Saturday, March 18, 2017

ಗೋಡ್ಸೆಯ ಬಂದೂಕಿನಿಂದ ಮಂಜೇರ್‍ನ ಪಿಸ್ತೂಲ್‍ವರೆಗೆ..

       1. ಗುಂಡೇಟು ತಗುಲಿ ಕುಸಿದು ಬಿದ್ದ ಮಹಾತ್ಮಾ ಗಾಂಧಿಯವರನ್ನು ಪಕ್ಕದ ಆಸ್ಪತ್ರೆಗೆ ಕೊಂಡೊಯ್ಯದೇ ಇದ್ದುದು ಯಾಕಾಗಿ?
      2. ನಾಥೂರಾಂ ಗೋಡ್ಸೆಯನ್ನು ಹಿಡಿದ ಅಮೇರಿಕನ್ ರಾಯಭಾರ ಕಚೇರಿಯ ಉದ್ಯೋಗಿ ಟೋ ರೈನರ್ ನನ್ನು ಮತ್ತು ಗೋಡ್ಸೆಯಿಂದ ಬಂದೂಕನ್ನು ಕಿತ್ತುಕೊಂಡ ಭಾರತೀಯ ವೈಮಾನಿಕ ದಳದ ಉದ್ಯೋಗಿ ಡಿ.ಆರ್. ಸಿಂಗ್‍ರನ್ನು ವಿಚಾರಣೆಗೆ ಒಳಗಪಡಿಸದೇ ಇರಲು ಕಾರಣವೇನು?
      3. 1948 ಜನವರಿ 20ರಂದು ಬಿರ್ಲಾ ಮಂದಿರದಲ್ಲಿ ಗಾಂಧೀಜಿಯವರ ವಿರುದ್ಧ ಹತ್ಯಾ ಯತ್ನ ನಡೆದ ಬಳಿಕವೂ ಅವರಿಗೆ ಗರಿಷ್ಠ ಭದ್ರತಾ ವ್ಯವಸ್ಥೆಯನ್ನು ಮಾಡದಿರುವುದಕ್ಕೆ ಬೇರೇನಾದರೂ ಕಾರಣಗಳಿವೆಯೇ? ಹಾಗಂತ, ಅದು ಪ್ರಥಮ ಹತ್ಯಾ ಯತ್ನ ಆಗಿರಲಿಲ್ಲ. 1934 ಜೂನ್ 25ರಂದು, 1944 ಜುಲೈ ಮತ್ತು ಸೆಪ್ಟೆಂಬರ್‍ನಲ್ಲೂ ಹತ್ಯಾಯತ್ನ ನಡೆದಿತ್ತು. ಇಷ್ಟಿದ್ದೂ, ಭದ್ರತೆಯ ವಿಷಯದಲ್ಲಿ ಈ ಮಟ್ಟಿನ ನಿರ್ಲಕ್ಷ್ಯಕ್ಕೆ ಕಾರಣವೇನು?
      4. ನಾಥೂರಾಂ ಗೋಡ್ಸೆ ಬಳಸಿದ ಬಂದೂಕಿನ ಬಗ್ಗೆ ಯಾವ ವಿಚಾರಣೆಯೂ ನಡೆದಿಲ್ಲವೇಕೆ? ಅದರ ಒಡೆಯ ಯಾರೆಂಬ ಬಗ್ಗೆ ತನಿಖೆ ನಡೆದಿಲ್ಲವೇಕೆ? 1948 ಜನವರಿ 28ರಂದು ನಾಥೂರಾಂ ಗೋಡ್ಸೆ ಮಧ್ಯಪ್ರದೇಶದ ಗ್ವಾಲಿಯರ್‍ಗೆ ತಲುಪುತ್ತಾನೆ. ಅಲ್ಲಿ ಅವನಿಗೆ ಗಂಗಾಧರ್ ದಂಡವತೆ ಎಂಬವರು ಈ ಬಂದೂಕನ್ನು ನೀಡಿದ್ದಾರೆ ಅನ್ನುವುದು ಸ್ಪಷ್ಟವಾಗಿದೆ. ಅಲ್ಲದೇ, ಆ ಬಂದೂಕಿನ ನೈಜ ಒಡೆಯ ತಾನಲ್ಲವೆಂದು ಅವರು ಹೇಳಿದ್ದಾರೆ. ಅದನ್ನು ಜಗದೀಶ್ ಚಂದ್ರ ಗೋಯಲ್‍ನಿಂದ ತಾನು ಪಡೆದಿರುವುದಾಗಿ ದಂಡವತೆ ಹೇಳಿದ್ದಾರೆ. ಇದನ್ನು ಗೋಯಲ್ ಕೂಡ ಒಪ್ಪಿಕೊಂಡಿದ್ದಾರೆ. ಆದರೆ ಆ ಬಂದೂಕಿಗೆ ಇಷ್ಟು ಸಣ್ಣ ಇತಿಹಾಸ ಮಾತ್ರ ಇರುವುದಲ್ಲ. ಗೋಡ್ಸೆಯ ಕೈಗೆ ಆ ಬಂದೂಕು ತಲುಪುವ ಮೊದಲು ಹಲವರ ಕೈ ಬದಲಾಗಿದೆ. ಅದು ಇಟಲಿಯಲ್ಲಿ ತಯಾರಾದ ಬಂದೂಕು. ಆದ್ದರಿಂದಲೇ ಅಂದಿನ ಕಾಲದಲ್ಲಿ ತುಂಬಾ ದುಬಾರಿಯೂ ಆಗಿತ್ತು. ಸಾಮಾನ್ಯ ವ್ಯಕ್ತಿಯೋರ್ವ ಅದನ್ನು ಖರೀದಿಸುವುದು ಸಾಧ್ಯವಿರಲಿಲ್ಲ. ಗ್ವಾಲಿಯರ್‍ನ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ದಂಡವತೆಯವರ ಪುತ್ರ ಚಂದ್ರಶೇಖರ್ ಅವರು ಆ ಬಂದೂಕಿನ ಬಗ್ಗೆ 2012ರಲ್ಲಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಜೊತೆ ಹೀಗೆ ಹೇಳಿಕೊಂಡಿದ್ದರು,
      ‘ಆ ಬಂದೂಕಿನ ಮೂಲದ ರಹಸ್ಯವನ್ನು ಹಲವು ವರ್ಷಗಳಿಂದ ಕಾಪಿಟ್ಟುಕೊಂಡು ಬರಲಾಗಿದೆ. ಅದನ್ನು ಇವತ್ತು ಬಹಿರಂಗಪಡಿಸಿದರೆ ದೊಡ್ಡ ರಾಷ್ಟ್ರೀಯ ಭೂಕಂಪವೇ ಉಂಟಾದೀತು. ಈ ವಯಸ್ಸಿನಲ್ಲಿ (58) ಬೆದರಿಕೆ, ಆರೋಪಗಳನ್ನು ಎದುರಿಸುತ್ತಾ ಬದುಕುವುದು ನನ್ನಿಂದ ಸಾಧ್ಯವಿಲ್ಲ..’
    ಗಾಂಧೀಜಿಯವರ ಹತ್ಯೆಯ ಅಪರಾಧಕ್ಕಾಗಿ 1949 ಫೆಬ್ರವರಿ 10ರಂದು ನಾಥೂರಾಂ ಗೋಡ್ಸೆ ಮತ್ತು ನಾರಾಯಣ ಆಪ್ಟೆಗೆ ನ್ಯಾಯಾಲಯ ಗಲ್ಲು ಶಿಕ್ಷೆಯನ್ನು ವಿಧಿಸುತ್ತದೆ. ಗೋಪಾಲ್ ಗೋಡ್ಸೆ, ವಿಷ್ಣು ಕರ್ಕರೆ, ಮದನ್ ಲಾಲ್ ಪಹ್‍ವ, ಶಂಕರ್ ಕಿಸ್ತಯ್ಯ, ದತ್ತಾತ್ರೇಯ ಪರ್ಚರೆಗೆ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ಘೋಷಿಸುತ್ತದೆ. ವಿ.ಡಿ. ಸಾವರ್ಕರ್‍ರನ್ನು ದೋಷಮುಕ್ತ ಗೊಳಿಸುತ್ತದೆ. ದಿಗಂಬರ್ ರಾಮಚಂದ್ರ ಬಾಡ್ಜೆ ಮಾಫಿ ಸಾಕ್ಷಿಯಾಗಿ ಬದಲಾದುದರಿಂದ ಆತನೂ ಹೊರ ಬರುತ್ತಾನೆ. 1949 ನವೆಂಬರ್ 15ರಂದು ಅಂಬಾಲ ಜೈಲಿನಲ್ಲಿ ನಾಥೂರಾಂ ಗೋಡ್ಸೆಯನ್ನು ಗಲ್ಲಿಗೇರಿಸಲಾಗುತ್ತದೆ. ನೇಣುಗಂಭದ ಕಡೆಗೆ ಸಾಗುವಾಗ ಆತ ಅಖಂಡ್ ಭಾರತ್ ಎಂದು ಕೂಗಿಕೊಳ್ಳುತ್ತಾನೆ. ನೇಣುಗಂಭಕ್ಕೇರುವಾಗ, ‘ನಮಸ್ತೆ ಸದಾ ವತ್ಸಲೆ, ಮಾತೃಭೂಮೆ.. ಭಾರತ್ ಮಾತಾಕಿ ಜೈ’ ಎಂದು ಘೋಷಿಸುತ್ತಾನೆ. ಹೀಗೆ ಈ ಅಪರಾಧಿಗಳಲ್ಲಿ ಓರ್ವನಾದ ಗೋಪಾಲ್ ಗೋಡ್ಸೆಯ ಮಗಳು ಹಿಮಾನಿ ಸಾವರ್ಕರ್ ಟೈಮ್ಸ್ ಆಫ್ ಇಂಡಿಯಾದೊಂದಿಗೆ 2012 ಅಕ್ಟೋಬರ್ 2ರಂದು ಹೀಗೆ ಹೇಳಿಕೊಂಡಿದ್ದರು -
     ‘ಬಂದೂಕಿನ ನಿಜ ಒಡೆಯ ಯಾರೆಂದು ತಂದೆಯವರೊಂದಿಗೆ ಹಲವು ಬಾರಿ ಪ್ರಶ್ನಿಸಿದ್ದೇನೆ. ಆದರೆ ಮೌನವೇ ಅವರ ಉತ್ತರವಾಗಿತ್ತು’ (Mystery  shrouds ownership of pistol that killed Baapu, P. Naveen Oct. 2, 2012). ಇವೆಲ್ಲ ಏನನ್ನು ಸೂಚಿಸುತ್ತದೆ? ಯಾಕೆ ಈ ಬಂದೂಕಿನ ಬಗ್ಗೆ ಇಷ್ಟು ರಹಸ್ಯವನ್ನು ಈವರೆಗೂ ಕಾಪಿಟ್ಟುಕೊಳ್ಳಲಾಗಿದೆ? ಗಾಂಧೀಜಿಯವರ ಹತ್ಯೆಯಾಗುವುದಕ್ಕಿಂತ ಒಂದು ದಿನ ಮೊದಲು ನಾಗಪುರದ ಪ್ರೊಫೆಸರ್ ಒಬ್ಬರು ತಮ್ಮ ವಿದ್ಯಾರ್ಥಿಗಳೊಂದಿಗೆ ಈ ಹತ್ಯೆಯ ಬಗ್ಗೆ ಮುಂಚಿತವಾಗಿ ತಿಳಿಸಿದ್ದರು ಎಂದು 1948 ಫೆಬ್ರವರಿ 7ರ ಇಂಡಿಯನ್ ಎಕ್ಸ್ ಪ್ರೆಸ್‍ನಲ್ಲಿ ಸುದ್ದಿ ಪ್ರಕಟವಾಗಿತ್ತು. ಹತ್ಯೆಯ ಬಳಿಕ ನಾಗಪುರದ ಸಿಟಿ ಕಾಲೇಜಿನ ಪ್ರೊ. ವರಹದ್ ಪಾಂಡೆಯವರನ್ನು ಬಂಧಿಸಲಾಗಿರುವುದು ಇದನ್ನು ಪುಷ್ಠೀಕರಿಸುತ್ತದೆ. ಅಷ್ಟಕ್ಕೂ,
      ಇವೆಲ್ಲವನ್ನೂ ಇಲ್ಲಿ ಹಂಚಿಕೊಳ್ಳುವುದಕ್ಕೆ ಒಂದು ಕಾರಣವಿದೆ.
       ಮಾರ್ಚ್ 8ರಂದು ಉತ್ತರ ಪ್ರದೇಶದಲ್ಲಿ ಕೊನೆಯ ಹಂತದ ಮತದಾನ ನಡೆಯುತ್ತಿತ್ತು. ದೇಶದ ಪ್ರಮುಖ ಟಿ.ವಿ. ಚಾನೆಲ್‍ಗಳು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ನೇರಪ್ರಸಾರದಲ್ಲಿ ಬ್ಯುಸಿಯಾಗಿದ್ದುವು. ಮಾರ್ಚ್ 7ರಂದು ಭೋಪಾಲ್-ಉಜ್ಜೈನ್‍ನ ನಡುವೆ ಸಂಚರಿಸುವ ಪ್ರಯಾಣಿಕರ ರೈಲಿನಲ್ಲಿ ಸಣ್ಣ ಪ್ರಮಾಣದ ಸ್ಫೋಟ ಸಂಭವಿಸಿತು. ಆರಂಭದಲ್ಲಿ ಅದು ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದ ಆದ ಸ್ಫೋಟ ಎಂದು ನಂಬಲಾಯಿತು. 8 ಮಂದಿ ಗಾಯಗೊಂಡರು. ಆರಂಭದಲ್ಲಿ ಸಾಮಾನ್ಯ ಘಟನೆಯಾಗಿ ಗುರುತಿಗೀಡಾದ ಸ್ಫೋಟವು ಕೆಲವೇ ಗಂಟೆಗಳಲ್ಲಿ ಭಯೋತ್ಪಾದಕ ದಾಳಿಯಾಗಿ ಬದಲಾಯಿತು. ಮಾರ್ಚ್ 8ರ ಮುಂಜಾನೆ ರಾಷ್ಟ್ರೀಯ ಟಿ.ವಿ. ಚಾನೆಲ್‍ಗಳು ಪ್ರಕರಣವನ್ನು ಎತ್ತಿಕೊಂಡವು. ಆರಂಭದಲ್ಲಿ ಅವು ಕೊಟ್ಟ ಶೀರ್ಷಿಕೆಗಳು ಬಹುತೇಕ ಈ ಮಟ್ಟದಲ್ಲಿತ್ತು-
1. ಭಾರತದಲ್ಲಿ ಮೊಟ್ಟ ಮೊದಲ ಐಸಿಸ್ ದಾಳಿ..
2. ಉಜ್ಜೈನ್ ಸ್ಫೋಟದ ಮೂಲವನ್ನು ಲಕ್ನೋದಲ್ಲಿ ಪತ್ತೆ ಹಚ್ಚಲಾಗಿದೆ..
3. ಸಿರಿಯಾಕ್ಕೆ ಸ್ಫೋಟದ ಚಿತ್ರವನ್ನು ರವಾನಿಸಿದ ದಾಳಿಕೋರರು..
       ಬಳಿಕ ಲಕ್ನೋದ ಥಾಕೂರ್‍ಗಂಜ್‍ಗೆ ದೃಶ್ಯಮಾಧ್ಯಮಗಳ ಕ್ಯಾಮರಾಗಳು ತಿರುಗಿದುವು. ಅಲ್ಲಿ ಶಂಕಿತ ಭಯೋತ್ಪಾದಕರ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯ ನೇರಪ್ರಸಾರವನ್ನು ಮಾಡತೊಡಗಿದುವು. ನಡುನಡುವೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಗುಜರಾತ್‍ನ ಸೋಮನಾಥ ದೇವಾಲಯಕ್ಕೆ ಭೇಟಿ ನೀಡುತ್ತಿರುವುದನ್ನು ತೋರಿಸತೊಡಗಿದುವು. ಹಾಗಂತ, ಶಂಕಿತ ಭಯೋತ್ಪಾದಕರಿಗೂ ಐಸಿಸ್‍ಗೂ ನಡುವೆ ಸಂಬಂಧ ಇದೆ ಎಂದು ಕೇಂದ್ರದ ಗೃಹ ಇಲಾಖೆಯಾಗಲಿ ಅಥವಾ ಉತ್ತರ ಪ್ರದೇಶದ ಪೊಲೀಸರಾಗಲಿ ಏನನ್ನೂ ಹೇಳಿರಲಿಲ್ಲ. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ರಾಜ್ಯ ಗೃಹ ಸಚಿವ ಭೂಪೇಂದ್ರ ಸಿಂಗ್‍ರ ಹೇಳಿಕೆಯ ಹೊರತು ಐಸಿಸ್ ಭೂತಕ್ಕೆ ಇನ್ನಾವ ಪುರಾವೆಯೂ ಇರಲಿಲ್ಲ. ಆದರೆ ಚಾನೆಲ್‍ಗಳು ವಿವಿಧ ತಜ್ಞರನ್ನು ಕೂರಿಸಿ ದಿನವಿಡೀ ಚರ್ಚಿಸಿದುವು. ಐಸಿಸ್‍ನ ಮುಂದಿನ ಕಾರ್ಯಾಚರಣೆ, ಅದು ಯುವಕರನ್ನು ತೆಕ್ಕೆಗೆ ಹಾಕಿಕೊಳ್ಳುವ ವಿಧಾನ, ಭಾರತದಲ್ಲಿ ಅದರ ಪ್ರಭಾವ, ಅದನ್ನು ಎದುರಿಸುವ ಬಗೆ.. ಎಲ್ಲವನ್ನೂ ಅತ್ಯಂತ ಅದ್ಭುತವಾಗಿ ಅವು ಕಟ್ಟಿಕೊಟ್ಟವು. ವಿಶೇಷ ಏನೆಂದರೆ, ಯಾವ ತಜ್ಞರೂ ಸುದ್ದಿಯ ಮೂಲವನ್ನು ಪ್ರಶ್ನಿಸಲಿಲ್ಲ. ಸುದ್ದಿಯ ಅಧಿಕೃತತೆಯ ಬಗ್ಗೆ ಸ್ಪಷ್ಟೀಕರಣ ಕೋರ ಲಿಲ್ಲ. ಆರಂಭದಲ್ಲಿ ಉತ್ತರ ಪ್ರದೇಶದ ಸ್ಥಳೀಯ ಚಾನೆಲ್ ಒಂದು ಸೈಫುಲ್ಲಾ ಮತ್ತು ಇನ್ನಿಬ್ಬರ ವಿರುದ್ಧದ ಕಾರ್ಯಾಚರಣೆಯ ನೇರ ಪ್ರಸಾರದಲ್ಲಿ ತೊಡಗಿತು. ಬಳಿಕ ರಾಷ್ಟ್ರೀಯ ದೃಶ್ಯ ಮಾಧ್ಯಮಗಳು ಪ್ರವೇಶಿಸಿದುವು. ಪಠಾಣ್‍ಕೋಟ್‍ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನೇರ ಪ್ರಸಾರ ಮಾಡಿದ ಆರೋಪದಲ್ಲಿ ಇತ್ತೀಚೆಗೆ ಓಆಖಿಗಿಯ ಮೇಲೆ ಕೇಂದ್ರ ಸರಕಾರ ನಿಷೇಧ ಹೇರಹೊರಟ ಘಟನೆ ಇನ್ನೂ ಹಸಿಯಾಗಿರುವಾಗಲೇ ಈ ನೇರ ಪ್ರಸಾರ ನಡೆಯಿತೆಂಬುದು ಇನ್ನೊಂದು ಸೋಜಿಗ. 26/11ರಂದು ಮುಂಬೈಯ ತಾಜ್ ಹೊಟೇಲ್‍ನ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ರಾಷ್ಟ್ರೀಯ ದೃಶ್ಯ ಮಾಧ್ಯಮಗಳು ನೇರ ಪ್ರಸಾರ ಮಾಡಿದ್ದುವು. ಆ ಬಗ್ಗೆ ಪರ-ವಿರುದ್ಧ ಚರ್ಚೆಗಳಾಗಿದ್ದುವು. ಇವುಗಳ ಪರಾಮರ್ಶೆಗೆ ಉನ್ನತ ಮಟ್ಟದ ತಜ್ಞರ ಸಮಿತಿಯನ್ನೂ ರಚಿಸಲಾಗಿತ್ತು. ಆ ನೇರ ಪ್ರಸಾರದಿಂದಾಗಿ ಕಾರ್ಯಾಚರಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ ಎಂದು ಸಮಿತಿ ಅಭಿಪ್ರಾಯ ಪಟ್ಟಿತು. ಇಷ್ಟಿದ್ದೂ, ಮಾರ್ಚ್ 8ರ ನೇರ ಪ್ರಸಾರ ಯಾಕೆ ಚರ್ಚೆಗೊಳಗಾಗಲಿಲ್ಲ? ಕೇಂದ್ರ ಸರಕಾರ ಈ ಬಗ್ಗೆ ಯಾವ ಆಕ್ಷೇಪವನ್ನೂ ವ್ಯಕ್ತಪಡಿಸಿಲ್ಲವೇಕೆ? ಅದೇ ದಿನ ಅಜ್ಮೀರ್ ಸ್ಫೋಟ ಪ್ರಕರಣದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯು ತೀರ್ಪು ನೀಡಿತು. ಸುನೀಲ್ ಜೋಶಿ, ದೇವೇಂದ್ರ ಗುಪ್ತ ಸಹಿತ ಮೂವರಿಗೆ ಜೀವಾವಧಿ ಶಿಕ್ಷೆಯಾಯಿತು. ಮ್ಯಾಜಿಸ್ಟ್ರೇಟರ್ ಮುಂದೆ ತಪ್ಪೊಪ್ಪಿಕೊಂಡಿದ್ದ ಅಸೀಮಾನಂದ ಆರೋಪ ಮುಕ್ತರಾದರು. ಭಯೋತ್ಪಾದನಾ ಕೃತ್ಯಗಳನ್ನು ನಡೆಸುವವರು ಯಾವುದಾದರೂ ನಿರ್ದಿಷ್ಟ ಸಮುದಾಯಕ್ಕೆ ಸೇರಬೇಕೆಂದಿಲ್ಲ ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ಸಾರಿದ ಸಂದರ್ಭ ಇದು. ಆದರೆ ಲೈವ್ ಕವರೇಜ್‍ನಲ್ಲಿ ನಿರತವಾಗಿದ್ದ ದೃಶ್ಯ ಮಾಧ್ಯಮಗಳು ಈ ತೀರ್ಪಿನಲ್ಲಿ ಯಾವ ಪ್ರಾಮುಖ್ಯತೆಯನ್ನೂ ಕಾಣಲಿಲ್ಲ. ಸಂಜೆಯ ವೇಳೆಗೆ ಸೈಫುಲ್ಲಾನ ಹತ್ಯೆಯ ಸುದ್ದಿಯನ್ನೂ ಆತನಿಂದ ಬಿಹಾರದ ಮಂಜೇರ್‍ನಲ್ಲಿ ತಯಾರಿಸಲಾದ ಪಿಸ್ತೂಲು ವಶಪಡಿಸಲಾಗಿರುವುದನ್ನೂ ಚಾನೆಲ್‍ಗಳು ಘೋಷಿಸಿದುವು. ಮತದಾನ ಮುಗಿದ ಬಳಿಕ ಗೃಹ ಸಚಿವ ರಾಜನಾಥ್ ಸಿಂಗ್‍ರಿಂದ ಸ್ಪಷ್ಟನೆ ಹೊರಬಿತ್ತು. ಶಂಕಿತ ಭಯೋತ್ಪಾದಕ ಸೈಫುಲ್ಲಾನಿಗೆ ಐಸಿಸ್‍ನೊಂದಿಗೆ ಸಂಬಂಧ ಇರುವ ಬಗ್ಗೆ ಅವರು ಏನನ್ನೂ ಹೇಳಲಿಲ್ಲ. ಮಗನ ಶವವನ್ನು ಪಡೆಯಲಾರೆ ಎಂದ ಸೈಫುಲ್ಲಾನ ತಂದೆಯನ್ನು ಅವರು ಹೊಗಳಿದರು. ಅಲ್ಲಿಗೆ ನೇರ ಪ್ರಸಾರ ಕೊನೆಗೊಂಡಿತು. ನಿಜವಾಗಿ, ಅನುಮಾನ ಆರಂಭವಾಗುವುದೇ ಅಲ್ಲಿಂದ. ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ನೇರ ಪ್ರಸಾರವಾಗಲು ಕಾರಣವೇನು? ಇದೇ ಕಾರಣಕ್ಕಾಗಿ NDTVಯ ಮೇಲೆ ನಿಷೇಧ ಹೇರಲು ಕೇಂದ್ರ ಸರಕಾರ ಹೊರಟ ಬಳಿಕವೂ ಚಾನೆಲ್‍ಗಳು ಮತ್ತದೇ ಧೈರ್ಯವನ್ನು ಹೇಗೆ ಪ್ರದರ್ಶಿಸಿದವು? ಕೇಂದ್ರ ಗೃಹ ಇಲಾಖೆ ಯಾಕೆ ಮಧ್ಯ ಪ್ರವೇಶ ಮಾಡಲಿಲ್ಲ? ಮತದಾನದ ದಿನ ದಿಢೀರ್ ಆಗಿ ದೃಶ್ಯ ಮಾಧ್ಯಮಗಳು ಜಿದ್ದಿಗೆ ಬಿದ್ದಂತೆ ನೇರ ಪ್ರಸಾರದಲ್ಲಿ ತೊಡಗಿರುವುದಕ್ಕೆ ಬೇರೇನಾದರೂ ಉದ್ದೇಶವಿದೆಯೇ ಅಥವಾ ಅದು ಸಹಜವೇ ಅಥವಾ ಅವು ಸಂಚಿಗೆ ಬಲಿಯಾದುವೇ? ಬಿಜೆಪಿಯ ಪರ ಮತದಾರರನ್ನು ಭಾವನಾತ್ಮಕವಾಗಿ ಸೆಳೆಯುವ ತಂತ್ರವು ಇದರ ಹಿಂದಿರಬಹುದೇ? ನಡುನಡುವೆ ಮೋದಿ ಮತ್ತು ಅಮಿತ್ ಶಾರ ಸೋಮನಾಥ ದೇವಾಲಯ ಭೇಟಿಯ ದೃಶ್ಯಗಳು ಪ್ರಸಾರವಾದುದು ಈ ತಂತ್ರದ ಭಾಗವೇ?
        ಗಾಂಧೀಜಿಯವರ ಹತ್ಯೆಯ ಸುತ್ತ ರಹಸ್ಯಗಳು ಇನ್ನೂ ಉಳಿದುಕೊಂಡಿರುವಂತೆಯೇ ಇಲ್ಲಿ ನಡೆಯುವ ಸ್ಫೋಟಗಳು, ಬಂಧನಗಳು ಮತ್ತು ಮಾಧ್ಯಮ ನಿಲುವುಗಳು ಮತ್ತೆ ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಾ ಹೋಗುತ್ತಿರುವುದೇಕೆ? ನಿಜ ಏನು?



No comments:

Post a Comment