಯಲ್ಲಿ ಸ್ಪಾನರ್ ಮತ್ತಿತರ ಉಪ ಕರಣಗಳನ್ನು ಹಿಡಿದು ತನ್ನ ಪತ್ನಿ-ಮಕ್ಕಳನ್ನು ಧ್ಯಾನಿಸುತ್ತಿರುವ ಅಬೂ ಅಲಿಯು ಯುದ್ಧವೊಂದರ ಬೇರೆ ಬೇರೆ ಮುಖಗಳಾಗಿದ್ದಾರೆ. ಓರ್ವರು ತನ್ನ ಸಾಕು ಪ್ರಾಣಿಯ ಮೂಲಕ ತನ್ನನ್ನು ಅಭಿವ್ಯಕ್ತಿಸಿ ಕೊಂಡರೆ, ಇನ್ನೋರ್ವರು ತನ್ನ ಕುಟುಂಬದ ಮೂಲಕ ತನ್ನೊಳ ಗನ್ನು ಬಿಚ್ಚಿಡುತ್ತಾರೆ. ಅಬೂ ಅಲಿ ಇತ್ತಿತ್ತಲಾಗಿ ಚಿಕ್ಕ ಚಿಕ್ಕ ವಿಷಯಕ್ಕೂ ಕಣ್ಣೀರಾಗುತ್ತಾರೆಂದು ಜೊತೆಗಾರರು ಹೇಳುತ್ತಾರೆ. ಆರ್ಥಿಕ ನಷ್ಟದ ಹೊರತಾಗಿ ಯುದ್ಧವೊಂದು ಯಾಕೆ ಚರ್ಚಿತ ಗೊಳ್ಳಬೇಕು ಎಂಬುದನ್ನು ಸಾರುವ ಎರಡು ಮುಖಗಳು ಇವು. ಊರಲ್ಲಿರುವ ಕುಟುಂಬವನ್ನು ಅಬೂ ಅಲಿ ನೆನೆಯುವಾಗ ಊರಲ್ಲಿ ಬಿಟ್ಟು ಬಂದಿರುವ ಬೆಕ್ಕಿಗಾಗಿ ಆ ವೃದ್ಧ ಹಪಹಪಿಸುತ್ತಾನೆ. ಹಾಗಂತ, ಆ ವೃದ್ಧನಿಗೆ ಹೋಲಿಸಿದರೆ ಅಬೂ ಅಲಿಗೆ ಎಲ್ಲವೂ ಇದೆ. ಊರೂ ಇದೆ. ಕುಟುಂಬವೂ ಇದೆ. ಆದರೂ ಭಯ. ಯಾವಾಗ ಇವರೆಲ್ಲ ಇಲ್ಲವಾಗುತ್ತಾರೋ ಅನ್ನುವ ಭಯ. ತಾತ ನಿಗೋ ತನ್ನವು ಅನ್ನುವ ಎಲ್ಲವೂ ಕಳೆದು ಹೋದುದರ ನೋವು. ಆದ್ದರಿಂದಲೇ, ಯುದ್ಧ ಭೀತಿಯಿಲ್ಲದೇ ಸುಖವಾಗಿ ಬದುಕುತ್ತಿರುವ ಎಲ್ಲರನ್ನೂ ತಟ್ಟಬೇಕಾದ ಎರಡು ಪಾತ್ರಗಳು ಅಬೂ ಅಲಿ ಮತ್ತು ಆ ವೃದ್ಧ. ಒಂದು ವೇಳೆ ಆ ಸ್ಥಿತಿ ನಮಗೂ ಅನಿವಾರ್ಯವಾದರೆ..
       ಕಳೆದವಾರ ಓದಲು ಸಿಕ್ಕ ಆ ತಾತ ಮತ್ತು ಅಬೂ ಅಲಿಯನ್ನು ನಿಮಗೂ ಹೀಗೆ ಪರಿಚಯಿಸಬೇಕೆನಿಸಿತು.