Thursday, May 26, 2016

ಅಂತಕರಣವನ್ನು ಮೀಟುವ 'ಕರೆ'..

      ಬಸ್ ನಿಲ್ದಾಣ. ಅಲ್ಲೇ  ಪಕ್ಕದಲ್ಲಿ ಬಿಳಿ ಟೊಪ್ಪಿ ಧರಿಸಿರುವ ಗಡ್ಡಧಾರಿ ಯುವಕನೊಬ್ಬ ಪತ್ರಿಕೆಗಳನ್ನು ಅಚ್ಚುಕಟ್ಟಾಗಿ ಇಡುತ್ತಿರುತ್ತಾನೆ. ಒಬ್ಬಿಬ್ಬರನ್ನು ಬಿಟ್ಟರೆ ಬಸ್ ನಿಲ್ದಾಣದಲ್ಲಿ ಜನರೇ ಇಲ್ಲ. ಒಂದು ಬಗೆಯ ನೀರವ ಮೌನ. ತುಸು ದೂರದಲ್ಲಿ ಗಟ್ಟಿಮುಟ್ಟಾದ ಯುವಕನೊಬ್ಬ ಮೊಬೈಲ್‍ನಲ್ಲಿ ಬಿಝಿಯಾಗಿದ್ದಾನೆ. ಕಿವಿಗಳನ್ನು ಇಯರ್‍ಫೋನ್ ಮುತ್ತಿಕೊಂಡಿದೆ. ಆತನ ಹಾವಭಾವ, ಉಡುಗೆ-ತೊಡುಗೆ, ನಡಿಗೆಯ ಶೈಲಿ, ಬ್ಯಾಗು.. ಎಲ್ಲವೂ ಆತನನ್ನು ಓರ್ವ ವಿದ್ಯಾವಂತ ಯುವಕನಂತೆ ತೋರಿಸುತ್ತಿದೆ. ಅದೇ ವೇಳೆ, ಓರ್ವ ಮಧ್ಯ ವಯಸ್ಕ ಬೈಕ್‍ನಲ್ಲಿ ಬರುತ್ತಾನೆ. ಬೈಕನ್ನು ಒಂದು ಕಡೆ ನಿಲ್ಲಿಸಿ ಜೇಬಿನಿಂದ ಮೊಬೈಲ್ ಎತ್ತಿ ಕರೆ ಸ್ವೀಕರಿಸುತ್ತಾನೆ. ಆದರೆ, ಕರೆ ಸರಿಯಾಗಿ ಕೇಳಿಸುವುದಿಲ್ಲ. ಮೊಬೈಲ್  ಕೈಕೊಟ್ಟಿದೆ ಎಂದು ಆತನಿಗೆ ಸ್ಪಷ್ಟವಾಗುತ್ತದೆ. ಬಹುಶಃ ಚಾರ್ಜ್ ಮುಗಿದಿರಬೇಕು. ಆತ ಆ ವಿದ್ಯಾವಂತ ಯುವಕನ ಬಳಿ ಸಾಗಿ ಒಮ್ಮೆ ಮೊಬೈಲ್ ಕೊಡಬಹುದಾ, ತುರ್ತು ಕರೆ ಮಾಡಬೇಕಿತ್ತು.. ಎಂದು ವಿನಂತಿಸುತ್ತಾನೆ. ಯುವಕ ಕಿವಿಯಿಂದ ವಯರ್ ಅನ್ನು ಕಿತ್ತು ಏನು ಎಂಬಂತೆ ಒಂದು ಬಗೆಯ ತಿರಸ್ಕಾರ ಭಾವದಿಂದ ಪ್ರಶ್ನಿಸುತ್ತಾನೆ. ‘ಹೋಗಯ್ಯ, ಜಮಾನಾ ಖರಾಬ್ ಸಾಬ್..' ಎಂದು ನಿರಾಕರಿಸುತ್ತಾನೆ. ಮಧ್ಯವಯಸ್ಕ ಮೊಬೈಲ್‍ಗಾಗಿ ಬಸ್ ನಿಲ್ದಾಣದಲ್ಲಿರುವವರಲ್ಲಿ ವಿನಂತಿಸುತ್ತಾ ಹೋಗುತ್ತಾನೆ. ಯಾರೂ ಕೊಡಲ್ಲ. ಆತನಿಗೆ ತೀವ್ರ ನಿರಾಶೆಯಾಗುತ್ತದೆ. ಮುಖದಲ್ಲಿ ದುಃಖದ ಕಡಲು. ಏನೂ ತೋಚದಂತಾಗಿ ಆತ ಮಂಜಾದ ಕಣ್ಣಿನೊಂದಿಗೆ ಬಸ್ ನಿಲ್ದಾಣದಲ್ಲಿ ಕೂರುತ್ತಾನೆ. ಇದೇ ವೇಳೆ ಇವೆಲ್ಲವನ್ನೂ ವೀಕ್ಷಿಸುತ್ತಿದ್ದ ಗಡ್ಡಧಾರಿ ಪತ್ರಿಕಾ ಮಾರಾಟಗಾರ ಯುವಕ ಆತನ ಬಳಿ ಸಾಗಿ ಮೊಬೈಲ್ ಕೊಡುತ್ತಾನೆ. ಆತ ಅತೀವ ತುರ್ತಿನೊಂದಿಗೆ ಮೊಬೈಲ್ ಸ್ವೀಕರಿಸಿ ಕರೆ ಮಾಡುತ್ತಾನೆ. ‘ಹೇಳು ಪ್ರಿಯಾ, ಏನಾಯ್ತು...' ಎಂದು ಕೇಳುತ್ತಾನೆ. ಬಳಿಕ ನಿಧಾನಕ್ಕೆ ಕಣ್ಣೀರು ಹರಿಯತೊಡಗುತ್ತದೆ. ಮಾತು ತಡ ವರಿಸುತ್ತದೆ. ಈ ಮೊದಲು ಮೊಬೈಲ್ ಕೊಡಲು ನಿರಾಕರಿಸಿದವರು ಹತ್ತಿರ ಬರುತ್ತಾರೆ. ಕಣ್ಣೀರಿನ ಕಾರಣಗಳನ್ನು ಕೇಳುತ್ತಾರೆ. ಆದರೆ ಆತನಿಗಾದರೋ ಬಾಯಿ ಕಟ್ಟಿರುವಷ್ಟು ದುಃಖ. ತನ್ನ ಮಗಳು ಮನೆಯ ಮಾಡಿನಿಂದ ಬಿದ್ದದ್ದು, ಕೊನೆಯುಸಿರಿಗಿಂತ ಮೊದಲು ತಂದೆಯೊಂದಿಗೆ ಮಾತಾಡಬೇಕೆಂದು ಬಯಸಿದ್ದು ಹಾಗೂ ಹಾಗೇ ಮಾತಾಡುವ ಸಂದರ್ಭದಲ್ಲೇ ತನ್ನ ಮೊಬೈಲ್ ಕೈ ಕೊಟ್ಟಿದ್ದು.. ಆತ ಹೇಳುತ್ತಾ ಹೋಗುವಾಗ ಸುತ್ತಲಿನವರ ಹೃದಯಕ್ಕೆ ಚುಚ್ಚಿದ ಅನುಭವವಾಗುತ್ತದೆ. ಒಂದು ವೇಳೆ, ನೀವು ನನಗೆ ಮೊಬೈಲ್ ಕೊಡುತ್ತಿದ್ದರೆ ಮಗಳೊಂದಿಗೆ ಕೊನೆಯ ಬಾರಿ ಮಾತಾಡುತ್ತಿದ್ದೆ, ಆಕೆಯ ಕಟ್ಟಕಡೆಯ ಆಸೆಯನ್ನು ಪೂರೈಸುತ್ತಿದ್ದೆ.. ಅನ್ನುತ್ತಾ ಬಿಕ್ಕುತ್ತಾನೆ. ಸುತ್ತಲೂ ಮೌನ ಆವರಿಸುತ್ತದೆ.
  ಗೆಳೆಯ ಶೌಕತ್ ಅಲಿ ಅವರು ನಿರ್ದೇಶಿಸಿರುವ ನಾಲ್ಕು ನಿಮಿಷಗಳ ‘Only One Cal  Plz..' (ಒಂದೇ ಒಂದು ಕರೆ -ದಯವಿಟ್ಟು) ಎಂಬ ಈ ಕಿರುಚಿತ್ರ ಇಷ್ಟವಾಗುವುದು ಮಾನವ ಸಂಬಂಧಗಳ ಕುರಿತಾದ ಅದರ ಕಳಕಳಿಯಿಂದಾಗಿ.. ಮನುಷ್ಯನಿಗೆ ಮನುಷ್ಯನ ಮೇಲೆ ಇರುವಷ್ಟು ಅಪನಂಬಿಕೆ ಇವತ್ತು ಯಂತ್ರಗಳ ಮೇಲೂ ಇರದಷ್ಟು ಈ ಕ್ಷೇತ್ರ ಹದಗೆಟ್ಟು ಹೋಗುತ್ತಿದೆ. ಇವತ್ತು ಟೊಪ್ಪಿ ಧರಿಸಿದ ಗಡ್ಡಧಾರಿ ವ್ಯಕ್ತಿಯನ್ನು ಅಥವಾ ಉದ್ದ ನಾಮ ಹಾಕಿದ ಮತ್ತು ಕೈಯಲ್ಲಿ ಕೇಸರಿ ನೂಲುಗಳನ್ನು ಧರಿಸಿರುವ ವ್ಯಕ್ತಿಯನ್ನು ಇಲ್ಲವೇ ಬುರ್ಖಾ ಅಥವಾ ಕೇಸರಿ ಉಡುಪು ಧರಿಸಿರುವವರನ್ನು ಅನೇಕರು ನೋಡುವುದೇ ಅನುಮಾನದ ಕಣ್ಣಿನಿಂದ. ಒಂದು ಕಡೆ ಬುರ್ಖಾ, ಗಡ್ಡ, ಟೊಪ್ಪಿ, ನೂಲು, ಕೇಸರಿ ಉಡುಪು.. ಮುಂತಾದ ಧಾರ್ಮಿಕ ಎನ್ನಬಹುದಾದ ಕುರುಹುಗಳು. ಇನ್ನೊಂದು ಕಡೆ, ಇವೇ ಕುರುಹುಗಳು ಮನುಷ್ಯರನ್ನು ಪ್ರತ್ಯೇಕಿಸುವ ಸಂಕೇತ ಗಳೂ ಆಗುತ್ತಿವೆ. ಇದಕ್ಕಿರುವ ಕಾರಣಗಳು ಏನು? ಈ ಕಿರುಚಿತ್ರದಲ್ಲಿರುವ ಮಧ್ಯ ವಯಸ್ಕ ವ್ಯಕ್ತಿಯಲ್ಲೂ ಈ ಮನೋಭಾವ ಅಸ್ಪಷ್ಟವಾಗಿ ಕಾಣಿಸುತ್ತದೆ. ಆತ ಒಂದು ಕರೆಗಾಗಿ ಎಲ್ಲರನ್ನೂ ಸಂಪರ್ಕಿಸುತ್ತಾನೆ. ಆದರೆ ಟೊಪ್ಪಿಧಾರಿ ಅಲ್ಲೇ ಇದ್ದರೂ ಸಂಪರ್ಕಿಸುವುದಿಲ್ಲ. ಆದರೆ ಅಂತಿಮವಾಗಿ ಮಧ್ಯ ವಯಸ್ಕನ  ಮೇಲೆ ವಿಶ್ವಾಸವಿಟ್ಟು ಮೊಬೈಲ್ ಕೊಡುವುದು ಆ ಪತ್ರಿಕಾ ಮಾರಾಟಗಾರನೇ. ಅಂತಃಕರಣ ಒಣಗಿ ಹೋಗಿರುವ ಆಧುನಿಕ ಜಗತ್ತಿನ ಮನುಷ್ಯರ ಕುರಿತಂತೆ ಈ ಕಿರುಚಿತ್ರ ಮತ್ತೆ ಮತ್ತೆ ಎಚ್ಚರಿಸುತ್ತದೆ. ನಿಜವಾಗಿ, ಆ ಮಧ್ಯ ವಯಸ್ಕನಿಗಿಂತಲೂ ನಮ್ಮನ್ನು ಕಾಡಬೇಕಾದ ಪಾತ್ರ ಆ ಟೊಪ್ಪಿಧಾರಿ ಯುವಕನದ್ದು. ಆತ ಮನುಷ್ಯ ಸಂಬಂಧದ ಗಿಲೀಟುತನವನ್ನು ಬಿಚ್ಚಿಡುತ್ತಾನೆ. ಒಂದಿಡೀ ಕರುಣಕತೆಗೆ ಸಾಕ್ಷಿಯಾಗುತ್ತಾನೆ. ವೇಷ-ಭೂಷಣಗಳ ಆಧಾರದಲ್ಲಿ ನಿರ್ಮಿತವಾಗಿರುವ ಮಾನವ ಸಂಬಂಧಗಳ ಪೊಳ್ಳುತನವನ್ನು ಪ್ರಶ್ನಿಸುತ್ತಾನೆ. ಆದ್ದರಿಂದಲೇ, ಆತ ಕೊಡುವ ಮೊಬೈಲ್ ಬರೇ ಕರೆಗಾಗಿರುವ ಒಂದು ಸಂಪರ್ಕ ಸಾಧನವಾಗಿಯಷ್ಟೇ ಕಾಣುವುದಿಲ್ಲ, ಬದಲಾಗಿ ಪ್ರಚಲಿತ ಜಗತ್ತಿಗೆ ಹಿಡಿಯುವ ಭೂತಗನ್ನಡಿಯಾಗಿಯೂ ಗೋಚರಿಸುತ್ತದೆ..
  ತಮಾಷೆ ಏನೆಂದರೆ, ಆಧುನಿಕ ತಂತ್ರಜ್ಞಾನಗಳು ಮನುಷ್ಯರನ್ನು ಹತ್ತಿರವಿದ್ದೂ ದೂರಗೊಳಿಸುತ್ತವೆ ಎಂಬುದನ್ನು ಹೇಳುವುದಕ್ಕೆ ಇವತ್ತು ಬಳಕೆಯಾಗುತ್ತಿರುವ ಮಾಧ್ಯಮವೂ ಆಧುನಿಕ ತಂತ್ರಜ್ಞಾನಗಳೇ ಎಂಬುದು. ಕಿರುಚಿತ್ರಗಳು ಇವತ್ತು ಎಷ್ಟು ಪ್ರಭಾವಶಾಲಿ ಮಾಧ್ಯಮವೆಂದರೆ, ಮೂರು ಗಂಟೆಯ ಸಿನಿಮಾ ಹೇಳುವುದಕ್ಕಿಂತಲೂ ಹೆಚ್ಚಿನದನ್ನು ನಾಲ್ಕೈದು ನಿಮಿಷಗಳ ಕಿರುಚಿತ್ರಗಳು ಅತ್ಯಂತ ಪರಿಣಾಮಕಾರಿಯಾಗಿ ಹೇಳಿಬಿಡುತ್ತವೆ. ಸಿನಿಮಾಗಳಿಗಾದರೋ ಕೋಟ್ಯಂತರ ರೂಪಾಯಿಗಳ ಬಜೆಟ್ ಬೇಕು. ಹೀರೋ ಬೇಕು. ಹೀರೋಯಿನ್ ಬೇಕು. ವಿಲನ್ ಬೇಕು. ಹಾಡು, ಕುಣಿತ, ಫೈಟು, ನಗು, ರೋಮ್ಯಾನ್ಸ್, ದೃಶ್ಯ ವೈಭವ ಮುಂತಾಗಿ ಎಲ್ಲವೂ ಬೇಕು. ಸೆಕೆಂಡ್‍ಗಳಲ್ಲಿ ತೀರಾ ಮನಮುಟ್ಟುವಂತೆ ಹೇಳಬಹುದಾದುದನ್ನು ನಿಮಿಷಗಳ ವರೆಗೆ ಎಳೆದಾಡಬೇಕಾದ ಅನಿವಾರ್ಯತೆಯೊಂದು ಅಲ್ಲಿರುತ್ತದೆ. ಅದೊಂದು ಭಿನ್ನ ಕ್ಷೇತ್ರ. ಅದಕ್ಕೆ ಹೋಲಿಸಿದರೆ ಕಿರುಚಿತ್ರಗಳ ಜಗತ್ತಿನ ಸೊಗಸೇ ಬೇರೆ. ಇಲ್ಲಿ ಪಾತ್ರಗಳ ವೈಭವೀಕರಣ ಇಲ್ಲ. ಎಲಾಸ್ಟಿಕ್ ನೀತಿಗೆ ಸಮಯವೂ ಇಲ್ಲ. ವಿಲನ್, ಹೀರೋ, ಹೀರೋಯಿನ್, ಹಾಡು ಯಾವುದರ ಅಗತ್ಯವೂ ಇಲ್ಲದೇ ನೇರಾತಿನೇರವಾಗಿ ಕೆಲವೇ ನಿಮಿಷಗಳಲ್ಲಿ ವಿಷಯವನ್ನು ಮಂಡಿಸುವ ವಿಧಾನ ವೀಕ್ಷಕರನ್ನು ಬೇಗನೇ ತಟ್ಟುತ್ತದೆ. ಒಂದು ಸಣ್ಣ ಕಿರುಚಿತ್ರ ದೊಡ್ಡ ಬಜೆಟ್ಟಿನ ಸಿನಿಮಾಗಿಂತಲೂ ಪ್ರಭಾವಶಾಲಿಯಾಗಬಹುದಾದ ಎಲ್ಲ ಸಾಧ್ಯತೆಗಳೂ ಇವೆ. 19 ವರ್ಷದ ಗುಲ್‍ಮೆಹರ್ ಕೌರ್ ಎಂಬ ಯುವತಿಯ ಕಿರುಚಿತ್ರವನ್ನು ಈ ನಿಟ್ಟಿನಲ್ಲಿ  ಉಲ್ಲೇಖಿಸಬಹುದು. ಈಕೆ ಪಂಜಾಬ್‍ನ ಜಾಲಂಧರ್ ನವಳು. ಈ ಯುವತಿಯ ಬದುಕಿಗೊಂದು ನೋವಿನ ಹಿನ್ನಲೆಯಿದೆ. 1999ರ ಕಾರ್ಗಿಲ್ ಸಮರದಲ್ಲಿ ಈಕೆಯ ತಂದೆ ಕ್ಯಾಪ್ಟನ್ ಮನ್‍ದೀಪ್ ಸಿಂಗ್ ಸಾವಿಗೀಡಾದರು. ಆ ಘಟನೆ ಗುರ್‍ಮೆಹರ್‍ಳ ಮೇಲೆ ತೀವ್ರ ಪರಿಣಾಮವನ್ನು ಬೀರಿತು. ಆಕೆ 6 ವರ್ಷದವಳಿದ್ದಾಗ ಓರ್ವ ಬುರ್ಖಾಧಾರಿಗೆ ಇರಿಯಲು ಯತ್ನಿಸಿದಳು. ಯಾಕೆ ಹಾಗೆ ಮಾಡಿದಳೆಂದರೆ, ತನ್ನ ತಂದೆಯನ್ನು ಹತ್ಯೆ ಮಾಡಿದವರು ಮುಸ್ಲಿಮರು ಎಂಬ ಕಾರಣದಿಂದ. ಎಲ್ಲ ಮುಸ್ಲಿಮರನ್ನು ಆಕೆ ದ್ವೇಷಿಸುತ್ತಿದ್ದಳು. ಆದರೆ ತಾಯಿ ತಿದ್ದಿದರು. ಕ್ರಮೇಣ ಗುರ್‍ಮೆಹರ್ ಕೌರ್ ಎಲ್ಲವನ್ನೂ ತೆರೆದ ಮನಸ್ಸಿನಿಂದ ನೋಡತೊಡಗಿದಳು. ತಾನು ದ್ವೇಷಿಸಬೇಕಾದದ್ದು ಪಾಕಿಸ್ತಾನವನ್ನಲ್ಲ, ಯುದ್ಧವನ್ನು ಎಂಬುದಾಗಿ ತಿಳಿದುಕೊಂಡಳು. ಎರಡು ವಿಶ್ವ ಯುದ್ಧಗಳಲ್ಲಿ ವೈರಿಗಳಾಗಿ ಸೆಣಸಾಡಿದ ಜರ್ಮನಿ ಮತ್ತು ಫ್ರಾನ್ಸ್ ಗಳು ಇವತ್ತು ಗೆಳೆಯರಾಗಿ ಬದುಕಬಹುದಾದರೆ ಭಾರತ ಮತ್ತು ಪಾಕಿಸ್ತಾನಗಳಿಗೇಕೆ ಇದು ಸಾಧ್ಯವಿಲ್ಲ ಎಂಬುದು ಆಕೆಯ ಪ್ರಶ್ನೆ. ತನ್ನ ಮೇಲೆ ಎರಡು ಅಣುಬಾಂಬ್‍ಗಳನ್ನು ಸುರಿಸಿದ ಹೊರತಾಗಿಯೂ ಅಮೇರಿಕದೊಂದಿಗೆ ಜಪಾನ್ ಸೌಹಾರ್ದ ಸಂಬಂಧ ಬೆಳೆಸಬಹುದಾದರೆ ನಮಗೇಕೆ ಅಸಾಧ್ಯ ಎಂದು ಪ್ರಶ್ನಿಸುತ್ತಾಳೆ ಆಕೆ. ‘ಸಾಕು ಮಾಡಿ ದ್ವೇಷವನ್ನು, ಸರಕಾರಿ ಭಯೋತ್ಪಾದನೆಯನ್ನು ಮತ್ತು ಗಡಿಯಲ್ಲಿನ ಸಾವನ್ನು..’ ಹೀಗೆ ಆ ಯುವತಿ ಕಿರುಚಿತ್ರದಲ್ಲಿ ಆಕ್ರೋಶಿಸುತ್ತಾಳೆ. ‘#Profileforpeace’ ಎಂಬ ಹೆಸರಿನ ಈ ಪುಟ್ಟ ಕಿರುಚಿತ್ರದ ವಿಶೇಷತೆ ಏನೆಂದರೆ, ಇದರಲ್ಲಿ ಮಾತುಗಳೇ ಇಲ್ಲ. ಎಲ್ಲವೂ ಮೌನ. ಆಕೆ ಇವೆಲ್ಲವನ್ನೂ ಹೇಳುವುದಕ್ಕೆ Placardಗಳನ್ನಷ್ಟೇ ಬಳಸುತ್ತಾಳೆ. ಸುಮಾರು 30ರಷ್ಟು ಪ್ಲಕಾರ್ಡ್‍ಗಳು ಈ ಇಡೀ ವಿಷಯವನ್ನು ಪುಟ್ಟಪುಟ್ಟದಾಗಿ ವಿವರಿಸುತ್ತವೆ. ಕುರ್ಚಿಯಲ್ಲಿ ಕೂತು ಒಂದೊಂದೇ ಪ್ಲಕಾರ್ಡನ್ನು ಎತ್ತಿ ತೋರಿಸಿ, ಪಕ್ಕಕ್ಕಿಟ್ಟು ಇನ್ನೊಂದನ್ನು ಎತ್ತಿಕೊಳ್ಳುವ ಆಕೆ ಕೊನೆಯದಾಗಿ ಎದ್ದು ಹೋಗುವಾಗ ಸ್ಕ್ರೀನ್‍ನಲ್ಲಿ, ‘ನೀವು ಶಾಂತಿಯನ್ನು ಬಯಸುವಿರಾದರೆ ಇದನ್ನು ಶೇರ್ ಮಾಡಿ..’ ಎಂಬೊಂದು ವಾಕ್ಯ ಹರಿದಾಡುತ್ತದೆ. ಖಾಲಿ ಕುರ್ಚಿ ಮತ್ತು 30 ಪ್ಲಕಾರ್ಡ್‍ಗಳ ಭಾರವನ್ನು ಹೊತ್ತುಕೊಂಡ ಮೇಜು ಆ ಯುವತಿಯ ಅನುಪಸ್ಥಿತಿಯಲ್ಲೂ ನಮ್ಮನ್ನು ತೀವ್ರವಾಗಿ ಕಾಡುತ್ತದೆ. ಅಂದಹಾಗೆ, ಶಾಂತಿ ಮತ್ತು ದ್ವೇಷದ ಪಾಠವನ್ನು ಓರ್ವ ಯೋಧನ ಕುಟುಂಬಕ್ಕಿಂತ ಚೆನ್ನಾಗಿ ಯಾರೂ ಮಾಡಲಾರರು. ಯಾಕೆಂದರೆ, ಗಡಿಯಲ್ಲಿ ರಾಜಕಾರಣಿಗಳಿರುವುದಿಲ್ಲ. ಅವರ ಮಕ್ಕಳೂ ಇರುವುದಿಲ್ಲ. ‘ಗಡಿಯಲ್ಲಿ ಅಪ್ರಚೋದಿತ ಗುಂಡು’, ‘ಒಳನುಸುಳುವಿಕೆ’, ‘ಯುದ್ಧ’, ‘ಉಗ್ರ ಕಾರ್ಯಾಚರಣೆ..’ ಎಂಬೆಲ್ಲ ಪದಪುಂಜಗಳಲ್ಲಿ ಸುದ್ದಿಯನ್ನು ಕಟ್ಟಿಕೊಡುವ ಪತ್ರಕರ್ತರೂ ಗಡಿಯಲ್ಲಿ ಕಾದಾಡಿರುವುದಿಲ್ಲ. ಆದ್ದರಿಂದಲೇ, ಗುರ್‍ಮೆಹರ್ ಕೌರ್‍ಳ ಕಿರುಚಿತ್ರ ಹೃದಯವನ್ನು ತಟ್ಟುವುದು. ಫೇಸ್‍ಬುಕ್‍ನಲ್ಲಿ ಈ ಕಿರುಚಿತ್ರವನ್ನು ಮಿಲಿಯಾಂತರ ಮಂದಿ ವೀಕ್ಷಿಸಿದರು. ಕೌರ್‍ಳನ್ನು ಬೆಂಬಲಿಸಿದರು. ಎರಡೂ ದೇಶಗಳ ರಾಜಕಾರಣಿಗಳಿಗಾಗಿ ಜೀವ ತೆರುತ್ತಿರುವ ಮನ್‍ದೀಪ್ ಸಿಂಗ್‍ರಂಥ ಅಪ್ಪಂದಿರಿಗಾಗಿ ಮತ್ತು ಗುರ್‍ಮೆಹರ್ ಕೌರ್‍ಳಂಥ ಮಕ್ಕಳಿಗಾಗಿ ದುಃಖಪಟ್ಟರು.  
Only One Cal  Plz.
       ನಿಜವಾಗಿ, ಮನುಷ್ಯರನ್ನು ದೂರಗೊಳಿಸುತ್ತಿರುವುದು ಆಧುನಿಕ ತಂತ್ರಜ್ಞಾನಗಳಲ್ಲ. ಅವು ಮನುಷ್ಯ ವಿರೋಧಿಗಳೂ ಅಲ್ಲ. ‘Mother asked why she didnt have abortion - answer touches hearts of her critics ..’ ಎಂಬ ಹೃದ್ಯ ಕಿರುಚಿತ್ರವನ್ನು ಸಾಧ್ಯವಾಗಿಸಿದ್ದು ಇವೇ ತಂತ್ರಜ್ಞಾನಗಳು. ನೀವು ಕಿರುಚಿತ್ರಗಳ ಜಗತ್ತಿಗೊಮ್ಮೆ ಪ್ರವೇಶಿಸಿದರೆ ಹೃದಯವನ್ನು ಕಣ್ಣೀರಿನಲ್ಲಿ ಅದ್ದಿ ತೆಗೆಯಬಲ್ಲಷ್ಟು ಪ್ರಖರವಾದ ದೃಶ್ಯಗಳಿವೆ. ಹುಟ್ಟುವಾಗಲೇ ಎರಡೂ ಕಣ್ಣು ಕಾಣದ ಮತ್ತು ಕಣ್ಣಿನ ಭಾಗ ಭಯಪಡುವಷ್ಟು ವಿಕಾರವಾಗಿರುವ ಮಗುವನ್ನು ಅಕ್ಕರೆಯಿಂದ ಪೋಷಿಸುವ ಕ್ರಿಸ್ ಬುಕಾನನ್ ಮತ್ತು ಲೇಸಿ ಬುಕಾನನ್ ಎಂಬ ಹೆತ್ತವರನ್ನು ನೋಡಿದರೆ ನೀವು ಮೂಕರಾಗುವಿರಿ. ಇಂಥ ಅಸಂಖ್ಯ ಕಿರು ಚಿತ್ರಗಳು ಇವತ್ತು ಆಧುನಿಕ ತಂತ್ರಜ್ಞಾನಗಳಿಂದಾಗಿ ವೀಕ್ಷಕರಿಗೆ ಲಭ್ಯವಾಗುತ್ತಿವೆ. ಮಾತ್ರವಲ್ಲ, ನಮ್ಮೊಳಗಿನ ಸರ್ವ ಕಲ್ಮಷಗಳಿಗೂ ಒಂದೇಟು ಕೊಟ್ಟು ನಡುಗಿಸುವ ಸಾಮರ್ಥ್ಯವನ್ನೂ ಅವು ಹೊಂದಿವೆ. ದಿನೇ ದಿನೇ ಯಂತ್ರಕ್ಕೆ ಹತ್ತಿರವಾಗುತ್ತಿರುವ ಮತ್ತು ಹಣವನ್ನು ಬೆಂಬತ್ತುವ ತುರ್ತಿನಲ್ಲಿ ಪಕ್ಕದಲ್ಲಿರುವವರನ್ನೂ ಗುರುತಿಸದಷ್ಟು ಬ್ಯುಝಿಯಾಗಿರುವ ಮನುಷ್ಯ ತಾನೆಲ್ಲಿ ಕಳೆದು ಹೋಗುತ್ತಿದ್ದೇನೆ ಎಂಬ ಬಗ್ಗೆ ಅವಲೋಕನ ನಡೆಸಬೇಕು. ತಂತ್ರಜ್ಞಾನಗಳನ್ನು ದೂರುವುದು ಇದಕ್ಕೆ ಉತ್ತರವಲ್ಲ. ಮನುಷ್ಯರ ನಡುವೆ ನಂಬಿಕೆ ಮತ್ತು ವಿಶ್ವಾಸ ಬಹಳ ಪವಿತ್ರವಾದುದು. ಅದಕ್ಕೆ ಧಕ್ಕೆಯಾಗದಂಥ ವಾತಾವರಣವನ್ನು ಎಲ್ಲರೂ ಸೇರಿ ಬೆಳೆಸಬೇಕು. ಈ ಕಾರಣದಿಂದಲೇ,
  ‘Only One Cal  Plz..' ಮತ್ತು  #Profileforpeace ಕಿರುಚಿತ್ರಗಳು ಮುಖ್ಯವಾಗುತ್ತವೆ.

No comments:

Post a Comment