Wednesday, January 27, 2016

ಹೋರಾಟಗಾರರ ಗ್ರಹಿಕಾ ಸಾಮಥ್ಯ ಸತ್ತು ಹೋಗಿರುವಾಗ ವೇಮುಲ ಬೇರೇನು ಮಾಡಬೇಕಿತ್ತು?

   ಜರ್ಮನಿಯ ಬೆರ್ಟೊಲ್ಟ್ ಬೆಕ್ಟ್ ಮತ್ತು ಪೌಲ್ ಸಿಲೆನ್, ರಷ್ಯಾದ ವ್ಲಾದಿಮೀರ್ ಮಯಕೋವಸ್ಕಿ ಮುಂತಾದ ಮೇರು ಕವಿಗಳನ್ನು ಎತ್ತಿಕೊಂಡು ಮತ್ತು ಅವರಿಗೆ ಹೋಲಿಸಿಕೊಂಡು ಇವತ್ತು ರೋಹಿತ್ ವೇಮುಲರ ಆತ್ಮಹತ್ಯೆಯನ್ನು ವಿಶ್ಲೇಷಿಸಲಾಗುತ್ತಿದೆ. ತತ್ವಜ್ಞಾನಿ ಮತ್ತು ವಿಮರ್ಶಕರಾಗಿದ್ದ ವಾಲ್ಟರ್ ಬೆಂಜಮಿನ್‍ಗೆ ಬೆರ್ಟೊಲ್ಟ್ ಬೆಕ್ಟ್ ಬರೆದ ಕವನದ ಎಳೆಯೊಂದಕ್ಕೆ ವೇಮುಲರ ಡೆತ್‍ನೋಟನ್ನು ಹೋಲಿಸಲಾಗುತ್ತಿದೆ. ಪೌಲ್ ಸಿಲೆನ್ ಮತ್ತು ವ್ಲಾದಿಮೀರ್ ಮಯಕೋವಸ್ಕಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರೊಳಗಿನ ಆತಂಕವನ್ನು ಮತ್ತು ಸಮಸ್ಯೆಗೆ ಪರಿಹಾರವಾಗಿ ಅವರು ಸಾವನ್ನು ಆಯ್ದುಕೊಂಡದ್ದನ್ನು ಇವತ್ತು ವೇಮುಲರ ಮೃತದೇಹದ ಎದುರಿಟ್ಟುಕೊಂಡು ಚರ್ಚಿಸಲಾಗುತ್ತಿದೆ. ಒಪ್ಪೋಣ. ವೇಮುಲ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಗ್ರಂಥಲಯವನ್ನೇ ಮೆದುಳಲ್ಲಿ ತುಂಬಿಸಿಕೊಂಡಿದ್ದ. ಅಪಾರ ಬುದ್ಧಿವಂತ. ಈ ದೇಶದ ದಲಿತ ಸಮುದಾಯದ ಪ್ರತಿ ಮನೆಗಳಲ್ಲಿರುವ ಬಡತನ ಆತನ ಮನೆಯಲ್ಲೂ ಇತ್ತು. ಆತನ ತಾಯಿ ಸಾಮಾನ್ಯ ದಲಿತ ಮಹಿಳೆ. ಆತ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಯಾವ ಬಲವೂ ಭರವಸೆಯೂ ಇಲ್ಲದ ವಾತಾವರಣದಲ್ಲಿ ಅರಳಿದ ಅಪರೂಪದ ಹೂವಾಗಿದ್ದ. ಭಾರತದಲ್ಲಿ ದಲಿತನಾಗಿ ಬದುಕುವುದು ಎಷ್ಟು ‘ಗೌರವಾರ್ಹ’ ಎಂಬುದು ಆತನ ಈ ಹಿನ್ನೆಲೆಯೇ ಕಲಿಸಿಕೊಟ್ಟಿತ್ತು. ಆದ್ದರಿಂದಲೇ ಸಂಘಟನೆಯಲ್ಲಿ ತೊಡಗಿಸಿಕೊಂಡ. ಸಕ್ರಿಯನಾದ. ನಕುಲ್ ಸಿಂಗ್ ಸಾವ್ನೆ ಅವರ ‘ಮುಝಫ್ಫರ್ ನಗರ್ ಬಾಕಿ ಹೈ’ ಚಿತ್ರ ಪ್ರದರ್ಶನಕ್ಕೆ ABVP ಅಡ್ಡಿಪಡಿಸಿದ್ದಕ್ಕೆ ಸಿಟ್ಟಾದ. ಗಲ್ಲುಶಿಕ್ಷೆಯನ್ನು ಪ್ರಶ್ನಿಸಿದ. ಒಂದು ರೀತಿಯಲ್ಲಿ, ಮೇಲ್ವರ್ಗದ ಶೋಷಣೆ, ವಿಶ್ವವಿದ್ಯಾಲಯದಲ್ಲಿ ದಲಿತರ ಮೇಲಾಗುತ್ತಿರುವ ಅನ್ಯಾಯದ ವಿರುದ್ಧ ಆತನಲ್ಲಿ ಆವೇಶವೊಂದು ತುಂಬಿಕೊಂಡಿತ್ತು. ಈ ಮಧ್ಯೆ ಆತನ ಸಹಿತ ಇತರ ನಾಲ್ಕು ಮಂದಿ ವಿದ್ಯಾರ್ಥಿಗಳ ಮೇಲೆ ವಿಶ್ವವಿದ್ಯಾಲಯ ‘ಶಿಸ್ತುಕ್ರಮ’ ಕೈ ಗೊಂಡಿತು. ಸುಮಾರು 15 ದಿನಗಳ ಕಾಲ ವಿ.ವಿ.ಯ ಬಯಲಲ್ಲೇ ಮಲಗಿದ. ಈ ‘ಬಯಲುನಿದ್ದೆ’ಗಿಂತ ತಿಂಗಳುಗಳ ಮೊದಲೇ ಉಪಕುಲಪತಿಗಳಿಗೆ ಪತ್ರವನ್ನೂ ಬರೆದಿದ್ದ... ನಿಜವಾಗಿ, ವೇಮುಲ ಆತ್ಮಹತ್ಯೆ ಮಾಡಿಕೊಂಡದ್ದು ದಿಢೀರ್ ಆಗಿ ಅಲ್ಲ. 2015 ಅಗಸ್ಟ್ ನಿಂದಲೇ ವಿ.ವಿ.ಗೂ ವೇಮುಲನಿಗೂ ನಡುವೆ ಯುದ್ಧ ಆರಂಭವಾಗಿತ್ತು. 5 ತಿಂಗಳ ವರೆಗೆ ಈ ಯುದ್ಧ ಮುಂದುವರೆದು ಕೊನೆಗೆ ಆತ ಬದುಕು ಮುಗಿಸಿದ್ದಾನೆ. ಇಷ್ಟಿದ್ದೂ ಇವತ್ತು ಭಾಷಣದ ಮೇಲೆ ಭಾಷಣ ಮಾಡುವ ಮತ್ತು ಪ್ರತಿಭಟನೆಯ ಮೇಲೆ ಪ್ರತಿಭಟನೆ ಹಮ್ಮಿಕೊಳ್ಳುವ ಯಾರೂ, ಯಾವುದೂ ಆ ಸಂದರ್ಭದಲ್ಲಿ ಗಮನಸೆಳೆಯುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರಲಿಲ್ಲವಲ್ಲ, ಏಕೆ? ಆತ ಮತ್ತು ಆತನ ಗೆಳೆಯರನ್ನು ಹಾಗೂ ಅವರ ‘ಬಯಲು ನಿದ್ದೆ’ಯನ್ನು ಮುಂಚಿತವಾಗಿ ಓದಿಕೊಳ್ಳುವ ಸಾಮರ್ಥ್ಯ ಇವತ್ತು ಪ್ರತಿಭಟನೆ ಮಾಡುವ ಯಾರಿಗೂ ಇದ್ದಿರಲಿಲ್ಲವೇ? 5 ತಿಂಗಳ ದೀರ್ಘ ಅವಧಿಯವರೆಗೆ ಐವರು ಹುಡುಗರು ಅತಂತ್ರರಂತೆ ಬದುಕುತ್ತಿರುವುದು ಯಾಕೆ ಯಾವ ಮಾಧ್ಯಮಗಳಿಗೂ ಮುಖ್ಯ ಸುದ್ದಿ ಆಗಲಿಲ್ಲ? ಫೇಸ್‍ಬುಕ್, ವಾಟ್ಸ್ ಆ್ಯಪ್‍ಗಳು ಇರುವೆಯಷ್ಟು ಸಣ್ಣ ಸುದ್ದಿಯನ್ನೂ ಜನರ ಬಳಿಗೆ ತಲುಪಿಸುತ್ತಿರುವ ಈ ಹೊತ್ತಿನಲ್ಲಿ ಈ ಹುಡುಗರು ಬಯಲಲ್ಲೇ ಕಳೆದು ಹೋದುದು ಯಾಕಾಗಿ, ಯಾರಿಂದಾಗಿ? ಹಾಗಂತ, ಅವರು ತೊಡಗಿಸಿಕೊಂಡಿರುವ ಅಂಬೇಡ್ಕರ್ ಸ್ಟುಡೆಂಟ್ ಅಸೋಸಿಯೇಶನ್ (ASA) ಸಂಘಟನೆಯು ವಿ.ವಿ.ಗೆ ಮಾತ್ರ ಸೀಮಿತವಾಗಿರಬಹುದು. ಅಲ್ಲದೇ, ವಿ.ವಿ.ಯ ಮೇಲೆ ಮೇಲ್ವರ್ಗದ ಪ್ರಭಾವಿರುವುದರಿಂದ ಈ ಸಂಘಟನೆಯ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಮೌನಕ್ಕೆ ಶರಣಾಗಿರಬಹುದು. ಅಂದಹಾಗೆ, ಧಮನಿತ ಸಮುದಾಯದ ಮಕ್ಕಳು ಶೋಷಕ ಸಮುದಾಯದ ಮಕ್ಕಳಂತೆ ಅಲ್ಲವಲ್ಲ. ಶೋಷಕ ಸಮುದಾಯದ ಮಕ್ಕಳಲ್ಲಿ ಬಾಲ್ಯದಲ್ಲಿಯೇ ಮೇಲರಿಮೆ ಇರುತ್ತದೆ. ಶೋಷಣೆಯ ಮಾದರಿಗಳನ್ನು ಹಿರಿಯರಿಂದ ಅವು ಕಲಿತಿರುತ್ತವೆ. ಏರು ದನಿಯಲ್ಲಿ ಮಾತನಾಡುವುದಕ್ಕೆ, ಏರಿ ಹೋಗುವುದಕ್ಕೆ ಜನ್ಮಜಾತ ಜೀನ್‍ಗಳನ್ನು ಆ ಮಕ್ಕಳು ಪಡೆದಿರುತ್ತಾರೆ. ಇವರಿಗೆ ಹೋಲಿಸಿದರೆ ದಮನಿತ ಸಮುದಾಯದ ಮಕ್ಕಳು ಒಂದು ಹೆಜ್ಜೆ ಹಿಂದೆ. ಶೋಷಣೆಯನ್ನು ಪ್ರತಿಭಟಿಸದೆಯೇ ಅನುಭವಿಸುವ ಕಲೆ ಅವರಿಗೆ ಜನ್ಮಜಾತವಾಗಿ ಸಿದ್ದಿಸಿರುತ್ತದೆ. ಆದ್ದರಿಂದ ವೇಮುಲ ತೊಡಗಿಸಿ ಕೊಂಡಿರುವ ವಿದ್ಯಾರ್ಥಿ ಸಂಘಟನೆಯ (ASA) ಇತರ ದಲಿತ ವಿದ್ಯಾರ್ಥಿಗಳು ವಿ.ವಿ.ಯ ನಿಲುವನ್ನು ಗಂಭೀರ ತಾರತಮ್ಯವಾಗಿ ಕಂಡಿರುವ ಸಾಧ್ಯತೆ ಒಂದು ಹಂತದವರೆಗೆ ಕಡಿಮೆ. ಆದರೆ, ವಿ.ವಿ.ಯ ಹೊರಗಡೆ ಹತ್ತಾರು ಸಂಘಟನೆಗಳು ಇದ್ದುವಲ್ಲ, ಸ್ಥಾನೀಯ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಸುದ್ದಿ ಮಾಡಬಲ್ಲ ಸಾಮರ್ಥ್ಯವಂತರು ಇದ್ದರಲ್ಲ, ಅವರೆಲ್ಲ ವೇಮುಲ ಸಾಯುವವರೆಗೆ ಕಾದದ್ದೇಕೆ? ‘My birth is my fatal Accident’ ಎಂದು ವೇಮುಲ ತನ್ನ ಮೃತ್ಯು ಪತ್ರದಲ್ಲಿ ಬರೆದಿರುವುದರ ಹಿಂದಿನ ನೋವನ್ನು ಗ್ರಹಿಸಲು ಇವತ್ತು ಸಾಧ್ಯವಿರುವ ನಮಗೆ ತಿಂಗಳ ಹಿಂದೆ ಉಪಕುಲಪತಿಗಳಿಗೆ ಬರೆದ ಪತ್ರದಲ್ಲಿ ‘ಹಗ್ಗ ಕೊಡಿ, ವಿಷಕೊಡಿ’ ಎಂದು ವಿನಂತಿಸಿದ್ದನಲ್ಲ, ಆಗ ಏಕೆ ಅದು ನಮ್ಮ ಸಂವೇದನೆಗೆ ತಟ್ಟಲಿಲ್ಲ? ಹುಡುಗನೊಬ್ಬ ಖಿನ್ನತೆಗೆ ಒಳಗಾಗುತ್ತಿರುವ ಸೂಚನೆಯನ್ನೇಕೆ ಸಂಘಟನೆಗಳು, ನೇತಾರರು ಆ ಪತ್ರದಲ್ಲಿ ಗುರುತಿಸಲಿಲ್ಲ? ನಿಜ, ಬದುಕು ಮತ್ತು ಸಾವು ಒಂದೇ ಅಲ್ಲ. ಸಾವು ಭಾವನಾತ್ಮಕ. ಬದುಕಿರುವಾಗ ಒಂದೇ ಒಂದು ಬಾರಿ ಮಾತಾಡಿಸದ ಮತ್ತು ಸಮಸ್ಯೆಯೇನೆಂದು ಕಾಳಜಿ ತೋರದವನೂ ಆ ವ್ಯಕ್ತಿ ಸತ್ತಾಗ ಮನೆಗೆ ಭೇಟಿ ಕೊಡಬಲ್ಲ, ಕಣ್ಣೀರು ಹಾಕಬಲ್ಲ. ಬೇಕಾದರೆ ಸತ್ತ ವ್ಯಕ್ತಿಯ ಸಮಸ್ಯೆಯನ್ನು ರಾಷ್ಟ್ರಮಟ್ಟಕ್ಕೆ ಒಯ್ಯಬಲ್ಲ. ವೇಮುಲ ಕೂಡ ಈ ಮಟ್ಟದ ನಿರ್ಲಕ್ಷ್ಯಕ್ಕೆ ಒಳಗಾದನೇ? ಹೈದರಾಬಾದ್‍ನಲ್ಲಿ ದಲಿತ-ಬಲಿತ-ಅಲ್ಪಸಂಖ್ಯಾತ ಸಂಘಟನೆಗಳಿಗೇನೂ ಬರವಿಲ್ಲ. ಅಲ್ಲದೇ, ಅತ್ಯಂತ ಪ್ರಗತಿಪರ ಮತ್ತು ಶೋಷಕ ವಿರೋಧಿ ನಿಲುವಿನ ವೇಮುಲ ದಲಿತ, ಪ್ರಗತಿಪರ ಸಂಘಟನೆಗಳಿಗೆ ಅಪರಿಚಿತವಾಗಿರುವುದಕ್ಕೆ ಸಾಧ್ಯವೂ ಇಲ್ಲ. ಇಷ್ಟಿದ್ದೂ ವೇಮುಲನನ್ನು ಉಳಿಸಿಕೊಳ್ಳಲು ಯಾವ ಸಂಘಟನೆಗಳಿಗೂ ಸಾಧ್ಯವಾಗಲಿಲ್ಲವೆಂದರೆ, ಏನರ್ಥ? ಕಳ್ಳರು ಕೊಳ್ಳೆಹೊಡೆದು ಹೋದ ಮೇಲೆ ಪೊಲೀಸರ ಆಗಮನವಾಗುವಂತೆ ದಲಿತರ ವಿಷಯದಲ್ಲೂ ಇವತ್ತು ಆಗುತ್ತಿದೆಯೇ? ಅಂದಹಾಗೆ, ರೈತರು ಈಗಾಗಲೇ ಈ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಜೀವಂತ ರೈತನಿಗಿಂತ ಸತ್ತ ರೈತ ಹೆಚ್ಚು ಬೆಲೆಬಾಳುವ ಹಂತಕ್ಕೆ ಇವತ್ತು ತಲುಪಿದ್ದಾನೆ. ಆರಂಭದಲ್ಲಿ ರೈತ ಆತ್ಮಹತ್ಯೆ ಈ ದೇಶದ ಗದ್ದುಗೆಯನ್ನು ಅಲುಗಾಡಿಸುವಷ್ಟು ಪ್ರಬಲವಾಗಿತ್ತು. ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ತಪ್ಪದೇ ಭೇಟಿ ಕೊಡಬೇಕಾದ ಒತ್ತಡವೊಂದು ರಾಜಕಾರಣಿಗಳ ಮೇಲಿತ್ತು. ಬರಬರುತ್ತಾ ರೈತ ಆತ್ಮಹತ್ಯೆ ಸಾಮಾನ್ಯವಾಗತೊಡಗಿತು. ಕೊನೆಗೆ ಅದು ಎಲ್ಲಿಯವರೆಗೆ ತಲುಪಿತೆಂದರೆ ರೈತರ ಬಗ್ಗೆ ರಾಜಕಾರಣಿಗಳು ಬಿಡಿ, ರೈತ ಸಂಘಟನೆಗಳು ಮಾತಾಡಬೇಕಾದರೂ ರೈತರು ಸಾಯಲೇಬೇಕು ಎಂಬಂಥ ಗಂಭೀರ ಸ್ಥಿತಿಗೆ ತಲುಪಿತು. ಇವತ್ತು ಆರು ತಿಂಗಳಿಗೊಮ್ಮೆಯೋ, ವರ್ಷಕ್ಕೊಮ್ಮೆಯೋ ರೈತ ಆತ್ಮಹತ್ಯೆಯ ಅಂಕಿ ಅಂಶಗಳು ಮಾಧ್ಯಮಗಳಲ್ಲಿ ಪ್ರಕಟವಾಗಿ ಸದ್ದಿಲ್ಲದೇ ಹೋಗುವಲ್ಲಿಗೆ ಆ ಸಾವು ಸಾಮಾನ್ಯವಾಗಿ ಬಿಟ್ಟಿದೆ. ರೈತನು ಅನುಕಂಪದ ವಸ್ತುವಾಗಿದ್ದಾನೆಯೇ ಹೊರತು ಗಂಭೀರ ಸಮಸ್ಯೆಯೊಂದನ್ನು ಪ್ರತಿನಿಧಿಸುವ ವ್ಯಕ್ತಿಯಾಗಿಲ್ಲ. ನಿಜವಾಗಿ, ದಲಿತರಿಗೆ ಹೋಲಿಸಿದರೆ ರೈತರ ಆತ್ಮಹತ್ಯೆಗಳು ತೀರಾ ಹೊಸತು. ಈ ಹೊಸ ಸಮಸ್ಯೆಯೇ ಇಷ್ಟು ಬೇಗ ಸಾಮಾನ್ಯೀಕರಣ ಗೊಂಡಿರುವಾಗ, ಶೋಷಣೆಯ ದೀರ್ಘ ಇತಿಹಾಸವನ್ನು ಹೊಂದಿರುವ ಸಮುದಾಯವೊಂದರ ‘ಕೂಗು’ ಅಸಾಮಾನ್ಯ ಅನ್ನಿಸಿಕೊಳ್ಳುವುದು ಅಸಾಧ್ಯವೇನೋ? ಹಳತು ಬಿಡಿ, ಅಂಬೇಡ್ಕರ್‍ರ ಸಂವಿಧಾನವನ್ನು ಒಪ್ಪಿಕೊಂಡು 7 ದಶಕಗಳಾಗುತ್ತಾ ಬಂದ ಈ ಹೊತ್ತಿನಲ್ಲೂ ಅಂಬೇಡ್ಕರ್ ಅನುಯಾಯಿಗಳು ಸುಖವಾಗಿಲ್ಲ. ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗವು ಬಿಡುಗಡೆಗೊಳಿಸಿದ ವರದಿಯಂತೆ 2014ರಲ್ಲಿ ‘ದಲಿತರ ವಿರುದ್ಧ 47,064 ದೌರ್ಜನ್ಯ ಪ್ರಕರಣಗಳು ನಡೆದಿವೆ. 2013ರಲ್ಲಿ ಇದರ ಸಂಖ್ಯೆ 39,408. ಒಂದೇ ವರ್ಷದ ದೌರ್ಜನ್ಯ ಪ್ರಮಾಣದಲ್ಲಿ 19% ಹೆಚ್ಚಳ. ಕೇಂದ್ರದ ಸಮಾಜ ಕಲ್ಯಾಣ ಇಲಾಖೆಯು ಪಾರ್ಲಿಮೆಂಟಿನಲ್ಲಿ ಮಂಡಿಸಿದ ವರದಿಯ ಪ್ರಕಾರ ದೇಶದಲ್ಲಿ ಪ್ರತಿ 18 ನಿಮಿಷಕ್ಕೊಮ್ಮೆ ಓರ್ವ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಪ್ರತಿದಿನ ಮೂವರು ದಲಿತ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಪ್ರತಿದಿನ ಇಬ್ಬರು ದಲಿತರ ಹತ್ಯೆ ನಡೆಯುತ್ತಿದೆ, ಎರಡು ಗುಡಿಸಲು ಬೆಂಕಿಗಾಹುತಿ ಯಾಗುತ್ತಿದೆ. ಅಂದಹಾಗೆ, ದಲಿತ ದೌರ್ಜನ್ಯ ಪ್ರಕರಣಗಳ ವಿಚಾರಣೆ ನಡೆಸಲು ಪ್ರತ್ಯೇಕ ನ್ಯಾಯಾಲಯ ಮತ್ತು ಪ್ರಾಸಿಕ್ಯೂಶನ್ ಇರಬೇಕೆಂದು ಕಾನೂನೇ ಹೇಳುತ್ತದೆ. ಆದರೆ ಛತ್ತೀಸ್‍ಗಢ್, ಕೇರಳ, ಜಾರ್ಖಂಡ್ ಮತ್ತು ಮಧ್ಯಪ್ರದೇಶ ಗಳನ್ನು ಹೊರತು ಪಡಿಸಿದರೆ ಉಳಿದ ಎಲ್ಲೂ ಅಂಥ ಕೋರ್ಟುಗಳು ಅಸ್ತಿತ್ವ ದಲ್ಲೇ ಇಲ್ಲವೆಂದು 2015 ಮಾರ್ಚ್ 17ರಂದು ಪಾರ್ಲಿಮೆಂಟ್‍ಗೆ ನೀಡಿದ ಮಾಹಿತಿಯಲ್ಲಿ ಕೇಂದ್ರ ಮಂತ್ರಿ ಕೆ.ವಿ. ಥಾಮಸ್ ಹೇಳಿದ್ದರು. ಇತ್ತೀಚೆಗಷ್ಟೇ ಗುಜರಾತ್‍ನ ಪಠಾಣ್ ಜಿಲ್ಲೆಯ ಹಾಜಿಪುರ್ ಗ್ರಾಮದಲ್ಲಿ ದಲಿತ ಮಕ್ಕಳಿಗೆ ಪ್ರತ್ಯೇಕ ಅಂಗನವಾಡಿ ಇರುವುದು ಮಾಧ್ಯಮಗಳಲ್ಲಿ ಸುದ್ದಿಗೀಡಾಗಿತ್ತು. ಗ್ರಾಮದಲ್ಲಿರುವ ಎರಡು ಅಂಗನವಾಡಿಗಳಲ್ಲಿ ಒಂದು ಮೇಲ್ಜಾತಿಗೆ ಮೀಸಲಾಗಿದ್ದು ಅಲ್ಲಿಗೆ ದಲಿತ ಮಗುವೊಂದು ಹೋದದ್ದರಿಂದಾಗಿ ಆದ ರಂಪಾಟವು ಈ ಸುದ್ದಿ ಸ್ಫೋಟವಾಗಲು ಕಾರಣವಾಗಿತ್ತು. ರಾಷ್ಟ್ರೀಯ ಮಾನವ ಹಕ್ಕು ಆಯೋಗವು ಸ್ವಪ್ರೇರಿತವಾಗಿ ಗುಜರಾತ್ ಸರಕಾರಕ್ಕೆ ನೋಟೀಸನ್ನೂ ಜಾರಿಗೊಳಿಸಿತ್ತು. 2010 ಮಾರ್ಚ್ 31ರಂದು ಕೇರಳದ ದಾಖಲಾತಿ ವಿಭಾಗದ ಮುಖ್ಯಸ್ಥ ಹುದ್ದೆಯಿಂದ ಎ.ಕೆ. ರಾಮಕೃಷ್ಣನ್ ನಿವೃತ್ತರಾದರು. ಅದೇ ದಿನ ಸಂಜೆ 6:30 ವೇಳೆಗೆ ಅವರ ಕಚೇರಿಯಲ್ಲಿನ ಕೆಲವು ಉದ್ಯೋಗಿಗಳು ಸೆಗಣಿ ನೀರು ಚಿಮುಕಿಸಿ ಅವರ ಕ್ಯಾಬಿನ್ ಅನ್ನು ಶುದ್ಧ ಮಾಡಿದರು. ರಾಮಕೃಷ್ಣನ್ ಆ ಘಟನೆಯಿಂದ ತೀವ್ರ ನೊಂದುಕೊಂಡರಲ್ಲದೇ ಪರಿಶಿಷ್ಟ ಜಾತಿ ಮತ್ತು ವರ್ಗಗಳ ದೌರ್ಜನ್ಯ ತಡೆ ಕಾಯ್ದೆಯ ಅನ್ವಯ ಕೇಸು ದಾಖಲಿಸಿದರು. ನಿಜವಾಗಿ, ಇಂಥ ಸುದ್ದಿಗಳು ಮಾಧ್ಯಮಗಳನ್ನು ಮತ್ತು ಓದುಗರನ್ನು ಇವತ್ತು ಖಂಡಿತ ಹುಬ್ಬೇರಿಸುತ್ತಿಲ್ಲ. ಒಂದು ಬಗೆಯ ಹೊಂದಿಕೊಳ್ಳುವಿಕೆಯನ್ನು ಇಂಥ ಪ್ರಕರಣಗಳು ಈಗಾಗಲೇ ಈ ದೇಶಕ್ಕೆ ಕಲಿಸಿಕೊಟ್ಟಿವೆ. ಈ ಹಿಂದೆ ದಲಿತರ ಮೇಲಿನ ದೌರ್ಜನ್ಯಕ್ಕೆ ಕಾರಣಗಳನ್ನು ಕೊಡಬೇಕಾಗಿರಲಿಲ್ಲ. ಅವರ ಹುಟ್ಟೇ ಅದಕ್ಕೆ ಪ್ರಬಲ ಕಾರಣವಾಗಿತ್ತು. ಅವರ ನೆರಳು ಅಪರಾಧವಾಗಿತ್ತು. ಅವರನ್ನು ಮುಟ್ಟಿಸಿಕೊಳ್ಳುವುದು ಅವಮಾನ ವಾಗಿತ್ತು. ಅಂಬೇಡ್ಕರ್‍ರ ಸಂವಿಧಾನದಿಂದಾಗಿ ಈ ವಾತಾವರಣ ಬದಲಾಯಿತು. ದೌರ್ಜನ್ಯಕ್ಕೆ ಕಾರಣಗಳನ್ನು ಕೊಡಲೇಬೇಕಾದ ಒತ್ತಡವೊಂದು ಶೋಷಕರ ಎದುರು ಬಂತು. ಆದರೆ ಶತಮಾನಗಳಿಂದ ಶೋಷಿಸಿ ಅನುಭವ ಉಳ್ಳವರಿಗೆ ಕಾರಣಗಳನ್ನು ಉತ್ಪಾದಿಸುವುದು ಕಷ್ಟಕರವಾಗಲು ಸಾಧ್ಯವಿರಲಿಲ್ಲ. ಆದ್ದರಿಂದಲೇ ವೇಮುಲ ರಾಷ್ಟ್ರದ್ರೋಹಿಯಾದ. ಜಾತಿವಾದಿಯಾದ. ದಲಿತರು ಮತ್ತು ಅಲ್ಪಸಂಖ್ಯಾತರನ್ನು ಶೋಷಿಸುವುದಕ್ಕೆ ಮೇಲ್ವರ್ಗ ಸದಾ ಬಳಸುತ್ತಲೇ ಬಂದಿರುವ ಈ ಎರಡು ಅಸ್ತ್ರಗಳು ವೇಮುಲನನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿತು. ಹೀಗೆ ಶೋಷಕರೇ ಶೋಷಿತನ ವಿರುದ್ಧ ಕಾರಣಗಳನ್ನು ಉತ್ಪಾದಿಸಿ ಮಾನಸಿಕವಾಗಿ ಇರಿದರು. ಖಿನ್ನತೆಗೆ ದೂಡಿದರು. ಕೊನೆಗೆ ಆತ್ಮಹತ್ಯೆ ಮಾಡಿಸಿದರು. ದುರಂತ ಏನೆಂದರೆ, ಶೋಷಿತರ ಹಕ್ಕುಗಳ ರಕ್ಷಣೆಗಾಗಿಯೇ ಹುಟ್ಟಿಕೊಂಡ ಸಂಘಟನೆಗಳಾವುವೂ `ರಾಷ್ಟ್ರದ್ರೋಹಿಯಾಗಿ' 15 ದಿನಗಳ ಕಾಲ ಬಯಲಲ್ಲೇ ನಿದ್ದೆ ಮಾಡಿದ ಹುಡುಗನನ್ನು ಎಬ್ಬಿಸಿ, ಧೈರ್ಯ ತುಂಬಿ, ರಾಷ್ಟ್ರದ ಗಮನ ಸೆಳೆಯುವ ಪ್ರಯತ್ನ ನಡೆಸಲೇ ಇಲ್ಲ. ಇದೀಗ ‘ವೇಮುಲ’ ನಾಮಸ್ಮರಣೆ ನಡೆಯುತ್ತಿದೆ. ಬೆರ್ಟೊಲ್ಟ್ ಬ್ರೆಕ್ಟ್, ವ್ಲಾದಿಮೀರ್ ಮಯಕೋವಸ್ಕಿ, ಪೌಲ್ ಸಿಲೆನ್‍ರಿಗೆ ವೇಮುಲನನ್ನು ಹೋಲಿಸಿ ಹುತಾತ್ಮಗೊಳಿಸಲಾಗುತ್ತಿದೆ. ಬಿಡಿ,
  ಗ್ರಹಿಕೆ ಮತ್ತು ಸ್ಪಂದನಾ ಸಾಮರ್ಥ್ಯ ಸತ್ತು ಹೋಗಿರುವ ಸಮಾಜ ಇನ್ನೇನು ತಾನೇ ಮಾಡಬಲ್ಲುದು, ಅಲ್ಲವೇ?


No comments:

Post a Comment