Monday, June 16, 2014

ಗಾಝಿ ಪಾರ್ಕ್, ವಿಶ್ವಕಪ್ ಫುಟ್ಬಾಲ್ ಮತ್ತು ಪೌಲೋ ಇಟೋರ ಆ ಮಗು..

   2013 ಮೇ 28ರಂದು ಬೆಳಿಗ್ಗೆ ಟರ್ಕಿಯ ತಕ್ಸಿಮ್ ಗಾಝಿ ಪಾರ್ಕ್‍ನಲ್ಲಿ 50 ಮಂದಿ ಪರಿಸರಪ್ರಿಯರು ಪ್ರತಿಭಟನೆಗೆ ಕುಳಿತಾಗ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಮುಂದೆ ಈ ಪ್ರತಿಭಟನೆಯು ಇಡೀ ಟರ್ಕಿಯಾದ್ಯಂತ ಚರ್ಚೆಗೊಳಗಾಗುತ್ತದೆ ಮತ್ತು ಅಮೇರಿಕದ ನ್ಯೂಯಾರ್ಕ್ ಟೈಮ್ಸ್, ದಿ ಟೈಮ್ಸ್ ನಂಥ ಪ್ರಮುಖ ಪತ್ರಿಕೆಗಳು ಈ ಪ್ರತಿಭಟನೆಗಾಗಿ ಪುಟಗಟ್ಟಲೆ ಜಾಗ ವಿೂಸಲಿಡುತ್ತವೆ ಎಂದು ನಿರೀಕ್ಷಿಸುವುದಕ್ಕೆ ಏನೂ ಅಲ್ಲಿರಲಿಲ್ಲ. ಆದರೆ, ಪ್ರತಿಭಟನೆ ಮೇ 29ರಂದೂ ಮುಂದುವರಿಯಿತು. 50 ಮಂದಿಯ ಗುಂಪು ಐನೂರು, ಸಾವಿರವಾಗಿ ಬೆಳೆಯತೊಡಗಿತು. ಪುರಾತನ ಗಾಝಿ ಪಾರ್ಕನ್ನು ಕೆಡವಿ ಶಾಪಿಂಗ್ ಮಾಲ್ ಮತ್ತು ವಸತಿ ನಿರ್ಮಾಣಕ್ಕೆ ಮುಂದಾಗಿದ್ದ ಟರ್ಕಿ ಸರಕಾರದ ನಿಲುವನ್ನು ಖಂಡಿಸುವುದಕ್ಕಾಗಿ ಆರಂಭದಲ್ಲಿ ಒಟ್ಟು ಸೇರಿದ್ದ ಪ್ರತಿಭಟನಾಕಾರರು ದಿನ ಕಳೆದಂತೆಯೇ ತಮ್ಮ ಬೇಡಿಕೆಯ ಪಟ್ಟಿಯನ್ನು ವಿಸ್ತರಿಸತೊಡಗಿದರು. 2002ರಿಂದ ಅಧಿಕಾರದಲ್ಲಿರುವ ರಜಬ್ ತಯ್ಯಿಬ್ ಉರ್ದುಗಾನ್‍ರ ಸರಕಾರವು ಟರ್ಕಿಯನ್ನು ಇಸ್ಲಾವಿೂಕರಿಸುತ್ತಿದೆ ಎಂದು ಅವರು ಆರೋಪಿಸಿದರು. ವಿಶ್ವವಿದ್ಯಾಲಯಗಳ ಕ್ಯಾಂಪಸ್‍ನಲ್ಲಿ ಮದ್ಯ ಮಾರಾಟಕ್ಕೆ ವಿಧಿಸಿರುವ ನಿಷೇಧವನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಇಸ್ಲಾವಿೂ ವಿಚಾರಧಾರೆಗಳನ್ನು ಕಲಿಸುವುದಕ್ಕಾಗಿ 2012ರಲ್ಲಿ ‘ಪಠ್ಯಪುಸ್ತಕಗಳ ಸುಧಾರಣಾ ಮಸೂದೆಯನ್ನು’ ಪಾರ್ಲಿಮೆಂಟ್‍ನಲ್ಲಿ ಮಂಡಿಸಿ ಅನುಮೋದಿಸಿರುವುದನ್ನು ಖಂಡಿಸಿದರು. ‘ದೈವಭಕ್ತ ಪೀಳಿಗೆ’(Pious generation)ಯನ್ನು ಟರ್ಕಿಯಲ್ಲಿ ಕಾಣಬಯಸುವೆ' ಎಂದ ಉರ್ದುಗಾನ್‍ರನ್ನು ಟೀಕಿಸಿದರು. 2002, 2007 ಮತ್ತು 2011ರ ಚುನಾವಣೆಯಲ್ಲಿ ನಿರಂತರವಾಗಿ ಗೆಲುವು ಸಾಧಿಸುತ್ತಾ ಬಂದಿರುವ ಉರ್ದುಗಾನ್‍ರ ಸರಕಾರವು ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು. ಹೀಗೆ ಗಾಝಿ ಪಾರ್ಕ್‍ನಲ್ಲಿ ಆರಂಭವಾದ ಪ್ರತಿಭಟನೆಯು ಬಳಿಕ ಝವಿೂರ್, ಬರ್ಸಾ, ಅಂಟಾಲಿಯಾ, ಎಸ್ಕಿಸ್, ಯಹಿರ್, ಕಸೀರ್, ಎಡಿರ್ನೆ, ಮೆರ್ಸಿನ್.. ಮುಂತಾದ ಹತ್ತಾರು ನಗರಗಳಿಗೆ ಹಬ್ಬಿಕೊಂಡಿತಲ್ಲದೇ ಯುರೋಪ್, ಅಮೇರಿಕ ಸಹಿತ ಇತರ ರಾಷ್ಟ್ರಗಳಲ್ಲೂ ಕಾಣಿಸಿಕೊಂಡಿತು. ಪ್ರತಿಭಟನಾಕಾರರನ್ನು ಗಾಝಿ ಪಾರ್ಕ್‍ನಿಂದ ಬಲವಂತವಾಗಿ ತೆರವುಗೊಳಿಸಲಾಯಿತಾದರೂ ಪ್ರತಿರೋಧ ನಿಲ್ಲಲಿಲ್ಲ. ಈ ಮಧ್ಯೆ, What's Happening in Turkey (ಟರ್ಕಿಯಲ್ಲಿ ನಡೆಯುತ್ತಿರುವುದೇನು?) ಎಂಬ ಶೀರ್ಷಿಕೆಯಲ್ಲಿ 2013 ಜೂನ್ 7ರಂದು ನ್ಯೂಯಾಕ್ ಟೈಮ್ಸ್ ನಲ್ಲಿ ಒಂದು ಪುಟದ ಜಾಹೀರಾತು ಪ್ರಕಟವಾಯಿತು. ಪ್ರತಿಭಟನಾಕಾರರನ್ನು ಬೆಂಬಲಿಸಿ ಮತ್ತು ಉರ್ದುಗಾನ್ ರನ್ನು ಖಂಡಿಸಿ ಪ್ರಕಟವಾದ ಆ ಜಾಹೀರಾತಿನ ಸರಿಸುಮಾರು ಒಂದೂವರೆ ತಿಂಗಳ ಬಳಿಕ ಜುಲೈ 24ರಂದು ದಿ ಟೈಮ್ಸ್ ಮ್ಯಾಗಸಿನ್ ಪತ್ರಿಕೆಯು  ಒಂದು ಪುಟದ ಬಹಿರಂಗ ಪತ್ರವನ್ನು ಪ್ರಕಟಿಸಿತು. ಆ ಪ್ರಕಟಣೆ ಎಷ್ಟು ಪ್ರಚೋದಕವಾಗಿತ್ತೆಂದರೆ, ಪತ್ರಿಕೆಯ ವಿರುದ್ಧ ಮೊಕದ್ದಮೆ ಹೂಡುವುದಾಗಿ ಉರ್ದುಗಾನ್ ಬೆದರಿಸಿದರು. ನಿಜವಾಗಿ, ಟರ್ಕಿಯ ಜಿಡಿಪಿಯು ಪಾತಾಳ ಕಂಡಿದ್ದ ಸಮಯದಲ್ಲಿ ಅಧಿಕಾರಕ್ಕೆ ಬಂದವರು ಉರ್ದುಗಾನ್. ಆ ಬಳಿಕ ಟರ್ಕಿಯ ಆರ್ಥಿಕ ಪ್ರಗತಿಯಲ್ಲಿ ಯಾವ ಮಟ್ಟದ ಏರಿಕೆಯಾಯಿತೆಂದರೆ, 2011ರ ಅಂಕಿ-ಅಂಶದಂತೆ ಜಿಡಿಪಿಯಲ್ಲಿ ಶೇ. 12ಕ್ಕಿಂತಲೂ ಅಧಿಕ ದರವನ್ನು ದಾಖಲಿಸಿತು. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಮತ್ತು ಜಗತ್ತಿನ ಜನಪ್ರಿಯ ಪ್ರವಾಸಿ ತಾಣಗಳುಳ್ಳ ರಾಷ್ಟ್ರಗಳಲ್ಲಿ 6ನೇ ಸ್ಥಾನದಲ್ಲಿರುವ ಟರ್ಕಿಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದ ಗೌರವ ಉರ್ದುಗಾನ್‍ರಿಗಿದೆ. ಅವರು ವಿದೇಶಿ ಹೂಡಿಕೆಯನ್ನು ಆಕರ್ಷಿಸಿದರು. ಹೊಸ ಹೊಸ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡರು. ಆಧುನಿಕ ಅಭಿವೃದ್ಧಿ ಕಲ್ಪನೆಗಳ ಬಗ್ಗೆ ಅವರಲ್ಲಿರುವ ಸಂತುಲಿತ ನಿಲುವೇ ಅವರನ್ನು ಜನಪ್ರಿಯ ನಾಯಕನನ್ನಾಗಿ ಮಾರ್ಪಡಿಸಿತ್ತು. ಆದರೆ ಮೇ 28 ರಂದು ಪ್ರಾರಂಭವಾದ ಪ್ರತಿಭಟನೆಯು ಇಡೀ ಪ್ರವಾಸೋದ್ಯಮವನ್ನೇ ಕೆಡಿಸಿಬಿಟ್ಟಿತು. ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಕೆ ಉಂಟಾಯಿತು. ಆದಾಯ ಸ್ಥಗಿತಗೊಂಡಿತು. ಆದರೂ ಪ್ರತಿಭಟನೆ ನಿಲ್ಲದೇ ಹೋದಾಗ ಉರ್ದುಗಾನ್ ಇಡೀ ಪ್ರತಿಭಟನೆಯ ಕುರಿತೇ ಅನು ಮಾನಗೊಂಡರು. ಆಗ ಅವರಿಗೆ ಸಿಕ್ಕಿದ್ದೇ ಅಮೇರಿಕದ ಪೆನ್ಸಿಲ್ವೇನಿಯಾದಲ್ಲಿ ನೆಲೆಸಿರುವ ಫತ್‍ಹುಲ್ಲ ಗುಲಾನ್. ಒಂದೊಮ್ಮೆ ಟರ್ಕಿಯಲ್ಲಿ ನೆಲೆಸಿ ಹಿಸ್ಮತ್ ಆಂದೋಲನವನ್ನು ಹುಟ್ಟು ಹಾಕಿದ್ದ ಗುಲಾನ್‍ರು ಗಾಝಿ ಪಾರ್ಕ್‍ನ ನೆಪದಲ್ಲಿ ತನ್ನ ವಿರುದ್ಧ ಪ್ರತಿಭಟನೆಯನ್ನು ಏರ್ಪಡಿಸಿದ್ದಾರೆ ಎಂಬುದು ಖಚಿತಗೊಳ್ಳುತ್ತಲೇ ಉರ್ದುಗಾನ್ ಚುರುಕಾದರು. ಪ್ರತಿಭಟನಾಕಾರರ ವಿರುದ್ಧ ನಿಷ್ಠುರ ಕ್ರಮ ಕೈಗೊಂಡರು. ನಾಲ್ಕೈದು ತಿಂಗಳುಗಳ ಕಾಲ ನಡೆದ ಈ ಪ್ರತಿಭಟನೆಯ ದಟ್ಟ ನೆರಳಿನಲ್ಲಿಯೇ 2014 ಮಾರ್ಚ್‍ನಲ್ಲಿ ಪ್ರಾದೇಶಿಕ ಸಂಸ್ಥೆಗಳಿಗೆ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಉರ್ದುಗಾನ್‍ರ ಏ.ಕೆ.ಪಿ. ಪಕ್ಷವು ಸೋಲುತ್ತದೆಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಶೇ. 40ರಷ್ಟು ಮತಗಳನ್ನು ಪಡೆಯುವ ಮೂಲಕ ಉರ್ದುಗಾನ್‍ರ ಪಕ್ಷವು ಈ ಹಿಂದಿನ ಸಾಧನೆಯನ್ನೂ ವಿೂರಿ ಬೆಳೆಯಿತು..
   ಇದೀಗ ಬ್ರೆಝಿಲ್‍ನಲ್ಲೂ ಇಂಥದ್ದೇ ಪ್ರತಿಭಟನೆ ಪ್ರಾರಂಭವಾಗಿದೆ..
1500 ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತವನ್ನು ವಿಶ್ವಕಪ್ ಫುಟ್ಬಾಲ್‍ಗಾಗಿ ಖರ್ಚು ಮಾಡುತ್ತಿರುವ ಬ್ರೆಝಿಲ್ ಸರಕಾರದ ವಿರುದ್ಧ ಅಲ್ಲಿನ ಜನರು ಬೀದಿಗಿಳಿದಿದ್ದಾರೆ. ಹಿಂದಿನ ಮೂರು ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗಳಿಗೆ ಖರ್ಚು ಮಾಡಲಾದ ಒಟ್ಟು ಮೊತ್ತವನ್ನು ಈ ವಿಶ್ವಕಪ್‍ಗೆ ಖರ್ಚು ಮಾಡುತ್ತಿರುವ ಸರಕಾರದ ನಿಲುವನ್ನು ಅವರು ಖಂಡಿಸುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಈ ಮೊತ್ತವನ್ನು ಖರ್ಚು ಮಾಡಿ ಎಂದವರು ಒತ್ತಾಯಿಸುತ್ತಿದ್ದಾರೆ. ಬ್ರೆಝಿಲ್‍ನ ಪ್ರಸಿದ್ಧ ಕಲಾವಿದ ಪೌಲೋ ಇಟೋ ಎನ್ನುವವ ಮೇ 10ರಂದು ಸಾವೋ ಪೌಲೋ ನಗರದ ಶಾಲೆಯೊಂದರ ಗೋಡೆಯಲ್ಲಿ ಒಂದು ಚಿತ್ರವನ್ನು ಬಿಡಿಸಿದ್ದ. ತನ್ನೆದುರಿನ ಬಟ್ಟಲಿನಲ್ಲಿ ಫುಟ್ಬಾಲನ್ನು ಇಟ್ಟುಕೊಂಡಿರುವ ಬಡ ಹುಡುಗನೋರ್ವ ಆಹಾರಕ್ಕಾಗಿ ಅಂಗಲಾಚುತ್ತಿರುವ ದೃಶ್ಯ. ಈ ಚಿತ್ರ ಎಷ್ಟು ಪ್ರಸಿದ್ಧ ವಾಯಿತೆಂದರೆ ಜಾಗತಿಕ ಮಾಧ್ಯಮಗಳು ಈ ಚಿತ್ರಕ್ಕೆ ವ್ಯಾಪಕ ಪ್ರಚಾರ ಕೊಟ್ಟವು. ಫುಟ್ಬಾಲ್ ಪಂದ್ಯಾವಳಿಗೆ ಹಣ ಹೊಂದಿಸುವುದಕ್ಕಾಗಿ ಬಸ್ಸು, ರೈಲು, ಆಹಾರ ವಸ್ತುಗಳಿಗೆ ಬೆಲೆ ಏರಿಸಿದುದನ್ನು ಖಂಡಿಸಿ 2014 ಮೇ 22ರಂದು ಪ್ರಾರಂಭಗೊಂಡ ಪ್ರತಿಭಟನೆಯು ಎಡಪಂಥೀಯ ಅಧ್ಯಕ್ಷೆ ಡೆಲ್ಮಾ ರುಸ್ಸೆಫ್‍ರನ್ನು ಕಂಗೆಡಿಸುವಷ್ಟು ಪ್ರಮಾಣದಲ್ಲಿ ವ್ಯಾಪಕಗೊಂಡಿತು. ಫುಟ್ಬಾಲ್ ಕ್ರೇಝೆ ಇಲ್ಲದ ಮನಾಸ್ ಮತ್ತು ಕುಯಿಬ ಎಂಬ ನಗರಗಳಲ್ಲೂ ಬೃಹತ್ ಮೈದಾನಗಳನ್ನು ನಿರ್ಮಿಸಲಾಗಿದ್ದು ವಿಶ್ವಕಪ್ ಮುಗಿದ ಬಳಿಕ ಇವು ನಿಷ್ಪ್ರಯೋಜಕವಾಗಲಿದೆ ಎಂಬ ಆರೋಪವೂ ಕೇಳಿಬಂತು. ಅಂದಹಾಗೆ, ಫುಟ್ಬಾಲ್ ಸ್ಟೇಡಿಯಂನಿಂದ ವಿಮಾನ ನಿಲ್ದಾಣಕ್ಕೆ ಹೋಗಲು ಅದ್ದೂರಿ ರಸ್ತೆಗಳನ್ನು ನಿರ್ಮಿಸಲಾಗಿದೆ. ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಬೃಹತ್ ಅಕ್ವೇರಿಯಂಗಳ ಸಹಿತ ಹತ್ತಾರು ಯೋಜನೆಗಳನ್ನು ಜಾರಿಮಾಡಲಾಗಿದೆ. ಈಗಾಗಲೇ 2 ಲಕ್ಷದಷ್ಟು ಮಂದಿಯನ್ನು ತೆರವುಗೊಳಿಸಲಾಗಿದ್ದು, ಪಟ್ಟಣವನ್ನು ಸುಂದರಗೊಳಿಸುವುದಕ್ಕಾಗಿ ಸ್ಲಂಗಳನ್ನು, ಬಡವರನ್ನು ಬೇರೆ ಕಡೆಗೆ ಸ್ಥಳಾಂತರಗೊಳಿಸಲಾಗುತ್ತಿದೆ. ಎಲ್ಲ ಮೈದಾನಗಳ ಸುತ್ತಲಿನ 2 ಕಿಲೋ ವಿೂಟರ್ ಪ್ರದೇಶವು 'exclusion  zone' ಆಗಿರುತ್ತದೆ. ಆ ಪ್ರದೇಶವು ಸಂಪೂರ್ಣವಾಗಿ FIFAದ(ವಿಶ್ವ ಫುಟ್ಬಾಲ್ ಸಂಸ್ಥೆ)  ನಿಯಂತ್ರಣದಲ್ಲಿರುತ್ತದೆ. FIFA ಯಾವ ಶಾಪ್, ಮಳಿಗೆ, ಉತ್ಪನ್ನಗಳಿಗೆ ಅನುಮತಿ ನೀಡುತ್ತದೋ ಅವನ್ನು ಮಾತ್ರ ಆ ಪ್ರದೇಶದಲ್ಲಿ ಮಾರಾಟ ಮಾಡಬಹುದು. 2010ರಲ್ಲಿ ಆಫ್ರಿಕಾದಲ್ಲಿ ನಡೆದ ಫುಟ್ಬಾಲ್ ವಿಶ್ವಕಪ್‍ನ ವೇಳೆಯಲ್ಲೂ ಬೀದಿ ವ್ಯಾಪಾರಿಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. FIFAದ ನಿಯಮದಿಂದಾಗಿ ಒಂದು ಲಕ್ಷದಷ್ಟಿರುವ ತಮ್ಮ ಆದಾಯಕ್ಕೆ ಪೆಟ್ಟು ಬಿದ್ದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.
   ಹಾಗಿದ್ದರೂ, ಫುಟ್ಬಾಲನ್ನೇ ತಿನ್ನುವ, ಕುಡಿಯುವ, ಮಲಗುವ ದೇಶವೊಂದರಲ್ಲಿ ಇಂಥದ್ದೊಂದು ಪ್ರತಿಭಟನೆ
  
ಹುಟ್ಟಿಕೊಂಡಿರುವುದಕ್ಕೆ ಅಚ್ಚರಿಪಡುವವರು ಅಸಂಖ್ಯ ಮಂದಿಯಿದ್ದಾರೆ. ಬ್ರೆಝಿಲ್ ಎಂದಲ್ಲ, ಯುರೋಪ್ ಮತ್ತು ಆಫ್ರಿಕಾ ಖಂಡಗಳಲ್ಲಿ ಫುಟ್ಬಾಲ್ ಬರೇ ಆಟ ಮಾತ್ರವೇ ಅಲ್ಲ; ವಿಮೋಚನೆ, ಪ್ರತೀಕಾರ, ಜಿದ್ದಿನ ಸಂಕೇತ ಕೂಡ. ಆಫ್ರಿಕನ್ ರಾಷ್ಟ್ರಗಳಂತೂ ಫುಟ್ಬಾಲ್ ಅನ್ನು ಆಟಕ್ಕಿಂತ ಹೆಚ್ಚು ಪ್ರತೀಕಾರದ ದೃಷ್ಟಿಯಿಂದಲೇ ಆಡುತ್ತಿದೆ. ಫುಟ್ಬಾಲ್, ಆಫ್ರಿಕನ್ ಖಂಡದ ಆಟವಲ್ಲ. ಅವರಿಗೆ ಯುರೋಪಿನ ಸಾಮ್ರಾಜ್ಯಶಾಹಿ ಶಕ್ತಿಗಳು ಅದನ್ನು ಪರಿಚಯಿಸಿವೆ. ಇವತ್ತು ಆಫ್ರಿಕನ್ ರಾಷ್ಟ್ರಗಳು ತಮ್ಮನ್ನು ಶೋಷಿಸಿದವರ ವಿರುದ್ಧ ಸೇಡು ತೀರಿಸುವ ರೂಪಕವಾಗಿಯೂ ಫುಟ್ಬಾಲನ್ನು ಆಡುತ್ತಿದ್ದಾರೆ. 2012ರ ಯೂರೋ ಕಪ್ ಫುಟ್ಬಾಲ್‍ನಲ್ಲಿ ವರ್ಣ ಮತ್ತು ಜನಾಂಗ ದ್ವೇಷವು ತೀವ್ರ ಚರ್ಚೆಗೆ ಕಾರಣವಾಗಿತ್ತು. ಕರಿಯ ಆಟಗಾರರ ಬಗ್ಗೆ ತೀರಾ ಬಾಲಿಶತನದಿಂದ ನಡೆದುಕೊಂಡ ಬಗ್ಗೆ ವರದಿಗಳಿದ್ದುವು. ಆ ಪಂದ್ಯಾವಳಿಯಲ್ಲಿ ಇಟಲಿ ತಂಡದ ಆಫ್ರಿಕನ್ ಮೂಲದ ಆಟಗಾರ ಮಾರಿಯೋ ಬಾಲೊಟ್ಟೆಲ್ಲಿಯವರು ಗೋಲು ಬಾರಿಸಿದ ಬಳಿಕ ತನ್ನ ಜರ್ಸಿಯನ್ನು (ಅಂಗಿ) ಕಿತ್ತೆಸೆದು ತನ್ನ ಕಪ್ಪು ದೇಹಕ್ಕೆ ಬೊಟ್ಟು ಮಾಡುತ್ತಾ ಮೈದಾನವಿಡೀ ಓಡಾಡಿದ್ದರು. ಒಂದು ಕಾಲದಲ್ಲಿ ಫ್ರಾನ್ಸ್ ನ ವಸಾಹತು ಆಗಿದ್ದ ಸೆನೆಗಲ್ ದೇಶವು 2007ರ ವಿಶ್ವಕಪ್‍ನಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸನ್ನು ಸೋಲಿಸಿ ಅದರ ಪ್ರಶಸ್ತಿಯ ಕನಸನ್ನೇ ಚಿವುಟಿ ಹಾಕಿದ್ದನ್ನು ಆಫ್ರಿಕನ್ ಮಂದಿ ಸಡಗರದಿಂದ ಸ್ವಾಗತಿಸಿದ್ದರು. ಕ್ಯಾಮರೂನ್ ದೇಶದ ರೋಜರ್ ಮಿಲ್ಲ 1990 ರಲ್ಲಿ ತೋರಿದ ಹೋರಾಟ ಮನೋಭಾವಕ್ಕೆ ಇಡೀ ಆಫ್ರಿಕನ್ ಖಂಡವೇ ಭಾವೋದ್ವೇಗದಿಂದ ಪ್ರತಿಕ್ರಿಯಿಸಿತ್ತು. ಇರಾನ್ ಮತ್ತು ಅಮೇರಿಕ; ಬ್ರೆಝಿಲ್- ಅರ್ಜೆಂಟೀನಾ ಮುಂತಾದ ರಾಷ್ಟ್ರಗಳು ಮುಖಾಮುಖಿಯಾಗುವಾಗ ಆಟಕ್ಕಿಂತ ಹೊರತಾದ ಕಾರಣಗಳೂ ಪ್ರಮುಖವಾಗಿರುತ್ತವೆ. ಇಷ್ಟಿದ್ದೂ, ‘ಬ್ರೆಝಿಲ್ಸ್ ಡಾನ್ಸ್ ವಿದ್ ದಿ ಡೆವಿಲ್ಸ್' ಎಂಬಂಥ ಕೃತಿಗಳು ಪ್ರಕಟವಾಗುವುದು ಮತ್ತು ‘FIFA- We want quality Hospitals ಅಂಡ್ schools Not quality stadiums ’ ಎಂಬ ಫಲಕಗಳು ಬ್ರೆಝಿಲ್‍ನಲ್ಲಿ ಕಾಣಿಸಿಕೊಳ್ಳುತ್ತಿರುವುದನ್ನು ಏನೆಂದು ಪರಿಗಣಿಸಬೇಕು? ಬ್ರೆಝಿಲ್‍ನ ಪ್ರತಿ 10 ಮಂದಿಯಲ್ಲಿ 6 ಮಂದಿ ಫುಟ್ಬಾಲ್ ಪ್ರಾಯೋಜಕತ್ವದ ವಿರುದ್ಧ ಇದ್ದಾರೆ ಎಂಬ ಜನಮತ ಸಂಗ್ರಹವನ್ನು ಅಮೇರಿಕದ ಫ್ಯೂ ರಿಸರ್ಚ್ ಸೆಂಟರ್ ಬಿಡುಗಡೆಗೊಳಿಸಿರುವುದರ ಹಿನ್ನೆಲೆ ಏನಿರಬಹುದು? ಪೀಲೆ, ರೊನಾಲ್ಡೊ, ರೋಮಾರಿಯೋ, ಗರಿಚೊ.. ಮೊದಲಾದ ದಿಗ್ಗಜರನ್ನು ಜಗತ್ತಿಗೆ ಕೊಟ್ಟ ದೇಶದಲ್ಲಿ ಇವತ್ತು ಫುಟ್ಬಾಲ್ ಪ್ರಾಯೋಜಕತ್ವವನ್ನು ದ್ವೇಷಿಸುವವರೇ ಹೆಚ್ಚಿರಬಹುದೇ? 2022ರ ವಿಶ್ವಕಪ್ ಪ್ರಾಯೋಜಕತ್ವವನ್ನು ಪಡಕೊಳ್ಳುವುದಕ್ಕಾಗಿ ಕತರ್‍ನ ಅಧಿಕಾರಿಯೋರ್ವರು FIFAಕ್ಕೆ 5 ಮಿಲಿಯನ್ ಡಾಲರ್ ಲಂಚ ನೀಡಿರುವರೆಂಬ ಮಾಹಿತಿಯನ್ನು ಇದೇ ಸಂದರ್ಭದಲ್ಲಿ ಅಮೇರಿಕದ ಸಂಡೇ ಟೈಮ್ಸ್ ಬಿಡುಗಡೆಗೊಳಿಸಿರುವುದು ಬರೇ ಸದುದ್ದೇಶದಿಂದಲೇ ಅಥವಾ ಬ್ರೆಝಿಲ್‍ನ ಈಗಿನ ಪ್ರತಿಭಟನೆಯನ್ನು ಎದುರಿಟ್ಟುಕೊಂಡೇ?
         ಬ್ರೆಝಿಲ್‍ನ ಪ್ರತಿಭಟನೆಯು ಟರ್ಕಿಯ ಪ್ರತಿಭಟನೆಯನ್ನೇ ಹೋಲುತ್ತಿದೆ ಎಂದು ಉರ್ದುಗಾನ್ ಇತ್ತೀಚೆಗೆ ಹೇಳಿರುವುದನ್ನು ನೋಡುವಾಗ ಅನುಮಾನ ಬಂದೇ ಬರುತ್ತದೆ.

Tuesday, June 3, 2014

ಮಾಧ್ಯಮ ವಿಶ್ವಾಸಾರ್ಹತೆಯನ್ನು ಪ್ರಶ್ನಾರ್ಹಗೊಳಿಸಿದ ಚುನಾವಣೆ

   1. Manufacturing consent
   2.Manufacturing dissent
ಮಾಧ್ಯಮಗಳು ಮತ್ತು ಅವುಗಳ ಹೊಣೆಗಾರಿಕೆಗಳ ಕುರಿತಂತೆ ಚರ್ಚೆ ನಡೆಯುವಾಗಲೆಲ್ಲ ಈ ಎರಡು ಪದಗಳ ಉಲ್ಲೇಖವಾಗದೇ ಇರುವುದು ಬಹಳ ಕಡಿಮೆ. ಒಂದು ವಿಷಯದ ಪರ ಮಾತ್ರವೇ ಅಭಿಪ್ರಾಯವನ್ನು ರೂಪಿಸುವ (Manufacturing consent) ಅಥವಾ ಅದರ ವಿರುದ್ಧ ಮಾತ್ರವೇ ಅಭಿಪ್ರಾಯವನ್ನು ರೂಪಿಸುವ (Manufacturing dissent) ಧೋರಣೆಗಿಂತ ಭಿನ್ನವಾದ ನಿಲುವನ್ನು ಮಾಧ್ಯಮಗಳು ಆಯ್ಕೆ ಮಾಡಿಕೊಳ್ಳಬಾರದೇಕೆ? ಪರ ಅಥವಾ ವಿರುದ್ಧ ಎಂಬೆರಡು ಆಯ್ಕೆಗಳಷ್ಟೇ ನಮ್ಮ ಮುಂದಿರುವುದಲ್ಲವಲ್ಲ. ಇದು ಜಾರ್ಜ್ ಬುಶ್‍ರ ನೀತಿ. ಒಂದೋ ನನ್ನ ಪರ ಅಥವಾ ಭಯೋತ್ಪಾದಕರ ಪರ ಎಂಬ ಸ್ಲೋಗನನ್ನು ಅವರು ಇರಾಕ್ ಅತಿಕ್ರಮಣದ ವೇಳೆ ಉದುರಿಸಿದ್ದರು. ಅದನ್ನು ಒಂದು ಮಿತಿ ಯಲ್ಲಿ ವಿಮರ್ಶಿಸಿದ್ದ ಭಾರತೀಯ ಮಾಧ್ಯಮಗಳೇ ಕಳೆದ ಲೋಕಸಭಾ ಚುನಾವಣೆಯ ವೇಳೆ ಮರೆತುವೇಕೆ? ಮನಮೋಹನ್ ಸಿಂಗ್ ಸರಕಾರ ವಿರುದ್ಧ ಮತ್ತು ನರೇಂದ್ರ ಮೋದಿ ಪರ ಎಂಬ ಏಕ ಅಜೆಂಡಾದೊಂದಿಗೆ ಮುಖ್ಯವಾಹಿನಿಯ ಮಾಧ್ಯಮಗಳು ಕಾರ್ಯನಿರ್ವಹಿಸಿದುವಲ್ಲ, ಏಕೆ? ಇಂಡಿಯಾ ಟಿ.ವಿ. ಸಂಪಾದಕ ರಜತ್ ಶರ್ಮಾರಿಂದ ಹಿಡಿದು ಟೈಮ್ಸ್ ನೌನ ಸಂಪಾದಕ ಅರ್ನಾಬ್ ಗೋಸ್ವಾಮಿ ವರೆಗೆ, TV 9ನಿಂದ ಹಿಡಿದು ಸುವರ್ಣ ನ್ಯೂಸ್ 24x7 ವರೆಗೆ.. ಎಲ್ಲರೂ ಒಂದೇ ಭಾಷೆ, ಒಂದೇ ಆವೇಶ, ಒಂದೇ ಅಭಿಪ್ರಾಯದೊಂದಿಗೆ ಮಾತಾಡಿದ್ದು, ಸಂವಾದ ನಡೆಸಿದ್ದೆಲ್ಲ ಏನನ್ನು ಸೂಚಿಸುತ್ತದೆ? ಇಶ್ಯೂ ಕೇಂದ್ರಿತವಾಗಿ ನಡೆಯಬೇಕಾಗಿದ್ದ ಚರ್ಚೆಯನ್ನು ವ್ಯಕ್ತಿ ಕೇಂದ್ರಿತವಾಗಿ ಮಾರ್ಪಡಿಸಿದ್ದು ನರೇಂದ್ರ ಮೋದಿಯಲ್ಲ, ಮಾಧ್ಯಮ. ಮೋದಿಯವರು ಮಾಧ್ಯಮಗಳ ದೌರ್ಬಲ್ಯ, ದುರಾಸೆಯನ್ನು ಬಳಸಿಕೊಂಡರು ಅಷ್ಟೇ. ಮೋದಿಯವರು ಡಿಸೆಂಬರ್ 2012ರಲ್ಲಿ ಗುಜರಾತ್‍ನ ಮುಖ್ಯಮಂತ್ರಿಯಾಗಿ ಮೂರನೇ ಬಾರಿ ಆಯ್ಕೆಯಾದಾಗಲೇ ಮಾಧ್ಯಮಗಳು 2014ರ ಲೋಕಸಭಾ ಚುನಾವಣೆಯ ಪ್ರಚಾರವನ್ನು ಆರಂಭಿಸಿದ್ದುವು. ನರೇಂದ್ರ ಮೋದಿಯವರನ್ನು ಪರ್ಯಾಯ ನಾಯಕ ಎಂದು ಬಿಂಬಿಸುವ ಗಂಭೀರ ಪ್ರಯತ್ನದಲ್ಲಿ ತೊಡಗಿದ್ದುವು. 2013 ಡಿಸೆಂಬರ್‍ನಲ್ಲಿ ಕೇಜ್ರಿವಾಲ್‍ರ ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಅಭೂತಪೂರ್ವ ಜಯ ಗಳಿಸುವವರೆಗೆ ಮಾಧ್ಯಮಗಳಲ್ಲಿ ಮೋದಿಯವರ ಹೊರತಾಗಿ ಇನ್ನಾರಿಗೂ ಹೆಚ್ಚಿನ ಸ್ಪೇಸ್ ಸಿಕ್ಕಿರಲಿಲ್ಲ. ಆ ಬಳಿಕ ಕೇಜ್ರಿವಾಲ್ ಮತ್ತು ಮೋದಿಯವರು ಪ್ರೈಮ್ ಟೈಮನ್ನು ಹಂಚಿಕೊಂಡರು. ಆದರೆ ಕೇಜ್ರಿವಾಲ್ ಯಾವಾಗ ಕಾರ್ಪೋರೇಟ್ ಭ್ರಷ್ಟಾಚಾರ, ಕ್ರೋನಿ ಕ್ಯಾಪಿಟಾಲಿಸಂ, ವಿದ್ಯುತ್ ದರ ನಿಯಂತ್ರಣ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಗುಜರಾತ್‍ಗೆ ಭೇಟಿ ಕೊಟ್ಟು ಅಲ್ಲಿನ ಸ್ಥಿತಿ-ಗತಿಯ ಬಗ್ಗೆ ಮಾತಾಡಿದರೋ ಅಂದಿನಿಂದಲೇ ಮಾಧ್ಯಮಗಳು ಅವರನ್ನು ಖಳನಾಯಕನ ಪಟ್ಟದಲ್ಲಿ ಕೂರಿಸಿದುವು. ಅವರ ಒಂದೊಂದೇ ದೌರ್ಬಲ್ಯಗಳು ಬೆಳಕಿಗೆ ಬರತೊಡಗಿದುವು. ನಿಜವಾಗಿ, ಈ ಬಾರಿಯ ಚುನಾವಣೆಯಲ್ಲಿ ಬೆಲೆ ಏರಿಕೆ, ಭ್ರಷ್ಟಾಚಾರ, ಕ್ಯಾಪಿಟಾಲಿಸಂ, ನಿರುದ್ಯೋಗ.. ಮುಂತಾದುವುಗಳು ಪ್ರಮುಖ ಚರ್ಚೆಗೆ ಒಳಗಾಗಬೇಕಿತ್ತು. ಇವುಗಳಿಗೆ ಸಂಬಂಧಿಸಿ ಮನಮೋಹನ್ ಸಿಂಗ್ ಸರಕಾರದ ವೈಫಲ್ಯ ಮತ್ತು ಅದಕ್ಕಿರುವ ಕಾರಣಗಳನ್ನು ಚರ್ಚೆಗೆ ತರಬೇಕಿತ್ತು. 10 ವರ್ಷಗಳಲ್ಲಿ ಸಿಂಗ್ ಸರಕಾರ ಏನನ್ನೂ ಮಾಡಿಲ್ಲ ಎಂಬ ಶುದ್ಧ ಸುಳ್ಳು ಪ್ರಚಾರದ ಬದಲು ಯುಪಿಎ ಸರಕಾರದ ಸಾಧಕ-ಬಾಧಕಗಳನ್ನು ವಿಮರ್ಶೆಗೆ ಒಡ್ಡಬೇಕಿತ್ತು. ಒಂದು ಸರಕಾರದ ಸರಿ-ತಪ್ಪುಗಳನ್ನು ನಿಷ್ಠುರ ಚರ್ಚೆಗೆ ಒಳಪಡಿಸದೆಯೇ ತೀರ್ಪು ಕೊಡುವ ಕೆಲಸವನ್ನು ಮಾಧ್ಯಮ ಮಾಡುವುದು ಅಪಾಯಕಾರಿ. ಸಾವಿರಾರು ಪತ್ರಿಕೆಗಳು ಮತ್ತು ನೂರಾರು ನ್ಯೂಸ್ ಚಾನೆಲ್‍ಗಳಿರುವ ಈ ದೇಶದಲ್ಲಿ, ರಾಜಕಾರಣಿಗಳನ್ನು ಜನರ ಬಳಿಗೆ ತಂದಿರುವುದೇ ಮಾಧ್ಯಮಗಳು. ಇವು ಜನರ ಮತ್ತು ರಾಜಕಾರಣಿಗಳ ನಡುವಿನ ಅಂತರವನ್ನು ತೆಳುವಾಗಿಸಿವೆ. ಒಂದು ವೇಳೆ ಈ ಬಾರಿಯಂತೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಾಧ್ಯಮಗಳು ಮೋದಿಯ ವಿರುದ್ಧ ಏಕಮುಖ ಪ್ರಚಾರ ನಡೆಸಿದರೆ ಬಿಜೆಪಿ ಏನು ಹೇಳಬಲ್ಲುದು? ಮೋದಿ ಸರಕಾರದ ಸಾಧನೆಗಳಲ್ಲಿ ಒಂದನ್ನೂ ಚರ್ಚೆಗೆ ಒಳಪಡಿಸದೆಯೇ ಬರೇ ತಪ್ಪುಗಳನ್ನಷ್ಟೇ ಹೆಕ್ಕಿ ಹೇಳುತ್ತಾ ಈ ಸರಕಾರ 5 ವರ್ಷಗಳಲ್ಲಿ ಏನನ್ನೂ ಮಾಡಿಲ್ಲ ಎಂದು ವಾದಿಸತೊಡಗಿದರೆ ಆಗ ಬಿಜೆಪಿಯ ನಿಲುವು ಏನಿದ್ದೀತು?
ಅಂದಹಾಗೆ, ಚುನಾವಣೆಯ ಸಂದರ್ಭದಲ್ಲಿ ಮಾಧ್ಯಮಗಳ ನಿರ್ವಹಿಸಲೇಬೇಕಾದ ಕೆಲವು ಹೊಣೆಗಾರಿಕೆಗಳಿವೆ.
   1. ಚರ್ಚೆಗೊಳಗಾಗಲೇಬೇಕಾದ ವಿಷಯಗಳನ್ನು ಮುನ್ನೆಲೆಗೆ ತಂದು ಮತದಾರರನ್ನು ಎಚ್ಚರಿಸುವುದು.
   2. ಈ ವಿಷಯಗಳಲ್ಲಿ ಪಕ್ಷಗಳು ಮತ್ತು ಅವುಗಳ ಅಭ್ಯರ್ಥಿಗಳ ನಿಲುವುಗಳೇನೆಂಬುದನ್ನು ಮತದಾರರಿಗೆ ಗೊತ್ತುಪಡಿಸುವುದು.
   3. ಅಸ್ತಿತ್ವದಲ್ಲಿರುವ ಸರಕಾರಕ್ಕಿಂತ ತಾವು ಹೇಗೆ ಭಿನ್ನ ಎಂಬುದನ್ನು ಹೇಳಿಕೊಳ್ಳುವುದಕ್ಕೆ ಬೇಕಾದಷ್ಟು ಸ್ಪೇಸ್ ಅನ್ನು
ವಿರೋಧ ಪಕ್ಷಗಳಿಗೆ ಒದಗಿಸುವುದು.
   4. ಆಡಳಿತ ಪಕ್ಷದ ಸಾಧನೆಗಳನ್ನು ಹೇಳಿಕೊಳ್ಳುವುದಕ್ಕೆ ಅವಕಾಶವನ್ನು ಒದಗಿಸುತ್ತಲೇ ಅದರ ಬಾಧಕಗಳನ್ನು ವಿಮರ್ಶೆಗೆ ಒಡ್ಡುವುದಕ್ಕೆ ವಿರೋಧ ಪಕ್ಷಗಳಿಗೆ ಅವಕಾಶ ಮಾಡಿಕೊಡುವುದು.
   5. ಮತದಾರರು ಪ್ರಬುದ್ಧ ತೀರ್ಮಾನ ಕೈಗೊಳ್ಳುವುದಕ್ಕೆ ಪೂರಕವಾದ ಸನ್ನಿವೇಶವನ್ನು ನಿರ್ಮಿಸುವುದು.
ಬಹುಶಃ ಇನ್ನೂ ಕೆಲವು ಅಂಶಗಳನ್ನು ಈ ಪಟ್ಟಿಗೆ ಸೇರಿಸಬಹುದು. ದುರಂತ ಏನೆಂದರೆ, ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಪತ್ರಿಕೆ ಮತ್ತು ವಾರ್ತಾ ವಾಹಿನಿಗಳು ಈ ರೀತಿಯಾಗಿ ಕಾರ್ಯನಿರ್ವಹಿಸಿಯೇ ಇಲ್ಲ. ‘ಮೋದಿಯವರನ್ನು ಟಿ.ವಿ.ಯಲ್ಲಿ ತೋರಿಸುವುದರಿಂದ TRP ಹೆಚ್ಚುತ್ತದೆ..’ ಎಂದು ಇಂಡಿಯಾ TV ಯ ರಜತ್ ಶರ್ಮಾ ಒಂದು ಸೆಮಿನಾರ್‍ನಲ್ಲಿ ಹೇಳುವಾಗ ಝೀ ಟಿ.ವಿ.ಯ ಸುಭಾಶ್ ಚಂದ್ರರಂತೂ ಬಿಜೆಪಿ ಮೈತ್ರಿಕೂಟಕ್ಕಾಗಿ ಹರ್ಯಾಣದಲ್ಲಿ ಬಹಿರಂಗವಾಗಿಯೇ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡರು. ಚುನಾವಣಾ ಫಲಿತಾಂಶ ಪ್ರಕಟವಾಗುವ ಮೊದಲೇ ಹೆಚ್ಚಿನ ಪತ್ರಿಕೆಗಳು ಯಾರ್ಯಾರಿಗೆ ಯಾವ್ಯಾವ ಖಾತೆಗಳನ್ನು ನೀಡಬಹುದು ಎಂಬುದನ್ನು ವಿವರಿಸಿದುವು. ಟೈಮ್ಸ್ ಆಫ್ ಇಂಡಿಯಾ ಹೀಗೆ ಬರೆಯಿತು;
   ‘ಗೃಹ, ಹಣಕಾಸು, ವಿದೇಶಾಂಗ ಮತ್ತು ರP್ಷÀಣಾ ಖಾತೆಗಳು ಕೇಂದ್ರ ಸಚಿವ ಸಂಪುಟದ ಪ್ರಮುಖ ಖಾತೆಗಳಾಗಿವೆ. ಇವುಗಳಲ್ಲಿ ಗೃಹಖಾತೆಯನ್ನು ರಾಜನಾಥ್ ಸಿಂಗ್‍ರಿಗೆ ನೀಡಬಹುದು. ಅರುಣ್ ಜೇಟ್ಲಿಗೆ ಹಣಕಾಸು. ಹೀಗೆ ಮಾಡಿದರೆ ಎರಡು ಖಾತೆಗಳು ಉಳಿಯು ತ್ತವೆ. ಇವುಗಳಲ್ಲಿ ಒಂದನ್ನು ಸುಶ್ಮಾಗೆ ಕೊಡಬಹುದು. ಒಂದು ವೇಳೆ ಇವೆರಡರಲ್ಲಿ ಒಂದನ್ನೂ ಸುಶ್ಮಾಗೆ ಕೊಡಲು ಸಾಧ್ಯವಿಲ್ಲ ಎಂದಾದರೆ ಆರೋಗ್ಯ ಖಾತೆಯನ್ನು ನೀಡಬಹುದು. ಹಾಗಂತ ಅದೇನೂ ಸಣ್ಣ ಖಾತೆಯಲ್ಲ. ಬಹುದೊಡ್ಡ, ಮಹತ್ವದ ಖಾತೆಯಾಗಿದೆ..’
   2014 ಮಾರ್ಚ್ 23ರಂದು ಬಿಹಾರದ ರಾಪುರಾ ಗ್ರಾಮದಲ್ಲಿ ಬುದ್ಧರಾಮ್ ಪಾಸ್ವಾನ್‍ರನ್ನು ಹತ್ಯೆ ಮಾಡಲಾಯಿತು. ಅರಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ರಾಪುರದ ಜನರೊಂದಿಗೆ ಮಾತುಕತೆ ನಡೆಸಲಿಕ್ಕಾಗಿ ಬರುತ್ತಿದ್ದ ವೇಳೆ ಈ ಹತ್ಯೆ ನಡೆಯಿತು. 1998ರಲ್ಲಿ ನಗರಿ ಬಝಾರ್‍ನಲ್ಲಿ ರಣವೀರ ಸೇನೆಯು ನಡೆಸಿದ ದಲಿತರ ಹತ್ಯಾಕಾಂಡದ ವಿರುದ್ಧ ಸಂತ್ರಸ್ತರನ್ನು ಒಟ್ಟು ಸೇರಿಸಿ ಹೋರಾಟ ನಡೆಸುತ್ತಿದ್ದ ವ್ಯಕ್ತಿಯಾಗಿದ್ದರು ಪಾಸ್ವಾನ್. ಸಾಕ್ಷಿಗಳನ್ನು ಕೋರ್ಟಿಗೆ ಹಾಜರುಪಡಿಸುವಲ್ಲಿ ಮತ್ತು ಅವರಲ್ಲಿ ಧೈರ್ಯ ತುಂಬುವಲ್ಲಿ ಅವರು ಸಕ್ರಿಯ ಪಾತ್ರ ವಹಿಸಿದ್ದರು. ಅವರ ಪ್ರಯತ್ನದಿಂದಲೇ 2010ರಲ್ಲಿ ಸೆಶನ್ ಕೋರ್ಟು ರಣವೀರ ಸೇನೆಯ ಕಾರ್ಯಕರ್ತರಿಗೆ ಶಿಕ್ಷೆ ವಿಧಿಸಿತು. ಆದರೆ 2013ರಲ್ಲಿ ಹೈಕೋರ್ಟು ಶಿಕ್ಷೆಯನ್ನು ರದ್ದುಪಡಿಸಿತು. ಪಾಸ್ವಾನ್ ಛಲ ಬಿಡದೇ ಸಂತ್ರಸ್ತರನ್ನು ಒಟ್ಟು ಸೇರಿಸಿದರು. ಹೈಕೋರ್ಟ್ ಆದೇಶವನ್ನು ಸುಪ್ರೀಮ್ ಕೋರ್ಟ್‍ನಲ್ಲಿ ಪ್ರಶ್ನಿಸುವಂತೆ ಸಂತ್ರಸ್ತರಿಗೆ ಧೈರ್ಯ ತುಂಬಿದರು. ಆದ್ದರಿಂದಲೇ ಪಾಸ್ವಾನ್‍ರ ಹತ್ಯೆಯನ್ನು ರಣವೀರ ಸೇನೆಯು ಆಕಾಶಕ್ಕೆ ಗುಂಡು ಹಾರಿಸುವ ಮೂಲಕ ಸಂಭ್ರಮದಿಂದ ಆಚರಿಸಿತು. ಮೋದಿ ಪ್ರಧಾನಿಯಾಗಬೇಕೆಂದು ರಣವೀರ ಸೇನೆಯ ಮುಖ್ಯಸ್ಥನಾಗಿದ್ದ ಬ್ರಹ್ಮೇಶ್ವರ್ ಸಿಂಗ್ ಈ ಹಿಂದೆ ಬಹಿರಂಗವಾಗಿಯೇ ಹಾರೈಸಿದ್ದ. 2012ರಲ್ಲಿ ಬ್ರಹ್ಮೇಶ್ವರ್‍ನ ಹತ್ಯೆಯಾದಾಗ, ಬಿಜೆಪಿಯ ಗಿರಿರಾಜ್ ಸಿಂಗ್‍ರು ಆತನನ್ನು ಗಾಂಧಿ ಎಂದು ಕರೆದಿದ್ದರು. (ದಿ ಹಿಂದೂ ಮಾರ್ಚ್ 27, 2014) ಮೋದಿಯವರನ್ನು ವಿರೋಧಿಸುವವರು ಪಾಕಿಸ್ತಾನಕ್ಕೆ ಹೋಗಲಿ ಎಂದಿದ್ದೂ ಇದೇ ಗಿರಿರಾಜ್ ಸಿಂಗ್. ದಲಿತರು, ಬುಡಕಟ್ಟುಗಳು ಮತ್ತು ಆದಿವಾಸಿಗಳನ್ನು ಹದ್ದುಬಸ್ತಿನಲ್ಲಿಡುವುದಕ್ಕೆ ಮೇಲ್ಜಾತಿಗಳಿಂದ ರೂಪಿಸಲ್ಪಟ್ಟ ತಂಡವೇ ರಣವೀರ ಸೇನೆ. ಆದರೆ ಪಾಸ್ವಾನ್‍ರ ಹತ್ಯೆಯ ಬಳಿಕ ಬಿಹಾರದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ನರೇಂದ್ರ ಮೋದಿಯವರು, ತಾನು ಕೆಳಜಾತಿಯವ ಎಂದರು. ಆದರೂ ಕೆಳಜಾತಿಯವರನ್ನು ರಣವೀರ ಸೇನೆಯು ನಡೆಸಿಕೊಂಡ ಮತ್ತು ನಡೆಸಿಕೊಳ್ಳುತ್ತಿರುವ ರೀತಿಯ ಕುರಿತಂತೆ ಯಾವೊಂದು ಮಾತನ್ನೂ ಅವರು ಆಡಲಿಲ್ಲ. ಅಷ್ಟಕ್ಕೂ, ಮೋದಿಯವರಿಗೆ ಅದರ ಅಗತ್ಯ ಇಲ್ಲದೇ ಇರಬಹುದು. ಆದರೆ ಮಾಧ್ಯಮಗಳಿಗೂ ಹಾಗೆಯೇ ಅನಿಸಬಾರದಲ್ಲ. ಕೆಳಜಾತಿಯ ವ್ಯಕ್ತಿಯೋರ್ವರು ಪ್ರಧಾನಿಯಾಗುವಾಗ ಮತ್ತು ಕೆಳಜಾತಿಯವರನ್ನು ದಮನಿಸುವುದಕ್ಕೆಂದೇ ರೂಪುಗೊಂಡ ಮೇಲ್ಜಾತಿಯ ರಣವೀರ ಸೇನೆಯು ಅವರನ್ನು ಬಹಿರಂಗವಾಗಿಯೇ ಬೆಂಬಲಿಸುತ್ತಿರುವಾಗ ಅವರ ನಿಲುವೇನೆಂಬುದನ್ನು ಅವು ಪ್ರಶ್ನಿಸಬೇಕಿತ್ತಲ್ಲವೇ? ಇದು ಕೇವಲ ರಣವೀರ ಸೇನೆಯ ಪ್ರಶ್ನೆಯಲ್ಲ. ಮೋದಿಯವರನ್ನು ಹತ್ತಾರು ಅನುಮಾನಗಳು ಸುತ್ತಿಕೊಂಡಿವೆ. ಆ ಅನುಮಾನಗಳು ನಿಜವೋ ಸುಳ್ಳೋ ಎಂಬುದು ಸ್ಪಷ್ಟವಾಗಬೇಕಾದರೆ ಮಾಧ್ಯಮಗಳು ಅವನ್ನು ಚರ್ಚೆಗೆ ಎತ್ತಿಕೊಳ್ಳಬೇಕು. ಮನಮೋಹನ್ ಸಿಂಗ್‍ರ ದೌರ್ಬಲ್ಯ, ಸೋನಿಯಾರ ಸರ್ವಾಧಿಕಾರ ಮತ್ತು ರಾಹುಲ್‍ರ ಸಪ್ಪೆತನಗಳು ಚರ್ಚೆಗೆ ಈಡಾದಂತೆಯೇ ಮೋದಿ ಮತ್ತು ಅವರ ಪಕ್ಷದ ಕುರಿತಾಗಿಯೂ ಚರ್ಚೆಗಳಾಗಬೇಕು. ಆದರೆ, ಮಾಧ್ಯಮಗಳು ಇಂಥ ಪ್ರತಿ ಸಂದರ್ಭಗಳನ್ನೂ ಕೈಬಿಟ್ಟುವಲ್ಲ, ಏಕೆ? ಇದು ಅನುದ್ದೇಶಪೂರ್ವಕವೇ? ಬಿಜೆಪಿ ಪರ ಕಾರ್ಪೋರೇಟ್ ಕಂಪೆನಿಗಳು ಮಾಧ್ಯಮ ಕಚೇರಿಗಳನ್ನು ಖರೀದಿಸಿವೆ ಎಂಬ ಆರೋಪಗಳು ಈ ಬಾರಿ ಕೇಳಿ ಬಂದಷ್ಟು ಈ ಹಿಂದೆಂದೂ ಕೇಳಿಬರದಿದ್ದುದು ಸೂಚಿಸುವುದೇನನ್ನು? ಚುನಾವಣಾ ಆಯೋಗಕ್ಕೆ ಈ ಬಾರಿ ಪಾವತಿ ಸುದ್ದಿಯ (Paid News) ಸಾವಿರಾರು ದೂರುಗಳು ಬಂದುವು. ಅವುಗಳಲ್ಲಿ 3053 ಪ್ರಕರಣಗಳ ಕುರಿತಂತೆ ಆಯೋಗವು ಮಾಧ್ಯಮಗಳಿಂದ ವಿವರಣೆಯನ್ನು ಕೋರಿತು. ಈ ಹಿಂದೆಂದೂ ಇಷ್ಟೊಂದು ಪ್ರಮಾಣದಲ್ಲಿ ಪಾವತಿ ಸುದ್ದಿಯ ಕುರಿತಂತೆ ದೂರುಗಳು ಬಂದಿರಲಿಲ್ಲ.
   ಬಹುಶಃ, ಈ ಬಾರಿಯ ಚುನಾವಣೆಯು ಮಾಧ್ಯಮ ವಿಶ್ವಾಸಾರ್ಹತೆಯನ್ನು ತೀವ್ರವಾಗಿ ಪ್ರಶ್ನಾರ್ಹಗೊಳಿಸಿದೆ. ಮೋದಿ ಯೋಗ್ಯ ನಾಯಕರೇ ಇರಬಹುದು. ರಾಹುಲ್ ಅಯೋಗ್ಯರೇ ಆಗಿರಬಹುದು. ಮಾತ್ರವಲ್ಲ, ಕಾಂಗ್ರೆಸ್ ಪಕ್ಷವು ಅತ್ಯಂತ ಕಳಪೆ ಆಡಳಿತವನ್ನು ನೀಡಿರಬಹುದು. ಆದರೆ ಇದನ್ನು ತೀರ್ಮಾನಿಸಬೇಕಾದವರು ಯಾರು, ಹೇಗೆ, ಅವರ ಯೋಗ್ಯತೆಯೇನು? ಆರೋಪಿಗೆ (ಕಾಂಗ್ರೆಸ್) ಸಮರ್ಥಿಸಿಕೊಳ್ಳಲು ಅವಕಾಶವನ್ನೇ ನೀಡದೇ ತಪ್ಪಿತಸ್ಥನೆಂದು ಮುದ್ರೆಯೊತ್ತುವುದು ಎಷ್ಟು ಸರಿ?