Wednesday, March 30, 2016

ನನ್ನ ಅಪ್ಪ ನನ್ನ ಹೀರೋ...

      ಮಾರ್ಚ್ 19ರಂದು ನಿಧನರಾದ ನನ್ನ ತಂದೆಯವರನ್ನು (92 ವರ್ಷ)  ಸ್ಮರಿಸುತ್ತಾ..
          
          ಲುಂಗಿ, ಬನಿಯನ್ನು ಮತ್ತು ಮುಂಡಾಸು.. ಇದು ನನ್ನ ಅಪ್ಪ. ಅಪ್ಪ ಅಂದಕೂಡಲೇ ನನ್ನ ಎದುರು ನಿಲ್ಲುವುದು ಈ ಆಕೃತಿಯೇ. ಆದರೆ ಶುಕ್ರವಾರ ಮಾತ್ರ ಅಪ್ಪ ಸಂಪೂರ್ಣ ಬಿಳಿಯಾಗುತ್ತಿದ್ದರು. ಬಿಳಿ ಮುಂಡಾಸು, ಬಿಳಿ ಶರಟು ಮತ್ತು ಲುಂಗಿ. ಅಪ್ಪನ ಹಣೆ ಮತ್ತು ಎಡಗೈ ಅಂಗೈಯಲ್ಲಿ ಕಪ್ಪು ದಡ್ಡುಗಳಿದ್ದುವು. ಹಣೆಗಿಂತಲೂ ದೊಡ್ಡ ಗಾತ್ರದ ದಡ್ಡು ಇದ್ದುದು ಅಂಗೈಯಲ್ಲಿ. ಅಡಿಕೆ ಸುಲಿಯುವ ವೃತ್ತಿ ಅಪ್ಪನದ್ದಾದುದರಿಂದ ಆ ದಡ್ಡು ಅಸಾಮಾನ್ಯವೇನೂ ಆಗಿರಲಿಲ್ಲ. ನನ್ನ ಊರು ತುಂಬಾ ಅಡಿಕೆ ತೋಟಗಳೇ ತುಂಬಿಕೊಂಡಿದ್ದುವು. ಆದ್ದರಿಂದ ಅಪ್ಪ ಅಡಿಕೆ ಸುಲಿಯುವುದನ್ನೇ ಖಾಯಂ ವೃತ್ತಿ ಆಗಿ ಆಯ್ಕೆ ಮಾಡಿಕೊಂಡದ್ದು ಸಹಜವೇ ಆಗಿತ್ತು. ಅಡಿಕೆ ತೋಟದ ಮಾಲಿಕರೆಲ್ಲ ಶ್ರೀಮಂತ ಬ್ರಾಹ್ಮಣರು. ರಜಾದಿನಗಳಲ್ಲಿ ನಾನೂ ಅಪ್ಪನ ಜೊತೆ ಹೋಗುತ್ತಿದ್ದೆ. ಅಡಿಕೆ ಸುಲಿಯುತ್ತಿದ್ದೆ. ಆಗೆಲ್ಲ ಬ್ರಾಹ್ಮಣರ ಕೆಜಿ ಕ್ಲಾಸಿನ ಪ್ರಾಯದ ಮಕ್ಕಳು ಕೂಡ ನನ್ನ ಅಪ್ಪನನ್ನು ಏಕವಚನ ದಲ್ಲಿ ಕರೆಯುತ್ತಿದ್ದುದು ನನ್ನೊಳಗನ್ನು ಇರಿಯುತ್ತಿತ್ತು. ‘ಏ ಮಮ್ಮದೆ, ಇಲ್ಲಿ ಬಾ, ನೀನು ಹಾಗೆ ಮಾಡು.. ಹೀಗೆ ಮಾಡು..' ಮುಂತಾದ ಪದಪ್ರಯೋಗಗಳು ಮಾಮೂಲಾಗಿತ್ತು. ಅಪ್ಪನಲ್ಲಿ ಆ ಬಗ್ಗೆ ಅಸಹನೆ ಇತ್ತೋ ಇಲ್ಲವೋ, ಅದನ್ನು ಪತ್ತೆ ಹಚ್ಚುವಷ್ಟು ಪ್ರಬುದ್ಧತೆ ನನ್ನಲ್ಲಿರಲಿಲ್ಲ. ಆದರೆ ನನಗಂತೂ ಅಸಹನೆಯಿತ್ತು. ಯಾಕೆಂದರೆ, ಅಪ್ಪ ನನ್ನ ಪಾಲಿನ ಹೀರೋ. ನಿಜವಾಗಿ, ಆ ಅಸಂಸ್ಕ್ರತಿ ನನಗೊಂದು ಅಮೂಲ್ಯ ಸಂಸ್ಕಾರದ ಪಾಠವನ್ನು ಕಲಿಸಿತು.
  ಅಪ್ಪ ಅನಕ್ಷರಸ್ಥರು, ಅಮ್ಮ ಕೂಡ. ಊರಲ್ಲಿ ಏಕೈಕ ಪ್ರಾಥಮಿಕ ಶಾಲೆಯಿತ್ತು. 7ನೇ ತರಗತಿಯ ವರೆಗೆ ಅಲ್ಲಿ ಕಲಿಯಬಹುದಾಗಿತ್ತು. ಇದಕ್ಕಿಂತ ಹೆಚ್ಚಿನ ಶಿಕ್ಷಣ ಪಡೆಯಬೇಕಾದರೆ, ಊರಿನಿಂದ 13 ಕಿಲೋಮೀಟರ್ ದೂರವಿರುವ ‘ವಿಟ್ಲ’ಕ್ಕೆ ಹೋಗಬೇಕಿತ್ತು. ಹಾಗಂತ, ಅಲ್ಲಿಗೆ ಹೋಗುವುದು ಸುಲಭವಾಗಿರಲಿಲ್ಲ. ಬಸ್‍ಗಳಿರಲಿಲ್ಲ. ಮಣ್ಣಿನ ರಸ್ತೆ. ಅಷ್ಟಕ್ಕೂ, ರಸ್ತೆಯ ಮೂಲಕವೇ ಹೋದರೆ ದೂರ ಇನ್ನಷ್ಟು ಹೆಚ್ಚಾಗುತ್ತಿತ್ತು. ಊರಿನ ಮಂದಿ ವಿಟ್ಲ ಪೇಟೆಗೆ ಹೋಗಬೇಕಾದರೆ ಐದಾರು ಕಿಲೋಮೀಟರ್ ನಡೆದು ಮುಖ್ಯರಸ್ತೆಗೆ ಬಂದು, ಅಲ್ಲಿಂದ ಖಾಸಗಿ ವಾಹನಗಳನ್ನೋ ಅಪರೂಪಕ್ಕೆ ಓಡಾಡುವ ಸರಕಾರಿ ಬಸ್ಸುಗಳನ್ನೋ ಹಿಡಿಯಬೇಕಾಗಿತ್ತು. ಆದ್ದರಿಂದ ಊರಿನವರಿಗೆ ವಾರಕ್ಕೊಮ್ಮೆ ಪೇಟೆಗೆ ಹೋಗುವುದೆಂದರೆ ಅದುವೇ ಒಂದು ಸುದ್ದಿ. ಈ ಸ್ಥಿತಿಯು ಬಡವರೇ ಹೆಚ್ಚಿರುವ ಊರಿನ ಮೇಲೆ ತೀವ್ರ ಅಡ್ಡ ಪರಿಣಾಮವನ್ನು ಬೀರಿತು. ಊರಿನ ಎಲ್ಲರ ಶಿಕ್ಷಣವೂ 7ನೇ ತರಗತಿಯ ಒಳಗೇ ಮುಕ್ತಾಯಗೊಳ್ಳುತ್ತಿತ್ತು. ಆದರೆ ನನ್ನ ಅಪ್ಪ ಈ ಪರಿಸ್ಥಿತಿಯನ್ನು ದಾಟಲು ಪ್ರಯತ್ನಿಸಿದರು. ನನ್ನ ಮೂವರು ಅಣ್ಣಂದಿರಲ್ಲಿ ಇಬ್ಬರ ಶಿಕ್ಷಣ 7ನೇ ತರಗತಿಯ ಒಳಗಡೆಯೇ ಮುಕ್ತಾಯವನ್ನು ಕಂಡಿತ್ತು. ಆದರೆ ಮೂರನೆಯವನನ್ನು ತಂದೆ ವಿಟ್ಲದ ಹೈಸ್ಕೂಲಿಗೆ ಸೇರಿಸಿದರು. ಊರಿನ ಸುಮಾರು 25 ಮುಸ್ಲಿಮ್ ಮನೆಗಳಲ್ಲಿ ಹೈಸ್ಕೂಲ್ ಮೆಟ್ಟಿಲೇರಿದ ಮೊದಲ ಹುಡುಗ ನನ್ನ ಅಣ್ಣನಾಗಿದ್ದ. ಬಳಿಕ ನಾನು. ಊರಿನಲ್ಲಿ ಮೊಟ್ಟಮೊದಲು ಎಸೆಸೆಲ್ಸಿ ಪಾಸು ಮಾಡಿದ ವಿದ್ಯಾರ್ಥಿ ನನ್ನ ಅಣ್ಣನಾಗಿದ್ದ. ಆ ಬಳಿಕ ನಾನು. ಅನಕ್ಷರಸ್ಥರಾಗಿದ್ದ ಮತ್ತು ತೀರಾ ಬಡವರಾಗಿದ್ದ ಅಪ್ಪ ನಮ್ಮನ್ನು ಓದಿಸಲು ತೀರ್ಮಾನಿಸಿದ್ದು ಆ ಕಾಲದಲ್ಲಿ ಕ್ರಾಂತಿಕಾರಿ ನಿರ್ಧಾರವಾಗಿತ್ತು. ಮುಖ್ಯವಾಗಿ, ನನ್ನ ಊರಿನ ಪ್ರತಿಯೊಂದು ಮನೆಯಲ್ಲೂ ಒಂದಕ್ಕಿಂತ ಹೆಚ್ಚು ಉಸ್ತಾದರುಗಳು (ಮೌಲಾನಾ) ಮತ್ತು ಮುತಅಲ್ಲಿಂಗಳು (ದರ್ಸ್ ವಿದ್ಯಾರ್ಥಿಗಳು) ಇದ್ದರು. ಹೆಚ್ಚಿನವರು ಕಲಿಯುತ್ತಿದ್ದುದೆಲ್ಲ ಕೇರಳದ ಧಾರ್ಮಿಕ ವಿದ್ಯಾಸಂಸ್ಥೆಗಳಲ್ಲಿ. ಹೈಸ್ಕೂಲ್ ಶಿಕ್ಷಣಕ್ಕಾಗಿ ದೂರದ ವಿಟ್ಲಕ್ಕೆ ಹೋಗುವುದು ಮತ್ತು ಫೀಸು ತುಂಬುವುದು ಎರಡೂ ಹೊರೆಯಾದುದರಿಂದ 7ನೇ ತರಗತಿಯ ಬಳಿಕ ಅಥವಾ ಅದರ ಮುಂಚೆಯೇ ದರ್ಸ್ ವಿದ್ಯಾಭ್ಯಾಸಕ್ಕೆ ಸೇರ್ಪಡೆಗೊಳ್ಳುವುದು ಊರಿನವರ ಏಕೈಕ ದಾರಿಯಾಗಿತ್ತು. ಕೊನೆಯ ಗಂಡು ಮಗುವಾದ ನನ್ನ ಮೇಲೂ ಊರಿನ ಕುಟುಂಬಿಕರಿಂದ ಈ ಬಗ್ಗೆ ತಂದೆಯ ಮೇಲೆ ಒತ್ತಡ ಬಂದಿತ್ತು. ಮನೆಯಲ್ಲಿ ಒಬ್ಬನನ್ನಾದರೂ ‘ಉಸ್ತಾದ್' ಮಾಡಬೇಕೆಂಬ ಸಲಹೆಗಳು ಬಲವಾಗಿಯೇ ಕೇಳಿಬಂದಿದ್ದುವು. ಒಂದು ಹಂತದಲ್ಲಿ ನನ್ನ ಮಾವನ ಮಗನ ಜೊತೆ ನನ್ನನ್ನು ‘ದರ್ಸ್'ಗೆ ಸೇರ್ಪಡೆಗೊಳಿಸುವುದಕ್ಕೆ ನನ್ನ ತಾಯಿಯ ಕಡೆಯಿಂದ ಮಾತುಕತೆಗಳೂ ನಡೆದಿದ್ದುವು. ಆದರೆ ಕಲಿಯುವುದರಲ್ಲಿ ಮುಂದಿದ್ದ ನನ್ನನ್ನು ಅಪ್ಪ ಹೈಸ್ಕೂಲ್‍ಗೆ ಸೇರಿಸಿದರು. ಹೀಗೆ ನಾನು ಪ್ರತಿದಿನ ಕನಿಷ್ಠ 26 ಕಿಲೋಮೀಟರ್ ನಷ್ಟು ದೂರ ನಡೆಯಲೇಬೇಕಿತ್ತು. ಅಕ್ಷರಭ್ಯಾಸ ಇಲ್ಲದ ಅಪ್ಪನ ಅಂದಿನ ಈ ನಿರ್ಧಾರ ನನ್ನನ್ನು ಇವತ್ತಿಗೂ ಅಚ್ಚರಿಗೆ ತಳ್ಳಿದೆ. ಅಪ್ಪನ ಈ ನಿರ್ಧಾರ ಊರಿನ ಸಂಪ್ರದಾಯಕ್ಕೆ ತೀರಾ ವಿರುದ್ಧವಾಗಿತ್ತು. ಒಂದು ರೀತಿಯ ಬಂಡಾಯ. ಹಾಗಂತ, ಆ ಬಂಡಾಯ ಅಲ್ಲಿಗೇ ಮುಕ್ತಾಯಗೊಳ್ಳಲಿಲ್ಲ.
  ಜಮಾಅತೆ ಇಸ್ಲಾಮೀ ಹಿಂದ್‍ನ ದಕ್ಷಿಣ ಭಾರತ ಸಮ್ಮೇಳನವು ಕೇರಳದ ಹಿರಾ ನಗರದಲ್ಲಿ ಜರುಗಿದಾಗ ನಾನೂ ಅದರಲ್ಲಿ ಪಾಲುಗೊಂಡಿದ್ದೆ. ಹಾಗಂತ, ಆ ಸಂದರ್ಭದಲ್ಲಿ ಜಮಾಅತ್‍ಗೂ ನನಗೂ ಯಾವ ಸಂಬಂಧವೂ ಇರಲಿಲ್ಲ. ಅಂದು ನಾನು ಕಲಿ ಯುತ್ತಿದ್ದ ಮದ್ರಸಕ್ಕೆ ಪಕ್ಕದೂರಿನ ಡಿ.ಕೆ. ಇಬ್ರಾಹೀಮ್ ಎಂಬವರು ಆಗಾಗ ಬರುತ್ತಿದ್ದರು. ಅವರಿಗೂ ಉಸ್ತಾದರಿಗೂ ಒಳ್ಳೆಯ ಸಂಬಂಧವೂ ಇತ್ತು. ಹೀಗೆ ನಾನು ಮತ್ತು ನನ್ನ ಪ್ರಾಯದ ಒಂದಿಬ್ಬರು ಗೆಳೆಯರು ಇಬ್ರಾಹೀಮ್‍ರೊಂದಿಗೆ ಗೆಳೆತನ ಬೆಳೆಸಿದೆವು. ಆದರೆ ಒಂದು ದಿನ ನನ್ನ ಮದ್ರಸದಲ್ಲಿ ದೊಡ್ಡ ಕೋಲಾಹಲ ಉಂಟಾಯಿತು. ಇಬ್ರಾಹೀಮ್‍ರಿಗೂ ಜಮಾಅತೆ ಇಸ್ಲಾಮಿಗೂ ನಡುವೆ ಇರುವ ಸಂಬಂಧವು ತೀವ್ರ ಚರ್ಚೆಗೆ ಒಳಪಟ್ಟು ಹಲ್ಲೆಯ ಹಂತಕ್ಕೂ ಹೋಯಿತು. ಅವರ ಮೇಲೆ ಅಲಿಖಿತ ಬಹಿಷ್ಕಾರವನ್ನು ಹೇರಲಾಯಿತು. ಬಹುಶಃ, ನನ್ನಲ್ಲಿ ಈ ಬೆಳವಣಿಗೆ ತೀವ್ರ ಪರಿಣಾಮವನ್ನು ಬೀರಿತು. ನನಗೆ ಅವರ ಮೇಲೆ ಅನುಕಂಪವೋ ಅಭಿಮಾನವೋ ಏನೋ ಉಂಟಾಯಿತು. ಆದ್ದ ರಿಂದಲೋ ಏನೋ ನಾನು ಅವರೊಂದಿಗಿನ ಗೆಳೆತನವನ್ನು ಗಟ್ಟಿಗೊಳಿಸಿದೆ. ಆ ಗೆಳೆತನವೇ ನನ್ನನ್ನು ಹಿರಾ ಸಮ್ಮೇಳನಕ್ಕೆ ಕರೆದೊಯ್ದಿತ್ತು. ಅಪ್ಪನ ಅನುಮತಿಯನ್ನು ಕೇಳದೆಯೇ ನಾನು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದೆ. ಆದರೂ ಅಪ್ಪ ನನ್ನ ಮೇಲೆ ರೇಗಲಿಲ್ಲ. ತರಾಟೆಗೆತ್ತಿಕೊಳ್ಳಲಿಲ್ಲ. ಈ ಹಿಂದಿನಂತೆಯೇ ನನ್ನನ್ನು ಪ್ರೀತಿಸಿದರು. ಹೀಗೆ ಬೆಳೆದ ಸಂಬಂಧ ನನ್ನನ್ನು ಜಮಾಅತ್‍ಗೆ ಹತ್ತಿರಗೊಳಿಸಿತು. 2000ನೇ ಇಸವಿಯಲ್ಲಿ ನಾನು ಸನ್ಮಾರ್ಗ ಪತ್ರಿಕೆ ಸೇರಿಕೊಂಡೆ. ಬಹುಶಃ ಈ ಬೆಳವಣಿಗೆಯಿಂದಾಗಿ ನಾನು ಎದುರಿಸಿದುದಕ್ಕಿಂತ ಹೆಚ್ಚಿನ ಮುಜುಗರ ಮತ್ತು ಸವಾಲನ್ನು ನನ್ನ ತಂದೆ ಎದುರಿಸಿರಬಹುದು ಎಂದೇ ನನ್ನ ಭಾವನೆ. ಈ ಬಗ್ಗೆ ನನ್ನ ವಿರುದ್ಧ ಊರಿನಲ್ಲಿ ತೀವ್ರ ಆಕ್ಷೇಪಗಳೂ ವ್ಯಕ್ತವಾದುವು. ನನ್ನ ನಿಲುವನ್ನು ಅಲ್ಲಲ್ಲಿ ಪ್ರಶ್ನಿಸಲಾಯಿತು. ಅಪಹಾಸ್ಯಕ್ಕೂ ಗುರಿ ಪಡಿಸಲಾಯಿತು. ಹತ್ತಿರದ ಕುಟುಂಬಿಕರೋರ್ವರ ಬಾಡಿಗೆ ಕಾರಿನಲ್ಲಿ ನನಗೆ ಬಹಿಷ್ಕಾರವೂ ಬಿತ್ತು. ಹೀಗಿರುತ್ತಾ, ನನ್ನ ಅಪ್ಪನಿಗೆ ಊರಿನವರಿಂದ ತುಂಬು ಗೌರವ ಸಿಕ್ಕಿರಬಹುದೆಂದು ನಾನು ಭಾವಿಸುತ್ತಿಲ್ಲ. ಆದರೂ ಅಪ್ಪ ಎಲ್ಲೂ ಈ ಬಗ್ಗೆ ನನ್ನಲ್ಲಿ ಹೇಳಿಕೊಂಡೇ ಇಲ್ಲ. ನನ್ನ ನಿಲುವಿಗೆ ಎದುರಾಡಿದ್ದೂ ಇಲ್ಲ. ಒಂಟಿತನವನ್ನು ಇಷ್ಟಪಡುತ್ತಿದ್ದ ಮತ್ತು ಅಂತರ್ಮುಖಿಯಾಗಿದ್ದ ಅಪ್ಪ ಬದುಕಿನುದ್ದಕ್ಕೂ ಒಂದು ಬಗೆಯ ನಿರ್ಲಿಪ್ತತೆಯನ್ನು ಕಾಯ್ದುಕೊಂಡೇ ಬಂದರು. ಅವರು ಭಾವನೆಗಳನ್ನು ಪ್ರಕಟಿಸುತ್ತಿದ್ದುದು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಬದುಕಿನ ಕೊನೆಯ ದಿನಗಳನ್ನು ಬಿಟ್ಟರೆ ಉಳಿದಂತೆ ಅವರು ಕಣ್ಣೀರು ಹರಿಸಿದ್ದನ್ನು ನಾನು ನೋಡಿಯೂ ಇಲ್ಲ. ಅವರು ಒಂದು ರೀತಿಯಲ್ಲಿ ಅಂತರ್ಮುಖಿ ಬಂಡಾಯಗಾರನಾಗಿದ್ದರು. ಇಸ್ಲಾಮ್‍ಗೆ ಸಂಬಂಧಿಸಿ ಊರಿನ ತಪ್ಪು ಸಂಪ್ರದಾಯಗಳನ್ನು ನಿಷ್ಠೆಯಿಂದ ಪಾಲಿಸುತ್ತಿದ್ದ ಅಪ್ಪ, ಕ್ರಮೇಣ ಎಲ್ಲವನ್ನೂ ಕೈಬಿಟ್ಟರು. ಹಾಗಂತ ನಾನೇನೂ ಅವರ ಮೇಲೆ ಒತ್ತಡವನ್ನು ಹೇರಿರಲಿಲ್ಲ. ನನ್ನ ನಿಲುವನ್ನು ಬಲವಂತದಿಂದ ಮಂಡಿಸಿಯೂ ಇರಲಿಲ್ಲ. ಅಪ್ಪ ಇವೆಲ್ಲವನ್ನೂ ತೀರಾ ಸಹಜವಾಗಿ ನಿರ್ವಹಿಸಿದರು. ವರದಕ್ಷಿಣೆ ಮಾಮೂಲಾಗಿದ್ದ ಮತ್ತು ಊರಿನಲ್ಲಿ ತೀರಾ ಸಹಜವಾಗಿದ್ದ ಸಂದರ್ಭದಲ್ಲೂ ಅವರು ನನ್ನ ವರದಕ್ಷಿಣೆ ರಹಿತ ಮದುವೆಯನ್ನು ಬೆಂಬಲಿಸಿದರು. ಅವರು ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು. ಏಕಾಂತದಲ್ಲಿ ಪರೋಕ್ಷವಾಗಿ ಅದನ್ನು ವ್ಯಕ್ತಪಡಿಸುತ್ತಲೂ ಇದ್ದರು. ಅವರಿಗೆ ನನ್ನ ಮೇಲೆ ತುಂಬಾ ವಿಶ್ವಾಸವಿತ್ತು. ನನ್ನ ಪ್ರತಿ ಹೆಜ್ಜೆಯನ್ನೂ ಅವರು ಬೆಂಬಲಿಸಿದುದಕ್ಕೆ ಈ ವಿಶ್ವಾಸವೇ ಕಾರಣವಾಗಿತ್ತು. ನಿಜವಾಗಿ, ಓರ್ವ ಮಗನಾಗಿ ಇಂಥ ವಿಶ್ವಾಸಾರ್ಹ ತಂದೆಯನ್ನು ಪಡೆಯುವುದಕ್ಕಿಂತ ದೊಡ್ಡ ಭಾಗ್ಯ ಇನ್ನೇನೂ ಇಲ್ಲ..
       ನಾವು ತಂದೆಯನ್ನು ಬಾಪ ಎಂದು ಕರೆಯುತ್ತಿದ್ದೆವು. ಧಾರ್ಮಿಕವಾಗಿ ಬಾಪ ತುಂಬಾ ನಿಷ್ಠೆ ಉಳ್ಳವರಾಗಿದ್ದರು. ಸೂರಃ ಯಾಸೀನ್ ಅನ್ನು ಕಂಠಪಾಠವಾಗಿ ಪಠಿಸುತ್ತಿದ್ದರು. ನಾವು ತಪ್ಪಿ ಓದಿದರೆ ತಿದ್ದುತ್ತಿದ್ದರು. ಅಪಾರ ಸ್ವಾಭಿಮಾನಿ. ಪರಿಶ್ರಮ ಜೀವಿ. ನಮ್ಮ ಮುಳಿಹುಲ್ಲಿನ ಮನೆಯನ್ನು ಹೆಂಚಿನ ಮನೆಯಾಗಿ ಪರಿವರ್ತಿಸಿದ್ದು ಅಪ್ಪನೇ. ವರ್ಷ ವರ್ಷವೂ ಮುಳಿಹುಲ್ಲನ್ನು ಮಾಡಿಗೆ ಹಾಸಬೇಕಾಗಿತ್ತು. ಇಲ್ಲದಿದ್ದರೆ ಮಳೆಗಾಲದಲ್ಲಿ ನೀರು ಸೋರುತ್ತದೆ. ಆ ದಿನಗಳೇ ಒಂದು ಕೌತುಕ. ಸರಕಾರಿ ಜಾಗದಲ್ಲಿರುವ ಮುಳಿಹುಲ್ಲನ್ನೇ ಊರಿನವರು ಆಶ್ರಯಿಸಬೇಕಾಗಿತ್ತು. ಇಂತಿಂಥ ದಿನದಂದು ಹುಲ್ಲನ್ನು ಜನರು ಕತ್ತರಿಸಬೇಕೆಂದು ಗ್ರಾಮ ಕರಣಿಕರು ಫರ್ಮಾನು ಹೊರಡಿಸುವರು. ಆ ದಿನ ತಂದೆಯ ನೇತೃತ್ವದಲ್ಲಿ ನಾವು ಊರಿನ ಸರಕಾರಿ ಭೂಮಿಗೆ ತೆರಳಿ ಮುಳಿಹುಲ್ಲು ಕತ್ತರಿಸಿ ಕಟ್ಟು ಮಾಡು ತ್ತಿದ್ದೆವು. ಅಪ್ಪ ಅದನ್ನು ತಲೆಯಲ್ಲಿ ಹೊತ್ತು ಮನೆಗೆ ಸಾಗಿಸುತ್ತಿದ್ದರು. ನಾವೂ ಅವರ ಜೊತೆಗೂಡುತ್ತಿದ್ದೆವು. ಮುಳಿಹುಲ್ಲನ್ನು ಮಾಡಿಗೆ ಹಾಸುವಾಗ ಮಕ್ಕಳಾದ ನಾವೆಲ್ಲ ಮಾಡಿನಲ್ಲಿರುವ ಹಳೆ ಹುಲ್ಲಿನ ಕಾರಣದಿಂದ ಬಹುತೇಕ ಕಪ್ಪಾಗುತ್ತಿದ್ದೆವು. ಅಪ್ಪ ಆ ಬಳಿಕ ಮನೆಯನ್ನು ಹೆಂಚಿಗೆ ಬದಲಾಯಿಸಿದರು. ಬೆಳ್ಳಂಬೆಳಗ್ಗೆದ್ದು ಮಣ್ಣಿನ ಗೋಡೆಯನ್ನು ಮುಟ್ಟಿ(ಒಂದು ಬಗೆಯ ಮರದ ವಸ್ತು)ಯಿಂದ ಹದಗೊಳಿಸುತ್ತಿದ್ದುದು ಮತ್ತು ಬಳಿಕ ಕೆಲಸಕ್ಕೆ ತೆರಳುತ್ತಿದ್ದುದು ಈಗಲೂ ನೆನಪಿದೆ. ಈ ಎಲ್ಲ ಸಂದರ್ಭಗಳಲ್ಲಿ ಅವರು ತನ್ನ ಜೊತೆ ನಮ್ಮನ್ನು ಸೇರಿಸಿಕೊಳ್ಳುತ್ತಿದ್ದರು. ಅಂದಹಾಗೆ, ಬಾಲ್ಯದ ಈ ಅನುಭವಗಳಿಂದಲೋ ಏನೋ ಯಾವ ಕೆಲಸವೂ ನನ್ನ ಪಾಲಿಗೆ ಅಸ್ಪೃಶ್ಯವಾಗಿ ಕಾಣಿಸಲಿಲ್ಲ. ಶಾಲಾ ಖರ್ಚುಗಳನ್ನು ಭರಿಸ ಲಿಕ್ಕಾಗಿ ಬೀಡಿ ಸುರುಟಿದೆ. ವಿದ್ಯಾಭ್ಯಾಸ ಮುಗಿದು ಸನ್ಮಾರ್ಗ ಪತ್ರಿಕೆಗೆ ಸೇರ್ಪಡೆಗೊಳ್ಳುವುದರ ಮಧ್ಯೆ ವಿವಿಧ ಕೆಲಸಗಳನ್ನು ನಿರ್ವಹಿಸಿದೆ. ಅಪ್ಪ ಈ ಎಲ್ಲವನ್ನೂ ಸಹಜವಾಗಿಯೇ ಸ್ವೀಕರಿಸಿದರು. ನಾನು ಬರಹಗಾರನಾದ ಬಳಿಕವೂ ಅವರ ಈ ನಿಲುವು ಮುಂದುವರಿದಿತ್ತು. ಅವರು ನೈತಿಕವಾಗಿ ನನ್ನ ಬೆನ್ನೆಲುಬಾಗಿದ್ದರು. ಅಪ್ಪ ನನ್ನ ಜೊತೆಗಿದ್ದಾರೆ ಎಂಬ ಧೈರ್ಯವೊಂದು ನನ್ನನ್ನು ನನ್ನ ನಿಲುವಿಗೆ ಅಂಟಿಕೊಳ್ಳುವುದಕ್ಕೆ ಸದಾ ಒತ್ತಾಸೆಯಾಗಿ ನಿಲ್ಲುತ್ತಿತ್ತು. ಆದರೂ ಅಪ್ಪ ನನ್ನ ಮೇಲೆ ಇಷ್ಟೊಂದು ಭರವಸೆ ಯನ್ನು ಯಾಕೆ ಇಟ್ಟುಕೊಂಡಿದ್ದರು ಎಂಬುದು ನನಗಿನ್ನೂ ಗೊತ್ತಿಲ್ಲ. ನಾನು ಕೇಳಿಯೂ ಇಲ್ಲ. ಅಪ್ಪ ಹೇಳಿಯೂ ಇಲ್ಲ. ನನ್ನ ಬಾಲ್ಯದ ದಿನಗಳಲ್ಲಿ ಅವರ ಊಟದ ತಟ್ಟೆ ಹೇಗಿತ್ತು, ಅದರಲ್ಲಿ ಏನೇನಿತ್ತು ಮತ್ತು ಎಷ್ಟೆಷ್ಟಿತ್ತು ಎಂಬುದೂ ನನಗೆ ಗೊತ್ತಿಲ್ಲ. ಬಾಲ್ಯದ ಹಬ್ಬದ ದಿನಗಳೂ ಬಹುತೇಕ ಮಸುಕು ಮಸುಕು. ಅದರಲ್ಲಿ ಅಪ್ಪನ ಉಡುಪು ಏನಿತ್ತು, ಹೊಸತೋ.. ಸ್ಪಷ್ಟವಾಗಿ ಕಾಣುತ್ತಿಲ್ಲ. ಅಪ್ಪನ ಬದುಕು ತೀರಾ ಸರಳವಾದುದೂ ಸಹಜವಾದುದೂ ಆಗಿತ್ತು. ಬದುಕನ್ನು ಅವರು ಇದ್ದಂತೆ ಸ್ವೀಕರಿಸಿದರು. ಬದಲಾವಣೆಗೆ ಸಹಜವಾಗಿ ಒಗ್ಗಿಕೊಂಡರು. ಮಕ್ಕಳನ್ನು ಅಪಾರವಾಗಿ ಪ್ರೀತಿಸಿದರು. ಭಾವನೆಗಳನ್ನು ಅದುಮಿಟ್ಟುಕೊಂಡರು. ಅತ್ಯಂತ ಪ್ರತಿಕೂಲ ಸಂದರ್ಭದಲ್ಲಿಯೂ ನನ್ನನ್ನು ಓದಿಸಿದರು. ನನ್ನ ನಿಲುವುಗಳನ್ನು ಗೌರವಿಸಿದರು. ನೈತಿಕವಾಗಿ ನನ್ನ ಬೆಂಬಲಕ್ಕೆ ನಿಂತರು.. ಇವು ಮತ್ತು ಇಲ್ಲಿ ಹೇಳಲಾಗದ ಇಂಥ ಅನೇಕಾರು ಕಾರಣಗಳಿಂದಲೇ,
  ನನ್ನ ಅಪ್ಪ ನನ್ನ ಹೀರೋ, ಎಂದೆಂದೂ.. 

Thursday, March 17, 2016

ಶ್ರೀ ಶ್ರೀ ಶ್ರೀ ಸ್ಥಾನದಲ್ಲಿ ಓರ್ವ ಮೌಲಾನ ಇರುತ್ತಿದ್ದರೆ?

      Pseudo Secularism
      Muslim Appeasement
  ಈ ಎರಡು ಪದಗಳ ಕೃಪೆಯಿಂದ ಬಿಜೆಪಿಗೆ ಸಾಕಷ್ಟು ಓಟುಗಳು ದಕ್ಕಿವೆ. ನಕಲಿ ಜಾತ್ಯತೀತತೆ ( Pseudo Secularism) ಮತ್ತು ಮುಸ್ಲಿಮ್ ಓಲೈಕೆ (Muslim Appeasement) ಎಂಬ ವಿಷಯದ ಮೇಲೆ ಅದು ಅಸಂಖ್ಯ ಚುನಾವಣಾ ಭಾಷಣಗಳನ್ನು ನಡೆಸಿದೆ. ಚಪ್ಪಾಳೆಯನ್ನು ಗಿಟ್ಟಿಸಿಕೊಂಡಿದೆ. 2009 ಎಪ್ರಿಲ್ 20ರಂದು ಬಿಜೆಪಿಯ ಅಂದಿನ ಪ್ರಧಾನಿ ಅಭ್ಯರ್ಥಿ ಎಲ್.ಕೆ. ಅಡ್ವಾಣಿಯವರು ‘ಸ್ಯೂಡೋ ಸೆಕ್ಯುಲರಿಸಂ' ಎಂಬ ಪದವನ್ನು ಮೊತ್ತಮೊದಲು ಬಳಸಿದರು ಎಂದು ಹೇಳಲಾಗುತ್ತದೆ. ಪ್ರಧಾನಿ ಮನ್‍ಮೋಹನ್ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ ಅವರು ಈ ಪದವನ್ನು ಬಳಸಿದ್ದರು. ಆದರೆ, ಮುಸ್ಲಿಮ್ ಓಲೈಕೆ ಎಂಬುದು ಅಡ್ವಾಣಿಯವರ ಸಂಶೋಧನೆ ಅಲ್ಲ. ಸಾವರ್ಕರ್, ಗೋಲ್ವಲ್ಕರ್, ಹೆಗ್ಡೇವಾರ್‍ಗಳಿಗೆ ಅದರ ಕ್ರೆಡಿಟ್ಟನ್ನು ನೀಡಲಾಗುತ್ತದೆ. ದೇಶ ವಿಭಜನೆಗೊಂಡ ನಂತರದಿಂದಲೇ ಮುಸ್ಲಿಮ್ ಓಲೈಕೆ ಪದವನ್ನು ಬಿಜೆಪಿ ಮತ್ತು ಅದರ ಬೆಂಬಲಿಗರು ಬಳಸುತ್ತಲೇ ಬಂದಿದ್ದಾರೆ. ಹಾಗಂತ ಯಾವಾಗ, ಎಲ್ಲಿ ಮತ್ತು ಎಷ್ಟರ ಮಟ್ಟಿಗೆ ಈ ಓಲೈಕೆಗಳು ಮುಸ್ಲಿಮರ ನೆರವಿಗೆ ಬಂದಿವೆ ಎಂಬ ಪ್ರಶ್ನೆಗೆ ಸಮರ್ಪಕ ಉತ್ತರಗಳು ಲಭ್ಯವಾದದ್ದು ಕಡಿಮೆ. 1983ರಲ್ಲಿ ಗೋಪಾಲ್‍ಸಿಂಗ್ ಸಮಿತಿಯು ಕೇಂದ್ರ ಸರಕಾರಕ್ಕೆ ಸಲ್ಲಿಸಿದ ವರದಿಯಿಂದ ಹಿಡಿದು ನಾಲ್ಕೈದು ವರ್ಷಗಳ ಹಿಂದೆ ಸಾಚಾರ್ ಸಮಿತಿ ಸಲ್ಲಿಸಿದ ವರದಿಯ ವರೆಗೆ ಎಲ್ಲದರಲ್ಲೂ ಮುಸ್ಲಿಮರು ಕೊನೆಯ ಬೋಗಿಯಲ್ಲೇ ಇದ್ದಾರೆ. 1964 ಡಿ. 19-20ರಂದು ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಮುಸ್ಲಿಮರಿಗೆ ಸಂಬಂಧಿಸಿ ಎರಡು ಲೇಖನಗಳು ಪ್ರಕಟವಾದುವು. ಇದಾಗಿ ಮೂರು ವರ್ಷಗಳ ಬಳಿಕ ದಿ ಸ್ಟೇಟ್ಸ್ ಮನ್ ಪತ್ರಿಕೆಯಲ್ಲಿ ಮೂರು ಪ್ರಮುಖ ಲೇಖನಗಳು ಬೆಳಕು ಕಂಡವು. ಈ ಐದೂ ಲೇಖನಗಳು ಆ ಕಾಲದ ಮುಸ್ಲಿಮರ ಶೋಚನೀಯ ಬದುಕನ್ನು ಅತ್ಯಂತ ವಿವರಣಾತ್ಮಕವಾಗಿ ಮತ್ತು ಪುರಾವೆ ಸಹಿತ ಬಿಂಬಿಸಿದ್ದುವು. ಮುಸ್ಲಿಮರು ಯಾವ್ಯಾವ ವೃತ್ತಿಯಲ್ಲಿ, ಎಷ್ಟೆಷ್ಟು ವೇತನದಲ್ಲಿ, ಯಾವ್ಯಾವ ಪ್ರದೇಶಗಳಲ್ಲಿ ವಾಸಿಸು ತ್ತಿದ್ದಾರೆ ಎಂಬ ಬಗ್ಗೆ ಸಾಕಷ್ಟು ಮಾಹಿತಿಯನ್ನು ಅವುಗಳಲ್ಲಿ ಕೊಡಲಾಗಿತ್ತು. ಕಟ್ಟಕಡೆಯ ವೃತ್ತಿಯಲ್ಲಿ, ಕಟ್ಟಕಡೆಯ ಶಾಲಾ ಬೆಂಚ್‍ನಲ್ಲಿ, ಕಟ್ಟಕಡೆಯ ವೇತನದಾರರ ಸಾಲಿನಲ್ಲಿ ನಿಂತವರೆಲ್ಲ ಮುಸ್ಲಿಮರೇ ಆಗಿದ್ದರು. ಬಿಜೆಪಿ ಹೇಳುವ Appeasementನ ಫಲಾನುಭವಿಗಳು ನಿಜಕ್ಕೂ ಮುಸ್ಲಿಮರು ಆಗಿರುವುದೇ ಆಗಿದ್ದಿದ್ದರೆ, ಸ್ವಾತಂತ್ರ್ಯಾ ನಂತರದ 70 ವರ್ಷಗಳಲ್ಲಿ ಮುಸ್ಲಿಮರ ಸ್ಥಿತಿಗತಿ ಹೇಗಿರ ಬೇಕಿತ್ತು? ಇವತ್ತು ಮುಸ್ಲಿಮರಲ್ಲಿ ಎಷ್ಟು ಮಂದಿ ವೈದ್ಯರಿದ್ದಾರೆ, ನ್ಯಾಯವಾದಿಗಳಿದ್ದಾರೆ, ಉದ್ಯಮಿಗಳಿದ್ದಾರೆ, ಪತ್ರಿಕೆ, ಟಿ.ವಿ. ಮಾಲಿಕರು ಮತ್ತು ಮುಖ್ಯ ಸಂಪಾದಕರುಗಳಿದ್ದಾರೆ? ಸಾಮಾಜಿಕ ಹೋರಾಟಗಾರರಿದ್ದಾರೆ? ಬಡತನ ರೇಖೆಗಿಂತ ಕೆಳಗೆ ಗುರುತಿಸಿ ಕೊಂಡವರಲ್ಲಿ ಮುಸ್ಲಿಮರ ಪಾಲು ಎಷ್ಟು? ಭಾರತದ ಪ್ರಮುಖ 50 ಮಂದಿ ಕೋಟ್ಯಾಧಿಪತಿಗಳಲ್ಲಿ ಎಷ್ಟು ಮುಸ್ಲಿಮ್ ಉದ್ಯಮಿಗಳಿದ್ದಾರೆ? ಈ ದೇಶವನ್ನು ಅತ್ಯಂತ ದೀರ್ಘ ಅವಧಿಯವರೆಗೆ ಆಳಿದ್ದು ಕಾಂಗ್ರೆಸ್. ಮುಸ್ಲಿಮ್ ಓಲೈಕೆಯ ಆರೋಪವನ್ನು ಬಿಜೆಪಿ ಹೊರಿಸುತ್ತಿರುವುದೂ ಕಾಂಗ್ರೆಸ್‍ನ ಮೇಲೆಯೇ. ಇಷ್ಟು ದೀರ್ಘ ಅವಧಿಯಿಂದ ಓಲೈಕೆ ಆಗಿರುತ್ತಿದ್ದರೆ ಅದರ ಪರಿಣಾಮವೂ ಗೋಚರವಾಗಬೇಕಿತ್ತಲ್ಲವೇ? ಆದರೆ ದುರ್ಬೀನು ಹಿಡಿದರೂ ಅದರ ಕುರುಹು ಕಾಣಸಿಗುತ್ತಿಲ್ಲವೆಂದಾದರೆ, ನಿಜಕ್ಕೂ ಆಗಿರುವುದೇನು? ಮುಸ್ಲಿಮರ ಅಭಿವೃದ್ಧಿಗೆ ಯಾವುದೇ ಕಾರ್ಯಕ್ರಮಗಳನ್ನು ಕೈಗೊಳ್ಳದಂತೆ ತಡೆಯುವ ಉದ್ದೇಶದಿಂದಲೇ ಈ ಪದವನ್ನು ಹುಟ್ಟು ಹಾಕಲಾಯಿತೇ? ಮುಸ್ಲಿಮರ ಅಭಿವೃದ್ಧಿಗಾಗಿ ಕೈಗೊಳ್ಳಬಹುದಾದ ಯಾವುದೇ ಕ್ರಮಕ್ಕೂ ಮೊದಲು ಎರಡೆರಡು ಬಾರಿ ಯೋಚಿಸುವಂತೆ ಸರ್ಕಾರವನ್ನು ಒತ್ತಾಯಿಸುವುದು ಇದರ ಹಿಂದಿನ ತರ್ಕವಾಗಿತ್ತೇ? ಹೀಗೆ ಮುಸ್ಲಿಮ್ ಓಲೈಕೆ ಎಂಬ ಪದವನ್ನು ಮತ್ತೆ ಮತ್ತೆ ಬಳಸಿ ಒಂದು ಕಡೆ ಕಾಂಗ್ರೆಸ್ ಅನ್ನೂ ಇನ್ನೊಂದು ಕಡೆ ಮುಸ್ಲಿಮರನ್ನೂ ಕಟಕಟೆಯಲ್ಲಿ ನಿಲ್ಲಿಸಲು ಬಿಜೆಪಿ ಒಂದು ಹಂತದ ವರೆಗೆ ಯಶಸ್ವಿಯಾಯಿತು. ಮುಸ್ಲಿಮರು ‘ಕಾಂಗ್ರೆಸ್ ಕೃಪಾಪೋಷಿತರು' ಎಂಬ ಭಾವನೆಯನ್ನು ಅದು ಹುಟ್ಟುಹಾಕಿತು. ‘ಮುಸ್ಲಿಮರು ದೇಶ ಬಿಡಬೇಕಾದವರು, ಕೊಬ್ಬಿ ದವರು, ಸಂಸ್ಕøತಿ ವಿನಾಶಕರು..’ ಎಂದೆಲ್ಲಾ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಬಿಂಬಿಸುತ್ತಾ ಹೋಯಿತು. ಆದ್ದರಿಂದಲೇ ಶಾರುಖ್ ಖಾನ್, ಆಮಿರ್ ಖಾನ್‍ಗಳ ‘ಅಸಹಿಷ್ಣು' ಹೇಳಿಕೆಗಳು ಅಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಒಳಗಾದದ್ದು ಮತ್ತು ‘ಹಿಂದೂ ಅನ್ನಲು ನಾಚಿಕೆಯಾಗುತ್ತೆ' ಎಂದ ಅನುಪಮ್ ಖೇರ್ ಅಥವಾ ‘ದೇಶ ಬಿಡುವೆ' ಎಂದಿದ್ದ ಕಮಲ್ ಹಾಸನ್ ಮತ್ತಿತರರ ಹೇಳಿಕೆ ಯಾವ ಚರ್ಚೆಗೂ ಈಡಾಗದೇ ತಣ್ಣಗಾದದ್ದು. ಅಷ್ಟಕ್ಕೂ, ಶ್ರೀಶ್ರೀ ರವಿಶಂಕರ್ ಜಾಗದಲ್ಲಿ ಓರ್ವ ಮೌಲಾನಾರು ‘ಸಂಸ್ಕೃತಿ ಮೇಳ’ವನ್ನು ಏರ್ಪಡಿಸಿರುತ್ತಿದ್ದರೆ ಮತ್ತು ಮೋದಿಯ ಬದಲು ಸಿಂಗ್ ಪ್ರಧಾನಿಯಾಗಿರುತ್ತಿದ್ದರೆ ಬಿಜೆಪಿಯ ಪ್ರತಿಕ್ರಿಯೆ ಹೇಗಿರುತ್ತಿತ್ತು? ಸೈನಿಕರನ್ನು ಚಾಕರಿಗೆ ಬಳಸಿಕೊಂಡದ್ದಕ್ಕೆ ಅದು ಹೇಗೆ ಪ್ರತಿಕ್ರಿಯಿಸುತ್ತಿತ್ತು? ಪಾಕಿಸ್ತಾನ್ ಜಿಂದಾಬಾದ್ ಎಂದ ಮೌಲಾನರನ್ನು ಅದು ಏನೆಂದು ಕರೆಯುತ್ತಿತ್ತು? ಎಷ್ಟೆಷ್ಟು ಪ್ರತಿಭಟನೆಗಳಾಗುತ್ತಿತ್ತು? ‘ದಂಡ ಕಟ್ಟಲ್ಲ’ ಎಂದ ಮೌಲಾನಾರಿಗೆ ಅದು ಯಾವ ದರ್ಜೆಯ ದೇಶದ್ರೋಹಿ ಪಟ್ಟ ಕೊಡುತ್ತಿತ್ತು? ಕಾಂಗ್ರೆಸ್‍ನ ಮುಸ್ಲಿಮ್ ಓಲೈಕೆಗೆ ಪುರಾವೆಯಾಗಿ ಯಾವೆಲ್ಲ ವೇದಿಕೆಯಲ್ಲಿ ಈ ಮೇಳ ಬಳಕೆಯಾಗುತ್ತಿತ್ತು?
  ಅಂದಹಾಗೆ, ಜಾತ್ಯತೀತತೆ ಅಂದರೇನು? ನಕಲಿ ಜಾತ್ಯತೀತತೆಯ ಲಕ್ಷಣಗಳು ಯಾವುವು? ಕಳೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಸರ್ದಾರ್ ಪಟೇಲರನ್ನು ಜಾತ್ಯತೀತ ವ್ಯಕ್ತಿಯಾಗಿ ಬಿಂಬಿಸಿದರು. ಪಟೇಲರ ಬದಲು ನೆಹರೂರರನ್ನು ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದುದಕ್ಕಾಗಿ ಅವರು ಕಾಂಗ್ರೆಸ್ ಅನ್ನು ಟೀಕಿಸಿದರು. ನೆಹರೂ, ಗಾಂಧಿ ಮತ್ತು ಕಾಂಗ್ರೆಸ್ ಸ್ಯೂಡೋ ಸೆಕ್ಯುಲರಿಸ್ಟ್ ಗಳಾಗಿಯೂ ಪಟೇಲ್, ಬಿಜೆಪಿ ಮತ್ತು ಸಂಘಪರಿವಾರ ರಿಯಲ್ ಸೆಕ್ಯುಲರಿಸ್ಟ್ ಗಳಾಗಿಯೂ ಒತ್ತಿ ಹೇಳುವುದು ಅವರ ಉದ್ದೇಶವಾಗಿತ್ತು. ನೆಹರೂರನ್ನು ಪ್ರಧಾನಿಯಾಗಿ ಸೂಚಿಸಿದ ಗಾಂಧೀಜಿಯ ವರ್ಚಸ್ಸನ್ನು ತೆಳ್ಳಗಾಗಿಸುವ ತಂತ್ರವೂ ಇದರ ಹಿಂದಿತ್ತು. ನಿಜವಾಗಿ, ಬಿಜೆಪಿಯ ಈ ರಿಯಲ್ ಸೆಕ್ಯುಲರ್ ಮತ್ತು ಸ್ಯೂಡೋ ಸೆಕ್ಯುಲರ್ ವಿಭಜನೆಯೇ ಅತ್ಯಂತ ಹಾಸ್ಯಾಸ್ಪದ. ಒಂದು ವೇಳೆ ಗಾಂಧೀಜಿ, ಕಾಂಗ್ರೆಸ್, ನೆಹರೂಗಳು ಸ್ಯೂಡೋ ಸೆಕ್ಯುಲರ್‍ಗಳ ಪಟ್ಟಿಯಲ್ಲಿ ಸೇರಬೇಕಾದವರೆಂದಾದರೆ, ಅದೇ ಪಟ್ಟಿಯಲ್ಲಿ ಸಂಘಪರಿವಾರ, ಮೋದಿ ಮತ್ತು ಬಿಜೆಪಿಯೂ ಸೇರ ಬೇಕಾಗುತ್ತದೆ. ಯಾಕೆಂದರೆ, ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯಲ್ಲಿ ‘ಸರ್ದಾರ್ ಪಟೇಲ್’ ಆಗಿದ್ದುದು ಅಡ್ವಾಣಿ. ಬಿಜೆಪಿಯ ಪೋಸ್ಟರ್ ಬಾಯ್ ಆಗಿ ದಶಕಗಳ ಕಾಲ ಪಕ್ಷವನ್ನು ಕಟ್ಟಿದವರು ಅವರು. ಉಕ್ಕಿನ ಮನುಷ್ಯ ಆಗಿದ್ದವರು. 2009ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಗುರುತಿಸಿಕೊಂಡು 2014ರಲ್ಲಿ ಆ ಉಮೇದುವಾರಿಕೆಯನ್ನು ಉಳಿಸಿಕೊಳ್ಳಲು ಎಲ್ಲ ರೀತಿಯಲ್ಲೂ ಅರ್ಹತೆ ಇದ್ದವರು. ಆದರೆ, ಅಡ್ವಾಣಿಯ ಬದಲು ಮೋದಿಯನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯನ್ನಾಗಿಸಿತು. ಸರ್ದಾರ್‍ರ ಬದಲು ನೆಹರೂರನ್ನು ಗಾಂಧೀಜಿ ಸೂಚಿಸಿದಂತೆ ಅಡ್ವಾಣಿಯ ಬದಲು ಮೋದಿಯನ್ನು ಸಂಘಪರಿವಾರ ಸೂಚಿಸಿತು. ಹೀಗಿರುವಾಗ ನೆಹರೂ ಗುಂಪನ್ನು ಮೋಸಗಾರರಂತೆಯೂ ಮೋದಿ ಗುಂಪನ್ನು ಸಾಚಾಗಳಂತೆಯೂ ವ್ಯಾಖ್ಯಾನಿಸುವುದು ಎಷ್ಟು ಸರಿ? ಸರ್ದಾರ್ ಪಟೇಲ್‍ರು ನೆಹರೂರಿಗಿಂತ 14 ವರ್ಷ ಹಿರಿಯರಾಗಿದ್ದರು. ನೆಹರೂ ಪ್ರಧಾನಿಯಾಗುವಾಗ ಸರ್ದಾರ್‍ರಿಗೆ 71 ವರ್ಷ. ಅಲ್ಲದೇ, ವಯೋ ಸಹಜ ದಣಿವೂ ಅವರಲ್ಲಿತ್ತು. ಅಡ್ವಾಣಿ ಮತ್ತು ಮೋದಿಯವರಿಗೆ ಹೋಲಿಸಿದರೆ ಇವೇ ವ್ಯತ್ಯಾಸಗಳು ಗೋಚರವಾಗುತ್ತವೆ. ಆದರೆ ಸರ್ದಾರ್‍ರಿಗೆ ಸಂಬಂಧಿಸಿ ಹೇಳುವಾಗ, ‘ಹಿರಿತನವನ್ನು ಗಾಂಧೀಜಿ ಕಡೆಗಣಿಸಿದರು' ಎಂದು ಹೇಳುತ್ತಾ ಅಡ್ವಾಣಿಯವರಿಗೆ ಸಂಬಂಧಿಸಿ ಈ ಹೋಲಿಕೆ ಮಾಡದೇ ಇರುವುದು ಏನನ್ನು ಸೂಚಿಸುತ್ತದೆ? ಯಾವುದು ನಕಲಿ? ಯಾವುದು ಅಸಲಿ?
  ನೆಹರೂ ಅವರ ಒಂದು ಮಾತಿದೆ
  “ಹಿಂದೂ ಮತ್ತು ಮುಸ್ಲಿಮ್ ಎರಡರ ಕೋಮುವಾದವೂ ಕೆಟ್ಟದೇ. ಆದರೆ ಮುಸ್ಲಿಮ್ ಕೋಮುವಾದವು ಭಾರತೀಯ ಸಮಾಜದ ಮೇಲೆ ಪ್ರಾಬಲ್ಯ ಪಡೆಯಲು ಸಾಧ್ಯವಿಲ್ಲ. ಆದರೆ ಹಿಂದೂ ಕೋಮುವಾದಕ್ಕೆ ಅದು ಸಾಧ್ಯವಾಗಬಹುದು.” ಬಹುಶಃ, ಇವತ್ತು ಬಿಜೆಪಿ ಅಧಿಕಾರದಲ್ಲಿರುವುದಕ್ಕೆ ಬಹುದೊಡ್ಡ ಕೊಡುಗೆ ಅದು ನಿರ್ಮಿಸಿರುವ ಕೋಮುವಾದಿ ವಾತಾವರಣವೇ. ಸದ್ಯ ಬಿಜೆಪಿಯ ಲೋಕಸಭಾ ಸದಸ್ಯರಲ್ಲಿ ಶೇ. 75ರಷ್ಟು ಮಂದಿ ಕೋಮುಗಲಭೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಭಾಗಿಯಾಗಿ ಕ್ರಿಮಿನಲ್ ದೂರನ್ನು ಹೊತ್ತವರಾಗಿದ್ದಾರೆ. ಗುಜರಾತ್, ಭಾಗಲ್ಪುರ, ಮುಂಬೈ, ಮೊರಾದಾಬಾದ್, ಮುಝಫ್ಫರ್‍ನಗರ್ ಮುಂತಾದ ಯಾವ ಸಂಘರ್ಷವನ್ನೇ ಎತ್ತಿಕೊಳ್ಳಿ.. ಎಲ್ಲದರಲ್ಲೂ ಅಪಾರ ಸಾವು-ನೋವು-ನಾಶ-ನಷ್ಟಕ್ಕೆ ಒಳಗಾಗಿರುವವರು ಮುಸ್ಲಿಮರೇ ಆಗಿದ್ದಾರೆ. ನಿರಾಶ್ರಿತ ಶಿಬಿರಗಳಲ್ಲಿ ವರ್ಷಗಳಿಂದ ಜೀವಿಸುತ್ತಿರುವವರೂ ಅವರೇ. ಅಥವಾ ಯೋಗಿ ಆದಿತ್ಯನಾಥ್ ಮತ್ತು ಅಕ್ಬರುದ್ದೀನ್ ಓವೈಸಿಯವರ ನಡುವಿನ ವ್ಯತ್ಯಾಸವೂ ಇದುವೇ. ಓವೈಸಿಯ ಮಾತಿನಿಂದ ಯಾವ ಪರಿಣಾಮವೂ ಉಂಟಾಗದು. ಹೆಚ್ಟೆಂದರೆ, ಚಪ್ಪಾಳೆ ಗಿಟ್ಟಬಹುದು. ನಾಲ್ಕು ಯುವಕರು ಪ್ರಚೋದಿತರಾಗಬಹುದು. ಅದರಾಚೆಗೆ ಆ ಭಾಷಣ ಇಡೀ ಮುಸ್ಲಿಮ್ ಸಮುದಾಯವನ್ನು ಧರ್ಮಾಧಾರಿತವಾಗಿ ಧ್ರುವೀಕರಿಸಿ, ಆ ಧ್ರುವೀಕರಣ ಓಟಾಗಿ ಪರಿವರ್ತಿತವಾಗಿ, ಆ ಬಳಿಕ ಅದು ಅಧಿಕಾರ ಗಿಟ್ಟಿಸಿಕೊಳ್ಳುವಲ್ಲಿವರೆಗೆ ತಲುಪಲು ಸಾಧ್ಯವೇ ಇಲ್ಲ. ಮುಸ್ಲಿಮ್ ಕೋಮುವಾದಕ್ಕೆ ನೂರು ಮನೆಗಳಿರುವ ಒಂದು ಪುಟ್ಟ ಗಲ್ಲಿಯ ಮೇಲೆ ಪ್ರಾಬಲ್ಯ ಸ್ಥಾಪಿಸಲಾಗದಷ್ಟೂ ಅಸಮರ್ಥತೆ ಇದೆ. ಆದರೆ ಯೋಗಿ ಆದಿತ್ಯನಾಥ್‍ರ ಕೋಮುವಾದಕ್ಕೆ ಈ ಸೀಮಿತತೆಯಿಲ್ಲ. ಅವರ ಕೋಮುವಾದಿ ನಿಲುವು ಬಹುಸಂಖ್ಯಾತರನ್ನು ಧಾರ್ಮಿಕವಾಗಿ ಧ್ರುವೀಕರಣಗೊಳಿಸಿ, ಆ ಧ್ರುವೀಕರಣ ಓಟಾಗಿ ಪರಿವರ್ತನೆಗೊಂಡು, ಬಳಿಕ ಅದು ಅಧಿಕಾರ ಪಡೆಯುವಲ್ಲಿ ವರೆಗೆ ತಲುಪಬಹುದು. ಅದಕ್ಕೆ ಈಗಿನ ಮೋದಿ ನೇತೃತ್ವದ ಕೇಂದ್ರ ಸರಕಾರವೇ ಅತ್ಯುತ್ತಮ ಉದಾಹರಣೆ. ಈ ಸತ್ಯ ಗೊತ್ತಿರುವುದರಿಂದಲೇ ಬಿಜೆಪಿ ತನ್ನ ಮುಖ್ಯ ಅಜೆಂಡಾವಾಗಿ ಕೋಮು ಆಧಾರಿತ ವಿಭಜನೆಯನ್ನೇ ಆರಿಸಿಕೊಂಡಿದೆ. ಸಂದರ್ಭ ಸಿಕ್ಕಾಗಲೆಲ್ಲ ಅಥವಾ ಸಂದರ್ಭವನ್ನು ಸೃಷ್ಟಿಸಿಕೊಂಡಾದರೂ ಅದು ಆಗಾಗ ಹಿಂದೂಗಳಿಂದ ಮುಸ್ಲಿಮರನ್ನು ಬೇರ್ಪಡಿಸಿ ಹೊಡೆಯುವ ಮಾತುಗಳನ್ನು ಆಡುತ್ತಲೇ ಇದೆ. ಬಹುಶಃ, ಬಿಜೆಪಿಯ ಈ ಧರ್ಮಾಧಾರಿತ ರಾಜಕೀಯಕ್ಕೆ ಇವತ್ತು ಅತ್ಯಂತ ಪ್ರಬಲ ಮತ್ತು ನಿರ್ಣಾಯಕ ಸವಾಲನ್ನು ಒಡ್ಡಿರುವುದು ವೇಮುಲ ಮತ್ತು ಕನ್ಹಯ್ಯ ನೇತೃತ್ವದ Nationalism (ದೇಶಪ್ರೇಮ) ಚರ್ಚೆ ಎಂದೇ ಹೇಳಬೇಕು. ಈವರೆಗೆ ಸ್ಯೂಡೋ ಸೆಕ್ಯುಲರಿಸಂ, ಮುಸ್ಲಿಮ್ ಅಪೀಸ್‍ಮೆಂಟ್ ಎಂದು ಹೇಳಿ ವಿರೋಧಿಗಳನ್ನು ರಕ್ಷಣಾತ್ಮಕ ಆಟಕ್ಕೆ ದೂಡುತ್ತಿದ್ದ ಬಿಜೆಪಿ ಇದೀಗ ಮೊದಲ ಬಾರಿ ವಿದ್ಯಾರ್ಥಿಗಳು ರಚಿಸಿದ ದೇಶಪ್ರೇಮದ ಚಕ್ರವ್ಯೂಹದೊಳಗೆ ಸಿಲುಕಿಕೊಂಡಿದೆ. ನೈಜ ದೇಶಪ್ರೇಮ ಮತ್ತು ಸ್ಯೂಡೋ (ನಕಲಿ) ದೇಶಪ್ರೇಮದ ಚರ್ಚೆಯೊಂದಕ್ಕೆ ಈ ವಿದ್ಯಾರ್ಥಿಗಳು ವೇದಿಕೆಯೊಂದನ್ನು ಒದಗಿಸಿದ್ದಾರೆ ಮತ್ತು ಬಿಜೆಪಿಗೆ ಅದನ್ನು ಮುಖಾಮುಖಿಗೊಳಿಸಿದ್ದಾರೆ. ದುರ್ಗೆಯನ್ನು ಪೂಜಿಸುವುದು ದೇಶಪ್ರೇಮ ಮತ್ತು ಮಹಿಷಾಸುರನನ್ನು ಆರಾಧಿಸುವುದು ದೇಶದ್ರೋಹ ಎಂದು ಪಾರ್ಲಿಮೆಂಟ್‍ನಲ್ಲಿ ಸ್ಮೃತಿ ಇರಾನಿ ತೀರ್ಪು ನೀಡಿದ್ದರು. ಹೌದೇ, ಇದು ದೇಶಪ್ರೇಮವೇ? ದೇಶಪ್ರೇಮಕ್ಕೆ ಈ ಬಗೆಯ ವ್ಯಾಖ್ಯಾನ ಇದೆಯೇ? ಬಿಜೆಪಿ ಪ್ರತಿಪಾದಿಸುತ್ತಿರುವ ದೇಶಪ್ರೇಮ ನಿಜಕ್ಕೂ ಯಾವುದು, ನಕಲಿಯೋ ಅಸಲಿಯೋ? ಕನ್ಹಯ್ಯ ಕುಮಾರ್ ನೇತೃತ್ವ ದಲ್ಲಿ ಕೇಳಿಬರುತ್ತಿರುವ ದೇಶಪ್ರೇಮದ ಪರಿಭಾಷೆಗೂ ಸ್ಮೃತಿ ಇರಾನಿಯ ಮಹಿಷಾಸುರ-ದುರ್ಗಾ ಆಧಾರಿತ ದೇಶಪ್ರೇಮದ ಪರಿಭಾಷೆಗೂ ನಡುವಿನ ಮುಖಾಮುಖಿಯಲ್ಲಿ ಯಾವುದು ಸರಿ, ಯಾವುದು ತಪ್ಪು? ದೇಶಪ್ರೇಮವೆಂಬುದು ಪೂಜೆ-ಆರಾಧನೆ ಆಧಾರಿತವೇ ಅಥವಾ ಬಡವರು ಮತ್ತು ಬಡತನ ರೇಖೆಗಿಂತ ಕೆಳಗಿರುವ ಬಹುಸಂಖ್ಯಾತ ಜನರ ಬದುಕು-ಭಾವನೆ ಆಧಾರಿತವೇ? ಯಾವುದು ನೈಜ, ಯಾವುದು ಸ್ಯೂಡೋ?
      2009ರಲ್ಲಿ ಅಡ್ವಾಣಿ ಚರ್ಚೆಗೆ ತಂದ ಸ್ಯೂಡೋ ಚರ್ಚೆಯನ್ನು 2016ರಲ್ಲಿ ಕನ್ಹಯ್ಯ ನೇತೃತ್ವ ವಿದ್ಯಾರ್ಥಿಗಳ ಗುಂಪು ಮುಂದುವರಿಸಿದೆ. ಅಂದು ಜಾತ್ಯತೀತತೆ ಯಾಗಿದ್ದರೆ ಇಂದು ದೇಶಪ್ರೇಮ. ಸ್ಯೂಡೋಗಳ ಮುಖ ಅನಾವರಣಗೊಳ್ಳಲಿ. 

Thursday, March 10, 2016

ಮಿಥ್ಯಮೇವ ಪರಾಜಿತೆ...

ಇಂಡಿಯನ್ ಎಕ್ಸ್ ಪ್ರೆಸ್
ಸನ್ಮಾರ್ಗ

         ಫೆ. 19ರಂದು NDTVಯಲ್ಲಿ ರವೀಶ್ ಕುಮಾರ್ ನಡೆಸಿ ಕೊಟ್ಟ ಕಾರ್ಯಕ್ರಮವನ್ನು ವೀಕ್ಷಿಸುವಾಗ ಸನ್ಮಾರ್ಗ ಪತ್ರಿಕೆ ನೆನಪಾಯಿತು. 1988 ಎಪ್ರಿಲ್‍ನಲ್ಲಿ (ಸಂಪುಟ 11, ಸಂಚಿಕೆ 1-2) ಸನ್ಮಾರ್ಗವು ತನ್ನ ಸಂಪಾದಕೀಯ ಪುಟದಲ್ಲಿ ಏನನ್ನೂ ಬರೆದಿರಲಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವನ್ನು ಖಂಡಿಸಿ ಅದು ಸ್ತಬ್ಧ ಸಂಪಾದಕೀಯವನ್ನು ಪ್ರಕಟಿಸಿತ್ತು. ಸಂಪಾದಕರಾದ ಇಬ್ರಾಹೀಮ್ ಸಈದ್ ಅವರ ಬಂಧನದ ಕುರಿತಂತೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಯನ್ನು ಮರುಮುದ್ರಿಸಿ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿತ್ತು. ತುರ್ತು ಪರಿಸ್ಥಿತಿಯನ್ನು ಖಂಡಿಸಿ 1975ರಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯು ಸಂಪಾದಕೀಯ ಪುಟವನ್ನು ಖಾಲಿ ಬಿಟ್ಟಿತ್ತು. ಮಾಧ್ಯಮ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವುದರ ವಿರುದ್ಧ ಇಂಡಿಯನ್ ಎಕ್ಸ್ ಪ್ರೆಸ್ ಮತ್ತು  ಸನ್ಮಾರ್ಗ ದಶಕಗಳ  ಹಿಂದೆ ಈ ರೀತಿಯಾಗಿ ಪ್ರತಿಭಟಿಸಿದ್ದರೆ, ಮಾಧ್ಯಮ ಜಗತ್ತಿನ ಕರಾಳ ಮುಖವನ್ನು ಖಂಡಿಸುವುದಕ್ಕಾಗಿ ರವೀಶ್ ಕುಮಾರ್ ಅವರು ಫೆ. 19ರ ಕಾರ್ಯಕ್ರಮದಲ್ಲಿ ವಿನೂತನ ಶೈಲಿಯನ್ನು ಪರಿಚಯಿಸಿದರು. ಅವರ ಹಿಂದುಗಡೆಯ ಸ್ಕ್ರೀನ್ ಸಂಪೂರ್ಣ ಕಪ್ಪಾಗಿತ್ತು. ಅವರ ಕಾರ್ಯಕ್ರಮದ ಉದ್ದಕ್ಕೂ ಸ್ಕ್ರೀನ್‍ನಲ್ಲಿ ಯಾವ ದೃಶ್ಯಗಳೂ ಮೂಡಿಬರಲಿಲ್ಲ. JNU ವಿಷಯದಲ್ಲಿ ಕೆಲವು ಚಾನೆಲ್‍ಗಳು ಪ್ರಸಾರ ಮಾಡಿದ ಪಕ್ಷಪಾತಿ ಮತ್ತು ಅಪ್ಪಟ ಸುಳ್ಳುಗಳಿಂದ ಕೂಡಿದ ಕಾರ್ಯಕ್ರಮಗಳನ್ನು ಖಂಡಿಸುವುದು ಆ ಕಪ್ಪು ಸ್ಕ್ರೀನ್‍ನ ಉದ್ದೇಶವಾಗಿತ್ತು. ಟಿ.ವಿ.ಯಲ್ಲಿ ಪ್ರಸಾರವಾಗುವ ಚರ್ಚೆ ಮತ್ತು ಸಂವಾದಗಳು ಕತ್ತಲಿನೆಡೆಗೆ ಕೊಂಡೊಯ್ಯುತ್ತಿವೆ ಎಂಬುದನ್ನು ಅವರು ಅತ್ಯಂತ ಪರಿಣಾಮಕಾರಿಯಾಗಿ ಬಿಂಬಿಸಿದರು. ಅಷ್ಟಕ್ಕೂ, ಮಾಧ್ಯಮ ನೈತಿಕತೆ ಪ್ರಶ್ನಾರ್ಹವೆನಿಸಿದ್ದು JNU ಪ್ರಕರಣದಲ್ಲಷ್ಟೇ ಅಲ್ಲ. ಗುಜರಾತ್ ಹತ್ಯಾಕಾಂಡದಲ್ಲೂ ಅದು ತೀವ್ರ ಚರ್ಚೆಗೆ ಒಳಗಾಗಿತ್ತು. ಗುಜರಾತ್ ಸಮಾಚಾರ್ ಮತ್ತು ಸಂದೇಶ್ ಪತ್ರಿಕೆಗಳ ನೈತಿಕ ಮಟ್ಟವನ್ನು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾವೇ ಪ್ರಶ್ನಿಸಿತ್ತು. ಸಮುದಾಯಗಳ ನಡುವೆ ದ್ವೇಷ, ಅನುಮಾನ, ಹಗೆತನವನ್ನು ಹುಟ್ಟುಹಾಕುವಲ್ಲಿ ಮತ್ತು ವದಂತಿಗಳಿಗೆ ಸುದ್ದಿಯ ರೂಪವನ್ನು ಕೊಟ್ಟು ಬೆಂಕಿ ಕೊಡಿಸುವಲ್ಲಿ ಇವುಗಳು ನಿರ್ವಹಿಸಿದ ಪಾತ್ರ ತೀವ್ರ ಟೀಕೆಗೆ ಗುರಿಯಾಗಿತ್ತು. ಬಹುಶಃ ಆ ನಂತರದಲ್ಲಿ ಮಾಧ್ಯಮಗಳು ಕಟಕಟೆಯಲ್ಲಿ ನಿಂತ ಎಣಿಕೆಯ ಪ್ರಕರಣಗಳಲ್ಲಿ JNU ಕೂಡ ಒಂದು. ಕನ್ಹಯ್ಯ ಕುಮಾರ್ ಎಲ್ಲ ಟಿ.ವಿ. ಚಾನೆಲ್‍ಗಳ ನೈತಿಕ ಗುಣಮಟ್ಟವನ್ನು ಅಳೆಯುವ ವಸ್ತುವಾಗಿಬಿಟ್ಟ. ಆತನಿಂದಾಗಿ ಮುಖ್ಯಧಾರೆಯ ಟಿ.ವಿ. ಚಾನೆಲ್‍ಗಳ ಮುಖವಾಡಗಳು ದೊಪ್ಪನೆ ಕಳಚಿ ಬಿದ್ದುವು. ಬಹುಶಃ, ಗುಜರಾತ್ ಸಮಾಚಾರ್, ಸಂದೇಶ್ ಪತ್ರಿಕೆಗಳ ಪಾತ್ರವನ್ನು ಟೈಮ್ಸ್ ನೌ, ಝೀ ನ್ಯೂಸ್, ನ್ಯೂಸ್ ಎಕ್ಸ್ ಮುಂತಾದ ಚಾನೆಲ್‍ಗಳು ಸ್ವಯಂ ವಹಿಸಿಕೊಂಡಿರುವಂತೆ ವರ್ತಿಸಿದುವು. JNU ವಿದ್ಯಾರ್ಥಿ ನಾಯಕರು ದೇಶವಿರೋಧಿ ಘೋಷಣೆ ಕೂಗಿರುವರೆಂಬ ವದಂತಿಯನ್ನು ಯಾವ ಸತ್ಯಶೋಧನೆಯನ್ನೂ ನಡೆಸದೆಯೇ ಅವು ಮತ್ತೆ ಮತ್ತೆ ಪ್ರಸಾರ ಮಾಡಿದುವು. ಕನ್ಹಯ್ಯ ಕುಮಾರ್ ಭಾರತ್ ವಿರೋಧಿ ಭಾಷಣ ಮಾಡಿರುವನೆಂದು ಅವು ಹೇಳಿಕೊಂಡವು. ನ್ಯೂಸ್ ಎಕ್ಸ್ ಚಾನೆಲ್ ಅಂತೂ ಉಮರ್ ಖಾಲಿದ್‍ನನ್ನು ಜೈಶೆ ಮುಹಮ್ಮದ್‍ನ ಸದಸ್ಯ ಎಂದು ಹೇಳಿತು. ನಿರಂತರ ಮೂರು ದಿನಗಳ ಕಾಲ ಈ ಸುದ್ದಿಯನ್ನು ಅದು ಪ್ರಸಾರ ಮಾಡಿತು. ಮಾತ್ರವಲ್ಲ, ತನ್ನ ಈ ಸುದ್ದಿಗೆ ಗುಪ್ತಚರ ಇಲಾಖೆಯ ವರದಿಯೇ ಆಧಾರ ಎಂದೂ ಸಮರ್ಥಿಸಿಕೊಂಡಿತು. ಆದರೆ ಫೆ. 17ರಂದು ದಿ ಹಿಂದೂ ಪತ್ರಿಕೆ ಪ್ರಕಟಿಸಿದ ಸುದ್ದಿಯು ನ್ಯೂಸ್ ಎಕ್ಸ್ ನ ವಾದವು ಸಂಪೂರ್ಣ ಸುಳ್ಳೆಂಬುದನ್ನು ಸಾಬೀತುಪಡಿಸಿತು. ಆ ಸುದ್ದಿಯ ಪ್ರಕಾರ, ಗುಪ್ತಚರ ಇಲಾಖೆಯು ಅಂಥದ್ದೊಂದು ಸುದ್ದಿಯನ್ನು ಬಿಡುಗಡೆಗೊಳಿಸಿಯೇ ಇರಲಿಲ್ಲ.  ಉಮರ್ ಖಾಲಿದ್‍ನನ್ನು ಝೀ ನ್ಯೂಸ್ ಚಾನೆಲ್ ಭಯೋತ್ಪಾದಕ ಎಂದಿತು. ‘ಟೆರರಿಸ್ಟ್ ಉಮರ್ ಖಾಲಿದ್’ ಎಂಬ ಶೀರ್ಷಿಕೆಯನ್ನೇ ಅದು ಹುಟ್ಟು ಹಾಕಿತು. ತಮಾಷೆ ಏನೆಂದರೆ, ಈ ಭಯೋತ್ಪಾದಕನನ್ನು ಕೂರಿಸಿಕೊಂಡೇ ಝೀ ಮತ್ತು ಟೈಮ್ಸ್ ನೌಗಳು ಸ್ವತಃ ಚರ್ಚಾ ಕಾರ್ಯಕ್ರಮವನ್ನು ಏರ್ಪಡಿಸಿದ್ದುವು!
  ಫೆ. 15ರಂದು ಪಟಿಯಾಲ ಹೌಸ್ ಕೋರ್ಟ್‍ನಲ್ಲಿ ಪತ್ರಕರ್ತರು ಮತ್ತು ವಿದ್ಯಾರ್ಥಿಗಳ ಮೇಲೆ ವಕೀಲ ವೇಷಧಾರಿಗಳಿಂದ ಹಲ್ಲೆ ನಡೆದುವು. ಈ ಹಲ್ಲೆಯು ಪ್ರಮುಖ ಟಿ.ವಿ. ಚಾನೆಲ್‍ಗಳಲ್ಲಿ ಪ್ರಸಾರವನ್ನೂ ಕಂಡಿತು. ಆದರೆ ಟೈಮ್ಸ್ ನೌ ಈ ಬಗ್ಗೆ ಮೌನ ತಾಳಿತು. ಮರುದಿನ ಎನ್‍ಡಿ ಟಿ.ವಿ.ಯ ಬರ್ಖಾ ದತ್, ಇಂಡಿಯಾ ಟುಡೇ ಟಿ.ವಿ.ಯ ರಾಜ್‍ದೀಪ್ ಸರ್ದೇಸಾಯಿ ಮತ್ತು ಎನ್‍ಡಿ ಟಿ.ವಿ.ಯ ರವೀಶ್ ಕುಮಾರ್ ಮುಂತಾದ ಖ್ಯಾತ ಪತ್ರಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಪಟಿಯಾಲ ಹೌಸ್ ಕೋರ್ಟ್‍ನಲ್ಲಿ ನಡೆದ ಘಟನೆಯನ್ನು ಮತ್ತು ಪತ್ರಕರ್ತರ ಮೇಲಿನ ಹಲ್ಲೆಯನ್ನು ಅವರು ಖಂಡಿಸಿದರು. ಅಂಬಾನಿ ಒಡೆತನದ CNN-IBN ಚಾನೆಲ್ ಈ ಪ್ರತಿಭಟನೆಗೆ ವಿಶೇಷ ಕವರೇಜ್ ನೀಡಿದರೂ ಟೈಮ್ಸ್ ನೌ ಈ ಪ್ರತಿಭಟನೆಯನ್ನು ಗಮನಿಸದಂತೆ ನಟಿಸಿತು. ಮಾತ್ರವಲ್ಲ, ಈ ಪ್ರತಿಭಟನಾ ರಾಲಿಯಿಂದ ಸ್ವತಃ ಅರ್ನಾಬ್ ಗೋಸ್ವಾಮಿ ತಪ್ಪಿಸಿಕೊಂಡರು. ತಂದೆಯ ಅನಾರೋಗ್ಯದ ನಿಮಿತ್ತ ಬರಲಾಗುತ್ತಿಲ್ಲ ಎಂಬ ಸ್ಪಷ್ಟನೆ ನೀಡಿದರು. ಆದರೆ ಟೈಮ್ಸ್ ನೌನಲ್ಲಿ ರಾತ್ರಿ ಪ್ರಸಾರವಾದ ನ್ಯೂಸ್ ಅವರ್ ಕಾರ್ಯಕ್ರಮವನ್ನು ಅವರೇ ನಡೆಸಿ ಕೊಟ್ಟರು! ಖುಷಿಯ ಸಂಗತಿಯೇನೆಂದರೆ, ಈ ಬಾರಿ ಅರ್ನಾಬ್ ಬಹುತೇಕ ಒಂಟಿಯಾದರು. ಅವರ ವಾದ ಮತ್ತು ಭಾವಾವೇಶ ಸಾರ್ವಜನಿಕವಾಗಿ ಲೇವಡಿಗೆ ಗುರಿಯಾದುವು. ಆದರೆ, ಬರ್ಖಾ-ಸರ್ದೇಸಾಯಿಯಂತಹ ಪತ್ರಕರ್ತರು ಆರಂಭದಿಂದ ಕೊನೆಯ ವರೆಗೆ ಅತ್ಯಂತ ಅಧಿಕಾರಯುತವಾಗಿ ಮಾತಾಡಿದರು. ಇವರಿಗೆ ಹೋಲಿಸಿದರೆ ಅರ್ನಾಬ್ ಪಲಾಯನವಾದಿಯಂತೆ ಕಂಡರು. ಝೀ ನ್ಯೂಸ್ ಅಂತೂ ಅದರ ಪ್ರಮುಖ ಪತ್ರಕರ್ತ ವಿಶ್ವದೀಪ್‍ರ ರಾಜೀನಾಮೆಯಿಂದಾಗಿ ತೀವ್ರ ಮುಖಭಂಗ ಅನುಭವಿಸಿತು.  

     
ರವೀಶ್ ಕುಮಾರ್
         ನಿಜವಾಗಿ, JNU ವಿಷಯದಲ್ಲಿ ಝೀ ನ್ಯೂಸ್, ನ್ಯೂಸ್ ಎಕ್ಸ್, ಟೈಮ್ಸ್ ನೌ ಮುಂತಾದ ಚಾನೆಲ್‍ಗಳ ಕಾರ್ಯಕ್ರಮ ಎಷ್ಟು ಏಕಪಕ್ಷೀಯವಾಗಿತ್ತೆಂದರೆ, ಅದರ ಆ್ಯಂಕರ್‍ಗಳ ಜಾಗದಲ್ಲಿ ಬಿಜೆಪಿ ವಕ್ತಾರರು ಬಂದು ಕುಳಿತರೆ ಅದಕ್ಕಿಂತ ಭಿನ್ನವಾಗಿ ಮಾತಾಡಲಾರರೇನೋ ಎಂದು ಅನಿಸುವಷ್ಟು. ದೇಶಪ್ರೇಮವನ್ನು ಬಿಜೆಪಿ ಯಾವ ಚೌಕಟ್ಟಿನೊಳಗಿಟ್ಟು ನೋಡುತ್ತದೋ ಆ ಚೌಕಟ್ಟಿನಿಂದ ಒಂದಿಷ್ಟೂ ಹೊರಬರದೇ ಅವೂ ಒದ್ದಾಡಿದುವು. ಬಿಜೆಪಿ ಮತ್ತು ಸಂಘಪರಿವಾರದಲ್ಲಿ ಒಂದು ಭಾವಾವೇಶವಿದೆ. ಸ್ಮøತಿ ಇರಾನಿ, ಸಾಕ್ಷಿ ಮಹಾರಾಜ್, ಸಾಧ್ವಿ ಪ್ರಾಚಿ, ಓ.ಪಿ. ಶರ್ಮಾ, ಕಠಾರಿಯಾ ಇತ್ಯಾದಿ ಇತ್ಯಾದಿಗಳು ಆಗಾಗ ಅದರ ಪರಿಚಯ ಮಾಡುತ್ತಾ ಬಂದಿದ್ದಾರೆ. ಈ ಭಾವಾವೇಶವೆಲ್ಲ ಈ ದೇಶದ ಅಭಿವೃದ್ಧಿ, ಬಡತನ, ಮೂಲ ಸೌಲಭ್ಯ, ಅಸ್ಪೃಶ್ಯತೆಯ ಚರ್ಚೆಗಳ ಸಂದರ್ಭದಲ್ಲಿ ಕಾಣಿಸಿಕೊಳ್ಳುವುದೇ ಇಲ್ಲ. ಸಾಧ್ವಿ ಪ್ರಾಚಿಯವರು ದಲಿತ ಕಲ್ಯಾಣದ ಬಗ್ಗೆ ಎಂದಾದರೂ ಮಾತಾಡಿದ್ದಿದೆಯೇ? ದಲಿತ ಎಂಬ ಕಾರಣಕ್ಕಾಗಿ ದೇವಾಲಯ ಪ್ರವೇಶ ನಿಷೇಧಿಸಲಾದ ಘಟನೆಗೆ ಪ್ರತಿಕ್ರಿಯಿಸಿದ್ದಿದೆಯೇ? ಒಂದೊಮ್ಮೆ ಪ್ರತಿಕ್ರಿಯಿಸಿದ್ದಿದ್ದರೂ ಆ ಸಂದರ್ಭದಲ್ಲಿ ಒಂದಿನಿತಾದರೂ ಭಾವಾವೇಶ ಪ್ರಕಟಗೊಂಡದ್ದಿದೆಯೇ? ರುಂಡ ಕತ್ತರಿಸುವ ಮಾತಾಡಿದ ಸ್ಮøತಿ ಇರಾನಿಯವರು ಸದಾ ಕತ್ತಿಯ ಅಲುಗಿನಲ್ಲಿ ನಡೆಯುತ್ತಿರುವ ದುರ್ಬಲ ವರ್ಗಗಳ ಬಗ್ಗೆ ಯಾವಾಗಲಾದರೂ ಈ ಮಟ್ಟದ ಭಾವಾವೇಶಕ್ಕೆ ಒಳಗಾಗಿದ್ದಾರೆಯೇ? ಕನ್ಹಯ್ಯನನ್ನು ಪಟಿಯಾಲ ಹೌಸ್ ಕೋರ್ಟ್‍ನಲ್ಲಿ ಥಳಿಸಿದ ದೆಹಲಿಯ ಬಿಜೆಪಿ ಶಾಸಕ ಶರ್ಮಾ ಆಗಲಿ, ಮುಸ್ಲಿಮರ ವಿರುದ್ಧ ಯುದ್ಧ ಸಾರಬೇಕೆಂದು ಕರೆಕೊಡುವ ಕಠಾರಿಯಾ ಆಗಲಿ ಬಡಜನರ ಬವಣೆಯ ಬಗ್ಗೆ ಈ ಮಟ್ಟದಲ್ಲಿ ಆವೇಶಕ್ಕೆ ಒಳಗಾದದ್ದು ಎಂದೂ ನಡೆದಿಲ್ಲ. ಯಾಕೆಂದರೆ, ಅವರು ಭಾವುಕರಾಗುವುದಕ್ಕೆ ಕೆಲವು ನಿರ್ದಿಷ್ಟ ಪರಿಧಿಗಳಿವೆ. ದಲಿತರು, ದುರ್ಬಲರು, ಬಡತನ, ಹಸಿವು.. ಇವೆಲ್ಲ ಇವರ ಭಾವುಕ ವಲಯದೊಳಗೆ ಸೇರ್ಪಡೆಗೊಳ್ಳುವುದಿಲ್ಲ. ಇವರು ಭಾವುಕರಾಗಬೇಕಾದರೆ ಮುಸ್ಲಿಮರು, ಗೋಮಾಂಸ, ಘರ್‍ವಾಪಸಿ, ಲವ್ ಜಿಹಾದ್.. ಮುಂತಾದುವುಗಳು ಚರ್ಚೆಗೆ ಬರಬೇಕು. ವೇಮುಲ ಮತ್ತು ಕನ್ಹಯ್ಯ ಬಿಜೆಪಿಯ ಕಣ್ಣಿನಲ್ಲಿ ದೇಶದ್ರೋಹಿಗಳಾಗಿರುವುದಕ್ಕೆ ಅವರು ಬಿಜೆಪಿಯ ಈ ಮನುಷ್ಯ ವಿರೋಧಿ ಸ್ವಭಾವವನ್ನು ಪ್ರಶ್ನಿಸಿರುವುದೇ ಕಾರಣ. ಬಿಜೆಪಿ ಒಂದು ಬಗೆಯ ಗುಲಾಮ ಮನಸ್ಥಿತಿಯನ್ನು ನಿರ್ಮಿಸುತ್ತಿದೆ. 2015 ನವೆಂಬರ್ 26ನ್ನು ಸಂವಿಧಾನ ದಿನವನ್ನಾಗಿ ಘೋಷಿಸಿದ ಅದೇ ಬಿಜೆಪಿ ಸಂವಿಧಾನದ ಮೂಲ ಆಶಯವನ್ನು ಜಾರಿಗೊಳಿಸುವಂತೆ ಒತ್ತಾಯಿಸುವುದನ್ನು ದೇಶದ್ರೋಹ ಎಂದು ಕರೆಯುತ್ತಿದೆ. ಅಂಬೇಡ್ಕರ್ ಸ್ಟೂಡೆಂಟ್ ಯೂನಿಯನ್‍ನ ಮೂಲಕ ವೇಮುಲನು ಜಾತಿ ವಿಷಯವನ್ನು ಸಂವಿಧಾನದ ವಿಷಯವನ್ನಾಗಿಸಿ ಗಮನ ಸೆಳೆಯಬಯಸಿದ. ಅಸಮಾನತೆಯನ್ನು ಪೋಷಿಸುವ ವ್ಯವಸ್ಥೆಯನ್ನು ಖಂಡಿಸಿದ. ಕನ್ಹಯ್ಯನು ಆಲ್ ಇಂಡಿಯಾ ಸ್ಟೂಡೆಂಟ್ ಯೂನಿಯನ್‍ನ ಮೂಲಕ ಜಾತಿ ಮತ್ತು ಬಡತನವನ್ನು ಸಂವಿಧಾನಬದ್ಧವಾಗಿ ಪ್ರಶ್ನಿಸಿದ. ತನಗೆ ಬಡತನ, ಭ್ರಷ್ಟಾಚಾರ, ಜಾತಿ, ಅಸಮಾನತೆಯಿಂದ ಆಝಾದಿ ಬೇಕು ಅಂದ. ಇವುಗಳಿಗೆ ಯಾವ ಉತ್ತರವನ್ನೂ ಕೊಡಲಾಗದ ಬಿಜೆಪಿಯು ಭಾವಾವೇಶಕ್ಕೆ ಒಳಗಾಯಿತು. ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಮಿಥ್‍ಗಳನ್ನು ನೀವು ಎತ್ತುವಿರಾದರೆ ನಿಮ್ಮನ್ನು ದೇಶದ್ರೋಹಿಗಳಾಗಿ ಕಾಣಬೇಕಾಗುತ್ತದೆ ಎಂದು ಅದು ಎಚ್ಚರಿಸಿತು. ಸಂವಿಧಾನವು ಕೊಟ್ಟಿರುವ ಸಮಾನತೆಗಾಗಿ ನೀವು ಒತ್ತಾಯಿಸುವಿರಾದರೆ ನಿಮ್ಮನ್ನು ಸರಕಾರಿ ವಿರೋಧಿಗಳೆಂದು ಕರೆಯಬೇಕಾಗುತ್ತದೆ ಎಂದು ಸಾರಿತು. ವೇಮುಲನ ಆತ್ಮಹತ್ಯೆಯ ಬಳಿಕವೂ ಬಿಜೆಪಿ ಕನ್ಹಯ್ಯನನ್ನು ಗುರಿ ಮಾಡಿರುವುದು ಈ ನಿಲುವನ್ನೇ ಸಮರ್ಥಿಸುತ್ತದೆ. ಸಾಮಾಜಿಕ ನ್ಯಾಯ, ಸಮಾನತೆ, ದುರ್ಬಲ-ದಲಿತ ಕಲ್ಯಾಣ ಮುಂತಾದುವುಗಳ ಬಗ್ಗೆ ಗಮನ ಸೆಳೆಯಬಲ್ಲ ರೀತಿಯಲ್ಲಿ ಒತ್ತಾಯಿಸುವುದನ್ನು ದೇಶದ್ರೋಹವಾಗಿ ಕಾಣುವ ವಾತಾವರಣವನ್ನು ಸೃಷ್ಟಿಸಲಾಯಿತು. ಮಾತ್ರವಲ್ಲ, ದೇಶಪ್ರೇಮ ಮತ್ತು ದೇಶದ್ರೋಹದ ಬಗ್ಗೆ ಇದಮಿಥ್ಥಂ ಎಂದು ಹೇಳಿ ಬಿಡಬಹುದಾದ ರೀತಿಯನ್ನು ಆವಿಷ್ಕರಿಸ ತೊಡಗಿತು. ಇಂಥ ಸಂದರ್ಭಗಳಲ್ಲೆಲ್ಲ ಬಿಜೆಪಿಯ ಪ್ರಮುಖ ನಾಯಕರು ಭಾವಾವೇಶಕ್ಕೆ ಒಳಗಾಗುವರು. ಪಾರ್ಲಿಮೆಂಟ್‍ನಲ್ಲಿ ಮತ್ತು ಹೊರಗೆ ಅದರ ವಿವಿಧ ನಾಯಕರು ದೇಶಪ್ರೇಮದ ವಿವಿಧ ಮಜಲುಗಳನ್ನು ಹೇಳಿಕೊಡುವರು. ಸರಕಾರದ ವಿರುದ್ಧ, ಅದರ ನಾಯಕರುಗಳ ವಿರುದ್ಧ ಮತ್ತು ಅದರ ಬೆಂಬಲಿಗರ ವಿರುದ್ಧ ಮಾತಾಡುವುದನ್ನೇ ದೇಶದ್ರೋಹ ಎಂದು ನಂಬುವಂತೆ ಏರುದನಿಯಲ್ಲಿ ಕೂಗುವರು. ಅಲ್ಲದಿದ್ದರೆ,
       ಕನ್ಹಯ್ಯನ ಕುರಿತಾಗಿ ಪ್ರಸಾರ ಮಾಡಲಾದ ಎರಡು ವೀಡಿಯೋಗಳೂ ನಕಲಿ ಎಂದು ಫಾರೆನ್ಸಿಕ್ ಪರೀಕ್ಷೆಯಲ್ಲಿ ಸ್ಪಷ್ಟವಾದ ಬಳಿಕವೂ ಮತ್ತು ಕನ್ಹಯ್ಯ ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕವೂ ‘ಸತ್ಯಮೇವ ಜಯತೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡುವುದರ ಅರ್ಥವೇನು? ಅವರು ಯಾವ ಸತ್ಯದ ಬಗ್ಗೆ ಮಾತಾಡುತ್ತಿದ್ದಾರೆ? ತಿರುಚಿದ ವೀಡಿಯೋದ ಆಧಾರದಲ್ಲಿ ಆ ಹುಡುಗನನ್ನು ಬಂಧಿಸಿದುದನ್ನು ಪ್ರಶ್ನಿಸಿ ಒಂದೇ ಒಂದು ವಾಕ್ಯದ ಟ್ವೀಟನ್ನೂ ಅವರು ಮಾಡಿಲ್ಲವಲ್ಲ, ವೇಮುಲನನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಬಲವಂತಪಡಿಸಿದ ಸ್ಮೃತಿ ಇರಾನಿಯರ ಪತ್ರ ಮತ್ತು ಕುಲಪತಿಯವರ ನಿರ್ಧಾರದ ಬಗ್ಗೆ ಏನನ್ನೂ ಹೇಳಿಲ್ಲವಲ್ಲ, ಮತ್ತೆ ಯಾವ ಸತ್ಯದ ಜಯವನ್ನು ಅವರು ನಿರೀಕ್ಷಿಸುತ್ತಿದ್ದಾರೆ? ಹಾಗಿದ್ದರೂ,
         ಬಿಜೆಪಿಯ ‘ಸಂವಿಧಾನ ದ್ರೋಹಿ’ ಮನಸ್ಥಿತಿಯನ್ನು ಮತ್ತು ಕೆಲವು ಚಾನೆಲ್‍ಗಳ ‘ಬಿಜೆಪಿ ಶರಣು’ ನೀತಿಯನ್ನು ಬಹಿರಂಗಕ್ಕೆ ತಂದುದಕ್ಕಾಗಿ ಕನ್ಹಯ್ಯನನ್ನು ಅಭಿನಂದಿಸೋಣ. ಜೊತೆಗೆ ದಶಕಗಳ ಹಿಂದಿನ ಸ್ತಬ್ದ ಸಂಪಾದಕೀಯಗಳನ್ನು ನೆನಪಿಸಿದುದಕ್ಕಾಗಿ ರವೀಶ್ ಕುಮಾರ್‍ರಿಗೆ ಧನ್ಯವಾದವನ್ನು ತಿಳಿಸೋಣ.