Wednesday, June 15, 2016

ಅಮೆರಿಕದ ಒಂದು ಗೊರಿಲ್ಲಾಕ್ಕೆ ಅಮೆರಿಕೇತರ ಎಷ್ಟು ಮನುಷ್ಯರು ಸಮ ಅಧ್ಯಕ್ಷರೇ?

        1. ಬರಾಕ್ ಒಬಾಮ
  2. ಜಸ್ಟಿನ್ ಟ್ರುಡೇವ್
  3. ಹರಾಂಬೆ
  ಇವುಗಳಲ್ಲಿ ಮೊದಲಿನ ಎರಡು ಹೆಸರುಗಳು ಮನುಷ್ಯರದ್ದಾದರೆ ಮೂರನೆಯದ್ದು ಗೊರಿಲ್ಲಾದ ಹೆಸರು. ಕಳೆದ ಮೇ 27ರಿಂದ ಸುಮಾರು ಎರಡು ವಾರಗಳ ತನಕ ಈ ಮೂರೂ ಹೆಸರುಗಳು ಜಾಗತಿಕವಾಗಿ ಸಾಕಷ್ಟು ಚರ್ಚೆಗೆ ಒಳಗಾದುವು. ಅಮೇರಿಕದ ಹಿಪಾಕ್ರಸಿಗೆ ಅತ್ಯುತ್ತಮ ಉದಾಹರಣೆಯಾಗಿ ಒಬಾಮ ಮತ್ತು ಹರಾಂಬೆಯನ್ನು ಅನೇಕರು ಎತ್ತಿ ತೋರಿಸಿದರು. ಜಪಾನ್‍ನ ಹಿರೋಶಿಮಾ ಮತ್ತು ನಾಗಸಾಕಿಯಲ್ಲಿ ಕನಿಷ್ಠ ಎರಡೂವರೆ ಲಕ್ಷ ಮಂದಿಯನ್ನು ಅಣು ಬಾಂಬ್ ಸುರಿಸಿ ಕೊಂದು ಹಾಕಿದುದಕ್ಕಾಗಿ ಕ್ಷಮೆ ಯಾಚಿಸದ ಒಬಾಮರ ನಾಡು ಯಕಶ್ಚಿತ್ ಗೊರಿಲ್ಲಾವೊಂದರ ಹತ್ಯೆಗಾಗಿ ಆಕ್ರೋಶಿತಗೊಂಡಿದೆ ಎಂದು ಹಲವರು ಕಟಕಿಯಾಡಿದರು. ಅಷ್ಟಕ್ಕೂ,
  ಮೇ 29ರಂದು ಅಮೇರಿಕದ ಸಿನ್‍ಸಿನಾಟಿ ಮೃಗಾಲಯದಲ್ಲಿ 4 ವರ್ಷದ ಮಗುವೊಂದು ಹರಾಂಬೆ ಹೆಸರಿನ ಗೊರಿಲ್ಲಾ ಇರುವ ಕಂದಕಕ್ಕೆ ಉರುಳಿ ಬಿತ್ತು. ಕಂದಕದಲ್ಲಿ ಮಗುವಿನ ಸೊಂಟದೆತ್ತರಕ್ಕೆ ಬರುವಷ್ಟು ನೀರಿದ್ದುದರಿಂದ ಮಗುವಿಗೆ ಗಾಯವೇನೂ ಆಗಲಿಲ್ಲ. ಆದರೆ 17 ವರ್ಷ ಪ್ರಾಯದ ಮತ್ತು 400 ಪೌಂಡ್ ಭಾರ ಇರುವ ಹರಾಂಬೆ ಮಗುವಿನ ಹತ್ತಿರ ಬಂತು. ಮಗುವನ್ನು ಎತ್ತಿಕೊಂಡಿತು. ನೀರಿನಲ್ಲಿ ಅತ್ತಿಂದಿತ್ತ ಎಳೆದುಕೊಂಡು ಹೋಯಿತು. ಸುಮಾರು 10ರಿಂದ 15 ನಿಮಿಷಗಳ ಕಾಲ ಮಗು ಗೊರಿಲ್ಲಾದ ಜೊತೆಗಿತ್ತು. ವರ್ಷದಲ್ಲಿ ಸುಮಾರು 15 ಲಕ್ಷ ಮಂದಿ ಭೇಟಿ ಕೊಡುವ ಪ್ರಸಿದ್ಧ ಮೃಗಾಲಯದಲ್ಲಿ ಭಯಭೀತ ವಾತಾವರಣ. ಜನರು ಬೊಬ್ಬೆ ಹಾಕುತ್ತಿದ್ದರು. ತೆಂಗಿನ ಕಾಯಿಯನ್ನು ಹಲ್ಲಿನಿಂದ ಕಚ್ಚಿ ಪುಡಿ ಮಾಡುವಷ್ಟು ಬಲಶಾಲಿಯಾಗಿರುವ ಹರಾಂಬೆಯ ಕೈಯಿಂದ ಮಗುವನ್ನು ರಕ್ಷಿಸಿ ಎಂದು ಕೂಗಾಡಿದರು. ಕೊನೆಗೆ ಮೃಗಾಲಯದ ಅಧಿಕಾರಿಗಳು ಹರಾಂಬೆಯನ್ನು ಗುಂಡಿಟ್ಟು ಕೊಂದು ಮಗುವನ್ನು ರಕ್ಷಿಸಿದರು. 15 ನಿಮಿಷಗಳಲ್ಲಿ ನಡೆದು ಹೋದ ಈ ಘಟನೆ ಅಮೇರಿಕದಾದ್ಯಂತ ತೀವ್ರ ಚರ್ಚೆಯನ್ನು ಹುಟ್ಟು ಹಾಕಿತು. ಘಟನೆಯ ವೀಡಿಯೋ ವೈರಲ್ ಆಯಿತು. ಅಮೇರಿಕದಲ್ಲಿ ಪರ ಮತ್ತು ವಿರುದ್ಧ ವಾದಗಳು ನಡೆದುವು. ಮಗುವಿನ ತಾಯಿಯ ನಿರ್ಲಕ್ಷ್ಯ ತನಕ್ಕೆ ಹರಾಂಬೆಗೆ ಶಿಕ್ಷೆ ಕೊಟ್ಟದ್ದೇಕೆ ಎಂದು ಅನೇಕರು ಪ್ರಶ್ನಿಸಿದರು. ತಾಯಿಯ ಮೇಲೆ ಮೊಕದ್ದಮೆ ಹೂಡಿ ಎಂದೂ ಆಗ್ರಹಿಸಿದರು. ಹರಾಂಬೆಯ ಪುತ್ಥಳಿಗೆ ಹೂಹಾರ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದರು. ಜಸ್ಟಿಸ್ ಫಾರ್ ಹರಾಂಬೆ (ಹರಾಂಬೆಗೆ ನ್ಯಾಯ ಸಿಗಲಿ) ಎಂಬ ಹೆಸರಲ್ಲಿ ಫೇಸ್‍ಬುಕ್‍ನಲ್ಲಿ ಒಂದು ಪುಟವೇ ತೆರೆಯಿತು. ಒಂದೇ ದಿನದೊಳಗೆ 11 ಸಾವಿರ ಲೈಕ್‍ಗಳನ್ನು ಅದು ಗಿಟ್ಟಿಸಿಕೊಂಡಿತು. ಹರಾಂಬೆಯಂಥ ಪ್ರಾಣಿಗಳ ರಕ್ಷಣೆಗಾಗಿ ಕಾನೂನು ಜಾರಿ ಮಾಡಬೇಕೆಂದು ಆಗ್ರ ಹಿಸಿ Petitiononcharge.org  ಎಂಬ ನೆಟ್ ತಾಣವನ್ನು ಆರಂಭಿಸಲಾಯಿತು. ಇದಕ್ಕೆ ಮೂರು ದಿನಗಳಲ್ಲಿ 4 ಲಕ್ಷ ಸಹಿ ಸಂಗ್ರಹವಾಯಿತು. ಪ್ರಾಣಿ ದಯಾ ಸಂಘವಾದ PETA (People for ethical treatment of animals)ವು ಸಿನ್‍ಸಿನಾಟಿ ಮೃಗಾಲಯಕ್ಕೆ ಇನ್ನೊಂದು ಸುತ್ತು ಬೇಲಿ ಹಾಕುವಂತೆ ಒತ್ತಾಯಿಸಿತು. ಈ ನಡುವೆ ಅಮೇರಿಕದ ಲಾಸ್ ಏಂಜಲೀಸ್‍ನಿಂದ ಪ್ರಸಾರವಾಗುವ ರೇಡಿಯೋ ಕಾರ್ಯಕ್ರಮದಲ್ಲಿ ಪ್ರತಿದಿನ ಲೈವ್ ಕಾರ್ಯಕ್ರಮವನ್ನು ಏರ್ಪಡಿಸುವ ಪ್ರಸಿದ್ಧ ರೇಡಿಯೋ ನಿರೂಪಕ ಡೆನ್ನಿಸ್ ಪ್ರಾಗರ್ ಅವರು ಈ ಘಟನೆಗೆ ತಾಳೆಯಾಗುವ ಕಾರ್ಯಕ್ರಮವನ್ನು ಹಮ್ಮಿಕೊಂಡರು. ರೇಡಿಯೋ ಕೇಳುಗರಲ್ಲಿ ಅವರ ಪ್ರಶ್ನೆ ಹೀಗಿತ್ತು:
  “ಅಪರಿಚಿತ ಮನುಷ್ಯ ಮತ್ತು ನಿಮ್ಮ ಪ್ರೀತಿಪಾತ್ರ ಪ್ರಾಣಿ ನೀರಿಗೆ ಬಿದ್ದು ಮುಳುಗುತ್ತಿದ್ದರೆ ಮತ್ತು ನೀವು ಅವೆರಡರಲ್ಲಿ ಒಂದನ್ನು ಮಾತ್ರ ರಕ್ಷಿಸುವ ಅವಕಾಶವನ್ನು ಹೊಂದಿದ್ದರೆ ನೀವು ಯಾರನ್ನು ರಕ್ಷಿಸುವಿರಿ?”
  ಅಚ್ಚರಿಯ ವಿಷಯ ಏನೆಂದರೆ, ಕೇಳುಗರಲ್ಲಿ ಒಂದು ದೊಡ್ಡ ಗುಂಪು ಪ್ರಾಣಿಯನ್ನು ಎಂದು ಉತ್ತರಿಸಿತು. 1999ರಿಂದ ರೇಡಿಯೋದಲ್ಲಿ ಪ್ರತಿದಿನ ಲೈವ್ ಕಾರ್ಯಕ್ರಮವನ್ನು ಕೊಡುತ್ತಿರುವ, ‘ಹ್ಯಾಪಿನೆಸ್ ಈಸ್ ಸೀರಿಯಸ್ ಪ್ರಾಬ್ಲಮ್’, ‘ಥಿಂಕ್ ಎ ಸೆಕೆಂಡ್ ಟೈಮ್’ನಂಥ ಪ್ರಸಿದ್ಧ ಕೃತಿಗಳನ್ನು ಬರೆದಿರುವ ಮತ್ತು ವಿಶ್ವದ 7 ರಾಷ್ಟ್ರಗಳಲ್ಲಿ ಉಪನ್ಯಾಸ ನೀಡಿರುವ, ಟಿ.ವಿ. ಶೋಗಳನ್ನು ನಡೆಸಿ ಕೊಟ್ಟಿರುವ ಡೆನ್ನಿಸ್ ಪ್ರಾಗರ್ ಅವರು ಈ ಉತ್ತರವನ್ನು ಕೇಳಿ ಒಮ್ಮೆ ಅವಾಕ್ಕಾದರು. ನಿಜವಾಗಿ, ಅಮೇರಿಕನ್ನರ ಮನಸ್ಥಿತಿಯಿಂದ ಆಘಾತಗೊಂಡಿದ್ದು ಡೆನ್ನಿಸ್ ಪ್ರಾಗರ್ ಮಾತ್ರ ಅಲ್ಲ, ಜಗತ್ತಿನ ಅಸಂಖ್ಯಾತ ಮಂದಿ ಸೋಶಿಯಲ್ ಮೀಡಿಯಾಗಳು ಮತ್ತು ಮಾಧ್ಯಮಗಳ ಮೂಲಕ ಅಮೇರಿಕನ್ ಮನಸ್ಥಿತಿಗೆ ಖಾರವಾಗಿ ಪ್ರತಿಕ್ರಿಯಿಸಿದರು. ಜಪಾನ್‍ನ ಜನರಂತೂ ಅತ್ಯಂತ ಕಟು ಭಾಷೆಯಲ್ಲಿ ಅಮೇರಿಕನ್ ಮನಸ್ಥಿತಿಯನ್ನು ಖಂಡಿಸಿದರು. ಇದಕ್ಕೆ ಕಾರಣವೂ ಇದೆ.
  ಗೊರಿಲ್ಲಾ ಘಟನೆಗಿಂತ ಎರಡು ದಿನಗಳ ಮೊದಲು (ಮೇ 27) ಅಮೇರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಜಪಾನ್‍ಗೆ ಐತಿಹಾಸಿಕ ಭೇಟಿ ಕೊಟ್ಟಿದ್ದರು. 1945 ಆಗಸ್ಟ್ 6 ಮತ್ತು 9ರಂದು ಜಪಾನ್‍ನ ಹಿರೋಶಿಮಾ ಮತ್ತು ನಾಗಸಾಕಿಗೆ ಅಮೇರಿಕದ ಯುದ್ಧ ವಿಮಾನಗಳು ಅಣುಬಾಂಬ್ ಸುರಿಸುವಾಗ ಅಮೆರಿಕದ ಅಧ್ಯಕ್ಷರಾಗಿದ್ದುದು ಹ್ಯಾರಿ ಟ್ರೂಮನ್. ಆ ಬಳಿಕ ಅಮೇರಿಕವು 11 ಮಂದಿ ಅಧ್ಯಕ್ಷರುಗಳನ್ನು ಕಂಡಿದೆ. ಆದರೆ ಒಬ್ಬನೇ ಒಬ್ಬ ಅಧ್ಯಕ್ಷ ಜಪಾನ್‍ಗೆ ಈ ವರೆಗೂ ಭೇಟಿ ಕೊಟ್ಟಿಲ್ಲ. ಅತ್ಯಂತ ಪ್ರಭಾವಶಾಲಿ ಮತ್ತು ಧೈರ್ಯಶಾಲಿಗಳಾಗಿ ಗುರುತಿಸಿಕೊಂಡಿದ್ದ ಕೆನಡಿ, ಬುಶ್, ಕ್ಲಿಂಟನ್ ಸಹಿತ ಯಾವ ಅಧ್ಯಕ್ಷರೂ ಜಪಾನ್‍ನ ಮಣ್ಣನ್ನು ತುಳಿಯುವ ಧೈರ್ಯ ತೋರಿಸಿರಲಿಲ್ಲ. ಜಪಾನ್‍ಗೆ ಕಾಲಿಟ್ಟರೆ ಎಲ್ಲಿ ಅಣುಬಾಂಬ್ ಹತ್ಯೆಗಾಗಿ ಕ್ಷಮೆ ಯಾಚಿಸಬೇಕಾದೀತೋ ಎಂಬೊಂದು ಅಳುಕು ಅವರನ್ನು ಕಾಡಿತ್ತು. ಆದ್ದರಿಂದಲೇ, ಆ ಅಣುಬಾಂಬ್ ಕ್ರೌರ್ಯಕ್ಕೆ 71 ವರ್ಷಗಳು ಸಂದ ಈ ಸಂದರ್ಭದಲ್ಲಿ ಒಬಾಮ ಜಪಾನ್‍ಗೆ ಭೇಟಿ ಕೊಡುತ್ತಿರುವುದು ಸಹಜವಾಗಿಯೇ ಜಗತ್ತಿನ ಕುತೂಹಲವನ್ನು ಕೆರಳಿಸಿತ್ತು. ಜಪಾನಿಗರಂತೂ ಅತ್ಯಂತ ಆಸಕ್ತಿಯಿಂದ ಒಬಾಮರ ಭೇಟಿಯನ್ನು ನಿರೀಕ್ಷಿಸುತ್ತಿದ್ದರು. ದ್ವಿತೀಯ ವಿಶ್ವ ಯುದ್ಧದ ಸಮಯದಲ್ಲಿ ಕೊರಿಯನ್ ಮಹಿಳೆಯರನ್ನು ಲೈಂಗಿಕ ಗುಲಾಮರನ್ನಾಗಿ ಬಳಸಿಕೊಂಡಿರುವುದಕ್ಕಾಗಿ ಜಪಾನಿನ ಹಾಲಿ ಪ್ರಧಾನಿ ಶಿನ್ಝೊ ಅಬೆಯವರು ಕಳೆದ ಡಿಸೆಂಬರ್ (2015)ನಲ್ಲಿ ಕ್ಷಮೆ ಯಾಚಿಸಿದುದು ಒಬಾಮರ ಮೇಲಿನ ನಿರೀಕ್ಷೆಗೆ ಇನ್ನೊಂದು ಕಾರಣವೂ ಆಗಿತ್ತು. ಒಬಾಮ ಭೇಟಿಗಿಂತ ದಿನಗಳ ಮೊದಲು ಜಪಾನ್‍ನಲ್ಲಿ ಬಿರುಸಿನ ಚಟುವಟಿಕೆಗಳು ನಡೆದುವು. ಹಿರೋಶಿಮಾ ಶಾಂತಿ ಕಾರ್ಯಕರ್ತರು ಒಬಾಮ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿ ರಾಲಿ ನಡೆಸಿದರು. ಅಣುಬಾಂಬ್‍ನಿಂದ ಸಂತ್ರಸ್ತರಾದ ಕೈಕೋ ಒಗುರಾ, ಪಾರ್ಕ್ ನಮ್ಜೂ, ಸುನಾವೊ ತ್ಸುಬಿ, ಶಿಗೇಕೆ ಮಿರಿ, ಮಿಸ್ಕಾವೊ ಕಟನಿ.. ಮುಂತಾದ ವಯೋವೃದ್ಧರ ಅಭಿಪ್ರಾಯಗಳನ್ನು ಮಾಧ್ಯಮಗಳು ದಿನಂಪ್ರತಿಯೆಂಬಂತೆ ಪೋಟೋ ಸಹಿತ ಪ್ರಕಟಿಸಿದುವು. ಒಬಾಮ ಕ್ಷಮೆ ಯಾಚಿಸಬೇಕೆಂಬುದು ಅವರೆಲ್ಲರ ಆಗ್ರಹವಾಗಿತ್ತು. ತೆರುಮಿ ಕನಕ ಎಂಬವರ ಜೀವನಗಾಥೆಯಂತೂ ಅತ್ಯಂತ ಕರುಣಾಜನಕ. ಆಗಸ್ಟ್ 9, 1945ರಂದು ಅಮೇರಿಕವು ನಾಗಸಾಕಿಯ ಮೇಲೆ ಬಾಂಬ್ ಸುರಿಸಿದಾಗ ತೆರುಮಿ ಕನಕ ಅವರು ನಾಗಸಾಕಿಗಿಂತ ಒಂದೂವರೆ ಕಿಲೋಮೀಟರ್ ದೂರದಲ್ಲಿದ್ದರು. ಆ ಕ್ಷಣದಲ್ಲಿ ಅವರು ಪ್ರಜ್ಞಾಶೂನ್ಯರಾದರು. ಆದರೆ ಜೀವಕ್ಕೇನೂ ಹಾನಿ ತಟ್ಟಲಿಲ್ಲ. ಅವರು ಮತ್ತು ನಾಗಾಸಾಕಿಯ ಮಧ್ಯೆ ಹಲವಾರು ಬೆಟ್ಟ-ಗುಡ್ಡಗಳಿದ್ದುದು ಇದಕ್ಕೆ ಕಾರಣವಾಗಿತ್ತು. ಆದರೆ ಅವರ ಕುಟುಂಬದ 5 ಮಂದಿ ಸ್ಥಳದಲ್ಲೇ ಸುಟ್ಟು ಕರಕಲಾಗಿ ಹೋದರು. ತನ್ನ ಮನೆಯ ಹೊರಾಂಗಣದಲ್ಲಿ ಅತ್ತೆ ಮತ್ತು ಮಕ್ಕಳು ಸುಟ್ಟು ಇದ್ದಲಿನಂತೆ ಕರ್ರಗಾಗಿ ಬಿಟ್ಟಿದ್ದರು. ಇನ್ನೋರ್ವ ಅತ್ತೆ ತೀವ್ರ ಸುಟ್ಟ ಗಾಯಗಳಿಂದ ಕೂಗಾಡುತ್ತಿದ್ದರು. ಕೆಲವು ದಿನಗಳಲ್ಲಿ ಆಕೆಯೂ ಸತ್ತು ಹೋದರು. ದಫನ ಮಾಡುವುದಕ್ಕೂ ಜನರಿರಲಿಲ್ಲ. ಸ್ವತಃ ಕನಕ ಅವರೇ ಅವರನ್ನು ದಫನ ಮಾಡಿದ್ದರು. ಇಂಥ ಕಣ್ಣೀರ ಕತೆಗಳು ದಿನಂಪ್ರತಿ ಪ್ರಕಟವಾಗುತ್ತಿರುವುದರ ಮಧ್ಯೆಯೇ ಮೇ 27ರಂದು ಒಬಾಮ ಜಪಾನ್‍ಗೆ ಭೇಟಿ ಕೊಟ್ಟರು. ಹಿರೋಶಿಮಾ ಸಂದರ್ಶಿಸಿದರು. ಆದರೆ ಒಬಾಮ ಎಲ್ಲೂ ಕ್ಷಮೆ ಯಾಚಿಸಲೇ ಇಲ್ಲ. ಅತ್ಯಂತ ಕಾವ್ಯಾತ್ಮಕ ಶೈಲಿಯಲ್ಲಿ 71 ವರ್ಷಗಳ ಹಿಂದಿನ ಕ್ರೌರ್ಯವನ್ನು ವಿವರಿಸಿದುದನ್ನು ಬಿಟ್ಟರೆ ಇನ್ನಾವ ಹೇಳಿಕೆಯೂ ಅವರಿಂದ ಹೊರಬೀಳಲಿಲ್ಲ. ಒಂದು ಗೊರಿಲ್ಲಾದ ಹತ್ಯೆಗೆ ಮರುಗುವ ಮತ್ತು ಅಸಂಖ್ಯ ಸಂಖ್ಯೆಯಲ್ಲಿ ಸಹಿ ಸಂಗ್ರಹವಾಗುವ ದೇಶವೊಂದರ ಅಧ್ಯಕ್ಷ ಲಕ್ಷಾಂತರ ಮಂದಿಯನ್ನು ಬಾಂಬಿಟ್ಟು ಸಾಯಿಸಿದುದಕ್ಕಾಗಿ ಕ್ಷಮೆ ಯಾಚಿಸುತ್ತಿಲ್ಲ ಅನ್ನುವುದಕ್ಕೆ ಜಾಗತಿಕ ವಾಗಿಯೇ ಅಚ್ಚರಿ ವ್ಯಕ್ತವಾಯಿತು. ಲಕ್ಷಾಂತರ ಜಪಾನಿಗರ ಜೀವ ಅಮೇರಿಕದ ಒಂದು ಗೊರಿಲ್ಲಾಕ್ಕೂ ಸಮಾನವಲ್ಲವೇ ಎಂಬೊಂದು ಪ್ರಶ್ನೆಯೂ ಹುಟ್ಟಿಕೊಂಡಿತು. ಆದರೆ ಅಮೇರಿಕದ ಕೆಲವರು ಒಬಾಮರನ್ನು ಎಷ್ಟು ಹಾಸ್ಯಾಸ್ಪವಾಗಿ ಸಮರ್ಥಿಸಿ ಕೊಂಡರೆಂದರೆ, ಅಣುಬಾಂಬ್‍ನ ಬದಲು ಅಮೇರಿಕವು ಜಪಾನ್‍ನಲ್ಲಿ ಸೇನಾ ಕಾರ್ಯಾಚರಣೆಗೆ ಇಳಿದಿರುತ್ತಿದ್ದರೆ ಮಿಲಿಯನ್‍ಗಿಂತಲೂ ಅಧಿಕ ಮಂದಿ ಸಾವಿಗೀಡಾಗುತ್ತಿದ್ದರು ಎಂದರು. ಅದಕ್ಕೆ ಹೋಲಿಸಿದರೆ ಅಣುಬಾಂಬ್‍ನಿಂದಾದ ಅನಾಹುತ ಚಿಕ್ಕದು ಎಂದೂ ವಾದಿಸಿದರು. ಅಮೇರಿಕ ಬಾಬ್ ಹಾಕುವುದಕ್ಕಿಂತ ಮೊದಲೇ ದಕ್ಷಿಣ ಏಷ್ಯಾ ಮತ್ತು ಚೀನಾದಲ್ಲಿ 20 ಮಿಲಿಯನ್ ಮಂದಿಯನ್ನು ಜಪಾನ್ ಪ್ರಭುತ್ವವು ಕೊಂದು ಹಾಕಿದೆ ಎಂದೂ ಹೇಳಿದರು. ಅಮೇರಿಕವು ತನ್ನಲ್ಲಿ ಅತೀ ಹೆಚ್ಚು ಅಣ್ವಸ್ತ್ರ
ದಾಸ್ತಾನಿರಿಸಿಕೊಂಡಿದ್ದರೂ ಜಪಾನ್‍ನ ನಂತರ ಇನ್ನಾವ ರಾಷ್ಟ್ರದ ಮೇಲೂ ಅದು ಅಣ್ವಸ್ತ್ರವನ್ನು ಬಳಸಿಲ್ಲ ಎಂದೂ ಅಮೇರಿಕವನ್ನು ನಿರ್ಲಜ್ಜವಾಗಿ ಸಮರ್ಥಿಸಿಕೊಂಡರು. 20ನೇ ಶತಮಾನದ ಕೊನೆ ಮತ್ತು 21ನೇ ಶತಮಾನದ ಆರಂಭದಲ್ಲಿ ಅಣುಬಾಂಬ್ ಉಪಯೋಗಿಸಬೇಕಾದ ಅಗತ್ಯ ಕಂಡುಬಂದರೂ ಅಮೇರಿಕ ಅದನ್ನು ಉಪಯೋಗಿಸದಿರುವುದು ಏನನ್ನು ಸೂಚಿಸುತ್ತದೆ ಎಂದೂ ಪ್ರಶ್ನಿಸಿದರು. ನ್ಯೂಕ್ಲಿಯರ್ ನಾನ್ ಪ್ರೊಲಿಫಿಕೇಶನ್‍ಗೆ ಮೊಟ್ಟಮೊದಲು ಒತ್ತಾಯಿಸಿದವರೇ ಅಮೇರಿಕದ ಅಧ್ಯಕ್ಷ ಕೆನಡಿ ಎಂದೂ ಹೇಳಿಕೊಂಡರು. ಈ ಪರ-ವಿರೋಧಿ ಚರ್ಚೆಗಳ ನಡುವೆಯೇ ಕೆನಡದ ಪ್ರಧಾನಿ ಜಸ್ಟಿನ್ ಟ್ರುಡೇವ್ ಅವರು ಕೆನಡದ ಸಿಕ್ಖ್ ಸಮುದಾಯದ ಕ್ಷಮೆ ಯಾಚಿಸಿದುದನ್ನು ಯಾರೋ ಉಲ್ಲೇಖಿಸಿದರು. ಸಣ್ಣ ಸಂಗತಿಯಂತೆ ಕಳೆದು ಹೋಗಿದ್ದ ಕ್ಷಮೆಯೊಂದು ಹೀಗೆ ಹರಾಂಬೆ ಮತ್ತು ಒಬಾಮರಿಂದಾಗಿ ಮುನ್ನೆಲೆಗೆ ಬಂದಿತು. ಒಬಾಮರಿಗಿಂತ 6 ದಿನಗಳ ಮೊದಲೇ ಮೇ 18 ರಂದು ಕೆನಡದ ಪ್ರಧಾನಿ ಪಾರ್ಲಿಮೆಂಟ್‍ನಲ್ಲಿ 17 ಸಿಕ್ಖ್ ಸಂಸದರ ಸಹಿತ ಎಲ್ಲರೆದುರು ನಿಶ್ಶರ್ಥ ಕ್ಷಮೆ ಯಾಚಿಸಿದ್ದರು.  
          ಅಂದಹಾಗೆ, ಹಿರೋಶಿಮಾ-ನಾಗಸಾಕಿಗೆ ಹೋಲಿಸಿದರೆ ಏನೇನೂ ಅಲ್ಲದ 1914 ಮೇ 18ರ ಘಟನೆ ಅದು. ಅಂದು ಕೆನಡದಲ್ಲಿ ಭಾರತೀಯ ಮೂಲದ ಸಿಕ್ಖರು ಧಾರಾಳ ಸಂಖ್ಯೆಯಲ್ಲಿ ದ್ದರು. ಭಾರತೀಯ ವಲಸಿಗರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರು ವಂತೆಯೇ ಕೆನಡದಲ್ಲಿ ಅಸಮಾಧಾನಗಳೂ ಭುಗಿಲೆದ್ದುವು. ಈ ಕಾರಣದಿಂದಾಗಿ 1907ರಲ್ಲಿ ಕೆನಡಿಯನ್ ಸರಕಾರವು ಕೆಲವು ಕಠಿಣ ನಿಯಮಗಳನ್ನು ಜಾರಿಗೊಳಿಸಿತು. ಭಾರತೀಯರಿಗೆ ಮತದಾನ ಮಾಡುವ ಹಕ್ಕನ್ನು ರದ್ದುಪಡಿಸಿತು. ಭಾರತೀಯರು ಸರಕಾರಿ ಅಧಿಕಾರಿಗಳಾಗುವುದನ್ನು, ನ್ಯಾಯಾಧೀಶರು, ವಕೀಲರು, ಲೆಕ್ಕ ಪರಿಶೋಧಕರು ಮತ್ತು ವೈದ್ಯರಾಗುವುದನ್ನು ತಡೆಯಿತು. ಇಂಥ ಸಮಯದಲ್ಲೇ ಉದ್ಯಮಿ ಗುರುದಿತ್ ಸಿಂಗ್ ಎಂಬವರು ಕಮಗತ ಮರು ಎಂಬ ಜಪಾನಿ ಹಡಗನ್ನು ಬಾಡಿಗೆಗೆ ಪಡೆದು 376 ಮಂದಿ ಭಾರತೀಯ ವಲಸಿಗರನ್ನು ಕೆನಡಕ್ಕೆ ತಲುಪಿಸುವ ಸಾಹಸಕ್ಕೆ ಕೈ ಹಾಕಿದರು. ಈ ವಲಸಿಗರಲ್ಲಿ 340 ಮಂದಿ ಸಿಖ್ಖರು, 24 ಮಂದಿ ಮುಸ್ಲಿಮರು ಮತ್ತು 12 ಮಂದಿ ಹಿಂದುಗಳಿದ್ದರು. ಒಂದು ರೀತಿಯಲ್ಲಿ, ಈ ಸಾಹಸ ಕೆನಡಿಯನ್ ಸರಕಾರಕ್ಕೆ ಎಸಗಿದ ಬಹಿರಂಗ ಸವಾಲು ಆಗಿತ್ತು. ಈ ಹಡಗು ಹಾಂಗ್‍ಕಾಂಗ್‍ನಿಂದ ಹೊರಟು ಜಪಾನ್‍ನಲ್ಲಿ ತಂಗಿ ಬಳಿಕ ಕೆನಡಕ್ಕೆ ಹೊರಟಿತು. ಆದರೆ ಈ ಸುದ್ದಿಯನ್ನು ಜರ್ಮನ್ ಕೇಬಲ್ ಕಂಪೆನಿಯು ಜರ್ಮನ್ ಪ್ರೆಸ್‍ಗೆ ತಿಳಿಸಿತು. ಅಲ್ಲಿಂದ ಬ್ರಿಟಿಷ್ ಪ್ರೆಸ್ ಅದನ್ನು ಎತ್ತಿಕೊಂಡು ಅಲ್ಲಿಂದ ಕೆನಡದ ದಿ ವ್ಯಾಂಕೋವರ್ ಡೈಲಿಯುBoats loads of Hindus on way to Vancover (ಹಿಂದೂಗಳನ್ನು ತುಂಬಿಕೊಂಡ ಹಡಗು ವ್ಯಾಂಕೋವರ್‍ಗೆ) ಎಂಬ ಉದ್ರೇಕಕಾರಿ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಿಸಿತು. ಇನ್ನೊಂದು ಕಡೆ ‘ಹಿಂದೂ ಇನ್ವೇಷನ್ ಆಫ್ ಕೆನಡ’ ಎಂಬ ಶೀರ್ಷಿಕೆಯಲ್ಲೂ ಸುದ್ದಿ ಪ್ರಕಟವಾಯಿತು. ಕೆನಡದಲ್ಲಿರುವ ಸಿಖ್ಖರಂತೂ ಈ ಹಡಗನ್ನು ಸ್ವಾಗತಿಸಲು ಗುರುದ್ವಾರಗಳಲ್ಲಿ ಸಭೆ ನಡೆಸಿದರು. ಚಂದಾ ಸಂಗ್ರಹಿಸಿದರು. ಈ ಮಧ್ಯೆ, 1914 ಮೇ 23ರಂದು ಕಮಗತ ಮರು ಹಡಗು ಕೆನಡದ ವ್ಯಾಂಕೋವರ್ ಬಂದರ್‍ಗೆ ತಲುಪಿತು. ಆದರೆ ಹಡಗಿನಿಂದ ಯಾರನ್ನೂ ಇಳಿಯಲು ಅಧಿಕಾರಿಗಳು ಬಿಡಲಿಲ್ಲ. 2 ತಿಂಗಳ ವರೆಗೆ ಭಾರತೀಯ ಸಮುದಾಯ ಮತ್ತು ಕೆನಡಿಯನ್ ಅಧಿಕಾರಿಗಳ ಮಧ್ಯೆ ನ್ಯಾಯಾಂಗ ಸಮರ ನಡೆಯಿತು. ಕೊನೆಗೆ ಈ 376 ಮಂದಿಯಲ್ಲಿ ಕೇವಲ 24 ಮಂದಿಗಷ್ಟೇ ಕೆನಡ ಪ್ರವೇಶಿಸಲು ಅವಕಾಶ ನೀಡಲಾಯಿತು. 1914 ಜುಲೈ 23ರಂದು ವ್ಯಾಂಕೋವರ್ ಬಂದರ್‍ನಿಂದ ಸಮಗತ ಮರುವನ್ನು ಹೊರಗಟ್ಟಲಾಯಿತು. 1914 ಸೆ. 26ರಂದು ಇದು ಕೊಲ್ಕತ್ತಾಕ್ಕೆ ತಲುಪುವ ಮೊದಲೇ ಭಾರತದ ಬ್ರಿಟಿಷ್ ಆಡಳಿತ ಈ ಹಡಗನ್ನು ಸಮುದ್ರ ಮಧ್ಯದಲ್ಲೇ ತಡೆದಿರಿಸಿತು. ವಲಸಿಗರಿಗೂ ಅಧಿಕಾರಿಗಳಿಗೂ ನಡುವೆ ಜಟಾಪಟಿಯಾಗಿ 29 ಮಂದಿ ಸಾವಿಗೀಡಾಡದರು. ಹೀಗೆ ವಲಸಿಗರನ್ನು ಸಮುದ್ರ ಮಧ್ಯದಲ್ಲಿ 2 ತಿಂಗಳ ಕಾಲ ಕಟ್ಟಿ ಹಾಕಿದ ಮತ್ತು ಹಿಂತಿರುಗಿಸಿದ ತಪ್ಪಿಗಾಗಿ ಮೊನ್ನೆ ಜಸ್ಟಿನ್ ಟ್ರುಡೇವ್ ಸಿಖ್ಖರ ಕ್ಷಮೆ ಯಾಚಿಸಿದರು. ಆದ್ದರಿಂದಲೇ ಲಕ್ಷಾಂತರ ಮಂದಿಯ ಹತ್ಯೆಗೆ ಕಾರಣವಾಗಿಯೂ ಕ್ಷಮೆಯಾಚಿಸಿದ ಒಬಾಮರ ಎದುರು ಅನೇಕರು ಜಸ್ಟಿನ್ ಟ್ರುಡೇವ್‍ರನ್ನು ಇಟ್ಟು ಪರಸ್ಪರ ಹೋಲಿಸಿದರು. ಕ್ಷಮೆಯಾಚನೆಯಿಂದ ಯಾರೂ ಸಣ್ಣವರಾಗಲ್ಲ ಎಂದು ಕುಟುಕಿದರು. ವಲಸಿಗರ ಹಡಗನ್ನು ಸ್ವಾಗತಿಸದೇ ಇದ್ದುದಕ್ಕೆ ಕ್ಷಮೆಯಾಚಿಸುವ ಜಸ್ಟಿನ್‍ರ ಎದುರು ಒಬಾಮ ತೀರಾ ಸಣ್ಣವರು ಎಂದು ಗೇಲಿ ಮಾಡಿದರು. ಅಷ್ಟಕ್ಕೂ           
           ‘ಮನುಷ್ಯನ ಬದಲು ಸಾಕು ಪ್ರಾಣಿಯನ್ನು ರಕ್ಷಿಸುವೆ’ ಅನ್ನುವ ದೇಶದಲ್ಲಿ ಗೊರಿಲ್ಲಾವಲ್ಲದೇ ಮನುಷ್ಯ ಮುಖ್ಯವಾಗುವುದಾದರೂ ಹೇಗೆ?




No comments:

Post a Comment