Tuesday, March 19, 2019

ಚುನಾವಣಾ ವಿಶ್ಲೇಷಣೆ: ಸೆಮಿಫೈನಲ್, ಕ್ವಾರ್ಟರ್ ಫೈನಲ್ ಇತ್ಯಾದಿಗಳು...2014ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಮತ್ತು ಆ ಬಳಿಕದಿಂದ ಮೊನ್ನೆ ನಡೆದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳ  ವರೆಗೆ ಬಿಜೆಪಿಯ ಪ್ರಮುಖ ನಾಯಕರು ಮಾಡಿರುವ ಭಾಷಣಗಳನ್ನೊಮ್ಮೆ ಪರಿಶೀಲಿಸಿ ನೋಡಿ. ಏನನಿಸುತ್ತದೆ? ಮುಖ್ಯಮಂತ್ರಿ ನರೇಂದ್ರ  ಮೋದಿ ಆಡುತ್ತಿದ್ದ ಚುನಾವಣಾ ಸಭೆಯ ಮಾತುಗಳಿಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಡುತ್ತಿರುವ ಚುನಾವಣಾ ಭಾಷಣಗಳಿಗೂ  ಏನು ವ್ಯತ್ಯಾಸ ಇದೆ? ಘೋರಕ್‍ಪುರದ ಸಂಸದನಾಗಿ ಯೋಗಿ ಆದಿತ್ಯನಾಥ್ ಆಡುತ್ತಿದ್ದ ಮಾತುಗಳು ಹೇಗಿದ್ದುವು? ಮುಖ್ಯಮಂತ್ರಿ ಆದಿತ್ಯನಾಥ್ ಮಾಡುತ್ತಿರುವ ಭಾಷಣಗಳು ಹೇಗಿವೆ? ಗುಜರಾತ್‍ನ ಗೃಹಮಂತ್ರಿಯಾಗಿ ಅಮಿತ್ ಷಾ ಆಡುತ್ತಿದ್ದ ಮಾತುಗಳಲ್ಲಿ ಏನೇನು  ಇದ್ದುವು? ಬಿಜೆಪಿಯ ಅಧ್ಯಕ್ಷನಾಗಿ ಅಮಿತ್ ಶಾರ ಭಾಷಣಗಳು ಹೇಗಿವೆ? ಅಂದಹಾಗೆ, ಬಿಜೆಪಿಯ ಬಗ್ಗೆ ಷರಾ ಬರೆಯುವುದಕ್ಕೆ ಈ ಬಗೆಯ ಲೆಕ್ಕಾಚಾರವೇ ಧಾರಾಳ ಸಾಕು. ಮಧ್ಯಪ್ರದೇಶದ ಚುನಾವಣಾ ಪ್ರಚಾರದ ವೇಳೆ ಯೋಗಿ ಆದಿತ್ಯನಾಥ್‍ರ ಭಾಷಣ ಹೀಗಿತ್ತು:
`ಕಾಂಗ್ರೆಸ್‍ನ ಜೊತೆ ಅಲಿ ಇದ್ದರೆ ಬಿಜೆಪಿಯ ಜೊತೆ ಬಜರಂಗಬಲಿ ಇದ್ದಾನೆ.'
ತೆಲಂಗಾಣದಲ್ಲಿ ಅವರು ಹೇಳಿದ್ದು ಹೀಗೆ:
ಅಧಿಕಾರಕ್ಕೆ ಬಂದರೆ ಒವೈಸಿ ಸೋದರನ್ನು ನಾವು ಪಾಕಿಸ್ತಾನಕ್ಕೆ ಅಟ್ಟುತ್ತೇವೆ.’
ಗುಜರಾತ್ ಚುನಾವಣೆಯ ವೇಳೆ ಪ್ರಧಾನಿ ನೇಂದ್ರ ಮೋದಿಯವರು ಇದೇ ಧಾಟಿಯಲ್ಲಿ ಮಾತಾಡಿದ್ದರು. ‘ನೀವು ಕಾಂಗ್ರೆಸ್‍ಗೆ ಮತ  ಹಾಕಿದರೆ, ಅವರು ಮುಸ್ಲಿಮನನ್ನು ನಿಮಗೆ ಮುಖ್ಯಮಂತ್ರಿಯಾಗಿ ಕೊಡುತ್ತಾರೆ.' ಅಲ್ಲದೇ, 'ಮನ್‍ಮೋಹನ್ ಸಿಂಗ್ ಅವರು ಪಾಕಿಸ್ತಾನದೊಂದಿಗೆ  ಕೈಜೋಡಿಸಿದ್ದಾರೆ’ ಎಂದಿದ್ದರು. ಅಮಿತ್ ಷಾರ ಭಾಷಣ ಎಷ್ಟು ಕೆಟ್ಟದ್ದಾಗಿತ್ತೆಂದರೆ, ಚುನಾವಣಾ ಆಯೋಗ ಒಮ್ಮೆ ಅವರ ಮೇಲೆ ನಿಷೇಧವನ್ನು ಹೇರಿತ್ತು. 2014 ಮತ್ತು ಆ ಬಳಿಕ ನಡೆದ ವಿಧಾನಸಭಾ ಚುನಾವಣೆಗಳು ಹಾಗೂ ಉಪಚುನಾವಣೆಗಳಲ್ಲಿ ಬಿಜೆಪಿ ನಾಯಕರು  ಮಾಡಿದ ಭಾಷಣಗಳನ್ನು ಹರವಿ ಹಾಕಿ ಪರಿಶೀಲಿಸತೊಡಗಿದರೆ, ಎಲ್ಲದರಲ್ಲೂ ಏಕರೂಪತೆ ಕಾಣಬಹುದು. ಅದರಲ್ಲಿ ಒಂದು: ಮುಸ್ಲಿಮ್  ವಿರೋಧ 2. ಕಾಂಗ್ರೆಸ್ ವಿರೋಧ.  3. ಪಾಕಿಸ್ತಾನ.
ಅಷ್ಟಕ್ಕೂ,
ಕಳೆದ ನಾಲ್ಕೂವರೆ ವರ್ಷಗಳಲ್ಲಿ ಈ ದೇಶಕ್ಕೆ ಎದುರಾದ ಸವಾಲುಗಳೇ ಇವು? ಬಿಜೆಪಿ ಯಾಕೆ ಮತ್ತೆ ಮತ್ತೆ ಇವೇ ವಿಷಯಗಳ  ಸುತ್ತ ಗಿರಕಿ ಹೊಡೆಯುತ್ತಿದೆ? 2014ರಲ್ಲಿ ಮೋದಿ ನೇತೃತ್ವದ ಬಿಜೆಪಿಯನ್ನು ಈ ದೇಶದ ಮತದಾರರು ಬೆಂಬಲಿಸಿರುವುದಕ್ಕೆ ಅವರ  ಮಾತಿನ ಶೈಲಿ, ನೀಡಿದ ಭರವಸೆಗಳು ಮತ್ತು ಮನ್‍ಮೋಹನ್ ಸಿಂಗ್ ಸರಕಾರದ ಮೇಲೆ ಕೇಳಿ ಬಂದಿದ್ದ ಭ್ರಷ್ಟಾಚಾರದ ಆರೋಪಗಳು  ಪ್ರಮುಖ ಕಾರಣವಾಗಿದ್ದುವು. ಆಗ, ಅವರೆಂದೂ ನೋಟು ನಿಷೇಧ ಮಾಡುವ ಭರವಸೆ ನೀಡಿರಲಿಲ್ಲ. ಆದರೆ, ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆ ನೀಡಿದ್ದರು. ಭ್ರಷ್ಟಾಚಾರದ ನಿರ್ಮೂಲನೆಗಾಗಿ ಲೋಕಪಾಲವನ್ನು ಜಾರಿಗೊಳಿಸುವುದಾಗಿ ಹೇಳಿದ್ದರು. ರೈತರ ಬೆಳೆಯನ್ನು ಕಾಪಾಡುವ ಉದ್ದೇಶದಿ೦ದ ಏಕ ಮಾರುಕಟ್ಟೆಯನ್ನು ನಿರ್ಮಿಸುವುದಾಗಿ ಹೇಳಿಕೊಂಡಿದ್ದರು. ವರ್ಷದಲ್ಲಿ ಎರಡು ಕೋಟಿ  ಉದ್ಯೋಗ ಸೃಷ್ಟಿಯೂ ಅವರ ಭರವಸೆಗಳಲ್ಲಿ ಒಂದು. ತೈಲ ಬೆಲೆ ಇಳಿಕೆಯೂ ಅದರಲ್ಲಿ ಒಂದು. ವಿಷಾದ ಏನೆಂದರೆ, ಮಧ್ಯಪ್ರದೇಶದಲ್ಲಿ  2004 ರಿಂದ 2016ರ ನಡುವೆ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 16,932. ಅಂದರೆ ದಿನವೊಂದಕ್ಕೆ 3 ಕ್ಕಿಂತಲೂ ಅಧಿಕ. ಇದೇ  ಅವಧಿಯಲ್ಲಿ ಛತ್ತೀಸ್‍ಗಢದಲ್ಲಿ 12,979 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದರೆ ದಿನಕ್ಕೆ ಮೂವರು ರೈತರು. ರಾಜಸ್ತಾನದಲ್ಲಿ ಈ  ಆತ್ಮಹತ್ಯೆಯ ಸಂಖ್ಯೆ- 5582. ಇವತ್ತಿಗೂ ರೈತರ ಉತ್ಪನ್ನಗಳನ್ನು ದಾಸ್ತಾನು ಇರಿಸಲು ಸರಿಯಾದ ಗೋದಾಮುಗಳಿಲ್ಲ. ಬೆಂಬಲ ಬೆಲೆಯಲ್ಲಿ  ಸ್ಪಷ್ಟತೆಯಿಲ್ಲ. ಕಾರ್ಪೋರೇಟ್ ಸಂಸ್ಥೆಗಳ 3.5 ಲಕ್ಷ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡುವುದಕ್ಕೆ ಯಾವ ಹಿಂಜರಿಕೆಯನ್ನೂ ತೋರದ ಕೇಂದ್ರ ಸರಕಾರ ರೈತರ  ಸಾಲವನ್ನು ಮನ್ನಾ ಮಾಡಲು ಅಸಾಧ್ಯ ಎಂದೇ ಹೇಳುತ್ತಿದೆ. 2014ರಲ್ಲಿ ಈ ದೇಶದ ಮಂದಿ ಮತದಾನ ಮಾಡುವಾಗ ಬಿಜೆಪಿ ಹೀಗಿರಲಿಲ್ಲ.
ಆದರೆ,
ಆ ಬಳಿಕ ಒಂದು ರಾತ್ರಿ ದಿಢೀರ್ ಆಗಿ ನೋಟು ನಿಷೇಧ ಗೊಳಿಸಿತು. ಶ್ರೀಮಂತರಿಂದ ಹಣ ಪಡೆದು ಬಡವರಿಗೆ ಕೊಡುವ ಕ್ರಮ  ಎಂದು ಪ್ರಧಾನಿಯವರು ಅದನ್ನು ಸಮರ್ಥಿಸಿಕೊಂಡರೂ ಬಡವರಿಗೆ ಯಾವ ರೀತಿಯಲ್ಲೂ ಅದು ಉಪಯೋಗಕ್ಕೆ ಬರಲಿಲ್ಲ. ನಿಜವಾಗಿ,  ಚಲಾವಣೆಯಲ್ಲಿರುವ 86% ನೋಟುಗಳನ್ನು ನಿಷೇಧ ಮಾಡುವುದೆಂದರೆ, ಅದು ಮಕ್ಕಳಾಟಿಕೆಯಲ್ಲ. ಆ ನೋಟುಗಳು ಈ ದೇಶದ  ಕೋಟ್ಯಾಂತರ ಜನರ ಬದುಕನ್ನು ಕಟ್ಟಿದ್ದುವು. ದಿಢೀರ್ ಆಗಿ ಆ ನೋಟುಗಳು ಅಮಾನ್ಯಗೊಳ್ಳುವುದೆಂದರೆ, ಮಾರುಕಟ್ಟೆ ಸ್ತಬ್ಧಗೊಂಡಂತೆ.  ಆದ್ದರಿಂದಲೇ 100 ಕ್ಕಿಂತಲೂ ಅಧಿಕ ಮಂದಿ ಬೇರೆ ದಾರಿ ಕಾಣದೇ ಆತ್ಮಹತ್ಯೆ ಮಾಡಿಕೊಂಡರು. 15 ಕೋಟಿ ಜನರ ಪಾರಂಪರಿಕ  ಉದ್ಯೋಗಗಳಿಗೆ ಅದು ಎರವಾಯಿತು. ಅತ್ತ ನೋಟು ನಿಷೇಧದಿಂದ ಕಪ್ಪು ಹಣವನ್ನು ನಿಯಂತ್ರಿಸುವುದಕ್ಕೂ ಸಾಧ್ಯವಾಗಲಿಲ್ಲ ಮತ್ತು ಇತ್ತ  ಚಲನೆರಹಿತಗೊಂಡ ಮಾರುಕಟ್ಟೆಯನ್ನು ಸುಸ್ಥಿತಿಯಲ್ಲಿ ಇರಿಸುವುದಕ್ಕೂ ಸಾಧ್ಯವಾಗಲಿಲ್ಲ. ಇದು ನೋಟು ನಿಷೇಧದ ಬಹುದೊಡ್ಡ ವೈಫಲ್ಯ.  ಯುವ ಸಮೂಹದಲ್ಲಿ ಮಾತ್ರವಲ್ಲ, ಸಣ್ಣ ಸಣ್ಣ ಉದ್ದಿಮೆದಾರರಲ್ಲೂ ಬಿಜೆಪಿಯ ಬಗ್ಗೆ ತೀವ್ರ ಅಸಂತೋಷ ವ್ಯಕ್ತವಾಗತೊಡಗಿತು. ಒಂದುವೇಳೆ, ವರ್ಷದಲ್ಲಿ ಎರಡು ಕೋಟಿ ಉದ್ಯೋಗವನ್ನು ಸೃಷ್ಟಿಸುವಲ್ಲಿ ಮೋದಿಯವರು ಯಶಸ್ವಿಯಾಗಿರುತ್ತಿದ್ದರೆ, ನೋಟು ನಿಷೇಧದ ಸಂಕಷ್ಟವನ್ನು  ಜನರು ಮರೆಯುತ್ತಿದ್ದರೇನೋ. ಆದರೆ,
ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 15 ರಿಂದ 24 ವರ್ಷ ಗಳೊಳಗಿನ ಪ್ರಾಯದವರ 72 ಲಕ್ಷ   ಉದ್ಯೋಗ ಅವಕಾಶಗಳನ್ನು ನೋಟು ನಿಷೇಧ ಕಸಿದುಕೊಂಡಿತು. ಇದರ ಜೊತೆ ಜೊತೆಗೇ ತೈಲ ಬೆಲೆಯಲ್ಲಿ ವಿಪರೀತ ಏರಿಕೆ  ಉಂಟಾಯಿತು. ಬಿಜೆಪಿ ನಾಯಕರು ಏನೇ ಸಮರ್ಥಿಸಿಕೊಳ್ಳಲಿ, 2004 ರಿಂದ 2014ರ ವರೆಗಿನ ಮನ್‍ಮೋಹನ್ ಸಿಂಗ್ ಸರಕಾರದ  ಅವಧಿಗೆ ಹೋಲಿಸಿದರೆ, ಬಿಜೆಪಿ ಎಲ್ಲಿ ಎಡವಿದೆ ಎಂಬುದು ಸ್ಪಷ್ಟವಾಗುತ್ತದೆ. ಈ ಅವಧಿಯಲ್ಲಿ ಮನ್ ಮೋಹನ್ ಸಿಂಗ್ ಸರಕಾರವು 14  ಕೋಟಿ ಜನರನ್ನು ಬಡತನ ರೇಖೆಯಿಂದ ಹೊರತಂದಿದೆ ಎಂಬುದು ಅಧಿಕೃತ ಅಂಕಿಅಂಶ. ರಾಜೀವ್ ಗಾಂಧಿ ಗ್ರಾಮೀಣ ರೊಜ್‍ಗಾರ್  ಯೋಜನೆ ಈ ಸಾಲಿನಲ್ಲಿ ಅಭೂತಪೂರ್ವ ಸಾಧನೆಯನ್ನು ಮಾಡಿತ್ತು. ಗ್ರಾಮೀಣ ಜನರಿಗೆ ತಿಂಗಳಲ್ಲಿ ಇಂತಿಷ್ಟು ಕೆಲಸವನ್ನು ಒದಗಿಸುವ  ಅದ್ಭುತ ಯೋಜನೆ ಇದು. ಈ ಯೋಜನೆಯ ಮೇಲೆ ಮ್‍ಮೋಹನ್ ಸಿಂಗ್ ತೀವ್ರ ಗಮನವನ್ನು ಹರಿಸಿದ್ದರು. ಆದರೆ ಮೋದಿ ಆಡಳಿತದಲ್ಲಿ ಈ ಯೋಜನೆ ಬಹುತೇಕ ನಿಷ್ಕ್ರೀಯಗೊಂಡಿತು. ಮನ್‍ಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ ಕೃಷಿ ಉತ್ಪನ್ನಗಳ ರಫ್ತು 5  ಪಟ್ಟು ಹೆಚ್ಚಳಗೊಂಡಿತ್ತು. ಈಗ ಅದು 21% ಕುಸಿದಿದೆ. ಇದೇವೇಳೆ, ಕೃಷಿ ಉತ್ಪನ್ನಗಳ ಆಮದು ಪ್ರಮಾಣ ಇವತ್ತು 60%ಕ್ಕೆ ಹೆಚ್ಚಿದೆ. 70%  ರೈತರಿರುವ ದೇಶವೊಂದರಲ್ಲಿ ಕೃಷಿ ಉತ್ಪನ್ನಗಳ ಆಮದು ಪ್ರಮಾಣ ಹೆಚ್ಚಳಗೊಳ್ಳುವುದೂ ಮತ್ತು ರಫ್ತು ಪ್ರಮಾಣದಲ್ಲಿ ಇಳಿಕೆಯಾಗುವುದೂ  ಎಂದರೆ, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ ಎಂದೇ ಅರ್ಥ. ಇದರ ಜೊತೆಗೆ ಪ್ರತಿಯೊಂದನ್ನೂ  ಡಿಜಿಟಲ್ ಮಾಡುವ ಹುಚ್ಚುತನವನ್ನೂ  ಕೇಂದ್ರ  ಸರಕಾರ ಪ್ರದರ್ಶಿಸಿತು. ಪ್ರತಿಯೊಬ್ಬ ಭಾರತೀಯನೂ ಬ್ಯಾಂಕ್ ಖಾತೆ ತೆರೆಯಬೇಕೆಂದು ಒತ್ತಾಯಿಸಲಾಯಿತಲ್ಲದೇ ಜನ್‍ಧನ್ ಎಂದು  ನಂಬಿಸಲಾಯಿತು. ನಿಜವಾಗಿ, ಬ್ಯಾಂಕುಗಳೇ ಇಲ್ಲದ ಗ್ರಾಮೀಣ ಭಾರತದಲ್ಲಿ ಕ್ಯಾಶ್‍ಲೆಸ್ ಅತ್ಯಂತ ಬೇಜವಾಬ್ದಾರಿ ಕ್ರಮ. ಜನರನ್ನು ಮತ್ತೆ  ಬ್ಯಾಂಕಿನ ಮುಂದೆ ನಿಲ್ಲಿಸಿ ಅವರಿಂದ ಕನಿಷ್ಠ ಮೊತ್ತದಲ್ಲಿ ಬ್ಯಾಂಕ್ ಖಾತೆಯನ್ನು ಪ್ರಾರಂಭಿಸುವ ಅಭಿಯಾನ ನಡೆಯಿತು. ತಮಾಶೆ  ಏನೆಂದರೆ, ಈ ಪ್ರಕ್ರಿಯೆಗಾಗಿ ಜನರು ತಮ್ಮ ನಿತ್ಯದ ಕೆಲಸವನ್ನು ಕೈಬಿಟ್ಟು ತೊಡಗಿಸಿಕೊಳ್ಳುತ್ತಿರುವಾಗಲೇ ಮಿನಿಮಮ್ ಬ್ಯಾಲೆನ್ಸ್ ನ ಹೆಸರಲ್ಲಿ  ಬ್ಯಾಂಕುಗಳು ಅದೇ ಖಾತೆಯಿಂದ ದಂಡ ವಸೂಲು ಮಾಡತೊಡಗಿದುವು.
ನಿಜವಾಗಿ, ಪಂಚರಾಜ್ಯಗಳಲ್ಲಿ ಬಿಜೆಪಿಗಾದ ಸೋಲನ್ನು ಆಘಾತಕಾರಿಯಾಗಿ ನೋಡಬೇಕಿಲ್ಲ. ಮಾಧ್ಯಮಗಳು ಸೆಮಿಫೈನಲ್ ಎಂದು  ಬಿಂಬಿಸಿದ ಕಾರಣಕ್ಕಾಗಿ ಈ ಸೋಲಿಗೆ ಮಹತ್ವ ಲಭ್ಯವಾಗಿದೆಯೇ ಹೊರತು ಬಿಜೆಪಿಯ ಜನಪ್ರಿಯತೆ ಕುಸಿಯು ತ್ತಿರುವುದನ್ನು ಈ  ಮೊದಲಿನ ಚುನಾವಣೆಗಳೇ ಕೂಗಿ ಹೇಳಿದ್ದುವು. ಇದಕ್ಕೆ ಪ್ರಥಮ ಉದಾಹರಣೆ- ಗುಜರಾತ್ ವಿಧಾನ ಸಭಾ ಚನಾವಣೆ. ಆ ಬಳಿಕ  ಕರ್ನಾಟಕ. ಇದರ ಜೊತೆಗೇ ವಿವಿಧ ರಾಜ್ಯಗಳಲ್ಲಿ ವಿವಿಧ ಸಂದರ್ಭಗಳಲ್ಲಿ ನಡೆದ ಉಪ ಚುನಾವಣೆಗಳು. ಇವೆಲ್ಲವೂ ಬಿಜೆಪಿಯ ನಿರಾಶಾಜನಕ ಭವಿಷ್ಯವನ್ನೇ ಹೇಳಿದ್ದುವು. ಆದರೆ, ಮಾಧ್ಯಮಗಳಿಗೆ ಈ ಸೂಚನೆ ಅರ್ಥವಾಗಲಿಲ್ಲ ಅಥವಾ ಅರ್ಥವಾಗದಂತೆ ನಟಿಸಿದುವು.  ಅಂದಹಾಗೆ, ಸೆಮಿಫೈನಲ್ ಎಂದರೇನು? ಚುನಾವಣೆಯಲ್ಲಿ ಸೆಮಿಫೈನಲ್, ಫೈನಲ್, ಕ್ವಾರ್ಟರ್ ಫೈನಲ್, ಪ್ಲೆ ಆಫ್ ಎಂದೆಲ್ಲಾ ಇದೆಯೇ?  ಅದನ್ನು ನಿರ್ಧರಿಸುವುದು ಹೇಗೆ? ಬಿಜೆಪಿಗೆ ಅನು ಕೂಲವಾಗಲೆಂದೇ ಯಾರೋ ಈ ಬಾರಿ ಸೆಮಿಫೈನಲ್ ಕಾನ್ಸೆಪ್ಟನ್ನು ಹುಟ್ಟು  ಹಾಕಿರುವರೇನೋ ಎಂದು ಅನಿಸುತ್ತದೆ. ಬಿಜೆಪಿ ಸೋತರೂ ಬಿಜೆಪಿಯನ್ನೇ ಕೇಂದ್ರೀಯ ಸ್ಥಾನಲ್ಲಿ ಕೂರಿಸಿ ಚರ್ಚಿಸುವುದಕ್ಕೆ, ಪ್ರಧಾನಿ  ನರೇಂದ್ರ ಮೋದಿಯವರ ಭಾಷಣ ಮತ್ತೆ ಮತ್ತೆ ಪ್ರಸಾರ ಮಾಡಿ ಸೋಲಿನಲ್ಲೂ ಅವರ ಇಮೇಜನ್ನು ಎತ್ತಿಹಿಡಿಯುವುದಕ್ಕೆ ಹುಡುಕಿಕೊಂಡ  ತಂತ್ರ ಇದು ಎಂದೇ ಹೇಳಬೇಕಾಗುತ್ತದೆ. ಅಲ್ಲ ಎಂದಾದರೆ, ಬಿಜೆಪಿ ಸೋತ ಬಳಿಕವೂ ಚರ್ಚೆಯಲ್ಲಿ ಬಿಜೆಪಿಯೇ ಕೇಂದ್ರ ಸ್ಥಾನವನ್ನು  ಪಡೆದುಕೊಳ್ಳಲು ಕಾರಣವೇನು?
ಐಡಿಯಾಲಜಿಯ ಆಧಾರದಲ್ಲಿ ನಡೆಯಬೇಕಾಗಿದ್ದ ಚುನಾವಣೆಯನ್ನು ವಸ್ತು ರೂಪಕ್ಕಿಳಿಸಿದುದರಲ್ಲಿ ರಾಜಕೀಯ ಪಕ್ಷಗಳಿಗೆ ಪಾತ್ರ  ಇರುವಂತೆಯೇ ಮಾಧ್ಯಮಗಳಿಗೂ ಪಾತ್ರ ಇದೆ. ಈಗ ಚುನಾವಣಾ ಪ್ರಣಾಳಿಕೆಯ ವಿಶ್ಲೇಷಣೆ ನಡೆಯುವುದು ಹೇಗೆಂದರೆ, ಮುಸ್ಲಿಮರಿಗೆ  ಎಷ್ಟು, ಹಿಂದೂಗಳಿಗೆ ಎಷ್ಟು, ದಲಿತರಿಗೆ ಎಷ್ಟು, ರೈತರಿಗೆ ಎಷ್ಟು ಹೀಗೆ ವಸ್ತು ರೂಪದಲ್ಲಿ. ಚುನಾವಣೆ ಪ್ರಣಾಳಿಕೆಯಲ್ಲಿ ಪ್ರತಿಯೊಬ್ಬರೂ  ತಂತಮ್ಮ ಪಾಲನ್ನು ಲೆಕ್ಕ ಹಾಕಿ  ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಒಂದು ಪಕ್ಷದ ಪ್ರಣಾಳಿಕೆ ಯಾವ ಐಡಿಯಾಲಜಿಯನ್ನು ಪ್ರತಿನಿಧಿಸುತ್ತದೆ, ಒಂದು ದೇಶವೆಂಬ ನೆಲೆಯಲ್ಲಿ ಅದು ಜನರನ್ನು ಹೇಗೆ ಪರಿಗಣಿಸುತ್ತದೆ, ದೇಶದ ಸಮಗ್ರ ಬೆಳವಣಿಗೆಯ ಬಗ್ಗೆ ಪ್ರಣಾಳಿಕೆಯ ನಿಲುವು ಏನು ಇತ್ಯಾದಿಗಳ ಸುತ್ತ ವಿಶ್ಲೇಷಣೆ ನಡೆಸುವ ಸೂಕ್ಷ್ಮತೆಯನ್ನು ಮಾಧ್ಯಮಗಳು ಇವತ್ತು ಬಹುತೇಕ ಕಳಕೊಂಡು ಬಿಟ್ಟಿವೆ. ಅಷ್ಟಕ್ಕೂ,
ಕಾಂಗ್ರೆಸನ್ನು ಪ್ರಬಲ ವಿರೋಧ ಪಕ್ಷವಾಗಿ ಎತ್ತಿ ನಿಲ್ಲಿಸಿದ ಚುನಾವಣೆ ಎಂಬ ನೆಲೆಯಲ್ಲಿ ಪಂಚರಾಜ್ಯ ಫಲಿತಾಂಶಕ್ಕೆ ಮಹತ್ವ ವಿದೆ. ಈ  ಚುನಾವಣೆಗಿಂತ ಮೊದಲು ವಿರೋಧ ಪಕ್ಷಗಳ ನಾಯಕತ್ವ ಯಾರಲ್ಲಿರಬೇಕು ಎಂಬ ಬಗ್ಗೆ ಭಿನ್ನ ನಿಲುವುಗಳಿದ್ದುವು. ಕಾಂಗ್ರೆಸ್‍ನ ¸ ಸಾಮರ್ಥ್ಯದ ಬಗ್ಗೆ ಅನುಮಾನಗಳಿದ್ದುವು. ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ಸನ್ನು ಬೆದರಿಸುವ ಮತ್ತು ಸಾಮಾನ್ಯ ಪಕ್ಷವಾಗಿ ಕಾಣುವ ಹಂತಕ್ಕೆ  ತಲುಪಿದ್ದುವು. ಇದೀಗ ಸ್ಥಿತಿ ಬದಲಾಗಿದೆ. ವಿರೋಧ ಪಕ್ಷಗಳ ನಾಯಕತ್ವ ಕಾಂಗ್ರೆಸ್‍ಗೆ ಮರಳಿದೆ. ಬಿಜೆಪಿ ನೇತೃತ್ವದಲ್ಲಿ ಎನ್‍ಡಿಎ  ರಚನೆಗೊಂಡಂತೆ, ಕಾಂಗ್ರೆಸ್‍ನ ನೇತೃತ್ವದಲ್ಲೇ ವಿರೋಧ ಪಕ್ಷಗಳ ಒಕ್ಕೂಟ ಸಾಗಬೇಕಾದ ಅನಿವಾರ್ಯತೆ ಉಂಟಾಗಿದೆ. ನಿಜವಾಗಿ,
ಪಂಚ ರಾಜ್ಯ ಫಲಿತಾಂಶದ ಬಳಿಕದ ಸ್ಥಿತಿ ಇದು.

ಈ ಬಿಡಾರದಲ್ಲಿ ತುಂಬು ಕುಟುಂಬವೊಂದು ವಾಸವಿತ್ತು... ಘಟನೆ 1
ಹೆಣ್ಣು, ಗಂಡು ಮತ್ತು ಮಕ್ಕಳೂ ಸೇರಿರುವ ಉದ್ದದ ಸಾಲು. ಕೈಯಲ್ಲಿ ಪಾತ್ರೆಯನ್ನು ಹಿಡಿದು ಕೊಂಡಿರುವ ಆ ಸಾಲಿಗೆ ಧರ್ಮವಿಲ್ಲ.  ಹಸಿವೇ ಧರ್ಮ. ಮತ್ತೂ ಹುಡುಕಿದರೆ ಹಿಂದೂ, ಮುಸ್ಲಿಮ್, ಕ್ರೈಸ್ತ ಎಲ್ಲರೂ ಈ ಸಾಲಿನಲ್ಲಿ ಸಿಗುತ್ತಾರೆ. ಸಂಜೆ 6 ಗಂಟೆಗೆ ಈ ಸಾಲು ಸೇರುತ್ತದೆ. ಸಮಯಕ್ಕೆ ಸರಿಯಾಗಿ ವಾಹನವೊಂದು ಬಂದು ನಿಲ್ಲುವುದೂ ಅದರಿಂದ ಇಡ್ಲಿ ಮತ್ತು ಬೇಳೆಸಾರುಗಳುಳ್ಳ ದೊಡ್ಡ ಪಾತ್ರೆಗಳನ್ನು  ಇಳಿಸುವುದೂ ನಡೆಯುತ್ತದೆ. ಬಳಿಕ ನಡೆಯುವುದು ಹೃದಯವನ್ನು ಮೀಟುವ ಕ್ರಿಯೆ. ಸಾಲಿ ನಲ್ಲಿ ನಿಂತ ಸುಮಾರು 400-450 ಮಂದಿಗೆ  ಇದನ್ನು ಹಂಚುವ ಪ್ರಕ್ರಿಯೆ. ಒಬ್ಬೊಬ್ಬರಿಗೆ ಮೂರು ಇಡ್ಲಿ ಮತ್ತು ಸಾಂಬಾರು ಅಥವಾ ಮೂರು ಚಪಾತಿ ಮತ್ತು ಪದಾರ್ಥವನ್ನು ಹಂಚಲಾಗುತ್ತದೆ. ಈ ಸಾಲಿನಿಂದ ವ್ಯಕ್ತವಾಗುವ ಮಂದಹಾಸ ಮತ್ತು ಧನ್ಯತಾಭಾವವೇ ಈ ದಾನ ಎಷ್ಟು ಅಮೂಲ್ಯ ಅನ್ನುವುದನ್ನು ಸ್ಪಷ್ಟಪಡಿಸುತ್ತದೆ.
ಘಟನೆ 2
ಆರು ಮಕ್ಕಳು ಮತ್ತು ತಾಯಿಯಿರುವ ಕುಟುಂಬ. ಮಕ್ಕಳ ಅಪ್ಪ ಈ ಮೊದಲೇ ತೀರಿ ಹೋಗಿದ್ದಾರೆ. ನಾಲ್ಕು ಪುಟ್ಟ ಮಕ್ಕಳು ಶಾಲೆಗೆ  ಹೋಗುತ್ತಿವೆ. ಓರ್ವ ಹೆಣ್ಣು ಮಗಳು ಮದುವೆ ಪ್ರಾಯಕ್ಕೆ ತಲುಪಿದ್ದಾಳೆ. ಇನ್ನೋರ್ವ ಎಳೆ ಪ್ರಾಯದ ಮಗನ ಮೇಲೆ ಮನೆ ನಡೆಸುವ  ಆನೆಭಾರ ಬಿದ್ದಿದೆ. ಟರ್ಪಾಲು ಹಾಸಿದ ಮನೆಯಲ್ಲಿ ಈ ಕುಟುಂಬದ ವಾಸ. ನಗರ ಪ್ರದೇಶದ ಬಹುಮಹಡಿ ಕಟ್ಟಡ ಗಳಲ್ಲಿ ವಾಸಿಸುವ  ಮಂದಿ ಅದನ್ನು ಮನೆ ಎಂದು ಒಪ್ಪುವುದು ಬಿಡಿ ಮನುಷ್ಯರು ವಾಸಿಸುವುದಕ್ಕೆ ಯೋಗ್ಯವಾದ ಜೋಪಡಿ ಎಂದೂ ಒಪ್ಪಲಾರರು. ವರ್ಷಗಳ  ಹಿಂದೆ ಈ ಜೋಪಡಿಗೆ ಸರಕಾರದ ವತಿಯಿಂದ ಹಕ್ಕು ಪತ್ರ ಸಿಕ್ಕರೂ ಅದನ್ನು ಪಡೆದುಕೊಳ್ಳುವುದಕ್ಕೆ ಅಸಮರ್ಥವಾದ ಕುಟುಂಬ ಇದು.  ಹಕ್ಕು ಪತ್ರ ಪಡಕೊಳ್ಳಬೇಕಾದರೆ 10 ಸಾವಿರ ರೂಪಾಯಿಯನ್ನು ಸರಕಾರಕ್ಕೆ ಪಾವತಿಸಬೇಕು. ಅಷ್ಟೊಂದು ಹಣವಿದ್ದರೆ ಹಳೆ ಟರ್ಪಾಲನ್ನು  ಕಳಚಿ ಹೊಸದನ್ನು ಹೊದೆಸಬಹುದಿತ್ತು ಎಂದು ಅಂದುಕೊಂಡ ಕುಟುಂಬ. ಈ ಪರಿಸ್ಥಿತಿಯಿಂದಾಗಿ ಹಕ್ಕು ಪತ್ರವೂ ದಕ್ಕದ ಸ್ಥಿತಿ. ಇದನ್ನು  ಕಂಡು ಮರುಗಿದ ಸಂಘಟನೆಯೊಂದು ಈ ಕುಟುಂಬಕ್ಕೆ ಬದಲಿ ವ್ಯವಸ್ಥೆಯನ್ನು ಮಾಡಲು ಪಣ ತೊಟ್ಟಿತು. ದಾನಿಗಳನ್ನು ಸಂಪರ್ಕಿಸಿತು.  ಪ್ರತಿ ತಿಂಗಳೂ ಅಗತ್ಯದ ಆಹಾರ ವಸ್ತುಗಳನ್ನು ಒದಗಿಸುವ ವ್ಯವಸ್ಥೆಯನ್ನು ಮಾಡಿತು. ಆದರೆ, ಹಸಿವು ತಣಿಯುವುದೊಂದೇ ಆ ಕುಟುಂಬದ ಮೂಲಭೂತ ಅಗತ್ಯ ಆಗಿರಲಿಲ್ಲ. ಬೆಳೆದ ಮಗಳು, ಮಗ ಮತ್ತು ಮಕ್ಕಳಿರುವ ಕುಟುಂಬಕ್ಕೆ ಖಾಸಗಿತನವನ್ನು ಕಾಪಾಡಿಕೊಳ್ಳಲು ಕನಿಷ್ಠ  ಏರ್ಪಾಡನ್ನು ಮಾಡಬೇಕಿತ್ತು. ಆದ್ದರಿಂದ ಹತ್ತು ಸಾವಿರ ರೂಪಾಯಿಯನ್ನು ಪಾವತಿಸಿ ಹಕ್ಕು ಪತ್ರವನ್ನು ಪಡೆದುಕೊಳ್ಳಲಾಯಿತು.  ಟರ್ಪಾಲು ಹಾಸಿದ ಗುಡಿಸಲಿನ ಬದಲು ಚಂದದ ಮನೆಯೊಂದನ್ನು ಕಟ್ಟಿ ಕೊಡಲು ನಿರ್ಧರಿಸಲಾಯಿತು. ಮೊನ್ನೆ ಮೊನ್ನೆ ಆ ಕುಟುಂಬ  ಹೊಸ ಮನೆಯಲ್ಲಿ ಹೊಸ ಬದುಕನ್ನು ಆರಂಭಿಸಿದೆ. ಮನೆಗೆ ಬೇಕಾಗಿರುವ ಮಂಚ, ಕುರ್ಚಿ, ಹಾಸಿಗೆ ಇತ್ಯಾದಿ ಮೂಲಭೂತ ಸವಲತ್ತುಗಳನ್ನು ಒದಗಿಸಿಕೊಡಲಾಗಿದೆ.
ಮೊದಲ ಘಟನೆ ದ.ಕ. ಜಿಲ್ಲೆಯ ಮಂಗಳೂರಿನ ಹೃದಯ ಭಾಗದಲ್ಲಿರುವ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯದ್ದಾದರೆ ಎರಡನೇ ಘಟನೆ ಮಂಗಳೂರಿನ ಹೊರ ವಲಯದ ಅಡ್ಡೂರು-ಪುಂಚಮಿಯ ಕಿನ್ನಿಗುಡ್ಡೆಯದ್ದು. ಮೊದಲು ಘಟನೆಯ ನೇತೃತ್ವವನ್ನು ಎಂ. ಫ್ರೆಂಡ್ಸ್ ಎಂಬ ತಂಡವು  ವಹಿಸಿಕೊಂಡಿದ್ದರೆ ಎರಡನೇ ಘಟನೆಯ ನೇತೃತ್ವವನ್ನು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಘಟಕವು ವಹಿಸಿಕೊಂಡಿದೆ.  ಅಂದಹಾಗೆ, ಈ ಎರಡೂ ಘಟನೆಗಳ ನೇತೃತ್ವವನ್ನು ವಹಿಸಿಕೊಂಡವರು ಬೇರೆ ಬೇರೆ ಎಂಬುದನ್ನು ಬಿಟ್ಟರೆ ಉಳಿದಂತೆ ಸೇವೆ ಒಂದೇ.
ಜಗತ್ತಿನಲ್ಲಿ ಎರಡು ಬಗೆಯ ಬದುಕು ಇದೆ. ಒಂದು- ಬಯಸಿದ್ದೆಲ್ಲವನ್ನೂ ಅನುಭವಿಸುವ ಬದುಕಾದರೆ ಇನ್ನೊಂದು ಯಾವುದನ್ನೂ ಬಯಸದೆಯೇ ಇರುವ ಬದುಕು. ವಿಶೇಷ ಏನೆಂದರೆ, ಈ ಎರಡೂ ರೀತಿಯ ಬದುಕನ್ನು ಬದುಕುತ್ತಿರುವರು ಮನುಷ್ಯರೇ. ಹಾಗಂತ,  ಇವರಿಬ್ಬರೂ ವೈರಿಗಳಲ್ಲ. ಸ್ಪರ್ಧಿಗಳೂ ಅಲ್ಲ. ಅಲ್ಲದೇ, ಇವರಿಬ್ಬರ ನಡುವೆ ಅನೇಕ ವೇಳೆ ಭೇಟಿಯೂ ಆಗಿರುವುದಿಲ್ಲ. ಇಬ್ಬರೂ  ಒಂದೊಂದು ಮೂಲೆಯಲ್ಲಿ ತಮ್ಮದೇ ಕೋಟೆ ಮತ್ತು ಜೋಪಡಿಯನ್ನು ಕಟ್ಟಿಕೊಂಡು ಬದುಕುತ್ತಿದ್ದಾರೆ. ಇದೊಂದು ರೀತಿಯಲ್ಲಿ ಆರ್ಥಿಕ  ಅಸಮತೋಲನ. ಉಳ್ಳವರು ಮತ್ತು ಇಲ್ಲದವರ ನಡುವೆ ಕೊಂಡಿಯೊಂದನ್ನು ಜೋಡಿಸದೇ ಇರುವುದರ ಫಲಿತಾಂಶ. ನಿಜವಾಗಿ, ಉಳ್ಳವರ  ಬಗ್ಗೆ ಇಲ್ಲದವರಲ್ಲಿ ಅಭಿಮಾನ ಮತ್ತು ಗೌರವ ಮೂಡುವುದು ಯಾವಾಗ ಎಂದರೆ, ಉಳ್ಳವರು ತಮ್ಮ ಸಂಪತ್ತಿನಲ್ಲಿ ಒಂದಷ್ಟು ಪಾಲನ್ನು  ಇಲ್ಲದವರಿಗೆ ನೀಡುವಾಗ. ಇದನ್ನು ಇಸ್ಲಾಮ್ ಝಕಾತ್ (ಕಡ್ಡಾಯ ದಾನ) ಎಂಬ ಪದಪ್ರಯೋಗದೊಂದಿಗೆ ಗುರುತಿಸಿದೆ. ನಿಜವಾಗಿ,  ಇದೊಂದು ರೀತಿಯ ಕ್ರಾಂತಿಕಾರಿ ಪರಿಕಲ್ಪನೆ. ಉಳ್ಳವರನ್ನು ಮತ್ತು ಇಲ್ಲದವರನ್ನು ಒಂದೇ ಬಿಂದುವಿನಲ್ಲಿ ಸೇರಿಸುವ ಮತ್ತು ಪರಸ್ಪರ  ಅವಲಂಬಿಗಳನ್ನಾಗಿಸುವ ಕ್ರಿಯೆ. ಓರ್ವರಲ್ಲಿ ಖರ್ಚು-ವೆಚ್ಚಗಳೆಲ್ಲ ಮುಗಿದು ವರ್ಷದ ಕೊನೆಯಲ್ಲಿ ಹತ್ತೂವರೆ ಪವನ್ ಬಂಗಾರ ಅಥವಾ  ಅದಕ್ಕೆ ಸಮನಾದ ಮೊತ್ತಕ್ಕಿಂತ ಮಿಕ್ಕಿ ಉಳಿಕೆಯಾಗಿದ್ದರೆ ಅವರು ಅದರ ಮೇಲೆ ಎರಡೂವರೆ ಶೇಕಡಾ ಮೊತ್ತವನ್ನು ಕಡ್ಡಾಯವಾಗಿ  ಇಲ್ಲದವರಲ್ಲಿ ಹಂಚಬೇಕು. ಇದು ಮುಸ್ಲಿಮರ ಮಟ್ಟಿಗೆ ನಮಾಝ, ಉಪವಾಸದಂತೆಯೇ ಕಡ್ಡಾಯ. ಇದನ್ನು ಒಂದಷ್ಟು ಸಾವಧಾನದೊಂದಿಗೆ ಅವಲೋಕಿಸಿ ನೋಡಿ. ಒಂದು ಗ್ರಾಮದಲ್ಲಿ ಹೀಗೆ ಕಡ್ಡಾಯ ದಾನ ಮಾಡಲು ಅರ್ಹರಾಗಿರುವ 20 ಮಂದಿ ಇದ್ದಾರೆ  ಎಂದಿಟ್ಟುಕೊಳ್ಳಿ. ಮಾತ್ರವಲ್ಲ, ಅವರು ತಮ್ಮ ಕಡ್ಡಾಯ ದಾನವನ್ನು ನೀಡಲು ಸಿದ್ಧರೂ ಇದ್ದಾರೆ. ಈಗ ಆಗಬೇಕಾಗಿರುವ ತುರ್ತು ಕೆಲಸ  ಏನೆಂದರೆ, ಅದನ್ನು ಸಂಗ್ರಹಿಸುವುದು ಮತ್ತು ಆ ಊರು ಮತ್ತು ಪರ ಊರಿನಲ್ಲಿ  ಇರಬಹುದಾದ ಕಡು ಬಡವರನ್ನು ಗುರುತಿಸಿ ಅವರ ಸಮಗ್ರ ಸಬಲೀಕರಣಕ್ಕಾಗಿ ಅದನ್ನು ವಿನಿಯೋಗಿಸುವುದು. ಇದೊಂದು ರೀತಿಯ ಚಳವಳಿ. ಉಳ್ಳವರಿಂದ ಝಕಾತನ್ನು ಸಂಗ್ರಹಿಸುವುದು  ಮತ್ತು ಸಾಧ್ಯವಾದರೆ ಅವರನ್ನು ಜೊತೆಯಿಟ್ಟು ಕೊಂಡೇ ಇಲ್ಲದವರ ಜೋಪಡಿಗೆ ತೆರಳಿ ಅವರನ್ನು ಆ ಸ್ಥಿತಿಯಿಂದ ಮೇಲೆತ್ತುವುದಕ್ಕೆ  ಯೋಜನೆಗಳನ್ನು ರೂಪಿಸುವುದು. ಇದು ಚಳವಳಿಯ ರೂಪದಲ್ಲಿ ನಡೆದರೆ ಸಾಮಾಜಿಕ ಅಸಮಾನತೆಗೆ ಬಹುದೊಡ್ಡ ತಡೆಯನ್ನು ಒಡ್ಡಬಹುದು.
ನಮ್ಮ ನಡುವೆ ಇರುವ ಎಲ್ಲ ಸಿದ್ಧಾಂತಗಳೂ ಬಡವನ ಮನೆಯ ಬಳಿ ಬಂದು ನಿಂತಾಗ ಮೌನವಾಗುತ್ತವೆ. ಕಮ್ಯುನಿಸಂ ಆಗಲಿ, ಬಂಡವಾಳಶಾಹಿಯಾಗಲಿ ಎರಡೂ ಬಡತನ ನಿರ್ಮೂಲನೆಗೆ ಮಂಡಿಸುವ ವಿಚಾರಗಳಲ್ಲಿ ಅಪೂರ್ಣತೆ ಇದೆ. ಅನಾದಿ ಕಾಲದಲ್ಲಿ ಬಡತನವನ್ನು ಶಾಪದ ಫಲವೆಂಬಂತೆ ಕಾಣಲಾಗುತ್ತಿದ್ದರೆ ಆಧುನಿಕ ಕಾಲದಲ್ಲಿ ಅವಮಾನವಾಗಿ ಕಾಣಲಾಗುತ್ತದೆ. ಆದ್ದರಿಂದಲೇ, ಸರಕಾರಗಳು  ಬಡವರ ಸಂಖ್ಯೆಯನ್ನು ಕಡಿಮೆಗೊಳಿಸಿ ತೋರಿಸಲು ಪ್ರಯತ್ನಿಸುತ್ತಿವೆ. ನಿಜವಾಗಿ, ಇದಕ್ಕೆ ಪರಿಹಾರ ಝಕಾತ್ ಎಂಬ ಪರಿಕಲ್ಪನೆ.  ಒಂದುವೇಳೆ, ಇಸ್ಲಾಮ್‍ನ ಬದಲು ಬಂಡವಾಳಶಾಹಿತ್ವ ಅಥವಾ ಕಮ್ಯುನಿಸಂ ಸಿದ್ಧಾಂತವು ಝಕಾತನ್ನು ಪರಿಚಯಿಸಿರುತ್ತಿದ್ದರೆ ಅದಕ್ಕೆ ಇವತ್ತು  ಸಾಕಷ್ಟು ಸಾಮಾಜಿಕ ಮನ್ನಣೆ ಸಿಗುತ್ತಿತ್ತೇನೋ? ಆರ್ಥಿಕ ಅಸಮತೋಲನ ಮತ್ತು ಸಾಮಾಜಿಕ ಅಸಮಾನತೆಯನ್ನು ತೊಲಗಿಸಲು ಸಮರ್ಪಕ ಆಯುಧವಾಗಿ ಬಿಂಬಿತಗೊಳ್ಳುತ್ತಿತ್ತೇನೋ? ಅಂದಹಾಗೆ,
ದೇವ ಮತ್ತು ಮಾನವನ ನಡುವಿನ ಸಂಭಾಷಣೆಯ ಎಳೆಯೊಂದನ್ನು ಪ್ರವಾದಿ ಮುಹಮ್ಮದ್(ಸ) ಹೀಗೆ ಹಂಚಿ ಕೊಂಡಿದ್ದಾರೆ;
ಸತ್ತು ಮತ್ತೆ ಎಬ್ಬಿಸಲ್ಪಟ್ಟು ವಿಚಾರಣೆಗೆ ತಯಾರಾದ ಮಾನವನೊಂದಿಗೆ ದೇವನು ಕೇಳುತ್ತಾನೆ,
ನಾನು ರೋಗಿಯಾಗಿದ್ದೆ, ಆದರೆ ನೀನು ನನ್ನನ್ನು ವಿಚಾರಿಸಲು ಬರಲಿಲ್ಲ.
ಮಾನವನಿಗೆ ಆಶ್ಚರ್ಯವಾಗುತ್ತದೆ. ಎಲ್ಲಿಯ ಮಾನವ. ಎಲ್ಲಿಯ  ದೇವ. ನಿನಗೆ ರೋಗವಾ? ನೀನು ದೇವನಲ್ಲವೇ ಎಂದು ಪ್ರಶ್ನಿಸುತ್ತಾನೆ. ಆಗ ದೇವನು, ನನ್ನ ಇಂತಿಂಥ ದಾಸ ರೋಗಿಯಾಗಿದ್ದ. ನೀನು  ಅವನನ್ನು ಸಂದರ್ಶಿಸಿರುತ್ತಿದ್ದರೆ ನನ್ನನ್ನು ಸಂದರ್ಶಿಸಿದಂತಾಗುತ್ತಿತ್ತು ಎನ್ನುತ್ತಾನೆ. ಆ ಬಳಿಕ ದೇವನು ಹೇಳುತ್ತಾನೆ, ನಾನು ಊಟ ಕೇಳಿದೆ.  ಆದರೆ ನೀನು ಉಣಿಸಲಿಲ್ಲ. ಮಾನವನಿಗೆ ಮತ್ತದೇ ಆಶ್ಚರ್ಯ. ನಿನಗೆ ಹಸಿವೇ? ದೇವನೂ ಹಸಿಯುತ್ತಾನಾ? ದೇವನ ಉತ್ತರ ಏನೆಂದರೆ,  ಇಂತಿಂಥ ಮನುಷ್ಯ ನಿನ್ನಲ್ಲಿ ಊಟ ಕೇಳಿದ್ದ.   ನೀನು ಆತನಿಗೆ ಊಟ ನೀಡಿರುತ್ತಿದ್ದರೆ ನನಗೆ ನೀಡಿದಂತಾಗುತ್ತಿತ್ತು. ಮೂರನೆಯದಾಗಿ  ದೇವನು ಹೇಳುತ್ತಾನೆ, ಇಂತಿಂಥ ವ್ಯಕ್ತಿ ನಿನ್ನಲ್ಲಿ ದಾಹ ತಣಿಸುವಂತೆ ಕೇಳಿಕೊಂಡಿದ್ದ. ಆದರೆ ನೀನು ಆತನಿಗೆ ನೀರನ್ನು ಕೊಡಲಿಲ್ಲ.  ಕೊಟ್ಟಿರುತ್ತಿದ್ದರೆ ಅದು ನನಗೆ ಕೊಟ್ಟಂತಾಗುತ್ತಿತ್ತು.
ಇದೊಂದು ಮಾರ್ಮಿಕ ಮಾತುಕತೆ. ದೇವನು ಮನುಷ್ಯರೊಂದಿಗೆ ಮನುಷ್ಯ ಭಾವದಲ್ಲಿ ಮಾತಾಡುತ್ತಾನೆ. ದೇವನಿಗೆ ಕೊಡುವುದು ಎಂದರೆ  ಮನುಷ್ಯನಿಗೆ ಕೊಡುವುದು ಎಂದರ್ಥ ಎಂಬ ರೀತಿಯಲ್ಲಿ ವಿವರಿಸುತ್ತಾನೆ. ಇದೊಂದೇ ಅಲ್ಲ, ಪಾಪ ಗಳಿಗೆ ಪ್ರಾಯಶ್ಚಿತ್ತವಾಗಿ ಪವಿತ್ರ  ಕುರ್‍ಆನ್ ಪ್ರಸ್ತಾಪಿಸುವ ವಿವರಗಳೂ ಅಚ್ಚರಿಯದ್ದು. ದೇವನೊಂದಿಗಿನ ಕರ್ತವ್ಯದಲ್ಲಿ ಚ್ಯುತಿ ಉಂಟಾಗುವುದನ್ನು ದೇವನು ಹೇಗೆ  ನೋಡುತ್ತಾನೆಂದರೆ, ಅದು ಮನುಷ್ಯರಿಗೆ ಮಾಡಲಾದ ದ್ರೋಹ ಎಂಬಂತೆ. ರಮಝಾನ್ ತಿಂಗಳ ಉಪವಾಸ ಆಚರಿಸಲು ಅಶಕ್ತರಾದವರು  ಬಡವನಿಗೆ ಎರಡು ಹೊತ್ತಿನ ಊಟವನ್ನು ನೀಡಬೇಕು (2:185) ಎಂದು ಪವಿತ್ರ ಕುರ್‍ಆನ್‍ನಲ್ಲಿ ಹೇಳಲಾಗಿದೆ. ದೇವನಿಗಾಗಿ ಕಡ್ಡಾಯ  ಉಪವಾಸ ಆಚರಿಸುವ ವೇಳೆ ಉಂಟಾಗಿರಬಹುದಾದ ಲೋಪ-ದೋಷಗಳಿಗೆ ಪರಿಹಾರ ಏನೆಂದರೆ, ಬಡವರಿಗೆ ಫಿತ್ರ್ ಝಕಾತ್ ನೀಡುವುದು. ಈ ಹಿಂದೆ ಪ್ರವಾದಿಯವರ ಕಾಲದಲ್ಲಿ ಪತ್ನಿಯನ್ನು ತಾಯಿಯಂತೆ ಎಂದು ಪತಿ ಹೇಳುವ ಕ್ರಮ (ಝಿಹಾರ್) ಇತ್ತು. ಪತ್ನಿಯ ಜೊತೆ ಜಗಳವಾಡಿದ ಪತಿ, ನೀನು ಇನ್ನು ಮುಂದಕ್ಕೆ ನನಗೆ ತಾಯಿಗೆ ಸಮಾನ ಎಂದು ಹೇಳುತ್ತಿದ್ದ. ಆ ಬಳಿಕ ಆಕೆ ಆತನಿಗೆ ನಿಷಿದ್ಧವಾಗುತ್ತಿದ್ದಳು.  ಅತ್ತ ವಿಚ್ಛೇದನವೂ ಇಲ್ಲ, ಇತ್ತ ಪತ್ನಿಯಾಗಿಯೂ ಇಲ್ಲದ ತ್ರಿಶಂಕು ಸ್ಥಿತಿ. ಗಂಡಿನ ಈ ತಪ್ಪಿಗೆ ಅಲ್ಲಾಹನು ಪ್ರಾಯಶ್ಚಿತ್ತವಾಗಿ ನಿಗದಿಪಡಿಸಿರುವು ದೇನೆಂದರೆ, 60 ಮಂದಿ ದರಿದ್ರರಿಗೆ ಊಟ ಹಾಕುವುದು (ಪವಿತ್ರ ಕುರ್‍ಆನ್ 58:3). ಶಪಥವನ್ನು ಉಲ್ಲಂಘಿಸುವವರಿಗೆ  ಪ್ರಾಯಶ್ಚಿತ್ತವಾಗಿ 10 ಮಂದಿ ದರಿದ್ರರಿಗೆ ಊಟ ಕೊಡಬೇಕೆಂದು (5:59) ಪವಿತ್ರ ಕುರ್‍ಆನ್ ಒಂದು ಕಡೆ ಹೇಳುವಾಗ, ಇನ್ನೊಂದು ಕಡೆ  ಬಡವರಿಗೆ ಉಣಿಸುವುದು ಸಜ್ಜನ ದಾಸರ ಗುಣಸ್ವಭಾವ (76: 9-10) ಎಂದೂ ಹೇಳುತ್ತದೆ. ನಿಜವಾಗಿ, 
ಬದುಕನ್ನು ಪರೀಕ್ಷೆ ಎಂದು ನಂಬುವವರು ಇರುವಂತೆಯೇ ಹಾಗೆ ನಂಬದವರೂ ಈ ಜಗತ್ತಿನಲ್ಲಿದ್ದಾರೆ. ಹೀಗಿದ್ದರೂ, ಕೌತುಕ ಗಳು ಈ  ಜಗತ್ತಿನಲ್ಲಿ ನಡೆಯುತ್ತಲೇ ಇರುತ್ತವೆ. ಅತ್ಯಂತ ಆರೋಗ್ಯವಂತ ಮತ್ತು ಕಟ್ಟುಮಸ್ತಾದ ವ್ಯಕ್ತಿ ಒಂದು ದಿನ ಇದ್ದಕ್ಕಿ ದ್ದಂತೆ  ಅನಾರೋಗ್ಯಕ್ಕೀಡಾಗುತ್ತಾನೆ. ದೇಹ ನಿಶ್ಶಕ್ತಿಗೀಡಾಗುತ್ತದೆ. ಬಡವನೋರ್ವ ನೋಡನೋಡುತ್ತಲೇ ಶ್ರೀಮಂತನಾಗಿ ಬದಲಾಗುತ್ತಾನೆ.  ಶ್ರೀಮಂತನ ಸಂಪತ್ತು ಕರಗುತ್ತಾ ಕರಗುತ್ತಾ ನಿಧಾನಕ್ಕೆ ನಿರ್ವಾತ ಉಂಟಾಗುತ್ತದೆ. 50 ವರ್ಷಕ್ಕೇ ಇಷ್ಟು ಸಾಕು ಎಂದು ನಿಟ್ಟುಸಿರು  ಬಿಡುವವರೂ 90 ವರ್ಷವಾದರೂ ಅಪಾರ ಜೀವನ ಪ್ರೀತಿಯಿಂದ ಬದುಕುವವರೂ ಇಲ್ಲಿದ್ದಾರೆ. ಬಹುಶಃ ಇದೊಂದು ಜೀವನ ಚಕ್ರ. ಈ  ಚಕ್ರ ತಿರುಗುತ್ತಲೇ ಇರುತ್ತದೆ. ಚಕ್ರದ ತಳಭಾಗ ದಲ್ಲಿ ಇರುವವರು ಶಾಶ್ವತವಾಗಿ ತಳಭಾಗದಲ್ಲೇ  ಇರುವುದಿಲ್ಲ. ಒಂದು ಕಾಲದಲ್ಲಿ ಆತ ಮೇಲೇರಬೇಕಾಗುತ್ತದೆ. ಮೇಲ್ಭಾಗದಲ್ಲಿರುವವರು ಶಾಶ್ವತವಾಗಿ ಮೇಲ್ಭಾಗದಲ್ಲೇ  ಇರುವುದೂ ಇಲ್ಲ. ಅವರು ತಳಭಾಗವನ್ನು ಸ್ಪರ್ಶಿಸಲಿದ್ದಾರೆ.  ಹೀಗೆ ತಿರುಗುವ ಚಕ್ರದಲ್ಲಿ ಸಿಲುಕಿಕೊಂಡಿರುವ ಮಾನವರೆಲ್ಲರೂ ಪರಸ್ಪರರನ್ನು ಅವಲಂಬಿಸಿ ಮತ್ತು ಆಧರಿಸಿಕೊಂಡು ಬದುಕಬೇಕು  ಅನ್ನುವುದು ಸೃಷ್ಟಿಕರ್ತನ ಬಯಕೆ. ಮೇಲ್ಭಾಗದಲ್ಲಿರುವವರು ತಳಭಾಗದಲ್ಲಿರುವವರನ್ನು ಆಧರಿಸಬೇಕು. ತನ್ನಲ್ಲಿರುವುದರಿಂದ ಸ್ವಲ್ಪಂಶವನ್ನು  ಕೆಳಭಾಗದಲ್ಲಿರು ವವರಿಗೆ ನೀಡಿ ಅವರಲ್ಲಿ ಜೀವನ ಪ್ರೇಮವನ್ನು ಹುಟ್ಟಿಸಬೇಕು. ತಳಭಾಗದವ ಮೇಲ್ಭಾಗದವರನ್ನು ಗೌರವದಿಂದ ಕಾಣಬೇಕು. ಆದ್ದರಿಂದಲೇ ದೇವನ ಜೊತೆಗಿನ ಕರ್ತವ್ಯಚ್ಯುತಿಯನ್ನು ಮನುಷ್ಯರ ಜೊತೆಗಿನ ಕರ್ತವ್ಯ ಚ್ಯುತಿಯಾಗಿ ಮತ್ತು ಅವರಿಗೆ ಉಣಿಸುವ  ಮೂಲಕ ಅದಕ್ಕಿರುವ ಪ್ರಾಯಶ್ಚಿತ್ತವಾಗಿ ದೇವನು ಪರಿಗಣಿಸಿರುವುದು. ಆಳವಾಗಿ ಯೋಚಿಸಿದರೆ ಇದೊಂದು ಅದ್ಭುತ ಪರಿಕಲ್ಪನೆ.  ಶ್ರೀಮಂತರು ಮತ್ತು ಬಡವರನ್ನು ಜೋಡಿಸುವ ಮತ್ತು ಬಂಧುಗಳನ್ನಾಗಿಸುವ ಹೊಸ ಬಗೆಯ ಚಿಂತನೆ.

 ಆರಂಭದಲ್ಲಿ ಹೇಳಲಾದ ಎರಡೂ ಘಟನೆಗಳು ಇದಕ್ಕೆ ಉದಾಹರಣೆ, ಅಷ್ಟೇ.

ಆಯ್ಕೆಯ ಸ್ವಾತಂತ್ರ್ಯ ಮತ್ತು ಖದೀಜ ರೆಹಮಾನ್  
ಆಯ್ಕೆಯ ಸ್ವಾತಂತ್ರ್ಯ ಅಂದರೇನು? ಯಾವುದು ಆಯ್ಕೆ ಮತ್ತು ಯಾವುದು ಆಯ್ಕೆ ಅಲ್ಲ ಎಂದು  ತೀರ್ಮಾನಿಸಬೇಕಾದವರು ಯಾರು? ನಟಿ ಕರೀನಾ ಕಪೂರ್ ಸಿನಿಮಾದಲ್ಲಿ ಧರಿಸುವ ಉಡುಪು ಆಕೆಯ  ಆಯ್ಕೆಯೋ ಅಥವಾ ಸಿನಿಮಾ ನಿರ್ದೇಶಕರ ಆಯ್ಕೆಯೋ? ಆಕೆ ಸಿನಿಮಾದ ಹೊರಗೆ ನಿಜ ಜೀವನದಲ್ಲಿ ಧರಿಸುವ  ಉಡುಪಿನ ಆಯ್ಕೆ ಯಾರದು? ಪತಿಯದ್ದೋ, ತಂದೆಯದ್ದೋ, ಗೆಳತಿಯದ್ದೋ, ವಿನ್ಯಾಸಕಾರನದ್ದೋ,  ತಾಯಿಯದ್ದೋ? ಸಂಗೀತ ನಿರ್ದೇಶಕ ಏ.ಆರ್. ರೆಹಮಾನ್‍ರ ಮಗಳು ಖತೀಜ ರೆಹಮಾನ್ ನಕಾಬ್  ಧರಿಸಿದುದಕ್ಕೆ ಆಕ್ಷೇಪ ವ್ಯಕ್ತಪಡಿಸಿದವರು ಆಯ್ಕೆಯ ಸ್ವಾತಂತ್ರ್ಯಕ್ಕೆ ಕೊಡುವ ವಿವರಣೆಗಳೇನು? ನಕಾಬ್ ಧರಿಸುವುದು  ಪ್ರಗತಿ ವಿರೋಧಿಯೇ? ಆಯ್ಕೆಯ ಸ್ವಾತಂತ್ರ್ಯದ ಅಡಿಯಲ್ಲಿ ನಕಾಬ್, ಬುರ್ಖಾ, ಹಿಜಾಬ್, ಗಡ್ಡ ಇತ್ಯಾದಿಗಳು  ಬರುವುದಿಲ್ಲವೇ? ಮಹಿಳೆಯೋರ್ವಳು ನಕಾಬೋ ಬುರ್ಖಾವೋ ಧರಿಸಿದರೆ ಅದನ್ನು ಪುರುಷರ ಬಲವಂತದ  ಹೇರಿಕೆ ಎಂದು ವ್ಯಾಖ್ಯಾನಿಸುವವರು, ಪುರುಷ ಪ್ಯಾಂಟ್-ಶರ್ಟ್ ಧರಿಸುವುದನ್ನು; ಲುಂಗಿ-ಬನಿಯನ್ನು,  ಕುರ್ತಾ-ಪೈಜಾಮ, ಬರ್ಮುಡಾ ಚಡ್ಡಿ ಇತ್ಯಾದಿ ಧರಿಸುವುದರಲ್ಲಿ ಯಾಕೆ ಬಲ ವಂತದ ಹೇರಿಕೆಯನ್ನು  ಕಾಣುವುದಿಲ್ಲ? ಪುರುಷನ ಮೇಲೆ ಮಹಿಳೆ ಈ ಉಡುಪುಗಳನ್ನು ಯಾಕೆ ಹೇರಿರಬಾರದು? ಯಾಕೆ ಇವುಗಳು  ಪುರುಷರ ಸಹಜ ಆಯ್ಕೆಯಾಗಿರಬೇಕು? ಮಹಿಳೆ ನಕಾಬ್ ಧರಿಸಿದರೆ ಬಲವಂತದ ಹೇರಿಕೆ, ಅದೇ ಪುರುಷ  ಪ್ಯಾಂಟು ಧರಿಸಿದರೆ ಸಹಜ ಆಯ್ಕೆ- ಏನಿದೆಲ್ಲ? ಆಯ್ಕೆಯ ಸ್ವಾತಂತ್ರ್ಯ ಎಂಬುದು ಯಾರು ಯಾವ ಉಡುಪನ್ನು  ಧರಿಸುತ್ತಾರೆ ಎಂಬುದನ್ನು ಅವಲಂಬಿಸಿಕೊಂಡಿದೆ ಎಂಬ ರೀತಿಯಲ್ಲಿ ಪ್ರತಿ ಬಾರಿಯೂ  ಚರ್ಚೆಗಳಾಗುತ್ತಿರುವುದು ಯಾಕಾಗಿ? ಓರ್ವರು ಪ್ರಗತಿಪರರೋ ಪ್ರಗತಿರಹಿತರೋ ಎಂಬುದನ್ನು  ತೀರ್ಮಾನಿಸಬೇಕಾದುದು ಯಾವುದರ ಆಧಾರದಲ್ಲಿ? ಅವರು ಧರಿಸಿರುವ ಉಡುಪು, ಬಿಟ್ಟಿರುವ ಗಡ್ಡ,  ಧರಿಸಿರಬಹುದಾದ ಮುಂಡಾಸು ಮತ್ತು ಚಪ್ಪಲಿಗಳು ಇದನ್ನು ನಿರ್ಧರಿಸಬಲ್ಲುದೇ?
ಹಿಜಾಬ್, ಬುರ್ಖಾ, ನಕಾಬ್, ಚಾದ್ರಿ ಇತ್ಯಾದಿಗಳೆಲ್ಲ ಬೇರೆ ಬೇರೆ. ಬುರ್ಖಾ ಎಂಬುದು ಹಿಜಾಬ್‍ನ ಪರ್ಯಾಯ  ಪದ ಅಲ್ಲ. ನಕಾಬ್ ಅಂದರೆ ಬುರ್ಖಾವೂ ಅಲ್ಲ. ಮುಖದ ಸಹಿತ ಇಡೀ ದೇಹವನ್ನು ಮರೆಸುವ ಉಡುಪಿಗೆ  ಸಾಮಾನ್ಯವಾಗಿ ಬುರ್ಖಾ ಅನ್ನುತ್ತಾರೆ. ಇದರಲ್ಲಿ ಕಣ್ಣಿನ ಭಾಗ ತೆರೆದಿರುವುದಿಲ್ಲ. ಅದರ ಬದಲು ತೆಳುವಾದ  ಬಟ್ಟೆಯನ್ನು ಮುಖದ ಮೇಲೆ ಹಾಸಲಾಗುತ್ತದೆ. ಅಫಘಾನ್, ಆಫ್ರಿಕನ್ ರಾಷ್ಟ್ರಗಳಲ್ಲಿ ಈ ಬಗೆಯ ಉಡುಪು ಹೆಚ್ಚು  ಪ್ರಚಲಿತದಲ್ಲಿದೆ. ಅಫಘಾನ್‍ನ ಪಶ್ತೂನ್ ಬುಡಕಟ್ಟುಗಳಲ್ಲಿ ಈ ಬಗೆಯ ಉಡುಪಿಗೆ ಚಾದ್ರಿ ಎಂದು ಕರೆಯುತ್ತಾರೆ.  ಪ್ರವಾದಿ ಮುಹಮ್ಮದರ ಜನನಕ್ಕಿಂತ ಮುಂಚೆಯೇ ಪಶ್ತೂನ್‍ಗಳು ಈ ಬಗೆಯ ಉಡುಪನ್ನು ಧರಿಸುತ್ತಿದ್ದರು ಎಂದೂ  ಹೇಳಲಾಗುತ್ತದೆ. ಇನ್ನು, ನಕಾಬ್ ಎಂಬುದು ಮುಖವನ್ನು ಮರೆಸುವ ವಸ್ತ್ರದ ಹೆಸರು. ಆಸ್ಕರ್ ವಿಜೇತ ಸಿನಿಮಾ  ‘ಸ್ಲಂ ಡಾಗ್ ಮಿಲಿಯನೇರ್’ ಚಿತ್ರದ 10ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ  ಏ.ಆರ್. ರೆಹಮಾನ್‍ರ ಮಗಳು ಖತೀಜ ರೆಹಮಾನ್ ಧರಿಸಿದ್ದು ಇದೇ ನಕಾಬನ್ನು. ಆಕೆ ಅಪ್ಪಟ ಭಾರತೀಯ  ಮಹಿಳೆಯರಂತೆ ಸೀರೆ ಉಟ್ಟಿದ್ದರು ಮತ್ತು ಮುಖವನ್ನು ಮರೆಸುವ ನಕಾಬನ್ನು ಧರಿಸಿದ್ದರು. ಇನ್ನೊಂದು, ಹಿಜಾಬ್.  ಸರಳವಾಗಿ ಹೇಳಬೇಕೆಂದರೆ, ಮೈ ಮುಚ್ಚುವ ಉಡುಪು. ದೈಹಿಕ ಅವಯವಗಳು ಬಹಿರಂಗವಾಗಿ ಕಾಣದಂತೆ  ತಡೆಯುವ ವಸ್ತ್ರ. ಇದಕ್ಕೆ ನಿರ್ದಿಷ್ಟ ವಿನ್ಯಾಸ ಎಂಬುದಿಲ್ಲ. ನಿರ್ದಿಷ್ಟ ಬಣ್ಣ ಇಲ್ಲ. ನಿರ್ದಿಷ್ಟ ಬಟ್ಟೆಯೂ ಇಲ್ಲ. ಉಡುಪು  ಯಾವುದೇ ಇರಬಹುದು ಮತ್ತು ಅದರ ಬಣ್ಣ ಹಾಗೂ ವಿನ್ಯಾಸ ಏನೇ ಇರಬಹುದು, ಅದನ್ನು ಧರಿಸಿದವರ ದೈಹಿಕ  ಅವಯವಗಳನ್ನು ಅದು ಬಹಿರಂಗವಾಗಿ ಕಾಣಬಾರದು ಎಂಬುದಷ್ಟೇ ಷರತ್ತು. ದುರಂತ ಏನೆಂದರೆ,
  99% ಮಾಧ್ಯಮ ಸಂಸ್ಥೆಗಳಿಗೂ ಹಿಜಾಬ್, ನಕಾಬ್, ಬುರ್ಖಾ ಇತ್ಯಾದಿಗಳ ನಡುವೆ ಇರುವ ವ್ಯತ್ಯಾಸ ಗೊತ್ತೇ ಇಲ್ಲ.  ನಕಾಬನ್ನೇ ಅವು ಹಿಜಾಬ್ ಅನ್ನುತ್ತಿವೆ. ಆಸ್ಟ್ರಿಯಾ, ಕೆನಡಾ, ಕ್ಯೂಬೆಕ್, ಡೆನ್ಮಾರ್ಕ್, ಫ್ರಾನ್ಸ್, ಬೆಲ್ಜಿಯಂ, ತಜಕಿಸ್ತಾನ್,  ಬಲ್ಗೇರಿಯಾ, ಕ್ಯಾಮರೂನ್, ಚಾಡ್, ನೆದರ್ಲಾಂಡ್, ಚೀನಾ ಇತ್ಯಾದಿ ರಾಷ್ಟ್ರಗಳಲ್ಲಿ ನಕಾಬ್‍ಗೆ ಇರುವ ನಿಷೇಧವನ್ನು  ‘ಹಿಜಾಬ್‍ಗೆ ನಿಷೇಧ’ ಎಂಬ ರೀತಿಯಲ್ಲಿ ಅವು ಸುದ್ದಿ ಬಿತ್ತರಿಸುತ್ತಿವೆ. ನಿಷೇಧ ಇರುವುದು ಮುಖ ಮುಚ್ಚುವ  ಬುರ್ಖಾಕ್ಕೆ ಅಥವಾ ನಕಾಬ್‍ಗೆ. ಹಿಜಾಬ್‍ಗೆ ನಿಷೇಧ ವಿಧಿಸಲು ಸಾಧ್ಯವೇ ಇಲ್ಲ. ಖದೀಜ ರೆಹಮಾನ್  ಧರಿಸಿರುವುದು ಹಿಜಾಬ್ ಮತ್ತು ನಕಾಬ್. ಹಾಗಂತ, ನಕಾಬ್ ಅಗತ್ಯವೋ ಅಲ್ಲವೋ ಅನ್ನುವುದನ್ನು  ಚರ್ಚಿಸಬಹುದು. ಅದರಿಂದಾಗಬಹುದಾದ ತೊಂದರೆಗಳ ಪಟ್ಟಿ ಮಾಡಬಹುದು. ಆದರೆ, ನಕಾಬನ್ನೇ ಪ್ರಗತಿ  ವಿರೋಧಿ ಎಂದು ಬಣ್ಣಿಸುವುದೇಕೆ? ಪ್ರಗತಿಪರತೆಯನ್ನು ಬಟ್ಟೆಯ ಉದ್ದಳತೆಗೆ ಸೀಮಿತಗೊಳಿಸಿ ನೋಡುವುದು  ಏಕೆ?
ಉಡುಪಿಗೆ ಮಾನವನಷ್ಟೇ ಪುರಾತನ ಇತಿಹಾಸವಿದೆ. ಆದಿಪಿತ ಆದಮ್ ಮತ್ತು ಹವ್ವಾರು ಮರದ ಎಲೆಗಳನ್ನು ಬಳಸಿ  ಮೈ ಮುಚ್ಚಿಕೊಂಡರು ಎಂದು ಪವಿತ್ರ ಕುರ್‍ಆನ್ ಹೇಳುತ್ತದೆ. ಬರಬರುತ್ತಾ ಮಾನವ ಎಲೆಗಳಿಂದ ಹೊರಬಂದ.  ಬಟ್ಟೆಯನ್ನು ಸಂಶೋಧಿಸಿದ. ಕಾಲ ಕಳೆದಂತೆ ಬಟ್ಟೆಯಲ್ಲಿ ವಿವಿಧ ವಿನ್ಯಾಸಗಳನ್ನು ಮಾಡಲು ಕಲಿತ. ಈ ವಿನ್ಯಾಸ  ಪ್ರಕ್ರಿಯೆಯು ಉಡುಪನ್ನು ಬಹುದೊಡ್ಡ ಮಾರುಕಟ್ಟೆಯಾಗಿ ಬದಲಿಸಿಬಿಟ್ಟಿತು. ಬಟ್ಟೆಗಳಲ್ಲಿ ವಿವಿಧ ಬಣ್ಣಗಳನ್ನು  ಬಳಸುವ ಕ್ರಮ ಜಾರಿಗೆ ಬಂತು. ಮನುಷ್ಯ ಕಲರ್‍ಫುಲ್ ಆದ. ತಮಾಷೆ ಏನೆಂದರೆ, ಎಲೆಗಳಿಂದ ಪಾರಾಗು  ವುದಕ್ಕಾಗಿ ಬಳಕೆಗೆ ಬಂದ ಬಟ್ಟೆಯು ಇವತ್ತು ಮರಳಿ ಮನುಷ್ಯನನ್ನು ಎಲೆಗಳ ಕಾಲಕ್ಕೆ ಕೊಂಡೊಯ್ಯುತ್ತಿದೆ  ಎಂಬುದು. ಕಲೆ ಮತ್ತು ಮನರಂಜನೆಯ ಹೆಸರಲ್ಲಿ ಮನುಷ್ಯ ಇವತ್ತು ಬಹುತೇಕ ಬೆತ್ತಲೆಯಾಗುತ್ತಿದ್ದಾನೆ. ನಿಜವಾಗಿ,  ಸ್ವತಃ ಅವರು ಬಯಸಿಯೇ ಹೀಗೆ ಬೆತ್ತಲೆಯಾಗುತ್ತಿದ್ದಾರೆ ಎಂದು ಹೇಳುವಂತಿಲ್ಲ. ಬೆತ್ತಲೆಯೂ ಒಂದು ಮಾರುಕಟ್ಟೆ.  ಹೊಸ ವಿನ್ಯಾಸದ ದಿರಿಸೊಂದು ಮಾರುಕಟ್ಟೆಗೆ ಬರುವ ಮೊದಲು ಅದನ್ನು ಕ್ಯಾಟ್‍ವಾಕ್‍ನಲ್ಲಿ ಪ್ರದರ್ಶಿಸಲಾಗುತ್ತದೆ.  ಅದನ್ನು ಧರಿಸಿ ಹೆಣ್ಣೋ ಗಂಡೋ ಕ್ಯಾಟ್ ವಾಕ್ ನಡೆಸುತ್ತಾರೆ. ಕೆಳಗೆ ಕುಳಿತ ತೀರ್ಪುಗಾರರು ಅದಕ್ಕೆ ಅಂಕ  ನೀಡುತ್ತಾರೆ. ಇದು ಹಲವು ರೀತಿಯ ಪ್ರಚಾರ ತಂತ್ರಗಳಲ್ಲಿ ಒಂದು ತಂತ್ರ ಮಾತ್ರ. ಸಮುದ್ರ ದಂಡೆಯಲ್ಲಿ ಅತ್ಯಂತ  ಕನಿಷ್ಠ ಬಟ್ಟೆಯಲ್ಲಿ ಹೆಣ್ಣನ್ನು ನಿಲ್ಲಿಸಿ ನೂರಾರು ಕೋನಗಳಲ್ಲಿ ಫೋಟೋ ತೆಗೆದು ಉಡುಪಿನ ಪ್ರೊಮೋಶನ್  ನಡೆಸುವ ಕಂಪೆನಿಗಳಿವೆ. ಒಂದು ನಿಮಿಷದ ಉಡುಪಿನ ಜಾಹೀರಾತಿಗಾಗಿ ಕಂಪೆನಿಗಳು ಕೋಟ್ಯಾಂತರ  ರೂಪಾಯಿಗಳನ್ನು ಖರ್ಚು ಮಾಡುತ್ತವೆ. ಆ ಜಾಹೀರಾತಿನಲ್ಲಿ ನಟಿಸುವ ಹೆಣ್ಣು ಮತ್ತು ಗಂಡುಗಳು ಸ್ವ ಇಚ್ಛೆಯಿಂದ  ನಟಿಸಿದ್ದಾರೆ ಎಂದು ಹೇಳುವಂತಿಲ್ಲ. ಆ ನಟನೆಯು ಅವರ ಆಯ್ಕೆ ಆಗಿರಬೇಕಿಲ್ಲ. ಅವರ ನಗು ಅವರ ಆಯ್ಕೆಯ  ನಗುವಾಗಿರಬೇಕಿಲ್ಲ. ಅವರು ಹೇಳುವ ಡಯಲಾಗ್‍ಗಳು ಅವರದ್ದಾಗಿರಬೇಕಿಲ್ಲ. ಅದು ಇನ್ನಾರದೋ  ಆಯ್ಕೆಯಾಗಿರಬಹುದು. ಅವರ ಬಯಕೆಯಂತೆ ಇವರು ನಟಿಸುತ್ತಿರಬಹುದು. ದುರಂತ ಏನೆಂದರೆ, ತಮ್ಮದಲ್ಲದ  ನಗು, ತಮ್ಮದಲ್ಲದ ಅಳು, ತಮ್ಮದಲ್ಲದ ಉಡುಪು, ತಮ್ಮದಲ್ಲದ ನಟನೆ, ತಮ್ಮದಲ್ಲದ ಅಪ್ಪುಗೆ, ತಮ್ಮದಲ್ಲದ  ಡಯಲಾಗ್... ಇತ್ಯಾದಿಗಳನ್ನು ಮಾಡುವವರ ಬಗ್ಗೆ ಇಲ್ಲಿ ಯಾವ ಪ್ರಶ್ನೆಗಳೂ ಹುಟ್ಟಿಕೊಳ್ಳುವುದಿಲ್ಲ. ಖದೀಜ  ರೆಹಮಾನ್‍ರ ನಕಾಬನ್ನು ಬಲವಂತದ ಹೇರಿಕೆ ಎಂದು ಆಕ್ಷೇಪಿಸುವವರು ನಟ-ನಟಿಯರ ಉಡುಪುಗಳಲ್ಲಿ  ಬಲವಂತವನ್ನು ಕಾಣುವುದಿಲ್ಲ. ಮೈಮುಚ್ಚುವ ಉಡುಪಿನಲ್ಲಿ ಪ್ರಗತಿ ವಿರೋಧವನ್ನು ಕಾಣುವವರು ಮೈ ತೆರೆದು  ತೋರಿಸುವ ಬಟ್ಟೆಯಲ್ಲಿ ಪ್ರಗತಿ ವಿರೋಧವನ್ನು ಕಾಣುವುದಿಲ್ಲ. ಒಂದುವೇಳೆ, ಖದೀಜ ರೆಹಮಾನ್‍ರ ಉಡುಪು ತಪ್ಪು  ಎಂದಾದರೆ, ಕರೀನಾ ಕಪೂರ್‍ರ ಉಡುಪು ಏಕೆ ಸರಿ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ ಅಥವಾ ಈ  ಸರಿ ತಪ್ಪುಗಳ ಮಾನದಂಡವು ಮುಚ್ಚುವುದು ಮತ್ತು ತೆರೆಯುವುದನ್ನು ಅವಲಂಬಿಸಿದೆ ಎಂದೇ ನಂಬಬೇಕಾಗುತ್ತದೆ.  ನಿಜವಾಗಿ,
ಸಮಸ್ಯೆ ಇರುವುದು ಬಟ್ಟೆಯ ಉದ್ದಳತೆಯಲ್ಲಲ್ಲ. ನಮ್ಮ ವಿಚಾರಧಾರೆಯಲ್ಲಿ. ಮುಚ್ಚುವುದು ತಪ್ಪು ಮತ್ತು  ತೆರೆಯುವುದು ಸರಿ ಎಂಬ ನಮ್ಮ ನಿಲುವಿಗೆ ಆಧಾರ ಏನು ಅನ್ನುವುದರ ಬಗ್ಗೆ ಒಂದು ಅವಲೋಕನ ನಡೆಯಬೇಕು.  ಫ್ಯಾಶನ್ ಡಿಸೈನಿಂಗ್ ಯಾವಾಗ ಬೃಹತ್ ಮಾರುಕಟ್ಟೆಯಾಗಿ ರೂಪಾಂತರ ಪಡೆಯಿತೋ ಆವಾಗಲೇ ಹೆಣ್ಣು ಅದರ  ಪ್ರಮುಖ ರಾಯಭಾರಿಯಾಗಿ ಆಯ್ಕೆಯಾದಳು. ಉಡುಪು ಉದ್ಯಮಕ್ಕೆ ಸಂಬಂಧಿಸಿ 90%ಕ್ಕಿಂತಲೂ ಅಧಿಕ  ಜಾಹೀರಾತುಗಳಲ್ಲಿ ರೂಪದರ್ಶಿಯಾಗಿರುವುದು ಹೆಣ್ಣೇ. ಹಿಜಾಬ್ ಮತ್ತು ಮುಖ ತೆರೆದಿರುವ ಬುರ್ಖಾಗಳಲ್ಲಿ ಈ  ಉದ್ಯಮಕ್ಕೆ ಭಾರೀ ಅವಕಾಶಗಳಿಲ್ಲ ಅಥವಾ ಸಾಕಷ್ಟು ಮಿತಿಗಳಿವೆ. ಆದ್ದರಿಂದ ಹೆಣ್ಣನ್ನು ಈ ಮಿತಿಯಿಂದ  ಹೊರತರಬೇಕು. ಹಾಗೆ ತರಬೇಕೆಂದರೆ, ಮೊಟ್ಟ ಮೊದಲನೆಯದಾಗಿ, ಹೆಣ್ಣಿನ ಉಡುಪಿನ ಕುರಿತಂತೆ ಇರುವ  ನಿಲುವುಗಳಲ್ಲಿ ಸಡಿಲಿಕೆಯನ್ನು ತರಬೇಕು. ಹಿಜಾಬ್, ಬುರ್ಖಾ, ನಕಾಬ್ ಇತ್ಯಾದಿ ಇತ್ಯಾದಿಗಳ ಬಗ್ಗೆ ನಕಾರಾತ್ಮಕ  ಪ್ರಚಾರಗಳನ್ನು ಕೈಗೊಳ್ಳಬೇಕು. ಅದಕ್ಕಿರುವ ಉತ್ತಮ ದಾರಿ ಏನೆಂದರೆ, ಈ ಉಡುಪುಗಳ ಬದಲು ಅದನ್ನು ಧರಿಸು  ವವರನ್ನು ಗುರಿ ಮಾಡಿ ವಿಮರ್ಶಿಸುವುದು. ಯಾರು ಬುರ್ಖಾ ಧರಿಸುತ್ತಾರೋ ಅವರು ಪುರಾತನ  ಮನಸ್ಥಿತಿಯವರು ಮತ್ತು ಧರ್ಮಾಂಧರು ಎಂದು ಪ್ರಚಾರ ಮಾಡುವುದು. ಬುರ್ಖಾ ಎಂಬ ಉಡುಪಿನ ಬದಲು  ಬುರ್ಖಾ ಧರಿಸಿದವರನ್ನು ಗುರಿ ಮಾಡುವುದರಿಂದ ಸಾಮಾಜಿಕ ಸಂಘರ್ಷವೊಂದು ನಿರ್ಮಾಣ ವಾಗುತ್ತದೆ. ಬರೇ  ಬುರ್ಖಾವನ್ನು ವಿಮರ್ಶಿಸಲು ಹೊರಟರೆ, ಬುರ್ಖಾ ಮಾತ್ರ ಚರ್ಚೆಗೊಳಗಾಗುತ್ತದೆಯೇ ಹೊರತು ಅದನ್ನು  ಧರಿಸಿದವರ ಧರ್ಮ, ತಿಳುವಳಿಕೆ, ಸ್ಥಾನ-ಮಾನಗಳಲ್ಲ. ಆದರೆ ಧರಿಸಿದವರನ್ನೇ ಕೇಂದ್ರ ಸ್ಥಾನದಲ್ಲಿಟ್ಟು ಚರ್ಚಿಸಿದರೆ,  ನಿಧಾನಕ್ಕೆ ಆ ಉಡುಪಿನ ಬಗ್ಗೆ ಇತರರಲ್ಲಿ ಆಕರ್ಷಣೆ ಕಡಿಮೆಯಾಗುತ್ತದೆ. ಸಾಮಾಜಿಕ ಅವಹೇಳನದ ಮತ್ತು  ಪ್ರಗತಿರಹಿತತೆಯ ಭಾವವೊಂದು ಅವರಲ್ಲಿ ಚಿಗುರಿ ಅದರಿಂದ ವಿಮುಖರಾಗುವಂತೆ ನೋಡಿಕೊಳ್ಳುತ್ತದೆ. ಬಹುಶಃ,
ಫ್ಯಾಶನ್ ಡಿಸೈನಿಂಗ್ ಎಂಬುದು ಮಾರುಕಟ್ಟೆ ಸ್ವರೂಪವನ್ನು ಪಡೆದುಕೊಂಡು ಹೇಗೆ ವಿದೇಶದಿಂದ ಭಾರತಕ್ಕೆ  ಆಗಮಿಸಿತೋ ಹಾಗೆಯೇ ಮೈಮುಚ್ಚುವುದು ತಪ್ಪು ಮತ್ತು ತೆರೆಯುವುದು ಸರಿ ಎಂಬುದೂ ಅಲ್ಲಿಂದಲೇ  ಬಂದಿರಬಹುದು ಅನಿಸುತ್ತದೆ. ಬುರ್ಖಾ ಮತ್ತು ನಕಾಬ್ ಧರಿಸಿದವರನ್ನು ಗುರಿ ಮಾಡುವ ಕ್ರಮವಂತೂ ನೇರವಾಗಿ  ಅಲ್ಲಿಂದಲೇ ಬಂತು. ‘ಏ.ಆರ್. ರೆಹಮಾನ್‍ರ ಮಗಳ ಉಡುಪು ಹೀಗೆಯೇ’ ಎಂದು ಅಚ್ಚರಿ ಪಟ್ಟವರಾರೂ ಪ್ರಕಾಶ್  ಪಡುಕೋಣೆಯವರ ಮಗಳ ಉಡುಪು ಹೀಗೆಯೇ ಎಂದು ಅಚ್ಚರಿ ಪಟ್ಟಿಲ್ಲ. ಪಡುವುದೂ ಇಲ್ಲ. ಯಾಕೆಂದರೆ,  ಪಡುಕೋಣೆ ಯವರ ಮಗಳ ಉಡುಪನ್ನು ಸಜವೆಂದು ಒಪ್ಪಿಸಲಾಗಿದೆ. ಆ ಉಡುಪು ಬೃಹತ್ ಮಾರುಕಟ್ಟೆಯ  ಭಾಗ. ಪ್ರತಿದಿನ ಆ ಉಡುಪಿನ ಬಗ್ಗೆ ಮತ್ತು ಅದನ್ನು ಧರಿಸಿದವರು ಸುಂದರಿಯರಾಗಿ ಪರಿವರ್ತನೆಯಾಗುವುದರ  ಬಗ್ಗೆ ಜಾಹೀರಾತುಗಳನ್ನು ನೀಡಿ ನಂಬಿಸಲಾಗುತ್ತದೆ. ಪ್ರತಿನಿತ್ಯ ಕೋಟ್ಯಾಂತರ ರೂಪಾಯಿಗಳನ್ನು ಆ ಉಡುಪು  ಅದರ ಮಾಲಿಕನಿಗೆ ಒದಗಿಸುತ್ತಿದೆ. ಈ ಪ್ರಕ್ರಿಯೆಯನ್ನು ಹೀಗೆಯೇ ಉಳಿಸಿಕೊಳ್ಳುವುದು ಆತನ ಅಗತ್ಯ. ಹಾಗಂತ,  ಇಂಥ ಕಂಪೆನಿಗಳು ಮಾರುಕಟ್ಟೆಯಲ್ಲಿ ಇದೊಂದೇ ಅಲ್ಲ. ನೂರಾರು ಇವೆ. ಅವುಗಳಿಗೆ ಅವುಗಳದ್ದೇ  ಆದ  ವಿನ್ಯಾಸಗಳಿವೆ. ಅದನ್ನು ಧರಿಸಿ ಪ್ರದರ್ಶಿಸುವವರೂ ಇದ್ದಾರೆ. ಟಿ.ವಿ.ಗಳಲ್ಲಿ, ಬೃಹತ್ ಹೋರ್ಡಿಂಗ್‍ಗಳಲ್ಲಿ, ಸಿನಿಮಾ,  ಧಾರಾವಾಹಿಗಳಲ್ಲಿ ಅವುಗಳು ಜಾಹೀರಾತುಗಳ ರೂಪದಲ್ಲಿ ನಮ್ಮನ್ನು ಒಪ್ಪಿಸುತ್ತಲೂ ಇರುತ್ತವೆ. ಅದನ್ನು  ನೋಡುತ್ತಾ ನೋಡುತ್ತಾ ನಾವು ಒಗ್ಗಿಕೊಳ್ಳುತ್ತೇವೆ. ಅದಕ್ಕೊಂದು ಸಹಜತೆಯ ಮೊಹರು ಒತ್ತುತ್ತೇವೆ. ಬರಬರುತ್ತಾ  ಇದಕ್ಕೆ ವಿರುದ್ಧ ದಿಕ್ಕಿನಲ್ಲಿರುವ ಉಡುಪು ನಮ್ಮೊಳಗೆ ಅಸಹಜತೆಯನ್ನು ಹುಟ್ಟು ಹಾಕತೊಡಗುತ್ತದೆ. ಅದು  ಮೂಲಭೂತವಾದ, ಧರ್ಮಾಂಧತೆ, ಪ್ರಗತಿರಹಿತದಂತೆ ಅನಿಸತೊಡಗುತ್ತದೆ. ಕೊನೆಗೆ, ಬುರ್ಖಾ, ಹಿಜಾಬ್, ನಕಾಬ್  ಧರಿಸದಿರುವುದು ಹೇಗೆ ಆಯ್ಕೆಯ ಸ್ವಾತಂತ್ರ್ಯವೋ ಅದನ್ನು ಧರಿಸುವುದೂ ಆಯ್ಕೆಯ ಸ್ವಾತಂತ್ರ್ಯ ಎಂಬುದೇ ಮರೆತು  ಹೋಗುತ್ತದೆ. ಮಾತ್ರವಲ್ಲ, ಬುರ್ಖಾ ಧರಿಸುವವರನ್ನು ದ್ವೇಷಿಸುವಲ್ಲಿಗೆ ಇದು ಕೊಂಡೊಯ್ಯುತ್ತದೆ.
ಖದೀಜ ರೆಹಮಾನ್ ಪ್ರಕರಣದಲ್ಲಿ ಆಗಿರುವುದೂ ಇದುವೇ.

ರಫೇಲ್: ಎನ್. ರಾಮ್ ಅವರ ತನಿಖಾ ಬರಹದ ಬಳಿಕ
1986 ಮಾರ್ಚ್ 24ರಂದು ಪ್ರಧಾನಿ ರಾಜೀವ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರವು ಸ್ವೀಡನ್ನಿನ ಮದ್ದುಗುಂಡು  ತಯಾರಕ ಸಂಸ್ಥೆಯಾದ ಬೋಫೋರ್ಸ್‍ನೊಂದಿಗೆ 285 ಮಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ  ಹಾಕುತ್ತದೆ. ಮದ್ದುಗುಂಡುಗಳ ತಯಾರಿಯಲ್ಲಿ ಬೋಫೋರ್ಸ್‍ಗೆ ವಿಶ್ವ ಮಾರುಕಟ್ಟೆಯಲ್ಲಿಯೇ ಬಹಳ ಪ್ರಮುಖ  ಸ್ಥಾನವಿದ್ದುದರಿಂದ ಈ ಒಪ್ಪಂದವನ್ನು ಭಾರತದ ವಿರೋಧ ಪಕ್ಷಗಳಾಗಲಿ, ರಕ್ಷಣಾ ತಜ್ಞರಾಗಲಿ ವಿರೋಧಿಸುವುದಕ್ಕೆ  ಸಾಧ್ಯವೇ ಇರಲಿಲ್ಲ. ಹೀಗಾಗಿ ಈ ಒಪ್ಪಂದವು ಭಾರತೀಯ ರಾಜಕಾರಣದಲ್ಲಿ ದೊಡ್ಡಮಟ್ಟದ ಚರ್ಚೆಗೂ ಒಳಗಾಗಲಿಲ್ಲ. ಪತ್ರಿಕೆಗಳಿಗೂ ಅನುಮಾನ ಬಂದಿರಲಿಲ್ಲ. ಆದರೆ, 1986 ಮೇಯಲ್ಲಿ ಸ್ವೀಡನ್ನಿನ ರೇಡಿಯೊವೊಂದು  ಮೊದಲ ಬಾರಿ ಈ ಒಪ್ಪಂದದ ಬಗ್ಗೆ ಸಂದೇಹವನ್ನು ವ್ಯಕ್ತಪಡಿಸಿತು. ಈ ಒಪ್ಪಂದವನ್ನು ಕುದುರಿಸಿಕೊಳ್ಳುವುದಕ್ಕಾಗಿ  ಕಾಂಗ್ರೆಸ್ ಪಕ್ಷದ ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ 60 ಕೋಟಿ ರೂಪಾಯಿಯನ್ನು ಬೋಫೋರ್ಸ್  ಸಂಸ್ಥೆಯು ಲಂಚವಾಗಿ ನೀಡಿದೆ ಎಂದು ಅದು ಬಹಿರಂಗಪಡಿಸಿತು. ಈ ಸಂದರ್ಭದಲ್ಲಿ ದಿ ಹಿಂದೂ ಪತ್ರಿಕೆಯ  ಯುವ ಪತ್ರಕರ್ತೆ ಚಿತ್ರಾ ಸುಬ್ರಹ್ಮಣ್ಯಂ ಸ್ವೀಡನ್ನಿನಲ್ಲಿದ್ದರು. ಅವರೊಳಗಿನ ಪತ್ರಕರ್ತೆ ಜಾಗೃತರಾದರು.  ಬೋಫೋರ್ಸನ್ನು ತಲೆಯೊಳಗೆ ತುಂಬಿಕೊಂಡು ಮಾಹಿತಿಗಾಗಿ ಹುಡುಕಾಡಿದರು. ಹೀಗಿರುತ್ತಾ, 1987 ಎಪ್ರಿಲ್  16ರಂದು ಸ್ವೀಡನ್ನಿನ ಪತ್ರಿಕೆಯೊಂದು ದಂಗುಬಡಿಸುವ ಸುದ್ದಿಯನ್ನು ಪ್ರಕಟಿಸಿತು. ಸ್ಟೈನ್ ಲಿಂಡ್‍ಸ್ಟೋರ್ಮ್ ಎಂಬ  ಪೊಲೀಸಧಿಕಾರಿ ಆ ಸುದ್ದಿಯ ಮೂಲ. ಅವರು ಓರ್ವ ಚೊಚ್ಚಲಿಗ(Whistle  Blower)ನ ಮೂಲಕ  ಪಡೆದುಕೊಂಡ ಮಾಹಿತಿಯನ್ನು ಆ ಪತ್ರಿಕೆಗೆ ಬಿಡುಗಡೆಗೊಳಿಸಿದ್ದರು. ಬೋಫೋರ್ಸ್ ಸಂಸ್ಥೆಯು ಭಾರತದ  ರಾಜಕಾರಣಿಗಳಿಗೆ ಮಾತ್ರವಲ್ಲ, ವಿದೇಶದ ಬೇರೆ ಬೇರೆ ರಾಜಕೀಯ ಪ್ರಮುಖರಿಗೆ ಲಂಚವನ್ನು ನೀಡುವ ಮೂಲಕ  ಗುತ್ತಿಗೆಯನ್ನು ಪಡಕೊಳ್ಳುತ್ತದೆ ಎಂಬ ಮಾಹಿತಿಯನ್ನು ಆ ಚೊಚ್ಚಲಿಗ ಹೊರಹಾಕಿದ್ದ. ದಿ ಹಿಂದೂ ಪತ್ರಿಕೆ  ಚುರುಕಾಯಿತು. ಎನ್. ರಾಮ್ ಅವರ ನೇತೃತ್ವದ ಪತ್ರಕರ್ತರ ತಂಡವು ಸ್ವೀಡನ್ನಿಗೆ ತೆರಳಿತು. ಆ ತಂಡವು 350ರಷ್ಟು  ದಾಖಲೆಗಳನ್ನು ಸಂಗ್ರಹಿಸಿತಲ್ಲದೆ ಚಿತ್ರಾ ಸುಬ್ರಹ್ಮಣ್ಯಂ ನಿರಂತರವಾಗಿ ದಿ ಹಿಂದೂವಿನಲ್ಲಿ ಮತ್ತು ದಿ  ಇಂಡಿಯನ್ ಎಕ್ಸ್ ಪ್ರೆಸ್‍ನಲ್ಲಿ ಬರೆದರು. ಈ ವರದಿಯು ಭಾರತೀಯ ರಾಜಕಾರಣದ ಮೇಲೆ ಎಂಥ ಪರಿಣಾಮ  ಬೀರಿತೆಂದರೆ, ಯುವ ಪ್ರಧಾನಿಯಾಗಿ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿದ್ದ ರಾಜೀವ್ ಗಾಂಧಿಯವರ  ವರ್ಚಸ್ಸು ತೀವ್ರವಾಗಿ ಕಳೆಗುಂದಿತು. ಇವತ್ತಿನಂತೆ ಸಾಮಾಜಿಕ ಜಾಲತಾಣಗಳಿರದಿದ್ದ ಆ ಕಾಲದಲ್ಲೂ ‘ಬೋಫೋರ್ಸ್  ಹಗರಣ’ವನ್ನು ಜನರ ಬಳಿಗೆ ತಲುಪಿಸುವುದಕ್ಕೆ ವಿರೋಧ ಪಕ್ಷಗಳು ಯಶಸ್ವಿಯಾದವು. ಮುಖ್ಯವಾಗಿ, ಬಿಜೆಪಿಯು,  ‘ಗಲೀ ಗಲೀಮೆ ಶೋರ್ ಹೆ, ರಾಜೀವ್ ಗಾಂಧಿ ಚೋರ್ ಹೇ’ ಎಂಬ ಸ್ಲೋಗನ್ನನ್ನೇ ಹುಟ್ಟು ಹಾಕಿತು. ಅವತ್ತು  ಇದೇ ಎನ್. ರಾಮ್, ಚಿತ್ರಾ ಸುಬ್ರಹ್ಮಣ್ಯಂ ಮತ್ತು ದಿ ಹಿಂದೂ ಪತ್ರಿಕೆಯನ್ನು ಅತ್ಯಂತ ಅಭಿಮಾನದಿಂದ ನೋಡಿದ್ದು  ಇದೇ ಬಿಜೆಪಿ. ಇದೀಗ ಅದೇ ದಿ ಹಿಂದೂ ಮತ್ತು ಎನ್. ರಾಮ್‍ರು ರಫೇಲ್ ಒಪ್ಪಂದದ ಬಗ್ಗೆ ಕೆಲವು  ದಂಗುಬಡಿಸುವ ಸತ್ಯಗಳನ್ನು ಹೊರಹಾಕಿದ್ದಾರೆ. ಮಾತ್ರವಲ್ಲ, ತಮ್ಮ ಬರಹಕ್ಕೆ ಸಾಕ್ಷ್ಯವಾಗಿ ಮೂಲ ದಾಖಲೆಯ  ಝೆರಾಕ್ಸ್ ಪ್ರತಿಯನ್ನೂ ಪ್ರಕಟಿಸಿದ್ದಾರೆ. ಆದರೆ, 1987ರಲ್ಲಿ ಬಿಜೆಪಿಯಲ್ಲಿ ಕಾಣಿಸಿದ್ದ ರೋಮಾಂಚನ ಇವತ್ತಿನ  ಬಿಜೆಪಿಯಲ್ಲಿ ಕಾಣಿಸುತ್ತಿಲ್ಲ. ಅದು ಎನ್. ರಾಮ್‍ರನ್ನು ಮತ್ತು ದಿ ಹಿಂದೂ ಪತ್ರಿಕೆಯನ್ನು ಖಳಪಾತ್ರಗಳಂತೆ  ನೋಡುತ್ತಿದೆ. ಬಿಜೆಪಿ ಬೆಂಬಲಿಗರಂತೂ ಅತ್ಯಂತ ಕೆಳಮಟ್ಟದ ಭಾಷೆಯಲ್ಲಿ ಎನ್. ರಾಮ್‍ರನ್ನು ತೆಗಳುತ್ತಿದ್ದಾರೆ.  ಅವಾಚ್ಯ ಪದಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಳಸಿ ಅವಮಾನಿಸುತ್ತಿದ್ದಾರೆ. ಹಾಗಂತ, 1987ರಲ್ಲಿ ಬಿಜೆಪಿಗೆ  ಅತ್ಯಂತ ಪ್ರಿಯವಾಗಿದ್ದ ಎನ್. ರಾಮ್ ಮತ್ತು ದಿ ಹಿಂದೂ ಪತ್ರಿಕೆಯು 2019ರಲ್ಲಿ ಅತ್ಯಂತ ಅಪ್ರಿಯವಾಗಿರುವುದಕ್ಕೆ  ಕಾರಣಗಳೇನು?
1.MOD protested against PMO undermining Rafale negotiations (2019  ಫೆಬ್ರವರಿ 8)
2. Government waived anti -correption clauses in Rafale deal (2019 ಫೆಬ್ರವರಿ 11)
3. Rafale deal not better terms than UPA era offer (2019  ಫೆಬ್ರವರಿ 13)
4.No bank guarantees meant a more expensive new Rafale deal   (2019 ಮಾರ್ಚ್ 6)
ಹೀಗೆ ಎನ್. ರಾಮ್ ಅವರು ಒಂದು ತಿಂಗಳೊಳಗೆ ನಾಲ್ಕು ತನಿಖಾ ಬರಹವನ್ನು ದಿ ಹಿಂದೂವಿನಲ್ಲಿ ಬರೆದರು.  ಮಾತ್ರವಲ್ಲ, ಪ್ರತಿ ಬರಹಕ್ಕೂ ದಾಖಲೆಗಳನ್ನು ಮಂಡಿಸಿದರು. ಮೋದಿ ಸರಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದ್ದು ಈ  ದಾಖಲೆಗಳೇ. ಪ್ರಧಾನಿ ಮನ್‍ಮೋಹನ್ ಸಿಂಗ್ ನೇತೃತ್ವದ ಸರಕಾರವು ಫ್ರಾನ್ಸ್ ನ ಯುದ್ಧ ವಿಮಾನ ತಯಾರಕ  ಕಂಪೆನಿಯಾದ ಡಸಾಲ್ಟ್ ನೊಂದಿಗೆ 126 ಯುದ್ಧ ವಿಮಾನಗಳನ್ನು ಖರೀದಿಸಲು ಮಾಡಿಕೊಂಡಿದ್ದ ಒಪ್ಪಂದವನ್ನು  ಮುರಿದು 2016 ಸೆಪ್ಟೆಂಬರ್‍ನಲ್ಲಿ ಮೋದಿ ನೇತೃತ್ವದ ಸರಕಾರವು ಮಾಡಿಕೊಂಡಿರುವ ಒಡಂಬಡಿಕೆಯೇ ರಫೇಲ್  ಒಪ್ಪಂದ. ರಫೇಲ್ ಯುದ್ಧ ವಿಮಾನದ ಸಾಮರ್ಥ್ಯದ ಕುರಿತಾಗಲಿ, ಡಸಾಲ್ಟ್ ಕಂಪೆನಿಯ ವಿಶ್ವಾಸಾರ್ಹತೆಯ  ಕುರಿತಾಗಲಿ ಕಾಂಗ್ರೆಸ್, ಕಮ್ಯುನಿಸ್ಟ್ ಸಹಿತ ಯಾವ ಪಕ್ಷಗಳೂ ಈ ವರೆಗೆ ಅನುಮಾನಿಸಿಲ್ಲ. 2012ರಲ್ಲಿ  ಮನ್‍ಮೋಹನ್ ಸಿಂಗ್ ಸರಕಾರವು ಡಸಾಲ್ಟ್ ಕಂಪೆನಿಯನ್ನು ಆಯ್ಕೆ ಮಾಡಿಕೊಳ್ಳುವ ಮೊದಲು ಅಮೇರಿಕ, ರಷ್ಯಾ  ಮತ್ತು ಯುರೋಪಿನ ಯುದ್ಧ ವಿಮಾನ ತಯಾರಕ ಕಂಪೆನಿಗಳ ಬಗೆಗೂ ಪರಾಮರ್ಶೆ ನಡೆಸಿತ್ತು. ಅವು  ತಯಾರಿಸುವ ಯುದ್ಧ ವಿಮಾನಗಳು ಮತ್ತು ಡಸಾಲ್ಟ್ ತಯಾರಿಸುವ ಯುದ್ಧ ವಿಮಾನಗಳ ಕಾರ್ಯದಕ್ಷತೆ,  ಸಾಮರ್ಥ್ಯ ಮತ್ತು ಬೆಲೆಯನ್ನು ತಜ್ಞರ ತಂಡವು ಪರಿಶೀಲಿಸಿತ್ತು. ಕೊನೆಗೆ ಡಸಾಲ್ಟ್ ಆಯ್ಕೆಯಾಯಿತು. ಈ ಬಗ್ಗೆ  ಬಿಜೆಪಿಗೂ ತಕರಾರಿರಲಿಲ್ಲ. ಅಲ್ಲದೇ, ಡಸಾಲ್ಟ್ ಸಂಸ್ಥೆಯು ಈಜಿಪ್ಟ್ ಮತ್ತು ಕತಾರ್‍ ಗೂ  ರಫೇಲ್ ಯುದ್ಧ  ವಿಮಾನಗಳನ್ನು ಈ ಮೊದಲೇ ಮಾರಾಟ ಮಾಡಿದೆ. ಆದ್ದರಿಂದ ಪ್ರಶ್ನೆಯಿರುವುದು ರಫೇಲ್ ಯುದ್ಧ ವಿಮಾನಗಳ  ಕುರಿತಲ್ಲ. ಅದನ್ನು ಖರೀದಿಸುವುದಕ್ಕೆ ಮಾಡಿಕೊಳ್ಳಲಾದ ಒಪ್ಪಂದಗಳ ಬಗ್ಗೆ. ಬೆಂಗಳೂರಿನಲ್ಲಿರುವ ಭಾರತ  ಸರಕಾರದ ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್ (HAL) ಸಂಸ್ಥೆಯೊಂದಿಗೆ ಸೇರಿಕೊಂಡು ಯುದ್ಧ  ವಿಮಾನ ತಯಾರಿಸುವ ತಿಳುವಳಿಕೆಯೊಂದಿಗೆ 126 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ  ಒಪ್ಪಂದವನ್ನು ಮನ್‍ಮೋಹನ್ ಸಿಂಗ್ ಸರಕಾರವು ಡಸಾಲ್ಟ್ ಸಂಸ್ಥೆಯೊಂದಿಗೆ ಮಾಡಿಕೊಂಡಿದ್ದರೂ ಪ್ರಧಾನಿ  ಮೋದಿ ಸರಕಾರವು ಈ ಒಪ್ಪಂದವನ್ನು ತಿರಸ್ಕರಿಸಿ 2016 ಸೆಪ್ಟೆಂಬರ್‍ನಲ್ಲಿ ಹೊಸ ಒಪ್ಪಂದಕ್ಕೆ ಸಹಿ ಹಾಕಿತು. ಈ  ಒಪ್ಪಂದದಂತೆ, ಡಸಾಲ್ಟ್ ಕಂಪೆನಿಯು 126 ಯುದ್ಧ ವಿಮಾನಗಳನ್ನು ಒದಗಿಸಬೇಕಾಗಿಲ್ಲ ಮತ್ತು HALನೊಂದಿಗೆ  ಸೇರಿಕೊಂಡು ತಯಾರಿಸಬೇಕಿಲ್ಲ. ಅನಿಲ್ ಅಂಬಾನಿಯವರ ಒಡೆತನದ ಸಂಸ್ಥೆಯೊಂದಿಗೆ ಸೇರಿಕೊಂಡು 36 ಯುದ್ಧ  ವಿಮಾನಗಳನ್ನು ಮಾಡಿಕೊಟ್ಟರಷ್ಟೇ ಸಾಕಾಗುತ್ತದೆ. ಇಲ್ಲೊಂದು ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಭಾರತೀಯ  ವಾಯುಪಡೆಗೆ 126 ಯುದ್ಧ ವಿಮಾನಗಳು ಅಗತ್ಯವಿರುವಾಗ ಅದನ್ನು 36ಕ್ಕೆ ತಗ್ಗಿಸಲು ಕಾರಣ ಏನು?  ವಾಯುಪಡೆಯನ್ನು ಬಲಪಡಿಸಬೇಕಾದ ಈ ಸಂದರ್ಭದಲ್ಲಿ ಯುದ್ಧ ವಿಮಾನಗಳ ಸಂಖ್ಯೆಯನ್ನು  ಕಡಿಮೆಗೊಳಿಸುವುದರಿಂದ ರಕ್ಷಣೆಯ ವಿಚಾರದಲ್ಲಿ ರಾಜಿ ಮಾಡಿಕೊಂಡಂತಾಗುವುದಿಲ್ಲವೇ? ಅಥವಾ ವಾಯುಪಡೆಗೆ  126 ಯುದ್ಧ ವಿಮಾನಗಳ ಅಗತ್ಯವಿರಲಿಲ್ಲ ಅನ್ನುವುದನ್ನಾದರೂ ಸರಕಾರ ದಾಖಲೆ ಸಹಿತ ಸ್ಪಷ್ಟಪಡಿಸಬೇಕಾಗಿತ್ತು.  ಜೊತೆಗೆ ಹಿರಿಯ ರಕ್ಷಣಾ ತಜ್ಞರ ಅಭಿಪ್ರಾಯಗಳನ್ನು ನಾಗರಿಕರೊಂದಿಗೆ ಹಂಚಿಕೊಳ್ಳಬೇಕಾಗಿತ್ತು. ಮನ್‍ಮೋಹನ್  ಸಿಂಗ್ ಸರಕಾರವು ಈ ಒಪ್ಪಂದವನ್ನು ಮಾಡಿಕೊಳ್ಳುವ ಸಂದರ್ಭದಲ್ಲೂ ವಾಯುಪಡೆ ಸಹಿತ ಹಿರಿಯ ರಕ್ಷಣಾ  ತಜ್ಞರೊಂದಿಗೆ ಸಮಾಲೋಚನೆ ನಡೆಸಿತ್ತು. ಆಗ ಅಗತ್ಯವೆಂದು ಕಂಡುಬಂದಿದ್ದ 126 ಯುದ್ಧ ವಿಮಾನಗಳು  2016ರಲ್ಲಿ 36 ಯುದ್ಧ ವಿಮಾನಗಳು ಸಾಕು ಎಂದು ಬದಲಾದದ್ದು ಯಾಕೆ ಮತ್ತು ಏನು ಕಾರಣ? ಎರಡನೆ ಯದಾಗಿ, HAL ಅನ್ನು ಕೈ ಬಿಡುವುದಕ್ಕೆ ಮತ್ತು ಅಂಬಾನಿಯನ್ನು ಕೈ ಹಿಡಿಯುವುದಕ್ಕೆ ಕಾರಣಗಳೇನು? ಈ  ಪ್ರಶ್ನೆಗಳಿಗೆ ಮೋದಿ ಸರಕಾರವು ನೀಡಿದ ಪ್ರತಿಕ್ರಿಯೆಗಳಲ್ಲಿ ಸ್ಪಷ್ಟತೆಯ ಕೊರತೆ ಇದ್ದುದರಿಂದಲೇ ಸಾರ್ವಜನಿಕರಲ್ಲಿ  ಸಂದೇಹ ಮೂಡತೊಡಗಿತು. ಅಲ್ಲದೇ, ಪ್ರಧಾನಿ ನೇತೃತ್ವದಲ್ಲಿ ಫ್ರಾನ್ಸ್ ಗೆ ತೆರಳಿದ ಉದ್ಯಮಿಗಳ ತಂಡದಲ್ಲಿ ಅನಿಲ್  ಅಂಬಾನಿಯವರೂ ಇದ್ದರು ಅನ್ನುವ ಸುದ್ದಿ ಗಳು ಈ ಅನುಮಾನವನ್ನು ಇನ್ನಷ್ಟು ಬಲಪಡಿಸಿದುವು. ಈ  ಸಂದರ್ಭದಲ್ಲಿ ಪ್ರಕಟವಾದದ್ದೇ  ಎನ್. ರಾಮ್ ಅವರ ಬರಹಗಳು. ಅದು ಒಟ್ಟು ಒಪ್ಪಂದದ ಒಳ ಮರ್ಮವನ್ನೇ  ಸಮಾಜದ ಮುಂದಿಟ್ಟಿತು. ಮನ್‍ಮೋಹನ್ ಸಿಂಗ್ ಸರಕಾರವು ಮಾಡಿಕೊಂಡ ಒಪ್ಪಂದಕ್ಕಿಂತ ಮೋದಿ ಸರಕಾರವು  ಮಾಡಿಕೊಂಡಿರುವ ಒಪ್ಪಂದವು ಹೇಗೆ ದುಬಾರಿ ಅನ್ನುವುದನ್ನು ರಾಮ್ ಅವರು ಪುರಾವೆ ಸಮೇತ ಬರೆದರು.  ನಿಜವಾಗಿ, ಮನ್‍ಮೋಹನ್ ಸಿಂಗ್ ಸರಕಾರವು ಒಪ್ಪಂದ ಮಾಡಿಕೊಳ್ಳುವಾಗ, ಬ್ಯಾಂಕ್ ಗ್ಯಾರಂಟಿಯಾಗಿ 574  ಮಿಲಿಯನ್ ಯೂರೋ ಮೊತ್ತವನ್ನು ಡಸಾಲ್ಟ್ ಕಂಪೆನಿಯೇ ಪಾವತಿಸಬೇಕು ಎಂಬುದು ನಿರ್ಧಾರವಾಗಿತ್ತು. ಆದರೆ,  ಮೋದಿ ಸರಕಾರವು ಒಪ್ಪಂದ ಮಾಡಿಕೊಳ್ಳುವಾಗ ಡಸಾಲ್ಟ್ ಈ ನಿರ್ಧಾರದಿಂದ ಹಿಂದೆ ಸರಿಯಿತು. ಇದರರ್ಥ  ಏನೆಂದರೆ,
ಮನ್‍ಮೋಹನ್ ಸಿಂಗ್ ಸರಕಾರಕ್ಕಿಂತ 1963 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ಮೊತ್ತವನ್ನು ಮೋದಿ ಸರಕಾರವು ಡಸಾಲ್ಟ್ ಗೆ  ಪಾವತಿಸಬೇಕಾಗುತ್ತದೆ ಎಂಬುದು. ಇದಕ್ಕೆ ಪ್ರಧಾನಮಂತ್ರಿ ಕಾರ್ಯಾಲಯವೇ  ಕಾರಣ ಎಂಬುದಾಗಿ ರಕ್ಷಣಾ ತಜ್ಞರು  ಬೊಟ್ಟು ಮಾಡಿರುವುದನ್ನೂ ಎನ್. ರಾಮ್‍ರು ದಾಖಲೆ ಸಮೇತ ಸಮರ್ಥಿಸಿದ್ದಾರೆ. ಅದು ಹೇಗೆಂದರೆ,
ಮೋದಿ ಸರಕಾರವು ಡಸಾಲ್ಟ್ ನೊಂದಿಗೆ ಸಮಾಲೋಚನೆ ನಡೆಸುವುದಕ್ಕೆ 7 ಮಂದಿ ತಜ್ಞರ ಸಮಿತಿಯೊಂದನ್ನು  (INT) ರಚಿಸಿತ್ತು. ಅದರಲ್ಲಿ ರಕ್ಷಣಾ ತಜ್ಞರಾದ ಎಂ.ಪಿ. ಸಿಂಗ್, ಏ.ಆರ್. ಸುಳೆ ಮತ್ತು ರಾಜೀವ್ ವರ್ಮಾ  ಅವರೂ ಇದ್ದರು. ಅವರು ಒಪ್ಪಂದದ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿ 9 ಪುಟಗಳ ಪತ್ರವನ್ನು 2016  ಜೂನ್ 1ರಂದು ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದರು. ಅದರಲ್ಲಿ, ಈ ಒಪ್ಪಂದವು ಹಿಂದಿನ ಸರಕಾರದ ಒಪ್ಪಂದಕ್ಕಿಂತ  ಉತ್ತಮವಾಗಿಲ್ಲ ಎಂದಿದ್ದರಲ್ಲದೇ, ಮೊದಲ ಕಂತಿ ನಲ್ಲಿ 18 ರಫೇಲ್ ಯುದ್ಧ ವಿಮಾನಗಳನ್ನು ಭಾರತಕ್ಕೆ ಒದಗಿಸುವ  ಬಗ್ಗೆ ಇರುವ ನಿಬಂಧನೆಗಳು ಹಿಂದಿನ ಒಪ್ಪಂದಕ್ಕೆ ಹೋಲಿಸಿದರೆ ನಿಧಾನಗತಿಯದ್ದು ಎಂದು ಹೇಳಿದ್ದರು. ಅಂದರೆ,  ಮೊದಲ ಕಂತಿನ 18 ಯುದ್ಧ ವಿಮಾನಗಳು ಭಾರತಕ್ಕೆ ವಿಳಂಬವಾಗಿ ಬರುವುದಕ್ಕೆ ಈ ಒಪ್ಪಂದವು ಅವಕಾಶ  ಮಾಡಿಕೊಡುತ್ತದೆ ಎಂದರ್ಥ. ಹಾಗೆಯೇ, 7 ಮಂದಿ ತಜ್ಞರ ಸಮಾಲೋಚನಾ ಸಮಿತಿಯು ಮಾತುಕತೆ  ನಡೆಸುತ್ತಿರುವ ಸಂದರ್ಭದಲ್ಲೇ  ಪ್ರಧಾನಮಂತ್ರಿ ಕಾರ್ಯಾಲಯವು ನೇರವಾಗಿ ಡಸಾಲ್ಟ್ ಕಂಪೆನಿಯೊಂದಿಗೆ  ಸಮಾನಾಂತರ ಮಾತುಕತೆಯಲ್ಲಿ ತೊಡಗಿರುವುದಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಮಾನಾಂತರ  ಮಾತುಕತೆಯ ಕಾರಣದಿಂದಲೇ ಡಸಾಲ್ಟ್ ನಿಂದ ಬ್ಯಾಂಕ್ ಗ್ಯಾರಂಟಿ ಮೊತ್ತವನ್ನು ಪಾವತಿಸುವಂತೆ ಮಾಡಲು  ಸಾಧ್ಯವಾಗಲಿಲ್ಲ ಎಂದವರು ಪತ್ರದಲ್ಲಿ ದೂರಿಕೊಂಡಿದ್ದರು. ಇಡೀ ಒಪ್ಪಂದವನ್ನು ಅಗ್ಗಗೊಳಿಸಿಕೊಳ್ಳುವ ಅವಕಾಶ  ಇದ್ದೂ ಪ್ರಧಾನಮಂತ್ರಿ ಕಾರ್ಯಾಲಯದ ಮಧ್ಯಪ್ರವೇಶವು ಒಪ್ಪಂದವನ್ನು ದುಬಾರಿಗೊಳಿಸಿತು ಎಂಬರ್ಥದ ನೋವು  ತಜ್ಞರ ಪತ್ರದಲ್ಲಿದೆ. ಮಾತುಕತೆಗೆ ತಜ್ಞರ ಸಮಿತಿಯನ್ನು ರಚಿಸಿರುವಾಗ, ಪ್ರಧಾನಮಂತ್ರಿ ಕಾರ್ಯಾಲಯವು  ಸಮಾನಾಂತರ ಸಮಾಲೋಚನೆ ನಡೆಸಿರುವುದಕ್ಕೆ ಕಾರಣಗಳೇನು ಅನ್ನುವ ಪ್ರಶ್ನೆಯನ್ನು ಆ ಪತ್ರವು ಪರೋಕ್ಷವಾಗಿ  ಎತ್ತುತ್ತದೆ. ಒಂದೋ ತಾನೇ ರಚಿಸಿದ ತಜ್ಞರ ಸಮಿತಿಯ ಮೇಲೆ ನಂಬಿಕೆಯಿಲ್ಲ ಅಥವಾ ತನ್ನದೇ ಆದ  ಹಿತಾಸಕ್ತಿಯನ್ನು ಕಾಯ್ದುಕೊಳ್ಳುವುದಕ್ಕಾಗಿ ಹೀಗೆ ಮಾಡಲಾಗಿದೆ ಅನ್ನುವುದರ ಹೊರತು ಇನ್ನಾವ ಕಾರಣಗಳು ಇಲ್ಲಿ  ಕಾಣಿಸುತ್ತಿಲ್ಲ. ಒಂದುವೇಳೆ, ನಂಬಿಕೆ ಇಲ್ಲದಿದ್ದರೆ ತಂಡವನ್ನು ಬದಲಿಸಬಹುದಿತ್ತು. ಹೊಸ ತಜ್ಞರನ್ನು  ನೇಮಿಸಬಹುದಿತ್ತು. ಹಾಗೆ ಮಾಡಿಲ್ಲವೆಂದ ಮೇಲೆ ಈ ಸಮಾನಾಂತರ ಮಾತುಕತೆಗೆ ಬೇರೆ ಉದ್ದೇಶ ಇತ್ತು ಎಂದೇ  ಅರ್ಥ. ಕೇಂದ್ರ ಸರಕಾರಕ್ಕೆ ಯಾರದಾದರೂ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶ ಇತ್ತೇ? ಅವರು ಯಾರು?  ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ದೇಶಕ್ಕಿಂತ ಅವರು ಮುಖ್ಯವಾದರೇ? ಅದೇವೇಳೆ, ಈ ಹಿಂದಿನ ಒಪ್ಪಂದದಲ್ಲಿದ್ದ  ಭ್ರಷ್ಟಾಚಾರ ವಿರೋಧಿ ಕಲಂಗಳನ್ನು ಸರಕಾರವು ಕಿತ್ತು ಹಾಕಿದೆ ಎಂಬುದಾಗಿ ಎನ್. ರಾಮ್ ಅವರು ಪುರಾವೆ  ಸಮೇತ ದಾಖಲಿಸಿದ್ದಾರೆ. ಇವೆಲ್ಲ ಏನು? ಭ್ರಷ್ಟಾಚಾರ ರಹಿತ-ಪಾರದರ್ಶಕ ಆಡಳಿತದ ಬಗ್ಗೆ ಮಾತಾಡುತ್ತಲೇ  ಅಧಿಕಾರಕ್ಕೆ ಬಂದ ಮೋದಿಯವರು ರಫೇಲ್‍ನಲ್ಲಿ ಯಾಕೆ ಎಡವಿದರು? ಅವರು ಏನನ್ನು ಬಚ್ಚಿಟ್ಟುಕೊಂಡಿದ್ದಾರೆ?  ಯಾರದ್ದೋ ಹಿತಾಸಕ್ತಿಯನ್ನು ಕಾಪಾಡುವುದಕ್ಕಾಗಿ ದೇಶದ ಹಿತವನ್ನು ನಿರ್ಲಕ್ಷಿಸಿದರೇ? ಭ್ರಷ್ಟಾಚಾರಕ್ಕೆ ಬಾಗಿಲು  ತೆರೆದರೇ? ತನ್ನ ತಪ್ಪನ್ನು ಅಡಗಿಸಿಕೊಳ್ಳುವುದಕ್ಕಾಗಿ ದೇಶಪ್ರೇಮದ ಮಾತಾಡುತ್ತಿರುವರೇ?
ಎನ್. ರಾಮ್ ಅವರು ನಾಲ್ಕು ಕಂತಿನಲ್ಲಿ ಬರೆದ ದಾಖಲೆಸಹಿತ ತನಿಖಾ ಬರಹಗಳು ‘ಹೌದು’ ಅನ್ನುತ್ತಿವೆ.

ಯುದ್ಧದಾಹಿ ಉನ್ಮಾದವೊಂದರ ಹಿಂದೆ-ಮುಂದೆಮಾತುಕತೆ
ಸರ್ಜಿಕಲ್ ಸ್ಟ್ರೈಕ್
ಇವೆರಡೂ ಒಂದು ಸಾರ್ವಭೌಮ ರಾಷ್ಟ್ರದ ಸಹಜ ಆಯ್ಕೆಗಳು. ಇವೆರಡರಲ್ಲಿ ಒಂದನ್ನು ಮಾತ್ರ ಆಯ್ಕೆ  ಮಾಡಿಕೊಳ್ಳುವುದು ಮತ್ತು ಅದನ್ನೇ ಏಕೈಕ ರಣತಂತ್ರವಾಗಿ ಸ್ವೀಕರಿಸುವುದು ಅತ್ಯಂತ ಅಪಾಯಕಾರಿ. ಸರ್ಜಿಕಲ್  ಸ್ಟ್ರೈಕ್ ಒಂದು ಆಯ್ಕೆಯಾಗಿ ಇರುವು ದರ ಜೊತೆಜೊತೆಗೇ ಮಾತುಕತೆಯ ಬಾಗಿಲು ಸದಾ ತೆರೆದಿರಬೇಕು.  ಸರ್ಜಿಕಲ್ ಸ್ಟ್ರೈಕ್ ಅಂದರೆ ಪಾಕಿಸ್ತಾನದ ಗಡಿಗುಂಟದ ಮೇಲೆ ಬಾಂಬ್ ಸುರಿಸುವುದೊಂದೇ ಅಲ್ಲ. ಪಾಕಿಸ್ತಾನದ  ಮೇಲೆ ವಿವಿಧ ರೂಪದಲ್ಲಿ ಒತ್ತಡಗಳನ್ನು ಹೇರುವುದು, ಅಂತಾರಾಷ್ಟ್ರೀಯ ಸಮು ದಾಯದಿಂದ ಒಂಟಿಯನ್ನಾಗಿ  ಮಾಡುವುದು ಇತ್ಯಾದಿಗಳೂ ಸೇರಿವೆ. ಉತ್ತರ ಕೊರಿಯಾದ ಮೇಲೆ ಅಮೇರಿಕ ಸದ್ಯ ಇದೇ ತಂತ್ರವನ್ನು ಬಳಸುತ್ತಿದೆ.  ಒಂದೆಡೆ ಮಾತುಕತೆ ಮತ್ತು ಇನ್ನೊಂದೆಡೆ ಆರ್ಥಿಕ ದಿಗ್ಬಂಧನದಂತಹ ಒತ್ತಡ ತಂತ್ರ. ಟರ್ಕಿಯೂ ಸಿರಿಯದ  ಗಡಿಗುಂಟದ ಮೇಲೆ ಇಂಥದ್ದೇ  ದಾಳಿಯನ್ನು ಕೈಗೊಂಡಿದೆ ಮತ್ತು ಕೈಗೊಳ್ಳುತ್ತಲೂ ಇದೆ. ಟರ್ಕಿಯೊಳಗೆ  ಭಯೋತ್ಪಾದನಾ ದಾಳಿಯನ್ನು ನಡೆಸುತ್ತಿರುವ ಪಿಕೆಎಫ್ ಎಂಬ ಪ್ರತ್ಯೇಕತಾವಾದಿ ಸಂಘಟನೆಯು ಸಿರಿಯಾದ  ಗಡಿಯೊಳಗೆ ಆಶ್ರಯವನ್ನು ಪಡೆದಿರುವುದೇ ಇದಕ್ಕೆ ಕಾರಣ. ದಕ್ಷಿಣ ಕೊರಿಯದ ಮೇಲೆ ಸದಾ ಅಪಾಯದ ತೂಗು  ಗತ್ತಿಯಂತಿರುವ ಉತ್ತರ ಕೊರಿಯಾದ ವಿರುದ್ಧ ಅಮೇರಿಕ ಯುದ್ಧ ಹೇರದೇ ಇರಲು ಕಾರಣ ಏನು? ಈ  ಮಗ್ಗುಲೂ ಬಹಳ ಮುಖ್ಯ. ಪಾಕಿಸ್ತಾನದ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳು ವುದಕ್ಕಿಂತ ಮೊದಲು ಭಾರತ  ಈ ದಿಸೆಯಲ್ಲೂ ಅವಲೋಕನ ನಡೆಸಬೇಕು. ದುರ್ಬಲ ರಾಷ್ಟ್ರ ಯಾವಾಗಲೂ ಬಲಶಾಲಿ ರಾಷ್ಟ್ರದ ಬಗ್ಗೆ ಭಯದಲ್ಲೇ  ಇರುತ್ತದೆ. ಬಲಶಾಲಿ ರಾಷ್ಟ್ರ ತನ್ನ ಹಿತಕ್ಕಾಗಿ ಕೈಗೊಳ್ಳುವ ಯಾವುದೇ ತೀರ್ಮಾನವನ್ನೂ ತನ್ನ ವಿರುದ್ಧವೆಂಬಂತೆ  ಕಲ್ಪಿಸಿಕೊಳ್ಳುವುದು ಮತ್ತು ಸದಾ ಜಾಗೃತಾವಸ್ಥೆಯಲ್ಲಿರುವುದೂ ನಡೆಯುತ್ತಿರುತ್ತದೆ. ಪಾಕಿಸ್ತಾನ ಸದಾ ಇಂಥದ್ದೊಂದು  ಭಯದಲ್ಲೇ  ಇದ್ದಿರುವಂತಿದೆ. ರಕ್ಷಣೆಗಾಗಿ ಭಾರತ ಪ್ರತಿವರ್ಷ ಹೆಚ್ಚುವರಿ ಮೊತ್ತವನ್ನು ಕಾಯ್ದಿರಿಸುವುದನ್ನು ಅದು  ಸಹಜವಾಗಿ ಸ್ವೀಕರಿಸುವ ಸಾಧ್ಯತೆಯಿಲ್ಲ. ನಮ್ಮ ವಿರುದ್ಧ ಭಾರತ ಯಾವುದೋ ಸಂಚು ನಡೆಸುತ್ತಿದೆ ಎಂದು ಅದು  ಭಾವಿಸಬಹುದು. ಇದೊಂದೇ ಅಲ್ಲ, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ನಡೆಸುತ್ತಿರುವ ಪ್ರಯೋಗಗಳು ಮತ್ತು  ಸಾಧನೆಗಳು; ರಫೇಲ್‍ನಂತಹ ವಿವಿಧ ಯುದ್ಧ ವಿಮಾನಗಳ ಖರೀದಿ, ವೈಜ್ಞಾನಿಕ ಸಂಶೋಧನೆಗಳನ್ನೆಲ್ಲ ಪಾಕಿಸ್ತಾನ  ಸಹಜವಾಗಿ ಸ್ವೀಕರಿಸಬೇಕೆಂದಿಲ್ಲ. ಭಾರತದ ಯುದ್ಧ ಸಾಮಗ್ರಿಗಳೆಲ್ಲ ತಮ್ಮನ್ನೇ ಗುರಿಯಾಗಿಸಿ ಸಜ್ಜಾಗಿ ನಿಂತಿವೆ  ಎಂಬ ಭಾವನೆಯೊಂದು ಮೂಡಿ, ಅದು ಅಭದ್ರತೆಯಾಗಿ ಬೆಳೆದು, ಕೊನೆಗೆ ತನ್ನಲ್ಲಿರುವ ಏಕೈಕ ಆಯುಧವಾದ  ಅಣ್ವಸ್ತ್ರದ ಮೇಲೆ ಅದು ಅತಿ ನಂಬಿಕೆಯನ್ನು ಇರಿಸಿಕೊಳ್ಳುವುದಕ್ಕೆ ಕಾರಣ ವಾಗಬಹುದು. ಉತ್ತರ ಕೊರಿಯಾದ  ಸ್ಥಿತಿಯೂ ಬಹುತೇಕ ಇದುವೇ. ತನ್ನ ಪಕ್ಕದಲ್ಲೇ  ಇರುವ ದಕ್ಷಿಣ ಕೊರಿಯಾದಲ್ಲಿ ಅಮೇರಿಕದ ಸೇನೆ ದೊಡ್ಡ  ಸಂಖ್ಯೆಯಲ್ಲಿ ಠಿಕಾಣಿ ಹೂಡಿರುವುದನ್ನು ಅದು ಪ್ರತಿನಿತ್ಯ ವೀಕ್ಷಿಸುತ್ತಿದೆ. ಅಮೇರಿಕ ವಿವಿಧ ಆಧುನಿಕ  ಯುದ್ಧಾಸ್ತ್ರಗಳನ್ನು ದಕ್ಷಿಣ ಕೊರಿಯಾಕ್ಕೆ ರವಾನಿಸುತ್ತಿದೆ. ಆರ್ಥಿಕ ನೆರವು ನೀಡುತ್ತಿದೆ. ದಕ್ಷಿಣ ಕೊರಿಯ ಚಿಕ್ಕ  ರಾಷ್ಟ್ರವಾದರೂ ರಕ್ಷಣಾ ಬಜೆಟ್ ಅಂತೂ ಯಾವುದೇ ದೊಡ್ಡ ರಾಷ್ಟ್ರಕ್ಕೂ ಕಮ್ಮಿಯಿಲ್ಲ. ಉತ್ತರ ಕೊರಿಯದ ಮೇಲೆ  ಈ ಎಲ್ಲ ಬೆಳವಣಿಗೆಗಳು ಖಂಡಿತ ಒತ್ತಡವನ್ನು ಹೇರುತ್ತಿರುತ್ತವೆ. ಅಭದ್ರತೆಯ ತೇಲು ದೋಣಿಯಲ್ಲಿ ಇರುವಂತಹ  ಸ್ಥಿತಿ ಇದು. ಹೀಗಿರುವಾಗ ಅಣ್ವಸ್ತ್ರಗಳ ಮೇಲೆ ಉತ್ತರ ಕೊರಿಯಾವು ಅತೀ ಅವಲಂಬನೆಯನ್ನು ಹೊಂದುವುದು  ಅಸಹಜವಲ್ಲ. ದಕ್ಷಿಣ ಕೊರಿಯಾದಿಂದ ಆಗುವ ಸಣ್ಣ ಕ್ರಿಯೆಗೂ ಅದು ಅತಿ ಅಪಾಯಕಾರಿಯಾದ ಪ್ರತಿಕ್ರಿಯೆಗೆ  ಮುಂದಾಗಲೂ ಬಹುದು. ಈ ಭಯ ಅಮೇರಿಕಕ್ಕೆ ಇz್ದÉೀ ಇದೆ. ಆದ್ದರಿಂದಲೇ, ಅದು ಮಾತುಕತೆಯ ಬಾಗಿಲನ್ನು  ತೆರೆದಿದೆ. ಆದರೆ, ನರೇಂದ್ರ ಮೋದಿ ಸರಕಾರ ಮಾಡಿರುವ ಪ್ರಮಾದ ಏನೆಂದರೆ, ತೆರೆದಿರುವ ಮಾತುಕತೆಯ  ಬಾಗಿಲನ್ನು ಮುಚ್ಚಿರುವುದು ಮತ್ತು ತೋಳ್ಬಲದಲ್ಲೇ ನಂಬಿಕೆ ಇಟ್ಟಿರುವುದು.
ಅಂದಹಾಗೆ, ಒಂದು ತಲೆಗೆ ಹತ್ತು ತಲೆ ಅನ್ನುವುದು ಸುಲಭ. ಅಲ್ಲದೇ ಇಂಥ ಘೋಷಣೆಗೆ ಭಾವನೆಗಳನ್ನು  ಮೀಟುವ ಸಾಮಥ್ರ್ಯವೂ ಇದೆ. ಆದರೆ ಸಮಸ್ಯೆಯ ಪರಿಹಾರದ ದೃಷ್ಟಿಯಿಂದ ಇದೊಂದು ಗಂಭೀರ ವೈಫಲ್ಯ.  ಇದಕ್ಕಿಂತ, ನಮ್ಮ ಆ ಒಂದು ತಲೆಯನ್ನು ಮುಂದಿಟ್ಟುಕೊಂಡು ಅಂತಾರಾಷ್ಟ್ರೀಯವಾದ ಪ್ರಮುಖ 10 ತಲೆಗಳನ್ನು  ನಮ್ಮ ಪರ ಒಲಿಸಿಕೊಳ್ಳುವುದು ಹೆಚ್ಚು ಉತ್ತಮ. ಇದರ ಜೊತೆಗೇ ಇಲ್ಲೊಂದು ಪ್ರಮುಖ ಪ್ರಶ್ನೆಯೂ ಇದೆ. ಪಕ್ಕದ  ದುರ್ಬಲ ರಾಷ್ಟ್ರವೊಂದು ನಮ್ಮ ನೆಲದಲ್ಲಿ ಇಷ್ಟೊಂದು ಸಲೀಸಾಗಿ ಭಯೋತ್ಪಾದನಾ ಕೃತ್ಯಗಳನ್ನು ಎಸಗಲು  ಸಾಧ್ಯವಾಗುವುದು ಹೇಗೆ? ನಿಜವಾಗಿ, ಈ ಪ್ರಶ್ನೆಗೆ ಕಂಡುಕೊಳ್ಳುವ ಉತ್ತರದಲ್ಲೇ  ಈ ಸಮಸ್ಯೆಗೆ ಪರಿಹಾರವೂ ಇದೆ  ಎಂದು ಅನಿಸುತ್ತದೆ.
ಕಾಶ್ಮೀರ ಇವತ್ತು ಭಾರತದ ಪಾಲಿನ ಕೆಂಡವಾಗಿರುವುದರಲ್ಲಿ ಕಾಶ್ಮೀರಿಗಳ ಪಾತ್ರವೇ ದೊಡ್ಡದು. ಪುಲ್ವಾಮ ಪ್ರಕರಣದಲ್ಲಿ  ಭಾಗಿಯಾಗಿರುವುದೂ ಕಾಶ್ಮೀರಿ ಯುವಕನೇ. ಇದು ತೀರಾ ನಿರ್ಲಕ್ಷಿಸಬೇಕಾದ ವಿಷಯವಲ್ಲ. ನಮ್ಮದೇ  ಗಡಿಯೊಳಗಿನ ಒಂದಷ್ಟು ಯುವಕರು ಸ್ವತಃ ಸಿಡಿಯುವುದಕ್ಕೆ ಸಿದ್ಧವಾಗುವುದೇಕೆ? ಅವರು ಯಾವ ಮನೆಯ  ಮಕ್ಕಳು? ಅವರ ಸಮಸ್ಯೆಯೇನು? ಅವರು ಯಾರದೋ ದಾಳಗಳೋ ಅಥವಾ ವಿದ್ಯಾಭ್ಯಾಸ ಇರುವ ಮತ್ತು  ಪ್ರಬುದ್ಧರಾದ ಯುವಕರೋ? ಕಾಶ್ಮೀರದಲ್ಲಿ ಅವರ ವಿಚಾರಧಾರೆಯನ್ನು ಪ್ರತಿನಿಧಿಸುವವರ ಸಂಖ್ಯೆ ಎಷ್ಟಿವೆ? ಅವು  ಅಲ್ಪವೋ ಧಾರಾಳವೋ?
ಪಾಕಿಸ್ತಾನದ ಮೇಲೆ ಆರೋಪ ಹೊರಿಸುವ ಸಂದರ್ಭದಲ್ಲಿ ಭಾರತ ತನ್ನೊಳಗೇ ಹಾಕಿಕೊಳ್ಳಬೇಕಾದ ಪ್ರಶ್ನೆಗಳಿವು.  ಪಾಕಿಸ್ತಾನ ಈ ಯುವಕರಿಗೆ ಬೆಂಬಲ ನೀಡುತ್ತಿರಬಹುದು. ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿರಬಹುದು. ಗಡಿ  ನುಸುಳುವುದಕ್ಕೆ ನೆರವನ್ನೂ ನೀಡುತ್ತಿರಬಹುದು. ಆದರೆ ಇವೆಲ್ಲ ಸಾಧ್ಯವಾಗುವುದು ಯುವಕರು ಲಭ್ಯವಾದಾಗ.  ಆದ್ದರಿಂದ, ಈ ಯುವಕರೇಕೆ ಅಂಥದ್ದೊಂದು ಕ್ರೌರ್ಯಕ್ಕೆ ಸಿದ್ಧವಾಗುತ್ತಿದ್ದಾರೆ ಎಂಬ ಪ್ರಶ್ನೆ ಬಹುಮುಖ್ಯವಾಗಿ  ನಮ್ಮನ್ನು ಕಾಡಬೇಕು. ಮತಾಂಧತೆ ಅನ್ನುವ ನಾಲ್ಕಕ್ಷರದ ಕಾರಣ ಕೊಟ್ಟು ಸುಮ್ಮನಾಗುವುದು ಸುಲಭ. ಆದರೆ ಇದು  ನಿಜವೇ? ಭಾರತದಲ್ಲಿ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿರುವ ರಾಜ್ಯಗಳು ಬೇರೆಯೂ ಇವೆಯಲ್ಲ. ಅಸ್ಸಾಂ, ಪಶ್ಚಿಮ  ಬಂಗಾಳ, ಉತ್ತರ ಪ್ರದೇಶ, ಕೇರಳ ಇತ್ಯಾದಿ ರಾಜ್ಯಗಳಲ್ಲಿ ಗಣನೀಯ ಸಂಖ್ಯೆಯಲ್ಲಿ ಮುಸ್ಲಿಮರಿದ್ದಾರೆ. ಅಲ್ಲೆಲ್ಲಾ  ಕಾಣಿಸಿಕೊಳ್ಳದ ಮತಾಂಧತೆ ಬರೇ ಕಾಶ್ಮೀರದಲ್ಲಿ ಮಾತ್ರ ಕಾಣಿಸಿಕೊಳ್ಳುವುದಕ್ಕೆ ಕಾರಣವೇನು? ನಿಜವಾಗಿ, ಯಾವುದೇ  ಪ್ರತಿಭಟನೆಯನ್ನು ಸುಲಭದಲ್ಲಿ ಮಟ್ಟಹಾಕುವುದಕ್ಕೆ ಮತಾಂಧತೆ, ದೇಶದ್ರೋಹ, ಧರ್ಮನಿಂದನೆ ಇತ್ಯಾದಿಗಳನ್ನು  ಇವತ್ತು ಬಳಸಲಾಗುತ್ತಿದೆಯೇ ಹೊರತು ಇನ್ನೇನಕ್ಕಲ್ಲ. ಜೆ.ಎನ್.ಯು. ಪ್ರಕರಣ ಇದಕ್ಕೊಂದು ಉದಾಹರಣೆ.  ಇತ್ತೀಚೆಗೆ ಅಲಿಗಢ ವಿಶ್ವವಿದ್ಯಾನಿಲಯದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಿಸಲಾಗಿದೆ ಎಂದು ಸುಳ್ಳು ಸುಳ್ಳೇ  ವಿದ್ಯಾರ್ಥಿಗಳ ಮೇಲೆ ಆರೋಪ ಹೊರಿಸಿ ಪೋಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದು ಮತ್ತು ಬಳಿಕ ಸುಳ್ಳು  ಎಂದು ಪ್ರಕರಣವನ್ನು ಕೈಬಿಟ್ಟದ್ದು ಇದಕ್ಕಿರುವ ಇನ್ನೊಂದು ಉದಾಹರಣೆ. ಕಾಶ್ಮೀರ ಸಮಸ್ಯೆಯ ಮೂಲ  ಮತಾಂಧತೆಯದ್ದಲ್ಲ. ಅಸ್ತಿತ್ವದ್ದು. ಭಾರತ ಸ್ವತಂತ್ರಗೊಳ್ಳುವಾಗ ಹುಟ್ಟಿಕೊಂಡ ಈ ಸಮಸ್ಯೆಯನ್ನು ಮತಾಂಧತೆಗೆ  ಕಟ್ಟಿಹಾಕುವುದರಿಂದ ಟಿ.ವಿ. ಚರ್ಚೆಯಲ್ಲಿ ಗೆಲ್ಲಬಹುದೇ ಹೊರತು ಕಾಶ್ಮೀರ ಕೆಂಡಕ್ಕೆ ನೀರು ಸುರಿಯಲಾಗದು.  ಮೂಲ ಬಿಕ್ಕಟ್ಟು ಏನು ಮತ್ತು ಇವತ್ತಿನ ಆಧುನಿಕ ಕಾಶ್ಮೀರಿ ಪೀಳಿಗೆಯ ಮನಸ್ಸಿನಲ್ಲಿ ಆ ಬಿಕ್ಕಟ್ಟು ಯಾವ  ಸ್ವರೂಪವನ್ನು ಪಡೆದುಕೊಂಡಿದೆ ಎಂಬುದರ ಅಧ್ಯಯನ ನಡೆಯಬೇಕು. ಕಾಶ್ಮೀರ 1948ರಲ್ಲಿ ಭಾರತಕ್ಕೆ  ಸೇರ್ಪಡೆಯಾಗುವುದಕ್ಕೆ ಕಾರಣವಾದ ಸಂದರ್ಭ-ಸನ್ನಿವೇಶಗಳು ಏನೇನೋ ಅವು ಅದೇ ರೂಪದಲ್ಲಿ ಅಷ್ಟೇ  ಸ್ಪಷ್ಟವಾಗಿ ಇವತ್ತಿನ ಕಾಶ್ಮೀರಿ ಪೀಳಿಗೆಗೆ ತಿಳಿದಿರಬೇಕೆಂದಿಲ್ಲ. ಅದರ ವಿಕೃತ ಚಿತ್ರವೊಂದು ಅವರಲ್ಲಿರಲು ಸಾಧ್ಯ. ತಾವು  ಭಾರತ ದಿಂದ ವಂಚನೆಗೆ ಒಳಗಾಗಿದ್ದೇವೆ ಎಂಬ ಭಾವನೆ ಅವರಲ್ಲಿ ಇದ್ದಿರಲೂ ಬಹುದು. ತಮ್ಮನ್ನು ಭಾರತ  ಬಲವಂತವಾಗಿ ಹಿಡಿದಿಟ್ಟುಕೊಂಡಿದೆ ಎಂದು ಅವರು ಭಾವಿಸಿರಲೂ ಬಹುದು. ಇವು ಏನೇ ಇದ್ದರೂ ಇದನ್ನು  ಸರಿಪಡಿಸಬೇಕಾದುದು ಮತ್ತು ಕಾಶ್ಮೀರಿಗಳಲ್ಲಿ ವಿಶ್ವಾಸ ತುಂಬಬೇಕಾದುದು ಪಾಕಿಸ್ತಾನವಲ್ಲ, ಭಾರತ. ಕಾಶ್ಮೀರದ  ಸಮಸ್ಯೆಯನ್ನು ಮತಾಂಧತೆಯ ದೃಷ್ಟಿಯಿಂದ ಹೊರಗಿಟ್ಟು ನೋಡದ ಹೊರತು ಇದು ಸಾಧ್ಯವಲ್ಲ. ಅಷ್ಟಕ್ಕೂ,
21ನೇ ಶತಮಾಣದಲ್ಲಿ ಯುದ್ಧವೆಂಬುದು ಆಯ್ಕೆಯೇ ಅಲ್ಲ, ಅದೊಂದು ಅನಾಹುತ. ಕುರುಕ್ಷೇತ್ರದಲ್ಲೋ ಅಥವಾ  ಮಕ್ಕಾದ ಸಮೀಪದ ಬದ್ರ್‍ನಲ್ಲೋ ನಡೆದಂತೆ ಈ ಕಾಲದಲ್ಲಿ ಯುದ್ಧ ನಡೆಯುವುದಿಲ್ಲ. 7ನೇ ಶತಮಾನದಲ್ಲಿ ಅಥವಾ  ಕ್ರಿಸ್ತಪೂರ್ವದಲ್ಲಿ ಅಥವಾ ಪುರಾತನ ಕಾಲದಲ್ಲಿ ಯುದ್ಧ ನಡೆಯುತ್ತಿದ್ದುದು ಯುದ್ಧ ಭೂಮಿಯಲ್ಲಿ. ಯುದ್ಧವೆಂಬುದು  ಅಲ್ಲಿಯೇ ಪ್ರಾರಂಭವಾಗಿ ಅಲ್ಲಿಗೆ ಮುಕ್ತಾಯಗೊಳ್ಳುತ್ತಿತ್ತು. ಎರಡೂ ಕಡೆಯ ಸೈನಿಕರಿಗಷ್ಟೇ ಯುದ್ಧ ಸೀಮಿತ. ಯುದ್ಧ  ನಡೆಯುವ ಸ್ಥಳದ ಹೊರಗಿನ ಪ್ರದೇಶಗಳಿಗೂ ಯುದ್ಧಕ್ಕೂ ಯಾವ ಸಂಬಂಧ ಇರುತ್ತಿರಲಿಲ್ಲ. ಸಾವು-ನೋವು  ಏನಿದ್ದರೂ ರಾಜರುಗಳು ಮತ್ತು ಸೈನಿಕರದ್ದೇ ಹೊರತು ಜನಸಾಮಾನ್ಯರದ್ದಲ್ಲ. ಆದರೆ, ಇವತ್ತಿನ ಯುದ್ಧ ಇದಕ್ಕಿಂತ  ಸಂಪೂರ್ಣ ಭಿನ್ನ. ಇದರಲ್ಲಿ ಜನಸಾಮಾನ್ಯರೇ ಅತ್ಯಧಿಕ ಸಂಖ್ಯೆಯಲ್ಲಿ ಸಾವಿಗೀಡಾಗುತ್ತಾರೆ. ಯುದ್ಧಕ್ಕೆ ದೂಡಿದವರು  ಸಾವಿನಿಂದ ಪಾರಾಗುತ್ತಾರೆ. ಅಲ್ಲದೇ, ಇವತ್ತಿನ ಯುದ್ಧಕ್ಕೆ ನಿರ್ದಿಷ್ಟ ಸ್ಥಳವೆಂಬುದೇ ಇಲ್ಲ. ಇಡೀ ಪಾಕಿಸ್ತಾನವೇ  ಭಾರತದ ಯುದ್ಧ ಸ್ಥಳ. ಹಾಗೆಯೇ ಸಂಪೂರ್ಣ ಭಾರತವೇ ಪಾಕಿಸ್ತಾನದ ಯುದ್ಧ ಭೂಮಿ. ಭಾರತದಲ್ಲಿ ಎಷ್ಟು  ನಾಗರಿಕರು ಸಾವಿಗೀಡಾಗುತ್ತಾರೋ ಅದುವೇ ಪಾಕಿಸ್ತಾನದ ಯಶಸ್ಸು. ಭಾರತದ ಯಶಸ್ಸನ್ನೂ ಇದೇ  ಮಾನದಂಡದಲ್ಲಿ ಅಳೆಯಲಾಗುತ್ತದೆ. ಪಾಕಿಸ್ತಾನದಲ್ಲಿ ಎಷ್ಟು ನಾಗರಿಕರ ಸಾವು-ನೋವು ಸಂಭವಿಸುತ್ತದೋ ಅದನ್ನೇ  ಭಾರತದ ಯಶಸ್ಸಾಗಿ ಬಿಂಬಿಸಲಾಗುತ್ತದೆ. ಹಾಗಂತ, ಇದು ಭಾರತ-ಪಾಕಿಸ್ತಾನಕ್ಕೆ ಮಾತ್ರ ಸೀಮಿತವಾದ  ಸಂಗತಿಯಲ್ಲ. ಇರಾಕ್-ಇರಾನ್‍ಗಳಿಗೆ ಸಂಬಂಧಿಸಿಯೂ, ಉತ್ತರ ಕೊರಿಯಾ-ದಕ್ಷಿಣ ಕೊರಿಯಾಗಳಿಗೆ  ಸಂಬಂಧಿಸಿಯೂ ಇದುವೇ ನಡೆಯುತ್ತದೆ. ಆದ್ದರಿಂದ ಯುದ್ಧದಾಹ ಪರಿಹಾರ ಅಲ್ಲ, ಸ್ವತಃ ಅದುವೇ ಒಂದು  ಸಮಸ್ಯೆ. ಯುದ್ಧ ನಿರತ ಅಫಘಾನ್, ಇರಾಕ್, ಸಿರಿಯ, ಯಮನ್ ಮುಂತಾದವುಗಳೇ ಇದಕ್ಕೆ ಜೀವಂತ  ಉದಾಹರಣೆ. ದಶಕಗಳಿಂದ ಕಟ್ಟಿದ ಆರ್ಥಿಕ ವ್ಯವಸ್ಥೆಯನ್ನು ಒಂದು ಬಾಂಬು ದರಾಶಾಹಿಯಾಗಿಸಿ ಬಿಡಬಲ್ಲ್ಲುದು.  ಅಪಾರ ಹಣವನ್ನು ವ್ಯಯಿಸಿ ಕಟ್ಟಿದ ಬೃಹತ್  ಕಟ್ಟಡಗಳನ್ನು ಒಂದು ಮಿಸೈಲು ಕ್ಷಣಮಾತ್ರದಲ್ಲಿ ಉರುಳಿಸಬಲ್ಲುದು.  ನಮ್ಮ ಉದ್ಯಮಗಳು, ಕೈಗಾರಿಕೆಗಳು, ರಾಜ ರಸ್ತೆಗಳು, ಪಟ್ಟಣಗಳು ಎಲ್ಲವನ್ನೂ ಪುರಾತನ ಕಾಲಕ್ಕೆ  ಕೊಂಡೊಯ್ಯುವುದಕ್ಕೆ ಯುದ್ಧದಿಂದ ಸಾಧ್ಯವಿದೆ. ಆದ್ದರಿಂದ ಯುದ್ಧೋನ್ಮಾದವನ್ನು ಹಬ್ಬಿಸುವ ಮೊದಲು ಈ  ಕುರಿತಾದ ಎಚ್ಚರಿಕೆ ಎಲ್ಲರಲ್ಲೂ ಇರಬೇಕು. ಯುದ್ಧವೆಂದರೆ ಭಾರತದ ಕ್ಷಿಪಣಿಗಳು ಪಾಕಿಸ್ತಾನದ ಮೇಲೆ ಬಾಂಬ್  ಸುರಿಯುತ್ತದೆ ಎಂದಷ್ಟೇ ಅಲ್ಲ,  ಪಾಕಿಸ್ತಾನದ ಕ್ಷಿಪಣಿಗಳು ಭಾರತದ ಮೇಲೂ ಬಾಂಬ್ ಸುರಿಯುತ್ತದೆ ಎಂಬುದೂ  ಹೌದು. ಯುದ್ಧಕ್ಕಿರುವ ಈ ದ್ವಿಮುಖದ ಬಗ್ಗೆ ಅವಜ್ಞೆಯಿಂದ ವರ್ತಿಸುವುದು ಒಂದು ರೀತಿ ಯಲ್ಲಿ  ಜನದ್ರೋಹವಾಗುತ್ತದೆ. ಈ ದೇಶ 130 ಕೋಟಿ ಭಾರತೀಯರದ್ದು. ಅವರೆಲ್ಲರನ್ನೂ ಸುಖವಾಗಿ ಮತ್ತು ಸುರಕ್ಷಿತವಾಗಿ  ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಕೇಂದ್ರ ಸರಕಾರದ ಮೇಲಿದೆ. ಸಮಸ್ಯೆ ಎದುರಾದಾಗಲೆಲ್ಲ ಯುದ್ಧದ  ಭಾಷೆಯಲ್ಲಿ ಮಾತಾಡುವುದೆಂದರೆ ಅದು ತಮ್ಮಿಂದಾದ ವೈಫಲ್ಯವನ್ನು ಮುಚ್ಚಿ ಹಾಕಲು ಶ್ರಮಿಸಿದಂತಾಗುತ್ತದೆ. ಇದು  ರಾಜಕೀಯದಾಟ. ಅಲ್ಲದೆ ಸದಾ ಅಭದ್ರತೆಯಲ್ಲೇ ಬದುಕುವ ದೇಶವೊಂದರ ಮೇಲೆ ಘೋಷಿಸುವ ಯುದ್ಧವು  ಅಣ್ವಸ್ತ್ರ ಪ್ರಯೋಗದಲ್ಲೇ ಕೊನೆಗೊಳ್ಳುವ ಸಾಧ್ಯತೆಯೇ ಹೆಚ್ಚು. ಅಣ್ವಸ್ತ್ರ ಬಳಕೆಯ ಹೊರತು ಪಾಕಿಸ್ತಾನದ ಮುಂದೆ  ಅನ್ಯ ದಾರಿಯೂ ಇಲ್ಲ. ಇದರ ಜೊತೆಗೇ ಆಧುನಿಕ ಜಗತ್ತಿನ ಯುದ್ಧದ ಪರಿಕಲ್ಪನೆಯ ಬಗೆಗೂ ನಮ್ಮಲ್ಲಿ ಪ್ರಜ್ಞೆ  ಇರಬೇಕು. ಇವತ್ತು ಯಾವುದೇ ಸಂಘರ್ಷವು ಎರಡು ರಾಷ್ಟ್ರಗಳ ನಡುವೆ ಮಾತ್ರ ನಡೆಯುವುದಲ್ಲ. ಬಾಹ್ಯ ನೋಟಕ್ಕೆ  ಎರಡು ರಾಷ್ಟ್ರಗಳ ನಡುವೆ ನಡೆಯುತ್ತಿರುವಂತೆ ಕಂಡರೂ ಅವೆರಡರ ಮರೆಯಲ್ಲಿ ಅನೇಕ ರಾಷ್ಟ್ರಗಳು ಅಕ್ಕ-ಪಕ್ಕ  ಸೇರಿಕೊಂಡಿರುತ್ತವೆ. ಮುಖ್ಯವಾಗಿ, ಶಸ್ತ್ರಾಸ್ತ್ರಗಳ ವ್ಯಾಪಾರದ ಉದ್ದೇಶವೇ ಅದರ ಹಿಂದಿರುತ್ತದೆ. ಆದ್ದರಿಂದ ಎರಡು  ರಾಷ್ಟ್ರಗಳ ನಡುವೆ ಯುದ್ಧ ಆರಂಭವಾಗಿದ್ದರೂ ಅದರ ಅಂತ್ಯವನ್ನು ನಿರ್ಧರಿಸುವ ಸಾಮರ್ಥ್ಯ  ಅವೆರಡಕ್ಕಿರುವುದಿಲ್ಲ.  ಇತರ ರಾಷ್ಟ್ರಗಳ ಗೋದಾಮಿನಲ್ಲಿರುವ ಶಸ್ತ್ರಾಸ್ತ್ರಗಳು ಖಾಲಿಯಾಗದೇ ಆ ಯುದ್ಧ ಕೊನೆಗೊಳ್ಳುವುದೂ ಇಲ್ಲ.
ಯುದ್ಧದಾಹಿಗಳಿಗೆ ಇದು ಗೊತ್ತಿರಲಿ.

ಸತ್ಯಾಗ್ರಹ ಮತ್ತು ಬಂದೂಕಿನ ಮುಖಾಮುಖಿ
1896 ಡಿಸೆಂಬರ್ ತಿಂಗಳು
ಮಹಾತ್ಮಾ ಗಾಂಧೀಜಿಯವರು ದಕ್ಷಿಣ ಆಫ್ರಿಕಾದ ಡರ್ಬನ್‍ನ ಬಂದರಿನಲ್ಲಿ ಇಳಿದರು. ಆ ಇಳಿಯುವಿಕೆಯೂ ಸುಲಭದ್ದಾಗಿರಲಿಲ್ಲ. ಬಾಂಬೆಯಿಂದ ಹೊರಟ ಎರಡು ಹಡಗುಗಳಲ್ಲಿ ಒಟ್ಟು 800ರಷ್ಟು ಜನರಿದ್ದರು. ಇವರಲ್ಲಿ ಮಹಾತ್ಮಾ ಗಾಂಧಿ ಮತ್ತು ಅವರ ಪತ್ನಿ, ಇಬ್ಬರು ಮಕ್ಕಳು ಹಾಗೂ ವಿಧವೆ ಸಹೋದರಿಯ ಪುತ್ರನೂ ಸೇರಿದ್ದರು. ಆ ಕಾಲದಲ್ಲಿ ಹಡಗಿನ ಪ್ರಯಾಣಿಕರು ನೇರವಾಗಿ ಇನ್ನೊಂದು ರಾಷ್ಟ್ರದ ಬಂದರಿನಲ್ಲಿ ಇಳಿಯುವಂತಿರಲಿಲ್ಲ. ವೈದ್ಯ ಕೀಯ ಪರೀಕ್ಷೆ ನಡೆಯಬೇಕು. 800 ಮಂದಿಯ ವೈದ್ಯಕೀಯ ಪರೀಕ್ಷೆ ನಡೆಯುವುದೆಂದರೆ ಅದು ಸುಲಭದ ಮಾತೂ ಆಗಿರಲಿಲ್ಲ. ಅಲ್ಲದೇ, ಈ ಎರಡು ಹಡಗುಗಳು ಬಾಂಬೆಯಿಂದ ಹೊರಡುವಾಗ ದೇಶದಲ್ಲಿ ಪ್ಲೇಗ್ ಹಾವಳಿಯಿತ್ತು. ಅದರ ತೀವ್ರತೆ ಎಷ್ಟಿತ್ತೆಂದರೆ ಗಾಂಧೀಜಿಯವರ ಸಹೋದರಿಯ ಪತಿಯೂ ಅದಕ್ಕೆ ಬಲಿಯಾಗಿದ್ದ. ಸ್ವತಃ ಗಾಂಧೀಜಿಯವರೇ ತನ್ನ ಮನೆಗೆ ಕರೆತಂದು ಆರೈಕೆ ಮಾಡಿದರೂ ಆತ ಬದುಕುಳಿದಿರಲಿಲ್ಲ. ಆದ್ದರಿಂದ ಈ ಪ್ರಯಾಣಿಕರ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಆಫ್ರಿಕಾದ ವೈದ್ಯರ ಮೇಲಿತ್ತು. ಇದರ ನಡುವೆ ಈ ಹಡಗಿನಲ್ಲಿರುವ ಭಾರತೀಯರ ವಿರುದ್ಧ ಡರ್ಬನ್‍ನ ಬಿಳಿಯರು ಪ್ರತಿಭಟನೆ ನಡೆಸುತ್ತಿದ್ದರು. ಅವರನ್ನು ಹಡಗಿನಿಂದ ಕೆಳಗಿಳಿಯಲು ಬಿಡಲಾರೆವು ಎಂದು ಘೋಷಿಸುತ್ತಿದ್ದರು. ಎರಡು ಹಡಗುಗಳಲ್ಲಿ ಭಾರತೀಯರನ್ನು ಅಲ್ಲಿಗೆ ಕರೆಸಿಕೊಂಡಿದ್ದು ದಾದಾ ಅಬ್ದುಲ್ಲಾ  ಆಂಡ್ ಕಂಪೆನಿ. ಅದರ ಕಾರ್ಯನಿರ್ವಾಹಕ ಪಾಲುದಾರರಾಗಿದ್ದ ಶೇಕ್ ಅಬ್ದುಲ್ ಕರೀಮ್ ರಾಣೆಯವರಿಗೆ ಈ ಪ್ರತಿಭಟನಾ ನಿರತ ಬಿಳಿಯರು ಬಗೆಬಗೆಯ ಆಮಿಷಗಳನ್ನು ಒಡ್ಡಿದರು. ಅವರನ್ನು ಹಿಂದಕ್ಕೆ ಕಳಿಸಿದರೆ ಕಂಪೆನಿಗಾದ ನಷ್ಟವನ್ನು ತುಂಬಿಕೊಡುವುದಾಗಿಯೂ ಭರವಸೆ ನೀಡಿದರು. ಅಲ್ಲಿನ ಆಡಳಿತದ ಬೆಂಬಲವೂ ಪ್ರತಿಭಟನಾಕಾರರಿಗಿತ್ತು. ಆದರೆ ಶೇಕ್ ಬಗ್ಗಲಿಲ್ಲ. ಯಾವ ಬೆಲೆ ತೆತ್ತಾದರೂ ಈ ಮಂದಿಯನ್ನು ಉಳಿಸಿಕೊಳ್ಳುವೆ ಎಂದು ಸಾರಿದರು. ಕೊನೆಗೆ 23 ದಿನಗಳ ಕಾಲ ಹಡಗಿನಲ್ಲಿ ಬಂಧಿಯಾದ ಗಾಂಧಿ ಮತ್ತು ಇತರ 800 ಮಂದಿ ಡರ್ಬನ್ ಬಂದರಿನಲ್ಲಿ ಇಳಿದರು. ಈ ನಡುವೆ,
ಮಹಾತ್ಮಾ ಗಾಂಧೀಜಿಯವರು ಇಳಿದು ನಾಲ್ಕು ಹೆಜ್ಜೆ ಇಡುತ್ತಲೇ ಎರಡ್ಮೂರು ಬಿಳಿಯರು ಅವರನ್ನು ಗುರುತಿಸಿ ಗಾಂಧಿ, ಗಾಂಧಿ ಎಂದು ಕೂಗಿದರು. ಜನರ ಸಂಖ್ಯೆ ಹೆಚ್ಚಾಯಿತು. ಗಾಂಧೀಜಿಯ ಜೊತೆಗಿದ್ದವರು ಒಂದು ರಿಕ್ಷಾವನ್ನು ಕೂಗಿ ಕರೆದರೂ ಗಾಂಧೀಜಿಯನ್ನು ರಿಕ್ಷಾ ಹತ್ತಲು ಆ ಗುಂಪು ಬಿಡಲಿಲ್ಲ. ರಿಕ್ಷಾ ಚಾಲಕನಿಗೆ ಜೀವ ಬೆದರಿಕೆ ಒಡ್ಡಿ ಹಿಂದಕ್ಕೆ ಕಳುಹಿಸಿದರು. ಗುಂಪು ದೊಡ್ಡದಾಗುತ್ತಾ ಹೋಯಿತು. ಜೊತೆಗೆ ಗಾಂಧೀಜಿಯವರನ್ನು ಥಳಿಸಲು ಪ್ರಾರಂಭಿಸಿತು. ಇಟ್ಟಿಗೆ ಚೂರುಗಳಿಂದ ಮತ್ತು ಕೊಳೆತ ಮೊಟ್ಟೆಗಳಿಂದ ಹಲ್ಲೆ ನಡೆಸಿತು. ಅವರ ಮುಂಡಾಸನ್ನು ಯಾರೋ ಕಸಿದರು. ಮತ್ತೊಬ್ಬರು ಅವರಿಗೆ ಒದ್ದರು. ಮೈಮೇಲೆ ಕೈಹಾಕಿ ಥಳಿಸಿದರು. ಗಾಂಧೀಜಿ ಎಷ್ಟರ ವರೆಗೆ ಅಸಹಾಯಕರಾದರೆಂದರೆ, ಒಂದು ಮನೆಯ ಮುಂದಿರುವ ಕಂಬಿಗಳನ್ನು ಹಿಡಿದುಕೊಂಡರು. ಸರಾಗ ಉಸಿರಾಟವೂ ಕಷ್ಟಕರವಾದ ಪರಿಸ್ಥಿತಿ. ನಗರದ ಪೊಲೀಸ್ ಠಾಣೆಗೆ ಓಡಿ ಹೋಗಿ ಭಾರತೀಯ ಯುವಕನೋರ್ವ ಸುದ್ದಿ ಮುಟ್ಟಿಸದೇ ಇರುತ್ತಿದ್ದರೆ ಅಪಾಯಕಾರಿ ಸನ್ನಿವೇಶವೊಂದು ನಿರ್ಮಾಣವಾಗುವ ಎಲ್ಲ ಸಾಧ್ಯತೆಯೂ ಇತ್ತು. ಬಳಿಕ ಪೊಲೀಸರ ಬೆಂಗಾವಲಿನಲ್ಲಿ ಗಾಂಧೀಜಿಯವರನ್ನು ರುಸ್ತೋಮ್‍ಜಿಯವರ ಮನೆಗೆ ಬಿಡಲಾಯಿತು. ಅದಾಗಲೇ ಅವರ ಪತ್ನಿ, ಮಕ್ಕಳನ್ನು ಅಲ್ಲಿಗೆ ತಲುಪಿಸಲಾಗಿತ್ತು. ಆದರೆ ಪ್ರತಿಭಟನಾಕಾರರ ಗುಂಪು ತಣ್ಣಗಾಗಲಿಲ್ಲ. ಅವರು ರುಸ್ತೋಮ್‍ಜಿಯವರ ಮನೆಯನ್ನು ಸುತ್ತುವರಿದರು. ‘ನಮಗೆ ಗಾಂಧಿ ಬೇಕು, ಆತನನ್ನು ಒಪ್ಪಿಸಿ’ ಎಂದು ಗುಂಪು ಕೂಗುತ್ತಿತ್ತು. ಪರಿಸ್ಥಿತಿ ತೀರಾ ಹದಗೆಡುತ್ತಿದೆ ಎಂದು ಅನಿಸತೊಡಗಿದಾಗ ಪೊಲೀಸ್ ಸುಪರಿಂಟೆಂಡೆಂಟ್ ಅಲೆಕ್ಸಾಂಡರ್ ಅವರು ಒಂದು ತಂತ್ರ ಪ್ರಯೋಗಿಸಿದರು. ಗಾಂಧೀಜಿಯವರ ಬಗ್ಗೆ ಅಲೆಕ್ಸಾಂಡರ್‍ಗೆ ಒಳ್ಳೆಯ ಅಭಿಪ್ರಾಯವಿತ್ತು. ಅವರನ್ನು ಹೇಗಾದರೂ ಉಳಿಸಿ ಕೊಳ್ಳಬೇಕು ಎಂಬ ಹಠ ಇದ್ದಂತಿತ್ತು. ‘ನಿಮಗೆ ಗೆಳೆಯ ರುಸ್ತೋಮ್‍ಜಿಯವರ ಮನೆಯನ್ನು, ಅವರ ಕುಟುಂಬವನ್ನು ಮತ್ತು ಅವರ ಆಸ್ತಿಯನ್ನು ಉಳಿಸಬೇಕೆಂದಿದ್ದರೆ ವೇಷ ಬದಲಾಯಿಸಿಕೊಂಡು ಪಾರಾಗಿ’ ಎಂಬ ಸಂದೇಶವನ್ನು ಕಳಿಸಿ ಕೊಟ್ಟರು. ಅಲೆಕ್ಸಾಂಡರ್‍ರ ಸಂದೇಶವನ್ನು ಒಪ್ಪಿಕೊಂಡ ಗಾಂಧೀಜಿಯವರು ಭಾರತೀಯ ಪೊಲೀಸರ ಸಮವಸ್ತ್ರವನ್ನು ಧರಿಸಿಕೊಂಡರು ಮತ್ತು ತಲೆಯ ಮೇಲೆ ಒಂದು ತಟ್ಟೆಗೆ ಸುತ್ತಿದ್ದ ಮದರಾಸಿ ಉತ್ತರೀಯವನ್ನು ಇಟ್ಟುಕೊಂಡರು. ಅದು ಹೆಲ್ಮೆಟ್ ನಂತೆ ಕಾಣಿಸುತ್ತಿತ್ತು. ಇವರೊಂದಿಗೆ ಇಬ್ಬರು ಪತ್ತೆದಾರರೂ ಹೊರಟರು. ಅವರಲ್ಲಿ ಒಬ್ಬ ಭಾರತೀಯ ವರ್ತಕನಂತೆ ವೇಷ ತೊಟ್ಟಿದ್ದ. ಹಾಗಂತ,
ಬಿಳಿಯರಿಗೆ ಗಾಂಧೀಜಿಯವರ ಮೇಲೆ ದ್ವೇಷ ಹುಟ್ಟಲು ಕಾರಣವೊಂದಿತ್ತು.
ಗಾಂಧೀಜಿಯವರು ಮೊದಲ ಬಾರಿ ದಕ್ಷಿಣ ಆಫ್ರಿಕಾಕ್ಕೆ ಭೇಟಿ ನೀಡಿದ್ದು 1893ರಲ್ಲಿ. ಆಗ ಆಫ್ರಿಕಾಕ್ಕೆ ಅವರೋರ್ವ ಸಾಮಾನ್ಯ ವ್ಯಕ್ತಿ. ಅಲ್ಲಿ ಅವರು ತಮ್ಮ ವಕೀಲ ವೃತ್ತಿಯನ್ನು ಆರಂಭಿಸಿದರು. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಜನರ ಸಮಸ್ಯೆ ಗಳಿಗೆ ಕಿವಿಯಾದರು. ಹೀಗೆ ಮೂರು ವರ್ಷಗಳು ಕಳೆದ ಬಳಿಕ 1896ರಲ್ಲಿ ಅವರು ಭಾರತಕ್ಕೆ ಮರಳಿದರು. ದಕ್ಷಿಣ ಆಫ್ರಿಕಾದ ಬಗ್ಗೆ ಬರೆಯಲು ಪ್ರಾರಂಭಿಸಿದರು. ಹೀಗೆ ಅವರು ಬರೆದ ಪುಸ್ತಕ ‘ಹಸಿರು ಕಿರು ಪುಸ್ತಕ’ ಎಂಬ ಹೆಸರಲ್ಲಿ ಪ್ರಕಟವಾಯಿತು. ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯರ ಚಿತ್ರಣವನ್ನು ಅತ್ಯಂತ ಮೆದುವಾಗಿ ಮತ್ತು ಆವೇಶರಹಿತ ಭಾಷೆಯಲ್ಲಿ ಈ ಪುಸ್ತಕದಲ್ಲಿ ಅವರು ಚಿತ್ರಿಸಿದ್ದರು. ಈ ಹಸಿರು ಕಿರು ಪುಸ್ತಕದ 10 ಸಾವಿರ ಪ್ರತಿಗಳನ್ನು ಆ ಕಾಲದಲ್ಲಿ ಅವರು ಮುದ್ರಿಸಿದರು ಮತ್ತು ಎಲ್ಲ ಪತ್ರಿಕೆಗಳಿಗೂ ಮತ್ತು ಎಲ್ಲ ನಾಯಕರಿಗೂ ಕಳುಹಿಸಿಕೊಟ್ಟರು. ಪಯೋನೀರ್ ಪತ್ರಿಕೆಯು ಆ ಪುಸ್ತಕದ ಬರಹಕ್ಕೆ ಮಹತ್ವ ಕೊಟ್ಟು ಪ್ರಕಟಿಸಿತು. ರಾಯಿಟರ್ ಪತ್ರಿಕೆಯಂತೂ ಲೇಖನದ ಸಾರಾಂಶವನ್ನು ಇಂಗ್ಲೆಂಡ್‍ಗೆ ತಂತಿ ಸಂದೇಶ ರವಾನಿಸಿತು. ಮಾತ್ರವಲ್ಲ, ಈ ಸಾರಾಂಶದ ಸಾರಾಂಶವನ್ನು ರಾಯಿಟರ್ ಪತ್ರಿಕೆಯ ಲಂಡನ್ ಕಚೇರಿಯಿಂದ ಆಫ್ರಿಕಾದ ನಟಾಲ್‍ಗೆ ತಂತಿ ಸಂದೇಶದ ಮೂಲಕ ಕಳುಹಿಸಿಕೊಡಲಾಯಿತು. ಆ ಬಳಿಕ ಎಲ್ಲವೂ ವಿಚಿತ್ರ ತಿರುವನ್ನು ಪಡೆದುಕೊಂಡಿತು. ಆಫ್ರಿಕಾದ ನಟಾಲ್‍ನಲ್ಲಿ ಪತ್ರಿಕೆಗಳು ಬಿತ್ತರಿಸಿದ ಸಂದೇಶದಲ್ಲಿ ಗಾಂಧಿಯ ಮಾತುಗಳಿಗಿಂತ ಅವರದೇ ಮಾತುಗಳು ಹೆಚ್ಚಿದ್ದುವು. ಗಾಂಧೀಜಿಯವರು ಭಾರತಕ್ಕೆ ತೆರಳಿ ಬಿಳಿಯರ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ, ಭಾರತೀಯರನ್ನು ಆಫ್ರಿಕನ್ನರು ಕೆಟ್ಟದಾಗಿ ನೋಡುತ್ತಿದ್ದಾರೆ ಎಂದು ಬರೆದಿದ್ದಾರೆ ಎಂಬೆಲ್ಲಾ ವದಂತಿಗಳನ್ನು ಹರಡಲಾಯಿತು. ನಿಜವಾಗಿ, ‘ಹಸಿರು ಪುಸ್ತಕ’ದಲ್ಲಿ ಗಾಂಧೀಜಿ ಹಾಗೆ ಬರೆದೇ ಇರಲಿಲ್ಲ. ಅವರು ಬರೆಯದೇ ಇರುವುದನ್ನು ಬರೆದಿದ್ದಾರೆ ಎಂಬಂತೆ ಬಿಂಬಿಸಲಾಯಿತು. ಆದ್ದರಿಂದಲೇ, ಗಾಂಧೀಜಿಯವರು 1896 ಡಿಸೆಂಬರ್‍ನಲ್ಲಿ ಕುಟುಂಬ ಸಮೇತ ಮರಳಿ ಆಫ್ರಿಕಾಕ್ಕೆ ತಲುಪಿದಾಗ ಬಿಳಿಯರು ಅವರ ವಿರುದ್ಧ ಡರ್ಬನ್ ಬಂದರಿನಲ್ಲಿ ಒಟ್ಟು ಸೇರಿದ್ದು. ಅಂದಹಾಗೆ,
ಮೊನ್ನೆ ಜನವರಿ 30ರಂದು ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಎಂಬವರು ಗಾಂಧೀಜಿಯವರ ಪ್ರತಿಕೃತಿಗೆ ಗುಂಡು ಹಾರಿಸಿದ್ದು ಮತ್ತು ಸಿಹಿ ತಿಂಡಿ ಹಂಚಿ ಸಂಭ್ರಮಿಸಿದ್ದು ಬಹುಶಃ ಇಂಥದ್ದೇ  ವದಂತಿಯನ್ನು ನಂಬಿದ ಪರಿಣಾಮದಿಂದಾಗಿರಬಹುದೇ ಎಂದೇ ಅನ್ನಿಸುತ್ತದೆ. ಗೋಡ್ಸೆಯ ಗುಂಡಿಗೂ ಇದನ್ನು ಅನ್ವಯಿಸಿ ನೋಡಬಹುದು. ಗಾಂಧೀಜಿ ಪ್ರಕಟಿಸಿದ ‘ಹಸಿರು ಕಿರು ಪುಸ್ತಕ’ದ ಸಾರಾಂಶವನ್ನು ರಾಯಿಟರ್ ಪತ್ರಿಕೆ ಲಂಡನ್ನಿಗೆ ಕಳುಹಿಸುವಾಗ ಏನೇನೋ ಆಯಿತು. ಲಂಡನ್‍ನಿಂದ ನಟಾಲ್‍ಗೆ ಮತ್ತೆ ಆ ಸಾರಾಂಶವನ್ನು ಕಿರಿದುಗೊಳಿಸಿ ಕಳುಹಿಸುವಾಗ ಮತ್ತಿನ್ನೇನೋ ಆಯಿತು. ನಟಾಲ್‍ನ ಪತ್ರಿಕೆಗಳಲ್ಲಿ ಅದು ಪ್ರಕಟವಾಗುವಾಗ ಇನ್ನಷ್ಟು ಅದು ಕುರೂಪಗೊಂಡಿತು. ಮೂಲ ಬರಹಕ್ಕೆ ವಿಪರೀತಾರ್ಥ ಬರುವ ರೀತಿಯಲ್ಲಿ ಅದು ಆಫ್ರಿಕಾದಲ್ಲಿ ಪ್ರಕಟಗೊಂಡಿತು. ಈ ಶಕುನ್ ಪಾಂಡೆ ಓದಿರುವ ಗಾಂಧೀಜಿಯೂ ಹೀಗೆಯೇ ಆಗಿರಬಹುದೇ? ಗಾಂಧೀಜಿಯಲ್ಲದ ಗಾಂಧೀಜಿಯನ್ನು ಅವರು ಓದಿರಬಹುದೇ? ಅಥವಾ ಓದಿಯೇ ಇಲ್ಲವೇ? ಗಾಂಧೀಜಿ ಯವರ ಆತ್ಮಕತೆಯನ್ನು ಅವರು ಓದಿರಬಹುದೇ? ಹಿಂದೂ ಧರ್ಮದ ಬಗ್ಗೆ, ರಾಮನ ಬಗ್ಗೆ, ಮಂದಿರಗಳ ಬಗ್ಗೆ, ಆಧ್ಯಾತ್ಮದ ಬಗ್ಗೆ ಗಾಂಧೀಜಿಯವರ ನಿಲುವುಗಳನ್ನು ಅವರು ಅಧ್ಯಯನ ಮಾಡಿರಬಹುದೇ? ಗಾಂಧೀಜಿಯವರ ಆತ್ಮಕತೆಯನ್ನು ಓದಿದ ಯಾರಿಗೇ ಆಗಲಿ, ಅವರೆಷ್ಟು ಒಳ್ಳೆಯ ಶ್ರದ್ಧಾವಂತ ಹಿಂದೂ ಅನ್ನುವುದು ಗೊತ್ತಾಗುತ್ತದೆ ಮತ್ತು ಅವರ ಮೇಲೆ ಅಭಿಮಾನ ಮೂಡುತ್ತದೆ. ಗೋಡ್ಸೆಗೂ ಅವರ ಅನುಯಾಯಿಗಳಿಗೂ ಇರುವ ಸಮಸ್ಯೆ ಏನೆಂದರೆ, ಅವರು ಸಂವಾದಕ್ಕೆ ಸಿದ್ಧರಾಗುವುದಿಲ್ಲ. ಗಾಂಧೀಜಿಯವರು ಮೈಗೆ ಮಾತ್ರ ಬಟ್ಟೆ ಧರಿಸದೇ ಇದ್ದುದಲ್ಲ, ವಿಚಾರಗಳಿಗೂ ಬಟ್ಟೆ ಧರಿಸುತ್ತಿರಲಿಲ್ಲ. ಅವರು ಮುಕ್ತವಾಗಿದ್ದರು. ಆದರೆ, ಗೋಡ್ಸೆಯ ಬಗ್ಗೆ ಇಂಥದ್ದೊಂದು ವಿವರ ಸಿಗುವುದೇ ಇಲ್ಲ. ಮುಂಬೈ-ಪುಣೆಯ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಗೋಡ್ಸೆ 16ನೇ ವರ್ಷಕ್ಕೇ ಬಟ್ಟೆಯಂಗಡಿಯನ್ನು ತೆರೆದ. ಬಾಗಿಲು ಮುಚ್ಚಿದ. ಆ ಬಳಿಕ ಟೈಲರಿಂಗ್ ವೃತ್ತಿಯನ್ನು ಪ್ರಾರಂಭಿಸಿದ. ವಿಶೇಷ ಏನೆಂದರೆ, ಈ ಎರಡೂ ವೃತ್ತಿಗಳು ಬ್ರಾಹ್ಮಣ ಕುಟುಂಬ ನಿರ್ವಹಿಸುವಂಥದ್ದಾಗಿರಲಿಲ್ಲ. ಟೈಲರಿಂಗ್ ಎಂಬುದು ಕೆಳಜಾತಿಯ ವೃತ್ತಿ. ಇವತ್ತೂ ಬ್ರಾಹ್ಮಣರು ಟೈಲರಿಂಗ್ ವೃತ್ತಿಯಲ್ಲಿ ತೊಡಗಿಕೊಂಡಿರುವುದು ಶೂನ್ಯ ಅನ್ನುವಷ್ಟು ಕಡಿಮೆ. ಬಟ್ಟೆಯಂಗಡಿಯೂ ಬ್ರಾಹ್ಮಣೇತರ ಜಾತಿಯ ವೃತ್ತಿ. ಆದರೆ, ಬಡತನವು ಗೋಡ್ಸೆಯ ಪಾಲಿಗೆ ಇವೆರಡೂ ವೃತ್ತಿಯನ್ನು ಅನಿವಾರ್ಯವಾಗಿಸಿತ್ತು. ಬಹುಶಃ, ಸಾಮಾಜಿಕ ಮನ್ನಣೆ, ಗೌರವದ ದೃಷ್ಟಿಯಿಂದ ಸರಿಹೊಂದದ ವೃತ್ತಿಯಲ್ಲಿ ಸಣ್ಣ ಪ್ರಾಯದಲ್ಲೇ  ತೊಡಗಿಸ ಬೇಕಾಗಿ ಬಂದುದು ಆತನನ್ನು ವ್ಯಗ್ರನನ್ನಾಗಿ ಮಾಡಿರಬಹುದೇ? ಧಾರ್ಮಿಕ ಉಗ್ರತನವೆಂಬುದು ಧಾರ್ಮಿಕ ಕಾರಣಕ್ಕಾಗಿಯೇ ಹುಟ್ಟಿಕೊಳ್ಳಬೇಕೆಂದಿಲ್ಲ. ಧರ್ಮೇತರ ಸಂದರ್ಭ, ಸನ್ನಿವೇಶಗಳೂ ವ್ಯಕ್ತಿಯೋರ್ವನನ್ನು ಧ್ರರ್ಮಶ್ರದ್ಧೆಯವನನ್ನಾಗಿ, ಅಂಧಭಕ್ತನಾಗಿ ಮತ್ತು ಉಗ್ರನಾಗಿ ಪರಿವರ್ತಿಸ ಬಹುದು. ಗೋಡ್ಸೆ ಅಂಥದ್ದೊಂದು ಸನ್ನಿವೇಶದ ಬೀಜವೇ? ಎಳವೆಯಲ್ಲೇ  ಅವಮಾನಕಾರಿ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕಾದ ಸನ್ನಿವೇಶವು ಆತನನ್ನು ಅಸಂವಾದಿಯಾಗಿ ಮತ್ತು ಒಳ್ಳೆಯದನ್ನು ದ್ವೇಷಿಸುವವನಾಗಿ ಪರಿವರ್ತಿಸಿತೇ? ಗಾಂಧೀಜಿಗೆ ಮುಖಾಮುಖಿಯಾಗಿ ಆತನನ್ನು ತಂದಿಟ್ಟರೆ ಶ್ರದ್ಧಾವಂತ ಹಿಂದೂವಾಗಿ ಗಾಂಧೀಜಿಯವರೇ ಹೆಚ್ಚು ಅಂಕ ಪಡೆಯುತ್ತಾರೆ. ಅವರ ಮೃತದೇಹದ ತಲೆಯ ಭಾಗದಲ್ಲಿ ಹೇ ರಾಮ್ ಮತ್ತು ಕಾಲಿನ ಭಾಗದಲ್ಲಿ ಓಂ ಎಂದು ಹೂವಿನಲ್ಲಿ ಬಿಡಿಸಿದುದೂ ಇದಕ್ಕೊಂದು ಪುರಾವೆ. ಇಂಥ ಪುರಾವೆಗಳು ನೂರಾರು ಇವೆ. ಅವರು 1896ರಲ್ಲಿ ಆಫ್ರಿಕಾದಿಂದ ಭಾರತಕ್ಕೆ ಬಂದಿಳಿದ ತಕ್ಷಣ ಬಾಂಬೆಗೆ ಹೋಗುವ ರೈಲಿನಿಂದ ಅಲಹಾಬಾದ್‍ನಲ್ಲಿ ಇಳಿದು ತ್ರಿವೇಣಿ (ಮೂರು ನದಿಗಳ ಸಂಗಮ) ಸಂಗಮದ ದರ್ಶನ ಪಡೆದುದೂ ಇದಕ್ಕೆ ಇನ್ನೊಂದು ಪುರಾವೆ. ಅವರ ಆತ್ಮಕತೆಯಲ್ಲಿ ಇಂಥ ಅನೇಕಾರು ಸಾಕ್ಷ್ಯಗಳಿವೆ. ಗಾಂಧೀಜಿಯನ್ನು ಮುಂದಿಟ್ಟುಕೊಂಡು ಗೋಡ್ಸೆಯ ಬದುಕನ್ನು ಕೆದಕುತ್ತಾ ಹೋದರೆ, ಆತ ಅಲ್ಪವಾಗುತ್ತಲೇ ಹೋಗುತ್ತಾನೆ. ಗಾಂಧೀಜಿಯಂಥ ತೆರೆದ ಮನಸ್ಸೂ ಆತನದಲ್ಲ. ಅವರಷ್ಟು ಉತ್ತಮ ಶ್ರದ್ಧಾವಂತ ವ್ಯಕ್ತಿಯೂ ಆತನಲ್ಲ. ಮುಖ್ಯವಾಗಿ, ಆತನ ವಿಚಾರಧಾರೆ ಏನೋ ಅದರ ಬಗ್ಗೆ ಸಾರ್ವಜನಿಕವಾಗಿ ಚರ್ಚೆಗೆ ಆತ ಇಳಿದವನಲ್ಲ. ಗಾಂಧೀಜಿ ಸಂವಾದವನ್ನು ಇಷ್ಟ ಪಟ್ಟಿದ್ದರೆ ಆತ ಅದನ್ನು ದ್ವೇಷಿಸಿಕೊಂಡೇ ಬೆಳೆದ. ಎಲ್ಲವನ್ನೂ ಬಲವಂತದಿಂದ ಹೇರುವ ಮನಸ್ಥಿತಿ ಆತನದು. ಬ್ರಿಟಿಷರನ್ನು ದ್ವೇಷಿಸುವುದು ಗಾಂಧೀಜಿಯ ಉದ್ದೇಶವಾಗಿರಲಿಲ್ಲ. ಆಡಳಿತವನ್ನು ಸುಲಲಿತವಾಗಿ ಭಾರತೀಯರ ಕೈಗೆ ವರ್ಗಾಯಿಸುವುದು ಅವರ ಗುರಿಯಾಗಿತ್ತು. ಆದರೆ, ಗೋಡ್ಸೆಯಲ್ಲಿ ಬಲವಂತವಿತ್ತು. ಆತ ಪ್ರತಿಪಾದಿಸುವ ವಿಚಾರಧಾರೆಯಲ್ಲಿ ಗಾಂಧೀಜಿಯವರ ಸಹಜತೆಯೋ ಸುಲಲಿತತೆಯೋ ಇರಲಿಲ್ಲ. ಆದ್ದರಿಂದಲೇ, ಗಾಂಧೀಜಿಯವರು ಸತ್ಯಾಗ್ರಹವನ್ನು ಎತ್ತಿಕೊಂಡಾಗ ಆತ ಬಂದೂಕನ್ನು ಎತ್ತಿಕೊಂಡ. ನಿಜವಾಗಿ, ಸತ್ಯಾಗ್ರಹ ಮತ್ತು ಬಂದೂಕು ಇವೆರಡೂ ಇಬ್ಬರು ವ್ಯಕ್ತಿಗಳನ್ನು ಪ್ರತಿನಿಧಿಸುವುದಲ್ಲ, ಎರಡು ವಿಚಾರಧಾರೆಗಳನ್ನು ಪ್ರತಿನಿಧಿಸುತ್ತದೆ. ಗಾಂಧೀಜಿಯವರು ಸತ್ಯಾಗ್ರಹದ ಮೂಲಕ ಬೃಹತ್ ಸಾಮ್ರಾಜ್ಯ ಶಾಹಿತ್ವವನ್ನೇ ಮಣಿಸಿದರು. ಆದರೆ, ಗೋಡ್ಸೆಯ ಬಂದೂಕಿಗೆ ಭಾರತ ಬಿಡಿ, ಪುಣೆಯ ಪುಟ್ಟ ಹಳ್ಳಿಯ ಮೇಲೂ ಪ್ರಾಬಲ್ಯ ಸ್ಥಾಪಿಸಲು ಸಾಧ್ಯವಾಗಿಲ್ಲ. ಆ ಬಂದೂಕು ಮತ್ತೆ ಮತ್ತೆ ಸೋಲುತ್ತಲೂ ಅಲ್ಪವಾಗುತ್ತಲೂ ಇರುತ್ತದೆ. ಮೊನ್ನೆ,
ಕೃತಕ ಬಂದೂಕು ಬಳಸಿ ಪೂಜಾ ಶಕುನ್ ಪಾಂಡೆ ಹಾರಿಸಿದ ಗುಂಡಿನ ಘಟನೆಗೆ ಒಂದು ಡಜನ್‍ನಷ್ಟು ಮಂದಿ ಮಾತ್ರವೇ ಉಪಸ್ಥಿತರಿದ್ದುದು ಇದಕ್ಕೆ ಬಲವಾದ ಸಾಕ್ಷಿ.