Wednesday, May 7, 2014

ನೋವಲ್ಲೂ ಮಿಡಿವ ಆ ಯುವಕನನ್ನು ಎದುರಿಟ್ಟುಕೊಂಡು..

2014 ಫೆಬ್ರವರಿ 6
   ಕೀಮೋಥೆರಪಿ ಬೇಗನೇ ಮುಗಿಯಬಹುದೆಂದು ನಾನು ಅಂದುಕೊಂಡಿದ್ದೆ. ಆದರೆ ಅದು ನಿರೀಕ್ಷಿಸಿದ್ದಕ್ಕಿಂತಲೂ ತುಂಬಾ ಹೆಚ್ಚೇ ಸಮಯವನ್ನು ತೆಗೆದುಕೊಂಡಿತು. ಇದು ತುಂಬಾ ನೋವನ್ನೂ ಕೊಟ್ಟಿತು. ಆದರೂ ನಿರೀಕ್ಷಿಸಿದಷ್ಟು ಅಲ್ಲ. ಇನ್ನು, ನಾನು ಸಹಜ ಸ್ಥಿತಿಗೆ ಮರಳಲು ಕೆಲವು ದಿನಗಳೇ ಬೇಕಾಗಬಹುದು. ಹೌದು, ನಾನು ವಾಸ್ತವವನ್ನು ಒಪ್ಪಬೇಕಿದೆ. ಮನೆಗೆ ಹೋಗಬಹುದೆಂದು ವೈದ್ಯರೂ ಹೇಳಿದ್ದಾರೆ. ಮನಸ್ಸಿಗೆ ಖುಷಿಯಾಗುತ್ತಿದೆ - ಮನೆಯ ಸ್ವಂತ ಹಾಸಿಗೆಯಲ್ಲಿ ಮಲಗಬಹುದಲ್ಲ..
   ಫೆಬ್ರವರಿ 20
ನಾನು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಹೋಗಿದ್ದೇನೆ. ನನ್ನ ಕೀಮೋಥೆರಪಿಯ ಎರಡನೇ ಹಂತ ಪ್ರಾರಂಭವಾಗಿದೆ.  Cetuximab ಮತ್ತು Irinotecan  ಎಂಬ ಎರಡು ಔಷಧಿಗಳನ್ನು ಸೇವಿಸಿದೆ. ಇದು ನನ್ನ ಮೇಲೆ ಅಡ್ಡ ಪರಿಣಾಮ ಬೀರುತ್ತದೆಂಬುದು ನನಗೆ ಗೊತ್ತು. ನಾನು ಯಾವಾಗ ಚೆನ್ನಾಗಿರುತ್ತೇನೆ ಮತ್ತು ಯಾವಾಗ ಕಷ್ಟದಲ್ಲಿರುತ್ತೇನೆ ಎಂದು ಹೇಳಲಾಗುತ್ತಿಲ್ಲ. ನನ್ನ ಹೊಟ್ಟೆಯಲ್ಲಿ 3ನೇ ವಿಶ್ವ ಯುದ್ಧದ ಅನುಭವವಾಗುತ್ತಿದೆ.
   ಎಪ್ರಿಲ್ 13
ಹದಿಹರೆಯದ ಕ್ಯಾನ್ಸರ್ ಟ್ರಸ್ಟ್ ಗೆ (Teenage Cancer Trust)  ನೆರವು ನೀಡುತ್ತಿರುವ ಹೃದಯವಂತರನ್ನು ಸ್ಮರಿಸಿ ಖುಷಿಯಾಗುತ್ತಿದೆ. ಅವರಲ್ಲಿ ಹೆಚ್ಚಿನವರನ್ನೂ ನಾನು ನೋಡಿಲ್ಲ. ಇವತ್ತು ನನ್ನ ಆತ್ಮೀಯ ಗೆಳೆಯ ಲಂಡನ್ ಮ್ಯಾರಥಾನ್‍ನಲ್ಲಿ ಓಡಿದ. ನಾನೂ ಅದರಲ್ಲಿ ಓಡಬೇಕಿತ್ತು. ಆ ಮೂಲಕ ನನ್ನ ಟ್ರಸ್ಟ್ ಗೆ  ನಿಧಿ ಸಂಗ್ರಹಿಸಬೇಕಿತ್ತು. ಆದರೆ ದೇಹ ಸಹಕರಿಸುತ್ತಿಲ್ಲ.
   ಎಪ್ರಿಲ್ 16
ಇವತ್ತು ನಾನು ತುಸು ಚೆನ್ನಾಗಿಯೇ ಉಸಿರಾಡಿದೆ. ಅಂದರೆ ಸರಾಗ ಎಂದು ಅರ್ಥ ಅಲ್ಲ. ಆದರೂ ತುಸು ನೆಮ್ಮದಿಯಂತೂ ಇದೆ. ವೈದ್ಯರು ನನ್ನ ಎದೆಗೆ ಕಿವಿಗೊಟ್ಟು ಆಲಿಸಿದರು. ಶಬ್ದ ಬರುತ್ತಿತ್ತು. ಆ ಶಬ್ದಕ್ಕೂ ಎದೆಯಲ್ಲಿರುವ ಟ್ಯೂಮರ್‍ಗೂ ಸಂಬಂಧ ಇಲ್ಲ ಎಂಬುದು ವೈದ್ಯರ ನಿಲುವು. ಒಂದು ವೇಳೆ ಇದೆ ಎಂದಾದರೆ ತುಸು ಗಂಭೀರ ಪರೀಕ್ಷೆ ಎದುರಿಸಬೇಕಾಗುತ್ತದೆ. ಇವತ್ತು ನೋವು ತುಸು ಹಿಡಿತಕ್ಕೆ ಬಂದಿದೆ. ಒಂದು ವಾರಕ್ಕಿಂತ ಮೊದಲಾಗಿದ್ದರೆ ನೋವಿನ ಕಾರಣದಿಂದ ಪ್ರತಿದಿನ ರಾತ್ರಿ 7-8 ಬಾರಿ ಏಳುತ್ತಿದ್ದೆ. ಆದರೆ ನೋವು ನಿವಾರಕ ಔಷಧದ ಪರಿಣಾಮ ಈಗ 2-3 ಬಾರಿ ಏಳುತ್ತಿದ್ದೇನೆ. ಈ ಹಿಂದಿನದಕ್ಕೆ ಹೋಲಿಸಿದರೆ ಇದು ಓಕೆ. ಇದು ಏನೇ ಇರಲಿ, ಬದುಕಿನಲ್ಲಿ ಬ್ಯುಝಿ ಆಗಿರಬೇಕು ಎಂದು ನಾನು ಬಯಸುತ್ತೇನೆ. ಈ ತಿಂಗಳ ಕೊನೆಯಲ್ಲಿ ನನ್ನ ಕುರಿತಾದ ಡಾಕ್ಯುಮೆಂಟರಿ ಬಿಡುಗಡೆಗೊಳ್ಳುವುದನ್ನು ನಾನು ಖಾತ್ರಿಪಡಿಸಬೇಕಾಗಿದೆ. ಅದಕ್ಕಾಗಿ ಸಮಯ ನೀಡಬೇಕಾಗಿದೆ. ದೇಹವನ್ನು ಅದಕ್ಕಾಗಿ ಸಜ್ಜುಗೊಳಿಸಬೇಕಾಗಿದೆ.
   ಎಪ್ರಿಲ್ 21
ಖುಷಿಯ ಮತ್ತು ಅಚ್ಚರಿಯ ಸಂಗತಿ ಏನೆಂದರೆ, ನಾನೀಗಲೂ ಉಸಿರಾಡುತ್ತಿದ್ದೇನೆ. ನಿಮಗೆ ಗೊತ್ತಾ, ನಾನಿನ್ನು ಶಾಶ್ವತವಾಗಿ ಕೃತಕ ಆಕ್ಸಿಜನ್‍ನ ಸಹಾಯದಿಂದಲೇ ಬದುಕಬೇಕಾಗಿದೆ. ಹಾಗಾಗಿ ಆಸ್ಪತ್ರೆಯ ಹಾಸಿಗೆಯಿಂದ ಏಳಲಾಗುತ್ತಿಲ್ಲ. ಟ್ಯೂಮರ್‍ನಿಂದಾಗಿ ನನ್ನ ಬಲಭಾಗದ ಶ್ವಾಸಕೋಶ ಸಂಪೂರ್ಣ ನಿಷ್ಕ್ರಿಯವಾಗಿದೆ. ಇವತ್ತು ನಾನು CT  ಸ್ಕ್ಯಾನ್ ಮಾಡಿಸಲಿರುವೆನು. ಅದರಲ್ಲೇನೂ ಚೇತರಿಕೆ ಕಂಡರೆ ನಿಮ್ಮೊಂದಿಗೆ ಹೀಗೆ ಮಾತಾಡುವ ಅವಕಾಶ ಸಿಗಬಹುದೇನೋ.. ಬಹುಶಃ ಇಂಥ ನೋವು ಈ ಹಿಂದೆಂದೂ ಕಂಡಿರಲೇ ಇಲ್ಲ ಅನ್ನುವಷ್ಟು ತೀವ್ರವಾಗಿ ಇವತ್ತು ನನ್ನನ್ನು ಕಾಡುತ್ತಿದೆ. ತುಸು ಅಲ್ಲಾಡಲೂ ಆಗುತ್ತಿಲ್ಲ. ಸಣ್ಣ ಅಲುಗಾಟಕ್ಕೂ ಜೀವವೇ ಹೋದಷ್ಟು ನೋವಿನ ಅನುಭವವಾಗುತ್ತಿದೆ. ನಿತ್ರಾಣ ಎಷ್ಟು ವಿಪರೀತ ಮಟ್ಟಕ್ಕೆ ಹೋಗಿದೆಯೆಂದರೆ, ಮಾತಾಡಲೂ ಆಗದಷ್ಟು ಮತ್ತು ಹೀಗೆ ಟೈಪ್ ಮಾಡಲೂ ಕೂಡದಷ್ಟು. ಆದ್ದರಿಂದ ನಿಮ್ಮೆಲ್ಲರ ಪ್ರತಿಕ್ರಿಯೆ, ಹಾರೈಕೆಗಳನ್ನು ಓದಲಾಗುತ್ತಿಲ್ಲ. ಆದರೆ ನಿಮ್ಮೆಲ್ಲರ ಪ್ರೀತಿಗೆ ನಾನು ಅಭಾರಿಯಾಗಿರುವೆ. ಹೌದು, ಸಾವು ಅನಿವಾರ್ಯ. ಆದರೂ ನಾನು ಸಾಯಲು ಬಯಸುತ್ತಿಲ್ಲ. ಬದುಕನ್ನು ಕೇವಲ ಉಡುಗೊರೆ ಎಂಬಂತೆ ಕೇವಲವಾಗಿ ಪರಿಗಣಿಸಬಾರದೆಂಬುದೇ ನನ್ನ ನಿಲುವು. ಅದು ಅಮೂಲ್ಯ.
   ಎಪ್ರಿಲ್ 22
ಬಹುಶಃ ಇದು ನನ್ನ ಬದುಕಿನ ಕೊನೆಯ ಭೇಟಿ ಆಗಿರಬಹುದೇನೋ. ನೋವು ತುಂಬಾ ತುಂಬಾ ತೀವ್ರವಾಗುತ್ತಿದೆ. ಹಾಗಂತ, ಇಂಥ ನೋವುಗಳನ್ನು ನಾನು ಈ ಮೊದಲು ಅನುಭವಿಸಿಲ್ಲ ಎಂದಲ್ಲ. ಆದರೆ ನೋವು ದಿನೇ ದಿನೇ ಬಿಗಡಾಯಿಸುತ್ತಿದೆ. ಆದರೂ ನಾನು ಮಾಡಬೇಕಾದ ಕೆಲಸಗಳು ಇನ್ನೂ ಇವೆ. ಮುಖ್ಯವಾಗಿ ‘ಕ್ಯಾನ್ಸರ್ ಟ್ರಸ್ಟ್'ಗೆ ನಿಧಿ ಸಂಗ್ರಹ. ನನ್ನ ಅನುಪಸ್ಥಿತಿಯಲ್ಲೂ ಅದು ಮುಂದುವರಿಯಬೇಕು. ಪ್ಲೀಸ್ Do it. ಎಲ್ಲರಿಗೂ ಕೃತಜ್ಞತೆಗಳು. ವಿಶೇಷವಾಗಿ ನನ್ನ ಅಮ್ಮನಿಗೆ, ಕುಟುಂಬ ವರ್ಗಕ್ಕೆ, ಸ್ನೇಹಿತರಿಗೆ, ನನಗೆ ಆರೋಗ್ಯವನ್ನು ಮರಳಿಸುವುದಕ್ಕಾಗಿ ಶ್ರಮ ವಹಿಸಿ ದುಡಿಯುತ್ತಿರುವ ವೈದ್ಯರಿಗೆ, ಎಲ್ಲರಿಗೆ..
   ಎಪ್ರಿಲ್ 27
ನಿನ್ನೆ ಮಧ್ಯಾಹ್ನದ ಬಳಿಕ ಕೆಮ್ಮು ನನ್ನನ್ನು ಎಷ್ಟು ಕಾಡಿತೆಂದರೆ ತುಂಬಾ ತುಂಬಾ. ಆರಂಭದಲ್ಲಿ ಅಷ್ಟು ಜೋರಾಗಿ ಇರಲಿಲ್ಲ. ಆದರೆ ಬರಬರುತ್ತಾ ನನ್ನಿಂದ ತಡಕೊಳ್ಳಲೇ ಆಗದಷ್ಟು ವಿಪರೀತ ಆಯಿತು. ಸಂಜೆಯ ಹೊತ್ತಲ್ಲಿ ಉಸಿರಾಟವೂ ಕೈ ಕೊಡತೊಡಗಿತು. ನನ್ನನ್ನು ಭೇಟಿಯಾಗಲು ಹಲವರು ಬಂದಿದ್ದರು. ಅವರು ನನ್ನ ಸುತ್ತಲಿನಿಂದ ಚದುರಿದ್ದೇ ತಡ, ನಾನು ಕುರ್ಚಿಯಲ್ಲಿ ಕೂರಲು ಯತ್ನಿಸಿದೆ. ಉಸಿರಾಡಲು ಕಷ್ಟಪಡುವ ಸಂದರ್ಭ ಎಷ್ಟು ಭಯಾನಕ ಅನ್ನುವುದು ನಿಮಗೆ ಗೊತ್ತಿದೆಯೋ ಇಲ್ಲವೋ. ಕುರ್ಚಿಯಲ್ಲಿ ನೇರವಾಗಿ ಕೂತೆ. ನನಗೆ ಜೋಡಿಸಲಾಗಿದ್ದ ಕೃತಕ ಆಮ್ಲಜನಕದ ಪ್ರಮಾಣವನ್ನು ಹೆಚ್ಚುಗೊಳಿಸುವಂತೆ ದಾದಿಯರಲ್ಲಿ ವಿನಂತಿಸಿದೆ. ಆದರೂ ಉಸಿರಾಟದಲ್ಲಿ ಸಹಜತೆ ಇರಲಿಲ್ಲ. ಮತ್ತೆ ನಾನು ಹಾಸಿಗೆಗೆ ಮರಳಿದೆ. ಸ್ವಲ್ಪ ಹೊತ್ತು ನಿರಾಳ ಅನ್ನಿಸಿತು. ಬಳಿಕ ಉಸಿರಾಟದಲ್ಲಿ ತೊಡಕು ಕಾಣಿಸತೊಡಗಿತು. ಸಹಿಸಿಕೊಂಡೆ. ಆದರೆ ಎಲ್ಲಿವರೆಗೇಂತ ಈ ಸ್ಥಿತಿಯನ್ನು ಸಹಿಸಿಕೊಳ್ಳುವುದು? ತುಸು ಸಮಯದ ಬಳಿಕ ಕೆಮ್ಮು ಶುರುವಾಯಿತು. ಜೊತೆಗೇ ಉಸಿರಾಟದ ತೊಂದರೆಯೂ ಹೆಚ್ಚಾಯಿತು. ನಿಜ ಹೇಳಬೇಕೆಂದರೆ, ನನ್ನನ್ನು ಯಾರೋ ಉಸಿರುಗಟ್ಟಿಸಿ ಕೊಲ್ಲುತ್ತಿರುವ ಅನುಭವ. ಬಳಿಕ ತುಸು ನೆಮ್ಮದಿ. ಒಮ್ಮೆ ಸಮಸ್ಯೆ ವಿಪರೀತ ಮಟ್ಟಕ್ಕೆ ಹೋದರೆ, ಇನ್ನೊಮ್ಮೆ ಒಂದಷ್ಟು ಕರುಣೆ ತೋರಿಸಿದಂತೆ ಸಡಿಲ ಆಗುತ್ತಿತ್ತು. ರಾತ್ರಿಯಿಡೀ ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ನಿದ್ದೆ ಕಳೆದೆ. ಆದರೆ ಬೆಳಿಗ್ಗೆ ಚೆನ್ನಾಗಿದ್ದೇನೆ. I am feeling bloody fantastic.  ನಿನ್ನೆ ವೈದ್ಯರು ನನ್ನನ್ನು ಕಾಡುತ್ತಿರುವ ಸಮಸ್ಯೆಯ ಸುತ್ತ ಚರ್ಚಿಸುತ್ತಿದ್ದರು. ನನ್ನ ಕೆಮ್ಮಿಗೆ ಟ್ಯೂಮರ್ ಅಡ್ಡವಾಗಿರುವುದು ಕಾರಣ ಅಂದರು. ಎಕ್ಸ್ ರೇ  ತೆಗೆಯಲಾಯಿತು. ಹಾಗಂತ ನಾನು ಯಾರನ್ನೂ ಯಾವುದನ್ನೂ ದೂರುತ್ತಿಲ್ಲ. ಒಂದು ಹಂತದ ವರೆಗೆ ನಾನು ಖುಷಿಯಾಗಿಯೇ ಇದ್ದೇನೆ. ಪ್ರತಿದಿನ ಆರೋಗ್ಯದಲ್ಲಿ ಏರುಪೇರಾಗುವುದು ಈ ರೋಗದ ಭಾಗವೇ ಆಗಿದೆ. ನೋಡುವ..
   ಎಪ್ರಿಲ್ 29
ಹಾಯ್, ನಾನು ಸ್ಟೀಫನ್. ನಾನಿನ್ನೂ ಜೀವಂತ ಇದ್ದೇನೆ ಮತ್ತು ಬದುಕಿರಲು ಹೋರಾಟ ನಡೆಸುತ್ತಿದ್ದೇನೆ. ಹಾಗಂತ, ನನ್ನ ಮಿತಿಗಳ ಬಗ್ಗೆ ನನಗೆ ಸ್ಪಷ್ಟ ಅರಿವಿದೆ. ಬದುಕಿ ಉಳಿಯಬೇಕೆಂಬ ನನ್ನ ಆಸೆ ಮತ್ತು ವಾಸ್ತವಗಳ ನಡುವೆ ಎಷ್ಟು ದೊಡ್ಡ ಅಂತರ ಇದೆ ಎಂಬುದನ್ನೂ ಬಲ್ಲೆ. ಆದರೂ ಹೋರಾಟ ಮಾಡುತ್ತಲೇ ಇರುವೆ. ನಾನು ಸತ್ತೇ ಹೋದೆ ಎಂದೇ ಎಣಿಸಿದ್ದೆ. ಆದರೆ ಹಾಗೇನೂ ಆಗಿಲ್ಲ. ಎಪ್ರಿಲ್ 27ರಂದು ನನ್ನ ಬಲಭಾಗದ ಶ್ವಾಸಕೋಶ ಸಂಪೂರ್ಣ ನಿಷ್ಕ್ರಿಯವಾಗಿದೆ. ಅದು ಕೆಲಸ ಮಾಡುವುದಿಲ್ಲವೆಂದ ಮೇಲೆ ಕೃತಕ ಆಮ್ಲಜನಕದ ನೆರವು ಪಡೆಯಲೇಬೇಕು ತಾನೇ. ಈಗ ನಾನು ಉಸಿರಾಡುತ್ತಿರುವುದು ಇದೇ ಆಮ್ಲಜನಕದಿಂದ. ಮ್‍ಮ್.. ಆಮ್ಲಜನಕದೊಂದಿಗೆ ಬದುಕುವುದು, ಸದಾ ಮೂಗಿಗಿಟ್ಟುಕೊಂಡು ಉಸಿರಾಡೋದು ಎಷ್ಟು ಕಷ್ಟ ಗೊತ್ತಾ? ಆದರೂ ನಾನು ತುಂಬ ಖುಷಿಯಲ್ಲಿದ್ದೇನೆ. ಯಾಕೆಂದರೆ, ನಾನು ಆರಂಭಿಸಿದ, 'ಹದಿಹರೆಯದವರ ಕ್ಯಾನ್ಸರ್ ಟ್ರಸ್ಟ್'ಗೆ ಅದ್ಭುತ ಪ್ರತಿಕ್ರಿಯೆಗಳು ಬರುತ್ತಿವೆ. ಜನರು ಈ ಫಂಡ್‍ನ ಮೇಲೆ ಎಷ್ಟೊಂದು ಮಮಕಾರ ತೋರಿರುವರೆಂದರೆ, ಅದಕ್ಕೆ ನಿಗದಿತ ಗುರಿಗಿಂತ ಮೂರು ಪಟ್ಟು ಹೆಚ್ಚು ಹಣವು ಜಮೆಯಾಗಿದೆ. ಗೆಳೆಯರೇ, ನನ್ನ ಭಾವನೆಗಳನ್ನು ಪ್ರತಿದಿನ update  ಮಾಡಬೇಕೆಂದು ನಾನು ಬಯಸುತ್ತಿರುತ್ತೇನೆ. ಆದರೆ ನಾನು ಎಲ್ಲರಂತಿಲ್ಲವಲ್ಲ. ಮನಸ್ಸು ಬಯಸುತ್ತದಾದರೂ ದೇಹ ಸಹಕರಿಸುತ್ತಿಲ್ಲ. ಹಾಂ, ಎಪ್ರಿಲ್ 27ರಂದು ಬಲ ಶ್ವಾಸಕೋಶ ನಿಷ್ಕ್ರಿಯವಾಯಿತಲ್ಲ. ಅಂದು ನನ್ನನ್ನು ವೈದ್ಯರ ಒಂದು ತಂಡ ಇಡಿಯಾಗಿ ಸುತ್ತುವರಿದಿತ್ತು. ಎಮರ್ಜೆನ್ಸಿ ರೂಮ್ ತುಂಬಾ ವೈದ್ಯರೇ. ಅವರೆಲ್ಲರನ್ನೂ ಹಾಗೇ ನೋಡುತ್ತಲೇ ಒಂದು ಬಗೆಯ ಆತಂಕ, ತಳಮಳ ಉಂಟಾಯಿತು. ಓರ್ವ ರೋಗಿಯನ್ನು ನೋಡುವುದಕ್ಕಾಗಿ ವೈದ್ಯರು ಅಷ್ಟು ಗುಂಪಾಗಿ ಬರುವುದಿಲ್ಲವಲ್ಲ. ನಾನಿನ್ನು ಉಳಿಯಲಾರೆನೇನೋ ಎಂಬ ಅನುಮಾನ ಉಂಟಾಯಿತು. ಆದರೆ ಇನ್ನೂ ಬದುಕಿದ್ದೇನೆ. ಅವರೆಲ್ಲ ಹೋದ ಬಳಿಕ ವಿಪರೀತ ಸುಸ್ತಾಯಿತು. ಎಷ್ಟು ಅಂದರೆ ಏನೂ ಮಾಡಲು ಸಾಧ್ಯವಿಲ್ಲ ಅನ್ನುವಷ್ಟು...    ಸ್ಟೀಫನ್ ಸುಟನ್ ಎಂಬ 19 ವರ್ಷದ ಕ್ಯಾನ್ಸರ್ ಪೀಡಿತ ಯುವಕ ತನ್ನ ಬ್ಲಾಗಲ್ಲಿ ಹೀಗೆ ಬರೆಯುತ್ತಾ ಹೋಗುತ್ತಾನೆ. ಓದುತ್ತಾ ಹೋದಂತೆ ಕಣ್ಣಾಲಿಗಳು ತುಂಬಿಕೊಳ್ಳುತ್ತಾ ಹೋಗುತ್ತದೆ.
   ಲಂಡನ್ನಿನ ಬರ್ನ್‍ಂಟ್‍ವುಡ್‍ನಲ್ಲಿ 1994 ಡಿ. 16ರಂದು ಹುಟ್ಟಿದ ಈ ಹುಡುಗ 2012 ಆಗಸ್ಟ್ ನಲ್ಲಿ Chase Terrace Technology College ನಿಂದ ಪದವಿ ಪಡೆದ. ಅಲ್ಲದೇ ವೈದ್ಯನಾಗುವ ಉದ್ದೇಶದಿಂದ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಸಂದರ್ಶನಕ್ಕೆ ಹೋದ. ರಾಷ್ಟ್ರಮಟ್ಟದ ಅಥ್ಲೀಟ್, ಕ್ರಾಸ್ ಕಂಟ್ರಿ ಮತ್ತು ಫುಟ್ಬಾಲ್ ಆಟಗಾರನಾಗಿರುವ ಸುಟನ್, ಸಂದರ್ಶನದ ಫಲಿತಾಂಶವನ್ನು ಪ್ರಕಟವಾಗುವುದಕ್ಕಿಂತ ಮೊದಲೇ ಅರ್ಜಿಯನ್ನು ಹಿಂದಕ್ಕೆ ಪಡೆದ. ಯಾಕೆಂದರೆ, ಆತನಿಗೆ ಬಾಧಿಸಿರುವ ಕ್ಯಾನ್ಸರ್ ರೋಗವು ಗುಣಪಡಿಸಲಾಗದ ಹಂತಕ್ಕೆ ತಲುಪಿದೆ ಎಂದು ಗೊತ್ತಾಗಿರುತ್ತದೆ. 15ನೇ ವರ್ಷದಲ್ಲೇ ಕ್ಯಾನ್ಸರ್‍ಗೆ ತುತ್ತಾದ ಆತ 2013 ಜನವರಿಯಲ್ಲಿ ತನ್ನದೇ ಆದ ಬ್ಲಾಗ್ ಅನ್ನು ತೆರೆದು ಭಾವನೆಗಳನ್ನು ಬರೆಯಲು ಪ್ರಾರಂಭಿಸಿದ. ತನಗಾಗುವ ನೋವು, ಖುಷಿ, ಸಂಕಟ, ದುಮ್ಮಾನಗಳನ್ನು ಪ್ರತಿದಿನವೆಂಬಂತೆ ಅದರಲ್ಲಿ ದಾಖಲಿಸುತ್ತಾ ಹೋದ. ಫೇಸ್‍ಬುಕ್‍ನಲ್ಲೂ ಹಾಕತೊಡಗಿದ. ಈ ಮಧ್ಯೆ ತನ್ನಂತೆ ಕ್ಯಾನ್ಸರ್‍ನಿಂದ ಬಳಲುತ್ತಿರುವವರಿಗಾಗಿ ‘ಹದಿಹರೆಯದವರ ಕ್ಯಾನ್ಸರ್ ಟ್ರಸ್ಟ್’ ಅನ್ನು ಪ್ರಾರಂಭಿಸಿ ನಿಧಿ ಸಂಗ್ರಹಿಸತೊಡಗಿದ. ಅದಕ್ಕಾಗಿ ವೆಬ್‍ಸೈಟ್ ಸ್ಥಾಪಿಸಿದ. ಆರಂಭದಲ್ಲಿ 10,000 ಪೌಂಡ್ ಆತನ ಗುರಿಯಾಗಿತ್ತು. ಆದರೆ ಬರಬರುತ್ತಾ ಗುರಿ ಹಿಗ್ಗತೊಡಗಿತಲ್ಲದೇ 1 ಮಿಲಿಯನ್‍ಗೆ ತಲುಪಿತು. ಕಳೆದ ಎಪ್ರಿಲ್ 27ಕ್ಕೆ 3.5 ಮಿಲಿಯನ್ ಪೌಂಡ್ ಸಂಗ್ರಹವಾಗಿ ಜಾಗತಿಕವಾಗಿಯೇ ಸುದ್ದಿಗೀಡಾಯಿತು. ಓರ್ವ ಯುವಕನ ಈ ಪ್ರಯತ್ನವನ್ನು ಜಗತ್ತಿನ ಪ್ರಮುಖ ಸುದ್ದಿ ಮಾಧ್ಯಮಗಳು ಕೊಂಡಾಡಿದುವು. ವಿಷಾದ ಏನೆಂದರೆ, ಸ್ಟೀಫನ್ ಸುಟನ್ ಮಾತ್ರ ಅದಾಗಲೇ ಸಾವಿನ ಹತ್ತಿರಕ್ಕೆ ಸಮೀಪಿಸಿದ್ದ. ಎಪ್ರಿಲ್ 27ರಂದೇ ಆತನ ಬಲ ಶ್ವಾಸಕೋಶವು ನಿಷ್ಕ್ರಿಯಗೊಂಡು ಜೀವರಕ್ಷಕ ಉಪಕರಣಗಳ ಸಹಾಯದಿಂದ ಉಸಿರಾಡುತ್ತಿದ್ದ. ಆ ಸಂದರ್ಭದಲ್ಲೂ ನಗಲು ಪ್ರಯತ್ನಿಸುವ ಆತನನ್ನು ನೋಡುವಾಗ ಕಣ್ಣು ಹನಿಗೂಡುತ್ತದೆ. ನಿಜವಾಗಿ,
ಈರ್ಷ್ಯೇ, ದ್ವೇಷ, ಅಹಂಕಾರ, ವಂಚನೆ, ಸುಳ್ಳು, ಕಾಪಟ್ಯಗಳನ್ನು ದೇಹವಿಡೀ ತುಂಬಿಕೊಂಡು ಬದುಕುತ್ತಿರುವ ನಮ್ಮನ್ನು ಎಚ್ಚರ ಗೊಳಿಸುವುದಕ್ಕೆ ಸ್ಟೀಫನ್ ಸುಟನ್ ಒಬ್ಬನೇ ಸಾಕು.


1 comment:

  1. ಒಂದು ಉತ್ತಮ ಬರಹಗಾರಿಕೆ. ಮನಮುಟ್ಟುವಂತೆ ಮೂಡಿಬಂದಿದೆ. ಸ್ಟೀಫನನ ಬಗ್ಗೆ ಓದಿ ಮನಸ್ಸು ಆರ್ದ್ರವಾಯಿತು. ತನ್ನ ನೋವನ್ನು ನುಂಗಿಕೊಂಡು ಇತರರಿಗಾಗಿ ಪರಿತಪಿಸುವ ಈ ಮಹಾಮಾನವನ ಮುಂದೆ ನಾವೇನೂ ಇಲ್ಲ. ಧನ್ಯವಾದಗಳು ಕುಕ್ಕಿಲರವರೆ.

    ReplyDelete