Monday, May 19, 2014

ಗುರುಶರಣ್ ಕ್ಷಮಿಸಿದರೆಂದು ಜನರೇಕೆ ಕ್ಷಮಿಸಬೇಕು ಪ್ರಧಾನಿಗಳೇ?


ಲೆ ವವಡೆ
ಮಾರ್ಕಸ್ ಚ್ಯೂಸೆಸ್ಕ್ಯೂ
ಮಿಖಾಯಿಲ್ ಗೋರ್ಬಚೇವ್
   .. 1987-92 ಮಧ್ಯೆ ಜಾಗತಿಕ ಸುದ್ದಿಯ ಕೇಂದ್ರವಾಗಿದ್ದವರಲ್ಲಿ ಇವರೆಲ್ಲ ಸೇರಿದ್ದರು. ಪೋಲೆಂಡಿನಲ್ಲಿ ನಡೆದ ಕ್ರಾಂತಿಯ ನೇತೃತ್ವವನ್ನು ವವಡೆ ವಹಿಸಿಕೊಂಡಿದ್ದರು. ರುಮೇನಿಯಾದ ಮಂದಿ ಮಾರ್ಕಸ್ ಚ್ಯೂಸೆಸ್ಕ್ಯೂವನ್ನು ಅಧಿಕಾರದಿಂದ ಕೆಳಗಿಳಿಸಿದರು. ಯುಗೋಸ್ಲಾವಿಯಾ, ಬಲ್ಗೇರಿಯಾ, ಚಕೋಸ್ಲವಾಕಿಯಗಳೆಲ್ಲ ಸರಕಾರಿ ವಿರೋಧಿ ಪ್ರತಿಭಟನೆ ಮತ್ತು ದಮನಗಳ ಕಾರಣಕ್ಕಾಗಿ ಸುದ್ದಿಯಲ್ಲಿದ್ದುವು. ರಷ್ಯಾದಲ್ಲಿ ಮಿಖಾಯಿಲ್ ಗೋರ್ಬಚೇವ್‍ರು ಪೆರಸ್ಟ್ರಾಯಿಕಾ ಮತ್ತು ಗ್ಲಾಸ್‍ನೋಸ್ತ್ ಎಂಬ ಎರಡು ಸುಧಾರಣಾ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. ಒಂದು ರೀತಿಯಲ್ಲಿ, ಕಮ್ಯುನಿಸಮ್‍ನ ಹಿಡಿತದಿಂದ ಮುಕ್ತವಾಗುವುದಕ್ಕೆ 1987-92ರ ನಡುವೆ ಜಗತ್ತಿನ ಕೆಲವು ರಾಷ್ಟ್ರಗಳಲ್ಲಿ ಪ್ರಯತ್ನಗಳು ನಡೆದುವು. ಕಮ್ಯುನಿಸ್ಟ್ ಪ್ರಭಾವಿತ ಸೋಶಿಯಲ್ ಇಕನಾಮಿಕ್ಸ್ ನಿಂದ ಬಂಡವಾಳಶಾಹಿ ಅರ್ಥವ್ಯವಸ್ಥೆಯಾದ ಲಿಬರಲ್ ಇಕನಾಮಿಕ್ಸ್ ನೆಡೆಗೆ ಅಸೆಗಣ್ಣಿನಿಂದ ನೋಡುವ ಮಂದಿ ಹೆಚ್ಚಾದರು. ಕಮ್ಯೂನಿಸಮ್ ವಿಚಾರಧಾರೆಯಲ್ಲಿ ಸಡಿಲ ಮಾಡಿಕೊಳ್ಳಲು ಅಥವಾ ಪೂರ್ಣವಾಗಿ ಅದರಿಂದ ಹೊರಬರಲು ವಿವಿಧ ರಾಷ್ಟ್ರಗಳು ಪ್ರಯತ್ನದಲ್ಲಿ ತೊಡಗಿದುವು. ಇಂಥ ಸಂದರ್ಭದಲ್ಲೇ ಮನಮೋಹನ್ ಸಿಂಗ್‍ರು ಭಾರತದ ಹಣಕಾಸು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು. 1991ರಲ್ಲಿ ಮನಮೋಹನ್ ಸಿಂಗ್‍ರು ಈ ದೇಶದ ಹಣಕಾಸು ಸಚಿವರಾಗಿ ಆಯ್ಕೆಯಾದ ಹೊತ್ತಲ್ಲಿ ಈ ದೇಶವು ನೆಹರೂ ಅವರ `ಸೋಶಿಯಲ್ ಇಕನಾಮಿಕ್ಸ್' ಅರ್ಥವ್ಯವಸ್ಥೆಯನ್ನೇ ನೆಚ್ಚಿಕೊಂಡಿತ್ತು. 1972 ಮತ್ತು 76ರಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಸಲಹೆಗಾರರಾಗಿ, 90ರಲ್ಲಿ ವಿ.ಪಿ. ಸಿಂಗ್‍ರ ಅಧಿಕಾರಾವಧಿಯಲ್ಲಿ ಹಣಕಾಸು ಖಾತೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ಮನ್‍ಮೋಹನ್ ಸಿಂಗ್‍ರಿಗೆ ಇದು ಗೊತ್ತಿಲ್ಲ ಎಂದಲ್ಲ. ಅಲ್ಲದೇ ರಿಸರ್ವ್ ಬ್ಯಾಂಕ್‍ನ ಅಧ್ಯಕ್ಷರು ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾಗಿಯೂ ಅನುಭವ ಪಡೆದಿದ್ದ ಸಿಂಗ್‍ರಿಗೆ ಪಂಡಿತ್ ನೆಹರೂ ಅರ್ಥವಾಗದಿರುವುದಕ್ಕೆ ಸಾಧ್ಯವೂ ಇರಲಿಲ್ಲ. 1947ರಿಂದ 91ರ ವರೆಗಿನ ಸುಮಾರು 4 ದಶಕಗಳ ಅವಧಿಯಲ್ಲಿ ಈ ದೇಶ ಸಾಗಿ ಬಂದ ಹಾದಿ ಮತ್ತು ಸಾಧಿಸಿದ ಅಭಿವೃದ್ಧಿಯ ಕುರಿತಂತೆ ಮನ್‍ಮೋಹನ್ ಸಿಂಗ್‍ರಿಗೆ ಯಾರೂ ವಿವರಿಸಿ ಕೊಡಬೇಕಾದ ಅಗತ್ಯವೂ ಇರಲಿಲ್ಲ. ನೆಹರೂ ಕಲಿತದ್ದೂ ಬ್ರಿಟನಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ. ಮನ್‍ಮೋಹನ್ ಕಲಿತದ್ದೂ ಅಲ್ಲೇ. ನೆಹರೂ ಕೇಂಬ್ರಿಡ್ಜ್ ನಲ್ಲಿ ಓರ್ವ ಸಾಮಾನ್ಯ ವಿದ್ಯಾರ್ಥಿಯಾಗಿ ತೇರ್ಗಡೆಯಾದರೆ, ಮನ್‍ಮೋಹನ್ ಅಂತೂ ಆ್ಯಡಂಸ್ಮಿತ್ ಪುರಸ್ಕಾರದೊಂದಿಗೆ 24ನೇ ವಯಸ್ಸಿನಲ್ಲೇ ಅರ್ಥತಜ್ಞನಾಗಿ ಗುರುತಿಸಿಕೊಂಡೇ ತೇರ್ಗಡೆಗೊಂಡರು. ಇಂಥ ಮನ್‍ಮೋಹನ್ ಸಿಂಗ್‍ರನ್ನು 1991ರಲ್ಲಿ ಪಿ.ವಿ. ನರಸಿಂಹರಾವ್‍ರು ಹಣಕಾಸು ಸಚಿವರಾಗಿ ಆಯ್ಕೆ ಮಾಡಿದಾಗ ಸಾಕಷ್ಟು ಅರ್ಥತಜ್ಞರು ಹಲವು ಹೊಗಳಿಕೆಯ ಮಾತುಗಳನ್ನು ಆಡಿದ್ದರು. ಅಮೇರಿಕನ್ ನೇತೃತ್ವದ ಬಂಡವಾಳಶಾಹಿ ಅರ್ಥವ್ಯವಸ್ಥೆಯ ಬೆಂಬಲಿಗರು ಮತ್ತು ವಿಶ್ವಬ್ಯಾಂಕ್ ಕೂಡಾ ಸಿಂಗ್‍ರಿಂದ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದುವು. ಅದರಂತೆ ನೆಹರೂ ಅವರ ಸೋಶಿಯಲ್ ಇಕನಾಮಿಕ್ಸ್ ಗೆ ಬದಲಾಗಿ ಈ ದೇಶವನ್ನು ಉದಾರೀಕರಣ ಅರ್ಥವ್ಯವಸ್ಥೆಗೆ ಮನ್‍ಮೋಹನ್ ಸಿಂಗ್ ತೆರೆದಿಟ್ಟರು. ಅಲ್ಲಿಂದ ಈ 2014ರ ವರೆಗೆ 23 ವರ್ಷಗಳು ಸರಿದು ಹೋಗಿವೆ. ಹಣಕಾಸು ಸಚಿವರಿಂದ ಹಿಡಿದು ಪ್ರಧಾನ ಮಂತ್ರಿಯ ವರೆಗೆ ಸಾಗಿ ಮೊನ್ನೆ ಮೊನ್ನೆ ಮನ್‍ಮೋಹನ್ ಸಿಂಗ್ ಇಳಿದು ಹೋಗಿದ್ದಾರೆ. ಹೊಸ ಅರ್ಥ ವ್ಯವಸ್ಥೆಯನ್ನು ಈ ದೇಶಕ್ಕೆ ಪರಿಚಯಿಸಿದ ವ್ಯಕ್ತಿ ಮೊನ್ನೆ ಇಳಿದು ಹೋಗುವಾಗ ಎಷ್ಟು ಅಪರಿಚಿತರಾಗಿದ್ದರೆಂದರೆ, ಅವರನ್ನು ನೆನಪಿಸುವುದಕ್ಕೆ ಅವರ ಪಕ್ಷವೇ ಮುಂದಾಗಲಿಲ್ಲ. ಗಾಂಧೀಜಿಯ ಭಾರತವನ್ನು ನೆಹರೂ ಕೊಲೆಗೈದರೆ ನೆಹರೂರ ಭಾರತವನ್ನು ಮನ್‍ಮೋಹನ್ ಸಿಂಗ್ ಕೊಲೆಗೈದದ್ದಷ್ಟೇ ಅಲ್ಲ, ಭಾರತವನ್ನು ಕಾರ್ಪೋರೇಟ್ ವಲಯಕ್ಕೆ ಮಾರಿ ಹಿಂಬಾಗಿಲಿನಿಂದ ಹೊರಟು ಹೋದರು. ಚುನಾವಣೆಗಿಂತ ಮೊದಲೇ ಸೋಲೊಪ್ಪಿಕೊಂಡ ಈ ದೇಶದ ಪ್ರಪ್ರಥಮ ಪ್ರಧಾನಿ ಎಂಬ ಬಿರುದು ಪಡೆದರು. ಮನ್‍ಮೋಹನ್ ಹೀಗೇಕಾದರು? ಪ್ರಧಾನಿಯ ಮಾಧ್ಯಮ ಸಲಹೆಗಾರ ಸಂಜಯ್ ಬಾರು ಅವರು, `ದಿ ಆ್ಯಕ್ಸಿಡೆಂಟಲ್ ಪ್ರೈಮಿನಿಸ್ಟ್ಟರ್’ ಎಂಬ ಕೃತಿಯನ್ನು ಬಿಡುಗಡೆಗೊಳಿಸದಿರುತ್ತಿದ್ದರೆ ಆ ಚುನಾವಣೆಯ ಸಮಯದಲ್ಲೂ ಅವರು ಸುದ್ದಿಗೆ ಒಳಗಾಗುತ್ತಿದ್ದರೆ? ಅವರ ತಮ್ಮ  ಬಿಜೆಪಿ ಸೇರಿದಾಗ ಅವರು ಎರಡುಗೆರೆಯ ಉಲ್ಲೇಖಕ್ಕೆ ಒಳಗಾಗಿದ್ದನ್ನು ಬಿಟ್ಟರೆ ಉಳಿದಂತೆ ಈ ಚುನಾವಣೆಯ ವೇಳೆ ಅವರ ಉಲ್ಲೇಖ ಶೂನ್ಯ. 10 ವರ್ಷ ದೇಶವನ್ನು ಮುನ್ನಡೆಸಿದ ವ್ಯಕ್ತಿ ಈ ಮಟ್ಟದಲ್ಲಿ ಅಪ್ರಸ್ತುತರಾದರೇಕೆ? ಅವರು ಚುನಾವಣಾ ರಾಜಕೀಯಕ್ಕೆ ಒಗ್ಗಿಕೊಳ್ಳದೇ ಇದ್ದುದೇ? ಜನರ ನಾಡಿಮಿಡಿತ ಗೊತ್ತಿಲ್ಲದ, ಓಟಿಗೂ ನಿಂತಿಲ್ಲದ ಮತ್ತು ಭಾಷಣ ಚಾತುರ್ಯವೂ ಇಲ್ಲದ ಅವರ ದೌರ್ಬಲ್ಯಗಳೇ? ಅಥವಾ..
   ಇಂದಿರಾಗಾಂಧಿ ಮತ್ತು ರಾಜೀವ್‍ಗಾಂಧಿಯವರ ಹತ್ಯೆ ಮಾಡಿದವರನ್ನು ಈ ದೇಶ ಬಂಧಿಸಿದ್ದರೂ, ಆ ಹತ್ಯೆಯ ಹಿಂದೆ ಬಂಡವಾಳಶಾಹಿ ಅರ್ಥವ್ಯವಸ್ಥೆಯ ಕೈವಾಡ ಇದೆ ಎಂದು ವಾದಿಸುವವರು ಇವತ್ತೂ ಇದ್ದಾರೆ. ಭಾರತವನ್ನು ನೆಹರೂ ಪ್ರಭಾವಿತ ಅರ್ಥವ್ಯವಸ್ಥೆಯಿಂದ ಅಮೇರಿಕನ್ ಮಾದರಿಯ ಅರ್ಥವ್ಯವಸ್ಥೆಗೆ ಹೊರಳಿಸಲು ಈ ಎರಡು ಹತ್ಯೆಗಳನ್ನು ನಡೆಸಲಾಗಿದೆ ಎಂದೂ  ಹೇಳಲಾಗುತ್ತದೆ. ಅದೇನೇ ಇದ್ದರೂ, ಭಾರತಕ್ಕೆ ಉದಾರೀಕರಣದ ಹೊಸ ಅರ್ಥವ್ಯವಸ್ಥೆಯನ್ನು ಪರಿಚಯಿಸಿದ್ದು ಮನ್‍ಮೋಹನ್ ಸಿಂಗ್. ‘59 ವರ್ಷವಾಗುವವರೆಗೆ ನಾನು ರಾಜಕೀಯದ ಬಗ್ಗೆ ಆಲೋಚಿಸಿಯೇ ಇರಲಿಲ್ಲವೆಂದು’ ಬ್ರಿಟಿಷ್ ಪತ್ರಕರ್ತ ಮಾರ್ಕ್ ಟುಲಿಯೊಂದಿಗೆ ಹೇಳಿದ್ದ ಮನ್‍ಮೋಹನ್, 2004ರಲ್ಲಿ ಪ್ರಧಾನಿಯಾದರು. 91ರಲ್ಲಿ ಈ ದೇಶಕ್ಕೆ ಉದಾರೀಕರಣ ನೀತಿಯನ್ನು ಪರಿಚಯಿಸುತ್ತಾ, ‘ದೇಶದ ಬಡತನವನ್ನು ಹೋಗಲಾಡಿಸುವುದಕ್ಕಾಗಿ ಈ ನೀತಿಯನ್ನು ಅಳವಡಿಸಿಕೊಳ್ಳುತ್ತಿದ್ದೇವೆ...’ ಅಂದಿದ್ದರು. ಆದರೆ, ಮೊನ್ನೆ ಆಹಾರ ಭದ್ರತಾ ಕಾಯ್ದೆ ಮತ್ತು ನರೇಗಾ(ಗ್ರಾವಿೂಣ ಉದ್ಯೋಗ ಖಾತ್ರಿ ಯೋಜನೆ)ವನ್ನು ದೇಶಕ್ಕೆ ಕೊಟ್ಟು ಮೌನವಾಗಿ ಇಳಿದು ಹೋದರು. ನಿಜವಾಗಿ, ಅವರ ಉದಾರೀಕರಣ ಅರ್ಥವ್ಯವಸ್ಥೆಯ ದೊಡ್ಡ ವೈಫಲ್ಯ ಇದು. ಉದಾರೀಕರಣ ವ್ಯವಸ್ಥೆಯೇ ಬಡತನವನ್ನು ಹೋಗಲಾಡಿಸುತ್ತದೆ ಎಂದಿದ್ದ ಅವರು, ಅದಾಗಿ 23 ವರ್ಷಗಳ ಬಳಿಕ, ಬಡತನ ಅಳಿದಿಲ್ಲ ಮತ್ತು ಉದ್ಯೋಗ ಸಮಸ್ಯೆ ನಿವಾರಣೆಗೊಂಡಿಲ್ಲ ಎಂಬುದನ್ನು ಈ ಎರಡು ಯೋಜನೆಗಳ ಮೂಲಕ ಒಪ್ಪಿಕೊಂಡರು. ಅಷ್ಟಕ್ಕೂ, ಪ್ರಧಾನಿ ಅಂದರೆ ಕಂಪೆನಿ ಮ್ಯಾನೇಜರ್ ಅಲ್ಲವಲ್ಲ. ಮ್ಯಾನೇಜರ್ ಜನರಿಗೆ ಉತ್ತರದಾಯಿಯಲ್ಲ. ಮನ್‍ಮೋಹನ್ ಸಿಂಗ್ ಹಾಗಲ್ಲವಲ್ಲವೇ? ಆದರೂ ಅವರ ವರ್ತನೆ ಹೇಗಿತ್ತು? ಜನರ ನಾಡಿಮಿಡಿತ ಗೊತ್ತಿಲ್ಲದ, ಜನರೊಂದಿಗೆ ಸಂಪರ್ಕ ಇಲ್ಲದ ಮತ್ತು ಓಟಿಗೆ ನಿಲ್ಲದ ವ್ಯಕ್ತಿ ಎಂಬ ಕೊರತೆಗಳನ್ನು ವಿೂರಿ ಬೆಳೆಯಲು ಅವರು ಯತ್ನಿಸಿದ್ದರೇ? ಒಂದು ಬಾವಿಯ ಉದ್ಘಾಟನೆಗೆ ಹೋದರೂ, ಸೆನ್ಸೆಕ್ಸ್, ಜಿಡಿಪಿ, ಅಬಿವೃದ್ಧಿ ಸೂಚ್ಯಂಕಗಳಿಂದ ಭಾಷಣವನ್ನು ಪ್ರಾರಂಭಿಸಿ, ‘ರೂಪಾಯಿ ಮೌಲ್ಯ’ದಲ್ಲಿ ಕೊನೆಗೊಳಿಸುವುದನ್ನು ಹೊರತುಪಡಿಸಿ ಬೇರೇನಾದರೂ ಅವರಿಂದ ನಿರೀಕ್ಷಿಸಲು ಸಾಧ್ಯವಿತ್ತೇ? ನೆಹರೂ, ಇಂದಿರಾ, ವಾಜಪೇಯಿ, ದೇವೇಗೌಡ, ವಿ.ಪಿ.ಸಿಂಗ್, ರಾಜೀವ್ ಗಾಂಧಿ... ಮುಂತಾದವರೆಲ್ಲ ಏನು ಹೇಳುತ್ತಾರೋ ಅದುವೇ ಸುದ್ದಿಯಾಗುತ್ತಿದ್ದರೆ, ಸಿಂಗ್ ಏನಾದರೂ ಹೇಳುತ್ತಾರೆ ಎಂಬುದೇ ಸುದ್ದಿಯಾಗುವಷ್ಟು ಅವರು ಮೌನಿಯಾದರಲ್ಲ, ಯಾಕೆ? ದೇಶವನ್ನು ಮುನ್ನಡೆಸುವ ವ್ಯಕ್ತಿಗೆ ದೇಶದ ಪ್ರಮುಖ ಅಂಗವಾದ ಜನರ ಬಗ್ಗೆ ಯಾವ ಅಭಿಪ್ರಾಯವೂ ಸಂಬಂಧವೂ ಇರಬೇಕಿಲ್ಲ ಎಂಬ ಹೊಸ ರಾಜಕೀಯ ವ್ಯಾಖ್ಯಾನವನ್ನು ಸಿಂಗ್ ಕೊಟ್ಟದ್ದು ಸುಳ್ಳೇ? ನಿಜವಾಗಿ, ಸಾಮ್ರಾಜ್ಯಶಾಹಿ ಶಕ್ತಿಗಳಿಗೆ ಭಾರತದಲ್ಲೊಬ್ಬ ಮ್ಯಾನೇಜರ್ ಬೇಕಿತ್ತು. ಆತ ಜನರೊಂದಿಗೆ ಬೆರೆಯುವ, ಅವರ ನಾಡಿ ಮಿಡಿತ ಅರಿತು ಮಾತಾಡುವ ವ್ಯಕ್ತಿ ಆಗಬಾರದೆಂಬುದು ಅವರ ಬಯಕೆ. ಆದ್ದರಿಂದಲೇ 2ಜಿ, ಕಲ್ಲಿದ್ದಲು ಹಗರಣದಲ್ಲಿ ಎಲ್ಲವೂ ಗೊತ್ತಿದ್ದೂ ಮನ್‍ಮೋಹನ್ ಯಾವ ಪ್ರಶ್ನೆಗೂ ಉತ್ತರಿಸಲಿಲ್ಲ. ಯಾಕೆಂದರೆ, ಅದು ಮ್ಯಾನೇಜರ್‍ನ ಕಾರ್ಯಕ್ಷೇತ್ರವಲ್ಲ. ಯಾವ ವಿಭಾಗದಲ್ಲಿ ಏನೇನು ನಡೆದಿದೆಯೋ ಅದಕ್ಕೆ ಆಯಾ ವಿಭಾಗದವರೇ ಹೊಣೆಗಾರರು ಮತ್ತು ಅವರೇ ಆ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂಬಂತೆ ಅವರು ವರ್ತಿಸಿದರು. ನಿಜವಾಗಿ, ಮನಮೋಹನ್‍ರು ಮಾತಾಡಬೇಕಾದ ಪ್ರಧಾನಿಯಾಗಿ ಈ ದೇಶದಲ್ಲಿ ಗುರುತಿಸಿಕೊಳ್ಳಲೇ ಇಲ್ಲ. ಹೌದು, ಆರ್‍ಟಿಇ, ಆರ್‍ಟಿಐ, ನರೇಗ, ಆಹಾರ ಭದ್ರತಾ ಕಾಯ್ದೆ.. ಮುಂತಾದ ಜನಪರ ಯೋಜನೆಗಳನ್ನು ಅವರು ಜಾರಿಗೊಳಿಸಿದರು, ನಿಜ. ಆದರೆ ಆರ್‍ಟಿಐ ಕಾರ್ಯಕರ್ತರು ಸಾಲುಸಾಲಾಗಿ ಹತ್ಯೆಗೊಳಗಾಗುತ್ತಿರುವಾಗಲೂ ಅವರ ರಕ್ಷಣೆಗೆ ಯಾವ ಕಾಯ್ದೆಯನ್ನೂ ಅವರು ರೂಪಿಸಲಿಲ್ಲ. ಪೆಟ್ರೋಲಿಯಂ ಕ್ಷೇತ್ರವನ್ನು ಅವರು ರಿಲಯನ್ಸ್ ನಂಥ ಕಾರ್ಪೋರೇಟ್ ಕಂಪೆನಿಗಳ ಕಾಲಬುಡದಲ್ಲಿಟ್ಟರು. ಈ ದೇಶದ ರಕ್ಷಣಾ ರಹಸ್ಯಗಳು ಅಮೇರಿಕಕ್ಕೆ ಸೋರಿಕೆಯಾಗಲು ಅವಕಾಶ ಇರುವ ಅಣು ಒಪ್ಪಂದಕ್ಕೆ ಸಹಿ ಹಾಕಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ಅವರಿಗೆ ತಟ್ಟಲೇ ಇಲ್ಲ. ಒಂದು ಕಡೆ ವೇತನದಲ್ಲಿ ಹೆಚ್ಚಳವಾಗುತ್ತಲೇ ಇನ್ನೊಂದು ಕಡೆ ಖರ್ಚಲ್ಲೂ ಹೆಚ್ಚಳವಾಯಿತು. ರೈತರ ಆತ್ಮಹತ್ಯೆ, ಪಟ್ಟಣಕ್ಕೆ ಗ್ರಾವಿೂಣರ ವಲಸೆಯಿಂದಾಗಿ ಕೊಳಚೆಗೇರಿಗಳ ನಿರ್ಮಾಣ, ಉದ್ಯೋಗ ಅನಿಶ್ಚಿತತೆ.. ಸಹಿತ ಹತ್ತು-ಹಲವು ಸಮಸ್ಯೆಗಳಿಗೆ ಮನಮೋಹನ್‍ರ ಅರ್ಥವ್ಯವಸ್ಥೆಯಲ್ಲಿ ಯಾವ ಉತ್ತರವೂ ಇರಲಿಲ್ಲ. ಪೋಟಾವನ್ನು ಹಿಂತೆಗೆದುಕೊಂಡು ಅದಕ್ಕಿಂತಲೂ ಕ್ರೂರ ಎನ್ನಬಹುದಾದ UAPA ಯನ್ನು ಜಾರಿಗೊಳಿಸಿದ್ದೂ ಮನಮೋಹನ್‍ರೇ. ಪಾರ್ಲಿಮೆಂಟ್‍ನಲ್ಲಿ ಚರ್ಚೆ ನಡೆಸದೆಯೇ ಆಧಾರ್ ಎಂಬ ತಲೆಹಿಡುಕ ಬಹುಕೋಟಿ ಯೋಜನೆಯನ್ನು ಜಾರಿಗೊಳಿಸಿದ್ದೂ ಇವರೇ. 1984ರ ಸಿಕ್ಖ್ ಹತ್ಯಾಕಾಂಡ, 2002ರ ಗುಜರಾತ್ ನರಮೇಧ ಮತ್ತು ಇವುಗಳ ಮಧ್ಯೆ ಹತ್ತಾರು ಕೋಮುಗಲಭೆಗಳು ನಡೆದದ್ದಾಗ್ಯೂ 'ಕೋಮುಗಲಭೆ ತಡೆ ವಿಧೇಯಕ'ವನ್ನು ಜಾರಿಗೊಳಿಸುವುದಕ್ಕೆ ಅವರು ಆಸಕ್ತಿ ತೋರಲಿಲ್ಲ. ಅಣು ಒಪ್ಪಂದವನ್ನು ಜಾರಿಗೊಳಿಸುವುದಕ್ಕೆ ಅವರು ತೋರಿದ ಉತ್ಸಾಹದ ಒಂದು ಅಂಶವನ್ನಾದರೂ ಈ ಬಗ್ಗೆ ತೋರಿದ್ದರೆ ಅದು ಎಂದೋ ಈ ದೇಶದ ಕಾನೂನಾಗಿ ಜಾರಿಯಾಗುತ್ತಿತ್ತು.
   ಬಂಡವಾಳಶಾಹಿ ಅರ್ಥವ್ಯವಸ್ಥೆಯು ಇವತ್ತು ಎಷ್ಟು ಪ್ರಾಬಲ್ಯ ಸಾಧಿಸಿದೆಯೆಂದರೆ, ಜಗತ್ತಿನಲ್ಲಿ ಯಾರೆಲ್ಲ ಅದರ ಜಾರಿಗಾಗಿ ಯತ್ನಿಸುತ್ತಾರೋ ಅವರನ್ನೆಲ್ಲಾ ಅದು ಮಹಾನ್ ಸುಧಾರಕರಂತೆ ಬಿಂಬಿಸುತ್ತದೆ. ಮನಮೋಹನ್ ಸಿಂಗ್‍ರನ್ನು ಬಿಂಬಿಸಿದ್ದೂ ಹಾಗೆಯೇ. ಇಡೀ ಸರಕಾರವೇ ಹಗರಣಗಳಿಂದ ನಲುಗಿ ಹೋಗುತ್ತಿರುವಾಗಲೂ ಮನಮೋಹನ್ ಸಿಂಗ್‍ರನ್ನು ಸಂತನಂತೆ ಬಿಂಬಿಸಲಾಯಿತು. ಇತರ ವಿಷಯಗಳನ್ನು ಮುನ್ನೆಲೆಗೆ ತಂದು ಅವರ ಅರ್ಥವ್ಯವಸ್ಥೆಯ ಸಾಧಕ-ಬಾಧಕಗಳು ಚರ್ಚೆ ಗೊಳಗಾಗದಂತೆ ನೋಡಿಕೊಳ್ಳಲಾಯಿತು. ನಿಜವಾಗಿ, ಇಂಥ ಪ್ರಯತ್ನ ನಡೆದಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡುರನ್ನು ಕೂಡ ಹೀಗೆಯೇ ಬಿಂಬಿಸಲಾಗಿತ್ತು. ವಿಶ್ವಬ್ಯಾಂಕ್‍ನ ‘ಉತ್ತಮ ವ್ಯಕ್ತಿ'ಗಳ ಪಟ್ಟಿಯಲ್ಲಿ ಅವರೂ ಸ್ಥಾನ ಪಡೆದಿದ್ದರು. 1999ರಲ್ಲಿ ಅಮೇರಿಕದ ಟೈಮ್ಸ್ ಮ್ಯಾಗಸಿನ್ ತನ್ನ ಮುಖಪುಟದಲ್ಲಿ ನಾಯ್ಡುರನ್ನು ಅಚ್ಚು ಹಾಕಿ, ‘ದಕ್ಷಿಣೇಶ್ಯದ ವರ್ಷದ ವ್ಯಕ್ತಿ' ಎಂದು ಕೊಂಡಾಡಿತ್ತು. 2000ದಲ್ಲಿ ಅಮೇರಿಕದ ಅಂದಿನ ಅಧ್ಯಕ್ಷ  ಬಿಲ್ ಕ್ಲಿಂಟನ್ ಮತ್ತು ಬ್ರಿಟನ್ನಿನ ಪ್ರಧಾನಿ ಟೋನಿ ಬ್ಲೇರ್ ಹೈದರಾಬಾದ್‍ಗೆ ಆಗಮಿಸಿ ನಾಯ್ಡುರನ್ನು ಭೇಟಿಯಾಗಿದ್ದರು. ಆಂಧ್ರದಲ್ಲಿ ನಾಯ್ಡು ಸಾಧಿಸಿದ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಅವರಿಗೆ ನೋಬೆಲ್ ಪ್ರಶಸ್ತಿ ಸಿಗಬೇಕೆಂದು ಹಲವು ಪತ್ರಕರ್ತರು ಆ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದ್ದರು. ಆದರೂ ಜನರು ಕಿತ್ತೆಸೆದರು. ಪಶ್ಚಿಮ ಬಂಗಾಲದಲ್ಲಿ ಜ್ಯೋತಿ ಬಸು ಯಾವ ನೀತಿಯನ್ನು ಅಳವಡಿಸಿಕೊಂಡಿದ್ದರೋ ಅದಕ್ಕೆ ಭಿನ್ನವಾಗಿ ಮನಮೋಹನ್ ನೀತಿಯತ್ತ ಒಲವು ತೋರಿದವರು ಬುದ್ಧದೇವ ಭಟ್ಟಾಚಾರ್ಯ. ಸಿಂಗೂರ್ ಮತ್ತು ನಂದಿಗ್ರಾಮ ಸೃಷ್ಟಿಯಾದದ್ದು ಇವರ ಕಾಲದಲ್ಲೇ. ಜನರು ಬುದ್ಧದೇವ್‍ರನ್ನು ಹೊರಹಾಕಿದರು. ಇದೀಗ ಮನಮೋಹನ್.
  
2004ರಲ್ಲಿ ಮನಮೋಹನ್ ಸಿಂಗ್‍ರು ಪ್ರಧಾನಿಯಾದ ಸಂದರ್ಭದಲ್ಲಿ ಗ್ಯಾಸ್‍ನ ಬೆಲೆ ರೂ. 247 ಆಗಿತ್ತು. ಈ ಬೆಲೆಯನ್ನು ಇನ್ನು ಮುಂದೆ ಹೆಚ್ಚಳಗೊಳಿಸಬಾರದೆಂದು ಅವರ ಪತ್ನಿ ಗುರುಶರಣ್ ಕೌರ್ ಅಂದು ಸಾರ್ವಜನಿಕವಾಗಿಯೇ ವಿನಂತಿಸಿದ್ದರು. ಆದರೆ 10 ವರ್ಷಗಳ ಬಳಿಕ ಇವತ್ತು ಗ್ಯಾಸ್‍ನ ಬೆಲೆ ರೂ. 480 ಆಗಿದೆ. ಬಹುಶಃ ಮಾತು ತಪ್ಪಿದ ಪತಿಯನ್ನು ಕ್ಷಮಿಸುವುದಕ್ಕೆ ಗುರುಶರ್‍ಣ್ ಕೌರ್‍ಗೆ ಅವರದ್ದೇ ಆದ ಅನಿವಾರ್ಯತೆಗಳಿರಬಹುದು. ಹಾಗಂತ, ಜನರಿಗೆ ಅಂಥ ಅನಿವಾರ್ಯತೆಗಳೇನೂ ಇಲ್ಲವಲ್ಲ.

Tuesday, May 13, 2014

ಕ್ಯೊಂ ಕರ್‍ತೇಹೇ ಆಪ್‍ಲೋಗ್ ಐಸಾ?

ನವೀದ್
   ಈ ಮಾತುಕತೆಯನ್ನು ಯೂಟ್ಯೂಬ್‍ನಲ್ಲಿ ನೀವೂ ಆಲಿಸಿರಬಹುದು..
“ಟ್ರಿಣ್.. ಟ್ರಿಣ್.. ಹಲೋ, ಮಿಸ್ಟರ್ ಝಾಕಿರ್. ನಾನು ಜೇಮ್ಸ್. ಫೇಸ್‍ಬುಕ್‍ನಿಂದ ಮಾತಾಡ್ತಾ ಇದ್ದೇನೆ. ಫೇಸ್‍ಬುಕ್‍ನಲ್ಲಿ ಸಕ್ರಿಯರಾಗಿರುವ ಮತ್ತು ಸದಾ update  ಮಾಡುತ್ತಿರುವವರಿಗೆ ನಾವು ಬಹುಮಾನ ನೀಡಲಿದ್ದೇವೆ. ನಿಮಗೆ ಅಭಿನಂದನೆಗಳು. ನೀವು 5 ಸಾವಿರ ರೂಪಾಯಿ ಬಹುಮಾನವನ್ನು ಗೆದ್ದಿದ್ದೀರಿ. ಈಗ ನಿಮ್ಮೊಂದಿಗೆ ನಮ್ಮ ಸೀನಿಯರ್ (ಹಿರಿಯ ಅಧಿಕಾರಿ) ಮಾತಾಡಲಿದ್ದಾರೆ. ಅವರು ನಿಮ್ಮ ಇತ್ತೀಚಿನ update ನ ಬಗ್ಗೆ ನಿಮ್ಮೊಂದಿಗೆ ಕೇಳಲಿದ್ದಾರೆ. ನಿಮ್ಮ ಹೆಸರಲ್ಲಿರುವ ಫೇಸ್‍ಬುಕ್ ಅಕೌಂಟ್ ಅನ್ನು ಬಳಸುತ್ತಿರುವುದು ನೀವೋ ಅಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿಯಷ್ಟೇ ಈ ಮಾತುಕತೆ. ಅವರೊಂದಿಗೆ ಮಾತಾಡಿ..
  ಟ್ರಿಣ್ ಟ್ರಿಣ್.. ಹಲೋ, ನಾನು ರಾಮ್‍ಕಿಶನ್ ಚೌಧರಿ. ಅಭಿನಂದನೆಗಳು ಝಾಕಿರ್ ಹುಸೇನ್‍ರಿಗೆ. ನೀವು ಬಹುಮಾನ ಗೆದ್ದಿದ್ದೀರಿ. ಅಂದಹಾಗೆ, ಮೊನ್ನೆ 9:35ಕ್ಕೆ ನೀವು ಫೇಸ್‍ಬುಕ್ update  ಮಾಡಿದ್ದೀರಿ ತಾನೇ.
ಹೌದು
ಏನನ್ನು update  ಮಾಡಿದ್ದೀರಿ ಅಂತ ಹೇಳಬಹುದಾ?
ನಿಮ್ಮ ಹೆಸರು ಸರ್..
ರಾಮ್‍ಕಿಶನ್ ಚೌಧರಿ
ಹೇಳಿ ಝಾಕಿರ್ ಅವರೇ, ಏನನ್ನು update  ಮಾಡಿದ್ದೀರಿ?
ನಿಮ್ಮ ಹೆಸರು
ರಾಮ್ ಕಿಶನ್ ಚೌಧರಿ
ನಿಮಗೆ ಒಂದು ನಿಮಿಷ ಹೆಚ್ಚುವರಿ ಸಮಯ ಕೊಡುತ್ತಿದ್ದೇನೆ. ಆಲೋಚಿಸಿ ಹೇಳಿ.. ಕರೆಯನ್ನು ಮ್ಯೂಟ್ ಮಾಡಲಾಗುತ್ತದೆ.
ಈಗ ಇನ್ನೋರ್ವರೊಂದಿಗೆ ಮಾತುಕತೆ.
   ಟ್ರಿಣ್, ಟ್ರಿಣ್.. ಹಲೋ ಮಿಸ್ಟರ್ ಅಮಿತ್. ನಾನು ಜೇಮ್ಸ್. ಫೇಸ್‍ಬುಕ್‍ನಿಂದ ಮಾತಾಡ್ತಾ ಇದ್ದೇನೆ. ಫೇಸ್‍ಬುಕ್‍ನಲ್ಲಿ ಸಕ್ರಿಯರಾಗಿರುವವರಿಗೆ ನಾವು ಬಹುಮಾನ ನೀಡಲಿದ್ದೇವೆ. ನಿಮಗೆ ಅಭಿನಂದನೆಗಳು. ನೀವು 5 ಸಾವಿರ ರೂಪಾಯಿ ಬಹುಮಾನವನ್ನು ಗೆದ್ದಿದ್ದೀರಿ. ಈಗ ನಿಮ್ಮೊಂದಿಗೆ ನಮ್ಮ ಸೀನಿಯರ್ ಮಾತಾಡಲಿದ್ದಾರೆ. ಅವರು ನಿಮ್ಮ ಇತ್ತೀಚಿನ update ನ ಬಗ್ಗೆ ಕೇಳಲಿದ್ದಾರೆ.. ಅವರೊಂದಿಗೆ ಮಾತಾಡಿ..
   ಹಲೋ... ನಾನು ಮುಹಮ್ಮದ್ ಅಬ್ದುಲ್ಲಾ. ಅಭಿನಂದನೆಗಳು ಅಮಿತ್‍ರಿಗೆ. ನಿಮ್ಮ ಇತ್ತೀಚಿನ update ನ ಬಗ್ಗೆ ಹೇಳುವಿರಾ?
ನಿಮ್ಮ ಹೆಸರು ಸರ್
'ಮುಹಮ್ಮದ್ ಅಬ್ದುಲ್ಲಾ'
ಮೊನ್ನೆ ನೀವು update  ಮಾಡಿರುವುದನ್ನೊಮ್ಮೆ ಜ್ಞಾಪಿಸಿಕೊಳ್ಳಿ, ಏನದು?
ನಿಮ್ಮ ಹೆಸರು..
'ಮುಹಮ್ಮದ್ ಅಬ್ದುಲ್ಲಾ'
ಮೌನ...
   ಅಮಿತ್ ಅವರೇ ನಂಗೊತ್ತು, ನೀವು ಹೇಳಲಾರಿರಿ. ನೀವು ಮಾತ್ರವಲ್ಲ, ಈ ಮೊದಲು ನಾನು ಸಂಪರ್ಕಿಸಿದ ವ್ಯಕ್ತಿಯೂ ಹೇಳಲಾರರು. ಅಮಿತ್ ಅವರೇ, ನಾನು ನಿಮ್ಮೊಂದಿಗೆ ಇತ್ತೀಚಿನ update ನ ಬಗ್ಗೆ ವಿಚಾರಿಸಿದಾಗ ನೀವು ಮತ್ತೆ ಮತ್ತೆ ನನ್ನ ಹೆಸರು ಕೇಳಿದಿರಿ. ನಾನು ಮುಹಮ್ಮದ್ ಅಬ್ದುಲ್ಲ ಎಂಬ ಮುಸ್ಲಿಮ್ ಎಂದು ಗೊತ್ತಾದಾಗ ನೀವು ವಿಷಯ ಹೇಳಲು ತಡವರಿಸಿದಿರಿ. ಝಾಕಿರ್ ಅವರೇ, ನಿಮ್ಮಲ್ಲಿ ನಾನು ಇತ್ತೀಚಿನ update ನ ಬಗ್ಗೆ ವಿಚಾರಿಸಿದೆ. ನೀವು ನನ್ನ ಹೆಸರನ್ನು ಪದೇ ಪದೇ ಕೇಳಿದಿರಿ. ನಾನು ರಾಮ್ ಕಿಶನ್ ಚೌಧರಿ ಎಂಬ ಹಿಂದೂ ಎಂದು ಗೊತ್ತಾದಾಗ ಹೇಳಲು ತಡವರಿಸಿದಿರಿ. ಆದರೆ ನಾನು ಪೇಸ್‍ಬುಕ್‍ನಿಂದ ಮಾತಾಡುತ್ತಿಲ್ಲ. ‘ರೇಡಿಯೋ ಮಿರ್ಚಿ ಮುರ್ಗಾ'ದಿಂದ ನವೀದ್ ಮಾತಾಡುತ್ತಾ ಇದ್ದೇನೆ. ಝಾಕಿರ್ ಅವರೇ, ನೀವು ಹಿಂದೂಗಳ ವಿರುದ್ಧ  update ಮಾಡಿದ್ದೀರಿ. ನಾನು ನಿಮ್ಮ ಇತ್ತೀಚಿನ  update ಬಗ್ಗೆ ಕೇಳಿದಾಗ ನೀವೆಷ್ಟು ನಾಚಿಕೊಂಡಿರಿ ಮತ್ತು ಅಡಗಿಸಲು ಯತ್ನಿಸಿದಿರಿ  ಅಂದರೆ, ನಿಮಗೆ ಅದನ್ನು ಹೇಳಿಕೊಳ್ಳಲು ಸಾಧ್ಯವೇ ಆಗಲಿಲ್ಲ. ಅಮಿತ್ ಅವರೇ, ನೀವು ಮುಸ್ಲಿಮರ ವಿರುದ್ಧ  update ಮಾಡಿದ್ದೀರಿ. ಆದ್ದರಿಂದಲೇ ನಿಮಗೆ  updateನ್ನು ಹೇಳಿಕೊಳ್ಳಲು ಆಗಲಿಲ್ಲ. ಕ್ಯೊಂ ಕರ್‍ತೇಹೇ ಆಪ್‍ಲೋಗ್ ಐಸಾ? (ಯಾಕೆ ಹೀಗೆ ಮಾಡ್ತೀರಿ ನೀವು).
   ಅವರಿಬ್ಬರೂ ಮೌನ ವಹಿಸುತ್ತಾರೆ.
ಝಾಕಿರ್ ಅವರೇ, ನಿಮ್ಮೊಂದಿಗೆ ಫೋನಿನಲ್ಲಿ ಹೀಗೆ ಸಂಪರ್ಕಿಸುವುದಕ್ಕಿಂತ  ಮೊದಲು ನಾನು ನಿಮ್ಮ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಿದೆ. 2012 ಜುಲೈ 13ರಂದು ಅಪೋಲೋ ಆಸ್ಪತ್ರೆಯಲ್ಲಿ ನಿಮ್ಮ ಮಗನ ಆಪರೇಶನ್ ಆಗಿತ್ತು. ಆಗ ನಿಮ್ಮ ಮಗನ ನೆರವಿಗೆ ಬಂದದ್ದು ಮತ್ತು ರಕ್ತ ಕೊಟ್ಟದ್ದು ಕಿಶೋರ್, ಗೌರವ್, ಮನ್‍ದೀಪ್ ಮತ್ತು ರಣ್‍ಬೀರ್ ಎಂಬ ಹಿಂದೂಗಳು. ಹೌದಲ್ಲವೇ ಝಾಕಿರ್. ‘ಹೌದು'.
   ಅಮಿತ್ ಅವರೇ, ಜಾಮಿಯಾ ಯೂನಿವರ್ಸಿಟಿಯ ಬಳಿ 2012 ಮಾರ್ಚ್ 17ರಂದು ನೀವು ಅಪಘಾತಕ್ಕೆ ಒಳಗಾಗಿದ್ದಿರಿ, ಅಮಿತ್ ಹೌದೇ? ‘ಹೌದು'. ನೀವು ಬೈಕ್‍ನಿಂದ ಬಿದ್ದಿರಿ. ನಿಮ್ಮ ಕುಟುಂಬದವರು ಆಸ್ಪತ್ರೆಗೆ ಬರುವಾಗ ನಿಮ್ಮ ಬಳಿ ಇದ್ದುದು ರಿಝ್ವಾನ್, ಯಾಸಿರ್, ಅಫ್ನಾನ್, ಶಾಹಿದ್ ಎಂಬ ಯುವಕರು. ನಿಮ್ಮ ಕುಟುಂಬದವರು ಇಲ್ಲದ ಸಂದರ್ಭದಲ್ಲಿ ನಿಮ್ಮ ಬಳಿ ನಿಂತು ಸಹಾಯ ಮಾಡಿದ ಈ ಯುವಕರು ಮುಸ್ಲಿಮರು. ಹೌದಲ್ಲವೇ ಅಮಿತ್? ‘ಹೌದು'. ಝಾಕಿರ್ ಅವರೇ, ನಿಮ್ಮ 8 ವರ್ಷದ ಮಗನ ಅತ್ಯಂತ ಇಷ್ಟದ ಗೆಳೆಯ ಯಾರು ಗೊತ್ತಾ? ಒಮ್ಮೆ ಕೇಳಿನೋಡಿ. ಲಕ್ಷ್ಯ ಎಂಬ ಹಿಂದೂ ಹುಡುಗ. ಆತ ತನ್ನ ಹೆಚ್ಚಿನ ಸಮಯವನ್ನು ಕಳೆಯುತ್ತಿರುವುದು ಈ ಲಕ್ಷ್ಯನೊಂದಿಗೆ. ನಾವು ಶಾಲೆಯನ್ನು ಸಂಪರ್ಕಿಸಿ ಈ ಮಾಹಿತಿಯನ್ನು ಪಡಕೊಂಡಿದ್ದೇವೆ.
   ಅಮಿತ್ ಅವರೇ, ನಿಮ್ಮ ತಂದೆ ಅಂಗಡಿ ನಡೆಸ್ತಾ ಇದ್ರು. ಈಗ ಅವರಿಲ್ಲ, ಸರಿ ತಾನೇ. ‘ಸರಿ'. ನಿಮ್ಮ ತಂದೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದುದು ಶಬ್ಬೀರ್ ಸಾಬ್‍ರೊಂದಿಗೆ. ಯಾಕೆಂದರೆ, ನಿಮ್ಮ ತಂದೆಯವರಿಗೆ ಶಬ್ಬೀರ್ ಸಾಬ್ ಇಷ್ಟದ ಗೆಳೆಯ ಆಗಿದ್ದರು. ಹೀಗಿರುವಾಗ, ಯಾಕೆ ನೀವು ಇಂಥ ಮನುಷ್ಯ ವಿರೋಧಿ ವಿಷಯಗಳನ್ನು  update ಮಾಡುತ್ತಿದ್ದೀರಿ? ಯಾಕೆ ಮಾನವೀಯತೆಯನ್ನು ಕೊಲೆಗೈಯುತ್ತಿದ್ದೀರಿ?
   ಆಗ ಅವರಿಬ್ಬರೂ ಕುಗ್ಗಿದ ದನಿಯಲ್ಲಿ,
‘ಸರ್, ನಾವು ಈಗಲೇ ಡಿಲೀಟ್ (ಅಳಿಸಿ ಹಾಕುವುದು) ಮಾಡುತ್ತೇವೆ’ ಅನ್ನುತ್ತಾರೆ.
   ಹೌದು, ನೀವು ಡಿಲೀಟ್ ಮಾಡಬಹುದು. ಆದರೆ ಈಗಾಗಲೇ 12 ಮಂದಿ ಲೈಕ್ ಮಾಡಿದ್ದಾರೆ. ಅನೇಕರು ಶೇರ್ ಮಾಡಿರಬಹುದು. ನಿಮ್ಮೊಂದಿಗೆ ಕೈ ಮುಗಿದು ಬೇಡಿಕೊಳ್ಳುತ್ತಿದ್ದೇನೆ, ದಯವಿಟ್ಟು ಮೊದಲು ನಿಮ್ಮ ಮನಸ್ಸಿನಿಂದ ಡಿಲೀಟ್ ಮಾಡಿ. ನಿಮ್ಮ ಮೆದುಳಿನಿಂದ ಡಿಲೀಟ್ ಮಾಡಿ. ಮಾನವೀಯತೆಯನ್ನು ಬೆಳೆಸಿಕೊಳ್ಳಿ. ದ್ವೇಷವನ್ನು ಬಿತ್ತಬೇಡಿ. ವಿ ಹಿಂದೂಸ್ತಾನಿ. ನಿಮ್ಮಿಬ್ಬರಿಗೂ ಕೃತಜ್ಞತೆಗಳು.”
   2014 ಮೇ 2ರಂದು ಯೂಟ್ಯೂಬ್‍ನಲ್ಲಿ ಕಾಣಿಸಿಕೊಂಡ ಈ ಆಡಿಯೋವನ್ನು ಸಾವಿರಾರು ಮಂದಿ ಆಲಿಸಿದ್ದಾರೆ. ನೂರಾರು ಮಂದಿ ಪ್ರತಿಕ್ರಿಯಿಸಿದ್ದಾರೆ.
   A Hindu and a Muslim were fighting over Religion on Facebook, here this R. J. shame both on air - (ಧರ್ಮದ ಹೆಸರಲ್ಲಿ ಫೇಸ್‍ಬುಕ್‍ನಲ್ಲಿ ಪರಸ್ಪರ ಕೆಸರೆರಚಾಟ ನಡೆಸಿದ ಓರ್ವ ಹಿಂದೂ ಮತ್ತು ಓರ್ವ ಮುಸ್ಲಿಮನನ್ನು ರೇಡಿಯೋ ಜಾಕಿ ತರಾಟೆಗೆ ತೆಗೆದುಕೊಂಡಿರುವುದು) ಎಂಬ ಹೆಸರಲ್ಲಿ ಫೇಸ್ ಬುಕ್‍ನಲ್ಲಿ ಹರಿದಾಡಿದ ಈ ಆಡಿಯೋ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ. ಧಾರಾಳ ಮಂದಿ ಶೇರ್ ಮಾಡಿದ್ದಾರೆ. ‘ರೇಡಿಯೋ ಮಿರ್ಚಿ ಮುರ್ಗಾ'ದ ನಿರೂಪಕ (ರೇಡಿಯೋ ಜಾಕಿ) ನವೀದ್‍ನನ್ನು ಅಸಂಖ್ಯ ಮಂದಿ ಕೊಂಡಾಡಿದ್ದಾರೆ. ನಿಜವಾಗಿ, ಝಾಕಿರ್ ಮತ್ತು ಅಮಿತ್ ಎಂಬುದು ಕೇವಲ ಇಬ್ಬರು ವ್ಯಕ್ತಿಗಳಷ್ಟೇ ಅಲ್ಲ, ಅವರು ವಿಷಮ ಆಲೋಚನೆಗಳ ಎರಡು ಪ್ರತೀಕಗಳೂ ಹೌದು. ಇಂಥವರು ಎಲ್ಲ ಧರ್ಮಗಳಲ್ಲೂ ಇದ್ದೇ ಇರುತ್ತಾರೆ. ಅಂದಹಾಗೆ, ಫೇಸ್‍ಬುಕ್‍ನಂಥ ಸೋಶಿಯಲ್ ನೆಟ್‍ವರ್ಕ್‍ಗಳು ಇವತ್ತು ಪ್ರಭಾವಿ ಮಾಧ್ಯಮವಾಗಿ ಗುರುತಿಗೀಡಾಗಿದೆ. ಮಾರ್ಕ್ ಝುಕರ್ ಬರ್ಗ್ ಎಂಬ ಯುವಕ ತನ್ನ ಹಾರ್ವರ್ಡ್ ಯುನಿವರ್ಸಿಟಿಯ ಸಹಪಾಠಿಗಳಾದ ಎಡ್ವರ್ಡ್ ಸೆವೆರಿನ್, ಆ್ಯಂಡ್ರ್ಯೂ ಮೆಕಲಮ್, ಡಸ್ಟಿನ್ ಮಾಸ್ಕೊವಿಜ್ ಮತ್ತು ಕ್ರಿಸ್ ಹ್ಯೂಸ್‍ರೊಂದಿಗೆ ಸೇರಿ 2004 ಫೆ. 4ರಂದು ಫೇಸ್‍ಬುಕ್ ಅನ್ನು ಪ್ರಾರಂಭಿಸಿದಾಗ ಇದು ಮಾಧ್ಯಮ ಕ್ಷೇತ್ರದಲ್ಲಿ ಈ ಮಟ್ಟದ ಕ್ರಾಂತಿ ಮಾಡುತ್ತದೆಂದು ಖಂಡಿತ ಊಹಿಸಿರಲಿಲ್ಲ. ಆರಂಭದಲ್ಲಿ ಫೇಸ್‍ಬುಕ್‍ನ ಸದಸ್ಯತನವು ಹಾರ್ವರ್ಡ್ ಯುನಿವರ್ಸಿಟಿಗೆ ಮಾತ್ರ ಸೀಮಿತವಾಗಿತ್ತು. ಬಳಿಕ ಬೋಸ್ಟನ್ ಪ್ರದೇಶದ ಕಾಲೇಜುಗಳಿಗೆ ಅದನ್ನು ವಿಸ್ತರಿಸಲಾಯಿತು. ನಿಜವಾಗಿ, ಫೇಸ್‍ಬುಕ್ ಹುಟ್ಟುವುದಕ್ಕಿಂತ ಮೊದಲು ಮುದ್ರಣ ಮಾಧ್ಯಮವೇ (ಪತ್ರಿಕೆ) ಎಲ್ಲವೂ ಆಗಿತ್ತು. ಓರ್ವ ಬರಹಗಾರನನ್ನು ಹುಟ್ಟಿಸುವುದು ಅಥವಾ ಸಾಯಿಸುವುದು ಇದುವೇ ಆಗಿತ್ತು. ಓರ್ವನಿಗೆ ತನ್ನ ಭಾವನೆ, ಅಭಿಪ್ರಾಯ, ಚಿಂತನೆಗಳನ್ನು ಹೇಳಿಕೊಳ್ಳುವುದಕ್ಕೆ ಪತ್ರಿಕೆಗಳ ಹೊರತು ಇನ್ನಾವ ವೇದಿಕೆಯೂ ಇರಲಿಲ್ಲ. ಹಾಗೆಯೇ, ಪತ್ರಿಕೆಗಳಿಗೂ ಅವುಗಳದ್ದೇ ಆದ ಅಜೆಂಡಾ ಮತ್ತು ಮಿತಿಗಳಿದ್ದುವು. ಒಂದು ಲೇಖನ ಅಥವಾ ಕತೆ ಎಷ್ಟೇ ಚೆನ್ನಾಗಿದ್ದರೂ ಅದನ್ನು ಪ್ರಕಟಿಸದೇ ಇರುವುದಕ್ಕೆ ಪತ್ರಿಕೆಗಳಿಗೆ ಅವುಗಳದ್ದೇ ಆದ ಒತ್ತಡಗಳಿದ್ದುವು. ಜೊತೆಗೇ, ಪುಟಗಳ ಮಿತಿಯೂ ಇರುತ್ತದೆ. ಇಂಥ ಸ್ಥಿತಿಯಿಂದಾಗಿ, ಅತ್ಯುತ್ತಮವಾದ ಮತ್ತು ತಮ್ಮ ನಿಲುವಿಗೆ ಹೊಂದುವ ಬರಹಗಳನ್ನಷ್ಟೇ ಹೆಕ್ಕಿ ಪ್ರಕಟಿಸಬೇಕಾದ ಅನಿವಾರ್ಯತೆ ಪತ್ರಿಕೆಗಳ ಮುಂದಿರುತ್ತದೆ. ಇದರಿಂದಾಗಿ, ಅದಾಗಲೇ ಬರಹ ಜಗತ್ತಿಗೆ ಕಾಲಿಡ ಬಯಸುವ ಹೊಸಬರು ಪತ್ರಿಕೆಗಳಿಗೆ ಬರಹ ಕಳುಹಿಸುತ್ತಾ ತಿರಸ್ಕøತಗೊಳ್ಳುತ್ತಾ ಒಂದು ರೀತಿಯ ನಿರಾಶೆಗೆ ಒಳಗಾಗುತ್ತಿರಬೇಕಾಗುತ್ತದೆ. ಫೇಸ್‍ಬುಕ್‍ನಂಥ ಸೋಶಿಯಲ್ ನೆಟ್‍ವರ್ಕ್‍ಗಳು ಜನಪ್ರಿಯಗೊಂಡದ್ದು ಈ ಕಾರಣದಿಂದಲೇ. ಅಲ್ಲಿ ಮಿತಿಗಳೇ ಇಲ್ಲ. ನಿಮ್ಮ ಅಭಿಪ್ರಾಯ, ಚಿಂತನೆಗಳನ್ನು ಕಳಪೆ ಎಂದು ತಿರಸ್ಕರಿಸುವ ಸಂಪಾದಕರೂ ಇಲ್ಲ. ಬರಹದ ಪ್ರಕಟನೆಗಾಗಿ ಪ್ರತಿದಿನವೂ ಕಾಯುವ, ಸಂಪಾದಕರಿಗೆ ಕರೆ ಮಾಡಿ ವಿಚಾರಿಸುವ ಅಗತ್ಯವೂ ಇಲ್ಲ. ನೀವು ಏನನ್ನು ಬಯಸುತ್ತೀರೋ ತಕ್ಷಣ ಅದನ್ನು ಫೇಸ್‍ಬುಕ್‍ನಲ್ಲಿ ಬರೆಯಬಹುದು. ಪತ್ರಿಕೆಗಳು ಒದಗಿಸದ ಈ ಸ್ಪೇಸ್ ಅನ್ನು ಫೇಸ್‍ಬುಕ್ ಕೊಟ್ಟದ್ದರಿಂದಲೇ ಅದು ಅತ್ಯಂತ ವೇಗವಾಗಿ ಜನಪ್ರಿಯತೆ ಗಳಿಸಿಕೊಂಡಿತು. ಮುದ್ರಣ ಮಾಧ್ಯಮಕ್ಕೆ ಪರ್ಯಾಯವಾಗಿ ಗುರುತಿಗೀಡಾಗುವಷ್ಟು ಅದು ತನ್ನನ್ನು ವಿಸ್ತರಿಸಿಕೊಂಡಿತು. ದುರಂತ ಏನೆಂದರೆ, ‘ಝಾಕಿರ್’ ಮತ್ತು ‘ಅಮಿತ್’ನಂಥವರು ಇದರ ದುರ್ಲಾಭವನ್ನು ಧಾರಾಳವಾಗಿ ಪಡೆಯುತ್ತಿರುವುದು. ಪತ್ರಿಕೆಗಳಲ್ಲಿ ಪ್ರಕಟಿಸಲು ಅಯೋಗ್ಯವಾದ ಮತ್ತು ಸಾಧ್ಯವೂ ಇಲ್ಲದ ನಿಂದನೆ, ಅವಹೇಳನವುಳ್ಳ ಬರಹಗಳನ್ನು ಫೇಸ್‍ಬುಕ್‍ನಲ್ಲಿ ಅಪ್‍ಡೇಟ್ ಮಾಡುತ್ತಿರುವುದು. ಧರ್ಮಗಳನ್ನು, ಅದರ ಆಚರಣೆ, ವೇಷಭೂಷಣಗಳನ್ನು ಅಪಹಾಸ್ಯಗೊಳಿಸುವ ಬರಹಗಳು ಫೇಸ್‍ಬುಕ್‍ನಲ್ಲಿ ಇವತ್ತು ಕಾಣಿಸಿಕೊಳ್ಳುತ್ತಿವೆ. ಸೌಜನ್ಯದ ಮಿತಿಯೇ ಇಲ್ಲದ ಅತ್ಯಂತ ನಿಂದನಾತ್ಮಕ ಬರಹಗಳೂ ಅಪ್‍ಡೇಟ್ ಆಗುತ್ತಿವೆ. ಅವನ್ನು ಲೈಕ್ ಮಾಡುವವರೂ ಇರುತ್ತಾರೆ. ಹಾಗಂತ, ಇದಕ್ಕೆ ವಿರುದ್ಧವಾಗಿ ಬರಹಗಳು ಪ್ರಕಟವಾಗುತ್ತಿಲ್ಲ ಎಂದಲ್ಲ. ಧರ್ಮಗಳ ಕುರಿತಂತೆ ಅತ್ಯಂತ ವೈಚಾರಿಕ ಮತ್ತು
ಆರೋಗ್ಯಪೂರ್ಣ ಚರ್ಚೆಗಳು ಖಂಡಿತ ನಡೆಯುತ್ತಿವೆ. ಆದರೆ, ಅನೇಕ ಬಾರಿ ಇಂಥ ವಾತಾವರಣವನ್ನು ‘ಅಮಿತ್' ಮತ್ತು ‘ಝಾಕಿರ್'ಗಳು ಕೆಡಿಸಿಬಿಡುತ್ತಾರೆ. ಸಮಾಜವನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ಪರಸ್ಪರ ಸಂಘರ್ಷಕ್ಕೆ ಇಳಿಸುತ್ತಾರೆ. ಆ ಮೂಲಕ ಜಗಳಕ್ಕೆಂದೇ ಸಿದ್ಧವಾಗಿ ನಿಂತವರಿಗೆ ಆಹಾರ ಒದಗಿಸುತ್ತಾರೆ. ಆದ್ದರಿಂದಲೇ,
   ನವೀದ್ ಇಷ್ಟವಾಗುತ್ತಾರೆ.

Thursday, May 8, 2014

ಜಾನುವಾರು ಹತ್ಯೆ, ಮುಸ್ಲಿಮರು ಮತ್ತು ಕೆಲವು ಸುಳ್ಳುಗಳು

   ಗೋಹತ್ಯೆಗೆ ಸಂಬಂಧಿಸಿ 1959 ಮತ್ತು 1961ರ ಮಧ್ಯೆ ಸುಪ್ರೀಮ್ ಕೋರ್ಟ್‍ನ ಮುಂದೆ ಮೂರು ಪ್ರಕರಣಗಳು ದಾಖಲಾಗಿದ್ದುವು. ಮುಹಮ್ಮದ್ ಹನೀಫ್ ಖುರೇಷಿ ಮತ್ತು ಬಿಹಾರ ಸರಕಾರ; ಹಶ್ಮತುಲ್ಲಾ ಮತ್ತು ಮಧ್ಯಪ್ರದೇಶ ಸರಕಾರ; ಅಬ್ದುಲ್ ಹಕೀಮ್ ಮತ್ತು ಬಿಹಾರ ಸರಕಾರಗಳ ನಡುವಿನ ವ್ಯಾಜ್ಯವನ್ನು ವಿಚಾರಣೆಗೆ ಒಳಪಡಿಸುತ್ತಾ ಸುಪ್ರೀಮ್ ಕೋರ್ಟ್ ಅಂತಿಮವಾಗಿ ತೀರ್ಪು ಕೊಟ್ಟದ್ದು ಹೀಗೆ:
 A total ban (on Cattle Slaughter) was not permissable if, Under economic conditions, keeping useless bull or bullock be a burden on the society and therefore not in the public interest  - ಸಮಾಜದ ಮೇಲೆ ಹೊರೆಯಾಗಬಲ್ಲ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನೂ ಪ್ರತಿನಿಧಿಸದ ನಿರುಪಯುಕ್ತ ಜಾನುವಾರುಗಳಿರುವಲ್ಲಿ, ಜಾನುವಾರು ಹತ್ಯೆಗೆ ಸಂಪೂರ್ಣ ನಿಷೇಧ ವಿಧಿಸುವುದು ಅನುವದನೀಯವಲ್ಲ.’ (ವಿಕಿಪೀಡಿಯಾ)
 ನಿಜವಾಗಿ, ಒಂದು ಹಸು ಗರಿಷ್ಠ ಅಂದರೆ 14 ವರ್ಷಗಳ ವರೆಗೆ ಹಾಲು ಕೊಡುತ್ತದೆ. ಹಸು ಎಂದಲ್ಲ, ಎಮ್ಮೆ, ಕೋಣ, ಎತ್ತು, ಗೂಳಿಗಳೆಲ್ಲ ಉಪಯೋಗಕ್ಕೆ ಬರುವುದು 14-15 ವರ್ಷಗಳ ವರೆಗೆ ಮಾತ್ರ. ಹಾಗಂತ, ಆ ಬಳಿಕ ಅವು ತಕ್ಷಣ ಸಾಯುತ್ತವೆ ಎಂದಲ್ಲ. ಇನ್ನೂ 10 ವರ್ಷಗಳ ವರೆಗೆ ಬದುಕುವ ಸಾಮರ್ಥ್ಯ  ಅವುಗಳಲ್ಲಿರುತ್ತವೆ. ಆದರೆ ಹಾಲು ಕೊಡದ, ಉಳುಮೆಗೆ ಬಾರದ ಈ ಅಯೋಗ್ಯ ಜಾನುವಾರುಗಳನ್ನು ಸಾಕುವ ಸಾಮರ್ಥ್ಯ  ಎಷ್ಟು ರೈತರಲ್ಲಿದೆ? ಅವುಗಳಿಗೆ ಮೇವು, ಹಿಂಡಿಗಳನ್ನು ಒದಗಿಸುವುದಕ್ಕೆ ವರಮಾನ ಬೇಕಲ್ಲವೇ? ಉಳುಮೆಗೆ ಯೋಗ್ಯವಲ್ಲದ ಎತ್ತು ಕನಿಷ್ಠವೆಂದರೆ, 20ರಿಂದ 30 ಸಾವಿರದಷ್ಟು ಬೆಲೆ ಬಾಳುತ್ತದೆ. ಈ ಎತ್ತನ್ನು ಮಾರದೇ ಓರ್ವ ರೈತ ಉಳುಮೆಗೆ ಯೋಗ್ಯವಾದ ಬೇರೆ ಎತ್ತನ್ನು ಖರೀದಿಸುವುದಾದರೂ ಹೇಗೆ? ಖರೀದಿಸದಿದ್ದರೆ ಉಳುಮೆಗೆ ಏನು ಮಾಡಬೇಕು? ನಿಜವಾಗಿ, ಇದು ಕೇವಲ ಎತ್ತಿಗೆ ಮಾತ್ರ ಸಂಬಂಧಿಸಿದ್ದಲ್ಲ. ಹಸು, ಎಮ್ಮೆಗಳ ಸುತ್ತಲೂ ಇರುವುದು ಈ ಲೆಕ್ಕಾಚಾರವೇ. ಓರ್ವರು ಹಸುವನ್ನು ಸಾಕುವುದೇ ಹಾಲಿನ ಉದ್ದೇಶದಿಂದ. ಹಾಲಿಗಿರುವ ಮಾರುಕಟ್ಟೆ, ಸರಕಾರಿ ಸಬ್ಸಿಡಿ, ವರಮಾನಗಳೆಲ್ಲ ಓರ್ವರನ್ನು ಹಸು ಸಾಕುವಂತೆ ಪ್ರೇರೇಪಿಸುತ್ತಿದೆಯೇ ಹೊರತು ಬರೇ 'ಶ್ರದ್ಧೆ'ಯಲ್ಲ. ಕೇವಲ 'ಶ್ರದ್ಧೆ'ಗಾಗಿ ಮಾತ್ರ ಹಸುವನ್ನು ಸಾಕುವವರು ಅದನ್ನು ಮಾರುವುದು ಬಿಡಿ, ಅದರ ಹಾಲಿನಿಂದ ವ್ಯಾಪಾರ ಮಾಡಿ ದುಡ್ಡು ಗಳಿಸುವ ಯೋಚನೆ ಮಾಡುವುದಕ್ಕೂ ಸಾಧ್ಯವಿಲ್ಲ. ಯಾಕೆಂದರೆ, 'ಶ್ರದ್ಧಾಬಿಂದು'ವೊಂದು ತನ್ನ ಗೌರವವನ್ನು ಕಳಕೊಳ್ಳುವುದೇ ವ್ಯಾಪಾರೀಕರಣಗೊಂಡಾಗ. ಯಾವಾಗ ಹಾಲು ಲಾಭದಾಯಕ ಉದ್ಯಮ ಅನ್ನಿಸಿಕೊಂಡಿತೋ ಆಗಲೇ ಹಸು 'ಶ್ರದ್ಧಾಬಿಂದು'ವಿನಿಂದ ಹೊರಬಂದು ಲಾಭ-ನಷ್ಟದ ಪ್ರಾಣಿಯಾಗಿ ಬಿಟ್ಟಿತು. ಹಾಲು ಕೊಡದ ಹಸುವನ್ನು ಸಾಕುವುದು ನಷ್ಟದ ವ್ಯಾಪಾರವೆಂದು ಪರಿಗಣಿಸಲಾಯಿತು. ಅಂದ ಹಾಗೆ, ಜಾನುವಾರು ಹತ್ಯೆಯನ್ನು ಖಂಡಿಸುವವರಲ್ಲಿ ಎಷ್ಟು ಮಂದಿ ಇವತ್ತು ಗೋವನ್ನು ಬರೇ ‘ಶ್ರದ್ಧೆ’ಗಾಗಿ ಸಾಕುತ್ತಿದ್ದಾರೆ? ಅವರ ಮನೆಗಳಲ್ಲಿ ಎಷ್ಟು ಹಾಲು ಕೊಡದ ಹಸುಗಳಿವೆ? ಎಷ್ಟು ಗಂಡು ಕರು ಮತ್ತು ಎತ್ತುಗಳಿವೆ? ಹಸು ಒಂದು ದಿನ ತುಸು ಕಡಿಮೆ ಹಾಲು ಕೊಟ್ಟರೂ ನೆತ್ತಿಯಲ್ಲಿ ನೆರಿಗೆಗಳು ಮೂಡುವ ಈ ದಿನಗಳಲ್ಲಿ ಹಾಲೇ ಕೊಡದ ಹಸುವನ್ನು ಅದು ಸಾಯುವವರೆಗೂ ಸಾಕಬೇಕೆಂದು ಬಯಸುತ್ತಾರಲ್ಲ, ಅದು ಎಷ್ಟು ಪ್ರಾಯೋಗಿಕ? ಹಾಲು ಕೊಡದ ಹಸುವನ್ನು ಮಾರಿ ಇನ್ನಷ್ಟು ಕರುಗಳನ್ನೋ ಹಸುಗಳನ್ನೋ ಖರೀದಿಸಿದರೆ ಮಾತ್ರವೇ ಓರ್ವನಿಗೆ ತನ್ನ ಉದ್ದಿಮೆಯನ್ನು ವಿಸ್ತರಿಸಲು ಸಾಧ್ಯ ಅಲ್ಲವೇ? ಗೊಡ್ಡು ದನಗಳನ್ನು ಕೊಟ್ಟಿಗೆಯಲ್ಲಿ ಕಟ್ಟುತ್ತಾ ಹೋದರೆ ಸಾಕುವುದು ಹೇಗೆ, ಯಾವ ವರಮಾನದಿಂದ? ಅಷ್ಟಕ್ಕೂ, ಹಸುವನ್ನು ಬರೇ ಶ್ರದ್ಧಾಬಿಂದುವಾಗಿ ಮಾತ್ರ ಸಮಾಜ ಕಾಣುತ್ತದೆಂದಾದರೆ ಕೊಟ್ಟಿಗೆಯಲ್ಲಿ ಕೇವಲ ಹೆಣ್ಣು ಕರುಗಳಷ್ಟೇ ಕಾಣುತ್ತಿರುವುದೇಕೆ? ಗಂಡು ಕರುಗಳೆಲ್ಲ ಏನಾಗುತ್ತವೆ? ಹಾಲು ಕುಡಿಯುವುದನ್ನು ನಿಲ್ಲಿಸಿದ ಕೂಡಲೇ ಅದರ ಪೋಷಕರು ಅದನ್ನು ಮಾರುತ್ತಿದ್ದಾರೆ ಎಂದಲ್ಲವೇ ಇದರರ್ಥ? ಈ ಮಾರಾಟವಾದರೂ ಯಾಕಾಗಿ, ಯಾವ ಉದ್ದೇಶದಿಂದ? ಗಂಡು ಕರುವನ್ನು ಸಾಕಿದರೆ ಲಾಭ ಇಲ್ಲ ಎಂಬುದನ್ನು ಬಿಟ್ಟರೆ ಇದಕ್ಕೆ ಬೇರೆ ಯಾವ ಕಾರಣ ಇದೆ?
 ಗುಜರಾತ್, ಮಧ್ಯಪ್ರದೇಶ, ಹಿಮಾಚಲ ಪ್ರದೇಶ...ಈ ಮೂರು ರಾಜ್ಯಗಳನ್ನು ಬಿಟ್ಟರೆ ಉಳಿದಂತೆ ಎಲ್ಲೂ ಜಾನುವಾರು ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿಯೇ ಇಲ್ಲ. ಕೇರಳ, ಅರುಣಾಚಲ ಪ್ರದೇಶ, ಮೇಘಾಲಯ, ಮಿಝೋರಾಮ್, ನಾಗಾಲ್ಯಾಂಡ್, ತ್ರಿಪುರ, ಲಕ್ಷದ್ವೀಪಗಳಲ್ಲಿ ಜಾನುವಾರು ಹತ್ಯೆಗೆ ಯಾವ ತಡೆಯನ್ನೂ ಹಾಕಲಾಗಿಲ್ಲ. ಉಳಿದ ರಾಜ್ಯಗಳಲ್ಲಿ, ಕರ್ನಾಟಕದಲ್ಲಿ ಈಗ ಇರುವಂಥ (12 ವರ್ಷಕ್ಕಿಂತ ಮೇಲ್ಪಟ್ಟ ನಿರುಪಯುಕ್ತ ಜಾನುವಾರುಗಳ ಹತ್ಯೆ ಮಾಡಬಹುದು) ಕಾನೂನಷ್ಟೇ ಇದೆ. ಗುಜರಾತ್‍ನಲ್ಲಿ ಸಂಪೂರ್ಣ ಜಾನುವಾರು ಹತ್ಯೆ ನಿಷೇಧ ಕಾನೂನು ಜಾರಿಗೆ ಬಂದದ್ದೇ  2011ರಲ್ಲಿ. ಇದರ ಆಸು-ಪಾಸಿನಲ್ಲೇ ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಇದು ಜಾರಿಗೆ ಬಂದಿದೆ. ಅಷ್ಟಕ್ಕೂ, 'ಮಧ್ಯ ಪ್ರದೇಶದ ಸದ್ಯದ ಸ್ಥಿತಿ ಹೇಗಿದೆಯೆಂದರೆ, ‘ಹಾಲು ಕೊಡದ, ಉಳುಮೆಗೆ ಬಾರದ ಹಸು, ಎತ್ತುಗಳ ಸಹಿತ ಧಾರಾಳ ಜಾನುವಾರುಗಳು ಪ್ಲಾಸ್ಟಿಕ್ ತಿನ್ನುತ್ತಾ, ಮಾಲಿನ್ಯದ ನೀರು ಕುಡಿಯುತ್ತಾ ರಸ್ತೆಯಲ್ಲಿ ಕೊನೆಯುಸಿರೆಳೆಯುತ್ತಿವೆ..’ ಎಂದು ಅನುಷಾ ನಾರಾಯಣ್ ದಿ ಹಿಂದೂ ಪತ್ರಿಕೆಯಲ್ಲಿ (5-5-2013) ಬರೆದಿದ್ದರು. ಅದು ಬಿಡಿ, 1998ರಲ್ಲಿ ಬಿಜೆಪಿಯ ವಾಜಪೇಯಿಯವರೇ ದೇಶದ ಪ್ರಧಾನಿಯಾಗಿದ್ದರಲ್ಲ ಮತ್ತು ಆಗ ಈ ದೇಶದಲ್ಲಿ 3500ರಷ್ಟು ಕಸಾಯಿಖಾನೆಗಳಿದ್ದುವಲ್ಲ, ಇವುಗಳನ್ನು ಮುಚ್ಚಿಸಲು ಅವರು ಆಗ ಯಾವ ಕ್ರಮ ಕೈಗೊಂಡಿದ್ದರು? ಕನಿಷ್ಠ ಕಸಾಯಿಖಾನೆಗಳಿಗೆ ನೀಡಲಾಗುವ ಸಬ್ಸಿಡಿಯನ್ನು ನಿಲ್ಲಿಸುತ್ತಿದ್ದರೂ ಹೆಚ್ಚಿನವು ಬಾಗಿಲು ಮುಚ್ಚುತ್ತಿರಲಿಲ್ಲವೇ? ಆದರೂ ಯಾಕೆ ಅವರು ಇಂಥ ಪ್ರಯತ್ನಕ್ಕೆ ಮುಂದಾಗಲಿಲ್ಲ? ಆದರೆ, ಯಾಕೆ ಹೀಗಾಯಿತೆಂಬುದು ಎಲ್ಲರಿಗೂ ಚೆನ್ನಾಗಿ ಗೊತ್ತು. ಇದೊಂದು ಲಾಭದಾಯಕ ಉದ್ಯಮ. ಆದ್ದರಿಂದಲೇ ಸಬ್ಸಿಡಿ ಕೊಟ್ಟು ಅದನ್ನು ಉತ್ತೇಜಿಸಲೇಬೇಕಾಗಿದೆ. ಈ ದೇಶದ ದೊಡ್ಡ ಆದಾಯ ಮೂಲವೇ ಮಾಂಸ. 2012ರಲ್ಲಿ 16,80,000 ಮೆಟ್ರಿಕ್ ಟನ್‍ಗಳಷ್ಟು ಮಾಂಸವನ್ನು ರಫ್ತು ಮಾಡಿರುವ ಭಾರತ, ರಫ್ತಿನಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಬ್ರೆಝಿಲ್ ಮತ್ತು ಆಸ್ಟ್ರೇಲಿಯಾ ನಂತರದ ಸ್ಥಾನದಲ್ಲಿವೆ. ನಿಜವಾಗಿ, ಹಸು ಸಹಿತ ಒಟ್ಟು ಜಾನುವಾರುಗಳು ಉಪಯುಕ್ತ ಮತ್ತು ನಿರುಪಯುಕ್ತಗೊಳ್ಳುತ್ತಾ, ಸಮಾಜದ ಭಾಗವಾಗಿ ಅನಾದಿ ಕಾಲದಿಂದಲೂ ಬದುಕುತ್ತಲೇ ಇವೆ. ಅವು ಹಾಲೂ ಕೊಟ್ಟಿವೆ. ಆಹಾರವಾಗಿಯೂ ಬಳಕೆಯಾಗಿವೆ. ‘ವಸಿಷ್ಠ ಮಹರ್ಷಿಗೆ ಕರುವಿನ ಮಾಂಸವನ್ನು ಆಹಾರವಾಗಿ ಕೊಟ್ಟ ಚರಿತ್ರೆಯು ಸಂಸ್ಕøತ ಮಹಾಕವಿ ಭವಭೂತಿ ಬರೆದ ಉತ್ತರ ರಾಮ ಚರಿತದಲ್ಲಿದೆ.’ (ಅನು: ಎಸ್.ವಿ. ಪರಮೇಶ್ವರ ಭಟ್ಟ- ಪು 309, 310) ಹೀಗಿದ್ದೂ, ‘ಗೋಹತ್ಯೆಯನ್ನು ಪ್ರಾರಂಭಿಸಿದ್ದು ಮುಸ್ಲಿಮರು, ಅವರ ಬಾಯಿ ಚಪಲಕ್ಕೆ ನಮ್ಮ ಶ್ರದ್ಧಾಬಿಂದುವಿನ ಹತ್ಯೆಯಾಗುತ್ತಿದೆ..’ ಎಂಬ ಸುಳ್ಳನ್ನು ಕೆಲವರು ಹಬ್ಬಿಸುತ್ತಿದ್ದಾರೆ. ಒಂದು ವೇಳೆ, ಮುಸ್ಲಿಮರಿಂದಲೇ ಗೋಹತ್ಯೆಯ ಪ್ರಾರಂಭವಾಯಿತು ಎಂದಾದರೆ ಅದನ್ನು ತಿನ್ನಬೇಕಾದದ್ದು ಯಾರು, ಮುಸ್ಲಿಮರು ಮಾತ್ರ ತಾನೇ? ಆದರೆ ಪರಿಸ್ಥಿತಿ ಹಾಗಿದೆಯೇ? ಇವತ್ತು ಈ ದೇಶದಲ್ಲಿ ಗೋಮಾಂಸದ ದೊಡ್ಡ ಗಿರಾಕಿಗಳು ಬಹುಸಂಖ್ಯಾತರೇ ಎಂಬುದನ್ನು ಯಾರು ಅಲ್ಲಗಳೆಯುತ್ತಾರೆ? ಕೇರಳ ಸಹಿತ ಅನೇಕ ರಾಜ್ಯಗಳ ಹಿಂದೂ ಬಾಂಧವರ ಹೊಟೇಲುಗಳಲ್ಲಿ ಇವತ್ತು ಗೋಮಾಂಸ ಲಭ್ಯವಾಗುತ್ತಿರುವುದು ಏನನ್ನು ಸೂಚಿಸುತ್ತದೆ? ಅನಾದಿ ಕಾಲದಿಂದಲೂ ಅದು ಜನರ ಆಹಾರವಾಗಿಲ್ಲದಿರುತ್ತಿದ್ದರೆ ಇದು ಸಾಧ್ಯವಿತ್ತೇ? ಹಾಗಂತ, ಮುಸ್ಲಿಮರು ಗೋಮಾಂಸ ಸೇವಿಸುವುದು ಹಿಂದೂಗಳ ಶ್ರದ್ಧಾಬಿಂದುವಿಗೆ ಅಗೌರವ ತೋರಿಸಬೇಕು ಎಂದು ಖಂಡಿತ ಅಲ್ಲ. ಅದನ್ನು ಸೇವಿಸದಿದ್ದರೆ ಅವರ ವಿಶ್ವಾಸಕ್ಕೆ ಯಾವ ತೊಂದರೆಯೂ ಆಗುವುದಿಲ್ಲ. ಸರಕಾರವೇ ನಡೆಸುತ್ತಿರುವ ಕಸಾಯಿಖಾನೆಗಳಲ್ಲಿ ಮಾಂಸ ಲಭ್ಯವಾಗುತ್ತಿರುವುದರಿಂದಲೇ ಅವರು ಅದನ್ನು ಸೇವಿಸುತ್ತಿರುವುದು.ಅಷ್ಟಕ್ಕೂ ಇಲ್ಲಿ ಕಸಾಯಿಖಾನೆಗಳಿಗೆ ಪರವಾನಿಗೆ ಕೊಟ್ಟಿರುವುದು ಮುಸ್ಲಿಮರು ಅಲ್ಲವಲ್ಲ. ಅದರ ವ್ಯಾಪಾರದಲ್ಲಿ ಮುಸ್ಲಿಮರು ತೊಡಗಿಸಿಕೊಂಡಿದ್ದಾರೆಂಬುದು ನಿಜ. ಹಾಗಂತ, ಮುಸ್ಲಿಮರು ಕೇವಲ ಜಾನುವಾರು ವ್ಯಾಪಾರದಲ್ಲಿ ಮಾತ್ರ ತೊಡಗಿಸಿಕೊಂಡಿರುವುದಲ್ಲ, ಸರಕಾರ ಅನುಮತಿಸಿರುವ ಎಲ್ಲ ವ್ಯಾಪಾರ ವ್ಯವಹಾರಗಳಲ್ಲೂ ಅವರು ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗ, ಜಾನುವಾರು ವ್ಯಾಪಾರವನ್ನು ಮುಸ್ಲಿಮರು ತೊರೆಯಬೇಕು ಎಂದೋ ಅಂಥ ವ್ಯಾಪಾರಿಗಳನ್ನು ದೇಶದ್ರೋಹಿಗಳೆಂದು ಪರಿಗಣಿಸಬೇಕು ಎಂದೋ ಕೆಲವರು ವಾದಿಸುತ್ತಿರುವುದು ಎಷ್ಟು ಸರಿ? ಯಾವ ವ್ಯಾಪಾರ ದೇಶಪ್ರೇಮದ್ದು ಮತ್ತು ಯಾವುದು ದೇಶದ್ರೋಹದ್ದು ಎಂದು ತೀರ್ಮಾನಿಸಬೇಕಾದವರು ಯಾರು, ಸರಕಾರವೋ ಅಥವಾ ಸಂಘಟನೆಗಳೋ? ಅಲ್ಲದೇ, ಜಾನುವಾರು ವ್ಯಾಪಾರದಲ್ಲಿ ಮುಸ್ಲಿಮರು ತೊಡಗಿಸಿಕೊಂಡಿದ್ದಾರೆಯೇ ಹೊರತು ಕೇವಲ ಅವರು ಮಾತ್ರವೇ ಅಲ್ಲ. ಹಿಂದೂಗಳೂ ಇದ್ದಾರೆ. ವ್ಯಾಪಾರಿಗಳಿಗೆ ಜಾನುವಾರು ಮಾರಾಟ ಮಾಡುತ್ತಿರುವವರು ಯಾರು? ಅವರ ಕುರಿತೇಕೆ ಯಾರೂ  ಚಕಾರ ಎತ್ತುತ್ತಿಲ್ಲ? ಅವರು ಜಾನುವಾರುಗಳನ್ನು ಮಾರುವುದರಿಂದ ತಾನೇ ಈ ವ್ಯಾಪಾರ ಈ ವರೆಗೆ ಉಳಿದಿರುವುದು? ಹೀಗಿರುವಾಗ, ಮುಸ್ಲಿಮರು ಜಾನುವಾರು ವ್ಯಾಪಾರ ಮಾಡದಿದ್ದರೆ ಅಥವಾ ಮಾಂಸ ತಿನ್ನದಿದ್ದರೆ ಇಲ್ಲಿ ಸಾಮರಸ್ಯ ಉಂಟಾಗುತ್ತದೆ ಎಂದೆಲ್ಲ ಕೆಲವರು ವಾದಿಸುತ್ತಿರುವುದಕ್ಕೆ ಏನರ್ಥವಿದೆ? ಸರಕಾರವೇ ಅನುಮತಿಸಿರುವ ವ್ಯಾಪಾರದ ಮೇಲೆ ಹಿಂದೂ-ಮುಸ್ಲಿಮ್ ಸಾಮರಸ್ಯವನ್ನು ಯಾಕೆ ನಾವು ನೇತು ಹಾಕಬೇಕು? ಜಾನುವಾರು ಹತ್ಯೆಯು ಸಾಮರಸ್ಯಕ್ಕೆ ತೊಡಕಾಗುತ್ತದೆಂದಾದರೆ ಅದನ್ನು ನಿಷೇಧಿಸಬೇಕಾದದ್ದು ಸರಕಾರ. ಇದು ಎಲ್ಲರಿಗೂ ಗೊತ್ತು. ಜಾನುವಾರು ಹತ್ಯೆ ಎಂದಲ್ಲ ಯಾವುದೇ ಹತ್ಯೆ ಅಥವಾ ವ್ಯಾಪಾರವು ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುತ್ತದೆಂದಾದರೆ ಆ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಜವಾಬ್ದಾರಿ ಸರಕಾರದ ಮೇಲಿದೆ. ಅಲ್ಲದೇ, ಸರಕಾರದ ನಿಲುವನ್ನು ಪ್ರಶ್ನಿಸಿ ಕೋರ್ಟಿಗೆ ಹೋಗುವ ಅವಕಾಶ ಎಲ್ಲರಿಗೂ ಮುಕ್ತವಿದೆ. ಇದು ಬಿಟ್ಟು, ‘ಮುಸ್ಲಿಮರು ಈ ವ್ಯಾಪಾರ ಬಿಡಬೇಕು, ಆ ಆಹಾರವನ್ನು ತಿನ್ನಬಾರದು, ಹಾಗೆ ಮಾಡಬೇಕು, ಹೀಗೆ ಮಾಡಬೇಕು... ಎಂದೆಲ್ಲಾ ಸರಕಾರವೂ ಅಲ್ಲದ, ನ್ಯಾಯಾಲಯವೂ ಅಲ್ಲದ ಕೆಲವು ಖಾಸಗಿ ವ್ಯಕ್ತಿಗಳು ಒತ್ತಾಯಿಸುವುದು ಮತ್ತು ‘ನಾವು ಹೇಳಿದಂತೆ ಕೇಳದಿದ್ದರೆ ಸಾಮರಸ್ಯ ಕೆಡುತ್ತದೆ’ ಎಂದು ಬೆದರಿಸುವುದು ಯಾವುದರ ಸೂಚನೆ?
 ಹೌದು, ಜಾನುವಾರುಗಳ ಅಕ್ರಮ ಸಾಗಾಟವು ಕಾನೂನಿನ ಪ್ರಕಾರವೇ ನಿಷಿದ್ಧವಾಗಿದೆ. ಜಾನುವಾರು ಎಂದಲ್ಲ, ಅಕ್ಕಿ, ಗೋಧಿ, ಬದನೆ, ಬೆಂಡೆಕಾಯಿ... ಸಹಿತ ಯಾವುದೇ ವಸ್ತುಗಳ ಅಕ್ರಮ ಮಾರಾಟ ಮತ್ತು ಸಾಗಾಟವೂ ನಿಷಿದ್ಧವೇ ಆಗಿದೆ. ಇಂಥ ಅಕ್ರಮ ವ್ಯಾಪಾರದಲ್ಲಿ ಮುಸ್ಲಿಮರು ಎಂದಲ್ಲ ಯಾರೇ ತೊಡಗಿಸಿಕೊಂಡರೂ ಅದು ಶಿಕ್ಷಾರ್ಹವೇ. ಇಲ್ಲಿನ ಮುಸ್ಲಿಮರು ಅಕ್ರಮ ಜಾನುವಾರು ಸಾಗಾಟದಾರರ ಪರ ಎಲ್ಲೂ ವಾದಿಸಿಲ್ಲ. ಪ್ರತಿಭಟಿಸಿಲ್ಲ. ಹಾಗೆ ವಾದಿಸುವುದು, ಅಕ್ರಮವನ್ನು ಸಮರ್ಥಿಸುವುದು ಧಾರ್ಮಿಕವಾಗಿಯೇ ನಿಷಿದ್ಧ. ನಿಜವಾಗಿ, ಇಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಿಗೆ ಕೆಲವು ಭ್ರಷ್ಟ ಅಧಿಕಾರಿಗಳು ಕಾರಣವೇ ಹೊರತು ಒಂದು ನಿರ್ದಿಷ್ಟ ಧರ್ಮವೋ ಅದರ ಅನುಯಾಯಿಗಳೋ ಅಲ್ಲ. ಆದ್ದರಿಂದ, ಇಲ್ಲಿ ಮುಸ್ಲಿಮರ ವಿರುದ್ಧ ಅಲ್ಲ, ಭ್ರಷ್ಟ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಯಬೇಕಾಗಿದೆ. ಜಾನುವಾರು ಸಾಗಾಟವು ಅಕ್ರಮವಾಗಿ ನಡೆಯುತ್ತದೆ ಮತ್ತು ಅಮಾನವೀಯವಾಗಿ ಜಾನುವಾರುಗಳನ್ನು ವಾಹನಗಳಲ್ಲಿ ಸಾಗಿಸಲಾಗುತ್ತದೆ ಎಂಬ ಅಂಶವು ಒಟ್ಟು ವ್ಯಾಪಾರದ ಮೇಲೆಯೇ ನಿಷೇಧ ಹೇರುವುದಕ್ಕೆ ಕಾರಣ ಆಗುವುದಿಲ್ಲ. ಶೀತ ಆಗಿರುವುದಕ್ಕೆ ಮೂಗನ್ನೇ ಕೊಯ್ಯುವುದು ಪರಿಹಾರ ಅಲ್ಲವಲ್ಲ. ಅದಕ್ಕೆ ಮದ್ದು ಮಾಡಬೇಕಲ್ಲವೇ? ಜಾನುವಾರು ಸಾಗಾಟದಲ್ಲಾಗುವ ಅಕ್ರಮವನ್ನು ತಡೆಗಟ್ಟುವುದಕ್ಕೂ ಇದೇ ಮಾರ್ಗವನ್ನು ಅನುಸರಿಸಬೇಕಾಗಿದೆ. ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಯನ್ನು ನೀಡಬೇಕಾಗಿದೆ. ಸಾರ್ವಜನಿಕರು ಕಾನೂನನ್ನು ಕೈಗೆತ್ತಿಕೊಳ್ಳದೇ ಕಾನೂನು ಪಾಲಕರಿಗೆ ಸಹಕಾರ ನೀಡಿದರೆ ಇದು ಖಂಡಿತ ಜಾರಿಗೆ ಬರುತ್ತದೆ. ಅದು ಬಿಟ್ಟು, ಜಾನುವಾರು ಮಾಂಸವನ್ನು ಮುಸ್ಲಿಮರು ತ್ಯಜಿಸುವುದೋ ಅದರ ವ್ಯಾಪಾರ ಮಾಡುವುದನ್ನು ನಿಲ್ಲಿಸುವುದೋ ಒಟ್ಟು ಸಮಸ್ಯೆಗೆ ಪರಿಹಾರ ಆಗುವುದಿಲ್ಲ. ಯಾಕೆಂದರೆ, 125 ಕೋಟಿ ಜನರಿರುವ ಈ ದೇಶದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚೆಂದರೆ 15-16 ಕೋಟಿಯಷ್ಟೇ. ಕೇವಲ ಇಷ್ಟೊಂದು ಸಣ್ಣ ಸಂಖ್ಯೆಯನ್ನು ಆಧರಿಸಿ ಇಲ್ಲಿ ಯಾವ ವ್ಯಾಪಾರವೂ ಉಳಿದುಕೊಳ್ಳಲು ಸಾಧ್ಯವಿಲ್ಲ. ಬಿಜೆಪಿ ಸರಕಾರವು 2011ರಲ್ಲಿ ಜಾನುವಾರು ಸಂರಕ್ಷಣಾ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತರಲು ಮುಂದಾದಾಗ ಅದನ್ನು ಪ್ರತಿಭಟಿಸಿ ಬೆಂಗಳೂರಿನಲ್ಲಿ ಬಹಿರಂಗವಾಗಿ ಜಾನುವಾರು ಮಾಂಸವನ್ನು ಬೇಯಿಸಿ ಹಂಚಲಾಗಿತ್ತು. ಆ ಪ್ರತಿಭಟನೆಯನ್ನು ಏರ್ಪಡಿಸಿದ್ದು ಮುಸ್ಲಿಮರಾಗಿರಲಿಲ್ಲ. ಅಲ್ಲಿ ಪ್ರತಿಭಟಿಸಿದವರು ಯಾರು ಮತ್ತು ಮಾಂಸವನ್ನು ತಿಂದವರು ಯಾರು ಎಂಬುದು ಎಲ್ಲರಿಗೂ ಗೊತ್ತು. ಈ ದೇಶದ ದೊಡ್ಡದೊಂದು ಗುಂಪು ಇವತ್ತು ಜಾನುವಾರು ಮಾಂಸವನ್ನು ಆಹಾರವಾಗಿ ಬಳಸುತ್ತಿದೆ. ಅವರಲ್ಲಿ ಮುಸ್ಲಿಮರೂ ಸೇರಿದ್ದಾರೆ ಎಂಬುದು ನಿಜವೇ ಹೊರತು ಅವರೆಲ್ಲರೂ ಮುಸ್ಲಿಮರು ಎಂಬುದು ಅಪ್ಪಟ ಸುಳ್ಳು. ಒಂದು ವೇಳೆ, ಈ ದೇಶದ ಶೇ. 15ರಷ್ಟಿರುವ ಮುಸ್ಲಿಮರು ಮಾತ್ರ ಈ ಆಹಾರವನ್ನು ಸೇವಿಸುತ್ತಿದ್ದು ಉಳಿದ 85% ಮಂದಿ ಅದನ್ನು ವಿರೋಧಿಸುತ್ತಿದ್ದಾರೆ ಎಂದಾಗಿದ್ದರೆ ಅದು ಈ ದೇಶದಲ್ಲಿ ಎಂದೋ ನಿಷೇಧಕ್ಕೆ ಒಳಗಾಗುತ್ತಿತ್ತು. ಯಾಕೆಂದರೆ, ಯಾವ ಸರಕಾರವೂ 15% ಮಂದಿಯನ್ನು ತುಷ್ಠೀಕರಿಸುವುದಕ್ಕಾಗಿ 85% ಮಂದಿಯನ್ನು ಎದುರು ಹಾಕಿಕೊಳ್ಳುವ ಧೈರ್ಯ ತೋರಿಸಲಾರದು. ‘ಮುಸ್ಲಿಮರು ದಲಿತರಿಗಿಂತಲೂ ಹೀನಾಯ ಸ್ಥಿತಿಯಲ್ಲಿದ್ದಾರೆ’ ಎಂಬ ಸಾಚಾರ್ ವರದಿಯ ಅಂಶಗಳೇ ಮುಸ್ಲಿಮರನ್ನು ಇಲ್ಲಿನ ಸರಕಾರಗಳು ಎಷ್ಟರಮಟ್ಟಿಗೆ ಕಡೆಗಣಿಸಿವೆ ಎಂಬುದಕ್ಕೆ ಅತ್ಯುತ್ತಮ ಪುರಾವೆ. ಇಷ್ಟಿದ್ದೂ, ‘ಕಾಂಗ್ರೆಸ್ ಸರಕಾರವು ಮುಸ್ಲಿಮರನ್ನು ತುಷ್ಠೀಕರಿಸುತ್ತದೆ’ ಎಂದೋ ಅಥವಾ ‘ಮುಸ್ಲಿಮರಿಗಾಗಿಯೇ ಜಾನುವಾರು ಹತ್ಯೆಯನ್ನು ಸಕ್ರಮಗೊಳಿಸಲಾಗಿದೆ’ ಎಂದೋ ಹೇಳುವುದಾದರೆ, ಅದಕ್ಕೆ ನಾನೇನೂ ಹೇಳುತ್ತಿಲ್ಲ. ತೀರ್ಮಾನ ಓದುಗರಿಗೆ ಬಿಟ್ಟದ್ದು. ಆದರೂ,
 ಗೋವಿನ ಸಹಜ ಗರ್ಭಧಾರಣೆಯ ಹಕ್ಕನ್ನು ಕಸಿದು ಇಂಜಕ್ಷನ್ ಮುಖಾಂತರ ಕೃತಕ ಗರ್ಭಧಾರಣೆ ಮಾಡಿಸಿ ವರ್ಷದುದ್ದಕ್ಕೂ ಹಾಲು ಪಡೆಯಲು ಪ್ರಯತ್ನಿಸುವ ಮತ್ತು ಗೋವನ್ನು ಅಪ್ಪಟ ವ್ಯಾಪಾರದ ಪ್ರಾಣಿಯಾಗಿ ಮಾರ್ಪಡಿಸಿರುವ ಇಂದಿನ ಆಧುನಿಕ ಭಾರತೀಯರ ಬಗ್ಗೆ, ಅವರಿಂದಾಗಿ ಗೋವಿಗಾಗುತ್ತಿರುವ ಹಿಂಸೆಯ ಬಗ್ಗೆ ಏನೊಂದೂ ಹೇಳದೇ, ಬರೇ `ಹತ್ಯೆಯ’ ಬಗ್ಗೆ ಮತ್ತು ಅಕ್ರಮ ಸಾಗಾಟ ಹಾಗೂ ಮುಸ್ಲಿಮರ ಬಗ್ಗೆ ಮಾತ್ರ ಮಾತುಗಳು ಕೇಳಿ ಬರುತ್ತಿರುವುದನ್ನು ಕಂಡು ಇವೆಲ್ಲವನ್ನೂ ಇಲ್ಲಿ ಹಂಚಿಕೊಳ್ಳಬೇಕೆನಿಸಿತು.

Wednesday, May 7, 2014

ನೋವಲ್ಲೂ ಮಿಡಿವ ಆ ಯುವಕನನ್ನು ಎದುರಿಟ್ಟುಕೊಂಡು..

2014 ಫೆಬ್ರವರಿ 6
   ಕೀಮೋಥೆರಪಿ ಬೇಗನೇ ಮುಗಿಯಬಹುದೆಂದು ನಾನು ಅಂದುಕೊಂಡಿದ್ದೆ. ಆದರೆ ಅದು ನಿರೀಕ್ಷಿಸಿದ್ದಕ್ಕಿಂತಲೂ ತುಂಬಾ ಹೆಚ್ಚೇ ಸಮಯವನ್ನು ತೆಗೆದುಕೊಂಡಿತು. ಇದು ತುಂಬಾ ನೋವನ್ನೂ ಕೊಟ್ಟಿತು. ಆದರೂ ನಿರೀಕ್ಷಿಸಿದಷ್ಟು ಅಲ್ಲ. ಇನ್ನು, ನಾನು ಸಹಜ ಸ್ಥಿತಿಗೆ ಮರಳಲು ಕೆಲವು ದಿನಗಳೇ ಬೇಕಾಗಬಹುದು. ಹೌದು, ನಾನು ವಾಸ್ತವವನ್ನು ಒಪ್ಪಬೇಕಿದೆ. ಮನೆಗೆ ಹೋಗಬಹುದೆಂದು ವೈದ್ಯರೂ ಹೇಳಿದ್ದಾರೆ. ಮನಸ್ಸಿಗೆ ಖುಷಿಯಾಗುತ್ತಿದೆ - ಮನೆಯ ಸ್ವಂತ ಹಾಸಿಗೆಯಲ್ಲಿ ಮಲಗಬಹುದಲ್ಲ..
   ಫೆಬ್ರವರಿ 20
ನಾನು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಹೋಗಿದ್ದೇನೆ. ನನ್ನ ಕೀಮೋಥೆರಪಿಯ ಎರಡನೇ ಹಂತ ಪ್ರಾರಂಭವಾಗಿದೆ.  Cetuximab ಮತ್ತು Irinotecan  ಎಂಬ ಎರಡು ಔಷಧಿಗಳನ್ನು ಸೇವಿಸಿದೆ. ಇದು ನನ್ನ ಮೇಲೆ ಅಡ್ಡ ಪರಿಣಾಮ ಬೀರುತ್ತದೆಂಬುದು ನನಗೆ ಗೊತ್ತು. ನಾನು ಯಾವಾಗ ಚೆನ್ನಾಗಿರುತ್ತೇನೆ ಮತ್ತು ಯಾವಾಗ ಕಷ್ಟದಲ್ಲಿರುತ್ತೇನೆ ಎಂದು ಹೇಳಲಾಗುತ್ತಿಲ್ಲ. ನನ್ನ ಹೊಟ್ಟೆಯಲ್ಲಿ 3ನೇ ವಿಶ್ವ ಯುದ್ಧದ ಅನುಭವವಾಗುತ್ತಿದೆ.
   ಎಪ್ರಿಲ್ 13
ಹದಿಹರೆಯದ ಕ್ಯಾನ್ಸರ್ ಟ್ರಸ್ಟ್ ಗೆ (Teenage Cancer Trust)  ನೆರವು ನೀಡುತ್ತಿರುವ ಹೃದಯವಂತರನ್ನು ಸ್ಮರಿಸಿ ಖುಷಿಯಾಗುತ್ತಿದೆ. ಅವರಲ್ಲಿ ಹೆಚ್ಚಿನವರನ್ನೂ ನಾನು ನೋಡಿಲ್ಲ. ಇವತ್ತು ನನ್ನ ಆತ್ಮೀಯ ಗೆಳೆಯ ಲಂಡನ್ ಮ್ಯಾರಥಾನ್‍ನಲ್ಲಿ ಓಡಿದ. ನಾನೂ ಅದರಲ್ಲಿ ಓಡಬೇಕಿತ್ತು. ಆ ಮೂಲಕ ನನ್ನ ಟ್ರಸ್ಟ್ ಗೆ  ನಿಧಿ ಸಂಗ್ರಹಿಸಬೇಕಿತ್ತು. ಆದರೆ ದೇಹ ಸಹಕರಿಸುತ್ತಿಲ್ಲ.
   ಎಪ್ರಿಲ್ 16
ಇವತ್ತು ನಾನು ತುಸು ಚೆನ್ನಾಗಿಯೇ ಉಸಿರಾಡಿದೆ. ಅಂದರೆ ಸರಾಗ ಎಂದು ಅರ್ಥ ಅಲ್ಲ. ಆದರೂ ತುಸು ನೆಮ್ಮದಿಯಂತೂ ಇದೆ. ವೈದ್ಯರು ನನ್ನ ಎದೆಗೆ ಕಿವಿಗೊಟ್ಟು ಆಲಿಸಿದರು. ಶಬ್ದ ಬರುತ್ತಿತ್ತು. ಆ ಶಬ್ದಕ್ಕೂ ಎದೆಯಲ್ಲಿರುವ ಟ್ಯೂಮರ್‍ಗೂ ಸಂಬಂಧ ಇಲ್ಲ ಎಂಬುದು ವೈದ್ಯರ ನಿಲುವು. ಒಂದು ವೇಳೆ ಇದೆ ಎಂದಾದರೆ ತುಸು ಗಂಭೀರ ಪರೀಕ್ಷೆ ಎದುರಿಸಬೇಕಾಗುತ್ತದೆ. ಇವತ್ತು ನೋವು ತುಸು ಹಿಡಿತಕ್ಕೆ ಬಂದಿದೆ. ಒಂದು ವಾರಕ್ಕಿಂತ ಮೊದಲಾಗಿದ್ದರೆ ನೋವಿನ ಕಾರಣದಿಂದ ಪ್ರತಿದಿನ ರಾತ್ರಿ 7-8 ಬಾರಿ ಏಳುತ್ತಿದ್ದೆ. ಆದರೆ ನೋವು ನಿವಾರಕ ಔಷಧದ ಪರಿಣಾಮ ಈಗ 2-3 ಬಾರಿ ಏಳುತ್ತಿದ್ದೇನೆ. ಈ ಹಿಂದಿನದಕ್ಕೆ ಹೋಲಿಸಿದರೆ ಇದು ಓಕೆ. ಇದು ಏನೇ ಇರಲಿ, ಬದುಕಿನಲ್ಲಿ ಬ್ಯುಝಿ ಆಗಿರಬೇಕು ಎಂದು ನಾನು ಬಯಸುತ್ತೇನೆ. ಈ ತಿಂಗಳ ಕೊನೆಯಲ್ಲಿ ನನ್ನ ಕುರಿತಾದ ಡಾಕ್ಯುಮೆಂಟರಿ ಬಿಡುಗಡೆಗೊಳ್ಳುವುದನ್ನು ನಾನು ಖಾತ್ರಿಪಡಿಸಬೇಕಾಗಿದೆ. ಅದಕ್ಕಾಗಿ ಸಮಯ ನೀಡಬೇಕಾಗಿದೆ. ದೇಹವನ್ನು ಅದಕ್ಕಾಗಿ ಸಜ್ಜುಗೊಳಿಸಬೇಕಾಗಿದೆ.
   ಎಪ್ರಿಲ್ 21
ಖುಷಿಯ ಮತ್ತು ಅಚ್ಚರಿಯ ಸಂಗತಿ ಏನೆಂದರೆ, ನಾನೀಗಲೂ ಉಸಿರಾಡುತ್ತಿದ್ದೇನೆ. ನಿಮಗೆ ಗೊತ್ತಾ, ನಾನಿನ್ನು ಶಾಶ್ವತವಾಗಿ ಕೃತಕ ಆಕ್ಸಿಜನ್‍ನ ಸಹಾಯದಿಂದಲೇ ಬದುಕಬೇಕಾಗಿದೆ. ಹಾಗಾಗಿ ಆಸ್ಪತ್ರೆಯ ಹಾಸಿಗೆಯಿಂದ ಏಳಲಾಗುತ್ತಿಲ್ಲ. ಟ್ಯೂಮರ್‍ನಿಂದಾಗಿ ನನ್ನ ಬಲಭಾಗದ ಶ್ವಾಸಕೋಶ ಸಂಪೂರ್ಣ ನಿಷ್ಕ್ರಿಯವಾಗಿದೆ. ಇವತ್ತು ನಾನು CT  ಸ್ಕ್ಯಾನ್ ಮಾಡಿಸಲಿರುವೆನು. ಅದರಲ್ಲೇನೂ ಚೇತರಿಕೆ ಕಂಡರೆ ನಿಮ್ಮೊಂದಿಗೆ ಹೀಗೆ ಮಾತಾಡುವ ಅವಕಾಶ ಸಿಗಬಹುದೇನೋ.. ಬಹುಶಃ ಇಂಥ ನೋವು ಈ ಹಿಂದೆಂದೂ ಕಂಡಿರಲೇ ಇಲ್ಲ ಅನ್ನುವಷ್ಟು ತೀವ್ರವಾಗಿ ಇವತ್ತು ನನ್ನನ್ನು ಕಾಡುತ್ತಿದೆ. ತುಸು ಅಲ್ಲಾಡಲೂ ಆಗುತ್ತಿಲ್ಲ. ಸಣ್ಣ ಅಲುಗಾಟಕ್ಕೂ ಜೀವವೇ ಹೋದಷ್ಟು ನೋವಿನ ಅನುಭವವಾಗುತ್ತಿದೆ. ನಿತ್ರಾಣ ಎಷ್ಟು ವಿಪರೀತ ಮಟ್ಟಕ್ಕೆ ಹೋಗಿದೆಯೆಂದರೆ, ಮಾತಾಡಲೂ ಆಗದಷ್ಟು ಮತ್ತು ಹೀಗೆ ಟೈಪ್ ಮಾಡಲೂ ಕೂಡದಷ್ಟು. ಆದ್ದರಿಂದ ನಿಮ್ಮೆಲ್ಲರ ಪ್ರತಿಕ್ರಿಯೆ, ಹಾರೈಕೆಗಳನ್ನು ಓದಲಾಗುತ್ತಿಲ್ಲ. ಆದರೆ ನಿಮ್ಮೆಲ್ಲರ ಪ್ರೀತಿಗೆ ನಾನು ಅಭಾರಿಯಾಗಿರುವೆ. ಹೌದು, ಸಾವು ಅನಿವಾರ್ಯ. ಆದರೂ ನಾನು ಸಾಯಲು ಬಯಸುತ್ತಿಲ್ಲ. ಬದುಕನ್ನು ಕೇವಲ ಉಡುಗೊರೆ ಎಂಬಂತೆ ಕೇವಲವಾಗಿ ಪರಿಗಣಿಸಬಾರದೆಂಬುದೇ ನನ್ನ ನಿಲುವು. ಅದು ಅಮೂಲ್ಯ.
   ಎಪ್ರಿಲ್ 22
ಬಹುಶಃ ಇದು ನನ್ನ ಬದುಕಿನ ಕೊನೆಯ ಭೇಟಿ ಆಗಿರಬಹುದೇನೋ. ನೋವು ತುಂಬಾ ತುಂಬಾ ತೀವ್ರವಾಗುತ್ತಿದೆ. ಹಾಗಂತ, ಇಂಥ ನೋವುಗಳನ್ನು ನಾನು ಈ ಮೊದಲು ಅನುಭವಿಸಿಲ್ಲ ಎಂದಲ್ಲ. ಆದರೆ ನೋವು ದಿನೇ ದಿನೇ ಬಿಗಡಾಯಿಸುತ್ತಿದೆ. ಆದರೂ ನಾನು ಮಾಡಬೇಕಾದ ಕೆಲಸಗಳು ಇನ್ನೂ ಇವೆ. ಮುಖ್ಯವಾಗಿ ‘ಕ್ಯಾನ್ಸರ್ ಟ್ರಸ್ಟ್'ಗೆ ನಿಧಿ ಸಂಗ್ರಹ. ನನ್ನ ಅನುಪಸ್ಥಿತಿಯಲ್ಲೂ ಅದು ಮುಂದುವರಿಯಬೇಕು. ಪ್ಲೀಸ್ Do it. ಎಲ್ಲರಿಗೂ ಕೃತಜ್ಞತೆಗಳು. ವಿಶೇಷವಾಗಿ ನನ್ನ ಅಮ್ಮನಿಗೆ, ಕುಟುಂಬ ವರ್ಗಕ್ಕೆ, ಸ್ನೇಹಿತರಿಗೆ, ನನಗೆ ಆರೋಗ್ಯವನ್ನು ಮರಳಿಸುವುದಕ್ಕಾಗಿ ಶ್ರಮ ವಹಿಸಿ ದುಡಿಯುತ್ತಿರುವ ವೈದ್ಯರಿಗೆ, ಎಲ್ಲರಿಗೆ..
   ಎಪ್ರಿಲ್ 27
ನಿನ್ನೆ ಮಧ್ಯಾಹ್ನದ ಬಳಿಕ ಕೆಮ್ಮು ನನ್ನನ್ನು ಎಷ್ಟು ಕಾಡಿತೆಂದರೆ ತುಂಬಾ ತುಂಬಾ. ಆರಂಭದಲ್ಲಿ ಅಷ್ಟು ಜೋರಾಗಿ ಇರಲಿಲ್ಲ. ಆದರೆ ಬರಬರುತ್ತಾ ನನ್ನಿಂದ ತಡಕೊಳ್ಳಲೇ ಆಗದಷ್ಟು ವಿಪರೀತ ಆಯಿತು. ಸಂಜೆಯ ಹೊತ್ತಲ್ಲಿ ಉಸಿರಾಟವೂ ಕೈ ಕೊಡತೊಡಗಿತು. ನನ್ನನ್ನು ಭೇಟಿಯಾಗಲು ಹಲವರು ಬಂದಿದ್ದರು. ಅವರು ನನ್ನ ಸುತ್ತಲಿನಿಂದ ಚದುರಿದ್ದೇ ತಡ, ನಾನು ಕುರ್ಚಿಯಲ್ಲಿ ಕೂರಲು ಯತ್ನಿಸಿದೆ. ಉಸಿರಾಡಲು ಕಷ್ಟಪಡುವ ಸಂದರ್ಭ ಎಷ್ಟು ಭಯಾನಕ ಅನ್ನುವುದು ನಿಮಗೆ ಗೊತ್ತಿದೆಯೋ ಇಲ್ಲವೋ. ಕುರ್ಚಿಯಲ್ಲಿ ನೇರವಾಗಿ ಕೂತೆ. ನನಗೆ ಜೋಡಿಸಲಾಗಿದ್ದ ಕೃತಕ ಆಮ್ಲಜನಕದ ಪ್ರಮಾಣವನ್ನು ಹೆಚ್ಚುಗೊಳಿಸುವಂತೆ ದಾದಿಯರಲ್ಲಿ ವಿನಂತಿಸಿದೆ. ಆದರೂ ಉಸಿರಾಟದಲ್ಲಿ ಸಹಜತೆ ಇರಲಿಲ್ಲ. ಮತ್ತೆ ನಾನು ಹಾಸಿಗೆಗೆ ಮರಳಿದೆ. ಸ್ವಲ್ಪ ಹೊತ್ತು ನಿರಾಳ ಅನ್ನಿಸಿತು. ಬಳಿಕ ಉಸಿರಾಟದಲ್ಲಿ ತೊಡಕು ಕಾಣಿಸತೊಡಗಿತು. ಸಹಿಸಿಕೊಂಡೆ. ಆದರೆ ಎಲ್ಲಿವರೆಗೇಂತ ಈ ಸ್ಥಿತಿಯನ್ನು ಸಹಿಸಿಕೊಳ್ಳುವುದು? ತುಸು ಸಮಯದ ಬಳಿಕ ಕೆಮ್ಮು ಶುರುವಾಯಿತು. ಜೊತೆಗೇ ಉಸಿರಾಟದ ತೊಂದರೆಯೂ ಹೆಚ್ಚಾಯಿತು. ನಿಜ ಹೇಳಬೇಕೆಂದರೆ, ನನ್ನನ್ನು ಯಾರೋ ಉಸಿರುಗಟ್ಟಿಸಿ ಕೊಲ್ಲುತ್ತಿರುವ ಅನುಭವ. ಬಳಿಕ ತುಸು ನೆಮ್ಮದಿ. ಒಮ್ಮೆ ಸಮಸ್ಯೆ ವಿಪರೀತ ಮಟ್ಟಕ್ಕೆ ಹೋದರೆ, ಇನ್ನೊಮ್ಮೆ ಒಂದಷ್ಟು ಕರುಣೆ ತೋರಿಸಿದಂತೆ ಸಡಿಲ ಆಗುತ್ತಿತ್ತು. ರಾತ್ರಿಯಿಡೀ ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ನಿದ್ದೆ ಕಳೆದೆ. ಆದರೆ ಬೆಳಿಗ್ಗೆ ಚೆನ್ನಾಗಿದ್ದೇನೆ. I am feeling bloody fantastic.  ನಿನ್ನೆ ವೈದ್ಯರು ನನ್ನನ್ನು ಕಾಡುತ್ತಿರುವ ಸಮಸ್ಯೆಯ ಸುತ್ತ ಚರ್ಚಿಸುತ್ತಿದ್ದರು. ನನ್ನ ಕೆಮ್ಮಿಗೆ ಟ್ಯೂಮರ್ ಅಡ್ಡವಾಗಿರುವುದು ಕಾರಣ ಅಂದರು. ಎಕ್ಸ್ ರೇ  ತೆಗೆಯಲಾಯಿತು. ಹಾಗಂತ ನಾನು ಯಾರನ್ನೂ ಯಾವುದನ್ನೂ ದೂರುತ್ತಿಲ್ಲ. ಒಂದು ಹಂತದ ವರೆಗೆ ನಾನು ಖುಷಿಯಾಗಿಯೇ ಇದ್ದೇನೆ. ಪ್ರತಿದಿನ ಆರೋಗ್ಯದಲ್ಲಿ ಏರುಪೇರಾಗುವುದು ಈ ರೋಗದ ಭಾಗವೇ ಆಗಿದೆ. ನೋಡುವ..
   ಎಪ್ರಿಲ್ 29
ಹಾಯ್, ನಾನು ಸ್ಟೀಫನ್. ನಾನಿನ್ನೂ ಜೀವಂತ ಇದ್ದೇನೆ ಮತ್ತು ಬದುಕಿರಲು ಹೋರಾಟ ನಡೆಸುತ್ತಿದ್ದೇನೆ. ಹಾಗಂತ, ನನ್ನ ಮಿತಿಗಳ ಬಗ್ಗೆ ನನಗೆ ಸ್ಪಷ್ಟ ಅರಿವಿದೆ. ಬದುಕಿ ಉಳಿಯಬೇಕೆಂಬ ನನ್ನ ಆಸೆ ಮತ್ತು ವಾಸ್ತವಗಳ ನಡುವೆ ಎಷ್ಟು ದೊಡ್ಡ ಅಂತರ ಇದೆ ಎಂಬುದನ್ನೂ ಬಲ್ಲೆ. ಆದರೂ ಹೋರಾಟ ಮಾಡುತ್ತಲೇ ಇರುವೆ. ನಾನು ಸತ್ತೇ ಹೋದೆ ಎಂದೇ ಎಣಿಸಿದ್ದೆ. ಆದರೆ ಹಾಗೇನೂ ಆಗಿಲ್ಲ. ಎಪ್ರಿಲ್ 27ರಂದು ನನ್ನ ಬಲಭಾಗದ ಶ್ವಾಸಕೋಶ ಸಂಪೂರ್ಣ ನಿಷ್ಕ್ರಿಯವಾಗಿದೆ. ಅದು ಕೆಲಸ ಮಾಡುವುದಿಲ್ಲವೆಂದ ಮೇಲೆ ಕೃತಕ ಆಮ್ಲಜನಕದ ನೆರವು ಪಡೆಯಲೇಬೇಕು ತಾನೇ. ಈಗ ನಾನು ಉಸಿರಾಡುತ್ತಿರುವುದು ಇದೇ ಆಮ್ಲಜನಕದಿಂದ. ಮ್‍ಮ್.. ಆಮ್ಲಜನಕದೊಂದಿಗೆ ಬದುಕುವುದು, ಸದಾ ಮೂಗಿಗಿಟ್ಟುಕೊಂಡು ಉಸಿರಾಡೋದು ಎಷ್ಟು ಕಷ್ಟ ಗೊತ್ತಾ? ಆದರೂ ನಾನು ತುಂಬ ಖುಷಿಯಲ್ಲಿದ್ದೇನೆ. ಯಾಕೆಂದರೆ, ನಾನು ಆರಂಭಿಸಿದ, 'ಹದಿಹರೆಯದವರ ಕ್ಯಾನ್ಸರ್ ಟ್ರಸ್ಟ್'ಗೆ ಅದ್ಭುತ ಪ್ರತಿಕ್ರಿಯೆಗಳು ಬರುತ್ತಿವೆ. ಜನರು ಈ ಫಂಡ್‍ನ ಮೇಲೆ ಎಷ್ಟೊಂದು ಮಮಕಾರ ತೋರಿರುವರೆಂದರೆ, ಅದಕ್ಕೆ ನಿಗದಿತ ಗುರಿಗಿಂತ ಮೂರು ಪಟ್ಟು ಹೆಚ್ಚು ಹಣವು ಜಮೆಯಾಗಿದೆ. ಗೆಳೆಯರೇ, ನನ್ನ ಭಾವನೆಗಳನ್ನು ಪ್ರತಿದಿನ update  ಮಾಡಬೇಕೆಂದು ನಾನು ಬಯಸುತ್ತಿರುತ್ತೇನೆ. ಆದರೆ ನಾನು ಎಲ್ಲರಂತಿಲ್ಲವಲ್ಲ. ಮನಸ್ಸು ಬಯಸುತ್ತದಾದರೂ ದೇಹ ಸಹಕರಿಸುತ್ತಿಲ್ಲ. ಹಾಂ, ಎಪ್ರಿಲ್ 27ರಂದು ಬಲ ಶ್ವಾಸಕೋಶ ನಿಷ್ಕ್ರಿಯವಾಯಿತಲ್ಲ. ಅಂದು ನನ್ನನ್ನು ವೈದ್ಯರ ಒಂದು ತಂಡ ಇಡಿಯಾಗಿ ಸುತ್ತುವರಿದಿತ್ತು. ಎಮರ್ಜೆನ್ಸಿ ರೂಮ್ ತುಂಬಾ ವೈದ್ಯರೇ. ಅವರೆಲ್ಲರನ್ನೂ ಹಾಗೇ ನೋಡುತ್ತಲೇ ಒಂದು ಬಗೆಯ ಆತಂಕ, ತಳಮಳ ಉಂಟಾಯಿತು. ಓರ್ವ ರೋಗಿಯನ್ನು ನೋಡುವುದಕ್ಕಾಗಿ ವೈದ್ಯರು ಅಷ್ಟು ಗುಂಪಾಗಿ ಬರುವುದಿಲ್ಲವಲ್ಲ. ನಾನಿನ್ನು ಉಳಿಯಲಾರೆನೇನೋ ಎಂಬ ಅನುಮಾನ ಉಂಟಾಯಿತು. ಆದರೆ ಇನ್ನೂ ಬದುಕಿದ್ದೇನೆ. ಅವರೆಲ್ಲ ಹೋದ ಬಳಿಕ ವಿಪರೀತ ಸುಸ್ತಾಯಿತು. ಎಷ್ಟು ಅಂದರೆ ಏನೂ ಮಾಡಲು ಸಾಧ್ಯವಿಲ್ಲ ಅನ್ನುವಷ್ಟು...    ಸ್ಟೀಫನ್ ಸುಟನ್ ಎಂಬ 19 ವರ್ಷದ ಕ್ಯಾನ್ಸರ್ ಪೀಡಿತ ಯುವಕ ತನ್ನ ಬ್ಲಾಗಲ್ಲಿ ಹೀಗೆ ಬರೆಯುತ್ತಾ ಹೋಗುತ್ತಾನೆ. ಓದುತ್ತಾ ಹೋದಂತೆ ಕಣ್ಣಾಲಿಗಳು ತುಂಬಿಕೊಳ್ಳುತ್ತಾ ಹೋಗುತ್ತದೆ.
   ಲಂಡನ್ನಿನ ಬರ್ನ್‍ಂಟ್‍ವುಡ್‍ನಲ್ಲಿ 1994 ಡಿ. 16ರಂದು ಹುಟ್ಟಿದ ಈ ಹುಡುಗ 2012 ಆಗಸ್ಟ್ ನಲ್ಲಿ Chase Terrace Technology College ನಿಂದ ಪದವಿ ಪಡೆದ. ಅಲ್ಲದೇ ವೈದ್ಯನಾಗುವ ಉದ್ದೇಶದಿಂದ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಸಂದರ್ಶನಕ್ಕೆ ಹೋದ. ರಾಷ್ಟ್ರಮಟ್ಟದ ಅಥ್ಲೀಟ್, ಕ್ರಾಸ್ ಕಂಟ್ರಿ ಮತ್ತು ಫುಟ್ಬಾಲ್ ಆಟಗಾರನಾಗಿರುವ ಸುಟನ್, ಸಂದರ್ಶನದ ಫಲಿತಾಂಶವನ್ನು ಪ್ರಕಟವಾಗುವುದಕ್ಕಿಂತ ಮೊದಲೇ ಅರ್ಜಿಯನ್ನು ಹಿಂದಕ್ಕೆ ಪಡೆದ. ಯಾಕೆಂದರೆ, ಆತನಿಗೆ ಬಾಧಿಸಿರುವ ಕ್ಯಾನ್ಸರ್ ರೋಗವು ಗುಣಪಡಿಸಲಾಗದ ಹಂತಕ್ಕೆ ತಲುಪಿದೆ ಎಂದು ಗೊತ್ತಾಗಿರುತ್ತದೆ. 15ನೇ ವರ್ಷದಲ್ಲೇ ಕ್ಯಾನ್ಸರ್‍ಗೆ ತುತ್ತಾದ ಆತ 2013 ಜನವರಿಯಲ್ಲಿ ತನ್ನದೇ ಆದ ಬ್ಲಾಗ್ ಅನ್ನು ತೆರೆದು ಭಾವನೆಗಳನ್ನು ಬರೆಯಲು ಪ್ರಾರಂಭಿಸಿದ. ತನಗಾಗುವ ನೋವು, ಖುಷಿ, ಸಂಕಟ, ದುಮ್ಮಾನಗಳನ್ನು ಪ್ರತಿದಿನವೆಂಬಂತೆ ಅದರಲ್ಲಿ ದಾಖಲಿಸುತ್ತಾ ಹೋದ. ಫೇಸ್‍ಬುಕ್‍ನಲ್ಲೂ ಹಾಕತೊಡಗಿದ. ಈ ಮಧ್ಯೆ ತನ್ನಂತೆ ಕ್ಯಾನ್ಸರ್‍ನಿಂದ ಬಳಲುತ್ತಿರುವವರಿಗಾಗಿ ‘ಹದಿಹರೆಯದವರ ಕ್ಯಾನ್ಸರ್ ಟ್ರಸ್ಟ್’ ಅನ್ನು ಪ್ರಾರಂಭಿಸಿ ನಿಧಿ ಸಂಗ್ರಹಿಸತೊಡಗಿದ. ಅದಕ್ಕಾಗಿ ವೆಬ್‍ಸೈಟ್ ಸ್ಥಾಪಿಸಿದ. ಆರಂಭದಲ್ಲಿ 10,000 ಪೌಂಡ್ ಆತನ ಗುರಿಯಾಗಿತ್ತು. ಆದರೆ ಬರಬರುತ್ತಾ ಗುರಿ ಹಿಗ್ಗತೊಡಗಿತಲ್ಲದೇ 1 ಮಿಲಿಯನ್‍ಗೆ ತಲುಪಿತು. ಕಳೆದ ಎಪ್ರಿಲ್ 27ಕ್ಕೆ 3.5 ಮಿಲಿಯನ್ ಪೌಂಡ್ ಸಂಗ್ರಹವಾಗಿ ಜಾಗತಿಕವಾಗಿಯೇ ಸುದ್ದಿಗೀಡಾಯಿತು. ಓರ್ವ ಯುವಕನ ಈ ಪ್ರಯತ್ನವನ್ನು ಜಗತ್ತಿನ ಪ್ರಮುಖ ಸುದ್ದಿ ಮಾಧ್ಯಮಗಳು ಕೊಂಡಾಡಿದುವು. ವಿಷಾದ ಏನೆಂದರೆ, ಸ್ಟೀಫನ್ ಸುಟನ್ ಮಾತ್ರ ಅದಾಗಲೇ ಸಾವಿನ ಹತ್ತಿರಕ್ಕೆ ಸಮೀಪಿಸಿದ್ದ. ಎಪ್ರಿಲ್ 27ರಂದೇ ಆತನ ಬಲ ಶ್ವಾಸಕೋಶವು ನಿಷ್ಕ್ರಿಯಗೊಂಡು ಜೀವರಕ್ಷಕ ಉಪಕರಣಗಳ ಸಹಾಯದಿಂದ ಉಸಿರಾಡುತ್ತಿದ್ದ. ಆ ಸಂದರ್ಭದಲ್ಲೂ ನಗಲು ಪ್ರಯತ್ನಿಸುವ ಆತನನ್ನು ನೋಡುವಾಗ ಕಣ್ಣು ಹನಿಗೂಡುತ್ತದೆ. ನಿಜವಾಗಿ,
ಈರ್ಷ್ಯೇ, ದ್ವೇಷ, ಅಹಂಕಾರ, ವಂಚನೆ, ಸುಳ್ಳು, ಕಾಪಟ್ಯಗಳನ್ನು ದೇಹವಿಡೀ ತುಂಬಿಕೊಂಡು ಬದುಕುತ್ತಿರುವ ನಮ್ಮನ್ನು ಎಚ್ಚರ ಗೊಳಿಸುವುದಕ್ಕೆ ಸ್ಟೀಫನ್ ಸುಟನ್ ಒಬ್ಬನೇ ಸಾಕು.