Thursday, September 8, 2022

ನನ್ನ ಮೂವರು ಗುರುಗಳೂ ಪೆನ್ನು ಕೆಳಗಿಟ್ಟರು
ಇಬ್ರಾಹೀಮ್ ಸಈದ್
ನೂರ್ ಮುಹಮ್ಮದ್
ಎಂ. ಸಾದುಲ್ಲಾ 
ಈ ತ್ರಿಮೂರ್ತಿಗಳು ಸನ್ಮಾರ್ಗದ ಆರಂಭ ಕಾಲದಿಂದಲೇ ಜೊತೆಯಾದವರು. ಬಹುತೇಕ ಸಮಪ್ರಾಯದವರೂ ಹೌದು. ಕಾಲಚಕ್ರದ  ಬೇರೆ ಬೇರೆ ತಿರುವಿನಲ್ಲಿ ಇವರೆಲ್ಲ ಒಂಟಿ ಒಂಟಿಯಾಗಿ ಇಳಿದು ಹೋದರು. ಸನ್ಮಾರ್ಗಕ್ಕೆ 29 (ಮೇ 27, 2007) ವರ್ಷಗಳಾದಾಗ  ‘ಇನ್ನು ಸಾಕು’ ಎಂಬಂತೆ ಇಬ್ರಾಹೀಮ್ ಸಈದ್ ಮೊದಲಿಗರಾಗಿ ಪೆನ್ನು ಕೆಳಗಿಟ್ಟರು. ಆ ಬಳಿಕ ನೂರ್ ಮುಹಮ್ಮದ್ ಸಾಬ್‌ರ ಸರದಿ.  ಸನ್ಮಾರ್ಗಕ್ಕೆ 36 ವರ್ಷಗಳಾದಾಗ (ಆಗಸ್ಟ್ 19, 2014) ಅವರೂ ಪೆನ್ನು ಕೆಳಗಿಟ್ಟರು. ಅದರಲ್ಲೂ ನೂರ್ ಮುಹಮ್ಮದ್ ಅವರ  ವಿದಾಯವಂತೂ ದಿಢೀರ್ ಆಗಿತ್ತು. ಮಸೀದಿಯಲ್ಲಿ ಇಶಾ ನಮಾಝನ್ನು ಮುಗಿಸಿ ತನ್ನ ದ್ವಿಚಕ್ರದಲ್ಲಿ ಮನೆಯತ್ತ ಮರಳುತ್ತಿದ್ದಾಗ ಅಜ್ಞಾತ  ವಾಹನವೊಂದು ಅವರನ್ನು ನೆಲಕ್ಕೆ ಕೆಡವಿ ಪರಾರಿಯಾಗಿತ್ತು. ಅವರು ಪೆನ್ನು ಕೆಳಗಿಡುವುದಕ್ಕೆ ಭೌತಿಕ ಕಾರಣವಾಗಿ ನಮ್ಮಲ್ಲಿರುವುದು  ಇದೊಂದೇ. ಈ ಮೂಲಕ ಇಬ್ರಾಹೀಮ್ ಸಈದ್ ಬಿಟ್ಟು ಹೋದ ನಿರ್ವಾತ ವನ್ನು ತುಂಬಲು ಶಕ್ತಿಮೀರಿ ಶ್ರಮಿಸುತ್ತಿದ್ದ ಇನ್ನೊಂದು ಪೆ ನ್ನೂ ನಿಶ್ಚಲವಾಯಿತು. ಬಹುಶಃ, ತನ್ನಿಬ್ಬರು ಸಂಗಾತಿಗಳು ತನ್ನ ಕಣ್ಣೆದುರೇ ಮರಳಿ ಮಣ್ಣು ಸೇರಿದುದನ್ನು ಸಾದುಲ್ಲಾ  ಸಾಬ್ ಹೇಗೆ  ಸ್ವೀಕರಿಸಿರಬಹುದು ಮತ್ತು ಅವರ ಮೇಲೆ ಅದು ಬೀರಿರ ಬಹುದಾದ ಒತ್ತಡಗಳೇನಿರಬಹುದು ಎಂದು, ಮೊನ್ನೆ ಸಾದುಲ್ಲಾರನ್ನು ಮರಳಿ  ಮಣ್ಣಿಗೆ ಸೇರಿಸಿ ನೇರ ಕಚೇರಿಗೆ ಬಂದು ಅವರು ಸದಾ ಕುಳಿತುಕೊಳ್ಳುತ್ತಿದ್ದ ಕುರ್ಚಿ ಮತ್ತು ಮೇಜಿನ ಫೋಟೋ ಕ್ಲಿಕ್ಕಿಸುತ್ತಾ  ಆಲೋಚಿಸಿದೆ. ಇನ್ನು ನನ್ನ ಪಾಲಿಗೆ ಚೈತನ್ಯವಾಗಿ ಉಳಿದಿರುವುದು ಈ ಫೋಟೋ ಮಾತ್ರ. ಅಂದಹಾಗೆ,

ತನ್ನಿಬ್ಬರು ಜೊತೆಗಾರರು ವಿದಾಯ ಕೋರಿದಾಗಲೂ ಸಾದುಲ್ಲಾ  ಸಾಬ್ ಅಧೀರರಾದುದನ್ನೋ ಶೂನ್ಯವಾಗಿ ಕುಳಿತುದನ್ನೋ ನಾನು  ಕಂಡಿಲ್ಲ. ಇದರರ್ಥ ಆ ಇಬ್ಬರ ವಿದಾಯ ಅವರ ಮೇಲೆ ಪರಿಣಾಮ ಬೀರಿಲ್ಲ ಎಂದಲ್ಲ. ಅವರಿದ್ದುದೇ ಹಾಗೆ. ತನ್ನೊಳಗೆ  ಮಹಾಭಾರತವೇ ನಡೆಯುತ್ತಿದ್ದರೂ (ಯುದ್ಧ ಎಂಬರ್ಥದಲ್ಲಿ ತೆಗೆದುಕೊಳ್ಳಿ) ಅವರು ಬಾಹ್ಯವಾಗಿ ಅದನ್ನು ಪ್ರಕಟಿಸುತ್ತಿರಲಿಲ್ಲ. ನಿಷ್ಪಾಪಿ  ಮುಗುಳ್ನಗೆಯನ್ನು ತುಟಿಯಲ್ಲಿಟ್ಟುಕೊಂಡೇ ಅವರು ತಿರುಗುತ್ತಿದ್ದರು. ಅವರನ್ನು ಭೇಟಿಯಾಗುವ ಯಾರೇ ಆಗಲಿ, ಅವರಿಗಿರಬಹುದಾದ  ಕಾರ್ಯಭಾರ, ತುರ್ತು, ವೈಯಕ್ತಿಕ ಸಮಸ್ಯೆಗಳನ್ನು ಗುರುತಿಸಲಾಗದಷ್ಟು ಅವರು ಸಹಜವಾಗಿರುತ್ತಿದ್ದರು.

ನಾನು ಫೆಬ್ರವರಿ 14, 2000ನೇ ಇಸವಿಯಲ್ಲಿ ಸನ್ಮಾರ್ಗ ಸೇರಿಕೊಂಡೆ. ನನ್ನ ಇಂಟರ್‌ವ್ಯೂವ್ ನಡೆಸಿದ್ದು ಸಂಪಾದಕರಾದ ಇಬ್ರಾಹೀಮ್  ಸಈದ್. ಬಹುಶಃ ಐದಾರು ನಿಮಿಷಗಳಲ್ಲೇ  ನನ್ನ ಇಂಟರ್‌ವ್ಯೂವ್ ಮುಗಿದಿತ್ತು. ‘ಜಾತ್ಯತೀತ ಎಂದು ಬರೆಯಬಲ್ಲಿರಾ?’ ಎಂದು ಅವರು  ಪ್ರಶ್ನಿಸಿದ್ದರು. ಬರೆದು ತೋರಿಸಿದ್ದೆ. ನಾನು ಬರೆದುದೇ ತಪ್ಪಾಗಿತ್ತು. ಇಬ್ರಾಹೀಮ್ ಸಈದ್ ಮುಗುಳ್ನಕ್ಕರು ಮತ್ತು ನಾಳೆಯಿಂದ ನೀವು  ಸಂಪಾದಕೀಯ ಬಳಗದ ಸದಸ್ಯರಾಗಿ ಸೇರಿಕೊಳ್ಳಿ ಎಂದು ಹೇಳಿದ್ದರು. ಸಂಪಾದಕರ ಕೊಠಡಿಯಿಂದ ಹೊರಬರುವಾಗ ಕುರ್ಚಿಯ  ಮುಂದೆ ಟೇಬಲನ್ನು ಹರಡಿಕೊಂಡು ಕುಳಿತಿದ್ದ ಸಣ್ಣ ದೇಹಾಕೃತಿ ಮತ್ತು ಬಿಳಿ ಶರ್ಟು ಧರಿಸಿದ್ದ ವ್ಯಕ್ತಿ ನನ್ನನ್ನು ಹತ್ತಿರ ಕರೆದು  ಕೂರಿಸಿದರು. ಸನ್ಮಾರ್ಗ ಕಚೇರಿಗೆ ಅದು ನನ್ನ ಮೊದಲ ಭೇಟಿಯಾದುದರಿಂದ ಅವರು ಸಾದುಲ್ಲಾ ಎಂದು ನನಗೆ ಗೊತ್ತಿರಲಿಲ್ಲ. ‘ನಿನ್ನ  ಸಮ್ಮಂಧವನ್ನು ಕಟ್ ಮಾಡಿ ಮಾಡಿ ನನಗೆ ಸಾಕಾಗಿ ಹೋಯ್ತು...’ ಎಂದು ಅವರು ನಕ್ಕರು. ನಾನು ಅರ್ಥವಾಗದೇ ಅವರ ಮುಖವ ನ್ನೇ ನೋಡಿದ್ದೆ. ಮೊದಲೇ ಹೊಸ ಮುಖ. ಕಚೇರಿಯೂ ಹೊಸತೇ. ಈ ನಡುವೆ ಇವರ ಜೋಕು ಬೇರೆ. ವಿಷಯ ಏನೆಂದರೆ, ನನ್ನ  ಹಲವು ಕತೆಗಳು ಸನ್ಮಾರ್ಗದಲ್ಲಿ ಆ ಮೊದಲೇ ಪ್ರಕಟವಾಗಿದ್ದುವು. ಸನ್ಮಾರ್ಗ ಏರ್ಪಡಿಸಿದ್ದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನೂ  ಪಡೆದಿದ್ದೆ. ಆದರೆ ನಾನು ‘ಸಂಬಂಧ’ ಎಂಬ ಪದವನ್ನು ಸಮ್ಮಂಧ ಎಂದೇ ಬರೆಯುತ್ತಿದ್ದೆ. ಈ ತಪ್ಪನ್ನೇ ಅವರು ಜೋಕ್ ಮೂಲಕ ನನ್ನ  ಗಮನಕ್ಕೆ ತರುವ ಪ್ರಯತ್ನ ಮಾಡಿದ್ದರು. ಅಷ್ಟಕ್ಕೂ,

ತಪ್ಪಾಗಿ ಬರೆದವನನ್ನೇ ಇಬ್ರಾಹೀಮ್ ಸಈದ್ ಸಂಪಾದ ಕೀಯ ಬಳಗಕ್ಕೆ ಆಯ್ಕೆ ಮಾಡಿದರೆ, ನನ್ನ ತಪ್ಪನ್ನು ಹಾಸ್ಯದ ಮೂಲಕ  ಸಾದುಲ್ಲಾ ಸಾಬ್ ಎಂಬ ಆ ಅಪರಿಚಿತ ಮಹಾನು ಭಾವ ತಿದ್ದಿದ್ದರು.

ನೂರ್ ಮುಹಮ್ಮದ್ ಮತ್ತು ಸಾದುಲ್ಲಾ ಸಾಬ್‌ರಿಗೆ ಹೋಲಿಸಿದರೆ ಇಬ್ರಾಹೀಮ್ ಸಈದ್‌ರೊಂದಿಗೆ ನನ್ನ ಒಡನಾಟ ಕಡಿಮೆ. ಸನ್ಮಾರ್ಗಕ್ಕೆ  ಸೇರಿದ ಆರಂಭದಲ್ಲಿ ನನ್ನಲ್ಲಿ ಸಹಜ ಅಳುಕು ಮತ್ತು ಭಯ ಮಿಶ್ರಿತ ಆದರಭಾವವು ಅವರ ಜೊತೆ ಸಹಜವಾಗಿ ಬೆರೆಯುವುದಕ್ಕೆ ಅಡ್ಡಿ ಪಡಿಸಿದರೆ, ಆ ಬಳಿಕ ಅವರು ಜಮಾಅತ್‌ನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿ ಬೆಂಗಳೂರು ಸೇರಿ ಕೊಂಡುದೂ ಇದಕ್ಕೆ ಕಾರಣ.  ಆದ್ದರಿಂದ, ನಾನು ಸಂಪಾದಕೀಯ ಬಳಗದಲ್ಲಿ ಹಿರಿಯರಾಗಿದ್ದ ನೂರ್ ಮುಹಮ್ಮದ್ ಮತ್ತು ಸಾದುಲ್ಲಾ ಸಾಬ್‌ರಿಗೆ ಹತ್ತಿರವಾದೆ.  ಇವರಿಬ್ಬರದ್ದೂ ತದ್ವಿರುದ್ಧ ಗುಣಸ್ವಭಾವ. ನೂರ್ ಮುಹಮ್ಮದ್ ಸಾಬ್ ಖಡಕ್ ನಿಷ್ಠುರಿ. ಶಿಸ್ತಿನ ಸಿಪಾಯಿ. ಸರಿ ಕಾಣದ್ದನ್ನು ತಕ್ಷಣವೇ  ಹಿಂದು-ಮುಂದು  ನೋಡದೇ ಹೇಳಿ ಬಿಡುವುದು ಅವರ ಅಭ್ಯಾಸ. ಸದಾ ಗಂಭೀರ. ಆದರೆ ಸಾದುಲ್ಲಾ ಸಾಬ್ ಇದಕ್ಕೆ ತೀರಾ ಭಿನ್ನ.  ಅವರು ಸಹನಾಮಯಿ. ಸಿಟ್ಟು ಕಡಿಮೆ. ಹೇಳಬೇಕಾದುದನ್ನು ಅಳೆದೂ ತೂಗಿ ಹೇಳುವಷ್ಟು ಮತ್ತು ನಗುತ್ತಲೇ ಹೇಳುವಷ್ಟು ಭಿನ್ನ ವ್ಯಕ್ತಿ.  ವಿಶೇಷ ಏನೆಂದರೆ,

ಇವರಿಬ್ಬರೂ ಸಂಪಾದಕೀಯ ಬಳಗದಲ್ಲಿ ಅಕ್ಕ-ಪಕ್ಕವೇ ಕುಳಿತಿರುತ್ತಿದ್ದರು. ಸಾದುಲ್ಲಾ ಸಾಬ್‌ಗೆ ಜೋಕ್ ಹೇಳುವ ಅಭ್ಯಾಸ ಹೆಚ್ಚು. ಅನುವಾದಿಸುತ್ತಲೋ ಲೇಖನಗಳನ್ನು ತಿದ್ದುತ್ತಲೋ ಸಾದುಲ್ಲಾ ಸಾಬ್ ಹಾಸ್ಯ ಚಟಾಕಿ ಹಾರಿಸಿದರೆ, ಬಿಳಿ ಹಲ್ಲು ಕಾಣುವಂತೆ ನೂರ್  ಮುಹಮ್ಮದ್ ಬರೆಯುತ್ತಲೇ ನಗುತ್ತಿದ್ದರು. ಅವರಿಬ್ಬರ ಗುಣಸ್ವಭಾವಗಳು ಭಿನ್ನವಾಗಿದ್ದರೂ ಅವರಿಬ್ಬರ ನಡುವೆ ಮಾತಿಗೆ ಮಾತು  ಬೆಳೆದದ್ದನ್ನೋ ಸಿಟ್ಟು ಮಾಡಿಕೊಂಡದ್ದನ್ನೋ ನಾನು ಕಂಡಿಲ್ಲ. ನೂರ್ ಮುಹಮ್ಮದ್ ಸಾಬ್ ವಾರ ದಲ್ಲಿ ಎರಡು ಬಾರಿ ಕಚೇರಿಗೆ  ಬರುತ್ತಿದ್ದರೆ, ಸಾದುಲ್ಲಾ  ಸಾಬ್ ಕಚೇರಿಯನ್ನೇ ಮನೆ ಮಾಡಿಕೊಂಡಿದ್ದರು. ಯಾರು ಯಾವ ಸಮಯದಲ್ಲೇ  ಕಚೇರಿಗೆ ಬಂದರೂ  ಅವರನ್ನು ಸ್ವಾಗತಿಸಲು ಸಾದುಲ್ಲಾ  ಸಾಬ್ ಇರುತ್ತಿದ್ದರು ಎಂಬುದೇ ಅವರ ನಿಸ್ವಾರ್ಥತೆ ಮತ್ತು ತ್ಯಾಗ ಜೀವನಕ್ಕೆ ಬಲುದೊಡ್ಡ ಪುರಾವೆ.  ನಿಜವಾಗಿ,

ಇವರಿಬ್ಬರೂ ಜೊತೆ ಸೇರಿ ನನ್ನನ್ನು ಬೆಳೆಸಿದರು.

ನೂರ್ ಮುಹಮ್ಮದ್ ಸಾಬ್‌ರಿಗೆ ನಾನು ಬೆಳೆಯಬೇಕು ಮತ್ತು ಹೀಗೆಯೇ  ಬೆಳೆಯಬೇಕು ಎಂಬ ನಿರ್ದಿಷ್ಟ ಗುರಿ ಹಾಗೂ ಕಾಳಜಿಯಿತ್ತು.  ಆದ್ದರಿಂದಲೋ ಏನೋ ಇಬ್ರಾಹೀಮ್ ಸಈದ್ ಮತ್ತು ಸಾದುಲ್ಲಾ  ಸಾಬ್‌ರು 25ರ ತರುಣನಾದ ನನ್ನನ್ನು ‘ನೀವು’ ಎಂದು ಬಹುವಚ ನದಲ್ಲಿ ಸಂಬೋಧಿಸುತ್ತಿದ್ದಾಗ ನೂರ್ ಮುಹಮ್ಮದ್ ಸಾಬ್‌ರು ‘ನೀನು’ ಎಂದೇ ಸಂಬೋಧಿಸಿದರು. ಅವರು ನನ್ನನ್ನು ಮಗನಂತೆ  ನಡೆಸಿಕೊಂಡರು. ಪ್ರೀತಿಸಿದರು. ತಪ್ಪಾದಾಗ ಗದರಿದರು. ಅವರಿಗೆ ಸನ್ಮಾರ್ಗ ಎಂಬುದು ಆಮ್ಲಜನಕದಂತೆ ಇತ್ತು. ‘ಪತ್ರಿಕೆಯಲ್ಲಿ ಒಂದು  ತಪ್ಪೂ ಬರ‍್ಬಾರ್ದು, ಅನಗತ್ಯ ಅನ್ನಬಹುದಾದ ಒಂದು ಬರಹ ಬಿಡಿ, ಒಂದು ಗೆರೆ ವಾಕ್ಯ ಕೂಡಾ ಬರ‍್ಬಾರ್ದು, ಎಡಿಟಿಂಗ್‌ನಲ್ಲಿ  ನಿಷ್ಠುರವಾಗಿರಬೇಕು..’ ಎಂಬಿತ್ಯಾದಿ ಬಿಗು ನಿಲುವು ಅವರದಾಗಿತ್ತು. ಒಂದು ವಾಕ್ಯದಲ್ಲಿ ಒಂದೇ ಒಂದು ಶಬ್ದ ಹೆಚ್ಚುವರಿಯಾಗಿ  ಕಾಣಿಸಿದರೂ ಅದನ್ನು ಮುಲಾಜಿಲ್ಲದೇ ಕಿತ್ತು ಹಾಕಬೇಕು ಎಂಬುದು ಅವರ ಎಡಿಟಿಂಗ್ ಶೈಲಿಯಾಗಿತ್ತು.

ಒಂದು ಬಾರಿ ಹೀಗೂ ನಡೆಯಿತು.

ಮಲಯಾಳಂ ಪತ್ರಿಕೆಯ ಲೇಖನವೊಂದನ್ನು ಮುಂದಿಟ್ಟ ಅವರು ಅನುವಾದಿಸುವಂತೆ ನನ್ನಲ್ಲಿ ಹೇಳಿದರು. ಕತೆ ಬರೆದು ಗೊತ್ತಿದ್ದ ನನಗೆ  ಅನುವಾದ ಹೊಸತು. ನನ್ನ ಕಿಸೆಯಿಂದ ಸಾಕಷ್ಟು ಪದಗಳನ್ನು ಹಾಕಿ ಅನುವಾದಿಸಿ ಕೊಟ್ಟಿದ್ದೆ. ಅವರು ನನ್ನ ಅನುವಾದದಲ್ಲಿರುವ ತ ಪ್ಪುಗಳನ್ನು ಎತ್ತಿ ತೋರಿಸಿದರು. ಬಳಿಕ ನನ್ನೆದುರೇ ಯಾವ ಮುಲಾಜೂ ಇಲ್ಲದೇ ಹರಿದು ಬುಟ್ಟಿಗೆ ಹಾಕಿದರು. ಬಹುಶಃ ಸಾದುಲ್ಲಾ  ಸಾಬ್‌ರಿಗೆ ಅದನ್ನೇ ನಾನು ಕೊಡುತ್ತಿದ್ದರೆ ಸರಿಪಡಿಸಿ ಬಳಸಿಕೊಳ್ಳುತ್ತಿದ್ದರೋ ಏನೋ? ಆದರೆ, ನೂರ್ ಮುಹಮ್ಮದ್ ಹಾಗಲ್ಲ. ಅವರು  ಖಡಕ್. ಎಡಿಟಿಂಗ್‌ನ ವೇಳೆ ನನ್ನಲ್ಲಿ ಮುಲಾಜುತನ ಇರಬಾರದು ಎಂಬ ಪಾಠವನ್ನು ಅವರು ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ  ಸದಾ ರವಾನಿಸುತ್ತಲೇ ಇದ್ದರು. ನಾನೂ ಅವರ ಪ್ರತಿ ನಿಷ್ಠುರ ನಡೆಯನ್ನೂ ಸಕಾರಾತ್ಮಕವಾಗಿ ಸ್ವೀಕರಿಸುತ್ತಾ ಹೋದೆ. ಅಂದಹಾಗೆ, ಸದಾ  ಗಂಭೀರವಾಗಿರುತ್ತಿದ್ದ ಅವರು ಬರೆಯುತ್ತಲೇ ಅಪರೂಪ ಕ್ಕೊಮ್ಮೆ ಜೋಕ್ ಹೇಳುವುದೂ ಇತ್ತು. ಹಾಗೇ ಜೋಕ್ ಹೇಳುವಾಗಲೂ  ಅವರ ಮುಖ ಗಂಭೀರವಾಗಿಯೇ ಇರುತ್ತಿತ್ತು. ಅವರು ನಗುತ್ತಾರೋ ಎಂದು ನೋಡಿ, ಅವರು ನಕ್ಕ ಮೇಲೆ ನಾನು ನಗುವುದೂ ಇತ್ತು.

ನನ್ನ ಬರಹಕ್ಕೆ ಶಿಸ್ತಿನ ಚೌಕಟ್ಟನ್ನು ತಂದುಕೊಟ್ಟವರೇ  ನೂರ್ ಮುಹಮ್ಮದ್ ಸಾಬ್. ಎಡಿಟಿಂಗ್ ಪಾಠವನ್ನು ನಾನು ಅವರಿಂದಲೇ ಕಲಿತೆ.  ಕತೆ ಮತ್ತು ಲೇಖನಗಳ ನಡುವೆ ಇರುವ ವ್ಯತ್ಯಾಸವನ್ನೂ ಲೇಖನ ಬರೆಯುವಾಗ ಇರಬೇಕಾದ ಎಚ್ಚರಿಕೆಯನ್ನೂ ನಾನು ಕ ಲಿತುಕೊಂಡದ್ದು ನೂರ್ ಮುಹಮ್ಮದ್ ಸಾಬ್‌ರಿಂದ. ‘ನೀನು ತುಂಬಾ ಚೆನ್ನಾಗಿ ಎಡಿಟಿಂಗ್ ಮಾಡುತ್ತೀ...’ ಎಂದು ಒಂದು ಬಾರಿ  ಸಾದುಲ್ಲಾ ಸಾಬ್ ನನ್ನಲ್ಲಿ ಹೇಳಿದ್ದೂ ಇದೆ.

ಸಾದುಲ್ಲಾ  ಸಾಬ್ ನನ್ನಲ್ಲಿ ಮಾತಾಡುವಾಗಲೆಲ್ಲ ಅವರು ನನ್ನನ್ನು ಅತಿಯಾಗಿ ಪ್ರೀತಿಸುತ್ತಿದ್ದಾರೆ ಎಂಬ ಭಾವ ನನ್ನೊಳಗೆ ಯಾವಾಗಲೂ  ಉಂಟಾಗುತ್ತಿತ್ತು. ಅವರು ನನ್ನನ್ನು ಗದರಿಸಿದ್ದು ಇಲ್ಲವೇ ಇಲ್ಲ. ಹಾಗಂತ, ನಾನು ತಪ್ಪು ಮಾಡಿಲ್ಲ ಎಂದಲ್ಲ. ನನ್ನ ಮುಲಾಜುರಹಿತ  ಎಡಿಟಿಂಗ್‌ನ ಬಗ್ಗೆ ನನ್ನ ಸಹೋದ್ಯೋಗಿಯೇ ಒಮ್ಮೆ ಆಕ್ಷೇಪ ಎತ್ತಿದ್ದರು. ಆ ಪ್ರಕರಣ ಸಾದುಲ್ಲಾ ಸಾಬ್‌ರ ಬಳಿಗೂ ಹೋಗಿತ್ತು. ನನ್ನ  ಸಹೋದ್ಯೋಗಿಯ ಆಕ್ಷೇಪದಲ್ಲಿ ಹುರುಳಿತ್ತಾದರೂ ಮತ್ತು ನನ್ನ ಸಮರ್ಥನೆ ಅಸಮಂಜಸವಾಗಿ ತ್ತಾದರೂ ಸಾದುಲ್ಲಾ ಸಾಬ್ ಆ  ಸಂದರ್ಭದಲ್ಲಿ ನನ್ನನ್ನು ತರಾಟೆಗೆ ಎತ್ತಿಕೊಂಡಿರಲಿಲ್ಲ. ಆ ಬಳಿಕ ನನ್ನನ್ನು ಕರೆದೋ ಅಥವಾ ಹತ್ತಿರ ಬಂದೋ ತಿಳಿ ಹೇಳಿದ್ದರು.  ನಿಜವಾಗಿ,

ಎರಡು ರೀತಿಯ ಸಾದುಲ್ಲಾ  ಸಾಬ್‌ರನ್ನು ನನ್ನ ಬದುಕಿನಲ್ಲಿ ಕಂಡಿದ್ದೇನೆ. ಒಂದು- ನಾನು ಸಂಪಾದಕನಾಗುವ ಮೊದಲಿನ ಸಾದುಲ್ಲಾ  ಸಾಬ್. ಇನ್ನೊಂದು- ಸಂಪಾದಕನಾದ ಬಳಿಕದ ಸಾದುಲ್ಲಾ ಸಾಬ್. ಅವರು ಕಚೇರಿಗೆ ಪ್ರವೇಶಿಸಿದ ಕೂಡಲೇ ಪ್ರತಿಯೊಬ್ಬರ ಬಳಿಗೂ  ತೆರಳಿ ಪ್ರತ್ಯಪ್ರತ್ಯೇಕವಾಗಿ ಸಲಾಂ ಹೇಳುತ್ತಾ, ಹಸ್ತಲಾಘವ ಮಾಡುವುದು ರೂಢಿ. ಇದನ್ನು ಅತ್ಯಂತ ನಿಷ್ಠೆಯಿಂದ ಬದುಕಿನ ಕೊ ನೆಯವರೆಗೂ ಅವರು ಪಾಲಿಸುತ್ತಾ ಬಂದಿದ್ದರು. ಅಂದಹಾಗೆ,

ನಾನು ಉಪಸಂಪಾದಕನಾಗಿದ್ದಾಗ, ನನ್ನ ಬರಹವನ್ನು ಅವರಿದ್ದಲ್ಲಿಗೆ ಕೊಂಡು ಹೋಗಿ ಕೊಡುತ್ತಿದ್ದೆ. ನೂರ್ ಮುಹಮ್ಮದ್ ಸಾಬ್  ವಾರದಲ್ಲಿ ಎರಡು ಬಾರಿ ಮಾತ್ರ ಕಚೇರಿಗೆ ಬರುತ್ತಿದ್ದುದರಿಂದ ನನ್ನ ಬರಹದ ಪರಿಶೀಲನೆ ಬಹುತೇಕ ಸಾದುಲ್ಲಾ  ಸಾಬ್‌ರದ್ದೇ  ಆಗಿತ್ತು. ಯಾವಾಗ ನಾನು ಸಂಪಾದಕನಾಗಿ ಆಯ್ಕೆಯಾದೆನೋ ಸಾದುಲ್ಲಾ  ಸಾಬ್‌ರ ವರ್ತನೆಯಲ್ಲೂ ಬದಲಾವಣೆಯಾಯಿತು. ನಾನು ಸಂಪಾದಕರ ಕುರ್ಚಿಯಲ್ಲಿ ಕುಳಿತಿದ್ದರೆ ಅವರು ನನ್ನೆದುರಿನ ಕುರ್ಚಿಯಲ್ಲಿ ಸಾಮಾನ್ಯರಂತೆ ಕುಳಿತುಕೊಳ್ಳುತ್ತಿದ್ದರು. ಆರಂಭದಲ್ಲಿ ನಾನು ಎದ್ದು ನಿಲ್ಲುತ್ತಿದ್ದೆ. ಯಾಕೆಂದರೆ, ಅವರ ಕಣ್ಣೆದುರಲ್ಲೇ  ಬೆಳೆದ ವ್ಯಕ್ತಿ ನಾನು. ನಾನು ಸನ್ಮಾರ್ಗಕ್ಕೆ ಸೇರ್ಪಡೆಗೊಳ್ಳುವಾಗಲೇ ಅವರು ಸಂಪಾದಕೀಯ ಬಳಗದ ಸದಸ್ಯರಾಗಿ ಮತ್ತು ಪತ್ರಿಕೆಯ ಪ್ರಕಾಶಕರಾಗಿ ಹೊಣೆ ನಿಭಾ ಯಿಸುತ್ತಿದ್ದರು. ನಾನು ಅವರೆದುರು ತೀರಾ ಎಳೆಯ ವ್ಯಕ್ತಿ. ಆದರೆ, ನಾನು ಎದ್ದು ನಿಲ್ಲುವುದು ಅವರಿಗೆ ಇಷ್ಟವಿರಲಿಲ್ಲ. ಈ ಮೊದಲು ನಾನು ಅವರಿದ್ದಲ್ಲಿಗೆ ನನ್ನ ಬರಹವನ್ನು ಮುಟ್ಟಿಸುತ್ತಿದ್ದರೆ ಈಗ ಅವರೇ ಅವರ ಬರಹವನ್ನು ನನ್ನ ಬಳಿಗೆ ತಂದು ಕೊಡುತ್ತಿದ್ದರು. ಮಾತ್ರವಲ್ಲ, ‘ಇಷ್ಟವಾಗದಿದ್ದರೆ ಹತ್ತಿರದಲ್ಲಿರುವ ‘ಕಸಬು’ಗೆ (ಕಸದ ಬುಟ್ಟಿ) ಹಾಕು’ ಎಂದು ಮುಗುಳ್ನಗೆ ಯೊಂದಿಗೆ ಹೇಳುತ್ತಿದ್ದರು. ಎಲ್ಲಿಯ ವರೆಗೆಂದರೆ,

ಸನ್ಮಾರ್ಗದ ಬಹು ಜನಪ್ರಿಯ ಕಾಲಂ ಆದ ‘ಕೇಳಿದಿರಾ ಕೇಳಿ’ ವಿಭಾಗದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದುದು ಅವರೇ ಆಗಿದ್ದರೂ ಎಲ್ಲೂ ಅವರು ತನ್ನ ಹೆಸರನ್ನು ಹಾಕಿಕೊಂಡೇ ಇರಲಿಲ್ಲ. ಮುಜೀಬ್ (ಉತ್ತರಿಸುವವ) ಎಂಬ ಹೆಸರಿನಲ್ಲಿ ಅವರು ನೀಡುತ್ತಿದ್ದ ಉತ್ತರಗಳು ಅಸಂಖ್ಯ ಮಂದಿಯ ಬಾಳಿಗೆ ಬೆಳಕಾಗಿದ್ದುವು. ಹಾಗಂತ, ಈ ಕಾಲಂ ಅನ್ನು ನಿಭಾಯಿಸುವುದು ಸುಲಭ ವಾಗಿರಲಿಲ್ಲ. ಪ್ರತಿ ಪ್ರಶ್ನೆಗೂ ಕುರ್‌ಆನ್, ಹದೀಸ್ ಮತ್ತು ಸಹಾಬಿಗಳ ಬದುಕನ್ನು ಉದಾಹರಿಸಿ ಉತ್ತರಿಸಬೇಕಿತ್ತು. ಅಲ್ಲದೇ, ಆಧುನಿಕ ವಿದ್ವಾಂಸರ ಫತ್ವಗಳ ಬಗ್ಗೆ ಅರಿವಿರಬೇಕಿತ್ತು. ಕೆಲವೊಮ್ಮೆ ಕುರ್‌ಆನ್-ಹದೀಸ್‌ನ ಆಧಾರದಲ್ಲಿ ಚಿಂತನ-ಮಂಥನ ನಡೆಸಿ ತನ್ನ ಜ್ಞಾನದಾಧಾರದಲ್ಲಿ ಉತ್ತರ ನೀಡಬೇಕಾದ ಅನಿವಾರ್ಯತೆಯೂ ಎದುರಾಗುತ್ತಿತ್ತು. ಇದು ಅತ್ಯಂತ ಸೂಕ್ಷ್ಮ  ಕಾಲಂ. ತುಸು ಎಡವಟ್ಟಾದರೂ ಮುಸ್ಲಿಮ್ ಸಮುದಾಯವೇ ಸನ್ಮಾರ್ಗವನ್ನು ಕಟಕಟೆಯಲ್ಲಿ ನಿಲ್ಲಿಸಬಹುದಾದ ಇಕ್ಕಟ್ಟಿನ ಕಾಲಂ. ಆದ್ದರಿಂದಲೇ, ಸಾದುಲ್ಲಾ  ಸಾಬ್ ಮೈಯೆಲ್ಲಾ  ಕಣ್ಣಾಗಿದ್ದುಕೊಂಡು ಮತ್ತು ಅಪಾರ ತಾಳ್ಮೆ ಹಾಗೂ ಅಧ್ಯಯನದ ಆಧಾರದಲ್ಲಿ ಪ್ರಶ್ನೆಗಳಿಗೆ ಉತ್ತರಿಸಬೇಕಿತ್ತು. ಒಂದು ಪುಟದ ಉತ್ತರಕ್ಕಾಗಿ ಗಂಟೆಗಟ್ಟಲೆ ಅಧ್ಯಯನ ನಡೆಸಬೇಕಿತ್ತು. ಒಂದು ಗೆರೆಯ ಪ್ರಶ್ನೆಗೆ ಪುಟಗಟ್ಟಲೆ ಉತ್ತರಿಸಬೇಕಾದ ಸನ್ನಿವೇಶವೂ ಎದುರಾಗುತ್ತಿತ್ತು. ಆದರೆ ಇಷ್ಟೆಲ್ಲಾ  ಶ್ರಮವಹಿಸಿ ಬರೆದಾದ ಬಳಿಕ ಅವರು ಉತ್ತರದ ಪ್ರತಿಯನ್ನು ನನ್ನ ಬಳಿಗೆ ತಂದು ಕೊಡುತ್ತಿದ್ದರು. ಬಳಿಕ ಅದೇ ಡಯಲಾಗ್- ‘ಇಷ್ಟವಾಗದಿದ್ದರೆ ಹತ್ತಿರದಲ್ಲಿರುವ ‘ಕಸಬು’ಗೆ ಹಾಕು’. ಆಗೆಲ್ಲ ನಾನು ಮುಜುಗರದಿಂದ ಹಿಡಿ ಯಷ್ಟಾಗುತ್ತಿದ್ದೆ. ನನ್ನ ಸ್ಥಾನಕ್ಕೆ ಅವರು ನೀಡುತ್ತಿದ್ದ ಗೌರವ ವನ್ನು ಕಂಡು ಒಳಗೊಳಗೇ ಅಳುತ್ತಿದ್ದೆ. ಇಂಥ ಸಾವಿರಾರು ಉತ್ತರಗಳನ್ನು ಅವರು ‘ಕೇಳಿದಿರಾ ಕೇಳಿ’ ವಿಭಾಗದಲ್ಲಿ ಪ್ರಕಟಿಸಿದ್ದಾರೆ. ನಿಜವಾಗಿ, ಅಲ್ಲಾಹನು ಅವರನ್ನು ಪ್ರೀತಿಸುವುದಕ್ಕೆ ಈ ಉತ್ತರಗಳೇ ಧಾರಾಳ ಸಾಕು. ಅಂದಹಾಗೆ,

ಕುರ್‌ಆನ್ ಮತ್ತು ಹದೀಸ್‌ನ ಬಗ್ಗೆ ಅಪಾರ ಪಾಂಡಿತ್ಯವಿದ್ದ ಅವರು ನನ್ನ ಪಾಲಿಗೆ ಅಮೂಲ್ಯ ಆಸ್ತಿಯಾಗಿದ್ದರು. ಲೇಖನ ಬರೆಯುತ್ತಾ ಬರೆ ಯುತ್ತಾ ಕೆಲವೊಮ್ಮೆ ನನಗೆ ಕುರ್‌ಆನ್‌ನ ವಚನಗಳ ಕನ್ನಡಾನುವಾದ ನೆನಪಾಗುವುದಿದೆ. ಅದರ ಅರೇಬಿಕ್ ರೂಪ ಏನು ಅನ್ನುವುದೂ ಗೊತ್ತಿರುವುದಿಲ್ಲ. ನಾನು ನೇರ ಸಾದುಲ್ಲಾ  ಸಾಬ್‌ರ ಬಳಿಗೆ ಹೋಗಿ ನನಗೆ ಗೊತ್ತಿರುವ ಕನ್ನಡ ವಚನವನ್ನು ಅರ್ಧಂಬರ್ಧ ಹೇಳುತ್ತಿದ್ದೆ. ಇದು ಯಾವ ಅಧ್ಯಾಯದ, ಯಾವ ವಚನ ಎಂಬುದು ನನ್ನ ಪ್ರಶ್ನೆಯಾಗಿರುತ್ತಿತ್ತು. ಆದರೆ ಬಹುತೇಕ ಬಾರಿ ಅದು ಇಷ್ಟನೇ ಅಧ್ಯಾಯದ ಇಷ್ಟನೇ ವಚನ ಎಂದು ತಕ್ಷಣವೇ ಅವರು ಹೇಳಿ ಬಿಡುತ್ತಿದ್ದರು. ಕುರ್‌ಆನ್‌ಗೆ ಸಂಬಂಧಿಸಿ ಅವರು ನಡೆದಾಡುವ ಡಿಕ್ಷನರಿ. ಕೆಲವೊಮ್ಮೆ ನಾನು ಹದೀಸನ್ನು ಕುರ್‌ಆನ್ ವಚನವೆಂದು ತಪ್ಪಾಗಿ ತಿಳಿದುಕೊಂಡು, ಆ ವಚನ ಎಲ್ಲಿದೆ ಎಂದು ಕೇಳಿದ್ದೂ ಇದೆ. ಅವರಿಗೆ ಕುರ್‌ಆನ್ ಮತ್ತು ಹದೀಸ್‌ನ ಬಗ್ಗೆ ಅತ್ಯಂತ ಸ್ಪಷ್ಟ ಜ್ಞಾನವಿತ್ತು. ಬಹುಶಃ ಕೇಳಿದಿರಾ ಕೇಳಿ ವಿಭಾಗದ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಾಗಿ ಅವರು ನಡೆಸಿರಬಹುದಾದ ಅಧ್ಯಯನವೇ ಅವರನ್ನು ಕುರ್‌ಆನ್ ಮತ್ತು ಹದೀಸ್‌ನ ಮೇಲೆ ಅಪಾರ ಪಾಂಡಿತ್ಯವನ್ನು ಹೊಂದುವುದಕ್ಕೆ ನೆರವಾಗಿರಬಹುದು ಎಂದೇ ಅನಿಸುತ್ತದೆ.

ನೂರ್ ಮುಹಮ್ಮದ್ ಸಾಬ್ ನನ್ನ ಪಾಲಿಗೆ ಓರ್ವ ಶಾಲಾ ಅಧ್ಯಾಪಕರಾದರೆ ಸಾದುಲ್ಲಾ  ಸಾಬ್ ಓರ್ವ ಆಪ್ತ ಗುರು. ನೂರ್ ಮುಹಮ್ಮದ್ ಸಾಬ್ ಶಿಸ್ತು ಮತ್ತು ನಿಷ್ಠುರತೆಯ ಪ್ರತೀಕವಾದರೆ, ಸಾದುಲ್ಲಾ ಸಾಬ್ ಸಹನೆ ಮತ್ತು ಸೌಜನ್ಯದ ಪ್ರತೀಕ. ಅವರಿಬ್ಬರ ಮಿತಿಯಿಲ್ಲದ ಪ್ರೀತಿ ಮತ್ತು ಬೆಂಬಲವನ್ನು ಪಡೆದುಕೊಂಡೇ ನಾನು ಬೆಳೆದೆ. ಇವರಿಬ್ಬರೂ ಬಿಟ್ಟು ಹೋದ ಬಲುದೊಡ್ಡ ಪಾಠ ಏನೆಂದರೆ, ಜನರೊಂದಿಗೆ ಅಂತರವಿಟ್ಟುಕೊಳ್ಳದೇ ಬೆರೆಯಬೇಕು ಎಂಬುದು. ನಿಮ್ಮ ಹುದ್ದೆಯು ಜನರೊಂದಿಗೆ ಬೆರೆಯುವುದಕ್ಕೆ ತಡೆಯಾಗಬಾರದು ಎಂಬುದು. ಇಬ್ರಾಹೀಮ್ ಸಈದ್, ನೂರ್ ಮತ್ತು ಸಾದುಲ್ಲಾ ಸಾಬ್- ಈ ಮೂವರೂ ಇದೇ ರೀತಿಯಲ್ಲಿ ಬದುಕಿದರು. ಒಂದು ರೀತಿ ಯಲ್ಲಿ ಬರಹವನ್ನೇ ಬದುಕಿದರು. ಬದುಕಿದ್ದನ್ನೇ ಬರೆದರು. ಇವರ ವಿಚಾರಧಾರೆಯನ್ನು ಒಪ್ಪದವರು ಕೂಡ ಅವರ ಪ್ರಾಮಾಣಿಕತೆ, ಪಾರದರ್ಶಕತೆ, ಪಾಂಡಿತ್ಯ ಮತ್ತು ಆರಾಧನಾ ನಿಷ್ಠೆಯನ್ನು ಕೊಂಡಾ ಡುವಂತೆ ಬದುಕಿದರು. ಎಲ್ಲಿಯ ವರೆಗೆಂದರೆ,

ಖ್ಯಾತ ಸಾಹಿತಿ ಬೊಳುವಾರು ಮುಹಮ್ಮದ್ ಕುಂಞಯವರು ತಮ್ಮ ಆತ್ಮಕತೆ ‘ಮೋನುಸ್ಮೃತಿ’ ಯನ್ನು ಬರೆಯುತ್ತಿದ್ದ ವೇಳೆ ನನಗೆ ಕರೆ ಮಾಡಿದ್ದರು. ಇಬ್ರಾಹೀಮ್ ಸಈದ್‌ರ ಕುಟುಂಬದ ವಿವರ ಅವರಿಗೆ ಬೇಕಾಗಿತ್ತು. ಅವರು ಕಾರ್ಕಳದಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದ ವೇಳೆ ಬ್ಯಾಂಕ್‌ಗೆ ತೆರಳಿ ಇದೇ ಇಬ್ರಾಹೀಮ್ ಸಈದ್ ಕುರ್‌ಆನ್‌ನ ಕನ್ನಡಾನುವಾದ ನೀಡಿದ್ದರಂತೆ. ಮಾತಾಡುತ್ತಾ ಅವರು ನನ್ನೊಂದಿಗೆ ಹೇಳಿದ್ದು ಹೀಗೆ: 

‘ಇಬ್ರಾಹೀಮ್ ಸಈದ್ ತನ್ನ ಬರಹ ಮತ್ತು ಭಾಷಣದಂತೆಯೇ ಬದುಕಿದರು. ಅದು ಅಷ್ಟು ಸುಲಭ ಅಲ್ಲ.’

ಪೆನ್ನು ಕೆಳಗಿಟ್ಟು ಹೋದ ಈ ಮೂವರನ್ನು ಅಲ್ಲಾಹನು ಪ್ರೀತಿಸಲಿ.