Wednesday, January 27, 2016

ಹೋರಾಟಗಾರರ ಗ್ರಹಿಕಾ ಸಾಮಥ್ಯ ಸತ್ತು ಹೋಗಿರುವಾಗ ವೇಮುಲ ಬೇರೇನು ಮಾಡಬೇಕಿತ್ತು?

   ಜರ್ಮನಿಯ ಬೆರ್ಟೊಲ್ಟ್ ಬೆಕ್ಟ್ ಮತ್ತು ಪೌಲ್ ಸಿಲೆನ್, ರಷ್ಯಾದ ವ್ಲಾದಿಮೀರ್ ಮಯಕೋವಸ್ಕಿ ಮುಂತಾದ ಮೇರು ಕವಿಗಳನ್ನು ಎತ್ತಿಕೊಂಡು ಮತ್ತು ಅವರಿಗೆ ಹೋಲಿಸಿಕೊಂಡು ಇವತ್ತು ರೋಹಿತ್ ವೇಮುಲರ ಆತ್ಮಹತ್ಯೆಯನ್ನು ವಿಶ್ಲೇಷಿಸಲಾಗುತ್ತಿದೆ. ತತ್ವಜ್ಞಾನಿ ಮತ್ತು ವಿಮರ್ಶಕರಾಗಿದ್ದ ವಾಲ್ಟರ್ ಬೆಂಜಮಿನ್‍ಗೆ ಬೆರ್ಟೊಲ್ಟ್ ಬೆಕ್ಟ್ ಬರೆದ ಕವನದ ಎಳೆಯೊಂದಕ್ಕೆ ವೇಮುಲರ ಡೆತ್‍ನೋಟನ್ನು ಹೋಲಿಸಲಾಗುತ್ತಿದೆ. ಪೌಲ್ ಸಿಲೆನ್ ಮತ್ತು ವ್ಲಾದಿಮೀರ್ ಮಯಕೋವಸ್ಕಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರೊಳಗಿನ ಆತಂಕವನ್ನು ಮತ್ತು ಸಮಸ್ಯೆಗೆ ಪರಿಹಾರವಾಗಿ ಅವರು ಸಾವನ್ನು ಆಯ್ದುಕೊಂಡದ್ದನ್ನು ಇವತ್ತು ವೇಮುಲರ ಮೃತದೇಹದ ಎದುರಿಟ್ಟುಕೊಂಡು ಚರ್ಚಿಸಲಾಗುತ್ತಿದೆ. ಒಪ್ಪೋಣ. ವೇಮುಲ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಗ್ರಂಥಲಯವನ್ನೇ ಮೆದುಳಲ್ಲಿ ತುಂಬಿಸಿಕೊಂಡಿದ್ದ. ಅಪಾರ ಬುದ್ಧಿವಂತ. ಈ ದೇಶದ ದಲಿತ ಸಮುದಾಯದ ಪ್ರತಿ ಮನೆಗಳಲ್ಲಿರುವ ಬಡತನ ಆತನ ಮನೆಯಲ್ಲೂ ಇತ್ತು. ಆತನ ತಾಯಿ ಸಾಮಾನ್ಯ ದಲಿತ ಮಹಿಳೆ. ಆತ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಯಾವ ಬಲವೂ ಭರವಸೆಯೂ ಇಲ್ಲದ ವಾತಾವರಣದಲ್ಲಿ ಅರಳಿದ ಅಪರೂಪದ ಹೂವಾಗಿದ್ದ. ಭಾರತದಲ್ಲಿ ದಲಿತನಾಗಿ ಬದುಕುವುದು ಎಷ್ಟು ‘ಗೌರವಾರ್ಹ’ ಎಂಬುದು ಆತನ ಈ ಹಿನ್ನೆಲೆಯೇ ಕಲಿಸಿಕೊಟ್ಟಿತ್ತು. ಆದ್ದರಿಂದಲೇ ಸಂಘಟನೆಯಲ್ಲಿ ತೊಡಗಿಸಿಕೊಂಡ. ಸಕ್ರಿಯನಾದ. ನಕುಲ್ ಸಿಂಗ್ ಸಾವ್ನೆ ಅವರ ‘ಮುಝಫ್ಫರ್ ನಗರ್ ಬಾಕಿ ಹೈ’ ಚಿತ್ರ ಪ್ರದರ್ಶನಕ್ಕೆ ABVP ಅಡ್ಡಿಪಡಿಸಿದ್ದಕ್ಕೆ ಸಿಟ್ಟಾದ. ಗಲ್ಲುಶಿಕ್ಷೆಯನ್ನು ಪ್ರಶ್ನಿಸಿದ. ಒಂದು ರೀತಿಯಲ್ಲಿ, ಮೇಲ್ವರ್ಗದ ಶೋಷಣೆ, ವಿಶ್ವವಿದ್ಯಾಲಯದಲ್ಲಿ ದಲಿತರ ಮೇಲಾಗುತ್ತಿರುವ ಅನ್ಯಾಯದ ವಿರುದ್ಧ ಆತನಲ್ಲಿ ಆವೇಶವೊಂದು ತುಂಬಿಕೊಂಡಿತ್ತು. ಈ ಮಧ್ಯೆ ಆತನ ಸಹಿತ ಇತರ ನಾಲ್ಕು ಮಂದಿ ವಿದ್ಯಾರ್ಥಿಗಳ ಮೇಲೆ ವಿಶ್ವವಿದ್ಯಾಲಯ ‘ಶಿಸ್ತುಕ್ರಮ’ ಕೈ ಗೊಂಡಿತು. ಸುಮಾರು 15 ದಿನಗಳ ಕಾಲ ವಿ.ವಿ.ಯ ಬಯಲಲ್ಲೇ ಮಲಗಿದ. ಈ ‘ಬಯಲುನಿದ್ದೆ’ಗಿಂತ ತಿಂಗಳುಗಳ ಮೊದಲೇ ಉಪಕುಲಪತಿಗಳಿಗೆ ಪತ್ರವನ್ನೂ ಬರೆದಿದ್ದ... ನಿಜವಾಗಿ, ವೇಮುಲ ಆತ್ಮಹತ್ಯೆ ಮಾಡಿಕೊಂಡದ್ದು ದಿಢೀರ್ ಆಗಿ ಅಲ್ಲ. 2015 ಅಗಸ್ಟ್ ನಿಂದಲೇ ವಿ.ವಿ.ಗೂ ವೇಮುಲನಿಗೂ ನಡುವೆ ಯುದ್ಧ ಆರಂಭವಾಗಿತ್ತು. 5 ತಿಂಗಳ ವರೆಗೆ ಈ ಯುದ್ಧ ಮುಂದುವರೆದು ಕೊನೆಗೆ ಆತ ಬದುಕು ಮುಗಿಸಿದ್ದಾನೆ. ಇಷ್ಟಿದ್ದೂ ಇವತ್ತು ಭಾಷಣದ ಮೇಲೆ ಭಾಷಣ ಮಾಡುವ ಮತ್ತು ಪ್ರತಿಭಟನೆಯ ಮೇಲೆ ಪ್ರತಿಭಟನೆ ಹಮ್ಮಿಕೊಳ್ಳುವ ಯಾರೂ, ಯಾವುದೂ ಆ ಸಂದರ್ಭದಲ್ಲಿ ಗಮನಸೆಳೆಯುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರಲಿಲ್ಲವಲ್ಲ, ಏಕೆ? ಆತ ಮತ್ತು ಆತನ ಗೆಳೆಯರನ್ನು ಹಾಗೂ ಅವರ ‘ಬಯಲು ನಿದ್ದೆ’ಯನ್ನು ಮುಂಚಿತವಾಗಿ ಓದಿಕೊಳ್ಳುವ ಸಾಮರ್ಥ್ಯ ಇವತ್ತು ಪ್ರತಿಭಟನೆ ಮಾಡುವ ಯಾರಿಗೂ ಇದ್ದಿರಲಿಲ್ಲವೇ? 5 ತಿಂಗಳ ದೀರ್ಘ ಅವಧಿಯವರೆಗೆ ಐವರು ಹುಡುಗರು ಅತಂತ್ರರಂತೆ ಬದುಕುತ್ತಿರುವುದು ಯಾಕೆ ಯಾವ ಮಾಧ್ಯಮಗಳಿಗೂ ಮುಖ್ಯ ಸುದ್ದಿ ಆಗಲಿಲ್ಲ? ಫೇಸ್‍ಬುಕ್, ವಾಟ್ಸ್ ಆ್ಯಪ್‍ಗಳು ಇರುವೆಯಷ್ಟು ಸಣ್ಣ ಸುದ್ದಿಯನ್ನೂ ಜನರ ಬಳಿಗೆ ತಲುಪಿಸುತ್ತಿರುವ ಈ ಹೊತ್ತಿನಲ್ಲಿ ಈ ಹುಡುಗರು ಬಯಲಲ್ಲೇ ಕಳೆದು ಹೋದುದು ಯಾಕಾಗಿ, ಯಾರಿಂದಾಗಿ? ಹಾಗಂತ, ಅವರು ತೊಡಗಿಸಿಕೊಂಡಿರುವ ಅಂಬೇಡ್ಕರ್ ಸ್ಟುಡೆಂಟ್ ಅಸೋಸಿಯೇಶನ್ (ASA) ಸಂಘಟನೆಯು ವಿ.ವಿ.ಗೆ ಮಾತ್ರ ಸೀಮಿತವಾಗಿರಬಹುದು. ಅಲ್ಲದೇ, ವಿ.ವಿ.ಯ ಮೇಲೆ ಮೇಲ್ವರ್ಗದ ಪ್ರಭಾವಿರುವುದರಿಂದ ಈ ಸಂಘಟನೆಯ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಮೌನಕ್ಕೆ ಶರಣಾಗಿರಬಹುದು. ಅಂದಹಾಗೆ, ಧಮನಿತ ಸಮುದಾಯದ ಮಕ್ಕಳು ಶೋಷಕ ಸಮುದಾಯದ ಮಕ್ಕಳಂತೆ ಅಲ್ಲವಲ್ಲ. ಶೋಷಕ ಸಮುದಾಯದ ಮಕ್ಕಳಲ್ಲಿ ಬಾಲ್ಯದಲ್ಲಿಯೇ ಮೇಲರಿಮೆ ಇರುತ್ತದೆ. ಶೋಷಣೆಯ ಮಾದರಿಗಳನ್ನು ಹಿರಿಯರಿಂದ ಅವು ಕಲಿತಿರುತ್ತವೆ. ಏರು ದನಿಯಲ್ಲಿ ಮಾತನಾಡುವುದಕ್ಕೆ, ಏರಿ ಹೋಗುವುದಕ್ಕೆ ಜನ್ಮಜಾತ ಜೀನ್‍ಗಳನ್ನು ಆ ಮಕ್ಕಳು ಪಡೆದಿರುತ್ತಾರೆ. ಇವರಿಗೆ ಹೋಲಿಸಿದರೆ ದಮನಿತ ಸಮುದಾಯದ ಮಕ್ಕಳು ಒಂದು ಹೆಜ್ಜೆ ಹಿಂದೆ. ಶೋಷಣೆಯನ್ನು ಪ್ರತಿಭಟಿಸದೆಯೇ ಅನುಭವಿಸುವ ಕಲೆ ಅವರಿಗೆ ಜನ್ಮಜಾತವಾಗಿ ಸಿದ್ದಿಸಿರುತ್ತದೆ. ಆದ್ದರಿಂದ ವೇಮುಲ ತೊಡಗಿಸಿ ಕೊಂಡಿರುವ ವಿದ್ಯಾರ್ಥಿ ಸಂಘಟನೆಯ (ASA) ಇತರ ದಲಿತ ವಿದ್ಯಾರ್ಥಿಗಳು ವಿ.ವಿ.ಯ ನಿಲುವನ್ನು ಗಂಭೀರ ತಾರತಮ್ಯವಾಗಿ ಕಂಡಿರುವ ಸಾಧ್ಯತೆ ಒಂದು ಹಂತದವರೆಗೆ ಕಡಿಮೆ. ಆದರೆ, ವಿ.ವಿ.ಯ ಹೊರಗಡೆ ಹತ್ತಾರು ಸಂಘಟನೆಗಳು ಇದ್ದುವಲ್ಲ, ಸ್ಥಾನೀಯ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಸುದ್ದಿ ಮಾಡಬಲ್ಲ ಸಾಮರ್ಥ್ಯವಂತರು ಇದ್ದರಲ್ಲ, ಅವರೆಲ್ಲ ವೇಮುಲ ಸಾಯುವವರೆಗೆ ಕಾದದ್ದೇಕೆ? ‘My birth is my fatal Accident’ ಎಂದು ವೇಮುಲ ತನ್ನ ಮೃತ್ಯು ಪತ್ರದಲ್ಲಿ ಬರೆದಿರುವುದರ ಹಿಂದಿನ ನೋವನ್ನು ಗ್ರಹಿಸಲು ಇವತ್ತು ಸಾಧ್ಯವಿರುವ ನಮಗೆ ತಿಂಗಳ ಹಿಂದೆ ಉಪಕುಲಪತಿಗಳಿಗೆ ಬರೆದ ಪತ್ರದಲ್ಲಿ ‘ಹಗ್ಗ ಕೊಡಿ, ವಿಷಕೊಡಿ’ ಎಂದು ವಿನಂತಿಸಿದ್ದನಲ್ಲ, ಆಗ ಏಕೆ ಅದು ನಮ್ಮ ಸಂವೇದನೆಗೆ ತಟ್ಟಲಿಲ್ಲ? ಹುಡುಗನೊಬ್ಬ ಖಿನ್ನತೆಗೆ ಒಳಗಾಗುತ್ತಿರುವ ಸೂಚನೆಯನ್ನೇಕೆ ಸಂಘಟನೆಗಳು, ನೇತಾರರು ಆ ಪತ್ರದಲ್ಲಿ ಗುರುತಿಸಲಿಲ್ಲ? ನಿಜ, ಬದುಕು ಮತ್ತು ಸಾವು ಒಂದೇ ಅಲ್ಲ. ಸಾವು ಭಾವನಾತ್ಮಕ. ಬದುಕಿರುವಾಗ ಒಂದೇ ಒಂದು ಬಾರಿ ಮಾತಾಡಿಸದ ಮತ್ತು ಸಮಸ್ಯೆಯೇನೆಂದು ಕಾಳಜಿ ತೋರದವನೂ ಆ ವ್ಯಕ್ತಿ ಸತ್ತಾಗ ಮನೆಗೆ ಭೇಟಿ ಕೊಡಬಲ್ಲ, ಕಣ್ಣೀರು ಹಾಕಬಲ್ಲ. ಬೇಕಾದರೆ ಸತ್ತ ವ್ಯಕ್ತಿಯ ಸಮಸ್ಯೆಯನ್ನು ರಾಷ್ಟ್ರಮಟ್ಟಕ್ಕೆ ಒಯ್ಯಬಲ್ಲ. ವೇಮುಲ ಕೂಡ ಈ ಮಟ್ಟದ ನಿರ್ಲಕ್ಷ್ಯಕ್ಕೆ ಒಳಗಾದನೇ? ಹೈದರಾಬಾದ್‍ನಲ್ಲಿ ದಲಿತ-ಬಲಿತ-ಅಲ್ಪಸಂಖ್ಯಾತ ಸಂಘಟನೆಗಳಿಗೇನೂ ಬರವಿಲ್ಲ. ಅಲ್ಲದೇ, ಅತ್ಯಂತ ಪ್ರಗತಿಪರ ಮತ್ತು ಶೋಷಕ ವಿರೋಧಿ ನಿಲುವಿನ ವೇಮುಲ ದಲಿತ, ಪ್ರಗತಿಪರ ಸಂಘಟನೆಗಳಿಗೆ ಅಪರಿಚಿತವಾಗಿರುವುದಕ್ಕೆ ಸಾಧ್ಯವೂ ಇಲ್ಲ. ಇಷ್ಟಿದ್ದೂ ವೇಮುಲನನ್ನು ಉಳಿಸಿಕೊಳ್ಳಲು ಯಾವ ಸಂಘಟನೆಗಳಿಗೂ ಸಾಧ್ಯವಾಗಲಿಲ್ಲವೆಂದರೆ, ಏನರ್ಥ? ಕಳ್ಳರು ಕೊಳ್ಳೆಹೊಡೆದು ಹೋದ ಮೇಲೆ ಪೊಲೀಸರ ಆಗಮನವಾಗುವಂತೆ ದಲಿತರ ವಿಷಯದಲ್ಲೂ ಇವತ್ತು ಆಗುತ್ತಿದೆಯೇ? ಅಂದಹಾಗೆ, ರೈತರು ಈಗಾಗಲೇ ಈ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಜೀವಂತ ರೈತನಿಗಿಂತ ಸತ್ತ ರೈತ ಹೆಚ್ಚು ಬೆಲೆಬಾಳುವ ಹಂತಕ್ಕೆ ಇವತ್ತು ತಲುಪಿದ್ದಾನೆ. ಆರಂಭದಲ್ಲಿ ರೈತ ಆತ್ಮಹತ್ಯೆ ಈ ದೇಶದ ಗದ್ದುಗೆಯನ್ನು ಅಲುಗಾಡಿಸುವಷ್ಟು ಪ್ರಬಲವಾಗಿತ್ತು. ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ತಪ್ಪದೇ ಭೇಟಿ ಕೊಡಬೇಕಾದ ಒತ್ತಡವೊಂದು ರಾಜಕಾರಣಿಗಳ ಮೇಲಿತ್ತು. ಬರಬರುತ್ತಾ ರೈತ ಆತ್ಮಹತ್ಯೆ ಸಾಮಾನ್ಯವಾಗತೊಡಗಿತು. ಕೊನೆಗೆ ಅದು ಎಲ್ಲಿಯವರೆಗೆ ತಲುಪಿತೆಂದರೆ ರೈತರ ಬಗ್ಗೆ ರಾಜಕಾರಣಿಗಳು ಬಿಡಿ, ರೈತ ಸಂಘಟನೆಗಳು ಮಾತಾಡಬೇಕಾದರೂ ರೈತರು ಸಾಯಲೇಬೇಕು ಎಂಬಂಥ ಗಂಭೀರ ಸ್ಥಿತಿಗೆ ತಲುಪಿತು. ಇವತ್ತು ಆರು ತಿಂಗಳಿಗೊಮ್ಮೆಯೋ, ವರ್ಷಕ್ಕೊಮ್ಮೆಯೋ ರೈತ ಆತ್ಮಹತ್ಯೆಯ ಅಂಕಿ ಅಂಶಗಳು ಮಾಧ್ಯಮಗಳಲ್ಲಿ ಪ್ರಕಟವಾಗಿ ಸದ್ದಿಲ್ಲದೇ ಹೋಗುವಲ್ಲಿಗೆ ಆ ಸಾವು ಸಾಮಾನ್ಯವಾಗಿ ಬಿಟ್ಟಿದೆ. ರೈತನು ಅನುಕಂಪದ ವಸ್ತುವಾಗಿದ್ದಾನೆಯೇ ಹೊರತು ಗಂಭೀರ ಸಮಸ್ಯೆಯೊಂದನ್ನು ಪ್ರತಿನಿಧಿಸುವ ವ್ಯಕ್ತಿಯಾಗಿಲ್ಲ. ನಿಜವಾಗಿ, ದಲಿತರಿಗೆ ಹೋಲಿಸಿದರೆ ರೈತರ ಆತ್ಮಹತ್ಯೆಗಳು ತೀರಾ ಹೊಸತು. ಈ ಹೊಸ ಸಮಸ್ಯೆಯೇ ಇಷ್ಟು ಬೇಗ ಸಾಮಾನ್ಯೀಕರಣ ಗೊಂಡಿರುವಾಗ, ಶೋಷಣೆಯ ದೀರ್ಘ ಇತಿಹಾಸವನ್ನು ಹೊಂದಿರುವ ಸಮುದಾಯವೊಂದರ ‘ಕೂಗು’ ಅಸಾಮಾನ್ಯ ಅನ್ನಿಸಿಕೊಳ್ಳುವುದು ಅಸಾಧ್ಯವೇನೋ? ಹಳತು ಬಿಡಿ, ಅಂಬೇಡ್ಕರ್‍ರ ಸಂವಿಧಾನವನ್ನು ಒಪ್ಪಿಕೊಂಡು 7 ದಶಕಗಳಾಗುತ್ತಾ ಬಂದ ಈ ಹೊತ್ತಿನಲ್ಲೂ ಅಂಬೇಡ್ಕರ್ ಅನುಯಾಯಿಗಳು ಸುಖವಾಗಿಲ್ಲ. ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗವು ಬಿಡುಗಡೆಗೊಳಿಸಿದ ವರದಿಯಂತೆ 2014ರಲ್ಲಿ ‘ದಲಿತರ ವಿರುದ್ಧ 47,064 ದೌರ್ಜನ್ಯ ಪ್ರಕರಣಗಳು ನಡೆದಿವೆ. 2013ರಲ್ಲಿ ಇದರ ಸಂಖ್ಯೆ 39,408. ಒಂದೇ ವರ್ಷದ ದೌರ್ಜನ್ಯ ಪ್ರಮಾಣದಲ್ಲಿ 19% ಹೆಚ್ಚಳ. ಕೇಂದ್ರದ ಸಮಾಜ ಕಲ್ಯಾಣ ಇಲಾಖೆಯು ಪಾರ್ಲಿಮೆಂಟಿನಲ್ಲಿ ಮಂಡಿಸಿದ ವರದಿಯ ಪ್ರಕಾರ ದೇಶದಲ್ಲಿ ಪ್ರತಿ 18 ನಿಮಿಷಕ್ಕೊಮ್ಮೆ ಓರ್ವ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಪ್ರತಿದಿನ ಮೂವರು ದಲಿತ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಪ್ರತಿದಿನ ಇಬ್ಬರು ದಲಿತರ ಹತ್ಯೆ ನಡೆಯುತ್ತಿದೆ, ಎರಡು ಗುಡಿಸಲು ಬೆಂಕಿಗಾಹುತಿ ಯಾಗುತ್ತಿದೆ. ಅಂದಹಾಗೆ, ದಲಿತ ದೌರ್ಜನ್ಯ ಪ್ರಕರಣಗಳ ವಿಚಾರಣೆ ನಡೆಸಲು ಪ್ರತ್ಯೇಕ ನ್ಯಾಯಾಲಯ ಮತ್ತು ಪ್ರಾಸಿಕ್ಯೂಶನ್ ಇರಬೇಕೆಂದು ಕಾನೂನೇ ಹೇಳುತ್ತದೆ. ಆದರೆ ಛತ್ತೀಸ್‍ಗಢ್, ಕೇರಳ, ಜಾರ್ಖಂಡ್ ಮತ್ತು ಮಧ್ಯಪ್ರದೇಶ ಗಳನ್ನು ಹೊರತು ಪಡಿಸಿದರೆ ಉಳಿದ ಎಲ್ಲೂ ಅಂಥ ಕೋರ್ಟುಗಳು ಅಸ್ತಿತ್ವ ದಲ್ಲೇ ಇಲ್ಲವೆಂದು 2015 ಮಾರ್ಚ್ 17ರಂದು ಪಾರ್ಲಿಮೆಂಟ್‍ಗೆ ನೀಡಿದ ಮಾಹಿತಿಯಲ್ಲಿ ಕೇಂದ್ರ ಮಂತ್ರಿ ಕೆ.ವಿ. ಥಾಮಸ್ ಹೇಳಿದ್ದರು. ಇತ್ತೀಚೆಗಷ್ಟೇ ಗುಜರಾತ್‍ನ ಪಠಾಣ್ ಜಿಲ್ಲೆಯ ಹಾಜಿಪುರ್ ಗ್ರಾಮದಲ್ಲಿ ದಲಿತ ಮಕ್ಕಳಿಗೆ ಪ್ರತ್ಯೇಕ ಅಂಗನವಾಡಿ ಇರುವುದು ಮಾಧ್ಯಮಗಳಲ್ಲಿ ಸುದ್ದಿಗೀಡಾಗಿತ್ತು. ಗ್ರಾಮದಲ್ಲಿರುವ ಎರಡು ಅಂಗನವಾಡಿಗಳಲ್ಲಿ ಒಂದು ಮೇಲ್ಜಾತಿಗೆ ಮೀಸಲಾಗಿದ್ದು ಅಲ್ಲಿಗೆ ದಲಿತ ಮಗುವೊಂದು ಹೋದದ್ದರಿಂದಾಗಿ ಆದ ರಂಪಾಟವು ಈ ಸುದ್ದಿ ಸ್ಫೋಟವಾಗಲು ಕಾರಣವಾಗಿತ್ತು. ರಾಷ್ಟ್ರೀಯ ಮಾನವ ಹಕ್ಕು ಆಯೋಗವು ಸ್ವಪ್ರೇರಿತವಾಗಿ ಗುಜರಾತ್ ಸರಕಾರಕ್ಕೆ ನೋಟೀಸನ್ನೂ ಜಾರಿಗೊಳಿಸಿತ್ತು. 2010 ಮಾರ್ಚ್ 31ರಂದು ಕೇರಳದ ದಾಖಲಾತಿ ವಿಭಾಗದ ಮುಖ್ಯಸ್ಥ ಹುದ್ದೆಯಿಂದ ಎ.ಕೆ. ರಾಮಕೃಷ್ಣನ್ ನಿವೃತ್ತರಾದರು. ಅದೇ ದಿನ ಸಂಜೆ 6:30 ವೇಳೆಗೆ ಅವರ ಕಚೇರಿಯಲ್ಲಿನ ಕೆಲವು ಉದ್ಯೋಗಿಗಳು ಸೆಗಣಿ ನೀರು ಚಿಮುಕಿಸಿ ಅವರ ಕ್ಯಾಬಿನ್ ಅನ್ನು ಶುದ್ಧ ಮಾಡಿದರು. ರಾಮಕೃಷ್ಣನ್ ಆ ಘಟನೆಯಿಂದ ತೀವ್ರ ನೊಂದುಕೊಂಡರಲ್ಲದೇ ಪರಿಶಿಷ್ಟ ಜಾತಿ ಮತ್ತು ವರ್ಗಗಳ ದೌರ್ಜನ್ಯ ತಡೆ ಕಾಯ್ದೆಯ ಅನ್ವಯ ಕೇಸು ದಾಖಲಿಸಿದರು. ನಿಜವಾಗಿ, ಇಂಥ ಸುದ್ದಿಗಳು ಮಾಧ್ಯಮಗಳನ್ನು ಮತ್ತು ಓದುಗರನ್ನು ಇವತ್ತು ಖಂಡಿತ ಹುಬ್ಬೇರಿಸುತ್ತಿಲ್ಲ. ಒಂದು ಬಗೆಯ ಹೊಂದಿಕೊಳ್ಳುವಿಕೆಯನ್ನು ಇಂಥ ಪ್ರಕರಣಗಳು ಈಗಾಗಲೇ ಈ ದೇಶಕ್ಕೆ ಕಲಿಸಿಕೊಟ್ಟಿವೆ. ಈ ಹಿಂದೆ ದಲಿತರ ಮೇಲಿನ ದೌರ್ಜನ್ಯಕ್ಕೆ ಕಾರಣಗಳನ್ನು ಕೊಡಬೇಕಾಗಿರಲಿಲ್ಲ. ಅವರ ಹುಟ್ಟೇ ಅದಕ್ಕೆ ಪ್ರಬಲ ಕಾರಣವಾಗಿತ್ತು. ಅವರ ನೆರಳು ಅಪರಾಧವಾಗಿತ್ತು. ಅವರನ್ನು ಮುಟ್ಟಿಸಿಕೊಳ್ಳುವುದು ಅವಮಾನ ವಾಗಿತ್ತು. ಅಂಬೇಡ್ಕರ್‍ರ ಸಂವಿಧಾನದಿಂದಾಗಿ ಈ ವಾತಾವರಣ ಬದಲಾಯಿತು. ದೌರ್ಜನ್ಯಕ್ಕೆ ಕಾರಣಗಳನ್ನು ಕೊಡಲೇಬೇಕಾದ ಒತ್ತಡವೊಂದು ಶೋಷಕರ ಎದುರು ಬಂತು. ಆದರೆ ಶತಮಾನಗಳಿಂದ ಶೋಷಿಸಿ ಅನುಭವ ಉಳ್ಳವರಿಗೆ ಕಾರಣಗಳನ್ನು ಉತ್ಪಾದಿಸುವುದು ಕಷ್ಟಕರವಾಗಲು ಸಾಧ್ಯವಿರಲಿಲ್ಲ. ಆದ್ದರಿಂದಲೇ ವೇಮುಲ ರಾಷ್ಟ್ರದ್ರೋಹಿಯಾದ. ಜಾತಿವಾದಿಯಾದ. ದಲಿತರು ಮತ್ತು ಅಲ್ಪಸಂಖ್ಯಾತರನ್ನು ಶೋಷಿಸುವುದಕ್ಕೆ ಮೇಲ್ವರ್ಗ ಸದಾ ಬಳಸುತ್ತಲೇ ಬಂದಿರುವ ಈ ಎರಡು ಅಸ್ತ್ರಗಳು ವೇಮುಲನನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿತು. ಹೀಗೆ ಶೋಷಕರೇ ಶೋಷಿತನ ವಿರುದ್ಧ ಕಾರಣಗಳನ್ನು ಉತ್ಪಾದಿಸಿ ಮಾನಸಿಕವಾಗಿ ಇರಿದರು. ಖಿನ್ನತೆಗೆ ದೂಡಿದರು. ಕೊನೆಗೆ ಆತ್ಮಹತ್ಯೆ ಮಾಡಿಸಿದರು. ದುರಂತ ಏನೆಂದರೆ, ಶೋಷಿತರ ಹಕ್ಕುಗಳ ರಕ್ಷಣೆಗಾಗಿಯೇ ಹುಟ್ಟಿಕೊಂಡ ಸಂಘಟನೆಗಳಾವುವೂ `ರಾಷ್ಟ್ರದ್ರೋಹಿಯಾಗಿ' 15 ದಿನಗಳ ಕಾಲ ಬಯಲಲ್ಲೇ ನಿದ್ದೆ ಮಾಡಿದ ಹುಡುಗನನ್ನು ಎಬ್ಬಿಸಿ, ಧೈರ್ಯ ತುಂಬಿ, ರಾಷ್ಟ್ರದ ಗಮನ ಸೆಳೆಯುವ ಪ್ರಯತ್ನ ನಡೆಸಲೇ ಇಲ್ಲ. ಇದೀಗ ‘ವೇಮುಲ’ ನಾಮಸ್ಮರಣೆ ನಡೆಯುತ್ತಿದೆ. ಬೆರ್ಟೊಲ್ಟ್ ಬ್ರೆಕ್ಟ್, ವ್ಲಾದಿಮೀರ್ ಮಯಕೋವಸ್ಕಿ, ಪೌಲ್ ಸಿಲೆನ್‍ರಿಗೆ ವೇಮುಲನನ್ನು ಹೋಲಿಸಿ ಹುತಾತ್ಮಗೊಳಿಸಲಾಗುತ್ತಿದೆ. ಬಿಡಿ,
  ಗ್ರಹಿಕೆ ಮತ್ತು ಸ್ಪಂದನಾ ಸಾಮರ್ಥ್ಯ ಸತ್ತು ಹೋಗಿರುವ ಸಮಾಜ ಇನ್ನೇನು ತಾನೇ ಮಾಡಬಲ್ಲುದು, ಅಲ್ಲವೇ?


Wednesday, January 20, 2016

ಯುದ್ಧವೆಂಬ ಉದ್ಯಮದಲ್ಲಿ ಕಳೆದುಹೋಗುವ ಅರ್ನಿ, ಜಾಕಿಗಳು...

ತುಕ್ಕು ಹಿಡಿದಿರುವ ಸೋವಿಯತ್ ಯೂನಿಯನ್ನಿನ ಯುದ್ಧ ಟ್ಯಾಂಕರ್‍ ನಲ್ಲಿ ಆಡುತ್ತಿರುವ ಮಕ್ಕಳು
         “ನನ್ನೊಳಗೆ ಸಂಘರ್ಷವೊಂದು ನಡೆಯುತ್ತಿತ್ತು. ನನ್ನ ಮೇಲೆ ದಾಳಿ ನಡೆದಂತೆ, ನಾನು ಆಕ್ರಮಣಕ್ಕೆ ಒಳಗಾದಂತೆ ಅನಿಸುತ್ತಿತ್ತು. ಒಂದೆರಡು ದಿನವಲ್ಲ, ದೀರ್ಘ ಒಂದೂವರೆ ವರ್ಷಗಳ ಪ್ರತಿ ದಿನವೂ ಇದರದ್ದೇ ಪ್ರಾಬಲ್ಯ. ದುಸ್ವಪ್ನಗಳು ಬಿಡದೇ ನನ್ನನ್ನು ಬೇಟೆಯಾಡುತ್ತಿತ್ತು. ನಿದ್ದೆ ಮಾಡುವುದಕ್ಕೇ ಭಯಪಟ್ಟೆ. ಸಣ್ಣ ಶಬ್ದವೂ ನನ್ನನ್ನು ನಿದ್ದೆಯಿಂದ ಎಚ್ಚರಗೊಳಿಸುತ್ತಿತ್ತು. ಭೀತಿಯಿಂದ ಎದ್ದು ಕೂರುತ್ತಿದ್ದೆ. ದುಸ್ವಪ್ನಗಳು ನನ್ನನ್ನು ಎಷ್ಟರ ಮಟ್ಟಿಗೆ ಪ್ರಭಾವಿತಗೊಳಿಸಿತ್ತೆಂದರೆ, ಮಲಗುವಾಗ ಪಕ್ಕದಲ್ಲಿ ಚೂರಿಯನ್ನು ಇಟ್ಟುಕೊಳ್ಳತೊಡಗಿದೆ. ಒಂದು ರಾತ್ರಿ ನನ್ನ ತಮ್ಮನಿಗೆ ಈ ಚೂರಿಯಿಂದ ಬಹುತೇಕ ಇರಿದೇಬಿಟ್ಟೆ ಎಂಬ ಸ್ಥಿತಿಗೆ ತಲುಪಿದ್ದೆ. ಅಂತೂ ನಿದ್ದೆ ಹತ್ತುವುದಿಲ್ಲ ಅಥವಾ ನಿದ್ದೆಯನ್ನೇ ಭಯಪಡುವ ಮನಃಸ್ಥಿತಿ. ಕಾಬೂಲ್‍ನ ಹೊರವಲಯದಲ್ಲಿ ತುಕ್ಕು ಹಿಡಿದು ಮಲಗಿರುವ ಸೋವಿಯತ್ ಯೂನಿಯನ್ನಿನ ಯುದ್ಧ ಟ್ಯಾಂಕರ್‍ಗಳು ದುಸ್ವಪ್ನದಲ್ಲಿ ನನ್ನೊಂದಿಗೆ ಮಾತಾಡುತ್ತಿದ್ದುವು. ಆ ಟ್ಯಾಂಕರ್‍ಗಳ ಅಕ್ಕ-ಪಕ್ಕ ಮಾನವ ಅಸ್ತಿಪಂಜರದ ಪರ್ವತವನ್ನೇ ನೋಡಿದೆ. ದವಡೆಯ ಎಲುಬುಗಳು, ಕಣ್ಣಿನ ಕುರುಹುಗಳ ಗುಳಿಗಳು, ತಲೆಬುರುಡೆಗಳು ನನ್ನೊಂದಿಗೆ ಚರ್ಚೆಗೆ ಇಳಿದಂತೆ ಅನಿಸುತ್ತಿತ್ತು. ‘ನೀನೇಕೆ ಯುದ್ಧಪೀಡಿತ ದೇಶದಲ್ಲಿದ್ದೀ, ಮರಳಿ ನಿನ್ನ ದೇಶಕ್ಕೆ ಹೋಗದೇ ಯಾಕೆ ಇಲ್ಲೇ ಕಚ್ಚಿ ಕೂತಿರುವೆ’ ಎಂದು ಆ ಅಸ್ತಿಪಂಜರಗಳು ನನ್ನನ್ನು ಪೀಡಿಸುತ್ತಿತ್ತು. ನಾನು ನಿದ್ದೆ ಗುಳಿಗೆಗಳನ್ನು ಸೇವಿಸತೊಡಗಿದೆ. ಹಾಗಂತ ನಿದ್ದೆ ಗುಳಿಗೆಗೂ ಒಂದು ಗುಣ ಇದೆ. ಮತ್ತೆ ಮತ್ತೆ ಅದನ್ನೇ ಸೇವಿಸತೊಡಗಿದರೆ ಅದು ಮುನಿಸಿಕೊಳ್ಳುತ್ತದೆ. ಬಳಿಕ ಒಂದರ ಬದಲಿಗೆ ಎರಡೆರಡು ಗುಳಿಗೆಗಳನ್ನು ಸೇವಿಸಬೇಕಾಗುತ್ತದೆ. ಹೀಗೆ ಸೇವಿಸುವ ಗುಳಿಗೆಗಳ ಪ್ರಮಾಣವನ್ನು ಹೆಚ್ಚಿಸಿದೆ. ಆದರೂ ಕ್ರಮೇಣ ಅದೂ ವಿಫಲವಾಯಿತು. ಕೊನೆಗೆ ಮದ್ಯ ಪಾನದ ಮೊರೆಹೋದೆ. ಎಲ್ಲಿಯವರೆಗೆ ಮದ್ಯ ಸೇವಿಸಿದೆ ಎಂದರೆ ಕುಡಿದೂ ಕುಡಿದೂ ತಣ್ಣಗೆ ನಿದ್ದೆಗೆ ಜಾರುವಷ್ಟು..”
  ಸಂಹಿತಾ ಅರ್ನಿ ಬರೆಯುತ್ತಾ ಹೋಗುತ್ತಾರೆ. ಅಫಘಾನಿಸ್ತಾನದ ಟಿ.ವಿ. ಚಾನೆಲ್ ಗೆ  ಚಿತ್ರಕತೆಗಾರರಾಗಿ 6 ತಿಂಗಳ ಕಾಲ (2013ರಲ್ಲಿ) ಕಾಬೂಲ್‍ನಲ್ಲಿ ಕೆಲಸ ಮಾಡಿದ ಅವರು ಬಳಿಕ ಭಾರತಕ್ಕೆ ಮರಳುತ್ತಾರೆ. ಆದರೆ ಆ ಮರಳಿದ ಬಳಿಕದ ಒಂದೂವರೆ ವರ್ಷಗಳ ವರೆಗೆ ಅವರು ಖಿನ್ನತೆಗೆ ಒಳಗಾಗುತ್ತಾರೆ. ದೈಹಿಕವಾಗಿ ಭಾರತಲ್ಲಿದ್ದರೂ ಮಾನಸಿಕವಾಗಿ ಅಫಘಾನ್‍ನಲ್ಲಿದ್ದಂಥ ಅನುಭವ. ಕಾಬೂಲ್‍ನಲ್ಲಿ 6 ತಿಂಗಳ ಕಾಲ ಅವರು ಏನನ್ನು ನೋಡಿದ್ದರೋ ಮತ್ತು ಅನುಭವಿಸಿದ್ದರೋ ಅದು ಭಾರತದಲ್ಲೂ ಅವರನ್ನು ಹಿಂಬಾಲಿಸುತ್ತದೆ. ಇಲ್ಲೂ ಒಂದು ಕೃತಕ ಯುದ್ಧ ಪೀಡಿತ ಭೂಮಿಯನ್ನು ಆ ಅನುಭವಗಳು ಅವರಿಗೆ ಕಟ್ಟಿಕೊಡುತ್ತದೆ. ಅವರು ನಿದ್ದೆ ಕಳೆಯುತ್ತಾರೆ. ದಿಗಿಲಿನಿಂದ ಬೆಚ್ಚಿ ಬೀಳುತ್ತಾರೆ. ತೀವ್ರ ಖಿನ್ನತೆಯಿಂದ ಬಳಲುತ್ತಾರೆ..
  “ಕಾಬೂಲ್‍ನಲ್ಲಿ ಒಂದು ದಿನ ಸಂಜೆ ನನ್ನ ಗೆಳತಿಯೋರ್ವಳು ನನ್ನನ್ನು ಪಾರ್ಟಿಗೆ ಕರೆದುಕೊಂಡು ಹೋದಳು. ಅಲ್ಲಿ ಉಪಸ್ಥಿತಿಯಿರುವವರಲ್ಲಿ ಮಾಜಿ ಯುದ್ಧ ದೊರೆಯೂ ಸೇರಿದ್ದ. ಈಗ ಆತ ತನ್ನ ಹಿಂದಿನ ಹೋರಾಟವನ್ನು ಕೈ ಬಿಟ್ಟು ರಾಜಕಾರಣಿಯಾಗಿದ್ದಾನೆ. ಅಮೇರಿಕದ ಮಾಜಿ ರಕ್ಷಣಾ ಗುತ್ತಿಗೆದಾರರ ಸಹಾಯದಿಂದ ಕಾಬೂಲ್‍ಗೆ ಮದ್ಯವನ್ನು ಕಳ್ಳ ಸಾಗಾಣಿಕೆ ಮಾಡುವ ವ್ಯವಹಾರ ಮಾಡುತ್ತಿದ್ದಾನೆ. ಈ ಮಧ್ಯೆ ನಾನೊಂದು ದಿನ ಕಾಯಿಲೆ ಬಿದ್ದೆ. ಔಷಧಕ್ಕಾಗಿ ಅಫಘಾನ್ ವೈದ್ಯರಲ್ಲಿಗೆ ಹೋದೆ. ಆತ ಔಷಧವನ್ನೇನೋ ನೀಡಿದ. ಆದರೆ ಆ ಔಷಧದ ಅವಧಿ ಎಂದೋ ಮುಗಿದಿತ್ತು. ಆ ಔಷಧವನ್ನು ಸೇವಿಸುವುದೆಂದರೆ ಇನ್ನೊಂದು ಕಾಯಿಲೆಗೆ ಆಹ್ವಾನ ಕೊಟ್ಟಂತೆ. ಆದ್ದರಿಂದ ನಾನು ಇನ್ನೋರ್ವ ವೈದ್ಯರನ್ನು ಭೇಟಿಯಾಗಲೇ ಬೇಕಾಯಿತು. ಅವಧಿ ಮುಗಿದ ಔಷಧಗಳು, ಒತ್ತಡ, ಮಾದಕ ಪದಾರ್ಥಗಳು ಮತ್ತು ಹಿಂಸೆ ಎಲ್ಲವೂ ಒಟ್ಟಾಗಿ ನನ್ನ ಮೇಲೆ ಸವಾರಿ ಮಾಡಿದ್ದರಿಂದಲೋ ಏನೋ ನಾನು ರಜೆ ಪಡೆದು ಭಾರತಕ್ಕೆ ಮರಳಲೇ ಬೇಕಾಯಿತು.  ಹಾಗಂತ, ನಾನು ಕಾಬೂಲ್‍ಗೆ ಹೋಗಿರುವುದರ ಹಿಂದೆ ಚಿತ್ರಕತೆ ಮತ್ತು ಆ ಮೂಲಕ ದುಡ್ಡು ಮಾಡುವ ಉದ್ದೇಶವಷ್ಟೇ ಇದ್ದುದಲ್ಲವಲ್ಲ. ದುಡ್ಡಿಗೆ ಸಂಬಂಧಿಸಿ ಹೇಳುವುದಾದರೆ ಕಾಬೂಲ್‍ನಲ್ಲಿ ಒಂದು ತಿಂಗಳಲ್ಲಿ ಎಷ್ಟು ಹಣ ಸಂಪಾದಿಸಿದೆನೋ ಅದು ಭಾರತದಲ್ಲಿ ಸಂಪಾದಿಸುವ ಹಣಕ್ಕಿಂತ 9 ಪಟ್ಟು ಹೆಚ್ಚು. ಆದರೆ ನನ್ನ ಉದ್ದೇಶಗಳ ಪಟ್ಟಿಯಲ್ಲಿ ದುಡ್ಡು ಏಕೈಕ ವಿಷಯ ಆಗಿರಲಿಲ್ಲ. ಜಗತ್ತಿನ ಕುರಿತಾದ ನನ್ನ ಅರಿವಿನ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕಿತ್ತು. ಯುದ್ಧಪೀಡಿತ ಪ್ರದೇಶ ಮತ್ತು ಅಲ್ಲಿನ ಜನರನ್ನು ಅವರ ಜೊತೆಗಿದ್ದೇ ಅನುಭವಿಸಬೇಕಿತ್ತು. ಅದನ್ನು ದಾಖಲಿಸಿಕೊಂಡು ಎಲ್ಲರಿಗೂ ದಾಟಿಸಬೇಕಿತ್ತು. ಯುದ್ಧವಿಲ್ಲದ ದೇಶದಲ್ಲಿ ನಿಂತು ಯುದ್ಧಪೀಡಿತ ದೇಶವೊಂದನ್ನು ಕಲ್ಪಿಸಿಕೊಳ್ಳುವುದಕ್ಕೂ ನೇರ ಅನುಭವಿಸುವುದಕ್ಕೂ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕಿತ್ತು. ಬೇಕಿದ್ದರೆ ನೀವಿದನ್ನು ಸಾಹಸ ಪ್ರವೃತ್ತಿ ಎಂದೂ ಹೇಳಬಹುದು. ಆದ್ದರಿಂದಲೇ ಭಾರತಕ್ಕೆ ಬಂದು ಅಸೌಖ್ಯಕ್ಕೆ ಮದ್ದು ಮಾಡಿಕೊಂಡು ಪುನಃ ಅಪಘಾನ್‍ಗೆ ಮರಳಿದೆ. ನನ್ನ ಹೊಣೆಗಾರಿಕೆಯನ್ನು ಪೂರ್ಣಗೊಳಿಸಿ 6 ತಿಂಗಳ ಬಳಿಕ ಶಾಶ್ವತವಾಗಿ ಅಲ್ಲಿಂದ ಭಾರತಕ್ಕೆ ಮರಳಿದೆ. ವಿಷಾದ ಏನೆಂದರೆ, ಮರಳುವಾಗ ನಾನು ಒಂಟಿಯಾಗಿ ಮರಳಲಿಲ್ಲ. ಅಷ್ಟೂ ಅನುಭವಗಳನ್ನು ನನ್ನ ಜೊತೆಗೇ ನಾನು ಬಯಸದೆಯೇ ಹೊತ್ತು ತಂದೆ. ಸಂಪಾದನೆಯ ಮಟ್ಟಿಗೆ ಹೇಳುವುದಾದರೆ ನಾನು ಸಾಕಷ್ಟನ್ನು ಪಡೆದೆ. ಆದರೆ, ಅಲ್ಲಿಂದ ಮರಳಿ ಬರುವಾಗ ನನ್ನನ್ನು ಕಾಡಿದ್ದೇನೆಂದರೆ, ಯುದ್ಧವೆಂಬ ಉದ್ಯಮದಲ್ಲಿ ನಾನು ಕೂಲಿ ಸಿಪಾಯಿ ಆದೆನೇ ಎಂಬುದು. ಈ ಅಪರಾಧಿ ಮನೋಭಾವದ ಪ್ರಭಾವದಿಂದಲೋ ಏನೋ ನಾನು ಭಾರತಕ್ಕೆ ಮರಳಿದ ಬಳಿಕದ ಒಂದೂವರೆ ವರ್ಷಗಳು ನನ್ನವು ಆಗಲಿಲ್ಲ. ಪ್ರತಿದಿನ ನನ್ನ ರಕ್ತ ಕಣಗಳಲ್ಲಿ, ನನ್ನ ಮೆದುಳಿನ ಸಂವೇದನೆಗಳಲ್ಲಿ, ನನ್ನ ಕನಸಿನಲ್ಲಿ, ನನ್ನ ಬದುಕಿನ ಪ್ರತಿಕ್ಷಣಗಳಲ್ಲಿ ಕಾಬೂಲ್ ತುಂಬಿಕೊಂಡಿತ್ತು. ಅಲ್ಲಿನ ಭೂತ ಮತ್ತು ವರ್ತಮಾನಗಳು ನನ್ನೊಳಗೆ ವಿಲೀನಗೊಂಡು ತೀವ್ರವಾಗಿ ಕಾಡಿದುವು. ನಾನು ಭಾರತದಲ್ಲಿದ್ದರೂ ಕಾಬೂಲ್‍ನಲ್ಲೇ ಇರುವೆನೋ ಎಂದು ಅನಿಸುವಷ್ಟು ಅದರ ಪ್ರಭಾವ ದಟ್ಟವಾಗಿತ್ತು. ‘ಯುದ್ಧ ಮುಗಿಯುವುದಿಲ್ಲ, ಅದು ಮುಗಿದರೂ ಮುಗಿಯುವುದಿಲ್ಲ..’ ಎಂದು ಅಫಘಾನ್‍ನ ಗೆಳೆಯರೊಬ್ಬರು ನನ್ನೊಂದಿಗೆ ಒಗಟಾಗಿ ಹೇಳಿದ್ದರು. ಆ ಮಾತಿನ ತೀವ್ರತೆ ಅಫಘಾನ್‍ನಲ್ಲಿದ್ದಾಗ ನನಗೆ ಗೊತ್ತಾಗಿರಲಿಲ್ಲ. ಆದರೆ ಭಾರತಕ್ಕೆ ಮರಳಿದ ಬಳಿಕ ನನಗೆ ಅದರ ಪ್ರತ್ಯಕ್ಷ ಅನುಭವವಾಯಿತು. ಅಲ್ಲಿನ ಅನುಭವವಗಳು ನನ್ನಿಂದ ಬೀಳ್ಕೊಡುವುದಿಲ್ಲವಾದರೆ, ನಾನೇನು ಮಾಡಬಲ್ಲೆ? ಅದಕ್ಕೆ ಹೇಗೆ ಅಂತ್ಯ ಕಾಣಿಸಬಲ್ಲೆ? ನನ್ನಿಂದ ಅದನ್ನು ತೊರೆಯಲು ಸಾಧ್ಯವೇ? ನಾನು ವೈದ್ಯರು ಮತ್ತು ಮನಃಶಾಸ್ತ್ರಜ್ಞರ ಬಳಿಗೆ ಹೋದೆ. ಅವರು ಗುಳಿಗೆ ಕೊಟ್ಟರು. ಆರಂಭದಲ್ಲಿ ಈ ಗುಳಿಗೆಗಳು ಪರಿಣಾಮಕಾರಿಯಂತೆ ಕಂಡರೂ ಕ್ರಮೇಣ ಅವು ಪರಿಣಾಮರಹಿತವಾಗಿ ಬಿಟ್ಟವು. ನನ್ನ ದುಸ್ವಪ್ನಗಳು ಮರಳಿದುವು. ಭ್ರಮಾ ಲೋಕದಲ್ಲಿ ನಾನು ಮತ್ತೆ ತೇಲತೊಡಗಿದೆ. ನನ್ನ ಮೇಲೆ ದಾಳಿಗಳಾಗುತ್ತಿರುವಂಥ ಅನುಭವ. ಗುಳಿಗೆಯ ಪ್ರಮಾಣವನ್ನು ಹೆಚ್ಚಿಸಲಾಯಿತು. ಆದರೆ ಅದು ಫಲ ನೀಡಲಿಲ್ಲ. ಅದರ ಅಡ್ಡಪರಿಣಾಮದಿಂದಲೋ ಏನೋ ಹಾಸಿಗೆಯಿಂದ ಏಳುವುದೇ ಅಸಾಧ್ಯವೆಂಬ ಸ್ಥಿತಿ ನಿರ್ಮಾಣವಾಯಿತು. ಖಿನ್ನತೆ ನನ್ನ ಮೇಲೆ ಪ್ರಾಬಲ್ಯ ಸ್ಥಾಪಿಸಿತು. ನಿಜ ಏನೆಂದರೆ ನನ್ನೊಳಗೆ
ಜಾಕ್ವೆಲಿನ್ ಸುಟನ್
ಏನಾಗುತ್ತಿದೆ ಎಂಬುದನ್ನು ಪತ್ತೆಹಚ್ಚಲು ವೈದ್ಯರು ವಿಫಲರಾಗಿದ್ದರು. ದೈಹಿಕವಾಗಿ ನನಗಾವ ಕಾಯಿಲೆಯೂ ಇರಲಿಲ್ಲ. ಇದೊಂದು ಮನಸಿನ ಕಾಯಿಲೆ ಮತ್ತು ಇದರಿಂದ ನಾನು ಹೊರಬರಬೇಕಾದರೆ ನನ್ನೊಳಗೆ ನಾನು ವಿಶ್ವಾಸವನ್ನು ಬೆಳೆಸಿಕೊಳ್ಳಬೇಕಿತ್ತು. ಮೊದಲು ನಾನು ನಾನಾಗಬೇಕಿತ್ತು. ಆದ್ದರಿಂದ ನನ್ನನ್ನು ನಾನು ಉಳಿಸಿಕೊಳ್ಳುವುದಕ್ಕಾಗಿ ಏನನ್ನೂ ಮಾಡುವೆ ಎಂದು ನಿಶ್ಚಯಿಸಿಕೊಂಡೆ. ನನ್ನ ಗೆಳತಿಯ ಸಲಹೆಗಳು ಈ ವಿಷಯದಲ್ಲಿ ನನಗೆ ತುಂಬಾ ನೆರವಿಗೆ ಬಂತು. ನಾನು ನನ್ನಲ್ಲಿ ನಂಬಿಕೆಯಿಟ್ಟೆ. ನನ್ನನ್ನು ನಾನು ನಂಬಿಕೊಳ್ಳುವುದೆಂದರೆ ಹೊರಗಿನ ಭಯಕ್ಕೆ ಸಡ್ಡು ಹೊಡೆದಂತೆ. ಇದು ಕ್ರಮೇಣ ಪರಿಣಾಮ ಬೀರತೊಡಗಿತು. ನನ್ನನ್ನು ಪ್ರತಿದಿನ ಕಾಡುತ್ತಿದ್ದ ದುಸ್ವಪ್ನಗಳು ಸರದಿ ತಪ್ಪಿಸಿ ಬರತೊಡಗಿದುವು. ಕ್ರಮೇಣ ಅದೂ ಅಪರೂಪಕ್ಕೊಮ್ಮೆ ಎಂಬಂತಾಯಿತು. ಹೀಗೆ ಅಘಘಾನ್ನಿನ 6 ತಿಂಗಳ ಅನುಭವವು ಒಂದೂವರೆ ವರ್ಷಗಳ ವರೆಗೆ ನನ್ನನ್ನು ಖಿನ್ನತೆಗೆ ದೂಡಿದರೂ ನಾನು ಅದಕ್ಕೆ ತಲೆಬಾಗಲಿಲ್ಲ. ಹಾಗಂತ, ನನಗೆ ಗೊತ್ತಿರುವ ಇತರರಿಗೆ ಹೋಲಿಸಿದರೆ ನನ್ನ 6 ತಿಂಗಳು ತೀರಾ ಜುಜುಬಿ ಎಂಬುದು ನನಗೆ ಗೊತ್ತು. ಅಪಹರಣಗಳ ನಡುವೆ ಬದುಕುತ್ತಿರುವ ಮತ್ತು ತಮ್ಮವರು ಮತ್ತು ಕುಟುಂಬಿಕರು ಕಣ್ಣೆದುರೇ ಸಾಯುತ್ತಿರುವುದನ್ನು ನೋಡಿ ಜೀವಿಸುತ್ತಿರುವವರ ಎದುರು ನನ್ನ ಅನುಭವ ಏನೇನೂ ಅಲ್ಲ. ತುಟಿಗಳನ್ನು ಕಳಕೊಂಡವರು, ಈಗ- ಈ ಕ್ಷಣ ಸಾಯುವ ಭೀತಿಯಿಂದ ಒಂಟಿಯಾಗಿ ನಿಂತವರು, ಸಾವಿನಿಂದ ಕ್ಷಣ ಮಾತ್ರದಲ್ಲಿ ತಪ್ಪಿಸಿಕೊಂಡವರನ್ನು ಪರಿಗಣಿಸಿದರೆ, ನನ್ನ 6 ತಿಂಗಳು ನಮೂದಿಸುವುದಕ್ಕೇ ಅರ್ಹವಲ್ಲ. ಅಲ್ಲದೇ ನಾನು ಯುದ್ಧದೊಂದಿಗೆ ಬದುಕಲಿಲ್ಲ. ಯುದ್ಧ ಪೀಡಿತ ಪ್ರದೇಶದಲ್ಲಿ ಬರೇ 6 ತಿಂಗಳನ್ನಷ್ಟೇ ಕಳೆದೆ. ಆದರೆ ಅದು ನನ್ನ ಒಂದೂವರೆ ವರ್ಷಗಳ ಬದುಕನ್ನು ಕಸಿದುಕೊಂಡಿತೆಂದರೆ ಮತ್ತು ನನ್ನನ್ನೇ ಆಹುತಿ ಪಡಕೊಳ್ಳುವ ಅಪಾಯಕಾರಿ ಹಂತಕ್ಕೆ ತಲುಪಿತ್ತೆಂದರೆ ಇನ್ನು ಯುದ್ಧದೊಂದಿಗೆ ಬದುಕುವವರ ಕುರಿತು ಏನೆನ್ನೋಣ? ನಿಜವಾಗಿ, ಯೋಧರು ಸಾಮೂಹಿಕ ಹತ್ಯೆಗಳಲ್ಲಿ ಭಾಗಿಯಾಗುವುದು, ನಾಗರಿಕರನ್ನು ಕೊಲ್ಲುವುದನ್ನು ನಾವು ಕೇಳುತ್ತಿರುತ್ತೇವೆ. ಆತ್ಮಹತ್ಯಾ ಬಾಂಬರ್‍ಗಳ ಅನಾಹುತಕಾರಿ ಸ್ಫೋಟಕ್ಕೆ ಬೆಚ್ಚಿರುತ್ತೇವೆ. ನಮ್ಮ ಮಟ್ಟಿಗೆ ಅವರೆಲ್ಲ ಹುಚ್ಚರು. ಆದರೆ ನಿಜಕ್ಕೂ ಅದು ಹುಚ್ಚೆ? ನನ್ನ ಪ್ರಕಾರ ಅದು ಹುಚ್ಚಲ್ಲ ಅಥವಾ ಮೆದುಳು ತೊಳೆದುದರ ಪರಿಣಾಮವೂ ಅಲ್ಲ. ಅದು ಆತ್ಮದ ಸಂಘರ್ಷ. ಇದೀಗ ಸಿರಿಯದ ಮೇಲೆ ಬಾಂಬ್ ಸುರಿಸಲಾಗುತ್ತಿದೆ. ಈ ಬಾಂಬ್‍ಗಳು ಒಂದಿಡೀ ದೇಶದ ಮೇಲೆ ಮತ್ತು ಅಲ್ಲಿನ ಸಂಸ್ಕ್ರತಿಯ ಮೇಲೆ ಬೀರುವ ಆಘಾತಕಾರಿ ಪರಿಣಾಮಗಳನ್ನು ನಾನು ಕಲ್ಪಿಸಿಕೊಳ್ಳುತ್ತಿದ್ದೇನೆ. ಯಾಕೆಂದರೆ ಒಂದೂವರೆ ವರ್ಷದ ಭಯಾನಕ ಅನುಭವ ನನ್ನ ಜೊತೆಗಿದೆ...” ಸಂಹಿತಾ ಅರ್ನಿಯವರ ನೆನಪು ಹೀಗೆ ಹರಿಯುತ್ತಾ ಹೋಗುತ್ತದೆ.   
ಸಂಹಿತಾ ಅರ್ನಿ
             ಯುದ್ಧ ಪೀಡಿತ ಇರಾಕ್, ಸಿರಿಯಗಳಲ್ಲಿ ಕೆಲಸ ಮಾಡಿರುವ ಬಿಬಿಸಿಯ ಮಾಜಿ ಪತ್ರಕರ್ತೆ ಜಾಕ್ವೆಲಿನ್ ಸುಟನ್ ಅವರು ತಿಂಗಳುಗಳ ಹಿಂದೆ ಟರ್ಕಿಯ ಅತಾತುರ್ಕ್ ವಿಮಾನ ನಿಲ್ದಾಣದ ಸ್ನಾನದ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿಯನ್ನು ಓದುವಾಗ ಅಥವಾ ಆಗಾಗ ಯೋಧರಿಂದ ಸಂಭವಿಸುತ್ತಲೇ ಇರುವ ಹತ್ಯೆ, ಆತ್ಮಹತ್ಯೆಗಳನ್ನು ನೋಡುವಾಗ ಸಂಹಿತಾ ಅರ್ನಿಯವರ ಅನುಭವ ಹೆಚ್ಚು ಮಹತ್ವಪೂರ್ಣ ಮತ್ತು ಅಧ್ಯಯನಾರ್ಹವೆನಿಸುತ್ತದೆ.

Wednesday, January 13, 2016

‘ವರ್ಷದ ವ್ಯಕ್ತಿತ್ವ’ವಾಗಿ ಗೋವು ಮತ್ತು ರಾಜಕಾರಣದ ಅನಿವಾರ್ಯತೆಗಳು

    ಬಲಪಂಥೀಯ ವಿಚಾರಧಾರೆ ಎಷ್ಟು ಅಪಾಯಕಾರಿ ಎಂಬುದಕ್ಕೆ ಯಾಹೂ ಡಾಟ್ ಕಾಮ್ ಪುರಾವೆಯೊಂದನ್ನು ನೀಡಿದೆ. ಅದು ಭಾರತದ 2015ನೇ ‘ವರ್ಷದ ವ್ಯಕ್ತಿತ್ವ’ವಾಗಿ (Personality of the Year) ಆಯ್ಕೆ ಮಾಡಿದ್ದು ಗೋವನ್ನು. ಹಾಗಂತ ಗೋವುಗಳ ಸಂಖ್ಯೆಯನ್ನು ಲೆಕ್ಕ ಹಾಕಿ ಈ ಆಯ್ಕೆ ಪ್ರಕ್ರಿಯೆ ನಡೆದಿದ್ದಲ್ಲ. ಈ ಆಯ್ಕೆ ಪ್ರಕ್ರಿಯೆಗೆ ಅದು ಕೆಲವು ಮಾನದಂಡಗಳನ್ನು ಗೊತ್ತು ಮಾಡಿದೆ. ವರ್ಷವಿಡೀ ಅತ್ಯಂತ ಹೆಚ್ಚು ಸುದ್ದಿಯಲ್ಲಿದ್ದ, ಮಾಧ್ಯಮಗಳಲ್ಲಿ ಚರ್ಚೆಗೆ, ಅಂಕಣ ಬರಹಕ್ಕೆ, ಸಂಪಾದಕೀಯಕ್ಕೆ ಹೆಚ್ಚು ಬಾರಿ ಬಳಕೆಯಾದ, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಬಾರಿ ಹುಡುಕಾಟಕ್ಕೆ ಒಳಗಾದ ವಿಷಯಗಳನ್ನು ಪರಿಶೀಲಿಸಿ ಅದು ವರ್ಷದ ವ್ಯಕ್ತಿತ್ವವನ್ನು ಆಯ್ಕೆ ಮಾಡುತ್ತದೆ. ಹೀಗೆ 2015 ಗೋವಿನ ಪಾಲಾಗಿದೆ. 120 ಕೋಟಿ ಮನುಷ್ಯರಿರುವ ಮತ್ತು ಇವರಲ್ಲಿ ಸುಮಾರು 60% ಜನರು ಬಡತನ ರೇಖೆಗಿಂತ ಕೆಳಗಿರುವ ದೇಶವೊಂದರಲ್ಲಿ ಪ್ರಾಣಿಯೊಂದು ವರ್ಷವಿಡೀ ಸುದ್ದಿಯಲ್ಲಿರುತ್ತದೆಂದರೆ ಏನರ್ಥ? ಅದಕ್ಕಿರುವ ಕಾರಣಗಳೇನು? ವರ್ಷದ 365 ದಿನಗಳಲ್ಲಿ ಬಹುತೇಕ 360 ದಿನಗಳೂ ಮಾಧ್ಯಮಗಳ ಮುಖಪುಟದಲ್ಲಿರುವುದು ಮನುಷ್ಯನೇ. ಆತ/ಕೆ ಫೇಸ್‍ಬುಕ್ ಬಳಸುತ್ತಾನೆ/ಳೆ. ವಾಟ್ಸ್‍ಆ್ಯಪ್ ಆತನಲ್ಲಿದೆ. ವಿಮಾನ ಓಡಿಸುತ್ತಾನೆ, ಬಾಂಬ್ ತಯಾರಿಸುತ್ತಾನೆ. ರಕ್ತ ಹರಿಸುತ್ತಾನೆ. ಆಡುತ್ತಾನೆ. ನಟಿಸುತ್ತಾನೆ, ಮೋಸ ಮಾಡುತ್ತಾನೆ, ಪ್ರಾಮಾಣಿಕತೆ ಮೆರೆಯುತ್ತಾನೆ, ಪ್ರತಿಭಟನೆ, ಆಮರಾಣಾಂತ ಉಪವಾಸ, ಚಳವಳಿ ಎಲ್ಲವನ್ನೂ ಮಾಡುತ್ತಾನೆ. ಅತ್ಯಾಚಾರ ಎಂಬುದೂ ಮನುಜ ಜಗತ್ತಿನ ಕೊಡುಗೆ. ಹಿಂಸೆ-ಅಹಿಂಸೆ, ದ್ವೈತ-ಅದ್ವೈತ, ಧರ್ಮ- ಅಧರ್ಮ, ಪ್ರೀತಿ-ಪ್ರೇಮ, ನಂಬಿಕೆ-ಮೂಢನಂಬಿಕೆ, ಅಸ್ತಿಕ-ನಾಸ್ತಿಕ... ಎಲ್ಲ ವಿಧಗಳಲ್ಲೂ ಮನುಷ್ಯನದ್ದೇ ಪಾತ್ರ. ಇವು ಮತ್ತು ಇನ್ನಿತರ ಎಲ್ಲ ವಿಷಯಗಳಲ್ಲೂ ಪ್ರಾಣಿಗಳ ಪಾತ್ರ  ನಗಣ್ಯ ಅನ್ನುವಷ್ಟು ಕಡಿಮೆ. ಇಷ್ಟಿದ್ದೂ ಗೋವು 2015ರ ವರ್ಷದ ವ್ಯಕ್ತಿತ್ವವಾಗಿ ಗುರುತಿಸಲ್ಪಟ್ಟಿರುವುದಕ್ಕೆ ಕಾರಣಗಳು ಏನು? ಅದರ ಹಿಂದಿರುವವರು ಯಾರು? ಅವರ ವಿಚಾರಧಾರೆ ಯಾವುದು? ಮಹಾರಾಷ್ಟ್ರ ಸರಕಾರದ ಗೋಮಾಂಸ ನಿಷೇಧದಿಂದ ಆರಂಭವಾಗಿ ದಾದ್ರಿಯ ವರೆಗೆ ಗೋವು ವರ್ಷವಿಡೀ ಸುದ್ದಿಯಲ್ಲಿತ್ತಲ್ಲ, ಅದು ಸಹಜ ಬೆಳವಣಿಗೆಯೋ ಅಥವಾ ರಾಜಕೀಯ ಅನಿವಾರ್ಯವೋ? 2015ರುದ್ದಕ್ಕೂ ದಿನಬಳಕೆಯ ವಸ್ತುಗಳ ಬೆಲೆ ಏರುತ್ತಲೇ ಇತ್ತು. ಆಹಾರ ಭದ್ರತೆ, ಸಾಮಾಜಿಕ ಭದ್ರತೆ, ಜಾತಿ ತಾರತಮ್ಯ ಮುಂತಾದವುಗಳು 2015ರ ಆರಂಭದಿಂದ ಕೊನೆಯ ವರೆಗೂ ಸಮಸ್ಯೆಯಾಗಿಯೇ ಉಳಿದುಕೊಂಡವು. ಇವು ಮತ್ತು ಇಂತಹ ಇನ್ನಿತರ ಹತ್ತಾರು ಪ್ರಬಲ ಸಮಸ್ಯೆಗಳು ಗೋವನ್ನು ವರ್ಷದ ವ್ಯಕ್ತಿತ್ವವಾಗಿ  ಆಯ್ಕೆಯಾಗದಂತೆ ತಡೆಯುವುದಕ್ಕೆ ಪ್ರಬಲ ಕಾರಣಗಳಾಗಿ ಅಸ್ತಿತ್ವದಲ್ಲಿದ್ದುವು. ಆದರೆ ಇವೆಲ್ಲವನ್ನೂ ನಿರ್ಲಕ್ಷಿಸುವಂತೆ ಮತ್ತು ಗೋವನ್ನು ಪ್ರಮುಖ ಸಮಸ್ಯೆಯಾಗಿ ಮುನ್ನೆಲೆಗೆ ಬರುವಂತೆ ತಂತ್ರ ಹೆಣೆದವರು ಯಾರು? ಅದಕ್ಕಿರುವ ಕಾರಣಗಳೇನು?
  ಗ್ರೀಸ್‍ನ ಗೋಲ್ಡನ್ ಡಾನ್ ಪಾರ್ಟಿ, ಫ್ರಾನ್ಸ್ ನ ಫ್ರಂಟ್ ನೇಶನ್, ಫಿನ್‍ಲ್ಯಾಂಡ್‍ನ ಟ್ರೂ ಫಿನ್ಸ್, ಡೆನ್ಮಾರ್ಕ್‍ನ ಡೆನ್ಮಾರ್ಕ್ ಪೀಪಲ್ಸ್ ಪಾರ್ಟಿ, ಸ್ವೀಡನ್‍ನ ಸ್ಟೀಡನ್ ಡೆಮಾಕ್ರೆಟ್ಸ್, ಸ್ವೀಝರ್ಲ್ಯಾಂಡ್ ನ ಸ್ವಿಸ್ ಪೀಪಲ್ಸ್ ಪಾರ್ಟಿ ಮುಂತಾದ ಬಲಪಂಥೀಯ ರಾಜಕೀಯ ಪಕ್ಷಗಳು ಯುರೋಪಿನ ಬಹುತೇಕ ರಾಷ್ಟ್ರಗಳಲ್ಲಿ ಇವತ್ತು ಪ್ರಾಬಲ್ಯವನ್ನು ಸ್ಥಾಪಿಸುತ್ತಿವೆ. ಕೆಲವು ಕಡೆ ಆಡಳಿತದ ಮೈತ್ರಿಕೂಟದಲ್ಲಿ ಭಾಗಿಯಾಗಿವೆ. ನೆದರ್ಲ್ಯಾಂಡ್, ಇಟಲಿ, ಅಸ್ಟ್ರಿಯ, ನಾರ್ವೆ ಮುಂತಾದ ರಾಷ್ಟ್ರಗಳಲ್ಲೂ ಈ ವಿಚಾರಧಾರೆಗೆ ಸಾಕಷ್ಟು ಜನಮನ್ನಣೆ ದೊರಕುತ್ತಿವೆ. ಭಾರತದಲ್ಲಿ ಬಿಜೆಪಿ ಹೇಗೆಯೋ ಗ್ರೀಸ್‍ನಲ್ಲಿ ಗೋಲ್ಡನ್ ಡಾನ್ ಪಾರ್ಟಿ ಕೂಡ ಹಾಗೆಯೇ. ಮೋದಿ ಅಥವಾ ಅವರ ಪರಿವಾರ ಮಾತಾಡುವ ಭಾಷೆಯಲ್ಲಿಯೇ ಬಹುತೇಕ ಫ್ರೆಂಚ್ ನೇಶನ್ ಪಕ್ಷದ ಮರಿನ್ ಲಿ ಪೆನ್ ಮಾತಾಡುತ್ತಾರೆ. ನೆದರ್ಲ್ಯಾಂಡ್ ನ ಪಾರ್ಟಿ ಆಫ್ ಫ್ರೀಡಮ್‍ನ ಗೀರ್ಟ್ ವೈಲ್ಡರ್ಸ್, ಟ್ರೂ ಫಿನ್ಸ್ ನ ಟಿಯೋ ಸೋಯಿನಿ, ಇಟಲಿಯ ನಾರ್ದನ್ ಲೀಗ್‍ನ ಅಂಬರ್ಟೋ ಬಾಸ್ಸಿ, ನಾರ್ವೇಯ ಸಿವ್ ಜೇನ್ಸನ್ ಮುಂತಾದವರೆಲ್ಲ ಬಳಸುವ ಭಾಷೆ ಮತ್ತು ಭಾವ-ಭಂಗಿಗಳು ಅಮೇರಿಕದ ಈಗನ ಅಧ್ಯಕ್ಷೀಯ ಅಭ್ಯರ್ಥಿ ಡೋನಾಲ್ಡ್ ಟ್ರಂಪ್‍ರಂತೆಯೇ ಇವೆ. ಆಕ್ರಮಣಕಾರೀ ಭಾಷಾ ಶೈಲಿ ಮತ್ತು ಬಲಪಂಥೀಯ ಉಗ್ರ ವಿಚಾರಧಾರೆಯನ್ನು ಸಾರ್ವಜನಿಕವಾಗಿ ಎಗ್ಗಿಲ್ಲದೇ ಪ್ರಸ್ತಾಪಿಸುವುದು ಒಂದು ಹಂತದ ವರೆಗೆ ಜನಪ್ರಿಯವಾಗತೊಡಗಿದೆ. ಭಾರತದಲ್ಲಿ ಗೋವು, ಸೆಗಣಿ, ಗೋಮೂತ್ರ ಮತ್ತು ಅದರ ಉತ್ಪನ್ನಗಳ ಹೆಸರಲ್ಲಿ ಚರ್ಚೆಗಳು ನಡೆಯುತ್ತಿರುವಂತೆಯೇ ಯುರೋಪಿಯನ್ ರಾಷ್ಟ್ರಗಳಲ್ಲಿ ಪಿಯ ಜೇಯ್‍ಗಾರ್ಡ್, ಹೆನ್ಸ್, ಕ್ರಿಸ್ಚಿಯನ್ ಸ್ಟಾಚೆ, ಜೋಸೆಫ್ ಬಚರ್, ಜಿಮ್ಮಿ ಅಕೆಸ್ಸನ್ ನಂತಹ ವಿವಿಧ ರಾಜಕೀಯ ಪಕ್ಷಗಳ ನಾಯಕರು ಮುಸ್ಲಿಮರ ಆಚಾರ, ಸಾಂಸ್ಕ್ರಿತಿಕ ವೈವಿಧ್ಯತೆಗಳು, ಧಾರ್ಮಿಕ ವಿಧಿಗಳು, ಚಿಹ್ನೆಗಳ ಬಗ್ಗೆ ಅಕ್ರೋಶದ ಧ್ವನಿಯಲ್ಲಿ ಮಾತಾಡುತ್ತಿರುತ್ತಾರೆ. ಒಂದು ರೀತಿಯಲ್ಲಿ, ರಾಜಕೀಯದ ಸಾಂಸ್ಕ್ರಿತೀಕೀಕರಣವು ನಡೆಯುತ್ತಿರುವಂತೆ ತೋರುತ್ತಿದೆ. ಬಹುಶಃ ಮುಕ್ತ ಮಾರುಕಟ್ಟೆಗೆ ಜಗತ್ತು ತೆರೆದುಕೊಂಡ ಬಳಿಕ ಆದ ಮಹತ್ತರ ಬದಲಾವಣೆ ಇದು. ಮುಕ್ತ ಮಾರುಕಟ್ಟೆ ವಿಧಾನದಲ್ಲಿ ಸರಕಾರಗಳಿಗೆ ಪೂರ್ಣ ಸ್ವಾತಂತ್ರ್ಯ ಇರುವುದಿಲ್ಲ. ಜನರಿಂದ ಆಯ್ಕೆಯಾದ ಜನ ಪ್ರತಿನಿಧಿಗಳು ಸರಕಾರ ರಚಿಸುವುದಾದರೂ, ಆ ಸರಕಾರದ ನೀತಿ-ನಿರೂಪಣೆಗಳನ್ನು ನಿರ್ಧರಿಸುವುದು ಅವರಲ್ಲ, ಮುಕ್ತ ಮಾರುಕಟ್ಟೆಯ ಒಡೆಯರು. ಜಾಗತಿಕವಾಗಿ ಇವತ್ತು ವಿಶ್ವ ಬ್ಯಾಂಕು, ಅಂತಾರಾಷ್ಟ್ರೀಯ ಹಣಕಾಸು ನಿಧಿ, ಏಶ್ಯನ್ ಡೆವಲಪ್‍ಮೆಂಟ್ ಬ್ಯಾಂಕ್ ಸಹಿತ ವಿವಿಧ ಹಣಕಾಸು ಸಂಸ್ಥೆಗಳು ಅಸ್ತಿತ್ವದಲ್ಲಿವೆ. ಈ ಸಂಸ್ಥೆಗಳಿಂದ ಸಾಲ ಪಡೆಯದೇ ಅಭಿವೃದ್ಧಿ ಸಾಧ್ಯವಿಲ್ಲ ಎಂಬ ವಾತಾವರಣವನ್ನು ನಿರ್ಮಿಸಲಾಗಿದೆ. ಗ್ರೀಸ್ ಇದೇ ವ್ಯವಸ್ಥೆಯ ಬಲಿಪಶು. ಮುಕ್ತ ಆರ್ಥಿಕ ನೀತಿಯಿಂದಾಗಿ ದೇಶಗಳ ಮೇಲೆ ಆಗಿರುವ ದೊಡ್ಡ ಅಡ್ಡ ಪರಿಣಾಮ ಏನೆಂದರೆ, ಹಣಕಾಸು ನಿರ್ವಹಣೆಯನ್ನು ಬಹುತೇಕ ತೆರೆಮರೆಯಲ್ಲಿ ಅವೇ ನಿಯಂತ್ರಿಸುವುದು. ಜಿಡಿಪಿ, ಅಭಿವೃದ್ಧಿ, ಸಾಲ ಎಂಬವುಗಳನ್ನೇ ತೋರಿಸಿ ಪ್ರತಿ ರಾಷ್ಟ್ರಗಳ ಮೇಲೂ ಅವು ಸವಾರಿ ಮಾಡುತ್ತವೆ. ಸಾಲ ಕೊಡುವ ಈ ಬ್ಯಾಂಕುಗಳು ಇಂತಿಷ್ಟು ಜಿಡಿಪಿ ದರ ಇರಬೇಕು ಎಂದು ತಾಕೀತು ಮಾಡುತ್ತವೆ. ಅಭಿವೃದ್ಧಿಯ ವೇಗವು ಕುಂಠಿತಗೊಳ್ಳಬಾರದಾದರೆ ಇಂತಿಂಥ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಡ ಹೇರುತ್ತವೆ. ಹೀಗೆ ಮುಕ್ತ ಆರ್ಥಿಕ ನೀತಿಯ ಅಡ್ಡ ಪರಿಣಾಮಕ್ಕೆ ಬಹುತೇಕ ಎಲ್ಲ ರಾಷ್ಟ್ರಗಳ ಹಣಕಾಸು ಇಲಾಖೆಗಳು ತುತ್ತಾಗಿವೆ. ಆದ್ದರಿಂದ ಹಣಕಾಸು ನೀತಿಗೆ ಸಂಬಂಧಿಸಿದ ಪ್ರಮುಖ ಇಲಾಖೆಗಳಲ್ಲೆಲ್ಲಾ ರಾಜಕಾರಣಿಗಳಲ್ಲದ ತಜ್ಞರು ನೇಮಕವಾಗಿರುತ್ತಾರೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಲ್ಲಿ ದುಡಿದವರನ್ನೋ ಅಥವಾ ಅವುಗಳ ಪರವಾದ ಅಭಿಪ್ರಾಯ ಹೊಂದಿದವರನ್ನೋ ಹಣಕಾಸು ನೀತಿ-ನಿರೂಪಣಾ ಇಲಾಖೆಗಳಲ್ಲಿ ನೇಮಿಸಿಕೊಳ್ಳಲೇಬೇಕಾದ ಒತ್ತಡವೊಂದನ್ನು ಎಲ್ಲ ಸರಕಾರಗಳೂ ಎದುರಿಸುತ್ತಿವೆ. ನಿಜವಾಗಿ ಒಂದು ದೇಶದ ಅರ್ಥವ್ಯವಸ್ಥೆಯ ನಿಯಂತ್ರಣ ಆ ದೇಶದ ಕೈಯಿಂದ ತಪ್ಪಿಹೋದರೆ, ಆ ಬಳಿಕ ಸರಕಾರಗಳಿಗೆ ಸುದ್ದಿಯಲ್ಲಿರುವುದಕ್ಕೆ ಹೆಚ್ಚು ವಿಷಯಗಳಿರುವುದಿಲ್ಲ. ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಿರುವುದರಿಂದ ಬಡತನ, ಹಸಿವಿನಿಂದ ಸಾವು, ಆಹಾರ ಭದ್ರತೆ ಮುಂತಾದವುಗಳನ್ನು ಹೆಚ್ಚು ಪ್ರಸ್ತಾಪಿಸುವಂತಿಲ್ಲ. ರಾಜಕಾರಣಿಗಳಲ್ಲದ ತಜ್ಞರು ಹಣಕಾಸು ಕ್ಷೇತ್ರದ ವಿವಿಧ ಆಯಕಟ್ಟಿನ ಸ್ಥಾನಗಳಲ್ಲಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳ ನಿರ್ದೇಶನದಂತೆ ಉದ್ಯೋಗ ನಡೆಸುತ್ತಿರುವುದು ಒಂದು ರೀತಿಯಲ್ಲಿ ರಾಜಕಾರಣಿಗಳಲ್ಲಿ ವಿಷಯದ ಕೊರತೆ ಎದುರಿಸುವಂತೆ ಮಾಡಿದೆ. ಆದ್ದರಿಂದಲೇ ರಾಜಕಾರಣಿಗಳು ಸಾಂಸ್ಕ್ರಿತಿಕ ರಾಜಕಾರಣವನ್ನು ಬದಲಿಯಾಗಿ ಆಯ್ಕೆ ಮಾಡಿಕೊಂಡಿರುವಂತೆ ಕಾಣುತ್ತಿದೆ. ಆದ್ದರಿಂದಲೇ ಜನರು ಏನನ್ನು ತಿನ್ನಬೇಕು, ಏನನ್ನು ಧರಿಸಬೇಕು, ಯಾರನ್ನು ಮದುವೆಯಾಗಬೇಕು, ಎಲ್ಲಿ ಧರ್ಮ ಇರಬೇಕು, ಯಾರು ಯಾವ ಭಾಷೆಯನ್ನಾಡಬೇಕು ಮುಂತಾದವುಗಳನ್ನೇ ದೇಶದ ಪ್ರಮುಖ ಇಶ್ಯೂ ಆಗಿ ಬಿಂಬಿಸುತ್ತಿರುವಂತೆ ಅನಿಸುತ್ತಿದೆ. ನಿಜವಾಗಿ ಮುಕ್ತ ಮಾರುಕಟ್ಟೆ ನೀತಿಯು ನಾಗರಿಕರ ಮೇಲೆ ಬೀರಿ ರುವ ಅಡ್ಡ ಪರಿಣಾಮ ಇದು. ಈ ನೀತಿಯಲ್ಲಿ ಮಾರುಕಟ್ಟೆಗಳು ಮಾತ್ರ ಮುಕ್ತವಾಗುವುದಲ್ಲ. ಸರಕಾರಗಳು ಕೂಡ ಜವಾಬ್ದಾರಿ ಯಿಂದ ಬಹುತೇಕ ಮುಕ್ತವಾಗಿರುತ್ತವೆ. ಬಾಹ್ಯ ನೋಟಕ್ಕೆ ಸರಕಾರವೊಂದು ಆರ್ಥಿಕ ಪ್ರಗತಿ, ಜಿಡಿಪಿ ಪ್ರಗತಿ, ಅದೂ ಇದೂ ಎಂದೆಲ್ಲ ಹೇಳುತ್ತಿರಬಹುದು. ಆದರೆ ಅವನ್ನು ಆಗಾಗ ಹೇಳಿಕೊಡುತ್ತಿರುವುದು ಮುಕ್ತ ಆರ್ಥಿಕ ನೀತಿಯ ಒಡೆಯರೇ. ಅವರೇ ಸರಕಾರದಲ್ಲಿ ಹಣಕಾಸು ಮಂತ್ರಿ ಯಾರಾಗಬೇಕೆಂದು ತೀರ್ಮಾನಿಸುತ್ತಾರೆ. ಯಾವ್ಯಾವ ತಜ್ಞರನ್ನು ಯಾವ್ಯಾವ ಇಲಾಖೆಯ ಮುಖ್ಯಸ್ಥರನ್ನಾಗಿಸಬೇಕೆಂದು ಪಟ್ಟಿ ಕೊಡುತ್ತಾರೆ. ಇಂಥ ಸ್ಥಿತಿಯಲ್ಲಿ ರಾಜಕಾರಣಿಗಳಿಗೆ ಜನರನ್ನು ತಮ್ಮ ಬಳಿ ಸದಾ ಇಟ್ಟುಕೊಳ್ಳಬೇಕು ಮತ್ತು ಸರಕಾರದ ನೀತಿ-ನಿಯಮಗಳ ಬಗ್ಗೆ ಸಾರ್ವಜನಿಕ ಚರ್ಚೆಗಳಾಗದಂತೆ ನೋಡಿಕೊಳ್ಳ ಬೇಕೆಂದಾದರೆ ಸಾಂಸ್ಕ್ರಿತಿಕ ರಾಜಕೀಯವೊಂದೇ ಉತ್ತಮ ಉಪಾಯ. ಹೀಗೆ ದನ, ಕರು, ಸೆಗಣಿ, ಸಸ್ಯಹಾರ, ಮಾಂಸಹಾರ, ಉಡುಗೆ-ತೊಡುಗೆ, ಯೋಗ, ಭಾಷೆ, ಭಗವದ್ಗೀತೆ... ಇತ್ಯಾದಿಗಳು ಪ್ರಜಾತಂತ್ರದ ಪ್ರಧಾನ ರಂಗ ಭೂಮಿಗೆ ಬರ ಬೇಕಾಗುತ್ತದೆ. ನಿಜವಾಗಿಯೂ ಈ ರಂಗಭೂಮಿಯಲ್ಲಿ ಗಟ್ಟಿಯಾಗಿ ತಳವೂರಲೇ ಬೇಕಾಗಿದ್ದ ವಿಷಯಗಳು ಕಂಬಿ ಕೀಳ ಬೇಕಾಗುತ್ತದೆ. ಆದ್ದರಿಂದ,  ಮಹಾರಾಷ್ಟ್ರ ಸರಕಾರವು 2015ರ ಆರಂಭದಲ್ಲಿ ಗೋಮಾಂಸವನ್ನು ನಿಷೇಧಿಸುವಲ್ಲಿಂದ ತೊಡಗಿ ವರ್ಷದ ಕೊನೆಯಲ್ಲಾದ ದಾದ್ರಿ ಹತ್ಯಾಕಾಂಡದ ವರೆಗೆ ಗೋವು ಭಾರತೀಯ ರಾಜಕೀಯದ ಪ್ರಮುಖ ವಿಷಯವಾಗಿರುವುದನ್ನು ನಾವು ಬರೇ ರಾಜಕೀಯ ತಂತ್ರಗಾರಿಕೆಯಾಗಿಯಷ್ಟೇ ನೋಡಬೇಕಾಗಿಲ್ಲ. ಸಾಂಸ್ಕ್ರಿತಿಕ ರಾಜಕಾರಣವು  ಮುಕ್ತ ಆರ್ಥಿಕ ನೀತಿಯ ಬೇಡಿಕೆಯೂ ಹೌದು. ಈ ಆರ್ಥಿಕ ನೀತಿಯಿಂದ ಆಗಿರುವ ಮತ್ತು ಆಗುತ್ತಿರುವ ವಿರೂಪಗಳನ್ನು ಮರೆಮಾಚಬೇಕಾದರೆ ಜನರನ್ನು ಭಾವುಕಗೊಳಿಸುವ ವಿಷಯಗಳ ಮೇಲೆ ಚರ್ಚೆಯಾಗುವಂತೆ ನೋಡಿಕೊಳ್ಳಬೇಕಾಗುತ್ತದೆ. ಬೆಲೆ ಏರಿಕೆಯ ಬಗ್ಗೆ ಜನರು ಗಂಭೀರವಾಗಿ ಮಾತಾಡತೊಡಗಿದರೆ ಅದರಿಂದ ಬಂಡವಾಳಶಾಹಿ ವ್ಯವಸ್ಥೆಯ ಬಗ್ಗೆ ಅನುಮಾನಗಳು ಸೃಷ್ಟಿಯಾಗು ತ್ತವೆ. ಅಂತಾರಾಷ್ಟ್ರೀಯ ಹಣಕಾಸು ಒಪ್ಪಂದಗಳು, ಅದರ ಶರತ್ತುಗಳು, ಪಾವತಿಸಬೇಕಾದ ಬಡ್ಡಿಗಳು ಮುಂತಾದವುಗಳೆಲ್ಲ ಜನರಿಗೆ ಗೊತ್ತಾಗುತ್ತದೆ. ಹೀಗಾದರೆ ಪರ್ಯಾಯ ನೀತಿಗಳತ್ತ ಜನರಿಂದ ಒತ್ತಾಯಗಳು ಕೇಳಬರಬಹುದು. ಗ್ರೀಸ್‍ನ ನಾಗರಿಕರಂತೆ ತಿರುಗಿಬಿದ್ದರೆ ಅದು ಅಪಾಯಕಾರಿ ನಾಗರಿಕ ಚಳವಳಿಯನ್ನು ಹುಟ್ಟು ಹಾಕಬಹುದು. ಅದಕ್ಕಿಂತ ಮೋದಿ ಮತ್ತು ಅವರ ಪರಿವಾರದ ಭಾಷೆಯಲ್ಲಿ, ಡೊನಾಲ್ಡ್ ಟ್ರಂಪ್‍ರ ಭಾಷೆಯಲ್ಲಿ ಅಥವಾ ಗೀರ್ಟ್ ವಿಲ್ಡರ್ಸ್‍ರ ಭಾಷೆಯಲ್ಲಿ ಮಾತಾಡಿದರೆ ಅದು ಪ್ರಧಾನ ವಿಷಯವನ್ನು ಮರೆಸಿ ಬಿಡುತ್ತದೆ. ಆದ್ದರಿಂದ ಜಾಗತೀಕರಣದಂತೆ ರಾಜಕೀಯವನ್ನೂ ಸಾಂಸ್ಕ್ರಿತೀಕರಣಗೊಳಿಸ ಬೇಕಾಗುತ್ತದೆ. ಆಗ ಗೋವು, ಮಸೀದಿ, ಮಂದಿರ, ಗಡ್ಡ, ಮದ್ರಸ, ಕುರ್‍ಆನ್, ಭಗವದ್ಗೀತೆ, ಪ್ರಣಯ... ಮುಂತಾದವು ಗಳಲ್ಲಿಯೇ ಸಮಾಜ ಮುಳುಗಿ ಬಿಡುತ್ತದೆ. ಅಂದಹಾಗೆ,
  2015ರಲ್ಲಿ ಗೋವು ‘ವರ್ಷದ ವ್ಯಕ್ತಿತ್ವ’ವಾಗಿ ಮೂಡಿ ಬಂದಂತೆಯೇ 2016ರಲ್ಲಿ  ಮಂದಿರ ‘ವರ್ಷದ ವ್ಯಕ್ತಿತ್ವ’ ಗೌರವವನ್ನು ಪಡೆಯಲೂ ಬಹುದು. 