Wednesday, January 20, 2016

ಯುದ್ಧವೆಂಬ ಉದ್ಯಮದಲ್ಲಿ ಕಳೆದುಹೋಗುವ ಅರ್ನಿ, ಜಾಕಿಗಳು...

ತುಕ್ಕು ಹಿಡಿದಿರುವ ಸೋವಿಯತ್ ಯೂನಿಯನ್ನಿನ ಯುದ್ಧ ಟ್ಯಾಂಕರ್‍ ನಲ್ಲಿ ಆಡುತ್ತಿರುವ ಮಕ್ಕಳು
         “ನನ್ನೊಳಗೆ ಸಂಘರ್ಷವೊಂದು ನಡೆಯುತ್ತಿತ್ತು. ನನ್ನ ಮೇಲೆ ದಾಳಿ ನಡೆದಂತೆ, ನಾನು ಆಕ್ರಮಣಕ್ಕೆ ಒಳಗಾದಂತೆ ಅನಿಸುತ್ತಿತ್ತು. ಒಂದೆರಡು ದಿನವಲ್ಲ, ದೀರ್ಘ ಒಂದೂವರೆ ವರ್ಷಗಳ ಪ್ರತಿ ದಿನವೂ ಇದರದ್ದೇ ಪ್ರಾಬಲ್ಯ. ದುಸ್ವಪ್ನಗಳು ಬಿಡದೇ ನನ್ನನ್ನು ಬೇಟೆಯಾಡುತ್ತಿತ್ತು. ನಿದ್ದೆ ಮಾಡುವುದಕ್ಕೇ ಭಯಪಟ್ಟೆ. ಸಣ್ಣ ಶಬ್ದವೂ ನನ್ನನ್ನು ನಿದ್ದೆಯಿಂದ ಎಚ್ಚರಗೊಳಿಸುತ್ತಿತ್ತು. ಭೀತಿಯಿಂದ ಎದ್ದು ಕೂರುತ್ತಿದ್ದೆ. ದುಸ್ವಪ್ನಗಳು ನನ್ನನ್ನು ಎಷ್ಟರ ಮಟ್ಟಿಗೆ ಪ್ರಭಾವಿತಗೊಳಿಸಿತ್ತೆಂದರೆ, ಮಲಗುವಾಗ ಪಕ್ಕದಲ್ಲಿ ಚೂರಿಯನ್ನು ಇಟ್ಟುಕೊಳ್ಳತೊಡಗಿದೆ. ಒಂದು ರಾತ್ರಿ ನನ್ನ ತಮ್ಮನಿಗೆ ಈ ಚೂರಿಯಿಂದ ಬಹುತೇಕ ಇರಿದೇಬಿಟ್ಟೆ ಎಂಬ ಸ್ಥಿತಿಗೆ ತಲುಪಿದ್ದೆ. ಅಂತೂ ನಿದ್ದೆ ಹತ್ತುವುದಿಲ್ಲ ಅಥವಾ ನಿದ್ದೆಯನ್ನೇ ಭಯಪಡುವ ಮನಃಸ್ಥಿತಿ. ಕಾಬೂಲ್‍ನ ಹೊರವಲಯದಲ್ಲಿ ತುಕ್ಕು ಹಿಡಿದು ಮಲಗಿರುವ ಸೋವಿಯತ್ ಯೂನಿಯನ್ನಿನ ಯುದ್ಧ ಟ್ಯಾಂಕರ್‍ಗಳು ದುಸ್ವಪ್ನದಲ್ಲಿ ನನ್ನೊಂದಿಗೆ ಮಾತಾಡುತ್ತಿದ್ದುವು. ಆ ಟ್ಯಾಂಕರ್‍ಗಳ ಅಕ್ಕ-ಪಕ್ಕ ಮಾನವ ಅಸ್ತಿಪಂಜರದ ಪರ್ವತವನ್ನೇ ನೋಡಿದೆ. ದವಡೆಯ ಎಲುಬುಗಳು, ಕಣ್ಣಿನ ಕುರುಹುಗಳ ಗುಳಿಗಳು, ತಲೆಬುರುಡೆಗಳು ನನ್ನೊಂದಿಗೆ ಚರ್ಚೆಗೆ ಇಳಿದಂತೆ ಅನಿಸುತ್ತಿತ್ತು. ‘ನೀನೇಕೆ ಯುದ್ಧಪೀಡಿತ ದೇಶದಲ್ಲಿದ್ದೀ, ಮರಳಿ ನಿನ್ನ ದೇಶಕ್ಕೆ ಹೋಗದೇ ಯಾಕೆ ಇಲ್ಲೇ ಕಚ್ಚಿ ಕೂತಿರುವೆ’ ಎಂದು ಆ ಅಸ್ತಿಪಂಜರಗಳು ನನ್ನನ್ನು ಪೀಡಿಸುತ್ತಿತ್ತು. ನಾನು ನಿದ್ದೆ ಗುಳಿಗೆಗಳನ್ನು ಸೇವಿಸತೊಡಗಿದೆ. ಹಾಗಂತ ನಿದ್ದೆ ಗುಳಿಗೆಗೂ ಒಂದು ಗುಣ ಇದೆ. ಮತ್ತೆ ಮತ್ತೆ ಅದನ್ನೇ ಸೇವಿಸತೊಡಗಿದರೆ ಅದು ಮುನಿಸಿಕೊಳ್ಳುತ್ತದೆ. ಬಳಿಕ ಒಂದರ ಬದಲಿಗೆ ಎರಡೆರಡು ಗುಳಿಗೆಗಳನ್ನು ಸೇವಿಸಬೇಕಾಗುತ್ತದೆ. ಹೀಗೆ ಸೇವಿಸುವ ಗುಳಿಗೆಗಳ ಪ್ರಮಾಣವನ್ನು ಹೆಚ್ಚಿಸಿದೆ. ಆದರೂ ಕ್ರಮೇಣ ಅದೂ ವಿಫಲವಾಯಿತು. ಕೊನೆಗೆ ಮದ್ಯ ಪಾನದ ಮೊರೆಹೋದೆ. ಎಲ್ಲಿಯವರೆಗೆ ಮದ್ಯ ಸೇವಿಸಿದೆ ಎಂದರೆ ಕುಡಿದೂ ಕುಡಿದೂ ತಣ್ಣಗೆ ನಿದ್ದೆಗೆ ಜಾರುವಷ್ಟು..”
  ಸಂಹಿತಾ ಅರ್ನಿ ಬರೆಯುತ್ತಾ ಹೋಗುತ್ತಾರೆ. ಅಫಘಾನಿಸ್ತಾನದ ಟಿ.ವಿ. ಚಾನೆಲ್ ಗೆ  ಚಿತ್ರಕತೆಗಾರರಾಗಿ 6 ತಿಂಗಳ ಕಾಲ (2013ರಲ್ಲಿ) ಕಾಬೂಲ್‍ನಲ್ಲಿ ಕೆಲಸ ಮಾಡಿದ ಅವರು ಬಳಿಕ ಭಾರತಕ್ಕೆ ಮರಳುತ್ತಾರೆ. ಆದರೆ ಆ ಮರಳಿದ ಬಳಿಕದ ಒಂದೂವರೆ ವರ್ಷಗಳ ವರೆಗೆ ಅವರು ಖಿನ್ನತೆಗೆ ಒಳಗಾಗುತ್ತಾರೆ. ದೈಹಿಕವಾಗಿ ಭಾರತಲ್ಲಿದ್ದರೂ ಮಾನಸಿಕವಾಗಿ ಅಫಘಾನ್‍ನಲ್ಲಿದ್ದಂಥ ಅನುಭವ. ಕಾಬೂಲ್‍ನಲ್ಲಿ 6 ತಿಂಗಳ ಕಾಲ ಅವರು ಏನನ್ನು ನೋಡಿದ್ದರೋ ಮತ್ತು ಅನುಭವಿಸಿದ್ದರೋ ಅದು ಭಾರತದಲ್ಲೂ ಅವರನ್ನು ಹಿಂಬಾಲಿಸುತ್ತದೆ. ಇಲ್ಲೂ ಒಂದು ಕೃತಕ ಯುದ್ಧ ಪೀಡಿತ ಭೂಮಿಯನ್ನು ಆ ಅನುಭವಗಳು ಅವರಿಗೆ ಕಟ್ಟಿಕೊಡುತ್ತದೆ. ಅವರು ನಿದ್ದೆ ಕಳೆಯುತ್ತಾರೆ. ದಿಗಿಲಿನಿಂದ ಬೆಚ್ಚಿ ಬೀಳುತ್ತಾರೆ. ತೀವ್ರ ಖಿನ್ನತೆಯಿಂದ ಬಳಲುತ್ತಾರೆ..
  “ಕಾಬೂಲ್‍ನಲ್ಲಿ ಒಂದು ದಿನ ಸಂಜೆ ನನ್ನ ಗೆಳತಿಯೋರ್ವಳು ನನ್ನನ್ನು ಪಾರ್ಟಿಗೆ ಕರೆದುಕೊಂಡು ಹೋದಳು. ಅಲ್ಲಿ ಉಪಸ್ಥಿತಿಯಿರುವವರಲ್ಲಿ ಮಾಜಿ ಯುದ್ಧ ದೊರೆಯೂ ಸೇರಿದ್ದ. ಈಗ ಆತ ತನ್ನ ಹಿಂದಿನ ಹೋರಾಟವನ್ನು ಕೈ ಬಿಟ್ಟು ರಾಜಕಾರಣಿಯಾಗಿದ್ದಾನೆ. ಅಮೇರಿಕದ ಮಾಜಿ ರಕ್ಷಣಾ ಗುತ್ತಿಗೆದಾರರ ಸಹಾಯದಿಂದ ಕಾಬೂಲ್‍ಗೆ ಮದ್ಯವನ್ನು ಕಳ್ಳ ಸಾಗಾಣಿಕೆ ಮಾಡುವ ವ್ಯವಹಾರ ಮಾಡುತ್ತಿದ್ದಾನೆ. ಈ ಮಧ್ಯೆ ನಾನೊಂದು ದಿನ ಕಾಯಿಲೆ ಬಿದ್ದೆ. ಔಷಧಕ್ಕಾಗಿ ಅಫಘಾನ್ ವೈದ್ಯರಲ್ಲಿಗೆ ಹೋದೆ. ಆತ ಔಷಧವನ್ನೇನೋ ನೀಡಿದ. ಆದರೆ ಆ ಔಷಧದ ಅವಧಿ ಎಂದೋ ಮುಗಿದಿತ್ತು. ಆ ಔಷಧವನ್ನು ಸೇವಿಸುವುದೆಂದರೆ ಇನ್ನೊಂದು ಕಾಯಿಲೆಗೆ ಆಹ್ವಾನ ಕೊಟ್ಟಂತೆ. ಆದ್ದರಿಂದ ನಾನು ಇನ್ನೋರ್ವ ವೈದ್ಯರನ್ನು ಭೇಟಿಯಾಗಲೇ ಬೇಕಾಯಿತು. ಅವಧಿ ಮುಗಿದ ಔಷಧಗಳು, ಒತ್ತಡ, ಮಾದಕ ಪದಾರ್ಥಗಳು ಮತ್ತು ಹಿಂಸೆ ಎಲ್ಲವೂ ಒಟ್ಟಾಗಿ ನನ್ನ ಮೇಲೆ ಸವಾರಿ ಮಾಡಿದ್ದರಿಂದಲೋ ಏನೋ ನಾನು ರಜೆ ಪಡೆದು ಭಾರತಕ್ಕೆ ಮರಳಲೇ ಬೇಕಾಯಿತು.  ಹಾಗಂತ, ನಾನು ಕಾಬೂಲ್‍ಗೆ ಹೋಗಿರುವುದರ ಹಿಂದೆ ಚಿತ್ರಕತೆ ಮತ್ತು ಆ ಮೂಲಕ ದುಡ್ಡು ಮಾಡುವ ಉದ್ದೇಶವಷ್ಟೇ ಇದ್ದುದಲ್ಲವಲ್ಲ. ದುಡ್ಡಿಗೆ ಸಂಬಂಧಿಸಿ ಹೇಳುವುದಾದರೆ ಕಾಬೂಲ್‍ನಲ್ಲಿ ಒಂದು ತಿಂಗಳಲ್ಲಿ ಎಷ್ಟು ಹಣ ಸಂಪಾದಿಸಿದೆನೋ ಅದು ಭಾರತದಲ್ಲಿ ಸಂಪಾದಿಸುವ ಹಣಕ್ಕಿಂತ 9 ಪಟ್ಟು ಹೆಚ್ಚು. ಆದರೆ ನನ್ನ ಉದ್ದೇಶಗಳ ಪಟ್ಟಿಯಲ್ಲಿ ದುಡ್ಡು ಏಕೈಕ ವಿಷಯ ಆಗಿರಲಿಲ್ಲ. ಜಗತ್ತಿನ ಕುರಿತಾದ ನನ್ನ ಅರಿವಿನ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕಿತ್ತು. ಯುದ್ಧಪೀಡಿತ ಪ್ರದೇಶ ಮತ್ತು ಅಲ್ಲಿನ ಜನರನ್ನು ಅವರ ಜೊತೆಗಿದ್ದೇ ಅನುಭವಿಸಬೇಕಿತ್ತು. ಅದನ್ನು ದಾಖಲಿಸಿಕೊಂಡು ಎಲ್ಲರಿಗೂ ದಾಟಿಸಬೇಕಿತ್ತು. ಯುದ್ಧವಿಲ್ಲದ ದೇಶದಲ್ಲಿ ನಿಂತು ಯುದ್ಧಪೀಡಿತ ದೇಶವೊಂದನ್ನು ಕಲ್ಪಿಸಿಕೊಳ್ಳುವುದಕ್ಕೂ ನೇರ ಅನುಭವಿಸುವುದಕ್ಕೂ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕಿತ್ತು. ಬೇಕಿದ್ದರೆ ನೀವಿದನ್ನು ಸಾಹಸ ಪ್ರವೃತ್ತಿ ಎಂದೂ ಹೇಳಬಹುದು. ಆದ್ದರಿಂದಲೇ ಭಾರತಕ್ಕೆ ಬಂದು ಅಸೌಖ್ಯಕ್ಕೆ ಮದ್ದು ಮಾಡಿಕೊಂಡು ಪುನಃ ಅಪಘಾನ್‍ಗೆ ಮರಳಿದೆ. ನನ್ನ ಹೊಣೆಗಾರಿಕೆಯನ್ನು ಪೂರ್ಣಗೊಳಿಸಿ 6 ತಿಂಗಳ ಬಳಿಕ ಶಾಶ್ವತವಾಗಿ ಅಲ್ಲಿಂದ ಭಾರತಕ್ಕೆ ಮರಳಿದೆ. ವಿಷಾದ ಏನೆಂದರೆ, ಮರಳುವಾಗ ನಾನು ಒಂಟಿಯಾಗಿ ಮರಳಲಿಲ್ಲ. ಅಷ್ಟೂ ಅನುಭವಗಳನ್ನು ನನ್ನ ಜೊತೆಗೇ ನಾನು ಬಯಸದೆಯೇ ಹೊತ್ತು ತಂದೆ. ಸಂಪಾದನೆಯ ಮಟ್ಟಿಗೆ ಹೇಳುವುದಾದರೆ ನಾನು ಸಾಕಷ್ಟನ್ನು ಪಡೆದೆ. ಆದರೆ, ಅಲ್ಲಿಂದ ಮರಳಿ ಬರುವಾಗ ನನ್ನನ್ನು ಕಾಡಿದ್ದೇನೆಂದರೆ, ಯುದ್ಧವೆಂಬ ಉದ್ಯಮದಲ್ಲಿ ನಾನು ಕೂಲಿ ಸಿಪಾಯಿ ಆದೆನೇ ಎಂಬುದು. ಈ ಅಪರಾಧಿ ಮನೋಭಾವದ ಪ್ರಭಾವದಿಂದಲೋ ಏನೋ ನಾನು ಭಾರತಕ್ಕೆ ಮರಳಿದ ಬಳಿಕದ ಒಂದೂವರೆ ವರ್ಷಗಳು ನನ್ನವು ಆಗಲಿಲ್ಲ. ಪ್ರತಿದಿನ ನನ್ನ ರಕ್ತ ಕಣಗಳಲ್ಲಿ, ನನ್ನ ಮೆದುಳಿನ ಸಂವೇದನೆಗಳಲ್ಲಿ, ನನ್ನ ಕನಸಿನಲ್ಲಿ, ನನ್ನ ಬದುಕಿನ ಪ್ರತಿಕ್ಷಣಗಳಲ್ಲಿ ಕಾಬೂಲ್ ತುಂಬಿಕೊಂಡಿತ್ತು. ಅಲ್ಲಿನ ಭೂತ ಮತ್ತು ವರ್ತಮಾನಗಳು ನನ್ನೊಳಗೆ ವಿಲೀನಗೊಂಡು ತೀವ್ರವಾಗಿ ಕಾಡಿದುವು. ನಾನು ಭಾರತದಲ್ಲಿದ್ದರೂ ಕಾಬೂಲ್‍ನಲ್ಲೇ ಇರುವೆನೋ ಎಂದು ಅನಿಸುವಷ್ಟು ಅದರ ಪ್ರಭಾವ ದಟ್ಟವಾಗಿತ್ತು. ‘ಯುದ್ಧ ಮುಗಿಯುವುದಿಲ್ಲ, ಅದು ಮುಗಿದರೂ ಮುಗಿಯುವುದಿಲ್ಲ..’ ಎಂದು ಅಫಘಾನ್‍ನ ಗೆಳೆಯರೊಬ್ಬರು ನನ್ನೊಂದಿಗೆ ಒಗಟಾಗಿ ಹೇಳಿದ್ದರು. ಆ ಮಾತಿನ ತೀವ್ರತೆ ಅಫಘಾನ್‍ನಲ್ಲಿದ್ದಾಗ ನನಗೆ ಗೊತ್ತಾಗಿರಲಿಲ್ಲ. ಆದರೆ ಭಾರತಕ್ಕೆ ಮರಳಿದ ಬಳಿಕ ನನಗೆ ಅದರ ಪ್ರತ್ಯಕ್ಷ ಅನುಭವವಾಯಿತು. ಅಲ್ಲಿನ ಅನುಭವವಗಳು ನನ್ನಿಂದ ಬೀಳ್ಕೊಡುವುದಿಲ್ಲವಾದರೆ, ನಾನೇನು ಮಾಡಬಲ್ಲೆ? ಅದಕ್ಕೆ ಹೇಗೆ ಅಂತ್ಯ ಕಾಣಿಸಬಲ್ಲೆ? ನನ್ನಿಂದ ಅದನ್ನು ತೊರೆಯಲು ಸಾಧ್ಯವೇ? ನಾನು ವೈದ್ಯರು ಮತ್ತು ಮನಃಶಾಸ್ತ್ರಜ್ಞರ ಬಳಿಗೆ ಹೋದೆ. ಅವರು ಗುಳಿಗೆ ಕೊಟ್ಟರು. ಆರಂಭದಲ್ಲಿ ಈ ಗುಳಿಗೆಗಳು ಪರಿಣಾಮಕಾರಿಯಂತೆ ಕಂಡರೂ ಕ್ರಮೇಣ ಅವು ಪರಿಣಾಮರಹಿತವಾಗಿ ಬಿಟ್ಟವು. ನನ್ನ ದುಸ್ವಪ್ನಗಳು ಮರಳಿದುವು. ಭ್ರಮಾ ಲೋಕದಲ್ಲಿ ನಾನು ಮತ್ತೆ ತೇಲತೊಡಗಿದೆ. ನನ್ನ ಮೇಲೆ ದಾಳಿಗಳಾಗುತ್ತಿರುವಂಥ ಅನುಭವ. ಗುಳಿಗೆಯ ಪ್ರಮಾಣವನ್ನು ಹೆಚ್ಚಿಸಲಾಯಿತು. ಆದರೆ ಅದು ಫಲ ನೀಡಲಿಲ್ಲ. ಅದರ ಅಡ್ಡಪರಿಣಾಮದಿಂದಲೋ ಏನೋ ಹಾಸಿಗೆಯಿಂದ ಏಳುವುದೇ ಅಸಾಧ್ಯವೆಂಬ ಸ್ಥಿತಿ ನಿರ್ಮಾಣವಾಯಿತು. ಖಿನ್ನತೆ ನನ್ನ ಮೇಲೆ ಪ್ರಾಬಲ್ಯ ಸ್ಥಾಪಿಸಿತು. ನಿಜ ಏನೆಂದರೆ ನನ್ನೊಳಗೆ
ಜಾಕ್ವೆಲಿನ್ ಸುಟನ್
ಏನಾಗುತ್ತಿದೆ ಎಂಬುದನ್ನು ಪತ್ತೆಹಚ್ಚಲು ವೈದ್ಯರು ವಿಫಲರಾಗಿದ್ದರು. ದೈಹಿಕವಾಗಿ ನನಗಾವ ಕಾಯಿಲೆಯೂ ಇರಲಿಲ್ಲ. ಇದೊಂದು ಮನಸಿನ ಕಾಯಿಲೆ ಮತ್ತು ಇದರಿಂದ ನಾನು ಹೊರಬರಬೇಕಾದರೆ ನನ್ನೊಳಗೆ ನಾನು ವಿಶ್ವಾಸವನ್ನು ಬೆಳೆಸಿಕೊಳ್ಳಬೇಕಿತ್ತು. ಮೊದಲು ನಾನು ನಾನಾಗಬೇಕಿತ್ತು. ಆದ್ದರಿಂದ ನನ್ನನ್ನು ನಾನು ಉಳಿಸಿಕೊಳ್ಳುವುದಕ್ಕಾಗಿ ಏನನ್ನೂ ಮಾಡುವೆ ಎಂದು ನಿಶ್ಚಯಿಸಿಕೊಂಡೆ. ನನ್ನ ಗೆಳತಿಯ ಸಲಹೆಗಳು ಈ ವಿಷಯದಲ್ಲಿ ನನಗೆ ತುಂಬಾ ನೆರವಿಗೆ ಬಂತು. ನಾನು ನನ್ನಲ್ಲಿ ನಂಬಿಕೆಯಿಟ್ಟೆ. ನನ್ನನ್ನು ನಾನು ನಂಬಿಕೊಳ್ಳುವುದೆಂದರೆ ಹೊರಗಿನ ಭಯಕ್ಕೆ ಸಡ್ಡು ಹೊಡೆದಂತೆ. ಇದು ಕ್ರಮೇಣ ಪರಿಣಾಮ ಬೀರತೊಡಗಿತು. ನನ್ನನ್ನು ಪ್ರತಿದಿನ ಕಾಡುತ್ತಿದ್ದ ದುಸ್ವಪ್ನಗಳು ಸರದಿ ತಪ್ಪಿಸಿ ಬರತೊಡಗಿದುವು. ಕ್ರಮೇಣ ಅದೂ ಅಪರೂಪಕ್ಕೊಮ್ಮೆ ಎಂಬಂತಾಯಿತು. ಹೀಗೆ ಅಘಘಾನ್ನಿನ 6 ತಿಂಗಳ ಅನುಭವವು ಒಂದೂವರೆ ವರ್ಷಗಳ ವರೆಗೆ ನನ್ನನ್ನು ಖಿನ್ನತೆಗೆ ದೂಡಿದರೂ ನಾನು ಅದಕ್ಕೆ ತಲೆಬಾಗಲಿಲ್ಲ. ಹಾಗಂತ, ನನಗೆ ಗೊತ್ತಿರುವ ಇತರರಿಗೆ ಹೋಲಿಸಿದರೆ ನನ್ನ 6 ತಿಂಗಳು ತೀರಾ ಜುಜುಬಿ ಎಂಬುದು ನನಗೆ ಗೊತ್ತು. ಅಪಹರಣಗಳ ನಡುವೆ ಬದುಕುತ್ತಿರುವ ಮತ್ತು ತಮ್ಮವರು ಮತ್ತು ಕುಟುಂಬಿಕರು ಕಣ್ಣೆದುರೇ ಸಾಯುತ್ತಿರುವುದನ್ನು ನೋಡಿ ಜೀವಿಸುತ್ತಿರುವವರ ಎದುರು ನನ್ನ ಅನುಭವ ಏನೇನೂ ಅಲ್ಲ. ತುಟಿಗಳನ್ನು ಕಳಕೊಂಡವರು, ಈಗ- ಈ ಕ್ಷಣ ಸಾಯುವ ಭೀತಿಯಿಂದ ಒಂಟಿಯಾಗಿ ನಿಂತವರು, ಸಾವಿನಿಂದ ಕ್ಷಣ ಮಾತ್ರದಲ್ಲಿ ತಪ್ಪಿಸಿಕೊಂಡವರನ್ನು ಪರಿಗಣಿಸಿದರೆ, ನನ್ನ 6 ತಿಂಗಳು ನಮೂದಿಸುವುದಕ್ಕೇ ಅರ್ಹವಲ್ಲ. ಅಲ್ಲದೇ ನಾನು ಯುದ್ಧದೊಂದಿಗೆ ಬದುಕಲಿಲ್ಲ. ಯುದ್ಧ ಪೀಡಿತ ಪ್ರದೇಶದಲ್ಲಿ ಬರೇ 6 ತಿಂಗಳನ್ನಷ್ಟೇ ಕಳೆದೆ. ಆದರೆ ಅದು ನನ್ನ ಒಂದೂವರೆ ವರ್ಷಗಳ ಬದುಕನ್ನು ಕಸಿದುಕೊಂಡಿತೆಂದರೆ ಮತ್ತು ನನ್ನನ್ನೇ ಆಹುತಿ ಪಡಕೊಳ್ಳುವ ಅಪಾಯಕಾರಿ ಹಂತಕ್ಕೆ ತಲುಪಿತ್ತೆಂದರೆ ಇನ್ನು ಯುದ್ಧದೊಂದಿಗೆ ಬದುಕುವವರ ಕುರಿತು ಏನೆನ್ನೋಣ? ನಿಜವಾಗಿ, ಯೋಧರು ಸಾಮೂಹಿಕ ಹತ್ಯೆಗಳಲ್ಲಿ ಭಾಗಿಯಾಗುವುದು, ನಾಗರಿಕರನ್ನು ಕೊಲ್ಲುವುದನ್ನು ನಾವು ಕೇಳುತ್ತಿರುತ್ತೇವೆ. ಆತ್ಮಹತ್ಯಾ ಬಾಂಬರ್‍ಗಳ ಅನಾಹುತಕಾರಿ ಸ್ಫೋಟಕ್ಕೆ ಬೆಚ್ಚಿರುತ್ತೇವೆ. ನಮ್ಮ ಮಟ್ಟಿಗೆ ಅವರೆಲ್ಲ ಹುಚ್ಚರು. ಆದರೆ ನಿಜಕ್ಕೂ ಅದು ಹುಚ್ಚೆ? ನನ್ನ ಪ್ರಕಾರ ಅದು ಹುಚ್ಚಲ್ಲ ಅಥವಾ ಮೆದುಳು ತೊಳೆದುದರ ಪರಿಣಾಮವೂ ಅಲ್ಲ. ಅದು ಆತ್ಮದ ಸಂಘರ್ಷ. ಇದೀಗ ಸಿರಿಯದ ಮೇಲೆ ಬಾಂಬ್ ಸುರಿಸಲಾಗುತ್ತಿದೆ. ಈ ಬಾಂಬ್‍ಗಳು ಒಂದಿಡೀ ದೇಶದ ಮೇಲೆ ಮತ್ತು ಅಲ್ಲಿನ ಸಂಸ್ಕ್ರತಿಯ ಮೇಲೆ ಬೀರುವ ಆಘಾತಕಾರಿ ಪರಿಣಾಮಗಳನ್ನು ನಾನು ಕಲ್ಪಿಸಿಕೊಳ್ಳುತ್ತಿದ್ದೇನೆ. ಯಾಕೆಂದರೆ ಒಂದೂವರೆ ವರ್ಷದ ಭಯಾನಕ ಅನುಭವ ನನ್ನ ಜೊತೆಗಿದೆ...” ಸಂಹಿತಾ ಅರ್ನಿಯವರ ನೆನಪು ಹೀಗೆ ಹರಿಯುತ್ತಾ ಹೋಗುತ್ತದೆ.   
ಸಂಹಿತಾ ಅರ್ನಿ
             ಯುದ್ಧ ಪೀಡಿತ ಇರಾಕ್, ಸಿರಿಯಗಳಲ್ಲಿ ಕೆಲಸ ಮಾಡಿರುವ ಬಿಬಿಸಿಯ ಮಾಜಿ ಪತ್ರಕರ್ತೆ ಜಾಕ್ವೆಲಿನ್ ಸುಟನ್ ಅವರು ತಿಂಗಳುಗಳ ಹಿಂದೆ ಟರ್ಕಿಯ ಅತಾತುರ್ಕ್ ವಿಮಾನ ನಿಲ್ದಾಣದ ಸ್ನಾನದ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿಯನ್ನು ಓದುವಾಗ ಅಥವಾ ಆಗಾಗ ಯೋಧರಿಂದ ಸಂಭವಿಸುತ್ತಲೇ ಇರುವ ಹತ್ಯೆ, ಆತ್ಮಹತ್ಯೆಗಳನ್ನು ನೋಡುವಾಗ ಸಂಹಿತಾ ಅರ್ನಿಯವರ ಅನುಭವ ಹೆಚ್ಚು ಮಹತ್ವಪೂರ್ಣ ಮತ್ತು ಅಧ್ಯಯನಾರ್ಹವೆನಿಸುತ್ತದೆ.

No comments:

Post a Comment