Thursday, May 26, 2016

ಅಂತಕರಣವನ್ನು ಮೀಟುವ 'ಕರೆ'..

      ಬಸ್ ನಿಲ್ದಾಣ. ಅಲ್ಲೇ  ಪಕ್ಕದಲ್ಲಿ ಬಿಳಿ ಟೊಪ್ಪಿ ಧರಿಸಿರುವ ಗಡ್ಡಧಾರಿ ಯುವಕನೊಬ್ಬ ಪತ್ರಿಕೆಗಳನ್ನು ಅಚ್ಚುಕಟ್ಟಾಗಿ ಇಡುತ್ತಿರುತ್ತಾನೆ. ಒಬ್ಬಿಬ್ಬರನ್ನು ಬಿಟ್ಟರೆ ಬಸ್ ನಿಲ್ದಾಣದಲ್ಲಿ ಜನರೇ ಇಲ್ಲ. ಒಂದು ಬಗೆಯ ನೀರವ ಮೌನ. ತುಸು ದೂರದಲ್ಲಿ ಗಟ್ಟಿಮುಟ್ಟಾದ ಯುವಕನೊಬ್ಬ ಮೊಬೈಲ್‍ನಲ್ಲಿ ಬಿಝಿಯಾಗಿದ್ದಾನೆ. ಕಿವಿಗಳನ್ನು ಇಯರ್‍ಫೋನ್ ಮುತ್ತಿಕೊಂಡಿದೆ. ಆತನ ಹಾವಭಾವ, ಉಡುಗೆ-ತೊಡುಗೆ, ನಡಿಗೆಯ ಶೈಲಿ, ಬ್ಯಾಗು.. ಎಲ್ಲವೂ ಆತನನ್ನು ಓರ್ವ ವಿದ್ಯಾವಂತ ಯುವಕನಂತೆ ತೋರಿಸುತ್ತಿದೆ. ಅದೇ ವೇಳೆ, ಓರ್ವ ಮಧ್ಯ ವಯಸ್ಕ ಬೈಕ್‍ನಲ್ಲಿ ಬರುತ್ತಾನೆ. ಬೈಕನ್ನು ಒಂದು ಕಡೆ ನಿಲ್ಲಿಸಿ ಜೇಬಿನಿಂದ ಮೊಬೈಲ್ ಎತ್ತಿ ಕರೆ ಸ್ವೀಕರಿಸುತ್ತಾನೆ. ಆದರೆ, ಕರೆ ಸರಿಯಾಗಿ ಕೇಳಿಸುವುದಿಲ್ಲ. ಮೊಬೈಲ್  ಕೈಕೊಟ್ಟಿದೆ ಎಂದು ಆತನಿಗೆ ಸ್ಪಷ್ಟವಾಗುತ್ತದೆ. ಬಹುಶಃ ಚಾರ್ಜ್ ಮುಗಿದಿರಬೇಕು. ಆತ ಆ ವಿದ್ಯಾವಂತ ಯುವಕನ ಬಳಿ ಸಾಗಿ ಒಮ್ಮೆ ಮೊಬೈಲ್ ಕೊಡಬಹುದಾ, ತುರ್ತು ಕರೆ ಮಾಡಬೇಕಿತ್ತು.. ಎಂದು ವಿನಂತಿಸುತ್ತಾನೆ. ಯುವಕ ಕಿವಿಯಿಂದ ವಯರ್ ಅನ್ನು ಕಿತ್ತು ಏನು ಎಂಬಂತೆ ಒಂದು ಬಗೆಯ ತಿರಸ್ಕಾರ ಭಾವದಿಂದ ಪ್ರಶ್ನಿಸುತ್ತಾನೆ. ‘ಹೋಗಯ್ಯ, ಜಮಾನಾ ಖರಾಬ್ ಸಾಬ್..' ಎಂದು ನಿರಾಕರಿಸುತ್ತಾನೆ. ಮಧ್ಯವಯಸ್ಕ ಮೊಬೈಲ್‍ಗಾಗಿ ಬಸ್ ನಿಲ್ದಾಣದಲ್ಲಿರುವವರಲ್ಲಿ ವಿನಂತಿಸುತ್ತಾ ಹೋಗುತ್ತಾನೆ. ಯಾರೂ ಕೊಡಲ್ಲ. ಆತನಿಗೆ ತೀವ್ರ ನಿರಾಶೆಯಾಗುತ್ತದೆ. ಮುಖದಲ್ಲಿ ದುಃಖದ ಕಡಲು. ಏನೂ ತೋಚದಂತಾಗಿ ಆತ ಮಂಜಾದ ಕಣ್ಣಿನೊಂದಿಗೆ ಬಸ್ ನಿಲ್ದಾಣದಲ್ಲಿ ಕೂರುತ್ತಾನೆ. ಇದೇ ವೇಳೆ ಇವೆಲ್ಲವನ್ನೂ ವೀಕ್ಷಿಸುತ್ತಿದ್ದ ಗಡ್ಡಧಾರಿ ಪತ್ರಿಕಾ ಮಾರಾಟಗಾರ ಯುವಕ ಆತನ ಬಳಿ ಸಾಗಿ ಮೊಬೈಲ್ ಕೊಡುತ್ತಾನೆ. ಆತ ಅತೀವ ತುರ್ತಿನೊಂದಿಗೆ ಮೊಬೈಲ್ ಸ್ವೀಕರಿಸಿ ಕರೆ ಮಾಡುತ್ತಾನೆ. ‘ಹೇಳು ಪ್ರಿಯಾ, ಏನಾಯ್ತು...' ಎಂದು ಕೇಳುತ್ತಾನೆ. ಬಳಿಕ ನಿಧಾನಕ್ಕೆ ಕಣ್ಣೀರು ಹರಿಯತೊಡಗುತ್ತದೆ. ಮಾತು ತಡ ವರಿಸುತ್ತದೆ. ಈ ಮೊದಲು ಮೊಬೈಲ್ ಕೊಡಲು ನಿರಾಕರಿಸಿದವರು ಹತ್ತಿರ ಬರುತ್ತಾರೆ. ಕಣ್ಣೀರಿನ ಕಾರಣಗಳನ್ನು ಕೇಳುತ್ತಾರೆ. ಆದರೆ ಆತನಿಗಾದರೋ ಬಾಯಿ ಕಟ್ಟಿರುವಷ್ಟು ದುಃಖ. ತನ್ನ ಮಗಳು ಮನೆಯ ಮಾಡಿನಿಂದ ಬಿದ್ದದ್ದು, ಕೊನೆಯುಸಿರಿಗಿಂತ ಮೊದಲು ತಂದೆಯೊಂದಿಗೆ ಮಾತಾಡಬೇಕೆಂದು ಬಯಸಿದ್ದು ಹಾಗೂ ಹಾಗೇ ಮಾತಾಡುವ ಸಂದರ್ಭದಲ್ಲೇ ತನ್ನ ಮೊಬೈಲ್ ಕೈ ಕೊಟ್ಟಿದ್ದು.. ಆತ ಹೇಳುತ್ತಾ ಹೋಗುವಾಗ ಸುತ್ತಲಿನವರ ಹೃದಯಕ್ಕೆ ಚುಚ್ಚಿದ ಅನುಭವವಾಗುತ್ತದೆ. ಒಂದು ವೇಳೆ, ನೀವು ನನಗೆ ಮೊಬೈಲ್ ಕೊಡುತ್ತಿದ್ದರೆ ಮಗಳೊಂದಿಗೆ ಕೊನೆಯ ಬಾರಿ ಮಾತಾಡುತ್ತಿದ್ದೆ, ಆಕೆಯ ಕಟ್ಟಕಡೆಯ ಆಸೆಯನ್ನು ಪೂರೈಸುತ್ತಿದ್ದೆ.. ಅನ್ನುತ್ತಾ ಬಿಕ್ಕುತ್ತಾನೆ. ಸುತ್ತಲೂ ಮೌನ ಆವರಿಸುತ್ತದೆ.
 ಗೆಳೆಯ ಶೌಕತ್ ಅಲಿ ಅವರು ನಿರ್ದೇಶಿಸಿರುವ ನಾಲ್ಕು ನಿಮಿಷಗಳ ‘Only One Cal  Plz..' (ಒಂದೇ ಒಂದು ಕರೆ -ದಯವಿಟ್ಟು) ಎಂಬ ಈ ಕಿರುಚಿತ್ರ ಇಷ್ಟವಾಗುವುದು ಮಾನವ ಸಂಬಂಧಗಳ ಕುರಿತಾದ ಅದರ ಕಳಕಳಿಯಿಂದಾಗಿ.. ಮನುಷ್ಯನಿಗೆ ಮನುಷ್ಯನ ಮೇಲೆ ಇರುವಷ್ಟು ಅಪನಂಬಿಕೆ ಇವತ್ತು ಯಂತ್ರಗಳ ಮೇಲೂ ಇರದಷ್ಟು ಈ ಕ್ಷೇತ್ರ ಹದಗೆಟ್ಟು ಹೋಗುತ್ತಿದೆ. ಇವತ್ತು ಟೊಪ್ಪಿ ಧರಿಸಿದ ಗಡ್ಡಧಾರಿ ವ್ಯಕ್ತಿಯನ್ನು ಅಥವಾ ಉದ್ದ ನಾಮ ಹಾಕಿದ ಮತ್ತು ಕೈಯಲ್ಲಿ ಕೇಸರಿ ನೂಲುಗಳನ್ನು ಧರಿಸಿರುವ ವ್ಯಕ್ತಿಯನ್ನು ಇಲ್ಲವೇ ಬುರ್ಖಾ ಅಥವಾ ಕೇಸರಿ ಉಡುಪು ಧರಿಸಿರುವವರನ್ನು ಅನೇಕರು ನೋಡುವುದೇ ಅನುಮಾನದ ಕಣ್ಣಿನಿಂದ. ಒಂದು ಕಡೆ ಬುರ್ಖಾ, ಗಡ್ಡ, ಟೊಪ್ಪಿ, ನೂಲು, ಕೇಸರಿ ಉಡುಪು.. ಮುಂತಾದ ಧಾರ್ಮಿಕ ಎನ್ನಬಹುದಾದ ಕುರುಹುಗಳು. ಇನ್ನೊಂದು ಕಡೆ, ಇವೇ ಕುರುಹುಗಳು ಮನುಷ್ಯರನ್ನು ಪ್ರತ್ಯೇಕಿಸುವ ಸಂಕೇತ ಗಳೂ ಆಗುತ್ತಿವೆ. ಇದಕ್ಕಿರುವ ಕಾರಣಗಳು ಏನು? ಈ ಕಿರುಚಿತ್ರದಲ್ಲಿರುವ ಮಧ್ಯ ವಯಸ್ಕ ವ್ಯಕ್ತಿಯಲ್ಲೂ ಈ ಮನೋಭಾವ ಅಸ್ಪಷ್ಟವಾಗಿ ಕಾಣಿಸುತ್ತದೆ. ಆತ ಒಂದು ಕರೆಗಾಗಿ ಎಲ್ಲರನ್ನೂ ಸಂಪರ್ಕಿಸುತ್ತಾನೆ. ಆದರೆ ಟೊಪ್ಪಿಧಾರಿ ಅಲ್ಲೇ ಇದ್ದರೂ ಸಂಪರ್ಕಿಸುವುದಿಲ್ಲ. ಆದರೆ ಅಂತಿಮವಾಗಿ ಮಧ್ಯ ವಯಸ್ಕನ  ಮೇಲೆ ವಿಶ್ವಾಸವಿಟ್ಟು ಮೊಬೈಲ್ ಕೊಡುವುದು ಆ ಪತ್ರಿಕಾ ಮಾರಾಟಗಾರನೇ. ಅಂತಃಕರಣ ಒಣಗಿ ಹೋಗಿರುವ ಆಧುನಿಕ ಜಗತ್ತಿನ ಮನುಷ್ಯರ ಕುರಿತಂತೆ ಈ ಕಿರುಚಿತ್ರ ಮತ್ತೆ ಮತ್ತೆ ಎಚ್ಚರಿಸುತ್ತದೆ. ನಿಜವಾಗಿ, ಆ ಮಧ್ಯ ವಯಸ್ಕನಿಗಿಂತಲೂ ನಮ್ಮನ್ನು ಕಾಡಬೇಕಾದ ಪಾತ್ರ ಆ ಟೊಪ್ಪಿಧಾರಿ ಯುವಕನದ್ದು. ಆತ ಮನುಷ್ಯ ಸಂಬಂಧದ ಗಿಲೀಟುತನವನ್ನು ಬಿಚ್ಚಿಡುತ್ತಾನೆ. ಒಂದಿಡೀ ಕರುಣಕತೆಗೆ ಸಾಕ್ಷಿಯಾಗುತ್ತಾನೆ. ವೇಷ-ಭೂಷಣಗಳ ಆಧಾರದಲ್ಲಿ ನಿರ್ಮಿತವಾಗಿರುವ ಮಾನವ ಸಂಬಂಧಗಳ ಪೊಳ್ಳುತನವನ್ನು ಪ್ರಶ್ನಿಸುತ್ತಾನೆ. ಆದ್ದರಿಂದಲೇ, ಆತ ಕೊಡುವ ಮೊಬೈಲ್ ಬರೇ ಕರೆಗಾಗಿರುವ ಒಂದು ಸಂಪರ್ಕ ಸಾಧನವಾಗಿಯಷ್ಟೇ ಕಾಣುವುದಿಲ್ಲ, ಬದಲಾಗಿ ಪ್ರಚಲಿತ ಜಗತ್ತಿಗೆ ಹಿಡಿಯುವ ಭೂತಗನ್ನಡಿಯಾಗಿಯೂ ಗೋಚರಿಸುತ್ತದೆ..
 ತಮಾಷೆ ಏನೆಂದರೆ, ಆಧುನಿಕ ತಂತ್ರಜ್ಞಾನಗಳು ಮನುಷ್ಯರನ್ನು ಹತ್ತಿರವಿದ್ದೂ ದೂರಗೊಳಿಸುತ್ತವೆ ಎಂಬುದನ್ನು ಹೇಳುವುದಕ್ಕೆ ಇವತ್ತು ಬಳಕೆಯಾಗುತ್ತಿರುವ ಮಾಧ್ಯಮವೂ ಆಧುನಿಕ ತಂತ್ರಜ್ಞಾನಗಳೇ ಎಂಬುದು. ಕಿರುಚಿತ್ರಗಳು ಇವತ್ತು ಎಷ್ಟು ಪ್ರಭಾವಶಾಲಿ ಮಾಧ್ಯಮವೆಂದರೆ, ಮೂರು ಗಂಟೆಯ ಸಿನಿಮಾ ಹೇಳುವುದಕ್ಕಿಂತಲೂ ಹೆಚ್ಚಿನದನ್ನು ನಾಲ್ಕೈದು ನಿಮಿಷಗಳ ಕಿರುಚಿತ್ರಗಳು ಅತ್ಯಂತ ಪರಿಣಾಮಕಾರಿಯಾಗಿ ಹೇಳಿಬಿಡುತ್ತವೆ. ಸಿನಿಮಾಗಳಿಗಾದರೋ ಕೋಟ್ಯಂತರ ರೂಪಾಯಿಗಳ ಬಜೆಟ್ ಬೇಕು. ಹೀರೋ ಬೇಕು. ಹೀರೋಯಿನ್ ಬೇಕು. ವಿಲನ್ ಬೇಕು. ಹಾಡು, ಕುಣಿತ, ಫೈಟು, ನಗು, ರೋಮ್ಯಾನ್ಸ್, ದೃಶ್ಯ ವೈಭವ ಮುಂತಾಗಿ ಎಲ್ಲವೂ ಬೇಕು. ಸೆಕೆಂಡ್‍ಗಳಲ್ಲಿ ತೀರಾ ಮನಮುಟ್ಟುವಂತೆ ಹೇಳಬಹುದಾದುದನ್ನು ನಿಮಿಷಗಳ ವರೆಗೆ ಎಳೆದಾಡಬೇಕಾದ ಅನಿವಾರ್ಯತೆಯೊಂದು ಅಲ್ಲಿರುತ್ತದೆ. ಅದೊಂದು ಭಿನ್ನ ಕ್ಷೇತ್ರ. ಅದಕ್ಕೆ ಹೋಲಿಸಿದರೆ ಕಿರುಚಿತ್ರಗಳ ಜಗತ್ತಿನ ಸೊಗಸೇ ಬೇರೆ. ಇಲ್ಲಿ ಪಾತ್ರಗಳ ವೈಭವೀಕರಣ ಇಲ್ಲ. ಎಲಾಸ್ಟಿಕ್ ನೀತಿಗೆ ಸಮಯವೂ ಇಲ್ಲ. ವಿಲನ್, ಹೀರೋ, ಹೀರೋಯಿನ್, ಹಾಡು ಯಾವುದರ ಅಗತ್ಯವೂ ಇಲ್ಲದೇ ನೇರಾತಿನೇರವಾಗಿ ಕೆಲವೇ ನಿಮಿಷಗಳಲ್ಲಿ ವಿಷಯವನ್ನು ಮಂಡಿಸುವ ವಿಧಾನ ವೀಕ್ಷಕರನ್ನು ಬೇಗನೇ ತಟ್ಟುತ್ತದೆ. ಒಂದು ಸಣ್ಣ ಕಿರುಚಿತ್ರ ದೊಡ್ಡ ಬಜೆಟ್ಟಿನ ಸಿನಿಮಾಗಿಂತಲೂ ಪ್ರಭಾವಶಾಲಿಯಾಗಬಹುದಾದ ಎಲ್ಲ ಸಾಧ್ಯತೆಗಳೂ ಇವೆ. 19 ವರ್ಷದ ಗುಲ್‍ಮೆಹರ್ ಕೌರ್ ಎಂಬ ಯುವತಿಯ ಕಿರುಚಿತ್ರವನ್ನು ಈ ನಿಟ್ಟಿನಲ್ಲಿ  ಉಲ್ಲೇಖಿಸಬಹುದು. ಈಕೆ ಪಂಜಾಬ್‍ನ ಜಾಲಂಧರ್ ನವಳು. ಈ ಯುವತಿಯ ಬದುಕಿಗೊಂದು ನೋವಿನ ಹಿನ್ನಲೆಯಿದೆ. 1999ರ ಕಾರ್ಗಿಲ್ ಸಮರದಲ್ಲಿ ಈಕೆಯ ತಂದೆ ಕ್ಯಾಪ್ಟನ್ ಮನ್‍ದೀಪ್ ಸಿಂಗ್ ಸಾವಿಗೀಡಾದರು. ಆ ಘಟನೆ ಗುರ್‍ಮೆಹರ್‍ಳ ಮೇಲೆ ತೀವ್ರ ಪರಿಣಾಮವನ್ನು ಬೀರಿತು. ಆಕೆ 6 ವರ್ಷದವಳಿದ್ದಾಗ ಓರ್ವ ಬುರ್ಖಾಧಾರಿಗೆ ಇರಿಯಲು ಯತ್ನಿಸಿದಳು. ಯಾಕೆ ಹಾಗೆ ಮಾಡಿದಳೆಂದರೆ, ತನ್ನ ತಂದೆಯನ್ನು ಹತ್ಯೆ ಮಾಡಿದವರು ಮುಸ್ಲಿಮರು ಎಂಬ ಕಾರಣದಿಂದ. ಎಲ್ಲ ಮುಸ್ಲಿಮರನ್ನು ಆಕೆ ದ್ವೇಷಿಸುತ್ತಿದ್ದಳು. ಆದರೆ ತಾಯಿ ತಿದ್ದಿದರು. ಕ್ರಮೇಣ ಗುರ್‍ಮೆಹರ್ ಕೌರ್ ಎಲ್ಲವನ್ನೂ ತೆರೆದ ಮನಸ್ಸಿನಿಂದ ನೋಡತೊಡಗಿದಳು. ತಾನು ದ್ವೇಷಿಸಬೇಕಾದದ್ದು ಪಾಕಿಸ್ತಾನವನ್ನಲ್ಲ, ಯುದ್ಧವನ್ನು ಎಂಬುದಾಗಿ ತಿಳಿದುಕೊಂಡಳು. ಎರಡು ವಿಶ್ವ ಯುದ್ಧಗಳಲ್ಲಿ ವೈರಿಗಳಾಗಿ ಸೆಣಸಾಡಿದ ಜರ್ಮನಿ ಮತ್ತು ಫ್ರಾನ್ಸ್ ಗಳು ಇವತ್ತು ಗೆಳೆಯರಾಗಿ ಬದುಕಬಹುದಾದರೆ ಭಾರತ ಮತ್ತು ಪಾಕಿಸ್ತಾನಗಳಿಗೇಕೆ ಇದು ಸಾಧ್ಯವಿಲ್ಲ ಎಂಬುದು ಆಕೆಯ ಪ್ರಶ್ನೆ. ತನ್ನ ಮೇಲೆ ಎರಡು ಅಣುಬಾಂಬ್‍ಗಳನ್ನು ಸುರಿಸಿದ ಹೊರತಾಗಿಯೂ ಅಮೇರಿಕದೊಂದಿಗೆ ಜಪಾನ್ ಸೌಹಾರ್ದ ಸಂಬಂಧ ಬೆಳೆಸಬಹುದಾದರೆ ನಮಗೇಕೆ ಅಸಾಧ್ಯ ಎಂದು ಪ್ರಶ್ನಿಸುತ್ತಾಳೆ ಆಕೆ. ‘ಸಾಕು ಮಾಡಿ ದ್ವೇಷವನ್ನು, ಸರಕಾರಿ ಭಯೋತ್ಪಾದನೆಯನ್ನು ಮತ್ತು ಗಡಿಯಲ್ಲಿನ ಸಾವನ್ನು..’ ಹೀಗೆ ಆ ಯುವತಿ ಕಿರುಚಿತ್ರದಲ್ಲಿ ಆಕ್ರೋಶಿಸುತ್ತಾಳೆ. ‘#Profileforpeace’ ಎಂಬ ಹೆಸರಿನ ಈ ಪುಟ್ಟ ಕಿರುಚಿತ್ರದ ವಿಶೇಷತೆ ಏನೆಂದರೆ, ಇದರಲ್ಲಿ ಮಾತುಗಳೇ ಇಲ್ಲ. ಎಲ್ಲವೂ ಮೌನ. ಆಕೆ ಇವೆಲ್ಲವನ್ನೂ ಹೇಳುವುದಕ್ಕೆ Placardಗಳನ್ನಷ್ಟೇ ಬಳಸುತ್ತಾಳೆ. ಸುಮಾರು 30ರಷ್ಟು ಪ್ಲಕಾರ್ಡ್‍ಗಳು ಈ ಇಡೀ ವಿಷಯವನ್ನು ಪುಟ್ಟಪುಟ್ಟದಾಗಿ ವಿವರಿಸುತ್ತವೆ. ಕುರ್ಚಿಯಲ್ಲಿ ಕೂತು ಒಂದೊಂದೇ ಪ್ಲಕಾರ್ಡನ್ನು ಎತ್ತಿ ತೋರಿಸಿ, ಪಕ್ಕಕ್ಕಿಟ್ಟು ಇನ್ನೊಂದನ್ನು ಎತ್ತಿಕೊಳ್ಳುವ ಆಕೆ ಕೊನೆಯದಾಗಿ ಎದ್ದು ಹೋಗುವಾಗ ಸ್ಕ್ರೀನ್‍ನಲ್ಲಿ, ‘ನೀವು ಶಾಂತಿಯನ್ನು ಬಯಸುವಿರಾದರೆ ಇದನ್ನು ಶೇರ್ ಮಾಡಿ..’ ಎಂಬೊಂದು ವಾಕ್ಯ ಹರಿದಾಡುತ್ತದೆ. ಖಾಲಿ ಕುರ್ಚಿ ಮತ್ತು 30 ಪ್ಲಕಾರ್ಡ್‍ಗಳ ಭಾರವನ್ನು ಹೊತ್ತುಕೊಂಡ ಮೇಜು ಆ ಯುವತಿಯ ಅನುಪಸ್ಥಿತಿಯಲ್ಲೂ ನಮ್ಮನ್ನು ತೀವ್ರವಾಗಿ ಕಾಡುತ್ತದೆ. ಅಂದಹಾಗೆ, ಶಾಂತಿ ಮತ್ತು ದ್ವೇಷದ ಪಾಠವನ್ನು ಓರ್ವ ಯೋಧನ ಕುಟುಂಬಕ್ಕಿಂತ ಚೆನ್ನಾಗಿ ಯಾರೂ ಮಾಡಲಾರರು. ಯಾಕೆಂದರೆ, ಗಡಿಯಲ್ಲಿ ರಾಜಕಾರಣಿಗಳಿರುವುದಿಲ್ಲ. ಅವರ ಮಕ್ಕಳೂ ಇರುವುದಿಲ್ಲ. ‘ಗಡಿಯಲ್ಲಿ ಅಪ್ರಚೋದಿತ ಗುಂಡು’, ‘ಒಳನುಸುಳುವಿಕೆ’, ‘ಯುದ್ಧ’, ‘ಉಗ್ರ ಕಾರ್ಯಾಚರಣೆ..’ ಎಂಬೆಲ್ಲ ಪದಪುಂಜಗಳಲ್ಲಿ ಸುದ್ದಿಯನ್ನು ಕಟ್ಟಿಕೊಡುವ ಪತ್ರಕರ್ತರೂ ಗಡಿಯಲ್ಲಿ ಕಾದಾಡಿರುವುದಿಲ್ಲ. ಆದ್ದರಿಂದಲೇ, ಗುರ್‍ಮೆಹರ್ ಕೌರ್‍ಳ ಕಿರುಚಿತ್ರ ಹೃದಯವನ್ನು ತಟ್ಟುವುದು. ಫೇಸ್‍ಬುಕ್‍ನಲ್ಲಿ ಈ ಕಿರುಚಿತ್ರವನ್ನು ಮಿಲಿಯಾಂತರ ಮಂದಿ ವೀಕ್ಷಿಸಿದರು. ಕೌರ್‍ಳನ್ನು ಬೆಂಬಲಿಸಿದರು. ಎರಡೂ ದೇಶಗಳ ರಾಜಕಾರಣಿಗಳಿಗಾಗಿ ಜೀವ ತೆರುತ್ತಿರುವ ಮನ್‍ದೀಪ್ ಸಿಂಗ್‍ರಂಥ ಅಪ್ಪಂದಿರಿಗಾಗಿ ಮತ್ತು ಗುರ್‍ಮೆಹರ್ ಕೌರ್‍ಳಂಥ ಮಕ್ಕಳಿಗಾಗಿ ದುಃಖಪಟ್ಟರು. 
Only One Cal  Plz.
       ನಿಜವಾಗಿ, ಮನುಷ್ಯರನ್ನು ದೂರಗೊಳಿಸುತ್ತಿರುವುದು ಆಧುನಿಕ ತಂತ್ರಜ್ಞಾನಗಳಲ್ಲ. ಅವು ಮನುಷ್ಯ ವಿರೋಧಿಗಳೂ ಅಲ್ಲ. ‘Mother asked why she didnt have abortion - answer touches hearts of her critics ..’ ಎಂಬ ಹೃದ್ಯ ಕಿರುಚಿತ್ರವನ್ನು ಸಾಧ್ಯವಾಗಿಸಿದ್ದು ಇವೇ ತಂತ್ರಜ್ಞಾನಗಳು. ನೀವು ಕಿರುಚಿತ್ರಗಳ ಜಗತ್ತಿಗೊಮ್ಮೆ ಪ್ರವೇಶಿಸಿದರೆ ಹೃದಯವನ್ನು ಕಣ್ಣೀರಿನಲ್ಲಿ ಅದ್ದಿ ತೆಗೆಯಬಲ್ಲಷ್ಟು ಪ್ರಖರವಾದ ದೃಶ್ಯಗಳಿವೆ. ಹುಟ್ಟುವಾಗಲೇ ಎರಡೂ ಕಣ್ಣು ಕಾಣದ ಮತ್ತು ಕಣ್ಣಿನ ಭಾಗ ಭಯಪಡುವಷ್ಟು ವಿಕಾರವಾಗಿರುವ ಮಗುವನ್ನು ಅಕ್ಕರೆಯಿಂದ ಪೋಷಿಸುವ ಕ್ರಿಸ್ ಬುಕಾನನ್ ಮತ್ತು ಲೇಸಿ ಬುಕಾನನ್ ಎಂಬ ಹೆತ್ತವರನ್ನು ನೋಡಿದರೆ ನೀವು ಮೂಕರಾಗುವಿರಿ. ಇಂಥ ಅಸಂಖ್ಯ ಕಿರು ಚಿತ್ರಗಳು ಇವತ್ತು ಆಧುನಿಕ ತಂತ್ರಜ್ಞಾನಗಳಿಂದಾಗಿ ವೀಕ್ಷಕರಿಗೆ ಲಭ್ಯವಾಗುತ್ತಿವೆ. ಮಾತ್ರವಲ್ಲ, ನಮ್ಮೊಳಗಿನ ಸರ್ವ ಕಲ್ಮಷಗಳಿಗೂ ಒಂದೇಟು ಕೊಟ್ಟು ನಡುಗಿಸುವ ಸಾಮರ್ಥ್ಯವನ್ನೂ ಅವು ಹೊಂದಿವೆ. ದಿನೇ ದಿನೇ ಯಂತ್ರಕ್ಕೆ ಹತ್ತಿರವಾಗುತ್ತಿರುವ ಮತ್ತು ಹಣವನ್ನು ಬೆಂಬತ್ತುವ ತುರ್ತಿನಲ್ಲಿ ಪಕ್ಕದಲ್ಲಿರುವವರನ್ನೂ ಗುರುತಿಸದಷ್ಟು ಬ್ಯುಝಿಯಾಗಿರುವ ಮನುಷ್ಯ ತಾನೆಲ್ಲಿ ಕಳೆದು ಹೋಗುತ್ತಿದ್ದೇನೆ ಎಂಬ ಬಗ್ಗೆ ಅವಲೋಕನ ನಡೆಸಬೇಕು. ತಂತ್ರಜ್ಞಾನಗಳನ್ನು ದೂರುವುದು ಇದಕ್ಕೆ ಉತ್ತರವಲ್ಲ. ಮನುಷ್ಯರ ನಡುವೆ ನಂಬಿಕೆ ಮತ್ತು ವಿಶ್ವಾಸ ಬಹಳ ಪವಿತ್ರವಾದುದು. ಅದಕ್ಕೆ ಧಕ್ಕೆಯಾಗದಂಥ ವಾತಾವರಣವನ್ನು ಎಲ್ಲರೂ ಸೇರಿ ಬೆಳೆಸಬೇಕು. ಈ ಕಾರಣದಿಂದಲೇ,
 ‘Only One Cal  Plz..' ಮತ್ತು  #Profileforpeace ಕಿರುಚಿತ್ರಗಳು ಮುಖ್ಯವಾಗುತ್ತವೆ.

Wednesday, May 18, 2016

ನೇಣಿಗೆ ಅರ್ಹರಾದವರೆಲ್ಲ ವಿರೋಧ ಪಕ್ಷಗಳಲ್ಲೇ ಏಕಿದ್ದಾರೆ ಬೇಗಂ?

        ಡಾ| ಚಂದ್ರ ಮುಝಫ್ಫರ್
 ತಲ್ಹಾ ಅಹ್ಮದ್ 
        ರೋನಕ್ ದೇಸಾಯಿ
 ಇವರೆಲ್ಲ ಬಾಂಗ್ಲಾದೇಶದ ಪ್ರಧಾನಿ ಬೇಗಮ್ ಹಸೀನಾರಂತೆ ಅಪ್ಪಟ ಪ್ರಗತಿಪರರು ಮತ್ತು ಹಸೀನಾರ ಭಾಷೆಯಲ್ಲಿ ಹೇಳುವುದಾದರೆ ‘ಮೂಲಭೂತವಾದಿ' ಮುಸ್ಲಿಮರಲ್ಲ. ಆದರೂ ಇವರೆಲ್ಲ ಬಾಂಗ್ಲಾ ದೇಶದ ಯುದ್ಧಾಪರಾಧಿ ನ್ಯಾಯ ಪ್ರಕ್ರಿಯೆಯ ಬಗ್ಗೆ ತಮ್ಮ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲಿನ ‘ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯ’(International Crime Tribunal - ICT)ದ ನ್ಯಾಯ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಿದ್ದಾರೆ. ಈ ನ್ಯಾಯಾಲಯಕ್ಕೆ ಸಂಬಂಧಿಸಿ ಕತೆ-ಚಿತ್ರಕತೆ, ನಿರ್ದೇಶನ, ನಿರ್ಮಾಣ.. ಎಲ್ಲವನ್ನೂ ಹಸೀನಾರೇ ನಿರ್ವಹಿಸುತ್ತಿರುವರೇನೋ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಹಾಗಂತ, ಇವರೇನೂ ಬಾಂಗ್ಲಾದೇಶದ ಜಮಾಅತೆ ಇಸ್ಲಾಮೀ ಅಥವಾ ವಿರೋಧ ಪಕ್ಷವಾದ ಖಲೀದಾ ಝಿಯಾರ ಬಂಗ್ಲಾದೇಶ್ ನ್ಯಾಶನಲಿಸ್ಟ್ ಪಾರ್ಟಿಯ ಕಾರ್ಯಕರ್ತರಲ್ಲ. ಮಲೇಶ್ಯ ಕೇಂದ್ರಿತ ಇಂಟರ್‍ನ್ಯಾಶನಲ್ ಮೂವ್‍ಮೆಂಟ್ ಫಾರ್ ಎ ಜಸ್ಟ್ ವರ್ಲ್ಡ್ ಎಂಬ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ| ಚಂದ್ರ ಮುಝಫ್ಫರ್ ಅವರು, ‘ನಿಝಾಮಿಯವರ ಗಲ್ಲು ಮತ್ತು ರಾಜಕೀಯದ ಮೇಲಿನ ಹಿಡಿತ' (The Hanging of Nizami and grip on Political Power) ಎಂಬ ಶೀರ್ಷಿಕೆಯಲ್ಲಿ ಕಳೆದ ವಾರ ಲೇಖನ ಬರೆದಿದ್ದಾರೆ. ಮುಸ್ಲಿಮ್ ಕೌನ್ಸಿಲ್ ಆಫ್ ಬ್ರಿಟನ್‍ನ ಸಂಚಾಲಕ ಹಾಗೂ ನ್ಯಾಯವಾದಿ, ಉಪನ್ಯಾಸಕರೂ ಆಗಿರುವ ತಲ್ಹಾ ಅಹ್ಮದ್ ಅವರು, The Politicalisation of Bangladesh's War Criminal Tribunal (ಬಾಂಗ್ಲಾದೇಶದ ಯುದ್ಧಾಪರಾಧಿ ನ್ಯಾಯಾಲಯದ ರಾಜಕೀಕರಣ) ಎಂಬ ಶೀರ್ಷಿಕೆಯಲ್ಲಿ ಮತ್ತು ಹಾರ್ವರ್ಡ್ ಯುನಿವರ್ಸಿಟಿಯ ರೋನಕ್ ದೇಸಾಯಿಯವರು,A Justice Denied as Bangladesh Prosecutes War Crime ಎಂಬ ಹೆಸರಲ್ಲಿ ಲೇಖನಗಳನ್ನು ಬರೆದಿದ್ದಾರೆ. ‘ನ್ಯಾಯದ ಹೊರತು ಶಾಂತಿಯಿಲ್ಲ' (No Peace without Justice ) ಎಂಬ ಹೆಸರಿನ ಇಟಲಿಯ ರಾಜಕೀಯೇತರ ಸಂಸ್ಥೆಯೊಂದು ಬಾಂಗ್ಲಾದೇಶದ ಯುದ್ಧಾಪರಾಧಿ ನ್ಯಾಯಾಲಯ ವನ್ನು ತೀವ್ರವಾಗಿ ಖಂಡಿಸಿದೆ. ‘ಅದರ ತೀರ್ಪುಗಳು ರಾಜಕೀಯ ಪ್ರೇರಿತ ಮತ್ತು ವಿರೋಧ ಪಕ್ಷಗಳನ್ನು ದಮನಿಸುವ ಉದ್ದೇಶವನ್ನಷ್ಟೇ ಹೊಂದಿವೆ..’ ಎಂದು ಅದು ಟೀಕಿಸಿದೆ. ಆಮ್ನೆಸ್ಟಿ ಇಂಟರ್‍ನ್ಯಾಶನಲ್ ಕೂಡ ಬಾಂಗ್ಲಾದೇಶದ ಬೆಳವಣಿಗೆಯ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದೆ. ಟರ್ಕಿ ತನ್ನ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಂಡಿದೆ. ಅಂದಹಾಗೆ, ಯುದ್ಧಾಪರಾಧಗಳ ತನಿಖೆಯ ನೆಪದಲ್ಲಿ ಬಾಂಗ್ಲಾ ದೇಶದಲ್ಲಿ ನಿರ್ದಿಷ್ಟ ಮಂದಿಯನ್ನು ಬೆನ್ನಟ್ಟಿ ಕೊಲ್ಲುವ ಕಾರ್ಯಾಚರಣೆ ನಡೆಯುತ್ತಿದೆಯೇ? ವಿರೋಧ ಪಕ್ಷಗಳನ್ನು ದಮನಿಸುವುದು ಇದರ ಗುರಿಯೇ? ಇಲ್ಲದಿದ್ದರೆ 1971ರಲ್ಲಿ ನಡೆದಿದೆಯೆನ್ನಲಾದ ಯುದ್ಧಾಪರಾಧಗಳ ತನಿಖೆಗೆ 2010ರಲ್ಲಿ ದಿಢೀರಾಗಿ ಟ್ರಿಬ್ಯೂನಲ್ ಒಂದನ್ನು ರಚಿಸುವುದು ಮತ್ತು ವಿರೋಧ ಪಕ್ಷಗಳ ಐವರು ಪ್ರಮುಖ ನಾಯಕರನ್ನು ಗಲ್ಲಿಗೇರಿಸುವುದೆಲ್ಲ ಏನು? ಯುದ್ಧಾಪರಾಧಿಗಳೆಲ್ಲ ವಿರೋಧ ಪಕ್ಷಗಳಾದ ಜಮಾಅತೆ ಇಸ್ಲಾಮೀ ಮತ್ತು ಬಾಂಗ್ಲಾದೇಶ್ ನ್ಯಾಶನಲ್ ಪಾರ್ಟಿ(BNP)ಯಲ್ಲೇ ತುಂಬಿಕೊಂಡಿದ್ದಾರೆಯೇ? ಶೇಖ್ ಹಸೀನಾರ ಅವಾಮಿ ಲೀಗ್ ಪರಿಶುದ್ಧವೇ? ನಿಜಕ್ಕೂ, ಈ ನ್ಯಾಯ ಪ್ರಕ್ರಿಯೆ ಪಾರದರ್ಶಕವಾಗಿದೆಯೇ?
 ಕಳೆದವಾರ ಗಲ್ಲಿಗೇರಿಸಲ್ಪಟ್ಟ ಮುತೀಉರ್ರಹ್ಮಾನ್ ನಿಝಾಮಿ ಯವರು ಯುದ್ಧಾಪರಾಧದ ಆರೋಪದಲ್ಲಿ ಗಲ್ಲಿಗೇರಿಸಲಾದ 5ನೇ ವ್ಯಕ್ತಿ. ಈ ಮೊದಲು ಇದೇ ಆರೋಪದಲ್ಲಿ ಅಲ್ ಅಹ್ಸನ್ ಮುಹಮ್ಮದ್ ಮುಜಾಹಿದ್, ಸಲಾಹುದ್ದೀನ್ ಚೌಧರಿ, ಕಮರು ಝ್ಝಮಾನ್, ಅಬ್ದುಲ್ ಕಾದಿರ್ ಮುಲ್ಲಾರನ್ನು ಗಲ್ಲಿಗೇರಿಸಲಾಗಿತ್ತು. ಇವರಲ್ಲಿ ಸಲಾಹುದ್ದೀನ್ ಚೌಧರಿ(BNP)ಯವರನ್ನು ಬಿಟ್ಟರೆ ಉಳಿದ ನಾಲ್ವರೂ ಜಮಾಅತೆ ಇಸ್ಲಾಮೀ ಎಂಬ ರಾಜಕೀಯ ಪಕ್ಷಕ್ಕೆ ಸೇರಿದವರು. ಜಮಾಅತೆ ಇಸ್ಲಾಮಿಯ ಪ್ರಭಾವಿ ನಾಯಕರಾದ ಗುಲಾಮ್ ಆಝಮ್ ಮತ್ತು ದಿಲಾವರ್ ಹುಸೇನ್ ಸಈದಿಯವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ. ಇಲ್ಲಿ ಒಬ್ಬೊಬ್ಬರದ್ದೂ ಬಹುತೇಕ ಒಂದೇ ಕತೆ. ಬಾಂಗ್ಲಾದೇಶದ ಸಂಸತ್ತಿಗೆ 7 ಬಾರಿ ಆಯ್ಕೆಯಾಗಿದ್ದ ಮತ್ತು ಖಲೀದಾ ಝಿಯಾ ಸರಕಾರದಲ್ಲಿ ಮುಖ್ಯ ಸಲಹಾಕಾರರಾಗಿ ಕಾರ್ಯನಿರ್ವಹಿಸಿದ್ದ ಸಲಾಹುದ್ದೀನ್ ಚೌಧರಿಯವರ ವಿಚಾರಣಾ ಪ್ರಕ್ರಿಯೆಯೇ ಒಂದು ಸೋಜಿಗ. ಪಾಕಿಸ್ತಾನದಿಂದ ಬಾಂಗ್ಲಾದೇಶವು ಸ್ವತಂತ್ರಗೊಳ್ಳುವ ಮುನ್ನಾದಿನ ಮತ್ತು ಮರುದಿನ ನಡೆದ ಹಿಂದೂಗಳ ಮೇಲಿನ ದಾಳಿಯ ಸಹಿತ ಇತರ ಅಪರಾಧ ಕೃತ್ಯಗಳಲ್ಲಿ ಪಾಲುಗೊಂಡ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ. ತಮಾಷೆ ಏನೆಂದರೆ, ‘ಆ ದಿನಗಳಲ್ಲಿ ಅವರು ಪಶ್ಚಿಮ ಪಾಕಿಸ್ತಾನದಲ್ಲಿ (ಈಗಿನ ಬಾಂಗ್ಲಾ) ಇರಲೇ ಇಲ್ಲ ಮತ್ತು ಅವರು ತನ್ನೊಂದಿಗೆ ಪಂಜಾಬ್ ಯುನಿವರ್ಸಿಟಿಯಲ್ಲಿದ್ದರು’ ಎಂದು ಬಾಂಗ್ಲಾದ ಹಾಲಿ ಸುಪ್ರೀಮ್ ಕೋರ್ಟ್‍ನ ನ್ಯಾಯಾಧೀಶರೇ ಟ್ರಿಬ್ಯೂನಲ್‍ಗೆ ಪತ್ರ ಬರೆದಿದ್ದರು. ‘ನ್ಯಾಯಾಧೀಶನೆಂಬ ನೆಲೆಯಲ್ಲಿ ತಾಂತ್ರಿಕ ತೊಂದರೆಗಳಲ್ಲದೇ ಹೋಗಿದ್ದರೆ ತಾನು ಟ್ರಿಬ್ಯೂನಲ್‍ನಲ್ಲಿ ಬಂದು ಸಾಕ್ಷ್ಯ ನುಡಿಯುತ್ತಿದ್ದೆ’ ಎಂದೂ ಅವರು ಪತ್ರದಲ್ಲಿ ತಿಳಿಸಿದ್ದರು. ಚೌಧರಿಯವರ ವಿರುದ್ಧ 41 ಸಾಕ್ಷಿಗಳನ್ನು ಕೋರ್ಟ್‍ನಲ್ಲಿ ಹಾಜರುಪಡಿಸಲಾಗಿತ್ತು. ಆದರೆ ಚೌಧರಿಯವರ ಪರ ಬರೇ 4 ಮಂದಿ ಸಾಕ್ಷಿಗಳಿಗೆ ಮಾತ್ರ ಅನುಮತಿ ನೀಡಲಾಯಿತು. ಚೌಧರಿಯವರ ವಿರುದ್ಧ 41 ಮಂದಿ ಆರೋಪ ಹೊರಿಸುವಾಗ ಅವರ ಪರವಾಗಿ ಬರೇ 4 ಮಂದಿ ಸಾಕ್ಷ್ಯ ನುಡಿಯುವ ಸನ್ನಿವೇಶವನ್ನೊಮ್ಮೆ ಊಹಿಸಿ. ಆ ವಿಚಾರಣಾ ಪ್ರಕ್ರಿಯೆ ಹೇಗಿದ್ದೀತು? ಅಲ್ಲದೇ ಚೌಧರಿಯವರ ಪರ ಸಾಕ್ಷ್ಯ ನುಡಿಯುವುದಾಗಿ ಪಾಕಿಸ್ತಾನ ಮಾಜಿ ಪ್ರಧಾನಿ ಮತ್ತು ಮಾಜಿ ಅಮೇರಿಕನ್ ರಾಯಭಾರಿಯವರು ಕೇಳಿಕೊಂಡರೂ ಟ್ರಿಬ್ಯೂನಲ್ ಅವಕಾಶ ನೀಡಲಿಲ್ಲ. ಅದೇ ವೇಳೆ ಇಂಟರ್‍ನೆಟ್‍ನ ಮೂಲಕ ಸೋರಿಕೆಯಾದ ತೀರ್ಪಿನ ಪ್ರತಿಯು ಇಡೀ ನ್ಯಾಯ ಪ್ರಕ್ರಿಯೆಯನ್ನೇ ಬೋಗಸ್ ಎಂದು ಬಹಿರಂಗವಾಗಿಯೇ ಸಾಬೀತುಪಡಿಸಿತ್ತು. ಚೌಧರಿಯವರಿಗೆ ಟ್ರಿಬ್ಯೂನಲ್ ಗಲ್ಲು ಶಿಕ್ಷೆ ಘೋಷಿಸುವುದಕ್ಕಿಂತ ಮೊದಲೇ ಆ ತೀರ್ಪಿನ ಪ್ರತಿ ಇಂಟರ್‍ನೆಟ್‍ನಲ್ಲಿ ಸೋರಿಕೆಯಾಗಿತ್ತು. ಮರುದಿನ ನ್ಯಾಯಾಧೀಶರು ಓದಿದ ತೀರ್ಪೂ ನೆಟ್‍ನಲ್ಲಿ ಸೋರಿಕೆಯಾದ ತೀರ್ಪೂ ಸಂಪೂರ್ಣ ತಾಳೆಯಾಗುತ್ತಿತ್ತು. ಹಸೀನಾ ಸರಕಾರದ ಮಂತ್ರಿಯೋರ್ವರು ಬರೆದುಕೊಟ್ಟ ತೀರ್ಪನ್ನು ನ್ಯಾಯಾಧೀಶರು ಓದಿದ್ದಾರೆ ಎಂದೇ ಅದನ್ನು ವ್ಯಾಖ್ಯಾನಿಸಲಾಗಿತ್ತು. ನಿಜವಾಗಿ, ಬಾಂಗ್ಲಾದೇಶದ ಅಪರಾಧ ಟ್ರಿಬ್ಯೂನಲ್‍ನ ವಿಚಾರಣೆಯ ಬಗ್ಗೆ, ಅದು 2010ರಲ್ಲಿ ದಿಢೀರ್ ಆಗಿ ಹುಟ್ಟಿಕೊಂಡ ಬಗ್ಗೆ ಮತ್ತು ವಿರೋಧ ಪಕ್ಷಗಳನ್ನೇ ಗುರಿಯಾಗಿಸಿ ಅದು ನೀಡುತ್ತಿರುವ ಗಲ್ಲು ಶಿಕ್ಷೆಗಳ ಬಗ್ಗೆ ನಾವು ಅನುಮಾನಿಸಬೇಕಾದದ್ದು ಇವು ಮತ್ತು ಇಂತಹ ಅನೇಕಾರು ಕಾರಣಗಳಿಂದಲೇ. ಕಳೆದವಾರ ಗಲ್ಲಿಗೇರಿಸಲಾದ ಮುತೀಉರ್ರಹ್ಮಾನ್ ನಿಝಾಮಿಯರನ್ನೇ ಎತ್ತಿಕೊಳ್ಳಿ. ಅವರು ಜಮಾಅತೆ ಇಸ್ಲಾಮೀ ಎಂಬ ರಾಜಕೀಯ ಪಕ್ಷದ ಪ್ರಭಾವಿ ನಾಯಕರಾಗಿದ್ದುದಷ್ಟೇ ಅಲ್ಲ, 2009ರ ವರೆಗೆ ಖಲೀದಾ ಝಿಯ ಸರಕಾರದಲ್ಲಿ ಕೃಷಿ ಸಚಿವರಾಗಿ ಜನಪ್ರಿಯರಾಗಿದ್ದರು. ಬಳಿಕ ಕೈಗಾರಿಕಾ ಸಚಿವರಾದರು. ಢಾಕಾ ಯುನಿವರ್ಸಿಟಿಯಿಂದ ಪದವಿ ಪಡೆದರು. ಇಸ್ಲಾಮ್‍ಗೆ ಸಂಬಂಧಿಸಿ ಆಳ ಜ್ಞಾನವನ್ನು ಪಡೆದವರಾಗಿಯೂ ಗುರುತಿಸಿಕೊಂಡಿದ್ದರು. ಅಮೇರಿಕದ ಇಸ್ಲಾಮೀ ಚಿಂತಕರ ಸಭೆಯು 2009ರಲ್ಲಿ ನಿಝಾಮಿಯವರನ್ನು ವಿಶ್ವದ ಪ್ರಭಾವಿ 50 ಮುಸ್ಲಿಮರಲ್ಲಿ ಓರ್ವರೆಂದು ಗುರುತಿಸಿತ್ತು. ಅವರು ಎರಡು ಬಾರಿ ಬಾಂಗ್ಲಾದೇಶದ ಸಂಸತ್ತಿಗೆ ಆಯ್ಕೆಯಾಗಿದ್ದರು. ಹಾಗಂತ, ಇವೆಲ್ಲ ಓರ್ವ ವ್ಯಕ್ತಿಯ ಪ್ರಾಮಾಣಿಕತೆಯನ್ನು ಸಾರುವ ಪುರಾವೆಗಳು ಎಂದಲ್ಲ ಅಥವಾ ಅವರ ಮೇಲೆ ಹೊರಿಸಲಾಗುವ ಆರೋಪಗಳನ್ನು ಸುಳ್ಳು ಎಂದು ಸಾರುವುದಕ್ಕೆ ಇರುವ ಸಮರ್ಥನೆಗಳೂ ಅಲ್ಲ. ಆದರೆ ಕಲ್ಪಿತ ಆರೋಪಗಳನ್ನೇ ನಿಜ ಎಂದು ಸಾರಲು ವ್ಯವಸ್ಥೆ ಮತ್ತು ಕೋರ್ಟು ತುದಿಗಾಲಲ್ಲಿ ನಿಲ್ಲುವುದಾದರೆ ಆ ಬೆಳವಣಿಗೆಗೆ ಏನೆನ್ನಬೇಕು? ಬಾಂಗ್ಲಾದೇಶದ ಈಗಿನ ಅಧ್ಯಕ್ಷೆ ಶೇಖ್ ಹಸೀನಾ ಪ್ರಧಾನಿಯಾದದ್ದು ಇದೇ ಮೊದಲಲ್ಲ. 1996-2001ರಲ್ಲೂ ಅವರು ಪ್ರಧಾನಿಯಾಗಿದ್ದರು. 1971ರಲ್ಲಿ ಅವರ ತಂದೆ ಮುಜೀಬುರ್ರಹ್ಮಾನ್ ಪ್ರಧಾನಿಯಾಗಿದ್ದರು. ಒಂದು ವೇಳೆ ಯುದ್ಧಾಪರಾಧಗಳ ಕುರಿತಂತೆ ಟ್ರಿಬ್ಯೂನಲ್ ರಚಿಸಬೇಕಾದ ಅನಿವಾರ್ಯತೆ ಎದುರಾಗಿದ್ದರೆ ಅದು ಮುಜೀಬುರ್ರಹ್ಮಾನ್‍ರ ಅವಧಿಯಲ್ಲಿ. ಆದರೆ ಅವರು ಯುದ್ಧಾಪರಾಧಿಗಳಿಗೆ ಸಾರ್ವತ್ರಿಕ ಕ್ಷಮೆಯನ್ನು ಘೋಷಿಸಿದರು. ಇದಾಗಿ ದೀರ್ಘ 45 ವರ್ಷಗಳ ಬಳಿಕ 2010ರಲ್ಲಿ ಹಸೀನಾರು ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯ (ಟ್ರಿಬ್ಯೂನಲ್)ವನ್ನು ಸ್ಥಾಪಿಸಿದರು. ಪ್ರಮುಖ ವಿರೋಧ ಪಕ್ಷವಾದ ಜಮಾಅತೆ ಇಸ್ಲಾಮಿಯ ಮೇಲೆ 2014ರಲ್ಲಿ ನಿಷೇಧ ಹೇರಿದರು. ವಿರೋಧ ಪಕ್ಷಗಳ ಪ್ರಮುಖ ನಾಯಕರ ಮೇಲೆಲ್ಲ ವಿವಿಧ ಆರೋಪಗಳನ್ನು ಹೊರಿಸಿ ವಿಚಾರಣೆ ಆರಂಭಿಸಿದರು. ನಿಝಾಮಿಯವರ ವಿಚಾರಣಾ ಪ್ರಕ್ರಿಯೆ ಎಷ್ಟು ಹಾಸ್ಯಾಸ್ಪದವಾಗಿತ್ತೆಂದರೆ, ಅವರ ವಿರುದ್ಧ ಸಾಕ್ಷ್ಯ ನುಡಿಯುವುದಕ್ಕೆ 22 ಮಂದಿಗೆ ಅವಕಾಶ ನೀಡಲಾಗಿತ್ತು. ಆದರೆ ಅವರ ಪರ ಕೇವಲ 4 ಮಂದಿಗೆ ಮಾತ್ರ ಸಾಕ್ಷ್ಯ ನುಡಿಯಲು ಅನುಮತಿಯನ್ನು ನೀಡಲಾಗಿತ್ತು. ಅದರಲ್ಲೂ ನಿಝಾಮಿಯವರ ವಿರುದ್ಧ ಸಾಕ್ಷ್ಯ ನುಡಿದವರನ್ನು ಪ್ರಶ್ನೆಗೊಳಪಡಿಸಲು (ಕ್ರಾಸ್ ಕ್ವಶ್ಚನ್) ವಕೀಲರಿಗೆ ನ್ಯಾಯಾಲಯ ಅವಕಾಶವನ್ನೇ ನೀಡಲಿಲ್ಲ. ನಿಜವಾಗಿ, ಯಾವುದೇ ಒಂದು ನ್ಯಾಯ ಪ್ರಕ್ರಿಯೆಯ ಅತ್ಯಂತ ಮಹತ್ವದ ಘಟ್ಟ ಸಾಕ್ಷಿಗಳನ್ನು ಪ್ರತಿಪ್ರಶ್ನೆಗೆ ಒಳಪಡಿಸುವುದು. ಅವರು ನುಡಿದ ಸಾಕ್ಷ್ಯ ನಿಜವೋ ಸುಳ್ಳೋ ಎಂಬುದನ್ನು ಖಚಿತಪಡಿಸುವ ನಿರ್ಣಾಯಕ ಸಂದರ್ಭವದು. ಆದರೆ ಬಾಂಗ್ಲಾ ದೇಶದ ಟ್ರಿಬ್ಯೂನಲ್ ನಿಝಾಮಿಯವರಿಗೆ ಈ ಅವಕಾಶವನ್ನೇ ಒದಗಿಸಲಿಲ್ಲ. ಹೀಗಿರುತ್ತಾ, 22 ಸಾಕ್ಷಿದಾರರ ಸಾಕ್ಷ್ಯದ ಎದುರು 4 ಮಂದಿ ಸಾಕ್ಷಿಗಳ ಸಾಕ್ಷ್ಯ ಪರಿಣಾಮಕಾರಿಯಾಗುವ ಯಾವ ಸಾಧ್ಯತೆಯೂ ಇರಲಿಲ್ಲ. ಅದರ ಜೊತೆಗೇ, ವಿಚಾರಣಾ ಪ್ರಕ್ರಿಯೆಗೆ ಸಿದ್ಧವಾಗುವುದಕ್ಕಾಗಿ ಪ್ರಾಸಿಕ್ಯೂಶನ್‍ಗೆ ನ್ಯಾಯಾಲಯವು 22 ತಿಂಗಳ ದೀರ್ಘ ಅವಧಿಯನ್ನು ನೀಡಿದ್ದರೆ ನಿಝಾಮಿಯವರಿಗೆ ಕೇವಲ 3 ವಾರಗಳನ್ನಷ್ಟೇ ನೀಡಲಾಗಿತ್ತು. ಅಷ್ಟಕ್ಕೂ,
 ಅಂತಾರಾಷ್ಟ್ರೀಯ ಅಪರಾಧ ಟ್ರಿಬ್ಯೂನಲ್ (ICT) ಎಂಬುದು ಅಂತಾರಾಷ್ಟ್ರೀಯ ನ್ಯಾವೇತ್ತರನ್ನು ಒಳಗೊಂಡ ಸರ್ವಮಾನ್ಯ ವಿಚಾರಣಾ ಸಮಿತಿಯಲ್ಲ. ಅಂತಾರಾಷ್ಟ್ರೀಯ ಎಂಬ ಹೆಸರನ್ನು ಅದು ತಗುಲಿಸಿಕೊಂಡಿದ್ದರೂ ಅಂತಾರಾಷ್ಟ್ರೀಯಕ್ಕೂ ಅಂತಾರಾಷ್ಟ್ರೀಯ ಅಪರಾಧ ನಿಯಮಗಳಿಗೂ ಯಾವ ಸಂಬಂಧವೂ ಇಲ್ಲದಷ್ಟು ಈ ಟ್ರಿಬ್ಯೂನಲ್ ಏಕಪಕ್ಷೀಯವಾಗಿದೆ ಮತ್ತು ಸ್ಥಳೀಯರಿಂದ ತುಂಬಿಕೊಂಡಿದೆ . ಆದ್ದರಿಂದಲೇ ಅಂತಾರಾಷ್ಟ್ರೀಯ ಸಮುದಾಯವು ಈ ಟ್ರಿಬ್ಯೂನಲ್‍ನ ಗಲ್ಲು ಪ್ರೇಮವನ್ನು ಆಗಿಂದಾಗ್ಗೆ ಪ್ರಶ್ನೆಗೊಳಪಡಿಸುತ್ತಲೇ ಬಂದಿದೆ. ಬಹುಶಃ, ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದಲ್ಲಿ ನಡೆಯುತ್ತಿರುವ ಪ್ರಗತಿಪರ ಚಿಂತಕರು ಮತ್ತು ಬ್ಲಾಗರ್‍ಗಳ ಹತ್ಯೆಗೂ ಅಲ್ಲಿನ ವ್ಯವಸ್ಥೆಗೂ ಸಂಬಂಧ ಇರಬಹುದೇ ಎಂಬ ಅನುಮಾನಗಳೂ ಮೂಡುತ್ತಿವೆ. ಹಸೀನಾ ಪ್ರಗತಿಪರ ಗುಂಪಿನೊಂದಿಗೆ ಗುರುತಿಸಿಕೊಂಡವರು. ಜೊತೆಗೇ ಜಮಾಅತೆ ಇಸ್ಲಾಮೀ ಮತ್ತು ಬಿಎನ್‍ಪಿ ಪಕ್ಷಗಳನ್ನು ಪ್ರಗತಿ ವಿರೋಧಿ ಮೂಲಭೂತವಾದಿಗಳಾಗಿ ಬಿಂಬಿಸುತ್ತಲೂ ಇದ್ದಾರೆ. ಇಂಥ ಸ್ಥಿತಿಯಲ್ಲಿ, ಓರ್ವ ಪ್ರಗತಿಪರನ ಹತ್ಯೆ ಹಸೀನಾರ ಪಾಲಿಗೆ ಆನೆಬಲವನ್ನು ತುಂಬಬಲ್ಲುದು. ಟ್ರಿಬ್ಯೂನಲ್ ನೀಡುವ ಗಲ್ಲು ತೀರ್ಪನ್ನು ಸಮಾಜ ಸ್ವಾಗತಿಸುವುದಕ್ಕೆ ಇಂಥ ಹತ್ಯೆಗಳು ದೊಡ್ಡದೊಂದು ಪಾತ್ರವನ್ನು ನಿರ್ವಹಿಸಬಹುದು. ನಿಜವಾಗಿ, ನಿಝಾಮಿಯವರ ಹತ್ಯೆ ಸಾರ್ವತ್ರಿಕ ಚರ್ಚೆಗೆ ಒಳಪಡಬೇಕಾದದ್ದು ಅವರು ಜಮಾಅತೆ ಇಸ್ಲಾಮಿಯವರೋ ಅಥವಾ ಮಾಜಿ ಸಚಿವರೋ ಎಂಬ ಕಾರಣಕ್ಕಾಗಿ ಅಲ್ಲ. ಅವರು ನಿಜಕ್ಕೂ ಆ ಶಿಕ್ಷೆಗೆ ಅರ್ಹರೋ ಅಥವಾ ಅವರನ್ನು ರಾಜಕೀಯ ಕಾರಣಗಳಿಗಾಗಿ ಶಿಕ್ಷೆಗೆ ಅರ್ಹಗೊಳಿಸಲಾಯಿತೋ ಎಂಬುದಕ್ಕಾಗಿ. ಹಸೀನಾರ ಅಧಿಕಾರ ದಾಹ ಅಥವಾ ರಾಜಕೀಯ ಪ್ರತೀಕಾರವು ಈ ಗಲ್ಲುಗಳ ಹಿಂದೆ ಕೆಲಸ ಮಾಡಿದೆಯೇ? ಟ್ರಿಬ್ಯೂನಲ್ ಆ ಉದ್ದೇಶಕ್ಕಾಗಿಯೇ ಹುಟ್ಟುಹಾಕಲಾದ ನಕಲಿ ನ್ಯಾಯಾಲಯವೇ? ಈ ಹಿಂದೆ ಈ ಟ್ರಿಬ್ಯೂನಲ್‍ನ ನ್ಯಾಯಾಧೀಶರು ಮತ್ತು ಯುದ್ಧಾಪರಾಧ ವಿಚಾರಣೆಯನ್ನು ಬೆಂಬಲಿಸುವ ಕಾರ್ಯಕರ್ತರ ನಡುವೆ ನಡೆದ ಮಾತುಕತೆಗಳ ವಿವರಗಳು ಸೋರಿಕೆಯಾಗಿದ್ದು ಮತ್ತು ಇಡೀ ವಿಚಾರಣಾ ಪ್ರಕ್ರಿಯೆಯೇ ಒಂದು ನಾಟಕ ಎಂಬುದಾಗಿ ಬಹಿರಂಗವಾದದ್ದನ್ನು ಮುಖಾಮುಖಿಯಾಗಿಟ್ಟು ನೋಡಿ. ಏನನಿಸುತ್ತದೆ? ಅಷ್ಟಕ್ಕೂ,
 ಹಸೀನಾರ ‘ಗಲ್ಲು' ರಾಜಕೀಯವನ್ನು ಪ್ರಧಾನಿ ನರೇಂದ್ರ ಮೋದಿ ಸರಕಾರವು ಬೆಂಬಲಿಸಿದ ಎರಡು ದಿನಗಳ ಬಳಿಕ ಸಾಧ್ವಿ ಪ್ರಜ್ಞಾಸಿಂಗ್ ಮತ್ತವರ ತಂಡವು ಆರೋಪಮುಕ್ತವಾಗಿರುವುದು ಕಾಕತಾಳೀಯವೋ..?


Wednesday, May 11, 2016

ಕನ್ನಡವನ್ನು ಮಿಸ್ ಮಾಡಿಕೊಳ್ಳುವ ಮುಸ್ಲಿಂ ಮಕ್ಕಳ ಸುತ್ತ...

         ಮುಸ್ಲಿಮ್ ಸಮುದಾಯದ ಮಕ್ಕಳ ಕನ್ನಡ ಹೇಗಿದೆ? ಕನ್ನಡದಲ್ಲಿ ಅವರೆಷ್ಟು ಪ್ರಾವೀಣ್ಯತೆಯನ್ನು ಪಡೆದಿದ್ದಾರೆ? ಅವರಲ್ಲಿ ಕನ್ನಡದ ಬಗ್ಗೆ ಆಸಕ್ತಿ, ಆಕರ್ಷಣೆ ಎಷ್ಟರ ಮಟ್ಟಿಗಿದೆ? ಅವರಲ್ಲಿ ಕನ್ನಡವನ್ನು ಸಲೀಸಾಗಿ ಮಾತಾಡುವ, ಓದುವ ಮತ್ತು ಅರ್ಥೈಸುವ ಸಾಮರ್ಥ್ಯದಲ್ಲಿ ಹೆಚ್ಚಳ ಆಗುತ್ತಿದೆಯೇ ಅಥವಾ ಕುಸಿತವೇ? ಮುಸ್ಲಿಮ್ ಸಮುದಾಯದ ಆಧುನಿಕ ತಲೆಮಾರಿಗೂ ಕನ್ನಡಕ್ಕೂ ನಡುವೆ ಇರುವ ಸಂಬಂಧ ಯಾವ ಬಗೆಯದು? ಬಲಿಷ್ಠವೇ, ಸಮಾಧಾನಕರವೇ ಅಥವಾ ಆತಂಕಕಾರಕವೇ?
 ಕಳೆದವಾರ ಬೇಸಿಗೆ ಶಿಬಿರವೊಂದರಲ್ಲಿ ಅತಿಥಿಯಾಗಿ ಭಾಗವಹಿಸಿದ ಬಳಿಕ ನನ್ನನ್ನು ಬೆಂಬಿಡದೇ ಕಾಡುತ್ತಿರುವ ಪ್ರಶ್ನೆ ಇದು. ಕನ್ನಡದಲ್ಲಿ ಮಾತಾಡಲು ಪ್ರಾರಂಭಿಸಿದ ನನ್ನನ್ನು ಮಕ್ಕಳು ಭಾಷೆ ಜೀರ್ಣವಾಗಲ್ಲ ಅಂದರು. ಒಂದೋ ತಾಯ್ನುಡಿ (ಬ್ಯಾರಿ) ಇಲ್ಲವೇ ಇಂಗ್ಲಿಷ್‍ನಲ್ಲಿ ಮಾತಾಡಿ ಎಂದು ವಿನಂತಿಸಿದರು. ಅಷ್ಟಕ್ಕೂ, ಈ ಬೆಳವಣಿಗೆ ಅಪಾಯಕಾರಿಯೇ? ಕರ್ನಾಟಕದಲ್ಲಿರುವ ಪ್ರತಿಯೊಬ್ಬರಿಗೂ ಕನ್ನಡವನ್ನು ಓದಲು, ಬರೆಯಲು ಮತ್ತು ಮಾತಾಡಲು ಬರಲೇಬೇಕೇ? ಬರದೇ ಇರುವುದು ಅಪರಾಧವೇ? ಸಂವಹನ ಮಾಧ್ಯಮವಾಗಿರುವ ಭಾಷೆಯೊಂದಕ್ಕೆ ಗಡಿಯ ಚೌಕಟ್ಟೊಂದನ್ನು ನಿರ್ಮಿಸಿ, ಭಾವನೆಗಳನ್ನು ತುಂಬಿ, ಆರಾಧನಾ ಭಾವದಿಂದ ಕಾಣಲಾಗುತ್ತಿದೆಯೇ? ಕನ್ನಡ ಭಾಷೆಯನ್ನು ಈ ಚೌಕಟ್ಟಿನಿಂದ ಹೊರತಂದು ಇಂಗ್ಲಿಷ್‍ನಂತೆ ಸಹಜವಾಗಿ ಬದುಕಲು ಬಿಡಬೇಕೇ? ಹಾಗಂತ, ಕರ್ನಾಟಕದಲ್ಲಿ ಕನ್ನಡ ಎಷ್ಟು ಮಕ್ಕಳ ತಾಯ್ನುಡಿ? 6 ಕೋಟಿ ಕನ್ನಡಿಗರಿದ್ದಾರೆಂದು ನಾವು ಲೆಕ್ಕ ಕೊಡುತ್ತಿದ್ದರೂ ಈ 6 ಕೋಟಿಯಲ್ಲಿ ಕನ್ನಡ ತಾಯ್ನುಡಿಯಾಗಿರುವವರು ಎಷ್ಟು ಮಂದಿ? ಕಲಿಕೆ ತಾಯ್ನುಡಿಯಲ್ಲಿರಲಿ ಎಂದು ವಾದಿಸುವಾಗಲೂ ಕನ್ನಡ ಎಷ್ಟು ಮಕ್ಕಳ ತಾಯ್ನುಡಿ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಕರಾವಳಿ ಕರ್ನಾಟಕದ ಮುಸ್ಲಿಮರ ತಾಯ್ನುಡಿ ಬ್ಯಾರಿ, ಉರ್ದು. ಹಿಂದೂಗಳ ತಾಯ್ನುಡಿ ತುಳು ಮತ್ತು ಕೊಂಕಣಿ. ರಾಜ್ಯದ ಇತರ ಪ್ರದೇಶಗಳಿಗೆ ಸಂಬಂಧಿಸಿ ಹೇಳುವಾಗಲೂ ತಾಯ್ನುಡಿಯಲ್ಲಿ ಈ ಬಗೆಯ ವ್ಯತ್ಯಾಸಗಳಿವೆ. ಲಂಬಾಣಿಯಂಥ ತಾಯ್ನುಡಿ ಭಾಷೆಗಳಿವೆ. ಹೀಗಿರುವಾಗ ತಾಯ್ನುಡಿಯಲ್ಲಿ ಶಿಕ್ಷಣ ಎಂಬ ವಾದವೇ ಚರ್ಚಾರ್ಹವಾಗುತ್ತದೆ. ಮನೆಯಲ್ಲಿ ಬ್ಯಾರಿ ಭಾಷೆ ಮಾತಾಡುತ್ತಾ ಬೆಳೆದ ಮಗುವಿಗೆ ಕನ್ನಡವೂ ಇಂಗ್ಲಿಷೂ ಎರಡೂ ಅನ್ಯ ಭಾಷೆಯೇ. ‘ಎರಡು ಬಾಳೆ ಹಣ್ಣಿಗೆ ಇನ್ನೆರಡು ಸೇರಿಸಿದರೆ ಎಷ್ಟು' ಎಂದು ಬ್ಯಾರಿ ಭಾಷೆಯನ್ನಾಡುವ LKGಯ ಮಗುವಿನಲ್ಲಿ ಕೇಳಿದರೂ ಅಥವಾ ‘ಎರಡು ಕ್ರಾಸ್ ಬೆರ್ರಿಗೆ ಇನ್ನೆರಡು ಸೇರಿಸಿದರೆ ಎಷ್ಟು' ಎಂದು ಕೇಳಿದರೂ ಅದರ ಮುಖಭಾವದಲ್ಲಿ ವ್ಯತ್ಯಾಸಗಳೇನೂ ಆಗಲ್ಲ. ಯಾಕೆಂದರೆ, ಅದರ ಪಾಲಿಗೆ ಬಾಳೆ ಹಣ್ಣೂ ಅಪರಿಚಿತ, ಕ್ರಾಸ್ ಬೆರ್ರಿಯೂ ಅಪರಿಚಿತ. ಆದ್ದರಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ಯಾವ ಮಕ್ಕಳನ್ನೂ ಸಾರಾಸಗಟಾಗಿ ಅವು ತಮಗೆ ಗೊತ್ತಿಲ್ಲದ ನುಡಿಯಲ್ಲಿ ಕಲಿಯುತ್ತಿವೆ ಎಂದು ಷರಾ ಬರೆಯುವುದು ತಪ್ಪಾಗುತ್ತದೆ. ಕನ್ನಡ ತಾಯ್ನುಡಿಯಲ್ಲದ ಮಗುವಿನ ಪಾಲಿಗೆ ಕನ್ನಡವೂ ಇಂಗ್ಲಿಷ್‍ನಂತೆಯೇ ಗೊತ್ತಿಲ್ಲದ ಭಾಷೆಯೇ. ಅನೇಕ ಬಾರಿ ಕನ್ನಡ ಪರ ಹೋರಾಟಗಳು ಜನರನ್ನು ತಟ್ಟದೇ ಇರುವುದು ಈ ವಾಸ್ತವವನ್ನು ನಿರ್ಲಕ್ಷಿಸಿರುವುದರಿಂದಲೇ. ಕೇರಳದಲ್ಲಿ ಮಲಯಾಳಂ ಬಹುತೇಕ ಎಲ್ಲ ಕೇರಳಿಗರ ತಾಯ್ನುಡಿ. ಭಾಷೆಯ ಉಚ್ಛಾರದಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ತುಸು ವ್ಯತ್ಯಾಸಗಳಿದ್ದರೂ ಎಲ್ಲರೂ ಮಾತಾಡುವ ಭಾಷೆ ಮಲಯಾಳಂ ಒಂದೇ. ಈ ರಾಜ್ಯಕ್ಕೆ ಸಂಬಂಧಿಸಿ ಯುನೆಸ್ಕೋ ವ್ಯಕ್ತಪಡಿಸಿರುವ ಆತಂಕವನ್ನು ಪರಿಗಣಿಸಬಹುದು. ‘ಗೊತ್ತಿಲ್ಲದ ಭಾಷೆಯನ್ನು ಮಗುವಿಗೆ ಕಲಿಸುವುದನ್ನು ಈಜು ಬರದ ಮಗುವನ್ನು ನೀರಿಗೆ ಹಾಕಿದಂತೆ’ ಎಂದು ಅದು ಹೇಳಿರುವುದನ್ನು ಸಮರ್ಥಿಸಿ ವಾದಿಸಬಹುದು. ಅಂದಹಾಗೆ, ಶಿಶು ಪ್ರಾಯದಿಂದ ತೊಡಗಿ LKGಗೆ ಸೇರ್ಪಡೆಗೊಳ್ಳುವವರೆಗೆ ಒಂದು ಮಗುವಿನ ಮೇಲೆ ತಾಯ್ನುಡಿಯೇ ಪ್ರಾಬಲ್ಯ ಸ್ಥಾಪಿಸಿರುತ್ತದೆ ಎಂಬುದು ನಿಸ್ಸಂಶಯ. ತಾಯಿ ಮತ್ತು ತಂದೆಯ ನುಡಿ ಇಂಗ್ಲಿಷ್ ಆಗಿದ್ದರೆ ಮಗು ಬಾಳೆ ಹಣ್ಣು, ತೆಂಗಿನ ಕಾಯಿ, ಮಾವಿನ ಕಾಯಿ, ಮೆಟ್ಟು, ನೀರುಳ್ಳಿ, ಕಣ್ಣೀರು, ಅಳು, ಸಂತೋಷ.. ಎಲ್ಲಕ್ಕೂ ಇಂಗ್ಲಿಷ್ ಪದಗಳನ್ನೇ ಬಳಸುತ್ತದೆ. ಅದರ ಪಾಲಿಗೆ ತಾಯ್ನುಡಿ ಇಂಗ್ಲಿಷ್. ಅಂಥ ಹೆತ್ತವರಿಗೆ ಇಂಗ್ಲಿಷ್ ಮಾಧ್ಯಮ ಮೊದಲ ಆದ್ಯತೆಯಾಗುವುದರಲ್ಲಿ ಯಾವ ಅಚ್ಚರಿಯೂ ಇಲ್ಲ. ಇನ್ನು, ಬ್ಯಾರಿ, ತುಳು, ಕೊಂಕಣಿ, ಲಂಬಾಣಿ ಸಹಿತ ಲಿಪಿ ಇಲ್ಲದ ಭಾಷೆಯನ್ನಾಡುವ ಮಗುವಿಗೂ ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮ ಎಂಬೆರಡು ಆಯ್ಕೆಗಳನ್ನು ಮುಕ್ತವಾಗಿಯೇ ಇಡಬೇಕಾಗುತ್ತದೆ. ಅವೆರಡೂ ಮಗುವಿನ ಪಾಲಿಗೆ ಗೊತ್ತಿಲ್ಲದ ಭಾಷೆಗಳೇ. ಇಸ್ರೇಲ್‍ನಲ್ಲಿ ಹಿಬ್ರೂ ಭಾಷೆಯಲ್ಲಿ ಕಲಿಸಲಾಗುತ್ತದೆ. ಈ ಭಾಷೆಯಲ್ಲಿ ಕಲಿತವರೇ ಮುಂದೆ ಆ ದೇಶದ ಮಹಾನ್ ವಿಜ್ಞಾನಿಗಳು, ಸಂಶೋಧಕರು, ಸಾಧಕರೂ ಆಗಿದ್ದಾರೆ,  70ರಷ್ಟು ನೋಬೆಲ್ ಪ್ರಶಸ್ತಿಗಳು ಆ ದೇಶಕ್ಕೆ ಲಭ್ಯವಾಗಿವೆ ಎಂದು ಹೇಳಲಾಗುತ್ತದೆ. ತಾಯ್ನುಡಿಯಲ್ಲಿ ಮೊದಲ ಹಂತದ ಕಲಿಕೆಯು ಮಗುವಿನ ಮಾನಸಿಕ ಬೆಳವಣಿಗೆಗೂ ಅದರ ಆಲೋಚನಾ ಶಕ್ತಿಯನ್ನು ಹಿಗ್ಗಿಸುವುದಕ್ಕೂ ಸಹಕಾರಿಯಾಗುತ್ತದೆಂದು ವಿಶ್ವಸಂಸ್ಥೆಯೂ ಹೇಳಿದೆ. ಜಗತ್ತಿನ ಮುಂದುವರಿದ ರಾಷ್ಟ್ರಗಳಲ್ಲೆಲ್ಲಾ ಮಗುವಿನ ಮೊದಲ ಹಂತದ ಶಿಕ್ಷಣ ತಾಯ್ನುಡಿ ಯಲ್ಲೇ  ನಡೆಯುತ್ತಿದೆ. ಬ್ರಿಟಿಷರಿಂದ ಆಳ್ವಿಕೆಗೊಳಪಟ್ಟ ಭಾರತ ಮತ್ತು ಆಫ್ರಿಕಾ ಖಂಡವನ್ನು ಬಿಟ್ಟರೆ ಉಳಿದಂತೆ ಇಂಗ್ಲಿಷ್ ಮಾಧ್ಯಮವನ್ನು ಆರಾಧನಾ ಭಾವದಿಂದ ಕಾಣುವ ರಾಷ್ಟ್ರಗಳು ನಗಣ್ಯ ಅನ್ನುವಷ್ಟು ಕಡಿಮೆ. ತಾಯ್ನುಡಿಯಲ್ಲಿ ಕಲಿತ ಮಕ್ಕಳು ಗಣಿತದಲ್ಲಿ ಮುಂದಿರುತ್ತಾರೆ ಎಂದು ಆಂಧ್ರಪ್ರದೇಶ ಮತ್ತು ತೆಲಂಗಾಣದ 233 ಶಾಲೆಗಳ 900ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಿದ ಯುನಿಸೆಫ್‍ನ ಸಲಹಾಕಾರರಾಗಿರುವ ಶ್ರೀಕುಮಾರ್ ನಾಯರ್ ಅವರು ತಮ್ಮ Does medium of instruction affect learning outcomes? ಎಂಬ ಸಂಶೋಧನಾ ವರದಿಯಲ್ಲಿ ವಾದಿಸಿದ್ದಾರೆ. ಅಲ್ಲದೇ, ಎಳವೆಯಲ್ಲಿ ಮಗುವಿನ ಕೈ ಹಿಡಿದು ನಡೆಯಲು ಕಲಿಸುವ ರೀತಿಯನ್ನು ಕೆಲವರು ತಾಯ್ನುಡಿ ಕಲಿಕೆಗೆ ಆಧಾರವಾಗಿ ಮುಂದಿಡುತ್ತಾರೆ. ಮಕ್ಕಳು ನಡೆಯುವುದನ್ನು ಕಲಿಯುವುದಕ್ಕೆ ಮೊದಲು ಕೆಲವು ತಿಂಗಳು ಹೆತ್ತವರು ಕೈ ಹಿಡಿದು ನಡೆಸಬೇಕಾಗುತ್ತದೆ. ನಂತರ ಮಗು ತಾನೇ ನಡೆಯುತ್ತದೆ. ಹೀಗೆಯೇ ಕಲಿಕೆಯ ವಿಷಯಗಳನ್ನು ಗ್ರಹಿಸಲು ಮಗುವಿಗೆ ಆರಂಭದಲ್ಲಿ ತಾಯ್ನುಡಿಯ ಅಗತ್ಯವಿರುತ್ತದೆ. ತಾಯ್ನುಡಿಯು ಮೊದಲ ಹಂತದ ಕಲಿಕೆಯಲ್ಲಿ ಮಗುವನ್ನು ಕೈ ಹಿಡಿದು ನಡೆಸುತ್ತದೆ. ಬಳಿಕ ಈ ಕಲಿಕೆಯ ಆಧಾರದಲ್ಲಿ ಮಗು ಇತರ ಭಾಷೆಯನ್ನು ಮತ್ತು ಅದರ ಸೌಂದರ್ಯವನ್ನು ಅನುಭವಿಸಲು ಶಕ್ತವಾಗುತ್ತದೆ. ಇನ್ಫೋಸಿಸ್‍ನ ನಾರಾಯಣ ಮೂರ್ತಿ, ವಿಜ್ಞಾನಿಗಳಾದ ಯು.ಆರ್. ರಾವ್, ಸಿ.ಎನ್.ಆರ್. ರಾವ್ ಮುಂತಾದವರೆಲ್ಲ ತಾಯ್ನುಡಿಯಲ್ಲೇ ಕಲಿತು ಸಾಧನೆ ಮಾಡಿರುವುದಾಗಿ ಸಮರ್ಥಿಸಲಾಗುತ್ತದೆ..
 ಇರಬಹುದು. ಆದರೆ, ಈ ವಾದಗಳ ಸಮಸ್ಯೆ ಏನೆಂದರೆ, ಕನ್ನಡವು ಇಲ್ಲಿನ 6 ಕೋಟಿ ಕನ್ನಡಿಗರ ತಾಯ್ನುಡಿ ಎಂದು ಸಾರ್ವತ್ರೀಕರಿಸುವುದು ಅಥವಾ ಆ ಧಾಟಿಯಲ್ಲಿ ವಾದಿಸುವುದು. ನಿಜವಾಗಿ, ಈ ತಪ್ಪನ್ನು ಒಪ್ಪಿಕೊಂಡೇ ಮತ್ತು ತಿದ್ದಿಕೊಳ್ಳುವ ವಿಶಾಲ ಮನಸ್ಸಿನಿಂದಲೇ ಈ ಚರ್ಚೆಯನ್ನು ಮುಂದುವರಿಸಬೇಕಾಗಿದೆ. ಹಾಗಂತ,
 ನಮ್ಮ ತಾಯ್ನುಡಿ ಬ್ಯಾರಿ, ಲಂಬಾಣಿ, ಉರ್ದು ಅಥವಾ ತುಳು ಭಾಷೆ.. ಎಂಬ ಮಾತ್ರಕ್ಕೇ ಕನ್ನಡವನ್ನು ನಿರ್ಲಕ್ಷಿಸಬೇಕಾಗಿಲ್ಲ. ಕನ್ನಡವೆಂಬುದು ಈ ಮಣ್ಣಿಗೆ ಇಂಗ್ಲಿಷ್‍ನಂತೆ ಅನ್ಯಭಾಷೆಯಲ್ಲ. ಸಂವಹನ ಮಾಧ್ಯಮವಾಗಿ ಇಂಗ್ಲಿಷ್ ಜಾಗತಿಕ ಮನ್ನಣೆ ಪಡೆದಿರಬಹುದು. ಆದರೆ ಅದಕ್ಕೆ ಸ್ಥಳೀಯತೆ ಇಲ್ಲ. ಆದ್ದರಿಂದಲೇ ಬೇಂದ್ರೆಯವರ ಪ್ರೇಮ ಪದ್ಯಗಳನ್ನು ಅದೇ ಭಾವ ಮತ್ತು ತಾದಾತ್ಮ್ಯದಲ್ಲಿ ಇಂಗ್ಲಿಷ್‍ಗೆ ಅನುವಾದಿಸಲು ಸಾಧ್ಯವಾಗದಿರುವುದು. ಇದು ಬೇಂದ್ರೆಯವರ ಸಾಹಿತ್ಯಕ್ಕೆ ಮಾತ್ರ ಸೀಮಿತವಲ್ಲ. ಕನ್ನಡಕ್ಕೆ ಮತ್ತು ಅದರ ಸಾಹಿತ್ಯಿಕ ಸೌಂದರ್ಯಕ್ಕೆ ಅದರದೇ ಆದ ಪ್ರತ್ಯೇಕತೆಯಿದೆ. ಕನ್ನಡದಲ್ಲಿ ಲಲಿತ ಪ್ರಬಂಧ ಎಂಬ ಸಾಹಿತ್ಯಿಕ ಪ್ರಕಾರವಿದೆ. ಅದು ಅತ್ತ ಹಾಸ್ಯ ಬರಹವೂ ಅಲ್ಲ, ಇತ್ತ ನಗೆಬುಗ್ಗೆಯೂ ಅಲ್ಲ. ಅದು ಹಾಸ್ಯ, ಕೌತುಕ, ಚರ್ಚೆ, ಕಚಗುಳಿಗಳ ಮಿಶ್ರಣ. ಆದರೆ ಈ ಪ್ರಕಾರವನ್ನು ಅಷ್ಟೇ ಸೊಗಸಾಗಿ ಕಟ್ಟಿ ಕೊಡುವ ಇಂಗ್ಲಿಷ್ ಪದವೇ ಇಲ್ಲ. ಇಂಗ್ಲಿಷ್‍ನಲ್ಲಿ ಇದನ್ನು Essay  ಅಥವಾ Lighter Essay  ಎಂದಷ್ಟೇ ಕರೆಯಲಾಗುತ್ತದೆ. ಲಲಿತ ಪ್ರಬಂಧ ಮತ್ತು Lighter Essayಯನ್ನು ಎದುರು ಬದುರಾಗಿ ಇಟ್ಟು ನೋಡಿ. ಲಲಿತ ಪ್ರಬಂಧ ಅನ್ನುವ ಪದದಲ್ಲಿರುವ ಲಾಲಿತ್ಯ Lighter Essayಯಲ್ಲಿ ವ್ಯಕ್ತವಾಗುವುದೇ ಇಲ್ಲ. ಕನ್ನಡ ಭಾಷೆಯಲ್ಲಿ ಅನಂತ ಮೂರ್ತಿ, ತೇಜಸ್ವಿ, ಶಿವರಾಮ ಕಾರಂತ, ಕುವೆಂಪು, ಭೈರಪ್ಪ, ಕಾರ್ನಾಡ್.... ಮುಂತಾದ ಶ್ರೇಷ್ಠ ಸಾಹಿತಿಗಳಿದ್ದಾರೆ. ಅಸಂಖ್ಯ ಸಾಹಿತ್ಯ ಕೃತಿಗಳಿವೆ. ಪತ್ರಿಕೆಗಳು, ಪಾಕ್ಷಿಕಗಳು, ಕಾವ್ಯಗಳಿವೆ. ಇಲ್ಲಿಯ ಮಣ್ಣಿನಲ್ಲೇ  ಹುಟ್ಟಿದ ಪದಗಳು ಮತ್ತು ನುಡಿಗಟ್ಟುಗಳಿವೆ. ಪಾಡ್ದನಗಳಿವೆ. ಸ್ಥಳೀಯವಾದ ಅನೇಕಾರು ಆಚರಣೆಗಳಿವೆ. ಈ ರಾಜ್ಯದಲ್ಲಿ ಮಾತ್ರವೇ ಲಭ್ಯವಾಗುವ ತರಕಾರಿಗಳಿವೆ. ವಿಶೇಷ ರೀತಿಯ ಮರಗಳಿವೆ. ಬಳ್ಳಿಗಳಿವೆ. ಹಣ್ಣುಗಳಿವೆ. ಇಂಗ್ಲಿಷ್ ಪದಗಳಿಗೆ ಸಿಕ್ಕದ ತಿನಿಸುಗಳಿವೆ. ಇಲ್ಲಿಯ ಸಾಂಸ್ಕ್ರತಿಕ ವೈವಿಧ್ಯತೆಯನ್ನು ಬಿಂಬಿಸುವ ಕಟ್ಟಡಗಳಿವೆ. ನಂಬಿಕೆಗಳು ಮತ್ತು ಆಚರಣೆಗಳಿವೆ. ಔಷಧೀಯ ಗುಣಗಳುಳ್ಳ ಸಸ್ಯಗಳು ಅನೇಕ ಇವೆ ಮತ್ತು ಅದಕ್ಕೆ ಇಂಗ್ಲಿಷ್‍ನಲ್ಲಿ ಸ್ಪಷ್ಟ ಪದಗಳು ಈವರೆಗೂ ಹುಟ್ಟಿಕೊಂಡಿಲ್ಲ. ಇಂಗ್ಲಿಷ್‍ನಲ್ಲಿ ಸ್ಪಷ್ಟವಾಗಿ ಬರೆಯಲಾಗದ ಮತ್ತು ಉಚ್ಛರಿಸಲಾಗದ ಮಾನವ ಹೆಸರುಗಳೂ ಇಲ್ಲಿವೆ. ಹಾಗಂತ, ಇದನ್ನು ಕನ್ನಡ ಭಾಷೆಯ ಹೆಚ್ಚುಗಾರಿಕೆಯಾಗಿಯೋ ಅಥವಾ ಇಂಗ್ಲಿಷ್ ಭಾಷೆಯ ದೌರ್ಬಲ್ಯವಾಗಿಯೋ ಕಾಣಬೇಕಿಲ್ಲ. ಪ್ರತಿ ಭಾಷೆಗೂ ಸ್ಥಳೀಯತೆ ಇದೆ. ಭಾಷೆಯೊಂದು ಎಲ್ಲಿ ಜನ್ಮ ತಳೆದಿದೆಯೋ ಅಲ್ಲಿಯ ಮಟ್ಟಿಗೆ ಅದು ಅತ್ಯಂತ ಶ್ರೀಮಂತ ಭಾಷೆ. ಕನ್ನಡವನ್ನು ನಾವು ಕಲಿಯಬೇಕಾದದ್ದು ಮತ್ತು ಇದರಲ್ಲಿ ಪ್ರಾವೀಣ್ಯತೆಯನ್ನು ಪಡೆಯಲು ಶ್ರಮಿಸಬೇಕಾದದ್ದು ಈ ಕಾರಣಕ್ಕಾಗಿ. ಕನ್ನಡವನ್ನು ಕಲಿಯದೇ ಇರುವುದರಿಂದ ನಾವು ಭಾಷೆಯೊಂದನ್ನಷ್ಟೇ ಮಿಸ್ ಮಾಡಿಕೊಳ್ಳುವುದಲ್ಲ, ಆ ಭಾಷೆ ಒಳಗೊಂಡಿರುವ ಸರ್ವದರಿಂದಲೂ ವಂಚಿತರಾಗುತ್ತೇವೆ. ಜನಪದೀಯ ಹಾಡುಗಳು, ಅಜ್ಜಿ ಕತೆಗಳು, ನರಿ, ಕೋಳಿ, ಸಿಂಹ, ಆನೆ.. ಮುಂತಾದುವುಗಳ ಸುತ್ತ ಹುಟ್ಟಿಕೊಂಡಿರುವ ಕೌತುಕಮಯ ಸಂಗತಿಗಳು, ಧರಣಿ ಮಂಡಲ ಹಾಡು.. ಎಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತೇವೆ. ಸಂವಹನದ ದೃಷ್ಟಿಯಿಂದ ಇಂಗ್ಲಿಷ್ ಅನಿವಾರ್ಯವಾಗಿರಬಹುದು. ಅದರರ್ಥ ಅದೊಂದೇ ಭಾಷೆ ಸಾಕು ಮತ್ತು ಅದುವೇ ಪರಮ ಪವಿತ್ರ ಎಂದಲ್ಲ. ಅಲ್ಲದೇ ಭಾಷೆ ಸಂಸ್ಕಾರವನ್ನು ಕಲಿಸುತ್ತದೆ. ಸಾಂಸ್ಕ್ರತಿಕವಾಗಿ ಜನಮನವನ್ನು ಜೋಡಿಸುತ್ತದೆ. ತಾಯ್ನುಡಿಯು ಬ್ಯಾರಿ, ತುಳು, ಉರ್ದು ಅಥವಾ ಇನ್ನೇನೇ ಆಗಿರಬಹುದು. ಆದರೆ ಈ ಎಲ್ಲ ಭಾಷೆಗಳು ಕನ್ನಡದೊಂದಿಗೆ ಒಂದು ರೀತಿಯಲ್ಲಿ ಸಂಬಂಧವನ್ನು ಹೊಂದಿದೆ ಅಥವಾ ಸಂಬಂಧ ಹೊಂದಿರಬೇಕಾದ ಭೌಗೋಳಿಕ ಪರಿಸ್ಥಿತಿಯಿದೆ. ಆದ್ದರಿಂದ ಕನ್ನಡವನ್ನು ಒಂದು ಭಾಷೆ ಎಂದು ಕೇವಲವಾಗಿ ನೋಡಬೇಕಿಲ್ಲ. ಈ ಭಾಷೆ ನಮ್ಮನ್ನು ಸುತ್ತುವರಿದಿದೆ ಮತ್ತು ಕ್ಷಣಕ್ಷಣಕ್ಕೂ ನಮ್ಮೊಂದಿಗೆ ಮಾತಾಡಬಯಸುತ್ತದೆ. ಈ ಮಾತನ್ನು ಕೇಳಿಸಿಕೊಳ್ಳದೇ ಹೋಗುವುದರಿಂದ ಭಾಷೆಗೆ ನಷ್ಟವಿದೆಯೋ ಇಲ್ಲವೋ ಕೇಳುಗರಿಗಂತೂ ನಷ್ಟವಿದೆ..
 ಮುಸ್ಲಿಮ್ ಸಮುದಾಯದಲ್ಲಿ ಈ ಬಗ್ಗೆ ಗಂಭೀರ ಅವಲೋಕನ ನಡೆಯಬೇಕಾಗಿದೆ.

Wednesday, May 4, 2016

.ಅಣು ಕುಟುಂಬದ ಅನಾಹುತಕ್ಕೆ ಸಾಕ್ಷ್ಯವಾಗುವಳೇ ಸಿಮಿ?

ಸಿಮಿ
    ಬೇಬಿ ಬ್ಲೂವ್ಸ್ ಗೂ (Baby blues) ವಿಭಕ್ತ ಕುಟುಂಬ ಪದ್ಧತಿಗೂ ಸಂಬಂಧ ಇದೆಯೇ? ಪ್ರಸವಾನಂತರದ ಖಿನ್ನತೆ (Post partum Depression - PPD)ಯ ಕಾರಣಗಳನ್ನು ಅಣು ಕುಟುಂಬ ಪದ್ಧತಿಯಲ್ಲಿ ಹುಡುಕಬಹುದೇ? ಪ್ರಸವಾನಂತರದ ಖಿನ್ನತೆಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದಕ್ಕೆ ಕಾರಣಗಳೇನು? ದೇಶದ 20% ಮಹಿಳೆಯರು PPD ಯಿಂದ ಬಳಲುತ್ತಿದ್ದಾರೆ ಎಂಬುದು ಏನನ್ನು ಮತ್ತು ಯಾವುದನ್ನು ಸೂಚಿಸುತ್ತದೆ? ಸ್ವತಃ ತಾಯಿಯೇ ಮಗುವನ್ನು ಕೊಲೆಗೈದ ಅಥವಾ ಅದಕ್ಕಾಗಿ ಪ್ರಯತ್ನ ಪಟ್ಟ, ಮಗುವಿನೊಂದಿಗೆ ಹಿಂಸಾತ್ಮಕವಾಗಿ ನಡಕೊಂಡ ಅಥವಾ ಸ್ವತಃ ಬಾಣಂತಿ ತಾಯಿಯೇ ಆತ್ಮಹತ್ಯೆಗೈದ ಪ್ರಕರಣಗಳು ಆಗಾಗ ಸುದ್ದಿಯಾಗುತ್ತಿರುವುದಕ್ಕೂ ನಮ್ಮ ಕೌಟುಂಬಿಕ ಜೀವನ ಶೈಲಿಗೂ ಸಂಬಂಧ ಕಲ್ಪಿಸಬಹುದೇ?
 ಇದು ಭಾರತೀಯರ ಪ್ರಶ್ನೆಯಷ್ಟೇ ಅಲ್ಲ, ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡ ಎಲ್ಲ ರಾಷ್ಟ್ರಗಳನ್ನೂ ತೀವ್ರವಾಗಿ ಕಾಡತೊಡಗಿದೆ. ಟರ್ಕಿಯಲ್ಲಿ ಈ ಕುರಿತಂತೆ ಗಂಭೀರ ಸಂಶೋಧನೆ ಮತ್ತು ಅಧ್ಯಯನಗಳೂ ನಡೆದಿವೆ. ಯುರೋಪಿಯನ್ ಯೂನಿಯನ್‍ನ ಭಾಗವಾಗುವ ಮೂಲಕ ಗಡಿಗಳಿಲ್ಲದ ರಾಷ್ಟ್ರ ಕಲ್ಪನೆಯನ್ನು ಅದು ಬಹುತೇಕ ಸಾಧ್ಯವಾಗಿಸಿಕೊಂಡರೂ ಅದರ ಜೊತೆಗೇ ಸಾಂಸ್ಕೃತಿಕ ಆಮದು-ರಫ್ತುಗಳಿಗೂ ಸ್ಪೇಸ್ ನೀಡಬೇಕಾಯಿತು. ಅಜ್ಜ-ಅಜ್ಜಿ, ತಂದೆ-ತಾಯಿ, ಅಣ್ಣ-ಅಕ್ಕ, ತಂಗಿ-ತಮ್ಮ ಮುಂತಾದವರೆಲ್ಲ ಒಂದೇ ಮನೆಯಲ್ಲಿದ್ದುಕೊಂಡು ಬದುಕುವ ಅವಿಭಕ್ತ ಕುಟುಂಬ ಪದ್ಧತಿಯು ಯುರೋಪಿಯನ್ ನ್ಯೂಕ್ಲಿಯರ್ ಕುಟುಂಬ ಪದ್ಧತಿಯಿಂದ ಪ್ರಭಾವಿತವಾಯಿತು. ಅಣು ಕುಟುಂಬಗಳು ಹೆಚ್ಚಾಗತೊಡಗಿದುವು. ಅದರ ಜೊತೆಗೇ ಬೇಬಿ ಬ್ಲೂವ್ಸ್ ಮತ್ತು ಪಿಪಿಡಿಗಳ ಪ್ರಮಾಣದಲ್ಲೂ ಹೆಚ್ಚಳ ಕಂಡುಬಂದುವು. ಅಷ್ಟಕ್ಕೂ, ಬೇಬಿ ಬ್ಲೂವ್ಸ್ ಎಂಬುದು ಅಣು ಕುಟುಂಬ (ಪತಿ-ಪತ್ನಿ-ಮಗು)ದಲ್ಲಿ ಮಾತ್ರ ಕಾಣಿಸಿಕೊಳ್ಳಬೇಕಾದ ಅಥವಾ ಕಾಣಿಸಿಕೊಳ್ಳುವ ಕಾಯಿಲೆಯೇನಲ್ಲ. ಬಹುತೇಕ 80% ಬಾಣಂತಿಯರಲ್ಲಿ ಈ ಖಿನ್ನತೆ ಕಾಣಿಸಿಕೊಳ್ಳುತ್ತದೆ. ಬೇಸರ, ಆತಂಕ, ಸಿಟ್ಟು, ನಿದ್ದೆರಹಿತ ರಾತ್ರಿ ಇದರ ಸಾಮಾನ್ಯ ಲಕ್ಷಣ. ನಿಜವಾಗಿ, ಗರ್ಭಧಾರಣೆಯೆಂಬುದೇ ಓರ್ವ ಹೆಣ್ಣಿನ ಪಾಲಿಗೆ ಸಹಜ ಬದುಕಿನಿಂದ ಅತ್ಯಂತ ಅಪರಿಚಿತ ಮತ್ತು ಅಸಹಜವಾದ ಬದುಕಿಗೆ ಮಾಡುವ ಮುಖಾಮುಖಿ. ಮನೆ, ಪರಿಸರ, ಗಂಡ, ಅತ್ತೆ, ಮಾವ, ಅಭಿರುಚಿ, ದುಡಿಮೆ.. ಮುಂತಾದ ಅನೇಕ ಅಂಶಗಳು ಓರ್ವ ಗರ್ಭಿಣಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಗರ್ಭಧಾರಣೆಯ ಬಗ್ಗೆ ನೂರಾರು ಕನಸುಗಳನ್ನು ಕಟ್ಟಿಕೊಂಡವರಿಗೆ  ತಮ್ಮ ಆ  ಕನಸುಗಳ ಪರಿಧಿಯೊಳಗೆ ಬರದ ಅನುಭವಗಳು ಎದುರಾಗತೊಡಗಿದಾಗ ತಳಮಳಗೊಳ್ಳುವುದು ಸಹಜ. ಬಹುಶಃ, ಅಣು ಕುಟುಂಬಗಳ ತಾಕಲಾಟ ಬಹುತೇಕ ಪ್ರಾರಂಭವಾಗುವುದು ಇಲ್ಲೇ. ಒಂದು ಕಡೆ ಅತ್ತೆ, ಮಾವ ಎಂಬ ಕೂಡು ಕುಟುಂಬದಿಂದ ದೂರವಾಗಿ ತಾನು ಮತ್ತು ಗಂಡ ಎಂಬ ತನ್ನದೇ ಗೂಡು ಕಟ್ಟಿಕೊಂಡಿದ್ದರೆ ಇನ್ನೊಂದು ಕಡೆ ಉದ್ಯೋಗ ಮತ್ತು ಮನೆವಾರ್ತೆಯ ಒತ್ತಡ ಇರುತ್ತದೆ. ಇದೇ ವೇಳೆ ಗರ್ಭಧಾರಣೆಯು ಈ ವಾತಾವರಣದಲ್ಲಿ ಬದಲಾವಣೆಯನ್ನು ಬಯಸುತ್ತದೆ. ದೈಹಿಕ ಮತ್ತು ಮಾನಸಿಕ ವಿಶ್ರಾಂತಿಯ ಅಗತ್ಯವಿರುತ್ತದೆ. ಮದರ್‍ಹುಡ್ ಅನ್ನು ವಿವಿಧ ರೀತಿಯಲ್ಲಿ ಬಣ್ಣಿಸುವ ಮತ್ತು ಅದಕ್ಕಾಗಿ ಹಂಬಲಿಸುವವರನ್ನು ಕಂಡಿರುವ ಈಕೆಗೆ ಗರ್ಭಧಾರಣೆ ಆ ದಾರಿಯಲ್ಲಿ ಮೊದಲ ಸವಾಲು. ಅಪರಿಚಿತವಾಗಿರುವ ಈ 9 ತಿಂಗಳನ್ನು ಅಣು ಕುಟುಂಬದ ಓರ್ವ ಹೆಣ್ಣು ಮತ್ತು ಅವಿಭಕ್ತ ಕುಟುಂಬದ ಓರ್ವ ಹೆಣ್ಣು ಹೇಗೆ ನಿಭಾಯಿಸುತ್ತಾರೆ ಎಂಬುದರೊಂದಿಗೆ ಬಾಣಂತನದ ಖಿನ್ನತೆಯು ಜೋಡಿಕೊಂಡಿರುತ್ತದೆ. ಅವಿಭಕ್ತ ಕುಟುಂಬದಲ್ಲಿ ಒಂಟಿತನ ಕಡಿಮೆ. ಪ್ರತಿ ಹಂತದಲ್ಲೂ ಕೇರಿಂಗ್ ಎಂಬುದು ಇರುತ್ತದೆ. ಅಕ್ಕ-ಪಕ್ಕದವರು ಭೇಟಿ ಕೊಡುತ್ತಿರುತ್ತಾರೆ. ಗರ್ಭಿಣಿಯನ್ನು ಸಂತೈಸುತ್ತಾರೆ. ಕುಶಲೋಪರಿ ವಿಚಾರಿಸಿ ಸಲಹೆ-ಸೂಚನೆಗಳನ್ನು ಕೊಡುತ್ತಾರೆ. ಹಂತಹಂತಕ್ಕೂ ಧೈರ್ಯ ತುಂಬುವ ಮತ್ತು ಒತ್ತಡವಿಲ್ಲದ ವಾತಾವರಣ ನಿರ್ಮಾಣಕ್ಕೆ ಕಾರಣರಾಗುತ್ತಾರೆ. ಇದಕ್ಕೆ ಹೋಲಿಸಿದರೆ ಅಣು ಕುಟುಂಬದ ವಾತಾವರಣ ತೀರಾ ಭಿನ್ನ. ಉದ್ಯೋಗ, ಮನೆವಾರ್ತೆ, ಅದೂ-ಇದೂಗಳ ಒತ್ತಡದ ಪಟ್ಟಿಗೆ ಗರ್ಭಧಾರಣೆಯು ಇನ್ನೊಂದು ಒತ್ತಡವಾಗಿ ಸೇರ್ಪಡೆಗೊಳ್ಳುವುದೇ ಹೆಚ್ಚು. ಪತಿಯನ್ನು ಬಿಟ್ಟರೆ ಇನ್ನಾರೂ ಇಲ್ಲ ಎಂಬ ಸ್ಥಿತಿಯಲ್ಲಿ ಒಂದು ಬಗೆಯ ಅಪರಿಚಿತತೆ ಮನೆ ಮಾಡಿರುತ್ತದೆ. ಪರಿಸರದವರ ಭೇಟಿ, ಗರ್ಭಿಣಿಗೆ ಇಷ್ಟದ ತಿಂಡಿಗಳನ್ನು ತಯಾರಿಸಿ ತರುವುದು, ಧೈರ್ಯ ತುಂಬುವುದು, ತಮಾಷೆ-ಹಾಸ್ಯಗಳ ವಿನಿಮಯವಾಗುವು ದೆಲ್ಲ ಇಲ್ಲಿ ತೀರಾ ತೀರಾ ಕಡಿಮೆ. ಇಂಥ ಸ್ಥಿತಿಯಲ್ಲಿ ಪ್ರಸವಕ್ಕೆ ಸಿದ್ಧವಾಗುವ ಮತ್ತು ತಾಯ್ತನದ ಹೊಸ ಅನುಭವಕ್ಕೆ ಜಾರುವು ದನ್ನೊಮ್ಮೆ ಕಲ್ಪಿಸಿಕೊಳ್ಳಿ. ತಾಯ್ತನವೆಂಬುದು ಸಂಪೂರ್ಣವಾಗಿ ದÉೈಹಿಕ, ಮಾನಸಿಕ ಮತ್ತು ಸಾಮಾಜಿಕ ಆಯಾಮವುಳ್ಳದ್ದು. ಹುಟ್ಟಲಿರುವ ಮಗುವಿನ ತೂಕ, ಬಣ್ಣ, ಆಕಾರ, ಲಿಂಗ ಮುಂತಾ ದುವುಗಳ ಬಗ್ಗೆ ಸುಂದರ ಕನಸುಗಳನ್ನಿಟ್ಟು ಕೊಂಡವಳಿಗೆ ಆ ನಿರೀಕ್ಷಿತ ಮಗು ಲಭ್ಯವಾಗದೇ ಹೋದರೆ ಕ್ಷಣ ಆಘಾತವಾಗುವುದಕ್ಕೆ ಅವಕಾಶವಿದೆ. ಇದು ಅಣು ಕುಟುಂಬ ಮತ್ತು ಅವಿಭಕ್ತ ಕುಟುಂಬ ಎರಡರಲ್ಲೂ ಸಂಭವಿಸಬಹುದಾದರೂ ಅವಿಭಕ್ತಕ್ಕೆ ಹೋಲಿಸಿದರೆ ಅಣು ಕುಟುಂಬದಲ್ಲಿ ಹೆಚ್ಚು ಅಪಾಯಕಾರಿ. ಭಾವನಾತ್ಮಕ ಬೆಂಬಲವನ್ನು ಗಳಿಸಲು ಕಡಿಮೆ ಅವಕಾಶಗಳಿರುವ ಅಣು ಕುಟುಂಬವು ಇಂಥ ವಾತಾವರಣದಲ್ಲಿ ಬೇಗ ನಿರಾಶವಾಗುವುದೇ ಹೆಚ್ಚು. ಅವಿಭಕ್ತ ಕುಟುಂಬದ ಬಾಣಂತಿ ಇಂಥ ಸ್ಥಿತಿಯಲ್ಲಿ ಕನಿಷ್ಠ ಇನ್ನೊಂದು ಮಗುವಿನ ಕನಸನ್ನಾದರೂ ಕಾಣಬಲ್ಲಳು. ಅವರಿವರ ಮಾತುಕತೆಯಲ್ಲಿ ಆಘಾತದಿಂದ ಚೇತರಿಸಿಕೊಳ್ಳಬಲ್ಲಳು. ಆದರೆ ಇನ್ನೊಂದು ಮಗುವಿನ ಬಗ್ಗೆ ಅಣು ಕುಟುಂಬದ ಬಾಣಂತಿಗೆ ಅವಿಭಕ್ತ ಕುಟುಂಬದ ಬಾಣಂತಿಯಲ್ಲಿರುವಷ್ಟು ಆಯ್ಕೆಗಳೋ ಅವಕಾಶಗಳೋ ಇರುವುದಿಲ್ಲ. ಮೊದಲನೆಯದಾಗಿ ಮನೆಯಲ್ಲಿ ಗಂಡನನ್ನು ಬಿಟ್ಟರೆ ಇನ್ನಾರೂ ಇಲ್ಲ. ಮಗುವನ್ನು ತಾನೇ ನೋಡಿಕೊಳ್ಳಬೇಕು. ಕೆಲವೊಮ್ಮೆ ಅದಕ್ಕಾಗಿ ಉದ್ಯೋಗದ ಒಂದು ವರ್ಷವನ್ನು ತೆರಬೇಕಾದೀತು ಅಥವಾ ಲಭ್ಯವಾಗುವ ರಜೆಯನ್ನು ಮುಗಿಸಿ ಮಗುವನ್ನು ಶಿಶುಪಾಲನಾ ಕೇಂದ್ರಕ್ಕೋ ಅಥವಾ ಇನ್ನಾವುದಾದರೂ ಕೇರಿಂಗ್ ಸೆಂಟರ್‍ಗೋ ಒಪ್ಪಿಸಿ ಉದ್ಯೋಗಕ್ಕೆ ಸೇರಬೇಕಾದೀತು. ಉದ್ಯೋಗವು ಅಣು ಕುಟುಂಬದ ತೀರಾ ಅಗತ್ಯವಾದುದರಿಂದ ಅದನ್ನು ನಿರ್ಲಕ್ಷಿಸಿ ಬದುಕುವುದು ದುಬಾರಿ ಜಗತ್ತಿನಲ್ಲಿ ಸುಲಭವಲ್ಲ. ಹೀಗಿರುವಾಗ ಇನ್ನೊಮ್ಮೆ ಗರ್ಭಿಣಿಯಾಗು ವುದು ಮತ್ತು ಪ್ರಸವಿಸುವುದೆಲ್ಲ ಕಷ್ಟ ಎಂಬ ಭಾವನೆ ಅಣು ಕುಟುಂಬದಲ್ಲಿ ಸಹಜವಾಗಿಯೇ ಗಟ್ಟಿಯಾಗಿರುತ್ತದೆ. ತಾಯಿ ಯಾಗುವುದಕ್ಕೆ ಸಮಯವಿಲ್ಲ ಮತ್ತು ಮಗುವಿನ ಆರೈಕೆಗೆ ಸೂಕ್ತ ವ್ಯವಸ್ಥೆಯಿಲ್ಲ ಎಂಬುದು ಅಂತಿಮವಾಗಿ ಒಂದೇ ಮಗು ಎಂಬಲ್ಲಿಗೆ ತಂದು ನಿಲ್ಲಿಸುತ್ತದೆ. ಈ ಕಾರಣದಿಂದಲೇ ಮೊದಲ ಪ್ರಸವದಲ್ಲಿ ಆಕೆಗೆ ನಿರೀಕ್ಷಿತ ಮಗು ದಕ್ಕದೇ ಹೋದಾಗ ಅಥವಾ ತಾಯ್ತನದ ಕೆಲವು ಅನಿವಾರ್ಯ ‘ರಾಜಿ'ಗಳಿಗೆ ಮನಸು ಒಗ್ಗಿಕೊಳ್ಳದೇ ಹೋದಾಗ ಬೇಬಿ ಬ್ಲೂವ್ಸ್ ಕಾಣಿಸಿಕೊಳ್ಳುತ್ತದೆ. ಸೂಕ್ತ ಪರಿಚಾರಿಕೆ, ಸಾಂತ್ವನ ಲಭ್ಯವಾಗದೇ ಹೋದರೆ ಇದುವೇ ಮುಂದೆ
ಗಂಭೀರ ಡಿಪ್ರೆಶನ್ ಆಗಿ ಬದಲಾಗಿ ಬಿಡುತ್ತದೆ. ಸಾಮಾನ್ಯವಾಗಿ ಈ ಆರೋಗ್ಯ ಸಮಸ್ಯೆಯನ್ನು ತಾಯ್ತನದ ಅನನುಭವ ಅಥವಾ ಹೊಸ ವಾತಾವರಣಕ್ಕೆ ಒಗ್ಗಿಕೊಳ್ಳದೇ ಇರುವುದರಿಂದ ಆಗುವ ಪರಿಣಾಮ ಎಂದು ನಾವು ವ್ಯಾಖ್ಯಾನಿಸಬಹುದಾದರೂ ಆಂತರಿಕವಾಗಿ ಇದರ ಜೊತೆ ನಮ್ಮ ಬದಲಾದ ಜೀವನ ಶೈಲಿಗೆ ಬಲವಾದ ಸಂಬಂಧವಿದೆ. ಮಕ್ಕಳ ಸಂಖ್ಯೆಯ ಬಗ್ಗೆ ಅವಿಭಕ್ತ ಮತ್ತು ವಿಭಕ್ತ ಕುಟುಂಬಗಳಲ್ಲಿ ಭಿನ್ನ ಲೆಕ್ಕಾಚಾರವಿದೆ. ಪತಿ ಮತ್ತು ಪತ್ನಿ ಇಬ್ಬರು ಉದ್ಯೋಗಸ್ಥರಾಗಿರು ವಲ್ಲಿ ಒಂದೇ ಮಗು ಸಿದ್ಧಾಂತ ಹೆಚ್ಚು ಪ್ರಾಬಲ್ಯವನ್ನು ಪಡೆಯುತ್ತದೆ. ಆದರೆ ಹಾಗಿಲ್ಲದ ಕುಟುಂಬಗಳಲ್ಲಿ ಮಕ್ಕಳ ಸಂಖ್ಯೆಯ ಬಗ್ಗೆ ಇಷ್ಟು ಕಟ್ಟುನಿಟ್ಟಿಲ್ಲ. ಈ ದೇಶದಲ್ಲಿ ಜನಸಂಖ್ಯೆಯ ಕುರಿತಂತೆ ಸರಕಾರ ಎಷ್ಟೇ ಭೀತಿಯನ್ನು ಹರಡಲಿ, ದೇಶದ ಒಟ್ಟು ಫಲವತ್ತತೆಯ ಪ್ರಮಾಣ(TFR)ದಲ್ಲಿ ತೀವ್ರ ಇಳಿಮುಖವಾಗುತ್ತಿರುವುದಾಗಿ ಇತ್ತೀಚಿನ ಅಂಕಿ ಸಂಖ್ಯೆಗಳು ಸ್ಪಷ್ಟವಾಗಿ ವಿವರಿಸುತ್ತಿವೆ.
 ಕಳೆದವಾರ ಜಪಾನಿನ ಪ್ರತಿನಿಧಿಗಳು ಸುಮಾರು 4 ಲಕ್ಷ ನೌಕರರ ಬೇಡಿಕೆಯೊಂದಿಗೆ ಈ ದೇಶಕ್ಕೆ ಬಂದಿದ್ದರು. ಜಪಾನಿನಲ್ಲಿ ಒಟ್ಟು ಫಲವತ್ತತೆಯ ಪ್ರಮಾಣ (TFR) ಅತ್ಯಂತ ಅಪಾಯಕಾರಿ ಮಟ್ಟದಲ್ಲಿದೆ. ಅದು ಈಗ 1.41ರಲ್ಲಿದೆ. ಈ ಪ್ರಮಾಣದಲ್ಲಿ ಒಂದಿಷ್ಟು ಇಳಿಮುಖವಾದರೂ ಮುಂದೆ ಸರಿಪಡಿಸಿಕೊಳ್ಳಲಾಗದ ಸ್ಥಿತಿಗೆ ಜಪಾನ್ ತಲುಪಲಿದೆ ಎಂದು ಹೇಳಲಾಗುತ್ತದೆ. ಭಾರತ ದಲ್ಲಿ ಜನಸಂಖ್ಯೆಯ ಸಮತೋಲನ ಮಟ್ಟವನ್ನು 2.1 ಎಂದು ನಿಗದಿಪಡಿಸಲಾಗಿದೆ. ಆಂಧ್ರ, ತಮಿಳುನಾಡು, ಕೇರಳ, ಗೋವಾ, ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಸಿಕ್ಕಿಮ್, ತ್ರಿಪುರ, ದೆಹಲಿ, ಲಕ್ಷದ್ವೀಪ, ಅಂಡಮಾನ್-ನಿಕೋಬಾರ್, ದಿಯು ಮತ್ತು ದಾಮನ್ ಮುಂತಾದುವು ಈಗಾಗಲೇ ನಿಗದಿತ 2.1ರ ಪ್ರಮಾಣದಿಂದ ಕೆಳಗಿಳಿದು 1.9 ಮತ್ತು 1.7ರ ನಡುವೆ ತೂಗಾಡುತ್ತಿದೆ. ಕರ್ನಾಟಕದ ಒಟ್ಟು ಫಲವತ್ತತೆಯ ಪ್ರಮಾಣ 1.8. ಕೊಲ್ಕತ್ತಾವಂತೂ ಭಾರತದಲ್ಲೇ ಅತ್ಯಂತ ಕಡಿಮೆ ಫಲವತ್ತತೆಯನ್ನು ಹೊಂದಿದ ನಗರವಾಗಿ ಗುರುತಿಸಿಕೊಂಡಿದೆ. ಚೀನಾದ ಫಲವತ್ತತೆಯ ಪ್ರಮಾಣ 1.5 ಆದರೆ ಯುರೋಪಿಯನ್ ಯೂನಿಯನ್‍ನ ಪ್ರಮಾಣ 1.6. ಇದೇ ವೇಳೆ 2011ರ ಗಣತಿಯ ಪ್ರಕಾರ ಕೋಲ್ಕತ್ತಾದ ಫಲ ವತ್ತತೆಯ ಪ್ರಮಾಣ 1.2. ಚೆನ್ನೈ ಮತ್ತು ಮುಂಬೈಯ ಪ್ರಮಾಣ 1.4, ಹÉೈದರಾಬಾದ್ 1.6 ಮತ್ತು ಬೆಂಗಳೂರು 1.7. ನಿಜವಾಗಿ ನಮ್ಮ ಕುಟುಂಬ ವ್ಯವಸ್ಥೆಗೂ ಮತ್ತು ಫಲವತ್ತತೆ ಹಾಗೂ ಪ್ರಸವಾ ನಂತರದ ಖಿನ್ನತೆಗೂ ಆಂತರಿಕವಾದ ಸಂಬಂಧ ಇದೆ. ನಗರಗಳಲ್ಲಿ ಫಲವತ್ತತೆಯ ಪ್ರಮಾಣ ತೀವ್ರಗತಿಯಲ್ಲಿ ಇಳಿಮುಖವಾಗುತ್ತಿರುವುದನ್ನು ಮಾಧ್ಯಮಗಳಾಗಲಿ ಸರಕಾರಗಳಾಗಲಿ ಇವತ್ತು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅದರ ಬದಲು ಬಿಹಾರ, ಗುಜರಾತ್, ಅಸ್ಸಾಮ್, ಒಡಿಸ್ಸಾ ಮುಂತಾದ ರಾಜ್ಯಗಳಲ್ಲಿ ಫಲವತ್ತತೆಯ ಪ್ರಮಾಣ 2.2ರಿಂದ 2.3ರ ನಡುವೆ ಇರುವುದನ್ನು ಆತಂಕಕಾರಿಯೆಂದು ಬಿಂಬಿಸುವ ಯತ್ನಗಳು ನಡೆಯುತ್ತಿವೆ. ಹಾಗಂತ,
 ಈ ಎಲ್ಲ ರಾಜ್ಯಗಳಲ್ಲೂ ಫಲವತ್ತತೆಯ ಪ್ರಮಾಣ 2.1ಕ್ಕೆ ಬಂದು ತಲುಪಿತೆಂದೇ ಇಟ್ಟುಕೊಳ್ಳಿ. ಅದು ಅಲ್ಲಿಗೇ ನಿಲ್ಲಬಹುದೇ? ಈಗಾಗಲೇ ಫಲವತ್ತತೆಯ ಪ್ರಮಾಣ ನಗರಗಳಲ್ಲಂತೂ ತೀವ್ರಗತಿಯಲ್ಲಿ ಇಳಿಮುಖವಾಗುತ್ತಲೇ ಇದೆ. ಅದು ಉಳಿದ ಪ್ರದೇಶಗಳಿಗೂ ಇದೇ ಪ್ರಮಾಣದಲ್ಲಿ ಹಬ್ಬದೇ ಇರುವುದಕ್ಕೆ ಯಾವ ಕಾರಣವೂ ಇಲ್ಲ. ಹೀಗಿರುವಾಗ ಈ ಇಳಿಕೆಯನ್ನು ತಡೆಯುವುದಕ್ಕೆ ನಮ್ಮಲ್ಲಿ ಯಾವ ಮಂತ್ರದಂಡವಿದೆ? ಚೀನಾ, ಜಪಾನ್, ಇಟಲಿಯಂಥ ರಾಷ್ಟ್ರಗಳು ಈಗಾಗಲೇ ‘ವೃದ್ಧ ದೇಶ'ದ ಭೀತಿಯಿಂದ ಥರಗುಟ್ಟುತ್ತಿವೆ. ಮಕ್ಕಳನ್ನು ಹೊಂದುವಂತೆ ದಂಪತಿಗಳಿಗೆ ಒತ್ತಾಯಿಸುತ್ತಿವೆ. ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರಂತೂ ಎಲ್ಲ ದಂಪತಿಯರೂ ಎರಡು ಮಕ್ಕಳನ್ನು ಹೊಂದುವಂತೆ ಕರೆ ಕೊಟ್ಟಿದ್ದಾರೆ. ನಿಜವಾಗಿ, ನಗರ ಜೀವನ ಜನಪ್ರಿಯವಾಗುತ್ತಿರುವ ಇಂದಿನ ದಿನಗಳಲ್ಲಿ ಫಲವತ್ತತೆಯ ಪ್ರಮಾಣವನ್ನು ಇಳಿಸುವ ಪ್ರಯತ್ನವು ಜನಸಂಖ್ಯಾ ಸಮತೋಲನವನ್ನು ದಿಕ್ಕು ತಪ್ಪಿಸುವ ಅಪಾಯಕಾರಿ ಸೂಚನೆಯನ್ನು ನೀಡುವುದಷ್ಟೇ ಅಲ್ಲ, ಬೇಬಿ ಬ್ಲೂವ್ಸ್ ಮತ್ತು ಪಿಪಿಡಿಯಲ್ಲಿ ಏರಿಕೆಯನ್ನೂ ಉಂಟು ಮಾಡಲಾರದೇ? ನಗರ ಜೀವನದ ಒತ್ತಡದಲ್ಲಿ ಒಂದು ಮಗುವೇ ಭಾರವಾಗಬಹುದಾದ ಇಂದಿನ ವಾತಾವರಣವನ್ನೊಮ್ಮೆ ಕಲ್ಪಿಸಿಕೊಳ್ಳಿ ಮತ್ತು ಈ ಜೀವನಕ್ರಮದ ಉಪ ಉತ್ಪತ್ತಿಯಾದ ಖಿನ್ನತೆ(ಪಿಪಿಡಿ)ಯನ್ನು ಎದುರಿಟ್ಟುನೋಡಿ. ಏನನಿಸುತ್ತದೆ?
        ಕಳೆದ ವಾರ ಕೇರಳದ ಕಣ್ಣೂರಿನ ಪೆರಿಯಾರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಐದನೇ ಮಹಡಿಯಿಂದ ಬಾಣಂತಿ ಮಹಿಳೆ ಸಿಮಿ ಎಂಬವರು ಖಿನ್ನತೆಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿ ಕೊಂಡಿರುವ ಸುದ್ದಿಯನ್ನು ಓದುತ್ತಾ ಇವೆಲ್ಲ ನೆನಪಾಯಿತು