ನವೀದ್ |
“ಟ್ರಿಣ್.. ಟ್ರಿಣ್.. ಹಲೋ, ಮಿಸ್ಟರ್ ಝಾಕಿರ್. ನಾನು ಜೇಮ್ಸ್. ಫೇಸ್‍ಬುಕ್‍ನಿಂದ ಮಾತಾಡ್ತಾ ಇದ್ದೇನೆ. ಫೇಸ್‍ಬುಕ್‍ನಲ್ಲಿ ಸಕ್ರಿಯರಾಗಿರುವ ಮತ್ತು ಸದಾ update ಮಾಡುತ್ತಿರುವವರಿಗೆ ನಾವು ಬಹುಮಾನ ನೀಡಲಿದ್ದೇವೆ. ನಿಮಗೆ ಅಭಿನಂದನೆಗಳು. ನೀವು 5 ಸಾವಿರ ರೂಪಾಯಿ ಬಹುಮಾನವನ್ನು ಗೆದ್ದಿದ್ದೀರಿ. ಈಗ ನಿಮ್ಮೊಂದಿಗೆ ನಮ್ಮ ಸೀನಿಯರ್ (ಹಿರಿಯ ಅಧಿಕಾರಿ) ಮಾತಾಡಲಿದ್ದಾರೆ. ಅವರು ನಿಮ್ಮ ಇತ್ತೀಚಿನ update ನ ಬಗ್ಗೆ ನಿಮ್ಮೊಂದಿಗೆ ಕೇಳಲಿದ್ದಾರೆ. ನಿಮ್ಮ ಹೆಸರಲ್ಲಿರುವ ಫೇಸ್‍ಬುಕ್ ಅಕೌಂಟ್ ಅನ್ನು ಬಳಸುತ್ತಿರುವುದು ನೀವೋ ಅಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿಯಷ್ಟೇ ಈ ಮಾತುಕತೆ. ಅವರೊಂದಿಗೆ ಮಾತಾಡಿ..
ಟ್ರಿಣ್ ಟ್ರಿಣ್.. ಹಲೋ, ನಾನು ರಾಮ್‍ಕಿಶನ್ ಚೌಧರಿ. ಅಭಿನಂದನೆಗಳು ಝಾಕಿರ್ ಹುಸೇನ್‍ರಿಗೆ. ನೀವು ಬಹುಮಾನ ಗೆದ್ದಿದ್ದೀರಿ. ಅಂದಹಾಗೆ, ಮೊನ್ನೆ 9:35ಕ್ಕೆ ನೀವು ಫೇಸ್‍ಬುಕ್ update ಮಾಡಿದ್ದೀರಿ ತಾನೇ.
ಹೌದು
ಏನನ್ನು update ಮಾಡಿದ್ದೀರಿ ಅಂತ ಹೇಳಬಹುದಾ?
ನಿಮ್ಮ ಹೆಸರು ಸರ್..
ರಾಮ್‍ಕಿಶನ್ ಚೌಧರಿ
ಹೇಳಿ ಝಾಕಿರ್ ಅವರೇ, ಏನನ್ನು update ಮಾಡಿದ್ದೀರಿ?
ನಿಮ್ಮ ಹೆಸರು
ರಾಮ್ ಕಿಶನ್ ಚೌಧರಿ
ನಿಮಗೆ ಒಂದು ನಿಮಿಷ ಹೆಚ್ಚುವರಿ ಸಮಯ ಕೊಡುತ್ತಿದ್ದೇನೆ. ಆಲೋಚಿಸಿ ಹೇಳಿ.. ಕರೆಯನ್ನು ಮ್ಯೂಟ್ ಮಾಡಲಾಗುತ್ತದೆ.
ಈಗ ಇನ್ನೋರ್ವರೊಂದಿಗೆ ಮಾತುಕತೆ.
ಟ್ರಿಣ್, ಟ್ರಿಣ್.. ಹಲೋ ಮಿಸ್ಟರ್ ಅಮಿತ್. ನಾನು ಜೇಮ್ಸ್. ಫೇಸ್‍ಬುಕ್‍ನಿಂದ ಮಾತಾಡ್ತಾ ಇದ್ದೇನೆ. ಫೇಸ್‍ಬುಕ್‍ನಲ್ಲಿ ಸಕ್ರಿಯರಾಗಿರುವವರಿಗೆ ನಾವು ಬಹುಮಾನ ನೀಡಲಿದ್ದೇವೆ. ನಿಮಗೆ ಅಭಿನಂದನೆಗಳು. ನೀವು 5 ಸಾವಿರ ರೂಪಾಯಿ ಬಹುಮಾನವನ್ನು ಗೆದ್ದಿದ್ದೀರಿ. ಈಗ ನಿಮ್ಮೊಂದಿಗೆ ನಮ್ಮ ಸೀನಿಯರ್ ಮಾತಾಡಲಿದ್ದಾರೆ. ಅವರು ನಿಮ್ಮ ಇತ್ತೀಚಿನ update ನ ಬಗ್ಗೆ ಕೇಳಲಿದ್ದಾರೆ.. ಅವರೊಂದಿಗೆ ಮಾತಾಡಿ..
ಹಲೋ... ನಾನು ಮುಹಮ್ಮದ್ ಅಬ್ದುಲ್ಲಾ. ಅಭಿನಂದನೆಗಳು ಅಮಿತ್‍ರಿಗೆ. ನಿಮ್ಮ ಇತ್ತೀಚಿನ update ನ ಬಗ್ಗೆ ಹೇಳುವಿರಾ?
ನಿಮ್ಮ ಹೆಸರು ಸರ್
'ಮುಹಮ್ಮದ್ ಅಬ್ದುಲ್ಲಾ'
ಮೊನ್ನೆ ನೀವು update ಮಾಡಿರುವುದನ್ನೊಮ್ಮೆ ಜ್ಞಾಪಿಸಿಕೊಳ್ಳಿ, ಏನದು?
ನಿಮ್ಮ ಹೆಸರು..
'ಮುಹಮ್ಮದ್ ಅಬ್ದುಲ್ಲಾ'
ಮೌನ...
ಅಮಿತ್ ಅವರೇ ನಂಗೊತ್ತು, ನೀವು ಹೇಳಲಾರಿರಿ. ನೀವು ಮಾತ್ರವಲ್ಲ, ಈ ಮೊದಲು ನಾನು ಸಂಪರ್ಕಿಸಿದ ವ್ಯಕ್ತಿಯೂ ಹೇಳಲಾರರು. ಅಮಿತ್ ಅವರೇ, ನಾನು ನಿಮ್ಮೊಂದಿಗೆ ಇತ್ತೀಚಿನ update ನ ಬಗ್ಗೆ ವಿಚಾರಿಸಿದಾಗ ನೀವು ಮತ್ತೆ ಮತ್ತೆ ನನ್ನ ಹೆಸರು ಕೇಳಿದಿರಿ. ನಾನು ಮುಹಮ್ಮದ್ ಅಬ್ದುಲ್ಲ ಎಂಬ ಮುಸ್ಲಿಮ್ ಎಂದು ಗೊತ್ತಾದಾಗ ನೀವು ವಿಷಯ ಹೇಳಲು ತಡವರಿಸಿದಿರಿ. ಝಾಕಿರ್ ಅವರೇ, ನಿಮ್ಮಲ್ಲಿ ನಾನು ಇತ್ತೀಚಿನ update ನ ಬಗ್ಗೆ ವಿಚಾರಿಸಿದೆ. ನೀವು ನನ್ನ ಹೆಸರನ್ನು ಪದೇ ಪದೇ ಕೇಳಿದಿರಿ. ನಾನು ರಾಮ್ ಕಿಶನ್ ಚೌಧರಿ ಎಂಬ ಹಿಂದೂ ಎಂದು ಗೊತ್ತಾದಾಗ ಹೇಳಲು ತಡವರಿಸಿದಿರಿ. ಆದರೆ ನಾನು ಪೇಸ್‍ಬುಕ್‍ನಿಂದ ಮಾತಾಡುತ್ತಿಲ್ಲ. ‘ರೇಡಿಯೋ ಮಿರ್ಚಿ ಮುರ್ಗಾ'ದಿಂದ ನವೀದ್ ಮಾತಾಡುತ್ತಾ ಇದ್ದೇನೆ. ಝಾಕಿರ್ ಅವರೇ, ನೀವು ಹಿಂದೂಗಳ ವಿರುದ್ಧ update ಮಾಡಿದ್ದೀರಿ. ನಾನು ನಿಮ್ಮ ಇತ್ತೀಚಿನ update ಬಗ್ಗೆ ಕೇಳಿದಾಗ ನೀವೆಷ್ಟು ನಾಚಿಕೊಂಡಿರಿ ಮತ್ತು ಅಡಗಿಸಲು ಯತ್ನಿಸಿದಿರಿ ಅಂದರೆ, ನಿಮಗೆ ಅದನ್ನು ಹೇಳಿಕೊಳ್ಳಲು ಸಾಧ್ಯವೇ ಆಗಲಿಲ್ಲ. ಅಮಿತ್ ಅವರೇ, ನೀವು ಮುಸ್ಲಿಮರ ವಿರುದ್ಧ update ಮಾಡಿದ್ದೀರಿ. ಆದ್ದರಿಂದಲೇ ನಿಮಗೆ updateನ್ನು ಹೇಳಿಕೊಳ್ಳಲು ಆಗಲಿಲ್ಲ. ಕ್ಯೊಂ ಕರ್‍ತೇಹೇ ಆಪ್‍ಲೋಗ್ ಐಸಾ? (ಯಾಕೆ ಹೀಗೆ ಮಾಡ್ತೀರಿ ನೀವು).
ಅವರಿಬ್ಬರೂ ಮೌನ ವಹಿಸುತ್ತಾರೆ.
ಝಾಕಿರ್ ಅವರೇ, ನಿಮ್ಮೊಂದಿಗೆ ಫೋನಿನಲ್ಲಿ ಹೀಗೆ ಸಂಪರ್ಕಿಸುವುದಕ್ಕಿಂತ ಮೊದಲು ನಾನು ನಿಮ್ಮ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಿದೆ. 2012 ಜುಲೈ 13ರಂದು ಅಪೋಲೋ ಆಸ್ಪತ್ರೆಯಲ್ಲಿ ನಿಮ್ಮ ಮಗನ ಆಪರೇಶನ್ ಆಗಿತ್ತು. ಆಗ ನಿಮ್ಮ ಮಗನ ನೆರವಿಗೆ ಬಂದದ್ದು ಮತ್ತು ರಕ್ತ ಕೊಟ್ಟದ್ದು ಕಿಶೋರ್, ಗೌರವ್, ಮನ್‍ದೀಪ್ ಮತ್ತು ರಣ್‍ಬೀರ್ ಎಂಬ ಹಿಂದೂಗಳು. ಹೌದಲ್ಲವೇ ಝಾಕಿರ್. ‘ಹೌದು'.
ಅಮಿತ್ ಅವರೇ, ಜಾಮಿಯಾ ಯೂನಿವರ್ಸಿಟಿಯ ಬಳಿ 2012 ಮಾರ್ಚ್ 17ರಂದು ನೀವು ಅಪಘಾತಕ್ಕೆ ಒಳಗಾಗಿದ್ದಿರಿ, ಅಮಿತ್ ಹೌದೇ? ‘ಹೌದು'. ನೀವು ಬೈಕ್‍ನಿಂದ ಬಿದ್ದಿರಿ. ನಿಮ್ಮ ಕುಟುಂಬದವರು ಆಸ್ಪತ್ರೆಗೆ ಬರುವಾಗ ನಿಮ್ಮ ಬಳಿ ಇದ್ದುದು ರಿಝ್ವಾನ್, ಯಾಸಿರ್, ಅಫ್ನಾನ್, ಶಾಹಿದ್ ಎಂಬ ಯುವಕರು. ನಿಮ್ಮ ಕುಟುಂಬದವರು ಇಲ್ಲದ ಸಂದರ್ಭದಲ್ಲಿ ನಿಮ್ಮ ಬಳಿ ನಿಂತು ಸಹಾಯ ಮಾಡಿದ ಈ ಯುವಕರು ಮುಸ್ಲಿಮರು. ಹೌದಲ್ಲವೇ ಅಮಿತ್? ‘ಹೌದು'. ಝಾಕಿರ್ ಅವರೇ, ನಿಮ್ಮ 8 ವರ್ಷದ ಮಗನ ಅತ್ಯಂತ ಇಷ್ಟದ ಗೆಳೆಯ ಯಾರು ಗೊತ್ತಾ? ಒಮ್ಮೆ ಕೇಳಿನೋಡಿ. ಲಕ್ಷ್ಯ ಎಂಬ ಹಿಂದೂ ಹುಡುಗ. ಆತ ತನ್ನ ಹೆಚ್ಚಿನ ಸಮಯವನ್ನು ಕಳೆಯುತ್ತಿರುವುದು ಈ ಲಕ್ಷ್ಯನೊಂದಿಗೆ. ನಾವು ಶಾಲೆಯನ್ನು ಸಂಪರ್ಕಿಸಿ ಈ ಮಾಹಿತಿಯನ್ನು ಪಡಕೊಂಡಿದ್ದೇವೆ.
ಅಮಿತ್ ಅವರೇ, ನಿಮ್ಮ ತಂದೆ ಅಂಗಡಿ ನಡೆಸ್ತಾ ಇದ್ರು. ಈಗ ಅವರಿಲ್ಲ, ಸರಿ ತಾನೇ. ‘ಸರಿ'. ನಿಮ್ಮ ತಂದೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದುದು ಶಬ್ಬೀರ್ ಸಾಬ್‍ರೊಂದಿಗೆ. ಯಾಕೆಂದರೆ, ನಿಮ್ಮ ತಂದೆಯವರಿಗೆ ಶಬ್ಬೀರ್ ಸಾಬ್ ಇಷ್ಟದ ಗೆಳೆಯ ಆಗಿದ್ದರು. ಹೀಗಿರುವಾಗ, ಯಾಕೆ ನೀವು ಇಂಥ ಮನುಷ್ಯ ವಿರೋಧಿ ವಿಷಯಗಳನ್ನು update ಮಾಡುತ್ತಿದ್ದೀರಿ? ಯಾಕೆ ಮಾನವೀಯತೆಯನ್ನು ಕೊಲೆಗೈಯುತ್ತಿದ್ದೀರಿ?
ಆಗ ಅವರಿಬ್ಬರೂ ಕುಗ್ಗಿದ ದನಿಯಲ್ಲಿ,
‘ಸರ್, ನಾವು ಈಗಲೇ ಡಿಲೀಟ್ (ಅಳಿಸಿ ಹಾಕುವುದು) ಮಾಡುತ್ತೇವೆ’ ಅನ್ನುತ್ತಾರೆ.
ಹೌದು, ನೀವು ಡಿಲೀಟ್ ಮಾಡಬಹುದು. ಆದರೆ ಈಗಾಗಲೇ 12 ಮಂದಿ ಲೈಕ್ ಮಾಡಿದ್ದಾರೆ. ಅನೇಕರು ಶೇರ್ ಮಾಡಿರಬಹುದು. ನಿಮ್ಮೊಂದಿಗೆ ಕೈ ಮುಗಿದು ಬೇಡಿಕೊಳ್ಳುತ್ತಿದ್ದೇನೆ, ದಯವಿಟ್ಟು ಮೊದಲು ನಿಮ್ಮ ಮನಸ್ಸಿನಿಂದ ಡಿಲೀಟ್ ಮಾಡಿ. ನಿಮ್ಮ ಮೆದುಳಿನಿಂದ ಡಿಲೀಟ್ ಮಾಡಿ. ಮಾನವೀಯತೆಯನ್ನು ಬೆಳೆಸಿಕೊಳ್ಳಿ. ದ್ವೇಷವನ್ನು ಬಿತ್ತಬೇಡಿ. ವಿ ಹಿಂದೂಸ್ತಾನಿ. ನಿಮ್ಮಿಬ್ಬರಿಗೂ ಕೃತಜ್ಞತೆಗಳು.”
2014 ಮೇ 2ರಂದು ಯೂಟ್ಯೂಬ್‍ನಲ್ಲಿ ಕಾಣಿಸಿಕೊಂಡ ಈ ಆಡಿಯೋವನ್ನು ಸಾವಿರಾರು ಮಂದಿ ಆಲಿಸಿದ್ದಾರೆ. ನೂರಾರು ಮಂದಿ ಪ್ರತಿಕ್ರಿಯಿಸಿದ್ದಾರೆ.
A Hindu and a Muslim were fighting over Religion on Facebook, here this R. J. shame both on air - (ಧರ್ಮದ ಹೆಸರಲ್ಲಿ ಫೇಸ್‍ಬುಕ್‍ನಲ್ಲಿ ಪರಸ್ಪರ ಕೆಸರೆರಚಾಟ ನಡೆಸಿದ ಓರ್ವ ಹಿಂದೂ ಮತ್ತು ಓರ್ವ ಮುಸ್ಲಿಮನನ್ನು ರೇಡಿಯೋ ಜಾಕಿ ತರಾಟೆಗೆ ತೆಗೆದುಕೊಂಡಿರುವುದು) ಎಂಬ ಹೆಸರಲ್ಲಿ ಫೇಸ್ ಬುಕ್‍ನಲ್ಲಿ ಹರಿದಾಡಿದ ಈ ಆಡಿಯೋ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ. ಧಾರಾಳ ಮಂದಿ ಶೇರ್ ಮಾಡಿದ್ದಾರೆ. ‘ರೇಡಿಯೋ ಮಿರ್ಚಿ ಮುರ್ಗಾ'ದ ನಿರೂಪಕ (ರೇಡಿಯೋ ಜಾಕಿ) ನವೀದ್‍ನನ್ನು ಅಸಂಖ್ಯ ಮಂದಿ ಕೊಂಡಾಡಿದ್ದಾರೆ. ನಿಜವಾಗಿ, ಝಾಕಿರ್ ಮತ್ತು ಅಮಿತ್ ಎಂಬುದು ಕೇವಲ ಇಬ್ಬರು ವ್ಯಕ್ತಿಗಳಷ್ಟೇ ಅಲ್ಲ, ಅವರು ವಿಷಮ ಆಲೋಚನೆಗಳ ಎರಡು ಪ್ರತೀಕಗಳೂ ಹೌದು. ಇಂಥವರು ಎಲ್ಲ ಧರ್ಮಗಳಲ್ಲೂ ಇದ್ದೇ ಇರುತ್ತಾರೆ. ಅಂದಹಾಗೆ, ಫೇಸ್‍ಬುಕ್‍ನಂಥ ಸೋಶಿಯಲ್ ನೆಟ್‍ವರ್ಕ್‍ಗಳು ಇವತ್ತು ಪ್ರಭಾವಿ ಮಾಧ್ಯಮವಾಗಿ ಗುರುತಿಗೀಡಾಗಿದೆ. ಮಾರ್ಕ್ ಝುಕರ್ ಬರ್ಗ್ ಎಂಬ ಯುವಕ ತನ್ನ ಹಾರ್ವರ್ಡ್ ಯುನಿವರ್ಸಿಟಿಯ ಸಹಪಾಠಿಗಳಾದ ಎಡ್ವರ್ಡ್ ಸೆವೆರಿನ್, ಆ್ಯಂಡ್ರ್ಯೂ ಮೆಕಲಮ್, ಡಸ್ಟಿನ್ ಮಾಸ್ಕೊವಿಜ್ ಮತ್ತು ಕ್ರಿಸ್ ಹ್ಯೂಸ್‍ರೊಂದಿಗೆ ಸೇರಿ 2004 ಫೆ. 4ರಂದು ಫೇಸ್‍ಬುಕ್ ಅನ್ನು ಪ್ರಾರಂಭಿಸಿದಾಗ ಇದು ಮಾಧ್ಯಮ ಕ್ಷೇತ್ರದಲ್ಲಿ ಈ ಮಟ್ಟದ ಕ್ರಾಂತಿ ಮಾಡುತ್ತದೆಂದು ಖಂಡಿತ ಊಹಿಸಿರಲಿಲ್ಲ. ಆರಂಭದಲ್ಲಿ ಫೇಸ್‍ಬುಕ್‍ನ ಸದಸ್ಯತನವು ಹಾರ್ವರ್ಡ್ ಯುನಿವರ್ಸಿಟಿಗೆ ಮಾತ್ರ ಸೀಮಿತವಾಗಿತ್ತು. ಬಳಿಕ ಬೋಸ್ಟನ್ ಪ್ರದೇಶದ ಕಾಲೇಜುಗಳಿಗೆ ಅದನ್ನು ವಿಸ್ತರಿಸಲಾಯಿತು. ನಿಜವಾಗಿ, ಫೇಸ್‍ಬುಕ್ ಹುಟ್ಟುವುದಕ್ಕಿಂತ ಮೊದಲು ಮುದ್ರಣ ಮಾಧ್ಯಮವೇ (ಪತ್ರಿಕೆ) ಎಲ್ಲವೂ ಆಗಿತ್ತು. ಓರ್ವ ಬರಹಗಾರನನ್ನು ಹುಟ್ಟಿಸುವುದು ಅಥವಾ ಸಾಯಿಸುವುದು ಇದುವೇ ಆಗಿತ್ತು. ಓರ್ವನಿಗೆ ತನ್ನ ಭಾವನೆ, ಅಭಿಪ್ರಾಯ, ಚಿಂತನೆಗಳನ್ನು ಹೇಳಿಕೊಳ್ಳುವುದಕ್ಕೆ ಪತ್ರಿಕೆಗಳ ಹೊರತು ಇನ್ನಾವ ವೇದಿಕೆಯೂ ಇರಲಿಲ್ಲ. ಹಾಗೆಯೇ, ಪತ್ರಿಕೆಗಳಿಗೂ ಅವುಗಳದ್ದೇ ಆದ ಅಜೆಂಡಾ ಮತ್ತು ಮಿತಿಗಳಿದ್ದುವು. ಒಂದು ಲೇಖನ ಅಥವಾ ಕತೆ ಎಷ್ಟೇ ಚೆನ್ನಾಗಿದ್ದರೂ ಅದನ್ನು ಪ್ರಕಟಿಸದೇ ಇರುವುದಕ್ಕೆ ಪತ್ರಿಕೆಗಳಿಗೆ ಅವುಗಳದ್ದೇ ಆದ ಒತ್ತಡಗಳಿದ್ದುವು. ಜೊತೆಗೇ, ಪುಟಗಳ ಮಿತಿಯೂ ಇರುತ್ತದೆ. ಇಂಥ ಸ್ಥಿತಿಯಿಂದಾಗಿ, ಅತ್ಯುತ್ತಮವಾದ ಮತ್ತು ತಮ್ಮ ನಿಲುವಿಗೆ ಹೊಂದುವ ಬರಹಗಳನ್ನಷ್ಟೇ ಹೆಕ್ಕಿ ಪ್ರಕಟಿಸಬೇಕಾದ ಅನಿವಾರ್ಯತೆ ಪತ್ರಿಕೆಗಳ ಮುಂದಿರುತ್ತದೆ. ಇದರಿಂದಾಗಿ, ಅದಾಗಲೇ ಬರಹ ಜಗತ್ತಿಗೆ ಕಾಲಿಡ ಬಯಸುವ ಹೊಸಬರು ಪತ್ರಿಕೆಗಳಿಗೆ ಬರಹ ಕಳುಹಿಸುತ್ತಾ ತಿರಸ್ಕøತಗೊಳ್ಳುತ್ತಾ ಒಂದು ರೀತಿಯ ನಿರಾಶೆಗೆ ಒಳಗಾಗುತ್ತಿರಬೇಕಾಗುತ್ತದೆ. ಫೇಸ್‍ಬುಕ್‍ನಂಥ ಸೋಶಿಯಲ್ ನೆಟ್‍ವರ್ಕ್‍ಗಳು ಜನಪ್ರಿಯಗೊಂಡದ್ದು ಈ ಕಾರಣದಿಂದಲೇ. ಅಲ್ಲಿ ಮಿತಿಗಳೇ ಇಲ್ಲ. ನಿಮ್ಮ ಅಭಿಪ್ರಾಯ, ಚಿಂತನೆಗಳನ್ನು ಕಳಪೆ ಎಂದು ತಿರಸ್ಕರಿಸುವ ಸಂಪಾದಕರೂ ಇಲ್ಲ. ಬರಹದ ಪ್ರಕಟನೆಗಾಗಿ ಪ್ರತಿದಿನವೂ ಕಾಯುವ, ಸಂಪಾದಕರಿಗೆ ಕರೆ ಮಾಡಿ ವಿಚಾರಿಸುವ ಅಗತ್ಯವೂ ಇಲ್ಲ. ನೀವು ಏನನ್ನು ಬಯಸುತ್ತೀರೋ ತಕ್ಷಣ ಅದನ್ನು ಫೇಸ್‍ಬುಕ್‍ನಲ್ಲಿ ಬರೆಯಬಹುದು. ಪತ್ರಿಕೆಗಳು ಒದಗಿಸದ ಈ ಸ್ಪೇಸ್ ಅನ್ನು ಫೇಸ್‍ಬುಕ್ ಕೊಟ್ಟದ್ದರಿಂದಲೇ ಅದು ಅತ್ಯಂತ ವೇಗವಾಗಿ ಜನಪ್ರಿಯತೆ ಗಳಿಸಿಕೊಂಡಿತು. ಮುದ್ರಣ ಮಾಧ್ಯಮಕ್ಕೆ ಪರ್ಯಾಯವಾಗಿ ಗುರುತಿಗೀಡಾಗುವಷ್ಟು ಅದು ತನ್ನನ್ನು ವಿಸ್ತರಿಸಿಕೊಂಡಿತು. ದುರಂತ ಏನೆಂದರೆ, ‘ಝಾಕಿರ್’ ಮತ್ತು ‘ಅಮಿತ್’ನಂಥವರು ಇದರ ದುರ್ಲಾಭವನ್ನು ಧಾರಾಳವಾಗಿ ಪಡೆಯುತ್ತಿರುವುದು. ಪತ್ರಿಕೆಗಳಲ್ಲಿ ಪ್ರಕಟಿಸಲು ಅಯೋಗ್ಯವಾದ ಮತ್ತು ಸಾಧ್ಯವೂ ಇಲ್ಲದ ನಿಂದನೆ, ಅವಹೇಳನವುಳ್ಳ ಬರಹಗಳನ್ನು ಫೇಸ್‍ಬುಕ್‍ನಲ್ಲಿ ಅಪ್‍ಡೇಟ್ ಮಾಡುತ್ತಿರುವುದು. ಧರ್ಮಗಳನ್ನು, ಅದರ ಆಚರಣೆ, ವೇಷಭೂಷಣಗಳನ್ನು ಅಪಹಾಸ್ಯಗೊಳಿಸುವ ಬರಹಗಳು ಫೇಸ್‍ಬುಕ್‍ನಲ್ಲಿ ಇವತ್ತು ಕಾಣಿಸಿಕೊಳ್ಳುತ್ತಿವೆ. ಸೌಜನ್ಯದ ಮಿತಿಯೇ ಇಲ್ಲದ ಅತ್ಯಂತ ನಿಂದನಾತ್ಮಕ ಬರಹಗಳೂ ಅಪ್‍ಡೇಟ್ ಆಗುತ್ತಿವೆ. ಅವನ್ನು ಲೈಕ್ ಮಾಡುವವರೂ ಇರುತ್ತಾರೆ. ಹಾಗಂತ, ಇದಕ್ಕೆ ವಿರುದ್ಧವಾಗಿ ಬರಹಗಳು ಪ್ರಕಟವಾಗುತ್ತಿಲ್ಲ ಎಂದಲ್ಲ. ಧರ್ಮಗಳ ಕುರಿತಂತೆ ಅತ್ಯಂತ ವೈಚಾರಿಕ ಮತ್ತು
ಆರೋಗ್ಯಪೂರ್ಣ ಚರ್ಚೆಗಳು ಖಂಡಿತ ನಡೆಯುತ್ತಿವೆ. ಆದರೆ, ಅನೇಕ ಬಾರಿ ಇಂಥ ವಾತಾವರಣವನ್ನು ‘ಅಮಿತ್' ಮತ್ತು ‘ಝಾಕಿರ್'ಗಳು ಕೆಡಿಸಿಬಿಡುತ್ತಾರೆ. ಸಮಾಜವನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ಪರಸ್ಪರ ಸಂಘರ್ಷಕ್ಕೆ ಇಳಿಸುತ್ತಾರೆ. ಆ ಮೂಲಕ ಜಗಳಕ್ಕೆಂದೇ ಸಿದ್ಧವಾಗಿ ನಿಂತವರಿಗೆ ಆಹಾರ ಒದಗಿಸುತ್ತಾರೆ. ಆದ್ದರಿಂದಲೇ,
ನವೀದ್ ಇಷ್ಟವಾಗುತ್ತಾರೆ.
No comments:
Post a Comment